Friday, October 26, 2018

#MeToo, ಒಂದೆರಡು ಪ್ರೆಶ್ನೆಗಳು from Me Too...!

ಸ್ಥಳ ವರ್ಲಿ, ಮುಂಬೈ. ಅದು ಕಡುಕಪ್ಪು ಕೋಟುಗಳು ಹಾಗು ಎಲ್ಲೆಂದರಲ್ಲಿ ಸೀಳಿಕೊಂಡು ಗಾಳಿಗೆ ಹಾರಾಡುತ್ತಿರುವ ಡ್ರೆಸ್ಸುಗಳೇ ತುಂಬಿ ತುಳುಕುತ್ತಿರುವ ಸ್ಟಡಿಯಂ. ಸೇರಿರುವರೆಲ್ಲ ಸಿನಿಮಾರಂಗದಲ್ಲಿ ಒಂದಿಲ್ಲೊಂದು ಬಗೆಯಲ್ಲಿ ಗುರುತಿಸಿಕೊಂಡಿರುವ ದೂಡ್ಡ ದೊಡ್ಡ ಹಸ್ತಿಗಳು. ಘಾಡ ಮೌನದ ಸೀರಿಯಸ್ನೆಸ್ ಅನ್ನು ಒಳಗೊಂಡ ಆ ಮುಖಗಳನ್ನು ಗಮನಿಸಿದಾಗ ಮುಂದಿದ್ದ ಸ್ಟೇಜಿನ ಮೇಲೆ ಇಂದು ತೀರಾಸಾಮನ್ಯವೆನಿಸಿಕೊಂಡಿರುವಂತೆ ಕೇಂದ್ರ ಸರ್ಕಾರಗಳ ನೆಡೆಯ ವಿರುದ್ಧವೋ, ದೇವಸ್ಥಾನಗಳಿಗೆ ಮಹಿಳೆಯ ಪ್ರವೇಶ ಬೇಕೆಂಬುದ್ದರ ಬಗ್ಗೆಯೂ ಅಥವಾ ಜೀವ ಪಣವಿಟ್ಟು ಕಾದಾಡುವ ಸೈನಿಕರ ನಡೆಗಳ ಬಗ್ಗೆಯೂ ಜನತೆಗೆ ಅರ್ಥವಾಗದ ದುಬಾರಿ ಭಾಷೆಯಲ್ಲಿ ಅವರವರೇ ಚರ್ಚಿಸಿ, ಮಧ್ಯದಲ್ಲಿ ಒಂದೆರೆಡು ಮದ್ಯಗಳನ್ನು ಏರಿಸಿ, ಕೊನೆಗೆ ತೂರಾಡುತ್ತಾ ಮನೆಗೆ ತೆರಳುವ ಹೈ ಪ್ರೊಫೈಲ್ ಪ್ರಗತಿಪರರ ಕಾರ್ಯಕ್ರಮವೇನೋ ಎಂದೆನಿಸುತ್ತಿತ್ತು. ಆದರೆ ಅಂದು ಅಲ್ಲಿ ನೆಡೆದದ್ದೇ ಬೇರೆ. ಮುಂದಿನ ಮೂರ್ನಾಲ್ಕು ಘಂಟೆ ಅಲ್ಲಿ ನೆಡೆದ ಪ್ರಹಸನ ಇಡೀ ದೇಶಕ್ಕೆ ದೇಶವೇ ಹುಚ್ಚೆದ್ದು ಚರ್ಚಿಸುವ ವಿಷಯವಾಯಿತು. ಸ್ಲೇಟೊಂದನ್ನು ಹಿಡಿದು ಅರೆನಗ್ನಗೊಂಡ ಪಬ್ಲಿಸಿಟಿಯನ್ನೇ ಸಾಧನೆ ಎಂದುಕೊಂಡು ಅರಚಾಡುವ ಕೆಟಗರಿಯ ಮೂವರು, ವಾನರರ ಸೈನ್ಯದ ಕಿರಾತಕರಂತಿರುವ ಆರೇಳು ಜನರನ್ನು ಸ್ಟೇಜಿನ ಮೇಲೆ ಕರೆಸಿ ಅವರ ಮೂರು ತಲೆಮಾರಿನ ಕುಟುಂಬವನ್ನು ಜಾತಿ ವರ್ಣವೆನ್ನದೇ ಮುಖದಿಂದ ಹಿಡಿದು ಮರ್ಮಾಂಗದವರೆಗೂ ಅಣಕಿಸಿ, ಹೀಯಾಳಿಸಿ ತಮ್ಮ ವಿಷಯ ದಾಹದ ತೃಷೆಯನ್ನು ತೀರಿಸಿಕೊಂಡಿದ್ದನ್ನು ಅಲ್ಲಿ ನೆರೆದಿದ್ದ ಜೆಂಟಲ್ ಮ್ಯಾನ್ ಡ್ರೆಸ್ಸಿನ ಸೆಲೆಬ್ರಿಟಿಗಳು ಎದ್ದು ಬಿದ್ದು ನಗುತ್ತಾ ಸ್ವಾಗತಿಸಿದರು. ಕೇಕೆಹಾಕುತ್ತ ಕುಣಿದು ಕುಪ್ಪಳಿಸಿದರು. ಅಲ್ಲಿ ನೆರೆದಿರುವರಷ್ಟೇ ಅಲ್ಲದೆ ಬಾರದಿರುವರನ್ನೂ ಮಾತಿನಲ್ಲಿ ಅಳಿದು ಜಾಡಿಸಿದರು. ಹಿರಿಯರು ಕಿರಿಯರು ಎಂಬೋದನ್ನು ಲೆಕ್ಕಿಸದೆ ನೆಡೆದ ಆ 'A' ಕೆಟಗರಿಯ ಕಾರ್ಯಕ್ರಮವನ್ನು ಪ್ರೆಶ್ನಿಸಹೊರಟವರಿಗೆ 'ಅಭಿವ್ಯಕ್ತಿ' ಸ್ವಾತಂತ್ರ್ಯದ ಬಾವುಟವನ್ನು ಹಾರಿಸುತ್ತ ನಂತರ ನುಳಚಿಕೊಂಡರು. ಯಾವುದೇ ಹ್ಯಾಷ್ ಟ್ಯಾಗ್ ಗಳಾಗಲಿ, ಪಿಟಿಷನ್ಗಳ ಅಭಿಯಾನಗಳಾಗಲಿ ಅಂದು ಕಾಣಲಿಲ್ಲ. ಅಲ್ಲಿ ನೆರೆದಿದ್ದ ಯಾವೊಬ್ಬ ಸೆಲೆಬ್ರೆಟಿಯೂ ನನ್ನ ಮಾನ ಹರಾಜಾಯಿತು ಏನುತಾ ಮಾನನಷ್ಟ ಮೊಕದ್ದಮ್ಮೆಯನ್ನು ಊಡಲಿಲ್ಲ.... ಏಕೆ?

ಅದು ಟ್ರಡಿಷನಲ್ ಚಿತ್ರಗಳ ಓಟವನ್ನು ತಡೆಯಿಡಿದು, ಬಡಿದು, ತುಳಿದು ಬೆಳೆಯಲೆತ್ನಿಸುತಿದ್ದ ಕಮರ್ಷಿಯಲ್ ಚಿತ್ರಗಳ ಜಮಾನ. ಆದರೆ ಅದೆಷ್ಟೇ ಕಮರ್ಷಿಯಾಲಿಟಿ ಚಿತ್ರದಲ್ಲಿ ಇದ್ದರೂ ಕ್ಲಾಸಿಕ್ ಚಿತ್ರಗಳ ಹೊಳಪಿನ ಮುಂದೆ ಆವುಗಳು ತೀರಾನೇ ಮಂಕಾಗುತ್ತಿದ್ದವು. ಕ್ರಿಯೆಟಿವಿಟಿ ಏನೆಂಬುದೇ ಅರಿಯದ ಅಮಾಯಕ ನಿರ್ದೇಶಕ ಆಗ ಬೇರೆದಾರಿ ಕಾಣದೆ ಕೆಲವು ವಯಸ್ಕ ಸೀನ್ಗಳನ್ನು ಚಿತ್ರಗಳಲ್ಲಿ ತೂರಿಸಬೇಕಾಯಿತು. ನಾವು ನಟರು, ಡೈರೆಕ್ಟರ್ ಸಾಹೇಬರ ಕೈಯಲ್ಲಿ ನಲಿಯುವ ಗೊಂಬೆಗಳು, ಅವರು ಆಡಿಸಿದ ಆಟವನ್ನು ಆಟವಾಡುವವರು ಎಂಬ ಸ್ಟೇಟ್ಮೆಂಟ್ ಗಳನ್ನು ನೀಡುತ್ತಾ ನಟ ನಟಿಯರೂ ತಮ್ಮ ಮೂರು ಕಾಸಿನ ಮರ್ಯಾದೆಯ ಹರಾಜನ್ನು ಕೊಂಚ ಡೈರೆಕ್ಟರ್ಗಳಿಗೂ ಹೊರಿಸಿ, ನಟಿಸಿ, ಹಣವನ್ನು ಗಳಿಸಿ ಅಲ್ಲಿಂದ ಪಾರಾಗುತ್ತಿದ್ದರು. ಹೆಚ್ಚಾಗಿ ತಮ್ಮ ವೃತ್ತಿಜೀವನದ ಆದಿಯಲ್ಲಿರುತ್ತಿದ್ದ ಅವರುಗಳು ಹಣ ಹಾಗು ಪಬ್ಲಿಸಿಟಿಗಳು ಸಿಗುವ ಕ್ರ್ಯಾಶ್ ಕೋರ್ಸ್ ಗಳ ಶಾರ್ಟ್ಕಟ್ಟನು ಹಿಡಿದ್ದಿದ್ದರು. ಆಗ ಎಲ್ಲವೂ ಸರಿ. ಎಲ್ಲರೂ ತನ್ನ ಜೀವನವನ್ನು ಕಟ್ಟಿ ಬೆಳೆಸುವ ಮಾರ್ಗದರ್ಶಕರು. ಅದಕ್ಕಾಗಿ ಚಿತ್ರದಲ್ಲಿ ಎಂತಹ ಸೀನ್ಗಳನ್ನೂ ಮಾಡಲು ಸಿದ್ದ. ಏನೂ ಮಾಡಲೂ ಸಿದ್ದ. ಏಕೆಂದರೆ ಅದು 'ಬೋಲ್ಡ್' ಕ್ಯಾರೆಕ್ಟರ್. ಅಲ್ಲದೆ ಅದೊಂದು ಆರ್ಟ್. ದುರ್ಬಿನ್ ಇಟ್ಟು ಕಣ್ಣರಳಿಸಿ ನೋಡಿದರೂ ಎಳ್ಳಷ್ಟೂ ನಟನೆಯ ಅಂಶವನ್ನು ಕಾಣದ ಆ ಮುಖಗಳು ಆರ್ಟ್ ಅಂಡ್ ಕ್ಯಾರೆಕ್ಟರ್ ಗಳ ಬಗ್ಗೆ ಮಾತನಾಡುವಾಗ ಅಂದು ಕಿವಿಯಿಟ್ಟು ಕೇಳುತ್ತಾ ಸಿಳ್ಳೆ ಚಪ್ಪಾಳೆಗಳನ್ನು ಬಾರಿಸಿದ ಗುಂಪನ್ನೂ ಶ್ಲಾಘಿಸಲೇ ಬೇಕು ಬಿಡಿ. ಅದೇನೇ ಇರಲಿ. ಈಗ ದಶಕಗಳ ನಂತರ ಮತ್ತದೇ ಕ್ಯಾರೆಕ್ಟರ್ಗಳು ತಲೆಯೆತ್ತಿವೆ. ತಮ್ಮ ನಟನ ಕೌಶ್ಯಲ್ಯದ ಹಿರಿಮೆಗೆ ಮೂರು ದಿನದ ಮಟ್ಟಿಗೆ ನೆಟ್ಟಗೆ ಚಿತ್ರರಂಗದಲ್ಲಿ ನೆಲೆಯೂರಲಾಗದ ಅವುಗಳು ಈಗ ಮತ್ತೊಮ್ಮೆ ಟಿವಿ ಪರದೆಯ ಮೇಲೆ ಬಂದಿವೆ. ಕೈಗೊಂದು ಕಾಲಿಗೊಂದು ಸಿಗುವ ರಿಯಾಲಿಟಿ ಷೋಗಳ ದೃಷ್ಟಿ ತಮ್ಮೆಡೆ ಹರಿಯಲೋ ಅಥವಾ ಮತ್ತದೇ ಪುಕ್ಕಟೆ ದೊರೆಯುವ ಹಣ ಹಾಗು ಪಬ್ಲಿಸಿಟಿಯ ಧಾಹಕ್ಕೋ ಆತೊರೆಯುವ ಅವುಗಳ ಹಪಾಹಪಿ ಪ್ರೆಸ್ ಕಾನ್ಫೆರೆನ್ಸ್ ಒಂದನ್ನು ಕರೆಸಿ ದಶಕಗಳ ಹಿಂದೆ ಜರುಗಿದ ಶೋಷಣೆಯನ್ನು ಊರು ಬಿದ್ದರೂ ಕ್ಯಾರೇ ಎನ್ನದೆ ಸೆಲೆಬ್ರಿಟಿಗಳ ಬಾಲದ ಹಿಂದೆ ಅಲೆಯುವ ಕೆಲ ಮಾಧ್ಯಮಗಳ ಮುಂದೆ ಕಾಣುತ್ತದೆ. ಅದೊಂದು ದಿನ, ಅದೆಲ್ಲೋ, ಅದೆಷ್ಟೊತ್ತಿಗೋ ನನ್ನ ಮೇಲೆ ಆತ ಅಸಭ್ಯವಾಗಿ ವರ್ತಿಸಿದ, ಹೇಳಬಾರದ ಮಾತನ್ನು ಹೇಳಿದ, ಶೋಷಿಸಿದ ಎಂದೆಲ್ಲಾ ಒದರುತ್ತಾ ನೆರೆದಿರುವವರ ಸಿಂಪತಿಯನ್ನು ಪಡೆಯಲೆತ್ನಿಸುವ ಅವುಗಳ ಪ್ರಸ್ತುತ ಆಟ ಯಾರಿಗೇನು ತಿಳಿಯದಂತಲ್ಲ. ಕ್ರಿಕೆಟ್ ದಿಗ್ಗಜರಿಂದಿಡಿರು ಪ್ರಸಿದ್ಧ ನಟ ನಿರ್ದೇಶಕರವರೆಗೆ ಬೊಟ್ಟು ಮಾಡುತ್ತಾ ಜೀವನದ ಗೊತ್ತು ಗುರಿ ಇಲ್ಲದೆ ಅಲೆಯುವ ಅವುಗಳ ಸ್ಟೇಟ್ಮೆಂಟ್ ಗಳನ್ನು ಪರೀಕ್ಷೆ ಹಾಗು ಪರಾಮರ್ಶೆಗೆ ಒಳಪಡಿಸದೆ ಮುಖ್ಯವಾಹಿನಿಯಲ್ಲಿ ಬಿತ್ತರಿಸಲಾಗುತ್ತದೆ. ಹೀಗೆ ಅಂದು ಯಾವುದೇ ನೀಲಿ ಚಿತ್ರಗಳಿಗೂ ಕಡಿಮೆ ಎನಿಸದ, ಎಂತಹ ವಯಸ್ಕ ಸೀನ್ಗಳನ್ನೂ ನೀರು ಕುಡಿದಂತೆ ಮಾಡಿ, ಒಂದು ಮಾತನ್ನು ತುಟಿಕ್ ಪಿಟಿಕ್ ಅನ್ನದೆ ಇಂದು ಅದೆಲ್ಲೋ ಆತ ಆಗಂದ,ಇವರು ಹೀಗೆಂದರು, ಈತ ಅಲ್ಲಿಗೆ ಕರೆದ, ಕಣ್ಸನ್ನೆ ಮಾಡಿದ ಹಾಗಾಗಿ ನನ್ನ ಮೇಲೆ ಶೋಷಣೆಯಾಗಿದೆ ಎಂಬ ಮಾತುಗಳಿಗೆ ಆ ಮಟ್ಟಿನ ಪ್ರಾಮುಖ್ಯತೆಯನ್ನು ಕೊಡುವ ಮಾಧ್ಯಮಗಳ ಬಗೆಯನ್ನು ಪ್ರೆಶ್ನಿಸುವರೇ ಇಲ್ಲ, ಏಕೆ?

ಅದೊಂದು ಕಾಲವಿತ್ತು. ಸಿನಿಮಾದಲ್ಲಿ ನಟಿಸುವ ನಾಯಕ ಹಾಗು ನಾಯಕಿಯರ ಆಧಾರದ ಮೇಲೆ ಪೋಷಕರು ತಮ್ಮ ಮಕ್ಕಳನ್ನು ಅಂತಹ ಸಿನಿಮಾಗಳಿಗೆ ಕರೆದುಕೊಂಡು ಹೋಗಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತಿದ್ದರು. ಆ ನಾಯಕ ನಾಯಕಿರಿಯರೂ ಸಹ ತಮ್ಮ-ತಮ್ಮ ಸ್ಥಾನದ ಜವಾಬ್ದಾರಿಯನ್ನು ಅರಿತು ಸಿಗುವ ಪಾತ್ರಗಳನ್ನು ಕೇಳಿ, ಕಲ್ಪಿಸಿ, ಬೇಡವಾದಾದನ್ನು ತಿರಸ್ಕರಿಸಿ ಬೇಕಾದನ್ನು ಮಾರ್ಪಡಿಸಿ ಒಟ್ಟಿನಲ್ಲಿ ಎಲ್ಲಿಯೂ ತನ್ನ ಗೌರವಕ್ಕೆ ಹಾಗು ಜನತೆಯ ನಂಬುಗೆಗೆ ದಕ್ಕೆ ಬಾರದಂತಹ ಪಾತ್ರಗಳನ್ನು ಮಾಡುತ್ತಾ ನಟಿಸಿ ರಂಜಿಸುತ್ತಿದ್ದರು. ಆದರೆ ಕಾಲ ಕಳೆದಂತೆ ಹಣದ ಹುಚ್ಚುಹೊಳೆಯಲ್ಲಿ ಪ್ರಸ್ತುತ ಬಹುಪಾಲು ನಟನಟಿಯರು ಸಾಮಾಜಿಕ ಜವಾಬ್ದಾರಿ, ಅಭಿಮಾನಿಗಳ ಬಗೆಗಿನ ಕಳಕಳಿ ಎಂಬೆಲ್ಲ ನಿಯಮಗಳನ್ನು ಯಾವುದೇ ಮುಲಾಜಿಲ್ಲದೆ ಮುರಿದು 'ಫೇಮ್' ಎಂಬ ಕಿರೀಟದ ಧಾಹದಲ್ಲಿ ದೈಹಿಕವಷ್ಟೇ ಅಲ್ಲದೆ ಮಾನಸಿಕವಾಗಿಯೂ ನಗ್ನಗೊಳ್ಳುತ್ತಿದ್ದಾರೆ. ಪ್ರಸ್ತುತ ಕಾಲದ ಇಂತಹ ಬಹುಮಂದಿ ನಟ ನಟಿಯರಿಗೆ ಶೋಷಣೆಯ ಹೆಸರಿನಲ್ಲಿ ಇನ್ನೊಬ್ಬರ ಮೇಲೆ ಬೊಟ್ಟು ಮಾಡುವ ನೈತಿಕ ಹಕ್ಕು ನಿಜವಾಗಿಯೂ ಇದೆಯೇ ಎಂಬ ಪ್ರಶ್ನೆ ಉದ್ಭವಿಸದಿರದು. ಅಲ್ಲದೆ ಎಂದು 'ಚಿತ್ರಮಾಧ್ಯಮ'ಗಳು 'ಫಿಲ್ಮ್ಇಂಡಸ್ಟ್ರಿ'ಗಳಾದವೋ ಅಂದೇ ಕಲೆ, ಸಂಗೀತ, ಸಾಹಿತ್ಯ ಎಂಬ ಬೇಕಾದ ಅಂಶಗಳು ಅಲ್ಲಿಂದ ದೂರವಾದವು. ಇಂದು ಸಿನಿಮರಂಗವೇನಿದ್ದರೂ ಇತ್ತಕಡೆಯಿಂದ ನೂರು ರೂಪಾಯಿ ತಳ್ಳಿ ಅತ್ತ ಕಡೆಯಿಂದ ಕೋಟಿ ಪಡೆಯುವ ಯಂತ್ರವಷ್ಟಾಗಿ ನಿಂತಿದೆ. ಇಲ್ಲಿ ಎಲ್ಲವು ಹಣಮಯವಾಗಿರುವಾಗ ಸರಿ-ತಪ್ಪು, ಸುಳ್ಳು-ನಿಜ, ಕಪ್ಪು-ಬಿಳುಪೆಂಬ ಭಾವಗಳಿಗೆ ಎಲ್ಲಿಯ ಬೆಲೆ?

ಒಟ್ಟಿನಲ್ಲಿ ಲಂಗು ಲಗಾಮಿಲ್ಲದೆ ನ್ಯಾಯಮೂರ್ತಿಗಳಂತೆ ವರ್ತಿಸುವ ಮಾಧ್ಯಮಗಳು, ಹೊಲಸು ಪದಗಳ ಸರಮಾಲೆಯನ್ನೇ ಹಾಸ್ಯವೆಂದು ಪರಿಗಣಿಸಿ ನೋಡುಗರನ್ನು ರಂಜಿಸಲೆತ್ನಿಸುವ ಯುವ ಜನಾಂಗ, ಸಾಮಜಿಕ ಬದ್ಧತೆಯನ್ನು ಕಳೆದುಕೊಂಡಿರುವ ಪ್ರಸ್ತುತ ಚಿತ್ರರಂಗಳ ಹಿನ್ನಲೆಗಳಲ್ಲಿ ಇಂದು ಶೋಷಣೆ ಎಂಬ ಪದ ತನ್ನ ನಿಜತ್ವವನ್ನು ಕಳೆದುಕೊಳ್ಳುವಂತೆ ತೋರುತ್ತಿದೆ. ಬೇಕಾಬಿಟ್ಟಿ ಸಿಕ್ಕ ಸಿಕ್ಕಲೆಲ್ಲ ಬಳಕೆಯಾಗಿ ತನ್ನ ನೈಜ ಶಕ್ತಿಯನ್ನು ಕ್ಷಿಣೀಸಿಕೊಳ್ಳುತ್ತಿದೆ. ಮುಖವನ್ನು ಬಣ್ಣಮೆತ್ತುವ ಪೈಂಟ್ ಬೋರ್ಡಿನಂತೆ ಮಾಡಿಕೊಂಡು, ಲಕ್ಷಬೆಲೆಬಾಳುವ ಚಿನ್ನಾಭರಣಗಳನ್ನು ಕಷ್ಟಪಟ್ಟು ಹೊತ್ತುಕೊಂಡು, ಸರಿಯೋ ತಪ್ಪೋ, ನಿಜವೋ ಸುಳ್ಳೋ ಏನಾದರಾಗಲಿ ಮೇರು ವ್ಯಕ್ತಿತ್ವವೊಂದರ ಮಾನಹರಣ ಕಾರ್ಯಕ್ರಮವೆಂದರೆ ತಮ್ಮೆಲ್ಲ ಕೆಲಸಕಾರ್ಯಗಳನ್ನು ಬಿಟ್ಟು ಡೇರೆ ಹೂಡುವ ಕೆಲವು ಮಾನವಪ್ರಾಣಿಗಳನ್ನು ಒಳಗೊಂಡು 'ಶೋಷಣೆ' ಎನುತ ನುಲಿಯುವ ಗುಂಪಿಗೆ ಅಲ್ಲಿ ಸ್ಕೂಲು, ಕಾಲೇಜು, ಆಸ್ಪತ್ರೆ, ಕಚೇರಿಗಳಷ್ಟೇ ಅಲ್ಲದೆ ಆಶ್ರಮ ಅನಾಥಯಲಯಗಳಲ್ಲೂ ನಡೆಯುವ (!)ಶೋಷಣೆ ಶೋಷಣೆ ಎನಿಸುವುದಿಲ್ಲವೇ? ಅವುಗಳ ಧ್ವನಿಗೂ ಧ್ವನಿಗೂಡಿಸಬೇಕೆನಿಸುವುದಿಲ್ಲವೇ? ಸ್ಟಾರ್ಗಿರಿ ಇದ್ದ ಮಾತ್ರಕ್ಕೆ ಇಂದು ಊರಿಗೆ ಊರೇ ಈಕೆಗೆ ಬೆಂಬಲ ಕೊಡಬಹುದು. ಮುಖಕ್ಕೆ ಮಸಿಯನ್ನು ಮೆತ್ತಿಕೊಂಡು ಅಡುಗೆ ಮನೆಯಲ್ಲೆ ಕಾಲ ತಳ್ಳುವ ಅದೆಷ್ಟೋ ಮೂಕ ಜೀವಗಳಿಗೆ ಬೆಂಬಲ ಕೊಡುವವರ್ಯಾರು? ಮೇಲಾಗಿ ಇಂದು ಶೋಷಣೆ ಎಂಬುದು ಕೇವಲ ಮಹಿಳೆಯೊಬ್ಬಳ ಮಾತ್ರದ ಅನ್ಯಾಯದ ಭಾಗವೇ? ಅದೇ ಇಂಡಸ್ಟ್ರಿಯಲ್ಲಿ ಪುರುಷರೊಟ್ಟಿಗೂ ಜರುಗುವ ಶೋಷಣೆಗೆ ಏನೆಂದು ಕರೆಯುತ್ತಾರೆ? ಅಷ್ಟಾಗಿಯೂ ಕೆಲ ಹೆಂಗಸರಿಗೆ ಅದು ಶೋಷಣೆಯ ನಿಜ ರೂಪವೆಂದೇ ಎನಿಸಿದಲ್ಲಿ ನಮ್ಮ ಪೊಲೀಸ್ ಸ್ಟೇಷನ್ ಗಳು, ಕೋರ್ಟು ಕಛೇರಿಗಳೇನು ಸರ್ಕಾರದ ಬೆಂಚು ಬಿಸಿ ಮಾಡಲಿಕ್ಕಿರುವ ಸಂಸ್ಥೆಗಳೇ? ಹೋಗಿ, ನಿಮ್ಮ ಅಳಲನ್ನು, ನೋವನ್ನು, ಜಿಗುಪ್ಸೆಯನ್ನು ಪುರಾವೆಯ ಸಹಿತ ಅಲ್ಲಿ ಬಿಚ್ಚಿಡಿ. ಅದನ್ನು ಬಿಟ್ಟು ಸ್ವಘೋಷಿತ ನ್ಯಾಯಮೂರ್ತಿಗಳೆನಿಸಿರುವ ಟಿವಿ ಚಾನೆಲ್ಲುಗಳನ್ನು ಕರೆದು ಬಾಯಿಗೆ ಬಂದಂತೆ ಅರಚಿದರೆ ಅಪರಾಧಿಗೆ ಶಿಕ್ಷಿಸುವ ನಿಮ್ಮ ಪ್ರಯತ್ನ ನಿಜವಾಗಿಯೂ ಸಫಲವಾಗುತ್ತದೆಯೇ?

ಒಂದಂತು ನಿಜ. ಇಂದು ನೆಡೆಯುತ್ತಿರುವ #MeToo ಅಭಿಯಾನ ಮುಂದಿನ ದಿನಗಳಲ್ಲಿ ಮುಗ್ದ ಜೀವಗಳನ್ನು ಚಿತ್ರದ ಆಮಿಷವೊಡ್ಡಿ ತಮಗೆ ಬೇಕಂತೆ ಬಳಸಲಿಚ್ಛಿಸುವ ಅದೆಷ್ಟೋ ಮನಸ್ಸುಗಳಿಗೆ ಮರ್ಮಾಘಾತವನ್ನು ಉಂಟುಮಾಡುವದಂತು ಸುಳ್ಳಲ್ಲ. ಈ ಅಭಿಯಾನ ಕೇವಲ ಸಿನಿಮಾ ಇಂಡಸ್ಟ್ರಿಯಷ್ಟೇ ಅಲ್ಲದೆ ಇತರೆ ಎಲ್ಲಾ ವಲಯಗಳನ್ನು ಪ್ರವೇಶಿಸಬೇಕು. ಆದರೆ ಇಂದು ಸಮ್ಮತಿಸಿ ನಾಳೆ ದೂರುವಂತಹ ಅಥವಾ ನೋಡಿದ ಮಾತ್ರಕ್ಕೆ ತನ್ನ ಚಾರಿತ್ರವೇ ಹಾಳಾಯಿತ್ತೆನ್ನುವ ಬಾಲಿಶ ಹೇಳಿಕೆಗಳಿಗೆ ಪರಮಾರ್ಶೆಯ ಫಿಲ್ಟರ್ ಅನ್ನು ತೊಡಿಸದೆಯೇ ಸೊಪ್ಪು ತಿನ್ನಿಸುವುದನ್ನು ಮಾತ್ರ ಮಾಧ್ಯಮಗಳು ನಿಲ್ಲಿಸಲೇಬೇಕು. ಅಲ್ಲದೆ ಇವುಗಳೆಲ್ಲದರ ಅಖಾಡವಾಗಿರುವ ಸಿನಿಮಾ ರಂಗ ಕೊಂಚವಾದರೂ ಬದಲಾಗಬೇಕು. ಅರೆ ಬೆತ್ತಲ ಫೋಟೊಶೂಟ್ಗಳ ಮಾಧಕ ಪೋಸುಗಳಿಗೆ ನೋಡುಗರೇನು ಕಾಯಿ ಒಡೆದು ಪೂಜೆಮಾಡುವಿದಿಲ್ಲ ಸ್ವಾಮಿ. ನಿಜವಾದ ಅಭಿಯಾನ ಮೊದಲು ಕ್ರಿಯೇಟಿವಿಟಿಯ ಹೆಸರಿನಲ್ಲಿ ಫ್ಯಾಮಿಲಿ ಫಿಲಂ ಎಂದು ಪಬ್ಲಿಸಿಟಿಯನ್ನು ನೀಡಿ ‘ಇಂಟಿಮೇಟ್ ಸೀನ್ಗಳು ’ 'ಐಟಂ ಸಾಂಗ್ ಗಳು' 'ಹಾಟ್ ಸೀನ್'ಗಳು ಎಂಬ ಬಾಯಿಚಪ್ಪರಿಸುವ ದೃಶ್ಯಗಳನ್ನು ತೋರಿಸುವವರ ವಿರುದ್ದವೂ ಇರಲಿ. ಇಲ್ಲವಾದರೆ ಕೆಸರನ್ನು ತಿನ್ನುವ ಪ್ರಾಣಿಯನ್ನು ಕೆಸರಿಗೇ ಒಗೆದಂತೆ ಶೋಷಣೆಯೆನುತ ಒದರುವ ಮಾತುಗಳು ಅತ್ತ ಆರಕ್ಕೂ ಏರದ ಮೂರಕ್ಕೂ ಇಳಿಯದ ಗಾಳಿಪದಗಳಾಗಿ ಕಾಣೆಯಾಗಬಲ್ಲವು.

Friday, October 19, 2018

ಆಲಾಪ..

'ಎಕ್ಸ್ ಕ್ಯೂಸ್ ಮೀ .. ನೀವು ರಿಸೆರ್ವ್ಡ್ ಸೀಟಲ್ಲಿ ಕೂತಿದ್ದೀರಾ ಅನ್ಸುತ್ತೆ?'

'ಇಸ್ ಇಟ್?.. ಸ್ವಲ್ಪ ತಾಳಿ, ಒಮ್ಮೆ ಚೆಕ್ ಮಾಡ್ಕೊಬಿಡ್ತೀನಿ' ಎನುತ ಆಕೆ ಮೊಬೈಲ್ ಅನ್ನು ಹೊರಗೆಳೆದಳು

'ಓ ಗಾಡ್, ಮೊಬೈಲ್ ಸ್ವಿಚ್ ಆಫ್ ಬರ್ತಾ ಇದೆ. ಏನ್ ಹುಡುಗ್ರಪ್ಪ ಇವ್ರು…ಎನಿವೇಸ್ ಐಮ್ ಸಾರೀ..ನೀವ್ ಬಂದ್ ಕೂತ್ಕೊಳ್ಳಿ' ಎಂದು ಕೂಡಲೇ ಆಕೆ ಎದ್ದು ಕಾಫಿ ಡೇಯಿಂದ ಹೊರನೆಡೆದಳು.

ಈತನಿಗೆ ಅಷ್ಟರಲ್ಲಾಗಲೇ ತನ್ನ ಅನುಮಾನ ನಿಜವೆನಿಸಿದ್ದರಿಂದ ಒಂದರೆಕ್ಷಣ ಮಾತು ಬಾರದಂತಾಗುತ್ತದೆ. ತನ್ನ ಮೊಬೈಲ್ ಅನ್ನು ಹೊರಗೆಳೆದು ಸ್ವಿಚ್ ಆನ್ ಮಾಡಿದ ಕೂಡಲೇ ಆಕೆಯ ನಂಬರ್ ಎಂದು ಕಳಿಸಲ್ಪಟ್ಟಿದ್ದ ನಂಬರ್ನಿಂದ ಎರಡು ಮಿಸ್ಸೇಡ್ ಕಾಲ್ ಗಳು ಬಂದಿರುತ್ತವೆ. ಇದೇಗೆ ಸಾಧ್ಯ!? ಅದೆಷ್ಟೇ ಯೋಚಿಸಿದರೂ ಉತ್ತರ ಹೊಳೆಯಲಿಲ್ಲ. ಕೂಡಲೇ ಆಕೆಯ ಅಪ್ಪನಿಗೆ ಫೋನಾಯಿಸಿ ನಾಲ್ಕು ಬೈದುಬಿಡಬೇಕೆಂಬ ಮನಸ್ಸಾದರೂ ಏಕೋ ಸುಮ್ಮನಾಗುತ್ತಾನೆ. 'ಐಮ್ ಸಾರೀ..ನೀವ್ ಬಂದ್ ಕೂತ್ಕೊಳ್ಳಿ' ಎಂದ ಆಕೆಯ ಮಾತುಗಳಲ್ಲಿ ಅದೇನೋ ಒಂದು ಬಗೆಯ ಮುಗ್ದತೆ ಆತನನ್ನು ಕಾಡಿತು. ಅಂತಃಕರಣ ರೋಧಿಸಿತು. ತಾನು ಫೋಟೋದಲ್ಲಿ ನೋಡಿದ ಚಲುವೆ ನಿಜವಾಗಿಯೂ ಇವಳೇನಾ ಏನುತಾ ಆಕೆಯ ಫೋಟೋಗಳನ್ನೇ ಒಂದೊಂದಾಗೆ ನೋಡತೊಡಗಿದ.

.

.


ಆ ಕಿಕ್ಕಿರಿದ ಜನಸ್ತೋಮದಲ್ಲೂ ಸಣ್ಣ ಭೂಕಂಪನವನ್ನೇ ಸೃಷ್ಟಿ ಮಾಡಿದ್ದವು ಮಾನಸನ ಆ ಡ್ರಮ್ ಬೀಟ್ಸ್ ಗಳು. ಮಿರಿಮಿರಿ ಮಿರುಗುವ ಕಪ್ಪಾದ ಲೆದರ್ ಜಾಕೆಟ್, ಮುಖವನ್ನು ಅರೆ ಮುಚ್ಚುವಷ್ಟು ದೊಡ್ಡದಾದ ತಲೆಯ ಕ್ಯಾಪು, ಕಪ್ಪಾದ ಝರಿಯಂತೆ ಕೆಳಗಿಳಿದು ಬೆನ್ನಿನವರೆಗೂ ಬೆಳೆದಿರುವ ಆ ನೀಳ ಕೂದಲು, ಕಣ್ಣಿಗೊಂದು ಘಾಡ ಕೆಂಪಿನ ಕನ್ನಡಕ, ಕಪ್ಪು ಜೀನ್ಸಿನ ಕೆಳಗೆ ಬೆಳ್ಳಗೆ ಹೊಳೆಯುವ ಶೂಗಳೊಟ್ಟಿಗೆ ಡ್ರಮ್ ಸ್ಟಿಕ್ ಗಳೆರಡನ್ನು ಹಿಡಿದು ಈತ ಬಡಿಯುತ್ತಾ ಹೋದರೆ ಅಲ್ಲಿ ಸೇರುವ ಸಮಸ್ತ ಜನಸ್ತೋಮ ಹುಚ್ಚೆದ್ದು ಕುಣಿಯತೊಡಗುತ್ತದೆ. ಅದು ಆತನ ಸಂಗೀತ ಜ್ಞಾನವೂ ಅಥವಾ ಸಂಗೀತವೇನೆಂದೇ ಅರಿಯದ ಜನಸ್ತೋಮದ ರಂಜನೆಯೋ ಅಥವಾ ತನ್ನ ದುಃಖ, ನೋವು, ಹತಾಶೆ ಹಾಗು ಅವಮಾನವನ್ನು ಹೊರಹಾಕುವ ಪ್ರಕ್ರಿಯೆಯೋ ಒಟ್ಟಿನಲ್ಲಿ ವಾರಕ್ಕೊಂದೆರಡು ಬಾರಿ ಹೀಗೆ ತಡರಾತ್ರಿಯವರೆಗೆ ಪಬ್ಬಿನಲ್ಲಿ ಡ್ರಮ್ಸ್ಗಳನ್ನು ಚಚ್ಚಿ ಕೆಡವುವಂತೆ ಭಾರಿಸಿ ಮನಸ್ಸಿನ ತನ್ನೆಲ್ಲ ಭಾರವನು ಕರಗಿಸಿಕೊಳ್ಳುತ್ತಿದ್ದ ಮಾನಸ್. ರಂಜನೆ ಹವ್ಯಾಸವಾಗಿ, ಹವ್ಯಾಸ ರೂಟಿನ್ ನಂತಾಗಿ ಈಗ ಅದು ಒಂತರ ಚಟವಾಗಿಬಿಟ್ಟಿದೆ ಎಂದರೆ ತಪ್ಪಾಗದು. ಒಂದು ಪಕ್ಷ ಆತ ಬಿಯರ್ ಹಾಗು ಸಿಗರೇಟನ್ನೂ ಬಿಟ್ಟರೂ ಹೀಗೆ ವಾರಕೊಂದೆರಡು ಬಾರಿ ಡ್ರಮ್ ಗಳನ್ನು ಬಡಿಯದೇ ಇರುತ್ತಿರಲಾರ. ಇಲ್ಲವಾದರೆ ಏನನ್ನೋ ಕಳೆದುಕೊಂಡ ಶೂನ್ಯಭಾವ ಆತನ ಮನಸ್ಸನ್ನು ಆವರಿಸುತ್ತಿತ್ತು.

ಇಂದು ರಾತ್ರಿ ಹನ್ನೆರಡರ ಸುಮಾರಿಗೆ ಪುಬ್ಬಿನಿಂದ ಹೊರಬಂದ ಮಾನಸ್ ತನ್ನ ಕಾರಿನೊಳಗೆ ಕೂರುವ ಮುನ್ನ ಸಿಗರೇಟನ್ನು ಹೊತ್ತಿಸಲು ಲೈಟರ್ ಹೊರತೆಗೆದ. ಕೂಡಲೇ ರ್ರುಮ್ ರ್ರುಮ್ ಎಂದು ಸದ್ದು ಮಾಡುತ್ತಾ ಸೈಲೆಂಟ್ ಮೋಡಿನಲ್ಲಿದ್ದ ಆತನ ಮೊಬೈಲು ಅಲುಗಾಡತೊಡಗಿತು. ಟಪ್ ಟಪ್ ಎಂದು ಬಂದ ನಾಲ್ಕೈದು ಮೆಸೇಜ್ ಗಳನ್ನು ಆತ ಕಣ್ಣರಳಿಸಿ ನೋಡತೊಡಗಿದ. ಅದೆಂದೋ ಕಾಲೇಜಿನ ದಿನಗಳಲ್ಲಿ ತೆರೆದಿದ್ದ ಮ್ಯಾರೇಜ್ ಆಪ್ (!) ನಿಂದ ಯಾರೋ ಹುಡುಗಿ ಕಳುಹಿಸಿದ ಸಂದೇಶಗಳಾಗಿದ್ದವು. ಅಂತಹ ಅದೆಷ್ಟೋ ಮೆಸೇಜ್ ಗಳೂ ಬಂದಿದ್ದರೂ, ಅವುಗಳಿಗೆಗೆ ಗುಲಗಂಜಿಯಷ್ಟೂ ಗಮನವನ್ನು ನೀಡದ ಆತನಿಗೆ ಅದ್ಯಾಕೋ ಈಕೆ ಮನಸ್ಸಿಗೆ ತೀರಾ ಹಿಡಿಸಿದಳು. ಹುಡುಗಿ ನೋಡಲು ಹಾಲಿನ ಗೊಂಬೆಯಂತೆ ಸುಂದವಾಗಿದ್ದಾಳೆ. ಆ ಕಪ್ಪಾದ ಕಣ್ಣುಗಳು, ಕೆಂಪಾದ ತುಟಿ, ಘಾಡ ಕಪ್ಪು ಕೂದಲಿಗೆ ಹೊಂದುವಂತೆ ಹಚ್ಚೋತ್ತಿದಂತರಿರುವ ಆ ಹಣೆಯ ಹುಬ್ಬುಗಳು ಹಾಗು ಚೊಕ್ಕವಾದ ಒಂದು ಹಣೆಯ ಬೊಟ್ಟು ಆಕೆಯನ್ನು ಅಪ್ಸರೆಯ ಮಗಳೇನೋ ಎಂಬಂತೆ ಮಾಡಿದ್ದವು. ಪ್ರೀತಿ, ಪ್ರೇಮ, ಸಲುಗೆ, ಸಂಬಂಧ ಎಂದರೆ ಬೇಡವಾಗಿಬಿಟ್ಟಿದ್ದ ಮಾನಸನಿಗೆ ಅದೆಷ್ಟೇ ಪ್ರಯತ್ನಿಸಿದರೂ ಇಂದು ಆಕೆಗೆ ಪ್ರತಿಕ್ರಿಯಿಸದೆ ಇರಲಾಗಲಿಲ್ಲ.

**********************************************

ರೂಪ ಅತಿಸುಂಧರಿಯಾಗದಿದ್ದರೂ ಗುಣವಂತೆ. ಆಕೆಯ ಸನ್ನಡತೆ ಬೇರೆಯ ಯಾವುದೇ ನ್ಯೂನ್ಯತೆಗಳನ್ನೂ ಬದಿಗಿರಿಸುವಂತಿತ್ತು. ಆ ಸಣ್ಣ ಕಂಠದ ಮಾತುಗಳು, ಮಾತಿಗಿಂತ ಆ ಮಾತಿನ ಭಾವವನ್ನರಿತು ಪ್ರತಿಕ್ರಿಯಿಸುವ ಆಕೆಯ ಪ್ರೌಢಿಮೆ, ನವಿರಾದ ಹಾಸ್ಯಪ್ರಜ್ಞೆ, ಸ್ನಾತಕೋತರ ಪದವಿಗಳಿದ್ದರೂ ಅಹಂ ಇಲ್ಲದ ಆಕೆಯ ಕ್ಯಾರೆಕ್ಟರ್, ವಿಶಾಲ ಮನೋಭಾವ, ಇವೆಲ್ಲವೂ ಆಕೆಯನ್ನು ಒಂದು ಆಕರ್ಷಣ ಕೇಂದ್ರವನ್ನಾಗಿ ಮಾಡಿದ್ದವು. ಆದ್ದರಿಂದಲೇ ಏನೋ ದಶಕಗಳ ಹಿಂದಿನ ಅಂಗನವಾಡಿಯ ಗೆಳೆಯರೂ ಆಕೆಯ ಸಂಪರ್ಕದಲ್ಲಿದ್ದಾರೆ. ವರ್ಷಕೊಮ್ಮೆ ಕನಿಷ್ಠವಾದರೂ ಒಮ್ಮೆಯಾದರೂ ಆಕೆಯನ್ನು ನೆನೆದು ಫೋನಾಯಿಸುತ್ತಾರೆ. ತುಸು ಕಪ್ಪು ಬಣ್ಣ, ಕೋಲುಮುಖ ಹಾಗು ಕಣ್ಣಿಗೆ ದಪ್ಪದಾದೊಂದು ಕನ್ನಡಕವನ್ನು ಧರಿಸುವ ಆಕೆಗೆ ‘ಸಹಜ’ವಾಗಿಯೇ ಯಾವುದೇ ಪ್ರೀತಿ ಪ್ರೇಮ ಹಾಗು ಬಾಯ್ ಫ್ರೆಂಡ್ ಗಳೆಂಬ ನಂಟಿರಲಿಲ್ಲ. ರೂಪಳ ಪೋಷಕರಿಗೆ ಆಕೆ ಇಪ್ಪತೈದಾದಂತೆಯೇ ಮದುವೆಯ ಶಾಸ್ತ್ರವನ್ನು ಮಾಡಿ ಮುಗಿಸಬೇಕಂಬ ಚಿಂತೆ ಕಾಡತೊಡಗಿತ್ತು. ಕಳೆದ ಕೆಲ ವರ್ಷಗಳಿಂದ ಆಕೆಯನ್ನು ಕಾಡಿ-ಬೇಡಿ ಕೊನೆಗೆ 'ನೀವ್ ಯಾರನ್ನು ಹೇಳಿದ್ರು ನಾನ್ ಮದುವೆ ಆಗ್ತೀನಿ. ಆದ್ರೆ ಒಂದೇ ಕಂಡೀಶನ್, ಆತನಿಗೆ ಕುಡಿಯುವ ಚಟ ಮಾತ್ರ ಇರಬಾರದು' ಎಂದು ಆಕೆಯಿಂದ ಹೇಳಿಸಿಯೂ ಆಗಿದೆ.

ಪ್ರಸ್ತುತ ಕಾಲದಲ್ಲಿ ಇಂಟೆರ್ನೆಟ್ಟೇ ಎಲ್ಲ ಆಗಿರುವಾಗ ಇಂತಹ ಹುಡುಗನನ್ನು ಹುಡುಕಿಕೊಂಡು ಹೋಗುವುದು ಎಲ್ಲಿಗೆ. ರೂಪಾಳ ತಂದೆ ಉಪಾಯವೊಂದನ್ನು ಮಾಡಿ ಮ್ಯಾರೇಜ್ ಸೈಟಿನಲ್ಲಿ ತಮ್ಮ ಮಗಳ ಅಕೌಂಟ್ ಒಂದನ್ನು ತೆರೆದರು. ಅಲ್ಲಿ ಈಕೆಯ ಒಂದೇ ಕಂಡೀಶನ್ ಅನ್ನು ಸೇರಿಸಿ, ಒಂದೆರೆಡು ಫೋಟೋವನ್ನೂ ಅಪ್ಲೋಡ್ ಮಾಡಿದ್ದರು. ಇದಾದ ನಂತರ ಕೆಲದಿನಗಳ ಕಾಲ ತನ್ನ ಮಗಳಿಗೆ ಸರಿಹೊಂದುವ, ಅತಿ ಸುಂದರನೂ ಅಲ್ಲದ ಅತಿ ಕುರೂಪಿಯೂ ಎಂದನಿಸದ ಹುಡುಗನೊಬ್ಬನನ್ನು ಹುಡುಕತೊಡಗಿದರು. ಅದೆಷ್ಟೇ ಹುಡುಕಿದರೂ, ಅದೆಂತಹದ್ದೇ ಮೆಸೇಜ್ ಗಳನ್ನು ಹರಿಬಿಟ್ಟರೂ ಅತ್ತ ಕಡೆಯಿಂದ ಪ್ರತ್ಯುತ್ತರ ಮಾತ್ರ ಬರುತ್ತಿರಲಿಲ್ಲ. ಇಂತಹ ಗುಣವಂತ ಹುಡುಗಿಗೆ ಒಬ್ಬ ವರನೂ ಸಿಗಲಾರನೇ? ಬಣ್ಣ ಕೊಂಚ ಕಪ್ಪಾದ ಮಾತ್ರಕ್ಕೆ ಗುಣನಡತೆಗೆ ಬೆಲೆಯೇ ಇಲ್ಲವೇ? ಅಪ್ಪ ತಮ್ಮ ನೋವನ್ನು ಒಳಗೇ ಬಚ್ಚಿಟ್ಟು ರೋಧಿಸುತ್ತಿದ್ದರು. ರೂಪಾಳಿಗೆ ಅದರ ಬಗ್ಗೆ ಏನನ್ನು ಹೇಳುತ್ತಿರಲಿಲ್ಲ. ಒಂದು ಪಕ್ಷ ಹೇಳಿದ್ದರೂ ಆಕೆ ಇಂತಹ ಸಣ್ಣ ಪುಟ್ಟ ವಿಚಾರಗಳಿಗೆಲ್ಲ ಚಿಂತಿಸುತ್ತಿರಲಿಲ್ಲವೆಂಬುದು ಅವರಿಗೂ ತಿಳಿದಿತ್ತು. ಆದರೆ ತಂದೆಯ ಹೃದಯ, ಕೇಳಬೇಕಲ್ಲ. ತನ್ನ ಒಬ್ಬಳೇ ಮಗಳನ್ನು ಯಾರಾದರೂ ರಿಜೆಕ್ಟ್ ಮಾಡಿದರೆ ಅಥವಾ ಒಪ್ಪಿಕೊಳ್ಳದಿದ್ದರೆ ಅದು ಅವರ ಎದೆಗೇ ಭಲವಾದ ಗುದ್ದನ್ನು ನೀಡಿದಂತಾಗುತ್ತಿತ್ತು.

.

.


'ಸರ್, ನೀವು ಮಾನಸ್ ಅಲ್ವ?' ಎನುತ ತಾನು ಕೂತಿದ್ದ ಟೇಬಲ್ಲಿನ ಮುಂದೆ ಬಂದು ಕೂತರು, ಸುಮಾರು ಅರ್ವತ್ತು ವರ್ಷದ ಅವಳ ತಂದೆ. ತಪ್ಪು ಮಾಡಿರುವ ಅಮಾಯಕನ ನಗುವನ್ನು ಬೀರುತ್ತಾ ಕೂತ ಅವರನ್ನು ನೋಡಿ 'ಅಂಕಲ್, ಪ್ಲೀಸ್. ನನ್ನನ್ನ ಮಾನಸ್ ಅಂತಾನೆ ಕರೀರಿ.' ಎನುತ, ಅವರ ಮೇಲಿನ ಕೋಪ ಇನ್ನೂ ಆರಿರದಿದ್ದರೂ ಕುಡಿಯಲು ಏನಾದರು ಬೇಕೆಂದು ಕೇಳುತ್ತಾನೆ. ಏನೂ ಬೇಡೆಂದು ನಿರಾಕರಿಸಿದ ಅವರು ತುಸು ಮೊದಲು ಹೊರಟುಹೋದ ರೂಪಾಳ ಪರವಾಗಿ ಮಾನಸ್ನ ಕೈಗಳೆರಡನ್ನು ಬಿಗಿಯಾಗಿ ಹಿಡಿದುಕೊಂಡು 'ನನ್ನನ್ನು ಕ್ಷಮಿಸಿ…' ಎನುತ ಸಣ್ಣದಾಗಿ ಅಳತೊಡಗುತ್ತಾರೆ! ಅವರ ಕೈಗಳ ಕಂಪನ ಮಾನಸ್ನ ಅರಿವಿಗೆ ಸ್ಪಷ್ಟವಾಗಿ ಬರುತ್ತಿರುತ್ತದೆ. ಕೂಡಲೇ ಎದ್ದು ನಿಂತ ಮಾನಸ್ ಅವರನ್ನು ಸಮಾಧಾನಪಡಿಸುತ್ತಾ, 'ಅಂಕಲ್, ಈಗ ಏನಾಯಿತು ಅಂತ ನೀವ್ ಅಳ್ತಾ ಇದ್ದೀರಾ? ನನ್ಗೆ ಏನೊಂದು ಇಲ್ಲಿ ಅರ್ಥ ಆಗ್ತಿಲ್ಲ. ಪ್ಲೀಸ್ ಅಳ್ಬೇಡಿ' ಎನ್ನುತ್ತಾನೆ.

‘ಹುಟ್ಟಿ ಬೆಳೆಸಿದ ತಂದೆ ಕಾಣಪ್ಪಾ. ದೇವ್ರು ನನ್ನ್ ಮಗಳಿಗೆ ಎಲ್ಲವನ್ನೂ ಕೊಟ್ಟ, ಅಂದ ಅನ್ನೋ ಒಂದು ಕಳಶವನ್ನು ಬಿಟ್ಟು! ಆದರೆ ನನ್ನ್ ಮಗಳು ಯಾವುದೇ ರೀತಿಯಲ್ಲೂ ಅಸುಂದರೆಯಲ್ಲ. ಆಕೆಯ ಪ್ರತಿಯೊಂದು ಗುಣನಡತೆಯೂ ಅಪ್ಪಟ ಚಿನ್ನ ಕಾಣಪ್ಪಾ. ಆದರೆ ಈ ಸ್ವಾರ್ಥಿ ಜಗತ್ತಿಗೆ ಅದು ಅರಿವಿಗೆ ಬರುತ್ತಿಲ್ಲವಷ್ಟೇ’. ಮ್ಯಾರೇಜ್ ಸೈಟಿನಲ್ಲಿ ಅವಳ ಪರವಾಗಿ ನಾನೇ ಪ್ರೊಫೈಲ್ ಅನ್ನು ತೆರೆದಿದ್ದು ಎನ್ನುತ್ತಾರೆ.ಅದೆಷ್ಟೋ ದಿನಗಳ ನಂತರ ಆಕೆಯ ಪ್ರೊಫೈಲಿಗೆ ಯಾವುದೇ ಪ್ರತಿಕ್ರಿಯೆಯೂ ಬಾರದಿದ್ದಾಗ ಇವರು ಆಕೆಯ ಫೋಟೋಗಳನ್ನು ಎಡಿಟ್ ಮಾಡಿ ಕೃತಕ ಫಿಲ್ಟರ್ಗಳನ್ನು ಬಳಸಿ, ಒಬ್ಬ ವಿಭಿನ್ನ ಹುಡುಗಿಯೋ ಎಂಬುವಂತೆ ಕಾಣಿಸಿ ಬಂದ ಫೋಟೋವನ್ನು ಅಪ್ಲೋಡ್ ಮಾಡಿರುತ್ತಾರೆ. ಹಾಗು ತೀರಾ ಸಾಮನ್ಯವಾಗಿ ಕಾಣುತಿದ್ದ ಮಾನಸನ ಪ್ರೊಫೈಲ್ ಒಂದಕ್ಕೆ ಒಂದೆರಡು ಮೆಸೇಜ್ಗಳನ್ನು ಕಳಿಸಿ ಸುಮ್ಮನಾಗಿರುತ್ತಾರೆ.

'ಆದರೆ ನೀವೂ ಕೂಡ ಆ ಫೋಟೋದಲ್ಲೇ ಒಂತರ ಇದ್ದೀರಾ, ಇಲ್ಲಿ ಬೇರೇನೇ ಕಾಣ್ತಿರಲ್ಲ' ಎಂದ ಅವರ ಪ್ರೆಶ್ನೆಗೆ ಮಾನಸ್,

'ಅಂಕಲ್, ಅದು ನನ್ನ ಕಾಲೇಜು ದಿನಗಳ ಫೋಟೋ. ಹುಡುಗಾಟಿಕೆಯೂ ಮತ್ತೊಂದೋ ಒಂದು ಪ್ರೊಫೈಲ್ ಅನ್ನು ಕ್ರಿಯೇಟ್ ಮಾಡಿ ಅದ್ವಾನ ಮಾಡಿಕೊಂಡುಬಿಟ್ಟೆ. ಹಾಗೆಯೆ ಇದ್ದ ಆ ಪ್ರೊಫೈಲ್ ನಲ್ಲಿ ಆಗೊಮ್ಮೆ ಈಗೊಮ್ಮೆ ಮೆಸೇಜ್ಗಳು ಬರುತ್ತಿದ್ದರೂ ಏಕೋ ನಿಮ್ಮ ಮಗಳ ಪ್ರೊಫೈಲ್ ಇಷ್ಟವಾಯಿತು ' ಎಂದು ಸುಮ್ಮನಾಗುತ್ತಾನೆ.

ತನ್ನ ಮಗಳನ್ನು ಸುಂದರವಾಗಿ ಕಾಣಲು ಆಕೆಯ ಕನ್ನಡಕ ರಹಿತ ಫೋಟೋವೊಂದನ್ನು ಎಡಿಟ್ ಮಾಡಿ ಅಪ್ಲೋಡ್ ಮಾಡಿರುತ್ತಾರೆ ರೂಪಾಳ ತಂದೆ. ಆ ಫೋಟೋಗಳನ್ನು ನೋಡಿ ಅದೇನೋ ಒಂದು ಬಗೆಯ ಆಕರ್ಷಣೆ ಮಾನಸ್ನಿಗೆ ಅವಳ ಮೇಲೆ ಮೂಡಿರುತ್ತದೆ. ಅವರ ಮೆಸ್ಸೇಜಿಗೆ ಖುದ್ದು ಹುಡುಗಿಯೇ ಕೇಳಿಕೊಳ್ಳುತ್ತಿರುವಳು ಎಂದುಕೊಂಡು ತಿಳಿಸಿದ ಕಫೆ ಡೇ ಗೆ ಬಂದು, ಇಬ್ಬರಿಗೂ ಒಬ್ಬರನೊಬ್ಬರು ಗುರುತು ಹಿಡಿಯದಂತಾಗಿ ರೂಪ ಅಲ್ಲಿಂದ ಹೋದ ನಂತರ ಮಾನಸ್ ಅಲ್ಲೇ ಕೂತಿರುತ್ತಾನೆ.

ಅಷ್ಟರಲ್ಲಾಗಲೇ ರೂಪಾಳ ತಂದೆಯ ಕಣ್ಣೇರು ಒಣಗಿ ಕೆನ್ನೆಗಳ ಮೇಲೆ ತಮ್ಮ ಅಚ್ಚನ್ನು ಮೂಡಿಸಿದ್ದವು. ಮಾನಸ್ನಿಗೆ ಮುಂದೇನೂ ಹೇಳಲು ಪದಗಳೇ ತೋಚುವುದಿಲ್ಲ. 'ಸರಿ ಬಿಡಪ್ಪ.. ಅವ್ರ್ ಅವ್ರ ಹಣೇಲಿ ಏನೇನ್ ಬರ್ದಿರುತ್ತೋ ಅದ್ ಹಾಗೆ ಆಗುತ್ತೆ. ಆಲ್ ದ ಬೆಸ್ಟ್ ಫಾರ್ ಯುವರ್ ಫ್ಯೂಚರ್' ಎಂದು ಅವರು ಅಲ್ಲಿಂದ ಬೀಳ್ಗೊಂಡರು.

ಆ ದಿನದಿಂದ ಅದೇನೋ ಒಂದು ಬಗೆಯ ಹತಾಶೆ ಮಾನಸನನ್ನು ಆವರಿಸುತ್ತದೆ. ತನ್ನ ನೀಳ ಕೂದಲು, ಟ್ರಿಮ್ ಮಾಡದ ಗಡ್ಡ, ಬೀಯರ್ ಹಾಗು ಸಿಗರೇಟುಗಳಿಗೆ ಕಾರಣವಾಗಿದ್ದ ಕಹಿಘಟನೆಗಳು ಇನ್ನೂ ಮನಸ್ಸಿಂದ ಮಾಸುವ ಮುನ್ನವೇ ಮತ್ತೊಂದು ವಿಪರೀತವಾದಂತಹ ನೋವು ಅವರಿಸತೊಡಗುತ್ತದೆ. ಕಣ್ಣೇರಿರದೆ ಅಳುತ್ತಿದ್ದ ಆತನ ಕಣ್ಣುಗಳು ಇಂದು ತುಂಬಿ ಬಂದಿವೆ. ಹಳೆಯ ನೋವುಗಳಿಗೆ ಯಾರೋ ಬೆಂಕಿ ಗೀರಿ ಹಚ್ಚಿದಂತಾಗಿತ್ತು. ತಾನು ಹಾಗು ತನ್ನ ಜೀವನ ಎಂದುಕೊಂಡಿದ್ದವನಿಗೆ ಆ ಒಂದು ಕ್ಷಣಮಾತ್ರದ ಭೇಟಿ ಈ ಬಗೆಯ ನೋವನ್ನು ತರುತ್ತದೆ ಎಂದುಕೊಂಡಿರಲಿಲ್ಲ. ಚಲುವೆನ್ನೆ ನಾಚಿಸುವ ಅವಳ ನಡತೆ, ಅಸಹಾಯಕ ಅಪ್ಪ, ಅವರ ಕಣ್ಣೀರು.. ಪದೇ ಪದೇ ಆತನನ್ನು ಕಾಡತೊಡಗಿದವು.

ಭಾರಿಸುತ್ತಿದ್ದ ಡ್ರಮ್ ಗಳ ಸದ್ದು ಕೇಳುಗರಿಗೆ ನಡುಕವನ್ನುಂಟುಮಾಡುತ್ತಿರುತ್ತವೆ. ಬದಲಾವಣೆ ಬೇಕೆಂದು ಅವುಗಳು ಚೀರುತ್ತಿರುತ್ತವೆ.

ಹೆಳೆಯ ದಿನಗಳ ಮಾನಸ್ ಪುನ್ಹ ಹುಟ್ಟತೊಡಗುತ್ತಾನೆ. ಜಗತ್ತನೇ ಗೆಲ್ಲುವ ಮಹತ್ವಕಾಂಕ್ಷೆಯ, ಸಂಗೀತ ಲೋಕದಲ್ಲಿ ದಿಗ್ಗಜನಾಗುವ ಆ ಎಳೆಯ ಪೋರ ಡ್ರಮ್ ಭಿಟ್ಸ್ಗಳ ಸದ್ದಿನಲ್ಲಿ ಕಾಣೆಯಾಗಿಹೋದದ್ದೇ ತಿಳಿದಿರುವುದಿಲ್ಲ. ಕೆಲದಿನಗಲ್ಲೇ ನೀಳ ಕೂದಲಿಗೆ, ಕುರುಚಲು ಗಡ್ಡಕ್ಕೆ ಕತ್ತರಿಯನ್ನು ಹಾಕಿ ತನ್ನ ನೆಚ್ಚಿನ ಸಿತಾರ್ ಅನ್ನು ಹೊರತೆಗೆದ. ವರ್ಷಗಳ ಧೂಳು ಹಿಡಿದು ಜಡಗಟ್ಟಿ ಹೋದರೂ ಅದರ ತಂತಿಗಳನ್ನು ಮೀಟಿದಾಗ ಮೂಡುತ್ತಿದ್ದ ಸ್ವರಗಳು ಅದೇ ಆನಂದಭಾಷ್ಪವನ್ನು ಆತನಲ್ಲಿ ಮೂಡಿಸುತ್ತಿದ್ದವು. ಸಂಗೀತದ ತಾಲೀಮು ಮಗದೊಮ್ಮೆ ಆರಂಭವಾಯಿತು. ದಿನ ಬೆಳಗ್ಗೆ ಹಾಗು ಸಂಜೆ ಸರಸ್ವತಿ ಪಠಕ್ಕೆ ಪೂಜಿಸಿ ಸೀತಾರನ್ನು ನುಡಿಸತೊಡಗಿದ. ಮಂದಹಾಸ ಆತನ ಮುಖದಲ್ಲಿ ಮನೆಮಾಡಿತು. ಆ ಮಂದಹಾಸದ ಹಿಂದಿದ್ದ ಚಹರೆಯೇ ಕೆಲತಿಂಗಳ ಹಿಂದೆ ಕ್ಷಣಮಾತ್ರಕ್ಕೆ ಸಿಕ್ಕಿ ಮರೆಯಾದ ರೂಪ. ಮೇಲು-ಕೀಳು, ಭೇದಭಾವ, ಅಂದ-ಚಂದಳಿಗೆ ಒಂದಿಷ್ಟು ಜಾಗವಿರದ ಆಕೆಯ ಚಹರೆ ಮಾನಸನಿಗೆ ಕೆಲವೇ ಕ್ಷಣಗಳಾದರೂ ಜೀವನಕ್ಕಾಗುವಷ್ಟು ಕಲಿಕೆಯನ್ನು ಕಳಿಸಿದವು. ಆ ಗುಂಗಿನಲ್ಲೇ ಆತ ಮುಂದುವರೆದ.

ಅಂದಿನಿಂದ ಅದೆಷ್ಟೋ ಬಾರಿ ರೂಪಾಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಆತನಿಗೆ ಅದು ಸಾಧ್ಯವಾಗಲೇ ಇಲ್ಲ. ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲೂ ಆಕೆಯ ಸುಳಿವು ಸಿಗಲಿಲ್ಲ. ಅಪ್ಪ ಮಗಳ ನಂಬರುಗಳೆರಡೂ ಸ್ವಿಚ್ ಆಫ್ ಬರುತ್ತಿದ್ದವು. ಆದರೆ ಆತನ ಅರಸುವಿಕೆ ಮಾತ್ರ ನಿಲ್ಲಲಿಲ್ಲ. ಇತ್ತೀಚಿಗೆ ಸಂಗೀತ ಕಚೇರಿಗಳನ್ನು ನೆಡೆಸಿಕೊಡಲು ಆತನಿಗೆ ಆಮಂತ್ರಣಗಳು ಬರತೊಡಗಿದವು. ಹೊಡದೆಯಲ್ಲ ಜನಸ್ತೋಮದಲ್ಲಿ ಆಕೆಯ ಚಹರೆಯನ್ನೇ ಆತ ಹುಡುಕುತ್ತಾನೆ. ಮೇಕಪ್ಪು ಬಳಿದು ಪಳಪಳ ಹೊಳೆಯುವ ಮುಖಗಳ ನಡುವೆ ಆ ಮುಗ್ದ ಮಧುರ ಚಹರೆ ಅದೆಷ್ಟೇ ಹುಡುಕಿದರೂ ಕಾಣುವುದಿಲ್ಲ. ಇತ್ತ ಕಡೆ ರೂಪಾಳೂ ಅಂದಿನಿಂದ ತನಗೆ ಹುಡುಗರನ್ನು ಹುಡುಕುವುದು ಬಿಡಬೇಕೆಂದೂ, ತಾನು ಇನ್ನೂ ಹೆಚ್ಚಿನ ಓದನ್ನು ಮಾಡುತ್ತಿರುವೆನೆಂದು ಅಪ್ಪನಿಗೆ ತಿಳಿಸುತ್ತಾಳೆ. ಮೊದಲ ಭಾರಿಗೆ ಹುಡುಗನೊಬ್ಬ ಇಷ್ಟವಾಗಿ ಸಿಗಲು ಹೋದರೆ ಆತ ಮೊಬೈಲನ್ನು ಸ್ವಿಚ್ ಆಫ್ ಮಾಡಿ ಬಾರಲೇ ಇಲ್ಲವೆಂದು ಕುಪಿಸಿಕೊಂಡು ಹುಡುಗರ ಮೇಲೆಯೇ ಒಂದು ಬಗೆಯ ಆಲಸ್ಯ ಅವಳಲ್ಲಿ ಮೂಡಿರುತ್ತದೆ.ಎಲ್ಲೆಂದರಲ್ಲಿ ಹರಿಬಿಟ್ಟಿದ್ದ ತನ್ನ ಹಾಗು ಅಪ್ಪನ ನಂಬರುಗಳೆರಡನ್ನೂ ಆಕೆ ಬದಲಿಸುತ್ತಾಳೆ.

ದಿನಗಳು ಕಳೆದವು...

ಅಂದು ತನ್ನ ಕಾಲೇಜಿನ ವಾರ್ಷಿಕೋತ್ಸವಕ್ಕೆ ಹಿಂದೂಸ್ತಾನಿ ಸಂಗೀತ ಕಚೇರಿಯನ್ನು ನೆಡೆಸುತ್ತಾರೆ ಎಂದು ತಿಳಿದು ರೂಪ ಎಲ್ಲರಿಗಿಂತ ಮೊದಲೇ ಆಡಿಟೋರಿಯಂನಲ್ಲಿ ಆಸೀನಳಾಗುತ್ತಾರೆ. ಸಂಗೀತದ ವ್ಯಾಕರಣ ಆಕೆಗೆ ಬಲ್ಲದು, ಆದರೆ ಸಂಗೀತವೆಂಬುದು ಭಾವಪದಗಳ ಸುಂದರ ಭಾಷೆ ಎಂಬುದು ಆಕೆಯ ಅಭಿಮತ. ಸಂಜೆ ಸರಿಯಾಗಿ ಏಳಕ್ಕೆ ಶುರುವಾದ ಸಂಗೀತ ಕಚೇರಿಗೆ ಹೇಳಿಕೊಳ್ಳುವ ಮಟ್ಟಿನ ಪ್ರೇಕ್ಷಕರೇನೂ ಸೇರಿರಲಿಲ್ಲ. ಕೊಳಲು ಹಾಗು ತಬಲದ ಜುಗಲ್ಬಂಧಿಯ ನಂತರ ಸೀತಾರ್ ವಾದಕ ಶ್ರೀಯುತ ಮಾನಸ್ ಎಂದು ಸಂಭೋದಿಸುತ್ತಾ ಆಹ್ವಾನಿಸಿದ ನಿರೂಪಕಿಯ ಮಾತನ್ನು ಕೇಳಿ ರೂಪಾಳ ಎದೆ ಒಮ್ಮೆಲೇ ಜಲ್ ಎನಿಸುತ್ತದೆ. ಮಾನಸ್ ಸ್ಟೇಜಿನ ಮೇಲೆ ಬಂದು ನೆರೆದವರಿಗೆಲ್ಲ ವಂದಿಸಿ ತನ್ನ ಸೀತಾರನ್ನು ನುಡಿಸತೊಡಗಿದಾಗ ಗುಸುಗುಸುಗುಡುತ್ತಿದ್ದ ಜನಸ್ತೋಮ ಕಲ್ಲಿನಂತೆ ಸ್ತಬ್ದವಾಗಿಬಿಡುತ್ತದೆ. ಆ ರಾಗಗಳ ಆಳೇತ್ತರ ಎಂತವರನ್ನೂ ಸಂಗೀತದ ಸುಧೆಯಲ್ಲಿ ತೇಲಾಡಿಸಿಬಿಡುವಂತಿತ್ತು. ಈತ ಇಷ್ಟು ಮಹಾನ್ ಕಲಾವಿದನಾಗಿರುವುದಕ್ಕೆ ಅಂದು ನನ್ನಂತ ಸಾಧಾರಣ ಹುಡುಗಿಯನ್ನು ಆತ ಭೇಟಿಯಾಗಲು ನಿರಾಕರಿಸಿದ್ದು. ಅವನೆಲ್ಲಿ, ನಾನೆಲ್ಲಿ?! ಆತ ಅಂದು ನನನ್ನು ಭೇಟಿಯಾಗದಿದ್ದದ್ದೇ ಒಳ್ಳೆಯದಾಯಿತು ಎಂಬ ಕೀಳರಿಮೆ ಆತನ ಸಂಗೀತವನ್ನು ಕೇಳಿ ರೂಪಾಳಲ್ಲಿ ಮೂಡುತ್ತದೆ. ಆ ಅದ್ಭುತ ಸಂಗೀತಕ್ಕೆ ಅಲ್ಲಿ ಮನಸೋತ ಪ್ರೇಕ್ಷಕರಿರಲಿಲ್ಲ. ಸಂಗೀತ ಬಲ್ಲವರು, ಬಾರದವರು ಎಲ್ಲರು ಗಮನವಿಟ್ಟು ಸಂಗೀತವನ್ನು ಕೇಳುತ್ತಿರಬೇಕಾದರೆ ರೂಪ ಮಾತ್ರ ಎದ್ದು ಸ್ಟೇಜಿನ ಮುಂದೆಯೇ ಹಾದು ಹೊರನೆಡುತ್ತಾಳೆ.

ಕಳೆದ ಒಂದು ವರ್ಷದಿಂದ ಹೊಡದೆಯಲ್ಲ ಹುಡುಕುತ್ತಿದ್ದ ಆ ಒಂದು ಚಹರೆ ಸಿಗದೆ ಮಾನಸನ ಮನಸ್ಸು ದುಃಖ ತುಂಬಿದ ಕಟ್ಟೆಯಂತಾಗಿದ್ದಿತು. ಅದೇನೋ ಈ ಬಾರಿ ಆತನಿಗೆ ತಡೆಯಲಾಗಲಿಲ್ಲ. ಸಂಗೀತದ ಸಾಗರದಲ್ಲಿ ಮುಳುಗಿದ್ದ ಆತನ ಕಣ್ಣುಗಳಿಂದ ಗಳಗಳನೆ ಅಶ್ರುಧಾರೆಗಳು ಮೂಡತೊಡಗಿದವು. ಆದರೆ ಸ್ವರಾಲಾಪನೆ ಮಾತ್ರ ಎಲ್ಲಿಯೂ ತಪ್ಪಲಿಲ್ಲ. ಅತ್ತು ಮಂಜುಗಟ್ಟಿದ್ದ ಕಣ್ಣುಗಳಿಗೆ ತನ್ನ ಎದುರಿಗೆ ಹಾದುಹೊದ 'ಆ' ಚಹರೆ ಕಾಣದಾಯಿತು. ಸಂಗೀತದ ಆಲಾಪ ಮುಗಿಲುಮುಟ್ಟಿತು.....



Monday, October 8, 2018

ಆಗಸಕ್ಕೆ ಏಣಿ ಹಾಕಿದ ನಾಯಕರಿವರು...

ರಿಚರ್ಡ್ ಬ್ರಾನ್ಸನ್ :
ಆತನ ವಯಸ್ಸು 16. ಬಾಲ್ಯವೆಲ್ಲ ಡಿಸ್ಲೆಕ್ಸಿಯಾ ಸಮಸ್ಯೆಯಿಂದ ನರಳಿದ ಆತ ತನ್ನ ಜೀವನದ ಅತಿ ಮಹತ್ವದ ಘಟ್ಟದಲ್ಲಿ ನಿಂತಿದ್ದಾನೆ. ಓದಲು, ಕಲಿಯಲು ಮನಸ್ಸಿದ್ದರೂ ದೇಹ ಸಾಥ್ ನೀಡುತ್ತಿಲ್ಲ. ಹಿಂದಿಯ 'ತಾರೆ ಝಮೀನ್ ಪರ್' ಚಿತ್ರವನ್ನು ನೋಡಿದವರಿಗೆ ಈ ಸಮಸ್ಯೆಯ ಆಳ ಒಂದಿಷ್ಟು ಅರಿಯಬಹುದು. ಅಂದು ಆತನ ಶಾಲೆಯ ಕೊನೆ ದಿನ . ಓದಲು ಬರೆಯಲು ಆಗದು ಎಂದರಿತ ಪೋಷಕರು ಆತನನ್ನು ಶಾಲೆಯಿಂದ ತೆಗೆಯುವ ನಿರ್ಧಾರವನ್ನು ಮಾಡಿದ್ದಾರೆ. ಆ ಎಳೆಯ ಹುಡುಗ ತನ್ನ ಸ್ನೇಹಿತರಿಂದ, ಶಾಲೆಯಿಂದ ದೂರವಾಗುತ್ತಿದ್ದಾನೆ. ಶಿಕ್ಷಕರಲೊಬ್ಬರು ಈತ ಹೊರಡುವಾಗ 'ನೀನು ಮುಂದೆ ಒಂದೋ ಅಪರಾದಿಯಾಗಿ ಜೈಲಿನಲ್ಲಿ ಕೊಳೆಯುತ್ತೀಯ ಇಲ್ಲವಾದರೆ ಒಬ್ಬ ಕೋಟ್ಯಧಿಪತಿಯಾಗಿ ಬೆಳೆಯುತ್ತೀಯ' ಎಂದು ದ್ವಂದ್ವದ ಹಾರೈಕೆಯೊಂದನ್ನು ನೀಡಿ ಬೀಳ್ಕೊಟ್ಟರು. ಹೇಳಿದ ಮಾತಿನ ಅರ್ಥವನ್ನು ಅರಿಯುವುದು ಹಾಗಿರಲಿ ಕಡೆಯ ಪಕ್ಷ ದಿನನಿತ್ಯದ ಕೆಲಸಕಾರ್ಯಗಳನ್ನೂ ಸರಿಯಾಗಿ ಮಾಡಲಾಗದ ಹುಡುಗನೊಬ್ಬ ಆತನ ಶಿಕ್ಷಕನ ಮಾತಿನಂತೆ ಇಂದು ಏನಾಗಿರಬಹುದು? ಅದು ಶಿಕ್ಷಕನ ಕುಹಕ ನುಡಿಯೂ ಅಥವಾ ಪ್ರೋತ್ಸಾಹಭರಿತ ಮಾತೋ, ಆತ ಮಾತ್ರ ಇಂದು ಜಗತ್ತಿನಾದ್ಯಂತ ಇರುವ ಸುಮಾರು 400 ಕಂಪನಿಗಳ ಒಡೆಯ! ಹೆಸರು ರಿಚರ್ಡ್ ಬ್ರಾನ್ಸನ್. ವರ್ಜಿನ್ ಗ್ರೂಪ್ಸ್ ಎಂಬ ವಿಶ್ವದ ಪ್ರಖ್ಯಾತ ಸಂಘಟಿತ ಸಂಸ್ಥೆಯ ಮಾಲೀಕನಾದ ಈತ ಬೆಳೆದು ಬಂದ ಹಾದಿ ಯಾವ ಚಿತ್ರಕತೆಗೂ ಕಮ್ಮಿ ಇಲ್ಲ. ಮಧ್ಯಮವರ್ಗದ ಕುಟುಂಬದಲ್ಲಿ ಬೆಳೆದ ಈತನ ಪೋಷಕರು ಈತನೊಬ್ಬ ಸಹಜ ಮಾನವ ಜೀವಿಯಾದರೆ ಸಾಕೆಂದಷ್ಟೇ ಅರಸಿದರು. ಹೊರಜಗತ್ತಿಗೆ ಈತ ಒಬ್ಬ ವಿಕಲಚೇತನನಂತೆ ಕಂಡರೂ ಈತನ ಒಳಜಗತ್ತು ಜಗತ್ತನೇ ಗೆಲ್ಲುವ ತವಕದಲ್ಲಿತ್ತು. ಆದುದರಿಂದಲೇ ಏನೋ ಅಂದು ಶಾಲೆಯಿಂದ ಹೊರಬಂದ ಬ್ರಾನ್ಸನ್ 'ಸ್ಟೂಡೆಂಟ್' ಎಂಬ ಹೆಸರಿನ ಮ್ಯಾಗಜಿನ್ ಒಂದನ್ನು ತೆರೆದೇಬಿಟ್ಟ! ತನ್ನ ಕ್ರಿಯಾಶೀಲತೆಯನ್ನೆಲ್ಲ ಆ ಮ್ಯಾಗಜಿನ್ ನ ಮೇಲೆತ್ತುವಿಕೆಯಲ್ಲೇ ಹರಿಸಿ ನೋಡನೋಡುತ್ತಿದ್ದಂತೆಯೇ ತನ್ನ ಒಡೆತನದ ರೆಕಾರ್ಡಿಂಗ್ ಸ್ಟುಡಿಯೋ ಒಂದನ್ನು ಆತ ತೆರದ. ಅಲ್ಲಿಂದ ಮುಂದೆ ಈತನನ್ನು ಯಾರೊಬ್ಬರೂ ಸಹ ಹಿಡಿದು ನಿಲ್ಲಿಸಲಾಗಲಿಲ್ಲ, ಸ್ವತಃ ಆತನ ಡಿಸ್ಲೆಕ್ಸಿಯಾ ಸಮಸ್ಯೆ ಕೂಡ! ಇಂದು 5.1 ಬಿಲಿಯನ್ ಡಾಲರ್ ಸಂಪತ್ತಿನ ಒಡೆಯನಾಗಿರುವ ರಿಚರ್ಡ್ ಬ್ರಾನ್ಸನ್ ನ ‘ವರ್ಜಿನ್ ಮೀಡಿಯಾ’ , ‘ವರ್ಜಿನ್ ಹಾಲಿಡೇಸ್’, ‘ವರ್ಜಿನ್ ಮ್ಯೂಸಿಕ್’ , ‘ವರ್ಜಿನ್ ಗಲಾಟಿಕ್’ ಎಲ್ಲವೂ ವಿಶ್ವದಾದ್ಯಂತ ಚಿರಪರಿಚಿತವಾಗಿರುವ ಬ್ರಾಂಡ್ ಗಳು.

ಜೆಫ್ ಬೆಝೋಸ್ :

ಬಿಲ್ ಗೇಟ್ಸ್ ಹಾಗು ವಾರೆನ್ ಬಫೆಟ್ ರನ್ನು ಹಿಂದಕ್ಕೆ ಹಾಕಿದ ಈತ ಇಂದು ವಿಶ್ವದ ಅಗ್ರಮಾನ್ಯ ಶ್ರೀಮಂತರ ಪಟ್ಟಿಯಲ್ಲಿ ಮೊದಲಿಗ. ಹೆಚ್ಚು ಕಡಿಮೆ ಪ್ರಸ್ತುತ ಪ್ರತಿಯೊಬ್ಬರೂ ಕೇಳಿರುವ ಅಮೆಜಾನ್ ಎಂಬ ಧೈತ್ಯ ಸಂಸ್ಥೆಯ ಮಾಲೀಕನಾದ ಈತ ಮೂವತ್ತು ವರ್ಷಗಳ ಹಿಂದೆ ನಮ್ಮ ನಿಮ್ಮಂತೆಯೇ ಬೆಳಗಿನಿಂದ ಸಂಜೆಯವರೆಗೆ ದುಡಿಯುವ ಒಬ್ಬ ಸಾಧಾರಣ ನೌಕರ. ಆದರೆ ತನ್ನ ಮೂರನೇ ವಯಸ್ಸಿಗೆ ಸ್ಕ್ರೂ ಡ್ರೈವರ್ ಒಂದನ್ನು ಹಿಡಿದು ತನ್ನನ್ನು ಕಟ್ಟಿ ಹಾಕುತಿದ್ದ ತೊಟ್ಟಿಲನ್ನೇ ಬಿಚ್ಚಲು ಹೊರಟಿದ್ದ ಮಗುವೊಂದು ಹೀಗೆ ಜೀವನವಿಡೀ ಖಾಸಗಿ ಕಂಪನಿಗಳಿಗೆ ದುಡಿಯುವ ಸಂಭವ ತೀರಾ ಕಡಿಮೆ. ಅಂತೆಯೇ ಕೆಲವರ್ಷಗಳ ಕಾಲ ಖಾಸಗಿ ಕಂಪನಿಗಳಿಗೆ ದುಡಿದ ಜೆಫ್ 1994 ರಲ್ಲಿ ಅಮೆಜಾನ್ ಎಂಬ ಆನ್ಲೈನ್ ಪುಸ್ತಕ ಮಳಿಗೆಯನ್ನು ತೆರೆದ. ಅದು ಇಂಟರ್ನೆಟ್ ಎಂಬ ಹೆಮ್ಮರ ಚಿಗುರೊಡೆಯುತ್ತಿದ್ದ ಕಾಲ. ಅದರ ಮುನ್ಸೂಚನೆ ಜೆಫ್ ನ ಬಡಿದೆಬ್ಬಿಸಲು ಹೆಚ್ಚು ಸಮಯ ಹಿಡಿಯಲಿಲ್ಲ. ಪುಸ್ತಕಗಳೊಟ್ಟಿಗೆ ಮ್ಯೂಸಿಕ್ ವಿಡಿಯೋ ಗಳು ಹಾಗು ಇತರೆ ಗೃಹಪಯೋಗಿ ವಸ್ತುಗಳನ್ನೂ ಅಲ್ಲಿ ಮಾರಲು ಆತ ಶುರುವಿಟ್ಟನು. ಆದರೆ ಹಿಂದೆಂದೂ ಕಾಣದ ಹೊಸ ಮಾದರಿಯ ವಹಿವಾಟನ್ನು ಗಮನಿಸಿ ಹಲವರು ಈತನಿಗೆ ಹೆಚ್ಚರಿಸಿದ್ದೂ ಉಂಟು. ಆದರೆ ಗುರಿ ಸ್ಪಷ್ಟವಾಗಿದ್ದು ನಮ್ಮ ಪ್ರಯತ್ನವೂ ಅದಕ್ಕೆ ಪೂರಕವಾಗಿದ್ದರೆ ಹೆದರುವ ಮಾತೆಲ್ಲಿಂದ? ಜೆಫ್ ತನ್ನ ವೇಗವನ್ನು ಹೆಚ್ಚಿಸಿದ. ನೋಡ ನೋಡುತ್ತಲೇ ಅಮೆಜಾನ್ ಮನೆ-ಮನೆಯ ಮಾತಾಯಿತು. ಜೆಫ್ನ ಸಾಧನೆ ನೆಟ್ಟಿನಲ್ಲಿ ಹರಿದಾಡತೊಡಗಿತು. Souq.com, ಗುಡ್ ರೀಡ್ಸ್, IMDb, ಶತಮಾನಗಳ ಇತಿಹಾಸ ವಿರುವ ‘ದಿ ವಾಷಿಂಗ್ ಟನ್ ಟೈಮ್ಸ್ ಪತ್ರಿಕೆ’ ,ಬ್ಲೂ ಆರಿಜಿನ್ ಎಂಬ ಒಟ್ಟು ಹದಿನಾಲ್ಕು ಕಂಪನಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಮುನ್ನೆಡೆದ ಈತ ಇಂದು ಒಟ್ಟು 112 ಬಿಲಿಯನ್ ಡಾಲರ್ ಗಳ ಒಡೆಯ!

ಎಲಾನ್ ಮಸ್ಕ್ :
ಈತನಿಗೆ ಕಂಪ್ಯೂಟರ್ ಪ್ರೋಗ್ರಾಮಿಂಗ್ ನ ಹುಚ್ಚು ಅದೆಷ್ಟಿತ್ತೆಂದರೆ ತನ್ನ ಹತ್ತನೇ ವಯಸ್ಸಿಗೇ ಯಾವುದೇ ಶಾಲಾ ಕಾಲೇಜುಗಳ ತರಗತಿಗಳ ಅವಶ್ಯಕೆತೆ ಇಲ್ಲದೆಯೇ, ಮನೆಯಲ್ಲಿದ್ದ ಪುಸ್ತಕಗಳ ಓದಿನಿಂದಲೇ ವಿಡಿಯೋ ಗೇಮಿನ ಪ್ರೋಗ್ರಾಮ್ ಒಂದನ್ನು ಬರೆಯುತ್ತಾನೆ. ಅದು ಯಶಸ್ವಿಯೂ ಆಗುತ್ತದೆ. ನಂತರ ಆ ಗೇಮನ್ನು ಕೆಲವೇ ನೂರು ಡಾಲರ್ಗೆ ಕಂಪನಿಯೊಂದಕ್ಕೆ ಆತ ಮಾರಿಯೂ ಬಿಡುತ್ತಾನೆ! ಬಹುಷಃ ಈ ಒಂದು ವಹಿವಾಟೇ ಆತನಿಗೆ ಹೊಸತೊಂದನ್ನು ಹುಟ್ಟುಹಾಕಿ, ಬೆಳೆಸಿ ಅದನ್ನು ಮಾರಿ ಮಗದೊಂದು ಸಾಹಸಕ್ಕೆ ಕೈಯಾಕುವ ಧೈರ್ಯವನ್ನು ಅಂದು ಬೆಳೆಸಿರಬೇಕು. ಬ್ಯುಸಿನೆಸ್ ವಲಯದ ಐರನ್ ಮ್ಯಾನ್ ಎಂದೇ ಪ್ರಖ್ಯಾತಿ ಹೊಂದಿರುವ ಇಲಾನ್ ಮಸ್ಕ್ ಮುಂದೆ ಬೆಳೆದ ಹಾದಿ ಆತನ ಈ ನೆಡೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಸಾಕಷ್ಟು ಏಳುಬೀಳುಗಳ ನಂತರ 1995 ರಲ್ಲಿ Jip-2 ಎಂಬ ಆನ್ಲೈನ್ ಸಿಟಿ ಗೈಡ್ ವೆಬ್ಸೈಟ್ ಅನ್ನು ತೆರೆದ ಈತ ಕೆಲವೇ ವರ್ಷಗಳ ನಂತರ ಅದನ್ನು ಬೇರೊಂದು ಕಂಪನಿಗೆ ಮಾರಿ ಬರೋಬ್ಬರಿ 22 ಮಿಲಿಯನ್ ಡಾಲರ್ ಗಳನ್ನು ಗಳಿಸಿಕೊಳ್ಳುತ್ತಾನೆ. ದೊರೆತ ಹಣದಿಂದ X.com ಎಂಬ ಆನ್ಲೈನ್ ಬ್ಯಾಂಕಿಂಗ್ ಕಂಪನಿಯನ್ನು ತೆರೆದ ಈತ ಮುಂದೆ ಅದನ್ನು ‘ಕಾನ್ಫಿನಿಟಿ’ ಎಂಬ ಕಂಪೆನಿಯೊಟ್ಟಿಗೆ ವಿಲೀನಗೊಳಿಸಿ ಸ್ಥಾಪಿಸಿದ ಹೊಸ ಕಂಪನಿಯೇ ವಿಶ್ವವಿಖ್ಯಾತ 'Paypal.com'. ಮುಂದೆ Paypal ಅನ್ನು Ebay.com ಕಂಪನಿಗೆ 1.5 ಬಿಲಿಯನ್ ಡಾಲರ್ ಗೆ ಮಾರಿ ತನ್ನ ಷೇರಿನ ಮೊತ್ತ 165 ಮಿಲಿಯನ್ ಡಾಲರ್ ಗಳನ್ನು ಕಿಸೆಗೆ ಹಾಕಿಕೊಳ್ಳುತ್ತಾನೆ. ಬಂದ ಹಣದಿಂದ ಈತ ಸ್ಥಾಪಿಸಿದ ಮಗದೊಂದು ಕಂಪನಿ ಅಕ್ಷರ ಸಹ ಈತನ ಮೂರ್ಖ ನಡೆಯಂತೆ ಅಂದು ಎಲ್ಲರಿಗೂ ಭಾಸವಾಯಿತು. ಏಕೆಂದರೆ ಈತ ದೊರೆತ ಆ ದೊಡ್ಡ ಮೊತ್ತದ ಹಣವನ್ನು ಬಳಸಿಕೊಂಡಿದ್ದು ಅಂತರಿಕ್ಷ ವಾಹನಗಳ ಬಿಡಿಭಾಗಗಳ ನಿರ್ಮಾಣ ಹಾಗು ಬಾಹ್ಯಾಕಾಶಕ್ಕೆ ಚಲಿಸುವ ವಾಹನಗಳ ನಿರ್ಮಾಣದ SpaceX ಎಂಬ ಸಂಸ್ಥೆ! ಸರಿ ಆತನ ದುಡ್ಡು ಆತನ ಬುದ್ದಿ ಎಂದು ಸುಮ್ಮನಾದ ಈತನ ಹಿತೈಷಿಗಳಿಗೆ ಆತನ ಓಟದ ಗುರಿ ಇನ್ನೂ ತಿಳಿದಿರಲಿಲ್ಲ. ಮುಂದೆ ಟೆಸ್ಲಾ ಮೋಟಾರ್ಸ್ ಎಂಬ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಕಂಪನಿ, ಸೋಲಾರ್ ಪ್ಯಾನೆಲ್ ಗಳನ್ನು ನಿರ್ಮಿಸುವ ಸೋಲಾರ್ ಸಿಟಿ ಎಂಬ ಕಂಪನಿ, OpenAI ಎಂಬ ಲಾಭರಹಿತ ಸಂಶೋಧನಾ ಸಂಸ್ಥೆಯನ್ನು ತೆರೆದು ಕೃತಕ ಬುದ್ದಿವಂತಿಕೆಗೆ ಉತ್ತೇಜನ, ಘಂಟೆಗೆ 2000 ಕಿಲೋಮೀಟರ್ ವೇಗವನ್ನು ತಲುಪುವ ಹೈಪರ್ ಲೂಪ್ ಎಂಬ ಸಾರಿಗೆ ವ್ಯವಸ್ಥೆಯನ್ನು ತನ್ನ ‘ದ ಬೋರಿಂಗ್’ ಕಂಪನಿಯ ಮೂಲಕ ಸಾಧಿಸಲು ಗುರಿಯನ್ನು ಹಾಕಿಕೊಂಡಿರುವ ಈತನದು ಇಂದು ಬೆಳೆಯುತ್ತಿರುವ ಹಲವು ಯುವ ಉದ್ಯಮಿಗಳಿಗೆ ಸ್ಪೂರ್ತಿದಾಯಕ ವ್ಯಕ್ತಿತ್ವ.

ಇಲ್ಲಿ ಏಕೆ ಈ ಮೂವರ ಬಗ್ಗೆ ಇಂದು ಚರ್ಚಿಸಲಾಗುತ್ತಿದೆ ಎಂಬ ಪ್ರೆಶ್ನೆಗೆ ಉತ್ತರ ಖಂಡಿತಾವಾಗಿಯೂ ಇದೆ. ಈ ಮೂವರ ಯೋಚನೆಯಲ್ಲೂ ಹಾಗು ಯೋಜನೆಯಲ್ಲೂ ಅತಿ ಕಾಮನ್ ಅಂಶ ಒಂದಿದೆ. ಅದೇ ಬಾಹ್ಯಾಕಾಶ. ಮಗುವೊಂದಕ್ಕೆ ತನ್ನ ಎಳೆತನದಲ್ಲಿ ಅಂತರಿಕ್ಷಕ್ಕೆ ಜಿಗಿಯುವ ಪ್ಲೈನು ರಾಕೆಟ್ಗಳನ್ನು ನೋಡಿ ನಾನೂ ಕೂಡ ಅಂತಹದೊಂದು ಸಾಧನೆಯನ್ನು ಮಾಡಬೇಕೆಂದು ಕನಸ್ಸು ಕಾಣುವುದು ತೀರಾ ಸಹಜವೇ.ಈ ತ್ರಿವಳಿಗಳೂ ಅಂತಹದ್ದೇ ಆದ ಕನಸ್ಸನ್ನು ತಮ್ಮ ಎಳೆಯ ವಯಸ್ಸಿನಲ್ಲಿ ಕಂಡಿದ್ದರು. ಸಮಯ ಹಾಗು ಸಂಧರ್ಭ ತಮ್ಮ ಕನಸ್ಸಿಗೆ ಪೂರಕವಾಗಿರಲಿಲ್ಲವಷ್ಟೇ. ಆದರೆ ಆ ಕನಸ್ಸು ಕಾಲದ ಗಾಲಿಯಲ್ಲಿ ಸವೆಯಲಿಲ್ಲ. ಅಳಿಸಲಿಲ್ಲ. ಒಳಗೊಳಗೇ ಅದು ಗಟ್ಟಿಗೊಂಡಿತ್ತು. ಎಂದು ಇವರುಗಳು ಯಶಸ್ಸಿನ ಉತ್ತುಂಗವನ್ನು ಹತ್ತಿದರೋ ಅಂದೇ ತಮ್ಮ ವಿಶಿಷ್ಟ ಕನಸ್ಸಿಗೆ ರೆಕ್ಕೆಯನ್ನು ಕಟ್ಟಲಾಂಬಿಸಿದರು. ರಿಚರ್ಡ್ ಬ್ರಾನ್ಸನ್ 2004 ರಲ್ಲಿ ವರ್ಜಿನ್ ಗಲಾಟಿಕ್ ಎಂಬ ಅಂತರಿಕ್ಷ ವಾಹನಗಳನ್ನು ತಯಾರಿಸುವ ಕಂಪನಿಯನ್ನು ಸ್ಥಾಪಿಸಿದ. ಎರಡು ಟೆಸ್ಟ್ ಫ್ಲೈಟ್ ಗಳನ್ನೂ ನಭಕ್ಕೆ ಚಿಮ್ಮಿಸಿ ಯಶಸ್ವಿಯೂ ಆಗಿರುವ ಕಂಪನಿ ಈಗ ಮಾನವ ಸಹಿತ ತನ್ನ ಚೊಚ್ಚಲ ಸ್ಪೇಸ್ ಶಿಪ್ ಅನ್ನು ಹಾರಿಸುವ ಸನಿಹದಲ್ಲಿದೆ. ಈ ಸಾಹಸಕ್ಕೆ ಸಾಕ್ಷಿಯಾಗುವ 'ಯಾತ್ರಿ' ಗಳಿಂದ ಅರ್ಜಿಯನ್ನು ಸ್ವೀಕರಿಸಿ ಹಲವರನ್ನು ಅಂತಿಮಗೊಳಿಸಿಯೂ ಆಗಿದೆ. ಅಲ್ಲದೆ ಅಂತಹ ಕೆಲ ನಿಮಿಷಗಳ ಯಾತ್ರೆಗೆ ಅವರುಗಳು ತೆರಬೇಕಾದ ಮೊತ್ತ ಹತ್ತಿರ ಹತ್ತಿರ 2 ಕೋಟಿ ರೂಪಾಯಿಗಳು! ಅಲ್ಲದೆ ಸ್ವತಃ ಬ್ರಾನ್ಸನ್ ಈ ಯಾತ್ರೆಯ ಮೊದಲ ಪ್ರಯಾಣಿಕನಾಗಲಿದ್ದಾನೆ. ಇನ್ನು ಜೆಫ್ ಬೆಝೋಸ್ನ ಬ್ಲೂ ಆರಿಜಿನ್ (ಕ್ರಿ ಶ 2000)ಕಂಪನಿಯೂ ಸಹ ಅಂತರಿಕ್ಷ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿದೆಯಲ್ಲದೆ ಅಮೇರಿಕಾದ ನಾಸಾ ಸಂಸ್ಥೆಯ ರಾಕೆಟ್ಗಳನ್ನು ಹಾಗು ಹೊಸ ಟೆಕ್ನಾಲಾಜಿಗಳನ್ನು ಪರೀಕ್ಷಿಸುವ ಒಪ್ಪಂದವನ್ನೂ ಅದು ಮಾಡಿಕೊಂಡಿದೆ. ಈ ಮೂಲಕ ಖಾಸಗಿ ಅಂತರಿಕ್ಷ ಸಂಸ್ಥೆಗಳ ಹೊಸ ಯುಗಕ್ಕೆ ನಾಂದಿಯನು ಹಾಡಿದೆ. ನಿಧಾನವಾದರೂ ಅಚ್ಚುಗಟ್ಟಾಗಿ ಗಟ್ಟಿಯಾದ ಒಂದೊಂದೇ ಹೆಜ್ಜೆಯನ್ನು ಇಡುತ್ತಿರುವ ಬ್ಲೂ ಆರಿಜಿನ್ ಅಂತರಿಕ್ಷ ವಲಯದಲ್ಲಿ ಗಟ್ಟಿಗನೆಂಬುದರಲ್ಲಿ ಸಂಶಯವಿಲ್ಲ. ಇನ್ನು ಎಲಾನ್ ಮಸ್ಕ್ ನ SpaceX ಸಂಸ್ಥೆಯ ವಿಚಾರಕ್ಕೆ ಬಂದರೆ ಆತನ ಕನಸ್ಸು ಇನ್ನು ಒಂದೆಜ್ಜೆ ಮುಂದಿದೆ ಎನ್ನಬಹುದು. ಆತ ಯಾತ್ರಿಕರನ್ನು ನಿಮಿಷಮಾತ್ರಕ್ಕೆ ಗಗನಕ್ಕೆ ಕಳುಹಿಸಿ ವಾಪಸ್ಸು ಕರೆತರುವ ಯೋಜನೆಯಷ್ಟೇ ಅಲ್ಲದೆ ದೈನಂದಿನ ವಿಮಾನಯಾನಗಳಂತೆ ‘ಬಾಹ್ಯಾಕಾಶಯಾನ’ವನ್ನೂ ಮಾಡಿಸುವುದಾಗಿದೆ. ಅರ್ಥಾತ್ ಭೂಮಿಯ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಬಾಹ್ಯಾಕಾಶದ ಮುಖೇನ ಜಿಗಿಯುವ ಯೋಜನೆ. ಮುಂದೊಂದು ದಿನ ಈ ಯೋಜನೆ ಸಫಲಗೊಂಡರೆ ಇಡೀ ಭೂಮಿಯ ಯಾವ ಮೂಲೆಗೂ ಕೇವಲ ಅರ್ವತ್ತು ನಿಮಿಷಗಳೊಳಗೆ ತಲುಪಬಹುದಾಗಿದೆ! ಅಲ್ಲದೆ ಎಲಾನ್ ಮಸ್ಕ್ ಮಂಗಳ ಗ್ರಹದಲ್ಲಿ ಮಾನವರನ್ನು ಇಳಿಸುವ ತನ್ನ ಬಾಲ್ಯದ ಕನಸ್ಸನ್ನೂ ನನಸ್ಸಾಗಿಸುವ ಸನಿಹದಲ್ಲಿದ್ದಾನೆ. ಈ ಯೋಜನೆಗೆ ಅದಾಗಲೇ BFR (Big Falcon Rocket) ಎಂಬ ಮರುಬಳಕೆ ಮಾಡಬಹುದಾದ ಸ್ಪೇಸ್ ಕ್ರಾಫ್ಟ್ ಅನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ.

ಒಟ್ಟಿನಲ್ಲಿ ಸಾಮಾನ್ಯ ಕುಟುಂಬದಲ್ಲೆ ಹಲವಾರು ಕಷ್ಟ, ದುಃಖ ಹಾಗು ನ್ಯೂನ್ಯತೆಗಳೊಟ್ಟಿಗೆ ನಮ್ಮ ನಿಮ್ಮಂತೆಯೇ ಹುಟ್ಟಿ ಬೆಳೆದ ಈ ಮೂವರು ಇಂದು ಇಡೀ ವಿಶ್ವದಲ್ಲೇ ತಮ್ಮ ಹೆಸರಿನ ಬ್ರಾಂಡನ್ನು ಕಟ್ಟಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಹೇಳಿಕೊಳ್ಳುವ ಮಹತ್ತರವಾದ ಡಿಗ್ರಿಗಳಿರದಿದ್ದರೂ ಅಂತರಿಕ್ಷ ವಲಯದಲ್ಲಿ ದೊಡ್ಡ ದೊಡ್ಡ ಹೆಸರಿನ ಸಂಸ್ಥೆಗಳೇ ಇವರ ಕಂಪನಿಯ ಟೆಕ್ನಾಲಜಿಗಳ ಮುಂದೆ ತಲೆಬಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಹಣವನ್ನು ಯಾರಾದರೂ ಗಳಿಸಬಹುದು. ಅದಕ್ಕೆ ಸಾವಿರಾರು ಮಾರ್ಗಗಳಿವೆ. ಆದರೆ ಗಳಿಸಿದ ನಂತರ ಇಡುವ ಹೆಜ್ಜೆ ಇದೆಯಲ್ಲ ಅದು ಆತನ ಅಥವಾ ಅವಳ ಸ್ವಭಾವವನ್ನು ಹಾಗು ಶಕ್ತಿಯನ್ನು ಜಗತ್ತಿಗೆ ತೋರಿಸುತ್ತದೆ. ಸೋಲು ಖಚಿತವೆಂದು ದೇವರೇ ಬಂದು ಹೇಳಿದರೂ ಇವರುಗಳು ಮಾತ್ರ ಪ್ರಯತ್ನಿಸುವುದ ಬಿಡಲಿಲ್ಲ. ಹಣದ ಹೊಳೆಯೇ ಪೋಲಾದರೂ ದೃತಿಗೆಡಲಿಲ್ಲ. ಅವರ ಪ್ರತಿ ಸೋಲೂ ಪ್ರಗತಿಯಾಗಿದ್ದಿತೇ ವಿನಃ ಕೇವಲ ನಡೆಯಾಗಿರಲಿಲ್ಲ. ಇಲ್ಲವಾದರೆ ತಿಂಗಳ ಕೊನೆಗೆ ಸಿಗುವ ಸಂಬಳಕ್ಕೆ ದುಡಿಯುವ ನೌಕರನೊಬ್ಬ ನಾಸಾದಂತಹ ಧೈತ್ಯ ಅಂತರಿಕ್ಷ ಸಂಸ್ಥೆಗಳಿಗೆ ರಾಕೆಟ್ ಗಳನ್ನು ಮಾಡಿ ಕೊಡುವ ಪ್ರಪೋಸಲ್ ಅನ್ನು ಇಡಲು ಸಾಧ್ಯವಾದೀತೆ? ಒಮ್ಮೆ ಯೋಚಿಸಿ. ಇವರುಗಳ ನಡುವೆ ಅದೆಂತಹ ಪೈಪೋಟಿಯೇ ಇರಬಹುದು ಆದರೆ ಸೋಲನ್ನು ಸೋಲಿಸಿ ಆಗಸಕ್ಕೆ ಏಣಿಯಿಟ್ಟವರಿವರು. ನಮ್ಮ ನಿಮ್ಮ ಸುತ್ತಲೂ ಇಂತಹ ಹತ್ತಾರು ನೂರಾರು ಅರಬ್ ಪತಿಗಳು, ಕೋಟ್ಯಾಧಿಪತಿಗಳು ಕಾಣಸಿಗುತ್ತಾರೆ. ಕೂತು ತಿಂದರೂ ಕೊಳೆಯುವಷ್ಟು ಹಣವಿರುವ ಶ್ರೀಮಂತರಿದ್ದಾರೆ. ವಿಶ್ವದ ಪಟ್ಟಿಯಲ್ಲಿ ಅಗ್ರಮಾನ್ಯರೆನಿಸಿಕೊಂಡವರಿದ್ದಾರೆ. ಆದರೆ ಅದರಲ್ಲಿ ಅದೆಷ್ಟು ಜನ ಇಂತಹ ಸಾಹಸದ ಕಾರ್ಯಕ್ಕೆ ಕೈಯಾಕಬಲ್ಲರು?. ಅವರಲ್ಲಿ ಅದೆಷ್ಟು ಮಂದಿಗೆ ಇಂತಹ ಡೇರಿಂಗ್ ವಲಯಗಳನ್ನು ಪ್ರವೇಶಿಸುವ ತಾಕತ್ತು ಹಾಗು ಆ ತಾಕತ್ತಿಗೆ ಬೇಕಾದ ವಿದ್ವತ್ತು ಇರಬಹುದು? ಉತ್ತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅತಿ ಮಹತ್ವವಾದದ್ದು!