Monday, July 8, 2019

ಒಂಟಿಬೆಟ್ಟದ ಸ್ಮಶಾನ - 2

*** Continued
https://sujithckm.blogspot.com/2017/11/blog-post_29.htmlhttps://sujithckm.blogspot.com/2017/11/blog-post_29.html


ಈ ಭಾರಿ ಅದೆಷ್ಟೇ ಪ್ರಯತ್ನ ಪಟ್ಟರೂ ಅದು ಕನಸ್ಸಲ್ಲವೆಂಬ ಖಾತ್ರಿ ರಾಹುಲ್ನಿಗೆ ಅದಾಗಲೇ ಆಗಿರುತ್ತದೆ. 'ಜಣ್ .. ಜಣ್' ಎಂದು ಎರಡೆಜ್ಜೆ ಮುಂದೆ ಬಂದ ಆ ಭಯಾನಕ ಸದ್ದಿಗೆ ಇಡೀ ಪ್ರಕೃತಿಯೇ ಒಮ್ಮೆಗೆ ಶಾಂತವಾಗಿಬಿಡುತ್ತದೆ. ಕಡುಗೆಂಬು ಕಣ್ಣಿನ ನಾಯಿಗಳೆರಡು ದಾರಿಯನ್ನು ಬಿಡುವಂತೆ ವೃತ್ತದಿಂದ ಹೊರಬಂದು ನಿಲ್ಲುತ್ತವೆ. ರಾಹುಲ್ನ ದೇಹದ ರೋಮಗಳೆಲ್ಲವೂ ಸಟೆದು ನಿಂತಿರುತ್ತವೆ. ಹೃದಯಬಡಿತ ಆತನ ದೇಹವನ್ನೇ ಕಂಪಿಸುವಂತಿರುತ್ತದೆ. 'ಜಣ್..ಜಣ್' ಎಂಬ ಮತ್ತೆರಡು ಹೆಜ್ಜೆಗಳ ಸದ್ದು! ಆ ಅದೃಶ್ಯ ಆಕೃತಿ ಕೆಲವೇ ಅಡಿಗಳ ಮುಂದೆ ಬಂದಿರುವ ಖಾತ್ರಿಯಾದ ಕೂಡಲೇ ರಾಹುಲ್ ಒಮ್ಮೆ ಜೋರಾಗಿ ಕೂಗತೊಡಗುತ್ತಾನೆ. ಆದರೆ ಆ ಸದ್ದು ಭದ್ರವಾಗಿ ಮುಚ್ಚಿರುವ ಕೋಣೆಯಳೊಗೆಯೇ ಗಿರಕಿ ಹೊಡೆದಂತೆ ಅರೆಕ್ಷಣದಲ್ಲೇ ಅಂತರ್ದಹನವಾಗುತ್ತದೆ. ರಾಹುಲ್ ಒಮ್ಮೆಲೇ ಅಳತೊಡಗುತ್ತಾನೆ. ಆತನ ಅಳುವಿನಲ್ಲಿ ಕಾಪಾಡಿ..ಎಂಬ ಪದ ಬಹಳಾನೇ ಕರುಣಾಜನಕವಾಗಿ ಮೂಡುತ್ತಿರುತ್ತದೆ. ಕೂಡಲೇ 'ಘ್ರಾ.....' ಎಂದು ಘೋರವಾಗಿ ಮೂಡತೊಡಗಿದ ಸದ್ದು ಒಮ್ಮೆಲೇ ಜೋರಾಗುತ್ತಾ ಹೋಗುತ್ತದೆ. ಹತ್ತಾರು ಜನರ ಆಕ್ರಂದನಗಳನ್ನು ನುಂಗಿದ ಭಯಾನಕ ಹೆಣ್ಣು ಸದ್ದಿನಂತಿದ್ದ ಆ ಧ್ವನಿ ನೋಡನೋಡುತ್ತಲೇ ಇಡೀ ಭೂಮಂಡಲವನ್ನೇ ನಡುಗಿಸಿಬಿಡುವಂತೆ ಹಬ್ಬುತ್ತದೆ. ಆ ಸದ್ದಿನಿಂದ ಅಕ್ಕಪಕ್ಕದ ಮರಗಿಡಗಳಲ್ಲಿದ್ದ ಹಕ್ಕಿ ಪಕ್ಷಿಗಳೆಲ್ಲವೂ ಪ್ರಕೃತಿವಿಕೋಪದ ಮುನ್ಸೂಚನೆ ಸಿಕ್ಕಾಗ ಚೆಲ್ಲಾಪಿಲ್ಲಿಯಾಗಿ ಹಾರುವಂತೆ ಹಾರಿ ಕಣ್ಮರೆಯಾಗುತ್ತವೆ. ಹೆಚ್ಚುಕಡಿಮೆ ಎರಡು ನಿಮಿಷಗಳಿಗೂ ಮಿಗಿಲಾಗಿ ಬಂದ ಆ ಸದ್ದಿಗೆ ರಾಹುಲ್ ತರತರನೇ ನಡುಗ ಹತ್ತುತ್ತಾನೆ. ಕೂಡಲೇ ದೂರದಿಂದ ಯಾರೋ ಕೂಗಿದ ಹಾಗೆ ಸದ್ದು!

'ಏ ಬೇವರ್ಸಿ ಮುಂಡೆ.. ಈ ಅಮಾಸೆಗೆ ಮುಗಿತು ಕಣೆ ನಿನ್ ಕತೆ.. ಗಂಡುಸರೇ ಬೇಕೆನೆ ನಿಂಗೆ.. ಲೌಡಿಮಗ್ಳೆ ಬಾರೆ ಇಲ್ಲಿ ..! ' ಎಂದು ದೂರದಲ್ಲಿ ಲ್ಯಾಟಿನ್ನನ್ನು ಹಿಡಿದು ಮುದುಕಿಯೊಂದರ ಸದ್ದು ಮೂಡಿತು. ಆ ಸದ್ದಿಗೆ ನೂರು ಮೀಟರ್ ದೂರದಲ್ಲಿದ್ದ ಆ ಬೆಳಕಿನ ಕಡೆಗೆ ನಾಲ್ಕೇ ಹೆಜ್ಜೆಯಲ್ಲಿ 'ಜಲ್ .. ಜಲ್ .. ಜಲ್ .. ಜಲ್ ' ಎಂದು ಕುಪ್ಪಳಿಸಿದ ಆ ಸದ್ದು ಮತ್ತೊಮ್ಮೆ ಹೃದಯವಿದ್ರಾವಕ ಸದ್ದಿನಿಂದ ಕೂಗುತ್ತದೆ. ಲಾಟಿನ್ನ್ನಿನ ಬೆಳಕಿನ ಹಿನ್ನಲೆಯಲ್ಲಿ ಹೊಳೆಯುತ್ತಿದ್ದ ಆ ಮುದುಕಿಯ ಬಿಳಿ ಕೂದಲುಗಳು ಒಮ್ಮೆಲೇ ಗಾಳಿಗೆ ತೂರುತ್ತಾ ಹಾರತೊಡಗುತ್ತವೆ. ಆ ಅದೃಶ್ಯ ಆಕಾರದ ಮೊಗ ಆ ಮುದುಕಿಯ ಮುಖದ ಅತಿ ಸಮೀಪವಿರುವಂತೆ ಭಾಸಾಭಾಗುತ್ತಿತ್ತು. ಆದರೆ ಮುದುಕಿ ತಾನು ನಿಂತ ಜಾಗದಿಂದ ಒಂದಿನಿತೂ ಕದಲದೆ ಆ ಅದೃಶ್ಯ ಆಕೃತಿಯನ್ನೇ ದಿಟ್ಟಿಸಿ ನೋಡತೊಡಗುತ್ತದೆ. ಕೊಡಲೇ ತನ್ನ ಬಲಗೈಯ ಮುಷ್ಟಿಯಲ್ಲಿದ್ದ ಬೂದಿಯಂತಹ ಪುಡಿಯನ್ನು ಅದರ ಮೇಲೆ ಎಸೆಯುತ್ತಾಳೆ. ಲ್ಯಾಂಟೀನಿನ ಬೆಳಕಿನಲ್ಲಿ ಬೂದಿಯಿಂದ ಮೂಡಿದ ಆ ಆಕೃತಿಯ ಎತ್ತರ ಕಡಿಮೆ ಎಂದರೂ ಹನ್ನೆರೆಡು ಅಡಿಯಷ್ಟಿದ್ದಿತು!! ಬೂದಿ ಬಿದ್ದ ಮರುಕ್ಷಣದಲ್ಲೇ ಆ ಭೀಮಾಕೃತಿ ಕಣ್ಣಿಗೆ ಕಾಣದಂತೆ ಕಾಡಿನೊಳಗೆ ನುಗ್ಗಿ ಮಾಯವಾಯಿತು. ಅದರ ಹಿಂದೆದ್ದ ನಾಯಿಗಳೂ ಚೆಲ್ಲಾಪಿಲ್ಲಿಯಾಗಿ ಓಡುತ್ತಾ ಕತ್ತಲೆಯಲ್ಲಿ ಮರೆಯಾದವು.

ದೂರದಲ್ಲಿದ್ದ ಮುದುಕಿ ರಾಹುಲ್ನನ್ನೇ ದುರುಗುಟ್ಟಿ ನೋಡತೊಡಗಿದ್ದಳು. 'ಯಾರಯ್ಯ ನೀನು .. ಇಲ್ಲೇನ್ ಮಾಡ್ತಾ ಇದ್ದೀಯ' ಎನ್ನುತ್ತಾ ಕೋಲನ್ನು ಊರಿಕೊಂಡು ಕುಂಟುತ್ತಾ ಹತ್ತಿರವಾದಳು ಆ ಮುದುಕಿ. ಜನರ ಹೆಜ್ಜೆಗುರುತುಗಳಿಲ್ಲದ ಈ ಕಡುಕಾನನದಲ್ಲಿ ಮುದುಕಿಯೊಬ್ಬಳ ಇರುವಿಕೆ ರಾಹುಲನಿಗೆ ಸಂಶಯವನ್ನು ಹುಟ್ಟಿಹಾಕಿತು. ಹತ್ತಿರವಾದ ಆಕೆ ರಾಹುಲ್ನನ್ನು ಮೇಲಿಂದ ಕೆಳಗಿನವರೆಗೂ ನೋಡುತ್ತಾ 'ಅವ್ಳ್ ಕಣ್ಣು ನಿನ್ ಮ್ಯಾಗೆ ಬಿದೈತೆ.. ನೀನ್ ಎಲ್ ಹೋದ್ರೂ ಅವ್ಳ್ ಬಿಡಾಕಿಲ್ಲ.. ನೀನು ನಾಳೆತಂಕ ಇಲ್ಲೇ ಇರು.. ಅಮಾಸೆ ದಿನ ನೀನ್ ಎಲ್ ಇದ್ರೂ ಹಿಂದೇನೆ ಬರ್ತಾಳೆ.. ಆಗ ಆಯಿತೇ ಅವ್ಳಿಗೆ ಮಾರಿ ಹಬ್ಬ..' ಎನ್ನುತ್ತಾಳೆ. ನಂತರ ರಾಹುಲ್ ಅಲ್ಲಿಯವರೆಗೂ ನೆಡೆದ ವಿಷಯವನ್ನೆಲ್ಲ ವಿವರಿಸಿ ಕೊನೆಗೆ ತನ್ನ ಮೆನೆಯವರು ನನಗಾಗಿ ಕಾಯುತ್ತಿದ್ದಾರೆ ಎಂದು ಹೇಳುತ್ತಾನೆ. ಆ ಭಯಾನಕ ಸ್ಮಶಾನದಲ್ಲಿ ಇನ್ನು ನಿಲ್ಲುವುದು ಬೇಡವೆಂದು ಅಲ್ಲದೆ ಈ ಒಂಟಿಬೆಟ್ಟ ಗಂಡಸರಿಗಂತೂ ಅಲ್ಲವೇ ಅಲ್ಲವೆಂದು ಮುದುಕಿ ರಾಹುಲ್ನನ್ನು ಹಿಂಬಾಲಿಸುವಂತೆ ಹೇಳುತ್ತಾಳೆ. ರಾಹುಲ್ ಆಕೆ ನೆಡೆದ ಹಾದಿಯನ್ನೇ ಹಿಡಿಯುತ್ತಾನೆ. ಸುಮಾರು ಅರ್ಧ ಘಂಟೆಗಳ ಕಾಲ ಕಾಡಿನ ಕಡುಗಪ್ಪಿನಲ್ಲಿ ನೆಡೆದ ನಂತರ ಸಣ್ಣದಾದ ಗುಡಿಸಲೊಂದು ಸಿಗುತ್ತದೆ. 'ಬಾ..' ಎಂದು ಕರೆದ ಮುದುಕಿ ಗುಡಿಸಿಲಿನೊಳಗೆ ಹೋಗಿ ಚಿಮಣಿಯಯನ್ನು ಹತ್ತಿಸುತ್ತಾಳೆ. ಗುಡಿಸಿಲಿನ ಒಳಗೊದ ರಾಹುಲ್ ಅದರಳೊಗೆ ಒಮ್ಮೆ ಕಣ್ಣಾಯಿಸಿದಾಗ ಎಲ್ಲೆಂದರಲ್ಲಿ ಕಟ್ಟುಗಳು, ಬಗೆ ಬಗೆಯ ಪ್ರಾಣಿಗಳ ಕೊಂಬುಗಳು, ಮಂತ್ರಿಸಿದ ನಿಂಬೆ ಹಣ್ಣುಗಳೇ ಕಾಣುತ್ತವೆ. 'ಹೊಟ್ಟೆ ಹಸ್ದಿರುತ್ತೆ.. ತಗ..' ಎಂದ ಮುದುಕಿ ಒಂದು ಗೊಂಚಲು ಬಾಳೆಹಣ್ಣನ್ನು ನೀಡುತ್ತಾಳೆ. ಆತ ತಾವು ಒಂದೆರೆಡು ತೆಗೆದುಕೊಳ್ಳಿ ಎಂದಾಗ ಬೇಡವೆಂಬಂತೆ ಆಕೆ ತಲೆಯನ್ನು ಅಲ್ಲಾಡಿಸುತ್ತಾಳೆ. ನೀರು ಕಾಣದ ನೆಲದಂತಾಗಿದ್ದ ರಾಹುಲ್ನ ಹೊಟ್ಟೆಯ ಬಾಯಾರಿಕೆ ಕ್ಷಣಮಾತ್ರದಲ್ಲಿ ಅಷ್ಟೂ ಹಣ್ಣುಗಳನ್ನು ತಿನ್ನಿಸುತ್ತದೆ. ಮುದುಕಿ ರಾಹುಲ್ನನ್ನು ನೋಡಿ ನಗುತ್ತಾಳೆ. ನಗುವಾಗ ಆಕೆಯ ಕಂದುಮಿಶ್ರಿತ ಹಲ್ಲುಗಳು ಹೊರಬಂದು ವಿಕಾರವಾಗಿ ಕಾಣತೊಡಗುತ್ತವೆ. ನಂತರ ರಾಹುಲ್ ಆಕೆಯನ್ನು ವಿಚಾರಿಸುತ್ತಾ ಆಕೆಯ ಹೆಸರು, ಊರು, ಮೆನೆಯವರು ಎಲ್ಲವನ್ನು ಕೇಳುತ್ತಾ ಆಕೆ ಈ ಗುಡಿಸಿಲಿನಲ್ಲಿ ಒಬ್ಬಳೇಕೆ ಇರುವುದೆಂದು ಕೇಳುತ್ತಾನೆ.

ಆಕೆಯ ಹೆಸರು ಕೆಂಚಿಯೆಂದೂ, ಆಕೆ ದೂರದ ಬಯಲುಸೀಮೆಯವಳೆಂದು ಮದುವೆಯ ನಂತರ ಗಂಡನೊಟ್ಟಿಗೆ ಇಲ್ಲಿಗೆ ಬಂದು ಸಂಸಾರ ಊಡಿದಳೆಂದು ಮುದುಕಿ ತನ್ನ ಬಗ್ಗೆ ಹೇಳತೊಡಗುತ್ತಾಳೆ. ಮದುವೆಯ ಒಂದು ವರ್ಷದ ನಂತರ ಆಕೆಗೆ ಗಂಡುಮಗುವೊಂದು ಜನಿಸುತ್ತದೆ. ಆಕೆಯ ಗಂಡ ಮಗುವಾದ ನಂತರ ಪರಸ್ತ್ರೀಯ ಸಂಗವನ್ನು ಬಯಸುತ್ತ ಪಕ್ಕದ ಊರಿನ ದ್ಯಾವಿ ಎಂಬ ಹುಡುಗಿಯ ಹಿಂದೆ ಬೀಳುತ್ತಾನೆ. ಆ ದ್ಯಾವಿ ಮದುವೆಯ ಕನಸೊತ್ತ ಹದಿನಾರರ ಚಲುವೆ. ಕೆಂಚಿಯ ಗಂಡನ ಮೋಹಕ ಮಾತುಗಳಿಗೆ ಬಲಿಯಾಗಿ ಪ್ರತಿದಿನ ರಾತ್ರಿ ಆ ಒಂಟಿಬೆಟ್ಟದ ತಪ್ಪಲಿನಲ್ಲಿ ಸಿಗತೊಡಗುತ್ತಾಳೆ. ದಿನಗಳೆದಂತೆ ವಿಷಯ ದ್ಯಾವಿಯ ಅಪ್ಪನಿಗೆ ಗೊತ್ತಾಗಿ ಒಂದುದಿನ ಆತ ಮನಬಂದಂತೆ ಆ ಹುಡುಗಿಗೆ ಥಳಿಸಿ ರಾತ್ರೋ ರಾತ್ರಿ ಆಕೆಯ ಕೈಗಳುಗಳೆರಡನ್ನು ಕಟ್ಟಿ ಪ್ರಾಣಿಗಳನ್ನು ಎಳೆದು ತಂದಂತೆ ಎಳೆದುಕೊಂಡು ಬಂದು ಕೆಂಚಿಯ ಮೆನೆಯ ಮುಂದೆ ಎಸೆದುಹೋಗುತ್ತಾನೆ. ಕೆಳಜಾತಿಯವರಾದ್ದರಿಂದಲೋ ಏನೋ ಆತ ನ್ಯಾಯವನ್ನಾಗಲಿ, ಜಗಳವನ್ನಾಗಲಿ ಮಾಡಲೋಗುವುದಿಲ್ಲ. ಗಾಯದ ಮಡುವಿನಲ್ಲಿ ನರಳುತ್ತಿದ್ದ ಆಕೆಯನ್ನು ಕಂಡು ಕೆಂಚಿ ಶುಶ್ರುಶೆಯನ್ನು ಮಾಡಿ ತನ್ನ ಗುಡಿಸಿನಲ್ಲೇ ಮಲಗಿಸಿಕೊಳ್ಳುತ್ತಾಳೆ. ವಿಷಯ ತಿಳಿದ ಕೆಂಚಿಯ ಗಂಡ ತಮ್ಮಿಬ್ಬರ ಬಗ್ಗೆ ಕೆಂಚಿಗೆ ತಿಳಿಸದೇ ಗೌಪ್ಯವಾಗಿರುವಂತೆ ದ್ಯಾವಿಗೆ ಹೇಳುತ್ತಾನೆ. ದಿನಗಳೆದಂತೆ ಇಲ್ಲಿಯೂ ಕೆಂಚಿ ನೀರು ತರಲು ಅಥವಾ ಬಟ್ಟೆಯೊಗೆಯಲು ಹೊಳೆಯಬಳಿಗೆ ಹೋದಾಗ ಆತ ದ್ಯಾವಿಯನ್ನು ಕಾಡತೊಡಗುತ್ತಾನೆ. ಬಲವಂತ ಮಾಡುತ್ತಾನೆ. ಅತ್ತ ಕಡೆ ತಾನು ಹುಟ್ಟಿ ಬೆಳೆದ ಮನೆಗೂ ಹೋಗಲಾಗದೆ ಇತ್ತ ಕಡೆ ಈತನ ಕಾಟವನ್ನೂ ತಡೆಯಲಾಗದೆ ದ್ಯಾವಿ ದಿನೇ ದಿನೇ ಸೊರಗುತ್ತಾಳೆ. ಒಂದು ದಿನ ಪಾತ್ರೆಯನ್ನು ತೊಳೆಯಲು ಹೋದ ಕೆಂಚಿ ಬಿಟ್ಟ ಮತ್ತೊಂದು ಪಾತ್ರೆಯನ್ನು ತರಲು ವಾಪಸ್ಸು ಬಂದಾಗ ತನ್ನ ಗಂಡ ದ್ಯಾವಿಯ ಮೇಲೆರಗಿರುವ ನಗ್ನ ದೃಶ್ಯವನ್ನು ಕಂಡು ಕೆಂಡಾಮಂಡಲವಾಗುತ್ತಾಳೆ. ಕೂಡಲೇ ಪಕ್ಕದಲ್ಲಿದ್ದ ತಡಿಗೆಯನ್ನು ತೆಗೆದು ಗಂಡನಿಗೂ ದ್ಯಾವಿಗೂ ಮನಬಂದಂತೆ ಬಡಿಯತೊಡಗುತ್ತಾಳೆ. ದ್ಯಾವಿ ಕೆಂಚಿಯ ಕಾಲಿಡಿಯುತ್ತಾ ಕ್ಸಮಿಸಬೇಕೆಂದೂ, ಇದರಲ್ಲಿ ತನ್ನ ತಪ್ಪೇನೂ ಇಲ್ಲವೆಂದು ಅಂಗಲಾಚಿ ಬೇಡಿಕೊಳ್ಳುತ್ತಾಳೆ. ಆದರೆ ಕೆಂಚಿ ಇದ್ಯಾವುದನ್ನು ಕೇಳುವ ಸ್ಥಿತಿಯಲ್ಲಿರುವುದಿಲ್ಲ. ಆ ದಿನದಿಂದಲೇ ತನ್ನ ಗಂಡನನ್ನೂ ಆಕೆಯನ್ನು ಮನೆಯಿಂದ ಹೊರಗಟ್ಟಿ ಇನ್ನೆಂದೂ ತನಗೆ ಮುಖವನ್ನು ತೋರಿಸಬಾರದೆಂದು ಅರಚುತ್ತಾಳೆ. ನಂತರ ಅದೆಷ್ಟೋ ತಿಂಗಳುಗಳ ಕಾಲ ಅವರಿಬ್ಬರೂ ಏನಾದರೆಂದು ತಿಳಿಯಲಿಲ್ಲ. ಕೊನೆಗೆ ಯಾರಿಂದಲೋ ಕೇಳಿದ ವಿಷಯ ಕೆಂಚಿಯ ಮರ್ಯಾದೆಯೇ ಅರಾಜಾಕುವಂತೆ ಮಾಡುತ್ತದೆ. ತನ್ನ ಗಂಡ ಆಕೆ ಹಾಗು ಇನ್ನು ಕೆಲವರು ಸೇರಿ ದೂರದ ಊರಿನಲ್ಲಿ ವೈಶ್ಯವಾಟಿಕೆಯನ್ನು ಶುರುಮಾಡಿದ್ದರೆಂದೂ ಈಗ ಇಡೀ ಊರಿಗೆ ಊರೇ ಸಂಜೆಯಾದರೆ ಅಲ್ಲಿ ನೆರೆಯುತ್ತಾರೆಂದು ತಿಳಿಯುತ್ತಾಳೆ. ಹಣೆಯ ಮೇಲೆ ಬರೆದಂತೆ ನೆಡೆಯುತ್ತದೆ ಎಂದುಕೊಂಡು ಇದ್ದೊಬ್ಬ ಮಗನನ್ನು ಕಷ್ಟಪಟ್ಟು ಬೆಳೆಸುತ್ತಾ ಹೋಗುತ್ತಳೆ ಕೆಂಚಿ. ವರುಷಗಳು ಉರುಳಿದವು. ಆದರೆ ವಿಪರ್ಯಾಸವೆಂಬಂತೆ ವಯಸ್ಸಿಗೆ ಬಂದ ತನ್ನ ಮಗನೂ ಕೊನೆಗೆ ಅದೇ ವೈಶ್ಯವಾಟಿಕೆಯ ಅಡ್ಡದ ಗಿರಾಕಿಯಾಗಿ ದಿನಕಳೆಯತೊಡಗುತ್ತಾನೆ. ವಿಷಯ ತಿಳಿದ ಕೆಂಚಿ ವಿಧವಿಧವಾಗಿ ಮಗನಿಗೆ ಬುದ್ದಿಯನ್ನು ಹೇಳಿದರೂ ಆತ ಅಲ್ಲಿಗೆ ಹೋಗುವುದ ಮಾತ್ರ ನಿಲ್ಲಿಸಲಿಲ್ಲ. ಜೀವನಕ್ಕಾಗಿ ಇದ್ದೊಬ್ಬ ಮಗನೂ ಹೀಗೆ ಅಡ್ಡದಾರಿ ಹಿಡಿದಿದ್ದನ್ನು ಕಂಡ ಕೆಂಚಿ ಶತಾಯಗತಾಯ ಏನಾದರು ಮಾಡಲೇಬೇಕೆಂದು ಒಂದು ದಿನ ತಿಳಿಯದಂತೆ ಮಗನನ್ನು ಹಿಂಬಾಲಿಸುತ್ತಾಳೆ. ಅದೆಷ್ಟೋ ಸಮಯ ನೆಡೆದ ನಂತರ ದ್ಯಾವಿಯ ಮನೆ ಕಾಣುತ್ತದೆ. ಅದರ ಹೊರಜಗಲಿಯಲ್ಲಿ ನಾಲ್ಕೈದು ಜನರ ಸಣ್ಣ ಸಣ್ಣ ಗುಂಪುಗಳು ಇಸ್ಪೀಟನ್ನು ಆಡುತ್ತಾ, ಕಳ್ಳಭಟ್ಟಿಯನ್ನು ಕುಡಿಯುತ್ತಾ ಮತ್ತಿನಲ್ಲಿ ಮರೆತ್ತಿರುತ್ತದೆ. ಆಗೊಮ್ಮೆ ಈಗೊಮ್ಮೆ ಒಬ್ಬೊಬ್ಬ ಗಂಡಸರೂ ಆ ಮೆನೆಯ ಒಳಗೊಗಿ ಹೊರಬರುತ್ತಿರುತ್ತಾರೆ. ಕೆಂಚಿಯೂ ವಿಧವಿಧವಾದ ಖಾದ್ಯವನ್ನು ತಯಾರಿಸಿ ನೆರೆದಿದ್ದವರಿಗೆಲ್ಲ ತಂದು ಕೊಡುತ್ತಿರುತ್ತಾಳೆ. ಹಾಗೆ ಬಂದಾಗಲೆಲ್ಲ ಕೆಲವರು ಆಕೆಯ ಕೈಯನ್ನು ಹಿಡಿದೆಳೆದು ಆಕೆಯನ್ನು ಚುಂಬಿಸಲು ಪ್ರಯತ್ನಿಸುತ್ತಿರುತ್ತಾರೆ. ಮೊದಮೊದಲು ಕೊಸರಾಡುವ ಆಕೆ ಚಿಲ್ಲರೆಯ ಗಂಟುಗಳು ಹೊರಬಿದ್ದಕೂಡಲೇ ಬದಲಾಗುತ್ತಾಳೆ. ಆ ವ್ಯಕ್ತಿಯನ್ನು ಮೋಹಿಸಿದಂತೆ ನಟಿಸಿ ಒಳಬರುವಂತೆ ಸಂಜ್ಞೆ ಮಾಡುತ್ತಾಳೆ. ಇದನ್ನೆಲ್ಲಾ ದೂರದಲ್ಲಿ ನಿಂತು ನೋಡುತ್ತಿದ್ದ ಕೆಂಚಿಗೆ ಕೋಪ ನತ್ತಿಗೇರುತ್ತದೆ. ತನ್ನ ಮಗ ಎಲ್ಲಾದರೂ ಕಾಣುತ್ತಾನೇನೋ ಎಂದು ಕಾಯುತ್ತಾಳೆ. ಎಷ್ಟೇ ಹೊತ್ತು ಕಾದರೂ ಆತನ ಚಹರೆ ಅಲ್ಲಿ ಕಾಣುವುದಿಲ್ಲ. ಕೆಲಸಮಯದ ನಂತರ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಕೆಂಚಿಯ ಮಗನು ಆ ಮನೆಯಿಂದ ತೂರಾಡುತ್ತಾ ಹೊರಬರುತ್ತಾನೆ.ಆತ ಹುಡುಗಿಯೊಬ್ಬಳ ಕೈಯನ್ನು ಹಿಡಿದೆಳೆಯುತ್ತಿರುತ್ತಾನೆ ಹಾಗು ಮತ್ತೊಂದು ಕೈಯಲ್ಲಿ ಮದ್ಯದ ಬಾಟಲಿ. ಕೂಡಲೇ ಹೊರಬಂದ ದ್ಯಾವಿ ಹಾಗು ತನ್ನ ಗಂಡ ಕೆಂಚಿಯ ಮಗನಿಂದ ಆ ಹುಡುಗಿಯನ್ನು ಬಿಡಿಸಿ ಮೆಟ್ಟಿಲಿನಿಂದ ಜಾಡಿಸಿ ಒದೆಯುತ್ತಾರೆ. ಮೊದಲೇ ಕುಡಿದ ಮತ್ತಿನಲ್ಲಿದ್ದ ಆತ ಒಮ್ಮೆಲೇ ಬಂದು ನೆಲದ ಮೇಲೆ ಅಪ್ಪಳಿಸುತ್ತಾನೆ. ಮಗ ನಶೆಯಲ್ಲಿದ್ದರೂ, ಪರಸ್ತ್ರೀಯರ ಸಂಗವನ್ನು ಮಾಡಿ ಬಂದಿದ್ದರೂ ಕೆಂಚಿಗೆ ತಡೆಯಲಾಗಲಿಲ್ಲ. 'ಮಗನೇ..' ಎನ್ನುತ್ತಾ ತನ್ನ ದೊಡ್ಡ ಧ್ವನಿಯಲ್ಲಿ ಆಕ್ರಂದಿಸುತ್ತಾ ಹೋಗಿ ತಬ್ಬಿಕೊಳ್ಳುತ್ತಾಳೆ. ಮಗನ ರಕ್ತಮಯ ಮುಖವನ್ನು ಕಂಡ ಕೆಂಚಿ ಕೂಡಲೇ ಪ್ರತಿಜ್ಞೆ ಮಾಡುವವಳಂತೆ ಇನ್ನೊಂದು ತಿಂಗಳಲ್ಲಿ ದ್ಯಾವಿ ಹಾಗು ತನ್ನ ಗಂಡನ ಜೀವವನ್ನು ಬಲಿಪಡೆಯದಿದ್ದರೆ ತನ್ನ ಹೆಸರು ಕೆಂಚಿಯೇ ಅಲ್ಲ ಎಂದು ಹೇಳಿಬರುತ್ತಾಳೆ.

ಅಲ್ಲಿಂದ ಮುಂದೆ ತನ್ನ ಮಗನನ್ನು ಸಮಜಾಯಿಸಿ ಆ ಅಡ್ಡದಲ್ಲಿರುವ ವ್ಯಕ್ತಿ ಈತನ ಸ್ವಂತ ಅಪ್ಪನೆಂದ ಮೇಲೆ ಕೆಂಚಿಯ ಮಗನೂ ಅತ್ತ ಕಡೆ ಹೋಗುವುದನ್ನು ನಿಲ್ಲಿಸುತ್ತಾನೆ. ಅಲ್ಲದೆ ಕೆಂಚಿ ತನಗೆ ತಿಳಿದ ಜನರಿಂದ ವಿಚಾರಿಸಿ ಹುಡುಗಿಯೊಬ್ಬಳನ್ನು ಗೊತ್ತು ಮಾಡಿ ಮಗನಿಗೆ ಮದುವೆ ಮಾಡುವುದೆಂದೂ ತೀರ್ಮಾನಿಸುತ್ತಾಳೆ. ಆದರೆ ಅದೇ ಸಮಯಕ್ಕೆ ಆಕೆಗೆ ತನ್ನ ಪ್ರತಿಜ್ಞೆಯ ಅರಿವಾಗುತ್ತದೆ. ತನಗೆ ತಿಳಿದಿದ್ದ ತಂತ್ರವಿದ್ಯೆಯನ್ನೆಲ್ಲ ಪ್ರಯತ್ನಿಸಿ ನೋಡುತ್ತಾಳೆ. ಕೊನೆಗೆ ಅದೊಂದು ಅಮಾವಾಸ್ಯೆಯ ದಿನ ಹಿಟ್ಟಿನ ಗೊಂಬೆಗಳೆರಡನ್ನು ಮಾಡಿ ಅವುಗಳಿಗೆ ಪೂಜೆಯನ್ನು ಮಾಡಿ ತಾನು ಬಲ್ಲ ಮಂತ್ರಗಳನೆಲ್ಲ ಹೇಳುತ್ತಾ ಕತ್ತಿಯಿಂದ ಎರಡೂ ಗೊಂಬೆಗಳ ತಲೆಯನ್ನು ಉದುರಿಸುತ್ತಾಳೆ. ಮಾರನೇ ದಿನ ದ್ಯಾವಿ ಹಾಗು ಆತನ ಗಂಡ ರಕ್ತ ಕಾರಿಕೊಂಡು ಸತ್ತರೆಂಬ ಸುದ್ದಿ ಬಂದು ಮುಟ್ಟುತ್ತದೆ.

ಕೆಂಚಿಯ ಕತೆಯನ್ನು ಕೇಳುತ್ತಾ ಮಗ್ನನಾಗಿದ್ದ ರಾಹುಲ್ನಿಗೆ ಜಬಜಬನೇ ಸುರಿಯಹತ್ತಿದ ಮಳೆಯ ಸದ್ದು ವಿಚಲಿತಪಡಿಸುತ್ತದೆ. ಕೂಡಲೇ ಗುಡಿಸಲಿನ ಮರದ ಬಾಗಿಲು ಒಂದೇ ಸಮನೆ ಬಡಿದುಕೊಳ್ಳತೊಡಗುತ್ತದೆ.

'ಏ .. ಮಾರಿಮುಂಡೆ .. ಏನ್ ನಿಜ ಕೇಳಿ ಮೈ ಉರಿತ ಇದ್ಯೇನೆ.. ಆದ್ರಗಿತ್ತಿ, ನನ್ನ ಬಾಳನ್ನೇ ಹಾಳ್ ಮಾಡಿದಲ್ಲದೆ, ನನ್ನ ಗಂಡ, ಮಗನ್ನೂ ಕಿತ್ತ್ ತಿಂದಲ್ಲೇ, ನಾಳೇನೇ ಕೊನೆ, ಅದೇನ್ ಕಿಸ್ಕೊಂತೀಯೋ ಕಿಸ್ಕ' ಎಂದು ಅಜ್ಜಿ ಕೂಗಿಟ್ಟಳು. ಅಜ್ಜಿಯ ಆ ಸದ್ದಿಗೆ ಗಾಳಿ ತಣ್ಣಗಾಗಿ ಬಾಗಿಲು ಬಡಿಯುವುದೂ ಒಮ್ಮೆಲೇ ನಿಂತಿತು. ಹೊರಗಡೆಯ ಮಳೆ ಮಾತ್ರ ಹಾಗೆಯೇ ಮುಂದುವರೆಯಿತು.

ಸ್ವಲ್ಪ ಸಮಯದ ನಂತರ 'ನಿಮ್ಮ ಮಗನ್ನೂ.. ' ಎಂದು ಕೇಳಿದಾಗ,

ಮುದುಕಿ ಉತ್ತರಿಸುತ್ತಾ, ಹೌದು. ಆ ರಂಡೆ ಸತ್ತ್ ನರ್ಕ ಸೇರ್ದೆ ಇಲ್ಲೇ ಅಲೀತ ಕೂತ್ಲು. ಆಕೆ ಕಣ್ಣ್ ನನ್ನ್ ಮಗುನ್ ಮ್ಯಾಲೆ ಬಿತ್ತು ಎನ್ನುತ್ತಾ, ಮಗ ಇವೆಲ್ಲ ಚಟವನ್ನು ಬಿಟ್ಟು ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡು ಇರುವಾಗ ಆಕೆ ಅಮಾವಾಸ್ಯೆಯ ದಿನದಂದು ಚಿತ್ರ ವಿಚಿತ್ರ ರೀತಿಯಲ್ಲಿ ಬಂದು ಮಗನಿಗೆ ಕಾಟ ಕೊಡುತ್ತಿದ್ದದಾಗಿಯೂ, ಮಗ ಕೊನೆಗೆ ಭಯವನ್ನು ತಾಳಲಾರದೆ ಮದುವೆ ಇನ್ನೇನು ನಾಲ್ಕು ದಿನಗಳಿದ್ದವು ಎನ್ನುವಾಗ ಕೆರೆಗೆ ಹಾರಿ ಪ್ರಾಣ ಬಿಟ್ಟನೆಂದು ಹೇಳಿದಳು. ಅಲ್ಲಿಂದ ಮುಂದೆ ತನಗೂ ಕೊಡಬಾರದ ಕಾಟವನ್ನೆಲ್ಲ ಕೊಟ್ಟರೂ ತಾನು ಒಬ್ಬಳೇ ಆಕೆಯ ಅಷ್ಟೂ ಉಪಟಳಗಳನ್ನು ಹೇಗೋ ಸಹಿಸಿಕೊಂಡು ಬಂದಳೆಂದಳು. ಮುಂದೆ ಹೀಗೆಯೇ ವಯಸ್ಸಿಗೆ ಬಂದ ಹುಡುಗರ ಜೀವ ಪಡೆಯುವ ಖಯಾಲಿಯನ್ನು ಬೆಳೆಸಿಕೊಂಡು ಪ್ರತಿಬಾರಿಯೂ ಒಬ್ಬೊಬ್ಬರನು ಬಲಿಪಡೆದಾಗಲೂ ಆಕೆಯ ಆಕೃತಿ ದೊಡ್ಡದಾಗುತ್ತಾ ಹೋಯಿತೆಂದು ಅಜ್ಜಿ ಹೇಳುತ್ತಾಳೆ.

ಸ್ವಲ್ಪ ಯೋಚಿಸಿದ ರಾಹುಲ್ 'ಅಜ್ಜಿ ಅದೇನೇ ಆಗಲಿ.. ನೀವು ಆಕೆಯ ವಿರುದ್ಧ ಮಾಠ ಮಂತ್ರ ಮಾಡಿದ್ದು ಸರಿಯಲ್ಲ ಅನ್ಸುತ್ತೆ. ಪರಿಸ್ಥಿತಿ ಆಕೆಯನ್ನು ಹಾಗೆ ಮಾಡಿರಬಹುದು. ನಿಮ್ಮ ಗಂಡ ಆಕೆಯನ್ನು ವೈಶ್ಯವಾಟಿಕೆಗೆ ತಳ್ಳಿರಬಹುದು. ಅತ್ತ ಆಕೆಯ ಮನೆಯವರೂ ಆಕೆಗೆ ಸಹಾಯ ಮಾಡಲು ಬರಲಿಲ್ಲ. ಇಪ್ಪತ್ತು ತುಂಬದ ಹುಡುಗಿಯಾಗಿ ತಾವೇ ಆ ಸ್ಥಾನದಲ್ಲಿದ್ದರೆ ಏನು ಮಾಡುತ್ತಿದ್ದೀರಿ' ಎಂದು ಕೇಳುತ್ತಾನೆ.

ಕೂಡಲೇ ಅಜ್ಜಿ ರಾಹುಲ್ನನ್ನ ದುರುಗುಟ್ಟಿ ನೋಡತೊಡಗಿದಳು. ಭಯಂಕರ ಸರಿಸೃಪದಂತಹ ಕಣ್ಣಿನ ಆ ತೀಕ್ಷ್ಣನೋಟ ರಾಹುಲ್ಗೆ ಆ ಚಳಿಯಲ್ಲೂ ಹಣೆಗಳ ಮೇಲೆ ಬೆವರಿನ ಹನಿಗಳು ಮೂಡುವಂತೆ ಮಾಡಿದವು. ಆ ನೋಟವನ್ನು ನೋಡಲಾಗದೆ ರಾಹುಲ್ ಬೇರೆಡೆ ತಿರುಗಿದ.
'ಏಯ್.. ಏನ್ಲಾ ನೀನು ಅವ್ಳ್ ಪರವಾಗಿ ಮಾತಾಡೋದು.. ನಿಂಗಿತ್ತ ನಂಗೊತ್ತು ಆ ಹಡಬೆ ಬಗ್ಗೆ.. ನೀ ಮುಚ್ಕಂಡಿರು' ಎಂದು ಅತಿ ಒರಟು ಧ್ವನಿಯಲ್ಲಿ ಆಕೆ ಹೇಳಿದಳು. ಆ ಮಾತಿನ ಧಾಟಿಗೆ, ಗಡಸುತಕ್ಕೆ ರಾಹುಲನಿಗೆ ಮಾತೇ ಹೊರಡಲಿಲ್ಲ. ಗಂಡನನ್ನು ಕಳೆದುಕೊಂಡ ಹೆಂಗಸಿನ ರೊಚ್ಚಿರಬಹುದೆಂದು ಆತ ಮುಂದೇನು ಮಾತಡಲಿಲ್ಲ. ಕೆಲಹೊತ್ತಿನ ನಂತರ ಆಕೆ ರಾಹುಲ್ಗೆ ಮಲಗಲು ಹೇಳಿ ತಾನು ಸ್ವಲ್ಪ ಸಮಯದ ನಂತರ ಪಕ್ಕದ ಕೋಣೆಯಲ್ಲಿ ಬಂದು ಮಲಗುವುದಾಗಿ ಹೇಳಿ ಉರಿಯುತ್ತಿದ್ದ ಚಿಮಣಿಯನ್ನು ಹೊರತೆಗೆದುಕೊಂಡು ಹೋಗುತ್ತಾಳೆ. ಗುಡಿಸಲನ್ನು ಮಹಾ ಕತ್ತಲೆಯೊಂದು ಪುನ್ಹ ಆವರಿಸಿತು.ಭಯದಲ್ಲೇ ಆತ ಕಣ್ಣನ್ನು ಮುಚ್ಚಿದ.

ಎಷ್ಟೋ ಸಮಯದ ನಂತರ ಯಾರೋ ಬಂದು ರಾಹುಲ್ ನನ್ನು ಬಡಿದಂತಾಯಿತು. ಆದರೆ ಅಲ್ಲಿ ಯಾರೂ ಇದ್ದಂತೆ ಕಾಣಲಿಲ್ಲ. ತನ್ನ ವಾಚಿನಲ್ಲಿ ಸಮಯವನ್ನು ನೋಡಲು ಹೋದಾಗಲೂ ಆತನಿಗೆ ಅದು ಕತ್ತಲೆಯಲ್ಲಿ ಸರಿಯಾಗಿ ಕಾಣಲಿಲ್ಲ. ಒಂದು ಕ್ಷಣಕ್ಕೆ ಸುಮ್ಮನಾದ ಆತ ಗುಡಿಸಲಿನ ಮೂಲೆಯಲ್ಲಿ ಯಾರೋ ನಿಂತು ಅಳುತ್ತಿರುವ ಹಾಗೆ ಭಾಸವಾಗುತ್ತದೆ. ಕಪ್ಪು ಮುದ್ದೆಯ ದೈತ್ಯಾಕಾರ ಕೊಂಚ ಗಮನವಿಟ್ಟು ನೋಡಿದರೆ ಅಸ್ಪಷ್ಟವಾಗಿ ಕಾಣುತ್ತಿತ್ತು. ಎಳೆಯ ಹೆಣ್ಣುಮಗಳ ಆ ಧ್ವನಿ ಅಜ್ಜಿಯದಂತೂ ಆಗಿರಲೇ ಇಲ್ಲ. ಆದರೂ ಆತ 'ಅಜ್ಜಿ.. ' ಎಂದು ಒಮ್ಮೆ ಸಣ್ಣ ಧ್ವನಿಯಲ್ಲಿ ಕೂಗುತ್ತಾನೆ. ಆ ಕಡೆಯಿಂದ ಯಾವುದೇ ಉತ್ತರವಿಲ್ಲ. ಪಕ್ಕದ ಕೋಣೆಯಲ್ಲಿ ತಾನು ಮಲಗಿರುವುದಾಗಿ ಅಜ್ಜಿ ಹೇಳಿದ ಮೇಲೆ ಆಕೆ ಅಲ್ಲಿರಬಹುದೇ? ಮೇಲೇಳಲು ಆತನಿಗೆ ಧೈರ್ಯ ಸಾಲುವುದಿಲ್ಲ. ಆ ಕೋಣೆಯಿಂದ ಯಾವುದೇ ಬೆಳಕೂ ಸಹ ಮೂಡುತ್ತಿರಲಿಲ್ಲ. ಅಳುವ ಸದ್ದು ಮಾತ್ರ ಮುಂದುವರೆಯಿತು

'ಯಾ..ಯಾ.. ಯಾರು' ಎಂದ ರಾಹುಲ್. ಆತನ ಧ್ವನಿಯಲ್ಲಾಗಲೇ ಅಳುವು ಸಹಜ ಮನೆಮಾಡಿತ್ತು.

'ಹೆದರಬೇಡಿ ಬುದ್ದಿ.. ನಾನೇನು ಮಾಡಕಿಲ್ಲ ನಿಮ್ಗೆ' ಎಂದಿತು ಆ ಧ್ವನಿ. ಆದರೂ ರಾಹುಲ್ನಿಗೆ ಭಯ ತಡೆಯಲಾಗಲಿಲ್ಲ. ಏನೇಳಬೇಕು ಅಥವಾ ಏನನ್ನು ಮಾಡಬೇಕೆಂಬುದೂ ಆತನಿಗೆ ತೋಚಲಿಲ್ಲ. ಕೂಡಲೇ ಅದು ಮುಂದುವರೆದು,

'ಬುದ್ದಿ ನಾನು ಅಕ್ಕ ಹೇಳಿದ ದ್ಯಾವಿ ' ಎಂದಿತು ಆ ಧ್ವನಿ. ಮಾತನ್ನು ಕೇಳಿ ರಾಹುಲ್ ಭಯದಿಂದ ಅಕ್ಷರ ಸಹ ಅಳತೊಡಗಿದ. ದೇವರೇ ಇದೂ ಸಹ ಮೊದಲು ಕಂಡಂತಹ ಕನಸ್ಸಾಗಲಿ ಎಂದು ಬೇಡಿಕೊಳ್ಳತೊಡಗಿದ. ಕಡು ಕತ್ತಲೆಯ ಆಳವಾದ ಭಯಂಕರ ಭಾವಿಯೊಳಗೆ ಆತ ಸಿಲುಕಿಕೊಂಡಿರುವಂತೆ ಆತನಿಗೆ ಅನಿಸುತ್ತದೆ. ಅದೆಷ್ಟೋ ವರ್ಷಗಳ ಹಿಂದೆ ಸತ್ತಿರುವ ಅತೃಪ್ತ ಆತ್ಮವೊಂದು ನನ್ನ ಮುಂದಿದೆ ಎಂಬುದನ್ನು ಕಲ್ಪಿಸಿಕೊಂಡೇ ಆತನ ಭಾಗಶಃ ಜೀವ ಇಂಗಿದಂತಹ ಅನುಭವವಾಗಿರುತ್ತದೆ. ಹೋದರೆ ಒಮ್ಮೆಲೇ ಜೀವ ಹೊರಟುಹೋಗಲಿ, ಈ ರೀತಿ ಭಯಗೊಂಡು ನರಳುವುದಂತೂ ಬೇಡವೇ ಬೇಡವೆಂದು ಆತ ಮತ್ತೊಮ್ಮೆ ದೇವರಲ್ಲಿ ಬೇಡಿಕೊಳ್ಳುತ್ತಾನೆ. ಅಷ್ಟರಲ್ಲಾಗಲೇ ಆ ಧ್ವನಿ ಪುನ್ಹ ಮುಂದುವರೆದು,

'ಬುದ್ದಿ..ನಾನೇಳೋದನ್ನ ಭಯ ಬಿಟ್ಟು ಕೇಳಿ ಬುದ್ದಿ.. ನೀವೇ ನಂಗೆ ಇರೋ ಕೊನೆ ನಂಬ್ಕೆ! ' ಎಂದ ಅದು ತನ್ನ ಕತೆಯನ್ನು ಹೇಳತೊಡಗಿತು. ರಾಹುಲ್ ಮಾತ್ರ ಕೂತಲ್ಲಿಂದ ಅಲುಗಾಡಲಿಲ್ಲ. ಜೋರಾಗಿ ಕೂಗಿಕೊಂಡರೂ ಆ ದೈತ್ಯ ಕಪ್ಪು ಮುದ್ದೆಯಿಂದ ಪಾರಾಗುವುದು ಅಷ್ಟು ಸುಲಭದ ಕೆಲಸವಲ್ಲವೆಂಬುದು ಆತನಿಗೆ ತಿಳಿದಿದ್ದಿತು. ಆತನಿಗಿದ್ದ ಒಂದೇ ಆಯ್ಕೆ ಸಾಧ್ಯವಾದಷ್ಟು ಧೈರ್ಯ ಮಾಡಿ ಆ ಧ್ವನಿ ಏನೇಳುತ್ತದೆ ಎಂದು ಕೇಳುವುದು.

ಅದು ಮುಂದುವರೆದು, ಅಜ್ಜಿ ಹೇಳಿದ ಮಾತುಗಳು ನಾನು ಮತ್ತು ಆಕೆಯ ಗಂಡ ಗುಡಿಸಿಲಿನೊಳಗೆ ಅರೆಬೆತ್ತಲೆಯಾಗಿ ಕಾಣುವವರೆಗೂ ನಿಜವೆಂದು ಅದಾದ ನಂತರ ಹೇಳಿದ ಮಾತುಗಳೆಲ್ಲವೂ ಶುದ್ಧ ಸುಳ್ಳೆಂದು ಹೇಳುತ್ತದೆ. ಕೆರೆಗೆ ಹೋಗಿದ್ದ ಕೆಂಚಿ ಅಂದು ಗುಡಿಸಲಿಗೆ ವಾಪಸ್ಸು ಬಂದಾಗ ಆಕೆಯ ಗಂಡ ನನ್ನನು ಬಲಾತ್ಕಾರ ಮಾಡುವುದನ್ನು ಕಂಡು ಕೆಂಡಾಮಂಡಲವಾಗಿ ನನ್ನನ್ನು, ಆಕೆಯ ಗಂಡನನ್ನು ಥಳಿಸಿ ಅವನನ್ನು ಅಲ್ಲಿಯೇ ಕೊಂದೇ ಹಾಕುತ್ತಾಳೆ! ಆದರೆ ನನ್ನನ್ನು ಮಾತ್ರ ಕೊಲ್ಲದೆ ಪಕ್ಕದ ಊರಿನ ವೈಶ್ಯವಾಟಿಕೆಯ ಅಡ್ಡಕ್ಕೆ ತಬ್ಬುತ್ತಾಳೆ. ಅಸಹಾಯಕಳಾದ ನಾನು ಬೇರೆ ದಾರಿಯಿಲ್ಲದೆ ಅಲ್ಲಿಯೇ ಉಳಿಯಬೇಕಾಯಿತು ಎನ್ನುತ್ತಾಳೆ. ಮೊದಮೊದಲು ಜೀವನವೇ ನರಕವೆಂಬಂತಹ ಪರಿಸ್ಥಿತಿ ಎದುರಾದರೂ ಕ್ರಮೇಣ ಅದೇ ಜೀವನಕ್ಕೆ ಒಗ್ಗಿಕೊಳ್ಳುತ್ತಾಳೆ. ಅಲ್ಲಿಂದ ಮುಂದೆ ಅದೆಷ್ಟೋ ವರ್ಷಗಳವರೆಗೂ ದ್ಯಾವಿ, ಕೆಂಚಿಯ ಮುಖವನ್ನೂ ನೋಡದೆ ವೈಶ್ಯವಾಟಿಕೆಯ ವೃತ್ತಿಯಲ್ಲೇ ಮುಂದುವರೆಯುತ್ತಾಳೆ. ಅದೊಂದು ದಿನ ಪಕ್ಕದ ಊರಿನ ಸುಂದರ ಚೆಲುವ ಮದ್ಯವಯಸ್ಸಿನವಳಾಗಿದ್ದ ದ್ಯಾವಿಯ ಚೆಲುವಿಗೆ ಮನಸ್ಸೋತು ಪ್ರತಿ ದಿನ ಅಲ್ಲಿಗೆ ಬರತೊಡಗಿದ. ಮೊದಲೆಲ್ಲ ಆತನಿಗೆ ಇದೆಲ್ಲ ತಪ್ಪು, ಸರಿಯಲ್ಲ ಎಂದು ಬುದ್ದಿಮಾತು ಹೇಳುತ್ತಿದ್ದ ದ್ಯಾವಿಯೂ ಬರಬರುತ್ತಾ ಆತನ ಮಾತಿಗೆ, ಹಾಸ್ಯಪ್ರಜ್ಞೆಗೆ, ಚೆಲುವಿಗೆ ಹಾಗು ಗಡಸು ಮೈಮಾಟಕ್ಕೆ ಮನಸೊತ್ತಿದ್ದಳು. ಹೀಗೆಯೇ ಮುಂದುವರೆದಾಗ ಅದೊಂದು ದಿನ ಕೆಂಚಿ ಬಂದು ರಾದಂತ ಮಾಡಿದಾಗಲೇ ತಿಳಿದದ್ದು ಆತ ಆಕೆಯ ಮಗನೆಂದು! ಕೂಡಲೇ ದ್ಯಾವಿ ಆಕೆಯ ಕಾಲಿಗೆರಗಿ ಪರಿಪರಿಯಾಗಿ ಬೇಡಿಕೊಂಡರೂ, ಅದಾಗಲೇ ಅಲ್ಲಲ್ಲಿ ಬಿಳಿಗೂದಲು ಕಾಣುತ್ತಿದ್ದ ಕೆಂಚಿ ರಾಕ್ಷಸಿಯಂತಾಗಿ ದ್ಯಾವಿಯನ್ನು ಕಾಡುವುದಾಗಿ ಪ್ರತಿಜ್ಞೆ ಮಾಡುತ್ತಾಳೆ. ಮರದ ಕೊರಡಿನಿಂದ ಮಗನನ್ನು ಪ್ರಾಣಿಗಳಿಗೆ ಬಡಿದಂತೆ ಬಡಿದು ಅರೆಜೀವವಾಗಿದ್ದ ಆತನನ್ನು ಸುರಿಯುತ್ತಿದ್ದ ಮಳೆಯಲ್ಲಿಯೇ ಥರಥರನೆ ಎಳೆದುಕೊಂಡು ಮನೆಗೆ ಹೋಗುತ್ತಾಳೆ. ಮಾಠ ಮಂತ್ರದ ವಿದ್ಯೆಯನ್ನು ತಿಳಿದಿದ್ದ ಆಕೆ ಮುಂದೆ ಅದೇ ಸಿಟ್ಟಿನಲ್ಲಿ ತನ್ನ ಸ್ವಂತಃ ಮಗನನ್ನೇ ಅದಕ್ಕೆ ಆಹುತಿಕೊಟ್ಟು ಹುಚ್ಚಿಯಾದಳಂತೆ! ಅಲ್ಲಿಂದ ಮುಂದೆ ಪ್ರತಿ ಅಮಾವಾಸ್ಯೆಯ ರಾತ್ರಿ ಕಾಡಿನಲ್ಲಿ ಒಬ್ಬಳೇ ಅಲೆಯುತ್ತಾ ಅದೇನೋ ಬಗೆಯ ಚಿತ್ರವಿಚಿತ್ರ ಪೂಜೆಗಳನ್ನು ಮಾಡುತ್ತಾ ದ್ಯಾವಿಯನ್ನೂ ರಕ್ತಕಾರಿ ಸಾಯುವಂತೆ ಮಾಡುತ್ತಾಳೆ. ಆದರೆ ನನ್ನ ಆತ್ಮಕ್ಕೆ ಮುಕ್ತಿ ದೊರೆಯದಂತೆ, ಆಕೆಯ ಆಯಸ್ಸೂ ಸಹ ಕೊನೆಯಾಗದಂತೆ ವಯಸ್ಸಿಗೆ ಬಂದ ಯುವಕರನ್ನು ನನ್ನನ್ನು ಬಳಸಿ ಕಾಡಿನಲ್ಲಿ ದಿಕ್ಕು ತಪ್ಪುವಂತೆ ಮಾಡಿ ವಿಚಿತ್ರ ರೀತಿಯಲ್ಲಿ ಅವರನ್ನು ಕೊಂದು ಅಮರತ್ವವನ್ನು ಸಾಧಿಸಲು ಹೊರಟಿದ್ದಾಳೆ ಎನ್ನುತ್ತಾಳೆ. ಅಲ್ಲದೆ ಹೀಗೆ ಆ ಯುವಕರನ್ನು ಸಾಯಿಸುವಾಗ ಆಕೆ ತನ್ನ ನಿಜರೂಪಕ್ಕೆ ಬಂದು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಅವರೊಟ್ಟಿಗೆ ದೈಹಿಕ ಸಂಬಂಧವನ್ನು ಹೊಂದುತ್ತಾಳೆ. ಆಕೆಯ ಪ್ರಕಾರ ಗಂಡನನ್ನು, ಮಗನನ್ನು ಕೊಂದ ದ್ಯಾವಿಗೆ ಅದು ಶಿಕ್ಷೆಯಂತೆ! ಹೀಗೆ ನೂರಾರು ಯುವಕರು ಆಕೆಯ ಮಂತ್ರವಿದ್ಯೆಗೆ ಬಲಿಯಾಗಿ ನಶಿಸಿಹೋಗಿದ್ದಾರೆ ಎನ್ನುತ್ತಾಳೆ.

ಕೂಡಲೇ ರಾಹುಲನಿಗೆ ಆ ಅಜ್ಜಿಯ ಮಾತು ನೆನಪಾಗುತ್ತದೆ. ತನ್ನ ಮಗ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಾಗಿಯಾಗಿದ್ದ ಎಂದ ಆಕೆಯ ಮಾತು ನೆನಪಾಗಿ ಆತನ ಮೈ ಜುಮ್ ಎನಿಸುತ್ತದೆ. ಪ್ರಸ್ತುತ ದಿನದಿಂದ ಲೆಕ್ಕ ಹಾಕಿದರೆ ಕನಿಷ್ಠವೆಂದರೂ ನೂರಾಮೂವತ್ತು ವರ್ಷಗಳಾದರೂ ಆ ಮುದುಕಿಗೆ ಈಗ ಆಗಿರಬಹುದು. ಆ ವಿಷಯವನ್ನು ಯೋಚಿಸಿಯೇ ಆತನ ಮೈ ನಡುಗಹತ್ತುತ್ತದೆ. ಭಯವನ್ನು ಹುಟ್ಟಿಸುತ್ತಿದ್ದ ಆ ದೈತ್ಯ ಆಕೃತಿಯ ಅರ್ತಾತ್ ದ್ಯಾವಿಯ ಮಾತುಗಳ ಮೇಲೆ ನಿಧಾನವಾಗಿ ವಿಶ್ವಾಸ ಮೂಡುತ್ತದೆ. ದ್ಯಾವಿ ಮುಂದುವರೆದು,

ನಾಳೆ ಅಮಾವಾಸ್ಯೆಯಾದರಿಂದ ಕೆಂಚಿಯ ಶಕ್ತಿ ಆಗ ನೂರು ಆನೆಯಷ್ಟಾಗುತ್ತದೆ. ಆಗ ಆಕೆಯನ್ನು ಯಾರಿಂದಲೂ ಅಲುಗಾಡಿಸಲಾಗುವುದಿಲ್ಲವೆಂದು ಹೇಳುತ್ತಾಳೆ. ಆದರಿಂದ ಇಂದೇ ಆಕೆಯ ಪೂಜೆಯನ್ನು ನಿಲ್ಲಿಸಿ ಆಕೆಯನ್ನು ಕೊಲ್ಲಬೇಕು. ಆಕೆಯ ಒಳಗಿರುವ ಶಕ್ತಿ ಹೊರ ಹೋದರೆ ನಿಸರ್ಗವೇ ಕ್ಷಣಮಾತ್ರದಲ್ಲಿ ಆಕೆಯನ್ನು ಪಂಚಭೂತಗಳಲ್ಲಿ ಲೀನಗೊಳಿಸುತ್ತದೆ. ಹಾಗೆ ಮಾಡಲು ಆಕೆಗೆ ಕಾಮೋತ್ತೇಜನೆಯನ್ನು ಮಾಡಿ, ಆಕೆಯನ್ನು ನಿಜರೂಪಕ್ಕೆ ತರಿಸಿ, ಮೋಹಗೊಳಿಸಿ ದೂರದಲ್ಲಿರುವ ಕಾಲಭೈರವ ಸ್ವಾಮಿಯ ಗುಡಿಯ ನೂರು ಅಡಿ ಒಳಗೆ ತಂದರೂ ಸಾಕು, ಆಕೆ ಕ್ಷಣಾರ್ಧದಲ್ಲಿ ಬೂದಿಯಾಗಿ ಕೊನೆಯಾಗುತ್ತಾಳೆ. ನಾನೂ ಕೂಡ ಆಕೆಯೊಟ್ಟಿಗೆ ಇಲ್ಲಿಂದ ಮುಕ್ತಿಪಡೆಯಬಹುದು ಎನ್ನುತ್ತಾಳೆ. ಒಂದು ಪಕ್ಷ ಅದು ಸಾಧ್ಯವಾಗದಿದ್ದರೆ ಇನ್ನು ಮುನ್ನೂರು ವರ್ಷಗಳವರೆಗೂ ಆಕೆಯನ್ನು ಯಾರೂ ಏನೂ ಮಾಡಲಾಗುವುದಿಲ್ಲ ಎನ್ನುತ್ತಾಳೆ. ಅಲ್ಲದೆ ಈಗ ಕೆಂಚಿ ಗುಡಿಸಿಲಿನ ಹಿಂದುಗಡೆಯೇ ಮಂತ್ರಾದಿಗಳನು ಮಾಡುತ್ತಾ ಮೈಮರೆತಿದ್ದಾಳೆ ಎಂದು ದ್ಯಾವಿ ಹೇಳುತ್ತಾಳೆ.

ಮಾತುಗಳೆಲ್ಲವನ್ನು ಕೇಳಿದ ರಾಹುಲ್ ಧೈರ್ಯ ತಂದುಕೊಳುತ್ತಾನೆ. ತಾನು ಈಗ ಹೊರಾಡದಿದ್ದರೆ ಸಾವೆಂಬುದು ಕಟ್ಟಿಟ್ಟ ಬುತ್ತಿ. ಕೊನೆಪಕ್ಷ ದ್ಯಾವಿಯ ಮಾತುಗಳಂತೆ ಪ್ರಯತ್ನಿಸಿಯಾದರೂ ನೋಡುವ ಎಂದುಕೊಳ್ಳುತ್ತಾನೆ. ಕಣ್ಣುಮುಚ್ಚಿ ತನ್ನ ಅಮ್ಮನನ್ನು ಒಮ್ಮೆ ನೆನೆದು ಮಾಡುವ ಕಾರ್ಯದ ರೂಪುರೇಷೆಯನ್ನು ಚಿತ್ರಿಸಿಕೊಳ್ಳುತ್ತಾನೆ. ಕೆಲನಿಮಿಷಗಳ ನಂತರ ನಿಧಾನವಾಗಿ ಕಣ್ಣನು ಬಿಡುತ್ತಾನೆ, ಅಲ್ಲಿಯವರೆಗೂ ಕಾಣೆಯಾಗಿದ್ದ ಕೆಂಚಿ ಚಿಮಣಿಯನ್ನು ತನ್ನ ಮುಖದ ಬಳಿಗಿರಿಸಿ ದೈತ್ಯ ಕಡುಗಪ್ಪು ಕಣ್ಣುಗಳನ್ನು ಹಿಗ್ಗಿಸಿ ರಾಹುಲ್ ನನ್ನೇ ಧಿಟ್ಟಿಸುತ್ತಾ ನಿಂತಿರುತ್ತಾಳೆ. ಚಿಮಣಿಯ ಬೆಳಕಿಗೆ ಆಕೆಯ ಮುಖ ಭಯಹುಟ್ಟಿಸುವಂತಿರುತ್ತದೆ. ದ್ಯಾವಿಯ ಆತ್ಮ ಅಷ್ಟರಲ್ಲಾಗಲೇ ಅಲ್ಲಿಂದ ನಾಪತ್ತೆಯಾಗಿರುತ್ತದೆ.

'ಯಾಕ್ಲಾ.. ನಿದ್ದೆ ಬರ್ಲಿಲ್ವಾ..?' ಬೆದರಿಸುವ ಧ್ವನಿಯಲ್ಲಿ ಆಕೆ ಕೇಳಿದಳು.ಕಲ್ಲಿನ ಮೂರ್ತಿಯಂತೆ ಆಕೆಯ ಕಣ್ಣುಗಳಾಗಲಿ, ಬಿಳಿಯ ಕೂದಲಾಗಲಿ ಒಂದಿನಿತೂ ಅಲುಗಾಡುತ್ತಿರಲಿಲ್ಲ.

'ಇಲ್ಲ ನಿದ್ದೆ ಬರ್ತಾ ಇಲ್ಲ.. ಸೆಕೆ' ಎಂದ ರಾಹುಲ್ ತನ್ನ ಟಿಶರ್ಟನ್ನು ತೆಗೆದು ಬದಿಗಿಟ್ಟ. ಕಟ್ಟುಮಸ್ತಾದ ಆತನ ದೇಹವನ್ನು ಕಂಡು ಕೆಂಚಿ ಹಲ್ಲು ಬಿರಿದಳು. ಆಕೆ ನಕ್ಕಂತೆ ಕಂಡರೂ ಕಣ್ಣುಗಳೂ ಮಾತ್ರ ಇನ್ನೂ ಭಯಂಕರವಾಗಿಯೇ ಕೆರಳಿದ್ದವು. ರಾಹುಲ್ ತನ್ನ ಕೈಗಳ ಲಠಿಕೆಗಳನ್ನು ಮುರಿಯತೊಡಗಿದ.

'ಬಾ.. ನಾ ಮಂಗುಸ್ತೀನಿ.. ನನ್ನ್ ತೊಡೆ ಮ್ಯಾಗೆ ಮಂಕ' ಎಂದ ಕೆಂಚಿ ರಾಹುಲ್ನ ಹತ್ತಿರ ಬರತೊಡಗಿದಳು. ದಮ್ಮುಗಟ್ಟಿದ ಏದುಸಿರಿನ ಸದ್ದು ಆಕೆ ಹತ್ತಿರವಾದಂತೆ ಸ್ಪಷ್ಟವಾಗಿ ರಾಹುಲ್ ಗೆ ಕೇಳತೊಡಗಿತು. ಆಕೆ ತನ್ನ ಪಕ್ಕಕ್ಕೆ ಬಂದು ಕೂತು ರಾಹುಲ್ನ ಕೂದಲನ್ನು ಒಮ್ಮೆಲೇ ಹಿಡಿದೆಳೆದು ತನ್ನ ತೊಡೆಯ ಮೇಲೆ ಹಾಕಿಕೊಂಡಳು. ಹೆಬ್ಬೆರಳ ಗಾತ್ರದ ಮೂಳೆಗಳು ಮಾತ್ರ ತನ್ನ ತಲೆಯ ಕೆಳಗಿರುವ ಅನುಭವ ರಾಹುಲನಿಗೆ ಕೂಡಲೇ ಆಯಿತು. ಭಯದಲ್ಲಿ ಆತ ತನ್ನ ಕಣ್ಣುಗಳನ್ನು ಮುಚ್ಚಿಯೇ ಮಲಗಿದ. ಕೆಲಕ್ಷಣಗಳಲ್ಲೇ ಒಣಗಿದ ಮರದ ತೊಗಟೆಗಳು ತನ್ನ ಎದೆಯ ಮೇಲೆ ಹರಿದಾಡಿದಂತಹ ಅನುಭವ ಆತನಿಗೆ. ಅದು ಕೆಂಚಿಯ ಕೈಗಳೇ ಎಂದು ಅರಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ಇನ್ನೂ ತಡ ಮಾಡಿದರೆ ಆಗದು ಎಂದರಿತ ರಾಹುಲ್ ಕೂಡಲೇ ಆಕೆಯನ್ನು ಪಕ್ಕಕೆ ತಳ್ಳಿ ಗುಡಿಸಿಲಿನ ಬಾಗಿಲಿಂದ ಹೊರ ಓಡಿದ. ಗುಡಿಸಿಲಿನ ಹಿಂದೆ ಬೆಂಕಿಯ ಕುಂಡ, ಹರಿಶಿನ ಕುಂಕುಮದ ರಾಶಿ, ರುಂಡ ಬೇರ್ಪಟ್ಟ ಎರಡು ಕೋಳಿಗಳು ಬಿದ್ದಿದ್ದವು. ಏನು ಮಾಡಬೇಕೆಂದು ತೋಚದೆ ರಾಹುಲ್ ಚೀರುತ್ತಾ ಎಲ್ಲವನ್ನು ತನ್ನ ಕಾಲಿನಿಂದ ಒದೆಯತೊಡಗಿದ. ಅಷ್ಟರಲ್ಲಾಗಲೇ ಕೆಂಚಿ ರಾಹುಲ್ನ ಹಿಂದೆಯೇ ಬಂದು ನಿಂತಿರುತ್ತಾಳೆ. ಕೆಲಕ್ಷಣಗಳ ಹಿಂದಷ್ಟೇ ಕಂಡ ಆಕೆಯ ದೇಹ ಈಗ ಅಕ್ಷರ ಸಹ ಮಹಾ ಬದಲಾವಣೆಯನ್ನು ಕಂಡಿರುತ್ತದೆ. ಆಕೆಯ ಸೊಂಟದ ಮುಂದಿನ ಬಾಗ ನೆಲಕ್ಕೆ ತಾಗುವಷ್ಟು ಮುಂಬಾಗಿರುತ್ತದೆ ಹಾಗು ಆಕೆಯ ತಲೆ ಹಾವಿನ ಹೆಡೆಯಂತೆ ಮೇಲೇರಲು ಆವಣಿಸುತ್ತಿರುತ್ತದೆ! ಕೀಲಿಕೊಟ್ಟ ಮರದ ಗೊಂಬೆಯಂತೆ ಯಾಂತ್ರಿಕವಾಗಿ ಆಕೆ ಮುಂಬರುತ್ತಾಳೆ. ಮಿಂಚಿನ ವೇಗದಲ್ಲಿ ರಾಹುಲ್ನನ್ನು ಸುತ್ತ ತೊಡಗುತ್ತಾಳೆ. ಗಹಗಹನೇ ನಗುತ್ತಾ ಚೀರತೊಡಗುತ್ತಾಳೆ. ಆ ಸದ್ದಿಗೆ ಇಡೀ ಕಾಡೇ ಮಾರ್ದನಿಸತೊಡಗುತ್ತದೆ. ರಾಹುಲ್ ತನ್ನ ಕಿವಿಯನ್ನು ಗಟ್ಟಿಯಾಗಿ ಮುಚ್ಚಿಕೊಳ್ಳುತ್ತಾನೆ.'ಲೇ..' ಎಂದ ಆಕೆ ಒಮ್ಮೆಲೇ ನಿಂತು ರಾಹುಲ್ನ ತೀರಾ ಸಮೀಪಕ್ಕೆ ಬರತೊಡಗುತ್ತಾಳೆ. ಆನೆಯ ಹೆಜ್ಜೆಗಳಂತೆ ಆಕೆಯ ಪ್ರತಿ ಹೆಜ್ಜೆಗೂ ನೆಲ ಕಂಪಿಸತೊಡಗುತ್ತದೆ. ಬೃಹದಾದ ಪರ್ವತವೊಂದು ತನ್ನ ಮುಂದೆ ನಿಂತಿರುವ ಅನುಭವವಾದರೂ 'ಜೈ ಶ್ರೀ ರಾಮ್ .. ಜೈ ಹನುಮಾನ್' ಎನುತ ರಾಹುಲ್ ಆಕೆಯೆಡೆಗೆ ತನ್ನ ಕಾಲುಗಳಿಂದ ಒದೆಯುತ್ತಾನೆ. ಅದು ತನ್ನ ನಿಜಶಕ್ತಿಯೋ ಅಥವಾ ದೇವರ ನಾಮದ ಮಹಿಮೆಯೋ ಏನೋ ಹತ್ತಾರು ಪ್ರಾಣಿಗಳ ಕೀಚಲು ಧ್ವನಿಯಿಂದ ಚೀರುತ್ತಾ ಅದು ದೂರಹೋಗಿ ಬೀಳುತ್ತದೆ.

ಕೂಡಲೇ ರಾಹುಲ್ನ ಕಿವಿಯ ಬಳಿ 'ಬುದ್ದಿ..' ಎಂದು ಹೇಳಿದ ಸದ್ದಿನ ಅನುಭವವಾಗುತ್ತದೆ. ರಾಹುಲ್ ತನ್ನ ಪಕ್ಕಕ್ಕೆ ತಿರುಗುತ್ತಾನೆ. ಅದೇ ದಿಕ್ಕಿನಲ್ಲಿ ಇನ್ನು ಸ್ವಲ್ಪ ದೂರದಲ್ಲಿ ಮತ್ತದೇ ಸದ್ದು. ಕಾಲಭೈರೇಶ್ವರನ ದೇವಾಲಯದ ದಾರಿತೋದರಲು ದ್ಯಾವಿಯ ಸದ್ದಿದು ಎಂದು ಅರಿಯಲು ಆತನಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಕೂಡಲೇ ಆತ ಆ ಸದ್ದು ಬರುವ ದಿಕ್ಕಿನ ಕಡೆಗೆ ಓಡತೊಡಗುತ್ತಾನೆ. ಕಲ್ಲು ಮುಳ್ಳುಗಳೆಲ್ಲ ಕಾಲಿಗೆ ತಗುಲಿ ಗಾಯಗಳಾಗುತ್ತಿದ್ದರೂ ಅದ್ಯಾವುದೂ ಆತನ ಅರಿವಿಗೆ ಬರುವುದಿಲ್ಲ. ತಾನು ಓಡಲು ಶುರುವಿಟ್ಟು ಒಂದೆರಡು ನಿಮಿಷಗಳಾಗಿರಬಹುದು ಅಷ್ಟರಲ್ಲಾಗಲೇ ತನ್ನನ್ನು ಹಿಂಬಾಲಿಸುತ್ತಿರುವ ಸದ್ದು ಆತನ ಅರಿವಿಗೆ ಬರುತ್ತದೆ. ಹೆಚ್ಚು ಕಡಿಮೆ ಕುದುರೆಯೊಂದು ಹುಚ್ಚೆದ್ದು ಓಡುವಂತೆ. ಆದರೆ ಅದು ಕೆಂಚಿಯಾಗಿರದೆ ದೈತ್ಯ ನಾಯಿಯೊಂದರ ಆಕೃತಿಯಾಗಿರುತ್ತದೆ. ವಿಚಿತ್ರವೆಂಬಂತೆ ಅದು 'ನಿಲ್ಲಲೇ..' ಎಂದು ವಿಕಾರವಾಗಿ ಕೂಗುತ್ತಿರುತ್ತದೆ. ಕೆಂಚಿಯ ಸದ್ದೂ ಅಲ್ಲಿ ಮಿಳಿತಗೊಂಡಿರುವುದು ರಾಹುಲ್ನ ಅನುಭವಕ್ಕೆ ಬಾರದೇ ಇರಲಿಲ್ಲ. ರಾಹುಲ್ ತನ್ನ ಶಕ್ತಿಯನ್ನೆಲ್ಲ ಬಳಸಿ ಓಡತೊಡಗುತ್ತಾನೆ. ದ್ಯಾವಿಯ ಧ್ವನಿ ಆತನಿಗೆ ದಾರಿಯನ್ನು ತೋರಿಸುತ್ತಿರುತ್ತದೆ. ಇನ್ನೇನು ದೂರದಲ್ಲಿ ಗುಡಿಯಾಕಾರದ ಆಕೃತಿಯೊಂದು ಕಾಣತೊಡಗಿತು ಎನ್ನುವಷ್ಟರಲ್ಲಿ ತನ್ನ ಕೂದಲನ್ನು ಹಿಡಿದು ಹಿಂದಕ್ಕೆ ಎಳೆದುಕೊಂಡ ಅನುಭವ. ಆ ಎಳೆತಕ್ಕೆ ಅದೆಷ್ಟೋ ದೂರ ಹಾರಿ ಬಿದ್ದ ರಾಹುಲ್ ನೋವಿನ ಮಡುವಿನಲ್ಲಿ ನರಳತೊಡಗುತ್ತಾನೆ.

'ಏಯ್ ..ಆ ಸೂಳೆಮುಂಡೆ ನಿಂಗೆಲ್ಲ ಏಳಿದ್ಲಾ.. ' ದೈತ್ಯಾಕಾರದ ನಾಯಿ ರಾಹುಲ್ನನ್ನು ಸುತ್ತುತ್ತ ವಿಕಾರವಾಗಿ ಮಾತನಾಡತೊಡಗಿತು. ಕಾಡಿನ ಹಕ್ಕಿಪಕ್ಷಿಗಳೆಲ್ಲವೂ ಚೆಲ್ಲಾಪಿಲ್ಲಿಯಾಗುವಂತೆ ಕೂಗತೊಡಗಿತು. ಕೆಂಚಿ ತನ್ನ ಮಂತ್ರವಿದ್ಯೆಯಿಂದ ನಾಯಿಯ ಒಳಹೊಕ್ಕಿದ್ದಾಳೆ, ಅಲ್ಲದೆ ಜೀವವನ್ನು ಪಡೆಯುವುದಾಗಿದ್ದರೆ ಆಕೆ ನನನ್ನು ಅಷ್ಟರಲ್ಲಾಗಲೇ ಮುಗಿಸಿಬಿಡುತ್ತಿದ್ದಳು, ಅದರಿಂದ ನಾಳೆಯವರೆಗೂ ನನಗೆ ಏನನ್ನೂ ಮಾಡಳು ಎಂಬುದನ್ನು ಆತ ದೃಢಪಡಿಸಿಕೊಂಡ. ಹೇಗಾದರೂ ಮಾಡಿ ಗುಡಿಯ ಬಳಿಗೆ ಈಕೆಯನ್ನು ಕರೆದುಕೊಂಡು ಹೋಗಬೇಕು. ಕೂತಲ್ಲೇ ಆತನ ಚಿತ್ತ ಓಡತೊಡಗಿತು. ದೈತ್ಯಾಕಾರದ ನಾಯಿ ಆತನನ್ನು ಸುತ್ತುವರೆಯುತ್ತಲೇ ಇದ್ದೀತು. ರಾಹುಲ್ ಎದ್ದುನಿಲ್ಲುತ್ತಾನೆ. ತಾನು ಧರಿಸಿದ್ದ ವಸ್ತ್ರಗಳನೆಲ್ಲ ಕಳಚಿ ನೆಲಕ್ಕೆಸೆಯುತ್ತಾನೆ. ಚಳಿಯಿಂದ ಆತನ ಮೈ ನಡುಗತೊಡಗುತ್ತದೆ. ಆತ ಹಾಗೆ ಮಾಡಿದ ಮರುಕ್ಷಣವೇ ಆ ದೈತ್ಯ ನಾಯಿ ಸಣ್ಣ ಮರಿಯಂತೆ ಕುಯ್ಗುಡುತ್ತಾ ಬಾಲವನ್ನು ಅಲ್ಲಾಡಿಸುತ್ತ ನಿಲ್ಲುತ್ತದೆ. ಮರುಗಳಿಗೆಯೇ ಅದರ ಹಿಂದಿದ್ದ ಕತ್ತಲೆಯಲ್ಲಿ ಚಂಗನೆ ಜಿಗಿದು ಮರೆಯಾಗುತ್ತದೆ. ನಿಟ್ಟುಸಿರು ಬಿಡುತ್ತಾ ರಾಹುಲ್ ತಾನು ನಿಂತಲ್ಲಿಯೇ ದೊಪ್ಪನೆ ಕೂರುತ್ತಾನೆ. ತನ್ನ ಅವಸ್ಥೆಯನ್ನು ಕಂಡು ಆತನಿಗೆ ವಿಪರೀತ ದುಃಖವಾದರೂ ಕೆಂಚಿಯ ದುಷ್ಟ ಶಕ್ತಿಯನ್ನು ಮುಗಿಸಿಯೇ ತೀರಬೇಕೆಂಬ ಉತ್ಕಟ ಹಠ ಆತನಲ್ಲಿ ಮೂಡುತ್ತದೆ. ಪ್ರತಿ ನಿಮಿಷಕ್ಕೂ ದ್ಯಾವಿಯ ಸದ್ದು ಬರುತ್ತಿದ್ದದ್ದನು ಗಮನಿಸಿದ ಆತ ಇದೆ ಸುಸಮಯವೆಂದು ಗೋಪುರದ ಬಳಿಗೆ ತೆರಳುತ್ತಾನೆ. ಕೆಲಹೊತ್ತಿನ ಮೊದಲಷ್ಟೇ ಕಳಚಿ ಹಾಕಿದ ವಸ್ತ್ರಗಳನ್ನು ಹುಡುಕುತ್ತಾನೆ. ಆದರೆ ಎಲ್ಲಿ ನೋಡಿದರೂ ಅವು ಕಾಣುವುದಿಲ್ಲ! ಅದು ಯಾರ ಕೃತ್ಯವೆಂದು ಚೆನ್ನಾಗಿ ಅರಿತ ರಾಹುಲ್ ನಗ್ನವಾಗಿಯೇ ದ್ಯಾವಿಯ ಧ್ವನಿಯನ್ನು ಹಿಂಬಾಲಿಸುತ್ತಾನೆ.

ನೆಡೆಯಲು ಶುರುಮಾಡಿ ಹತ್ತಾರು ನಿಮಿಷಗಳಾದರೂ ಮೊದಲು ಅಸ್ಪಷ್ಟವಾಗಿ ಕಂಡ ಆ ಗುಡಿ ಮಾತ್ರ ಆತನಿಗೆ ಕಾಣುವುದೇ ಇಲ್ಲ! ಒಂದೋ ಕೆಂಚಿಯ ಆ ದೈತ್ಯ ಶಕ್ತಿಗೆ ತಾನು ಬಹಳಾನೇ ದೂರ ಹಾರಿ ಬಿದ್ದಿರಬೇಕು ಅಥವಾ ಆಕೆ ಮತ್ತೆ ಬೇಕಂತಲೇ ನನ್ನ ದಿಕ್ಕನ್ನು ತಪ್ಪಿಸುತ್ತಿರಬೇಕು. 'ಬುದ್ದಿ..' ಎನ್ನುತ್ತಿದ್ದ ಧ್ವನಿಯಲ್ಲಿ ಮೊದಲಿನ ಮುಗ್ದತೆ ಮಾಯವಾಗಿದ್ದಿತು. ಏನೋ ಒಂದು ಕಪಟ ಆಲೋಚನೆ ತುಂಬಿರುವ ಮದಭರಿತ ಆ ಧ್ವನಿಯನ್ನು ರಾಹುಲ್ ಗಮನವಿಟ್ಟು ಕೇಳಿದ. ಆತನ ಹೆಜ್ಜೆಗಳ ಅಂತರ ಕ್ಷೀಣಿಸತೊಡಗಿತು. ವೇಗ ತಂತಾನೇ ಕಡಿಮೆಯಾಯಿತು. ತಾನು ನೆಡೆಯುತ್ತಿದ್ದ ದಿಕ್ಕಿನಲ್ಲಿ ಒಂದತ್ತು ಮಾರು ದೂರದಲ್ಲಿ ದೈತ್ಯ ಮರದ ಹಿಂದೆ ಬೆಳಕೊಂದು ಮೂಡಿರುತ್ತದೆ. 'ಯಾರದು..' ಎಂದು ಕೂಗಿದ ರಾಹುಲ್ ಕೂಡಲೇ ತನ್ನ ನಡೆಯನ್ನು ನಿಲ್ಲಿಸುತ್ತಾನೆ. 'ಬುದ್ದಿ.. ನಾನು ಬುದ್ದಿ ದ್ಯಾ...ವಿ' ಎಂದು ವಿಕಾರವಾಗಿ ನಗುತ್ತಾ ಕೆಂಚಿ ಮರದ ಹಿಂದಿನಿಂದ ಹೊರಬರುತ್ತಾಳೆ. ಕೊಳೆತ ಹುಳಗಳಂತಹ ಆಕೆಯ ಹಲ್ಲುಗಳು, ಕಡುರಕ್ತಬಣ್ಣದ ಕಣ್ಣುಗಳು, ವಿಚಿತ್ರ ಜಂತುವಿನಂತೆ ಬಾಗಿರುವ ಆಕೆಯ ದೇಹವನ್ನು ಕಂಡು ರಾಹುಲ್ ಹೌಹಾರಿದ. ಒಂದು ಕೈಯಲ್ಲಿ ಚಿಮಣಿಯಯನ್ನು ಹಿಡಿದ್ದಿದ್ದ ಕೆಂಚಿ ತನ್ನ ಬಲಗೈಯಲ್ಲಿ ಯಾರದೋ ಕೂದಲನ್ನು ಗಟ್ಟಿಮಾಡಿ ಹಿಡಿದು ಜಗ್ಗುತ್ತಿರುವಂತೆ ಕಾಣುತಿತ್ತು. ಆದರೆ ಅಲ್ಲಿ ಯಾರೂ ಇರದೇ ಕೇವಲ ಕೂದಲು ಮಾತ್ರ ಕಾಣುತಿತ್ತು. 'ಬುದ್ದಿ.. ಓಡಿ.. ಬುದ್ದಿ..' ಎಂಬ ಸದ್ದು ಅಲ್ಲಿಂದ ಬಂದ ಕೂಡಲೇ ರಾಹುಲ್ ತಾನು ಬಂದ ವಿರುದ್ಧ ದಿಕ್ಕಿಗೆ ಓಡತೊಡಗಿದ. ಕೆಂಚಿ ದ್ಯಾವಿಯ ಆತ್ಮವನ್ನು ಕಟ್ಟಿಹಾಕಿ ತನ್ನ ದಿಕ್ಕನ್ನು ತಪ್ಪಿಸುತ್ತಿದ್ದಾಳೆ ಎಂದರಿತ ರಾಹುಲ್ ಈ ಬಾರಿ ಧ್ವನಿ ಬರುತ್ತಿದ್ದ ದಿಕ್ಕಿಗೆ ವಿರುದ್ಧವಾಗಿಯೇ ಓಡುತ್ತಾನೆ.

ರಾಹುಲ್ನ ನಗ್ನ ದೇಹವನ್ನು ಕಂಡು ಒಂದು ಕೈಯಲ್ಲಿ ದ್ಯಾವಿಯ ದೈತ್ಯ ಆತ್ಮವನ್ನು ಮತ್ತೊಂದು ಕೈಯಲ್ಲಿ ಚಿಮಣಿಯನ್ನು ಹಿಡಿದ್ದಿದ್ದರೂ ಕೆಂಚಿ ಆತನನ್ನು ಆಸೆಯ ಕಣ್ಣುಗಳಿಂದ ಹಿಂಬಾಲಿಸುತ್ತಾಳೆ. ಆದರೆ ಈ ಬಾರಿ ಆಕೆಗೆ ರಾಹುಲ್ನ ವೇಗಕ್ಕೆ ಒಗ್ಗಿಕೊಳ್ಳಲು ಆಗಲಿಲ್ಲ. ಆದರೆ ರಭಸವಾಗಿ ಆತನ ದೇಹದ ವಾಸನೆಯನ್ನು ಗ್ರಹಿಸುತ್ತಾ ಮುನ್ನೆಡೆಯುತ್ತಾಳೆ. ಆಕೆಗೆ ರಾಹುಲ್ನನ್ನು ಒಮ್ಮೆಲೇ ಭಕ್ಷಿಸಿ ಬಿಡುವ ಆಸೆ. ಆದರೆ ದ್ಯಾವಿಯ ಆತ್ಮವನ್ನೂ ಬಿಡಲು ಸಾಧ್ಯವಲ್ಲ. ಅದೆಷ್ಟೋ ಸಮಯ ಕುಂಟುತ್ತಾ ನೆಡೆದ ನಂತರ ರಾಹುಲ್ ಪೊದೆಯೊಂದರ ಮುಂದೆ ನಿಂತಿರುವುದು ಆಕೆಗೆ ಕಾಣುತ್ತದೆ. ಕೂಡಲೇ ಒಂದೇ ಸಮನೆ ಕಟಕಟನೆ ಹಲ್ಲುಕಡಿಯತೊಡಗಿದ ಕೆಂಚಿ 'ಬಾರ್ಲ.. ನಿಂಗೇನೂ ಮಾಡಾಕಿಲ್ಲ.. ಬರ್ಲಾ' ಎಂದು ಆತನೆಡೆಗೆ ಮುನ್ನೆಡಿಯುತ್ತಾಳೆ. ರಾಹುಲ್ ನಿಂತ ನೆಲದಿಂದ ಕದಲಲಿಲ್ಲ. ಕೆಂಚಿಯ ದೃಷ್ಟಿ ರಾಹುಲ್ನ ಕಣ್ಣುಗಳ ಮೇಲೆ ನೆಟ್ಟಿರುತ್ತದೆ. ಕೊದಲನ್ನು ಹಿಡಿದೆಳೆದು ಬರುತ್ತಿದ್ದ ಕಡೆಯಿಂದ ದ್ಯಾವಿಯ ರೋಧನೆ ವಿಪರೀತವಾಗಿರುತ್ತದೆ. ರಾಹುಲ್ನ ಕೆಲವೇ ಹೆಜ್ಜೆಗಳ ಸಮೀಪಕ್ಕೆ ಬಂದ ಕೆಂಚಿ ಆತನನ್ನು ಮೇಲಿನ ಕೆಳಕ್ಕೂ ಒಮ್ಮೆಲೇ ನೋಡಿ ಗಹಗಹನೇ ನಗತೊಡಗುತ್ತಾಳೆ. ನಂತರ ಒಮ್ಮೆಲೇ ಸುಮ್ಮನಾಗಿ, ತನ್ನ ಹಾವಿನ ಹೆಡೆಯಂತಹ ತಲೆಯನ್ನು ಅರ್ಧಚಂದ್ರಾಕೃತಿಯಲ್ಲಿ ಎಡಕ್ಕೂ ಬಲಕ್ಕೂ ತಿರುಗಿಸುತ್ತಾ, ತಾನು ನಿಂತ ಪಕ್ಕಕ್ಕೆ ದೊಡ್ಡವೃತ್ತವರೊಂದನ್ನು ಎಳೆದು ಕೈಯಲ್ಲಿ ಹಿಡಿದ್ದಿದ್ದ ದ್ಯಾವಿಯ ಅದೃಶ್ಯ ಆತ್ಮವನ್ನು ಅದರೊಳಗೆ ಎಸೆಯುತ್ತಾಳೆ. ಅದು ಅಲ್ಲೇ ನರಳುತ್ತಾ ಬೀಳುತ್ತದೆ. ನಂತರ ತನ್ನ ಮೈಯ ಮೇಲಿದ್ದ ಕೊಳಕು ವಸ್ತ್ರಗಳನೆಲ್ಲ ಕಿತ್ತೊಗೆದು ನಿಂತ ಕೆಂಚಿಯ ದೇಹವನ್ನು ನೋಡಿದ ರಾಹುಲ್ ಗೆ ಒಮ್ಮೆಲೇ ವಾಂತಿಬಂದಂತಾದರೂ ಹೇಗೋ ಸಹಿಸಿಕೊಳ್ಳುತ್ತಾನೆ. ಆ ಹುಳುಗಟ್ಟಿದ ಕುಬ್ಜ ದೇಹ ಒಂದೊಂದೇ ಹೆಜ್ಜೆ ಮುಂಬಂದಂತೆ ರಾಹುಲ್ ನಿದಾನವಾಗಿ ಪೊದೆಯ ಹಿಂದಕ್ಕೆ ಸರಿಯತೊಡಗುತ್ತಾನೆ. ಆದರೆ ಅದರ ಕಣ್ಣಿನೊಟ್ಟಿಗೆ ನೆಟ್ಟ ದೃಷ್ಟಿಯನ್ನು ಮಾತ್ರ ಕದಲಿಸುವುದಿಲ್ಲ. ಒಂದು, ಎರಡು, ಮೂರು.. ನಾಲ್ಕನೇ ಹೆಜ್ಜೆಗೆ ದೊಪ್ಪನೆ ಕೆಳಬಿದ್ದ ಕೆಂಚಿಯ ದೇಹ ಪೊದೆಗಳು ಮುಚ್ಚಿದ ಒಂಟಿಬೆಟ್ಟದ ಪ್ರಪಾತದೊಳಗೆ ಜಾರುತ ಹೋಗುತ್ತದೆ. ಆ ಸಣ್ಣ ಪ್ರಪಾತ ಸೀದಾ ಕಾಲಭೈರೇಶ್ವರನ ಗುಡಿಯ ಸಮೀಪಕ್ಕೆ ಹೋಗಿರುತ್ತದೆ. ಅಷ್ಟರಲ್ಲಾಗಲೇ ಚೀರುತ್ತಾ. ಅರಚುತ್ತಾ ಸದ್ದು ಮಾಡತೊಡಗಿದ ಕೆಂಚಿ ಗಾಜಿನ ಗೋಡೆಯಂತಿದ್ದ ಪರಿಧಿಯೊಳಗೆ ಮಿಂಚಿನ ವೇಗದಲ್ಲಿ ಸುತ್ತತೊಡಗುತ್ತಾಳೆ. ಗುದ್ದತೊಡಗುತ್ತಾಳೆ. ಕಾದ ಹಂಚಿನ ಮೇಲೆ ಹುಳುವೊಂದು ಬಿದ್ದಂತೆ ವಿಲವಿಲ ಒದ್ದಾಡುತ್ತಾಳೆ. ಕೂಡಲೇ ಕಾಡಿನ ಗಾಳಿ ವಿಪರೀತವಾಗಿ ಗಿಡಮರಗಳೆಲ್ಲ ಮುರುಟಿಗೊಳ್ಳತೊಡಗುತ್ತವೆ. ದೂರದಲ್ಲೆಲ್ಲೋ ನರಿಗಳು ಒಮ್ಮೆಲೇ ಗೀಳಿಡುತ್ತವೆ. ನೋಡನೋಡುತ್ತಿದ್ದಂತೆ ಕೆಂಚಿಯ ದೇಹ ಸಣ್ಣದಾಗುತ್ತ ಗುಡಿಯ ಮುಂದೆಯೇ ಕಣ್ಮರೆಯಾಗುತ್ತವೆ. ಬೆಂಕಿಯ ಕಿಡಿಯೊಂದು ಚಟ್ಟನೆ ಸಿಡಿದು ನಶಿಸಿಹೋಗುತ್ತದೆ.

ಕೆಲಸಮಯ ರೌದ್ರಗೊಂಡ ಪ್ರಕೃತಿ ಒಮ್ಮೆಲೇ ಶಾಂತವಾಗುತ್ತದೆ. ಬಿರುಗಾಳಿ ನಿಂತು ಪರಿಸರ ತಂಪಾಗುತ್ತದೆ. ದೂರದಲ್ಲೆಲ್ಲೋ ಕೂಗುತ್ತಿದ್ದ ನರಿಗಳ ಗಂಟಲನ್ನು ಯಾರೋ ಅದುಮಿ ಹಾಕಿದಂತಹ ಸದ್ದು ಮೂಡುತ್ತದೆ. ಕೂಡಲೇ ರಾಹುಲ್ನಿಗೆ ತಲೆ ಸುತ್ತು ಬಂದಂತಾಗಿ ಅಲ್ಲಿಯೇ ಕುಸಿಯುತ್ತಾನೆ.

****

ಬೆಳಕಿನ ಕಿರಣಗಳು ಅದಾಗಲೇ ರಾಹುಲ್ನ ಮುಖದ ಮೇಲೆ ನಲಿಯುತ್ತಿರುತ್ತವೆ. ಹಕ್ಕಿಗಳ ಆ ಚಿಲಿಪಿಲಿ ಸದ್ದು ಅದೇನೋ ಒಂದು ಬಗೆಯ ನೆಮ್ಮದಿಯನ್ನು ಮೂಡಿಸುತ್ತಿರುತ್ತವೆ. ತುಸುಹೊತ್ತು ಓರಳಾಡಿದ ರಾಹುಲ್ಗೆ ಕೂಡಲೇ ಎಚ್ಚರವಾಗಿ ನೋಡುತ್ತಾನೆ ತಾನು ಒಂಟಿಬೆಟ್ಟದ ಬುಡದಲಿದ್ದ ಕಾಲಭೈರೇಶ್ವರ ಸ್ವಾಮಿಯ ಗುಡಿಯ ಮರದ ಬುಡಕ್ಕೆ ತಲೆಕೊಟ್ಟು ಮಲಗಿರುವುದು ತಿಳಿಯುತ್ತದೆ. ತನ್ನ ವಸ್ತ್ರಗಳೆಲ್ಲವೂ ಆತನ ಮೈಮೇಲೆ ಮೊದಲಿನಂತೆಯೇ ಇರುತ್ತವೆ. ಮೇಲೆದ್ದು ಗುಡಿಯ ಒಳಗಿದ್ದ ಘಾಡಕಪ್ಪುಬಣ್ಣದ ಮೂರ್ತಿಗೆ ಭಕ್ತಿಯಿಂದ ಕೈಮುಗಿದು ರಾತ್ರಿ ಕೆಂಚಿ ಜಾರಿದ ಸಣ್ಣ ಪ್ರಪಾತವನ್ನು ಆತ ಏರುತ್ತಾನೆ. ದ್ಯಾವಿಯನು ಕೂಡಿಹಾಕಿದ ಪರಿಧಿಯನ್ನು ಹುಡುಕಿಕೊಂಡು ಬಂದು ನೋಡುತ್ತಾನೆ, ಅಲ್ಲೊಂದು ಪುಟ್ಟ ಸೇವಂತಿಗೆ ಹೂವು ಬಿದ್ದಿರುತ್ತದೆ. ದೂರದ ಎಲ್ಲೆಲ್ಲಿಯೂ ಸೇವಂತಿಗೆ ಗಿಡದ ಕುರುಹುಗಳಿರದಿದ್ದರೂ ಅಲ್ಲಿಗೆ ಆ ಹೂವು ಹೇಗೆ ಬಂತೆಂದು ಅರಿಯದಾಗುತ್ತಾನೆ. ಪ್ರೀತಿಯಿಂದ ಆ ಹೂವನ್ನು ತನ್ನ ಎದೆಯ ಜೇಬಿನೊಳಗಿರಿಸಿ ತಾನೊಂದು ಆತ್ಮಕೆ ಮುಕ್ತಿ ದೊರಕಿಸಿದೆ ಎಂಬ ಖುಷಿಯಲ್ಲಿ ಮುನ್ನೆಡೆಯುತ್ತಾನೆ. ಅದೆಷ್ಟೋ ದೂರ ನೆಡೆದ ನಂತರ ಯಾರೋ ತನ್ನ ಹೆಸರನ್ನು ಹಿಡಿದು ಕರೆಯುತ್ತಿರುವ ಸದ್ದು ಆತನಿಗೆ ಕೇಳುತ್ತದೆ. ಒಂದೆರೆಡು ಬಾರಿ ಕೇಳಿದ ನಂತರವೇ ಅದು ತನ್ನ ಅಮ್ಮನ ಸದ್ದೆಂದು ಆತನಿಗೆ ತಿಳಿಯುತ್ತದೆ. ಕೂಡಲೇ ಅದೇ ದಿಕ್ಕಿನೆಡೆಗೆ ಓಡುತ್ತಾನೆ. ಅಮ್ಮ, ಮದುಮಗ ಹಾಗು ಇತರ ಗೆಳೆಯರು ರಾಹುಲ್ನ ಹೆಸರನ್ನು ಕೂಗುತ್ತಾ ಇತ್ತಲೇ ಬರುತ್ತಿರುತ್ತಾರೆ. ದೂರದಿಂದ ಅವರನ್ನು ನೋಡಿಯೇ ಆನಂಧಬಾಷ್ಪಗಳು ಮೂಡಿ 'ಅಮ್ಮಾ..' ಎಂದು ಅಳುತ್ತಾ ಅವರೆಡೆಗೆ ಓಡುತ್ತಾನೆ ರಾಹುಲ್....