Wednesday, September 21, 2016

ಪ್ರಸ್ತುತ : ಮಿತಿ.


೧೪೦ ಪದಗಳಲ್ಲೇ ಜನುಮವನ್ನು ಜಾಲಾಡಬಲ್ಲೆವೆಂದರೆ  ಕನಿಷ್ಠಕ್ಕೆ ನಾವು ಒಗ್ಗಿಕೊಂಡಂಗಲ್ಲವೆ? ದಿನಕ್ಕೆ ನೂರು ಎಸ್ಸೆಮೆಸ್ಗಳಿದ್ದ ಕಾಲದಲ್ಲೇ ಮಿತವಾಗಿ ವ್ಯಹಿಸಿ ವಾಕ್ಯಗಳಿಗೆ 'ಹೊಸ ರೂಪ'ವನ್ನೇ ಕೊಟ್ಟ ನಮ್ಮಂತಹ ಸೃಜನಶೀಲರಿಗೆ 'ಕಡಿಮೆ ನೀರಿ'ನಲ್ಲಿ ಹಿತವನ್ನೂ ಜೊತೆಗೆ ಮಿತಿಯನ್ನು ಕಲಿತುಕೊಳ್ಳುವ ಅರಿವು ಮೂಡಬೇಕೆಂದರ್ತವೆ? 

ಪದಗಳಿದ ಭಾವವೋ..ಭಾವಗಳಿದ ಪದವೋ..?
ಬದುಕಿಗಾಗಿ ನೀರೋ..ನೀರಿಗಾಗಿ ಬದುಕೋ ..?!


"GUDNI8"

Sunday, September 18, 2016

ಅಂಕಣ : ಬಾಲಿವುಡ್ನ ಬಡಾ ಜೋಡಿ : ಸಲಿಂ-ಜಾವೇದ್..


ಅದು ಎಪ್ಪತ್ತರ ದಶಕದ ಆರಂಭದ ವರ್ಷಗಳು. ಭಾರತದಲ್ಲಿ ವಾಕ್ ಚಿತ್ರಗಳು ಶುರುವಾಗಿ ಅದಾಗಲೇ ನಾಲ್ಕು ದಶಕಗಳು ಕಳೆದಿದ್ದವು. ಶಾಂತಿ ಪ್ರಿಯ, ಕಾದಂಬರಿ ಆದಾರಿತ, ಪ್ರೀತಿ ಪ್ರೇಮಗಳ ತ್ಯಾಗಮಯಿ ಚಿತ್ರಗಳಷ್ಟೇ ಹೆಚ್ಚು ಹೆಚ್ಚಾಗಿ ಮೂಡುತ್ತಿದ್ದವು. ಪ್ರೇಕ್ಷಕರು ತದೇಕಚಿತ್ತದಿಂದ ಚಿತ್ರವನ್ನು ನೋಡಿ ಕೊನೆಗೆ ಚಿತ್ರದಲ್ಲಿರುವ ಸಂದೇಶವನ್ನು ಅರಿಯಬೇಕಿತ್ತು. ಇಂದಿನಂತೆ ಚಿತ್ರದ ನಾಯಕನ ವೇಷಭೂಷಣದ, ನಟನೆಯ ಅಥವಾ ಕೇಶರಾಶಿಯ ಶೈಲಿಯನ್ನಾಗಲಿ ಹುಚ್ಚೆದ್ದು ಅನುಸರಿಸುವ ಕಾಲವಾಗಿರಲಿಲ್ಲ. ನಾಯಕ ತೀರಾ ಸರಳ ಹಾಗು ಅತಿ ಬಡವ ಕುಟುಂಬದ ವ್ಯಕ್ತಿಯಾಗಿರುತ್ತಿದ್ದರಿಂದ ಆತನದ್ದು ನೋವಿನ ಹಾಗು ಕರುಣಾಜನಕ ಪಾತ್ರಗಳೇ ಹೆಚ್ಚಾಗಿರುತ್ತಿದ್ದವು. ಚಿತ್ರವನ್ನು ನೋಡಿದ ಪ್ರೇಕ್ಷಕ ಇದು ತುಂಬ ಒಳ್ಳೆಯ ಚಿತ್ರವೆಂದು ಹೇಳುತ್ತಿದ್ದ ವಿನ್ಹಾ ನಾನೂ ನಾಯಕನಂತೆ ನ್ಯಾಯಕ್ಕಾಗಿ ಹೋರಾಡುತ್ತೇನೆ, ಅನ್ಯಾಯದ ವಿರುದ್ಧ ದನಿ ಎತ್ತುತ್ತೇನೆ ಎನ್ನುವ ಭಾವಗಳನ್ನು ಅವನಲ್ಲಿ ಮೂಡಿಸುವ ಚಿತ್ರಗಳು ತೀರಾ ವಿರಳವಾಗಿದ್ದವು.

ಅದು 1973 ರ ಮೇ ತಿಂಗಳು. ಚಿತ್ರವೊಂದರ ಬಿತ್ತಿಪತ್ರವೊಂದು ಎಲ್ಲೆಲ್ಲೂ ಹೆಸರು ಮಾಡಲು ಶುರು ಮಾಡುತ್ತದೆ. ಅದರಲ್ಲಿ ಆರು ಆಡಿ ಎತ್ತರದ ವ್ಯಕ್ತಿಯೊಬ್ಬ ಬಿಳಿಯ ಕೋಟು, ಕರಿ ಬೂಟು ಹಾಗು ಅದೇ ಬಿಳಿ ಬಣ್ಣದ ಬೆಲ್ ಬಾಟಮ್ ಪ್ಯಾಂಟ್ ಧರಿಸಿ ದರ್ಪದಿಂದ ನಿಂತಿದ್ದಾನೆ. ಆತನ ಮುಖದಲ್ಲಿ ರಾಜಗಾಂಭೀರ್ಯ ಹಾಗು ಕಣ್ಣುಗಳಲ್ಲಿ ಹೊತ್ತಿ ಹುರಿಯುವ ಕಿಚ್ಚು. ಆ ನಿಲುವಿಗೆ ತಕ್ಕಂತೆ ಎಂಬಂತೆ ಚಿತ್ರದ ಹೆಸರು. ಜಂಜೀರ್. ಚಿತ್ರ ದಿನೇ ದಿನೇ ಎಲ್ಲೆಡೆ ಹೆಸರು ಮಾಡುತ್ತದೆ. ನಾಯಕನ ಪ್ರವೇಶವನ್ನೇ ಕಾಯುತ್ತಿದ್ದ ಪ್ರೇಕ್ಷಕ ಕೇಕೆ ಸಿಳ್ಳೆಗಳಿಂದ ಅವನನ್ನು ಸ್ವಾಗತಿಸತೊಡಗುತ್ತಾನೆ. ಅನ್ಯಾಯದ ವಿರುದ್ಧ ಹೊರಡುವ ಆರು ಅಡಿಯ ಆ ವ್ಯಕ್ತಿ ಅಷ್ಟರಲ್ಲಾಗಲೇ ಮನೆಮಾತಾಗಿದ್ದ. ಆತನ ಹೆಸರಿಗಿಂತ ಹೆಚ್ಚಾಗಿ 'ಆಂಗ್ರಿ ಯಂಗ್ ಮ್ಯಾನ್' ಎನ್ನುವ ಅನ್ವರ್ಥ ನಾಮದಿಂದ. ಆತನ ಧ್ವನಿ, ನಿಲ್ಲುವ ಭಂಗಿ, ವೈರಿಯ ಎದೆಯಲ್ಲಿ ನಡುಕ ಹುಟ್ಟಿಸುವ ಧೈರ್ಯ ಹಾಗು ಎಲ್ಲಕಿಂತ ಮಿಗಿಲಾಗಿ ಕಿಚ್ಚೆತ್ತಿಸುವ ಆತನ ಪಾತ್ರ ನೋಡುಗನಿಗ ಅತೀ ಸನಿಹವಾಗುತ್ತದೆ. ಈ ಪಾತ್ರವೇ ಮುಂದೆ ಆತನನ್ನು ದೇಶದ ಅತಿ ದೊಡ್ಡ ನಾಯಕ ನಟನಾಗಿ ಮುಂದುವರೆಯಲು ಕಾರಣವಾಗುತ್ತದೆ. ಬಾಲಿವುಡ್ ಇತಿಹಾಸದ ನಿಜವಾದ ಟರ್ನಿಂಗ್ ಪಾಯಿಂಟ್ ಎಂದರೆ ಈ ಸಿನಿಮಾವೆಂದೇ ಇಂದಿಗೂ ಇತಿಹಾಸ ಬಲ್ಲವರು ಮಾತನಾಡಿಕೊಳ್ಳುತ್ತಾರೆ. ಗಂಡು ಎದೆಯ ನಾಯಕ ಹಾಗು ಅಂತಹ ಪಾತ್ರಕ್ಕೆ ತಕ್ಕ ಚಿತ್ರಗಳು ಮುಂದೆ ಹೆಚ್ಚು ಹೆಚ್ಚಾಗಿ ಮೂಡತೊಡಗುತ್ತವೆ. ಆ ಗಂಡು ಎದೆಯ ನಾಯಕನೇ 'ದಿ ಆಂಗ್ರಿ ಯಂಗ್ ಮ್ಯಾನ್' ಅಮಿತಾಬ್ ಬಚ್ಚನ್ ಹಾಗು ಅಂತಹ ಪಾತ್ರಗಳ ಸೃಷ್ಟಿಗೆ ಕಾರಣೀಕರ್ತರೇ ದೇಶ ಕಂಡ ಹೆಮ್ಮೆಯ ಕಥೆ, ಚಿತ್ರಕಥೆ, ಹಾಗು ಸಂಭಾಷಣೆಗಾರರಾದ ಸಲೀಮ್-ಜಾವೇದ್.

ಹೌದು, ಸಲೀಮ್-ಜಾವೇದ್. ದೇಶ ಕಂಡ ಅತ್ಯಂತ ಸೃಜನಶೀಲ ಹಾಗು ಜನಪ್ರಿಯ ಚಿತ್ರಕತೆಗಾರರಲ್ಲಿ ಒಬ್ಬರು. ಸರಿ ಸುಮಾರು 26 ಚಿತ್ರಗಳಿಗೆ ಕಥೆಯನ್ನು ಬರೆದಿರುವ ಈ ಜೋಡಿ 21 ಚಿತ್ರಗಳಲ್ಲಿ ಯಶಸ್ಸನ್ನು ಕಂಡಿದೆ. ಈ ಪಾಟಿ ಯಶಸ್ಸಿನ ಚಿತ್ರಕಥೆಗಾರರು ಕಾಣುವುದು ತೀರಾ ವಿರಳ. ಆಗಿನ ಕಾಲಕ್ಕೆ ಚಿತ್ರವೆಂದರೆ ನಾಯಕ, ನಾಯಕಿ ಹಾಗು ಹೆಚ್ಚೆಂದರೆ ನಿರ್ದೇಶಕ. ಇವರಿಷ್ಟೆ ಚಿತ್ರದ ಬಿತ್ತಿಪತ್ರದಲ್ಲಿ ಹಾಗು ಜನರ ಮಾತುಗಳಲ್ಲಿ ಉಳಿಯುತ್ತಿದ್ದರು. ಚಿತ್ರ ಗೆಲ್ಲುವುದೋ ಅಥವಾ ಸೋಲುತ್ತದೋ ಎಂಬುದು ಹೆಚ್ಚಾಗಿ ಈ ಅಂಶಗಳಲ್ಲೇ ತೀರ್ಮಾನವಾಗುತ್ತಿತ್ತು. ಚಿತ್ರಕಥೆ, ಸಂಪಾದನೆ,ಸಂಭಾಷಣೆ, ನೃತ್ಯ, ಗೀತರಚನೆ ಇವೆಲ್ಲ ಅಂದಿನ ಸಾಮಾನ್ಯ ನೋಡುಗನ ಅರಿವಿಗೆ ಬಾರದ ವಿಷಯಗಳಾಗಿದ್ದವು. ಅರಿತರು ನೆನಪಲ್ಲಿ ಉಳಿಯದ ಹೆಸರುಗಳಾಗಿದ್ದವು. ಅಂತಹ ಕಾಲದಲ್ಲಿ ಒಂದು ಚಿತ್ರದ ಲಾಭದ ಶೇಕಡಾ 25ರಷ್ಟನ್ನು ಪಡೆಯುವ ಚಿತ್ರಕಥೆಗಾರರಿದ್ದರೆಂದರೆ ಅದು ಸಲೀಮ್-ಜಾವೇದ್! ಅವರ ಕಥೆಗಳೇ ಹಾಗೆ. ಕಥೆ ಹಾಗು ಅದರೊಳಗಿನ ಪಾತ್ರಗಳು ಅಂದಿನ ನೈಜಸ್ಥಿತಿಗೆ ಸಮೀಪವಾಗಿರುತ್ತಿದ್ದವು. ನಾಯಕ ಪ್ರಧಾನ ಕಥೆಗಳಾಗಿದ್ದ ಅವುಗಳು ನಾಯಕನ ಕಷ್ಟಗಳು ಹಾಗು ಅದಕೊಂಡು ಪರಿಹಾರವನ್ನೂ ಅಲ್ಲಿ ತೋರಿಸಿ ಕೊಡುತ್ತಿದ್ದವು. ಇದು ನೋಡುಗರ ಮನದಲ್ಲಿ ಛಲವನ್ನು ಮೂಡಿಸಿ ಒಂದು ಬಗೆಯ ಧನಾತ್ಮಕ ಮನೋಭಾವವನ್ನು ಸೃಷ್ಟಿಸುತ್ತಿದ್ದವು. ಅಲ್ಲದೆ ಪ್ರತಿಯೊಂದು ಪಾತ್ರವನ್ನು ಕೂಲಂಕುಶವಾಗಿ ಅಧ್ಯಯನ ಮಾಡಿ ಅದರಿಂದ ಸಮಾಜದ ಮೇಲೆ ಬೀರುವ ಒಳಿತು ಕೆಡುಕುಗಳನ್ನು ಅಳೆದು ಬರೆಯುತ್ತಿದ್ದ ಕಥೆಗಳು ನೋಡುಗನನ್ನು ಹಿಡಿಟ್ಟುಕೊಳ್ಳುತ್ತಿದ್ದವು. ಸರಿ ಸುಮಾರು ಹನ್ನೊಂದು ವರ್ಷಗಳ ಕಾಲ ಒಟ್ಟಾಗಿ ಬರೆದ ಈ ಜೋಡಿ ಭಾರತೀಯ ಚಿತ್ರರಂಗವನ್ನು ಮತ್ತೊಂದು ಮಟ್ಟದ ಎತ್ತರಕ್ಕೆ ಕೊಂಡೊಯಿತೆಂದರೆ ಸುಳ್ಳಾಗದು.

ಅಂದು ಅಮಿತಾಬ್ ಬಚ್ಚನ್ ಸಿನಿಮಾ ರಂಗದಲ್ಲಿ ನೆಲೆಯೂರುತ್ತಿದ್ದ ಸಮಯ. ಇತ್ತ ಕಡೆ ಸಲೀಮ್-ಜಾವೇದ್ ತಮ್ಮ ಜಂಜೀರ್ ಚಿತ್ರಕ್ಕೆ ನಾಯಕ ನಟನನ್ನು ಅರಸುತ್ತಿದ್ದರು. ವಿಪರ್ಯಾಸವೆಂಬಂತೆ ಅಂದಿನ ಬಹು ಬೇಡಿಕೆಯ ದೇವ್ ಆನಂದ್, ರಾಜೇಶ್ ಖನ್ನಾ ಹಾಗು ಧರ್ಮೇದ್ರರಂತ ತಾರೆಗಳೇ ಒಂದಲ್ಲೊಂದು ಕಾರಣವನೊಡ್ಡಿ ಚಿತ್ರವನ್ನು ತಿರಸ್ಕರಿಸಿದರು. ಕೊನೆಗೆ ಅದೃಷ್ಟ ಒಲಿದಿದ್ದು ಆರು ಅಡಿ ಎರಡು ಅಂಗುಲ ಎತ್ತರದ ಅಮಿತಾಬ್ಗೆ. ಅಲ್ಲಿಯವರೆಗು ಕೇವಲ ಬೆರಳೆಣಿಕೆಯ ಚಿತ್ರಗಳಲ್ಲಿ ನಟಿಸಿದ್ದ ಅಮಿತಾಭ್ ಒಂದು ಪ್ರಚಂಡ ಬ್ರೇಕ್ಗೋಸ್ಕರ ಕಾಯುತ್ತಿದ್ದರು. ಚಿತ್ರ ಗೆದ್ದಿತು. ಚಿತ್ರರಂಗದ ಎಲ್ಲರ ಹುಬ್ಬೇರುವಂತೆ ಮಾಡಿತು. ಮುಂದೆ ನೆಡೆಯುವುದೆಲ್ಲ ಇತಿಹಾಸ. ಈ ಜೋಡಿ ಒಂದರ ಮೇಲೊಂದು ಹಿಟ್ ಚಿತ್ರಗಳನ್ನು ನೀಡುತ್ತಾ ಹೋಯಿತು. ಅಲ್ಲದೆ ಹೆಚ್ಚಾಗಿ ಅಮಿತಾಭ್ ನನ್ನೇ ಚಿತ್ರದ ನಾಯಕನಾಗಿ ಮಾಡಿಕೊಳ್ಳುವಂತೆ ನಿರ್ದೇಶಕರಲ್ಲಿ ಒತ್ತಡ ಹೇರುತ್ತಿತ್ತು. ಬಾಲಿವುಡ್ನ ಇತಿಹಾಸದಲ್ಲೇ ಅಚ್ಚಳಿಯದ ಚಿತ್ರಗಳಾದ ದಿವಾರ್,ಶೋಲೆ, ಡಾನ್, ತ್ರಿಶೂಲ್,ದೋಸ್ತಾನಾ, ಕ್ರಾಂತಿ ,ಶಕ್ತಿ, Mr.ಇಂಡಿಯಾ ಹೀಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ಇವರು ಬರೆದರು. ಅಮಿತಾಬ್ನನ್ನು ಚಿತ್ರರಂಗದ ದಿ ಗ್ರೇಟ್ ನಾಯಕ ನಟನಾಗಿ ಮಾಡಲು ಈ ಜೋಡಿಯ ಪಾತ್ರವೂ ಅಗಾದವಾದದ್ದು. ಅಲ್ಲದೆ Dr.ರಾಜಕುಮಾರ್ ಅಭಿನಯದ ಕನ್ನಡದ ಸೂಪರ್ ಹಿಟ್ ಚಿತ್ರಗಳಾದ 'ಪ್ರೇಮದ ಕಾಣಿಕೆ' ಹಾಗು 'ರಾಜ ನನ್ನ ರಾಜ' ಚಿತ್ರಗಳ ಚಿತ್ರಕತೆಯನ್ನೂ ಬರೆದಿದ್ದು ಈ ಜೋಡಿಯೇ ಎಂಬುದು ಮತ್ತೊಂದು ವಿಶೇಷ.

ಅಂದೆಲ್ಲ ಚಿತ್ರದ ಬಿತ್ತಿ ಪತ್ರದಲ್ಲಿ ನಾಯಕ, ನಾಯಕಿ, ನಿರ್ದೇಶಕ ಹಾಗು ನಿರ್ಮಾಪಕರ ಹೆಸರುಗಳೇ ಹೆಚ್ಚಾಗಿ ಇರುತ್ತಿದ್ದವು. ಹೆಚ್ಚೆಂದರೆ ಸಂಗೀತ ಸಂಯೋಜಕಾರ ಹೆಸರು. ಅಂತಹ ಸಮಯದಲ್ಲಿ ಚಿತ್ರದ ಶ್ರೇಯ ಅದರ ಕಥೆ, ಚಿತ್ರಕಥೆ ಹಾಗು ಸಂಭಾಷಣೆ ಬರೆಯುವವರಿಗೂ ಸಲ್ಲಬೇಕೆಂದು ಹೋರಾಡಿ ಕೊನೆಗೆ ಅದು ಆಗುವಂತೆಯೂ ನೋಡಿಕೊಂಡರು. ಚಿತ್ರದ ಗೆಲುವಿನ ಶ್ರೇಯ ಪ್ರತಿಯೊಬ್ಬರಿಗೂ ಸಮಾನವಾಗಿ ಸಲ್ಲಬೇಕು ಎಂಬುದು ಅವರ ವಾದವಾಗಿತ್ತು. ಅಲ್ಲದೆ ೨೦೦೮ ರ ಆಸ್ಕರ್ ಗೆದ್ದ ಸ್ಲಂ ಡಾಗ್ ಮಿಲೇನಿಯರ್ ಚಿತ್ರತಂಡವೂ ಕೂಡ ಇವರ ಚಿತ್ರಕಥೆಯ ರೀತಿಯಿಂದಲೇ ಪ್ರಭಾವಗೊಂಡಿತ್ತು. ಅಲ್ಲದೆ ಚಿತ್ರದಲ್ಲಿ ಎರಡು ಪಾತ್ರಗಳಿಗೆ ಇವರ ಹೆಸರನ್ನೇ ನಾಮಕರಣ ಮಾಡಿತ್ತು!



ಒಂದೆಡೆ ಇವರ ಸಾಲು ಸಾಲು ಚಿತ್ರಗಳು ಜಯಭೇರಿಯನ್ನು ಬಾರಿಸುತ್ತ ಹೋಗುತ್ತಿದ್ದರೆ ಇನ್ನೊಂದೆಡೆ ನಿಜಜೀವನದಲ್ಲಿ ಇವರಿಬ್ಬರ ಒಳಗೊಳಗೇ ವೈಮನಸ್ಸು ಬೆಳೆಯುತ್ತಿರುತ್ತದೆ. ಸಲಿಂ-ಜಾವೇದ್ ರಿಂದಲೇ ಹೆಚ್ಚಾಗಿ ಚಿತ್ರರಂಗದಲ್ಲಿ ಬೆಳೆದ ಅಮಿತಾಬ್ ಬಚ್ಚನ್ರೇ ಕೊನೆಗೊಂದು ದಿನ ಇವರಿಬ್ಬರ ಒಡಕಿಗೂ ಕಾರಣರಾಗುತ್ತಾರೆ ಎಂದು ಯಾರು ಸಹ ಊಹಿಸಿರಲಿಲ್ಲ. Mr.ಇಂಡಿಯಾ ಚಿತ್ರವನ್ನು ನಿರಾಕರಿಸಿದ ಅಮಿತಾಬ್ ಬಚ್ಚನ್ನೊಟ್ಟಿಗೆ ಮತ್ತೆಂದೂ ಚಿತ್ರ ಮಾಡುವುದಿಲ್ಲವೆಂದು ಸಿಡುಕಿದ್ದ ಜಾವೇದ್ ಮತ್ತೊಂದು ದಿನ ಅದೇ ಅಮಿತಾಬ್ ನೊಟ್ಟಿಗೆ ಅವರ ಮನೆಯಲ್ಲೇ ಹೋಳಿಯನ್ನಾಡುವುದು ಸಲೀಮ್ರ ಕಿವಿಗೆ ಬೀಳುತ್ತದೆ. ಅದೆಲ್ಲಿಗೆ ಜಾವೇದ್ರ ಮೇಲೆ ಇವರಿಗೆ ತಿರಸ್ಕಾರ ಭಾವ ಮೂಡುತ್ತದೆ. ಇದಾದ ಕೆಲವೇ ದಿನಗಳಲ್ಲಿ ಜಾವೇದ್ ಅಖ್ತರ್ ಸಲೀಂರನ್ನು ಕುರಿತು ತಾನು ಚಿತ್ರಗಳಿಗೆ ಹಾಡುಗಳನ್ನು ಬರೆಯುವುದಾಗಿಯೂ, ಅದಕ್ಕೂ ಸಲೀಂ-ಜಾವೇದ್ ಎಂಬ ಹೆಸರನ್ನೂ ಕೊಡುವುದಾಗಿಯೂ ಹೇಳಿದರು. ಸಲೀಂ ನಿಜ ಜೀವನದಲ್ಲಿ ತುಂಬ ನೇರ ಮನುಷ್ಯ. ಕೇವಲ ಚಿತ್ರಕಥೆಗಳಿಗೆ ಸೀಮಿತವಾಗಿದ್ದ ಸಲಿಂ ಹಾಡುಗಳನ್ನು ಬರೆದಿರುವುದು ತೀರಾ ವಿರಳ. ಹಾಗಾಗಿ ತಾನು ಮಾಡದೇ ಇರುವ ಕೆಲಸಕ್ಕೆ ದಕ್ಕುವ ಶ್ರೇಯ ತನಗೆ ಬೇಡವೆಂದು ಖಡಾಖಂಡಿತವಾಗಿ ಹೇಳುತ್ತಾರೆ. ಕೊಡಲೇ ಅಲ್ಲಿಂದ ಹೊರಟ ಜಾವೇದ್ ಮತ್ತೆಂದೂ ಸಲೀಂ ಕಡೆ ತಿರುಗಿ ನೋಡುವುದಿಲ್ಲ. ಅಲ್ಲಿಗೆ 1971 ರಿಂದ 1982ರ ವರೆಗಿದ್ದ ಹಿಂದಿ ಚಿತ್ರರಂಗದ ದಿ ಬೆಸ್ಟ್ ಜೋಡಿಯೊಂದು ಬೇರ್ಪಟ್ಟಿತ್ತು. ಇದರಿಂದ ನಿಜವಾಗಿ ನಷ್ಟವನ್ನು ಅನುಭವಿಸಿದ್ದು ಮಾತ್ರ ಪ್ರೇಕ್ಷಕ. ಇವರ ಶಾಹಿಯಿಂದ ಇನ್ನೂ ಅದೆಷ್ಟೋ ಚಿತ್ರಗಳು ಮೂಡದೇ ಉಳಿದವೋ ಹೇಳಲಾಗದು. ಅಲ್ಲಿಂದ ಮುಂದಕ್ಕೆ ಜಾವೇದ್ ಅಖ್ತರ್ ಗೀತರಚನೆ ಹಾಗು ಚಿತ್ರಕಥೆಯನ್ನು ಮುಂದುವರೆಸುತ್ತಾರೆ. ಚಿತ್ರಕಥೆಯಲ್ಲಿ ಹಿಂದಿನ ಪ್ರಚಂಡ ಯಶಸ್ಸೇನೂ ಕಾಣದಿದ್ದರೂ ತಕ್ಕ ಮಟ್ಟಿಗೆ ಉತ್ತಮ ಚಿತ್ರಗಳನ್ನು ಬರೆಯುತ್ತಾರೆ. ಆದರೆ ಗೀತರಚನೆಯಲ್ಲಿ ಮಾತ್ರ ಚಿತ್ರ ಇತಿಹಾಸದ ದಂತಕಥೆಯಾಗುತ್ತಾರೆ. ಅದು ಅವರ ಎಂಭತ್ತರ ದಶಕದ ಹಾಡುಗಳಾಗಲಿ ಅಥವಾ ತೀರಾ ಇತ್ತೀಚಿನ ಶಾಯರಿಗಳಾಗಲಿ, ಒಮ್ಮೆ ಕೇಳಿದರೆ ಸಾಕು ಅವು ಕೇಳುಗನ ಮನದಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಎಷ್ಟೂ ಕೇಳಿದರೂ ಸಾಲದೆಂಬ ಭಾವವನ್ನು ಸ್ಪುರಿಸುತ್ತವೆ. ಆ ಮಟ್ಟಿನ ಭಾಷಾ ಹಿಡಿತ ಹಾಗು ಭಾವ ತುಂಬುವ ಕಲೆ ಜಾವೇದ್ರಿಗೆ ಒಲಿಯಿತು.
ಅತ್ತ ಕಡೆ ಸಲೀಂ ಖಾನ್ ಸಹ ಚಿತ್ರಕಥೆಯಲ್ಲಿ ಮುಂದುವರೆಯುತ್ತಾರೆ. ಆದರೆ ಒಂದಕ್ಕಿಂತ ಒಂದು ಚಿತ್ರಗಳು ನೆಲ ಕಚ್ಚತೊಡಗುತ್ತವೆ. ಸತತ ಸೋಲಿನಿಂದ ಬೇಸತ್ತ ಸಲೀಮ್ ಕೊನೆಗೊಂದು ದಿನ ಚಿತ್ರಕಥೆ ಬರೆಯುವುದನ್ನೇ ನಿಲ್ಲಿಸುತ್ತಾರೆ! ಅಲ್ಲಿಗೆ ಹಿಂದಿ ಚಿತ್ರರಂಗ ಕಂಡ ವಿಶಿಷ್ಟ ದ್ರುವತಾರೆಯೊಂದು ಮಿನುಗಿ ಮರೆಯಾಗಿರುತ್ತದೆ.

ಇದು ಹಿಂದಿ ಚಿತ್ರರಂಗ ಕಂಡ ಖ್ಯಾತ ಕಥೆಗಾರರಿಬ್ಬರ ಕಥೆ. ಇಂದಿನ ಖ್ಯಾತ ನಟ ಸಲ್ಮಾನ್ ಖಾನ್ರ ಅಪ್ಪ ಸಲೀಮ್ ಖಾನ್ ಹಾಗು ಇನ್ನೊಬ್ಬ ನಟ ಫರಾನ್ ಅಕ್ತರ್ ರವರ ಅಪ್ಪ ಜಾವೇದ್ ಅಖ್ತರ್ ಎಂದು ಕೆಲವರೆಂದರೆ, ಇನ್ನೂ ಕೆಲವರು 'ಇಲ್ಲ ಇಲ್ಲ.. ಸಲೀಮ್ ಖಾನ್ರ ಮಗ ಸಲ್ಮಾನ್ ಖಾನ್ ಹಾಗು ಜಾವೇದ್ ಅಖ್ತರ್ರವರ ಮಗ ಫರಾನ್ ಅಕ್ತರ್' ಎಂದು ಹೇಳುತ್ತಾರೆ!!

Tuesday, September 13, 2016

ಕಥೆ :Mr.ತ್ಯಾಗಿ...

ಕೇರಳದ ಅಲಪಿ ಸಮುದ್ರ ತೀರದ ಪ್ರಶಾಂತ ದಂಡೆಯನ್ನು ಹಿಂದಕ್ಕೆ ತಳ್ಳುವಂತೆ ಅಲೆಗಳು ಒಂದರ ಹಿಂದೊಂದು ಅಪ್ಪಳಿಸತೊಡಗಿದ್ದವು. ಅದಕ್ಕೆ ಸಾಥಿ ಕೊಡುವಂತೆ ಅದೇ ದಿಕ್ಕಿನಲ್ಲಿ ಬೀಸುವ ಗಾಳಿ. ಬಿಸಿಲಿನ ದಗೆ ಹರಿದು ಸಂಜೆಯ ತಂಪನ್ನು ಸವಿಯಲು ಪ್ರೇಮಿಗಳು, ನವ ದಂಪತಿಗಳು, ಮಕ್ಕಳನ್ನೊಳಗೊಂಡ ದಂಪತಿಗಳು, ಮಕ್ಕಳನ್ನೊಳಗೊಂಡದೇ ಇರೋ ವಯೋ ವೃದ್ದರು, ಕೆಲ ಒಬ್ಬಂಟಿಗರು ಹೀಗೆ ಹಲವು ಬಗೆಯ ನೂರಾರು ಜನ ಈ ಸಮುದ್ರ ತೀರಕ್ಕೆ ಬರುವುದುಂಟು. ಎಲ್ಲರಲ್ಲೂ ಒಂದೊಂದು ಭಾವ. ವಿಶಾಲ, ನೀಲ, ಶಾಂತ ಸಮುದ್ರಕ್ಕೆ ಅಷ್ಟೆಲ್ಲಾ ನೋವು-ನಲಿವುಗಳನ್ನು ಶಾಂತಿಯಿಂದ ಆಲಿಸಿಕೊಳ್ಳುವ ಶಕ್ತಿಯನ್ನು ಕರುಣಿಸಿದವರಾರೆಂದು ಯೋಚಿಸುತ್ತಾ ಮರಳುದಂಡೆಯ ಮೇಲಿದ್ದ ಕುರ್ಚಿಯನ್ನು ಒರಗಿ ಕೂತಿದ್ದರು ತ್ಯಾಗಿ. ವಯಸ್ಸು ಅರವತ್ತು. ಮನದಲ್ಲಿ ಅಡಗಿರುವ ಚಿಂತೆಯನ್ನು ಮರೆಮಾಚಲು ಯತ್ನಿಸುವ ಹುಸಿ ಮುಗುಳ್ನಗೆ. ಮನೆಯಿಂದ ಕೊಂಚ ದೂರಕ್ಕಿರಿವ ಈ ಜಾಗಕ್ಕೆ ಇತ್ತೀಚೆಗೆ ಸಂಜೆಯ ವೇಳೆಗೆ ಬಂದು ಕೆಲ ಘಂಟೆಗಳ ಕಾಲ ಕೂರುವುದುಂಟು.

'Mr.ತ್ಯಾಗಿ... ಹೇಗಿದ್ದೀರ...' ಗಾಢ ಆಲೋಚನೆಯಲ್ಲಿ ಮುಳುಗಿದ್ದ ತ್ಯಾಗಿ ತನ್ನ ಪಕ್ಕದಿಂದ ಬಂದ ಸದ್ದಿಗೆ ಜಾಗೃತರಾದರು. ತನ್ನ ಹೆಸರಿನ ಉಚ್ಚಾರಣೆಯಲ್ಲೇ ಇದು ಉಮ್ಮರ್ ಕಾಕಾ ಎಂದು ಊಹಿಸಿದರು. ತನ್ನ ಹೆಸರಿಗೆ Mr. ಎಂಬ ಗೌರವಸೂಚಕ ಪದವನ್ನು ಸೇರಿಸಿ ಕರೆವವರು ಅವರೊಬ್ಬರೇ. 'ಚೇಟಾ, ನನ್ನ ತ್ಯಾಗಿ ಅಂತ ಕರೀರಿ ಸಾಕು.. ಈ ಮಿಸ್ಟರ್ ಗಿಸ್ಟರ್ ಅಂತೆಲ್ಲಾ ಕರೆದ್ರೆ ಮುಜುಗರವಾಗುತ್ತೆ' ಅಂತ ಅದೆಷ್ಟೇ ಬಾರಿ ಹೇಳಿದರೂ ಕೇಳುವುದಿಲ್ಲ. 'ಅಲ್ರಿ, ನೀವು ಫಾರಿನ್ ರಿಟರ್ನ್, ಅಷ್ಟೂ ಮರ್ಯಾದೆ ಕೊಡ್ಲಿಲ್ಲ ಅಂದ್ರೆ ಹೇಗೆ' ಏಂದು ನಗುತ್ತಾ ಬೇರೊಂದು ವಿಷಯಕ್ಕೆ ಮಾತಿನ ಲಹರಿಯನ್ನು ಎಳೆಯುತ್ತಿದ್ದರು. ಸಾದಾ ಮನುಷ್ಯ. ಆತ್ಮಾಭಿಮಾನ ತುಸು ಹೆಚ್ಚು. ಮಕ್ಕಳೇನೋ ಅಂದರು ಎಂಬ ಕಾರಣಕ್ಕೆ ಎಲ್ಲರನ್ನು ಬಿಟ್ಟು ಆಶ್ರಮದಲ್ಲಿ ನೆಲೆಸಿದ್ದಾರೆ. ಆದರೆ ಅದರ ಕಿಂಚಿತ್ತೂ ಚಿಂತೆಯೂ ಅವರಲ್ಲಿ ಕಾಣದು. ಇಲ್ಲಿನ ಸಮುದ್ರ ತೀರಕ್ಕೆ ಬರುವ, ತೀರಾ ನೊಂದಿರುವ ಕೆಲವರನ್ನು ಗುರುತಿಸಿ. ಅವರೊಟ್ಟಿಗೆ ಸಂಭಾಷಿಸಿ, ಅವರ ನೋವುಗಳನ್ನು ಅರಿತು ತಮ್ಮ ಚೈತನ್ಯಪೂರಿತ ಮಾತುಗಳಿಂದ ಅವರ ಮನವನ್ನು ಕೊಂಚ ಹಗುರು ಮಾಡುವ ಗೀಳು. ಸದಾ ಹಸನ್ಮುಖಿ. ತ್ಯಾಗಿಗಿಂತ ಕೆಲ ವರುಷ ದೊಡ್ಡವರು.

'ಹೇಗಿದ್ದೀರ Mr.ತ್ಯಾಗಿ..' ಎಂದು ಕುಶಲೋಪಾರಿಯಾಗಿ ಶುರುವಾದ ಸಂಭಾಷಣೆ ಕೊನೆಗೆ 'ಯಾಕೆ ಇಂದು ಇಷ್ಟೊಂದು ಚಿಂತೆ ನಿಮ್ಮ ಮೊಖದಲ್ಲಿ ಎದ್ದು ಕಾಣ್ತಾ ಇದೆ..' ಎನ್ನುವುದರೊಂದಿಗೆ ವಿರಾಮವನ್ನು ಪಡೆಯಿತು. ಒಂದು ವಿಷಯನ್ನು ಹಿಡಿದರೆ ಅದನ್ನು ಹುಡುಕಿ, ಕೆದಕಿ ಹೊರ ತೆಗೆಯುವವರೆಗೂ ಅವರಿಗೆ ಸಮಾಧಾನವಿರದು. ಅದೆಷ್ಟೇ ನಿರಾಕರಿಸಲು ಪ್ರಯತ್ನಿಸಿದರೂ ಸಾಧ್ಯವಾಗದ ತ್ಯಾಗಿ ಕೊನೆಗೆ 'ನೋಡಿ ಚೇಟಾ.. ನೀವು ದೊಡ್ಡವರು, ಜೀವನವನ್ನು ಅರಿತವರು ಅಂತ ನಿಮ್ಮೊಟ್ಟಿಗೆ ಹೇಳಿಕೊಳ್ತಾ ಇದ್ದೀನಿ..ನೀವು ಬೇರೆಲ್ಲೂ ಇದರ ಬಗ್ಗೆ ಚರ್ಚಿಸ ಬಾರದು..' ಎಂಬೊಂದು ಷರತ್ತನ್ನು ಹಾಕಿದರು. ಕೊಂಚ ಮುಗುಳ್ನಗೆಯೊಟ್ಟಿಗೆ ಕಣ್ಣ ರೆಪ್ಪೆಯನ್ನು ನಿದಾನವಾಗಿ ಮುಚ್ಚಿ ತಲೆಯನ್ನು ಒಮ್ಮೆ ಮೇಲೆ ಕೆಳಕ್ಕೂ ಅಲುಗಾಡಿಸಿದಾಗಲೇ ಅವರ ಭರವಸೆ ಮೂಡಿತು.



ಹೆಣ್ಣಿನ ಹೆಣೆಯ ಮೇಲಿನ ಚೆಂದದ ಬೊಟ್ಟಂತೆ ಮಾರ್ಪಟ್ಟಿದ್ದ ಸೂರ್ಯನನ್ನು ದಿಟ್ಟಿಸುತ್ತಾ ತ್ಯಾಗಿ ಮಾತನಾಡಲು ಶುರು ಮಾಡಿದರು.



'ಅದು 1973.. ಹಿಂದಿಯ ಜಂಜೀರ್ ಚಿತ್ರ ಎಲ್ಲೆಲ್ಲೂ ರಾರಾಜಿಸುತ್ತಿದ್ದ ಕಾಲ. ಆಂಗ್ರೀ ಯಂಗ್ ಮ್ಯಾನ್ ನಂತೆ ಮೀಸೆ ಚಿಗುರುವ ಹುಡುಗರೆಲ್ಲ ತಾನೇ ಅಮಿತಾಬ್ ಬಚ್ಚನ್ ಎಂದು ಅರಚುತ್ತಿದ್ದ ಸಮಯ. ನನಗಾಗ 18 ವರ್ಷ. ಜೀವನವೆಲ್ಲಾ ಬಡತನದಲ್ಲೇ ಬೇಸತ್ತಿದ್ದ ಅಪ್ಪ ಅಮ್ಮ ತಮ್ಮ ತಂಗಿಯರನ್ನು ಕಂಡು ಮರುಗಿದ್ದ ನನಗೆ ಅಂದು ಆ ಚಿತ್ರವನ್ನು ನೋಡಿ ಎಲ್ಲಿಲ್ಲದ ಕಿಚ್ಚು ಹುಟ್ಟಿಕೊಂಡಿತು. ಈ ಬಡತನವೆಂಬ ದಾರಿದ್ರ್ಯವನ್ನು ಚಿತ್ರದ ಅಮಿತಾಬ್ನಂತೆ ಒದ್ದು ಓಡಿಸಬೇಕು, ಏನಾದರೂ ಒಂದು ಮಾಡಬೇಕು ಎಂಬ ಯೋಚನೆ ಮೂಡಿತು. ಕೆಲದಿನಗಳು ಅದೇ ಯೋಚನೆಯಲ್ಲಿ ಮುಳುಗಿದ್ದ ನನಗೆ ಒಂದು ದಿನ ತಿರುವನಂತಪುರದಿಂದ ಹಡಗೊಂಡು ಸೌದಿ ದೇಶಕ್ಕೆ ಹೋಗುತ್ತದೆಂದೂ, ಅಲ್ಲಿ ಇತ್ತೇಚೆಗೆ ವಿಪರೀತ ನೌಕರಿಗಳಿವೆಯೆಂದೂ, ಇಲ್ಲಿನ ಮೂರು ಪಟ್ಟು ಹೆಚ್ಚು ಸಂಬಳ ಸಿಗುತ್ತದೆಯೆಂದು ತಿಳಿಯಲ್ಪಟ್ಟಿತು. ನಾನು ಕೂಡಲೇ ತಿರುವಂತಪುರಕ್ಕೆ ಹೋಗುವ ಬಸ್ಸನ್ನು ಹಿಡಿದು, ಅಲ್ಲಿ ವಿಚಾರಿಸಿ, ನನ್ನ ಹೆಸರನ್ನೂ ಕೊಟ್ಟು ಬಂದೆ. ವಿದೇಶಕ್ಕೆ ಹೋಗುವುದು ಇಷ್ಟು ಸುಲಭವೆಂದು ನಾನು ಅರಿತಿರಲಿಲ್ಲ. ಆದರೆ ಮನೆಯವರನ್ನು ಒಪ್ಪಿಸುವುದು ಸಹ ಅಷ್ಟು ಸುಲಭವಾಗಲಿಲ್ಲ. ಪ್ರತಿ ತಿಂಗಳು ಹಣ ಕಳಿಸುವುದಾಗಿ ಹೇಳಿದರೂ ಯಾರೊಬ್ಬರೂ ಕೇಳಲಿಲ್ಲ. ಅಪ್ಪನಿಗೆ ನಾನು ಕೂಡ ಆತನಂತೆ ಒಬ್ಬ ಮೀನುಗಾರನಾಗಬೇಕೆಂಬ ಬಯಕೆ. ಇಬ್ಬರೂ ನಮ್ಮಿಬ್ಬರ ಪಟ್ಟನ್ನು ಬಿಡಲಿಲ್ಲ. ಕೊನೆಗೆ ಒಮ್ಮೆ ಹೋಗಿ ಅದೆಷ್ಟು ಸಂಪಾದನೆಯಾಗುತ್ತೂ ಅಷ್ಟು ಸಂಪಾದಿಸಿ ವಾಪಾಸ್ ಬರುವುದೆಂದು ಮಾತಾಯಿತು. ಒಮ್ಮೆ ಹೋದರೆ ಕನಿಷ್ಠ ಎರಡು ವರ್ಷವಾದರೂ ಬರಲಾಗದು. ಆದರೂ ಹೇಗೋ ಎಲ್ಲರ ಮನವೊಲಿಸಿದೆ. ಅಪ್ಪ ಅಮ್ಮ ,ಇಬ್ಬರು ತಂಗಿಯರು ಹಾಗು ಒಬ್ಬ ಪುಟ್ಟ ತಮ್ಮನನ್ನು ಬಿಟ್ಟು ಹೊರಟೆ. ಕುಟುಂಬದ ಕಷ್ಟಗಳನ್ನೆಲ್ಲಾ ದೂರವಾಗಿಸುವ ಕನಸನ್ನು ಹೊತ್ತು.



ವಾರಗಟ್ಟಲೆ ಸಮುದ್ರದಲ್ಲಿ ಸಾಗಿ ಕೊನೆಗೆ ಅಲ್ಲಿನ ನೆಲವನ್ನು ಮುಟ್ಟುವಾಗ ದೇಹ ಶಕ್ತಿಗುಂದಿತ್ತು. ಸುಧಾರಿಸಿಕೊಳ್ಳಲು ವಾರಗಳೇ ಬೇಕಾಗಿತ್ತು. ದಿನದ ಮೂರೊತ್ತು ಅಮ್ಮ ಮಾಡಿದ್ದ ಅಡಿಗೆಯನ್ನೇ ತಿಂದಿದ್ದ ನಾನು ಅಲ್ಲಿ ಸ್ವತಃ ತಯಾರಿಸಿ ಕೊಳ್ಳುವುದು ಆಗದೆ ಹೋಯಿತು. ಸಮುದ್ರದಲ್ಲಿ ದಣಿದಿದ್ದ ದೇಹ, ಹೊಟ್ಟೆಗೆ ತಕ್ಕನಾಗಿ ಸಿಗದ ಹಿಟ್ಟು, ಹೊತ್ತಿ ಹುರಿಯುವ ಉರಿ ಬಿಸಿಲು. ಹೋದ ಎರಡನೇ ದಿನವೇ ಕೆಲಸಕ್ಕೆ ಹಾಜರಾಗಬೇಕಿತ್ತು. ಬೆಳಗಿನ 6 ಘಂಟೆಗೆ ಕೆಲಸದ ಜಾಗಕ್ಕೆ ಕೊಂಡೂಯ್ಯುವ ಬಸ್ಸು ರೆಡಿ ಇರುತ್ತಿತ್ತು. ಸ್ನಾನ ಹಾಗು ಶೌಚಕ್ಕೆ ಬೆಳಗಿನ ನಾಲ್ಕು ಘಂಟೆಗೇ ಎದ್ದು ಸರದಿಯಲ್ಲಿ ಕಾಯಬೇಕು. ಅಲ್ಲಿದ್ದ ಇತರರು ತಮ್ಮ ತಮ್ಮ ಊಟವನ್ನು ತಿಂದು ಮದ್ಯಾಹ್ನಕ್ಕೆ ಕಟ್ಟಿಕೊಂಡು ಹೊರಡುತ್ತಿದ್ದರು. ನಾನು ಅರೆ ಬರೆ ಬೆಂದ ಗಂಜಿಯ ಅನ್ನವನ್ನೇ ಒಂದು ಪ್ಲಾಸ್ಟಿಕ್ ಚೀಲಕ್ಕೆ ತುಂಬಿ ಮಿಕ್ಕಿದನ್ನು ಕುಡಿದು ಓಡುತ್ತಿದ್ದೆ. ಸಮುದ್ರ ತೀರದಲ್ಲಿ ನಿರ್ಮಾಣ ಹಂತದಲ್ಲಿ ನಿಂತಿರುತ್ತಿದ್ದ ಹಡಗು, ರಿಗ್(ಸಮುದ್ರದಿಂದ ಕಚ್ಚಾ ಇಂದನವನ್ನು ಸಮುದ್ರದಾಳದಿಂದ ತೆಗೆಯುವ ಯಂತ್ರ) ಗಳೇ ಕೆಲಸದ ಸ್ಥಳ. ಹೊರಗಿನ ಉಷ್ಣಾಶ 50 ಡಿಗ್ರಿ ಯಷ್ಟಿದ್ದರೆ ಅವುಗಳ ಒಳಗೆ ಇನ್ನೂ ಹೆಚ್ಚು. ಹುಟ್ಟ ಹುಡುಪುಗಳಿಂದ ಬೆವರಿನ ನದಿಯೇ ಹರಿಯುತ್ತಿತ್ತು. ಏಳರಿಂದ ಒಂದರವರೆಗೂ ಒಂದೇ ಸಮನೆ ದುಡಿದು ಕೊನೆಗೆ ಒಂದು ಘಂಟೆ ಊಟಕ್ಕೆ ವಿಶ್ರಾಂತಿ. ಎಲ್ಲರೂ ಗುಂಪುಗೊಂಡು ಅರಟುತ್ತಾ ತಿನ್ನುತ್ತಿದ್ದರು. ಯಾರನ್ನೂ ಅಷ್ಟಾಗಿ ಬಲ್ಲದ ನಾನು ಒಂದೆಡೆ ಕೂತು ಪ್ಲಾಸ್ಟಿಕ್ ಚೀಲದ ಗಂಟನ್ನು ಬಿಚ್ಚಿದರೆ ಬಗ್ ಎಂದು ಹಳಸಿದ ದುರ್ನಾತ ಮುಖಕ್ಕೆ ಬಡಿಯುತ್ತಿತ್ತು. ಅತಿಯಾದ ಉಷ್ಣಾಂಶಕ್ಕೆ ಬಹು ಬೇಗನೆ ಊಟ ಹಾಳಗುತ್ತಿತ್ತು. ಕೆಲವೊಮ್ಮೆ ಹಳಸಿದ ಊಟವನ್ನು ತಿನ್ನಲಾರದೆ ಎಸೆದರೆ ಕೆಲವೊಮ್ಮೆ ಹಸಿವಿನ ಬೇಗೆಯನ್ನು ತಾಳಲಾರದೆ ಅದನ್ನೇ ತಿನ್ನಬೇಕಿತ್ತು. ತಿಂದು ಇನ್ನೇನು ನಿದ್ರೆಯ ಜೋಂಪು ಹತ್ತಿತು ಅನ್ನುವಾಗಲೇ ಮೇಲ್ವಿಚಾರಕನ ಸದ್ದು. ಎದ್ದು ಮತ್ತೆ ಕೆಲಸದ ಜಾಗಕ್ಕೆ ಓಡುತ್ತಿದ್ದೆ. ರಾತ್ರಿ 8 ಘಂಟೆಗೆ ಬಂದು, ಸ್ನಾನಕ್ಕಾಗಿ ಕಾದು, ಸ್ನಾನ ಮುಗಿಸಿ ಬರುವಷ್ಟರಲ್ಲೇ ಘಂಟೆ ಹತ್ತಾಗಿರುತ್ತಿತ್ತು. ಮತ್ತೆ ಗಂಜಿ ಮಾಡಿ ಕುಡಿದು ಕಣ್ಣು ಮುಚ್ಚಿದರೆ ಮತ್ತೆ ಬಿಡುವುದೇ ಬೇಡವೆನಿಸುತ್ತಿತ್ತು. ಬೆಳಗ್ಗೆ ಮೂರಕ್ಕೆ ಎದ್ದು ನಾಷ್ಟ ಹಾಗು ಮದ್ಯಾಹ್ನಕ್ಕೆ ಗಂಜಿಯನ್ನು ಮಾಡಿಟ್ಟು ಸ್ನಾನ ಹಾಗು ಶೌಚಕ್ಕೆ ಸರದಿಯಲ್ಲಿ ನಿಲ್ಲಬೇಕಿತ್ತು. ಅಲ್ಲೂ ತೂಕಡಿಕೆ.



ಹೋದ ಮೇಲೆ ಮನೆಯವರಿಗೆ ಒಂದು ಕಾಗದವನ್ನೂ ಬರೆಯಲಿಲ್ಲ. ಪ್ರತಿ ದಿನ, ಪ್ರತಿ ಹೊತ್ತು ಮನೆಯ ನೆನಪೇ.ಹಳಸಿದ ಊಟವನ್ನು ಮಾಡುವಾಗ ಕೆಲವೊಮ್ಮೆ ಅಳು ಉಕ್ಕಿ ಬರುತ್ತಿತ್ತು. ಒಂದೆಡೆ ಒಬ್ಬನೇ ಹೋಗಿ ಸಾಧ್ಯವಾದಷ್ಟು ಅತ್ತು ಬರುತ್ತಿದ್ದೆ. ನನಗಿಂತಲೂ ಜಾಸ್ತಿ ಅಪ್ಪ ಗೋಳು ಪಡುತ್ತಾನೆ. ಜೀವನವೆಲ್ಲಾ ಮೀನು ಹಿಡಿಯಲು ಸಮುದ್ರಕ್ಕೆ ಇಳಿದು ಅದೆಷ್ಟು ಬಾಡಿ ಬೆಂಡಾಗಿದೆ ಆತನ ದೇಹ ಅನಿಸುತ್ತಿತ್ತು. ಅದೆಷ್ಟೇ ಕಷ್ಟ ಬಿದ್ದರೂ ಸರಿಯೇ, ನಾನು ದುಡಿಯುತ್ತೀನಿ, ಹಣ ಸಂಪಾದಿಸುತ್ತೀನಿ ಎನ್ನುವ ಹಟ ಒಳಗೊಳಗೇ ಮೂಡುತ್ತಿತ್ತು. ಕೆಲದಿನಗಳು ಹೀಗೆ ಕಳೆದ ಮೇಲೆ ಒಂದು ದಿನ ನಮ್ಮ ಊರಿನ ಹತ್ತಿರದವರೇ ಒಬ್ಬರು ಪರಿಚಯವಾಗಿ ಅವರು ತಮ್ಮ ಜೊತೆಗೆ ಊಟ ಮಾಡಿಕೊಳ್ಳಲು ಸೇರುವಂತೆ ಹೇಳಿದರು. ಒಂದು ಊಟದ ಡಬ್ಬಿಯನ್ನು ಕೊಟ್ಟು ಮದ್ಯಾಹ್ನ ಊಟವನ್ನು ನೆರಳಲ್ಲಿ ಇಡಬೇಕೆಂಬುದನ್ನು ಹೇಳಿ ಕೊಟ್ಟರು.



ಮೊದಲ ತಿಂಗಳ ಬಂದ ಸಂಬಳ ಅಷ್ಟೆಲ್ಲಾ ಬೇಗೆಯನ್ನು ನಿವಾರಿಸಿತು. ಅಲ್ಲಿಗೆ ಹೋದ ಮೊದಲ ಬಾರಿಗೆ ಸಂತೋಷದ ಚಿಲುಮೆ ಮನದಲ್ಲಿ ಮೂಡಿತು. ಬಂದ ಹಣದಲ್ಲಿ ಒಂದು ಕಾಗದವನ್ನು ಕೊಂಡು ಕ್ಷೇಮ ಸಮಾಚಾರವನ್ನು ಬರೆದು ಮನೆಗೆ ಕಳಿಸಿ ಉಳಿದ ಅಷ್ಟೂ ಹಣವನ್ನು ಮನಿ ಆರ್ಡರ್ ಮಾಡಿದೆ. ತುಸು ಸಮಾದಾನವಾಯಿತು. ಅದೆಷ್ಟೋ ದಿನಗಳ ನಂತರ ಮನೆಯವರಿಂದ ಒಂದು ಕಾಗದ ಬಂದಿತು. ತಂಗಿಯ ಬರಹ. ಓದಲು ಕಷ್ಟವಾದರೂ ಮುದ್ದು ಮುದ್ದಾಗಿ ಕಂಡ ಅವುಗಳು ಮನೆಯವರೆಲ್ಲರ ಆರೈಕೆಯ ಮಾತುಗಳು. ಅಮ್ಮನ ಕಳಕಳಿಯ ಪ್ರೆಶ್ನೆಗಳು, ಅಪ್ಪನ ಧೈರ್ಯ ತುಂಬುವ ಮಾತುಗಳು. ತಮ್ಮ ತಂಗಿಯರಿಗೆ ಏನೇನು ಬೇಕೆಂಬ ಟಿಪ್ಪಣಿ. ಕೊನೆಗೆ 'ಬೇಗ ಬಾ ನಾವೆಲ್ಲಾ ಕಾಯುತ್ತಿದ್ದೀವಿ' ಎಂಬ ವಾಕ್ಯದೊಂದಿಗೆ ಪತ್ರವು ಮುಕ್ತಾಯಗೊಂಡಿತ್ತು. ದಿನವೂ ಕೆಲಸದ ನಂತರ ಮಲಗುವ ಮುಂಚೆ ಒಮ್ಮೆ ಪತ್ರವನ್ನು ಓದುತ್ತಿದ್ದೆ. ಗುರಿ ಸ್ಪಷ್ಟವಾಗುತ್ತಿತ್ತು. ಕ್ರಮೇಣ ಅಲ್ಲಿನ ಸ್ಥಿತಿಗೆ ಹೊಂದಿಕೊಳ್ಳಲಾರಂಭಿಸಿದೆ. ಸುಡುಬಿಸಿಲಿಗೆ ದೇಹವೆಲ್ಲ ಬೆಂದ ಕೆಂಡದಂತಾಗಿತ್ತು.



ತಿಂಗಳ ಕೊನೆಯ ಸಂಬಳ ಹಾಗು ಮನೆಯವರಿಗೊಂದು ಪತ್ರ. ಇವಿಷ್ಟೇ ನನಗೆ ಸಂತೋಷ ಕೊಡುತ್ತಿದ್ದ ವಿಚಾರಗಳು.



ಒಂದು ದಿನ ಮನೆಯವರಿಂದ ಪತ್ರ ಬಂದಿತು. ಅದು ತಂಗಿಯ ಬರಹವಾಗಿರಲಿಲ್ಲ. ಊರಿನ ಪಟೇಲರು. ಅಪ್ಪನಿಗೆ ವಿಪರೀತ ಆರೋಗ್ಯ ಹದಗೆಟ್ಟಿದೆಯೆಂದೂ ಮನೆಯವರೆಲ್ಲ ಚಿಂತೆಯಲ್ಲಿದ್ದಾರೆಂದು ಬರೆಯಲಾಗಿತ್ತು. ಕಡೆಗೆ ಅಪ್ಪನ ಮಾತುಗಳಂತೆ ನಾನು ಹೆದರಬಾರದೆಂದು, ಕೆಲ ದಿನಗಳಲ್ಲಿ ಅವರು ಗುಣವಾಗುತ್ತಾರೆಂದು ಅವರು ಹೇಳಿದ್ದರು. ಅಪ್ಪ ಆಗ್ಗಾಗೆ ಜ್ವರದಿಂದ ಬಳಲುತ್ತಿದ್ದರು. ಇದೂ ಅದೇ ಬಗೆಯ ಜ್ವರವೆಂದೂ,ಈ ಬಾರಿ ಕೊಂಚ ಜಾಸ್ತಿ ಇರಬಹುದೆಂದು ಭಾವಿಸಿದರೂ ಯಾಕೋ ಮನವೆಲ್ಲ ಮರುಗಿತ್ತು. ಹೀಗೆ ಒಂದು ತಿಂಗಳು ಕಳೆದಿರಬಹುದು. ಮತ್ತೊಂದು ಪತ್ರ. ಪಟೇಲರ ಬರವಣಿಗೆಯೇ. ಅಪ್ಪನ ಆರೋಗ್ಯ ತೀರಾ ಹದಗೆಟ್ಟು ಚಿಕಿತ್ಸೆ ಫಲಕಾರಿಯಾಗದೆ ನೆನ್ನೆ ಕೊನೆಯುಸಿರೆಳೆದರೆಂದು ಬರೆಯಲಾಗಿತ್ತು. ಈ ಪತ್ರ ತಲುಪಿ ನಾನು ಅಲ್ಲಿಂದ ಹೊರಟರೂ ಇಲ್ಲಿಗೆ ಬರುವಷ್ಟರಲ್ಲೇ ಎಲ್ಲ ಕಾರ್ಯಗಳು ಮುಗಿದಿರುತ್ತಾವೆಂದೂ ಹೇಳಿದ್ದರು. ಪತ್ರವನ್ನು ಓದಿದ ತಕ್ಷಣ ತಲೆ ಸುತ್ತು ಬಂದಿತು. ದೊಪ್ಪನೆ ಅಲ್ಲೇ ಬಿದ್ದು ಬಿಟ್ಟೆ. ಕಣ್ಣು ಬಿಡುವಾಗ ಎಲ್ಲರೂ ನನ್ನ ಸುತ್ತುವರಿದಿದ್ದರು. ನನ್ನನ್ನು ರೂಮಿಗೆ ತಂದು ನೀರು ಕುಡಿಸಿ ಹಾಸಿಗೆಯ ಮೇಲೆ ಮಲಗಿಸಿದರು. ಅವರೆಲ್ಲ ಹೋದ ಮೇಲೆ ಮತ್ತೊಮ್ಮೆ ಪತ್ರವನ್ನು ಹೊರತೆಗೆದು ಓದಿದೆ. ಕಣ್ಣೀರ ಕಟ್ಟೆ ಒಡೆದಂತೆ ಅಳತೊಡಗಿದೆ. ಬೇಗ ವಾಪಾಸ್ ಬಂದು ಬಿಡು ಎಂದು ಹೇಳುತ್ತಿದ್ದ ಅಪ್ಪ ಕೊನೆಯ ಪತ್ರದಲ್ಲಿ ಮಾತ್ರ ಬರಬೇಡೆಂದು ಹೇಳಿದ್ದ. ತಾನು ಸಾಯುವುದು ಖಚಿತವೆಂದು ಅವನಿಗೆ ಅನ್ನಿಸಿರಬೇಕು. ನಾನು ಅಲ್ಲಿಂದ ವಾಪಾಸ್ ಬಂದರೆ ಮತ್ತೆ ಹಿಂದಿರುಗಿ ಹೋಗುವುದಿಲ್ಲ, ಆಮೇಲೆ ಮನೆಯ ಕಷ್ಟ ಇನ್ನೂ ವಿಪರೀತವಾದಿತು ಎಂದು ಅರಿತ್ತಿದ ಅನ್ನಿಸುತ್ತೆ. ಅದೆಷ್ಟೇ ಕಷ್ಟ ಬಂದರೂ ಮಕ್ಕಳಿಗೆ ಏನನ್ನೂ ಕಡಿಮೆ ಮಾಡುತ್ತಿರಲಿಲ್ಲ ಅಪ್ಪ ಎಂದು ನೆನಪಾಗಿ ಕಾಗದವನ್ನು ಎದೆಗೆ ಅವುಚಿಕೊಂಡು ಬಿಕ್ಕಿ ಬಿಕ್ಕಿ ಅತ್ತೆ. ಅಪ್ಪ ಇಲ್ಲವೆಂಬ ಕಲ್ಪನೆಯೇ ಅದೆಷ್ಟು ಘೋರವಾಗಿತ್ತು. ಇದೆಲ್ಲ ಒಂದು ಕನಸಾಗಬಾರದೆ ಎಂದು ಯೋಚಿಸಿತ್ತಿದ್ದೆ. ಕೊನೆಗೆ ಗಟ್ಟಿ ಮನಸ್ಸು ಮಾಡಿ ಅಲ್ಲೇ ಇರುವುದಾಗಿ ನಿರ್ಧರಿಸಿ ಎರಡು ವರ್ಷಕೊಮ್ಮೆ ಸಿಗುವ ರಜೆಯನ್ನೂ ತೆಗೆಯದೆ ಕೆಲಸ ಮುಂದುವರೆಸಿದೆ. ಮನೆಯ ಪತ್ರಗಳು ಹೆಚ್ಚಾಗತೊಡಗಿದವು. ಮನೆಗೆ ಬರುವಂತೆ ಪ್ರೇರೇಪಿಸುತ್ತಿದ್ದವು. ಆದರೂ ಮನಸ್ಸನ್ನು ಕಲ್ಲಿನಂತೆ ಗಟ್ಟಿಯಾಗಿಸಿ ಕಾಲ ತಳ್ಳಿದೆ. ಕೊನೆಗೂ 4 ವರ್ಷಗಳು ಕಳೆದವು. ತಮ್ಮ ತಂಗಿಯರಿಗೆ ಬಟ್ಟೆ ಹಾಗು ಅಮ್ಮನಿಗೆ ಒಂದು ಚಿನ್ನದ ಬಳೆಯನ್ನು ಕೊಂಡು ವಾಪಸ್ಸಾದೆ.

ನಾಲ್ಕು ವರ್ಷಗಳ ನಂತರ ಕಂಡ ನನ್ನನ್ನು ಅಮ್ಮ ಆಲಿಂಗಿಸಿ ಅಳತೊಡಗಿದಳು. ಹಾರವಾಕಿದ್ದ ಅಪ್ಪನ ಫೋಟೋವನ್ನು ನಾನು ನೋಡಲಾಗಲಿಲ್ಲ. ತಮ್ಮ ಅದಾಗಲೇ ಶಾಲೆಗೆ ಸೇರಿದ್ದ. ತಂಗಿಯರಿಬ್ಬರೂ ಹೈಸ್ಕೂಲು ಸೇರಿದ್ದರು. ಇವರೆಲ್ಲರ ವಿದ್ಯಾಭ್ಯಾಸದ ಸಲುವಾಗಿ ಖರ್ಚು ಇನ್ನೂ ವಿಪರೀತವಾಗಿತ್ತು. ಅಮ್ಮ ಕಷ್ಟ ಪಟ್ಟು ಹೊಲಿಗೆಯನ್ನು ಕಲಿಯುತ್ತಿದ್ದಳು. ಹೆಚ್ಚು ದಿನ ವ್ಯಹಿಸದೆ ಪುನಃ ಸೌದಿಯ ಹಡಗನ್ನು ಹಿಡಿದೆ. ಈ ಸಂಬಳ ಮನೆಯ ಖರ್ಚಿಗೆ ಸಾಲದು ಎಂದರಿತ ನಾನು ವಿಚಾರಿಸಿ ಒಂದು ಅರೆಕಾಲಿಕ ಕೆಲಸವನ್ನು ಹುಡುಕಿದೆ. ರಾತ್ರಿ ಹತ್ತರಿಂದ ಎರಡು ತಾಸು. ವಾಸದ ಸ್ಥಳದ ಪಕ್ಕದಲ್ಲೇ ಕೆಲಸ. ಮೀನಿನ ಬಲೆಯನ್ನು ಹೆಣೆಯುವುದು. ಬೆಳಗಿನ ಕೆಳಸದಷ್ಟು ಕಷ್ಟವಲ್ಲದಾದರೂ ತೂಕಡಿಗೆ ಬರುತ್ತಿತ್ತು. ಕೆಲವೇ ಘಂಟೆಗಳ ವಿಶ್ರಾಂತಿ ದೇಹಕ್ಕೆ ಸಾಲದೇ ಹೋಯಿತು. ಹೇಗೋ ಆ ಕೆಲಸಕ್ಕೂ ಒಗ್ಗಿಕೊಂಡೆ' ಎಂದು ಹೇಳಿ ಉಮ್ಮರ್ ಕಾಕಾರ ಮುಖವನೊಮ್ಮೆ ನೋಡಿದರು. ತದೇಕಚಿತ್ತದಿಂದ ಅವರು ತ್ಯಾಗಿಯನ್ನೇ ನೋಡುತ್ತಿದ್ದರು. ಕಣ್ಣೀರು ಮೂಡಿ, ಹರಿದು ಒಣಗಿದ್ದದ್ದನು ಗಮನಿಸಿದರು. ಈ ಲಹರಿಯನ್ನು ಮುರಿದರೆ ಸರಿಕಾಣದು ಎಂದರಿತ ತ್ಯಾಗಿ ಪುನ್ಹ ಮುಂದುವರೆಸಿದರು.

‘ಹೀಗೆ ವರ್ಷಗಳು ಉರುಳಿದವು. ಕೆಲವೋಮ್ಮೆ ಎರಡು ವರ್ಷಕ್ಕೇ ಬಂದರೆ ಕೆಲವೊಮ್ಮೆ ನಾಲ್ಕು ವರ್ಷಕ್ಕೆ. ಅಂತು ಹೇಗೋ ನಲ್ವತ್ತಮೂರು ವರ್ಷಗಳನ್ನು ತಳ್ಳಿದೆ. ತಂಗಿಯರಿಬ್ಬರರನ್ನು ಮದುವೆ ಮಾಡಿದೆ. ತಮ್ಮನನ್ನು ಓದಿಸಿ ಒಂದೊಳ್ಳೆ ಕೆಲಸವನ್ನೂ ಕೊಡಿಸಿ ಮಾದುವೆ ಮಾಡಿದೆ. ಈ ನಲ್ವತ್ತು ಮೂರು ವರ್ಷದಲ್ಲಿ ಹೆಚ್ಚೆಂದರೆ ಹದಿನೈದು ಬಾರಿ ನಾನು ಬಂದಿರಬಹುದು. ಕೆಲವೊಮ್ಮೆ ಒಂದು ತಿಂಗಳಿದ್ದರೆ ಕೆಲವೊಮ್ಮೆ ಕೇವಲ ಹದಿನೈದು ದಿನಗಳು. ಜೀವನದ ಹೆಚ್ಚು ಪಾಲು ನಾನು ಕೆಲಸದಲ್ಲೇ ಕಳೆದೆ. ಜಂಜೀರ್ ನ ಆಂಗ್ರಿ ಅಮಿತಾಬ್ ಕೂಡ ಇಂದು ಮುದುಕನಾಗಿದ್ದಾನೆ ಎಂದು ನಗುತ್ತಾ, ಕಾಲ ಅದೆಷ್ಟು ಬೇಗ ಓಡಿತು ನೋಡಿ’ ಎಂದು ಸುಮ್ಮನಾದರು.

ತ್ಯಾಗಿಯವರ ತ್ಯಾಗಮಯಿ ಕತೆಯನ್ನು ಕೇಳಿದ ಉಮ್ಮರ್ ಕಾಕಾ ಅಕ್ಷರ ಸಹ ಮೌನವಾಗಿದ್ದರು. ಮಾತಿನ ಮದ್ಯೆ 'ಹುಂ' ಎನ್ನುವ ಅಂಗೀಕಾರದ ಸದ್ದೂ ಇಲ್ಲದೆ. ತಮ್ಮಲ್ಲಿ ಸೌದಿಯಿಂದ ವಾಪಾಸ್ ಬರುವವರ ಬಗ್ಗೆ ಇದ್ದ ಕಲ್ಪನೆಯ ಲೋಕ ಕುಸಿದು ಬಿದ್ದಿತ್ತು. ತ್ಯಾಗಿಯೊಟ್ಟಿಗೆ ಅಲ್ಲಿಗೆ ತೆರಳುವ ಇತರರ ಬಗ್ಗೆಯೂ ಅನುಕಂಪ ಮೂಡಿತು. ಕೊನೆಗೆ ಮೌನ ಮುರಿದು, ಗಂಟಲನ್ನು ಸರಿಪಡಿಸಿಕೊಳ್ಳುತ್ತಾ 'Mr.ತ್ಯಾಗಿ.. ನಾನೀಗ ಏನನ್ನೂ ಹೇಳಲು ಅಶಕ್ಯ.. ಅಲ್ಲಾವು ನಿಮ್ಮಗೆ ಇನ್ನು ಮೇಲಾದರೂ ನೆಮ್ಮದಿಯನ್ನು ಕರುಣಿಸಲಿ' ಎಂದರು.

ಉಮ್ಮರ್ ಕಾಕರ ಮಾತನ್ನು ಕೇಳಿ ತ್ಯಾಗಿ ಹಾಸ್ಯಾಸ್ಪದವಾಗಿ ನಗಲಾರಂಭಿಸಿದರು. ನಂತರ ಸುಮ್ಮನಾಗಿ 'ಚೇಟಾ ಕ್ಷಮಿಸಿ.ದೇವರಿಗೆ ನನ್ನ ಮೇಲೆ ಅನುಕಂಪ ಎಂಬುವುದು ಇಲ್ಲವೇ ಇಲ್ಲ ಬಿಡಿ' ಎಂದು ಹೇಳಿ ಮಾತನ್ನು ನಿಲ್ಲಿಸಿದರು. ಕೆಲವೊತ್ತು ಹಾಗೆ ಸುಮ್ಮನಿದ್ದ ತ್ಯಾಗಿ ಮುಂದುವರೆಸಿ,

'ಅಮ್ಮನಿಗೆ ನನ್ನ ಮದುವೆಯನ್ನು ಒಬ್ಬ ಒಳ್ಳೆಯ ಹುಡುಗಿಯನ್ನು ತಂದು ಮಾಡಬೇಕು ಎಂದಿತ್ತು.ಆದರೆ ನಾನು ತಮ್ಮನ ಮದುವೆಯ ಮೊದಲು ಆಗುವುದಿಲ್ಲವೆಂದು ಪಟ್ಟು ಹಿಡಿದ್ದಿದ್ದೆ. ಅವನ ಮದುವೆಯಾದಾಗ ನನಗೆ 58. ಯಾವ ಅಪ್ಪ ತಾನೇ ಆ ವಯಸ್ಸಿನಲ್ಲಿ ನನಗೆ ಹೆಣ್ಣು ಕೊಟ್ಟಾನು. ಅದೇ ಕೊರಗಿನಲ್ಲಿ ಅಮ್ಮ ಹೋದ ವರುಷ ಕೊನೆಯುಸಿರೆಳೆದಳು.ಈ ಒಂದು ಕೊರಗು ಸದಾ ಅವಳ ಮನದಲ್ಲಿತ್ತು.. ಅವಳ ಕೊನೆಯ ಕನಸನ್ನು ನಾನು ತೀರಿಸಲಾದೆ..' ಎಂದರು.



'ಜೀವನದಲ್ಲಿ ನಿಮ್ಮ ತಮ್ಮ ತಂಗಿಯರನ್ನೇ ಮಕ್ಕಳಿಗಿಂತ ಹೆಚ್ಚಾಗಿ ನೋಡಿ ಕೊಂಡಿರಿ ಬಿಡಿ..ನೀವು ಮಾಹಾತ್ಮರು' ಎಂದ ಉಮ್ಮರ್ ಕಾಕನನ್ನು ನೋಡಿ,

'ಅಷ್ಟೆಲ್ಲಾ ದೊಡ್ಡ ಮಾತು ಬೇಡಿ ಚೇಟಾ.. ನಾನು ಇಷ್ಟೆಲ್ಲಾ ಕಷ್ಟ ಪಟ್ಟರೂ ಮೊದಲೇ ಹೇಳಿದಂತೆ ದೇವರಿಗೆ ನನ್ನ ಮೇಲೆ ಅನುಕಂಪ ಅನ್ನುವುದೇ ಮೂಡಲಿಲ್ಲ. ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಇಂಧನದ ಬೆಲೆ ಕುಸಿದಿರುವುದರಿಂದ ಇತರರೊಟ್ಟಿಗೆ ನನ್ನನ್ನೂ ಕೆಲಸದಿಂದ ತೆಗೆದರು. ಇಷ್ಟೊಂದು ವರ್ಷಗಳ ಕಾಲ ಒಂದೇ ಕಂಪನಿಗಾಗಿ ಕೆಲಸ ಮಾಡಿದವರು ಮತ್ತೊಬ್ಬರಿಲ್ಲ.ಆದರೂ ಮುಲಾಜಿಲ್ಲದ್ದೆ ಹೊರಗಟ್ಟಿದ್ದರು. ಆದದ್ದು ಆಗಲಿ, ಇನ್ನೇನು ತಮ್ಮನ ಮದುವೆಯೂ ಆಯಿತು, ತಂಗಿಯರಿಬ್ಬರೂ ನೆಮ್ಮದಿಯಾಗಿದ್ದಾರೆ ಇನ್ನೂ ಕೆಲಸ ಮಾಡಿ ಏನು ಪ್ರಯೋಜನ ಎಂದು ಧನ್ಯವಾದಗಳನ್ನೇಳಿ ವಾಪಸ್ಸಾದೆ. ಆದರೆ ಬಂದ ಮರುದಿನವೇ ಚೇಟಾ, ಮರುದಿನವೇ ತಮ್ಮನ ಹೆಂಡತಿ ಮನೆಯಲ್ಲಿ ಪಾಲು ಕೇಳಿದಳು. ಆಕೆಯ ಕಡೆಯವರನ್ನೆಲ್ಲ ಕರೆಸಿ ಪಂಚಾಯಿತಿಯನ್ನೇ ಮಾಡಿದಳು. ನನ್ನ ತಮ್ಮನೂ ಒಂದೂ ಮಾತಾಡದೆ ಸುಮ್ಮನಿದ್ದ. ನೀವು ಬಂದು ಮನೆಯ ಖರ್ಚು ಇನ್ನೂ ಹೆಚ್ಚಾಗಿದೆ, ಈ ದುಬಾರಿ ಜಗತ್ತಿನಲ್ಲಿ ಇಬ್ಬರೇ ಇರುವುದು ಕಷ್ಟವಾಗಿರುವಾಗ ನೀವೂ ಬಂದು ವಕ್ಕರಿಸಿಕೊಂಡಿರಿ ಎಂದು ಅರಚತೊಡಗಿದಳು. ಭಾವನೆಗಳೇ ಅಳಿಸಿಹೋಗಿದ್ದ ಮನವು ಅವಳ ಮಾತುಗಳಿಂದ ಹೆಚ್ಚೇನೂ ಮರುಗಲಿಲ್ಲ. ಇನ್ನು ಕೆಲವೇ ವರುಷ ಬದುಕುವ ನನಗ್ಯಾಕೆ ಮನೆ ಹಾಗು ಸಂಸಾರ ಎಂದು ಮನೆಯನ್ನೂ ತಮ್ಮನಿಗೆ ಕೊಡಲು ನಿರ್ಧರಿಸಿದ್ದೀನಿ. ಈಗ ಮುಂದೆ ಎಲ್ಲಿ ಹೋಗಲಿ ಎಂದು ಕೂತು ಯೋಚಿಸಿತ್ತಿರುವಾಗ ನೀವು ಬಂದಿರಿ' ಎಂದು ಸುಮ್ಮನಾದರು.



'ನಿಮಗೆ ಸಹಾಯ ಮಾಡಲಿ ಅಂತಾನೆ ದೇವರು ನನ್ನ ಇಲ್ಲಿಗೆ ಕಳಿಸಿದ್ದಾನೆ ಅನ್ನಿಸುತ್ತೆ. ಜಾಸ್ತಿ ಚಿಂತೆ ಬೇಡ Mr.ತ್ಯಾಗಿ. ನಿಮ್ಮ ಸಾಮಾನುಗಳನ್ನು ಕಟ್ಟಿ ಹೊರಡಿ. ನಮ್ಮ ಆಶ್ರಮ ಚಿಕ್ಕದಾದರೂ ನೆಮ್ಮದಿಯ ಜಾಗ. ನಿಮ್ಮಂತೆಯೇ ಅಲ್ಲಿ ಬಹಳಷ್ಟು ಜನ ಇದ್ದಾರೆ. ದುಃಖವೆಂಬುದು ಒಂದಿಷ್ಟೂ ಮೂಡದು. ಅಲ್ಲದೆ ಆಶ್ರಮ ನಿಮ್ಮ ಜಿಲ್ಲೆಯಲ್ಲಿಯೇ ಇದೆ. ಮನೆಯನ್ನು ನೋಡಬೇಕು ಎಂದನಿಸಿದಾಗಲೆಲ್ಲ ಹೋಗಿ ಬರಬಹುದು' ಎಂದರು. ತುಸು ಹೊತ್ತು ಸುಮ್ಮನಿದ್ದ ತ್ಯಾಗಿ 'ಸರಿ ಚೇಟಾ, ಈಗ ನಾನು ಎಲ್ಲಾದರು ಹೊಂದಿಕೊಳ್ಳಬಲ್ಲೆನು. ಅದು ಅಶ್ರಮವಾದರೇನು ಅಥವಾ ಅರಮನೆಯಾದರೇನು' ಎನ್ನುತ ಎದ್ದು ನಿಂತರು. 'ಸರಿ ಹಾಗಾದರೆ, ಬನ್ನಿ..ನಿಮ್ಮ ಚಿಂತೆಯನ್ನೆಲ್ಲಾ ನಿವಾರಿಸುವ ಕೇರಳದ ದಿ ಬೆಸ್ಟ್ ಚಹಾ ಕುಡಿಸುತ್ತೇನೆಂದು' ಹತ್ತಿರದ ಚಹಾ ಅಂಗಡಿಯ ಬಳಿ ಹೊರಟರು. ತ್ಯಾಗಿ ಅವರ ಹಾದಿಯನ್ನು ಅನುಸರಿಸಿದರು.


ಪಶ್ಚಿಮದ ಕೆಂದಾವರೆಯ ಆಗಸದ ಕಡೆಯಿಂದ ಬೀಸುತ್ತಿದ್ದ ಗಾಳಿಗೆ ವಿರುದ್ಧವಾಗಿ ಹಕ್ಕಿಯೊಂದು ಹಾರುತ್ತಿತ್ತು..

Saturday, September 3, 2016

ಕಥೆ : ರಿಲೀಫ್...

"ಹತ್ತ್ ಘಂಟೆ ಆಯ್ಥೊ!!….ಎದ್ದೇಳೋ...." ಅಡುಗೆ ಮನೆಯಿಂದ ಅಮ್ಮನ ಸದ್ದು ಕೇಳಿ, ಓದ್ದಿದ್ದ ರಗ್ಗನ್ನು ಬೆನ್ನಿಂದ ಕಿವಿಯ ವರೆಗೂ ಎಳೆದು, ಕೈ ಕಾಲುಗಳನ್ನು ನಾಲ್ಕು ದಿಕ್ಕುಗಳಿಗೂ ಚಾಚಿ ಮಲಗಿದ ರಾಹುಲ್....

ಊರಿನಿಂದ ಸುಮಾರು ಮುನ್ನೂರು ಕಿಲೋಮೀಟರ್ ದೂರದಲ್ಲಿ, ವಾರದ ಐದೂ ದಿನಗಳೂ ಮಲ್ಟಿನ್ಯಾಷನಲ್ ಕಂಪನಿಯ ಗುಲಾಮನಾಗಿ ಸೇವೆ ಸಲ್ಲಿಸಿದ ನಂತರ ರಾಜನಂತೆ ಉಳಿದೆರೆದು ದಿನಗಳನ್ನು ಊರಿನಲ್ಲಿ ಕಳೆಯುತ್ತಿದ್ದ.ಗೆಳೆಯರೆಲ್ಲರೂ ವೀಕೆಂಡ್ನ ಟ್ರಿಪ್ ಅಂತ ನೂರಾರು ಮೈಲಿ ಕಲ್ಲು-ಮುಳ್ಳು, ಹಳ್ಳ-ದಿಬ್ಬ ಅಂತ 'ಪಟ್ಟಣದ ಆದಿವಾಸಿಗಳ' ಹಾಗೆ ಊರೆಲ್ಲ ಸುತ್ತಿ, ಸಭೂತಿಗೆ ಒಂದೈನೂರು ಫೋಟೋಗಳನ್ನು ದುಬಾರಿ ಕ್ಯಾಮರದಲ್ಲಿ ಸೆರೆ ಹಿಡಿದು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿ ರಾಹುಲ್ನ ಅದರಲ್ಲಿ ಟ್ಯಾಗ್ ಮಾಡಿದರೂ ಸಹ ಈತ ಒಮ್ಮೆಯೂ ವೀಕೆಂಡ್ನನ್ನು ಮನೆಯ ಹೊರಗಡೆ ಕಳೆದಿಲ್ಲ. ಊರ ತೋಟ ಹಾಗು ಗದ್ದೆ, ಆದಷ್ಟು ಕೆಲಸ, ಮಾವು, ಹಲಸು ಅಥವಾ ಪೇರಲೆ ಮರದ ಮೇಲತ್ತಿ ಕೆಲಸದ ದಣಿವನ್ನು ನಿವಾರಿಕೊಳ್ಳುವ ನೆಪದಲ್ಲಿ ಹಣ್ಣುಗಳನ್ನು ಹೊಟ್ಟೆ ಬಿರಿಯುವಂತೆ ತಿಂದು, ಸುಸ್ತಾಗಿ,ಊಟ ಮಾಡದೆ ಇದ್ದಾಗ ಅಮ್ಮನ ಬೈಗುಳದ ಸದ್ದು. ಇವುಗಳಲ್ಲಿ ಯಾವುದೊಂದಿಲ್ಲದಿದ್ದರೂ ಒಂದು ಆಪೂರ್ಣತೆಯ ಅನುಭವ ರಾಹುಲ್ನಿಗೆ.



"ಈ ಜಾಗ ನೋಡೋಕ್ಕೆ ನೀವು ೮೦೦ ಮೈಲಿ ಹೋಗಬೇಕಿತ್ತ!!?? ಅದೂ ಅಸ್ಟ್ ಕರ್ಚ್ ಮಾಡ್ಕೊಂಡು??" ಅಂತ ಪ್ರತಿ ಬಾರಿನು ಟ್ರಿಪ್ನಿಂದ ದಣಿದು ಬಂದ ಗೆಳೆಯರ ಗುಂಪನ್ನು ಮತ್ತಷ್ಟು ರೇಗಿಸುತ್ತಿದ್ದ."ಇದೇ ನನ್ನೂರಿಗೆ ಬಂದಿದ್ರೆ ಇದ್ರ ೧೦% ದುಡ್ಡಲ್ಲಿ ನಿಮ್ಗೆ ಒಂದು ಮಿನಿ ಸ್ವರ್ಗಾನೆ ತೋರಿಸ್ತಿದ್ದೆ" ಅಂತ ತನ್ನ ಊರಿನ ಬಗ್ಗೆ ಹೆಮ್ಮಯಿಂದ ಹೇಳಿಕೊಳ್ಳುತಿದ್ದ.



ವಾರದ ಐದನೇ ದಿನದ ರಾತ್ರಿ ಗೆಳೆಯರೊಟ್ಟಿಗೆ ಸೇರಿ, ಒಂದೆರೆಡು ಸಿಪ್ ಬಿಯರ್ ಹೀರಿ, ಮುಂಜಾನೆ ಬೇಗ ಎದ್ದು ನಾಲ್ಕೈದು ಬಟ್ಟೆಗಳನ್ನು ಬ್ಯಾಗ್ಗೆ ತುಂಬಿ, ಜೇಡರ ಬಲೆಯ ಹಿಯರ್-ಫೋನ್ ಅನ್ನು ಕಿವಿಗೆ ತೂರಿಸೀ, ರೈಲಿನ ಕಿಟಕಿಯ ಪಕ್ಕದ ಸೀಟಿನಲ್ಲಿ ಘನಿಕರಿಸುವ ಸೂರ್ಯನನ್ನು ದಿಟ್ಟಿಸುತ್ತ ೩೦೦ ಕಿಲೋಮೀಟರ್ ಸಾಗುವಷ್ಟರಲ್ಲಿ ಊರು ಬಂದೆ ಬಿಡುತ್ತಿತ್ತು.ಸುಡುವ ಬಿಸಿಲು, ಬಿಸಿಯಾದ ಗಾಳಿ, ಕರ್ಕಶ ದ್ವನಿಯನ್ನು ಕೇಳಿದ್ದ ಕಣ್ಣು ಕಿವಿಗಳಿಗೆ ಹಸಿರಾದ ಪರ್ವತ,ತಂಪಾದ ಗಾಳಿ, ಇಂಪಾದ ಹಕ್ಕಿಗಳ ಸದ್ದನ್ನು ಕೇಳಿ,ನೋಡಿದಾಗ ಎಲ್ಲಿಲ್ಲದ ಸಂತೋಷ, ಶಾಂತಿ . ಕೋಟಿ ಕೊಟ್ಟರು ಸಿಗದನ್ನು ರಾಹುಲ್ ತನ್ನ ಊರಿನಲ್ಲಿ ಗಳಿಸುತ್ತಿದ್ದ … ನೆಮ್ಮದಿ.



"ಇನ್ನು ಎದ್ದಿಲ್ವೇನೋ .... ರೊಟ್ಟಿ ಎಲ್ಲಾ ತಣ್ಣಗಾಗೊದ್ವು... ನಾನ್ ಮತ್ತೆ ಬಿಸಿ ಮಾಡ್ತಾ ಕೂರಲ್ಲ.. ಬೇಕಾದ್ರೆ ಎದ್ದು ತಿನ್ನು" ಅಂತ ಅಮ್ಮ ತನ್ನ ಕೊನೆ ಪ್ರಯತ್ನ ಮಾಡಿದಳು. ಕೆಲವು ಬಾರಿ ಬೇಕಂತಲೇ, ಅಮ್ಮಾ ಕೂಗಿ ಹೇಳಲಿ ಅಂತ ರಾಹುಲ್ ಮಂಚದ ಮೇಲೆ ಬಿದ್ದಿರುತ್ತಿದ್ದ. ಎದ್ದು, ರೆಡಿಯಾಗಿ ತುಪ್ಪ ಎಲ್ಲಿದೆ ಅಂತ ಕೂಗಿ ಕೇಳಿ, ರೊಟ್ಟಿ,ಸಾರು,ತುಪ್ಪ ಹಾಕಿ ತಿಂದು ಕೈಬೆರಳುಗಳನ್ನು ಚೀಪಿ, ಮನೆಯಲ್ಲೇ ಮಾಡಿದ್ದ ಕಾಫಿ ಪುಡಿಯಿಂದ ತಯಾರಿಸಿದ್ದ ಕಾಫಿಯನ್ನು ಈರುತ್ತ ಮನೆಯಿಂದ ಹೊರಗಡೆ ನಿಂತು ಉದ್ದ ಪರ್ವತ ಶ್ರೇಣಿಯನ್ನು ದಿಟ್ಟಿಸುತ್ತ ನಿಂತ. ನಂತರ ಕೊಂಚ ಹೊತ್ತು ತೋಟದಲ್ಲಿ ಅಡ್ಡಾಡಿ ಬಂದ.



"ಮದ್ಯಾನ ಏನ್ ಮಾಡ್ಲಿ ಊಟಕ್ಕೆ... " ಎಂದು ಐದು ದಿನಗಳ ನಂತರ ಬಂದ ಮಗನನ್ನು ಅಮ್ಮ ಕೇಳಿದಳು.



"ಗೊತ್ತಿದ್ದು ಅದನ್ನೇ ಕೇಳ್ತಿಯಲ್ಲ" ಅಂತ ರಾಹುಲ್ ಬೈಕನ್ನು ಹೊರತೆಗೆದು ಕೋಳಿ ಮಾಂಸವನ್ನು ತರಲು ಹೊರಟ. ಮದ್ಯಾನ ಅಮ್ಮ ಮಾಡಿದ್ದ ಭೂರಿ ಬೋಜನವನ್ನು ತಿಂದು, ಟೀವಿ ನೋಡುತ್ತ ಹಾಗೆ ನಿದ್ರೆಗೆ ಜಾರಿ ಕಣ್ಣು ತೆರೆದಾಗ ಸಂಜೆ ಐದಾಗಿತ್ತು. ಇನ್ನು ನಲವತ್ತು ತಾಸುಗಳ ನಂತರ ತಾನು ಪುನಃ ಮಲ್ಟಿನ್ಯಾಷನಲ್ ಕಂಪನಿಯ ಗುಲಾಮನಾಗುವುದನ್ನು ನೆನೆದು ಏನೋ ಒಂದು ದುಗುಡ ಮನದಲ್ಲಿ ಮೂಡಿದರೂ ಕೆಲದಿನಗಳ ನಂತರ ಪುನ್ಹ ಮನೆಗೆ ಹಿಂತಿರುಗುವ ಖುಷಿ ಅದೆಲ್ಲವನ್ನು ಮರೆಮಾಚಿತು. ಪಕ್ಕದ ಬೆಟ್ಟದ ತಪ್ಪಲಿನಲ್ಲಿ ತನ್ನ ಇಷ್ಟವಾದ ಜಾಗಕ್ಕೆ ಹೋಗಿ, ಆಶಾ-ಕಿಶೋರ್ರ ಮಧುರ ಸ್ವರದಲ್ಲಿ ಸೂರ್ಯ ಕರಗುವುದನ್ನು ನೋಡಲ್ಲಿಲ ಅಂದರೆ ಅದೇನೊ ಅಪೂರ್ಣತೆಯ ಅನುಭವ. ಇತ್ತಿಚೆಗೆ ಬಿಡುಗಡೆಗೊಂಡ, ನೋಡದೆ ಉಳಿದಿರುವ ಚಲನಚಿತ್ರಗಳನ್ನು ಗೆಳೆಯರಿಂದ ಕೇಳಿ ತಂದಿದ್ದ. ಯಾವುದಾದರು ಒಂದನ್ನು ಆಮೇಲೆ ನೋಡಿದರಾಯಿತು ಎಂದುಕೊಂಡು ಮತ್ತೊಮ್ಮೆ ಬೈಕನ್ನು ಹೊರಗೆಳೆದು ಹೊರಟ..



ಕಿಶೋರ್,ಆಶಾ,ಲತಾ, ಈಗೆ ಎಲ್ಲರನ್ನು ತನ್ನ ಫೋನಿನಲ್ಲಿ ನಗಿಸಿ,ಅಳಿಸಿ,ಪ್ರೀತಿಸಿ, ಪುನಃ ನಗಿಸಿ,ಅಳಿಸಿ, ಸೂರ್ಯ ಪಶ್ಹಿಮದಲ್ಲಿ ಕಣ್ಮರೆಯಾದ ಮೇಲೆ ಮನೆಗೆ ವಾಪಸ್ಸಾದ. ಅಮ್ಮ ಮಾಡಿಟ್ಟಿದ್ದ ಕಾಫಿಯನ್ನು ಕುಡಿಯುತ್ತ ಲ್ಯಾಪ್ಟಾಪ್ ಮುಂದೆ ಕೂತು ಇಮೇಲ್ಗಳ ಮೇಲೆ ಕಣ್ಣಾಯಿಸಿ, ಕೆಲಸಕ್ಕೆ ಹಾಕಿದ್ದ ಅರ್ಜಿಗೆ ಉತ್ತರ ಬಂದಿದ್ದನ್ನು ಗಮನಿಸಿದ. ಉತ್ತಮ ಸಂಬಳ, ವಸತಿ, ವಾಹನ ಈಗೆ ಎಲ್ಲವನ್ನು ಕೊಡಲಾಗಿತ್ತು. ಆಸಕ್ತರಿದ್ದರೆ ನಾಳಿನ ವೀಡಿಯೊ ಸಂದರ್ಶನಕ್ಕೆ ಬರಲು ಕಾಲವನ್ನು ನಿಗದಿಮಾಡಲಾಗಿತ್ತು. ಇಲ್ಲಿಯವರೆಗೂ ಅಪ್ಪ-ಅಮ್ಮನನ್ನು ಕೇಳಿ ಏನೂ ಮಾಡಿರದ ರಾಹುಲ್ ಈ ಬಾರಿಯೂ ಅವರಿಗೆ ಏನು ಹೇಳಲಿಲ್ಲ. ಕೆಲ ನಿಮಿಷಗಳ ದ್ವಂದ್ವ ಆಲೋಚನೆಯ ನಂತರ ಸಂದರ್ಶನ ಕೊಡಲು ತೀರ್ಮಾನಿಸಿದ...



"ದೂರದ ಬೆಟ್ಟ ನೋಡಲು ಬಹು ಸೊಗಸು" ರಾಹುಲ್ನ ಮನಸ್ಸು ಮಲಗುವ ಮುನ್ನ ಮಾತಾಡಿತು!



ನಂತರದ ಕೆಲ ದಿನಗಳಲ್ಲಿ ಎಲ್ಲಾ ರಾಹುಲ್ ಬಯಸಿದಂತೆ ನಡಯಿತು. ನೋಡ ನೋಡುತ್ತಲೇ ರಾಹುಲ್ ಸಾವಿರ ಮೈಲುಗಳ ದೂರದ ಜಾಗದಲ್ಲಿ ಗುಲಾಮನಾಗಲು ಹೊರಟು ನಿಂತ.



"ಅಲ್ಲಿಂದ ವಾಪಾಸ್ ಬರೋಕ್ಕೆ ಎಷ್ಟ್ ದಿನ ತಗೋನುತ್ತ್ಹೋ ... " ಹೊರಡುವಾಗ ಕಣ್ಣೀರನ್ನು ಜಿನಿಗಿಸುತ್ತ ಅಮ್ಮ ಕೇಳಿದಳು…



ಮನಯಿಂದ, ಮನೆಯವರಿಂದ, ಊರಿಂದ, ನಾಡಿಂದ ದೂರವಿರದ ರಾಹುಲ್ಗೆ ತಾನು ಯಾವುದೊ ಬೇರೆಯ ಸೌರಮಂಡಳಕ್ಕೆ ಬಂದ ಹಾಗಾನಿಸಿತು. ಮಾಡುತಿದ್ದ ಊಟ ೨ನೇ ಬಾರಿಗೇ ಬೇಜಾರಿಯಿತು. ಹಿಂದೆಂದೂ ಸಹ ರಾಹುಲ್ಗೆ ಮನೆಯ ನೆನಪು ಇಷ್ಟೊಂದು ಕಾಡಿಸಿರಲಿಲ್ಲ. ಮನಸ್ಸು ಊರಲ್ಲೇ ಹಸಿರು ಪರ್ವತಗಳ ನಡುವೆ ಅಲೆಯುತಿದ್ದರೆ, ದೇಹ ಮಾತ್ರ ಆ ದೂರದ ಊರಲ್ಲಿ ಇದ್ದಿತು. ಮನಸಿಲ್ಲದ ಮನಸ್ಸಿಂದ ಕೆಲಸ ಮಾಡುವುದೆನಂತ ಈಗ ಅರಿವಾಹಿತು. ತನ್ನ ಹಳೆಯ ಕೆಲಸದ ಉತ್ತರ ಭಾರತದ ಸಹೋದ್ಯೋಗಿಗಳ ಪಾಡು ಅರ್ಥವಾಗತೊಡಗಿತು.ಇಲ್ಲಿಂದ ಇಂದೇ ವಾಪಾಸ್ ಹೋಗುವಂತನಿಸಿದರೂ ಕಂಪನಿಯ ಜೊತೆ ಇದ್ದ ಒಪ್ಪಂದ ಯಾಕೋ ಬೇಡವೆನಿಸುವಂತೆ ಮಾಡಿತು.ಇಲ್ಲಿಗೆ ಬರುವ ನಿರ್ಣಯದ ಬದಲು ಅಪ್ಪ-ಅಮ್ಮನನ್ನು ಕೇಳಬೇಕಿತ್ತು ಅನ್ನುವುದರ ಅರಿವು ಕೊನೆಗೂ ಆಯಿತು.



ಇಲ್ಲಿಂದ ತುಸು ದೂರ ಸಾಗಿದರೆ ಒಂದು ಒಳ್ಳೆಯ ಸೂರ್ಯಾಸ್ತ ನೋಡುವ ಜಾಗವಿದೆ ಅಂತ ತಿಳಿದು ಅಲ್ಲಿಗೆ ಹೊರಡುತ್ತಾನೆ. ಸಕಲ ಸೌರಮಡಲಕ್ಕೂ ಒಬ್ಬನೇ ಸೂರ್ಯನಾದರೂ ರಾಹುಲ್ಗೆ ಇಲ್ಲಿನ ಸೂರ್ಯ ತೀರಾ ಭಿನ್ನವಾಗಿ ಕಾಣಿಸಿದ. ಊರಿನ ತನ್ನ ಇಷ್ಟವಾದ ಜಾಗದಲ್ಲಿ ನಿಂತು ಸೂರ್ಯನನ್ನು ನೋಡುತ್ತಾ ನಿಂತರೆ ಆತ ಮುಳುಗುತ್ತಾ ತನ್ನ ನೋವು-ಚಿಂತೆಯನೆಲ್ಲ ಕರಗಿಸುವ ಭಾಸ. ತಿಪ್ಪರಲಾಗ ಹಾಕಿದರೂ ಅವಳು ಸಿಗುವುದಿಲ್ಲ ಅಂತ ಗೊತ್ತಿದ್ದರೂ ಊರಿನಲ್ಲಿ ಮುಳುಗುವ ಸೂರ್ಯನನ್ನು ಇಂಪಾದ ಹಾಡುಗಳೋಟ್ಟಿಗೆ ನೋಡುತ್ತ ನಿಂತರೆ ಅದೇನೋ ಖುಷಿ. ಆಕೆ ಪಕ್ಕದಲ್ಲೇ ನಿಂತ ಭಾವ! ಆದರೆ ಇಲ್ಲಿನ ಸೂರ್ಯ ಅವನೆಲ್ಲ ಪುನಃ ರಾಹುಲನ ಮನದೊಳಗೆ ಹಾಕಿ ಕದಲಿಸಿ-ನೋಯಿಸುವ ಅನುಭವ!



ಇದ್ದಕ್ಕಿದ್ದಂತೆ ಮಳೆ ಹನಿಗಳು ಒಂದೊಂದಾಗಿ ಬೀಳಲಾರಂಬಿಸಿದವು. ಇದು ಕೇವಲ ತುಸು ಸಮಯದ ಉದುರು ಮಳೆ ಎಂದು ರಾಹುಲ್ ನಡೆಯುತ್ತಲೇ ರೂಮಿನೆಡೆಗೆ ನಡೆದ. ತನ್ನ ಊರಿನ ಮಳೆಗಾಲದ ನೆನಪು ರಾಹುಲ್ನನ್ನು ಕಾಡಲರಂಬಿಸಿದವು. ಊರಿನ ಮಳೆ, ದೂರ ದೂರಕ್ಕೆ ಒಡೆದು ನಿಂತಿರುವ ಹಸಿರು ಗದ್ದೆಗಳು, ಮಳೆಯಲ್ಲೇ ಅದರೊಳಗೆ ಆಟದ ಗೊಂಬೆಗಳಂತೆ ಓಡಾಡುವ ಕೆಲಸಗಾರು. ಜಿನುಗುವ ಮಳೆಯಲ್ಲೇ ಊರೆಲ್ಲ ಸುತ್ತಿ ಒಲೆಯ ಮುಂದೆ ಕೂತು ಮೈ ಕಾಯಿಸಿಕೊಳ್ಳುವುದು, ಬೆಳಗಿನ ತಿಂಡಿ,ಊಟ ಎಲ್ಲವನ್ನು ಹಲಸಿನ ಹಣ್ಣಿನ ಒಟ್ಟಿಗೆ ಮಾಡಿದ ಆ ದಿನಗಳು ರಾಹುಲ್ನನ್ನು ಊರಿನೆಡೆಗೆ ಕರೆದವು.ತುಸು ಹೊತ್ತು ಬಂದ ಮಳೆಗೆ ಒದ್ದೆಯಾಗಿದ್ದ ತಲೆಯನ್ನೂ ಒರೆಸದೆ ರಾಹುಲ್ ಬಟ್ಟೆಗಳನ್ನು ಪ್ಯಾಕ್ ಮಾಡಲು ಶುರು ಮಾಡಿದ!! ಇರಲಿ ಅಂತ ತನ್ನ ರಾಜೀನಾಮೆ ಪತ್ರವನ್ನು ಇಮೇಲ್ ಮಾಡಿ, ಆ ದಿನ ರಾತ್ರಿಯೇ ರೈಲನ್ನು ಹಿಡಿದು ಊರಿನೆಡೆ ಸಾಗಿದ.



ದೂರ ಕ್ಷೀಣಿಸಿದ ಹಾಗೆ ಮನಸ್ಸಿನ ಭಾರ ಕಡಿಮೆಯಾಗತೊಡಗಿತು. ಊರು ತಲುಪಿದಾಗ ಮನಸ್ಸು ಹಗುರಾಹಿತು........

.

.

.

ದಿನಗಳು ಕಳೆದವು........



"ಘಂಟೆ ಹ್ಹನ್ನೊಂದು!!.....ಇನ್ನೂ ಮಲ್ಗಿದ್ದಿಯಲ್ಲ ಮಾರಾಯ" ಅಮ್ಮನ ದ್ವನಿ ಕಿವಿಗೆ ಬಿದ್ದಿತು. ಐದು ದಿನಗಳ ನಂತರ ವೀಕೆಂಡ್ಗೆ ಪುನಃ ಮನೆಗೆ ಬಂದು ಮಲಗಿದ್ದ ರಾಹುಲ್ಗೆ ಮನದಲ್ಲೇ ಹಾಗೆ ಒಂದು ಮುಗುಳ್ನಗೆ ಮೂಡಿತು... ಎಷ್ಟೋ ದಿನಗಳ ನಂತರ ಬಂದ ಗುಬ್ಬಚ್ಚಿ ಸದ್ದಿಗೆ ಎಚ್ಚರವಾಗಿ ಕಬೋರ್ಡ್ನ ಮೂಲೆಯಲ್ಲಿ ಇಟ್ಟಿದ್ದ ಕ್ಯಾಮರ ತರಲು ರಾಹುಲ್ ದೌಡಹಿಸಿದ.....