Saturday, June 27, 2020

ಪಯಣ - 4

Dear Mr.Lokesh,

With respect to your shipment being sent from India, we are sorry to inform you that the container consisting of coffee has been rejected by the Food inspecting authorities in the customs at the destination. Attached is the cancellation receipt. Accordingly, the shipment has been rejected & has been destroyed immediately and no refund can be availed as per the set norms. However, considering the scenario we are providing you a special discount on our freight cost which will be communicated to you in our next email.

Thanks for choosing us.

Regards,
Manager,
CM Shipping & forwarding,
Mumbai, India.

ಕಾಫಿ ಬಿಸಿನೆಸ್ ಮಾಡಲು ಹೊರಟ ಲೋಕೇಶ ಮೊದಲು ಸಣ್ಣದೊಂದು ಸ್ಯಾಂಪಲ್ ಪ್ಯಾಕನ್ನು ಕಳಿಸಿ, ಎಲ್ಲವೂ ಸರಿಯಂತಾಗಿ ದೂರದ ಗಲ್ಫ್ ರಾಷ್ಟ್ರರೊಂದರಲ್ಲಿ ಒಬ್ಬ ಕಸ್ಟಮರ್ ಅನ್ನೂ ಸಹ ಗಳಿಸಿದ. ಎರಡೇ ತಿಂಗಳಲ್ಲಿ ಲೋಕಲ್ ಕಾಫಿ ಬೆಳೆಗಾರರಿಂದ ಕಾಫಿಯನ್ನು ಪಡೆದು, ಪುಡಿ ಮಾಡಿ, ಅದನ್ನುಪ್ಯಾಕ್ ಮಾಡಿಸಿ, ಅದಕೊಂದು Bar-code, Expiry date, Date of Manufacture ಎಲ್ಲವನ್ನು ಹಾಕಿ ಮೊದಲ ಆರ್ಡರ್ ಗೆ ಅಡ್ವಾನ್ಸ್ ಅನ್ನೂ ಸಹ ಪಡೆದುಕೊಂಡಿದ್ದ. ಅದೇ ಅಡ್ವಾನ್ಸ್ ದುಡ್ಡಿನಲ್ಲಿ ಇಲ್ಲಿನ ಕಾಫಿ ಬೆಳೆಗಾರರಿಗೆ ಹಣವನ್ನೂ ಸಂದಾಯ ಮಾಡಿ ಸಂಪೂರ್ಣ ಷಿಪ್ಮೆಂಟನ್ನು ಅಲ್ಲಿಯವರೆಗೂ ಕಳುಹಿಸುವ ಜವಾಬ್ದಾರಿಯನ್ನೂ ತಾನೇ ತೆಗೆದುಕೊಂಡಿದ್ದ. ಆದರೆ ವಿಧಿಯಾಟ ಬೇರೆಯೇ ಆಗಿದ್ದಿತು. ಸ್ಯಾಂಪಲ್ ಪ್ಯಾಕನ್ನು accept ಮಾಡಿದ್ದ ಕಸ್ಟಮ್ಸ್ ನ ಅಧಿಕಾರಿಗಳು ರಿಯಲ್ ಶಿಪ್ಮೆಂಟನ್ನು ಮಾತ್ರ ಸಾರಾಸಗಟಾಗಿ ರಿಜೆಕ್ಟ್ ಮಾಡಿದ್ದರು. ಅಲ್ಲದೆ ಅಲ್ಲಿನ ನಿಯಮಗಳ ಪ್ರಕಾರ ಈ ರೀತಿ ರಿಜೆಕ್ಟ್ ಆದ ಸ್ಯಾಂಪಲ್ ಗಳನ್ನು ಕೂಡಲೇ ಡೆಸ್ಟ್ರಾಯ್ ಮಾಡಲಾಗಿದೆ ಎಂಬ ಸಂದೇಶವನ್ನು ಕಳುಹಿಸುತ್ತಾರೆ. ಅಸಲಿಗೆ ಅದು ಒಳಗೊಳಗೇ ನೂರಾರು ಜನರಲ್ಲಿ ಹರಿದು ಹಂಚಿದರೂ ಅದನ್ನು ಕೇಳುವವರು ಯಾರು ಇರುವುದಿಲ್ಲ. ಒಟ್ಟಿನಲ್ಲಿ ಲೋಕೇಶನಿಗೆ ಮಾತ್ರ ಈಗ ಲಕ್ಷ ಲಕ್ಷಗಳ ಸಾಲ!

'Bloody customs.. ಏನ್ ಈ ಕಾಫಿ ಕುಡಿದ್ರೆ ಇವರಪ್ಪ ಸತ್ತ್ ಹೋಗ್ತಾ ಇದ್ನ.. ನಾವೆಲ್ಲಾ ಕುಡಿಯೊಲ್ವ.. ಏನ್ ಆಗಿದೆ ಮಚಿ ನಮ್ಮ್ ಕಾಫಿಗೆ.. ಅಮೇರಿಕ ಇಂಗ್ಲೆಂಡ್ನಿಂದ ಬರೋ ಟೂರಿಸ್ಟ್ಸ್ ಗೆ ನಮ್ಮ ಫಿಲ್ಟರ್ ಕಾಫಿನೇ ಬೇಕಂತೆ.. ಆದ್ರೆ ಈ ಶೋಕಿಲಾಲರಿಗೆ ಇದು Suspected Sample ಅಂತೆ.. My foot..ಎಲ್ಲದೂ ನಮ್ಮ್ ಈ government ಪ್ರಾಬ್ಲಮ್.. ಫಾರಿನ್ ಅಫೇರ್ ಮಿನಿಸ್ಟರ್ಸು, ಕಾಮರ್ಸ್ ಮಿನಿಸ್ಟರ್ಸು ವರ್ಷಕ್ಕೆ ಎರ್ಡ್ ಎರ್ಡ್ ಸಾರಿ ಮೀಟಿಂಗ್ ಮಾಡ್ತಾರೆ ಅವರೊಟ್ಟಿಗೆ.. ಅವಾಗ ಏನ್ ಕಿತ್ತಾಕ್ತಾರೆ ಇವ್ರು.. ಅಲ್ಲ, ಇಲ್ಲಿ ನಮ್ಮ್ ರೈತ್ರು ಸಾಲ ಸೂಲ ಅಂತ ಸಾಯಿತಾನೆ ಇದ್ದಾರೆ.. ನಮ್ಮ ಮಲೆನಾಡ್ ಕಾಫಿನ ಇವ್ರು ಒಂದು ಬ್ರಾಂಡ್ ಮಾಡೋಕ್ ಆಗಲ್ವ..? ರೈತ್ರಿಗೆ ನಿಜವಾದ ಮಾರ್ಕೆಟ್ ರೇಟ್ ಕೊಡ್ಸೋಕ್ ಆಗಲ್ವ..? ಅಲ್ಲ ಮಚಿ, ಇದೆ ಕಾಫಿನ ಅಮೆರಿಕದವ್ರು ಇಂಪೋರ್ಟ್ ಮಾಡ್ಕೊಂಡು ಗಾಜಿನ ಬಾಟ್ಲಿಗಳೊಳಗೆ ತುಂಬಿ ಕೊಟ್ರೆ ಚಪ್ಪರ್ಸ್ಕೊಂಡು ಕುಡಿತಾರೆ.. ಅದ್ಯಾವ್ದೋ ಸ್ಟಾರ್ ಬಗ್ಗಂತೆ ಒಂದ್ ಕಪ್ ಕಾಫಿಗೆ ನೂರೈವತ್ತು ಡಾಲರ್ ಅಂತೇ. ಒನ್ ಫಿಫ್ಟಿ ಡಾಲರ್, ಟೆನ್ ಥೌಸಂಡ್ ರುಪೀಸ್!! Can you believe it? ಇದನ್ನ ನಮ್ಮ್ ಪ್ಲಾಂಟರ್ಸ್ ಏನಾದ್ರೂ ಕೇಳಿದ್ರೆ ಹಾರ್ಟ್ ಅಟ್ಟ್ಯಾಕ್ ಆಗ್ಬಿಡುತ್ತೆ. ಇಲ್ಲಿ ಒಂದು ಮೂಟೆ ಕಾಫಿಗೂ ಆ ಪ್ರೈಸ್ ಸಿಗೋದಿಲ್ಲ ಗೊತ್ತಾ? Raw, Authentic ಪೌಡರ್ ಕೊಟ್ರೆ ಇವ್ರಜ್ಜಿ ರಿಜೆಕ್ಟ್ ಮಾಡ್ತಾರಾ? It’s all our government fault you know.. It’s our entire system fault! 'ಎಂದೇಳಿ ತನ್ನ ಕೋಪವೆಲ್ಲವನ್ನು ಹೊರಹಾಕುತ್ತಾ ಮತ್ತೊಮ್ಮೆ ಆ ಇಮೇಲನ್ನು ಓದಿದ ಲೋಕೇಶ.



****



'ಇಲ್ವೋ..ನೀನ್ ನಂಗೆ ಸಿಕ್ಕೇ ಸಿಗ್ತಿಯ ಅಂತ ಗೊತ್ತಿತ್ತು. ಹೊಸ ಸ್ಕೂಲು ನನಗೆ ಒಂಚೂರು ಇಷ್ಟ ಇಲ್ಲ ಕಣೋ .. ನೀನೂ ನಮ್ಮ್ ಸ್ಕೂಲ್ಗೆ ಸೇರೋ ಆದಿ .. ನಂಗೆ ಅಲ್ಲಿ ಯಾರೂ ಫ್ರೆಂಡ್ಸ್ ಗಳೇ ಇಲ್ಲ ಗೊತ್ತ...?' ಆದಿಯ ಎದೆಗೊರಗಿ ಖುಷಿ ಬಿಕ್ಕಳಿಸತೊಡಗಿದ್ದಳು. ಕಪ್ಪುಬಣ್ಣದ ಆಕಾಶವನ್ನು ಚೀರಿ ಹೊರಬರುತ್ತಿರುವ ಹಳದಿ ಚಿಟ್ಟೆಗಳಂತಿದ್ದ ಆಕೆಯ ಫ್ರಾಕ್ ಏನೋ ಒಂದು ವಿಭಿನ್ನ ಲೋಕವನ್ನೇ ಸೃಷ್ಟಿಸಿದ್ದವು. ಆದಿಗೆ ಈಗ ಯಾವ ಮಾತುಗಳೂ ಬರುತ್ತಿಲ್ಲ. ಮಾತಾಡಲೂ ಏನೂ ತೋರುತ್ತಿಲ್ಲ. ಆಕೆಯೆ ಮುಂದುವರೆಸಿ,

'ನಂಗೆ ನಿನ್ನ ಸ್ಕೂಲ್ಗೆ ಸೇರ್ಬೇಕು ಅಂತ ಇಷ್ಟ.. ಆದ್ರೆ ಮನೇಲಿ ಅಪ್ಪ,ಅಮ್ಮ, ಒಪ್ಪಿದ್ರೂ ನಮ್ಮ್ ಅಣ್ಣ ಒಪ್ಪಲ್ಲ ಕಣೋ..' ಎಂದಳು.

ಆಕೆಯ ಅಣ್ಣನ ಪಟ ಆದಿಯ ಮನದೊಳಗೆ ಹಾಗೆಯೇ ಒಮ್ಮೆ ಮೂಡಿತು. ಚಿಕ್ಕಂದಿನಲ್ಲಿ ನೋಡಿದ್ದ ಆತನ ಸಿಡುಕು ಮೊಗ ಒಮ್ಮೆ ಕಣ್ಣ ಮುಂದೆ ಬಂದಿತು. ಅಲ್ಲಿ ಯಾವುದೇ ಭಾವನೆಗಳ ಸುಳಿವುಗಳಾಗಲಿ ಅಥವ ಹಿಂದೊಮ್ಮೆ ಅಲ್ಲಿ ಮೂಡಿರುವ ಕುರುಹುಗಳಾಗಲಿ ಕಾಣಲಿಲ್ಲ.

'ಆತ ಹಠಮಾರಿ.. ಆತ ಹೇಳಿದ್ದೆ ಮನೇಲಿ ನಡೀಬೇಕು .. ನಾನು ಯಾವ್ ಕೋರ್ಸ್ ಮಾಡ್ಬೇಕು, ಏನ್ ಒದ್ಬೇಕು ಎಲ್ಲ ಅವ್ನೆ ಡಿಸೈಡ್ ಮಾಡೋದು .. ಅಪ್ಪಂಗೂ ಹೆದ್ರಲ್ಲ .. ಯಾರ್ ಮಾತೂ ಕೇಳಲ್ಲ ..ನನ್ನ ಫೈನಲ್ ಇಯರ್ ಮುಗಿಯೋದೊಳಗೆ ನೀನು ಜಾಬ್ ಹುಡ್ಕೋಬೇಕು ಆದಿ.. ಇಲ್ಲ ಅಂದ್ರೆ ನಂಗೊತ್ತಿಲ್ಲ..' ಎಂದೇಳಿ ಆಕೆ ಜೋರಾಗಿ ಅಳತೊಡಗಿದಳು. ಆತನ ಎದೆಬಡಿತ ಗಟ್ಟಿಯಾಗಿ ತಬ್ಬಿ ಹಿಡಿದಿದ್ದ ಆಕೆಯನ್ನೂ ದಾಟಿ ಹೊರಬರತೊಡಗಿದ್ದವು.

ನೋಡುತ್ತಾನೆ, ಇದ್ದಕ್ಕಿಂದಂತೆ ದೂರದಲ್ಲಿ ಆತನ ಅಣ್ಣ ಬಂದು ನಿಂತಿದ್ದಾನೆ! ನಿಂತಲ್ಲೇ ಭಸ್ಮ ಮಾಡುವಂತಹ ಆತನ ಕಣ್ಣುಗಳು ಆದಿಯ ಹೃದಯ ಸಿಡಿದು ಛಿದ್ರವಾಗುವಂತೆ ಮಾಡಿದವು. ಆತ ದಾಪುಗಾಲು ಹಾಕುತ್ತ, ತನ್ನ ಅಪ್ಪನಂತೆಯೇ, ಈತನ ಬಳಿಗೆ ಬರತೊಡಗುತ್ತಾನೆ. ಆತನ ಕೈಲೂ ಬೆಲ್ಟೋಂದು ಹಾವಿನಂತೆ ನೇತಾಡುತ್ತಿರುತ್ತದೆ. ಹತ್ತಿರ ಬರಬರುತ್ತಾ ಆತನ ಆಕೃತಿಯೂ ದೊಡ್ಡದಾಗುತ್ತಾ ಹೋಗುತ್ತದೆ. ಹೆದರುತ್ತಾ ಆಕೆ ಆದಿಯ ಹಿಂದಕ್ಕೆ ಸರಿದಳು. ಆದಿ ಒಂದೊಂದೇ ಹೆಜ್ಜೆಗಳನ್ನು ಹಿಂದಕ್ಕ್ಕೆ ಇಡುತ್ತಾನೆ. ಹತ್ತಿರಬಂದವನೇ ಕೈ ಎತ್ತಿ ಇನ್ನೇನು ಆದಿನಿಗೆ ಒಡೆಯಬೇಕು ಎನ್ನುವಷ್ಟರಲ್ಲಿ ಧಡಾರನೆ ಎದ್ದು ಕೂತ ಆದಿ!

ನಿಜ ಜಗತ್ತಿಗೆ ಬರಲು ಆದಿಗೆ ಕೊಂಚ ಸಮಯವೇ ಹಿಡಿಯಿತು. ಮಧ್ಯಾಹ್ನದ ಊಟದ ನಂತರ ಮಲಗಿದ್ದ ಆತನಿಗೆ ತನ್ನ ಕಲ್ಪನಾ ಪ್ರಪಂಚ ಪ್ರಸ್ತುತದಲ್ಲಿರಬಹುದಾದ ಖುಷಿಯನ್ನು ಹಾಗು ಆತನ ಅಣ್ಣನನ್ನೂ ಕಲ್ಪಿಸಿ ಕೊಟ್ಟಿತ್ತು.

ಒಂದೊಮ್ಮೆ ಈ ಕನಸ್ಸು ನನಸ್ಸಾದರೆ? ಆದರೆ ಆಕೆ ನನಗೆ ಕೆಲಸವನ್ನು ಹುಡುಕಿಕೊಳ್ಳಲು ಹೇಳುತ್ತಿರುವುದು ಏಕೆ?? ಆದಿ ತನ್ನಲ್ಲೇ ಕೇಳಿಕೊಳ್ಳುತ್ತಾನೆ

ಅಷ್ಟರಲ್ಲಾಗಲೇ ತನ್ನ ಒಂದು ಕೈಯಿಂದ ಫೋನಿನ ತುದಿಯನ್ನು ಬಲಕಿವಿಯ ಬಳಿಗೆ ಇರಿಸಿಕೊಂಡು, ಕಣ್ಣುಗಳೆರಡನ್ನೂ ಬಿಗಿದಾಗಿ ಮುಚ್ಚಿ, ಡಾಕ್ಟರ್ಗಳಿಗೆ ಹೆದರುವ ಮಕ್ಕಳ ಮುಖವನ್ನು ಮಾಡಿ ರೂಮಿನೊಳಗೆ ಬಂದ ಲೋಕೇಶ.

'ಯಸ್ ಸರ್, ಓಕೆ, ಓಕೆ.. ಇಲ್ಲ ಸರ್, ಇನ್ ಸ್ವಲ್ಪ ದಿನ. ಶೋರ್ ಸರ್.. ಓಕೆ ಸರ್.. ಓಕೆ.. bye ' ಎಂದೇಳುತ್ತಾ ಫೋನನ್ನು ಆದಿಯ ಬೆಡ್ಡಿನ ಮೇಲೆಸೆದು ಪಕ್ಕದಲ್ಲಿದ್ದ ಬೀನ್ ಬ್ಯಾಗಿನ ಮೇಲೆ ದೊಪ್ಪನೆ ಕೂತ. ಅದೆಷ್ಟೇ ಜನರ ಪೃಷ್ಠಗಳು ಬಂದು ತಿವಿದಾಡಿದರೂ ಏನೂ ಮಾಡಲಾಗದ ಆ ಬೀನ್ ಬ್ಯಾಗಿನ ವ್ಯಥೆಯಂತೆ ನನ್ನ ಕತೆಯಾಯಿತಲ್ಲ ಎಂದುಕೊಳ್ಳುತ್ತಾನೆ.

'ಏನಾಯಿತೋ.. ಯಾರ್ದು ಫೋನು?' ಆದಿ ಕೇಳಿದ.

'ಇನ್ಯಾರಪ್ಪ.. ಕಾಫಿ ಎಕ್ಸ್ಪೋರ್ಟ್ ಗೆ ಸಾಲ ಕೊಟ್ಟ ಪಾರ್ಟಿ.. ಎಂಟ್ ಲಕ್ಷ + ಇಂಟರ್ಸ್ಟ್ ಕೇಳ್ತಾ ಇದ್ದಾನೆ..' ವಿಚಿತ್ರ ರೀತಿಯಲ್ಲಿ ಸದ್ದನ್ನು ಮಾಡುತ್ತಿದ್ದ ಫ್ಯಾನನ್ನು ಧಿಟ್ಟಿಸುತ್ತಾ ಹೇಳಿದ ಲೋಕೇಶ.

'Shit Man, ಹೇಗೋ ಅಷ್ಟ್ ಸಾಲ ತೀರ್ಸೋದು ಇವಾಗ? ಇಂಥ ಪ್ರಾಬ್ಲೆಮ್ಸ್ ಗೆಲ್ಲ ಸರ್ಕಾರಗಳು ಏನೂ ಮಾಡಲ್ವಾ?'

'ಸರ್ಕಾರಗಳ? ಸುಮ್ನಿರಪ್ಪಾ..ಅವ್ರನ್ನ ನಂಬ್ಕೊಂಡ್ ಕೂತ್ರೆ ಅಷ್ಟೇನೆ'

'That’s not right Lokesh, ನೀನು ಎಲ್ಲದಕ್ಕೂ ಸರ್ಕಾರವನ್ನು ಧೂಷಿಸೋದು ಸರಿಯಲ್ಲ. ನೀನು ಬಿಸಿನೆಸ್ ಮಾಡೋ ಮೊದ್ಲೇ ಯಾವ್ದಾದ್ರೊಂದು ಸರಿಯಾದ Goverament ಡಿಪಾರ್ಟ್ಮೆಂಟ್ ಗೆ ಹೋಗಿ ವಿಷ್ಯಾನ ತಿಳ್ಕೊಂಡು ಆಮೇಲೆ ಮುಂದುವರ್ದಿದ್ರೆ ಈ ರೀತಿ ಆಗ್ತಿರ್ಲಿಲ್ಲ'

'Come on man, Do you think this is really gonna work? ಆದಿ, ನಮ್ಮ ಇಂಡಿಯದಲ್ಲಿ ಇಂಥ ಅದೆಷ್ಟೋ ಐಡಿಯಾಗಳು, ಪ್ರಾಜೆಕ್ಟ್ ಗಳು ಇರ್ತಾವೆ. ಅವರೆಲ್ಲರೂ ನಮ್ಮ್ governmentನ ಕೇಳಿ ಖಾರ ಅರಿಯೋದಾಗಿದ್ರೆ ಅಷ್ಟೇ. ಏನು ಬೇಡಪ್ಪ ಸಿಟಿ ಲಿಮಿಟ್ ಅಲ್ಲಿ ಒಂದು ಮನೆ ಕಟ್ಟೋಕ್ಕೆ ಲೈಸನ್ಸ್ ಮಾಡ್ಸ್ ನೋಡು ನೋಡಣ. ನಮ್ ಹೆಣ ಬಿದ್ದೋಗಿರುತ್ತೆ. ಅಂತದ್ರಲ್ಲಿ ಇನ್ನು ಎಕ್ಸ್ಪೋರ್ಟ್ ಎಲ್ಲ ಆಗ್ ಹೋಗೋ ವಿಷ್ಯ ಅಲ್ಲ. ಮೇಲಾಗಿ ನಾವುಗಳು ಎಲ್ಲ ಸರ್ಕಾರಗಳೇ ಮಾಡ್ತವೆ ಅಂತ ಕೂರೋದು ದಡ್ಡತನ. ಇದು ಡಿಜಿಟಲ್ ಯುಗ. ಇಡೀ ಪ್ರಪಂಚಾನೆ ಈಗ ಈ ಮೊಬೈಲ್ ಒಳಗಿದೆ. ಟೆಕ್ನಾಲಜಿ ಎಂಟ್ರಿ ಮಾಡ್ದೆ ಇರೋ ಏರಿಯಗಳೇ ಇಲ್ಲ. So we have to be independent now.. ತಪ್ಪ್ ಮಾಡಿದ್ರೂ ಅದ್ರಿಂದ ಕಲಿಬೇಕು. ಕಲೀತಾನೆ ಇರ್ಬೇಕು.. ಕಲಿತಾ Independent ಆಗ್ಬೇಕು'

'But this one is your costliest mistake. Anyways, ಈಗ ಹಣ ತೀರ್ಸೋಕ್ಕೆ ಮತ್ತ್ಯಾವ ತಪ್ಪ್ ಮಾಡ್ಬೇಕು ಅಂತ ಇದ್ದೀಯ?'

'Farming..' ಎಂದ ಲೊಕೇಶನ ಮಾತಿನಲ್ಲಿ ಏನೋ ಒಂದು ಬಗೆಯ ದೃಢತೆ ಇದ್ದಂತಿತ್ತು.

'What?! Boss, are you serious?'

'Yes, Farming is the only option. ಸ್ವಲ್ಪ ಮಾರ್ಕೆಟ್ ರಿಸರ್ಚ್ ಮಾಡಿದ್ದೀನಿ. ನೆಕ್ಸ್ಟ್ ಇಯರ್ ಶುಂಠಿಗೆ ಒಳ್ಳೆ ಬೆಲೆ ಬರ್ತಾ ಇದೆ. ಮೇಲಾಗಿ ಶುಠಿ ಒನ್ ಟು ಫೋರ್ ಟೈಮ್ಸ್ ಪ್ರಾಫಿಟ್ ಕೊಡೊ ಬೆಳೆ. ಇಲ್ಲಿಂದ 5 ಕಿಲೋಮೀಟರ್ ದೂರದ ಹಳ್ಳಿ ಒಂದ್ರಲ್ಲಿ ಗದ್ದೇನ ಲೀಸ್ಗೆ ಪಡೀತೀನಿ. ಅಲ್ಲೂ ಸಹ ರೈತ್ರು ಮಳೆ ಸರಿ ಆಗ್ತಾ ಇಲ್ಲ ಅಂತ ಜಾಗನೆಲ್ಲ ಹಾಳ್ ಬಿಟ್ಟಿದ್ದಾರೆ. ನೀನ್ ಹೇಳ್ದಲ್ಲ ನಮ್ಮ government ಅಂತ ಅದೇ government ಈಗ ಮನ್ಸ್ ಮಾಡಿದ್ರೆ ಆ ಹಳ್ಳಿಯ ಅಷ್ಟೂ ಗದ್ದೆಗಳನ್ನು ಲೀಸ್ ಗೆ ತಗೊಂಡು ರೈತರಿಂದಲ್ಲೇ ಕೃಷಿ ಮಾಡಿಸಬಹುದಿತ್ತು. ಹೆಚ್ಚೇನೂ ಬೇಡ ನಮ್ ಜಿಲ್ಲೆಗೆ ಏನೇನು ಬೇಕು ಅದನ್ನಾದ್ರೂ ಬೆಳೆಯಬಹುದಿತ್ತು. Transportation ಪ್ರಾಬ್ಲಮ್ ಇಲ್ಲ. ನೀರ್ ಬೇಕಾದ್ರು ಟ್ಯಾಂಕರ್ನಿಂದ ಇಲ್ಲಿಂದಲ್ಲೇ ಸಾಗಿಸ್ಬಹುದಿತ್ತು. ಇಂಥ convenient ಪ್ಲೇಸ್ ಎಲ್ಲಿಸಿಗುತ್ತೆ ಹೇಳು. ಆದ್ರೆ ಅವ್ರಿಗೆ ಆ ತಲೆನೋವೆಲ್ಲ ಬೇಕಿಲ್ಲ. ಟ್ಯಾಕ್ಸ್ ಅಂತ ನಮ್ಮ್ ದುಡ್ಡನು ತಗೊಂಡು ಆಮೇಲೆ ನಮ್ಗಳಿಗೆ ಕೊಡಕ್ಕೆ ನಾಟ್ಕ ಮಾಡೋದು ಅವರ ಚಾಳಿ. Anyways, I have decided. ಕಾಲೇಜಿಗೆ ಹೋಗ್ತಾನೆ ಫಾರ್ಮಿನ್ಗ್ ಅನ್ನೂ supervise ಮಾಡ್ತೀನಿ..' ಎಂದು ಸುಮ್ಮನಾದ.

' ಆದ್ರೆ ಅಲ್ಲಿವರೆಗೂ ನಂಗೆ ಟೈಮ್ ಬೇಕು ಮಚಿ. At least for another 8 months. ನಾಳೇನೇ ಅವ್ರತ್ರ ಹೋಗಿ ಮಾತಾಡ್ಬೇಕು. ನಿಮ್ಮ್ ಅಸಲು ಹಾಗು ಇಂಟ್ರೆಸ್ಟ್ ಖಂಡಿತಾ ತೀರಿಸ್ತೀನಿ ಅಂತ ಕೇಳ್ಕೊಬೇಕು. ಆಗಲ್ಲ ಅಂದ್ರೆ ಏನಾಗುತ್ತೋ ಗೊತ್ತಿಲ್ಲ, But have to try. ಆಮೇಲೆ ನಾನ್ ಒಬ್ನೇ ಅಂತೂ ಹೋಗಲ್ಲ. ನೀವಿಬ್ಬರೂ ಬರ್ಬೇಕು' ಎಂದು ನನ್ನನ್ನೂ ಸಂಬೋಧಿಸಿ ಹೇಳಿದ.

'ನಾನ್ ರೆಡಿನಪ್ಪ' ಎಂದ ಆದಿಯ ಮಾತಿಗೆ, ನನ್ನ ಒಂದು ಮಾತನ್ನು ಕೇಳಬೇಕೆಂಬ ಸೌಜನ್ಯವನ್ನೂ ತೋರದೆ

'So, tomorrow evening 5 o'clock. ಸಿಟಿ ಕ್ಲಬ್ ' ಎಂದ ಲೋಕೇಶ.



**

ಸಿಟಿ ಕ್ಲಬ್. ಕಾಡ್ಗಿಚ್ಚಿನಂತೆ ಶರವೇಗದಲ್ಲಿ ಹರಡುತ್ತಿರುವ ನಗರೀಕರಣದ ಮಾಹೆಯಲ್ಲಿ ಆಗೆಲ್ಲ ಕಿಲೋಮೀಟರ್ ಗಟ್ಟಲೆ ದೂರದಿಂದ ನಿಂತೂ ನೋಡಿದರೂ ಗುರುತಿಸಬಹುದಾಗಿದ್ದ ಕಟ್ಟಡ ಇಂದು GPS ಹಾಕಿ ಹುಡುಕಿದರೂ ಸಿಗುವುದು ಕಷ್ಟಸಾಧ್ಯ ಎನಿಸುವ ಜಾಗವಾಗಿದೆ. ಊರಿನ ಹಸಿರು ಬಣ್ಣದ ಈ ಕಟ್ಟಡ ಸಂಜೆಯಾಯಿತೆಂದರೆ ತಾಲೂಕಿನ ದೊಡ್ಡ ದೊಡ್ಡ ಕುಳಗಳು ಒಂದೆಡೆ ಸೇರುವ ಅಡ್ಡ. ಅನಧಿಕೃತವಾಗಿ ನೆಡೆಯುವ ಕೆಲವು ಕಾರ್ಯಗಳು ಅಧಿಕೃತವಾಗಿ ನೆಡೆಯಬೇಕಿದ್ದ ಹಲವು ಕಾರ್ಯಗಳನ್ನು ಅಲ್ಲಿ ಮುಚ್ಚಿಹಾಕಿವೆ. ಅಪ್ಪನ ಅಥವ ಅಜ್ಜನ ಜೀಪೂ ಅಥವಾ ಕಾರನ್ನೋ ತಂದು, ಕಂಗ್ಲಿಷಿನಲ್ಲಿ ಕೇಳುಗ ಕಿವುಡಾಗುವಂತೆ ಅಥವ ಹೆದರುವಂತೆ ಅರಚುತ್ತಾ, ಕಷ್ಟಪಟ್ಟು ಆಡುವ ಬಿಲಿಯರ್ಡ್ಸ್ ನೊಟ್ಟಿಗೆ ಇಷ್ಟಪಟ್ಟು ಕುಡಿಯುವ ಮದ್ಯದ ಮೋಜಿಗೆ ಇವರುಗಳು ಪ್ರೆಸಿಡೆಂಟು , ವೈಸ್ ಪ್ರೆಸಿಡೆಂಟುಗಳೆನುತ ತಮಗೆ ತಾವೇ ಕಿರೀಟಗಳನ್ನು ತೊಡಿಸಿಕೊಂಡು ಮಧ್ಯರಾತ್ರಿಯ ಘಾಡ ಮೌನದಲ್ಲಿ ತಮ್ಮ ಫೋರ್ ವೀಲರ್ ಗಳ ಕರ್ಕಶ ಸದ್ದನ್ನು ಹೊರಹೊಮ್ಮಿಸುತ್ತಾ ಹೊರಡದಿದ್ದರೆ ಕ್ಲಬ್ಬಿನ ಗಬ್ಬಿಗೆ ಕನ್ನಡಿ ಹಿಡಿಯುವರ್ಯಾರು?

'ಏನೋ ಮಚಿ ಇದು.. ಒಳ್ಳೆ 7 ಸ್ಟಾರ್ ಹೋಟೆಲ್ ಇದ್ದಾಗೆ ಇದಿಯಲ್ಲೋ' ಮೊದಲ ಬಾರಿಗೆ ಕ್ಲಬ್ನ ಒಳಹೊಕ್ಕ ನನ್ನ ಬಾಯಿಂದ ಮಾತುಗಳು ತಂತಾನೇ ಹೊರಬಂದವು. ಸಾಧಾರಣವಾದ ನಗರಸಭೆಯಂತಹ ಸರ್ಕಾರೀ ಕಟ್ಟಡದ ಪ್ರವೇಶದ್ವಾರವನ್ನು ಹೊಂದಿದ್ದ ಈ ಕ್ಲಬ್ನ ಒಳ ಹೊಕ್ಕರೆ ಬೇರೇನೇ ಒಂದು ಪ್ರಪಂಚ ಅನಾವರಣಗೊಳ್ಳುತ್ತಿತ್ತು. ಇಡೀ ನೆಲಮಾಳಿಗೆಯೇ ಹರಡಿಕೊಂಡಿರುವಂತಿರುವ ತಿಳಿನೀಲಿ ನೀರಿನ ಸ್ವಿಮಿಂಗ್ ಪೂಲು, ಅರೆನಗ್ನ ಅವಸ್ಥೆಯ ದಡೂತಿ ದೇಹಗಳು, ಅದರ ಸುತ್ತಲೂ ಜಾತ್ರೆಯ ಆಟಿಕೆಯ ಮಳಿಗೆಗಳಂತೆ ಬೀಡುಬಿಟ್ಟಿರುವ ಟೇಬಲ್ ಟೆನ್ನಿಸ್ ಹಾಗು ಬಿಲಿಯರ್ಡ್ಸ್ ಆಟಗಳ ಟೇಬಲ್ಲುಗಳು, ಬಿಳಿ ವಸ್ತ್ರವನ್ನು ಧರಿಸಿ ಅತ್ಯಂತ ಶಿಸ್ತಿನ ಸಿಪಾಯಿಗಳಂತೆ ನೆಡೆದಾಡುವ waiterಗಳು, ಬಣ್ಣ ಬಣ್ಣದ ಮದ್ಯಗಳು ಇವೆಲ್ಲವನ್ನು ಕಂಡು ನಮಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ!

'Mr. ಲೋಕೇಶ್..' ಹಿಂದಿನಿಂದ ಬಂದ ಆ ಗಡಸು ಧ್ವನಿಗೆ ನನ್ನ ಎದೆ ಒಮ್ಮೆಗೆ ಝಲ್ ಎಂದಿತು. ಬಿಳಿ ಶರ್ಟ್ ಹಾಗು ಕಪ್ಪು ಬಣ್ಣದ ಜಾಗಿಂಗ್ ಪ್ಯಾಂಟನ್ನು ಧರಿಸಿದ್ದ ಐವತ್ತರ ಆಸುಪಾಸಿನ ವ್ಯಕ್ತಿಯೊಬ್ಬ ಶಟಲ್ ನ ರಾಕೆಟ್ಟೊಂದನ್ನು ಹಿಡಿದು ನಿಂತಿದ್ದ. ಬೆವರುಮಯ ಗೊಂಡಿದ್ದ ಆತನ ಮುಖದಲ್ಲಿ ಮಂದಹಾಸವೊಂದು ಮೂಡಿತ್ತು.

'ಯಸ್, ಯಸ್ ಸರ್. ಲೋಕೇಶ್ ಹಿಯರ್' ಎಂದು ಲೋಕಿ ನಮ್ಮ ಮೂರು ಜನರ ಗುಂಪನ್ನು ಸೀಳಿಕೊಂಡು ಮುಂಬಂದ.

'ಒಹ್..You are Mr. ಲೋಕೇಶ್.. I was waiting ..ಬನ್ನಿ ಕೂತ್ಕೊಂಡು ಮಾತಾಡುವ' ಎಂದು 'These people..?' ಏನುತಾ ನಮ್ಮಿಬ್ಬರನ್ನು ನೋಡಿದರು. ಒಂದೊಮ್ಮೆ ನಮಗೂ ಈ ಸಂಭಾಷಣೆಗೂ ಯಾವುದೇ ಸಂಭಂದವಿಲ್ಲವೆಂದು ತಿಳಿದು ಎಲ್ಲಿ ನಮ್ಮನ್ನು ಹೊರಹಾಕಿ ನನ್ನ ಭಿಟ್ಟಿ ಊಟವನ್ನು ಹೊಟ್ಟೆ ತುಂಬಾ , ಫ್ರೀ ಯಾಗಿ , ತಿನ್ನುವ ಕನಸ್ಸಿಗೆ ಮಣ್ಣು ಎರಚುತ್ತಾರೋ ಎಂದು ನನಗೆ ಕಳವಳವಾಗತೊಡಗಿತು. ಲೋಕೇಶನಿಗೆ ಸಾದ್ಯವಾದರೆ ಪಾರ್ಸೆಲ್ ಅನ್ನು ಕಟ್ಟಿ ತರಲು ಹೇಳಬೇಕು ಎಂದುಕೊಳ್ಳುತ್ತಿರುವಾಗ ಲೋಕೇಶ,

'They are my friends sir. No issues if they are around' ಎಂದ.

ನಮ್ಮನ್ನು especially ನನ್ನನ್ನು ಮೇಲಕ್ಕೂ ಕೆಳಕ್ಕೂ ನೋಡಿದ ಆ ವ್ಯಕ್ತಿ 'waiter..' ಎಂದು ಕೂಗಿ ಪೂಲಿನ ಬಳಿಯಿದ್ದ ನಾಲ್ಕು ಜನ ಕೂರುವ ಟೇಬಲ್ಲಿನ ಬಳಿಗೆ ನೆಡೆದ. ಲೊಕೇಶನನ್ನೂ ಹಿಂದಿಕ್ಕಿ ನಾನು ಅವರ ಹಿಂದೆ ಓಡಿದೆ.


'ಯಸ್ ಲೋಕೇಶ್.. ಟೆಲ್ ಮಿ.. ವಾಟ್ಸ್ ಯುವರ್ ಪ್ಲಾನ್ ಅಬೌಟ್ returning the ಮನಿ' ಎಂದ ಅವರ ಪ್ರೆಶ್ನೆಗೆ ಲೋಕೇಶ ಸುಮ್ಮನಾದ. ಆತ ಬಿಳಿ ಬಣ್ಣದ ಪಿಂಗಾಣಿ ಕಪ್ಪಿಗೆ ಬ್ಲಾಕ್ ಟೀಯನ್ನು ಸುರಿದು ಸಕ್ಕರೆಯ ಒಂದೆರೆಡು ಪ್ಯಾಕುಗಳನ್ನು ಹಾಕಿ ಚಮಚವೊಂದರಿಂದ ವೃತ್ತಾಕಾರವಾಗಿ ನಿಧಾನವಾಗಿ ತಿರುಗಿಸುತ್ತಿದ್ದ. ಅದಕ್ಕೆ ಮಿಲ್ಕ್ ಪೌಡರನ್ನು ಹಾಕುವುದೇ, ಹಾಕಿದರೆ ಕಪ್ಪಿಂದ ಕಪ್ಪಿಗೆ ಸುರಿದು ಚೆನ್ನಾಗಿ ಮಿಕ್ಸ್ ಮಾಡುವುದೇ, ಬೇಡವೇ ಎಂದು ಆತ ಯೋಚಿಸುತ್ತಿರಬಹುದೇ ಎಂದು ನಾನು ಯೋಚಿಸಿದೆ. ಆತ ಮತ್ತೂ ಸುಮ್ಮನಿದ್ದ. ನಾನು ತಂದೂರಿ ಚಿಕನ್ನಿನ ಎರಡನೇ ಪ್ಲೇಟನ್ನು ಆರ್ಡರ್ ಮಾಡಿದೆ. ಆದಿ ಕಾಫಿಯಷ್ಟನ್ನೇ ಹೇಳಿ ಕುಡಿಯುತ್ತಿದ್ದ.

'ಟ್ರಸ್ಟ್ ..' ಎಂದ ಲೋಕೇಶ ಕೊಂಚ ಸುಮ್ಮನಾದ. ಲೊಕೇಶನ ದೃಷ್ಟಿ ಬ್ಲಾಕ್ ಟೀಯ ಮೇಲೆ ಮೂಡುತ್ತಿದ್ದ ಹಬೆಯ ಮೇಲೆ ಕೇಂದ್ರೀಕರಣಗೊಂಡಿತ್ತು.

'Trust is my plan for returning your money, sir'

ಕೊಂಚ ವಿಚಲಿತರಾದ ಅವರು,

'Hello Mister.. have you lost your mind?' ಎಂದರು. ಅವರ ಗಡಸು ಧ್ವನಿ ಲೊಕೇಶನನ್ನು ಇಹಲೋಕಕ್ಕೆ ಕರೆತಂದಿತು. ಅದೇ ಸಮಯಕ್ಕೆ ತಂದೂರಿ ಚಿಕನ್ನಿನ ಎರಡನೇ ಪ್ಲೇಟೂ ಸಹ ಬಂದಿತು. ಅವರು ನನ್ನನೊಮ್ಮೆ ದುರುಗುಟ್ಟಿ ನೋಡಿದರು. ನಾನು ದೃಷ್ಟಿಯನ್ನು ಬದಲಿಸಿ ಕೆಂಪು ಕೆಂಪಾಗಿ ಘಮಘಮಿಸುತ್ತಿದ್ದ ಚಿಕನ್ನನ್ನು ನೋಡುತ್ತಾ ಖಾಲಿಯಾದ ಪ್ಲೇಟನ್ನು waiter ಗೆ ನೀಡಿ ಸುಮ್ಮನಾದೆ. ಆತ ತಂದ ಪ್ಲೇಟನ್ನು ಟೇಬಲ್ಲಿನ ಮೇಲಿಟ್ಟ. ಅವರ ದೃಷ್ಟಿ ಇನ್ನೂ ನನ್ನ ಮೇಲೆಯೇ ಇದೆ ಎಂದು ಅರಿತಾಗ ನಾನು ತನಗೆ ಬೇಡವಂತೆ ನಟಿಸುತ್ತಾ ಲೋಕೇಶ ಹಾಗು ಆದಿಯರನ್ನು ನೋಡಿ ತಿನ್ನುವಂತೆ ಸಂಜ್ಞೆಯನ್ನು ಮಾಡಿದೆ. ಅವರಿಬ್ಬರೂ ಬೇಡವೆಂಬಂತೆ ತಲೆಯಾಡಿಸಿದರು. ಮರ್ಯಾದೆ ಹರಾಜಾದರೂ ಬಂಡತನ ಬಿಡದ ಪುಂಡನಂತೆ ಕೊನೆಗೆ ನಾನು ಪ್ಲೇಟನ್ನು 'ಸರ್..' ಏನುತ ಅವರ ಮುಂದಕ್ಕೆ ಜಾರಿಸಿದೆ. ಅವರು ತಿರಸ್ಕಾರದ ನೋಟದಿಂದ ತಮ್ಮ ದೃಷ್ಟಿಯನ್ನು ಬದಲಿಸಿದರು.

‘You, Mister. This is not the fun game we are discussing here. ಅಲ್ರಿ ರಿಟರ್ನ್ ಮಾಡೋಕೆ ಆಗಲ್ಲ ಅಂದ್ರೆ ಯಾಕ್ರೀ ಸಾಲ ಎಲ್ಲ ನಿಮ್ಗೆ ? ನನ್ನ್ ಮ್ಯಾನೇಜರ್ ಬರ್ಲಿ, ಆ ಪೆದ್ದ್ ಮುಂಡೇದುಕೆ ಹೇಳಿದ್ದೆ. ನೋಡ್ದೆ ಮಾಡ್ದೆ ಯಾರಿಗೂ ಸಾಲ ಕೊಡ್ಬೇಡ ಅಂತ.'

ಅವರ ಬಾಯಿಂದ 'ಪೆದ್ದ್ ಮುಂಡೇದು' ಎಂಬ ಲೋಕಲ್ ಪದವನ್ನು ಕೇಳಿ ಕೊಂಚ ಚಕಿತನಾದ ಲೋಕೇಶ,

'ಸರ್.. ನಾನು ಸಾಲ ತೆಗೆದುಕೊಳ್ಳುವ ಮುಂಚೆ ನಿಮ್ಗೆ ಒಂದು ಇಮೇಲ್ ಬರ್ದಿದ್ದೆ. ನನ್ನ ಪ್ಲಾನ್, ಅದ್ರಿಂದ ಸಿಗೋ ಪ್ರಾಫಿಟ್, ನಮ್ಮ ರೈತರಿಗೆ ಆಗುವ ಲಾಭ ಎಲ್ಲವನ್ನೂ explain ಮಾಡಿದ್ದೆ. ನೀವೂ ಸಹ ಓದಿ ಅಪ್ರಿಷಿಯೇಷನ್ ಮೇಲ್ ಕಳ್ಸಿದ್ರಿ. ನೆನ್ಪ್ ಇದ್ಯಾ ಸಾರ್’ ಎಂದು ಕೇಳಿದ ಲೋಕೇಶ. ಮುಂದೆ ಯಾವುದೇ ಪ್ರತಿಕ್ರಿಯೆಗಳು ಆಕಡೆಯಿಂದ ಬಾರಾದಿದ್ದರಿಂದ ಪುನ್ಹ ಮುಂದುವರೆಸಿ, ‘ನಾನು ಅಲ್ಲಿ ದುಡ್ಡ್ ಮಾಡ್ಬೇಕು ಅನ್ನೋಕ್ಕಿಂತ ಹೆಚ್ಚಾಗಿ ಹೊಸದಾಗಿ ಏನಾದ್ರೂ ಮಾಡ್ಬೇಕು ಅನ್ನೋ ಹಠ ಇತ್ತು ಸರ್. ಆದ್ರೆ ನನ್ನ್ ಹಠಕ್ಕೆ ಬೇರೆಯವ್ರ ದುಡ್ಡಿನ ಜೊತೆ ಆಡೋದು ಸರಿಯಲ್ಲ, I know. ಆದ್ರೆ ಏನ್ ಮಾಡೋದು ಸರ್ , ನಾನ್ ಅಂದ್ಕೊಂಡಿದ್ದೇ ಒಂದು ಆಗಿದ್ದೇ ಮತ್ತೊಂದು. ಆದ್ರೆ ನಾನು ಪಕ್ಕಾ ಮಾರ್ಕೆಟ್ ರಿಸರ್ಚ್ ಮಾಡಿದ್ದೆ. ನಮ್ಮ್ ಕಾಫಿ ಪ್ಲಾಂಟರ್ಸ್ ಗೆ ಆ ರೊಟು ಸರಿಯಾಗಿ ಗೊತ್ತಾದ್ರೆ ಒನ್ ಟು ಡಬಲ್ ಪ್ರಾಫಿಟ್ ತೆಗಿಬಹುದು. ಅದಕ್ಕೆ ಸ್ವಲ್ಪ ಧೈರ್ಯ ಬೇಕು ಅಂಡ್ ಒಳ್ಳೆ ಕಾಂಟ್ಯಾಕ್ಟ್ಸ್. ನನ್ನ್ ಹತ್ರ ಮೊದಲನೆಯದಿದೆ ಆದ್ರೆ ಸೆಕೆಂಡ್ ಒನ್ ಇಲ್ಲ! ಬಟ್ ನಾನದನ್ನ ಸುಲಭವಾಗಿ ಕಳ್ಕೋಣಕ್ಕೆ ಬಿಡಲ್ಲ ಸರ್. Im in touch with PMO office. Hope to receive a positive reply soon..' ಎಂದು ಸುಮ್ಮನಾದ.

ಅತ್ತ ಕಡೆಯಿಂದ ಆಗಲೂ ಯಾವುದೇ ರಿಪ್ಲೈ ಬಾರದೆ ಇದ್ದರಿಂದ ಪುನ್ಹ ಮುಂದುವರೆಸಿ,

'ಸರ್.. ನಿಮ್ ಸಾಲ ತೀರುತ್ತೆ, don't worry. ನನ್ನ್ ಹತ್ರ ಸ್ವಲ್ಪ ಗೋಲ್ಡ್ ಇದೆ ಹಾಗು ನನ್ನ ಫ್ರೆಂಡ್ಸ್ ಹತ್ರ ಇರೋ ಅಮೌಂಟ್ ಎಲ್ಲ ಸೇರಿಸಿ ಒಟ್ಟು 3 ಲಕ್ಷ ಆಗುತ್ತೆ. ಆದ್ರೆ ಆ ಹಣವನ್ನು ನಾನು ಇವಾಗ್ಲೆ ನಿಮ್ಗೆ ಕೊಡಕ್ ಆಗಲ್ಲ. ಅದನ್ನ ನಾನು ಜಿಂಜರ್ ಬಿಸಿನೆಸ್ ಅಲ್ಲಿ ಇನ್ವೆಸ್ಟ್ ಮಾಡ್ತಾ ಇದ್ದೀನಿ. By the end of this year you will be having the money along with the interest' ಎಂದೇಳಿ ನನಗೆ ಹೇಳಿದ ಶುಂಠಿಯ ಘಾಟನ್ನು ಅವರಿಗೂ ಪಸರಿಸಿದ. ಮೊದಮೊದಲು ಕಾಟಾಚಾರಕ್ಕೆ ಕೇಳುವಂತೆ ಮಾಡಿದ ಅವರು ಯಾವಾಗ ಲೋಕೇಶ ತನ್ನ ಸಂಪೂರ್ಣ ಯೋಜನೆಯನ್ನು ಅವರಿಗೆ ವಿವರಿಸಿ 'This model can be extended to other sectors as well' ಎಂದಾಗ ಅವರ ಮುಖದಲ್ಲಿ ಕಳೆದುಹೋಗಿದ್ದ ಮಂದಹಾಸ ಪುನ್ಹ ಮೂಡಿತು.

ನಮ್ಮನ್ನು ಕೇಳದೇ ಈತ ಮೂರು ಲಕ್ಷ ಒಟ್ಟುಮಾಡುವುದಾದರೂ ಹೇಗೆ ಎನುತ ನಾನು ಹಾಗು ಆದಿ ಒಬ್ಬರನ್ನೊಬ್ಬರ ಮುಖವನ್ನು ಕಳವಳದಿಂದ ನೋಡಿದೆವು.

ತುಸು ಯೋಚಿಸಿದಂತೆ ಮಾಡಿದ ಅವರು,

'ಅದಕ್ಕಾಗಿ ಸ್ಟಡಿ discontinue ಮಾಡ್ಬೇಕಲ್ರಿ?!'

'ಸುಮ್ನೆ ಇರಿ ಸಾರ್.. ಕೃಷಿ ಅಂದ್ರೆ ಏನ್ ನಾವೂ ಅದ್ರೊಟ್ಟಿಗೆ ಊಟ ತಿಂಡಿ ಮಾಡ್ತಾ ಕೂರ್ಬೇಕಾ? ಒಬ್ಬ ಮೇಸ್ತ್ರಿನ ಇಟ್ಕೊಂಡು ಕೆಲ್ಸ ಮಾಡಿಸ್ತೀನಿ. Of course ಜನ ಕೆಲ್ಸ ಮಾಡ್ದೆ ಇರ್ಬಹುದು.. ಮಾಡಿದ್ರೂ ಅರ್ಧಂಬರ್ಧ ಮಾಡ್ಬಹುದು.. ಬಟ್ ಅದನ್ನೆಲ್ಲಾ ಯೋಚ್ನೆ ಮಾಡ್ತಾ ಕೂತ್ರೆ ಮುಂದೆ ಹೋಗೋಕ್ ಆಗಲ್ಲ ಸಾರ್.. ಗುರಿನ ಬಿಟ್ಟು ಬರಿ obstacles ಬಗ್ಗೆನೇ ಯೋಚ್ನೆ ಮಾಡ್ತಾ ಇದ್ರೆ ಗುರಿ ಮರ್ತೂಗಿ ಬರಿ obstaclesಗಳೆ ಗುರಿಯಾಗ್ಬಿಡ್ತಾವೆ.. ಅಷ್ಟಾಗು ನಾನ್ ಎಕ್ಸಾಮ್ಸ್ ನೆಲ್ಲ ಓದಿ ಪಾಸ್ಮಾಡೊ ಹುಡ್ಗ ಅಂತೂ ಅಲ್ವೇ ಅಲ್ಲ' ಎಂದು ನಗುತ್ತಾ ಆದಿಯ ಮುಖವನ್ನು ನೋಡಿದ. ಆದಿ ಮುಗುಳ್ನಕ್ಕ.

'ಕೃಷಿ ಬಗ್ಗೆ ಕೃಷಿಕ ಆಗಿ ಮಾತ್ರ ಮಾತಾಡಿ ಲೋಕೇಶ್.. ಹೇಳೋದಕ್ಕೂ ಮಾಡೋದಕ್ಕೂ ಬಹಳಾನೇ ವ್ಯತ್ಯಾಸ ಇರುತ್ತೆ.. ಈಗಿನ ಕಾಲದಲ್ಲಿ ಪ್ರತಿ ಹೆಜ್ಜೆ ಇಡಬೇಕಾದ್ರೂ ನೂರ್ ಸಾರಿ ಯೋಚ್ನೆ ಮಾಡ್ಬೇಕು ..You have to think zillion times before you start anything .. ಆದ್ರೆ ನಿಮ್ದು ಬಿಸಿರಕ್ತ... ಕೇಳೋದಿಲ್ಲ.. ಅಲ್ವೇ' ಎಂದು ನಕ್ಕರು.

'ಮನುಷ್ಯ zillion ಟೈಮ್ಸ್ ಯೋಚ್ನೆ ಮಾಡ್ತಾ ಕೂತಿದ್ರೆ ಇನ್ನೂ ಮಿಲಿಯನ್ ಟೈಮ್ಸ್ ಹಿಂದೇನೆ ಇರ್ತಾ ಇದ್ದ ಸರ್..ಅದೆಲ್ಲ ಬೇಡ ಬಿಡಿ.. ನಿಮ್ಗೆಲ್ಲಾ ಒಂದ್ ಸಣ್ಣ ಸ್ಟೋರಿ ಹೇಳ್ತಿನಿ.. ಕೇಳಿ ' ಎಂದು ನಮ್ಮನ್ನೂ ಒಮ್ಮೆ ನೋಡಿದ. ಮೂಗಿಗೆ ಬಡಿಯ ಹತ್ತಿದ್ದ ತಂದೂರಿ ಚಿಕನ್ನಿನ ಘಮ ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿತ್ತು. ದೇವರೇ ಈ ಪೊಳ್ಳು ವಾಗ್ಮಿ ಲೊಕೇಶನ ತಲೆಗೆ ನಾಲ್ಕು ಭಾರಿಸಿ ಸುಮ್ಮನಿರಿಸು ಎಂದು ನಾನು ಬೇಡಿಕೊಂಡೆ.

'ಸರಿಯಾಗಿ ಮೂವತ್ತು ವರ್ಷದ ಹಿಂದೆ ಒಬ್ಬ ಯಂಗ್ ಹುಡ್ಗ ಈ ಊರಿನಲ್ಲಿದ್ದ.. ಬಿಸಿ ರಕ್ತದ ಹುಡ್ಗ ಅಂದ್ಕೊಳ್ಳಿ.. ಬಹಳಾನೇ ಮಹತ್ವಕಾಂಕ್ಷಿ..ನೇರ ನುಡಿ... ದೇಶಪ್ರೇಮಿ.. ಇಂಗ್ಲಿಂಡಿನಲ್ಲಿ ಓದಿದ್ದರೂ ಊರಿಗೆ ಬಂದು ಕೃಷಿ ಮಾಡತೊಡಗಿದ.. ಅದೇನೋ ಕೃಷಿ ಅಂದರೆ ಆತನಿಗೆ ಎಲ್ಲಿಲ್ಲದ ಆನಂದ . ಅಪ್ಪನ ಬೇಜಾನ್ ಆಸ್ತಿ ಇದ್ದರೂ ಅದನ್ನು ನೆಡೆಸೋದೇನು ಅಷ್ಟೇನು ಸುಲಭ ಆಗಿರ್ಲಿಲ್ಲ..ಆದ್ರೂ ಆತ ಪಣತೊಟ್ಟ.. ಈಜಿದ ..ಗೆಳೆಯರಲ್ಲ ಆತನನ್ನು ಮೂದಲಿಸಿದರು. ಎಲ್ಲವನ್ನು ಮಾರಿ ಇಂಗ್ಲೆಂಡ್ ನಲ್ಲಿ ಸೆಟ್ಲ್ ಆಗುವ ಸಜೆಶನ್ ಕೊಟ್ರು..ಆತ ಕೇಳಲಿಲ್ಲ, ಹಿಡಿದ ದಾರಿಯನ್ನು ಬಿಡಲಿಲ್ಲ. ಆತನ ಆ ಡೈನಾಮಿಕ್ ಯೋಚನೆ ಹಾಗು ಯೋಜನೆಗಳಿಂದ ಇಂದು ಆತ ಇಡೀ ಜಿಲ್ಲೆಯ ಏಕೈಕ ಸಾವಯವ ಕೃಷಿಕ ಅನ್ನಿಸಿಕೊಂಡಿದ್ದಾನೆ. ಅಲ್ದೆ ರೈತರಿಗೆ ಒಂದು ಕಾಫಿ ಕ್ಯೂರಿಂಗ್ ಹಾಗು ಹಾಲಿನ ಸಂರಕ್ಷಣ ಘಟಕವನ್ನು ಸ್ಥಾಪಿಸಿ ಸರ್ಕಾರಗಳಿಂದ ಪ್ರಶಸ್ತಿಗಳನ್ನೂ ಪಡೆದಿದ್ದಾನೆ... ತನ್ನ ಗೆಳೆಯರ ಮಾತನ್ನು ಕೇಳಿ ಅಂದು ಬ್ರಿಟನ್ಗೋ ಅಥವಾ ಫ್ರಾನ್ಸಿಗೂ ಹೋಗಿ ಸೆಟ್ಲ್ ಆಗಿದ್ರೆ ಚೆನ್ನಾಗಿರಬಹುದಿತ್ತು.. ಆದ್ರೆ ಆತನ ಗುರಿ ಸ್ಪಷ್ಟವಾಗಿತ್ತು..ಬಿಸಿರಕ್ತ ಕುದಿಯುತ್ತಾ ಇತ್ತು.. ತಾಯ್ನಡಿನ ಮಣ್ಣು ಚಿನ್ನ ಎಂಬ ಅರಿವು ಆತನಿಗಿತ್ತು' ಎಂದ ಲೋಕೇಶ ನನ್ನನ್ನು ನೋಡಿದ. ಆತ ಏನು ಹೇಳಲೋರಟ್ಟಿದ್ದಾನೆ ಎಂದು ಕೇಳುವ ಮೊದಲೇ ಪುನ್ಹ ಮುಂದುವರೆಸಿ,

'ಇಷ್ಟೆಲ್ಲಾ ಸಾಧನೆ ಮಾಡಿದ ಹೆಮ್ಮೆಯ ವ್ಯಕ್ತಿ ಯಾರು ಗೊತ್ತಾ.., ಎಂದು ಸಣ್ಣದಾದ ಬ್ರೇಕನ್ನು ನೀಡಿ ಎಲ್ಲರ ಮುಖವನ್ನು ಮತ್ತೊಮ್ಮೆ ನೋಡಿ ‘ಅವ್ರು ಬೇರೆ ಯಾರು ಅಲ್ಲ ಜಿಲ್ಲೆಯ ಪ್ರಖ್ಯಾತ ಹೆಮ್ಮೆಯ ಕಾಫಿ ಬೆಳೆಗಾರರಾದ ಶ್ರೀಯುತ ಸಾಲ್ದಾನಾ ಜೋಸೆಫ್..' ಎಂದು ನಮ್ಮ ಮುಂದೆ ಕೂತಿದ್ದ ಅವರನ್ನು ತೋರಿಸಿದ. ನಾನು ಹಾಗು ಆದಿ ಒಬ್ಬರನೊಬ್ಬರು ಆಶ್ಚರ್ಯದಿಂದ ನೋಡಿದೆವು. ಅಪ್ಪಿ ತಪ್ಪಿ ಲೈಬ್ರರಿಯಲ್ಲಿ ಯಾವುದೊ ಹಿಸ್ಟರಿ ಬುಕ್ ಓದಿ ಈತನ ತಲೆಕೆಟ್ಟಿರಬಹುದೆಂದು ನಾನು ಅಂದುಕೊಂಡೆ. ಆದರೆ ಮುಂದೆ ನೆಡೆದ ಘಟನಾವಳಿ ನನ್ನ ಊಹೆಯನ್ನು ಸುಳ್ಳಾಗಿಸಿತು.

'Oh, come-on Lokesh, don’t embarrass me please.. ನೀವು ಹೀಗೆಲ್ಲ ಹೇಳಿದ್ರೆ ನಾನು ದುಡ್ಡ್ ಕೇಳೋದು ಬಿಟ್ಟ್ ಬಿಡ್ತೀನಿ ಅನ್ಕೋಬೇಡಿ' ಎಂದು ಅವರು ನಕ್ಕರು.

'ಇಲ್ಲ ಸರ್ .. This is the legend what our city speak about you..ಅವತ್ತು ನೀವು ಇಲ್ಲೇ ಇದ್ದು ಕೃಷಿ ಮಾಡ್ತೀನಿ ಅಂದ್ಕೊಂಡಾಗ್ಲೂ ನಿಮ್ಗೆ ಕೃಷಿ ಮೇಲೆ ಅಂತಹ ಆಳವಾದ ಜ್ಞಾನ ಇರ್ಲಿಲ್ಲ ಅಲ್ವ ಸರ್.. ಆದ್ರೂ ನೀವು ಪ್ರಯತ್ನ ಪಟ್ರಿ.. ಸೊತ್ರಿ.. ಸೊತ್ರಿ.. ಎಷ್ಟೋ ಸೋಲಿನ ನಂತ್ರ ಗೆದ್ರಿ.. ಅಲ್ವ?'

ಅವರ ಮುಗುಳ್ ನಗುವೆ ಲೊಕೇಶನ ಪ್ರೆಶ್ನೆಗೆ ಉತ್ತರವಾಗಿದ್ದಿತು.

'Right now ನಾನು ಕೂಡ ಅದೇ ಪ್ಲೇಸ್ ನಲ್ಲಿ ಇದ್ದೀನಿ.. ನಂಗೆ ನಿಮ್ಮಿಂದ ಏನೂ ಬೇಡ ಸರ್.. I just need a handful of days.. let me achieve it sir' ಎಂದು ಸುಮ್ಮನಾದ.

ಆಸಾಮಿ ಬರುವಾಗ ಅವರ ಜೀವನಕತೆಯನ್ನೇ ಅರೆದು ಕುಡಿದು ಬಂದಹಾಗಿದೆ. ಆದರೆ ಲೊಕೇಶನ ಈ ರೀತಿಯ ಟ್ರಿಕ್ಸ್ ಗಳೇ ಅದೆಷ್ಟೋ ಬಾರಿ ಸಫಲವಾಗಿವೆ. ವ್ಯಕ್ತಿ ಬಿಸಿನೆಸ್ ಮೆಟೀರಿಯಲ್ ಅನ್ನೋದರಲ್ಲಿ ದೂಸರಾ ಮಾತೇ ಇಲ್ಲ ಎಂದು ನನಗನಿಸಿತು.

'ನೋಡಿ ಲೋಕೇಶ್.. ಏನೇ ಅಂದ್ರು Business is Business.. ಆದ್ರೆ ನಿಮ್ಮನ ನೋಡಿ ನನ್ಗೆ ನನ್ನ ಯಂಗ್ ಡೇಸ್ ನೆನಪಿಗೆ ಬರುತ್ತೆ.. ಅದೇ ಜೋಷ್ ಅದೇ ಸ್ಪಷ್ಟತೆ.. I liked it..' ಎಂದು ಸುಮ್ಮನಾಗಿ 'Only 8 months.. Also ನೀವ್ ಹೇಳಿದ್ದ ಜಾಗದಲ್ಲೇ ನನ್ನ ಮೂರ್ ಎಕ್ರೆ ಖಾಲಿ ಗದ್ದೆ ಇದೆ.. ಬೇಕಾದ್ರೆ ಅದನ್ನೂ ಯೂಸ್ ಮಾಡ್ಕೊಳಿ.. ರೆಂಟ್ ಎಲ್ಲ ಏನು ಬೇಡ..' ಎಂದರು.

ಸಾಲ ಕೊಡೋಕ್ ಆಗಲ್ಲ ಸ್ವಾಮಿ ಏನುತಾ ಲೋಕೇಶ ಕಾಲಿಗೆರಗುವ ಸೀನ್ಗಳೆಲ್ಲ ಇರಬಹುದೆಂದು ಬಂದ ನನಗೆ ಗಡತ್ತಾದ ಊಟ, ಆತನಿಗೆ ಮೂರು ಎಕರೆ ಜಾಗ ಫ್ರೀಯಾಗಿ ದೊರೆಯುತ್ತದೆ ಎಂಬುದನ್ನು ಊಹಿಸಿಕೊಳ್ಳಲೂ ನನಗೆ ಸಾಧ್ಯವಾಗಲಿಲ್ಲ. ಸಾಲದಕ್ಕೆ ಮರ್ಯಾದೆ ಬಿಟ್ಟ ಕಾಲೇಜಿನ ಎಕಾನಾಮಿಕಲ್ ಬ್ಯಾಚುಲರ್ಸ್ ಎಂದು ಸಾಬೀತುಪಡಿಸುವ ಸಲುವಾಗೇ ಏನೋ ನಾನು ಒಂದು ಚಿಕ್ಕನ್ ಬಿರಿಯಾನಿಯನ್ನೂ ನಾನು ರೂಮಿಗೆ ಕಟ್ಟಿಸಿಕೊಂಡಿದ್ದೆ

'ಮಗ್ನೆ, ಅಷ್ಟೆಲ್ಲ ಹೆಂಗೋ ಹುಳ ಬಿಟ್ಟೆ?' ಪ್ಲಾಂಟರ್ಸ್ ಕ್ಲಬ್ಬಿನಿಂದ ಹೊರಬರುತ್ತಾ ಲೋಕೇಶನನ್ನು ಕೇಳಿದೆ ನಾನು.

'ಟ್ಯಾಲೆಂಟ್ ಮಚಿ..ಎಲ್ರಿಗೂ ಅದ್ ಬರಲ್ಲ' ಎಂದು ಸಹಜವಾಗಿಯೇ ತಂತಾನೇ ಹೊಗಳತೊಡಗಿದ ಆತ.

'ಹಾಗಾದ್ರೆ ಈ ಸಾರಿ ಇಂಟರ್ನಲ್ಸ್ ನಲ್ಲೂ ನಿನ್ನ ಟ್ಯಾಲೆಂಟ್ ತೋರಿಸೇ ಪಾಸಾಗು ' ಎಂದ ಆದಿ.

'ಇಲ್ಲ ಗುರು.. ಹಾಗೆಲ್ಲ ಮಾಡ್ಬೇಡ.. ತಾವ್ ಇದ್ರೆ ನಾವು, ಇವ್ನು, ಇಡೀ ಅರ್ಧಕ್ಕರ್ಧ ಕ್ಲಾಸು..ನಿನ್ ಟ್ಯಾಲೆಂಟ್ ಮುಂದೆ ನಮ್ದೇಲ್ಲ ಏನೂ ಇಲ್ಲ ಬಿಡು' ಎಂದು ಆದಿಯನ್ನು ಪುಸಲಾಯಿಸತೊಡಗಿದ. ಅಷ್ಟರಲ್ಲಿ ನಾವು ಕ್ಲಬ್ಬಿನ ಗೇಟಿನ ಬಳಿಗೆ ಬಂದಿದ್ದೆವು. ಕ್ಲಬ್ಬಿನ ಹೊರಕ್ಕೂ ಒಳಕ್ಕೂ ಎಮರ್ಜೆನ್ಸಿಯ ಆಂಬುಲೆನ್ಸ್ ಗಳಂತೆ ಇತ್ತಿಂದತ್ತ ಅತ್ತಿಂದಿತ್ತ ಸದ್ದುಮಾಡುತ್ತಾ ನುಗ್ಗುವ ದುಭಾರಿ ನಾಲ್ಕು ಚಕ್ರದ ಗಾಡಿಗಳ ಒಳಗಿರುವ ಚಹರೆಗಳನ್ನು ತಮ್ಮ ಅಮಾಯಕ ಕಣ್ಣುಗಳಿಂದ ನೋಡುವ ಹತ್ತಾರು ಚಹರೆಗಳು ಗೇಟಿನ ಬಳಿ ನಿಂತಿದ್ದವು. ತಲೆಗೆದರಿಕೊಂಡ ಹಳದಿ ಹಲ್ಲಿನ ಕೊಳಕು ಬಟ್ಟೆಯ ಆ ಮಕ್ಕಳನ್ನು ಕಂಡರೆ ಎಂತಹ ವ್ಯಕ್ತಿಗೂ ತನ್ನ ದೊಡ್ಡತನವನ್ನು ಪ್ರದರ್ಶಿಸುವ ಅವಕಾಶ ಒದಗಿ ಬರುತ್ತಿತ್ತು. ಆಗ ತಮ್ಮ ಕಾರನ್ನು ನಿಲ್ಲಿಸಿ ನೂರೋ, ಇನ್ನೂರೋ ಅಥವಾ ಕೈಗೆ ಬಂದಷ್ಟು ದುಡ್ಡನ್ನು ಎಳೆದು ಕೊಟ್ಟು ಹೋಗುತ್ತಿದ್ದರು ಆ ದೊಡ್ಡವರು. ಸಿಕ್ಕ ಹಣವನ್ನು ಬೀಡಿ, ಸಿಗರೇಟು, ಗುಟ್ಕಾ, ಸಾರಾಯಿ ಎನುತ ಆ ಗುಂಪು ಖರ್ಚು ಮಾಡುವುದು ಮಾತ್ರ ಬೇರೆಯ ಮಾತು.

ಅಂತ ದೊಡ್ಡ ಕುಳಗಳ ಅನ್ವೇಷಣೆಯಲ್ಲಿ ಈಗಲೂ ಅಲ್ಲಿಯೇ ನಿಂತಿತ್ತು ಆ ಮರಿ ಪೋಕರಿ ಸೈನ್ಯ. ನಾವು ಬಂದದನ್ನು ಕಂಡ ಅವರು,

'ಅಣ್ಣ.. ದುಡ್ಡ್ ಕೊಡಣ್ಣ..ಪ್ಲೀಸ್, ಪ್ಲೀಸ್ ' ಎಂದು ಪೀಡಿಸತೊಡಗಿದರು.

'ನನ್ನ್ ಹತ್ರ ಇಲ್ಲ ಗುರು.. ಅಂಕಲ್ ನ ಕೇಳು' ಎನುತ ನಾನು ಆದಿಯನ್ನು ತೋರಿಸಿದೆ.

'ಅಂಕಲ್.. ಅಂಕಲ್.. ದುಡ್ಡ್ ಕೊಡಿ ಅಂಕಲ್.. ಊಟ ಮಾಡಿ ಮೂರ್ ದಿನ ಆಯ್ತು ಅಂಕಲ್.. ಪ್ಲೀಸ್ ಅಂಕಲ್' ಎಂದು ರೋಧಿಸುವ ನಾಟಕವಾಡಿದ ಗುಂಪನ್ನು ಲೋಕೇಶ ಬೈಯುತ್ತಾ ದೂರ ಸರಿಸತೊಡಗಿದ. ಅವರ ಒಂದೊಂದೇ ಮುಖವನ್ನು ನೋಡಿದ ಆದಿ ಕೂಡಲೇ ತನ್ನ ಪರ್ಸನ್ನು ಹೊರಗೆಳೆದು ನೂರರ ಒಂದು ನೋಟನ್ನು ಅವರ ಕೈಲಿಟ್ಟ. ಹಣವನ್ನು ಪಡೆದ ಗುಂಪು ಮರುಕ್ಷಣದಲ್ಲೇ ಈತನೊಬ್ಬ ಅಜೀವ ವಸ್ತುವೇನೋ ಎಂಬಂತೆ ತಮಗೂ ಹಾಗು ಈತನಿಗೂ ಯಾವುದೇ ಸಂಬಂಧ ಇಲ್ಲವೆಂಬಂತೆ ಅಲ್ಲಿಂದ ಜಾಗ ಕಿತ್ತವು. ಪುನ್ಹ ತಮ್ಮ ಸ್ವಸ್ಥಾನಕ್ಕೆ ಹೋಗಿ ಮತ್ತೊಂದು ಗಿರಾಕಿಗೆ ಕಾಯತೊಡಗಿದವು.

'ಲೋ .. ನಿಂಗೇನು ಹುಚ್ಚ.. ಆ ಗುಡ್ಕ ತಿನ್ನೋ ಕಪಿಗಳಿಗೆ ನೂರ್ ರೂಪಾಯ್ ಕೊಡೊದ?' ನಾನು ಕೇಳಿದೆ.

'ಒಬ್ಬ ನನ್ನ್ ಮುಂದೆ ಕೈ ಚಾಚುತ್ತಿದ್ದಾನೆ ಎಂದರೆ ನಂಗೆ ಏನೂ ತೋಚಲ್ಲ.. ತನ್ನ ಎಲ್ಲವನ್ನು ಬಿಟ್ಟು ಇನ್ನೊಬ್ಬರ ಮುಂದೆ ಕೈ ಚಾಚುವುದು ಅಷ್ಟು ಸುಲಭ ಅಲ್ಲ.. ನೂರ್ ರೂಪಾಯ್ ಎಲ್ಲಿ ಹೋಗಿ ಎಲ್ ಬರುತ್ತೋ ಗೊತ್ತಿಲ್ಲ.. ಆದ್ರೆ ಕೈ ಚಾಚಿದವ್ರಿಗೆ ಇಲ್ಲ ಆನ್ಬಾರ್ದು ಅಷ್ಟೇ' ಆದಿ ಹೇಳಿದ.

'ನಿನ್ ಕಿತ್ತೊಗಿರೊ ಈ ಫಿಲಾಸಪಿನ ನೀನೆ ಇಡ್ಕೊ ಗುರು... ಎಳೆ ಮಕ್ಕಳಿಗೆ ದುಡ್ಡ್ ಕೊಟ್ಟ್ ಹಾಳ್ ಮಾಡ್ತಾ ಇದ್ದೀಯ ನೀನು' ಎಂದೇ ನಾನು.

'ನಿಂಗೆ ಅರ್ಥ ಆಗಲ್ಲ ಬಿಡು..' ಎಂದು ಆದಿ ಸುಮ್ಮನಾದ.

ಆ ಗುಂಪು ನಿಂತಿದ್ದ ತುಸು ದೂರದಲ್ಲಿ ಅಜ್ಜಿಯೊಂದು ಮರದ ನೆರಳ ಕೆಳಗೆ ನಿಂತಿತ್ತು. ಅದರ ವೇಷಭೂಷಣ ಜೋಳಿಗೆ ಎಲ್ಲವನ್ನು ನೋಡಿದರೆ ಅದೂ ಸಹ ಹೀಗೆಯೇ ಕೈಚಾಚಿ ಬೇಡಿ ತಿನ್ನುವ ಜೀವವೆಂದು ಅರಿವಾಯಿತು. ಏಕೋ ನನಗೆ ಅವಳ ಬಳಿಗೆ ಹೋಗುವ ಹಾಗಾಯಿತು . ಕೂಡಲೇ ನಾನು ಆಕೆಯ ಬಳಿಗೊದೆ. ತನ್ನ ಎಡ ಬುಜದ ಮೇಲೊಂದು ಬಟ್ಟೆಯ ಜೋಳಿಗೆ ಹಾಗು ಬಲಗೈಯಲ್ಲಿ ಎರಡು ಪ್ಲಾಸ್ಟಿಕ್ ಕವರ್. ಒಂದರ ತುಂಬೆಲ್ಲ ರೊಟ್ಟಿ, ದೋಸೆ, ಚಪಾತಿಗಳಾದರೆ ಇನ್ನೊಂದರಲ್ಲಿ ಸಾರು ಹಾಗು ಪಲ್ಯಗಳ ಮಿಶ್ರಣ. ನಾನು ಆಕೆಯ ಮುಂದೋಗಿ ನಿಂತರೂ ಆಕೆ ನನ್ನನ್ನು ಏನೂ ಕೇಳಲಿಲ್ಲ. ಆಕೆಯ ನೋಟ ನನ್ನಲ್ಲಿ ಏನೋ ಒಂದು ಬಗೆಯ ಸಂಕಟವನ್ನು ಉಂಟುಮಾಡಿತು. ನಾನು ಆಕೆಯ ಕಣ್ಣುಗಳನ್ನೇ ನೋಡತೊಡಗಿದೆ. ‘ಕ್ಲಬ್ಬು , ಮೋಜು , ಮಸ್ತಿ , ಹಣ , ಗಾಡಿ , ಗುಟ್ಕಾ ಎಲ್ಲದರ ಮದ್ಯೆ ಜೀವನವೆಂದರೆ ಇದೆ , ನನನ್ನು ನೋಡಿ ಕಲಿ’ ಅನ್ನುವಂತಿತ್ತು ಆಕೆಯ ನೋಟ. ನಾನು ಕ್ಲಬ್ಬಿನಿಂದ ಕಟ್ಟಿಸಿಕೊಂಡು ಬಂದಿದ್ದ ಬಿರಿಯಾನಿಯೊಟ್ಟಿಗೆಐನೂರರ ಒಂದು ನೋಟನ್ನು ಅದರೊಟ್ಟಿಗಿಟ್ಟು ಆಕೆಗೆ ನೀಡಿದೆ. ಬಿರಿಯಾನಿಯ ಪೊಟ್ಟಣವಷ್ಟನ್ನೇ ಪಡೆದು ಆಕೆ ಹಣವನ್ನು ನನಗೆ ವಾಪಸ್ಸು ನೀಡಿದಳು! ಪುನ್ಹ ನಾನು ಕೊಡಲೋದೆ. ಆಕೆ ಬೇಡವೆನುತ ತನ್ನ ತಲೆಯನ್ನಾಡಿಸಿದಳು. ನನಗೆ ದಿಗ್ಭ್ರಮೆಯಾಯಿತು. ಪ್ಲಾಂಟರ್ಸ್ ಕ್ಲಬ್ಬು, ಐಷಾರಾಮಿ ಕಾರುಗಳು, ಸ್ವಿಮ್ಮಿಂಗ್ ಪೂಲು, ಟೇಬಲ್ ಟೆನ್ನಿಸ್ ಟೇಬಲ್ಲು, ದುಬಾರಿ ಇಂಗ್ಲೀಷು, ತಂದೂರಿ ಚಿಕನ್ನು, ಸುಳ್ಳೇಳಿ ಹಣವನ್ನು ದೋಚುವ ಮಕ್ಕಳು, ಅವರ ಕೊಳಕು ಬಟ್ಟೆ ಹಾಗು ಈ ಮುದುಕಿ. ನನಗೆ ಅಲ್ಲಿ ನಿಲ್ಲಲಾಗಲಿಲ್ಲ. ಕೂಡಲೇ ಅಲ್ಲಿಂದ ಹೊರಟೆ. ಮುದುಕಿ ಪೊಟ್ಟಣವನ್ನು ಬಿಡಿಸಿ ಬಿರಿಯನಿ ಅನ್ನವನ್ನು ಚಪಾತಿ, ದೋಸೆ ಹಾಗು ರೊಟ್ಟಿಯಿದ್ದ ಪ್ಲಾಸ್ಟಿಕ್ ಕವರ್ನೊಳಗೆ ಹಾಕಿಕೊಂಡಳು. ಆಕೆಗೆ ಬಿರಿಯಾನಿ ಹಾಗು ರೊಟ್ಟಿಗಳ ನಡುವೆ ಯಾವುದೇ ವ್ಯತ್ಯಾಸ ಕಾಣಲಿಲ್ಲ. ಎಲ್ಲವನ್ನೂ ಒಟ್ಟಿಗೆ ಬೆರೆಸಿ ಶಾಂತವಾಗಿ ಪುನಃ ಮರದ ಕೆಳಗೆ ನಿಂತಳು.

****

No comments:

Post a Comment