Monday, July 31, 2017

ಐನ್ಸ್ಟೀನ್ ತಾತನ ಆ ಮಾತುಗಳು ನಿಜವಾಗುವ ಸನಿಹದಲ್ಲಿ..!

ನ್ಯೂಕ್ಲಿಯರ್ ವಾರ್. ಇತ್ತೀಚಿನ ದಿನಗಳಲ್ಲಿ ಈ ಪದಗುಚ್ಛ ಅದೆಷ್ಟು ಪ್ರಸಿದ್ದಿ ಹೊಂದಿದೆ ಎಂದರೆ ಚಡ್ಡಿ ಹಾಕದ ಮಕ್ಕಳೂ ಸಹ ಇತರರನ್ನು ಹೆದರಿಸಲೆತ್ನಿಸಿದಾಗ ಇಂತಹ ಪದವೊಂದನ್ನು ಬಳಸುವುದುಂಟು. ಈ ವಿಚಾರದ ಬಗೆಗಿನ ದೃಶ್ಯ ಮಾಧ್ಯಮಗಳ ವಿಪರೀತ ಪ್ರಚಾರ ಹಾಗು ಏಖಮುಖೇನ ಚರ್ಚೆಗಳು ಪರಮಾಣು ಬಾಂಬ್ ಗಳೆಂದರೆ ಇಂದು ದೀಪಾವಳಿ ಹಬ್ಬದಲ್ಲಿ ಸಿಡಿಸುವ ಲಕ್ಷ್ಮಿ ಪಟಾಕಿಯೋ ಎನ್ನುವಷ್ಟರ ಮಟ್ಟಿಗೆ ಅವನ್ನು ಬಾಲಿಶವಾಗಿಸಿಬಿಟ್ಟಿವೆ. ಅಲ್ಲದೆ ಅವೇ ದೃಶ್ಯಮಾಧ್ಯಮಗಳು ನಮ್ಮಲ್ಲಿರುವ ಪರಮಾಣು ಬಾಂಬ್ ಗಳ ಸಂಖ್ಯೆ ಎಷ್ಟು, ಆ ದೇಶ ಪರಮಾಣು ಶಕ್ತವೇ?, ಪರಮಾಣು ಬಾಂಬ್ ಗಳ ಜಗದ ಅತಿದೊಡ್ಡ ಒಡೆಯನಾರು? ಎಂಬಿತ್ಯಾದಿ ಸುದ್ದಿಗಳನ್ನು ಮನೆಯ ಗೋದಾಮಿನಲ್ಲಿ ಅತಿಹೆಚ್ಚು ಧವಸ ದಾನ್ಯಗಳನ್ನು ಕೂಡಿಟ್ಟ ವ್ಯಕ್ತಿ ಊರಿನ ಶ್ರೀಮಂತನೆಂಬಂತೆ ಪರಮಾಣು ಶಕ್ತ ದೇಶಗಳನ್ನು ಬಿಂಬಿಸುತ್ತವೆ. ತಾತಪ್ಪನ ಕಾಲದಲ್ಲಿ ಅಮೇರಿಕ ಅದ್ಯಾವುದೋ ದೇಶದಲ್ಲಿ ಅಣುಬಾಂಬ್ ಒಂದನ್ನು ಸಿಡಿಸಿ ಅದೆಷ್ಟೋ ಸಾವಿರ ಜನರನ್ನು ಸುಟ್ಟು ಹಾಕಿತು ಎಂಬ ವಿಚಾರಕಿಂತ, ಊರಿನಲ್ಲಿ ಸಣ್ಣದೊಂದು ಪಟಾಕಿ ಅಂಗಡಿ ಸುಟ್ಟು ಪಕ್ಕದ ಕೋಳಿ ಅಂಗಡಿಯ ಹತ್ತು ಕೋಳಿಗಳು ಭಸ್ಮವಾದವು ಎಂಬ ಸುದ್ದಿಯೇ ಸಾಮಾನ್ಯರಲ್ಲಿ ದಿಗ್ಬ್ರಾಂತಿಯನ್ನು ಮೂಡಿಸುತ್ತದೆ. ಒಟ್ಟಾರೆ ಜನಮಾದ್ಯಮದಲ್ಲಿಂದು ನ್ಯೂಕ್ಲಿಯರ್ ವಾರ್ ಎಂದರೆ ಅತಿ ಸಾಮಾನ್ಯದ ಸಂಗಾತಿಯಾಗಿಬಿಟ್ಟಿದೆ. ದಶಕಗಳಿಂದಲೂ ಇದರ ಪರ ವಿರೋಧ ಚರ್ಚೆಗಳು ನೆಡೆದರೂ ಉತ್ತರಕುಮಾರನ ಪೌರುಷದಂತೆ ಒಮ್ಮೆಯೂ ಸಹ (ದ್ವಿತೀಯ ವಿಶ್ವಯುದ್ಧದ ನಂತರ) ಇಂತಹದೊಂದು ಯುದ್ಧ ನೆಡೆಯದ್ದೇ ಇರುವುದೂ ಇದಕೊಂಡು ಹಾಸ್ಯಾಸ್ಪದ ಕಾರಣವೆನ್ನಬಹುದು. ಒಂದು ವೇಳೆ ಈ ದಶಕಗಳ ಚರ್ಚೆಯೊಂದು ನಿಜರೂಪ ತಾಳಿ ನ್ಯೂಕ್ಲಿಯರ್ ವಾರ್ ಎಂಬೊಂದು ಆಧುನಿಕ ಪ್ರಳಯ ಸಂಭವಿಸಿತು ಅಂದಿಟ್ಟುಕೊಳ್ಳಿ, ಅದರ ಮುಂದಾಗುವ ಪರಿಣಾಮವಾದರೂ ಎಂತಹದ್ದು? ಅದ್ಯಾವುದೋ ದೇಶ ಇನ್ನೊಂದು ದೇಶದ ಮೇಲೆ ನ್ಯೂಕ್ಲಿಯರ್ ಬಾಂಬ್ಗಳನ್ನು ಒಗೆದುಕೊಂಡರೆ ನಮ್ಮ ಬ್ರೆಡ್ ಬಟರ್ ಗೇನು ಕುಂದು ಎಂದು ನಾವು ಸುಮ್ಮನೆ ಕೂರಲಾಗುತ್ತದೆಯೇ? ಹಾಗಿದ್ದರೆ ವಿಶ್ವದ ಬೂಪಟದಲ್ಲಿ ಬೂತಕನ್ನಡಿ ಹಿಡಿದು ಹುಡುಕಿದರೂ ಕೆಲವೊಮ್ಮೆ ಕಣ್ಣಿಗೆ ಕಾಣದ ದೇಶವೊಂದು ಖಂಡಾತರ ಕ್ಷಿಪಣಿಯನ್ನು ಆವಿಷ್ಕರಿಸಿಕೊಂಡರೆ ಇತ್ತ ಹತ್ತಾರು ದೇಶಗಳು ಬಾಯಿ ಬಡಿದುಕೊಳ್ಳುವುದೇಕೆ? ಇವೆಲ್ಲ ವಿದ್ಯಮಾನಗಳು ಜರುಗಬಹುದೇನೋ ಎಂಬ ದೂರದೃಷ್ಟಿಯಿದ್ದ ಆಧುನಿಕ ಜಗತ್ತಿನ ಸೈಂಟಿಫಿಕ್ ಸಂತನೆಂದೇ ಕರೆಯಬಹುದಾದ ಐನ್ಸ್ಟೈನ್ ಅರ್ಧ ಶತಮಾನದ ಹಿಂದೆಯೇ 'ನನಗೆ ಮೂರನೇ ಮಹಾಯುದ್ಧ ಯಾವ 'ಆಯುಧ'ಗಳಿಂದ ನೆಡೆಯುತ್ತದೆ ಅನ್ನುವುದಕ್ಕಿಂತ ನಾಲ್ಕನೇ ಮಹಾಯುದ್ಧ ಮಾತ್ರ ಕಲ್ಲು ಮತ್ತು ಕೋಲಿನಿಂದ ನೆಡೆಯುತ್ತದೆ ಎಂಬುದು ತಿಳಿದಿದೆ' ಎಂದು ಮಾರ್ಮಿಕವಾಗಿ ಗಂಭೀರವಾದ ವಿಷಯವನ್ನು ಅರಿಯಬಿಡುತ್ತಾನೆ. ಅವನ ಪ್ರಕಾರ ಮೂರನೇ ಮಹಾಯುದ್ದದ 'ಆಯುಧ'ಗಳು ನ್ಯೂಕ್ಲಿಯರ್ ಬಾಂಬ್ ಗಳು ಎಂಬುದನ್ನು ಬಿಟ್ಟರೆ ಬೇರೇನೂ ಆಗಿರಲಿಲ್ಲ. ಇಂದು ಆ ಐನ್ಸ್ಟೈನ್ ತಾತನ ಮಾತುಗಳು ನಿಜವಾಗುವ ಸನಿಹದಲ್ಲಿವೆ. ಅರ್ಥಾತ್ ನ್ಯೂಕ್ಲಿಯರ್ ಬಾಂಬ್ ಗಳ ಯುದ್ಧಗಳಿಂದ ಮಾನವ ಒಂದು ವೇಳೆ ಬದುಕುಳಿದರೆ ಆತ ಮತ್ತೊಮ್ಮೆ ಶಿಲಾಯುಗದ ಅನುಭವವನ್ನು ಪಡೆಯಬೇಕಾಗುತ್ತದೆ! ಹಾಗಾದರೆ ನ್ಯೂಕ್ಲಿಯರ್ ಯುದ್ಧಗಳಿಂದ ಅಥವಾ ವಿಕಿರಣಶೀಲತೆಯಿಂದ (Radioactivity) ಪರಿಸರದ ಹಾಗು ಅದರ ಜೀವಜಂತುಗಳ ಮೇಲೆ ಆಗುವ ಪ್ರಭಾವವಾದರೂ ಎಂತಹದ್ಹು? ನ್ಯೂಕ್ಲಿಯರ್ ಯುದ್ಧದ ನಂತರ ಜನಜೀವನ ಹೇಗಿರಬಹುದು ಅಥವಾ ಹೇಗಾಗಬಹುದು?


ದಟ್ಟ ಹೊಗೆಯ ಕಪ್ಪು ಮೋಡಗಳು -
ದ್ವಿತೀಯ ವಿಶ್ವಯುದ್ಧದ ಕೊನೆಯಲ್ಲಿ ರೊಚ್ಚಿಗೆದ್ದ ಅಮೇರಿಕ, ಜಪಾನಿನ ಹಿರೋಶಿಮಾ ಹಾಗು ನಾಗಸಾಕಿ ನಗರಗಳ ಮೇಲೆ ಇಳಿಬಿಟ್ಟ ಬಾಂಬ್ ಗಳ ವಿಡಿಯೋ ತುಣುಕುಗಳನ್ನೋ ಅಥವಾ ಚಿತ್ರಗಳನ್ನು ನೋಡಿದರೆ ಹಣಬೆಯಾಕಾರದ ದಟ್ಟ ಹೊಗೆಯ ಗೋಲವೊಂದು ಕೆಂಪು ಬಣ್ಣದ ಹಿನ್ನಲೆಯೊಂದಿಗೆ ನಮಗೆ ಕಾಣಸಿಗುತ್ತದೆ. ಕಿಲೋಮೀಟರ್ಗಟ್ಟಲೆ ವಿಸ್ತೀರ್ಣವಿರುವ ಈ ಅವಶೇಷಗಳ ಹೊಗೆ ಅಕ್ಷರಸಹ ಮಳೆಗಾಲದ ದಟ್ಟ ಮೋಡದಂತೆ ಕಾಣುವುದಲ್ಲದೆ ಸೂರ್ಯನೆಂಬ ಒಂದು ಬೆಂಕಿಯ ಚಂಡೇ ಮಾಯವಾಯಿತೇನೋ ಎಂಬಂತೆ ಹರಡಿಕೊಂಡಿರುತ್ತದೆ. ಮಳೆಗಾಲದ ಮೋಡಗಳೇನೋ ಕರಗಿ ಭೂಮಿಯನ್ನು ತಣಿಸುತ್ತವೆ ಆದರೆ ದೂಳಿನ ಕಣಗಳ ಈ ಮೋಡದ ರಾಶಿ ಹೋಗುವುದಾದರೂ ಎಲ್ಲಿಗೆ? ಪರಿಣಾಮ ಕರಗದ ಮೋಡಗಳಾಗಿ ಅಲೆಯುವ ಇವುಗಳು ಸೂರ್ಯನ ಕಿರಣಗಳನ್ನು ತಡೆದು ತಿಂಗಳುಗಳ ಕಾಲ ಮೋಡಕವಿದ ವಾತಾವರಣವನ್ನು ಸೃಷ್ಟಿಸಿಬಿಡುತ್ತವೆ. ಬೇಸಿಗೆಕಾಲ ಬಂದರೆ ಬಿಸಿಲನ್ನು ನಿಂದಿಸುವ ಖಯಾಲಿಯ ನಮಗೆ ಒಂದು ಪಕ್ಷ ಸೂರ್ಯನ ಕಿರಣಗಳೇನಾದರೂ ಕೆಲದಿನಗಳ ಮಟ್ಟಿಗೆ ಭೂಮಿಯನ್ನು ಚುಂಬಿಸದೇ ಇದ್ದರೆ ಅದರಿಂದಾಗುವ ಪರಿಣಾಮವನ್ನು ಊಹಿಸಿಕೊಳ್ಳಲೂ ನಮಗೆ ಸಾಧ್ಯವಿಲ್ಲ. ಮೊದಲನೆಯದಾಗಿ ಸೂರ್ಯನ ಕಿರಣಗಳ ಕೊರತೆಯಿಂದ ಭೂಮಿಯ ತಾಪಮಾನ ಎಕ್ದಮ್ ಕಡಿಮೆಯಾಗುವುದಲ್ಲದೆ ಚಲನಚಿತ್ರಗಳಲ್ಲಿ ಕಾಣುವ 'ಐಸ್-ಏಜ್' ನ ಸ್ಥಿತಿಗೆ ಭೂಮಿಯ ಮೇಲ್ಪದರ ಬಂದು ನಿಲ್ಲುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ. ಅತ್ತಕಡೆ ಸೂರ್ಯನ ಕಿರಣಗಳೇ ಸಕಲ ಸಸ್ಯಗಳ ದ್ಯುತಿಸಂಶ್ಲೇಷಣೆಗೆ ಅಗತ್ಯವಾಗಿರುವುದರಿಂದ ಸಸ್ಯಗಳ ಆಹಾರೋತ್ಪತ್ತಿಯ ಪ್ರಮಾಣವೂ ಕ್ಷೀಣಿಸತೊಡಗುತ್ತದೆ ಅಲ್ಲದೆ ಇಂಗಾಲದ ಡೈ ಆಕ್ಸೈಡ್ ನ ಪ್ರಮಾಣ ಹೆಚ್ಚಾಗಿ ಉಸಿರಾಡಲು ಬೇಕಾದ ಆಮ್ಲಜನಕದ ಪ್ರಮಾಣವೂ ಕುಸಿಯತೊಡಗುತ್ತದೆ. ಇನ್ನು ಅತಿಯಾದ ಇಂಗಾಲದ ಡೈ ಆಕ್ಸೈಡ್ ನಿಂದಾಗುವ ಹಸಿರುಮನೆ ಪರಿಣಾಮ (Greenhouse Effect) ಯಾವುದೇ ಅಡೆ ತಡೆ ಇಲ್ಲದೆ ಜರುಗುತ್ತದೆ. ಇಷ್ಟೆಲ್ಲಾ ಆಗುವುದು ಕೇವಲ ಸೂರ್ಯನ ಕಿರಣಗಳ ತಡೆಯುವಿಕೆಯಿಂದ. ನಾಲ್ಕಾರು ದೇಶಗಳು ಒಂದೇ ಸಮಯದಲ್ಲಿ ಇಂತಹ ನೂರಾರು ಬಾಂಬ್ ಗಳ ಎರಚಾಟದಲ್ಲಿ ತೊಡಗಿದರೆ ಶಾಶ್ವತವಾಗಿ ಸೂರ್ಯನಿಗೊಂದು ವಿದಾಯವನ್ನು ನಾವು ಹೇಳಬೇಕಾಗುತ್ತದೆ.

ಓಜೋನ್ ಪದರದ ಮಂಗಮಾಯ-
ವಾಹನಗಳು ಉಗುಳುವ ಹೊಗೆ ಹಾಗು ಇನ್ನಿತರ ವಿಷಾನಿಲಗಳಿಂದಲೇ ಭಾಗಶಃ ಕಣ್ಮರೆಯಾಗುತ್ತಿರುವ ಓಜೋನ್ ಪದರ ಪರಮಾಣು ಬಾಂಬ್ಗಳ ಸಿಡಿಯುವಿಕೆಯಿಂದ ಇಂಚ್ಚಷ್ಟೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳದೇ ಪೂರ್ಣವಾಗಿ ನಶಿಸಿ ಹೋದರೂ ಆಶ್ಚರ್ಯಪಡಬೇಕಿಲ್ಲ. ಆದರೆ ಸೂರ್ಯನಿಂದ ಹೊರಬರುವ ನೇರಳಾತೀತ (Ultraviolet Rays) ಕಿರಣಗಳ ಸೋಸುವಿಕೆಯ ಕಾರ್ಯವನ್ನು ಇಂದಿನವರೆಗೂ ಅಚ್ಚುಗಟ್ಟಾಗಿ ಮಾಡಿಕೊಂಡು ಬಂದಿರುವ ಕಾಣದ ಪದರವೊಂದು ಒಮ್ಮಿಂದೊಮ್ಮಲೆ ಕಾಣೆಯಾಗಿ ಹೋದರೆ ನೆಲದ ಮೇಲಿನ ಜೀವಿಗಳ ಮೇಲೆ ಆಗುವ ಪರಿಣಾಮವಾದರೂ ಎಂತಹದ್ದು? ಅತಿಯಾದ ನೇರಳಾತೀತ ಕಿರಣಗಳು ದೃಷ್ಟಿ ದೋಷ, ಅಲ್ಲದೆ ಚರ್ಮದ ಕ್ಯಾನ್ಸರ್ ಗೂ ಕಾರಣವಾಗುತ್ತದೆ. ಬದುಕುಳಿಯುವುದೇ ಕಷ್ಟಸಾಧ್ಯವಾಗಿರುವಾಗ ಇನ್ನು ಚರ್ಮದ ಕಾಯಿಲೆಯ ಬಗ್ಗೆ ವಿಶ್ವಸುಂದರಿಯೂ ಅಂದು ತಲೆಕೆಡಿಸಿಕೊಳ್ಳಲಾರಳು ಬಿಡಿ.


ಭೂಗರ್ಭದಾಳದಲ್ಲಿನ ವಾಸ!
ಯುದ್ಧ ಸಂಭವಿಸುವ ಮುಂಜಾಗೃತ ಕ್ರಮದ ಬಗ್ಗೆ ಮಾನವನೇನಾದರೂ ಯೋಚಿಸತೊಡಗಿದರೆ ಆತನಿಗೆ ಇರುವ ಒಂದೇ ಮಾರ್ಗ ಇರುವೆಗಳಂತೆ ಭೂಮಿಯ ಆಳದಲ್ಲಿ ಅಡಗಿಕೊಂಡು ವಾಸಿಸಿಸುವುದು! ಆದರೆ ವಿಕಿರಣಗಳು ಅಲ್ಲಿಗೂ ಬರುವುದಿಲ್ಲವೆಂಬ ಗ್ಯಾರೆಂಟಿ ಮಾತ್ರ ಯಾರಿಗೂ ಕೊಡಲಾಗದು. ಉತ್ತರ ಕೊರಿಯಾ ಹಾಗು ಇನ್ನಿತರ ಯುದ್ಧಭೀತಿ ಇರುವ ದೇಶಗಳು ಅದಾಗಲೇ ವಿಕಿರಣ ಆಶ್ರಯಗಳೆಂಬ (Fallout Shelter) ಭೂಮಿಯಾಳದ ನೆಲೆಗಳನ್ನು ರೆಡಿಮಾಡಿಕೊಂಡಿವೆ ಎಂದರೆ ಕೆಲ ದೇಶಗಳು ಅದ್ಯಾವ ಮಟ್ಟಿಗೆ ನ್ಯೂಕ್ಲಿಯರ್ ಯುದ್ಧಕ್ಕೆ ಸನ್ನದ್ಧವಾಗುತ್ತಿದೆ ಎಂದು ಅರಿಯುತ್ತದೆ. ಆದರೆ ಅದೆಷ್ಟು ದಿನ ತಾನೇ ಭೂಮಿಯ ಅಂತರಾಳದಲ್ಲಿ ಮಾನವಜೀವಿ ಹುದುಗಿಗೊಳ್ಳಲು ಸಾಧ್ಯವುಂಟು? ಶೇಖರಿಸಿಟ್ಟ ಆಹಾರ ಪದಾರ್ಥಗಳೆಲ್ಲ ಖಾಲಿಯಾದ ಮೇಲೆ ಮಾನವ ನೆಲದ ಮೇಲೇ ಪುನಃ ಬರಲೇಬೇಕಲ್ಲವೇ? ಅಂದು ಯಾವುದೇ ಯುನಿವರ್ಸಿಟಿಯ ಆದ್ಯಾವುದೇ ಉನ್ನತ ಡಿಗ್ರಿಗಳೂ ಪ್ರಯೋಜನಕ್ಕೆ ಬಾರವು. ಆಂದು ಪ್ರತಿಯೊಬ್ಬ ಮಾನವ ಜೀವಿಯೂ ರೈತನಾಗಲೇ ಬೇಕಾಗುತ್ತದೆ! ನೆಲವನ್ನು ಅಗೆದು ತನ್ನ ಅನ್ನವನ್ನು ತಾನೇ ಬೆಳೆಯಬೇಕಾಗುತ್ತದೆ. ಆದರೆ ಬಾಂಬುಗಳಿಂದ ಸಿಡಿಯುವ ವಿಕಿರಣಗಳು ಅದೆಂದಿನವರೆಗೆ ಭೂಮಿಯ ಮೇಲ್ಮೈಯಲ್ಲಿ ಸಂಚರಿಸುತ್ತಿರುತ್ತವೆ ಎಂಬುದರ ಮೇಲೆ ಮುಂದಿನ ಎಲ್ಲ ಅಂಶಗಳು ನಿರ್ಧರಿತವಾಗಿರುತ್ತವೆ.

ಅಲ್ಲದೆ,

ಚಲನಚಿತ್ರಗಳಲ್ಲಿ ಕಾಣಸಿಗುವ ಹಸಿರು ಬಣ್ಣದ ವಸ್ತ್ರ, ಕಣ್ಣು ಕಿವಿ ಹಾಗು ಮೂಗುಗಳ ಸುತ್ತ ಕಪ್ಪಗಿನ ಯಂತ್ರಗಳಿಂತಿರುವ ಭಯಹುಟ್ಟಿಸುವ ಹೆಲ್ಮೆಟ್ ಆಗ ಮಾನವನ ಸಮವಸ್ತ್ರವಾಗಿರುತ್ತವೆ. ಕೊಹಿನೂರ್ ವಜ್ರವೇ ಅಂದು ದಾರಿಯಲ್ಲಿ ಬಿದ್ದಿದ್ದರೂ ಮುಟ್ಟುವ ಗೋಜಿಗಂತು ಯಾವೊಬ್ಬ ನರಪಿಳ್ಳೆಯೂ ಹೋಗದಿಹ ಸ್ಥಿತಿ ನಿರ್ಮಾಣವಾಗುತ್ತದೆ ಎಂದರೆ ನಂಬಬಹುದೇ? ಕುತೂಹಲಕಾರಿ ವಿಷಯವೆಂದರೆ ಹಲವಾರು ಕೀಟರಾಶಿಗಳು ವಿಕಿರಣಶೀಲತೆಗೆ ಪ್ರತಿರೋಧವನ್ನು ಒಡ್ಡುವ ಗುಣವನ್ನು ಹೊಂದಿರುವುದು. ಚೇಳು, ಜಿರಳೆ, ನೀರ್ಕರಡಿ ಇನ್ನಿತರೇ ಜೀವಿಗಳ ದೇಹದ ಮೇಲೆ ವಿಕಿರಣಗಳು ಒಂದಿಷ್ಟೂ ಪರಿಣಾಮವನ್ನು ಬೀರದು. ಹಾಗಾಗಿ ಇಂತಹ ಹಲವಾರು ಜೀವಿಗಳು ಭೂಮಿಯ ಮೇಲೆ ತಮ್ಮ ಅಸ್ತಿತ್ವವನ್ನು ಹೆಚ್ಚಾಗಿ ತಾಳಿ ಇಂದು ಮಾನವ ಹೇಗೆ ಭೂಮಿಯೇ ತನ್ನದೆನುತ ಅವುಗಳನ್ನು ಹಿಂಸಿಸುತ್ತಿದ್ದಾನೋ ಅಂತೆಯೇ ಅವುಗಳೂ ನಮ್ಮನ್ನು ಹಿಂಸಿಸುವ ಕಾಲ ದೂರವೇನಿಲ್ಲ. ಅಲ್ಲದೆವಿವಿಧ ಬಗೆಯ ಕ್ಯಾನ್ಸರ್ ಹಾಗು ಅಂಗವಿಕಲತೆಯಿಂದ ಕುರೂಪಿಯಾಗಿಹೋಗುವ ಮಾನವನನ್ನು ಕಂಡರೆ ಅಂದು ಏಲಿಯನ್ ಗಳೂ ಹೆದರಿ ಓಟಕೀಳಬಹುದು.

ಕಂಡುಹಿಡಿದವರಿಗೇ ನಾಚಿಕೆ ಹಾಗು ಜಿಗುಪ್ಸೆಯನ್ನು ಉಂಟುಮಾಡಿದ ಅವಿಷ್ಕಾರಗಳಲ್ಲಿ ನ್ಯೂಕ್ಲಿಯರ್ ಬಾಂಬ್ ಕೂಡ ಒಂದು. ನ್ಯೂಕ್ಲಿಯರ್ ಬಾಂಬ್ಗಳ ಜನಕರಲ್ಲಿ ಒಬ್ಬನಾದ ಅಮೇರಿಕಾದ ವಿಜ್ಞಾನಿ ಆಫೆನೇಮಾರ್ ಇದರಿಂದ ಸಂಭವಿಸಿದ ಹಾಗು ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ಗಮನಿಸಿ ವಿಶ್ವದ ಮುಂದಿನ ದಿನಗಳ ಉಳಿಗಾಲ ಒಬ್ಬರನೊಬ್ಬರು ಅರಿತು ಬಾಳುವುದರಲ್ಲಿ ಮಾತ್ರ ಇದೆ ಎನ್ನುತ್ತಾನೆ! ಅಂದು ಅವನ ಮಾತುಗಳಲ್ಲಿ ಹತಾಶೆ ಹಾಗು ನೋವುಗಳು ಒಟ್ಟೊಟಿಗೆ ಮೂಡುತ್ತವೆ. ತಾನೊಬ್ಬ ಇಂತಹ ಆವಿಷ್ಕಾರದ ಕಾರಣೀಕರ್ತ ಎಂಬುದನ್ನು ನೆನೆದು ಆತ ತಲೆತಗ್ಗಿಸಿ ಈ ಮಾತುಗಳನ್ನು ಹೇಳುತ್ತಾನೆ. ಇಂದು ಪ್ರಪಂಚದಾದ್ಯಂತ ಅಧಿಕೃತವಾಗಿ ಸುಮಾರು 23,000 ನ್ಯೂಕ್ಲಿಯರ್ ಬಾಂಬುಗಳಿವೆ ಎನ್ನಲಾಗುತ್ತದೆ. ಅನಧಿಕೃತವಾಗಿ ಇರುವ ಬಾಂಬುಗಳು ಅದೆಷ್ಟೋ?! ಒಟ್ಟಿನಲ್ಲಿ ಇಷ್ಟೆಲ್ಲಾ ಬಾಂಬುಗಳು ಒಮ್ಮಿಂದೊಮ್ಮೆಲೆ ಉಡೀಸ್ ಆದರೆ ಮಾನವ ಜೀವಿಗಳ ಸಂಪೂರ್ಣ ವಿನಾಶ ಎಂಬುದು ಕಟ್ಟಿಟ್ಟ ಬುತ್ತಿ. ಸರಕಾರಗಳೇನೋ ನೀತಿ ನಿಯಮಗಳನ್ನು ಪಾಲಿಸುತ್ತ ಇಂದು ಯುದ್ಧರಹಿತ ವಿಷಯಗಳಿಗೆ ಮಾತ್ರ ಪರಮಾಣು ಶಕ್ತಿಯನ್ನು ಬಳಸಬೇಕೆಂದು ವಾದಿಸುತ್ತವೆ. ಆದರೆ ಗನ್ನು ಬಾಂಬುಗಳನ್ನೇ ಅಪ್ಪ ಅಮ್ಮರೆಂದು ನಂಬಿ ಬಾಳುವ ಭಯೋತ್ಪಾದಕರಿಗೇನಾದರೂ ನ್ಯೂಕ್ಲಿಯರ್ ಬಾಂಬುಗಳ ಟ್ರಿಗರ್ ದೊರೆತರೆ ಕತೆ ಏನಾಗಬಹುದು? ಹೆಂಡ ಕುಡಿದ ಮಂಗನ ಕೈಗೆ AK 47 ನನ್ನು ಕೊಟ್ಟು ಕಾಡನ್ನು ಕಾಯುವಂತೆ ಹೇಳಿದಂತಾಗಬಹುದು. ಇಂತಹ ಕಂಠಕದ ದಿನಗಳು ಬಹಳ ದೂರವೇನಿಲ್ಲ. ಇಂದು ಅದೆಷ್ಟೋ ದೇಶಗಳಿಗೆ ಭಯೋತ್ಪಾದಕರ ವಿರುದ್ದ ಹೋರಾಡುವುದಕ್ಕಿಂತ ಅಂತವರ ಕೈಗೆ ಇಂತಹ ಸಣ್ಣ ಪುಟ್ಟ ಬಾಂಬುಗಳು ದೊರೆಯದಂತೆ ಕಾಪಾಡುವುದೇ ಹರಸಾಹಸವಾಗಿದೆ. ನ್ಯೂಕ್ಲಿಯರ್ ಬಾಂಬ್ ಎಂಬ ವಿನಾಶಕಾರಿಯನ್ನು ಇನ್ನು ತಡೆದು ನಿಲ್ಲಿಸಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ಒಂದು ದೇಶ ಪರಮಾಣು ಸಶಕ್ತವಾದರೆ ಅನಿವಾರ್ಯವಾಗಿ ಪಕ್ಕದ ದೇಶವೂ ಆ ನಿಟ್ಟಿನಲ್ಲಿ ಚಿಂತಿಸಬೇಕಾಗುತ್ತದೆ. ದೇಶದ ಎಕಾನಮಿ ಅದೆಷ್ಟೇ ಪಾತಾಳ ಮುಟ್ಟಿರಲಿ, ಒಂದು ಪಕ್ಷ ಆ ದೇಶವೇನಾದರೂ ಪರಮಾಣು ಸಶಕ್ತ ಎಂದೆನಿಸಿದರೆ ಸಾಕು ಅದರ ಮೇಲೆ ದಬ್ಬಾಳಿಕೆ ನೆಡೆಸುವ ದೇಶಗಳೆಲ್ಲವೂ ಬಾಲ ಮುದುಡಲೇ ಬೇಕಾಗುತ್ತದೆ. ಆದ ಕಾರಣಕ್ಕೆ ಇಂದು ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿಯೊಂದನ್ನು ತಯಾರಿಸಿಕೊಂಡರೆ ನೀರಿನಿಂದ ಹೊರಬಿದ್ದ ಮೀನಿನಂತೆ ಅಮೇರಿಕ ಒದ್ದಾಡತೊಡಗಿರುವುದು. ಪ್ರಸ್ತುತ ಕಾಲದಲ್ಲಿ ರಾಷ್ಟ್ರರಕ್ಷಣೆಯ ನಿಟ್ಟಿನಲ್ಲಿ ಪರಮಾಣು ಶಕ್ತತೆ ಎಂಬುದು ಪ್ರತಿಯೊಂದು ದೇಶದ ಅತಿ ಅನಿವಾರ್ಯವಾರ್ಯತೆಯಲ್ಲೊಂದಾಗಿದೆ. ಆದರೆ ಹೆಂಡತಿಯ ರುಚಿಗೆಟ್ಟ ಮನೆಯೂಟದ ಮೇಲಿನ ಸಿಟ್ಟಿಗೆ ತನ್ನ ಕೆಳಗಿರುವ ನೌಕರನನ್ನು ವಜಾಗೊಳಿಸಿದಂತೆ ಯಾರದೋ ವರ್ಚಸ್ಸಿನ ಚರ್ಚೆಗೆ ಇನ್ಯಾರೋ ಸಾವಿರ ಜನ ನೆಲಸಮವಾಗುವುದು ಅದ್ಯಾವ ಮಾನವ ಧರ್ಮ ?


Wednesday, July 26, 2017

ಸಿ.ಎ.ಜಿ ಯ ಈ ರಿಪೋರ್ಟ್ ದೇಶಕ್ಯಾವ ಬಗೆಯಲ್ಲಿ ಸಪೋರ್ಟ್!

ಕೆಲದಿನಗಳ ಹಿಂದೆಯಷ್ಟೇ ಮಹಾಲೆಕ್ಕಪರಿಶೋಧಕರ (CAG) ವರದಿ ಭಾರತದ ಶಸ್ತ್ರಾಗಾರದ ಬತ್ತಳಿಕೆಯ ನಗ್ನ ಸತ್ಯವನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿತು. ಬೂದಿ ಮುಸುಕಿದ ಕೆಂಡದಂತಿದ್ದ ಸಮಸ್ಯೆಯೊಂದನ್ನು ನಾಜೂಕಾಗಿ ಬಿಡಿಸಿ ಸಂಸ್ಥೆ ಸಂಸತ್ತಿನ ಮುಂದಿರಿಸಿತು. ಯುದ್ಧವೆಂಬುದರ ಕನಿಷ್ಠ ಅರಿವೂ ಇರದ ಅದೆಷ್ಟೋ ವಾಗ್ಮಿಗಳು ಮೊನ್ನೆಯವರೆಗೂ ಸೈನ್ಯದಲ್ಲಿನ ಯೋಧರ ಸಂಖ್ಯೆಯನ್ನೇ ಬಂಡವಾಳವಾಗಿಸಿಕೊಂಡು ಸಿಕ್ಕ ಸಿಕ್ಕಲೆಲ್ಲ ವಾದಕ್ಕಿಳಿದು ಮುಂದಿರುವವರನ್ನು ತಿವಿಯಲು ಯತ್ನಿಸುತ್ತಿದ್ದರೇ ವಿನಃ ಸೈನಿಕರ ಬತ್ತಳಿಕೆಗೆ ಬಂದು ಸೇರುವ ಯುದ್ದೋಪಕರಣಗಳ ಸಂಖ್ಯೆಯ ಅರಿವನ್ನು ಅರಿಯದೆ ಹೋಗಿದ್ದರು. ದೃಶ್ಯ ಮಾಧ್ಯಮಗಳಿಗೂ ಈ ಒಂದು ಸುದ್ದಿ ಆಹಾರವಾಗಿ ದೊರೆತದ್ದು CAG ಯ ವರದಿ ಬಂದ ನಂತರವೇ ಆದದ್ದರಿಂದ ಅವುಗಳೂ ಸಹ ಈ ವಿಷಯವನ್ನು ಚೀವಿಂಗ್ ಗಮ್ನ ಗುಳ್ಳೆಗಳಂತೆ ಮಾಡಿ ನೋಡುಗನ ಅಮಾಯಕ ಜ್ಞಾನವನ್ನು ಹೆಚ್ಚಿಸುವಲ್ಲಿ ವಿಫಲವಾಗಿದ್ದವು.


ಅದೇನೆಯಿರಲಿ, ಸದ್ಯಕ್ಕೆ CAG ಯು ಕೊಟ್ಟಿರುವ ವರದಿ ದೇಶಕ್ಕೆ ವರದಾನವಾಗಿ ಪರಿಣಮಿಸಿತೋ ಅಥವಾ ಪ್ರಸ್ತುತ ಯುದ್ಧಸನ್ನದ್ಧ ಪರಿಸ್ಥಿತಿಯಲ್ಲಿ ರಾಜತಾಂತ್ರಿಕವಾಗಿ ಇತರೆ ದೇಶಗಳ ಮುಂದೆ ತನ್ನ ಬಲಾಡ್ಯತೆಯ ಮೇಲೆಯೇ ಸವಾಲೆಸಿದುಕೊಂಡಿತೋ ಅಥವಾ ಸರ್ಕಾರ ಅತಿ ಬೇಗನೆ ಕಾರ್ಯಪ್ರವೃತವಾಗಲು ಸಣ್ಣದಾದ ಚುರುಕೊಂದನ್ನು ಮುಟ್ಟಿಸಿತೋ ಎಲ್ಲವೂ ಗೋಜಲು. ಆದರೆ ಇದಕ್ಕಿಂತಲೂ ಮಹತ್ವದ ಪ್ರೆಶ್ನೆಯಂದರೆ ವೈರಿ ಪಡೆಯು ಅತ್ತಕಡೆಯಿಂದ ಬಾಂಬೊಂದನ್ನು ಎಸೆದ ಮೇಲೆಯೇ ನಮ್ಮ ಬತ್ತಳಿಕೆಯ ನಿಜಸ್ಥಿತಿ CAGಯವರಿಗೆ ಅರಿವಾಗಿದ್ದು ಏತಕ್ಕೆ? ಇಲ್ಲಿಯವರೆಗೂ ಈವೊಂದು ವರದಿ ಸದ್ದಿಲ್ಲದೇ ಅಡಗಿ ಕುಳಿತ್ತಿದ್ದಾದರೂ ಎಲ್ಲಿ? ಅಥವಾ ಸಂಸ್ಥೆಯ ಹಿಂದಿನ ಅದೆಷ್ಟೋ ವರದಿಗಳ ಹಾಗೆಯೆ ಈ ವರದಿಯೂ ಸರ್ಕಾರೀ ಕೋಣೆಯೊಂದರಲ್ಲಿ ಸುಖನಿದ್ರೆಗೆ ಜಾರಿದ್ದಿತೇ?

ಸದ್ಯಕ್ಕೆ ಮಧ್ಯಂತರ ಬಿಸಿಸಿಐ ಅಧ್ಯಕ್ಷರಾಗಿರುವ ಹಾಲಿ CAG ಅಧ್ಯಕ್ಷರಾಗಿದ್ದ ವಿನೋದ್ ರಾಯ್ ಅವರು 2008 ರಲ್ಲಿ ಮಹಾಲೆಕ್ಕಪರಿಶೋಧಕರಾಗಿ ಅಧಿಕಾರ ವಹಿಸಕೊಳ್ಳುವ ವರೆಗೂ CAG ಎಂದರೆ ಆಟಕುಂಟು ಲೆಕ್ಕಕಿಲ್ಲದ ಸಂಸ್ಥೆಯಂತೆ ಕಾಣುತಿತ್ತು. ಮನೆಯೊಳಗೆ ಅಡಗಿರುವ ಒಂದೊಂದೇ ವಿಷ ಜಂತುಗಳನ್ನು ಹೆಕ್ಕಿ ಎಳೆದು ಬೀದಿಗೆ ಹಾಕುವಂತೆ ವಿನೋದ್ ಅಂದು ವ್ಯವಸ್ಥೆಯ ಒಳಗಿದ್ದ ಅವ್ಯವಸ್ಥೆ ಹಾಗು ಅದರ ಮೂಲ ವ್ಯಕ್ತಿಗಳನ್ನು ದೇಶದ ಜನತೆಯ ಮುಂದೆ ಎಳೆದು ನಿಲ್ಲಿಸತೊಡಗಿದರು. ಕೂಡಲೇ ಬಾಲಕ್ಕೆ ಬೆಂಕಿಬಿದ್ದ ಬೆಕ್ಕಿನಂತದಾದ ಅದೆಷ್ಟೋ ರಾಜಕಾರಣಿಗಳು ಒಬ್ಬರಿಂದೊಬ್ಬರಂತೆ ಇವರ ವಿರುದ್ಧ ಮುಗಿಬಿದ್ದರು. ಆದರೆ ಯಾವುದೇ ಬೆದರಿಕೆ, ಚೀರಾಟಗಳಿಗೆ ಕ್ಯಾರೇ ಎನ್ನದ್ದ ರಾಯ್ ಕಳಂಕಿತ ವ್ಯವಸ್ಥೆಯಲ್ಲಿ ಆನೆಯ ನೆಡೆಯನ್ನು ನೆಡೆಯತೊಡಗಿದರು. ಇವರ ಈ ನಡೆಯಿಂದಲೆ CAG ಎಂಬೊಂದು ಸಂಸ್ಥೆ ದೇಶದಲ್ಲಿ ಇದೆ ಎಂಬುದರ ಅರಿವು ಜನರಲ್ಲಿ ಮೂಡತೊಡಗಿತು. ಅಲ್ಲದೆ ನೆನಗುದಿಗೆ ಬಿದ್ದಿದ್ದ ಅದೆಷ್ಟೋ ಅಧಿಕಾರಯುಕ್ತ ಕಾನೂನುಗಳಿಗೆ ಜೀವವನ್ನು ನೀಡಿ ಅವುಗಳನ್ನು ಚಲಾಯಿಸಿಯೂ ತೋರಿಸಿದರು. ತಮಾಷೆಯ ವಿಷಯವೆಂದರೆ ರಾಜಕಾರಣಿಗಳು ಅಂದು ತಳ ಬುಡ ಇರದ ಸವಾಲುಗಳನ್ನು ಸಂಸ್ಥೆಯ ವಿರುದ್ಧ ಎಸೆಯುತ್ತಾ ಮಾಧ್ಯಮಗಳ ಮುಂದೆ ನಟಿಸುತ್ತಿದ್ದರೆ ಅತ್ತ ಕಡೆ ಸಂವಿಧಾನಿಕವಾಗಿ CAG ಗಿರುವ ಅಧಿಕಾರಗಳನ್ನು ರಾಯ್ ಎಳೆ ಎಳೆಯಾಗಿ ಬಿಚ್ಚಿಟ್ಟು ಎಲ್ಲರ ಬಾಯನ್ನು ಮುಚ್ಚಿಸುತ್ತಿದ್ದರು! ದೇಶವೇ ಬೆಚ್ಚಿ ಬಿದ್ದ 2ಜಿ ಸ್ಪೆಕ್ಟ್ರಮ್ ಹಗರಣ, ಕಲ್ಲಿದ್ದಲು ಹಗರಣದಂತಹ ಮಹತ್ವದ ಹಗರಣಗಳನ್ನು ಬಯಲಾದದ್ದು ವಿನೋದ್ ಅವರ ಅಧಿಕಾರವಾದಿಯಲ್ಲೇ.ಇಂತಹ ಅದೆಷ್ಟೋ ಹಗರಣಗಳ ನಡುವಿನ ಸೆಣೆಸಾಟ ಸಂಸ್ಥೆಯ ಆತ್ಮ ಸ್ತಯ್ರ್ಯವನ್ನು ಸಾವಿರ ಪಟ್ಟು ಹೆಚ್ಚಿಸಿತು ಎಂದರೆ ಸುಳ್ಳಾಗದು.

ಸುಪ್ರೀಂ ಕೋರ್ಟ್ ನಿಯೋಜಸಿರುವ ದೇಶದ ಅತಿ ಉನ್ನತ ಸಂಸ್ಥೆಗಳಲೊಂದಾದ ಮಹಾಲೆಕ್ಕಪರಿಶೋಧಕರ ಸಂಸ್ಥೆ ದೇಶದ ಖಜಾನೆಯಿಂದ ಒರಬೀಳುವ ಪ್ರತಿ ನಯಾಪೈಸೆಯ ಹಣವನ್ನು ಪರಿಶೋಧಿಸುವ ಅಧಿಕಾರವನ್ನು ದೇಶದ ಉದ್ದಗಲಕ್ಕೂ ಮುಲಾಜಿಲ್ಲದೆ ಚಲಾಯಿಸಬಹುದಾಗಲಿದೆ. ಅಂತಹ ಕೆಲ ಪರಿಶೋಧನೆಗಳ ಫಲವೇ ಬೊಫೋರ್ಸ್ ಹಗರಣ,ಮೇವು ಹಗರಣ, ಕಲ್ಲಿದ್ದಲ್ಲು ಹಗರಣ ಹಾಗು 2G ಸ್ಪೆಕ್ಟ್ರಮ್ ಹಗರಣಗಳೆಂಬ ಕೂಪದಿಂದ ದೇವತಾಮನುಷ್ಯರಂತೆ ಪೋಸುಕೊಡುತ್ತಿದ್ದ ಅದೆಷ್ಟೋ ಜನರ ನಿಜಬಣ್ಣವನ್ನು ಹೊರಕ್ಕೆ ಎಳೆತರಲು ಸಾಧ್ಯವಾದದ್ದು. CAGಯ ಹಾಲಿ ಅಧ್ಯಕ್ಷರಾಗಿರುವ ಶಶಿಕಾಂತ್ ಶರ್ಮಾರವರು ಸಹ ಇಂತಹ ನೂರಾರು ವರದಿಗಳನ್ನು ಸಿದ್ದಪಡಿಸಿ ಸರ್ಕಾರಗಳ ಪಾರದರ್ಶಕತೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ದೇಶದ ರಾಷ್ಟ್ರಪತಿಗಳಿಗೆ ನೇರವಾಗಿ ವರದಿಯನ್ನು ಒಪ್ಪಿಸಿದ ನಂತರ ಅವರು ವರದಿಯನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ಸರಿಯೆನಿಸಿದವುಗಳನ್ನು ಸಂಸತ್ತಿನಲ್ಲಿ ಚರ್ಚಿಸಲು ರವಾನಿಸುತ್ತಾರೆ. ಮುಂದೆ ಸಂಸತ್ತಿನಲ್ಲಿ ಈ ವಿಚಾರದ ಬಗ್ಗೆ ಆಳವಾದ ಚರ್ಚೆ ಏರ್ಪಡುತ್ತದೆ ಹಾಗು ಸರಿ ತಪ್ಪುಗಳನ್ನು ಮಂಥಿಸುವ ಕಾರ್ಯ ನೆಡೆಯುತ್ತದೆ.



ದೇಶದ ಅಭಿವೃದ್ಧಿಯ ಪ್ರತೀಕವಾಗಿರುವ ಇಂಥಹ ಸಂಸ್ಥೆಯೊಂದು ದೇಶದ ಶಸ್ತ್ರಾಗಾರದ ಕ್ಷಮತೆಯ ಬಗ್ಗೆ ವರದಿ ಮಾಡಿ ಆಡಳಿತ ಸರ್ಕಾರ ಹಾಗು ಜನತೆಯಲ್ಲಿ ಮುಜುಗರವನ್ನು ಉಂಟುಮಾಡಿದಂತೂ ಸುಳ್ಳಲ್ಲ. ಇದೊಂದು ಕಹಿಯಾದ ಸತ್ಯ. ಸತ್ಯ ಮಿತ್ಯದ ಮಾತು ಒಂದೆಡೆಯಿರಲಿ ಅದಕ್ಕಿಂತಲೂ ಮಿಗಿಲಾಗಿ ಇದು ದೇಶದ ರಕ್ಷಣೆಯ ವಿಚಾರ. ಇಂತಹ ಒಂದು ಗಂಭೀರ ವಿಚಾರವನ್ನು ಯುದ್ಧಸನ್ನದ್ಧ ಪರಿಸ್ಥಿಯಲ್ಲಿಯೇ ಸಂಸ್ಥೆ ಏತಕ್ಕೆ ಮೂಡಿಸಿತು, ಇಷ್ಟೆಲ್ಲಾ ಲೋಪದೋಷಗಳು ಇದ್ದರೂ ಇಲ್ಲಿಯವರೆಗೂ ಯಾರೊಬ್ಬ ಅಧಿಕಾರಿಯೂ ಇದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲವೇ ಎಂಬ ಪ್ರೆಶ್ನೆ ನಮ್ಮಲ್ಲಿ ಮೂಡದಿರದು. ಶೆ.40 ರಷ್ಟು ಶಸ್ತ್ರಾಸ್ತ್ರಗಳ ಕೊರತೆ ಹಾಗು ಸರಿಯಾಗಿ ಹತ್ತುದಿನಗಳೂ ಯುದ್ಧ ಮಾಡಲಾಗದ ಸಂಖ್ಯೆಯ ಯುದ್ದೋಪಕರಣಗಳಷ್ಟೇ ನಮ್ಮ ಬತ್ತಳಿಕೆಯಲ್ಲಿವೆ ಎಂದರೆ ಪರಿಸ್ಥಿತಿಯ ಗಂಭೀರತೆ ಅತಿ ಬೇಗನೆ ಅಳುವ ಸರ್ಕಾರಗಳಿಗೆ ಮುಟ್ಟಬೇಕಿದೆ. ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಪ್ರತಿಪಕ್ಷಗಳ ಸಮಯೋಚಿತ ನಡೆಗಳೂ ಸಹ ಅತ್ಯಗತ್ಯ. ಇಲ್ಲದ ವಿಚಾರಗಳಿಗೆ ರಂಪಾಟಗಳನ್ನು ಮಾಡಿ ಸದನವನ್ನು ಬಹಿಷ್ಕರಿಸುವ ಬದಲು ದೇಶದ ಸುರಕ್ಷತೆಯ ಬಗೆಗಿರುವ ಇಂತಹ ಅದೆಷ್ಟೋ ವಿಚಾರಗಳನ್ನು ಆಗಿಂದಾಗೆ ಕೆದಕುತ್ತಿರಬೇಕು. CAG ಯಂತಹ ಹಲವು ಘನ ಸಂಸ್ಥೆಗಳ ವರದಿಗಳನ್ನು ಗಾಳಿಗೆ ತೂರದೆ ಜವಾಬ್ದಾರಿಯುತ ಚರ್ಚೆಗಳು ಆ ವಿಚಾರವಾಗಿ ನೆಡೆದರೆ ಇಂತಹ ವಿಷಮ ಸ್ಥಿತಿಗಳು ಮುಂದೆ ಎದುರಾಗದಿರದು.

Monday, July 24, 2017

ಕೇವಲ ಲಕ್ಷದಷ್ಟು ಇಂಗ್ಲಿಷ್ ಸೈನಿಕರು ಇಡೀ ಭರತಖಂಡವನ್ನು ಬುಗುರಿಯಂತೆ ಆಡಿಸಿದಾದರೂ ಹೇಗೆ?

ಈಸ್ಟ್ ಇಂಡಿಯಾ ಕಂಪನಿಯಿಂದ ಬ್ರಿಟಿಷ್ ರಾಜ್ ವರೆಗಿನ ನಡೆ.


ಬಾಲ ಬಿಚ್ಚಿ ಕುಣಿದಾಡುತ್ತಿದ್ದ ದೇಶಗಳೆಲ್ಲವನ್ನು ಜುಟ್ಟು ಹಿಡಿದು ಟೊಂಕ ಮುರಿದು ಬಡಿದು ಹಾಕಿದ ದೇಶವದು. ಅಮೇರಿಕ ಆಸ್ಟ್ರೇಲಿಯಾದಂತ ಬಲಿಷ್ಠ ದೇಶಗಳೇ ಗಪ್ ಚುಪ್ ಎನ್ನುತ ಅವರ ಅಧಿಕಾರದವನ್ನು ತಮ್ಮ ಮೇಲೆ ಹರಿಯಬಿಟ್ಟುಕೊಂಡಿದ್ದವು. ಪ್ರಸ್ತುತ ಜಗತ್ತಿನ ಕೇವಲ ಇಪ್ಪತ್ತರಿಂದ ಇಪ್ಪತ್ತೆರಡು ದೇಶಗಳನ್ನು ಒರತುಪಡಿಸಿದರೆ ಉಳಿದೆಲ್ಲ ದೇಶಗಳು ಒಂದಿಲ್ಲೊಂದು ಇತಿಹಾಸದ ಕಾಲಘಟ್ಟದಲ್ಲಿ ಈವೊಂದು ಪುಟ್ಟ ದೇಶದಿಂದ ಆಳ್ವಿಕೆಗೊಳಲ್ಪಟ್ಟಿವೆ! ಹೆಚ್ಚೆಂದರೆ ನಮ್ಮ ಉತ್ತರಪ್ರದೇಶ ರಾಜ್ಯದಷ್ಟಿರುವ ಈ ದೇಶ ಅದೇಗೆ ವಿಶ್ವದ ನಾಲ್ಕನೇ ಒಂದರಷ್ಟು ಭಾಗವನ್ನು ತನ್ನ ಹಿಡಿತಕ್ಕೆ ಒಳಪಡಿಸಿಕೊಂಡಿತ್ತು ಎಂಬುದೇ ಪ್ರೆಶ್ನೆ. ಇನ್ನು ನಮ್ಮ ಭಾರತದ ವಿಷಯಕ್ಕೆ ಬಂದರೆ ಸಾವಿರಾರು ಮೈಲುಗಳ ದೂರ ಹಡಗುಗಳಲ್ಲಿ ಕ್ರಮಿಸಿ ಭರತಖಂಡವೆಂಬ ವಿಶ್ವದ ಏಳನೇ ಅತಿ ದೊಡ್ಡ ದೇಶವನ್ನು ಒಳಹೊಕ್ಕು ಸುಮಾರು ಇಪ್ಪತೈದು ಕೋಟಿ ಜನರನ್ನು ಸುಮಾರು ಎರಡು ಶತಮಾನಗಳಿಗೂ ಹೆಚ್ಚಿನ ಕಾಲ ಹಿಂಡಿ ಹಿಪ್ಪೆಮಾಡಿಯಾಕಲು ಕೇವಲ ತೋಳ್ಬಲದ ಶಕ್ತಿಯೊಂದೇ ಸಾಕಾಗಿತ್ತೇ ಅಥವಾ ಕಾಲಕ್ಕೆ ತಕ್ಕಂತೆ ಹಂತ ಹಂತವಾಗಿ ಉಸಿರುಗಟ್ಟಿಸುವ ಬೇರೊಂದು ಯುಕ್ತಿಯೇ ಬೇಕಿತ್ತೆ? ಅಂತಹದೊಂದು ಕುತಂತ್ರಿ ಯುಕ್ತಿಯ ಪರಿಣಾಮವೇ ಅಂದು ಕೇವಲ ಲಕ್ಷದಷ್ಟು ಇಂಗ್ಲಿಷ್ ಸೈನಿಕರು ಇಡೀ ಭರತಖಂಡವನ್ನು ಬುಗುರಿಯಂತೆ ಆಡಿಸಲು ಸಾಧ್ಯವಾದದ್ದು.

ಕ್ರಿ.ಶ 1600ರಷ್ಟೋತ್ತಿಗೆ ಭಾರತದ ಮಸಾಲೆ ಪದಾರ್ಥಗಳ ರುಚಿಯನ್ನು ಕಂಡುಕೊಂಡ ಇಂಗ್ಲೆಂಡ್ ವರ್ತಕರ ಪಡೆ ಅಲ್ಲಿಯ ರಾಣಿ ಎಲಿಜಬತ್ಳ ಅನುಮತಿಯ ಮೇರೆಗೆ ಈಸ್ಟ್ ಇಂಡಿಯ ಕಂಪನಿ ಎಂಬ ವರ್ತಕರ ಸಂಘವೊಂದನ್ನು ಕಟ್ಟಿಕೊಂಡು ಭಾರತಕ್ಕೆ ಪ್ರಯಾಣವನ್ನು ಬೆಳೆಸಿತು. ಪುಡಿಗಾಸಿನ ಬಂಡವಾಳವನ್ನು ಹೂಡಿ ಕೋಟ್ಯಧಿಪತಿಗಳಾಗುವ ಕನಸ್ಸನ್ನು ತವರು ಬಿಡುವಾಗಲೇ ಈ ವರ್ತಕರು ಕಾಣುತ್ತಾ ಬಂದಿದ್ದರು. ಆದರೆ ಆ ವೇಳೆಗಾಗಲೇ ಡಚ್ ಹಾಗು ಪೋರ್ಚುಗಲ್ ಕಂಪನಿಗಳು ತಮ್ಮ ಬೇರುಗಳನ್ನು ಭಾರದದ ನೆಲದಲ್ಲಿ ಆಳವಾಗಿ ಇಳಿಬಿಟ್ಟಿದ್ದವು. ಅಷ್ಟೂ ವರ್ತಕರಲ್ಲಿ ತಾನೂ ಒಬ್ಬನಾಗಿ ವ್ಯಾಪಾರ ಮಾಡುವ ಜಾಯಮಾನ ಇಂಗ್ಲಿಷರದಲ್ಲ. ತಾನೊಬ್ಬನೇ ಎಲ್ಲವನ್ನು ಬಾಚಿಕೊಳ್ಳಬೇಕೆಂಬ ದುರಾಸೆ ಭಾರತ ತಲುಪಿದ ಮೊದಲ ದಿನದಿಂದಲೇ ಕಂಪನಿಯ ಪ್ರಣಾಳಿಕೆಯಲ್ಲಿ ಸೇರಿಕೊಂಡಿತು. ಕೆಲವರ್ಷಗಳ ಕಾಲ ಭಾರತದ ವಿಶ್ವಶ್ರೇಷ್ಠ ಮಸಾಲ ಪದಾರ್ಥಗಳು, ಸಕ್ಕರೆ, ವಜ್ರಗಳು ಹಾಗು ಇನ್ನಿತರೇ ಅಮೂಲ್ಯ ಉತ್ಪನ್ನಗಳು ಮೂವರ ಮದ್ಯೆ ಹರಿದು ಹಂಚಿಹೋಗುವುದನ್ನೇ ಹೊಟ್ಟೆಕಿಚ್ಚಿನ ಜ್ವಾಲೆಯ ಕಣ್ಣುಗಳಿಂದ ನೋಡತೊಡಗಿದ್ದ ಕಂಪನಿ 1613 ರಲ್ಲಿ ಸೂರತ್ನ ಸ್ವಾಲಿಯಲ್ಲಿ ಪೋರ್ಚುಗೀಸರನ್ನು ಒಡೆದುರುಳಿಸಿತು. ಮುಂದೆ ಈ ಸೋಲು ಭಾರತದಲ್ಲಿ ಪೋರ್ಚುಗೀಸರ ನಿರ್ನಾಮಕ್ಕೂ ಕಾರಣವಾಯಿತು ಎಂದರೆ ತಪ್ಪಾಗದು.

ವರ್ತಕ ಕಂಪನಿಯಾರೂ ಹಲವಾರು ವರ್ಷಗಳಿಂದ ನೆಲೆವೂರಿದ್ದ ಪೋರ್ಚುಗೀಸರ ಅರೆ ಸೈನ್ಯವೊಂದನ್ನು ಸೋಲಿಸಿದ್ದು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಆತ್ಮಸ್ತಯ್ರ್ಯವನ್ನು ಸಾವಿರ ಪಟ್ಟು ಹೆಚ್ಚಿಸಿತು. ಮೊಗೆದಷ್ಟೂ ಬತ್ತದ ಅಪಾರ ಸಂಪತ್ತನ್ನು ಇಲ್ಲಿಯ ನೆಲದಲ್ಲಿ ಕಾಣತೊಡಗಿದ ಕಂಪನಿಗೆ ಹೇಗಾದರು ಮಾಡಿ ಅಂದಿನ ಮೊಘಲ್ ದೊರೆ ಜಹಾಂಗೀರ್ ನನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಅದರ ಮುಖೇನ ಈಸ್ಟ್ ಇಂಡಿಯ ಕಂಪನಿಯ ಹಾಗು ಬ್ರಿಟಿಷ್ ಸಾಮ್ರಾಜ್ಯದ ಜೋಳಿಗೆಯನ್ನು ತುಂಬಿಸಬೇಕಂಬ ಆಸೆ ಚಿಗುರೊಡೆದು ಹೆಮ್ಮರವಾಗಿ ಬೆಳೆದಿತ್ತು. ಇದಕ್ಕಾಗಿ ಅಂದಿನ ಬ್ರಿಟಿಷ್ ರಾಯಭಾರಿ ಥಾಮಸ್ ರೋನನ್ನು ಜಹಾಂಗೀರ್ ನ ಆಸ್ಥಾನಕ್ಕೆ ಕಳುಹಿಸಿ, ಕಂಪನಿ ಭಾರತದಲ್ಲಿ ವ್ಯಾಪಾರವನ್ನು ಮಾಡುವಾಗ ಯಾವುದೇ ವಿಘ್ನಗಳು ಎದುರಾಗದಂತೆ ಬೆಂಬಲಿಸಬೇಕೆಂದು, ಪರ್ಯಾಯವಾಗಿ ರಾಜನಿಗೆ ಯುರೋಪ್ ಮಾರುಕಟ್ಟೆಯ ರಂಗು ರಂಗಿನ ವಸ್ತುಗಳ ಉಡುಗರೆಯ ರಾಶಿಯನ್ನೇ ತಂದು ಅರಮನೆಯಲ್ಲಿ ಸುರಿಯಲಾಗವುದು ಎಂಬ ಕನಸ್ಸನ್ನು ಬಿತ್ತಿತು. ಪಾನಮತ್ತ ದೊರೆಯೆಂದೇ ಬಿರುದು ಗಳಿಸಿದ್ದ ಜಹಾಂಗೀರ್ ಬ್ರಿಟಿಷರ ಮತ್ತೇರಿಸುವ ವಸ್ತುಗಳಿಗೆ ಮನಸ್ಸೋತು ಅಸ್ತು ಎಂದಿದ್ದ. ಆತನ ಈ ಒಂದು ನಿರ್ಧಾರವೇ ಭರತಖಂಡದಲ್ಲಿ ಆಂಗ್ಲರ ಅಧಿಪತ್ಯ ಚಿಗುರಲು ಸಾದ್ಯವಾಯಿತು ಅಲ್ಲದೆ ಮುಂದೊಂದು ದಿನ ಇದೆ ಕಂಪನಿ ಅದೇ ಮೊಘಲ್ ಸಾಮ್ರಾಜ್ಯವನ್ನು ಗುರುತುಸಿಗದಂತೆ ಹೊಸಕಿಹಾಕಿತು.

ಮುಂದೆ ಹೀಗೆಯೇ ತನ್ನ ಚಾಣಾಕ್ಷ ಬುದ್ದಿಯನ್ನು ಉಪಯೋಗಿಸಿ ಅಂದಿನ ಬಾಂಬೆ, ಕೋಲ್ಕತ್ತ ಹಾಗು ಚೆನ್ನೈ ನಗರಗಲ್ಲಿ ಶಾಖೆಗಳನ್ನು ಸ್ಥಾಪಿಸಿದ ಕಂಪನಿ ಭಾರತದ ಅತಿ ದೊಡ್ಡ ವರ್ತಕ ಕಂಪನಿಯಾಗಿ ಬೆಳೆಯಿತು. ಪ್ರೆಂಚರ ವಿರುದ್ಧ ಕರ್ನಾಟಿಕ್ ಯುದ್ಧಗಳಲ್ಲಿ ಭಾಗಶಃ ಜಯವನ್ನು ಗಳಿಸಿದ್ದ ಕಂಪನಿಯ ಮುಂದಿನ ನಡೆ ದೇಶೀ ರಾಜರುಗಳ ಆಳ್ವಿಕೆಯಲಿದ್ದ ಸಾಮ್ರಾಜ್ಯಗಳನ್ನು ಕಬಳಿಸುವುದು. ಆದರೆ ರಾಜರುಗಳ ಕಾಲ್ದಳ, ಗಜದಳ ಹಾಗು ತಮ್ಮಲ್ಲಿಯ ಸಿಪಾಯಿಗಳ ಹೋಲಿಕೆಯಲ್ಲಿ ಆನೆ ಇರುವೆಯ ವ್ಯತ್ಯಾಸವಿದ್ದ ಕಾರಣ ನೇರವಾಗಿ ಸೆಣೆಸಾಡುವ ಬದಲು ಹಿತ್ತಲು ಬಾಗಿಲಿನಿಂದ ನುಗ್ಗಿ ಹೊಡೆಯುವ ತಂತ್ರವನ್ನು ಅವರು ರೂಪಿಸಿದರು. ಇದಕ್ಕೆ ಮೊಮ್ಮೊದಲ ಬಲಿಯೇ ಬಂಗಾಲದ ನವಾಬ ಸಿರಜ್ಜುದೌಲ.

ಬ್ರಿಟಿಷ್ ಹಾಗು ಫ್ರೆಂಚರ ಕಿತ್ತಾಟದ ಉಪಟಳದಿಂದ ಬೇಸತ್ತಿದ್ದ ನವಾಬ ಬ್ರಿಟಿಷರ ಬೆಳವಣಿಗೆಯ ಹಳ್ಳವನ್ನು ಪ್ರವಾಹವಾಗುವ ಮೊದಲೇ ನಶಿಸಿಹಾಕುವ ಯೋಜನೆಯನ್ನು ಹಾಕಿಕೊಂಡು ಕೋಲ್ಕತ್ತದ ಮೇಲೆ ದಾಳಿ ಮಾಡಿ ಬ್ರಿಟಿಷರ ವಸಾಹತುಗಳನ್ನು ವಶಪಡಿಕೊಳ್ಳುತ್ತಾನೆ. ಪರಕೀಯರ ಮನೆಯೊಂದರಲ್ಲಿ ರೊಟ್ಟಿ ಮುರಿದು ಮನೆಯೇ ನನ್ನದು ಎನ್ನುವ ನಡತೆಯ ಬ್ರಿಟಿಷ್ ಅಧಿಕಾರಿಗಳಿಗೆ ಈ ಅವಮಾನ ನುಂಗಲಾರದ ತುತ್ತಾಯಿತು. ಕೂಡಲೇ ಚೆನ್ನೈನಿಂದ ಒಂದಿಷ್ಟು ಸೈನ್ಯವನ್ನು ತರಿಸಿಕೊಂಡ ಮೇಜರ್ ಜನರಲ್ ರಾಬರ್ಟ್ ಕ್ಲೈವ್ ಸಿರಜ್ಜುದೌಲನ ಮೇಲೆ ಆಕ್ರಮಣವನ್ನು ಮಾಡಲು ಹೊಂಚು ಹಾಕುತ್ತಾನೆ. ಎಷ್ಟೆಲ್ಲಾ ಹೆಣಗಾಡಿದರು ಆತನಿಗೆ ಹೆಚ್ಚೆಂದರೆ ಮೂರು ಸಾವಿರ ಸೈನಿಕರನ್ನು ಮಾತ್ರ ಒಟ್ಟುಗೂಡಿಸಲು ಸಾದ್ಯವಾಯಿತು ಮತ್ತು ಸಿರಜ್ಜುದೌಲನ ಐವತ್ತು ಸಾವಿರ ಸೈನಿಕರ ಮುಂದೆ ಅದು ತೀರಾ ಕನಿಷ್ಠವಾದ ಸಂಖ್ಯೆಯಾಗಿದ್ದಿತು. ಇಂತಹ ಸಂಧಿಘ್ನ ಸಂದರ್ಭದಲ್ಲಿ ಆಂಗ್ಲರ ನರಿಬುದ್ದಿ ಮತ್ತೊಮ್ಮೆ ಕೆಲಸಕ್ಕೆ ಅಣಿಯಾಯಿತು. ಸಿರಜ್ಜುದೌಲನ ಸೈನ್ಯನಾಯಕ ಮಿರ್ ಜಾಫರ್ ನನ್ನು ಪುಸಲಾಯಿಸಿದ ಆಂಗ್ಲರು, ಯುದ್ದದ್ದಲ್ಲಿ ಆತ ತಮ್ಮ ಪರವಾಗಿ ಇರಬೇಕೆಂದೂ, ಪ್ರತಿಫಲವಾಗಿ ಯುದ್ಧವನ್ನು ಗೆದ್ದ ನಂತರ ಆತನನ್ನೇ ಬಂಗಾಲದ ನವಾಬನನ್ನಾಗಿ ಮಾಡುವ ಆಸೆಯನ್ನು ಹೊತ್ತಿಸಿ ಬಂದಿದ್ದರು. ಜೂನ್ 23, 1757 ರಂದು 50,000 ಕ್ಕೂ ಹೆಚ್ಚಿನ ಸಿರಜ್ಜುದೌಲನ ಪಡೆ ಹಾಗು 3000 ಕ್ಕಿಂತಲೂ ಕಡಿಮೆ ಸಂಖ್ಯೆಯ (ಇದರಲ್ಲಿ ಹೆಚ್ಚಿನ ತಲೆಗಳು ‘ಭಾರತೀಯ’ ಸಿಪಾಯಿಗಳೇ ಎಂಬುದು ಮಹತ್ವದ ವಿಷಯ) ಕಂಪನಿಯ ಪಡೆ ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಎದುರಾದವು. ಅದಾಗಲೇ ಬಂಗಾಳದ ನವಾಬನ ಕುರ್ಚಿಯ ಹಗಲು ಕನಸ್ಸನ್ನು ಕಾಣುತ್ತಿದ್ದ ಮಿರ್ ಜಾಫರ್ ತನ್ನ ದೊರೆ ಅಕ್ರಮಣವೆಂದರೂ ದಳಗಳಿಗೆ ಮುನ್ನುಗ್ಗುವ ಸೂಚನೆಯನ್ನು ಕೊಡಲಿಲ್ಲ. ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಬ್ರಿಟಿಷ್ ಪಡೆ ಕೂಡಲೇ ಸಿರಜ್ಜುದೌಲನ ಮೇಲೆ ಮುಗಿಬಿದ್ದು ಆತನನ್ನು ಅಟ್ಟಾಡಿಸಿಕೊಂಡು ಹೋಗಿ ಮುಗಿಸಿದವು. ನಂತರದ ಕೆಲವೇ ದಿನಗಳಲ್ಲಿ 'ಬ್ರಿಟಿಷ್ ಅದಿನದ ಬಂಗಾಳದ ದೊರೆ' ಎಂಬ ಬಿರುದಿನೊಂದಿಗೆ ಮಿರ್ ಜಾಫರ್ ಸಿಂಹಾಸನವನ್ನೇರುತ್ತಾನೆ. ಈ ಒಂದು ಯುದ್ಧದ ಗೆಲುವು ಬ್ರಿಟಿಷರನ್ನು ವರ್ತಕರು ಎಂಬ ವರ್ತನೆಯಿಂದ ಬೇರ್ಪಡಿಸಿ ರಾಜರು, ಸಾರ್ವಬೌಮರು ಎಂಬೊಂದು ಅಹಂನನ್ನು ಅವರಲ್ಲಿ ಹುಟ್ಟುಹಾಕಿತು. ರಾಬರ್ಟ್ ಕ್ಲೈವ್ ನ ಹೆಸರು ಇತಿಹಾಸದ ಪುಟಗಳಲ್ಲಿ ಅಳಿಸಿಹಾಕದಂತಾಯಿತು.

ಮುಂದೆ 1764 ರಲ್ಲಿ ಮೊಘಲ್(ಷಾ ಆಲಂ) ಹಾಗು ನವಾಬರು (ಮೀರ್ ಖಾಸಿಂ) ಒಟ್ಟುಗೂಡಿ ಬಿಹಾರದ ಬಾಕ್ಸರ್ನಲ್ಲಿ ಬ್ರಿಟಿಷರ ವಿರುದ್ಧ ಯುದ್ಧ ಸಾರಿದರು. ಆ ಯುದ್ಧದ ಪರಿಣಾಮವೂ ಸಹ ಪ್ಲಾಸಿ ಕದನದ ಪ್ರತಿರೂಪವೇ ಆಗಿದ್ದಿತು. ಅಲ್ಲದೆ ಈ ಸೋಲು ಬಂಗಾಳದಲ್ಲಿ ನವಾಬರ ಆಳ್ವಿಕೆಯ ಅಂತ್ಯಕ್ಕೆ ಕಾರಣವಾಯಿತಲ್ಲದೆ ಕ್ರಮೇಣ ಮೊಘಲರ ಸಂಪೂರ್ಣ ಅವನತಿಗೂ ನಾಂದಿ ಹಾಡಿತು. 40,000 ದಷ್ಟಿದ್ದ ದೇಶಿ ಪಡೆ ಅದಕ್ಕಿಂತಲೂ ಕಾಲು ಬಾಗದ ಬ್ರಿಟಿಷ್ ಈಸ್ಟ್ ಇಂಡಿಯ ಪಡೆಯಿಂದ ಹೀನಾಯವಾಗಿ ಸೋಲನೊಪ್ಪಿಕೊಂಡಿತ್ತು. ಪ್ಲಾಸಿಯಲ್ಲಿ ಮಿರ್ ಜಾಫರ್ ನನ್ನು ದಾಳವಾಗಿ ಬಳಸಿಕೊಂಡ ಆಂಗ್ಲರ ಪಡೆ, ಬಾಕ್ಸರ್ ನಲ್ಲಿ ಎದುರಾಳಿ ಪಡೆಗಳ ನಡುವೆ ಇದ್ದ ಅಸಹಕಾರತೆಯ ಲಾಭವನ್ನು ಪಡೆಯಿತು.

ಈ ಎರಡು ಯುದ್ಧಗಳು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಯನ್ನು ದೇಶದ ರಾಜಕೀಯ ವಲಯಕ್ಕೂ ಕಾಲಿಡಲು ಅನುವುಮಾಡಿಕೊಟ್ಟವಲ್ಲದೆ ಬ್ರಿಟಿಷರ ಹೆಸರೆತ್ತಿದರೆ ಎದೆಯಲ್ಲಿ ನಡುಕವನ್ನುಟ್ಟಿಸುವ ಸ್ಥಿತಿಯನ್ನು ದೇಶೀ ರಾಜರಲ್ಲಿ ಮೂಡಿಸಿತು. ಮುಂದೆ ಉತ್ತರದ ಸಿಂದ್, ಪಂಜಾಬ್ ಹಾಗು ದಕ್ಷಿಣದಲ್ಲಿ ಮೈಸೂರು ಹಾಗು ಮರಾಠರ ಪ್ರಾಂತ್ಯಗಳನ್ನು ಗೆಲ್ಲುತ್ತಾ ಸುಮಾರು 1840 ರಷ್ಟರಲ್ಲಿ ಕಂಪನಿ ಇಡೀ ಭರತ ಖಂಡದಲ್ಲೇ ತನ್ನ ಅಧಿಪತ್ಯವನ್ನು ಸ್ಥಾಪಿಸಿತು ಅಲ್ಲದೆ ರಕ್ತ ಹೀರುವ ಜಿಗಣೆಗಳಂತೆ ಭಾರತದ ಅಮೋಘ ಸಂಪತ್ತನ್ನು ಹೀರಿಕೊಂಡು ಪುಂಖಾನುಪುಂಖವಾಗಿ ಸ್ವದೇಶಕ್ಕೆ ಸಾಗಿಸತೊಡಗಿತು.

ಸಂಪೂರ್ಣ ಭರತಖಂಡದ ಮೇಲಿನ ಆಡಳಿತದ ಚುಕ್ಕಾಣಿಯನ್ನು ಹಿಡಿದ ಕಂಪನಿಗೆ ಅಫಿಮಿನ ಅಮಲೂ ಸಹ ಅತಿಯಾಗಿಯೇ ಇದ್ದಿತು. ಬಡ ರೈತರಿಂದ ಬಲವಂತವಾಗಿ ಅಫಿಮನ್ನು ಬೆಳಸಿ, ಮೂರು ಕಾಸಿನ ಬೆಲೆಗೆ ಅದನ್ನು ಖರೀದಿಸಿ ಪಕ್ಕದ ಚೀನಾದಲ್ಲಿ ಉತ್ತಮ ಬೆಲೆಗೆ ಮಾರಿ ತನ್ನ ಜೋಳಿಗೆಯನ್ನು ಬರಪೂರ ತುಂಬಿಸಿಕೊಳ್ಳುತ್ತಿತ್ತು. ದೇಶದ ಜನತೆಗೆ ಅಫಿಮಿನ ಅಮಲನ್ನು ಹತ್ತಿಸಿದ ಕಂಪನಿಯ ವಿರುದ್ಧ ಸಿಡಿದ್ದೆದ್ದ ಚೀನಾದ ರಾಜ ಆಂಗ್ಲರ ವಿರುದ್ಧ ಯುದ್ಧವನ್ನು ಸಾರಿದ. ವಿಪರ್ಯಾಸವೆಂಬಂತೆ ಅಂತಹ ಯುದ್ದದ್ದಲ್ಲೂ ಹೋರಾಡಿ ಸಾಯುತ್ತಿದ್ದದ್ದು ಜಮೀನನ್ನು ಕಳೆದುಕೊಂಡು ಆಂಗ್ಲರ ಸೇನೆಯನ್ನು ಸೇರಿದ್ದ ಸಿಪಾಯಿಗಳೆಂದು ಕರೆಸಿಕೊಳ್ಳುತ್ತಿದ್ದ ಅಮಾಯಕ ಭಾರತೀಯ ನಾಗರಿಕರೇ! ಹೀಗೆ ಮುಂದೆ ಕಂಪನಿಯ ಉಪಟಳ, ಅನ್ಯಾಯ ಹಾಗು ತಾರತಮ್ಯದಿಂದ ಬೇಸತ್ತು 1857ರಲ್ಲಿ ಉಂಟಾದ ಸಿಪಾಯಿ ದಂಗೆ ಭಾರತೀಯರೆನಿಸಿಕೊಂಡವರಿಗೆಲ್ಲ ತಿಳಿದಿರುವ ವಿಷಯವೇ. ಅಂದಿನ ಸಿಪಾಯಿ ದಂಗೆಯ ಬಿಸಿ ಬ್ರಿಟನ್ ರಾಣಿಯ ಆಸ್ಥಾನವನ್ನು ತಲುಪಿದ ಕೂಡಲೇ ಕಂಪನಿಯ ಆಡಳಿತವನ್ನು ಬದಿಗೊತ್ತಿ ಸಂಪೂರ್ಣ ಭರತ ಖಂಡದ ಅಧಿಕಾರವನ್ನು ಆಕೆಯ ಬಿಗಿ ಹಿಡಿತಕ್ಕೆ ಒಳಪಡಿಸಲಾಯಿತು. ಹೀಗೆ 1858 ರಿಂದ ಈಸ್ಟ್ ಇಂಡಿಯ ಕಂಪನಿಯ ಆಳ್ವಿಕೆ ಕೊನೆಗೊಂಡು ಬ್ರಿಟಿಷ್ ರಾಜ್ ಆಳ್ವಿಕೆ ಜಾರಿಯಾಗಿ ಅಂಗೈಯಲ್ಲಿ ದೋಚುವ ಕಾರ್ಯಕ್ಕೆ ಜೋಳಿಗೆಯ ಸಹಾಯವನ್ನು ಕರುಣಿಸಲಾಯಿತು.

ಇತಿಹಾಸದ ಕಾಲಘಟ್ಟದಲ್ಲಿ ವೈಜ್ಞಾನಿಕವಾಗಿ, ಶೈಕ್ಷಣಿಕವಾಗಿ, ಅಲ್ಲದೆ ತಾಂತ್ರಿಕವಾಗಿಯೂ ಮುಂಚೂಣಿಯಲ್ಲಿದ್ದ ದೇಶವೊಂದು ಹೀಗೆ ಪರಕೀಯರ ದಾಳಿಗಳಿಗೆ ಅತಿ ಸಲೀಸಾಗಿ ತುತ್ತಾಗಿದ್ದಾದರು ಹೇಗೆ ಎಂಬ ಪ್ರೆಶ್ನೆ ನಮ್ಮಲ್ಲಿ ಮೂಡದೇ ಇರಲಾರದು. ನಮ್ಮಲ್ಲಿದ್ದ ಅದ್ಯಾವ ದೌರ್ಬಲ್ಯ ಪರಕೀಯರನ್ನು ಇಲ್ಲಿಗೆ ಕರೆಕರೆದು ಚಚ್ಚಿಸಿಕೊಂಡಿತು? ಬ್ರಿಟಿಷರ ವಿಷಯಕ್ಕೆ ಬಂದರೆ ಭಾರತದ ಅವರ ಉತ್ತುಂಗದ ಕಾಲದಲ್ಲೂ ಹೆಚ್ಚೆಂದರೆ ಲಕ್ಷದ್ದಷ್ಟಿದ್ದ ಆ ಸೇನಾಪಡೆ ಇತಿಹಾಸದ ಯಾವ ಸಾಮ್ರಾಜ್ಯವೂ ಆಳದ ಮಟ್ಟಿಗೆ ಆಳ್ವಿಕೆ ನೆಡೆಸಿದ್ದಾದರು ಹೇಗೆ?

ಮೊದಲನೆಯದಾಗಿ ಆಕ್ರಮಣಗಳ ಮೇಲೆ ಆಕ್ರಮಣವನ್ನು ಮಾಡಿಸಿಕೊಂಡು ಹರಿದು ಹಂಚಿ ಹೋಗಿದ್ದ ದೇಶ ಒಗ್ಗಟ್ಟಿಲ್ಲದ ಮದವೇರಿದ ಆನೆಯ ಗುಂಪಿನಂತಾಗಿದ್ದಿತು. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭವಾಗುತ್ತಿದ್ದ ಕಾಲವದು. ಇಂತಹ ಸಂಧರ್ಭವನ್ನು ಸದುಪಯೋಗ ಮಾಡಿಕೊಂಡ ಆಂಗ್ಲರು ಒಂದೊಂದೇ ಆನೆಗಳನ್ನು ತಮ್ಮ ಪರವಾಗಿ ಪಳಗಿಸತೊಡಗಿದರು. ಪಳಗದ ಆನೆಗಳನ್ನು ಪಳಗಿದ ಆನೆಗಳ ಸಹಾಯದಿಂದ ಒಡೆದುರುಳಿದರು. ಹೀಗೆ ಭಲಿಷ್ಟ ಸಾಮ್ರಾಜ್ಯಗಳೊಟ್ಟಿಗೆ ರಾಜಿಯ ಒಪ್ಪಂದ, ಆಟಕುಂಡು ಲೆಕ್ಕಕ್ಕಿಲ್ಲದವರ ಮೇಲೆ ಪೌರುಷದ ನಡೆ, ದುಡಿಯುವ ಕಂಪನಿಯೊಂದನ್ನು ಆಳುವ ಸರ್ಕಾರವನ್ನಾಗಿ ಮಾಡಿತು. ಅಮೆರಿಕದಂತಹ ಭಲಿಷ್ಟ ದೇಶವೇ ಅಂದೊಂದು ದಿನ ವಿಯೆಟ್ನಾಮ್ ನಂತಹ ಅತಿ ಸಣ್ಣ ದೇಶವನ್ನು ಮಣಿಸಲಾಗದಿರುವಾಗ, ಮನಸು ಮಾಡಿದ್ದರೆ ವಿಶ್ವವನ್ನೇ ಗೆಲ್ಲುವ ತಾಕತ್ತಿದ್ದ ಪುರಾತನ ಪ್ರಸಿದ್ಧ ದೇಶವೊಂದು ನೆನ್ನೆ ಮೊನ್ನೆ ಜನಿಸಿದ ದೇಶಗಳ ದಾಳಿಕೋರರಿಂದ ಆಳ್ವಿಕೆಗೊಳಪಟ್ಟದ್ದು ಮಾತ್ರ ನಮ್ಮ ವಿಪರ್ಯಾಸವೇ ಸರಿ. ಬ್ರಿಟಿಷರ ಅಧಿಕಾರ ವಿಸ್ತರಣೆಗೆ ಮತ್ತೊಂದು ಬಲವಾದ ಕಾರಣ ಅವರ ಬಳಿಯಿದ್ದ ಯುದ್ದೋಪಕರಣಗಳು. ದೇಶೀ ರಾಜರುಗಳ ಸಾಗರ ಸಂಖ್ಯೆಯ ಅಶ್ವದಳ, ಗಜದಳ ಹಾಗು ಕಾಲ್ದಳಗಳನ್ನು ನಿಮಿಷಮಾತ್ರದಲ್ಲಿ ನಿರ್ನಾಮ ಮಾಡುವ ತಂತ್ರಜ್ಞಾನಗಳು ಅವರ ಗೆಲುವುಗಳಿಗೆ ವರದಾನವಾಗಿ ಪರಿಣಮಿಸಿದವು. ಅಲ್ಲದೆ ನಮ್ಮವರನ್ನೇ ಸಿಪಾಯಿಗಳೆಂದು ಸೈನ್ಯಕ್ಕೆ ಸೇರಿಸಿಕೊಂಡು ನಮ್ಮ ವಿರುದ್ಧವೇ ಹೋರಾಡಲು ನಿಲ್ಲುವಂತೆ ಮಾಡಿದ್ದು ಅವರ ನೂರು ತಂತ್ರಗಾರಿಕೆಗಳಲ್ಲೊಂದು. ದೇಶೀ ರಾಜರುಗಳ ಆಳ್ವಿಕೆಯಲ್ಲಿದ್ದ ಲೋಪದೋಷಗಳಿಂದ ಬೇಸತ್ತಿದ್ದ ಜನರೂ ಸಹ ಹೀಗೆ ಬಹುವಾಗಿ ಆಂಗ್ಲರ ಪಡೆಯನ್ನು ಸೇರುತ್ತಿದ್ದರು. ಇಷ್ಟೆಲ್ಲಾ ಕುತಂತ್ರಗಾರಿಕೆಗಳು ಆಂಗ್ಲರನ್ನು ಶತಮಾನಗಳವರೆಗೆ ವಿಶ್ವದ ಮೂಲೆ ಮೂಲೆಗಳಿಗೆ ಪಸರಿಸಿಕೊಳ್ಳಲ್ಲು ಸಾದ್ಯಗಿಸಿತು.



ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಆಗಮನ ನಮ್ಮ ದೇಶವನ್ನು ಆರ್ಥಿಕವಾಗಿ ಅದೆಷ್ಟೇ ಕುಗ್ಗಿಸಿದರೂ ಅಖಂಡ ಭಾರತವಂಬ ಕಲ್ಪನೆಯನ್ನು ದೇಶೀಯರಲ್ಲಿ ಪುನ್ಹ ಹುಟ್ಟಿ ಹಾಕಿತು. ಒಂದು ಪಕ್ಷ ಬ್ರಿಟಿಷರು ದೇಶದ ಸುತ್ತಲೂ ಗೆರೆಯೊಂದನ್ನು ಎಳೆದು ಇಂತಿಷ್ಟು ಜಾಗವನ್ನು ಇಂಡಿಯ ಎಂದು ಕರೆಯದಿದ್ದರೆ ಅಕ್ಕ ಪಕ್ಕದ ಬಕರಾಕ್ಷಸ ರಾಷ್ಟ್ರಗಳು ಇಷ್ಟರಲ್ಲಾಗಲೇ ನಮ್ಮ ನೆಲವನ್ನು ನುಂಗಿ ನೀರು ಕುಡಿದಿರುತ್ತಿದ್ದವು. ಬ್ರಿಟಿಷರು ಮೇಲಿನಿಂದ ಬಂದ ಆಕ್ರಮಣಕಾರರನ್ನು ಇಲ್ಲಿಂದ ಕಾಲು ಕೀಳಿಸಿದರಲ್ಲದೆ ದೇಶವನ್ನು, ದೇಶೀ ಉತ್ಪನ್ನಗಳನ್ನು ತಿಳಿದೋ ತಿಳಿಯದೆಯೋ ವಿಶ್ವ ಮಾರುಕಟ್ಟೆಯಲ್ಲಿ ತಂದು ನಿಲ್ಲಿಸಿದರು. ಸ್ವಾತಂತ್ರ್ಯ ನಂತರ ದೇಶದ ಬೆಳವಣಿಗೆಯಲ್ಲಿ ಪ್ರತ್ಯಕ್ಷವಲ್ಲವಾದರೂ ಪರೋಕ್ಷವಾಗಿ ಇದು ಸಹಕಾರಿಯಾಯಿತು. ಅದು ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಕಲ್ಪನೆಯಾಗಲಿ ಅಥವಾ ಇದು ನಮ್ಮ ನೆಲವೆಂಬ ಪ್ರೀತಿಯ ಜ್ವಾಲೆಯಾಗಲಿ, ಬ್ರಿಟಿಷರೆಂಬ ಆಸೆಬುರುಕ ಅನ್ಯಾಯಿಗಳಿಂದಲೇ ಸಾಧ್ಯವಾಯಿತು ಎಂಬುದು ಸೋಜಿಗದ ಸಂಗತಿ. ಇಲ್ಲವಾದರೆ ಗುಲಾಮ, ನಿಜಾಮ, ರಜಪೂತ, ಮರಾಠ, ಒಡೆಯ ಎಂಬಿತ್ಯಾದಿ ರಾಜ ಮನೆತನಗಳ ನಡುವೆ ಹರಿದು ಹಂಚಿಹೋಗಿದ್ದ ಇತಿಹಾಸ ಪ್ರಸಿದ್ಧ ನಮ್ಮ ನೆಲ ಇಂದು ಒಂದಾಗಿ ಭಾರತ ಎಂದು ಹೆಮ್ಮೆಯಿಂದ ಕರೆಸಿಕೊಳ್ಳಲು ಸಾದ್ಯವಾಗದೆ ಇರುತ್ತಿತ್ತೇನೋ, ಯಾರು ಬಲ್ಲರು?!

Thursday, July 13, 2017

ಗತವೈಭವದ ದಿನಗಳ ಇತಿಹಾಸದ ಪುಟಗಳು ....

ಭಾಗಶಃ ದಕ್ಷಿಣ ಭಾರತವಲ್ಲದೆ ಇಂದಿನ ಶ್ರೀಲಂಕಾ, ಬಾಂಗ್ಲಾದೇಶ, ಮಯನ್ಮಾರ್, ಥೈಲ್ಯಾಂಡ್, ಮಲೇಷ್ಯಾ, ಮಾಲ್ಡೀವ್ಸ್ ಅಲ್ಲದೆ ದೂರದ ಸಿಂಗಾಪುರದವರೆಗೂ ತನ್ನ ಅಧಿಪತ್ಯವನ್ನು ಸ್ಥಾಪಿಸಿದ್ದ ಸಾಮ್ರಾಜ್ಯವೊಂದಿತ್ತು. ಸುಮಾರು ಹದಿನೈದು ಶತಮಾನಗಳಿಗೂ ಹೆಚ್ಚಿನ ಕಾಲಘಟ್ಟದಲ್ಲಿ ವಿಸ್ತರಿಸಿದ್ದ ಈ ಭಲಿಷ್ಟ ಸಾಮ್ರಾಜ್ಯ ಇಂದಿಗೆ ಸಾವಿರ ವರ್ಷಗಳ ಹಿಂದೆಯೇ ದಂಡೆತ್ತಿ ಹೋಗಲು ಸುಮಾರು ಒಂದೂವರೆ ಸಾವಿರಕ್ಕಿಂತಲೂ ಹೆಚ್ಚಿನ ಯುದ್ಧನೌಕೆಗಳುಳ್ಳ ‘ನೌಕಾದಳ’ವನ್ನು ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿತ್ತು. ಇನ್ನು ಈ ಸಾಮ್ರಾಜ್ಯದ ಆಡಳಿತದಲ್ಲಿ ನಿರ್ಮಿಸಲ್ಪಟ್ಟ ದೇವಾಲಯಗಳ ಆಕಾರ, ಕೆತ್ತನೆಗಳಿಗೆ ಪ್ರಸ್ತುತ ಇಂಜಿನಿಯರಿಂಗ್ ಟೆಕ್ನಾಲಜಿಗಳೇ ನಾಚಿ ನೀರಾಗುವಂತಿವೆ, ಅಲ್ಲದೆ ಇಂದಿಗೂ ಗಟ್ಟಿಮುಟ್ಟಾಗಿವೆ! ಯೂರೋಪಿನ ಕಾಡು ಮೇಡುಗಳಲ್ಲಿ ಮಾನವ ಗೆಡ್ಡೆ ಗೆಣೆಸುಗಳನ್ನು ಅಗೆದು ತಿನ್ನುತ್ತಿದ್ದ ಕಾಲದಲ್ಲೇ ಇವರು ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಿ ಸಾವಿರಾರು ಹೆಕ್ಟರ್ ಪ್ರದೇಶಗಳಿಗೆ ನೀರನ್ನು ಹರಿಬಿಡುತ್ತಿದ್ದರು. ವಿಸ್ಮಯದ ಸಂಗತಿಯೆಂದರೆ ಇಂದಿಗೂ ಆ ಅಣೆಕಟ್ಟುಗಳು ಬಹುಜನರ ಆಧಾರವಾಗಿರುವುದು! ದಂಡೆತ್ತಿ ಬಂದ ಮೊಂಡ ರಾಜರನ್ನೇ ಇತಿಹಾಸವೆಂದು ಕಲಿಯುತ್ತಿರುವ ನಾವುಗಳು ಇಂತಹ ಒಂದು ಸಾಮ್ರಾಜ್ಯದ ಬಗ್ಗೆ ತಿಳಿದೂ ತಿಳಿಯದಂತಾಗಿದ್ದೇವೆ. ಕ್ರಿಸ್ತ ಪೂರ್ವ ಸುಮಾರು ಮೂರನೇ ಶತಮಾನದಿಂದ ಕ್ರಿಸ್ತ ಶಕ ಹದಿಮೂರನೇ ಶತಮಾನದವರೆಗೂ ವಿಸ್ತರಿಸಲ್ಪಟ್ಟಿದ್ದ ಈ ಸಾಮ್ರಾಜ್ಯದ ಹೆಸರನ್ನು ಕೇಳಿದರೆ ಅಂದು ಇಡೀ ಭರತ ಖಂಡವೇ ಗಡ ಗಡ ನಡುಗುತ್ತಿತ್ತು. ದೂರದ ಚೀನಾ ಹಾಗು ಬಾಗ್ದಾದಿನವರೆಗೂ ತನ್ನ ಪ್ರಭಾವವನ್ನು ಬೀರಿದ್ದ ಚೋಳ ಸಾಮ್ರಾಜ್ಯವನ್ನು ಇಂದಿನ ಅದೆಷ್ಟು ಜನ ಬಹುವಾಗಿ ಬಲ್ಲರು?

ಕ್ರಿ.ಪೂ ಮೂರನೇ ಶತಮಾನಕ್ಕೂ ಮೊದಲೇ ದಕ್ಷಿಣದಲ್ಲಿ ಚೋಳರ ಇರುವಿಕೆಗೆ ಪುರಾವೆಗಳು ( ಅಶೋಕನನ ಕಾಲದ ಶಾಸನಗಳ ಮೇಲೆ ಚೋಳರ ಹೆಸರುಗಳನ್ನು ಕಾಣಬಹುದು) ದೊರೆತರೂ, ಚೋಳ ಸಾಮ್ರಾಜ್ಯ ಉತ್ತುಂಗದ ದಿನಗಳನ್ನು ಕಂಡದ್ದು ವಿಜಯಾಲಯ ಚೋಳ (ಕ್ರಿ.ಶ 848) ಅಧಿಕಾರ ವಹಿಸಿಕೊಂಡ ನಂತರವೇ. ಸುಮಾರು ಒಂಬತ್ತನೇ ಶತಮಾನದ ಆದಿಯಲ್ಲಿ ಅಧಿಕಾರದ ಮದದಲ್ಲಿ ಪಲ್ಲವರು ಹಾಗು ಪಾಂಡ್ಯರ ನಡುವಿನ ಕಿತ್ತಾಟದ ಸೂಕ್ತ ಸಮಯದಲ್ಲಿ ತಮಿಳುನಾಡಿನ ತಂಜಾವೂರನ್ನು ಆಕ್ರಮಿಸಕೊಂಡ ಈತ ಅದನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡ.ಅಲ್ಲಿಂದ ಮುಂದೆ ದಕ್ಷಿಣ ಭಾರತದ ಅತಿ ಬಲಿಷ್ಠ ಸಾಮ್ರಾಜ್ಯವಾಗಿ ಬೆಳೆದ ಚೋಳ ಸಾಮ್ರಾಜ್ಯ ರಾಜ ರಾಜ ಚೋಳ ಹಾಗು ಆತನ ಮಗ ರಾಜೇಂದ್ರ ಚೋಳನ ಕಾಲಕ್ಕಾಗಲೇ ಇಂದಿನ ಮಾಲ್ಡೀವ್ಸ್, ಇಂಡೋನೇಶಿಯಾದ ವರೆಗೂ ವಿಸ್ತರಿಸಿತ್ತು.

ಸಾವಿರಾರು ಮೈಲುಗಳ ದೂರವನ್ನು ನಿರಾಯಾಸವಾಗಿ ಕ್ರಮಿಸುವ ಯುದ್ಧನೌಕೆಗಳೇ ಅಂದಿನ ಚೋಳ ಸಾಮ್ರಾಜ್ಯದ ಅದ್ಭುತ ಹೈಲೈಟ್. ಪ್ರತಿ ಯುದ್ಧ ನೌಕೆಗಳು ಆಕ್ರಮಿಸುವ ದೇಶದ ಶಕ್ತಿಗನುಸಾರವಾಗಿ ಬೇಕಾಗುವ ಆನೆ, ಕುದುರೆ ಹಾಗು ಕಾಲ್ದಳಗಳ ಟನ್ ಗಟ್ಟಲೆ ತೂಕವನ್ನು ಹೊತ್ತು ಸಾಗುತ್ತಿದ್ದವು. ಇನ್ನೂ ಕುತೂಹಲದ ವಿಷಯವೆಂದರೆ ಪ್ರತಿ ಯುದ್ಧ ನೌಕೆಗಳು ಬೆಂಕಿಯನ್ನು ಉಗುಳಿ ವೈರಿಪಡೆಯನ್ನು ಅಲ್ಲೊಲ್ಲ ಕಲ್ಲೊಲ್ಲ ಮಾಡುವ ತಂತ್ರಗಾರಿಕೆಯನ್ನು ಒಳಗೊಂಡಿದ್ದವು. ಈಗೆ ಬೆಂಕಿಯನ್ನು ಕಾರುವ ಯಂತ್ರೋಪಕರಣಗಳನ್ನು ದೂರದ ಚೀನಾದಿಂದ ಆಮದು ಮಾಡಿಕೊಂಡು ಅಳವಡಿಸಿಕೊಳ್ಳುವ ತಂತ್ರಗಾರಿಕೆ ಇವರಿಗೆ ಪಾರಂಗತವಾಗಿದ್ದಿತು. ಕ್ರಿ.ಶ 1025 ರಲ್ಲಿ ರಾಜೇಂದ್ರ ಚೋಳನ ಶ್ರೀವಿಜಯ (ಇಂದಿನ ಇಂಡೋನೇಷ್ಯಾ) ದಂಡಯಾತ್ರೆ ಇದಕೊಂಡು ತಕ್ಕ ಪುರಾವೆ. ಮುಂದೆ ಅಕ್ಕ ಪಕ್ಕದ ಮಲೇಷ್ಯಾ, ಥೈಲ್ಯಾಂಡ್, ಮಯನ್ಮಾರ್ ಹಾಗು ಸಿಂಗಾಪುರವನ್ನು ಆಕ್ರಮಿಸಿಕೊಂಡ ಚೋಳ ಪಡೆ ದಕ್ಷಿಣ ಏಷ್ಯಾದಾದ್ಯಂತ ತನ್ನ ಪ್ರಭಾವವನ್ನು ಬೀರಿದ್ದಿತು. ಇಂತಹ ಒಂದು ನೌಕಾಪಡೆಯನ್ನು ಬೆಳೆಸಿಕೊಂಡ ಪರಿಯಂತೂ ನಮ್ಮ ಇತಿಹಾಸದ ಗತವೈಭವದ ಅದ್ಬುತ ಕಾಲ. ಇತ್ತೀಚೆಗೆ 2014 ರಲ್ಲಿ ಭಾರತೀಯ ನೌಕಾಸೇನೆ ದೇಶೀ ನೌಕಾವ್ಯವಸ್ಥೆಗೆ ಮಹತ್ವದ ಕೊಡುಗೆಯನ್ನು ನೀಡಿದ್ದ ರಾಜೇಂದ್ರ ಚೋಳನ 1000ನೇ ವರ್ಷದ ಪಟ್ಟಾಭಿಷೇಕದ ದಿನವನ್ನು ಆಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇನ್ನು ಇವರ ದೇವಾಲಯಗಳ ನಿರ್ಮಾಣ ಕಲೆಯ ಬಗ್ಗೆ ಹೇಳುವುದಾದರೆ ಒಂದೋ ಆ ಅಗಾಧತೆಯ ಮುಂದೆ ಅಕ್ಷರ ಸಹ ಮಾರುಹೋಗಿರುವರನ್ನೂ ಅಥವಾ ಇಂಥಹದದೊಂದು ಕೆತ್ತನೆ ನಮ್ಮವರಲ್ಲಿ ಏಕೆ ಮೂಡಲಿಲ್ಲ ಎಂದು ಅಸೂಹೆ ಪಡುವವರನ್ನು ಮಾತ್ರ ಕಾಣಬಹುದೇ ವಿನಃ ಕಲೆಯಲ್ಲಿ 'ಕಲೆ' ಯನ್ನು ಹುಡುಕಿ ಕೊಡುವವರು ಇತಿಹಾಸದ ಉದ್ದಗಲಕ್ಕೂ ನಮಗೆ ಸಿಗರು. ಹೆಚ್ಚಾಗಿ ದ್ರಾವಿಡ ಶೈಲಿಯ ಕೆತ್ತನೆಗಳಾಗಿದ್ದ ಚೋಳರ ದೇವಾಲಯಗಳು ನೋಡುಗರನ್ನು ಇಂದಿಗೂ ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಇದಕ್ಕೆ ತಕ್ಕ ಉದಾಹರಣೆ ತಂಜಾವೂರಿನ ಬೃಹದೇಶ್ವರ ದೇವಾಲಯ.

ದೇಶದ ಅತಿ ದೊಡ್ಡ ದೇವಾಲಯವೆಂದೇ ಪ್ರಸಿದ್ದಿ ಹೊಂದಿರುವ ಈ ದೇವಾಲಯದ ನಿರ್ಮಾಣ ಕ್ರಿ ಶ ಸುಮಾರು 1002 ರಲ್ಲಿ ಶುರುವಾಗಿ 1010 ರ ಆಸುಪಾಸಿನಲ್ಲಿ ಮುಗಿಯಲ್ಪಟಿತ್ತು. 66 ಅಡಿ ಎತ್ತರವಿರುವ (ವಿಮಾನ) ದೇವಾಲಯ ಅತಿ ಎತ್ತರವಾಗ ಶಿವಲಿಂಗ ಹಾಗು ಅತಿ ದೊಡ್ಡ ನಂದಿಯ ಕೆತ್ತನೆಯನ್ನೂ ಒಳಗೊಂಡಿದೆ. ಆದರೆ ಈ ದೇವಾಲಯದ ವಿಶಿಷ್ಟತೆ ಇರುವುದು ಅದರ ವಿನ್ಯಾಸ ಹಾಗು ರಚನೆಯಲ್ಲಿ. ಮೊದಲನೆಯದಾಗಿ ಮ್ಯಾಟ್ರಿಕ್ಸ್ ಮಾದರಿಯ ದೇವಾಲಯದ ರಚನೆ. ಅಂದರೆ ಸುಣ್ಣ ಅಥವಾ ಸಿಮೆಂಟಿನಂತಹ ಯಾವುದೇ ಮಾದ್ಯಮವಿರದೆ ಲಗೋರಿ ಆಟದ ಕಲ್ಲುಗಳಂತೆಯೇ ಒಂದರ ಮೇಲೊಂದು ಕಲ್ಲುಗಳನ್ನು ಜೋಡಿಸಿ ಕಟ್ಟಿರುವ ದೇವಾಲಯವಿದು! ಬಹುಷಃ ಈ ಮಟ್ಟದ ತಾಂತ್ರಿಕ ಚಿಂತನೆ ಅಂದಿನ ಕಾಲದಲ್ಲಿ ಕೇವಲ ದೇಶೀ ಶಿಲ್ಪಿಗಳಿಗೆ ಮಾತ್ರ ಸೀಮಿತವಾಗಿದ್ದಿತೇನೋ. ದೇವಾಲಯದ ಕೆತ್ತನೆಗೆ ಬಳಸಲಾಗಿರುವು ಅತಿ ಗಟ್ಟಿಯಾದ ಗ್ರಾನೈಟ್ ಶಿಲೆ. ಶಕ್ತಿಯೆಲ್ಲವನ್ನು ಬಸಿದು ಬಡಿಯುವ ಏಟಿಗೆ ಇಂಚಷ್ಟೂ ಕದಲದ ಗ್ರಾನೈಟ್ ಎಂಬ ಗಟ್ಟಿಗನನ್ನು ಚೀವಿಂಗ್ ಗಮ್ ನ ದೇಹದಂತೆ ತಿದ್ದಿ, ತೀಡಿ ಮಾಡಿರುವ ಕಲಾಕೃತಿಗಳ ಅಂದವಂತೂ ವರ್ಣನೆಗೆ ನಿಲುಕದು. 1,30,000 ಟನ್ ಗಿಂತಲೂ ಹೆಚ್ಚಿನ ಗ್ರಾನೈಟ್ ಈ ದೇವಾಲಯದ ನಿರ್ಮಾಣಕ್ಕೆ ಬಳಕೆಯಾಗಿದೆ ಎಂದರೆ ನಮ್ಮ ಪ್ರಾಚೀನರ ಶ್ರಮದ ಮೇಲೆ ನಮಗೆ ಹೆಮ್ಮೆ ಮೂಡದೇ ಇರುತ್ತದೆಯೇ? ವಿಸ್ಮಯದ ವಿಚಾರವೆಂದರೆ ಈ ದೇವಾಲಯ ನಿರ್ಮಾಣವಾಗಿರುವ ಜಾಗದಿಂದ ಸುತ್ತ ಮುತ್ತಲೂ ಯಾವುದೇ ಕಲ್ಲಿನ ಗುಡ್ಡಗಳಾಗಲಿ, ಬಂಡೆಗಳಾಗಲಿ ಇದ್ದ ಪುರಾವೆಗಳಿಲ್ಲ. ಹಾಗಾದರೆ ಅಷ್ಟೆಲ್ಲ ಪ್ರಮಾಣದ ಕಲ್ಲಿನ ರಾಶಿಯನ್ನು ಹೊತ್ತು ತಂದಿದ್ದಾದರೂ ಎಲ್ಲಿಂದ? ಸಂಶೋದಿಸುತ್ತ ಹೊರಟ ಇತಿಹಾಸಕಾರರಿಗೆ ದೊರೆತದ್ದು ಸುಮಾರು ಐವತ್ತು ಮೈಲಿನಷ್ಟು ದೂರದ ಒಂದು ಹಳ್ಳಿ. ಆದರೆ ತಿಣುಕಾಡಿದರೂ ಅಲುಗಾಡಿಸಲಾಗ, ಪ್ರಪಂಚದಲ್ಲೇ ಅತಿ ಗಟ್ಟಿ ಕಲ್ಲಾದ ಗ್ರಾನೈಟ್ ಅನ್ನು ಟನ್ ಗಟ್ಟಲೆ ಪ್ರಮಾಣದಲ್ಲಿ ಐವತ್ತು ಮೈಲಿನಷ್ಟು ದೂರ ಸಾಗಿಸಿದಾದರೂ ಹೇಗೆ? ಅದಿರಲಿ, ದೇವಾಲಯದ ಅರವತ್ತಾರು ಅಡಿ ಎತ್ತರದ ಗೋಪುರದ ಮೇಲಿರುವ ಕಲ್ಲಿನ ತೂಕವೇ ಸುಮಾರು 80 ಟನ್ ಗಳು.! ಅಷ್ಟು ಭಾರವಾದ ಕಲ್ಲೊಂದನ್ನು ಮೋಟಾರು ಅಥವಾ ಕ್ರೈನ್ ಗಳಿಲ್ಲದ ಕಾಲದಲ್ಲಿ ಅರವತ್ತರಿಂದ ಎಪ್ಪತ್ತು ಅಡಿ ಎತ್ತಿ ಕೂರಿಸಿದಾದರೂ ಹೇಗೆ? ಕುತೂಹಲ ಮೂಡುವುದಿಲ್ಲವೇ? ಸಾವಿರ ವರ್ಷಗಳು ಕಳೆದರೂ ಇಂದಿಗೂ ಕಂಗೊಳಿಸುವ ವರ್ಣಚಿತ್ರಗಳು, ದೇವಾಲಯದ ನೆರಳು ನೆಲದ ಮೇಲೆಯೇ ಬೀಳದಂತೆ ಕಟ್ಟಿರುವ ಕುಶಲತೆ, ಕೆಲಮಾಳಿನಲ್ಲಿ ಇರುವ ಸುರಂಗ ವ್ಯವಸ್ಥೆ ಹೀಗೆ ಇನ್ನು ಹಲವು ಪ್ರತ್ಯೇಕ್ಷ ಪುರಾವೆಗಳು ಚೋಳರ ಜಾಣ್ಮೆಯನ್ನು ವಿಶ್ವಕ್ಕೆ ಎತ್ತಿ ತೋರಿಸುತ್ತವೆ. ವಿದೇಶಿಗರಿಗೆ ಅಲ್ಲದೆ ನಮ್ಮಲ್ಲೇ ಹೆಚ್ಚಿನವರಿಗೆ ಇಂತಹ ತಾಂತ್ರಿಕತೆಯ ಮೇಲೆ ಸಂಶಯ ಮೂಡಿ ಇವೆಲ್ಲ ಏಲಿಯನ್ ಎಂಬ ಜೀವಿಗಳು ಮಾಡಿವೆ ಎಂಬ ಬಂಡ ವಾದವನ್ನು ಮುಂದಿಡುತ್ತಾರೆ. ನಾವುಗಳು ಒಂದರ ಹಿಂದೊಂದು ವಿಸ್ಮಯಗಳನ್ನು ಸೃಷ್ಟಿಸುತ್ತಿದ್ದ ಕಾಲದಲ್ಲಿ ಕಾಡುಮೇಡುಗಳಲ್ಲಿ ಅರೆ ಬೆತ್ತಲಾಗಿ ಅಲೆಯುತ್ತಿದ್ದ ಅವರುಗಳೇನೋ ತಾವು ಸಣ್ಣವರೆಂದು ತೋರಿಸಿಕೊಳ್ಳದಿರಲು ಹಾಗೊಂದು ವಾದವನ್ನು ಮುಂದಿಡಬಹುದು. ಆದರೆ ಇಲ್ಲಿ ಹುಟ್ಟಿ ಇಲ್ಲಿಯೇ ಬೆಳೆದ ನಮ್ಮವರಿಗೇಕೆ ನಮ್ಮ ಪೂರ್ವಜರ ಕುಶಲತೆ ಹಾಗು ಶ್ರಮದ ಮೇಲೆ ಇಲ್ಲದ ಸಂಶಯ?

ಆಣೆಕಟ್ಟು ನಿರ್ಮಾಣದಲ್ಲೂ ಚೋಳರು ಭಾರಿ ನಿಸ್ಸಿಮರಾಗಿದ್ದರು. ಅದೂ ಸಹಃ ಸುಮಾರು 2000 ವರ್ಷಗಳ ಹಿಂದೆಯೇ. ಕ್ರಿ ಶ 2 ನೇ ಶತಮಾನದಲ್ಲಿ ಕರಿಕಲ ಚೋಳನ ಆಳ್ವಿಕೆಯಲ್ಲಿ ನಿರ್ಮಿಸಲ್ಪಟ್ಟ ಕಲ್ಲಣೈ ಆಣೆಕಟ್ಟು ಇಂದಿಗೂ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಕೇಳಿದರೆ ನಮ್ಮ ಪ್ರಸ್ತುತ ಎಂಜಿನೀರ್ಗಳಿಗೆ ಅಸೂಹೆ ಬರದಿರದು. ಪ್ರಪಂಚದಲ್ಲೇ ಅತಿ ಪುರಾತನ ಆಣೆಕಟ್ಟು ಎಂಬ ಹೆಗ್ಗಳಿಕೆಯನ್ನು ಗಳಿಸಿರುವ ಈ ಅಣೆಕಟ್ಟನ್ನು ತಿರುಚನಾಪಳ್ಳಿಯಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಅಂದು ಸಾವಿರಾರು ವರ್ಷಗಳು ಕೋಟ್ಯಂತರ ಜನರರಿಗೆ ಆಧಾರವಾಗಬಲ್ಲ ಅಣೆಕಟ್ಟನ್ನು ನಿರ್ಮಿಸಬಲ್ಲ ಚಾತುರ್ಯತೆ ಚೋಳರಿಗೆ ಅದೆಲ್ಲಿಂದ ಬಂದಿರಬಹು ಎಂಬುದು ಕುತೂಹಲಕಾರಿ ವಿಷಯ.

ಜಗತ್ಪ್ರಸಿದ್ದ ದೇವಾಲಯಗಳು, ಅವುಗಳಲ್ಲಿನ ಅಮೋಘ ಕೆತ್ತನೆ, ದಂಡೆತ್ತಿ ಬರುವ ಭಾರಿ ಅಲೆಗಳ ನಡುವೆ ಸಾವಿರಾರು ಮೈಲುಗಳು ಚಲಿಸುವ ನೌಕೆಗಳು, ವೈರಿ ನೌಕೆಗಳನ್ನು ದಿಕ್ಕುತಪ್ಪಿಸಿ ಕಟ್ಟಿಹಾಕುವ ಕಲೆ, ಯಾವುದೇ ಕಂಪ್ಯೂಟರ್ ಟೆಕ್ನಾಲಜಿಗಳ ಆಧಾರವಿಲ್ಲದೆ ಇಂದಿನವರೆಗೂ ಕಾರ್ಯನಿರ್ವಹಿಸಬಲ್ಲ ನಿರ್ಮಾಣಗಳ ಕ್ಷಮತೆಯ ಹಿಂದಿರುವ ಕುಶಲತೆ, ಸಹಸ್ರ ವರ್ಷಗಳ ಕಾಲ ಆಳ್ವಿಕೆ ಮಾಡಿದ ಹೆಗ್ಗಳಿಕೆ, ಕಲೆ ವಾಸ್ತುಶಿಲ್ಪಗಳಿಗೆ ನೀಡಿದ ಅಮೂಲ್ಯ ಕೊಡುಗೆ ಹಾಗು ಇನ್ನು ಹಲವು ಅಂಶಗಳನ್ನು ಒಳಗೊಂಡಿದ್ದ ಜೋಳ ಸಾಮ್ರಾಜ್ಯ ಇಂದು ಇತಿಹಾಸದ ಪುಸ್ತಕಗಳಿಂದಲ್ಲದೆ ಜನರ ಮಸ್ತಿಷ್ಕದಿಂದಲೂ ಮರೆಯಾಗುತ್ತಿದೆ.

ವಿದೇಶಿಯರಿಗೆ ಇಂತಹ ವಿಚಾರಗಳ ಬಗ್ಗೆ ಯೋಚಿಸಲೂ ಸಾಧ್ಯವಾಗದಂತಹ ಕಾಲದಲ್ಲಿ ಇಷ್ಟೆಲ್ಲಾ ವಿಷಯಗಳನ್ನು ಅರೆದು ಕುಡಿದ ಜ್ಞಾನಿಗಳು ಬರ ಬರುತ್ತಾ ಏಕೆ ಕಣ್ಮರೆಯಾಗಿ ಹೋದರು? ಚಕ್ರವನ್ನು ಕಂಡು ಹಿಡಿದ ಮಾನವ ಇಂದು ವಿಮಾನವನ್ನು ಸೃಷ್ಟಿಸಿದಂತೆ ಅಂದು ಒಂದು ವಿಶ್ವವಿದ್ಯಾಲಯದ ಜ್ಞಾನವನ್ನೇ ತಮ್ಮಲ್ಲಿ ಮಿಳಿತಗೊಳಿಸಿಕೊಂಡಿದ್ದ ಕಲಿಗಳು ಕಾಲದೊಟ್ಟಿಗೆ ಇನ್ನೂ ಬೆಳೆಯಬೇಕಿತ್ತಲ್ಲವೇ? ಸಾವಿರ ಸಾವಿರ ವರ್ಷಗಳ ಹಿಂದೆ ಅಣೆಕಟ್ಟೊಂದನ್ನು ನಿರ್ಮಿಸಬಲ್ಲ ಜ್ಞಾನ ಹಾಗೆಯೆ ಬೆಳೆಯುತ್ತ ಮುಂದುವರೆದಿದ್ದಾರೆ ಭಾರತೀಯರಿಗೆ ಇಂದು ಯಾರೊಬ್ಬರೂ ಸರಿಸಾಟಿಯಾಗುತ್ತಿರಲಿಲ್ಲ. ಹಾಗಾದರೆ ಇಂತಹ ಒಂದು ಬೆಳವಣಿಗೆ ಕಣ್ಮರೆಯಾದದ್ದು ಎಲ್ಲಿ? ಚೋಳ ಸಾಮ್ರಾಜ್ಯ ಇಂತಹ ಭವ್ಯ ದೇಶದ ವೈಭವದ ದಿನಗಳಿಗೆ ಒಂದು ಸಣ್ಣ ಸಾಕ್ಷಿ. ಇಂತಹ ಅದೆಷ್ಟು ಸಾಮ್ರಾಜ್ಯಗಳು ಬಂದು, ಬೆಳಗಿ ಮರೆಯಾದವೋ ಯಾರು ಬಲ್ಲರು?

ಕಲೆ, ಸಾಹಿತ್ಯ, ಸಂಗೀತ, ನಿರ್ಮಾಣ, ತಾಂತ್ರಿಕತೆ, ಯುದ್ಧ ಕುಶಲತೆ ಹೀಗೆ ಇನ್ನು ಹಲವು ವರ್ಗಗಳಲ್ಲಿ ಪ್ರಚಂಡ ಜ್ಞಾನವನ್ನುಗಳಿಸಿದ್ದ, ಮೂವತ್ತರಿಂದ ಮೂವತೈದು ರಾಜರುಗಳ ಆಳ್ವಿಕೆಗೆ ಒಳಗಾದ ಚೋಳ ಸಾಮ್ರಾಜ್ಯ ಹದಿಮೂರನೇ ಶತಮಾನದ ಕೊನೆಯಲ್ಲಿ ಅವನತಿಯನ್ನು ಕಂಡಿತು. ಜೊತೆಗೆ ಹಾವಾಡಿಗರ ದೇಶ ಎಂದು ಕಾಲೆಳೆಯುವ,ಪರಕೀಯರ ಮುಖ ಕೆಂಪಾಗುವಂತೆ ಹಲವಾರು ವಿಸ್ಮಯಗಳನ್ನು ದೇಶೀ ಇತಿಹಾಸದ ಪುಟಗಳಲ್ಲಿ ಪುರಾವೆಗಳ ಸಹಿತ ಅಚ್ಚೋತ್ತಿ ಹೋಯಿತು. ದೀಪದ ಸುತ್ತ ಇರುವ ಕತ್ತಲಿನಂತೆ ಕಪ್ಪಾಗಿರುವ ನಮ್ಮ ದೇಶೀ ವಿಚಾರಗಳು ಇತಿಹಾಸದ ಪುಟಗಳಿಂದ ಕಣ್ಮರೆಯಾಗುವ ಮೊದಲು ಮುಂದಿನ ಪೀಳಿಗೆಗೆ ರವಾನಿಸುವ ಕಾರ್ಯ ನೆಡೆಯಬೇಕಿದೆ. ಆಗೆಲ್ಲ ಚೋಳ ಸಾಮ್ರಾಜ್ಯವನ್ನು ಹೆಮ್ಮೆಯಿಂದ ವರ್ಣಿಸಬೇಕಿದೆ.

Friday, July 7, 2017

ಮರಳುಗಾಡಿನಲ್ಲಿ ಹಸಿರನ್ನೊತ್ತಿಸಿದ ದೇಶವೊಂದು ನೆಡೆದ ಹಾದಿಯಲ್ಲಿ...

1947. ಅರಬ್ಬರ ಹಾಗು ಜ್ಯೂವರ (ಯಹೂದಿ) ಕಿತ್ತಾಟವನ್ನು ನೋಡಲಾರದೆ ವಿಶ್ವಸಂಸ್ಥೆ ಅಂದು ಹೂದಿಗಳಿಗೊಂದಷ್ಟು ಹಾಗು ಅರಬ್ಬರಿಗೊಂದಿಷ್ಟು ನೆಲವನ್ನು ಪಾಲುಮಾಡಿ ಕೊಟ್ಟಿತ್ತು. ಇಬ್ಬರ ಕಿತ್ತಾಟದ ನಡುವೆ ಮೂರನೆಯವರ ಉಸಾಬರಿಯನ್ನು ಒಪ್ಪದ ಅರಬ್ ಪಡೆ (ಈಜಿಪ್ಟ್, ಸಿರಿಯಾ, ಜೋರ್ಡನ್, ಲೆಬನಾನ್) ತಮ್ಮ ಪಾಲು ಸಣ್ಣದೆಂದು ಕೊರಗಿ ವಿಶ್ವಸಂಸ್ಥೆ ಗೊತ್ತುಮಾಡಿದ್ದ ಯಹೂದಿಯರ ಅಷ್ಟೂ ನೆಲವನ್ನು ನುಂಗಿ ಹಾಕಲು ರಣತಂತ್ರವೊಂದನ್ನು ರೂಪಿಸಿದವು. ಜಾಗತಿಕ ಮಟ್ಟದಲ್ಲಿ ತನ್ನ ಪಿಳಿ ಪಿಳಿ ಕಣ್ಣುಗಳನ್ನು ಬಿಡುತ್ತಿರುವಷ್ಟರಲ್ಲೇ ವೈರಿ ಸೇನೆ ಯಹೂದಿಯರ ಪ್ರದೇಶವನ್ನು ಮೂರು ದಿಕ್ಕಿನಿಂದಲೂ ಆವರಿಸಿತು. ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ತನ್ನೆಲ್ಲಾ ಶಕ್ತಿಯನ್ನು ಬಸಿದು ಹೋರಾಡಿದ ಪಡೆ, ವೈರಿಸೇನೆ ಕನಸ್ಸಿನಲ್ಲಿಯೂ ಊಹಿಸಲಾಗದ ಮಟ್ಟಿಗೆ ಸದೆಬಡಿಯಿತು. ಯುದ್ಧದಲ್ಲಿ ಸೋತು ಓಡತೊಡಗಿದ್ದ ವೈರಿಪಡೆಯ ಒಂದೊಂದೇ ಪ್ರದೇಶಗಳನ್ನು 'ಗೆದ್ದ' ಯಹೂದಿಯರು 1948 ರಲ್ಲಿ ಹೊಸ ದೇಶವೊಂದನ್ನು ಹುಟ್ಟುಹಾಕಿ ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟರು. ಇಂದು ಯುದ್ಧ ಸಾಮಗ್ರಿಗಳ ತಯಾರಿ ಹಾಗು ಅವುಗಳ ರಪ್ತಿನಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ, ಹಾಗು ಅಭಿವೃದ್ದಿ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಝಳಪಿಸುವ ಆ ದೇಶದ ಹೆಸರೇ ಇಸ್ರೇಲ್.

ಇಸ್ರೇಲ್ ಅಂದು ಯುದ್ಧವನ್ನೇನೋ ಗೆದ್ದಿತು. ಅದರೆ ಅದು ತಾನು ಗೆದ್ದು ಆಕ್ರಮಿಸಕೊಂಡ ಗಲ್ಲಿ ಮೂಲೆಗಳನ್ನು ಅಕ್ಕಪಕ್ಕದ ದೇಶಗಳು ಪುನಃ ತಮಗೆ ಹಿಂದಿರುಗಿಸಬೇಕೆಂದು ಕುಯಿಂಗುಟ್ಟವು. ಈ ವಾದಸರಣಿ ಸುಮಾರು ಎರಡು ದಶಕಗಳ ಕಾಲ ಹಾಗೆಯೆ ಮುಂದುವರೆಯಿತು. ಕೊನೆಗೆ 1967 ರಲ್ಲಿ ಸೋತು ಸುಮ್ಮನಿರಲಾಗದ ಈಜಿಪ್ಟ್ ಮತ್ತೊಮ್ಮೆ ಇಸ್ರೇಲ್ನ ವಿರುದ್ಧ ಯುದ್ಧ ಸಾರಿತು. ಇಪ್ಪತ್ತು ವರ್ಷಗಳ ಹಿಂದೆಯೇ ನಾಲ್ಕಾರು ದೇಶಗಳನ್ನು ಎಡೆಮುರಿ ಕಟ್ಟಿ ಪಕ್ಕಕ್ಕೆ ಬಿಸಾಡಿದ್ದ ಇಸ್ರೇಲ್ ಅಂದು ಕೇವಲ ಆರು ದಿನಗಳಲ್ಲಿಯೇ ಈಜಿಪ್ಟ್ ಹಾಗು ಅದರ ಮಿತ್ರಪಡೆಗಳ ಹುಂಬುತನವನು ಹತ್ತಿಕ್ಕಿ ಯುದ್ಧವನ್ನು ಗೆದ್ದಿತು. ಈ ಯುದ್ಧದಲ್ಲಿ ಪಾಕಿಸ್ತಾನವೂ ಈಜಿಪ್ಟ್ ನ ಪರವಾಗಿ ಹೆಣಗಾಡಿ ಸೋತು ಸುಣ್ಣವಾಗಿ ವಾಪಸ್ಸು ಬಂದದ್ದುಂಟು.

1967 ರ ಆರು ದಿನಗಳ ಪ್ರಸಿದ್ಧ ಯುದ್ಧದ ನಂತರ ಪಕ್ಕದ ಜೋರ್ಡನ್ ದೇಶದ ಬಳಿಯಲಿದ್ದ ಪೂರ್ವ ಜೆರುಸಲೇಮ್ನ ಅಷ್ಟೂ ನೆಲವನ್ನು ಇಸ್ರೇಲ್ ಕಬಳಿಸಿಕೊಂಡಿತ್ತಲ್ಲದೆ ಜೆರುಸಲೇಮ್ ನನ್ನು ತನ್ನ ರಾಜಧಾನಿಯೆಂದೂ ಘೋಷಿಸಿಕೊಂಡಿತು. ಇತ್ತ ಕಡೆ ಬಾಲ ಸುಟ್ಟ ಬೆಕ್ಕಿನಂತಾದ ಜೋರ್ಡನ್ನ ಪಡೆ ಕಳೆದುಕೊಂಡ ಜಾಗವನ್ನು ವಾಪಸ್ಸು ಪಡೆಯಲು ಇನ್ನಿಲ್ಲದ ಕಸರತ್ತುಗಳನ್ನು ಮಾಡತೊಡಗಿತು. ಈ ಕಸರತ್ತಿನ ಹಿಂದಿದ್ದ ಕಾರಣವೂ ಅತಿ ಬಲವಾದದ್ದು. ಜೆರುಸಲೇಮ್ ಕೇವಲ ಒಂದು ಪ್ರದೇಶವಾಗಿರದೆ ಯಹೂದಿಗಳು, ಮುಸ್ಲಿಂ ಹಾಗು ಕ್ರಿಶ್ಚಿಯನ್ನರಿಗೂ ಬೇಕಾದ ಅತಿ ಪವಿತ್ರವಾದ ಸ್ಥಳ. ಇದು ಯಹೂದಿಗಳ ಪವಿತ್ರ ದೇವಾಲಯವನ್ನು ಹೊಂದಿರುವ ಪ್ರದೇಶವಾಗಿಯೂ, ಪ್ರವಾದಿ ಮೊಹಮ್ಮೆದ್ ಅವರು ಭೇಟಿಕೊಟ್ಟ ಮಹತ್ವದ ಜಾಗವಾಗಿಯೂ ಅಲ್ಲದೆ ಎಸು ಕ್ರಿಸ್ತರನ್ನು ಶಿಲುಬೆಗೇರಿಸಿದ ಸ್ಥಳವಾಗಿಯೂ ಪ್ರಸಿದ್ದಿ ಹೊಂದಿದೆ. ಹಾಗಾಗಿ ಮೂರು ಧರ್ಮದ ನಾಯಕರು ಈ ನೆಲದ ಮೇಲೆ ತಂತಮ್ಮ ಅಧಿಕಾರವನ್ನು ಚಲಾಯಿಸಲು ಬಯಸಿದ್ದಾರೆ, ಬಯಸುಸುತ್ತಿದ್ದಾರೆ. ಆದರೆ ಅಂದು ಯುದ್ಧದಲ್ಲಿ ಗೆದ್ದು ತನ್ನ ತೆಕ್ಕೆಗೆ ಹಾಕಿಕೊಂಡ ಜಾಗಗಳನ್ನು ಜಪ್ಪಯ್ಯ ಎಂದರೂ ಜೋರ್ಡನ್ ಅಥವಾ ಇತರ ದೇಶಗಳಿಗೆ ಇಸ್ರೇಲ್ ಬಿಟ್ಟುಕೊಡಲಿಲ್ಲ. ಯಾರೇ ಮುನಿಸಿಕೊಂಡರೂ ಕ್ಯಾರೇ ಎನ್ನದ ಸ್ವಾವಲಂಬಿ ದೇಶಕ್ಕೆ ಅಂದು ವಿಶ್ವಸಂಸ್ಥೆಯೇ ಖುದ್ದಾಗಿ 'ಜೆನೆವ ಕನ್ವೆನ್ಷನ್' (ಯುದ್ಧದಲ್ಲಿ ಅಕ್ರಮವಾಗಿ ಆಕ್ರಮಿಸಕೊಂಡ ನೆಲದಲ್ಲಿ ತನ್ನ ವಸಾಹತನ್ನು ಸ್ಥಾಪಿಸಬಾರದೆಂಬ ನೀತಿ) ವಾದವನ್ನು ಮುಂದಿಟ್ಟು ಪೂರ್ವ ಜೆರುಸಲೇಮ್ ಅನ್ನು ಹಿಂದುರುಗಿಸಬೇಕಂದು ವಾದಿಸಿತು. ಆದರೆ ಯಾವುದೇ ಅರಚುವಿಕೆಗೂ ಕಿವಿಕೊಡದ ಇಸ್ರೇಲ್ ತಾನು ಗೆದ್ದು ಪಡೆದ ಜಾಗದಲ್ಲಿ ಒಂದರಿಂದೊಂದು ಕಟ್ಟಡ ಕಾಮಗಾರಿಗಳನ್ನು ಬಿರುಸಾಗಿ ಮುಂದುವರೆಸಿತು. ಈ ನಡೆಯೇ ಮುಂದೆ ಇಸ್ರೇಲ್ ವಿಶ್ವಕ್ಕೆ ಒಂತರ ಭಯೋತ್ಪಾದಕ ದೇಶದಂತೆ ಕಾಣಿಸತೊಡಗಿತು. ಆದರೆ ಅಮಾಯಕ ಟಿಬೆಟ್ ಹಾಗು ಇನ್ನಿತರೇ ಪ್ರದೇಶಗಳನ್ನು ಸಾರಾಸಗಟಾಗಿ ನುಂಗಿ ಈಗ ಭಾರತದ ಆಯಕಟ್ಟಿನ ಜಾಗಗಳ ಮೇಲೆ ಕಣ್ಣಿಟ್ಟಿರುವ ಚೀನಾದಂತ ಬಕರಾಕ್ಷಸ ದೇಶವನ್ನು ಒಂದು ಪ್ರೆಶ್ನೆಯನ್ನೂ ಕೇಳದ, ತೆಪ್ಪಗೆ ಇರುವದ ಬಿಟ್ಟು ತಲೆ ಗಟ್ಟಿಯಿದೆಯೆಂದು ಇಸ್ರೇಲ್ ಎಂಬ ಬೆಂಕಿಯಂತ ಬಂಡೆಯನ್ನು ಕೆದಕಿ ಓಟ ಕಿತ್ತ ದೇಶಗಳ ಜಾಗವನ್ನು ಹಿಂದುರಿಗಿಸಬೇಕೆಂಬ ವಿಶ್ವಸಂಸ್ಥೆಯ ವಾದ ಅದೆಷ್ಷ್ಟು ಸಮರ್ಥನೀಯ?

ತನ್ನ ಕೆಣಕಿದವರ ಸೊಕ್ಕು ಅಡಗಿಸಿ ಗೆದ್ದ ಜಾಗಗಳನ್ನು ಪುನ್ಹ ಹಿಂದಿರುಗಿಸಬೇಕೆಂಬ ಒತ್ತಡ ಮಾತ್ರ ಇಸ್ರೇಲ್ ನ ಮೇಲೆ ಹಾಗೆಯೆ ಉಳಿಯಿತು. ಕೊನೆಗೂ ಇದಕ್ಕೆ ಒಪ್ಪಿದ ಇಸ್ರೇಲ್ ತಾನು ಗೆದ್ದು ಆಕ್ರಮಿಸಿಕೊಂಡಿದ್ದ ಒಂದೆರೆಡು ಪ್ರದೇಶಗಳನ್ನು ಬಿಟ್ಟುಕೊಟ್ಟಿತು. ಆದರೆ ಈ ಪ್ರದೇಶಗಳು ಪುನ್ಹ ಸ್ವದೇಶಗಳಿಗೆ ಸೇರಿಕೊಳ್ಳದೆ ತಮ್ಮದೇ ಆದೊಂದು ದೇಶವನ್ನು ಕಟ್ಟಲು ಬಯಸಿದವು. ಅವೇ ಇಂದಿನ ಇಡೀ ವಿಶ್ವವೇ ಚರ್ಚಿಸುವ ಪ್ಯಾಲೆಸ್ಟೈನ್ ಹಾಗು ಗಾಝ/ಗಾಝಪಟ್ಟಿ.

ಅಂದು ಕೇವಲ ಇಪ್ಪತ್ತು ಲಕ್ಷ ಜನರನ್ನು ಒಳಗೊಂಡು ಸಾಧನೆಯ ಹಾದಿಯನ್ನಿಡಿದಿದ ಇಸ್ರೇಲ್ ಇಂದು ತನ್ನ ಬಲಿಷ್ಠ ಪ್ರಭಾವವನ್ನು ಜಾಗತಿಕ ಮಟ್ಟದಲ್ಲಿ ಬೀರುವ ಮಟ್ಟಿಗೆ ಬೆಳೆದಿರುವುದು ಅದೆಷ್ಟೋ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಾರ್ಗಸೂಚಿ. ಭಾಗಶಃ ಮರಳುಗಾಡು ಹಾಗು ಕುಡಿಯಲೂ ಯೋಗ್ಯವಾದ ನೀರಿರದ ನೆಲವನ್ನು ಪಡೆದು ಅಂದು ಅದೇ ನೆಲದಲ್ಲಿ ಹಸಿರನ್ನು ಹೊತ್ತಿಸಿ ಮೆರೆದ ಸಾಧನೆಯನ್ನು ನೋಡಲು ರೋಮಾಂಚನವೆನಿಸದಿರದು. ಇಂದು ತಂತ್ರಜ್ಞಾನ, ಭದ್ರತೆ, ಕೃಷಿ ಹಾಗು ಜಲನಿರ್ವಹಣೆಯಲ್ಲಿ ವಿಶ್ವದ ದೈತ್ಯ ರಾಷ್ಟ್ರಗಳಿಗೇ ಸಲಹೆ ಸೂಚನೆಗಳನ್ನು ಕೊಡುವ ಕ್ಷಮತೆಯನ್ನು ಇಸ್ರೇಲ್ ಹೊಂದಿದೆ. ವಿಜ್ಞಾನಿಗಳ ಕೊಡುಗೆಯನ್ನೂ ಇಲ್ಲಿ ಅಲ್ಲಗೆಳೆಯಲಾಗದು. ಇಲ್ಲಿಯವರೆಗೂ ಬಂದಿರುವ ಸುಮಾರು 12 ನೊಬೆಲ್ ಪ್ರಶಸ್ತಿಗಳಲ್ಲಿ ಅರ್ಧದಷ್ಟು ಪ್ರಶಸ್ತಿಗಳು ರಸಾಯನಶಾಸ್ತ್ರ ವಿಜ್ಞಾನಿಗಳಿಗೇ ಬಂದಿರುವುದು ದೇಶದ ಉನ್ನತಿಯಲ್ಲಿ ಅವರ ಪಾತ್ರವನ್ನು ಎತ್ತಿತೋರಿಸುತ್ತದೆ.

ತನ್ನ ತಂಟೆಗೆ ಬಂದವರ ಕಂಠವನ್ನೇ ಸೀಳುವ ಎಂಟೆದೆಯ ಬಂಟನಂತ ಇಸ್ರೇಲ್ ನ ತಾಕತ್ತು ಇಂದು ಜಗತ್ತಿಗೆ ಗೊತ್ತು. ಅದ ಕಾರಣಕ್ಕೆ ಅಕ್ಕ ಪಕ್ಕದ ದೇಶಗಳಿಂದು ಕ್ಯಾತೆ ಎತ್ತುವುದ ಬಿಟ್ಟು ಬಾಲ ಮುದುಡಿ ಶಾಂತಿ ಮಾತುಕತೆಯ ಪ್ರಸ್ತಾಪವನ್ನು ಮಾಡುತ್ತಿವೆ. ಅಂದು ಇಸ್ರೇಲ್ ತನ್ನ ಪಕ್ಕದ ದೇಶಗಳ ಪ್ರತಿಯೊಂದು ಉಪಟಳಗಳಿಗೂ ವಿಶ್ವಸಂಸ್ಥೆಯ ಬಾಗಿಲನ್ನು ತಟ್ಟುತ್ತಾ ಕೂತಿದ್ದರೆ ಇಂದು ಸುತ್ತಲಿನ ರಾಷ್ಟ್ರಗಳು ಅಲ್ಲೊಂದು ದೇಶವಿತ್ತೆಂಬ ಕುರುಹನ್ನೇ ಅಳಿಸಿ ಹಾಕಿಬಿಡುತ್ತಿದವು. ವಿಶ್ವದ ಏಕೈಕ ಯಹೂದಿಗಳ ದೇಶವೆನಿಸಿಕೊಂಡಿರುವ ಇಸ್ರೇಲ್ಗೆ ಇಂದು ಹಲವು ದೇಶಗಳು ಖಳನಾಯಕನ ಹಣೆಪಟ್ಟಿಯನ್ನು ಕಟ್ಟಿವೆ. ಆನೆ ನೆಡೆದಾಗ ಹುಲ್ಲಿಗಾದ ಅನ್ಯಾಯವನ್ನೇ ಎತ್ತಿ ಹಿಡಿದು ಇಸ್ರೇಲ್ ನನ್ನು ಜಾಗತಿಕ ಉಗ್ರ ದೇಶದಂತೆ ಬಿಂಬಿಸುತ್ತಿರುವ ಈ ದೇಶಗಳು ಕೇವಲ ಅವಕಾಶವಾದಿ ಪಡೆಗಳೇ ಹೊರತು ಕೂಡಿ ಬಾಳುವ ಜಾಯಮಾನದ ಗುಣವನ್ನೊಂದಿರುವವಲ್ಲ. ಪ್ರತ್ಯೇಕತೆಯ ಕೂಗನ್ನೇ ನರ ನಾಡಿಗಳಲ್ಲಿ ಹರಿಯಬಿಟ್ಟು ಕೊನೆಗೆ ಗಾಝಪಟ್ಟಿಯ ಜನ ಆರಿಸಿಕೊಂಡ ಸರ್ಕಾರವಾದರೂ ಎಂತಹದ್ದು? ವಿಶ್ವದಲ್ಲೆಡೆ ಭಯೋತ್ಪಾದಕ ಗುಂಪೆಂದು ಕರೆಯಲ್ಪಡುವ ಸಂಸ್ಥೆಯೊಂದು 2006 ರಲ್ಲಿ ಅಧಿಕಾರಕ್ಕೇರಿದ ಮೇಲೆ ಅಲ್ಲೂ ಹೋಗದ ಇಲ್ಲೂ ಇರಲಾಗದ ಅತಂತ್ರ ಸ್ಥಿತಿಯಲ್ಲಿ ಇಂದು ಆ ಜನರು ಬದುಕುತ್ತಿದ್ದಾರೆ. ದೂರದ ಬೆಟ್ಟ ನುಣ್ಣಗೆ ಎನ್ನುವ ಮಾತು ಇಂತಹ ಅದೆಷ್ಟೋ ಪ್ರತ್ಯೇಕತಾವಾದಿಗಳಿಗೆ ಬಹು ಬೇಗನೆ ತಿಳಿಯಬೇಕು.

ಭದ್ರತೆಯ ದೃಷ್ಟಿಕೋನದದಲ್ಲಿ ಭಾರತ ಹಾಗು ಇಸ್ರೇಲ್ ನ ಸ್ಥಿತಿಗತಿಗಳು ಭಾಗಶಃ ಒಂದೇ ತರಹದಾಗಿವೆ. ದೇಶದ ಮೂರೂ ದಿಕ್ಕಿನಲ್ಲೂ ಸುತ್ತುವರೆದ ವೈರಿಪಡೆ, ಗಡಿ ಸಮಸ್ಯೆ ಹಾಗು ಗಡಿ ನುಸುಳುವಿಕೆ, ದೇಶದ ಅನ್ನವನ್ನೇ ತಿಂದು ಪ್ರತ್ಯೇಕತ್ಯೆಯ ಕೂಗನ್ನು ಹಾಕುವ ಸೋಗಲಾಡಿ ಗುಂಪುಗಳು ಹಾಗು ಅವುಗಳಿಗೆ ಗಡಿಯಿಂದಾಚೆಗಿನ ಮೂಲಗಳಿಂದ ಸಿಗುವ ಬೆಂಬಲ, ಕಬಳಿಕೆಯ ಅಮಲಿನಲ್ಲಿ ಎಲ್ಲರನ್ನೂ ತುಳಿದು ನಿಲ್ಲಬೇಕೆಂಬ ಪಕ್ಕದ ಒಂದು ದೇಶ ಹೀಗೆ ಇನ್ನು ಹಲವು ವಿದ್ಯಮಾನಗಳು ಭಾರತವನ್ನು ಅಕ್ಷರ ಸಹ ಅಂದಿನ ಇಸ್ರೇಲ್ ನ ಸ್ಥಿತಿಗೇ ತಂದು ನಿಲ್ಲಿಸಿವೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರಸ್ತುತ ಬೆಳವಣಿಗೆಯನ್ನು ಸಹಿಸಲಾಗದ ನೆರೆಯ ದೇಶಗಳು ಶಾಲೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಯ ಕಂಡು ಉರಿಬೀಳುವಂತಹ ಬಾಲಿಶ ಮನಸ್ಥಿತಿಯ ದೇಶಗಳಾಗಿವೆ. ಆಂತರಿಕ ಭಯೋತ್ಪಾದನೆ, ಪ್ರತೇಕವಾದಿಗಳಿಗೆ ಕುಮ್ಮಕ್ಕು, ಇಸ್ರೇಲ್ ದೇಶವೂ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಾದರೂ ಆ ದೇಶದ ಬೆಳವಣಿಗೆಗೆ ಇವುಗಳ್ಯಾವುವೂ ಅಡಚಣೆಯಂತನಿಸಲಿಲ್ಲ. ಕಾರಣ, ತಂತ್ರಜ್ಞಾನವೆಂಬುದು ಅಲ್ಲಿಯ ಪ್ರತಿಯೊಂದು ವಲಯಗಳಿಗೂ ಒಳನುಸಿದಿರುವುದು. ಬ್ರಿಟನ್ ಹಾಗು ಫ್ರಾನ್ಸ್ ನಂತಹ ದೇಶಗಳೇ ಇಂದು ಭಯೋತ್ಪಾದನಾ ಸಮಸ್ಯೆಗಳಿಗೆ ಇಸ್ರೇಲ್ ನಂತಹ ಪುಟ್ಟ ದೇಶದ ತಂತ್ರಜ್ಞಾನದ ಸಲಹೆಯನ್ನು ಅಪೇಕ್ಷಿಸುತ್ತಿರುವುದು ಇದಕ್ಕೊಂದು ತಕ್ಕ ಉದಾಹರಣೆ.

ಪ್ರಸ್ತುತ ಪ್ರಧಾನಿಯವರ ಇಸ್ರೇಲ್ ಭೇಟಿಯೂ ಸಹ ನಮ್ಮ ಅಕ್ಕ ಪಕ್ಕದ ದೇಶಗಳಿಗೆ ಅಸೂಯೆಯನ್ನು ನತ್ತಿಗೆರಿಸಿರುವುದಲ್ಲದೆ ಭಯದ ನಡುಕವನ್ನೂ ಒಳಗೊಳಗೇ ಹೊತ್ತಿಸಿದೆ. ಭಾರತವನ್ನು ದೇಶದ ಆತ್ಮೀಯ ಗೆಳೆಯನೆಂದು ಸಂಭೋದಿಸುತ್ತ ಬಂದಿರುವ ಇಸ್ರೇಲ್ 70 ವರ್ಷಗಳಲ್ಲಿ ಮೊದಲ ಬಾರಿಗೆ ದೇಶದ ಪ್ರಧಾನಿಯೊಬ್ಬರನ್ನು ಈ ಪರಿ ಸ್ವಾಗತಿಸಿರುವದು ಮುಂಬರುವ ನಮ್ಮ ಉತ್ತಮ ದಿನಗಳ ಕನಸ್ಸನ್ನು ಹೊತ್ತಿಸತೊಡಗಿವೆ.

ಆದರೆ,



ಕಾಕತಾಳೀಯವೆಂಬಂತೆ ಇಸ್ರೇಲ್ ಹಾಗು ಭಾರತ ಎರಡೂ ದೇಶಗಳ ಆಯಸ್ಸು ಕೇವಲ 70 ವರ್ಷಗಳು. ಒಂದೇ ವಿಧವಾದ ಸಮಸ್ಯೆ ಹಾಗು ಸವಾಲುಗಳನ್ನು ಎದುರಿಸಿದ ಎರಡು ದೇಶಗಳ ಬೆಳವಣಿಗೆಯಲ್ಲಿ ಅಜಗಜಾಂತರ ವ್ಯತ್ಯಾಸವಿರುವುದಂತೂ ಸುಳ್ಳಲ್ಲ. ಕೇವಲ ಇಪ್ಪತ್ತು ಲಕ್ಷ ಜನರನ್ನು ಮರಳುಗಾಡಿನಲ್ಲಿ ನೆಡೆಸಿ ಇಂದು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ನಿಲ್ಲುವ ಆ ದೇಶವೆಲ್ಲಿ, ಮೂವತ್ತು ಕೋಟಿ ಜನರರೊಟ್ಟಿಗೆ ಜನಿಸಿ ಇಂದಿಗೂ ಅಭಿವೃದ್ಧಿಶೀಲ ರಾಷ್ಟ್ರವೆಂಬ ಹಣೆಪಟ್ಟಿಯನ್ನು ಹೊತ್ತು ನಿಂತಿರುವ ನಮ್ಮ ದೇಶವೆಲ್ಲಿ? ಆದರೂ ಕಳೆದ ಕೆಲ ದಶಕಗಳಲ್ಲಿ ಎದುರಾದ ಅಡಚಣೆಗಳೆಲ್ಲವನ್ನೂ ದಾಟಿ ನಾವು ಬೆಳೆದು ಬಂದ ವೇಗವೇನೂ ಸಾಮಾನ್ಯವಾದದಲ್ಲ. ಆದರೆ ಪ್ರತಿ ಬಾರಿ ನಮ್ಮ ಪ್ರಧಾನಿಗಳ ವಿದೇಶ ಯಾತ್ರೆಯ ಸಮಯದಲ್ಲಿ ಅವರುಗಳು ಭೇಟಿ ನೀಡುವ ದೇಶದ ಉದ್ದಗಲಗಳನ್ನು ಹಾಡಿ ಹೊಗಳಿ ಕೊನೆಗೆ ಆ ದೇಶದ ಒಂದಿಷ್ಟು ತಂತ್ರಜ್ಞಾನಗಳನ್ನು ಖರೀದಿಸಿ ಬರುವುದರೊಟ್ಟಿಗೆ, ನಾವೂ ಸಹ ಅಂತೊಂದು ಸ್ವಾವಲಂಬಿ ದೇಶದ ಕನಸನ್ನು ಕಟ್ಟಬೇಕು. ವಿಶ್ವದ ಅತಿ ದೊಡ್ಡ ಆರ್ಥಿಕತೆಯ ದೇಶವಾದರೂ ಅತ್ಯುನ್ನತ ಯುದ್ಧ ಸಾಮಗ್ರಿಗಳಿಗೆ ಇಂದಿಗೂ ಅಮೇರಿಕ, ರಷ್ಯಾ, ಇಸ್ರೇಲ್ ಎಂಬ ದೇಶಗಳನ್ನೇ ನೆಚ್ಚಿ ಕೂರುವುದು ಸಹಿಸಿಕೊಳ್ಳಲಾಗದ ವಿಷಯ. ಆದರೂ ಪ್ರಸ್ತುತ ಕೆಲವು ಬೆಳವಣಿಗೆಗಳು ಅಂತಹ ಒಂದು ಸ್ವಾವಲಂಬಿ ದಿಶೆಯಲ್ಲಿ ನಮ್ಮೆಲ್ಲರನ್ನೂ ಕೊಂಡೊಯ್ಯಬಲ್ಲವು ಎಂಬೊಂದು ಆಶಾವಾದ ನಮ್ಮಲ್ಲಿರಲಿ. ಏಳು ದಶಕಗಳಲ್ಲಿ ಇಸ್ರೇಲ್ ಬೆಳೆದುನಿಂತ ಜಾಗದಲ್ಲಿ ನಿಲ್ಲುವ ಗುರಿಯನ್ನು ಭಾರತ ಇನ್ನು ಏಳೇ ವರ್ಷಗಳಲ್ಲಿ ತಲುಪಲಿ.