Sunday, October 8, 2017

ಹಣಕಾಸು ಮಸೂದೆ 2017 : ಬವಣೆಯೊ ಅಥವಾ ಬದಲಾವಣೆಯೂ .. ?

ನೀವು ಸರ್ಕಾರೀ ಅಧಿಕಾರಿಗಳಾಗಿದ್ದರೆ, ಲಂಚಬಾಕರಾಗಲಿದ್ದರೆ, ಅಕ್ರಮ ಆಸ್ತಿಯನ್ನು ಸಂಪಾದಿಸಿಕೊಂಡಿದ್ದರೆ ಸ್ವಲ್ಪ ಜೋಕೆ! ಈ ಎಚ್ಚರಿಕೆಯನ್ನು ಸುಮಾರು ಅರ್ದ ವರ್ಷಗಳ ಮೊದಲೇ ಕೊಡಬೇಕಾಗಿಡಿತು, ಕ್ಷಮೆಯಿರಲಿ! ಇನ್ನು ಮುಂದೆ ಅಕ್ರಮ ಸಂಪಾದನೆಗಳ ಮೇಲೆ ದಾಳಿ ಮಾಡುವ IT ಅಧಿಕಾರಿಗಳು ಮೀನಾ ಮೇಷ ಎಣಿಸದೆ, ಕನಿಷ್ಠ ಒಂದಿಷ್ಟೂ ಸುಳಿವನ್ನೂ ನೀಡದೆ ಯಾವುದೇ ಸಮಯದಲ್ಲಾದರೂ ಮನೆಗೆ ನುಗ್ಗಬಹುದು ಅಲ್ಲದೆ ಇನ್ನು ಮುಂದೆಲ್ಲ ಹಿಂದಿನಂತೆ ಇತ್ತ IT ಅಧಿಕಾರಿಗಳು ಮನೆಯನ್ನು ಜಾಲಾಡುತ್ತಿದ್ದರೆ ಗೊತ್ತಿಲ್ಲದಂತೆ ತನ್ನ ಲಾಯರಿನ ಮೂಲಕ ಕೋರ್ಟಿನ ಬಾಗಿಲು ತಟ್ಟುವ ಅವಕಾಶವೂ ಆ ವ್ಯಕ್ತಿಗೆ ಇರುವುದಿಲ್ಲ. ಈ ವಿಷಯ ಅದೆಷ್ಟು ಜನರಿಗೆ ಸಂತಸವನ್ನು ತರುತ್ತದೋ ಅಥವಾ ಆಕಾಶವೇ ತಲೆ ಮೇಲೆ ಬಿದಂತೆ ಮಾಡುತ್ತದೋ ಅದು ಅವರವರ ನಾಮಕ್ಕೆ ಹಾಗು ಬಕುತಿಗೆ ಬಿಟ್ಟದು. ಒಟ್ಟಿನಲ್ಲಿ ಇಂತಹ ಹಲವಾರು ಬದಲಾವಣೆಯೊಂದಿಗೆ ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಫೈನಾನ್ಸ್ ಬಿಲ್ (ಹಣಕಾಸು ಮಸೂದೆ) ಜಾರಿಗೊಂಡಿದೆ. ಮಾಧ್ಯಮಗಳಲ್ಲಿ ಅಷ್ಟೇನೂ ಚರ್ಚೆಗೆ ಗ್ರಾಸವಾಗಾದ ಅಥವಾ ನಿಜವಾಗಿಯೂ ಅಂತಹ ಮಹಾ ಬದಲಾವಣೆಗಳೇನೂ ಇಲ್ಲದ ಕಾರಣಕ್ಕೋ ಏನೋ(!) ಈ ಮಸೂದೆ ಅತ್ತ ಕಿವಿಯಿಂದ ಒಳನುಸುಳಿ ಇತ್ತ ಕಿವಿಯಿಂದ ಮರೆಯಾಯಿತು. ಆದರೂ ಇಷ್ಟು ತಿಂಗಳುಗಳ ನಂತರ ಈ ಬಿಲ್ಲಿನಲ್ಲಿರುವ ಕೆಲವು ಮಹತ್ವದ ಅಂಶಗಳನ್ನು ಅವುಗಳನ್ನು ನಾವು ಮರೆಸಿಕೊಳ್ಳುವ ಮುನ್ನ ಕೆದಕುವ ಮನಸ್ಸಾಯಿತು.


ಕೇವಲ ಲೋಕಸಭೆಯ ಸದಸ್ಯರುಗಳ ಅನುಮತಿಯೊಂದಿಗೆ ಜಾರಿಯಾಗಬಲ್ಲ ಮಸೂದೆಗಳಲ್ಲಿ ಹಣಕಾಸು ಮಸೂದೆಯೂ ಒಂದು. ಪ್ರಸ್ತುತ ಅಧಿಕಾರದಲ್ಲಿರುವ ಬಹುಮತ ಸರಕಾರದ ಪರಿಣಾಮ ಇಂತಹ ಹಲವಾರು ಮಸೂದೆಗಳನ್ನು ನೀರು ಕುಡಿದಂತೆ ಸಂಸತ್ತಿನಲ್ಲಿ ಪಾಸುಮಾಡಬಹದುದು. ಉದ್ದೇಶ ಸಾತ್ವಿಕವಾಗಿದ್ದು, ಪಾರದರ್ಶಕವಾಗಿ ಯಾವುದಾದರೊಂದು ಕಾನೂನನ್ನು ಜಾರಿಗೊಳಿಸಲು ಇಂತಹ ಬಹುಮತ ಸರಕಾರಗಳಿಗೆ ಇದು ಸುವರ್ಣಾವಕಾಶ. ಅದೇನೇ ಇರಲಿ ಸದ್ಯಕ್ಕೆ ಜಾರಿಯಾಗಿರುವ ಫೈನಾನ್ಸ್ ಬಿಲ್ ಸಹ ಇಂತಹದ್ದೇ ಒಂದು ಲೋಕಸಭೆಯಬಹುಒಮ್ಮತದ ಕಾನೂನಾಗಿದೆ ಹಾಗು ಸಾಮಾನ್ಯನೆಂಬ ಕುರುಡನಿಗೆ ಆಕಾಶದ ನಕ್ಷತ್ರವನ್ನು ತೋರಿದಂತಿದೆ!

1. ಇನ್ನು ಮುಂದೆ ಖಾಸಗಿ ಕಂಪನಿಗಳು ರಾಜಕೀಯ ಪಕ್ಷಗಳಿಗೆ ನೀಡುವ ಡೊನೇಷನ್ ಮೊತ್ತಕ್ಕೆ ಯಾವುದೇ ಬೇಲಿಯಿಲ್ಲ ಹಾಗು ಅಂತಹ ಕಂಪನಿಗಳಿಗೂ ಈ ರವಾನೆಗಳನ್ನು ‘ನೋಟ್’ಮಾಡಿಕೊಳ್ಳುವ ಅಗತ್ಯತೆ ಇಲ್ಲ! ಹೌದು, ಕಳೆದ ವರ್ಷದವರೆಗೂ ಕೇವಲ 7.5% ನಷ್ಟೇ ಹಣವನ್ನು (ಒಂದು ಕಂಪನಿಯ ಮೂರು ವರ್ಷದ ನಿವ್ವಳ ಲಾಭದ ಸರಾಸರಿಯ 7.5%) ಮಾತ್ರ ಪಕ್ಷವೊಂದಕ್ಕೆ ದೇಣಿಗೆಯ ರೂಪದಲ್ಲಿ ನೀಡಬಹುದಾಗಿದ್ದ ಕಾನೂನಿನ ನಿಯಮವನ್ನು ಗಾಳಿಗೆ ತೂರಿದ ಮಸೂದೆ ಈ ಬಾರಿ ಯಾವುದೇ ಕಂಪನಿಯಾಗಲಿ, ಅದೆಷ್ಟೇ ಹಣವನ್ನು ಆಗಲಿ, ತಮಗೆ ಹತ್ತಿರುವಿರುವ/ಸಹಕರಿಸುವ, ಅಧಿಕಾರದಲ್ಲಿರುವ/ವಿಪಕ್ಷಲ್ಲಿರುವ ಯಾವುದೇ ಪಕ್ಷಕ್ಕಾದರೂ ಸುರಿಯಬಹುದು. IT ಅಧಿಕಾರಿಗಳೂ ಇಲ್ಲಿ ಕಂಪನಿಯನ್ನು ಪ್ರೆಶ್ನಿಸಲಾರರು! ಅಲ್ಲದೆ ವಿದೇಶದಿಂದ ರಾಜಕೀಯ ಪಕ್ಷಗಳಿಗೆ ಬರುವ ಚಂದಾವನ್ನೂ ಕಳೆದ ಬಾರಿ 'ಲೀಗಲ್' ಮಾಡಿಯಾಗಿದೆ. ಇಂತಹುಗಳ ಮದ್ಯೆ ದೇಶವನ್ನು ನೆಡೆಸುವುದು ಜನರಿನದ ಆರಿಸಲ್ಪಟ್ಟ ಸರ್ಕಾರವೇ ಅಥವಾ ಈ ರೀತಿ ತೆರೆಮರೆಯ ಚೋರನಂತೆ ಬಿಗಿಹಿಡಿತವನ್ನು ಸಾಧಿಸಬಲ್ಲ ದೇಶೀ ಹಾಗು ವಿದೇಶಿ ಕಂಪನಿಗಳೇ ಎಂಬ ಸಂಶಯ ಇಲ್ಲಿ ಮೂಡದೇ ಇರದು?!

2. IT ACT 1962 ರ ಪ್ರಕಾರ ಯಾವುದೇ IT ದಾಳಿ ನೆಡೆಯುವ ಮುನ್ನ ಅಲ್ಲೊಂದು ಬಲವಾದ ಕಾರಣವಿರಬೇಕು. ಅದನ್ನೇ ಕಾನೂನಿನ ಚೌಕಟ್ಟಿನಲ್ಲಿ ‘Reason to Believe' ಎಂದು ಕರೆಯಲಾಗುತ್ತದೆ. ಇಲ್ಲಿ ಅಕ್ರಮವಾಗಿ ಕೂಡಿಟ್ಟುರುವ/ಗಳಿಸಿಕೊಂಡಿರುವ ಹಣ ಅಥವಾ ಚಿನ್ನ ಅಥವಾ ಆಸ್ತಿ ಅಥವಾ ಇವೆಲ್ಲವೂ ಆದರೂ ಸರಿಯೇ ಒಟ್ಟಿನಲ್ಲಿ ದಾಳಿಯನ್ನು ನೆಡೆಸುವ ಅಧಿಕಾರಿ ತಾನು ದಾಳಿ ನೆಡೆಸುತ್ತಿರುವ ನಿಖರ ವಿಷಯದ ಬಗ್ಗೆ ತನ್ನ ಮೇಲಧಿಕಾರಿಯಲ್ಲ್ಲಿ ಅನುಮತಿಯನ್ನು ಪಡೆದು ತದಾನಂತರ ಭ್ರಷ್ಟರ ಮನೆ ಆಫೀಸುಗಳಿಗೆ ಲಗ್ಗೆ ಇಡಬಹುದಾಗಿತ್ತು. ಪ್ರಸ್ತುತ ಕಾನೂನು ಇಂತಹ ಒಂದು ನಿಯಮವನ್ನು ಇಲ್ಲವಾಗಿಸಿದೆ. ಬಿಕರಿಯಾಗಿರುವ ವ್ಯವಸ್ಥೆಯಲ್ಲಿ IT ಇಲಾಖೆಯ ಮೇಲೆ ಒಂದಿಷ್ಟು ಭಯ ಭಕ್ತಿ ಉಳಿಯಬೇಕು ಎಂದರೆ ಇಂತಹ ನಿರ್ಧಾರಗಳೇನೋ ಅತ್ಯವಶ್ಯಕ. ಆದರೆ ಇದೆ ಕಾನೂನನ್ನು ಅಧಿಕಾರದಲ್ಲಿರುವ ಸರ್ಕಾರಗಳು ತಮ್ಮ ವಿರೋಧಿಗಳನ್ನು ಮಟ್ಟ ಹಾಕಲು ಮಾತ್ರ ಬಳಸಿಕೊಂಡರೆ ಇದಕ್ಕಿಂತ ದುರಂತ ಮತ್ತೊಂದಿರುವುದಿಲ್ಲ.

3. ಮಾತೆತ್ತಿಯರೇ ಪಾರದರ್ಶಕತೆ ಎನ್ನುವ ನಮ್ಮ ಸರ್ಕಾರಗಳು ಆ ನಿಟ್ಟಿನಲ್ಲಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಮಾತ್ರ ಹಲವರಲ್ಲಿ ದಿಗಿಲನ್ನುಟ್ಟಿಸುತ್ತವೆ. ಪ್ರಸ್ತುತ ಕಾನೂನಿನಲ್ಲಿ ಈ ಪಾರದರ್ಶಕತೆ ಎಂಬ ವಿಶೇಷಣಕ್ಕೆ ಇಂಬು ಕೊಡುವಂತೆ 'ಎಲೆಕ್ಟ್ರೋರಿಯಾಲ್ ಬಾಂಡ್' ಎಂಬೊಂದು ನೀತಿಯನ್ನು ಜಾರಿಗೊಳಿಸಲಾಯಿತು. ಅದೇನೆಂದರೆ ಇನ್ನು ಮುಂದೆ ಯಾವುದೇ ರಾಜಕೀಯ ಪಕ್ಷಗಳಿಗೆ ದೇಣಿಗೆಯ ರೂಪದಲ್ಲಿ ಹಣವನ್ನು ನೀಡಬಯಸಿದರೆ ಅಬ್ಬಬ್ಬಾ ಎಂದರೆ 2000 ರೂಪಾಯಿಗಳನಷ್ಟೇ ನೀಡಬಹುದು. ಒಂದುಪಕ್ಷ ಅದಕ್ಕಿಂತ ಹಚ್ಚಿನ ಹಣವನ್ನು ನೀಡುವ 'ಅಗತ್ಯತೆ' ಏನಾದರು ನಿಮಗೆ ಬಂದರೆ ಆಗ ನೀವು ಎಲೆಕ್ಟ್ರೋರಿಯಾಲ್ ಬಾಂಡ್ ಗಳನ್ನೇ ಖರೀದಿಸಬೇಕು. ನೀವು ಬ್ಯಾಂಕುಗಳಿಗೆ ನೀಡುವ ಹಣದ ಮೊತ್ತದ ಸರಿಸಮನಾಗಿ ಆಯಾ ಬ್ಯಾಂಕುಗಳು ನಿಮಗೆ ಕರಾರುಪತ್ರವೊಂದನ್ನು ನೀಡುತ್ತವೆ. ಇದನ್ನೇ ವಿತ್ತವಲಯಲ್ಲಿ ಎಲೆಕ್ಟ್ರೋರಿಯಾಲ್ ಬಾಂಡ್ ಎಂದು ಕರೆಯಲಾಗುತ್ತದೆ. ಇಂತಹ ಬಾಂಡ್ ಗಳನ್ನು ನೀವು ತಮಗಿಷ್ಟವಾದ ಪಕ್ಷದ ಖಾತೆಗಳೆಗೆ ಮನಃಪೂರ್ವಕವಾಗಿ ಜಮಾವಣೆಮಾಡಬಹುದು. ಆದರೆ ಪಾರದರ್ಶಕತೆಯ ಹಿನ್ನಲೆಯಲ್ಲಿ ಇಂತಹ ಎಲೆಕ್ಟ್ರೋರಿಯಾಲ್ ಬಾಂಡ್ ಗಳು ಅದೆಷ್ಟು ಪ್ರಸ್ತುತ ಎಂಬುದೇ ಪ್ರೆಶ್ನೆ. ಏಕೆಂದರೆ ದೊಡ್ಡ ದೊಡ್ಡ ದೇಣಿಗೆಯನ್ನು ದೇಶದ ಹಿರಿಯ ಕಂಪೆನಿಗಳಿಂದ, ವ್ಯಕ್ತಿಗಳಿಂದ ಸ್ವೀಕರಿಸುವ ರಾಜಕೀಯ ಪಕ್ಷಗಳು ಕೊಟ್ಟವರ ನಾಮವನ್ನು ಅನಾವರಣಗೊಳಿಸದಿದ್ದರೆ ಏನು ಬಂತು? ಯಾವ ಬಗೆಯಿಂದ ಈ ನಿಯಮ ಪಾರದರ್ಶಕತೆಯ ಪರಿಧಿಯೊಳಗೆ ಬರುತ್ತದೆ?

4. ಇವೆಲ್ಲ ವಿಷಯಗಳಿಗಿಂತ ಮಿಗಿಲಾದ ಹಾಗು ಮಹತ್ವಪೂರ್ಣವಾದ ವಿಚಾರವೆಂದರೆ the way the Bill has been Implemented. ಉದಾಹರಣೆಗೆ ಈಗ ನೀವೊಂದು ಹೊಸ ಕಾನೂನನ್ನುದೇಶದಾದ್ಯಂತ ತರಲು ಇಚ್ಛಿಸುತ್ತೀರ ಎಂದಿಟ್ಟುಕೊಳ್ಳಿ. ಅಂತಹ ಯಾವುದೇ ಕಾನೂನುಗಳು ಮೊದಲು ಲೋಕಸಭೆ ನಂತರ ರಾಜ್ಯಸಭೆಯಲ್ಲಿ ಚರ್ಚೆಗೊಂಡು, ತೇರ್ಗಡೆಗೊಂದು, ರಾಷ್ಟ್ರಪತಿಯವರ ಅಂಕಿತಕ್ಕೆ ಹೋಗಿ ತದನಂತರ ದೇಶದಾದ್ಯಂತ ಕಾನೂನಾಗಿ ಜಾರಿಗೊಳ್ಳುತ್ತದೆ. ಆದರೆ ಕೆಲವು ಮಸೂದೆಗಳು ಕಾನೂನಾಗಿ ಜಾರಿಗೊಳಲು ಕೇವಲ ಲೋಕಸಭೆಯ ಸರ್ವಾನುಮತದ ಒಪ್ಪಿಗೆಯಷ್ಟೇ ಸಾಕು. ಅಂತಹ ಕೆಲವು ಮಸೂದೆಗಳಲಿ ಹಣಕಾಸು ಮಸೂದೆಯೂ ಒಂದು. ಈಗ ನೀವು ಇಚ್ಛಿಸುತ್ತಿರುವ ಕಾನೂನು ಬೇರೆ ಯಾವುದಾದರೊಂದು ಮಸೂದೆಯಾಗಿದ್ದರೆ ಮೇಲ್ಮನೆ (ರಾಜ್ಯಸಭೆ) ಹಾಗು ಕೆಳಮನೆ (ಲೋಕಸಭೆ) ಯ ಅನುಮತಿಗೆ ಕಾದುಕೂರಬೇಕಿತ್ತು. ಆದರೆ ಒಂದು ಪಕ್ಷ ನೀವೇನಾದರೂ ಆ ಮಸೂದೆಯನ್ನು ಹಣಕಾಸು ಮಸೂದೆಯೊಟ್ಟಿಗೆ ಸೇರಿಸಿ ಕೈ ತೊಳೆದುಕೊಂಡು ಕುಳಿತರೆ ನಿಮ್ಮ ಕೆಲಸ ಭಾಗಶಃ ಆದಂತೆಯೇ! ನೀವು ಇಚ್ಛಿಸಿದ ಕಾನೂನು ನಿಜವಾದ ಹಣಕಾಸು ಮಸೂದೆಯೊಟ್ಟಿಗೆ ಸೇರಿ ಕೇವಲ ಲೋಕಸಭೆಯ ಅನುಮತಿಯೊಂದಿಗೇ ಪಾಸಾಗಿಬಿಡುತ್ತದೆ. ಅಲ್ಲದೆ ಮೊದಲೇ ಹೇಳಿದಂತೆ ಲೋಕಸಭೆಯಲ್ಲಿ ಮೆಜಾರಿಟಿ ಸದಸ್ಯರು ಒಂದೇ ಪಕ್ಷದವರಾಗಿದ್ದರೆ (ಪ್ರಸ್ತುತ ಲೋಕಸಭೆಯಂತೆ) ಅವರು ಆಡಿದ್ದೇ ಆಟ, ಹೇಳಿದ್ದೆ ಪಾಠ! ಪ್ರಸ್ತುತ ಫೈನಾನ್ಸ್ ಬಿಲ್ಲಿನಲ್ಲಿ ಇದೇ ರೀತಿ ಐಟಿ ರೇಡ್, ವಿದೇಶಿ ದೇಣಿಗೆ ಎಂಬ ಹಲವಾರು ವಿಷಯಗಳನ್ನು ಸೇರಿಸಿ, ಅವುಗಳಿಗೆ ಹಣಕಾಸು ಮಸೂದೆಎಂಬ ಬಣ್ಣವನ್ನು ಲೇಪಿಸಿ,ದೇಶದ ಎರಡೂ ಸದನಗಳಲ್ಲಿ ಕೂಲಂಕೂಷವಾಗಿ ಚರ್ಚಿಸದೆ ಏಕಮುಖವಾಗಿ ಕಾನೂನನ್ನು ಜಾರಿಗೆ ತರಲಾಗಿದೆ ಹಾಗು ಇದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಬಹಳ ಆತಂಕದ ವಿಚಾರ ಎಂಬುದು ಹಲವು ವಿತ್ತಪಂಡಿತರ ಅಭಿಪ್ರಾಯ.


ಇವುಗಳನ್ನು ಹೊರತುಪಡಿಸಿ ಕಾರ್ಪೊರೇಟ್ ಟ್ಯಾಕ್ಸ್ ನಲ್ಲಿ ಇಳಿಕೆ, ಸ್ಟಾರ್ಟ್-ಅಪ್ಸ್ ಗಳಿಗೆ ತೆರಿಗೆಯಲ್ಲಿ ವಿನಾಯಿತಿ ಎಂಬ ಕೆಲವು ಬಹುಪಯೋಗಿ ಅಂಶಗಳನ್ನೂ ಈ ಫೈನಾನ್ಸ್ ಬಿಲ್ಲಿನಲ್ಲಿ ಅಳವಡಿಸಲಾಗಿದೆ. ಆದರೆ ಯಾವುದೇ ಕಾನೂನಾಗಲಿ ಅದು ಸಂವಿಧಾನಿಕವಾಗಿ, ಸರ್ವಾನುಮತದ ಅನುಮತಿಯ ವಿನಃ ಜಾರಿಗೊಂಡರೆ/ಜಾರಿಗೊಳಿಸಿದರೆ ಮುಂಬರುವ ಪೀಳಿಗೆಯೂ ಅದೇ ಚಾಳಿಯನ್ನು ಬೆಳಿಸಿಕೊಂಡು ಪ್ರಜಾತಂತ್ರತೆಯಂಬ ಕೋಟೆಯನ್ನು ಅದ್ವಾನವನ್ನಾಗಿ ಮಾಡಿಬಿಡಬಹುದು. ಅಲ್ಲದೆ ದೇಶದ ಜನತೆಯೂ ಜಾರಿಗೊಳ್ಳುವ ಪ್ರತಿ ಕಾನೂನನ್ನೂ ಕೂಲಂಕುಷವಾಗಿ ಅರಿತುಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಪ್ರೆಶ್ನಿಸಬೇಕು. ಪಕ್ಷಾತೀತವಾಗಿ. ಮನೆಯಲ್ಲಿ ಅಪ್ಪ ಜೋಜಾಡಿಕೊಂಡು ಹಣವನ್ನು ಕಳೆದುಕೊಂಡು ಬಂದರೆ ಮನೆಯವರು ಆತನನ್ನು ತಿದ್ದಲು ಪ್ರತ್ನಿಸುತ್ತಾರೆಯೇ ವಿನಃ ಅದನ್ನು ಪಕ್ಕದ ಮನೆಯವರೊಟ್ಟಿಗೆ ಹೇಳಿಕೊಂಡು ವ್ಯಂಗ್ಯಮಾಡುವುದಿಲ್ಲ! ಅಲ್ಲವೇ?

Friday, October 6, 2017

ಕಥೆ - ಮಧುಮಗನ ಮದುವೆ..

ಹುಡುಗ ಈ ಬಾರಿ ಮದುವೆ ಆಗುತ್ತಿದ್ದಾನಂತೆ. ಮೊದಲ ವರ್ಷ ಮನೆ, ಕಳೆದ ವರ್ಷ ಕಾರು ತೆಗೆದುಕೊಂಡ ಆತನಿಗೆ ಪ್ರಸ್ತುತ ವರ್ಷ ಮಾಡಲು ಬೇರೇನೂ ಕ್ಯಾಮೆ ಇಲ್ಲದ ಕಾರಣ ಅವರ ಪೋಷಕಪೂಜ್ಯರು ಈ ಬಾರಿ ಮದುವೆ ಮಾಡಿಕೊಳ್ಳುವ ಆರ್ಡರ್ ಅನ್ನು ಜಾರಿಗೆ ತಂದಿದ್ದಾರಂತೆ. ದೇಶದ ರಾಜಧಾನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ವರ್ಷಕ್ಕೊಮ್ಮೆ ಅಥವಾ ಎರಡು ಸಾರಿ (ಆದೂ ದೀಪಾವಳಿ ಹಬ್ಬದ ಇನ್ಕ್ರಿಮೆಂಟ್ ಸಿಕ್ಕರೆ ಮಾತ್ರ) ಮನೆಗೆ ಬಂದೊಗುವ ಅಮಾಯಕನಿಗೆ ಬಂದಾಗಲೆಲ್ಲ ಒಂದಲ್ಲೊಂದು ಪ್ರಾಜೆಕ್ಟ್ ಗಳನ್ನು ನೀಡಿ ಅದನ್ನು ಪೂರ್ಣಗೊಳಿಸಿಕೊಂಡೆಯೇ ತೀರುತ್ತಿದ್ದರು ಆತನ ಪೋಷಕರು. ಈ ವರುಷದ ಮದುವೆಯ ನಂತರ ಮುಂದಿನ ವರ್ಷ ಅದೇನು ಕೇಳುವರೋ/ಹೇಳುವರೋ ಎಂಬುದೇ ಎಂದು ಪ್ರಸ್ತುತ ಸುತ್ತ ಮುತ್ತಲಿನೆಲ್ಲರಿಗೂ ಕಾಡುತ್ತಿರುವ ಏಕೈಕ ಪ್ರೆಶ್ನೆ. ಹೆತ್ತವರು ಕೇಳಿದಕ್ಕೆಲ್ಲ ಕೋಲೆ ಬಸವನಂತೆ ತಲೆಯಾಡಿಸುವ ಮಧುಮಗ ತನ್ನ ಫ್ಯೂಚರ್ ಹೆಂಡತಿಯೊಟ್ಟಿಗೆ ಅದೇಗೆ ಜೀವನದ ಬಂಡಿಯನ್ನು ಸವೆಸುತ್ತಾನೋ ಕಾದು ನೋಡಿ ಆನಂದ ಪಡಬೇಕು ಎಂದು ಕೆಲವರು ಘಳಿಗೆ ನೋಡುತ್ತಿದ್ದರು!!


ಹೇಳಿದ ದಿನಕ್ಕಿಂತ ಒಂದು ದಿನ ಮುಂಚೆಯೇ ಬಂದಿಳಿದ ಮಗನನ್ನು ಕಂಡು ಪೋಷಕರಿಂದಿಡಿದು ಮದುವೆಗೆ ಜಮಾವಣೆಗೊಂಡಿದ್ದ ನೆಂಟರಾದಿಗಳಿಗೂ ಅಂದು ಸಂತಸ. ಮದುವೆಗೆ ಇನ್ನು ಮೂರು ವಾರಗಳಿವೆ. ಮದುವೆಯ ಆಡಳಿತದ ಅಧಿಕಾರ ಅಪ್ಪನೊಬ್ಬನಿಗೆ ಮಾತ್ರ ಇದ್ದಿದ್ದರಿಂದ ಮಧುಮಗ ನಿರಾಳ. ಮನೆಯ ಬಣ್ಣದಿಂದಿಂದಿಡು ಮಧುಮಗನ ಒಳ ಉಡುಪುಗಳ ಆಯ್ಕೆಗೂ ಅಪ್ಪನ ಇಂಗಿತವೇ ಬೇಕಿದ್ದಿತು. ಆದ ಕಾರಣ ಮದುವೆ ಮನೆಯ ಕೆಲಸ ಕಾರ್ಯಗಳ ಕಳ್ಳ ನೆಪವನ್ನು ಒಡ್ಡಿ ಮೂರು ವಾರದ ಮುಂಚೆಯೇ ತಮ್ಮ ಕ್ಯಾಂಪ್ ಅನ್ನು ತೆರೆದಿದ್ದ ಮಧುಮಗನ ಸೋದರಸಂಬಂಧಿಗಳು ಹಾಡು, ಹರಟೆ, ಇಸ್ಪೀಟು, ಡ್ರಿಂಕು ಎನ್ನುತ್ತಾ ತಮ್ಮ ಮನೋರಂಜನೆಯ ಅಡ್ಡವನ್ನಾಗಿ ಮನೆಯನ್ನು ಮಾಡಿಕೊಂಡಿದ್ದರು. ಏನೇ ಹೇಳಿದರು 'ದೊಡ್ಡಪ್ಪನಿಗೆ ಹೇಳಿ' ಎನ್ನುತ್ತಾ ಅಲೆಮಾರಿಗಳಂತೆ ಮನೆಯೊಳಗೇ ಅಡ್ಡಾಡಿಕೊಂಡು ಇದ್ದರು. ಮಧುಮಗ ಬಂದು ಎಲ್ಲರನ್ನು ಮಾತಾಡಿಸಿ ತನ್ನ ಲಗೇಜುಗಳ ಸಮೇತ ಆತನ ರೂಮಿನೊಳಗೆ ಹೋಗುವುದನ್ನೇ ಕಾಯುತ್ತಿದ್ದ ಈ ಪಡೆ, ಆತನನ್ನೇ ಹಿಂಬಾಲಿಸುತ್ತ ರೂಮಿನ ಒಳಹೊಕ್ಕು, ಬಾಗಿಲನ್ನು ಮುಚ್ಚಿ, ಹಸಿದ ಪ್ರಾಣಿಗಳಂತೆ ಕ್ಷಣಾರ್ಧದಲ್ಲಿ ಆತನ ಲಗೇಜಿನ ಮೇಲೆ ಮುಗಿಬಿದ್ದವು. ಕೆಲನಿಮಿಷಗಳ ಹುಡುಕಾಟದ ನಂತರವೂ ತಾವು ‘ಬಯಸಿದ್ದು’ ಸಿಗದಿದ್ದಾಗ ಹ್ಯಾಪೆ ಮೊರೆಯನ್ನು ಹಾಕಿಕೊಂಡು ಒಂದೊಂದಾಗೆ ಜಾಗ ಕಿತ್ತವು. ಆದರೆ ಸಂಜೆ ಯಾರಿಗೂ ತಿಳಿಯದಂತೆ ಕಿಡ್ನಾಪ್ ಮಾಡಿಯಾದರೂ ಸರಿಯೇ ಊರಿನ ಬಾರಿಗೆ ತನ್ನನ್ನು ಎತ್ತಾಕಿಕೊಂಡು ಹೋಗಿ ನಾಲ್ಕು ನಾಲ್ಕು ಪೆಗ್ ಗಳನ್ನು ಗಂಟಲಿನೊಳಗೆ ಗಟಗಟ ಇಳಿಸಿ ಜೇಬಿಗೆ ಕತ್ತರಿ ಹಾಕುವರು ಎಂಬುದ ಚೆನ್ನಾಗಿ ಬಲ್ಲ ಮಧುಮಗ.

ತುಸು ಹೊತ್ತು ಹಾಗೆಯೇ ವಿರಮಿಸಲೆಂದು ಮಂಚದ ಮೇಲೆ ಒರಗಿದ್ದ ಮಧುಮಗನ ದೃಷ್ಟಿ ಕೋಣೆಯ ಮೂಲೆಯ ಮೇಜಿನ ಮೇಲಿಟ್ಟಿದ್ದ ಮಧುವೆಯ ಆಮಂತ್ರಣ ಪ್ರತಿಗಳ ಮೇಲೆ ಬಿದ್ದಿತು. ಅದಾಗಲೇ ನೆಂಟರಾದಿಗಳಿಂದಿಡಿದು ಮಧುಮಗನ ಗೆಳೆಯರಾದಿಗಳಿಗೆ ಅಪ್ಪನೇ ಆಮಂತ್ರಣ ಪ್ರತಿಯನ್ನು ಹಂಚಿದ್ದರಿಂದ ಹಾಗು ಉಳಿದ ಇತರ ಗೆಳೆಯರು ಹಾಗು ಸಹೋದ್ಯೋಗಿಗಳಿಗೆ ಹುಡುಗನೇ ಖುದ್ದಾಗಿ ಫೋನಾಹಿಸಿ ಕರೆದಿದ್ದರಿಂದ್ದ ಮೇಜಿನ ಮೇಲಿದ್ದ ಪ್ರತಿಗಳೆಲ್ಲವೂ ಮಿಕ್ಕಿ ಉಳಿದವುಗಳೆಂದು ಅಂದುಕೊಂಡನು. ಹಾಗೆಯೆ ಒಂದೆರೆಡು ಪ್ರತಿಗಳನ್ನು ತೆಗೆದುಕೊಂಡು ನೋಡುತ್ತಾನೆ. ಇನ್ನೂ ಯಾರೆಲ್ಲ ಮಿಕ್ಕಿರಬವುದೆಂದು ಯೋಚಿಸತೊಡಗುತ್ತಾನೆ. ಯೋಚನೆಯಲ್ಲಿ ಮಗ್ನನಾದ ಮಧುಮಗನಿಗೆ ಕೂಡಲೇ ‘ಅವರಿಬ್ಬರ’ ನೆನಪು ಮಗದೊಮ್ಮೆ ಮೂಡುತ್ತದೆ.ಅವರಿಬ್ಬರನ್ನೂ ಮದುವೆಗೆ ಕರೆಯುವವರೆಗೂ ಅದೇನೋ ಒಂದು ಅಪೂರ್ಣತೆಯ ಭಾವ ಮನದಲ್ಲಿ ಮೂಡುತ್ತಿರುತ್ತದೆ.

ವರುಷಗಳೇ ಕಳೆದಿವೆ ಈ ಇಬ್ಬರು ದೂರಾಗಿ. ಆತ ಕಾಲೇಜಿನ ಮೊದಲನೇ ದಿನದಿಂದ ಪರಮಾಪ್ತನೆನಿಸಿಕೊಂಡ ಸ್ನೇಹಿತನಾದರೆ ಆಕೆ ಕೆಲಸದ ಜೊತೆಯಲ್ಲಿ ಜೊತೆಯಾದ ಸ್ನೇಹಿತೆ.

ಮೊದಮೊದಲು ನಯ ನಾಜೂಕಿನಿಂದ 'ಹೋಗಿ, ಬನ್ನಿ' ಎನ್ನುತ್ತಿದ್ದ ಆತ ಬರ ಬರುತ್ತಾ 'ಬಡ್ಡಿಮಗ್ನೆ, ಸಿಗ್ರೆಟ್ ಕೊಡ್ಸೋ' ಎಂಬ ಮಟ್ಟಿಗೆ ಮಧುಮಗನ ಗೆಳೆಯನಾಗಿದ್ದ. ಕೊಂಚ ಮುಂಗೋಪಿ, ಉಳಿದಂತೆ ಸೀದಾ ಸಾದಾ ವ್ಯಕ್ತಿ. ಪರೀಕ್ಷೆಗಳಲ್ಲಿ ಪಾಸುಮಾಡಿಸುವುದರಿಂದಿಡಿದು ಹುಡುಗಿಯರಿಗೆ ಪ್ರೇಮಪತ್ರವನ್ನು ಬರೆದುಕೊಡುವವರೆಗೂ ಆತನ ಸಹಾಯವೇ ಬೇಕಿದ್ದಿತು. ದೋಸ್ತಿ ಎಂದರೆ ಅವರಿಬ್ಬರ ಹಾಗೆ ಇರಬೇಕು ಎಂದು ಇಡೀ ಕಾಲೇಜಿಗೆ ಕಾಲೇಜೇ ಮಾತಾಡಿಕೊಳ್ಳುತ್ತಿತ್ತು. ಅದೇನು ಒಂದು ಕೆಟ್ಟ ಘಳಿಗೆಯೋ, ಗ್ರಹಚಾರವೋ, ಅಥವಾ ತನ್ನ ದುರ್ಬುದ್ಧಿಯೋ ಅದೊಂದು ದಿನ ಯಾವುದೊ ಕೆಲಸದ ನಿಮಿತ್ತಾ ಐವತ್ತು ಸಾವಿರ ರೂಪಾಯಿಗಳನ್ನು ಆತನಿಂದ ಪಡೆದ ಮಧುಮಗ ಅದನ್ನು ಹಿಂದಿರುಗಿಸುವ ಮಾತನ್ನು ಮಾತ್ರ ಎತ್ತಲೇ ಇಲ್ಲ. ಇಂದು ನಾಳೆಯಾಗಿ, ನಾಳೆ ನಾಡಿದ್ದಾಗಿ, ದಿನಗಳು ತಿಂಗಳುಗಳಾಗಿ ಉರುಳಿದವು. ಈವೊಂದು ಕಾರಣಕ್ಕೆ ಏನೋ ನಿಧಾನವಾಗಿ ಮಧುಮಗ ಆತನ ಸಂಪರ್ಕದಿಂದ ವಿಮುಖನಾಗತೊಡಗಿದ್ದ. ಮಧುಮಗನಿಗೆ ದೆಹಲಿಯಲ್ಲಿ ಕೆಲಸ ದೊರೆತು ಚೆನ್ನಾಗಿ ದುಡಿಯಲು ಶುರುಮಾಡಿದ್ದ. ಆದರೆ ಆ ವೇಳೆಗಾಗಲೆ ಹಣವನ್ನು ಹಿಂದಿರುಗಿಸುವ ಮನಸ್ಥಿತಿಯೇ ಆತನಿಗೆ ಇಲ್ಲದಾಗಿದ್ದಿತು. ಕೆಲ ತಿಂಗಳ ಹಿಂದೆಯಷ್ಟೇ ಕೃಷ್ಣ-ಕುಚೇಲರಂತಿದ್ದ ಜೋಡಿಯನ್ನು ಕೇವಲ ಒಂದಿಷ್ಟು ನೋಟುಗಳ ಮಾಹೆ ಒಡೆದು ಪುಡಿಮಾಡಿದನ್ನು ಮಾತ್ರ ಮಧುಮಗ ಆಗೊಮ್ಮೆ ಈಗೊಮ್ಮೆ ನೆನೆದು ಚಿಂತಿಸುತ್ತಿದ್ದ. ಕೆಲವೊಮ್ಮೆ ತನ್ನ ಮೇಲೆ ತನಗೆ ಜಿಗುಪ್ಸೆ ಬಂದರೂ ಅದೇಗೋ ಅದನ್ನು ಅದುಮಿಕೊಂಡು ನಿರಾಳನಾಗಿದ್ದ. ಇತ್ತ ಕಡೆ ಹಣ ನೀಡಿದ್ದ ಗೆಳೆಯನೂ ಒಮ್ಮೆಯೂ ಈತನಿಗೆ ಫೋನಾಯಿಸುವುದಾಗಲಿ ಮಾಡಿರಲಿಲ್ಲ. ಕಾರಣ ತಿಳಿಯುವ ಗೋಜಿಗಂತೂ ಮಧುಮಗ ಹೋಗಿಯೇ ಇರಲಿಲ್ಲ.

ದೆಹಲಿಗೆ ಹೋಗಿ ಸಂಬಳವನ್ನುಎಣಿಸಲು ಶುರುವಿಟ್ಟಾಗ ಸಾಮನ್ಯವಾಗಿಯೇ ಹುಡುಗಿಯರನ್ನು ಗೆಳತಿಯರನ್ನಾಗಿ ಮಾಡಿಕೊಳ್ಳುವ ಗೀಳು ಅಲ್ಲಿನ ಎಲ್ಲರಲ್ಲೂ. ಸುತ್ತಲು,ತಿನ್ನಲು, ಹರಟೆಯೊಡೆಯಲು ಅಲ್ಲದೆ ಹತ್ತಿಪ್ಪತ್ತು ಫೋಟೋಗಳ ರಾಶಿಯೊಂದನ್ನು ತಮ್ಮ ಫೇಸ್ಬುಕ್ ಪೇಜಿನಲ್ಲಿ ಅಪ್ಲೋಡ್ ಮಾಡಲೂ ಹುಡುಗಿಯರ ಕೆಲ ಚಹರೆಗಳು ಅತಿಪ್ರಾಮುಖ್ಯ ವಿಚಾರಗಳಲ್ಲೊಂದಾಗಿದ್ದವು. ಜಿರೋಗಿರಿಯ ಕೂಪದಿಂದ ಹೀರೋಗಿರಿಯ ಶಿಖರವನ್ನೇರಲು ಬೇಕಾದ ಆಧಾರವಾಗಿ ಅಂದು ಹುಡುಗರು ಹುಡುಗಿಯರಿಗೆ, ಹುಡುಗಿಯರು ಹುಡುಗರಿಗೆ ಜೊತೆಯಲ್ಲಿ ಬೇಕಾಗಿದ್ದರು. ಇಂತಹ ಅವಲಂಬಿತ ಜೀವನದ ಕಾಲಘಟ್ಟದಲ್ಲಿ ಮಧುಮಗನಿಗೆ ಜೊತೆಯಾದವಳು 'ಅವಳು'. ತಮ್ಮೂರಿನ ಹತ್ತಿರದ ಹಳ್ಳಿಯಿಂದಲೇ ಬಂದ ಆಕೆ ಮಧುಮಗನ ಜೀವನದ ಹೂದೋಟವನ್ನು ಒಳಹೊಕ್ಕ ಮೊದಲ ಚಿಟ್ಟೆ. ಬೆಳಗಿನಿಂದ ಸಂಜೆಯವರೆಗೂ ಒಬ್ಬರನೊಬ್ಬರು ಬಿಟ್ಟಿರುತ್ತಿದ್ದ ಸಮಯವೇ ಬಲು ಕಡಿಮೆ. ಇವರಿಬ್ಬರ ಬಗೆಗೆ ಸಹೋದ್ಯೋಗಿಗಳು ಆಡಿಕೊಳ್ಳುವ ಗುಸುಗುಸು ಆಗಾಗ್ಗೆ ಮಧುಮಗನ ಕಿವಿಗೆ ಬೀಳುತ್ತಿದ್ದಾರು ಅದನ್ನು ಆತ ಹಿತವಾಗಿರುವ ಭಾವಕೋಶದೊಂದರೊಳಗೆ ಸೇರಿಸಿಕೊಳ್ಳುತ್ತಿದ್ದ. ಖುಷಿಯಾಗುತಿದ್ದ . ಆದರೆ ಆ ವಿಷಯವಾಗಿ ಎಂದೂ ಆಕೆಯೊಟ್ಟಿಗೆ ಮಾತಿಗಿಳಿದಿರಲಿಲ್ಲ. ಊಟ, ತಿಂಡಿ, ಓದು, ಪುಸ್ತಕ, ಜೀವನ, ಚಲನಚಿತ್ರ, ಸಾವು, ಹುಟ್ಟು, ಬ್ರಹ್ಮಾಂಡ, ಏಲಿಯನ್ಸ್, ಶಾಶ್ವತ, ನಶ್ವರ ಹೀಗೆ ಜಗತ್ತಿನಲ್ಲಿ ಘಟಿಸುವ ಅಥವಾ ಘಟಿಸುತ್ತಿರುವ ಪ್ರತಿಯೊಂದೂ ವಿಷಯವನ್ನೂ ಘಂಟೆಗಳ ಕಾಲ ಚರ್ಚಿಸುತ್ತಿದ್ದ ಇಬ್ಬರೂ ಕಾಲಚಕ್ರದ ಓಟದಲ್ಲಿ ತಮ್ಮನೇ ತಾವು ಮರೆತಿದ್ದರು. ವಾರಗಳು ದಿನಗಳಂತೆ ಕಳೆದವು. ಅವೊಂದು ದಿನ ಸಿಟಿಯ ಎತ್ತರವಾದ ಪಾರ್ಕಿನಲ್ಲಿ ಕೂತಿದ್ದ ಇಬ್ಬರು ಪಡುವಣದಲ್ಲಿ ಲೀನವಾಗುತ್ತಿದ್ದ ಸೂರ್ಯನನ್ನು ತದೇಕಚಿತ್ತದಿಂದ ನೋಡುತಿದ್ದರು. ಮಧುಮಗ ಇದ್ದಕ್ಕಿದಂತೆ ಅವಳನ್ನು ಉದ್ದೇಶಿಸಿ ತನಗರಿಯದಂತೆ ಆಕೆಯನ್ನು ಮನಸ್ಸಾರೆ ಇಚ್ಛಿಸುತ್ತಿದ್ದೇನೆಂದೂ ಆಕೆ ಸಮ್ಮತಿಸಿದರೆ ಕೂಡಲೇ ಮನೆಯವರನ್ನು ಒಪ್ಪಿಸುತ್ತೇನೆಂದೂ ಹೇಳಿ ಮೊದಲ ಬಾರಿಗೆ ಆಕೆಯ ಕೆನ್ನೆಯ ಮೇಲೊಂದು ಹೂಮುತ್ತನಿಟ್ಟು ಸುಮ್ಮನಾಗುತ್ತಾನೆ. ಈತನನ್ನೇ ಕಳವಳಗೊಂಡು ಕೆಲಹೋತ್ತು ನೋಡಿದ ಆಕೆ ಕೆಲ ಕ್ಷಣಗಳ ನಂತರ ಒಂದೇ ಸಮನೆ ಗಳಗಳ ಅಳಲು ಶುರು ಮಾಡಿದಳು. ಕಾರಣ ಅರಿಯನವನಾದ ಮಧುಮಗ ಆಕೆಯನ್ನು ಸಂತೈಸಲು ಮುಂದಾದಾಗ ಆತನನ್ನು ಒಮ್ಮೆಲೇ ದೂರಕ್ಕೆ ತಳ್ಳಿ 'ಪವಿತ್ರವಾದ ಗೆಳೆತನದ ಗುರಿ ಮದುವೆಯಾಗುವುದೊಂದೇ ಅಲ್ಲ, ಮೈಂಡ್ ಇಟ್!' ಎಂದು, ಆಕೆಯನ್ನು ಈತ ಮುಂದೆಂದೂ ಸಿಗುವುದಾಗಲಿ ಫೋನಾಯಿಸುವುದಾಗಲಿ ಮಾಡಬಾರದೆಂದು ಹೇಳಿ ಅಲ್ಲಿಂದ ಹೊರಟಳು. ಕ್ಷಣ ಮಾತ್ರದಲ್ಲೇ ಆಕಾಶವೇ ಕುಸಿದು ಕೆಳಗೆ ಬಿದ್ದಂತಹ ಅನುಭವವಾದ ಮಧುಮಗನಿಗೆ ತನ್ನ ಪ್ರೀತಿಯ ನಿವೇದನೆ ಅಷ್ಟೊಂದು ಘೋರ ಪಾಪವೇ ಎಂದನಿಸತೊಡಗಿತ್ತು. ಇದಾದ ಕೆಲದಿನಗಳಲ್ಲೇ ಆಕೆ ತನ್ನ ಕೆಲಸಕ್ಕೆ ರಾಜೀನಾಮೆಯನ್ನು ನೀಡಿ ಹೊರಡುವ ಮೊದಲು ಈತನಿಗೊಂದು ಕಾಗದವನ್ನಿಟ್ಟು ಅಲ್ಲಿಂದ ಬೀಳ್ಕೊಟ್ಟಳು. ಆಕೆ ಈತನನ್ನು ಒಬ್ಬ ಉತ್ತಮ ಗೆಳೆಯನಾಗಿ ಮಾತ್ರ ಹಚ್ಚಿಕೊಂಡಿದ್ದಳೆಂದೂ, ಮೊದಲೊಮ್ಮೆ ಈಕೆಗೆ ಈಗೆಯೆ ಗೆಳೆಯನೊಬ್ಬ ಪ್ರೇಮ ನಿವೇದನೆಯನ್ನು ಮಾಡಿ ಅತಿಯಾಗಿ ಸತಾಯಿಸಿದ್ದನೆಂದೂ, ಅಲ್ಲಿಂದ ಮುಂದಕ್ಕೆ ಈಕೆ ಯಾವ ಹುಡುಗನನ್ನೂ ಗೆಳೆಯನಾಗಿ ಮಾಡಿಕೊಳ್ಳಲಿಲ್ಲವೆಂದೂ, ದೇವರ ಕೃಪೆಯಿಂದ ಮಧುಮಗನಂತಹ ಒಳ್ಳೆಯ ಗೆಳೆಯ ಆಕೆಗೆ ದೊರೆತರೂ ಆತನೂ ತನ್ನ ಉದ್ದೇಶವನ್ನು ಪ್ರೀತಿ ಪ್ರೇಮವೆಂಬ ಮೂರುಕಾಸಿನ ಭಾವಗಳಿಗೇ ಮುಡಿಪಾಗಿಟ್ಟಿರುವುನ್ನು ಕಂಡು ಅತಿಯಾಗಿ ನೊಂದ ಆಕೆ ಇವನಿಂದ ದೂರವಾಗುತ್ತಿದ್ದಾಳೆ ಎಂಬುದು ಆ ಪತ್ರದ ಒಟ್ಟು ಸಾರಾಂಶವಾಗಿದ್ದಿತು. 'ಪ್ರೀತಿಯನ್ನು ಗೆಳೆತನಕ್ಕಿಂತ ಮಿಗಿಲಾದ ಭಾವವನ್ನಾಗಿ ಮಾಡಲಾಗದು, ಇಂದಿಗೂ ಎಂದೆಂದಿಗೂ' ಎಂಬ ಆಕೆಯ ಪತ್ರದ ಕೊನೆಯ ಸಾಲುಗಳು ಮಧುಮಗನನ್ನು ಈಗಲೂ ಕಾಡುತ್ತಿವೆ.

ತನ್ನ ಯೋಚನಾಲಹರಿಯಲ್ಲಿ ಮುಳುಗಿಹೋಗಿದ್ದ ಮಧುಮಗನನ್ನು ಹುಚ್ಚು ಹಿಡಿದ ವಾನರರಂತೆ ಅರಚಾಡುತಿದ್ದ ಸೋದರಸಂಬಂಧಿಗಳ ಸದ್ದು ಎಚ್ಚರಿಸಿತು. ಈ ಇಬ್ಬರು ಗೆಳೆಯರ ಬಗ್ಗೆ ರೂಮಿನ ಹೊರಗೆ ಅರಚುತ್ತಿದ್ದ ವಾನರರ ಗುಂಪಿನೊಳಗೇ ಒಂದಿಬ್ಬರು ಬಲ್ಲರಾದರೂ ಯಾರೂ ಆತನೊಟ್ಟಿಗೆ ಅಷ್ಟಾಗಿ ಚರ್ಚಿಸುತ್ತಿರಲಿಲ್ಲ. ಅಂದು ಸಂಜೆ ಅಂದುಕೊಂಡಂತೆ ಊರು ಸುತ್ತುವ ನೆಪವೊಡ್ಡಿ ಮಧುಮಗನನ್ನು ಎಳೆದುಕೊಂಡೋದ ಪಡೆ ಕಂಠಪೂರ್ತಿ ಕುಡಿದು ವಾಪಸ್ಸಾಗುವಾಗ ಮಧ್ಯರಾತ್ರಿ ಕಳೆದಿತ್ತು. ಎಣ್ಣೆಯ ನಶೆಯಲ್ಲಿ ಏನೆಲ್ಲಾ ಸಂಭಾಷಣೆಗಳು ನೆಡೆದವು ಎಂಬುದ ಅದೆಷ್ಟೇ ತಡಕಾಡಿದರೂ ಮಾರನೇ ದಿನ ಮಧುಮಗನಿಗೆ ನೆನಪಿಗೇ ಬಾರದಿರದಾಗಿದ್ದಿತು.

ದಿನಗಳು ಕಳೆದವು. ಮದುವೆಯ ಆ ದಿನ ಕೊನೆಗೂ ಬಂದೇ ಬಿಟ್ಟಿತು. ಊರಿನ ವಾರದ ಸಂತೆಗಿಂತಲೂ ಹೆಚ್ಚಿನ ಜನ ಮದುಮಗನ ಮನೆಯಲ್ಲಿ ಅಂದು ಜಮಾವಣೆಗೊಂಡಿದ್ದರು. ತಾಲೂಕಿನ MLA ಗಿಂತಲೂ ಮದುಮಗನ ಅಪ್ಪ ಅಂದು ಬ್ಯುಸಿ. ಮಧುಮಗ ಏಳುವುದನ್ನೇ ಕಾಯುತ್ತಿದ್ದ ಎಲ್ಲರು ಆತನ ನಿತ್ಯಕರ್ಮಗಳನ್ನೊಂದು ಒರೆತುಪಡಿಸಿ ಬೇರೆಲ್ಲ ಕಾರ್ಯಚಟುವಟಿಕೆಗಳನ್ನು ತಾವಾಗಿಯೇ ಅವನ ಮೇಲೆ ಮಾಡತೊಡಗಿದರು. ಬೆಳಗಿನಿಂದ ಸಂಜೆಯವರೆಗೂ ಮಧುಮಗ ಕೇವಲ ಆಡುವ ಗೊಂಬೆಯಂತಾಗಿದ್ದ. ಅಪ್ಪ, ಅಮ್ಮ, ಗೆಳೆಯರು, ಸೋದರರು ಅಲ್ಲದೆ ಕ್ಯಾಮೆರಾ ಮ್ಯಾನ್ ಗಳೂ ಸಹ ಹೇಳಿದಡೆ ಕೂರುವುದು, ನಿಲ್ಲುವುದಷ್ಟೇ ಆತನ ಕಾಯಕವಾಗಿದ್ದಿತು. ಅದು ಬಾಡೂಟದ ಮದುವೆಯಾದದ್ದರಿಂದ ನೆರೆದಿದ್ದ ಬಹುಪಾಲು ಜನರಿಗೆ ಜೋಡಿಗೆ ಆಶ್ರಿವದಿಸುವುದಕ್ಕಿಂತ ಹೆಚ್ಚಾಗಿ ಊಟದ ಕೋಣೆಯೊಳಗೆ ಓಡುವುದೇ ಅತಿ ಮಹತ್ವವಾದ ಕಾರ್ಯವಾಗಿದ್ದಿತು. ಆದರಿಂದ ಕಾಟಾಚಾರಕೆಂಬಂತೆ ಮ೦ಟಪದ ಬಳಿಗೆ ಬಂದು ಐವತ್ತೋ ನೂರೊ ರೂಪಾಯಿಗಳನ್ನು ನಾಲ್ಕಾಣೆಯ ಒಂದು ಕಾಗದೊಳಗೆ ತುರುಕಿ ಫೋಟೋ ತೆಗೆಸಿಕೊಳ್ಳಲೂ ನಿಲ್ಲದೆ ತರಾತುರಿಯಲ್ಲಿ ಜಾಗ ಕೀಳುತ್ತಿದ್ದರು. ಕೆಲವರಂತೂ ಸಾಲಿನಲ್ಲಿ ಕಾದು ಕಾದು ಎಲ್ಲಿ ಪಂಕ್ತಿಗಳು ಹೆಚ್ಚಾಗುತ್ತಿದ್ದಂತೆ ಮಾಂಸದ ಚೂರುಗಳ ಸಂಖ್ಯೆಯಲ್ಲೂ ಇಳಿಮುಖ ಕಾಣುತ್ತದೆಂಬ ಲೆಕ್ಕಾಚಾರದೊಂದಿಗೆ ಚಿಂತಾಗ್ರಸ್ತರಾಗಿ ಯಾರು ನೋಡುತ್ತಿಲ್ಲ ಎಂದು ತಮಗೆ ತಾವೇ ಅಂದುಕೊಂಡು ಸಾಲಿನಿಂದ ವಾಪಸ್ಸಾಗಿ ಊಟದ ಮನೆಯನ್ನು ಒಳಹೊಕ್ಕುತ್ತಿದ್ದರು. ಅಂತೂ ಬಂದ ಅಷ್ಟೂ ಜನರನ್ನು ಹಲ್ಲು ಕಿಸಿಯುತ್ತಾ ಮಾತನಾಡಿಸುತ್ತಿದ್ದ ಜೋಡಿಗೆ ಬಾಯೆಲ್ಲ ನೋವು ಶುರುವಾಗಿದ್ದಿತು. ಎರೆಡೆರಡು ಬಾರಿ ಗಡತ್ತಾಗಿ ಬಾರಿಸಿ, ಮದುವೆಗೆ ಬಂದ ಹುಡುಗಿಯರನ್ನು ನಗಿಸಲು ಹರಸಾಹಸ ಪಡುತ್ತಿದ್ದ ಸೋದರ ಪಡೆ ಇತ್ತಕಡೆ ಕೂತಿದ್ದ ತಮ್ಮನ್ನು ಒಂದಿಷ್ಟೂ ಗುರುತಿಡಿಯದಂತೆ ವರ್ತಿಸುತ್ತಿದ್ದದ್ದನ್ನು ಕಂಡು ಮಧುಮಗನಿಗೆ ಸಿಟ್ಟು ನತ್ತಿಗೇರತೊಡಗಿತ್ತು.

ಒಳ ಬರುತಿದ್ದ ಜನಸಂಖ್ಯೆ ಇನ್ನೇನು ಕ್ಷೀಣಿಸ ತೊಡಗಿತ್ತು ಎಂಬಷ್ಟರಲ್ಲಿ ವೀಲ್ ಚೇರಿನಲ್ಲಿ ವ್ಯಕ್ತಿಯೊಬ್ಬನನ್ನು ಕೂರಿಸಿಸಿಕೊಂಡು ಹಿರಿಯರೊಬ್ಬರು ಬರತೊಡಗಿದರು. ಗಡ್ಡವನ್ನು ಬಿಟ್ಟು, ಕಾಯಿಲೆ ಬಿದ್ದವನಂತಿದ್ದ ವ್ಯಕ್ತಿಯ ಕಾಲುಗಳೆರಡೂ ಇರದಾಗಿದ್ದವು. ಮಧುಮಗ ಯಾರೋ ಹುಡುಗಿಯ ಕಡೆಯವರಿರಬೇಕೆಂದು ಎಡಕ್ಕೆ ತಿರುಗಿದರೆ ಆಕೆ ತನಗೆ ಗೊತ್ತಿಲ್ಲವೆಂಬಂತೆ ತಲೆಯಾಡಿಸಿದಳು. 'ಬಡ್ಡಿ ಮಗ್ನೆ, ಡೆಲ್ಲಿಗೋದ್ರೆ ಏನ್ ನಾವೆಲ್ಲಾ ಮರ್ತ್ ಹೋದ್ವಾ ನಿಂಗೆ' ಎನ್ನುತ ಚೇರನ್ನು ತಳ್ಳಿಕೊಂಡು ಬಳಿಗೆ ಬಂದು ಮದುಮಗನ ಕೈಯ್ಯ ಕುಲುಕತೊಡಗಿದ ಆತ. ತನ್ನ ಜೀವಮಾನದಲ್ಲೇ ಮತ್ತೆಂದೂ ಈತನ್ನು ಎದುರಿಸುವ ಶಕ್ತಿಯನ್ನು ಕಳೆದುಕೊಂಡಿದ್ದ ಮಧುಮಗ ಕೆಲ ಕ್ಷಣಗಳ ಕಾಲ ಅವಕ್ಕಾಗಿ ನಿಂತುಬಿಟ್ಟಿದ್ದ. ತನ್ನ ಕೃಷ್ಣ ಕುಚೇಲರ ಜೋಡಿಯಲ್ಲಿ ಕೃಷ್ಣನಾದವನಿವನು! ಕಾಲೇಜು ಕಳೆದು ಕೆಲದಿನಗಳ ನಂತರ ಮನೆಗೆ ಹೋಗುವಾಗ ಹಿಂದಿನಿಂದ ಬಂದ ಬಸ್ಸೊಂದು ಈತನ ಕಾಲಿನ ಮೇಲೆ ಹಾದುಹೋದದ್ದಾಗಿಯೂ, ಎಷ್ಟೇ ಪ್ರಯತ್ನ ಪಟ್ಟರೂ ಕಾಲನ್ನು ಉಳಿಸಿಕೊಳ್ಳಲಾಗಲಿಲ್ಲವೆಂದೂ, ವರ್ಷಗಳ ಕಾಲ ಆಸ್ಪತೆಯಲ್ಲಿಯೇ ಕಳೆಯಬೇಕಾಯಿತೆಂದೂ ಈತನ ವೃತ್ತಾಂತವನ್ನು ವೀಲ್ ಚೇರನ್ನು ತಳ್ಳಿಕೊಂಡು ಬಂದ ಅವರಪ್ಪ ಹೇಳಿದರು. ಅಲ್ಲಿಯವರಿಗೂ ಮಧುಮಗನ ಕೈಯನ್ನೇ ಬಿಗಿದಿಡಿದುಕೊಂಡಿದ್ದ ಆತ ಕೆಮ್ಮಿ ಗಂಟಲನ್ನು ಸರಿಪಡಿಸಿಕೊಳ್ಳುತ್ತಾ ಹುಡುಗಿಗೂ ಮಧುವೆಯ ಶುಭಾಶಯವನ್ನು ಕೋರಿ ತಾನು ತಂದಿದ್ದ ಉಡುಗೊರೆಯ ಪೊಟ್ಟಣವನ್ನು ಇಬ್ಬರಿಗೂ ಒಂದೊಂದು ಕೊಟ್ಟು, ಒಂದೆರೆಡು ಫೋಟೋಗಳನ್ನು ತೆಗೆದುಕೊಂಡು ಅಲ್ಲಿಂದ ಹೊರಟ. ಹೊರಡುವಾಗ 'ಅತ್ತಿಗೆನ ಕರ್ಕೊಂಡು ಮನೆಗ್ ಬಂದ್ ಹೋಗು' ಎಂದ ಅವನ ಧ್ವನಿಯನ್ನು ಕೇಳಿ ಮಧುಮಗನ ಕಣ್ಣಂಚು ಒದ್ದೆಯಾದದ್ದು ಮಾತ್ರ ಯಾರಿಗೂ ತಿಳಿಯಲಿಲ್ಲ. ನನಗೊಬ್ಬ ಆಪ್ತ ಗೆಳೆಯಲಿಲ್ಲ ಎಂದೇ ಎಲ್ಲರೊಟ್ಟಿಗೂ ಹೇಳಿ ಕೊರಗುತ್ತಿದ್ದ ಮಧುಮಗ, ಕಷ್ಟಗಾಲದಲ್ಲೂ ನೀಡಿದ್ದ ಅಷ್ಟು ದೊಡ್ಡ ಮೊತ್ತದ ಹಣವನ್ನು ವಾಪಸ್ಸು ಕೇಳದ ಈತನನ್ನು ನೆನಪಿನ ಮೂಟೆಯಲ್ಲಿ ಕಟ್ಟಿ ಎಲ್ಲೋ ಮೊಲೆಗೆಸೆದಿದ್ದನು. ಮೇಲಾಗಿ ತಾನು ಕರೆಯದಿದ್ದರೂ ಅವನಾಗಿಯೇ ಮದುವೆಗೆ ಬಂದು ಗೆಳೆತನ ಏನೆಂಬುದನ್ನು ತನಗೆ ತೋರಿಸಿಕೊಟ್ಟ ಎಂದುಕೊಳ್ಳುತ್ತಾನೆ. ನಾಚಿಕೆಯಿಂದ ತಗಿದ್ದ ಮಧುಮಗನ ತಲೆ ಮೇಲೇಳಲು ತಡಕಾಡುತ್ತಿರುತ್ತದೆ. ಹಣವೆಂಬ ಮಾಹೆ ಗೆಳೆತನದಲ್ಲಿ ಎಂದಿಗೂ ಬರಬಾರದು ಎಂದು ಕೊಳ್ಳುತ್ತಾನೆ. ಅಲ್ಲದೆ ಆತನ ಆ ಐವತ್ತು ಸಾವಿರಕ್ಕೆ ಮತ್ತೂ ಐವತ್ತು ಸಾವಿರ ಸೇರಿಸಿ ಯಾರಿಗೂ ತಿಳಿಯದಂತೆ ಅವನಿಗೆ ತಲುಪಿಸಬೇಕೆಂದು ಅಂದುಕೊಳ್ಳುತ್ತಾನೆ. ತನಗೊಬ್ಬ ಗೆಳೆಯನೆಂಬುವನು ಇದ್ದಾನೆ ಎಂಬ ಸಮಾಧಾನವೇ ಅವನಿಗೆ ಕೋಟಿ ಗಳಿಸಿದಕ್ಕಿಂತಲೂ ಮಿಗಿಲಾಗಿರುತ್ತದೆ.

ಇನ್ನೇನು ಜೋಡಿ ಊಟದ ಹಾಲಿನೊಳಗೆ ಹೋಗಬೇಕು ಎನ್ನುವಷ್ಟರಲ್ಲಿ 'ಅವಳು' ಹತ್ತಿರ ಬಂದು ನಿಂತಿರುತ್ತಾಳೆ! ಮಧುಮಗನಿಗಂತೂ ಪರಮಾಶ್ಚರ್ಯ. ತನ್ನ ಕಣ್ಣುಗಳನ್ನು ಆತನಿಗೆ ನಂಬಲೇ ಆಗಲಿಲ್ಲ. ತನ್ನ ಬಾಲ್ಯದಲ್ಲಿ ಕಳೆದುಹೋಗಿದ್ದ ಆಟಿಕೆಯೊಂದು ಇಂದು ಪುನ್ಹ ಸಿಕ್ಕಂತ ಭಾವ! ತಾನು ದೆಹಲಿಯಲ್ಲಿ ಕೊನೆ ಬಾರಿ ನೋಡಿದಕ್ಕೂ ಇಂದಿಗೂ ಬಹಳಾನೇ ವ್ಯತ್ಯಾಸ ಆಕೆಯಲ್ಲಿ ಕಾಣುತ್ತಾನೆ. ಗುಳಿ ಬಿದ್ದ ಕಣ್ಣುಗಳು, ಸಣಕಲಾಗಿ ಕಪ್ಪಾದ ದೇಹಸಿರಿಯನ್ನು ಕಂಡು ಒಮ್ಮೆಲೇ ಈಕೆಯನ್ನು ಗುರುತಿಡಿಯುವುದು ಕಷ್ಟವೆನಿಸುತ್ತದೆ. ಆದರೂ ಆಕೆಯ ಸೌಂದರ್ಯ ಸಿರಿಗೆ ಅಲ್ಲಿ ನೆರೆದಿದ್ದ ಯಾರೊಬ್ಬರೂ ಸರಿಸಾಟಿಇರಲಿಲ್ಲ ಎನ್ನಬಹುದು. ಆಕೆ ಸ್ಟೇಜಿನ ಮೇಲೆ ಬಂದಾಗಲಿಂದ ತಾವು ಪಟಾಯಿಸಲು ಹರಸಾಹಸ ಪಡುತಿದ್ದ ಹುಡುಗಿಯರನ್ನು ಬಿಟ್ಟು ಇತ್ತ ಕಡೆಯೇ ತಮ್ಮ ಬಾಯಿಗಳನ್ನು ಊರಗಲ ಕಿಸಿದುಕೊಂಡು ನೋಡುತಿದ್ದ ಮಧುಮಗನ ಸೋದರ ಸಂಬಂಧಿಗಳೇ ಅದಕ್ಕೆ ಸಾಕ್ಷಿ. ‘ಮೈ ಬೆಸ್ಟ್ ಫ್ರೆಂಡ್’ ಎನ್ನುತ್ತಾ ಆಕೆಯನ್ನು ತನ್ನ ಭಾವಿ ಹೆಂಡತಿಗೆ ಪರಿಚಯಿಸುತ್ತಾನೆ. ಆಕೆ ಈಗ ತಾನು ಊರಿನ ಶಾಲೆಯಲ್ಲಿ ಶಿಕ್ಷಕಿಯಾಗಿಯೂ ಹಾಗು ಬಿಡುವಿನ ವೇಳೆಯಲ್ಲಿ ವ್ಯವಸಾಯವನ್ನು ಮಾಡಿಕೊಂಡಿರುವುದಾಗಿಯೂ, ಸಮಯ ಮಾಡಿಕೊಂಡು ಒಮ್ಮೆ ಬಂದೋಗಬೇಕೆಂದು ಅವಳು ಹೇಳುತ್ತಾಳೆ. ಆಕೆಯ ಮದುವೆ ಆಗಿದೆಯೇ ಎಂಬ ಪ್ರೆಶ್ನೆಯನ್ನು ಕೇಳಲು ಮಧುಮಗನಿಗೆ ಧೈರ್ಯ ಸಾಲದಾಗುತ್ತದೆ. ಅಲ್ಲಿಯವರೆಗೂ ಕಾಣೆಯಾಗಿದ್ದ ತನ್ನ ಸೋದರರ ಗುಂಪು ಇವರಿಬ್ಬರ ಸಂಭಾಷಣೆ ಮುಗಿಯುವುದನ್ನೇ ಕಾಯುತ್ತಾ 'ಗಿಫ್ಟ್ ಏನೂ ಇಲ್ವಾ' ಎಂದು ಜೋರಾಗಿ ಅರಚುತ್ತಾರೆ. 'ನೋ ಗಿಫ್ಟ್ಸ್ ಇನ್ ಫ್ರೆಂಡ್ಶಿಪ್' ಎಂದು ನಗುತ್ತಾ ಹೊರಡಲು ಅಣಿಯಾದ ಆಕೆಯನ್ನು ಮಧುಮಗ ತಾನು ಆಕೆಯನ್ನು ಮದುವೆಗೆ ಕರೆಯಲು ಮರೆತೋಯಿತೆಂದು ನಟಿಸುತ್ತಾನೆ. ಆಕೆ ನಗುತ್ತಾ 'ಐ ನೋ, ನಿನ್ನ ಕಸಿನ್ಸ್ ಎಲ್ಲಾರು ಕಾಲ್ ಮಾಡಿ ರಿಕ್ವೆಸ್ಟ್ ಮಾಡ್ಕೊಂಡಿದಕ್ಕೆ ನಾನು ಬಂದೆ' ಎಂದಳು. ಕೂಡಲೇ ಆಶ್ಚರ್ಯದಿಂದ ತನ್ನ ಸಹೋದರರ ಗುಂಪನ್ನು ನೋಡತೊಡಗಿದ ಮಧುಮಗನಿಗೆ ಹಾಗಾದರೆ ಮೊದಲು ಬಂದ ಗೆಳೆಯನನ್ನೂ ಇವರೇ ಕರೆದಿರಬೇಕು ಎಂದುಕೊಳ್ಳುತ್ತಾನೆ. ಅದ್ಯಾವಾಗ ಇವರಿಬ್ಬರ ಬಗ್ಗೆ ವಾನರ ಪಡೆಗೆ ಹೇಳೇದ್ದೇನೋ ಎಂದುಕೊಂಡನು. ಒಟ್ಟಿನಲ್ಲಿ ಗೆಳೆಯರಿಗಿಂತ ಮಿಗಿಲಾಗಿ ತನ್ನ ಜೀವನದ ಬಹುಮುಖ್ಯ ಇಬ್ಬರು ವ್ಯಕ್ತಿಗಳನ್ನು ಮದುವೆಗೆ ಕರೆತಂದು ಈ ಕೆಲಕ್ಷಣಗಳನ್ನು ಅಮರವಾಗಿಸಿದ ಆ ವಾನರರ ಗುಂಪಿಗೆ ಮನದಲ್ಲೇ ಒಂದು ದೊಡ್ಡ ಥ್ಯಾಂಕ್ಸ್ ಅನ್ನು ಹೇಳಿಕೊಳ್ಳುತ್ತಾನೆ. ಬಾಯಿಬಿಟ್ಟು ಅವರ ಉಪಕಾರವನ್ನು ಕೊಂಡಾಡಿದರೆ ತನ್ನ ಮೊದಲ ರಾತ್ರಿ ಎಂಬುದನ್ನೂ ಲೆಕ್ಕಿಸದೆ ಮತ್ತೊಮ್ಮೆ ಕಿಡ್ನಾಪ್ ಮಾಡಿ ಬಾರಿನೆಡೆ ಕೊಂಡೊಯ್ಯಬಲ್ಲ ಆಸಾಮಿಗಳಿವರು ಎನ್ನುವುದು ಆತನಿಗೆ ತಿಳಿದಿರುತ್ತದೆ. ಸರಿ 'ಅವಳ'ನ್ನು ಬೀಳ್ಕೊಡುವ ಮುನ್ನ ‘ಒಂದು ಫೋಟೋ’ ಎಂದ ಮಧುಮಗ ಅವಳನ್ನು ತನ್ನ ಬಳಿಗೆ ಕರೆದು ನಿಲ್ಲಿಸಿಕೊಳ್ಳುತ್ತಾನೆ. ಫೋಟೋದಲ್ಲಿ ಕೇವಲ ಮೂವರೇ ಬಂದರೆ ಸರಿಯಿರುವುದಿಲ್ಲ ಯಾರಾದರೂ ಒಂತಿಷ್ಟು ಜನ ಬನ್ನಿ ಎಂದ ಫೋಟೋಗ್ರಾಫರ್ಗಳ ಕೋರಿಗೆ ಓಗೊಟ್ಟ ಮಧುಮಗನ ಸಹೋದರರ ಗುಂಪು ತಾವೂ ಸಹ ಅದನ್ನೇ ಬಯಸುತಿದ್ದದೆಂದು ಒಬ್ಬೊಬ್ಬರಾಗೆ ಬಂದು ಜಮಾವಣೆಗೊಳ್ಳುತ್ತಾರೆ. ಆದರೆ, ಎಲ್ಲರೂ ಮಧುಮಗನ ಬಲಬದಿಗೆ 'ಅವಳ' ಪಕ್ಕದಲ್ಲೇ ನಿಲ್ಲತೊಡಗುತ್ತಾರೆ. ಇದೇನಾಯಿತಪ್ಪ ಎನ್ನುತ್ತಾ ಫೋಟೋಗ್ರಾಫೇರ್ಸ್ ಗಳು ತಲೆಕೆರೆದುಕೊಳ್ಳಲು ಶುರುಮಾಡಿದರು. ಮಧುಮಗನ ಬಲಬದಿ ರಾಣಿಚೆನ್ನಮ್ಮ ಎಕ್ಸ್ಪ್ರೆಸ್ ರೈಲು ಬಂದು ನಿಂತಂತಿತ್ತು. ಪರಿಸ್ಥಿತಿಯನ್ನು ಅರಿತ ಮಧುಮಗ ಕೆಲವರನ್ನು ಇತ್ತಲೂ ಬರುವಂತೆ ಕೇಳಿಕೊಂಡನು. ಕೂಡಲೇ ನೀನು ನೀನೆಂಬ ಉದ್ಗಾರದೊಂದಿಗೆ ಸಣ್ಣದಾದ ಜಟಾಪಟಿ ಗುಂಪಿನೊಳಗೇ ನೆಡೆಯತೊಡಗಿತು. ಕೊನೆಗೆ ಮದುಮಗನ ಅಪ್ಪ 'ಏನಾಯಿತರ್ಲಾ ನಿಮ್ಗೆ' ಎಂದು ಅಬ್ಬರಿಸಿದಾಗಲೇ ಕೆಲವರು ಮಧುಮಗನ ಎಡಕ್ಕೂ ಇನ್ನು ಕೆಲವರು ಆತನ ಕಾಲಿನ ಬಳಿ ಬಂದು ಕೂತು ಬಿಟ್ಟರು. ಇನ್ನು ಕೆಲವರು ಕೂತರೆ ಚೆನ್ನಾಗಿರುವುದಿಲ್ಲವೆಂದು ಮಧುಮಗನನ್ನೇ ಹಿಂದಕ್ಕೆ ದಬ್ಬಿ ವಿವಿಧ ಬಂಗಿಯಲ್ಲಿ 'ಅವಳೊಟ್ಟಿಗೆ' ಪೋಸನ್ನು ಕೊಡಲು ಪ್ರಯತ್ನಿಸುತ್ತಿದ್ದರು.ಕಾಲ ಕೈಜಾರುವುದರೊಳಗೆ ತಮ್ಮ ಕೆಲಸವನ್ನು ಮುಗಿಸಬೇಕೆಂದುಕೊಂಡ ಫೋಟೋಗ್ರಾಫರ್ಸ್ ಗಳು ಒಂದೆರೆಡು ಫೋಟೋಗಳನ್ನು ತೆಗೆಯುವ ಶಾಸ್ತ್ರವನ್ನು ಮಾಡಿಯೇಬಿಟ್ಟರು. ಕಷ್ಟಪಟ್ಟು ಹುಡುಕಿದರೂ ಮಧುಮಗನ ಮುಖಚರ್ಯೆ ಆ ಅಮೂಲ್ಯ ಫೋಟೋದಲ್ಲಿ ಇಂದಿಗೂ ಗೋಚರಿಸುವುದಿಲ್ಲ!




Sunday, October 1, 2017

ಕುಸ್ತಿ ಪಂದ್ಯದ ದಂತಕಥೆ : ದಿ ಗ್ರೇಟ್ ಗಾಮ!

ಕುಸ್ತಿ ಪಂದ್ಯದ ಇತಿಹಾಸದಲ್ಲಿ ಸೋಲಿಲ್ಲದ ಸರದಾರನೊಬ್ಬನಿದ್ದ. ಭಾರತ, ಇಂಗ್ಲೆಂಡ್, ಫ್ರಾನ್ಸ್ ನಷ್ಟೇ ಅಲ್ಲದೆ ಇಡೀ ಭೂ ಮಂಡಲದಲ್ಲೇ ಆತ ಒಮ್ಮೆಯೂ ಸೋತ ಪುರಾವೆಗಳಿಲ್ಲ! ಬರೋಬ್ಬರಿ 50 ವರ್ಷಗಳಗಾಲ ಅಜೇಯನಾಗಿ ವಿಶ್ವದೆಲ್ಲೆಡೆ ರಾರಾಜಿಸಿದ್ದ ಆ ಕುಸ್ತಿಪಟು ಸ್ವಾತಂತ್ರ್ಯಪೂರ್ವ ಭಾರತದ ಹೆಮ್ಮೆಯ ಹೆಸರು. ಒಮ್ಮೆ ಬರೋಬ್ಬರಿ 20 ಕುಸ್ತಿಪಟುಗಳನ್ನು ಒಮ್ಮೆಲೇ ಎದುರಿಸಬಲ್ಲೆ ಎಂದು ಹೇಳಿದರೂ ಒಬ್ಬನೂ ಆತನ ಬಳಿಗೆ ಸುಳಿದಿರಲಿಲ್ಲ!! ಅಂತಹ ಒಂದು ಭಯಂಕರ ಭಯವನ್ನು ಹೊತ್ತಿಸಿ ತಿರುಗುತ್ತಿದ್ದ ಆ ವ್ಯಕ್ತಿಯ ಹೆಸರೇ 'ದಿ ಗ್ರೇಟ್ ಗಾಮ' ಅಥವಾ ಕುಸ್ತಿ ಇತಿಹಾಸದ ದಂತಕತೆ ಗುಲಾಮ್ ಮೊಹಮ್ಮೆದ್ ಬಕ್ಷ್.

1878 ಮೇ 22 ರಲ್ಲಿ ಪಂಜಾಬಿನ ಅಮೃತಸರದಲ್ಲಿ ಜನಿಸಿದ 5 ಅಡಿ 7 ಅಂಗುಲ ಉದ್ದದ ಗಾಮ ಬೆಳಕಿಗೆ ಬಂದದ್ದು ಅಂದಿನ ಕುಸ್ತಿ ಚಾಂಪಿಯನ್ ಎನಿಸಿದ್ದ 7 ಅಡಿ ಉದ್ದದ ರಹೀಮ್ ಬಕ್ಷ್ ಎಂಬ ಕುಸ್ತಿಪಟುವಿಗೆ ಸವಾಲೆಸೆದಾಗ. ಪ್ರಸ್ತುತ ಟೀಮ್ ಇಂಡಿಯ ಕ್ರಿಕೆಟ್ ತಂಡವನ್ನು ಚೀನೀ ತಂಡವೊಂದು ಕೆದಕಿದಂತೆ. ತನ್ನ ಹತ್ತನೇ ವಯಸ್ಸಿಗಾಗಲೇ ಕುಸ್ತಿಯ ಅಖಾಡಕ್ಕಿಳಿದು ಕೊಂಚ ಮಟ್ಟಿನ ಹೆಸರನ್ನು ಗಳಿಸಿದ್ದ ಗಾಮ, ರಹೀಮ್ ಬಕ್ಷ್ ಎಂಬ ದೈತ್ಯನನ್ನು ಎದುರಾಕಿಕೊಂಡದ್ದು ಅಂದು ಹಲವರಿಗೆ ತಮಾಷೆಯ ವಿಚಾರವಾಗಿದ್ದಿತು. ಅಲ್ಲದೆ ಆಗ ಗಾಮನ ವಯಸ್ಸೂ ಕೇವಲ 17 ವರ್ಷಗಳು! ಆದರೆ ಮೀಸೆ ಚಿಗುರದ ಪೋರನೊಬ್ಬ ದೇಶೀ ಕುಸ್ತಿ ಚಾಂಪಿಯನ್ ಒಬ್ಬನೊಟ್ಟಿಗೆ ಸೆಣೆಸುವುದೇ ಅಂದು ಮಹಾ ಸುದ್ದಿಯಾಗಿದ್ದಿತು. ಅಲ್ಲದೆ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ ಸುದ್ದಿಯಂತೂ ಕೆಲವರಿಗೆ ತಮ್ಮ ಕಿವಿಯನ್ನೇ ನಂಬದಂತೆ ಮಾಡಿತ್ತು. ಹೌದು, ಅಂದು ಗಾಮ ರಹೀಮ್ ಬಕ್ಷ್ ನನ್ನು ಸೋಲಿಸಲಾಗದಿದ್ದರೂ ಆತನ ಎದಿರು ಸೋಲೊಪ್ಪಿಕೊಳ್ಳಲಿಲ್ಲ! ಇಷ್ಟೇ ಸಾಕಾಗಿತ್ತು ಅಂದು ಗಾಮ ದೇಶದ ಕುಸ್ತಿ ವಲಯದಲ್ಲಿ ಹೆಸರು ಗಳಿಸಿಕೊಳ್ಳಲು. ಅಲ್ಲಿಂದ ಮುಂದೆ ದೇಶದ ದೊಡ್ಡ ದೊಡ್ಡ ಕಲಿಗಳನ್ನು ಅಡ್ಡಡ್ಡ ಮಲಗಿಸತೊಡಗಿದ ಈ ಭೂಪ ಮುಂದೊಂದು ದಿನ ಅದೇ ಏಳು ಅಡಿಯ ರಹೀಮ್ ಬಕ್ಷ್ ನನ್ನೂ ಸೋಲಿಸಿಯೇ ತೀರುತ್ತಾನೆ. ಅಲ್ಲಿಂದ ಮುಂದೆ ಅಖಂಡ ಭಾರತದಲ್ಲಿ ಗಾಮನನ್ನು ಸೋಲಿಸುವ ಮತ್ತೊಬ್ಬ ಕಾಣಲಿಲ್ಲ. ಮುಂದೆ ಗಾಮನ ಪಯಣ ದೂರದ ಇಂಗ್ಲೆಂಡ್ ಕಡೆಗೆ. ಬಿಳಿಯರ ಶಕ್ತಿ ಹಾಗು ಸೊಕ್ಕನ್ನೂ ನೆಲಕುರುಳಿಸುವ ಎಡೆಗೆ.

ಆದರೆ ಲಂಡನ್ ನಗರಿಯಲ್ಲಿ ಕುಸ್ತಿಯ ಅಖಾಕ್ಕಿಳಿಯುವುದು ಅಷ್ಟೇನೂ ಸುಲಭವಾಗಿರಲಿಲ್ಲ. ಪರಿಣಾಮ ಗಾಮ ತನ್ನೊಡನೆ ಸೆಣೆಸಲು ಸುತ್ತೋಲೆಯೊಂದನ್ನು ಹೊರಡಿಸಬೇಕಾಯಿತು. ಆದರೆ ಸುಖಾಸುಮ್ಮನೆ ಕುಸ್ತಿ ಪಂದ್ಯಕ್ಕೆ ಬಾ ಎಂದರೆ ಬಂದುಬಿಡುವರಾಗಿರಲಿಲ್ಲ ಬಿಳಿಯ ದೈತ್ಯರು. ಹಾಗಾಗಿ ಗಾಮ ಅವರುಗಳೆಲ್ಲರಿಗೂ ಒಂದು ಸವಾಲನ್ನೆಸೆಯುವ ಸುತ್ತೋಲೆಯನ್ನು ಹೊರಡಿಸುತ್ತಾನೆ. 'ಎಷ್ಟೇ ತೂಕದ, ಯಾವುದೇ ವರ್ಗದ ಯಾವ ಕುಸ್ತಿಪಟುವೆ ಆಗಲಿ, ಅವರನ್ನು ಕೇವಲ ಮೂವತ್ತು ನಿಮಿಷದೊಳಗೆ ಅಂತಹ ಮೂವರು ಪಟುಗಳನ್ನು ಸೋಲಿಸುವುದಾಗಿ' ಹೇಳುತ್ತಾನೆ. ಅಷ್ಟೆಲ್ಲಾ ಸಾಮರ್ಥ್ಯದ ಜೀವವೊಂದು ಬದುಕಿರಲೇ ಸಾಧ್ಯವಲ್ಲ ಎಂದರಿತಿದ್ದ ಅಲ್ಲಿನ ಕುಸ್ತಿಪಟುಗಳು ಈ ಘೋಷಣೆಯನ್ನು ಸುಳ್ಳುವಾರ್ತೆ ಎಂಬಂತೆ ಅಲ್ಲಗೆಳೆಯುತ್ತಾರೆ! ಆದರೆ ಕಳೆಗುಂದದ ಗಾಮ ಈ ಬಾರಿ ನೇರವಾಗಿ ಒಂದೆರೆಡು ಕುಸ್ತಿ ಪಟುಗಳನ್ನೇ ಆರಿಸಿಕೊಂಡು ಸವಾಲನ್ನೆಸೆಯುತ್ತಾನೆ. ಅವರನ್ನು ಈತ ಸೋಲಿಸುವುದಾಗಿಯೂ ಇಲ್ಲವೇ ಈತನೇ ಖುದ್ದಾಗಿ ಪ್ರಶಸ್ತಿಯ ಮೊತ್ತದಷ್ಟೇ ಹಣವನ್ನು ಅವರಿಗೆ ನೀಡುವುದಾಗಿ ತಿಳಿಸುತ್ತಾನೆ. ಇಂತಹ ನೇರ ಸವಾಲಿಗೆ ಅಣಿಯಾದ ಮೊದಲ ಕುಸ್ತಿಪಟು ಬೆಂಜಮಿನ್ ರೋಲರ್. ಅಂದು ನೆಡೆದ ಕಾಳಗದಲ್ಲಿ ಕೇವಲ 100 ಸೆಕೆಂಡ್ ನೊಳಗೆ ಬೆಂಜಮಿನ್ ರೋಲರ್ ಗಾಮ ನ ವಿರುದ್ಧ ಸೋಲನೊಪ್ಪಿಕೊಂಡಿರುತ್ತಾನೆ! ಕೂಡಲೇ ಸುದ್ದಿ ನಗರದ ಎಲ್ಲಡೆ ಹಬ್ಬಿದ್ದರಿಂದ ಉತ್ಸಾಹಗೊಂಡ ಇತರ ಕುಸ್ತಿಪಟುಗಳು ಮಾರನೇ ದಿನ ಇವನ ವಿರುದ್ಧ ಸೆಣೆಸಲು ಅಣಿಯಾಗುತ್ತಾರೆ. ಅಂದು ಗಾಮ ಅಲ್ಲಿಗೆ ಬಂದಿದ್ದ ಅಷ್ಟೂ ಜನ ಕುಸ್ತಿಪಟುಗಳನ್ನು ಒಂದೇ ದಿನದಲ್ಲಿ ಸದೆಬಡಿದಿರುತ್ತಾನೆ. ಅವರುಗಳ ಸಂಖ್ಯೆ ಬರೋಬ್ಬರಿ 12!!

ಅಲ್ಲಿಂದ ಮುಂದೆ ಗಾಮನ ನೆಡೆ ಆನೆಯ ನೆಡೆಯಾಗಿ ಸಾಗುತ್ತದೆ. ವಿಶ್ವದ ಯಾವುದೇ ಮೂಲೆಯಿಂದಲೂ ಯಾರೊಬ್ಬ ಕುಸ್ತಿಪಟುವೂ ಈತನನ್ನು ಸೋಲಿಸುವುದು ಇರಲಿ ಎದುರು ಹಾಕಿಕೊಳ್ಳಲೂ ಅಂಜುತ್ತಿದ್ದರು. ಅಂದಿನ ವಿಶ್ವ ಚಾಂಪಿಯನ್ ಆಗಿದ್ದ ಸ್ಟ್ಯಾನಿಸ್ಲಾಸ್ಸ್ ಜ್ಬೈಸ್ಕೊ ನನ್ನು ಗಾಮ ಎರಡು ಘಂಟೆ ಮುವ್ವತೈದು ನಿಮಿಷಗಳ ಕಾಲ ಮಕಾಡೆ ಮಲಗಿಸಿದ್ದು ಇಂದಿಗೂ ಕೇಳುಗರ ಎದೆಯನ್ನು ನಡುಗಿಸದಿರದು.

ಗಾಮನ ದಿನನಿತ್ಯದ ಅಭ್ಯಾಸವೇನಾದರೂ ಕೇಳಿದರೆ ಅಬ್ಬಬ್ಬ ಎನಿಸದಿರದು ನಮಗೆ. ಬರೋಬ್ಬರಿ 5000 ಸ್ಸ್ಕ್ವಾಟ್ಸ್ ಹಾಗು 3000 ಪುಷಪ್ಸ್ ದಿನವೊಂದಕ್ಕೆ! ಇನ್ನು 7.5 ಲೀಟರ್ ನಷ್ಟು ಹಾಲು ಹಾಗು 1 ಕೆಜಿಯಷ್ಟು ಬಾದಾಮಿ ಈತನ ಶಕ್ತಿಯನ್ನು ಹೆಚ್ಚಿಸುತ್ತಿದ್ದವು. ಇಂತಹ ಒಬ್ಬ ಮಹಾಕಲಿಯ ಪ್ರಭಾವ ವಿಶ್ವದೆಲ್ಲೆಡೆ ಪಸರಿಸಿತ್ತು ಎಂಬುದ್ದಕ್ಕೆ ಮಾರ್ಷಲ್ ಆರ್ಟ್ಸ್ ಸ್ಪೆಷಲಿಸ್ಟ್ 'ಬ್ರೂಸ್ ಲಿ' ಯೇ ಒಂದು ಉತ್ತಮ ಉದಾಹರಣೆ. ಬ್ರೂಸ್ ಲಿ ಗಾಮನ ತರಬೇತಿಯಿಂದ ಉತ್ತೇಜನಗೊಂಡಿದ್ದನಲ್ಲದೆ ತನ್ನ ತರಬೇತಿಗಳಲ್ಲೂ ಕೆಲವೊಂದನ್ನು ಬೆರೆಸಿಕೊಳ್ಳುತ್ತಿದ.

ಇಂತಹ ಒಬ್ಬ ವ್ಯಕ್ತಿ ಬದುಕಿದ್ದ ಎಂದರೆ ನಂಬುವುದೇ ಅಸಾಧ್ಯ. ಯಾವುದೇ ಕ್ರೀಡೆಯಾಗಲಿ ಅದರಲ್ಲಿ ಯಾರೊಬ್ಬ ಮಹಾನ್ ಎಂದೆನಿಸಿಕೊಂಡಿದ್ದರೂ ತನ್ನ ವೃತ್ತಿಜೀವನದ ಆದಿಯಲ್ಲೋ ಅಥವಾ ಅಂತ್ಯದಲ್ಲೋ ಎಲ್ಲದರೊಮ್ಮೆ ಸೋತೆ ಸೋತಿರುತ್ತಾರೆ. ಸೋಲುವುದು ಅನಿವಾರ್ಯವಿಲ್ಲದಿದ್ದರೂ ನಮಗೆ ಅಂತಹ ಒಂದೂ ಪುರಾವೆಗಳು ಇತರೆ ಕ್ರೀಡೆಗಳಲ್ಲಿ ಕಾಣಲು ಸಿಗದು. ಆದರೆ ಗಾಮ ತಾನು ಆಡಿದ ಅಷ್ಟೂ ವೃತ್ತಿಪರ ಕುಸ್ತಿಯಲ್ಲಿ ಒಮ್ಮೆಯೂ ಸೋಲನ್ನು ಕಾಣದಿರುವುದು ನಿಜವಾಗಿಯೂ ಆಶ್ಚರ್ಯಕರ. 1200 ಕೆಜಿಯ ಕಲ್ಲೊಂದನ್ನು ಎತ್ತಬಲ್ಲ ವ್ಯಕ್ತಿಯೊಬ್ಬನಿದ್ದ ಎಂದರೆ ಅದು ಗಾಮ ಮಾತ್ರ. ಆತ ಎತ್ತಿದ್ದ ಅಷ್ಟು ದೊಡ್ಡ ಕಲ್ಲು ಇಂದಿಗೂ ಬರೋಡ ಮ್ಯೂಸಿಯಂ ನಲ್ಲಿ ಇರಿಸಲಾಗಿದೆ. ವಿಶ್ವವನ್ನೇ ತನ್ನ ಕದಂಭ ಬಾಹುಗಳಿಂದ ಬಗ್ಗು ಬಡಿದ ಗಾಮನ ಇರುವಿಕೆಗೆ ಅದು ಸಾಕ್ಷಿಯಾಗಿದೆ.