Wednesday, August 7, 2019

ಸ್ವರ್ಗವನ್ನಾವರಿಸುವುದಿನ್ನು ಮಲೆನಾಡ ಕಾಫಿಯ ಕಂಪು... Bon Voyage you Sir!!

ಜುಲೈ 30, 2019. ಆ ದಿನದ ಬೆಳಗಿನ ಸೂರ್ಯ ಯಾರಿಗೆ ಏನನ್ನು ಹೊತ್ತು ತಂದನೋ ಗೊತ್ತಿರಲಿಲ್ಲ ಆದರೆ ದಕ್ಷಿಣ ಭಾರತದ ಲಕ್ಷಾಂತರ ಮಲೆನಾಡಿಗರಿಗಂತೂ ದುಃಖದ ಮಹಾ ಮಡುವನ್ನೇ ತಂದೆಸೆದಿದ್ದ. ಮೋಡಗಳ ಮದ್ಯೆ ಆಗಾಗ ಮರೆಯಾಗಿ ಆಟವಾಡುತ್ತಿದ್ದ ಆತ ಮಲೆನಾಡ ಕಣ್ಮಿಣಿಯಂತಿದ್ದ ನಾಯಕನೊಬ್ಬನ ಕಣ್ಮರೆಯನ್ನು ಸೂಚಿಸುತ್ತಿದ್ದ. ಅಂದು ಇಡೀ ಊರಿಗೆ ಊರೇ ಒಂದು ಮಹಾ ಮೌನದಲ್ಲಿ ಮುಳುಗಿಹೋಗಿತ್ತು. ‘ಜೀವನ ಇಷ್ಟೇಯೇ?’ ಎಂದೆನಿಸಿ ಬೇಸರಗೊಂಡು ಮುಚ್ಚಿದ ಅಂಗಡಿ ಮುಂಗಟ್ಟುಗಳು ಒಂದೆಡೆಯಾದರೆ, ಇತ್ತಕಡೆ ಅನಿವಾರ್ಯ ಕಾರಣಗಳಿಂದ ತೆರೆದ ಮಳಿಗೆಗಳೂ ಬಿಕೋ ಎನ್ನುತ್ತಿದ್ದವು. ಹಾಲು ಮಾರುವವರ, ಪೇಪರ್ ಹಾಕುವನವರ ಅಥವಾ ತರಕಾರಿ ಗಾಡಿಯ ವ್ಯಕ್ತಿಗಳಿಂದಿಡಿದು ಸಾವಿರಾರು ಎಕರೆ ಕಾಫಿ ತೊಡದ ಒಡೆಯರ ಮುಖಗಳ ಮೇಲೂ ನೋವಿನ ಛಾಯೆಯೊಂದು ಅಂದು ಮನೆಮಾಡಿತ್ತು. ಜಾತಿ, ಪಂಥ, ಬಡವ, ಬಲ್ಲಿದ, ಹಿರಿಯರು, ಕಿರಿಯರೊಟ್ಟಿಗೆ ಆ ನಾಯಕ ಬೆಳೆಸಿದ್ದ ಕೋಟ್ಯಂತರ ಕಾಫಿ ಗಿಡಗಳೂ ಸಹ ಅಂದು ದುಃಖಗೊಂಡಿದ್ದವು. In a broad sense ಅರಗಿಸಿಕೊಳ್ಳಲಾಗದ ಸ್ಮಶಾನ ಮೌನವೊಂದು ಪಶ್ಚಿಮ ಘಟ್ಟದ ನಾಡನ್ನು ಅಂದು ಆವರಿಸಿತ್ತು. ಕಾರಣ, ದೇಶವಷ್ಟೇ ಅಲ್ಲದೆ ವಿದೇಶಗಳಿಗೂ ಮಲೆನಾಡ ಕಾಫಿಯ ಸುಮಧುರ ಘಮವನ್ನು ಪಸರಿಸಿದ್ದ, ವಿಶ್ವದ ಭೂಪಟದಲ್ಲಿ ಮಲೆನಾಡ ಚಿರಗುರುತನ್ನು ಹುಟ್ಟುಹಾಕಿದ, ಕಾಫಿ ಬೆಳೆಗಾರ, ಉದ್ಯಮಿ, ಕಾಫಿ ಕಿಂಗ್ , ಸಾಹಸಿ, ಕನಸುಗಾರ, , ತೆರೆಮರೆಯ ಸಮಾಜಸೇವಕ, ಸರಳ ಸಜ್ಜನಿಕೆಯ ಮನುಷ್ಯನೊಬ್ಬ ಕಳೆದ ಹನ್ನೆರೆಡು ಘಂಟೆಗಳಿಂದ ಕಾಣೆಯಾಗಿದ್ದ ವಿಷಯ! ವ್ಯಕ್ತಿಯೊಬ್ಬ ಕೇವಲ ಕಾಣೆಯಾದ ಮಾತ್ರಕ್ಕೇ ಲಕ್ಷಾಂತರ ಮನಸ್ಸುಗಳು ಹೀಗೆ ದುಃಖತಪ್ತವಾಗುತ್ತವೆಂದರೆ ಆ ವ್ಯಕ್ತಿತ್ವ ಜನಮಾನಸದ ಮೇಲೆ ಅದೆಂತಹ ಪ್ರಭಾವವನ್ನು ಬೀರಿರಬಹುದೆಂದು ನಾವು ಊಹಿಸಬಹುದು.

ಹೆಚ್ಚೇನ್ನಿಲ್ಲ, ಕೇವಲ ದಶಕಗಳೆರಡರ ಹಿಂದಕ್ಕೆ ಹೋದರೆ ಕಾಫಿ ಎಂಬುದು ಉಳ್ಳವರ, ದೊಡ್ಡವರ ಪೇಯ ಎಂಬೊಂದು ಮನೋಭಾವನೆ ಭಾರತೀಯರಲ್ಲಿದ್ದಿತು. ಟೀ ಅಥವಾ ಚಹಾ ದೇಶದ ಕೋಟ್ಯಾನುಕೋಟಿ ಜನರ ನಾಲಿಗೆಯ ಮೇಲೆ ನಲಿಯುತ್ತಿತ್ತು. ಕಾಫಿ ಎಂಬ ಹೆಸರನ್ನು ಜನ ಕೇಳಿದ್ದರೇ ವಿನ್ಹಾ ನೋಡಿರುವ ಮಂದಿ ಬಹಳ ವಿರಳವಾಗಿದ್ದರು. ಇನ್ನು ರೈತರ ವಿಷಯಕ್ಕೆ ಬಂದರೆ ತಾವು ಬೆಳೆದ ಬೆಳೆಯನ್ನು ಮುಕ್ತವಾಗಿ ಮಾರುಕಟ್ಟೆಯಲ್ಲಿ ಮಾರಲೂ ಬೇರೆಯೊಬ್ಬರ ಅಪ್ಪಣೆಯನ್ನು ಪಡೆಯಬೇಕಿತ್ತು. ಅಲ್ಲದೆ ಕಾಫಿ ಎಂಬುದು ಅಂದು ಬಹುಪಾಲು ಜನರಿಗೆ ಜೀವನ ನೆಡೆಸಲು ಇದ್ದ ಒಂದು ಸಣ್ಣ ಆಧಾರವಾಗಿದ್ದಿತೇ ವಿನ್ಹಾ ರಾಷ್ಟ್ರಮಟ್ಟದಲ್ಲಿ ದೇಶದ ಆದಾಯಕ್ಕೆ ಬೆನ್ನೆಲುಬಾಗುವ ಉದ್ಯಮವಂತೂ ಅದು ಆಗಿರಲೇ ಇಲ್ಲ. ಇನ್ನು ನಮ್ಮ ಬೆಳೆಗಾರರು ವಿದೇಶಗಳಿಗೆ ರಫ್ತುಮಾಡಿ ಹಣ ಗಳಿಸುವುದೆಲ್ಲ ಕನಸ್ಸಿನ ಮಾತೆ ಸರಿ. ಕಾರಣ ಅಂತಹ ರಪ್ತಿಗೆ ಸರ್ಕಾರಗಳು ವಿಧಿಸುತ್ತಿದ್ದ ಭಾರಿ ಮೊತ್ತದ ತೆರಿಗೆಗಳು ಹಾಗು ಕಾಫಿ ಬೋರ್ಡ್ ಎಂಬ ತಡೆಗೋಡೆಗಳು. ಮೇಲಾಗಿ ವಿಶ್ವದಾದ್ಯಂತ ಅಷ್ಟರಲ್ಲಾಗಲೇ ಹಲವಾರು ಚಿರಪರಿಚಿತ ಕಾಫಿ ಬ್ರಾಂಡ್ಗಳು ನೆಲೆಯೂರಿದ್ದರಿಂದ ಕಗ್ಗತ್ತಲೆಯ ಮಲೆನಾಡ ಮೂಲೆಯ ನಮ್ಮ ಕಾಫಿ ಬೀಜಗಳನ್ನು ಅಲ್ಲಿಯವರೆಗೂ ಕೊಂಡೊಯ್ದು ಅಂತಹ ದೈತ್ಯ ಬ್ರಾಂಡ್ಗಳೊಟ್ಟಿಗೆ ಪೈಪೋಟಿಯನ್ನು ಮಾರುವವರ್ಯರು? ವಿದೇಶಿ ಮಾರುಕಟ್ಟೆಗಳನ್ನು ನಮ್ಮಲ್ಲಿಗೆ ಕರೆದು ತರುವವರ್ಯಾರು ? ಇವೆಲ್ಲ ಪ್ರೆಶ್ನೆಗಳ ಉತ್ತರ ಮಲೆನಾಡ ಚಿಗುರು ಮೀಸೆಯ ಸಣಕಲು ಕಾಯದ ಆ ಒಬ್ಬ ವ್ಯಕ್ತಿಯಲ್ಲಿದ್ದಿತು. ಆತನ ಹೆಸರೇ ವೀರಪ್ಪ ಗಂಗಯ್ಯ ಸಿದ್ದಾರ್ಥ.

'In the next 15-20 years, there will be around 15 to 20 retail brands from India in the high-Streets of the world & we want our brand to be one of them. We want to make every Indian is proud of our brand'

ಅದು 2016, ಕಾನ್ಪುರ IIT. ನಾಳಿನ ದಿನಗಳ ಮಹತ್ತರ ಕನಸನ್ನು ಹೊತ್ತ ನೂರಾರು ವಿದ್ಯಾರ್ಥಿಗಳ ಮುಂದೆ ತಮ್ಮ Cafe Coffee Day ಕುರಿತು ಈ ಮಾತನ್ನು ಹೇಳುತಿದ್ದ ಸಿದ್ಧಾರ್ಥರ ಮುಖದಲ್ಲಿದ್ದ ಆ ಹುಮ್ಮಸ್ಸನ್ನು ನೋಡಬೇಕು. ವರ್ಷಗಳ ಹಿಂದೆ ಯಾರಿಗೂ ಬೇಡವಾದ ವಲಯವನ್ನು ಬ್ರಾಂಡ್ ಒಂದಾಗಿ ಮಾರ್ಪಡಿಸಿ ವಿದೇಶದ ನೆಲದಲ್ಲಿ ಅದನ್ನು ಪ್ರತಿಷ್ಠಾಪಿಸುವ ಅವರ ಕನಸ್ಸನ್ನು ಕಂಡು ಅಲ್ಲಿ ನೆರೆದಿದ್ದ ಅಷ್ಟೂ ಮಂದಿಯೂ ಆತ್ಮವಿಶ್ವಾಸದ ಅಲೆಯಲ್ಲಿ ತೇಲಿದಂತೂ ಸುಳ್ಳಲ್ಲ. ಹೆಚ್ಚು ಕಡಿಮೆ ಆ ಕನಸ್ಸು ಇಂದಿಗೆ ನನಸ್ಸಾಗಿದೆ ಎಂದರೆ ತಪ್ಪಾಗದು. CCD ಎಂದರೆ ಇಂದು ದೇಶದ ಭಾಗಶಃ ಯುವಕ ಯುವತಿಯರ ದೈನಂದಿಂದ ರೂಟೀನಲ್ಲಿ ಒಂದಾಗಿಬಿಟ್ಟಿದೆ. IT ಜನರ ಹಾಡು, ಹರಟೆ, ಸುಖ, ದುಃಖ, ನೋವು, ನಲಿವುಗಳೆಲ್ಲದರ ಮೇಟಿಂಗ್ ಪಾಯಿಂಟ್ ಈ CCD. ನಾನಿಲ್ಲಿ ಗೂಡಂಗಡಿಯಲ್ಲಿ ಸಿಗುವ ರುಚಿಕರವಾದ ಒಂದಕ್ಕಿ ದುಡ್ಡಿನ ಕಾಫಿಗೂ, CCDಯಲ್ಲಿ ದೊರೆಯುವ ಮೂರಂಕಿಯ ಕಾಫಿಗೂ ಹೋಲಿಕೆ ಮಾಡುತ್ತಿಲ್ಲ. Ofcourse ಹಣವನ್ನು ಮುಂದಿಟ್ಟರೆ ಅಲ್ಲಿ ಕಾಣುವ ಏರಿಳಿತ ಸಾಮನ್ಯವೇ. But here I’m taking about a Brand. The Brand. ಪ್ರಸ್ತುತ ಪೈಪೋಟಿಯ ಕಾಲದಲ್ಲಿ ಬ್ರಾಂಡ್ ಒಂದನ್ನು ಸೃಷ್ಟಿಸಿ ಬೆಳೆಸಿ ಮುನ್ನೆಡೆಸುವ ಪ್ರಕ್ರಿಯೆಗೂ ತಾಯಿಯೊಬ್ಬಳು ಮೊದಲ ಬಾರಿ ಗರ್ಭವತಿಯಾಗಿ ಮುದ್ದಾದ ಮಗುವನ್ನು ಭೂಮಿಗೆ ತರುವ ಕ್ರಿಯೆಗೂ ಏನೇನೂ ವ್ಯತ್ಯಾಸವಿರುವುದಿಲ್ಲ. ಅಳುತ್ತಲೇ ಬರುವ ಮಗುವನ್ನು ಸಂತೈಸಿ, ಮುದ್ದಿಸಿ, ಹಾಲುಣಿಸಿ, ಶುಚಿಗೊಳಿಸಿ, ಕಷ್ಟಗಳೆಲ್ಲದರಿಂದ ರಕ್ಷಿಸಿ ಬೆಳೆಸುವ ಪ್ರಕ್ರಿಯೆ ಒಂದೆಡೆ ಸಾಕು ಸಾಕೆನಿಸಿದರೆ ಮತ್ತೊಂದೆಡೆ ಮನಸ್ಸಿಗೊಂದು ಅವರ್ಣನೀಯವಾದ ಮುದವನ್ನು ನೀಡುತ್ತಿರುತ್ತದೆ. ತನ್ನಿಂದ ಜೀವಕಂಡ ಮಗು ಹೆಮ್ಮರವಾಗಿ ಬೆಳೆಯುವ ಕನಸ್ಸು ಅಲ್ಲಿರುತ್ತದೆ. ಅದೇನೇ ಕಷ್ಟಗಳು ಬಂದರೂ ಸಹಿಸುವ ಮನೋಬಲ ಅದಾಗಿರುತ್ತದೆ. ಅಂತಹದ್ದೇ ತಾಯಿಯ ಕನಸ್ಸನ್ನು ಬ್ರಾಂಡ್ಗಳ ಸೃಷ್ಟಿಸುವ ಬಿಸಿನೆಸ್ ಮ್ಯಾನ್ಗಳು ಕಾಣುತ್ತಾರೆ. ಶತಾಯಗತಾಯ ಆದೂ ಸಹ ಹೆಮ್ಮರವಾಗಿ ಬೆಳೆಯಬೇಕು, ರಾಜ್ಯ, ದೇಶಗಳಷ್ಟೇ ಅಲ್ಲದೆ ವಿದೇಶಗಳಲ್ಲೂ ತನ್ನ ಹೆಸರು ಕೀರ್ತಿಯನ್ನು ಗಳಿಕೊಳ್ಳಬೇಕು ಎಂಬ ಕನಸು ಅವರದ್ದಾಗಿರುತ್ತದೆ. ಅಂತಹ ತಾಯಿಯ ಮಮತೆಯ ಕನಸಿಗೆ ನಾವು ಬೆಲೆಕಟ್ಟುವ ಧಾವಂತ ಎಂದಿಗೂ ಮಾಡಕೂಡದು.ಅಂತ ನೂರಾರು ಕನಸ್ಸುಗಳ ನಡುವೆ ನಮ್ಮ CCDಯೂ ಕೂಡ ಒಂದು.

1983. ಮಲೆನಾಡಿನ ಮಟ್ಟಕ್ಕೆ ಶ್ರೀಮಂತ ಮನೆತನದಲ್ಲಿ ಹುಟ್ಟಿ ಬೆಳೆದ ಹುಡುಗನೊಬ್ಬ ಅಂದು ಸೀದಾ ಬಾಂಬೆಗೆ ಹೋಗುವ ಟ್ರೈನನ್ನು ಹಿಡಿದ. ಸೈನ್ಯಕ್ಕೆ ಸೇರಬೇಕೆಂದು ಪ್ರಯತ್ನಿಸಿ ಸೋತರೂ ಜೀವನದಲ್ಲಿ ಪುನಃ ಮತ್ತೇನನ್ನೋ ಸಾಧಿಸಬೇಕೆಂಬುದು ಆತನ ಕನಸ್ಸಾಗಿರುತ್ತದೆ. ಆದರೆ ಅದು ಏನು, ಹೇಗೆ, ಎಲ್ಲಿ ಎಂಬುದು ತಿಳಿದಿರುವುದಿಲ್ಲ. ರೂಮೊಂದನ್ನು ಬುಕ್ಕು ಮಾಡಿ ಕೆಲಸವನ್ನು ಅರೆಸತೊಡಗಿದ. ಕಣ್ಣಿಗೆ ಕಂಡ ದೊಡ್ಡದಾದ ಕಟ್ಟಡದ ಆರನೇ ಅಂತಸ್ತನ್ನು ಏರಿದ 22ರ ಆ ಪೋರ ಸೀದಾ ನೆಡೆದದ್ದೇ ಆಗಿನ ಕಾಲಕ್ಕೆ ಬಾಂಬೆಯಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದ JM Financial ಎಂಬ ಕಂಪೆನಿಯೊಳಕ್ಕೆ. ಗೊತ್ತಿಲ್ಲ, ಗುರಿಯಿಲ್ಲ, Appointment ಎಂಬುದು ಇಲ್ಲವೇ ಇಲ್ಲ. ಆದರೂ ಯಂಗ್ ಸಿದ್ದಾರ್ಥನ ಅದೃಷ್ಟ ಚೆನ್ನಾಗಿಯೇ ಇದ್ದಿತು. ಆತನ ಜೀವನ ಬದಲಾದ ಅಮೋಘ ಕ್ಷಣಗಳವು. ಕಂಪನಿಯ ಮಾಲೀಕ Mr. Naveen Bhai Kampani ಖುದ್ದಾಗಿ ಈತನನ್ನು ತನ್ನ ತಂಡದಲ್ಲಿ ನೇಮಿಸಿಕೊಂಡರು. ಆ ಬಿಸಿರಕ್ತದ ಹುಡುಗನ ಜೀವನದಲ್ಲಿ ಮುಂದೆ ನೆಡೆದ ಘಟನೆಗಳೆಲ್ಲ ವಸಂತ ಮಾಸದ ಹೂವುಗಳಂತೆ ಒಂದರಿಂದೊಂದು ಅರಳಿ ಘಮಿಸತೊಡಗಿದವು. ಸಿದ್ಧಾರ್ಥರ JM Financial ನೊಳಗಿನ ಸ್ಟಾಕ್ ಮಾರ್ಕೆಟ್ಟಿನ ಅನುಭವ ಹಾಗು ಜ್ಞಾನ ಅವನ ಜೀವನಕ್ಕಾಗುವಷ್ಟು ದೊರೆಯಿತು. ಮೇಲಾಗಿ ಅಲ್ಲಿ ದೊರೆತ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯ, ಅವರ ಜೀವನದ ಮೌಲ್ಯಗಳು ಸಿದ್ದಾರ್ಥರನ್ನು A man with ambition ರನ್ನಾಗಿ ಮಾಡಿತು. ಕನಸ್ಸೊಂದು ಚಿಗುರೊಡೆಯಿತು. ಎರಡೇ ವರ್ಷಗಳ ನಂತರ ತಾಯ್ನೆಲಕ್ಕೆ ಆಗಮಿಸಿದ ಸಿದ್ದಾರ್ಥ್ ಸೀದಾ ತನ್ನ ಕನಸ್ಸಿನ ಗೋಪುರಕ್ಕೆ ಅಡಿಪಾಯವನ್ನು ಹಾಕಿದರು. ಸ್ಟಾಕ್ ಮಾರ್ಕೆಟ್ ನಲ್ಲಿ ಚತುರತೆಯಿಂದ ಇನ್ವೆಸ್ಟ್ ಮಾಡುತ್ತಾ ಬಂದ ಹಣವನ್ನು ಸೀದಾ ಕಾಫಿತೋಟಗಳ ಕೊಳ್ಳುವಿಕೆಯಲ್ಲಿ ತೊಡಗಿಸುತ್ತಾರೆ. ನೋಡನೋಡುತ್ತಲೇ ಸಾವಿರಾರು ಎಕರೆ ತೋಟದ ಮಾಲೀಕರಾಗುತ್ತಾರೆ.

ಇಲ್ಲಿನ ನಂತರ 'ಬ್ರಾಂಡ್' ಎಂಬ ಕಾನ್ಸೆಪ್ಟ್ ಸಿದ್ದಾರ್ಥರ ತಲೆಯೊಳಗೆ ಬಂದದ್ದೇ ತಡ ಆಗಿನ ಕಾಲಕ್ಕೆ ತೀರಾ ಸೋಜಿಗವೆಂದೆನಿಸಿದ ಬಿಸಿನೆಸ್ ಮಾಡೆಲ್ ಒಂದನ್ನು ತನ್ನ ಕನಸ್ಸಿನ ಕೂಸಗಿ ತೊಡೆಯಮೇಲೆ ಅವರು ಹಾಕಿಕೊಂಡರು. ತಾವು ಬೆಳೆದ ಕಾಫಿಯನ್ನು ತೃಣಮಾತ್ರದ ಬೆಲೆಗೆ ಮಾರಿ ದೂರದಲ್ಲಿ ಅಲ್ಯಾರೋ ಒಂದಿಷ್ಟೂ ಮೈ ಬಗ್ಗಿಸದೆ ಕೋಟಿ ಕೋಟಿಯನ್ನು ಎಣಿಸುವ ಪ್ರಕ್ರಿಯೆಯನ್ನು ಮೊಟಕು ಗೊಳಿಸಬೇಕೆಂದುಕೊಂಡರು. ಅದು ತಾನೊಬ್ಬನಿಗೆ ಅಲ್ಲದೆ ಈ ಪ್ರದೇಶದಲ್ಲಿ ನೆಲೆಸಿರುವ ಸಾವಿರಾರು ಕಾಫಿ ಬೆಳೆಗಾರರಿಗೂ ವರವಾಗಿ ಪರಿಣಮಿಸುತ್ತಿತ್ತು. ಪರಿಸ್ಥಿತಿಯನ್ನು ಅರಿತ ಸಿದ್ದಾರ್ಥ ಸುಮ್ಮನೆ ಕೂರಲಿಲ್ಲ. ಕಮಿಟಿಯೊಂದನ್ನು ಮಾಡಿಕೊಂಡು ಸೀದಾ ಭೇಟಿ ಮಾಡಿದ್ದೆ ಆಗಿನ ಹಣಕಾಸು ಸಚಿವರಾಗಿದ್ದ ಪ್ರಸ್ತುತ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ರವರನ್ನು! ಒಂದರೆಗಳಿಗೆಯೂ ಯೋಚಿಸದೆ ಇವರ ಕೋರಿಕೆಯನ್ನು ಮನ್ನಿಸಿದ ಸಿಂಗ್ ಕಾಫಿಯನ್ನು ರಫ್ತ್ತುಮಾಡಲು ಇದ್ದ ಹಲವು ಬಗೆಯ ತೊಡಕುಗಳನ್ನು ಹಾಗು ಹೆಮ್ಮರವಾಗಿ ಬೆಳೆದು ನಿಂತ ಸುಂಕಗಳನ್ನು ತೆರವುಗೊಳಿಸಿದರು. ಆ ದಿನ ಮಲೆನಾಡ ಕಾಫಿ ಬೆಳೆಗಾರರಿಗೆ ಉಂಟಾದ ಖುಷಿಗೆ ಬಹುಷಃ ಪಾರವೇ ಇರಲಿಲ್ಲವೆಂದೆನಿಸುತ್ತದೆ. ಅಲ್ಲಿಂದ ಮುಂದೆ ಟ್ರೇಡಿಂಗ್ ಹಾಗು ಎಕ್ಸ್ಪೋರ್ಟ್ ಮಾಡುವ ಕಂಪನಿಯನ್ನು ಖುದ್ದು ಹುಟ್ಟುಹಾಕಿದರು. ಹೀಗೆ ಹುಟ್ಟಿಕೊಂಡ ಕಂಪನಿಯೇ Amalgamated Bean Coffee Trading Company ಅಥವ ಮಲೆನಾಡಿಗರ ಪ್ರೀತಿಯ ABC.

ABCಯ ನಂತರ Coffee Day ಯನ್ನು ಸ್ಥಾಪಿಸಿ ಅದರ ಮುಖೇನ CCD, Tanglin, Sical Logistics, Serai Resorts, Way to Wealth, ಎಂಬ ಚಿರಪರಿಚಿತ ಬ್ರಾಂಡ್ಗಳೊಟ್ಟಿಗೆ ಹಲವಾರು IT ಕಂಪನಿಗಳಲ್ಲೂ ಅವರು ತೊಡಗಿಸಿಕೊಂಡರು. ಇದು ಗೆದ್ದ ಉದ್ಯಮಿಯೊಬ್ಬ ಬೆಳೆದು ಬಂದ ಸಕ್ಸಸ್ ಪಾತ್ ನಂತಷ್ಟೇಯೇ ಆಗಿದ್ದರೆ ಇಷ್ಟೆಲ್ಲಾ ಹೇಳಬೇಕಾದ ಅವಶ್ಯಕತೆ ಇರಲಿಲ್ಲ. ಬದಲಾಗಿ ಸಿದ್ದಾರ್ಥ್ ಒಬ್ಬ ಸಮಾಜವಾದಿ ಧೋರಣೆಯುಳ್ಳ ವ್ಯಕ್ತಿತ್ವ. ಉದಾಹರಣೆಗೆ ಮೇಲೆ ತಿಳಿಸಿದ ಯಾವುದಾದರೊಂದು ಸಂಸ್ಥೆಯಲ್ಲಿ ಹೋಗಿ ನೋಡಿದರೆ ಮಿನಿಮಮ್ ಎಂದರೂ 60 ರಿಂದ 70 % ನಷ್ಟು ನೌಕರರು ಮಲೆನಾಡಿಗರೇ ಅಥವಾ ಕನ್ನಡಿಗರೇ ಆಗಿರುತ್ತಾರೆ. ತಮ್ಮ ತಮ್ಮ ಊರುಗಳಲ್ಲಿ ಕನಿಷ್ಠ ವೇತನವನ್ನಷ್ಟೇ ಗಳಿಸುತ್ತಾ ಜೀವನ ಸವೆಸುವ ಸಾವಿರಾರು ಯುವಕ ಯುವತಿಯರು ಇಂದು Coffee Dayಯ ಅವಿಬಾಜ್ಯ ಅಂಗವಾಗಿಬಿಟ್ಟಿದ್ದಾರೆ. ಒಂದು ಪಕ್ಷ ಡಿಗ್ರಿ ಗಿಗ್ರಿಗಳೆಲ್ಲ ಇಲ್ಲವಾದರೆ ಏನಪ್ಪಾ ಮಾಡುವುದು ಎಂದರೆ 'ಹೋಗಯ್ಯಾ..' ಎನುತ ಮನೆಯ ದಾರಿಯನು ತೋರಿಸುವ ಪ್ರಸ್ತುತ ಕಾಲದಲ್ಲಿ ಸಿದ್ಧಾರ್ಥ್ ಅಂತವರಿಗಾಗಿಯೇ ಒಂದು ತರೆಬೇತಿ ಸಂಸ್ಥೆಯನ್ನು ಕಟ್ಟಿಕೊಟ್ಟರು! ಅಲ್ಲಿನ ಆ ಪರಿಸರದಲ್ಲಿ ಒಂದಿಷ್ಟು ತರಬೇತಿಯನ್ನು ಗಳಿಸಿದರೆ ಸಾಕು ಗರಿಗರಿಯಾದ ಆಫರ್ ಲೆಟರ್ ಕೆಲವೇ ತಿಂಗಳುಗಳಲ್ಲಿ ಅಭ್ಯರ್ಥಿಯ ಕೈಯನ್ನು ಬಂದು ಸೇರುತ್ತದೆ. ಇನ್ನು ಈ ಪ್ರಾಂತ್ಯದ ರೈತರಿಗೆ ಇವರು ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿಯೂ ಮಾಡಿರುವ ಉಪಕಾರಗಳು ಅನೇಕನೇಕ. ಎಲ್ಲಿಯೂ ಸಹ ತನ್ನ ಹೆಸರಾಗಲಿ ಅಥವಾ ತಮ್ಮ ಕುಟುಂಬದವರ ಹೆಸರಾಗಲಿ ಬರಲು ಬಯಸದ ಸಿದ್ದಾರ್ಥ್ ಒಂತರ ಮಲೆನಾಡ ರಾಬಿನ್ ಹುಡ್ ಎಂದೇ ಹೇಳಬಹುದು! ಇದಕ್ಕೆ ಒಂದು ಪೂರಕ ಉದಾಹರಣೆ ಚಿಕ್ಕಮಗಳೂರಿನಲ್ಲಿ ಸ್ಥಾಪಿಸುತ್ತಿದ್ದ, ಕ್ಯಾಶ್ ಕೌಂಟಗಳೆ ಇಲ್ಲದ ಒಂದು Multi Specialty Hospital..! Yes, try believing your eyes! ಒಂದಿನಿತೂ ಬಿಡಿಗಾಸಿಲ್ಲದೇ ಆಸ್ಪತ್ರೆಯೊಂದನ್ನು ಅದೂ ಸಹ Multi Specialty Hospital ಒಂದನ್ನು ಸ್ಥಾಪಿಸುವುದೆಂದರೆ ಹುಡುಗಾಟಿಕೆಯ ವಿಚಾರವೆನ್ನಬಹುದು. ಹತ್ತಾರು ಸರ್ಕಾರಗಳು ಬಂದರೂ ಮಾಡಲಾಗದಂತಹ ಇಂತಹ ಕಾರ್ಯವನ್ನು ಸಿದ್ದಾರ್ಥ್ ತಮ್ಮ ಹೆಗಲ ಮೇಲಾಕಿಕೊಂಡಿದರು.

ಸಿದ್ಧಾರ್ಥ್ ಎಂದರೆ ರಾಜ್ಯದ ಹೆಚ್ಚಿನ ಮಂದಿಗೆ ಪರಿಚಯವೇ ಇರಲಿಲ್ಲ. ‘ಒಹ್ ಅವ್ರ್ ಬಿಡಪ್ಪ ‘CM ಅಳಿಯ...’ಹಾಗೆ’...’ಹೀಗೆ’..’ ಎಂದಷ್ಟೇ ಹೇಳುವವರಿದ್ದರೆ ವಿನ್ಹಾ ಇಡೀ ದೇಶಕ್ಕೇ 2003 ರ "Entrepreneur of the Year" by The Economic Times ಹಾಗು 2011 ರ "NextGen Entrepreneur" by Forbes India ಪ್ರಶಸ್ತಿ ಪಡೆದದ್ದನ್ನು ತಿಳಿದೂ ತಿಳಿಯದಂತಿದ್ದರು. ವಿಪರ್ಯಾಸವೆಂಬಂತೆ ಅದೆಷ್ಟೋ ಮಂದಿಗೆ, ಮಲೆನಾಡಿಗರಿಗೂ ಸಹ, ಸಿದ್ಧಾರ್ಥರ ವಿಶ್ವರೂಪ ಗೋಚರವಾದದ್ದು ಅವರು ನಮ್ಮಿಂದ ಮರೆಯಾದ ಮೇಲೆಯೇ! ದೇಶ ವಿದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳೇ ಮಾತನಾಡಲು ಹಾತೊರೆದು ಕರೆಯುತ್ತಿದ್ದ, ಸ್ಟಾರ್ ಬಗ್ಗು ಮತ್ತೊಂದು ಮಗದೊಂದು ವಿದೇಶಿ ಬ್ರಾಂಡುಗಳಿಗೆ ಸವಾಲೆಸೆದಿದ್ದ, ಕಂಡು ಕೇರಳಿಯದ ವಿಶ್ವವೇ ಗಮನ ಸೆಳೆದ APRC Motor Rallyಯ ಕಾರುಗಳನ್ನು ನಮ್ಮ ಕಾಫಿ ತೋಟಗಳ ನಡುವೆ ಚೀರಾಡಿಸಿದ್ದ, ಎಲ್ಲಕ್ಕೂ ಮಿಗಿಲಾಗಿ ಅರ್ಧಲಕ್ಷದಷ್ಟು ಜನರಿಗೆ ದಾರಿದೀಪವಾಗಿದ್ದ ಚಹರೆಯೊಂದು ಈಗ ಕಣ್ಮರೆಯಾಗಿದೆ. ಒಬ್ಬ ನಾಯಕನನ್ನಾಗಲಿ ಅಥವಾ ಒಂದು ಕಂಪೆನಿಯನ್ನಾಗಲಿ ಮುಟ್ಟುಗೋಲು ಹಾಕಿ ಮುಚ್ಚಾಕಲು ಕೇವಲ ನಿಮಿಷಗಳು ಮಾತ್ರ ಸಾಕು ಆದರೆ ಅದೇ ನಾಯಕ ಅಥವಾ ಅಂತಹದ್ದೇ ಕಂಪೆನಿಯನ್ನು ಮತ್ತೊಮ್ಮೆ ಕಟ್ಟಲು ಅದೆಷ್ಟು ದಶಕಗಳು ಬೇಕು? ಈ ನಮ್ಮ ಸೀದಾ- ಸಾದಾ ಪ್ರೆಶ್ನೆಗೆ ಇನ್ಕಮ್ ಟ್ಯಾಕ್ಸ್ ಎಂಬ ನೇಣಿನ ಕುಣಿಕೆಯನ್ನು ಕೊರಳ ಸುತ್ತ ಹಾಕಿ ಆಟವಾಡಿಸುವ ಸರ್ಕಾರಗಳೇ ಉತ್ತರಿಸಬೇಕು. ಸಾವಿರಾರು ಜನರ ದಾರಿದೀಪವಾಗಿದ್ದ ಸಿದ್ದಾರ್ಥ್ ಅಂದು ಒಂತಿಷ್ಟು ಗಾಳಿಗಾಗಿ ಹಾತೊರೆಯುತ್ತಾ ಹುಸಿರುಗಟ್ಟಿ ಮುಳುಗಿ ಮುಳುಗಿ ಕೊನೆಗೆ ಅನಾಥವಾಗಿ ನದಿಯ ದಂಡೆಯ ಮೇಲೆ ಮಲಗಿರುವ ದೃಶ್ಯವನ್ನು ನೋಡಿದ ಪ್ರತಿಯೊಬ್ಬರಿಗೂ ಕಣ್ಣಂಚುಗಳು ಒದ್ದೆಯಾದದಂತೂ ಸುಳ್ಳಲ್ಲ. ಸೋಲಿಗೆ ಸಾವೇ ಉತ್ತರವಲ್ಲ ಎಂದು ಹಚ್ಚೋತ್ತಿದಂತೆ ಹೇಳುತ್ತಿದ್ದ ವ್ಯಕ್ತಿಯೊಬ್ಬ ಇಂದು ಖುದ್ದು ತಾನಾಗಿಯೇ ಆ ಮಾತನ್ನು ಮುರಿದು ನೀರಿಗೆ ಹಾರಿ ಪ್ರಾಣ ಕಳೆದುಕೊಂಡನೆಂದರೆ ಅದೆಂದಂಥ ಅಘಾದವಾದ ಒತ್ತಡ ಆತನನ್ನು ಕಾಡಿರಬಾರದು?! ಕಾಲವೇ ಇದಕೆಲ್ಲ ಉತ್ತರಿಸಬೇಕು. ಇನ್ನೂರು ಮುನ್ನೂರರ ಗಡಿಯಲಿದ್ದ ಕಾಫಿ ಡೇ ಯ ಷೇರುಗಳು ಪ್ರಪಾತಕ್ಕೆ ಬೀಳುವ ಮೊದಲೇ ಅವೆಲ್ಲವನ್ನು ಖರೀದಿಸಿ ವಿಶ್ವವಿಖ್ಯಾತ ನಮ್ಮ ಮಲೆನಾಡ ಕಂಪನಿಯನ್ನು ಉಳಿಸಿಕೊಳ್ಳಬೇಕೆಂದು ಹಾತೊರೆಯುವ ಜನರ ಹಪಾಹಪಿಯನ್ನು ಕಂಡರೆ ಕಣ್ಣಿಗೆ ಕಾಣದೆಯೇ ರಾಜ್ಯದ ಜನಮನದಲ್ಲಿ ಶಾಶ್ವತ ನೆಲೆಯೊಂದು ನಮ್ಮ ಸಿದ್ದಾರ್ಥರಿಗೆ ಅದಾಗಲೇ ಲಭಿಸಿದೆ ಎಂದರೆ ಸುಳ್ಳಾಗದು.

Bon Voyage… The leader!!