Friday, November 30, 2018

ಬಾರ್ಡರ್-ಗವಾಸ್ಕರ್ ಸರಣಿ : ಅಂದು - ಇಂದು!


ಸ್ಥಳ : ಕೊಲ್ಕತ್ತಾ. ಮಾರ್ಚ್ 15, 2001.

ಮೊದಲ ಇನ್ನಿಂಗ್ಸ್
:
ಆಸ್ಟ್ರೇಲಿಯ : 445/10
ಭಾರತ : 212/10

ಎರಡನೇ ಇನ್ನಿಂಗ್ಸ್ : (ಫಾಲೋ ಆನ್)
ಭಾರತ : 657/7 (D)
ಆಸ್ಟ್ರೇಲಿಯ : 171/10



ಆ ದಿನದ ಸೂರ್ಯ ಪಶ್ಚಿಮದಲ್ಲಿ ಮರೆಯಾಗುತ್ತಾ ಕ್ರಿಕೆಟ್ ಲೋಕದ ಮಹಾ ಅಚ್ಚರಿಯೊಂದಕ್ಕೆ ಸಾಕ್ಷಿಯಾದನು. ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದ ಆ ಟೆಸ್ಟ್ ಭಾರತದ ಪಾಲಿಗಂತೂ ವಿಶ್ವಕಪ್ನನ್ನೇ ಗೆದ್ದು ಬೀಗಿದ ಅನುಭವವನ್ನು ನೀಡಿತು. ಅಂದು ಕೋಲ್ಕತ್ತದ ಆಗಸ ರಂಗು ರಂಗಿನ ಪಟಾಕಿಗಳಿಂದ ಶೃಂಗಾರಗೊಳ್ಳುತ್ತಿದ್ದರೆ ಇತ್ತ ಕಡೆ ಇಡೀ ದೇಶವೇ ಹಬ್ಬದ ವಾತಾವರಣವೇನೋ ಎಂಬ ಸಂಭ್ರಮದಲ್ಲಿ ನಲಿಯಿತು. VVS ಲಕ್ಷ್ಮಣ್, ಹರ್ಭಜನ್ ಸಿಂಗ್ ಹಾಗು ರಾಹುಲ್ ದ್ರಾವಿಡ್ ಅಂದು ಖಾನ್, ರೋಷನ್ ಹಾಗು ಬಚ್ಚನ್ ರೆಲ್ಲರನ್ನೂ ಹಿಂದಿಕ್ಕಿ ದೇಶದ ಜನಮಾನಸದಲ್ಲಿ ಹೀರೋಗಳಾಗಿಬಿಟ್ಟರು. ಒಟ್ಟು 557 ರನ್ಗಳು ಹಾಗು 13 ವಿಕೆಟ್ಗಳ ಈ ಮೂವರ ಆಟ ಅಂದು ವಿಶ್ವ ಕ್ರಿಕೆಟ್ನಲ್ಲಿ ಮ್ಯಾಚ್ ಫಿಕ್ಸಿಂಗ್ ಎಂಬ ಸ್ಲೋ ಪಾಯಿಸನ್ನಿಂದ ನೇಪಥ್ಯಕ್ಕೆ ಸೇರುತ್ತಿದ್ದ ಭಾರತೀಯ ಕ್ರಿಕೆಟ್ನ ಪುನರ್ಜನ್ಮಕ್ಕೆ ಕಾರಣವಾಯಿತು. ಹೈಡೆನ್, ಲ್ಯಾಂಗರ್, ಪಾಂಟಿಂಗ್, ವಾ ಬ್ರದರ್ಸ್, ಗಿಲ್ಕ್ರಿಸ್ಟ್, ವಾರ್ನ್, ಗಿಲ್ಲೆಸ್ಪಿ, ಮೆಗ್ರಾತ್ ಎಂಬ ಕ್ರಿಕೆಟ್ ದಂತಕತೆಗಳೇ ತುಂಬಿದ್ದ ತಂಡವೊಂದನ್ನು ಫಾಲೋ ಆನ್ ನ ಹೊರತಾಗಿಯೂ ಸಿನಿಮೀಯ ರೀತಿಯಲ್ಲಿ ಸೋಲಿಸುವುದು ಅಂದಿನ ಕಾಲಕಷ್ಟೆ ಅಲ್ಲದೆ ಇಂದಿಗೂ ಸಹ ಸಾಮಾನ್ಯದ ಮಾತಲ್ಲ. ಮೊದಲ ಟೆಸ್ಟ್ ನಲ್ಲಿ ಸೋತು ಎರಡನೇ ಟೆಸ್ಟನ್ನು ಇಲ್ಲಿ ದಾಖಲೆಯ ಅಂಕಿ ಅಂಶಗಳೊಟ್ಟಿಗೆ ಗೆದ್ದ ಭಾರತ ಅದೇ ಆತ್ಮವಿಶ್ವಾಸದಲ್ಲಿ ಮೂರನೆಯ ಹಾಗು ಅಂತಿಮ ಟೆಸ್ಟನ್ನು ಗೆದ್ದು ಸರಣಿಯನ್ನು ವಶಪಡಿಸಿಕೊಂಡಿತು. ಆ ಮೂಲಕ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕಾಂಗರೂಗಳ ಮೂರು ದಶಕದ ಕನಸಿಗೆ ತಣ್ಣಿರೆರಚಿತು!

ಹೆಸರು 'ಬಾರ್ಡರ್-ಗವಾಸ್ಕರ್' ಸರಣಿ. ಇಂಗ್ಲೆಂಡ್ ಹಾಗು ಆಸ್ಟ್ರೇಲಿಯಾ ಟೆಸ್ಟ್ ಪಂದ್ಯಗಳು ಎಂದಾಕ್ಷಣ ಹೇಗೆ 'ASHES' ನ ಹೆಸರು ಬರುತ್ತದೆಯೋ ಅಂತೆಯೇ ಭಾರತ ಹಾಗು ಆಸ್ಟ್ರೇಲಿಯಾ ಟೆಸ್ಟ್ ಎಂದಾಕ್ಷಣ ಕಣ್ಣ ಮುಂದೆ ಬರುವ ಹೆಸರೇ 'ಬಾರ್ಡರ್-ಗವಾಸ್ಕರ್' ಸರಣಿ. ಟೆಸ್ಟ್ ಕ್ರಿಕೆಟ್ ನಲ್ಲಿ ಹತ್ತುಸಾವಿರ ರನ್ ಗಳ ಕಿರೀಟವನ್ನು ಮೊದಲು ತೊಟ್ಟ ಸುನಿಲ್ ಗವಾಸ್ಕರ್ (1987) ಹಾಗು ಆಸ್ಟ್ರೇಲಿಯಾದ ಅಲನ್ ಬಾರ್ಡರ್ (1993) ದಿಗ್ಗಜದ್ವಯರ ಹೆಸರಿನಲ್ಲಿ ಕ್ರಮವಾಗಿ ಎರೆಡೆರೆಡು ವರ್ಷಕ್ಕೊಮ್ಮೆ ಭಾರತ ಹಾಗು ಆಸ್ಟ್ರೇಲಿಯಾ ತಂಡಗಳ ನಡುವೆ ನೆಡೆಯುವ ಹಣಾಹಣಿ. 1996 ರಲ್ಲಿ ಮೊದಲುಗೊಂಡು ಇಲ್ಲಿಯವರೆಗೂ ಒಟ್ಟು 13 ಸರಣಿಗಳನ್ನು ಆಡಿರುವ ಎರಡು ತಂಡಗಳಲ್ಲಿ ಭಾರತ 7 ಬಾರಿ, ಆಸ್ಟ್ರೇಲಿಯ 5 ಹಾಗು ಒಮ್ಮೆ (2003) ಸರಣಿ ಡ್ರಾ ನಲ್ಲಿ ಅಂತ್ಯ ಕಂಡಿದೆ. ಅಲ್ಲದೆ ಅತಿ ಹೆಚ್ಚು ರನ್ಗಳು (ಸಚಿನ್ ತೆಂಡೂಲ್ಕರ್) ಹಾಗು ಅತಿ ಹೆಚ್ಚಿನ ವಿಕೆಟ್ ಗಳ (ಅನಿಲ್ ಕುಂಬ್ಳೆ) ದಾಖಲೆಯೂ ಭಾರತೀಯರ ಹೆಸರಿನಲ್ಲಿಯೇ ಇದೆ ಎಂಬುದು ಹೆಮ್ಮೆಯ ವಿಷಯ.

2000-01ರ ಆಸ್ಟ್ರೇಲಿಯದ ಭಾರತ ಪ್ರವಾಸ ಹಾಗು 2003-04ರ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ. ಈ ಎರಡೂ ಸರಣಿಗಲ್ಲಿದ್ದ ರೋಚಕತೆ, ಹಠ ಹಾಗು ಉಭಯ ತಂಡಗಳ ಸಾಬೀತುಪಡಿಸುವಿಕೆಯ ಹಪಾಹಪಿ ಬಹುಷಃ ಬೇರ್ಯಾವ ಸರಣಿಯಲ್ಲಿಯೂ ಕಾಣಸಿಗದು. ಕಾರಣ ವಿಶ್ವವನ್ನೇ ಬಗ್ಗುಬಡಿದು ಮೆರೆಯುತ್ತಿದ್ದ ಆಸ್ಟ್ರೇಲಿಯಕ್ಕೆ ಕಬ್ಬಿಣದ ಕಡಲೆಯಾಗಿ ಅಂದು ಭಾರತ ತಂಡ ಮಾರ್ಪಾಡಾಗುತ್ತಿತ್ತು. ಹೋದಲೆಲ್ಲಾ ವಿಜಯಪತಾಕೆಯನ್ನು ಹಾರಿಸಿಯೇ ಬರುತ್ತಿದ್ದ ಧೈತ್ಯ ಕಾಂಗರು ಬಳಗದ ಎದುರು ಸಟೆದು ನಿಲ್ಲಬಲ್ಲ ತಂಡವೊಂದಿತ್ತೆಂದರೆ ಅದು ಭಾರತ ತಂಡ. ಈ ಎರಡೂ ಸರಣಿಗಳು ಟೆಸ್ಟ್ ಕ್ರಿಕೆಟ್ನಲ್ಲಿ ಕುಸಿಯುತ್ತಿದ್ದ ಭಾರತದ ವರ್ಚಸ್ಸನ್ನು ಮೇಲೆತ್ತಿ ನಿಲ್ಲಿಸಿದವಲ್ಲದೆ ವಿದೇಶಿ ನೆಲದಲ್ಲಿ ತಂಡವನ್ನು ಪಳಗಿಸುವ ಕಲೆಯನ್ನು ಪ್ರತಿಯೊಬ್ಬ ಆಟಗಾರನಲ್ಲೂ ಮೂಡಿಸಿದವು. ಇದರ ಸಂಪೂರ್ಣ ಕೀರ್ತಿ ಅಷ್ಟೂ ತಂಡಕ್ಕೂ ಸಲ್ಲಬೇಕಾದರೂ ಅದರ ಬಹುಪಾಲು ಕ್ರೆಡಿಟ್ ಡೇರಿಂಗ್ ಅಂಡ್ ಡ್ಯಾಶಿಂಗ್ ನಾಯಕನಾದ ಸೌರವ್ ಗಂಗೂಲಿಗೆ ಸೇರಬೇಕು ಎಂಬುದು ಹಲವರ ಅನಿಸಿಕೆ. ನಾಯಕನ ಹೆಚ್ಚಿನ ಹೊರೆಯ ನಂತರ 2000 ವರ್ಷದಿಂದಾಚೆಯ ಮ್ಯಾಚುಗಳಲ್ಲಿ ತನ್ನ ಬ್ಯಾಟಿಂಗ್ ನ ಹೊಳಪನ್ನು ಆತ ಕೊಂಚ ಕಳೆದುಕೊಂಡನಾದರೂ ನಾಯಕತ್ವದ ನೆಡೆಯಲ್ಲಿ ಮಾತ್ರ ನಿಸ್ಸಿಮನಾಗಿದ್ದ. ದೇಶೀ ನೆಲದಲ್ಲಿ ಭಾರತ ಅದೇನೇ ಸಾಧನೆ ಮಾಡಿದ್ದರೂ ವಿದೇಶಿ ನೆಲದಲ್ಲಿ ಅದರ ಸಾಧನೆ ಸೊನ್ನೆ ಎನ್ನುವ ಬಿಳಿಯರ ಮುಖ ಕೆಂಪಾಗುವಂತೆ ಅದೇ ನೆಲದಲ್ಲಿ ಅವರನ್ನೇ ಚಚ್ಚಿಕೆಡವಿ NatWest ಏಕದಿನ ಸರಣಿಯನ್ನು ವಶಪಡಿಸಿಕೊಂಡ ಗಂಗೂಲಿ ವಿಶ್ವವನ್ನೇ ಗೆಲ್ಲಲು ಬೇಕಾದ ತಂಡವನ್ನು ಕಟ್ಟಿದ್ದ. ಸೌತ್ ಆಫ್ರಿಕಾದ ನೆಲದಲ್ಲಿ 2003 ರ ವಿಶ್ವಕಪ್ ನ ಫೈನಲ್ ವರೆಗೂ ಬಂದು ಸರಣಿಯ ಪೂರ್ತಿ ಆಸ್ಟ್ರೇಲಿಯ ಒಂದನ್ನು ಹೊರತುಪಡಿಸಿ ಬೇರ್ಯಾವ ತಂಡಕ್ಕೂ ಮಣಿಯದ ಭಾರತ ತಂಡದ ಆ ಸಾಧನೆ ವಿಶ್ವದ ಹುಬ್ಬೇರುವಂತೆ ಮಾಡಿತ್ತು. ಇಂದಿಗೂ ವಿದೇಶಿ ನೆಲದಲ್ಲಿ ಭಾರತದ ಸಾಧನೆಯ ವಿಷಯ ಬಂದಾಗ ಗಂಗೂಲಿ ಹಾಗು ಆತನ ತಂಡದ ಸಾಹಸಗಳೇ ಮೊದಲ ಸಾಲಿನಲ್ಲಿ ಬರುತ್ತವೆ.

2001ರ ಬಾರ್ಡರ್-ಗವಾಸ್ಕರ್ ಸರಣಿ ಭಾರತದ ಪಾಲಿಗೆ ಗೆಲುವಿನ ನಗೆಯನ್ನು ತಂದಿತಾದರೂ ಆಸ್ಟೇಲಿಯ ನೆಲದ ಫಾಸ್ಟ್ ಪಿಚ್ ಗಳಲ್ಲಿ ತಮ್ಮ ತಾಕತ್ತನ್ನು ಒರೆಹಚ್ಚಿಕೊಳ್ಳುವ ಕೆಲಸ 2003ರ ತಂಡದ ಅಷ್ಟೂ ಆಟಗಾರರಿಗಿದ್ದಿತ್ತು. ಅಲ್ಲದೆ ಅದು ಆಸ್ಟ್ರೇಲಿಯಾದ ಲೆಜೆಂಡರಿ ಆಟಗಾರ ಸ್ಟೀವ್ ವಾ ನ ಕೊನೆಯ ಸರಣಿಯೂ ಆದದ್ದರಿಂದ ಕಾಂಗರೂ ಬಳಗ ಆತನ ಬೀಳ್ಕೊಡಿಗೆಯ ಕಾಣಿಕೆಯಾಗಿ ಶತಾಯ ಗತಾಯ ಟ್ರೋಫಿಯನ್ನು ಗೆದ್ದು ಕೊಡುವ ತವಕದಲ್ಲಿದ್ದಿತು. ಆಸ್ಟ್ರೇಲಿಯ ನೆಲದಲ್ಲಿ ಭಾರತದ ಗೆಲುವಿನ ಸಾಧನೆ ಕೇವಲ 11%. ಅರ್ಥಾತ್ 70 ವರ್ಷಗಳ ಉಭಯತಂಡಗಳ ಮುಖಾಮುಖಿಯಲ್ಲಿ ಭಾರತ ಆಸ್ಟ್ರೇಲಿಯವನ್ನು ಅದರದ್ದೇ ನೆಲದಲ್ಲಿ ಸೋಲುಣಿಸಿರುವುದು ಕೇವಲ 5 ಟೆಸ್ಟ್ ಗಳಲಷ್ಟೇ! 2003-04 ರ ಸರಣಿಯ ಹೊತ್ತಿಗೆ ಆ ಸಂಖ್ಯೆ ಕೇವಲ 3 ಮಾತ್ರವಾಗಿದ್ದಿತ್ತು! ಆದ ಕಾರಣ ಸರಣಿ ಭಾರತ ತಂಡಕ್ಕೆ ಆತ್ಮಗೌರವದ ಪ್ರತೀಕವಾಗಿತ್ತಷ್ಟೆ ಅಲ್ಲದೆ ಗೆದ್ದೇ ಬೀಗಬೇಕೆಂದು ಹಠಕ್ಕೆ ಬಿದ್ದಿದ್ದ ಆಸೀಸ್ ವೇಗಿಗಳ ಬಲಿಷ್ಠ ಆಕ್ರಮಣವ ದ ಜೊತೆಗೆ ಸ್ಲೆಡ್ಗಿಂಗ್ ಚಾಳಿಯನ್ನೂ ದಿಟವಾಗಿ ಎದುರಿಸುವುದಾಗಿದ್ದಿತು. ಗಾಯದ ಸಮಸ್ಯೆಯಿಂದ ಮೆಗ್ರಾಥ್ ಹಾಗು ಶೆರ್ನ್ ವಾರ್ನ್ ಸರಣಿಯಿಂದ ಹೊರಗುಳಿದದ್ದೂ ಸಹ ಭಾರತಕ್ಕಂದು ಪ್ಲಸ್ ಪಾಯಿಂಟ್.


ಮೊದಲ ಪಂದ್ಯ : ದ ಗಬ್ಬಾ ಕ್ರಿಕೆಟ್ ಮೈದಾನ, ಬ್ರಿಸ್ಬೈನ್. (4-8 Dec 2003)

ಮೋಡಗಳ ಕರಿಛಾಯೆಯಲ್ಲೇ ಶುರುವಾದ ಆಟ ಮೊದಲು ಆಸ್ಟ್ರೇಲಿಯಾದ ಬಿಗಿ ಹಿಡಿತದಲ್ಲಿಯೇ ಸಾಗಿತು. ನಂತರ 323 ರನ್ ಗಳ ಆಸೀಸ್ ನ ಮೊತ್ತವನ್ನು ಬೆನ್ನಟ್ಟಿದ ಭಾರತ 63 ರನ್ಗಳಿಗೆ 3 ವಿಕೆಟ್ ಗಳನ್ನು ಕಳೆದುಕೊಂಡು ಪರದಾಡತೊಡಗಿತ್ತು. ಇನ್ನೊಂದೆರೆಡು ವಿಕೆಟ್ಗಳು ಉರುಳಿದರೆ ಇಡೀ ಸರಣಿಗೆ ಬೇಕಿದ್ದ ಆರಂಭಿಕ ಆತ್ಮಸೈರ್ಯವೂ ಉರುಳುತ್ತಿತ್ತು. ಇನ್ನಿಂಗ್ಸ್ ಲೀಡ್ ಕೊಡಲಾಗದಿದ್ದರೂ ಟಪಟಪನೆ ಉದುರುತ್ತಿದ್ದ ವಿಕೆಟ್ಗಳನ್ನಾದರೂ ಕೂಡಲೇ ತಡೆದು ನಿಲಿಸಬೇಕಿತ್ತು. ಆಗ ಜೊತೆಯಾದ ಗಂಗೂಲಿ ಹಾಗು ಲಕ್ಷ್ಮಣ್ ಜೋಡಿ ಶೀತಬರೀತ ಆ ನೆಲದಲ್ಲೂ ಕಾಂಗರೂಗಳ ಬೆವರನ್ನು ಇಳಿಸಿದರು. ಆ ಇನ್ನಿಂಗ್ಸ್ ನ ಅದ್ಭುತ ಹೈಲೈಟ್ ಸೌರವ್ ಗಂಗೂಲಿಯ 196 ಎಸೆತಗಳ 144 ರನ್ಗಳು. ತಮ್ಮ ಬೌನ್ಸರ್ ಹಾಗು ಯಾರ್ಕ್ ರ್ ಗಳಿಂದ ವಿಸಿಟಿಂಗ್ ತಂಡದ ನಾಯಕನನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುವ ಆಸ್ಟ್ರೇಲಿಯನ್ನರ ತಂತ್ರಗಾರಿಕೆಯನ್ನು ಬುಡಮೇಲು ಮಾಡಿದ ಗಂಗೂಲಿ ಆಸೀಸ್ ನೆಲದಲ್ಲಿ ಶತಕವನ್ನು ಸಿಡಿಸಿದ ಭಾರತದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಾನೆ. ಜೊತೆಗೆ ಆಸ್ಟ್ರೇಲಿಯನ್ನರೆಂದರೆ ರನ್ಗಳ ಸುರಿಮಳೆಗೈಯುವ ಲಕ್ಷ್ಮಣ್ 75 ರನ್ ಗಳಿಸಿ ಭಾರತದ ಮೊತ್ತವನ್ನು 400 ರ ಗಡಿಯನ್ನು ದಾಟಿಸಲು ನಿರ್ಣಾಯಕ ಪಾತ್ರವನ್ನು ವಹಿಸಿದ. ಅಷ್ಟರಲ್ಲಾಗಲೇ ಮಳೆಯ ಕಾರಣ ಪಂದ್ಯದ ನಾಲ್ಕು ದಿನಗಳು ಮುಗಿದ್ದಿದ್ದವು. ಯಾವ ಆಟವನ್ನೂ ಆಡಿದರೂ ಸಹ ಪಂದ್ಯ ಡ್ರಾನಲ್ಲಿ ಅಂತ್ಯ ಕಾಣುವುದರಲ್ಲಿ ಸಂಶಯವೇ ಇರಲಿಲ್ಲ. ಆದರೆ ಆಸೀಸ್ ನೆಲದಲ್ಲಿ ಭಾರತದ ಬ್ಯಾಟಿಂಗ್ ಹಾಗು ಬೌಲಿಂಗ್ ನ ಪರೀಕ್ಷೆಯ ಮೊದಲ ಪಂದ್ಯ ಅದಾಗಿದ್ದಿತು. ನಾಲ್ಕೈದು ಆಟಗಾರರನ್ನು ಬಿಟ್ಟರೆ ಉಳಿದೆಲ್ಲ ಚಿಗುರು ಮೀಸೆಯ ಆಟಗಾರರಿಗೆ ಅದು ಚೊಚ್ಚಲ ಆಸೀಸ್ ಪ್ರವಾಸ ಬೇರೆ. ಪಂದ್ಯದಲ್ಲಿ ಭಾರತದ ದಿಟ್ಟ ಉತ್ತರ ಸರಣಿ ರೋಚಕವಾಗುವ ಎಲ್ಲ ಮುನ್ಸೂಚನೆಯನ್ನೂ ಪ್ರೇಕ್ಷಕರಿಗೆ ನೀಡಿದವು. ಅಂದುಕೊಂಡಂತೆಯೇ ಮ್ಯಾಚ್ ಡ್ರಾ ನಲ್ಲಿ ಅಂತ್ಯಕಂಡಿತು.


ಎರಡನೇ ಪಂದ್ಯ : ಓವಲ್ ಕ್ರಿಕೆಟ್ ಮೈದಾನ, ಅಡಿಲೇಡ್. ( 12-16 Dec 2003)

ಭಾರತದ ಟೆಸ್ಟ್ ಇತಿಹಾಸದ ಮತ್ತೊಂದು ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಗುವುದರಲಿತ್ತು ಓವಲ್. ಹೆಚ್ಚುಕಡಿಮೆ 2001ರ ಕೋಲ್ಕತ್ತಾ ಟೆಸ್ಟ್ ಪಂದ್ಯವೇ ಮರುಕಳಿಸುವಂತಹ ಪ್ರದರ್ಶನ ಅಂದು ಆಸೀಸ್ ನೆಲದಲ್ಲಿ ಕಂಡಿತು. ಅಂದಿನಂತೆಯೇ ಇಂದೂ ಸಹ ಲಕ್ಷ್ಮಣ್ ಹಾಗು ದ್ರಾವಿಡ್ ಮುಳುಗುತಿದ್ದ ತಂಡವನ್ನು ಗೆಲುವಿನ ದಡ ತಲುಪಿಸಿದರು. ಹಾಗು ಅದು ಇರ್ಫಾನ್ ಪಠಾಣ್ ಎಂಬ ಸ್ವಿಂಗ್ ಮಾಂತ್ರಿಕನ ಡೆಬ್ಯು ಮ್ಯಾಚ್ ಕೂಡ. ಬೌಲರ್ಗಳಿಗೆ ಅಷ್ಟೇನೂ ನೆರವಾಗದ ಫ್ಲಾಟ್ ಪಿಚ್ ನಲ್ಲಿ ಪಠಾಣ್ ತನ್ನ ಚೊಚ್ಚಲ ವಿಕೆಟ್ ರೂಪದಲ್ಲಿ ಹಡೆನ್ ನನ್ನು ಹೊರಗಟ್ಟಿದ ಆ ಕ್ಷಣವಂತೂ ವಿಶ್ವದ ಯಾವುದೇ ಮೂಲೆಗೊದರೂ ಸಾವಿರ ಸಾವಿರ ಸಂಖ್ಯೆಯಲ್ಲಿ ಜಮಾವಣೆಗೊಂಡು ತಂಡವನ್ನು ಹುರಿದುಂಬಿಸುವ ಭಾರತೀಯರ ಸಂತಸ ಮುಗಿಲು ಮುಟ್ಟುವಂತೆ ಮಾಡಿತು. ಆದರೆ ಆ ಸಂತಸ ಬಹಳಷ್ಟು ಹೊತ್ತು ಉಳಿಯಲಿಲ್ಲ. ಆ ವರ್ಷದ ತನ್ನ ಎರಡನೇ ಡಬಲ್ ಸೆಂಚೂರಿಯನ್ನು ಪೂರ್ತಿಗೊಳಿಸಲು ಆಡಲಿಳಿದ್ದಿದ್ದ ರಿಕ್ಕಿ ಪಾಂಟಿಂಗ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿ ಭಾರತದ ಬೌಲರ್ಗಳ ಗಟ್ಟಿ ತೋಳುಗಳನ್ನು ಸೋಲಿಸಿದ. ಆತ ಗಳಿಸಿದ ಸ್ಕೋರ್ 242 ರನ್ನುಗಳು. ತಂಡದ ಮೊತ್ತ 556! ನಂತರ ಇನ್ನಿಂಗ್ಸ್ ಆರಂಭಿಸಿದ ಭಾರತದ ಪಾಲಿಗೆ ಉತ್ತಮ ಆರಂಭವವೇ ದೊರೆಯಿತು. ಏಕದಿನ ಪಂದ್ಯಗಳಂತೆ ಬ್ಯಾಟ್ ಬೀಸಿದ ಸೆಹ್ವಾಗ್ ತನ್ನ ಹಾಫ್ ಸೆಂಚೂರಿ ತಲುಪುವ ಕ್ಷಣಮಾತ್ರದಲ್ಲಿ ಬಿಚೆಲ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದ. ಅತ್ತ ಕಡೆಯಿಂದ ಬಂದ ಗಂಗೂಲಿ ಹಾಗು ಸಚಿನ್ ತಮ್ಮ ಸ್ಕೋರು ಎರಡಂಕಿ ತಲುಪುವ ಮೊದಲೇ ಅದೇ ಹಾದಿಯನ್ನು ಹಿಡಿದರು. ಆಗ ತಂಡದ ಮೊತ್ತ 84/4. ಆಸ್ಟ್ರೇಲಿಯನ್ನರ ರನ್ ಗಡಿ ದಾಟಿ ಮುನ್ನುಗ್ಗಲು ಇನ್ನು ೪೭೨ ರನ್ ಗಳು ಬೇಕಿದ್ದಿತು. ಭಾರತದ ಬಳಿ ಉಳಿದ ವಿಕೆಟ್ಗಳು ಕೇವಲ ಆರೇ ಆರು. ಅಷ್ಟರಲ್ಲಾಗಲೇ ಫಾಲೋ ಆನ್ ತಪ್ಪಿಸಿಕೊಳ್ಳುವ, ಟೆಸ್ಟ್ ಡ್ರಾ ಮಾಡಿಕೊಳ್ಳುವ ಮಾತುಗಳು ಕಾಮೆಂಟರಿ ಕ್ಯಾಬಿನ್ ಇಂದ ಬರತೊಡಗಿದವು. ಸ್ಕ್ರೀಸ್ ನಲ್ಲಿ ಇದ್ದವರು ಭಾರತ ತಂಡದ ರಾಮಲಕ್ಷ್ಮಣ ಜೋಡಿಯಂದೆನ್ನಬಹುದಾದ ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಹಾಗು ದ ವಾಲ್ ದ್ರಾವಿಡ್. ಜೋಡಿ ಆಸ್ಟ್ರೇಲಿಯ ನೆಲದಲ್ಲಿ ಮಗದೊಂದು ಇತಿಹಾಸ ಬರೆಯಲು ಅಣಿಯಾಗತೊಡಗಿತು. ಭಾರತದ ನಿಜವಾದ ಟೆಸ್ಟ್ ಶುರುವಾದದ್ದು ಆಗೆನ್ನಬಹುದು. ಬೆಣ್ಣೆಯ ಮೇಲಿನ ಕಸವನ್ನು ತೆಗೆದಂತೆ ನಿರಾಯಾಸವಾಗಿ ಬೌಂಡರಿಗಳಿಗೆ ಚೆಂಡನ್ನು ಅಟ್ಟುತ್ತಾ ಮೋಹಕ ಇನ್ನಿಂಗ್ಸ್ ಕಟ್ಟಿದ್ದ ಜೋಡಿ ಬರೋಬ್ಬರಿ 303 ರನ್ ಗಳ ಸ್ಮರಣೀಯ ಜೊತೆಯಾಟವನ್ನು ನೀಡಿತು. ದ್ರಾವಿಡ್ ಟೆಸ್ಟ್ ಕ್ರಿಕೆಟ್ನ ದಿ ಬೆಸ್ಟ್ 233 ರನ್ಗಳನ್ನು ಸಿಡಿಸಿದರೆ, VVS ತಮ್ಮ ಸ್ಪೆಷಲ್ 148 ರನ್ಗಳನ್ನು ಕಲೆಹಾಕಿ ವಿಕೆಟನ್ನು ಒಪ್ಪಿಸಿದರು. ಈ ಜೊತೆಯಾಟ ಇಂದಿಗೂ ಟೆಸ್ಟ್ ಇತಿಹಾಸದಲ್ಲಿ ಗ್ರೇಟೆಸ್ಟ್ ಜೊತೆಯಾಟಗಳ ಸಾಲಿನಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ. ಪಿಚ್ ನಿಧಾನವಾಗಿ ಬೌಲಿಂಗ್ಗೆ ಪೂರಕವಾಗತೊಡದಿದ್ದರೆ ಆತ್ತ ಕಡೆ ಭಾರತದ ಸ್ಕೋರು 500 ರ ಗಡಿಯನ್ನು ದಾಟಿತ್ತು. 33 ರನ್ ಗಳ ಲೀಡ್ ನೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಆಸೀಸನ್ನು ತನ್ನ ಮಾರಕ 6 ವಿಕೆಟ್ಗಳ ದಾಳಿಯಿಂದ 196 ರನ್ಗಳಿಗೆ ಹೆಡೆಮುರಿಕಟ್ಟಿದ ಅಗರ್ಕರ್ ಆ ದಿನದ ಹೀರೊ ನಂಬರ್ ಒನ್. ನಂತರ ದೊರೆತ 229 ರನ್ಗಳ ಮೊತ್ತ ದ ಗುರಿಯನ್ನು ಭಾರತ ಆಯಾಸಪಡುತ್ತಲೇ ಆರು ವಿಕೆಟ್ ಗಳನ್ನು ಕಳೆದುಕೊಂಡು ತಲುಪಿತು. ಗೆಲುವು ಖಚಿತವಾಗುವವರೆಗೂ ಆಗಲೂ ವಿಕೆಟ್ನ ಇನ್ನೊಂದೆಡೆ ಗಟ್ಟಿಗಲ್ಲಿನಂತೆ ನಿಂತ ವ್ಯಕ್ತಿ ಮತ್ತದೇ ರಾಹುಲ್ ದ್ರಾವಿಡ್. ಟೆಸ್ಟ್ ನ ಗೆಲುವು ಆಸೀಸ್ ನೆಲದಲ್ಲಿ ಭಾರತದ 22 ವರ್ಷಗಳ ಗೆಲುವಿನ ಬರವನ್ನು ನೀಗಿಸಿತಲ್ಲದೆ ಸರಣಿ ಗೆಲುವನ್ನೂ ಸಾಧಿಸಲೇಬೇಕೆಂಬ ಹುರುಪಿನಲ್ಲಿ ನಂತರದ ಟೆಸ್ಟ್ ಅನ್ನು ಎದುರುನೋಡಿತು.


ಮೂರನೇ ಪಂದ್ಯ : ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (26-30 Dec 2003)

ಟಾಸ್ ಗೆದ್ದು ಬ್ಯಾಟಿಂಗನ್ನು ಆಯ್ದುಕೊಂಡ ಗಂಗೂಲಿಯ ನಿರ್ಧಾರವನ್ನು ಅಕ್ಷರ ಸಹ ಸದುಪಯೋಗ ಮಾಡಿಕೊಂಡ ಚೋಪ್ರಾ ಹಾಗು ಸೆಹ್ವಾಗ್ ಜೋಡಿ ಕಳೆದ ಹತ್ತು ವರ್ಷಗಳಲ್ಲೇ ಮೊದಲ ಬಾರಿಗೆ ಆಸೀಸ್ ನೆಲದಲ್ಲಿ ಭಾರತೀಯ ಓಪನರ್ಗಳು ಗಳಿಸದ ಅತ್ಯಧಿಕ ಪಾರ್ಟ್ನರ್ ಶಿಪನ್ನು ಕಲೆಹಾಕಿದರು. 141 ರನ್ ಗಳ ಮೆಗಾ ಪಾರ್ಟರ್ಶಿಪ್ನ ನಂತರ ದ್ರಾವಿಡ್ನ ಜೊತೆಗೂಡಿದ ಸೆಹ್ವಾಗ್ ಬಿರುಸಿನ ಆಟವಾಡಿದನು. ಚೆಂಡನ್ನು ಬೌಂಡರಿ ಗೆರೆಗೆ ಅಟ್ಟುವ ಮೂಲಕ ಆಸ್ಟ್ರೇಲಿಯನ್ನರ ವಿರುದ್ಧ ತನ್ನ ಚೊಚ್ಚಲ ಸೆಂಚೂರಿಯನ್ನು ಪೂರೈಸಿದ. ಮುಂದಿನ್ನೇನು, ಸ್ಪಿನ್ ಹಾಗು ಪಾಸ್ಟ್ ದಾಳಿಗಳೆರಡೂ ಕಕ್ಕಾಬಿಕ್ಕಿಯಾಗುವಂತೆ ಬ್ಯಾಟ್ ಬೀಸಿ ತಂಡದ ಮೊತ್ತ 278/1 ತಲುಪುವಂತೆ ಮಾಡಿದ. ಆದರೆ ಅಲ್ಲಿಂದ ಮುಂದೆ ಒಂದರಿಂದೊಂದು ವಿಕೆಟ್ಗಳು ಉರುಳತೊಡಗಿದವು. ಸೆಹ್ವಾಗ್ 195 ರಲ್ಲಿ ಆಡುತ್ತಿದ್ದಾಗ ಬೌಂಡರಿಯ ಮೂಲಕ ತನ್ನ ಮೊದಲ ದ್ವಿಶತಕವನ್ನು ಪೂರೈಸುವ ಜೋಶಿನಲ್ಲಿ ಕ್ಯಾಟಿಚ್ ನ ಕೈಗೆ ಕ್ಯಾಚಿತ್ತು ಪೆವಿಲಿಯನ್ ನೆಡೆಗೆ ಹೆಜ್ಜೆ ಹಾಕುತ್ತಿದ್ದರೆ ಅಲ್ಲಿಯವರೆಗೂ ಕುಣಿದು ಕುಪ್ಪಳಿಸುತ್ತಿದ್ದ ಭಾರತೀಯ ಪ್ರೇಕ್ಷಕರು ಘಾಡ ಮೌನಕ್ಕೆ ಜಾರಿದರು. ಅಲ್ಲಿಗೆ ಭಾರತದ ಮೊದಲ ಇನ್ನಿಂಗ್ಸ್ ಕ್ಷೀಣಿಸಿತೆಂದೇ ಹೇಳಬೇಕು. ಕಾರಣ 278 ರನ್ಗಳಿಗೆ ಒಂದು ವಿಕೆಟ್ಗಳನ್ನು ಕಳೆದುಕೊಂಡಿದ್ದ ಭಾರತ ನಂತರದ 88 ರನ್ ಗಳಿಗೆ ಸರ್ವಪತನವನ್ನು ಕಂಡಿತು! ಎಲ್ಲೋ ಒಂದೆಡೆ ಈ ಪತನ ಸರಣಿಯ ಫಲಿತಾಂಶ ಭಾರತದ ಪರ ವಾಲಾಡಿರಲು ಪ್ರಮುಖ ಪರಿಣಾಮ ಬೀರಿತೆಂದೇ ಹೇಳಬಹುದು. ಸೊಗಸಾದ ಆರಂಭವನ್ನು ಪಡೆದು ಮೊದಲ ದಿನದ ಮೇಲುಗೈ ಸಾಧಿಸಿದ ಭಾರತ ಕೆಲವೇ ತಾಸುಗಳ ಹಾದಿಯಲ್ಲಿ ಮುಗ್ಗರಿಸಿತು. ಅಲ್ಲಿಂದ ಮುಂದೆ ಆಸೀಸ್ ಆಟಗಾರ ಘರ್ಜನೆ ಆರಂಭಗೊಂಡಿತು. ವೇಗವಾಗಿ ಬ್ಯಾಟ್ ಬೀಸಿದ ಹೈಡೆನ್ 136 ರನ್ ಗಳನ್ನು ಮಾಡಿದರೆ ಮಗದೊಂದು ದ್ವಿಶತಕವನ್ನು ಭಾರಿಸಿ ದಾಖಲೆ ಸೃಷ್ಟಿಸಿದ ಪಾಂಟಿಂಗ್ 257 ರನ್ಗಳ ಅದ್ಭುತ ಆಟವನ್ನು ಆಡಿದ. ಮೊದಲ ಇನ್ನಿಂಗ್ಸ್ ನ ಬಿರುಸುತನ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಆಟದಲ್ಲಿ ಕಾಣಲಿಲ್ಲ. 286 ರನ್ ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 94 ರನ್ ಗಳ ಸಾಧಾರಣ ಟಾರ್ಗೆಟ್ ಅನ್ನು ಆಸೀಸ್ ಬಳಗಕ್ಕೆ ನೀಡಿ ಅದು ಸೋಲಿನ ಕಹಿಯನ್ನನುಭವಿಸಿತು. ಆದರೆ ಟೆಸ್ಟ್ ಸೋತರೂ ಭಾರತದ ಮೊದಲ ಇನ್ನಿಂಗ್ಸ್ ಅದರಲ್ಲೂ ಆ ಮೊದಲ ದಿನದಾಟ ನಮ್ಮವರ ಹುಮ್ಮಸ್ಸನ್ನು ಹೆಚ್ಚಿಸಿತು. ಅದರಲ್ಲೂ ಸೆಹ್ವಾಗ್ ಎಂಬ ರೋರಿಂಗ್ ಓಪನರ್ ನ ಭಯ ಅಲ್ಲಿಂದ ಮುಂದೆ ಆಸೀಸ್ ಬೌಲರ್ಗಳಿಗೆ ಕಾಡತೊಡಗಿತು.


ನಾಲ್ಕನೇ ಹಾಗು ಅಂತಿಮ ಪಂದ್ಯ : ಸಿಡ್ನಿ ಕ್ರಿಕೆಟ್ ಗ್ರೌಂಡ್ ( 2-6 Jan 2004 )

ಹೊಸವರ್ಷವನ್ನು ಆಸ್ಟ್ರೇಲಿಯಾದ ಅಂಗಳದಲ್ಲಿ ಆಚರಿಸಿಕೊಂಡ ಭಾರತೀಯ ಪಡೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಹಣಾಹಣಿಗೆ ಸಜ್ಜಾಗಿದ್ದಿತು. ಸರಣಿ 1-1 ರಲ್ಲಿ ಸಮಭಲಗೊಂಡಿದ್ದರಿಂದ ಎರಡೂ ತಂಡಗಳಿಗೂ ಅದು ನಿರ್ಣಾಯಕ ಟೆಸ್ಟ್. ಆಸ್ಟ್ರೇಲಿಯನ್ನರಿಗೆ ತಮ್ಮ ಹೀರೋ ಸ್ಟೀವ್ ವಾ ನ ಅಂತಿಮ ಸರಣಿಯ ಬಿಳ್ಕೊಡುಗೆಯ ಕಾಣಿಕೆಯಾಗಿ ಪ್ರಶಸ್ತಿಯನ್ನು ಗೆದ್ದುಕೊಡಬೇಕೆಂಬ ಹಠವಿದ್ದರೆ ಭಾರತೀಯರಿಗೆ ತಮ್ಮ ಚೊಚ್ಚಲ ಟೆಸ್ಟ್ ಸರಣಿಯನ್ನು ಆಸೀಸ್ ಅಂಗಳದಲ್ಲಿ ಗೆದ್ದು ಇತಿಹಾಸ ಸೃಷ್ಟಿಸುವ ತವಕ. ವಾ ನ ಕೊನೆಯ ಪಂದ್ಯಕ್ಕಾಗಿ ಭರ್ಜರಿ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಹೋಂ ಕ್ರೌಡ್ ನ ಭರಪೂರ ಸಪೋರ್ಟ್ ಆಸ್ಟ್ರೇಲಿಯನ್ನರಿಗೆ. ಇವೆಲ್ಲವೂ ಭಾರತಕ್ಕೆ ಪ್ರತಿಕೂಲ ವಾತಾವರಣೆವನ್ನೇ ಸೃಷ್ಟಿಸಿದ್ದವು. ಆದರೆ ಪ್ರತೀ ಪಂದ್ಯದಲ್ಲೂ ಒಂದಿಲ್ಲೊಬ್ಬ ಭಾರತೀಯ ಆಟಗಾರರು ಮಿಂಚುತಿದ್ದರೂ ದಿ ಗ್ರೇಟ್ ಸಚಿನ್ ನ ಪಾಲಿಗೆ ಸರಣಿ ಏಕೋ ರನ್ ಗಳಿಲ್ಲದ ಮರುಭೂಮಿಯಾಗಿದ್ದಿತು. ಸರಣಿಯ ಆರು ಇನ್ನಿಂಗ್ಸ್ ನಲ್ಲಿ ಆತ ಗಳಿಸಿದ್ದು ಕೇವಲ 83 ರನ್ ಗಳು. ಜೊತೆಗೆ ಎರೆಡೆರಡು ಡಕ್ ! ಆಸ್ಟ್ರೇಲಿಯಾದ ಲೋವರ್ ಆರ್ಡರ್ ಬ್ಯಾಟ್ಸ್ಮನ್ಗಳಿಗಿಂತಲೂ ಕನಿಷ್ಠ ರನ್ ಗಳನ್ನು ಗಳಿಸಿದ್ದ ಸಚಿನ್ಗೆ ತನ್ನ ಅಗಾಧತೆಯನ್ನು ತೋರಿಸಿಕೊಳ್ಳಲು ಉಳಿದದ್ದು ಕೇವಲ ಸಿಡ್ನಿ ಟೆಸ್ಟ್ ಮಾತ್ರ. ವಿಶ್ವದಾದ್ಯಂತ ಬೌಲರ್ಗಳ ನಿದ್ದೆ ಕೆಡಿಸುತ್ತಿದ್ದ ಮಾಸ್ಟರ್ ಬ್ಲಾಸ್ಟರ್ ಆಸ್ಟ್ರೇಲಿಯಾದ ನೆಲದಲ್ಲಿ ಮಿಂಚದೆ ಬರುವುದುಂಟೇ? ಬಹುಷಃ ಆತನ ಆಷ್ಟೂ ಆಟವೂ ಈ ಒಂದು ಟೆಸ್ಟ್ ಗಾಗಿಯೇ ಮೀಸಲಿತ್ತೇನೋ. ಕಾರಣ, ಟೆಸ್ಟ್ ಮುಗಿಯುವುದರೊಳಗೆ ಆತನ ಜೋಳಿಗೆಯಲ್ಲಿ ಒಂದು ಡಬಲ್ ಸೆಂಚೂರಿ ಹಾಗು ಒಂದು ಫಿಫ್ಟಿಯೊಟ್ಟಿಗೆ ಇದ್ದ ಒಟ್ಟು ರನ್ ಗಳು ಮುನ್ನೂರರ ಗಡಿಯನ್ನು ದಾಟಿದ್ದವು!

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಓಪನರ್ ಗಳು ಸ್ವಿಂಗ್ ಹಾಗು ಬೌನ್ಸರ್ ಗಳ ಹೊರತಾಗಿಯೂ ಮಗದೊಂದು ಉತ್ತಮ ಓಪನಿಂಗನ್ನು ನೀಡಿದರು. 194ಕ್ಕೆ ಮೂರು ವಿಕೆಟ್ ಗಳನ್ನು ಕಳೆದುಕೊಂಡಿದ್ದ ಭಾರತದ ನಾಲ್ಕನೇ ವಿಕೆಟ್ ಉರುಳಿದಾಗ ಪರದೆಯ ಮೇಲೆ ಮೂಡಿದ್ದ ಸ್ಕೋರ್ 547 ರನ್ಗಳು! ಸಚಿನ್ ಹಾಗು ಲಕ್ಷ್ಮಣ್ ಜೋಡಿ ಬರೋಬ್ಬರಿ 303 ರನ್ ಗಳ ಜೊತೆಯಾಟವನ್ನು ಅಲ್ಲಿ ನೀಡಿತು. ಲಕ್ಷ್ಮಣ್ 178 ರನ್ ಗಳನ್ನು ಮಾಡಿ ಔಟಾದರೆ ಸಚಿನ್ ಇನ್ನಿಂಗ್ಸ್ ನ ಕೊನೆಯವರೆಗೂ ತಂಡವನ್ನು ಮುನ್ನೆಡೆಸುತ್ತಾ 241 ರನ್ ಗಳನ್ನು ಗಳಿಸಿ ಅಜೇಯನಾಗಿ ಉಳಿದ. ಆಗ ತಂಡದ ಮೊತ್ತ 7 ವಿಕೆಟ್ ನಷ್ಟಕ್ಕೆ 705 ರನ್ ಗಳು. ಅದು ಇಂದಿಗೂ ಆಸ್ಟ್ರೇಲಿಯ ನೆಲದಲ್ಲಿ ಇನ್ನಿಂಗ್ಸ್ ಒಂದರ ಭಾರತದ ಅತ್ಯಧಿಕ ಮೊತ್ತ.

ಸರಣಿಗೂ ಮೊದಲು ಆಯ್ಕೆದಾರರ ಜೊತೆಗೆ ವಾಗ್ವಾದ ನೆಡೆಸಿದ್ದ ಗಂಗೂಲಿ ತಾನು ಬಯಸಿದ ಟೀಮನ್ನು ಕೊಡದಿದ್ದಲ್ಲಿ ತಾನೇ ತಂಡದಿಂದ ಹೊರಗುಳಿಯುವೆನು ಎಂದು ಹಠಹಿಡಿದಿದ್ದ. ಆ ಹಠದ ಹಿಂದಿದ್ದ ಏಕಮಾತ್ರ ಹೆಸರು ಅನಿಲ್ ಕುಂಬ್ಳೆ. ಆಸ್ಟ್ರೇಲಿಯಾದ ಫಾಸ್ಟ್ ಪಿಚ್ ಗಳಿಗೆ ಸ್ಪಿನ್ ಬೌಲಿಂಗ್ ಅಷ್ಟೇನೂ ಸೂಕ್ತವಲ್ಲವಾದರೂ ಒಂದೆರೆಡು ಸ್ಪಿನ್ನರ್ ಗಳು ತಂಡಕ್ಕೆ ಬೇಕಾಗಿಯೇ ಇದ್ದರು ಬಹಳಷ್ಟು ಯುವ ಸ್ಪಿನ್ನರ್ಗಳು ಅಂದು ಗಂಗೂಲಿಯ ಆಪ್ತವಲಯದಲ್ಲಿ ಕಾಣಿಸಿಕೊಂಡರೂ ನಾಯಕ ಮೊಗಮಾಡಿದ್ದು ಮಾತ್ರ ಜಂಬೊ ಕುಂಬ್ಳೆಯಡೆಗೆ. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ನ ಒಟ್ಟು ಎಂಟು ವಿಕೆಟ್ ಗಳನ್ನು ಕಬಳಿಸಿದ ಕುಂಬ್ಳೆ ತನ್ನ ಆಯ್ಕೆಯನ್ನು ದಾಖಲೆಯ ಅಂಕಿ ಅಂಶಗಳೊಟ್ಟಿಗೆ ಸಮರ್ಥಿಸಿಕೊಂಡ. ಅಲ್ಲದೆ ಇಡೀ ಸರಣಿಯಲ್ಲಿ ಅತಿಹೆಚ್ಚು ವಿಕೆಟ್ ಗಳನ್ನು(24) ಉರುಳಿಸಿ ಗಂಗೂಲಿಯ ನಂಬಿಕೆಯನ್ನು ಉಳಿಸಿಕೊಂಡ.

ಎರಡನೇ ಇನ್ನಿಂಗ್ಸ್ ನಲ್ಲಿ ಲ್ಯಾಂಗರ್ ಹಾಗು ಕ್ಯಾಟಿಚ್ನ ಸೆಂಚೂರಿಗಳ ಹೊರತಾಗಿಯೂ 474 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡ ಆಸ್ಟ್ರೇಲಿಯ ಭಾರತಕ್ಕೆ 231 ರನ್ಗಳ ಮುನ್ನಡೆಯನ್ನು ನೀಡಿತ್ತು. ನಂತರ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಭಾರತ ದ್ರಾವಿಡ್ ಹಾಗು ತೆಂಡೂಲ್ಕರ್ರ ಶತಕದ ಜೊತೆಯಾಟದ ನೆರವಿನಿಂದ ಹೆಚ್ಚು ಕಡಿಮೆ 5 ರನ್ ಗಳ ಸರಾಸರಿಯಲ್ಲಿ 211 ರನ್ ಗಳನ್ನು ಕಲೆಹಾಕಿತು. ನಾಲ್ಕನೇ ದಿನದಾಟದ ಇನ್ನು ನಾಲ್ಕು ಓವರ್ಗಳು ಬಾಕಿ ಇರುವಂತೆ ಡಿಕ್ಲೆರ್ ಮಾಡಿಕೊಂಡು ಆಸ್ಟ್ರೇಲಿಯನ್ನರಿಗೆ 443 ರನ್ ಗಳ ಬೃಹತ್ ಟಾರ್ಗೆಟನ್ನು ನೀಡಿತು. ತಮ್ಮ ತವರು ನೆಲದಲ್ಲೇ ಕೊನೆಯ ಟೆಸ್ಟ್ ನ ಕೊನೆಯ ಇನ್ನಿಂಗ್ಸ್ ನ ವರೆಗೂ ಆಸ್ಟ್ರೇಲಿಯನ್ನರನ್ನು ಈ ಮಟ್ಟಿಗೆ ಕಾಡಿರುವ ತಂಡ ಅಂದಿಗೆ ಬಹುಷಃ ಬೇರೊಂದಿರಲು ಸಾಧ್ಯವಿಲ್ಲ. ಅಲ್ಲಿದ್ದ ಆಟಗಾರರಿಂದಿಡಿದು ನೆರೆದಿದ್ದ ಪ್ರತಿಯೊಬ್ಬ ಪ್ರೇಕ್ಷಕನಿಗೂ ಭಾರತದ ಈ ಮಟ್ಟಿನ ಹೋರಾಟ ಸಹಜವಾಗಿಯೇ ದಿಗ್ಬ್ರಮೆಯನ್ನುಂಟುಮಾಡಿತ್ತು. ಭಾರತಕ್ಕು ಸರಣಿ ಗೆಲುವಿಗೂ ಇದ್ದ ಅಂತರ ಕೇವಲ ಹತ್ತು ವಿಕೆಟ್ಗಳಷ್ಟೇ. ಆದರೆ ಆಸ್ಟ್ರೇಲಿಯನ್ನರಿಗೆ ಅದು 443 ರನ್ಗಳ ದೂರದ ಪಯಣ. ಮೇಲಾಗಿ ಟೆಸ್ಟ್ ಇತಿಹಾಸದಲ್ಲೇ ಈವೊಂದು ಬೃಹತ್ ಮೊತ್ತವನ್ನು ನಾಲ್ಕನೇ ಇನ್ನಿಂಗ್ಸ್ ನಲ್ಲಿ ಗಳಿಸಿದ್ದ ಪುರಾವೆಗಳೇ ಇಲ್ಲ. ಆದರೇನಂತೆ. ಅಷ್ಟು ಸಲೀಸಾಗಿ ಸೋಲೊಪ್ಪಿಕೊಳ್ಳುವ ಜಾಯಮಾನ ಆಸ್ಟ್ರೇಲಿಯನ್ನರದಲ್ಲ. ಈಗಿನ ತಂಡ ಅದೇನೇ ಇರಬಹದು ಆದರೆ ಅಂದಿನ ಸ್ಟೀವ್ ವಾ ಬಳಗಗಂತೂ ಅದನ್ನು ಅರಗಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಮೇಲಾಗಿ ಅದು ಪ್ರತಿಷ್ಠೆಯ ಪ್ರೆಶ್ನೆ. ವಿಶ್ವಕಪ್ ಅನ್ನು ಗೆದ್ದ ತಂಡ ತನ್ನದೇ ನೆಲದಲ್ಲಿ ವಿದೇಶಿ ತಂಡದಿಂದ ಸರಣಿ ಸೋಲನ್ನು ಕಾಣುವುದು ಕಾಂಗರೂಗಳಿಗೆ ಕಲ್ಪನೆಗೂ ಮೀರಿದ ಸಂಗತಿಯಾಗಿದ್ದಿತು. ಆದ ಕಾರಣ ಏಕದಿನ ಪಂದ್ಯದಂತೆ ಬ್ಯಾಟ್ ಬೀಸಿದ ಆಸೀಸ್ ಪಡೆ ಶತಾಯಗತಾಯ ಗೆದ್ದೇ ತೀರುತ್ತೇವೆಂಬ ಅಚಲ ವಿಶ್ವಾಸದಿಂದ ಮುನ್ನೆಡಿಯಿತು. ಮೊದಲ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ಗಳನ್ನು ಕಬಳಿಸಿದ ಕುಂಬ್ಳೆ ಎರಡನೇ ಇನ್ನಿಂಗ್ಸ್ ನಲ್ಲೂ ಅದೇ ಬಗೆಯ ಪ್ರದರ್ಶನವನ್ನು ತೋರಿ ಒಟ್ಟು 4 ವಿಕೆಟ್ಗಳನ್ನು ಒಡೆದುರುಳಿಸಿದ.

ಒತ್ತಡದ ಸ್ಥಿತಿಯಲ್ಲೂ ಮನೋಜ್ಞವಾಗಿ ಬ್ಯಾಟ್ ಬೀಸತೊಡಗಿದ ಆಸೀಸ್ ಬ್ಯಾಟ್ಸಮನ್ಗಳ ಆಟವನ್ನು ನೋಡಿದವರಿಗೆ ಅದು ಗೆಲುವಿನ ಓಟವೆಂದೇ ಎನಿಸಿತು. ಆದರೆ ಪಂದ್ಯದ ಕೊನೆಯ 30 ಓವರ್ ಗಳು ಬಾಕಿ ಇರುವಾಗ ಪಾಂಟಿಂಗ್ ನ ರೂಪದಲ್ಲಿ 4ನೇ ವಿಕೆಟ್ ಯಾವಾಗ ಬಿದ್ದಿತೋ ಆಗ ಮಾತ್ರ ಭಾರತೀಯ ಪಡೆಯಲ್ಲಿ ಗೆಲುವಿನ ವಿಶ್ವಾಸ ಚಿಗುರೊಡೆಯತೊಡಗಿದ್ದು. ಪಾಂಟಿಂಗ್ ಪೆವಿಲಿಯನ್ ಗೆ ಸೇರಿದ ಕೆಲಕ್ಷಣ ಮೌನವಾದ ಸಿಡ್ನಿ ಮೈದಾನ ಅಷ್ಟೂ ಜನರನ್ನು ಎದ್ದು ನಿಲುವಂತೆ ಮಾಡಿತು. ಕೂಡಲೇ ಚಟಚಟ ಸದ್ದಿನ ಚಪ್ಪಾಳೆಯ ರಣಕಹಳೆ ಮೊಳಗಿ ಮಾರ್ಧನಿಸತೊಡಗಿತು. ಕಾರಣ ತಮ್ಮ ಹೀರೊ, ಹೆಚ್ಚು ಕಡಿಮೆ 20 ವರ್ಷಗಳ ಕಾಲ ದೇಶಕ್ಕಾಗಿ ಆಡಿದ ದಂತಕತೆ ಸ್ಟೀವ್ ವಾ ಕೊನೆಯ ಬಾರಿಗೆ ಆಸೀಸ್ ಜೆರ್ಸಿಯನ್ನು ತೊಟ್ಟು ಆಡಲು ಇಳಿಯುತಿದ್ದ. ನೋಡುಗರ ಮೈ ರೋಮಾಂಚನಗೊಳ್ಳುವಂತೆ ಮೂಡಿದ ಆ ಸ್ವಾಗತದ ಮೊರೆತ ಆತ ಸ್ಕಿರ್ಸ್ ನ ಮೇಲೆ ಬಂದು ನಿಂತರೂ ಸಹ ನಿಲ್ಲಲಿಲ್ಲ. ಅಂತಹ ಒಂದು ಸೂಪರ್ ಮ್ಯಾನ್ ನಾಯಕನ ಕೊನೆಯ ಪಂದ್ಯದ ಫಲಿತಾಂಶವೂ ಆತನ ಹೆಗಲ ಮೇಲೆಯೇ ಕುಳಿತಿತ್ತು. ಮೂವತ್ತು ಓವರ್ಗಳು. ಇನ್ನೊಂದೆರೆಡು ವಿಕೆಟ್ ಉರುಳಿದರೆ ಭಾರತದ ದಶಕಗಳ ಕನಸು ನನಸು. 242 ರನ್ ಗಳನ್ನು ಗಳಿಸಿದರೆ ಆಸ್ಟ್ರೇಲಿಯನ್ನರ ಕನಸು ನನಸು. ಇಂತಹ ಸಂಧಿಘ್ನ ಪರಿಸ್ಥಿಯಲ್ಲಿ ಆಡಲತ್ತಿದ ವಾ ಹಾಗು ಕ್ಯಾಟಿಚ್ ಜೋಡಿ ಪಂದ್ಯವನ್ನು ಗೆದ್ದೇ ತೀರಬೇಕೆಂಬ ದೃಢ ನಿರ್ಧಾರದಲ್ಲಿ ಮುನ್ನುಗ್ಗಿದಂತಿತ್ತು. ಭಾರತದ ಬೌಲರ್ ಗಳ ಯಾವ ತಂತ್ರಮಂತ್ರಕ್ಕೂ ಬಗ್ಗದ ವಾ, ಕ್ಯಾಟಿಚ್ನ ಜೊತೆಗೂಡಿ ಬರೊಬ್ಬರಿ 142 ರನ್ ಗಳ ಜೊತೆಯಾಟವನ್ನು ನೀಡಿದ. ತನ್ನ 80 ರನ್ ಗಳ ಅಮೋಘ ಆಟದಿಂದ ಕೊನೆಯ ಟೆಸ್ಟ್ ಪಂದ್ಯವನ್ನು ಸೋಲಿನ ದವಡೆಯಿಂದ ಪಾರುಮಾಡಿ ಆಸ್ಟ್ರೇಲಿಯನ್ನರ ಸರಣಿ ಸೋಲನ್ನು ತಡೆದನಾತ. ಸರಣಿಯ ಕೊನೆಯ ಟೆಸ್ಟ್ ನ ಕೊನೆಯ ಓವರ್ನನಲ್ಲಿ ಕುಂಬ್ಳೆಯ ಬೌಲಿಂಗ್ ಗೆ ಕ್ಯಾಚನಿತ್ತು ಆತ ಔಟಾದಾಗ ನೆರೆದಿದ್ದ ಅಷ್ಟೂ ಜನರು ಕೆಲಕ್ಷಣ ಮೌನವಾದರು. ಸಿಡ್ನಿ ಮೈದಾನ ಮತ್ತೊಮ್ಮೆ ಚಪ್ಪಾಳೆಯ ಸದ್ದಿನಲ್ಲಿ ಮುಳಿಗಿತು. ಸೂರ್ಯ ಪಶ್ಚಿಮದ ಆಗಸದಲ್ಲಿ ಕಣ್ಮರೆಯಾಗತೊಡಗಿದ್ದ. ಸರಣಿ ಸೋಲನ್ನು ತಪ್ಪಿಸಿದ ಆತ್ಮತೃಪ್ತಿಯೊಂದಿಗೆ ತನ್ನ ಕೊನೆಯ ಹೆಜ್ಜೆಗಳನ್ನು ಇಡುತ್ತಾ ಸ್ಟೀವ್ ವಾ ಡ್ರೆಸ್ಸಿಂಗ್ ರೂಮಿನೆಡೆ ಸಾಗಿದ. 90 ನೇ ಓವರ್ನ ಕೊನೆಯ ಒಂದು ಎಸೆತ ಬಾಕಿ ಇರುವಾಗ ಗಿಲ್ಕ್ರಿಸ್ಟ್ ವಿಕೆಟ್ ಅನ್ನು ಉರುಳಿಸಿದ ಭಾರತಕ್ಕೆ ಟೆಸ್ಟ್ ಗೆಲ್ಲಲು ಬಾಕಿ ಉಳಿದ ಒಂದು ಎಸೆತದದಲ್ಲಿ 4 ವಿಕೆಟ್ಗಳನ್ನು ಉರುಳಿಸಬೇಕಿದ್ದರೆ ಆಸ್ಟ್ರೇಲಿಯನ್ನರಿಗೆ 86 ರನ್ಗಳ ಅವಶ್ಯಕತೆ ಇದ್ದಿತು. ಸರಿಯಾಗಿ 90 ಓವರ್ಗಳಿಗೆ ಮುಗಿಯಬೇಕಿದ್ದ ಮ್ಯಾಚು ಇನ್ನೂ 4 ಓವರ್ಗಳಿಗೆ ವಿಸ್ತರಿಸಲ್ಪಟ್ಟಿತ್ತಾದರೂ ಫಲಿತಾಂಶ ಅಂದುಕೊಂಡಂತೆಯೇ ಡ್ರಾ ನಲ್ಲಿ ಕೊನೆಗೊಂಡಿತು. ಕಳೆದ ಸರಣಿ (2001) ಭಾರತದ ಪಾಲಾದರಿಂದ ಪ್ರಸ್ತುತ ಟ್ರೋಫಿ ಭಾರತದ ಬಳಿಯೇ ಉಳಿಯಿತು. ಸರಣಿ ಸಮಬಲದಲ್ಲಿ ಅಂತ್ಯಕಂಡರೂ ಗೆದ್ದಷ್ಟೇ ಖುಷಿ ಮಾತ್ರ ಭಾರತದ ಪಾಳಯದಲ್ಲಿ ಮನೆ ಮಾಡಿತ್ತು. ಕಾರಣ ಆ ಫಲಿತಾಂಶ ಆಸೀಸ್ ನೆಲದಲ್ಲಿ ಭಾರತದ ಅಲ್ಲಿಯವರೆಗಿನ ದಿ ಬೆಸ್ಟ್ ಆಗಿದ್ದಿತು. ಇಂದಿಗೂ ಕೂಡ! ಒಂದುಪಕ್ಷ ಉತ್ತಮ ಆರಂಭವನ್ನು ಪಡೆದಿದ್ದ ಮೂರನೇ ಟೆಸ್ಟ್ ಅನ್ನು ಗೆದ್ದಿದ್ದರೆ ಅಥವಾ ಡ್ರಾ ಮಾಡಿಕೊಂಡಿದ್ದರೂ ಸರಣಿ ಗೆಲುವಿನ ಹಿರಿಮೆ ಅಂದು ಭಾರತದಾಗಿರುತ್ತಿತ್ತು. ರಾಹುಲ್ ದ್ರಾವಿಡ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಬಾಜನನಾದರೆ ಕುಂಬ್ಳೆ ಸರಣಿಯ ಅತಿ ಹೆಚ್ಚು ವಿಕೆಟನ್ನು (24) ಬರೆದು ದಾಖಲೆ ಬರೆದ. ಸೆಹ್ವಾಗ್, ದ್ರಾವಿಡ್, ಸಚಿನ್, ಗಂಗೂಲಿ. ಲಕ್ಷ್ಮಣ್ ಹಾಗು ಕುಂಬ್ಳೆ ಇಂದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅಜರಾಮರರಾಗಲು ಈ ಸರಣಿ ಪ್ರಮುಖ ಪಾತ್ರವನ್ನು ವಹಿಸಿತು.

ಇಂದು ಆ ಸರಣಿ ಮುಗಿದು ಒಂದೂವರೆ ದಶಕಗಳೇ ಕಳೆದಿವೆ. ಪ್ರಸ್ತುತ 10 ಓವರ್ಗಳ ಕ್ರಿಕೆಟ್ ಪಂದ್ಯಗಳಲ್ಲಿ ಟೆಸ್ಟ್ ಕ್ರಿಕೆಟ್ ನ ಹೊಳಪು ಕಾಣೆಯಾಗುತ್ತಿರುವುದು ಒಂದೆಡೆಯಾದರೆ ನೆಡೆಯುವ ಟೆಸ್ಟ್ ಪಂದ್ಯಗಳ ಹೆಚ್ಚಿನ ಆಯುಷ್ಯ ಹೆಚ್ಚೆಂದರೆ ಮೂರುದಿನಗಳಿಗಷ್ಟೇ ಕೊನೆಯಾಗುತ್ತಿದೆ. ಟೆಸ್ಟ್ ರಾಂಕಿಂಗ್ನಲ್ಲಿ ಇಂದು ಭಾರತ ನಂಬರ್ 1 ಸ್ತಾನದಲ್ಲಿದ್ದರೂ, ನಂಬರ್ 1 ಬ್ಯಾಟ್ಸಮನ್ಗಳೆಲ್ಲರೂ ನಮ್ಮವರೇ ಆದರೂ, ಎದುರಾಳಿ ಪಾಳಯಗಳಲ್ಲಿ ದಂತಕತೆಗಳೆನ್ನುವ ಅಂದಿನ ಆಟಗಾರರ್ಯಾರು ಇರದಿದ್ದರೂ ಆಸ್ಟ್ರೇಲಿಯಾ ಹಾಗು ಸೌತ್ ಆಫ್ರಿಕಾದ ನೆಲಗಳಲ್ಲಿ ಟೆಸ್ಟ್ ಸರಣಿ ಗೆಲ್ಲುವ ಭಾರತದ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಪ್ರಸ್ತುತ ಬಾರ್ಡರ್-ಗವಾಸ್ಕರ್ ಸರಣಿ ಸೊರಗಿ ಸುಣ್ಣವಾಗಿರುವ ಆಸ್ಟ್ರೇಲಿಯ ತಂಡವನ್ನು ಬಗ್ಗು ಬಡಿದು ಭಾರತ ಆ ಮೈಲಿಗಲ್ಲನ್ನು ತಲುಪುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಆದರೆ ದೇಸಿ ಪಿಚ್ ಗಳಲ್ಲಿ ಅದೇನೇ ಕುಣಿದರು ತನ್ನ ಸಾಮರ್ಥ್ಯ ಹಾಗು ಬಂಡವಾಳವನ್ನು ವಿದೇಶಿ ನೆಲದಲ್ಲಿ ತೋರಿಸುವ ಚಾಲೆಂಜ್ ತಂಡದ ಅಷ್ಟೂ ಆಟಗಾರರ ಮುಂದಿದೆ.


Friday, November 16, 2018

ಸಂಸದರ ಸಮೇತ ಇಡೀ ಪಾರ್ಲಿಮೆಂಟನ್ನೇ ಮಾರಿದ ಭೂಪನೀತ!!

ಪ್ರತಿಭೆ. ಎಲ್ಲೆಂದರಲ್ಲಿ ಎಲ್ಲರಿಗೂ ಸಿಗುವ ವಸ್ತುವಂತು ಇದು ಅಲ್ಲವೇ ಅಲ್ಲ. ಹುಟ್ಟುತ್ತಲೇ ಬರುವ ಪ್ರತಿಭೆಯನ್ನು ಹೇಗೆ ಪ್ರತಿಭೆಯೆಂದೆನ್ನಲಾಗದೋ ಹಾಗೆಯೇ ಕಷ್ಟ ಪಟ್ಟು ಗಿಟ್ಟಿಸಿಕೊಳ್ಳುವ ಪ್ರತಿಭೆಯನ್ನು ಪ್ರತಿಭೆಯೆಂದೆನ್ನಲಾಗದಿರದು! ಹಾಗೆ ಅದನ್ನು ಅದನ್ನು ಗಿಟ್ಟಿಸಿಕೊಳ್ಳಲು ಸವೆಸಬೇಕಾದ ಹಾದಿಯೂ ಸಹ ಬಲು ದುರ್ಘಮ. ಒಮ್ಮೆ ದೊರೆತರೆ ಮೇಲು-ಕೀಳು, ಬಡವ-ಬಲ್ಲಿದ, ಕಳ್ಳ ಕಾಕರ್ಯಾರನ್ನೂ ಸಹ ಅದು ಪರಿಗಣಿಸುವುದಿಲ್ಲ. ಕಾರ್ಯಗಳು ಒಳ್ಳೆವೋ, ಕೆಟ್ಟವೋ ಅಥವ ಉಪಯೋಗ ದುಷ್ಪಾರಿಣಾಮಗಳೇನೇ ಇದ್ದರೂ ಲೆಕ್ಕಿಸದೆ ಆಡಿಸುವವನ ಕೈಚಳಕದಲ್ಲಿ ಪ್ರತಿಭೆಯೂ ಕೂಡ ಆಡತೊಡಗುತ್ತದೆ. ವಿಶ್ವೇಶ್ವರೈಯ್ಯ, ಸತ್ಯಜಿತ್ ರೇ, ವಿರಾಟ್ ಕೊಹ್ಲಿ ಅಥವಾ ಧೀರೂಭಾಯಿ ಅಂಬಾನಿಯಂತಹ ಹಲವರೊಟ್ಟಿಗಿದ್ದ/ಇರುವ ವಿಭಿನ್ನ ಹಾಗು ವಿಶಿಷ್ಟ ಪ್ರತಿಭೆಯೇ ಅವರನ್ನು ಇಂದು ದೇಶದ ಇತಿಹಾಸದಲ್ಲಿ ದಂತಕತೆಗಳನ್ನಾಗಿ ಮಾಡಿದೆ. ಅಂತೆಯೇ ವೀರಪ್ಪನ್ , ಸದ್ದಾಂ ಹುಸೇನ್, ಒಸಾಮಾ ಬಿನ್ ಲಾಡೆನ್ರಂತಹ ನರರಾಕ್ಷಸರ ಕೈಯ ಬೆಂಕಿಯ ಉಂಡೆಯಂತೆಯೂ ಅದು ಸಾವಿರಾರು ಜನರ ವಂಚನೆ ಹಾಗು ಮಾರಣಹೋಮದಲ್ಲಿ ಪರೋಕ್ಷವಾಗಿಯೂ ಸಹಕರಿಸಿದೆ! ಇಂತಹದ್ದೇ ಪ್ರತಿಭೆಯನ್ನು ಬೆಳೆಸಿಕೊಂಡು ಬಂದ ಹಲವರು ದೇಶದ ನಾನಾ ಜೈಲುಗಲ್ಲಿ ಬಂದಿಯಾಗಿ, ಶಿಕ್ಷೆಗಳೆಲ್ಲವನ್ನೂ ಅನುಭವಿಸಿದರೆ ಕೆಲವರು ಅಲ್ಲಿಯೇ ಕೊಳೆತು ಕೊನೆಯುಸುರೆಳೆದಿದ್ದಾರೆ. ಇನ್ನು ಕೆಲವರು ತಮ್ಮ ಕೊನೆಗಾಲದಲ್ಲಿ ಕುಂಟುತ್ತಾ ಕೊರಗುತ್ತಾ ಹೊರಬರುತ್ತಾರೆ ಮತ್ತೂ ಕೆಲವರು ಮಾತ್ರ ಒಂದಲ್ಲ, ಎರಡಲ್ಲ ಹತ್ತಾರು ಭಾರಿ ಅಂತಹ ಭಾರಿ ಜೈಲುಗಳಿಗೇ ಚಳ್ಳೆಹಣ್ಣನು ತಿನ್ನಿಸಿ ಹೊರ ಓಡಿರುವುದೂ ಉಂಟು. ಅಲ್ಲೂ ಇದ್ದ ಆ ಅಮೂಲ್ಯ ಅಂಶವೇ ಪ್ರತಿಭೆ! ಇಂತಹ ಪ್ರತಿಭೆಗಳ ಮಾಸ್ಟರ್ ಗೇಮ್ಗಳನ್ನು ನಾವು ಹಲವಾರು ಚಿತ್ರಗಳಲ್ಲಿ ಕಂಡು ಬೆರಗಾಗಿದ್ದೇವೆ. ಅಂತಹ ಪ್ರತಿಭೆಯುಳ್ಳವನು ಒಬ್ಬ ವಿಲನ್ ನಂತಾದರೂ ನೋಡುಗರನೇಕರಿಗೆ ಮಾತ್ರ ನಾಯಕಶ್ರೇಷ್ಠ!


ನಟ್ವರ್ಲಾಲ್ :

ಸ್ವಾತಂತ್ರ್ಯಪೂರ್ವ ಭಾರತದಿಂದ ಇತ್ತೀಚಿನ ಕೆಲದಶಕಗಳವರೆಗೂ ಈ ಒಂದು ಹೆಸರು ತುಂಬಾನೇ ಹೆಸರು ಮಾಡಿದ್ದಿತು. ಕಳ್ಳತನವನ್ನು ಪ್ರತಿಭೆಯೆಂದುಕೊಂಡವರಿಗೆ ಆ ಪ್ರತಿಭೆಗೆ ಕೊಡುವ ಉತ್ಕೃಷ್ಟ ಬಿರುದೇನೋ ಎಂಬುವಂತೆ ನಟ್ವರ್ಲಾಲ್ನ ಹೆಸರನ್ನು ಬಳಸಲಾಗುತ್ತಿತ್ತು. ನೂರಕ್ಕಿಂತ ಹೆಚ್ಚಿನ ಕೇಸುಗಳ ಫಲದಿಂದ 113 ವರ್ಷಗಳ ಸಜೆಗೆ ಒಳಗಾಗಿದ್ದ , 8 ರಾಜ್ಯದ ಪೊಲೀಸರಿಗೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿ, 50 ಕಿಂತ ಹೆಚ್ಚಿನ ಅನ್ವರ್ಥ ನಾಮಗಳನ್ನು ಒಳಗೊಂದು, ಟಾಟಾ, ಬಿರ್ಲಾ ಹಾಗು ಅಂಬಾನಿಯರಂತಹ ಹತ್ತಾರು ಉದ್ಯಮಪತಿಗಳಿಗೆ ಮಂಕುಬುದ್ದಿಯನ್ನೆರಚಿ, ರಾಷ್ಟ್ರಪತಿಗಳ ಹಸ್ತಾಕ್ಷರವನ್ನೇ ನಕಲು ಮಾಡಿದ್ದ, ಮೂರು ಬಾರಿ ತಾಜ್ ಮಹಲ್ ಅನ್ನು, ರಾಷ್ಟ್ರಪತಿಭವನ ಅಷ್ಟೇ ಏಕೆ ನಮ್ಮ ಇಡೀ ಪಾರ್ಲಿಮೆಂಟನ್ನೇ ಅಷ್ಟೂ ಸಂಸದರೊಟ್ಟಿಗೆ( !) ವಿದೇಶಗರಿಗೆ ಮಾರಿದವನೀತ ಎಂದರೆ ನಮಗೆ ಅಚ್ಚರಿಯಾಗದಿರದು. ಇಂದು ದಿನವಿಡಿ ಅರಚಾಡಿ ಕಚ್ಚಾಡಿ ಸಂತೆಯಂತಾಗುತ್ತಿರುವ ನಮ್ಮ ವ್ಯವಸ್ಥೆಯನ್ನು ಮಾರುವ ಇಂಥವರು ಇಂದಿಗೂ ಇದ್ದಿದ್ದರೆ ಬಹುಷಃ ಒಳಿತಾಗುತ್ತಿತ್ತೇನೋ. ಅದಿರಲಿ. ಇಷ್ಟೆಲ್ಲಾ ಕೃತ್ಯಗಳನ್ನು ಎಸಗಿ ಸಿಕ್ಕಿಹಾಕಿಕೊಂಡ ಈತ ತನ್ನ ನೂರಾರು ವರ್ಷದ ಸೆರೆವಾಸದಲ್ಲಿ ಅನುಭವಿಸಿದ್ದು ಮಾತ್ರ ಹೆಚ್ಚೆಂದರೆ 20 ವರ್ಷಗಳಷ್ಟೇ. ಬಾಕಿ ಅಷ್ಟೂ ಬಾರಿಯೂ ಒಂದಲ್ಲ ಒಂದು ಬಗೆಯಲ್ಲಿ ಪೊಲೀಸರಿಗೆ ಚಳ್ಳೆಹಣ್ಣನು ತಿನ್ನಿಸಿ ಪರಾರಿಯಾಗಿರುತ್ತಾನೆ. ಈತನ ಕಟ್ಟ ಕಡೆಯ ಎಸ್ಕೇಪ್ ನೆಡೆದದ್ದು 1996 ರಲ್ಲಿ. ಆತನಿಗಾದ ಬರೋಬ್ಬರಿ 84 ವರ್ಷ!

ಮೋಸಮಾಡಿ ಹಣಗಳಿಸುವ ಹವ್ಯಾಸ ಈತನಿಗೆ ತನ್ನ ಓದಿನ ದಿನಗಳಿಂದಲೇ ಮೈಹತ್ತಿತ್ತು. ಪರಿಚಯದವರೊಬ್ಬರು ಬ್ಯಾಂಕ್ ಡ್ರಾಫ್ಟ್ ಗಳನ್ನು ಬ್ಯಾಂಕಿಗೆ ಜಮಾವಣೆ ಮಾಡಲು ಈತನನ್ನು ಕಳಿಸುವಾಗ ಅವರುಗಳ ಹಸ್ತಾಕ್ಷರಗಳನ್ನು ನೋಡುತ್ತಾ ಪಕ್ಕಾ ಒರಿಜಿನಲ್ ಹಸ್ತಾಕ್ಷರಗಳಂತೆಯೇ ನಕಲು ಮಾಡುವುದನ್ನು ಕಲಿತು ಅಂದಿಗೇ ಸಾವಿರಾರು ರೂಪಾಯಿಗಳನ್ನು ಬ್ಯಾಂಕಿನಿಂದ ಪಡೆದು ಪರಾರಿಯಾದನಾತ. ಅಲ್ಲಿಂದ ಶುರುವಾದ ಈತನ ಕಳ್ಳತನದ ಪ್ರತಿಭೆ, ಒಂದು ಮೂಟೆ ಅಕ್ಕಿಯನ್ನು ದೇಶದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಕಳಿಸಿ ಸಿಗುವ ಬಿಲ್ಲಿನಲ್ಲಿ ಒಂದರ ಮುಂದೆ ಎರಡು ಸೊನ್ನೆಯನ್ನು ಸುತ್ತಿ ತಾನೊಬ್ಬ ದೊಡ್ಡ ಅಕ್ಕಿವ್ಯಾಪಾರೀ ಎಂದು ತೋರಿಸಿಕೊಂಡು ಬ್ಯಾಂಕುಗಳಿಗೆ ಮೋಸ ಮಾಡುವವರೆಗೂ ಮುಂದುವರೆಯಿತು. ಅಲ್ಲದೆ ಕೇಂದ್ರ ಸರ್ಕಾರದ ಉನ್ನತ ಸಚಿವರ PA ಎಂದು ನಂಬಿಸಿ ನಮ್ಮ ಪಕ್ಷದ ರಾಜಕಾರಣಿಗಳಿಗೆ ಉತ್ಕೃಷ್ಟ ಮಟ್ಟದ ವಾಚುಗಳು ಬೇಕೆಂದು ಅವುಗಳನ್ನು ಉದ್ಯಮಿಗಳಿಂದ ಖರೀದಿಸಿ ನಕಲು ಚೆಕ್ ಗಳನ್ನು ಬರೆದು ಪರಾರಿಯಾದ ಕೇಸುಗಳೇ ಇವನ ಹೆಸರಲ್ಲಿ ಹತ್ತಾರಿವೆ. ಅಲ್ಲದೆ ವೇಶ್ಯೆಯರಿಗೆ ಮತ್ತಿನ ಮಾತ್ರೆಯನ್ನು ತಿನ್ನಿಸಿ ಅವರ ಆಭರಣಗಳ ಲೂಟಿ, ರೈಲ್ವೆ ಆರ್ಡರ್ಗಳನ್ನು ಸೃಷ್ಟಿಸಿ ವಸ್ತುಗಳನ್ನು ರಾಜಾರೋಷವಾಗಿ ಪಡೆದು ಪರಾರಿಯಾಗುವಿಕೆ ಎಲ್ಲವು ಅಂದಿನ ಕಾಲಕ್ಕೆ ಕೇಳುಗರಿಗೆ ರೋಮಾಂಚನಕಾರಿಯಾದ ಸುದ್ದಿಗಳಾಗಿದ್ದವು. ಇನ್ನು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ರ ಹಸ್ತಾಕ್ಷರವನ್ನು ನಕಲು ಮಾಡಿ ದೇಶದ ಭವ್ಯ ಸ್ಮಾರಕಗಳನ್ನು ಮಾರಿರುವ ಕತೆಗಳಂತೂ ಈತ ಹುಟ್ಟಿರುವುದೇ ಫೋರ್ಜರಿ ಮಾಡುವ ಸಲುವಾಗೇ ಎಂದನಿಸದಿರದು.



1957, ಕಾನ್ಪುರ ಜೈಲು: 

ತನ್ನ ಕುಕೃತ್ಯಗಳಿಂದ ದೇಶವ್ಯಾಪಿ ಹೆಸರಾಗಿ ಕೊನೆಗೂ ಪೋಲೀಸರ ದಿವ್ಯಹಸ್ತಗಳಿಗೆ ದೊರೆತ ಈತ ಕಾನ್ಪುರ ಜೈಲಿನಲ್ಲಿ ಶಿಕ್ಷೆಯನ್ನನುಭವಿಸಬೇಕಾಯಿತು. ಆದರೆ ತನ್ನ ಮಧ್ಯ ವಯಸ್ಸಿನಲ್ಲಿದ್ದ ನಟ್ವರ್ಲಾಲ್ (ಅಂದಹಾಗೆ ಆತನ ಅಸಲಿ ಹೆಸರು ಮಿಥಿಲೇಶ್ ಕುಮಾರ್ ಶ್ರೀವತ್ಸವ!) ಹೇಗೆ ತಾನೇ ತನ್ನನು ನಾಲ್ಕು ಕೋಣೆಗಳ ರೂಮಿನೊಳಗೆ ಬಂದಿರಿಸಿಕೊಳ್ಳಲು ಸಾಧ್ಯ? ಆತನ ಮನಸ್ಸು ಸದಾ ಹೊರ ಜಗತ್ತನ್ನೇ ಹಾತೊರಿಯುತ್ತಿತ್ತು . ಹೊರಬಂದು ಮತ್ತಷ್ಟು ದೊಡ್ಡ ದೊಡ್ಡ ಕುಳಗಳ ಜೇಬಿಗೆ ಕತ್ತರಿಯನ್ನು ಹಾಕುವ ವಿಧವಿಧವಾದ ಯೋಜನೆಗಳು ಆತನ ತಲೆಯೊಳಗೆ ತಯಾರಾಗಿ ಕಾರ್ಯರೂಪಕ್ಕೆ ಬರಲು ಹವಣಿಸುತ್ತಿದ್ದವು. ಅಂದು ತನ್ನ ಕಿಲಾಡಿ ಬುದ್ದಿಯನ್ನು ಬಳಸಿ ಪೋಲೀಸ್ ಸಮವಸ್ತ್ರ ಒಂದನ್ನು ಕದ್ದ ಈತ ಅದನ್ನು ತನ್ನ ಕೋಣೆಯೊಳಗೆ ಯಾರಿಗೂ ಕಾಣದಂತೆ ಮುಚ್ಚಿಡುತ್ತಾನೆ. ನಂತರ ತನ್ನ ರೂಮಿನ ದ್ವಾರಪಾಲಕರನ್ನು ನಯವಾಗಿ ಪಾಟಯಿಸಿಕೊಂಡಿದ್ದ ಆತ ಹಣ ತುಂಬಿದ ಎರಡು ಬ್ಯಾಗುಗಳನ್ನು ಅವರಿಗೆ ನೀಡಿ ಅಂದು ರಾತ್ರಿ ತನ್ನ ಕೋಣೆಯ ಬಾಗಿಲನ್ನು ಮುಚ್ಚದಂತೆ ಕೇಳಿಕೊಳ್ಳುತ್ತಾನೆ. ಅಷ್ಟು ದೊಡ್ಡ ನೋಟಿನ ಗಂಟನ್ನು ಕಂಡ ದ್ವಾರಪಾಲಕರು ತಮ್ಮ ಕೆಲಸ ಹೋದರೂ ಚಿಂತೆಯಿಲ್ಲವೆಂಬಂತೆ ಆತನ ಬಾಗಿಲನ್ನು ತೆರೆದು ಬಿಟ್ಟರು. ಕದ್ದ ಪೊಲೀಸ್ ಸಮವಸ್ತ್ರವನ್ನು ನೀಟಾಗಿ ಧರಿಸಿ ರಾಜಾರೋಷವಾಗಿ ಹೊರಬಂದ ಅವನನ್ನು ಕಂಡ ಕಾನ್ಸ್ಟೇಬಲ್ ಗಳು ನಮಸ್ಕರಿಸುತ್ತಾ ಜೈಲಿನ ಹೊರಗೇಟನ್ನು ತೆರೆದರು. ಬಹುಷಃ ಆತನ ಆ ಪರ್ಸನಾಲಿಟಿ ಯಾವೊಬ್ಬ ಪೊಲೀಸ್ ಅಧಿಕಾರಿಗೂ ಕಡಿಮೆ ಇದ್ದಿರಲು ಸಾಧ್ಯವಿಲ್ಲ. ಜೈಲಿನಿಂದ ಹೊರಬಂದ ಆತ ನೇರವಾಗಿ ದೂರದಲ್ಲಿದ್ದ ಪೊಲೀಸ್ ಜೀಪಿನೊಳಗೆ ಕೂರುತ್ತಾನೆ. ಆದರೆ ಚಾಲಕನಿಗೂ ಅದೇನು ಮಂಕು ಕವಿದಿತ್ತೋ ಅಥವಾ ಆತನೂ ಈ ಹೊಸ ಅಧಿಕಾರಿಯ ರಗಡ್ ಲುಕ್ಕಿಗೆ ಹೆದರಿಯೋ ಏನೋ ಕೂಡಲೇ ಜೀಪನ್ನು ಶುರುಮಾಡಿ ಆತ ಹೇಳಿದ ಕಡೆ ಚಲಾಯಿಸಿಕೊಂಡು ಹೋಗುತ್ತಾನೆ! ಇತ್ತ ಕಡೆ ಹಣದ ಗಂಟಿನ ಖುಷಿಯಲ್ಲಿದ್ದ ದ್ವಾರಪಾಲಕರು ಗಂಟನ್ನು ಬಿಚ್ಚಿ ನೋಡಿದರೆ ಕಾಣಸಿಕ್ಕ ರಾಶಿ ರಾಶಿ ಬಿಳಿಯ ಹಾಳೆಗಳನ್ನು ನೋಡಿ ಎದೆಬಡಿದುಕೊಂಡು ಅಳತೊಡಗಿದರು. ದೇಶದ ಇತಿಹಾಸದಲ್ಲಿ ಇಂದಿಗೂ ದಿ ಗ್ರೇಟ್ ಎಸ್ಕೇಪ್ ಗಳ ಸಾಲಿನಲ್ಲಿ ನಟ್ವರ್ಲಾಲ್ನ ಈ ಸಾಹಸ ಮೊದಲಾಗಿ ಬರುತ್ತದೆ.

ತನ್ನ ಜೀವನವೆಲ್ಲ ಕಳ್ಳ ಪೊಲೀಸ್ ಆಟದಲ್ಲಿಯೇ ಕಳೆದ ಈತ ತನ್ನ ಎಂಬತ್ತರ ವಯಸ್ಸಿನಲ್ಲಿ ಇಂದೋರ್ ಜೈಲಿನಲ್ಲಿ ಸೆರೆಸಿಕ್ಕು ಕಾಲವನ್ನು ತಳ್ಳುತ್ತಿರುತ್ತಾನೆ. ಆದರೆ ತನ್ನ ಜೀವಮಾನದ ಪಾಪವನ್ನೆಲ್ಲ ಹೊತ್ತುಕೊಂಡು ಸುತ್ತುತ್ತಿದ್ದ ಈ ಹಣ್ಣು ಹಣ್ಣು ಮುದುಕನನ್ನು ಮಹಾರಾಷ್ಟ್ರ ಪೊಲೀಸರು ಬಾಕಿ ಉಳಿದಿದ್ದ ಹಲವಾರು ಕೇಸುಗಳ ಸಲುವಾಗಿ 1996 ರಲ್ಲಿ ಮುಂಬೈಗೆ ಕರೆಸಿಕೊಳ್ಳುತ್ತಾರೆ. ನೆಡೆಯಲೂ ಶಕ್ತವಿರದ ಮುದುಕ ನಟ್ವರ್ಲಾಲ್ ವೀಲ್ ಚೀರಿನ ಮೂಲಕ ಓಡಾಡುತ್ತಿರತ್ತಾನೆ. ಮುಂಬೈಗೆ ಬಂದ ಆತ ತನಗೆ ಕಿಡ್ನಿ ಸಮಸ್ಯೆ ಇದೆ ಎನುತ ಆಸ್ಪತ್ರೆಗೆ ಸೇರಿಕೊಳ್ಳುವ ನೆಪವೊಡ್ಡಿ ಆಸ್ಪತ್ರೆಗೆ ತೆರಳುತ್ತಾನೆ. ಇಬ್ಬರು ಕಾನ್ಸ್ಟೇಬಲ್ಗಳನ್ನು ಜೊತೆಮಾಡಿ ನೆಡೆದಾಡಲು ಶಕ್ಯವಿರದ ಮುದುಕನೊಬ್ಬನ್ನು ಆಸ್ಪತ್ರೆಗೆ ಕಳುಹಿಸುತ್ತಾರೆ ಅಲ್ಲಿನ ಅಧಿಕಾರಿಗಳು. ಮಾರ್ಗಮಧ್ಯದಲ್ಲಿ ದೆಹಲಿಯ ರೈಲ್ವೆ ಸ್ಟೇಷನ್ ನಲ್ಲಿ ತನ್ನೊಟ್ಟಿಗಿದ್ದ ಕಾನ್ಸ್ಟೇಬಲ್ ರಿಗೆ ಕುಡಿಯಲು ಚಹಾವನ್ನು ತರುವಂತೆ ಹೇಳಿ ಅಲ್ಲಿಯೂ ವಿಸ್ಮಯವೆನ್ನುವ ರೀತಿ ಈತ ಪರಾರಿಯಾಗುತ್ತಾನೆ. ಅದೇ ಆತನ ಕೊನೆಯ ಸುದ್ದಿ. ಅಲ್ಲಿಂದ ಮುಂದೆ ನಟ್ವರ್ಲಾಲ್ ಯಾರಿಗೂ ಎಲ್ಲಿಯೂ ಸಿಗುವುದಿಲ್ಲ. ಆದರೆ ಆತನ ದಂತಕಥೆಗಳು ಮಾತ್ರ ಇಂದಿಗೂ ಜೀವಂತವಾಗಿವೆ. ಅಲ್ಲದೆ ಆತನ ಸಾವೂ ಕೂಡ ಕೊನೆಗೆ ಪ್ರೆಶ್ನೆಯಾಗಿಯೇ ಉಳಿಯಿತು. ಕಾರಣ 2009ರಲ್ಲಿ ಆತನ ವಕೀಲ ನಟ್ವರ್ಲಾಲ್ ಆ ವರ್ಷ ಸತ್ತನೆಂದು ಆತನ ವಿರುದ್ದವಿದ್ದ ನೂರಾರು ಕೇಸುಗಳನ್ನು ತೆರವುಗೊಳಿಸಬೇಕೆಂದು ಕೇಳಿಕೊಳ್ಳುತ್ತಾನೆ. ಆದರೆ ನಟ್ವರ್ಲಾಲ್ನ ತಮ್ಮ 1996 ರಲ್ಲಿಯೇ ಆತ ಸತ್ತನೆಂದು ತಾನಾಗಿಯೇ ಖುದ್ದಾಗಿ ಆತನ ಅಂತ್ಯಕ್ರಿಯೆಯನ್ನು ಮಾಡಿರುವುದಾಗಿಯೂ ಹೇಳುತ್ತಾನೆ. 1996 ರಲ್ಲಿಯೇ ಆತ ಸತ್ತರೆ 2009 ರಲ್ಲಿ ಆತನ ವಿರುದ್ದದ ಕೇಸುಗಳನ್ನು ಖುಲಾಸೆ ಮಾಡಬೇಕೆನ್ನುವ ವಕೀಲರ ವಾದದ ಪ್ರಕಾರ ಆತ ಅಂದಿಗೂ ಜೀವಂತವಿದ್ದನು ಎಂಬ ಸಂಶಯ ಮಾತ್ರ ಬಾರದಿರದು.

ಹೀಗೆ ಪ್ರತಿಭೆ ಎಂಬ ಹುಚ್ಚು ಕುದುರೆಯ ಓಟದ ಹಾದಿ ಕೇವಲ ಅದನ್ನು ಓಡಿಸುವವನ ಮನದಲ್ಲಿ ಮೂಡಿದಂತಿರುತ್ತದೆ. ಅದೇ ಪ್ರತಿಭೆಯನ್ನು ಸಮಾಜ ಕಟ್ಟುವ ಕೆಲಸಗಳಿಗೆ ಬಳಸಿಕೊಂಡಿದ್ದರೆ ನಟ್ವರ್ಲಾಲ್ನ ಹೆಸರನ್ನು ಇಂದು ಬೇರೊಂದು ರೀತಿಯಾಗಿಯೇ ಬಳಸಿಕೊಳ್ಳಲಾಗುತ್ತಿತ್ತು. ತನ್ನನ್ನು ದೇಶೀ ರಾಬಿನ್ ಹುಡ್ ಎಂದೇ ಕರೆದುಕೊಂಡು ಮೆರೆಯುತ್ತಿದ್ದ ಈತ ಒಂದು ಉತ್ಕೃಷ್ಟ ಪ್ರತಿಭೆಯನ್ನು ಪೋಲುಮಾಡಿದ ಉದಾಹರಣೆಯಾಗಿ ಮಾತ್ರವಷ್ಟೇ ಇತಿಹಾಸದಲ್ಲಿ ಕಾಣಸಿಗುತ್ತಾನೆ. ಇಂಥಹದ್ದೇ ಚಾಣಾಕ್ಷ ಬುದ್ದಿಯ ಮತ್ತೊಬ್ಬ ದೇಶದ ಅತಿ ಸುರಕ್ಷಿತ ಜೈಲೆಂಬ ಹೆಗ್ಗಳಿಕೆಗೆ ಪಾತ್ರವಾಗುವ ತಿಹಾರ್ ಜೈಲಿನಿಂದ ಪಾರಾರಿಯಾಗಿ ಪೋಲಿಸರ ತಲೆತಗ್ಗುವಂತೆ ಮಾಡುತ್ತಾನೆ. ನಂತರ ಹಾಗೂ ಹೀಗೋ ಸೆರೆಸಿಕ್ಕ ಆತ ತಾನು ತಪ್ಪಿಸಿಕೊಳ್ಳುವುದು ಹಾಗು ಮತ್ತೊಮೆ ಹೀಗೆ ಸೆರೆಸಿಕ್ಕುವುದು ಎಲ್ಲವೂ 'ಪಾರ್ಟ್ ಆಫ್ ಮೈ ಪ್ಲಾನ್' ಎಂದು ವಿಚಾರಣಾಧಿಕಾರಿಗಳು ಕಕ್ಕಾಬಿಕ್ಕಿಯಾಗುವಂತೆ ಮಾಡುತ್ತಾನೆ. ಆತ ಜೈಲಿನಿಂದ ತಪ್ಪಿಸಿಕೊಂಡಿದ್ದೇಕೆ, ತಪ್ಪಿಸಿಕೊಂಡು ಮತ್ತೊಮ್ಮೆ ಸೆರೆ ಸಿಕ್ಕಿದಾದರೂ ಏತಕ್ಕೆ? ವಿದೇಶಿ ಪೋರನ ಆ ದೇಶೀ ಎಸ್ಕೇಪ್ ಸ್ಟೋರಿ ಮುಂದಿನ ಅಂಕಣದಲ್ಲಿ...