Saturday, June 27, 2020

ಪಯಣ - 9

'ರೀ..ಇದೇನ್ರಿ ಸಗಣಿ ಗೊಬ್ರ.. ಒಳ್ಳೆ ಸಿಮೆಂಟ್ ಪೀಸ್ ಇದ್ದಂಗೆ ಇದ್ಯಲ್ಲ..' ಎಂದು ತರಾತುರಿಯಲ್ಲಿ ಟ್ರಾಕ್ಟಾರ್ನಲ್ಲಿ ಎಲ್ಲಿಂದಲೋ ಹೊತ್ತು ತಂದ ಒಣಗಿದ ಸಗಣಿಯನ್ನು ನೋಡಿ ಹೇಳಿದ ಲೊಕೇಶ. ಪ್ರತ್ಯುತ್ತರವಾಗಿ ಏನೇಳಬೇಕೆಂದು ತಿಳಿಯದೆ ತಲೆಯನ್ನು ಕೆರೆದುಕೊಂಡು ನಿಂತ ಮೇಸ್ತ್ರಿ,

'ಇಷ್ಟ್ ಬೇಗ ಇಷ್ಟೇ ಅರೆಂಜ್ ಮಾಡೋಕ್ಕೆ ಆಗಿದ್ದು ಸಾರ್.. ' ಎಂದ.

'ತತ್ತ್ .. ಇಸ್ಕಿ.. ' ಎಂದು ತನ್ನ ತೊಡೆಯ ಮೇಲೆ ರಪ್ಪನೆ ಗುದ್ದಿದ ಲೋಕೇಶ, 'ಸರಿ, ಇವಾಗ ಎಷ್ಟ್ ಜನ ಇದ್ದಾರೆ' ಎಂದು ಮೇಸ್ತ್ರಿಯನ್ನು ನೋಡಿದ.

ಸಗಣಿ ಗೊಬ್ಬರ ಎಂದಾಗ ಭಾಗಶಃ ಮಂದಿ ಅಲ್ಲಿಂದ ಕಾಲ್ಕಿತ್ತಿದ್ದರು. ಮೇಸ್ತ್ರಿ ದೂರದಲ್ಲಿದ್ದ ಒಬ್ಬಳೇ ಅಜ್ಜಿಯನ್ನು ನೋಡಿದ.

ವಯಸ್ಸು ಎಪ್ಪತ್ತು ದಾಟಿದರೂ ಅಜ್ಜಿ ಲವಲವಿಕೆಯಿಂದ್ದಿತ್ತು. ಎಲ್ಲರು ಹೋದಮೇಲೆ ಸುಮ್ಮನೆ ಕಾಲಹರಣವೇಕೆಂದು ಯಾರು ಹೇಳದಿದ್ದರೂ ತಾನೇ ಖುದ್ದಾಗಿ ಗದ್ದೆಯ ಕಳೆಯನ್ನು ತೆಗೆಯತೊಡಗಿತು. ಲೋಕೇಶ ಅಜ್ಜಿಯ ಬಳಿಗೊದ.

'ಏನ್ ಶುಂಠಿ ಮಾಡ್ತಾರೋ ಏನೊ .. ಮನ್ಸನ ರಕ್ತಹೀರೊ ಪಿಶಾಚಿ ಈ ಶುಂಠಿ.. ಭೂಮ್ ತಾಯ್ ಸಾರ ಎಲ್ಲ ಹೀರಿ ಹಾಕುತ್ತೆ.. ಯಾರ್ ಹೇಳ್ತಾರೋ ಇವಕ್ಕೆಲ್ಲ' ಎಂದು ಶಪಿಸುತ್ತಾ ಕೆಲಸವನ್ನು ಮುಂದುವರೆಸಿದಳು.

'ಅಜ್ಜಿ .. ಏನ್ ನಿನ್ ಹೆಸ್ರು' ಎಂದ ಲೋಕೇಶ.

'ನನ್ನ್ ಹೆಸ್ರ್ ಕಟ್ಕೊಂಡ್ ಏನ್ ಆಗ್ ಬೇಕ್ಲ ನಿಂಗೆ ..' ಎಂದಳು ಅಜ್ಜಿ. ಕೂಡಲೇ ಮೇಸ್ತ್ರಿ ಮದ್ಯಸ್ಥಿಕೆ ವಹಿಸಿ,

''ಅಜ್ಜಿ .. ಶುಂಠಿ ಗದ್ದೆ ಮಾಡ್ತಿರೋರು ಇವ್ರೆಯ.. ಲೋಕೇಶ್ ಅಂತ’ ಎಂದು ಆತನನ್ನು ಪರಿಚಯಿಸಿದ.

'ಲೋಕೇಶ ಆದ್ರೇನು ಆದಿಶೇಷ ಆದ್ರೇನು .. ಇಲ್ಲಿ ಎಲ್ಲ ಒಬ್ರೇಯ... ಒಳ್ಳೇದು .. ಒಳ್ಳೇದು .. ಹುಡುಗ್ರು ಗದ್ದೆ ಗಿದ್ದೆ ಮಾಡೋದೆಲ್ಲ ಒಳ್ಳೆ ಶಕ್ನ.. ಆದ್ರೆ ಶುಂಠಿ ದುಡ್ಡ್ ಕೊಡಬಹುದು .. ನೆಲನ ಜೊಳ್ ಆಗ್ಸುತ್ತೆ.. '

'ಇರ್ಬಹುದು ಅಜ್ಜಿ .. ಮುಂದಿನ್ ಸಾರಿ ಭತ್ತ ಹಾಕ್ತಿನಿ .. ಈ ಸರಿ ಮಾತ್ರ ಶುಂಠಿ' ಎಂದು ಆತ ಮುಗುಳ್ ನಗುತ್ತಾನೆ .

ಮಾತಾಡುವಾಗಲೂ ತನ್ನ ಸ್ವಂತ ಗದ್ದೆಯೇ ಎಂಬಂತೆ ಕಳೆಯನ್ನು ಕೀಳುತ್ತಾ ಇದ್ದ ಅಜ್ಜಿಯನ್ನು ಕಂಡು ಲೋಕೇಶನಿಗೆ ಏನೋ ಒಂದು ಸಂತೋಷವಾಯಿತು.

'ಅಜ್ಜಿ .. ಸಾಕ್ ಕೆಲ್ಸ ಮಾಡಿದ್ದು.. ನಾನು ಈ ಸಾರಿ ಬರಿ ಸಗಣಿ ಗೊಬ್ಬರ ಹಾಕಣ ಅಂತಿದ್ದೀನಿ, ಹೇಗೆ.' ಎಂದು ವಿಚಾರಿಸುವ ಧಾಟಿಯಲ್ಲಿ ಕೇಳಿದ

ಕೊಂಚ ಹೊತ್ತು ಸುಮ್ಮನಾದ ಅಜ್ಜಿ ಬಗ್ಗಿದ ತನ್ನ ತಲೆಯನ್ನು ಮೇಲೆತ್ತಿದಳು.

'ಏನಪ್ಪಾ ನಿನ್ ಹೆಸ್ರು' ಎಂದು ಪ್ರೀತಿಯಿಂದ ಕೇಳುವಂತೆ ಮಾಡಿದಳು.

'ಲೋಕೇಶ'

'ಇಲ್ಲಿ ಎಲ್ರೂ ಈಶ್ರೆ..' ಎಂದು ನಕ್ಕ ಅಜ್ಜಿ 'ಮಗ .. ಒಂದ್ ಮಾತ್ ದಿಟ .. ಗೋಮಾತೆ ಗೋಬ್ರಾನ ಹಾಕಿ ಗದ್ದೆ ಬೆಳೀತೀನಿ ಅನ್ನೋ ನಿನ್ನ್ ಗುರಿ ಸರಿಯಾಗೇ ಇರುತ್ತೇ ಬಿಡು' ಎಂದು ತುಸು ಸುಮ್ಮನಾಗಿ, 'ಆದ್ರೆ ಆ ಒಣಗಿದ್ ಸಗಣಿ ಹಾಕೋ ಮೊದ್ಲು ಅದನ್ನ ನೀರಲ್ಲಿ ನೆನ್ಸಿ , ಬೇವಿನ್ ಹಿಂಡಿ ಗಂಜಲ ಹಾಕಿ ಸ್ವಲ್ಪ ದಿನ ಬಿಟ್ಟು ಅಮ್ಯಾಗೆ ಹಾಕು..' ಎಂದು ಸಲಹೆ ನೀಡಿದಳು.

ಏಕೋ ಅಜ್ಜಿಯ ಮಾತು ಲೋಕೇಶನಿಗೆ ನಾಟಿತು. ಆಕೆಯ ಉಪದೇಶದಂತೆ ಲೋಕೇಶ ಸಗಣಿಗೊಬ್ಬರವನ್ನು ತಯಾರಿಸಿದ. ಗದ್ದೆಯಲ್ಲಿಯೇ ಗುಂಡಿಯೊಂದನ್ನು ಮಾಡಿ ಅಲ್ಲಿಯೇ ಎಲ್ಲವನ್ನು ಸಿದ್ದಪಡಿಸಿದ. ವಿಪರ್ಯಾಸವೆಂಬಂತೆ ಅಂದು ಸಗಣಿ ಗೊಬ್ಬರವನ್ನು ಸಿಂಪಡಿಸುವಾಗ ಯಾರೊಬ್ಬ ಕಾರ್ಮಿಕನೂ, ಖುದ್ದು ಮೇಸ್ತ್ರಿಯೂ, ಸಹ ಅತ್ತ ಕಡೆ ಸುಳಿಯಲಿಲ್ಲ! ಲೋಕೇಶ ಹಾಗು ಅಜ್ಜಿಯಿಬ್ಬರೇ ಅಷ್ಟೂ ಗದ್ದೆಗೆ ಗೊಬ್ಬರವನ್ನು ಸಿಂಪಡಿಸಿದರು.

ಕೆಲಸದ ಖುಷಿಯಲ್ಲಿ ಲೋಕೇಶ ಊಟವನ್ನು ಮರೆತುಬರುವುದು, ಅಜ್ಜಿಯೊಟ್ಟಿಗೆ ಆಕೆಯ ಗುಡಿಸಿಲಿಗೆ ಹೋಗಿ ಅನ್ನ ಸಾರು ಹಾಗು ರಾಗಿ ಅಂಬಲಿಯನ್ನು ಸವಿಯುವುದು, ಅಲ್ಲಿಯೇ ಮರದ ಕೆಳಗೆ ಅರೆ ಹೊತ್ತು ಅಂಗಾತ ಮಲಗುವುದು ತೀರಾ ಸಾಮಾನ್ಯವಾಯಿತು. ಸಗಣಿ, ವಾಸನೆ, ಕೆಸರು, ಹಿಂಸೆ ಎಂಬ ಯಾವುದೇ ಪೊಳ್ಳು ನಾಟಕಗಳಿಲ್ಲದೆ ಲೋಕೇಶ ಕೆಲಸದಲ್ಲಿ ಮಗ್ನನಾಗಿದ್ದ. ಚಿಗುರೆಲೆಯ ಚಿನ್ನದ ಬಣ್ಣದ ಎಳೆಯ ಶುಂಠಿಯ ಎಲೆಗಳು ಒಂದೊಂದಾಗಿಯೇ ಮೇಲ್ಬರತೊಡಗಿದವು. ಲೊಕೇಶನ ಆನಂದಕ್ಕೆ ಪಾರವೇ ಇಲ್ಲದಂತಾಯಿತು.



****



ರಾತ್ರಿಯ ಆ ನೀರವ ಮೌನದಲ್ಲಿ ಕೆನ್ನೆಗಳ ಮೇಲೆ ಮೂಡಿದ ಸದ್ದು ಕೊಂಚ ಹೆಚ್ಚಾಗಿದ್ದರೂ ಪ್ರತಿಧ್ವನಿಸುವ ಮಟ್ಟಿಗಿದ್ದಿತು. ಪ್ರತಿದಿನ ಸಂಜೆ ಕತ್ತಲಾದ ಮೇಲೆ ಟೆರೇಸ್ನ ಮೇಲೆ ಬಂದು ಖುಷಿಗೆ ಫೋನಾಯಿಸುವ ಮೊದಲು ಹೀಗೆ ತನ್ನ ಕೆನ್ನೆಯ ಮೇಲೊಮ್ಮೆ ಹೊಡೆದುಕೊಂಡು ಜರುಗುತ್ತಿರುವುದೆಲ್ಲ ಕನಸ್ಸಲ್ಲ ಎಂದು ಖಾತ್ರಿಮಾಡಿಕೊಳ್ಳುತ್ತಿದ್ದ ಆಸಾಮಿ! ಕಳೆದ ಮೂರ್ನಾಲ್ಕು ತಿಂಗಳ ಈ ಘಳಿಗೆಯಲ್ಲಿ ಪ್ರತಿದಿನವೂ ಅಮಾಯಕ ಪೆಟ್ಟನ್ನು ತಿನ್ನುತ್ತಿದ್ದ ಆತನ ಕನ್ನೆಯೂ ಇತ್ತೀಚಿನ ಕೆಲದಿನಗಳಿಂದ ಒಂದು ರೀತಿಯಲ್ಲಿ ಒಗ್ಗಿಕೊಂಡಂತಿತ್ತು. ಅದೆಷ್ಟೇ ಜೋರಾಗಿ ಹೊಡೆದರೂ ಸ್ಪರ್ಶಜ್ಞಾನವಿರದ ಕಲ್ಲಿನಂತೆ ತನ್ನ ಪಾಡಿಗೆ ಅದು ತಾನಿರತೊಡಗಿತು. ಆದರೆ ಈ ಸುಮ್ಮನಿರುವಿಕೆ ಅದಕ್ಕೆ ಮತ್ತೊಂದು, ಇನ್ನೂ ಜೋರಾದ ಪೆಟ್ಟನ್ನು ಆದಿಯ ಅಸ್ತಗಳಿಂದ ದಯಪಾಲಿಸುತ್ತಿತ್ತು. ಆಗ ಅನಿವಾರ್ಯವಾಗಿ ಮೆದುಳಿನ ಕೆಲ ಕೋಶಗಳನ್ನು ಜಾಗೃತಗೊಳಿಸಿ ತನ್ನ ಮೇಲಾಗುವ ಶೋಷಣೆಯನ್ನು ತಪ್ಪಿಸಿಕೊಳ್ಳುತ್ತಿತ್ತು.

'ಛಟಾರ್..!' ಇಂದು ಎಂದಿಗಿಂತಲೂ ತುಸು ಜೋರಾಗಿಯೇ ಬಿದ್ದ ಪೆಟ್ಟು ಆದಿಗೆ ತನ್ನ ಕನಸ್ಸೆಂಬ ಸುಳ್ಳನ್ನು ಪ್ರತ್ಯೇಕಿಸುವುದಷ್ಟೇ ಅಲ್ಲದೆ ಕೆನ್ನೆಯ ಮೇಲೆ ಆಗಿನಿಂದಲೂ ಚೀರಾಡುತ್ತಿದ್ದ ಸೊಳ್ಳೆಯೊಂದರ ಕೊನೆಗಾಲವನ್ನೂ ಕರುಣಿಸಿತ್ತು. ಪಕ್ಕದಲ್ಲಿದ್ದ ನಲ್ಲಿಯ ನೀರಿನಿಂದ ಸೊಳ್ಳೆಯ ಅಸ್ತಿಯನ್ನು ಹರಿಯಬಿಟ್ಟು ಆದಿ ತನ್ನಿಷ್ಟದ ಹಾಡೊಂದನ್ನು ಹಾಕಿದ.

'ಸವಿ ಸವಿ ನೆನಪು .. ಸವಿ ಸವಿ ನೆನಪು , ಸಾವಿರ ನೆನಪು..' ಒಂದರೆ ನಿಮಿಷ ತನ್ನ ಕಣ್ಣನ್ನು ಮುಚ್ಚಿ ತನ್ನ ಬಾಲ್ಯದ ದಿನಗಳನ್ನು ನೆನೆಯತೊಡಗಿದ. ತನ್ನ ಬಾಲ್ಯವೆಲ್ಲವೂ ಖುಷಿಯೇ ಆಗಿದ್ದರಿಂದ ಆತನಿಗೆ ಅವಳ ಬಿಟ್ಟು ಬೇರೇನೂ ಅಲ್ಲಿ ನೆನೆಯಲು ಸಾಧ್ಯವಾಗಲಿಲ್ಲ. ಸಾದ್ಯವೂ ಇರಲಿಲ್ಲ! ಕೂಡಲೇ ಮೊಬೈಲ್ನ ಸ್ಪೀಕರ್ 'ಟಣ್..' ಎಂದು ಸದ್ದು ಮಾಡಿತು. ಎಂದಿನಂತೆ 'Hi..' ಎಂಬ ಖುಷಿಯ ಮೆಸ್ಸೇಜು ಸರಿಸಮಯಕ್ಕೆ ಬಂದಿತು. ಇಡೀ ಜಗತ್ತಿನ ಅಷ್ಟೂ ಸುಖ ಸಂತೋಷಗಳು ಆದಿಗೆ ಆಕೆ ಕಳುಹಿಸಿದ ಆ ಎರಡಕ್ಷರದಲ್ಲಿ ಕಾಣತೊಡಗಿದವು. ಮನಸ್ಸು ಪ್ರಸನ್ನವಾಯಿತು. ಈ ಸಂತೋಷ ಎಂದಿಗೂ ಮುಗಿಯದಿರಲಿ ಎಂದು ಬೇಡುತ್ತ ಆತ ಆಕೆಯ ನಂಬರ್ಗೆ ಫೋನಾಯಿಸಿದ. ಉದ್ವೇಗಭರಿತ 'ಹಲೋ..!' ಎಂಬ ಧ್ವನಿ ಅತ್ತಕಡೆಯಿಂದ ಸ್ವಾಗತಿಸಿತು.

ಮತ್ತದೇ ‘ಹಾಯ್, ಹೇಗಿದ್ದೀಯ, ಏನ್ ಊಟಕ್ಕೆ' ಎಂಬ ಟ್ರಡಿಷನಲ್ ಪ್ರೆಶ್ನೆಗಳ ನಂತರ 'ಮತ್ತೆ..?' ಎಂಬ ಉತ್ತರವಿಲ್ಲದ ಪ್ರೆಶ್ನೆಯನ್ನು ಕೇಳುವುದು ಇತ್ತೀಚೆಗೆ ಸಾಮಾನ್ಯವಾಯಿತು. ಹಾಗೆ ಕೇಳಿದಾಗಲೆಲ್ಲ ಆಕಡೆಯಿಂದ ಆಕಳಿಕೆಯ ಸದ್ದೋ ಅಥವಾ ಏನೂ ಇರದ ಸ್ತಬ್ದತೆಯೊಂದು ಮೂಡುತ್ತಿತ್ತು. ಹೇಳುವುದೆಲ್ಲ ಹೇಳಿ, ಕೇಳುವುದೆಲ್ಲ ಕೇಳಿ ಈಗ ಭಾಗಶಃ ತೆರೆದ ಪುಸ್ತಕದಂತಾಗಿರುವ ಇಬ್ಬರ ಜೀವನದಲ್ಲಿ ಹೊಸತೆಂಬ ಏನೂ ಇರದಂತಾಯಿತು. ಸಂಬಂಧಗಳಲ್ಲಿ ಅತಿವೃಷ್ಟಿಯನ್ನಾಗಲಿ ಅಥವಾ ಅನಾವೃಷ್ಟಿಯನ್ನಾಗಲಿ ಸೃಷ್ಟಿಸಿಕೊಳ್ಳದೆ ಸಂಬಾಳಿಸಿಕೊಂಡು ಹೋಗಬೇಕು, ಮಾತು, ಬಯಕೆ, ಫೋನು, ಮೆಸೇಜು, ಸಿಟ್ಟು, ಕೋಪ, ತಾಪ ಎಲ್ಲವೂ ಇತಿಮಿತಿಯಾಗಿ ನಿಯಮಿತವಾಗಿರಬೇಕು, ಆಕೆ Hi .. ಎಂದಾಕ್ಷಣಕ್ಕೆ ತನ್ನ ಇಡೀ ದಿನಚರಿಯನ್ನು ಒಂದು ಕ್ಷಣವೂ ಪುರುಸತ್ತಿರದೆ ಉಸಿರುಗಟ್ಟಿ ಹೇಳಿಬಿಟ್ಟು ಕೊನೆಗೆ 'ಮತ್ತೆ..?' ಎಂದು ಆಕೆಯನ್ನು ಕೇಳಬಾರದು, ದಿನವಿಡಿ ಆಕೆಯ ಜಪವೊಂದೇ ಮಾಡುತ್ತಾ ಊಟ, ತಿಂಡಿ, ಏನ್ ಕುಡಿದೆ, ಯಾವ ಜ್ಯೂಸು, ಅದ್ ಬೇಡ ಇದನ್ನ ಕುಡಿ, ಯಾರೊಟ್ಟಿಗೆ ಇಷ್ಟೊತ್ತು ಮಾತಾಡ್ತಿದ್ದೆ, etc etc ಎಂಬುದನ್ನೆಲ್ಲ ಕೇಳಿ ಆಕೆಯ ತಲೆಗೂ ಮನಸ್ಸಿಗೂ ಒಟ್ಟೊಟ್ಟಿಗೆ ನೋವನ್ನು ನೀಡಬಾರದು ಎಂಬುದೆಲ್ಲ ಆತನಿಗೆ ಎಲ್ಲಿ ತಿಳಿದಿತ್ತು? ಆದರೆ ಜೀವನದ ಅನಂತ ವಸಂತಮಾಸವನ್ನು ಕರುಣಿಸಿರುವ ತನ್ನಾಕೆಯನ್ನು ಮಗುವಿನ ಪ್ರೀತಿಯಂತೆ ಹಠಬಿದ್ದು ಪಡೆಯುವ ಪೆದ್ದನಂತ ಆದಿಯಲ್ಲಿ ಬೇರ್ಯಾವ ಯೋಚನೆಯೂ ಬರುತ್ತಿರಲಿಲ್ಲ. ಆಲ್ಲಿದ್ದದ್ದು ಕೇವಲ ಕಾಳಜಿ. ಅನಿರ್ವಚನೀಯವಾದ, ಎಂದಿಗೂ ಬತ್ತದ ಗೆಳತಿಯೆಂಬ ಮಧುರ ಕಾಳಜಿ. ವಿಪರ್ಯಾಸವೆಂದರೆ ಅದು ಖುಷಿಗೆ ಗೋಚರವಾಗುತ್ತಿದ್ದದ್ದು ಮಾತ್ರ ದಿನದ ನೂರು ಮೆಸೇಜುಗಳ ಕೋಟಾವನ್ನು ಪ್ರತಿದಿನವೂ ಇಂತಹ ಸಮಯ ಹರಣ ಪ್ರೆಶ್ನೋತ್ತರಗಳಿಗೆ ವ್ಯಹಿಸಿ ಸಂಜೆ ಐದಾಗುವಷ್ಟರಲ್ಲಿ ಅಷ್ಟೂ ಖಾಲಿಯಾಗಿ ನಂತರದ ಪ್ರತಿ ಮೆಸೇಜಿಗೆ ಹಣವ್ಯಹಿಸಬೇಕಾದಾಗ ಮೂಡುತ್ತಿದ್ದ ಸಿಟ್ಟಿನ ರೂಪದಲ್ಲಿ. ಆಫ್ ಕೋರ್ಸ್, ಸಾಮಾನ್ಯನಾದವರಿಗೆ ಇಂತಹ ವಿಷಯಗಳ ಮೇಲೆ ಕಿರಿಕಿರಿಯಾಗುಸುವುದು ಸಾಮಾನ್ಯವೇ.

ಅದೇನೋ ಒಂದು ಉದ್ವಿಗ್ನತೆ, ಆತುರ, ಕಾತುರ ಆತನಿಗೆ ಆಕೆಯ ಹೆಸರಿನ ಮೆಸೇಜೊಂದು ಟನ್ಗುಟ್ಟರೆ. ಆಕೆಯೂ ಈತ ಅದೆಷ್ಟೇ ತಲೆತಿಂದರೂ ಪ್ರತಿದಿನ ಒಂದೆರೆಡು ಮೆಸೇಜುಗಳನ್ನು ಕಳಿಸದೆ ಇರುತ್ತಿರಲಿಲ್ಲ. ಖುಷಿಯ ಮರಳುವಿಕೆ ಜೀವನದಲ್ಲಿ ಎಲ್ಲಿಲ್ಲದ ಖುಷಿಯನ್ನು ತಂದಿರುವಾಗ ನಗುವುದು, ನಗಿಸುವುದು ಆದಿಗೆ ತೀರಾ ಕಷ್ಟದ ವಿಷಯವೇನಾಗಿರಲಿಲ್ಲ. ಆದರೆ ಆದಿಶೇಷ ಎಲ್ಲವನ್ನೂ ಸಶೇಶಿಸುವುದರಲ್ಲೇ ಕಾರ್ಯೋನ್ಮುಕನಾಗಿದ್ದ. ಆದರೆ ಇಂದು ಆಕೆಯ ಸೆನ್ಸ್ ಆಫ್ ಹ್ಯುಮರನ್ನು ಪರೀಕ್ಷಿಸಲೋಗಿ ಆಕೆಯ ಕೋಪ ದ ಕಟ್ಟೆಯನ್ನು ಒಡೆಯುವಂತೆ ಮಾಡಿ, ಮಾತಿನ ಮದ್ಯೆಯೇ ಆಕೆ ಫೋನ್ ಕಟ್ ಮಾಡುವಂತೆ ಮಾಡಿದ! ಕೂಡಲೇ ಹತ್ತಾರು ಫೋನುಗಳನ್ನು ಇತ್ತಕಡೆಯಿಂದ ಮಾಡಿದರೂ ಆಕೆ ಒಂದಕ್ಕೂ ಉತ್ತರಿಸಲಿಲ್ಲ. ನಂತರದ ದಿನ ಎಲ್ಲವು ಸರಿಯೋಗಬಹುದು ಎಂದುಕೊಂಡವನಿಗೆ ಮತ್ತದೇ ಬಗೆಯ ಪ್ರತಿಕ್ರಿಯೆ. ಮೆಸೇಜಿಗೆ ಉತ್ತರವಿಲ್ಲ, ಫೋನನ್ನು ಎತ್ತುತ್ತಿಲ್ಲ.

ದಿನಗಳು ಕಳೆದವು.

ಮೋಡ ಕವಿದ ವಾತಾವರಣದಂತೆ ದಿನವೆಲ್ಲ ಆತನ ಮುಖ ಇಳಿಬಿಟ್ಟಿತು. ಯಾರೊಟ್ಟಿಗೂ ಮಾತನಾಡದ ಆತ ಖುಷಿಯ ಮೆಸೇಜಿಗೆ ಬಕಪಕ್ಷಿಯಂತೆ ಕಾಯತೊಡಗಿದ. ಸದ್ದಿಲ್ಲದಂತೆ ಅಡಗಿ ಮರೆಯಾಗಿದ್ದ ದುಗುಡದ ಛಾಯೆ ಒಂದೊಂದಾಗಿಯೇ ಆತನನ್ನು ಪುನ್ಹ ಆವರಿಸತೊಡಗಿದವು.




****



ಬೆಳಗಾದರೆ ಸಾಕು ಈ ಹಕ್ಕಿಗಳೆಲ್ಲವಕ್ಕೂ ಚಿಯ್ ಗುಡುವ ಕೆಲಸವನ್ನು ನೀಡಿದವರ್ಯಾರು? ಕೋಳಿಗಳಿಗೆ ಕೂಗಲು ಹೇಳಿಕೊಟ್ಟವರ್ಯರು? ಕರಾರುವಕ್ಕಾಗಿ ತಮ್ಮ ನಿರ್ಧಿಷ್ಟ ಸಮಯಕ್ಕೆ ಅಲರಾಂ ಬಾರಿಸಿದಂತೆ ಎದ್ವಾ-ತದ್ವಾ ಗೀಳಿಡುವ ಇವುಗಳು ಹೇಳಲು ಪ್ರಯತ್ನಿಸುತ್ತಿರುವುದಾರೂ ಏನು? ಬೆಳಗಾಗಿದೆ ಎದ್ದೇಳಿ ಎಂಬುದನ್ನು ಹೇಳುವುದಾದರೆ ಇವುಗಳ ವಿನ್ಹಾ ಸೂರ್ಯ ಮೇಲೇರುವುದು ಜಗತ್ತಿಗೇನು ತಿಳಿಯುವುದಿಲ್ಲವೇ? ಹಾಗಾದರೆ ಏನಿರಬಹದು ಈ ಹಕ್ಕಿಗಳ ಸದ್ದಿನ ಹಿಂದಿನ ಮೆಸೇಜು? ಅದ್ಯಾವ ಟೆಕ್ನಾಲಜಿ ಈ ಧ್ವನಿಯನ್ನು ಅರ್ಥೈಸಬಹುದು? ತಾವು ಬದುಕುವ ಒಂದೆರೆಡು ವರ್ಷಗಳಲ್ಲಿ ಆವು ಹೀಗೆ ಕೂಗಿ ಸಾಧಿಸುವುದಾದರೂ ಏನು?

ಆದರೆ ಸಮಯ ಎಲ್ಲರಿಗೂ ಒಂದೆಯೇ? ನಾವು ನಮ್ಮಲಿನ ಸಮಯದ ಮೇರೆಗೆ ಕೇವಲ ಒಂದೆರೆಡು ವರ್ಷಗಳೆನ್ನುತ್ತೀವಿ, ಆದರೆ ಅವಕ್ಕೆ ಆ ಒಂದೆರೆಡು ವರ್ಷಗಳೇ ಜೀವನದ ಅಷ್ಟೂ ಹಾದಿ. ಹುಟ್ಟು, ಸಾವು, ಪ್ರೀತಿ, ಮಮತೆ, ಬಾಲ್ಯ ,ಮುಪ್ಪು, ಎಲ್ಲವನ್ನೂ ಮಾನವರಂತೆಯೇ ಸಾಧಿಸುವ ಅವುಗಳ ಕಾಲಚಕ್ರ ನಮಗಿಂತಲೂ ಚಿಕ್ಕದಾದದ್ದು. ಅರ್ಥಾತ್ ನಮ್ಮ ಜೀವನದ ಸಾಧನೆಗೆ ನೂರು ವರ್ಷಗಳು ಬೇಕಾದರೆ ಅವುಗಳ ಸಾಧನೆ ಕೆಲವೇ ವರ್ಷಗಳಲ್ಲಿಯೇ ಸಾಧ್ಯವಿರಬಹುದು. ಲವ್ಕಿಕ ಸಾಧನೆಗಳನ್ನು ಬಿಟ್ಟು ಆದ್ಯಾತ್ಮಿಕ ಸಾಧನೆಯೆನ್ನಾದರೂ ಅವುಗಳು ಕೈಕೊಂಡರೆ ಪರಿಣಾಮವೇನಾಗಬಹುದು? ಸಾಧು ಸಂತರಂತೆ ಸಮಾಧಿ ಅವಸ್ಥೆಗೇರಲು ಇವುಗಳಿಗೆ ನಿಮಿಷಮಾತ್ರದಲ್ಲಿ ಸಾದ್ಯವಾಗಬಹುದೇ? ಇನ್ನು ದಿನ ಮಾತ್ರ ಜೀವನ ನೆಡೆಸುವ ಹೂವು ಹಣ್ಣುಗಳ ಕತೆಯೇನು? ಅಥವಾ ನಮಗಿಂತಲೂ ಹೆಚ್ಚು ಜೀವಿಸುವ ಇತರ ಪ್ರಾಣಿಗಳ ಮರ್ಮವೇನು? ಜೀವನದ ಕಾಲಾವಧಿ ಎಲ್ಲರಿಗು ಏಕೆ ಸಮನಾಗಿಲ್ಲ? ನಿಸರ್ಗ ಇವೆಲ್ಲವನ್ನೂ ನಮ್ಮಿಂದ ಮುಚ್ಚಿಟ್ಟಿದೆಯೇ? ಅಥವಾ ನಾವೇ ಹುಟ್ಟು ಕುರುಡರೇ?

ಅದ್ಯಾಕೋ ಇಂದು ಎಂದಿಗಿಂತ ಮೊದಲೇ ಎಚ್ಚರವಾಯಿತು. ಗರಗನೆ ತಿರುಗುತ್ತಿದ್ದ ಸೀಲಿಂಗ್ ಫ್ಯಾನನ್ನು ಧಿಟ್ಟಿಸುತ್ತಾ ಮಲಗಿದ್ದ ನನಗೆ ಬೆಳಗಿನ ಹಕ್ಕಿಗಳ ಚಿಲಿಪಿಲಿ ಸದ್ದು ವಿಭಿನ್ನವಾದೊಂದು ಯೋಚನೆನ್ನು ಹುಟ್ಟುಹಾಕಿತು. ರಾತ್ರಿಯಿಡೀ ರಾಧಾರ ಯೋಚನೆಯಲ್ಲೇ ಕಳೆದ ನನಗೆ ಒಂದರೆಕ್ಷಣವೂ ಸರಿಯಾಗಿ ನಿದ್ರಿಸಲು ಸಾಧ್ಯವಾಗಿರಲಿಲ್ಲ. ಚಿತ್ರವಿಚಿತ್ರವಾದ ಪ್ರೆಶ್ನೆಗಳು ಹಾಗು ಅಷ್ಟೇ ಘೋರವಾದ ಉತ್ತರಗಳು ನನನ್ನು ಕೊರೆದುಹಾಕಿದ್ದವು. ಇನ್ನು ಹೀಗೆಯೇ ಯೋಚಿಸಿದರೆ ಆಗದು ಎನುತ ಎದ್ದು ಟೆರೇಸಿನ ಮೇಲೆ ಬಂದೆ. ತಂಪಾದ ಗಾಳಿ ಹಿತವಾಗಿ ನನ್ನನು ತಬ್ಬಿಕೊಂಡಿತು. ಕಾಲಿಗೆ ಮೆಟ್ಟಿಕೊಂಡಿದ್ದ ಚಪ್ಪಲಿಯನ್ನು ಅಲ್ಲಿಯೇ ಪಕ್ಕಕ್ಕೆ ಬಿಟ್ಟು ಜಗತ್ತನ್ನು ಬೆಳಗಲು ಅಣಿಯಾಗುತ್ತಿದ್ದ ಜೀವದೀಪದೆಡೆಗೆ ನೋಡುತ್ತಾ ನಿಂತೇ. ಯಾವುದೂ ಮಹತ್ವದ ಕಾರ್ಯಕ್ಕೆ ಸದ್ದಿಲ್ಲದೇ ಹೋಗುತ್ತಿರುವಂತೆ ನಿಧಾನವಾಗಿ ಮುಂದುವರೆಯುತ್ತಿದ್ದ ಹಕ್ಕಿಗಳ ಸಾಲು ನನ್ನ ಮನಸ್ಸನ್ನೂ ತಮ್ಮೊಟ್ಟಿಗೆ ತೇಲಿಸಿಕೊಂಡು ಹೋದವು. ಕೈಗಳು ತಂತಾನೆ ಜೋಡಲ್ಪಟ್ಟವು. ಸೂರ್ಯನಮಸ್ಕಾರದ ಹನ್ನೆರೆಡು ಆಸನಗಳ ನಂತರ ಪದ್ಮಾಸನವಾಗಿ ಕೂತು ಓಂಕಾರವನ್ನು ಗುನುಗತೊಡಗಿದೆ. ಆಹಾ.. ಆ ನಿರ್ಲಿಪ್ತ ವಾತಾವರದಲ್ಲಿ ಅಕ್ಷರಸಹಃ ಹಾರುತ್ತ ದೂರ..ದೂರ.. ಬಹುದೂರ ಸಾಗಿದಂತಹ ಅನುಭವವನ್ನು ಅನುಭವಿಸಿದವನಿಗೇ ಗೊತ್ತು. ಸಿಟ್ಟು, ಕೋಪ, ತಾಪ, ಮಧ, ಮತ್ಸರ, ಕಿಚ್ಚು, ಪ್ರೀತಿ, ನಾನು.. ಎಂಬ ಎಲ್ಲವನ್ನು ಬಿಟ್ಟೂ, ಬಿಡದಂತೆ ಬಲು ದೂರ ಹಿತವಾದೊಂದು ಪ್ರದೇಶಕ್ಕೆ ಸಾಗಿದಂತಹ ಅಮೋಘ ಅನುಭವ.

ಅಂತ್ಯವಿರದ ಗುರಿಯೆಡೆಗೆ ಗುರಿಯ ಪಯಣ…

ಅದೆಷ್ಟೋ ಸಮಯದ ನಂತರ ಕಣ್ಣು ತೆರೆದೆ. ಸೂರ್ಯದೇವ ಅದಾಗಲೇ ತನ್ನ ಕಾರ್ಯವನ್ನು ಕೈಗೆತ್ತಿಕೊಂಡು ಪ್ರಕರವಾಗಿ ಬೆಳಗುತ್ತಿದ್ದಾನೆ. ಕೂಡಲೇ ಕೆಳಗಿಳಿದು ಬಂದು ಘಮಘಮಿಸುವ ಘಾಡ ಕಾಫಿಯನ್ನು ಮಾಡಿಕೊಂಡು ಮೊಬೈಲಿನೊಟ್ಟಿಗೆ ಪುನ್ಹ ಮೇಲೆ ಬಂದೆ. ಬೆಳಗಿನ ಹಿಂದೂಸ್ತಾನಿ ರಾಗವೊಂದನ್ನು ಹಾಕಿ ಕಾಫಿಯನ್ನು ಹೀರುತ್ತಾ ಹೋದಂತೆ ಮನಸ್ಸು ಹಲವಾರು ಆಸೆಗಳನ್ನು ಚುಗುರೊಡೆಸಿತು. ಕೂಡಲೇ ವೀಣೆಯನ್ನು ನುಡಿಸುವ ಮನಸಾಯಿತು. ಆದರೆ ವೀಣೆಯಾಗಲಿ ಅದನ್ನು ನುಡಿಸುವ ಪ್ರವೀಣತೆಯಾಗಲಿ ನನ್ನಲ್ಲಿರಲಿಲ್ಲ.

'ರಾಗ್ ವಿಭಾಸ್ ... ಕಿಶೋರಿ ಅಮೋನ್ಕರ್..?' ಎಂದ ಆದಿ ನನ್ನ ಪಕ್ಕಕ್ಕೆ ಬಂದು ನಿಂತನು. ರಾಗದ ಆಳದಲ್ಲಿ ಮುಳುಗಿದ್ದ ನಾನು ತಲೆಯನ್ನಷ್ಟೇ ಅಲ್ಲಾಡಿಸುತ್ತ ಆತನ ಪ್ರೆಶ್ನೆಗೆ ಹೌದೆಂದೇ. ಇಬ್ಬರು ಬಹಳ ಹೊತ್ತು ಸಂಗೀತವನ್ನು ಆಸ್ವಾದಿಸಿದೆವು. ಗಮಕ ಹಾಗು ಸ್ವರಗಳ ಸಮ್ಮಿಶ್ರಣದ ಆ ಮಧುರ ಹಿನ್ನಲೆಯಲ್ಲಿ ಮೂಡುತ್ತಿದ್ದ ಹಕ್ಕಿಗಳ ಸದ್ದು ಮತ್ತೊಂದು ಬಗೆಯ ಭ್ರಮಾ ಲೋಕವನ್ನೇ ಅಲ್ಲಿ ಸೃಷ್ಟಿಸಿದವು. ಆದಿ ನಾನು ಮಾತಾಡುವರೆಗೂ ಸುಮ್ಮನಿದ್ದ.

'ವಾವ್ .. ಈ ಸಂಗೀತ ಅನ್ನೋ ಭಾವಾತೀತ ಭಾವವನ್ನು ಕಂಡು ಹಿಡಿದ್ದಿದಾದರೂ ಯಾರು ಮಾರಾಯ..' ಮಂದ್ರದಲ್ಲಿ ಕೊನೆಗೊಂಡ ರಾಗಕ್ಕೆ ತಲೆಗೂಗುತ್ತ ನಾನೆಂದೆ.

'ಪರಿಸರ..' ಎಂದ ಆದಿ ಮುಂದುವರೆದ. 'ನಿರ್ಜೀವ ವಸ್ತುಗಳಿಂದ ಮೂಡುವ ಸದ್ದಿಗೇ ನಾವು ಹೀಗೆ ತಲೆದೂಗುತ್ತಿರಬೇಕಾದರೆ ಇನ್ನು ನೈಸರ್ಗಿಕವಾಗಿ ಮೂಡುವ ಆ ಮಧುರ ವಾಣಿಗೆ ಏನೆನ್ನಬೇಕು? ಪರಿಸರ ಪ್ರತಿ ಘಳಿಗೆಗೂ ಒಂದೊಂದು ರಾಗವನ್ನು ಏಕೆ ಹೊರಹೊಮ್ಮಿಸುತ್ತಿರಬಾರದು? ರಾಗ, ಗಮಕ, ಶ್ರುತಿ ಹಾಗು ತಾಳಗಳು ಇದ್ದರೂ ಕೊಂಚ ಭಿನ್ನವಾಗಿರಬಹುದು. ಅವು ಪರಿಸರದ ಸಂಗೀತವಾಗಿರಬಹುದು. ಯಾರಿಗೊತ್ತು? ಹಕ್ಕಿಗಳು ಬೆಳಗಿನ ಜಾವ ಕೂಗುವ ವಾಣಿಗೆ ನಾವು ಯಾವ ರಾಗದ ಹೆಸರಿಡಬೇಕು? ನಾವುಗಳೇಕೆ ಈ ಬಗೆಯಲ್ಲಿ ಯೋಚಿಸಬಾರದು? ಸಂಗೀತದ ಒಂದು ಹೊಸ ಬಗೆಯನ್ನೇ ಇಲ್ಲಿ ಆವಿಷ್ಕರಿಸಬಹುದಲ್ಲವೇ..?' ಎಂದ.

'ನಿಜ .. ಸಾವು ಬದುಕಿನ ಅಂತರ ನಮಗೆ ನೂರು ವರ್ಷವಾದರೆ ಅವಕ್ಕೆ ಕೇವಲ ಒಂದೆರೆಡು ವರ್ಷಗಳು. ನಾವು ನಮ್ಮ ಇಡೀ ಜೀವನದಲ್ಲಿ ಸಾಧಿಸುವುದನ್ನು ಅವು ಕೆಲವೇ ಕೆಲವು ತಿಂಗಳುಗಳಲ್ಲಿ ಸಾಧಿಸಬಲ್ಲವು. ಅದು ಸಂಗೀತವಾಗಲಿ ಅಥವಾ ಮತ್ತೇನೇ ಆಗಲಿ. ನಾವುಗಳು ಆ ರೀತಿನೂ ಯಾಕೆ ಯೋಚ್ನೆ ಮಾಡ್ಬಾರು?'

'ಮಾನವ ಬಂದುಕುತ್ತಿರೋದೇ ಒಂದು ಭ್ರಮ ಲೋಕದಲ್ಲಿ .. ಅಸ್ತಿತ್ವದಲ್ಲಿ ಇರದೇ ಇರೋ ನಕ್ಷತ್ರನೇ ನಿಜ ಅನ್ಕೊಂಡು ಬದುಕುವ ಆತನ ಚಿಂತನೆ ಬಹಳ ಸೀಮಿತವಾದದ್ದು. ಎಲ್ಲಿಯವರೆಗೂ ಆತ ಪರಿಸರಕ್ಕಾಗಿ ನಾವುಗಳೇ ವಿನಃ ನಮಗಾಗಿ ಪರಿಸರ ಅಲ್ಲ ಎಂದು ಅದ್ರೊಟ್ಟಿಗೆ ಏಕವಾಗಿ ಬದುಕಲು ಪ್ರಯತ್ನಿಸುವುದಿಲ್ಲವೋ ಅಲ್ಲಿಯವರೆಗೂ ಅದು ಆತನಿಗೆ ನಿಗೂಢವಾಗಿಯೇ ಇರುತ್ತದೆ. ಈ ಹಕ್ಕಿಗಳ ಸದ್ದಿನ ತರ.' ಎಂದು ಸುಮ್ಮನಾದನು

ಆದಿಯ ಮಾತುಗಳು ನನ್ನ ಆಳವನ್ನು ತಲುಪಿದವು.



****



'Waw! Is it that simple?' ಶಶಿಕಲಾ ಕೂತಿದ್ದ ಬೆಂಚಿನ ಮುಂದೆಯೇ ನಿಂತು ಆಕೆ ಹೇಳಿದ ಥಿಯರಿಯೊಂದನ್ನು ಕೇಳುವಂತೆ ನಟಿಸುತ್ತಾ ಹೇಳಿದ ಲೋಕೇಶ. ಪ್ರತಿ ಕ್ಷಣಕ್ಕೂ ಆತ ಆಕೆಯ ಪಕ್ಕದಲ್ಲಿದ್ದ ಉಷಾಳನ್ನು ತನ್ನ ಕಿರುನೋಟದಲ್ಲಿ ನೋಡುತ್ತಾ ಕಾಟಾಚಾರಕ್ಕೆ ಎಂಬಂತೆ ಶಶಿಕಲಾಳ ಮಾತಿಗೆ ಹುಂಗುಡುತ್ತಿದ್ದ. ಈತನ ಯಾವ ಡೊಂಬರಾಟಗಳಿಗೂ ಕ್ಯಾರೇ ಎನ್ನದೆ ಸಹಜವಾಗಿರುತ್ತಿದ್ದ ಉಷಾಳ ಸ್ವಭಾವ ಆತನಿಗೆ ಪದೇ ಪದೇ ಹಿಂಸಿಸುತ್ತಿತ್ತು. ಮೊದಲೆಲ್ಲ ಕೊಂಚ ಜೆಲಸಿಗಾದರೂ ತನ್ನೊಟ್ಟಿಗೆ ಮಾತನಾಡುವಳು ಎಂದುಕೊಂಡಿದ್ದ ಆತನಿಗೆ ಯಾವಾಗ ಆಕೆ ‘I don’t care.. get off..’ ಎಂಬ ಸ್ವಭಾವವನ್ನು ತೋರತೊಡಗಿದಳೋ ಆಗೆಲ್ಲ ಈತನ ಕಿಚ್ಚು ಕಾಡ್ಗಿಚ್ಚಿನಂತೆ ಹಬ್ಬತೊಡಗಿತು. ಪ್ರತಿ ಕ್ಲಾಸ್ಸಿನ ನಂತರ ಹೀಗೆ ಪ್ರೆಶ್ನೆ ಕೇಳುವಂತೆ ನಟಿಸಿ ಶಶಿಕಲಳ ಬಳಿಗೆ ಬಂದು ಆತ ನಿಲ್ಲುತ್ತಿದ್ದ.

'Yes it is.. could you please repeat it?' ಎಂದ ಶಶಿಯ ಪ್ರೆಶ್ನೆ ಕೂಡಲೇ ಸಿಡಿಲು ಬಡಿದಂತೆ ಬಂದೆರಗಿತು. ಆಕೆ ವಿವರವಾಗಿ ಒಂದನೇ ತರಗತಿಯ ಮಕ್ಕಳೂ ಅರ್ಥೈಸಿಕೊಳ್ಳುವಂತೆ ಹೇಳಿದ ವಿಷಯವನ್ನು ಎಳ್ಳಷ್ಟೂ ಕೇಳದೆ ತನ್ನ ಒಳಕೋಪದಲ್ಲಿ ಮಗ್ನನಾಗಿದ್ದ ಲೋಕೇಶ ಇನ್ನು ಇಲ್ಲಿ ನಿಂತರೆ ಉಷಾಳ ನೋಟದಲ್ಲಿ ತಾನು ಇನ್ನೂ ಬಿದ್ದುಬಿಡಬಹುದೆಂದುಕೊಂಡು ಕೂಡಲೇ,

'ರೀ ಶಶಿ ಬನ್ರಿ ಸಾಕು .. ರಿಪೀಟ್ ಅಂತೆ .. ಎಲ್ಲ ಅರ್ಥ ಆಗಿದೆ .. ಬೈ ದಿ ವೆ, ನಿಮ್ಗೆ ಟ್ರೀಟ್ ಬಾಕಿ ಇತ್ತಲ್ಲ ಇವತ್ತ್ ಕೊಡ್ತೀನಿ ಬನ್ನಿ' ಎಂದ.

ಹುಡುಗನೊಬ್ಬ ಅದರಲ್ಲೂ ಲೋಕೇಶನಂತ ಡೈನಾಮಿಕ್ ಪರ್ಸನಾಲಿಟಿಯ ಯುವಕನೊಬ್ಬ ತನ್ನನ್ನು ಕರೆದದ್ದು ಕೊಂಚ ಅನುಮಾನ ಮೂಡಿಸಿದರೂ ಬ್ಯಾಗನ್ನು ಹೊತ್ತು ಹೊರಟು ನಿಂತಳು ಶಶಿಕಲಾ.



****



'Impressive!! Well done my boy! .. Really proud of you..' ಮಂದವಾಗಿ ಬೀಸುತಿದ್ದ ಗಾಳಿಗೆ ತನ್ನ ಎದೆಯನೋಡ್ಡುತ್ತಾ ನಿಂತಿದ್ದ Mr.ಸಾಲ್ದಾನ ಜೋಸೆಫ್ ಶುಂಠಿಯ ಬೆಳೆಯನ್ನು ನೋಡುತ್ತಾ ಹೇಳಿದರು. ಟಿ ಶರ್ಟನ್ನೇ ಇನ್ ಮಾಡಿ ಬಿಳಿ ಪ್ಯಾಂಟು ಹಾಗು ಬಿಳಿಯ ಶೂ ಅನ್ನು ತೊಟ್ಟು ನಿಂತಿದ್ದ ಅವರು ಒಂತರ ಹಸಿರು ಗದ್ದೆಯಲ್ಲಿ ನಿಂತ ಹಿಮಕರಡಿಯಂತೆ ಕಾಣುತ್ತಿದ್ದರು. ಲೋಕೇಶ ಅವರ ಪಕ್ಕಕ್ಕೆ ತನ್ನ ಕೈಗಳೆರಡನ್ನು ಕಟ್ಟಿಕೊಂಡು ನಿಂತಿದ್ದ. ಹಾಳು ಬಿದ್ದು ಕುಡುಕರ ಅಡ್ಡವಾಗಿದ್ದ ಜಾಗವನ್ನು ಮನಸ್ಸಿಗೆ ಮುದ ನೀಡುವ ಹಸಿರ ಸಿರಿಯನ್ನಾಗಿ ಪರಿವರ್ತಿಸಿರುವ ಅವನ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಲೋಕೇಶ ಅನುಸರಿಸಿದ ಕೃಷಿಯ ಬಗೆಯನ್ನು ಸವಿವರವಾಗಿ ಕೇಳಿದ ಮೇಲಂತೂ ಸಂತೋಷದಿಂದ ತಲೆದೂಗಿದರು.ನಿಮ್ಮಂತ ಯಂಗ್ ಕ್ರಿಯೇಟಿವ್ ಥಿಂಕರ್ಸ್ ನಮ್ಮ ನಾಡಿಗೆ, ದೇಶಕ್ಕೆ ಬೇಕು ಲೋಕೇಶ್ ಎಂದರು.. ಸಾಲ್ದಾನ ಜೋಸೆಫ್ ಮತ್ತೊಮ್ಮೆ ತಮ್ಮ ಗದ್ದೆಯನ್ನು ಸುತ್ತು ಬಂದು ಲೊಕೇಶನ ಹೆಗಲ ಮೇಲೆ ಕೈಯಾಕಿ ‘If you need anything else give me call.. Keep up the good work ’ಎಂದೇಳಿ ತಮ್ಮ ಜೀಪನ್ನೇರಿ ಅಲ್ಲಿಂದ ಹೊರಟರು. ಲೋಕೇಶ ಖುಷಿಯಿಂದ ಪಕ್ಕದಲ್ಲಿದ್ದ ಬೆಟ್ಟವನ್ನು ಏರಿದ. ಒಳದಾರಿಯನ್ನು ಕಂಡುಹಿಡಿದ ಪರಿಣಾಮ ಈಗ ಆ ಭೀಮ ಬೆಟ್ಟ ಬೆಳಗಿನ ಜಾಗಿಂಗ್ ಟ್ರ್ಯಾಕ್ನಂತಾಗಿದೆ. ಮೇಲೇರಿದ ಆತ ನತ್ತಿಯಿಂದ ತಾನು ಬೆಳೆಸಿದ ಗದ್ದೆಯನೊಮ್ಮೆ ನೋಡತೊಡಗಿದ. ಆತನ ಮನಸ್ಸು ಖುಷಿಯಿಂದ ನಲಿಯುತ್ತಿತ್ತು. ಹಲವಾರು ಯೋಚನೆಗಳು ಅಲ್ಲಿ ಹಾದುಹೋಗುತ್ತಿದ್ದವು. ಕೆಲವೊಮ್ಮೆ ತನ್ನ ಸಾಲದ ಹೊರೆಯನ್ನು ತೀರಿಸುವ ಇನ್ವೆಸ್ಟ್ಮೆಂಟ್ನಂತೆ ಅದು ಕಂಡರೆ ಮತ್ತೊಮ್ಮೆ ತಾನೇ ಸ್ವತಃ ಹೆತ್ತು ಹೊತ್ತು ಬೆಳೆಸಿದ ಎಳೆಯ ಮಗುವಂತೆ ಕಾಣಿಸುತ್ತಿತ್ತು. ಆತ ಮೇಲಿಂದ ತನ್ನ ಗದ್ದೆಯನ್ನು ದಿಟ್ಟಿಸುತ್ತಿದ್ದರೆ ಆತ್ತ ಕಡೆಯಿಂದ ಗದ್ದೆಯೂ ಈತನನ್ನು ಮುಗ್ದವಾಗಿ ನೋಡುತ್ತಿರುವಂತೆ ಭಾಸವಾಯಿತು. ಕೂಡಲೇ ಆತನಿಗೆ ವಿಭಿನ್ನ ಆಲೋಚನೆಯೊಂದು ಮೂಡಿತು. ಪರಿಣಾಮ ಮನಸ್ಸು ಗೊಂದಲದಲ್ಲಿ ಮುಳುಗಿತು. ಕಷ್ಟಬಿದ್ದು, ಬಿತ್ತಿ ಬೆಳೆಸಿದ ಸಸಿಗಳು ತನ್ನ ಕರುಳ ಕುಡಿಯೇನೋ ಅನಿಸುತ್ತಿದ್ದ ಆತನಿಗೆ ಅವನ್ನು ಯಾವುದೇ ಕಾರಣಕ್ಕೂ ಕಟಾವು ಮಾಡಬಾರದೆಂಬ ಮಮತೆ ಮೂಡುತ್ತದೆ! ಆತನ ಸ್ಥಿತಿಪ್ರಜ್ಞ ಮನಸ್ಸು ಕಲ್ಪನಾ ಲೋಕದಿಂದ ಹೊರಬರುವಂತೆ ಅರಚುತ್ತಿದ್ದರೂ ಲೊಕೇಶನ ನಿಶ್ಚಯ ಒಮ್ಮೆಲೆ ದೃಢವಾಗುತ್ತದೆ!!

ಅದೇನೇ ಆಗಲಿ, ಅದ್ಯಾರೇ ಅದೇನನ್ನೇ ಅನ್ನಲಿ ಈ ಸಸಿಗಳ ಕುತ್ತಿಗೆಯನ್ನು ನಾ ಕಡಿಯೇನು! ನಾ ಬೆಳೆಸಿದ ಕಂದಮ್ಮಗಳನ್ನು ಅದೇಗೆ ಕೊಲ್ಲಲಿ?!



****



'ಕಿಸ್ ಮಿ, ಪ್ಲೀಸ್..' ಬರೆಯತೊಡಗಿದ ಕತೆಯ ಒಂದು ಕ್ಯಾರೆಕ್ಟ್ರನ್ನು ವಿವರಿಸತೊಡಗಿದ ನನಗೆ ರಾಧಾರ ಮಾತನ್ನು (ಆಸೆಯನ್ನು!) ಕೇಳಿ ಆಕಾಶವೇ ಕಳಚಿ ಬಿದ್ದಂತಹ ಅನುಭವವಾಯಿತು. ಕಣ್ಣುಗಳನ್ನು ಸಣ್ಣಗಾಗಿಸಿ, ಸಿಹಿತಿಂಡಿಗೆ ಹಠಹಿಡಿಯುವ ಮಕ್ಕಳಂತೆ ಮುಖವನ್ನು ಮಾಡಿ, 'ಅಚ್ಚ ಜಿ ಮೈ ಹಾರಿ ಚಲೋ ಮಾನ್ ಜಾಹೂ ನ' ಹಾಡಿನ ಮಧುಬಾಲಳಂತೆ ನನ್ನನ್ನು ನೋಡುತ್ತಾ ಕೇಳಿದ ಅವರ ಆ ಪರಿಗೆ ಒಲ್ಲೆ ಎನ್ನುವ ಗಂಡಸು ಬಹುಷಃ ಇಡೀ ಬ್ರಹ್ಮಾಂಡದಲ್ಲೇ ಇದ್ದಿರಲು ಸಾಧ್ಯವಿಲ್ಲವೇನೋ. ಏನು ಉತ್ತರಿಸಬೇಕೆಂದು ತಿಳಿಯದೆ ನಾನು ತಡವರಿಸಿದೆ.

'ರಿ ರಾಧ .. ಇತ್ತೀಚಿಗೆ ನೀವು ತುಂಬಾನೇ ಹಾಳಾಗಿದ್ದೀರಾ!'

'ಒಹ್, ಇಸ್ ಇಟ್ .. !' ಎಂದು ಸುಮ್ಮನಾಗಿ ಮುಂದೆ ಮತ್ತೇನನ್ನೋ ಹೇಳಲು ಮುಂದಾದ ಅವರು ಅದನ್ನು ಬದಲಿಸಿ 'ವಾಟೆವರ್.. ಕಿಸ್ ಮಿ ನೌ' ಎಂದು ಪುನ್ಹ ಗೋಗರೆಯತೊಡಗಿದರು.

‘Comeon . .ಇದು ಕಾಲೇಜ್ ರೀ . .ನನ್ನ್ ರೂಮ್ ಅಲ್ಲ' ನಾನು ನಗಾಡಿದೆ.

‘Doesn’t make any difference..’ ಎಂದ ಅವರು ನನ್ನ ಟಿಶರ್ಟ್ ಅನ್ನು ಹಿಡಿದು ಹತ್ತಿರಕ್ಕೆ ಎಳೆದುಕೊಂಡರು. ನನ್ನ ಎದೆ ಭಯದಿಂದಲೋ, ಉತ್ಸಾಹದಿಂದಲೋ ಗಡಗಡನೆ ನಡುಗತೊಡಗಿತು.ಟೆರೇಸಿನ ಮೇಲೆ ಸದ್ಯಕಂತು ನಾವಿಬ್ಬರೇ ಇದ್ದರೂ, ಗಂಡು ಮಾನವನ ನನ್ನೀ ಅಸೆ ಆಕಾಂಕ್ಷೆಗಳು ದೇವರಾಣೆಗೂ ಜಾಗೃತಗೊಂಡಿದ್ದರೂ, ಜೀವನದ ಮೊಮ್ಮದಲ ಚುಂಬನದ ಸುವರ್ಣಾವಕಾಶ ಮಗದೊಮ್ಮೆ ಎದುರಾಗಿದ್ದರೂ ನನ್ನ ಮನ ಪುನ್ಹ ತನ್ನ ಅಹಃ ಅನ್ನು ತೋರತೊಡಗಿತು.

ಸೊ, ನಿನ್ನ ಅವರ ಸಂಬಂಧ ಇಂತಹ ಕೆಲವು ಘಳಿಗೆಗಳಿಗೆ ಮಾತ್ರ ಸೀಮಿತವೇ? ಗೆಳೆತನ, ಸಲಿಗೆ ಅಂದ ಮಾತ್ರಕ್ಕೆ .. ಎಂದು ಏನೇನೋ ಗೊಣಗತೊಡಗಿತು.

‘What Happened?!’ ನಯವಾಗಿ ಕೇಳಿದರು ಅವರು.

ಅಗಣಿತ ಯೋಚನೆಯಲ್ಲಿ ಮುಳುಗಿದ ನನಗೆ ಆಕೆಯ ಪ್ರೆಶ್ನೆಗೆ ಉತ್ತರವನ್ನು ಹೇಳಲು ತಡವರಿಸತೊಡಗಿದೆ. ಏನೋ ಒಂದು ಗಟ್ಟಿ ನಿರ್ಧಾರವನ್ನು ಮಾಡಿಕೊಂಡಂತೆ ನಾನು,

ಆಕೆಯ ಕಪೋಲಗಳೆರಡನ್ನೂ ಹಿಡಿದು 'ರಾಧಾ .. Marry me!!' ಎಂದು ಪ್ರಯಾಸಪಟ್ಟು ಕೇಳಿದೆ. ನನ್ನ ಜೀವನದ ಅಷ್ಟೂ ಆಶೋತ್ತರಗಳನ್ನು ಈಡೇರಿಸುವ ಅಕ್ಷಯಪಾತ್ರೆಯಂತೆ ಆಕೆಯ ನುಣುಪಾದ ಮುಖ ನನಗೆ ಭಾಸವಾಯಿತು. ಬಹುಷಃ ನನ್ನ ಜೀವನದ ಗುರಿ ಸ್ಪಷ್ಟವಾಗತೊಡಗಿತು.

ಕೆಲಕ್ಷಣಗಳ ಕಾಲ ವಿಚಿತ್ರ ಭಂಗಿಯಲ್ಲಿ ನನ್ನ ನೋಡಿದ ಆಕೆ,

‘What did you just say?! ನನ್ನ ಕೈಗಳನ್ನು ಆಕೆಯ ಕೆನ್ನೆಗಳಿಂದ ಬೇರ್ಪಡಿಸಿ ದೂರಕ್ಕೆ ತಳ್ಳಿ ‘What’s your age you know by the way?’ ಎಂದು ಕುಪಿಸಿಗೊಂಡು ಕೇಳಿದರು.

'ಟ್ವೆಂಟಿ' ಪೆದ್ದನಂತೆ ನಾನು ಉತ್ತರಿಸಿದೆ.

'ಏನ್ ಕಾಮಿಡಿ ಮಾಡ್ತಿದ್ದೀಯಾ.. You know my age' ಎಂದು ಚಿದಂಬರ ರಹಸ್ಯವನ್ನು ಭೇದಿಸು ಸಾಧ್ಯವಾದರೆ ಎಂಬಂತೆ ನನ್ನ ಕೇಳಿದಳು.

'ಟ್ವೆಂಟಿ ಒನ್ ?'

'ನಿನ್ ತಲೆ .. I’m 25' ಎಂದು ಸುಮ್ಮನಾದರು

'ಸೊ ವಾಟ್ .. I love you and would like to marry you..That's it' ಎಂದು ಸುಮ್ಮನಾಗಿ 'That must be my destination'

'Destination?..What kind of Destination it is? And you love me in what bloody sense?' ಎಂದು ತುಸು ಜೋರಗಿಯೇ ಹೇಳಿದರು. ಈಗ ಕಾಣುತ್ತಿರುವ ಗಂಟಿಕ್ಕಿಕೊಂಡಿದ್ದ ಕೋಪಭರಿತ ಅವರ ಮುಖಕ್ಕೂ ಕೆಲ ಸೆಕೆಂಡುಗಳ ಹಿಂದಷ್ಟೇ ನನ್ನ ಕೈಯ ಮೇಲೆ ಅರಳಿದ ತಾವರೆಯಂತಹ ಆ ಚಹರೆಗೂ ಅಜಗಜಾಂತರ ವ್ಯತ್ಯಾಸವಿದ್ದಿತು.

'Don’t overreact.. ನೀವೂ ನನ್ನ ಇಷ್ಟ ಪಡುತ್ತಿದ್ದೀರಾ ಎನ್ನುವುದು ಗೊತ್ತು .. ನನ್ನ ಡಿಗ್ರಿ ಮುಗಿಯುವವರೆಗೂ ತಾಳಿ .. ನಂತರ ನಾನೇ ಖುದ್ದಾಗಿ ಮನೆಯವರನ್ನ ಒಪ್ಪಿಸ್ತೇನೆ’ ಎಂದು ನಾನು ಆಕೆಯ ಹತ್ತಿರಕ್ಕೆ ತೆರಳಿದೆ. ಆದರೆ ಈ ಬಾರಿ ಕೊಸರಾಡತೊಡಗಿ ತೀಕ್ಷ್ಣವಾಗಿ ನೋಡಿದ ಆಕೆ ನನ್ನ ಕೆನ್ನೆಯ ಮೇಲೊಂದು ಛಟಾರನೆ ಭಾರಿಸಿ ಅಲ್ಲಿಂದ ಬಿರಬಿರನೆ ಹೊರನೆಡೆದರು. ಆ ಹೊಡೆತ ನನಗೆ ಗೊಂದಲದೊಟ್ಟಿಗೆ ವಿಪರೀತ ನೋವನ್ನೂ ಉಂಟುಮಾಡಿತು. ಅಂತಹ ಅನ್ನಬಾರದನ್ನು ನಾನು ಏನಂದೆ ಎಂದು ಯೋಚಿಸುತ್ತಾ ನಿಂತೆ




ಮುಂದುವರೆಯುವುದು......

No comments:

Post a Comment