Friday, March 24, 2017

ಆಸ್ಕರ್ : ಮರುಭೂಮಿಯ ಓಯಸಿಸ್ ನಂತೇಕೆ?

89 ವರ್ಷದ ಸುಧೀರ್ಘ ಇತಿಹಾಸ. ದೇಶ ವಿದೇಶಗಳ ಸಾವಿರಾರು ಸ್ಪರ್ಧಿಗಳು. ಜಗತ್ತಿನ ಪ್ರತಿಯೊಬ್ಬ ಸಿನಿ ತಾರೆಯ ಮಹತ್ತರವಾದ ಕನಸು. ಕರಿ ಸೂಟು-ಬೂಟಿನ ಉಡುಗೆಯಿಂದ ಮಾತಿಗಿಳಿಯುವ ನಿರೂಪಕರು. ಅಲ್ಲಿ ನಿರೂಪಣೆಯ ಅವಕಾಶ ಸಿಕ್ಕರೂ ಅದೇ ಮಹಾನ್ ಸಾಧನೆ! ಅತಿ ಕ್ಲಿಷ್ಟವಾದ ಆಯ್ಕೆಯ ವಿಧಾನ. ಪ್ರಶಸ್ತಿಯ 24 ವರ್ಗಗಳು. ಪ್ರಶಸ್ತಿಯ ಮೊತ್ತ ಮಾತ್ರ ಶೂನ್ಯ! 3.8 ಕೆಜಿಯ ಪ್ರತಿಮೆ. ಹೆಸರು ಆಸ್ಕರ್.

ಆಸ್ಕರ್ ಎಂದಾಕ್ಷಣ ಮೇಲಿಂದ ಮೇಲೆ ಕಣ್ಣ ಮುಂದೆ ಮೂಡುವ ವಿಚಾರಗಳಿವು. ವಿಶ್ವದ ಕಲಾ ಜಗತ್ತಿನ ಮಹತ್ತರವಾದ ಪುರಸ್ಕಾರಗಳಲ್ಲಿ ಒಂದಾಗಿರುವ ಆಸ್ಕರ್ ಚಲನಚಿತ್ರ, ನಟನೆ, ನಿರ್ದೇಶನ, ಸಂಗೀತ, ಛಾಯಾಗ್ರಹಣ, ವಸ್ತ್ರಾಲಂಕಾರ ಎಂಬ ಒಟ್ಟು 24 ವರ್ಗಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಎಲ್ಲ ಚಿತ್ರಗಳ ಕಲಾತ್ಮಕ ಸಾಧನೆಗಳಿಗೆ ಸಮಾನ ವೇದಿಕೆಯನ್ನು ನೀಡುತ್ತಾ ಬಂದಿದೆ. ಮೇ 11, 1929 ರಂದು ಅಮೇರಿಕಾದಲ್ಲಿ ಹುಟ್ಟಿಕೊಂಡ 'ಅಕಾಡೆಮಿ ಆಫ್ ಮೋಷನ್ ಪಿಚ್ಚರ್ ಆರ್ಟ್ಸ್ ಅಂಡ್ ಸೈನ್ಸ್' ನ ಮೂಲಕ ಆಸ್ಕರ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಉತ್ತಮ ಚಿತ್ರ ನಿರ್ಮಾಣ ಪಟ್ಟಿಯಲ್ಲಿ ಇಟಲಿ ಇಲ್ಲಿಯವರೆಗೂ 14 ಬಾರಿ ಪ್ರಶಸ್ತಿಯನ್ನು ಗೆದ್ದು ಅಗ್ರಸ್ಥಾನವನ್ನು ಕಾಯ್ದಿರಿಸಿಕೊಂಡಿದೆ. ಒಂದು ಕಾಲಕ್ಕೆ ಪ್ರೇಮಿಗಳ ಪ್ರೇರಣೆಯಾಗಿದ್ದ ಟೈಟಾನಿಕ್ ಚಿತ್ರ ಅದು ನಾಮಾಂಕಿತಗೊಂಡ ಹನ್ನೊಂದೂ ವರ್ಗಗಳಲ್ಲಿ ಪ್ರಶಸ್ತಿಯನ್ನು ಗೆದ್ದು ಇಂತಹ ಸಾಧನೆಗೈದಿರುವ ಕೆಲವೇ ಚಿತ್ರಗಳಲ್ಲಿ ಒಂದೆನಿಸಿದೆ. ಕ್ಯಾಥೆರಿನ್ ಹೆಪ್ಬುರ್ನ್ ಎಂಬ ಅಮೇರಿಕಾದ ನಟಿ ಹನ್ನೆರೆಡು ಬಾರಿ ನಾಮಾಂಕಿತಗೊಂಡು ನಾಲ್ಕು ಬಾರಿ ಉತ್ತಮ ನಟಿಯಾಗಿ ಪ್ರಶಸ್ತಿಯನ್ನು ಗೆದ್ದಿರುವುದು ಇಂದಿಗೂ ವಿಶ್ವದಾಖಲೆಯಾಗಿಯೇ ಉಳಿದಿದೆ.

ಭಾರತದ ಚಿತ್ರಗಳ ವಿಚಾರಕ್ಕೆ ಬಂದರೆ ಆಸ್ಕರ್ ಪ್ರಶಸ್ತಿ ಎಂಬುದು ಮರುಭೂಮಿಯ ಓಯಸಿಸ್ ಆಗಿರುವುದು ಆಟವಾಡುವ ಮಕ್ಕಳಿಗೂ ತಿಳಿದಿರುವ ವಿಷಯ. ಇಲ್ಲಿಯವರೆಗೂ ಭಾರತದಿಂದ ಸುಮಾರು 49 ಚಿತ್ರಗಳನ್ನು ಆಸ್ಕರ್ ಗಾಗಿ ಆರಿಸಿ ಕಳುಹಿಸಲಾಗಿದೆಯಾದರೂ ಪ್ರಶಸ್ತಿಗೆ ನಾಮಾಂಕಿತಗೊಂಡವು ಕೇವಲ ಮೂರೇ ಮೂರು! ಅವುಗಳಲ್ಲಿ ಗೆದ್ದವು ಮಾತ್ರ ನಗಣ್ಯ!! ಉಳಿದ ಚಿತ್ರಗಳೆಲ್ಲ ಇತರೆ ಪರಭಾಷಾ ಚಿತ್ರಗಳ ಮುಂದೆ ಆಟಕುಂಟು ಲೆಕ್ಕಕ್ಕಿಲ್ಲದಂತಾದವು. ವೈಯ್ಯಕ್ತಿಕ ಪ್ರಶಸ್ತಿಗಳ ವಿಷಯದಲ್ಲೂ ನಮ್ಮದು ಅದೇ ಸಾಧನೆ. ಇಂದಿನವರೆಗು ನಾಲ್ಕು ಆಸ್ಕರ್ ಗಳು ಭಾರತೀಯರಿಗೆ ಬಂದರೂ ಅವುಗಳು ಸಾಧ್ಯವಾದದ್ದು ಇತರೆ ದೇಶದ ನಿರ್ದೇಶಕ ನಿರ್ಮಾಪಕರ ಚಿತ್ರಗಳ ಮೂಲಕವೇ ಎಂಬುದು ಗಮನದಲ್ಲಿರಬೇಕಾದ ವಿಚಾರ.

40,000 ಚಿತ್ರಮಂದಿರಗಳಿರುವ ಅಮೇರಿಕದಲ್ಲಿ ವಾರ್ಷಿಕವಾಗಿ ನಿರ್ಮಾಣಗೊಳ್ಳುವ ಚಿತ್ರಗಳು ಸುಮಾರು 600 ರ ಆಸುಪಾಸು. ಆದರೆ ಕೇವಲ 14,000 ಚಿತ್ರಮಂದಿರಗಳಿರುವ ನಮ್ಮಲ್ಲಿ ವಾರ್ಷಿಕವಾಗಿ ಜೀವ ಪಡೆಯುವ ಚಿತ್ರಗಳ ಸಂಖ್ಯೆ ಬರೋಬ್ಬರಿ 1200 ಅಥವಾ ಅದಕ್ಕಿಂತಲೂ ಹೆಚ್ಚು! ಅಲ್ಲದೆ ಪ್ರತಿಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಕರ್ ಅನ್ನು ದೋಚಿಕೊಳ್ಳುವರು ಅಮೆರಿಕದವರೇ ಎಂಬುದು ಆ ಚಿತ್ರಗಳು ಹಾಗು ಅವುಗಳ ಹಿಂದಿರುವ ಕೌಶಲ್ಯವನ್ನು ಗಮನಿಸಿದರೆ ತಿಳಿಯಪಡುತ್ತದೆ. ಆದರೆ ನಮ್ಮಲ್ಲಿ ಕಡಲೆ ಮಿಠಾಯಿಯಂತೆ ಚಿತ್ರಗಳನ್ನು ಮಾಡಿ ಎಸೆದರೂ ಕನಿಷ್ಠ ಒಂದು ಚಿತ್ರವಾದರೂ ಆಸ್ಕರ್ ನ ಗುರಿ ಮುಟ್ಟದಿರುವುದು ವಿಪರ್ಯಾಸದ ಸಂಗತಿ. ಹಾಗಾದರೆ ನಮ್ಮ ಈ ಸಾವಿರಾರು ಚಿತ್ರಗಳು ಎಡವುತ್ತಿರುವುದು ಎಲ್ಲಿ? ಅವುಗಳಲ್ಲಿ ಇರುವ ದೋಷಗಳಾದರು ಎಂತಹದ್ದು? ಒಂದು ಪಕ್ಷ ನಮ್ಮ ಚಿತ್ರಗಳಲ್ಲಿ ದೋಷಗಳಿರುವುದು ನಿಜವೇ ಆಗಿದ್ದಲ್ಲಿ ಅದನ್ನು ಸರಿಪಡಿಕೊಳ್ಳಲು ನಮಗೆ ಅರ್ಧ ಶತಮಾನವೇ ಸಾಕಾಗಲಿಲ್ಲವೇ? ಅಥವ ಮಿಂಚಿನಂತೆ ಬಂದು ಮರೆಯಾಗುವ ಉತ್ತಮ ಚಿತ್ರಗಳನ್ನು ಆರಿಸಿ ಕಳಿಸುವ ಕ್ಷಮತೆ, ಚತುರತೆ ನಮ್ಮ ಆಯ್ಕೆದಾರರಿಗಿವೆಯೇ?

ದೇಶದ ಅತಿ ಉತ್ತಮ ಚಿತ್ರವೆಂದು ಗುರಿತಿಸಲ್ಪಡುವುದು ಅದಕೊಂಡು ರಾಜ್ಯ, ರಾಷ್ಟ್ರೀಯ ಅಥವಾ ಯಾವುದಾದರೊಂದು ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತಾಗ. ( ಪ್ರಶಸ್ತಿಗಳನ್ನು ಪಡೆಯದೆಯೇ ಉತ್ತಮ ಚಿತ್ರಗಳು ಎನಿಸಿಕೊಂಡಿರುವ ಹಲವು ಚಿತ್ರಗಳಿರುವಾಗ ಈ ಮಾತು ಪೂರಾ ನಿಜವೆಂದು ಹೇಳಲಾಗದು. ಆದರೂ ಸಹಸ್ರ ಚಿತ್ರಗಳ ಸರೋವರದಲ್ಲಿ ಮೇಲ್ನೋಟಕ್ಕೆ ಅತಿ ಉತ್ತಮ ಚಿತ್ರಗಳ ವಿಂಗಡಣೆಗಾಗಿ ಈ ಮಾತನ್ನು ಆಧಾರವನ್ನಾಗಿ ಇಟ್ಟುಕೊಳ್ಳೋಣ.) ಇಂತಹ ಪ್ರಶಸ್ತಿಗಳಿಗೆ ಆರಿಸಲ್ಪಡುವ ಹೆಚ್ಚಿನ ಚಿತ್ರಗಳು ಜೀವನ ಮೌಲ್ಯಗಳೊಟ್ಟಿಗೆ ಸಾಮಾಜಿಕ ಸಮಸ್ಯೆಗಳನ್ನೂ ಬಿಂಬಿಸುವ ಚಿತ್ರಗಳಾಗಿರುತ್ತವೆ. ನೋಡುಗನನ್ನು ಒಂದು ಹೊಸ ವಿಚಾರಧಾರೆಯತ್ತ ಮುಖ ಮಾಡಿಸುತ್ತವೆ. ನಾವುಗಳು ಇಲ್ಲಿಯವರೆಗೂ ಆಸ್ಕರ್ ಗೆ ಕಳಿಸಿರುವ ಒಟ್ಟು 49 ಚಿತ್ರಗಳಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿರುವ ಚಿತ್ರಗಳ ಸಂಖ್ಯೆ ಕೇವಲ ಮೂರೋ ನಾಲ್ಕೋ ಅಷ್ಟೇ. ಅಂದರೆ ಆರಿಸಿ ಕಳಿಸಿರುವ ಸುಮಾರು 95% ಗಿಂತ ಹೆಚ್ಚಿನ ಸಿನಿಮಾಗಳ ಗುಣಮಟ್ಟ ಹೇಗಿರಬಹುದು ಹಾಗು ಅಂತಹ ಚಿತ್ರಗಳ ಮೌಲ್ಯಮಾಪನ ಎಷ್ಟರ ಮಟ್ಟಿಗೆ ಆಗಿರಬಹುದು ಎಂದು ನಾವು ಊಹಿಸಬಹುದು. ಅಲ್ಲದೆ ಅವುಗಳಲ್ಲಿ ಸುಮಾರು 70% ಚಿತ್ರಗಳು ಬಾಲಿಹುಡ್ ಚಿತ್ರಗಳೇ ಆಗಿವೆ. ಅರ್ಥಾತ್ ನಮ್ಮ ದೇಶದ ಅರ್ಧಕ್ಕಿಂತ ಹೆಚ್ಚಿನ ಇತರೆ ಚಿತ್ರ ಮಂಡಳಿಗಳಿಗೆ (ಕನ್ನಡ, ಮಲ್ಯಾಳಮ್, ತಮಿಳು, ತೆಲುಗು, ಬೆಂಗಾಲಿ, ಮರಾಠಿ ಇತ್ಯಾದಿ) ಆಸ್ಕರ್ ನ ಸ್ತರದ ಚಿತ್ರಗಳನ್ನು ಮಾಡುವ ಕ್ಷಮತೆ ಇಲ್ಲವೆಂದಾಯಿತು, ಅಲ್ಲವೇ!?

ವಾಸ್ತವವಾಗಿ ಆಸ್ಕರ್ ಗಾಗಿ ಚಿತ್ರಗಳನ್ನು ಆಯ್ಕೆ ಮಾಡುವ ಕೈಗಳು ಹೆಚ್ಚಾಗಿ ಬಾಲಿಹುಡ್ ನ ಪೋಷಣೆಯಿಂದಲೇ ಬೆಳೆದಿರುತ್ತವೆ. ಹಾಗಾಗಿ ಆ ಚಿತ್ರಗಳಿಗೇ ಮಣೆಯನ್ನು ಅಚ್ಚುಗಟ್ಟಾಗಿ, ಹೆಚ್ಚಾಗಿ ಹಾಕಲಾಗುತ್ತದೆ. ಪರಿಣಾಮ ಇತರೆ ಭಾಷೆಯ ಚಿತ್ರಗಳು ಕಡೆಗಾಣಿಸಲ್ಪಡುತ್ತವೆ. ಉದಾಹರಣೆಗೆ 1970 ಹಾಗು 75 ರಲ್ಲಿ ಮೂಡಿಬಂದ 'ಸಂಸ್ಕಾರ' ಹಾಗು 'ಚೋಮನ ದುಡಿ' ಕನ್ನಡ ಚಿತ್ರಗಳು ಅಂದು ಹಲವು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು, ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದು ಎಲ್ಲೆಡೆ ಸದ್ದು ಮಾಡಿದರೂ ದೇಶದಿಂದ ಆಸ್ಕರ್ ಗೆ ನಾಮಕಿಂತಗೊಳ್ಳಲು ಮಾತ್ರ ವಿಫಲವಾದವು. ಇಲ್ಲಿಯವರೆಗೂ ಬೆಂಗಾಲಿ, ಮಲ್ಯಾಳಮ್ ಹಾಗು ಕನ್ನಡ ಚಿತ್ರಗಳ ರಾಷ್ಟೀಯ ಪ್ರಶಸ್ತಿಗಳನ್ನು ಒಂದೆಡೆ ಗುಡ್ಡೆ ಹಾಗಿದ್ದರೆ ನಮಗೆ ಸುಮಾರು ಮೂವತ್ತರಿಂದ ಮೂವತ್ತೈದು ಸಿಗಬಹುದು! ಆದರೂ ಈ ಚಿತ್ರಗಳು ಆಸ್ಕರ್ ನ ರೇಸ್ ನಲ್ಲಿ ಕಂಡದ್ದು ಮಾತ್ರ ತೀರಾ ವಿರಳ.

ಕಲೆಯ ಹಲವು ಪ್ರಕಾರಗಳಲ್ಲಿ ಚಿತ್ರ ನಿರ್ಮಾಣವೆಂಬುದು ಅತಿ ಮಹತ್ತರವಾದುದು. ಸಾಹಿತ್ಯ, ಸಂಗೀತ, ಕಥೆ, ನಟನೆ ಎಂಬ ಹಲವಾರು ಕಲಾ ವಿಭಾಗಗಳು ಒಟ್ಟಿಗೆ ಬೆರೆತು ಅರಳುವ ಮತ್ತೊಂದು ಪ್ರಕಾರವಿಲ್ಲ. ಆಸ್ಕರ್ ನ ಮೂಲ ಉದ್ದೇಶವೂ ಇದೆ ಆಗಿರುತ್ತದೆ. ಪ್ರತಿಯೊಂದು ಕಲೆಯ ವಿಭಾಗವನ್ನು ಅತ್ಯುನ್ನತ ಸ್ಥರದಲ್ಲಿ ಮೂಡಿಸಬಲ್ಲ ಕ್ಷಮತೆಯನ್ನು ಮಾತ್ರ ಇಲ್ಲಿ ಪರಿಗಣಿಸಲಾಗುತ್ತದೆ. ಉಸಿರಾಡುವ ಗಾಳಿಗಿಂತಲೂ ಹಣವೇ ಮುಖ್ಯವಾಗಿರುವ ನಮ್ಮಲಿ ಚಿತ್ರಗಳ ಗುಣಮಟ್ಟವನ್ನು ಇಂತಹ ಹಣದ ರಾಶಿಗೆ ತುಲನೆ ಮಾಡಿ ಅತಿ ಹೆಚ್ಚು ಕೋಟಿಗಳನ್ನು ಗಳಿಸುವ ಚಿತ್ರಗಳನ್ನು ಬ್ಲಾಕ್ ಬಸ್ಟರ್ ಚಿತ್ರಗಳೆಂಬ ಬಿರುದನ್ನು ಕೊಟ್ಟುಬಿಡುತ್ತೇವೆ. ಅಲ್ಲದೆ ಒಮ್ಮೆ ಚಿತ್ರ ಬಿಡುಗಡೆಗೊಂಡು ಕೆಲವೇ ದಿನಗಳೊಳಗೆ ಅವಾರ್ಡ್ ಫಂಕ್ಷನ್ ಗಳೆಂಬ ದೊಂಬಿಯನ್ನು ಏರ್ಪಡಿಸಿ ಸ್ವಘೋಷಿತ ಪ್ರಶಸ್ತಿಗಳನ್ನು ಪಡೆದುಕೊಳ್ಳುವುದು ಸಹ ತೀರಾ ಸಹಜದ ಸಂಗತಿಯಾಗಿ ಹೋಗಿದೆ. ಇಂದಿನ ಭಾಗಶಃ ಚಿತ್ರಗಳ ಮೂಲ ಉದ್ದೇಶ ಕೇವಲ ಹಣ ಸಂಪಾದನೆಯೇ ಆಗಿರುವಾಗ ಸಾಹಿತ್ಯ ಹಾಗು ಸಂಗೀತದ ರಸವನ್ನು ಹೊಮ್ಮಿಸಿ ಚಿತ್ರವನ್ನು ಮೂಡಿಸಬೇಕೆಂಬ ಅವಶ್ಯಕತೆ ಯಾರಿಗೆ ತಾನೇ ಬೇಕು?

ಚಿತ್ರಗಳಲ್ಲಿ ಕೆಲವೊಂದು ಸಣ್ಣ ಪುಟ್ಟ ವಿಷಯಗಳನ್ನು ನಕಲು ಮಾಡಿದರೂ ಸಹ ಉತ್ತಮವಾದ ಕಥೆ ಹಾಗು ಸಾಹಿತ್ಯದ ಮುಂದೆ ಅಂತಹ ವಿಷಯಗಳು ಕುಬ್ಜವಾಗುತ್ತವೆ. ಮನೋರಂಜನೆಯ ನಿಟ್ಟಿನಲ್ಲಿ ಇದು ಸರಿ ಎನಿಸಿದರೂ ಆಸ್ಕರ್ ನ ಸ್ಥರದಲ್ಲಿ ಇಂತಹ ‘ಕಾಪಿ ಪೇಸ್ಟ್’ ಕ್ರಿಯಾಶೀಲತೆಗೆ ಅವಕಾಶವಿರುವುದಿಲ್ಲ. ಚಿತ್ರಗಳನ್ನು ಆಯ್ಕೆ ಮಾಡುವಾಗ ನಾವುಗಳು ಇಂತಹ ಕನಿಷ್ಠ ಅಂಶಗಳನ್ನೂ ಪರಿಗಣಿಸದಿರುವುದು ವಿಪರ್ಯಾಸದ ಸಂಗತಿ. ಉದಾಹರಣೆಗೆ 2012 ರಲ್ಲಿ ಆಸ್ಕರ್ ಗೆ ನಾಮಾಂಕಿತಗೊಂಡಿದ್ದ ರಣ್ ಬೀರ್ ಕಪೂರ್ ಅಭಿನಯದ 'ಬರ್ಫಿ' ಚಿತ್ರದ ಕೆಲವು ಹಾಸ್ಯದ ಸನ್ನಿವೇಶಗಳು ಚಾರ್ಲಿ ಚಾಪ್ಲಿನ್ ನ ಅಥವಾ ಇತರೆ ಚಿತ್ರಗಳ ಪಕ್ಕಾ ನಕಲಾಗಿವೆ! ಅಂದು ಆಸ್ಕರ್ ನ ಆಯ್ಕೆದಾರರು ರಣಬೀರನ ನಟನೆಯನ್ನು ನೋಡಿ ಖುಷಿಪಟ್ಟಿರುವುದಕ್ಕಿಂತ ಮಿಗಿಲಾಗಿ ನಮ್ಮವರ ಬುದ್ದಿವಂತಿಕೆಯನ್ನು ಹಾಗು ಬಂಡತನವನ್ನು ಕಂಡು ಹೆಚ್ಚಾಗಿ ನಕ್ಕಿರಬಹುದು. ಇಂತಹ ಪರಿಸರದಲ್ಲಿ ನಮ್ಮ ಚಿತ್ರಗಳು ಆಸ್ಕರ್ ಗಳನ್ನು ತಂದುಕೊಡುವವೆಂಬ ಆಶಾವಾದ ನಮಗೆ ಎಷ್ಟರ ಮಟ್ಟಿಗೆ ಸರಿ?

ಸಾಮಾಜಿಕ ಮೌಲ್ಯಗಳ ಜೊತೆಗೆ ಮನೋರಂಜನೆಗೂ ಅಷ್ಟೇ ಮಟ್ಟಿನ ಪ್ರಾಮುಖ್ಯತೆಯನ್ನು ನೀಡಿ ಮೂಡಿಸಬಲ್ಲ ಚಿತ್ರ ನಿರ್ಮಾಪಕ ನಿರ್ದೇಶಕರು ನಮ್ಮಲ್ಲಿ ಇಲ್ಲವೆಂದಲ್ಲ. ಆದರೆ ಹೊಟ್ಟೆಗೇ ಹಿಟ್ಟಿರದಿರುವಾಗ ಜುಟ್ಟಿಗೆ ಮಲ್ಲಿಗೆ ಹೂವನ್ನು ಎಲ್ಲಿಂದ ತಂದಾರು? ಪರಿಣಾಮ ನಾಯಕ ಮುಟ್ಟಿದ ಮಾತ್ರಕ್ಕೆ ವಿಲನ್ ಎಂಬ ಗುಂಡುಕಲ್ಲಿನಂತ ವ್ಯಕ್ತಿ ತರಗಲೆಯಂತೆ ಹಾರಿಹೋಗುತ್ತಾನೆ! ಕೋಟ್ಯಾಧೀಶ್ವರನ ಮಗಳಿಗೆ ಒಮ್ಮಿಂದೊಮ್ಮೆಗೆ ಚಪ್ಪಲಿ ಹೊಲಿಯುವವನ ಮೇಲೆ ಒಲವು ಹುಕ್ಕಿ ಹರಿದು ನಡುರಸ್ತೆಯಲ್ಲೇ ಚುಂಬಿಸುವ ಮಟ್ಟಿಗೂ ಬೆಳೆದುಬಿಡುತ್ತದೆ. ಕೆ.ಜಿ ಗಟ್ಟಲೆ ಮೇಕ್ ಅಪ್ ಜೊತೆಗೆ ಘಾಡವಾದ ಕೆಂಪು ಲಿಪ್ ಸ್ಟಿಕ್ ಅನ್ನು ಮೆತ್ತಿರುವ ಹುಡುಗಿ ನಾಯಕಿಯಾಗಿದ್ದಾಳೆ ಎಂದು ಯೋಚಿಸುತ್ತಿರುವಾಗಲೇ ಇದು 'ಹಾರರ್ ಚಿತ್ರ' ವೆಂಬ ಶೀರ್ಷಿಕೆ ಪರದೆಯ ಮೇಲೆ ಮೂಡುತ್ತದೆ!, ಚಿತ್ರಕಥೆಗೂ ತಮಗೂ ಸಾಸಿವೆ ಕಳಷ್ಟೂ ಸಂಭಂದವಿಲ್ಲದ ಹಾಡುಗಳು ಹಾಗು ಅವುಗಳಲ್ಲಿ ಅರೆಬೆತ್ತಲಾಗಿ ಕುಣಿವ ಪಾತ್ರಗಳು ಒಮ್ಮಿಂದೊಂಬಿಗೆ ಪ್ರತ್ಯಕ್ಷವಾಗುತ್ತವೆ, ನಾಯಕನ ಮುಖದ ಮೇಲೆ ಒಮ್ಮಿಂದೊಮ್ಮೆಗೆ ಹುಲಿ ಸಿಂಹಗಳು ಬಂದು ಘರ್ಜಿಸಿ ಮರೆಯಾಗುತ್ತವೆ (ಒಂದು ವೇಳೆ ಅವೇ ಪ್ರಾಣಿಗಳು ದೇಹವಿರದ ತಮ್ಮ ರುಂಡವನ್ನೇನಾದರೂ ಹೀಗೆ ವಿಚಿತ್ರವಾದ ಭಂಗಿಯಲ್ಲೇನಾದರೂ ಕಂಡರೆ ಇದ್ದೆನೋ ಬಿದ್ದೆನೋ ಎಂದು ಹೆದರಿ ಓಟ ಕೀಳುವುದಂತು ಗ್ಯಾರೆಂಟಿ), ನಾಯಕ ತೊಡೆ ತಟ್ಟಿದ ಮಾತ್ರಕ್ಕೆ ನಾಯಿಮರಿಯಂತೆ ಬಾಲಮುದುರಿ ಹಿಂದೆ ಸರಿಯುವ ಸಾವಿರಾರು ಹಾರ್ಸ್ ಪವರ್ ನ ರೈಲು ಬಂಡಿಗಳು, ನೂರಾರು ಮೀಟರ್ ದೂರದಲ್ಲಿರುವ ಕಾರಿನ ಫ್ಯೂಯೆಲ್ ಟ್ಯಾಂಕಿನ ರಂದ್ರಕ್ಕೆ ಗುರಿಹಿಡಬಲ್ಲಂತಹ ವಿಸ್ಮಯಕಾರಿ ಕ್ರಿಯಾಶೀಲತೆಗಳು ನಮಗೆ ಆಸ್ಕರ್ ಅನ್ನು ತಂದು ಕೊಡಬಲ್ಲವೇ?



ಒಟ್ಟಿನಲ್ಲಿ ನೋಡುಗರನ್ನು ಒಂದು ಭ್ರಮಾಪ್ರಪಂಚದೊಳಗೇ ಕೊಂಡೊಯ್ದು ಮನೋರಂಜಿಸುವ ಕಲೆ ನಮ್ಮವರಿಗಾದರೆ, ಇವುಗಳ ಹೊರತಾಗಿಯ ಚಿತ್ರಗಳನ್ನು ಕಣ್ಣೆತ್ತು ನೋಡದ ಚಾಳಿ ನಮ್ಮದು. ಆದರೆ ಇದನ್ನು ಎಂದಿನವರೆಗೆ ಸಹಿಸಲಾದೀತು? ಒಲಿಂಪಿಕ್ಸ್ ಹಾಗು ಆಸ್ಕರ್ ನಲ್ಲಿ ಹಿಂದುಳಿದಿರುವ ದೊಡ್ಡ ದೇಶವೆಂಬ ಹಣೆಪಟ್ಟಿ ಇನ್ನೂ ಎಂದಿನವರೆಗೆ ನಾವುಗಳು ಕಟ್ಟಿಕೊಂಡಿರಬೇಕು? ಅರ್ಥವರಿಯದ ಕಾರ್ಯಗಳಿಗೆ ಕೋಟಿ ಕೋಟಿ ಸುರಿದು ಹಣವನ್ನು ಪೋಲುಮಾಡುವ ನಮ್ಮ ಸರ್ಕಾರಗಳು, ಚಿತ್ರಮಂಡಳಿಗಳು ಉತ್ತಮ ಚಿತ್ರಗಳನ್ನು ಮಾಡಲು ಆರ್ಥಿಕವಾಗಿಯೂ ಹಾಗು ಅರ್ಥಪೂರ್ಣವಾಗಿಯೂ ಸಹಕರಿಸಬೇಕಾಗಿದೆ. ಕೇಂದ್ರ ಸರ್ಕಾರದಿಂದ ನೆಡೆಯುವ NFDCI (National Film Development Corporation Of India) ಸಂಸ್ಥೆ ಇಲ್ಲಿಯವರೆಗೂ ಸುಮಾರು ಮುನ್ನೂರು ಚಿತ್ರಗಳನ್ನು ನಿರ್ಮಿಸಿದೆ. ಕೇವಲ ಕಥೆ ಹಾಗು ಸಾಹಿತ್ಯಗಳೇ ಮುಖ್ಯ ಭೂಮಿಕೆಯಲ್ಲಿ ಬರುವ ಈ ಚಿತ್ರಗಳು ಭಾರತ ದೇಶವನ್ನು ವಿಶ್ವಕ್ಕೆ ಪರಿಚಯಿಸಿಕೊಟ್ಟ ಸಣ್ಣ ಸಣ್ಣ ಕಿಟಕಿಗಳಂತೆ ಕಂಡರೂ ಆಸ್ಕರ್ ನ ಮಟ್ಟಿನ ಯಶಸ್ಸು ಗಳಿಸಲು ಇವುಗಳಿಗೂ ಸಾಧ್ಯವಾಗಿಲ್ಲ. ಪರಿಣಾಮ ಇನ್ನೂ ಹೆಚ್ಚಿನ ಪ್ರಯತ್ನ ನಮ್ಮಲ್ಲಿ ಆಗಬೇಕಿದೆ. ಯಾವುದೇ ಆಡಂಬರಗಳ ಅವಶ್ಯಕತೆ ಇರದೇ ಘಾಡವಾದ ಸಾಮಾಜಿಕ ಸಂದೇಶವನ್ನೂ ಸಹ ಸಾಮಾನ್ಯನಿಗೆ ತಿಳಿಯುವಂತೆ ಅತಿ ಸರಳವಾಗಿ, ಮನೋರಂಜನೆಯ ಮೂಲಕವೇ ತಲುಪುವಂತೆ ಮಾಡುವ ನಿರ್ದೇಶಕರ ಗುಂಪು ನಮ್ಮಲ್ಲಿ ಬರಬೇಕಿದೆ. ನೂರಾ ಮೂವತ್ತು ಕೋಟಿ ಜನರಲ್ಲಿ ಒಲಿಂಪಿಕ್ಸ್ ನ ಒಂದು ಚಿನ್ನದ ಪದಕವನ್ನು ಗೆಲ್ಲಲು ತೋರುವ ಹಪಹಪಿಸುವಿಕೆ ಆಸ್ಕರ್ ನ ಒಂದು ಮೂರ್ತಿಯನ್ನೂ ಗೆಲ್ಲಲು ತೋರಿಸಬೇಕಿದೆ.

Thursday, March 16, 2017

ಹಾಡು ಹಳೆಯದಾದರೇನು..ಭಾವ ನವನವೀನ...!

ಬರೋಬ್ಬರಿ ಇಪ್ಪತೈದು ಸಾವಿರ ಹಾಡುಗಳು ಅಥವಾ ಇನ್ನೂ ಹೆಚ್ಚಿರಬಹುದು. ಭಕ್ತಿಗೀತೆ, ಭಾವಗೀತೆ, ಹಾಗು ಚಿತ್ರಗೀತೆಗಳು. ರಾಗ, ತಾಳ, ಶ್ರುತಿಗಳ ಸೂಕ್ತ ಮಿಶ್ರಣದಿಂದ ಹಾಗು ಕೋಗಿಲೆಯೂ ಅಸೂಯೆಪಡುವಂತಹ ಇಂಪಾದ ಸ್ವರಗಳಿಂದ ಮೂಡಿದ ಹಾಡುಗಳಿವು. ಸೋತು ಬಿದ್ದ ಸೈನಿಕನ ಆತ್ಮಸ್ತಯ್ರ್ಯವನ್ನು ಬಡಿದೆಬ್ಬಿಸುವುದರಿಂದ ಹಿಡಿದು, ನಟನೆಯ ಮೂಲಕವೂ ಸಾಧ್ಯವಾಗದ ಭಾವಗಳನ್ನು ಪ್ರೇಕ್ಷಕನ ಚಿತ್ತದಲ್ಲಿ ಸ್ಪುರಿಸುವ ಮಟ್ಟಿಗೆ ಈ ಹಾಡುಗಳು ಪ್ರಚಲಿತ. ನಮ್ಮ ನಿಮ್ಮಂತಹ ಸಾಮಾನ್ಯರೊಟ್ಟಿಗಿರುವ ಫೋನಿನಲ್ಲೂ ಒಂದು ಪಕ್ಷ ಇಷ್ಟೊಂದು ಹಾಡುಗಳನ್ನು ಹಿಡಿದಿಡುವ ಸಾಮರ್ಥ್ಯವಿರದಿರುವಾಗ ಅಕ್ಕತಂಗಿಯರಿಬ್ಬರ ಮಧುರ ಸ್ವರದಿಂದ ಇಷ್ಟೆಲ್ಲಾ ಹಾಡುಗಳು ಮೂಡಿಬಂದಿವೆ ಎಂದರೆ ನಾವು ನಂಬಲೇಬೇಕು. ಯಸ್, ಇಂದು ನಾವು ಮಾತನಾಡಲೊರಟಿರುವುದು ಭಾರತ ದೇಶ, ಅಷ್ಟೇ ಏಕೆ, ವಿಶ್ವವೇ ಕಂಡ ಮಹಾನ್ ಹಾಡುಗಾರ್ತಿಯರಲ್ಲಿಬ್ಬರು. ನಮ್ಮ ದೇಶದ ಮಟ್ಟಿಗೆ ಅಕ್ಷರ ಅರಿಯದ ಮುದುಕಪ್ಪನಿಗೂ ಇದು ಇವರದೇ ಧ್ವನಿಯೆಂದು ಗುರುತಿಸಬಲ್ಲಷ್ಟು ಮನೆಮಾತಾಗಿರುವ ಸಹೋದರಿಯರಿಬ್ಬರು. ಫಿಲಂ ಫೇರ್, ಪದ್ಮ ಪ್ರಶಸ್ತಿ ಗಳಿಂದಿಡಿದು ಭಾರತ ರತ್ನದ ವರೆಗೂ ಸುಮಾರು ನೂರಕ್ಕೂ ಹೆಚ್ಚಿನ ಬಿರುದು ಸಮ್ಮಾನಗಳನ್ನು ಗಳಿಸಿರುವವರು!




ಆಶಾ ಹಾಗು ಲತಾ. ಸ್ವಾತಂತ್ರ್ಯಪೂರ್ವ ಭಾರತದ ಸಿನಿಮಾ ಜಗತ್ತಿನಿಂದಿಡಿದು ಇಂದಿನವರೆಗೂ, ಸರಿಸುಮಾರು ಎಪ್ಪತ್ತು ವರ್ಷಗಳಿಂದಲೂ ಆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರವ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ಇಬ್ಬರು. 1929 ಸೆಪ್ಟೆಂಬರ್ 28 ರಂದು ಜನಿಸಿದ ಲತಾ ಮಂಗೇಶ್ಕರ್, ಕುಟುಂಬದ ಐವರು ಮಕ್ಕಳಲ್ಲಿ ಹಿರಿಯಳು. ಆಶಾ ಅಕ್ಕನಿಗಿಂತ ನಾಲ್ಕು ವರ್ಷ ಕಿರಿಯಳು. 1942 ರಲ್ಲಿ ತಂದೆ (ಹಾಡುಗಾರ ದೀನನಾಥ್ ಮಂಗೇಶ್ಕರ್) ತೀರಿಕೊಂಡಾಗ ಸಂಸಾರದ ಪೂರಾ ಹೊಣೆ ಲತಾಳ ಎಳೆಯ ಹೆಗಲ ಮೇಲೆ ಬಂದೆರಗಿತು. ತನ್ನ ಐದನೇ ವಯಸ್ಸಿಗೆ ಹಾಡುವುದನ್ನು ಕಲಿತಿದ್ದ ಈಕೆ ಅಂದು ಆಯ್ಕೆ ಮಾಡಿಕೊಂಡದ್ದೂ ಸಹ ಅದೇ ಕ್ಷೇತ್ರವನ್ನೇ. ತಂದೆಯೂ ಸಹ ಹಾಡುಗಾರರಾಗಿ ಹೆಸರು ಮಾಡಿದ್ದರಿಂದ ಒಂದೆರಡು ಅವಕಾಶಗಳು ಕೂಡಲೇ ಈಕೆಗೆ ಸಿಕ್ಕವು. ಆದರೆ ಅಂದಿನ ಹಾಡುಗಳು ಈಕೆಯ ಮನಸಂತೃಪ್ತಿಗಿಂತ ಹೆಚ್ಚಾಗಿ ತಂಗಿ ತಮ್ಮಂದಿರ ಉದರ ತೃಪ್ತಿಗಾಗೇ ಆಗಿದ್ದಿತು. ಅಷ್ಟೇನೂ ಬಲಿಯದ ಕಂಠಸಿರಿಯಿಂದ ಸಂಗೀತ ನಿರ್ದೇಶಕರು ಸಂತೃಪ್ತರಾಗುತ್ತಿರಲಿಲ್ಲ. ಪರಿಣಾಮ ಅವಕಾಶಗಳು ಕ್ಷೀಣಿಸತೊಡಗಿದವು. ದಾರಿ ಕಾಣದೆ ಲತಾ ಆಶಾಳೊಟ್ಟಿಗೊಡಗೂಡಿ ನಟನೆಗೆ ಇಳಿಯುತ್ತಾಳೆ. ಆದರೆ ಯಶಸ್ಸೆಂಬುದು ಇಲ್ಲಿಯೂ ಮರೀಚಿಕೆಯಾಗುತ್ತದೆ. ಆದರೆ ಸಂಗೀತ ಲತಾಳನ್ನು ಅಷ್ಟು ಸುಲಭವಾಗಿ ಕೈ ಬಿಟ್ಟಿರಲಿಲ್ಲ. ಅದು ಆಕೆಯನ್ನು ಹಿಂದುಸ್ಥಾನಿ ಸಂಗೀತದ ಆಳ ಅಗಲವನ್ನು ಕಲಿಯಲು ಪ್ರೇರೇಪಿಸಿಸುತ್ತದೆ. ಅಂದು ದೈನ್ಯಭಾವದಿಂದ ಅವಿರತವಾಗಿ ಸಂಗೀತಾಭ್ಯಾಸವನ್ನು ಆರಂಭಿಸಿದ ಲತಾಳಿಗೆ ಸಂಗೀತ ನಿರ್ದೇಶಕ ಗುಲಾಮ್ ಹೈದೆರ್ ಅವರ ಮಾರ್ಗದರ್ಶನದಲ್ಲಿ (1948) 'ಮಜಬೂರ್' ಚಿತ್ರದಲ್ಲಿ ಮೂಡಿಬಂದ ಹಾಡುಗಳು ಯಶಸ್ಸಿನ ಮೈಲುಗಲ್ಲಾದವು. ಕೂತವ ಕೂತಲ್ಲೇ ಕಲ್ಲಾಗಿಬಿಡುವ ಮಟ್ಟಿಗಿನ ಮಧುರ ವಾಣಿಗೆ ಮನಸ್ಸೋತು ಸಂಗೀತ ನಿರ್ದೇಶಕರು ಈಕೆಯ ಮನೆಯ ಮುಂದೆ ಸಾಲು ಗಟ್ಟಿ ನಿಲ್ಲತೊಡಗಿದರು. ಅಂತೂ ಸಂಸಾರವನ್ನು ಪೋಷಿಸುವ ನೆಪದಲ್ಲಿ ಇತಿಹಾಸವೇ ಹೆಮ್ಮೆ ಪಡುವ ಹಾಡುಗಾರ್ತಿಯಾಗಿ ಲತಾ ಬೆಳೆಯತೊಡಗಿದಳು. ಒಮ್ಮೆ ಪ್ರಧಾನಿ ನೆಹರು ಅವರೇ ಕೇಳಿ ಅತ್ತುಬಿಟ್ಟಿದ್ದ 'ಏ ಮೇರೇ ವತನ್ ಕೆ ಲೋಗೋ' ಹಾಡಿನ ಮೂಲಕ (1962 ರ ಇಂಡೋ ಚೈನಾ ಸಮರದ ಸಮಯದಲ್ಲಿ ) ದೇಶ ಕಾಯುವ ಸೈನಿಕರ ಕೆಚ್ಚೆದೆಯ ವ್ಯಕ್ತಿತ್ವವನ್ನು ಇಂಪಾಗಿ ಹಾಡಿ ತಿಳಿಸಿದ್ದರಿಂದ ಹಿಡಿದು, A R ರೆಹ್ಮಾನ್ ರ ನವ ಮಾದರಿಯ ಒಂದೇ ಮಾತರಂವರೆಗೂ ಲತಾ ಜನಸಾಗರದಲ್ಲಿ ಆಪ್ತಳಾದಳು. ದೇಶದ ‘ನೈಟಿಂಗೇಲ್’ ಎಂಬ ಬಿರುದು ಆಕೆಗೆ ಸುಮ್ಮನೆ ಬರಲಿಲ್ಲ. ಸುಮಾರು 35 ಭಾಷೆಗಳಲ್ಲಿ ಹನ್ನೆರೆಡು ಸಾವಿರಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿರುವ ಈಕೆಗೆ ಕೇಂದ್ರ ಸರ್ಕಾರ 2001 ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ




ಇತ್ತ ಕಡೆ ಆಶಾ ಅಕ್ಕ ನೆಡೆದ ಹಾದಿಯಲ್ಲೇ ತನ್ನ ಕೆರಿಯರ್ ಅನ್ನು ರೂಪಿಸಿಕೊಳ್ಳುತ್ತಾಳೆ. ಆದರೆ ಈಕೆ ಅಕ್ಕನ ಹಾಗೆ ಕೇವಲ ಭಾವ ಹಾಗು ಭಕ್ತಿ ಪ್ರಧಾನ ಹಾಡುಗಳಿಗೆ ಸೀಮಿತವಾಗಿರದೆ ರಾಕ್, ಡಿಸ್ಕೋ, ಪಾಪ್, ಗಝಲ್ಸ್ ಹಾಗು ಇನ್ನು ಹಲವು ಪ್ರಕಾರಗಳಲ್ಲಿ ತೊಡಗಿಸಿಕೊಂಡು ವರ್ಸಟೈಲ್ ಹಾಡುಗಾರ್ತಿ ಎಂಬ ಬಿರುದನ್ನು ಪಡೆಯತೊಡಗಿದಳು. ರೋಮ್ಯಾಂಟಿಕ್ ಹಾಡುಗಳೆಂದರೆ ಅದು ನೃತ್ಯಗಾರ್ತಿಯ ಮೂಲಕ, ಆಕೆಯ ಕನಿಷ್ಠ ಬಟ್ಟೆಗಳ ಸಿಂಗಾರದಲ್ಲಿ ಮಾತ್ರ ಸಾಧ್ಯವೆಂಬುದು ಒಂದೆಡೆಯಾದರೆ, ಐಟಂ ಸಾಂಗ್ ಗಳೆಂದು ಕರೆಯುವ ಹಾಡುಗಳಿಗೇ ಸವಾಲೆಸೆಯುವ ಮಟ್ಟಿನ ಮಾಟದ ಕಂಠದಿಂದ, ನಾಯಕಿಯ ಯಾವುದೇ ಬಿಂಕ ಬಿಗುಮಾನಗಳ ಅವಶ್ಯಕತೆಯಿರದೆ, ಕೇಳುಗ ತನ್ನ ಕಲ್ಪನಾಶಕ್ತಿಗೇ ಸವಾಲೆಸೆಯುವಂತೆ ಮಾಡುತ್ತಿದ್ದದ್ದು ಆಶಾಳ ಕಲೆ. 'ಧಮ್ ಮಾರೋ ಧಮ್' , 'ಜಬ್ ಛಾಯೆ ಮೇರಾ ಜಾದು' ವಿನಿಂದ ಹಿಡಿದು 'ರಾಧಾ ಕೈಸೇ ನ ಜಲೇ' ಎಂಬ ರಾಧೆಯ ಹುಸಿ ಮುನಿಸ್ಸನು ಕೇಳುಗ ತನ್ನಲ್ಲೇ ಪ್ರೆಶ್ನಿಸಿಕೊಳ್ಳುವವರೆಗೂ ಆಶಾ ಸಂಗೀತಪ್ರಿಯರ ಮನಗೆದ್ದಳು. ಈಕೆಯ ಈ ಪರಿಯ ವರ್ಸಟೈಲಿಟಿ ಗಾಯನಕ್ಕೆ ತಕ್ಕ ಪುಷ್ಟಿಯನ್ನು ನೀಡಿದವರು ಸಂಗೀತ ನಿರ್ದೇಶಕ R. D.ಬರ್ಮನ್ (ಪಂಚಮ್ ದಾ). ಎಪ್ಪತ್ತು, ಎಂಬತ್ತರ ದಶಕಗಳಲ್ಲಿ ತನ್ನ ಯಶಸ್ಸಿನ ಉತ್ತುಂಗದಲ್ಲಿದ್ದ R. D.ಬರ್ಮನ್ ರವರ ಸಂಗೀತಕ್ಕೆ ಜೀವವಾಗಿ ಈಕೆಯ ಧ್ವನಿ ಹೊಂದತೊಡಗಿತ್ತು. ಜೋಡಿ ನೋಡುಗರಿಗೆ ಒಂದು ಹೊಸ ಸಂಗೀತ ಲೋಕವನ್ನೇ ಸೃಷ್ಟಿಸಿ ಕೊಟ್ಟಿತ್ತು. ಸರಿ ಸುಮಾರು 28 ವರ್ಷಗಳ ಕಾಲ ಸಂಗೀತ ಪ್ರಿಯರನ್ನು ರಂಜಿಸಿದ್ದಲ್ಲದೆ 1980 ರಲ್ಲಿ ಇಬ್ಬರು ವಿವಾಹ ಬಂಧನಕ್ಕೂ ಒಳಗಾಗುತ್ತಾರೆ. ಹೀಗೆ ಸುಮಾರು ಇಪ್ಪತಕ್ಕೂ ಹೆಚ್ಚಿನ ಭಾಷೆಗಳಲ್ಲಿ ಹದಿಮೂರು ಸಾವಿರಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿರುವ ಆಶಾ ಅತಿ ಹೆಚ್ಚು ಸ್ಟುಡಿಯೋ ರೆಕಾರ್ಡಿಂಗ್ಸ್ ಮಾಡಿರುವ ವ್ಯಕ್ತಿಯಾಗಿ ಗಿನ್ನೆಸ್ ದಾಖಲೆಯನ್ನೂ ತನ್ನದಾಗಿಸಿಕೊಂಡಿದ್ದಾಳೆ. . ಅಲ್ಲದೆ ಗ್ರಾಮಿ ಅವಾರ್ಡ್ ಗೆ ಹೆಸರಿಸಲ್ಪಟ್ಟ ಭಾರತದ ಮೊದಲ 'ಹಾಡುಗಾರ್ತಿ' ಎಂಬ ಹೆಗ್ಗಳಿಕೆಯೂ ಆಶಾ ಬೋಸ್ಲೆಯದು.




ಅಕ್ಕನ ಹಾದಿಯಲ್ಲೇ ನೆಡೆದು ಬಂದ ಆಶಾ ಆಕೆಯನ್ನು ಸ್ಪೂರ್ತಿಯ ಸೆಲೆಯಾಗಿಸಿಕೊಂಡಳೆ ವಿನಹ ಎಂದಿಗೂ ಆಕೆಯ ಹೆಗ್ಗಳಿಕೆಯನ್ನು ಬಳಸಿ ಮೇಲೇರಲಿಲ್ಲ. ಲತಾ ನಿರಾಕರಿಸಿದ ಹಾಡುಗಳು ಮಾತ್ರ ಆಶಾಳ ಪಾಲಾಗುತ್ತಿದ್ದವು ಎಂಬ ಅಪವಾದ ಹಿಂದಿನಿಂದಲೂ ಇದ್ದಿತು. ಆದರೆ ವಾಸ್ತವದಲ್ಲಿ ಆಶಾ ಲತಾಳಾಗಿ ಅಥವಾ ಲತಾ ಆಶಾಳಾಗಿ ಹಾಡಲು ಸಾಧ್ಯವೇ ಇಲ್ಲವೆಂಬುದು ಸಾರ್ವತ್ರಿಕ ಸತ್ಯವಾಗಿದ್ದಿತು. ಇಬ್ಬರೂ ತಮ್ಮದೇ ಆದ ವಿಶಿಷ್ಟ ಲಯವನ್ನು ಕಂಡುಕೊಂಡಿದ್ದರು. ಗಂಡುಬೀರಿ ಅಥವಾ ಸಿಡುಕಿನ ವ್ಯಕ್ತಿತ್ವದ ನಾಯಕಿಯ ಪಾತ್ರಗಳಿಗೆ ಜೀವತುಂಬುವ ಕಲೆ ಆಶಾಳ ಹೆಗ್ಗಳಿಕೆಯಾಗಿದ್ದರೆ, ಪ್ರೀತಿಯ ಬೇಗೆಯಲ್ಲಿ ಬೇಯುತ್ತಿರುವ ಹೃದಯದ ಚಡಪಡಿಕೆಯನ್ನು ಲತಾಳ ಕಂಠದಿಂದ ಕೇಳುವುದೇ ಮನಸ್ಸಿಗೆ ಒಂದು ಬಗೆಯ ಮುದ. ಒಂದು ಕೋನದಲ್ಲಿ ನಿಜಜೀವನದಲ್ಲೂ ಇಬ್ಬರದು ಅದೇ ಬಗೆಯ ವ್ಯಕ್ತಿತ್ವವಾಗಿದ್ದಿತು. ಆಶಾ ತನ್ನ ಹದಿನಾರನೆ ವಯಸ್ಸಿಗೇ, ಮನೆಯವರ ವಿರೋಧದ ನಡುವೆಯೇ ತನಗಿಂತ ಎರಡರಷ್ಟು ವಯಸ್ಸಿನ ಗಣಪತ್ ರಾವ್ ಬೋಸ್ಲೆಯವರನ್ನು ಹಠಮಾಡಿ ಮದುವೆಯಾಗಿ ತೋರಿಸಿದ ಧೈರ್ಯ ಮುಂದೆ ತನ್ನ 46ನೆ ವಯಸ್ಸಿನಲ್ಲಿ ತನಗಿಂತಲೂ ಕಿರಿಯರಾಗಿದ್ದ R D ಬರ್ಮನ್ ಅವರನ್ನು ವರಿಸುವವರೆಗೂ ತೋರುತ್ತಿತ್ತು.

ತನ್ನ ಖಾಸಗಿ ಜೀವನವನ್ನು ತೆರೆದ ಪುಸ್ತಕದಂತೆ ಮಾಡಿಕೊಳ್ಳದ ಲತಾ ಮಾತ್ರ ಜೀವನದುದ್ದಕ್ಕೂ ಯಾರ ಕೈಯನ್ನು ಹಿಡಿಯಲಿಲ್ಲ. ಘಾಡವಾದ ಪ್ರೇಮವೊಂದು ಇದಕ್ಕೆ ಕಾರಣವಾದರೂ, ಅದಕೊಂಡು ನಿಜ ರೂಪ ಇನ್ನೂ ಸಿಕ್ಕಿಲ್ಲ. ಈ ಒಂದು ಕಾರಣಕ್ಕೆ ಏನೋ ಲತಾಳ ಮಧುರ ಕಂಠದಲ್ಲಿ ಆ ಪರಿಯ ನೋವಿನ ಭಾವ ತುಂಬಿ ತುಳುಕುತ್ತಿರುವುದು. ಒಟ್ಟು ಮೂರು ಜನ ಕಿರಿಯ ಸಹೋದರಿಯರು ಹಾಗು ಒಬ್ಬ ತಮ್ಮನನ್ನೂ ಸಂಗೀತ ಲೋಕದ ದಿಗ್ಗಜರನ್ನಾಗಿ ಮಾಡಲು ಪ್ರೇರಣೆಯಾದದ್ದು ಮಾತ್ರ ಲತಾಳ ಹಿರಿಮೆ.




ಇಂದು ಒಮ್ಮೆ ಕೇಳಿ ಮರೆತುಹೋಗುವ ನೂರಾರು ಹಾಡುಗಳ ಮದ್ಯೆ ಆ ಕಾಲದ ಇಂತವರ ಹಾಡುಗಳು ಇನ್ನೂ ನಮ್ಮ ಹೃದಯದ ಆಳದಲ್ಲಿ ಎಲ್ಲೋ ಒಂದೆಡೆ ಮನೆಮಾಡಿಕೊಂಡಿವೆ ಎಂದರೆ ಅದು ಸಂಗೀತ, ಸಾಹಿತ್ಯ ಹಾಗು ಹಾಡುಗಾರರು, ಎಲ್ಲರಿಗು ಸಮಾನವಾದ ಮಾನ್ಯತೆಯನ್ನು ನೀಡುತ್ತಿದ್ದ ಸಂಗೀತ ನಿರ್ದೇಶಕರು ಹಾಗು ಸಂಗೀತದ ಪರಿಪೂರ್ಣ ಜ್ಞಾನವನ್ನು ಸಂಪಾದಿಸಿದ ಇಂತಹ ಹಲವಾರು ಸವಿಮಧುರ ಕಂಠಗಳೇ ಕಾರಣ. ಇಂದಿನ ತಾಂತ್ರಿಕ ಯುಗದಲ್ಲಿ ಸಾಹಿತ್ಯ ಹಾಗು ಹಾಡುಗಾರರನ್ನು (ಅರ್ಹರಾದ ಹಾಡುಗಾರರು) ಊಟಕ್ಕೆ ಇಡುವ ಉಪ್ಪಿನಕಾಯಿಯಂತೆ ಬೇಕೂ ಬೇಡವಾಗಿಸಿರುವ ಬಹಳಷ್ಟು ಸಂಗೀತ ನಿರ್ದೇಶಕರು ಕೇವಲ ಸಂಗೀತಕಷ್ಟೇ ಮಣೆ ಹಾಕುತ್ತಾರೆ. ಅದೂ ಸಹ ಕಂಪ್ಯೂಟರ್ ಗಳ ಮುಖೇನ ಮೂಡುವ ಯಾಂತ್ರಿಕ ಸ್ವರಗಳು. ಅದಾಗಲೇ ಸಾಹಿತ್ಯದ ವರ್ಚಸ್ಸನೇ ಬಹುವಾಗಿ ಒಸಕಿಹಾಕಿರುವ ಇಂದಿನ ಸಿನಿಪ್ರಪಂಚ ಹೀಗೆ ಮುಂದುವರೆದರೆ ನಾಳಿನ ದಿನಗಳಲ್ಲಿ ಹಾಡುಗಾರರ ಧ್ವನಿಯನ್ನೂ ಯಂತ್ರಗಳ ಮುಖಾಂತರವೇ ಮೂಡಿಸಿ, ಹಾಡುಗಾರರೆಂಬ ಪದವೇ ಮಾಯಾವಾಗಿಸಿದರೂ ಆಶ್ಚರ್ಯಪಡಬೇಕಾಗಿಲ್ಲ. ಕಿವಿಗೆ ಇಂಪಾದ ಒಂದೇ ಕಾರಣಕ್ಕೆ ಇಂದು ಅಂತಹ ಹಾಡುಗಳೇ ಸೂಪರ್ ಹಿಟ್ ಹಾಡುಗಳೆನ್ನುವುದಾದರೆ ರಾಗ, ತಾಳ, ಶ್ರುತಿ ಗಳೊಟ್ಟಿಗೆ ಗಮಕಗಳ ಹದವಾದ ಮಿಶ್ರಣದೊಂದಿಗೆ ಸಂಗೀತವೆಂಬ ಅನಂತವನ್ನು ಸೃಷ್ಟಿಸುತ್ತಿದ್ದ ಹಾಡುಗಳ ಕತೆಯೇನು? ಗಿಟಾರ್, ಡ್ರಮ್ಸ್ ಗಳ ಮೂಲಕ ಮೂಡುವ ಸದ್ದಿಗೆ ರ್ಯಾಪ್ ಮಾಡುವ ಶೈಲಿಯನ್ನೇ ಸಂಗೀತವೆಂದು ಅರಿಯುತ್ತಿರುವ ಹೆಚ್ಚಿನ ಯುವ ಜನತೆಗೆ ತಬಲಾ, ಕೊಳಲು ಹಾಗು ತಂಬೂರದಿಂದ ಮೂಡುವ ಸ್ವರಗಳಿಗೂ ಗುನುಗುವುದನ್ನು ಹೇಳಿಕೊಡುವವರ್ಯಾರು? ಅಂದು ಕೇವಲ ಮೈಕೊಂದನ್ನು ಕೈಗೆ ಕೊಟ್ಟು ಕುಳಿತರೆ ಕೇಳುಗ ಒಂದು ಹೊಸ ಲೋಕದಲ್ಲೇ ಮುಳುಗಿ ಹೋಗುವಂತೆ ಮಾಡುತ್ತಿದ್ದ ಲತಾ ಹಾಗು ಆಶಾರಂತಹ ನೈಜ ಹಾಡುಗಾರ್ತಿಯರು ಹಾಗು ಆ ಸ್ಥರದ ಸಂಗೀತ ನಿರ್ದೇಶಕರು ಮುಂದೆಯೂ ಬರುವರೇ ಎಂಬುದೇ ಪ್ರಸ್ತುತ ಪ್ರೆಶ್ನೆ. ಇಂದಿನ ತಾಂತ್ರಿಕ ಸಂಗೀತ ಜಗತ್ತು ಮತ್ತು ಅದರ ಉದ್ದೇಶವನ್ನು ನೋಡಿದರೆ ಇದಕ್ಕೆ ಉತ್ತರವನ್ನು ಕಂಡುಕೊಳ್ಳುವುದು ಕಷ್ಟವೇನಲ್ಲ!




'ತೆರೆ ಬಿನ ಜಿಯಾ ಜಯೇ ನ' ಎಂಬ ಸಾಹಿತ್ಯ ಹಾಗು ಅದಕ್ಕೆ ಪೂರಕವಾದ ಮಹಾದಾದ್ಬುತ ಕಂಠಸಿರಿಯ ಮುಖೇನ ಮನಸ್ಸಿನ ಭಾವಗಳೆ ಹೊರಬಂದು ಮಾತಿಗಿಳಿಯುವಂತೆ ಮಾಡುತಿದ್ದ ಆ ಹಳೆಯ ಹಾಡುಗಳೆಲ್ಲಿ?, 'ಚಾರ್ ಬಾಟೆಲ್ ವೋಡ್ಕಾ, ಕಾಮ್ ಮೇರಾ ರೋಜ್ಕ ' ಎಂಬ ಹೆಂಡಗುಡುಕರ ಹೊಸಲೋಕವನ್ನು ಸೃಷ್ಟಿಸುವ ಗಲಭೆಗಳೆಲ್ಲಿ?

Friday, March 10, 2017

ಇಂತಹ ತೀರ್ಮಾನಗಳು ಸಮ್ಮತವೇ....?

ಆಕೆ ದೇಶಕ್ಕಾಗಿ ಸೆಣೆಸಿ ಬೆಳ್ಳಿಯ ಪದಕವೇನೋ ತಂದಿದ್ದಾಳೆ. ಸಂತೋಷ. ಭಾರತೀಯ ಬ್ಯಾಡ್ಮಿಂಟನ್ ಒಲಿಂಪಿಕ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಸಾಧನೆಯನ್ನು ಮಾಡಿರುವ ಪಿ ವಿ ಸಿಂಧು ಕೋಟ್ಯಾನುಕೋಟಿ ಯುವಕ ಯುವತಿಯರಿಗೆ ಸ್ಪೂರ್ತಿಯಾಗುವುದರಲ್ಲಿ ದೂಸರಾ ಮಾತೆ ಇಲ್ಲ. ದೇಶದ ಕ್ರೀಡೆಯ ಬಗ್ಗೆ ಮುತುವರ್ಜಿ ವಹಿಸುವವರು, ನಾಯಕರುಗಳು ಈಗ ಮಾಡಬೇಕಾದ ಕಾಮನ್ ಸೆನ್ಸ್ ಕೆಲಸ ಆಕೆಗೊಂದು ಉತ್ತಮ ಇನ್ಸ್ಟಿಟ್ಯೂಟೊ ಅಥವಾ ಆಕೆಯ ಆಟದಲ್ಲಿ ಮತ್ತಷ್ಟು ಸುಧಾರಣೆ ಬರಲು ಉತ್ತಮ ಫೀಲ್ಡ್ ಗಳ ನಿರ್ಮಾಣವೊ, ಅಥವಾ ಒಳ್ಳೆಯ ಧರ್ಜೆಯ ಕ್ರೀಡಾ ಸಲಕರಣೆಳೋ, ಅಥವಾ ಇನ್ನೂ ಹೆಚ್ಚು ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಏರ್ಪಡಿಸಿ ಈ ಮೂಲಕ ಇನ್ನೂ ಹೆಚ್ಚಿನ ಭಲಿಷ್ಟ ಆಟಗಾರರೊಡನೆ ಸೆಣೆಸಲು ಅವಕಾಶವನ್ನು ಕಲ್ಪಿಸಿ ಮುಂದಿನ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವಂತೆ ಆಕೆಯನ್ನು ಹುರಿದುಂಬಿಸುವುದು. ರಾಜ್ಯದ, ದೇಶದ ಕ್ರೀಡಾ ಮುಂದಾಲೋಚನೆ ಇರುವ ಯಾವುದೇ ವ್ಯಕ್ತಿ ಮಾಡಬೇಕಾದ ಕೆಲಸವಿದು ಎನ್ನುವುದು ಒಬ್ಬ ಸಾಮನ್ಯನಿಗೂ ಗೊತ್ತು.

ಆದರೆ, ನಮ್ಮ ಸೊ ಕಾಲ್ಡ್ ರಾಜಕಾರಣಿಗಳು ಮಾತ್ರ ಏನೋ ಹೊಸತೊಂದು ಸಾಧಿಸುವ ಭರದಲ್ಲಿ ಬೆಳ್ಳಿ ಗೆದ್ದ ಆಕೆಯ ಮುಂದೆ ದೇಶದ ಉನ್ನತ ಹಾಗು ಅಷ್ಟೇ ಜವಾಬ್ದಾರಿಯುತವಾದ ಹುದ್ದೆಗಳಲ್ಲೊಂದಾದ ಜಿಲ್ಲಾಧಿಕಾರಿ ಅಥವಾ ಅದಕ್ಕೆ ಸಮನಾದ ಕೆಲಸದ ಪ್ರಸ್ತಾಪವನ್ನು ಹಿಡಿದು ಹೋಗುತ್ತಾರೆ. ವಿಶ್ವದ ನಂಬರ್ 1 ಆಟಗಾರ್ತಿಯಾಗುವ ಗುರಿಯಿರುವ ಆಕೆಯಲ್ಲಿ ಈ ರೀತಿಯ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ಕಾಡುತ್ತಾರೆ. ಸುದ್ದಿಘೋಷ್ಠಿಯನ್ನು ಮಾಡುತ್ತಾರೆ. ಎದೆಯುಬ್ಬಿಸಿಕೊಂಡು ವಿಚಾರವನ್ನು ಜಗತ್ತಿನ ಮುಂದಿಡುತ್ತಾರೆ. ಒಬ್ಬ ಕ್ರೀಡಾಪಟು ತಾಲೂಕು, ಜಿಲ್ಲಾ , ರಾಜ್ಯ, ರಾಷ್ಟ್ರ ಹಾಗು ಅಂತಾರಾಷ್ಟ್ರೀಯ ಮಟ್ಟದ್ದಲ್ಲಿ ಬೆಳೆದು ಗಳಿಸಿದ ಅನುಭವವನ್ನು ಇದಕ್ಕೆ ಗುಲಗಂಜಿಯಷ್ಟೂ ಸಂಬಂಧವಿಲ್ಲದ ಯಾವುದೊ ಒಂದು ಸರ್ಕಾರೀ ವೃತ್ತಿಗೆ ತುಲನೆ ಮಾಡಿ ಆತನನ್ನು/ಆಕೆಯನ್ನು ಆ ಕುರ್ಚಿಯ ಮೇಲೆ ಈಗೆ ಕೂರಿಸುವುಸು ಅದೆಷ್ಟು ಸಮಂಜಶ? ಮೇಲಾಗಿ ಆ ಕ್ರೀಡಾಪಟು ಕೂರುತ್ತಿರುವುದು ಅಆಇಈ ಕಲಿಯುತ್ತಿರುವ ಮಕ್ಕಳಿಗೆ ತಲೆ ಬಾಚಿ, ಚಪ್ಪಲಿ ಹಾಕುವುದನ್ನು ಕಲಿಸಿಕೊಡುವ ವಿಚಾರವಲ್ಲ. ಲಕ್ಷಾನುಲಕ್ಷ ಜನರ ಕೋಟ್ಯಾನುಕೋಟಿ ಕಷ್ಟಕಾರ್ಪಣ್ಯಗಳನ್ನು ಸಂವಿಧಾನದ ಚೌಕಟ್ಟಿನಲ್ಲಿ, ಕಾನೂನುಬದ್ದವಾಗಿ, ನ್ಯಾಯಯುತವಾಗಿ ಅರಿತು, ಬೆರೆತು, ಅವುಗಳಿಗೊಂದು ಸೂಕ್ತ ಪರಿಹಾರವನ್ನು ಕೊಡುವ ಜವಾಬ್ದಾರಿಯುತ ಕೆಲಸ. ಇದು ವರ್ಷವಿಡೀ ಕ್ರೀಡಾ ಅಂಗಳದಲ್ಲೇ ಕಳೆಯಬೇಕಾದ ಇಪ್ಪತ್ತು ಇಪ್ಪತ್ತೊಂದು ವಯಸ್ಸಿನ ಹುಡುಗ ಹುಡುಗಿಯರಿಗೆ ಸಾಧ್ಯವಾಗುವ ವಿಷಯವೇ? ಒಂದು ಪಕ್ಷ ವಯಸ್ಸು ಇಂತಹ ಅಭಿಪ್ರಾಯವನ್ನು ಬದಲಿಸಬಹುದು ಎಂದಿಟ್ಟಿಕೊಳ್ಳೋಣ ಆದರೆ ಕಾಲ? ಈ ಅಮೂಲ್ಯ ಕಾಲವನ್ನು ಕ್ರೀಡಾಪಟು ಆಟದ ಅಂಗಳದಲ್ಲಿ ವಿನಿಯೋಗಿಸಬೇಕೋ ಅಥವಾ ಜವಾಬ್ದಾರಿಯುತ ಸರ್ಕಾರೀ ಉದ್ದೆಯಲ್ಲಿ ಕಳೆಯಬೇಕೋ ಎಂಬ ಪ್ರೆಶ್ನೆಯನ್ನು ಹೀಗೆ ಬೇಕಾ ಬಿಟ್ಟಿ ಉದ್ಯೋಗದ ಆಮಿಷವೊಡ್ಡುವ ಸರ್ಕಾರಗಳು ಕೇಳಿಕೊಳ್ಳಬೇಕು.

ಒಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕಗಳ ಸಾಧನೆ ಎರಡಂಕಿ ತಲುಪಿಲ್ಲ ಎಂಬ ಕೊರಗು ಅಪ್ಪನ ಆಲದಮರ ಸಸಿಯಾಗಿದ್ದಾಗಿನಿಂದಲೂ ಇದೆ. ಈಜುಗಾರಿಕೆ, ಬಾಸ್ಕೆಟ್ ಬಾಲ್, ಜುಡೋ, ಸೈಕ್ಲಿಂಗ್ ಹೀಗೆ ಇನ್ನೂ ಹಲವು ಕ್ರೀಡೆಗಳಲ್ಲಿ ಬೂತಕನ್ನಡಿ ಹಿಡಿದು ಹುಡುಕಿದರೂ ನಮ್ಮ ಒಂದೋ ಎರಡೂ ಹೆಸರುಗಳು ಸಿಕ್ಕವು ಅಷ್ಟೇ. ಅದೂ ಕೇವಲ ಪದಕದ ಮೂರು ಮೈಲು ದೂರಲ್ಲೇ ಬಂದು ಮರೆಯಾದವುಗಳು. ಇದಕ್ಕೆ ಕಾರಣವೆಂದರೆ ಸಾವಿರ ಜವಾಬು ಕೊಡುವ ನಾವುಗಳು ಹೀಗೆ ಉದಯೋನ್ಮುಖ ಪ್ರತಿಭೆಗಳು ಇನ್ನೇನು ಸಾಧನೆಯ ಗುರಿ ಮುಟ್ಟಲು ಒಂದಿಂಚು ಇರುವಾಗಲೇ ಎಡವಿ ಬೀಳುತ್ತಿರುವುದು ಏಕೆಂದು ಕೇಳಿಕೊಳ್ಳಲು ವಿಫಲರಾಗುತ್ತೇವೆ. ಅದು ಹೆಚ್ಚಾಗಿ ಪ್ರದರ್ಶನದ ವೈಫಲ್ಯವಾಗಿದ್ದರೂ ಎಲ್ಲೋ ಒಂದೆಡೆ ಆತನಿಗೆ ಅಥವಾ ಆಕೆಗೆ ತಾನು ಈ ಮಟ್ಟಕ್ಕೆ ಬಂದಿರುವುದೇ ಮಹಾನ್ ಸಾಧನೆ, ಇನ್ನು ಸೋತರು ಚಿಂತೆಯಿಲ್ಲ ಎಂಬ ಸಂತೃಪ್ತಿಯ ಭಾವ ಒಳಗೊಳಗೇ ಮೂಡಿರುತ್ತದೆ. ಅಲ್ಲದೆ ಸರ್ಕಾರಗಳ ಈ ಬಗೆಯ ಪ್ರಸ್ತಾಪಗಳೂ ಅಂತಹ ಮನೋಭಾವಕ್ಕೆ ತಕ್ಕ ಪುಷ್ಟಿಯನ್ನು ತುಂಬುತ್ತವೆ. ಇಂದು ರಾಜ್ಯಮಟ್ಟದಲ್ಲಿ ಸೆಣೆಸಿದರೆ ಈ ಹುದ್ದೆ, ರಾಷ್ಟ್ರಮಟ್ಟಕ್ಕೆ ಹೋದರೆ ಆ ಹುದ್ದೆ ಇನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದರೆ ಇಷ್ಟು ದುಡ್ಡು, ಅಷ್ಟು ಫ್ಲ್ಯಾಟು ಎಂಬ ಬಹುಮಾನಗಳಿಗೆ ಅದೆಷ್ಟೋ ಆಟಗಾರ ಆಟಗಳು ಸೀಮಿತವಾಗತೊಡಗಿವೆ. ಈ ಮೂಲಕ ಮುಂದಿನ ಕ್ರೀಡಾ ಪ್ರತಿಭೆಗಳನ್ನೇ ಪರೋಕ್ಷವಾಗಿ ಕಟ್ಟಿ ಕೂರಿಸುತ್ತಿದ್ದೇವೆಯೇ ಎಂಬುದನ್ನು ನಾವು ಅವಲೋಕಿಸಬೇಕಾಗಿದೆ. ಪದಕಗಳು ಬರುತ್ತಿಲ್ಲವೆಂದು ಕೊರಗುವ, ಆರ್ಥಿಕವಾಗಿ ಸಾಕಷ್ಟು ಸದೃಢವೆನಿಕೊಂಡಿರುವ ಭಾರತೀಯರು (ಸರ್ಕಾರಗಳು) ಒಬ್ಬ ಕ್ರೀಡಾಪಟು ದಿನದ 24 ಘಂಟೆಯೂ ಕ್ರೀಡೆಗಾಗಿಯೇ ತೊಡಗಿಸಕೊಳ್ಳಲು ಬೇಕಾದ ಸೌಲಭ್ಯವನ್ನು ಕಲ್ಪಿಕೊಡಲು ಮಾತ್ರ ಜಿಪುಣುತನ ಮಾಡುತ್ತೇವೆ. ನೀನು ನಾಲ್ಕು ಘಂಟೆ ಅಭ್ಯಾಸ ಮಾಡು ಹಾಗು ಉಳಿದ ಎಂಟು ಘಂಟೆ ಕೆಲಸಮಾಡಬೇಕೆಂದು ರೈಲ್ವೆ ಇಲಾಖೆಗೊ ಅಥವಾ ಪೊಲೀಸ್ ಇಲಾಖೆಗೊ ಕಳುಹಿಸುತ್ತೇವೆ. ದೇಶದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಡಿದೆತ್ತುವ ಕ್ರೀಡಾಳುಗಳು ಎದುರಿಸುತ್ತಿರುವ ಗಂಭೀರ ಸವಾಲುಗಳಿವು.

ಇಂದು ಒಬ್ಬ ಜಿಲ್ಲಾಧಿಕಾರಿಯಾಗಿ, ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಥವಾ ರೈಲ್ವೆ ಇಲಾಖೆಯ ಮತ್ಯಾವುದೋ ಉನ್ನತ ಹುದ್ದೆಯನ್ನಲಂಕರಿಸಲು ಒಬ್ಬ ದೇಶದ ನಾಗರಿಕ ಹಗಲು ರಾತ್ರಿಯೆನ್ನದೆ ತನ್ನ ಎಲ್ಲವನ್ನೂ ಅರ್ಪಿಸಿ, ಉತ್ತರಪತ್ರಿಕೆಯಲ್ಲಲ್ಲದೆ ವ್ಯಕಿಗತವಾಗಿಯೂ ಉತ್ತಮ ಅಂಕವನ್ನು ಗಳಿಸುತ್ತಾನೆ. ಇಂತಹ ಕೇವಲ ಒಂದು ಹುದ್ದೆಗೆ ಸಾವಿರಾರು ಯುವಕ ಯುವತಿಯರು ಅರ್ಹರಾಗಿರುತ್ತಾರೆ. ದೇಶದ ಉನ್ನತಿಗೆ ತಮ್ಮ ನಿಸ್ವಾರ್ಥ ಸೇವೆಯ ಮುಖೇನ ಸಾಧ್ಯವಾದಷ್ಟು ಮಟ್ಟಿನ ಕೊಡುಗೆಯನ್ನು ಕೊಡಲು ಅಣಿಯಾಗಿರುತ್ತಾರೆ. ಇಂತಹ ಸನ್ನಿವೇಶದಲ್ಲಿ ಆ ಹುದ್ದೆಯ ಗಂಧ ಗಾಳಿಯೂ ಅರಿಯದ ಯಾರೋ ಒಬ್ಬನನ್ನು ತಂದು ಅಲ್ಲಿಗೆ ಕೂರಿಸಿದರೆ ಇತ್ತ ಕಡೆ ಅದೆಷ್ಟು ಸಾವಿರ ಕನಸುಗಳು ಉದುರಿ ಕಮರಿ ಹೋಗಬಹುದು? ಅಲ್ಲದೆ ಅದೆಷ್ಟು ಧಕ್ಷ ಯುವಕರು ಇಂದು ಅಧಿಕಾರಿಗಳಾಗದೆ ವ್ಯವಸ್ಥೆ ಅಸ್ತವ್ಯಸ್ತ ವಾಗಬಹುದು? ಲೋಕಸೇವಾ ಆಯೋಗಗಳು ನೆಡೆಸುವ ಪರೀಕ್ಷೆಗಳಿಗೆ ಮಾನ್ಯತೆ ಉಳಿಯುತ್ತದೆಯೇ? ಇದಕ್ಕೆಲ್ಲ ನೇರ ಹೊಣೆಯನ್ನು ಹೊರುವವರು ಯಾರು? ಒಟ್ಟಿನಲ್ಲಿ ಆಟಗಾರರಿಗೆ ಉತ್ತಮ ಆಟಗಾರರಾಗಲು ಅಧಿಕಾರಿಗಳಿಗೆ ಧಕ್ಷ ಅಧಿಕಾರಿಗಲೂ ಸಾಧ್ಯವಾಗದ ದ್ವಂದ್ವ ಪರಿಸ್ಥಿತಿ ನಿರ್ಮಾಣವಾಗಿ ಹೋಗಿದೆ!

ಹೆಸರು ಸರ್ವಾನ್ ಸಿಂಗ್. ದೇಶಕ್ಕೆ ಸ್ವಾತಂತ್ರ್ಯ ಬಂದು ಎಳೇ ವರ್ಷಗಳ ನಂತರ ಏಶಿಯನ್ ಗೇಮ್ಸ್ (1954) ಒಂದರಲ್ಲಿ ಭಾರತಕ್ಕೆ ಚಿನ್ನದ ಪದಕವೊಂದು ಬಂದಿತೆಂದರೆ ಅದು ಈತನ ಅದ್ಭುತ ಓಟದಿಂದ ಮಾತ್ರ. ಅಂದು ದೇಶಕ್ಕೆ ಚಿನ್ನದ ಪದಕವನ್ನು ಗೆದ್ದು ತಂದ ಈತ ಮುಂದೆ ಒಲಿಂಪಿಕ್ಸ್ ಪಂದ್ಯದಲ್ಲೂ ಅದೇ ಪ್ರದರ್ಶನವನ್ನು ನೀಡುವ ಕನಸ್ಸನ್ನು ವಿಧಿಯ ಆಟ ಕೊನೆಗಾಣಿಸಿತು. ದುರದೃಷ್ಟವಶಾತ್ ಅಪಘಾತವೊಂದರಲ್ಲಿ ತನ್ನ ಕಾಲನ್ನು ಮುರಿದುಕೊಂಡ ಈತನಿಗೆ ಉಳಿದದ್ದು ಜೀವನ ನಿರ್ವಹಣೆಯ ಸಾಲು ಸಾಲು ಸವಾಲುಗಳು. ಸೈನ್ಯದಿಂದ ನಿವೃತ್ತಿ ಹೊಂದಿದ ಮೇಲಂತೂ ಅಕ್ಷರ ಸಹ ನಲುಗಿ ಹೋಗಿದ್ದ ಸಂಸಾರದ ದೋಣಿಯನ್ನು ಸಾಗಿಸಲು ಆತ ತಾನು ಅಂದು ಗೆದ್ದ ಚಿನ್ನದ ಪದಕವನ್ನೂ ಮಾರಬೇಕಾದ ಸನ್ನಿವೇಶ ಎದುರಾಗುತ್ತದೆ. ಅಲ್ಲದೆ ಮುಂದೆ ಟ್ಯಾಕ್ಸಿ ಚಾಲಕನಾಗಿ ತನ್ನ ಇಳಿ ವಯಸ್ಸಿನಲ್ಲಿಯೂ ದುಡಿಯಬೇಕಾಗುತ್ತದೆ. ಇಂದು ಪದಕವೊಂದು ಗೆದ್ದರೆ ರಾಶಿ ರಾಶಿ ಹಣದ ಹೊಳೆಯನ್ನು ಹರಿಸುವ, ಸಿಕ್ಕ ಸಿಕ್ಕ ಉನ್ನತ ಉದ್ದೇಗಳನ್ನು ಪೇರಳೆ ಹಣ್ಣುಗಳಂತೆ ಕಿತ್ತು ಕೊಡುವ ಸರ್ಕಾರಗಳಿಗೆ ದೇಶದ ವಿಜಯಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ಈಗಿನ ಹಲವು ಆಟಗಾರರಿಗೆ ಸ್ಪೂರ್ತಿಯ ಅಡಿಗಳಲ್ಲಾದ ಸರ್ವಾನ್ ಸಿಂಗ್ ರಂತ ಹಲವರು ಏತಕ್ಕೆ ಕಣ್ಣಿಗೆ ಕಾಣರು? 2007 ರ ಚೊಚ್ಚಲ ವಿಶ್ವಕಪ್ ಭಾರತದ ಪಾಲಾಗಲು ಪ್ರಮುಖ ಪಾತ್ರವಹಿದ್ದ ಜೋಗಿಂದೆರ್ ಶರ್ಮ ಇಂದು ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಉನ್ನತ ಉದ್ದೆಯಲ್ಲಿದ್ದಾನೆ. ಹಾಗಾದರೆ ಅವನ ಕ್ರಿಕೆಟ್ ಜೀವನ ಅಂದು ಪಾಕಿಸ್ತಾನದ ವಿರುದ್ಧ ಕೊನೆಯ ಓವರ್ ಅನ್ನು ಎಸೆಯಲು ಮಾತ್ರ ಸೀಮಿತವಾಗಿದ್ದಿತೇ? ಒಂದು ಪಕ್ಷ ಆತ ನಿಜವಾಗಿಯೂ ಒಬ್ಬ ಪೊಲೀಸ್ ಅಧಿಕಾರಿಯೇ ಆಗಬೇಕಿದ್ದಾಗಿದ್ದರೆ ಆತನಿಗೆ ಕ್ರಿಕೆಟ್ ಎಂಬ ಒಳದಾರಿಯೇ ಬೇಕಾಗಿದ್ದಿತೇ?



ಇದು ಕೇವಲ ಒಂದೆರಡು ಆಟಗಾರ ವಿಷಯವಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಪ್ರತಿಯೊಬ್ಬ ಭಾರತೀಯ ಆಟಗಾರನಿಗೂ ಎದುರಾಗುತ್ತಿತುವ ಸವಾಲುಗಳಿವು. ಆಟವೋ ಅಥವಾ ಉದ್ಯೋಗವೋ ಎಂಬ ಇಕ್ಕಟಿನ ಸ್ಥಿತಿಯಲ್ಲಿ ಹೆಚ್ಚಿನ ಆಟಗಾರರು ಹಾಯ್ದುಕೊಳ್ಳುತ್ತಿರುವುದು ಉದ್ಯೋಗವನ್ನೇ. ದೇಶದ ಕೀರ್ತಿಗಿಂತ ಜೀವನ ನಿರ್ವಹಣೆಯೇ ಮುಖ್ಯವೆಂದು ಯೋಚಿಸುವುದರಲ್ಲಿ ಅವರ ತಪ್ಪೇನೂ ಇಲ್ಲ. ಅಸಲಿಗೆ ನಷ್ಟ ಉಂಟಾಗುವುದು ಮಾತ್ರ ದೇಶದ ಕ್ರೀಡಾ ಭವಿಷ್ಯಕ್ಕೆ. ಒಬ್ಬ ಆಟಗಾರ ಆಟಗಾರನಾಗಿಯೇ ನಿವೃತ್ತಿ ಹೊಂದಬೇಕೆ ವಿನಃ ನಾಮ್ಕಾ ವಾಸ್ಥೆ ಆಗಿ ಹೋಗುವ ಅಧಿಕಾರಿಯಾಗಲ್ಲ. ಇಂತಹ ಪ್ರಸ್ತುತ ಸ್ಥಿತಿಯಲ್ಲಿ ದೇಶಕ್ಕಾಗಿ ಪದಕವನ್ನು ಗಳಿಸಿಕೊಡೆಂದು ಆಟಗಾರರನ್ನು ಕೇಳುವುದು ಯಾರ ನಾಚಿಕೇಡುತನ, ನೀವೇ ಹೇಳಿ.

Sunday, March 5, 2017

ಬವಣೆಯ ಬದುಕಿನಲ್ಲಿ ತಾವರೆಗಳಂತರಳಿದ ಸ್ಪೂರ್ತಿಯ ಕಿರಣಗಳಿವು...

ಮೇರಿ ಕ್ಯೂರಿ, ಅನ್ನಿ ಬೆಸೆಂಟ್, ಮದರ್ ತೆರೆಸ್ಸಾ, ಬೆನಝೀರ್ ಭುಟ್ಟೋ, ಇಂದಿರಾ ಗಾಂಧಿ, ಕಿತ್ತೋರ್ ರಾಣಿ ಚೆನ್ನಮ, ಸರೋಜಿನಿ ನಾಯ್ಡು, ಕಲ್ಪನಾ ಚಾವ್ಲಾ, ಸಾನಿಯಾ ಮಿರ್ಜಾ ಅಥವಾ ಇತ್ತೀಚಿನ ನಮ್ಮ ಮಹಿಳಾ ಹಾಕಿ ತಂಡ ಇತ್ಯಾದಿ ಇತ್ಯಾದಿ. ಪ್ರತಿ ವರ್ಷ ಮಾರ್ಚ್ 8 ಬಂತೆದರೆ ಹೆಚ್ಚಾಗಿ ಕೇಳಿಬರುವ ಹೆಸರುಗಳಿವು. ತಮ್ಮ ಸ್ವಂತ ಶ್ರಮದಿಂದ ಹಾಗು ಬಿಡದ ಛಲದಿಂದ ಸಮಾಜವೇ ಅಡ್ಡಿಬಂದರೂ ಜಗ್ಗದೆ ಯಾರ ಮಾತಿಗೂ ಕುಗ್ಗದೆ ಕಲೆ, ಸಾಹಿತ್ಯ, ಕ್ರೀಡೆ, ವಿಜ್ಞಾನ ಹಾಗು ಸ್ವಾತಂತ್ರ್ಯ ಚಳುವಳಿಯಂಬ ಹಲವು ವಿಷಯಗಳಲ್ಲಿ ಸಾಧನೆಗೈಯಲು ಗಂಡು ಹೆಣ್ಣೆಂಬ ತಾರತಮ್ಯವಿಲ್ಲವೆಂಬುದನ್ನು ಜಗತ್ತಿಗೆ ತೋರಿಕೊಟ್ಟ ಹಲವು ಹೆಸರುಗಳಲ್ಲಿ ಕೆಲವುಗಳಿವು. ಈ ಪ್ರತಿಯೊಂದು ಹೆಸರಿನ ಹಿಂದಿರುವ ಸಾಹಸವನ್ನು ಹೆಣ್ಣೆಂಬ ಪ್ರತಿಯೊಂದು ಶಕ್ತಿಯ ಜ್ವಾಲೆಯೂ ತಿಳಿಯಲೇ ಬೇಕು. ತಮ್ಮ ಜೀವನದಲ್ಲಿ ಸಾದ್ಯವಷ್ಟನ್ನು ಅಳವಡಿಸಿಕೊಳ್ಳಬೇಕು. ಇದು ಓದು ಬರಹ ಕಲಿತು, ಸುದ್ದಿ ಸಮಾಚಾರವನ್ನು ನೋಡಿ ಬೆಳೆಯುವ ಹೆಣ್ಣು ಮಕ್ಕಳಿಗಾಯಿತು. ಆದರೆ ಇದರಿಂದ ವಿಮುಖರಾದವರು? ಅವರಿಗೆ ಇವರುಗಳ ಬಗ್ಗೆ ಹೇಳುವವರ್ಯಾರು? ಓದು ಬರಹ ಬಾರದ ಮಾತ್ರಕ್ಕೆ ಇಂದು ಅದೆಷ್ಟೋ ಮಹಿಳೆಯರಿಗೆ ಇಂತಹ ಹಲವರ ಸದೃಢ ಜೀವನ ಪ್ರೇರಣೆಯಾಗದೆ ಉಳಿಯುತ್ತದೆಯೇ? ಅಥವ ಕೋಳಿ ಕೂಗುವ ಮುನ್ನವೇ ಎದ್ದು ಊರಿನ ಎಪಿಎಂಸಿ ಗೆ ಹೋಗಿ, ತರಕಾರಿ ಹಾಗು ಸೊಪ್ಪನ್ನು ಕೊಂಡು, ಕುಕ್ಕೆಗೆ ತುಂಬಿ ಎಂಟು ಘಂಟೆಯಾಗುವಷ್ಟರಲ್ಲಿ ಊರೆಲ್ಲ ಸುತ್ತಿ, ಗಂಟಲು ಒಣಗುವಂತೆ ಅರಚಿ, ಚೌಕಾಶಿ ಮಾಡುವ ಶ್ರೀಮಂತರೊಟ್ಟಿಗೆ ವಾದಿಸಿ, ಕುಕ್ಕೆಯನ್ನು ಖಾಲಿಮಾಡಿ ಬಿರಬಿರನೇ ಮನೆಗೆ ಬಂದು ತಿಂಡಿಯನ್ನು ಮಾಡಿಟ್ಟು, ಮಕ್ಕಳ್ಳನ್ನು ಸ್ಕೂಲಿಗೆ ಹೊರಡಿಸಿ, ಮನೆಗೆಲಸವನ್ನು ಮಾಡಿ ಬಾಗಿಲಿಗೆ ಬೀಗವನ್ನು ಜಡಿದು ಮತ್ತೊಬ್ಬರ ಮನೆಯ ಮುಸುರೆ ತಿಕ್ಕಿ, ಅಷ್ಟೋ ಇಷ್ಟೋ ಹೊಟ್ಟೆಗೆ ತಿಂದು, ಸಂಜೆ ಕುಡಿದು ಬರುವ ಗಂಡನೊಟ್ಟಿಗೆ ಕಾದಾಡಿ, ಮಲಗೆದ್ದು ನಾಳೆ ಪುನ್ಹ ಅದೇ ಹುರುಪಿನಲ್ಲಿ ಜೀವನವನ್ನು ಶುರುಮಾಡುವ ಕಾಳಮ್ಮ, ನಿಂಗಮ್ಮ ಅಥವ ಜಯಕ್ಕಂದಿರೂ ಸಹ ಸ್ಪೂರ್ತಿಯ ಸೆಲೆಯಾಗಬಲ್ಲರೇ? ಬಹುಕಾರ್ಯ ವಲ್ಲಭೆಯರಾದ ಇವರುಗಳಿಗೂ ಆತ್ಮಸ್ಥೈರ್ಯ ತುಂಬಿ ಬೆನ್ನ ಹಿಂದೆ ನಿಂತು ಬೆಳೆಸಿದರೆ ಇಂದು AC ಕೋಣೆಗಳ ಒಳಗೆ ಲ್ಯಾಪ್ಟಾಪ್ ನ ಮುಂದೆ ಮೈ ಬಗ್ಗಿಸದೆ ಕೆಲಘಂಟೆಗಲಷ್ಟೇ ಕೂತು ಮಾಡುವ ಕೆಲಸದಲ್ಲೇ ಬೇಸತ್ತು 'ನನ್ನ ಬದುಕೇ ಹೈರಾಣಾಯಿತು' ಎಂದು ಬೊಬ್ಬೆಹಾಕುವ ಹಲವರಿಗೆ ಪ್ರೆಶ್ನಾರ್ಥಕವಾಗಬಲ್ಲ ರೇ? ಹೌದೆನ್ನುತವೆ ನಿಜ ಜೀವನದ ಕೆಲವು ದಂತಕಥೆಗಳು.



ಅಂದು 5 ರೂಪಾಯಿಯ ದಿನಗೂಲಿ ಮಹಿಳೆ ಇಂದು ಸಾಫ್ಟ್ವೇರ್ ಕಂಪನಯೊಂದರ ಸಿ.ಇ.ಓ!!

ಸ್ಥಳ : ಮೈಲಾರನ್, ಅಂದ್ರ ಪ್ರದೇಶ - ಅತಿ ಬಡ ಕುಟುಂಬದಲ್ಲಿ ಹುಟ್ಟಿಬೆಳೆದ ಈಕೆ ತನ್ನ ಹದಿನಾರನೇ ವಯಸ್ಸಿಗೆ ಮದುವೆಯ ಬಂಧನಕ್ಕೊಳಗಾಗುತ್ತಾಳೆ. ಮುಂದಿನ ಎರೆಡು ವರ್ಷಗಳಲ್ಲಿಯೇ ಎರೆಡು ಮಕ್ಕಳ ತಾಯಿ. ಬಡತನದ ಜೊತೆಗೆ ಬಲಿಯದ ಬುದ್ದಿ, ಅಷ್ಟರೊಳಗೇ ಮಕ್ಕಳು. ಜೀವನದ ಸಂಕೋಲೆಯಲ್ಲಿ ಬೇಯಲು ಇನ್ನೇನು ಬೇಕು? ಬಡತನದ ಬೇಗೆಗೆ ಬೇಸತ್ತು 5 ರೊಪಾಯಿಯ ದಿನಗೂಲಿ ಕೆಲಸಕ್ಕೆ ಸೇರಿ ಮುಂದೆ ಸತತವಾಗಿ 5 ವರ್ಷ ಕೂಲಿಕಾರ್ಮಿಕೆಯಾಗಿ ದುಡಿಯುತ್ತಾಳೆ. ಜೀವನ ದೇಶದ ಅದೆಷ್ಟೋ ಕೋಟಿ ಮಹಿಳೆಯರಂತೆ ಅಂಧಕಾರದ ಕೂಪದೊಳಗೆ ಉದುಗಿ ಮರೆಯಾಗತೊಡಗಿತ್ತು. ಆದರೆ ಕಾಣದ ಶಕ್ತಿಯೊಂದು ಪ್ರತಿಬಾರಿಯೂ ಈಕೆಯನ್ನು ಪ್ರೇರೇಪಿಸುತ್ತಿತ್ತು. ಯಾವುದೊ ಜನ್ಮದ ಪುಣ್ಯವೆಂಬಂತೆ ತನ್ನ ಹತ್ತನೇ ತರಗತಿಯನ್ನು ಪೂರ್ಣಗೊಳಿಸಿಕೊಂಡಿದ್ದು ಈಕೆಗೆ ವರದಾನವಾಗಿ ಪರಿಣಮಿಸಿತು. ಪರಿಣಾಮವಾಗಿ 1988 ರಲ್ಲಿ ವಯಸ್ಕ ಶಿಕ್ಷಣ ಶಿಕ್ಷಕಿಯಾಗಿ ಕೆಲಸವೊಂದು ದೊರಕಿತು. ಆಗ ಸಿಗುತ್ತಿದ್ದ ಸಂಬಳ ತಿಂಗಳಿಗೆ ಕೇವಲ 120 ರೂಪಾಯಿ. ಅಷ್ಟರಲ್ಲೇ ಹೊಟ್ಟೆ ಬಟ್ಟೆಯನ್ನು ಕಟ್ಟಿ ಸಂಸಾರವನ್ನು ಬೆಳೆಸಿ ನಂತರ ರಾಷ್ಟೀಯ ಸೇವಾ ಕಾರ್ಯಕರ್ತೆಯಾಗಿ ದುಡಿಯುತ್ತಾಳೆ. ಅಲ್ಲಿಂದ ಮುಂದೆ ತನ್ನ ಪತಿ ಮಹಾಶಯನ ವಿರೋಧದ ನಡುವೆಯೂ ತನ್ನ ಹಳ್ಳಿಯಿಂದ ಪುಟ್ಟ ಮಕ್ಕಳೊಟ್ಟಿಗೆ ಅವುಗಳ ಜೀವನದ ದೊಡ್ಡ ಕನಸ್ಸನ್ನು ಹೊತ್ತು ನಗರಕ್ಕೆ ಬಂದು ಕರಕೌಶಲ ವಸ್ತುಗಳ ತಯಾರಿಯ ತರಬೇತಿಯನ್ನು ಪಡೆಯುತ್ತಾಳೆ.ಅಲ್ಲಿಂದ ಮುಂದೆ ಗ್ರಂಥಾಲಯವೊಂದರ ನಿರ್ವಾಹಕಿಯಾಗಿ ಕೆಲಸವನ್ನು ಗಿಟ್ಟಿಸಿಕೊಳ್ಳುತ್ತಾಳೆ. ಅಲ್ಲಿ ಪುಸ್ತಕಗಳ ನಡುವಿನ ಒಡನಾಟ ಅವಳಿಗೆ ಅರ್ಧಕ್ಕೆ ನಿಂತು ಹೋಗಿದ್ದ ತನ್ನ ಓದಿನ ಆಸೆಯನ್ನು ಪುನಃ ಚಿಗುರೊಡೆಸಿರಬೇಕು. ಹತ್ತಿರದಲ್ಲೇ ಇದ್ದ ವಾರಾಂತ್ಯದ ಶಾಲೆಗೆ ಸೇರಿಯೇ ಬಿಡುತ್ತಾಳೆ. ಹೀಗೆ ಹಿಂತಿರುಗದೆ ಮುಂದೆ ಮುಂದೆ ನೆಡೆದ ಈಕೆಗೆ ಕೊನೆಗೆ 18 ತಿಂಗಳ ಕರಾರಿನಡಿ ಶಿಕ್ಷಕಿಯಾಗಿ ಕೆಲಸವೊಂದು ಸಿಗುತ್ತದೆ. ಸ್ಥಳ ಆಕೆ ವಾಸಿಸುತ್ತಿದ್ದ ಪ್ರದೇಶದಿಂದ 70 ಕಿಲೋಮೀಟರು! ಬರುತ್ತಿದ್ದ ಸಂಬಳ ಹೆಚ್ಚುಕಡಿಮೆ ಪ್ರಯಾಣಕ್ಕಾಗಿಯೇ ಸಾಕಾಗುತ್ತಿತ್ತು. ಆದರೇನಂತೆ? ಛಲ ಬಿಡದ ಈಕೆ ಪ್ರಯಾಣಿಸುತ್ತಿದ್ದ ರೈಲಿನಲ್ಲಿಯೇ ಶಿಕ್ಷಕಿಯಾದರೂ ಯಾವುದೇ ತಾತ್ಸಾರವಿಲ್ಲದೆ ಸೀರೆಗಳನ್ನು ಮಾರತೊಡಗುತ್ತಾಳೆ. ಗುರಿ ಏನೆಂದು ಸ್ಪಷ್ಟವಾಗಿಲ್ಲದಿದ್ದರೂ ದಿನದಿಂದ ದಿನಕ್ಕೆ ಹೊಸತೊಂದು ವಿಷಯವನ್ನು ಕಲಿಯುವ ಗುಣವನ್ನು ಪಾರಂಗತ ಮಾಡಿಕೊಂಡ ಈಕೆ ಹಲವು ವರ್ಷಗಳ ತನ್ನ ಸತತ ಪರಿಶ್ರಮದ ಬಳಿಕ 1994 ರಲ್ಲಿ ಮಂಡಲ ಪಂಚಾಯಿತಿಯ ಹೆಣ್ಣು ಮಕ್ಕಳ ಅಭಿವೃದ್ಧಿಯ ಅಧಿಕಾರಿಯಾಗುತ್ತಾಳೆ! ಜೀವನದುದ್ದಕ್ಕೂ ತುಳಿದ ಶಕ್ತಿಗಳಿಗೊಂದು ದಿಟ್ಟ ಉತ್ತರವನ್ನು ಕೊಡುತ್ತಾಳೆ. ತನ್ನೂರಿನ ಹಲವು ಹೆಣ್ಣುಮಕ್ಕಳಿಗೆ ಆಶಾಕಿರಣವಾಗುತ್ತಾಳೆ. ಆದರೆ ಇವಳ ಓಟ ಅಲ್ಲಿಗೆ ನಿಲ್ಲುವುದಿಲ್ಲ. 1998 ರಲ್ಲಿ ಅಮೇರಿಕೆಯಿಂದ ಬಂದ ತನ್ನ ನೆಂಟರಿಷ್ಟರಲ್ಲೊಬ್ಬರನ್ನು ಕಂಡು ತನಗೂ ಹಾಗು ಅವರಿಗೂ ಇರುವ ಜೀವನ ಶೈಲಿಯ ವ್ಯತ್ಯಾಸವನ್ನು ಅರಿಯುತ್ತಾಳೆ. ಅವರ ಕೆಲಸ ಕಾರ್ಯ ಹಾಗು ಪ್ರಸ್ತುತ ಜಾಗತಿಕ ಸ್ಥಿತಿಗತಿಗಳನ್ನು ಕೇಳಿ ತಿಳಿದ ಈಕೆ ಆಗಷ್ಟೇ ಬೆಳೆಯುತ್ತಿದ್ದ ಸಾಫ್ಟ್ವೇರ್ ಉದ್ಯಮವೇ ತನ್ನ ಮುಂದಿನ ಗುರಿ ಎಂದು ತನ್ನನು ತಾನು ಒಪ್ಪಿಸಿಕೊಳ್ಳುತ್ತಾಳೆ. ಆಂದ್ರಪ್ರದೇಶದ ಹಳ್ಳಿಯೊಂದರಲ್ಲಿ ಕುಂಟಪಿಲ್ಲೆ, ಕಣ್ಣಾಮುಚ್ಚೆಗಳನ್ನು ಆಡುತ್ತಿದ್ದ ಹೆಣ್ಣುಮಕ್ಕಳಿಗೆ ನೀತಿಯ ಪಾಠವನ್ನು ಹೇಳಿಕೊಡುತ್ತಿದ್ದ ಹುಡುಗಿಯೊಬ್ಬಳ ಈ ಪರಿಯ ಕನಸ್ಸನ್ನು ಕಾಣುವ ಧೈರ್ಯವನ್ನು ಎಲ್ಲರು ಮೆಚ್ಚಲೇಬೇಕು. ಕನಸ್ಸನ್ನು ಕಟ್ಟಿಕೊಂಡು ಅದರಲ್ಲೇ ಮೈಮರೆಯದ ಈಕೆ ಕೂಡಲೇ ಅದಕ್ಕೆ ಪೂರಕವಾದ ತರಬೇತಿಯನ್ನು ಹೈದರಾಬಾದಿನಲ್ಲಿ ಪಡೆಯುತ್ತಾಳೆ. ನೋಡನೋಡುತ್ತಲೇ 2000 ನೆಯ ವರ್ಷದಲ್ಲಿ ಅಮೆರಿಕೆಯ ವಿಮಾನವನು ಏರುತ್ತಾಳೆ. ಕೂಲಿಕಾರ್ಮಿಕೆಯಾಗಿ ಒಂದೊತ್ತು ಊಟಕ್ಕೂ ಪರದಾಡಿ ಬೆಳೆದ ಈ ಧಿಟ್ಟ ಮಹಿಳೆ. ಅಂದು ಅಮೇರಿಕಾದ ನೆಲವನ್ನು ತುಳಿದಾಗಲೂ ಸವಾಲುಗಳೇನು ಈಕೆಗೆ ಸಲೀಸಾಗಿರಲಿಲ್ಲ. ಅದು ಕಮ್ಯುನಿಕೇಷನ್ ಪ್ರಾಬ್ಲಮ್ ಗಳಾಗಿರಬಹುದು ಅಥವಾ ಕೆಲಸವೊಂದು ಸಿಗುವವರೆಗೂ ವಸತಿ ಹಾಗು ಊಟದ ಕೊರತೆಯಾಗಿರಬಹುದು, ಎಲ್ಲವನ್ನು ಅಂದು ಧೈರ್ಯದಿಂದ ಈಕೆ ಎದುರಿಸಿದ ಆಕೆ ಅಲ್ಲಿಯೂ ಅರೆಕಾಲಿಕ ಕೆಲಸಗಳ ಸಹಾಯದೊಂದಿಗೆ ಜೀವನವನ್ನು ಕಟ್ಟಿಕೊಂಡು ಬದುಕಿ ಮುಂದೊಂದು ದಿನ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಮಾನವ ಸಂಪನ್ನೂಲ ವಿಭಾಗದಲ್ಲಿ ಕೆಲಸವನ್ನು ಗಳಿಸಿಕೊಂಡುಬಿಡುತ್ತಾಳೆ. ಇಷ್ಟೆಲ್ಲಾ ಹೀಜಾಡಿ ಸೆಣೆಸಾಡಿ ಬೆಳೆದ ಈಕೆಗೆ ಮುಂದಿನ ಹಾದಿ ಮಾತ್ರ ತುಸು ಸುಗಮವಾಗಿಯೇ ಆಗಿತ್ತು. ನೋಡ ನೋಡುತ್ತಲೇ ಹಂತ ಹಂತವಾಗಿ ಬೆಳೆದ ಈಕೆ ಪರಿಚಯದವರೊಬ್ಬರ ಸಹಬಾಗಿತ್ವದೊಂದಿಗೆ ತನ್ನದೇ ಒಂದು ಕಂಪನಿಯನ್ನು ಕಟ್ಟಿ ಬೆಳೆಸುತ್ತಾಳೆ. ಇಂದು ಆ ಕಂಪನಿಯಲ್ಲಿ ನೂರಾರು ಇಂಜಿನಿಯರ್ ಗಳು ಈಕೆಯ ಕೈ ಕೆಳಗೆ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಜೀವನ ಅದೆಷ್ಟೇ ಕಾಡಿದರು ಸೋಲದಿರು ಎಂದು ಸಾರುವ ಜೀವನ ಚರಿತೆಯ ಈ ಧೀರ ಮಹಿಳೆಯ ಹೆಸರು D. ಅನಿಲ ಜ್ಯೋತಿ ರೆಡ್ಡಿ. ಇಂದು ಕೇವಲ ಕಷ್ಟಗಳನ್ನೇ ದೊಡ್ಡಗಾಗಿಸಿ ಪ್ರತಿಭೆಯನ್ನು ಮರೆಮಾಡಿಕೊಂಡಿರುವ ಹಲವರಿಗೆ ಜ್ಯೋತಿಯವರ ಯಶಸಿನ್ನ ಜ್ಯೋತಿಗಿಂತ ಬೇರ್ಯಾವ ಸ್ಪೂರ್ತಿ ಬೇಕು?



ಅಂದು ಕಲ್ಲೊಡೆಯುವ ಪೋರಿ ಇಂದು ಒಂದು ಹಳ್ಳಿಯನ್ನೇ ಸರಪಂಚಳಾಗಿ ಮುನ್ನೆಡೆಸುವ ನಾರಿ!!


ಅದು ಎಂಬತ್ತರ ದಶಕ. ರಾಜಸ್ತಾನದ ಪುಹರು ಹಳ್ಳಿಯ ರಸ್ತೆಬದಿಯೊಂದರಲ್ಲಿ ಕಲ್ಲನ್ನು ಒಡೆಯುತ್ತಿದ್ದ ಹೆಣ್ಣುಮಕ್ಕಳ ಗುಂಪಿನೊಳಗೆ ಗುಜು ಗುಜು ಸದ್ದೊಂದು ಶುರುವಾಗತೊಡಗಿತ್ತು. ದಿನವಿಡೀ ಬೆವರಿನ ನದಿಯನ್ನೇ ಹರಿಸಿ ಕಲ್ಲನ್ನು ಹೊಡೆದರೂ ಹೇಳಿದ ದಿನಗೂಲಿಯ ರೊಕ್ಕವನ್ನೇ ಕೊಡದೆ ಸತಾಹಿಸುತಿದ್ದ ಮೇಸ್ತ್ರಿಗಳ ವಿರುದ್ಧವಾದ ಬವಣೆಯ ಸದ್ದು ಅದಾಗಿತ್ತು. ಆದರೆ ಅಲ್ಲಿದ ಯಾರೊಬ್ಬರಲ್ಲೂ ಎದ್ದು ನಿಂತು ನ್ಯಾಯ ಕೇಳುವ ಧೈರ್ಯವಿರಲಿಲ್ಲ. ಇದು ಕೆಲ ದಿನಗಳ ಕಾಲ ಹಾಗೆಯೆ ನೆಡೆಯಿತು. ಆದರೆ ಒಂದು ದಿನ ಇದ್ದಕಿದ್ದ ಹಾಗೆ ಹೆಣ್ಣುಹುಡುಗಿಯೊಬ್ಬಳು ತನ್ನೊಟ್ಟಿಗೆ ಇನ್ನೂ ಕೆಲವರನ್ನು ಕಟ್ಟಿಕೊಂಡು ಈ ಅನ್ಯಾಯದ ವಿರುದ್ಧ ಪುಟಿದೇಳುತ್ತಾಳೆ. ಮೇಸ್ತ್ರಿಗಳ ವಿರುದ್ಧ, ಮಾಲೀಕರ ವಿರುದ್ಧ ಘೋಷಣೆಯನ್ನು ಕೂಗುತ್ತಾಳೆ. ಈ ಹೋರಾಟ ಅಂದಿನ ದಿನಕ್ಕೆ ಮಾತ್ರ ಸೀಮಿತವಾಗಿರದೆ ಮುಂದೆ ಹಲವು ದಿನಗಳ ಕಾಲ ಮುಂದುವರೆಯುತ್ತದೆ ಹಾಗು ಜಿಲ್ಲೆಯ ಹಲವೆಡೆ ಸದ್ದನ್ನು ಮಾಡುತ್ತದೆ. ರಾಜಸ್ಥಾನದ ಮಹಿಳೆಯರೆಂದರೆ ಸೀರೆಯ ಸೆರಗಿನೊಳಗೆ ತಲೆಯನ್ನು ಅಡಗಿಸಿಕೊಂಡು ಗಂಡಂದಿರು, ಅಪ್ಪಂದಿರು ಹೇಳುವ ಮಾತುಗಳನ್ನು ವೇದವಾಕ್ಯಗಳಂತೆ ಪಾಲಿಸಿ ಬದುಕುವರು ಎಂದು ಅರಿತಿದ್ದ ಅದೆಷ್ಟೋ ದಪ್ಪ ಮೀಸೆಯ ಗಂಡಸರಿಗೆ ಅಂದು ಈಕೆಯ ನಡೆ ಇರುಸು ಮುರುಸನ್ನು ತಂದೊಡ್ಡಿತು. ಸಹಜವಾಗಿಯೇ ಹಲವರು ಈಕೆಯ ವಿರುದ್ಧ ಕತ್ತಿ ಮಸೆಯತೊಡಗಿದರು. ಆದರೆ ಅವೆಲ್ಲ ಬೆದರಿಕೆಗಳಿಗೆ ಈಕೆ ಸುತಾರಾಂ ಜಗ್ಗುವುದಿಲ್ಲ. ಇಟ್ಟ ನೆಡೆಯನ್ನು ಹಿಂದಿಡುವ ಮಾತೆ ಇರಲಿಲ್ಲ. ಕೊನೆಗೆ NGO ಒಂದರ ಸಹಕಾರದ ಮೂಲಕ ವಿವಾದ ಕೋರ್ಟಿನವರೆಗೂ ಹೋಗಿ, ವಾದದಲ್ಲಿ ಜಹಿಸಿ ತಮ್ಮ ಪೂರ್ಣ ವೇತನವನ್ನು ಪಡೆದುಕೊಳ್ಳುವಲ್ಲಿ ಈಕೆ ಹಾಗು ಇವಳ ತಂಡ ಯಶಸ್ವಿಯಾಯಿತು. ಅಂದು ತನ್ನ ಧೈರ್ಯಹಾಗು ನಾಯಕತ್ವದ ಗುಣಗಳಿಂದ ಪುರುಷ ಪ್ರಧಾನ ಆಡಳಿತವರ್ಗವನ್ನೇ ತಬ್ಬಿಬ್ಬು ಮಾಡಿದ ಈಕೆ ತನ್ನೂರಿನ ಅದೆಷ್ಟೋ ಮಹಿಳೆಯರಿಗೆ ಆಶಾಕಿರಣವಾದಳು. ಮುಂದೆ ಓದುವ ಆಸೆ ಚಿಗುರಿ ಕಾಲೇಜನ್ನು ಸೇರಿ ವಯಸ್ಕ ಶಿಕ್ಷಣ, ಕಂಪ್ಯೂಟರ್ ಶಿಕ್ಷಣವನ್ನು ಪಡೆದು ಊರಿನ ಇತರ ಹೆಣ್ಣುಮಕ್ಕಳಿಗೂ ಕಲಿಯಲು ಹುರಿದುಂಬಿಸುತ್ತಾಳೆ. ಊರಿನ ಮಹಿಳೆಯರ ಧ್ವನಿಯಾಗುತ್ತಾಳೆ. ತದಾನಂತರ ಊರಿನ ಗ್ರಾಮ ಪಂಚಾಯಿತಿಯ ಸದಸ್ಯೆಯಾಗಿ ನೇಮಕಗೊಳ್ಳುತ್ತಾಳೆ. ಪುರುಷ ಪ್ರಧಾನ ಅಂದಿನ ಸಮಾಜದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯೆ ಒಂದೆಡೆ ಇರಲಿ ಕೊನೆ ಪಕ್ಷ ತಲೆಯ ಮೇಲಿನ ಸೆರಗೇನಾದರೂ ಅಪ್ಪಿ ತಪ್ಪಿ ಕೆಳಗೆ ಜಾರಿದರೂ ವಿಸ್ಕಿ ಪ್ರಿಯರಿಗೆ ದ್ರಾಕ್ಷಿಯ ಸರಬತ್ತಿನ ಪೆಗ್ ಮಾಡಿ ಕೊಟ್ಟಾಗ ನೋಡುವಂತೆ ನೋಡುತಿದ್ದರು. ಆದರೆ ಅಲ್ಲಿನ ಜನರ ಅದೃಷ್ಟವೋ ಎಂಬಂತೆ ಹಾಳು ಹಳ್ಳವಿಡಿದಿದ್ದ ತನ್ನ ಹಳ್ಳಿಗೆ ಮೊದಲ ಸರಪಂಚೆಯಾಗಿ ಆಯ್ಕೆಯಾಗುವುದರ ಮೂಲಕ ಎಲ್ಲರನ್ನೂ ಬಾಯ್ ಚುಪ್ ಮಾಡಿಸುತ್ತಾಳೆ. ನಂತರ ದೇಶ ವಿದೇಶಲ್ಲೂ ಈಕೆ ಹೆಸರು ಹರಿದಾಡುತ್ತದೆ. ಸರಪಂಚೆಯಾಗಿ ಈಕೆ ಮಾಡಿದ ಕೆಲಸವನ್ನು ಇಂದು ಊರಿಗೆ ಊರೇ ಹೇಳಿ ಕೊಂಡಾಡುವ ಮಟ್ಟದಲ್ಲಿದೆ. ಅಂದು ರಸ್ತೆ ಬದಿಯಲ್ಲಿ ಕಲ್ಲು ಹೊಡೆಯುವುದರಿಂದ ಹಿಡಿದು ಇಂದು ಸರಪಂಚೆಯಾಗಿ ಕಂಪ್ಯೂಟರ್ ನ ಕೀಲಿಗಳನ್ನು ಪಠ ಪಠ ಕುಕ್ಕುವ ಶ್ರೀ. ನರೋಟಿ ಯಾವ IT ಉದ್ಯೋಗಿಗೂ ಕಡಿಮೆ ಹೇಳಿ?



ಈಕೆ ನಿಜ ಬದುಕಿನ 'ಸ್ಲಂ ಡಾಗ್ ಮಿಲಿಯನೇರ್’!!


ಅಂದು 2013 ನೇ ಸಾಲಿನ ವಾಣಿಜ್ಯ ಹಾಗು ಕೈಗಾರಿಕಾ ಕ್ಷೇತ್ರದಲ್ಲಿನ ಅತ್ಯುನ್ನತ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿಗೆ ಹೆಸರಿಸಲ್ಪಟ್ಟ ಕಲ್ಪನಾ ಸರೋಜ್ ಅವರು ಪ್ರಣವ್ ಮುಖರ್ಜಿ ಯವರಿಂದ ಪ್ರಶಸ್ತಿಯನ್ನು ಪಡೆಯುವಾಗ ರಾಷ್ಟ್ರಪತಿ ಭವನದಲ್ಲಿ ಚಪ್ಪಾಳೆಗಳ ಸದ್ದು ತುಸು ಹೆಚ್ಚಾಗಿಯೇ ಮೂಡತೊಡಗಿತು. ಕಾರಣ ಅಂದಿನ ಆ ಪದ್ಮಶ್ರೀ ಪ್ರಶಸ್ತಿ ಕೇವಲ ಆಕೆಯ ವ್ಯಾವಹಾರಿಕ ಸಾಧನೆಗಲ್ಲದೆ ಹೆಣ್ಣೆಂಬ ಮಹಾ ಶಕ್ತಿಯ ಮಿತಿಯನ್ನು ಸಮಾಜಕ್ಕೆ ತೋರಿಸಿಕೊಟ್ಟ ಆಕೆಯ ಸಾಹಸದ ವ್ಯಕ್ತಿತ್ವಕ್ಕೂ ಕನ್ನಡಿ ಹಿಡಿದಂತಿದ್ದಿತು. ಬಾಲ್ಯವೆಲ್ಲ ಜಾತಿಪದ್ಧತಿಯ ಕೂಪದಲ್ಲಿ ಬೆಂದು ತನ್ನ ಹನ್ನೆರಡನೇ ವಯಸ್ಸಿಗೆ ಮದುವೆಯಾಗಿ ಮುಂಬೈಯ ಸ್ಲಂ ವೊಂದರ ಕಿರು ಕೋಣೆಯ ಗಂಡನ ಮೆನೆಗೆ ಬಂದ ಈಕೆ ಅಕ್ಷರ ಸಹ ನರಕದ ಯಾತನೆ ಅನುಭವಿಸಬೇಕಾಯಿತು. ದೈಹಿಕವಾಗಿ, ಮಾನಸಿಕವಾಗಿ ಜರ್ಜರಿತಳಾದ ಈಕೆಯನ್ನು ಅಪ್ಪ ಆರು ತಿಂಗಳ ನಂತರ ನೋಡಲು ಬಂದು ಈಕೆಯ ಮೂಳೆಗೆ ಅಂಟಿಕೊಂಡ ಚಕ್ಕಳದಂತಿದ್ದ ದೇಹಸ್ಥಿತಿಯನ್ನು ಕಂಡು ತನ್ನ ತಪ್ಪಿನ ಅರಿವಾಗಿ ಕೂಡಲೇ ಅಲ್ಲಿಂದ ತವರು ಮನೆಗೆ ಕರೆದುಕೊಂಡು ಹೋಗುತ್ತಾನೆ. ಆದ ಮಾತ್ರಕ್ಕೆ ಆಕೆಯ ಗೋಳೇನು ತೀರಲಿಲ್ಲ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎಂಬ ಮಾತು ಮನೆಯವರಿಗಿಂತ ಮನೆಯೊರಗಿನವರಿಗೇ ಬಲು ಇಷ್ಟ. ಸಿಕ್ಕ ಸಿಕ್ಕಲೆಲ್ಲ ಅಣಕಿಸುವುದು, ಕಿಚಾಯಿಸುವುದು, ಕಿಸಿ ಕಿಸಿ ಎಂದು ಸುಖಾ ಸುಮ್ಮನೆ ನಗುವ ಗುಂಪುಗಳು ಯಾಕೋ ಈಕೆಗೆ ತನ್ನನು ಅವಮಾನದ ಬುಡಕ್ಕೆ ಕಟ್ಟಿ ಹಾಕಿದಂತಾಗುತ್ತದೆ. ದುಃಖ, ಸಂಕಟ ಹಾಗು ಹತಾಶೆಗೆ ಮಣಿದು ಜೀವನವೇ ಬೇಡವೆಂದು ಈಕೆ ವಿಷವನ್ನು ಸೇವಿಸುತ್ತಾಳೆ. ಇನ್ನೇನು ಕೊನೆಯುಸಿರೆಳೆಯಲು ಕ್ಷಣಗಣನೆ ಆರಂಭವಾಹಿತೆನ್ನುವುದರೊಳಗೆ ಅದೃಷ್ಟವಶಾತ್ ಬದುಕುಳಿಯುತ್ತಾಳೆ. ಕಾಡಿದ ಸಮಾಜಕ್ಕೆ ಧಿಟ್ಟ ಉತ್ತರವನ್ನು ನೀಡಲು ಮತ್ತ್ತೊಂದು ಅವಕಾಶವನ್ನು ಪಡೆಯುತ್ತಾಳೆ. ಅಲ್ಲಿಂದ ಶುರುವಾದ ಈಕೆಯ ಸಾಧನೆಯ ಸ್ತರಗಳು ಇಂದಿಗೂ ಮುಂದುವರೆಯುತ್ತಲೇ ಬಂದಿವೆ. ಅಂದು ತಾನು ಬದುಕುಳಿದು, ಮೇಲೆದ್ದು ಜೀವನದಲ್ಲೇನಾದರೂ ಸಾಧಿಸಬೇಕೆಂಬ ಹಠದೊಂದಿಗೆ ಪುನ್ಹ ಮುಂಬೈ ಗೆ ಬಂದಿಳಿದ ಈಕೆ ಗಾರ್ಮೆಂಟ್ ಕಂಪನಿ ಯೊಂದರಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಅಲ್ಲಿಂದ ಮುಂದೆ ದರ್ಜಿಯ (Tailoring) ಉದ್ಯಮ ನಂತರ ಪರಿಶಿಷ್ಟ ಜಾತಿಯವರಿಗೆ ಸರ್ಕಾರದದಿಂದ ಸಿಗುವ ಸಾಲ ಯೋಜನೆಯಿಂದ ಪೀಠೋಪಕರಣಗಳ ಉದ್ಯಮಕ್ಕೂ ಏಕಾಂಗಿಯಾಗಿ ಕೈಹಾಕಿ ಯಶಸ್ವಿಯಾಗುತ್ತಾಳೆ. ತದನಂತರ ಕೂಡಿಟ್ಟ ಹಣದಿಂದ ಜಾಗವೊಂದನ್ನು ಖರೀದಿಸಿ ಇತರ ಉದ್ಯಮ ಸಹವರ್ತಿಗಳೊಡನೆ ಕೂಡಿ ವ್ಯಾಪಾರೀ ಮಳಿಗೆಯೊಂದನ್ನು ನಿರ್ಮಿಸಿಯೇ ಬಿಡುತ್ತಾಳೆ. ಅಲ್ಲಿಂದ ಮುಂದಕ್ಕೆ ಈ ಅವಿರತ ಮಹಿಳೆಯ ಹೆಜ್ಜೆಗಳೆಲ್ಲಾ ದಂತಕಥೆಗಳಂತಾದವು. ಇಂದು 'ಕಾಮಿನಿ ಟ್ಯೂಬ್ಸ್' ಕಂಪನಿಯ ಸಿ.ಇ.ಓ ಆಗಿರುವ ಈಕೆ, ರಿಯಲ್ ಎಸ್ಟೇಟ್ ಹಾಗು ತನ್ನ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಯಿಂದ ಚಿತ್ರಗಳನ್ನೂ ನಿರ್ಮಿಸುವ ಮಟ್ಟಕ್ಕೆ ಬೆಳೆದಿದ್ದಾಳೆ ಎಂದರೆ ಕಷ್ಟಗಳ ಸರಮಾಲೆಯಿಂದ ಕುಸಿದು ಬಿದ್ದಿರುವ ಕೋಟ್ಯಂತರ ಹೆಣ್ಣುಮಕ್ಕಳ ರೋಮು ರೋಮುಗಳು ಎದ್ದು ನಿಲ್ಲದೆ ಇರಲಾರವು!

ಇಂದು ಸಮಾಜದ ಮುಂದಿರುವ ಇಂತಹ ಹಲವಾರು ಉದಾಹರಣೆಗಳಿಂದ ಒಂದು ವಿಷಯ ಮಾತ್ರ ಸ್ಪಷ್ಟ. ಹೆಣ್ಣು ಮನಸ್ಸು ಮಾಡಿದರೆ ಆಕೆಗೆ ಸಾದ್ಯವಾಗದೆ ಇರದ ಮತ್ತೊಂದು ವಿಷಯವಿಲ್ಲ. ಅಲ್ಲದೆ ಶಿಕ್ಷಣವೆಂಬ ಸ್ಪಾರ್ಕ್ ಅನ್ನು ಅವಳ ಮಂದಗತಿಯ ನೆಡೆಗೆ ತುಂಬಿದರೆ ಅವಳ ನಂತರದ ಓಟಕ್ಕೆ ಸರಿಸಾಟಿ ಮತ್ತೊಬ್ಬರಿಲ್ಲ ಎಂಬುವುದು. ಇಂದು ಅಪ್ಪ ಕೂಡಿಟ್ಟ ದುಡ್ಡಿನಲ್ಲೇ ಊಟ ಬಟ್ಟೆ ವಿದ್ಯಾಭ್ಯಾಸವನ್ನು ಮುಗಿಸಿ ಯಾವುದೊ ಒಂದು ಕಂಪೆನಿಗಳಲ್ಲಿ ಕೆಲಸವೊಂದನ್ನು ಗಿಟ್ಟಿಸಿಕೊಂಡು ಅದನ್ನೇ ಮಹಾನ್ ಸಾಧನೆ ಎಂಬುವ ಮಟ್ಟಕ್ಕೆ ಪೋಸನ್ನು ನೀಡುವ ಅದೆಷ್ಟೋ ಯುವಕ ಯುವತಿಯರಿಗೆ ಇಂತಹ ಹಲವರು ಜೀವನದ ರೋಲ್ ಮಾಡೆಲ್ ಗಳಾಗಬೇಕು. ಅಲ್ಲದೆ ಸ್ತ್ರೀ ಪರ ಹೋರಾಟವೆಂದರೆ ಕೇವಲ ಶೋಷಣೆಗೊಳಗಾದ ಹೆಣ್ಣಿನ ಭಾವಚಿತ್ರದ ಮುಂದೆ ನಿಂತು, ರಾಜಕಾರಣಿಗಳು, ಮಾಧ್ಯಮಗಳು ಹಾಗು ಸರ್ಕಾರಗಳ ವಿರುದ್ಧ ಘೋಷಣೆಯನ್ನು ಕೂಗಿ ಸಾಧ್ಯವಾದಷ್ಟೂ ತಮ್ಮ ಬೇಳೆಕಾಳುಗಳನ್ನು ಬೇಹಿಸಿಕೊಳ್ಳುವ ಆಸೆಯಾಗಿದೆಯೇ ಹೊರತು, ಬರುವ ಕಷ್ಟಗಳನ್ನು ದೈರ್ಯದಿಂದ ಎದುರಿಸುವುದನ್ನು ಕಲಿಸುವ ಸಾಮಾಜಿಕ ಕಳಕಳಿಯಿರುವ ಸಂಸ್ಥೆಗಳು ವಿರಳವಾಗತೊಡಗಿವೆ. ಸಾಧನೆಯ ಹಾದಿಯಲ್ಲಿ ಗಂಡು ಹೆಣ್ಣಿಗೆ ಸಮವೆಂದು ತೋರಿಸುವುದು ಕೇವಲ ಗಂಡಸು ತೊಡುವ ಹರಿದು ಬರಿದ ಜೀನ್ಸ್ ಪ್ಯಾಂಟ್ ಹಾಗು ಲೋಳಕು ಶರ್ಟ್ ಅನ್ನು ತಾನೂ ತೊಟ್ಟರೆ ಮಾತ್ರ ಸಾಧ್ಯವೆಂದು ಅರಿಯುತ್ತಿರುವ ಅದೆಷ್ಟೋ ಎಜುಕೇಟೆಡ್ ಮಹಿಳೆಯರು ಹೇಳುವ ಮಹಿಳಾ ಅಭಿವೃದ್ಧಿಯ ಮಂತ್ರವೆಲ್ಲಿ, ದಿನ ಬೆಳಗೆದ್ದು ಯಂತ್ರಗಳಂತೆ ದುಡಿದು ಗಂಡನ ಹಾಗು ಮಕ್ಕಳ ಸಾಧನೆಗೆ ಹೆಗಲಾಗುವ ವಿದ್ಯಾಹೀನ ಗೃಹಿಣಿಯ ಶ್ರಮವೆಲ್ಲಿ?