Saturday, June 27, 2020

ಪಯಣ - 2

ಸಿಟ್ಟು ಹಾಗು ದುಃಖಗಳ ಹೊಳೆ ಸಮರಾಶಿಯಲ್ಲಿ ಮನಸ್ಸನ್ನು ಆವರಿಸದರೆ ದುಃಖವೆಂಬ ಆ ಪ್ರಧಾನಭಾವವೇ ಗೆದ್ದೇ ತೀರುತ್ತದೆ.

ಲೌಡ್ ಸ್ಪೀಕರ್ ನಲ್ಲಿರಿಸಿದ ಮೊಬೈಲಿನಲ್ಲಿ ಕೊಂಕು ನುಡಿದು ಮೂದಲಿಸುತ್ತಿರುವ ಅಮ್ಮನ ದುಃಖಬರಿತ ಧ್ವನಿ ಒಂದೆಡೆಯಾದರೆ ತನ್ನ ಮಾವನಿಂದಿಡು ಅವನ ಮಡದಿಯನ್ನೂ ಲೆಕ್ಕಿಸದೆ ಬಯ್ಯತೊಡಗಿದ್ದ ಹೆಸರಿಗೆ ಮಾತ್ರವಾಗಿದ್ದ ಅಪ್ಪನೆಂಬ ಸಿಡುಕ. ಸಿಟ್ಟು ದುಃಖಗಳ ಈ ತೊಳಲಾಟದ ಸನ್ನಿವೇಶವನ್ನು ಕಾಲೇಜಿನ ಕಾರಿಡಾರ್ನ ಒಂದೆಡೆ ನಿಂತು ತನ್ನ ಮೊಬೈಲಿನಲ್ಲಿ ಆಲಿಸುತ್ತಿದ್ದ ಆದಿ ಉಸಿರುತಡೆಯಿಡಿದು ಅಳತೊಡಗಿದ. ತನ್ನಪ್ಪನ ದುರ್ವರ್ತನೆಯನ್ನು ಕೇಳಿ ಮೈಯಲ್ಲ ಕುದಿಬಂದಂತಹ ಸಿಟ್ಟುಬಂದರೆ ಅಮ್ಮನ ಗದ್ಗದಿತ ಸ್ವರ ಅವನನ್ನು ಕಣ್ಣೀರಿನ ಅಲೆಯಲ್ಲಿ ಮುಳಿಗಿಸುತ್ತಿದ್ದವು. ತನ್ನಿಂದೆ ಗುಜುಗುಜುಗುಡುತ್ತಿದ ವಿದ್ಯಾರ್ಥಿಗಳ ಗುಂಪಿಗೆ ವಿಮುಖವಾಗಿ ವಿಶಾಲವಾಗಿ ಹರಡಿದ್ದ ಬೆಟ್ಟಗುಡ್ಡಗಳೆಡೆಗೆ ನಿಂತು ಆತ ರೋಧಿಸುತ್ತಿದ್ದಾನೆ. ತರಗತಿ ಶುರುವಾಗಿ ಎಲ್ಲರೂ ಒಳಗೊದ ಮೇಲೆ ಮುಖವನ್ನು ತೊಳೆದುಕೊಂಡು ಬಂದು ಒಬ್ಬಂಟಿಗನಂತೆ ಹಿಂದಿನ ಬೆಂಚಿನಲ್ಲಿ ಕೂತ. ಸೆಮಿಸ್ಟರ್ ಶುರುವಾಗಿ ಎರಡು ತಿಂಗಳಾದರೂ ಯಾರೊಬ್ಬರೂ ಈತನಿಗೆ ಗೆಳೆಯನ ಪಟ್ಟವನ್ನು ಕಟ್ಟಿರಹರು. ಮಾತು ಬಾರದ ಮೂಕನಾಗಿ, ದುಃಖ ದ್ವೇಷಗಳ ಅಲೆಗಳ ತಿಕ್ಕಾಟವನ್ನು ಹತ್ತಿಕ್ಕುತ್ತಾ ಪಾಠವನ್ನು ಕೇಳುವ ನಾಟಕವನ್ನು ನಟಿಸತೊಡಗಿದ.

ತನ್ನ ಮುಂದೆ ಕೂತಿದ್ದ ವಿದ್ಯಾರ್ಥಿ ಸಮೂಹವನ್ನು ಒಮ್ಮೆ ಹಾಗೆಯೇ ಗಮನಿಸುತ್ತಾನೆ. ಆ ಉದ್ದುದ್ದ ಜಡೆಯ ಹುಡುಗರ ಕೇಶರಾಶಿಯ ಹೊಳಪುಗಳೇನು, ಅವರ ಬ್ರಾಂಡೆಡ್ ಡ್ರೆಸ್ಸುಗಳೇನು, ಶಿಕ್ಷಕರೂ ತಮಗೆ ಜಿಗುಪ್ಸೆಯಾಗದಿರಲಿ ಎನ್ನುವಂತೆ ಅಂತವರನ್ನೇ ಮುಂದಿನ ಸಾಲಿನಲ್ಲಿ ಕೂರಿಸಿದ್ದಾರೆಯೋ ಎಂದನಿಸುತ್ತದೆ ಆತನಿಗೆ. ಇನ್ನು ಹುಡುಗಿಯರ ಅಂದ ಚಂದವೆಲ್ಲ ದೂರದ ಮಾತು, ಕನಿಷ್ಠ ಅವರ ಮುಖವನ್ನೂ ತಲೆಯೆತ್ತಿ ನೋಡಿದರೂ ಈ ಸುಂದರ ಸುಮಧುರ ಪ್ರಪಂಚದಲ್ಲಿ ತಾನೊಬ್ಬ ಮಹಾಕುರೂಪಿಯೇನೋ ಎಂಬಂತಹ ಭಾವನೆ ಈತನಲ್ಲಿ ಮೂಡುತ್ತಿತ್ತು. ಈ ಹುಡುಗ ಹುಡುಗಿಯರ ಜೀವನ ತನ್ನ ಜೀವನಕ್ಕಿಂತ ಅದೆಷ್ಟು ಭಿನ್ನ? ಇವರ ಸುಗುಣ ಜಾತಿಯ ಪೋಷಕರು, ನೆಮ್ಮದಿಯ ಜೀವನ, ಓದು, ಹರಟೆ, ನಕ್ಕು ನಲಿಯುವ ಬಾಳು ಎನುತ ಮತ್ತೊಂದು ಕಲ್ಪನಾ ಲೋಕದಲ್ಲಿ ಮುಳುಗುತ್ತಾನೆ. ಇದ್ದಕ್ಕಿಂದಂತೆ ಸೈಲೆಂಟ್ ಮೋಡಿನಲ್ಲಿದ್ದ ಆತನ ಮೊಬೈಲ್ ಅದುರತೊಡಗಿತು. ಅಮ್ಮನ ಫೋನನ್ನು ನೋಡಿದಾಕ್ಷಣ ಸಿಟ್ಟು ವಿಪರೀತವಾಗಿ ಕೆಂಪು ಬಟನ್ ಅನ್ನು ಒತ್ತಿದ್ದಾಗ ಬಂದ ಆ ಸದ್ದು ಲೆಕ್ಚರರ್ ಬೋರ್ಡಿನ ಮೇಲೆ ಚಾಕ್ ಪೀಸ್ನಿಂದ ಕುಟ್ಟಿದಂತಿತ್ತು.

**

'What the...! ಏನ್ ಹೇಳ್ತೀಯೋ ನೀನು? ಅಲ್ಲ ಮಾರಾಯ ಈ ಸ್ಕ್ಯಾಮ್ ಗಳು ನಿನ್ನ ಹುಡ್ಕೊಂಡ್ ಬರ್ತಾವೋ ಅಥವಾ ಸ್ಕ್ಯಾಮ್ ಗಳನ್ನೇ ನೀನು ಹುಡ್ಕೊಂಡು ಹೋಗ್ತಿಯೋ..' ಎಂದು ಗಹಗಹನೇ ನಗುತ್ತ ಹೇಳಿದ ನನ್ನ ಮಾತಿಗೆ ಲೋಕೇಶ,

'ಹೋಗ್ಲಿ ಬಿಡ್ ಮಚಿ ಇದೆಲ್ಲ ಇದ್ದಿದ್ದೇ. Anyways, ನಿನ್ ದುಡ್ಡ್ ಮಾತ್ರ ಸೇಫ್.. ತಗೋ ' ಏನುತಾ ತನ್ನ ಜೇಬಿನಲ್ಲಿದ್ದ ಹತ್ತುಸಾವಿರದ ಕಂತೆಯನ್ನು ನನ್ನ ಕೈಲಿಟ್ಟ.

'ಮೂರ್ಛೆ ಬಿದ್ದ ಆ ಐದಡಿ ಆಸಾಮಿ ಮತ್ತೆ ಅಲ್ಲಿಗೆ ಹೋಗಿದ್ನಂತೆ.. ಸೆಟ್ನ ಬಿಚ್ಚ್ಕೊಂಡು ಹೋಗೋಕೆ. ಕೊನೆಗೆ ಏನು ವರ್ಕ್ ಔಟ್ ಆಗ್ಲಿಲ್ಲ ಅನ್ನೋ ಸಿಟ್ಟಿಗೆ ಅಲ್ಲಿದ್ದ ಹಂದಿಮರಿಗಳನ್ನು ಕದಿಯೋಕ್ಕೆ ಹೋಗಿ ಊರವರಿಂದ ಚೆನ್ನಾಗಿ ಗೂಸಾ ತಿಂದು ಈಗ ಜೈಲಿನಲ್ಲಿದ್ದನಂತೆ..' ಎಂದಾಗ ನನಗೆ ಮತ್ತೊಮ್ಮೆ ನಗುವನ್ನು ತಡೆಯಲಾಗಲಿಲ್ಲ. 'ಇಂಥವರಿಂದಾನೆ ನೋಡು ನಿಯತ್ತಾಗಿ ಸಂಪಾದನೆ ಮಾಡೋದು ಅಂದ್ರೆ ಈಗಿನ್ ಕಾಲದಲ್ಲಿ ಸಾಧ್ಯನೇ ಇಲ್ವೇನೋ ಅನ್ನೋಹಾಗೆ ಹಾಗಿರೋದು..' ನೋಟಿನ ಕಂತೆಯನ್ನು ಜೀನ್ಸ್ ಪ್ಯಾಂಟಿನ ಜೇಬಿನೊಳಗೆ ತೂರಿಸಿಕೊಳ್ಳುತ್ತಾ ನಾನೆಂದೆ.

ಇನ್ನೇನು ಬೆಳಗಿನ ಕೊನೆಯ ಪಿರಿಯಡ್ ಶುರುವಾಗುವ ಘಂಟೆ ಭಾರಿಸಿ ನಾವುಗಳು ಕ್ಲಾಸ್ ರೂಮಿನ ಒಳಹೋಗಬೇಕು ಎನ್ನುವಷ್ಟರಲ್ಲಿ ನಮ್ಮ ಹಿಂದೆ ಬಂದ ಸದ್ದೊಂದು,

'ಬ್ರದರ್, ಸ್ವಲ್ಪ ನಿಮ್ಮ್ ಮೊಬೈಲ್ ಕೊಡ್ತೀರಾ? ಅರ್ಜೆಂಟ್ ಆಗಿ ಮನೆಗ್ ಫೋನ್ ಮಾಡ್ಬೇಕು.. ನನ್ನ ಬ್ಯಾಲೆನ್ಸ್ ಮುಗಿದಿದೆ ' ಎಂದಾಗ ನಾನು ಲೊಕೇಶನ ಮುಖವನ್ನು ನೋಡಿದೆ. ಲೋಕೇಶ ತನ್ನ ಮೊಬೈಲನ್ನು ಆತನಿಗೆ ನೀಡಿದ. ಆತ ನನ್ನ ಫೋನನ್ನು ತೆಗೆದುಕೊಂಡು ತುಸುದೂರ ಹೋದನಂತರ ಲೋಕೇಶ 'ಆದಿಶೇಷ್ ಅಂತ, ತುಂಬಾ ಸೈಲೆಂಟ್ ಹುಡ್ಗ.. ಯಾವಾಗ್ಲೂ ಏನೋ ಒಂತರ ಚಿಂತೇಲೆ ಇರ್ತಾನೆ, ಎರಡನೇ ಸೆಮಿಸ್ಟರ್ಗೆ ಕಾಲೇಜ್ ಚೇಂಜ್ ಮಾಡ್ಕೊಂಡು ಇಲ್ಲಿಗೆ ಬಂದಿದ್ದಾನೆ ' ಎನ್ನುತ್ತಾನೆ.

ಸ್ವಲ್ಪ ಹೊತ್ತಿನ ನಂತರ ಮೊಬೈಲ್ನನ್ನು ಹಿಂದಿರಿಗಿಸುವ ನೆಪದಲ್ಲಿ ಆತ ನಮ್ಮ ಬಳಿಯೇ ಬಂದು ಕೂತ. ಕೆಲಸಮಯದ ನಂತರ ಆತನನ್ನು ಗಮನಿಸಿದೆ. ದುಃಖಭರಿತ ಆ ಕಣ್ಣುಗಳಲ್ಲಿ ಒರೆಸಿದಷ್ಟೂ ಕಣ್ಣೀರ ಹನಿಗಳು ಉದುರುತ್ತಿದ್ದವು. ಲೋಕೇಶ ನನ್ನ ಮುಖವನೊಮ್ಮೆ ಬೇಸರದಿಂದ ನೋಡಿದ.



**



ಎರಡುವಾರಕ್ಕೊಂದೇ ಕುಡಿಯುತ್ತಿದ್ದ ಬಿಯರ್ನ ಸರದಿ ನೆನ್ನೆಯ ರಾತ್ರಿ ಬಂದಿದ್ದರಿಂದ ಇಂದು ಕಾಲೇಜಿನ ಮೊದಲ ಪಿರಿಯಡ್ಗೆ ಬಂಕ್ ಹಾಕುವ ಕಾರ್ಯಕ್ರಮವಿದ್ದಿತು. ಲೋಕೇಶ ತನ್ನ ಕಾಲನ್ನು ರಾತ್ರಿಯಿಡಿ ನನ್ನ ಮೇಲೆಸೆದು ಆ ಮತ್ತಿನ ರಾತ್ರಿಯಲ್ಲೂ ನಿದ್ದೆ ಬಾರದಂತೆ ಮಾಡಿದ್ದ. ಅಲ್ಲದೆ 'ಕೋತಿ ತಾನ್ ಕೆಡೋದಲ್ದೆ, ಇಡೀ ಕಮ್ಯೂನಿಟಿಯನ್ನೇ ಕೆಡಿಸಿತು..' ಎನ್ನುವ ಹಾಗೆ 'ಮಾಸ್ ಬಂಕ್' ಎಂಬ ಪಾವನ ಕಾರ್ಯವನ್ನು ಶುರುಮಾಡಿ ಅದರಲ್ಲಿ ಗೆದ್ದೂ ಸಹ ತೀರಿದ್ದ. ಅಲ್ಲದೆ ಹಾಗೆ ಬಂಕ್ ಹಾಕಿದ ತಪ್ಪಿಗೆ ಬೇಕಾದ ಹಾಜರಿಯ ವಿಲೇವಾರಿಯನ್ನು ಮಾಡಲೂ ಸಹ ಈತನೇ ನೆರವಾಗುತ್ತಿದ್ದ. ಹಾಗಾಗಿ ಇಂದು ಆತನ ಕೃಪೆಯಿಂದ ಮೊದಲ ಪಿರಿಯಡ್ನ ಕ್ಲಾಸಿನ ಬೆಂಚುಗಳು ಕೇವಲ ಮೊದಲ ಸಾಲಿನ ಪ್ರವೀಣರಿಗೆ ಮೀಸಲಾಗಿದ್ದಿತು.

'ತತ್ತ್ .. ಹಾಸ್ಟೆಲಿಗೋಗಿ ರೆಡಿ ಆಗೋ ಮಾರಾಯ.. ಅದೆಷ್ಟ್ ಗೊರ್ಕೆ ಹೊಡಿತಿಯ ' ಎಂದು ಬೈದ ನಂತರ ಕೊಸರಾಡಿಕೊಂಡು ಎದ್ದು ಕೂತ ಲೋಕೇಶ.

'ತಾವೆನ್ ಕಮ್ಮಿನಾ .. ಸೊಳ್ಳೆಗಳೂ ಹೆದ್ರಿ ಓಡ್ ಹೋಗೋ ಹಾಗೆ ಗೊರಕೆ ಹೊಡೆಯೋದು ಯಾರಪ್ಪ..' ಎಂದು ಇಲ್ಲದ ಸುಳ್ಳನ್ನು ಸೃಷ್ಟಿಸಿ ನನ್ನ ಮೇಲೆಯೇ ಒರಿಸತೊಡಗಿದ. ಅಂತೆಯೇ ಯಾವುದೊ ಕರ್ಕಶ ಸದ್ದನ್ನು ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದನ್ನು ಕೇಳಿಸಿ ಅದು ನನ್ನದೇ ಗೊರಕೆಯ ಸದ್ದೆಂದು ವಾದಿಸತೊಡಗಿದ.

'ಆ ಹೊಸ ಹುಡ್ಗ ಆದಿಶೇಷ ನನ್ನ್ ರೂಮಿಗೆ ಶಿಫ್ಟ್ ಆಗ್ಲ ಅಂತ ಕೇಳ್ತಿದ್ದ..' ದಿಂಬನ್ನು ಗೋಡೆಗೆ ಒರಗಿಸಿ ಕೂರುತ್ತಾ ನಾನೇಳಿದೆ.

'ಒಹ್ ನ್ಯೂ ಕಮರ್ .. ಹಾಸ್ಟೆಲ್ ಏನಾಗಿದೆ ಅಂತೇ ಅವ್ನಿಗೆ ..'

'ಗೊತ್ತಿಲ್ಲ. ಬಂದ್ರೆ ಬರ್ಲಿ ಬಿಡು. ನಂಗೂ ಸ್ವಲ್ಪ ರೆಂಟ್ ಶೇರ್ ಆಗುತ್ತೆ.' ಎಂದ ನಾನು ತುಸು ಹೊತ್ತಿನ ನಂತರ 'ನೀನೂ ಯಾಕೆ ಇದೇ ರೂಮಿಗೇ ಶಿಫ್ಟ್ ಆಗ್ಬಾರದು ಮಾರಾಯ? ಹೇಗಿದ್ರು ಯಾವಾಗಲೂ ಇಲ್ಲೇ ಸಾಯ್ತಾ ಇರ್ತೀಯ .. ಅಫೀಷಿಯಲ್ ಆಗಿ ಬಂದ್ರೆ ರೆಂಟ್ ಖರ್ಚು ನಂಗೆ ಇನ್ನೂ ಕಡಿಮೆ ಆಗ್ಬಹುದಲ್ಲ..' ಆತನ ಮುಖಭಾವವನ್ನು ಗಮನಿಸುತ್ತಾ ನಾನೇಳಿದೆ.

'ನೋಡನಪ್ಪ .. ಆದ್ರೆ ನಾನ್ ರೆಂಟ್ ಕೊಡೋದು ಯಾವ್ದಾದ್ರು ಬಿಸಿನೆಸ್ ಶುರು ಮಾಡಿದ್ ಮೇಲೇನೆ..' ಎಂದು ಅಲ್ಲಿಯೇ ತನ್ನ ಚೌಕಾಶಿಯನ್ನು ಶುರುಮಾಡಿದ ಆತ. ನಾನು ಆತನನ್ನು 'ಥು..ನಿಂದು ಒಂದು ಜನ್ಮನಾ..' ಎಂಬ ನೋಟದಿಂದ ಗುರಾಯಿಸಿದಾಗ ಹಲ್ಲು ಕಿರಿಯುತ್ತ ನನ್ನ ಬಳಿಗೆ ಬಂದು 'ಜಸ್ಟ್ ಕಿಡ್ಡಿನ್ಗ್ ಮಚಿ..' ಎಂದು ನಗತೊಡಗಿದ.

'ಅದೆಲ್ಲ ಆಮೇಲೆ ನೋಡಣ .. ಮೊದ್ಲು ಕಾಲೇಜಿಗೆ ರೆಡಿ ಆಗು.. ಪ್ರಿನ್ಸಿ ಇವತ್ತು ಸರ್ಪ್ರೈಸ್ ವಿಸಿಟ್ ಮಾಡ್ತಾರಂತೆ.. ' ಎಂದ ಮೇಲೆಯೇ ಆತ ಎದ್ದು ಹಾಸ್ಟೆಲಿನ ಕಡೆಗೆ ಮುಖ ಮಾಡಿದ್ದು. ರಾತ್ರಿ ಕುಡಿದ ಬಿಯರ್ನ ಬಾಟಲಿಗಳನ್ನು ಹೆಕ್ಕಿ ನಾನು ರೂಮನ್ನು ಶುಚಿಗೊಳಿಸತೊಡಗಿದೆ.



**



'ಮಚಿ, ಉಷಾನ ನೋಡೋ. ಏನ್ ಐಟಂ ಆಗಿದ್ದಳೋ ಈಗ…' ಬಿಸಿನೆಸ್ ಡೆವೆಲಪಮೆಂಟ್ ಕ್ಲಾಸಿನ ನಿದ್ದೆಯ ಮತ್ತಿನಲ್ಲಿದ್ದ ನನ್ನನ್ನು ಬಡಿದೆಬ್ಬಿಸಿದ ಲೋಕೇಶ. ಇಡೀ ಕ್ಲಾಸ್ ರೂಮಿಗೆ ಇರುವ ಏಕೈಕ ಫ್ಯಾನಿನಿಂದ ಅದರ ಮೂಳೆ ಮುರಿಯುವಂತೆ ದುಡಿಸಿಕೊಂಡು ಅದು ಕರುಣಿಸುವ ಕೆಲವೇ ಕೆಲವು ಮೀಟರ್ / ಸೆಕೆಂಡ್ ಗಾಳಿಯನ್ನು ಕಷ್ಟಪಟ್ಟು ಆಸ್ವಾದಿಸುತ್ತಾ ಹೆಚ್ಚುಕಡಿಮೆ ಶಿಕ್ಷಕರಾದಿಯಾಗಿ ವಿದ್ಯಾರ್ಥಿಗಳೂ ನಿದ್ರೆಗೆ ಶರಣಾಗುವ ಮಧ್ಯಾಹನದ ಆ ಮತ್ತು ಆಹಾ…! ಎನಿಸುವಂತಿತ್ತು. ಒಂದು ಪಕ್ಷ ನಾನೇನಾದರೂ ಕಾಲೇಜಿನ ಪ್ರಿನ್ಸಿಪಲ್ ಆಗಿದ್ದರೆ ಇಡೀ ಕಾಲೇಜಿಗೆ ಕಾಲೇಜು ಮದ್ಯಾಹ್ನದ ಒಂದು ಪವರ್ ನ್ಯಾಪನ್ನು ತೆಗೆದುಕೊಳ್ಳುವುದನ್ನು ಖಡ್ಡಾಯ ಮಾಡಿ ಆ ನಿದ್ರೆಯಲ್ಲೂ ಏನಾದರೊಂದು ಚಿಂತನಾ ಕಾರ್ಯಗಳನ್ನು ಮಾಡುವ ವಿದ್ಯಾರ್ಥಿಗಳನ್ನು ತಯಾರಿಸುವ ಹೊಣೆಯನ್ನು ಶಿಕ್ಷಕರಿಗೆ ನೀಡುತ್ತಿದ್ದೆ!!

'ತತ್ತ್ ಏನಪ್ಪಾ ನಿನ್ ಗೋಳು , ಮುಚ್ಕೊಂಡ್ ಮಲ್ಕೋ ಇಲ್ಲ ನಂಗ್ ಮಲ್ಗೊಕ್ ಆದ್ರೂ ಬಿಡು' ಎಂದು ಕೊಸರಾಡುವಷ್ಟರಲ್ಲೇ ಶಿಕ್ಷಕರ ಕೈಲಿದ್ದ ಚಾಕ್ ಪೀಸಿನ ತುಂಡು ನನ್ನ ಕೆನ್ನೆಯನ್ನು ರಪ್ಪನೆ ಬಂದು ತಟ್ಟಿತು. ಚಾಕ್ ಪೀಸಿನ ಒಡೆತಕ್ಕೆ ಒಂದರೆ ಸೆಕೆಂಡು ಮಾತು ಬಾರದಂತಾಗಿ ಏನು ಮಾಡಬೇಕೆಂದು ನನಗೆ ತಿಳಿಯಲಿಲ್ಲ. ಲೋಕೇಶನ ದೃಷ್ಟಿ ಇನ್ನೂ ಉಷಾಳ ಮುಖವನ್ನು ತಲುಪಿರದಿದ್ದರಿಂದ ಹಾಗು ಆ ಸಮಯದಲ್ಲಿ ಆತನಿಂದ ಯಾವುದೇ ಬಗೆಯ ಸಹಾಯವನ್ನು ಆಕ್ಷೇಪಿಸುವದೂ ನಿಷ್ಪ್ರಯೋಜಕ ಕೆಲಸವಾದ್ದರಿಂದ ನಾನು ನಿರಪರಾಧಿಯಂತೆ ತಲೆತಗ್ಗಿಸಿಕೊಂಡು ಎದ್ದು ನಿಂತೆ.

'ಏನ್ರಿ ನೀವು.. ಮಾನ ಮರ್ಯಾದೆ ಏನೂ ಇಲ್ವಾ.. ಮನೆ ಒಳಗೆ ಅಮ್ಮನ್ ಕಾಲ್ ಮೇಲೆ ಮಲ್ಗೊ ಹಾಗೆ ಮಲಗಿದ್ದೀರಲ್ಲರಿ’

'ಅಮ್ಮನ್ ಕಾಲ್ ಮೇಲೆ ಮಲಗೋಕೆ ಮಾನ ಮರ್ಯಾದೆ ಯಾಕ್ ಬೇಕು ಮೇಡಂ..' ಎಂದಾಗ ಒಂದಷ್ಟು ಜನ ಗಹಗಹಿಸಿ ನಕ್ಕರು.

'Don’t talk Non Sense with me..' ಊಹಿಸಲಾರದ ಪ್ರತ್ಯುತ್ತರವನ್ನು ಕೇಳಿ ಆಕೆ ತನ್ನ ಸಹಜ ಏರು ಧ್ವನಿಯಲ್ಲಿ ಅಬ್ಬರಿಸಿದರು.

'Then tell me Mam, What Should I speak with you..’ ಎಂದು ರಾಗವಾಗಿ ನಾನು ಹೇಳಿದಾಗ ಇಡೀ ಕ್ಲಾಸಿಗೆ ಕ್ಲಾಸೇ ಬಿದ್ದು ನಗತೊಡಗಿತು.

ಆದರೆ ಆಕೆ ಗಟ್ಟಿ ಹೆಣ್ಣು. ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವಾಕೆಯಲ್ಲ. ಮೇಲಾಗಿ ಸಾಂಸ್ಕೃತಿಕ ಚಟುವಟಿಕೆಗಳ ಆಗರವಾಗಿದ್ದ ನಮ್ಮ ಕಾಲೇಜಿನಲ್ಲಿ ಶಿಕ್ಷಕ ಹಾಗು ವಿದ್ಯಾಥಿಗಳ ಈ ಬಗೆಯ ‘ಚರ್ಚಾಕೂಟ’ಗಳು ಆಗಾಗ್ಗೆ ನೆಡೆಯುತ್ತಲೇ ಇರುತ್ತಿದ್ದರಿಂದ ಮಾತಿನ ಪೆಟ್ಟನ್ನು ಮಾತಿನಿಂದಲೇ ಕೊಡಬೇಕಾಗಿ ಬರುತ್ತಿತ್ತು.

‘Oh is it, then Come on .. ಬನ್ನಿ ಇಲ್ಲಿ’ ಎನುತ ಅವರು ಬ್ಲಾಕ್ ಬೋರ್ಡಿನ ಬಳಿಗೆ ಹೋದರು. ಕೂಡಲೇ ಏನೂ ಅರಿಯದವನಂತೆ ನಾನು ಅವರನ್ನು ಹಿಂಬಾಲಿಸಿದೆ. ಲೋಕೇಶ ಸಿಕ್ಕ ಈ ಸದಾವಕಾಶವನ್ನು ಉಷಾಳ ಉದ್ದಳತೆಯನ್ನು ಕಣ್ಣಿನಲ್ಲೇ ಅಳೆಯುವುದರಲ್ಲಿ ಮಗ್ನನಾಗಿದ್ದ. ತನ್ನ ಒಬ್ಬನೇ ಅಮಾಯಕ ಗೆಳೆಯನ ಮಾನಾಪಹರಣದ ಸಂಧರ್ಭವೆಂದೂ ಅರಿಯದೆ ಆತ್ಮತೃಪ್ತಿಯ ನಗೆಯೊಂದನ್ನು ಬೀರುತ್ತಿದ್ದ.

'ರೀ ಮಿಸ್ಟರ್.. ನೋಡಿ, ಈ ಕ್ಲಾಸ್ಸಲ್ಲಿ ಒಬ್ರಾದ್ರೂ ನಾನ್ ಹೇಳಿರೋ ಪಾಠ ಆರ್ಥ ಆಗ್ಲಿಲ್ಲ ಅಥವಾ ನಿದ್ರೆ ಬರೋ ಆಗಿತ್ತು ಅನ್ಲಿ. I will make sure this will become my last class here.. ' ಎಂದು ನನಗೆ ಆ ಮ್ಯಾನೇಜ್ಮೆಂಟ್ ಕ್ಲಾಸ್ಸಿನ ಅತಿ ಕ್ಲಿಷ್ಟವಾದ ಸವಾಲನ್ನು ಹಾಕುವ ಮೊದಲು ತಾನು ಹೇಳಿದ ಮಾತನ್ನು ಸಮರ್ಥಿಸುವಂತೆ ತರಗತಿಯನೊಮ್ಮೆ ನೋಡಿದರು. ಆಶ್ಚರ್ಯವೆಂಬಂತೆ ಆ ಗುಂಪಿನ ಮಧ್ಯದಿಂದ ಕೈಯೊಂದು ಸದ್ದಿಲ್ಲದೆ ಮೇಲೆದ್ದು ನಿಂತಿತ್ತು! ತನ್ನ ಕಣ್ಣುಗಳೆರಡನ್ನೂ ಕೆರಳಿಸಿ ಆ ಕೈಗಳನ್ನೇ ನೋಡಿದ ಅವರು 'Hello, who the hell are you man & what do you want.. ' ಎಂದಾಗ ಲೋಕೇಶ,

'ನಿಮ್ಮ್ ಪಾಠಾನೂ ಅರ್ಥ ಆಗ್ಲಿಲ್ಲ + ಈ ಕಡೆ ನಿದ್ರೆನೂ ಬಿಡ್ತಿಲ್ಲ' ಎಂದು ಆಕಳಿಸುತ್ತಾ ಎದ್ದು ನಿಂತ!

ಮೊದಲ ಬಾರಿಗೆ ಅವರಿಗೆ ತಮ್ಮ ಮಾತಿನ ಮೇಲಿನ ಹಿಡಿತ ಸಡಿಲಗೊಂಡಿತು. ಧ್ವನಿ ಕೊಂಚ ತೊದಲತೊಡಗಿತು. ಅವರು ಉಷಾಳ ಮುಖವನ್ನೊಮ್ಮೆ ನೋಡಿದರು. ನಂತರದ ಕ್ಷಣದಲ್ಲೇ ಮತ್ತೆ ಗಟ್ಟಿಯಾದ ಉಸಿರೊಂದನ್ನು ಎಳೆದುಕೊಂಡು,

'ಸರಿ.. ಬನ್ರೀ.. ನೀವೂ ಬನ್ನಿ..ಸ್ಟೇಜ್ ಮೇಲೆ ನಿಂತು ನಾನ್ ಹೇಳ್ತಿರೋ ವಿಷ್ಯಾನ ಕ್ಲಾಸ್ಸಿಗೆ ಅರ್ಥ ಮಾಡ್ಸಿ.. ನಿಮ್ ನಿದ್ರೆನೂ ಹೋಗುತ್ತೆ, ನನಗೂ ಹೆಲ್ಪ್ ಆಗುತ್ತೆ..Come..Come ' ಎಂದು ಸ್ಟೇಜಿನಿಂದ ಕೆಳಗಿಳಿದರು. ಸಂದರ್ಭ ಬಿಗುವಾಯಿತು. ಕೆಲ ನಿಮಿಷ ಮೌನವಾಗಿದ್ದು 'Sorry ಮೇಡಂ' ಅಂದಿದ್ದರೆ ವಿಷಯ ಅಲ್ಲಿಗೆ ಮುಗಿಯುತ್ತಿತ್ತು. ಆದರೆ ಲೋಕೇಶ ಸುಮ್ಮನಾಗಲಿಲ್ಲ. ಈ ಹೊಸ ಐವತ್ತರ ಆಸುಪಾಸಿನ ಸ್ಟ್ರಿಕ್ಟ್ ಲೆಕ್ಚರರ್ನ ಮುಂದೆ ತನ್ನ ಹೀರೋಗಿರಿಯನ್ನು ತೋರಲೊದ ಆಸಾಮಿ.

ನನ್ನ ಪಕ್ಕಕ್ಕೆ ಬಂದು ನಿಂತವನು ಮುಗುಳ್ ನಕ್ಕು 'ಮಚಿ.. ಈದ್ ಯಾವ್ ಕ್ಲಾಸು' ಎಂದು ಕಿವಿಯ ಬಳಿ ಗುಸುಗುಡತೊಡತೊಡಗಿದ. ನಾನು ಬೇಕಂತಲೇ ಏನೂ ಮಾತನಾಡದೆ ಸುಮ್ಮನಾದೆ!

'ರೀ ಮಿಸ್ಟರ್, ಅಲ್ಲಿ ಬುಕ್ ಇದೆ, ಚಾಪ್ಟರ್ ನಂಬರ್ 2. ಸ್ಟಾರ್ಟ್ ಅಪ್ ಕಾನ್ಸೆಪ್ಟ್ಸ್ ' ಎಂದಾಗ ಲೋಕೇಶ ಪುಸ್ತಕವನ್ನು ಕೈಗೆತ್ತಿಗೊಂಡು ಬಿರಬಿರನೆ ಪುಸ್ತಕದ ಮೇಲೆ ಕಣ್ಣಾಯಿಸಿದ. ನಂತರ ಕೊಂಚ ಸುಮ್ಮನಾಗಿ ಸಿನಿಮೀಯ ರೀತಿಯಲ್ಲಿ ನಗುತ್ತಾ,

'You know class, ಈ ಪುಸ್ತಕದ ಬದ್ನೇಕಾಯಿನೆಲ್ಲ ಓದ್ತಾ ಇದ್ರೆ ದೇವ್ರಾಣೆ ನೀವು ಸ್ಟಾರ್ಟ್ ಅಪ್ಪು ಮಾಡಲ್ಲ ಮತ್ತೊಂದು ಮಾಡಲ್ಲ. ಅಲ್ಲ ರೀ, ಏನ್ ಇವಾಗ, ಬಿಸಿನೆಸ್ ಶುರು ಮಾಡ್ಬೇಕು ಅಷ್ಟೇ ತಾನೇ…' ತಾನು ಸೋತು ಸುಣ್ಣವಾಗಿದ್ದ ಬಿಸಿನೆಸ್ ನ ಯಾವುದಾದರೊಂದು ಕಾನ್ಸೆಪ್ಟ್ ಅನ್ನು ಹೇಳಲು ಹೊರಟಿರುವಂತಿದೆ ಎಂದು ನನಗೆ ಖಚಿತವಾಯಿತು.

'ಅದಕ್ಕ್ ಯಾಕ್ರೀ ಕ್ಲಾಸ್ ರೂಮ್ ಟೀಚಿಂಗು.. ಯಾಕ್ ಇಷ್ಟೆಲ್ಲಾ ಫೀಸು ಗೀಸು ಮತ್ತೊಂದು ಮಗದೊಂದು..? See, Until & Unless ನೀವು ರಣರಂಗಕ್ಕೆ ಇಳಿಯೋದಿಲ್ವೋ, ತಪ್ಪನ್ನು ಮಾಡೋದಿಲ್ವೋ, ಆ ತಪ್ಪಿಂದ ಪಾಠಗಳನ್ನು ಕಲಿಯೋದಿಲ್ವೋ ಅಲ್ಲಿವರೆಗೂ ನೀವ್ ಏನ್ ಓದಿದ್ರೂ ಅಷ್ಟೇನೆ! ನೀವು ತಪ್ಪ್ ಮಾಡಬಾರ್ದು ಅಂತ ಈ ಪುಸ್ತಕಗಳಿವೆ. ವಿಪರ್ಯಾಸ ಅಂದ್ರೆ ಇವೆ ವಿದ್ಯಾರ್ಥಿ ಜೀವನದ ಅತಿ ದೊಡ್ಡ ಶಾಪ... Yes. ಪುಸ್ತಕಗಳಿದ್ದರೆ ವಿದ್ಯಾರ್ಥಿಗಳು ತಪ್ಪನ್ನೇ ಮಾಡುವುದಿಲ್ಲ. ತಪ್ಪೇ ಮಾಡ್ದೆ ಗೆಲ್ಲೋದ್ರಲ್ಲಿ ಇರೋ ಮಜಾನಾದ್ರು ಏನು ಅಂತ? Come on guys, Let’s make mistake & learn the best out of it..' ಎನುತ ರಾಜನಗೆಯನ್ನು ಬೀರಿದನು.

ಮಾತಾಡಲು, Sorry, ಪಾಠ ಮಾಡಲು ಅನುಮತಿ ಕೊಟ್ಟ ಶಿಕ್ಷಕಿ ತನ್ನ ತಲೆಯನ್ನು ಕೆಳಹಾಕಿದರು.

'Anyways, ಈ ಟೀಚಿಂಗೇ ಟೀಚ್ ಮಾಡುವ ಒಂದು ಬ್ರಿಲಿಯೆಂಟ್ ಕಾನ್ಸೆಪ್ಟ್ ಅನ್ನು ನಾನು ನಿಮ್ಗೆ ಹೇಳ್ತಿನಿ.. Its Free, Its open, it’s useful & it’s very powerful too!'

ನಿದ್ರೆಗಣ್ಣಿನಲ್ಲಿದ ಕೆಲ ಹುಡುಗರು ಚಕಿತರಾದರೆ ಇನ್ನು ಕೆಲವರು 'ಇವನ್ಯಾವನೋ ಗುಲ್ಟು' ಎಂದು ಒಳಗೊಳಗೇ ನಗತೊಡದಿದರು. ಶಿಕ್ಷಕಿ ಮಾತ್ರ ತಾನು ಇಳಿಬಿಟ್ಟ ತಲೆಯನ್ನು ಮೇಲೇರಿಸಲಿಲ್ಲ.

'ಇದನ್ನು ಬಿಸಿನೆಸ್ ಅಂತ ಬೇರೆಯವರು ಕರೆಯಬಹದು. ಆದರೆ ನಾನು ಇದನ್ನು ಸೋಶಿಯಲ್ ಸರ್ವಿಸ್ ಅಂತಾನೆ ಅನ್ನೊದು. ಯಾಕಂದ್ರೆ ಇಲ್ಲಿ ಪ್ರಯೋಜನಕ್ಕೊಳಪಡುತ್ತಿರುವವರು ವಿದ್ಯಾರ್ಥಿಗಳು, ಕಾಲೇಜುಗಳು, ಹಾಗು ಕಂಪನಿಗಳು. ಇದೊಂದು ಟ್ರೈನಿಂಗ್ ಇನ್ಸ್ಟಿಟ್ಯೂಟ್. ನಮ್ಮ ತಾಲೂಕಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅದೆಷ್ಟೇ ಉತ್ತಮ ಅಂಕಗಳನ್ನೂ ಗಳಿಸಿಕೊಂಡಿದ್ದರೂ ಯಾವೊಂದು ಕಂಪನಿಯೂ ಸಿಟಿಯ ಕಾಲೇಜುಗಳಿಗೆ ಬರುವಂತೆ ಸೆಮಿಸ್ಟರ್ ಮುಗಿಯುವ ಮೊದಲೇ ಇಲ್ಲಿಗೆ ಬಂದು ನೂರಾರು ವಿದ್ಯಾರ್ಥಿಗಳನ್ನು ಹೆಕ್ಕಿ ಕರೆದುಕೊಂಡು ಹೋಗುವುದಿಲ್ಲ. It’s a fact. ಹಳ್ಳಿಯ ವಿದ್ಯಾರ್ಥಿಗಳು ಕಾಲೇಜು ಮುಗಿದು ವರ್ಷಾನುಗಟ್ಟಲೆ ಆ ಸಿಟಿಯ ನಗರಗಳಲ್ಲಿ ಕೆಲಸಕ್ಕಾಗಿ ಅಲೆಯಬೇಕು. ಸಿಕ್ಕರೂ ಅಂತ ಕೆಲಸಗಳಿಂದ ಬರುವ ಸಂಬಳ ಬಟ್ಟೆಗಾದರೆ ಹಿಟ್ಟಿಗಿಲ್ಲ, ಹಿಟ್ಟಿಗಾದರೆ ಬಟ್ಟೆಗಿಲ್ಲ ಎಂಬಂತೆ. ಇನ್ನು ಸಾಧಾರಣ ವಿದ್ಯಾರ್ಥಿಗಳಿಗಂತೂ ಕೆಲಸವೆಂಬುದು ಹಿಮಾಲಯ ಪರ್ವತವೇ ಸರಿ. ಊರಿನಿಂದ ಅಷ್ಟೋ ಇಷ್ಟೋ ಚಿಲ್ಲರೆ ಹಣವನ್ನು ಹಿಡಿದುಕೊಂಡು ಹೋಗಿ, ಯಾವುದೊ ಗೆಳೆಯನ ಒಂದು ರೂಮಿನ ಮೂಲೆಯಲ್ಲಿ ಒಂದಿಷ್ಟು ಜಾಗವನ್ನು ಪಡೆದು ದಿನವಿಡೀ ಸಿಟಿಯ ಗಲ್ಲಿಮೂಲೆಗಳನ್ನು ಸುತ್ತುತ್ತಾ, ಕಂಡ ಕಂಡಲ್ಲೆಲ್ಲ ತಮ್ಮ ರೆಸ್ಯುಮೆಗಳನ್ನು ಹಾಕುತ್ತಾ, ಹಣ ಖಾಲಿಯಾಗುತ್ತಿರುವಂತೆ ಏರೊಡೊತ್ತಿನ ಊಟವನ್ನು ಒಂದೊತ್ತಿಗೆ ಸೀಮಿತವಾಗಿರಿಸಿಕೊಳ್ಳುತ್ತಾ, ಕೊನೆಕೊನೆಗೆ ಕೇವಲ ಟೀ ಬನ್ನುಗಳಲ್ಲೇ ದಿನವನ್ನು ಸಾಗಿಸುತ್ತ, ಆಗಲೂ ಕೆಲಸ ಸಿಗದೇ ಕೊನೆಗೆ ಜೇಬಿನಲ್ಲಿದ್ದ ಚಿಲ್ಲರೆಯಲ್ಲ ಖಾಲಿಯಾದ ಮೇಲೆ ಊರಿನ ಯಾರೋ ಒಬ್ಬರನ್ನು ಸಿಟಿಯಲ್ಲಿ ಕಂಡು ಅವರಿಂದ ಒಂದಿಷ್ಟು ಹಣವನ್ನು ಸಾಲದ ರೂಪದಲ್ಲಿ ಪಡೆದು ಇದ್ದೆನೋ ಬಿದ್ದೆನೋ ಎಂಬಂತೆ ಊರಿಗೆ ಸೇರುವ ಇಂತಹ ಯುವಕರನ್ನು ಎಂಜಿನೀರ್ಸ್ ಗಳು ಎಂದು ಕರೆಯಬಹುದೇ?’

ತಲೆ ಮೇಲೆತ್ತದ ಶಿಕ್ಷಕಿಗೆ ಏನಾಯಿತೋ ಎಂದು ನನ್ನ ಚಿಂತೆ. ಆಕೆಗೆ ಲೊಕೇಶನ ಮಾತುಗಳನ್ನು ಕೇಳಿ ಕುಂತಲ್ಲೇ ಹೃದಯಘಾತವಾಗಿರಬಹುದೇ?!

'ನಾನು ಅಥವಾ ನಿಮ್ಮಲ್ಲೇ ಯಾರೊಬ್ಬರು ಶುರು ಮಾಡಲೋಗುತ್ತಿರುವ ಈ ಇನ್ಸ್ಟಿಟ್ಯೂಟ್ ಮೊದಲು ಕಂಪನಿಗಳನ್ನು ಸಂಪರ್ಕಿಸಿ ಅವರು ಪ್ರಸ್ತುತ ವರ್ಷಕ್ಕೆ ನೇಮಕಾತಿ ಮಾಡಲು ಯೋಜಿಸಿರುವ ವಿದ್ಯಾರ್ಥಿಗಳ ಅರ್ಹತೆ, ಬೇಡಿಕೆ ಹಾಗು ಒಟ್ಟು ಸಂಖ್ಯೆಯನ್ನು ಒಟ್ಟುಗೂಡಿಸಿಕೊಂಡು ಬರುತ್ತದೆ. ಹೀಗೆ ಎಂಟತ್ತು ಕಂಪನಿಗಳನ್ನು ಸಂಪರ್ಕಿಸಿ ವಿವರಗಳನ್ನು ಗುರುತಾಕಿಕೊಂಡು ಕಾಲೇಜನ್ನು ಸಂಪರ್ಕಿಸುವುದು. ಕಾಲೇಜಿನಲ್ಲಿ ತಮ್ಮಲ್ಲಿರುವ ವಿವರಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯಾ ವಿಷಯದ್ಲಲಿಯೇ ಸಂಜೆ ಕಾಲೇಜು ಮುಗಿದ ಬಳಿಕ ಅಥವಾ ವಾರಾಂತ್ಯದಲ್ಲಿ ತರಬೇತಿಯನ್ನು ನೀಡುವುದು. ಉದಾಹರಣೆಗೆ ಇಂದು ಒಬ್ಬ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮಾಡಿದ ವಿದ್ಯಾರ್ಥಿ ಹೆಚ್ಚಾಗಿ ಆಯ್ಕೆಯಾಗುತ್ತಿರುವುದು ಪ್ರೋಗ್ರಾಮಿಂಗ್ ಆಧಾರಿತ ಕೆಲಸಗಳ ಮೇಲೆಯೇ. ಅಂದರೆ ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಾಡಬೇಕಾದ ಕೆಲಸ. ಇದು ಅವನ ಸ್ವಂತದ ಆಯ್ಕೆಯಾಗದಿದ್ದರೂ ಪ್ರಸ್ತುತ ಪರಿಸ್ಥಿತಿ ಆತನನ್ನು ಮೂಕನನ್ನಾಗಿಸುತ್ತದೆ. ಹಾಗಾದರೆ ಕೊನೆಗೆ ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಾಡುವ ಕೆಲಸವನ್ನೇ ಈತ ಮಾಡಬೇಕಾದರೆ ಎಲೆಕ್ಟ್ರಿಕಲ್ ಇಂಜಿನಿಯರಿಂಗನ್ನು ತನ್ನ ನಾಲ್ಕು ವರ್ಷಗಳ ಕಲಿಕೆಯಲ್ಲಿ ಕಲಿತು ಏನು ಪ್ರಯೋಜನ? ಇಂದು ಬಹುಪಾಲು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಗೋಳು ಇದೆಯೇ. ಓದುವುದು ಒಂದು ಮಾಡುವುದು ಬೇರೊಂದು! ಇಲ್ಲಿ ಶುರುವಾಗುವ ಇನ್ಸ್ಟಿಟ್ಯೂಟ್, ಕಂಪನಿಗಳಿಂದ ಕರಾರುವಕ್ಕಾಗಿ ಡೇಟಾಗಳನ್ನು ಸಂಗ್ರಹಿಸಿ ಅವರವರ ಐಚ್ಚಿಕ ವಿಷಯಗಳಲ್ಲೇ ತರಬೇತಿಯನ್ನು ನೀಡುತ್ತದೆ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವರ ವಲಯದಲ್ಲಿನದೇ ಕಂಪನಿಗಳ ಅಗತ್ಯದ ಮೇರೆಗೆ ತರಬೇತಿಯನ್ನು ನೀಡುತ್ತದೆ. ಅದೂ ಸಹ ಕೆಲಸ ದೊರೆತ ಮೊದಲ ಆರು ತಿಂಗಳು ಕಂಪೆನಿಗಳಲ್ಲಿ ನೀಡುವ ತರಬೇತಿಯಂತೆಯೆ. ಸಾದ್ಯವಾದರೆ ಈ ತರಬೇತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಕೊನೆಯ ವರ್ಷದ ಪ್ರೊಜೆಕ್ಕ್ಟ್ ಅನ್ನೂ ಸಹ ಮಾಡಿಕೊಳ್ಳಬಹುದು.

ಈಗ ಸಂಸ್ಥೆಯ ಪ್ರಯೋಜನಕ್ಕೆ ಬಂದರೆ, ಮೊದಲು ವಿದ್ಯಾರ್ಥಿಗಳು ಅವರವರ ಐಚ್ಚಿಕ ವಿಷಯಗಳಲ್ಲೇ ವೃತ್ತಿ ಆಧಾರಿತ ತರಬೇತಿಯನ್ನು ಪಡೆದು ವರ್ಷಾಂತ್ಯದ ಹೊತ್ತಿಗೆ ಏಕ್ದಂ ರೆಡಿಯಾಗಿರುತ್ತಾರೆ. ಇದರಿಂದ ಕಂಪನಿಗಳಿಗೂ ತರಬೇತಿಯ ಹೊರೆ ಕಡಿಮೆಯಾಗಿ ಅವರಿಗಿಚ್ಚಿಸಿದ ವಿದ್ಯಾರ್ಥಿಗಳೇ ಪ್ಲೇಸ್ಮೆಂಟ್ ಸಮಯದಲ್ಲಿ ಇಲ್ಲಿ ತಯಾರಾಗಿ ನಿಂತಿರುತ್ತಾರೆ. ಎಲ್ಲಾ ಬಗೆಯ ಕಂಪನಿಗಳು ತಾವು ನಿರಾಳವಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬಹುದು. ಅಲ್ಲದೆ ಪ್ರೊಬೇಷನ್ ಪಿರಿಯಡ್ ಅದು ಇದು ಏನದೆ ಮೊದಲ ದಿನದಿಂದಲೇ ಉದ್ಯೋಗಿಗಳ ಪೂರ್ಣ ಲಾಭವನ್ನು ಪಡೆಯಬಹುದು. ಒಂದು ಪಕ್ಷ ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಕಂಪನಿಗಳಲ್ಲಿ ಆಯ್ಕೆಯಾಗದಿದ್ದರೂ ಅವರಿಗೊಂದು ವೃತ್ತಿ ಆಧಾರಿತ ತರಬೇತಿ ಅದಾಗಲೇ ಆಗಿರುತ್ತದೆ. ಇದು ಕೇವಲ ಪದವಿ ಪ್ರಮಾಣಪತ್ರವನ್ನು ಹಿಡಿದು ಕೆಲಸವನ್ನು ಅರಸುವುದಕಿಂತ ಎಷ್ಟೋ ಪಾಲು ವಾಸಿ ಅಲ್ಲವೇ? ಅಲ್ಲದೆ ಹಳ್ಳಿಗಳ ಕಾಲೇಜುಗಳಿಗೂ ಹೆಚ್ಚೆಚ್ಚು ಕಂಪನಿಗಳು ಬರುವುದರಿಂದ ಕಾಲೇಜಿಗೂ ಒಳ್ಳೆಯ ಹೆಸರು, ಹಳ್ಳಿಯ ವಿದ್ಯಾರ್ಥಿಗಳಿಗೂ ಒಂದೊಳ್ಳೆಯ ಅವಕಾಶ ದೊರೆತಂದಾಗುತ್ತದೆ.’ ಎಂದು ಸುಮ್ಮನಾಗುತ್ತಾನೆ.

ಪ್ಲೇಸ್ಮೆಂಟ್ ಎಂಬ ಪದವನ್ನು ಕೇಳಿಯೋ ಏನೋ ಇಡೀ ಕ್ಲಾಸೇ ಎಲ್ಲಿಲ್ಲದ ಒಂದು ಮೌನದಲ್ಲಿ ಲೀನವಾಯಿತು. ಗರಗರನೆ ತಿರುಗುತ್ತಿದ್ದ ಸೀಲಿಂಗ್ ಫ್ಯಾನ್ ಒಂದನ್ನು ಬಿಟ್ಟು.

'ವಾವ್.. What a concenpt .. ಬ್ರಿಲಿಯೆಂಟ್..!! ಎನುತ ನಿಂತು ಚಪ್ಪಾಳೆಯನ್ನು ಹೊಡೆಯ ತೊಡಗಿದಳು ಉಷಾ! ಆಕೆಯನ್ನು ಇಡೀ ಕ್ಲಾಸೇ ಅನುಕರಿಣಿಸಿತು. ಯಾರಿಗೂ ಬೇಡವಾದ ಪಾಪದ ಕೂಸಾಗಿ ನಾನು ಏನು ಮಾಡುವುದೆಂದು ತಿಳಿಯದೆ ಸುಮ್ಮನೆ ನಿಂತೆ.

ಕೂಡಲೇ ಉಷಾ ಕ್ಲಾಸಿನೆಡೆಗೆ ಮುಖ ಮಾಡಿ,

'ಹಲೋ, will you guys stop clapping please?! ಅಲ್ಲರೀ ಇದನ್ನ ಯಾರಾದ್ರೂ ಬಿಸಿನೆಸ್ ಅಂತಾರ? ಎಂದು ಕ್ಲಾಸನ್ನು ಒಮ್ಮೆ ನೋಡಿದಳು. ‘ನಮ್ಮೂರಲ್ಲಿ ಸೀಬೆಕಾಯಿ ಮಾರೋನು ಸಹ ಇದಕ್ಕಿಂತ ಒಳ್ಳೆ ಬಿಸಿನೆಸ್ ಮಾಡ್ತಾನೆ. ಇವನ್ಯಾರೊ ಹೇಳ್ದ , ಇವ್ರ್ ಕೇಳಿದ್ರು' ಎಂದು ಮುಖಕ್ಕೆ ಬಡಿದಂತೆ ಆಕೆ ಹೇಳಿದಳು. ಉಷಾಳ ಶಾಖವನ್ನು ಕಂಡು ತಬ್ಬಿಬ್ಬಾದ ಲೋಕೇಶ ನನ್ನೆಡೆ ನೋಡಿದ. ಪ್ರತ್ಯುತ್ತರವಾಗಿ ನನ್ನ ಹನ್ನೆರೆಡು ಹಲ್ಲುಗಳು ಆತನನ್ನು ನೋಡಿ ನಲಿದವು. ನಂತರ ಉಷಾ ಲೆಕ್ಚರರ್ ನ ಬಳಿಗೊಗಿ 'Mom, Come on .. Will go out and Complain Princi' ಎಂದಾಗ ನನ್ನ ಜಂಘಾಬಲವೇ ನಡುಗಿಹೋಯಿತು! ಕಾಲೇಜಿಗೆ ಸೇರಿ ಆರು ತಿಂಗಳಾದರೂ ಯಾರು ಯಾರ ಮಗಳು ಯಾರು ಯಾರ ಅಮ್ಮ ಎಂದರಿಯದ ಸಾಮಾನ್ಯ ಜ್ಞಾನ ನಮಗಿಂದು ಕೈಕೊಟ್ಟಿತು. ಆದರೆ ಲೆಕ್ಚರರ್ಗೆ ಕೂತಲ್ಲೇ ಹೃದಯಾಘಾತವಾಗಿ ಏನೋ ಹೆಚ್ಚು-ಕಡಿಮೆಯಾಗಿರಬೇಕೆಂದು ಊಹಿಸಿದ ನನಗೆ ತುಸು ಸಮಾಧಾನವಾಯಿತು. ಅಸಲಿಗೆ ನಮ್ಮ ಕ್ಲಾಸ್ ರೂಮಿನ ಏಕೈಕ ಫ್ಯಾನಿನ ಮಹಿಮೆಗೆ ಆ ತಾಯಿ ಕೂತಲ್ಲೇ ನಿದ್ರೆಗೆ ಜಾರಿದ್ದರು!! ಮಧ್ಯಾಹ್ನದ ನಿದ್ರೆಯ ಮತ್ತಿನಿಂದ ನಾವುಗಳು ಪರದಾಡುವುದು ಇಂದು ಆಕೆಗೂ ತಿಳಿದಿರಬಹುದು. ಉಷಾಳ ಮಾತನ್ನು ಕೇಳಿ ಎದ್ದು ಕೊಸರಾಡಿಕೊಳುತ್ತಾ ಏನನ್ನೂ ಮಾತನಾಡದೆ ಕ್ಲಾಸ್ ರೂಮಿನಿಂದ ಹೊರನೆಡೆದರು. ಅವರುಗಳು ಹೋದ ನಂತರ ಇಡೀ ಕ್ಲಾಸೇ ಶಿಳ್ಳು ಚಪ್ಪಾಳೆಗಳಿಂದ ಕೇಕೆ ಹಾಕಿತು. ಲೆಕ್ಚರರ್ನ್ನು ನಿದ್ರೆಗೆ ಜಾರಿಸಿದ ನಮ್ಮ ಯಶೋಗಾಥೆ ಮುಂದಿನ ಹಲವು ದಿನಗಳವರೆಗೂ ಕಾಲೇಜಿನ ಕ್ಯಾಂಪಸ್ ನಲ್ಲಿ ರಾರಾಜಿಸಿತು...


ಮುಂದುವರೆಯುವುದು..

No comments:

Post a Comment