Sunday, May 24, 2020

ಕಾದಂಬರಿ : ಪಯಣ -1

ಕ್ಯಾನ್ಬೆರಾ, ಆಸ್ಟ್ರೇಲಿಯ.

ಸಾವಿರಾರು ಕಿಲೋಮೀಟರ್ ದೂರ ದ್ವೀಪದೇಶದ, ಸುಂದರ ರಾಜಧಾನಿಯ, ನಗರವೊಂದರ ಗಜಿಬಿಜಿಗುಡುವ ರಸ್ತೆಯ, ಕಡೆಯ ತಿರುವಿನ, ಕೊನೆಯ ಅಪಾರ್ಟ್ಮೆಂಟಿನ ತುತ್ತತುದಿಯ ಫ್ಲೋರಿನ ನಾಲ್ಕನೇ ಮನೆಯ ಎರಡನೇ ರೂಮಿನ ಮೂಲೆಗೆ ಅಂಟಿಕೊಂಡಿರುವ ಬೆಡ್ಡಿನ ಬೆಚ್ಚಗಿನ ಹೊದಿಕೆಯ ಹಿತಾನಭಾವವನ್ನು ಆಸ್ವಾದಿಸುತ್ತಾ ಮಲಗಿದ್ದಳು ಇಶಾ.

ಚಳಿಗಾಲದ ಆ ಬೆಳಗು ತನ್ನೂರಿನ ಬೆಣ್ಣೆಯಂತಹ ಮಂಜಿನ ಸವಿನೆನಪನ್ನು ಹೊತ್ತು ತಂದು ಮತ್ತೊಂದು ಸುತ್ತಿನ ನಿದ್ರೆಗೆ ಜಾರಿಸಿ ಕೊನೆಗೂ ಆಕೆಯನ್ನು ಎಚ್ಚರಿಸಿದಾಗ ಘಂಟೆ ಒಂಬತ್ತು. ದಡಬಡನೆ ಎದ್ದು ರೆಡಿಯಾಗಿ ನಾಲ್ಕೈದು ನಿಮಿಷ ಬಾಲ್ಕನಿಯಲ್ಲಿ ಧಾನ್ಯವನ್ನು ಮಾಡಿ ತನ್ನ ಕಪ್ಪನೆಯ ನೀಳ ಕೂದಲನ್ನು ಹಾಗೆಯೇ ಹಿಂದಕ್ಕೆ ಇಳಿಬಿಟ್ಟು ಪ್ರಾಜೆಕ್ಟ್ ಥಿಸಿಸ್ನ ಹಾಳೆಗಳನ್ನು ಗಡಿಬಿಡಿಯಲ್ಲಿ ಜೋಡಿಸಿಕೊಂಡು ಫ್ರಿಜ್ಜಿನ ಬಳಿ ಬಂದು ನಿಂತರೆ ಮೊಟ್ಟೆ , ಹಾಲು , ಕಾರ್ನ್ ಫ್ಲಿಕ್ಸ್ ಹಾಗು ಹಲವು ಬಗೆಯ ತರಕಾರಿ ಹಣ್ಣುಗಳು. ಅವಸರದಲ್ಲಿ ಏನು ಮಾಡಬೇಕೆಂದು ತೋಚದೆ ಕೊನೆಗೆ ಹಸಿರು ಸೊಪ್ಪುಗಳ ನಡುವೆ ಏಕಾಂತವಾಗಿ ಬಿದ್ದಿದ್ದ ಸೇಬೊಂದನ್ನು ಕೈಗೆತ್ತಿಕೊಂಡು ರೂಮಿನಿಂದ ಹೊರನೆಡೆದಳು.

'ಇಶಾ.. ನಿಲ್ಲೆ .. ನಾನೂ ಬರ್ತಾ ಇದ್ದೀನಿ..' ಪಕ್ಕದ ಮನೆಯಿಂದ ಇಡೀ ಕಟ್ಟಡವೇ ನಡುಗುವಂತೆ ಅರಚಿದಳು ಅಮೆಲಿ. ದೂರದ ನ್ಯೂಯಾರ್ಕ್ನವಳು. ನ್ಯೂಯಾರ್ಕ್ ಹಾಗು ಕನ್ನಡ ? ಹೌದು.  ಪಿಎಚ್ಡಿ ಮಾಡಲು ಬಂದ ಈಕೆ ಮೊದಲ ವರ್ಷದ ನೈಟ್ ಔಟ್ ಪಾರ್ಟಿಯಲ್ಲಿ ದೇಶ ಭಾಷೆಗಳ ಬಗೆಗೆ ಇಶಾಳೊಟ್ಟಿಗೆ ಘೋರ ವಾಗ್ವಾದಕ್ಕೆ ಇಳಿದು, ಸೋತು, ಇನ್ನು ಆರೇ ತಿಂಗಳಲ್ಲಿ ಕನ್ನಡವನ್ನು ಓದುವುದು ಹಾಗು ಬರೆಯುವುದನ್ನು ಕಲಿಯುವುದಾಗಿ ಹೇಳಿ ಅಂತೆಯೇ ಈಗ ಮೂರು ವರ್ಷಗಳ ನಂತರ ಇಶಾಳನ್ನೂ ನಾಚಿಸುವಂತಹ ಕನ್ನಡವನ್ನು ಕಲಿತಿದ್ದಾಳೆ. ಸದ್ಯಕ್ಕೆ ಇಶಾಳ ಬೆಸ್ಟ್ ಫ್ರೆಂಡ್ ಕಮ್ ಫ್ಲೋರ್ ಮೇಟ್.

'ಏನೇ .. ನೀನೂ ಇನ್ನೂ ಹೊರ್ಟಿಲ್ವ..?' ಅಪಾರ್ಟ್ ಮೆಂಟಿನ ಕಿಟಕಿಯಯನ್ನು ಇಣುಕುತ್ತಾ ಕೇಳಿದಳು ಇಶಾ.

ಅಚ್ಚುಗಟ್ಟಾದ ಚಿನ್ನದ ಬಣ್ಣದ ಕೂದಲಿನ ತಿರುಬನ್ನು ಹಿಂದಕ್ಕೆ ಕಟ್ಟಿ ಅದಕೊಂಡು ಚಂದದ ಹೂವನ್ನು ಮುಡಿದು ಬೆಳ್ಳನೆಯ ಸೀರೆಯನುಟ್ಟು ಹೊರಬಂದ ಅಮೆಲಿ,

'ಸೀ .. ಪಕ್ಕಾ ಇಂಡಿಯನ್ ಹುಡ್ಗಿತರ ಕಾಣ್ತಾ ಇದೀನಿ ಆಲ್ವ..' ಎಂದು ಎಡಕ್ಕೂ ಬಲಕ್ಕೂ ತಿರುಗಿ ತನ್ನ ಕೆಂದಾವರೆ ಬಣ್ಣದ ಸೌಂದರ್ಯವನ್ನು  ಪ್ರದರ್ಶಿಸತೊಡಗಿದಳು. ರಸಿಕರ ಕಣ್ಣಿಗೆ ಮಲ್ಲಿಗೆ ಹೂವಿನಂತೆ ಕಾಣುವ ಆಕೆಯ ಸೌಂದರ್ಯ ಇಶಾಳಿಗೆ ಕಿಂಚಿತ್ತೂ ಕ್ಯಾರೆ ಎನಿಸಲಿಲ್ಲ.

'ಹುಂ ಬಾರಮ್ಮ .. ನ್ಯೂಯಾರ್ಕಿನ ಗೌರಮ್ಮ ..ಹನ್ನೊಂದ್ ಘಂಟೆಯೊಳಗೆ ಥೀಸಿಸ್ ಸಬ್ಮಿಟ್ ಮಾಡ್ಬೇಕು..ನೆನ್ಪ್ ಇದ್ಯಾ..' ಎನುತ ತನ್ನೊಳಗಿನ ವಯೋಸಹಜ ಹೆಣ್ಣಿನ ಸಣ್ಣದಾದ ಅಸೂಯೆಯನ್ನು ಹತ್ತಿಕ್ಕಿಕೊಂಡು ಆಕೆ ಹೇಳಿದಳು.

'ಎಕ್ಸ್ ಕ್ಯೂಸ್ ಮೀ .. ರಾತ್ರಿ ಎಷ್ಟ್ ಬಿಯರ್ ಕುಡಿದಿ ಡಿಯರ್..? ಥೀಸಿಸ್ ಸಬ್ಮಿಶನ್ ಡೇಟ್ ಪೋಸ್ಟ್ ಪೊನ್ಡ್ ಆಗಿದೆ ಅಂತ ನಿನ್ನೇನೆ ಅನೌನ್ಸ್ ಮಾಡಿದ್ರಲ್ಲ ..' ಹಾಲುಬಿಳುಪಿನ ತನ್ನ ಸೊಂಟದ ಮೇಲೆ ಕೈಯಿಟ್ಟು ಕೇಳಿದಳು ಅಮೆಲಿ.

ಒಮ್ಮೆಲೇ ಇಶಾಳಿಗೆ ತನ್ನ ಮರುವಿನ ಅರಿವಾಯಿತು. ನೆನ್ನೆ ಇಡೀ ಕ್ಲಾಸಿಗೆ ಕ್ಲಾಸೇ ಈ ಬಗ್ಗೆ ಹೇಳಿಕೊಂಡು ಸಂಭ್ರಮಿಸಿದ ಕ್ಷಣಗಳೇ ಆಕೆಯಿಂದ ಮರೆಯಾಗಿವೆ. ಅದೇನೋ ತಿಳಿದಿಲ್ಲ. ಇತ್ತೀಚಿಗೆ ಈ ಬಗೆಯ ಮರೆಯುವಿಕೆ ಆಕೆಗೆ ಸರ್ವೇ ಸಾಮಾನ್ಯ ವಿಷಯವಾಗಿಬಿಟ್ಟಿದೆ.

'ಒಹ್ ಗಾಡ್ .. ನನ್ ಮೆಮೋರಿಗೂ ಏನಾಗಿದೆ ಇತ್ತೀಚೆಗೆ ಅಂತ..' ಎಂದು ಕೈಲಿದ್ದ ಅರೆತಿಂದ ಸೇಬಿನಿಂದ ತನ್ನ ಹಣೆಯ ಮೇಲೆ ಚಚ್ಚಿಕೊಂಡು ಬಾಲನಗೆಯನ್ನು ಬೀರಿದ ಇಶಾ ದೊಡ್ಡ ಹೊರೆಯೊಂದು  ಹೆಗಲಮೇಲಿಂದ ಕೆಳಗಿಳಿದಂತೆ ಪಕ್ಕದ ಗೋಡೆಗೆ ಒರಗಿ ನಿಂತಳು.

'ಮೇ ಬಿ ಥೀಸಿಸ್ ಸಬ್ಜೆಕ್ಟ್ ಅನ್ನೇ ನೀನು ಚೇಂಜ್ ಮಾಡ್ಬೇಕು ಅನ್ಸುತ್ತೆ ..' ಎಂದ ಅಮೆಲಿ .. 'ಫ಼ಾರ್ಗಾಟ್ ಟು ಇನ್ಫಾರಂ .. ನೆನ್ನೆ ಇಂಡಿಯಾದಿಂದ ನಿನಗೆ ಕೋರಿಯರ್  ಏನೋ ಬಂದಿದೆ ಅಂತ ವಾಚ್ ಮ್ಯಾನ್ ಹೇಳ್ತಾ ಇದ್ದಾ .. Check it out ' ಎಂದು ಕನ್ನಡಿಯ ಮುಂದೆ ಬಾಗಿ ತನ್ನ ನುಣುಪಾದ ಕೆನ್ನೆಗಳಿಗೆ ಮೇಕಪ್ಪಿನ ಫೈನಲ್ ಟಚ್ಚನ್ನು ಕೊಡತೊಡಗಿದಳು.

'ಕೊರಿಯರ..?' ಎಂದು ಸಂಶಯದಿಂದ ಕೇಳಿದ ಇಶಾ ಕೂಡಲೇ ಲಿಫ್ಟಿನಿಂದ ಕೆಳಗಿಳಿದು ಸ್ವಲ್ಪ ಸಮಯದ ನಂತರ ಬಿಳಿಯ ಕವರಿನ ಒಂದು ಲಕೋಟೆಯನ್ನು ಕೈಯಲ್ಲಿಡಿದು ತಂದಳು.

ಕಣ್ಣುಗಳಿಗೆ ಘಾಡವಾದ ಕಪ್ಪನ್ನು ಮೆತ್ತಿಕೊಳ್ಳುತ್ತಾ ಯಾವುದೊ ಒಂದು ಹಿಂದಿ ಹಾಡನ್ನು ಗುನುಗುತ್ತಿದ್ದ ಅಮೆಲಿ 'ಏನದು..' ಎಂಬಂತೆ ಕಣ್ ಸನ್ನೆಯಲ್ಲಿಯೇ ಕೇಳಿದಳು. ಇಶಾ ಕಾರಿಡಾರಿನಲ್ಲಿಯೇ ಲಕೋಟೆಯನ್ನು ಒಡೆದು ವಿಳಾಸವನ್ನು ಓದಿ ನಂತರ ಕೆಲಕ್ಷಣ ಮೌನವಾಗಿ 'ಹಿ ಡಿಡ್ ಇಟ್.. ಯಸ್ .. ಐ ನ್ಯೂ ಇಟ್' ಎಂದು ಖುಷಿಯಿಂದ ಹೇಳುತ್ತಾ ಅದರೊಳಗಿದ್ದ ನೂರಾರು ಪುಟಗಳ ಹಾಳೆಗಳನ್ನು ಹೊರತೆಗೆದಳು.

'ಇಶಾ .. ಥೀಸಿಸ್ ಅನ್ನೂ ನೀನು ಬೇರೆಯವರ ಕೈಲಿ ಬರ್ಸೊದ... ಏನಾಗಿದೆ ನಿಂಗೆ ..By the way, who is that he ..?' ಎಂದು ಛೇಡಿಸುವಂತೆ ಕೇಳಿದಾಗ,

'ಸುಮ್ನಿರಮ್ಮ .. ನಾನೇನ್ ನೀನ್ ಕೆಟ್ಟೋದ್ನ... ಇದು ನನ್ನ ಸ್ಟೂಡೆಂಟ್ , Sorry , ಫ್ರೆಂಡೊಬ್ಬ ಬರ್ದಿರೋ ಡ್ರಾಫ್ಟ್ ನಾವೆಲ್.. ಓದಿ ಅಂತ ನನ್ಗೆ ಮೊದಲ ಕಾಪಿ ಕಳ್ಸಿದ್ದಾನೆ.. ' ಎಂದಳು.

'ನಾನೇನ್ ನೀನ್ ಕೆಟ್ಟೋದ್ನ..' ಎಂಬ ವಾಕ್ಯದ ಅರ್ಥ ಅರಿಯದಾದರೂ 'ಪರ್ವಾಗಿಲ್ಲ ಮೇಡಂ.. ತಮಗೆ ನಾವೆಲ್ ಎಡಿಟ್ ಮಾಡೋ ಕ್ಯಾಪಾಸಿಟಿ ಅಂತ ನನಗೆ ಗೊತ್ತಿರ್ಲಿಲ್ಲ.. ಎನಿವೇಸ್, ನೀನ್ ಓದಿ ಆದ್ಮೇಲೆ ವಿಥ್ ಯುವರ್ ಸ್ಟೂಡೆಂಟ್ ಕಮ್  ಫ್ರೆಂಡ್ ಪರ್ಮಿಷನ್ ಇದ್ರೆ ನಾನು ಸ್ವಲ್ಪ ಓದುತ್ತೀನಿ.. ಕೊಡ್ತಿಯಾ ' ಎಂದು ತನಗೂ ಕನ್ನಡವನ್ನು ಓದಲು ಬರುತ್ತದೆ ಎಂಬುದನ್ನು ಇಶಾಳಿಗೆ ಮನದಟ್ಟು ಮಾಡಿದಳು.  ಹೀಗೆ ಒಬ್ಬರನ್ನೊಬ್ಬರು ಛೇಡಿಸಿಕೊಂಡು  ಇನ್ನೇನು ಇಬ್ಬರು ಹೊರಟು ಕಾಲೇಜಿಗೆ ನೆಡೆಯಬೇಕು ಎನ್ನುವಷ್ಟರಲ್ಲಿ ಇಶಾ ಆಕೆಯನ್ನು ತಡೆದು,

'ಅಮಿ .. ನೀನ್ ಹೋಗು .. ಹೇಗೂ ಥೀಸಿಸ್ ಸಬ್ಮಿಶನ್ ಇಲ್ಲ .. ನಂಗೆ ಯಾಕೋ ಕ್ಲಾಸ್ಸಲ್ಲಿ ಕೂರಕ್ಕೆ ಮನ್ಸ್ ಇಲ್ಲ .. ' ಎಂದಳು.

ಕೆಲ ಸೆಕೆಂಡುಗಳಲ್ಲಿಯೇ ಬದಲಾದ ಇಶಾಳ ನಿರ್ಧಾರವನ್ನು ಕಂಡು ಕೊಂಚ ಸಂಶಯಗೊಂಡ ಅಮೆಲಿ ನಗುತ್ತಲೇ 'ಕುಚ್ ತೊ ಹೂಹ ಹೇ .. ಕುಚ್ ಹೊ ಗಯಾ ಹೆ..' ಎಂದು ಬರೋಬ್ಬರಿ ಇಪ್ಪತ್ತು ಬಾರಿ ನೋಡಿರುವ ‘ಕಲ್ ಹೊ ನಾ ಹೊ’ ಚಿತ್ರದ ಹಾಡನ್ನು ಅಣಕಿಸುವಂತೆ ಆಕೆಯ ಬಳಿಗೆ ಬಂದು ಹಾಡತೊಡಗಿದಳು. ಅರ್ಥವಾಗದ ಹಳೆಗನ್ನಡ ಪದಗಳ ಬಳಕೆಯನ್ನು ಮಾಡಿ ಹೇಗೋ ಆಕೆಯನ್ನು ಕಾಲೇಜಿಗೆ ತಳ್ಳಿದ ಮೇಲೆ ರೂಮಿಗೆ ವಾಪಸ್ಸಾದ ಇಶಾ ತನ್ನ ಸಂಯಮದ ಕಟ್ಟೆ ಒಡೆದಂತೆ ಹಾಕಿರುವ ಚಪ್ಪಲಿಯನ್ನೂ ಕಳಚದೆ ಮೊದಲ ಹಾಳೆಯನ್ನು ತೆರೆದು ಒಂದೇ ನಿಮಿಷದಲ್ಲಿ ಓದುವಂತೆ ಅಷ್ಟೂ ಹಾಳೆಗಳನ್ನು ಪಟಪಟನೆ ತಿರುವತೊಡಗಿದಳು.

ಮೂರ್ನಾಲ್ಕು ಭಾರಿ ಅಳಿಸಿ, ಮತ್ತೆರೆಡು ಬಾರಿ ನಗಿಸಿ, ಭಯ, ಖುಷಿ , ಹಠ , ಅಸೂಹೆ , ಹಾಗು ರೋಚಕತೆಯಿಂದ ಕೂಡಿದ ಕಥೆ ಒಮ್ಮೆಲೇ ಏನೆಂದು ಅರಿವಾಗದಿದ್ದರೂ ಕೊನೆಯ ಕೆಲ ಪುಟವನ್ನು ಓದಿದಾಗಲೇ ಅವಳಿಗೆ ಅದರ ಭಾಗಶಃ ರೂಪ ಗೋಚರಿಸತೊಡಗಿದ್ದು.  ಬೆಳಗಿನಿಂದ ರಾತ್ರಿಯವರೆಗೂ ಒಂದೇ ಗುಕ್ಕಿನಲ್ಲಿ ಓದುವಂತೆ ಮಾಡಿದ ಆ ಹಾಳೆಗಳು ಕತೆಯ ಅಂತ್ಯವನ್ನು ಮಾತ್ರ  ಕಾಣಿಸಿರಲಿಲ್ಲ. ಏಕೆಂದು ಆತನಿಗೆ ಕೂಡಲೇ ಇಮೇಲ್ ಮಾಡಿ ಕೇಳಿಬಿಡಬೇಕೆಂಬ ಮನಸ್ಸಾಯಿತಾದರೂ ಏಕೋ ಆಕೆ ಸುಮ್ಮನಾದಳು. ಅಂತ್ಯದ ಆತುರಕಿಂತಲೂ ಇಶಾಳ ಮನಸ್ಸು ಆಗ ಏಕಾಂತದ ಮೊರೆಯನ್ನು ಬಯಸಿತು. ಇಲ್ಲವಾದರೆ ಬೆಳಗಿನಿಂದ ಸಂಜೆಯ ತನಕ ಗ್ರಹಿಸಿದ ಅಮೂಲ್ಯವಾದ ಜೀವನ ಪಾಠವೊಂದು ಕರಗಿ ನೀರಾಗಿ ಹೋಗಬಹುದೆಂಬ ಭಾವ. ಕೂಡಲೇ ಮೇಲೆದ್ದು ಮೊಬೈಲಿನಲ್ಲಿ ಸಮಯವನ್ನು ನೋಡಿದಳು. ಅದಾಗಲೇ ರಾತ್ರಿ ಎಂಟರ ಆಸುಪಾಸು. ಸ್ನಾನಾದಿಗಳನ್ನು ಮುಗಿಸಿ ಒಂದರೆ ಹೊತ್ತು ಧ್ಯಾನವನ್ನು ಮಾಡಿದರೂ ಮನಸ್ಸು ಶಾಂತವಾಗಲಿಲ್ಲ. ಓದಿದ್ದ ಹಾಳೆಗಳೆಲ್ಲವನ್ನು ಜೋಡಿಸಿ ಅಮೆಲಿಯ ರೂಮಿನ ಟೇಬಲ್ಲಿನ ಮೇಲಿಟ್ಟು ಕೂಡಲೇ ಹತ್ತಿರದ ಕೃಷ್ಣನ ದೇವಾಯಲಯಕ್ಕೆ ಹೋಗಲು ನಿರ್ಧರಿಸಿದರು. ಕೈತುಂಬ ಮುಚ್ಚುವ ನೀಳವಾದ ಸ್ವೇಟ್ಟರು ಹಾಗು ತಲೆಗೆ ಒಂದು ಕಪ್ಪಾದ ಟೋಪಿಯೊಂದನ್ನು ತೊಟ್ಟು ದೇವಾಲಯದ ಬಳಿಗೆ ಹೆಜ್ಜೆಯಿಟ್ಟಳು.

ನಡುಗಹುಟ್ಟಿಸುವ ಆ ಚಳಿಯಲ್ಲಿ ಒಂದರೆಕಿಲೋಮೀಟರ್ ನಡೆಯುವಷ್ಟರಲ್ಲಿಯೇ ದೇವಾಲಯದ ಘಂಟೆಗಳ ಸದ್ದು ಕೇಳತೊಡಗಿದವು. ಇಡೀ ನಗರದಲ್ಲೇ ಇರುವ ಕೆಲವೇ ಕೆಲವು ದೇವಾಲಗಳಲ್ಲಿ ಕೃಷ್ಣನ ಈ ದೇವಾಲಯ ಕೆಲವೊಮ್ಮೆ ರಾತ್ರಿಯಿಡಿ ತೆರೆದಿರುತ್ತದೆ ಹಾಗು ಸಾಮೂಹಿಕ ಭಜನೆ ಮತ್ತಿತರ ಕಾರ್ಯಕ್ರಮಗಳು ನೆಡೆಯುತ್ತವೆ. ಬಿಳಿಯರು, ಕರಿಯರು, ಮೇಲು, ಕೀಳು ಎಂದಿರದೆ ವಿಶ್ವದ ಎಲ್ಲ ಸಮುದಾಯದ ಜನ ಅಲ್ಲಿ ಬೆರೆಯುತ್ತಾರೆ. ತಮಗೆ ತಿಳಿದ ಮಟ್ಟಿಗೆ ದೇವರನ್ನು ಆರಾಧಿಸುತ್ತಾರೆ. ವಾರಕ್ಕೆ ಒಂದೆರೆಡು ಬಾರಿ ಅಮೆಲಿಯೊಟ್ಟಿಗೆ ಬರುವ ಇಶಾ ತನ್ನೂರಿನ ದೇವಾಲಯದೊಳಗಿನ ತನ್ಮಯತೆಯನ್ನೇ ಇಲ್ಲಿಯೂ ಕಂಡಿದ್ದಾಳೆ.  ‘ದೇಶಯಾವುದಾದರೇನು, ಕೋಶ ಯಾರುಬರೆದರೇನು, ಭಕ್ತಿ ಇರಲು ಇಲ್ಲಿ  ಬಾರನೇನು ಅವನು?’ ಎಂದು ತನ್ನೊಳಗೆ ಅನೇಕ ಬಾರಿ ಹೇಳಿಕೊಳ್ಳುವ ಇಶಾ ದೇವಾಲಯದ ಬೃಹತ್ ದ್ವಾರದ ಮುಂದೆ ಬಂದು ನಿಂತಳು. ಚಪ್ಪಲಿಗಳನ್ನು ಪ್ರಾಂಗಣದವರೆಗೂ ಹಾಕಿಕೊಂಡು ಹೋಗಬಾಹುದಾದರೂ ಎಂದಿನಂತೆಯೇ ಅವುಗಳನ್ನು ಅಲ್ಲಿಯೇ ಬಿಟ್ಟು ಬಿಳಿಯ ಗ್ರಾನೈಟ್ ಕಲ್ಲುಗಳಿಂದ ಮಾಡಿದ ಮೆಟ್ಟಿಲುಗಳನ್ನು ಒಂದೊಂದಾಗಿಯೇ ಹತ್ತತೊಡಗಿದಳು. ಶ್ರೀಕೃಷ್ಣನಿಗೆ ಕೈ ಮುಗಿದು ತಾನು ಎಂದಿನಂತೆ ಕೂರುವ ಸ್ಥಳಕ್ಕೆ ಬಂದು ಕಂಬಒರಗಿ ಕೂತರೆ ತಲೆ ಯಾಕೋ ಭಾರವಾಗತೊಡಗಿತು.. ಅಲ್ಲಿ ಸಂಚರಿಸುತ್ತಿದ್ದ ಬಹುಷಃ ಎಲ್ಲ ಜಾತಿಯ ಹಾಗು ವರ್ಣದ ಜನರ ಗುಂಪಿನಲ್ಲಿ ಅವರಿಗೆ ತಾನು ಓದಿದ ಕತೆಯ ಒಂದು ಚಹರೆ ಬಹುವಾಗಿ ಕಾಡತೊಡಗಿತು.

ನಿಮಿಷಮಾತ್ರದಲ್ಲಿ ಕಣ್ಣೀರ ಧಾರೆ ಅವಳ ಕಪೋಲಗಳೆರಡನ್ನು  ತೊಯ್ಸತೊಡಗಿದವು. 

**

ಪಾಠ ಕಲಿಸುವ ಶಿಕ್ಷಕರೊಟ್ಟಿಗೆ ವಾಗ್ವಾದದಕ್ಕೆ ಇಳಿಯುವುದರ ಹುಚ್ಚು ಅದೆಂತಹದ್ದು ಎಂದು ಅಮೆಲಿಯನ್ನು ನೋಡಿ ಕಾಣಬೇಕು. ಅದು ಶಿಕ್ಷಣಕ್ಕೆ ಪೂರಕವಾದ ತಾರ್ಕಿಕ ಚರ್ಚೆಯೇ ಆಗಿದ್ದರೂ ಟಾಮ್ ಅಂಡ್ ಜೆರ್ರಿಯ ಇಲಿಯನ್ನು ಅಟ್ಟಾಡಿಸುವ ಆ ಆ ಪುಡಾರಿ ಬೆಕ್ಕಿನಂತೆ ಈಕೆ ತಮ್ಮ ಶಿಕ್ಷಕರನ್ನು ಪ್ರೆಶ್ನೆಗಳ ಸುರಿಮಳೆಯಲ್ಲಿ ಮೀಯಿಸಿ ಸತಾಯಿಸುತ್ತಾಳೆ. ಬಹುಷಃ ಆಕೆಯ ಕಲಿಕೆಯ ಶೈಲಿಯೇ ಹಾಗಿರಬಹುದು . ಆದರೆ ಕೆಲವೊಮ್ಮೆ ತನನ್ನು ಒಬ್ಬ ಪ್ರಚಂಡ ವಾಗ್ಮಿ ಎಂದು ಭ್ರಮಿಸಿಕೊಂಡು ಇನ್ನಿಲ್ಲದಂತೆ ಸೋತು ಅವರು ಹೇಳುವ ಯಾವ ಕಾರ್ಯಕ್ಕೂ ಸೈ ಎನ್ನುವ ಹುಡುಗಿ. ಆಕೆಯ ಕನ್ನಡ ಕಲಿಕೆಯೇ ಅದಕ್ಕೊಂದು ಉತ್ತಮ ಉದಾಹರಣೆ.

ಇಂದೂ ಸಹ ಕಾಲೇಜಿನಲ್ಲಿ ನೈಜೀರಿಯದ ಶಿಕ್ಷಕರೊಬ್ಬರಿಗೆ ಪ್ರೆಶ್ನೆಯನ್ನು ಕೇಳಿ , ಆ ಪ್ರೆಶ್ನೆ ಚರ್ಚೆಯಾಗಿ , ಚರ್ಚೆ ವಾದವಾಗಿ , ವಾದ ಬೈಗುಳವಾಗಿ , ಶಾಪವಾಗಿ ಕೊನೆಗೆ ಮುಗಿಯುವಷ್ಟರಲ್ಲಿ ಘಂಟೆ ರಾತ್ರಿಯ ಹನ್ನೊಂದು. ಆ ಆಸಾಮಿಯೂ ತಾನೇನು ಕಮ್ಮಿ ಇಲ್ಲವೆನ್ನುವಂತೆ ಈಕೆಯ ಮಾತಿಗೆ ಮಾತು ಬೆಳಸಿ ಕೊನೆಗೆ ತನ್ನ ಜೀವನದ ಮೇಲೆಯೇ ಜಿಗುಪ್ಸೆ ಬರುವಂತೆ ಬೈಸಿಕೊಂಡು ಹ್ಯಾಪೆ ಮೊರೆಯನ್ನು ಹಾಕಿಕೊಂಡು ಹೊರಟುಹೋದ.

ಇಶಾಳೊಟ್ಟಿಗೆ ಹೊರಗೆ ಊಟ ಮಾಡಿದಾರಾಯಿತು ಎಂದು ಬೇಗ ಬೇಗನೆ ಮನೆಗೆ ಬಂದ ಅಮೆಲಿಗೆ ಇಶಾ ಕಾಣಲಿಲ್ಲ. ಆಕೆಯ ಫೋನಂಬರಿಗೆ ಕೂಡಲೇ ಡಯಲ್ ಮಾಡಿದಳು. 'Dont disturb ..I’m in temple' ಎಂಬ ಆಟೋ ರಿಪ್ಲೈ ಮೆಸೇಜ್ ಬಂದ ಮೇಲೆ ತನ್ನ ರೂಮಿನೊಳಗೆ ಬಂದ ಆಕೆಗೆ ಡೆಸ್ಕಿನ ಮೇಲೆ ಇಡಲಾಗಿದ್ದ ಕಾದಂಬರಿಯ ಹಾಳೆಗಳ ಮೇಲೆ ದೃಷ್ಟಿ ನೆಟ್ಟಿತು. ಇಶಾ ಇಷ್ಟು ಬೇಗ ಕಾದಂಬರಿಯನ್ನು ಓದಿರುವಳೇ ಎಂಬ ಒಂದು ಸಣ್ಣ ಸಂಶಯ ಆಕೆಯಲ್ಲಿ ಮೂಡಿತು.

ಅದು ಭಾಷೆಯ ಆಕರ್ಷಣೆಯೋ ಏನೋ, ಬೆಡ್ಡಿನ ಮೇಲೆ ದೊಪ್ಪನೆ ಬಿದ್ದವಳೇ ಹಾಳೆಗಳ ಪುಟಗಳನ್ನು ಪಕ್ಕಕ್ಕೆ ಇರಿಸಿ ಅವುಗಳ ಮಧ್ಯದ ಯಾವುದೊ ಒಂದು ಪುಟವನ್ನು ತೆರೆದು ಸುಮ್ಮನೆ ಓದಿದಳು. ಒಂದೆರೆಡು ನಿಮಿಷದಲ್ಲಿಯೇ ಆಕೆಗೆ ಏನೋ ಒಂದು ಬಗೆಯ ಕೂತುಹಲ ಮೂಡಿದಂತಾಗಿ ಕೂಡಲೇ ಎದ್ದು ಬಿಸಿ ನೀರಿನ ಜಳಕನ್ನು ಮುಗಿಸಿ ಇನ್ಸ್ಟಾ ಮ್ಯಾಗ್ಗಿ ಪ್ಯಾಕನ್ನು ಒಡೆದು ನೀರಿನಲ್ಲಿ ಬೆರೆಸಿ ಅದನ್ನು ಪ್ಲೇಟಿಗೆ ಹಾಕಿ ತಂದಳು. ಪಬ್ಲಿಕ್ ಪರೀಕ್ಷೆಗೆ ಓದುವ ಗಂಭೀರ ವಿದ್ಯಾರ್ಥಿಯಂತೆ ಕಾಲುಗಳನ್ನು ಮಡಚಿ ಮೊದಲ ಪುಟವನ್ನು ಕೈಗೆತ್ತಿಕೊಂಡಳು. ಅದಕ್ಕೂ ಮೊದಲು ಇಶಾಳ ಪ್ಲಾಟಿಗೋಗಿ ಕನ್ನಡ ಡಿಕ್ಷನರಿಯನ್ನು ಪಕ್ಕಕ್ಕೆ ತಂದಿಡುವುದ ಮರೆಯಲಿಲ್ಲ.

 

*******************************************************************************************

                                                             

ಪುಟ-೧. 

ಅದು ಬೆಳಗಿನ ಜಾವ ಸುಮಾರು ಆರರ ಆಸುಪಾಸು. ಜಾಗಿಂಗ್ ಮಾಡುತ್ತಲೇ ಓಡೋಡಿ ಬಂದ ಲೋಕೇಶ ಒಂದೇ ಸಮನೆ ಬಾಗಿಲನ್ನು ಬಡಿಯತೊಡಗಿದ. ಬೆಳಗಿನ ಜಡತ್ವದ ಕೋಟೆಯನ್ನು ಭೇದಿಸುವ ಸೈನಿಕನ ಸದ್ದಿನಂತೆ ಆತ ಅರಚತೊಡಗಿದ. ಬೊಬ್ಬಿ ಗೀಳಿಡುವ ಸಂತೆಯಾಗಿರುವ ಪ್ರಪಂಚದಲ್ಲಿ ಚಿಂತೆ ಇರದೇ ಸುಖವನ್ನು ಕಾಣುವ ನಿದ್ರೆಯೆಂಬ ಮಹಾತಪಸ್ಸಿಗೆ ಇಳಿದಿದ್ದ ನನಗೆ ಆತನ ಅರಚುವಿಕೆ ಎಲ್ಲಿಲ್ಲದ ಕೋಪವನ್ನು ತಂದಿತು. ಘಾಡ ನಿದ್ದೆಯಲ್ಲೂ ಕಷ್ಟಪಟ್ಟು ಎದ್ದು ಬಾಗಿಲನ್ನು ತೆರೆದ ನನ್ನನ್ನು ಪಕ್ಕಕ್ಕೆ ತಳ್ಳಿ  ಫ್ರಿಡ್ಜ್ ನಲ್ಲಿದ್ದ ತಣ್ಣೀರನ್ನು ಹೊರತೆಗೆದು ಗಟಗಟನೆ ಕುಡಿದು,

'ಮಚಿ, ಅರ್ಜೆಂಟ್ ಆಗಿ ಒಂದು ಹತ್ತು ಸಾವಿರ ದುಡ್ಡ್ ಬೇಕೋ. ಒಳ್ಳೆ ಒಂದು ಬಿಸಿನೆಸ್ ಪ್ರಪೋಸಲ್ ಬಂದಿದೆ. ಪಕ್ಕದ ಊರಲ್ಲಿ ಓಪನ್ ಗ್ರೌಂಡ್ ಮೀಟಿಂಗ್ ಇದ್ಯಂತೆ, ಇವತ್ತೇ ಹೊರಡ್ಬೇಕು..' ಎಂದು ಬೆವರು ಮೆತ್ತಿದ ಉದ್ದನೆಯ ಕೂದಲನ್ನು ತನ್ನ ಎರಡೂ ಕೈಗಳಿಂದ ಹಿಂದಕ್ಕೆ ಸರಿಸುತ್ತಾ ಬಡಬಡನೆ ಒದರುತ್ತಾನೆ. ಎತ್ತರ ಆರಡಿ ಇರದಿದ್ದರೂ, ಮೈಯ ಬಣ್ಣ ಹಾಲಿನಂತೆ ಹೊಳೆಯದಿದ್ದರೂ ಜಡೆ ಕಟ್ಟಬಹುದಾದಂತಹ ಆತನ ನೀಳ  ಕೇಶ ರಾಶಿ ಏನೋ ಒಂದು ಮೆರುಗನ್ನು ಆತನಿಗೆ ತಂದಿಟ್ಟಿತು. ಓದು ಮುಗಿಯುವುದರೊಳಗೆ ತನ್ನದೇ ಏನೋ ಒಂದು ಸ್ಟಾರ್ಟಪ್ಪನ್ನು ನೆಡೆಸಬೇಕೆಂಬ ಅದಮ್ಯ ಹಠದೊಂದಿಗೆ ಗುಂಡಿಗೆ ಬೀಳಲು ಹವಣಿಸುವ ಹಲವರಲ್ಲಿ ಮೊದಲಿಗ ನಮ್ಮ ಲೋಕೇಶ. ಓದಿನಲ್ಲಿ ಹಿಂದಿದ್ದರೂ 'ಅಂಬಾನಿ ಏನು ಡಿಗ್ರಿ ತಗೊಂಡೆ ಬಿಲೇನಿಯರ್ ಆದ್ನಾ?' ಎಂದುಕೊಂಡೆ ತನ್ನೆಲ್ಲಾ ಘನಕಾರ್ಯಗಳನ್ನು ನಮ್ಮೊಟ್ಟಿಗೆ ಸಮರ್ಥಿಸಿಕೊಳ್ಳುತ್ತಿದ್ದ. ಆಗಲೇ ಲಕ್ಷ ದುಡ್ಡಿನ ಸಾಲಗಾರನಾಗಿರುವ ಈತ ಅಂಬಾನಿ ಆಗ್ತಾನೋ ಅಥವ ಮಹಾ ಮೋದಿಯ ತದ್ರೂಪಿಯಾಗುತ್ತಾನೋ ಎಂಬುದೇ ಸದ್ಯ ಫ್ರೆಂಡ್ ಸರ್ಕಲ್ ಗಳಲ್ಲಿ ಇತ್ತೀಚಿಗೆ ನೆಡೆಯುತ್ತಿರುವ ಚರ್ಚೆ.

'ನೋಡಪ್ಪ ನೆಕ್ಸ್ಟ್ ಮಂತ್ ಶುರುವಲ್ಲೇ ನಂಗೆ ದುಡ್ಡ್ ವಾಪಸ್ ಬೇಕು. ನನ್ನ್ ಪಾರ್ಟ್ ಟೈಮ್ ಕೆಲ್ಸದ ಸೇವಿಂಗ್ಸ್ ಅದು. ನನ್ನ್ ಮಕ್ಳ ಬರಿ ತಗೋಣೋದೆ ಮಾಡ್ತಿರಲ್ಲ, ಯಾವಾಗ್ಲಾದ್ರೂ ಕೊಡೋದೂ ಕಲಿರೋ'  ನಾನೆಂದೆ.

'ಬಂದ ಹಾಜಿರ್ ಹೈ ಹುಕುಂ .. ಆಪ್ ಕೆ ಲಿಯೆ ಜಾನ್ ಬಿ ತೈಯಾರ್ ಹೈ.. ಈ ದುಡ್ಡು ಗಿಡ್ಡು ಎಲ್ಲ ಯಾವ್ ಮಹಾ ಲೆಕ್ಕ ' ಎನುತ ಸಾರ್ಕ್ಯಾಸ್ಟಿಕ್ ಆಗಿ ನಟಿಸತೊಡಗಿದ .

ಮಧ್ಯದ ಬೆರಳನ್ನು ತೋರಿಸಿದ ನಾನು ರೂಮಿನೊಳಗೋಗಿ ಡೆಬಿಟ್ ಕಾರ್ಡನ್ನು ತಂದು ಅವನ ಕೈಮೇಲಿಟ್ಟು,

 ‘ವಾಪಾಸ್ ಇಟ್ಟೋಗು.. ನನ್ನ ಎಬ್ಬಿಸ್ಬೇಡ..' ಎಂದೆ.

'ಥಾಂಕ್ ಯು ಮಚಿ..' ಎನುತ ತನ್ನ ಬೆವರಿನ ಮೈಯಲ್ಲೇ ನನ್ನನ್ನು ಬಾಚಿ ತಬ್ಬಿಕೊಂಡ ಆತನನ್ನು ನಾನು ಸಾಧ್ಯವಾದಷ್ಟು ದೂರಕ್ಕೆ ತಳ್ಳಿದೆ.

**

'ಡಿಯರ್ ಫ್ರೆಂಡ್ಸ್, ವೆಲ್ಕಮ್ ಯು ಆಲ್..' ಎಂದ ಧ್ವನಿವರ್ಧಕದ ಕರ್ಕಶ ಸದ್ದು ಆಗಷ್ಟೇ ಮುಸುಕುಹಾಕುತ್ತಿದ್ದ  ಸುಖನಿದ್ದೆಗೆ ಭಂಗ ತರುವಂತಿತ್ತು. ಊರಿನ ಸಂತೇಮಾಳದಲ್ಲಿ ಮದುವೆಗೆ ಬಳಸುವ ಶಾಮಿಯಾನವನ್ನು ಕಟ್ಟಿ, ಕಂಗೆಟ್ಟ ಕೆಂಪು ಹಾಗು ಜಿಡ್ಡುಗಟ್ಟಿದ್ದ ಬಿಳಿಯ ಬಣ್ಣದ ಚೇರುಗಳನ್ನು ಮನಬಂದಂತೆ ಅಸ್ತವ್ಯಸ್ತವಾಗಿ ಜೋಡಿಸಿ, ಪ್ರೈಮರಿ ಶಾಲೆಯ ಮಕ್ಕಳನ್ನು ನಿಗ್ರಹಿಸುವ ಶಿಕ್ಷಕಿಯರಂತಹ ಹಠಮಾರಿ ಹುಡುಗಿಯರಿಬ್ಬರನ್ನು ಮ್ಯಾನೇಜರ್ ಗಳಾಗಿ ನೇಮಿಸಿ ಓಪನ್ ಗ್ರೌಂಡ್ ಮೀಟಿಂಗನ್ನು ಆಯೋಜಿಸಲಾಗಿತ್ತು. ಬಂದವರನ್ನೆಲ್ಲ ಜೋರು ಮಾಡಿ ಅಲ್ಲಲ್ಲೇ ಕೂರಿಸುತಿದ್ದ ಆ ಸಮಾರಂಭ ಒಂತರ ಜನರೇಟರ್ನ ಶಕ್ತಿಯಲ್ಲಿ ಹಳ್ಳಿಮೂಲೆಯೊಂದರಲ್ಲಿ ರಾತ್ರಿಯ ಚಿತ್ರವನ್ನು ತೋರಿಸಿದಂತಿತ್ತು. ಆ ಹುಡುಗಿಯರೂ ತಾವೇ ಭವಿಷ್ಯದ ಪಿಯಮ್ಮೋ ಅಥವಾ ಸಿಯಮ್ಮು  ಕ್ಯಾಂಡಿಡೇಟುಗಳೋ ಎಂಬಂತೆ ತುಸು ಜಾಸ್ತಿಯೇ ಕುಣಿಯುತ್ತಿದ್ದರು. ಓಪನ್ ಗ್ರೌಂಡ್ ಮೀಟಿಂಗ್ ನಲ್ಲಿ ನೆರೆದಿದ್ದ  ಹತ್ತಿಪ್ಪತ್ತು ಮಂದಿಯೂ ಮೀಸೆ ಚಿಗುರದ ಅಮಾಯಕ ಹುಡುಗರು. ಜೊತೆಗೆ ಒಂದಿಬ್ಬರು ಕುಡಿದರೂ ಕುಡಿಯದಂತೆ ನಟಿಸಲಿಚ್ಚಿ ಫೇಲಾದ ವಾಗ್ಮಿಗಳು ಹಾಗು 'ಪ್ಯಾಟೆ'ಯ ಎಲ್ಲೆಂದರಲ್ಲಿ ಸಮಯ ಹರಣ ಮಾಡದೆ ಜೀವನ ನೆಡೆಸುವ ಒಂದಷ್ಟು ಪ್ರಜ್ಞಾವಂತ ನಾಗರಿಕರು. ಧ್ವನಿವರ್ಧಕದ ಸದ್ದನ್ನುಕೇಳಿ ವಿಚಲಿತನಾದ ಲೋಕೇಶ ತನ್ನೆರಡು ಅಸ್ತಗಳಿಂದ ಕಣ್ಣುಗಳನ್ನು ಉಜ್ಜಿಕೊಳ್ಳುತ್ತಾ ಎದ್ದೇಳತೊಡಗಿದ. ಮಲಗಿದ್ದು ಒಂದತ್ತೇ ನಿಮಿಷವಾದರೂ ಕೋಟ್ಯಧಿಪತಿಯಾಗುವ ಕನಸ್ಸನ್ನು ಕಂಡು ಸ್ವರ್ಗಲೋಕಕ್ಕೆ ಒಂದು ವಾಕನ್ನು ಹೋಗಿ ಬಂದತಿದ್ದ. ಸುತ್ತ ನೆರೆದಿದ್ದ ಹತ್ತು ಮತ್ತೊಂದು ಜನರನ್ನು ಕಂಡು ಉಳಿದವರು ಎಲ್ಲಿ ಎಂದು ಭವಿಷ್ಯದ ಸಂಭಾವ್ಯ ಪಿಯಮ್ ಅಥವಾ ಸಿಯಮ್ ಗಳಿಬ್ಬರನ್ನು ಕೇಳಿ,

'ರೀ, ಸಾರ್ ಭಾಷ್ಣ ಕೇಳ್ರಿ ಮೊದ್ಲು..' ಎಂದ ಒಬ್ಬಾಕೆಯನ್ನು ಹಾಗೆಯೆ ದುರುಗುಟ್ಟಿ ನೋಡಿ ಸುಮ್ಮನಾದ.

'ಹಾದರಿಂದ, ನೀವುಗಳೂ ಸಹ ದಿ ಗ್ರೇಟ್ ಅಂಟೋನಿಯೋ ರಂತಾಗಲು ಈ ಕೂಡಲೇ ನಮ್ಮ ಬಿಸಿನೆಸ್ ಅನ್ನು ಸೇರಿಕೊಳ್ಳಿ. ಈ ಅವಕಾಶ ನಿಮುಗೆ ಭಾರಿ ಭಾರಿ ಭರೋದಿಲ್ಲ! ಭಂದಾಗ ಭಿಡಭೇಡಿ.. ಕಮೋನ್, ಏನ್ ಯೋಚಿಸ್ತ್ತಿದ್ದೀರಾ, ಬನ್ನಿ ಫ್ರೆಂಡ್ಸ್, ನಮ್ಮನ ಸೇರಿಕೊಳ್ಳಿ..' ಎಂದು ಮೈಕನ್ನು ಹಿಡಿದು ಧೀರ್ಘಾಕ್ಷರಗಳನ್ನು ಕಚ್ಚಿ-ಕಚ್ಚಿ  ಅರಚುತ್ತಿದ್ದ ಐದಡಿಯ ವ್ಯಕ್ತಿಯೊಬ್ಬನನ್ನು ಕಂಡು ಹೌಹಾರಿ ಕಕ್ಕಾಬಿಕ್ಕಿಯಾದರು ದೂರದ ಬಳ್ಳಾರಿಯಿಂದ ಬಂದ ಹೈದರಿಬ್ಬರು.

'ಏನ್ ಹೇಳಕ್ಕಾತ್ತವ್ನೆಲೇ ಇವ್ನು, ಹುಚ್ಚ್ ಮಂಗ್ಯಾ' ಎಂದು ತನ್ನ ಸಣಕಲು ದೇಹದ ದೊಡ್ಡ ಕಣ್ಣುಗಳನ್ನು ನಿಮಿರಿಸಿ ಹೇಳಿದ ಒಬ್ಬಾತನಿಗೆ ಮತ್ತೊಬ್ಬ 'ಈ ಸೂಳಿಮಗನೆ ಅನ್ಸುತ್ತೆ ಅವತ್ತ್ ಫೋನಾಗ ನನ್ನ್ ಹತ್ರ ಐವತ್ ಕೋಟಿ ದುಡ್ಡಾತ ಅಂದದ್ದು. ಆ ಮುಖಾ ನೋಡ್ಲೆ, ಹತ್ತಾಣೆ ಕೊಟ್ಟ್ ಒಂದ್ ಸಾಬೂನ್ ತಗಣಕ್ಕ್ ಗತಿಯಿಲ್ಲ, ಐವತ್ ಕೋಟಿ ಈತಂತೆ. ' ಎಂದು ವ್ಯಂಗ್ಯವಾಗಿ ಹೇಳಿದನು.

ಆ ವ್ಯಕ್ತಿ  ಭಾಷಣ ಮಾಡುತ್ತಿದ್ದ ಪಕ್ಕಕೆ ಹಂದಿಗಳ ಹಿಂಡುಗಳು ಬಂದು ಗುಟುರತೊಡಗಿದವು. ಭಾಷಣಗಾರನ ಭಾಷಣಕ್ಕೆ ತೀರಾನೇ ಉಪಟಳವಾದಂತಾಗಿ ಕೊನೆಗೂ ತಾಳಲಾರದೆ ಆತ ಪಕ್ಕದಲ್ಲಿದ್ದ ಕಲ್ಲೊಂದನ್ನು ತೆಗೆದುಕೊಂಡು ಹಂದಿಯೊಂದರ ಹೊಟ್ಟೆಗೆ ಬೀಳುವಂತೆ ತನ್ನ ಶಕ್ತಿಯಲ್ಲವನ್ನು ಬಿಟ್ಟು ಎಸೆದ. ಆ ಹೊಡೆತದಲ್ಲಿ ಈ ಮಹಾಸಭೆಗೆ ತಾನು ನೂರು ಜನರನ್ನು ಕರೆದುತಂದು  ಪಕ್ಕದಲ್ಲಿ ಕೋಟು ತೊಟ್ಟು ಕೂತಿದ್ದ ಮೂರ್ನಾಲ್ಕು ಪ್ರತಿಷ್ಠಿತ ವ್ಯಕ್ತಿಗಳಿಂದ ಶಹಬಾಸ್ ಗಿರಿಯನ್ನು ಪಡೆಯುವ ಕನಸ್ಸು ಹಾಳಾದ ಸಿಟ್ಟೂ ಸಹ ಸೇರಿದಂತಿತ್ತು. 'ಡಬ್ಬ್..' ಎಂದು ಮಾಗಿದ ಹಲಸಿನ ಹಣ್ಣಿಗೆ ಬಡಿದಂತಹ ಬಂದ ಆ ಸದ್ದಿಗೆ ಹಂದಿಗಳೆಲ್ಲ ಹುಂಕರಿಸುತ್ತಾ ಅಲ್ಲಿಂದ ಜಾಗ ಕಿತ್ತವು.  ಖಾಲಿ ಚೇರಿನ ಕೊನೆಯಲ್ಲಿ ನಿಂತಿದ್ದ, ಸಮಯ ಹರಣ ಮಾಡದೆ ಜೀವನ ನೆಡೆಸುವ ಒಂದಷ್ಟು ಪ್ರಜ್ಞಾವಂತ ನಾಗರಿಕರು ಈ ದೃಶ್ಯವನ್ನು ಕಂಡು ನಗತೊಡಗಿದರು…

'ಸೊ ಫ್ರೆಂಡ್ಸ್ .. ಖ್ಖಷ್ಟಗಳು ಯಾರಿಗೆ ಬರುದಿಲ್ಲ.. ನಾವೆಲ್ಲ ಖ್ಖಷ್ಟಗಳನ್ನೇ ಹುಂಡು ಬಂದೋರು.. ಬನ್ನಿ ಫ್ರೆಂಡ್ಸ್.. ಅಲ್ಲಿ ನಮ್ಮ ಅಕೌಂಟ್ ಡಿಪಾರ್ಟ್ಮೆಂಟ್ ಇದೆ' ಎನುತ ಮತದಾನ ಬೂತಿನಂತಹ ನೀಲಿ ಬಟ್ಟೆಯಿಂದ ಒಂದು ಚೌಕಾಕಾರದ ಕೋಣೆಯನ್ನು ತೋರಿಸಿ ಅದರೊಳಗೆ ಹೋಗಿ ಅಲ್ಲಿರುವ ಒಬ್ಬ ವ್ಯಕ್ತಿಯ ಕೈಯಲ್ಲಿ ತಮ್ಮ ಹಣವನ್ನು ಡಿಪಾಸಿಟ್ ಮಾಡಿ ಬರುವಂತೆ ಹೇಳುತ್ತಾನೆ. ಚೌಕದ ಸುತ್ತಲೂ ಮತ್ತದೇ ಹಂದಿಗಳು ಬಂದು ಗುಟುರುತ್ತಿದ್ದವು. ಸ್ಟೇಜಿನ ಮೇಲೆ ಕೂತ ಮೂವರು ಬಾಡಿಗೆ ವ್ಯಕ್ತಿಗಳು ತಮ್ಮ ಮುಂದಿದ್ದ ಬಿಸ್ಕತ್ತು, ಕಾಫಿಯನ್ನು ಡಾಳಾಗಿ ಸೇವಿಸುತ್ತಾ ತಮಗೂ ಹಾಗು ಕುಳ್ಳ ಅರಚುತ್ತಿರುವ ಮಾತಿಗೂ ಎಳ್ಳಷ್ಟೂ ಸಂಬಧವಿಲ್ಲವೇನೋ ಎಂಬಂತೆ ವರ್ತಿಸುತ್ತಿದ್ದರು. ಬಳ್ಳಾರಿಯ ಹೈದರು ಇನ್ನು ಇಲ್ಲಿ ಕೂತರೆ ತಮಗೆ ಉಳಿಗಾಲವಿಲ್ಲ ಎನುತ ತಮ್ಮ ಜಾಗವನ್ನು ಕೀಳಲು ಆವಣಿಸುತ್ತಿದ್ದರು.

'ಬೋಸುಡಿಮಗ ಫೋನ್ ಮಾಡ್ಲಿ ಇವಾಂಗ್ ಐತಿ..' ಏನುತಾ ಎದ್ದು ನಿಂತರೆ, ಪ್ರೈಮರಿ ಸ್ಕೂಲಿನ ಹೆಡ್ಮೇಡಂಗಳಂತೆ ಕಣ್ಕೆರಳಿಸಿಕೊಂಡು ಯಾರೊಬ್ಬರೂ ಎದ್ದು ಹೋಗದಂತೆ ಕಾವಲು ಕಾಯುತಿದ್ದ ದ್ವಾರಪಾಲಕೆಯರು ಎದುರಾದದ್ದನ್ನು ಕಂಡು ಬೆಚ್ಚಿಬಿದ್ದರು. ಆ ರಣಕಣ್ಣುಗಳಲ್ಲಿ ತಮ್ಮ ಗಂಡಸುತನದ ಧೈರ್ಯ ಕಾಣದಂತೆ ಮರೆಯಾಯಿತು.

'ಲೇ, ಆ ಅಕ್ಕಂದಿರ್ ನೋಡ್ಲೆ. ಎದ್ದ್ ಹೋದ್ರ ದನಿಗ್ ಹೊಡ್ದನ್ಗೆ ಹೊಡಿಬಹುದು.. ಇನ್ ಸ್ವಲ್ಪ ಹೊತ್ತ್ ಕೂರ್ಲೇ.. ಅಮೇಗ್ ಹೋಗಣ' ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಂಡರು.

ಇದು ಯಾವ ಬಗೆಯ ಬಿಸಿನೆಸ್, ಏನನ್ನು ಮಾರಬೇಕು, ಇವುಗಳ ಶಾಖೆಗಳು ಎಲ್ಲಿವೆ ಎಂಬುದನ್ನು ಒಂದಿನಿತೂ ಹೇಳದೆ ಕೋಟಿ ಗಳಿಸುವ ಕನಸಿನ ಗೋಪುರವನ್ನಷ್ಟೇ ಕಟ್ಟಿ ಇಷ್ಟಿಷ್ಟು ದುಡ್ಡು ಕೊಡಬೇಕು ಎಂದರೆ ನಿಯತ್ತಿನ ನಾಗರಿಕರಿಗೆ ಸಿಟ್ಟು ಬಾರದೆ ಇರುತ್ತದೆಯೇ. ಲೋಕೇಶ ರೆಬಲ್ ನಂತಾದ. 'ರೀ ಮಿಸ್ಟರ್, ಬನ್ರೀ ಇಲ್ಲಿ..' ಎನುತ ತಾನು ಕೂತ ಜಾಗದಿಂದ ಒಂದಿಷ್ಟೂ ಕದಲದೆ ಭಾಷಣ ಮಾಡುತ್ತಿದ್ದ ವ್ಯಕ್ತಿಯನ್ನು ಕರೆದ. ಲೋಕೇಶ ಕೂತಲ್ಲೇ ಕೈಸನ್ನೆ ಮಾಡಿ ತನ್ನನ್ನು ಕರೆದದನ್ನು ಅವಮಾನವೆಂದು ಭಾವಿಸಿದ ಆ ವ್ಯಕ್ತಿ, ಕೂಡಲೇ ತನ್ನ ಸಿಟ್ಟಿನ ಕಣ್ಣುಗಳನ್ನು ರಣಚಂಡಿಯರಂತೆ ನಿಂತಿದ್ದ ಹೆಣ್ಣುಗಳ ಮೇಲೆ ಬೀರಿದ. ಕೂಡಲೇ ದೈವೀಶಕ್ತಿಯೊಂದು ತಮ್ಮ ಮೈಮೇಲೆ ಆವಾಹನೆಯಾದಹಾಗೆ ಚೀರುತ್ತಾ ಬಂದ ಅವರುಗಳು,

'ಏಯ್.. ಎನ್ನು..ಹ.. ಹೆಂಗಿದೆ ಮೈಗೆ.. ಅವ್ರ್ ಯಾರ್ ಗೊತ್ತಾ..?' ಎನುತ ತಮ್ಮ ಹೆಣ್ಣುದೇಹದೊಳಗಿದ್ದ ಗಂಡಸರನ್ನು ಮಾತಿಗಿಳಿಸಿದರು. ಅದಾಗಲೇ ಸಿಟ್ಟು ವಿಪರೀತವಾಗಿ ತನ್ನ ಸಹನೆಯನ್ನು ಕಳೆದುಕೊಂಡಿದ್ದ ಲೋಕೇಶ ಕೂಡಲೇ ತನ್ನ ಪಕ್ಕದಲ್ಲಿದ್ದ ಚೇರೊಂದನ್ನು ತನ್ನ ಬಲಗೈಯಲ್ಲಿ ಮೇಲಕೆತ್ತಿ ಮುಂದಿದ್ದ ಇನ್ನೊಂದು ಚೇರಿನ ಮೇಲೆ ರಭಸವಾಗಿ ಹೊಡೆದ. ಆ ಹೊಡೆತಕ್ಕೆ ಎರಡೂ ಚೇರುಗಳು ಸೀಳಿ ಮುರುಟಿಬಿದ್ದವು!  ಲೌಡ್ ಸ್ಪೀಕರ್ನ ಧ್ವನಿಯನ್ನೂ ಮೀರಿಸುವಂತೆ ಬಂದ ಆ ಸದ್ದಿಗೆ ರಣಚಂಡಿಯರಿಬ್ಬರು ವಿರುದ್ಧ ದಿಕ್ಕಿನಲ್ಲಿ ಕಕ್ಕಾಬಿಕ್ಕಿಯಾಗಿ ಓಡಿ ತಮ್ಮ ಪಿಳಪಿಳ ಕಣ್ಣನ್ನು ಬಿಡುತ್ತಾ ದೂರದಲ್ಲಿ ನಿಂತರು. ಬಳ್ಳಾರಿಯ ಹೈದರಿಬ್ಬರು ಇದೆ ಸುಸಮಯವೆಂದುಕೊಂಡು ತಮ್ಮ ಕಿರುಬೆರಳುಗಳೆರಡನ್ನು ಭಾಷಣಮಾಡುತ್ತಿದ್ದ ವ್ಯಕ್ತಿಗೆ ತೋರಿಸುತ್ತಾ ಹಂದಿಗಳು ಗುಟುರುತ್ತಿದ್ದ ಜಿಗ್ಗಿನೆಡೆಗೆ ನೆಡೆದು ಪವಾಡಸದೃಶ್ಯ ರೀತಿಯಲ್ಲಿ ಅವುಗಳ ಒಳಗೆ ತೂರಿಕೊಂಡೇ ಮಾಯಯಾಗಿಬಿಟ್ಟರು!

ತನ್ನ ಕೈಚಿಟಕಿಯನ್ನು ಹೊಡೆದು ಸನ್ನೆಯಲ್ಲೇ ತನ್ನ ಮುಂದೆ ಬರುವಂತೆ ಮತ್ತೊಮ್ಮೆ ಆಜ್ಞಾಪಿಸಿದ ಲೋಕೇಶನನ್ನು ಕಂಡು ಐದಡಿಯ ವ್ಯಕ್ತಿ ಉಗುಳನ್ನೇ ಗಟಗಟ ನುಂಗುತ್ತಾ ಹುಸಿನಗೆಯನ್ನು ಬೀರಿ ಮುಂಬಂದು ನಿಂತ.

'ಏನ್ರಿ ಇದು..?' ಲೊಕೇಶನ ಕಣ್ಣುಗಳು ಕಾದ ಕೆಂಡದಂತೆ ಕೆಂಪಾಗಿದ್ದವು.

'ಸಾರ್.. ಅದು..ಮಾರ್ಕೆಟಿಂಗ್ ಬಿಸಿನೆಸ್..' ಎಂದಷ್ಟೇ ಹೇಳಲು ಸಶಕ್ತನಾದ ಆತ ಲೊಕೇಶನ ಆ ತೀಕ್ಷ್ಣ ದೃಷ್ಟಿಯನ್ನು ನೋಡಲಾಗದೇನೋ ಎಂಬಂತೆ ತನ್ನ ಮೂರ್ಛೆಹೋಗುವ ನಾಟಕವನ್ನು ಆಡಿದ.

'ಓ ಧೇವನೇ' ಎಂದು ಹಾಸಿಗೆಯ ಮೇಲೆ ಮಲಗುವಂತೆ ಮಲಗಿದ ಆತನನ್ನು ಕಂಡು ಕಾಫಿ ಬಿಸ್ಕತ್ತಿನಲ್ಲೇ ಊಟವನ್ನು ಮಾಡುತ್ತಿದ್ದ ಕಪ್ಪು ಕೋಟಿನ ವ್ಯಕ್ತಿಗಳು ನಿಧಾನವಾಗಿ ಎದ್ದು ನಿಂತರು. ಅಷ್ಟರಲ್ಲಾಗಲೇ ನೆರೆದಿದ್ದ ಜನರಲ್ಲಿ ಗುಜುಗುಜು ಶುರುವಾಗತೊಡಗಿತು. ಲೋಕೇಶ ಸೀದಾ ಮೈಕಿನ ಬಳಿಗೋಗಿ ನೆರೆದಿದ್ದ ಜನರನ್ನು ಉದ್ದೇಶಿಸಿ ಇದೊಂದು ಬಗೆಯ ಸ್ಕ್ಯಾಮ್ ಎಂದೂ , ಅಮಾಯಕ ಜನರ ಹಣವನ್ನು ಲೂಟಿಮಾಡುವ ಷಡ್ಯಂತ್ರವೆಂದೂ ಹೇಳಿ ಎಲ್ಲರನ್ನು ಅಲ್ಲಿಂದ ತೆರಳುವಂತೆ ಹೇಳಿದ. ಹಾಗೆಯೆ ನೆರೆದಿದ್ದ ಪ್ರಜ್ಞಾವಂತ ಊರಿನ ಜನರಲ್ಲಿ ಕೂಡಲೇ ಹತ್ತಿರದ  ಪೊಲೀಸ್ ಠಾಣೆಗೆ ಪೋನಾಹಿಸಬೇಕೆಂದೂ ಆಜ್ಞಾಪಿಸಿದ. ಅಲ್ಲಿಯವರೆಗೂ ಕೂತಲ್ಲಿಯೇ ನೆಡೆಯುತ್ತಿದ್ದ ಎಲ್ಲವನ್ನೂ ಸಾವಧಾನವಾಗಿ ನೋಡತೊಡಗಿದ ಕಪ್ಪುಕೋಟಿನ ವ್ಯಕ್ತಿಗಳು ಯಾವಾಗ ಪೋಲೀಸರ ಹೆಸರನ್ನು ಕೇಳಿದರೋ ಕೂಡಲೇ ನೆಲಗೊಳಗೆ ಉದುಗಿಕೊಳ್ಳುವ ಇಲಿಮರಿಗಳಂತೆ ಒಬ್ಬೊಬ್ಬರಾಗಿಯೇ ಅಲ್ಲಿಂದ ಜಾಗ ಕೀಳತೊಡಗಿದರು. ಆಶ್ಚರ್ಯವೆಂಬಂತೆ ಕೆಲಸೆಕೆಂಡುಗಳ ಮೊದಲು ಮೂರ್ಛೆ ಬಿದ್ದಿದ್ದ ವ್ಯಕ್ತಿಯೂ ಯಾರಿಗೂ ತಿಳಿಯದಂತೆ ಅಲ್ಲಿಂದ ಕಾಣೆಯಾಗಿದ್ದ. ಇನ್ನು ರಣಚಂಡಿಯರಿಬ್ಬರು ಬಹುಷಃ ತಮ್ಮ ಊರ ದಾರಿ ಮರೆಯುವಂತಯೇ ಓಟ ಕಿತ್ತಿರೆನೊ ಎಂಬುದು ತಿಳಿಯಲಿಲ್ಲ.
 
 
ಮುಂದುವರೆಯುವುದು..