Saturday, December 31, 2016

ಪ್ರಸ್ತುತ : ದೇಶೀ ಅಖಾಡದಲ್ಲಿ ಬೆಳೆದು ವಿದೇಶಗಳಿಗೆ ರಫ್ತಾಗುತ್ತಿರುವ ವಿಜೇಂಧರರು..!!

ಕೆಲದಿನಗಳ ಹಿಂದಷ್ಟೇ ಬಾಕ್ಸರ್ ವಿಜೇಂದರ್ ಸಿಂಗ್ ಟಾಂಜೇನಿಯಾದ ಫ್ರಾನ್ಸಿಸ್ ಚೆಕಾ ಅವರನ್ನು ಎಡೆಮುರಿ ಕಟ್ಟಿ ಸೋಲಿಸಿ ಎಂಟನೇ ಬಾರಿಗೆ ಪ್ರೊ-ಬಾಕ್ಸಿಂಗ್ನ ಪಂದ್ಯವನ್ನು ಗೆದ್ದ ಘಳಿಗೆಯನ್ನು ಅಂದು ನೆಡೆಯುತ್ತಿದ್ದ ಇಂಡಿಯಾ ಹಾಗು ಇಂಗ್ಲೆಂಡ್ ಟೆಸ್ಟ್ ಸರಣಿಯ ಕೊನೆಯ ಪಂದ್ಯಕ್ಕಿಂತ ಹೆಚ್ಚಾಗಿ ಚರ್ಚಿಸಲಾಯಿತು. ಬಹುಷಃ ವರ್ಷ ಪೂರ್ತಿ ಕ್ರಿಕೆಟ್ನ ಜ್ವರದಲ್ಲೇ ಮುಳುಗುವ ಅದೆಷ್ಟೋ ಭಾರತೀಯರಿಗೆ ಹೀಗೆ ಆಗೊಮ್ಮೆ ಹೀಗೊಮ್ಮೆ ಇತರ ಕ್ರೀಡೆಗಳೂ ಸಂಜೆಯ ಚಹಾ-ಬಜ್ಜಿಗಳೊಟ್ಟಿಗೆ ಚರ್ಚೆಯ ವಿಷಯಗಳಾಗುವುದು ತೀರಾ ಅಪರೂಪವೆ ಬಿಡಿ. ಅದೆಷ್ಟೋ ಜನರಿಗೆ ಆ ಒಂದು ಗಳಿಗೆಗೆ ಮಾತ್ರ ಹೀರೊವಾಗುವ ಆ ಪರಕ್ರೀಡಾ ಪ್ರತಿಭೆ ಕೆಲವೇ ಘಂಟೆಗಳಲ್ಲಿ / ದಿನಗಳಲ್ಲಿ ನೋಡನೋಡುತ್ತಿದ್ದಂತೆ ಕಣ್ಮರೆಯಾಗಿಬಿಡುತ್ತಾನೆ. ಅವನ ಸ್ಥಾನವನ್ನು ಮತ್ತದೇ ಕ್ರಿಕೆಟ್ ಕಲಿಗಳು ತುಂಬಿರುತ್ತಾರೆ. ಗೆಲ್ಲುವವರೆಗೂ 'ನೀನ್ಯಾರಯ್ಯ' ಎನ್ನುತ್ತಾ, ಗೆದ್ದ ಮೇಲೆ 'ಅಣ್ಣಯ್ಯ, ಅಪ್ಪಯ್ಯ' ಎನ್ನುವ ಜನನಾಯಕರೂ ಸುದ್ದಿವಾಹಿನಿಗಳಲ್ಲಿ ಸುದ್ದಿ ಸದ್ದು ಮಾಡಿ ಮರೆಯಾಗುವುದರೊಳಗೆ ಇವರುಗಳಿಗೆ ಒಂದೆರೆಡು ಸಭೆ ಸನ್ಮಾನಗಳನ್ನು ಮಾಡಿ ಮುಗಿಸಿಬಿಟ್ಟರೆ ತಮ್ಮ ಕ್ರೀಡಾಮನೋವೈಷಾಲ್ಯತೆಯನ್ನು ಮೆರೆದಂತೆ ಅಂದುಕೊಳ್ಳುತ್ತಾರೆ. ಒಟ್ಟಿನಲ್ಲಿ ಕ್ಷಣಮಾತ್ರಕ್ಕೆ ಮಾತ್ರ ನಾಯಕನಂತಾಗಿ ಉಳಿದೆಲ್ಲ ಕಾಲ ತೆರೆಮರೆಗೆ ಸರಿಯುವ ಸಪೊರ್ಟಿನ್ಗ್ ಆರ್ಟಿಸ್ಟ್ ಗಳಂತಾಗುವ ಕ್ರೀಡೆಗಳಲ್ಲಿ ಬಾಕ್ಸಿಂಗ್ ಕೂಡ ಒಂದು. ಇದು ವಿಜೇಂದರ್ ಸಿಂಗ್ನ ಸತತ 8ನೇ ಗೆಲುವು. ಅಲ್ಲದೆ ಈತ ಇಲ್ಲಿಯವರೆಗೂ ಆಡಿರುವ ಪ್ರೊ-ಬಾಕ್ಸಿಂಗ್ ಪಂದ್ಯಗಳಲ್ಲಿ ಒಮ್ಮೆಯೂ ಸೋಲದ ಸರದಾರ! ಇಷ್ಟೊಂದು ಪ್ರತಿಭಾವಂತ ಆಟಗಾರ ನಮ್ಮ ಭಾರತದವನಾದರೆ ಮೊನ್ನೆ ಒಲಿಂಪಿಕ್ ಪಂದ್ಯದಲ್ಲೇಕೆ ದೇಶದ ಪರವಾಗಿ ಆಡಲಿಲ್ಲ? ದೇಶಕ್ಕೆ ಪದಕವನ್ನೇಕೆ ಗಳಿಸಿಕೊಡಲಿಲ್ಲ? ಎಂಬ ಪ್ರೆಶ್ನೆ ಹಲವರಲ್ಲಿ ಮೂಡಿರದೆ ಇರಲಿಕ್ಕಿಲ್ಲ.

ಈ ಪ್ರೆಶ್ನೆಗಳಿಗೆ ಉತ್ತರ ಹುಡುಕುವ ಮೊದಲು ಬಾಕ್ಸಿಂಗ್ನ ಪ್ರಕಾರಗಳ ಬಗ್ಗೆ ಸ್ವಲ್ಪ ತಿಳಿಯೋಣ. ಬಾಕ್ಸಿಂಗ್ ನಲ್ಲಿ ಎರಡು ಪ್ರಕಾರ. ಮೊದಲನೆಯದು ಅಮೆಚುರ್ ಹಾಗು ನಂತರದ್ದು ಪ್ರೊಫೆಷನಲ್ ಅಥವಾ ಪ್ರೊ-ಬಾಕ್ಸಿಂಗ್. ಈ ಅಮೆಚುರ್ ಬಾಕ್ಸಿಂಗ್ ಅನ್ನುವುದು ಹೆಸರೇ ಹೇಳುವಂತೆ ಒಂತರಾ ಬಲಿಯುತ್ತಿರುವ ಹಲಸಿನ ಹಣ್ಣಿನ ಹಾಗೆ. ಇತ್ತ ಕಡೆ ಕಾಯಿಗೆ ಕಾಯಿಯೂ ಆಗದೆ ಹಣ್ಣಿಗೆ ಹಣ್ಣೂ ಆಗದ ಸ್ಥಿತಿ. ಇಲ್ಲಿ ನಿಯಮಗಳು ಕೊಂಚ ಹಿಡಿತಕ್ಕೊಳಪಟ್ಟಿರುತ್ತವೆ. ದೇಹದ ಕೆಲವೇ ಭಾಗಗಳಿಗೆ ಮಾತ್ರ ಪಂಚ್ ಕೊಡಬಹುದು, ಒಂದೇ ಬಣ್ಣದ ವಸ್ತ್ರಗಳನ್ನು ತೊಡುವಂತಿಲ್ಲ, ಗಡ್ಡ ಬಿಡುವಂತಿಲ್ಲ, ತಲೆಗೆ ಶಿರಸ್ತ್ರಾಣವನ್ನು (Helmet) ಧರಿಸಲೇ ಬೇಕು ಇತ್ಯಾದಿ ಇತ್ಯಾದಿ. ಆದರೆ ಪ್ರೊ-ಬಾಕ್ಸಿಂಗ್ ಇದಕ್ಕೆ ಕೊಂಚ ವ್ಯತಿರಿಕ್ತ. ಇಲ್ಲಿ ಶಿರಸ್ತ್ರಾಣವನ್ನು ಧರಿಸುವಂತೆಯೇ ಇಲ್ಲ! ದೇಹದ ಬಹುತೇಕ ಭಾಗಗಳಿಗೆ ಪಂಚ್ಗಳನ್ನು ಕೊಡಬಹುದು, ಅಲ್ಲದೆ ಬಾಕ್ಸರ್ಗಳ ಸಾಮರ್ಥ್ಯಕ್ಕನುಗುಣವಾಗಿ, 4, 6, 8 ಹೀಗೆ ಹೆಚ್ಚೆಂದರೆ ಒಟ್ಟು ಹನ್ನೆರೆಡು ಸುತ್ತುಗಳಿರಬಹುದು. ಈ ಹನ್ನೆರೆಡು ಸುತ್ತುಗಳಲ್ಲಿ ಒಬ್ಬ ಇನ್ನೊಬ್ಬನ ಮುಸುಡಿಗೆ ಪಂಚ್ಗಳಿಂದ ಚಚ್ಚಿ ಅವನನ್ನು ಮೂರ್ಛೆ ಹೋಗುವಂತೆಯೂ ಮಾಡಬಹುದು. ಇದಕ್ಕೆ ಪ್ರೊ-ಬಾಕ್ಸಿಂಗ್ ನಲ್ಲಿ 'ನಾಕ್ ಔಟ್' ಎನ್ನುತ್ತಾರೆ. ಒಂದು ವೇಳೆ ಒಬ್ಬ ಇನ್ನೊಬ್ಬನನ್ನು 'ನಾಕ್ ಔಟ್' ಮಾಡದಿದ್ದರೆ, ರೆಫೆರಿಗಳ ಅಂಕಗಳ ಆಧಾರದ ಮೇಲೆ ಗಲುವನ್ನು ನಿರ್ಧರಿಸಲಾಗುತ್ತದೆ. ಆದರೆ ಅಮೆಚುರ್ ಬಾಕ್ಸಿಂಗ್ ನಲ್ಲಿ ಮೂರು ನಿಮಿಷದ ಮೂರು ಅಥವಾ ನಾಲ್ಕು ಸುತ್ತುಗಳು. ಇಷ್ಟರಲ್ಲೇ ವಿಜಯಿಗಳು ಘೋಷಿತರಾಗಬೇಕು. ಅಲ್ಲದೆ ಇದು ಪ್ರೊ-ಬಾಕ್ಸಿಂಗ್ ನಷ್ಟು ಅಪಾಯಕಾರಿಯೂ ಅಲ್ಲ. ದೇಶದ ಹೆಸರಲ್ಲಿ ಸೆಣೆಸುವ ಅಷ್ಟೂ ಬಾಕ್ಸರ್ ಗಳು ಅಮೆಚುರ್ ಬಾಕ್ಸಿಂಗ್ ನ ಪ್ರಕಾರವನ್ನೇ ಅನುಸರಿಸಬೇಕು. 2012 ರ ಲಂಡನ್ ಒಲಿಂಪಿಕ್ಸ್ ನ ವರೆಗೂ ಕೇವಲ ಅಮೆಚುರ್ ಬಾಕ್ಸರ್ಗಳೆ ದೇಶಗಳಿಗೆ ಪದಕಗಳನ್ನು ಗಳಿಸಿ ಕೊಡುತ್ತಿದ್ದರು. 2016 ರ ರಿಯೋ ಒಲಿಂಪಿಕ್ಸ್ ನಲ್ಲಿ ಪ್ರೊ-ಬಾಕ್ಸರ್ಗಳಿಗೂ ಅವಕಾಶವನ್ನು ಕೊಟ್ಟಿದ್ದು ಮಾತ್ರ ಎಲ್ಲರ ಆಶ್ಚರ್ಯಕ್ಕೂ ಕಾರಣವಾಗಿತ್ತು.

ಈ ಎರಡೂ ಬಗೆಯ ಬಾಕ್ಸಿಂಗ್ಗೆ ತಮ್ಮದೇ ಆದ ವೈಶಿಷ್ಟಗಳಿವೆ. ಪ್ರೊ-ಬಾಕ್ಸಿಂಗ್ನ ಕೆಲವು ಹಣಾಹಣಿಗಳು ಪ್ರಪಂಚದಾದ್ಯಂತ ಸುದ್ದಿ ಮಾಡಿ ನೋಡುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವುದಲ್ಲದೆ ಬಾಕ್ಸರ್ಗಳನ್ನು ಯಶಸ್ಸಿನ ಉತ್ತುಂಗಕ್ಕೆ ಹಾರಿಸುತ್ತವೆ. 'ಶತಮಾನದ ಫೈಟ್', 'ದಿ ಗ್ರೇಟ್ / ಗ್ರೇಟೆಸ್ಟ್', ‘ನಿರ್ವಿವಾದ(Undisputed)’ ಹೀಗೆ ವಿವಿಧ ಹೆಸರಿನ ಪ್ರೊ-ಬಾಕ್ಸಿಂಗ್ ಪಂದ್ಯಗಳು ಇತಿಹಾಸದ ಪುಟಗಳಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿವೆ. ಮೊಹಮ್ಮೆದ್ ಅಲಿ, ಮೈಕ್ ಟೈಸನ್, ಜಾಕ್ ಜಾನ್ಸನ್, ರಾಕಿ ಮರ್ಸಿಯಾನೊ, ಸೂನ್ನಿ ಲಿಸ್ಟನ್, ಜೋ ಲೂಯಿಸ್ ಹೀಗೆ ಹಲವಾರು ಲೆಜೆಂಡರಿ ಬಾಕ್ಸರ್ಗಳು ಇಂದಿಗೂ ಹಲವರ ಹಿರೋಗಳಾಗಿದ್ದಾರೆ. ಹೀಗೆ ಬಾಕ್ಸಿಂಗ್ನ ಎವರ್ಗ್ರೀನ್ ಹೀರೋಗಳಾಗಲು ಪ್ರೊ-ಬಾಕ್ಸಿಂಗ್ನ ಹಾದಿಯನ್ನು ಬಹುಷಃ ಎಲ್ಲಾ ಬಾಕ್ಸರ್ಗಳು ಬಯಸುವುದು ಸರ್ವೇ ಸಾಮಾನ್ಯ.
ಆಮೆಚುರ್ ಬಾಕ್ಸಿಂಗ್ನಲ್ಲಿ ಕ್ರೀಡಾಳುಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿದರೆ, ಪ್ರೊ-ಬಾಕ್ಸಿಂಗ್ ನಲ್ಲಿ ಹಣದ ಪ್ರವಾಹಕ್ಕೆ ಆವಣಿಸಲಾಗುತ್ತದೆ. ಹಾಗಾಗಿ ಪ್ರೊ-ಬಾಕ್ಸಿಂಗ್ ಹೆಚ್ಚಾಗಿ ಖಾಸಗಿ ಕ್ಲಬ್ಗಳಿಗೆ ಮಾತ್ರ ಆಡಲಾಗುತ್ತದೆ. ಹೀಗೆ ಕ್ಲಬ್ಗಳಿಗೆ ಆಡುವ ಬಾಕ್ಸರ್ಗಳ ಮುಂದೆ ಹರಿಯುವ ಹಣದ ಹೊಳೆಯನ್ನು ಕಂಡು, ಸರ್ಕಾರಿ ಕೋಟಾದಲ್ಲಿ ದೇಶಕ್ಕಾಗಿ ಆಡುವ ಬಾಕ್ಸರ್ ಗಳು ತಮ್ಮ ಕೈ-ಮೈ ಪರಚಿಕೊಳ್ಳುವುದು ಸಾಮಾನ್ಯದ ಸಂಗತಿ. ಹೀಗೆ ಮುಂದುವರೆದು ಯಾವುದಾದರೊಂದು ಪ್ರಮುಖ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಂಚೊ, ಬೆಳ್ಳಿಯೋ ಅಥವಾ ಅಕಸ್ಮಾತಾಗಿ ಚಿನ್ನವನ್ನೇನಾದರೂ ಗೆದ್ದರೆ ಆತನ ಮುಂದಿನ ಗುರಿ ತನ್ನನು ಖರೀದಿಸುವ ಯಾವುದಾದರೊಂದು ಕ್ಲಬ್ಗಳ ಅರಸುವಿಕೆಯಾಗಿರುತ್ತದೆ. ಮುಖದ ಮೇಲೆ ಹೆಚ್ಚು ಹೆಚ್ಚು ಪಂಚ್ಗಳನ್ನು ಚಚ್ಚಿಸಿ ಕೊಳ್ಳುವುದಾಗಿರುತ್ತದೆ. ಕಿಸೆಯ ತುಂಬ ನೋಟುಗಳನ್ನು ತುಂಬಿಕೊಳ್ಳುವುದಾಗಿರುತ್ತದೆ.

ಹೀಗೆ ದೇಶದ ಗರಡಿಯಲ್ಲಿ ಬೆಳೆದು ಪಳಗಿದ ಪಟುಗಳು ನೋಡ ನೋಡುತ್ತಲೇ ಪರಕೀಯರ ಪಾಲಾಗುತ್ತಾರೆ And/Or ಪಾಲಾಗಿದ್ದಾರೆ!!

ಬಡಕುಟುಂಬದಲ್ಲಿ ಬೆಳೆದ ವಿಜೇಂದರ್, ಮುಂದೊಂದು ದಿನ ದೇಶದ ದೊಡ್ಡ ಬಾಕ್ಸರ್ ಆಗುತ್ತೇನೆಂಬುದನ್ನು ಊಹಿಸಿರಲೂ ಸಾಧ್ಯವಿಲ್ಲ. ಆದರೆ ತನ್ನ ಹಿರಿಯ ಸಹೋದರನನ್ನು ಅನುಸರಿಸುತ್ತಾ ಬಾಕ್ಸಿಂಗ್ಗೆ ಸೇರಿದ ವಿಜೇಂದರ್, ಸಹೋದರ ಬಾಕ್ಸಿಂಗ್ನ ಕೋಟದ ಮೇಲೆ ಸರ್ಕಾರಿ ನೌಕರಿಯನ್ನು ಗಳಿಸಿಗೊಂಡಾಗ ಈತನಿಗೆ ಬಾಕ್ಸಿಂಗ್ ಇನ್ನೂ ಸನಿಹವಾಗಿರಬಹುದು. ನಂತರ ಸುಪ್ರಸಿದ್ದ ಭಿವಾನಿ ಬಾಕ್ಸಿಂಗ್ ಕ್ಲಬ್ಗೆ ಸೇರಿದ ಈತ ತನ್ನ ಬಾಕ್ಸಿಂಗ್ ಕಲೆಯನ್ನು ಇನ್ನೂ ವೃದ್ಧಿಸಿಕೊಳ್ಳುತ್ತಾನೆ ಅಲ್ಲದೆ 1997ರ ರಾಷ್ಟ್ರೀಯ ಮಟ್ಟದ ಸಬ್ ಜೂನಿಯರ್ ಪಂದ್ಯಾವಳಿಯಲ್ಲಿ ಬೆಳ್ಳಿಯ ಪದಕವನ್ನೂ ಗೆಲ್ಲುತ್ತಾನೆ. ಇದು ಅವನ ಬಾಕ್ಸಿಂಗ್ ಕೆರಿಯರ್ ನ ಮೊದಲ ಪದಕ. ಅಲ್ಲಿಂದ ಮುಂದೆ ಒಂದರಿಂದೊಂದಂತೆ ರಾಶಿ ರಾಶಿ ಪಂಚ್ ಗಳನ್ನು ಹೊಡೆಯುತ್ತಾ, ಕೆಲ ಪಂಚ್ ಗಳನ್ನು ತಾನೂ ಗುದ್ದಿಸಿಕೊಳ್ಳುತ್ತಾ ಸಾಲು ಸಾಲು ಪದಕಗಳನ್ನು ಮುಡಿಗೇರಿಸಿಕೊಳ್ಳುತ್ತಾನೆ. ವರ್ಷ 2003 ರಲ್ಲಿ ಆಲ್ ಇಂಡಿಯಾ ಯುವ ಬಾಕ್ಸಿಂಗ್ ಚಾಂಪಿಯನ್ಶಿಪ್, ಅದೇ ವರ್ಷ ಹೈದ್ರಾಬಾದಿನಲ್ಲಿ ನೆಡೆದ ಆಫ್ರೋ-ಏಷ್ಯನ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ, 2006 ರ ಮೆಲ್ಬೋರ್ನ್ ಕಾಮನ್ ವೆಲ್ತ್ ಪಂದ್ಯಾವಳಿಯಲ್ಲಿ ಕಂಚಿನ ಪದಕ, ಅದೇ ವರ್ಷ ದೊಹಾದಲ್ಲಿ ನೆಡೆದ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ, ನಂತರ 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ದೇಶದ ಒಲಿಂಪಿಕ್ಸ್ ಇತಿಹಾಸದ ಮೊದಲ ಕಂಚಿನ ಪದಕ, 2010ರಲ್ಲಿ ಡೆಲ್ಲಿಯಲ್ಲಿ ನೆಡೆದ ಕಾಮನ್ ವೆಲ್ತ್ ಚಾಂಪಿಯನ್ನಶಿಪ್ ನಲ್ಲಿ ಚಿನ್ನದ ಪದಕ ನಂತರದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ, ಅದೇ ವರ್ಷ ಚೀನಾದಲ್ಲಿ ನೆಡೆದ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ, 2014 ರ ಗ್ಲ್ಯಾಸ್ಕೋ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿಯ ಪದಕ. ಒಂದೇ ಎರಡೇ.. ಹೀಗೆ ದೇಶದ ಬಾಕ್ಸಿಂಗ್ ಇತಿಹಾಸದಲ್ಲಿ ಹಿಂದೆಂದೂ ಮಾಡದ ಸಾಧನೆಯನ್ನು ಸಾಧಿಸುತ್ತಾನೆ. ದೇಶದ ಕ್ರೀಡಾಪ್ರಿಯರ ಮನೆಮಾತಾಗುತ್ತಾನೆ.

ಆದರೆ,

ಅದು ಮೊನ್ನೆ ಆಗಸ್ಟ್ ತಿಂಗಳಲ್ಲಿ ನೆಡೆದ ರಿಯೋ ಒಲಿಂಪಿಕ್ಸ್ ಗಿಂತ ಸುಮಾರು ಒಂದು ವರ್ಷ ಹಿಂದಿನ ಸಮಯ. ಅದಾಗಲೇ ರಿಯೋ ಒಲಿಂಪಿಕ್ಸ್ ಗೆ ಭರ್ಜರಿ ಸಿದ್ದತೆಗಳು ನೆಡೆಯುತ್ತಿದ್ದವು. ಆಗ ಇದ್ದಕ್ಕಿದ್ದಂತೆ ಸುದ್ದಿಯೊಂದು ಟಿವಿ ಪರದೆಯ ಮೇಲೆ ಮೂಡುತ್ತದೆ. ಆ ಸುದ್ದಿಯನ್ನು ನೋಡಿದ ಬಾಕ್ಸಿಂಗ್ ಪ್ರಿಯರ ಎದೆಬಡಿತ ಅರೆಕ್ಷಣ ನಿಂತಿರಲೂ ಬಹುದು. ವಿಜೇಂದರ್ ಸಿಂಗ್ ಇನ್ನು ಮುಂದೆ ಆಮೆಚುರ್ ಬಾಕ್ಸಿಗ್ನ್ ಆಡುವುದಿಲ್ಲವೆಂದೂ, ಇನ್ನು ಮುಂದೆ ಈತ ಪೂರ್ಣಮಟ್ಟದ ಪ್ರೊಫೆಶನಲ್ ಬಾಕ್ಸರ್ ಆಗುತ್ತಾನೆಂದು ಭಿತ್ತರಿಸಲಾಗುತ್ತದೆ. 2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಆರು ಪದಕಗಳನ್ನು ಪಡೆದ ಭಾರತೀಯರು ಈ ಬಾರಿ ಮತ್ತಷ್ಟು ಪದಕಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಪದಕಗಳ ಸಂಖ್ಯೆ ಎರಡಂಕಿ ತಲುಪುವುದನ್ನು ಕಾಣಲು ಆತುರರಾಗಿದ್ದರು. ಅವರ ಆ ನಿರೀಕ್ಷೆಯಲ್ಲಿ ವಿಜೇಂದರ್ ಸಿಂಗ್ನ ಹೆಸರು ಮೊದಲ ಸ್ಥಾನದಲ್ಲಿತ್ತು. ಆದಾಗಲೇ ಹಲವು ಪ್ರಸಿದ್ಧ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ, 2008 ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ದೇಶದ ಮೊದಲ ಬಾಕ್ಸಿಂಗ್ ಪದಕವನ್ನೂ ತಂದುಕೊಟ್ಟಿದ್ದ ವಿಜೇಂದರ್ ಸಿಂಗ್ನ ಮೇಲೆ ಭರವಸೆ ತುಸು ಜಾಸ್ತಿಯೇ ಇತ್ತೆನ್ನಬಹುದು. ಆದರೆ ಆ ವೇಳೆಯಲ್ಲಿ ಇನ್ನೂ ಒಲಿಂಪಿಕ್ಸ್ ಪಂಧ್ಯಾವಳಿಗಳಲ್ಲಿ ಪ್ರೊ-ಬಾಕ್ಸಿಂಗ್ ನ ಸೇರ್ಪಡೆಯಾಗಿರಲಿಲ್ಲ, So, ವಿಜೇಂದರ್ನ ಮನಸ್ಥಿತಿ ಆಮೆಚುರ್ ಬಾಕ್ಸಿಂಗ್ ನಿಂದ ದೂರವಾಗಿ ಪ್ರೊ ಬಾಕ್ಸಿಂಗ್ ನ ಗುಂಗಿನಲ್ಲಿತ್ತು. ವಿದೇಶಿ ಕ್ಲಬ್ ನೊಟ್ಟಿಗೆ ಬಹುವಾರ್ಷಿಕ ಒಪ್ಪಂದಕ್ಕೂ ಸಹಿ ಹಾಕಲಾಗಿತ್ತು. ಇನ್ನೇನಿದ್ದರೂ ಈತ ಒಲಿಂಪಿಕ್ ರಿಂಗ್ ನಲ್ಲಿ, ಭಾರತದ ಧ್ವಜವನ್ನು ಎದೆಯ ಮೇಲೆ ಹೊತ್ತು ಸೆಣೆಸುವ ಇತರ ಆಟಗಾರರನ್ನು ನೋಡಿ ಮರುಗುವುದಾಗಿತ್ತು. ಅವರುಗಳು ಸೋತು ಬಿದ್ದಾಗ, ದೇಶದವನಾಗಿ ದೇಶಕ್ಕಾಗಿ ಸೆಣೆಸಲಾಗಲಿಲ್ಲವಲ್ಲ ಎಂದು ಕೊರಗುವುದಾಗಿತ್ತು. 2016ರ ಒಲಿಂಪಿಕ್ಸ್ ಶುರುವಾಗುವ ಮುನ್ನವೇನೋ ಪ್ರೊ-ಬಾಕ್ಸಿಂಗ್ ಓಲಿಂಪಿಕ್ಸ್ ಗೆ ಪಾದಾರ್ಪಣೆ ಮಾಡಿತಾದರೂ ತನ್ನ ಏಳನೇ ಪ್ರೊ ಬಾಕ್ಸಿಂಗ್ ನ ಸಿದ್ದತೆಯಲ್ಲಿ ಈತನಿಗೆ ಒಲಿಂಪಿಕ್ಸ್ ರಿಂಗ್ ನೊಳಗೆ ಬರಲಾಗಲಿಲ್ಲ.

ಇದು ಕೇವಲ ಬಾಕ್ಸಿಂಗ್ ಹಾಗು ಬಾಕ್ಸರ್ ಗಳ ವಿಷಯವಲ್ಲ. ಒಲಿಂಪಿಕ್ಸ್ ನಲ್ಲಿ ಸೆಣೆಸುವ ಅದಷ್ಟೂ ಕ್ರೀಡೆ ಹಾಗು ಕ್ರೀಡಾಳುಗಳಿಗೆ ಅನ್ವಹಿಸುವ ವಿಷಯ. ರಿಯೋ ಒಲಿಂಪಿಕ್ಸ್ ನಲ್ಲಿ ಒಂದು ಬೆಳ್ಳಿ ಹಾಗು ಒಂದು ಕಂಚಿನ ಪದಕಗಳನ್ನು ಗೆದ್ದು ತಂದ P.V ಸಿಂಧೂ ಹಾಗು ಸಾಕ್ಷಿ ಮಲಿಕ್ ರನ್ನು ರಿಯೋ ಒಲಿಂಪಿಕ್ಸ್ ಗೆ ಹೋಗುವ ಮುನ್ನ ಗುರುತೇ ಹಿಡಿಯದವರು, ಗೆದ್ದು ಬಂದ ಮೇಲಂತೂ ಕೋಟಿ ಕೋಟಿ ಹಣವನ್ನು ಅವರ ಮುಂದೆ ಸುರಿದು ಕುಣಿದು ಕುಪ್ಪಳಿಸಿದರು.. ಸಿಂಧು ಇದಾದ ನಂತರ ಸುಮಾರು ಅರ್ವತ್ತರಿಂದ ಅರವತೈದು ಕೋಟಿಯನ್ನು ಗಳಿಸಿದರೆ, ಕಂಚನ್ನು ಗೆದ್ದ ಸಾಕ್ಷಿಗೆ ಸುಮಾರು ಹತ್ತು ಕೋಟಿ ಸಿಕ್ಕಿರಬಹುದು. ಇದೆ ಹಣವನ್ನೇದಾರೂ ಒಲಿಂಪಿಕ್ಸ್ ನ ಮುಂಚೆಯೇ ಕ್ರೀಡಾಳುಗಳ ಉತ್ತಮ ಗುಣಮಟ್ಟದ ಕ್ರೀಡಾ ಉಪಕರಣಗಳಿಗೋ, ಒಳ್ಳೆಯ ಕೋಚ್ ಗಳಿಗೋ ಅಥವಾ ಕ್ರೀಡೆ ಎಂದರೆ ಕ್ರಿಕೆಟ್ ಎಂದರಿತಿರುವ ಹಲವಾರು ಶಾಲಾ ಕಾಲೇಜುಗಳಿಗೂ ಕೊಟ್ಟಿದ್ದರೂ ಇಂದು 130 ಕೋಟಿ ಜನಸಂಖ್ಯೆಯಲ್ಲಿ ಕನಿಷ್ಠ 0.00000001 % ರಷ್ಟು ಪದಕಗಳನ್ನಾದರೂ, ಅಂದರೆ ಕಳೆದ ಲಂಡನ್ ಒಲಿಂಪಿಕ್ಸ್ ಗಿಂತ ಎರಡರಷ್ಟು ಪದಗಳನ್ನಾದರೂ ನಾವು ಗೆಲ್ಲಬಹುದಿತ್ತೇನೋ!

ಬ್ರಿಟನ್ 1996 ರ ಒಲಿಂಪಿಕ್ಸ್ ನ ಪದಕಗಳ ಪಟ್ಟಿಯಲ್ಲಿ 36 ನೇ ಸ್ಥಾನದಲಿದ್ದಿತ್ತು. ಆದರೆ, 2008 ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ 4ನೆ ಸ್ಥಾನ, 2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ 3ನೆ ಸ್ಥಾನ ಹಾಗು ಕಳೆದ ರಿಯೋ ಒಲಿಂಪಿಕ್ಸ್ ನಲ್ಲಿ ಎರಡನೇ ಸ್ಥಾನವನ್ನು ಗಳಿಸಿದೆ. ಹಾಗು ಮುಂದಿನ 2020 ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮೊದಲನೇ ಸ್ಥಾನಕ್ಕೂ ಕಣ್ಣಿಟ್ಟಿದೆ. ಜೆರ್ಮನಿ, ರಷ್ಯಾ, ಜಪಾನ್ ಗಳಂತ ಒಲಿಂಪಿಕ್ಸ್ ನ ಅತಿರಥ ಮಹಾರಥ ದೇಶಗಳನ್ನು ಕೇವಲ ಎರಡೇ ಒಲಿಂಪಿಕ್ಸ್ ನಲ್ಲಿ ಹಿಂದಾಕುವುದು ಸುಲಭದ ಮಾತಲ್ಲ. ಹಾಗಾದರೆ ಬ್ರಿಟನ್ ನ ಈ ಪಾಟಿ ಸಾಧನೆಗೆ ಕಾರಣವಾದರು ಏನು? ನಾವು ಸುಮಾರು ನೂರು ವರ್ಷದಲ್ಲಿ ಕೇವಲ ಬೆರಳೆಣಿಕೆಯ ಪದಕಗಳನ್ನೇ ಮಾತ್ರ ಗಳಿಸಲು ಶಕ್ತರಾದೇವೇಕೆ? ಉತ್ತರ ಇಷ್ಟೇ. ನಮ್ಮಲ್ಲಿ ಒಲಿಂಪಿಕ್ಸ್ ಮುಗಿದ ಮೇಲೆ ಸುರಿಯುವ ಹಣದ ರಾಶಿ ಅಲ್ಲಿ ಒಲಿಂಪಿಕ್ಸ್ ಶುರುವಾಗುವ ಮೊದಲೇ ಸಂಸ್ಥೆ ಹಾಗು ಆಟಗಾರರ ಮುಂದೆ ಬಂದಿರುತ್ತದೆ.. ಹೀಗೆ ಅಲ್ಲಿ ಒಬ್ಬ ಅಥ್ಲೀಟ್ ಗೆ ಸರಾಸರಿ 5 ಕೋಟಿಯಷ್ಟನ್ನು ಖರ್ಚನ್ನು ಮಾಡಿದರೆ ನಮ್ಮಲ್ಲಿ ಖರ್ಚು ಮಾಡುವ ಮೊತ್ತ ಅಮ್ಮಮ್ಮ ಅಂದರೆ 5 ಲಕ್ಷ. ಅಲ್ಲದೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ವಾರ್ಷಿಕ ಬಜೆಟ್ ನಲ್ಲಿ ಸುಮಾರು 3,500 ಕೋಟಿಯಷ್ಟು ಹಣವನ್ನು ಕ್ರೀಡೆಗಾಗಿಯೇ ಮಾಡಿಪಾಗಿಟ್ಟರು ಅದು ಬ್ರಿಟನ್ ನ ಕ್ರೀಡಾ ಆಯವ್ಯಯಕ್ಕೆ ಹೋಲಿಸಿದರೆ ಕೇವಲ ಮೂರನೇ ಒಂದು ಬಾಗವಷ್ಟೇ! Okay, ಬ್ರಿಟನ್ನಂತಹ ಸದೃಢ ದೇಶದೊಟ್ಟಿಗೆ ನಮ್ಮ ನಮ್ಮ ಆಯವ್ಯಯಗಳನ್ನು ಹೋಲಿಸುವುದು ಬೇಡ. ಆದರೆ ಇತ್ತೀಚೆಗಷ್ಟೇ ನಮ್ಮ ಎಕಾನಮಿ ಬ್ರಿಟನ್ನ ಎಕಾನಾಮಿಯನ್ನು ಹಿಂದಿಕ್ಕಿರುವದನ್ನ ಮರೆಯುವುದೂ ಬೇಡ! ವಿಸ್ಮಯದ ಸಂಗತಿಯೆಂದರೆ, ಅವರು ಗೆಲ್ಲುವ ಪ್ರತಿ ಪದಕದ ಬೆಲೆ ೧೫೦ ಕೋಟಿಯಷ್ಟಿದ್ದರೆ ನಾವು ಗಲ್ಲುವ (ರಿಯೋ ಒಲಿಂಪಿಕ್ಸ್ ನ ಪದಕಗಳ ಆಧಾರದ ಮೇಲೆ) ಪ್ರತಿ ಪದಕದ ಬೆಲೆ ಬರೋಬ್ಬರಿ ೧೮೦೦ ಕೋಟಿಗಳು!!

ಅಂದೊಮ್ಮೆ ವಿಜೇಂದರ್ ಮಾದ್ಯಮಗಳೊಟ್ಟಿಗೆ 'ಕ್ರೀಡೆಯೆಂದರೆ ಕೇವಲ ಕ್ರಿಕೆಟ್ ಅಲ್ಲ, ನಾವುಗಳೂ ದೇಶಕ್ಕಾಗೆ ಸೆಣೆಸುವರು' ಎಂದಿದ್ದ. ಅಂದು ಅವನಲ್ಲಿ ಇದ್ದಿದ್ದು ಹತಾಶೆ. ಹನ್ನೊಂದು ಜನರು ಸೆಣೆಸುವ ಒಂದು ಕ್ರೀಡೆಗೂ ಹಾಗು ಒಬ್ಬಂಟಿಯಾಗಿ ಕಾದಾಡುವ ಒಂದು ಕ್ರೀಡೆಗೂ ತುಲನೆ ಮಾಡುವ ನಮ್ಮ ಮನಸ್ಥಿತಿಯ ವಿರುದ್ಧವಿದ್ದ ಆಕ್ರೋಶ. ಅಷ್ಟಾದರೂ ಕೊನೆಗೆ ಕ್ರಿಕೆಟ್ಟೇ ಗ್ರೇಟ್, ಥ್ರಿಲ್ಲಿಂಗ್, ಅಂಡ್ ಎವ್ರಿಥಿಂಗ್ ಎನ್ನುತ್ತಾ ಜಾಹಿರಾತು ಕಂಪನಿಗಳು ಅವರ ಹಿಂದೆಯೇ ಓಡುತ್ತವೆ. ದೇಶದ ಒಲಿಂಪಿಕ್ಸ್ ಇತಿಹಾಸದಲ್ಲೆ ಹಿಂದೆಂದೂ ಕಂಡರಿಯದ ಸಾಧನೆಗಳನ್ನು ಮಾಡಿದರೂ ಕೆಲವರ್ಷಗಳ ನಂತರ ಅವರನ್ನು ಗುರುತೇ ಹಿಡಿಯದ ಪ್ರಸ್ತುತ ಸ್ಥಿತಿಯಲ್ಲಿ ಇಂತಹ ಕ್ರೀಡಾಪಟುಗಳಿಗೆ ಹೆಚ್ಚೆಂದರೆ ಸರ್ಕಾರೀ ಕೋಟಾದಲ್ಲಿ ಒಂದು ಕೆಲಸವೂ ಅಥವಾ ಸಣ್ಣ ಮೊತ್ತದ ವೇತನವೋ ಸಿಕ್ಕರೆ ಅದೇ ಪುಣ್ಯ. ಇಂತಹ ಸ್ಥಿತಿಯಲ್ಲಿ ಯಾವುದೊ ಒಂದು ಸ್ಪೋರ್ಟ್ಸ್ ಕ್ಲಬ್ ನ ವ್ಯಕ್ತಿಗಳು ಬಂದು ದೊಡ್ಡ ದೊಡ್ಡ ಮೊತ್ತದ ಚೆಕ್ಕುಗಳನ್ನು ಅವರ ಮುಂದೆ ಇಟ್ಟಾಗ, ನಮ್ಮ ಯಾವ ಕ್ರೀಡಾಪಟು ತಾನೇ ಬೇಡವೆನ್ನುತ್ತಾನೆ? ವಿಜೇಂದರ್ ಸಿಂಗ್ ನೊಟ್ಟಿಗೂ ಆದದ್ದು ಇದೆ. ಬ್ರಿಟನ್ ನ Queensberry Promotions ಅಂದು ನಮ್ಮ ವಿಜೇಂದರ್ ನನ್ನು ಖರೀದಿಮಾಡಿತು. ಇದು ಕೇವಲ ವಿಜೇಂದರ್ ನ ಕಥೆಯಲ್ಲ. ೨೦೦೦ ರ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಪದಕವನ್ನು ಗೆಲ್ಲಲು ಸಮೀಪಕ್ಕೆ ಬಂದು ನೋಡುಗರ ರೋಮುಗಳನು ಎದ್ದು ನಿಲ್ಲಿಸಿದ್ದ ಬಾಕ್ಸರ್ ಗುರುಚರಣ್ ಸಿಂಗ್, ೨೦೦೮ ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಸಂಚಲನ ಮೂಡಿಸಿದ್ದ ಅಖಿಲ್ ಕುಮಾರ್ ಹಾಗು ಜಿತೇಂದರ್ ಕುಮಾರರೂ ಸಹ ಇಂದು ಪ್ರೊಫೆಷನಲ್ ಬಾಕ್ಸರ್ ಗಳಾಗಿದ್ದಾರೆ. ಬಾಕ್ಸಿಂಗ್ ಎಂಬ ಪದವೇ ಭಾರತದ ಒಲಿಂಪಿಕ್ ಇತಿಹಾಸದಲ್ಲಿ ಕೇಳುತ್ತಿರಲಿಲ್ಲ. ಆದರೆ ಇತ್ತೇಚೆಗೆ ಅದು ಹೆಚ್ಚೆಚ್ಚು ಸದ್ದು ಮಾಡುತ್ತಿದೆ. ಆದರೆ ಆ ಸದ್ದು ಗೆಲುವಿನ ಕಹಳೆಯಾಗುವ ಮೊದಲೇ ಕದ್ದು ಮರೆಯಾಗುತ್ತಿದೆ. ಇಂದು ಭಾರತ ವಿಶ್ವದ ಆರ್ಥಿಕತೆಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಿದೆ. ಜಗತ್ತಿನ ಹಿರಿಯಣ್ಣರ ಪಟ್ಟಿಯಲ್ಲಿ ಸ್ಥಾನವನ್ನೂ ಪಡೆಯುತ್ತಿದೆ. ಇಷ್ಟೆಲ್ಲಾ ಆಗುತ್ತಿದರೂ, ವಿಶ್ವದ ಆರನೇ ಒಂದು ಭಾಗದಷ್ಟು ಜನಸಂಖ್ಯೆಯನ್ನು ಹೊಂದಿದ್ದರೂ, ಒಲಿಂಪಿಕ್ಸ್ ನಲ್ಲಿ ಕೇವಲ ಒಂದೋ, ಎರಡೂ ಪದಕಗಳನ್ನು ಗೆಲ್ಲುತ್ತೇವೆ ಎಂದರೆ ಖಂಡಿತಾ ಹುಳುಕು ನಮ್ಮಲ್ಲಿಯೇ ಇದೆ. ಬ್ರಿಟನ್ ನಲ್ಲಿ ೧೮ ರಿಂದ ೩೫ ವಯೋಮಾನದ 'ಯುವಕರ' ಸಂಖ್ಯೆ ೧೮ ಕೋಟಿಯಷ್ಟಿದ್ದರೆ ನಮ್ಮಲಿ ಅದೇ ವಯೋಮಾನದ ಯುವಕರ ಸಂಖ್ಯೆ ಬರೋಬ್ಬರಿ ೪೦ ಕೋಟಿಯಷ್ಟಿದೆ! ಅಷ್ಟಾಗಿಯೂ ನಮ್ಮಲಿ ಈ ಕ್ರೀಡಾ ಅಸಫಲತೆ ಏತಕ್ಕೆ?


ಇದು ಕೇವಲ ಅಕಾಡೆಮಿ ಹಾಗು ಸರ್ಕಾರಗಳ ತಪ್ಪೆಂದು ಜವಾಬ್ದಾರಿಯಿಂದ ಜಾರಿಕೊಳ್ಳಲಾಗುವುದಿಲ್ಲ. ಪ್ರತಿ ಕ್ರೀಡಾಳುಗಳ ಮೊದಲ ಆದ್ಯತೆ ಎಂದಿಗೂ ದೇಶವೇ ಆಗಿರಬೇಕು. ಮದ್ಯವನ್ನು ಹೀರುತ್ತಾ, ತಾನು ತಿನ್ನುವ ಏಟಿಗೆ ಕೇಕೆ ಆಕುತ್ತಾ ಕುಣಿಯುವ ಜನಗಳಿಗಿಂತ, ದಿನದ ಜಂಜಾಟದಲ್ಲಿ ಅದೆಷ್ಟೇ ಬಿಸಿಯಾಗಿದ್ದರೂ ಮನಸ್ಸಿನ ಎಲ್ಲೋ ಒಂದು ಕಡೆ ನಮ್ಮ ಕ್ರೀಡಾಪಟುಗಳು ಗೆಲ್ಲಲಿ ಎಂದು ಹಾರೈಸುವ ನಮ್ಮ ಭಾರತೀಯರ ಕೀರ್ತಿಯನ್ನು ಎತ್ತಿ ಹಿಡಿಯುವುದಾಗಿರಬೇಕು. ಎಷ್ಟಾದರೂ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಮಾರ್ಕೆಟ್ ವ್ಯಾಲ್ಯೂ ಹೆಚ್ಚಿದೆ ಅಂದರೆ ಅದು ದೇಶದ ಅಖಾಡದೊಳಗೆ ಅಂಬೆಗಾಲಿಟ್ಟು, ಬೆಳೆದಿದ್ದರಿಂದಲ್ಲವೇ? ದೇಶದ ಹೆಸರೇಳಿ ಸೆಣೆಸಲು ಅವಕಾಶ ಪಡೆದಿದ್ದರಿಂದಲ್ಲವೇ? ಯೋಚಿಸಿ..

Reference : Hindustan Times, ABP Live & Internet

P C  : Vijender Singh by runninkool

Thursday, December 15, 2016

ಪರಮಾಣು ವಿಜ್ಞಾನ : ಬೇಕು ಬೇಡಗಳೆಂಬ ಗೊಂದಲಗಳ ಸುಳಿಯಲ್ಲಿ..!!

ಇಪ್ಪತ್ತೊಂದನೇ ಶತಮಾನದ ಆದಿಯಲ್ಲಿರುವ ವಿಶ್ವಕ್ಕೆ ಕಂಠಕಪ್ರಾಯವಾದಂತಿರುವ ಒಂದು ವಿಷಯ ಪರಮಾಣು ವಿಜ್ಞಾನ. ಇಂದು ವಿಶ್ವದ ಅತಿ ಶಕ್ತಿಶಾಲಿ ದೇಶಗಳ್ಯಾವುದೆಂದು ಪಟ್ಟಿಮಾಡ ಹೊರಟರೆ ಅದು ಹೆಚ್ಚು ಧನಸಂಪತ್ತಿರುವ ದೇಶಗಳಾಗಿರುವುದಿಲ್ಲ, ಬದಲಾಗಿ ಹೆಚ್ಚು ಪರಮಾಣು (Nuclear) ಬಾಂಬ್ಗಳನ್ನು ಹೊಂದಿರುವ ದೇಶಗಳಾಗಿರುತ್ತವೆ! ಆ ದೇಶ ಅದೆಷ್ಟೇ ಸಣ್ಣದೆನಿಸಿದರೂ, ವಿಶ್ವದ ಆರ್ಥಿಕತೆಯಲ್ಲಿ ಆಟಕ್ಕುಂಟು ಲೆಕ್ಕಕಿಲ್ಲವೆಂದೆನಿಸಿದರೂ, ಒಮ್ಮೆ ಅದರ ಬಳಿ ಪರಮಾಣು ಬಾಂಬ್ಗಳು ಇವೆಯೆಂದು ಸಾಬೀತಾದರೆ ಇತರ ಎಲ್ಲ ದೇಶಗಳು ತೆಪ್ಪಗಾಗಬೇಕಾಗುತ್ತದೆ. ಪರಮಾಣು ಬಾಂಬ್ಗಳೆ ಹಾಗೆ. ಕೇವಲ ೬೪ ಕೆಜಿ ಯಷ್ಟು ಯುರೇನಿಯಂ ಅಂದು ಜಪಾನ್ನ ಲಕ್ಷಾಂತರ ಜನರ ಜೀವವನ್ನು ಕ್ಷಣಮಾತ್ರದಲ್ಲಿ ಸುಟ್ಟು ಹಾಕಿತೆಂದರೆ ಇವುಗಳ ಹಿಂದಿರುವ ಸಾಮರ್ಥ್ಯವನ್ನು ನೀವು ಊಹಿಸಬಹುದು.

ಬೆಳವಣಿಗೆಯ ಶೀತಲ ಸಮರದಲ್ಲಿ ಪರಮಾಣು ಶಕ್ತತೆ ಇಂದು ದೇಶಗಳಿಗೆ ಅನಿವಾರ್ಯವಾಗಿದೆ. ಆದರೆ ಪಾರದರ್ಶಕತೆ ಇಲ್ಲದ ಈ ಶಕ್ತತೆ ದೇಶ-ದೇಶಗಳ ನಡುವೆ ದ್ವೇಷದ ಕಿಡಿಯನ್ನು ಹೊತ್ತಿಸುತ್ತಿದೆ. ವಿಶ್ವದ ಹತ್ತಾರು ದೇಶಗಳ ಸಂಭಂದ ಈ ಒಂದು ವಿಷಯದ ಕುರಿತು ಹದಗೆಡುತ್ತಿದೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಈವೊಂದು ವಿಷಯದ ಕುರಿತು ಇಂದು ಹಲವು ದೇಶಗಳ ಮೇಲೆ ಆರ್ಥಿಕ ನಿರ್ಬಂಧವನ್ನು ಏರುತ್ತಿವೆ. ವಿಶ್ವವೇ ಪರಮಾಣು ಯುದ್ಧವೆಂಬೊಂದು ಭಯಾನಕ ಗಳಿಗೆಯ ಭಯದಿಂದ ಮುನ್ನೆಡೆಯುತ್ತಿದೆ.

ಎರಡನೇ ವಿಶ್ವಯುದ್ಧದ ಮಧ್ಯದಲ್ಲಿ (೧೯೪೨) ಜರ್ಮನಿಯ ಪರಮಾಣು ತಂತ್ರಜ್ಞಾನದ ಬಗ್ಗೆ ಅನುಮಾನವಿದ್ದ ಅಮೇರಿಕ, ಬ್ರಿಟನ್ ಹಾಗು ಕೆನಡಾ ದೇಶಗಳ ಸಹಾಯದೊಂದಿಗೆ 'ಮ್ಯಾನ್ ಹಟನ್ ' ಎಂಬ ಯೋಜನೆಯನ್ನು ರೂಪಿಸಿತು. ಈ ಯೋಜನೆಯ ಮೂಲ ಉದ್ದೇಶ ವಿಶ್ವದ ಮೊದಲ ಪರಮಾಣು ಶಸ್ತ್ರವನ್ನು ತಯಾರಿಸುವುದು ಹಾಗು ವಿಶ್ವಕ್ಕೆ ಅಮೇರಿಕದ ಸಾಮರ್ಥ್ಯವನ್ನು ತೋರ್ಪಡಿಸುವುದು. ಪರಿಣಾಮ ಜಗತ್ತಿನ ಮೊದಲ ನಾಲ್ಕು ವಿನಾಶಕಾರಿ ಪರಮಾಣು ಬಾಂಬ್ಗಳು! ಅವುಗಳೇ ಗ್ಯಾಡ್ಜೆಟ್, ಲಿಟ್ಲ್ ಬಾಯ್, ಫ್ಯಾಟ್ ಮ್ಯಾನ್, ಹಾಗು ನಾಲ್ಕನೆಯ ಹೆಸರಿಡದ ಒಂದು ಬಾಂಬ್. ಇವುಗಳಲ್ಲಿ ‘ಗ್ಯಾಡ್ಜೆಟ್’ ಎಂಬ ಮೊದಲ ಬಾಂಬನ್ನು ಜುಲೈ ೧೬, ೧೯೪೫ ರಲ್ಲಿ ದಕ್ಷಿಣ ಮೆಕ್ಸಿಕೋದ ಬಳಿ ಪರೀಕ್ಷಾಪೂರ್ವಕವಾಗಿ ಸಿಡಿಸಲಾಗುತ್ತದೆ. ಇದೆ ಜಗತ್ತಿನ ಅತಿ ಮೊದಲ ಅಣುಬಾಂಬ್ ಸ್ಫೋಟ. ಇದಾದ ಕೇವಲ ಇಪ್ಪತ್ತು ದಿನದಲ್ಲೇ ಅಮೇರಿಕ ತನ್ನ ‘ಲಿಟ್ಲ್ ಬಾಯ್’ ಬಾಂಬನ್ನು ಜಪಾನಿನ ಹಿರೋಷಿಮಾ ನಗರದ ಮೇಲೆ ಹಾಗು ಮೂರುದಿನಗಳ ನಂತರ ‘ಫ್ಯಾಟ್ ಮ್ಯಾನ್’ನನ್ನು ನಾಗಸಾಕಿಯ ಮೇಲೆ ಹಾಕುತ್ತದೆ. ಇದು ಭೂಮಿಯ ಮೇಲೆ ಒಂದೇ ಶಸ್ತ್ರದಿಂದ ಅತಿಹೆಚ್ಚು ಜೀವಗಳನ್ನು ಕೊಂದ ಗಳಿಗೆಯಾಗುತ್ತದೆ ಅಲ್ಲದೆ ವಿಶ್ವವೇ ಅಮೆರಿಕಾದ ಈ ನಡೆಯಿಂದ ನಡುಗಿಹೋಗುತ್ತದೆ. ಪರಮಾಣು ಶಸ್ತ್ರಗಳ ಜನಕವಾದ 'ಮ್ಯಾನ್ ಹಟನ್ ' ಯೋಜನೆ ಆಗಸ್ಟ್ ೧೫, ೧೯೪೭ ರಂದು ಕೊನೆಗಾಣುತ್ತದೆಯಾದರೂ ಅಷ್ಟರಲ್ಲಿ ವಿಜ್ಞಾನದ ವಿನಾಷದ ಜ್ಞಾನ ತನ್ನ ಪರಿಮಿತಿಯನ್ನು ವಿಸ್ತರಿಸಿರುತ್ತದೆ. ತಾದಾನಂತರ ಹಲವಾರು ದೇಶಗಳು ಪರಮಾಣು ಬಾಂಬ್ಗಳ ತಯಾರಿಕೆಯಲ್ಲಿ ತೊಡಗಿಕೊಳ್ಳುತ್ತವೆ.
ಒಂದು ಸಮೀಕ್ಷೆಯ ಪ್ರಕಾರ ಇಂದು ವಿಶ್ವದ ವಿವಿಧ ದೇಶಗಳಲ್ಲಿ ಸುಮಾರು ೨೩೦೦೦ ಸಾವಿರಕ್ಕೂ ಮಿಗಿಲಾದ ಪರಮಾಣು ಶಸ್ತ್ರಗಳಿವೆ ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಈ ದೇಶಗಳ ನಡುವಿನ ದ್ವೇಷದ ಜ್ವಾಲೆ ವಿವೇಕವನ್ನು ಮೀರಿ ಬೆಳೆದರೆ ವಿಶ್ವವೇ ಬೂದಿಯ ಉಂಡೆಯಾಗುವಿದರಲ್ಲಿ ಸಂಶಯವೇ ಇಲ್ಲ ಎನ್ನಬಹುದು!

ಹಾಗಾದರೆ ಪರಮಾಣು ವಿಜ್ಞಾನ ಎಂಬುದು ನಿಜವಾಗಿಯೂ ಭಯಪಡಬೇಕಾದ ವಿಷಯವೇ? ಇದರ ಉತ್ತರ ಅದನ್ನು ಬಳಸಿಕೊಳ್ಳುವ ಬಗೆಯಲ್ಲಿರುತ್ತದೆ ಎನ್ನಬಹುದು. ಒಂದು ಸಮೀಕ್ಷೆಯ ಪ್ರಕಾರ ಕಲ್ಲಿದ್ದಲಿನ ಕಾರ್ಖಾನೆಗಳ ಮೂಲಕ ಹೊರಹೋಗುವ ವಿಕಿರಣಶೀಲ (Radioactive) ವಸ್ತುಗಳು ಪರಮಾಣು ಕೇ೦ದ್ರಗಳಿಗಿಂತ ಹೆಚ್ಚಾಗಿರುತ್ತದೆ ಎಂದರೆ ನೀವು ನಂಬಲೇಬೇಕು! ಕಲ್ಲಿದ್ದಲಿನಲ್ಲಿ ಯುರೇನಿಯಂ ಹಾಗು ತೊರಿಯಂ ಗಳ ಅಂಶಗಳಿರುವುದೇ ಇದಕ್ಕೆ ಕಾರಣ. ಅಲ್ಲದೆ ಕಲ್ಲಿದ್ದಲಿನ ಗಣಿಗಳಲ್ಲಿನ ಸಾವು-ನೋವುಗಳು ಹಾಗು ಕೆಲಸಗಾರರ ದೈಹಿಕ ಸಮಸ್ಯೆ ಪರಮಾಣು ಅಣುಕೇ೦ದ್ರಗಳಿಗಿಂತ ಜಾಸ್ತಿಯೇ ಎಂಬುದು ಪ್ರಸ್ತುತ ವಸ್ತುಸ್ಥಿತಿ. ಅಲ್ಲದೆ ಅದೆಷ್ಟೋ ಬಗೆಯ ಕ್ಯಾನ್ಸರ್ಗಳ ಚಿಕಿತ್ಸೆ ಹಾಗು ಆಧುನಿಕ ಬಹುಪಯೋಗಿ ವಸ್ತುಗಳ ನಿರ್ಮಾಣದಲ್ಲೂ ಪರಮಾಣು ವಿಜ್ಞಾನ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಮಿಗಿಲಾಗಿ ಪರಮಾಣು ಸ್ಥಾವರಗಳು ಜಾಗತಿಕ ತಾಪಮಾನ ಏರಿಕೆಗೆ ಪೂರಕವಾದ ಯಾವುದೇ ಅಂಶಗಳನ್ನು ಪರಿಸರಕ್ಕೆ ಬಿಡುವುದಿಲ್ಲ. ಇನ್ನು ಇತರೆ ಬಗೆಯ ಶಕ್ತಿಯ ಮೂಲಗಳಿಗೆ ಹೋಲಿಸಿದರೆ ಪರಮಾಣು ತಂತ್ರಜ್ಞಾನದಿಂದ ಗಳಿಸುವ ಶಕ್ತಿಯ ಪ್ರಮಾಣ ಅದೆಷ್ಟೋ ನೂರು ಲಕ್ಷ ಪಟ್ಟು ಹೆಚ್ಚಿರುತ್ತದೆ. ಉದಾಹರಣೆಗೆ ೧ ಕಿಲೋ ಕಲ್ಲಿದ್ದಲನ್ನು ಉರಿಸುವುದರಿಂದ ಉತ್ಪಾದಿಸಬಹುದಾದ ಶಾಖ ಶಕ್ತಿಯು 8 kWH ನಷ್ಟಿದ್ದರೆ, ಅಷ್ಟೇ ಪೆಟ್ರೊಲಿಯಂ ಬೈ-ಪ್ರಾಡಕ್ಟ್ ಗಳಿಂದ ಗಳಿಸುವ ಶಾಖ ಶಕ್ತಿ 12 kWH. ಆದರೆ, ಅದೇ ಒಂದು ಕಿಲೋ ಯುರೇನಿಯಂನನ್ನು ಉರಿಸುವುದರಿಂದ ಗಳಿಸಬಹುದಾದ ಶಾಖ ಶಕ್ತಿ ೨೪,೦೦೦,೦೦೦ kWH ಎಂಬುದು ಅಕ್ಷರ ಸಹ ಸತ್ಯ!

ಇನ್ನು ಪರಮಾಣು ಇಂಧನದ ಬಳಕೆಯಿಂದ ದುಷ್ಪರಿಣಾಮಗಳಿವೆ ಎಂಬ ವಾದವನ್ನೂ ಸಹ ಅಲ್ಲಗೆಳೆಯಲಾಗುವುದಿಲ್ಲ. ಮೊದಲನೆಯದಾಗಿ, ಪರಮಾಣು ಘಟಕಗಳ ಆಕಸ್ಮಿಕ ದುರಂತಗಳಿಂದಾಗುವ ಅವಘಡಗಳು ರಾಶಿ ರಾಶಿ ಜೀವವನ್ನೇ ಬಲಿತೆಗೆದುಕೊಳ್ಳಬಹುದು.ಉದಾಹರಣೆಗೆ ೧೯೮೬ ರಲ್ಲಿ ಕ್ಷಣಮಾತ್ರದಲ್ಲಾದ ಅವಘಡದಿಂದ ವಿಕಿರಣಗಳು ಪರಿಸರವನ್ನು ಸೇರಿ, ಸಾವು ನೋವುಗಳೊಟ್ಟಿಗೆ ದಿನಕಳೆಯುವುದರೊಳಗೆ ನಗರವನ್ನೇ ನರಕವನ್ನಾಗಿಸಿದಂತ ಚರ್ನೋಬಿಲ್ ದುರಂತ ಇದಕ್ಕೆ ಒಂದು ಜ್ವಲಂತ ಉದಾಹರಣೆ. ಆದ ಕಾರಣ ಅಣುಕೇಂದ್ರಗಳ ಸುರಕ್ಷೆಯ ಮಟ್ಟ ಉಳಿದೆಲ್ಲ ಘಟಕಗಳಿಗೆ ಹೋಲಿಸಿದರೆ ಅತಿ ಸುಭದ್ರವಾಗಿರಬೇಕು. ಅಣುಬಾಂಬ್ಗಳನ್ನು ಕಂಡುಹಿಡಿದ ಮಾನವನಿಗೇ ಅಣುಘಟಕಗಳನ್ನು ಸಂರಕ್ಷಿಸಬಲ್ಲ ಯುಕ್ತಿ ಅಸಾದ್ಯವೆನ್ನಲ್ಲ ಬಿಡಿ. ಎರಡನೆಯದಾಗಿ, ಇವುಗಳಿಂದ ಹೊರಬರುವ ವಿಕಿರಣ ತ್ಯಾಜ್ಯಗಳ (Radioactive Waste) ವಿಲೇವಾರಿ. ವಿಕಿರಣ ತ್ಯಾಜ್ಯಗಳು ವರುಷಗಳು ಕಳೆದರೂ ಸಕ್ರಿಯವಾಗಿರುವುದರಿಂದ ಅವುಗಳ ವಿಲೇವಾರಿ ಅಷ್ಟೊಂದು ಸುಲಭದ ಮಾತಲ್ಲ. ಅವುಗಳನ್ನು ಭೂಮಿಯಾಳದಲ್ಲಿ ಅಗೆದು ಮುಚ್ಚಬೇಕು ಹಾಗು ಯಾರ ಸಂಪರ್ಕಕ್ಕೂ ಬರದಂತೆ ಕಾಪಾಡಬೇಕು. ಹಾಗಾಗಿ ಇದರ ನಿರ್ವಹಣೆಗೆ ಹಾಗು ವಿಲೇವಾರಿಗೆ ತಗುಲುವ ವೆಚ್ಚ ಹಾಗು ಸಮಯ ತುಸು ಹೆಚ್ಚೇ ಎನ್ನಬಹುದು. ಮೂರನೆಯದಾಗಿ ಯುರೇನಿಯಂ (ಪರಮಾಣು ಲೋಹ) ನವೀಕರಿಸಲಾಗದ ಸಂಪನ್ಮೂಲಗಳಲೊಂದು. ಅಲ್ಲದೆ ಪ್ರಸ್ತುತ ಲಭ್ಯತೆಯಲ್ಲಿ ಇದರ ಪ್ರಮಾಣ ತೀರಾ ಕಡಿಮೆ. ಹೀಗೆ ನಾಳಿನ ದಿನಗಳಲ್ಲಿ ನಶಿಸಿ ಹೋಗುವ ಒಂದು ಶಕ್ತಿಯ ಮೂಲವಸ್ತುವಿನ ಮೇಲೆ ಸಾವಿರಾರು ಕೋಟಿ ಖರ್ಚು ಮಾಡಿ ಸ್ಥಾಪನೆಯಾಗುವ ಘಟಕಗಳು ಅಭಿವೃದ್ಧಿ ಹೊಂದುತಿರುವ ದೇಶಗಳಿಗೆ ಅಷ್ಟೇನೂ ಲಾಭದಾಯಕವಲ್ಲ.ಕೊನೆಯದಾಗಿ, ಮರ್ಕಟ ಮನಸ್ಸಿನ ಮಾನವ ಅದೆಷ್ಟೇ ನೀತಿಯ ಪಾಠಗಳನ್ನು ಹೇಳಿಸಿಕೊಂಡರೂ ತಾನು ತಾನೆಂಬ ಮೋಹದಲ್ಲಿ ಮಾನವೀಯತೆಯನ್ನು ಮರೆತ ಮೃಗವಾಗುತ್ತಿದ್ದಾನೆ. ಆದ ಕಾರಣ ಬೇರೆಲ್ಲ ದುಷ್ಪರಿಣಾಮಗಳಿಗಿಂತ ಮಿಗಿಲಾಗಿ ಮಾನವನ ದುಶ್ಚಟಗಳಿಂದ ಆಗುವ ಸಾವು-ನೋವು ಹಾಗು ಪರಿಸರ ಹಾನಿ ಅತಿ ಹೇರಳವಾದುದು.

ಪರಮಾಣು ಶಕ್ತತೆ ಇಂದು ಪ್ರತಿಯೊಂದು ದೇಶಕ್ಕೂ ಪ್ರತಿಷ್ಠೆಯ ಜೊತಗೆ ದೇಶದ ರಕ್ಷಣೆಯ ಪ್ರೆಶ್ನೆ. ತಿನ್ನಲು ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಮುಡಿದು ಕುಣಿಯುವಂತಿರುವ ದೇಶಗಳ ಕೈಯಲ್ಲಿ ಪರಮಾಣು ಬಾಂಬ್ಗಳ ರಿಮೋಟ್ ಕಂಟ್ರೋಲ್ಗಳು ಇರುವುದೇ ಇದಕ್ಕೆಲ್ಲ ಕಾರಣ. ಜೇಬು ತೂತಿದ್ದರೂ, ನೀತಿ ಹದಗೆಟ್ಟಿದ್ದರೂ ಅಂತಹ ದೇಶದಳ ಮಾತುಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಅನಿವಾರ್ಯತೆ ಬಂದೊದಗಿದೆ. ಹಾಗಾಗಿ ಅದೆಷ್ಟೇ ದುಷ್ಪರಿಣಾಮಗಳಿದ್ದರೂ ಪರಮಾಣು ಶಕ್ತವಾಗಬೇಕಾದ ಅನಿವಾರ್ಯತೆ ಇಂದು ಹಲವು ದೇಶಗಳಿಗಿದೆ. ಅಧಿಕೃತವಾಗಿ ಇಂದು ಎಂಟರಿಂದ ಹತ್ತು ದೇಶಗಳು ಪರಮಾಣು ಶಕ್ತ ದೇಶಗಳೆಂದು ಗುರುತಿಸಿಕೊಂಡಿವೆ. ಇನ್ನೂ ಗೌಪ್ಯತೆಯನ್ನೇ ಕಾಪಾಡಿಕೊಂಡು ಮುಂದೊಂದು ದಿನ ‘ಢಮ್...’ ಎಂದು ಬೆಂಕಿಯ ಆಟವಾಡಲು ಕಾದು ಕುಳಿತಿರುವ ದೇಶಗಳ ಸಂಖ್ಯೆ ಎಷ್ಟಿದೆಯೋ ಬಲ್ಲವರು ಯಾರು?

ಕೇವಲ ಇನ್ನೊಂದು ದೇಶವನ್ನು ಹೆದರಿಸುವ, ತನ್ನ ಭಲಾಢ್ಯತೆಯನ್ನು ತೋರಿಕೊಳ್ಳುವ ಪೆದ್ದುತನದಿಂದ ಇಂದು 'ಪರಮಾಣು ಶಕ್ತಿ'ಯೆಂಬ ವಿಷಯ 'ಪರಮಾಣು ಬಾಂಬ್' ಗಳಾಗಿ ಮಾರ್ಪಟ್ಟಿದೆ. ಕಲ್ಲಿದ್ದಲ್ಲು,ಪೆಟ್ರೋಲಿಯಂ ಉತ್ಪನ್ನಗಳು, ಪವನಶಕ್ತಿ, ಜಲಶಕ್ತಿ ಹಾಗು ಇನ್ನೂ ಹಲವು ಶಕ್ತಿಯ ಮೂಲಗಳಿಗೆ ಹೋಲಿಸಿದರೆ ಪರಮಾಣು ಶಕ್ತಿಯ ಉತ್ಪದನಾ ಸಾಮರ್ಥ್ಯ ಅತಿ ಹೆಚ್ಚಾದುದು. ನಿರ್ವಹಣೆಯ ಲೋಪದೋಷಗಳಿಂದ ಆಗುವ ಅನಾಹುತಗಳನ್ನು ಬಿಟ್ಟರೆ ಬೇರ್ಯಾವ ಬಗೆಯಲ್ಲೂ ಸಂಭವಿಸಬಹುದಾದ ಸಾವು ನೋವುಗಳ ಪ್ರಮಾಣ ಇತರೆ ಶಕ್ತಿಯ ಮೂಲಗಳಿಗೆ ಹೋಲಿಸಿದರೆ ಇದರಲ್ಲಿ ಕಡಿಮೆಯೇ. ಮಿಗಿಲಾಗಿ ಜಾಗತಿಕ ತಾಪಮಾನ ಹೇರಿಕೆಗೂ ಇದರ ಕೊಡುಗೆ ಶೂನ್ಯವೇ. ಇಂತಹ ಒಂದು ಶಕ್ತಿಯ ಮೂಲ ಇಂದು ಕೇವಲ ಭಯೋತ್ಪದನಾ ವಿಷಯವಾಗಿ ಮಾರ್ಪಟ್ಟಿರುವದು ಖೇದನೀಯ ಸಂಗತಿ. ವಿಜ್ಞಾನದ ಈ ಅದ್ಬುತ ಆವಿಷ್ಕಾರಕ್ಕೆ ತಲೆದೂಗಬೇಕಾದ ನಾವುಗಳು 'ಒಂದು ಪಕ್ಷ ಪರಮಾಣು ಶಕ್ತಿಯ ಆವಿಷ್ಕಾರ ಸಾಧ್ಯವಾಗದೆ ಹೋಗಿದ್ದರೆ ಇಂದು ದೇಶ ದೇಶಗಳ ನಡುವಿನ ಕಿತ್ತಾಟ ಕಡಿಮೆಯಾಗುತ್ತಿತ್ತು ' ಎಂದು ಕೊಳ್ಳುವುದು ನಮ್ಮ ದೌರ್ಭಗ್ಯವೇ ಸರಿ. ತನ್ನ ಬಳಿ ಪರಮಾಣು ತಂತ್ರಜ್ಞಾನವಿದೆ ಎಂದು ಸಾಬೀತಾದರೆ ಇಂದು ಆ ದೇಶ ಒಮ್ಮೆಲೇ ಕಳನಾಯಕನ ಹಣೆ ಪಟ್ಟಿಯನ್ನು ಕಟ್ಟಿಕೊಳ್ಳುತ್ತದೆ. ಅಲ್ಲದೆ ಅದೆಷ್ಟೋ ದೇಶಗಳಿಂದ ಆರ್ಥಿಕ ನಿರ್ಬಂಧನಗಳನ್ನೂ ಹೇರಿಸಿಕೊಳ್ಳುತ್ತದೆ. ಯಾರೋ ಒಂದಿಬ್ಬರು ಮಾಡಿದ ಮೂರ್ಖತನಕ್ಕೆ ಇಂದು ಹಲವು ದೇಶಗಳು ಈ ಒಂದು ವಿಷಯದ ಕುರಿತಾಗಿ ವೈಜ್ಞಾನಿಕವಾಗಿ ಚರ್ಚಿಸಲಾಗುತ್ತಿಲ್ಲ.ಬೆಳೆಯಲಾಗುತ್ತಿಲ್ಲ.ಹೀಗೆ ವಿಶ್ವದ ಮುಂದಿನ ದಿನಗಳ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ಕೊಡಬಲ್ಲ ವಿಷಯವೊಂದು ಇಂದು ನೆನಗುದಿಗೆ ಬೀಳುತ್ತಿದೆ.

ಇಂದಿಗೆ ಸುಮಾರು ೨೨೭ ವರ್ಷಗಳ ಹಿಂದೆ ಯುರೇನಿಯಂ ನನ್ನು ಕಂಡುಹಿಡಿದ ಶ್ರೇಯ ಮಾರ್ಟಿನ್ ಹೆನ್ರಿಚ್ ಕ್ಲಪ್ರೋತ್ ನದಾದರೆ, ೧೩೦ ವರ್ಷಗಳ ಹಿಂದೆ ವಿಕಿರಣಶೀಲತೆ(Radioactivity)ಯನ್ನು ಕಂಡುಹಿಡಿದ ಶ್ರೇಯ ಮೇರಿ ಕ್ಯೂರಿ ಹಾಗು ಪಿಯರ್ ಕ್ಯೂರಿಯರದ್ದು. ವಿಶ್ವವೇ ನಿಬ್ಬರಗಾಗಿಸಿದ ಸಂಶೋಧನೆಯ ಸಂಶೋಧಕರ ಈ ಕಾರ್ಯಕ್ಕೆ ಪ್ರಸ್ತುತ ಸ್ಥಿತಿಯನ್ನು ನೋಡಿದಾದ ನಗುವುದೋ ಅಳುವುದೋ ತಿಳಿಯದಾಗುತ್ತದೆ..!



Reference : Internet

Sunday, December 11, 2016

ವ್ಯಕ್ತಿಗತ : ಆಡು ತಿನ್ನದ ಸೊಪ್ಪಿಲ್ಲ.. ಇವರು ಮುಟ್ಟದ ವಲಯಗಳೇ ಇಲ್ಲ..!



ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಅದೆಷ್ಟು ವಿಷಯಗಳನ್ನು ವಿವರವಾಗಿ ಅರಿಯಬಹುದು ಎಂಬ ಪ್ರೆಶ್ನೆಗೆ ಉತ್ತರದ ಮೂಲ ಆ ವ್ಯಕ್ತಿಯ ಆಸಕ್ತಿ ಎಂಬ ಕ್ರಿಯೆಯಲ್ಲಿರುತ್ತದೆ. ವ್ಯಕ್ತಿ ಕಲಿಕೆಯಲ್ಲಿ ಹೆಚ್ಚು ಆಸಕ್ತದಾಯಕನಾದಷ್ಟೂ ಹೆಚ್ಚು ವಿಷಯಗಳು ಆತನ ಕೂತುಹಲವನ್ನು ಕೆರಳಿಸಿ ಹೊಸ ವಿಚಾರಗಳನ್ನು ಕಲಿಸುತ್ತವೆ. ಆಸಕ್ತಿ ಹಾಗು ಕಲಿಕೆ ಮಾನವನ ಜೀವನದಲಿ ಒಂದಕ್ಕೊಂದು ಪೂರಕವಾಗಿರುತ್ತವೆ. ಇಂದು ಮುಂದುವರೆದ ಆಧುನಿಕತೆಯಲ್ಲಿ ಕಲಿಯಲು, ಕಲಿತು ಸಂಶೋಧಿಸಲು ಹಲವಾರು ಸೌಲಭ್ಯಗಳಿದ್ದರೂ ನಾವುಗಳು ಕೇವಲ ಒಂದೂ ಅಥವಾ ಎರಡೂ ಹೊಸ ವಿಷಯಗಳಿಗೆ ಮಾತ್ರ ನಮ್ಮ ಓದು ಹಾಗು ಸಂಶೋಧನೆಗಳನ್ನು ಮೀಸಲಿಡುತೇವೆ. ಅದರಲ್ಲೂ ತಡಕಾಡುತ್ತೇವೆ.


ಆದರೆ ಕೆಲವು ದಂತಕಥೆಗಳು ನಮ್ಮೊಟ್ಟಿಗೇ ಹುಟ್ಟಿ, ನಮ್ಮೊಟ್ಟಿಗೇ ಬೆಳೆದು, ನಮಗಿಂದು ಸಿಗುತ್ತಿರುವ ಸೌಲಭ್ಯಗಳ ತೃಣಮಾತ್ರದಲ್ಲಿ ಹಲವಾರು ವಿಷಯಗಳಲ್ಲಿ ತಮ್ಮನ್ನು ತೊಡಗಿಸಿ, ಕಲಿತು, ಸಂಶೋಧಿಸಿ ಸಮಾಜಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿರುವ ಉದಾಹರಣೆಗಳಿವೆ.. ಅಲ್ಲದೆ ಅವರ ಆ ಕೊಡುಗೆ ಕೇವಲ ಒಂದು ವಿಷಯಕ್ಕೆ ಮಾತ್ರ ಸೀಮಿತವಾಗಿರದೆ ತಮಗೆ ಕುತೂಹಲ ಕೆರಳಿಸಿದ ವಿಷಯಗಳಿಗೆಲ್ಲ ಪಸರಿಸಿ ಹೆಸರು ಮಾಡಿರುವುದೂ ಉಂಟು. ಒಬ್ಬ ಮಾನವ ತನ್ನ ಜೀವಿತಾವಧಿಯಲ್ಲಿ ಅದೆಷ್ಟು ವಿಷಯಗಳಲ್ಲಿ ಪ್ರವೀಣನಾಗಬಹುದು ಎಂಬುದಕ್ಕೆ ಇಂತಹ ಹಲವರು ಉತ್ತಮ ಉದಾಹರಣೆಗಳಾಗುತ್ತಾರೆ. ಆಸಕ್ತಿ ಹಾಗು ಜೊತೆಗೆ ಸಾದಿಸುವ ಛಲದಿಂದ ತನ್ನ ಅಲ್ಪಾವಧಿಯಲ್ಲಿ ಎಷ್ಟೆಲ್ಲಾ ಸಾದನೆಗಳನ್ನು ಸಾಧಿಸಬಹುದೆಂದು ಇವರು ತೋರಿಸಿಕೊಟ್ಟರು. ಸಾಧಕರಿಗೆ ಮಾದರಿಯಾದರು.

ನೆಡೆದಾಡುವ ವಿಶ್ವಕೋಶ, ಯುಗಾಮಾನದ ಸಾಹಿತಿ, ಕಡಲ ತೀರದ ಭಾರ್ಗವರೆಂದೇ ಹೆಸರಾದ ಇವರು ತಮ್ಮ ಜೀವಿತಾವಧಿಯಲ್ಲಿ ಕೈಯಾಡಿಸದ ವಿಷಯಗಳಿಲ್ಲ, ರುಚಿ ನೋಡದ ವಲಯಗಳಿಲ್ಲ.ಕಂಡರೂ ಪರಾಮರ್ಶಿಸಿ ನೋಡು ಎಂಬ ವ್ಯಕ್ತಿತ್ವದ ಇವರು ತಮ್ಮನ್ನು ಯಾರ ಹಂಗಿಗೂ ಒಪ್ಪಿಸದೆ ಸ್ವಂತ ವಿಚಾರಧಾರೆಯಲ್ಲಿ ಬೆಳೆದವರು. ಆದ ಮಾತ್ರಕ್ಕೆ ಏನೋ ಇಷ್ಟೆಲ್ಲಾ ವಿಷಯಗಳನ್ನು ಕಟ್ಟಿ ನಿಂತ ವಿಶಿಷ್ಟ ಮೂರ್ತಿಯಾದರು. ಒಬ್ಬ ಕವಿಯಾಗಿ, ಸಾಹಿತಿಯಾಗಿ, ಪತ್ರಕರ್ತನಾಗಿ, ಯಕ್ಷಗಾನ ಕಲಾವಿದನಾಗಿ, ರಾಜಕಾರಣಿಯಾಗಿ, ಸ್ವಾತಂತ್ರ್ಯ ಹೋರಾಟಗಾರನಾಗಿ, ಚಲನಚಿತ್ರ ನಿರ್ದೇಶಕನಾಗಿ, ನಿರ್ಮಾಪಕನಾಗಿ, ಪರಿಸರವಾದಿಯಾಗಿ, ಒಂದೇ ಎರಡೇ.. ಒಬ್ಬ ವ್ಯಕ್ತಿ ತನ್ನ ಆಯಸ್ಸೇಲ್ಲವನ್ನು ಇವರು ಸಾಧಿಸಿರುವ ವಿಷಯಗಳ ಬಗ್ಗೆ ಅರಿಯಲು ಮುಡಿಪಾಗಿಟ್ಟರೂ ಸಾಲದು! ಅಲ್ಲದೆ ಇವೆಲ್ಲವೂ ಇಂದು ಬಂದು ನಾಳೆ ಹೋದಂತೆ ಇವರ ಜೀವನದಲ್ಲಿ ಬಂದು ಹೋದವುಗಳಲ್ಲ. ಹಿಡಿದ ವಿಷಯದ ಆಳವನ್ನು ಮುಟ್ಟುವ ತನಕ ಬಿಡದ ವ್ಯಕ್ತಿತ್ವ ಅವರದಾಗಿತ್ತು. ಹೀಗೆ ಕಲಿತ ವಿಷಯಗಳಲ್ಲಿ ಏನನ್ನಾದರೂ ವಿಶಿಷ್ಟವನ್ನು ಸಾಧಿಸಿಯೇ ಅವರಿಗೆ ವಿಶ್ರಾಂತಿ.



೧೯೦೨ ಅಕ್ಟೋಬರ್ ೧೦ ರಂದು ಇಂದಿನ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ ಹುಟ್ಟಿ ಬೆಳೆದ ಇವರ ನಡತೆ ಇತರ ಮಕ್ಕಳಿಗೆ ಹೋಲಿಸಿದರೆ ತೀರಾ ವಿಭಿನ್ನವಾಗಿತ್ತು. ಚಿಕ್ಕವರಿದ್ದಾಗ ಇವರು ಕಲಿತ ಶಾಲೆಯಲ್ಲಿ ಇಂಗ್ಲಿಷ್ ಭಾಷೆಯನ್ನೇ ಮಾತಾಡಬೇಕೆಂದು ನಿಯಮವೊಂದಿತ್ತು. ಆದರೆ ಇದ್ಯಾಕೋ ಇವರಿಗೆ ಸರಿ ಅನ್ನಿಸಿರಲಿಲ್ಲ ಹಾಗೂ ಒಳಗೊಳಗೇ ಈ ನಿಯಮವನ್ನು ಜಾರಿಗೆ ತಂದ ಪ್ರಾಂಶುಪಾಲರನ್ನು ವಿರೋಧಿಸುತ್ತಿದ್ದರು. ಹೀಗೆ ಒಂದು ದಿನ ಇದನ್ನು ವಿರೋದಿಸುವ ಸಲುವಾಗಿ ಪಿಸುಗುಡುತ್ತಿದ್ದ ತನ್ನ ಸ್ನೇಹಿತನನ್ನು ಕುರಿತು ಪ್ರಾಂಶುಪಾಲರಿಗೆ ಕೇಳುವಂತೆ 'ಏಯ್ ಕತ್ತೆ..ಕನ್ನಡದಲ್ಯಾಕೆ ನಗಾಡುತ್ತಿದ್ದೀಯ.. ನಗುವುದಾದದರೆ ಇಂಗ್ಲಿಷ್ನಲ್ಲಿ ಮಾತ್ರ ನಗು' ಎಂದು ಮಾರ್ಮಿಕವಾಗಿ ಕೂಗಿದ್ದರಂತೆ.ಈ ಘಟನೆಯಾದನಂತರ ಶಾಲೆಯಲ್ಲಿ ಇಂಗ್ಲಿಷ್ ಮಾತನಾಡುವ ನಿಯಮ ಕೊಂಚ ಸಡಿಲವೂ ಆಯಿತಂತೆ! ಹೀಗೆ ಚಿಕ್ಕವರಿಂದಲೇ ಯಾವುದೇ ಕಟ್ಟುಪಾಡುಗಳಿಗೆ ಜೋತುಬೀಳದೆ, ಸರಿಯನ್ನಿಸದನ್ನು ತಪ್ಪೆಂದೆ ಹೇಳುವ ಗುಣಗಳನ್ನು ಬೆಳೆಸಿಕೊಂಡರು ಇವರು. ಯಕ್ಷಗಾನ, ನಾಟಕ, ಹಾಗು ಪಠ್ಯೇತರ ವಿಷಯಗಳ ಓದು ಸಣ್ಣವರಿದ್ದಾಗ ಇವರ ಬಹು ಆಸಕ್ತಿಯ ವಲಯಗಳು. ತಮ್ಮ ಕಾಲೇಜು ಜೀವನದಲ್ಲಿ ಗಾಂಧಿಯವರ ಅಸಹಕಾರ ಚಳುವಳಿಯಿಂದ ಪ್ರೇರಿತರಾಗಿ ಕಾಲೇಜು ವ್ಯಾಸಂಗವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಚಳುವಳಿಯಲ್ಲಿ ಧುಮುಕಿದರು. ಮಗನನ್ನು ಒಬ್ಬ ಒಳ್ಳೆಯ ವಕೀಲನಾಗಿ ಮಾಡಬೇಕೆಂದು ಇಚ್ಛಿಸಿದ್ದ ಇವರ ತಂದೆ, ಮಗ ಓದನ್ನು ಬಿಟ್ಟು ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡದ್ದನ್ನು ಕಂಡು ಹೈರಾಣಾದರು. ಅಲ್ಲದೆ ಮಗನನ್ನು ಪುನ್ಹ ಕಾಲೇಜಿಗೆ ತರಲು ಮನೆಯಲ್ಲಿ ಹೋಮ ಹವನವನ್ನೂ ಮಾಡಿಸಿದರು! ಆದರೆ ಹಿಡಿದಿದ್ದನ್ನು ಬಿಡದ ಛಲ ನಮ್ಮ ನಾಯಕನದು. ಯಾರ ಮಾತಿಗೂ ಜಗ್ಗದೆ ತಮ್ಮನ್ನು ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡೆಯೇ ಬಿಟ್ಟರು. ಮುಂದಿನ ಆರೆಂಟು ವರ್ಷಗಳ ಕಾಲ ವಿಧವೆಯರ ಮದುವೆ, ನೆರೆ ಸಂತ್ರಸ್ಥರಿಗೆ ಸಹಾಯ, ವೈಶ್ಯವಾಟಿಕೆಯಲ್ಲಿ ತೊಡಗಿದ್ದ ಮಹಿಳೆಯರಿಗೆ ಸಹಾಯ, ಚರಕ ಕೇಂದ್ರಗಳ ಸ್ಥಾಪನೆ, ಹಳ್ಳಿಗಳ ನೀರಿನ ಸಮಸ್ಯೆಗಳಿಗೆ ಭಾವಿಗಳನ್ನು ತೊಡುವುದು, ಹೀಗೆ ಹತ್ತು ಹಲವು ಸಮಾಜ ಸೇವೆಗಳನ್ನು ಶ್ರದ್ದೆಯಿಂದ ಮಾಡಿದರು. ಕಡಲ ತೀರದಲ್ಲಿ ಹೆಸರು ಮಾಡತೊಡಗಿದರು. ಪರಿಸರವಾದಿಯಾಗಿದ್ದ ಇವರು ಮುಂದೆ ೧೯೮೯ ರಲ್ಲಿ ಕೈಗಾ ಅಣುಸ್ಥಾವರದ ವಿರುದ್ಧ ಹೋರಾಡಿ ಆ ಯೋಜನೆಯನ್ನು ವಿರೋದಿಸುವ ಜನರ ಪರವಾಗಿ ಲೋಕಸಭಾ ಚುನಾವಣೆಗೆ ನಿಂತು ಸೋತಿರುವುದು ಉಂಟು.



ಇವೆಲ್ಲದರ ಮದ್ಯೆ ೧೯೨೪ರಲ್ಲಿ ಇವರಿಗೆ ಪತ್ರಿಕೋದ್ಯಮದ ಆಸಕ್ತಿ ಹತ್ತಿಕೊಳ್ಳುತ್ತದಲ್ಲದೆ ನೋಡ ನೋಡುತ್ತಲೇ ತಮ್ಮ ಗೆಳೆಯರೊಟ್ಟಿಗೆ 'ವಸಂತ' ಎಂಬ ಪತ್ರಿಕೆಯನ್ನು ಖುದ್ದಾಗಿಯೇ ಶುರುಮಾಡಿ ಬಿಡುತ್ತಾರೆ! ಪತ್ರಿಕೆಯೇನೋ ಶುರುವಾಯಿತು ಆದರೆ ಹಾಳೆಗಳ ಮೇಲೆ ಬರಹಗಳನ್ನೇಗೆ ತುಂಬುವುದು? ತಾವು ಬಲ್ಲ ಅದಷ್ಟು ಕವಿ ಸಾಹಿತಿಗಳಿಗೆ ತಮ್ಮ ಪತ್ರಿಕೆಗೆ ಬರೆಯಲು ಕೋರಿಕೊಳ್ಳುತ್ತಾರೆ. ಆದರೂ ಪತ್ರಿಕೆಯ ಭಾಗಶಃ ಪುಟಗಳು ಖಾಲಿಯಾಗಿಯೇ ಉಳಿಯತೊಡಗಿದವು. ಛಲ ಬಿಡದ ಈ ನಾಯಕ ಸೋಲನ್ನೊಪ್ಪಿಕೊಳ್ಳಲಿಲ್ಲ. ತಾವೇ ಸ್ವತಹಃ ಶಾಹಿಯನ್ನು ಹಿಡಿದರು! ಎರೆಡೆರೆಡು ಪತ್ತೇದಾರಿ ಕಥಾಸರಣಿಯನ್ನು ಬರೆಯಲು ಶುರುಮಾಡಿದರು! ಓದಿರುವುದು ಅರ್ದಮ್ಬರ್ದ ಕಾಲೇಜು ಆದರೂ ಕಥಾಸರಣಿಯನ್ನು ಬರೆಯಬಲ್ಲ ಕ್ಷಮತೆ ಇವರಿಗೆ ಸಹಜವಾಗೇ ಬಂದೊದಗಿತು. ಅಂತೂ ಎಳೆ ಮೀಸೆಯ ಸಾಹಸಿ ಯುವಕನೊಬ್ಬ ಆರು ವರ್ಷಗಳ ಕಾಲ ಸ್ವತಃ ಪತ್ರಿಕೆಯೊಂದನ್ನು ಶುರುಮಾಡಿ, ಬರೆದು, ನೆಡೆಸಿ ಎಲ್ಲರ ಹುಬ್ಬೇರುವಂತೆ ಮಾಡಿದ. ಹೀಗೆ ಶುರುವಾದ ಇವರ ಬರವಣಿಗೆ ತಮ್ಮ ಕೊನೆಯುಸಿರಿರುವವರೆಗೂ ದಿಟ್ಟವಾಗಿ ಸಾಗಿತು. ಇವರದು ೪೭ ಕಾದಂಬರಿಗಳು, ೩೧ ನಾಟಕಗಳು, ೪ ಸಣ್ಣ ಕಥಾಮಾಲಿಕೆ, ಕಲೆಯ ಕುರಿತು ೧೩ ಪುಸ್ತಕಗಳು, ೯ ವಿಶ್ವಕೋಶಗಳು ಹಾಗು ನೂರಾರು ಪ್ರಭಂದ ಹಾಗು ಲೇಖನಗಳು! ತಮ್ಮ ತೊಂಬತೈದನೆ ವಯಸ್ಸಿನಲ್ಲೂ ಪುಸ್ತಕಗಳನ್ನು ಬರೆಯುತ್ತಿದ್ದರು ಎಂದರೆ ಬರಹವನ್ನು ಅದೆಷ್ಟು ರೂಡಿಸಿಕೊಂಡಿದ್ದರೆಂದು ತಿಳಿಯುತ್ತದೆ.



ಬರಹವನ್ನು ಬಿಟ್ಟರೆ ಇವರ ನಂತರದ ವ್ಯಕ್ತ ಮಾಧ್ಯಮ ನಾಟಕ. ಸಮಾಜದದ ಸಮಸ್ಯೆಗಳ ಸುಧಾರಣೆಗೆ ಇದು ಸಹ ಒಂದು ಮಾರ್ಗವಾಗಿತ್ತು ಎಂದು ಇವರು ನಂಬಿದ್ದರು. 'ನಿಶಾ ಮಹಿಮೆ' ಎಂಬ ತಮ್ಮ ಮೊದಲ ನಾಟಕದ ಮೂಲಕ ಶುರುವಾದ ಇವರ ಪಯಣ ಮುಂದೆ ಹಲವಾರು ನಾಟಕಗಳನ್ನು ತಾವೇ ಸ್ವತಹಃ ನಿರ್ದೇಶಿಸುವ ಮಟ್ಟಕ್ಕೆ ತಲುಪಿತು. ಮುಂದೆ ಸಾಗಿ ಚಿತ್ರ ನಿರ್ದೇಶನಕ್ಕೂ ಕೈ ಹಾಕಿದರು. ಸಾಲವನ್ನು ಮಾಡಿ ಚಿತ್ರನಿರ್ದೇಶನಕ್ಕೆ ಬೇಕಾದ ಎಲ್ಲಾ ವಿಷಯಗಳನ್ನು ಶ್ರದ್ದೆಯಿಂದ ಕಲಿತು ಅಸ್ಪೃಶ್ಯತೆಯ ಬಗ್ಗೆ 'ಡೊಮಿಂಗೊ' ಎಂಬ ಮೊದಲ ಮೂಕಿ ಚಿತ್ರವನ್ನು ಮಾಡಿಯೇ ಬಿಟ್ಟರು. ನಂತರ ಪುಟ್ಟದೊಂದು ಸ್ಟುಡಿಯೋವನ್ನು ಸ್ಥಾಪಿಸಿ ಸಣ್ಣ ಪುಟ್ಟ ಚಿತ್ರಗಳನ್ನು ಅಲ್ಲಿ ಮಾಡದೊಡಗಿದರು. ಮುಂದೆ ಯಕ್ಷಗಾನವನ್ನೂ ಕಲಿತು ತಮ್ಮ ತಂಡದೊಂದಿಗೆ ದೇಶ ವಿದೇಶಗಲ್ಲೆಡೆ ಪ್ರದರ್ಶನಗಳನ್ನು ನೀಡುತ್ತಾ ಬಂದರು. ಯಕ್ಷಗಾನದ ಸಂಸ್ಕೃತಿಯ ಉಳಿವಿಗೆ ಬಹಳಷ್ಟು ಪಣ ತೊಟ್ಟರು. ಬರಹಗಳಂತೆ ಇವರಿಗೆ ಇವೆಗಳೆಲ್ಲದರ ಮೂಲ ಉದ್ದೇಶ ಸಮಾಜದ ಸುಧಾರಣೆ ಹಾಗು ಜನರ ಒಗ್ಗೂಡಿಸುವಿಕೆಯಾಗಿತ್ತು. ಅಕ್ಷರ ಸಹ ತಾವು ಬಯಸಿದ್ದನ್ನು ಸಾಧಿಸಿಯೇ ಬಿಟ್ಟರು.




ಇವರಿಗೆ ಮಕ್ಕಳ ಓದು ಹಾಗು ಭವಿಷ್ಯದ ಮೇಲಿದ್ದ ಪ್ರೀತಿ ಹಾಗು ಕಾಳಜಿ ಅತ್ತ್ಯುನ್ನತವಾದುದು. ಪುಸ್ತಕದ ಒಳಗಿರುವ ವಿಷಯಗಳಿಗೆ ಮಾತ್ರ ಮುಡಿಪಾಗಿಡಿಸುವ ಶಿಕ್ಷಣಪದ್ದತಿಯನ್ನು ನೆಚ್ಚದ ಇವರು ಮಕ್ಕಳಿಗಾಗೇ ೧೯೩೪ ರಲ್ಲಿ 'ಬಾಲವನ'ವೆಂಬ ಮಕ್ಕಳ ಶಾಲೆಯೊಂದನ್ನು ತೆರೆದರು. ಇಲ್ಲಿ ಮಕ್ಕಳ ಅರಳುವ ಮುದ್ದು ಮನಗಳು ಪರಿಸರದ ಮದ್ಯೆ, ಆಟೋಟಗಳ ಮೂಲಕ ಶಿಕ್ಷಣವನ್ನು ಕಲಿಯಬಹುದಿತ್ತು. ಅಂದಿನ ಸಾಂಪ್ರದಾಯಿಕ ಶಿಕ್ಷಣ ಪದ್ದತಿಗೆ ಇದು ಅಕ್ಷರ ಸಹ ವ್ಯತಿರಿಕ್ತವಾಗಿತ್ತು. ಬೆರಳೆಣಿಕೆಯ ಮಕ್ಕಳಷ್ಟೇ ಇಲ್ಲಿಗೆ ಬರತೊಡಗಿ ಕೆಲವರ್ಷಗಳ ನಂತರ ಬಾಲವನ ಮುಚ್ಚಲ್ಪಟ್ಟಿತ್ತು. ಆದರೆ ಮಕ್ಕಳ ಮೇಲಿನ ಕಾಳಜಿ ಇವರಿಗೆ ಕಡಿಮೆಯೇನಾಗಲಿಲ್ಲ. ಆಗಿನ ಕಾಲಕ್ಕೆ ಮಕ್ಕಳಿಗಾಗೇ ಯಾವುದೆ ಬಗೆಯ ವಿಶ್ವಕೋಶ (Encyclopedia) ಗಳಿರದ್ದನ್ನು ಗಮನಿಸಿದ ಇವರು 'ಬಾಲ ಪ್ರಪಂಚ', 'ವಿಜ್ಞಾನ ಪ್ರಪಂಚ' ಹಾಗು 'ಓದುವ ಆಟ' ವೆಂಬ ಬೃಹತ್ ವಿಶ್ವಕೋಶಗಳನ್ನು ರಚಿಸಿಯೇ ಬಿಡುತ್ತಾರೆ. ಅಲ್ಲದೆ ತಮ್ಮ ಕೊನೆದಿನಗಳಲ್ಲೂ ಮಕ್ಕಳಿಗಾಗೇ ಹಕ್ಕಿಗಳ ಬಗ್ಗೆ ಪುಸ್ತಕವೊಂದನ್ನು ಬರೆಯುತ್ತಿದ್ದರು. ಹೀಗೆ ಮಕ್ಕಳಿಗಾಗೇ ನೂರಾರು ಪುಸ್ತಕಗಳನ್ನು ಬರೆದರು. ನಾಳಿನ ಸಮಾಜವನ್ನು ನೆಡೆಸುವ ಮಕ್ಕಳು ಸರ್ವತೋಮುಖವಾಗಿ ಬೆಳೆಯಬೇಕು ಎಂಬುದೇ ಇದರಿಂದಿನ ಇವರ ಆಶಯವಾಗಿತ್ತು.

ಏತನ್ಮದ್ಯೆ ೧೯೩೫ರ ಸುಮಾರಿಗೆ ಮಂಗಳೂರಿನ ಬೆಸೆಂಟ್ ಬಾಲಕಿಯರ ಶಾಲೆಗೆ ನೃತ್ಯ ಕಲಿಸಲು ಹೋಗುತ್ತಿರುವಾಗ ಲೀಲಾ ಎಂಬುವರ ಪರಿಚಯವಾಗಿ ೧೯೩೬ ರಲ್ಲಿ ಸಮಾಜದ ವಿರೋಧದ ನಡುವೆಯೂ (ಲೀಲಾರು ಬಂಟರ ಸಮುದಾಯಕ್ಕೆ ಸೇರಿದವರಾಗಿದ್ದರು) ಅವರ ಕೈಯಿಡಿಯುತ್ತಾರೆ. ಜಾತಿ ಪದ್ದತಿ, ಮೇಲು-ಕೀಳು ಇದ್ಯಾವುದನ್ನು ಲೆಕ್ಕಿಸದ ಇವರು ಸಮಾಜದ ಮಾತುಗಳಿಗೆ ಬೆಲೆ ಕೊಡುವುದಿಲ್ಲ. ಮುಂದೆ ನಾಲ್ಕು ಮಕ್ಕಳ ತಂದೆಯಾಗಿ ಒಂದು ತುಂಬು ಜೀವನವನ್ನು ನೆಡೆಸುತ್ತಾರೆ.




ಇವೆಲ್ಲದರ ನಡುವೆ ಇವರಿಗೆ ಇನ್ನೂ ಒಂದು ನೆಚ್ಚಿನ ಹವ್ಯಾಸವಿರುತ್ತದೆ. ಅದೇ ಪ್ರವಾಸ. ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬಂತೆ ಇವರ ಎಲ್ಲಾ ಸಮಗ್ರ ರಚನೆಗಳಿಗೆ ಪ್ರವಾಸವೂ ಒಂದು ಮುಖ್ಯ ಅನುಭವವಾಗಿರುತ್ತದೆ.ತಮ್ಮ ಮೂವತ್ತನೇ ವಯಸ್ಸಿಗಾಗಲೇ ಬಾಗಶಃ ಭಾರತವನ್ನು ಸುತ್ತಿದ್ದ ಇವರು ನಂತರ ವಿದೇಶ ಪರ್ಯಟನೆಯನ್ನು ಸಹ ಮಾಡುತ್ತಾರೆ. ತಮ್ಮ ೮೮ನೇ ವಯಸ್ಸಿನಲ್ಲೂ ದಕ್ಷಿಣ ಅಮೆರಿಕಕ್ಕೆ ಪ್ರವಾಸ ಕೈಗೊಂಡಿದ್ದು ಆಶ್ಚರ್ಯವೇ ಸರಿ. ಪ್ರವಾಸವೆಂದರೆ ಕೇವಲ ಸುತ್ತುವುದು, ವೀಕ್ಷಿಸುವುದು ಆಗಿರಲಿಲ್ಲ. ಇವರು ಹೋದಡೆಯಲ್ಲ ಸಿಗುವ ಪುಸ್ತಕ, ಚಿತ್ರಕಲೆ, ಸಂಸ್ಕೃತಿಗಳನ್ನು ಆಳವಾಗಿ ಅರ್ಥೈಸಿಕೊಂಡು ಗುರುತು ಮಾಡಿಕೊಂಡು ಬರುತ್ತಿದ್ದರು. ಇವುಗಳೆಲ್ಲವೂ ಸೇರಿ ಒಟ್ಟು ನಾಲ್ಕು ಪ್ರವಾಸ ಕಥನ ಪುಸ್ತಕಗಳು ಇವರಿಂದ ಮೂಡಿವೆ.



ಈ ಬಹುಮುಖ ಪ್ರತಿಭೆಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಅರಸಿ ಬಂದಿವೆ. ಆದರೆ ಎಂದೂ ಇವರು ಅವುಗಳಿಗಾಗಿ ಜೋತು ಬಿದ್ದವರಲ್ಲ. ತಮ್ಮ 'ಮೂಕಜ್ಜಿಯ ಕನಸುಗಳು' ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ 'ಈ ಜ್ಞಾನಪೀಠ ನನಗೆ ಜ್ಞಾನಪಿತ್ತವಾಗದಿರಲಿ' ಎಂದು ಮಾರ್ಮಿಕವಾಗಿ ಹೇಳಿದರಂತೆ. ೧೯೭೫ರ ದೇಶದ ತುರ್ತು ಪರಿಸ್ಥಿಯನ್ನು ವಿರೋದಿಸುವ ಸಲುವಾಗಿ ತಮಗೆ ಬಂದ 'ಪದ್ಮ ಭೂಷಣ'ವನ್ನೂ ಇವರು ಹಿಂತಿರುಗಿಸಿರುವುದುಂಟು! ಲೇಖಕರು, ಬರಹಗಾರರೆಂದರೆ ಬುದ್ದಿಜೀವಿಗಳು, ಸಾಹಸಿಗಳು, ಎಂದೆಲ್ಲ ಅರಿಯುವ ಸಮಾಜದಲ್ಲಿ 'ಅವರೂ ನಮ್ಮ ನಿಮ್ಮಂತೆ ಸಾಮನ್ಯರು. ಅವರಿಗಿಂತಲೂ ಮಿಗಿಲಾದ ಕಾರ್ಯಗಳನ್ನು ಒಬ್ಬ ಸಾಮಾನ್ಯನೂ ಮಾಡುತ್ತಾನೆ. ಸುಖಾಸುಮ್ಮನೆ ಅವರನ್ನು ಸಿಂಹಾಸನದ ಮೇಲೆ ಕೂರಿಸಬೇಡಿ' ಎಂದು ಹೇಳುತ್ತಿದ್ದರಂತೆ. 'ಮಾನವನು ಹುಟ್ಟಿದ ಮೇಲೆ ಏನೂ ಮಾಡದಿದ್ದರೂ ಕೊನೆ ಪಕ್ಷ ತನ್ನ ಸುತ್ತಲಿನ ಸಮಾಜವನ್ನು ಕೊಂಚ ಸುಂದರವಾಗಿಸಿಯಾದರೂ ಹೋಗಬೇಕು' ಎಂದಿದ್ದರಂತೆ ನಮ್ಮ ಸರಳ, ನೇರ ವ್ಯಕ್ತಿತ್ವದ ನಾಯಕ ಕೋಟ ಶಿವರಾಮ ಕಾರಂತರು.



ಇಂದು ತಮ್ಮ ಅಲ್ಪ ಸಾಧನೆಯನ್ನೇ ದೊಡ್ಡದೆಂದು ಬಿಂಬಿಸಿ ಬೀಗುವ ನಾವುಗಳು ಕಾರಂತರ ಬೃಹತ್ ವ್ಯಕ್ತಿತ್ವದಿಂದ ಅಲ್ಪವಾದರೂ ಕಲಿಯಲೇಬೇಕಿದೆ. ಕಲಿಯಲು, ಸಂಶೋದಿಸಲು ಗುಡ್ಡದಷ್ಟಿದ್ದರೂ, ಏನೂ ಇಲ್ಲವೆಂದೇ ಗೊಣಗುತ್ತಾ ಕನಿಷ್ಠ ಸಾಧನೆಗಳಿಗೆ ತೃಪ್ತರಾಗುವ ಪ್ರತಿಭೆಗಳು ಇಂದು ಬಹುಮುಖ ಪ್ರತಿಭೆಗಳಾಗಿ ರೂಪಗೊಳ್ಳುತ್ತಿಲ್ಲ. ಕಾರಂತರು ಇಂದಿಗೆ (ಡಿಸೆಂಬರ್ ೯) ನಮ್ಮನಾಗಲಿ ಹದಿನೆಂಟು ವರ್ಷಗಳಾಗಿವೆ. ಅವರ ನನಪಿನಲ್ಲಿ, ಆ ಆದರ್ಶದಾಯಕ ವ್ಯಕ್ತಿತ್ವದಲ್ಲಿ ಆದಷ್ಟನ್ನು ಮೈಗೂಡಿಕೊಂಡು ಮುಂದಿನ ಪೀಳಿಗೆಗೂ ಇವರ ಬಗ್ಗೆ ತಿಳಿಸುವ ಸಂಕಲ್ಪವನ್ನು ಮಾಡೋಣ. ಸಮಾಜಕ್ಕೆ, ರಾಜ್ಯಕ್ಕೆ, ದೇಶಕ್ಕೆ ಮಾದರಿಯಾದ ಕಾರಂತಜ್ಜರಿಗೆ ಹೃದಯದಾಳದಿಂದ ಧನ್ಯವಾದಗಳನ್ನೂ ಸಮರ್ಪಿಸೋಣ.






Reference : K Shivrama Karanth by C N Ramachandran & Internet


PC : raorohith

Friday, December 9, 2016

ಪ್ರಸ್ತುತ : ‘ಮೇಕ್-ಇನ್-ಇಂಡಿಯ’ ಬಂದಾಯ್ತು ಆದರೆ, ‘ಮೇಡ್-ಇನ್-ಇಂಡಿಯಾ’ಗಳ ಕತೆ ಏನಾಯ್ತು..?


Bharathi Shipyard

HMT (Watch Division)

UB Groups

BPL

Sahara Housing Corporation

And many more…




ಒಂದು ಕಾಲದಲ್ಲಿ ದೇಶದ ಟಾಪ್ ರೇಟೆಡ್ ಕಂಪನಿಗಳ ಪಟ್ಟಿಯಲ್ಲಿ ಈ ಎಲ್ಲಾ ಹೆಸರುಗಳಿದ್ದಿದ್ದನ್ನು ಗಮನಿಸಿರಬಹುದು. ಕೆಲವು ಹೆಸರುಗಳು ಪಟ್ಟಿಯಲ್ಲಿ ಕೆಲದಿನಗಳು ಮಾತ್ರ ಕಂಡರೆ, ಕೆಲವು ದಶಕಗಳವರೆಗೂ ರಾರಾಜಿಸಿದ್ದವು. ಅಂದು ದೇಶದ ಪ್ರತಿಯೊಬ್ಬ ಪ್ರಜೆಯೂ ಹೆಮ್ಮೆಯಿಂದ ಹೇಳುತ್ತಿದ್ದ ಹಾಗೂ ಇರುವುದರಲ್ಲೇ ಇಲ್ಲದಿರುವುದನ್ನು ಸಾಧಿಸಿ ತೋರಿಸಿದ ಕಂಪನಿಗಳಿವು. ಇವುಗಳಲ್ಲಿ ಕೆಲವು ದೇಶದ 'ಸಮಯವನ್ನು ಕಾಯುವ' ಕಂಪನಿಗಳೆಂದು ಪ್ರಸಿದ್ದಿ ಹೊಂದಿದರೆ ಮತ್ತು ಕೆಲವು ಸ್ವದೇಶೀ ತಂತ್ರಜ್ಞಾನದಿಂದ ಏನೆಲ್ಲಾ ಸಾಧಿಸಬಹುದು ಎಂದು ತೋರಿಸಿಕೊಟ್ಟವು. ಅಂದು ಟಿವಿ, ವಾಚು, ವಿಮಾನ ಪ್ರಯಾಣ ಇತ್ಯಾದಿ ಅಂದಾಗಲೆಲ್ಲ ಮೇಲಿನ ಹೆಸರುಗಳೇ ಹೆಚ್ಚಾಗಿ ಜನರ ಗಮನ ಸೆಳೆಯುತ್ತಿದ್ದವು. ಅದೃಷ್ಟ ಲಕ್ಷ್ಮಿ ಒಲಿದರೆ, ನಮಗೆ ಕೊಳ್ಳಲು ಸಾದ್ಯವಾದರೆ, ಅಥವಾ ಕೊನೆ ಪಕ್ಷ ಸಾಲ ಮಾಡಿಯಾದರೂ ಇಂತ ಒಂದು ಪ್ರಾಡಕ್ಟ್ ಅನ್ನೇ ಖರೀದಿಸಬೇಕು ಎಂದು ಜನಸಾಮಾನ್ಯ ಅಂದುಕೊಳ್ಳುತ್ತಿದ್ದ. ಇಷ್ಟೆಲ್ಲಾ ಬೇಡಿಕೆ, ಹೆಮ್ಮೆ, ಮೇಲಾಗಿ ದೇಶಕ್ಕೆ ಆದಾಯವನ್ನು ತಂದು ಕೊಟ್ಟದ್ದು ಯಾವುದೇ ವಿದೇಶಿ ಬಹುರಾಷ್ಟೀಯ ಕಂಪನಿಗಳಲ್ಲ. ನಮ್ಮ ನೆಲದಲ್ಲೇ ಬೆಳೆದು ಇತಿಹಾಸ ಸೃಷ್ಟಿಸಿ ಇಂದು ಅವನತಿಯ ಹಾದಿ ಹಿಡಿದು ಅಥವಾ ಹಿಡಿಯುತ್ತಿರುವ ಸ್ವದೇಶೀ ಕಂಪನಿಗಳು!

ಅಂದು 1991. ಚಂದ್ರಶೇಖರ್ ಸರ್ಕಾರ ಬಿದ್ದು ಮತ್ತೊಮ್ಮೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸನ ಮುಂದಿದ್ದದ್ದು ಅವನತಿಯ ಹಾದಿ ಹಿಡಿದ್ದಿದ್ದ ದೇಶದ ಅರ್ಥವ್ಯವಸ್ಥೆ. ಆಗ ಮನಮೋಹನ್ ಸಿಂಗ್ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಿ ದೇಶದ ಆರ್ಥಿಕ ಅವನತಿಯನ್ನು ತಪ್ಪಿಸಿದ ಕೀರ್ತಿ P.V ನರಸಿಂಹರಾವ್ ಸರ್ಕಾರಕ್ಕೆ ಸೇರುತ್ತದೆ. Economic Policy Reform, ಎಫ್.ಡಿ.ಐ ಹಾಗು ಮತ್ತಿತರ ಸುದಾರಣೆಗಳೊಂದಿಗೆ ತಯಾರಾದ ಯೋಜನೆ ದೇಶದ ಅರ್ಥವ್ಯವಸ್ಥೆ ಹೊರದೇಶದ ಕಂಪನಿಗಳಿಗೊಸ್ಕರ ಆತುರದಿಂದ ಕಣ್ಣರಳಿಸಿ ನೋಡುವಂತೆ ಮಾಡಿತ್ತು. ಆಗ ನಿಜವಾದ ಪೀಕಲಾಟ ಶುರುವಾದದ್ದು ನಮ್ಮ ದೇಶಿಯ ಕಂಪನಿಗಳಿಗೆ. ಅಲ್ಲಿಯವರೆಗೂ ದೇಶದ ಟಾಪ್ ರೇಟೆಡ್ ಕಂಪನಿಗಳಲ್ಲಿ ಒಂದಾಗಿದ್ದ ಕಂಪನಿಗಳು, ವಿದೇಶಿ ರಂಗು ರಂಗಿನ ವಸ್ತುಗಳ ಮುಂದೆ ಮಂಕಾದದ್ದು ಮಾತ್ರ ಸುಳ್ಳಲ್ಲ. ದೇಶದ ಆರ್ಥಿಕ ಸುದಾರಣೆಯ ಜವಾಬ್ದಾರಿ ಹೊತ್ತ ಸರ್ಕಾರ ಆಗ ದೇಶಿಯ ಕಂಪನಿಗಳಿಗೆ ಆಗಬಹುದಾಗಿದ್ದ ವ್ಯತಿರಿಕ್ತ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳುವಾಗ ಸ್ವಲ್ಪ ಎಡವಟ್ಟು ಮಾಡಿತು. ದೇಶಿಯ ಅದೆಷ್ಟೋ ಉದ್ಯಮಗಳನ್ನು ಮತ್ತು ಅವುಗಳ ಪ್ರಾಡಕ್ಟ್ಗಳನ್ನು ಭಾರತೀಯರೇ ಕೇಳದಂತಾದರು. ತಮ್ಮ ದೇಶದಲ್ಲಿ ಒಬ್ಬ ನೌಕರನಿಗೆ ಕೊಡುವ ಸಂಬಳದಲ್ಲಿ ಇಲ್ಲಿ 10 ನೌಕರರನ್ನು ಕೊಳ್ಳುವ ಅವಕಾಶ ಯಾರು ತಾನೆ ಬಿಟ್ಟಾರು? ಫಲಿತಾಂಶವಾಗಿ ರಾಶಿ ರಾಶಿ ವಿದೇಶಿ ಕಂಪನಿಗಳು ಇಲ್ಲಿಯ ನೆಲದಲ್ಲಿ ಗೋಚರಿಸತೊಡಗಿದವು. ದೇಶದ ಅರ್ಥವ್ಯವಸ್ಥೆ ಆಗ ಅದೆಷ್ಟು ಬಲಿಯಿತೋ ಅದರ ನೂರು ಪಟ್ಟು ವಿದೇಶಿ ಕಂಪನಿಗಳು ತಮ್ಮ ಲಾಭವನ್ನು ಗಳಿಸಿಕೊಂಡವು ಎಂಬುದು ಸುಳ್ಳಲ್ಲ. ಹಾಗೆಯೆ, ನಮ್ಮ ಎಲ್ಲಾ ದೇಶಿಯ ಕಂಪನಿಗಳು ಈ ನೀತಿಯಿಂದ ಉನ್ನತಿ ಒಂದಿದವು ಅನ್ನುವ ಮಾತೂ ನಿಜವಲ್ಲ.

UB Groups. ಹೆಸರು ಕೇಳುತ್ತಲೇ ಅದೇನೋ ಒಂಥರಾ ಥ್ರಿಲ್! UB Groups ಒಂದು ಸಂಘಟಿತ ವ್ಯಾಪಾರಿ ಸಂಸ್ಥೆ (Conglomerate). ವಿಧ-ವಿಧವಾದ ಮಧ್ಯವನ್ನು ಪ್ರಪಂಚಕ್ಕೆ ಪರಿಚಹಿಸಿದ ಖ್ಯಾತಿ, ಭಾರತವನ್ನು 'ಫೋರ್ಸ್ ಇಂಡಿಯಾ' ಎಂಬ ಹೆಸರಲ್ಲಿ F1 ಟ್ರ್ಯಾಕ್ಗೆ ಇಳಿಸಿ ಭಾರತೀಯರು ಇಲ್ಲೂ ಹಿಂದಿಲ್ಲ ಎಂದು ತೋರಿ, ಭಾರತದ ಏವಿಯೇಷನ್ ಇಂಡಸ್ಟ್ರಿ ಅಂದರೆ ‘ಅಯ್ಯೋ ಅದೇ ಏರ್ ಇಂಡಿಯಾ, ಜೆಟ್ ಏರ್ವೇಸ್’ ಎಂದು ಮೂಗು ಮುರಿಯುತ್ತಿದ್ದ ಕಾಲದಲ್ಲಿ 'Fly The Good Times' ಎಂಬ ಸ್ಲೋಗನ್ನೊಂದಿಗೆ ಐಷಾರಾಮಿ ಕಿಂಗ್ ಫಿಷರ್ ಏರ್ಲೈನ್ಸ್ ಅನ್ನು ಸ್ಥಾಪಿಸಿ ವಿದೇಶಿಯರ ಉಬ್ಬನ್ನು ಮೇಲೇರಿಸಿದ ಕೀರ್ತಿ ಈ UB Groupsನದು. ಒಂದು ಕಾಲಕ್ಕೆ ವಿಶ್ವದಲ್ಲೇ ಟಾಪ್ ಸ್ಪಿರಿಟ್ಸ್ ಕಂಪನಿ ಅನ್ನಿಸಿಕೊಂಡಿದ್ದ UB Groupsನ ಮುಖ್ಯ ಶಾಖೆ ಇರುವುದು ಬೆಂಗಳೊರಿನಲ್ಲಿ. ಬಹುರಾಷ್ಟ್ರಿಯ ಕಂಪನಿಯಾಗಿ ವಿಶ್ವದಾದ್ಯಂತ ಸುಮಾರು 60 ಇತರೆ ಕಂಪನಿಗಳನ್ನು ತೆಕ್ಕೆಗೆ ಹಾಕಿಕೊಂಡು 1983 ರಿಂದ 1998ರ ವರೆಗೆ ಅಂದರೆ ಕೇವಲ 15 ವರ್ಷದಲ್ಲೇ ವಾರ್ಷಿಕ ವಹಿವಾಟನ್ನು 64% ಜಾಸ್ತಿ ಮಾಡಿ ತೋರಿಸಿತು. ಈ ಪರಿ ಬೆಳೆದು ಅಚ್ಚರಿ ಮೂಡಿಸಿದ UB Groups ಇಂದು ಪರಕೀಯರ ಪಾಲಾಗಿದೆ!

ಹಾಗೆಯೇ..

ಒಂದು ಕಾಲಕ್ಕೆ ದೇಶದ No.1 ಹಡಗು ನಿರ್ಮಾಣ ಕಂಪನಿಗಳಲ್ಲಿ ಒಂದಾಗಿದ್ದ ಭಾರತೀ ಶಿಪ್ಯಾರ್ಡ್ ದೇಶಿಯ ಹಡಗು ನಿರ್ಮಾಣ ವಲಯಕ್ಕೆ ಒಂದು ಹೊಸ ದಿಕ್ಕನ್ನೇ ತೋರಿಸಿತ್ತು. 1973ರಲ್ಲಿ ಯುವ ಇಂಜಿನಿಯರ್ಗಳಾಗಿದ್ದ ಪ್ರಕಾಶ್ ಸಿ ಕಪೂರ್ ಹಾಗು ವಿಜಯ್ ಕುಮಾರ್ ಅವರುಗಳು ಶುರು ಮಾಡಿದ ಈ ಸಂಸ್ಥೆ ಹಡಗು, ಟಗ್ ಬೋಟ್ಸ್, ಕಾರ್ಗೋ ಶಿಪ್ಸ್ , ಕಂಟೇನರ್ ಶಿಪ್ಸ್, ಫಿಶಿಂಗ್ ಬೋಟ್ಸ್ಗಳ ತಯಾರಿಸುವ ಪ್ರಾಜೆಕ್ಟ್ ಗಳನ್ನು ನಮ್ಮ ದೇಶದ ನೆಲದಲ್ಲೇ ಬೆಳೆಸುತ್ತಾ ಬಂದಿತು. ಅಲ್ಲದೆ ತನ್ನ ವ್ಯವಹಾರವನ್ನು ವಿಸ್ತರಿಸುತ್ತಾ ಹಲವಾರು ಸಣ್ಣ ಪುಟ್ಟ ಕಂಪನಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಮುನ್ನಿಗ್ಗಿತು. ಮರೀನ್ ಇಂಜಿನಿಯರಿಂಗ್ ಮುಗಿಸಿ ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಆತುರಲ್ಲಿರುವ ನಮ್ಮ ಇಂಜಿನಿಯರ್ಗಳಿಗೆ ಆಗೆಲ್ಲ ಮೊದಲು ಕಾಣುತ್ತಿದ್ದದ್ದು ಭಾರತೀ ಶಿಪ್ಯಾರ್ಡ್. ನಮ್ಮವರಲ್ಲೇ, ನಮ್ಮದೇ ತಂತ್ರಜ್ಞಾನದಿಂದ ಹಡಗುಗಳನ್ನು ನಿರ್ಮಿಸಿ ಮಾರುಕಟ್ಟೆಗೆ ಬಿಟ್ಟ ಈ ಕಂಪನಿ ಇಂದು ಅಕ್ಷರ ಸಹ ತನ್ನ ಉಳಿವಿಗೆ ಪರದಾಡುತ್ತಿದೆ!

ಇದೇ ಸಾಲಿನಲ್ಲಿ ಬರುವುದು ಮತ್ತೊಂದು ದೇಶಿಯ ಕಂಪನಿ, ಹಿಂದುಸ್ತಾನ್ ಮಷೀನರಿ ಟೂಲ್ಸ್. HMT. ಒಂದು ಕಾಲಕ್ಕೆ ದೇಶವೇ ಮೆಚ್ಚುವಂತ ವಾಚ್ಗಳನ್ನ ದೇಶದ ಮಾರುಕಟ್ಟೆಗೆ ಬಿಟ್ಟು, ಅನಲಾಗ್ ವಾಚ್ ನಿರ್ಮಾಣದಲ್ಲಿ ತನಗೆ ಸಾಟಿಯಾರು ಎಂದು ವಿಶ್ವಕ್ಕೆ ಸವಾಲೆಸೆದ ಕಂಪನಿ! Quartz ವಾಚ್ಗಳು (ಸ್ಫಟಿಕದ ಕಂಪನದಿಂದ ನೆಡೆಯುವ ವಾಚುಗಳು) ಮಾರುಕಟ್ಟೆಯಲ್ಲಿ ತಮ್ಮ ಅದಿಪತ್ಯವನ್ನು ಮೆರೆದಾಗಲೂ ತನ್ನ ಉಳಿವನ್ನು ಕಂಡ ಈ ಕಂಪನಿ ‘The Timekeeper of the Nation' ಎಂದೇ ಪ್ರಸಿದ್ದಿ. ಕೊಹಿನೂರ್, ರವಿ, ತೇಜಸ್, ಜಯಂತ್, ಚಿರಾಗ್ ಅನ್ನುವ ದೇಶೀ ಹೆಸರುಗಳ ವಾಚ್ಗಳು ಕೇವಲ ಇನ್ನು ಇತಿಹಾಸದ ಪುಟಗಳಲ್ಲಿ ಕಾಣಲು ಮಾತ್ರ ಸಾದ್ಯ.



ಇದೆ ರೀತಿ 1941 ರಲ್ಲಿ ಶುರುವಾದ ಹಿಂದುಸ್ತಾನ್ ಶಿಪ್ಯಾರ್ಡ್, 1991 ರಲ್ಲಿ ಶುರುವಾದ ಅರ್ಚನ ಏರ್ವೇಸ್, 1946 ರಲ್ಲಿ ಶುರುವಾಗಿದ್ದ ಕಳಿಂಗ ಏರ್ವೇಸ್, ಸ್ವರಾಜ್ ಮಜ್ದಾ, ಸ್ಟ್ಯಾಂಡರ್ಡ್ ಮೋಟರ್ಸ್ ಹೀಗೆ ನೂರಾರು 'ಇಂಡಿಯನ್ ಮೇಡ್' ಕಂಪನಿಗಳು ಅಂದು ದೇಶದ ಆರ್ಥಿಕತೆಯ ಬೆನ್ನೆಲುಬುಗಳಾಗಿ, ಇಂದು ಹೇಳ ಹೆಸರಿಲ್ಲದಂತಾಗಿವೆ! ಒಂದು ಸರ್ವೇ ಪ್ರಕಾರ ಕೇವಲ 1992 ರಿಂದ 1998ರ ವರೆಗೆ ಸುಮಾರು ನೂರರಿಂದ ನೂರೈವತ್ತು ಪ್ರತಿಷ್ಟಿತ ಕಂಪನಿಗಳು ಮುಚ್ಚಿ ಹೋದವು.( FDI ನೀತಿಯಿಂದ ವಿದೇಶಿ ಕಂಪನಿಗಳು ದೇಶದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದ ಸಮಯವಿದು ಎಂಬುದು ಗಮನಿಸಬೇಕಾದ ವಿಚಾರ) ಇನ್ನೊಂದು ಸರ್ವೇ ಪ್ರಕಾರ, 2012 ರಲ್ಲಿ ಒಟ್ಟು 379 ತಾಂತ್ರಿಕ ಕಂಪನಿಗಳು ಶುರುವಾದವು, ಅಂದರೆ ದಿನಕೊಂದರೆಂತೆ ಹೊಸ ಕಂಪೆನಿಗಳು! ಆದರೆ ವರ್ಷ ಕಳೆಯುವುದರೊಳಗೆ ಇವುಗಳಲ್ಲಿ ಸುಮಾರು 90 ಕಂಪನಿಗಳು ನೆಲ ಕಚ್ಚಿದವು. ಉಳಿದ ಕಂಪನಿಗಳೂ ಸಹ ಇನ್ನೊಂದು ವರ್ಷ ಅನ್ನುವಾಗಲೇ ತಿಣುಕಾಡತೊಡಗಿದವು.ವಿಪರ್ಯಾಸವೆಂದರೆ ಇವುಗಳಲ್ಲಿ ಹೆಚ್ಚಿನವು ಬೆಂಗಳೂರಿನ ಕಂಪನಿಗಳು.

ಛೆ..! ಒಂದು ಕಂಪನಿ, ನೂರಾರು ಹೊಸ ಯೋಚನೆಗಳು, ಯೋಜನೆಗಳು. ಅವುಗಳನ್ನು ಹುಟ್ಟುಹಾಕುವ ನೂರಾರು ಸೃಜನಶೀಲ ನಾಯಕರು.. ಹಗಲು ರಾತ್ರಿ ಎನ್ನದೆ ಯೋಚಿಸಿ, ಅವಲೋಕಿಸಿ ಶುರು ಮಾಡುವ ಒಂದು ಕಂಪನಿ, ಯಾವುದೊ ಒಂದು ಅಲ್ಪ ಕಾನುನಿಗೋ, ಯಾರದೋ ಕಪಿಮುಷ್ಠಿಗೋ, ಕೊಂಚ ಅತಿಯಾಸೆಗೋ ಅಥವಾ ಗೆಲ್ಲುತ್ತೇವೆ ಎನ್ನುವ ಭರವಸೆ ಇದ್ದರೂ ಸಹಾಯ/ಇನ್ವೆಸ್ಟ್ ಮಾಡುವ ಕೈಗಳು ಸಿಗದೇ ಇರುವ ಕಾರಣಕ್ಕೋ ಏನೋ, ದಿನಗಳು ತಿಂಗಳುಗಳಾಗುವ ಮೊದಲೇ ಮುಚ್ಚಲ್ಪಡುತ್ತಿವೆ. ನೂರಾರು ಕಂಪನಿಗಳನ್ನು ಶುರುಮಾಡಬಲ್ಲ ಕೆಪ್ಯಾಸಿಟಿ ಇರುವ ಭಾರತೀಯರು, ಅದೇ ಕಂಪೆನಿಗಳನ್ನು ಮುನ್ನೆಡುಸುವಲ್ಲಿ ಎಡವುತಿರುವುದೇಕೆ?



ಇಷ್ಟೆಲ್ಲಾ ಮುಚ್ಚಲ್ಪಡುತಿರುವ ಅಥವಾ ಮುಚ್ಚಿರುವ ಕಂಪನಿಗಳು ಮತ್ತೊಮೆ ಜೀವ ಪಡೆದರೆ ಅಥವಾ ಅವಕ್ಕೆ ಜೀವವನ್ನು ತುಂಬಿದರೆ ದೇಶದ ಅಭಿವೃದ್ಧಿಯ ಹಾದಿ ಇನ್ನೂ ಸುಗಮವಾಗಬಹುದೇ?


ಬೀಳುತ್ತಿರುವ ದೇಶಿಯ ಕಂಪೆನಿಗಳನ್ನು ಉಳಿಸಲು ಎಷ್ಟು ಕಷ್ಟಕರವಾದ ಮಾರ್ಗಗಳಿವೆಯೋ, ಅಷ್ಟೇ ಸುಲಬವಾದ ಮಾರ್ಗಗಳು ಅವುಗಳನ್ನು ಮುಚ್ಚಲು ಇವೆ. 'Closure of Sick PSUs' ಎಂಬ ಹಣೆಬರಹದೊಂದಿಗೆ ಒಂದು ನೋಟೀಸ್ ಹೊರಡಿಸಿ ದಶಕಗಳಿಂದ ಬೆಳೆದುಬಂದ ಕಂಪೆನಿಗಳನ್ನು ನಿಮಿಷಗಳಲ್ಲಿ ಮುಚ್ಚಬಲ್ಲ ಕಾನೂನು ಇರುವಾಗ ಬೀಳುತ್ತಿರುವ ಕಂಪನಿಗಳ ರಕ್ಷಣೆ ಕಷ್ಟವೇ ಎನ್ನಬಹುದು. ಒಮ್ಮೆ ಯೋಚಿಸಿ ನೋಡಿ, ಒಂದು ಕುಂಟುತ್ತಿರುವ ಕಂಪನಿಯನ್ನು ಮುಚ್ಚುವುದರಿಂದ ದೇಶಕ್ಕೆ ಆಗುವ ಅರ್ಥಿಕ ನಷ್ಟಕ್ಕೆ ಕಡಿವಾಣ ಹಾಕಿದಂತಾಗುವುದೇನೋ ನಿಜ. ಆದರೆ, ಪುನ್ಹ ಅಂತಹದೊಂದು ಕಂಪನಿಯನ್ನು, ಅಂತಹ ನಾಯಕರನ್ನು ಅಲ್ಪಸಮಯದಲ್ಲಿ ಮತ್ತೆ ಹುಟ್ಟುಹಾಕಲು ಸಾದ್ಯವಿದೆಯೇ? ಭಾರತೀ ಶಿಪ್ಯಾರ್ಡ್ನನ್ನು ಮುಚ್ಚಿಸಿ ನಾಳೆ ಕ್ಷಣಮಾತ್ರದಲ್ಲಿ ಅಂತಹ ಮತ್ತೊಂದು ಕಂಪನಿಯನ್ನು ಕಟ್ಟಲು ಸಾದ್ಯವೇ? ಯಾರ ಸಹಾಯವಿಲ್ಲದೆ ಶಿಪ್ ಬಿಲ್ಡಿಂಗ್ ಯಾರ್ಡ್ಗಳನ್ನು ನಿರ್ಮಿಸಿ, ಕೊನೆ ಪಕ್ಷ ಸಣ್ಣ ಪುಟ್ಟ ಹಡಗುಗಳಿಗಾದರೂ ಬೇರೆ ದೇಶವನ್ನೇ ನೆಚ್ಚಿ ಕೂರುವ ವಿಪರ್ಯಾಸವನ್ನು ತಪ್ಪಿಸಿದ್ದ ಪ್ರಕಾಶ್ ಹಾಗು ವಿಜಯ್ ಅವರಂತ ನಾಯಕರನ್ನು ಮತ್ತೆ ಸೃಷ್ಟಿಸಬಹುದೇ? ವಾಚ್ ಎಂದರೆ HMT, ಟೆಲಿವಿಷನ್ ಅಂದರೆ BPL ಎನ್ನುವಂತಹ ಜನಮನ್ನಣೆ ಗಳಿಸಿದ್ದ ಮೊತ್ತೊಂದು ಕಂಪನಿಯನ್ನು ನಾವು ಸೃಷ್ಟಿಸಬಲ್ಲೆವ? ಅಳಿಸಿಹಾಕುವ ಮೈಂಡ್ ಸೆಟ್ ಅನ್ನು ಬಿಟ್ಟರೆ ಉಳಿಸಿಕೊಳ್ಳುವ ಯೋಚನೆ ನಮ್ಮಲ್ಲಿ ಬರಲಿಲ್ಲ. ಈ ‘ಡಿಲೀಟ್’ ಎನ್ನುವ ಹೊಸ ಜಮಾನದಲ್ಲಿ, ಕಣ್ಣು ಮಿಟುಕಿಸುವಲ್ಲಿ ಕೈಗೆ ಬಂದು ಸೇರುವ ವಸ್ತುಗಳಿರುವಾಗ, ಹಾಳಾದದನ್ನು ಅಥವಾ ಸ್ವಲ್ಪ ಬಿರುಕು ಬಿಟ್ಟಿದ್ದರೂ ಸಹ ಆ ವಸ್ತು ತಮಗೆ ಬೇಡವೆಂದು ಬಿಸಾಡಿ ಹೊಸದರ ಅನ್ವೇಷಣೆಯಲ್ಲಿ ತೊಡಗುತ್ತೇವೆ. ಆದರೆ ಅಂದೆಲ್ಲ ಇದ್ದದ್ದು ಬಡತನ, ಜೊತೆಗೆ ಅನಿವಾರ್ಯತೆ. ಮುರಿದ ಹಾಗು ಬಿರಿದ ಕಂಪನಿಗಳಿಗೆ, ಬಿರುಕು ಮುಚ್ಚಿ, ಉಳಿಯಲು ಬೆಂಬಲ ಕೊಟ್ಟ ಕಾರಣಕ್ಕೆ ಅಂದು ಕೆಲವು ಕಂಪನಿಗಳು ದಶಕಗಳ ವರೆಗೂ ದೇಶದ ಬೆನ್ನೆಲುಬುಗಳಾದವು.



Happened Is Happened. ಈಗ ಹೋದ ಸಮಯದ ಬಗ್ಗೆ ಚಿಂತಿಸಿ ಪ್ರಯೋಜನವಿಲ್ಲ. ಆದರೆ ಇವುಗಳೆಲ್ಲದರಿಂದ ನಮ್ಮ ದೇಶಿಯ ಕೈಗಾರಿಗ ವಲಯ ಹಲವಾರು ಪಾಠಗಳನ್ನೂ ತಿಳಿಸಿದೆ. ಸಂಸ್ಥೆಯ ಶೇರ್ ವ್ಯಾಲ್ಯೂವನ್ನು ಹೆಚ್ಚಿಸಲು ಕಂಪನಿಯ ಆದಾಯವನ್ನು ಇರುವುದಕ್ಕಿಂತ ಹೆಚ್ಚು ತೋರಿ ದೇಶದ ಕಳಂಕಿತ ಕಂಪನಿಗಳ ಸಾಲಿನಲ್ಲಿ ನಿಂತ ಸತ್ಯಂ, ಇಂದು ವಂಚಿಸುವ ಕಂಪನಿಗಳಿಗೆ ಒಂದು ನೀತಿಪಾಠದಂತೆ ಗೋಚರಿಸುತ್ತದೆ. 2G ಸ್ಪೆಕ್ಟ್ರಮ್ ಹಗರಣ ಇನ್ನು ಮುಂದೆ ರಾಜಕಾರಣಿಗಳಲ್ಲದೆ ಕಂಪನಿಗಳೂ ತಪ್ಪೆಸಗುವ ಮುನ್ನ ಎದೆಯಲ್ಲಿ ಡವ-ಡವ ಹುಟ್ಟು ಹಾಕುತ್ತದೆ! ಹಾಗಾಗಿ ಇಂದು ತನ್ನ ಕಂಪನಿ ಮುಚ್ಚಲ್ಪಟ್ಟಿದೆ ಎಂದರೆ ಅದರಲ್ಲಿ ತನ್ನ ನೇರ ಹೊಣೆ ಎಷ್ಟಿದೆ ಎಂಬ ಪ್ರೆಶ್ನೆಯನ್ನು ಅದರ ನಾಯಕರು/ಮಾಲೀಕರು ಹಾಕಿಕೊಳ್ಳಬೇಕು. ಆದರೆ ಈ ರೀತಿ ಪ್ರತಿಷ್ಟಿತ ಕಂಪನಿಗಳು ನಮ್ಮ ದೇಶದಲ್ಲಿ ಕಾರಣಾಂತರಗಳಿಂದ ಮುಚ್ಚುತ್ತಿರುವುದರಿಂದ ಆಗುತ್ತಿರುವ ಪರಿಣಾಮ ದೇಶದ ಬೆಳವಣಿಗೆಗೆ ಬಹಳ ವ್ಯತಿರಿಕ್ತವಾದುದು. ಹೂಡಿಕೆದಾರರು ಇಂದು ಪಬ್ಲಿಕ್ ಸೆಕ್ಟರ್ ಕಂಪನಿಗಳಲ್ಲಿ ಹಣ ಹೂಡಲು ಇಂದು ಮುಂದು ನೋಡುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಿಯ ಕಂಪನಿಗಳ ಬಗೆಗಿನ ಗ್ರಹಿಕೆ (Perception) ಹಾಳಾಗುತ್ತಿದೆ. ಅಂದು ಕೇವಲ ಸತ್ಯಂ ಕಂಪನಿ ಮುಚ್ಚಲ್ಪಟ್ಟಾಗ ಅದರ ಸಾವಿರಾರು ನೌಕರರು ಬೀದಿಗೆ ಬಂದಿದ್ದರು. ಇಂದು ಅದೇ ರೀತಿ ಅದೆಷ್ಟು ಸತ್ಯಂಗಳು ಮುಚ್ಚುತ್ತಿವೆ?! ಇನ್ನೆಷ್ಟು ಜನ ಬೀದಿಗೆ ಬೀಳಬಹುದು? ಅಲ್ಲದೆ ನಮ್ಮ ಸರ್ಕಾರಗಳೇನೋ ಮುಚ್ಚುತಿರುವ ಕಂಪನಿಗಳನ್ನು ಪುನರುಜ್ಜೀವಗೊಳಿಸಲು ಆದಷ್ಟು ಕಾರ್ಯಕ್ರಮಗಳನ್ನು ತಂದಿದೆಯಾದರೂ ಅವೆಲ್ಲ ಕಾರ್ಯಗತಗೊಂಡಿರೋ ಸುದ್ದಿಗಳು ತೀರಾ ವಿರಳ. ಮೇಲಾಗಿ ಕಂಪನಿಗಳ ಲಾಭದ ಅರ್ಧಕಿಂತ ಜಾಸ್ತಿ ವಿವಿಧ ಬಗೆಯ ತೆರಿಗೆಗಳೇ ಇರುವಾಗ ಸೋಲುತ್ತಿರುವ ಕಂಪನಿಗಳು ಮೇಲೆ ಏಳುವುದು ಹೇಗೆ?
ಮೊನ್ನೆ ಮೊನ್ನೆಯಷ್ಟೇ ಬ್ಯಾನ್ ಆದ ನೆಸ್ಲೆ ಅವರ ಮ್ಯಾಗಿ, ದೇಶದ ತರ್ಕರಹಿತ ಕೆಲವು ಕಾನೂನುಗಳಿಗೆ ಒಂದು ಉದಾಹರಣೆ ಅಷ್ಟೇ. ಸೀಸದ /Lead (ಸಾಮಾನ್ಯವಾಗಿ ಎಲ್ಲ ಆಹಾರ ಪದಾರ್ಥಗಳಲ್ಲಿ ಕಂಡು ಬರುವ ಒಂದು ಬಗೆಯ ಲೋಹ) ಪ್ರಮಾಣ ಜಾಸ್ತಿಯಿದೆ ಎಂದು ಉತ್ಪಾದನೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ, ರಾಶಿ ರಾಶಿ ಪ್ಯಾಕ್ ಗಳನ್ನು ಸುಟ್ಟುಹಾಕಿಸಿದ ಕಾನೂನು ಇದೆ ಪ್ರಮಾಣ UK, ಸಿಂಗಾಪುರ್ ಹಾಗು ಕೆನಡಾದಂತ ಅಭಿವೃದ್ಧಿ ಹೊಂದಿದ್ದ ರಾಷ್ಟ್ರಗಳಲ್ಲಿ 'This Limit Is Completely Alright' ಎನ್ನುವ ಸುದ್ದಿಯನ್ನು ಕೇಳಿ ತೆಪ್ಪಗಾಯಿತು. ನಮ್ಮಲ್ಲಿ ಬೇಕಾದ ಕಡೆ ಇರಬೇಕಾದ ಕಾನೂನುಗಳು ಬೇಡವೆಂದೆಡೆ ತುಸು ಜಾಸ್ತಿಯೇ ಇವೆ ಎಂದನಿಸುತ್ತದೆ. ಇಂತಹದರಲ್ಲಿ ಯಾರು ತಾನೇ ಹಣ ಹೂಡಲು ನಾ ಮುಂದು, ತಾ ಮುಂದು ಎಂದು ಬರುವರು ಹೇಳಿ.


ಅಂದು ಅವನತಿಯ ಹಾದಿಯಲ್ಲಿದ್ದ ಕಂಪನಿಗಳು ಎದ್ದು ನಿಲ್ಲಲು ಬೇಕಾಗಿದ್ದದ್ದುಬೇಕಾದದ್ದು ಕೆಲವು ಕೋಟಿಗಳು ಮಾತ್ರ. ಸರ್ಕಾರವನ್ನು ಬಿಡಿ, ಲಕ್ಷ-ಲಕ್ಷ ಕೋಟಿ ಖರ್ಚು ಮಾಡಿ ಪಕ್ಷದ ಗೆಲುವಿಗೆ ಹವಣಿಸುವ ನಮ್ಮ ರಾಜಕೀಯ ಬಣಗಳಾದರೂ ದೇಶದ ಹಿತದೃಷ್ಟಿಯಿಂದ ಇಂತಹ ಕಂಪನಿಗಳಿಗೆ ಸಾಲದ ರೂಪದಲ್ಲಾದರೂ ಸಹಾಯ ಮಾಡಿ ಪುಣ್ಯ ಕಟ್ಟಿಕೊಳ್ಳಬಹುದಾಗಿತ್ತು.ಇಂದು ನಾವುಗಳು ಮೇಕ್ ಇನ್ ಇಂಡಿಯಾ ಎನ್ನುತ ಹೆಮ್ಮೆಯಿಂದ ಮಾತಾಡುತ್ತೇವೆ. 'ಮೇಕ್ ಇನ್ ಇಂಡಿಯ ಬಂದಾಯ್ತು ಆದರೆ, ಮೇಡ್ ಇಂಡಿಯಾಗಳ ಕತೆ ಏನಾಯ್ತು..?' ಎಂಬುದನ್ನು ಸಹ ನಾವು ಕೇಳಿಕೊಳ್ಳಬೇಕು. ಇಂದು ಹೊಸತನ್ನು ಸೃಷ್ಟಿಸಿ, ಅದನ್ನು ಪರಿಕ್ಷಿಸುವುದರ ಬದಲು/ಜೊತೆಗೆ ಈಗಾಗಲೇ ಬೀಳುತ್ತಿರುವ ಕಂಪನಿಗಳ ಪುನರುಜ್ಜಿವದ ಕಡೆಗೂ ಹೆಚ್ಚಾಗಿ ಚಿಂತಿಸಬೇಕು. ಇಲ್ಲವಾದರೆ ನಮ್ಮ ಈ ‘ಡಿಲೀಟ್ ಜಮಾನ’ದಲ್ಲಿ ಮತ್ತೊಮ್ಮೆ ಡಿಲೀಟ್ ಬಟನ್ ಕಡೆ ಮುಖ ಮಾಡಬೇಕಾದೀತು, ಎಚ್ಚರಿಕೆ!


PC : 1971 THE HINDU ARCHIVES

ಪ್ರಸ್ತುತ : ಎಕ್ಸ್ ಬಾಕ್ಸ್, ಪ್ಲೇ ಸ್ಟೇಷನ್ಗಳ ಯುಗದಲ್ಲಿ ಮೂಡಬಲ್ಲರೇ ನಾಳಿನ ನಮ್ಮ ನಾಯಕರು?

ಬೆಳೆಯುವ ಸಸಿ ಮೊಳಕೆಯಲ್ಲಿ. ನಾಳಿನ ನಾವು ಇಂದಿನ ಗ್ರಹಿಕೆಯಲ್ಲಿ!

ಕೆಲ ತಿಂಗಳ ಹಿಂದಷ್ಟೇ ಅಮೇರಿಕಾದ ಒರ್ಲ್ಯಾಂಡೊದಲ್ಲಿ ನೆಡೆದ ಶೂಟೌಟ್ ಗೆ ಕಾರಣೀಕರ್ತನಾದ ಯುವಕನಾಗಲಿ ಅಥವಾ ಶಾಲೆಯೊಳಗೆ ಗನ್ ಅನ್ನು ತಂದು ತನ್ನ ಸಹಪಾಠಿಗಳ ಮೇಲೇ ಗುಂಡಿನ ಸುರಿಮಳೆಗೈದ ಹುಡುಗನೇ ಆಗಲಿ ಅಥವಾ ಪ್ರಪಂಚದ ಮತ್ಯಾವುದೇ ಮೂಲೆಯಲ್ಲಿ ಹಿಂಸಾತ್ಮಕ ಕೃತ್ಯಗಳು ಜರುಗಿದಾಗ ಖೇದನೀಯವೆಂಬಂತೆ ಯುವಕರ ಹೆಸರುಗಳೇ ಹೆಚ್ಚಾಗಿ ಕೇಳಿ ಬಂದಾಗಲೆಲ್ಲ ಮೇಲಿನ ವಾಕ್ಯ ಚಿತ್ತದ ಸುತ್ತ ಸುತ್ತುತ್ತದೆ. ಉಜ್ವಲ ಭವಿಷ್ಯದ ಕನಸನ್ನು ಹೊತ್ತು ಬದುಕನ್ನು ಕಟ್ಟಿಕೊಳ್ಳಬೇಕಾದ ಕಾಲದಲ್ಲಿ ಇಂತಹ ವಿದ್ವಂಸಕ ಕೃತ್ಯಗಳನ್ನು ಮಾಡಹೊರಟಿರುವ ಯುವಕರ ಮನಸ್ಥಿತಿಯು ಅದೆಷ್ಟರ ಮಟ್ಟಿಗೆ ಅಲ್ಲೊಲ್ಲ ಕಲ್ಲೋಲವಾಗಿರಬಹುದು ಎಂದನಿಸುತ್ತದೆ. ಜೀವನವೇ ಏನೆಂದು ಪಕ್ವವಾಗಿ ಅರಿತಿರದ ವಯಸ್ಸಿನಲ್ಲಿ ಇನ್ನೊಂದು ಜೀವವನ್ನು/ಜೀವಗಳನ್ನು ಕಡ್ಡಿ ಮುರಿದಂತೆ ಮುರಿದು ಬಿಸಾಡುವ ಮನೋಭಾವನೆ ಯುವಕರಲ್ಲಿ ಅದೇಗೆ ಮೂಡುತ್ತದೆ? ಆಧುನಿಕ ಜೀವನ ಶೈಲಿಯೇ ಇದಕ್ಕೆ ಪ್ರತ್ಯಕ್ಷ ಕಾರಣವೆ?
ಇಂದಿನ ಯುವಕರೇ ನಾಳಿನ ನಾಯಕರು. ದೇಶ ಕಟ್ಟುವವರು. ದಿನದ ಇಪ್ಪತ್ನಾಲ್ಕೂ ಘಂಟೆಯೂ ಬಾಂಬು ಮಚ್ಚುಗಳಿಂದ ಆವಿಷ್ಕರಿಸಿದ ಆನ್ಲೈನ್ ಆಟಗಳನ್ನೇ ಆಡುತ್ತಾ ಕೂರುವ ನಾವುಗಳು (ಯುವಕರು) ನಾಳಿನ ದೇಶವನ್ನು ಕಟ್ಟುವ ಜವಾಬ್ದಾರಿಯನ್ನು ಹೊರಬಲ್ಲೆವಾ? ನಾಯಕರಿಗಿರಬೇಕಾದ ಅಂತಹ ಶಾಂತಿ, ತಾಳ್ಮೆ, ಸಂಯಮ ಇಂತದ ವಾತಾವರದಲ್ಲಿ ಬೆಳೆಯುವ ನಮ್ಮಲ್ಲಿ ಮೂಡಬಲ್ಲದೆ?

ಮಾನವ ಸಂಪೂರ್ಣ ಯಾಂತ್ರಿಕತೆಯ ಜಗತ್ತನ್ನು ಸೃಷ್ಟಿಸುವ ಸನ್ನಿಹದಲ್ಲಿದ್ದಾನೆ. ಆಟ-ಪಾಠಗಳಿಂದಿಡಿದು ಊಟ-ನಿದ್ರೆಗಳಿಗೂ ಇಂದು ಯಂತ್ರಗಳು ಬಂದಿವೆ. ಕೆಸರುಗದ್ದೆಯಲ್ಲಿ ಕುಣಿದು ಕುಪ್ಪಳಿಸಿ ಬಂದು, ಅಮ್ಮನ ಕೈತುತ್ತು ತಿಂದು, ಮನೆಯ ಮಾಳಿಗೆಯ ಮೇಲೆ ಚಂದಮಾಮನನ್ನು ನೋಡುತ್ತಾ ತಂಪಾದ ರಾತ್ರಿಯಲ್ಲಿ ಮಲಗುವ ದಿನಗಳು ಮುಗಿದು ಅದೆಷ್ಟೋ ದಿನಗಳಾಗಿವೆ. ಅದ್ಯಾವುದೋ ದೇಶದಲ್ಲಿ ಅದೆಷ್ಟೋ ದಿನಗಳ ಹಿಂದೆ ಸುತ್ತಿ ಕೊಟ್ಟ ಒಣ ರೊಟ್ಟಿಯನ್ನು ಖರೀದಿಸಿ ತಂದು, ಓವನ್ನಲ್ಲಿ ಇಟ್ಟು ಹೊಟ್ಟೆ ಕೆಟ್ಟು, ನಾಳೆ ಅದನ್ನು ಬಿಟ್ಟು ಮತ್ತೊಂದು ದೇಶದ ಮತ್ಯಾವುದೋ ರೊಟ್ಟಿಗೆ ಹಣವನ್ನು ಹೆಚ್ಚಾಗಿ ಕೊಟ್ಟು ಎಸಿ ರೂಮುಗಳಲ್ಲಿ ಜೀವನ ತಳ್ಳುವ ಮಂದಿಗಳು ಇಂದು ಹೇರಳವಾಗುತ್ತಿದ್ದಾರೆ. ಕೆಲಸದ ಕಾರಣಕ್ಕಾಗಿ ಹೆಚ್ಚಾಗಿ ಮನೆಯಿಂದ ದೂರವಿದ್ದು ನಗರಗಳಲ್ಲಿ ಬದುಕುವ ಇಂದಿನ ಯುವಜನತೆ ಅಮ್ಮನ ತುತ್ತಾಗಲಿ ಅಥವಾ ತುಂಬು ಕುಟುಂಬದ ಪರಿಸರವನ್ನಾಗಲಿ ಆಸ್ವಾದಿಸದೆ ಬೆಳೆಯುತ್ತಿದ್ದಾರೆ. ಹೆಚ್ಚೆಂದರೆ ವರ್ಷಕ್ಕೆ ಒಮ್ಮೆಯೊ ಅಥವಾ ಎರಡು ಬಾರಿ ಊರಿಗೆ ಹೋಗಿಬಂದರೆ ಸಾಕೆನ್ನುವ ಮನೋಭಾವ. ಬಂದರೂ ಊರಿನ ಸಮಸ್ಯೆಗಳಿಗೆ ಬೇಸತ್ತು ಆದಷ್ಟು ಬೇಗ ಕಾಲು ಕೀಳುವ ಹುನ್ನಾರದಲ್ಲಿರುತ್ತಾರೆ. ಒಮ್ಮೆ ಊರು ಬಿಟ್ಟು ನಗರ ಸೇರಿದರೆ ಮುಂದಿನ ಆರು ತಿಂಗಳೋ ಅಥವಾ ವರ್ಷವೋ ಊರ ಕಡೆ ತಲೆ ಹಾಕರು. 'ಬೇಕಾದ್ರೆ ನೀವೇ ಬನ್ನಿ ಎನ್ನುತ' ಪೋಷಕರನ್ನು ಕೆಲದಿನಗಳ ಮಟ್ಟಿಗೆ ನಗರಕ್ಕೆ ಕರೆಸಿಕೊಳ್ಳುತ್ತಾರೆ. ಹೀಗೆ ನಗರವಾಸಿಯಾಗಿ ಕೆಲದಿನಗಳಲ್ಲೇ ಮದುವೆ. ಮದುವೆಯ ಕೆಲ ವರ್ಷಗಳಲ್ಲೇ ಮಗು ಅಥವಾ ಮಕ್ಕಳು.

ಈ ಮಕ್ಕಳೇ ಯಾಂತ್ರಿಕತೆಯ ಲೋಕಕ್ಕೆ ತಮ್ಮನ್ನು ದಬ್ಬಿಸಿಕೊಳ್ಳುವ ನಾಳಿನ ಪ್ರಜೆಗಳು!

ಒಂದು ಜೀವಕ್ಕೆ ಜನ್ಮವಿತ್ತ ಮಾತ್ರಕ್ಕೆ ಪೋಷಕರಿಗೆ ಮಕ್ಕಳ ಮೇಲೆ, ಅವರ ಭವಿಷ್ಯದ ಮೇಲೆ ಮೂಡುವ ಕಾಳಜಿ ಅತಿಸಹಜ. ಆದರೆ ಇದು ಇತ್ತೀಚಿನ ದಿನಗಳಲ್ಲಿ ತೀರಾ ಅತಿರೇಕವಾಗಿದೆ. 'ಅಮ್ಮಾ ' ಎಂಬ ಪದವನ್ನೇ ಸರಿಯಾಗಿ ಉಚ್ಚರಿಸಲಾಗದ ವಯಸ್ಸಿಗೆ ಬೇಬಿ ಸಿಟ್ಟಿಂಗ್ಸ್ ಎಂಬ ಕೊಪಕ್ಕೆ ಕಳುಹಿಸಿ ತೂಕಡಿಸುವ ತಲೆಯೊಳಗೆ ನೂರಾರು ಹೊಸ ಪದಗಳನ್ನು ತುಂಬಲು ಹೇಳಿ ಆಫೀಸಿಗೆ ಹೊರಟರೆ ಪೋಷಕರ ಕರ್ತ್ಯವ ಮುಗಿದಂತೆ. ಸುಖಾ-ಸುಮ್ಮನೆ ದುಂದುವೆಚ್ಚಗಳನ್ನು ಹೆಚ್ಚಾಗಿಸಿಕೊಂಡಿರುವ ಇಂದಿನ ಪೋಷಕರು ‘ಅನಿವಾರ್ಯತೆ’ಯ ನೆಪವೊಡ್ಡಿ ಮಕ್ಕಳಿಂದ ದೂರ ಉಳಿಯುತ್ತಾರೆ. ಹೊಸಲೋಕವನ್ನು ವಿಸ್ಮಯ ಕಣ್ಣುಗಳಿಂದ ನೋಡುವ ಆ ಕಂದಮ್ಮಗಳು ಇನ್ಯಾರದ್ದೋ ತೊಡೆಯ ಮೇಲೆ ಆಡಿ ಬೆಳೆಯುತ್ತವೆ. ಅಮ್ಮನ ಸೀರೆಯ ಸೆರಗನ್ನು ಬಾಯೊಳಗೆ ತೂರಿಕೊಂಡು ಮೆನೆಯ ಸುತ್ತೆಲ್ಲ ಆಕೆಯ ಹಿಂದೆ ಓಡುತ್ತಾ, ಬಿದ್ದು ಎದ್ದು, ಮತ್ತು ಹೆದರಿ ಅತ್ತರೆ, ಅಮ್ಮ ಮಗುವನ್ನು ಎದೆಗವುಚಿಕೊಂಡು ಸಮಾಧಾನ ಮಾಡಿದರೆ, ಆಹಾ..ಮಗುವಿಗೆ ಅಲ್ಲೇ ಒಂದು ಧೈರ್ಯ. ಮನದೊಳಗಿನ ಅಂಜಿಕೆ ಭಯವೆಲ್ಲ ಮಾಯಾ! ಆದರೆ ಅದು ಇಂದಿನ ಎಳೆಯ ಕಂದಮ್ಮಗಳಿಗೆ ಸಿಗದಾಗುತ್ತಿದೆ. ಮುಕ್ತವಾಗಿ ಅಳಲೂ ಅವಕ್ಕೆ ಭಯ. ಎಳೆಯ ವಯಸ್ಸಿನಲ್ಲಿ ಮೂಡುವ ಎಳೆಯ ಭಾವನೆಗಳಿಗೆ ಇನ್ಯಾರೋ ಒಬ್ಬರು ಬ್ರೇಕ್ ಹಾಕುತ್ತಾರೆ. ಡಿಸಿಪ್ಲಿನ್ನನ್ನ ಕಲಿಸುವ ಸಾಹಸದಲ್ಲಿ ಹೀಗೆ ದಿನವೆಲ್ಲಾ ಹೊರಗಿಟ್ಟು ಮಕ್ಕಳನ್ನು ಒಳಗೊಳಗೇ ಒಂಟಿಗಾರನನ್ನಾಗಿ ಮಾಡುತ್ತಿದ್ದಾರೆ ಆಧುನಿಕ ಪೋಷಕರು. ಒಂದು ತುಂಬು ಸಂಸಾರವಾದರೆ ಮಕ್ಕಳಿಗೆ ಅಜ್ಜಿಯ ಕಥೆಯೋ ಅಥವಾ ಅಜ್ಜನ ಅಂಬಾರಿಯೋ ಮನರಂಜನೆಯನ್ನು ನೀಡುತ್ತದೆ. ಹಿರಿಯ ಮನಗಳ ಹಾರೈಕೆ ಮಕ್ಕಳಿಗೆ ನೀತಿ ಪಾಠಗಳೊಟ್ಟಿಗೆ ಕೂಡಿ ಬಾಳುವುದನ್ನೂ ಹೇಳಿಕೊಡುತ್ತದೆ. ಆದರೆ ಆಧುನಿಕ ಜೀವನ ಶೈಲಿ ಇಂದಿನ ಮಕ್ಕಳಿಗೆ ಇವೆಲ್ಲವನ್ನೂ ಮರೀಚಿಕೆಯನ್ನಾಗಿಸಿದೆ.

ಇಂತಹ ಸಮಯದಲ್ಲಿ ಮಕ್ಕಳಿಗೆ ಪ್ರಿಯವಾಗಿ ಕಾಣುವುದು ಅಪ್ಪನ ಅಥವಾ ಅಮ್ಮನ ಮೊಬೈಲ್ ಫೋನುಗಳು. ಸಂಜೆ ಮನೆಗೆ ಬಂದು ಮೊಬೈಲ್ ಫೋನ್ ಅನ್ನು ಕೈಯಲ್ಲಿಟ್ಟುಕೊಂಡರೆ ಅವಕ್ಕೆ ಜಗತ್ತೇ ಬೇಡವಾಗುತ್ತದೆ. 'ನನ್ನ್ ಮಗು ಇಷ್ಟ್ ವಯಸ್ಸಿಗೆ ಫೋನ್ ಹೇಗೆ ಆಪರೇಟ್ ಮಾಡುತ್ತೆ ನೋಡಿ' ಎಂದು ಕೆಲವರು ಹುಬ್ಬಿದರೆ, ಇನ್ನೂ ಕೆಲವರು ಅದರ ಕೈಯಿಂದ ಫೋನ್ ಅನ್ನು ಕಸಿದುಕೊಂಡರೆ ಎಲ್ಲಿ ಅತ್ತು ಬಿಡುವುದೋ ಎಂದು ಅಂಜಿ ಅದರ ಪಾಡಿಗೆ ಅದನ್ನು ಬಿಡುತ್ತಾರೆ. ಸಂಜೆ ಶಾಲೆಯಿಂದ ಮನೆಗೆ ಬಂದು ಆಟೋಟದಲ್ಲಿ ಬಾಗಿಯಾಗುವ ಬದಲು ಮಗು ಮೊಬೈಲ್ ಫೋನು, ವಿಡಿಯೋ ಗೇಮ್ ಗಳಲ್ಲಿ ಮಗ್ನವಾಗುತ್ತದೆ. ಆ ಗೇಮ್ ಗಳೋ, ಕ್ರೌರ್ಯತೆಯ ಉತ್ತುಂಗದಲ್ಲಿರುತ್ತವೆ. ಬಾಂಬು, ಮಚ್ಚು, ಗನ್ ಗಳೇ ಹೆಚ್ಚಿನ ಗೇಮ್ಗಳ ಸಾಧನಗಳಾಗಿರುತ್ತವೆ. ಒಂದು ಸಿಟಿಯೊಳಗೆ ಜಿಗಿಯುವುದು, ಅಲ್ಲಿ ಕೆಲವರನ್ನು ಕೊಲ್ಲುವುದು, ಕೊಂದು ಪೋಲಿಸರಿಂದ ತಪ್ಪಿಸಿಕೊಂಡು ಓಡುವುದು. ಹೀಗೆ ಬೆಳೆಯುವ ಮನಗಳು ವಿಕೃತ ಕೃತ್ಯಗಳನ್ನು ಅತಿ ಸಾಮನ್ಯವಂತೆ ಗ್ರಹಿಸುತ್ತವೆ. ಎಲ್ಲಿಂದಲೋ ನಿಜವಾದ ಗನ್ ಗಳನ್ನು ತಂದು ಮೀನಾ-ಮೇಷ ಎಣಿಸದೆ ಜನರ ಮೇಲೆ ಗುಂಡಿನ ಸುರಿಮಳೆಗೈಯುವ ಎಳೆಯ ಮನಗಳ ತರಬೇತಿ ಇಲ್ಲಿಂದಲೇ ಶುರುವಾಗುವುದೆ!? ಇದು ಯೋಚಿಸಬೇಕಾದ ವಿಷಯ. ಅಲ್ಲದೆ ಇದು ದೈಹಿಕ ಅಸಮತೋಲನವಲ್ಲದೆ ಮಾನಸಿಕ ಅಸ್ವಸ್ಥೆಯ ಉಗಮಕ್ಕೂ ನಾಂದಿಯಾಗುತ್ತವೆ. ವಿಪರ್ಯಾಸವೆಂದರೆ ಈ ‘ಚಟ’ ಇತ್ತೀಚಿನ ದಿನಗಲ್ಲಿ ವಯಸ್ಸಿಗೆ ಮೀಸಲಾಗದಿರುವುದು! ವಯಸ್ಸು ಮೂವತ್ತಾದರೂ ತಲೆ ಕೂದಲು ಗಡ್ಡವನ್ನು ಮಾನಸಿಕ ರೋಗಿಗಳಂತೆ ವಿಕೃತ ವಾಗಿ ಬಿಟ್ಟು Xbox, PS4 ಹಾಗು ಇನ್ನಿತರ ಗೇಮಿಂಗ್ ಉಪಕರಣಗಳ ಮುಂದೆ ಸಿಕ್ಕ ಕಾಲವನ್ನೆಲ್ಲಾ ಹರಣ ಮಾಡುವ ಯುವಜನತೆ ಹೆಚ್ಚಾಗುತ್ತಿದೆ. ತಮ್ಮ ತಿಂಗಳ ದುಡಿಮೆಯನ್ನೆಲ್ಲವನ್ನೂ ಕೇವಲ ಒಂದು ವಿಡಿಯೋ ಗೇಮ್ಗೆ ಸುರಿಯುವರೂ ಇದ್ದಾರೆ! ಹೀಗೆ ಒಂದು ಭಯಾನಕವಾದ ವರ್ಚುಯಲ್ ಲೋಕವೊಂದು ಅರಿಯದಂತೆ ಮಕ್ಕಳು ಹಾಗು ಯುವಕರರನ್ನು ತನ್ನ ಬಿಗಿದಾದ ತೆಕ್ಕೆಗೆ ಹಾಕಿಕೊಂಡಿದೆ.

ಕೇವಲ ಗೇಮಿಂಗ್ ಗಳಿಗೆ ಸೀಮಿತವಾಗಿದ್ದ ಮೊಬೈಲ್ ಫೋನುಗಳು, ಇಂಟರ್ನೆಟ್ ನ ಟಚ್ ನಿಂದ ಮಕ್ಕಳಿಗೆ ಇನ್ನೂ ಆತ್ಮೀಯವಾಗುತ್ತದೆ. ಹತ್ತು ತುಂಬುವುದರೊಳಗೆ ಫೇಸ್ಬುಕ್ ಯುಟ್ಯೂಬ್ ಅನ್ನುವ ವಿವಿಧ ಹೊಸ ಲೋಕಗಳು ಮಕ್ಕಳಿಗೆ ತೆರೆಯಲ್ಪಡುತ್ತವೆ. ಒಮ್ಮೆ ಇದರ ರುಚಿ ತಿಳಿದರೆ ಅವರಿದ ಮೊಬೈಲ್ ಫೋನ್ ಗಳನ್ನು ಬೇರ್ಪಡಿಸುವುದು ಆಗದಿರುವ ವಿಷಯ. ಏಕೆಂದರೆ ಈ ಹೊಸ ಲೋಕಗಳು ಎಷ್ಟು ನೋಡಿದರೂ ಮುಗಿಯದವು. ಒಂದು ರೀತಿ ಅನಂತವಾದವು ಎನ್ನಬಹುದು! ವಯಸ್ಸು ಹದಿನೈದು ತುಂಬುವುದರೊಳಗೆ ಪೊರ್ನ್ ವೆಬ್ಸೈಟ್ಗಳಿಂದಿಡಿದು ಡೇಟಿಂಗ್ ಆಪ್ ಗಳ ಸರಮಾಲೆಯನ್ನೇ ಮೊಬೈಲ್ನ ಲೋಕದಲ್ಲಿ ಕಾಣುತ್ತಾರೆ. ವ್ಯಸನಿಗಳಂತೆ ವರ್ತಿಸುತ್ತಾರೆ. ಸದಾ ಕಿವಿಗೊಂದು ಹಿಯರ್ ಫೋನ್ ಅನ್ನು ತೂರಿಸಿ, ಮಿಕ್ಕಿ ಉಳಿಯುವಷ್ಟು ಡೇಟಾ ಪ್ಯಾಕೇಜ್ ಗಳನ್ನು ಅತ್ತು ಕಾದಾಡಿ ಪೋಷಕರಿಂದ ಹಾಕಿಸಿಕೊಂಡು ,ಸರ್ಕಸ್ನ ಜೋಕೆರ್ ಗಳಂತೆ ವೇಷಭೂಷಣಗಳನ್ನು ಮಾಡಿಕೊಂಡು ಹೊರಟರೆ ಜಗತ್ತೇ ಬೇಡವಾಗಿ ಬಿಡುತ್ತದೆ ಇಂದಿನ ಯುವಕರಿಗೆ. ನಾಳಿನ ನಮ್ಮ ನಾಯಕರಿಗೆ!!

ಕೇಳಿದನ್ನು ಪಡೆಯುವ ತನಕ ಬಿಡದ ಹಠ ಇಂದಿನ ಮಕ್ಕಳಲ್ಲಿ ಕಾಣಬಹುದು. ಕೇಳಿದೆಲ್ಲವನ್ನು ಕೊಡಿಸಲು ಶಕ್ತವಾಗಿರುವ ಪೋಷಕರೂ ಅವರ ಈ ಅಧೋಗತಿಗೆ ಕಾರಣವೆನ್ನಬಹುದು. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ನಾಳೆಗಳನ್ನು ಭಯಸುವುದು ಎಷ್ಟು ಸಹಜವೋ ಹಾಗೆಯೇ ನಾಳಿನ ದಿನಗಳಿಗೆ (ಸಮಾಜಕ್ಕೆ) ತಮ್ಮ ಒಳ್ಳೆಯ ಮಕ್ಕಳನ್ನು ಕೊಡಬೇಕು ಎಂದರಿಯಲು ವಿಫಲರಾಗುತ್ತಿದ್ದಾರೆ. ಒಂದು ಪೆಟ್ಟು ಕೊಟ್ಟು ಸುಮ್ಮನಿರಿಸುವ ಕಾಲವೂ ಈಗಿಲ್ಲ. ಪೆಟ್ಟಿಗೆ ಹೆದರುವ ಮನಸ್ಥಿಯ ಮಕ್ಕಳೂ ಈಗಿನವರಲ್ಲ. ಅಂದೆಲ್ಲ ಅಪ್ಪ ಗದರಿಸಿದರೆ ಓಡಿ ಅಡಗಿ ಕೂರುತ್ತಿದ್ದ ಅಥವಾ ಹೇಳಿದ ಕೆಲಸವನ್ನು ಚಾಚುತಪ್ಪದೆ ಮಾಡುತ್ತಿದ್ದ ಮಕ್ಕಳಿಗೆ ಇಂದು ಅಪ್ಪಂದಿರೇ ಗೋಗರೆದು, ಕಾಡಿ ಬೇಡಿ ಕೆಲಸವನ್ನು ಹೇಳಿ ಮಾಡಿಸಿಕೊಳ್ಳಬೇಕಾಗಿದೆ. ಪೋಷಕರು ಮಕ್ಕಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕಿಂತ ಹೆಚ್ಚಾಗಿ ಮಕ್ಕಳೇ ಪೋಷಕರನ್ನು ನಿಯಂತ್ರಿಸುತ್ತಿದ್ದಾರೆ.

ಅತಿಯಾದ ಇಂಟರ್ನೆಟ್ ಬಳಕೆಯಿಂದ ಬಂದೊದಗುವ ವ್ಯತಿರಿಕ್ತ ಪರಿಣಾಮ ಒಂದೆರಡಲ್ಲ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರೆ ಸಿಗುವ ಮೊಬೈಲ್ಗಾಗಿ ಮಾತ್ರ ಓದುವ ಮಕ್ಕಳು ಗಳಿಸುವ ಜ್ಞಾನ ಕೇವಲ ಕ್ಷಣಿಕವಾಗಿರುತ್ತದೆ. ಅವರ ಆಸಕ್ತಿ ಏನಿದ್ದರೂ ಕೇವಲ ಮೊಬೈಲ್ ಫೋನು ಹಾಗು ಇಂಟರ್ನೆಟ್ನ ಒಳಗಿರುತ್ತದೆ. ಇಂಟರ್ನೆಟ್ನಲ್ಲಿ ಎಲ್ಲವೂ ಕ್ಷಣಮಾತ್ರದಲ್ಲಿ ಕೈಗೆಟಕುವಾಗ ಸಹನೆ ಹಾಗು ತಾಳ್ಮೆಯಿಂದ ಕಾಯುವ ಮನಸ್ಥಿತಿ ಇಂದಿನವರಲ್ಲಿ ಇಲ್ಲವಾಗಿದೆ. ಮಕ್ಕಳ ಕ್ರಿಯಾಶೀಲತೆಯ ಮೇಲೂ ಇದು ದುಷ್ಪರಿಣಾಮವನ್ನು ಬೀರುತ್ತಿದೆ. ಅಲ್ಲದೆ ಶಾರೀರಿಕ ವ್ಯಾಯಾಮಗಳಿಲ್ಲದೆ ದೈಹಿಕವಾಗಿಯೂ ಮಕ್ಕಳು ಕುಂದುತ್ತಾರೆ. ಪರೀಕ್ಷೆಗಳಲ್ಲಿ ನಕಲು ಮಾಡುವುದರಿಂದ ಶುರುವಾಗುವ ಗುಣಗಳು ಸೈಬರ್ ಕ್ರೈಂ ಗಳೆಂಬ ಕುಕೃತ್ಯಗಳ ತನಕ ಬೆಳೆಯುತ್ತವೆ. ನಗಲು, ಅಳಲು, ಪ್ರೀತಿಸಲು ಹಾಗು ಮಾನವನ ಎಲ್ಲ ಸಹಜ ಭಾವನೆಗಳಿಗೂ ಇಂದು ಇಂಟರ್ನೆಟ್ ಅನಿವಾರ್ಯವಾಗಿದೆ. ಅಲ್ಲದೆ ಅಂತರ್ಜಾಲದಲ್ಲಿ ಕಾಣುವ ವಿಷಯಗಳನ್ನೇ ನಿಜವೆಂದು ನಂಬಿ ನಡೆಯುವ ಇಂದಿನ ಯುವಜನತೆ ವಿದ್ಯಾವಂತರೆಂದು ಕರೆಸಿಕೊಳ್ಳಲು ನಿಜವಾಗಿಯೂ ಅರ್ಹರೆ ಎಂಬ ಸಂಶಯ ಮೂಡುತ್ತದೆ. ಪ್ರಚಾರಪ್ರಿಯತೆಯ ಅಮಲಿನಲ್ಲಿ ಪರಾಮರ್ಶಿಸುವ ಗುಣಗಳೂ ಇಲ್ಲವಾಗುತ್ತಿದೆ!

ಇಂತಹ ವಾತಾವರಣದಲ್ಲಿ ಬೆಳೆಯುವ ಮಗುವೊಂದು ನಾಳಿನ ಮುಖ್ಯಮಂತ್ರಿಯೋ ,ಪ್ರಧಾನಿಯೊ ಅಥವಾ ರಾಷ್ಟಪತಿಯೋ ಆದರೆ ಆ ದೇಶದ ಪ್ರಜೆಗಳ ಗತಿಯೇನು? ದೇಶದ ರಕ್ಷಣಾ ವ್ಯವಸ್ಥೆಯೇ ಇಂತಹ ಒಬ್ಬ ನಾಯಕನ ಕೈಗೆ ಸಿಕ್ಕರೆ ಆ ದೇಶದ ನಾಳೆಗಳನ್ನು ಊಹಿಸಲಾಗುತ್ತದೆಯೇ? ಒಬ್ಬ ನಾಯಕನೆನಿಸಿದವನು ಜನಗಳ ಒಳಗೆ ಅವರ ಕಷ್ಟ ಕಾರ್ಪಣ್ಯಗಳ ಅರಿತು ಬೆಳೆದವನಾಗಿರಬೇಕು. ಬಿದ್ದು ಎದ್ದು ಜೀವನವನ್ನು ಅರಿತವನಾಗಿರಬೇಕು. ಕಷ್ಟಗಳಿಗೆ ಇಂಟರ್ನೆಟ್ ನಲ್ಲದೆ ತಮ್ಮ ಸ್ವಂತ ಜೀವನದಲ್ಲೇ ಉತ್ತರವನ್ನು ಕಾಣಿಸುವನಾಗಬೇಕು. ಇಂತಹ ಒಬ್ಬ ನಾಯಕನನ್ನು ಇಂದಿನ ಆಧುನಿಕ (ಇಂಟರ್ನೆಟ್) ಯುಗ ಗಳಿಸಿಕೊಡಬಲ್ಲದೆ? ಒಂದು ದೇಶ ಬರಿ ಬಾಯಿ ಮಾತಿನಲ್ಲೇ ಪ್ರಚೋದನೆ ಕೊಟ್ಟರೆ ತಾಳ್ಮೆಯಿಂದ ಆಲಿಸಿ ಅದನ್ನು ಅವಲೋಕಿಸುವ ನಾಯಕರು ನಮ್ಮಲ್ಲಿ ಮೂಡುವರೆ? ಅಥವಾ ಆಗಿದ್ದು ಆಗಲಿ.ಆದರೆ ಆದ ಮೇಲೆ ನೋಡಿದರಾಯಿತು ಎಂದು ದೇಶವನ್ನೇ ರಣರಂಗವನ್ನಾಗಿ ಮಾಡಿಬಿಡುವ ಮಂದಿಯೇ ಹೆಚ್ಚಾಗುವರೆ?

ಒಟ್ಟಿನಲ್ಲಿ ಪ್ರಸ್ತುತ ಇಂಟರ್ನೆಟ್ನ ಲೋಕವೆಂಬುದು ಒಂದು ಹೊಸ ಪೀಳಿಗೆಯನ್ನೇ ಜಗತ್ತಿಗೆ ಕೊಡುತ್ತಿದೆ ಹಾಗು ಕೊಟ್ಟಿದೆ. ಆದ ಮಾತ್ರಕ್ಕೆ ಇಂಟರ್ನೆಟ್, ಮೊಬೈಲ್ ಫೋನ್ ಹಾಗು ಇನ್ನಿತರ ಆಧುನಿಕ ತಂತ್ರಜ್ಞಾನಗಳು ಕೇವಲ ದುಷ್ಪರಿಣಾಮಗಳನ್ನೇ ಯುವಜನರ ಮೇಲೆ ಬೀರಿದೆ ಎಂದರೆ ಸುಳ್ಳಾಗುತ್ತದೆ. ಆದರೆ ಅರ್ಥವರಿಯದೆ ಬಳಸುವುದಕ್ಕೂ ಹಾಗು ಅರ್ಥವರಿತು ವ್ಯಸನಿಗಳಾಗುವುದಕ್ಕೂ ವ್ಯತ್ಯಾಸವಿದೆ. 'ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು' ಎಂಬುದರಿತು ಇಂದಿನ ಪೋಷಕರು ಜಾಗೃತರಾಗಬೇಕು. ಲಕ್ಷ ಸುರಿದು ಯಾವುದೊ ಒಂದು ಭಾಷೆಯ ಉಚ್ಚಾರವನ್ನು ಕಲಿಸುವ ಬದಲು ಪ್ರೀತಿ ಸುರಿದು ‘ಅಮ್ಮ’ ಎಂಬ ಪದವನ್ನು ಮನೆಯಲ್ಲೇ ಕಲಿಸಿದರೆ ಸಾಕು. ಮಗು ಬಿದ್ದರೆ ಎತ್ತಿ ಅಳುತ್ತಾ ಮುತ್ತಿಕ್ಕುವ ಬದಲು ಅದು ತನಗೆ ತಾನೇ ಎದ್ದು ನಿಲ್ಲಲು ಬಿಡಬೇಕು. ಬರಿ ಸುಖವನ್ನೇ ಧಾರೆ ಎಳೆಯುವ ಬದಲು ಕೆಲ ಕಷ್ಟಗಳಿಗೂ ಮಕ್ಕಳನ್ನು ಸಜ್ಜಾಗಿಸಬೇಕು. 'ಇಲ್ಲ' ಎಂಬುದನ್ನು ಅರಗಿಸಿಕೊಳ್ಳುವ ಮತ್ತು ಅದಕ್ಕೆ ಒಗ್ಗಿಕೊಳ್ಳುವ ಗುಣಗಳನ್ನು ಮಕ್ಕಳಲ್ಲಿ ಬಿತ್ತಬೇಕು. ಇಂಟರ್ನೆಟ್ವನ ಮೂಲಕ ವಯಸ್ಸಿಗೆ ತಕ್ಕ ವಿಷಯಗಳು ಸಿಗುವಂತೆ ಮಾತ್ರ ಮಾಡಬೇಕು. ವಿಷಯಗಳನ್ನು ಅನುಕರಣೆ ಮಾಡುವ ಬದಲು ತನ್ನದೇ ನೆಲೆಗಟ್ಟಿನಲ್ಲಿ ಪರಮಾರ್ಶಿಸುವ ವ್ಯಕಿತ್ವವನ್ನು ಬೆಳೆಸಬೇಕು. ಇಲ್ಲವಾದರೆ ನಾಳಿನ ನಾಯಕರನ್ನು ನೋಡಲು ನಮಗೆ ನಾಳೆಗಳೇ ಉಳಿಯದಾಗಬಹುದು. ಶಾಂತ ನಿರ್ಮಲ ಜಗತ್ತಿನ ನಿರ್ಮಾಣಕ್ಕೆ ಹೆತ್ತವರ ಕೆಲವು ಕಠಿಣ ನಿರ್ಧಾರಗಳೂ ಅತ್ಯವಶ್ಯಕ.

ಹಾಗೆಯೆ ಪೋಷಕರೆನಿಸಿಕೊಂಡವರು ಮಕ್ಕಳಿಗೆ ಕೇವಲ ಬುದ್ದಿವಾದ ಹೇಳದರೆ ಸಾಲದು. ತಾವೂ ಸಹ ಪರಿವರ್ತನೆಗೊಳ್ಳಲು ಇಚ್ಚಿಸಬೇಕು. ಏಕೆಂದರೆ ಇಂದಿನ ಮಕ್ಕಳು ಓದಿ ಅರಿವುದಕ್ಕಿಂತ, ಕೇಳಿ ಕಲಿಯುವದಕ್ಕಿಂತ ಹೆಚ್ಚಾಗಿ ‘ನೋಡಿ’ ಬೆಳೆಯುತ್ತಾರೆ, ಅಲ್ಲವೇ?

Image Credit : Paul Rogers

ವ್ಯಕ್ತಿಗತ : ಭಾವಗಳೂ ಚೆಲುವನ್ನು ಬೀರುತ್ತಿದ್ದವು ಈಕೆಯ ಅಂದದ ಮೊಗದ ಮೇಲೆ...


ಹುಣ್ಣಿಮೆಯ ಚಂದ್ರನ ಹೊಳಪಿನ ಕಿರಣ, ಅದು ಆಕೆಯ ನಯನ. ಅದು ಮಲ್ಲಿಗೆಯೇ ನಾಚುವಂತಹ ಅಂದ. ಆಕೆ ನಕ್ಕರೆ ಮುತ್ತು ಸುರಿದಂತೆ . ಮುನಿದರೆ ಮುನಿಸೂ ನಾಚುವಂತೆ. ಅತ್ತರೆ ನೋಡುಗನೂ ಜೊತೆಗೆ ಅತ್ತಂತೆ. ನಲಿದರಂತೂ ನವಿಲೇ ಕುಣಿದಂತೆ. ಆಕೆ ಪರದೆಯ ಮೇಲಿನ ಪ್ರಜ್ವಲಿಸುವ ಕಮಲ. ಹೆಸರು ಮಧುಬಾಲ.

ಮಧುಬಾಲ. ನಲವತ್ತು ಹಾಗು ಐವತ್ತನೇ ದಶಕದ ಅದೆಷ್ಟೋ ಯುವಕರ ಡ್ರೀಮ್ ಗರ್ಲ್. ಹಿಂದಿ ಚಿತ್ರರಂಗದ ತಾರೆಗಳಲ್ಲಿ ಆಗ್ರಗಣ್ಯಳು. ಈಕೆಯ ಅಂದಕ್ಕೆ ಹಾಗು ನಟನೆಗೆ ಮನಸೋತವರಿಲ್ಲ. ಮೈಮರೆತವರಿಲ್ಲ. ವೀನಸ್ ಕ್ವೀನ್ (ವೀನಸ್ : ಪ್ರೀತಿ ಹಾಗು ಸೌಂದರ್ಯದ ರೋಮನ್ ದೇವತೆಯಾದ ಶುಕ್ರ ಗ್ರಹ) ಎಂದೇ ಅಭಿಮಾನಿಗಳಲ್ಲಿ ಚಿರಪರಿಚಿತಳು. ಹೆಚ್ಚೆಂದರೆ ಎರಡು ದಶಕಗಳಷ್ಟೇ ತೆರೆಯ ಮೇಲೆ ಕಂಡರೂ ಇಂದಿಗೂ ಜನಮನಗಳಲ್ಲಿ ಮಧುಬಾಲಳ ಹೆಸರು ಚಾಲ್ತಿಯಲ್ಲಿದೆ ಎಂದರೆ ಅದು ಆಕೆಯ ಪ್ರಸಿದ್ದಿ ಛಾಪು ಎನ್ನಬಹುದು. ದಶಕಗಳ ನಂತರವೂ ಅಭಿಮಾನಿಗಳ ಮನೆಮಾತಾಗಿರುವ ಈಕೆಯ ಒಳ-ಹೊರಗಿನ ಜೀವನದ ಬಗ್ಗೆ ಒಂದು ಸಣ್ಣ ಇಣುಕು ನೋಟ.

ಪ್ರೇಮಿಗಳ ದಿನವೆಂದು ಆಚರಿಸಲಾಗುವ ಫೆರ್ಬ್ರವರಿ ೧೪ ರಂದು(೧೯೩೩) ದೆಹಲಿಯಲ್ಲಿ ಜನಿಸಿದ ಮಧುಬಾಲಳ ಮೂಲ ಹೆಸರು ಮುಮ್ತಾಜ್ ಜಿಹಾನ್ ದೇಹ್ಲವ್. ಇತರ ಅನೇಕ ನಟ-ನಟಿಯರಂತೆ ಈಕೆಗೂ ಚಿತ್ರರಂಗ ತನ್ನದೇ ಆದ ಮುದ್ದಾದ ಹೆಸರನ್ನು ನಾಮಕರಣ ಮಾಡಿತು. ಅತಿ ಕಷ್ಟದ ದಿನಗಳನ್ನೇ ಕಂಡು ಬೆಳೆದ ಮಧುಬಾಲ ಪೋಷಕರ ಹನ್ನೊಂದು ಮಕ್ಕಳಲ್ಲಿ ಒಬ್ಬಳು. ಕೆಲಸವನ್ನು ಅರಸುತ್ತಾ ತಂದೆ ಅತಾವುಲ್ಲಾ ಖಾನ್ ಮುಂಬೈಗೆ ಬಂದು ನೆಲೆಸುತ್ತಾರೆ. ಕಷ್ಟದಿಂದ ಬೇಸತ್ತಿದ್ದ ಕುಟುಂಬಕ್ಕೆ ಆಧಾರವವಾಗಿ ಮಧುಬಾಲ ತನ್ನ ಒಂಬತ್ತನೇ ವಯಸ್ಸಿಗೆ ಕೆಲಸಕ್ಕಾಗಿ ಬಾಂಬೆ ಫಿಲಂ ಸ್ಟುಡಿಯೋವನ್ನು ಸೇರಬೇಕಾಗುತ್ತದೆ. ೧೯೪೨ರಲ್ಲಿ ತೆರೆಗಂಡ ‘ಬಸಂತ್’ ಚಿತ್ರ ಬೇಬಿ ಮಧುಬಾಲಳ ಮೊದಲ ಚಿತ್ರ. ಅಲ್ಲಿಂದ ಮುಂದೆ ಒಂದರ ಮೇಲೊಂದು ಚಿತ್ರಗಳು ಸಿಗತೊಡಗುತ್ತವೆ. ಮಧುಬಾಲಾಳ ಹೆಸರು ಸಿನಿಮಾ ವಲಯದಲ್ಲಿ ಸದ್ದು ಮಾಡತೊಡಗುತ್ತದೆ. ನೋಡ ನೋಡುತ್ತಿದ್ದಂತೆ ಒಂದು ದಿನ ಚಿತ್ರದ ನಾಯಕ ನಟಿಯ ಪ್ರಸ್ತಾಪವೂ ಬಂದೆ ಬಿಡುತ್ತದೆ. ಆಕೆಗೆ ಆಗ ಕೇವಲ ಹದಿನಾಲ್ಕು ವರ್ಷ. ಚಿತ್ರ ‘ನೀಲ್ ಕಮಲ್’ ಹಾಗು ಅದರ ನಾಯಕ ನಟ ‘ದಿ ಶೋ ಮ್ಯಾನ್’ ರಾಜ್ ಕಪೂರ್!

ಅಲ್ಲಿಂದ ಮುಂದೆ ಮಧುಬಾಲಳ ಹೆಸರು ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಾ ಹೋಗುತ್ತದೆ. ಮಹಲ್, ದುಲಾರಿ, ಹೌರಾ ಬ್ರಿಡ್ಜ್, ಕಾಲ ಪಾನಿ, ದೊ ಉಸ್ತಾದ್, ಅಮರ್, ಮಿಸ್ಟರ್ & ಮಿಸೆಸ್ 55, ಚಲ್ತಿ ಕ ನಾಮ್ ಗಾಡಿ, ಬರ್ಸಾತ್ ಕಿ ರಾತ್ ಹಾಗು ಮುಘಲ್-ಎ-ಅಜಮ್ ಹೀಗೆ ಸಾಲು ಸಾಲು ಹಿಟ್ ಚಿತ್ರಗಳಲ್ಲಿ ಅಭಿನಯಿಸಿ ಜನರ ಮನಸೂರೆಗೊಳಿಸುತ್ತಾಳೆ. ಐವತ್ತನೇ ಶತಮಾನದಲ್ಲಿ ಮಧುಬಾಲಳ ಪ್ರಸಿದ್ದಿ ಇತರ ನಾಯಕ ನಟಿಯರಿಗೆ ಹೋಲಿಸಿದರೆ ಅತಿ ಉತ್ತುಂಗದಲ್ಲಿರುತ್ತದೆ. ಕೆಲ ವರ್ಷಗಳಿಂದೆಯಷ್ಟೇ ಪುಟ್ಟ ಹುಡುಗಿಯೊಬ್ಬಳು ಬಾಂಬೆ ಫಿಲಂ ಸ್ಟುಡಿಯೋದ ಹೊರಗೆ ನಿಂತು ನಟನಟಿಯರನ್ನು ತನ್ನ ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದ್ದವಳು ಇಂದು ಅದೇ ನಟ ನಟಿಯರ ಸಾಲಿನಲ್ಲಿ ನಿಂತಿರುತ್ತಾಳೆ. ಅಭಿಮಾನಿಗಳ ದೊಡ್ಡ ಸಾಲು ಈಕೆಯ ಒಂದು ನೋಟಕ್ಕೆ ಅದೇ ಜಾಗದಲ್ಲಿ ಸಾಲುಗಟ್ಟಿ ನಿಲ್ಲತೊಡಗಿರುತ್ತದೆ! ಮಧುಬಾಲಾಳ ಪ್ರಸಿದ್ದಿ ಕೇವಲ ದೇಶವಲ್ಲದೆ ವಿದೇಶಗಳಲ್ಲೂ ಕೇಳಿಬರುತ್ತದೆ. ಅಮೇರಿಕಾದ ಬಹು ಪ್ರಸಿದ್ಧಿಯ ಫಿಲ್ಮಿ ಮ್ಯಾಗಜಿನ್ನ ೧೯೫೨ ರ ಆಗಸ್ಟ್ ಸಂಚಿಕೆಯಲ್ಲಿ ಮಧುಬಾಲಳನ್ನು ಉಲ್ಲೇಖಿಸುತ್ತಾ 'ಪ್ರಪಂಚದ ಅತಿ ದೊಡ್ಡ ತಾರೆ' ಎಂಬ ಶೀರ್ಷಿಕೆಯೊಂದಿಗೆ ಒಂದು ಪುಟ ಪೂರ್ತಿ ಬರೆಯಲಾಗಿರುತ್ತದೆ!
ಅವಳ ಪ್ರಸಿದ್ದಿ ಅದೆಷ್ಟಿತ್ತೆಂದು ಇಲ್ಲೇ ಅಂದಾಜಿಸಬಹುದು. ಇದಾದ ನಂತರ ಆಕೆಗೆ ಹಾಲಿವುಡ್ ಆಫರ್ಗಳೂ ಅರಸಿ ಬರತೊಡಗುತ್ತವೆ. ಆದರೆ ತಂದೆ ಅತಾವುಲ್ಲಾ ಖಾನ್ರ ನಿರಾಕರಣೆಯ ಮೇರೆಗೆ ಅದು ಮುಂದುವರೆಯುವುದಿಲ್ಲ.

ಸಿನಿಜಗತ್ತಿಗೆ ಬಂದ ಮೇಲೆ ಬೇಡವೆಂದರೂ ತಮ್ಮ ಹೆಸರುಗಳನ್ನು ಇತರ ನಟ-ನಟಿಯರೊಂದಿಗೆ ಕಟ್ಟಿ ಸುದ್ದಿಯನ್ನು ಮಾಡಲಾಗುತ್ತದೆ. ಇವಗಳಲ್ಲಿ ಕೆಲವು ನಿಜವಾದರೆ ಕೆಲವು ಅಕ್ಷರ ಸಹ ಸುಳ್ಳಾಗಿರುತ್ತವೆ. ಮಧುಬಾಲಾಳ ಹೆಸರೂ ಹೀಗೆ ಹಲವು ನಟ ನಿರ್ದೇಶಕರೊಟ್ಟಿಗೆ ಕಂಡು ಬಂದು ಅಂದಿನ ಸಿನಿವಲಯದಲ್ಲಿ ಚರ್ಚೆಯ ವಿಷಯವಾಗಿದಂತೂ ಸುಳ್ಳಲ್ಲ. ಆದರೆ ಅದು ಸಾಬಿತ್ತಾಗಿದ್ದು ಕೆಲವೇ ವ್ಯಕ್ತಿಗಳ ನಡುವೆ ಮಾತ್ರ. ಅವರಲ್ಲಿ ಪ್ರಮುಖರು ದಿ ಟ್ರಾಜಿಡಿ ಕಿಂಗ್ ದಿಲೀಪ್ ಕುಮಾರ್. ೧೯೪೪ ರಲ್ಲಿ 'ಜ್ವಾರ್ ಬಟ್ಟಾ' ಚಿತ್ರದ ಮೂಲಕ ಪರಿಚಯಗೊಂಡ ಈ ಜೋಡಿ ಮುಂದೆ ನಾಲ್ಕೈದು ಚಿತ್ರಗಳಲ್ಲಿ ಒಟ್ಟಾಗಿ ನಟಿಸುತ್ತಾರೆ. ಅಷ್ಟರಲ್ಲಾಗಲೇ ಒಬ್ಬರನೊಬ್ಬರು ಮೆಚ್ಚಿಯೂ ಇರುತ್ತಾರೆ. ಆದರೆ ಇಲ್ಲೂ ಸಹ ಮಧುಬಾಲಳ ತಂದೆಯೇ ಅಡ್ಡಿಯಾಗುತ್ತಾರೆ. ದಿಲೀಪ್ ಕುಮರೊಟ್ಟಿಗನ ಸಂಬಂಧಕ್ಕೆ ಅವರು ಮೊದಲಿಂದಲೇ ಆಕ್ಷೇಪ ವ್ಯಕ್ತಪಡಿಸಿರುತ್ತಾರೆ. ಕೆಲ ಸಣ್ಣ ಪುಟ್ಟ ವೈಮನಸ್ಸಿಂದ ಬೇರಾದ ಈ ಜೋಡಿ ಮತ್ತೆಂದೂ ಒಟ್ಟುಗೂಡುವುದಿಲ್ಲ. ಇದಾದ ನಂತರ ಪ್ರಸಿದ್ಧ ಹಾಡುಗಾರ ಕಿಶೋರ್ ಕುಮಾರ್ ಈಕೆಯನ್ನು ವರಿಸಲು ಇಚ್ಛಿಸುತ್ತಾರೆ. ಆದರೆ ಮಧುಬಾಲಳ ಮನ ಇನ್ನೂ ದಿಲೀಪ್ ಕುಮಾರ್ರನ್ನೇ ಬಯಸುತ್ತಿರುತ್ತದೆ. ಕೊನೆಗೆ ಮಧುಬಾಲ ಕಿಶೋರ್ರ ವಿವಿಧ ಬಗೆಯ ಪ್ರಸ್ತಾವನೆಗೆ ಮಣಿಯಲೇ ಬೇಕಾಗುತ್ತದೆ. ಅಲ್ಲದೆ ಇದಕ್ಕಾಗಿ ಕಿಶೋರ್ ತಾವು ಇಸ್ಲಾಂ ಗೆ ಮತಾಂತರಗೊಂಡು ಹೆಸರನ್ನು ಅಬ್ದುಲ್ ಕರೀಂ ಎಂದೂ ಬದಲಿಸಿಕೊಂಡಿದ್ದೂ ಇದೆ! ಒಟ್ಟಿನಲ್ಲಿ ೧೯೬೦ ರಲ್ಲಿ ಮಧುಬಾಲ ಕಿಶೋರ್ರನ್ನು ವರಿಸುತ್ತಾಳೆ.

ತನ್ನ ಅಂದ ಹಾಗು ನಟನೆಯಿಂದ ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದ ಈಕೆಗೆ ತನ್ನ ಹೃದಯವೇ ಕೊನೆಗೊಂದು ದಿನ ಕಂಠಕಪ್ರಾಯವಾಗುತ್ತದೆ ಎಂದು ಭಾವಿಸಿರಲಿಲ್ಲ. ೧೯೫೪ರ ಹೊತ್ತಿಗಾಗಲೇ ಈಕೆಯ ಹೃದ್ಯದಲ್ಲಿ ರಂಧ್ರವೊಂದು ಪತ್ತೆಯಾಗಿರುತ್ತದೆ. ಹಾಗು ಆಗಿನ ಕಾಲಕ್ಕೆ ಅದು ವಾಸಿಮಾಡಲಾಗದ ಖಾಯಿಲೆ! ಹೆಚ್ಚು ಕ್ರಿಯಾಶೀಲವಾದಷ್ಟೂ ರಕ್ತವು ಮೂಗು ಹಾಗು ಬಾಯಿಯ ಮೂಲಕ ಹೊರ ಹೋಗುತ್ತಿರುತ್ತದೆ. ದೇಹದಲ್ಲಿ ನೋವು ಅಷ್ಟಿದ್ದರೂ ಈಕೆ ಆ ನೋವಿನಲ್ಲೇ ಹಲವು ಚಿತ್ರಗಳನ್ನು ಮಾಡುತ್ತಾಳೆ. ‘ಮೊಗಲ್-ಎ-ಅಜಮ್’ ಚಿತ್ರದ ಕೊನೆಯ ದೃಶ್ಯಗಳಲ್ಲಿ ಅಕ್ಷರ ಸಹ ಬಳಲಿದ್ದ ದೇಹದಲ್ಲೇ ಈಕೆ ಕ್ಯಾಮೆರಾದ ಮುಂದೆ ಬಂದು ನಿಲ್ಲುತ್ತಾಳೆ. ತನ್ನ ಎಲ್ಲವನ್ನೂ ನಟನೆಗೆ ಒಪ್ಪಿಸುತ್ತಾಳೆ. ಆ ಚಿತ್ರದ 'ಅನಾರ್ಕಲಿ' ಪಾತ್ರಕ್ಕೆ ಈಕೆಯ ವಿನಃ ಮತ್ಯಾರು ಒಗ್ಗರು ಎಂಬ ಮಟ್ಟಿಗೆ ನಟಿಸುತ್ತಾಳೆ. ಇಂದಿಗೂ ಆ ಪಾತ್ರ ಚಿತ್ರಪ್ರಿಯರ ಕಣ್ಣಿಗೆ ಕಟ್ಟಿದಂತಿದೆ. ಮನೆಮಾತಾಗಿದೆ. ೧೯೬೧ ರ ಹೊತ್ತಿಗಾಗಲೇ ಕಾಯಿಲೆ ಉಲ್ಬಣಿಸಿ ಹಾಸಿಗೆಯನ್ನು ಹಿಡಿದ ಮಧುಬಾಲ ಸುಮಾರು ಒಂಬತ್ತು ವರ್ಷಗಳ ಕಾಲ ಮೇಲೇಳುವುದೇ ಇಲ್ಲ! ಚರ್ಮವು ಎಲುಬಿಗೆ ಅಂಟಿದಂತ ದೇಹಸ್ಥಿತಿ ಈ ಸುಂದರಿಗೆ ಬರುತ್ತದೆಂದು ಯಾರು ಸಹ ಊಹಿಸಿರಲಿಲ್ಲ. 'ನಾನು ಸಾಯಲು ಇಚ್ಛಿಸುವುದಿಲ್ಲ.. ಬದುಕಬೇಕು.. ನಾನು ಬದುಕಬೇಕು' ಎನ್ನುತ್ತಲೇ ಫೆಬ್ರವರಿ ೨೩, ೧೯೬೯ ರಂದು ಇಹ ಲೋಕ ತ್ಯೆಜಿಸುತ್ತಾಳೆ. ಆಗ ಆಕೆಗಿನ್ನೂ ಮೂವತ್ತಾರು ವರ್ಷಗಳು!



ಮಧುಬಾಲ ತನ್ನ ಅಂದದಷ್ಟೇ ನಟನೆಯಲ್ಲೂ ಮಿಗಿಲು. ಆದರೆ ಅವಳ ಅಂಧದ ವರ್ಣನೆಯ ಮುಂದೆ ನಟನೆಗೆ ಸಿಗಬೇಕಾಗಿದ್ದ ಮಾನ್ಯತೆ ಕೊಂಚ ಕಡಿಮೆಯಾಯಿತು ಎನ್ನಬಹುದು. ಚಿತ್ರದ ಸೆಟ್ ಒಂದರಲ್ಲಿ ಮೊದಲ ಬಾರಿಗೆ ಈಕೆಯನ್ನು ಪ್ರತ್ಯಕ್ಷವಾಗಿ ಕಂಡ ಶಮ್ಮಿ ಕಪೂರ್ ಇವಳ ಅಂದಕ್ಕೆ ಬೆರಗಾಗಿ ಮೂರ್ಛೆ ಹೋಗಿರುವುದು ಇದೆ! ‘ಇಂತಹ ಅಂದಕ್ಕೆ ಅದೆಷ್ಟು ಜನರ ದೃಷ್ಟಿ ತಾಗಿತ್ತೋ’ ಎಂದು ಕೆಲವರೆಂದರೆ ‘ಎಲ್ಲ ಅವನ ಇಚ್ಛೆ’ ಎಂದು ಕೆಲವರು ಈಕೆಯ ಅಭಿಮಾನಿಗಳು ಈಕೆಯ ಅಗಲಿಕೆಯಿಂದ ನೊಂದಿರುವುದು ಉಂಟು.ಇಷ್ಟೊಂದು ಸುಂದರ ಚೆಲುವನ್ನು ಪಡೆದ ಮಧುಬಾಲ ಕೊಂಚ ಕಾಲವನ್ನೂ ತನ್ನ ಜೊತೆಗೆ ಪಡೆದುಬರಬೇಕಿತ್ತು. ಚಿತ್ರಪ್ರಿಯರಿಗೆ ಇನ್ನೂ ಹೆಚ್ಚು ಹೆಚ್ಚು ಚಿತ್ರಗಳನ್ನು ನೀಡಬೇಕಿತ್ತು. ಆ ಮಿಂಚಿನ ಹೊಳಪಿನ ಕಣ್ಣುಗಳು, ಮನಮೋಹಕಗೊಳಿಸುವ ನಗು ಹಾಗು ಮನಸೂರೆಗೊಳಿಸುವ ಆ ನಟನೆ ಇಂದು ಕೇವಲ ನೆನಪಾಗಿ ಉಳಿದಿವೆ. ಅಂದಕ್ಕೆ ಅನ್ವರ್ಥನಾಮವೆಂದು ಹೇಳಬಹುದಾದ ಮಧುಬಾಲಳ ಬಗ್ಗೆ ಚರ್ಚಿಸುವ ಪೀಳಿಗೆಯೂ ಇಂದು ಉಳಿದಿಲ್ಲ. ಮರೆಯಾಗುತ್ತಿರುವ ಪೀಳಿಗೆಯಲ್ಲಿ ಮರೆಯಾಗದೆ, ಮುಂಬರುವ ಪೀಳಿಗೆಯ ಮನಗಳಲ್ಲೂ ಈಕೆ ಮನೆಮಾಡಲಿ ಎಂಬುದೇ ಆಶಯ.

Photo Courtesy : Madhubala II in Painting by Sunanda Puneet