Saturday, June 27, 2020

ಪಯಣ - 8

'ಅವಳಜ್ಜಿ .. ಕೊಬ್ಬ್ ನೋಡು .. ಏನ್ ಇವ್ಳು ಶಕೀರಾನ ತಂಗಿ .. ಅಟ್ಟಿಟ್ಯೂಡ್ ಬೇರೆ ..' ಕೆಂಡದ ಮೇಲಿನ ತುಂಡನ್ನು ತಿನ್ನಲೋಗಿ ಮೂತಿ ಸುಟ್ಟ ನಾಯಿಮರಿಯಂತೆ ನನ್ನ ಪಕ್ಕಕೆ ಕೂತು ಕುಯಿಂಗುಡತೊಡಗಿದ ಲೋಕೇಶ.

ಮದ್ಯಾಹ್ನದ ಆ ಫ್ರೀ ಕ್ಲಾಸ್ಸಿನಲ್ಲಿ ಹೀರೋಗಿರಿಯನ್ನು ತೋರಿಸುವ ಅಮಲಿನಲ್ಲಿ ಶಾರುಖ್ ಖಾನ ನಡಿಗೆಯನ್ನು ನಡೆಯುತ್ತಾ ತನ್ನ ಕ್ರಶ್ ಉಷಾಳ ಮುಂದೋಗಿ ನಿಂತ. ಆಕೆಯ ಮುಂದೆ ನಿಲ್ಲುವ ಧೈರ್ಯಕ್ಕೋ ಅಥವಾ ಸಾಹಸಕ್ಕೋ ಏನೋ ಇಡೀ ಕ್ಲಾಸೇ ಒಮ್ಮೆ ನಿಶಬ್ದವಾಯಿತು, ಆತನನ್ನೇ ಧಿಟ್ಟಿಸತೊಡಗಿತು. ಲೊಕೇಶನ ಆತ್ಮವಿಶ್ವಾಸ ನಾನು ಅಗಿದು ಹೊರಬಿಡುತ್ತಿದ್ದ ಚೀವಿಂಗ್ ಗಮ್ನ ಗುಳ್ಳೆಗಿಂತಲೂ ದೊಡ್ಡದಾಯಿತು.

'ಏ ಉಷಾ.. ನೆನ್ನೆ ಮಾಡಿದ್ ಮ್ಯಾಥಮೆಟಿಕ್ಸ್ ಕ್ಲಾಸ್ಸಿನ ನೋಟ್ಸ್ ಕೊಡೆ..' ಎಂದು ತನ್ನ ಮನೆಯಾಕೆಯನ್ನು ಕೇಳುವಂತೆ ಎದೆಯುಬ್ಬಿಸಿಕೊಂಡು ಕೇಳಿದ.

ಕೆಲಕ್ಷಣ ಆತನ ವಿಚಿತ್ರ ಬಂಗಿಯನ್ನು ಮೇಲಕ್ಕೂ ಕೆಳಕ್ಕೂ ನೋಡಿದ ಆಕೆ,

'ಹೋಗಲೋ ಪೊರ್ಕಿ .. ಮುಖ ನೋಡ್ಕೋ..ನೋಟ್ಸ್ ಕೊಡೆ ಅಂತೇ.. ಥು! ' ಎಂದು ಉಗಿದಳು.

ಆಕೆಯ ಆ ಉತ್ತರವನ್ನು ಕೇಳಿ ಕ್ಷಣಮಾತ್ರದಲ್ಲಿ ಲೊಕೇಶನ ಮುಖ ಕೆಂಪೇರಿತು. ಆಕೆಯ ಪಕ್ಕದಲ್ಲಿದ್ದ ಮೂವರು ಹುಡುಗಿಯರನ್ನು ಬಿಟ್ಟರೆ ಇಡೀ ಕ್ಲಾಸಿಗೆ ಕ್ಲಾಸೇ ಗೊಳ್ಳೆಂದು ನಕ್ಕಿತು. ನಮ್ಮ ಏಕೈಕ ಗೆಳೆಯನಿಗೆ ತುಂಬಿದ ಕ್ಲಾಸ್ ರೂಮಿನಲ್ಲಿ ನೆಡೆದ ಅವಮಾನದಿಂದ ಪಾರುಮಾಡುವುದ ಬಿಟ್ಟು ನಾನು ಹಾಗು ಆದಿ ನಕ್ಕರು ನಗದಂತೆ ನಟಿಸಿದೆವು. ಆ ನಗುವಿನ ತಡೆಯುವಿಕೆಯಲ್ಲಿ ನನ್ನ ಹೊಟ್ಟೆ ತಡೆಯಲಾರದಷ್ಟು ನೋಯತೊಡಗಿತು. ಆದಿ ಸುಸ್ಸು ಎಂದು ನಾಟಕವಾಡಿ ಕಾರಿಡಾರಿನ ಬಳಿಗೋಗಿ ಸಾಧ್ಯವಾದಷ್ಟು ನಗಾಡಿದ ಹಾಗು ಖುಷಿಗೆ 'Hi..' ಎಂಬ ಮೆಸೇಜನ್ನು ಕಳಿಸಿ ತನ್ನದೇ ಬೇರೊಂದು ಲೋಕದೊಳಗೆ ಮುಳುಗಿದ!

'ಬೆಳ್ಳಗೆ, ತೆಳ್ಳಗೆ ಈದ್ಬಿಟ್ರೆ ಏನ್ ಊರವ್ರೆಲ್ಲ ಪುಕ್ಸಾಟೆ ಬಿದ್ದಿರ್ತಾರೆ.. ನನ್ನ್ ಗದ್ದೆ ಒಳಗೆ ತಳ್ಳಿ ಬೆಳಗಿಂದ ಸಂಜೆವರ್ಗು ಗೇಯ್ಸ್ಬೇಕು .. ಲುಕ್ ನೋಡು .. ಅವಳಜ್ಜಿ ಪಿಂಡ.. ಸಿಗ್ಲಿ ತಾಳು..' ಎಂದು ತನ್ನೊಳಗೆ ಏನೇನೋ ಗುನುಗಿಕೊಳ್ಳತ್ತಾ ನನ್ನ ಪಕ್ಕಕ್ಕೆ ಬಂದು ಕುಳಿತ. ಕೆಲವೊಮ್ಮೆ ಎದ್ದು ನಂತರ ಕೂತೂ ಇನ್ನೇನು ಒಂದೇ ಕುಪ್ಪಳದಲ್ಲಿ ಆಕೆಯ ಬಳಿಗೆ ನೆಗೆದು ಆಕೆಯ ಕೆನ್ನೆಯ ಮೇಲೊಂದು ಛಟಾರನೆ ಭಾರಿಸುವವನಂತೆ ಆಡುತ್ತಿದ್ದ. ನಂತರ ಸ್ವಲ್ಪ ಹೊತ್ತು ಸುಮ್ಮನಾಗಿ, 'ಇನ್ಮುಂದೆ ನೋಡ್ತಾ ಇರು .. ಅವಳನ್ನ ಹೆಂಗ್ ಆಟ ಆಡಸ್ತೀನಿ ಅಂತ .. ಲೆಕ್ಚರರ್ ಮಗ್ಳು ಅಂತ ತುಂಬಾನೇ ಇದೆ.. ' ಎಂದು ಎದ್ದು ಕ್ಲಾಸಿನಿಂದ ಬಿರಬಿರನೆ ಹೊರನೆಡೆದ. ಮೊದಲೇ ಹಠಮಾರಿ. ಮುಂದೇನು ಮಾಡುವನೋ ಎಂದು ನನಗೆ ಕೊಂಚ ಭಯಮೂಡತೊಡಗಿತು. ಅದೇನೇ ಆಗಲಿ ತುಂಬಿದ ಕ್ಲಾಸಿನಲ್ಲಿ ಹುಡುಗನೊಬ್ಬನೊಟ್ಟಿಗೆ ಈ ರೀತಿ ವರ್ತಿಸುವುದು ಸುತರಾಂ ಸರಿಯಲ್ಲ ಎಂದೂ ಅನಿಸಿತು.

ಲೋಕೇಶ ಹೇಳುವಂತೆ ಅಂದ ಚೆಂದಗಳಿದ್ದ ಮಾತ್ರಕ್ಕೆ ಆಕೆಯ / ಆತನ ಮಾತುಗಳೆಲ್ಲವೂ ವೇದವಾಕ್ಯಗಳಾಗುತ್ತಾವೆಯೇ? ಇಲ್ಲವಾದರೆ ಅದು ಯಾರಿಗೂ ಬೇಡದ ಕಸವಾಗುತ್ತದೆಯೇ?

ಲೋಕೇಶ ಕ್ಲಾಸ್ ರೂಮಿನಿಂದ ಹೊರಬಂದವನೇ ದೂರದ ದುಡ್ಡವನ್ನು ಧಿಟ್ಟಿಸುತ್ತ ಕಾರಿಡಾರಿನ ಮೂಲೆಯಲ್ಲಿ ನಿಂತ.

'ಏನಾಗಲ್ಲ ಬಿಡು ಮಚಿ.. ನೀನೂ ಸಹ ಆ ತರ ಹುಡ್ಗಿರ್ನ ಏಕವಚನದಲ್ಲಿ ಮಾತಾಡ್ಸೋದು ಸರಿ ಇರ್ಲಿಲ್ಲ' ಕೂಡಲೇ ಆತನನ್ನು ಹಿಂಬಾಲಿಸಿ ಬಂದ ನಾನೆಂದೆ.

ಲೋಕೇಶ ಮಾತನಾಡಲಿಲ್ಲ.

ಆತನ ಹೆಗಲನ್ನು ತಟ್ಟುತ್ತಾ 'ಹೋಗ್ಲಿ ಬಿಡಿ ಬಾಸ್.. ಸಂಜೆ ಬಿಯರ್ ಟ್ರೀಟ್ ನನ್ನ್ ಕಡೆಯಿಂದ.. ತಮ್ಮ್ ಎಲ್ಲ ಫ್ರಸ್ಟ್ರೇಷನ್ ಅವಾಗ ತೆಗಿರಂತೆ..’

ಬಿಯರ್ನ ಹೆಸರೆತ್ತಿದರೆ ಸಾಕು ಮಕ್ಕಳಂತೆ ಕುಣಿದು ಕುಪ್ಪಳಿಸುವ ಆತ ಅದಕ್ಕೂ ಏನನ್ನು ಉತ್ತರಿಸಲ್ಲಿಲ್ಲ. ಕೂಡಲೇ ಕ್ಲಾಸ್ ರೂಮಿನೊಳಗೋಗಿ ತನ್ನ ಬ್ಯಾಗನ್ನು ತೆಗೆದುಕೊಂಡು ರೂಮಿಗೆ ಹೊರಟೇ ಹೋದ. ಆತ ಅಷ್ಟು ಸೀರಿಯಸ್ ಆಗಿದ್ದನ್ನು ನಾನು ಕಂಡಿರುವುದು ಬಹಳ ಕಡಿಮೆಯೇ. ಆಗಾದಾಗಲೆಲ್ಲ ಆತ ತೆಗೆದುಕೊಳ್ಳುವ ನಿರ್ಧಾರಗಳು ಮಾತ್ರ ಸಾಮಾನ್ಯನಾದವನಿಗೆ ಅರಗಿಸಿಕೊಳ್ಳುವುದು ತುಸು ಕಷ್ಟವೇ. ನನಗೆ ಚಿಂತೆ ಕಾಡತೊಡಗಿತು.

ಇಷ್ಟೆಲ್ಲಾ ಆದರೂ ಬಿಸ್ಕಟ್ ಪ್ಯಾಕಿನ ಗಾತ್ರದ ತನ್ನ ಫೋನಿನಲ್ಲಿ ತಲೆಯ ಹೇನನ್ನು ಹುಡುಕುವಂತೆ ಮೆಸ್ಸೇಜುಗಳನ್ನು ಕುಟ್ಟುತ್ತಿದ್ದ ಆದಿಯ ತಲೆಯ ಮೇಲೊಂದು ಜೋರಾಗಿ ತಟ್ಟಿ ಕ್ಲಾಸ್ ರೂಮಿನೊಳಗೆ ಕರೆದುಕೊಂಡು ಓದೆ.




****




ನೀರವ ಮೌನದ ರಾತ್ರಿಯನ್ನು ಒಮ್ಮೆಲೇ ಕದಡಿದಂತೆ ಮಾಡಿತು ಲೊಕೇಶನ ಚೀರುವ ಸದ್ದು.

'ಲೇ ನಿನ್ನಜ್ಜಿ, ಬಾರೆ ಹೊರ್ಗೆ..' ಎಂದು 'ಬಾ' ಅಕ್ಷರವನ್ನು ಎರಡು ಸೆಕೆಂಡುಗಳಿಗೂ ಮಿಗಿಲಾಗಿ ಎಳೆದು ಅರಚಿದ ಸದ್ದು ತೆಪ್ಪಗೆ ತಮ್ಮ ಪಾಡಿಗೆ ಹಾಯಾಗಿ ಮಲಗಿದ್ದ ನಾಯಿಗಳನ್ನೂ ಜಾಗೃತಗೊಳಿಸಿತು. ಕುಡಿದ ಅಮಲಿನಲ್ಲಿ ಮೂಡಿದ ವಿಚಿತ್ರ ಸದ್ದಿಗೆ ಯಾವುದೊ ಮಹಾ ಜೀವಜಂತುವೊಂದು ಆಗಸದಿಂದ ಬಂದು ಬಿದ್ದಿರಬೇಕೆಂಬ ಭಯದಿಂದಲೋ ಏನೋ ಕೂಡಲೇ ಅವುಗಳ ಬೊಗಳುವಿಕೆಯ ಬುದ್ಧಿಯೂ ಕೊಂಚ ಯೋಚಿಸತೊಡಗಿದಂತಿತ್ತು.

'ಏನೇ .. ನಿಮ್ ಅಮ್ಮ ಮಗ್ಳುದು .. ಏನ್ ಕಾಲೇಜ್ ನಿಮ್ಮಪ್ಪಂದ .. ಏನ್ ನಕ್ರ ಗೂರೂ ಇವರ್ದು..'

'ಲೋಕಿ .. ಸುಮ್ನಿರೋ .. ಲೋಫರ್ .. ಗೊತ್ತಾದ್ರೆ ನಾಳೆ ಡಿಬಾರ್ ಆಗ್ತಿವಿ..' ಸ್ಥಿತಪ್ರಜ್ಞನಂತೆ ನಟಿಸುತ್ತಿದ್ದ ಆದಿ ಲೊಕೇಶನನ್ನು ತಡೆಯಲು ಪ್ರಯತ್ನಿಸುತ್ತಿದ್ದರೆ ನಾನು ಅದಾಗಲೇ ಆಕಾಶದ ನಕ್ಷತ್ರವನ್ನು ಎಣಿಸುವಂತೆ ತಲೆಯನ್ನು ಮೇಲೆತ್ತಿ ಅವರಿಬ್ಬರನ್ನು ಹಿಂದಿಕ್ಕಿ ಮುನ್ನೆಡಯತೊಡಗಿದ್ದೆ. ಆದಿ ತಡೆಯುವಂತೆ ನನ್ನ ಕೊರಳ ಪಟ್ಟಿಯನ್ನು ಹಿಡಿದು ಎಳೆದ. ಅದರ ರಭಸಕ್ಕೆ ನಾನು ದೊಪ್ಪನೆ ಆತನ ಮೇಲೆರಗಿ ಬಿದ್ದೆ.

'ಡೋಂಟ್ ವರಿ ಮಚಿ .. ಡಿಬಾರ್ ಆದ್ರೆ ನಾನ್ ನಿಂಗೆ ಕೆಲ್ಸ ಕೊಡ್ತೀನಿ.. ಗದ್ದೇಲಿ..’ ಎಂದು ಕೊಂಚ ಸುಮ್ಮನಾಗಿ ‘ಅಮ್ಮ ಮಗ್ಳು ಇಬ್ರನ್ನೂ ಅಲ್ಲಿ ಕೆಲ್ಸಕ್ಕೆ ಸೇರಿಸ್ಕೊಬೇಕು .. ನೀನೆ ಮೇಸ್ತ್ರಿ..' ಎಂದು ಆತ ಕಿಸಕಿಸನೇ ನಕ್ಕರೆ ಅತ್ತಕಡೆ ಮನೆಯೊಳಗಡೆಯ ಲೈಟುಗಳು ಒಂದೊಂದಾಗಿಯೇ ಹೊತ್ತಿಕೊಂಡವು. ಮನೆಯ ಲೈಟುಗಳ ಹೊಳಪು ಬಾಲಮುದುಡಿ ಕುಯಿಂಗುಡುತ್ತಿದ್ದ ನಾಯಿಗಳಿಗೆ ಎಲ್ಲಿಲ್ಲದ ಬಂಡ ಧೈರ್ಯವನ್ನು ತಂದುಕೊಟ್ಟವು. ಕೂಡಲೇ ಕಿವಿಯ ಟಮಟೆಯೇ ಹರಿದು ಹೋಗುವಂತೆ ಬೊಬ್ಬಿಟ್ಟ ಅವುಗಳ ಸದ್ದು ಇಡೀ ಪ್ರದೇಶದಲ್ಲಿ ಮಾರ್ದನಿಸತೊಡಗಿತು.

'ಆದಿ, ಯಾವ್ ಪ್ರಾಣಿಗಳೂ ಅವು .. ಹುಲಿಗಳ ಆತ್ಮ ಮೈಮೇಲೆ ಬಂದಿರೋ ಹಾಗೆ ಕೂಗ್ತಾ ಇದ್ದವಲ್ಲೋ' ಎಂದ ಲೋಕಿ ಇತ್ತ ತಿರುಗಿದರೆ ಆತನಿಗೆ ನಾವುಗಳು ನೆಲದ ಮೇಲೆ ಬಿದ್ದಿರುವುದು ತಿಳಿಯಲಿಲ್ಲ. ನಾವು ಅಲ್ಲಿಂದ ಓಡಿರಬೇಕೆಂದುಕೊಂಡ ಆತ, 'ಬಡ್ಡಿಮಕ್ಳ, ನಿಲ್ರೋ .. ಓಡ್ಬೇಡಿ' ಎಂದು ಆತನೂ ಓಡಲು ಅಣಿಯಾಗಿ ನನ್ನ ಕಾಲು ಆತನಿಗೆ ತಡೆಯಾಗಿ ಮುಗ್ಗರಿಸಿ ದೊಪ್ಪನೆ ನೆಲದ ಮೇಲೆ ಬಿದ್ದ.

ಅದಾಗಲೇ ಯಾರೋ ಒಳಗಿನಿಂದ ಹೊರಬಂದು ನಿಂತರು. ಬಹುಷಃ ಕಾಂಪೊಂಡಿನ ಗೋಡೆಗಳು ಎತ್ತರವಿದ್ದರಿಂದಲೋ ಏನೋ ನಾವುಗಳು ಕೆಳಗೆ ಬಿದ್ದು ಕೊಸರಾಡುತ್ತಿದ್ದದ್ದು ಅವರಿಗೆ ಕಾಣಲಿಲ್ಲ. ಆದಿ ಲೊಕೇಶನ ಬಾಯಿಯನ್ನು ತನ್ನ ಎರಡೂ ಕೈಗಳಿಂದ ಮುಚ್ಚಿ ಹಿಡಿದ ಸಾಹಸವಂತೂ ಅವರ್ಣನೀಯವಾದದ್ದು. ಒಂದೆರೆಡು ನಿಮಿಷ ಅಲ್ಲಿಯೇ ನಿಂತ ಅವರು ನಂತರ ಮನೆಯೊಳಗೇ ಹೋದರು. ಆದರೆ ಹೋಗುವ ಮುನ್ನ ಹುಚ್ಚು ರಕ್ಕಸರಂತೆ ಆಡುತ್ತಿದ್ದ ನಾಯಿಗಳೆರಡನ್ನೂ ಬಿಟ್ಟು ಏನೋ ವಿಚಿತ್ರವಾಗಿ ಅವುಗಳ ಕಿವಿಯಲ್ಲಿ ಹೇಳಿದರು. ಆ ನಾಯಿಗಳೂ ದೊಡ್ಡ ಗೇಟಿನ ಸರಳುಗಳ ಮದ್ಯೆಯೇ ಪವಾಡಸದೃಶ್ಯ ರೀತಿಯಲ್ಲಿ ನುಗ್ಗಿ ಹೊರಬಂದು ನಮ್ಮೆಡೆಗೆ ಬೌಗುಡತೊಡಗಿದವು. ಅಮಲಿನ ಅರೆಪ್ರಜ್ಞನಾಗಿದ್ದ ನಾನು ಉಳಿದ ಪ್ರಜ್ಞೆಯನ್ನು ಒಟ್ಟುಗೂಡಿಸಿ ನಾಯಿಗಳು ಅದೆಷ್ಟೇ ಕಿರುಚಾಡಿದರೂ ಅಲುಗಾಡಗೆ ಸುಮ್ಮನೆ ಇದ್ದುಬಿಡಬೇಕೆಂದು ಇಬ್ಬರಿಗೂ ಹೇಳಿದೆ. ಆಶ್ಚರ್ಯವೇನೋ ಎಂಬಂತೆ ಲೊಕೇಶನೂ ನನ್ನ ಮಾತನ್ನು ಕೇಳುವವನಂತೆ ಕಂಡ. ಜೀವವಿರದ ಕಲ್ಲಿನ ಬಂಡೆಗಳಂತೆ ಬಿದ್ದಿದ್ದ ನಮ್ಮನ್ನು ಕಂಡು ಅಕ್ಷರ ಸಹ ಕನ್ಫ್ಯೂಸ್ ಆದ ನಾಯಿಗಳು ಏನು ಮಾಡಬೇಕೆಂದು ತೋಚದೆ ಕಕ್ಕಾಬಿಕ್ಕಿಯಾಗಿ ಒಂದರ ಮುಖವನ್ನು ಮತ್ತೊಂದು ನೋಡತೊಡಗಿದವು. ರಾತ್ರಿಯ ನೀರವ ಮೌನ ಮತ್ತೊಮ್ಮೆ ಅಲ್ಲಿ ಆವರಿಸಿ ಇನ್ನೇನು ಅವುಗಳು ತಮ್ಮ ಸ್ವಸ್ಥಾನಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ಕಿಸಕ್ಕನೆ ನಕ್ಕ ಲೋಕೇಶ! ಬಲ ತಿರುವಿಕೊಂಡು ರಾಜನೆಡೆಯನ್ನು ಇಡುತ್ತಿದ್ದ ಅವುಗಳಿಗೆ ಲೊಕೇಶನ ನಗುವ ಸದ್ದು ನಮ್ಮ ಇರುವುಕೆಯನ್ನು ಖಾತ್ರಿ ಪಡಿಸಿತ್ತಲ್ಲದೆ ಆ ಸದ್ದು ನಮ್ಮನ್ನು ಮೂದಲಿಸಲು ಮೂಡಿರುವುದೇನೋ ಎಂಬಂತೆ ಕೆಂಡಾಮಂಡಲವಾದ ನಾಯಿಗಳು ನಮ್ಮನ್ನು ನುಂಗೇ ಬಿಡುತ್ತವೆನ್ನುವ ಧಾಟಿಯಲ್ಲಿ ಚೀರುತ್ತಾ ಮುನ್ನುಗ್ಗತೊಡಗಿದವು. ಅವುಗಳ ಆ ರುದ್ರವಾತಾರವನ್ನು ನೋಡಲಾಗದೆ ಎಂಬಂತೆ ನಾನು ಹಾಗು ಆದಿ ಜಾಗವನ್ನು ಒಂದೇ ಕುಪ್ಪಳದಲ್ಲಿ ಖಾಲಿಮಾಡಿದರೆ ಲೋಕೇಶ ಮಾತ್ರ ನೆಲದ ಮೇಲೆಯೇ ಕೂತಿದ್ದ. ನಾವುಗಳು ಅದೇನೇ ಅರಚಿದರೂ ಆತ ಅಲ್ಲಿಂದ ಕದಲಲಿಲ್ಲ. ಎರಡು ನಾಯಿಗಳಲ್ಲಿ ಬಲು ಎತ್ತರದ ಒಂದು ಇನ್ನೇನು ಬಂದು ಲೊಕೇಶನ ಭುಜಕ್ಕೆ ಬಾಯಿಯಾಕಿ ಎಳೆಯಬೇಕು ಎನ್ನುವಷ್ಟರಲ್ಲಿ ಕ್ಷಣಮಾತ್ರದಲಿ ಚಂಗನೆ ಎದ್ದುನಿಂತ ಲೋಕೇಶನ ಬಂಗಿಯನ್ನು ಕಂಡು ತಮ್ಮ ಅರಚುವ ಶಕ್ತಿಯನ್ನೆಲ್ಲ ಕಾಲಿಗೆ ಬ್ರೇಕ್ ಹಾಕುವುದರಲ್ಲಿ ಅವುಗಳು ವ್ಯಯಿಸಿದವು. ಲೋಕೇಶ ಯುದ್ಧಕ್ಕೆ ಅಣಿಯಾಗುವ ಉನ್ಮಾದಭರಿತ ಸೈನಿಕನಂತೆ ನಿಂತರೆ ಅವುಗಳಿಗೆ ಯಾವ ಪ್ರತಿಕ್ರಿಯೆಯನ್ನು ಕೊಡಬೇಕೆಂದು ಬಹುಷಃ ತಿಳಿಯಲಿಲ್ಲ. ಸಾಲದಕ್ಕೆ ಮನೆಯೊಳಗಿನ ಲೈಟುಗಳೂ ಆಗಲೇ ಆಫ್ ಆದವು. ಇಡೀ ಏರಿಯಾದಲ್ಲಿ ಕೇವಲ ಧ್ವನಿಯಿಂದಲೇ ಭಯವನ್ನು ಸೃಷ್ಟಿಸಿದ್ದ ನಾಯಿಗಳಿಂದು ಎಲ್ಲಿ ಇತರ ನಾಯಿಗಳ ಆಗಮವಾಗಿ ಅವುಗಳ ಮುಂದೆ ತಮ್ಮ ಹವಾ ಕಡಿಮೆಯಾಗುವುದೋ ಎಂಬಂತೆ ಕೂಡಲೇ ಅಲ್ಲಿಂದ ಜಾಗವನ್ನು ಕಿತ್ತವು.

ಮರುದಿನ ಬೆಳಗ್ಗೆ ಎದ್ದು ಒಬ್ಬರನೊಬ್ಬರ ಮುಖವನ್ನು ನೋಡಿದರೆ ಕರಿದ ಬೋಂಡಗಳಂತೆ ಅಲ್ಲಲ್ಲಿ ಕೆಂಪಗಿನ ಕಲೆಗಳು ಮೂಡಿದ್ದವು. ಬಟ್ಟೆಗಳೆಲ್ಲ ಹರಿದು ಕೊಳಕು ಮುದ್ದೆಯಾಗಿದ್ದವು. ಲೊಕೇಶನ ಕೈ ತೆರಚಿ ಕೆಂಪಾಗಿದ್ದರೆ ಹಣೆಯಲ್ಲಿ ರಕ್ತ ಹೆಪ್ಪುಗಟ್ಟಿದಂತೆ ಕಾಣುತ್ತಿತ್ತು. ನಾಯಿಗಳು ಅಲ್ಲಿಂದ ಜಾಗ ಕಿತ್ತ ಮೇಲೆ ಹೇಗೆ ರೂಮನ್ನು ತಲುಪಿದೆವು ಎಂದು ಯಾರೊಬ್ಬರಿಗೂ ನೆನಪಿಲ್ಲ. ಮೊದಲಬಾರಿಗೆ ಎಂಬಂತೆ ಬಿಯರ್ ಅನ್ನು ಬಿಟ್ಟು ಬೇರೆ ಬ್ರಾಂಡಿನ ಆಲ್ಕೋಹಾಲ್ ಗಳನ್ನು ಕುಡಿಯಲು ಪ್ರಯತ್ನಿಸಲೋಗಿ ಆದ ವಿಪತ್ತು ನಮ್ಮ ತಲೆಯನ್ನು ತಗ್ಗಿಸುವಂತೆ ಮಾಡಿತು. ಕಾಲೇಜಿನ ನಾಟಕ ಮಂಡಳಿಯ ಅಧ್ಯಕ್ಷನಗಾಗುವ ಅವಕಾಶವಿರುವ ನನಗೆ ಎಲ್ಲಿಯಾದರೂ ಈ ರೀತಿ ಕುಡಿದ ನಶೆಯಲ್ಲಿ ಯಾರಿಗಾದರೂ ಸಿಕ್ಕಿಕೊಂಡರೆ ಏನು ಗತಿ ಎಂದು ಯೋಚಿಸಿಯೇ ಮೈ ಜುಮ್ಮೆನಿಸಿತು. ಉಷಾ ತನಗೆ ಎಲ್ಲರ ಸಮ್ಮುಖದಲ್ಲೇ ಪೊರ್ಕಿ ಎಂದು ಬೈದ ಸಿಟ್ಟಿನ ಅಚಾತುರ್ಯದಲ್ಲಿ ಲೋಕೇಶ ಸಿಕ್ಕ ಸಿಕ್ಕಿದ್ದನ್ನೆಲ್ಲ ಕುಡಿದದ್ದು ನಮ್ಮ ಈ ಗತಿಗೆ ಕಾರಣವಾಯಿತು. ಆತ ತೊಟ್ಟ ಶೂಗಳನ್ನು ಮೊದಲ ಬಾರಿಗೆ ಎಂಬಂತೆ ರೂಮಿನೊಳಗೆ ತಂದು ಹಾಗೆಯೆ ಮಲಗಿದ್ದರೆ, ಆದಿ ಬಹಳ ಪ್ರಯತ್ನ ಮಾಡಿ ಹೊಟ್ಟೆಯೊಳಗೇ ತಡೆದಿದ್ದ ಎಲ್ಲವನ್ನೂ ಮಲಗಿದ್ದ ದಿಂಬಿನ ಮೇಲೆಯೇ ಕಕ್ಕಿಕೊಂಡಿದ್ದ. ಅಮಾಯಕನಂತೆ ಮುದುಡಿ ಮಲಗಿದ್ದ ಅವನನ್ನು ಬಚ್ಚಲುಮನೆಗೆ ತಂದು ಸ್ನಾನ ಮಾಡಿಸಿ ಮಲಗಿಸಿದೆವು. ಲೊಕೇಶನ ಗಾಯಗಳಿಗೆ ಬ್ಯಾಂಡೇಜನ್ನು ಹಾಕಿ ಕಣ್ಣ್ಮುಚ್ಚಿದವನಿಗೆ ಎಚ್ಚವಾದಾಗ ಅದಾಗಲೇ ಸಂಜೆ ಏಳಾಗಿದ್ದಿತು! ಲೋಕಿ ಮೊದಲ ಬಾರಿಗೆ ಎಂಬಂತೆ ತನಗೆ ತಿಳಿದ ಮಟ್ಟಿಗೆ ಮಾಡಿದ ಟೀಯನ್ನು ನಮ್ಮ ಮುಂದೆ ತಂದಿಟ್ಟ. ಮೂವರು ಒಂದಿನಿತು ಮಾತನಾಡದೆ ಕುಡಿದು ಸುಮ್ಮನೆ ಕೂತೆವು.

'This is it!.. ಇನ್ ಮುಂದೆ ಯಾವತ್ತೂ ಆ ಹಾಳದನ್ನ ಕುಡೀಬಾರ್ದು.. ಎನಿ ಟೈಮ್ .. ಎನಿ ವೇರ್ ..' ನಾನಂದೆ.

'ಸಾಯೋವರ್ಗು ನಾನ್ ಯಾವದೇ ಡ್ರಿಂಕ್ಸ್ನ ಮುಟ್ಟಲ್ಲ .. ಬಿಯರ್ ಒಂದನ್ನು ಬಿಟ್ಟು' ಎಂದು ತನ್ನ ತಲೆಯ ಮೇಲೆ ಕೈಯಿಟ್ಟು ಹೇಳಿದ ಲೊಕೇಶನನ್ನು ನಾನು ಹಾಗು ಆದಿ ದುರುಗುಟ್ಟಿ ನೋಡಿದೆವು.

'ಮಕ್ಳ .. ನೆನ್ನೆ ರಾತ್ರಿ ಅದ್ ಯಾರ್ ಮನೆ ಮುಂದೋ ನಾವು ಹಾಗೆ ಅರ್ಚಾಡಿದ್ದು? ಇವ ಅದೇ ಉಷಾಳ ಮನೆ ಅನ್ಕೊಂಡಿದ್ದ. ಅವ್ರ್ ಮನೆ ಇರೋದು ಇಲ್ಲಿಂದ ಮೂರ್ ಕಿಲೋಮೀಟರ್ ದೂರ್ದಲ್ಲಿ.. ಆಕಡೆ .. ನಾವ್ ಬಂದಿದ್ದು ಎಕ್ಸಾಕ್ಟ್ಲಿ ಅಪೋಸಿಟ್ ಕಡೆಯಿಂದ ' ಎಂದು ಆದಿ ಹೇಳಿದ ಕೂಡಲೇ ಜಾಗೃತರರಾದ ನಾನು, 'ಶಿಟ್ .. ನಾವೇನಾದ್ರು..' ಎಂದು ಆತಂಕದಿಂದ ಹೇಳಿದೆ. ಕೂಡಲೇ ದಡಬಡನೆ ಮೂವರು ಎದ್ದು ಒಂದು ಅಂದಾಜಿನ ಮೇಲೆ ನೆನ್ನೆ ರಾತ್ರಿ ಬಿದ್ದು ಒರಳಾಡಿದ ಜಾಗದ ತುಸು ದೂರಕ್ಕೆ ಬಂದು ನಿಂತೆವು. ಹದಿನೇಳನೇ ಶತಮಾನದ ಯಾರು ವಾಸಿಸದ ಹಾಳು ಬಂಗಲೆಯದು. ನಗರದ ಏಕ ಮಾತ್ರ ಹಳೆಯ ಕಟ್ಟಡ. ಗಾಳಿ ನೀರು ಬೆಳಕಿಲ್ಲದ ಅದನ್ನು ಈಗ ಸರ್ಕಾರವೇ ಮುಚ್ಚಿ ಹಾಕಿದೆ. ಎಲ್ಲೆಂದರಲ್ಲಿ ಹುಲ್ಲು ಪೊದೆಗಳು ಬೆಳೆದಿರುವ ಅದರಲ್ಲಿ ನೆನ್ನೆಯ ರಾತ್ರಿ ಲೈಟುಗಳು ಆನ್ ಆದದ್ದಾದರೂ ಹೇಗೆ. ಅದ್ಯಾರು ಅಲ್ಲಿಂದ ಹೊರಬಂದು ನಾವು ಬಿದ್ದಿರುವುದನ್ನೇ ನಿಂತು ಕೆಲ ಕಾಲ ನೋಡಿದರು. ತಮ್ಮ ಗಂಟಲೇ ಬಿರಿಯುವಂತೆ ಅರಚುತ್ತಿದ್ದ ಆ ನಾಯಿಗಳಾದರೂ ಎಂಥವು? ಎಂಬೆಲ್ಲ ನಡುಕಹುಟ್ಟಿಸುವ ಪ್ರೆಶ್ನೆಗಳು ಮೂಡುತ್ತಿರುವಾಗಲೇ ನಮ್ಮ ಪಕ್ಕದಲ್ಲಿದ್ದ ಮರದ ಮೇಲಿಂದ ಏನೋ ಜಾರಿದಂತಹ ಸದ್ದಾಯಿತು. ಇದ್ದೆವೋ ಬಿದ್ದೆವೋ ಎನುತ ಅಲ್ಲಿಂದ ಓಡಹತ್ತಿದವರು ನಿಂತದ್ದು ರೂಮಿಗೆ ಬಂದು ಬಾಗಿಲನ್ನು ಹಾಕಿದ ಮೇಲೆಯೇ!



****



'ನನ್ನ್ ಮಕ್ಳ, ಬಿಟ್ಟ್ ಬಿಡ್ರೋ ಲೇ .. ಪ್ಲೀಸ್..' ಆದಿ ಗೋಗರೆದ.

ದೂರದಿಂದ ನುಣ್ಣಗೆ ಕಾಣುವ ಬೆಟ್ಟವನ್ನು ಕ್ಷಣಮಾತ್ರದಲ್ಲಿ ಹತ್ತಿ ಬೀಗುವೆ ಎಂದು ಮುನ್ನೆಡೆದ ಆತ ಭೀಮಕಾಯದ ಬೆಟ್ಟ ಹತ್ತಿರವಾದಂತೆ ತನ್ನ ಜಂಘಾಬಲವೆಲ್ಲ ಕಮರಿದಂತಾಗಿ ಕೂಡಲೇ ಅಲ್ಲಿಂದ ಜಾಗ ಕೀಳಲು ಅವಣಿಸತೊಡಗಿದ. ಲೋಕೇಶ ಆತನನ್ನು ಅಣಕಿಸುತ್ತಾ 'ಬೆಟ್ಟದ್ ಮೇಲಿಂದ ಒಳ್ಳೆ ಸೀನರಿ ಕಾಣುತ್ತೆ ಮಚಿ, ಅಲ್ಲಿ ಇಯರ್ ಫೋನನ್ನು ಕಿವಿಗೆ ಹಾಕಿ ಹಾಡನ್ನು ಕೇಳುತ್ತಾ ಕೂತರೆ ನಿಂಗೆ ಸ್ವರ್ಗ ಕೈಗೆಟುಕಲು ಮೂರೇ ಮೂರು ಮಿಲಿಮೀಟರ್ ಎಂದು..' ಹೇಳುತ್ತಾನೆ. ಆದರೆ ಅದೆಷ್ಟೇ ಪುಸಲಾಯಿಸಿದರೂ ಕಾಲು ಕಿಲೋಮೀಟರ್ನಷ್ಟು ಅಗಲವಾದ ರುದ್ರರಮಣೀಯ ಬೆಟ್ಟ ಎಂತವರಿಗೂ ಒಮ್ಮೆ ಮೈನಡುಕವನ್ನು ಹುಟ್ಟಿಸು ವುದು ಸುಳ್ಳಲ್ಲ.

ಅದು ಮೆಳೆಗಾಲವಾದದ್ದರಿಂದ ಹಸಿರುಗಟ್ಟಿದ ಪಾಚಿ ಎಲ್ಲೆಂದರಲ್ಲಿ ಬೆಳೆದು ಕಾಲಿಟ್ಟಲ್ಲೆಲ್ಲ ಜಾರುತ್ತಿತ್ತು. ಒಬ್ಬರ ಕೈಯೊಬ್ಬರು ಹಿಡಿದುಕೊಂಡು ಭಯಪಡುತ್ತಲೇ ಬೆಟ್ಟದ ತುದಿಯನ್ನು ಕಷ್ಟಪಟ್ಟು ತಲುಪುವಷ್ಟರಲ್ಲಿ ಆ ಚಳಿಯಲ್ಲೂ ಮೈಯಲ್ಲ ಬೆವತಂತಿತ್ತು. ಆದರೆ ಹತ್ತುವಾಗ ಉಂಟಾದ ಆ ಉದ್ವೇಗ ಬೆಟ್ಟದ ತುದಿಯನ್ನು ತಲುಪಿದಾಗ ಮಾತ್ರ ಮಾಯವಾಯಿತು. ಎಲ್ಲೆಂದರಲ್ಲಿ ಕಾಣುವ ಆ ಹಚ್ಚ ಹಸಿರು, ತುಂತುರು ಮಳೆಯ ಹಾಡು, ಬೆಳ್ಳನೆಯ ಹೊದಿಕೆಯಂತಾವರಿಸಿರುವ ಮೋಡಗಳು, ಹಕ್ಕಿಗಳ ನಾದಮಯ ಪರಿಸರ ಎಲ್ಲವು ಸೇರಿ ಅಂದು ದ್ವಾರಸಮುದ್ರದ ದೇವಾಲಯದ ಒಳಗೆ ಮೂಡಿದ ಶಾಂತತೆಯೇ ಇಲ್ಲಿಯೂ ಮೂಡಿತು. ಮೈಕೊರೆಯುವ ಗಾಳಿಗೂ ನನಗೂ ಅದೇನೋ ಒಂದು ಬಗೆಯ ಅವಿನಾಭಾವ ಸಂಬಂಧವಿರುವಂತೆ ಭಾಸವಾಯಿತು. ಎಳೆಯ ಮುದ್ದಾದ ನಾಯಿಮರಿಗಳು ನಮ್ಮ ಕೈಕಾಲುಗಳನ್ನು ಕಚ್ಚುತ್ತಾ, ಮೈಯನ್ನು ತಿವಿಯುತ್ತಾ ಚಿನ್ನಾಟವಾಡುತ್ತಾ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವಂತೆ ಗಾಳಿಯೂ ನನ್ನೊಟ್ಟಿಗೆ ಆಡಿ ನಲಿಯುತ್ತಿದೆ ಎಂದೆನಿಸಿತು. ಕೂಡಲೇ ಮನದೊಳಗೆ ಮೂಡಿದ ಆ ಅಮೂರ್ತ ಖುಷಿಗೆ ಕಣ್ಣು ತುಂಬಿ ಬಂದಿತು. ಅತ್ತಷ್ಟೂ ಮನಸ್ಸು ನಲಿಯತೊಡಗಿತು. ಆದಿ ಹಾಗು ಲೋಕೇಶ ದೂರದಲ್ಲಿ ಅಸ್ಪಷ್ಟವಾಗಿ ಕಾಣುತ್ತಿದ್ದ ನಮ್ಮ ಕಾಲೇಜನ್ನು ನೋಡಿ ಅದೇನನ್ನೋ ವಾದಿಸುತ್ತಿದ್ದರು. ಕೊಂಚ ಸಮಯದ ನಂತರ ಆದಿ ತನ್ನ ಇಯರ್ ಫೋನನ್ನು ಕಿವಿಯೊಳಕ್ಕೆ ತೂರಿಕೊಂಡು ಕಲ್ಪನಾ ಲೋಕದಲ್ಲಿ ಮರೆಯಾದರೆ 'ಹೂವೆ .. ಹೂವೆ..ನಿನ್ನೀ ನಗುವಿಗೆ ಕಾರಣವೇನೇ' ಹಾಡನ್ನು ತನ್ನ ಲೌಡ್ ಸ್ಪೀಕರ್ನಲ್ಲಿ ಹಾಕಿ ಲೋಕೇಶ ಸಣ್ಣ ಸಣ್ಣ ಜಾತಿಯ ಹೂವುಹಣ್ಣುಗಳ ಫೋಟೋಗಳನ್ನು ತೆಗೆಯತೊಡಗಿದ.

ಸಮಯ ಹೇಗೆ ಜಾರಿತೋ ತಿಳಿಯಲೇ ಇಲ್ಲ. ಹತ್ತುವಾಗ ಮೌಂಟ್ ಎವರೆಸ್ಟ್ ಬೆಟ್ಟವನ್ನು ಏರುವಂತೆ ತಿಣುಕಾಡಿದ ಆದಿ ಇಳಿಯುವಾಗಂತೂ ತನ್ನ ಕಾಲಿನ ಕೀಲಿಗಳೇ ಉದುರಿವೆಯೋ ಎಂಬಂತೆ ಆಡಿದ. ಆದರೂ ತಿಂಗಳಿಗೆ ಕನಿಷ್ಠ ಒಂದೆರಡು ಬಾರಿಯಾದರೂ ಇಲ್ಲಿಗೆ ಬರುವ ಒಪ್ಪಂದವನ್ನು ಎಲ್ಲರೂ ಮಾಡಿಕೊಂಡೆವು.



****



'ನೋಡ್ ಮಚಿ.. ಮಾಥ್ಸ್ ನೋಟ್ ಬುಕ್ಕು..' ಎಂದು ಕಿಂಗ್ ಸೈಜಿನ ಬುಕ್ಕೊಂದನ್ನು ನನಗೆ ತೋರಿಸುತ್ತಾ ವಿಕಾರವಾಗಿ ನಗಾಡಿದ ಲೋಕೇಶ.

ಊರೇ ಮುಳುಗಿದರೂ ತಾನು ಒಂದರೆ ಪದವನ್ನೂ ಆ ಬುಕ್ಕಿನಿಂದ ಓದುವುದಿಲ್ಲವೆಂಬುದು ಗೊತ್ತಿದ್ದರೂ ಅದು ಆತನ ಕೈಯಲ್ಲಿ ರಾರಾಜಿಸುತ್ತಿತ್ತು.. ಆದರೆ ಈ ಬಾರಿ ಅದು ಉಷಾಳ ಬುಕ್ಕಾಗಿರದೆ ಆಕೆಯ BFF ಶಶಿಕಲದಾಗಿದ್ದಿತು.

ಶಶಿಕಲ ಓದಿನಲ್ಲಿ ಹಾಗು ಕ್ಲಾಸ್ ರೂಮಿನ ಬೆಂಚುಗಳಲ್ಲಿ ಎಲ್ಲರಿಗಿಂತ ಮುಂದಿದ್ದರೂ ಯಾವೊಬ್ಬ ಹುಡುಗನೂ ಆಕೆಯನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಕಾರಣ ಆಕೆಯ ಕಪ್ಪುವರ್ಣವಾಗಿರಬಹುದು, ಕರ್ಕಶ ಧ್ವನಿಯಾಗಿರಬಹದು ಅಥವಾ ಒಂದಕ್ಕೊಂದು ಹೋಲಿಕೆಯಿರದ ಡ್ರೆಸ್ ಸೆನ್ಸ್ ಆಗಿರಬಹದು. ಕುರೂಪಿ ಎನ್ನಲಾಗದ ತೀರಾ ಸಾಧಾರಣ ಮೈಕಟ್ಟಿನ ಆಕೆ ಉಷಾಳೊಬ್ಬಳಿಗೆ ಬಿಟ್ಟರೆ ಬೇರ್ಯಾರಿಗೂ ತಿಳಿದೂ ತಿಳಿಯದಂತಿದ್ದಳು. ಲೋಕೇಶ ಅಂದಿನ ತನ್ನ ಅವಮಾನದ ಪ್ರತಿಕಾರವೆಂಬಂತೆ ಶಶಿಕಲಳನ್ನು ಮಾತನಾಡಿಸಿ ಆಕೆಯಿಂದ ನೋಟ್ ಬುಕ್ಕನ್ನು ಕೊಂಡು, ಆಕೆಯ ಈ ಸಹಾಯಕ್ಕಾಗಿ ಒಂದು ಸಣ್ಣ ಟ್ರೀಟನ್ನೂ ಕೊಡುವುದಾಗಿ ಉಷಾಳಿಗೆ ಕೇಳುವಂತೆ ಜೋರಾಗಿ ಹೇಳಿ ನನ್ನಲ್ಲಿಗೆ ಬಂದು ಕುಳಿತ. ಆದರೆ ಆತ ನಗುವಂತೆ ಕಾಣುತ್ತಿದ್ದರೂ ಕಣ್ಣುಗಳು ಮಾತ್ರ ದ್ವೇಷದ ಅಲೆಗಳನ್ನು ತೇಲಿ ಬಿಡುತ್ತಿದ್ದವು. ಪ್ರತಿ ಮಾತಿಗೂ ಉಷಾಳನ್ನು ನೋಡುತ್ತಾ ಆಕೆಯ ಪ್ರತಿಕ್ರಿಯೆಯನ್ನು ನೋಡುತ್ತಿದ್ದ ಆತ. ಆಕೆ ಇದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಎಂದಿನಂತೆಯೇ ಸಹಜವಾಗಿದ್ದಳು . ಆ ಸಹಜತೆಯೇ ಲೋಕೇಶನ ದ್ವೇಷದ ಬೆಂಕಿಗೆ ಇನ್ನಷ್ಟು ಮತ್ತಷ್ಟು ತುಪ್ಪವನ್ನು ಸುರಿಯುತ್ತಿತ್ತು.

'ನೋಡ್ತಾ ಇರು ಮಚಿ .. ಇನ್ಮುಂದೆ ಉಷಾನ ಹೆಂಗೆ ಆಟ ಆಡಿಸ್ತಿನಿ ಆಂತ..' ಎಂದು ನಾನು ಅಲ್ಲಿಂದ ಎದ್ದೋಗಿರುವುದನ್ನೂ ತಿಳಿಯದೆಯೇ ಆತ ಹೇಳಿದ.

ಕೂಡಲೇ ಆತನ ಫೋನು ರಿಂಗಾಯಿಸಿತು. ಅದು ಆತನ ಗದ್ದೆಯ ಮೇಸ್ತ್ರಿಯ ಫೋನೆಂದು ತಿಳಿದು ಮುಖ ಇಳಿಬಿದ್ದಿತು. ಮೇಸ್ತ್ರಿ ಆಕಡೆಯಿಂದ ಏನೋ ಹೇಳುವುದನ್ನು ಕೇಳಿ ಕಿರಿಕಿರಿಗೊಂಡ ಆತ,

'ಥು .. ರೀ .. ನಿಮ್ಗೆ ಹೇಳಿರ್ಲಿಲ್ವ .. ಯಾವದೇ ಕಾರಣಕ್ಕೂ ಕೆಮಿಕಲ್ಸ್ನ ಹಾಕ್ ಬೇಡಿ ಅಂತ.. ಸಗಣಿ ಮುಟ್ಟೂಕ್ಕೆ ಹೇಸಿಗೆ ಆಗುತ್ತೆ ಅಂದ್ರೆ ಅವ್ರಿಗೆ ಕಿಂಗ್ ಫಿಷರ್ ಕ್ಯಾಲೆಂಡರ್ಗೆ ಪೋಸ್ ಕೊಡೋಕ್ ಹೇಳಿ 'ಎಂದು ಅರಚಿದ. ಬಹುಷಃ ಕಿಂಗ್ ಫಿಷರ್ ಕ್ಯಾಲೆಂಡರ್ ಎಂದರೆ ಏನೆಂದು ತಿಳಿಯದ ಮೇಸ್ತ್ರಿ ಲೋಕೇಶನ ಬೈಗುಳವನ್ನೂ ಲೆಕ್ಕಿಸದೆ 'ದಿನಕ್ಕ್ ಎಷ್ಟ್ ಕೊಡ್ತಾರೆ ಸರ್..' ಎಂದ. ಕೊಡಲೇ ಲೊಕೇಶನ ಕೋಪ ವಿಪರೀತವಾಯಿತು. 'ರೀ .. ಏನ್ ಆಟ ಆಡ್ತಾ ಇದ್ದೀರಾ .. ಇನ್ ಅರ್ದ ಘಂಟೇಲಿ ನಂಗೆ ಸಗಣಿ ಗೊಬ್ಬರ ಬೇಕು..! ನಾನೇ ಬಂದ್ ಹಾಕ್ತಿನಿ .. ಇರೋರ್ ಬೇಕಾದ್ರೆ ಇರ್ಬಹುದು , ಬೇಡದವ್ರು ಹೊರಡಬಹುದು' ಎಂದೇಳಿ ಶರವೇಗದಲ್ಲಿ ಅತ್ತಕಡೆಯಿಂದ ಕ್ಲಾಸ್ ರೂಮಿನ ಒಳಗೆ ಬಂದ ಲೆಕ್ಚರೆರ್ನನ್ನೂ ಲೆಕ್ಕಿಸದೆ ಹೊರನಡೆದ. ಈತನ ವೇಗಕ್ಕೆ ಅವರೂ ದಾರಿ ಸರಿದು ಪಕ್ಕಕೆ ನಿಂತರು.



ಮುಂದುವರೆಯುವುದು...

No comments:

Post a Comment