Thursday, August 31, 2017

ಬುದ್ದಿವಂತರನ್ನೇ ಅತಿಬುದ್ದಿವಂತರನ್ನಾಗಿ ಮಾಡಲು ಪ್ರಸ್ತುತ ಶಾಲಾ ಕಾಲೇಜುಗಳೆ ಬೇಕೆ? ಅಥವಾ 'ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು' ಎಂಬೊಂದು ಮಾತೆ ಸಾಕೆ?

ಇದು ಸ್ಪರ್ಧಾತ್ಮಕ ಜೀವನ. ಸಾಮನ್ಯ ನೆಡಿಗೆಗೆ ಇಲ್ಲಿ ಆಸ್ಪದವೇ ಇಲ್ಲ. ಇಲ್ಲಿ ಪ್ರತಿಯೊಬ್ಬನೂ ಉಸೈನ್ ಬೋಲ್ಟ್ ಆಗಿರಲೇಬೇಕು ಅಥವಾ ಆಗಬೇಕು. ಇಲ್ಲವಾದಲ್ಲಿ ಬದುಕುವುದೇ ಕಷ್ಟಸಾಧ್ಯ! ಶಿಕ್ಷಣ, ಉದ್ಯೋಗ, ಸಂಸಾರ, ಸಂಬಂಧ, ಸದ್ಯಕ್ಕಂತೂ ಈ ಸ್ಪರ್ಧೆ ಎಂಬ ಗೀಳು ತಾನು ಕಾಲು ಸೋಕಿಸದಿರುವ ವಲಯವಿಲ್ಲ, ವಿಷಯವಿಲ್ಲ.

ಇಂತಹ ಒಂದು ಓಟದ ಜಗತ್ತಿಗೆ ಕಾಲಿಡುವ ಕುಡಿ ತಾನು ಕಣ್ಣುತೆರೆಯುವುದೊಳಗೆ ಪುಸ್ತಕಗಳ ರಾಶಿಯ ಕಾನನದಲ್ಲಿ ಆರಳುವ ವಯಸ್ಸಿಗೆ ಮಹಾಜ್ಞಾನಿಯಾಗಬೇಕೆಂಬ ತನ್ನ ಸುತ್ತಲಿನ ಸಮಾಜದ ಬಯಕೆಯಲ್ಲಿ ಕರಗಿ ಕಮರಿ ಹೋಗಿರುತ್ತದೆ. ಕಾರಣ ಇದೇ ಸ್ಪರ್ಧೆಯ ಮಾಹೆ. ಆದರೆ ಜ್ಞಾನವೆಂಬುದು ಕೇವಲ ಪುಸ್ತಕಗಳ ಒಳಗಿರುವ ಬಿಳಿಹಾಳೆಗಳ ಮೇಲಿನ ಕಪ್ಪು ಅಕ್ಷರಗಳ ಪದಮಾಲೆಯಷ್ಟೇ ಅಲ್ಲದೆ ದಿನ ನಿತ್ಯದ ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದವರೆಗಿನ ಕಾಲಘಟ್ಟದಲ್ಲಿ ನೆಡೆಯುವ ಅಪಾರ ಸಂಖ್ಯೆಯ ಸಂಗತಿಗಳ ಒಟ್ಟು ಮೊತ್ತವೂ ಹೌದು ಎಂಬುದನ್ನು ಹೇಳಿಕೊಡುವ ಶಾಲೆಗಳೆಷ್ಟಿವೆ ಇಂದು? ಮಗುವೊಂದು ಜನಿಸುವ ಮೊದಲೇ ಶಾಲೆಯನ್ನು ಹುಡುಕುವ ಖಯಾಲಿಯ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಂತಿರುವ ಪ್ರತಿಯೊಬ್ಬರೂ ಮೊದಲ ಸಾಲಿನ ಅತೀ ಪ್ರವೀಣರೇ. ಇಲ್ಲಿ ಎಲ್ಲವೂ ಮೊದಲು. ಮಗು ಹುಟ್ಟುವ ಮೊದಲೇ ಶಾಲೆಯಲ್ಲಿ ಅಡ್ಮಿಷನ್, ಹತ್ತನೇ ತರಗತಿ ಮುಗಿಯುವುದರೊಳಗೆಯೇ ಸಿ.ಇ.ಟಿ ಪರೀಕ್ಷೆಯ ಕೋಚಿಂಗ್, ಇನ್ನು ಸಿ.ಇ.ಟಿ ಮುಗಿದರೆ ಸೀದಾ ನಾಲ್ಕು ವರ್ಷ ನಂತರ ಮಾಡಬೇಕಾದ ಎಂ-ಟೆಕ್ ಅಥವಾ ಎಂಬಿಎ ಸ್ನಾತಕೋತ್ತರ ಪದವಿಗಳಿಗೋಸ್ಕರ ವಿದೇಶಿ ಯೂನಿವರ್ಸಿಟಿಗಳ ಜಾಲಾಟ ಶುರುವಾಗಿಬಿಟ್ಟಿರುತ್ತದೆ!

ಇಂದು ಪ್ರತಿ ಶಾಲೆಗಳು ತಾವು ಸೇರಿಸಿಕೊಳ್ಳುವ ಮಕ್ಕಳನ್ನು ಸಂತೆಯಲ್ಲಿ ಆರಿಸಿ ಚೀಲದೊಳಗೆ ಹಾಕಿಕೊಳ್ಳುವ ತರಕಾರಿಗಳಂತೆ ಶೋದಿಸುತ್ತವೆ. ಹೀಗೆಲ್ಲಾ ಶಾಲಾ ಮಟ್ಟದಲ್ಲೇ ನೆಡೆಯುವ ಈ ಶೋಧನಾ ಪ್ರಕ್ರಿಯೆ ಕಾಲೇಜು ಸೇರುವಷ್ಟರಲ್ಲಿ ಇನ್ನೂ ಸೂಕ್ಷ್ಮವಾಗಿರುತ್ತದೆ ಹಾಗು ಅಷ್ಟೇ ಕ್ಲಿಷ್ಟವಾಗಿರುತ್ತದೆ. ಒಟ್ಟಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಬುದ್ದಿವಂತನೆನಿಸಿಕೊಂಡ ವಿದ್ಯಾರ್ಥಿ ಉತ್ತಮ ಶಾಲೆ ಅಥವಾ ಕಾಲೇಜುಗಳನ್ನು ಒಳಹೊಕ್ಕರೆ, ಹಕ್ಕಿ ಗೂಡು ಕಟ್ಟುವುದನ್ನೇ ತದೇಕಚಿತ್ತದಿಂದ ನೋಡುವ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿ ದಡ್ಡನೆನಿಸಿಕೊಂಡು ಜಗತ್ತಿನ ಸ್ಪರ್ಧೆಯಲ್ಲಿ ಹಿಂದುಳಿದುಬಿಡುತ್ತಾನೆ. ಇಂತಹ ಪ್ರಸ್ತುತ ಪರಿಸ್ಥಿತಿಯಲ್ಲಿ ಶ್ರೀಮಂತ ಶ್ರೀಮಂತನಾಗಿಯೇ, ಬಡವ ಬಡವನಾಗಿಯೇ ಇರುವಂತೆ ಕೊಂಚ ಕಡಿಮೆ ಅಂಕವನ್ನು ಪಡೆದು ದಿಕ್ಕು ದಸೆಯಿಲ್ಲದಿರುವಂತೆ ಅಲೆಯುವ ಮಕ್ಕಳನ್ನು ನಮ್ಮ ದೇಶದ ಅತ್ಯುನ್ನತ ವಿದ್ಯಾಸಂಸ್ಥೆಗಳು ತಮ್ಮ ಉನ್ನತಗಿರಿ ಕೇವಲ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳನ್ನು ಇನ್ನೂ ಹೆಚ್ಚು ಅಂಕ ಪಡೆಯುವಂತೆ ಮಾಡುವುದೇ ಆಗಿದೆ ಎಂಬುದನ್ನು ಅರಿತಿರುವಂತೆಯೇ ಇದೆಯೆ ಹೊರತು ಸಾಧಾರಣ ಅಥವಾ ಅತಿಸಾಧಾರಣ ವಿದ್ಯಾರ್ಥಿಗಳನ್ನೂ ಮೇಲೆತ್ತಿ ಶೈಕ್ಷಣಿಕ ವ್ಯವಸ್ಥೆಯಲ್ಲಿರುವ ಅಸಮತೋಲನವನ್ನು ಸಮದೂಗಿಸುವ ಗುರುತರ ಕಾರ್ಯವೂ ತಮ್ಮದಾಗಿವೆ ಎಂಬುದನ್ನು ಮನಗಂಡಂತಿಲ್ಲ.

ಇಂದು ಶಾಲಾ ಕಾಲೇಜುಗಳಲ್ಲಿ ಮಗುವೊಂದು ಶಾಲೆಗೆ ಸೇರುವಾಗ ನಡೆಯುವ ಆಯ್ಕೆಯ ವಿಧಾನ ಸ್ಲೋ ಪಾಯಿಸನ್ ನಂತೆ ಸಮಾಜವನ್ನು ಕೊಲ್ಲುತ್ತಿರುವುದು ಸೂಕ್ಷ್ಮವಾಗಿ ಅವಲೋಕಿಸಿದರೆ ತಿಳಿಯುವ ವಿಚಾರ. ಮಗುವಿನ ಹಿಂದಿನ ತರಗತಿಯ ಅಂಕಿ ಅಂಶಗಳನೆಲ್ಲಾ ಬೂತಕನ್ನಡಿ ಹಿಡಿದು ಪರೀಕ್ಷಿಸುವುದರಿಂದ ಹಿಡಿದು ತೂಕ, ಎತ್ತರ ಹಾಗು ನಡತೆಯನ್ನೂ ಇಲ್ಲಿ ಒರೆಹಚ್ಚಿ ನೋಡಲಾಗುತ್ತದೆ. ನಂತರ ಉದ್ಯೋಗಕ್ಕಾಗಿ ನೆಡೆಯುವ ಸಂದರ್ಶನದಂತೆ ಪಿಳಿ ಪಿಳಿ ಕಣ್ಣುಬಿಡುವ ಮಕ್ಕಳನ್ನು ಸಾಲು ಸಾಲು ಪ್ರೆಶ್ನೆಗಳನ್ನು ಕೇಳಿ ಪರೀಕ್ಷಿಸಲಾಗುತ್ತದೆ. ಒಟ್ಟಿನಲ್ಲಿ ಶಾಲೆಗೆ ಬಂದು ಸೇರುವ ಮಕ್ಕಳು ಮೊದಲೇ ಸಕಲಕಲಾವಲ್ಲಭನಾಗಿರಬೇಕು ಹಾಗು ಬೆಸ್ಟ್ ಕ್ವಾಲಿಟಿ ಪ್ರಾಡಕ್ಟ್ ಗಳಾಗಿರಬೇಕು . ಶಾಲಾ ಶಿಕ್ಷಕರ ಆಯ್ಕೆಯ ಬಗ್ಗೆ ವಹಿಸದ ಇಂತಹ ಮುತುವರ್ಜಿ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವಾಗ ವಹಿಸಲಾಗುತ್ತದೆ. ಕಾಟಾಚಾರಕ್ಕೆ ಎಂಬಂತೆ ಒಂತಿಷ್ಟು ಎಳೆಯ ವಯಸ್ಸಿನ ಶಿಕ್ಷಕರನ್ನು ನೇಮಿಸಕೊಂಡು, ಕೇವಲ ಪುಸ್ತಕದೊಳಗಿನ ಅಕ್ಷರಗಳ ಸಂತೆಯನ್ನೇ ಶಿಕ್ಷಣವೆಂದು ನಂಬಿಸಿ, ಮಕ್ಕಳ ತಲೆಯೊಳಗೆ ಬಟ್ಟಿ ಇಳಿಸಿ, ವರ್ಷಾಂತ್ಯದ ವೇಳೆಗೆ 'ಶೇಕಡಾ 100 ರಷ್ಟು ಫಲಿತಾಂಶ' ಎಂಬ ಬೋರ್ಡುಗಳನ್ನು ಊರಿನ ಗಲ್ಲಿ ಮೂಲೆಗಳಲ್ಲಿಯೂ ತೂಗಾಕುವುದೇ ಇಂದಿನ ಸ್ಪರ್ಧಾತ್ಮಕ ಶಿಕ್ಷಣ ಸಂಸ್ಥೆಗಳ ಏಕೈಕ ಗುರಿ.

ತಮ್ಮ ಒಂತಿಷ್ಟೂ ಶ್ರಮದ ಹೂಡಿಕೆಯಿಲ್ಲದೆಯೇ ಬುದ್ದಿವಂತ ಮಕ್ಕಳನ್ನೇ ಅತಿ ಬುದ್ದಿವಂತರನ್ನಾಗಿ ಮಾಡುವ ಕಾರ್ಯಕ್ಕೆ ಶಿಕ್ಷಣವೆಂದು ಕರೆಲಾಗುತ್ತದೆಯೇ? ಅರೆಬರೆ ತಿಳಿದ ಅಥವಾ ಏನೂ ಬಲ್ಲದ ವಿದ್ಯಾರ್ಥಿಗಳನ್ನು ಕೈಹಿಡಿದು ಮೇಲೆತ್ತಲಾಗದ ಸರ್ಕಸ್ಸಿಗೆ ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಏತಕ್ಕೆ ಬೇಕು? 'ಲೆಸ್ ರಿಸ್ಕ್' ಎಂಬ ಪಾಲಿಸಿಯನ್ನು ಅನುಸರಿಸುವ ಇಂದಿನ ಶಿಕ್ಷಣ ಸಂಸ್ಥೆಗಳ ಜಮಾನದಲ್ಲಿ 'ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು' ಎಂಬ ಮಾತುಗಳು ನೂರಕ್ಕೆ ನೂರು ಪ್ರಸ್ತುತವೆನಿಸದಿರದು. ಮೂರು ವರ್ಷಕ್ಕೆ ಶಾಲೆಯ ಮೆಟ್ಟಿಲೇರಿ ಮುಂದಿನ ಮೂರು ವರ್ಷದಲ್ಲಿ ಭಾಗಶಃ ಪ್ರಾಥಮಿಕ ಶಿಕ್ಶಣವನ್ನೇ ಪೂರ್ತಿಗೊಳಿಸಿರುವಷ್ಟು ವಿಷಯಗಳನ್ನು ಆ ಪುಟ್ಟ ಮಸ್ತಿಷ್ಕದೊಳಗೆ ತುಂಬಿಕೊಂಡು ತಮ್ಮ ಆರನೇ ವಯಸ್ಸಿಗೆ ಒಂದನೇ ತರಗತಿಯನ್ನು ಸೇರುವ ಮಕ್ಕಳು ಒಂದೆಡೆಯಾದರೆ ಕಲ್ಲು ಮಣ್ಣುಗಳನ್ನೇ ತಮ್ಮ ಆಟಿಕೆಗಳನ್ನಾಗಿ ಮಾಡಿಕೊಂಡು, ಹಲಸು,ಕಿತ್ತಳೆ, ಪೇರಳೆ ಮರಗಳನ್ನು ಏರಿಳಿಯುತ್ತಾ ಸ್ಕೂಲು ಎಂದರೆ ಮೈಲು ದೂರ ಓಡುವ ಮಕ್ಕಳು ಮತ್ತೊಂದೆಡೆ. ಇಂತಹ ಎರಡು ವಿಭಿನ್ನ ಧ್ರುವಗಳನ್ನು ತರಗತಿಯ ಕೋಣೆಯೊಳಗೆ ಒಟ್ಟುಗೂಡಿಸಿ ನಾಳಿನ ಸಮಾಜದ ಅಡಿಪದರಗಳನ್ನು ರೆಡಿ ಮಾಡಲಾಗುತ್ತದೆ. ಆಗ ಸ್ವಾಭಾವಿಕವಾಗಿ ಶಿಕ್ಷಕರ ಪ್ರತಿಯೊಂದು ಪ್ರೆಶ್ನೆಗಳಿಗೆ ಕೀಲು ಗೊಂಬೆಯಂತೆ ಚಕಾಚಕ್ ಉತ್ತರಗಳನ್ನು ಕೊಡುವ 'ಪ್ರಿ-ಪ್ರೈಮರಿ' ಮಕ್ಕಳನ್ನು ಕಂಡು ತಮಗರಿಯದಂತೆ ಒಂದು ಬಗೆಯ ಕೀಳರಿಮೆ, ಧುಗುಡ, ಭಯ ಇತರೆ ಮಕ್ಕಳ ಮೇಲೆ ಮೂಡುತ್ತದೆ. ಇನ್ನು ದಿನಕೊಂದರಂತೆ ನೆಡೆಯುವ ವಿವಿಧ ಪರೀಕ್ಷೆಗಳಲ್ಲಿ ಕೊಂಚ ಕಡಿಮೆ ಅಂಕವೋ ಅಥವಾ ಫೇಲೋ ಆದರೆ ಅಂತಹ ಮಗುವಿನ ಸ್ಥಿತಿ ರೆಕ್ಕೆ ಮುರಿದ ಹಕ್ಕಿಯಂತಾಗಿ ಬಿಡುತ್ತದೆ. ಶಿಕ್ಷಕರಿಂದ ಹಿಡಿದು ನೆರೆಮನೆಯವರಿಗೂ ಆ ಮಗು ದಡ್ಡಶಿಕಾಮಣಿಯಾಗುತ್ತದೆ. ಕೂಡಲೇ ಕರೆಂಟಿನ ಶಾಕ್ ಹೊಡೆದವರಂತೆ ಆಡುವ ಪೋಷಕರು ಮಗು ಶಾಲೆಯಿಂದ ಮೆನೆಗೆ ಬರುವುದೇ ತಡ ಟ್ಯೂಷನ್ ಗಳೆಂಬ ಮತ್ತೊಂದು ಬಗೆಯ ಮಹಾಕೂಪದೊಳಗೆ ತಳ್ಳಿ ಬಿಡುತ್ತಾರೆ. ಆಟೋಟ ತುಂಟಾಟಗಳಿಲ್ಲದ ಮಗುವಿನ ಸರ್ವೋತೊಮುಖ ಬೆಳವಣಿಗೆ ಎಂಬುದು ಇಲ್ಲಿ ಮಣ್ಣು ಪಾಲು. ಒಟ್ಟಿನಲ್ಲಿ ಪ್ರಾಥಮಿಕ ಶಾಲೆಯ ನಂತರ ಪ್ರೌಢಶಾಲೆಗೆ, ತದಾನಂತರ ಕಾಲೇಜುಗಳಿಗೆ ಸೇರುವಾಗ ಭರಪೂರ ಧನಸಂಪತ್ತಿನೊಟ್ಟಿಗೆ ಮಕ್ಕಳ ಅಂಕಸಂಪತ್ತಿನ ಒತ್ತಡದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಬೆಳೆಸುತ್ತಾರೆ.

ಪ್ರಸ್ತುತ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಒಟ್ಟು 13 ಐಐಎಂಗಳು, 16 ಐಐಟಿಗಳು ಹಾಗು ಸುಮಾರು ಆರ್ನೂರು ಯೂನಿವರ್ಸಿಟಿಗಳಿವೆ. ಇಂತಹದೊಂದು ಶಿಕ್ಷಣ ಸಂಸ್ಥೆಯಿಂದ ಹೊರಬರುವುದನ್ನೇ ಬಕಪಕ್ಷಿಗಳಂತೆ ಕಾಯುವ ಕಂಪನಿಗಳು (ಹೆಚ್ಚಿನವು ಸಾಕು ಸಾಕೆನ್ನುವಷ್ಟು ಹಣವನ್ನು ಸುರಿಯುವ ವಿದೇಶಿ ಕಂಪನಿಗಳು) ನಾ ಮುಂದು ತಾ ಮುಂದು ಎನ್ನುತ್ತಾ ಅಭ್ಯರ್ಥಿಗಳ ಆಯ್ಕೆಗಳನ್ನು ಶುರುವಚ್ಚಿಕೊಂಡುಬಿಡುತ್ತವೆ. ಇಂತಹ ಶಿಕ್ಷಣ ಸಂಸ್ಥೆಗಳಿಂದ ಬರುವ ವಿದ್ಯಾರ್ಥಿಗಳ ತಾಂತ್ರಿಕ ಹಾಗು ಆಡಳಿತಾತ್ಮಕ ಗುಣಮಟ್ಟದ ಬಗ್ಗೆ ದೂಸರಾ ಮಾತೆ ಇಲ್ಲ. ಇಲ್ಲಿನ ವಿದ್ಯಾರ್ಥಿಗಳು ತಮ್ಮ ಮಿಕ್ಕುಳಿದ ಜೀವನವೆಲ್ಲ 'ಐಐಟಿ ಪಾಸ್ ಔಟ್' , 'ಬ್ಯಾಚ್ XXXX, ಐಐಟಿ XXXXX' ಎಂಬ ಸಹನಾಮದೊಂದಿಗೆ ಹೆಮ್ಮೆಯಿಂದ ಕರೆಯಲ್ಪಡುತ್ತಾರೆ. ಭಾಗಶಃ ಇಂತಹ ಸ್ವದೇಶೀ ಕಲಿಗಳು ವಿಮಾನವನೇರಿ ವಿದೇಶಗಳ ಸೇವೆಗೆ ತೆರಳುವುದು ಬೇರೊಂದು ವಿಷಯ ಬಿಡಿ. ಆದರೆ ಅಂದು ಒಂದಿಷ್ಟು ಮನೋಸ್ತಯ್ರ್ಯ, ಪ್ರೀತಿ ಹಾಗು ವಿಶ್ವಾಸವನ್ನು ತುಂಬಿ ಕಡಿಮೆ ಅಂಕ ಪಡೆವ ಮಗುವನ್ನೂ ಜೀವನದ ದಾರಿಯೇ ಮುಗಿದೋಯಿತೆಂಬಂತೆ ಚಿತ್ರಿಸದಿದ್ದರೆ, 'ಮಿನಿಮಂ ಕ್ವಾಲಿಫಿಕೇಷನ್ ಫಾರ್ ಅಡ್ಮಿಶನ್' ಎಂಬೊಂದು ಅರ್ಹತಾ ಪಟ್ಟಿಯನ್ನು ಶಾಲೆಯ ಗೇಟಿಗೆ ತೂಗಾಕಿಕೊಳ್ಳದಿದ್ದರೆ, ಮಕ್ಕಳೆಲ್ಲರನ್ನೂ ಹಸಿ ಮಣ್ಣಿನ ಮುದ್ದೆಯೆಂದು ಭಾವಿಸಿ ಶ್ರದ್ದೆಯಿಂದ ವಿದ್ಯೆಯನ್ನು ಕಲಿಸುವ ಶಿಕ್ಷಕ ಅಥವಾ ಶಿಕ್ಷಕಿ ಅಂದು ಇತರೆಲ್ಲಾ ಮಕ್ಕಳಿಗೆ ದೊರಕಿದ್ದರೆ ಇಂದು ಪ್ರತಿಯೊಬ್ಬ ವಿದ್ಯಾರ್ಥಿಯೂ ಆ ಮಟ್ಟಕ್ಕೇರುವ ಅರ್ಹ ಆಕಾಂಕ್ಷಿಯಾಗಿರುತ್ತಿದ್ದ ಇಲ್ಲವೇ ತಾನು ಮನಸಾರೆ ನೆಚ್ಚುವ ವಿಷಯವನ್ನುಮುಕ್ತವಾಗಿ ಆರಿಸಿಕೊಂಡು ಕ್ರೀಡೆ, ಸಂಗೀತ, ಸಾಹಿತ್ಯ ಎಂಬೆಲ್ಲ ವಲಯಗಳೂ ಐಐಟಿ ಐಐಎಂ ಗಳಷ್ಟೇ ಮಹತ್ವವಾದವುಗಳು ಎಂಬುದನ್ನು ಸಾಬೀತುಪಡಿಸುತ್ತಿದ್ದ.

ಬೆಳೆಯುವ ಗಿಡ ಮೊಳಕೆಯಲ್ಲಿ. ಆದರೆ ಆ ಗಿಡಕ್ಕೆ ದಾರ ಕಟ್ಟಿ, ಕೋಲು ನೆಟ್ಟು ನೀನು ಹೀಗೆಯೇ ಇರಬೇಕು, ಇಂತೆಯೇ ಬೆಳೆಯಬೇಕು, ಬೇಗ ಮರವಾಗಬೇಕು, ಅತಿ ಬೇಗನೆ ಹಣ್ಣನ್ನು ನೀಡಬೇಕು ಎಂದು ಬಯಸುವುದು ಪ್ರಸ್ತುತ ಜಗತ್ತಿನ ಕಹಿಯಾದ ಸತ್ಯ. ಆಟವೇತಕ್ಕೆ ಆಡಬೇಕು ಎಂದರೆ 'ಮೊದಲು ಬರಲು' 'ಹೆಸರು ತರಲು' ಎಂತಾಗಿರುವ ಈಗಿನ ಕಾಲದಲ್ಲಿ , '' ಆಟ, ಆಡುದುವು 'ಹೇಗೆ' ಎಂದು ಅರಿಯಲು ಮಾತ್ರ. ಅಲ್ಲಿ ಸೋಲು ಗೆಲುವು ಮೊದಲು ಕೊನೆ ಎಂಬುದೆಲ್ಲ ನಗಣ್ಯ'' ಎಂದು ಹೇಳಿಕೊಡುವ ಶಿಕ್ಷಕರು ಬೇಕು. ಓಟವೆ ಜೀವನ, ಅಂಕವೇ ಶಿಕ್ಷಣ, ಹಣವೇ ಪಾವನ ಎಂಬ ಮನಸ್ಥಿತಿಯ ಸಮಾಜ ಇನ್ನು ಮುಂದೆ ಸಾಕು.


Friday, August 25, 2017

ಎಚ್ಚರ!! ನಿಮ್ಮ ಸುತ್ತಲೂ ಇರುವರಿವರು...

ಆ ವಯಸ್ಸೇ ಹಾಗೆ. ಅರೆ ಬರೆ ಬೆಂದ ಬಿಸಿನೆಸ್ ಪ್ಲಾನ್ ಗಳನ್ನೇ ಕನಸಿನ ಕೋಟೆಯನ್ನಾಗಿಸಿಕೊಂಡು ಅನುಷ್ಠಾನಗೊಳಿಸಲು ಸದ್ಯಕ್ಕಂತೂ ಸಾಧ್ಯವಿಲ್ಲದಿದ್ದರೂ ಮಾಡೇ ತೀರುತ್ತೇನೆಂಬ ಹೆಬ್ಬಯಕೆ. ತಿಂಗಳಿಗೆ ಒಂತಿಷ್ಟು ಪಾಕೆಟ್ ಮನಿ, ತಲೆಯ ತುಂಬೆಲ್ಲಾ ಬ್ರಾಂಡೆಡ್, ಹೈಗ್ರೇಡ್ ವಸ್ತುಗಳ ಕಾರುಬಾರು, ಊರು ಸುತ್ತಲು ಗೆಳೆಯನ ಸೆಕೆಂಡ್ ಹ್ಯಾಂಡ್ ಬೈಕು ಹಾಗು ಕ್ಲಾಸಿಗೆ ಬಂಕು ಹೀರೋಗಿರಿಗೆ ಸೊಂಪು! ಅಚ್ಚುಕಟ್ಟಾಗಿ ಓದಿ ಸ್ವಂತ ಕಾಲಮೇಲೆ ನಿಲ್ಲುವ ಕನಸ್ಸನ್ನು ಕಟ್ಟಿ ಹೆಗಲೇರಿಸಿ ಕಳುಹಿಸುವ ಪೋಷಕರ ವಾರಕ್ಕೋ ತಿಂಗಳಿಗೋ ತಳ್ಳುವ ಒಂದಿಷ್ಟು ಹಣವನ್ನು 'ಇಂದು ಇಂದಿಗೆ.. ನಾಳೆ ನಾಳೆಗೆ' ಎಂಬಂತೆ ಭಕ್ಷಿಸಿ, ತಿಂಗಳಾಂತ್ಯದ ವೇಳೆಗೆ ಅತಂತ್ರದ ಸ್ಥಿತಿಯ ಮುಸಿಯನಂತೆ ಪಿಳಿ ಪಿಳಿ ಕಣ್ಣುಗಳನ್ನು ಬಿಡುತ್ತಾ ಪಕ್ಕದ ಗೂಡಂಗಡಿಯ ಟೀ ಬನ್ನುಗಳನ್ನೇ ಎರಡೊತ್ತಿನ ಆಹಾರವನ್ನಾಗಿ ಮಾಡಿಕೊಂಡು 'ಏನಾದ್ರು ಬಿಸಿನೆಸ್ ಮಾಡ್ಬೇಕು ಮಗಾ' ಎನ್ನುತ ಕ್ಷಣಮಾತ್ರದಲ್ಲಿ ಅಂಭಾನಿಗಳಾಗಲು ಆವಣಿಸುತ್ತಾ ದಿನಕಳೆಯುವ ಯುವಕರೇ ಈ ಮಹಾ ಷಡ್ಯಂತ್ರದ ಸುಲಭದ ಬಲಿಪಶುಗಳು!

ಹೆಚ್ಚು ಕಡಿಮೆ ಕಳೆದ ಒಂದುವರೆ ದಶಕಗಳಿಂದ ವಿಶ್ವದಾದ್ಯಂತ ತನ್ನ ಕರಾಳ ಛಾಪನ್ನು ಮೂಡಿಸಿರುವ ಈ ಷಡ್ಯಂತ್ರಗಳಿಗೆ ಬಿಸಿನೆಸ್ ಎಂಬ ಲೇಪವನ್ನು ಬಳಿದಿರುವುದು ಶೋಚನೀಯ ಸಂಗತಿ. ಮೀಸೆ ಚಿಗುರಿತ್ತುರುವ, ಅರೆಪಕ್ವ ತಿಳಿವಳಿಕೆಯ ಅಮಾಯಕ ಯುವಕರ ನೆಮ್ಮದಿಯನ್ನು, ಕೆಲವೊಮ್ಮೆ ಜೀವನವನ್ನೇ ಹಾಳುಗೆಡವಿ ತನ್ನ ಜೋಳಿಗೆಯನ್ನು ತುಂಬಿಕೊಳ್ಳುವ ಈ ಷಡ್ಯಂತ್ರವನ್ನು ಮಲ್ಟಿ ಲೇವಲ್ ಮಾರ್ಕೆಟಿಂಗ್ (MLM) ಎಂದು ಕರೆಯಲಾಗುತ್ತದೆ. ಪ್ರಸ್ತುತ ಜಾರಿಯಲ್ಲಿರುವ ಪ್ರತಿಯೊಂದು MLM ಳೆಲ್ಲವೂ ಇಂತಹ ಡೋಂಗಿ ಬಿಸಿನೆಸ್ ಗಳೆಂದು ಹೇಳಲಾಗದಿದ್ದರೂ ಮೇಲಿಂದ ಮೇಲೆ ಅವಲೋಕಿಸಿದರೆ ಇಂತವುಗಳ ಬಹುಪಾಲು ಕಾರ್ಯಚಟುವಟಿಕೆಗಳ ಗೂಡಾರ್ಥ ಅಮಾಯಕರನ್ನು ವಂಚಿಸುವುದೇ ಆಗಿರುತ್ತದೆ.

ವಾಚು, ಪರ್ಫ್ಯೂಮ್, ಔಷಧಿ, ಮುಖಕ್ಕೆ ಮೆತ್ತಿಕೊಳ್ಳುವ ಮೇಕ್ ಅಪ್ ಕಿಟ್ಗಳು, ಅಂತರ್ಜಾಲವನ್ನು ಜಾಲಾಡಿ ಅಲ್ಲೊಂದು ಇಲ್ಲೊಂದು ಪೇಜ್ಗಳನ್ನು ಬಟ್ಟಿ ಇಳಿಸಿ ಸಿದ್ಧಪಡಿಸುವ ಆನ್ಲೈನ್ ಕೋರ್ಸ್ಗಳು ಹಾಗು ಇನ್ನು ಹಲವು ಪ್ರಾಡಕ್ಟ್ಗಳು ಈ ಷಡ್ಯಂತ್ರದ ಮಂತ್ರದಂಡಗಳು. ಇವುಗಳ ಮಾರಾಟವೇ ಬಿಸಿನೆಸ್ ನ ವಹಿವಾಟು. ಅರೆ, ವಸ್ತುಗಳನ್ನು ಮಾರಿ ಹಣವನ್ನು ಗಳಿಸುವುದರಲ್ಲಿ ಇರುವ ತಪ್ಪೇನಾದರೂ ಎಂತಹದ್ದು ಎಂದು ನಮಗೆ ಅನಿಸದಿರುವುದಿಲ್ಲ. ಆದರೆ ಈ ವಸ್ತುಗಳ ಬೆಲೆಯನ್ನೇನಾದರೂ ಒಮ್ಮೆ ಕೇಳಿದರೆ ಮೂರ್ಛೆ ರೋಗಕ್ಕೂ ತುತ್ತಾಗುವ ಅಪಾಯಯವನ್ನೂ ತಳ್ಳಿಹಾಕಲಾಗುವುದಿಲ್ಲ! ಹೌದು. ಇದು ಹಾಲಿವುಡ್ ನಾಯಕನು ತೊಡುವ ವಾಚಿನ ಬ್ರಾಂಡ್ ಎಂದೂ, ಈ ಸುಗಂಧವರ್ಧಕ ಅಮೆಝನ್ ಕಾನನದ ಯಾವುದೊ ಒಂದು ಮರದ ಬೇರಿನ ತುದಿಯನ್ನು ಅರೆದು ಮಾಡಿರುವುದೆಂದೂ, ಈ ಗುಳಿಗೆಗಳು ಪ್ರಪಂಚದ ಸರ್ವರೋಗ ನಿವಾರಣೆಯ ಮಹಾಮದ್ದೆಂದೂ, ಈ ಆನ್ಲೈನ್ ಕೋರ್ಸ್ ವಿಶ್ವದ ಯಾವುದೇ ಮೂಲೆಯಲ್ಲೂ ದೊರಕುವುದಿಲ್ಲವೆಂದು ಹೀಗೆ ಇನ್ನೂ ಹಲವು 'ಭಯಾ'ನಕ ಸತ್ಯಗಳನ್ನು ಒಂದರಿಂದೊಂದು ತಲೆಯ ತುಂಬಾ ತುಂಬಿಸಿ ಕೊನೆಗೆ ಕೇಳುಗ ಮಹಾಶಯ ಪ್ರಸ್ತುತ ಕಾಲದ ವೈದ್ಯಕೀಯ, ಶಿಕ್ಷಣ, ತಾಂತ್ರಿಕ ಲೋಕವನ್ನೆಲ್ಲಾ ಸುಳ್ಳೇಂದು ಭ್ರಮಿಸುವಂತೆ ಮಾಡುತ್ತಾರೆ ಬಿಸಿನೆಸ್ ನ ಈ ಪ್ರಚಂಡ ಕಲಿಗಳು. ಅಸಲಿಗೆ ಇಷ್ಟೆಲ್ಲಾ ಪೀಪಿ ಊದುತ್ತಾ ಗಾಳವನ್ನು ಹಾಕಲು ಆವಣಿಸುವ ಆ ವ್ಯಕ್ತಿಗಳಿಗೆ ತಾವು ಮಾರಲೊಗುತ್ತಿರುವ ವಸ್ತುಗಳ ಕಿಂಚಿತ್ತೂ ನಿಜತ್ವದ ಅರಿವಿರುವುದಿಲ್ಲ ಎಂಬುದು ದುರದೃಷ್ಟಕರ ಸಂಗತಿ!

ಹೀಗೆ ಒಂದಿಷ್ಟು ಜನ ತಮ್ಮ ಗುಂಪೊಂದನ್ನು ಕಟ್ಟಿ, ಆ ಗುಂಪಿಗೆ ಮಹಾ ತಾಂತ್ರಿಕತೆಯ ಹೆಸರನ್ನೊಂದಿಟ್ಟು, ಕಸದ ತೊಟ್ಟಿಯಿಂದ ಹೆಕ್ಕಿ ತಂದಿರುವಂಥಹ ವಸ್ತುಗಳನ್ನು ಉಜ್ಜಿ ತೊಳೆದು ಆವುಗಳನ್ನು ತಮ್ಮ ಪ್ರಾಡಕ್ಟ್ಗಳೆಂದು ಘೋಷಿಸಿ, ಕಾನೂನು ಕಟ್ಟಳೆಗಳ ತಾಪತ್ರಯ ಬರದಂತೆ ಬೇಕಾದ ಎಲ್ಲಾ ಕಾಗದ ಪತ್ರಗಳನ್ನು ಸಿದ್ಧಪಡಿಸಿಕೊಂಡು, ( ಕೆಲ ಗುಂಪುಗಳು ಇನ್ನೂ ಒಂದೆಜ್ಜೆ ಮುಂದೆ ಹೋಗಿ ಲಾಯರು, ಅಧಿಕಾರಿಗಳನ್ನೇ ತಮ್ಮ ಪಾರ್ಟ್ನರ್ ಗಳನ್ನಾಗಿ ಮಾಡಿಕೊಳ್ಳುವುದೂ ಉಂಟು), ತಿಂಗಳಿಗೊಮ್ಮೆ ಮಹಾನಗರಗಳ ಯಾವುದಾದರೊಂದು ಭವ್ಯ ಹೋಟೆಲೊಂದನ್ನು ಗಂಟೆಗಳ ಲೆಕ್ಕದಲ್ಲಿ ಬಾಡಿಗೆಗೆ ಪಡೆದು, ಸೂಟು ಬೂಟುಗಳನ್ನು ಧರಿಸಿ ರಾಜಗಾಂಭೀರ್ಯದ ಮುಖವಾಡವನ್ನು ತೊಡಿಸಿ ಕೆಲವರನ್ನು ವೇದಿಕೆಯ ಮೇಲೆ ಕೂರಿಸಿ, ಅವರ ಯಶೋಗಾಥೆಯನ್ನು ಘಂಟೆಗಳ ಕಾಲ ಅರಚುತ್ತಾರೆ. ಹೀಗೆ ಅರಚುವಾಗ ಆ ಮಹಾನುಭಾವರ ಕಡುಕಷ್ಟದ ದಿನಗಳನ್ನು, ಕೊನೆಗೆ ತಮ್ಮ ಬಿಸಿನೆಸ್ ಅವರನ್ನು ದಿಗಂತವನ್ನು ಮುಟ್ಟುವಂತೆ ಮಾಡಿದ 'ಕತೆ'ಯನ್ನು ಅದೆಷ್ಟೂ ಚನ್ನಾಗಿ ಬಣ್ಣಿಸುತ್ತಾರೆಂದರೆ ಮೂವಿಗಳಿಗೆ ಕತೆಯನ್ನು ಬರೆಯುವ ಚಿತ್ರಕತೆಗಾರನೂ ನಾಚಿ ನೀರಾಗಬೇಕು! ಅಷ್ಟೆಲ್ಲಾ ಭಾಷಣಗಳನ್ನು ಘಂಟೆಗಳ ಕಾಲ ಬಿಗಿದರೂ ಒಂತಿಷ್ಟೂ ತಮ್ಮ ಬಿಸಿನೆಸ್ ನ ಕಾರ್ಯಚಟುವಟಿಕೆಯ ಬಗೆಯಾಗಲಿ, ಆ ಪ್ರಾಡಕ್ಟ್ ಗಳ ಅಸಲಿಯತ್ತಾಗಲಿ ಅವರು ಬಾಯ್ತೆರೆಯುವುದಿಲ್ಲ. ಬದಲಿಗೆ ಅಲ್ಲಿ ನೆಡೆಯುವುದು ಕೇವಲ ಮಾತಿನ ಮಾಂತ್ರಿಕತೆ! ಕ್ಷಣಮಾತ್ರದಲ್ಲಿ ಕೋಟ್ಯಧಿಪತಿಗಳಾಗುವ ಕನಸ್ಸನ್ನು ಹೊತ್ತ ಅಮಾಯಕ ಬುದ್ಧಿಗಳ ಮನಃಪರಿವರ್ತನೆ.

ಕೆಲದಿನಗಳ ನಂತರ ಅಷ್ಟೂ ಜನರ ಬಳಿಗೆ ಒಬ್ಬೊಬ್ಬರಾಗಿ ತೆರಳುವ ತಂಡ ಕೂಡಲೇ ತಮ್ಮ ಬಿಸಿನೆಸ್ ಅನ್ನು ಒಳಹೊಕ್ಕಬೇಕೆಂದೂ ಇಂತಹ ಒಂದು ಸುವರ್ಣಾವಕಾಶವನ್ನು ಮಿಸ್ ಮಾಡಿಕೊಂಡರೆ ಮುಂದೆ ಅವರು ಪಶ್ಚಾತಾಪ ಪಡುತ್ತಾರೆಂದೂ, ಅಲ್ಲದೆ ಇಂದೇ ಸೇರಿಕೊಂಡರೆ ಅವರು ತಮ್ಮ ಬಿಸಿನೆಸ್ ನ 'ಪಾರ್ಟನರ್ಸ್' ಗಳಾಗುತ್ತಾರೆಂದು ಬೆಣ್ಣೆಯನ್ನು ಪರಿಪರಿಯಾಗಿ ಸವರುತ್ತಾರೆ. ಈಗಲೂ ಆ ಬಿಸಿನೆಸ್ ನ ಬಣ್ಣವನ್ನು ಬಿಚ್ಚುವುದಿಲ್ಲ. ಕೊನೆಗೆ ಕೇಳುಗ ಅವರ ಮಾಂತ್ರಿಕತೆಯ ಮಾತಿಗೂ, ಒತ್ತಾಯಕ್ಕೋ, ಅಥವಾ 'ಮಗಾ, ನನ್ ಮೇಲೆ ನಿನ್ಗೆ ನಂಬಿಕೆ ಇಲ್ವಾ?' ಎನ್ನುವ ಆ ಗೆಳೆಯನ ಆತ್ಮೀಯತೆಗೋ ಕರಗಿ ಅಸ್ತು ಎನ್ನುತ್ತಾನೆ. ತಾನು ಅಷ್ಟು ಇಷ್ಟು ಕೂಡಿಟ್ಟ ಅಥವಾ ಅಪ್ಪ ಅಮ್ಮರು ಕಷ್ಟಪಟ್ಟು ಕಳುಹಿಸಿಕೊಟ್ಟ ಹಣವನ್ನೆಲ್ಲ ಒಟ್ಟುಗೂಡಿಸಿ ಅವರ ಕೈಮೇಲಿತ್ತು ಸುಮ್ಮನಾಗುತ್ತಾನೆ. ಅಲ್ಲಿಯವರೆಗೂ ಆ ಬಿಸಿನೆಸ್ ನ ಅಸಲಿ ಸ್ಟ್ರಾಟರ್ಜಿ ಏನೆಂದು ಹೇಳದ ಆ ಗುಂಪು ಮುಂದೊಂದು ದಿನ ಗುಂಡಿಗೆ ಬಿದ್ದ ಆ ಅಮಾಯಕನನ್ನು ಬಳಿ ಕರೆದು ಇದು ನಮ್ಮ ಪ್ರಾಡಕ್ಟ್, ಇದನ್ನು ನೀನು ಇಬ್ಬರಿಗೆ ಮಾರಿದರೆ ನಿನಗೆ ಇಂತಿಷ್ಟು ಕಮಿಷನ್, ಅವರು ಮತ್ತಿಬ್ಬರಿಗೆ ಮಾರಿದರೆ ಅಲ್ಲಿಂದಲೂ ನಿನಗೆ ಕಮಿಷನ್ ಎಂದೂ ಅಣ್ಣ, ತಮ್ಮ, ಗೆಳೆಯ, ಗೆಳತಿ, ಗೆಳೆಯನ ಗೆಳಯರು, ಗೆಳತಿಯರು ಅಥವಾ ಅವರ ಬಂದು ಮಿತ್ರರು ಹಾಗು ಎಲ್ಲರನ್ನು ಹೇಗೆ ಪಟಾಯಿಸಕೊಳ್ಳಬೇಕು ಎಂಬ ಬಗೆಯನ್ನು, ಮಾತಿನ ಚಳಕವನ್ನೂ ಹೇಳಿ ಯುದ್ಧರಂಗಕ್ಕೆ ದಬ್ಬುವಂತೆ ಸಿಟಿಯ ಸಾಗರದೊಳಗೆ ಅವರನ್ನು ದಬ್ಬುತ್ತಾರೆ. ಕಾಲೇಜಿನ ವಾರ್ಷಿಕ ಫೀಸಿಗೋ, ಪರೀಕ್ಷಯನ್ನು ಕಟ್ಟಲೋ, ಪುಸ್ತಕವನ್ನು ಕೊಳ್ಳಲೋ, ಗೃಹಿಣಿಯರಾದರೆ ತಾವು ಜೀವನವೆಲ್ಲ ಕೂಡಿಟ್ಟ ಪುಡಿಗಾಸನ್ನು ಇಂತಹ ಒಂದು ಬಲೆಗೆ ಕೆಡವಿಕೊಂಡ ಮೇಲೆ ಶತಾಯ ಗತಾಯ ಅದನ್ನು ಹಿಂಪಡೆದೆ ತೀರಲು ಅವ ಣಿಸುತ್ತಾರೆ. ತಮ್ಮ ಕೈಲಿರುವ ಪ್ರಾಡಕ್ಟ್ ಅದೆಂಥಹದ್ದು, ಅದರಿಂದಾಗುವ ಅಡ್ಡ ಪರಿಣಾಮಗಳೇನೂ ಅನ್ನದೆ ಸಿಕ್ಕ ಸಿಕ್ಕವರನ್ನೆಲ್ಲ ಪೀಡಿಸಲು ಶುರುವಿಡುತ್ತಾರೆ.

ಇಂತಹ MLM ಗಳ ಮತ್ತೊಂದು ರಣತಂತ್ರ ವೈಭವೀಕರಿಸುವಿಕೆ. ತಮ್ಮ ತಂಡದ ಒಂದಿಷ್ಟು ಜನರನ್ನು ಸಿಂಗಾಪುರ್, ಥೈಲ್ಯಾಂಡ್ ನಂತಹ ಜಾಗಕ್ಕೆ ಒಂದೆರಡು ದಿನಗಳ ಕಾಲ ಬಿಸಿನೆಸ್ ಟ್ರಿಪ್ ಗಳೆಂದು ಹೇಳಿ ಕಳುಹಿಸುವುದು. ಅಲ್ಲಿ ನೆಡೆಯುವ ಕಾಯಮತ್ತಾದರೂ ಎಂತಹದ್ದು ಅಂತೀರಾ. ಬಿಸಿನೆಸ್ ನ ನೆಪದಲ್ಲಿ ಒಂದೈನೂರು ರಾಶಿ ಸೆಲ್ಫಿಗಳನ್ನು ಹೊತ್ತು ತಂದು ಇಲ್ಲಿ ತಮ್ಮ ಫೇಸ್ಬುಕ್ ಪೇಜ್ಗಳ ಮೇಲೆ ವಾರಕೊಮ್ಮೆ ಧಾರವಾಯಿ ಎಪಿಸೋಡ್ಗಳಂತೆ ಬಿತ್ತರಿಸಿ ತಮ್ಮ ಬಹುಸಂಖ್ಯಾ ಆನ್ಲೈನ್ ಗೆಳೆಯರಿಗೆ ಹೊಟ್ಟೆ ಉರಿಯುವಂತೆ ಮಾಡಿ ಅವರಾಗಿಯೇ ಇವರನ್ನು ಸಮೀಪಿಸುವಂತೆ ಮಾಡುವುದು! ಅದೂ ಸಾಲದಕ್ಕೆ ಪ್ರಸಿದ್ಧ ಸಿನಿ ತಾರೆಯರೋ ಅಥವಾ ಆಟಗಾರರನ್ನು ಅತಿಥಿಗಳನ್ನಾಗಿ ಕರೆದು ಒಂದರಿಂದೊಂದು ಚಕಚಕ ಫೋಟೋಗಳನ್ನು ತೆಗೆದುಕೊಂಡು ತಮ್ಮ ವೆಬ್ಸೈಟ್ಗಳಲ್ಲಿ, ಫೇಸ್ಬುಕ್ ಪೇಜ್ ಗಳಲ್ಲಿ ತಮ್ಮ ಆ ಕಂಪನಿಯ ಲೋಗೋವನ್ನು ಸೇರಿಸಿ ಅಂತ ಫೋಟೋವನ್ನು ಅಜರಾಮರವಾಗುವವಂತೆ ಹಾಕಿಕೊಳ್ಳುವುದು. ಆ ಸೆಲೆಬ್ರಿಟಿಗಳೋ ಸರಿ ತಪ್ಪು ಒಂದನ್ನೂ ಲೆಕ್ಕಿಸದೆ ಇವರೆಸೆಯುವ ಹಣದ ಆಸೆಗೆ ಕರದೆಡೆಯಲ್ಲ ನುಲಿಯುತ್ತ ಹೋಗುತ್ತಾರೆ. ಒಂದು ಕಾಲದ ಆಮೆಚುರ್ ಬಿಲಿಯರ್ಡ್ಸ್ ಚಾಂಪಿಯನ್, ಪದ್ಮ ಪ್ರಶಸ್ತಿಯ ವಿಜೇತ ಮೈಕಲ್ ಫೆರೇರ ರಂತಹವರೆ ಇಂತಹ ಕಂಪನಿಗಳ ಅತಿ ದೊಡ್ಡ ಶೇರ್ ಹೋಲ್ಡರ್ಗಳಾಗಿರುವುದೂ ದುರದೃಷ್ಟಕರ.

ಒಮ್ಮೆ ಈ ಷಡ್ಯಂತ್ರದ ಬಿಸಿನೆಸ್ ಗೆ ಬಿದ್ದರೆ ಆತ/ಅವಳು ಅಕ್ಷರ ಸಹ ಬೆನ್ನಿಗೆ ಬಿದ್ದ ಬೇತಾಳರಂತೆ ಜನರನ್ನು ಹಿಂಸಿಸತೊಡಗುತ್ತಾರೆ. ಬೆಸ್ಟ್ ಫ್ರೆಂಡ್, ಡೀಪ್ ಫ್ರೆಂಡ್, ಟ್ರು ಫ್ರೆಂಡ್ ಎಂಬೆಲ್ಲ ಅನ್ವರ್ಥ ನಾಮಗಳು ಹರಿದು ಅವರನ್ನು ಕಂಡರೆ ಬದ್ದವೈರಿಗಳಂತೆ ಮಾಡುತ್ತದೆ ಈ ಬಿಸಿನೆಸ್. ಓದು ಬರಹ ಬಿಟ್ಟು ಹಣಗಳಿಸಲು ಇಂತಹ ಶಾರ್ಟ್ ಕಟ್ ಗಳನ್ನು ಹಿಡಿಯುವ ಯುವಕರು ತಾವು ಮಾಡಲೊಗುತ್ತಿರುವ ಕಾರ್ಯ ಅದೆಷ್ಟರ ಮಟ್ಟಿಗೆ ಶಾಶ್ವತ ಎಂಬುದನ್ನು ಕೇಳಿಕೊಳ್ಳಬೇಕು. ಅಲ್ಲದೆ ಇಂತಹ ಗೊತ್ತು ಗುರಿ ಇಲ್ಲದ ಪುಡಾರಿ ಕಂಪನಿಗಳಿಗೆ ಪರವಾನಿಗೆ ನೀಡುವ ಸರ್ಕಾರಗಳು ಸಹ ಇತ್ತ ಕಡೆ ಗಮನಹರಿಸಬೇಕು.



Monday, August 21, 2017

ಪೂರ್ಣತೆಯ ಚೇತನ…

ಅರೆಬರೆಯಾಗಿ ಕತೆ ಕಾದಂಬರಿಗಳನ್ನು ಓದುತಿದ್ದ ನನಗೆ ಓದಿನ ನಂತರ ಕಾಡುತಿದ್ದ ಹಲವು ಪ್ರೆಶ್ನೆಗಳಲಿ ಪೂರ್ಣತೆ ಎಂಬ ಪದವೂ ಒಂದು. ಒಂದು ಕಾದಂಬರಿಯನ್ನು ಕೊಂಡು ಓದುವಾಗ ಪಾತ್ರಗಳ ಪರಿಚಯದಿಂದ ಶುರುವಾಗುವ ಆ ಕಥೆ ಕೊನೆಗೆ ಅರ್ಥಪೂರ್ಣವಾದ ಪರ್ಯವಸನವನ್ನು ಕಾಣುವಂತೆ ಮನಸ್ಸು ಭಯಸುತ್ತದೆ. ಇಲ್ಲದೆ ಹೋದಲ್ಲಿ 'ಇದೇನಪ್ಪ ತಳ ಬುಡ ಇಲ್ಲ ಈ ಪುಸ್ತಕ' ಅನ್ನಿಸಿ ಕೆಲವೊಮ್ಮೆ ಕೊಸರಾಡುತ್ತೇವೆ. ಕುವೆಂಪುರವರ 'ಮಲೆಗಳಲ್ಲಿ ಮದುಮಗಳು' ಇಂತಹ ಪುಸ್ತಕಗಳಿಗೊಂದು ಉಧಾಹರಣೆ. ಇಲ್ಲಿ ಕುವೆಂಪುರವರೇ ಮುನ್ನುಡಿಯಲ್ಲಿ ಹೇಳಿರುವಂತೆ ಆ ಕಥಾಹಾದಿಗೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಪಾತ್ರಗಳು ಕೈಹಿಡಿದು ನೆಡೆಸಿಕೊಂಡ ಹಾಗೆ ಕಾದಂಬರಿಕಾರ ಹೋಗಿರುತ್ತಾನೆ. ಅಂತೆಯೇ ಜೀವನ. ಇಲ್ಲಿ ಹುಟ್ಟಿನಿಂದ ಶುರುವಾಗುವ ಜೀವನದ ಕತೆ ಆತನ ಕೊನೆಯುಸಿರಿನ ತನಕವಷ್ಟೇ ಪ್ರಸ್ತುತವಾಗಿರುತ್ತದೆ. ಒಂದು ಪಕ್ಷ ಆ ಘಳಿಗೆಗೆ ವ್ಯಕ್ತಿಯ ಕಾರ್ಯಯೋಜನೆಗಳೆಲ್ಲವೂ ಸಾಕಾರಗೊಂಡಿರದೆ ಇದ್ದರೆ ಆತನ ಜೀವನ ಅಪೂರ್ಣವಾಯಿತೇ? ಅಥವಾ ನಾಲ್ಕು ದಿನ ಜೀವಿಸಿದರೂ ಸರಿಯೇ, ನಿನ್ನೆ ನಾಳೆಗಳ ಚಿಂತೆಯಿಲ್ಲದೆ, ಮನಸ್ಸಿಗೆ ಸರಿ ತೋಚಿದ್ದನ್ನು ಪಣತೊಟ್ಟು ಮಾಡಲೆತ್ನಿಸಿ, ಸೋಲೋ ಗೆಲುವೋ, ಕಾರ್ಯವೆಂಬ ಚೇತನವನೊಂದೆ ನಂಬಿ ಬಾಳುವುದರಲ್ಲಿಯೇ ಪೂರ್ಣತೆ ಎಂಬುದು ಅಡಗಿರಬಹುದು. ತೇಜಸ್ವಿಯವರ ಜೀವನ ಈ ಮಾತಿಗೊಂದು ಉತ್ತಮ ಉದಾಹರಣೆ ಎಂಬುದು ನನ್ನ ಅನಿಸಿಕೆ. ಕುವೆಂಪುರವರ ಚೇತನರಾಗಿ, ಪ್ರಕೃತಿ ಪ್ರೇಮಿಯಾಗಿ, ಪ್ರೇಮಿಯಾಗಿ, ಬರಹಗಾರನಾಗಿ, ಕೃಷಿಕನಾಗಿ, ಸಾಮಾನ್ಯರಲ್ಲಿ ಅತಿಸಾಮಾನ್ಯರಂತೆ ಬೆರೆತು ಬೆಳೆದು, ಮನಸ್ಸಿಗೆ ಸರಿ ಎನಿಸದಷ್ಟನ್ನೇ ಮಾಡಿ ಕೊನೆಗೆ ಪ್ರಕೃತಿಯ ಮಡಿಲಲ್ಲೇ ಕೊನೆಯುಸಿರೆಳೆದ ಇವರ ಜೀವನ ಹೆಸರಿಗೆ ತಕ್ಕಂತೆ ಪೂರ್ಣ, ಸಂಪೂರ್ಣ.

ದೊಡ್ಡ ತತ್ವ ಮೀಮಾಂಸಕರಂತೆ ಅರೆಬರೆ ಅರ್ಥವಾಗುವ ಧಾಟಿಯಲ್ಲಿ ಸಾಹಿತ್ಯವನ್ನು ರಚಿಸದೇ, ಇದ್ದದನ್ನು ಇದ್ದ ಹಾಗೆಯೆ ಸರಳವಾಗಿ ಸುಂದರವಾಗಿ, ಚಿಕ್ಕದಾದರೂ ಚೊಕ್ಕವಾಗಿ ಓದುಗ ದೊರೆಯ ಮುಂದಿಡುತ್ತಿದ್ದದ್ದು ತೇಜಸ್ವಿಯವರ ಹಲವು ವಿಶಿಷ್ಟತೆಗಳಲ್ಲೊಂದು. ಪತ್ರಕರ್ತ ಮಹಾಶಯನಿಗೆ ಸಂದರ್ಶನ ಕೊಟ್ಟು ಬಾಯಿ ನೋಯಿಸಿಕೊಳ್ಳುವುದಕ್ಕಿಂತ ಕಾಡ ಕೆರೆಯ ಮೀನುಗಳನ್ನು ಹಿಡಿಯುತ್ತಾ ಕಾಲ ಕಳೆಯುವ ಜಾಯಮಾನದ ವ್ಯಕ್ತಿಯಿಂದ ನಾವು ಕಲಿಯಬೇಕಿರುವುದು ಬೆಟ್ಟದಷ್ಟಿವೆ. ನಿಜವಾದ ಸ್ವಾವಲಂಬತೆ ಎಂಬುದು ತನ್ನ ಅನ್ನವನ್ನು ತಾನೇ ಉತ್ತಿ ಬೆಳೆದು ತಿನ್ನುವುದರಲ್ಲಿರುತ್ತದೆ. ಎಷ್ಟೆಲ್ಲಾ ಇದ್ದರೂ ತೇಜಸ್ವಿ ಕೊನೆಯದಾಗಿ ಆಯ್ದುಕೊಂಡಿದ್ದು ನಿಸರ್ಗದ ಅಪ್ಪಟ ಮಡಿಲನ್ನೇ. ಉತ್ಕೃಷ್ಟ ಮಟ್ಟದ ಬತ್ತವನ್ನು ಬೆಳೆಯುವುದರಿಂದ ಹಿಡಿದು ಕಾಫಿತೋಟದ ಕಸಿಯನ್ನು ಮಾಡುವವರೆಗೂ ಅವರು ನೇಸರನಲ್ಲಿ ಒಂದಾಗಿದ್ದರು. ಇಂತಹ ಒಬ್ಬ ವ್ಯಕ್ತಿಯಿಂದ ಸಾಹಿತ್ಯ ಕೃತಿಗಳ ಸೃಷ್ಟಿ ಸಾದ್ಯವಾಗಬಹುದೆಂದರೆ ಸಾಹಿತ್ಯ ಸೃಷ್ಟಿಯ ಅಗಾಧತೆ ಅದೆಷ್ಟಿರಬಹುದೆಂದು ಎಂಬುದನ್ನು ನಾವು ಊಹಿಸಬಹುದು.

ತಮ್ಮ ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದಲ್ಲಿ ಹೇಳಿರುವಂತೆ ಹಳ್ಳಿಯ ಜನಗಳ ನಡುವೆ ಒಬ್ಬ ಮೂಕ ಪ್ರೇಕ್ಷಕನಂತೆ ಜೀವಿಸುತ್ತಾ ಒಂದು ಹೊಸ ಬಗೆಯ ಬರಹದ ಸ್ಪೂರ್ತಿಯನ್ನು ಅವರು ಕಂಡುಕೊಳ್ಳುತ್ತಾರೆ. ಪುಸ್ತಕದುದ್ದಕ್ಕೂ ಸಮಾಜದ ಕೆಲ ಗಂಭೀರವಾದ ವಿಷಯಗಳನ್ನು ಅತಿ ಸರಳವಾಗಿ ಮನಸೋಕುವಂತೆ ಕಟ್ಟಿಕೊಡುತ್ತಾ ಹೋಗುತ್ತಾರೆ. ಅಲ್ಲಿ ಆಸೆ,ಕೋಪ,ಕರುಣೆ, ಜಗಳ, ಜಾತಿ, ಬಡತನ, ಹೀಗೆ ಮಾನವ ಜೀವಿಯ ಎಲ್ಲಾ ಬಗೆಯ ಭಾವ ಹಾಗು ಸ್ಥಿತಿಗಳೂ ನೈಜವಾಗಿ ಹಾಸುಹೊಕ್ಕಿವೆ. ಸಾಮಾನ್ಯ ಓದುಬರಹ ತಿಳಿದವನೂ ಸಹ ತನ್ನ ಜ್ಞಾನಪರಿದಿಯೊಳಗೆ ಒಬ್ಬ ಚಿಂತನಕಾರನಾಗಿ ಅಥವಾ ತತ್ವಜ್ಞಾನಿಯಾಗಿ ತನ್ನ ಯೋಚನಾ ಲಹರಿಗೆ ಚಾಲನೆ ಕೊಡುವ ಈ ಪುಸ್ತಕ ಒಂದು ನವ ಮಾದರಿಯ ಸಾಹಿತ್ಯ ಸೃಷ್ಟಿಯೊಂದಕ್ಕೆ ದಾರಿಯನ್ನು ಮಾಡಿಕೊಂಡಿತು ಎಂದರೆ ಸುಳ್ಳಾಗದು. ಇಂತಹ ನೂರಾರು ಕೃತಿಗಳ ಮೂಲಕ ಆಡುವವರಿಂದಿಡಿದು ಅಳುವವನೊರೆಗೂ ತಾಕುವಂತೆ ಬರೆದು, ಬದುಕಿ ಮಾರೆಯಾದ ಪೂರ್ಣ ಚಂದ್ರ ತೇಜಸ್ವಿಯವರಂತಹ ವ್ಯಕ್ತಿತ್ವ ಮತ್ತೊಮ್ಮೆ ಸಿಗುವುದು ಬಲು ಅಪೂರ್ವ.

Wednesday, August 16, 2017

ಶಿಸ್ತಿನ ನಟನೆಯ ಚಿಗುರಿನ ಚೇತನ ..

ಈತ ದೇಶೀ ಚಿತ್ರರಂಗದ ಅತಿ ಹಿರಿಯ ನವತರುಣ! ಸ್ವಾತಂತ್ರ್ಯಪೂರ್ವದಿಂದ ಹಿಡಿದು ಇಂದಿನವರೆಗೂ ಅದೇ ಮಂದಹಾಸದ ನಗೆ, ಅದೇ ಶಾಂತ ನಿರ್ಮಲ ಚಹರೆ ಹಾಗು ಅಷ್ಟೇ ಘಾಡವಾದ ಕಪ್ಪುಗೂದಲು ಈತನ ಹೈಲೈಟ್ಸ್. ವಯಸ್ಸಿನ ಗಡಿಯಾರ 95 ವರ್ಷಗಳನ್ನು ದಾಟಿದೆ ಹಾಗು ತಿರುಗಾಡಲು ಒಂದು ವೀಲ್ ಚೇರ್ ನ ಅವಶ್ಯಕತೆಯಿದೆ ಎಂಬುದನ್ನು ಬಿಟ್ಟರೆ ಬೇರೆಲ್ಲ ಬಗೆಯಿಂದಲೂ ಈತ ನವತರುಣನೇ. ಒಂಚೂರು ಬಣ್ಣ ಬಳಿದು, ಸೂಟು ಬೂಟನ್ನು ಧರಿಸಿ ಕ್ಯಾಮೆರಾದ ಮುಂದೆ ನಿಲ್ಲಿಸಿದರೆ ಸಾಕು ಖಾನ್, ಬಚ್ಚನ್ ಹಾಗು ರೋಷನ್ ಗಳೆಲ್ಲ ತಮ್ಮ ಕಾಂತಿಯನ್ನೇ ಕಳೆದುಕೊಳ್ಳುತ್ತಾರೆ. ಸುಮಾರು ಆರು ದಶಕಗಳ ಕಾಲ ನಟನೆಯಲ್ಲಿ ತೊಡಗಿ, ಹಲವಾರು ಪೀಳಿಗೆಯ ಜನರ ಮೇಲೆ ತನ್ನ ನಟನ ಚಾತುರ್ಯದ ಪ್ರಭಾವವನ್ನು ಬೀರಿ, ಎಂಟು ಫಿಲಂ ಫೇರ್ ಪ್ರಶಸ್ತಿಯನ್ನು ಗೆದ್ದ ದಾಖಲೆಯೊಂದಿಗೆ ಹನ್ನೊಂದು ಬಾರಿ ಅದರಲ್ಲಿ ನಾಮನಿರ್ದೇಶನಗೊಂಡು, 'ಟ್ರಾಜಿಡಿ ಕಿಂಗ್' ಎಂದು ಇಂದಿಗೂ ಜನಮಾನಸದಲ್ಲಿ ಕಂಗೊಳಿಸುತ್ತಿರುವ ಮುಹಮ್ಮದ್ ಯೂಸುಫ್ ಖಾನ್ ಅಥವಾ ಸಿನಿಪ್ರಿಯರ ಪ್ರೀತಿಯ ದಿಲೀಪ್ ಕುಮಾರ್ ನನ್ನು ಯಾರಾದರೂ ಮರೆಯುವುದುಂಟೆ?

ದಿಲೀಪ್ ಜನಿಸಿದ್ದು 1922ರ ಡಿಸೆಂಬರ್ ನಲ್ಲಿ. ಪ್ರಸ್ತುತ ಪಾಕಿಸ್ತಾನದ ಪೇಶಾವರ್ ಈತನ ಜನ್ಮಭೂಮಿ. ಕಾಕತಾಳೀಯವೆಂಬಂತೆ ಹಿಂದಿ ಚಿತ್ರರಂಗದ ಮತ್ತೊಬ್ಬ ದಿಗ್ಗಜ ರಾಜಕಪೂರ್ ಸಹ ಈತನ ನೆರೆಮನೆವಾಸಿ ಕಮ್ ಚಡ್ಡಿ ದೋಸ್ತ್. ರಾಜ್ ನ ಕುಟುಂಬ ಅದಾಗಲೇ ಚಿತ್ರರಂಗದಲ್ಲಿ ಹೆಸರನ್ನು ಮಾಡತೊಡಗಿದ್ದರಿಂದ ಸ್ವಾಭಾವಿಕವಾಗಿ ದಿಲೀಪ್ ನ ಮೇಲೂ ಇದರ ಪ್ರಭಾವ ಬಿದ್ದಿರಬಹುದು. ಅಲ್ಲಿಂದ ಮುಂದೆ ದಿಲೀಪ್ ರ ತಂದೆ ಜೀವನ ನಿರ್ವಹಣೆಗಾಗಿ ಸಂಸಾರ ಸಮೇತ ಬಾಂಬೆಗೆ ಬಂದಿಳಿದರು. ಮುಂದೆ ಅಲ್ಲಿಯೇ ಹಣ್ಣಿನ ವ್ಯಾಪಾರವನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದ ಅವರಿಗೆ ಮುಂದೊಂದು ದಿನ ಮಗನೊಟ್ಟಿಗಿನ ಒಂದು ವಿರಸ ಬಹುವಾಗಿ ಬಾದಿಸಿತು. ತನ್ನ ಹದಿನೆಂಟನೆ ವಯಸ್ಸಿಗೆ ಅಪ್ಪನೊಟ್ಟಿಗೆ ಮುನಿಸಿಕೊಂಡು ಮನೆಬಿಟ್ಟು ಹೊರಟ ದಿಲೀಪ್ ಹೋದದ್ದಾದರೂ ಎಲ್ಲಿಗೆ? ನೂರಾರು ಮೈಲು ದೂರದ ಪುಣೆಗೆ!. ಮತ್ತೆಂದೂ ಹಿಂಬರಬಾರದು, ಕಷ್ಟ ಪಟ್ಟು ದುಡಿದು ಸ್ವಂತ ಕಾಲ ಮೇಲೆ ನಿಲ್ಲಬೇಕೆಂಬ ಹಠ ಅಂದು ಬಿಸಿರಕ್ತದ ಶಾಂತರೂಪಿ ದಿಲೀಪ್ ನದಾದಾಗಿದ್ದಿತು. ಅಂದು ಹೋಟೆಲ್ ನ ನೌಕರನಾಗಿ ಚಾಕರಿ ಶುರುಮಾಡುವ ಆತನಿಗಿದ್ದ ಏಕೈಕ ಗುರಿ ತಾನೇ ಖುದ್ದಾಗಿ ಹೋಟೆಲೊಂದನ್ನು ಸ್ಥಾಪಿಸುವುದು. ಆದರೆ ಆ ಗುರಿಯೆಡಗಿನ ಹಾದಿ ಆತನನ್ನು ಕೊಂಡೊಗಿ ಬಿಟ್ಟದ್ದು ಮಾತ್ರ ಕನಸಿನ ಊಹೆಗೂ ನಿಲುಕದ ಸ್ಥಳ ಒಂದಕ್ಕೆ!

ಆಗೆಲ್ಲ ಬಾಂಬೆ ಟಾಕೀಸ್ ಎಂದರೆ ಒಂಥರಾ ಕನಸ್ಸಿನ ಕೋಟೆ. ಯಾರೋಬ್ಬನೇ ಆಗಲಿ ಅದರೊಳಗೆ ಒಮ್ಮೆ ಹೊಕ್ಕರೆ ಧಾರಿದ್ರ್ಯವನ್ನು ಕೆಳಗಿಳಿಸಿಯೇ ಹೊರಬರುತ್ತಾನೆ ಎಂಬೊಂದು ನಂಬಿಕೆ ಭಲವಾಗಿದ್ದ ಕಾಲವದು. ದೇವಿಕಾ ರಾಣಿ ಆ ಬಾಂಬೆ ಟಾಕೀಸ್ ನ ಒಡೆಯಳಾಗಿದ್ದಳು. ಮಧುಬಾಲ, ಅಶೋಕ್ ಕುಮಾರ್, ಮುಮ್ತಾಜ್ ರಂತಹ ದಿಗ್ಗಜರನ್ನು ಸಿನಿಮಾ ಕ್ಷೇತ್ರಕ್ಕೆ ನೀಡಿದ ಹಿರಿಮೆ ಬಾಂಬೆ ಟಾಕೀಸ್ ಹಾಗು ದೇವಿಕಾ ರಾಣಿಯದು. ಈ ಹೆಸರಿನ ಸಾಲುಗಳಿಗೆ ಮತ್ತೊಂದು ಸೇರ್ಪಡೆಯೆ ದಿಲೀಪ್ ಕುಮಾರ್. ಒಮ್ಮೆ ಪರಿಚಯದವರೊಬ್ಬರನ್ನು ಬಾಂಬೆ ಟಾಕೀಸ್ ಗೆ ಬಿಡಲು ಬಂದಾಗ ಅಚಾನಕ್ಕಾಗಿ ದೇವಿಕಾ ರಾಣಿಯ ಪರಿಚಯವಾಗುತ್ತದೆ. ತದನಂತರ ತಿಂಗಳಿಗೆ 1250 ರೂಪಾಯಿಗಳ ಸಂಬಳದ ಕೆಲಸವನ್ನು ಆಕೆ ದಿಲೀಪ್ ಗೆ ನೀಡುತ್ತಾಳೆ. ದಿನವಿಡೀ ಹೋಟೆಲ್ನಲ್ಲಿ ದುಡಿದು ನಲುಗಿದ್ದ ದಿಲೀಪ್ ದೊರೆತ ಈ ಅವಕಾಶದ ಮೇಲೇರಿ ಬಾಂಬೆ ಟಾಕೀಸ್ನ ಭಾಗವಾಗಿಬಿಡುತ್ತಾನೆ. ತನ್ನ ಉರ್ದು ಬರವಣಿಗೆ ಹಾಗು ಉಚ್ಚಾರಣೆಯಲ್ಲಿ ಬಲವಾಗಿದ್ದ ಈತ ಮೊದಮೊದಲು ಹೆಚ್ಚಾಗಿ ಚಿತ್ರಕಥೆ, ಸಂಭಾಷಣೆಗಳ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಾನೆ. ಆದರೆ ನಾಯಕನ ದೇಹಕಾಯ, ಲಲನೆಯರು ನಾಚಿ ನೀರಾಗುವಂತಹ ನಗು, ಆದರ್ಶ ವ್ಯಕ್ತಿತ್ವ ಹಾಗು ಕೆಲಕಾಲದ ಚಿತ್ರರಂಗದ ಅನುಭವ 1944 ರಲ್ಲಿ ಈತನನ್ನು ನಾಯಕನಾಗಿ ಮಾಡುತ್ತದೆ. ದೇವಕಿ ರಾಣಿಯ ಸೂಚನೆಯ ಮೇರೆಗೆ ಮೊಹಮೂದ್ ಯೂಸುಫ್ ಖಾನ್ ನ ಹೆಸರು ಅಂದು ದಿಲೀಪ್ ಕುಮಾರ್ ಆಗಿ ಬದಲಾಯಿತು ಮತ್ತು ದೇಶದೆಲ್ಲೆಡೆ ಚಿರಪರಿಚಿತವಾಯಿತು.

ಹೀಗೆ ಸುಮಾರು ಐವತ್ತರ ದಶಕದಷ್ಟರಲ್ಲಿ ದಿಲೀಪ್ ಜನಮಾನಸದಲ್ಲಿ ಬೆರೆತುಹೋಗುತ್ತಾನೆ. ಕುಡಿ ಮೀಸೆಯ ತರುಣರಾದ ದಿಲೀಪ್ ಕುಮಾರ್, ರಾಜ್ ಕಪೂರ್ ಹಾಗು ದೇವಾನಂದ್ ರೆಂದರೆ ಜನ ಹುಚ್ಚೆದ್ದು ಕುಣಿಯುತ್ತಿದ್ದ ಜಮಾನವದು. ಬೆಳೆಯುತ್ತಿದ್ದ ಜನಪ್ರಿಯತೆಗೆ ತಕ್ಕಂತೆ ಕ್ಲಾಸಿಕ್ ನಟನೆಗಳನ್ನು ನೀಡುತ್ತಿದ್ದ ದಿಲೀಪ್ ಅಕ್ಷರ ಸಹ ತಮ್ಮನ್ನು ಆ ನಟನೆಯಲ್ಲಿ ಒಂದಾಗಿಸಿಕೊಂಡುಬಿಡುತ್ತಿದ್ದರು. ಅದೆಷ್ಟರ ಮಟ್ಟಿಗೆಂದರೆ ‘ದೇವದಾಸ್’ ಚಿತ್ರದ ಅಭಿನಯದ ನಂತರ ಚಿತ್ರದ ನಾಯಕನ ಖಿನ್ನತೆಯ ಸ್ವಭಾವದಿಂದ ಹೊರಬರಲು ಮನಶಾಸ್ತ್ರಜ್ಞರೊಬ್ಬರನ್ನು ಕಂಡು ಚಿಕಿತ್ಸೆಯನ್ನು ಪಡೆಯುವ ಮಟ್ಟಿಗೆ! ಇವರ ಈ ಅಮೋಘ ನಟನೆಯ ಸ್ಫೂರ್ತಿಯಿಂದಲೇ ಹಿಂದಿ ಚಿತ್ರರಂಗದ ದಿಗ್ಗಜರಾದ ಅಮಿತಾಬ್ ಬಚ್ಚನ್, ಧರ್ಮೇಂದ್ರ ಹಾಗು ಮನೋಜ್ ಕುಮಾರ್ ರಂತಹ ನಟರು ಮುನ್ನೆಲೆಗೆ ಬಂದದ್ದು.

ಯಾವುದಾದರೊಂದು ಕಾರ್ಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡರೆ ಕಾಯ.ವಾಚಾ, ಮನಸ್ಸ ಅದರಲ್ಲಿ ಕರಗಿಸಿಕೊಳ್ಳುವುದು ದಿಲೀಪ್ರ ಹಲವು ವಿಶಿಷ್ಟತೆಗಳಲ್ಲೊಂದು. ಅದು ಕೇವಲ ನಟನೆಯಲ್ಲಲ್ಲದೆ ಪೀತಿ ಪ್ರೇಮದ ವಿಷಯದಲ್ಲಿಯೂ. ಇಲ್ಲಿ ದಿಲೀಪ್ ಕಾಯ.ವಾಚಾ, ಮನಸ್ಸ ತಮ್ಮನ್ನು ಅರ್ಪಿಸಿಕೊಂಡಿದ್ದು ಆಗಿನ ಜನಪ್ರಿಯ ನಟಿ ಮಧುಬಾಲಾಳಿಗೆ. ಆನ್ ಸ್ಕ್ರೀನ್ ಹಾಗು ಆಫ್ ಸ್ಕ್ರೀನ್ ಎರಡರಲ್ಲೂ ಜನರ ಮೋಡಿ ಮಾಡಿದ್ದ ಈ ಜೋಡಿ ಜೀವನದ ತೂಗುಯ್ಯಾಲೆಯಲ್ಲಿ ಕೂಡಿ ಬಾಳುವ ಮುನ್ನವೇ ಕಾರಣಾನಂತರಗಳಿಂದ ಬೇರಾಯಿತು. ಹೀಗೆ ಬೇರಾದ ಮಧುಬಾಲರನ್ನು ಮನಸ್ಸಿನಾಳದಲ್ಲಿ ವಿಪರೀತವಾಗಿ ಪ್ರೀತಿಸುತ್ತಿದ್ದ ದಿಲೀಪ್ ಆಕೆಯ ಸಾವಿನ ನಂತರ ಅಕ್ಷರ ಸಹ ಅಲುಗಾಡಿಹೋದರು. ತಮಗಾಗಿ ತನ್ನೆಲ್ಲಾ ಸರ್ವಸ್ವವನ್ನೂ ಧಾರೆ ಎರೆಯುವ ತ್ರಿಪುರ ಸುಂದರಿಯರ ಉಪಸ್ಥಿತಿಯಲ್ಲೂ ತಮ್ಮ 44 ವಯಸ್ಸಿನವರೆಗೂ ಮದುವೆಯಾಗದೆ ಉಳಿದ ದಿಲೀಪ್ ನ ಕಣ ಕಣದಲ್ಲೂ ಅಂದು ಮಧುಬಾಲಳ ನೆನಪೇ ತುಂಬಿರುತ್ತದೆ. ಚಿತ್ರದಲ್ಲಷ್ಟೇ ಅಲ್ಲದೆ ನಿಜ ಜೀವನದಲ್ಲೂ ದೇವದಾಸನ ಕಾರ್ಮೋಡ ಆವರಿಸಿಕೊಳ್ಳುತ್ತದೆ.

ಇಂದು ದಿಲೀಪ್ ಕುಮಾರ್ ರೆಂದರೆ ದೇಶೀ ಚಿತ್ರರಂಗದ ರೂಲ್ ಬುಕ್ ನಂತೆ ಕಾಣಲಾಗುತ್ತದೆ. ಶಹೀದ್, ಅಂದಾಜ್, ಅಮರ್, ದೇವದಾಸ್, ಮೊಘಲ್-ಎ-ಆಝಮ್ , ಸೌದಾಗರ್ ನಂತಹ ಹಲವಾರು ಲೆಜೆಂಡರಿ ಚಿತ್ರಗಳಲ್ಲಿ ನಟಿಸಿ, ತಲೆತಲಾಂತರದ ಜನಜೀವನವನ್ನು ಹಾಸುಹೊಕ್ಕಾಗಿ ಬಿಂಬಿಸಿ, ಜನರನ್ನು ರಂಜಿಸಿದ ದಿಲೀಪ್ ನ ನಟನ ಕಲೆಗೆ ಮನಸೋತವರೇ ಇಲ್ಲ. ತಮ್ಮೆಲ್ಲ ಗೆಲುವು, ಏಳಿಗೆಯನ್ನು ತಮಗೆ ದೊರೆತ ಪಾತ್ರಗಳಿಗೆ ಹಾಗು ಅವನ್ನು ಸೃಷ್ಟಿಸಿದ ಕಲಾವಿದರಿಗೆ ಅರ್ಪಿಸುವ ಈತನಿಗೆ ಭಾರತ ಸರ್ಕಾರ ಪದ್ಮಭೂಷಣ ಪದ್ಮವಿಭೂಷಣ ಹಾಗು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.


ಒಮ್ಮೆ ದಿಲೀಪ್ ತಮ್ಮ ಚಿತ್ರವೊಂದಕ್ಕೆ 20ರ ಹರೆಯದ ಹುಡುಗಿಯೊಬ್ಬಳನ್ನು ತಮ್ಮೊಟ್ಟಿಗೆ ನಟಿಸುವುದು ಬೇಡವೆನ್ನುತ್ತಾರೆ. ಆ ನಟಿಗಂತೂ ದಿಲೀಪ್ ಕುಮಾರರೇ ಆರಾಧ್ಯ ದೈವ. ಆಕೆ ಚಿತ್ರರಂಗಕ್ಕೆ ಕಾಲಿಡಲು ಆತನ ನಟನೆಯೇ ಸ್ಪೂರ್ತಿಯ ಸಿಂಚನ. ಆದರೆ ಆ ಪುಟ್ಟ ಹುಡುಗಿಯೊಟ್ಟಿಗೆ ನಾನೇನು ನಟಿಸುವುದು ಎಂದು ಹಿರಿತ್ವದ ಮಾತನ್ನು ದಿಲೀಪ್ ಅಂದು ಹೇಳುತ್ತಾರೆ. ಆದರೆ ವಿಧಿಲೀಲೆ ಬೇರೊಂದೇ ಯೋಚಿಸಿರುತ್ತದೆ, ನಟಿಯೊಬ್ಬಳನ್ನು ತಮ್ಮ ವಯಸ್ಸಿಗೆ ಸಮಪ್ರಾಯದವಳೆಂದು ನಿರಾಕರಿಸಿದ್ದ ದಿಲೀಪ್ ಆಕೆಯನ್ನೇ 1966 ರಲ್ಲಿ ವರಿಸುತ್ತಾರೆ! ಅವರಿಗಾಗ ಬರೋಬ್ಬರಿ 44 ವರ್ಷ. ಅಂದಿನಿಂದ ಇಂದಿನವರೆಗೂ ಜೀವನದ ಸಾಕಷ್ಟು ಏಳುಬೀಳುಗಳ ನಡುವೆ ಕೈಹಿಡಿದು ಸಂಬಾಳಿಸಿಕೊಂಡು ಬಂದಿರುವ ಆ ನಟಿಯೇ ಸಾಹೇರಾ ಬಾನು.

Thursday, August 10, 2017

ಪಂಚಾಯಿತಿ ಹಾಗು ಪಾರ್ಲಿಮೆಂಟ್ ನಡುವೇಕೆ ಈ ತಾರತಮ್ಯ?

2014ರಲ್ಲಿ ರಾಜಸ್ಥಾನ ಸರ್ಕಾರ ಪಂಚಾಯಿತಿ ಮಟ್ಟದ ಚುನಾವಣೆಗಳಿಗೆ ಸ್ಪರ್ಧಿಸುವ ಆಕಾಂಕ್ಷಿಗಳಿಗೆ ಕನಿಷ್ಠ ವಿದ್ಯಾಹರ್ತೆ ಇರಬೇಕೆಂಬ ಮಹತ್ತರವಾದ ಆದೇಶವೊಂದನ್ನು ಹೊರಡಿಸಿತು. ಸಿಡಿಲಿನಂತೆ ಬಂದೆರಗಿದ ಸುದ್ದಿಯಿಂದ ಕೂಡಲೇ ನೂರಾರು ಪರ ವಿರೋಧದ ಚರ್ಚೆಗಳು ನೆಡೆದವು. ಇದು ದಲಿತ ವಿರೋಧಿ ರಾಜಕೀಯ ಅದು ಇದು ಎನ್ನುತ ಒಂದು ಮಿನಿ ಹೋರಾಟವೇ ಹುಟ್ಟಿಕೊಂಡಿತು. ಇದು ಹೆಬ್ಬೆಟೊತ್ತುವ, ಸರ್ಕಾರದ ಹಣದ ಗುಣಾಕಾರ ಭಾಗಾಕಾರ ಗೊತ್ತಿರದ ನೂರಾರು ಹಳ್ಳಿಗರ ಕನಸಿನ ಮೇಲೆ ತಣ್ಣೀರೆರಚಿದಂತಾಯಿತು. ಕೆಲದಿನದಗಳ ನಂತರ ಹರ್ಯಾಣ ಸರ್ಕಾರವೂ ಅದೇ ಹಾದಿಯನ್ನು ಹಿಡಿಯಿತು. ಏನೋ ಹೊಸದೊಂದು ಬದಲಾವಣೆಯ ಅಲೆ ದೇಶದಲ್ಲೆಡೆ ಏಳುತ್ತಿದೆ ಎನ್ನುವಷ್ಟರಲ್ಲೇ ಎಲ್ಲವೂ ಮತ್ತದೇ ಶಾಂತ ಮೌನದ ಕತ್ತಲಿನಲ್ಲಿ ಲೀನವಾಗತೊಡಗದವು. ಸಾಂವಿಧಾನಿಕ ಅಧಿಕಾರವನ್ನೇ ಹತ್ತಿಕ್ಕುವ ನಿಯಮವಿದು ಎನಿಸಿದರೂ ಡಿಜಿಟಲ್ ಯುಗವೆಂದು ಕರೆಸಿಕೊಳ್ಳುವ ಪ್ರಸ್ತುತ ಕಾಲದಲ್ಲಿ ಕನಿಷ್ಠ ವಿದ್ಯಾರ್ಹತೆಗೂ ಜಿಪುಣುತನವೇತ್ತಕ್ಕೆ ಎಂದನಿಸದಿರದು ನಮಗೆ.

ಆದರೆ ಇವೆಲ್ಲದರ ಮದ್ಯೆ ಉದ್ಭವವಾದ ಮತ್ತೊಂದು ಪ್ರೆಶ್ನೆ, ಕನಿಷ್ಠ ವಿದ್ಯಾಹರ್ತೆ ಕೇವಲ ಪಂಚಾಯತಿ ಗ್ರಾಮಸ್ಥರಿಗೇಕೆ ಎಂಬುದು? ಗೊತ್ತು ಗುರಿ ಇಲ್ಲದ, ಯಾವುದೇ ಅತ್ಯುನ್ನತ ವಿದ್ಯಾರ್ಹತೆಯೂ ಇಲ್ಲದೆ ಗುಡಿಸಿಲಿನಿದ್ದವ ಒಮ್ಮೆ MLAಯೋ ಅಥವಾ MPಯೋ ಆದರೆ ಕಣ್ಣಿಗೆ ಕುಕ್ಕುವಂತಹ ರಾಜರಮನೆಗಳನ್ನು ನಿರ್ಮಿಸಿಕೊಂಡು ಮಧ್ಯರಾತ್ರಿಯ ಶ್ರೀಮಂತನಾಗಿಬಿಡುತ್ತಾನೆ. ಹೀಗೆ ಕೇವಲ ಹಣಕ್ಕಾಗೇ ರಾಜಕೀಯ ಎಂದು ಮೆರೆಯುವ ಇವರುಗಳಿಗ್ಯಾಕೆ ಕನಿಷ್ಠ ವಿದ್ಯಾಹರ್ತೆ ಎಂಬುದು ಅನ್ವಹಿಸುವುದಿಲ್ಲ? ತಮ್ಮ ತಮ್ಮ ಕ್ಷೇತ್ರಗಳ ಲಕ್ಷಾಂತರ ಜನರ ನಾಳಿನ ದಿನಗಳ ಬದುಕನ್ನು ಕಟ್ಟಬೇಕಾದ, ಏರಿಳಿತವಿರುವ ದೇಶದ ಎಕಾನಮಿಯಲ್ಲಿ ತನ್ನ ಕ್ಷೇತ್ರವನ್ನು ಸಂಬಾಳಿಸಿಕೊಂಡು ಮೇಲೆತ್ತುವ ಮಹೋನ್ನತ ಜವಾಬ್ದಾರಿಯ ವ್ಯಕ್ತಿಗೆ ಕೊನೆ ಪಕ್ಷ ಒಂದು ಡಿಗ್ರಿಯ ಆಧಾರವೂ ಬೇಡವೇ? ಅಲ್ಲೆಲ್ಲೋ ಕೂಲಿ ನಾಲಿ ಮಾಡಿಕೊಂಡು ಜೀವನಸಾಗಿಸುವ ಜನರಿಗಾದರೆ ಸಿಡಿಲು ಬಂದೆರಗಿದಂತೆ ಪ್ರತ್ಯಕ್ಷವಾಗಿಬಿಡುವ ನೀತಿ ನಿಯಮಗಳು, ನಾನೆ ರಾಜ ಎಂಬಂತೆ ಗಸ್ತು ಹೊಡೆಯುವ ಹಲವು ಮಂದಿ ರಾಜಕಾರಣಿಗಳಿಗೇಕಿಲ್ಲ? ಕಾನೂನು ಎಲ್ಲರಿಗೂ ಒಂದೇಯಾಗುವುದಾದರೆ ಪಂಚಾಯತಿ ಹಾಗು ಪಾರ್ಲಿಮೆಂಟ್ ಗೇಕೆ ಅಂತರ?

ಸ್ವಾತಂತ್ರ್ಯ ಬಂದ ಹೊಸತರಲ್ಲಿಯೇ ಆಗಿನ ಚುನಾವಣಾಯೋಗದ ಅಧ್ಯಕ್ಷರು ಪ್ರಧಾನಿಯಾದವರಿಗೆ ಈ ಒಂದು ವಿಷಯದ ಬಗ್ಗೆ ಪತ್ರಬರೆದು ‘ಮಿನಿಮಮ್ ಎಜುಕೇಷನಲ್ ಕ್ವಾಲಿಫಿಕೇಷನ್’ ಎಂಬುದು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಕನಿಷ್ಠ ಅರ್ಹತೆಗಳಲ್ಲೊಂದಾಗಲಿ ಎಂದಿದ್ದರು. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಪ್ರತಿಯೊಬ್ಬ ಭಾರತೀಯನ ಸಂವಿಧಾನಿಕ ಹಕ್ಕುಗಳಲ್ಲೊಂದು, ಆತ ಕೂಡಿ ಕಳೆಯುವ ಲೆಕ್ಕವನ್ನೇ ತಿಳಿಯದಿರುವ ಗಾಂಪನೆ ಆದರೂ ಪರವಾಗಿಲ್ಲ ದೇಶದ ಕೋಟ್ಯಾನುಕೋಟಿ ಜನರ ಜೀವನವನ್ನು ನಿರ್ಧರಿಸುವ ನಾಯಕನಾಗಲು ಅರ್ಹ ಎಂಬ ವಾದ ಸರಣಿಯೊಂದಿಗೆ ಆ ಯೋಚನೆಗೆ ಇತೀಶ್ರಿ ಹಾಡಲಾಯಿತು! ಪ್ರಸ್ತುತ ಸ್ಥಿತಿಗತಿಗಳನ್ನು ನೋಡಿದರೆ ಸದ್ಯಕಂತೂ ಇಂತಹದೊಂದು ಕಾನೂನು ದೇಶದ ಉದ್ದಗಲಕ್ಕೂ ವಿಸ್ತರಿಸುವ ಯಾವುದೇ ಸೂಚನೆಗಳು ಗೋಚರಿಸುತ್ತಿಲ್ಲ. ಒಂದು ವೇಳೆ ಇಂತಹ ಕಾನೂನುಗಳು ಜಾರಿಗೆ ಬಂದರೂ ಮೊದಲನೆಯದಾಗಿ, ಕಷ್ಟ ದುಃಖಗಳೊಟ್ಟಿಗೆ ಜೀವನವನ್ನು ಸವೆಸಿ, ಶಾಲಾ ಕಾಲೇಜುಗಳ ಮೆಟ್ಟಿಲನ್ನೂ ತುಳಿಯದೆ ಜೀವನದಲ್ಲಿ ಮಹೋತ್ತಮವಾದ ಏನನ್ನಾದರೂ ಸಾಧಿಸಬೇಕಾದರೆ ಡಿಗ್ರಿಯೊಂದೇ ಅಸ್ತ್ರವಲ್ಲ ಎಂದು ಸಾಬೀತುಪಡಿಸಿದ ಅದೆಷ್ಟೋ ಹಳ್ಳಿಯ ನಾಯಕರು ನೆನೆಗುದಿಗೆ ಬೀಳುತ್ತಾರೆ. ಜಾರಿಗೊಳಿಸದೆ ಹೋದರೆ ರಾಜಕೀಯವನ್ನೇ ಒಂದು ಬ್ಯುಸಿನೆಸ್ ಎಂದು ಅರಿತಿರುವ ಅದೆಷ್ಟೋ ರಾಜಕಾರಣದ ಪುಡಾರಿಗಳು ಇಂತಹ ಸಾಧಾರಣ ಜ್ಞಾನವನ್ನು ಗಳಿಸಿರುವ ನೂರಾರು ಗ್ರಾಮ ರಾಜಕಾರಣದ ನಾಯಕರ ಕಣ್ಣಿಗೆ ಮಣ್ಣೆರೆಚುತ್ತಾರೆ. ಇದಕೊಂಡು ಸೂಕ್ತ ಪರಿಹಾರ, ಮೊದಲು ವಿದ್ಯಾರ್ಹತೆಯನ್ನು ಎಲ್ಲರಿಗೂ ಕಡ್ಡಾಯಗೊಳಿಸಿ ನಂತರ ಇಂತಹ ನಿಯಮಗಳ ಜಾರಿಯೆಡೆಗೆ ಒಲವುತೋರುವುದು. ಅಂದು ದೇಶ ಬೆಳೆಯುತ್ತಿರುವಾಗಲೇ ‘ಎಜುಕೇಶನ್ ಫಸ್ಟ್, ಪವರ್ ಇಸ್ ನೆಕ್ಸ್ಟ್’ ಎಂಬೋದು ಕಾನೂನನ್ನು ಜಾರಿಗೊಳಿಸಿದ್ದರೆ ಸಂವಿಧಾನಿಕವಾಗಿಯೇ ವಿದ್ಯಾವಂತ ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿಯುತ್ತಿದ್ದರು, ನಾಳಿನ ಏಳಿಗೆಯ ದಿನಗಳನ್ನು ಅಂದೇ ಕಾಣುತ್ತಿದ್ದರು.

ಪ್ರಸ್ತುತ ರಾಜಕಾರಣಿಗಳು ಹಾಗು ರಾಜಕಾರಣಗಳನ್ನು ನೋಡಿದಾದ ಈಗೊಂದು ಕಾನೂನು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎನಿಸದಿರದು. ರಾಜಕೀಯ/ಸಮಾಜಸೇವೆ ಎಂದರೆ ಕೇವಲ ರೆಸಾರ್ಟ್, ಕುದುರೆ ವ್ಯಾಪಾರ, ಹೈಜಾಕ್ , ಜಾತಿ ಹಾಗು ಪಂಗಡ ಇತ್ಯಾದಿ ಇತ್ಯಾದಿ ಪದಗಳೇ ಆಗಿಹೋಗಿರುವಾಗ ಸಮಸ್ತ ಜನರ ಏಳಿಗೆ ಹಾಗು ಪಾರದರ್ಶಕ ನಡತೆಯೇ ಪ್ರತಿಯೊಬ್ಬ ರಾಜಕಾರಣಿಯ ಏಕೈಕ ಮಾರ್ಗ ಎಂಬ ಮಾತುಗಳು ಇಂದು ಕೇವಲ ಪುಸ್ತಕದ ಬದನೇಕಾಯಿಯಾಗಿವೆ. ಒಂದು ತಾಲೂಕಿನ ಜನಪ್ರಧಿನಿಧಿಯಾದವರನ್ನು ಅಪರಾಧಿಗಳಂತೆ ಹೋಟೆಲ್ ಒಂದರಲ್ಲಿ ಕೂಡಿಹಾಕಿ ಕಾಪಾಡಿಕೊಳ್ಳುವ ರಣತಂತ್ರಕ್ಕೆ ರಾಜಕಾರಣವೆನ್ನಬೇಕೋ ಅಥವಾ ಸಂತೆಯಲ್ಲಿ ನೆಡೆಯುವ ತರಕಾರಿ ವ್ಯಾಪಾರ ಎನ್ನಬೇಕೋ ತಿಳಿಯದು. ಆತ ನೂರಾರು, ಲಕ್ಷಾಂತರ ಜನರಿಂದ ಆಯ್ಕೆಯಾದ ಜನಪ್ರತಿನಿಧಿಯೇ ಆಗಿದ್ದರೆ ಯಾವುದೇ ಕಾರಣಕ್ಕೂ ಹಣದ ಆಮಿಷಕ್ಕೆ ಬಲಿಯಾಗದೆ, ಬರುವ ಸವಾಲುಗಳೆಲ್ಲವನ್ನು ದೈರ್ಯದಿಂದ ಎದುರಿಸಿ ತಾನೊಬ್ಬ ಜನಪರನಾದ ನಿಯತ್ತಿನ ರಾಜಕಾರಣಿ ಎಂದು ತೋರಿಸಿಕೊಳ್ಳುತ್ತಿದ್ದ. ಆದರೆ ಹಣದ ಮೇಲಿನ ಆಮಿಷಕ್ಕೆ ಬಲಿಯಾಗುವ ಜೊಲ್ಲುಬುರುಕರು ಪ್ರತಿಯೊಬ್ಬರೂ ಎಂದು ತಿಳಿದಿರುವ ಮೇಲಿನವರು ರಾಜಕೀಯದ ಬಿಸಿನೆಸ್ ನ ಗಾಳವನ್ನು ಅದಕ್ಕನುಗುಣವಾಗಿಯೇ ನೆಡೆಸುವರು. ಇನ್ನು ಇಂತಹ ರಾಜಕಾರಣಿಗಳಿಂದ ಅದೆಂತಹ ದೇಶಸೇವೆ ಅಥವಾ ಸಮಾಜಸೇವೆಯನ್ನು ನಿರೀಕ್ಷಿಸಲು ಸಾಧ್ಯವುಂಟು? ಆದರೆ ಕನಿಷ್ಠ ವಿದ್ಯಾಹಾರ್ಹತೆಗೂ ಕಳಕಿಂತರಹಿತ ರಾಜಕಾರಣಕ್ಕೂ ಎಲ್ಲಿಯ ಸಂಬಂಧ ಎನಿಸಬಹುದು. ನಿಜ, ಗೋಸುಂಬೆ ಬಣ್ಣ ಬದಲಿಸಿದ ಮಾತ್ರಕ್ಕೆ ತನ್ನ ಇರುವಿಕೆಯನ್ನು ಕಾಣೆಯಾಗಿಸಿಕೊಳ್ಳಲಾಗುವುದಿಲ್ಲ. ಅಂತೆಯೇ ಜನರ ಬೆವರ ಹಣವನ್ನು ಹೀರಿ ಕೋಟ್ಯಧಿಪತಿಗಳಾಗುವ ರಾಜಕಾರಣಿಗಳು ಅದೆಷ್ಟೇ ವಿದ್ಯಾವಂತರಾದರೂ ಅಷ್ಟೆಯೇ.

ಎಲ್ಲೋ ಒಂದೆಡೆ ವಿದ್ಯಾರ್ಹತೆ ಇರುವ ರಾಜಕಾರಣಿಗಳಿಗೂ, ಅದರಿಂದ ವಿಮುಖರಾದವರಿಗೂ ಒಂದು ದೊಡ್ಡ ಮಟ್ಟಿನ ವ್ಯತ್ಯಾಸವೆಂಬುದು ಇದ್ದೇ ಇರುತ್ತದೆ. ಆಸೆಬುರುಕ ಮನಸ್ಥಿತಿಯನ್ನು ಒಡೆದುರುಳಿಸಿ ಜನಪರ ಕಾಳಜಿಯ ವಿಷಯಗಳು ಇಂತಹ ಓದಿನಲ್ಲಿ ಸಿಕ್ಕಿರಬೇಕು. ಕಾನೂನು ಕಟ್ಟಳೆಗಳನ್ನು ಮಾಡುವಾಗ ಸಮಸ್ತ ಆಗು-ಹೋಗುಗಳ ಪರಿಚಯ ಇರುವ/ತಿಳಿದಿರುವ ವ್ಯಕ್ತಿಗಳ ಮುಖೇನ ಆಗಬೇಕು. ವಿಪರ್ಯಾಸದ ವಿಷಯವೆಂದರೆ ಇಂತಹ ಚಿಂತನೆ ಹಾಗು ಚಿಂತಕರು ಕೇವಲ ಪುಸ್ತಕ, ಕಥೆ, ಕವನಗಳನ್ನು ಬರೆದು ಮಾತ್ರ ತಮ್ಮ ಕೂಗನ್ನು ಹೊರಹಾಕುತ್ತುರಿವುದು. ಇಂತಹ ಉತ್ಕೃಷ್ಟ ವಿದ್ಯಾಹಾರ್ಹತೆ ಇರುವ ಚಿಂತಕರು, ವಿಚಾರವಂತರು ಹೆಚ್ಚಾಗಿ ರಾಜಕೀಯದೊಳಗೆ ಬರುವುದಿಲ್ಲ. ಬಂದರೂ ನೂರಾರು ಅಲ್ಪಮತಿಗಳ ಕಾಟಕ್ಕೆ ಬೇಸತ್ತು ಹಿಂದೆ ಸರಿಯುವರು. ಇನ್ನೂ ಕೆಲವೊಮ್ಮೆ ಹಣದ ಆಸೆಗೋ, ಮೀಸಲಾತಿಯ ಕನಸಿಗೂ ಅಥವಾ ಇನ್ಯಾವುದೋ ಕಾರಣಕ್ಕೋ ಜನರೇ ಇಂಥವರನ್ನು ರಾಜಕಾರಣಕ್ಕೆ ಬಾರದಂತೆ ನೋಡಿಕೊಳ್ಳುತ್ತಾರೆ! ಶಿವರಾಂ ಕಾರಂತರ ಜೀವನವೇ ಇದಕೊಂಡು ಸ್ಪಷ್ಟ ಉದಾಹರಣೆ. ಎಲ್ಲಕಿಂತ ಮೇಲಾಗಿ ಓದಿಗಾಗಿ ರಾಜಕೀಯವೇ ಹೊರತು ರಾಜಕೀಯಕ್ಕಾಗಿ ಓದು ಎಂಬಂತಾಗಬಾರದು. ಆದರೆ ಜನರಿಂದ, ಜನರಿಗಾಗಿ, ಜನಗಳಿಗೋಸ್ಕರ ತಾವುಗಳೆಂಬ ನಿಜವಾದ ಭಾವನೆ ಎಲ್ಲಿಯವರೆಗೂ ಎಲ್ಲರಲ್ಲಿಯೂ ಬರುವುದಿಲ್ಲವೋ ಅಲ್ಲಿಯವರೆಗೂ ಹಾವೂ ಸಾಯುವುದಿಲ್ಲ , ಕೋಲೂ ಮುರಿಯುವುದಿಲ್ಲ.

Thursday, August 3, 2017

ಬೇಲಿಯೇ ಎದ್ದು ಹೊಲ ಮೇಯುವ ಹೊತ್ತಿನಲ್ಲಿ....

'Little thieves are hanged, but great ones escape' ಎಂಬೊಂದು ಗಾದೆಯಿದೆ. ಅಕ್ಕಿ ಕದ್ದ ಕಳ್ಳ ಸಿಕ್ಕಿಕೊಂಡರೂ, ಆನೆ ಕದ್ದವನನ್ನು ಹಿಡಿಯಲಾಗದು ಎಂಬಂತೆ. ಪ್ರಸ್ತುತ ಮಧ್ಯಪ್ರಾಚ್ಯದ ದೇಶವಾದ ಕತಾರ್ ಕೂಡ ಅಕ್ಷರ ಸಹ ಈವೊಂದು ಗಾದೆಯ ಮಾತಿನಂತೆಯೇ ದಿನಕಳೆಯುವಂತಾಗಿದೆ. ಇಲ್ಲಿ ಸಣ್ಣ ಕಳ್ಳನ ಹಣೆಪಟ್ಟಿ ಕತಾರ್ ನದಾದರೆ, ಅನೆಕಳ್ಳನ ಹಣೆಪಟ್ಟಿ ಸೌದಿ ಹಾಗು ಅದರ ಮಿತ್ರಪಡೆಗಳದ್ದು ಎನ್ನಬಹುದು. ಕಳೆದ ಜೂನ್ 5 ರ ರಾತ್ರಿ ಮುಗಿದು ಹಗಲು ಮೂಡುವುದರೊಳಗೆ ಸೌದಿ ಅರೇಬಿಯಾ, ಬಹರೇನ್, ಯುಎಇ ಹಾಗು ಈಜಿಪ್ಟ್ ದೇಶಗಳು ಒಟ್ಟಾಗಿ ಮೈಲಿಗೆಯಾದ ವ್ಯಕ್ತಿಯನ್ನು ಊರಿನಿಂದ ಹೊರದಬ್ಬುವಂತೆ ಕತಾರ್ ನನ್ನು ತಮ್ಮ ಒಕ್ಕೊಟದಿಂದ ಹೊರಗಟ್ಟಿ ಸುದ್ದಿಮಾಡಿದವು. ಕಳೆದ ಕೆಲ ದಶಕಗಳಲ್ಲೇ ಒಂದು ದೇಶವನ್ನು ಈ ಮಟ್ಟಿಗೆ ವಿವಿಕ್ತಗೊಳಿಸುವ ಪ್ರಕ್ರಿಯೆ ಇದೆ ಮೊದಲೆನ್ನಬಹುದು.

ಭಾರತದಂತೆಯೇ ಪರ್ಯಾಯ ದ್ವೀಪ ರಾಷ್ಟ್ರವಾಗಿರುವ ಕತಾರ್ ತನ್ನ ಅಷ್ಟೂ ಭೂಗಡಿಯನ್ನು ದೈತ್ಯ ಸೌದಿ ಅರೇಬಿಯದೊಂದಿಗೇ ಹಂಚಿಕೊಂಡಿದೆ. ಪ್ರಸ್ತುತ ನಿರ್ಬಂಧದ ಪರಿಣಾಮ ಪರ್ಶಿಯನ್ ಗಲ್ಫ್ ನ ಒಂದು ಬದಿಯ ಸಂಪೂರ್ಣ ನೆಲಸಂಪರ್ಕವೇ ಈ ದೇಶಕ್ಕೆ ಇಲ್ಲದಂತಾಗಿದೆ.

ಮಧ್ಯಪ್ರಾಚ್ಯದಲ್ಲಿನ ಅಷ್ಟೂ ದೇಶಗಳು ಎಷ್ಟು ಪ್ರಮಾಣದಲ್ಲಿ ಕಚ್ಚಾ ತೈಲವನ್ನು ವಿದೇಶಗಳಿಗೆ ರಫ್ತ್ತು ಮಾಡುತ್ತಾವೆಯೋ ಅಷ್ಟೇ ಪ್ರಮಾಣದಲ್ಲಿ ದಿನನಿತ್ಯದ ಆಹಾರ ಪದಾರ್ಥಗಳನ್ನು ಇತರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತವೆ. ಪರಿಮಾಣ ನೆರೆಯ ದೇಶಗಳೂಡಗಿನ ಮೃದುವಾದ ಸಂಬಂಧ ಅತಿಯಾಗಿಯೇ ಅವುಗಳಿಗೆ ಅವಶ್ಯವಾಗಿರುತ್ತದೆ. ಇನ್ನು ಸೌದಿ, ಬಹರೇನ್ ಹಾಗು ಯುಎಇ ದೇಶಗಳಿಂದ ಸುತ್ತುವರೆದಿರುವ ಕತಾರ್ ತಾನು ಆಮದು ಮಾಡಿಕೊಳ್ಳುವ ಅಷ್ಟೂ ಉತ್ಪನ್ನಗಳಿಗೆ ಇವಿಷ್ಟೇ ದೇಶಗಳ ನೆಲ ಹಾಗು ವಾಯುಮಾರ್ಗವನ್ನು ಬಳಸುತ್ತಿತ್ತು. ಪರಿಣಾಮ ಆಮದು ವೆಚ್ಚ ಅಷ್ಟೇನೂ ಹೆಚ್ಚಿರದೇ ಉತ್ಪನ್ನಗಳ ವೆಚ್ಚವೂ ಒಂದು ಬಗೆಯಲ್ಲಿ ಕಡಿಮೆಯೆನಿಸುತ್ತು. ಆದರೆ ಪ್ರಸ್ತುತ ಬಂದೆರಗಿದ ದಿಗ್ಬಂಧನದಿಂದ ಕತಾರ್ ನ ಜೋಡಣೆಗೆ ಉಳಿದಿರುವ ಏಕೈಕ ಮಾರ್ಗ ಜಲಮಾರ್ಗ. ಅದೂ ಸಹ ಸಾವಿರಾರು ಕಿಲೋಮೀಟರ್ ಬಳಸಿ ಬರಬೇಕಾದ ಅನಿವಾರ್ಯತೆ. ವಾಯುಮಾರ್ಗವೂ ಭಾಗಶಃ ಅಂತೆಯೇ. ಇನ್ನು ದಿನನಿತ್ಯದ ಅಗತ್ಯ ವಸ್ತುಗಳ ಪೂರೈಕೆಯಂತೂ ಮುಳ್ಳಿನ ಮೇಲಿನ ನೆಡೆತದಂತಾಗಿದೆ. ಸದ್ಯಕ್ಕೆ ಸಾವಿರ ಕಿಲೋಮೀಟರ್ಗಳಷ್ಟು ದೂರದಲ್ಲಿರುವ ಕುವೈತ್ ಹಾಗು ಒಮಾನ್ ದೇಶಗಳೇ ಪರಮಾಪ್ತ ನೆರೆಯ ರಾಷ್ಟ್ರಗಳು. ಕುಪಿತಗೊಂಡಿರುವ ದೇಶಗಳು ಹಾಗು ಕತಾರ್ ನ ನಡುವೆ ಮಧ್ಯವರ್ತಿಗಳ ಕೆಲಸ ಸದ್ಯಕ್ಕೆ ಈ ಎರಡು ದೇಶಗಳ ಮೇಲಿರುವ ಗುರುತರ ಜವಾಬ್ದಾರಿ.

ಕೇವಲ 25 ಲಕ್ಷ ಜನಸಂಖ್ಯೆಯ ಒಂದು ಪುಟ್ಟ ದೇಶವನ್ನು ಜಾಗತಿಕ ಮಟ್ಟದಲ್ಲಿ ಭಾಗಶಃ ಏಕಾಂಗಿಯಾಗಿ ನಡುನೀರಿನಲ್ಲಿ ಬಿಟ್ಟದ್ದಾದರೂ ಏತಕ್ಕೆ? ಆ ದೇಶವು ಭಯೋತ್ಪಾದನೆಗೆ ನೀಡುವ ಕುಮ್ಮಕ್ಕು ಎಂದು ಮೇಲಿಂದ ಮೇಲೆ ಕಂಡು ಬರುವ ವಿಷಯ. ಭಯೋತ್ಪಾದನೆಯ ವಿರೋಧದ ಪರವಾಗಿನ ಈ ನಿರ್ಧಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗಿ ಪ್ರಶಂಸೆಯನ್ನೇ ಗಳಿಸಿದರೂ ಏಕಾಏಕಿ ದೇಶವೊಂದರ ಮೇಲೆ ಅಷ್ಟದಿಗ್ಬಂಧನವನ್ನು ಹೇರಿದ ಇತರೆ ದೇಶಗಳಾದರೂ ಅದೆಷ್ಟರ ಮಟ್ಟಿಗೆ ಸಾಚಾಗಳು ಎಂಬುದೇ ಪ್ರಸ್ತುತ ಪ್ರೆಶ್ನೆ. ತಾಲಿಬಾನ್, ಲಷ್ಕರೆ ತೈಬಾ, ಅಲ್ಕೈದಾ ಭಯೋತ್ಪಾದಕ ಗುಂಪುಗಳಿಗೆ ಕುಮ್ಮಕ್ಕು ಕೊಡುವ ಸೌದಿ ಅರೇಬಿಯಾ, ವಿಶ್ವದ ಎಲ್ಲ ಬಗೆಯ ಚೋರ ಮಹಾರಥಿಗಳ ಸ್ವರ್ಗದಂತಿರುವ ಯುಎಇ, ಸರ್ಕಾರದ ವಿರುದ್ಧ ಧ್ವನಿಯೆತ್ತಿದರೆ ಗುಂಡಿನ ಮೂಲಕವೇ ಉತ್ತರಿಸುವ ಈಜಿಪ್ಟ್ ನಂತಹ ದೇಶಗಳ ಕರಾಳ ಇತಿಹಾಸದ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ವೀಕ್ಷಿಸಿದರೆ ನ್ಯಾಯ ಹಾಗು ಅನ್ಯಾಯದ ನಡುವಿರುವ ವ್ಯತ್ಯಾಸ ಸ್ಪಷ್ಟವಾಗಿ ತಿಳಿಯಬರುತ್ತದೆ.

ಕತಾರ್ನ ಸುದ್ದಿವಾಹಿನಿಯೊಂದು ಅಲ್ಲಿನ ದೊರೆ ಹಮದ್ ಅಲ್ ತಾನಿ ಇರಾನ್ ಹಾಗು ಇಸ್ರೇಲ್ ದೇಶಗಳನ್ನು ಹೊಗಳುತ್ತಿರುವ ಸುದ್ದಿಯೊಂದನ್ನು ಪ್ರಸಾರ ಮಾಡಿತ್ತು. ತನ್ನಷ್ಟೇ ಬಲಾಡ್ಯವಾಗುತ್ತಿರುವ ಇರಾನ್ ಹಾಗು ಭೂನಕ್ಷೆಯಲ್ಲಿ ಇಂಚಷ್ಟಿದ್ದರೂ ಪ್ರಪಂಚವನ್ನೇ ತನ್ನೆಡೆ ಸೆಳೆಯುತ್ತಿರುವ ಇಸ್ರೇಲ್ ನನ್ನು ಕಂಡ ನೆರಳಿಗೆ ಆಗದ ಸೌದಿ ಅರೇಬಿಯಾಕ್ಕೆ ತನ್ನ ಗುಂಪಿನಲೊಬ್ಬ ಆ ದೇಶದ ಪರವಾಗಿ ಮಾತನಾಡಿದ್ದು ಸಹಿಸದಾಯಿತು. ಅಲ್ಲದೆ ಕೆಲದಿನಗಳ ನಂತರ ಅದೇ ದೊರೆ ಇರಾನ್ ನ ಅಧ್ಯಕ್ಷ ಸ್ತಾನಕ್ಕೆ ಪುನರಾಯ್ಕೆಯಾದ ಹಸ್ಸನ್ ರೌಹಾನಿಗೆ ಫೋನಾಯಿಸಿ ಆತನಿಗೆ ಶುಭಹಾರೈಕೆಯನ್ನು ತಿಳಿಸುತ್ತಾನೆ. ಈ ವಿಷಯವೂ ಸೌದಿ ದೊರೆಯ ಕಿವಿಗೆ ಬಿದ್ದ ಕೂಡಲೇ ಕೆಂಡಾಮಂಡಲವಾಗಿ ಬುಸುಗುಡತೊಡಗಿದ ಆತ ತನ್ನೊಟ್ಟಿಗೆ ಇದರೆ ದೇಶಗಳ ರಾಜರುಗಳನ್ನೂ ಸೇರಿಸಿಕೊಂಡು ಅಲ್ಲೊಂದು ಇಲ್ಲೊಂದು ಬಿದ್ದಿದ್ದ ಹಳಸಿದ ವಿಷಯಗಳನ್ನು ಎಕ್ಕಿಕೊಂಡು ರಾಜತಾಂತ್ರಿಕವಾಗಿ ಕತಾರ್ ನನ್ನು ಹೊರಗಟ್ಟುತ್ತಾನೆ. ಕೂಡಲೇ ಎಚ್ಚೆತ್ತುಕೊಂಡ ಕತಾರ್ ವೆಬ್ಸೈಟ್ ನಲ್ಲಿ ಪ್ರಚಾರವಾದ ಈ ಎಲ್ಲ ಸುದ್ದಿಗಳು ಸುಳ್ಳೆಂದೂ, ವೆಬ್ಸೈಟ್ ಅನ್ನು ಯಾರೋ ಕಿಡಿಗೇಡಿಗಳು ಹ್ಯಾಕ್ ಮಾಡಿ ಇಂತಹ ವಿಷಯಗಳನ್ನೆಲ್ಲ ಪ್ರಸಾರಮಾಡಿದ್ದಾರೆ ಎಂದಿತು. ಅಷ್ಟರಲ್ಲಾಗಲೇ ಕತಾರ್ ನ ಈ ಕೂಗನ್ನು ಯಾವೊಂದು ದೇಶವೂ ಕೇಳುವ ಸ್ಥಿತಿಯಲ್ಲಿರಲಿಲ್ಲ.

ವೈಯಕ್ತಿಕ ಜಿಡಿಪಿ ಗಳಿಕೆಯಲ್ಲಿ ವಿಶ್ವದಲ್ಲೇ ನಂಬರ್ ಒನ್ ಎನಿಸಿರುವ ಕತಾರ್ ಈ ಎಲ್ಲ ಬೆಳವಣಿಗೆಯಿಂದ ಅಷ್ಟೇನೂ ಕುಂದಲಿಲ್ಲ. ಅದಾಗಲೇ ಇರಾನ್ ಹಾಗು ಟರ್ಕಿ ದೇಶಗಳ ಸಹಾಯ ಹಸ್ತಗಳು ದೇಶದ ಬೆಂಬಲಕ್ಕೆ ಬಂದಿವೆ. ಒಂದು ಬಗೆಯಲ್ಲಿ ಹೇಳುವುದಾದದರೆ ಈ ಬಹಿಷ್ಕಾರದಿಂದ ಕತಾರ್ ಗಿಂತಲೂ ಹೆಚ್ಚಿನ ನಷ್ಟ ಇತರೆ ದೇಶಗಳಿಗೆ ಆಗಲಿದೆ ಎಂದರೂ ಸುಳ್ಳಾಗದು. ಕತಾರ್ನರಾಜಧಾನಿ ದೊಹಾದಲ್ಲಿ ಮದ್ಯಪ್ರಾಚ್ಯದಲ್ಲೇ ಅತಿ ದೊಡ್ಡ ವಾಯುನೆಲೆಯನ್ನು ಹೊಂದಿರುವ ಅಮೇರಿಕಾಕ್ಕೆ ಈ ನಡೆ ತಲೆನೋವಾಗಿ ಪರಿಣಮಿಸಿದೆ. ದಶಕಗಳಿಂದ ಉತ್ತಮ ಸಂಬಂಧವನ್ನು ಹೊಂದಿರುವ ಕತಾರ್ ನ ಪರವಾಗಿ ಹೇಳಿಕೆ ನೀಡಿದರೆ ಸೌದಿ ಹಾಗು ಇತ್ತೀಚೆಗಷ್ಟೇ ಅತಿ ದೊಡ್ಡ ಶಸ್ತ್ರಾಸ್ತ್ರ ಗಳ ಒಪ್ಪಂದವನ್ನು ಮಾಡಿಕೊಂಡ ಸೌದಿಯ ಪರವಾಗಿ ಹೇಳಿದರೆ ಕತಾರ್ ಮುನಿಸಿಕೊಳ್ಳತೊಡಗಿವೆ. ಇದೆ ದ್ವಂದ್ವದ ಪ್ರತಿರೂಪ ಅಧ್ಯಕ್ಷ ಟ್ರಂಪ್ ನ ಇತ್ತೀಚಿನ ಕೆಲ ಟ್ವೀಟ್ಗಳಲ್ಲಿ ಕಾಣಬಹುದು. ಇನ್ನು ತನ್ನ 65% ನಷ್ಟು ನೈಸರ್ಗಿಕ ಅನಿಲವನ್ನು (LNG ) ಕತಾರ್ ನಿಂದಲೇ ಆಮದು ಮಾಡಿಕೊಳ್ಳುವ ಭಾರತಕ್ಕೂ ಇನ್ನು ಮುಂದೆ ಬೆಲೆ ಏರಿಕೆಯ ಬಿಸಿ ತಟ್ಟಬಹುದು.

ಸದ್ಯದ ಪರಿಸ್ಥಿತಯಲ್ಲಿ ಮಧ್ಯಪ್ರಾಚ್ಯದ ಈ ಒಳಜಗಳ ಕೂಡಲೇ ಶಮನವಾಗುವಂತೆ ಕಾಣುತಿಲ್ಲ. 2022 ರ ಫಿಫಾ ವಿಶ್ವಕಪ್ ಅನ್ನು ಆಯೋಜಿಸುವ ಯೋಜನೆಯನ್ನು ಹೊತ್ತಿರುವ ದೇಶಕ್ಕೆ ನೆರೆಯ ರಾಷ್ಟ್ರಗಳ ಈ ದಿಗ್ಬಂದನ ಅದೆಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದನ್ನೂ ಕಾದು ನೋಡಬೇಕಿದೆ. ಸೌದಿ ಹಾಗು ಇತರೆ ದೇಶಗಳು ಒಂದಿಷ್ಟುದ್ದದ ಪಟ್ಟಿಯನ್ನು ಮಾಡಿ ಅವುಗಳಿಗೆ ಬದ್ದವಾಗುವಂತೆ ಕತಾರ್ ನನ್ನು ಒತ್ತಾಯಿಸುತ್ತಿವೆ. ಭಯೋತ್ಪಾನೆಯನ್ನು ಪ್ರಚೋದಿಸುವ ದೇಶಗಳ ವಿರುದ್ಧ ಇಂತಹ ನಿರ್ಧಾರಗಳು ಪ್ರಸ್ತುತ ಸ್ಥಿಯಲ್ಲಿ ತುಂಬಾ ಪರಿಣಾಮಕಾರಿಯಾದದ್ದು ಹಾಗು ಇದೆ ನೀತಿಯನ್ನು ಹೆಚ್ಚೆಚ್ಚು ದೇಶಗಳು ಭಯೋತ್ಪಾದನೆಯ ವಿರುದ್ದದ ಅಸ್ತ್ರವನ್ನಾಗಿ ಬಳಸಬೇಕು. ಆದರೆ ಬೇಲಿಯೇ ಎದ್ದು ಹೊಲವನ್ನು ತಿಂದಂತೆ ಇಲ್ಲಿ ತಪ್ಪೆಸಗುವ ದೇಶಗಳೇ ಬೇರೆಯವರ ತಪ್ಪನು ಪತ್ತೆಹಚ್ಚಿ ನ್ಯಾಯಮೂರ್ತಿಗಳಂತೆ ವರ್ತಿಸುವುದು ಮಾತ್ರ ಖಂಡನೀಯ ವಿಚಾರ.