Friday, May 25, 2018

ಮರುಭೂಮಿಯ ಸೆರೆವಾಸ

'ನಿನ್ನ್ ಆ ರಾಶಿ ಕೂದ್ಲು ನೋಡಕ್ ಆಗಲ್ಲ ಮಹರಾಯ, ಸೆಲೂನ್ ಶಾಪಿಗೆ ತಿಂಗ್ಳಿಗೆ ಒಮ್ಮೆ ಆದ್ರೂ ಹೋಗೋದಲ್ವ' ಎಂಬ ಮಾತನ್ನು ಕಳೆದ ಕೆಲ ತಿಂಗಳಿಂದ ಕೇಳಿ ಕೇಳಿ ಕೊನೆಗೂ ಏಕೋ ಆ ದಡೂತಿ ಬಂಗಾಳಿಯ ಶಾಪಿಗೆ ಹೋಗುವ ಮನಸ್ಸಾಯಿತು. ರೂಮಿನಲ್ಲಿದ್ದ ಹೂವಿನ ಗಿಡಕ್ಕಿಂತಲೂ ಕಾಳಜಿ ವಹಿಸಿ ಬೆಳೆಸಿದ್ದ ಕೇಶರಾಶಿಯನ್ನು ಹೀಗೆ 'ನೋಡಕ್ ಆಗಲ್ಲ ಮಹರಾಯ' ಎಂಬ ಗವಾರರ ಮಾತುಗಳಿಗೆ ಕೊಂಚ ಸಿಟ್ಟು ಬಂದರೂ ಆ ಬಂಗಾಳಿಯ ಗಜಗಾತ್ರದ ಹಸ್ತಗಳಿಂದ ತಲೆಗೂ ಹಾಗು ಬೆನ್ನಿಗೂ ಪಟಪಟನೆ ಬಡಿಸಿಕೊಳ್ಳುವ ಸುಖಕ್ಕಾದರೂ ಇಂದು ಸೆಲೂನಿನೆಡೆ ಹೋಗಬೇಕೆನಿಸಿತು. ಬಂಗಾಳಿ, ಅಂದರೆ ನಮ್ಮ ಪಚ್ಚಿಮ ಬಂಗಾಳದವನಲ್ಲ. ಅದಕ್ಕೂ ಕೊಂಚ ಎಡಕ್ಕಿರುವ ಬಾಂಗ್ಲಾ ದೇಶದವ. ಮೀಸೆ ಚಿಗುರುವ ವಯಸ್ಸಿನಲ್ಲಿ ತನ್ನೂರಿನ ಯಾರೊ ಒಬ್ಬನನ್ನು ಕಾಡಿ ಬೇಡಿ ಇಲ್ಲಿಗೆ ಬಂದು ಪರಿಚಯಸ್ತರೊಬ್ಬರ ಬಳಿ ಕೆಲಸ ಕಲಿತು ಇಂದು ತನ್ನದೇ ಆದೊಂದು ಸೆಲೂನ್ ಶಾಪ್ ತೆರೆದು ಎರಡು ಹುಡುಗರನ್ನು ಕೆಲಸಕ್ಕೂ ಇಟ್ಟುಕೊಂಡಿದ್ದಾನೆ. ಕಾರ್ಪೊರೇಟ್ ಪದದಲ್ಲಿ ಏಳುವುದಾದರೆ ಏಕ್ದಂ 'ವರ್ಟಿಕಲ್ ಗ್ರೂಥ್ '! ಕೆಲವರುಷಗಳ ಪರಿಚಯ. ಪ್ರತಿಬಾರಿಯೂ ರೂಮಿನಿಂದ ಹೊರಗಿಳಿದರೆ 'ಸಲಾಂ ಸಾಬ್' ಎನುತ್ತಾ ಆತ್ಮೀಯವಾದೊಂದು ನಗುವನ್ನು ಚೆಲ್ಲಿದರೂ ಆತನ ದೃಷ್ಟಿ ಮಾತ್ರ ಗ್ರಾಹಕನ ಕೇಶರಾಶಿಯ ಉದ್ದಳತೆಯ ಮೇಲೆಯೇ ಇದ್ದಿರುತ್ತದೆ. ಬೇಕಂತೆಲೆ ಏನೋ ಎಂಬಂತೆ 'ಸಾಬ್, ಛೋಟೆ ಬಾಲ್ ಆಪ್ಕೋ ಸಹಿ ನಹಿ ದಿಕ್ತ' ಎನ್ನುತ್ತಾ ಪ್ರತಿಬಾರಿಯೂ ಎರಡಿಂಚಿನ ಕೂದಲಿನ ಉದ್ದವನ್ನು ಕನಿಷ್ಠ ಹತ್ತು ಪರ್-ಸೆಂಟ್ಟೂ ತಗ್ಗಿಸದೆ ತನ್ನ ಮುಂದಿನ ತಿಂಗಳ ಬಿಸಿನೆಸ್ ಗೂ ಅಂದೇ ಇನ್ವೆಸ್ಟ್ಮೆಂಟ್ ಮಾಡಿಕೊಳ್ಳುತ್ತಿದ್ದ.

ಹಳೆಯ ಹಿಂದಿ ಹಾಡುಗಳೊಟ್ಟಿಗೆ ವೀಕೆಂಡಲೊಂದು ಬಿಯರು, ಮುಂಜಾವಿನ ಅಥವಾ ಇಳಿಸಂಜೆಯಲ್ಲೊಂದು ವಾಕು, ಅಲ್ಲೆಲ್ಲೋ ದೂರದ ಮರದ ಕೆಳಗೆ ಅಂಗಾತ ಮಲಗಿ ಒಂದೆರೆಡು ಪುಸ್ತಕಗಳ ಓದು, ಪಾಕಕ್ರಾಂತಿಯ ಮೋಜು... ಹೀಗೆ ವಾರಕ್ಕೊಂದು ಸಿಗುವ ರಜೆಯ ಟೈಮ್ ಟೇಬಲ್ಲಿಗೆ ಇತ್ತೀಚಿಗೆ ಈ ಭೀಮಗಾತ್ರ ಬೆಂಗಾಲಿಯ ಮಾಸ್ಸಾಜು ಕೂಡ ಸೇರಿಕೊಂಡಿದೆ. ಕನಿಷ್ಠ ಎರಡು ತಿಂಗಳಿಗೊಮ್ಮೆಯಾದರು ಅತ್ತ ಕಡೆ ಹೋಗೆ ಬರಬೇಕು. ಇಲ್ಲವಾದಲ್ಲಿ ಕೂತೇ ಕೈಲಾಸ ಸೇರುವಂತಹ ಪ್ರಸ್ತುತ ಕೆಲಸದಲ್ಲಿ ಜಡಗಟ್ಟಿದ ಬೆನ್ನುಮೂಳೆಗಳನ್ನು ಬಾಗಿ ಬೆಂಡಾಗಿಸುವವರ್ಯಾರು? ತಲೆಯ ಕೂದಲನ್ನು ಹಿಡಿದೆಳೆದು ಅದರ ಭಾರವನ್ನು ಇಳಿಸುವವರ್ಯಾರು? ಈ ಮಸ್ಸಾಜು ಕೆಜಿಗಟ್ಟಲೆ ತೂಕದ ಕೇಶರಾಶಿಯ ಗಾತ್ರವನ್ನು ಕಡಿಮೆಗೊಳಿಸುವುದಷ್ಟೇ ಅಲ್ಲದೆ ಅದರ ತುಸು ಕೆಳಗೆ ತುಂಬಿರುವ ಅಗಣಿತ ಸಂಖ್ಯೆಯ ನೋವು, ಹತಾಶೆ ಹಾಗು ಏಕಾಂತವನ್ನು ಕರಗಿಸಿಕೊಳ್ಳುವ ಪ್ರಕ್ರಿಯೆಯೇ ಆಗಿತ್ತೆಂದು ಹೇಳಬಹುದು.

ಬೆಳಗಿನ ಹತ್ತುಘಂಟೆಗೇ ಭಿಕೋ ಎನ್ನುತ್ತಿದ್ದ ಸೆಲೂನಿನ ಒಳಹೊಕ್ಕು ನೋಡಿದಾಗ ಅಲ್ಲಿ ಕೆಲಸಕ್ಕಿದ್ದ ಹುಡುಗರಿಬ್ಬರನ್ನು ಬಿಟ್ಟರೆ ಬಂಗಾಳಿ ಮಾತ್ರ ಕಾಣಲೇ ಇಲ್ಲ. 'ಎಲ್ಲಿ ನಿಮ್ಮ ಒಡೆಯ' ಎಂದು ಕೇಳಿದಾಗ ಆತ ಊರಿಗೆ ಹೋಗಿದ್ದಾನೆಂದು ಬರುವುದು ಇನ್ನೆರೆಡು ದಿನಗಳಾಗುತ್ತವೆ ಎಂಬ ಉತ್ತರ ದೊರೆತಿತು. ಬಂಗಾಳಿಯ ವಿನಃ ಈ ಎರೆಡು ಚಿಳ್ಳೆ ಪಿಳ್ಳೆ ಗಳಿಂದ ಆಗದ ಕೆಲಸವಲ್ಲ. ಆತ ಬರುವವರೆಗೂ ಕಾಯಬಹುದಿತ್ತು. ಆದರೆ ಮ್ಯಾಸ್ಸಜಿನ ತುಡಿತ ಅಷ್ಟೊಂದು ಶಾಂತವಾಗಿಬೇಕಲ್ಲ. 'ಅದು ಎಲ್ಲಿಯಾದರೂ ಸರಿಯೇ' ಎಂಬ ಮಕ್ಕಳ ಹಠಹಿಡಿಯತೊಡಗಿತು. ಮೊದಲಬಾರಿಗೆ ಅಕ್ಕಪಕ್ಕದ ಇತರೆ ಸೆಲೂನ್ ಶಾಪಿನ ಒಳಗೆ ಇಣುಕಿದೆ. ತುಸುದೂರದಲ್ಲಿದ್ದ ಇನ್ನೊಂದು ಶಾಪಿನ ಒಳಗೆ ಹೊಕ್ಕು ನೋಡಿದರೆ ಬಿಳಿಯ ಅಂಗಿಯನ್ನು ಧರಿಸಿ ತೆಳ್ಳಗೆ ಬೆಳ್ಳಗೆ ಇದ್ದೊಬ್ಬ ವ್ಯಕ್ತಿಯೊಬ್ಬ ಗಾಢ ಮೌನದ ಮುಖವಾಡವನ್ನೊತ್ತು ಇತ್ತಲೇ ನೋಡುತ್ತಿದ್ದ. ಸುಸ್ತು ಹತಾಶೆಗಳನ್ನೊಳಗೊಂಡ ಆ ನೋಟ ಒಂದು ಬಗೆಯ ಕಿಚ್ಚಿನ ನೋಟದಂತೆಯೂ ಕಾಣುತಿದ್ದಿತು. ‘ತತ್.. ಈ ನನ್ನ್ ಮಗ ನೋಡೋ ನೋಟಾನೆ ಹೀಗಿರ್ಬೇಕಾದ್ರೆ ಇನ್ ಮಸಾಜ್ ಮಾಡಿ ಅಂತಾ ಕೇಳೋಕ್ಕಾಗುತ್ತ?’ ಆದರೆ ಕೂದಲು ಬೇರೆ ಜಡೆ ಹಾಕೋವಷ್ಟು ಬೆಳೆದಿದೆ. ಶಾಪಿನ ಒಳಗೆ ಬಂದು ಹಾಗೆಯೆ ಹೊರಗೆ ಹೋಗಲು ಆಗಲಿಲ್ಲ. Infact ಧೈರ್ಯ ಸಾಲಲಿಲ್ಲ! ಬೇಕೋ ಬೇಡವೋ ಎನುತ ನನ್ನ ಪಾಡಿಗೆ ನಾನು ಹಾಯಾಗಿ ಚಾಚಿಕೊಂಡಿದ್ದ ಕುರ್ಚಿಯ ಮೆಲೋಗಿ ಕುಳಿತೆ. ಕೂಡಲೇ ತನ್ನ ಹಿಂಬದಿಗೆ ಸಣ್ಣದೊಂದು ಕುರ್ಚಿಯ ಮೇಲೆ ಕೂತಿದ್ದ ಆತ ಎದ್ದು ಬಿಳಿಯ ಬಟ್ಟೆಯೊಂದನ್ನು ಎದೆ ಹಾಗು ಹೊಟ್ಟೆಯ ಸುತ್ತಲೂ ಹೊದಿಸಿ ಕುತ್ತಿಗೆಗೊಂದು ಬಿಳಿಯ ಪೇಪರಿನ ಬಟ್ಟೆಯೊಂದನ್ನು ಕಟ್ಟಿದ. ಕೈಲಿದ್ದ ಮೊಬೈಲು ಹಾಗು ಕನ್ನಡಕವನ್ನು ಮುಂದಿದ್ದ ಮೇಜಿನ ಮೇಲೆ ಇಡುವಂತೆ ಕಣ್ಸನ್ನೆ ಮಾಡಿ, ಸರ್ವದಿಕ್ಕುಗಳಿಗೂ ಏಕರೂಪವಾಗಿ ಬೆಳೆದಿದ್ದ ಕೂದಲಿನ ಮೇಲೊಮ್ಮೆ ಕೈಯಾಡಿಸಿ 'ಏನಯ್ಯ ಇದು' ಎಂಬಂತೆ ತನ್ನ ಅಸ್ತವನ್ನು ಅರಳಿಸಿದ. ಬಾಯ್ಬಿಟ್ಟೂ ಕೇಳಲಾಗದ ಆ ಸಿಡುಕು ಮುಸುಡಿಯನ್ನು ಕಂಡು ಮಯ್ಯಲ್ಲ ಕೆಂಡಸುರಿದಂತಾಗಿ ಸಿಟ್ಟನ್ನು ಅದುಮಿಟ್ಟುಕೊಂಡ ನಾನು 'ನೋಡೇಬಿಡುವ' ಎನುತ ಸುಮ್ಮನೆ ಕುಳಿತೆ. ಮುಂದಿದ್ದ ಬೃಹತ್ ಕನ್ನಡಿಯ ಮೂಲಕ ನನ್ನನ್ನೇ ಕೆಲಕಾಲ ಗುರಾಹಿಸಿದ ಆ ಮೊರೆ ಮುಂದಿದ್ದ ನೀರಿನ ಬಾಟಲಿಯನ್ನು ತೆಗೆದು ಇಂಚಿಚ್ಛೇ ನೀರನ್ನು ಕೂದಲ ಮೇಲೆ ಚಿಮುಕಿಸತೊಡಗಿತು. ನರನಾಡಿಯಲ್ಲಿದ್ದ ರಕ್ತವನ್ನೆಲ್ಲ ಬಸಿದುಬಿಟ್ಟ ದೇಹಕ್ಕೆ ಕೆಲಸ ಕೊಟ್ಟಂತೆ ಆ ಸ್ಪ್ರೇ ಬಾಟಲಿನಿಂದ ಚಿಮುಕುತಿದ್ದ ನೀರು ಪ್ರತಿ ಬಾರಿಗೆ ಒಂದೋ ಅಥವಾ ಎರಡೂ ಕೂದಲೆಳೆಗಳನ್ನು ಮಾತ್ರವಷ್ಟೇ ನೆನೆಸುತಿದ್ದಿತು. ಕೋಪ ತಡೆಯಲಾಗಲಿಲ್ಲ. 'ಭಾಯ್, ಹೇರ್ ಕಟಿಂಗ್ ಮಾಡಿ, ಹೂವಿನ ಗಿಡ ಬೆಳೆಸ್ಬೇಡಿ ತಲೆ ಮೇಲೆ' ಎಂಬಂತೆ ಜೋರಾಗೆ ಹಿಂದಿಯಲ್ಲೇ ಅರಚಿದೆ. ಅಲ್ಲಿಯವರೆಗೂ ತನಗೂ ಆ ಕಾಯಕ್ಕಕ್ಕೂ ಸಂಭಂಧವಿಲ್ಲವೇನೋ ಎಂಬಂತಿದ್ದ ಆ ವ್ಯಕ್ತಿ ಕೂಡಲೇ ಗಂಟಲನ್ನು ಸರಿಪಡಿಸಿಕೊಳ್ಳುತ್ತ 'ಫಾಸ್ಟಿಂಗ್ ಸಾಬ್' ಎನ್ನುತ್ತಾ ಸುಮ್ಮನಾದ. ಮುಸ್ಲಿಮರ ಪವಿತ್ರ ಮಾಸವದು ಎಂಬುದ ಮರೆತೇಬಿಟ್ಟಿದ್ದ ನಾನು ಕೆಲಕಾಲ ಸುಮ್ಮನಾದೆ. ದಿನಪೂರ್ತಿ ಒಂದುಹನಿ ನೀರೂ ಇಲ್ಲದೆ ಹೀಗೆ ಬೆಳಗಿನಿಂದ ಸಂಜೆಯ ತನಕ ಉಪವಾಸವಿರುವುದನ್ನು ನೆನೆದೇ ಮೈ ಜುಮ್ಮೆನ್ನುವ ನನಗೆ ಆತನ ಆ ಸಿಡುಕು ಮೊರೆಯಲ್ಲೂ ಎಲ್ಲೋ ಒಂದೆಡೆ ಕರುಣಾಭಾವ ಕಂಡಿತು. ನಂತರ ಆತನ ಪಾಡಿಗೆ ಕೆಲಸದಲ್ಲಿ ಮಗ್ನನಾದ.

ಆದರೆ ಬಂದ ಕೆಲಸವನ್ನು ಮಾಡಿಸಿಕೊಂಡು ಹೋಗದೆ ಆದೀತೆ? ಆದರೆ ಮಸಾಜ್ ಮಾಡಲು ಬೇಕಾದ ಶಕ್ತಿಯಾಗಲಿ, ಗೆಲುವಾಗಲಿ ಒಂದಿನಿತೂ ಆತನಲ್ಲಿ ಇದ್ದಂತೆ ಕಾಣಲಿಲ್ಲ. ಆದರೆ ಪುಸಲಾಯಿಸಿಯಾದರೂ ಸರಿಯೇ ತಿಂಗಳು ಬಿಟ್ಟು ಬಂದವನಿಗೆ ಒಂದೆರೆಡು ಗುದ್ದನ್ನು ಗುದ್ದಿಸಿಕೊಂಡು ಹೋಗದಿರಲಾಗುತ್ತದೆಯೇ? ನಾನೇ ಮೊದಲು ಮಾಡಿ 'ಕಿದರ್ ಸೆ ಹೊ' ಎನ್ನುತ ಮಾತು ಶುರುಮಾಡಿದೆ.

ಕೆಲ ಕ್ಷಣ ಸುಮ್ಮನಿದ್ದು 'ಪಾಕಿಸ್ತಾನ್…' ಎಂದ ಆತನ ಧ್ವನಿಯಲ್ಲಿ ಮೂಡಿದ ಏಕರೂಪೇನ ದ್ವಂದ್ವವು ನನ್ನ ಮುಖದ ಮೇಲೆಯೂ ಮೂಡಿತು. ನಂತರ ಕತ್ತರಿಯ ಚಟ್ ಪಟ್ ಸದ್ದು ತಲೆಯ ಹಿಂಭಾಗದಿಂದ ಮುಂಬದಿಗೆ ಬಂದಿತ್ತು.

'ಆಪ್ ಕಿದರ್ ಸೆ ಹೊ ' ಎಂದ ಆತನ ಪ್ರೆಶ್ನೆಗೆ ಅಳುಕುತ್ತಲೇ ನಾನು 'ಇಂಡಿಯಾ' ಎಂದೆ.

ಪುನ್ಹ ಒಂತಿಷ್ಟು ಮೌನ. ತದನಂತರ ಆತ ನಾನೇನು ಮಾಡುತ್ತಿರುವೆನೆಂದು ಕೇಳಿ ತಿಳಿದು, ಇದ್ದಕ್ಕಿದಂತೆ ತನಗೂ ನಾನಿರುವ ಕಡೆ ಯಾವುದಾದರೊಂದು ಕೆಲಸವನ್ನು ಹುಡುಕಿ ಕೊಡುವಂತೆ ಕೇಳಿಕೊಂಡ!

'ಅರ್ರೆ, ತನ್ನ ಕಾಯಕವೇ ಬಂಡವಾಳವಾಗಿರುವ, ತುಸುಮಟ್ಟಿಗೆ ಹಾಯಾದ ಕೆಲಸವೆನ್ನಬಹುದಾದ ಕೆಲಸವನ್ನು ಬಿಟ್ಟು ಈತ ಮಾಡುವುದಾದರೂ ಏನುಂಟು?!' ಎಂಬ ಪ್ರೆಶ್ನೆಯೊಂದು ಮನದೊಳಗೆ ಮೂಡಿತು.

ಕೂತೂಹಲದಿಂದ ಏಕೆ, ಏನೆಂದು ವಿಚಾರಿಸಿದೆ.

ಮೌನದ ಕಟ್ಟೆಯೊಡೆದಂತೆ ಒಂದೇ ಉಸಿರಿನಲ್ಲಿ ಆತ ತನ್ನ ಬವಣೆಯನ್ನೆಲ್ಲವನ್ನು ಹೊರಹಾಕತೊಡಗಿದ. ಪಾಕಿಸ್ತಾನದ ಇಸ್ಲಾಮಾಬಾದ್ ನಿಂದ ಬಂದು ಇಂದಿಗೆ ಸುಮಾರು ಆರು ತಿಂಗಳಾಯಿತಂತೆ. ಊರಿನಲ್ಲೊಂದು ತನ್ನದೇ ಆದ ಪುಟ್ಟ ಸೆಲೂನ್ ಶಾಪನ್ನು ನೆಡೆಸುತ್ತಿದ್ದ ಈತ ತಾನೊಬ್ಬ ಸುಖೀಜೀವಿಯಾಗಿದ್ದೆ ಎಂಬುದನ್ನು ಇಲ್ಲಿಗೆ ಬಂದಮೇಲೆಯೇ ಮನಗಂಡನಂತೆ! ಮಳಿಗೆಯ ಖರ್ಚುವೆಚ್ಚಗಳೆಲ್ಲವನ್ನು ಕಳೆದು ಕಮ್ಮಿ ಎಂದರೂ ದಿನಕ್ಕೆ ಐನೂರರಿಂದ ಸಾವಿರ ರೂಪಾಯಿಗಳನ್ನು ಉಳಿಸುತ್ತಿದ್ದ ಈತನಿಗೆ ತನ್ನ ಗಳಿಕೆ ಬಹಳ ಕಡಿಮೆಯಾಯಿತೆಂದೋ ಅಥವ ಹೊರದೇಶಕ್ಕೆ ಹೋದರೆ ನಿಮಿಷ ಮಾತ್ರದಲ್ಲಿ ಕುಭೇರನಾಗಬಹುದೆಂಬ ಕನಸನ್ನು ಕಂಡೊ ಏನೋ, ಹೊರದೇಶದಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪರಿಚಯ ಮಾಡಿಕೊಂಡು ಕೆಲಸವನ್ನು ಹೊಂದಿಸುವಂತೆ ಕೇಳಿಕೊಳ್ಳುತ್ತಾನೆ. ಆತನೋ ಹೀಗೆ ರಾಶಿ ರಾಶಿ ಅಮಾಯಕರನ್ನು ತುಂಬಿ ತಂದು ಇಲ್ಲಿಗೆ ಸುರಿಯುವವ. ಶಿಕಾರಿ ತಾನಾಗಿಯೇ ಬಲೆಗೆ ಬೀಳಲು ಬಂದರೆ ಬಿಟ್ಟನೇ. ವೀಸಾ, ಪಾಸ್ಪೋರ್ಟ್, ಟಿಕೆಟ್ಟು, ಕಮಿಷನ್ ಮಣ್ಣು ಮಸಿ ಎನುತ್ತಾ ಸಾವಿರಾರು ರೂಪಾಯಿಗಳನ್ನು ಆತನಿಂದ ಕಸಿದುಕೊಂಡು ನಂತರದ ಕೆಲವೇ ದಿನಗಳಲ್ಲಿ ಮರಳುಗಾಡಿನ ಕಾನನದೊಳಗೆ ಆತನನ್ನು ತಂದು ಬಿಡುತ್ತಾನೆ. ಎಲ್ಲೆಡೆ ವಿಚಾರಿಸಿ ಕೊನೆಗೆ ಕೆಲಸ ಸಿಗದಿರುವಾಗ ಆತನನ್ನು ದೇಶಾಂತರ ಹೊತ್ತು ತಂದ ವ್ಯಕ್ತಿಯೇ ಇಲ್ಲಿಯ ಸೆಲೂನ್ ಶಾಪಿನಲ್ಲಿ ಕೆಲಸವನ್ನು ಹುಡುಕಿ ಕಳುಹಿಸುತ್ತಾನೆ. ಆದರೆ ಪ್ರತಿ ತಿಂಗಳ ಆತನ ಸಂಬಳದಲ್ಲಿ ಕನಿಷ್ಠವೆಂದರೂ 10 ಪ್ರಸೆಂಟ್ ನಷ್ಟು ಹಣ ಆ ದಳ್ಳಾಳಿಯ ಜೇಬನು ಸೇರಬೇಕೆಂಬ ಕಾರಾರಿನೊಂದಿಗೆ! ಇರಲು ಮೂರಡಿಯ ಒಂದಿಷ್ಟು ಜಾಗ ಹಾಗು ದಿನಕ್ಕೆ ಮೂರು ಬಾರಿ ರೋಟಿ ಹಾಗು ಇಂತಿಷ್ಟು ಬಾಜಿಯನ್ನು ಬಿಟ್ಟರೆ ಈತನಿಗೆ ಬರುತ್ತಿದ್ದ ಸಂಬಳ ತಾನು ಊರಿನಲ್ಲಿ ಗಳಿಸುತ್ತಿದ್ದ ಅರ್ಧದಷ್ಟೂ ಸಮನಿರಲಿಲ್ಲ. ಬೆಳಗ್ಗಿನಿಂದ ದುಃಖ, ಕೋಪ, ಹಸಿವನ್ನು ತಡೆದುಕೊಂಡು, ಬಂದುಹೋಗುವ ಗ್ರಾಹಕರ ಇಚ್ಛೆಗನುಗುಣವಾಗಿ ಅವರ ಕೇಶರಾಶಿಯನ್ನು ವಿನ್ಯಾಸಗೊಳಿಸಿ, ತಲೆಯನ್ನು ತೀಡಿ ತಿವಿದು ಅವರ ಚಿಂತೆಯನ್ನು ದೂರಾಗಿಸುವ ಈತ ಹಲವು ಬಾರಿ ತನ್ನ ತಾಯ್ನಾಡಿಗೆ ಹಿಂದಿರುಗಲು ಆವಣಿಸಿದರೂ ತಾನು ಕೆಲಸ ಮಾಡುತಿದ್ದ ಮಾಲೀಕನೊಟ್ಟಿಗೆ ಎರಡು ವರ್ಷದ ಕರಾರಿದ್ದ ಕಾರಣ ಅದು ಸಾಧ್ಯವಾಗದೆ ಸುಮ್ಮನಾಗಿದ್ದಾನೆ.

ಕೆಲಕಾಲ ಸುಮ್ಮನಾಗಿ ಪುನ್ಹ ಮಾತು ಶುರುವಿಟ್ಟಾಗ ಆತನ ಧ್ವನಿ ಏಕೋ ಗದ್ಗದಿಸತೊಡಗಿತ್ತು. ಹೀಗೆ ಕೆಲದಿನಗಳ ಹಿಂದೆ ತನ್ನ ತಾಯಿ ತೀರಿಕೊಂಡಳೆಂಬ ವಿಷಯ ತಿಳಿದು ಕೂಡಲೇ ಹೋಗಬೇಕೆಂದಾಗ ಮಾಲೀಕ ಹಣವಿಲ್ಲವೆಂದು ನಿರಾಕರಿಸಿದನೆಂದು ಹೇಳುತ್ತಾನೆ. ಪಾಸ್ಪೋರ್ಟ್ ಹಾಗು ಒಂತಿಷ್ಟು ಹಣ ನನ್ನ ಕೈಲಿದ್ದರೆ ನಾನೇ ಹೇಗಾದರೂ ಮಾಡಿ ಹೋಗಿಬಿಡುತ್ತಿದ್ದೆ ಸಾಬ್ ಎಂದನಾತ. ಈಗ ತಾನು ಏನೇ ಮಾತಾಡಿದರೂ ಆತ ಅತ್ತುಬಿಡುವುದಂತು ಗ್ಯಾರೆಂಟಿ. ಆತನ ಬಿಳಿಯ ಮುಖವೆಲ್ಲ ಕೆಂಪಾಗಿ ಹೊಳೆಯತೊಡಗಿತ್ತು. ಸಿಟ್ಟು, ಕೋಪ, ಹತಾಶೆ ಎಲ್ಲವೂ ಒಮ್ಮೆಲೇ ಹೊರಬರಲು ಹವಣಿಸುತ್ತಿವೆಯೇನೋ ಎಂಬಂತೆ ಭಾಸವಾಗತೊಡಗಿತು. ಕೊನೆಯ ಭಾರಿಗೆ ತನ್ನ ತಾಯಿಯ ಮುಖವನ್ನೂ ನೋಡಲಾಗದ ಆತ ತನ್ನನ್ನು ತಾನೇ ಶಪಿಸಿಕೊಳ್ಳುತ್ತಿರವಂತೆ ಅನಿಸಿತು. ಆತನ ಮುಖಚಹರೆ ಮಾತಾಡತೊಡಗಿತು. ನಾವೋಬ್ಬ ಮುಖ ಪ್ರೇಕ್ಷಕನಾಗಿ ಕನ್ನಡಿಯ ಪ್ರತಿಬಿಂಬದಲ್ಲಿ ಆತನನ್ನು ಆಲಿಸತೊಡಗಿದ್ದೆ.

'ಏನಾದರು ಸರಿಯೇ, ಸಣ್ಣದೊಂದು ಕೆಲಸ ಕೊಡಿಸಿ ಬಾಯ್. ಇಲ್ಲಂತೂ ನಾನಿರಲಾರೆ' ಎನ್ನತೊಡಗಿದ. ತನಗಿಷ್ಟವಿಲ್ಲದ ಬೋರ್ಡಿಂಗ್ ಸ್ಕೂಲಿಗೆ ಹಾಕದಂತೆ ಮಕ್ಕಳು ಪೋಷಕರನ್ನು ಕಾಡುವಂತೆ. ಏನೋ ಒಂದು ಬಗೆಯ ಆತ್ಮಿಯತೆಯೊಂದು ಆತನಿಗೆ ಆತನನ್ನು ಕೇಳುವವರಲ್ಲಿ ಮೂಡುತ್ತಿತ್ತೇನೋ. ಆ ಸಾಲಿಗೆ ನಾನೇ ಮೊದಲಿಗನಿರಬೇಕು. ಏಕೋ ಪೇಚಿಗೆ ಸಿಕ್ಕ ಅನುಭವವಾಗತೊಡಗಿತು. ಕತ್ತಿನ ಸುತ್ತ ನನ್ನ ಪ್ರೀತಿಪಾತ್ರವಾದ ಕೂದಲುಗಳು ರಣರಂಗದಲ್ಲಿ ಹೋರಾಡಿ ಅಸುನೀಗಿದಂತೆ ಹಿಡಿಹಿಡಿಯಾಗಿ ಬಿದ್ದಿದ್ದವು. ಮತ್ತೆಂದೂ ಆ ಸ್ವಸ್ಥಾನಕ್ಕೆ ಹಿಂದಿರುಗದ ಅವುಗಳ ರೋಧನೆಯೂ ಅವುಗಳಲ್ಲಿ ಕಾಣಬಹುದಾಗಿದ್ದಿತು. ತಾನು ಸಹ ಅವುಗಳಂತೆಯೇ ಏನೋ ಎಂಬಂತೆ ಆ ರಾಶಿಯನ್ನೆಲ್ಲ ಹೆಕ್ಕಿ ಮೂಲೆಯಲ್ಲಿ ಒಂದೆಡೆ ಸುರಿದ ಆತ. ಒಂತಿಷ್ಟು ಹಣವನ್ನು ಗಳಿಸುವ ಆಸೆಯಲ್ಲಿ ದೇಶಾಂತರ ಬರುವ ಇಂತವರು ಕೊರಗಿ ದಣಿದು ಸಾಕು ಸಾಕಾಗಿ ಪುನ್ಹ ತಮ್ಮ ಸ್ವಸ್ಥಾನವನ್ನು ಸೇರುವಾಗ ಬದುಕಿನ ಬಾಗಿಲೇ ಮುಚ್ಚತೊಡಗಿರುತ್ತದೆ. ಅಂತಹ ಲಕ್ಷಾಂತರ ಬಡಪಾಯಿಗಳು ಇಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹುಡುಕಿದರೂ ಸಿಗುವರು! ಹುಟ್ಟೂರಿನ ಗಂಜಿ ಅನ್ನವೂ ಅಮೃತಕ್ಕೆ ಸಮವೆಂಬುದ ವಿಪರ್ಯಾಸವೆಂಬಂತೆ ಪರದೇಶಗಳಿಗೆ ಬಂದೇ ಕಲಿಯುವವರು. ಆದರೆ ಈ ಮಾತು ಎಲ್ಲರಿಗೂ ಅನ್ವಯವಾಗಬಲ್ಲದೇ? ಕೊಂಚ ದೂರದಲ್ಲಿದ್ದ ಬಂಗಾಳಿಯೂ ಹೀಗೆ ಹಲವು ವರ್ಷಗಳಿಂದೆ ಇಲ್ಲಿಗೆ ಬಂದು ಇದೆ ನೋವು ಹತಾಷೆಗಳನು ಅದೆಷ್ಟು ಅನುಭವಿಸಿರಬಹುದು? ಅದೆಂಥಹ ಹಸಿವುಗಳನ್ನು ನೀಗಿಕೊಂಡಿರಬಹುದು? ಅವುಗಳೆಲ್ಲದರ ಪರಿಣಾಮವಾಗಿಯೇ ಏನೋ ಇಂದು ಆತ ತನ್ನ ಸ್ವಂತ ಕಾಲಮೇಲೆ ನಿಂತಿದ್ದಾನೆ. ಸುಖೀಯಾಗಿದ್ದಾನೆ. ಕಷ್ಟಗಳು ಬರುವುದೇ ಮನಸ್ಸನ್ನು ಕಲ್ಲಾಗಿಸಲು. ಒಂತಿಷ್ಟು ಪೆಟ್ಟನ್ನು ತಿಂದು ನೆಮ್ಮದಿಯ ಜೀವನವನ್ನು ಕಾಣಲು.

ಮುಂದಿನ ಕೆಲಸನಿಮಿಷಗಳಲ್ಲಿ ಭಾಗಶಃ ಕೇಶರಾಶಿಯ ಹತ್ಯಾಕಾಂಡವೇನೋ ಮುಗಿಯಿತು. ಬಹುದಿನಗಳಿಂದಲೇನೋ ಎಂಬಂತೆ ಆತನ ದುಃಖವೂ ಕರಗಿ ನಿರಾಳತೆಯ ಭಾವವೊಂದು ಆತನಲ್ಲಿ ಮೂಡಿದಂತಿತ್ತು. ಈಗ ನನ್ನ ಮುಂದಿದ್ದ ಪ್ರೆಶ್ನೆಗಳು ಎರಡೇ. ಕೆಲಸವೊಂದರ ದೃಡೀಕರಣವನ್ನು ಆತನಿಗೆ ನೀಡುವುದು. ಎರಡು, ಒಂತಿಷ್ಟು ಪೆಟ್ಟನ್ನು ತಲೆಗೂ ಬೆನ್ನಿಗೂ ತಿಂದು ಹಿತಭಾವವನ್ನು ಅನುಭವಿಸುವುದು! ಆದರೆ ಅದ್ಯಾವ ಬಾಯಿ ಬಿಟ್ಟು ಆತನಲ್ಲಿ ಮಸಾಜ್ ಮಾಡಯ್ಯ ಎಂದು ಕೇಳಲಿ? ದುಃಖದಿಂದ ಬಾತಿದ್ದ ಆತನ ಮುಖವನ್ನು ನೋಡಿದರೆ ಇನ್ನೇನೂ ಹೆಚ್ಚನ್ನು ಹೇಳುವ ಅಥವ ಕೇಳುವ ಹಾಗಿರಲಿಲ್ಲ. ಮೇಲಾಗಿ ಆತ ಉಪವಾಸನಿರತ. ಬೇಕೋ ಬೇಡವೋ ಎನ್ನುತ್ತಲೇ ಮೇಲೇಳತೊಡಗಿದೆ. ಕೂಡಲೇ ನನ್ನ ಬುಜದಮೇಲೆ ಬಿದ್ದ ಆತನ ಎರಡು ಕೈಗಳು 'ಏಕ್ ಮಿನಿಟ್ ಸಾಬ್, ಮಸ್ಸಾಜ್ ಕರ್ತ ಹೂ' ಎನ್ನುತ್ತಾ ಏಳುತ್ತಿದ್ದವನನ್ನು ಪುನ್ಹ ಕುರ್ಚಿಯ ಮೇಲೆ ಕೂರಿಸಿದವು. ಬಾಯಿಬಿಟ್ಟು ಕೇಳದಿದ್ದರೂ ನನ್ನ ಮುಖಭಾವದಿಂದಲೇ ಏನೋ ನನ್ನನು ಆತ ಅರಿತಿದ್ದ! ನಂತರ ಗೋಡೆಗೆ ನೇತಾಕಿದ್ದ ದಪ್ಪದಾದೊಂದು ಟವೆಲ್ ಅನ್ನು ಬೆನ್ನ ಸುತ್ತಲೂ ಹೊದಿಸಿ, ಒಂತಿಷ್ಟು ನೀರನ್ನು ತಲೆಕೂದಲಿಗೆ ಚಿಮುಕಿಸಿ ತಲೆಯ ಸುತ್ತ ಹಾವುಗಳು ಹೊರಳಾಡಿಸಿದಂತೆ ಕೈಬೆರಳುಗಳನ್ನು ಆಡಿಸತೊಡಗಿದ. ಕಣ್ಣನ್ನು ಮುಚ್ಚಿ ನನ್ನ ಇಡೀ ತಲೆಯ ಅಧಿಕಾರವನ್ನು ಆತನಿಗೆ ಒಪ್ಪಿಸಿದೆ. ಅದು ಆಟಿಕೆಯ ಗೊಂಬೆಯಂತೆ ಆತ ಆಡಿಸಿದಂತೆ ಅಷ್ಟ ದಿಕ್ಕುಗಳಿಗೂ ತಿರುಗತೊಡಗಿತು. ಹೆಚ್ಚು ಕಡಿಮೆ ಆತನಷ್ಟೇ ಅಥವಾ ಕೊಂಚ ಹೆಚ್ಚೆಂದೇ ಹೇಳಬಹುದಾದ ಜಂಜಾಟಗಳನ್ನು ಹೊತ್ತಿದ ಹೊರೆಯನ್ನು ಕಳೆದುಕೊಳ್ಳತೊಡಗಿತು. ಆಗೊಂದು ಹೀಗೊಂದು ಬೆನ್ನಿಗೆ ಬೀಳುತಿದ್ದ ಗುದ್ದುಗಳು ಜಡಗಟ್ಟಿದ ಹುರುಪನ್ನು ಪುನಃ ಜಾಗೃತ ಗೊಳಿಸಿದವು. ಬದ್ದ ವೈರಿದೇಶದ ಪ್ರಜೆಯೊಬ್ಬ ಹೀಗೆ ಮತ್ತೊಬ್ಬನ ನೋವು ಹತಾಶೆಗಳ ಹೊರೆಯನ್ನು ತನ್ನ ಶಕ್ತಿಹೀನ ಸ್ಥಿತಿಯಲ್ಲೂ ಕಡಿಮೆಗೊಳಿಸತೊಡಗಿದ. ಎಲ್ಲಿಯ ದೇಶ ಅದೆಲ್ಲಿಯ ದ್ವೇಷ? ಕಷ್ಟ ಸುಖಗಳಿಗೆ ಸ್ಪಂದಿಸಬಲ್ಲ ಆತ್ಮಗಳೇ ಇಲ್ಲದ ಮೇಲೆ ದೇಶಕ್ಕೊಂದು ಬೇಲಿಯನ್ನು ಹಾಕಿ ಏನು ಪ್ರಯೋಜನ?

ತಿಳಿದ ಮಟ್ಟಿಗೆ ಯಾವೊಂದು ಕೆಲಸವೂ ನನ್ನ ತಲೆಗೆ ತಕ್ಷಣ ಹೊಳೆಯಲೇ ಇಲ್ಲ. ಮೇಲಾಗಿ ಆತನಿಗೆ ಗೊತ್ತಿರುವುದು ಈ ಒಂದೇ ಕೆಲಸವಾಗಿರುವುದರಿಂದ ಬೇರ್ಯಾವ ಕೆಲಸವನ್ನು ಹುಡುಕಿಕೊಟ್ಟರೂ ಆತ ಅದನ್ನು ಮೊದಲಿನಿಂದ ಕಲಿಯಬೇಕು. ಕೇವಲ ಹೊಟ್ಟೆಪಾಡಿಗಾಗಿ ತನ್ನ ಕೆಲಸದ ಹಿರಿತನದ ಅನುಭವವನ್ನು ಬದಿಗಿಡಬೇಕು. ಹುಡುಕಿಕೊಟ್ಟರೂ ಅದು ಇದೇ ವಲಯದ ಬೇರೊಂದು ಕೆಲಸವಾಗಬೇಕು ಅಂದುಕೊಂಡೆ. ಗಜಕಾಯದ ಬಂಗಾಳಿ ತನ್ನೂರಿನಿಂದ ಬಂದಾಗ ಭಾರತೀಯನಾಗಿ ನಾನು ಈ ಕುಡಿಮೀಸೆಯ ಪಾಕಿಸ್ತಾನಿಗೆ ಒಂದು ಕೆಲಸವನ್ನು ಹೊಂದಿಸಬೇಕು. ಸಾಧ್ಯವಾದಷ್ಟು ಸಹಾಯವನ್ನು ಮಾಡಬೇಕೆಂದು ಯೋಚಿಸತೊಡಗಿದೆ. 'ಸಾಬ್ ಚಿಂತಾ ಮತ್ ಕರೋ, ಕಾಮ್ ನಹಿ ಮಿಲೇಗ ತೊ ಬಿ ಟೀಕ್ ಹೈ' ಎನ್ನುತ ಆತ ಮುಗುಳ್ನಗೆಯೊಂದು ಬೀರಿದಾಗ ಏಕೋ ಮನದಲ್ಲಿ ತುಂಬಾನೆ ಕಸಿವಿಸಿಯಾಯಿತು. ಜೇಬಿನಲ್ಲಿದ್ದ ಎಲ್ಲವನ್ನು ಕಳೆದುಕೊಂಡು, ಹುಟ್ಟಿಬೆಳೆದ ತನ್ನೂರನ್ನು ಬಿಟ್ಟು, ಅರೆಹೊಟ್ಟೆಯಲ್ಲಿ ಬದುಕುತ್ತಿದ್ದ ವ್ಯಕ್ತಿಯೊಬ್ಬ ನಕ್ಕರೆ ಅದು ಹತಾಶೆಯ ನಗೆಯಲ್ಲದೆ ಮತ್ತೇನು? ಏನು ಹೇಳಬೇಕೆಂದು ತಿಳಿಯದೆ ಕೊಡಬೇಕಾಗಿದ್ದ ಹಣಕ್ಕಿಂತ ಎರಡರಷ್ಟನ್ನು ಕೊಟ್ಟು, ಆತನ ಕೆಲಸಕ್ಕಾಗಿ ಪ್ರಯತ್ನಿಸುವೆ ಎಂದು ಹೇಳಿ ಹೊರಬಂದರೂ ಆತನ ಆ ಅಮಾಯಕ ನಗುವಿನ ದೃಶ್ಯ ಮಾತ್ರ ನನ್ನನ್ನು ಬಹುದಿನಗಳವರೆಗೂ ಕೊರೆಯುತ್ತಲೇ ಇದ್ದಿತು.

Sunday, May 13, 2018

ಮಾನಹೀನ ಮಾತುಗಳಿಂದ ಬದುಕಬೇಕಿದೆಯೇ ನಮ್ಮ ಡೆಮಾಕ್ರಸಿ...?

ಸಣ್ಣವರಿದ್ದಾಗ ಶಿಕ್ಷಕರು ನಮಗೆ ಕಲಿಸಿದ್ದ ಅಮೋಘ ಶಿಕ್ಷಣಗಳಲ್ಲಿ ಸರಿಯೆನಿಸದ್ದಿದ್ದನ್ನು ಪ್ರೆಶ್ನಿಸುವುದೂ ಒಂದು. ಅದು 'ಏನಲೇ..!?' ಎಂದು ಕೊಳಪ್ಪಟ್ಟಿಯನ್ನು ಹಿಡಿದು ಜಾಡಿಸಿ ಕೇಳುವುದಕ್ಕಿಂತ ಮಿಗಿಲಾಗಿ, ಹರಿತವಾದ ಮಾತಿನಿಂದ ಸತ್ಯವೆಂಬ ಹಿಡಿತದೊಂದಿಗೆ ಮುಂದಿರುವವನ ಕಪಟ ವಂಚಕ ಮನಸ್ಥಿತಿಯನ್ನು ಬೆದರುಗೊಳಿಸುವ ಬಗೆಯಾಗಿದ್ದಿತು. ಅರ್ಥಾತ್ ಅವು ವೈಚಾರಿಕ ಬಗೆಯ ನೇರ ಪ್ರೆಶ್ನೆಗಳಾಗಿದ್ದವು. ಆದರೆ ಅಂದಿನ ಆ ಪಾಠವನ್ನು ಮರೆತ ಬಹುಮಂದಿ ಜನರು ಇಂದು ಕೇಳುವ ಪ್ರೆಶ್ನೆಗಳು ಏಕವಚನ ಪದಗುಚ್ಛಗಳ ಚಪ್ಪಲಿ ಏಟಿನಂತೆ ಮುಂದಿರುವ ವ್ಯಕ್ತಿಯ ಮಾನಹರಣ ಮಾಡುವ ಅಸ್ತ್ರಗಳಾಗಿವೆ. ಪುಕ್ಕಟೆಯಾಗಿ ಸಿಗುವ ಹೊಲಸು ಪದಗಳ ವಿಶೇಷಣಗಳನ್ನು ಬಳಸಿ ಮುಂದಿರುವವರ ಸ್ಥಾನ ಜೊತೆಗೆ ಮಾನವನ್ನೂ ತಿವಿದು ಹಾಕುವ ಇಂದಿನ ದಿನಗಳಲ್ಲಿ ವಿಷಯಕ್ಕೆ ತಕ್ಕನಾದಂತಹ ನೇರವಾದ ಪ್ರೆಶ್ನೆಗಳನ್ನೂ ಕೇಳುವವರ ಸಂಖ್ಯೆ ಕ್ಷೀಣಿಸುತ್ತಿದೆ! ಒಂದೋ ಆತ/ಅವಳು ಸಮಾಜದ ಅತಿ ಪ್ರಭಾವಿ ಗುಂಪಿನ ಇಂಪಾರ್ಟೆಂಟ್ ವ್ಯಕ್ತಿಗಳೆನಿಸಿಕೊಂಡಿರಬೇಕು ಅಥವಾ ಯಾರಿಗೂ ಕ್ಯಾರೇ ಎನ್ನದ ಖಡಕ್ ಅಧಿಕಾರಿಗಳಾಗಿರಬೇಕು. ಅಂತವರಿಗಷ್ಟೇ ಇಂದು ಪ್ರೆಶ್ನೆಗಳನ್ನು ಕೇಳುವ 'ಅಧಿಕಾರ' ಹಾಗು 'ಧೈರ್ಯ' ಸೀಮಿತವಾಗುತ್ತಿದೆ ಎಂದರೆ ಸುಳ್ಳಾಗದು. ಸಾಮಾನ್ಯನೊಬ್ಬನಿಗೆ ಇಂದು ಪ್ರೆಶ್ನಿಸುವ ಧೈರ್ಯವನ್ನು ತುಂಬುವ ಸಮಾಜವೇ ಇಲ್ಲವಾದರೆ ವಿಧ್ಯಾವಂತರಾಗಿಯೂ ಕುರಿಗಳು ಸಾರ್ ಕುರಿಗಳು ಎಂಬಂತೆ ಪ್ರೆಶ್ನಿಸುವ ನರಗಳನ್ನೇ ಕಳೆದುಕೊಂಡು ಒಬ್ಬರ ಬಾಲವನ್ನು ಇನ್ನೊಬ್ಬರು ಮೂಸುತ್ತಾ ಸಾಗುವ ಪಯಣ ಇದಾದಿತು.

ಪೀಠಿಕೆ ಇಷ್ಟಿರಲಿ. ಈಗ ವಿಷಯಕ್ಕೆ ಬರೋಣ. ಅದಕ್ಕೂ ಮೊದಲು ಒಂದೆರೆಡು ನೇರ ನುಡಿ. ಇಲ್ಲಿ ಕೇಳಲಾಗಿರುವ ಪ್ರೆಶ್ನೆಗಳಿಗೆ ಪಕ್ಷ, ಜಾತಿ, ಪಂಥ ಎಂಬ ಯಾವುದೇ ಬಗೆಯ ತುರಿಕೆಗಳಾಗಲಿ, ಖಾಯಿಲೆಯಗಳಾಗಲಿ ಅಂಟಿಕೊಂಡಿಲ್ಲ. ಭಾರತೀಯರಾಗಿ ಅದಕ್ಕಿಂತಲೂ ಹೆಚ್ಚಾಗಿ ಸ್ವಸ್ಥ ಮಾನವರಾಗಿ ಕೇಳಲೇ ಬೇಕಾದ ಪ್ರೆಶ್ನೆಗಳಿವು. ಮುಂದಿರುವ ಇನ್ನೊಬ್ಬರಿಗಲ್ಲದಿದ್ದರೂ ತಮಗೆ ತಾವೇ ಚುಚ್ಚಿಕೊಳ್ಳಬೇಕಾದದ ಸೂಜಿಗಳಿವು!

ಚುನಾವಣೆ. ಸಧ್ಯಕಂತೂ ಆಡುವ ಮಕ್ಕಳ ಬಾಯಲ್ಲೂ ರಾರಾಜಿಸುತ್ತಿರುವ ಏಕಮಾತ್ರ ಪದವಿದು. ಸ್ವಾತಂತ್ರ್ಯೋತ್ತರ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಈ ಮಟ್ಟಿನ ಉತ್ಸುಕತೆ, ಭಾಗವಹಿಸುವಿಕೆ, ಅರಚಾಡುವಿಕೆ ಬಹುಶಃ ಹಿಂದೆಲ್ಲೂ ನಮಗೆ ಸಿಗದು. ಇಂದು ಬದುಕಲು ಬೇಕಾಗಿರುವ ಗಾಳಿ, ನೀರು ಹಾಗು ಆಹಾರದಂತಹ ಕೆಟಗರಿಗಳಿಗೆ ಬಂದು ಸೇರಿರುವ ಇಂಟರ್ನೆಟ್ ಎಂಬ ಮಹಾ ಮಾಯಾವಿಯೇ ಇದಕ್ಕೆಲ್ಲ ಕಾರಣವೆಂಬುದು ಸರ್ವರಿಗೂ ತಿಳಿದಿರುವ ವಿಷಯ. ಇಲ್ಲಿ ಪ್ರತಿಯೊಬ್ಬನೂ ವಾಗ್ಮಿಯೇ. ಟ್ವೀಟು, ಕಾಮೆಂಟು, ಸ್ಟೇಟಸ್ಸು, ಎನ್ನುತ್ತಾ ಡೆಮೋಕ್ರಸಿಯ ಸ್ವಾತಂತ್ರ್ಯವನ್ನು ಅಕ್ಷರ ಸಹ ಪಾಲಿಸುವ ಆತ ತಾನು ಅರಚಿ ವ್ಯಕ್ತ ಪಡಿಸಲಾಗದದನ್ನು ಕೀಬೋರ್ಡಿನ ಕೀಲಿಗಳನ್ನು ಕುಟ್ಟುತ್ತಾ ತೋರ್ಪಡಿಸ ಬಯಸ್ಸುತ್ತಾನೆ. ಪದಗಳಿಗೆ, ಅವುಗಳಿಂದ ಮೂಡುವ ಹೊಲಸು ವಾಕ್ಯಗಳಿಗೆ ಬ್ರೇಕೇ ಇಲ್ಲದ ಇಲ್ಲೂ ಸಹ ಸಿಕ್ಕ ಸಿಕ್ಕವರ ಮಾನಹಾನಿ ಎಂಬುದು ನೀರು ಕುಡಿದಷ್ಟೇ ಸುಲಭ. ಜಾತಿ, ಮತ, ಪಂಥ ಎಂಬ ಅಸ್ತ್ರಗಳು ಯಾವುದೇ ಮುಲಾಜಿಲ್ಲದೆ ಇಲ್ಲಿ ಎಲ್ಲಡೆಯೂ ಬೇರುಬಿಟ್ಟಿವೆ. ಮೊದಲೆಲ್ಲ ಹೆದರಿ ಆಡಲಾಗುತ್ತಿದ್ದ ಮಾತುಗಳಿಗೀಗ ಶಿಳ್ಳೆ ಚಪ್ಪಾಳೆಗಳ ಜೊತೆಗೆ ಲೈಕು ಕಾಮೆಂಟುಗಳ ಪ್ರೋತ್ಸಹಗಳೂ ಸಿಗತೊಡಗಿವೆ. ನೀನು ಸೇರಾದರೆ ನಾನು ಸವಾಸೇರು! ನೀನು ಒಂದೆಂದರೆ ನಾನು ಹತ್ತನ್ನು ‘ಕುಟ್ಟ’ಬಲ್ಲೆ!! ಇಂಥಹ ಮನಸ್ಥಿತಿ ಇಂದು ಎಲ್ಲೆಡೆ ಮೂಡುತ್ತಿದೆ.

ಪ್ರಸ್ತುತ ಚುನಾವಣೆಯಲ್ಲಂತೂ ಇಂತಹ ಕೆಸರೆರಚಾಟಗಳು ಯಾರ ಹಂಗಿಲ್ಲದೆಯೇ ಸಾಗಿವೆ. ಅದು ಪಿಎಂ ನಿಂದಿಡಿದು ಸಿಮ್ ರ ವರೆಗೂ ಪ್ರಸ್ತುತವಾಗಿದೆ. ಇಂಟರ್ನೆಟ್ ಲೋಕದಿಂದಿಡಿದು ಬೆಳಕು ಕಾಣದ ಗುಡಿಸಿಲಿನವರೆಗೂ ಅದು ಹರಡಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಚೆಹರೆಯಾಗಿ, ಕೋಟಿ ಕೋಟಿ ದೇಹಶಾಭಿಮಾನಿಗಳ ಹೆಮ್ಮೆಯ ನಾಯಕನಾಗಿ, ಭಾರತದ ಪ್ರಧಾನಿಯ ಸ್ಥಾನದಲ್ಲಿ ಕೂತು ಚುನಾವಣೆಯ ಪ್ರಚಾರದ ಭರದಲ್ಲಿ ತಮ್ಮದೇ ದೇಶದ ಮುಖ್ಯಮಂತ್ರಿಗಳನ್ನು, ಮಾಜಿ ಪ್ರಧಾನಿಗಳನ್ನು ಸಾಮೂಹಿಕವಾಗಿ ಜರಿಯುವ ಪರಿ ಅದೆಷ್ಟರ ಮಟ್ಟಿಗೆ ಸರಿ? ರಾಜ್ಯದ ಘನವೆತ್ತ ಮುಖ್ಯಮಂತ್ರಿಯಾಗಿ, ಆರು ಕೋಟಿ ಜನರ ಮುಂದಾಳುವಾಗಿ, ಸಮಾಜದ ಅತಿ ಗೌರವಾನ್ವಿತ ಸ್ಥಾನದಲ್ಲಿ ಕೂತಿರುವ ಹಿರಿಯರಾಗಿ, ಸಿಗುವ ಕೇವಲ ಬೆರಳೆಣಿಕೆಯ ಮತಗಳ ಧುರಾಸೆಯಲ್ಲಿ ದೇಶದ ನೂರು ಕೋಟಿ ಜನರ ಪ್ರಧಾನಮಂತ್ರಿಯನ್ನು ತೆಗಳುವನಂತಹ ಮಾತುಗಳು ಆ ಸ್ಥಾನಕ್ಕೆ ಶೋಭೆ ತರುವಂಥಹದ್ದೇ? ಇಂತಹ ವೈಮಸ್ಸಿನಿಂದ, ತಾರತಮ್ಯದಿಂದ, ಸರಿಹೊಂದದ ತಾಳಮೇಳದಿಂದ ಏಕರೂಪವಾದ ದೇಶದ ಅಭಿವೃದ್ಧಿ ನಿಜವಾಗಿಯೂ ಸಾಧ್ಯವವಿದೆಯೇ? ಇನ್ನು ಇವರುಗಳ ಹಿಂದಕ್ಕೂ ಮುಂದಕ್ಕೂ ಅಡ್ಡಾಡಿಕೊಂಡು ಕೈ ಮುಗಿದು ಕಾಲಿಗೆರಗಿ ದೇವತಾಮನುಷ್ಯರ ಸ್ಟೇಟಸ್ ಅನ್ನು ಗಿಟ್ಟಿಸಿಕೊಡಬಲ್ಲ ಇತರೆ ನಾಯಕರುಗಳನಂತೂ ಕೇಳುವುದೇ ಬೇಡ. ಘಂಟೆಗೊಂದು, ನಿಮಿಷಕ್ಕೊಂದರಂತೆ ಫೇಸ್ ಬುಕ್ಕಿನ 'ನೇರಪ್ರಸಾರ'ದ ವಾಚಕರಾಗಿ, ನಾವೇ ಸರಿ, ಉಳಿದೆಲ್ಲವೂ ಸುಳ್ಳು ಎಂಬಂತೆ ಬೊಬ್ಬೆಯೊಡೆದು ಬೀಗುವ ಇವರುಗಳ ಮನಸ್ಥಿತಿಯಿಂದ ಸಮಾಜ ಕಲಿಯುವುದೇನು? ನಾಯಿ, ಸಗಣಿ, ಕಪಿ ಎಂಬ ಮೂಕಪ್ರಾಣಿಗಳಗೆ ಎದುರು ಪಕ್ಷದವರನ್ನು ಹೋಲಿಸಿ ಅವುಗಳ ಮರ್ಯಾದೆಯನ್ನೂ ಹಾಳುಮಾಡುವುದಲ್ಲದೆ ಹುಚ್ಚ, ಅರೆಹುಚ್ಚ, ಪಾಪಿ, ಕಳ್ಳ, ಸುಳ್ಳ ಎಂಬ ಹಣೆಪಟ್ಟಿಯನ್ನು ಮನಬಂದಂತೆ ಮನಬಂದವರಿಗೆ ಕಟ್ಟುವ ನ್ಯಾಯಾಧೀಶರಂತೆ ಆಗಿರುವ ನಾಯಕರನ್ನು ಹದ್ದುಬಸ್ತಿನಲ್ಲಿಡುವವರು ಯಾರು? ಇಂತಹ ಕೀಳುಮಟ್ಟದ ಪ್ರಚಾರದಿಂದ ನಾಗರಿಕತೆಯ ನಮ್ಮ ಪಯಣ ಹಿಮ್ಮುಖವಾಗಿ ಸಾಗುವುದರಲ್ಲಿ ದೂಸರಾ ಮಾತೇ ಇಲ್ಲ ಅಲ್ಲವೇ? ಕೋಟಿ ಕೋಟಿ ಜನರ ಬೆವರ ಹಣವನ್ನು ಕೊಳ್ಳೆಯೊಡೆದು ಸೆರೆವಾಸದ ಸುಖವನ್ನನುಭವಿಸಿ ಬಂದ ಭಂಡ ವ್ಯಕ್ತಿಗಳಿಗೆ ಟಿಕೇಟನ್ನು ನೀಡಿ, ಸಾಲದಕ್ಕೆ ಡೆಲ್ಲಿಯಿಂದ ಹರಾರಿಕೊಂಡು ಬಂದು ಅವರ ಪರವಾಗಿ ಭಾಷಣಯೊಡೆಯುವ ಮುನ್ನ ತಾವು ಮಾಡುತ್ತಿರುವ ಕಾರ್ಯ ಅಕ್ಷರ ಸಹ ತಪ್ಪೆಂದು ಅವರುಗಳಾಗಲಿ ಅಥವಾ ಸತ್ಯವೇ ತನ್ನ ತಾಯಿ ತಂದೆ ಸತ್ಯವೇ ನನ್ನ ಬಂಧು ಬಳಗ ಎನ್ನುತ್ತಾ 'ನೆಟ್ಟಿ'ನಲ್ಲಿ ನಲಿಯುವ ಇತರೆ ನಾಯಕರುಗಳಾಗಲಿ ಉಸಿರೆತ್ತಬಲ್ಲರೇ? ಪ್ರೆಶ್ನಿಸಬಲ್ಲರೇ? ಇಲ್ಲ ಖಂಡಿತವಾಗಿಯೂ ಇಲ್ಲ! ಏಕೆಂದರೆ ತಾವು ಒಂದು ಪಕ್ಷವನ್ನು ಅನುಸರಿಸಿದ ಮಾತ್ರಕ್ಕೆ ಅದರ ನಾಯಕರುಗಳು ಏನೇ ಅಂದರೂ ಅದು ವೇಧವಾಕ್ಯಕ್ಕೆ ಸಮ! ಅವರ ಪ್ರತಿಯೊಂದು ನಡೆಯನ್ನು ಕಣ್ಣು ಕೆಟ್ಟಿ, ಕಿವಿಯ ಮುಚ್ಚಿ ಹಿಂಬಾಲಿಸುವ ಸುಶಿಕ್ಷಿತರ ಗುಂಪೊಂದೇ ಇಂದು ನಿರ್ಮಾಣವಾಗಿದೆ. ಆಧುನಿಕ ಜಗತ್ತಿನ ಹೊಸ ಬಗೆಯ ಗುಲಾಮಗಿರಿ ಇದ್ದಲ್ಲದೆ ಮತ್ತೇನು? ಅಲ್ಲದೆ ಇಂತಹ ಕಪಟ ನಾಯಕರ ದೌಲು, ಹುಂಬುತನ, ಹಗೆ, ದ್ವೇಷ ಹಾಗು ವೈರತ್ವದಿಂದ ಕೂಡಿದ ಮಾತುಗಳಿಗೆ ಮರುಳಾಗಿ ನಾವು ವೋಟನ್ನು ಒತ್ತಬೇಕೆ? ಅಷ್ಟಾಗಿಯೂ ಅಂತವರಿಗೇ ಓಟನ್ನು ಒತ್ತಿ ಸುಶಿಕ್ಷಿತರಾಗಿಯೂ ನಾವು ಅಶಿಕ್ಷಕರಾಗಿದ್ದೀವಿ ಎಂಬುದನ್ನು ಸಾಬೀತುಪಡಿಸಿ ತೋರಿಸಬೇಕಿದೆಯೇ?

ದೇಶದ, ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಾಣದ ಭರಾಟೆಯಲ್ಲಿ ಇಂದು ಚುನಾವಣೆಗಳು ನೆಡೆಯುತ್ತಿವೆ. ಜಾತಿ ಹಾಗು ಧರ್ಮದ ರಾಜಕಾರಣ ಸಮಾಜವನ್ನೇ ಒಡೆದು ಹೋಳಾಗಿಸುವ ಭರದಲ್ಲಿ ಮುನ್ನಿಗ್ಗುತ್ತಿದೆ. ಇಂದಿನ ಯಾವೊಬ್ಬ ರಾಜಕಾರಣಿಯ ಬಾಯಲ್ಲೂ ಏಕತೆ, ಅನ್ಯೂನ್ಯತೆ, ಸಹಬಾಳ್ವೆ ಎಂಬ ಪದಗಳೇ ಮೂಡದಾಗಿವೆ. ಪ್ರತಿಯೊಂದು ಕ್ಷೇತ್ರದ ಟಿಕೆಟ್ಟಿಗೂ ಜಾತಿವಾರು ಸರ್ವೆಗಳೆ ಮೂಲಾಧಾರವಾಗಿರುತ್ತವೆ. ಅಲ್ಲ ಸ್ವಾಮಿ, ನಮ್ಮ ಹಿರೀಕರೇನೋ ತಿಳಿದೋ ತಿಳಿಯದೆಯೋ ನೂರಾರು ಜಾತಿ ಪಂಗಡಗಳನ್ನು ಸೃಷ್ಟಿಸಿ ಮರೆಯಾದರು. ಇಷ್ಟೆಲ್ಲಾ ಜಾತಿಗಳಿರುವುದರಿಂದ ಗುಂಪು ಪಂಗಡಗಳನ್ನು ಲೆಕ್ಕ ಹಾಕುತ್ತೀರಾ. ಒಂದು ಪಕ್ಷ ಇಂತಹ ಜಾತಿ ಧರ್ಮಗಳೇ ಇಲ್ಲದ ನಾಡು ನಮ್ಮದಾಗಿದ್ದರೆ ಯಾವ ಆಧಾರದ ಮೇಲೆ ನಿಮ್ಮ ಟಿಕೇಟುಗಳು ಹಂಚಿಕೆಯಾಗುತ್ತಿದ್ದವು?! ಅದ್ಯಾವ ಬಗೆಯ ಸಮೀಕರಣ ನಿಮ್ಮನ್ನು ಗೆಲ್ಲಿಸುತಿತ್ತು? ಒಂದು ಧರ್ಮವನ್ನು ನಿಂಧಿಸಿ ಮತಯಾಚಿಸುವ ಮನಸ್ಸುಗಳು ಇಂದು ಬದಲಾಗಬೇಕಿದೆ. 'ನಾನು ಸಾಯುತ್ತೀನಿ, ಸಾಯುವ ಮೊದಲೊಮ್ಮೆ ಗೆಲ್ಲಿಸಿ' ಎಂಬ ನಾಟಕೀಯ ಮಾತುಗಳಿಗೆ ಮಣೆಯಾಕುವುದನ್ನು ನಿಲ್ಲಿಸಬೇಕಿದೆ. ಭಾರತ ರತ್ನ ವ್ಯಕ್ತಿಯ ಹೆಸರನ್ನೇ ಕತ್ತರಿಸಿ ಉಚ್ಚರಿಸಬಲ್ಲದ ನಾಯಕರಿಂದ ನಾವುಗಳು ಕಲಿಯಬೇಕೇ? ಹಣಕೊಟ್ಟು ಕಟ್ಟಿದ ಗುಂಪಿನ ಮುಂದೆ ದೇಶಾಭಿಮಾನದ ಮಾತುಗಳನ್ನು ಸುರಿದರೆ ಸಮಾಜ ಉದ್ದಾರವಾದೀತೇ? ಇಂತಹ ಪರಿಸ್ಥಿಯಲ್ಲಿ ಎಲ್ಲೆಲ್ಲಿಯೂ ಅಂಧ ಗುಂಪುಗಾರಿಕೆಯೆ ರಾರಾಜಿಸುತ್ತಿರುವಾಗ ಯಾವ ಗುಂಪನ್ನು ನಾವು ಸೇರಬೇಕು ಅಥವ ಯಾವ ಗುಂಪಿಗೆ ನಮ್ಮ ಬೆಂಬಲ ಮೂಡಬೇಕು? ಈ ಆಯ್ಕೆಯೂ ಬೇಡ ಮುಂದೆ ಅದರಿಂದುಟಾಗುವ ಕಹಿ ಅನುಭವವೂ ಬೇಡವೆಂದನ್ನುತ್ತಿದೆ ಮನದ ಮಾತು!

Friday, May 4, 2018

ಮೆಚ್ಚಲೇಬೇಕಿದೆ ಗೌತಮನ ಈ ಗಂಭೀರ ನಡೆ...!

ಡಿಸೆಂಬರ್ 15, 2006.

ದೇಸಿ ಕ್ರಿಕೆಟ್ನ ಮಹಾರಾಜನೆಂದೇ ಬಿಂಬಿತನಾಗಿದ್ದ ಗ್ರೇಟ್ ನಾಯಕನೊಬ್ಬನ ಅಗ್ನಿಪರೀಕ್ಷೆಯ ದಿನವಂದು. ತಿಂಗಳುಗಳ ಕೆಳಗಷ್ಟೇ ಭಾರತ ತಂಡದ ನಾಯಕನಾಗಿ ಸತತ ಐದು ವರ್ಷಗಳ ಕಾಲ ತಂಡದ ಹಾಗುಹೋಗುಗಳ ಮಾವುತನಾಗಿದ್ದ ವ್ಯಕ್ತಿ ಇಂದು ಅಕ್ಷರ ಸಹ ತಂಡದಲ್ಲಿ ತನ್ನ ಸ್ಥಾನವನ್ನುಉಳಿಸಿಕೊಳ್ಳಲು ಹೆಣಗುತ್ತಿದ್ದಾನೆ. ಅದು ಕೂಡ ತಂಡದ ಒಬ್ಬ ಸಾಮಾನ್ಯ ಸದಸ್ಯನಾಗಿ! ಹತ್ತು-ಹನ್ನೆರೆಡು ವರ್ಷಗಳ ಕಾಲ ಕ್ರಿಕೆಟ್ ನಲ್ಲೆ ಬದುಕನ್ನು ಕಳೆದೂ, ಕ್ರಿಕೆಟ್ ಇತಿಹಾಸದಲ್ಲಿ ಒಬ್ಬ ಅಜರಾಮರ ವ್ಯತಿತ್ವವೆನಿಸಿಕೊಂಡರೂ ಯಾಕಪ್ಪ ಈತನಿಗೆ ಇನ್ನೂ ಆಡುವ ಹುಚ್ಚು ಎಂದು ಹೇಳಿದವರು ಅದೆಷ್ಟೋ. ಪಾತಾಳ ಸೇರುತ್ತಿದ್ದ ತಂಡವೊಂದನ್ನು ಶಿಖರದ ತುತ್ತ ತುದಿಯ ಬಳಿಗೆ ತಂದು ನಿಲ್ಲಿಸಿದ ವ್ಯಕ್ತಿಯನ್ನೇ ತಂಡದಿಂದ ತೆಗೆದು ಹಾಕಿದ್ದ ಮೇಲೆ ಪುನಃ ತಂಡದಲ್ಲಿ ಅವಕಾಶವನ್ನು ಕೋರುವುದು ಮರ್ಯಾದೆಗೇಡು ಎಂದು ಈತನ ಅಭಿಮಾನಿಗಳೇ ಅಂದು ಬಯ್ಯತೊಡಗಿದರು. ಸಂಸಾರದ ಜವಾಬ್ದಾರಿ, ಹಣದ ಕೊರತೆ ಏನಾದರೂ? ಬಿಲ್ಲಕುಲ್ ಇಲ್ಲ! ಅಷ್ಟಕ್ಕೂ ಬೆಂಗಾಲದ ಅತಿ ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿರುವ ಈತನ ಕುಟುಂಬಕ್ಕೆ ಹಣದ ಕೊರತೆ ಎಂದರೆ ಕೇಳಿದವರು ನಗುವರು. ಹಾಗಾದರೆ ತನ್ನ ಮುವತ್ನಾಲ್ಕನೇ ವಯಸ್ಸಿನಲ್ಲಿಯೂ ಹಠವಿಡಿದ ಮಗುವಿನಂತೆ ಈತ ಭಾರತ ತಂಡಕ್ಕೆ ಕಮ್ ಬ್ಯಾಕ್ ಮಾಡಲೇ ಬೇಕು ಎನುತ ಕೂತಿರುವುದಾದರೂ ಏತಕ್ಕೆ? ಏಕೆಂದರೆ ಆತ ಸೌರವ್ ಗಂಗೂಲಿ! ಆಕಾಶವೇ ಕಳಚಿ ಬಿದ್ದರೂ ಸೋಲನೊಪ್ಪಿಕೊಳ್ಳದ , ಹೋದರೂ ತಲೆಯೆತ್ತಿ ಆತ್ಮಗೌರವದಿಂದ ಹೊರಡಬೇಕೆಂಬ ಖಯಾಲಿಯ ನಾಯಕ.

ಮ್ಯಾಚ್ ಫಿಕ್ಸಿಂಗ್ ಹಗರಣದ ನಂತರ ಚಿಂದಿ ಚಿತ್ರಾನ್ನವಾಗುತ್ತಿದ್ದ ತಂಡವನ್ನು ಒಂದುಗೂಡಿಸಿ ಬೆಳೆಸಿದ್ದಷ್ಟಲ್ಲದೆ ವಿದೇಶಿ ನೆಲೆಗಳಲ್ಲಿ ಗೆಲುವೆಂಬ ಮಾಯಾಜಿಂಕೆಯ ಬೆನ್ನನೇರುವ ಕಲೆಯನ್ನು ತಂಡಕ್ಕೆ ಕರಗತಮಾಡಿತೋರಿಸಿದ ಶ್ರೇಯ ಗಂಗೂಲಿಯದು. ಮುಂದೊಂದು ದಿನ ತಾನೇ ಖುದ್ದಾಗಿ ತಂಡದ ಕೋಚ್ ಸ್ಥಾನಕ್ಕೆ ಗ್ರೆಗ್ ಚಾಪೆಲ್ ಎಂಬ ಸಿಡುಕು ಮೋರೆಯ ವ್ಯಕ್ತಿಯನ್ನು ಆಯ್ದು ತಂದು ಆತನಿಂದಲೇ ತಂಡದಿಂದ ಹೊರಹಾಕಿಸಿಕೊಂಡ ಪ್ರಸಂಗ ಬಹುಷಃ ಕ್ರಿಕೆಟ್ ಇತಿಹಾಸದಲ್ಲೇ ಬೇರ್ಯಾವ ತಂಡದಲ್ಲೂ ಬಂದಿರಲು ಸಾದ್ಯವಿಲ್ಲ. ಅಲ್ಲಿಂದ ಮುಂದೆ ನೆಡೆದದ್ದು ಮಾತ್ರ ಕಮ್ ಬ್ಯಾಕ್ ಕಿಂಗ್ ಎಂದು ಹೆಸರು ಗಳಿಕೊಂಡ ಈತನ ಯಶೋಗಾಥೆ. ಅಂದು ಡಿಸೆಂಬರ್ 15, 2006 ರ ಸೌತ್ ಆಫ್ರಿಕಾ ವಿರುದ್ದದ ಮೊದಲ ಇನ್ನಿಂಗ್ಸ್ ನಲ್ಲಿ ಈತ ಗಳಿಸಿದ್ದು ಕೇವಲ 51 ರನ್ ಗಳಾದರೂ ಅದರಿಂದ ಆತ ತನ್ನನು ತಂಡದಿಂದ ಹೊರತಳ್ಳಿದವರಿಗೆ, ಆತನ ಬಗ್ಗೆ ಉಡಾಫೆಯ ಮಾತನ್ನಾಡಿದವರಿಗೆ, ಮುಳುಗುವಾಗಲೂ ತಮ್ಮವನೆಂಬ ಆತ್ಮೀಯತೆಯಿಂದಲೂ ಕೈಹಿಡಿದು ಮೇಲೆತ್ತದ ಇತರ ಆಟಗಾರರಿಗೆ ಇನ್ನಿಂಗ್ಸ್ ನ ಕೊನೆಯವರೆಗೂ ಸ್ಕ್ರೀಸ್ನ ಇನ್ನೊಂದು ಬದಿಯಲ್ಲಿ ನಿಂತು ಘರ್ಜಿಸುತ್ತಲೇ ಉತ್ತರಿಸಿದ. ಮಸಸ್ಸು ಮಾಡಿದರೆ ಕಮ್ ಬ್ಯಾಕ್ ಎಂಬುದು ಮೂವತ್ನಾಲ್ಕನೇ ವಯಸ್ಸಿನಲ್ಲಿಯೂ ಸಾಧ್ಯವಾಗದಿರದು ಎಂಬುದನ್ನು ಸಾಭೀತುಮಾಡಿದ. ಅಂದು ಆತನ ಕಮ್ ಬ್ಯಾಕ್ ಜಗತ್ತಿಗೆ ತನ್ನ ಶಕ್ತಿಯ ಪ್ರಭಾವವನ್ನು ತೋರಿಸಿಕೊಳ್ಳುವುದಕ್ಕಿಂತ ಮಿಗಿಲಾಗಿ ತನಗೆ ತಾನೇ ಉತ್ತರಿಸಿಕೊಳ್ಳುವ ಪ್ರಕ್ರಿಯೆಯಾಗಿದ್ದಿತು. ಆತ್ಮವಿಶ್ವಾಸ ಹಾಗು ತಕ್ಕ ಶ್ರಮವನ್ನು ವ್ಯಹಿಸಿದರೆ ಜಗತ್ತಿನಲ್ಲಿ ಅಸಾಧ್ಯವಾದುದು ಏನೇನೂ ಇಲ್ಲವೆಂಬುದನ್ನು ತೋರಿಸಿಕೊಡುವುದಾಗಿದ್ದಿತು.

ಹೆಚ್ಚುಕಡಿಮೆ ಹನ್ನೆರೆಡು ವರ್ಷಗಳ ನಂತರ ದೇಶ ಕಂಡ ಮತ್ತೊಬ್ಬ ಎಡಗೈ ಬ್ಯಾಟ್ಸಮನ್ ಇಂದು ಅದೇ ಸ್ಥಾನದಲ್ಲಿ ನಿಂತಿದ್ದಾನೆ. ಸಿಡುಕ, ಅಹಂಕಾರಿ, ರನ್ ಗಳಿಸಲು ಅಶಕ್ಯನಾದವ, ನಾಯಕನ ಹಿಡಿತವನ್ನು ಕಳೆಕೊಂಡಿರುವವ, ಹೀಗೆ ನಾನಾ ಬಗೆಯಲ್ಲಿ ಜರಿಯುವವರಿಗೆ ಉತ್ತರಿಸುವ ಪರಿಸ್ಥಿಯಲ್ಲಿದ್ದಾನೆ. ಆದರೆ ಉತ್ತರಿಸಬಲ್ಲನೆ ? ಆತನ ಕ್ರಿಕೆಟ್ ವ್ಯಕ್ತಿವವನ್ನು ಚೆನ್ನಾಗಿ ಬಲ್ಲವರಿಗೆ ಈ ಪ್ರೆಶ್ನೆಗೆ ಉತ್ತರ 'ಹೌದು' ಎಂಬುದು ತಿಳಿದೇ ಇದೆ! ಹೆಸರು ಗೌತಮ್ ಗಂಭೀರ್. ಭಾರತಕ್ಕೆ 2007 ಹಾಗು 2011 ರ ವಿಶ್ವಕಪ್ ನ ಕಿರೀಟವನ್ನು ತೊಡಿಸಿದ ಕಾರ್ಯದಲ್ಲಿ ಸಿಂಹಪಾಲು ಶ್ರಮ ಇವನದ್ದೇ ಎಂಬುದು ಭಾರತೀಯರಿಗಲ್ಲದೆ ಕ್ರಿಕೆಟ್ ಆಡುವ ಎಲ್ಲ ದೇಶಗಳಿಗೂ ತಿಳಿದುಂಟು. ಟೆಸ್ಟ್, ಒಂಡೇ ಹಾಗು ಟೀ 20 ಯಾವುದೇ ಬಗೆಯಾಗಲಿ ಆಯಾ ಫಾರ್ಮ್ಯಾಟ್ ಗಳಿಗೆ ಹೇಳಿಮಾಡಿಸಿದಂತೆ ಬ್ಯಾಟ್ ಬೀಸುತ್ತಿದ್ದ ಈತನ ಕ್ರಿಕೆಟ್ ಪಯಣ ಮಾತ್ರ ಒಂದು ಧುರಂತ ಕತೆ ಎಂದರೆ ಸುಳ್ಳಾಗದು. ವಿಶ್ವದ ಅಗ್ರಮಾನ್ಯ ಬ್ಯಾಟ್ಸ್ಮನ್ ಗಳ ಪಟ್ಟಿಯಲ್ಲಿ ಅಗ್ರಮಾನ್ಯನಾಗಿರುತ್ತಿದ್ದ, ತಂಡದ ಕಿರಿಯ ಆಟಗಾರರೊಟ್ಟಿಗೆ ತನ್ನ ಪ್ರಶಸ್ತಿಯನ್ನು ಹಂಚಿಕೊಳ್ಳುತ್ತಿದ್ದ, ಸಂಧರ್ಭ ಬಂದಾಗ ತಂಡವನ್ನು ಮುನ್ನೆಡಿಸಿ ಗೆಲುವನ್ನು ಸಾಧಿಸುತಿದ್ದ ಆಟಗಾರನೊಬ್ಬ ಇಂದು ರಾಷ್ಟ್ರೀಯ ತಂಡದಲ್ಲಿ ಬಿಡಿ ಕನಿಷ್ಠ ಪಕ್ಷ ಮೋಜು ಮಸ್ತಿಯ ಹುತ್ತವೆಂದೇ ಕಾಣುವ ಐಪಿಎಲ್ ನ ತಂಡವೊಂದರಲ್ಲೂ ಪರ್ಮನೆಂಟಾದ ಆಟಗಾರನೊಬ್ಬನಾಗಲು ಹೆಣಗುತ್ತಿದ್ದಾನೆ. ಪ್ಲೇ ಆಫ್ ದೂರದ ಮಾತು ಪ್ರತಿ ವರ್ಷ ಸೀಸನ್ ಮುಗಿದಾಗ ಕನಿಷ್ಠಪಕ್ಷ ಟಾಪ್ 5 ತಂಡದಲ್ಲೂ ಕಾಣದಿದ್ದ ಫ್ರಾಂಚೈಸಿಯೊಂದಕ್ಕೆ ಎರೆಡೆರಡು ಬಾರಿ ಪ್ರಶಸ್ತಿಯ ಪ್ರತಿಮೆಯನ್ನು ಮುಡಿಗೇರಿಸಿಕೊಟ್ಟ ಈತ ಅದೇ ಫ್ರಾಂಚೈಸಿಯಿಂದಲೇ ಹೊರಹಾಕಿಸಿಕೊಳ್ಳುತ್ತಾನೆ. ಹಣವೆಂದರೆ ಕ್ರಿಕೆಟ್, ಕ್ರಿಕೆಟ್ ಎಂದರೆ ಹಣವಾಗಿರುವ ಇಲ್ಲಿ ಫ್ರಾಂಚೈಸಿ ಗಳ ಕೈಕೆಳಗೆ ಆಡುವುದು ಕಬ್ಬಿಣ ಜಲ್ಲೆಯ ನುರಿತದಂತೆ ಎಂಬುದನ್ನು ಗಂಗೂಲಿ ತಾನು ಬರೆದ ಪುಸ್ತಕದಲ್ಲಿ (A Century Is Not Enough) ಸೊಗಸಾಗಿ ವರ್ಣಿಸಿದ್ದಾನೆ. ಆತನೂ ಕೆಲವರ್ಷಗಳ ಹಿಂದೆ ಅದೇ ಪ್ರಾಂಚೈಸಿಯಿಂದ ಹೀನಾಯವಾಗಿ ಹೊರಹಾಕಿಸಿಕೊಂಡಿದ್ದ. ಇಂದು ಗಂಭೀರ್ ನ ಸರಧಿ. ಆದರೆ ಆತ ತಂಡದಿಂದ ಹೊರಬಿದ್ದ ಕೂಡಲೇ ಡೆಲ್ಲಿಯ ಡೆವಿಲ್ಸ್ ಗಳು ತೆಕ್ಕೆಗೆ ಹಾಕಿಕೊಂಡರೂ ಸೀಸನ್ ನ ಆರ್ಧ ಮ್ಯಾಚುಗಳು ಮುಗಿಯುವ ಮೊದಲೇ ಆತನನ್ನು ತಂಡದಲ್ಲಿ ಉಳಿಸಿಕೊಳ್ಳಲು ಅಶಕ್ಯವಾದವು.

ಅರ್ಧದಷ್ಟು ಕ್ರಿಕೆಟ್ ಇಂದು ದೈಹಿಕ ಆಟವಾದರೆ ಉಳಿದರ್ಧ ಅಥವಾ ಇನ್ನೂ ಹೆಚ್ಚಿನ ಬಾಗ ಅದೊಂದು ಮೆಂಟಲ್ ಗೇಮ್ ಎಂಬುವುದು ಸರ್ವ ಆಟಗಾರರ ಒಕ್ಕೂರಲ ಅನಿಸಿಕೆ. ಅಲ್ಲದೆ ಇಂದು ಆಡುವವರಿಗಿಂತಲೂ ಹೆಚ್ಚಾಗಿ AC ಕೋಣೆಯಲ್ಲಿ ಬೊಬ್ಬೆಯೊಡೆಯುವವರು, ಸ್ಟಾಟಿಸ್ಟಿಕ್ಸ್ನ ದಾಸರಾಗಿ ಅದನ್ನು ಪುಂಖಾನುಪುಂಖಾವಾಗಿ ಜನಮಾನಸದೊಳಗೆ ಹರಿಬಿಡುವವರ ಸಂಖ್ಯೆಯೇ ಜಾಸ್ತಿಯಾಗಿದೆ. 'ವರ್ಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್ಮೆನ್', 'ಸ್ಮಾರ್ಟ್ ಸ್ಟ್ರೈಕ್ ರೇಟ್', 'ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್', 'ಬೆಸ್ಟ್ ಸ್ಟ್ರೈಕ್ ರೇಟ್' ಹೀಗೆ ಆಟಗಾರರನ್ನು ಅಳೆದು ತೂಗುವ ನೂರಾರು ಕೆಟಗರಿಗಳು ಇಂದು ಕ್ರಿಕೆಟ್ ನಲ್ಲಿವೆ. ಆಟಗಾರ ಕ್ರೀಡಾಂಗಣದಲ್ಲಿ ದೈಹಿಕವಾಗಿ ಸೆಣೆಸುವುದಲ್ಲದೆ ಆಫ್ ದಿ ಫೀಲ್ಡ್ ಇಂತಹ ಅರ್ಥವಿಲ್ಲದ ಅಂಕೆ ಸಂಖ್ಯೆಗಳೊಟ್ಟಿಗೆ ಮಾನಸಿಕವಾಗಿ ಗುದ್ದಾಡಬೇಕು. ಇಂತಹ ಗುದ್ದಾಟದಿಂದಲೇ ಇಂದು ಒಬ್ಬ ಆಟಗಾರ ಕ್ಷಣಮಾತ್ರದಲ್ಲಿ ಯಶಸ್ಸಿನ ಉತ್ತುಂಗದಿಂದ ಸೋಲಿನ ಕೂಪದೊಳಗೆ ದೊಪ್ಪನೆ ಬೀಳುವುದು. ಹಾಗಾಗಿ ಕಮ್ ಬ್ಯಾಕ್ ಎಂಬುವುದು ಅಂದಿನಷ್ಟು ಇಂದು ಸುಲಭವಲ್ಲ. ಏಕೆಂದರೆ ಅಂದು ಆಟಗಾರನ ಕಂಬ್ಯಾಕ್ ಇಂಟರ್ನೆಟ್ಟಿನ ಬಹುಕೋಟಿ ಟ್ವೀಟ್, ಕಾಮೆಂಟ್ ಗಳೊಟ್ಟಿಗಿರದೆ ಕೇವಲ ಕ್ರೀಡಾಂಗಣದೊಳಗಿನ ಬ್ಯಾಟು ಬಾಲುಗಳೊಟ್ಟಿಗಿದ್ದಿತು. ಬೆವರು ಸುರಿಸಿ ಹೆಸರು ಗಳಿಸುವುದರೊಟ್ಟಿಗಿದ್ದಿತು.

ಇಂದು ಗಂಭೀರ್ ದೆಹಲಿ ತಂಡದ ನಾಯಕನ ಸ್ಥಾನದಿಂದ ನಿವೃತ್ತಿ ಘೋಷಿಸಿದ್ದರೆ ಅದರ ಹಿಂದೆಯೂ ಹೀಗೆಯೇ ಬೊಬ್ಬೆಯೊಡೆದು ಬೀಗುವ ನೂರಾರು ಬಾಯಿಗಳು ಹಾಗು ಅವುಗಳೊಳಗಿನ ಸಾವಿರಾರು ಸ್ಟ್ಯಾಟಿಸ್ಟಿಕ್ಸ್ ಗಳೂ ಕಾರಣವಿರಬಹುದು. ಇಂದು ಮಾನಸಿಕವಾಗಿ ಒಬ್ಬ ಆಟಗಾರ ಸೋತನೆಂದರೆ ಆತನಿಗೆ ತನ್ನ ಕರಿಯರ್ ನನ್ನು ಕೊನೆಗೊಳಿಸಿದಷ್ಟೇ ದುಃಖ ಹತಾಶೆಯನ್ನು ಸಹಿಸಿಕೊಳ್ಳಬೇಕಾಗುವುದು. ಆದರೆ ಮಾನವನ ಗುಣವೈಖರಿಯನ್ನು ಹೀಗೀಗೆ ಇಂತಿಷ್ಟೇ ಎಂದು ಏಳಲು ಸಾಧ್ಯವಿದೆಯೇ? ತನ್ನ 42 ನೇ ವಯಸ್ಸಿನಲ್ಲಿ ಚೊಚ್ಚಲ ರಣಜಿ ಪಂದ್ಯವನ್ನಾಡಿ ನೋಡುಗರ ರೋಮು ರೋಮುಗಳನ್ನು ಎದ್ದು ನಿಲ್ಲಿಸಿದ್ದ ಪ್ರವೀಣ್ ತಾಂಬೆಯಾಗಲಿ, ಕ್ಯಾನ್ಸರ್ ಎಂಬ ಮಹಾಮಾರಿಯನ್ನೇ ಬಡಿದುರುಳಿಸಿ ಪುನ್ಹ ಕ್ರಿಕೆಟ್ ಮೈದಾನದಲ್ಲಿ ಫೊರು ಸಿಕ್ಸರ್ ಗಳ ಸುರಿಮಳೆಗೈಯುವ ಯುವರಾಜ್ ಸಿಂಗ್ ರಂತವರಾಗಲಿ ಅಥವ ತಿನ್ನಲು ಹಿಟ್ಟಿಲ್ಲದೆ ಇರಲೊಂದು ಸೂರಿರದೆ ಕಡುಕಷ್ಟದಲ್ಲಿ ಬದುಕಿ ಕೋಟ್ಯಧಿಪತಿಗಳಾಗಿರುವ ಅದೆಷ್ಟೋ ಆಟಗಾರರಾಗಿರಲಿ ಇಂದು ಅವರೆಲ್ಲ ಹೀಜಿ ಒದ್ದಾಡಿ ಜೀವನವನ್ನು ಒಂದು ಆದರ್ಶಪರವಾದ ಹೊತ್ತಿಗೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದರೆ ಅದರಲ್ಲಿ ಕ್ರಿಕೆಟ್ ಎಂಬ ಆಪತ್ಭಾಂದವನ ಕೃಪೆ ಅದೆಷ್ಟಿದೆ ಎಂದು ತಿಳಿಯುತ್ತದೆ. ಇಷ್ಟೆಲ್ಲಾ ಸಾಧ್ಯತೆಗಳಿರುವ ಆಟವೊಂದರಲ್ಲಿ ಮಹಾಒತ್ತಡವಿರುವ ಅದೆಷ್ಟೋ ಮ್ಯಾಚುಗಳಲಿ ಬೌಂಡರಿಯ ಅಷ್ಟ ದಿಕ್ಕುಗಳಿಗೂ ಮನಬಂದಂತೆ ಚಚ್ಚಿ ಬೌಲರ್ಗಳ ಬೆವರಿಳಿಸುತ್ತಿದ್ದ ಗೌತಮನೆಂಬ ಗಂಭೀರ ವ್ಯಕ್ತಿಗೆ ಮಗದೊಮ್ಮೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಮತ್ತೊಂದು ಸೆಂಚೂರಿಯನ್ನು ಗಳಿಸುವುದು ಯಾವ ಮಹಾಕಷ್ಟದ ಕಾರ್ಯ ?

ಆದರೆ ಗಂಭೀರ್ ನ ಈ ನಡೆ ಇನ್ನೊಂದು ಬಗೆಯಲ್ಲಿ ನೋಡಬಯಸುವವರಿಗೆ ಬೇರೆಯದ್ದೇ ನೀತಿ ಪಾಠವನ್ನು ಹೇಳಿಕೊಡುತ್ತದೆ. ತನಗಿಂತ ತಂಡ ಮೊದಲು, ಹಣಕ್ಕಿಂತ ಆಟ ಮಿಗಿಲು ಎನ್ನುವುದು ಕೇವಲ ಬಾಯಿಮಾತಿನ ವಚನಗಳಂತಾಗಿರುವಾಗ ಗೌತಮ್ ಗಂಭೀರ್ ಅವುಗಳನ್ನು ಅಕ್ಷರ ಸಹ ನಿಜಜೀವನದಲ್ಲೇ ಮಾಡಿ ತೋರಿಸಿದ್ದಾನೆ. ತಂಡ ಸೋಲಿನ ಸರಮಾಲೆಯನ್ನೇ ಮುಡಿಗೇರಿಸ್ಕೊಳ್ಳುತ್ತಿರುವಾಗ ಕಾರಣ ನಾನಲ್ಲ ನೀನು, ನೀನಲ್ಲ ಅವನು ಎಂದು ಬ್ಲೇಮ್ ಗೇಮ್ಗಳು ನೆಡೆಯುತ್ತಿರುವಾಗ ಹೀನಾಯ ಪ್ರದರ್ಶನದ ಅಷ್ಟೂ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೇರಿಸಿಕೊಂಡು ನಾಯಕನ ಸ್ಥಾನವನ್ನು ತ್ಯೆಜಿಸಿದ್ದನಲ್ಲದೆ ತಾನು ಪಡೆದಿದ್ದ ಅಷ್ಟೂ ಹಣವನ್ನು ಫ್ರಾಂಚೈಸಿಗಳಿಗೆ ಹಿಂದಿರುಗಿಸಲೂ ಮುಂದಾಗಿದ್ದಾನೆ. ಹಣವೇ ಸರ್ವಸ್ವವಾಗಿರುವ ಪ್ರಸ್ತುತ ಕಾಲದಲ್ಲಿ ಕೂತಕೂತಲ್ಲೆ ಸಿಗುವ ಕೋಟಿ ಕೋಟಿ ರೂಪಾಯಿಗಳನ್ನು ಹಿಂತಿರುಗಿಸುವವರು ಎಲ್ರಿ ಸಿಗುತ್ತಾರೆ? ಆತ ಬೇರೇನೂ ಮಾಡದೆ ಕೇವಲ ಬೆಂಚಿನ ಮೇಲೆ ಕುಳಿತು ಚಪ್ಪಾಳೆ ತಟ್ಟಿದರೂ ಸಾಕಾಗಿದ್ದಿತು ಅಷ್ಟೂ ಹಣವು ಬಡ್ಡಿಸಮೇತ ಆತ ಅಕೌಂಟಿನಲ್ಲಿ ಬಿದ್ದಿರುತ್ತಿತ್ತು. ಆದರೆ ಸ್ಪೋರ್ಟ್ಸ್-ಮ್ಯಾನ್ಷಿಪ್ ಎಂಬುದು ರಕ್ತದ ಕಣಕಣದಲ್ಲಿ ಅಡಗಿರುವವರಿಗೆ ಆಡದೆ ಸಿಗುವ ಬಹುಮಾನವೂ ಕಸಕ್ಕೆ ಸಮವಾಗಿರುತ್ತದೆ ಎಂಬುದು ಇಲ್ಲಿ ತಿಳಿಯುತ್ತದೆ. ಅಲ್ಲದೆ ಪ್ರಸ್ತುತ ಚುನಾವಣೆಯ ಈ ದಿನಗಳಲ್ಲಿ ರಾಜಕಾರಣಿಗಳೂ ಸಹ ಹೀಗೆಯೇ ಆತ್ಮಾವಲೋಕನ ಮಾಡಿಲೊಳ್ಳಬಲ್ಲರೇ ಎಂಬೊಂದು ಪ್ರೆಶ್ನೆ ನಮ್ಮನ್ನು ಕಾಡದಿರದು? ಜಿಲ್ಲೆಯ ಅಥವಾ ತಾಲೂಕಿನ ಜೀರೋ (೦) ಅಭಿವೃದ್ಧಿಗೆ ಮರುಗಿ ತಾನು ಈ ಕಾರ್ಯಕ್ಕೆ ಲಾಯಕ್ಕಲ್ಲವೆನುತ ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನು ಇವರುಗಳೂ ನೀಡಬಲ್ಲರೇ? ಇಂಪಾಸಿಬಲ್! ಅಲ್ಲವೇ? ಅದೇನೇ ಇರಲಿ ಈ ಬಾರಿ ಚುನಾವಣ ಆಯೋಗವೇನಾದರೂ ಗಂಭೀರ್ ನನ್ನೇ ತನ್ನ ಬ್ರಾಂಡ್ ಅಂಬಾಸಿಡರ್ ನನ್ನಾಗಿ ಮಾಡಿದ್ದರೆ ಜನರ ಹಣವನ್ನು ಕೊಳ್ಳೆಯೊಡೆಯುವ ಅದೆಷ್ಟೋ ಕಳಪೆ ರಾಜಕಾರಣಿಗಳಿಗೆ ಪರೋಕ್ಷವಾಗಿ ಮಹತ್ತರವಾದ ಸಂದೇಶವೊಂದು ತಲುಪುತ್ತಿತ್ತೇನೋ?!