Friday, February 23, 2018

ನಂಬುಗೆಯೆಂಬ ಪಾತ್ರೆಯ ಒಳಗೆ ಸುಳ್ಳುಸುದ್ದಿಗಳ ಜಾತ್ರೆ!

ಇಲ್ಲಿ ಸರ್ವವೂ ಇಂಟರ್ನೆಟ್ಮಯ. ಇಲ್ಲಿ ಕ್ಷಣಮಾತ್ರದಲ್ಲಿ ಕಣ್ಣೊಡೆದು ಕೋಟಿ ಜನರ ಕನಸಿನ ರಾಣಿಯಾಗಲೂಬಹುದು ಅಂತೆಯೇ ಸುಳ್ಳಿನ ಕಂತೆಯಿಂದ ಕಟ್ಟಿರುವ ರಾಜಪಟ್ಟದ ಉತ್ತುಂಗದಿಂದ ಕಣ್ಮುಚ್ಚಿ ಬಿಡುವಷ್ಟರಲ್ಲಿ ನೆಲದ ಮೇಲೆ ವಿವಸ್ತ್ರನಾಗಿ ಬೀಳಲೂಬಹುದು. ಇಲ್ಲಿ ಸತ್ಯ, ಮಿಥ್ಯ, ಸರಿ, ತಪ್ಪು, ಅಂತೆ, ಕಂತೆ ಎಂಬೆಲ್ಲಾ ಗ್ರಹಿಕೆಗಳು ನಿಂತಿರುವುದು ಕೇವಲ ಒಂದು ಮಾತ್ರದ ಅಂಶದ ಮೇಲೆ. ಅದು ಪ್ರಸ್ತುತ ಇಂಟರ್ನೆಟ್ ಬಳಕೆದಾರನ ಬಳಿಯಿರುವ ಏಕೈಕ ಮಾಪನ. ಹೆಸರು ನಂಬುಗೆ. ಇಂದಿನ ಸಾಮಾಜಿಕ ಜಾಲತಾಣಗಳ ಸರೋವರದಲ್ಲಿ ಕಾಣಸಿಗುವ ಪ್ರತಿಯೊಂದು ಸುದ್ದಿಯನ್ನು ಹಿಂದೂ-ಮುಂದೂ ನೋಡದೆ ಅವುಗಳ ಅಳೆತ್ತರವನ್ನೂ ಅರಿಯದೆ ಕಾದ ಎಣ್ಣೆಗೆ ಬಿದ್ದ ಒಣ ಹಪ್ಪಳದಂತೆ ಹಿರಿ ಹಿರಿ ಹಿಗ್ಗುವ ಜನಕೋಟಿಯ ವಿಚಾರಗ್ರಹಿಕೆ ತಾವು ಕಂಡ ಸುದ್ದಿಯನ್ನು ಒರೆಹಚ್ಚಿ ಪರೀಕ್ಷಿಸಿಕೊಳ್ಳುವುದು ಈ ನಂಬುಗೆ ಎಂಬ ಸೂಕ್ಷ್ಮ ಎಳೆಯ ಮೇಲೆಯೇ.

ಫೇಸ್ಬುಕ್, ಟ್ವಿಟ್ಟರ್, ವಾಟ್ಸ್ಅಪ್ ಅಥವಾ ಇನ್ನ್ಯಾವುದೇ ಸಾಮಾಜಿಕ ಜಾಲತಾಣಗಳಾಗಿರಲಿ ಇಂದು ಅವುಗಳಲ್ಲಿ ಕಾಣಬೇಕಿದ್ದ ಸುಂದರ ಸಂವಹನ, ಒಂದಿಷ್ಟು ಸಾಂದರ್ಭಿಕ ಮಾತುಕತೆಗಳಿಗಿಂತ ಹೆಚ್ಚಾಗಿ ಇಂದು ಬ್ರೆಕಿಂಗ್ ನ್ಯೂಸ್ಗಳು, ಸಿಕ್ಕ ಸಿಕ್ಕ ವ್ಯಕ್ತಿತ್ವಗಳ ಕಾಲೆಳೆತಗಳು, ಬೈಗುಳಗಳು, ಬೆದರಿಕೆಗಳೇ ಕಾಣಸಿಗುತ್ತವೆ. ಅಲ್ಲದೆ ಹಿತ್ತಾಳೆ ಕಿವಿಯ ಬಯಕೆಯಂತೆ ಸುಳ್ಳು ಸುದ್ದಿಗಳ (Hoax) ಉಗಮವಾಗುವಿಕೆಗೂ ಇಲ್ಲಿ ಕೊನೆಯಿಲ್ಲ. ಈ ಸುಳ್ಳು ಸುದ್ದಿಗಳ ಜಾತ್ರೆಯಲ್ಲಿ ಹೆಚ್ಚಾಗಿ ಸಿಲುಕಿ ಗೋಳಾಡುವವರು ಮಾತ್ರ ಜನಮಾನಸದಲ್ಲಿ ಪ್ರಸಿದ್ದಿ ಹೊಂದಿ ಎಲ್ಲರಿಂದ ಸೆಲೆಬ್ರಿಟಿ ಎಂದು ಕರೆಸಿಕೊಳ್ಳುವವರು. ಇಲ್ಲಿ ಆತ ಬಿದ್ದು, ಎದ್ದು, ಸತ್ತು, ಅತ್ತು, ಸನ್ಯಾಸಿಯಾಗಿ, ಯೋಗಿಯಾಗಿ ದಿನಕೊಂದು ಹೊಸ ಸ್ಥಿತಿಯನ್ನು ರೂಪವನ್ನು ಪಡೆಯುತ್ತಿರುತ್ತಾನೆ.ಅಸಲಿಗೆ ಆತ AC ಕೋಣೆಯೊಳಗೆ ಬೆಚ್ಚಗೆ ಸುಖನಿದ್ರೆಯನು ಸವಿಯುತ್ತಿರುತ್ತಾನೆ! ಎದ್ದು ಒಮ್ಮೆ ಇಂತಹ ಸುದ್ದಿಯೇನಾದರೂ ನೋಡಿದರೆ ಆತ/ಅವಳು ನಿಜವಾಗಿಯೂ ಎದೆಹೊಡೆದುಕೊಂಡು ಪ್ರಾಣಬಿಡಬಹುದೇನೋ!

ಈ ಪಟ್ಟಿಗೆ ತೀರಾ ಇತ್ತೀಚಿನ ಸೇರ್ಪಡೆ ನಟ, ನಿರ್ದೇಶಕ, ಕತೆಗಾರ, ಛಲಗಾರ, ದಿ ಲೆಜೆಂಡ್ ಸಿಲ್ವಿಸ್ಟರ್ ಸ್ಟ್ಯಾಲಿನ್. 'ಯೊ ಅಡ್ರಿಯನ್..' ಎನ್ನುತ್ತಾ ತೆರೆಯ ಮೇಲೆ ಕಾಲಿಟ್ಟು ನೋಡುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ಅಮೇರಿಕಾದ ಈ ನಟಭೂಪ ಕೆಲದಿನಗಳ ಹಿಂದಷ್ಟೇ ಪ್ರೊಸ್ಟೇಟ್ ಕ್ಯಾನ್ಸರ್ ನಿಂದ ವಿಧಿವಶನಾಗಿದ್ದಾನೆ ಎಂಬೊಂದು ಸುದ್ದಿ ರಾತ್ರಿ ಕಳೆದು ಹಗಲು ಮೂಡುವುದರೊಳಗೆ ಜಾಲತಾಣಗಳೆಲ್ಲಡೆ ಲೀಲಾಜಾಲವಾಗಿ ಹರಿದಾಡತೊಡಗಿತು. ಸುದ್ದಿಗಳನ್ನು ನೋಡಿ (ಸುದ್ದಿಯೊಟ್ಟಿಗೆ ಆತನ ಎಲ್ಲಿಂದಲೋ ಸಂಗ್ರಹಿಸಿದ ಒಂದೆರೆಡು ಫೋಟೋಗಳನ್ನೂ ಕೊಂಚ ಎಡಿಟ್ ಮಾಡಿ ಬಳಲುತ್ತಿರುವಂತೆ ತೋರಿಸಿ ಹಾಕಲಾಗಿದ್ದಿತು.) ಆತನ ಕೋಟ್ಯಾನುಕೋಟಿ ಅನುಯಾಯಿಗಳು ದುಃಖಿಸತೊಡಗಿದರು. ತಮ್ಮ ತಮ್ಮ ಪೇಜ್ಗಳ ಮೇಲೂ ಸುದ್ದಿಯನ್ನು ಷೆರ್ ಮಾಡತೊಡಗಿದರು. ಕೆಲತಿಂಗಳ ಹಿಂದಷ್ಟೇ ‘ಗಾರ್ಡಿಯನ್ ಆಫ್ ಗ್ಯಾಲಕ್ಸಿ Vol.2’ ಎಂಬ ಚಿತ್ರದಲ್ಲಿ ನಟಿಸಿದ್ದ ವ್ಯಕ್ತಿ ಅದೇಗೆ ಕೆಲವೇ ತಿಂಗಳಲ್ಲಿ ಕ್ಯಾನ್ಸರ್ ನಿಂದ ಕೃಶನಾಗಿ ತೀರಿಕೊಂಡ ಎಂಬೊಂದು ಸಾಮಾನ್ಯ ಪ್ರೆಶ್ನೆಯನ್ನೂ ಕೇಳಿಕೊಳ್ಳದೆ ಸುದ್ದಿಯನ್ನು ಜನ ನಂಬಿಬಿಟ್ಟರು. ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಸಿಲ್ವೆಸ್ಟರ್ ಬೆಳಗೆದ್ದು ನೋಡಿದಾಗಲೇ ತಿಳಿದದ್ದು ಆತನನ್ನು ಇಂಟೆಟ್ನೆಟ್ ಲೋಕ ಪರಲೋಕಕ್ಕೆ ತಳ್ಳಿಬಿಟ್ಟಿದೆ ಎಂದು! ಕೂಡಲೇ ಟ್ವಿಟ್ಟರ್ ಮೂಲಕ ತನ್ನ ಇರುವಿಕೆಯ ಸಂದೇಶವನ್ನು ಹರಿಬಿಟ್ಟ ಆತ ಅಲ್ಲಿಯವರೆಗೂ ಅರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದುಬಿಟ್ಟ.

ಹುಟ್ಟುವಾಗಲೇ ಮುಖದ ಒಂದು ಬದಿ ಪಾರ್ಶ್ವವಾಯುವಿನಿಂದ ಸಟೆದುಕೊಂಡು, ಧ್ವನಿಯೂ ಕೊಂಚ ವಿಲಕ್ಷಣಗೊಂಡು, ಇರಲು ನೆಲೆಯಿಲ್ಲದೆ ದಾರಿಬದಿಯಲ್ಲೂ ಮಲಗೆದ್ದು, ಹೊಟ್ಟೆಪಾಡಿಗಾಗಿ ನೀಲಿಚಿತ್ರಗಳಲ್ಲೂ ಅಭಿನಯಿಸಿ ಅಲೆದಾಡುತ್ತಿದ್ದ ಯುವಕನೊಬ್ಬ ಕೆಲವೇ ತಿಂಗಳುಗಳಲ್ಲಿ ಕೋಟಿ ಜನರ ಸ್ಪೂರ್ತಿಯ ವ್ಯಕ್ತಿತ್ವವೆನಿಸಿಕೊಳ್ಳುವ ಮಟ್ಟಿಗೆ ಬೆಳೆದ ಪರಿಯೇ ಆತನಿಗೆ ಕೋಟ್ಯಾನುಕೋಟಿ ಅಭಿಮಾನಿಗಳನ್ನು ವಿಶ್ವದೆಲ್ಲೆಡೆ ಸೃಷ್ಟಿಕೊಟ್ಟಿತು. ಅದಕ್ಕೆ ಇಂಬುಕೊಡುವ ಆತನ ಚಿತ್ರಗಳು, ರಾಕಿ ಬಾಲ್ಬೋಹ, ರಾಂಬೊವಿನಂತಹ ಪಾತ್ರಗಳು ಕಳೆದ ಐದು ದಶಕಗಳಿಂದ ಅಭಿಮಾನಿಗಳ ಮನದಲ್ಲಿ ಮನೆಮಾಡಿಕೊಂಡಿವೆ. ಇಂತಹ ಒಂದು ವ್ಯಕ್ತಿತ್ವ ಇದ್ದಕ್ಕಿದಂತೆ ಕಾಣೆಯಾಯಿತು ಎಂದರೆ ಸೃಷ್ಟಿಯಾಗುವ ಅಲ್ಲೊಲ್ಲ ಕಲ್ಲೋಲಗಳು ತೀರ ಸಹಜವೇ.

ಆದರೆ ಇಲ್ಲಿ ಕೇಳಿಕೊಳ್ಳಬೇಕಾದ ಪ್ರೆಶ್ನೆ, ಒಣಸೀಗೆಯಂತೆ ಎಲ್ಲೆಡೆ ಹಬ್ಬಿಕೊಂಡಿರುವ ಇಂದಿನ ಇಂಟರ್ನೆಟ್ ಯುಗದಲ್ಲಿ ನಂಬಬಾರದ ಹಾಗು ನಂಬಲೇಬೇಕಾದ ಸುದ್ದಿಗಾಳವುವು ಎಂಬುದು. ಯಾವುದೇ ಅಡೆತಡೆಗಳಿಲ್ಲದೆ ಬೇಕಾಬಿಟ್ಟಿ ಸೃಷ್ಟಿಸಿ ತೇಲಿಬಿಡುವ ಸುದ್ದಿಗಳನ್ನು ಇಲ್ಲಿ ಅಳೆದು ತೂಗುವುದಾದರೂ ಹೇಗೆ? ಅದಕ್ಕೂ ಮೊದಲು ನಾವುಗಳು ಕೇಳಿಕೊಳ್ಳಬೇಕಾದ ಮತ್ತೊಂದು ಅತಿಮುಖ್ಯ ಪ್ರೆಶ್ನೆಯೆಂದರೆ ಜಾಲತಾಣಗಳ ಸುದ್ದಿ ಅದೇನೇ ಇರಲಿ ಕನಿಷ್ಠ ಒಮ್ಮೆಯಾದರೂ ಅಂತಹ ವಿಷಯಗಳನ್ನು ಬೇರೊಂದೆಡೆ ದೃಢಪಡಿಸಿಕೊಳ್ಳಬೇಡವೇ ಎಂಬುದು. ಇಲ್ಲದೆ ಹೋದರೆ ನಂಬುಗೆ ಎಂಬ ನೋಟವನ್ನು ನಾವುಗಳೇ ಕಿತ್ತು ಬದಿಗಿಟ್ಟಂತೆ! ಮೇಲಾಗಿ ಇದು ಸಾವು ಬದುಕಿನ ಸುದ್ದಿಗಳು. ನಮ್ಮವರಲ್ಲೇ ಒಬ್ಬ ಅತ್ಯಾಪ್ತರನ್ನು ಅಥವಾ ಯಾರೋ ನಮ್ಮ ಸಾವನ್ನೇ ಸುದ್ದಿಯಾಗಿ ಹಬ್ಬಿಸಿ ಎಲ್ಲೆಡೆ ಹರಿಯಬಿಟ್ಟರೇ ನಮಗೆ ಏನನಿಸಬಹುದು? ಅದೆಂತಹ ವಿಧ -ವಿಧವಾದ ದುಃಖಭಾವಗಳು ಮನದಲ್ಲಿ ಮೂಡಬಹುದು? ಸೆಲೆಬ್ರಿಟಿಗಳೇನು ಮನುಷ್ಯರಲ್ಲವೇ? ಜನರು ಒಬ್ಬ ವ್ಯಕ್ತಿಯನ್ನು ಎನ್ನುವುದಕ್ಕಿಂತ ಹೆಚ್ಚಾಗಿ ಒಂದು ವ್ಯಕ್ತಿತ್ವವನ್ನು ಸಾಯಿಸಿ ಅಂತಹ ಒಂದು ಸುದ್ದಿಯನ್ನು ಹರಿಬಿಟ್ಟು ಫೇಮಸ್ ಆಗಬಯಸುತ್ತಾರೆ ಎಂದರೆ ಹೆಸರು ಗಳಿಕೊಳ್ಳಬೇಕು ಎಂಬ ಗೀಳು ಹಾಗು ಅಂತಹ ಗೀಳಿಗೆ ತುಳಿಯುವ ಹಾದಿ ಇಂದು ಅದೆಂಥಹ ಮಟ್ಟತಲುಪಿದೆ ಎಂಬುದು ತಿಳಿದುಬರುತ್ತದೆ. ಇದು ಕೇವಲ ಸುಳ್ಳು ಸುದ್ದಿಯನ್ನು ಹರಡುವುದಷ್ಟೇ ಅಲ್ಲದೆ ಒಂದು ವಿಡಿಯೋ ತುಣುಕಿನ ಸಂಭಾಷಣೆಯನ್ನೇ ತಿರುಚುಚುವುದು, ಇತಿಹಾಸ ಪ್ರಸಿದ್ಧ ಫೋಟೋಗಳನ್ನು ಮನಬಂದಂತೆ ಕಲಸಿ ನೋಡುಗರ ಮುಂದೆ ಇರಿಸುವುದು, ಪಕ್ಷಪಾತೀಯ ಸಮೀಕ್ಷೆಗಳನ್ನು ನೆಡೆಸಿ ಜನರ ಹಾದಿತಪ್ಪಿಸುವುದು ಅತಿ ಸಾಮಾನ್ಯವಾಗಿಬಿಟ್ಟಿದೆ. ಒಟ್ಟಿನಲ್ಲಿ ಸರ್ವವೂ ಇಂಟರ್ನೆಟ್ಮಾಯವಾಗಿರುವ ಕಾಲದಲ್ಲಿ ಜರುಗುವ ಇಂತಹ ಹಲವು ವಿಕೃತಿಗಳಿಗೆ ಪ್ರೆಶ್ನೆ ಹಾಕುವವರೇ ಇಲ್ಲದಂತಾಗಿದೆ.

ಇದು ಅಮೆರಿಕದಲ್ಲಷ್ಟೇ ಅಲ್ಲದೆ ಭಾರತದಲ್ಲೂ ಲತಾ ಮಂಗೇಶ್ಕರ್, ಅಮಿತಾಬ್ ಬಚ್ಚನ್, ದಿಲೀಪ್ ಕುಮಾರ್ ರಂತಹ ಹಲವು ದಿಗ್ಗಜರ ಸಾವಿನ ಸುದ್ದಿಗಳು ಈಗಾಗಲೇ ಎಲ್ಲೆಡೆ ಹರಿದಾಡಿ ಮರೆಯಾಗಿವೆ. ಸಾವು ಎಲ್ಲರಿಗು ಸಹಜವೇ ಆದರೆ ಹೀಗೆಯೇ ಮುಂದುವರೆದರೆ ಬದುಕಿರುವಾಗಲೇ ಸತ್ತು ಮತ್ತೊಮ್ಮೆ ಆತನೇ ತನ್ನ ಬದುಕಿರುವಿಕೆಗೆ ಕೋರ್ಟ್ಗಳಿಗೆ ಪುರಾವೆಗಳನ್ನು ಒದಗಿಸಬೇಕಾದ ಕಾಲವೊಂದು ಬಂದರೂ ಆಶ್ವರ್ಯ ಪಡಬೇಕಾಗಿಲ್ಲ! ಅಲ್ಲದೆ ಹಲವು ಬಾರಿ ಇಂತಹ ಗಾಳಿಸುದ್ದಿಗಳೇ ಬ್ರೇಕಿಂಗ್ ನ್ಯೂಸ್ಗಳಾಗಿ ಮುಖ್ಯವಾಹಿನಿಗಳಲ್ಲಿ, ಪತ್ರಿಕೆಗಲ್ಲಿ ಪ್ರಸಾರವಾಗಿರುವುದೂ ಉಂಟು. ಈ ನಿಟ್ಟಿನಲ್ಲಿ ಪರ್ತಿಕೆ, ದೂರದರ್ಶನ, ರೇಡಿಯೋ ಹೀಗೆ ಒಂದೊಂದೇ ಸುದ್ದಿಯ ಮೂಲಗಳನ್ನು ಆಕ್ರಮಿಸಕೊಂಡು ಬರುತ್ತಿರುವ ಇಂಟರ್ನೆಟ್ ಎಂಬ ದೈತ್ಯಶಕ್ತಿಯ ಮುಂದೆ ನಿಖರತೆಯ, ಶುದ್ಧ ಸುದ್ದಿ ಸಮಾಚಾರಗಳನ್ನು ಜನಮಾನಸಕ್ಕೆ ಒದಗಿಸುವ ಸವಾಲು ಮಾತ್ರ ಅಳಿದುಳಿದಿರುವ ಸುದ್ದಿ ಮಾಧ್ಯಮಗಳ ಮುಂದಿದೆ.

Sunday, February 18, 2018

42 ವರ್ಷಗಳ ಕೆಳಗೆ...

ಹೊಟ್ಟೆಬಿರಿದು ತೇಗುತ್ತಿರುವವನ ಬಾಯಿಗೆ ಕಡುಬು ಗಿಡುಗಿದಂತಹ ಸ್ಥಿತಿ ಇಂದು ವಿಶ್ವ ಕ್ರಿಕೆಟ್ನದ್ದು. ಇಂದು ESPN ಕ್ರಿಕೆಟ್ ವೆಬ್ಸೈಟ್ ಅನ್ನು ಒಮ್ಮೆ ಇಣುಕಿ ನೋಡಿದರೆ ಕಡೆ ಪಕ್ಷ ಒಂದೆರೆಡು ಡಜನ್ ಪಂದ್ಯಗಳಾದರೂ ಏಕಕಾಲಕ್ಕೆ ವಿಶ್ವದ ವಿವಿದೆಡೆ ಜರುಗುತ್ತಿರುತ್ತವೆ. ಇನ್ನು ವಾರ, ತಿಂಗಳು ಹಾಗು ವರ್ಷಗಳನ್ನು ಗಣನೆಗೆ ತೆಗೆದುಕೊಂಡು ಲೆಕ್ಕಹಾಕಿದರೆ ಸಾಗರೋಪಾದಿಯಲ್ಲಿ ಇವುಗಳ ಸಂಖ್ಯೆ ಮೂಡುತ್ತವೆ. ಸಾಕು ಸಾಕಪ್ಪ ಅನ್ನುವಷ್ಟು. ಆಡುವ ಪ್ರತಿಯೊಂದು ಪಂದ್ಯಗಳನ್ನು ನೆನಪಿರಿಸಿ, ಚರ್ಚಿಸುವ ಕಾಲವೂ ಇಂದಿಲ್ಲ. ಪಂದ್ಯಗಳೂ ಅಂತಹ ಚರ್ಚಿಸುವ ಸಮಯವನ್ನು ಒದಗಿಸಿದರೆ ತಾನೆ. ಹೀಗೆ ಸಾಗರದ ಅಲೆಗಳಂತೆ ಒಂದರ ಬೆನ್ನಿಗೊಂದು ತಳ್ಳಿಕೊಂಡು ಬರುತ್ತಲೇ ಇರುತ್ತವೆ. ಪರಿಣಾಮ ಪ್ರಸ್ತುತ ಯುಗ ರೆಕಾರ್ಡ್ ಬ್ರೇಕಿಂಗ್ ಗಾಗಿಯೇ ಮೂಡಿರುವಂತಿದೆ. ಇಲ್ಲಿ ಮೂಡುವ, ಮುರಿಯುವ ದಾಖಲೆಗಳಿಗೆ ಆಕಾಶವೇ ಕೊನೆ!

ಅದೊಂದು ಕಾಲವಿತ್ತು. ಹೆಚ್ಚೇನೂ ಇಲ್ಲ, ಕೇವಲ ಎರಡು ಮೂರು ದಶಕಗಳ ಕೆಳಗೆ. ವಿದೇಶಿ ತಂಡಗಳು ನಮ್ಮಲ್ಲಿ ಆಟವಡಾಲು ಬಂದವೆಂದರೆ ಆ ಸರಣಿ ಮುಗಿಯುವವರೆಗೂ ಹಬ್ಬದ ವಾತಾವರಣ ಎಲ್ಲೆಡೆ. ಕೇಳರಿಯದ ಆಂಗ್ಲ ಅಥವಾ ಮತ್ಯಾವುದೂ ಭಾಷೆಯ ನಾಮಪದಗಳೆಲ್ಲ ಬಾಯಿಪಾಠ ಮಕ್ಕಳಿಗೆ. ಭಾನುವಾರದ ನಾಲ್ಕು ಘಂಟೆಯ ಚಲಚಿತ್ರಕ್ಕಿಂತಲೂ ಅಂದು ಹೆಚ್ಚಾಗಿ ಚರ್ಚಿಸಲ್ಪಡುತ್ತಿದ್ದದ್ದು ಕ್ರಿಕೆಟ್ ಪಂದ್ಯದ ಆಳೆತ್ತರಗಳೇ. ಅತ್ತ ಪಂದ್ಯ ನೋಡದಿರುವವರು (ಹೆಚ್ಚಾಗಿ ಅಮ್ಮ, ಅಕ್ಕ, ಅಜ್ಜ, ಅಜ್ಜಿಯರು) ಲೊಟ-ಲೊಟ ಶಾಪವನ್ನು ಹಾಕುತ್ತ 'ನಿಮ್ ಹಾಳಾದ್ ಟಿಕೆಟ್ ಮುಗಿತಾ' ಎನ್ನುತ್ತಾ ಭಾನುವಾರ ಪೂರ್ತಿ ಶಬರಿಯ ತಪಸ್ಸನ್ನು ಮಾಡಿ ರಾತ್ರಿಯಾದರೂ ಕಪ್ಪು ಬಿಳುಪಿನ ಟಿವಿಯ ಮುಂದೆ ಅಂಟಿಕೊಂಡಿರುವ ಗುಂಪನ್ನು ಕಂಡು ಖಿನ್ನರಾಗಿ ತಾವು ಮಲಗುವ ಕೋಣೆಯೊಳಗೆ ಧಾವಿಸುತ್ತಿದ್ದರು. ಇನ್ನು ಸಚಿನ್, ಗಂಗೂಲಿ, ದ್ರಾವಿಡ್, ಕಪಿಲ್, ಗವಾಸ್ಕರ್ ರಂತಹ ದಿಗ್ಗಜರು ಸೆಂಚುರಿಯನ್ನೇನಾದರೂ ಬಾರಿಸಿದರಂತೂ ಮಕ್ಕಳಿಗೆ ತಾವು ಕಲಿತ ಮಗ್ಗಿ, ಕಾಗುಣಿತ, ಗುಣಾಕಾರ, ಭಾಗಕಾರಗಳೆಲ್ಲವೂ ಮಂಗಮಾಯವಾಗಿ ಆ ಜಾಗದಲ್ಲಿ ಪ್ರತಿಷ್ಠಾಪಿಸಲ್ಪಡುತ್ತಿದ್ದದ್ದು ಅವರುಗಳ ಸಿಕ್ಸು, ಫೋರು, ಆವರೇಜ್ ಹಾಗು ಸ್ಟ್ರೈಕ್ ರೇಟ್ ಗಳೆಂಬ ರಂಜನೆಯ ಸಂಖ್ಯಾಶಾಸ್ತ್ರಗಳೇ! ಇನ್ನು ಸರ್ಕಾರಗಳ ಪವರ್ ಪ್ರಾಬ್ಲಮ್ ಗಳನ್ನು ಅಲ್ಲಿ ಯಾರು ಆಲಿಸುತ್ತಿದ್ದರು? ಹೊಟ್ಟೆಕಿಚ್ಚಿಗೋ ಏನೋ ಎಂಬಂತೆ ವಾರಕ್ಕೊಮ್ಮೆಯೂ ಕೊಂಚ ರಿಯಾಯ್ತಿಯನ್ನು ನೀಡದೆ ವಿದ್ಯುತ್ತನ್ನು ತುಂಡರಿಸುತ್ತಿದ್ದ ಪಾಪದ ಲೈನ್ ಮ್ಯಾನ್ಗಳ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜಾಕುತ್ತಾ, ಘಂಟೆಗಳ ನಂತರ ಬರುತ್ತಿದ್ದ ವಿದ್ಯುತ್ತ್ರಾಯನಿಗೆ ಕೈ ಮುಗಿದು ಮತ್ತೊಮ್ಮೆ ಟಿವಿಯನ್ನು ಆನ್ ಮಾಡಿ ಬಿಟ್ಟರೆ ಮತ್ತದೇ ಕಲ್ಲು ಬಂಡೆಯಂತೆ ಅಲ್ಲಲ್ಲೇ ತಟಸ್ಥವಾಗಿಬಿಡುತ್ತಿದ್ದರು. ಒಂದು ವೇಳೆ ವಿದ್ಯುತ್ತ್ ಕಾಣೆಯಾದ ಈ ಮೂರ್ನಾಲ್ಕು ಘಂಟೆಗಳಲ್ಲಿ ಭಾರತ ತೀರಾ ಕಳಪೆ ಪ್ರದರ್ಶನವೇನಾದರೂ ಮಾಡಿದ್ದರೆ ಅಥವಾ ಪಂದ್ಯವೇನಾದರೂ ಸೋತಿದ್ದರೆ ದೋಷವೆಲ್ಲವನ್ನೂ ಲೈನ್ ಮ್ಯಾನ್ ಒಬ್ಬನ ಮೇಲೆ ಒರಿಸಿ ಆತನೇ ತಂಡವನ್ನು ಸೋಲಿಸಿದನೇನೋ ಎಂಬಂತೆ ಅಟ್ಟಾಡಿಸಿಕೊಂಡು ಒಡೆಯಲೂ ಹಿಂಜರಿಯುತ್ತಿರಲಿಲ್ಲ, ತಮ್ಮನ್ನೇ ತಾವು ಭಾರಿ ಅಭಿಮಾನಿಗಳೆಂದುಕೊಳ್ಳುತ್ತಿದ್ದ ಎಳೆಯ ಮರಿಗಳು.

ಇದೆಲ್ಲ ಆಗಿನ ಕಾಲ. ಇಂದು ದಿನದ ಇಪ್ಪತ್ನಾಲ್ಕು ಘಂಟೆಯೂ ವಿದ್ಯುತ್ತು. ಇಲ್ಲವಾದರೆ ಯು.ಪಿ.ಎಸ್. ಜೊತೆಗೆ ಮೊಬೈಲ್ ಹಾಗು ಇಂಟರ್ನೆಟ್ಗಳ ಲೈವ್ ಅಪ್ಡೇಟ್ಸ್. ಇಷ್ಟೆಲ್ಲಾ ಇದ್ದರೂ ಅಂದಿನ ಖುಷಿಯ ಒಂದಿನಿತೂ ಇಂದಿಲ್ಲ. ದಿನಕ್ಕೊಂದು ನಾಲ್ಕಾರು ಸರಣಿಗಳು. ಪೊರು ಸಿಕ್ಸರ್ ಗಳ ಸುರಿ ಮಳೆ. ಅಂದು ಪಂದ್ಯಕ್ಕೊಂದೋ ಎರಡೂ ಕಾಣಸಿಗುತ್ತಿದ್ದ ಸಿಕ್ಸರ್ಗಳು ಇಂದು ಪ್ರತಿ ಒವೇರ್ಗಳಲ್ಲೂ ಸಿಡಿಯಲ್ಪಡುತ್ತವೆ. ಟಿ20 ಪಂದ್ಯಗಳು ಶುರುವಾದ ಮೇಲಂತೂ ಇಂತಹ ಸಿಕ್ಸರ್ಗಳ ರಸಸ್ವಾದನೆಯ ಖುಷಿಯೇ ಇಲ್ಲದಂತಾಗಿದೆ. ಆತುರದ ಜೀವನಶೈಲಿಯಲ್ಲಿ, ಹಣದ ಹೊಳೆಯಲ್ಲಿ ಇಂದು ಚುಟುಕು ಪಂದ್ಯಗಳು ಇಪ್ಪತ್ತರಿಂದ ಹತ್ತು, ಐದು ಓವರ್ಗಳಿಗೆ ಬಂದು ಮುಟ್ಟಿವೆ.

ಟೆಸ್ಟ್ ಕ್ರಿಕೆಟ್ನಲ್ಲಿ ಇಂದಿನ ಅದೆಷ್ಟೋ ತಂಡಗಳ ಕಳಪೆ ಪ್ರದರ್ಶನಗಳಿಗೂ ಚುಟುಕು ಮಾದರಿಯ ಇಂತಹ ಪಂದ್ಯಗಳೇ ಕಾರಣವೆಂಬುದು ಬಿಡಿಸಿ ಹೇಳಬೇಕಾಗಿಲ್ಲ. ವೆಸ್ಟ್ ಇಂಡೀಸ್ ತಂಡ 2012 ಹಾಗು 2016 ರ ಟೀ20 ವಿಶ್ವಕಪ್ ಅನ್ನು ಗೆದ್ದರೂ ಟೆಸ್ಟ್ ಶ್ರೇಯಾಂಕದಲ್ಲಿ ತಳಮಟ್ಟದಲ್ಲಿಯೇ ಉಳಿದಿದ್ದಿತು. ಇಂತಹ ಕಾಲದಲ್ಲಿ ಟೆಸ್ಟ್ ಕ್ರಿಕೆಟ್ ಗಳನ್ನು ಐದೈದು ದಿನಗಳ ಕಾಲ ಸಾವಕಾಶವಾಗಿ ಕಾದು ನೋಡುವವರಾದರೂ ಯಾರು? ಆ ಮಟ್ಟಿನ ತಾಳ್ಮೆಯಾಗಲಿ, ಸಮಯವಾಗಲಿ ಇಂದಿನ ಜನಮಾನಸದಲ್ಲಿಲ್ಲ ಎಂಬುದು ಜಗಜ್ಜಾಹೀತ ವಿಷಯವೇ. ಅಲ್ಲದೆ ಇಂದು ಟೆಸ್ಟ್ ಪಂದ್ಯಗಳು ಸಂಪೂರ್ಣ ಐದು ದಿನಗಳೂ ಎಲ್ಲಿ ನೆಡೆಯುತ್ತವೆ. ಹೊಡಿ ಬಡಿ ಆಟದಲ್ಲಿ ಮೂರೋ ಅಥವಾ ನಾಲ್ಕೇ ದಿನಗಳಲ್ಲಿ ಪಂದ್ಯಗಳು ಕೊನೆಗೊಳ್ಳುವುದು ಸಾಮಾನ್ಯದ ಸಂಗತಿ. ಪ್ರಸ್ತುತ ದಕ್ಷಿಣ ಆಫ್ರಿಕಾದ ಟೆಸ್ಟ್ ಸರಣಿಯಲ್ಲೂ ಭಾರತ ತಂಡದ ಪ್ರದರ್ಶನ ಇಂತಹ ಅಂಶಗಳನ್ನೇ ಎತ್ತಿ ಹಿಡಿಯುತ್ತಿತ್ತು. ನಮ್ಮ ನೆಲದಲ್ಲಿ ಅದೆಷ್ಟೇ ಹಾರಾಡಿ ಅರಚಾಡಿದರೂ ವಿದೇಶಿ ನೆಲದಲ್ಲಿ ತಂಡದ ಸಾಧನೆ ಅಷ್ಟಕಷ್ಟೇ ಎಂಬ ಅಪವಾದ ಭಾರತ ತಂಡದ ಮೇಲೆ ದಶಕಗಳಿಂದ ಇದೆ. ಇಂದು ಮೇನ್ ಕೋಚ್, ಬ್ಯಾಟಿಂಗ್ ಕೋಚ್, ಬೌಲಿಂಗ್ ಕೋಚ್, ಫೀಲ್ಡಿಂಗ್ ಕೋಚ್, ಭೌತಚಿಕಿತ್ಸಕ (Physiotherapist ) ಎಂಬ ಮತ್ತೊಂದು ಮಗದೊಂದು ಬೆಂಬಲ ತುಂಬುವ, ದಾರಿ ತೋರುವ ಕೈಗಳಿದ್ದರೂ ಕೆಲವೊಮ್ಮೆ ತಂಡ ತೀರ ಹೀನಾಯ ಪ್ರದರ್ಶನವನ್ನು ನೀಡುತ್ತದೆ.

ಟೆಸ್ಟ್ ಪಂದ್ಯಗಳನ್ನೂ ಟೀ20 ಪಂದ್ಯಗಳಂತೆ ಆಡುವ ಪ್ರಸ್ತುತ ಕಾಲದಲ್ಲಿ ಅಂದೊಂದು ದಿನ ಭಾರತ - 1983 ರ ವಿಶ್ವಕಪ್ ಗೆಲ್ಲುವ ಮೊದಲು - ನಾಲ್ಕನೇ ಇನ್ನಿಗ್ಸ್ ನಲ್ಲಿ ವಿಶ್ವದ ಯಾವುದೇ ಘಟಾನುಘಟಿ ತಂಡಗಳು ಪೇರಿಸಿರದ ಮೊತ್ತವನ್ನು ಪೇರಿಸಿ ಗೆಲುವನ್ನು ಮುಡಿಗೇರಿಸಿಕೊಂಡಿತ್ತು. ಕೊನೆಯ ದಿನದ ಕೊನೆಯ ಕೆಲ ನಿಮಿಷಗಳವರೆಗೂ ನೋಡುಗರನ್ನು ಹಾಗು ಕೇಳುಗರನ್ನು ಕಾಲ ತುದಿಯ ಮೇಲೆ ನಿಲ್ಲಿಸಿದ್ದ ಪಂದ್ಯಕ್ಕೆ ಇಂದಿಗೆ ಸುಮಾರು 42 ವರ್ಷಗಳು ತುಂಬಿವೆ!

ವಿಂಡೀಸ್ ತಂಡವೆಂದರೆ ಇತರ ತಂಡಗಳು ಬಾಡಿ ಬೆಂಡಾಗಿ ಹೋಗುತ್ತಿದ್ದ ಕಾಲವದು. ಭಾರತ ನಾಲ್ಕು ಪಂದ್ಯಗಳ ಸರಣಿಗೆ ವೆಸ್ಟ್ ಇಂಡೀಸ್ ನನ್ನು ತಲುಪಿ ಕೊನೆಯಲ್ಲಿ ಸರಣಿಯನ್ನು 2-1 ರ ಅಂತರದಲ್ಲಿ ಸೋತಿತ್ತಾದರೂ ಈ ಸರಣಿ ಭಾರತಕ್ಕೆ ಅವಿಸ್ಮರಣೀಯವಾದದ್ದು. ಟೆಸ್ಟ್ ಕ್ರಿಕೆಟನ್ನು ಆಡಲು ಶುರುವಿಟ್ಟ 8 ದಶಕಗಳಲ್ಲಿ ಭಾರತ ನಾಲ್ಕನೇ ಇನ್ನಿಂಗ್ಸ್ ನಲ್ಲಿ ಗಳಿಸಿ ಗೆದ್ದಿರುವ ಗರಿಷ್ಟ ಮೊತ್ತ 406. ಇಂದಿಗೂ ಇದು ವಿಶ್ವದಲ್ಲೇ ಮೂರನೇ ಅತಿ ಹೆಚ್ಚಿನ ರನ್ ಚೇಸ್. ಆಗಿನ ಕಾಲಕ್ಕೆ ನಂಬರ್ ಒನ್! ಇಂತಹ ಬೃಹತ್ ಮೊತ್ತವನ್ನು ಕಲೆಹಾಕಿ ಗೆದ್ದ ಪಂದ್ಯವೇ ಈ ಸರಣೀಯ ಮೂರನೇ ಪಂದ್ಯ. ಮೊದಲ ಪಂದ್ಯವನ್ನು ಸೋತು, ಎರಡನೇ ಪಂದ್ಯವನ್ನು ಡ್ರಾ ನಲ್ಲಿ ಕೊನೆಗೊಳಿಕೊಂಡಿದ್ದ ಭಾರತ ಸರಣಿಯಲ್ಲಿ ಜೀವಂತವಾಗಿರಲು ಮೂರನೇ ಪಂದ್ಯವನ್ನು ಗೆಲ್ಲುವ ಅನಿವಾರ್ಯತೆಯಲ್ಲಿದ್ದಿತು. ವಿದೇಶಿ ನೆಲ, ಹೊತ್ತಿ ಉರಿಯುವ ರಣ ಬಿಸಿಲು, ಕೋಚ್, ತೆರಪಿಸ್ಟ್ ಗಳೆಂದರೇ ಏನೆಂದು ಅರಿಯದ ಪಡೆ, ಆಡಲೊ ಅಥವ ಒಡೆಯಲೋ ಎಂಬಂತೆ ದಾಳಿ ನೆಡೆಸುವ ದೈತ್ಯ ವಿಂಡೀಸ್ ಬೌಲರ್ಗಳು, ಅವರುಗಳ ಕುಹಕ ನುಡಿಗಳು ಇವೆಲ್ಲವನ್ನು ನೀಗಿ ಭಾರತ ಅಡಿಯಿಡಬೇಕಿದ್ದಿತು. ಪೋರ್ಟ್ ಆಫ್ ಸ್ಪೇನ್ನಲ್ಲಿ ಅಂದು ಬಿಷನ್ ಸಿಂಗ್ ಬೇಡಿ ನೇತೃತ್ವದ ತಂಡ ಬಹುಶಃ ಕನಸಿನಲ್ಲಿಯೂ ಅವೊಂದು ಬಗೆಯ ಫಲಿತಾಂಶವನ್ನು ಕೊನೆಯಲ್ಲಿ ನಿರೀಕ್ಷಿಸಿರಲಿಲ್ಲ. ಮೊದಲನೇ ಇನ್ನಿಂಗ್ಸ್ ನಲ್ಲಿ ವಿಂಡೀಸ್ ತಂಡದ 359 ರನ್ ಗಳನ್ನು ಬೆನ್ನತ್ತಿದ ಭಾರತ 228 ರನ್ ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಒಪ್ಪಿಸಿಕೊಂಡಿತು. ಎರಡನೇ ಇನ್ನಿಂಗ್ಸ್ನಲ್ಲಿ ಮತ್ತೊಮ್ಮೆ ಬ್ಯಾಟ್ ಬೀಸಿದ ವಿಂಡೀಸ್ ತಂಡ 271 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡು 403 ರನ್ ಗಳ ಬೃಹತ್ ಮೊತ್ತವನ್ನು ಭಾರತದ ಮುಂದಿಟ್ಟಿತು. ಸರಣಿ ತನ್ನದೇ ಎಂಬಂತೆ ಅದು ನಿರಾಳವಾಯಿತು. ಭಾರತಕ್ಕೆ ಅದು ಮಾಡು ಇಲ್ಲವೇ ಮಡಿ ಪಂದ್ಯ. ಟೆಸ್ಟ್ ಇತಿಹಾಸದ ಹಿಂದೆಂದೂ ಈ ಮಟ್ಟಿನ ಒಂದು ಮೊತ್ತವನ್ನು ಪೇರಿಸಿ ಗೆದ್ದಿರುವ ಉದಾಹರಣೆಗಳೇ ಇದ್ದಿರಲಿಲ್ಲ. ಸುನಿಲ್ ಗವಾಸ್ಕರ್ ಹಾಗು ಅಂಶುಮಾನ್ ಗಾಯಕ್ವಾಡ್ರ ಜೋಡಿ ಆಟದ ಅಂಗಳಕ್ಕೆ ಇಳಿಯಿತು. ನಾಲ್ಕನೇ ದಿನದ ಕೊನೆಯ ಕೆಲ ಘಂಟೆಗಳು ಹಾಗು ಮಾರನೇಯ ಇಡೀ ದಿನವಷ್ಟೇ ಉಳಿದ ಸಮಯ. ಇಂದಿನ ಅಬ್ಬರಿಸಿ ಬೊಬ್ಬೆಯೊಡೆಯುವ ಯುಗದಲ್ಲೂ ಇಂತಹ ಒಂದು ಮೊತ್ತವನ್ನು ಪೇರಿಸಲು ತಿಣುಕಾಡಯುವ ಕಾಲದಲ್ಲಿ ಭಾರತ ಅಂದು ಡ್ರಾ ದೂರದ ಮಾತು, ಪಂದ್ಯವನ್ನು ಗೆದ್ದೇ ತೀರುತ್ತೇನೆಂಬತೆ ಬ್ಯಾಟ್ ಬೀಸಿತು. ಮೊದಲ ಜೋಡಿ 69 ರನ್ ಗಳ ಜೊತೆಯಾಟವನ್ನು ಮಾಡಿತು. ವಿಂಡೀಸ್ ಬೌಲರ್ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಲು ಈ ಜೊತೆಯಾಟ ಮಹತ್ವದಾಗಿದ್ದಿತು. ಅಲ್ಲಿಂದ ಮುಂದೆ ಗವಾಸ್ಕರ್ ಹಾಗು ಗುಂಡಪ್ಪ ವಿಶ್ವನಾಥ್ ರ ಶತಕ ಹಾಗು ಮಹೇಂದ್ರ್ ಅಮರನಾಥ್ ಹಾಗು ಬೃಜೇಶ್ ಪಟೇಲ್ರ ಸಮಯೋಚಿತ ಆಟದ ಮೂಲಕ ಭಾರತ ಆರು ಓವರ್ಗಳು ಬಾಕಿ ಇರುವಂತೆಯೇ ಗೆಲುವನ್ನು ತನ್ನ ಮುಡಿಗೇರಿಸಿಕೊಂಡಿತು. ಈ ಗೆಲುವು ಮುಂದೆ ಭಾರತವನ್ನು ವಿಶ್ವ ಚಾಂಪಿಯನ್ ತಂಡವಾಗಿ ಮಾರ್ಪಡಿಸುವಲ್ಲಿ ಮಹತ್ತರವಾದ ಪಾತ್ರವನು ವಹಿಸಿತು. ವಿಶ್ವವೇ ಭಾರತದ ಈ ಸಾಧನೆಯತ್ತ ಹುಬ್ಬೇರಿಸಿ ನೋಡುವಂತೆ ಮಾಡಿತು. ಏಪ್ರಿಲ್ 12 ರ ಆ ದಿನ ಭಾರತಕ್ಕೆ ಅವಿಸ್ಮರಣೀಯ ದಿನವಾಯಿತು. ಭಾರತದ ಸಾಮರ್ಥ್ಯ ವಿಶ್ವಕ್ರಿಕೆಟ್ ಗೆ ಮನವರಿಕೆಯಾಯಿತು. ಆದರೆ ನಂತರದ ಪಂದ್ಯದ ಸೋಲು ಭಾರತಕ್ಕೆ ಸರಣಿ ಸೋಲಿನ ಆಘಾತವನ್ನು ನೀಡಿತ್ತಾದರೂ ಅಂದಿನ ಕ್ರಿಕೆಟ್ ಪ್ರೇಮಿಗಳಿಗೆ ಈ ಮ್ಯಾಚ್ ಮಾತ್ರ ತಮ್ಮ ಆಲ್ ಟೈಮ್ ಫೆವೋರೇಟ್ ಗಳಲ್ಲಿ ಒಂದಾಯಿತು.

ಇಂದು ಭಾರತ ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದರೂ ಪುಟಿದೇಳುವ ವಿದೇಶಿ ಪಿಚ್ಗಳಲ್ಲಿ ಪಳಗಬೇಕಾದ ಅನಿವಾರ್ಯತೆ ಇನ್ನೂ ಹೆಚ್ಚಿದೆ. ಪ್ರಮುಖವಾಗಿ ಟೆಸ್ಟ್ ಪಂದ್ಯಗಳಲ್ಲಿ. ಅಲ್ಲದೆ ಅಂದಿನ ಘಟಾನುಘಟಿ ದೈತ್ಯ ಆಟಗಾರರ ನಡುವೆ ಸೆಣೆಸಿ ಗಳಿಸಿಕೊಳ್ಳುತ್ತಿದ್ದ ಗೆಲುವು ಇಂದು ಮೀಸೆ ಚಿಗುರುವ ಪೋರರ ಮೇಲೆ ಸ್ಥಾಪಿಸಿದಷ್ಟು ಸುಲಭವಾಗಿರಲಿಲ್ಲ. ಅದೆಷ್ಟೋ ಬಾರಿ ವೆಂಡಿಸ್ ಬೌಲರ್ಗಳ ಕಾಯಕ ಎದುರುಬದಿಯ ಬ್ಯಾಟ್ಸ್ಮನ್ಗಳ ಮುಖ ಮೂತಿಯನ್ನೂ ಲಿಕ್ಕಿಸದೆ ಬಾಲನ್ನು ಎಸೆಯುವುದೇ ಆಗಿದದ್ದಿತ್ತು. ಅಂತಹ ಕಾಲದಲ್ಲೂ ಸಾವಿರಾರು ಕಿಲೋಮೀಟರ್ ಸಮುದ್ರಮಾರ್ಗವಾಗಿ ಚಲಿಸಿ, ಅಲ್ಲಿನ ವಾತಾವರಣಕ್ಕೆ ಒಗ್ಗಿಕೂಂಡು, ತಮಗೆ ತಾವೇ ಕೋಚ್, ಫಿಸಿಸಿಸ್ಟ್ಗಳಾಗಿ ಪಡೆಯುತ್ತಿದ್ದ ಗೆಲುವು ಮೌಂಟ್ಎವರೆಸ್ಟ್ ಅನ್ನು ಏರಿ ದಣಿದ ನಗೆಯನ್ನು ಬೀರಿದಂತೆ ಅಮೋಘ, ಅವಿಸ್ಮರಣೀಯ!

ಒಂದು ಕೋನದಲ್ಲಿ ನೋಡಿದರೆ ಈ ಮಟ್ಟಿನ ಸಾಧನೆಗಳು ಅಂದು ಮೂಡಲು ಕಾರಣ ಆಟವನ್ನು ಆಟವಾಗಿಯೇ ಆಡಲಾಗುತ್ತಿದ್ದದ್ದು. ಇಂದು ಆಟವೆಂಬುದು ಭಾರಿ ಪ್ರೊಫೆಷನ್. ಡಯಟ್, ಆವರೇಜ್, ಸ್ಟ್ರೈಕ್ ರೇಟ್, ಸ್ಪೀಡ್ ಎಂಬ ಇಲ್ಲ ಸಲ್ಲದ ಅಂಕಿ ಅಂಶಗಳ ಸುತ್ತ ಸುತ್ತುವ ಆಟಗಾರರು ಹಾಗು ಅವರ ಪಂದ್ಯಗಳು ಒಂದು ತರಹ ಪರೀಕ್ಷೆಗಳಿಗೆ ತಲ್ಲಣಗೊಂಡು ತಯಾರಾಗುವ ವಿದ್ಯಾರ್ಥಿಗಳಂತೆ ಆಗಿದೆ. ಇದು ಕ್ರಿಕೆಟ್ ನಷ್ಟೇ ಅಲ್ಲದೆ ಭಾಗಶಃ ಇತರೆ ಎಲ್ಲ ಬಗೆಯ ಆಟೋಟವನ್ನೂ ಆವರಿಸಿದೆ. ಮನೋಲ್ಲಾಸಕ್ಕೆ ಆಡುತ್ತಿದ್ದ ಆಟಗಳಿಂದು ಮನೋಖಿನ್ನತೆಯನ್ನೂ ಮೂಡಿಸುತ್ತಿವೆ. ಉತ್ತರ ಕೊರಿಯದ ದೊರೆ ಕಿಮ್ ಜೊಂಗ್ ಒಲಿಂಪಿಕ್ಸ್ ನಲ್ಲಿ ಪದಕಗಳನ್ನು ತರದಿದ್ದರೆ ಆಟಗಾರನ್ನು ಜೈಲಿಗೆ ತಳ್ಳುವ, ಕಾರ್ಖಾನೆಗಳಲ್ಲಿ ದುಡಿಸುವ ಬೆದರಿಕೆಯನ್ನು ಹಾಕುತ್ತಾನೆ. ಹೀಗೆ ಆಟಗಾರರನ್ನು ಒತ್ತಡದ ಕೂಪದೊಳಗೆ ನೂಕಿ ಗೆದ್ದರೂ ಅದೆಂತಹ ಗೆಲುವು ಸ್ವಾಮಿ? ಸೋಲಲ್ಲೂ ಗೆಲುವನ್ನು ಕಾಣದ ಈ ಪೀಳಿಗೆ ಕೇವಲ ಗೆಲುವನ್ನೇ ಜಪಿಸುತ್ತಾ ಸಾಗುವುದು ನಿಜವಾಗಿಯೂ ಆತಂಕಕರ.

ಇವೆಲ್ಲವುಗಳ ಹಿನ್ನಲೆಯಲ್ಲಿ ತಾಳ್ಮೆ ಎಂಬ ಜೊತೆಗಾರನನ್ನು ಮರತೇ ಬಿಟ್ಟಂತೆ ಆಗಿರುವ ಆಟಗಾರರು, ತಂಡಗಳು ಅದೆಂದಿನವರೆಗೆ ಟೆಸ್ಟ್ ಪಂದ್ಯಗಳ ಸೊಗಡನ್ನು ಕಾಪಾಡುತ್ತವೆ ಎಂಬುದನ್ನು ಮಾತ್ರ ಕಾದು ನೋಡಬೇಕು.

Friday, February 9, 2018

30 ಇಯರ್ಸ್ ಆಫ್ 1987.

ಕಾಲದ ಗಾಲಿ ಎಂದಿಗಾದರೂ ನಿಲ್ಲಬಹುದೇ? ಎಂಬ ಮೂರ್ಖ ಪ್ರೆಶ್ನೆಯನ್ನು ಮಾನವ ಅದೆಷ್ಟು ಬಾರಿ ತನ್ನನ್ನೇ ತಾನು ಕೇಳಿದ್ದಾನೆಯೋ. ಅದೆಷ್ಟು ಬಾರಿ ಅದು ನಿಂತಿದೆ ಎಂದೇ ಭಾವಿಸಿ ಮೋಹಪರವಶನಾಗಿ, ಅಸೂಹಿಯಾಗಿ, ಸಕಲವೂ ನನ್ನದೇ ನಾನೇ ಒಡೆಯ ಎಂಬಂತೆ ಅದೆಷ್ಟು ಬಾರಿ ವರ್ತಿಸಿ ಕುಣಿದು ಮತ್ತೆ ಯಥಾ ಪ್ರಕಾರ ಅದೇ ಕಾಲದ ಗಾಲಿಯೊಳಗೆಯೇ ಮರೆಯಾಗಿದ್ದಾನೆಯೋ? ಅಂದಿನಿಂದ ಇಂದಿನವರೆಗೂ ಮಾನವ ಮೂರ್ಖನೇ. ಗಳಿಕೊಂಡಿರುವ ಒಂದೆರೆಡು ದಿನಗಳನ್ನು ಹಾಯಾಗಿ ಬದುಕಿ ನಕ್ಕು ನಲಿದು ಮರೆಯಾಗುವ ಬದಲು ಇಲ್ಲ ಸಲ್ಲದ ತಾಪತ್ರಯವನ್ನೆಲ್ಲ ತನ್ನ ಮೇಲೆರೆದುಕೊಂಡು ಸುಖಾಸುಮ್ಮನೆ ಗೋಳಾಡಿ ಗೊಣಗಾಡಿ ಅತ್ತು ಒದ್ದಾಡಿ ಮರೆಯಾಗುತ್ತಾ ಬಂದಿದ್ದಾನೆ. ಅಷ್ಟೆಲ್ಲ ಸರ್ಕಸ್ ಗಳನ್ನೂ ಮಾಡಿಯೂ ಆತ ಕಾಲದ ಗಾಲಿಯನ್ನು ತಡೆದು ನಿಲ್ಲಿಸಿದನೇ? ನಿಲ್ಲಿಸಬಲ್ಲನೆ?




ಈಗ ಮೊನ್ನೆ ಮೊನ್ನೆ ಮರೆಯಾಗಿರುವಂತಹ ಇಸವಿ 1987ನನ್ನೇ ತೆಗೆದುಕೊಳ್ಳಿ. 'ಅಲ್ಲಾ ಗುರು, ನೆನ್ನೆ ಮೊನ್ನೆ ತಾನೇ ಚಡ್ಡಿ ಹಾಕೊಂಡು ಆಡ್ದಡ್ತಾ ಇದ್ದವ ಈಗ ಅವ್ನ ಕಾರು ನೋಡು!' ಎಂದು ಮೂವತ್ತು ವರ್ಷವನ್ನು ಬರೇ ಮೂರೇ ದಿನಗಳಿಗೆ ಸಮವಾಗಿಸಿ ಬಿಡುತ್ತಾರೆ ಕಾಲದ ಓಟದಲ್ಲಿ ಭಾಗಿಯಾಗಿರುವ ಅನೇಕರು. ಆದರೂ ಎಲ್ಲೋ ಒಂದೆಡೆ ಈ ಮೂರು ದಶಕಗಳು ಮಾನವನ ಓಟದ ದಿಕ್ಕನ್ನೇ ಬದಲಿಸಿದವು ಎಂದರೆ ತಪ್ಪಾಗದು. ಓಟ ಮಾನವನ ಸಹಜ ಗುಣ. ಇಂದು ಬೈಸಿಕಲ್ಲ ತುಳಿಯುವ ಆತ ನಾಳೆ ಬೈಕ ಕ್ಲಚ್ ಅನ್ನು ಹಿಂಡದಿರುತ್ತಾನೆಯೇ? ಅಂತೆಯೇ ಇಂದು ಏನಿದೆಯೋ ನಾಳೆ ಅದನ್ನು ಮಹತ್ತರವಾದ ಮತ್ತೊಂದಾಗಿ ಕಾಣಲು ಆತ ಬಯಸುತ್ತಾನೆ. ನಾಳೆಯ ಅದನ್ನು ನಾಡಿದ್ದು ಮತ್ತೆಂದದ್ದೋ ಆಗಿ ಕಾಣಬಯಸುತ್ತಾನೆ. ಒಟ್ಟಿನಲ್ಲಿ ಕಾಲವನ್ನು ತಡೆಯಲಾಗದವನು ಹೆಚ್ಚೆಂದರೆ ಅದನ್ನು ಬದಲಾಯಿಸಬಹುದಷ್ಟೇ. ಬದಲಾಯಿಸತೊಡಗುತ್ತಾನೆ. ಬದಲಾವಣೆಯ ಬರದಲ್ಲಿ ಆತ ಬದಲಾಯಿಸುತ್ತಿರುವುದು ಕಾಲವನ್ನೇ ಅಥವಾ ತನ್ನನ್ನೇ ಎಂಬುದ ಮಾತ್ರ ಅರಿಯದವನಾಗಿದ್ದಾನೆ!




ಹಾಡುಗಳೆಂದರೆ ಕಿಶೋರ್ ಕುಮಾರ್ ಎಂದುಕೊಂಡವರಿಗೆ ಆತನ ಕೊನೆಯ ಘಳಿಗೆಯನ್ನು ಕಂಡ ವರ್ಷವದು. ಹುಚ್ಚೆದ್ದು ಕುಣಿದಾಡುವಂತೆ ಮಾಡುತಿದ್ದ R D ಬರ್ಮನ್ ರ ಹವಾ ಕೊಂಚ ಕೊಂಚವಾಗಿ ಕ್ಷೀಣಿಸತೊಡಗಿತ್ತು. ಆಂಗ್ರಿ ಯಂಗ್ ಮ್ಯಾನ್ ನ ಗಡ್ಡವೂ ಬಿಳಿಯಾಗತೊಡಗಿದ್ದಿತು! ರಾಜ್ಕುಮಾರ್ ರ ತಲೆಗೂ ವಿಗ್ ಬಂದಿದ್ದಿತು. ಅದೆಲ್ಲೋ ಮುಂಬೈಯ ಮೂಲೆಯಲ್ಲಿ ಕ್ರಿಕೆಟ್ ನ ದೇವರೆಂದು ಕರೆಸಿಕೊಳ್ಳುವ ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣಕ್ರಿಯೆ ಜರುಗುತ್ತಿತ್ತು. ಓವರ್ ಗೆ ಮೂರರಿಂದ ನಾಲ್ಕರ ಸರಾಸರಿಯಲ್ಲಿ ರನ್ ಗಳಿಸುತ್ತಿದ್ದ ತಂಡಗಳು ಆರು ಬಾಲಿಗೆ ಆರು ರನ್ಗಳನ್ನು ಕಬಳಿಸಲು ಶುರುವಚ್ಚಿಕೊಂಡವು. ದೇಶ ಕಂಡ ಮೊದಲ ಮಹಿಳಾ ಪ್ರಧಾನಿಯ ನೆನಪು ಇಂಚಿಚ್ಚೇ ಮಾಸಲು ಶುರುವಾಗಿದ್ದಿತು. ಅಮೇರಿಕವೆಂಬ ದೈತ್ಯ ರಾಷ್ಟ್ರಕ್ಕೆ ಸಡ್ಡು ಹೊಡೆದು ದೇಶೀ ನಿರ್ಮಾಣದ ಸೂಪರ್ ಕಂಪ್ಯೂಟರ್ಗಳನ್ನು ನಿರ್ಮಿಸಲು ದೇಶ ಚಿಂತಿಸುತ್ತಿತ್ತು. ಕುಡಿದು ಕುಣಿದು ಬರಲು ಬ್ಯಾಚುಲರ್ಗಳ ಸ್ವರ್ಗವಾದ ಗೋವಾಕ್ಕೆ ರಾಜ್ಯದ ಸ್ಥಾನಮಾನವನ್ನು ನೀಡಲಾಯಿತು. ಅಲ್ಲದೆ ಕೆಂಪು ಸೊಡ್ಡಿನ ಚೀನಾ ಆಗಲೂ ಅರುಣಾಚಲದ ವಿಷಯದಲ್ಲಿ ಮೂಗು ತೋರಿ ಮಾತು ಯುದ್ಧದವರೆಗೂ ಬೆಳೆದಿದ್ದಿತು.




ಇವೆಲ್ಲ ಘಟನೆಗಳು ಕಾಲದ ಗಾಲಿಯೊಳಗೆ ಕರಗಿ ಅದಾಗಲೇ ಮೂವತ್ತು ಬೇಸಿಗೆಗಳಾಗಿವೆ. ಬಿಸಿಲಿಗೆ ಬೆಂದ ಮನಗಳು ಮಾತ್ರ ದಣಿಯದೆ, ಧಣಿಗಳಾಗಿವೆ! ಸರ್ವವೂ ಕೈಗೆಟುಕುವ ಪ್ರಸ್ತುತ ಕಾಲದಲ್ಲಿ ಅವುಗಳು ಸಾಧಿಸುವುದಾದರೂ ಏನು?




ಮೂವತ್ತು ವಸಂತಗಳ ಮೊದಲು ಕಿಶೋರ್ ಕುಮಾರ್ರ ಘನ ಸ್ವರವನ್ನು ಅಮಿತಾಬ್ ಬಚ್ಚನ್ ನ ಹಾಡೊಂದಕ್ಕೆ ಬೆರೆಸಿ ಮೂಡಿಸಿದ ಹಾಡಿನ ಇಂಪನ್ನು ಗುನುಗುತ್ತಾ, ರಾಜಕೀಯ, ಕ್ರಿಕೆಟ್, ದೇಶ ವಿದೇಶಗಳ ಬಗ್ಗೆ ಚರ್ಚಿಸುತ್ತಾ ದೂರದ ಮುಂಬೈಯನ್ನು ಸೇರಲು ಗೋವಾದ ಮೂಲಕ ಹಾದು ಹೋಗುತ್ತಾ, ಅಲ್ಲಿನ ಪರಕೀಯತೆಯನ್ನು ಕಿಟಕಿಯಲ್ಲಿಯೇ ಒಮ್ಮೆ ನೋಡಿ 'ಏನ್ ಕಾಲ ಬಂತಪ್ಪ' ಎನ್ನುತ್ತಾ ಮತ್ತದೇ ಕಾಲವನ್ನು ಶಪಿಸುತ್ತಾ, ಸೇರಬೇಕಾದ ಜಾಗಕ್ಕೆ ಸೇರಿ, ವರ್ಷಪೂರ್ತಿ ದುಡಿದು, ಕಣ್ಣರಳಿಸಿ ಕಾಯುವ ಮಕ್ಕಳಿಗೆ ಒಂದೆರೆಡು ಆಟಿಕೆಗಳನ್ನು ಕೊಂಡು ಮತ್ತದೇ ಹಳೆಯ ಹಾಡುಗಳನ್ನು ಗುನುಗುತ್ತ, ಅರೆಬೆತ್ತಲೆಯಾದ ಗೋವಾವನ್ನು ಶಪಿಸುತ್ತಾ ಊರಿಗೆ ಬಂದು ಸೇರುತ್ತಿದ್ದ ಅಪ್ಪಂದಿರುಗಳು....

ಹೆಚ್ಚೆಂದರೆ ಯಾರೋ ನೆಂಟರಿಷ್ಟರು ಕೊಟ್ಟ ಒಂದು ರೂಪಾಯಿಯ ಬಿಲ್ಲೆ. ಅದನ್ನೂ ಎಲ್ಲೂ ಖರ್ಚು ಮಾಡದೆ ಒಂದೆಡೆ ಕೂಡಿಸಿ, ಆದ ಚಿಲ್ಲರೆಯ ಜಲ್ ಜಲ್ ಸದ್ದಿನಲ್ಲಿ ಆಕಾಶಕ್ಕೇ ಮಹಡಿಯನ್ನು ಕಟ್ಟುವ ಕನಸ್ಸನ್ನು ಹೆಣೆಯುತ್ತಾ, ದಿನ ಬೆಳಗಾದರೆ ತಮ್ಮ ತೂಕದ ಸರಿ ಸಮಾನದಷ್ಟೇ ಭಾರವಿರುವ ಶಾಲೆಯ ಬ್ಯಾಗನ್ನು ಹೊತ್ತು, ಅರಚಿದರೆ ಚಡ್ಡಿಯೇ ಒದ್ದೆಯಾಗುವ ಶಿಕ್ಷಕರ ಭಯದಿಂದಲೋ ಏನೋ ಸರಿಯಾದ ಸಮಯಕ್ಕೆ, ಹೇಳಿದ ಪಾಠವನ್ನು ಕಲಿತು, ಕೊಟ್ಟ ಮನೆಗೆಲಸವನ್ನು ಮಾಡಿಯೂ ಭಯದ ಎಳೆಯನ್ನು ಜೊತೆಗಿರಿಸಿಕೊಂಡೇ ಶಾಲೆಯನ್ನು ಸೇರುತ್ತಿದ್ದ ಮಕ್ಕಳು.....ಕೆಲವೊಮ್ಮೆ ಕೋಳಿಯೂ ಕಣ್ಣು ಬಿಟ್ಟಿರದ ಸಮಯಕ್ಕೆ ಎದ್ದು ಮನೆಯನ್ನು ಶುಚಿಗೊಳಿಸಿ, ಪೂಜೆ, ಕಾಫಿ, ತಿಂಡಿ, ಊಟ ಎಲ್ಲವನು ಅಕ್ಷರ ಸಹಃ ಯಂತ್ರಗಳಂತೆಯೇ ಮಾಡಿ, ಮಕ್ಕಳನ್ನು, ಮಕ್ಕಳಂತಿದ್ದ ಗಂಡನನ್ನೂ ಎಬ್ಬಿಸಿ, ತಯಾರುಗೊಳಿಸಿ, ಮನೆಯಿಂದ ಹೊರಗಟ್ಟಿ, ಮತ್ತೊಮ್ಮೆ ಮನೆಗುಡಿಸಿ, ಹೂವಿನ ಗಿಡಗಳನ್ನೂ ಒಮ್ಮೆ ಮಾತಾಡಿಸಿ, ಬೀರುವಿನ ಮೇಲಿಟ್ಟಿರುವ ವೀಣೆಯನ್ನು ಹೊರಗೆಳೆದು ಅದರಿಂದ ಒಂದೆರೆಡು ರಾಗಗಳನ್ನು ಗುನುಗಿಸಿ ಮತ್ತೊಮ್ಮೆ ಸಂಜೆಯಾಗುತ್ತಿದ್ದಂತೆ Vesrsion 2.0ವಿನಂತೇ ಮನೆ ಗೆಲಸದಲ್ಲಿ ತೊಡಗಿಕೊಳ್ಳುತ್ತಿದ್ದ ಅಮ್ಮಂದಿರುಗಳು....




ಇಂದು ಅದೇ ಅಪ್ಪಂದಿರುಗಳು ಅಜ್ಜಂದಿರಾಗಿ, ಮಕ್ಕಳು ಅಪ್ಪಂದಿರಾಗಿ, ಅಮ್ಮಂದಿರು ಅಜ್ಜಿಯರಾಗಿದ್ದರೆ. ಅವರೆಲ್ಲರೂ ಹೇಳುವ, ಕೇಳಬಯಸುವ ಒಂದೇ ಮಾತು 'ನಮ್ಮ್ ಕಾಲನೇ ಎಷ್ಟೋ ಚೆನ್ನಾಗಿತ್ತು' ಎಂದು!




ಹಾಗಾದರೆ ಕಾಲ ಬದಲಾಗಿದೆ. ಅಂದು ಅಷ್ಟೆಲ್ಲ ಕಷ್ಟಪಟ್ಟರೂ ಎಂದೂ ಕೊರಗದ, ಗೊಣಗದ ಮನಸ್ಥಿತಿ ಇಂದು ಏನಾಗಿದೆ? ಲಕ್ಷ ಖರ್ಚು ಮಾಡಿ ಮಕ್ಕಳನ್ನು ಸ್ಕೂಲುಗಳಿಗೆ ದಬ್ಬಿಬಿಟ್ಟರೆ ಸಾಕೆ? ಕೈಗೊಂದು ಮೊಬೈಲನ್ನು ಪಡೆದು ಜಗತ್ತನೇ ಜಯಿಸಿ ಬಾ ಎಂಬಂತೆ ಅವರನ್ನು ಮನೆಯಿಂದ ಹೊರಗಟ್ಟಿದರೆ ಸಾಕೆ? ಜಗತ್ತಿನ ಓಟದಲ್ಲಿ ಅಪ್ಪ ಬ್ಯುಸಿ, ಅಮ್ಮನೂ ಬ್ಯುಸಿ. ರಣಓಟಕ್ಕೇ ಒಗ್ಗಿಕೊಳ್ಳದೆ ಎಂಬಂತೆ ಅಜ್ಜ ಅಜ್ಜಿಯರಂತೂ ಅನಾಥಾಶ್ರಮಕ್ಕೆ ಪ್ರಿಯರಾಗಿ ಅದೆಷ್ಟೋ ವರ್ಷಗಳಾಗಿವೆ! ಭಯವೆಂಬ ಬ್ರೇಕನ್ನು ಮಕ್ಕಳಿಗಿಂದು ಶಿಕ್ಷಕರಿಂದಲೂ ಹಾಕಲಾಗದು. ಶಿಕ್ಷಿಸುವ ಮಾತು ಒಂದೆಡೆ ಇರಲಿ ಅಪ್ಪಿ ತಪ್ಪಿ ಗದರಿಸಿದರೂ ನಾಳೆ ಅವರುಗಳೇ ಮಕ್ಕಳ ಕಾಲಿಗೆ ಬಿದ್ದು ಕ್ಷಮೆಯಾಚಿಸಬೇಕಾಗಿ ಬಂದಿದೆ. ಇನ್ನು ಮನೆಯಲ್ಲಿ ಅಪ್ಪ ಅಮ್ಮರಿರದೆ, ಅಜ್ಜ ಅಜ್ಜಿಯರಿರದೆ, ಬೆಳೆಯುವ ಮಕ್ಕಳಿಗೆ 'ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು' ಎಂಬ ಮಾತು ಮರೀಚಿಕೆಯೇ. ಇಂತಹ ಮನಸ್ಥಿತಿ ಒಬ್ಬ ಕೃಷಿಕನನ್ನಾಗಲಿ, ಸಂಗೀತಗಾರನನ್ನಾಗಲಿ, ಸಾಹಿತ್ಯವನ್ನು ರಚಿಸುವವನ್ನನ್ನಾಗಲಿ ಅಥವಾ ಇತಿಹಾಸ, ಸಂಸ್ಕೃತಿ, ಆಚರಣೆ, ಐಕ್ಯತೆ, ಅನ್ಯೂನತೆಯಂತಹಯಂತಹ ಜವಾಬ್ದಾರಿಯುತ ಅಲ್ಲದೆ ಸಮಾಜದ ಒಳಿತಿಗೆ ಹಾಗು ಉಳಿವಿಗೆ ಅತ್ಯಗತ್ಯವಾದ ಗುಣಗಳನ್ನು ಬೆಳೆಸಬಲ್ಲದೇ? ನಾವುಗಳು ಖಂಡಿತವಾಗಿಯೂ ಉತ್ತರಿಸಿಕೊಳ್ಳಬೇಕು.




ಮೂವತ್ತು ವರ್ಷದ ಕೆಳಗೂ ಒಂದು ಓಟವಿತ್ತು. ಆ ಓಟಕ್ಕೆ ಒಂದಿನಿತಾದರೂ ಗುರಿ ಎಂಬುದಿತ್ತು. ನಾವುಗಳು ಅಂದಿನ ಎಲ್ಲ ಗುರಿಗಳನ್ನೂ ತಲುಪಿದರೂ ಇಂದು ಮತ್ತದೇ ಓಟದ ವೇಗದಲ್ಲಿ ಭಾಗಿಯಾಗಿದ್ದೇವೆ. ಎಲ್ಲಿಗೆ, ಏತಕ್ಕೆ, ಎಂಬುದು ಮಾತ್ರ ತಿಳಿದಿಲ್ಲ! ಬೇಕಿರುವುದೆಲ್ಲವ ಬಿಟ್ಟು ಬೇಡದಿರುವ ಎಲ್ಲೆಡೆಗೆ ಓಡುವ ನಾವುಗಳು ಹೇಳುವುದು ಮಾತ್ರ 'ಕಾಲ ಬದಲಾಗಿದೆ’ ಎಂದು. ಕಾಲ ನಿಜವಾಗಿಯೂ ಬದಲಾಗಿದೆಯೇ ಅಥವ ನಾವುಗಳು ಮಾತ್ರ ಬದಲಾಗಿ ಕಾಲವನ್ನಷ್ಟೇ ಧೊಷಿಸುತ್ತಿದ್ದೇವೆಯೇ? ಉತ್ತರ ಮಾತ್ರ ಅಸ್ಪಷ್ಟ.






Friday, February 2, 2018

ನ್ಯೂಟನ್ ಹಾಗು ಲೆಬ್ನಿಸ್ ರಿಬ್ಬರಿಗೂ 'ಬಾಸ್'ಕರನೀತ.. !

ಕಾಲ ಸುಮಾರು ಹನ್ನೆರಡನೆಯ ಶತಮಾನದ ಮಧ್ಯಭಾಗ. ಖಗೋಳಶಾಸ್ತ್ರ ಹಾಗು ಗಣಿತದ್ಯಾಯನದಲ್ಲಿ ಪರಿಣಿತಿಯನ್ನೊಂದಿದ್ದ ಈತ ತನ್ನ ಮಗಳ ಮದುವೆಯ ಕುರಿತು ಚಿಂತಾಗ್ರಸ್ತನಾಗಿರುತ್ತಾನೆ. ಕಾರಣ, ಮಗಳ ಜಾತಕದ ಪ್ರಕಾರ ಆಕೆ ಕೈಯಿಡಿಯುವ ಗಂಡು ಮದುವೆಯಾದ ಕೆಲವೇ ದಿನಗಳ ಒಳಗೆ ಜೀವ ಕಳೆದುಕೊಳ್ಳುತ್ತಾನೆಂಬುದಾಗಿರುತ್ತದೆ. ಆಕೆಯ ಮದುವೆಯ ಭಾಗ್ಯವೇ ಹಾಗಿರುವಾಗ ಯಾರು ತಾನೇ ಏನನ್ನು ಮಾಡಲು ಸಾಧ್ಯ. ದಿನಗಳು ಕಳೆದವು. ಆದರೆ ಅಪ್ಪ ತನ್ನ ಛಲವನ್ನು ಕಳೆದುಕೊಳ್ಳಲಿಲ್ಲ. ತನ್ನ ವಿದ್ಯಾಪರಿಣಿತಿಯ ತಂತ್ರವೆನ್ನೆಲ್ಲಾ ಬಳಸಿ ಈ ಸಮಸ್ಯೆಗೊಂದು ಪರಿಹಾರವನ್ನು ಆತ ಕಂಡುಕೊಳ್ಳುತ್ತಾನೆ. ಮದುವೆಯ ಮೂಹೂರ್ತ ಒಂದು ಪಕ್ಷ ಈತ ಗೊತ್ತುಮಾಡಿದ ಸುಸಮಯಕ್ಕೆ ಕರಾರುವಕ್ಕಾಗಿ (ಸೆಕೆಂಡುಗಳ ಮಟ್ಟದಲ್ಲಿ ಎನ್ನಬಹುದು) ನೆಡೆದರೆ ಮುಂದೆ ಬಂದೊದಗುವ ಅಪಾಯ ತಪ್ಪಿ ಮಗಳು ಸುಖವಾಗಿರುತ್ತಾಳೆ ಎಂಬ ಲೆಕ್ಕಾಚಾರ ಅಪ್ಪನದು. ಆದರೆ ಸಮಯವನ್ನು ನಿಮಿಷ ಹಾಗು ಸೆಕೆಂಡುಗಳ ಮಟ್ಟದಲ್ಲಿ ಗುರುತು ಹಾಕಿಕೊಂಡು ಮೂಹೂರ್ತದ ಸಮಯವನ್ನು ಗೊತ್ತುಮಾಡುವುದಾದರೂ ಹೇಗೆ? ಅದು ಹನ್ನೆರಡನೆಯ ಶತಮಾನ. ಹೆಚ್ಚೆಂದರೆ ಸೂರ್ಯನ ಸ್ಥಾನಪಲ್ಲಟಗನುಗುಣವಾಗಿ ಘಳಿಗೆಯನ್ನು ನಿಗಧಿ ಮಾಡಲಾಗುತ್ತಿತ್ತೆ ವಿನಹಃ ಸೆಕೆಂಡು ಮಿಲಿ ಸೆಕೆಂಡುಗಳಲ್ಲಲ್ಲ. ದೃತಿಗೆಡದ ಅಪ್ಪ ಕಾಲವನ್ನು ಕರಾರುವಕ್ಕಾಗಿ ಅಳೆಯಲು ಮಾಪನವೊಂದನ್ನು ತಯಾರು ಮಾಡುತ್ತಾನೆ! ಲೋಟವೊಂದನ್ನು ತೆಗೆದುಕೊಂಡು ಅದರ ತಳಕ್ಕೆ ರಂಧ್ರವೊಂದನ್ನು ಕೊರೆದು ಅದನ್ನು ನೀರಿರುವ ಪಾತ್ರೆಯೊಂದರಲ್ಲಿ ಒಂದು ವಿಶಿಷ್ಟ ಬಗೆಯಲ್ಲಿ ಜೋಡಿಸಿ ನೀರು ಆ ರಂಧ್ರದ ಮೂಲಕ ಲೋಟದೊಳಗೆ ಹೋಗಿ ಅದು ಪಾತ್ರೆಯ ತಳ ಸೇರುವ ಸಮಯಕ್ಕೆ ಸರಿಯಾಗಿ ಮಗಳ ಮದುವೆ ಜರುಗಬೇಕೆಂದಾಗಿರುತ್ತದೆ. ಮದುವೆಯ ದಿನ ಪಾತ್ರೆಯೊಂದರಲ್ಲಿ ಆವೊಂದು ಮಾಪನವನ್ನು ಮಾಡಿ ಯಾರಿಗೂ ಅದರ ಬಳಿಗೆ ಹೋಗದಂತೆ ಕಟ್ಟಪ್ಪಣೆ ಮಾಡುತ್ತಾನೆ. ವಿಶೇಷವಾಗಿ ಮಧುವಣಗಿತ್ತಿಯಾದ ತನ್ನ ಮಗಳಿಗೆ. ಆದರೆ ಸಹಜ ಕುತೂಹಲ ತಡೆಯಲಾರದೆ ಆಕೆ ಅಪ್ಪನಿರದಿದ್ದ ಸಮಯವನ್ನು ನೋಡಿ ಆ ಪಾತ್ರೆಯ ಬಳಿಗೋಗಿ ಇಣುಕಿ ನೋಡುತ್ತಾಳೆ. ಹಾಗೆ ನೋಡುವಾಗ ಮುಗುತ್ತಿಯ ಒಂದು ಮುತ್ತು ಜಾರಿ ಲೋಟದ ಒಳಗೆ ಬೀಳುತ್ತದೆ. ಹೆದರಿಯೋ ಏನೋ ಯಾರಿಗೂ ಆ ವಿಷಯವನ್ನು ಆಕೆ ತಿಳಿಸಲಿಲ್ಲ. ಮದುವೆ ಜರುಗಿತು. ಕೆಲದಿನಗಳ ತರುವಾಯ ಮಗಳ ಗಂಡ ವಿದಿವಶನಾಗುತ್ತಾನೆ! ವಿಚಾರಿಸಿದಾಗ ಮಗಳ ಮುಗುತ್ತಿಯ ಮುತ್ತು ಲೋಟದೊಳಗೆ ಬಿದ್ದಿದ್ದರಿಂದ ಘಳಿಗೆಯ ಮಾಪನ ಏರುಪೇರಾಗಿ ಮದುವೆಯ ಮುಹೂರ್ತ ನಿಗದಿಪಡಿಸಿದ ಸಮಯಕ್ಕೆ ಜರುಗದೆ ಬೇರೆ ಸಮಯದಲ್ಲಿ ಜರುಗಿರುತ್ತದೆ! ಮದುವೆಯ ಕೆಲ ದಿನಗಲ್ಲೇ ವಿಧವೆಯಾದ ಕಾರಣ ಮಗಳು ಖಿನ್ನಳಾದರೆ ಮಗಳ ಬರಡು ಬಿದ್ದ ಭವಿಷ್ಯವನ್ನು ಕಂಡು ಅಪ್ಪ ಕೊರಗುತ್ತಾನೆ. ಆದರೆ ಖಿನ್ನತೆಯಲ್ಲಿಯೇ ಮುಳುಗುವುದಿಲ್ಲ. ಮತ್ತೊಮ್ಮೆ ಆತ ಛಲವನ್ನು ಕಟ್ಟಿಕೊಳ್ಳುತ್ತಾನೆ. ಮಗಳನ್ನು ಸಂತೋಷಪಡಿಸಲು ಆಕೆಗೆ ಗಣಿತದ ಸುಖಸಿಹಿಯನ್ನು ಉಣಬಡಿಸುತ್ತಾನೆ. ಅಪ್ಪನ ಕ್ಲಿಷ್ಟಕರ ಪ್ರೆಶ್ನೆಗಳನ್ನು ಬಿಡಿಸುತ್ತಾ ಮಗಳು ತನ್ನೆಲ್ಲ ದುಃಖ ದುಮ್ಮಾನಗಳನ್ನು ಮರೆಯತೊಡಗುತ್ತಾಳೆ. . ಮುಂದೆ ಅಪ್ಪನಂತೆಯೇ ಗಣಿತಜ್ಞೆಯಾಗಿ ಬೆಳೆಯುತ್ತಾಳೆ. ಮುಂದೊಂದು ದಿನ ನಿತ್ಯದ ಜನಸಾಮಾನ್ಯರ ವ್ಯಾಪಾರ ವಹಿವಾಟುಗಳಿಗೆ ಅನುಕೂಲವಾಗುವ ಹಾಗು ಗಣಿತದ ಇನ್ನಿತರ ಮಹೋನ್ನತ ಸಂಶೋಧನೆಗಳನ್ನೊಳಗೊಂಡ 'ಲೀಲಾವತಿ' ಎಂಬ ಆಕೆಯ ಹೆಸರಿನ ಪುಸ್ತಕವೊಂದನ್ನೇ ಅಪ್ಪ ಬರೆಯುತ್ತಾನೆ.( ಲೀಲಾವತಿ 'ಸಿದ್ದಾರ್ಥ ಶಿರೋಮಣಿ' ಮಹಾಗ್ರಂಥದ ನಾಲ್ಕು ಅದ್ಯಾಯಗಳಲ್ಲಿ ಒಂದು ಅದ್ಯಾಯ. ಮೇಲಿನ ಕತೆ ಹದಿನಾರನೇ ಶತಮಾನದಲ್ಲಿ ಪರ್ಷಿಯನ್ ಭಾಷೆಗೆ ಅನುವಾದಗೊಂಡ ಲೀಲಾವತಿ ಪುಸ್ತಕದಲ್ಲಿ ಕಂಡುಬಂದಿದೆ) ನಂತರ ಸುಮಾರು ಐದಾರು ಶತಮಾನಗಳವರೆಗೂ (ಬ್ರಿಟಿಷರ ಆಗಮನದವರೆಗೂ) ಅಂದಿನ ಭಾರತದಲ್ಲಿ ಗಣಿತಾಧ್ಯಾಯದ ಅತಿಪ್ರಮುಖ ಹೊತ್ತಿಗೆಗಳಲ್ಲಿ ಈ ಪುಸ್ತಕ ಒಂದಾಗಿದ್ದಿತು ಎಂಬುದು ಸೋಜಿಗದ ಸಂಗತಿ.

ಮೇಲಿನ ಕತೆಯ ಅಪ್ಪನೇ ಹನ್ನೆರಡನೆಯ ಶತಮಾನದ ಗಣಿತಜ್ಞ ಹಾಗು ಖಗೋಳಶಾಸ್ತ್ರಜ್ಞ ಭಾಸ್ಕರ ಅಥವಾ ಭಾಸ್ಕರಚಾರ್ಯ. ಚಿಕ್ಕನಿಂದಲೇ ಗಣಿತಪ್ರಿಯರಾಗಿದ್ದರೆ ಒಮ್ಮೆಯಾದರೂ ಈತನ ಹೆಸರನ್ನು ಕೇಳಿರುವುದುಂಟು. (ಸುಮಾರು ಆರನೆಯ ಶತಮಾನದಲ್ಲೂ ಮತ್ತೊಬ್ಬ ಭಾಸ್ಕರ ಎಂಬ ಗಣಿತಜ್ಞನಿದ್ದ, ಕೆಲವೊಮ್ಮೆ ಅವನನ್ನು ಭಾಸ್ಕರ-I ಅಂತಲೂ ಸಂಭೋದಿಸುವುದುಂಟು). ಕರ್ನಾಟಕದ ಈಗಿನ ಬಿಜಾಪುರದಲ್ಲಿ ಜನಿಸಿದ ಈತ (ಕ್ರಿಸ್ತಶಕ 1114) ಗಣಿತಶಾಸ್ತ್ರದಲ್ಲಿ ಅದೆಷ್ಟರ ಮಟ್ಟಿಗೆ ಪರಿಣಿತಿಯನ್ನೊಂದಿದ್ದನೆಂದರೆ ಈತನ ಸಮೀಕರಣಗಳು ಹಾಗು ಅವುಗಳ ಸಮಸ್ಯೆಗಳನ್ನು ಬಿಡಿಸುವ ಚತುರತೆಯ ಪರಿಣಿತಿಯ ಮಟ್ಟಕೆ ಬೆಳೆಯಲು ಆಂಗ್ಲ ಗಣಿತಜ್ಞರಿಗೆ ನಂತರದ ನೂರಾರು ವರ್ಷಗಳೇ ಬೇಕಾಯಿತು. ನ್ಯೂಟನ್ ಹಾಗು ಲೆಬ್ನಿಸ್ ರ ಮೊದಲೇ Calculas (ಕಲನಶಾಸ್ತ್ರ) ಮೇಲಿನ ಈತನ ಮಹೋನ್ನತವಾದ ಕೆಲಸ ಹಾಗು ಸಂಶೋಧನೆ ಭಾರತೀಯರಾದ ನಮಗೆ ಹೆಮ್ಮೆಯನ್ನು ಹುಟ್ಟಿಸಿದರೆ, ನಾನು ನಾನೆಂದು ಬೊಬ್ಬೆಯೊಡೆಯುವ ಇತರರನ್ನು ಮಹಾನ್ ಆಶ್ಚರ್ಯಕ್ಕೆ ಸಿಲುಕಿಸುವುದಂತೂ ಸುಳ್ಳಲ್ಲ. ತಮಾಷೆಯ ವಿಷಯವೆಂದರೆ ಹದಿನೇಳನೇಯ ಶತಮಾನದಲ್ಲಿ ನ್ಯೂಟನ್ ಹಾಗು ಲೆಬ್ನಿಸ್ ಇಬ್ಬರು ಕಲನಶಾಸ್ತ್ರವನ್ನು ತಾವೇ ಮೊದಲು ಕಂಡುಹಿಡಿದೆವೆಂದು ಒಬ್ಬರ ಮೇಲೊಬ್ಬರು ಕೆಸರೆರಚಿ ಬೊಬ್ಬೆಯೊಡೆದುಕೊಂಡು ಸುದ್ದಿಯನ್ನು ಮಾಡಿದರೆ ವಿನಹಃ ಒಮ್ಮೆ ಭಾರತದೆಡೆಗೂ ತಿರುಗಿ ಭಾಸ್ಕರನೆಂಬ ಮೇಧಾವಿ ತಮ್ಮ ತಾತರ ಮುತ್ತಾತರ ಕಾಲಕ್ಕೂ ಮೊದಲೇ ಈ ವಿಷಯವನ್ನು ಕಲಿತು, ಬರೆದು ಮರೆಯಾಗಿದ್ದಾನೆ ಎಂದರೆ ತೆಪ್ಪಗಾಗುತ್ತಿದರೋ ಏನೋ. ವಿಪರ್ಯಾಸವೆಂಬಂತೆ ಆಧುನಿಕ ಗಣಿತಲೋಕ ಕಲನಶಾಸ್ತ್ರದ ಕತೃ ನ್ಯೂಟನ್ ಮಹಾಶಯನೊಬ್ಬನೇ ಮಾತ್ರ ಎನ್ನುತ್ತದೆ ವಿನಹ ಕನಿಷ್ಠ ಗೌರವಕ್ಕಾದರೂ ಭಾಸ್ಕರನ ಹೆಸರನ್ನು ಅದು ಎಲ್ಲಿಯೂ ಪ್ರಸ್ತಾಪಿಸುವುದಿಲ್ಲ. ಖಗೋಳ ವಿಜ್ಞಾನದಲ್ಲಿಯೂ ಪರಿಣಿತಿಯನ್ನು ಹೊಂದಿದ್ದ ಭಾಸ್ಕರ ಗ್ರಹಣ, ತಾರಾ ವರ್ಷ (Sidereal Year), ಗ್ರಹಗಳ ಚಲನೆ ಅವುಗಳ ರೇಖಾಂಶ ಇವುಗಳ ನಿಖರವಾದ ಮಾಹಿತಿಯನ್ನೊಳಗೊಂಡ ಗೋಲದ್ಯಾಯ ಎಂಬ ಪುಸ್ತಕವನ್ನು (ಇದೂ ಕೂಡ ಸಿದ್ದಾರ್ಥ ಶಿರೋಮಣಿಯ ಒಂದು ಅದ್ಯಾಯ) ಬರೆಯುತ್ತಾನೆ. 1979 ರಲ್ಲಿ ಭಾರತ ಹಾರಿಸಿದ ತನ್ನ ಎರಡನೆಯ ಉಪಗ್ರಹಹಕ್ಕೆ ಈತನ ಹೆಸರನ್ನೇ ಇರಿಸಿತ್ತು.

ಶ್ಲೋಕಗಳ ಮೂಲಕ ಸಮಸ್ಯೆ ಹಾಗು ಅವೇ ಶ್ಲೋಕಗಳ ಮೂಲಕ ಸಮಸ್ಯೆಗೊಂದು ಉತ್ತರ. ಸಮಸ್ಯೆಗಳನ್ನು ಅದೆಷ್ಟು ಸರಳವಾಗಿ ಹೇಳಿ ಮತ್ತದೇ ಸರಳತೆಯಲ್ಲಿ ಉತ್ತರವನ್ನು ಕೊಡುತ್ತಿದ್ದ ಎನ್ನುವುದಕ್ಕೆ ಆತನ ಲೀಲಾವತಿ ಪುಸ್ತಕದ ಒಂದು ಸಮಸ್ಯೆಯನ್ನು ನೋಡೋಣ.

ನವಿಲೊಂದು 9 ಅಡಿ ಎತ್ತರದ ಸ್ತಂಭವೊಂದರಲ್ಲಿ ಕೂತಿದೆ. ಆ ಸ್ತಂಭದ ಬುಡದಲ್ಲಿರುವ ರಂಧ್ರದ ಬಳಿಗೆ ಹಾವೊಂದು ಬರುತ್ತಿದ್ದೆ. ಹಾವು ಹಾಗು ರಂಧ್ರದ ನಡುವಿನ ಅಂತರ ಸ್ತಂಭದ ಮೂರು ಪಟ್ಟು ಅಂದರೆ 27 ಅಡಿ. ಹಾವನ್ನು ಕಂಡ ನವಿಲು ಅದನ್ನು ಹಿಡಿದು ಭಕ್ಷಿಸಲು ಅದರೆಡೆಗೆ ಹಾರುತ್ತದೆ.

ಪ್ರೆಶ್ನೆ : ನವಿಲು ಹಾವನ್ನು ಹಿಡಿಯುವ ಸ್ಥಳ ಸ್ತಂಭದಿಂದ ಎಷ್ಟು ದೂರದಲ್ಲಿದೆ?

ನಾವುಗಳಾದರೆ ಹಾವು, ನವಿಲು ಹಾಗು ರಂಧ್ರದ ಸ್ಥಳದಲ್ಲಿ ಮೂರು ಚಿಕ್ಕೆಗಳನಿಟ್ಟು, ಪೈಥಾಗೊರಸ್ ನ ನಿಯಮವನ್ನು ಜಡಿದು, ಚತುರ್ಭುಜ ಸಮೀಕರಣಗಳನ್ನು ಸೃಷ್ಟಿಸಿ, ಬಿಡಿಸಿ ಕೊನೆಯದಾಗಿ 12 ಅಡಿ ಎಂದು ಉತ್ತರಿಸುತ್ತೇವೆ. ಆದರೆ ಭಾಸ್ಕರನ ಹಾದಿ ಇನ್ನು ಸರಳ ಹಾಗು ಸುಂದರ. ಸ್ತಂಭದ ವರ್ಗಮೂಲವನ್ನು ( 81 ) ಹಾವಿನ ದೂರದಿಂದ (27) ಭಾಗಿಸಿ ಬಂದ ಭಾಗಲಬ್ಧವನ್ನು (3) ಹಾವಿನ ದೂರದಿಂದ (27) ಕಳೆದು ಬಂದ ಉತ್ತರವನ್ನು (24) ಸಮವಾಗಿ ತುಂಡರಿಸಿದರೆ ಬರುವ ಉತ್ತರವೇ (12) ನವಿಲು ಹಾವನ್ನು ಹಿಡಿಯುವ ಸ್ಥಳ. ಇಂತಹ ಸಾವಿರಾರು ಉದಾಹರಣೆಗಳೊಂದಿಗೆ ಅಂದು ಗಣಿತವನ್ನು ಸಾಮಾನ್ಯರಿಗೂ ಅರಿವಾಗುವತೆ ತಿಳಿಯಪಡಿಸುತಿದ್ದ.

ಭಾಸ್ಕರನ ಸಂಶೋಧನೆಗಳು ಆತನ ಕಾಲಕ್ಕೆ ಅದೆಷ್ಟೋ ವರ್ಷಗಳು ಮುಂದಿದ್ದವು ಎಂಬುದರಲ್ಲಿ ಎರಡು ಮಾತಿಲ್ಲ. ಆತನ ಪ್ರತಿಭೆಯನ್ನು ಅಳೆಯಲು ನಮ್ಮಲ್ಲಿ ಉಳಿದಿರುವುದು ಆತನ ಕೇವಲ ಒಂದೆರೆಡು ಪುಸ್ತಕಗಳಷ್ಟೇ. ಒಂದು ಪಕ್ಷ ಆಗಿನ ಕಾಲದಲ್ಲಿ ಮುದ್ರಣಾಲಯ, ಇಂಕು, ಪೇಪರ್ಗಳೆಂಬ ಸಂಸ್ಕರಣ ವ್ಯವಸ್ಥೆಗಳಿದ್ದರೆ ಇನ್ನೂ ಅವೆಷ್ಟೋ ಬರಹಗಳು, ಶೋಧನೆಗಳು ನಮಗೆ ಸಿಗುತ್ತಿದ್ದವೋ ಏನೋ? ಇತಿಹಾಸದ ಕಾಲಘಟ್ಟವನ್ನು ನೋಡಿದರೆ ಭಾಸ್ಕರನ (12ನೆಯ ಶತಮಾನ) ನಂತರ ಯಾವುದೇ ಪ್ರಮುಖ ಭಾರತೀಯ ಗಣಿತಜ್ಞರು ಬೆಳೆಯುವುದು ಕಾಣಸಿಗುವುದಿಲ್ಲ. ಪರಕೀಯರ ದಾಳಿ ಹಾಗು ಲೂಟಿ ಹುಟ್ಟಿಕೊಂಡ ದಿನಗಳವು. ಭಾರತೀಯ ಗಣಿತಜ್ಞರಾಗಲಿ ಅಥವಾ ಇನ್ಯಾವ ಮೇಧಾವಿಗಳಾಗಲಿ ತಮ್ಮ ಸಂಶೋಧನೆಯ ಬರಹಗಳನ್ನು ಉಳಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ತಮ್ಮ ಜೀವವನ್ನು ಉಳಿಸಿಕೊಂಡರೆ ಸಾಕಪ್ಪ ಅನ್ನುವಂತ ಕಾಲವದು. ಅಷ್ಟೆಲ್ಲ ಅನಾಚಾರದ ನಡುವೆಯೂ ಭಾಸ್ಕರರಂತಹ ಮೇಧಾವಿಗಳ ಹೆಸರು ಇನ್ನೂ ಜನರ ಬಾಯಿಯಲ್ಲಿ ರಾರಾಜಿಸುತ್ತಿದೆ ಎಂದರೆ ಅದು ಖಂಡಿತ ಹೆಮ್ಮೆಯ ವಿಷಯ. ಜ್ಞಾನ ವಿಜ್ಞಾನಗಳ ತಪೋಭೂಮಿಯಾಗಿದ್ದ ನೆಲದಲ್ಲಿ ಹೀಗೆ ಅಳಿದುಳಿದು ಬದುಕಿರುವವರು ಕೆಲವರು. ಶಿಖರದಷ್ಟೆತ್ತರದ ಸಾಧನೆಯನ್ನು ಮಾಡಿ ಇತಿಹಾಸದ ಪುಟಗಳಲ್ಲಿ ಗುಲಗಂಜಿಯಷ್ಟೂ ಉಳಿಯದೆಯೇ ಕಣ್ಮರೆಯಾದ ಮಹನೀಯರು ಇನ್ನೆಷ್ಟೋ!

ಭಾಸ್ಕರಾಚಾರ್ಯನ ಇನ್ನಷ್ಟು ಮಾಹಿತಿಗೆ :

https://www.thefamouspeople.com/profiles/bhskara-ii-6835.php