Saturday, June 27, 2020

ಪಯಣ - 5

'ಎಷ್ಟೋತ್ರಿ ನಿಮ್ಗೆ ಬರೋಕ್ಕೆ.. ಮೆಸೇಜ್ ಮಾಡಿ ಅರ್ಧ ಘಂಟೆ ಆಗ್ತಾ ಬಂತು.. ಎಲ್ ಇದ್ರಿ ಇಷ್ಟೊತ್ತು ' ಹೆಸರಿಗೆ ಮಾತ್ರ ಕ್ಯಾಂಟೀನ್ ಎಂದೆನಿಸಿಕೊಂಡಿದ್ದ, ನೀರಿಗೆ ಹಾಲನ್ನು ಬೆರೆಸಿದ್ದ ಐದು ರೂಪಾಯಿಯ ಒಂದು ಕಪ್ ಟೀಯನ್ನು ಕುಡಿಯುವ ನೆಪದಲ್ಲಿ ಘಂಟೆಗಟ್ಟಲೆ ಕಾಲಹರಣ ಮಾಡುವ ಕಾಲೇಜಿನ ಹಲವಾರು ವಿದ್ಯಾರ್ಥಿಗಳ ಅಡ್ಡವಾಗಿದ್ದ ಸ್ಥಳದಲ್ಲಿ ರಾಧಾ ನನಗಾಗಿ ಕಾಯುತ್ತಿದ್ದರು. ಕ್ಯಾಂಟೀನಿನ ಕೊನೆಯ ಬೆಂಚಿನಲ್ಲಿ ಆಕೆ ನನ್ನೆಡೆಗೆ ತಿರುಗಿದ್ದರಿಂದ ನನ್ನ ಮುಂದಿದ್ದ ಹೊಟ್ಟೆಕಿಚ್ಚಿನ ಹುಡುಗರಿಗ್ಯಾರಿಗೂ ಆಕೆಯ ಮುಖದರ್ಶನವಾಗುತ್ತಿರಲಿಲ್ಲ. ಪ್ರಸ್ತುತ ಹಾಗುಹೋಗುಗಳು, ಸಂಗೀತ, ಕಲೆ, ವಿಶ್ವ, ವಿಜ್ಞಾನ, ಸಮಾಜ, ಅಮೀಬಾ ಹಾಗು ಏಲಿಯನ್ಸ್ ನಿಂದಿಡಿದು ಪ್ರೀತಿ, ಪ್ರೇಮ, ಪ್ರಣಯದವರೆಗೂ ಪಾರದರ್ಶಕ ಚರ್ಚೆಗಳು ನೆಡೆಯುತ್ತ ಇತ್ತೀಚೆಗೆ ನಮ್ಮಲ್ಲಿ ಒಂದು ಬಗೆಯ ಸ್ನೇಹಭಾವ ಮೂಡಿದೆ. ತನ್ನ ಸಹೋದ್ಯೋಗಿಗಳನ್ನು ಬಿಟ್ಟರೆ ಹೆಚ್ಚಾಗಿ ಆಕೆ ಕಳೆಯುತ್ತಿದ್ದದ್ದು ನನ್ನೊಡನೆಯೇ. ಆದಿ ಹಾಗು ಲೋಕೇಶ ಹೆದರಿಯೋ ಅಥವಾ ಬೇಕಂತೆಲೇ ಏನೋ ಇವರು ನನ್ನೊಟ್ಟಿಗಿದ್ದಾಗ ಕಾಣಲು ಸಿಗದಂತೆ ಪರಾರಿಯಾಗುತ್ತಾರೆ. ಲಲನೆಯರ ಗಂಧಗಾಳಿಯಿರದ ಆ ಬ್ರಹ್ಮಚಾರಿಗಳ ನಡುವೆ ಪ್ರಕೃತಿಯಿತ್ತ ಪ್ರತಿಭೆಯನ್ನು ನಾನು ಎಲ್ಲಿ ಕಳೆದುಕೊಳ್ಳುವೆನೋ ಎಂಬ ಭಯದಲ್ಲಿ ನಾನು ಆಗಾಗ್ಗೆ ರಾಧಾರನ್ನು ಭೇಟಿಯಾಗಿ ಮಾತಿನ ಮತ್ತಿನಲ್ಲಿ ಕಳೆಯುತ್ತಿದ್ದೆ!. ಯಾವುದೇ ವಿಷಯವನ್ನು ಮುಚ್ಚು ಮರೆಯಿಲ್ಲದೆ ಆಡುವ ಒಬ್ಬ ಶಿಕ್ಷಕಿ ಕಮ್ ಗೆಳತಿ ಸಿಗುತ್ತಾರೆಂಬುದೇ ನನಗೆ ಊಹಿಸಲು ಸಾಧ್ಯವಿರಲಿಲ್ಲ. ಮೊನ್ನೆ ಹೀಗೆಯೇ ಮಾತನಾಡುವಾಗ ನಾನು ಬೇಕಂತಲೇ ನಿಮಗೆ ಕೇಸರಿಬಾತ್ ಮಾಡಲು ಬರುವುದಿಲ್ಲವೆಂದೇಳಿ ಇಂದು ಒಂದು ಭರ್ತಿ ಡಬ್ಬ ಕೇಸರಿಬಾತನ್ನು ಮಾಡಿ ತರುವಂತೆ ಮಾಡಿದ್ದೆ.

'ಗಾಸಿಪ್ ರಿ .. ತುಂಬಾ ದಿನ ಆಗಿತ್ತು ಅವ್ರ್ ಇವ್ರ್ ಬಗ್ಗೆ ಗಾಸಿಪ್ ಮಾಡಿ.. ಅದೇನೋ ಒಂತರ ಮಜಾ ಇರುತ್ತೆ ಈ ಗಾಸಿಪ್ ಮಾಡೋದ್ರಲ್ಲಿ ಯು ನೋ..' ನಗುತ್ತಲೇ ನಾನು ಉತ್ತರಿಸಿದೆ.

'Seriously..?' ಎಂದು ಮುಖವನ್ನು ಕಿವಿಚಿ ಆಕೆ ಕೇಳಿದರು.

'ಹುಂ, ರಿ.. ಈ ಮನುಷ್ಯ ಸರ್ವಭಾವಗಳ ಆಗರ.. ಇಲ್ಲಿ ಗಾಸಿಪ್ ಎಂಬ ಭಾವ ಆತನಿಗೆ ಒಂತರ ನಿಜವಾದ ನೆಮ್ಮದಿಯನ್ನು ನೀಡುತ್ತದೆ. ಒಂಥರ ಕ್ಲೀನ್ ಆಕ್ಸಿಜನ್ ಇದ್ದ ಹಾಗೆ..'

'ಅದು ಭಾವ ಅಲ್ಲ ಸಾರ್ .. ಚಟ .. ಸಿಗರೇಟು ಬಿಯರ್ ಇದ್ದ ಹಾಗೆ..'

'ನಾನೊಟ್ಟಿಗೆ ಒಮ್ಮೆ ಗಾಸಿಪ್ ಮಾಡಿ ನೋಡಿ ರಾಧಾ.. ನೀವೇ ಅಂತೀರಾ ಆಮೇಲೆ ಅದು ಚಟನೋ ಮತ್ತೊಂದೊ ಅಂತ, Its like haven sometimes!'

'ಸರಿ ಸರಿ.. ಆದ್ರೆ ಸದ್ಯಕಂತೂ ಅದ್ ಬೇಡ.. ನಿಮ್ಮ್ ಗಾಸಿಪ್ನ ನಿಮ್ಮೊಳಗೆ ಇಟ್ಕೊಳ್ಳಿ..ಇದನ್ನ ತಗೊಳ್ಳಿ, ನಿಮ್ ಕೇಸರಿಬಾತ್.. ಏನ್ ಮಾಡೋಕ್ ಬರಲ್ಲ ಅಂತಿದ್ರಲ್ಲ. ತಿಂದ್ ನೋಡಿ ಈಗ..' ಎಂದು ಕಾಲು ಕೆಜಿಯಷ್ಟು ನನ್ನಿಷ್ಟದ ತಿಂಡಿಯನ್ನು ನೀಡಿದರು. ಜೊತೆಗೆ ಅದನ್ನು ತಾನೇ ಮಾಡಿದ್ದೇನೆಂದು ದೃಡೀಕರಿಸಲು ಅದನ್ನು ಮಾಡಿದ್ದ ವಿಡಿಯೋವನ್ನೂ ಸಹ ರೆಕಾರ್ಡ್ ಮಾಡಿ ತಂದಿದ್ದರು.

'ಹುಂ ಬಿಡ್ರಿ .. ನೀವೇ ಮಾಡಿದ್ದು ಅಂತ ಪ್ರೂವ್ ಆಯ್ತು.. ಆದ್ರೆ ಕೇಸರಿ ಬಾತ್ ಮಾಡೋರಿಗೆ ಬಿರಿಯಾನಿ ಮಾಡೋಕ್ ಬರಲ್ಲ ಅಲ್ವಾ' ಎಂದೆ.

'ಹೌದು ಸಾರ್.. ನನ್ನ್ ಟ್ಯಾಲೆಂಟ್ ನ ಟೇಕನ್ ಫಾರ್ ಗ್ರಾಂಟೆಡ್ ಅಂದ್ಕೊಂಡಿದ್ದೀರಾ ನೀವು' ಎಂದು ಆಕೆ ನಕ್ಕರು.

ನಾನೂ ಸಹ ನಗಾಡಿದೆ. ಶುದ್ಧ ಜೇನಿನ ಪದರದಂತಿದ್ದ ರಸಭರಿತವಾದ ಅಂತಹ ಕೇಸರಿಬಾತನ್ನು ನಾನು ಹಿಂದೆಂದೂ ತಿಂದಿಲ್ಲವೆನಿಸಿತು.

'ರಿ.. ಅದ್ ಏನ್ ಒಳ್ಳೆ ಮಕ್ಳು ತಿಂದಾಗೆ..ಗಲ್ಲದ್ ಮೇಲೆ ಸ್ವಲ್ಪ ಉಳ್ಕೊಂಡಿದೆ..' ಎಂದು ಮುಂಬಾಗಿ ಆಕೆಯ ಕರ್ಚಿಪಿನಿಂದ ನನ್ನ ಗಲ್ಲವನ್ನು ಒರೆಸಿದ ರು. ಆಕೆಯ ಕೈ ಬೆರಳು ನನ್ನ ತುಟಿಯನ್ನು ತಾಕಿದವು. ಆಕೆಯ ಹಿಂದಿದ್ದ ಗಂಡು ಹಿಂಡಿಗೆ ಕೆಲಕಾಲ ಹೃದಯ ಬಡಿತವೇ ನಿಂತಂತಾಗಿರಬೇಕು. ನಗುತ್ತಿದ್ದ ಮಗುವಿಗೆ ಒಮ್ಮೆಲೇ ಸೂಜಿಯನ್ನು ಚುಚ್ಚಿದಂತಾಯಿತು. ನಾನು ಪುನಃ ತಿನ್ನಲು ಪ್ರಾರಂಭಿಸಿದೆ.

'ನೀವ್ ತಿನ್ನಲ್ವಾ..' ಎಂದು ಕೇಳಿದೆ. ಇಲ್ಲವೆಂಬಂತೆ ಅವರು ತಲೆಯಾಡಿಸಿದರು.

'ಹೇ ..' ಎಂದೇಳಿ ಆಕೆ ನನ್ನನ್ನೇ ನೋಡತೊಡಗಿದರು. ಬಹುಷಃ ಮೊದಲಿಂದಲೂ ಹೀಗೆಯೇ ನೋಡುತಿದ್ದರೆನೊ ತಿಳಿಯದು. ನಾನು ಬರಗೆಟ್ಟ ಪ್ರಾಣಿಯಂತೆ ತಿನ್ನುವುದರಲ್ಲೇ ಮಗ್ನವಾಗಿದ್ದೆ.

'ನನ್ಗೆ ನಿಮ್ಮತ್ರ ಒಂದು ವಿಷಯ ಕೇಳ್ಬೇಕಿತ್ತು.. ಇನ್ಫ್ಯಾಕ್ಟ್ ಇದನ್ನು ನನಗೆ ಪ್ರತಿಯೊಬ್ಬ ಹುಡುಗ್ರನ್ನೂ ಕೇಳ್ಬೇಕು ಅನ್ಸುತ್ತೆ'

'ಕೇಳಿ.. ಸರ್ವಪೋರರ ಪರವಾಗಿ ನಾನು ಉತ್ತರಿಸುತ್ತೇನೆ' ಎಂದು ನಗಾಡಿದೆ.

'ಹುಡ್ಗಿರ್ನ ಹತ್ರದಿಂದ ನೋಡಿದ್ರೆ, ಅಥವಾ ಜಸ್ಟ್ ಟಚ್ ಮಾಡಿದ್ರೆ ಸಾಕು..ಹುಡುಗ್ರಿಗೆ ಅದೇನೋ ಆಗುತ್ತೆ ಅಂತಾರಲ್ಲ.. ಏನದು..?'

ಆಗತಾನೆ ಗಂಟಲಿನೊಳಗೆ ಇಳಿದಿದ್ದ ಕೇಸರಿಬಾತಿನ ತುತ್ತೊಂದು ಪುನ್ಹ ಹೊರಬಂತಾಯಿತು ನನಗೆ. ಸಿಹಿನೀರಿನ ಕೊಳದಲ್ಲಿ ಇಜುತ್ತಿದ್ದವನಿಗೆ ಕೂಡಲೇ ಯಾರೋ ಸಾವಿರ ವ್ಯಾಟ್ಗಳ ಕರೆಂಟ್ ಅನ್ನು ಕೊಟ್ಟಂತೆ. ಪ್ರತ್ಯತ್ತವಾಗಿ ಏನೆನ್ನಬೇಕೆಂದು ನನಗೆ ಖಂಡಿತ ತಿಳಿಯಲಿಲ್ಲ.

'ಹಾಗೆಲ್ಲ ಏನಿಲ್ಲ ರೀ.. ಸುಮ್ನೆ ಗಿಮಿಕ್ಕು.. ಮೂವಿ, ಸೀರಿಯಲ್ಸ್ ಗಳಿಗೆ ಮಾತ್ರ ಅದೆಲ್ಲ' ಎಂದೆ.

'Be practical, ನಿಜ ಹೇಳಿ. ನಂಗೆ ತಿಳ್ಕೊಬೇಕು.. ನಿಜವಾಗಲೂ ನಿಮ್ಗೆ ಏನೂ ಅನ್ಸಲ್ವಾ ?'

'ನಂಗೆ ಮಾತ್ರ ಅಲ್ಲ ರಾಧಾ, ಯಾರಿಗೂ ಏನು ಅನ್ಸಲ್ಲ.. it’s all fake ' ಎಂದು ನಾನು ಪುನಃ ಸುಮ್ಮನಾದೆ.

ಆಕೆ ಕೇವಲ ಕುತೂಹಲಕ್ಕಾಗಿ ಮಾತ್ರ ಈ ಮಾತನ್ನು ಕೇಳುತ್ತಿದ್ದಾಳೆ ಎಂದು ನನಗೆ ತಿಳಿದಿತ್ತು. ಆದರೆ ಭೂಮಿಯ ಮೇಲಿನ ಪ್ರತಿಯೊಂದು ಗಂಡು ಜೀವಿಗೆ ಹೆಣ್ಣೊಂದರ ಪರಮ ಸುಮಧುರ ಸ್ಪರ್ಶ ಯಾವ್ಯಾವ ಅಂಗಗಳಲ್ಲಿ ಏನೇನು ಮಾಡುತ್ತದೆ ಎಂದು ಹೇಗೆ ಬಿಡಿಸಿ ಹೇಳಲಿ. ನಾನು ಬೇರೊಂದು ವಿಷಯವನ್ನು ತೆಗೆಯಲು ಯೋಚಿಸತೊಡಗಿದೆ. ಆದರೆ ಕೂಡಲೇ ಅವರು ಮುಂಬಾಗಿ ಎದೆಯ ಬಾಗ ನನಗೆ ಕಾಣುವಂತೆ ತನ್ನ ಮುಖವನ್ನು ನನ್ನ ಬಳಿಗೆ ತಂದರು. ಆಕೆಯ ಆ ಹಾಲಿನ ಕೆನೆಯಂತಹ ಚರ್ಮವನ್ನು ನಾನು ಮೊದಲ ಬಾರಿಗೆ ಅಷ್ಟು ಹತ್ತಿರದಿಂದ ನೋಡತೊಡಗಿದೆ. ಕಲ್ಲಂಗಡಿ ಹಣ್ಣನ್ನೇ ನಾಚಿಸುವ ಬಣ್ಣದ ಅವರ ತುಟಿಗಳು ನನ್ನ ಇಡೀ ದೇಹವನ್ನು ಬಿಸಿಯಾಗಿಸತೊಡಗಿತು. ಎರಡೇ ಇಂಚುಗಳ ಅಂತರದಲ್ಲಿದ್ದ ಅಪ್ಸರೆಗೆ ಮುತ್ತಿಕ್ಕುವ ಇಂತಹ ಅವಕಾಶ ಸಾವಿರಕ್ಕೊಬ್ಬರಿಗೆ ಮಾತ್ರ ಸಿಗಬಲ್ಲದು.

'Tell me, ನಿಮ್ಗೆ ಎನೂ ಫೀಲ್ ಆಗ್ತಾ ಇಲ್ವಾ..' ಎಂದು ನನ್ನ ಕೈಯನ್ನು ಹಿಡಿದು ಅದುಮಿದರು. ಏನೋ ಹೇಳಲು ತಡವರಿಸಿದೆ. ಮಾತು ಬರಲಿಲ್ಲ.

ಇನ್ನು ಅಲ್ಲಿರಲು ಸಾಧ್ಯವಿಲ್ಲವೆಂದೆನಿಸಿ ಕೂಡಲೇ ಎದ್ದು ಬಿರಬಿರನೆ ಹೊರನೆಡೆದೆ.

ಇಡ್ಲಿಗೆ ಸಾಂಬಾರನ್ನು ಹಾಕಲು ಹೋದ ಮಾಣಿ ನಮ್ಮೆಡೆ ನೋಡುತ್ತಾ ತನ್ನ ಪಂಚೆಯ ಮೇಲೆಯೆ ಒಂದು ಸೌಟು ಸಾರನ್ನು ಸುರಿದುಕೊಂಡ.




*****


'Excuse me..? ಏನಾಯಿತ್ರಿ ನಿಮ್ಗೆ..ಏನ್ ಇವತ್ತ್ ಮೌನ ವ್ರತನ?' ರಾಧಾ ನನ್ನ ಕೇಳಿದರು. ಕಾಲೇಜಿನ ಕಾರಿಡಾರಿನಲ್ಲಿ ನಾನು ಹಾಗು ಅವರು ನಿಂತಿದ್ದೆವು. ಕ್ಯಾಂಟೀನಿನ ‘ಆ ದಿನ’ದಿಂದ ನನ್ನನೊಳಗೆ ಅದೇನೋ ಒಂದು ಬಗೆಯ ನಾಚಿಕೆಯ ಭಾವ ಮೂಡಿದ್ದರೆ ಆಕೆ ಮಾತ್ರ ಏನೂ ಆಗಿಯೇ ಇಲ್ಲವೆಂಬಂತೆ ವರ್ತಿಸುತ್ತಿದ್ದರು.. ಅದೇಕೆ ಅಂದು ಆಕೆ ಕೇಳಿದರೋ ತಿಳಿಯಲಿಲ್ಲ. ಇವರು ಕೆಲ ಪತ್ರಿಕೆಗಳಿಗೆ ಅಂಕಣಗಳನ್ನೂ ಬರೆಯುವುದುಂಟು. ಕೆಲವೊಮ್ಮೆ ಈ ಬರಹಗಾರರಿಗೆ ಮಾನವನ ಅತಿ ಸಹಜ ಗುಣಗಳ ದರ್ಶನವಾಗಬೇಕಿರುತ್ತದೆ. ಆ ಭಾವಘಳಿಗೆಯನ್ನು ಅನುಭವಿಸಲು ಅಥವಾ ತಿಳಿಯಲು ಕೆಲವರು ಯಾವುದೇ ಮುಚ್ಚು ಮರೆಯಿಲ್ಲದೆ ಅದೆಂತಹ ಕೆಲಸವನ್ನೂ ಮಾಡಬಲ್ಲರು. ಮಾಡಿಸಬಲ್ಲರು. ಅದು ಕೇವಲ ಕುತೂಹಲ. ಫ್ಯಾಕ್ಟ್ ಚೆಕ್ಕಿಂಗ್ ಎನ್ನಬಹುದು. ತಾವು ಬರೆಯುವ ಅಥವಾ ಹೇಳುವ ವಿಷಯಗಳು ನೈಜವಾಗಿರಬೇಕು, ಅದು ಕಲ್ಪನಾ ಬರಹಗಳಾಗಿರಬಾರದು ಎಂಬ ಬಯಕೆ. ಬಹುಷಃ ರಾಧಾ ಇಂತಹ ಯಾವುದೊಂದೂ ವಿಷಯವನ್ನು ಬರೆಯುತ್ತಿರಬೇಕು. ಆದರೆ…

ನಾನು ರಾಧಾರ ಮುಖವನ್ನೊಮ್ಮೆ ನೋಡಿದೆ. ಪಶ್ಚಿಮದಿಂದ ಬೀಸುತ್ತಿದ್ದ ತಿಳಿಗಾಳಿ ಅವರ ಮುಂಗೂದಲನ್ನು ಪದೇ ಪದೇ ಕೆಣಕುತ್ತಿತ್ತು. ಅದೆಂಥಹ ಘೋರ ಕಠೋರ ಹೃದಯಿಯೂ ಕರಗಿ ನೀರಾಗಬೇಕು ಅಂತಹ ನೋಟವದು. ನನ್ನ ಮನಸ್ಸು ಮಾತಾಡುವದನ್ನು ಮುಂದುವರೆಸಿತು…

ಆದರೆ, ಅದು ಅಷ್ಟು ಮಾತ್ರವಾಗಿರದೆ ಇದ್ದರೆ? ಅಂದಿನ ಆ ಪ್ರೆಶ್ನೆ ಯಾವೊಂದು ಆರ್ಟಿಕಲ್ನ ವಿಷಯವಾಗಿರದೆ ಇದ್ದರೆ?! ಸುಖಾಸುಮ್ಮನೆ ನನ್ನ ಅತಿ ಸಮೀಪಕ್ಕೆ ಬಂದು ಹಾಗೆ ಕೈಗಳನ್ನು ಅದುಮಿ ನನ್ನ ರೋಮು ರೋಮುಗಳೆಲ್ಲವನ್ನು ಎದ್ದು ನಿಲ್ಲುವಂತೆ ಮಾಡಿ ನೋಡಿದ ಆ ನೋಟ ನನಗೆ ರಣಭಯಂಕರ ಸಿಡಿಲಿನ ಮನಮೋಹಕ ದೃಶ್ಯದಂತೆ ಆನಂದವೂ ಜೊತೆಗೆ ಭಯವೂ ಒಟ್ಟಿಗೆ ಮೂಡುವಂತೆ ಮಾಡಿದ್ದಿತು. ಹಾಗಾದರೆ ಏನಿದರ ಅರ್ಥ? ಆಕೆ ಏನಾದರೂ …ಕೂಡಲೇ ಆಕೆಯ ಪ್ರೆಶ್ನೆಯ ನೆನಪಾಗಿ,

'I’m Sorry, ಅವತ್ತು ನೀವ್ ಕೇಳಿದ್ ಪ್ರೆಶ್ನೆಗೆ ಏನೂ ಉತ್ತರಿಸದೆ ನಾನು ಎದ್ದ್ ಬಂದಿದ್ದಕ್ಕೆ ಇರ್ಬೇಕು' ಎಂದು ಮುಗುಳ್ನಕ್ಕೆ.

'That's okay .. ನೀವ್ ಎದ್ದ್ ಬಂದಾಗ್ಲೇ ನಂಗೆ ನನ್ನ ಆನ್ಸರ್ ಸಿಗ್ತು ಬಿಡಿ, ನೀವ್ ಅಷ್ಟೆಲ್ಲ intellectuality ಬಗ್ಗೆ ಮಾತಾಡೋರು ಅಷ್ಟೊಂದೆಲ್ಲ ನಾಚ್ಕೋಬಾರ್ದು..' ಎಂದು ಹೇಳಿದರು.

ಆಕೆಯ ತುಟಿಯ ಮೇಲಿದ್ದ ಕಳ್ಳ ನಗೆಯನ್ನು ನಾನು ಗಮನಿಸದೇ ಇರಲಿಲ್ಲ.

'What do you mean?’

'Nothing ..ನೀವ್ ಹುಡುಗ್ರಿಗೆ ಜಸ್ಟ್ ಟಚ್ ಮಾಡೋದ್ರಲ್ಲೇ ಕಾಮೋತ್ತೇಜನೆ ಆಗುತ್ತೆ ಅಂದ್ರೆ ಆ ಸೃಷ್ಟಿಕರ್ತ ರಿಯಲಿ ಗ್ರೇಟ್ ಯು ನೋ ..'

'ಹಲೋ, ಒಂದ್ ನಿಂಷ.. ಫಸ್ಟ್ ಆಫ್ ಆಲ್ ನಂಗೆ ಆವತ್ತು Aphrodisiac ಆಗಿತ್ತು ಅಂತ ಯಾರ್ ಹೇಳಿದ್ದು?'

'ಅದ್ ಏನ್ರಿ Aphrodisiac ಅಂದ್ರೆ?' ಗೊಂದಲದ ನೋಡದಲ್ಲಿ ಆಕೆ ಕೇಳಿದರು.

'ನೀವ್ ಅಂದ್ರಲ್ಲ , ಇಂಗ್ಲಿಷ್ ಅಲ್ಲಿ ಅದರ ಅರ್ಥ ಅದೇ'

'Come on .. don’t be so Conservative.. Moreover ನೀವ್ ಕನ್ನಡದಲ್ಲಿ ಹೇಳಿದ್ ಮಾತ್ರಕ್ಕೆ ಅದರ ಅರ್ಥ ಏನ್ ಚೇಂಜ್ ಆಗಲ್ಲ'

'Whatever.. But how could you say that? ನನ್ನೊಳಗೆ ಏನಾಗುತ್ತೆ ಅಂತ ಅಷ್ಟ್ easy ಯಾಗಿ ಅದೇಗ್ ಹೇಳ್ತೀರಾ ನೀವು?' ಕಾಲೇಜಿನ ಕ್ಯಾಂಟಿನಲ್ಲಿ ಹಾಲಿಗೆ ನೀರನ್ನು ಬೆರೆಸುವ ಪ್ರಮಾಣದಲ್ಲಿ ನಿಜಕ್ಕೆ ಸುಳ್ಳನ್ನು ಬೆರೆಸಿ ನಟಿಸಿದೆ.

ಮೊದಲ ಬಾರಿಗೆ ಆಕೆಯೊಟ್ಟಿಗೆ ನಾನು ಮುಚ್ಚುಮರೆಯನ್ನು ಸಾಧಿಸತೊಡಗಿದೆ.

'What do you mean by how could you say that.. You were excited, I know' ಎಂದು ತನ್ನ ತೀಕ್ಷ್ಣ ದೃಷ್ಟಿಯಿಂದ ನನ್ನ ನೋಡತೊಡಗಿದರು.

ನೈಸರ್ಗಿಕವಾಗಿ ಜರುಗುವ ಪ್ರಕ್ರಿಯೆಯನ್ನು ಹೌದೆಂದು ಒಪ್ಪಿಕೊಳ್ಳಲು ನನಗೇಕೆ ಈ ಪರಿಯ ನಾಚಿಕೆ ತಿಳಿಯಲಾಗಲಿಲ್ಲ.

ನಾನು ಸುಳ್ಳನ್ನು ಮುಂದುವರೆಸಿದೆ.

'ಸುಮ್ನೆ ಏನೇನೋ ಕಲ್ಪಿಸಿಕೊಳ್ಳಬೇಡಿ ರಾಧಾ.. ಅಂತಹ ಸಿಲ್ಲಿ ರೀಸನ್ಸ್ ಗೆಲ್ಲ ಅದೆಲ್ಲ ಆಗೋದಾಗಿದ್ರೆ ಅಷ್ಟೇ ಆಮೇಲೆ..'

'What?! So, ನಿಮ್ಗೆ ಅವತ್ತು ಏನೂ ಆಗ್ಲಿಲ್ವಾ.. ಹಾಗಾದ್ರೆ ಯಾಕೆ ಎದ್ದ್ ಹೋದ್ರಿ? You are lying, otherwise prove it now!'

'ಮಗ್ನೆ, ಇವತ್ತ್ ನೀನ್ ಸತ್ತೇ..' ಮನಸ್ಸು ಮಾತಾಡಿತು.

'ರಾಧಾ.. ಇವಾಗ ಅದೆಲ್ಲ ಏಕೆ.. ಬಿಟ್ಬಿಡಿ.. ಲೆಟ್ಸ್ ಟಾಕ್ ಸಂಥಿಂಗ್ ಎಲ್ಸ್'

'Don’t ever dare to lie to me . ನಾನ್ ಇದನ್ನ ಕಾಲೇಜಿನ ಎಲ್ರತ್ರನೂ ಹೋಗಿ ಕೇಳೋದಿಲ್ಲ. ನೀವೊಬ್ಬ matured knowledgeable ಪರ್ಸನ್ ಅಂತ ನಂಗೊತ್ತು.. Moreover a good friend, ಅದಕ್ಕೆ ಕೇಳೋದು, ಚರ್ಚಿಸೋದು'

'ರಾಧಾ That doesn’t mean..' ಎಂದು ಏನನ್ನೋ ಹೇಳಲೊದ ನನ್ನನ್ನು ತಡೆದು,

‘This weekend 10 PM.. I will be there at your home. Tell Adishesh & Lokesh to adjust somewhere else for that one night ' ಎಂದು ಕಟ್ಟಪ್ಪಣೆಯನ್ನು ಮಾಡಿದರು.

ನನ್ನ ಮಸಸ್ಸು ಅದಾಗಲೇ ಸಾವಿರ ಕಿಲೋಮೀಟರ್ ದೂರಕ್ಕೆ ಓಡಿಯಾಗಿದ್ದಿತು! ಕಾರಣ ನಾಚಿಕೆಯಿಂದಲೋ, ಭಯದಿಂದಲೋ ಅಥವಾ ಸಂತೋಷದಿದಲೋ ನನಗೆ ಖಂಡಿತಾ ತಿಳಿಯಲಿಲ್ಲ! ಆಕೆಯ ಪ್ರೆಶ್ನೆಗೆ ಉತ್ತರಿಸಲಾಗದೆ ನಾನು ಮಿಕ ಮಿಕ ಅವರನ್ನು ನೋಡತೊಡಗಿದೆ.



****





ಆ ನಡುರಾತ್ರಿಯ ಘಾಡಕತ್ತಲೆಯಲ್ಲಿ ಮೀಸೆ ಚಿಗುರದ ನಾಲ್ಕು ತಲೆಗಳು ಹಾಸ್ಟೆಲ್ಲಿನ ಹಿಂಬಾಗಿಲಿನಿಂದ ಹೊರಬಿದ್ದವು. ಮಳೆಗಾಲದ ಆರಂಭವಾದುದರಿಂದ ಅದು ಹಲಸಿನ ಹಣ್ಣಿನ ಘಮಘಮಿಸುವ ಕಾಲ. ಖಾಲಿ ಜೇಬು ಹಾಗು ಅರೆ ತುಂಬಿದ ಹೊಟ್ಟೆಯ ಜೊತೆಗೆ ಒಂದಿಷ್ಟು ಸಮಾನ ಮನಸ್ಸಿನ ಗೆಳೆಯರು. ಜಗತ್ತನ್ನು ಅನುಭವಿಸಲು ಇಷ್ಟು ಸಾಕಿತ್ತು ಆ ಗುಂಪಿಗೆ. ಜೇಮ್ಸ್ ಬಾಂಡ್ ಚಿತ್ರಗಳ ಬಾಂಡುಗಳಂತೆ ಒಬ್ಬರಿಂದೊಬ್ಬರು ಗೋಡೆಯನ್ನಿಡಿದುಕೊಂಡು ನೆಡೆದ ಗುಂಪು ಬಂದು ನಿಂತದ್ದು ಪಕ್ಕದ ತೋಟದ ಬಕ್ಕೆ ಹಲಸಿನ ಮರದ ಬುಡಕ್ಕೆ. ಬೆಳಗಿನ ಹೊತ್ತು ಆ ಮರದ ಬುಡದಲ್ಲೇ ನಿಂತು ಯಾವ ಕಾಯಿ ಹಣ್ಣಾಗಿದೆ ಯಾವ ಕಾಯಿ ಬಲಿತಿದೆ ಎಂದು ಅಂದಾಜುಹಾಕಿ ಬಂದಿದ್ದ ಒಂದು ತಲೆ ಕೊಡಲೇ ಮರವನ್ನು ಏರತೊಡಗಿತು. ಉಳಿದ ಮೂರು ತಲೆಗಳು ಕಾವಲು ಕಾಯುವಂತೆ ಅತ್ತಿಂದಿತ್ತ ಇತ್ತಿಂದಂತ್ತ ನೆಡೆಯತೊಡಗಿದವು. ವಾನರರೂ ನಾಚುವಂತೆ ಕುಪ್ಪಳಿಸುತ್ತ ಮರವತ್ತಿದ ಆ ತಲೆ ಕರಾರುವಕ್ಕಾಗಿ ಹಲಸಿನ ಗೊಂಚಲಿನ ಹಣ್ಣಾದ ಹಣ್ಣನ್ನೇ ಹೋಗಿ ಮಿಡಿಯಿತು. ಬಾಡೂಟ ಮಾಡಿದ ಹೊಟ್ಟೆಯನ್ನು ಮಿಡಿದಂತೆ ಸದ್ದು ಮಾಡಿದ ಆ ಹಣ್ಣನು ಒಂದೇ ಎಳೆತದಲ್ಲಿ ತೊಟ್ಟನ್ನು ತುಂಡರಿಸಿ ಕೆಳಗೆಸೆಯಿತು. ಹಣ್ಣು ಬಿದ್ದ ಸದ್ದಿಗೆ ತುಸು ದೂರದಲ್ಲೇ ಇದ್ದ ವಾರ್ಡನ್ನಿನ ಮನೆಯ ನಾಯಿ ಬೌಗುಟ್ಟಿತು. ನಾಯಿಯ ಸದ್ದಿಗೆ ಕೆಲಕ್ಷಣ ನಾಲ್ಕೂ ತಲೆಗಳು ತುಟಿಕ್ ಪಿಟಿಕ್ ಅನ್ನಲ್ಲಿಲ. ಕಲ್ಲಿನ ಮೂರ್ತಿಗಳಂತೆ ನಿಂತಲ್ಲೆಯೇ ಅಜೀವ ವಸ್ತುಗಳಂತಾದವು. ಯಾರು ಗಮನಿಸಲಿಲ್ಲ ಎಂಬುದನ್ನು ಅರಿತ ಆ ಪಡೆ ಕೂಡಲೇ ಕಾರ್ಯಪ್ರವೃತವಾಯಿತು. ಮರದ ಮೇಲಿದ್ದ ತಲೆ ಕ್ಷಣಮಾತ್ರದಲ್ಲಿ ಕೆಳಗಿಳಿದು ಬಂದು ನೋಡುತ್ತದೆ, ಅಷ್ಟರಲ್ಲಾಗಲೇ ಉಳಿದ ಮೂರು ತಲೆಗಳ ನಡುವೆ ವಿಷಯವೊಂದಕ್ಕೆ ವಾಗ್ವಾದ ಬಿರುಸುಗೊಂಡಿರುತ್ತದೆ. ಹಾಸ್ಟೆಲಿನಿಂದ ಹೊರಬರುವಾಗ ಹಣ್ಣನ್ನು ಸುಲಿಯಲು ಚಾಕೊಂದನ್ನು ತರುವ ಕಾಂಟ್ರಾಕ್ಟ್ ನ್ನು ಪಡೆದಿದ್ದ ತಲೆ ಹಲಸಿನ ಹಣ್ಣನ್ನು ಕಾಪುವ ಕನಸಲ್ಲಿ ಅದನ್ನು ಮರೆತಿದ್ದಿತು. ಈಗ ಪುನ್ಹ ವಾಪಸಾಗುವಷ್ಟು ಸಮಯವಾಗಲಿ ಅದಕ್ಕೆ ಬೇಕಾದ ತಾಳ್ಮೆಯಾಗಲಿ ಯಾರೊಬ್ಬರಲ್ಲೂ ಇರಲಿಲ್ಲ. ಹಣ್ಣಿನ ಘಮ ಮತ್ತು ಬರಿಸುವಂತಿತ್ತು. ಮರವತ್ತಿದ ತಲೆಯನ್ನು ಉಳಿದ ಮೂರು ತಲೆಗಳು ತಮ್ಮ ಕರುಣಾಜನಕ ನೋಟದಿಂದ ನೋಡತೊಡಗಿದವು. ಒಂದಿಷ್ಟು ಕೆಟ್ಟ ಪದಗಳನ್ನು ಬೈಯುತ್ತಾ ಕಾರ್ಯಪ್ರವೃತವಾದ ಅದು ಹಲಸಿನ ಹಣ್ಣನು ತನ್ನ ತೊಡೆಯ ಮೇಲೆ ಹಾಕಿಕೊಂಡಿತು. ಅಕ್ಷರ ಸಹ ಉಗ್ರನರಸಿಂಹ ಹಿರಣ್ಯಕಷುಪನನ್ನು ಬಗೆದು ವದೆ ಮಾಡಿದಂತೆ ತನ್ನ ಬರಿಗೈಯಿಂದಲೇ ಅದು ಹಲಸಿನ ಹಣ್ಣನ್ನು ಎರಡು ಓಳಾಗಿಸಿತು! ಕತ್ತಲೆಯಲ್ಲಿಯೂ ಮಿನುಗುತ್ತಿದ್ದ ಕೆಂದಳದಿ ಬಣ್ಣದ ಆ ತೊಳೆಗಳು ನಿಂತವರ ಕಣ್ಣುಗಳನ್ನು ಕುಕ್ಕತೊಡಗಿವು. ನಾಲ್ವರ ಒಳಗಿದ್ದ ರಾಕ್ಷಸಿ ಗುಣ ಕೂಡಲೇ ಜಾಗೃತವಾಯಿತು. ನಿಮಿಷಮಾತ್ರದಲ್ಲಿ ಹಣ್ಣು ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು! ಉಘೇ ಉಘೇ ಎಂಬ ಜೈಕಾರದೊಟ್ಟಿಗೆ ಮರವತ್ತಿದ ತಲೆಯನ್ನು ಇತರೆ ತಲೆಗಳು ಸದ್ದಾಗದಂತೆ ಕುಣಿಸಿದವು.

'ಮಚಿ.. ಏನ್ ಒಂದ್ ಬಿಯರ್ ಗೇ ಆಫಾ?' ಆದಿಯ ಭುಜವನ್ನು ಅಲುಗಾಡಿಸುತ್ತಾ ಕೇಳಿದ ಲೋಕೇಶ. ನನ್ನ ಕಡೆಯಿಂದ ಅಂದು ಬ್ರಹ್ಮಚಾರಿಗಳಿಬ್ಬರಿಗೂ ಕಂಠ ಪೂರ್ತಿ ಬೀಯರು ಹಾಗು ಒಂದು ಗಡತ್ತಾದ ಬಾಡೂಟದ ಪಾರ್ಟಿ ಕೊಡಲಾಗುತ್ತಿತ್ತು.

ಕೈಲೊಂದು ಬೀಯರಿನ ಬಾಟಲಿಯನ್ನು ಹಿಡಿದು ತನ್ನ ಪದವಿಪೂರ್ವ ಕಾಲೇಜಿನ ದಿನಗಳನ್ನು ನೆನೆಯುತ್ತಾ ಆದಿ ಅಂತರ್ಮುಖಿಯಾಗಿದ್ದನು. ಆಗೆಲ್ಲ ತಾನು ಅದೆಷ್ಟು ಚುರುಕಾಗಿದ್ದೆ. ನಗುವಾಗಲಿ, ಸಿಟ್ಟಾಗಲಿ, ಬೇಸರವಾಗಲಿ ಅಥವಾ ಮತ್ಯಾವುದೇ ಭಾವಗಳಾಗಲಿ ಅದೆಷ್ಟು ಮುಕ್ತವಾಗಿದ್ದವು. ಈಗಿನಂತೆ ಒಳಗೆ ಬೆಂಕಿಯ ಜ್ವಾಲೆಯನ್ನೇ ಹಿಡಿದಿಕೊಂಡಿದ್ದರೂ ಹೊರಗೆ ನಸುನಗುವ ಕಾಲವಂತೂ ಅದಾಗಿರಲಿಲ್ಲ. ನಾನೇಕೆ ಹೀಗಾದೆ? ಆದಿ ಯೋಚಿಸತೊಡಗಿದ್ದ. ಮರವನ್ನು ಏರಿ ಇಡೀ ಹಾಸ್ಟೆಲ್ಲಿಗೆ ಹಲಸಿನ ಹಣ್ಣನ್ನು ತಿನ್ನಿಸುತ್ತಿದ್ದ ತನ್ನ ಪರಾಕ್ರಮವನ್ನು ನೆನೆದು ಆದಿಯ ಮುಖದಲ್ಲಿ ಮಂದಹಾಸವೊಂದು ಮೂಡಿತು. ಸದ್ಯಕ್ಕೆ ಲೊಕೇಶನ ಪ್ರೆಶ್ನೆ ಆತನನ್ನು ಜಾಗೃತಗೊಳಿಸಿತು.

ಇಲ್ಲವೆಂಬಂತೆ ಆತ ತಲೆಯಾಡಿಸಿದ.

'ನೀನೋ..ನಿನ್ ಮೂಡೋ.. ಒಂದೋ ಭಯಾನಕ ಲವ್ ಫೇಲ್ಯೂರು ಇಲ್ಲ ಯಾವ್ದೋ ಫ್ಯಾಮಿಲಿ ಮ್ಯಾಟರು..ಏನ್ ಮಚಿ.. ಹಾಗೇನಿದ್ರೂ ನಮ್ಮೊಟ್ಟಿಗೆ ಹೇಳೋ' ಅದಾಗಲೇ ಮೂರನೇ ಬಿಯರ್ ಬಾಟಲಿಯನ್ನು ಕೈಯಲ್ಲಿಡಿದಿದ್ದ ಲೋಕೇಶ ತನ್ನ ಕೊನೆಯ ಪದವನು ತುಸು ಹೆಚ್ಚಾಗಿಯೇ ಎಳೆದಿದ್ದ. ನಾನು ನಗಾಡಿದೆ.

'ಇವ್ನ್ ನೋಡಪ್ಪ.. ಆಶಿಕ್ಕು.. ನಗಾಡ್ತಾ ಇರೋದು.. ಕಾಲೇಜಲ್ಲಿ ರಾಧಾ ಸಿಕ್ಕಿದಿಂದ ಅದೇನ್ ಮಾತು.. ಅದೇನ್ ಡಿಸ್ಕಶನ್ನು..ಮಗ್ನೆ ನೀನ್ ಏನ್ ಕಿತ್ತಾಕಿದ್ರೂ ಅಷ್ಟೇ, ಅವ್ರ್ ಮಾತ್ರ ನಿಂಗ್ ಸಿಗಲ್ಲ.. ಚಾಲೆಂಜ್ ಕಟ್ತೀನಿ.. ರೆಡಿನಾ?' ಆತನ ಪ್ರತಿ ಪದವೂ ಲಕ್ವಾ ಹೊಡೆದ ಬಾಯಿಂದ ಮೂಡುವ ಪದಗಳಂತೆ ಮುರುಟಿಗೊಂಡಿದ್ದವು. ಆಲ್ಕೋಹಾಲಿನ ಮತ್ತಿನಲ್ಲೂ ನಾನು ಕಷ್ಟಪಟ್ಟು ಅವನ್ನು ಗ್ರಹಿಸತೊಡಗಿದೆ. ಹಾಗು ಅಷ್ಟೇ ನಯವಾಗಿ ನಿರ್ಲಕ್ಷಿಸತೊಡಗಿದೆ.

'ಆಮೇಲೆ ತಾವು..? ಮನೇಲಿ ಓದೋ ಮಾರಾಯ ಅಂತ ಕಳ್ಸಿದ್ರೆ ಆಸಾಮಿ MLM ಬ್ಯುಸಿನೆಸ್ಸಂತೆ, ಕಾಫಿ ಎಕ್ಸ್ಪೋರ್ಟ್ ಅಂತೆ , ಕೋಚಿಂಗ್ ಇನ್ಸ್ಟಿಟ್ಯೂಟು ಇವಾಗ ಅದೂ ಆಗ್ಲಿಲ್ಲ ಅಂತ ಶುಂಠಿ ಬೆಳೀತಾನಂತೆ..' ನಾನೆಂದೆ.

'ಮಕ್ಳ ನಾನದನ್ನ ಇಂಡಿಪೆಂಡೆಂಟ್ ಆಗಿ ಇವತ್ತು ಮಾಡ್ತಾ ಇದ್ದೀನಿ .. ಯಾರ್ ಕ್ಯಾರು ಇಲ್ಲ .. ಮೈ ಓನ್ .. ಮುಂದೊಂದ್ ದಿನ ನೀವು ಅದನ್ನ ಬೇರೆಯವರಿಗೆ ಮಾಡ್ತಾ ಸ್ಯಾಲರಿ ತಗೋಂತಾ ಇರ್ತೀರ ನೋಡಿ.. ಆಗ ಹೇಳಿ ಈ ಮಾತನ್ನು..' ಎಂದು ಸುಮ್ಮನಾದ. ನಾವ್ಯಾಕೆ ಇವನ ಶುಂಠಿ ಗದ್ದೆಯಲ್ಲಿ ಕೆಲಸ ಮಾಡಬೇಕು? ನಾನು ಹಾಗು ಆದಿ ಒಬ್ಬರನ್ನೊಬ್ಬರು ನೋಡಿದೆವು. ಮುಂದೆ ಯೋಚಿಸಿ ಮಾತಾಡುವಷ್ಟು ಪ್ರಜ್ಞೆ ಉಳಿಯದೆ ಇದ್ದರಿಂದ ವಾತಾವರಣ ತುಸು ಶಾಂತವಾಯಿತು. ಆದಿಯ ಲ್ಯಾಪ್ಟಾಪಿನಿಂದ ಲತಾ ಮ್ಯಾಗೇಶ್ಕರರ ಧ್ವನಿಯಲ್ಲಿ ಅಭಿಮಾನ್ ಚಿತ್ರದ 'ಪಿಯಾ ಬಿನ ಬಾಸಿಯ ಬಾಜೇ' ಹಾಡು ಮೋಹಿಸತೊಡಗಿತು. ಏನೋ ಹೇಳಲು ಹೊರಟವನಿಗೆ ನನಗೆ ಕೂಡಲೇ ಮಾತು ನಿಂತು ಹೋಯಿತು. ಕಣ್ಣು ಮುಚ್ಚಿ ಜಯ ಬಾಧುರಿಯನ್ನು ಕಣ್ಣ ಮುಂದೆ ತಂದು ಲತಾರ ಗಾನಸುದೆಯನ್ನು ಆಸ್ವಾದಿಸತೊಡಗಿದೆ. ಮದ್ಯದ ಮತ್ತಿನಲ್ಲಿ ಇಂತಹ ಮನಸ್ಸು ಹಿಂಡುವಂತಹ ಹಾಡುಗಳು ತಂದುಕೊಡುವ ಸುಖ ಕುಡುಕರಾದರೆ ಅದು ನೂರು ಪೆಗ್ಗುಗಳಿಗೆ ಸಮವೆನ್ನಬಹುದು. ಬಹುಷಃ ಇನ್ನೂ ಮಿಗಿಲಿರಬಹುದು.

ಕೆಲ ನಿಮಿಷಗಳಲ್ಲೇ ಹಾಡು ಮುಗಿಯಿತು. ಕುರುಡನಿಗೆ ಮೊದಲಬಾರಿಗೆ ಜಗದರ್ಶನವಾಗುವಂತೆ ನಿಧಾನವಾಗಿ ನಾನು ಕಣ್ಣುಗಳನ್ನು ಬಿಡತೊಡಗಿದೆ. ಬ್ರಹ್ಮಚಾರಿಗಳಿಬ್ಬರೂ ಹಾಡಿನ ಜೊತೆಗೆ ಮೈಮರೆತು ನಾನು ಗುನುಗಿದ ಆಡಿಯೋವನ್ನು ರೆಕಾರ್ಡ್ ಮಾಡುತ್ತ ನಗಹತ್ತಿದ್ದರು. ನಂತರ ಅದನ್ನು ನನಗೆ ಕೇಳಿಸಿದರು. ಆ ಕುಡಿದ ಮತ್ತಿನಲ್ಲೂ ನನಗೆ ನನ್ನ ಧ್ವನಿಯ ಮೇಲೆ ವೈರಾಗ್ಯ ಮೂಡಿತು. ಮತ್ತೆಂದು ಹಾಡಲೇ ಬಾರದೆಂದು ತೀರ್ಮಾನಿಸಬೇಕೆಂದುಕೊಂಡೆ!

ಕೆಲಸಮಯದ ನಂತರ ನಾನು ನನ್ನೊಳಗೆ ಅಡಗಿಸಿಕೊಂಡಿದ್ದ ಸುಪ್ತ ಬುದ್ದಿಯನ್ನು ಜಾಗೃತಗೊಳಿಸಿದೆ. ಅದೇ ಸುಸುಮಯವೆಂದು,

'Guys.. ನಿಮ್ಮ್ ಹತ್ರ ಒಂದ್ ರಿಕ್ವೆಸ್ಟ್..' ನನ್ನ ರೂಮಿಗೆ ರೂಮೆಟುಗಳಾಗಿ ಬಂದರೂ ಔಪಚಾರಿಕ ನೆಲೆಯಲ್ಲಿ ನಾನು ಅವರನ್ನು ಕೇಳಬೇಕಂದುಕೊಂಡು ಕೇಳಿದೆ.

'ಈ ವೀಕ್ ಎಂಡ್ ರಾಧಾ ನಮ್ಮ ರೂಮಿಗೆ ಬರ್ತಾ ಇದ್ದಾರೆ!'

'ಏನ.. ಎಲ್ಲಿಗ್ ಹೋಗ್ತಾ ಇದ್ದಾರೆ..' ಲೋಕೇಶ ನ ಪ್ರತಿ ಪದಗಳ ನಡುವಿನ ಅಂತರ ಚದುರುವ ಮೋಡಗಳಂತೆ ದೂರ ದೂರವಾಗುತ್ತಿದ್ದವು.

'ಹೋಗ್ತಾ ಇಲ್ಲಪ್ಪ ತಂದೆ.. ಬರ್ತಾ ಇದ್ದಾರೆ.. ಇಲ್ಲಿಗೆ..ನಮ್ಮ್ ಪ್ಲಾಟಿಗೆ'

'ಬರ್ಲಿ ಬಿಡು.. ನಿಂಗೇನು ಪ್ರಾಬ್ಲಮ್ಮು.. '

'ಸರಿ ಹಾಗಾದ್ರೆ' ಇನ್ನು ಹೆಚ್ಚು ಮಾತನಾಡಿ ಪ್ರಯೋಜನವಿಲ್ಲವೆಂದು ನಾನು ಸುಮ್ಮನಾದೆ. ನನ್ನನ್ನು ಗಮನಿಸಿದ ಆದಿ,

'ಏನೋ ವಿಷ್ಯ..ಲೆಕ್ಚರರ್ ಒಬ್ರು ಬ್ಯಾಚೊಲೇರ್ ರೂಮಿಗೆಲ್ಲ ಬರೋದು ಸರಿ ಇರುತ್ತಾ?'

'ನಾನೇನ್ ಕರೀಲಿಲ್ಲಪ್ಪ..ಅವ್ರೆ ಬರ್ತೀನಿ ಅಂತ ಬರ್ತಾ ಇರೋದು..' ಎಂದು ನಾನು ಹೇಳಿದೆ.

'ಎಷ್ಟ್ ಹೊತ್ತಿಗೆ ?'

ನಾನು ಆದಿಯ ಕಣ್ಣುಗಳನ್ನೇ ಧಿಟ್ಟಿಸುತ್ತಾ 'ರಾತ್ರಿ ಹತ್ತಕ್ಕೆ..'

ಕುಡಿಯುತ್ತಿದ್ದ ಬಿಯರ್ನ ಗುಟುಕು ಕೂಡಲೇ ನತ್ತಿಗೇರಿ ಒಮ್ಮೆಲೇ ಕೆಮ್ಮತೊಡಗಿದ ಆತ. ನಾನು ತಲೆಯನ್ನು ತಟ್ಟಿಕೊಳ್ಳುವಂತೆ ಸಂಜ್ಞೆ ಮಾಡಿದೆ.

'ಲೋ ಮಹರಾಯ.. ಏನೋ ನಿಮ್ಮಿಬ್ರುದು..ರಾತ್ರಿಹೊತ್ತ್ ಯಾಕೋ ಬರ್ತಾ ಇರೋದು ಅವ್ರು..?' ಬಿಯರನ್ನು ಕುಡಿಸಿದ ಮಾತ್ರಕ್ಕೆ ನಾನು ಹೇಳಿದ್ದಕ್ಕೆಲ್ಲ ತಲೆಯಾಡಿಸುವವರು ಎಂದುಕೊಂಡ ನನ್ನ ಲೆಕ್ಕಾಚಾರ ಸ್ವಲ್ಪ ಉಲ್ಟಾ ಹೊಡೆಯತೊಡಗಿತು. ಲೋಕೇಶ ಕುಡಿತದ ಮತ್ತಿನಲ್ಲಿ ಕಣ್ಣುಮುಚ್ಚಿಕೊಂಡು ಭುಜವನ್ನು ಕುಣಿಸುತ್ತ ತನ್ನದೇ ಯಾವುದೊ ಲೋಕದಲ್ಲಿದ್ದರಿಂದ ಆತನ ಅಭಿಪ್ರಾಯ ಸದ್ಯಕಂತೂ ಮಾನ್ಯವಾಗುತ್ತಿರಲಿಲ್ಲ.

'ಹಾಗೇನಿಲ್ಲ ಮಚಿ.. ನಾನ್ ಎಲ್ಲ explain ಮಾಡ್ತೀನಿ..But ಅವತ್ತೊಂದಿನ ನೀವು ಹಾಸ್ಟೆಲಿನ ಯಾರ್ದಾದ್ರೂ ರೂಮಲ್ಲಿ ಅಡ್ಜಸ್ಟ್ ಮಾಡ್ಕೋಬೇಕು'

'ನಿನ್ ರೂಮು , ನೀನ್ ಥಿಂಕ್ ಮಾಡು.. ಓನರ್ ಬೇರೆ ಕೆಳಗ್ಗೆ ಇರ್ತಾರೆ.. ನಾನು ಈ ವೀಕ್ ಊರಿಗ್ ಹೋಗ್ತಾ ಇದ್ದೀನಿ, ನಂದೇನು ಪ್ರಾಬ್ಲಮ್ ಇಲ್ಲ.. ಇವ್ನ್ ಕೇಳು' ಎಂದು ಆದಿ ಲೊಕೇಶನನ್ನು ನೋಡಿದ.


****


ಸುಡುಬಿಸಿಲಿನ ತಾಪದಿಂದ ಬೆವರುತ್ತ ಬಂದ ಅಪ್ಪ ಸಂತೆಯಿಂದ ತಂದ ಎರಡೂ ದಿನಸಿ ಗಂಟುಗಳನ್ನು ಬಾಗಿಲ ಬಳಿ ಇರಿಸಿದ. ಆಗೆಲ್ಲ ನಾಲ್ಕೈದು ಅಂತಹ ಬ್ಯಾಗುಗಳನ್ನು ಎತ್ತುತ್ತಿದ್ದ ಅಮ್ಮನಿಗೆ ಇಂದು ಒಂದು ಬ್ಯಾಗನ್ನೂ ಎತ್ತಿಡಲು ಆಗುತ್ತಿಲ್ಲ. ಆದಿ ಕೂಡಲೇ ಹೋಗಿ ಎರಡೂ ಬ್ಯಾಗನ್ನು ತನ್ನ ಒಂದೊಂದು ಕೈಯಲ್ಲಿಡಿದು ಅಡುಗೆ ಮನೆಯಲ್ಲಿ ತಂದಿರಿಸಿದ. ಅಮ್ಮ ಬಂದು ಒಂದೊಂದೇ ಸಾಮಾನುಗಳನ್ನು ತೆಗೆದು ಜೋಡಿಸತೊಡಗಿದಳು.

ಭಾರತ ಆಸ್ಟ್ರೇಲಿಯ ತಂಡದ ಮ್ಯಾಚನ್ನು ನೋಡುತಿದ್ದ ಮಗನನ್ನು ನೋಡಿದ ಅಪ್ಪ 'ಓದೋದ್ ಬಿಟ್ ಇದೇ ಮಾಡು..' ಎಂದು ಸಿಡುಕಿದ. ಆದಿ ಅದಕ್ಕೆ ಕ್ಯಾರೇ ಎನ್ನದೆ ಟಿವಿ ನೋಡುವುದರಲ್ಲೇ ಮಗ್ನನಾದ. ಅಪ್ಪ ತನ್ನ ಪ್ಯಾಂಟಿನ ಜೇಬಿನಲ್ಲಿ ತಂದಿರಿಸಿದ ಓಲ್ಡ್ ಮಾಂಕ್ ರಮ್ಮನ್ನು ರಾತ್ರಿಯ ತೀರ್ಥ ಪ್ರಸಾದಕ್ಕೆಂದು ತೆಗೆದಿಟ್ಟ. ಖೈದಿಗಳ ಮುಂದೆ ಪೊಲೀಸರು ತೆಗೆದಿಡುವ ರಿವಾಲ್ವರ್ನಂತೆ ಆ ಕಾಗದದ ಪೊಟ್ಟಣದ ರಮ್ಮು ಆದಿಯ ಮನದೊಳಗೆ ಒಂದು ಬಗೆಯ ಭಯವನ್ನು ಹುಟ್ಟಿಸಿತು.

'ಕಡ್ಲೆ ಹಿಟ್ಟು ಇಲ್ಲ.. ಬೆಲ್ಲ ಒಂದ್ ಕೆಜಿ ತರೋಕ್ ಹೇಳಿದ್ದೆ.. ಅರ್ಧ ಕೆಜಿ ಮಾತ್ರ ಬಂದಿದೆ.. ಕರ್ಮ' ಎಂದು ಅಡುಗೆಮನೆಯಿಂದ ಕೂಗಿದಳು ಅಮ್ಮ. ಆಕೆಯ ಕರ್ಮ ಎಂಬ ಪದದ ಅರ್ಥ ಆ ಸಮಯಕ್ಕೆ ಕೇವಲ ಕರ್ಮವಾಗಿರದೆ ಒಂದು ಬಗೆಯ ಶಾಪವೆಂಬುದಾಗಿದ್ದಿತು.

'ಅಷ್ಟ್ ಹೇಳೋಳು ನೀನೆ ಹೋಗಿ ತರ್ಬೇಕಿತ್ತು..' ಅಪ್ಪ ಅರಚಿದ. ತನ್ನ ಪ್ರತೀ ತಪ್ಪಿಗೂ ಅರಚುವಿಕೆಯ ಗುರಾಣಿಯನ್ನೇ ಬಳಸಿ ಮುಂದಿರುವವರ ಮಾತನ್ನು ನಿಲ್ಲಿಸುವಲ್ಲಿ ನಿಷ್ಣಾತನಾಗಿದ್ದ ಆತ.

'ತಲೆ ಆಕಾಶದ್ ಮೇಲೆ ಇದ್ರೆ ಇನ್ನೇನಾಗುತ್ತೆ.. ಹೇಳೋದು , ಕೇಳ್ದಷ್ಟ್ ಕೊಟ್ಟ್ ತರೋದು..! ಏನ್ ಕೊಡ್ತಾ ಇದ್ದಾರೆ, ಇಲ್ಲ ಅಂತ ನೋಡೋದ್ ಬೇಡ್ವಾ?'

'ನೋಡ್ ಮಾರಾಯ.. ಈ ರಾಕ್ಷಸಿ ಹೆಂಗ್ಸ್ ಅತ್ರ ನಂಗಾಗಲ್ಲ.. ಏನ್ ಸಾಯಿತಾಳೆ' ಅಂದ ಅಪ್ಪ ಕೊಂಚ ಸುಮ್ಮನಾಗಿ ತಾನು ನೀರು ಕುಡಿಯುತ್ತಿದ್ದ ತಾಮ್ರದ ಲೋಟವನ್ನು ಒಮ್ಮೆಲೇ ಜೋರಾಗಿ ನೆಲದ ಮೇಲೆಸೆದ. ಹತ್ತಾರು ಮಗ್ಗುಲಲ್ಲಿ ಬಿದ್ದು ಸದ್ದು ಮಾಡುತ್ತಾ ಲೋಟ ಶಾಂತವಾಯಿತು. ಅದರ ಆ ವಿಪರೀತ ಸದ್ದಿಗೆ ಆದಿಯ ಎದೆ ಒಂದೇ ಸಮನೆ ಬಡಿದುಕೊಳ್ಳತೊಡಗಿತು.

'ಅಮ್ಮ ಸುಮ್ನಿರಮ್ಮ.. ಸಾಯಂಕಾಲ ನಾನೇ ಹೋಗಿ ತರ್ತೀನಿ..' ಎಂದ ಆದಿಯ ಮಾತಿಗೆ,

'ಸರಿ ಬಿಡಪ್ಪ.. ಹೀಗೆ ಆದ್ರೆ ಉದ್ದಾರ ಆದಂಗೆ'. ದಿನನಿತ್ಯದ ಕಚ್ಚಾಟದಲ್ಲಿ ಆಕೆಯ ಉದ್ದಾರ ಎಂಬ ಪದಕ್ಕೆ ಅದ್ಯಾವ ಬಗೆಯ ಸ್ಥಾನವಿದೆಯೋ ಬಲ್ಲವರ್ಯಾರು? ಆಕೆ ಕೂಡಲೇ ಬಟ್ಟೆಯೊಂದನ್ನು ತಂದು ನೆಲದ ಮೇಲೆ ಹರಡಿದ್ದ ನೀರನ್ನು ಒರೆಸತೊಡಗಿದಳು. ಅಪ್ಪನಿಗೆ ಹಿಡಿಶಾಪಗಳ ಸುರಿಮಳೆಗೈಯಲಾಗುತಿತ್ತು. ಕಣ್ಣಲ್ಲೇ ಸುಟ್ಟು ಭಸ್ಮ ಮಾಡುವವರಂತೆ ಆತ ಆಕೆಯನ್ನು ಧಿಟ್ಟಿಸತೊಡಗಿದ.

'ಮನೆ ಬಿಟ್ಟ್ ತೋಲ್ಗ್ ಆದ್ರೂ ಹೋಗ್ಬಾರ್ದ.. ನಿನ್ ಕಾಲ್ ಸೇದೋಗ..ನಿನ್ ಮಕ ಮಣ್ಣ್ ತಿನ್ನ..' ಅಪ್ಪ ತನ್ನ ಕಾಲಿನಿಂದ ಒದ್ದ ರಭಸಕ್ಕೆ ನೆಲದ ಮೇಲೆ ಬಿದ್ದ ಅಮ್ಮ ಅರಚತೊಡಗಿದಳು. ಅದಾಗಲೇ ಆದಿ ಆ ವಾನರ ಜಗಳದ ಮಧ್ಯವರ್ತಿಯಾಗಿ ಅವರಿಬ್ಬರ ನೆಡುವೆ ನಿಂತಿದ್ದ. ಹೊರಗೆಲ್ಲ ಒಬ್ಬರು ಕೆಮ್ಮಿದರೂ ನಡುಗಿ ನೀರಾಗುವ ಈತ ಅಮ್ಮನ ಮೇಲೆ ತೋರುವ ಪರಾಕ್ರಮವನ್ನು ಆದಿಗೆ ಸಹಿಸದಾಯಿತು. ಅಕ್ಕಪಕ್ಕದ ಮನೆಯವರು ಏನೆನ್ನುತ್ತಾರೆ ಎಂಬುದನ್ನೂ ಲೆಕ್ಕಿಸದೆ ಅಪ್ಪ ತನ್ನ ಅಶ್ಲೀಲ ಪದವಿಯ ಜ್ಞಾನವನ್ನು ತೋರ್ಪಡಿಸತೊಡಗಿದ.

'ಬಾಯಿ ಮುಚ್ಚಪ್ಪ ಸಾಕು.. ಬೈಯೋಕ್ಕೆ ನಿಂಗೊಬ್ಬನಿಗೆ ಬರೋದು ಅಂತ ಆರ್ಚ್ಬೇಡ .. ನಿಂಗಂತೂ ಮಾನ ಮಾರ್ಯಾದೆ ಇಲ್ಲ ಅಂತ ನಮ್ಮನ್ನೂ ಹಾಗೆ ಅನ್ಕೋಬೇಡ'

'ಮುಚ್ಚೋ ಲೈ ಅಲಾಲ್ಕೋರ್ ನನ್ನ್ ಮಗ್ನೆ.. ನಾನ್ ಗೆಯ್ದ್ ಹಾಕಿರೋದನ್ನೇ ತಿಂದು ತಿಂದು ಇಷ್ಟ್ ಮಾತಾಡ್ತಿರ.. ಇನ್ ನೀವೇ ದುಡಿಯೋದ್ ಆಗಿದ್ರೆ ಇನ್ನೇನ್ ಹೇಳ್ತಿದ್ರೋ..' ಎಂದು ತನ್ನನ್ನು ಒಬ್ಬ ದೇಶ ಕಾಯುವ ಸೈನಿಕರಿಗೆ ಹೋಲಿಸತೊಡಗಿದ ಆತ. ಬಾಯಿಂದ ಹೊರಸೂಸುತಿದ್ದ ಹೆಂಡದ ವಾಸನೆ ಆದಿಯನ್ನು ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ. ಹೆಚ್ಚಿನ ಮಾತು ಅನಾಹುತಕ್ಕೆ ನಾಂದಿಯಾಗುತ್ತದೆಂದು ಆತನಿಗೆ ಅನಿಸಿತು. ಅಮ್ಮನನ್ನು ಸುಮ್ಮನಿರಿಸಲು ಆತ ಪ್ರಯತ್ನಿಸಿದ. ಆದರೆ ಅದು ಬೆಂಕಿಯ ಮೇಲೆ ಸೀಮೆಯೆಣ್ಣೆಯನ್ನು ಸುರಿದಂತೆ ವ್ಯರ್ಥವಾದ ಕಾಯಕವಾಗಿದ್ದಿತು. ಆಕೆಯ ಕೊಂಕು ಮಾತುಗಳು ಆದಿಯನ್ನೂ ಕೆರಳುಸುತ್ತಿದ್ದ ವಲ್ಲದೆ ಸಮಯೋಚಿತ ಮೊಂಡು ಮಾತುಗಳು ಅಪ್ಪನನ್ನಂತೂ ಪ್ರತ್ಯುತ್ತರ ಕೊಡದಂತೆ ಕಟ್ಟಿಬಿಡುತ್ತಿದ್ದವು. ಮನೆ ರಣರಂಗವಾಯಿತು. ಅದಾಗಲೇ ಪಕ್ಕದ ಮನೆಯ ಒಂದಿಬ್ಬರು ಹೊರಬಂದು ಎತ್ತಲೋ ನೋಡುವ ನಟನೆಯನ್ನು ಮಾಡುತ್ತಾ ತಮ್ಮ ಕಿವಿಗಳೆರಡನ್ನೂ ಆದಿಯ ಪೋಷಕರ ವಾಗ್ಯುದ್ಧದೆಡೆ ಕೇಂದ್ರೀಕರಿಸಿದ್ದರು.

'ಆಗಲ್ಲ ಅಂದ್ರೆ ಆಗಲ್ಲ.. ಇವಾಗ್ಲೆ ಹೊರಟೊಗು..' ಅಪ್ಪ ಅರಚಿದ.

'ಹೋಗ್ತಿನೋ .. ನೀನ್ ಊರಲ್ ಇರೋ ಮುಂಡೆರ್ನ ಎಲ್ಲ ಕರ್ಕೊಬಂದು ಸಾಕೋ..ನಿಂಗ್ ಬೇಕಾಗಿರೋದು ಅದೇ ಅಲ್ವ'

'ನಾನ್ ಯಾವಳ್ನಾರು ಕಾರ್ಕೊ ಬರ್ತೀನಿ.. ಬೇಕಾದ್ರೆ ಕಟ್ಕೊಂಡ್ತೀನಿ.. ನೀನ್ಯಾವಳೇ ಕೇಳೋಕ್ಕೆ' ತನ್ನ ಒಂದು ಕಾಲನ್ನು ಮರದ ಕುರ್ಚಿಯ ಮೇಲಿರಿಸಿದ ಆತ ತನ್ನ ಕೈಗಳಿಂದ ಮೂಗಿನ ಹೊಕ್ಕನ್ನು ತೆಗೆಯುತ್ತಾ ಹೇಳತೊಡಗಿದ. ಆತನ ಆ ಮಾತನ್ನು ಕೇಳಿ ಅಡುಗೆ ಮಾಡುತ್ತಿದ್ದ ಆಕೆ ಅನ್ನದ ಸಮೇತ ಪಾತ್ರೆಯನ್ನು ನೆಲಕ್ಕೆ ಕುಕ್ಕಿದಳು ಅಮ್ಮ. ಬಿಸಿಯಾದ ಅನ್ನ ಹಾಗು ಅದರ ಗಂಜಿ ಆಕೆಯ ಕಾಲುಗಳ ಮೇಲೆ ಹರಿದು ಪಸರಿಸಿತು. ಆ ಸದ್ದಿಗೆ ಆದಿ ಕೂಡಲೇ ಅಡುಗೆ ಮನೆಯೊಳಗೇ ಓಡಿದ. ಆಗಷ್ಟೇ ನೀರನ್ನು ಒರೆಸಿದ್ದ ಆ ಹಸಿಬಟ್ಟೆಯನ್ನು ಕಾಲುಗಳ ಮೇಲೆ ಒತ್ತಿಹಿಡಿಡಿದ್ದಳು ಅಮ್ಮ. ಕಣ್ಣು ರೆಪ್ಪೆಗಳೆರಡೂ ಸಹ ಅಂತೆಹೆ ಗಟ್ಟಿಯಾಗಿ ಒಂದಕ್ಕೊಂದು ಒತ್ತಿಕೊಂಡಿದ್ದವು. ಕಳ್ಳಿಯ ಹಾಲಿನಂತೆ ಆಶ್ರುಧಾರೆಗಳು ಪಟಪಟನೆ ಉದುರತೊಡಗಿದ್ದವು. ಆದಿಗೆ ಆ ದೃಶ್ಯವನ್ನು ನೋಡಲಾಗಲಿಲ್ಲ. ಒಮ್ಮೆಲೇ ಅಪ್ಪನ ಕುತ್ತಿಗೆಯನ್ನು ಅದುಮಿ ಸಾಯಿಸಿಬಿಡಬೇಕೆಂಬ ಮನಸ್ಸಾದರೂ ಏಕೋ ಕೈಗಳು ಮುಂಬರಲಿಲ್ಲ. ಆತನ ಕಣ್ಣುಗಳೂ ಹುಕ್ಕಿ ಹರಿದವು.

ಆಕೆಯನ್ನು ಸಮಾಧಾನಪಡಿಸಲು ಮುಂದಾದ ಆದಿಯನ್ನು ಪಕ್ಕಕ್ಕೆ ತಳ್ಳಿ ಆಕೆ ಮಲಗುವ ಕೋಣೆಯೊಳಗೆ ಹೋದಳು. ಆದಿ ಅಳುತ್ತಲೇ ಅನ್ನವನ್ನೆಲ್ಲವನ್ನು ಕೈಯಿಂದ ಪಾತ್ರೆಯೊಳಗೆ ಸೀಟಿ ಅದನ್ನು ಹೊರಗೆಸೆದ. ಕೈ ಉರಿಯುವಷ್ಟು ಬಿಸಿಯಾಗಿದ್ದ ಅನ್ನದ ಗಂಜಿ ಇನ್ನು ಆಕೆಯ ಕಾಲುಗಳ ಮೇಲೆ ಅದೆಂತಹ ನೋವನ್ನು ಉಂಟುಮಾಡಿರಬಹುದು ಎಂಬುದನ್ನು ಆತ ಯೋಚಿಸಲೂ ಅಶಕ್ತನಾದ. ಆಕೆಯ ನೋವೆಲ್ಲಾ ತನಗೇ ಬರಬಾರದೇಕೆ ಎಂದು ಪ್ರಾರ್ಥಿಸತೊಡಗಿದ. ಅನ್ನವನ್ನು ಹೊರಗೆಸೆಯಲು ಬಂದಾಗ ಪಕ್ಕದ ಮನೆಯ ಹೆಂಗಸು ಏನೆಂದು ಕೇಳಿದಾಗ ಪಾತ್ರೆ ಕೈ ಜಾರಿ ಬಿತ್ತೆಂದೂ ಏನೂ ಹೆಚ್ಚು ಪೆಟ್ಟಾಗಲಿಲ್ಲ ಎಂದೇಳಿ ಸುಮ್ಮನಾದ. ತನ್ನ ತಾಯಿಯ ವಯಸ್ಸಿನ ಆ ಹೆಂಗಸು ಆದಿಯ ಉತ್ತರವನ್ನು ಕೇಳಿ ಆತನನ್ನು ತನ್ನ ಕರುಣಾಜನಕ ದೃಷ್ಟಿಯಿಂದ ನೋಡಿದಳು. ಆಕೆಯ ನೋಟದಲ್ಲಿ ತಾನೆಲ್ಲ ಬಲ್ಲೆ, ಪಾಪದ ಹುಡುಗ, ಅಪ್ಪ ಅಮ್ಮಂದಿರ ಕಿತ್ತಾಟದಲ್ಲಿ ಕಮರಿಹೋಗುತ್ತಿದ್ದಾನೆ ಎಂಬ ಒಂದು ನೋಟವಿತ್ತು. ಅವರನ್ನು ನೋಡಿ ಆದಿಗೆ ತನ್ನೆಲ್ಲ ದುಃಖವನ್ನು ಅಲ್ಲೇ, ಅದೇ ಕ್ಷಣದಲ್ಲಿ ಅತ್ತು ಕಳೆದುಕೊಳ್ಳಬೇಕೆನಿಸಿತು. ಅಪ್ಪನ ಅರಚುವಿಕೆ ಮತ್ತೆ ಭಯವನ್ನು ಉಂಟುಮಾಡಿತು.

'ನೀನ್ ಏನಾದ್ರೂ ಮಾಡು ಮಾರಾಯ.. ಅಮ್ಮ ಮಗ ಗಂಟು ಮೂಟೆ ಕಟ್ಕೊಂಡ್ ಹೋದ್ರೆ ಸರಿ..' ತನ್ನ ಅಧಿಕಾರವಾಣಿಯಲ್ಲಿ ಅಪ್ಪ ಹೇಳಿದ. ನೋವಿನಿಂದ ಮುಚ್ಚಿದ್ದ ಅಮ್ಮನ ರೆಪ್ಪೆಗಳು ಇನ್ನೂ ಒಂದನೊಂದು ಬಿಟ್ಟಿರಲಿಲ್ಲ. ಆ ನೋವಿನಲ್ಲೂ ಆಕೆ ಅಪ್ಪನ ಮಾತಿಗೆ ಕೊಂಕು ನುಡಿಯುವದನ್ನು ಮಾತ್ರ ಬಿಡಲಿಲ್ಲ.

'ಹೋಗ್ತಿವಿ .. ಸಾಯ್ಬೇಡ, ಸ್ವಲ್ಪ ಹೊತ್ತು ಬಾಯ್ ಮುಚ್ಕೊಂಡ್ ಇರು ತಂದೆ..' ಎಂದ ಆದಿ ಕೂಡಲೇ ಜೇನುತುಪ್ಪದ ಡಬ್ಬಿಯನ್ನು ತಂದು ಅಮ್ಮನ ಕಾಲುಗಳಿಗೆ ಹಚ್ಚತೊಡಗಿದ. ಆಕೆ ಆದಿಯನ್ನು ನೋಡುತ್ತಾ ಒಂದೇ ಸಮನೆ ಅಳತೊಡಗಿದಳು.

'ನಿಮ್ ಕಾಲೇಜತ್ರನೇ ಯಾವ್ದಾದ್ರು ಒಂದ್ ರೂಮ್ ಮಾಡಣ.. ನಾನೂ ಯಾವ್ದಾದ್ರು ಕೆಲ್ಸನ ನೋಡ್ಕೊಂಡ್ತೀನಿ..ನಿಂಗು ಅಡಿಗೆ ಊಟ ಅಂತ ಆಗುತ್ತೆ.. ನೆಡಿ, ಆದದ್ ಆಗ್ಲಿ.. ಈ ಬೇವರ್ಸಿ ಸಾವಾಸ ಸಾಕು ಇನ್ನು' ಎಂದು ಅಪ್ಪನಿಗೂ ಕೇಳುವಂತೆ ಆಕೆ ನುಡಿದಳು. ಆಕೆಯ ಮಾತನ್ನು ಕೇಳಿ ಆದಿಗೆ ಪ್ರಜ್ಞೆ ತಪ್ಪುವಂತಾಯಿತು. ಕೂಡಲೇ ಏನನ್ನು ಉತ್ತರಿಸಬೇಕೆಂದು ತೋಚದೆ ಆತ ರೂಮಿನಿಂದ ಹೊರಬಂದ. ಚಾರ್ಜಿಗೆ ಇರಿಸಿದ್ದ ಮೊಬೈಲನ್ನು ಹೊರತೆಗೆದು ಲೋಕೇಶನಿಗೆ ಫೋನಾಯಿಸಿದ. ಅದು ಐದಾರು ರಿಂಗುಗಳಾಗುವಷ್ಟರಲ್ಲೇ ಆತ ಮನೆಯಿಂದ ತುಸು ದೂರಕ್ಕೆ ಬಂದು ನಿಂತಿದ್ದ. ಅಪ್ಪ ಎಲ್ಲಿ ಅಮ್ಮನನ್ನು ಬೈಯುತ್ತಾನೋ, ಹೊಡೆಯುತ್ತಾನೋ ಎಂದು ತನ್ನ ಒಂದು ಕಿವಿಯನ್ನು ಆಕಡೆಯೇ ಇರಿಸುವುದನ್ನು ಮಾತ್ರ ಮರೆಯಲಿಲ್ಲ. ಫೋನನ್ನು ಎತ್ತಿದ ಲೊಕೇಶನ 'ಹೇಗಿದ್ದೀಯಪ್ಪ ಗುರು..' ಎಂಬ ಮಾತನ್ನು ಕೇಳಿ ಆದಿಯ ಧ್ವನಿ ಗದ್ಗತಿತವಾಯಿತು. ಕೂಡಲೇ ಸಾಧ್ಯವಾದಷ್ಟು ಕಡಿಮೆ ಸದ್ದನ್ನು ಮಾಡುತ್ತಾ ಆತ ಅಳತೊಡಗಿದ. ಮೊದಲಿಗೆ ಏಕೆ ಏನೆಂದು ಕೇಳಿದ ಲೋಕೇಶ ಸಂಧರ್ಭವನ್ನು ಅರಿತು ಆತ ಅಳುವವರೆಗೂ ಕಾದ. ಎಷ್ಟೋ ನಿಮಿಷಗಳ ನಂತರ ಇಹಸ್ಥಿತಿಗೆ ಬಂದ ಆದಿ ಏನನ್ನೂ ಹೇಳದೆ ನಾನೊಂದು ರೂಮನ್ನು ಮಾಡಬೇಕು, ನಿನ್ನ ಸಹಾಯ ಬೇಕು, ಅಮ್ಮನನ್ನು ಕರೆದುಕೊಂಡು ಬರುವುದಾಗಿ ಹೇಳಿದ. ಆದಿ ಬಾಯಿಬಿಟ್ಟು ಇಂತಿತ್ತೇ ಆಯಿತೆಂದು ಹೇಳದಿದ್ದರೂ ಆತನ ಮಾತಿನ ವರಸೆಯಿಂದ ಲೋಕೇಶ ಅದಾಗಲೇ ಆದಷ್ಟು ವಿಷಯವನ್ನು ಗ್ರಹಿಸಿದ್ದ. ನಂತರ ಏನು ಎತ್ತ ಎಂದು ಹೆಚ್ಚೇನೂ ಕೇಳದೆ ತುಸು ಹೊತ್ತು ಯೋಚಿಸಿ ತನ್ನ ಮಾತನ್ನು ಮುಂದುವರೆಸಿದ.

ಮೊದಲು ಆತನಿಗೆ ಕೊಂಚ ಶಾಂತವಾಗುವಂತೆ ಹೇಳಿ, ಮನೆಯಲ್ಲಿನ ಜಗಳ ಇಂದು ನೆನ್ನೆಯಲ್ಲದೆಂದೂ ಜಗಳವಿರದ ಮೆನೆಯೇ ಪ್ರಪಂಚದಲ್ಲಿ ಇರುವುದಿಲ್ಲ ಎನ್ನುತ್ತಾನೆ. ವಿದ್ಯಾವಂತರಿಗೆ ತಾವು ಕಲಿಯುವ ವಿದ್ಯೆ ಎಂಬುದು ಕೇವಲ ಕೆಲಸವೊಂದನ್ನು ಗಿಟ್ಟಿಸಿಕೊಂಡು ಹಣವನ್ನು ಗಳಿಸುವುದಷ್ಟೇ ಅಲ್ಲದೆ ಜೀವನದಲ್ಲಿ ಬರುವ ಇಂತಹ ಹಲವಾರು ವಿಷಮ ಸ್ಥಿತಿಗಳನ್ನು ಧೈರ್ಯದಿಂದ, ಜಾಣ್ಮೆಯಿಂದ ಎದುರಿಸುವುದಾಗಿದೆ ಎನ್ನುತ್ತಾನೆ. ಈ ಸಮಯಕ್ಕೆ ಏನೇ ಮಾಡಿದರೂ ಅದು ಕಾರ್ಯಸಾಧುವಾದುದಲ್ಲ. ಸ್ವಲ್ಪ ಸಮಯ ಕಾಯಿ. ಪೋಷಕರು ಹಿರಿಯರು. ವಯಸ್ಸಿನಲ್ಲಿಯೂ ಹಾಗು ಬುದ್ದಿಯಲ್ಲಿಯೂ. ಅವರವರ ಕಿತ್ತಾಟಕ್ಕೆ ಅವರೇ ಹೊಣೆ ಹಾಗು ಅದಕೊಂಡು ಪರಿಹಾರವನ್ನೂ ಅವರೇ ಕಂಡುಕೊಳ್ಳಬೇಕು. ನೀನು ವರ್ಷಪೂರ್ತಿ ಇವಿಷ್ಟೇ ವಿಷಯದಲ್ಲಿ ಬಿದ್ದಿದ್ದರೆ ಖಂಡಿತಾವಾಗಿಯೂ ಓದಿನ ಮೇಲೆ ಗಮನ ಹರಿಸಲಾರೆ. ಹೇಗಾದರೂ ಮಾಡಿ ಕಾಲೇಜನ್ನು ಪಾಸು ಮಾಡಿಕೊ. ನಿನ್ನಂತ ಪ್ರತಿಭಾವಂತರಿಗೆ ಕಂಪನಿಗಳು ಸಾಲಾಗಿ ಬಂದು ನಿಲ್ಲುತ್ತವೆ. ಆಗ ನೀನು ಯಾರನ್ನಾದರೂ ಕರೆದುಕೊಂಡು ಬಾ. ಅಷ್ಟಾಗಿಯೂ ನೀನು ಅಮ್ಮನನ್ನು ಕರೆದುಕೊಂಡು ಬಂದೆ ಎಂದಿಟ್ಟುಕೋ, ಮನೆ, ಡೆಪಾಸಿಟ್, ಬಾಡಿಗೆ, ಸಾಮಾನುಗಳು ಅಂತ ಹತ್ತಿರ ಹತ್ತಿರ ಎರಡು ಲಕ್ಷವಾದರೂ ಬೇಕು. ಸದ್ಯಕ್ಕೆ ನನ್ನ ಬಳಿ ಅಷ್ಟು ಹಣ ಇದ್ದರೂ ನಾನು ಶುಂಠಿಯಲ್ಲಿ ತೊಡಗಿಸಿಕೊಂಡಿರುವುದರಿಂದ ಅದು ಸಾಧ್ಯವಾಗದ ಮಾತು. ಆದಿಗೆ ಲೊಕೇಶನ ಮಾತು ಹೌದೆನಿಸಿದರೂ ಕಾಲಿನ ಮೇಲೆ ಗಂಜಿಯನ್ನು ಚೆಲ್ಲಿಕೊಂಡು ಅವಡುಗಚ್ಚಿ ಅಳುತ್ತಿರುವ ಅಮ್ಮನ ರೋಧನೆಯನ್ನು ಸಹಿಸಲಾಗಲಿಲ್ಲ. ಅದೇನೇ ಆದರೂ ನಾನು ಹಾಗು ಲೋಕೇಶ ಆತನ ಜೊತೆಗಿರುತ್ತಿವೆಂಬ ಭರವಸೆಯಲ್ಲಿ 'ಯೋಚ್ನೆ ಮಾಡಿ ಕಾಲ್ ಮಾಡ್ತೀನಿ' ಎಂದೇಳಿ ಫೋನನ್ನು ಇರಿಸಿದ.

ಆದಿಗೆ ತಂಗಿ ಮತ್ತೊಮ್ಮೆ ನೆನಪಾದಾಳು. ಆಕೆಯನ್ನು ಊರಿಗೆ ಕರೆಯಬೇಕೆಂಬ ಮನಸ್ಸಾಯಿತು.

ಗಿಜಿಗಿಜಿಗುಡುವ ನಗರದ ಧಟ್ಟಣೆ, ಬೆಂಕಿಪೊಟ್ಟಣಗಳಂತೆ ಒಂದಕೊಂದು ಅಂಟಿಕೊಂಡಿರುವ ಇಕ್ಕಟ್ಟಾದ ಮನೆಗಳು, ಆ ಮನೆಗಳ ಮೇಲೆ ಮತ್ತೆ ಹಲವು ಮನೆಗಳು, ಪ್ರತಿ ಹನಿ ನೀರಿಗೂ ಹಾಹಾಕಾರ, ಕರುಣೆ ಎಂಬ ಪದವನ್ನೇ ಮರೆತು ಮೋಸ ಸುಲಿಗೆಗಳನ್ನೇ ವ್ಯವಹಾರ ಎಂದುಕೊಂಡು ಜೀವನ ನೆಡೆಸುವ ಜನಸಂತೆ. ಇವೆಲ್ಲದರ ಮುಂದೆ ತನ್ನ ಅಮ್ಮ ನಿಂತಿರುವುದನ್ನು ಆದಿ ಒಮ್ಮೆ ಕಲ್ಪಿಸಿಕೊಂಡ.

ಆ ನರಕದ ಕಾನನಕ್ಕಿಂತ ಅಪ್ಪನ ಹಿಂಸೆಯೇ ಕೊಂಚ ಸಣ್ಣದೆನಿಸಿತು ಆತನಿಗೆ!

ಮನೆಗೆ ವಾಪಸ್ಸಾದಾಗ ಆತನಿಗೆ ಅಪ್ಪ ಅಷ್ಟರಲ್ಲಾಗಲೇ ಹೊರಗೋದದ್ದು ತಿಳಿಯಿತು. ನೀರು ಅದ್ದಿದ್ದ ಬೆಳ್ಳನೆಯ ಬಟ್ಟೆಯನ್ನು ಕಾಲಿಗೆ ಕಟ್ಟಿಕೊಂಡು ಅಮ್ಮ ಆ ನೋವಿನಲ್ಲೂ ಪುನ್ಹ ಅಡುಗೆ ಮಾಡುವುದರಲ್ಲಿ ತೊಡಗಿದ್ದಳು. 'ನಿಂಗೇನಾದ್ರು ತಲೆ ಕೆಟ್ಟಿದ್ಯಾ..?' ಎಂದು ಆದಿ ಅಮ್ಮನನ್ನು ಬೈಯುತ್ತಾ ಆಕೆಗೆ ಆಸ್ಪತ್ರೆಗೆ ತೆರಳಲು ರೆಡಿಯಾಗುವಂತೆ ಹೇಳುತ್ತಾನೆ. ಕಣ್ಣೀರಿನ ತೇವವಿನ್ನೂ ಆರಿರದ ಕಣ್ಣುಗಳಿಂದ ಆದಿಯನ್ನು ಪ್ರೀತಿಯಿಂದ ನೋಡುತ್ತಾ 'ಬೇಡ ಮಗ .. ಏನಾಗದಿಲ್ಲ.. ಸ್ವಲ್ಪ ದಿನ ಎಲ್ಲ ಸರಿ ಆಗುತ್ತೆ' ಎಂದು ಆಕೆ ಹೇಳುತ್ತಾಳೆ. ಆದಿ ಅದೆಷ್ಟೇ ಹಠ ಹಿಡಿದರೂ ಕೇಳುವುದಿಲ್ಲ. ಅಲ್ಲದೆ ಸದ್ಯಕ್ಕೆ ಆದಿಯೊಟ್ಟಿಗೆ ಆಕೆ ಸಿಟಿಗೆ ಬರುವುದೂ, ಬಾಡಿಗೆ ಮನೆ ಮಾಡುವುದೂ ಎಲ್ಲವೂ ಆಗದ ಕೆಲಸವೆಂದೂ ಆತ ತನ್ನ ಓದಿನ ಮೇಲೆ ಸದ್ಯಕೆ ಗಮನವನ್ನು ಕೊಟ್ಟು ಕಾಲೇಜನ್ನು ಪಾಸುಮಾಡಿಕೊಳ್ಳುವಂತೆ ಲೋಕೇಶ ಹೇಳಿದ ಮಾತನ್ನೇ ಹೇಳುತ್ತಾಳೆ. ಆದಿ ಸಾಧ್ಯವಾದಷ್ಟು ಬಗೆಯಲ್ಲಿ ಆಕೆಯನ್ನು ಆ ನರಕದ ಕೂಪದಿಂದ ಹೊರತರಲು ಯೋಚಿಸುತ್ತಾನೆ. ಆದರೆ ಆತನ ಎಲ್ಲ ಆಲೋಚನೆಗಳು ಪ್ರಪಾತವೊಂದರ ತುತ್ತತುದಿಗೆ ಬಂದಷ್ಟೇ ನಿಲ್ಲುತ್ತಿದ್ದವು. ಸಾಕಷ್ಟು ವಿಚಾರಗಳನ್ನು ಮಾಡಿ ಕೊನೆಗೆ ಆತ ಕೈಚೆಲ್ಲಿ ಕೂರುತ್ತಾನೆ.

ಕೆಲಸಮಯದ ನಂತರ ಆಕೆ ಅನ್ನ, ಸಾರು, ಉಪ್ಪಿನಕಾಯಿ ಹಾಗು ಮೊಸರನ್ನು ತಟ್ಟೆಯ ತುಂಬ ಹಾಕಿ ತಂದು ಆದಿಗೆ ನೀಡುತ್ತಾಳೆ. ಆಕೆ ನೀಡಿದ ತಟ್ಟೆಯನ್ನೇ ನೋಡುತ್ತಾ ಆದಿ ಚಿಂತೆಯಲ್ಲಿ ಮುಳುಗುತ್ತಾನೆ. ಅಪ್ಪ, ಆತನ ಕೋಪ, ಬೈಗುಳ, ಅಮ್ಮನ ಅಸಹಾಯಕತೆ, ಕೊಂಕು ನುಡಿಗಳು, ಅರ್ಥವಿರದ ಜೀವನ ಇವುಗಳೆಲ್ಲ ಒಂದೆಡೆಯಾದರೆ ಮತ್ತೊಂದೆಡೆ ಆಕಾಶವನ್ನು ಚುಂಬಿಸುವ ಆತನ ಕನಸುಗಳು, ಹಠ, ಪ್ರತಿಜ್ಞೆ, ಹೆಸರು ಜೊತೆಗೆ ಖುಷಿ ... ಜೀವನದ ಮೇಲೆ ಆತನಿಗೆ ಜಿಗುಪ್ಸೆ ಮೂಡತೊಡಗಿತು. ನಾಚಿಕೆಯಾಯಿತು. ಕೋಪ ವಿಪರೀತವಾಯಿತು. ಮೇಲಾಗಿ ಅಮ್ಮನನ್ನು ಇಂತಹ ಕ್ರೂರಿ ಅಪ್ಪನೊಟ್ಟಿಗೆ ಮದುವೆ ಆ ವ್ಯಕ್ತಿಗಳ ಮೇಲೆ ಎಲ್ಲಿಲ್ಲದ ಆಕ್ರೋಶ ಮೂಡಿತು. ಹುಡುಗ ಹೇಗೆ ಏನು ಎಂಬೊಂದನ್ನೂ ಲೆಕ್ಕಿಸದೆ ಈಕೆಯ ಕೊರಳನ್ನು ನೀಡುವಂತೆ ಮಾಡಿದ ಆ ಕಟುಕರಿಗೆ ಸಾಧ್ಯವಾದಷ್ಟು ಹಿಡಿಶಾಪವನ್ನು ಹಾಕುತ್ತಾನೆ. ಊಟ ಮುಗಿಸಿ ಅಂದಿನ ರಾತ್ರಿಯೇ ಕಾಲೇಜಿಗೆ ಹೊರಡುವ ಸಿದ್ದತೆಯನ್ನು ಮಾಡುತ್ತಾನೆ.


****


'ವಾವ್.. Awesome ರಿ ನೀವು.. ಸೂಪ್ ಮಾಡೋದ್ನ ಎಲ್ ಕಲ್ತರಿ..?' ಬಿಸಿಯಾಗಿ ಹಬೆಯಾರುತ್ತಿದ್ದ ಸೂಪನ್ನು ಕುಡಿಯುತ್ತಾ ರಾಧಾ ಕೇಳಿದರು. ಅಂದುಕೊಂಡಂತೆಯೇ ವೀಕೆಂಡಿನ ಎಂಡಿಗೆ ಆಕೆ ನಮ್ಮ ರೂಮಿಗೆ ಬಂದಿದ್ದರು. ಆದಿ ಊರಿಗೆ ಹೋದರಿಂದ, ಹೋರಾಡಲು ಲೋಕೇಶನೊಬ್ಬನಿಗೆ ಆದದ್ದರಿಂದ ಅನಿವಾರ್ಯವಾಗಿ ಆತನೂ ಸಹ ಅಂದು ರೂಮನ್ನು ತೊರೆಯಬೇಕಾಯಿತು. ರೆಡಿಮೇಡ್ ಸಿಗುವ ಸೂಪಿನ ಪುಡಿಯನ್ನು ನೀರಿಗೆ ಬೆರೆಸಿ ಕುದಿಸಿ ತಂದ ಮಿಶ್ರಣಕ್ಕೇ ಈ ಪರಿಯಾದ ಫೀಡ್ ಬ್ಯಾಕ್ ಬಂದಾಗ ಒಮ್ಮೆಲೇ ಹುಬ್ಬಿ ಹಿಗ್ಗಿದ ನಾನು ‘ಬೆಳಗಿನಿಂದ ಕಷ್ಟಪಟ್ಟು ಮಾಡಿದ ರೆಸಿಪಿ’ ಎಂದು ಹೇಳುವ ಮನಸ್ಸಾದರೂ ಕೊನೆಗೆ ’ಮತ್ತೊಮ್ಮೆ ಮಾಡಿ ತೋರಿಸಿ’ ಎಂದು ಆಕೆ ಕೇಳಿದರೆ ಎಂದು ಹೆದರಿ ಸುಮ್ಮನಾದೆ. ಅಡುಗೆಮನೆಯಲ್ಲಿ ಬಿದ್ದಿದ್ದ ಸೂಪಿನ ಪುಡಿಯ ಖಾಲಿ ಪೊಟ್ಟಣವನ್ನು ತಂದು ತೋರಿಸಿದಾಗ ಇಬ್ಬರೂ ಒಟ್ಟಿಗೆ ನಕ್ಕೆವು. ಮೊದಲ ಬಾರಿಗೆ ಹೆಣ್ಣೊಂದರ ನಗುವನ್ನು ಕೇಳತೊಡಗಿದ ಕೆಳಗಿನ ಓನರ್ರ ಕಿವಿಗಳೊಟ್ಟಿಗೆ ರೂಮಿನ ಗೋಡೆಗಳೂ ಸಹ ಒಮ್ಮೆಲೇ ಕಕ್ಕಾಬಿಕ್ಕಿಯಾಗಿರಬೇಕು. ಕೊಂಚ ನಿಧಾನವಾಗಿ ನಗುವಂತೆ ಆಕೆಗೆ ಸಂಜ್ಞೆ ಮಾಡಿದೆ. ಅವರು ಕೆಂಪು ತುಟಿಗಳ ಮೇಲೆ ತಮ್ಮ ಸುಂದರ ನೀಳ ಬೆರಳನ್ನು ಇಟ್ಟರು.

ಫ್ರಿಡ್ಜ್ ನಲ್ಲಿದ್ದ ಆಕೆಗಿಷ್ಟವಾದ ಚಾಕೋಲೇಟ್ಗಳೆರಡನ್ನು ತಂದು ಒಂದನ್ನು ಅವರೆಡೆಗೆ ಎಸೆದೆ. ಅವರು ಹಿಡಿಯಲು ಅಣಿಯಾಗಿದ್ದ ಕೈಗಳನ್ನು ದಾಟಿ ಅದು ಅವರ ಮುಖಕ್ಕೆ ಟಪ್ಪನೆ ಬಡಿಯಿತು. 'ಔಚ್... ರೀ, ನನ್ ಮೇಲೆ ಸಿಟ್ ಇದ್ರೆ ಹೇಳ್ಬಿಡಿ ಈ ರೀತಿ ಚಾಕೋಲೇಟ್ನಿಂದ ಮಾತ್ರ ಹೊಡಿಬೇಡಿ ಪ್ಲೀಸ್..' ಎಂದು ಅಳುವ ಮಗುವಿನ ಮುಖವನ್ನು ಮಾಡಿದರು ಅವರು. ಚಾಕೋಲೇಟಿನ ನುಣುಪಾದ ತುದಿ ತಾಗಿದ ಕೂಡಲೇ ಕೆಂಪುಗೊಂಡ ಆಕೆಯ ಕೆನ್ನೆಯನ್ನು ಕಂಡ ನಾನು ಕೂಡಲೇ ಅವರ ಬಳಿಗೆ ಧಾವಿಸಿ ಕೈಗಳಿಂದ ಅವುಗಳನ್ನು ಮುಟ್ಟಿ 'Sorry.. ಪೆಟ್ಟಾಯಿತಾ..' ಎಂದೇ. ನನ್ನ ನೋಟ ಆಕೆಯ ನೋಟದೊಟ್ಟಿಗೆ ಸಂಧಿಸಿದವು. ಅದಾಗಲೇ ಅವು ನೂರಾರು ಮಾತುಗಳನ್ನು ತಮಗೆ ತಾವೇ ಆಡಿಕೊಂಡಿದ್ದವು. ಆಸ್ವಾದಿಸಿದಷ್ಟೂ ಸಾಕೆನಿಸದ ಆಕೆಯ ಸೆಂಟಿನ ಘಮ ಏನೋ ಒಂದು ಬಗೆಯ ಮತ್ತನ್ನು ತರಿಸುತ್ತಿತ್ತು. ಆಗಷ್ಟೇ ಮಜ್ಜಿಗೆಯಿಂದ ಹೊರತೆಗೆದ ಬೆಣ್ಣೆಯ ಮುದ್ದೆಯಂತಹ ನುಣುಪಾದ ಮೃದು ಕೆನ್ನೆಗಳ ಮೇಲಿದ್ದ ನನ್ನ ಕೈಗಳಿಗೆ ವಾಪಸ್ಸು ಬರುವ ಮನಸ್ಸೇ ಆಗಲಿಲ್ಲ. ಕೂಡಲೇ ಆಕೆಯೂ ಅವುಗಳ ಮೇಲೆ ಕೈಗಳನ್ನು ಇಟ್ಟರು. ಕಣ್ಣುಗಳನ್ನು ಮುಚ್ಚಿ ನನ್ನ ಕೈಗಳ ಮೇಲೆ ನುಣುಪಾದ ಕೆನ್ನೆಯನ್ನು ಸವರತೊಡಗಿದರು. ನಾನು ಸೇಫ್ಟಿಗೆ ಇರಲಿ ಎಂದು ಪಕ್ಕದಲ್ಲಿಟ್ಟಿದ್ದ ಪುಸ್ತಕಗಳನ್ನು ಒಂದೇ ಕೈಯಿಂದ ಬ್ಯಾಗಿನೊಳೊಳಗಿಟ್ಟು ದೂರಕ್ಕೆ ತಳ್ಳಿದೆ. ನನ್ನನ್ನು ಇನ್ನೂ ಹತ್ತಿರಕ್ಕೆ ಎಳೆದ ಅವರು ನನ್ನ ಬಲಗೈಯ ಉಗುರುಬೆರಳಿನ ಮೇಲೆ ನಯವಾಗಿ ಚುಂಬಿಸಿ ಮತ್ತೊಮ್ಮೆ ಧೀರ್ಘವಾಗಿ ನೋಡಿದರು.

ಅಷ್ಟರಲ್ಲಾಗಲೇ ತನ್ನ ಶಬ್ದಬರಿತ ಸದ್ದಿನಿಂದ ಕೂಗತೊಡಗಿದ ಹೃದಯದ ಢಮರುಗವನ್ನು ಕೇಳಿ ಆಶ್ಚರ್ಯ ಚಕಿತಳಾಗುವಂತೆ ನನ್ನ ಎದೆಯ ಬಳಿಗೆ ಬಂದು ಅವರ ಕಿವಿಯನು ಇರಿಸಿದರು. ಅದು ಅವರ ನಯವಾದ ಕೆನ್ನೆಗಳ ಸ್ಪರ್ಶವೋ ಏನೋ ಸದ್ದು ಇನ್ನೂ ವಿಪರೀತವಾಯಿತು. ಆ ಸದ್ದಿಗೆ ನನ್ನನು ನೋಡಿ ಜೋರಾಗಿ ನಗಲಾರಂಬಿಸಿ, 'ಏನ್ರೀ ನೀವ್ ಹುಡುಗ್ರು.. ನೋಡೋಕೆ ಮಾತ್ರ ಕಾಮ್ ಅಂಡ್ ಕಂಟ್ರೊಲ್ಡ್ ಅಂತ ಕಂಡ್ರೂ ಒಳಗಡೆ ಮಾತ್ರ ಯಾಕ್ರಿ ಹೀಗೆ?' ಎಂದರು. ಕಾಮ್ ಆಗಿರೋದು ಓಕೆ, ಈ ಕಂಟ್ರೋಲ್ ಬಗ್ಗೆ ಆಕೆಗೆ ಹೇಗೆ ತಿಳಿಯಿತು? ತಿಳಿಯಲಿಲ್ಲ. ಸದ್ಯಕ್ಕೆ ನನಗೆ ಏನೆಳಬೇಕೆಂದು ಅರಿಯಲಿಲ್ಲ. ದಡ್ಡನಂತೆ ನಕ್ಕೆ. 'ಒಹ್ ಮೈ ಗಾಡ್ .. ಇಷ್ಟು ಜೋರಾಗಿ ಹೃದಯ ಬಡಿಯೋದನ್ನ ನಾನು ಎಲ್ಲೂ ನೋಡಿರ್ಲಿಲ್ಲ ರಿ' ಎಂದು ನನ್ನ ಎದೆಯ ಮೇಲೆ ಕೈಯನಿಟ್ಟು ಮತ್ತೊಮ್ಮೆ ಪರೀಕ್ಷಿಸಿದಳು. ಆಕೆಯ ಆ ಒಂದು ಸ್ಪರ್ಶದಿಂದ ದೇಹದ ಕಣಕಣ ಕೋಶಗಳು ಜಾಗೃತಗೊಂಡವು. ಕೂಡಲೇ ಆಕೆಯನ್ನು ಗಟ್ಟಿಯಾಗಿ ತಬ್ಬಿಕೊಂಡು ಚುಂಬಿಸಬೇಕೆಂಬ ಮನಸ್ಸಾದರೂ ಆ ದಿನನಂತೆ 'ಆ ಸೃಷ್ಟಿಕರ್ತನ ಸೃಷ್ಟಿಯನ್ನು ಟೆಸ್ಟ್ ಮಾಡುವ ಸಲುವಾಗಿ ಮಾತ್ರ ನಾನು ಬಂದೆ' ಎಂದರೆ ನನ್ನ ಮಾನ ಮೂರು ಕಾಸಿಗೆ ಹರಾಜಾಕಿದಂತೆ ಆಗುವುದಂತೂ ಸುಳ್ಳಲ್ಲ. ಸಂಯಮವನ್ನು ತಂದುಕೊಂಡೆ. ಆಗಲಿಲ್ಲ. ಕಾಲೇಜಿನಲ್ಲಿ ಇಂಟರ್ನಲ್ಗೆ ಕೇವಲ ಒಂದೇ ಒಂದು ಮಾರ್ಕ್ಸನ್ನು ಕೊಡಲು ನಿರಾಕರಿಸುವ, ಕಾಪಿ ಒಡೆಯಲೂ ಬಿಡದ ಕಟ್ಟುನಿಟ್ಟಾದ ಶಿಕ್ಷಕಿಯಂತೆ ಅವರನ್ನು ಕಲ್ಪಿಸಿಕೊಂಡೆ. ಅದೂ ಸಹ ಪ್ರಯೋಜನವಾಗಲಿಲ್ಲ. 'ಥು ನಿನ್ನ ಗಂಡಸು ಜನುಮಕ್ಕೆ, ಯೋಗ, ಪ್ರಾಣಾಯಾಮ ಎಲ್ಲವನ್ನೂ ಮಾಡಿಯೂ ನಿಗ್ರಹ ಶಕ್ತಿ ಇಲ್ಲದಂತೆ ಆಡ್ತಿಯಲ್ಲ' ಎಂದು ನನ್ನನ್ನೇ ನಾನೇ ಬೈದುಕೊಂಡೆ. ಈ ಬಾರಿ ಕೊಂಚ ವಿಚಲಿತವಾಯಿತು ಮನಸ್ಸು. ಕೇವಲ ಕೆಲಕ್ಷಣದ ಸುಖಕಷ್ಟೆ ನಮ್ಮಮಾತು, ಚರ್ಚೆ, ಗೆಳೆತನ ಎಲ್ಲ ಸೀಮಿತವೆ? ಒಬ್ಬ lecturer ಆಗಿ ಅದ್ಯಾವ ಬಗೆಯ ಸಂಕೋಚಗಳಿಲ್ಲದೆ ಹುಡುಗರ ರೋಮಿಗೆ ಬರೋದೆಂದರೆ ಏನು ಸಾಮನ್ಯದ ಮಾತೆ? ಇಲ್ಲಿ ನಂಬಿಕೆ ಇದೆ. ಈ ನಂಬಿಕೆಯನ್ನು ನಾನು ಉಳಿಸಿಕೊಳ್ಳಬೇಕು. ಹಾಗಾದರೆ ಆ ಮಾಯನೋಟದಿಂದ ನನ್ನ ಬೆರಳಿನ ಮೇಲ್ಯಾಕೆ ಆಕೆ ಚುಂಬಿಸಿದರು? ಏನದರ ಅರ್ಥ? ಮನಸ್ಸು ಕೇಳಿತು. ಉತ್ತರ ತಿಳಿಯಲ್ಲಿಲ್ಲ. ಆಕೆ ನನ್ನ ಪರೀಕ್ಷಿಸಲಿ ಅಥವಾ ಇಲ್ಲದಿರಲಿ, ನಾನು ಮಾತ್ರ ಸಂಯಮವನ್ನು ಕಳೆದುಕೊಳ್ಳೆನು. ಗೆಳೆತನ ಹಾಗು ಬಯಕೆಯಲ್ಲಿ ನನ್ನ ಮನಸ್ಸು ಯಾವುದನ್ನು ಆಯ್ಕೆಮಾಡುತ್ತದೆ ಎಂದು ಪರೀಕ್ಷಿಸಿ ನೋಡುವ ಎಂದುಕೊಂಡೆ. ಆದದ್ದಾಗಲಿ ಎನುತ ಗಟ್ಟಿಮನಸ್ಸು ಮಾಡಿ ಕೂತೆ.

‘Hey.. What happened??' ನಯವಾಗಿ ಅವರು ಕೇಳಿದರು. ಅಷ್ಟರಲ್ಲಾಗಲೇ ಆಕೆ ತನ್ನ ಮುಖವನ್ನು ಬಲುಹತ್ತಿರಕ್ಕೆ ತಂದಿದ್ದರು. ದೂರದ ಚಂದಿರನ್ನು ಒಮ್ಮೆಲೆ ಕಿತ್ತು ಮುಖದ ಬಳಿಯಿರಿಸಿದಂತಹ ಆ ಘಳಿಗೆ ಕೆಲಕ್ಷಣಗಳ ಮೊದಲಷ್ಟೇ ನನಗೂ ಹಾಗು ನನ್ನ ಮನಸ್ಸಿಗೂ ನೆಡೆದ ವಾಗ್ಯುದ್ಧವನ್ನು ಮರೆಮಾಸಿತು. ಸಂಯಮ ಸಂಯಮವನ್ನು ಕಳೆದುಕೊಂಡಿತು. ಆಕೆಯ ಕೈಬೆರಳನ್ನು ನನ್ನ ಬೆರಳುಗಳೊಟ್ಟಿಗೆ ಬೆಸೆದೆ. ಆಕೆಯ ಹಣೆಯ ಮೇಲೆ ಇನ್ನೇನು ಚುಂಬಿಸಬೇಕು ಎನ್ನುವಷ್ಟರಲ್ಲಿ ಒಮ್ಮೆಲೆ ಕಾಲಿಂಗ್ ಬೆಲ್ಲು ಬಡಿದುಕೊಂಡಿತು! ಆಶ್ಚರ್ಯದಿಂದ ಇಬ್ಬರೂ ರೋಮಿನ ಹೊರಗೆ ನೋಡತೊಡಗಿದೆವು....


ಮುಂದುವರೆಯುವುದು..

3 comments: