Monday, August 29, 2016

ಅಂಕಣ : ಹಾಕಿ ಎಂಬ ಪಟವೂ .... ಧ್ಯಾನ್ ಚಂದ್ ಎಂಬ ಸೂತ್ರಧಾರಿಯೂ…

ಕ್ರಿಕೆಟ್ ಗೆ ಸಚಿನ್ ಎನ್ನುವುದಾದರೆ ಹಾಕಿಗೆ ಯಾರು..? ಎಂಬೊಂದು ಪ್ರೆಶ್ನೆಯೊಟ್ಟಿಗೆ ಹೊರಟರೆ ಪ್ರಾಯಶಃ ನಮಗೆ ಉತ್ತರ ಸಿಗದೇ ಇರಬಹುದು. ಸಿಕ್ಕರೂ ಅದು 'ಹಾಕಿ ಮಾಂತ್ರಿಕ' ದೇಶ ಕಂಡ ಶತಮಾನದ ಆಟಗಾರ ದಿ ಗ್ರೇಟ್ ಧ್ಯಾನ್ ಚಂದ್ ಹೆಸರೇ ಆಗದಿರಬಹುದು. ಹೌದು..,ಧ್ಯಾನ್ ಚಂದ್. ವಿಶ್ವ ಹಾಕಿ ಕಂಡ ದಂತಕಥೆ. ಭಾರತ ದೇಶದ ಹಾಕಿಯ ಪುಸ್ತಕ! ಇಂದು ಒಲಿಂಪಿಕ್ಸ್ ನಲ್ಲಿ ನಮ್ಮ ಆಟಗಾರರು ಕನಿಷ್ಠ ಒಂದು ಕಂಚಿನ ಪದಕವನ್ನು ತಂದರೆ ಸಾಕು, ಆತ/ ಆ ತಂಡ ಆ 'ವರ್ಷದ ವ್ಯಕ್ತಿ/ತಂಡ'ವಾಗಿ ಬಿಡುತ್ತದೆ. ಅಂತಹದರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಎರಡು ದಶಕಗಳ ಮೊದಲೇ, ಬ್ರಿಟಿಷರ ಗುಲಾಮಗಿರಿಯಲ್ಲೇ ದೊರೆಯುತ್ತಿದ್ದ ಕನಿಷ್ಠ ಸೌಕರ್ಯಗಳಲ್ಲೇ ವಿಶ್ವವನ್ನೇ ಬಗ್ಗುಬಡಿರು ನಿರಂತರವಾಗಿ ಒಲಿಂಪಿಕ್ಸ್ ನಲ್ಲಿ ದೇಶಕ್ಕೆ ಚಿನ್ನದ ಪದಕವನ್ನು ಗಳಿಸಿಕೊಟ್ಟ ಮಹಾನ್ ಆಟಗಾರ. ಕೈಗೆ ಒಂದು ಮರದ ಕೋಲನ್ನು ಕೊಟ್ಟರೂ ಗೋಲು ಬಾರಿಸಬಲ್ಲ ಒಬ್ಬನಿದ್ದನೆಂದರೆ ಅದು ಧ್ಯಾನ್ ಚಂದ್. ದಶಕಗಳವರೆಗೆ ದೇಶದ ವಿಜಯ ಪತಾಕೆಯನ್ನು ವಿಶ್ವದ ಹೋದಡೆಯಲ್ಲ ಹಾರಿಸಿಯೇ ಬರುತ್ತಿದ್ದ ಧ್ಯಾನ್ ಚಂದ್ ಜನಿಸಿದ್ದು ಉತ್ತರಪ್ರದೇಶದ ಅಲಹಾಬಾದಿನಲ್ಲಿ. ತನ್ನ ೧೬ನೇ ವಯಸ್ಸಿಗೆ ಆಗಿನ ಭಾರತೀಯ ಸೇನೆಗೆ ಸೇರಿದ ಧ್ಯಾನ್ ಸೇನಾ ತುಕಡಿಯಲ್ಲಿ ಹಾಕಿಯನ್ನು ಆಡಲು ಶುರು ಮಾಡುತ್ತಾನೆ. ಹಾಕಿಯ ರುಚಿ ಹತ್ತಲು ಆತನಿಗೆ ಬಹಳ ದಿನಗಳೇನೂ ಹಿಡಿಯಲಿಲ್ಲ. ಕೆಲಸದ ಸಮಯದ ನಂತರ ಎಲ್ಲರೂ ನಿದ್ರಿಸುತ್ತಿದ್ದರೆ, ಧ್ಯಾನ್ 'ಚಾಂದ್'ನ (ಚಂದಿರ) ಬೆಳಕಿನಲ್ಲಿ ಅಭ್ಯಾಸವನ್ನು ಮಾಡುತ್ತಿದ್ದ. ಇವನ ಈ ಪಾಟಿ ಅಭ್ಯಾಸವನ್ನು ಕಂಡ ಎಲ್ಲರೂ ಆತನಿಗೆ ಧ್ಯಾನ್ 'ಚಾಂದ್' ಎಂಬ ಹೊಸ ನಾಮಕರಣವನ್ನೇ ಮಾಡಿಬಿಟ್ಟರು!

ಅಲ್ಲಿಂದ ಮುಂದೆ ಭಾರತೀಯ ಸೇನಾ ತಂಡಕ್ಕೆ ಸೇರ್ಪಡೆಯಾದ ಧ್ಯಾನ್ ಚಂದ್ ೧೯೨೬ರ ನ್ಯೂಜಿಲ್ಯಾಂಡ್ ಸರಣಿಗೆ ಆಯ್ಕೆಯಾಗುತ್ತಾನೆ. ವಿದೇಶಕ್ಕೆ ಪ್ರವಾಸ ಕೈಕೊಂಡ ಭಾರತದ ಮೊದಲ ಕ್ರೀಡಾ ತಂಡ ಅದಾಗಿತ್ತು. ಮುಂದೆ ನೆಡೆಯುವುದೆಲ್ಲವೂ ಭವ್ಯ ಇತಿಹಾಸ. ಅಂದು ಅಲ್ಲಿ ಆಡಿದ ೨೧ ಪಂದ್ಯಗಳಲ್ಲಿ ೧೮ ಪಂದ್ಯಗಳಲ್ಲಿ ಗೆದ್ದು ೨ ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿದ್ದ ಭಾರತ ತಂಡ ಸೋತ ಪಂದ್ಯ ಕೇವಲ ಒಂದು! ಒಟ್ಟಾರೆ ಸರಣಿಯಲ್ಲಿ ೨೪ ಗೋಲುಗಳನ್ನು ಬಿಟ್ಟುಕೊಟ್ಟರೆ, ಬಾರಿಸಿದ್ದ ಗೋಲುಗಳ ಸಂಖ್ಯೆ ಬರೋಬ್ಬರಿ ೧೯೨! ಅದರಲ್ಲಿ ಧ್ಯಾನ್ ಚಂದ್ ಒಬ್ಬನೇ ಸುಮಾರು ನೂರಕ್ಕಿಂತಲೂ ಹೆಚ್ಚು ಗೋಲುಗಳನ್ನು ಬಾರಿಸಿದ್ದಾನೆ ಎಂದರೆ ನೀವು ನಂಬಲೇಬೇಕು. ನ್ಯೂಜಿಲ್ಯಾಂಡ್ ನ ಅಭೂತಪೂರ್ವ ಯಶಸ್ಸು ಧ್ಯಾನ್ ಚಂದ್ ಜೀವನದ ಮಹತ್ತರವಾದ ಟರ್ನಿಂಗ್ ಪಾಯಿಂಟ್. ಆ ಯಶಸ್ಸೇ ಮುಂದೆ ಸೇನಾ ತಂಡ ಪ್ರತಿನಿಧಿಸುವ ಪ್ರತಿಯೊಂದು ಅಂತರಾಷ್ಟ್ರೀಯ ಪಂದ್ಯಕ್ಕೆ ಧ್ಯಾನ್ ಚಂದ್ ನನ್ನು ಆಯ್ಕೆಮಾಡಲು ಕಾರಣವಾಯಿತು. ಭಾರತದ ಇತಿಹಾಸದ ಪುಟಗಳು ಸುವರ್ಣಾಕ್ಷರಗಳಲ್ಲಿ ಧ್ಯಾನ್ ಚಂದ್ನ ಹೆಸರನ್ನು ತಮ್ಮ ಮೇಲೆ ಕೆತ್ತಿಸಿಕೊಳ್ಳಲು ಸಜ್ಜಾಗಿದ್ದವು.



೧೯೨೮ ಆಮ್ಸ್ಟರ್ಡಮ್ ಒಲಿಂಪಿಕ್ಸ್. ಒಲಿಂಪಿಕ್ಸ್ ನಲ್ಲಿ ಭಾರತದ ಹಾಕಿ ತಂಡವೊಂದು ಮೊದಲ ಬಾರಿಗೆ ದೇಶವನ್ನು ಪ್ರತಿನಿದಿಸುತ್ತದೆ. ವಿಶ್ವವೇ ನಿಬ್ಬೆರಗಾಗಿ ಭಾರತೀಯ ಹಾಕಿಯನ್ನು ನೋಡುವಂತೆ ಮಾಡಿದ ಆ ಸರಣಿ ದೇಶಕ್ಕೆ ಮೊದಲ ಒಲಿಂಪಿಕ್ ಚಿನ್ನದ ಪದಕವನ್ನು ಗಳಿಸಿ ತರುತ್ತದೆ. ಅಂದು ಆಡಿದ ಅಷ್ಟೂ ಪಂದ್ಯಗಳಲ್ಲಿ ಭಾರತ ಒಂದೇ ಒಂದು ಗೋಲನ್ನು ಎದುರಾಳಿ ತಂಡಕ್ಕೆ ಬಿಟ್ಟುಕೊಡುವುದಿಲ್ಲ ಎಂಬುದು ಇಂದಿಗೂ ವಿಸ್ಮಯವೇ ಸರಿ. ಆಸ್ಟ್ರಿಯಾದ ವಿರುದ್ಧ ೭-೦, ಬೆಲ್ಜಿಯಂನ ವಿರುದ್ಧ ೯-೦, ಡೆನ್ಮಾರ್ಕ್ ನ ವಿರುದ್ಧ ೫-೦, ಸೆಮಿಫೈನಲ್ ನಲ್ಲಿ ಸ್ವಿಜರ್ಲ್ಯಾಂಡ್ ವಿರುದ್ಧ ೬-೦ ಹಾಗೂ ಫೈನಲ್ ನಲ್ಲಿ ಹೋಲ್ಯಾಂಡ್ ವಿರುದ್ಧ ೩-೦ ಗೋಲುಗಳ ಅಂತರದಲ್ಲಿ ಎದುರಾಳಿ ತಂಡಗಳನ್ನು ಬಗ್ಗುಬಡೆದು ಗೆಲುವನ್ನು ಮುಡಿಗೇರಿಸಿಕೊಳ್ಳುತ್ತದೆ. ಗಳಿಸಿದ ಒಟ್ಟು ಗೋಲುಗಳಲ್ಲಿ ಸುಮಾರು ಅರ್ಧದಷ್ಟು ಧ್ಯಾನ್ ಚಂದ್ ನದೆ ಎಂಬುದು ಮತ್ತೊಂದು ಗಮನಾರ್ಹ ವಿಷಯ. ಆತನ ಆಟಕ್ಕೆ ಮರುಳಾದ ಅಲ್ಲಿನ ಸ್ಥಳೀಯ ಪತ್ರಿಕೆಯೊಂದು 'ಇದು ಕೇವಲ ಹಾಕಿಯ ಪಂದ್ಯವಲ್ಲ, ಇಂದೊಂದು ಮಂತ್ರವಿದ್ಯೆ..ಧ್ಯಾನ್ ಚಂದ್ ಇದರ ಮಾಂತ್ರಿಕ' ಎಂಬ ಸುದ್ದಿಯನ್ನು ಪ್ರಸಾರ ಸಹ ಮಾಡುತ್ತದೆ. ಹೀಗೆ ಧ್ಯಾನ್ ಚಂದ್ 'The Wizard' (ಮಾಂತ್ರಿಕ) ನೆಂದು ಪ್ರಸಿದ್ದಿ ಪಡೆಯುತ್ತಾನೆ.

ಅಲ್ಲಿಂದ ಶುರುವಾದ ಭಾರತದ ಓಲಿಂಪಿಕ್ ಬೇಟೆ ನಂತರದ ೧೯೩೨ರ ಲಾಸ್ ಏಂಜೆಲಿಸ್ ಹಾಗೂ ೧೯೩೬ ರ ಬರ್ಲಿನ್ ಒಲಿಂಪಿಕ್ಸ್ ನಲ್ಲೂ ಮುಂದುವರೆಯಿತ್ತದೆ. ೧೯೩೨ ರ ಒಲಿಂಪಿಕ್ಸ್ ಫೈನಲ್ನಲ್ಲಿ ಭಾರತ ಅಮೇರಿಕಾವನ್ನು ೨೪-೧ ಗೋಲುಗಳ ಅಂತರ-ದಲ್ಲಿ ಮಣಿಸಿತು. ಅದು ಇಂದಿನವರೆಗೂ ಯಾವ ತಂಡದಿಂದಲೂ ಭೇದಿಸಲಾಗದ ವಿಶ್ವದಾಖಲೆ! ೧೯೩೬ ರ ಬರ್ಲಿನ್ ಒಲಿಂಪಿಕ್ಸ್ ನಲ್ಲಿ ತಂಡದ ನಾಯಕನಾಗಿ ಜವಾಬ್ದಾರಿಯನ್ನು ಹೊತ್ತ ಧ್ಯಾನ್ ಚಂದ್ ತಂಡವನ್ನು ಫೈನಲ್ನ ವರೆಗೂ ಕೊಂಡೊಯ್ದು, ಬಲಿಷ್ಠ ಜೆರ್ಮನಿ ತಂಡವನ್ನು ೮-೧ ಗೋಲುಗಳ ಅಂತರದಲ್ಲಿ ಚಚ್ಚಿ ಕೆಡವುತ್ತಾನೆ. ಈ ಪಂದ್ಯವನ್ನು ವೀಕ್ಷಿಸಲು ಖುದ್ದು ಹಿಟ್ಲರ್ ಅಂದು ಅಲ್ಲಿಗೆ ಬಂದಿರುತ್ತಾನೆ. ವಿಶ್ವವನ್ನೇ ತನ್ನ ಅಧಿಕಾರಶಾಹಿ ನೀತಿಯಿಂದ ಭಯಬೀತಿಗೊಳಿಸಿದ್ದ ಹಿಟ್ಲರ್ ಅಂದು ಧ್ಯಾನ್ನ ಆಟವನ್ನು ನೋಡಿ ಅಕ್ಷರ ಸಹ ನಡುಗಿಹೋಗುವುದಲ್ಲದೆ ತನ್ನ ಸೇನೆಯಲ್ಲಿ ಅತ್ಯುತ್ತಮ ಸ್ಥಾನವನ್ನೂ ಹಾಗೂ ಜರ್ಮನಿಯ ಪೌರತ್ವವನ್ನೂ ಕೊಡುವ ಬಗ್ಗೆ ಪ್ರಸ್ತಾಪ ಮಾಡುತ್ತಾನೆ. ಹಿಟ್ಲರ್ನ ಮಾತೇ ವೇದವಾಕ್ಯವಾಗಿದ್ದ ಜರ್ಮನಿಯ ನೆಲದಲ್ಲಿ ಹಿಂದೂ ಮುಂದೂ ಯೋಚಿಸದೆ ಧ್ಯಾನ್ ಅವನನ ಪ್ರಸ್ತಾಪವನ್ನು ನಮ್ರತೆಯಿಂದಲೆ ತಿರಸ್ಕರಿಸುತ್ತಾನೆ.

ಭಾರತದ ಹಾಕಿ ಇತಿಹಾಸದಲ್ಲಿ ಧ್ಯಾನ್ ನನ್ನು ಸರಿದೂಗುವ ಮತ್ತೊಬ್ಬ ಆಟಗಾರ ಹುಟ್ಟಲಿಲ್ಲ. ೨೨ ವರ್ಷಗಳ ಸುದೀರ್ಘ ವೃತ್ತಿಬದುಕಿನಲ್ಲಿ ಈತ ಸಾವಿರಕ್ಕಿಂತಲೂ ಹೆಚ್ಚು ಗೋಲುಗಳನು ಬಾರಿಸಿರುತ್ತಾನೆ. ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ ಮ್ಯಾನ್ ಒಮ್ಮೆ ಈತನ ಆಟದ ಮೋಡಿಗೆ ಬೆರಗಾಗಿ 'ಕ್ರಿಕೆಟ್ ನಲ್ಲಿ ನಾವುಗಳು ರನ್ ಗಳನ್ನು ಪೇರಿಸುವ ಹಾಗೆ ಧ್ಯಾನ್ ಹಾಕಿಯಲ್ಲಿ ಗೋಲುಗಳನ್ನು ಹೊಡೆಯುತ್ತಾನೆ' ಎನ್ನುತ್ತಾನೆ. ಧ್ಯಾನ್ ಆಟವನ್ನು ಅದೆಷ್ಟರ ಮಟ್ಟಿಗೆ ಅರೆದು ಕುಡಿದಿದ್ದನೆಂದರೆ ಒಮ್ಮೆ ಆಡುವಾಗ ಆತನಿಗೆ ಎದುರಾಳಿ ತಂಡದ ವಿರುದ್ಧ ಒಂದೂ ಗೋಲನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಹಲವಾರು ವ್ಯರ್ಥ ಪ್ರಯತ್ನಗಳ ನಂತರ ಧ್ಯಾನ್ ಪಂದ್ಯದ ರೆಫೆರೀ ಯೊಟ್ಟಿಗೆ ವಾಗ್ವಾದಕ್ಕಿಳಿಯುತ್ತಾನೆ. ಗೋಲ್ ಪೋಸ್ಟ್ ನ ವಿಸ್ತಿರ್ಣದ ಬಗ್ಗೆ ಸಂಶಯ ವ್ಯಕ್ತಪಡಿಸುವುದಲ್ಲದೇ ಮತ್ತೊಮ್ಮೆ ಅದರ ವಿಸ್ತಿರ್ಣವನ್ನು ಅಳೆದುನೋಡಲು ಅವನ್ನಲ್ಲಿ ಕೇಳಿಕೊಳ್ಳುತ್ತಾನೆ. ಆತನ ಕೋರಿಕೆಗೆ ಕೊನೆಗೂ ಬಗ್ಗಿದ ರೆಫೆರೀ ವಿಸ್ತಿರ್ಣವನ್ನು ಅಳೆಸಿ ನೋಡಿದಾಗ ಅಲ್ಲಿದ್ದವರೆಲ್ಲ ಅವಕ್ಕಾಗುತ್ತಾರೆ! ಧ್ಯಾನ್ ನ ಊಹೆಯಂತೆ ಗೋಲ್ ಪೋಸ್ಟ್ ನ ಅಳತೆ ಅಂತರಾಷ್ತ್ರೀಯ ಪಂದ್ಯಗಳಿಗಿರಬೇಕಾದ ವಿಸ್ತಿರ್ಣ ಗಿಂತಲೂ ಕಡಿಮೆ ಇರುತ್ತದೆ!
ಸ್ವಾತಂತ್ರ್ಯ ನಂತರ ೧೯೪೭ ರ ಡಿಸೆಂಬರ್ ನಲ್ಲಿ ಮೊದಲ ಬಾರಿಗೆ ಆಫ್ರಿಕಾದ AHF (Asian Sports Association) ಭಾರತವನ್ನು ಆಡಲು ಆಹ್ವಾನಿಸುತ್ತದೆ. ಆದರೆ ಅದರ ಒಂದೇ ಕಂಡೀಷನ್, ಹಾಕಿ ದಿಗ್ಗಜ ಧ್ಯಾನ್ ಚಂದ್ ಟೀಮ್ ನಲ್ಲಿರಲೇಬೇಕೆಂಬುದು. ೧೯೪೫ರ ಸುಮಾರಿಗಾಗಲೇ ಭಾಗಶಃ ನಿವೃತ್ತಿಯನ್ನು ಪಡೆದ್ದಿದ್ದ ಧ್ಯಾನ್ ಆಫ್ರಿಕಾದ ಆಹ್ವಾನ ಬಂದಾಗ ಆತನಿಗೆ ಸುಮಾರು ೪೨ ವರ್ಷ! ಆದರೂ ದೇಶಕ್ಕಾಗಿ ಮತ್ತೊಮ್ಮೆ ಸಿದ್ಧನಾಗುತ್ತಾನೆ. ಅಲ್ಲದೆ ಸರಣಿಯ ೨೨ ಪಂದ್ಯಗಳಲ್ಲಿ ೬೧ ಗೋಲುಗಲ್ಲನ್ನೂ ಗಳಿಸುತ್ತಾನೆ.
ಈತನ ಮಿಂಚಿನ ವೇಗದ ಆಟವನ್ನು ಸಹಿಸಲಾರದೆ ಒಮ್ಮೆ ನೆದರ್ಲ್ಯಾಂಡ್ ನ ಅಧಿಕಾರಿಗಳು ಈತನ ಬ್ಯಾಟನ್ನು ಸೀಳಿ ಮ್ಯಾಗ್ನೆಟ್ ಇದೆಯೆಂದು ಪರೀಕ್ಷಿಸಿರುವುದುಂಟು! ಹೀಗೆ ದಾಖಲೆಗಳಿಗಿಂತಲೂ ವಿಸ್ಮಯಗಳನ್ನೇ ಹೆಚ್ಚಾಗಿ ಧ್ಯಾನ್ ಭಾರತೀಯ ಹಾಕಿಗೆ ನೀಡಿದ್ದಾನೆ.

ಅಂದು ಧರಿಸಲು ಕನಿಷ್ಠ ವಸ್ತ್ರಗಳು ಇಲ್ಲದೆ, ಲಭ್ಯವಿರುವ ವಸ್ತ್ರಗಳಲ್ಲೇ ವಿದೇಶ ಪ್ರಯಾಣ ಮಾಡಬೇಕಿತ್ತು. ವಿದೇಶಿಯರು ಒಳ್ಳೆಯ ಶೋ ಹಾಗೂ ಬಟ್ಟೆಯನ್ನು ತೊಟ್ಟು ಕಣಕ್ಕೆ ಇಳಿದರೆ ನಮ್ಮವರು ಸೈನ್ಯದಲ್ಲಿ ಕೊಟ್ಟ ಕಳಪೆ ಮಟ್ಟದ ಸಾಧನಗಳಿಂದಲೇ ದೇಶವನ್ನು ಗೆಲ್ಲಿಸಬೇಕಾಗುತ್ತಿತ್ತು. ವಿದೇಶಿಯರು ಕೆಲವೇ ಗಂಟೆಗಳಲ್ಲಿ ವಿಶ್ವದ ಮೂಲೆ ಮೂಲೆಗೂ ವಿಮಾನದಲ್ಲಿ ಪ್ರಯಾಣಿಸಿದರೆ ನಮ್ಮ ತಂಡ ವಾರಗಳು, ತಿಂಗಳುಗಳು ,ಸಾವಿರಾರು ಮೈಲುಗಳನ್ನು ಸಮುದ್ರದಲ್ಲಿ ಚಲಿಸಿ, ಸಮುದ್ರ ರೋಗಗಳನ್ನೂ ನಿಭಾಯಿಸಿ, ಅಲ್ಲಿನ ಹವಾಗುಣಕ್ಕೆ ಒಗ್ಗಿ, ಪಂದ್ಯದಲ್ಲಿ ಸೆಣೆಸಿ ದೇಶವನ್ನು ಗೆಲ್ಲಿಸಬೇಕಿತ್ತು. ಆದರೂ ಆಗಿನ ಭಾರತ ತಂಡ ಅದೆಷ್ಟು ಭಲಿಷ್ಟವಾಗಿತ್ತೆಂದರೆ ಸ್ವಾತಂತ್ರ್ಯ ಪೂರ್ವದ ಒಲಿಂಪಿಕ್ಸ್ ಗೆ ಬ್ರಿಟನ್ ಒಮ್ಮೆಯೂ ತನ್ನ ಸ್ವಂತ ತಂಡವನ್ನು ಕಳಿಸಿರಲಿಲ್ಲ. ಒಂದು ಪಕ್ಷ ಕಳಿಸಿದ್ದರೂ ತಾವು ಆಳ್ವಿಕೆ ಮಾಡುವ ದೇಶದಿಂದ ಪರಾಭವ ಗೊಳ್ಳುವುದು ಖಚಿತ, ಆಗ ಇಡೀ ವಿಶ್ವವೇ ತಮ್ಮನು ಗೇಲಿ ಮಾಡಲು ಶುರು ಮಾಡುತ್ತದೆ ಎಂಬ ಭಯದಿಂದ ಮರೆಮಾಚಿಕೊಳ್ಳುವುದು ಅದಕ್ಕೆ ಕಷ್ಟವಾಗುತ್ತಿತ್ತು. ಇಷ್ಟೆಲ್ಲಾ ಸವಾಲುಗಳ ನಡುವೆಯೂ ನಮ್ಮ ಹಾಕಿ ತಂಡ ಅಂದು ಸತತವಾಗಿ ೬ ಬಾರಿ ದೇಶಕ್ಕೆ ಚಿನ್ನದ ಪದಕವನ್ನು ಗಳಿಸಿಕೊಟ್ಟಿದೆ. ಭಾರತ ಇಲ್ಲಿಯವರೆಗೂ ಗಳಿಸಿರುವ ಒಟ್ಟು ೨೮ ಒಲಿಂಪಿಕ್ ಪದಕಗಳಲ್ಲಿ ೧೧ ಪದಕಗಳು ಹಾಕಿಯಿಂದ ಬಂದವುಗಳೆಂಬುದನ್ನು ನಾವು ಮರೆಯಬಾರದು. ಆದ ಕಾರಣಕ್ಕೆ ಇದು ನಮ್ಮ ಹೆಮ್ಮೆಯ ಕ್ರೀಡೆ. ದೇಶದ ರಾಷ್ಟ್ರೀಯ ಕ್ರೀಡೆ.



ಪ್ರಸ್ತುತ ಭಾರತ ಹಾಕಿ ತಂಡಗಳನ್ನು ಗಮನಿಸಿದಾಗ ನಾವುಗಳು ಅಕ್ಷರಸಹ ಮರುಗಬೇಕಾಗುತ್ತದೆ. ಕಳೆದ ೩೬ ವರ್ಷಗಳಲ್ಲಿ ಭಾರತ ಒಂದೂ ಪದಕವನ್ನು ಗಳಿಸದಿರುವುದು ಅದಕ್ಕೆ ಪೂರಕವಾಗಿದೆ.ಆದಷ್ಟು ಮಟ್ಟಿಗೆ ಒಳ್ಳೆಯ ಸೌಲಭ್ಯಗಳನ್ನೇ ಪಡೆದಿರುವ ನಮ್ಮ ತಂಡಗಳು ಪ್ರತಿ ಬಾರಿಯೂ ಕೇವಲ ನ್ಯೂನತೆಗಳನ್ನೇ ದೊಡ್ಡದಾಗಿಸಿ ಆಟದಲ್ಲಿ ಕಳಪೆ ಪ್ರದರ್ಶನಗಳನ್ನು ನೀಡುತ್ತಿರುವುದು ನಿಜವಾಗಿಯೂ ವಿಷಾದನೀಯ. ಕ್ರಿಕೆಟ್ ಎಂಬ ಪ್ರವಾಹದೊಟ್ಟಿಗೆ ಸೆಣೆಸುವಂತೆ ಕೇವಲ ಹಣ ಹಾಗೂ ಹೆಸರಿಗೆ ಮಾತ್ರ ಆಡುವಂತೆ ನಮ್ಮ ರಾಷ್ಟ್ರೀಯ ಕ್ರೀಡೆ ಮಾರ್ಪಾಡಾಗುತ್ತಿದೆ. ಇಂದೇನಾದರೂ ಧ್ಯಾನ್ ಚಂದ್ ಬದುಕ್ಕಿದ್ದರೆ ನಮ್ಮವರ ಈಗಿನ ಸಾಧನೆಯನ್ನು ನೋಡಿ ಕಣ್ಣೀರಿಡುತ್ತಿದ್ದನೇನೋ ಅನ್ನಿಸುತ್ತದೆ. ಆಟವೆಂಬುದು ದೇಶದ ಕೀರ್ತಿಗಾಗಿ, ಅದೆಂದೂ ನಮ್ಮ ಸ್ವಂತ ಭೋಗಕ್ಕಾಗಿ ಅಲ್ಲ ಎಂದು ಆಡಿದ ಧ್ಯಾನ್ ಚಂದ್ ಹಾಗೂ ತಂಡದಿಂದ ಕಲಿಯುವುದು ಸಾಕಷ್ಟಿದೆ. ಇಷ್ಟೆಲ್ಲ ಸಾಧನೆಗಳನ್ನು ಮಾಡಿ ದೇಶದ ಕೀರ್ತಿಯನ್ನು ಯಾರೂ ಕೊಂಡೊಯ್ಯದ ಮಟ್ಟಕ್ಕೆ ಮೇಲೇರಿಸಿದ್ದ ಇವರನ್ನು ನಮ್ಮವರೇ 'ಹಾಕಿ ಏತಕ್ಕೆ ರಾಷ್ಟ್ರಿಯ ಕ್ರೀಡೆಯಾಗಬೇಕು? ಧ್ಯಾನ್ ಚಂದ್ ಗೆ ಏಕೆ ಭಾರತರತ್ನ ಕೊಡಬೇಕು?' ಎಂದು ಕೇಳುವವರಿದ್ದಾರೆ.

ಅಂದಹಾಗೆ ಆಗಸ್ಟ್ ೨೯, ಈ ದಿಗ್ಗಜನ ಜನ್ಮದಿನವನ್ನು ನಾವುಗಳು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸುತ್ತೇವೆ.



Wednesday, August 24, 2016

ಕಥೆ : ಮೂಕ ವೇದನೆ...

ಆಗತಾನೆ ಸೂರ್ಯನು ತನ್ನ ದೈನಂದಿನ ಕೆಲಸದ ನಿಮಿತ್ತಾ ಪೂರ್ವದಲ್ಲಿ ಹಾಜರಗುತ್ತಿದ್ದನು. ಆತನ ಆಗಮನವನ್ನೇ ಕಾದು ಕುಳಿತ ಕೆರೆಯ ಏರಿಯ ಪಕ್ಕದ ಗದ್ದೆಯ ಸಾವಿರಾರು ಸೂರ್ಯಕಾಂತಿ ಹೂವುಗಳು ಪೂರ್ವಕ್ಕೆ ಮೊಗ ಮಾಡಿದ್ದವು. ರಾತ್ರಿಯೆಲ್ಲ ಕವಚದಂತೆ ಆವರಿಸಿತ್ತೆನೋ ಎಂಬಂತೆ ನೀರಿನ ಹಬೆ ಕೆರೆಯಿಂದ ನಿದಾನವಾಗಿ ಹಾರತೊಡಗಿತ್ತು. ಶುಭ್ರ ತಿಳಿಯಾದ ಕೆರೆಯ ನೀರಿನಲ್ಲಿ ಸಣ್ಣ ಪುಟ್ಟ ಮೀನುಗಳೊಟ್ಟಿಗೆ ತಮಗೂ ತಿಳಿಯದ ಹೆಸರಿನ ಕೆಲ ದೊಡ್ಡ ಮೀನುಗಳೂ ಕಾಣತೊಡಗಿದವು. ದೂರದಲ್ಲೆಲ್ಲೋ ಕೋಗಿಲೆಯೊಂದು ಕೂಗಿದ ದ್ವನಿ ಪ್ರತಿದ್ವನಿಸುತ್ತಿತ್ತು.ಚಳಿ ಜಾಸ್ತಿಯಾಗಿದ್ದರಿಂದಲೆನೋ ಮನೆಯಲ್ಲಿ ಇನ್ನೂ ಯಾರು ಎದ್ದಿರಲಿಲ್ಲ. ಮನೆಯ ಒಂದು ಕೋಣೆಯಲ್ಲಿ ಮಲಗಿದ್ದ ಪುಟ್ಟಿ ಒಮ್ಮೆ ಕೆಮ್ಮಿದಳು. ಮನೆ ನಿಶ್ಯಬ್ದವಾಗಿದ್ದರಿಂದ ಕೆಮ್ಮಿದ ದ್ವನಿ ಅಪ್ಪ ಅಮ್ಮ ಮಲಗಿದ್ದ ಪಕ್ಕದ ಕೋಣೆಗೂ ಕೇಳಿತು. ಕಳೆದ ಕೆಲದಿನಗಳಿಂದ ಶೀತವಾಗಿದ್ದರಿಂದ ಪುಟ್ಟಿ ಆಗಾಗೆ ಕೆಮ್ಮುತ್ತಿದ್ದಳು ಹಾಗೂ ಅದಕ್ಕೆ ಪೂರಕವಾಗಿ ಬೇಕಾಗಿದ್ದ ಎಲ್ಲಾ ಔಷದಿಗಳನ್ನೂ ಸೇವಿಸಿದ್ದಳು. ಆದರೂ ಯಾಕೋ ಕೆಮ್ಮು ಇಳಿದಿರಲಿಲ್ಲ. ಕೆಮ್ಮಿನ ಸದ್ದು ಕೇಳಿದೊಡನೆ ಪುಟ್ಟಿಯ ಅಮ್ಮ ಪುಟ್ಟಿ ಮಲಗಿದ್ದ ಕೋಣೆಗೆ ಓಡಿ ಬಂದಳು. "ಪುಟ್ಟಿ..ಪುಟ್ಟಿ" ಅನ್ನುತ ಅವಳು ಓದ್ದಿದ್ದ ಅರೆ ಒದಿಕೆಯನ್ನು ಸರಿಯಾಗಿ ಓದಿಸಿ, ಕಿವಿ ಮುಚ್ಚುವಂತೆ ಬಟ್ಟೆಯನ್ನು ಕಟ್ಟಿ, "ಬಿಸಿ ಕಷಾಯ ಮಾಡಿ ಕೊಡ್ತಿನಿ, ಕುಡಿವಂತೆ" ಎಂದಳು. "ಹಾಳಾದ್ ಕಷಾಯ ಕುಡ್ದು ಕುಡ್ದು ಎಳೆ ಹುಡ್ಗಿ ಎದೆ ಸುಟ್ ಹೋದಾತು, ಸಂತೆಲ್ ತಂದ್ ಒಂದ್ ಕೋಳಿನ ಕುಯ್ದು ಜೀರಿಗೆ ಮೆಣೆಸು ಹಾಕಿ ಕಾರಾಗ್ ಮಾಡಿ ಕೊಡು, ಸೀತಾ-ಗೀತಾ ಎಲ್ಲಾ ಹೊತದೆ" ಅನ್ನುತ ತನ್ನ ಆಸೆಯ ಇಂಗಿತವನ್ನು ಬೆರೆಸಿ ಅಪ್ಪ ಹೆಂಡತಿಯನ್ನು ಉದ್ದೇಶಿಸಿ ಕೂಗಿದ.ಪಕ್ಕದ ಊರಿನ ಸಂತೆಯಲ್ಲಿ ಸಿಗುವ ಗಿರಿರಾಜ ತಳಿಯ ಕೋಳಿ ಚಿಕ್ಕಿ (ಪುಟ್ಟಿ ಇಟ್ಟ ಹೆಸರು) ಮೊಟ್ಟೆ ಇಟ್ಟು ಮಾಡಿದ ಮರಿಗಳನ್ನು ತಬ್ಬಿ ಕೂತಿತ್ತು. ರಕ್ಕೆ, ಪುಕ್ಕ ಎಲ್ಲೆಂದರಲ್ಲಿ ಮುಖವನ್ನು ತುರಿಸಿ ಮರಿಗಳು ಚಿಯೋ-ಪಿಯೋ ಅನ್ನುತಿದ್ದವು. ಮೊಟ್ಟೆಯೊಡೆದು ಹೊರಬಂದು ಆಗಲೇ ನಾಲ್ಕು ತಿಂಗಳಾದರೂ ಮಲಗುವಾಗ ಚಿಕ್ಕಿಯ ರೆಕ್ಕೆಯ ಪುಕ್ಕದೊಳಗೆ ಹೊಕ್ಕಿ ಮಲಗುವುದ ಇನ್ನೂ ಬಿಟ್ಟಿರಲಿಲ್ಲ, ಚಿಕ್ಕಿಯ ಪುಟ್ಟ ಮಕ್ಕಳು."ಅಮ್ಮ, ಕರಿಯ ಬಂತ?" ಎನ್ನುತ ತನ್ನ ಮುಚ್ಚಿದ ಕಣ್ಣುಗಳಲ್ಲೇ ಪುಟ್ಟಿ ಕೇಳಿದಳು." ಇಲ್ಲ ಕಣೆ" ಎಂದು ಸುಮ್ಮನಾಗಿ, ದೂರದಲ್ಲೀಲೋ ನಾಯಿಗಳು ಬೊಗಳುವ ಸದ್ದನ್ನು ಕೇಳಿ... "ಆಲ... ಎಲ್ಲೋ ಕಿತ್ತಾಡ್ತಾ ಇದೆ ಅನ್ಸುತ್ತೆ.. ಆದ್ರ್ ಸದ್ದ್ ನೋಡು...ಅದ್ರು ಬಾಯಿಗೆ!" ಎನ್ನುತಾ ಕರಿಯನನ್ನು ಶಪಿಸುತ್ತಾ ಅಮ್ಮ ಹೊರ ನಡೆದಳು. ಕರಿಯನ ಸದ್ದನ್ನು ಕೇಳಿ ಪುಟ್ಟಿ ನಿದಾನವಾಗಿ ಎದ್ದು ತಲೆಯ ಬದಿಗಿದ್ದ ಕಿಟಕಿಯಿಂದ ಹೊರ ನೋಡಿದಳು....********************************************************************************************************************************ಪೂರ್ವದ ಕೇಸರಿಯ ಆಕಾಶ ನಿದಾನವಾಗಿ ಕರಗಿ ನೀಲಿ ಬಣ್ಣಕ್ಕೆ ತಿರುಗುತಿತ್ತು. ಕೋಗಿಲೆಯೋಟ್ಟಿಗೆ ಇತರ ಹಕ್ಕಿಗಳ ಚಿಲಿಪಿಲಿ ಸದ್ದೂ ಬೆರೆಯತೊಡಗಿತು. ಕೆರೆಯ ತಳದ ಬುಡಕ್ಕೆ ಅವಿತು ಕೂತಿದ್ದ ಮೀನುಗಳು ಒಂದರ ಹಿಂದೊಂದು ಮೇಲೆ ಬರ ತೊಡಗಿದವು. ಕೆರೆಯೇ ಅವುಗಳ ಜೀವನ. ಪ್ರತಿ ದಿನ ಅದೇ ನೀರು, ಅದೇ ಕಲ್ಲು, ಅಷ್ಟೇ ಬೆಳಕು ಮತ್ತು ಅಷ್ಟೇ ವಿಪರೀತ ಕತ್ತಲೆ. ಇವುಗಳಲ್ಲಿ ಎಲ್ಲವೂ ಒಂದೇ ರೀತಿ, ಒಂದೇ ಸಮನೆ, ಜೀವನವಿಡಿ ಅವಕ್ಕೆ. ತಮ್ಮೊಟ್ಟಿಗೆ ಕೆಲ ಏಡಿ, ಹಾವು ಹಾಗೂ ಇತರ ಹುಳುಗಳು, ತಮ್ಮ ನೆರೆಹೊರೆಯವರು. ಹೊರಗಿನ ಪ್ರಪಂಚದ ವಿವರಣೆ ಮೀನುಗಳಿಗೆ ಈ ನೆರೆವೊರೆಯವರ ಮೂಲಕವೇ. ಮಾನವರಿಗೆ ಮಾನವರೆಂದು, ನಾಯಿಗಳಿಗೆ ನಾಯಿಗಳೆಂದು ಹಾಗೂ ತಮಗೆ ಮೀನುಗಳೆಂದು ಹೊರಜಗತ್ತಿನಲ್ಲಿ ಕರೆಯಲಾಗುತ್ತದೆಂದು ಅವಕ್ಕೆ ತಿಳಿಯದು. ಅವುಗಳ ನೆರೆಹೊರೆಯವರಿಗೂ ಸಹಿತ! ಮೇಲೆ ತೇಲುತ್ತಿದ್ದ ಗುಂಪಿನ ಒಂದು ಮರಿ ಮೀನು ತಾನು ಹುಟ್ಟಿನಿಂದ ಕಂಡಿದ್ದ, ತನ್ನ ಶೂಶೃಷೆ ಮಾಡಿದ್ದ, ಮಾಡುತಿದ್ದ ದೊಡ್ಡ ಮೀನಿನ ಬಳಿ ಹೋಗಿ ಕಣ್ಣ ಸನ್ನೆಗಳಲ್ಲೇ "ಅನ್ನ ಇನ್ನೂ ಏಕೆ ಬೀಳಲಿಲ್ಲ.. ಹೊಟ್ಟೆ ಹಸಿಯುತ್ತಿದೆ.." ಎಂದಿತು."ಆ ನಾಲ್ಕು ಕಾಲಿನ ಕಪ್ಪು ಜೀವ ಯಾಕೋ ಇನ್ನೂ ಬಂದಿಲ್ಲ...ಸ್ವಲ್ಪ ತಾಳು.." ಎಂದು ದೊಡ್ಡ ಮೀನು ಅದನ್ನ ಸಮಾದಾನಪಡಿಸಿತು, ಕಣ್ಣ ಸನ್ನೆಗಳಲ್ಲೇ. "ನೀವಾದರೂ ಹೊರಗೆ ಹೋಗಿ ನೋಡಿ ಬರುವಿರಾ..? ನನ್ನ ಕಂದಮ್ಮಗಳು ಹಸಿವೇಯಿಂದ ಬಳಲುತ್ತಿವೆ.. ಸೂರ್ಯ ನೆತ್ತಿಗೆ ಬಂದರೂ ಆ ನಾಲ್ಕು ಕಾಲಿನ ಕಪ್ಪು ಜೀವ ಇನ್ನು ಬರಲಿಲ್ಲ" ಎಂದು ಮೀನುಗಳ ತಾಯಿ ಶವದಂತೆ ಬಿದ್ದಿದ್ದ ಏಡಿಯನ್ನು ಕೇಳಲು ಏಡಿ, ತನಗೂ ಇದಕ್ಕೂ ಯಾವುದೇ ಸಂಬದ್ದವೂ ಇಲ್ಲವೆಂಬಂತೆ ಎತ್ತಲೋ ಕಣ್ಣುಗಳನ್ನು ತಿರುಗಿಸಿ ಕೊಸರಿ ಮಲಗಿತು. ಇಲ್ಲಿಲ್ಲವೆಂದರೆ ಹೊರಗಡೆ ತಿನ್ನಲು ಸಿಕ್ಕೆ ಸಿಗುತ್ತದೆ ಎಂದು ತಿಳಿದ್ದಿದ, ಕಲ್ಲೇಡಿ.ಮಕ್ಕಳು ಹಸಿವಯಿಂದ ಚಿಟ-ಪಟ ಚಿಟ-ಪಟ ಜಿಗಿಯತೋಡಗಿದವು. ಅದನ್ನು ನೋಡಿದ ತಾಯಿ ಮೀನು ತಾನೆ ಜಿಗಿದು ನೀರಿನ ಮೇಲೆ ಹಾರಿ ನೋಡೋಣವೆಂದು ನೀರಿನ ಮೇಲಕ್ಕೆ ಬಂದು ಜಿಗಿಯಿತು. ಒಮ್ಮೆ ಜಿಗಿದಗಿಂತಲು ಮತ್ತೊಮ್ಮೆ ಇನ್ನೂ ಎತ್ತರಕ್ಕೆ ಜಿಗಿಯಿತು. ಜಿಗದಷ್ತೂ ಇನ್ನೂ ದೂರ ದೂರದ ಜಾಗ ಕಾಣತೊಡಗಿ, ನಾಲ್ಕು ಕಾಲಿನ ಕರಿ ಜೀವಿ, ಕರಿಯ ಎಲ್ಲೆಂದು ಗುರುತಿಸತೊಡಗಿತು. ಸೂರ್ಯನ ತಿಳಿ ರಶ್ಮಿಗಳಿಗೆ ಮಾನವನ ಲೆಕ್ಕಾಚಾರದಲ್ಲಿ ಕೇಜಿಗೆ ೫೦೦ ರೂಪಾಯಿಯಂತೆ ಮಾರಾಟವಾಗುವ ಈ ಮೀನಿನ 'ದೇಹ' ಪಳ-ಪಳ ಹೊಳೆಯತೊಡಗಿತು. ಎಷ್ಟೋ ದಿನಗಳಿಂದ ಹೊಂಚು ಹಾಕುತ್ತಿದ್ದ ರಣಹದ್ದು ಖುಷಿಗೆ ಜೀವವೇ ಬಾಯಿಗೆ ಬಂದಂತಾಗಿ ತನ್ನ ದೊಡ್ಡ ರೆಕ್ಕೆಗಳನ್ನು ಪಟ-ಪಟನೆ ಬಡಿಯುತ್ತಾ ಮೀನಿನಡೆ ಹಾರಿತು.******************************************************************************************************************************ಗಟ್ಟಿಯಾಗಿ ನೆಲೆವನ್ನು ಕಾಲ್ಗಳಿಂದ ಕಚ್ಚಿ, ಬಾಲವನ್ನು ಸಾದ್ಯವದಷ್ಟು ಮೇಲೆತ್ತಿ, ಅಷ್ಟೂ ದಂತ ಪಂಕ್ತಿಗಳು ಕಾಣುವಂತೆ ವಿಕಾರವಾಗಿ ಬಾಯನ್ನು ಬಿಟ್ಟು, ಅದಕ್ಕಿಂತಲೂ ಭಯಂಕರವಾಗಿ ಕಣ್ಣನ್ನು ಕೆರಳಿ ಕರಿಯ ಗುರ್ರ್... ಅನ್ನುತಾ ನಿಂತಿತು. ಮುಖಕ್ಕೆ ಮುಖ ಮಾಡಿ ಪಕ್ಕದ ಊರಿನ ಕೆಂಚ ಮಹಾಯುದ್ದದ ಸೇನಾಪತಿಯಂತೆ ಕರಿಯನ ಗುರ್ರಿಗೆ ಗುರ್ರ್ರ್ ಎನ್ನುತಾ ನಿಂತಿತು. ಕೆಂಚನ ಹಿಂದೆ ಬೊಗಳುವುದಕ್ಕಿಂತ ಹೆಚ್ಚಾಗಿ ಬದುಕಲು ಅವಣಿಸುವ ಆಡಿನ ಮರಿಯಂತೆ ಟಾಮು, ಅದಕ್ಕೆ ಸಾಕ್ಷಿ ಎಂಬಂತೆ ಅದರ ಬಾಲವೂ ನೈಜ ಸ್ಥಿತಿಗಿಂತ ಇನ್ನೂ ತುಸು ಕೆಳಗ್ಗೆ ಬಿದ್ದಿತ್ತು. ಕೋಳಿ ಕೂಗುವ ಮೊದಲೇ ತನ್ನ ಪಾಡಿಗೆ ತಾನು ನೆಲ ಮೂಸುತ್ತಾ ಎತ್ತಲೋ ಹೊರಟಿದ್ದ ಟಾಮು ವಿಪರ್ಯಾಸವೆಂಬಂತೆ ಕೆಂಚನ ದೃಷ್ಟಿಗೆ ಸಿಕ್ಕಿ ಮನಸ್ಸಿಲ್ಲದ ಮನಸ್ಸಿನಲ್ಲಿ ಸೇನಾಪತಿಯ ಜೊತೆ ಪುಕ್ಕಲು ಸೈನಿಕನಂತೆ ಹಿಂದೆ ಹಿಂದೆ ಬಂದಿತ್ತು. ಹಾಗೂ ಕೆಂಚ ಮತ್ತು ಕರಿಯನ ದೃಷ್ಟಿ ಯುದ್ದದಲ್ಲಿ, ತನ್ನ ಕೊಂಚ ಗಂಡುತನದ ಮಾನವನ್ನು ಉಳಿಸಿಕೊಳ್ಳಲು ಆಗೊಮ್ಮೆ ಹೀಗೊಮ್ಮೆ ಕೆಂಚನ ಪರವಾಗಿ ಬೌಗುಡತೊಡಗಿತ್ತು. ಆ ಸದ್ದಿನಲ್ಲಿ ಮುಂದಿರುವ ವೈರಿಯನ್ನು ಹೆದರಿಸುವ ಗತ್ತಿಗಿಂತಲೂ ತನ್ನನು ಯಾರಾದರು ಕಾಪಾಡಿ ಅನ್ನುವ ಆರ್ತನಾದವೇ ಹೆಚ್ಚಿನಂತಿತ್ತು! ಕೆಂಚ ಹಾಗು ಟಾಮುವಿನ ಹಿಂದೆ 'ಸಣ್ಣಿ', ಕರಿಯನ ಮನೆಯಿಂದ ಕದ್ದು ತಂದ ಒಂದು ಚಪ್ಪಲಿಯನ್ನು ಬಾಯಲ್ಲಿ ಕಚ್ಚಿ ಹಿಡಿದು ಎತ್ತ ಕಡೆ ಓಡುವುದೆಂದು ಹವಣಿಸುತ್ತಿತ್ತು. ಸಣ್ಣಿಯ ಪ್ರಾಣ ಹಾಗು ಮಾನ ರಕ್ಷಕರಂತೆ ಕೆಂಚ ಮತ್ತು ಟಾಮು ನಿಂತಿದ್ದವು. ಇನ್ನೂ ದೃಷ್ಟಿಯುದ್ದ ಕೊನೆಗಾಣದಿದ್ದಾಗ, ಕರಿಯ ಕೆರಳಿ ಮುನ್ನುಗಿತ್ತು. ಕರಿಯನ ಬೌಗುಡುವ ಸದ್ದು ಊರಿಗೆ ಊರೇ ಬೆಚ್ಚಿ ಬೀಳುವನ್ತಿತ್ತು!********************************************************************************************************************************ಚಿಕ್ಕಿಯ ಪುಕ್ಕದ ಒಳಗೆಲ್ಲ ಹೊಕ್ಕಿದ್ದ ಮರಿಗಳು ಚಳಿ ಕಳೆದು ಸೆಕೆ ಹೆಚ್ಚಾದಾದೆಂತಲ್ಲ ಹೊರಬರತೊಡಗಿದವು. ಹೊತ್ತು ಇಷ್ಟಾದರೂ ಇನ್ನೂ ಏಕೆ ನಮ್ಮನ್ನು 'ಬಿಟ್ಟಿ'ಲ್ಲವೆಂದು ಚಿಕ್ಕಿ ಯೋಚಿಸತೊಡಗಿತು. ಹಸಿವು ಹೆಚ್ಚಾದಂತೆಲ್ಲ ಮರಿಗಳ ಚಿಯೋ-ಪಿಯೋ ಸದ್ದು ಸಹ ಹೆಚ್ಚಾಗ ತೊಡಗಿತು!'ಕರಿಯನಾರೋ ಇದ್ದಿದ್ದರೆ ತನಗೆ ಹಾಕಿದ ತಂಗಳು ಊಟದ ತಟ್ಟೆಯನ್ನು ತಿಂದು ಮಿಕ್ಕಿಸಿ ಇತ್ತ ಕಡೆ ತನ್ನ ಕಾಲಿನಿಂದ ತಳ್ಳುತ್ತಿದ್ದ ಪುಣ್ಯಾತ್ಮ' ಎನ್ನುತಾ ಕರಿಯನನ್ನು ಒಮ್ಮೆ ಚಿಕ್ಕಿ ನೆನೆಯಿತು.ಅಷ್ಟರಲ್ಲೇ ಮನೆಯ ಒಳಗಿಂದ ಯಾರೋ ಸದ್ದು ಮಾಡಿ ಇತ್ತಲೇ ಬಂದಂತಾಯಿತು. ಮುಖದಲ್ಲಿ ಯಾವುದೇ ರೀತಿಯ ಭಾವನೆಗಳು ವ್ಯಕ್ತವಾಗದ ಪುಟ್ಟಿಯ ಅಮ್ಮ, ಚಿಕ್ಕಿಯ ಪುಟ್ಟ ಮನೆಯಾದ ಕುಕ್ಕೆಯ ಬಳಿ ಬಂದು ಕೂತಳು. ತಿನ್ನಲು ಏನಾದರೂ ಸಿಗುತ್ತದೆಂದು ಚಿಕ್ಕಿಯ ಮಕ್ಕಳು ಅವಳ ಕೈಗಳನ್ನೇ ನೋಡತೋಡಗಿದವು! ಬರಿದಾದ ಪುಟ್ಟಿಯ ಅಮ್ಮನ ಕೈಗಳು ಇದ್ದಕ್ಕಿದಂತೆ ಕುಕ್ಕೆಯ ಒಳಗೆ ಬಂದವು! ಚಿಕ್ಕಿಯ ಮಕ್ಕಳು ಹಸಿವೆಯಿಂದಲೋ ಅಥವಾ ಭಯದಿಂದಲೋ ಏನೋ ಆಕೆಯ ಕೈಗಳನ್ನೇ ಪುಟ್ಟ ಕೊಕ್ಕುಗಳಿಂದ ಕುಕ್ಕತೊಡಗಿದವು. 'ಥು ನಿಮ್ಮ್ ಕೊಕ್ಕ್ ಮುರ್ದ್ಹೋಗ.. ' ಎನ್ನುತಾ ಪುಟ್ಟಿಯ ಅಮ್ಮ ತಕ್ಷಣ ಕೈ ಹೊರ ಎಳೆದಳು. ಇದನ್ನ ನೋಡಿದ ತಕ್ಷಣ ಏನೋ ನೆನಪಾದಂತೆ ಚಿಕ್ಕಿ ತನ್ನ ಮಕ್ಕಳನೆಲ್ಲಾ ತನ್ನ ಬಳಿಗೆ ಕರೆದು ಕಿವಿಯಲ್ಲಿ ಏನೋ ಪಿಸುಗುಟ್ಟಿತು. ಪಿಸುಗುಡುವಾಗ ದುಃಖ ಉಕ್ಕಿ ಬಂದು ಎದೆ ಭಾರವಾದಂತಿತ್ತು. ಭೂಮಿ ನಡುಗುವ ಮುನ್ಸೂಚನೆಯನ್ನೇ ಎಲ್ಲರಿಗಿಂತ ಮೊದಲೇ ತಿಳಿಯಬಲ್ಲ ಚಿಕ್ಕಿಗೆ ಇನ್ನು ಕೆಲವೇ ನಿಮಿಷದಲ್ಲಿ ತನಗೊದಗುವ ಆಪಾಯದ ಸುಳಿ ಕಾಣದೆ ಇದ್ದೀತೆ?!"ಮನೆಯ ಅಮ್ಮ ಈಗ ನನ್ನನು ಕರೆದುಕೊಂಡು ಹೋಗುತ್ತಾಳೆ. ಆಮೇಲೆ ನಾನು ಬರುವುದಿಲ್ಲವೆನಿಸುತ್ತೆ.." ಎನ್ನುತ ಸುಮ್ಮನಾಯಿತು. "ನೀವು ಎಲ್ಲಿಗೆ ಹೋಗುತ್ತಿರಿ.. ಎಷ್ಟೋತ್ತಿಗೆ ವಾಪಸ್ಸು ಬರುವುದು" ಎಂದ ಒಂದು ಮರಿಗೆ ಚಿಕ್ಕಿ, ಆ ಮರಿಯ ಒಟ್ಟಿಗೆ ಇತರ ಮರಿಗಳನ್ನು ಬಿಗಿದಾಗಿ ತಬ್ಬಿ "ತಾನು ಪಕ್ಕದ ಊರಿಗೆ ಹೋಗಿ ತಿನ್ನಲು ಅಕ್ಕಿ ಹಾಗು ಗೋದಿಯ ಕಾಳುಗಳನ್ನು ತರುತ್ತೀನಿ" ಎಂದಿತು. ನಾನು ಬಾರದೆ ಹೋದರೆ ಕರಿಯ ಅವುಗಳಿಗೆ ಅನ್ನದ ತಟ್ಟೆಯನ್ನು ಕೊಡುತ್ತಾನೆಂದೂ, ಚೆನ್ನಾಗಿ ತಿಂದು ಜಗಳವಾಡದೆ ಇರಬೇಕೆಂದು ಹೇಳಿತು. ಚಿಕ್ಕಿಯ ಮಾತುಗಳು ಇನ್ನೂ ಮುಗಿಯುವುದರೊಳಗೆ ಆದರ ಕುತ್ತಿಗೆಗೆ ಪುಟ್ಟಿಯ ಅಮ್ಮನ ಕೈ ಬಿದ್ದಿತು. 'ಕೊರ್ರ್.....ಕೊರ್ರ್' ಅನ್ನುತ ಚಿಕ್ಕಿ ಹೊರಗೆಳೆಯಲ್ಪಟ್ಟಿತ್ತು. ಚಟ-ಪಟ ಬಡಿಯುತ್ತಿದ್ದ ರೆಕ್ಕೆಯನ್ನು ಪುಟ್ಟಿಯ ಅಮ್ಮ ಗಟ್ಟಿಯಾಗಿ ಹಿಡಿದಳು. 'ಕೊರ್ರೋ...' ಎನ್ನುತಾ ಚಿಕ್ಕಿ ಕೂಗತೊಡಗಿತು. ಚಿಕ್ಕಿಯ ಮಕ್ಕಳು ತಮ್ಮ 'ಅಮ್ಮ'ನಿಗೆ ಏನು ಮಾಡುತ್ತಿದ್ದಾರೆ ಎಂದು ತಿಳಿಯುವುದರೊಳಗೆ ಚಿಕ್ಕಿಯ ಸದ್ದು ನಿಂತಿತ್ತು...ನಿಂತೇ ಹೋಯಿತು. ಕುಕ್ಕೆಯೊಳಗಿನ ಚಿಯೋ-ಪಿಯೋ ಸದ್ದು ಇನ್ನೂ ಜಾಸ್ತಿಯಾಯಿತು. ಅಮ್ಮ ಬರುತ್ತಾಳೆಂದು, ಪಕ್ಕದ ಊರು ಜಾಸ್ತಿ ದೂರದಲ್ಲಿಲ್ಲವೆಂದು ಗುಂಪಿನ ಮರಿಯೊಂದು ಹೇಳಿದಾಗ ಇತರ ಮರಿಗಳೆಲ್ಲ ನಿಜವೆಂದು ಕುಕ್ಕೆಯ ಸಂದಿನಿಂದ ಅಮ್ಮನ ದಾರಿಯನ್ನೇ ಪಿಳಿ-ಪಿಳಿ ಕಣ್ಣುಗಳಿಂದ ನಿರೀಕ್ಷಿಸತೊಡಗಿದವು.******************************************************************************************************************************ಅನ್ನ ಸಿಗುವುದಿಲ್ಲವೆಂದು ಮರುಗಿ ಮೀನಿನ ಮರಿಗಳೆಲ್ಲಾ ಗುಂಪಾಗಿ ತಳ ಸೇರಿದ್ದವು. ಅನ್ನದ ರುಚಿಯೇ ಹಾಗೆ! ಊರಿನ ಭಟ್ಟರ ಹೋಟೆಲಿನ ಉಳಿದ ಅನ್ನವನ್ನು ಭಟ್ಟ ಹೋಟೆಲಿನ ಹಿಂದೆಯೇ ಎಲೆಗಳ ಸಮೇತಾವಾಗಿ ಎಸೆಯುತ್ತಿದ್ದ. ಊರಿನ ಎಲ್ಲೆಡೆಯಿಂದ ಶ್ವಾನದಳಗಳು ಬೆಳಗನ ಜಾವವೇ, ಕೆಲವು ರಾತ್ರಿಯೇ ತಮ್ಮ ಪಯಣವನ್ನು ಆರಂಭಿಸಿ, ಹೋಟೆಲ್ಲ ಬಾಗಿಲು ತೆರೆಯುವುದರೊಳಗೆ ಅರಳಿ ಕಟ್ಟೆಯ ಮುಂದೆ ಜನ ಪಂಚಾಯಿತಿ ಸೇರುವ ಹಾಗೆ ಬಂದು ಸೇರುತ್ತಿದ್ದವು. ಆದರೆ ಕರಿಯ ಮಾತ್ರ ಮನೆಯವರು ಏಳುವ ಕೊಂಚ ಮುಂಚೆಯಷ್ಟೇ ಬಾಗಿಲ ಹೊರಗೆ ಹಾಕಿರುವ ಗೋಣಿಚೀಲದಿಂದ ಮೇಲೆದ್ದು, ಮೈ ನಿಮಿರಿ, ಕೊಡಕಿ, ಬಟ್ಟರ ಹೋಟೆಲ ಬಳಿ ಹೋದರೆ ಸಾಕು, ರಾಜನಿಗೆ ತಲೆಬಾಗಿ ದಾರಿ ಬಿಡುವ ಮಂತ್ರಿಗಳಂತೆ ಕಂತ್ರಿ-ನಾಯಿಗಳು ಪಕ್ಕಕೆ ಸರಿಯುತ್ತಿದ್ದವು! ಸಾದ್ಯವಾದಷ್ಟನ್ನು ಶಿಸ್ತಿನಿಂದ ತಿಂದು, ಎಲೆಯೊಂದನ್ನು ಅದರಲ್ಲಿ ಅನ್ನ ಬರುವಂತೆ ಕಚ್ಚಿ ಹೊರಟರೆ ಬಾಯನ್ನು ಬಿಚ್ಚುತ್ತಿದ್ದಿದ್ದು ಊರಿನ ಕೆರೆಯ ನೀರಿನಲ್ಲೇ! ಅಷ್ಟರಲ್ಲಾಗಲೇ ಮೀನುಗಲೆಲ್ಲವೂ ನೀರಿನ ಮೇಲೆ ಬಂದು ಈಜುತ್ತಿರುತ್ತಿದ್ದವು. ಕರಿಯ ತಂದು ಬಿಟ್ಟ ಅನ್ನದ ಅಗುಳುಗಳನ್ನು ಕ್ಷಣ ಮಾತ್ರದಲ್ಲೇ ತಿಂದು ಮುಗಿಸುತ್ತಿದ್ದವು. ಕರಿಯ ಮೀನುಗಳನ್ನೇ ಕೆಲಹೊತ್ತು ಕರುಣೆಯ ಕಣ್ಣುಗಳಿಂದ ನೋಡುತಿತ್ತು... ಅಲ್ಲದೆ ಮೀನುಗಳು ಮೇಲೆ ಬರುವುದನ್ನೇ ಕೆರೆಯ ಏರಿಯ ಮೇಲೆ ಹೊಂಚು ಹಾಕಿ ಕೂರುವ ನರ ಹದ್ದುಗಳೆಡೆ, ಘರ್ಜಿಸುವಂತೆ ಬೊಗಳಿ, ಅವುಗಳು ಕಾಣದಂತೆ ದೂರವಾದ ಮೇಲೆ ಅಲ್ಲಿಂದ ಹೊರಡುತ್ತಿತ್ತು, ಕಪ್ಪು ಬಣ್ಣದ ಶುಭ್ರ ಮನಸ್ಸಿನ ಕರಿಯ.ಮನೆಯಲ್ಲಿ ಮಾಡಿ, ತಿಂದು, ಉಳಿದು ಎಸೆಯುವ ಕೋಳಿಯ,ಮೀನಿನ ಮೂಳೆಗಳನ್ನು, ಎಸೆದವನು ಅಥವಾ ಎಸೆದವಳು ಕಣ್ಣು ಮುಚ್ಚಿ ಬಿಡುವಷ್ಟರಲ್ಲೇ ಕರಿಯ 'ನುಂಗಿ' ಬಿಡುತ್ತಿತ್ತಾದರೂ ಊರಿನ ಕೇರಿಯ ಮೀನು, ಮನೆಯ ಚಿಕ್ಕಿ ಕೋಳಿ ಹಾಗು ಅದರ ಮರಿಗಳೆಂದರೆ ಕರಿಯನಿಗೆ ಅದೇನೋ ಒಂದು ಭಾವ! ನಮ್ಮವರು, ನನ್ನವರು ಎನ್ನುವ ಆತ್ಮೀಯ ಪ್ರೀತಿ. ಹೇಳಲಾಗದೆ ಕೇವಲ ಅನುಭವಿಸಬಹುದಾದ ಹಾಗು ನೀಡಬಹುದಾದ ಮಮತೆ! ಕರಿಯ,ಚಿಕ್ಕಿ ಹಾಗು ಮೀನುಗಳ ಈ ವರ್ಣನಾತೀತ ಸಂಭಂದವು ಊರಿನ ಯಾವ ಮಾನವ ಪ್ರಾಣಿಗೂ ಕಾಣದು, ಕಂಡರೂ ಅವಕ್ಕೆ ಅರಿಯದು. ಮುಂಜಾವು ಕಳೆದು ಸೂರ್ಯ ನೆತ್ತಿಯ ಮೇಲೆ ಬಂದರೂ ಕರಿಯನ ಬರದಿರುವಿಕೆ ಮೀನಿಗೆ ಕೊಂಚ ಆತಂಕವನ್ನು ಉಂಟುಮಾಡಿತ್ತು. ಮರಿಗಳು ಇಂದು ಎಲ್ಲಿ ಏನನ್ನೂ ತಿನ್ನದೆ ಇರುತ್ತಾವೆಂದು! ಅದೆಷ್ಟೇ ಹೊತ್ತಾದರೂ ಸರಿ, ಕೊನೆ ಪಕ್ಷ ನಾನು ಜಿಗಿಯುವುದ ದೂರದಿಂದೆಲ್ಲೋ ಕಂಡರೆ ನಾಲ್ಕು ಕಾಲಿನ ಕರಿ ಜೀವಿ ಕಂಡಿತಾ ಬರುತ್ತಾನೆಂದು ಊಹಿಸಿ ಮೀನು ಪುಳಕ್-ಪುಳ್ಕ್ ಏನ್ನುತಾ ನೀರಿನ ಹೊರಕ್ಕೊ,ಒಳಕ್ಕೂ ಜಿಗಿಯತೊಡಗಿತು.ಖುಷಿಯಿಂದ ಜೀವ ಬಾಯಿಗೆ ಬಂದ ಅನುಭವದಿಂದ ಹಾರಿ ಇತ್ತಲೇ ಬಂದ ರಣ ಹದ್ದಿನ ಸದ್ದು ಮೀನಿಗೆ ಕೇಳದೇ ಹೋಯಿತು... ಕ್ಷಣ ಮಾತ್ರದಲ್ಲೇ ಹದ್ದಿನ ಉಗುರುಗಳು ೫೦೦ ರೂಪಾಯಿ ಬೆಲೆಬಾಳುವ ಮೀನಿನ ದೇಹದೊಳಕ್ಕೆ ಹೊಕ್ಕಿದ್ದವು. ಬೆಲೆ ಐನೂರಾದರೆನು? ದೇಹದಿಂದ ಹೊರಬಿದ್ದಿದ್ದು ಅದೇ ರಕ್ತ, ಕಣ್ಣಿಂದ ಬಂದಿದ್ದು ನಾನಿಲ್ಲದೆ ಮರುಗುವ ಮರಿಗಳ ಬಗೆಗಿನ ಕನಿಕರ. ಏನೋ ಹೇಳುವಂತೆ ಬಾಯಿ ತೆರೆದು ತೆರೆದು ಮುಚ್ಚಿತು, ಊರ ಕೆರೆಯ ದೊಡ್ಡ ಮೀನು! ಕ್ಷಣ ಮಾತ್ರದಲ್ಲೇ ರಣಹದ್ದು ಮೀನನ್ನು ಹೊತ್ತು ಹಾರಿಹೋಗಿತ್ತು. ಇದ್ಯಾವುದರ ಅರಿವು ಮಕ್ಕಳೆಂದು ಕರೆಯುವ ಮರಿಮೀನುಗಳಿಗೆ ತಿಳಿಯದು. ಪುಳಕ್ ಎಂದು ಮೇಲೆ ಹಾರಿದ್ದ ಸದ್ದು ಮಾತ್ರ ಕೇಳಿತು ಅವಕ್ಕೆ. ತಮ್ಮ ಪಾಡಿಗೆ ನೀರ ತಳದಲ್ಲಿ ಒಂದರ ಪಕ್ಕದಲ್ಲಿ ಅದೇನೋ ಪಿಸಿ ಪಿಸಿ ಹೇಳಿಕೊಳ್ಳುತ್ತಾ ಇದ್ದವು. 'ಮೀನು' ಅದೇನೋ ಮಾಡಿ ಅನ್ನ ತರುತ್ತಾಳೆಂಬ ಭರವಸೆಯಿಂದ!ಇತ್ತ ಕಡೆ ಸೈನ್ಯಾದಿಪತಿ ಕೆಂಚ ಹಾಗು ಆತನ ಜೊತೆಗಿದ್ದ ಅರೆ ಪುಕ್ಕಲು ಟಾಮು ಮತ್ತು ಸಣ್ಣಿಯೋಟ್ಟಿಗೆ ಕಾದಾಡಿ,ಗುದ್ದಾಡಿ, ಕಚ್ಚಿ,ಪರಚಿ ಸುಸ್ತಾದ ಕರಿಯ,ಸಣ್ಣಿಯನ್ನೊಮ್ಮೆ ನೋಡಿ ಬೊಗಳಿತು. ಆ ಸದ್ದಿಗೆ ಇದ್ದೇನೋ ಬಿದ್ದೆನೋ ಎಂಬಂತೆ ಸಣ್ಣಿ, ಬಾಯಲ್ಲಿ ಕಚ್ಚಿದ್ದ ಪುಟ್ಟಿಯ ಚೆಪ್ಪಲಿಯನ್ನು ಅಲ್ಲೇ ಬಿಟ್ಟು ಓಟ ಕಿತ್ತಿತು. ಅದನ್ನು ನೋಡಿ,ನಾಲ್ಕೂ ಕಾಲುಗಳನ್ನು ಗಡ-ಗಡನೆ ನಡುಗಿಸುತ್ತಿದ್ದ ಟಾಮು, ಬಾಲ ಮುದುರಿ, ಒಂದಿಷ್ಟೂ ಪೆಟ್ಟು ಬೀಳದಿದ್ದರೂ ಭಯಾನಕ ಗಾಯವಾದಂತೆ ನಟಿಸುತ್ತಾ, ಕುಂಟುತ್ತಾ, ಕೂಗುತ್ತ ನಡೆಯಿತು. ಮೈಯಲ್ಲ ಗಾಯವಾಗಿ, ಅಲ್ಲಲ್ಲಿ ರಕ್ತ ಸುರಿಯುತ್ತಿದ್ದ ಕೆಂಚ ಹಾಗು ಕರಿಯರಿಬ್ಬರೂ ರಾಜಿಯಾದಂತೆ ಹಿಂದಕ್ಕೆ ಸರಿದರು! ತನ್ನ ಬಂದ ಕೆಲಸ ಆದಂತೆ, ಪುಟ್ಟಿಯ ಚಪ್ಪಲಿಯನ್ನು ಕಚ್ಚಿ ಹಿಡಿದು, ತಕ್ಷಣ ಏನೋ ನೆನಪಾದಂತೆ ಕರಿಯ ಕೆಂಚನ ಕಡೆ ಮತ್ತೊಮ್ಮೆ ಗುರ್ರೆಂದು ಬೊಗಳಿ ಓಡಿತು.********************************************************************************************************************************ಗಂಟೆ ಸುಮಾರು ಹನ್ನೊಂದರ ಹೊತ್ತಿಗೆ ಪುಟ್ಟಿಯ ಅಮ್ಮ ಆಕೆ ಮಲಗಿದ್ದ ಕೋಣೆಗೆ ಹೋಗಿ ಅವಳ ತಲೆ ಸವರುತ್ತಾ "ಯಾರ್ ಹಾಳಾದ್ ಕಣ್ ಬಿತ್ತೆ ಮಗ್ಲೆ ನಿಂಗೆ, ಕೆಮ್ಮಿ-ಕೆಮ್ಮಿ ಎಷ್ಟ್ ಸೋತ್ಹೊಗಿಯ ನೋಡು" ಎಂದಳು."ನಿಂಗೆ ಅಂತಾನೆ ಕೋಳಿ ಕುಯ್ದು ಸಾರ್ ಮಾಡಕ್ಕಿಟ್ಟೀನಿ..ಇನ್ನು ಸ್ವಲ್ಪ ಹೊತ್ತಲ್ಲೇ ಆತದೆ..ಯಾಕೆ, ಕೋಳಿ ಸಾರ್ ಘಮ ಬರ್ತಿಲ್ವೇನೆ?" ಶೀತದಿಂದ ಮೂಗು ಕಟ್ಟಿ, ಮನೆಯ ಯಾವುದೇ ಪರಿಮಳವನ್ನು ಆಸ್ವಾದಿಸದ ಪುಟ್ಟಿಯ ಮೂಗುಗಳು ಕೇವಲ ಉಸಿರಾಟಕ್ಕೆ ಮಾತ್ರ ಸೀಮಿತವಾಗಿದ್ದವು. ಅಮ್ಮನ ಮಾತನ್ನು ಕೇಳಿ ಏನೋ ಕಳೆದುಕೊಂಡಂತೆ ಪುಟ್ಟಿ, ತಲೆ ಸವರುತ್ತಿದ್ದ ಅಮ್ಮನ ಕೈಯನ್ನು ಬದಿಗಿಟ್ಟುಎದ್ದು ಕೂತು, "ಯಾವ್ ಕೋಳಿ ಕುಯ್ದೆ??" ಎನ್ನುತ ಗದ್ಗದಿತ ದ್ವನಿಯಲ್ಲಿ ಕೇಳಿದಳು. "ಅದೇ ಚಿಕ್ಕಿ ಯಾಟೆಮರಿ ಕಣೆ.. ಕೋಳಿಏನ್ ತುಂಬ್ಕೊಂಡು ಮನೆ ಎಲ್ಲಾ ಮಾಡಿತ್ತಲ್ಲ ಅದೇ" ಎಂದೊಡನೆ ಚಳಿಯಿಂದ ಬಾತಿದ್ದ ಪುಟ್ಟಿಯ ಮುಖ ಕೆಂಪಾಗಿ, ಕಣ್ಣಿನಿಂದ ಹನಿಗಳು ಇಬ್ಬನಿಯಂತೆ ಕರಗಿ, ಕೆಂಪು ಕೆನ್ನೆಗಳ ಮೇಲೆ ಹರಿದು ಜಾರಿದವು. ಪುಟ್ಟಿ ಕೂಡಲೇ ಹೊದ್ದಿದ್ದ ಒದಿಕೆಯನ್ನು ಎತ್ತಿ ಹೊಗೆದು ಅಳುತ್ತಲೇ ಚಿಕ್ಕಿಯನ್ನು ಮುಚ್ಚಿಟ್ಟಿದ್ದ ಕುಕ್ಕೆಯ ಬಳಿ ಓಡಿದಳು."ಲೇ ಪುಟ್ಟಿ.. ನಿಲ್ಲೇ..ಗಾಳಿಗೆ ಸೀತಾ ಇನ್ನೂ ಜಾಸ್ತಿ ಆದೀತು..ನಿಲ್ಲೇ ಎಲ್ಲಿಗ್ ಓಡ್ತಿದ್ದಿಯ"ಅಮ್ಮ ಕೂಗಿದಳು."ಆ.ಆ ...ಅದು.... ಚಿಕ್ಕಿ..ಎಲ್ಲಿ..ಚಿಕ್ಕಿ ಬೇಕು .. ನಾ.ನ...ನ .ನಂಗೆ ಚಿಕ್ಕಿ.." ಎನ್ನುತಾ ಪುಟ್ಟಿ ಚಿಕ್ಕಿ ಇದ್ದ ಬುಟ್ಟಿಯ ಮುಂದೆ ನಿಂತು ಅಳುತ್ತಾ ಬಿಕ್ಕಳಿಸತೋಡಗಿದಳು. ಅಕ್ಕಿ ಹಾಗೂ ಗೋದಿಯ ಕಾಳುಗಳನ್ನು ತರಲು ಹೋಗಿದ್ದ ಅಮ್ಮನ ದಾರಿಯನ್ನು ಕಾದು, ನೋಡಿ, ಕೂಗಿ ದಣಿದು ಮೂಲೆಯಲ್ಲಿ ಮಲ್ಗಗಿದ್ದ ಮರಿಗಳು ಪುಟ್ಟಿಯ ಕೂಗಿಗೆ ಎದ್ದು ಕುಕ್ಕೆಯ ಸಂದಿನಿಂದ ತಮ್ಮ ಪುಟ್ಟ ಕಣ್ಣುಗಳನ್ನು ಸಾದ್ಯವಾದಷ್ಟು ಹಿಗ್ಗಿಸಿ ನೋಡತೊಡಗಿದವು."ಲೇ ಪುಟ್ಟಿ.. ನಿಂದ್ ಇನ್ನೊಂದ್ ಚಪ್ಪ್ಲಿ ಎಲ್ಲೇ??" ಎನ್ನುತಾ ಪುಟ್ಟಿಯ ಅಮ್ಮ, ಪುಟ್ಟಿ ಅಳುವುದನ್ನೂ ಗಮನಿಸದೆ ಹುಡುಕತೊಡಗಿದಳು. ಇನ್ನೆಂದೂ ತನ್ನ ಜೀವನದಲ್ಲಿ ಒಮ್ಮೆಯೂ ಚಿಕ್ಕಿ ಬಾರದು,ಕಾಣಲು ಸಿಗದು ಎಂದು ದುಃಖ ಇಮ್ಮಡಿಸಿ ಬಂದು ಪುಟ್ಟಿ ಇನ್ನೂ ಜೋರಾಗಿ ಅಳತೊಡಗಿದಳು. ಪುಟ್ಟ ಮರಿಯಿಂದಲೂ ಅಕ್ಕರೆ, ಪ್ರೀತಿಯಿಂದ ಪುಟ್ಟಿಯೋಟ್ಟಿಗೆ ಆಡುತ್ತಾ ಬೆಳೆದಿದ್ದ ಚಿಕ್ಕಿಗೆ, ಪುಟ್ಟಿಯಂದರೆ ತುಂಬಾ ಒಡನಾಟ. ತನ್ನ ಮರಿಗಳನ್ನು ಪುಟ್ಟಿ ಹಾಗು ಕರಿಯನಿಗೆ ಬಿಟ್ಟು ಯಾರಿಗೂ ಮುಟ್ಟಲು ಬಿಡುತ್ತಿರಲಿಲ್ಲ. ಹತ್ತಿರ ಬಂದವರ ಕಣ್ಣಿಗೆ ಕುಕ್ಕುವಂತೆ ನೆಗೆದು, ಹಾರಿ, ಹಿಂಬಾಲಿಸಿ ಓಡಿಸುತ್ತಿತ್ತು. ಇದನ್ನು ಕಂಡು ಪುಟ್ಟಿಯ ಮನೆಯವರಿಗೆಲ್ಲರಿಗೂ ಆಶ್ಚರ್ಯವೇ ಆಶ್ಚರ್ಯ.ಹುಡುಕಿ ಹುಡುಕಿ ಚಪ್ಪಲಿ ಸಿಗದಿದ್ದದ್ದಾಗ "ಆ ಆಳಾದ್ ಕರ್ಯಂದೆ ಅಂತ ಕಾಣ್ಸುತ್ತೆ ಕೆಲ್ಸ..ಬರ್ಲಿ ತಡಿ ಆದ್ರ್ ಕಾಲ್ ಮುರಿತೀನಿ" ಅನ್ನುತಾ ಪುಟ್ಟಿಯ ಬಳಿಗೆ ಬಂದ ಅಮ್ಮ ಪುಟ್ಟಿಯ ಕೈರೆಟ್ಟೆಯನ್ನು ಬಿಗಿಯಾಗಿ ಹಿಡಿದು ಮೆನೆಯೊಳಗೆ ಕರೆದೊಯ್ದಳು.*****************************************************************************************************************************ಪಕ್ಕದ ಊರಿನ ಕೆಂಚನೊಟ್ಟಿಗೆ ಪುಟ್ಟಿಯ ಇನ್ನೊಂದು ಚಪ್ಪಲಿಗಾಗಿ ಕಾದಾಡಿ ಗಾಯಗಳೊಟ್ಟಿಗೆ ಮೈಯಲ್ಲ ಕೆಸರು ಮಾಡಿಕೊಂಡಿದ್ದ ಕರಿಯ ಅಲ್ಲಿಂದ ಸೀದಾ ಬಟ್ಟರ ಹೋಟೆಲ ಬಳಿ ಬಂದು ನಿಂತಿತು. ಅಷ್ಟರಲ್ಲಾಗಲೇ ಊಟದ ಎಲೆಗಳೆಲ್ಲವೂ ಚಿಲ್ಲಾ-ಪಿಲ್ಲಿಯಾಗಿ, ಅದರಲ್ಲಿರುವ ಅನ್ನದ ಕಾಳುಗಳು ಕಾಣದಂತೆ ತಿಂದು, ನೆಕ್ಕಿ, ಮರೆಯಗಿದ್ದವು, ಊರಿನ ಶ್ವಾನದಳಗಳು. ಇಂದು ಬೆಳಗ್ಗೆಯೇ ಎದಿಸುರು ಬಿಡುತ್ತಾ ಮೆನೆಯ ಹತ್ತಿರ ಬಂದ ಕೆಂಚ, ಟಾಮು ಹಾಗು ಸಣ್ಣಿಯ ಗುಂಪು ಚಿನ್ನಾಟವಾಡುತ್ತಾ ಕರಿಯ ಮಲಗಿರುವುದನ್ನೂ ಗಮನಿಸದೆ ಹೊರಗೆ ಬಿಟ್ಟಿದ್ದ ಪುಟ್ಟಿಯ ಚಪ್ಪಲಿಗಳನ್ನು ಸಣ್ಣಿ ಹಾಗೂ ಟಾಮು ಒಂದೊಂದನ್ನು ಬಾಯಲ್ಲಿ ಕಚ್ಚಿ ಹೊರಡುತ್ತಿರುವಾಗಲೇ, ದಾರಿಯ ಮದ್ಯದಲ್ಲೆ ಕರಿಯ ತಮ್ಮನ್ನು ಗುರ್ರೆಂದು ನಿಂತಿರುವುದನ್ನು ಕಂಡವು! ತನಗರಿವಿಲ್ಲದಂತೆ ಟಾಮುವಿನ ಬಾಯಲ್ಲಿದ್ದ ಚಪ್ಪಲ್ಲಿ ಕೆಳಗೆ ಬಿದ್ದಿತು! ಕರಿಯನ ಪ್ರಾಂತ್ಯಕ್ಕೆ ಬಂದರಿಂದಲೋ ಏನೋ, ಕೆಂಚನು ಕರಿಯನ ಗುರ್ರಿಗೆ ಗುರ್ರ್ ಅನ್ನದೆ ಅಲ್ಲಿಂದ ಜಾಗ ಕಿತ್ತಿತು. ಆದರೆ ಸಣ್ಣಿ ಮಾತ್ರ ಕಚ್ಚಿದ್ದ ಚೆಪ್ಪಲಿಯನ್ನು ಬಿಡದೆ ಕೆಂಚನ ಹಿಂದೆ ಓಡತೊಡಗಿತು. ಸಣ್ಣಿಯ ಮೂರ್ಖತನಕ್ಕೆ ಟಾಮುವಿಗೆ ತಲೆ ತಿರುಗಿದಂತಾಗಿ ಬೇರೆ ದಾರಿ ಕಾಣದೆ ಅದು ಕೂಡ ಕೆಂಚ ಮತ್ತು ಸಣ್ಣಿಯ ಹಿಂಬಾಲಿಸಿತು, 'ಕೈಯಂಯೋ..' ಅನ್ನುವ ಬೊಳ್ಳು ಸದ್ದಿನೊಂದಿಗೆ. ಕೂಡಲೇ ರೊಚ್ಚಿಗೆದ್ದ ಕರಿಯ, ಟಾಮುವಿನ ಬಾಯಿಂದ ಬಿದ್ದ ಚೆಪ್ಪಲಿಯನ್ನು ಬಾಯಲ್ಲಿ ಕಚ್ಚಿ ಮನೆಯ ಬಳಿ ಹಾಕಿ, ಇನ್ನೊದು ಚೆಪ್ಪಲಿಗೋಸ್ಕರ ಕೆಂಚನ ಅರೆ ಪುಕ್ಕಲು ಸೈನ್ಯವನ್ನು ಹಿಂಬಾಲಿಸಿತು. ಹಾಗಾಗಿ ಇಂದು ಭಟ್ಟರ ಹೋಟೆಲ್ಲಿಗೆ ಹೋಗಲಾಗದೆ, ಕೆರೆಯ ಮೀನುಗಳಿಗೂ ಅನ್ನವಾಕಲು ಸಾದ್ಯವಾಗಿರಲಿಲ್ಲ. ತುಸು ಹೊತ್ತು ಹೋಟೆಲ್ಲ ಹಿಂದೆ-ಮುಂದೆಲ್ಲ ಮುಸುತ್ತಾ ಅಲೆದು ನಂತರ ಬಾಯಲ್ಲಿ ಕಚ್ಚಿತಂದ ಚಪ್ಪಲಿಯನ್ನು ಅಲ್ಲಿಯೇ ಬಚ್ಚಿಟ್ಟು, ಯಾರೋ ಬಿಟ್ಟೆಸೆದ ಅನ್ನದ ಎಲೆಯನ್ನು ಹುಡುಕಿ,ಅದರಲ್ಲಿದ್ದ ಕೆಲವೇ ಅನ್ನದ ಅಗುಳುಗಳು ಬೀಳದಂತೆ ಕಚ್ಚಿ ಹಿಡಿದು ಕರಿಯ ಕೆರೆಯ ಬಳಿ ಓಡಿತ್ತು.ಹಿಂದೆದ್ದು ಇಲ್ಲದ ಶಾಂತತೆ ಇಂದು ಕೆರೆಯ ಬಳಿ ಇದ್ದಿತು. ಮದ್ಯಾನದ ಬಿಸಿಲು ಚುರುಕುಗೊಳ್ಳುತ್ತಿದ್ದರೂ, ಮೀನುಗಳು ಕಾಣದಿರುವುದು ಕರಿಯನಿಗೆ ದಿಗ್ಬ್ರಮೆಯಾಯಿತು.ತುಸು ಹೊತ್ತು ಅತ್ತಿತ್ತಾ ಓಡಾಡಿ, ಕಣ್ಣನ್ನು ನೀರಿನಲ್ಲಿ ಕೆಂದ್ರೀಕರಿಸಿ,ತಲೆಯನ್ನು ಎಡಕ್ಕೂ ಬಲಕ್ಕೂ ಅರ್ದವೃತಾಕೃತಿಯಲ್ಲಿ ಸುತ್ತಿ, ತುಸುಸಮಯದ ನಂತರ ಬೌಗುಟ್ಟಿತು. ಬಾಯಲ್ಲಿ ಕಚ್ಚಿ ತಂದಿದ್ದ ಅನ್ನದ ಎಲೆ ನೀರಿಗೆ ಬಿದ್ದ ಕೂದಲೇ, ನೀರಿನ ಕೆಳಗಿದ್ದ ಮರಿ ಮೀನುಗಳು ಒಂದೊಂದಾಗೆ ಮೇಲೆ ಬರ ತೊಡಗಿದವು. ಕರಿಯ ಅವುಗಳನ್ನೇ ನೋಡುತ್ತಾ ತುಸು ಸಮಯ ನಿಂತಿತು. ಎಷ್ಟೋತ್ತಾದರೂ ಬಾರದ ದೊಡ್ಡ ಮೀನನ್ನು ಕಾಣದೆ ಕರಿಯ ಮತ್ತೊಮ್ಮೆ ಬೌಗುಟ್ಟಿತು. ತಕ್ಷಣೆವೆ ಏನೋ ಒಳೆದಂತಾಗಿ ಕೆರೆಯ ಏರಿಯ ಮೇಲೋಗಿ ಸುತ್ತಲೂ ಒಮ್ಮೆ ನೋಡಿತು. ದೂರದಲೆಲ್ಲೋ ಎರಡು ರಣಹದ್ದುಗಳು ಏನನ್ನೋ ಹಿಡಿದು ಕಿತ್ತಾಡುತ್ತಿದ್ದವು. ತಕ್ಷಣವೇ ಹೆಬ್ಬುಲಿಯಂತೆ ರೊಚ್ಚಿಗೆದ್ದು, ಕುತ್ತಿಗೆಯ ಕೂದಲ ನಿಮಿರಿಸಿ ಕರಿಯ ಬೌಗುಡುತ್ತಾ ಅಲ್ಲಿಗೆ ಧಾವಿಸಿತು. ಅಷ್ಟರಲ್ಲಾಗಲೇ ಮೀನಿನ ದೇಹವನ್ನು ಹದ್ದುಗಳು ಹಸಿವಿನ ದಾಹದಲ್ಲಿ ಕುಕ್ಕಿ, ಹರಿದು, ಮಾಂಸವನ್ನು ತಿಂದು 'ಮುಳ್ಳು'ಗಳೆಂದು ಕರೆಯುವ ದೇಹದ ಮೂಳೆಗಳು ಕಾಣುವಂತೆ ಮಾಡಿದ್ದವು. ಕರಿಯ ತಮ್ಮಲ್ಲಿಗೆ ಬಂದ ಅಬ್ಬರಕ್ಕೆ ಹದ್ದುಗಳು ಮೀನಿನ ದೇಹವನ್ನು ಅಲ್ಲಿಯೇ ಬಿಟ್ಟು ಹಾರಿದವು. ಮೀನಿನ ಬಳಿಗೆ ಬಂದ ಕರಿಯ ಸ್ವಲ್ಪ ಹೊತ್ತು ಸುಮ್ಮನಿದ್ದು ವಿಕಾರವಾಗಿ ಕೂಗತೊಡಗಿತು. ಇಂದು ಬಳಗ್ಗೆ ತಾನು ಬೇಗನೆ ಬಂದಿದ್ದರೆ ಮೀನನ್ನು ಉಳಿಸಬಹುದಿತ್ತೆನೋ ಎಂಬ ಮೂಕ ಪ್ರಾಣಿಯ ಬವಣೆಯ ರೋದನೆ! ನಂತರ ಅಳಿದುಳಿದ ಮೀನನ್ನು ಬಾಯಲ್ಲಿ ಕಚ್ಚಿ, ಕೆರೆಯಿಂದ ಗದ್ದೆಗಳಿಗೆ ಮಾಡಿದ್ದ ಕಾಲುವೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಬಿಟ್ಟಿತು. ಕೆರೆಯ ಬಳಿಗೆ ಬಂದು ನೋಡುವಷ್ಟರಲ್ಲೇ ಬಾಯಲ್ಲಿ ಕಚ್ಚಿ ತಂದು ಬಿಟ್ಟಿದ್ದ ಅನ್ನದ ಅಗುಳುಗಳನ್ನೆಲ್ಲಾ ಮರಿ ಮೀನುಗಳು ತಿಂದು, ಲವಲವಿಕೆಯಿನದ ನೀರಿನಲ್ಲಿ ಆಟವಾಡುತ್ತಿದ್ದವು. ಇನ್ನುಮುಂದೆ ಇವುಗಳ ದಿನದ ಅನ್ನದ ಜವಾಬ್ದಾರಿ ತನ್ನದೆನ್ನುವಂಬುವಂತೆ ಅವುಗಳನ್ನು ಕರುಣೆಯ ಕಣ್ಣುಗಳಿಂದ ಒಮ್ಮೆ ನೋಡಿ, ಮತ್ತೊಮ್ಮೆ ವಿಕಾರವಾಗಿ ಕೂಗಿ, ಸುತ್ತ ಮುತ್ತಲು ಎಲ್ಲಾದರೂ ಹದ್ದುಗಳಿವೆಯೋ ಎಂದು ನೋಡಿ ಅಲ್ಲಿಂದ ಭಟ್ಟರ ಹೋಟೆಲಿನ ಬಳಿಗೆ ಹೋಗಿ ಬಚ್ಚಿಟ್ಟಿದ್ದ ಪುಟ್ಟಿಯ ಚಪ್ಪಲಿಯನ್ನು ಕಚ್ಚಿ ಮನೆಯ ಕಡೆ ಓಡಿತು. ಮದ್ಯಾನದ ಉರಿಬಿಸಿಲಿಗಾಗಲೇ ಕರಿಯನ ಮೈಯ ಕೆಸರು ಒಣಗಿ ಗಟ್ಟಿಯಾಗಿತ್ತು. ಬಾಯಲ್ಲಿ ಚಪ್ಪಲಿಯನ್ನು ಕಚ್ಚಿ ಇತ್ತಲೇ ಬರುತ್ತಿದ್ದ ಕರಿಯನನ್ನು ನೋಡಿ ಪುಟ್ಟಿಯ ಅಮ್ಮ "ಬಂತು ನೋಡು, ಊರ್ ಹಾಳ್ಮಡಕ್ ಹೋಗಿ ಹೆಂಗ್ ಕೆಸ್ರು ಮೆತ್ಕೊಂಡಿದೆ " ಅಂದಳು. ಊಟ ಬೇಡವೆಂದು ಅಳುತ್ತಾ ಮಲಗಿದ್ದ ಪುಟ್ಟಿ, ಕರಿಯ ಬಂದನೆಂದು ಕೇಳಿದಾಗ ಎದ್ದು ಕಿಟಕಿಯನ್ನು ತೆರೆದಳು. ಬಾಯಲ್ಲಿ ಕಚ್ಚಿ ತಂದ ಚಪ್ಪಲಿಯನ್ನು ಅಲ್ಲಿಯೇ ಮನೆಯ ಮುಂದೆ ಬಿಟ್ಟು ಪಕ್ಕಕೆ ತಿರುಗಿತಷ್ಟೇ, ಪುಟ್ಟಿಯ ಅಮ್ಮನ ಕೈಯಿಂದ ಬೀಸಿದ ಸೌದೆಯ ತುದಿ ರಪಾರನೆ ಕರಿಯನ ಮುಖಕ್ಕೆ ಬಡಿಯಿತು. "ಚಪ್ಲಿ ಕಚ್ಚ್ಕೊಂಡ್ ಹೋಗ್ತಿಯ.." ಎನ್ನುತ ಇನ್ನೊಂದು ಪೆಟ್ಟನ್ನು ಕರಿಯನ ಬೆನ್ನಿನ ಮೇಲೆ ಬಾರಿಸಿದಳು.ಅಳುತ್ತಾ ಓಡಿಬಂದ ಪುಟ್ಟಿಯನ್ನು ಮೆನೆಯೊಳಗೆ ಎಳೆದೊಯ್ದಳು. ಆ ನೋವಿನಲ್ಲೂ ಪುಟ್ಟಿಯನ್ನು ಕಂಡಾಕ್ಷಣ ಖುಷಿಯ ಕಣ್ಣುಗಳಲ್ಲಿ ಬಾಲವನ್ನು ಅಲ್ಲಾಡಿಸಿ, ಸ್ವಲ್ಪ ಹೊತ್ತು ನೋವಿನಿಂದ ಕೂಗಿ, ಸುಮ್ಮನಾಗಿ ಚಿಕ್ಕಿಯ ಕುಕ್ಕೆಯ ಪಕ್ಕದಲ್ಲಿ ತನಗಾಗಿ ಹಾಕಿದ ಗೋಣಿಚೀಲದ ಮೇಲೆ ಮುದುಡಿ ಮಲಗಿತು. ಹಿಂದೆಂದೂ ಕೂಡಿ ಹಾಕದ ಚಿಕ್ಕಿಯ 'ಸಂಸಾರ'ವನ್ನು ಇನ್ನೂ ಕುಕ್ಕೆಯ ಒಳಗೆ ಇಟ್ಟಿದ್ದನ್ನು ಕಂಡು ಕರಿಯ, ತನ್ನ ಕತ್ತನ್ನೆತ್ತಿ, ಕುಕ್ಕೆಯ ಒಳಗೆ ಕಣ್ಣಾಯಿಸಿತು. ಕೂಗಿ, ಕೂಗಿ ಸುಸ್ತಾಗಿ ಮಲಗಿದ್ದ ಚಿಕ್ಕಿಯ ಮಕ್ಕಳು ಕರಿಯನ ಕಂಡು ಅದರ ಮೂಗಿನ ಬಳಿ ಬಂದು ಚೀಯ್ಗುಡತೊಡಗಿಡವು. ಯಾರು ಇಲ್ಲದ ಅಬಲೆಯರಿಗೆ ಪೋಷಕರು ಸಿಕ್ಕಿದಂತೆ! ಪುಟ್ಟಿಯ ಅಮ್ಮ ಒಳಗಿನಿಂದ ಕರಿಯನಿಗೆ ತಿನ್ನಲು ಊಟವನ್ನು ಹಾಕಿದಳು. ಅದರಲ್ಲಿ ಅನ್ನ, ಅಂಬಲಿ ಹಾಗು ಸಾರಿನೋಟ್ಟಿಗೆ ಕೆಲ ಮೂಳೆಗಳು ಸೇರಿದ್ದವು. ಚಿಕ್ಕಿಯ ಮೂಳೆಗಳೆಂದು ಅರಿಯಲು ಕರಿಯನಿಗೆ ತುಂಬ ಸಮಯ ಹಿಡಿಯಲಿಲ್ಲ!!! ಹಾಕಿದ್ದ ಊಟವನ್ನು ಮೂಸು ನೋಡದೆ ಕರಿಯ ಬುಟ್ಟಿಯ ಪಕ್ಕಕ್ಕೆ ಬಂದು ತನ್ನ ಮುಂಗಾಲುಗಳ ಮೇಲೆ ಮುಖ ಹಾಕಿ, ಕುಕ್ಕೆಯಲ್ಲಿದ್ದ ಮರಿಗಳನ್ನೇ ನೋಡುತ್ತಾ ಮಲಗಿತು.ಕಣ್ಣು ಬಿಡುವಾಗಲೇ ಸಂಜೆಯಾಗಿತ್ತು. ಕೆಂಚನೊಟ್ಟಿಗೆ ಕಿತ್ತಾಡಿ,ಬೆಳಗ್ಗಿನಿಂದ ಏನೂ ತಿನ್ನದೆ, ಮನೆಯ ಅಮ್ಮನಿಂದ ಮಾಡಿರದ ತಪ್ಪಿಗೆ ಕಣ್ಣು ಊದುವಂತೆ ಒಡೆತ ತಿಂದ ಕರಿಯ ತುಸು ಜಾಸ್ತಿ ಹೊತ್ತೆ ಮಲಗಿತ್ತು. ಅಷ್ಟರಲ್ಲಾಗಲೇ ಪುಟ್ಟಿ ಒಳಗಿನಿಂದ ಒಂದು ಲೋಟದಲ್ಲಿ ಹರಳೆಣ್ಣೆಯನ್ನು ತಂದು ಕರಿಯನ ಸೌದೆಯಿಂದ ಪೆಟ್ಟು ಬಿದ್ದ ಕಣ್ಣುಗಳಿಗೆ ಹಚ್ಚುತ್ತಿದ್ದಳು. ಕೃತಜ್ಞತೆಯ ಭಾವದಿಂದ, ಪ್ರೀತಿಯಿಂದ, ಕರಿಯ ಅವಳ ಕೈಗಳನ್ನೇ ನೆಕ್ಕತೊಡಗಿತು. ಎಣ್ಣೆ ಹಚ್ಚಿದ ನಂತರ ಪುಟ್ಟಿ ಕರಿಯನ ತಟ್ಟೆಯನ್ನು ಅದರ ಪಕ್ಕಕ್ಕಿಟ್ಟಳು. ಕರಿಯನನ್ನು ಚೆನ್ನಾಗಿ ಅರಿತಿದ್ದ ಆರು ವರ್ಷದ ಪುಟ್ಟಿ, ಕರಿಯನಿಗೊಸ್ಕರ ಅದರಿಷ್ಟವಾದ ಹಾಲು ಮತ್ತು ಬಿಸ್ಕತ್ತನ್ನು ತಟ್ಟೆಗೆ ಹಾಕಿದ್ದಳು. ತನ್ನ ಜೀವನದ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಕಳೆದುಕೊಂಡು ಖಿನ್ನವಾಗಿದ್ದ ಕರಿಯ, ಹಸಿವಿಗಿಂತ ಜಾಸ್ತಿ ಏಕಾಂತದ ಮೊರೆ ಹೊಯಿತು. ಕುಕ್ಕೆಯ ಮರಿಗಳನ್ನೊಮ್ಮೆ ನೋಡಿ, ಪುಟ್ಟಿ ತಂದಿಟ್ಟ ಹಾಲು ಬಿಸ್ಕತ್ತನ್ನೂ ತಿನ್ನದೆ, ಊರ ದೇವಸ್ಥಾನದ ಬಳಿ ಹೊರಟಿತು, ಪುಟ್ಟಿ ಕೂಗಿ ಏನೋ ಹೇಳುತ್ತಿರುವುದನ್ನು ಲೆಕ್ಕಿಸದೆ. ಸಂಜೆಯ ಸೂರ್ಯ ಅಷ್ಟರಲ್ಲಾಗಲೇ ನಿದಾನವಾಗಿ ಪಶ್ಚಿಮದಲ್ಲಿ ಇಳಿಯುತ್ತಿದ್ದ, ಮೂಕ ಪ್ರಾಣಿಗಳ ಮೂಕ ವೇದನೆಯನ್ನು, ಮೂಕವಾಗಿ ನೋಡುತ್ತಾ. ತಂಪಾದ ಗಾಳಿ ಎಲ್ಲೆಡೆ ಹರಿದಾಡುತ್ತಿತ್ತು. ಊರ ದೇವಸ್ಥಾನದ ಕಟ್ಟೆಯ ಮೇಲೆ ಕೂತು, ಎತ್ತಲೋ ನೋಡುತ್ತ, ಉದ್ದ ನಾಲಗೆಯನ್ನು ಹೊರ ಹಾಕಿ ಏದುಸಿರು ಬಿಡುತ್ತಾ, ಯಾವುದೊ ಆಲೋಚನೆಯಲ್ಲಿ ಕರಿಯ ಮಗ್ನವಾಗಿತ್ತು. ಒಣಗಿದ ಕೆಸರಿನಿಂದ ದೇಹವೆಲ್ಲ ಕಂದು ಮಿಶ್ರಿತ ಕಪ್ಪಾಗಿ, ಇದು ಕರಿಯನೆ ಎಂದು ಕ್ಷಣಮಾತ್ರದಲ್ಲಿ ಕಂಡು ಹಿಡಿಯುವುದು ಕಷ್ಟವಾಗಿತ್ತು. ದೇಶ ಸ್ವಚ ಆಂದೋಲನದ ಬ್ಯಾನರನ್ನು ಹಾಕಿ, ಊರೆಲ್ಲ ಸುತ್ತಿದ ವಾಹನ ಕೊನೆಯದಾಗಿ ಈ ಊರಿಗೆ ಬಂದಿತು. ವಾಹನದ ತುಂಬ ಇದ್ದಿದ್ದು, ಸತ್ತು ಬಿದ್ದ 'ನಿಯತ್ತಿನ' ನಾಯಿಗಳೇ, ದೇಶದ 'ಅಬಿವೃದ್ದಿ'ಗೆಂದು ಜೀವ ತೆತ್ತ ಅಮಾಯಕ ಪ್ರಾಣಿಗಳ ದೇಹಗಳೇ! ನಾಯಿ ಯಾರದೆಂದು ದೂರದಿಂದ ಯಾರನ್ನೋ ಕೇಳಿ, ಕರಿಯನ ಕೊಳಚೆ ಬಣ್ಣದ ದೇಹವನ್ನು ದೂರದಿಂದ ಅವರು ಗುರುತಿಸದೆ, ಗೊತ್ತಿಲ್ಲವೆಂದೂ, ಎದ್ದು ಓಡುವುದರ ಮೊದಲೇ ಹಿಡಿಯುವಂತೆ ಸಲಹೆಯನ್ನೂ ನೀಡಿದರು. ಊರಿನ ಕೆರೆಯ ಮೀನು ಹಾಗು ಚಿಕ್ಕಿಯ ಜೀವನ ಮತ್ತು ಅವುಗಳ ಮರಿಗಳ ಬಗ್ಗೆ ಯೋಚಿಸುತ್ತಾ ಏನೋ ಕರಿಯ ತನ್ನ ಮುಂಗಾಲುಗಳ ಮೇಲೆ ಮುಖವಿಟ್ಟು ಮಲಗಿತ್ತು. ಹಿಂದಿನಿಂದ ಬಂದ ಸ್ವಚ್ಚ ದೇಶದ ಕೊಳಕು ಪ್ರಜೆಗಳು ಕರಿಯನಿಗರಿಯದಂತೆ ಅದರ ಕುತ್ತಿಗೆಗೆ ಹಗ್ಗದ ನುಣಿಕೆಯನ್ನು ಹಾಕಿದ್ದರು! ಕೆಲ ಕ್ಷಣಗಳಲ್ಲೇ ಕೂಗಿ, ಕಿರುಚಿ, ಒದ್ದಾಡಿ ಕರಿಯ ಸದ್ದಿಲ್ಲದಂತಾಯಿತು! ಎತ್ತಾಲಾಗದೆ, ತಿಣುಕಾಡಿ ದೇಶದ ಸತ್'ಪ್ರಜೆಗಳು' ಕರಿಯನ ದೇಹವನ್ನುವಾಹನದೊಳಗೆ ಎಸೆದರು..ಚಿಕ್ಕಿಯ ಕುಯ್ದರಿಂದಲೋ ಅಥವಾ ಮಧ್ಯಾನ ಸರಿಯಾಗಿ ಊಟ ಮಾಡದಿದ್ದರಿಂದಲೋ ಅಥವಾ 'ನಾಯಿ ಹಿಡಿಯುವವರು ಬಂದಿದ್ದಾರೆ , ಎಲ್ಲಿಗೂ ಹೋಗಬೇಡ' ಎಂದು ಎಚ್ಚರಿಸಿದ್ದನ್ನು ಕೇಳದೆ ಹೊರಟ ಕರಿಯನ ನಿರ್ಲಕ್ಷತನವೋ ಏನೋ, ಪುಟ್ಟಿಗೆ ಜ್ವರ ವಿಪರೀತವಾಯಿತು! ಮನೆಯ ಪಕ್ಕಕ್ಕೆ ಎಸೆದಿದ್ದ ಚಿಕ್ಕಿಯ ಪುಕ್ಕಗಳು ಸಂಜೆಯ ಗಾಳಿಗೆ ಹಾರುತ್ತಾ, ಒಂದೆರೆಡು ಕುಕ್ಕೆಯ ಬಳಿ ಬಂದು ಬಿದ್ದವು. ಅಮ್ಮ ಬಂದಳೆಂದು ಮರಿಗಳು ಮತ್ತೆ ಎದ್ದು ಕುಕ್ಕೆಯ ಸಂದಿಗೆ ಬಂದವು. ಬೆಳಗ್ಗಿನಿಂದ ಕಾಣದ ದೊಡ್ಡ ಮೀನನ್ನು ಹುಡುಕುವಂತೆ ಮರಿ ಮೀನುಗಳು ನೀರಿನ ಮೇಲೆ ಹಾರ ತೊಡಗಿದ್ದವು, 'ಪುಳಕ್-ಪುಳ್ಕ್' ಸದ್ದಿನೊಂದಿಗೆ.. ಇವಲ್ಲವನ್ನು ನೋಡಲಾಗದೆ ಎಂಬಂತೆ ಸೂರ್ಯ ಬೇಗನೆ ಪಶ್ಚಿಮದಲ್ಲಿ ಜಾರಿದ.........

Monday, August 22, 2016

ಅಂಕಣ: 'ಪದಕಗಳಿಷ್ಟೇ..!?' ಇದು ಸಹಜ ಪ್ರೆಶ್ನೆ. ಆದರೆ.....

ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

ರಿಯೋ ಒಲಿಂಪಿಕ್ಸ್ ಶುರುವಾಗಲು ಕೆಲವಾರಗಳ ಮೊದಲಷ್ಟೇ ಬರೆದಿದ್ದ ಈ ಅಂಕಣವನ್ನು ಇಲ್ಲಿ ಲಗತ್ತಿಸಬೇಕೋ ಬೇಡವೋ ಎಂಬ ದ್ವಂದ್ವದಲ್ಲಿದ್ದೆ. ಆದರೀಗ ಭಾರತದ 'ದಿ ಫ್ಲೈಯಿಂಗ್ ಸಿಖ್' ಎಂದೇ ಪ್ರಸಿದ್ಧಿಯ ಮಿಲ್ಕ ಸಿಂಗ್ ಇತ್ತೀಚೆಗೆ ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ ಒಲಿಂಪಿಕ್ಸ್ನಲ್ಲಿ ಆಟಗಾರ ಕಳಪೆ ಪ್ರದರ್ಶನಕ್ಕೆ ಪ್ರಸ್ತುತ ಭಾರತೀಯ ಒಲಿಂಪಿಕ್ಸ್ ಫೆಡರೇಶನ್ನೇ ಕಾರಣವೆಂದು ಹೇಳಿಯೇ ಬಿಟ್ಟರು. ಅವರ ಈ ಹೇಳಿಕೆ ಕೆಲವರಿಗೆ ಅವಿವೇಕದ ಮಾತುಗಳೆನಿಸಿದರೂ ಎಲ್ಲೋ ಒಂದೆಡೆ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕೆನಿಸುತ್ತದೆ. ಇಲ್ಲವಾದಲ್ಲಿ ದಶಕಗಳ ಕಾಲ ದೇಶಕ್ಕಾಗೇ ಓಡಿದ ಜೀವ ಎಂದೂ ದೇಶದ ಬಗ್ಗೆ, ಫೆಡೆರೇಶನ್ನ ಬಗ್ಗೆ ಹೀಗೆ ಹೇಳಲಾರದು. ಅವರ ಈ ಹೇಳಿಕೆಯನ್ನು ಬಾಲಿಶ ಹೇಳಿಕೆಯೆಂದು ಪರಿಗಣಿಸದೆ ಕೆಳಗೆ ಗೀಚಿರುವ ಕೆಲ ಪದಗನ್ನು ಓದಿ ಸರಿಯೆನಿಸಿದರೆ ಪ್ರತಿಕ್ರಿಯಿಸಿ.



ಒಂಬತ್ತು ಚಿನ್ನ, ನಾಲ್ಕು ಬೆಳ್ಳಿ ಹಾಗು ಹನ್ನೊಂದು ಕಂಚು. ಇದು ಒಲಿಂಪಿಕ್ ಇತಿಹಾಸದಲ್ಲಿ ಈವರೆಗಿನ ಭಾರತದ ಸಾದನೆ. ಒಟ್ಟು ೨೪ ಪದಕಗಳಲ್ಲಿ ಬಹುತೇಕ ಅರ್ಧದಷ್ಟು (ಹನ್ನೊಂದು) ಪದಕಗಳು ಹಾಕಿಯಿಂದ  ಬಂದವುಗಳಾದರೆ ಉಳಿದ ೧೩ ವೈಯಕ್ತಿಕ ಪದಕಗಳು. ೧೮೯೬ ರ ಅಧುನಿಕ ಒಲಿಂಪಿಕ್ಸ್ ಶುರುವಾಗಿ ಸುಮಾರು ನೂರು ವರ್ಷಗಳ ನಂತರವೂ ವೈಯಕ್ತಿಕ  ಮಟ್ಟದಲ್ಲಿ ಭಾರತ ಗಳಿಸಿದ್ದು ಕೇವಲ ಒಂದೇ ಒಂದು ಪದಕ. ಅದು ೧೯೫೨ರ ಹೆಲ್ಸೆಂಕಿ ಒಲಿಂಪಿಕ್ನ ಕುಸ್ತಿಯಲ್ಲಿ  K.D ಜಾಧವ್ರರಿಗೆ ದೊರೆತ ಕಂಚಿನ ಪದಕ. ಪದಕಗಳ ನಿರೀಕ್ಷೆಯಲ್ಲಿ ಶತಕಗಳನ್ನೇ ಕಳೆದ ಭಾರತ ೧೯೯೬ ರಿಂದ ಈಚೆಗೆ ಅಂದರೆ ಕಳೆದ ೨೦ ವರ್ಷಗಳಲ್ಲಿ ಗಳಿಸಿರುವುದು ೧೨ 'ವೈಯಕ್ತಿಕ' ಪದಕಗಳು. ಅದರಲ್ಲೂ ಕೇವಲ ಕಳೆದೆರಡು ಒಲಿಂಪಿಕ್ಸ್ನಲ್ಲೆ  ಒಟ್ಟು ೯ ಪದಕಗಳನ್ನು ಗಳಿಸಿದೆ. ವೈಯಕ್ತಿಕ ಮಟ್ಟದಲ್ಲಿ ಇತ್ತಿಚೆಗೆ ಇಷ್ಟೆಲ್ಲಾ ಸಾಧನೆಗಳನ್ನು ಮಾಡುತ್ತಿರುವ ನಮ್ಮ ಕ್ರೀಡಾಪಟುಗಳು ಒಲಿಂಪಿಕ್ಸ್ಗೆ ಆಯ್ಕೆಯಾಗುವ ಮುನ್ನ ಎದುರಿಸುವ ಸಂದಿಗ್ನತೆ ಹೊಸತೇನಲ್ಲ. ಒಲಿಂಪಿಕ್ಗೆ ಆಯ್ಕೆಯಾಗುವ ಅಷ್ಟೂ ಮಂದಿಯೂ ಸಹಜವಾಗಿಯೇ ಅರ್ಹರಾಗಿರುತ್ತಾರೋ ಅಥವಾ ಅವರಿಗಿಂತ ಮಿಗಿಲಾದ ಅಥವಾ ಹೆಚ್ಚಿನ ಅರ್ಹತೆಯುಳ್ಳ ಕ್ರೀಡಾಪಟುಗಳು ಆಯ್ಕೆಯಾಗದೆ ಉಳಿಯುತ್ತಾರೆಯೋ ಹಾಗು ಆಟಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಅಥವಾ ನಿಯಮಾವಳಿ ಸಮಂಜಷವಾಗಿದೆಯೋ ಅನ್ನುವುದೇ ಪ್ರೆಶ್ನೆ. ಪ್ರಪಂಚದ ಎರಡನೆ ಅತಿ ದೊಡ್ಡ ಜನಸಂಖ್ಯೆಯನ್ನೊಂದಿರುವ ನಮ್ಮ ದೇಶಕ್ಕೆ ಪ್ರತಿ ಬಾರಿಯೂ ಧಕ್ಕುವ ಪದಕಗಳ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟೆ ಮಾತ್ರವೇಕೆ? ಎಂಬ ಪ್ರೆಶ್ನೆಗೆ ಉತ್ತರ ಹುಡುಕುತ್ತಾ ಹೊರಟರೆ ನಮ್ಮ ಕ್ರೀಡಾಪಟುಗಳ ಆಯ್ಕೆ ಪದ್ದತಿಯ ಬಗ್ಗೆಯೂ ಒಮ್ಮೆ ಬೆಳಕು ಚೆಲ್ಲಬೇಕು ಎನಿಸುತ್ತದೆ. ಉದಾಹರಣಗೆ ಇತ್ತಿಚಿನ ರಿಯೊ ಒಲಿಂಪಿಕ್ಸ್ಗೆ ಆಯ್ಕೆ ಆಗುವಾಗ ಕುಸ್ತಿಯಲ್ಲಿ ಸುಶಿಲ್ ಕುಮಾರ್ ಮತ್ತು ನರಸಿಂಗ್ ಯಾದವ್ ಹಾಗು ಪುರುಷರ ಟೆನ್ನಿಸ್ನಲ್ಲಿ ಲಿಯಾನ್ದೆರ್ ಪೇಸ್ ಹಾಗೂ ರೋಹನ್ ಬೋಪಣ್ಣರ ನಡುವೆ ಏರ್ಪಟ್ಟಿದ್ದ ಶೀತಲ ಸಮರ!



ಸುಶಿಲ್ ವೈಯಕ್ತಿಕ  ಮಟ್ಟದಲ್ಲಿ ಎರಡು ಬಾರಿ ಪದಕವನ್ನು ಗೆದ್ದು ದೇಶದ ಒಲಿಂಪಿಕ್ಸ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಸಾದನೆಯ  ಮಾಡಿರುವ ಇವರೆಗಿನ ಏಕೈಕ ಭಾರತೀಯನಾದರೆ, ನರಸಿಂಗ್ ಯಾದವ್ ೭೪ k.g ವರ್ಗದ ಫ್ರೀ ಸ್ಟೈಲ್ ವಿಭಾಗದ ಕುಸ್ತಿಯಲ್ಲಿ ೨೦೧೫ರ ಲಾಸ್ ವೇಗಸ್ನಲ್ಲಿ ನಡೆದ  ವಿಶ್ವಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕವನ್ನು ಗೆದ್ದು ಭಾರತಕ್ಕೆ  ಅದೇ ವಿಭಾಗದಲ್ಲಿ ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ತಂದು ಕೊಡುತ್ತಾನೆ. ಒಲಿಂಪಿಕ್ಸ್ ಶುರುವಾಗಲು ಇನ್ನು ಕೆಲವೇ ತಿಂಗಳುಗಳು ಇರುವಾಗ ಭಾರತೀಯ ಕುಸ್ತಿ ಫೆಡರೇಶನ ಮುಂದೆ ಒಂದು ಸಮಸ್ಯೆ ಉದ್ಬವವಾಗುತ್ತದೆ. ಅದೇ ರಿಯೋ ಒಲಿಂಪಿಕ್ಸ್ ನ ೭೪ k.g ವರ್ಗದ ಫ್ರೀ ಸ್ಟೈಲ್ ವಿಭಾಗದಲ್ಲಿ ಭಾರತವನ್ನು ಯಾರು ಪ್ರತಿನಿದಿಸುವರು ಎಂಬುದರ ಕುರಿತು. ಪಂದ್ಯದಲ್ಲಿ ಆಡಲು ಅರ್ಹತೆಯನ್ನು ಗಳಿಸಿ ತಂದ ನರಸಿಂಗ್ ಯಾದವ್ ದೇಶವನ್ನು ಪ್ರತಿನಿದಿಸುವಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಅನುಭವದಲ್ಲಾಗಲಿ, ಭಲಿಷ್ಟತೆಯಲ್ಲಾಗಲಿ ಅವನಷ್ಟೇ ಅಥವಾ ಅವನಿಗಿಂತ ಹೆಚ್ಚೇ ಎಂದೆನಿಸಿರುವ ಸುಶೀಲ್ ಕುಮಾರ್ ದೇಶವನ್ನು ಪ್ರತಿನಿದಿಸಬೇಕೆಂಬ ವಾದದಲ್ಲೂ ಯಾವುದೇ ಹುಳುಕಿಲ್ಲ. ಇಬ್ಬರು ಕುಸ್ತಿ ಪಟುಗಳ ಬಲ ಹಾಗು ದೌರ್ಬಲ್ಯವನ್ನು ಅಳೆಯುವ ಮೊದಲು ಒಮ್ಮೆ ಅವರ ವೈಯಕ್ತಿಕ ಸಾದನೆಗಳ ಬಗ್ಗೆಯೂ ತಿಳಿಯುವುದು ಲೇಸು.



ಇವರಿಬ್ಬರ ವೈಯಕ್ತಿಕ ದಾಖಲೆಗಳ ಬಗ್ಗೆ ಒಮ್ಮೆ ಕಣ್ಣಾಹಿಸಿದರೆ ಸುಶೀಲ್ನ ದಾಖಲೆಗಳದೆ ಮೇಲುಗೈ. ೨೦೦೩ ರಲ್ಲಿ  ಮೊದಲ ಬಾರಿಗೆ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಪದಕ ಗೆಲ್ಲುವುದರ ಮೂಲಕ ಬೆಳಕಿದೆ ಬಂದ ಸುಶೀಲ್ ಕುಮಾರ್ ಇಲ್ಲಿಯವರೆಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಟ್ಟು ೧೫ ಪದಕಗಳನ್ನು ಗೆದ್ದಿರುತ್ತಾನೆ. ಒಲಿಂಪಿಕ್ಸ್ನಲ್ಲಿ ಎರಡು, ಕಾಮಾನ್ವೆಲ್ತ್ ಚಾಂಪಿಯನ್ಶಿಪ್ ನಲ್ಲಿ ಐದು, ಏಷ್ಯನ್ ಚಾಂಪಿಯನ್ಶಿಪ್ ನಲ್ಲಿ ನಾಲ್ಕು, ಕಾಮಾನ್ವೆಲ್ತ್  ಹಾಗೂ ಏಷ್ಯನ್ ಗೇಮ್ಸ್ ನಲ್ಲಿ ತಲಾ ಎರಡು ಹಾಗು ಒಂದು ಪದಕವನ್ನು ಗಳಿಸಿರುವ ಸುಶೀಲ್ ೨೦೧೦ ರ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್ ಆಗಿಯೂ ಹೊರಹೊಮ್ಮುತ್ತಾನೆ.  ಒಮ್ಮೆಯೂ ಸೋಲನ್ನೇ ಕಾಣದ ‘ದಿ ಗ್ರೇಟ್ ಗಾಮ’ನನ್ನು ಬಿಟ್ಟರೆ ಭಾರತದ ಕುಸ್ತಿ ಇತಿಹಾಸದಲ್ಲೇ ಈ ಮಟ್ಟಿನ ಸಾಧನೆ ಮಾಡಿರುವರು ಮತ್ತೊಬ್ಬರಿಲ್ಲ!

ಇನ್ನು ನರಸಿಂಗ್ ಯಾದವ್ನ ವಿಚಾರಕ್ಕೆ ಬಂದರೆ ೨೦೧೦ ರಲ್ಲಿ ನೆಡೆದ ಕಾಮಾನ್ವೆಲ್ತ್  ಗೇಮ್ಸ್ನಲ್ಲಿ ಚಿನ್ನದ ಪದಕವನ್ನು ಗೆಲ್ಲುವುದರ ಮೂಲಕ ಹೆಸರು ಮಾಡುತ್ತಾನೆ. ಅಲ್ಲಿಂದೀಚೆಗೆ ಅಂದರೆ ಸುಮಾರು ಆರು ವರ್ಷಗಳಲ್ಲಿ ನರಸಿಂಗ್ ಗೆದ್ದಿರುವುದು ನಾಲ್ಕು ಪದಕಗಳು. ಇದೇ ಕಾಲಘಟ್ಟದಲ್ಲಿ ಸುಶೀಲ್ ಗೆದ್ದಿರುವುದು ಆರು ಪದಕಗಳು! ಪದಕದಳ ವಿಚಾರ ಅದೇನೇ ಇದ್ದರೂ ಮೂರು ಬಾರಿ ಒಲಿಂಪಿಕ್ಸ್ ನಲ್ಲಿ ಆಡಿರುವ ಅನುಭವವುಳ್ಳ ಸುಶೀಲ್ನನ್ನು ಕಡೆಗಣಿಸುವುದು ಸುಲಭವಲ್ಲ. ಇದೆ ಕಾರಣಕ್ಕೆ ತನ್ನ ಹಾಗೂ ನರ್ಸಿಂಗ್ನ ನಡುವೆ ಒಂದು ಸ್ಪರ್ಧೆ ಇಟ್ಟು ಜಯಶಾಲಿನ್ನೇ ಒಲಿಂಪಿಕ್ಸ್ಗೆ ಕಳಿಸಿ ಅನ್ನುವ ಸುಶೀಲ್ನ ವಾದದಲ್ಲಿ ತೊಕವಿತ್ತು.


ಒಲಿಂಪಿಕ್ಸ್ಗೆ ಸ್ಪರ್ದಾಳುಗಳನ್ನ ಆಯ್ಕೆ ಮಾಡುವ ಮುನ್ನ ಉಂಟಾಗುವ ಸಂದಿಗ್ನತೆ ಇದೇನು ಹೊಸತಲ್ಲ. ೧೯೯೬ ರ ಅಟ್ಲಾಂಟಾ ಒಲಿಂಪಿಕ್ಸ್ನ ೪೮ ಕೆ ಜಿ ವರ್ಗಗಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಭಾರತ ಎಂಟ್ರಿಗೆ ಕಾರಣವಾಗಿದ್ದ  ಕಾಕಾ ಪವಾರ್ನನ್ನು ಬಿಟ್ಟ್ಟು ಪಪ್ಪು ಯಾದವ್ನನ್ನು ಆಡಲು ಕಳುಹಿಸಿತು. ಕಾಕಾ ಪವಾರ್ ಕೂಡ ಅಂದು ತಮ್ಮಿಬ್ಬರ ಮದ್ಯೆ ಒಂದು ಸ್ಪರ್ಧೆಯನ್ನು ನೆಡೆಸಬೇಕೆಂದು ಬೇಡಿಕೊಂಡ. ಆತನ ಕೂಗನ್ನು ಕೇಳದ WFI (Wrestling  Federation of India) ಯಾದವ್ನನ್ನು ಕಳಿಸಿ ಯಾವುದೇ ಪಾಯಿಂಟ್ಸ್ಗಳೂ ಸಹ ಗಳಿಸದೆ  ಒಲಿಂಪಿಕ್ಸ್ನಿಂದ ಸೋತು ಹೊರಬರಬೇಕಾಗುತ್ತದೆ. ೨೦೦೪ ರ ಅಥೆನ್ಸ್ ಒಲಿಂಪಿಕ್ಸ್ ನಲ್ಲೂ  ಸಹ  ಯೋಗೇಶ್ವರ್ ದತ್ತ್ ಆಯ್ಕೆಯಾದದನ್ನು ಪ್ರೆಶ್ನಿಸಿ ಆಗಿನ ಉದಯೋನ್ಮುಖ ಕುಸ್ತಿ ಪಟು ಕೃಪಾಶಂಕೆರ್  ಪಟೇಲ್ ದೆಹಲಿ ಹೈ ಕೋರ್ಟ್ನ ಮೊರೆ ಹೋಗುತ್ತಾನೆ. ಅಂದು ವಿಚಾರಣೆಯನ್ನು ಕೈಗೆತ್ತುಕೊಂಡ ಹೈ ಕೋರ್ಟ್ ದೇಶಕ್ಕೆ ಒಲಿಂಪಿಕ್ಸ್ನಲ್ಲಿ ‘ಆಡುವ ಅರ್ಹತೆಯನ್ನು ತಂದು ಕೊಡುವ’ ವ್ಯಕ್ತಿಯೇ ಒಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿದಿಸಬೇಕೆಂಬ ಮಹತ್ವದ ತೀರ್ಪನ್ನು ನೀಡುತ್ತದೆ. ಅಲ್ಲಿಗೆ IOC (International Olympic Committee) ನೆಡೆಸುವ ಅರ್ಹತ ಪಂದ್ಯಗಳಿಗೆ ಕಾರಣಾನಂತರಗಳಿಂದಲೂ ಸ್ಪರ್ದಿಸಲು ಆಗದಿದ್ದರೆ ಆತನ/ಆಕೆಯ ಒಲಿಂಪಿಕ್ಸ್ ಕನಸು ಅಲ್ಲಿಗೆ ಭಗ್ನವಾಗುತ್ತದೆ!
ಇಲ್ಲಿ ವಿಚಾರ ಮಾಡಬೇಕಾದ ಒಂದು ವಿಷಯವೇನೆಂದರೆ ಒಲಿಂಪಿಕ್ಸ್ನಲ್ಲಿ ಯಾವುದೇ ಸ್ಪರ್ದಾಳು ಆಡುವುದು ದೇಶದ ಪರವಾಗೇ ವಿನಃ ಆತನ ವೈಯಕ್ತಿಕ ಚಹರೆಗಾಗಿ ಅಲ್ಲ. ದೇಶವನ್ನು ಪ್ರತಿನಿಧಿಸುವ ವ್ಯಕ್ತಿ ದೇಶದ ಅದಷ್ಟೂ ಜನರ ಕನಸನ್ನು ನನಸಾಗಿಸುವಂತವನಾಗಿರಬೇಕು. ಆತ ದೇಶದ 'ದಿ ಟಾಪ್ ಮೋಸ್ಟ್' ಆಟಗಾರನಾಗಿರಬೇಕೇ ವಿನಃ ಕೇವಲ ಒಂದು ಪದಕದ ಬಲದಲ್ಲಿ ದೇಶದ ಮಹತ್ತರ ಕನಸನ್ನು ಹೊತ್ತು ಒಯ್ಯಬಾರದು. ಅದೇ ಕಾರಣಕ್ಕೆ IOC (International Olympic Committee) ಅರ್ಹತೆ ಪಡೆಯುವ ಪ್ರತಿಯೊಂದು ದೇಶಕ್ಕೂ ಆಟಗಾರರನ್ನು ಆಯ್ಕೆ ಮಾಡುವ ಅಂತಿಮ ನಿರ್ಧಾರ ಆಯಾ ದೇಶಕ್ಕೆ ಬಿಟ್ಟಿರುತ್ತದೆ. ಭಾರತದ  ನ್ಯಾಷನಲ್ ಸ್ಪೋರ್ಟ್ಸ್ ಡೆವೆಲಪ್ಮೆಂಟ್  ಕೋಡ್ನ ಪ್ರಕಾರ ( Selection Procedure: 13.1) ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿದಿಸುವ ವ್ಯಕ್ತಿ ಅಥವಾ ತಂಡ ದೇಶದ ಘನತೆಯನ್ನು ಹೆಚ್ಚಿಸಿ ದೇಶಕ್ಕೆ ವೈಭವವನ್ನು ಗಳಿಸಿಕೊಡುವಂತಿರಬೇಕೆಂದು ಹೇಳಲಾಗಿದೆ. ಹಾಗಾಗಿ ದೇಶದ ದಿ ಬೆಸ್ಟ್ ಆಟಗಾರ ಅಥವಾ ತಂಡವನ್ನು ಆಯ್ಕೆ ಮಾಡಬೇಕೆಂದು ಮಾತ್ರ ಹೇಳಿದೆ. ಕೇವಲ ಒಂದು ಪದಕದ ಆಸರೆಯ ಮೇಲೆ ಇತರ ಆಟಗಾರ/ತಂಡವನ್ನು ಕಡೆಗಣಿಸಿ ಎಂದು ಎಲ್ಲೂ ಸಹ ಹೇಳಲಾಗಿಲ್ಲ.
ಒಲಿಂಪಿಕ್ಸ್ ನಲ್ಲಿ ದೇಶವನ್ನು ಪ್ರತಿನಿದಿಸಲು ಆಟಗಾರರ ಆಯ್ಕೆಯಲ್ಲಿ ಪಾರದರ್ಶಕ ಹಾಗೂ ಘನವಾದ ನಿಯಮಗಳನ್ನು IOC (Indian Olympic Association) ಜಾರಿಗೊಳಿಸದಿರುವುದೇ ಇಷ್ಟೆಲ್ಲಾ ತೆಲೆನೋವಿಗೆ ಕಾರಣ ಎನ್ನಬಹುದು. ಬಹುತೇಕ ದೇಶಗಳಲ್ಲಿ ಈಗಾಗಲೇ ಸ್ಪರ್ದಾಳುಗಳು ಒಲಿಂಪಿಕ್ಸ್ಗೆ ಬರಪೂರ ತಯಾರಿ ನೆಡೆಸುತ್ತಿದ್ದರೆ ನಮ್ಮಲ್ಲಿ ಆಟಗಾರರು ಕೋರ್ಟ್ನ ಮೊರೆ ಹೋಗುತ್ತಿರುವುದು ವಿಪರ್ಯಾಸ ವೇ ಸರಿ. ಪ್ರತಿಯೊಬ್ಬ ಆಟಗಾರನು ಒಂದೊಂದು ಕಾರಣಕ್ಕೆ ಹೆಸರು ಮಾಡಿರುತ್ತಾನೆ. ನರಸಿಂಗ್ ನ ಸಾಧನೆ ಸುಶೀಲ್ ಗೆ ತಾಳೆಹಾಕಿ ನೋಡಿದರೆ ಕೊಂಚ ಮಟ್ಟಿಗೆ ಕಡಿಮೆ ಎನಿಸಿದರೂ ಆತ ಆಡಿರುವ ಎಲ್ಲ ಪಂದ್ಯಗಳು ಭಾರತಕ್ಕೆ ಅರ್ಹತೆ ಸಿಕ್ಕಿರುವ ೭೪ ಕೆಜಿ ಯ ವರ್ಗದ್ದಾಗಿವೆ. ಸುಶೀಲ್ ಕೇವಲ ಒಂದೇ ಬಾರಿ ಈ ವರ್ಗದಲ್ಲಿ ಗೆದ್ದಿರುತ್ತಾನೆ.
ಇನ್ನು ಪುರುಷರ ಟೆನ್ನಿಸ್ನ ಆಯ್ಕೆಯ ವಿಚಾರದಲ್ಲೂ ಅದೇ ಸಂದಿಗ್ನತೆ.  ವಿಶ್ವದ ಟಾಪ್ ಟೆನ್ ಡಬಲ್ಸ್ ರಾಂಕಿಂಗ್ ಹೊಂದಿರುವ ಒಂದೇ ಕಾರಣಕ್ಕಾಗಿ ರೋಹನ್ ಬೋಪಣ್ಣ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುತ್ತಾನೆ.  ಆದ ಮಾತ್ರಕ್ಕೆ ಆತ 'ತನಗಿಷ್ಟ'ವಾದ ಆಟಗಾರನನ್ನು ಸ್ವತಃ ಆಯ್ಕೆ ಮಾಡಬಹುದು! ಆಯ್ಕೆಯ ವಿಚಾರಕ್ಕೆ ಬಂದಾಗ ಆತ ದೇಶ ಕಂಡ ಅತ್ಯಂತ ಸ್ಪೂರ್ತಿದಾಯಕ ಟೆನ್ನಿಸ್ ಪಟು ಲಿಯಾಂಡರ್ ಪೇಸ್ ನನ್ನು ಬಿಟ್ಟು ಮತ್ಯಾರೋ ಒಬ್ಬಾತನನ್ನು ಆಯ್ಕೆ ಮಾಡಿಕೊಡುವಂತೆ ಆಯ್ಕೆ ಸಮಿತಿಯ ಮುಂದೆ ಕೇಳಿಕೊಳ್ಳುತ್ತಾನೆ. ಆದರೆ ಆಯ್ಕೆ ಸಮಿತಿ ಈತನ ಕೋರಿಕೆಯನ್ನು ಬದಿಗೊತ್ತಿ ಪೇಸ್ ರನ್ನೇ ಜೊತೆ ಮಾಡಿ ಒಲಿಂಪಿಕ್ಸ್ ಗೆ  ಕಳಿಸಲು ಮುಂದಾಗಿದೆ. ನಿಯಮಗಳ ಪೊಳ್ಳುತನ ಎಷ್ಟಿದೆಎಂದು ಇಲ್ಲಿ ಕಾಣಬಹುದು. ದೇಶವನ್ನು ಪ್ರತಿನಿದಿಸಲು ಪ್ರತಿಯೊಬ್ಬನಿಗೂ ಆಸೆ ಇರುತ್ತದೆ. ಹಾಗಂತ ಆಟಗಾರರನ್ನು ಹಾವು-ಏಣಿ ಆಟವಾಡಲು ಅನುವು ಮಾಡಿ ಕೊಡುತ್ತಿರುವುದು ತಪ್ಪು. ಒಲಿಂಪಿಕ್ಸ್ ಶುರುವಾಗಲು ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ನಮ್ಮ ಆಟಗಾರರು ಎದುರಿಸುತ್ತಿರುವ ಒತ್ತಡ ನಿಜವಾಗಿಯೂ ಖೇದವನ್ನುಂಟುಮಾಡುತ್ತದೆ. ದೇಹಸಾಧನೆ ಮಾಡಬೇಕಾದ ಸಮಯದಲ್ಲಿ ದಿನ ಬೆಳಗೆದ್ದು ಕೋರ್ಟನ ತೀರ್ಪಿಗೆ ಕಾಯುವ ವ್ಯವಸ್ಥೆಯಲ್ಲಿ ದೇಶಕ್ಕೆ ಚಿನ್ನ ಗಿಟ್ಟಿಸಿ ಕೊಡಬೇಕೆಂದು ಆಟಗಾರರನ್ನು ಕೇಳುವುದು ಅಪಾಹಾಸ್ಯ ಮಾಡಿದಂತಾಗುತ್ತದೆ. ಜನಸಂಖ್ಯೆ ಕೋಟಿಯಿದ್ದರೂ ಪದಕಗಳು ಬೆರಳೆಣಿಕೆಯಷ್ಟೇ ಎಂದು ಕೇಳುವಾಗ ನಾವುಗಳು ಪದಕ ಗಳಿಸಿ ಕೊಡಲು ಹೊರಡುವ ನಮ್ಮವರ ಆಯ್ಕೆ ಸಮಂಜಶವಾಗಿದೆಯೆ ಎಂದೂ ಕೇಳಬೇಕು.

ಅದೇನೇ ಇರಲಿ. ಈ ಬಾರಿ ಆಯ್ಕೆ ಆಗಿರುವ  ಅದಷ್ಟೂ ಆಟಗಾರರು ಇತರ ವಿಷಯಗಳನ್ನು ಬದಿಗಿಟ್ಟು, ದೇಶಕ್ಕಾಗಿ ಸೆಣೆಸಿ ಹೆಚ್ಚು ಹೆಚ್ಚು ಪದಕಗಳನ್ನು ಗೆಲ್ಲಲಿ ಎಂದು ಆಶಿಸೋಣ. ಕೇವಲ ಒಂದಂಕಿಗಳಿಗೆ ಸೀಮಿತವಾಗಿದ್ದ ಪದಕಗಳ ಸಂಖ್ಯೆ ರಿಯೋ ಒಲೆಂಪಿಕ್ಸ್ನಲ್ಲಿ ಎರಡಂಕಿಯಾಗುವ ಕನಸನ್ನೂ ಕಾಣೋಣ. 

Friday, August 19, 2016

ಕವನ: ಒಲವಿನ ಸ್ವಾರ್ಥ..

ಹಸಿರು ಬತ್ತುವ ಕಾಲವಿದು ಎಂದು
ಸರಸರನೆ ಬಂದ ಮಳೆರಾಯನಂದು.
ಕೆರೆ ಕಟ್ಟೆಗಳ ಹೊಟ್ಟೆಯನು ತುಂಬಿ
ಗದ್ದೆಗಳ ಒಳಗೆ ನಮ್ಮ ದಬ್ಬಿದನಂದು.

ಭತ್ತವ ಬಿತ್ತಲು ಕನಸುಗಳು ಅರಳಿ
ನಲಿದವು ಮನದಲ್ಲಿ ಹಸಿರಿನ ಬೆಳಕನ್ನು ಚೆಲ್ಲಿ
ಮನೆಯ ಮಗಳಂತೆ ಅರಳಿದ ಧರೆಯು
ನೋವ ಸಹಿಸಿತು ನೇಗಿಲ ನುಣುಪಾದ ತುದಿಗೆ

ಬಾಗಿ ಬಳುಕುವ ನಿನ್ನ ಹಸಿರ ಕಾಂತಿ
ಮನದಲ್ಲಿ ಮೂಡುವುದು ನೆಮ್ಮದಿಯ ಶಾಂತಿ
ಅವರಿವರು ನಿನ್ನ ಕೆಣಕರು ಎಂದೂ
ನನ್ನೀ ಅಭಯವಿರುವುದು ನಿನ್ನೊಂದಿಗೆಂದೂ

ಇಷ್ಟೇ ಬಿತ್ತಿದೆ ನಾನು, ಅಷ್ಟು ನೀಡಿದೆ ನೀನು
ಈ ಋಣವ ನಾ ತೀರಿಸಬಲ್ಲೆನೇನು?
ಚಳಿ ಗಾಳಿಯನ್ನೂ ಲೆಕ್ಕಿಸದೆ ನೀನು
ಮನೆಗಾಗಿ ಬೆಳೆದೆ ಮಗಳಾಗಿ ನೀನು.

ಭತ್ತದ ಕಾಳುಗಳಿಗೆ ಕತ್ತ ಹಿಸುಕಬೇಕೆಂದು
ಕೊಲ್ಲ ಹೊರಟರಲ್ಲ ನಿನ್ನ ಪಾಪಿಗಳು ಇಂದು!
ನನ್ನ ಅಭಯವನ್ನು ಸುಳ್ಳೆಂದು ಮರೆತು
ಕ್ಷಮಿಸಿಬಿಡು ಮಗಳೇ ನಮ್ಮಿ ಸ್ವಾರ್ಥಿ ಜನುಮವನು.

(ಮಳೆಯ ನೆಪದಲ್ಲಿ ಮೂಡುವ ಒಲವು ...
ಹನಿಯಾಗಿ,ಹದವಾಗಿ,ಹಸಿರಾಗಿ, ಬೀಜವಾಗಿ ಸಾಯಬೇಕು
ಕೊನೆಗೆ ಹಸಿವೆಂಬ ಸ್ವಾರ್ಥದಲ್ಲಿ...!)

ಕಥೆ :ಮೂಕಜ್ಜಿಯ ದಾರಿ.....

ಸಂಜೆ ಆರಾದರೂ ಅಕ್ಕ-ಪಕ್ಕದ ಮನೆಯ ಹುಡುಗರ ಜೊತೆ ಇನ್ನೂ ಆಡುತ್ತಿದ್ದ ಮೊಮ್ಮಗನ್ನನ್ನು ಕಂಡು ಅಜ್ಜಿ "ಗುಂಡಾ... ಅದ್ ಎಷ್ಟ್ ಅಂತ ಕುಣಿತೀಯ..ಕತ್ಲಾತು.. ಬಾ.. ಬಂದ್ ಓದ್ಕ" ಅಂದಳು. ಶಕ್ಕ್ತಿಇಲ್ಲದ ಆ ದ್ವನಿ ಮೊಮ್ಮಗನ ಸಣ್ಣ ಕಿವಿಗಳನ್ನು ತಟ್ಟಲಿಲ್ಲ. ಆದರೂ ಅಜ್ಜಿ ಮತ್ತೊಮ್ಮೆ ತನ್ನ ಪ್ರಯತ್ನವನ್ನು ಮಾಡಿದಳು. "ಅರ್ರೆ..ಇನ್ನೂ ಸಂಜೆ ಆರು..ಕತ್ಲೆ ಏನ್ ಆಗಿಲ್ಲ.. ಹೋಗಿ ಕನ್ನಡಕ ಹಾಕೋಳಿ... ಆಡೋ ವಯಸ್ಸು, ಇವಗ್ ಆಡದೆ ಇನ್ನ್ಯಾವಾಗ ಆಡ್ತಾನೆ?! ಆಮೇಲೆ ಅವ್ನ ಹೆಸ್ರು ಸೈದಾಂತ್.. ಗುಂಡ ಅಲ್ಲ!" ಕೈಯಲ್ಲಿ ರಿಮೋಟ್ ಹಿಡಿದು ಟಿವಿಯ ಮುಂದೆ ರಾರಜಿಸಿದ್ದ ಸೊಸೆ ಏರು ದ್ವನಿಯಲ್ಲಿ ಕೂಗಿದಳು.


ಅರ್ಥವರಿಯದ,ಒಮ್ಮೆಯೂ ಆಡದ, ಕ್ಲಿಷ್ಟ ಪದದ ಮೊಮ್ಮಗ ಎಂದಿಗೂ ಅಜ್ಜಿಗೆ ಪ್ರೀತಿಯ ಗುಂಡ. ಸೊಸೆಯ ಮಾತನ್ನು ಮನಸ್ಸಿಗೆ ಹಾಕಿಕೊಳ್ಳದೆ ಅಜ್ಜಿ ತನ್ನ ಊರುಗೋಲನ್ನು ಹೊರಗೆಳೆದು ತುಸು ದೂರ ನಡೆದಾಡಲು ಹೊರಟಳು. ಆಗ ತಾನೆ ಮುಳುಗಿದ್ದ ಸೂರ್ಯನ ಕಿರಣಗಳು ಇನ್ನೂ ಪಶ್ಚಿಮದ ಆಗಸದಲ್ಲಿ ಹೊಳೆಯುತಿದ್ದವು.


ವಯಸ್ಸು ಎಪ್ಪತ್ತಾದರೂ ಆಕೆಯ ಶಕ್ತಿಯೇನೂ ಕುಂದಿರಲಿಲ್ಲ. ಕೆಲವೇ ಕ್ಷಣಗಳಲ್ಲಿ ಅಜ್ಜಿ ಬಹು ದೂರ ನೆಡದಿದ್ದಳು. ಸೂರ್ಯನ ಕಿರಣಗಳು ಕಣ್ಮರೆಯಾಗಿ ಕೆಂದಾವರೆ ಬಣ್ಣದ ಆಕಾಶ ಕಣ್ಣಿಗೆ ಹಿತವಾಗಿ ಕಾಣುತಿತ್ತು. ದೂರ ದೂರಕ್ಕೆ ಹರಡಿರುವ ಹಸಿರಾದ ಮೈದಾನ, ಅದಕ್ಕೆ ಆಂಟಿಕೊಂಡು ಮೇಲೆದ್ದಿರುವಂತಿರುವ ಆಕಾಶ, ದೇಶ-ವಿದೇಶವನ್ನು ಕಂಡಿರದ ಅಜ್ಜಿಗೆ ಈ ಜಾಗವೇ ಎಲ್ಲಾ. ತನ್ನ ಮನದಲ್ಲಿರುವ ತುಮುಲಗಳನ್ನೆಲ್ಲ ಮುಳುಗುವ ಸೂರ್ಯ ನೊಂದಿಗೆ ಹಂಚಿಕೊಳ್ಳುತ್ತಿದ್ದಳು. ಅದೆಷ್ಟೇ ಮಾತಾನಾಡಿದರೂ ಸೂರ್ಯ ಎಂದಿಗೂ ಬೇಜಾರಾಗುತ್ತಿರಲಿಲ್ಲ, ಎಲ್ಲವನ್ನು ತಾಳ್ಮೆಯಿಂದ ಆಲಿಸಿ ಅಜ್ಜಿಯ ಮನಸ್ಸನ್ನು ಹಗುರಾಗಿಸುತ್ತಿದ್ದ. ಆದರೆ ಇಂದ್ಯಾಕೋ ಅಜ್ಜಿಗೆ, ಸೊಸೆಯ ಕೊಂಕು ಮಾತು ಮನಸ್ಸಿಗೆ ನಾಟಿತು.
"ತಾನೊಬ್ಬ ಅನಕ್ಷರಸ್ತೆ ಅನ್ನುವ ಒಂದೇ ಕಾರಣಕ್ಕೆ ಜನ ಹೀಗೆ ನೋಡ್ತಾರ? ನಾನೂ ಲಕ್ಷ್ಮಿತರ ಸ್ಕೂಲು ಕಾಲೇಜು ಅಂತ ಹೋಗಿದ್ದರೆ ಮಾತ್ರ ನನ್ನನು ಗುರ್ತಿಸ್ತಿದ್ರ? ನನ್ನ ಮಕ್ಳು ನನ್ನ ಗೌರವಿಸುತಿದ್ರ? ತನ್ನ ತಾಯಿ ಒಬ್ಬ ಅವಿಧ್ಯಾವಂತೆ ಅನ್ನೋ ಒಂದೇ ಕಾರಣಕ್ಕೆ ಇಂದು ನಾನು ನನ್ನ ಮಕ್ಕಳಿಗೇ ಬೇಕು-ಬೇಡವಾಗಿದ್ದೀನ? ಹಾಗಾದ್ರೆ ನಾನು ಜೀವನದಲ್ಲಿ ಇಷ್ಟೆಲ್ಲಾ ಕಷ್ಟ ಬಿದ್ದು, ಹೊಟ್ಟೆ-ಬಟ್ಟೆ ಕಟ್ಟಿ ಅವ್ರನ್ನೆಲ್ಲ ಬೆಳಸಿದೆಲ್ಲ ಲೆಕ್ಕಕ್ಕೆ ಇಲ್ವಾ? ಲಕ್ಹ್ಮಿ ಮಕ್ಕ್ಲು ಅಕೆನ ಅದೆಷ್ಟು ಪ್ರೀತಿ ವಿಶ್ವಾಸದಿಂದ ನೋಡ್ತಾರೆ! ಪ್ರತಿ ವಾರ ಒಬ್ಬೊಬ್ರು, ಒಬ್ಬೊಬ್ರ ಮನೆಗೆ ಕರ್ಕೊಂಡು ಹೋಗ್ತಾರೆ. ಶಾಲಾ ಶಿಕ್ಷಕಿ ಆದ ಆಕೆಗೆ ಊರಿಗೆ ಊರೆ ಗೌರವಿಸುತ್ತೆ.” ಜೀವನವೆಲ್ಲಾ ಪರರಿಗೆ ಮುಡಿಪಾಗಿಟ್ಟ ಅಜ್ಜಿ ಮೊದಲ ಬಾರಿಗೆ ತನ್ನ ಜೀವನದ ಅರ್ಥ ತಿಳಿಯಬಯಸಿದಳು. ‘ನಿರ್ಮಲ ತಾಯಿಯ ಪ್ರೀತಿ, ಅನಮ್ಯ ಕರುಣೆಗಿಂತಲೂ ಕಾಲೇಜು, ಡಿಗ್ರಿಗಳೇ ಹೆಚ್ಚಾ..?’ ಅಜ್ಜಿ ಯೋಚಿಸತೊಡಗಿದಳು.


ದೂರ ದೂರಕ್ಕೆ ಹಾರಿ ದಣಿದ ಹಕ್ಕಿಗಳು ಪುನ್ಹ ತಮ್ಮ ಗೂಡು ಸೇರುತ್ತಿದ್ದವು. ಅಜ್ಜಿಯ ಕಣ್ಣುಗಳು ದೂರದ ಮೈದಾನದಲ್ಲಿ ಆಡುತ್ತಿದ್ದ ಮಕ್ಕಳನ್ನೇ ದಿಟ್ಟಿಸುತ್ತಿದ್ದವು. ಇದ್ದಕ್ಕಿದ್ದಂತೆ ಅಕೆಗೆ ಇಬ್ಬರು ಪುಟ್ಟ ಹುಡುಗಿಯರು ಇತ್ತ ನೆಡೆದುಕೊಂಡು ಬರುವುದು ಕಂಡಿತು.ಅಜ್ಜಿ ತನ್ನ ಕಣ್ಣನ್ನೊಮ್ಮೆ ಮುಚ್ಚಿ ಬಿಟ್ಟಳು. ಸುಮಾರು ಎಂಟತ್ತು ಪ್ರಾಯದ ಅವರಲ್ಲಿ ಒಬ್ಬಾಕೆ ಅಜ್ಜಿಯನ್ನು ನೋಡಿ ಮುಗುಳ್ನಕ್ಕಳು. ಆಕೆಯ ಬಲ ಕೈಯಲ್ಲಿ ಸಿಂಬು (ಸಗಣಿ ತುಂಬಿದ ಕುಕ್ಕೆಯನ್ನುಒರಲು ತಲೆಗೆ ಆದಾರವಾಗಿ ಬಳಸುವ ಬಟ್ಟೆಯ ಸಾದನ) ಹಾಗು ಎಡಗೈಯಲ್ಲಿ ಸಗಣಿಯ ಖಾಲಿ ಕುಕ್ಕೆ. ಮೂಗ ಮುಗುತ್ತಿ ಹಾಗೂ ಕೈಯ ಒಂದು ಗಾಜಿನ ಬಳೆ ಬಿಟ್ಟು ಆಕೆಯ ಮೈಮೇಲೆ ಮತ್ಯಾವುದೇ ಆಭರಣಗಳಿಲ್ಲ. ತನ್ನ ಸಣ್ಣ ತಮ್ಮನಿಗಾಗಿ ದಾರಿಯಲ್ಲಿದ್ದ ಕಿತ್ತಳೆ ಮರದಿಂದ ನಾಲ್ಕು ಪುಟ್ಟ ಕಿತ್ತಳೆಹಣ್ಣುಗಳನ್ನು ಅಂಗಿಯ ಜೇಬಿನಲ್ಲಿ ತೂರಿಸಿದ್ದಾಳೆ. ಮುಂಜಾವಿನಿಂದ ಸಂಜೆಯವರೆಗೂ ಹಟ್ಟಿಯಲ್ಲೇ ದುಡಿದು ದಣಿದ ಸಣಕಲು ಮೈಯಿಂದ ಬರುವ ವಾಸನೆಗೆ ಜನರು ಆಕೆಯಿಂದ ದೂರ ಸರಿಯುತ್ತಿದ್ದರು. ಆಕೆಯ ಪಕ್ಕದಲ್ಲಿದ್ದ ಹುಡುಗಿ ನಾಲ್ಕಾರು ಪುಸ್ತಕಗಳನ್ನು ಎದೆಗೆ ಅವುಚಿಗೊಂಡು ಬರುತ್ತಿದ್ದಳು. ಮೈತುಂಬ ಬಣ್ಣದ ಬಟ್ಟೆ ದರಿಸಿದ್ದ ಅವಳಿಂದ ಇವಳು ತುಸು ದೂರದಲ್ಲೇ ಇದ್ದಳು. ಆಕೆಯ ಕೈಲಿದ್ದ ಪುಸ್ತಕದ ಮೇಲೆ ಇವಳ ದೃಷ್ಟಿ ನೆಟ್ಟಿರುವುದು ಕಂಡಿತು.


.


.


.


ಅದೊಂದು ದಿನ ಮನೆಯ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿಕೊಳ್ಳಲು ಶಾಲೆಯ ಶಿಕ್ಷಕರು ಮನೆಗೆ ಬಂದಿದ್ದರು. ಈಕೆ ಕುಕ್ಕೆಯಲ್ಲಿ ಗದ್ದೆಗೆ ಸಗಣಿ ಹಾಕಿ ಬರುವಾಗಲೇ ಎಲ್ಲಾ ಹೊರಟಿದ್ದರು. ಮನೆಯ ಯಾರೊಬ್ಬರೂ ಈಕೆಯ ಬಗ್ಗೆ ಹೇಳಲಿಲ್ಲವನ್ನಿಸುತ್ತೆ. ಈಕೆಯೂ ಶಾಲೆಗೆ ಹೋದರೆ ಹಟ್ಟಿಯ ಕೆಲಸ ಯಾರು ಮಾಡುವರು?


ಮುಂಜಾನೆಯ ಕೋಳಿ ಕೂಗುವ ಮುನ್ನವೇ ಕೊರೆಯುವ ಚಳಿಯಲ್ಲಿ ಎದ್ದು ಹಟ್ಟಿಗೆ ಹೋಗಿ, ಸಗಣಿಯನ್ನು ಬಾಚಿ, ಕುಕ್ಕೆಗೆ ತುಂಬಿ, ಎರಡು ಮೈಲು ದೂರ ಚಲಿಸಿ ಕುಕ್ಕೆಯನ್ನು ಖಾಲಿ ಮಾಡಿ, ವಾಪಸ್ಸು ಬಂದು ಪುನಃ ಮತ್ತೊಮ್ಮೆ ಕುಕ್ಕೆಯನ್ನು ತುಂಬಿ, ಖಾಲಿ ಮಾಡಿ ಬರುವಾಗಲೇ ಅಮ್ಮನ ಸದ್ದು, ‘ಇನ್ನೂ ಹಾಲ್ ಬಿಟ್ತಿಲ್ವೇನೆ!?’ ನೋಯುವ ಎಳೆ ಸೊಂಟದ ಮೇಲೆ ಕೈ ಇಟ್ಟು ದಣಿವು ನೀಗಲು ಸಮಯವಿಲ್ಲ. ಕೊಟ್ಟಿಗೆಯ ಗೋಡೆ ಮೇಲಿಟ್ಟಿರುವ ಪಾತ್ರೆಯನ್ನು ತೆಗೆದು, ಒದೆಯುವ ನಾಲ್ಕೈದು ಹಸುಗಳಿಂದ ಹಾಲು ಕರೆಯುವಷ್ಟರಲ್ಲಿ ಘಂಟೆ ಒಂಭತ್ತು! ಪುಟ್ಟ ತಮ್ಮ ಶಾಲೆಗೆ ಹೋಗುವ ಮುನ್ನ ಹಾಲು ಬಿಸಿ ಮಾಡಿ ಕೊಡಬೇಕು ಎನ್ನುತ ಓಡೋಡಿ ಬರುತ್ತಿದ್ದಳು. ಇಷ್ಟೆಲ್ಲಾ ಮುಗಿದು ಹಸಿಯುವ ಹೊಟ್ಟೆಗೆ ಉಳಿಯುತ್ತಿದ್ದಿದ್ದು ಎರಡು ತಣ್ಣನೆಯ ರೊಟ್ಟಿ ಹಾಗು ಉಪ್ಪಿನಕಾಯಿ. ಅದನ್ನೇ ಸಂತೋಷದಿಂದ ತಿಂದು ಪುನಃ ಗದ್ದೆಯ ಕಡೆ ಮುಖ ಮಾಡಿ ಕೆಲಸಕ್ಕೆ ಹೋಗುತ್ತಿದ್ದಳು.


ಈಕೆ ಎಂದರೆ ಊರ ಮಕ್ಕಳಿಗಂತೂ ವಿಪರೀತ ಇಷ್ಟ. ಸಣ್ಣ ಕಥೆಯನ್ನೂ ಸ್ವಾರಸ್ಯಯುತವಾಗಿ ಹೇಳುತ್ತಾ ಹೋದರೆ ಮಕ್ಕಳು ತೆರೆದ ಬಾಯಿಯನ್ನು ಮುಚ್ಚುತಿರಲಿಲ್ಲ. ಅಷ್ಟೊಂದು ಸೊಗಸಾದ ವರ್ಣನೆ! ಕೆಲವೊಮ್ಮೆ ಊರ ಅಜ್ಜಿಯಂದಿರೂ ಈಕೆಯ ಕಥೆಯನ್ನು ಕೇಳಲು ಬರುವುದುಂಟು. 'ಚಿತ್ರಮಂದಿರಕ್ಕೆ ಹೋಗಿ ಹಣ ವೆಚ್ಚ ಮಾಡುವುದಕಿಂತ ಈಕೆಯ ಕಥೆ ಸೊಗಸು' ಅನ್ನುವ ಹೊಗಳಿಕೆಯ ಮಾತಿಗೆ ಈಕೆಯ ಅಪ್ಪ ಸಿಡುಗುತ್ತಿದ್ದ. 'ತಮ್ಮುಗಿಂತ ಅಕ್ಕ ಬಹಳ ಚುರ್ಕು, ಇಸ್ಕೂಲ್ಗೆ ಕಳ್ಸಿ, ಚೆನ್ನಾಗ್ ಓದ್ತಾಳೆ, ಒಳ್ಳೆ ಹೆಸ್ರು ಮಾಡ್ತಾಳೆ ' ಅನ್ನೋ ಮಾತಿಗೆ ಅಪ್ಪನ ಸಿಟ್ಟು ನತ್ತಿಗೇರುತ್ತಿತ್ತು! "ನೆಟ್ಗೆ ಅಡ್ಗೆ ಮಾಡಿ ಪಾತ್ರೆ ಉಜ್ಜೋದ್ ಕಲಿಲಿ ಸಾಕು! ಸ್ಕೂಲು-ಗೀಲು ಎಲ್ಲಾ ಕಂಡಿದಾರೆ" ಅನ್ನುತ ಕೂಗುತ್ತಿದ್ದ. ಅಪ್ಪನ ಮಾತಿಗೆ ಹೆದರಿ ಅಂದಿನಿಂದ ಕಥೆ ಹೇಳುವುದನ್ನು ನಿಲ್ಲಿಸಿ ಬಿಟ್ಟಳು ಸಣಕಲು ಜೀವದ ಹುಡುಗಿ!


ಜೀವನ ಹಟ್ಟಿಯಲ್ಲಿ ಶುರುವಾಗಿ ಹಟ್ಟಿಯಲ್ಲೇ ಕೊನೆಗಾಣುತಿತ್ತು. ಈಕೆಯ ಒಟ್ಟಿಗೆ ಅದೆಷ್ಟೋ ಹುಡುಗಿಯರು!


ಅಪರೂಪಕ್ಕೊಮ್ಮೆ(ಜಾಸ್ತಿ ಇರುವ ಸಂತೆಯ ಚೀಲವನ್ನು ಒರಲು) ವಾರದ ಸಂತೆಗೆ ಅಪ್ಪನೊಟ್ಟಿಗೆ ಹೋದರೆ, ಅದೇ ಎಲ್ಲರೂ ಮಾತಾಡುವ ಬೆಂಗಳೂರು ನೋಡಿದ ಅನುಭವ. ಹಾಗೂ ಮನೆಗೆ ಬಂದು, ಅಮ್ಮನ ಬಳಿ ಸಂತೆಯ ಅನುಭವವನ್ನು ಕಣ್ಣಿಗೆ ಕಟ್ಟುವ ಹಾಗೆ ಹೇಳುತ್ತಿದ್ದಳು. ವರ್ಷದ ಜಾತ್ರೆಯೇ ಯಾರೋ ವರ್ಣನೆ ಮಾಡುವ ಅಮೇರಿಕ ನೋಡುವ ಅನುಭವ! ಜಾತ್ರೆಯ ತಿಂಗಳ ಮುಂಚೆಯೇ, ಜಾತ್ರೆಯಲ್ಲಿ ಏನು ಮಾಡಬೇಕು, ಏನು ತಿನ್ನಬೇಕು, ಎಲ್ಲಿ ಹೋಗಬೇಕು ಅನ್ನೋ ಯೋಚನೆ. ಅಪ್ಪ ಎಲ್ಲಿ ನೋಡಿ ಎಲ್ಲಿ ಹೊಡೆಯುತ್ತಾನೋ ಅನ್ನುವ ಭಯ ಬೇರೆ. ಜಾತ್ರೆ ಮುಗಿದ ಮೇಲೆ ಮುಂದಿನ ಒಂದು ವರ್ಷ ಅದೇ ನೆನಪಲ್ಲಿ ಕಳೆಯುವುದು. ಹಟ್ಟಿಯ ದನ ಎತ್ತುಗಳೊಟ್ಟಿಗೆ……..


ವರ್ಷಗಳು ಉರುಳಿದವು. ತಮ್ಮ ಕಾಲೇಜು ಸೇರಿದ. ಕೆಲ ವರ್ಷಗಳಲ್ಲೇ ಮದುವೆ! ಎಳೆಯ ವಯಸ್ಸಿಗೆ ನಾಲ್ಕು ಮಕ್ಕಳು. ತವರಿನ ಪ್ರಪಂಚ ಒಂದಾದರೆ ಗಂಡನ ಮನೆಯ ಪ್ರಪಂಚ ಮತ್ತೊಂದು. ಜೀವನದಲ್ಲಿ ತನಗಾದ ಅನ್ಯಾಯ ತನ್ನ ಮಕ್ಕಳಿಗಾಗಬಾರದು ಅನ್ನುವ ಬಯಕೆ ಅಕೆಯದು. ಇಲ್ಲೂ ಹಟ್ಟಿ ಕೆಲಸ. ರೊಟ್ಟಿ ಸುಟ್ಟು ಅಳುವ ಮಕ್ಕಳಿಗೆ ಹಾಲುಣಿಸಿ ಉಳಿದವನ್ನು ಶಾಲೆಗೆ ಕಳಿಸುವಾಗ ಸೂರ್ಯ ನತ್ತಿಯ ಮೇಲಿರುತಿದ್ದ. ಇಲ್ಲೂ ಅದೇ ತಣ್ಣಗಾದ ಎರಡು ರೊಟ್ಟಿ ಹಾಗು ಉಪ್ಪಿನಕಾಯಿ. ತನ್ನ ಮಕ್ಕಳೋಟ್ಟಿಗೆ ಗಂಡನ ಅಣ್ಣ-ತಮ್ಮಂದಿರ ಮಕ್ಕಳ ಶುಶ್ರುಷೆಯೂ ಈಕೆಯದೆ. ಒಟ್ಟಿನಲ್ಲಿ ಆ ಪುಟ್ಟ ಊರಿನ ಇಂದಿನ ಯುವಕರೆಲ್ಲ ಈಕೆಯ ತೊಡೆಯ ಮೇಲೆ ಸ್ನಾನ ಮಾಡಿ, ಅತ್ತು-ಒದ್ದಾಡಿ ಬೆಳೆದವರು. ಊರಿಗೆ ತಾಯಿ ಅನಿಸಿದವಳು. ಎಲ್ಲರಿಗೂ ಸಮಾನ ಪ್ರೀತಿ, ಒಲವು ನೀಡಿದ ಈಕೆಗೆ ಯಾವ ಡಿಗ್ರಿ ಸಮ?


.


.


.


ಹೊತ್ತು ಮುಳುಗಿ ಕತ್ತಲಾಗಿತ್ತು. ಇಬ್ಬರೂ ಹುಡುಗಿಯರು ಇನ್ನು ಇತ್ತಲೇ ಬರುತ್ತಿದ್ದರು. ಅಜ್ಜಿಗೆ ಪುಸ್ತಕ ಹಿಡಿದಿದ್ದ ಹುಡುಗಿಯ ನೋಡಿದ ನೆನಪು. "ಲಕ್ಷ್ಮಿ..." ಅನ್ನುತ ಅಜ್ಜಿ ಎದ್ದು ನಿಂತಳು! ಲಕ್ಷ್ಮಿ ಊರ ಶಾಲೆಯ ಕಡೆ ಓಡಿದಳು. ಕುಕ್ಕೆ ಇಡಿದ ಹುಡುಗಿ ಮಾತ್ರ ಅಲ್ಲೇ ನಿಂತಿದ್ದಳು, ಅಜ್ಜಿಯನ್ನು ನೋಡುತ್ತ. ಅಜ್ಜಿ ಆಕೆಯ ಬಳಿ ಹೋಗಲು ಮುಂದಾದಳು. ಅಷ್ಟರಲ್ಲಾಗಲೇ ಕೆಲವರು ಆಕೆಯನ್ನು ಬಂದು ಎಳೆಯ ತೊಡಗಿದರು. ತಮ್ಮ, ಅಪ್ಪ, ಇತರರು. ಮನಸ್ಸಿಲ್ಲದ ಮನಸಲ್ಲಿ ಹುಡುಗಿ ಅಳುತ್ತಾ ಮರೆಯಾದಳು.ಕೈಯಲ್ಲಿನ ಕುಕ್ಕೆ ಹಾಗು ಸಿಂಬು ಬೀಳಲಿಲ್ಲ! ಆಕೆಯ ಮುಗುತ್ತಿ ಒಮ್ಮೆ ಮಿನುಗಿತು. ಅಜ್ಜಿ ತನ್ನ ಮುಗುತ್ತಿಯನ್ನು ಒಮ್ಮೆ ಮುಟ್ಟಿ ನೋಡಿದಳು! ಅಜ್ಜಿಯ ಕಣ್ಣುಗಳು ಒದ್ದೆಯಾದವು.


'ಅವತ್ತು ನಾನೂ ಶಾಲೆಗೆ ಹೋಗಿದ್ರೆ??' ಸಾವಿರಾರು ಬಾರಿ ಬಂದ ಈ ಪ್ರೆಶ್ನೆಯನ್ನ ಮತ್ತೆ ತನ್ನ ತಾನೇ ಕೇಳಿದಳು. ಅಪ್ಪನ ಸಿಟ್ಟಿಗೋ , ಕುಟುಂಬದ ಎಳಿಗೆಗೋ ಅಥವಾ ತಮ್ಮನ ಒಳಿತಿಗೋ, ನನ್ನ ಜೀವನ ಒಂದು ಕಪ್ಪು ಹಾಳೆ. ಅಜ್ಜಿ ಅಂದುಕೊಂಡಳು.



ಕತ್ತಲಾದರೂ ಅಜ್ಜಿ ಮನೆಗೆ ಬರಲಿಲ್ಲವಲ್ಲ ಎಂಬ ಪರಿವು ಯಾರೊಬ್ಬರಿಗೂ ಇರಲಿಲ್ಲ. ಅಜ್ಜಿ ಮನೆಯಡೆ ಹೆಜ್ಜೆ ಹಾಕಿದಳು. ಅಷ್ಟರಲ್ಲಾಗಲೇ ಮೊಮ್ಮಗ ಓದತೊಡಗಿದ್ದ. ಸೊಸೆ ಇನ್ನೂ ಅದೇ ಸೋಫಾದ ಮೇಲೆ ರಾರಜಿಸಿದ್ದಳು. ತನ್ನ ಧಾರವಾಯಿಗಳೊಟ್ಟಿಗೆ. ಅಜ್ಜಿಯನ್ನು ನೋಡಿದ ಮೊಮ್ಮಗ ‘ಅಜ್ಜಿ.....’ ಎಂದು ಬಂದು ಅಪ್ಪಿಕೊಂಡ.

‘ಏನ್ ಓದ್ತಾ ಇದ್ದೀಯ ಗುಂಡ...’ ಅಜ್ಜಿ ಮೊಮ್ಮಗನನ್ನು ಕೇಳಿದಳು.ಅಜ್ಜಿಯ ಮಾತನ್ನು ಕೇಳಿ ಸೊಸೆ ಇತ್ತ ತಿರುಗಿದಳು. "ಶಕ್ತಿ ನಿತ್ಯತೆಯ ನಿಯಮ" ಮೊಮ್ಮಗ ಹೇಳಿದ. "ಏನದು ನಂಗು ಸ್ವಲ್ಪ ಹೇಳು ನೋಡಣ" ಅಜ್ಜಿ ಕೇಳಿದಳು. "ಶಕ್ತಿಯನ್ನು ಸೃಷ್ಟಿಸಲು, ನಾಶ ಮಾಡಲು ಸಾದ್ಯವಿಲ್ಲ, ಅದನ್ನು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಮಾತ್ರ ಬದಲಾಹಿಸಬಹುದು" ಎಂದು ಗುಂಡ ತೊದಲುತ್ತಾ ಹೇಳಿದಾಗ ಸ್ವಲ್ಪ ಸುಮ್ಮನಿದ್ದ ಅಜ್ಜಿ, "ಅರ್ರೆ ಅದೆಂಗ್ ಆಗುತ್ತೆ?!.. ಪ್ರತಿ ದಿನ, ಪ್ರತಿ ನಿಂಶ ಮಕ್ಳು, ಕುರಿ, ದನ ಅಂತ ಹುಟ್ತಾನೆ ಇರ್ತಾವೆ! ಅದು ಸೃಷ್ಟಿ ಅಲ್ವ? ಅವೂ ಶಕ್ತಿಯ ರೂಪ ಅಲ್ವ?! ಅಧೆಂಗ್ ಅವ್ರ್ ಹಾಗ್ ಬರ್ದಿದ್ದಾರೆ!" ಅಜ್ಜಿಯ ಪ್ರೆಶ್ನೆಗೆ ಸೊಸೆ, ಗುಂಡನಿಗಿಂತ ಜಾಸ್ತಿ ಬಾಯಿ ತೆರೆದು ಅಜ್ಜಿಯನ್ನು ನೋಡಿದಳು. ಅಜ್ಜಿಯ ಪ್ರೆಶ್ನೆಗೆ ಗುಂಡನಿಗೆ ಏನು ಉತ್ತರಿಸಬೇಕೆಂದು ತಿಳಿಯಲಿಲ್ಲ. ಮುಗುಳ್ನಗೆಯಾ ಮುಖದಿಂದ ಅಜ್ಜಿ ಗುಂಡನಿಗೊಂದು ಮುತ್ತಿಕ್ಕಳು....

Monday, August 15, 2016

ಕಥೆ : ಪ್ರೀತಿ ಬೆರೆತಾಗ….



'ವಯಸ್ಸು ಅರವತ್ತಾದರೂ ಇನ್ನೂ ಬುದ್ದಿ ಬರ್ಲಿಲ್ಲ ಇವಕ್ಕೆ ... ಪ್ರಾಣಿಗಳ ಹಾಗೆ ಕಿತ್ತಾಡ್ತಾರೆ. ಇವ್ರ ಜಗಳನ ಕೇಳಿ, ನೋಡಿ, ಸಮಾಧಾನಮಾಡಿ ಸಾಕಾಗಿದೆ .ಇನ್ನೂ ಎಷ್ಟು ಅಂತ ನೋಡೋದು..ಇದು ಆಗ್ಲಿಲ್ಲ.. ಏನಾದ್ರೂ ಒಂದು ಮಾಡ್ಲೆ ಬೇಕು.. ಇಲ್ಲ ಅಂದ್ರೆ ನಾನುಹುಚ್ಚಿಯಾದೆನು ' ಎಂದು ಯೋಚಿಸುತ್ತಾ ಶಾಂತಿ ಕಣ್ಣು ಮುಚ್ಚಿದಳು. ದಿನವಿಡಿ ಅರೆ ಕ್ಷಣವೂ ಪುರುಸತ್ತಿಲ್ಲದೆ ದುಡಿದು ದಣಿದಿದ್ದ ಆಕೆ ನಿದ್ರೆಗೆ ಜಾರಲು ಅವಣಿಸುತ್ತಿದ್ದರೂ ಮನದೊಳಗಿನ ದುಗುಡ ಅಲೆ ಅಲೆಯಾಗಿ ಎದ್ದು ಆಕೆಯ ಚಿತ್ತವನ್ನು ಕಲಕುತ್ತಿದ್ದವು. ಮರುದಿನ ಭಾನುವಾರವಾದ್ದರಿಂದ ತಲೆಯ ಮೇಲಿದ್ದ ಅಲಾರ್ಮ್ ಅನ್ನು ಆಫ್ ಮಾಡಿದಳು. ಬೆಳಗ್ಗೆ ನಿದಾನವಾಗಿ ಎದ್ದು ಶಾಸ್ತ್ರಿಯ ಸಂಗೀತವನ್ನು ಕೇಳಿದರಾಯಿತು, ಕೊಂಚ ಸಾಮಾದಾನವಾಗಬಹುದು ಎಂದುಕೊಂಡಳು. ಬಹಳ ಹೊತ್ತು ನರಳಿದ ಆಕೆಯ ಕಣ್ಣುಗಳು ಯಾವಾಗ ನಿದ್ರೆಗೆ ಜಾರಿದವೆಂದು ಆಕೆಗೆ ತಿಳಿಯಲಿಲ್ಲ.




ಆಗಷ್ಟೇ ಹಕ್ಕಿಗಳ ಚಿಲಿಪಿಲಿ ಸದ್ದು ಶುರುವಾಗತೊಡಗಿತ್ತು. ಪಾತ್ರೆಗಳನ್ನು ಒಂದರಮೇಲೊಂದರಂತೆ ಕುಕ್ಕುವ ಸದ್ದು ಸಹ ಅದರೊಳಗೆ ಬೆರೆಯತೊಡಗಿತು. ಅಪ್ಪ ಅಮ್ಮರ ಹೊಸದೊಂದು ವಿಷಯದ ಕುರಿತ ಕಿತ್ತಾಟಕ್ಕೆ ಇದು ನಾಂದಿಯಾಗಿತ್ತು ಎಂದು ಅರಿಯಲು ಶಾಂತಿಗೆ ಬಹಳ ಸಮಯ ಹಿಡಿಯಲಿಲ್ಲ. ಅಪ್ಪ ಅರಚಿ ಸುಮ್ಮನಾದ ಅನ್ನುವುದರೊಳಗೆ ಅಮ್ಮನ ಕೊಂಕು ಮಾತುಗಳು. ಅದರ ಸಿಟ್ಟನ್ನು ಪಾತ್ರೆಗಳ ಮೇಲೆ ತೋರಿ ಮೂಡುವ ವಿಭಿನ್ನ ಸದ್ದುಗಳು. ನಿರ್ಮಲ ಶಾಂತ ಮುಂಜಾವಿನ ರಾಗವನ್ನು ಅಲ್ಲೋಲ ಕಲ್ಲೋಲ ಮಾಡಿದ ಹಾಗಿತ್ತು. ಎಷ್ಟೋ ಹೊತ್ತು ನೆಡೆದ ವಾಕ್ ಸಮರ ಕೆಲ ಘಂಟೆಗಳ ನಂತರ ನಿಂತಿತು. ನಿದಾನವಾಗಿ ಎದ್ದು ರೆಡಿಯಾಗಿ ಹೊರಬಂದ ಶಾಂತಿ ಅಡುಗೆ ಮನೆಯನ್ನು ಹೊಕ್ಕಳು. ಅದಾಗಲೇ ಎಲ್ಲ ಪಾತ್ರೆಗಳನ್ನು ಎಲ್ಲೆಂದರಲ್ಲಿ ಬಿಟ್ಟು ಅಮ್ಮ ಮಲಗುವ ಕೋಣೆಯನ್ನು ಸೇರಿದ್ದಳು. ರೊಟ್ಟಿಗಾಗಿ ಅನ್ನ ಹಾಗು ಅಕ್ಕಿಯ ಹಿಟ್ಟಿನಿಂದ ಮಾಡಿದ ಉಂಡೆಗಳು ಹಾಗು ಅರೆಬೆಂದ ಕೆಲವು ರೊಟ್ಟಿಗಳು. ಅಪ್ಪ ಬೈದ ಕಾರಣದಿಂದ ಸಿಡುಕಿ ಹಾಗೆ ಬಿಟ್ಟು ಹೋಗಿದ್ದಾಳೆ. ಇದು ಅವರ ದಿನನಿತ್ಯದ ದಿನಚರಿಯಾಗಿದ್ದರಿಂದ ಹೆಚ್ಚೇನೂ ಚಿಂತಿಸದ ಶಾಂತಿ ತನ್ನ ಮಟ್ಟಿಗೆ ಒಂದು ಲೋಟ ಟೀಯನ್ನು ಮಾಡಿಕೊಂಡು ಟಿವಿಯ ಮುಂದೆ ಬಂದು ಕೂತಳು.


ಬುಸುಗುಡುತ್ತಾ ಹೊರಗಿನಿಂದ ಬಂದ ಅಪ್ಪ ಸೋಫಾದ ಮೇಲೆ ಕುಳಿತು ಮುಂದಿದ್ದ ಸಣ್ಣ ಮೇಜಿನ ಮೇಲೆ ತನ್ನ ಕಾಲನ್ನು ಚಾಚಿದ. ದಾರಿಯಲ್ಲಿ ತುಳಿದ ಕೆಸರಿನ ಕಲೆ ಪಾದದ ಸುತ್ತ ಕೆಂಪಾಗಿ ಕಾಣತೊಡಗಿತ್ತು. ಹೊರಗಿನಿಂದ ಬಂದು ಕಾಲಿಗೆ ನೀರನ್ನು ಹಾಕಿ ಶುಚಿ ಮಾಡಿಕೊಳ್ಳಬೇಕು ಅನ್ನುವ ಪರಿಜ್ಞಾನವಿಲ್ಲದೆ ಕೂತ ಆತನನ್ನು ಕಂಡು ಶಾಂತಿಯ ಕೋಪ ಜಾಸ್ತಿಯಾಯಿತು. ಆದರೆ ಈ ವಯಸ್ಸಿನಲ್ಲೂ ಸಂತೆಯಿಂದ ತರಕಾರಿ, ಬೇಳೆ, ಕಾಳುಗಳನ್ನು ಹೊತ್ತು, ಹಣ ಉಳಿಸುವ ಕಾರಣಕ್ಕಾಗಿ ನೆಡೆದೇ ಬರುವ ಆತನನ್ನು ಕಂಡು ಜೀವ ಮರುಗಿತು. ಕೆಲಹೊತ್ತು ಸುಮ್ಮನಿದ್ದ ಅಪ್ಪ ಇದ್ದಕ್ಕಿದಂತೆ 'ತಿಂಡಿ....' ಎಂದು ಅರಚಿದ ಕೇಳಿ ಶಾಂತಿ ಮಿಡುಕಿದಳು. 'ಬೇಕಾದ್ರೆ ಮಾಡ್ಕೊಂಡ್ ತಿನ್ ಬಹುದು' ಎಂದು ಅಮ್ಮ ಮಲಗುವ ಕೋಣೆಯಿಂದಲೇ ಕೂಗಿದಳು. 'ಕೂತು ತಿನ್ನೋಕ್ಕೆ ಸಿಕ್ಕಿದ್ರೆ ಇದೆ ರೀತಿ ಮಾತಾಡೋದು' ಎನ್ನುತ ಬಾಯಿಗೆ ಬಂದ ಹಾಗೆ ಅಮ್ಮನನ್ನು ಶಪಿಸಿದ ಅಪ್ಪ ದಡಬಡನೆ ಅಡುಗೆ ಮನೆಗೆ ನುಗ್ಗಿ ಅರೆಬೆಂದ ರೊಟ್ಟಿಗಳನ್ನೇ ಒಂದೆರೆಡು ಬಾಳೆಹಣ್ಣಿನೊಟ್ಟಿಗೆ ಗಬಗಬನೆ ನುಂಗಿ ಕೂತ. 'ಕೈ ಕಾಲು ತೋಳ್ಯೋದು, ಸ್ನಾನ ಮಾಡೋದು, ಪೂಜೆ ಮಾಡೋದು ಏನೂ ಇಲ್ಲ' ಎಂದು ಸುಮ್ಮನಿರದ ಅಮ್ಮ ಮತ್ತೊಮ್ಮೆ ಕೂಗಿದಳು. ಸಂತೆಯಿಂದ ಬಂದು, ತಿಂದು, ಪಕ್ಕದ ಕೋಣೆಯಲ್ಲಿ ಹಾಗೆಯೇ ಬಿದ್ದಿದ್ದ ಅಪ್ಪ 'ನೀನ್ಯಾವಳೇ ಕೇಳೋಕ್ಕೆ' ಎಂದು ಕೋಪದಿಂದ ಎದ್ದು ಅಮ್ಮ ಮಲಗಿದ್ದ ಕೋಣೆಗೆ ಆವೇಶದಿಂದ ಓಡಿದ. ಒಳಗಿನಿಂದ ಅಗುಣಿಯನ್ನು ಹಾಕಿ ಅಮ್ಮ ಮಲಗಿದ್ದಳು. ಅಪ್ಪ ದಬಡಬನೆ ಬಾಗಿಲನ್ನು ಬಡಿಯತೊಡಗಿದ. ವಯಸ್ಸಿಗೆ ಬಂದ ಮಗಳ ಮುಂದೆಯೇ ಇವರು ಹೀಗೆ ಕಿತ್ತಾಡುತ್ತಾರಲ್ಲ ಎನ್ನುತ ಶಾಂತಿ ಮರುಗತೊಡಗಿದಳು. ಸಿಟ್ಟಿನಿಂದ ಕೈಯ್ಯಲ್ಲಿದ್ದ ಗಾಜಿನ ಲೋಟವನ್ನು ಮುಷ್ಟಿಯಿಂದ ಗಟ್ಟಿಯಾಗಿ ಒತ್ತತೊಡಗಿದಳು. ಗಾಜಿನ ಲೋಟವು ಒಡೆಯಿತು. ಕೆಲವೇ ಕ್ಷಣದಲ್ಲಿ ಕೈಯಲ್ಲ ರಕ್ತಮಯವಾಹಿತು. ಗಾಯದಿಂದ ಆದ ನೋವಿಗಿಂತ ಅಪ್ಪ ಅಮ್ಮನ ಕಿತ್ತಾಟದ ನೋವೇ ಜಾಸ್ತಿಯಾಗಿ ದುಃಖ ಉಮ್ಮಳಿಸಿ ಬಂದಿತು. ಕೆಲಹೊತ್ತು ಅತ್ತು ಸುಮ್ಮನಾಗಿ, ಒಂದು ಬಿಳಿ ಬಟ್ಟೆಯನ್ನು ತೆಗೆದು ಕೈಗೆ ಕಟ್ಟಿಕೊಂಡಳು. ಏನೋ ದೃಢ ನಿಶ್ಚಯವನ್ನು ಮಾಡಿಕೊಂಡ ಹಾಗೆ ಕಣ್ಣುಗಳನ್ನು ಒರೆಸಿಕೊಂಡು ಎದ್ದು ನಿಂತಳು. ಗೊತ್ತಾಗದಿರಲೆಂದು ಹೊಡೆದ ಗಾಜಿನ ಚೂರುಗಳನ್ನು ಎತ್ತಿ ಹೊರಎಸೆದಳು. 'ಹೀಗೆ ಒಟ್ಟಿಗೆ ಇದ್ರೆ ಜಗಳ ಆಡ್ಕೊಂಡೇ ಸತ್ತ್ ಹೂಗ್ತೀರ …ಟ್ಯಾಕ್ಸಿ ಗೆ ಫೋನ್ ಮಾಡಿದ್ದೀನಿ..ಇಬ್ಬರಿಗೂ ಬೇರೆ ಬೇರೆ ಆಶ್ರಮನ ಬುಕ್ ಮಾಡಿದ್ದೀನಿ.. ನಂಗೆ ಆಫೀಸ್ ಕೆಲ್ಸದ ಮೇಲೆ ಬೇರೆ ಊರಿಗೆ ಡ್ಯೂಟಿ ಹಾಕಿದ್ದಾರೆ. ಒಂದ್ ತಿಂಗ್ಳು. ಬಂದ್ಮೇಲೆ ಕರ್ಕೊಂಡ್ ಬರ್ತೀನಿ..' ಎಂದು ಸುಳ್ಳು ಹೇಳಿ ಮನೆಯಿಂದ ಹೊರಟಳು. 'ಕೈಗೆ ಏನಾಯಿತೆ?' ಕರುಣೆಯ ಸ್ವರದಲ್ಲಿ ಅಮ್ಮ ಕೂಗಿದಳು. ಅಳು ಉಕ್ಕಿ ಬರುತ್ತಿತ್ತು. ಸಾಧ್ಯವಾದಷ್ಟು ತಡೆದು ರಸ್ತೆಗೆ ಬಂದು ಆಟೋವೊಂದನ್ನು ಹಿಡಿದು ಊರ ಹೊರವಲಯದಲ್ಲಿದ ಸಂಗೀತ ಶಾಲೆಯ ಬಳಿಗೆ ಹೋದಳು.



ನಗರದ ಸದ್ದು ಗದ್ದಲವಿಲ್ಲದೆ ಪ್ರಶಾಂತ ವಾತಾವರಣದಲ್ಲಿದ್ದ ಸಂಗೀತ ಶಾಲೆಗೆ ಶಾಂತಿ ವಾರಕೊಮ್ಮೆಯಂತೆ ಸಂಗೀತ ಕಲಿಯಲು ಬರುವುದುಂಟು. ನಿರ್ಭಾವುಕಳಾಗಿ ಅಲ್ಲಿನ ಆಲದ ಮರದ ಕೆಳಗೆ ಕೂತಳು. ಜಗಳವೇ ಜೀವನವಾಗೋಯಿತು, ಇವರ ಜೀವನಕೊಂದು ಅರ್ಥ ಇದೆಯಾ? ಸಣ್ಣ ಪುಟ್ಟ ವಿಷಯಗಳಿಗೂ ಇಷ್ಟೊಂದು ಕಿತ್ತಾಡಬೇಕಾ? ಇಷ್ಟೊಂದು ಸೌಕರ್ಯಗಳಿದ್ದರೂ ಶಾಂತಿಯಿಂದ, ಸಂತೋಷದಿಂದ ಇರಲು ರೋಗವೇನು ಇವಕ್ಕೆ? ಗುಡಿಸಲಲ್ಲಿ ಗಂಜಿ ಅನ್ನ ಉಂಡು ಸಂಸಾರ ಮಾಡುವ ಕುಟುಂಬಕ್ಕಿರುವ ನೆಮ್ಮದಿ ನಮ್ಮ ಮನೆಯಲ್ಲಿ ಇಲ್ಲವಾಯಿತಲ್ಲ ಎಂದು ನೊಂದುಕೊಂಡಳು. ಆಶ್ರಮಕ್ಕೆ ಹೋಗಲು ಹೇಳಿದ್ದು ಒಳ್ಳೆಯದೇ ಆಯಿತು ಎಂಬ ಸಮರ್ಥನೆ ಒಳಗೊಳಗೇ ಮೂಡಿತು. ಹೋಗಿರುತ್ತಾರಾ, ಅಥವಾ ಟ್ಯಾಕ್ಸಿಯವನಿಗೆ ಬೈದು ವಾಪಾಸ್ ಕಳುಹಿಸಿರುತ್ತಾರಾ ಎಂಬ ಚಿಂತೆ ಕೂಡ ಮೂಡಿತು.




ಅಮ್ಮ ಅದೆಷ್ಟು ಕೆಲ್ಸ ಮಾಡ್ತಾಳೆ! ಅವಳಷ್ಟು ಕಷ್ಟ ಪಡೋರನ್ನ ನಾನೆಲ್ಲೂ ನೋಡಿಲ್ಲ. ಆದ್ರೂ ಅಪ್ಪಂಗೆ ಯಾಕೆ ಅಷ್ಟು ಸಿಟ್ಟು ಅಂತ ತಿಳಿಯದು.. ಕಂಡ ನೆರಳಿಗೆ ಆಗೋಲ್ಲ. ವೈರಿಗಳಹಾಗೆ ಕತ್ತಿ ಮಸೀತಾ ಇರ್ಥಾನೇ. ಸಾಲದಕ್ಕೆ ಕುಡಿತ ಬೇರೆ. ಅವಳ ಜೀವನವನ್ನೇ ನರಕ ಮಾಡಿದ ಪಾಪಿ ಎಂದೆಲ್ಲ ಶಪಿಸತೊಡಗಿದಳು. ಪ್ರೀತಿಗಿಂತ ಹೆಚ್ಚಾಗಿ ಮಕ್ಕಳಿಗೆಬೇಕಾಗಿರೋದು ಒಳ್ಳೆಯ ನೀತಿ. ತಮ್ಮ ನಡತೆಯನ್ನೇ ಮಕ್ಕಳು ಕಲೀತಾರೆ ಅನ್ನೋ ಕಾಮನ್ಸೆನ್ಸ್ ಇಲ್ಲದೆ ಕಿತ್ತಾಡ್ತಾ ಇದ್ರು. ಮಕ್ಕಳ ಮುಂದೇನೆ ಕುಡಿಯೋದು, ಅಮ್ಮನಿಗೆ ಬಾಯಿಗೆಬಂದ ಹಾಗೆ ಬಯ್ಯೋದು. ಯಾರೊಬ್ಬರೂ ನಮ್ಮ ಮನೆಗೆ ಬರಲು ಹಿಂಜರಿಯುತ್ತಿದ್ದರು. ಬಂದರೂ ಬೆಳಗ್ಗೆ ಬಂದು ಸಂಜೆಯ ಒಳಗೆ ಹೊರಟುಬಿಡುತ್ತಿದ್ದರು. ಎಲ್ಲಿಯಾದರೂ ಈತಕುಡಿಯಲು ಕೂತು ಎಲುಬಿಲ್ಲದ ನಾಲಿಗೆಯಿಂದ ಕೂಗಲು ಶುರು ಮಾಡಿಬಿಟ್ಟಾನು ಎಂಬ ಹೆದರಿಕೆಯಿಂದ. ಯಾರೊಬ್ಬ ನೆಂಟರಿಷ್ಟರ ಹುಡುಗರೂ ನಮ್ಮ ಮನೆಗೆ ಇಷ್ಟ ಪಟ್ಟುಬಂದಿರುವುದ ಕಾಣೆ. ಕಾಲೇಜಿನಲ್ಲಿ ಓದಲು ಹಾಸ್ಟೆಲ್ನಲ್ಲಿದ್ದಾಗ ರಜೆಯಲ್ಲಿ ಎಲ್ಲರೂ ಮೆನೆಗೆ ಖುಷಿ ಖುಷಿ ಯಾಗಿ ಹೊರಟರೆ ನನ್ನೊಳಗೆ ಒಂದು ದುಗುಡ. ಈ ರಜೆ ಏತಕ್ಕಾದರೂಬರುತ್ತದೋ ಎನ್ನಿಸುತ್ತಿತ್ತು. ಆತ ಕುಡಿಯಲು ಕೂತರೆ ಅದೆಷ್ಟು ಭಯ! ಎಲ್ಲಿ ಅರಚುತ್ತಾನೋ, ಅಮ್ಮನನ್ನು ಹೊಡೆಯುತ್ತಾನೋ ಅನ್ನುವ ಚಿಂತೆ ಆವರಿಸಿ ಹಿಂಡುತ್ತಿತ್ತು. ಎಲ್ಲಿ ಪಕ್ಕದಮನೆಯವರು ಕೇಳುತ್ತಾರೋ ಎನ್ನುವ ಆತಂಕ, ಅವರ ಮುಂದೆ ನಾವು ತಲೆ ಎತ್ತಿ ನೆಡೆಯಲೂ ಆಗದಂತಹ ಸ್ಥಿತಿ. ನಾಚಿಕೆ, ಅಂಜಿಕೆ. ದಿನವೆಲ್ಲಾ ಅದೇ ಚಿಂತೆ. ಇಷ್ಟವಿರುವವಿಷಯದಲ್ಲಿ ತೊಡಗಿಸಿಕೊಳ್ಳಲಾಗದ ಸ್ಥಿತಿ. ಗೆಳೆಯರೊಂದಿಗೆ ಮುಕ್ತವಾಗಿ ನಗಲೂ ಆಗದು. ಒಂದು ಪಕ್ಷ ನಕ್ಕರೂ ಅಮ್ಮನ ಕೊರಗುವ ದೃಶ್ಯ ಕಣ್ಣ ಮುಂದೆ ಬಂದು ಬಿಡುತ್ತಿತ್ತು.ನಗು ಅಲ್ಲಿಗೆ ನಿಂತು ಕಲ್ಲಾಗುತ್ತಿತ್ತು. ಒಬ್ಬ ವಿದ್ಯಾರ್ಥಿಯಾಗಿ ಸಾಮಾಜಿಕ ಜೀವನದಲ್ಲಿ ಮುಕ್ತವಾಗಿ ತೊಡಗಿಸಿ ಕೊಳ್ಳಲಾಗದ ಸ್ಥಿತಿ. ಒಳ್ಳೆ ಶಾಲೆಗೇ ಅಥವಾ ಕಾಲೇಜಿಗೆ ಸೇರಿಸಿದ್ದೀನಿಅನ್ನುವುದನ್ನು ಬಿಟ್ಟರೆ ಬೇರೇನೂ ತಿಳಿಯದು. ಅದಕ್ಕೆ ಪೂರಕವಾದ ಮನೆಯ ವಾತವರಣವನ್ನೂ ಸಹ ನಿರ್ಮಿಸಿ ಕೊಡಬೇಕೆಂಬುದು ಇವಕ್ಕೆ ತಿಳಿಯಲಿಲ್ಲ. ಈ ಚಿಂತೆಎಂಬುದೊಂದಿಲ್ಲದಿದ್ದರೆ ನಾನು ಇನ್ನೂ ಬೆಳೆಯುತ್ತಿದ್ದೆ. ಬೌಧಿಕವಾಗಿ ಹಾಗು ಮಾನಸಿಕವಾಗಿಯೂ ಸಹ.


ಹುಡುಗರೊಂದಿಗೆ ದೃಷ್ಟಿಯಿಟ್ಟು ಮುಕ್ತವಾಗಿ ಮಾತನಾಡಲು ಭಯ. ಪ್ರೀತಿಯನ್ನು ಹೇಳಿಕೊಳ್ಳ ಲೂ ಸಹ ಭಯ. ಕಾಲೇಜಿನ ಅವನನ್ನು ಅದೆಷ್ಟು ಇಷ್ಟ ಪಟ್ಟಿದ್ದೆ ನಾನು. ಅವನಿಗೂನನ್ನ ಮೇಲೆ ಪ್ರೀತಿಯಿತ್ತು ಎನ್ನುವುದು ನನಗೆ ಗೊತ್ತಿತ್ತು. ಮನೆಯ ವಾತಾವರಣ, ಅದರಲ್ಲೂ ನನ್ನ ಒರಟು ಪೋಷಕರು, ಅವರ ಸಣ್ಣ ಬುದ್ದಿ ನನ್ನ ಇನ್ನೂ ಕಾಡಿತು. ಇವರನ್ನು ಹೇಗೆಅವನಿಗೆ ಪರಿಚಹಿಸಲಿ? ಸಾಧ್ಯವೇ ಇಲ್ಲ. ಅಮ್ಮನೊಟ್ಟಿಗಂತೂ ಈ ವಿಷಯವನ್ನು ಹೇಳಿಕೊಳ್ಳುವ ಮಾತೆ ಇಲ್ಲ. ಆಕೆಯ ಜೀವನದಲ್ಲೇ ಕಾಣದ ಅಂಶವನ್ನು ನಾನು ಆ ಹುಡುಗನಲ್ಲಿಕಂಡೆ ಎಂದರೆ ಆಕೆಗೆ ಎಲ್ಲಿ ಅರ್ಥವಾದೀತು? ಒರಟು ಮಾತುಗಳಿಂದ ಶಪಿಸಿಯಾಳು, ಅಷ್ಟೇ. ಪ್ರತಿ ಬಾರಿ ಇವರು ಜಗಳವಾಡಿದಾಗಲೆಲ್ಲ ಅವನೇ ನೆನಪಿಗೆ ಬರುತ್ತಿದ್ದ. ಇವರಮುಂದೆ ಅವನನ್ನು ಕಲ್ಪಿಸಿ ತಂದು ನಿಲ್ಲಿಸಿದರೆ ನನ್ನ ಮಾನವೇ ಹೋದಂತೆ ಅನಿಸುತ್ತಿತ್ತು. ಇವನ್ನೆಲ್ಲ ನೋಡಿ ಕಂಡಿತಾ ಅವನು ನನ್ನ ಒಪ್ಪನು ಎಂದೆನಿಸುತ್ತಿತ್ತು. ಎಳೆಯ ವಯಸ್ಸಿನಅರಳುವ ಪ್ರೀತಿ ಅರಳುವ ಮೊದಲೇ ಕಮರಿ ಹೋಗಿತ್ತು.


ತಮ್ಮನೇ ಆಗಬಹುದು. ಮನೆಯಿಂದ ಹೋಗಿಬರುವ ಕೆಲಸ ಸಿಕ್ಕಿದರೂ ಆತ ಆಯ್ದು ಕೊಂಡಿದ್ದು ದೂರದ ದೆಹಲಿಯ ಕೆಲಸವನ್ನೇ. ವರ್ಷಕ್ಕೆ ಒಮ್ಮೆ ಬಂದರೂ ಹೆಚ್ಚಿನ ಕಾಲಮನೆಯ ಹೊರ ಗೇ ಕಳೆಯುತ್ತಾನೆ. ಅವನಿಗೂ ಇವರೆಂದರೆ ಅಷ್ಟಕಷ್ಟೆ. ಇವರ ಆರೈಕೆಗೆ ನಾನು ಇಲ್ಲೇ ಉಳಿದೆ. ದೆಹಲಿ ಅದೆಷ್ಟು ಚಂದ. ವಿಶ್ವದ ಎಲ್ಲಾ ಬಗೆಯ ಜನ, ಸಂಸ್ಕೃತಿ,ತಿಂಡಿ-ತಿನಿಸುಗಳು. ಸ್ವರಮಾಲೆಗೆ ಗಮಕಗಳನ್ನು ಬೆರೆಸಿದ ಹಾಗೆ ಇರುವ ಹಸಿರಾದ ರಸ್ತೆಗಳು. ತುಸು ದೂರಕ್ಕೇ ಮಂಜಿನ ಪರ್ವತಗಳು. ಶಾಂತಿ. ನಾನು ರಾಗಗಳಲ್ಲಿ ಅರಸುವಶಾಂತಿ ಅದೇ ಪರ್ವತಗಳ ಮೇಲೆ ಇದೆ ಎಂದನಿಸುತ್ತದೆ. ತಂಬುರಾವನ್ನು ಹಿಡಿದು ದಿನವೆಲ್ಲಾ ಆ ಪರ್ವತಗಳ ಕೆಳಗೆ ಕೂತು ಹಾಡಬೇಕು. ಸೂರ್ಯೋದಯ, ಸೂರ್ಯಾಸ್ತಕ್ಕೆ ತಕ್ಕರಾಗವನ್ನು ಹಾಡುತ್ತಾ, ಪ್ರಕೃತಿಯ ಸೊಭಗನ್ನು ಸವಿಯುತ್ತಾ, ಇವರ ಕಿತ್ತಾಟದಿಂದ ದೂರ, ಬಹು ದೂರ ಹೋಗಬೇಕು... ಸಂಗೀತ ಸಾಧನೆ. ಅದರಲ್ಲೂ ಹಿಂದುಸ್ಥಾನಿ. ಸಂಜೆಯತಿಳಿಗಾಳಿಯಂತೆ ಜಾರಿ ಹೋಗುವ ಆ ರಾಗ ಗಳನ್ನು ಹಾಡಬೇಕು. ಹಾಡುತ್ತಲೇ ಅಳಬೇಕು. ಅತ್ತು ಅತ್ತು ಕಣ್ಣೀರು ಇಂಗುವರೆಗೂ ಹಾಡಬೇಕು. ಬಾಲ್ಯದಿಂದ ಅಡಗಿರುವ ಭಯ,ನೋವುಗಳೆಲ್ಲ ಕರಗುವವರೆಗೂ ಹಾಡಬೇಕು…


ತನ್ನ ಕೈಗಡಿಯಾರವನ್ನು ನೋಡಿದಳು. ಮನೆ ಬಿಟ್ಟು ಮೂರು ತಾಸಾಯಿತು.


ಇಷ್ಟರೊಳಗೆ ಹೋಗಿರಬಹುದು.



ಸೂರ್ಯ ನತ್ತಿಯ ಮೇಲೆ ಬಂದರೂ ಆಲದ ಮರದ ಕೆಳಗೆ ಹಕ್ಕಿಗಳ ಸದ್ದು ಇನ್ನೂ ಮುಂಜಾವಿನ ಭಾವವನ್ನು ಸ್ಪುರಿಸುತ್ತಿದ್ದವು. ಹಾಗೆಯೆ ಮರದ ಕೊಂಬೆಯೊಂದರ ತುದಿಯಲ್ಲಿದ್ದ ಹಕ್ಕಿಯ ಗೂಡನ್ನು ದಿಟ್ಟಿಸಿ ನೋಡುತ್ತಾಳೆ. ತಾಯಿ ಮರಿ ತನ್ನ ಮಕ್ಕಳಿಗಾಗಿ ತಂದ ಆಹಾರವನ್ನು ಹಿಗ್ಗಿಸಿ ಬಿಡುವ ಅವುಗಳ ಬಾಯಿಯೊಳಗೆ ಹಾಕುತ್ತಿತ್ತು. ಪುರ್ರೆಂದು ಹಾರುವುದು, ಆಹಾರವನ್ನು ಹುಡುಕುವುದು. ಮಕ್ಕಳ ಬಾಯಿಯೊಳಗೆ ತಂದು ಹಾಕುವುದು. ಅವೆಷ್ಟು ಕಷ್ಟದ ದಿನಗಳು. ತಿನ್ನಲೂ ಒಂದೊತ್ತು ಊಟಕ್ಕೂ ಕಷ್ಟ ಪಡಬೇಕಾದ ದಿನಗಳು. ಆರೋಗ್ಯಸರಿಯಿಲ್ಲದಿದ್ದರೂ ದಿನವಿಡೀ ದುಡಿಯುವ ಅಪ್ಪ. ಇದ್ದದ್ದರಲ್ಲೇ ಸಂಬಾಲಿಸಿಕೊಂಡು ಹೋಗುವ ಅಮ್ಮ. ಕಷ್ಟ ಅಷ್ಟಿದ್ದರೂ ಮಕ್ಕಳಿಬ್ಬರನ್ನೂ ಓದಿಸಿ ವಿದ್ಯಾವಂತರಾಗಿ ಮಾಡಿದರು.ನಾಳೆ ನಾನು ಮದುವೆಯಾಗಿ ಮಕ್ಕಳಾದ ಮೇಲೆ ಅದೇ ರೀತಿಯ ಕಷ್ಟವೇನಾದರೂ ಬಂದರೆ, ನಾನೂ ಅಮ್ಮ ಅಪ್ಪರ ಹಾಗೆ ದುಡಿದು, ಸಾಕಿ ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೆಕಿಂಚಿತ್ತೂ ದಕ್ಕೆ ಬಾರದ ಹಾಗೆ ನೋಡಿಕೊಳ್ಳ ಬಲ್ಲೇನ? ನನಗೆ ಅಷ್ಟು ಧೈರ್ಯ ಹಾಗು ಶಕ್ತಿ ಬರಬಲ್ಲದ? ಎಂದು ಯೋಚಿಸತೊಡಗಿದಳು. ತಾಯಿ ಹಕ್ಕಿ ಮತ್ತೊಮ್ಮೆ ಆಹಾರವನ್ನು ಕಚ್ಚಿ ತಂದಿತು. ಹಕ್ಕಿಗಳು ಬಾಯಿ ತೆರೆದಿದ್ದವು. ಮದುವೆ ಅಥವಾ ಇನ್ಯಾವುದೇ ಸಮಾರಂಭದಲ್ಲಿ ಊಟಕ್ಕೆ ಬಡಿಸುವ ಸಿಹಿ ತಿಂಡಿಯನ್ನೂ ತಿನ್ನದೆ, ಕಾಗದದಲ್ಲಿ ಕಟ್ಟಿ ಮನೆಗೆತರುತ್ತಿದ್ದರು. ಇಬ್ಬರೂ. ನಮ್ಮಿಬ್ಬರಿಗೂ. ದುಃಖವನ್ನು ನುಂಗಿಕೊಂಡೆ ಅವರು ಕಾಲ ದೂಡಿದರು ಎಂದುಕೊಂಡಾಗ ಶಾಂತಿಯ ಕಣ್ಣುಗಳು ಒದ್ದೆಯಾದವು. ಸಣ್ಣವಳಿದ್ದಾಗ ಅಪ್ಪಅಮ್ಮರನ್ನೇ ದಿನವೆಲ್ಲಾ ಶಾಲೆಯಲ್ಲಿ ಕಾಯುತ್ತಾ ಕೊನೆಗೆ ಅವರು ಬಂದಾಗ ಅದೆಷ್ಟು ಖುಷಿ. ಬಿಗಿದಾಗಿ ಓಡಿಬಂದು ಅವರನ್ನು ಹಿಡಿಯುತ್ತಿದ್ದೆ. ಆ ಭಾವ ಮತ್ತೆ ಮೂಡಬಾರದೆ...?






ದೂರದಲ್ಲಿ ಹಣ್ಣಿನ ಗಿಡಗಳ ಬುಡಕ್ಕೆ ಮಣ್ಣು ಕೊಡುತ್ತಿದ್ದ ಗುರೂಜಿ ಕಂಡರು. ವಯಸ್ಸು ಅರವತ್ತಾದರೂ ಯಾರ ಹಂಗಿಲ್ಲದೆ ಸ್ವಂತ ಶಾಲೆಯನ್ನು ನೆಡೆಸುತ್ತಾರೆ. ಮಕ್ಕಳು ಒಳ್ಳೆಯ ಕೆಲಸದ ಮೇಲಿದ್ದಾರೆ. ಅವರು ಕರೆದರೂ ಇವರು ಹೋಗುವುದು ಬಹಳ ಅಪೂರ್ವ. ಬೆಳಗ್ಗೆ ಹಾಗು ಸಂಜೆ ಸಂಗೀತದ ಪಾಠಗಳನ್ನು ಹೇಳಿ ಉಳಿದ ಸಮಯವೆಲ್ಲ ಹಣ್ಣಿನ ತೋಟದಲ್ಲೇ ಕಳೆಯುತ್ತಾರೆ. ಶ್ರಮಜೀವಿ. ಈ ತಿಂಗಳ ಫೀಸ್ ಅನ್ನು ಕೊಟ್ಟು ಅಶ್ರಿವಾದ ತೆಗೆದುಕೊಂಡು ಬರಲು ಆ ಕಡೆ ಹೊರಟಳು. ಗುರೂಜಿಗೆ ನಮಸ್ಕರಿಸಿ ತನ್ನ ಬ್ಯಾಗಿನಿಂದ ನೂರರ ನೋಟುಗಳನ್ನು ತೆಗೆದು ಎಣಿಸತೊಡಗಿದ ಅವಳನ್ನು ಕಂಡ ಗುರೂಜಿ 'ನಿಮ್ಮ ತಂದೆಯವರು ನೆನ್ನೆಯಷ್ಟೇ ಬಂದು ಹಣವನ್ನು ಕೊಟ್ಟರಲ್ಲ' ಅಂದರು. ಹೌದೇ, ಎಂದು ವಿಚಾರಿಸಿದಾಗ ಅವರು ಬಂದಿದ್ದು, ಮಗಳ ಸಂಗೀತಾಭ್ಯಾಸದ ಬಗ್ಗೆ ವಿಚಾರಿಸಿದ್ದೂ, ಮಗಳಿಗೆ ನಾನೂ ಏನು ಮಾಡಲಾಗಲಿಲ್ಲ ಕೊನೆ ಪಕ್ಷ ಸಂಗೀತವನ್ನಾದರೂ ಚೆನ್ನಾಗಿ ಕಲಿಯಲಿ ಎನ್ನುತ ಎರಡು ತಿಂಗಳ ಮುಂಗಡ ಹಣವನ್ನೂ ಕೊಟ್ಟು ಹೋದರು ಅಂದರು. ಅದನ್ನು ಕೇಳಿದ ಶಾಂತಿಯ ಗಂಟಲ ನರಗಳೆಲ್ಲಾ ಹುಬ್ಬಿದವು. ನಿಂತಲ್ಲೇ ಆಳ ತೊಡಗಿದಳು. ಗುರೂಜಿ ಆಕೆಯ ತೆಲೆ ಸವರುತ್ತಾ 'ಏನಾಯಿತಮ್ಮ ಶಾಂತಿ' ಏನು ಕೇಳಿದರು. 'ಏನಿಲ್ಲ ಗುರೂಜಿ..' ಎಂದು ಕಣ್ಣೀರನ್ನು ಒರೆಸಿಕೊಂಡು, ಮತ್ತೊಮ್ಮೆ ಅವರ ಚರಣ ಸ್ಪರ್ಶವನ್ನು ಮಾಡಿ ಅಲ್ಲಿಂದ ಹೊರಟಳು. ತಿಂಗಳ ದುಡಿಮೆಯಲ್ಲ ತಂದು ಇಲ್ಲಿಗೆ ಕೊಟ್ಟಿದ್ದಾರೆ ಎಂದು ಅರಿವಾದಾಗ ದುಃಖ ಇನ್ನೂ ಹೆಚ್ಚಾಯಿತು.



ಅಯ್ಯೋ, ನಾನೇನು ಮಾಡಿದೆ! ಇಂತಹ ಪೋಷಕರನ್ನ ವೃದ್ಧಾಶ್ರಮಕ್ಕೆ ಅಟ್ಟಿಬಿಟ್ಟೆನಾ? ಸಾಯುವ ಮಾತನ್ನೂ ಆಡಿಬಿಟ್ಟೆನಾ. ನಾನೆಂಥ ಹೆಣ್ಣು ಎಂದುಕೊಂಡಳು.


ಏನೋ ಕಳೆದುಕೊಳ್ಳುವ ಆತಂಕ. ಭಾರವಾಗಿದ್ದ ಮನದಲ್ಲಿ ಮಮತೆಯ ಸ್ವರಗಳು ಉಕ್ಕಿ ಹರಿದವು. ವೇಗವಾಗಿ ಮನೆಯೆಡೆ ಕಾಲು ಹಾಕಿದಳು.


ತನ್ನ ಬ್ಯಾಗಿನಲ್ಲಿದ್ದ ಕೀಲಿಯಿಂದ ಬಾಗಿಲನ್ನು ತೆರೆದಳು. ಮನೆ ನಿಶಬ್ದವಾಗಿತ್ತು. ಅಮ್ಮ .. ಎಂದು ಕೂಗಿದಳು. ಅಡುಗೆಮೆನೆಗೆ ಹೋಗಿ ನೋಡಿದಳು. ರೊಟ್ಟಿಗಳೆಯನ್ನೆಲ್ಲ ಸುಟ್ಟು, ಅದಕ್ಕೆ ಯಾವುದೊ ಪಲ್ಯವನ್ನು ಮಾಡಿ ಒಂದು ತಟ್ಟೆಯಲ್ಲಿ ಹಾಕಿ ಇಡಲಾಗಿತ್ತು. ನಾನೇನು ಮಾಡಿಬಿಟ್ಟೆ ಎಂದುಕೊಂಡು ತಲೆಯ ಮೇಲೆ ಕೈಯನ್ನು ಇಟ್ಟುಕೊಂಡಳು. ಕೂಡಲೇ ಮನೆಯ ಬಾಗಿಲನ್ನು ಹಾಕಿ ಆಟೋವನ್ನು ಹಿಡಿದು ಹೊರಟಳು. ಅಪ್ಪನನ್ನು ಕಳಿಸಿದ ಆಶ್ರಮ ಅಮ್ಮನನ್ನು ಕಳಿಸಿದ್ದಕ್ಕಿಂತ ನಾಲ್ಕು ಮೈಲು ದೂರದಲ್ಲಿತ್ತು. ಕೊನೆ ಪಕ್ಷ ಇಬ್ಬರನ್ನೂ ಒಂದೇ ಆಶ್ರಮಕ್ಕಾದರೂ ಸೇರಿಸಬೇಕಿತ್ತು ಅಂದುಕೊಂಡಳು. ಆಶ್ರಮಕ್ಕೆ ಬಂದು ಅಪ್ಪನ ಹೆಸರೇಳಿ ವಿಚಾರಿಸಿದಳು. 'ಒಹ್ ಅವರ, ಈಗಷ್ಟೇ ಬಂದರು.. ಕಾಲಿಗೆ ಏನೋ ಪೆಟ್ಟಾಗಿದೆ.. ರಕ್ತ ಸುರಿಯುತ್ತಿತ್ತು.. ಸದ್ಯಕ್ಕೆ ಆಗೂ ಆ ಕೋಣೆಯಲ್ಲಿ ಇರಿಸಿದ್ದಾರೆ' ಎಂದು ಆಶ್ರಮದ ಮೇಲ್ವಿಚಾರಕ ಬೊಟ್ಟು ಮಾಡಿ ತೋರಿಸಿದ. ಪೆಟ್ಟಾಗಿದೆ ಎಂಬುವುದ ಕೇಳಿ ಶಾಂತಿ ಹೆದರಿದಳು. ಹೃದಯ ಒಂದೇ ಸಮನೆ ತೀವ್ರಗತಿಯಲ್ಲಿ ಬಡಿಯತೊಡಗಿತು. 'ಅಪ್ಪ..' ಎನ್ನುತಾ ಗದ್ಗದಿತ ಸ್ವರದಲ್ಲಿ ಶಾಂತಿ ಅತ್ತ ಓಡಿದಳು.






'ಎಷ್ಟ್ ಹೇಳಿದ್ರೂ ಕೇಳಲ್ಲ.. ನೋಡಿ-ಮಾಡಿ ನಿಧಾನಕ್ಕೆ ರಸ್ತೆ ದಾಟ್ಬೇಕು..ವಯಸ್ಸ್ ಇಷ್ಟಾದ್ರೂ ಅಷ್ಟೇ ' ಎಂದು ಬೈಯುತ್ತಾ ಅಮ್ಮ ಅಪ್ಪನ ಕಾಲಿಗೆ ಬಟ್ಟೆ ಕಟ್ಟುತ್ತಿದ್ದಳು. ಇಬ್ಬರನ್ನೂ ಒಟ್ಟಿಗೆ ನೋಡಿ ಶಾಂತಿಗೆ ಎಲ್ಲಿಲ್ಲದ ಆಶ್ಚರ್ಯ!


'ಏನ್.. ಮಕ್ಳು ಹೊರಗಾಕಿದ್ರ' ಎಂದು ಪಕ್ಕದ ಬೆಡ್ಡಿನ ಲ್ಲಿ ಮಲಗಿದ್ದ ವ್ಯಕ್ತಿ ಕೇಳಿದ.


'ಏನ್ರಿ ನೀವು ಹೇಳೋದು.. ಹೊರಗ್ ಹಾಕೋದ.. ನಮ್ಮ ಮನೆ ಕೆಲ್ಸ ನಡೀತಾ ಇದೆ..ನೆಂಟರಿಷ್ಟರ ಮನೆಗೆ ಹೋಗಿ ತೊಂದ್ರೆ ಕೊಡೋದು ಯಾಕೆ ಅಂತ ನಾವೇ ಇಲ್ಲಿಗ್ ಬಂದ್ವು..ಮಕ್ಳು ಅವ್ರ ಗೆಳೆಯರ ಮನೆಯಲ್ಲಿ ಉಳ್ಕೊಂಡು ಕೆಲ್ಸ ಮಾಡ್ಸತ ಇದಾರೆ.. ' ಎಂದು ಅಪ್ಪ ಪೇಚಾಡಿಕೊಂಡು ಹೇಳಿದ.


'ಇಲ್ಲಿಗೆ ಎಲ್ಲರೂ ಬರ್ತಾರೆ.. ಆದ್ರೆ ವಾಪಾಸ್ ಯಾರು ಹೋಗಲ್ಲ ಬಿಡಿ' ಎಂದ.


'ನಮ್ಮ್ ಮಗ್ಳು ಇನ್ ಸ್ವಲ್ಪ ದಿನ ಬಂದು ಕರ್ಕೊಂಡು ಹೋದಾಗ ಗೊತ್ತಾಗುತ್ತೆ ನಿಮ್ಗೆ' ಎಂದು ಅಮ್ಮ ಹೇಳಿದಾಗ ಆತ ಗಹಗಹನೆ ನಗುತಾ ಮಗ್ಗುಲು ಹೊರಳಿ ಮಲಗಿದ. ಆತ ನಕ್ಕಿದ್ದನು ಕಂಡು ಅಪ್ಪ ಅಮ್ಮರಿಬ್ಬರೂ ಒಬ್ಬರನೊಬ್ಬರು ನೋಡಿಕೊಂಡರು. ದಿನವೆಲ್ಲ ವೈರಿಗಳಂತೆ ಜಗಳವಾಡಿದರೂ ಕಷ್ಟಗಾಲದಲ್ಲಿ ನಾವೇ ನಮ್ಮಿಬ್ಬರಿಗೆ ಎನ್ನುವ ಕರುಣೆಯ ನೋಟದಲ್ಲಿ. ಅದನ್ನು ಕಂಡು ಶಾಂತಿ ಸಂಕಟದಿಂದ ನರಳಿದಳು.ಬಾಗಿಲಲ್ಲೇ ನಿಂತು ಅಳುತ್ತಾ ಇವೆಲ್ಲವನ್ನು ನೋಡುತ್ತಿದ್ದ ಅವಳು ಅಮ್ಮಾ.. ಎನ್ನುತಾ ಹೋಗಿ ತಬ್ಬಿಕೊಂಡಳು. ಅಪ್ಪನ ಕಣ್ಣಲ್ಲೂ ನೀರು ಜಿನುಗಿದ್ದವು.ಎಂದೂ ಕರೆದುಕೊಂಡು ಹೋಗದಿದ್ದ ಅವರನ್ನು ಮೊದಲ ಬಾರಿಗೆ ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗಿ, ಕನ್ನಡ ಚಿತ್ರವನ್ನು ತೋರಿಸಿಕೊಂಡು, ಅವರಿಗಿಷ್ಟವಾಗ ಹೋಟೆಲಿನಲ್ಲಿ ಊಟವನ್ನು ಮಾಡಿಸಿಕೊಂಡು ಬರುವಷ್ಟರಲ್ಲೇ ರಾತ್ರಿಯಾಗಿತ್ತು. ಕೆಲವೇ ಘಂಟೆಗಳ ಮೊದಲು ಕವಿದ ಕಾರ್ಮೋಡವು ಸರಿದು ಶಾಂತಿಯ ಮೊಗದಲ್ಲಿ ಮಂದಹಾಸ ಮೂಡಿತ್ತು.






ಮರುದಿನ ಬೆಳಗ್ಗೆ 'ಅಮ್ಮಾ..ಅಪ್ಪಾ..ಅಮ್ಮಾ...' ಎನ್ನುತ ಮಲಗೇ ಕನವರಿಸುತ್ತಿದ್ದ ಶಾಂತಿಯನ್ನು ಕಂಡು ಅಮ್ಮ 'ಹೇ ಶಾಂತಿ.. ಏನಾಯಿತೆ.. ಎದ್ದೇಳೇ' ಎಂದು ಭುಜ ಅಲುಗಾಡಿಸಿ ಎಳಿಸಿದಾಗ ಶಾಂತಿಗೆ ಎಚ್ಚರವಾಯಿತು. ಕಣ್ಣು ತೆರೆದ ಕೂಡಲೇ ಅಮ್ಮ ತನ್ನ ಮುಂದಿದ್ದಾಳೆ. ಪಕ್ಕದ ಅಲಾರ್ಮ್ ನಲ್ಲಿ ಘಂಟೆ ೮ ತೋರಿಸುತ್ತಿತ್ತು. 'ಏನಿಲ್ಲ ..’ ಎಂದು ಶಾಂತಿ ಎದ್ದು ಕೂತು ಅಪ್ಪ ಎಲ್ಲಿ ಎಂದು ಕೇಳಿದಳು. 'ಮುಖ ಉದೀಸ್ಕೊಂಡು ಟಿವಿ ಮುಂದೆ ಕೂತಿದೆ' ಎಂದಳು. ತನ್ನ ಕೊಂಚ ಸಿಟ್ಟನ್ನೂ ಬೆರೆಸಿ. ಸರಿ ಎನ್ನುತಾ.ಎದ್ದು ಹೊರನಡೆದ ಶಾಂತಿಯನ್ನು ಎಳೆದು ಕೂರಿಸಿದ ಅಮ್ಮ ' ಬಾ ಕೂರಿಲ್ಲಿ.. ತೆಂಗಿನೆಣ್ಣೆ ಕಾಯಿಸ್ಕೊಂಡು ತಂದಿದ್ದೀನಿ.. ಕೂದ್ಲು ನೋಡು..' ಎಂದು ಗೊಣಗುತ್ತ ನೆತ್ತಿಯ ಮೇಲೆ ಎಣ್ಣೆಯನ್ನು ಸುರಿದು ಶಾಂತಿಯ ತಲೆಯನ್ನು ಕುಕ್ಕತೊಡಗಿದಳು....