Saturday, April 28, 2018

ಗ್ರೇಟ್ ವಾರ್ : ಏಕಮಾತ್ರ ಗುಂಡಿನಿಂದ ನೆಡೆದ ಕೋಟಿ ಜನರ ಹರಣ.

ಜುಲೈ 28, 1914. ನೋಡನೋಡುತ್ತಲೇ ಲಾಂಗ್ ರೇಂಜ್ ಯುದ್ಧ ಟ್ಯಾಂಕರ್ ನಿಂದ ಪುಟಿದೆದ್ದ ಸಿಡಿಮದ್ದೊಂದು ಸೆರ್ಬಿಯಾ ದೇಶದೆಡೆ ಶರವೇಗದಲ್ಲಿ ಚಿಮ್ಮಿತು. ನಂತರದ ಕೆಲವೇ ಕೆಲವು ದಿನಗಳಲ್ಲಿ 28 ದೇಶಗಳ ಸುಮಾರು ಎರಡು ಕೋಟಿ ಜನರ ಜೀವವನ್ನು ಭಸ್ಮಿಸಿ ಇಡೀ ಭೂಖಂಡವನ್ನೇ ತಾನು ಅಲ್ಲೊಲ್ಲ ಕಲ್ಲೊಲ್ಲ ಮಾಡಬಲ್ಲನೆಂಬ ಒಂದಿನಿತು ಸುಳಿವು ಆ ಸಿಡಿಮದ್ದಿಗೆ ಇದ್ದಿರಲಾರದು! ಕರ್ತವ್ಯ ನಿರತ ಸೈನಿಕನಂತೆ ದೇಶಗಳೆರಡರ ಗಡಿರೇಖೆಯನ್ನು ತನ್ನ ಪಾಡಿಗೆ ತಾನು ದಾಟಿ ಹಾರಿಹೋಯಿತು. ಅದು ಹಾರಿದ್ದು ಅಂದಿನ ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯದ ನೆಲದಿಂದ. ಅಶಾಂತಿಯ ಬೆಂಕಿಯನ್ನು ವಿಶ್ವದೆಲ್ಲೆಡೆದೆ ಪಸರಿಸಿದ ಶಾಂತ ಭೂಮಿಯಿಂದ.

ಜುಲೈ 23, 1914. ಹೆಚ್ಚು ಕಡಿಮೆ ಗುಲಾಮಗಿರಿಯ ಘೋಷಣೆಗಳೇನೋ ಎಂಬಂತಿದ್ದ ಒಟ್ಟು 10 ಬೇಡಿಕೆಗಳನೊತ್ತ ಪ್ರತಿಯೊಂದು ಸೆರ್ಬಿಯಾ ದೇಶದ ರಾಜ ಪೀಟರ್ನ ಕೈ ಸೇರಿತು. ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯದ ಚಕ್ರವರ್ತಿ ಫ್ರಾನ್ಸ್ ಜೋಸೆಫ್ ಕಳುಹಿಸಿದ ಈ ಬೇಡಿಕೆಗಳು ಬೇಡಿಕೆಗಳೆನ್ನುವುದಕ್ಕಿಂತ ಹೆಚ್ಚಾಗಿ ಯುದ್ಧಕ್ಕೆ ಪ್ರೇರೇಪಿಸುವ ಚುಚ್ಚುಮದ್ದುಗಳೇನೋ ಎಂಬಂತ್ತಿದ್ದವು! ಆದರೂ ಸೆರ್ಬಿಯಾ ಆ ಒಟ್ಟು ಹತ್ತು ಅಂಶಗಳಲ್ಲಿ ಎಂಟಕ್ಕೆ ಅಸ್ತು ಎಂದಿತು. ಎಷ್ಟಾದರೂ ಆ ದೇಶದ ರಾಜಕುಮಾರನೊಬ್ಬನನ್ನು ತನ್ನ ದೇಶದ ಜನರಿಂದ ಸಾಯಿಸಲ್ಪಟ್ಟ ಅಪವಾದವನ್ನು ಹಣೆಯಮೇಲೆ ಕಟ್ಟಿಕೊಂಡಿರುವಾಗ ಇಲ್ಲ ಎನ್ನಲು ಸಾಧ್ಯವುಂಟೆ!? ಆ ಎಂಟು ಅಂಶಗಳನ್ನು ಒಪ್ಪಿಕೊಂಡಿದ್ದರ ಪರಿಣಾಮ ಹೆಚ್ಚು ಕಡಿಮೆ ತನ್ನ ಜುಟ್ಟನೆಲ್ಲ ಆಸ್ಟ್ರಿಯಾ-ಹಂಗೇರಿಯ ಕೈಗೆ ಕೊಟ್ಟಂತೆಯೇ ಇದ್ದಿತು. ಆದರೆ ಯುದ್ದಮಾಡಲೇ ಕಾಲುಕೆರೆದುಕೊಂಡು ಕೂತಂತಿದ್ದ ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯ ಮಾತ್ರ ಆ ಎರಡು ಬೇಡಿಕೆಗಳ ನಕಾರಣೆಗೋಸ್ಕರ ಕೂಡಲೇ ಸೆರ್ಬಿಯಾದ ವಿರುದ್ಧ ಯುದ್ಧ ಸಾರಿತು! ಅಲ್ಲಿಗೆ ಆಗಿನ ಕಾಲಕ್ಕೆ ದಿ ಗ್ರೇಟ್ ವಾರ್ ಎಂದು ಕರೆಸಿಕೊಂಡ ಯುದ್ಧವೊಂದು ಅಧಿಕೃತವಾಗಿ ಘೋಷಣೆಯಾಯಿತು. ಸುಖಾಸುಮ್ಮನೆ ರಷ್ಯಾ, ಜರ್ಮನಿ, ಫ್ರಾನ್ಸ್ ಹಾಗು ಬ್ರಿಟನ್ ದೇಶಗಳನ್ನು ಯುದ್ಧಕ್ಕೆ ಎಳೆತರಲಾಯಿತು.

ಜೂನ್ 18, 1914. ಆಸ್ಟ್ರಿಯಾ-ಹಂಗೇರಿಯ ಉತ್ತರಾಧಿಕಾರಿ ಆರ್ಚ್ ಡ್ಯೂಕ್ ಆತನ ಪತ್ನಿ ಸಮೇತವಾಗಿ ಸೇನಾವೀಕ್ಷಣೆಗೆಂದು ದೇಶದ ಸರಾಜೇವೊ ನಗರಕ್ಕೆ ಪ್ರವಾಸವನ್ನು ಕೈಗೊಳ್ಳುತ್ತಾನೆ. ಅದು ಮಳೆಗಾಲದ ಹಣಬೆಗಳಂತೆ ದೇಶಗಳು ಉಗಮಗೊಳ್ಳುತ್ತಿದ್ದ ಪರ್ವಕಾಲ. ಧರ್ಮ, ರೀತಿ, ಆಚರಣೆಯ ಮೇರೆಗೆ ಪ್ರತಿಯೊಂದು ಗುಂಪುಗಳೂ ತನಗೊಂದಿರಲಿ ಎಂದು ದೇಶಗಳನ್ನು ಕಟ್ಟಲು ಹೊರಟ್ಟಿದ್ದ ಸಮಯ. ಸಣ್ಣಪುಟ್ಟ ದೇಶಗಳಾದರೆ ಒಡೆದಾಡಿ ಬಡಿದಾಡಿ ತಮಗೆ ಬೇಕಾದ ನೆಲವನ್ನು ತಮ್ಮದಾಗಿಸಿಕೊಳ್ಳಬಹುದಾಗಿತ್ತು ಆದರೆ ಅದೇ ಬೇಡಿಕೆ ಘಟಾನುಘಟಿ ಸಾಮ್ರಾಜ್ಯಗಳೊಟ್ಟಿಗಾದರೆ ದಶಕಗಳ ಕಾಲ ಸೇಡಿನ ಕಿಡಿಯನ್ನು ಬಚ್ಚಿಟ್ಟುಕೊಂಡೇ ಬದುಕಬೇಕಿದ್ದಿತ್ತು. ಅದೇ ಬಗೆಯ ಸೇಡಿನ, ರೋಷದ ಕಿಡಿಯೊಂದು ಅಂದು ಸ್ಲಾವಿಕ್ ಜನಗಳೆಂದು ಕರೆಯಲ್ಪಡುತ್ತಿದ್ದ ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯದ ಗುಂಪೊಂದರಲ್ಲಿ ಅಡಗಿತ್ತು. ಆ ಗುಂಪು ತಮಗೊಂದು ತುಂಡು ಜಾಗವನ್ನು ಬಿಟ್ಟುಕೊಟ್ಟರೆ ತಾವೊ ಒಂದು ದೇಶವನ್ನು ಕಟ್ಟಿ ಮೆರೆಯಬಹುದೆಂಬ ಕನಸ್ಸನ್ನು ಕಟ್ಟಿತ್ತು. ಆದರೆ ಸ್ಲಾವಿಕ್ ಜನರ ಈ ಬೇಡಿಕೆಗಳಿಗೆ ಕ್ಯಾರೇ ಎನ್ನದ ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯ ಅವರನ್ನು ಆಟಕುಂಟು ಲೆಕ್ಕಕ್ಕಿಲ್ಲದವರಂತೆ ಮಾಡಿಬಿಟ್ಟಿತ್ತು. ಅಲ್ಲದೆ ನೆರೆಯ ಸೆರ್ಬಿಯ ದೇಶವೇ ಇವರಿಗೆಲ್ಲ ಕುಮಕ್ಕು ನೀಡಿ ಕುಣಿಸುತ್ತಿದೆ ಎಂಬುದೂ ತಿಳಿದಿದ್ದಿತು. ಆದ ಕಾರಣ ಸ್ಲಾವಿಕ್ ಜನರ ಗುಂಪಿಗೆ ಅಲ್ಲಿನ ರಾಜಮನೆತನದ ಕುಟುಂಬಗಳ ಮೇಲೆ ಹದ್ದಿನ ಕಣ್ಣೊಂದು ಮೊದಲಿನಿಂದಲೇ ಇದ್ದಿತು. ಅಂದು ಆರ್ಚ್ ಡ್ಯೂಕ್ ಹಾಗು ಆತನ ಪತ್ನಿ ಪ್ರವಾಸವನ್ನು ಕೈಗೊಂಡಾಗ ಆತನ ಗುಪ್ತಚರ ಇಲಾಖೆ ಅಲ್ಲಿ ಅವರಿಗೆ ಬಂದೆರಗುವ ಅಪಾಯದ ಬಗ್ಗೆ ಸುಳಿವನ್ನು ನೀಡಿತ್ತಾದರೂ ಆತ ಅಷ್ಟೇನೂ ತಲೆಕೆಡಿಸಿಕೊಳ್ಳದೆ ಗ್ರಾಫ್ಟ್ & ಸ್ಟಿಫ್ ಕಂಪನಿಯ ತನ್ನ ಐಷಾರಾಮಿ ಕಾರನ್ನು ಏರುತ್ತಾನೆ. ಶಾಂತ ಸಂಡೇಯ ಹಗಲನ್ನು ಸವಿಯುತ್ತಾ ಸರಾಜೇವೊ ನಗರದ ಗಡಿಯನ್ನು ಪ್ರವೇಶಿಸುತ್ತಾನೆ. ಅಂದೇನಾದರೂ ರಾಜಕುಮಾರ ತನ್ನ ಗುಪ್ತಚರ ಇಲಾಖೆಯ ಮಾತನ್ನು ನಂಬಿದ್ದರೆ, ಸರಜೇವೊ ನಗರದ ಪ್ರವಾಸವನ್ನೇದರೂ ಮೊಟಕುಗೊಳಿಸಿದ್ದರೆ ಇಂದು ವಿಶ್ವದ ಪ್ರಸ್ತುತ ಚಿತ್ರಣವೇ ಬದಲಾಗಿರುತ್ತಿತ್ತೇನೋ ಎಂದರೆ ನಾವು ನಂಬಲೇಬೇಕು!!!

ಸರಾಜೇವೊ ನಗರಕ್ಕೆ ರಾಜಕುಮಾರ ಬರುತ್ತಾನೆಂದು ತಿಳಿದಿದ್ದ ಹತ್ಯೆಗಾರರ ಗುಂಪು ಕಳೆದ ಕೆಲದಿನಗಳಿಂದಲೇ ಅಲ್ಲಿ ಭಾರಿ ತಯಾರಿಯನ್ನು ಮಾಡಿರುತ್ತಾರೆ. ಮೇಲಾಗಿ ಈ ಹತ್ಯೆಯ ಮಾಸ್ಟರ್ ಮೈಂಡ್ ಗಳು ಸೆರ್ಬಿಯ ದೇಶದ ಸೈನ್ಯಾಧಿಕಾರಿಗಳೇ ಆಗಿದ್ದರಿಂದ ರಾಜನನ್ನು ಮುಗಿಸಲು ಬೇಕಾಗಿದ್ದ ಬಾಂಬು ಗನ್ನುಗಳ ಕೊರತೆ ಅವುಗಳಿಗೆ ಕಾಣುವುದಿಲ್ಲ. ಬರೋಬ್ಬರಿ ಆರು ಜನರ ಗುಂಪೊಂದನ್ನು ಕಟ್ಟಿ, ಅವಸರವಸರವಾಗಿ ತರಬೇತಿಯನ್ನು ನೀಡಿ, ರಾಜಕುಮಾರ ಆರ್ಚ್ ಡ್ಯೂಕ್ನ ಕಾರು ಅಂದು ಸಾಗುವ ಹಾದಿಯಲ್ಲಿ ದಾರಿಗೊಬೊಬ್ಬರಂತೆ ನಿಲ್ಲಿಸಲಾಯಿತು. ಸಮಯ ಬೆಳಗಿನ ಹತ್ತು ಘಂಟೆ. ಸರಾಜೇವೊ ನಗರದ ರಸ್ತೆಯನ್ನು ಪ್ರವೇಶಿಸಿದ ಕಾರು ಮೊದಲನೇ ಶೂಟರ್ ನನ್ನು ಕೂದಲೆಳೆಯಲ್ಲಿ ಹಾದುಹೋಗುತ್ತದೆ. ಮತ್ತೊಂದು ಗಲ್ಲಿಯಲ್ಲಿದ್ದ ಎರಡನೇ ಶೂಟರ್ ಸಹ ತನ್ನ ಸಣ್ಣಪುಟ್ಟ ಎಡವಟ್ಟುಗಳಿಂದ ಗನ್ನಿನಿಂದ ಗುಂಡನ್ನಾಗಲಿ ಅಥವಾ ಜೇಬಿನಲ್ಲಿದ್ದ ಬಾಂಬನ್ನಗಲಿ ಎಸೆಯಲಾಗಲಿಲ್ಲ. ಆದರೆ ನಗರದ ಮತ್ತೊಂದು ಮೂಲೆಯಲ್ಲಿದ್ದ ಮೂರನೇ ಶೂಟರ್ ಮಾತ್ರ ಸಿಕ್ಕ ಅವಕಾಶವನ್ನು ಕಳೆದುಕೊಳ್ಳಲಿಲ್ಲ. ರಾಜದಂಪತಿಗಳ ಮೇಲೆ ಗುಂಡಿನ ಸುರಿಮಳೆಗೈಯ್ಯದ್ದಿದ್ದರೂ ಕೈಯಲ್ಲಿದ್ದ ಬಾಂಬನ್ನು ಗುರಿಯಿಟ್ಟು ಅವರು ಚಲಿಸುತ್ತಿದ್ದ ಕಾರಿನ ಮೇಲೆ ಎಸೆದ. ಆದರೆ ವಿಧಿಯಾಟ ಬೇರೆಯೇ ಇದ್ದಿತು ನೋಡಿ. ಗಾಳಿಯಲ್ಲಿ ತೇಲಿಬಂದ ಬಾಂಬು ಕಾರಿನ ಹಿಂಬದಿಗೆ ತಗುಲಿ ರಸ್ತೆಯ ಮೇಲೆ ಬಿದ್ದಿತು. ಪರಿಣಾಮ ರಾಜದಂಪತಿಗಳನ್ನು ಹಿಂಬಾಲಿಸುತ್ತಿದ್ದ ಮತ್ತೊಂದು ಕಾರಿನಡಿ ಅದು ಸಿಡಿದು ಹಲವರನ್ನು ಗಾಯಗೊಳಿಸಿತು. ಎಲ್ಲೆಡೆಯೂ ಕೂಗು ಚೀತ್ಕಾರದ ಅಲ್ಲೊಲ್ಲ ಕಲ್ಲೊಲ್ಲವುಂಟಾಯಿತು. ಕೂಡಲೇ ರಾಜನ ಅಂಗರಕ್ಷಕರು ಆತನನ್ನು ಸುತ್ತುವರೆದು ಕಾರನ್ನು ಸುರಕ್ಷಿತವಾಗಿ ಅಲ್ಲಿಂದ ಮುನ್ನೆಡೆಸುತ್ತಾರೆ. ಇತ್ತ ಕಡೆ ತನ್ನ ವ್ಯರ್ಥ ಪ್ರಯತ್ನದಿಂದ ಕಕ್ಕಾಬಿಕ್ಕಿಯಾದ ಶೂಟರ್ ಸಿಟಿಯ ಜನತೆ ತನ್ನನ್ನು ಮುಗಿಸುವ ಮೊದಲೇ ಸೈನೇಡ್ ನ ಗುಳಿಗೆಯೊಂದನ್ನು ನುಂಗಿ ಪಕ್ಕದಲ್ಲಿದ್ದ ನದಿಗೆ ಹಾರುತ್ತಾನೆ. 'ಅಯ್ಯೋ ವಿಧಿಯೇ...!’ ಎಂಬಂತೆ ಪುಣ್ಯಾತ್ಮ ನುಂಗಿದ ವಿಷಗುಳಿಗೆಯೂ ತನ್ನ ಕೆಲಸವನ್ನು ಸರಿಯಾಗಿ ಮಾಡಲಿಲ್ಲ. ಅಲ್ಲದೆ ನದಿಯೂ ಸಹ ಬೇಸಿಗೆಯ ಒಣಬಿಸಿಲಿಗೆ ಮೊಣಕಾಲುದ್ದ ನೀರನ್ನೂ ಉಳಿಸಿಕೊಂಡಿರಲಿಲ್ಲ. ಸುತ್ತಲೂ ರಾಜನನ್ನು ಪ್ರೀತಿಸುವ ಜನರ ಉಗ್ರರೂಪ. ಪಿತೂರಿ ನೆಡೆಸಿದವನಿಗೇ ಪಿತೂರಿ ನೆಡೆಸಿದವೇನೋ ಎಂಬಂತಿದ್ದ ಸೈನೇಡ್ ಹಾಗು ಮೊಣಕಾಲುದ್ದ ನದಿಯ ಹಣೆಬರಹ. ಬೇಕಾದಾಗ ಸಾವು ಕೂಡ ಸಮುದ್ರದ ಮುತ್ತಿನಂತಾಗುವುದು ಎನ್ನುವುದು ಇದಕ್ಕಾಗಿಯೇ.

ಅಲ್ಲಿಂದ ಮುನ್ನೆಡೆದ ರಾಜಕುಮಾರ ಹಾಗು ಆತನ ಪತ್ನಿ ನೇರವಾಗಿ ಸಿಟಿಯ ಟೌನ್ ಹಾಲಿಗೆ ನೆಡೆಯುತ್ತಾರೆ. ಪೂರ್ವಸಿದ್ದತೆಯಂತೆ ಅಲ್ಲಿನ ಅಧಿಕಾರಿಗಳೆಲ್ಲ ರಾಜನ ಆಗಮನದ ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರೂ ದಾರಿಯಲ್ಲಿ ಅವರ ಮೇಲೆ ನೆಡೆದ ಆತ್ಮಹತ್ಯಾ ಧಾಳಿಯ ನಂತರ ಏನುಮಾಡಬೇಕೆಂದು ತಿಳಿಯದೆ ಹೆದರುತ್ತಲೇ ಕಾರ್ಯಕ್ರಮವನ್ನು ನೆಡೆಸುತ್ತಾರೆ. ಆದರೆ ಬಾಂಬಿನ ಸಿಡಿತದಿಂದ ಗಾಯಗೊಂಡ ಜನರ ಆರ್ತನಾದವೇ ರಾಜನನ್ನು ಕಾಡುತ್ತಿದ್ದರಿಂದ ಆತ ಕೂಡಲೇ ಅವರನ್ನು ಸೇರಿಸಿದ ಆಸ್ಪತ್ರೆಗೆ ಹೋಗಲು ಬಯಸುತ್ತಾನೆ. ಕೆಲಸಮಯದ ಮುಂಚಷ್ಟೇ ತಮ್ಮ ಮೇಲೆ ಆತ್ಮಹತ್ಯಾ ಸಂಚು ನೆಡೆದಿದ್ದೂ ಕೂಡಲೇ ಹೊರಬರುವುದು ಸುರಕ್ಷಿತವಲ್ಲ ಎಂದರೂ ಕೇಳದೆ ಪತ್ನಿಸಮೇತವಾಗಿ ಆತ ಕಾರಿನಲ್ಲಿ ಕುಳಿತು ಆಸ್ಪತ್ರೆಯ ಹಾದಿಯನ್ನು ಹಿಡಿಯುತ್ತಾನೆ. ಬಹುಶ ಅದು ತನ್ನ ಅತಿಕೊನೆಯ ಅತಿದೊಡ್ಡ ತಪ್ಪೆಂದು ಆತನಿಗೆ ತಿಳಿಯುವುದಿಲ್ಲ.

ರಾಜಕುಮಾರನನ್ನು ಮುಗಿಸುವ ವ್ಯರ್ಥ ಪ್ರಯತ್ನದಿಂದ ಕಂಗೆಟ್ಟುಹೋಗಿದ್ದ ನಾಲ್ಕನೆಯ ಶೂಟರ್ ಅದೇನೇ ಆಗಲಿ ಈ ಬಾರಿ ಶತಾಯ-ಗತಾಯ ರಾಜಕುಮಾರರನ್ನು ಮುಗಿಸಲೇಬೇಕೆಂಬ ಹೊಂಚುಹಾಕಿರುತ್ತಾನೆ. ಹೆಸರು ಗ್ಯಾವ್ರಿಲೋ ಪ್ರಿನ್ಸಿಪ್. ವಯಸ್ಸು ಕೇವಲ ಹತ್ತೊಂಬತ್ತು ವರ್ಷ. ಕಾರ್ಯಕ್ರಮಗಳೆಲ್ಲ ಮುಗಿದು ರಾಜಕುಮಾರ ವಾಪಸ್ಸು ಹೊರಡುವ ದಿನ ಹಾದಿಯಲ್ಲಿ ಆತನನ್ನು ಮುಗಿಸಬೇಕೆಂಬ ಸಂಚನ್ನು ರೂಪಿಸಿದ್ದ ಗ್ಯಾವ್ರಿಲೋ ಅಚಾನಕ್ಕಾಗಿ ರಾಜಕುಮಾರ ಆತನ ಪತ್ನಿ ಸಮೇತವಾಗಿ ಆಸ್ಪತ್ರೆಯ ಹಾದಿಯಲ್ಲಿ ಎದುರಾದಾಗ ಕೊಂಚ ದಿಗ್ಬ್ರಮೆಯಾಗುತ್ತಾನೆ. ಸಿಕ್ಕ ಸುವರ್ಣಾವಕಾಶ ಕೈತಪ್ಪುವ ಮೊದಲೇ ಆತ ತನ್ನ ಜೇಬಿನಲ್ಲಿದ್ದ ಪಿಸ್ತೂಲನ್ನು ಹೊರಗೆಳೆದು ರಾಜಕುಮಾರ ಹಾಗು ಆತನ ಪತ್ನಿಯ ಮೇಲೆ ಗುಂಡಿನ ಸುರಿಮಳೆಗೈಯುತ್ತಾನೆ. FN ಮಾಡೆಲ್ ೧೯೧೦ ಪಿಸ್ತೂಲಿನಿಂದ ಹೊರಟ ಗುಂಡೊಂದು ರಾಜನ ಕತ್ತನ್ನು ಸೀಳಿ ಹೊರಹಾರಿತು! ಗಾಯಗೊಂಡ ಪ್ರಜೆಗಳ ಯುಗಕ್ಷೇಮವನ್ನು ವಿಚಾರಿಸಲು ಹೊರಟಿದ್ದ ಜೋಡಿ ಮತ್ತೆಂದೂ ಹಿಂಬರದಿರುವ ಲೋಕಕ್ಕೆ ಪ್ರಯಾಣಿಸುತ್ತಾರೆ. ವಿಪರ್ಯಾಸವೆಂಬಂತೆ ಅಂದು ಅವರ ವಿವಾಹ ವಾರ್ಷಿಕೋತ್ಸವವೂ ಆಗಿದ್ದಿತು! ಸರೆಜಾವೋ ಅಧಿಕಾರಿಗಳಿಗೆ ಜೀವಂತವಾಗಿ ಸೆರೆಸಿಕ್ಕ ಇವನಿಂದ ನಂತರದ ಕೆಲವೇ ದಿನಗಳಲ್ಲಿ ಸೆರ್ಬಿಯ ದೇಶದ ಅಧಿಕಾರಿಗಳ ಕೈವಾಡವಿರುವ ಗುಟ್ಟು ಹೊರಹಾಕಲ್ಪಡುತ್ತದೆ. ಆದರೆ ಸೆರ್ಬಿಯ ಸರ್ಕಾರ ಈ ಸಾವಿಗೂ, ತನಗೂ ಹಾಗು ಅಧಿಕಾರಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಕೈತೊಳೆದುಕೊಳ್ಳುವ ಹಾದಿಯನ್ನು ಹಿಡಿದರೂ ತನ್ನ ರಾಜಕುಮಾರನನ್ನು ಕಳೆದುಕೊಂಡು ಬೆಂಕಿಯ ಚಂಡಾಗಿದ್ದ ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯ ಸೆರ್ಬಿಯ ದೇಶಕೊಂದು ಕೊನೆಯನ್ನು ಕಾಣಿಸಬೇಕೆಂದೇ ನಿಶ್ಚಯಿಸಿತು.

ಇದು ಅಂದಿಗೆ ದಿ ಗ್ರೇಟ್ ವಾರ್ ಅಥವ ಇಂದಿಗೆ ಮೊದಲ ವಿಶ್ವಯುದ್ಧವೆಂದು ಕರೆಸಿಕೊಂಡ ಪ್ರಪಂಚದ ಭೀಕರ ರಕ್ತಸಿಕ್ತ ಅಧ್ಯಾಯ ಒಂದಕ್ಕೆ ಮುನ್ನುಡಿಯಾದ ಘಟನಾವಳಿಗಳು.ಒಂದು ಪಕ್ಷ ಅಂದು ಸೆರ್ಬಿಯ ದೇಶ ಆಸ್ಟ್ರಿಯಾ-ಹಂಗೇರಿಯ ಅಷ್ಟೂ ಬೇಡಿಕೆಗಳಿಗೆ ಅಸ್ತು ಎಂದಿದ್ದರೆ ಅಥವಾ ರಾಜಕುಮಾರನೊಬ್ಬ ಗುಪ್ತಚರ ಸಿಬ್ಬಂದಿಯ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ ಅಥವಾ ಟೌನ್ ಹಾಲಿನಿಂದ ಕೂಡಲೇ ವಾಪಸ್ಸು ಬರುವ ಮನಸ್ಸನ್ನು ಮಾಡದಿದ್ದರೆ ಬಹುಷಃ ಇಂದು ನಮ್ಮೆಲ್ಲರ ಸುತ್ತ ಬೇರೆಯೇ ದಿನಗಳು ಇರುತ್ತಿದ್ದವೇನೋ? ದೇಶಗಳೆರಡರ ಕಚ್ಚಾಟ ಅಂದು ಮಹಾಯುದ್ದವಾಗಿ ಪರಿಣಮಿಸಿದ್ದೂ ಸಹ ಕಾಕತಾಳೀಯಎನ್ನಬಹುದು. ಎಂದು ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯ ಸೆರ್ಬಿಯ ದ ಮೇಲೆ ಯುದ್ಧವನ್ನು ಕಾರಿದ ಸುದ್ದಿ ರಷ್ಯಾದೇಶದ ಕಿವಿಗೆ ಬಿದ್ದಿತೋ ಅಂದೇ ಅದು ಸೆರ್ಬಿಯಾದ ಸಹಾಯಕ್ಕಾಗಿ ಸೇನೆಯನ್ನು ಕಳಿಸಲು ತೀರ್ಮಾನಿಸಿತು. ಆದರೆ ಸೆರ್ಬಿಯ ದೇಶವನ್ನು ದ್ವೇಷಿಸುತ್ತಿದ ಹಾಗು ತನ್ನ ಮಿತ್ರ ರಾಷ್ಟ್ರ ಆಸ್ಟ್ರಿಯಾ-ಹಂಗೇರಿಯ ಪರವಾಗಿ ಜರ್ಮನಿ, ರಷ್ಯಾ ದೇಶದ ಈ ನಡೆಯನ್ನು ವಿರೋಧಿಸಿ ಅದರ ವಿರುದ್ಧ ಯುದ್ಧ ಕಾರಿತು. ಅಲ್ಲದೆ ಸೆರ್ಬಿಯ ದೇಶಕ್ಕೆ ಯಾವುದೇ ಬಗೆಯ ಸಹಾಯವನ್ನು ಮಾಡಬಾರದೆಂದು ಫ್ರಾನ್ಸ್ ದೇಶಕ್ಕೆ ಖಡಕ್ ಸಂದೇಶವನ್ನು ರವಾನಿಸಿತು. ಹೀಗೆ ತಣ್ಣಗಿದ್ದ ಫ್ರಾನ್ಸ್ ದೇಶವನ್ನೂ ಒಂದಿಲ್ಲೊಂದು ಬಗೆಯಲ್ಲಿ ಯುದ್ಧಕ್ಕೆ ಎಳೆತಂದಿತು. ಫ್ರಾನ್ಸ್ ನ ಮೇಲೆ ಜರ್ಮನಿಯ ದಾಳಿಗೆ ಬ್ರಿಟನ್ ಮುನಿಸಿಕೊಂಡು ಅದೂ ಕೂಡ ಜರ್ಮನಿಯ ವಿರುದ್ಧ ಯುದ್ಧ ಸಾರಿತು. ಮತ್ತೊಂದೆಡೆ ಇದೆ ಬಗೆಯ ತನ್ನ ಹುಚ್ಚಾಟಗಳಿದ ಬೆಲ್ಜಿಯಂ ಹಾಗು ದೂರದ ಅಮೆರಿಕ ದೇಶಗಳನ್ನೂಯುದ್ಧಕ್ಕೆ ಎಳೆತಂದು ಅವುಗಳ ವಿರುದ್ಧ ಸೆಣೆಸಾಡ ತೊಡಗಿತು. ಒಟ್ಟಿನಲ್ಲಿ ಹನುಮನ ಬಾಲಕ್ಕೆ ಬೆಂಕಿಯನ್ನು ಕೊಟ್ಟಂತೆ ಅಂದಿನ ಜರ್ಮನಿ ಎಂಬ ಅರೆಹುಚ್ಚು ದೇಶಕ್ಕೆ ಯುದ್ಧವನ್ನು ಎಲ್ಲೆಡೆ ಪಸರಿಸಲು ಸೆರ್ಬಿಯ ಹಾಗು ಆಸ್ಟ್ರಿಯಾ-ಹಂಗೇರಿಯ ಜಗಳವೊಂದು ಸಾಕಾಗಿದ್ದಿತು. ಅಂದು ಇದೇ ಯುದ್ಧ ನಂತರ ಹಲವು ವರ್ಷಗಳ ನಂತರ ಮರುಕಳಿಸಿದ ಎರಡನೇ ವಿಶ್ವಯುದ್ದಕೂ ನಾಂಧಿಯಾಯಿತು.


ಸೆಪ್ಟೆಂಬರ್ 28, 1918. ನಾಲ್ಕು ವರ್ಷಗಳ ಯುದ್ಧದಲ್ಲಿ ಜರ್ಜರಿತವಾದ ಜರ್ಮನಿ ಇನ್ನೇನು ರಣರಂಗದಿಂದ ಹಿಂದೆ ಸರಿಯಬೇಕು. ಅಷ್ಟರಲ್ಲಾಗಲೇ ಬ್ರಿಟನ್ ದೇಶದ ಸೇನಾ ತುಕಡಿಗಳು ಯುದ್ಧದಲ್ಲಿ ಸೇರ್ಪಡೆಗೊಂಡು ಜರ್ಮನಿ ಹಾಗು ಅದರ ಮಿತ್ರಪಡೆಗಳ ಸೈನಿಕರ ರುಂಡವನ್ನು ಚೆಂಡಾಡತೊಡಗಿದ್ದವು. ಯುದ್ಧರಂಗದಿಂದ ಕಾಲು ಕೀಳುತಿದ್ದ ಗಾಯಗೊಂಡ ಜರ್ಮನಿಯ ಸೈನಿಕನೊಬ್ಬ ಬ್ರಿಟನ್ ದೇಶದ ಸೈನಿಕನ ಎದುರಿಗೆ ಸಿಕ್ಕಿಬೀಳುತ್ತಾನೆ. ನಿಲ್ಲಲೂ ತ್ರಾಣವಲ್ಲದ ಆತನನ್ನು ಕಂಡು ಮರುಗಿದ ಬ್ರಿಟನ್ ಸೈನಿಕ ಕೆಲಕಾಲ ಆತನನ್ನೇ ನೋಡಿ ಆತನಿಗೆ ಏನನ್ನೂ ಮಾಡದೇ ಅಲ್ಲಿಂದ ಮುನ್ನಡೆಯುತ್ತಾನೆ. ಜೀವಭಿಕ್ಷೆಯನ್ನು ಪಡೆದ ಜರ್ಮನ್ ಸೈನಿಕ ಅಲ್ಲಿನ ಕಾಲುಕೀಳುತ್ತಾನೆ. ಈ ಘಟನೆ ಜರುಗಿದ ಹಲವು ದಶಕಗಳ ಕಾಲ ಬ್ರಿಟನ್ನಿನ ಸೈನಿಕ ತನ್ನನು ತಾನೇ ಶಪಿಸಿಕೊಳ್ಳುತ್ತಿರುತ್ತಾನೆ. ಆತನ ಆ ಒಂದು ಗುಂಡೇಟಿನಿಂದ ಜಗತ್ತಿನ ಕೋಟಿ ಕೋಟಿ ಜನರ ಜೀವವನ್ನು ತಾನು ರಕ್ಷಿಸಬಹುದಾಗಿತ್ತಲ್ಲ ಎಂದು ದುಃಖಿಸುತ್ತಾನೆ! ಏಕೆಂದರೆ ಅಂದು ಆತ ಜೀವಭಿಕ್ಷೆಯನ್ನು ನೀಡಿದ್ದು ಜಗತ್ತಿನ ಇತಿಹಾಸದಲ್ಲೇ ನರರಾಕ್ಷಸನೆಂದೇ ಬಿಂಬಿತವಾಗಿ ಕೋಟಿ ಕೋಟಿ ಜನರ ಮಾರಣಹೋಮಕ್ಕೆ ನೇರವಾಗಿ ಕಾರಣನಾದ ಕುಖ್ಯಾತ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್!!

ಮೊದಲನೇ ಮಹಾಯುದ್ಧ ಕೊನೆಗಂಡು ಇಂದು ಬರೋಬ್ಬರಿ ನೂರು ವರ್ಷಗಳು ಸಂದಿವೆ. ತೀವ್ರಗಾಮಿಯ ಪಿಸ್ತೂಲಿನಿಂದ 'ಸಿಡಿದ ಗುಂಡೊಂದು' ಮೊದಲನೇ ಮಹಾಯುದ್ಧವನ್ನು ಹುಟ್ಟುಹಾಕಿದರೆ, ಸೈನಿಕನ ಪಿಸ್ತೂಲಿನಿಂದ 'ಸಿಡಿಯದ ಗುಂಡೊಂದು' ಎರಡನೇ ಮಹಾಯುದ್ದವನು ಹುಟ್ಟುಹಾಕಿತು.



Friday, April 20, 2018

ದೇಶಾಭಿಮಾನದ ಮುಂದೆ ದೇಹಾಭಿಮಾನವನ್ನು ಮರೆಯಾಗಿಸಿದ ನಾಯಕ...

ಗುಡಾಣ ದೇಹದ ಮೇಲಿನ ಕರಿ ಕೋಟು, ತಲೆಯ ಮೇಲೊಂದು ಹಾಂಬರ್ಗ್ ಹ್ಯಾಟು, ಹುಟ್ಟುವಾಗಲೇ ಅಂಟಿಕೊಂಡು ಬಂದಿತ್ತೇನೋ ಎಂಬಂತೆ ಬಾಯನ್ನು ಬಿಟ್ಟಿರದ ಹೊಗೆಯಾರದ ಸಿಗಾರಿನೊಂದು ತುಂಡು, ಕೈಯಲ್ಲೊಂದು ಭಯ ಹುಟ್ಟಿಸುವ ವಾಕಿಂಗ್ ಸ್ಟಿಕ್ಕು. ಇವಿಷ್ಟೇ ಸಾಕು ಇಪ್ಪತ್ತನೇ ಶತಮಾನದ ಕಾಂಟ್ರವೇರ್ಷಿಯಲ್ ವ್ಯಕ್ತಿತ್ವವೊಂದನ್ನು ಬಣ್ಣಿಸಲು. ಭಾರತೀಯರ ಮಟ್ಟಿಗೆ ಗಾಂಧಿಯನ್ನು ಜರಿಯುತ್ತಿದ್ದ, ಭಾರತವನ್ನು ನಿಂತ ನೆರಳಿಗೆ ಆಗದ ಅಲ್ಲದೆ ನಲ್ವತ್ತು ಲಕ್ಷ ಭಾರತೀಯರ ಮರಣ ಮೃದಂಗಕ್ಕೆ ಪ್ರತ್ಯಕ್ಷವಲ್ಲವಾದರೂ ಪರೋಕ್ಷವಾಗಿ ಕಾರಣನಾದ ಈತ ದೇಶಪ್ರೇಮಿಗಳಿಗೆ ಅಕ್ಷರ ಸಹ ವಿಲನ್ನಂತಾದರೂ ಬ್ರಿಟನ್ನಿಗರ ಪಾಲಿಗೆ ಮಾತ್ರ ಸಾಕ್ಷಾತ್ ದೇವಧೂತ! ಪ್ರಪಂಚವನ್ನೇ ನುಂಗಿ ನೀರು ಕುಡಿಯುವಂತೆ ಧಾವಿಸುತಿದ್ದ ಹಿಟ್ಲರ್ ಎಂಬ ರಾಕ್ಷಸನಿಂದ ಬ್ರಿಟನ್ನನ್ನು ರಕ್ಷಿಸಿದನಲ್ಲದೆ ಎರಡನೇ ಮಹಾಯುದ್ದಕ್ಕೂ ಅಂತ್ಯವನ್ನು ಹಾಡಿಸಿದವನೀತ. ಎರಡು ಬಾರಿ ಬ್ರಿಟನಿನ್ನ ಪ್ರಧಾನಿಯಾಗಿ ದೇಶವನ್ನು ಮುನ್ನೆಡೆಸಿದ ಈತ ಒಬ್ಬ ಬರಹಗಾರ, ಅಧಿಕೃತ ಪತ್ರಕರ್ತ, ಸೇನಾನಾಯಕ ಹಾಗು ಒಬ್ಬ ಖ್ಯಾತ ಚಿತ್ರಗಾರನೂ ಹೌದು. ಕೆಲವು ನೆಗೆಟಿವ್ ಅಂಶಗಳನ್ನು ಬದಿಗಿರಿಸಿ ಈತನನ್ನು ನೋಡಬಯಸಿದವರಿಗೆ ವಿಶ್ವವನ್ನೇ ಆಳಿದ ದೇಶವೊಂದು ಹಿಟ್ಲರ್ನ ನಾಝಿ ಜರ್ಮನಿಯ ಗುಲಾಮನಾಗಬೇಕಿದ್ದ ಸಂಧಿಘ್ನ ಘಳಿಗೆಯಲ್ಲಿಯೂ ತಲೆ ತಗ್ಗಿಸದೆ ಹೋರಾಡಿದ ಧೈರ್ಯಶಾಲಿ ನಾಯಕನೊಬ್ಬ ಅನಾವರಣಗೊಳ್ಳುತ್ತಾನೆ. ಹೆಸರು ವಿನ್ಸ್ಟನ್ ಲಿಯೊನಾರ್ಡ್ ಸ್ಪೆನ್ಸರ್ ಚರ್ಚಿಲ್.

ಇಂಗ್ಲೆಂಡಿನ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರೂ ಯುದ್ಧ ಭೂಮಿಯ ಸದ್ದು ಗದ್ದಲಗಳ ಕತೆಯನ್ನೇ ಕೇಳುತ್ತಾ ಬೆಳೆದವನೀತ. ಮುಂದೊಂದು ದಿನ ಬಂದೆರಗುವ ಯುದ್ಧನಾಯಕನ ಸ್ಥಾನಕ್ಕೆ ಇಂದೇ ತಯಾರಿ ನೆಡೆಸುವಂತೆ! ತನ್ನ ಓದು ಮುಗಿದ ಕೂಡಲೇ ಬ್ರಿಟನ್ ಸೈನ್ಯಕ್ಕೆ ಸೇರಿ ಅದರ ನಿಮಿತ್ತ ಕ್ಯೂಬಾ, ಸೂಡಾನ್ ಅಲ್ಲದೆ ಭಾರತಕ್ಕೂ ಈತ ಬಂದು ಹೋಗಿರುವುದುಂಟು. 1895 ರಿಂದ 1899 ರ ಮಧ್ಯೆ ಸುಮಾರು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಈತ ನೆಲಸಿದ್ದನೆಂದು ಇತಿಹಾಸ ತಿಳಿಸುತ್ತದೆ. ಅಂದು ಒಬ್ಬ ಪತ್ರಕರ್ತನಗಾಗಿ ದೇಶದ ಹಲವೆಡೆ ಸಂಚರಿಸಿ ಆ ಕಾಲಕ್ಕೆ ಜರುಗುತಿದ್ದ ಯುದ್ಧ ಹಾಗು ಬಂಡಾಯಗಳ ಸುದ್ದಿಯನ್ನು ಇಂಗ್ಲೆಂಡಿನ ಪತ್ರಿಕೆಗಳಿಗೆ ಬರೆದು ಕಳುಹಿಸುತ್ತಿದ್ದ. ಅದೇ ಸಮಯದಲ್ಲಿ ಯುದ್ಧ ಹಾಗು ದಂಗೆಗಳ ಕುರಿತ ಹಲವಾರು ಪುಸ್ತಕಗಳನ್ನೂ ಈತ ರಚಿಸುತ್ತಾನೆ. ಗುಣಸಹಜವಾಗಿ ಬಂದಿತ್ತೇನೋ ಎಂಬಂತಿದ್ದ ವಾಕ್ ಚಾತುರ್ಯ, ಎಂತದೇ ವಿಷಮ ಪರಿಸ್ಥಿಯಲ್ಲೂ ಕಳೆಗುಂದದ ದೃಢ ವ್ಯಕ್ತಿತ್ವವನ್ನೊಂದಿದ್ದ ಈತನಿಗೆ ಮುಂದೆ ಬ್ರಿಟನ್ನಿನ ಪಾರ್ಲಿಮೆಂಟನ್ನೇರುವುದು ತೀರಾ ಕಷ್ಟದ ಕಾಯಕವೇನಾಗಲಿಲ್ಲ.

ಪಾರ್ಲಿಮೆಂಟಿನ ವಿದೇಶಾಂಗ ಖಾತೆಯಿಂದ ಹಿಡಿದು ಸೈನ್ಯದ ಉಸ್ತುವಾರಿಯನ್ನೂ ಸಂಭಾಳಿಸುವ ಹುದ್ದೆಯನ್ನು ನಲ್ವತ್ತು ವರ್ಷದ ಚರ್ಚಿಲ್ ತನ್ನ ಹೆಗಲಮೇಲೇರಿಸಿಕೊಂಡಿರುತ್ತಾನೆ ಎಂದರೆ ಬ್ರಿಟನ್ನಿನಲ್ಲಿ ಅಂದು ಆತನ ಪ್ರಭಾವ ಎಷ್ಟಿತೆಂದು ನಾವು ಊಹಿಸಬಹುದು. ಆದರೆ ಮಾನವ ತಾನೊಂದು ಬಯಸಿದರೆ ಕಾಲ ಬೇರೊಂದು ದಿಕ್ಕಿನಲ್ಲಿ ಆತನನ್ನು ಎಳೆದೊಯ್ಯುತ್ತದೆ. ಅದು ಮೊದಲನೇ ಮಹಾಯುದ್ಧ ಶುರುವಾದ ಕಾಲ. ಪ್ರಸುತ್ತ ಇಸ್ತಾನ್ ಬುಲ್ ನನ್ನು ಆಕ್ರಮಿಸುವ ನಿರ್ಧಾರವನ್ನು ಕೈಗೊಂಡ ಚರ್ಚಿಲ್, ಹಲವರ ಅಸಮಾಧಾನದ ನಡುವೆಯೇ ರಷ್ಯಾ ಹಾಗು ಫ್ರಾನ್ಸ್ ಸೈನಿಕರ ಸಹಯೋಗದಿಂದ ಇಸ್ತಾನ್ ಬುಲ್ ನ ನಿಜಶಕ್ತಿಯನ್ನು ಅರಿಯದೆಯೇ ಅದರ ಮೇಲೆ ಮುಗಿಬೀಳುತ್ತಾನೆ. ಪರಿಣಾಮ ಕೆಲ ತಿಂಗಳ ಅಂತರದಲ್ಲಿಯೇ ಒಂದು ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಸಾವಿನ ಕೂಪದೊಳಗೆ ತಳ್ಳಿದ ಅಪವಾದವನ್ನು ಹೊತ್ತು ಸರ್ಕಾರದಲ್ಲಿದ್ದ ತನ್ನೆಲ್ಲ ಸ್ಥಾನಗಳಿಗೆಲ್ಲ ರಾಜಿನಾಮೆಯನ್ನು ನೀಡಬೇಕಾಗುತ್ತದೆ. ಇಂದು ತುಘಲಕ್ ನನ್ನು ಹೇಗೆ ಭಾರತದ ಇತಿಹಾಸ ಪರಿಹಾಸ್ಯ ಮಾಡುತ್ತದೆಯೂ ಹಾಗೆಯೆ ಅಂದು ಹಲವರು ಚರ್ಚಿಲ್ ನನ್ನು ಉಗಿಯತೊಡಗಿದರು. ಆದರೆ ಅಪಮಾನದ ಮಾತುಗಳಿಗೆ ನೊಂದು ಮುಖ ಮುಚ್ಚಿಕೊಂಡು ಮಲಗುವ ವ್ಯಕ್ತಿತ್ವ ಚರ್ಚಿಲ್ ನದ್ದಾಗಿರಲಿಲ್ಲ. ಅಲ್ಲಿಯವರೆಗೂ ಹೇಳಿ ಮಾಡಿಸುತ್ತಿದ್ದ ಆತ ಈಗ ಮಾಡಿ ತೋರಿಸುವ ಹಾದಿಯನ್ನು ಹಿಡಿಯುತ್ತಾನೆ. ಗುನ್ನು ಬಾಂಬುಗಳೊಟ್ಟಿಗೆ ನೇರವಾಗಿ ಯುದ್ಧರಂಗವನ್ನು ಪ್ರವೇಶಿಸುತ್ತಾನೆ. ಮೊದಲ ಮಹಾಯುದ್ಧದ ತೀವ್ರತೆ ಉತ್ತುಂಗದಲ್ಲಿದ್ದ ಆ ಕಾಲದಲ್ಲಿ ಲೆಫ್ಟಿನೆಂಟ್ ಕರ್ನಲ್ ನಾಗಿ ಸೇನಾತುಕಡಿಯೊಂದನ್ನು ಮುನ್ನೆಡೆಸುತ್ತಾನೆ. ವಿಶೇಷವೆಂದರೆ ಇತ್ತಕಡೆ ಚರ್ಚಿಲ್ ಯುದ್ಧಭೂಮಿಯಲ್ಲಿ ರಣತಂತ್ರ ರಚಿಸುತ್ತಿದ್ದರೆ ಅದೇ ಸಮಯಕ್ಕೆ ಅತ್ತ ಕಡೆ ಯುವ ಹಿಟ್ಲರ್ ಜರ್ಮನಿಯ ಪರವಾಗಿ ತನ್ನ ರಕ್ತ ಬೆವರನ್ನು ಸುರಿಸಿ ಸೆಣೆಸಾಡುತಿದ್ದ. ಇಬ್ಬರು ಒಬ್ಬರನೊಬ್ಬರು ಸಂಧಿಸದಿದ್ದರೂ, ಅಂದು ಯುದ್ಧಭೂಮಿಯಲ್ಲಿ ಏಕಕಾಲಕ್ಕೆ ವೈರಿಗಳಾಗಿ ಸೆಣೆಸಿದ ಸೈನಿಕರಿಬ್ಬರು ಇನ್ನು ಕೆಲವೇ ವರ್ಷಗಳಲ್ಲಿ ಆಯಾ ದೇಶಗಳ ಉನ್ನತ ಹುದ್ದೆಯನ್ನು ಅಲಂಕರಿಸಿ ಒಬ್ಬರ ಮೇಲೊಬ್ಬರು ಮುಗಿಬೀಳುತ್ತಾರೆ ಎಂದು ಯೋಚಿಸಿರಲು ಯಾರಿಂದಲೂ ಸಾಧ್ಯವಿರಲಿಲ್ಲ. ನೆನ್ನೆ ಮೊನ್ನೆಯವರೆಗೂ ಸರ್ಕಾರವನ್ನು ನೆಡೆಸುತ್ತಿದ್ದ ಚರ್ಚಿಲ್ ಇಂದು ಯುದ್ಧರಂಗಕ್ಕೆ ಬಂದು ನಿಂತ ಆತನ ನೆಡೆ ಸೈನಿಕರ ಆತ್ಮಸ್ತಯ್ರ್ಯವನ್ನು ನೂರುಪಟ್ಟು ಹೆಚ್ಚಿಸಿದಂತೂ ಸುಳ್ಳಲ್ಲ. ಅಲ್ಲದೆ ಅತ್ತ ಕಡೆ ಚರ್ಚಿಲ್ ನನ್ನು ಮನಸ್ಸಾಇಚ್ಛೆ ಬಯ್ಯುತಿದ್ದವರಿಗೂ ಆತನ ಈ ನಡೆಯಿಂದ ಕೊಂಚ ಮುಜುಗರವಾಗತೊಡಗಿತು. ಎಷ್ಟಿದ್ದರೂ ಆತನ ನಿರ್ಧಾರ ಅಂದು ಬಿಟನ್ನಿಗರ ಒಳಿತಿಗಾಗಿಯೇ ಆಗಿದ್ದಿತು ಎಂಬೊಂದು ಅಭಿಪ್ರಾಯ ಒಬ್ಬೊಬ್ಬರಲ್ಲೇ ಮೂಡತೊಡಗಿತು. ಪರಿಣಾಮ ಪಾರ್ಲಿಮೆಂಟಿನ ಬಾಗಿಲುಗಳು ಆತನಿಗಾಗಿ ತಾನಾಗಿಯೇ ತೆರೆಯತೊಡಗಿದವು. 1917 ರಲ್ಲಿ ಯುದ್ಧಸಾಮಗ್ರಿಗಳ ಸಚಿವನಾಗಿ ಪುನಃ ಆತ ಸರ್ಕಾರದ ಕುರ್ಚಿಯನ್ನು ಅಲಂಕರಿಸುತ್ತಾನೆ.

1920 ರ ಸುಮಾರಿಗಾಗಲೇ ಚರ್ಚಿಲ್ ನ ಮಾತುಗಳೆಂದರೆ ಬೆಂಕಿಯ ಕಿಡಿಗಳಂತೆ ಬ್ರಿಟನ್ನಿನಾದ್ಯಂತ ಸದ್ದುಮಾಡುತ್ತಿದ್ದವು. ನೇರ ನುಡಿಯ ಕಟು ಪದಗಳ ಆಗರವಾಗಿದ್ದ ಆತ ಗಾಂಧಿಯನ್ನಂತೂ ಮನ ಬಂದಂತೆ ಜರಿಯುತ್ತಿದ್ದ. ಅವರ ಚಳುವಳಿಯ ತೀವ್ರತೆಗೆ ಬೇಸತ್ತು 'ಗಾಂಧಿಯನ್ನು ಕೈ ಕಾಲು ಕಟ್ಟಿ ನಮ್ಮ ವೈಸ್ ರಾಯ್ ಯೊಬ್ಬರು ಕುಳಿತಿರುವ ಆನೆಯಿಂದ ತಿವಿದು- ತಿವಿದು ಸಾಯಿಸಬೇಕು' ಎಂದಿದ್ದ. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಉಪವಾಸನಿರತರಾಗಿ ಬ್ರಿಟಿಷ್ ರಾಜ್ ನ ದಬ್ಬಾಳಿಕೆಯ ವಿರುದ್ದ ಅಹಿಂಸಾ ಅಸ್ತ್ರವನ್ನು ಪ್ರಯೋಗಿಸಿ ದಿನಗಳನ್ನು ತಳ್ಳುತ್ತಿದ್ದಾಗ 'ಗಾಂಧಿ ಇನ್ನೂ ಸಾಯಲಿಲ್ಲವೇಕೆ? ಆತ ಇದೆ ಚಳುವಳಿಯಲ್ಲಿ ಹಸಿವಿನಿಂದ ಸತ್ತರೆ ನನಗೆ ಅಭ್ಯನ್ತರವೇನೂ ಇಲ್ಲ' ಎಂದಿದ್ದ ಸಿಡುಕು ಮೋರೆಯ ಚರ್ಚಿಲ್. 1942-43 ರಲ್ಲಿ, ಪ್ರಧಾನಿಯಾಗಿ ಎರಡನೇ ವಿಶ್ವಯುದ್ಧವನ್ನು ಎದುರಿಸುತ್ತಿದ್ದಾಗ, ಒಂದೊತ್ತು ತುತ್ತಿಗೂ ಹಾಹಾಕಾರವೆದ್ದಿದ್ದ ಬೆಂಗಾಳದ ಜನರಿಗೆ ಆಹಾರ ಪೂರೈಸುವ ಬದಲು ರಾಶಿ ರಾಶಿ ಆಹಾರವನ್ನು ಬ್ರಿಟನ್ನಿನ ಹಾಗು ಇತರೆ ಯುರೋಪಿಯನ್ ರಾಷ್ಟ್ರಗಳ ಗೋದಾಮುಗಳಲ್ಲಿ ಜಮಾವಣೆಗೊಳಿಸಿದ. ಅಂದು ಹಸಿವಿನ ಬೇಗೆಯಿಂದಲೇ ಸತ್ತ ಭಾರತೀಯರ ಸಂಖ್ಯೆ ಇಪ್ಪತ್ತು ಲಕ್ಷಕ್ಕೂ ಮಿಗಿಲು!!

ಎರಡನೇ ಮಹಾಯುದ್ಧ (1939-1945)
1939 ರಷ್ಟರಲ್ಲಾಗಲೇ ವಿಶ್ವದ ಭಾಗಶಃ ರಾಷ್ಟ್ರಗಳೆಲ್ಲ ಎರಡು ಬಣಗಳಾಗಿ ವಿಂಗಡಣೆಗೊಂಡವು. ಜರ್ಮನಿ, ಜಪಾನ್ ಹಾಗು ಇಟಲಿ ಒಂದೆಡೆಯಾದರೆ ಬ್ರಿಟನ್, ಫ್ರಾನ್ಸ್, ಅಮೇರಿಕ, ರಷ್ಯಾ(ಸೋವಿಯತ್ ಯೂನಿಯನ್), ಚೀನಾ, ಆಸ್ಟ್ರೇಲಿಯಾ ಹಾಗು ಕೆನಡಾ ದೇಶಗಳು ಮುಂದೆ ಕಾಲಾನುಕ್ರಮವಾಗಿ ಒಂದುಗೊಂಡು ಮೇಲಿನ ಮೂರು ರಾಷ್ಟ್ರಗಳ ವಿರುದ್ಧ ಮುಗಿಬಿದ್ದವು. 1939 ರಲ್ಲಿ ಜರ್ಮನಿ ಪೋಲೆಂಡ್ ನನ್ನು ಆಕ್ರಮಿಸುವ ಮೂಲಕ ಶುರುವಾದ ಯುದ್ಧ 1945 ರಲ್ಲಿ ಜಪಾನ್ ಶರಣಾಗತಿಯಾಗುವ ವರೆಗೂ ಮುಂದುವರೆಯಿತು. ಪೋಲೆಂಡ್ ನ ಮೇಲಿನ ಆಕ್ರಮಣದ ರುಚಿಯನ್ನು ಕಂಡ ಹಿಟ್ಲರ್ ತನ್ನೆಲ್ಲ ಶಕ್ತಿಯನ್ನು ಮೀರಿ ಸುತ್ತಮುತ್ತಲಿನ ದೇಶಗಳನ್ನು ಬಡಿದುರುಳಿಸಲು ಹವಣಿಸತೊಡದ. ತದಾನಂತರ ನೆದರ್ಲ್ಯಾಂಡ್ಸ್ಮ್ ಬೆಲ್ಜಿಯಂ, ಲೆಕ್ಸೆಮ್ ಬರ್ಗ್, ಫ್ರಾನ್ಸ್, ಡೆನ್ಮಾರ್ಕ್, ಯುಗೋಸ್ಲೋವಿಯಾ, ಗ್ರೀಸ್, ನಾರ್ವೆ ಹೀಗೆ ಹೆಚ್ಚುಕಡಿಮೆ ಅರ್ಧಕರ್ಧ ಯೂರಪ್ ಖಂಡವನ್ನೇ ಕಬಳಿಸತೊಡಗುತ್ತಾನೆ. ಮೊದಲನೇ ವಿಶ್ವಯುದ್ಧದಲ್ಲಿ ಜರ್ಮನಿಯ ಸೋಲು ಹಾಗು ಯೂರೋಪಿನ ಇತರೆಡೆ ಜರ್ಮನಿಗರ ಮೇಲೆ ನೆಡೆಯುತ್ತಿದ್ದ ದೌರ್ಜನ್ಯಗಳನ್ನೇ ಮಿಗಿಲಾಗಿಕೊಂಡು ಜರ್ಮನಿಗರನ್ನು ಹುರಿದುಂಬಿಸಿ, ಮತಾಂಧತೆಯ ಕ್ರೌರ್ಯದಲ್ಲಿ ಯಹೂದಿಗಳನ್ನು ಪ್ರಾಣಿಗಳಂತೆ ಚಿತ್ರಹಿಂಸೆ ಕೊಟ್ಟು ಸಾಯಿಸಿ, ವಿಶ್ವವನ್ನೇ ಗೆಲ್ಲಬೇಕೆಂಬ ಹುಚ್ಚುಕುದುರೆಯ ಮೇಲೇರಿ ಹೊರಟವನಿಗೆ ಕಂಡ ನಂತರದ ಹಾಗು ಕೊನೆಯ ರಾಷ್ಟ್ರ ಬ್ರಿಟನ್. ಬ್ರಿಟನ್ನಿನ ಮೇಲಿನ ಈ ಆಕ್ರಮಣ ಬಹುಷಃ ತನ್ನ ಜೀವನದ ಕೊನೆಯ ಆಕ್ರಮಣವಾದಿತೆಂದು ಹಿಟ್ಲರ್ ಊಹಿಸಿರಲೂ ಸಾಧ್ಯವಿಲ್ಲ. ಹಿಟ್ಲರ್ ಅಂದು ತಾನು ಕಬಳಿಸಿದ ದೇಶಗಳು ಶಸ್ತಾಸ್ರ ಹಾಗು ಸೇನಾಬಲದಲ್ಲಿ ಅಸಮರ್ಥವಾಗಿದ್ದವು ಎನ್ನುವುದಕ್ಕಿಂತ ಮಿಗಿಲಾಗಿ ಅವುಗಳಿಗೆ ಕಾಡಿದ ಅತಿ ದೊಡ್ಡ ಸಮಸ್ಯೆ ಎಂದರೆ ಒಬ್ಬ ಸಮರ್ಥ ನಾಯಕನದಾಗಿದ್ದಿತು. ಆದರೆ ಇದೆ ಮಾತು ಬ್ರಿಟನ್ನಿನ ವಿಷಯದಲ್ಲಿ ಮಾತ್ರ ಸುಳ್ಳಾಯಿತು. ಏಕೆಂದರೆ ಯುದ್ಧವೆಂಬ ಸಂದಿಘ್ನ ಸ್ಥಿತಿಯಲ್ಲೂ ಹಿಟ್ಲರ್ನನೆಂಬ ನರರಾಕ್ಷಸನ ಮುಂದೆ ಎದೆಯುಬ್ಬಿಸಿ ನಿಲ್ಲುವ ಧೈರ್ಯ ತೋರಿ ಅಂದು ದೇಶದ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಸಮ್ಮತಿಸಿದ ವಿನ್ಸೆಟ್ ಚರ್ಚಿಲ್ ಎಂಬ ಅಜಾತಶತ್ರು ಬ್ರಿಟನ್ನಿನ ಪ್ರಧಾನಿಯಾಗಿದ್ದರಿಂದ.

ಅಂದಿನ ಬ್ರಿಟನ್ ಪ್ರಧಾನಿ ನೆವಿಲ್ಲೆ ಚೇಂಬರ್ಲೇನ್ ಜರ್ಮನಿಯ ಮೇಲೆ ಮಾನ ಉಳಿಸಿಕೊಳ್ಳಲು ಎಂಬಂತೆ ಬಾಯಿಮಾತಿಗೆ ಯುದ್ಧ ಸಾರಿದರೂ ಹಿಟ್ಲರ್ನ ರಣಶಕ್ತಿಯ ಭಯದ ನಡುಕ ಒಳಗೊಳಗೇ ಹರಿದಾಡುತ್ತಿತ್ತು. ಅಲ್ಲದೆ ಅಂದಿನ ಸರ್ಕಾರದ ಅದೆಷ್ಟೋ ಮಂತ್ರಿಗಳಿಗೇ ಯುದ್ದದಲ್ಲಿ ಬ್ರಿಟನ್ನಿನ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಮನವರಿಕೆಯೂ ಆದಂತಿತ್ತು. ಆದದ್ದು ಆಗಲಿ ಹಿಟ್ಲರ್ ನೊಟ್ಟಿಗೆ ಶಾಂತಿ ಮಾತುಕತೆಯನ್ನು ಮಾಡಿ ಮುಂದೆ ಬಂದೆರಗುವ ಸಾವುನೋವುಗಳಿಗೆ ಫುಲ್ಸ್ಟಾಪ್ ಒಂದನ್ನು ಜಡಿಯೊಣ ಎಂದರೆ ಪ್ರಪಂಚವನ್ನೇ ಆಳಿದ 'ಗ್ರೇಟ್' ರಾಷ್ಟ್ರವೊಂದು ಯುದ್ಧ ಸಾರಿ, ಗುಂಡಿನ ಒಂದು ಸದ್ದನ್ನೂ ಕೇಳುವ ಮೊದಲೇ ಸೋಲನೊಪ್ಪಿಕೊಂಡಿತೆಂದರೆ ಅದರಿಂದಾಗುವ ಅವಮಾನ ಮಾತ್ರ ಮುಂದಿನ ಸಾವಿರ ವರ್ಷಗಳು ಬಂದರೂ ಅಳಿಸಿಹಾಕಲಾಗದು. ಹಾಗಾದರೆ ಗೆಲ್ಲಲು ತಾಕತ್ತಿಲ್ಲದಾದರೂ ಅಮಾಯಕ ಸೈನಿಕರ ಜೀವವನ್ನು ಬಲಿಕೊಡಬೇಕೆ? ಹಿಟ್ಲರ್ನ ಮುಂದೆ ಕೈಚಾಚಿ 'ಹೇಯ್ಲ್ ಹಿಟ್ಲರ್' ಎಂದು ನಾಝಿ ಸಲಾಂ ಒಂದನ್ನು ಹೊಡೆದರೆ ಸಬ್ ಕುಚ್ ಕತಮ್ ಆಗಿಬಿಡುವುದಿಲ್ಲವೇ? ಸೈನಿಕರ ಪ್ರಾಣ, ವಿಶ್ವವನ್ನು ಕೊಳ್ಳೆಹೊಡೆದ ಹಣ ಎಲ್ಲವು ಉಳಿಯುದಿಲ್ಲವೇ? ಈ ದ್ವಂದ್ವದ ಪರಿಸ್ಥಿತಿಯಲ್ಲಿ ಪ್ರಧಾನಿಗೆ ಕೂಡಲೇ ನೆನಪಾದ ಹೆಸರು ಬೊಜ್ಜು ಬೆಳೆಸಿಕೊಂಡು ಊದುಬಿದ್ದಿದ್ದ ಚರ್ಚಿಲ್. ಬ್ರಿಟನಿನ್ನ ಸೈನ್ಯವನ್ನು ನೆಡೆಸಲು ಒಬ್ಬ ಸಮರ್ಥ ನಾಯಕ ಯಾರಾಗಬೇಕೆಂದು ಚರ್ಚೆಯಾದಾಗ ಬಹುಪಾಲು ಜನರೂ ಚರ್ಚಿಲ್ ನೆಡೆಗೆ ಬೊಟ್ಟುಮಾಡಿದರು. ಆದರೆ ಹಿಂದೊಮ್ಮೆ ಅದೇ ಹುದ್ದೆಯಲ್ಲಿ ಲಕ್ಷಾಂತರ ಸೈನಿಕರ ಪ್ರಾಣವನ್ನು ಮನ ಬಂದಂತೆ ಬಲಿಕೊಟ್ಟು, ಅಶ್ರುವಾಯುವನ್ನು (ಟಿಯರ್ ಗ್ಯಾಸ್ / ರಾಸಾಯನಿಕ ಶಸ್ತ್ರಾಸ್ತ್ರ) ಬಳಸಲು ಅನುಮತಿ ನೀಡಿದ್ದನೆಂಬ ಅಪವಾದವೂ ಈತನ ಮೇಲಿದ್ದಿದ್ದರಿಂದ ಒಂದು ಬಣ ಈತನನ್ನು ಕ್ರೂರತೆಯ ಆಗರವೆಂದು ಜರಿಯತೊಡಗಿತು. ಪ್ರಧಾನಿಗೂ ಇಂತಹ ವ್ಯಕ್ತಿಯೇ ಬೇಕಾಗಿದ್ದಿತು. ಹಿಟ್ಲರ್ ನೆಂಬ ನರರಾಕ್ಷಸನ ಮುಂದೆ ತಲೆಯೆತ್ತಿ ನಿಲ್ಲಲು ಈ ವ್ಯಕ್ತಿತ್ವವಲ್ಲದೇ ಮತ್ಯಾವುದೂ ಸಮನಾಗುತ್ತಿರಲಿಲ್ಲ. ಪ್ರಧಾನಿ ಈ ಮಾತನ್ನು ಚೆನ್ನಾಗಿ ಬಲ್ಲವರಾಗಿದ್ದರಿಂದ ಚರ್ಚಿಲ್ನನ್ನು ಸುಮಾರು ಇಪ್ಪತೈದು ವರ್ಷಗಳ ನಂತರ ಪುನ್ಹ ಸನ್ಯಾಧಿಪತಿಯ ಸ್ಥಾನಕ್ಕೆ ಬರುವಂತೆ ಕೋರಿಕೊಳ್ಳುತ್ತಾರೆ. ಜೀವನವೆಲ್ಲ ಒಂದಿಲ್ಲೊಂದು ಬಗೆಯಲ್ಲಿ ಯುದ್ಧ ಹಾಗು ಸೈನ್ಯಗಳ ನಡುವೆ ಬೆಳೆದಿದ್ದ ಚರ್ಚಿಲ್ ತನ್ನ ಜೀವನದ ಅಷ್ಟೂ ಏಳುಬೀಳುಗಳು ಈ ಒಂದು ಸ್ಥಾನವನ್ನೇರಲೇ ಬಂದವೇನೋ ಅಂದುಕೊಳ್ಳುತ್ತಾನೆ. ಆದರೆ ಕೆಲದಿನಗಳ ಒಳಗೇ ಈ ಮಾತು ಸುಳ್ಳಾಗುತ್ತದೆ! ಆತನ ಜೀವನದ ಮಹಾಗುರಿ ಇನ್ನು ಒಂದು ಸ್ತರ ಮೇಲಿರುತ್ತದೆ! ಎರಡನೇ ಮಹಾಯುದ್ಧದ ಕಾವು ಬೆಂಕಿಯ ಉಂಡೆಗಳಾಗಿ ಬ್ರಿಟನನ್ನು ಅವರಿಸತೊಡಗಿದಾಗ ಜನರಲ್ಲಿ ಪ್ರಧಾನಿ ನೆವಿಲ್ಲೆ ಚೇಂಬರ್ಲೇನ್ ನ ಮೇಲೆ ವಿಶ್ವಾಸವೇ ಇಲ್ಲದಂತಾಗುತ್ತದೆ. ಹಿಟ್ಲರ್ನ ಗುಡುಗು ಮಿಂಚಿನಂತಹ ಮಾತುಗಳಿಗೆ ಚೇಂಬರ್ಲೇನ್ ನ ಬತ್ತಳಿಕೆಯಲ್ಲಿ ಮಾತುಗಳೇ ಕಾಣೆಯಾಗಿರುತ್ತವೆ. ಆದರೆ ಸೈನ್ಯಾದ್ಯಕ್ಷನಾಗಿದ್ದ ಚರ್ಚಿಲ್ ಮಾತ್ರ ಒಂದಿಲ್ಲೊಂದು ಬಗೆಯಲ್ಲಿ ಜರ್ಮನಿಯನ್ನು ಹೆಡೆಮುರಿಕಟ್ಟಲು ಆವಣಿಸುತ್ತಿರುವುದು ಮಾತ್ರ ಎಲ್ಲರಿಗೂ ತಿಳಿದಿರುತ್ತದೆ. ಸೈನ್ಯಾದ್ಯಕ್ಷರ ಮೇಲಿದ್ದ ಬ್ರಿಟನ್ನಿಗರ ನಂಬುಗೆ ಪ್ರಧಾನಿಯ ಮೇಲೇಯೇ ಇರುವುದಿಲ್ಲ! ಪರಿಣಾಮ ಚೇಂಬರ್ಲೇನ್ ತನ್ನ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕಾಯಿತು. ಹಾಗಾದರೆ ಈಗ ದೇಶವನ್ನು ಯುದ್ಧಕಾಲದಲ್ಲಿ ಸಮರ್ಥವಾಗಿ ನೆಡೆಸಬಲ್ಲ ನಾಯಕನ್ಯಾರು ಎಂದರೆ ಅಲ್ಲಿಯವರೆಗೂ ನಾ ಮುಂದು ತಾ ಮುಂದು ಎನ್ನುತ್ತಿದ್ದವರು ಹಿಟ್ಲರ್ ನೊಟ್ಟಿಗೆ ಬಡಿದಾಡುವ ಸಂದರ್ಭ ಬಂದೆರಗಿದಾಗ ತೆರೆಮರೆಯ ಹಿಂದೆ ಸರಿಯತೊಡಗಿದರು! ಇನ್ನು ಕೆಲವರು ಆತನೊಟ್ಟಿಗೆ ಶಾಂತಿಮಾತುಕತೆಯನ್ನು ನೆಡೆಸುವ ಪ್ರಧಾನಿಯಾಗಬಯಸಿದರು. ಆದರೆ ಬ್ರಿಟನ್ನಿನ ಜನತೆ ಯಾವುದೇ ಕಾರಣಕ್ಕೂ ಹಿಟ್ಲರ್ನ ಮುಂದೆ ತಲೆಬಾಗುವಂತೆ ಕಾಣಲಿಲ್ಲ. ದೇಹ ಸತ್ತರೂ ಆತ್ಮ ಸೋಲಬಾರದು ಎಂಬಂತೆ ಸಿಡಿದೆದ್ದ ಅವರಿಗೆ ತಮ್ಮನ್ನು ನೆಡೆಸಲು ಚರ್ಚಿಲ್ ನಂತಹ ಮೊಂಡ ನಾಯಕನೇ ಬೇಕೆಂಬ ಹಠವನ್ನು ಹುಟ್ಟುಹಾಕಿದರು. ಮೇ 10, 1940. ಬ್ರಿಟನ್ನಿನ 61 ನೇ ಪ್ರಧಾನಿಯಾಗಿ ವಿನ್ಸೆಟ್ ಚರ್ಚಿಲ್ ಅಧಿಕಾರ ವಹಿಸಕೊಳ್ಳುತ್ತಾನೆ. ಮುಂದೆ ನೆಡೆಯುವುದೆಲ್ಲ ಗ್ರೇಟ್ ಬ್ರಿಟನ್ನಿನ, ದಿ ಗ್ರೇಟ್ ಹಿಸ್ಟರಿ. ಇಪ್ಪತೈದು ವರ್ಷಗಳ ಕೆಳಗೆ ಮೊದಲ ವಿಶ್ವಯುದ್ಧದ ರಣರಂಗದಲ್ಲಿ ಬಾಗಿಯಾಗಿದ್ದ ಸೈನಿಕರಿಬ್ಬರು ಅಂದು ದೇಶದ ಅತ್ಯುನ್ನತ ಹುದ್ದೆಗಳ ಮೇಲೆ ಕೂತು ಸಮರ ಸಾರುತ್ತಿರುವುದನ್ನು ವಿಶ್ವವೇ ಕುತೂಹಲದಿಂದ ನೋಡತೊಡಗಿತ್ತು. ಅತ್ತ ಕಡೆ ಜಪಾನ್, ತಟಸ್ಥವಾಗಿದ್ದ ಅಮೆರಿಕವನ್ನು ಕೆಣಕಿ ತಪ್ಪು ಮಾಡಿದರೆ ಇತ್ತ ಜರ್ಮನಿ ಚರ್ಚಿಲ್ ನೇತೃತ್ವದ ಬ್ರಿಟನ್ ಹಾಗು ಸ್ಟಾಲಿನ್ ನೇತೃತ್ವದ ರಷ್ಯಾವನ್ನು ಎದುರು ಹಾಕಿಕೊಂಡು ಪೇಚಾಡತೊಡಗಿತು.

“Success is going from failure to failure without loss of enthusiasm.” (ಗೆಲುವು ಎನ್ನುವುದು ಉತ್ಸಾಹವನ್ನು ಕಳೆದುಕೊಳ್ಳದೆ ಸೋಲಿನಿಂದ ಸೋಲಿನೊಳಗೆ ಚಲಿಸುವ ಪಯಣ) ಎಂಬ ಮಾತಿನಿಂದ ಮುನ್ನೆಡದ ಚರ್ಚಿಲ್ ತನ್ನ ಇಳಿವಯಸ್ಸಿನ ಅಷ್ಟೆಲ್ಲ ಶಕ್ತಿಯನ್ನು ಒಂದುಗೂಡಿಸಿ ದೇಶವನ್ನು ಸಮರಕ್ಕೆ ಸಿದ್ಧಗೊಳಿಸಿದ. ಬೆಂಗಾಲದ ಮಹಾಕ್ಷಾಮದಲ್ಲಿ ಭಾರತಕ್ಕೆ ಬರಬೇಕಿದ್ದ ಆಹಾರಧಾನ್ಯಗಳು ಯುದ್ಧ ನಿರತ ಬ್ರಿಟನ್ನಿನ ಗೋದಾಮು ಸೇರತೊಡಗಿದ್ದು ಇದೇ ಕಾರಣಕ್ಕೆ. ಭಾರತೀಯರಾದ ನಾವು ಚರ್ಚಿಲ್ನನ್ನು ಅದೆಷ್ಟೇ ದ್ವೇಷಿಸಿದರೂ ತನ್ನ ದೇಶದ ಹಿತಾಸಕ್ತಿಯಿಂದ ಕೈಗೊಂಡ ಆತನ ಕ್ರಮ ಭಾಗಶಃ ಬ್ರಿಟನ್ನಿಗರಿಗೆ ಸರಿಯಾಗಿಯೇ ಇದೇ ಎಂದನಿಸಿತ್ತು. ಅಲ್ಲದೆ ಯುದ್ಧದಲ್ಲಿ ದೇಶದ ಗಡಿಯನ್ನು ಉಳಿಸಿಕೊಳ್ಳಲು ಆತ ಹಿಡಿಯದಿರುವ ಹಾದಿಯೇ ಇಲ್ಲ. ಈ ಹಾದಿಯಲ್ಲೂ ಆತ ಸಾವಿರಾರು ಸೈನಿಕರನ್ನು ಎದ್ವಾ ತದ್ವಾ ಕಳೆದುಕೊಂಡು ಮತ್ತೊಮ್ಮೆ ದೇಶಿಗರ ದ್ವೇಷವನ್ನು ಕಟ್ಟಿಕೊಳ್ಳುತ್ತಾನೆ. ಆದರೆ ತನ್ನ ನಿರ್ಧಾರಗಳ ಬಗ್ಗೆ ಎಂದಿಗೂ ಆತ ದ್ವಂದ್ವನಾಗಿರುವುದಿಲ್ಲ. ಇಟ್ಟ ಹೆಜ್ಜೆಯನ್ನು ಆಕಾಶವೇ ಕುಸಿದರೂ ಹಿಂದಿಡಲಿಲ್ಲ. ದ್ವಿತೀಯ ಮಹಾಯುದ್ಧದಲ್ಲಿ ಬ್ರಿಟನ್ನಿನ ಶಕ್ತಿ ಅಂತಹ ಹೇಳಿಕೊಳ್ಳುವ ಮಟ್ಟದಲ್ಲಿದ್ದಿಲ್ಲದಾದರೂ ಚರ್ಚಿಲ್ ಎಂಬ ಅಜಾತಶತ್ರು ಅದನ್ನು ಸಮರ್ಥವಾಗಿ ಎದುರಿಸಿದ. ಸರ್ಕಾರದ ತನ್ನ ಮಂತ್ರಿಗಳೇ ಹಿಟ್ಲರ್ನ ಮುಂದೆ ಶರಣಾಗಿ ಎಂದು ಅದೆಷ್ಟೇ ಒತ್ತಾಯಪಡಿಸಿದರೂ ದೃತಿಗೆಡದ ಆತನ ವ್ಯಕ್ತಿತ್ವ ಮುಂದೆ ವಿಶ್ವದ ಅದೆಷ್ಟೋ ನಾಯಕರಿಗೆ ಸ್ಫೂರ್ತಿಯಾಯಿತು. ದೇಶಾಭಿಮಾನ ಎಂಬುದು ದೇಹಾಭಿಮಾನದ ಮುಂದೆ ಕ್ಷೀಣಿಸಬಾರದು ಎಂಬುದನ್ನು ಚರ್ಚಿಲ್ ಬ್ರಿಟನ್ನಿಗರಿಗೆ ಮನವರಿಕೆ ಮಾಡಿಕೊಟ್ಟಿದ್ದ. ಈ ಮನವರಿಕೆಯಲ್ಲಿಯೇ ಬ್ರಿಟನ್ ಅಂದು ಭಾಗಶಃ ಯುದ್ಧವನ್ನು ಜಯಿಸಿದಂತಿದ್ದಿತು. ಇಲ್ಲವಾದರೆ ಅಕ್ಕಪಕ್ಕದ ಇತರೇ ದೇಶಗಳಂತೆ ಬ್ರಿಟನ್ ಕೂಡ ಹಿಟ್ಲರ್ನ ಕರಾಳ ಕತ್ತಲೆಯಲ್ಲಿ ಲೀನವಾಗಿ ಭೂನಕ್ಷೆಯಿಂದಲೇ ಅಳಿಸಿಹಾಕಲ್ಪಡುತ್ತಿತ್ತೇನೋ ಬಲ್ಲವರ್ಯಾರು?!

ಆಯ್ಕೆ ನಮ್ಮದು.. ಅನುಭವವೂ ನಮ್ಮದೆ!

ದಲ್ಲಾಳಿ. ಮೊದಲೆಲ್ಲ ಈ ಪದವೊಂದನ್ನು ಕೇಳಿದರೆ ಏನೋ ಒಂದು ಬಗೆಯ ಆತಂಕ, ಭಯ. ಪೋಕರಿ, ಪುಂಡ, ಉಂಡಾಡಿ ಗುಂಡ ಇಂತಹ ಸಮಾನಾರ್ಥಗಳನ್ನು ನೀಡುವ ಹಲವು ಪದಗಳು ತಲೆಯೊಳಗೆ ಒಮ್ಮಿಂದೊಮ್ಮೆಗೆ ಮೂಡುತಿದ್ದವು. ಏನೋ ಒಂದು ಬಗೆಯ ಕಾನೂನುಬಾಹಿರವಾದ ಕಳ್ಳ ಕೆಲಸವನ್ನು ಮಾಡುವ ವ್ಯಕ್ತಿಯೇನೋ ಎನ್ನುವ ಹಾಗೆ. ಏಕೇ ಹಾಗನಿಸುತ್ತಿತೋ, ಖಂಡಿತಾ ತಿಳಿಯದು. ಆದರೆ ಕಾಲ ಕಳೆದಂತೆ ಈ ದಲ್ಲಾಳಿ ಎಂಬ ಪದ ದಿನಜೀವನದ ಹಾಗು ಹೋಗುಗಳಲ್ಲಿ ಅದೆಷ್ಟರ ಮಟ್ಟಿಗೆ ಹಾಸು ಹೊಕ್ಕಿದೆ ಎಂದರೆ ಅಂದು ಈ ಪದವೊಂದನ್ನು ಕೇಳಿ ಮೂಡುತ್ತಿದ್ದ ಹಲವು ಅರ್ಥಗಳನ್ನು ನೆನೆದು ಇಂದು ನಗು ಬರತೊಡಗುತ್ತದೆ. ವಿಪರ್ಯಾಸವೇನೋ ಎಂಬಂತೆ ಪ್ರಸ್ತುತ ಅದೆಷ್ಟೋ ಗಣಿತ ಪುಸ್ತಕಗಳ ಸಮಸ್ಯೆಗಳಲ್ಲಿ ದಲ್ಲಾಳಿ ಎಂಬ ಪದದ ಉಲ್ಲೇಖ ಅತಿಸಹಜವಾಗಿದೆ ಅಲ್ಲದೆ ದಲ್ಲಾಳಿಕೆಗೂ ಪ್ರಸ್ತುತ ದಿನಗಳಲ್ಲಿ ಕೋರ್ಸ್ಗಳೂ ಸಾಕಷ್ಟು ಬಂದಿವೆ. ಪರಿಣಾಮ ಪ್ರತಿಯೊಂದು ವ್ಯವಹಾರದ ಅವಿಭಾಜ್ಯ ಅಂಗಗಳಲ್ಲಿ ಈತನೂ ಒಬ್ಬನೇನೋ ಎನ್ನುವಷ್ಟರ ಮಟ್ಟಿಗೆ ಇದು ಬೆಳೆದು ನಿಂತಿದೆ. ಇಂದು ದಲ್ಲಾಳಿ ಎಂದರೆ ಒಂತರ ಮುಸ್ಸಂಜೆ ಮಾತು ಚಿತ್ರದ ಸುಧೀಪ್ ನಂತಾಗಿಬಿಟ್ಟಿದ್ದಾನೆ. ಆಪತ್ಬಾಂಧವ ಎಂದರೂ ತಪ್ಪಾಗದು. ಸಂತೆ, ಸರ್ಕಾರೀ ಕಚೇರಿ, ಶಿಕ್ಷಣ ಸಂಸ್ಥೆ, ಷೇರು ಪೇಟೆ, ರಿಯಲ್ ಎಸ್ಟೇಟ್ ಅಲ್ಲದೆ ಇಂದು ದೇವಸ್ಥಾನಗಳಿಗೂ ಈ ದಲ್ಲಾಳಿ ಎಂಬ ಶಬ್ದ ಜೋತುಬಿದ್ದಿದೆ ಎಂದರೆ ಆಶ್ಚರ್ಯಪಡಬೇಕಾಗಿಲ್ಲ. ಇಂಗ್ಲಿಷಿನಲ್ಲಿ ಅಂದವಾಗಿ ಕಾಣಲೇನೋ ಎಂಬಂತೆ ಬ್ರೋಕರ್!

ನಿಜ ಹೇಳಬೇಕೆಂದರೆ ಪ್ರಸ್ತುತ ಆರ್ಥಿಕ ವ್ಯವಸ್ಥೆಯನ್ನೆ ಹಾಳುಗೆಡವಿರುವ ಹಲವು ಮಹಾಮಾರಿಗಳಲ್ಲಿ ಈ ಬ್ರೋಕರಿಕೆಯೂ ಒಂದು! ಅಲ್ಲದೆ ಮತ್ತೇನು? ಬೆಳೆಗಾರ ರೈತ. ಭಕ್ಷಿಸುವವ ಗ್ರಾಹಕ. ಇವೆರಡರ ಮಧ್ಯೆ ಡೊಂಬರಾಟ ಕುಣಿಯುವವನೇ ದಲ್ಲಾಳಿ. ಕೆಲಸ ಸರ್ಕಾರೀ ನೌಕರರದ್ದು. ಸೇವೆ ಸಲ್ಲಬೇಕಾಗಿರುವುದು ಜನಸಾಮಾನ್ಯರಿಗೆ. ಮೆಧ್ಯೆ ದಲ್ಲಾಳಿಯ ಕೊಂಡಿಯಾಕಯ್ಯ ಎಂದರೆ ಉತ್ತರ ಮಾತ್ರ ತೇಲುವ ಗಾಳಿಗೆ ಪ್ರಿಯವಾದೀತು. ಮನೆ ಹಾಗು ತೋಟ ಅವನದ್ದು, ಮಾರುವವನಾತ. ಹಣ ಹಾಗು ಶ್ರಮ ಈತನದ್ದು, ಕೊಳ್ಳುವವನೀತ. ಆದರೂ ತಮಾಷೆಯೆಂದರೆ ಇಲ್ಲಿ ಇಬ್ಬರೂ ಆಯ್ದುಕೊಳ್ಳುವುದು ಬ್ರೋಕರ್ಗಳನ್ನೇ. ಅದು ಸಹ ತಾವಾಗಿಯೇ! ಕೊಳ್ಳುವವ ಮಾರುವವನಲ್ಲಿ ಬಾಯಿಬಿಟ್ಟು ವ್ಯಾಪಾರ ಕುದುರಿಸಲು ಅದೇನೋ ಒಂದು ಬಗೆಯ ಹಿಂಜರಿತ, ಮುಜುಗರ. ಇಬ್ಬರೂ ನ್ಯಾಯಾಧಿಪತಿಗಳಿಗೆ ಚರ್ಚೆಯನ್ನು ಒಪ್ಪಿಸುವ ವಕೀಲರಂತೆ ದಲ್ಲಾಳಿಗಳನ್ನು ತೂಗುವ ತಕ್ಕಡಿಯೇನೋ ಎಂಬಂತೆ ಕಾಣಬಯಸುತ್ತಾರೆ. ಅಲ್ಲಿರುವ ಕಡ್ಡಿಯನ್ನು ಇಲ್ಲಿಗೆ ಎತ್ತಿಡುವಷ್ಟೂ ಕಾಯಕವನ್ನು ಮಾಡದೆ ಆತ ಬ್ರೋಕರಿಕೆಯ ಕೃಪಾಕಟಾಕ್ಷದಲ್ಲಿ ಕಮಿಷನ್ ಎಂಬ ಮಾನದಂಡದ ಮೂಲಕ ಭರಪೂರ ಹಣವನ್ನು ಗಳಿಸಿಕೊಳ್ಳುತ್ತಾನೆ. ಇದು ಆಸ್ತಿಪಾಸ್ತಿಯ ವಿಚಾರವಾದರೆ ಇನ್ನು ಸರ್ಕಾರೀ ಕಚೇರಿಗಳಲ್ಲಂತೂ ಬ್ರೋಕರಿಕೆಯ ಕರಾಳ ಛಾಯೆ ಹೇಳತೀರದು. ಒಂದು ಸೂಕ್ಷ್ಮಾತಿಸೂಕ್ಷ್ಮ ಕೆಲಸಕ್ಕೂ ಮೈ ನೋವು, ಕಾಲುನೋವು, ಸರ್ ಇಲ್ಲ, ಮೇಡಂ ಇಲ್ಲ, ಇದ್ದರೂ ಅವರಿಗೆ ಹುಷಾರಿಲ್ಲ, ವಿವರಗಳು ತಪ್ಪಾಗಿ ಬರೆಯಲಾಗಿದೆ ಎಂಬ ನೂರೆಂಟು ಕಾರಣಗಳ ಹಿಂದೆ ಇರುವ ಏಕೈಕ ಕಾರಣ ಅಮಾಯಕರ ಕೈಯಿಂದ ಒಂದಿಷ್ಟು ಹಣವನ್ನು ಪೀಕುವಿಕೆ. ಇವರುಗಳ ಈ ತಳ ಬುಡ ಇಲ್ಲದ ಸಾಬೂಬಿಕೆ ಸೋತ ಜನಸಾಮಾನ್ಯ ಕೊನೆಗೆ ಆಯ್ದುಕೊಳ್ಳುವುದು ಕೆಲಸವಿಲ್ಲದೇ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಸರ್ಕಾರಿ ಕಚೇರಿಗಳ ಹೊರಗೆ ಅಲೆಯುವ ಆಪತ್ಬಾಂದವರನ್ನ, ಅರ್ಥಾತ್ ದಲ್ಲಾಳಿಗಳನ್ನ. ಅಲ್ಲಿನ ದಲ್ಲಾಳಿಗಳೋ ಇಡೀ ಸರ್ಕಾರೀ ಕಚೇರಿಯೇ ತಮ್ಮದೆಂಬಂತೆ ತನಗೆ, ಸಬೂಬು ನೀಡಿದವರಿಗೆ, ಹುಷಾರಿಲ್ಲದ್ದ ಸರ್ ಹಾಗು ಮೇಡಂ ಗಳಿಗೆ ಎಂಬಂತೆ ಎಲ್ಲರಿಗೂ ಸಾಕೆನ್ನುವಷ್ಟು ಕಮಿಷನ್ ಅನ್ನು ಇರಿಸಿಕೊಂಡು ನೂರು ರೂಪಾಯಿಗಳಲ್ಲಿ ಆಗುವ ಕೆಲಸವನ್ನು ಸಾವಿರ ರೂಪಾಯಿಗಳಿಗೆ ಸರಿದೂಗಿಸಿ ಹಣವನ್ನು ಜಡಿಯುತ್ತಾರೆ. ಹೀಗೆ ಎದ್ವಾ-ತದ್ವಾ ಹಣವನ್ನು ಪೀಕಿದರೆ ನೋಡಿ ಎರಡೇ ದಿನಗಳಲ್ಲಿ ಕೆಲಸ ಕಂಪ್ಲೀಟ್! ಅಂತಹ ಅಚ್ಚುಕಟ್ಟಾದ ವ್ಯವಸ್ಥೆ ಇಂದು ನಮ್ಮ ಕಣ್ಣ ಮುಂದೆಯೇ, ನಮ್ಮದೇ ಸರ್ಕಾರೀ ಕಚೇರಿಗಳಲ್ಲಿ ರಾಜಾರೋಷವಾಗಿ ನೆಡೆಯುತ್ತಿವೆ. ಅಲ್ಲದೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಮಹತ್ವದ ವಿಷಯವೆಂದರೆ ಹಣ ಇರುವವರೇನೋ ಇಂತಹ ಬ್ರೋಕರ್ ಮಹಾಷಯರ ಸಹಾಯವನ್ನು ಪಡೆದು, ಅವರು ಕೇಳಿದಷ್ಟು ಹಣವನ್ನು ಸುರಿದು ಕೆಲಸವನ್ನು ಮಾಡಿಕೊಳ್ಳುತ್ತಾರೆ. ಆದರೆ ಇಂದು ಬೆವರು ಸುರಿಸಿದರೇನೇ ನಾಳೆಯ ಅನ್ನವನ್ನು ಕಾಣುವ ಸಾಮನ್ಯರ ಕತೆಯೇನು? ಹಣವನ್ನು ಕಂಡರೆಯೇ ಉಸಿರಾಡುವ ಖಯಾಲಿಯ ಬೊಜ್ಜುಗಟ್ಟಿದ ನೌಕರಶಾಯಿ ವ್ಯವಸ್ಥೆಯನ್ನು ಹುಟ್ಟುಹಾಕಿರುವವರು ನಾವೆಯೇ. ಇಂದು ಅದೇ ವ್ಯವಸ್ಥೆ ನಮ್ಮ ಬುಡಕ್ಕೇ ಬೆಂಕಿಯಿಡುವಂತಾಗಿರುವಾಗ ಮಾತ್ರ ಬೊಬ್ಬೆಯೊಡೆಯುತ್ತಿದ್ದೇವೆ.

ಮಾರುಕಟ್ಟೆಯ ವಿಚಾರಕ್ಕೆ ಬಂದಾಗ ಕಾಫಿ ಬೆಳೆಯ ಇತಿಹಾಸವನ್ನು ಒಮ್ಮೆ ಗಮನಿಸೋಣ. ಸುಮಾರು 90ರ ದಶಕದವರೆಗೂ ಕಾಫಿ ಬೆಳೆಗಾರ ಅಂದು ತಾನು ಬೆವರು ಸುರಿಸಿ ಬೆಳೆದ ಬೆಳೆಯನ್ನು ಮುಕ್ತವಾಗಿ ಮಾರುವಂತೆಯೇ ಇರಲಿಲ್ಲ. ತಾವು ಬೆಳೆದದ್ದೆಲ್ಲವನ್ನೂ ಒಂತಿಬ್ಬರು ಮಧ್ಯವರ್ತಿ ಮಹಾಶಯರುಗಳಿಗೆ (ಕಾಫಿ ಬೋರ್ಡ್) ನೀಡಿ ಅವರು ಕೊಟ್ಟಷ್ಟನ್ನು ಪಡೆದುಕೊಳ್ಳಬೇಕಾಗಿದ್ದಿತು. ಲೇಖಕರಾದರೂ ಸ್ವತಃ ಕಾಫಿ ಬೆಳೆಗಾರರಾಗಿದ್ದ ಮೂಡಿಗೆರೆಯ ಪೂರ್ಣ ಚಂದ್ರ ತೇಜಸ್ವಿಯವರು ಅಂದು ಈ ಮಧ್ಯವರ್ತಿ ಹಾವಳಿಯ ಮೇಲೆ ಬೇಸತ್ತು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಟೆಗೆ (50 ಕೆಜಿ ಯ ಬ್ಯಾಗುಗಳು) ಐದರಿಂದ ಆರುಸಾವಿರ ರೂಪಾಯಿಗಳಿದ್ದರೂ ಬೆಳೆಗಾರರಿಗೆ ಕಾಫಿ ಬೋರ್ಡ್ ಕೊಡುತ್ತಿರುವುದು ಕೇವಲ ಎಂಟನೂರರಿಂದ ಒಂಬೈನೂರು ರೂಪಾಯಿಗಳು ಮಾತ್ರ. ಕೂಡಲೇ ಮುಕ್ತ ಮಾರುಕಟ್ಟೆಗೆ ಅವಕಾಶ ಸಿಗದಿದ್ದರೆ ತಾವು ಸಂತೆಯಲ್ಲಿ ನಿಂತು ಕಾಫಿಯನ್ನು ಮಾರುವುದಾಗಿ ಗುಡುಗಿದ್ದರು. ಕೂಡಲೇ ಕಕ್ಕಾಬಿಕ್ಕಿಯಾದ ಕಾಫಿ ಬೋರ್ಡಿನ ಅಧಿಕಾರಿಗಳು ಮರುಕ್ಷಣವೇ ಸಂಧಾನವನ್ನೂ ಮಾಡಿದರೂ ಅಂದು ಹಚ್ಚಿಕೊಂಡ ಕಿಚ್ಚು ಕೂಡಲೇ ಶಮನಗೊಳ್ಳಲ್ಲಿಲ್ಲ. ಕ್ರಮೇಣ ದೇಶ ನೇರ ವಿದೇಶಿ ಹೂಡಿಕೆಯ ಬಕಪಕ್ಷಿಯಾಗತೊಡಗಿದಾಗ ಕಾಫಿ ಮಾರುಕಟ್ಟೆಯೂ ಮುಕ್ತ ವ್ಯಾಪಾರವಾಗಿ ಪ್ರತಿ ಬ್ಯಾಗಿಗೆ ಸಾವಿರ ರೂಪಾಯಿಯಿದ್ದ ಬೆಲೆ ಕೂಡಲೇ ಎಳರಿಂದ ಎಂಟು ಸಾವಿರಗಳಿಗೂ ಹೋಗಿರುವುದುಂಟು. ಒಂದಲ್ಲ ಎರಡಲ್ಲ ಬರೋಬ್ಬರಿ ಏಳರಿಂದ ಎಂಟು ಪಟ್ಟು ಹಣವನ್ನು ಮಧ್ಯವರ್ತಿ ಜಾಲ ಅಂದು ಆವರಿಸಿಬಿಟ್ಟಿದಿತು. ಕಾಫಿ ಬೆಳೆಗಾರರರು ನಿಟ್ಟುಸಿರು ಬಿಟ್ಟರು. ತಮ್ಮ ಬೆಳೆಯ ನಿಜಮೌಲ್ಯವನ್ನು ಅರಿಯತೊಡಗಿದರು.

ಇದೇ ಬಗೆಯ ಮಹಾ ಬದಲಾವಣೆ ಇಂದು ಇತರೇ ವಲಯಗಳಲ್ಲೂ ಬೇಕಾಗಿದೆ. ಹೆಚ್ಚಾಗಿ ನಗರಸನಭೆ, ಪುರಸಭೆಯಂತಹ ಸರ್ಕಾರೀ ಕಚೇರಿಗಳಲ್ಲಿ. ಕಚೇರಿಯ ಗುಮಾಸ್ತನನ್ನೂ ಅಣ್ಣ ಅಪ್ಪ ಎಂದು ಸಂಭೋದಿಸುತ್ತಾ ಮಾತಿಗಿಳಿಯುವ ಅಮಾಯಕರ ಶೋಷಣೆಗೆ ಇಲ್ಲಿ ಕೊನೆಯೇ ಇಲ್ಲದಂತಾಗಿದೆ. ಅವರ ಪರವಾಗಿ ವಾದಿಸಬೇಕಾದವರು ಇಂದು ಕ್ಯಾರೇ ಎನ್ನದೆ ಅಡ್ಡಾಡಿಕೊಂಡಿದ್ದಾರೆ.ಬಡಜನರ ಬೆವರಿನ ಸರ್ಕಾರದ ಹಣವನ್ನು ಸಂಬಳ ರೂಪದಲ್ಲಿ ಪಡೆಯುವುದಲ್ಲದೆ ಕೆಲಸ ಪೂರ್ಣಗೊಳ್ಳಲು ಅದೇ ಬೆವರಿನ ಮತ್ತಷ್ಟು ಹಣವನ್ನು ಗಿಂಬಳವಾಗಿ ನೀಡಲೇಬೇಕು. ಅದೂ ಕೂಡ ದಲ್ಲಾಳಿಗಳ ಹದ್ದುಬಸ್ತಿನಲ್ಲಿಯೇ. ಸೋಜಿಗವೋ ಏನೋ ಹಲವು ಬಾರಿ ಇಷ್ಟೆಲ್ಲಾ 'ಅಂಶ'ಗಳನ್ನೂ ಪಾಲಿಸಿಯೂ ಜನಸಾಮನ್ಯ ಕೊನೆಗೆ ವ್ಯಥೆಪಡುವುದು ಮಾತ್ರ ತಪ್ಪುವುದಿಲ್ಲ. ಇದ್ಯಾವ ಬಗೆಯ ಡೆಮಾಕ್ರಸಿ ಸ್ವಾಮಿ? ಬಡಪಾಯಿಯ ಬವಣೆಗೆ ಅಂತ್ಯವೆಂದು? ಪ್ರತಿ ಚುನಾವಣೆಯಲ್ಲೂ ಮಾಡುವ ಅದೇ ತಪ್ಪನ್ನು ಎಲ್ಲಿಯವರೆಗೂ ಜನಸಾಮನ್ಯ ಪುನರಾವರ್ತಿಸುತ್ತಾನೆಯೋ ಅಲ್ಲಿಯವರೆಗೂ ಫಲಾನುಭವಿಯೂ ಅವನೇ. ಆಯ್ಕೆ ನಮ್ಮದು. ಅನುಭವವೂ ನಮ್ಮದೆ.