Saturday, July 4, 2020

ಪಯಣ - 10

ತಿಳಿದ ಮಟ್ಟಿನ ಕನ್ನಡ ವ್ಯಾಕರಣಗಳ ಜ್ಞಾನದಿಂದಲೇ ಕಾದಂಬರಿಯ ಓದಿನಲ್ಲಿ ಮಗ್ನಳಾಗಿದ್ದ ಅಮೇಲಿಗೆ ಬೆಂಬಿಡದೆ ಮೂಡುತ್ತಿದ್ದ ಮೊಬೈಲಿನ ಸದ್ದು ಎಚ್ಚರಿಸಿತು. ಅಷ್ಟರಲ್ಲಾಗಲೇ ನಾಲ್ಕೈದು ಬಾರಿ ಕಾಲನ್ನು ಡಿಸ್ಕನೆಕ್ಟ್ ಮಾಡಿದರೂ ಪುನ್ಹ ರಿಂಗಣಿಸುತ್ತಿದ್ದ ಫೋನನ್ನು ಸಿಟ್ಟಿನಿಂದ ಕೈಗೆತ್ತುಕೊಂಡು 'ಹಲೋ .. ಬಡ್ಡಿಮಗ್ನೆ .. ರಾತ್ರಿ ಆದ್ರೂ ಏನೋ ನಿಂದು ಪ್ರಾಬ್ಲಮ್ಮು' ಎಂದು ಚೀರಿದಳು. ಚೀರುವಿಕೆಯ ಆ ರಭಸಕ್ಕೆ ಆಕೆಯ ಮುಂಗೂದಲು ಗಾಳಿಯಲ್ಲಿ ಹಾರುತ್ತ ಕೆಳ ಬೀಳುತ್ತಿತ್ತು.

'ಒಹ್ .. ಮೈ .. ಗಾಡ್ .. ಏನೇ ಅಮೆಲಿ ಇಷ್ಟ್ ಚೆನ್ನಾಗಿ ಬೈಯೋದನ್ನ ಯಾವಾಗ ಕಲ್ತೆ..?' ಎಂದು ಅತ್ತಕಡೆಯಿಂದ ನಗುತ್ತ ಹೇಳಿದ ರಾಜ್. ದೂರದೂರಿನಲ್ಲಿ ಕನ್ನಡದ ಬೈಗುಳವೂ ಆತನಿಗೆ ಎಲ್ಲಿಲ್ಲದ ಸಂತೋಷವನ್ನು ನೀಡಿತಲ್ಲದೆ ಆಕೆ ಪುನಃ ಮತ್ತೇನಾದರೂ ಬೈಯಲಿ ಎಂದು ಕಾಯತೊಡಗಿದ.

'ರಾಜ್ .. ಡೋಂಟ್ ಟೆಸ್ಟ್ ಮೈ ಪೇಶೆನ್ಸ್ .. ಐಮ್ ರೀಡಿಂಗ್ ಎ ಕನ್ನಡ ನಾವೆಲ್ .. ಪ್ಲೀಸ್ ಲೀವ್ ಮೀ ಅಲೋನ್' ಎಂದು ಫೋನನ್ನು ಕಟ್ ಮಾಡಿ ತನ್ನ ಬೆಡ್ಡಿನ ಪಕ್ಕಕ್ಕೆ ಎಸೆದಳು. ಕೆಲ ಸೆಕಂಡುಗಳ ಒಳಗೆಯೇ ಪುನ್ಹ ರಿಂಗಣಿಸಿದ ಫೋನನ್ನು ಪುನಃ ಕೈಗೆತ್ತುಕೊಂಡು 'ರಾಜ್ .. ವಾಟ್ ಹೆಪ್ಪೆನ್ಡ್ .. ನಾಳೆ ಮಾತಾಡಿದ್ರೆ ಆಗೋಲ್ವಾ . ಪ್ಲೀಸ್..' ಎಂದು ಶಾಂತವಾಗಿಯೇ ಹೇಳಿದಳು. ಆಕೆ ಹಾಗೆಂದು ಇನ್ನೇನು ಫೋನನ್ನು ಬದಿಗೆಸೆಯಬೇಕು ಎನ್ನುವಷ್ಟರಲ್ಲಿ ರಾಜ್ ಮಾತನಾಡಿ,

'ಅಮಿ .. ಏನಿಲ್ಲ .. ಇಶಾ ಎಲ್ಲಿದ್ದಾಳೆ .. ಆಗಿಂದ ಫೋನ್ ಮಾಡ್ತಾ ಇದ್ದೀನಿ . ಪಿಕ್ ಮಾಡ್ತಾ ಇಲ್ಲ' ಎಂದು ಕೇಳಿದನು.

'ಅವ್ಳು ಕೃಷ್ಣನ ಟೆಂಪಲ್ಗೆ ಹೋಗಿದ್ದಾಳೆ..ಮೇ ಬಿ ಅಲ್ಲೇ ಇರ್ಬೇಕು..' ಎಂದು ಮುಂದೇನೋ ಕೇಳುವಷ್ಟರಲ್ಲಿಯೇ ಅತ್ತ ಕಡೆಯಿಂದ ಕಾಲ್ ಡಿಸ್ಕನೆಕ್ಟ್ ಟೋನ್ ಬರತೊಡಗಿತು. ಹೆಚ್ಚೇನೂ ತಲೆ ಕೆಡಿಸಿಕೊಳ್ಳದೆ ಆಮೇಲಿ ತನ್ನ ಓದಿನಲ್ಲಿ ಮುಂದುವರೆದಳು. ಆ ರಾತ್ರಿಯೇ ಅಷ್ಟೂ ಪುಟಗಳನ್ನು ಓದೇ ತೀರಬೇಕೆಂಬ ಅಧಮ್ಯ ಆಸೆಯಿಂದ.



*********************************************************************************



ಪುಟ 51

'ಯಾಕಪ್ಪ ಮರಿ .. ಏನ್ ಸಮಾಚಾರ .. ಊಟ , ತಿಂಡಿ , ನಿದ್ದೆ ಎಲ್ಲ ಸರಿಯಾಗ್ ಮಾಡ್ತಾ ಇಲ್ವಂತೆ.. ಏನ್ ವಿಷ್ಯ' ತನ್ನ ಸಹಜ ಮೂದಲಿಸುವ ಧ್ವನಿಯಲ್ಲಿ ರೂಮಿನೊಳಗೆ ಬರುತ್ತಾ ಕೇಳಿದ ಲೋಕೇಶ. ಪ್ರತ್ಯುತ್ತರವಾಗಿ ಆದಿ ಆತನನ್ನು ಒಂದೆರಡು ಕ್ಷಣ ಗುರಾಯಿಸಿ ಸುಮ್ಮನಾದ. ಹಾಡುಗಳ ಸಂತೆಯಲ್ಲಿ ನಾನು ನನ್ನದೇ ಲೋಕವೊಂದರಲ್ಲಿ ಮುಳುಗಿಹೋಗಿದ್ದೆ. ಶಾಂತವಾಗಿದ್ದ ರೂಮಿನ ಏಕಾಂತತೆಯನ್ನು ಲೊಕೇಶನ ಆಗಮನ ಅಲ್ಲೊಲ್ಲ ಕಲ್ಲೋಲ ಮಾಡಿತು. ಗದ್ದೆಯ ಕೆಸರು ಮೆತ್ತಿದ ಶೂ ಗಳು , ನಾತ ಭರಿತ ಆ ಸಾಕ್ಸ್ಗಳು, ಬಡಬಡನೆ ತನ್ಮಯತೆಗೆ ಭಂಗ ತರುವ ಆತನ ಮಾತುಗಳ ಸದ್ದು ಕೋಪದ ಅಗ್ನಿಗೆ ತುಪ್ಪವನ್ನು ಸುರಿದಂತೆ ಮಾಡಿದವು.

'ಹೋಗಿ ಕಾಲ್ ತೊಳ್ಕೊ ಬಾರೋ ಹಂದಿಮುಂಡೆಗಂಡ!!' ಇನ್ನೂ ಉಸಿರು ತಡೆಯಿಡಿಯಲಾರದೆ ನಾನು ಅರಚಿದೆ.

'ಹ್ಯಾಂಡಿ ಮೂನ್ ಡೇ ಗಾಂಡ.. ವಾಟ್ ಡಸ್ ಇಟ್ ಮೀನ್ ಮೈ ಬೇಬಿ' ಎಂದ ಆತ ನನ್ನ ತಬ್ಬಿಕೊಳ್ಳಲು ಮುಂದಾದ. ಅತಿ ಖುಷಿಯಾದಾಗ ಅಥವಾ ಬೇರ್ಯಾರೊ ದುಃಖದಲ್ಲಿದ್ದಾಗ ಆತನ ಈ ಬಗೆಯ ನಟನೆ ತೀರಾನೇ ಸಾಮಾನ್ಯ. ಕೂಡಲೇ ನಾನು ಕಾಲಿನಿಂದ ಆತನ ಎದೆಗೆ ದೊಪ್ಪನೆ ಗುದ್ದಿದೆ. ಅದರ ರಭಸಕ್ಕೆಆತ ಸಿನಿಮೀಯ ರೀತಿಯಲ್ಲಿ ನಟಿಸುತ್ತಾ ಆದಿಯ ಮೇಲೆರಗಿ ಬಿದ್ದ. ಆತ ಆದಿಯನ್ನು ತಬ್ಬಿ ಮುದ್ದಾಡುವಂತೆ ನಟಿಸಿದ. ಮೂಗನ್ನು ಸಾಧ್ಯವಾದಷ್ಟು ಮುಚ್ಚಿಕೊಳ್ಳುತ್ತ ನಾನು ನಗತೊಡಗಿದೆ. ಖುಷಿಯ ಮೆಸೇಜುಗಳ ಬರದಲ್ಲಿ ಅಲ್ಲಿಯವರೆಗೂ ದುಃಖದ ಕರಿಛಾಯೆಯನ್ನು ಮುಖದ ಮೇಲೆ ಹೊದ್ದಿಕೊಂಡಿದ್ದ ಆದಿ ಲೊಕೇಶನನ್ನು ಪಕ್ಕಕ್ಕೆ ತಳ್ಳಿ ಛಟಾರನೆ ಆತನ ಕೆನ್ನೆಯ ಮೇಲೊಂದು ಭಾರಿಸಿದ! ಕರೆಂಟು ಹೋದ ಟೀವಿಯಂತೆ ನನ್ನ ನಗು ಒಮ್ಮೆಲೇ ಕಾಣೆಯಾಯಿತು. ನೆನ್ನೆಯಷ್ಟೇ ಟೆರೇಸಿನ ಮೇಲೆ ಬಿದ್ದ ರಾಧಾರ ಹೊಡೆತವನ್ನು ಮರೆಯಲೆತ್ನಿಸುತ್ತಿದ್ದ ನೆನಪು ನನ್ನೊಳಗೆ ಮತ್ತೊಮ್ಮೆ ಮೂಡಿತು. ಕೈಗಳು ತಂತಾನೇ ನನ್ನ ಕೆನ್ನೆಯನ್ನು ಅವರಿಸಿದವು. ಕೋಣೆ ಎಲ್ಲಿಲ್ಲದ ಮಹಾ ಮೌನದಲ್ಲಿ ಲೀನವಾಯಿತು. ಅಷ್ಟರಲ್ಲಾಗಲೇ ಎಳೆಮಕ್ಕಳ ಮುಖದಂತೆ ಕೂಡಲೇ ರಂಗೇರಿದ ಲೊಕೇಶನ ಚಹರೆಗೆ ತತ್ಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ತೋಚಲಿಲ್ಲವೆಂದೆನಿಸುತ್ತದೆ.

'ಬಡ್ಡಿ ಮಗ್ನೆ .. ಅಮ್ಮ .. ಏನ್ ತಿಂತೀಯಾ ಮಾರಾಯ .. ಒಳ್ಳೆ ಸನ್ನಿ ಡಿಯೋಲ್ ಕೈ ತರ ಇದಾವಾಲೋ ಅವು' ಎಂದು ಮುಖವನ್ನು ಹಿಂಡಿಕೊಂಡು, ಕೆನ್ನೆಯನ್ನು ಒರೆಸಿಕೊಳ್ಳುತ್ತಾ ಹೇಳಿದ.

ಪ್ರತ್ಯುತರವಾಗಿ ಆದಿ ಏನನ್ನೂ ಉತ್ತರಿಸದೆ ಅಲ್ಲಿಂದ ಎದ್ದು ಹೊರನೆಡೆದ. ಏನಾಗಿದೆ ಎಂಬಂತೆ ಲೋಕೇಶ ಸನ್ನೆಯಲೇ ನನ್ನ ಕೇಳಿದ.

ಸಾಕ್ಸ್ಗಳ ದುರ್ವಾಸನೆ ಅದಾಗಲೇ ರೂಮನ್ನು ಪಸರಿಸಿ ನನ್ನ ಮೂಗನ್ನೂ ಅದಕ್ಕೆ ಒಗ್ಗಿಕೊಂಡಿದ್ದರಿಂದಲೋ ಏನೋ, ಏನೂ ಗೊತ್ತಿಲ್ಲವೆಂಬಂತೆ ನಾನು ತಲೆಯಾಡಿಸಿದೆ.



****



ಬಣ್ಣ ಬಣ್ಣದ ಹಣ್ಣುಗಳನ್ನು ಭಿನ್ನ ವಿಭಿನ್ನವಾಗಿ ಬೆರೆಸೆ, ಅದಕೊಂದಿಷ್ಟು ಬಗೆಬಗೆಯ ಪೌಡರುಗಳನ್ನು ಸೇರಿಸಿ, ಕಣ್ಣು ನಾಲಿಗೆ ಜೊತೆಗೆ ಮನಸ್ಸಿಗೂ ಮುದವನ್ನು ನೀಡುವ ಕಲಾಕೇಂದ್ರವೆಂದೇ ಪ್ರಸಿದ್ದಿ ಕಾಲೇಜಿನ ಪಕ್ಕದ ಈ ಜ್ಯೂಸ್ ಶಾಪು. ಚಿತ್ರಗಾರ ಬಳಸುವ ಕುಂಚದ ಬಣ್ಣಗಳಂತೆ ಬಗೆ ಬಗೆಯ ಹಣ್ಣುಗಳನ್ನು ಬೆರೆಸಿ ಮಾಡಿ ನೀಡುವ ಆ ಪಾನಕ ದ ಆ ಶಾಪು ಪಾಕೇಟು ಮನಿ ಕೈಸೇರಿದಾಗಲಷ್ಟೇ ಹೋಗಲು ಅರ್ಹತೆ ಪಡೆಯುವ ಜಾಗವಾಗಿದ್ದಿತು. ಇಂದು ಬೆಳಗಿನ ಮೊದಲ ಘಂಟೆಗೇ ಚಚ್ಚಿ ಹೊಡೆಯುತ್ತಿದ್ದ ನಿದ್ರೆಯ ಜೋಂಪನ್ನು ಚಚ್ಚಿ ಹೊಡೆಯಲು ಲೋಕೇಶ ನನ್ನನ್ನು ಇಲ್ಲಿಗೆ ಕರೆತಂದ ಎಂಬ ನನ್ನ ಯೋಚನೆ ಸುಳ್ಳಾಯಿತು.

‘Oh god, are you Serious dude?!’ ಕುಡಿಯುತ್ತಿದ್ದ ಜ್ಯೂಸಿನ ಗುಟುಕು ನತ್ತಿಗೇರುವಂತೆ ನಾನು ಅರಚಿದೆ.

'ನಿಧಾನಕ್ಕೋ ಮಾರಾಯ .. ಅದೇನ್ ಒಳ್ಳೆ ಜೀವ ಹೋದರಾಗೆ ಆಡ್ತೀಯ..' ಅತ್ಯಂತ ಶಾಂತ ಪದಗಳಲ್ಲಿ ಹೇಳಿದ ಲೋಕೇಶ ಆತ ತನ್ನ ಮುಂದಿದ್ದ ಜ್ಯೂಸನ್ನು ಸ್ಟ್ರೇ ಮೂಲಕ ಗೋಲಾಕಾರದಲ್ಲಿ ತಿರುಗಿಸತೊಡಗಿದ.

'ಮಗ್ನೆ, ಸುಮ್ನೆ ಬಾಯಿಗ್ ಬಂದಾಗೇ ಮಾತಾಡ್ಬೇಡ..ನಿಜ ಹೇಳು.. Are you fucking serious ?!'

'Yes I do..' ಅತಿ ಗಂಭೀರವಾದ ಧ್ವನಿಯಲ್ಲಿ ಆತ ನುಡಿದ.

ಕೂಡಲೇ ಏನೇಳಬೇಕೆಂದು ತಿಳಿಯದೆ ಕೊಂಚ ಸುಮ್ಮನಾದ ನಾನು,

'ಮಚಿ.. ನಂಗೊತ್ತು. ಈ ಬ್ಯುಟಿ, ಬಾಡಿ, ಕಲ್ಲರು ಮತ್ತೊಂದು ಮಗದೊಂದು ಎಲ್ಲ ಟೈಮ್ ಪಾಸ್ ಆದಹಾಗೆ ಸುಕ್ಕುಗಟ್ಟಿ ಹೋಗೋ ವಿಷಯಗಳು ಅಂತ .. But in practicle, I mean.. No! its not possible at all .. ಸುಮ್ನೆ ಆಟ ಆಡ್ಬೇಡ, ನಿಜ ಹೇಳು..Do you really love her..?' ಸಾಧ್ಯವಾದಷ್ಟು ಸ್ಥಿತಪ್ರಜ್ಞೆಯನ್ನು ಕಾಪಾಡಿಕೊಂಡು ನಾನು ಬಡಬಡಿಸಿದೆ.

'ನೋಡಪ್ಪ .. ನಂದು ಏನಿದ್ರೂ ಸ್ಟ್ರೇಟ್ ಫಾರ್ವರ್ಡ್ ಥಿಂಗ್ಸ್ .. ನಾನು ಶಶಿನ ಮೀಟ್ ಮಾಡೋಕ್ಕೆ ಶುರು ಮಾಡಿದ್ದು ಉಷಾನ ಅವಾಯ್ಡ್ ಮಾಡೋಕ್ಕೇ ಇರ್ಬಹುದು. ಮೊದ್ಲೆಲ್ಲಾ ಸುಮ್ನೆ ಟೈಮ್ ಪಾಸ್ ಅಂತ ಕ್ಯಾಂಟೀನು ಅಲ್ಲಿ ಇಲ್ಲಿ ಸಿಗ್ತಾ ಇದ್ದೆ. ಆದ್ರೆ ದಿನಾ ಹೋದಂತೆ ತಿಳೀತು ಆಕೆ ಅದೆಂತ ಅದ್ಭುತ ಹುಡ್ಗಿ ಅಂತ. ಮಚಿ, ನಿಮ್ಗ್ಯಾರಿಗೂ ಗೊತ್ತಿಲ್ಲ ಆಕೆ ಕಾಲೇಜ್ ಮುಗ್ಸಿ ಬೇಗ ಮನೆಗ್ ಹೋಗಿ ಅಡಿಗೆ ಮಾಡಿಟ್ಟು ಸೀದಾ ಬಿಪಿಓ ಒಂದಕ್ಕೆ ಹೋಗ್ತಾಳೆ. ಅಲ್ಲಿ ರಾತ್ರಿ ಹನ್ನೊಂದ್ ಘಂಟೆ ತನ್ಕ ಕೆಲ್ಸ ಮಾಡ್ತಾಳೆ.. ಆಮೇಲೆ ಬಂದು ಮತ್ತೆ ಓದಿ ಬೆಳಗ್ಗೆ ಆರಕ್ಕೆ ಎದ್ದು ತಿಂಡೀ ಊಟ ಮಾಡಿಟ್ಟು ಕಾಲೇಜಿಗೆ ಬರ್ತಾಳೆ. ಅಷ್ಟೆಲ್ಲ ಕಷ್ಟ ಪಟ್ಟೂ ಆಕೆ ಕ್ಲಾಸಿಗೆ ಫಸ್ಟ್ ಬರ್ತಾಳೆ ಯು ನೋ.. ' ಎಂದು ಆಕೆಯ ದಿನಚರಿಯನ್ನು ಅಚ್ಚುಗಟ್ಟಾಗಿ ಬಾಯಿಪಾಠ ಮಾಡಿಕೊಂಡವನಂತೆ ಹೇಳಿದ.

'ಒಂದ್ ನಿಮಿಷ ' ಎಂದು ನಾನು ಆತನನ್ನು ಅಲ್ಲಿಗೇ ತಡೆದು 'ಕಾಲೇಜ್ ಓಕೆ, ಬಿಪಿಒನೂ ಓಕೆ.. ಅಲ್ಲ ತಿಂಡಿ ಊಟ ಎಲ್ಲ ಮಾಡೋಕ್ಕೆ ಅವ್ರ್ ಮನೇಲಿ ಬೇರೆ ಯಾರು ಮನುಷ್ರೆ ಇಲ್ವಾ?' ಸಂಶಯದ ದೃಷ್ಟಿಯಿಂದ ನಾನು ಕೇಳಿದೆ.

'ಅಪ್ಪ ಒಬ್ರೇ ಮಚಿ.. ಅಮ್ಮ ಇಲ್ಲ.. ಅಪ್ಪನೂ ಪಾರ್ಶ್ವವಾಯು ಬಂದು ಬೆಡ್ಡಲ್ಲೇ ಯಾವಾಗ್ಲೂ' ಎಂದ ಲೋಕೇಶ ತನ್ನ ತಲೆಯನ್ನು ತಗ್ಗಿಸಿದ.

ನಾನು ಸುಮ್ಮನ್ನಿದ್ದೆ.

ಆತನೇ ಮುಂದುವರೆಸಿ,

'ಜೀವನ ಯಾರನ್ನು ಇಷ್ಟ್ ಕಾಡಬಾರ್ದು ಮಚಿ.. ಕೈಲಾಗದ ಅಪ್ಪ, ಹತ್ತಿರಕ್ಕೆ ಸುಳಿಯದ ನೆಂಟರಿಷ್ಟರು, ಒಬ್ಳೆ ಹುಡ್ಗಿ. ಓದು, ಜೀವನ, ಕನಸ್ಸು, ಕಷ್ಟ, ಜಿಗುಪ್ಸೆ, ಅಸಹಾಯಕತೆ, ಇವೆಲ್ಲದರ ಜೊತೆಗೆ ಅಮ್ಮನ ನೆನಪು.. ಅದೇಗೆ ಅವೆಲ್ಲನ ಸಹಿಸ್ಕೊಂಡು ಇರ್ತಾಳೋ ನಂಗಂತೂ ತಿಳಿಯಲ್ಲ.. ಬಟ್ ಇಷ್ಟೆಲ್ಲಾ ಇದ್ರೂ ಅವ್ಳ್ ಯಾವತ್ತಾದ್ರೂ ಬೇಜಾರು ಮಾಡ್ಕೊಂಡಿರೋದಾಗ್ಲಿ, ಅಳ್ತಾ ಇರೋದಾಗಲಿ ನೋಡಿದ್ದೀಯಾ? ಎಲ್ಲೂ ಇಲ್ಲದ ಒಂದು ಸ್ಮೈಲ್ ಯಾವಾಗಲೂ ಅವ್ಳ ಫೇಸ್ ಮೇಲೆ ನಲಿತ ಇರುತ್ತೆ.. ನಿಜವಾಗಲು ಹೇಳ್ಬೇಕಂದ್ರೆ ನಂಗೆ ಆಕೆ ಇಷ್ಟ ಆಗಿದ್ದು ಅದೇ ಚಾರ್ಮಿಂಗ್ ಅಂಡ್ ಇನ್ಸ್ಪಿರೇಷನಲ್ ಸ್ಮೈಲ್ ನಿಂದ. ಅವ್ಳ ಬಣ್ಣ, ಬ್ಯೂಟಿ ಎಲ್ಲ ಅವ್ಳ್ ಪಡ್ಕೊ ಬಂದಿರೋ ಥಿಂಗ್ಸ್ ಅಲ್ಲ.. ಒಂದ್ ಪಕ್ಷ ಅವುನ್ನ ಇಲ್ಲೇ ಏನಾದ್ರು ಗಳಿಸೋದಾಗಿದ್ರೆ ಇವ್ಳು ಅದೆಷ್ಟು ಗಳಿಸ್ತಾ ಇದ್ಲು ಅಂದ್ರೆ ರಂಭೆ ಊರ್ವಶಿ ಎಲ್ಲರೂ ಇವಳ ಕಾಲ್ ಧೂಳಿಗೆ ಸಮ ಆಗ್ತಾ ಇದ್ರು..’ಎಂದು ಸುಮ್ಮನಾದ.

ಹತ್ತಾರು ಯೋಚನೆಗಳು ಅದಾಗಲೇ ನನ್ನ ತಲೆಯನ್ನು ಸುತ್ತಲಾರಂಬಿಸಿದವು.

ನಿಷ್ಕಲ್ಮಶ ಪ್ರೀತಿ ಎಂದರೆ ಇದೆಯೇ?

ಕಾಲೇಜಿನ ಯಾವೊಬ್ಬ ಹುಡುಗನೂ ಕಣ್ಣೆತ್ತಿ ನೋಡದ ಹುಡುಗಿಯೊಬ್ಬಳನ್ನು ತಾನು ಮನಸ್ಸು ಮಾಡಿದರೆ ಯಾವ ಹುಡುಗಿಯನ್ನೂ ಬೀಳಿಸಿಕೊಳ್ಳಬಲ್ಲೆ ಎಂಬ ಹುಡುಗನೊಬ್ಬ ಇಷ್ಟ ಪಡುವುದೆಂದರೆ ತೀರಾ ಸಾಮನ್ಯವಾದ ಮಾತಲ್ಲ. ಪ್ರೀತಿ ಹೀಗೂ ಚಿಗುರಬಹುದೇ ಎಂದನಿಸಿತು ನನಗೆ. ಲೋಕೇಶನ ರೂಪದಲ್ಲಿ ಘನ ವ್ಯಕ್ತಿತ್ವವೊಂದು ನನ್ನ ಕುರಿತು ಮಾತಾಡಿದಂತೆ ಭಾಸವಾಯಿತು.

ಕೂಡಲೇ ಗ್ಲಾಸಿನಲ್ಲಿದ್ದ ಜ್ಯೂಸನ್ನು ಅರ್ಧಕ್ಕೆ ಬಿಟ್ಟು, ಲೋಕೇಶ ಏನೋ ಹೇಳುತ್ತಿರುದನ್ನೂ ಆಲಿಸದೆ ಅಲ್ಲಿಂದ ಎದ್ದು ಟೆರೇಸಿನ ಮೇಲೆ ಹೋದೆ. ದೂರದ ಬೃಹತ್ ಬೆಟ್ಟವನ್ನು ಧಿಟ್ಟಿಸುತ್ತ ಹಲವು ನಿಮಿಷಗಳ ಕಾಲ ಕಲ್ಲಿನಂತೆ ನಿಂತೇ.

ಅದೆಷ್ಟೋ ಸಮಯದ ನಂತರ ಮನಸ್ಸು ಹಗುರಾಯಿತು.



****



'ಮಂತ್ ಎಂಡ್' ಎಂಬ ಕಷ್ಟಗಾಲದ ದಿನಗಳಲ್ಲೂ ಹೇಗೋ ಚಿಲ್ಲರೆ ಕಾಸನ್ನು ಹೊಂದಿಸಿ ನಮಗಾಗಿ ಬಿಯರ್ ಹಾಗು ರಸ್ತೆಬದಿಯ ಖಾರವಪ್ಪರಿಸಿದ ಮೀನಿನ ಫ್ರೈ ಗಳನ್ನು ಬಾಳೆಯೆಲೆಯಲ್ಲಿ ಕಟ್ಟಿಸಿಕೊಂಡು ಬಂದು 'cheer....!' ಎಂದ ಲೋಕೇಶ ಗಟಗಟನೆ ಒಮ್ಮೆಲೇ ಅರ್ಧಬಾಟಲಿಯ ಪೇಯವನ್ನು ಮುಗಿಸಿಹಾಕಿದ. ಉಷಾಳ ಮನೆ ಎಂದು ಆ ದಿನ ನೆಡೆದಿದ್ದ ಕರ್ಮಕಾಂಡದ ನಂತರ ಯಾರೊಬ್ಬರೂ ಬಿಯರ್ ಒಂದನ್ನು ಬಿಟ್ಟು ಬೇರೇನನ್ನೂ ಮುಟ್ಟುತ್ತಿರಲಿಲ್ಲ. ಅದೂ ಸಹ ನಾವು ಮಾಡುತ್ತಿರುವುದು ಯಾವುದೊ ಒಂದು ಪಾಪದ ಕೆಲಸವೆಂಬ ತಪ್ಪಿತಸ್ಥ ಭಾವನೆಯಿಂದ!

ಲೊಕೇಶನ ಆ ಭೀಮವರ್ತನೆಗೆ ಬೆರಗಾಗಿಯೇನೋ ಎಂಬಂತೆ ಆದಿ ತನ್ನ ಮೊದಲ ಸಿಪ್ಪನ್ನು ಕುಡಿಯಬೇಕೋ ಬೇಡವೋ ಎಂಬಂತೆ ನೋಡಹತ್ತಿದ್ದ. ಮೋಡದ ಕುರುಹುಗಳಿಲ್ಲದ ಎಲ್ಲೆಂದರಲ್ಲಿ ನಕ್ಷತ್ರಗಳೇ ಮಿನುಗುತ್ತಿರುವ ಸ್ವಚ್ಛಂದ ಆಗಸದ ನೀರವ ಮೌನದೊಟ್ಟಿಗೆ ಆಗೊಮ್ಮೆ ಹೀಗೊಮ್ಮೆ ಬೀಸುವ ತಂಗಾಳಿ ಟೆರೇಸಿನ ವಾತಾವರಣವನ್ನು ಮೋಹಕವಾಗಿಸುತ್ತಿತ್ತು. ಲೋಕೇಶ ಕೂಡಲೇ ರೂಮಿಗೆ ಹೋಗಿ ಟ್ರೆಕಿಂಗ್ಗೆ ಹೋದಾಗ ಬೇಕಾಗುತ್ತದೆಯೆಂದು ತಂದಿದ್ದ ಕೆಂಡದ ಒಲೆಯನ್ನು ಜೊತೆಗೆ ಒಂದಿಷ್ಟು ಇದ್ದಿಲನ್ನು ಹೊತ್ತು ತಂದು ಕಬ್ಬಿಣದ ಆ ಒಲೆಯೊಳಗೆ ಅವುಗಳನ್ನು ಸುರಿದು ನಿಧಾನವಾಗಿ ಬೆಂಕಿಯತ್ತಿಸಿದ. ನೋಡನೋಡುತ್ತಿದ್ದಂತೆ ಕಪ್ಪುಬಣ್ಣದ ಇದ್ದಿಲ ಪುಡಿಗಳು ಸುಂದರವಾದ ಕೆಂಪುಬಣ್ಣದಕ್ಕೆ ತಿರುಗಿ ಉರಿಯತೊಡಗಿದವು. ಬೆಚ್ಚನೆಯ ಬಿಸಿಗೆ ರುಚಿಯೇರಿಸುವ ತಣ್ಣನೆಯ ಬೀಯರು ಹಾಗು ಖಾರವಾದ ಮೀನಿನ ಫ್ರೈ ಹೇಳಿಮಾಡಿಸಿದಂತೆ ಒಗ್ಗಿಕೊಂಡವು. ಲೋಕೇಶ ಎಂದಿನಂತೆ ಶರವೇಗದ ಮಾತುಗಳನ್ನು ಒಂದರಿಂದೊಂದು ಹರಿಯಬಿಡುತ್ತಿದ್ದರೆ ಇತ್ತ ಕಡೆ ಆದಿ ಖುಷಿಯ ನೆನಪಿನಲ್ಲಿ ತನ್ನ ಜೋಲು ಮುಖವನ್ನು ಇಳಿಬಿಟ್ಟು ಅಷ್ಟೇನೂ ಮಾತನಾಡದೆ ಸುಮ್ಮನಿದ್ದ. ನಾನಾಗಲಿ ಅಥವಾ ಲೊಕೇಶನಾಗಲಿ ಆತನನ್ನು ಕೆಣಕುವ ಗೋಜಿಗೆ ಹೋಗಲಿಲ್ಲ.

ಕೆಲಸಮಯದ ನಂತರ ತನ್ನ ದಿನದ ರೂಟೀನನ್ನು ಪೂರ್ಣಗೊಳಿಸಲೆಂಬಂತೆ ಲೋಕೇಶನೂ ಶಶಿಯ ನಂಬರಿಗೆ ಫೋನಾಯಿಸಿ ಬ್ಯುಸಿಯಾದರೆ, ಆದಿ ನಿದ್ರೆಬರುತ್ತಿದೆ ಎಂಬ ಸುಳ್ಳು ಸಬೂಬನ್ನು ನೀಡಿ ಅಲ್ಲಿಂದ ಎದ್ದು ರೂಮಿಗೆ ನೆಡೆದ. ತಾನು ಖುಷಿಯೊಟ್ಟಿಗೆ ಆಡಿರುವ ಮಾತುಗಳನ್ನು ತನ್ನ ಮೊಬೈಲಿನ ಚಾಟ್ ಹಿಸ್ಟರಿಗೆ ಹೋಗಿ ಓದುತ್ತಾ ದುಃಖಿಸುತ್ತಾ ಕೂರುವನು ಎಂಬುದು ತಿಳಿದಿದ್ದರೂ ನಾನು ಆತನನ್ನು ತಡೆಯಲಿಲ್ಲ.

ಪಂಪುಹುಳದ ದೇಹದಂತೆ ಪ್ರಕಾಶಮಾನವಾಗಿ ಮಿನುಗಿ ಮತ್ತೆ ಕಪ್ಪಾಗುತ್ತಿದ್ದ ಕೆಂಡವನ್ನು ನೊಡುತ್ತಾ ಕಳೆದುಹೋದ ನನಗೆ ಯಾಕೋ ನೂರಾರು ವರ್ಷಗಳ ಹಿಂದಕ್ಕೆ ಯೋಚನಾಲಹರಿಯನ್ನು ಹೊತ್ತೊಯ್ಯಲು ಮನಸ್ಸಾಯಿತು!

ಸಂಬಂಧಗಳು ಅದೆಷ್ಟು ನಶ್ವರ? ಕಾಲವೆಂಬ ಸಾರ್ವಕಾಲಿಕ ಸತ್ಯ ಈ ಜಗತ್ತಿನಲ್ಲಿ ಏನನ್ನೂ ಶಾಶ್ವತವಾಗಿ ನೆಲೆಯೂರಲು ಬಿಡದು. ಕುಡಿದ ಮೇಲೆ ಪ್ರತಿಯೊಬ್ಬರೂ ನಮ್ಮ ಸಂಬಂಧಿಗಳೇ ಆಗುತ್ತಾರೆ. ಇನ್ನು ನಿಜ ಸಂಬಂಧಿಗಳಂತೂ ಒಡಹುಟ್ಟಿದವರೇನೋ ಎಂಬಂತೆ ಭಾಸವಾಗುತ್ತಾರೆ. ಅವರುಗಳು ಪಕ್ಕದಲ್ಲಿ ಕೂತು ಲೋಕಾಭಿರಾಮದ ಮಾತನ್ನು ಆಡುತ್ತಾ ಹೋದರೆ ಎಲ್ಲವೂ ಸ್ವಚ್ಛಂದವಾಗಿ ಕಾಣುತ್ತದೆ. ಅವರ ಸುಳ್ಳೂ ಸುಳ್ಳೆನಿಸುವುದಿಲ್ಲ. ಬಹುಶಃ ಕುಡಿದಾಗ ಅವರು ಸುಳ್ಳನೆ ಹೇಳದಿರಬಹುದು! ಅತ್ತರೆ ಅವರೊಟ್ಟಿಗೆ ಗಳಗಳನೆ ಅತ್ತುಬಿಡುವ, ನಕ್ಕರೆ ಅವರೊಟ್ಟಿಗೆ ನಲಿದುಬಿಡುವ, ದ್ವೇಷ, ಅಸೂಹೆ, ನಾಚಿಕೆ, ಸಂಶಯಗಳಿಲ್ಲದ ಈ ಅಮಲಿನ ಘಳಿಗೆ ಅದೆಷ್ಟು ಚೆಂದ?! ಭಾವ ಮೈಧುನ, ಮಾವ ಅಳಿಯ, ಕೆಲವೊಮ್ಮೆ ಅಣ್ಣ ತಮ್ಮಂದಿರೂ ಕೂತು ಹೀಗೆ ಒಟ್ಟಿಗೆ ಕುಡಿದು ಕಾಲದ ಮೂಸೆಯಲ್ಲಿ ಅದೆಷ್ಟು ಭಾರಿ ನಲಿದು, ಕುಣಿದು ಮರೆಯಾಗಿರಬಹದುದು?

ನೂರು ವರ್ಷದ ಹಿಂದಿನ ನನ್ನ ಹಿರಿಕರು ಯಾಕಿಂದು ನೆನಪಾಗುತ್ತಿದ್ದಾರೆ?

ದಿನವಿಡಿ ಗದ್ದೆ ತೋಟಗಳಲ್ಲಿ ದುಡಿದು, ದಣಿದು ಸಂಜೆಯಪ್ಪುವ ವೇಳೆಗೆ ತವರಿಗೆ ಹೋಗಿರುವ ಮಡದಿಯನ್ನು ನೋಡಲು ಲೈಟು ಟಾರ್ಚುಗಳಿಲ್ಲದ ಕಗ್ಗತ್ತಲೆಯ ಸಾಗರದಲ್ಲಿಯೆ ದಾರಿಯ ಗುರುತಿಡಿದು, ಹೊರಟು , ದಾರಿಯಲ್ಲಿ ಸಿಕ್ಕ ಬೈನೆ ಸೇಂದಿಯನ್ನು ಬಿದಿರಿನ ಒಳ್ಳೆಯೊಳಗೆ ಸುರಿಸಿಕೊಂಡು, ಪಕ್ಕದ ಗೂಡಂಗಡಿಯಲ್ಲಿ ಮಡದಿಗೆಂದು ಒಂದಿಷ್ಟು ಸಿಹಿತಿಂಡಿಗಳನ್ನು ಕಟ್ಟಿಸಿ ತನ್ನ ಕೋಟಿನ ಜೇಬಿನೊಳಗಿಟ್ಟು, ಅಲ್ಲಿಯವರೆಗೂ ಹಿಂಬಾಲಿಸಿಕೊಂಡು ಬರುತ್ತಿದ್ದ ನಾಯಿಯನ್ನು ಕಲ್ಲಿನಿಂದ ಹೊಡೆದು ದೂರಕ್ಕೆ ಓಡಿಸಿ ಬಿರಬಿರನೆ ನೆಡೆಯಹತ್ತಿ, ತುಸು ದೂರ ಸಾಗುತ್ತಿದ್ದಂತೆ ಹಿಂದಿನಿಂದ ಪುನ್ಹ ಏನೋ ನೆಡೆದುಕೊಂಡು ಬರುತ್ತಿರುವ ಸದ್ದಾಗುವುದನ್ನು ಆಲಿಸಿ ಅಲ್ಲಿಯೇ ನಿಂತು ಹೆಗಲ ಮೇಲಿದ್ದ ತಾಮ್ರದ ಹುಲಿಗುರುತಿನ ಕೇಪಿನ ಕೋವಿಯ ಕುದುರೆಯನ್ನು ಮೇಲೇರಿಸಿ , ಮೂಡುತ್ತಿದ್ದ ಶಬ್ದವನ್ನು ಕಿವಿಗೊಟ್ಟು ಕೇಳಿ ಅದು ತಮ್ಮ ಮನೆಯ ಕರಿಯ ನಾಯಿ ಎಂದು ತಿಳಿದು 'ಕರಿಯ!! ನಿನ್ ಜಾತಿಗ್ ನನ್ ಮೆಟ್ ಹೊಡ್ಯ..! ದಾರಿ ಮೂಸ್ಕೊಂಡೆ ಬಂತು ನೋಡ್ ಬೇವರ್ಸಿ ಮುಂಡೇದು' ಎಂದು ಅರಚಿದ ಕೂಡಲೇ ಬಾಲ ಅಲ್ಲಾಡಿಸಿಕೊಂಡು ಕುಯ್ ಗುಡುತ್ತಾ ಬರುವ ನಾಯಿಗೆ ಕೈಗೆ ಸಿಕ್ಕ ಏನಾದರೊಂದರಿಂದ ಹೊಡೆದು, ಮತ್ತೊಮ್ಮೆ ಬೈದು, ಬೆಂಬಿಡದ ಅದನ್ನು ಕಂಡು ಕೊನೆಗೆ ಬಂದರೆ ಬರಲಿ ಎನುತ ಮಾವನ ಮನೆಗೆ ಜೊತೆಗಾರನಾಗಿ ಕರೆದುಕೊಂಡು ಹೋಗುತ್ತಿದ್ದ ಹಿರಿಯಳಿಯ!

ಹೊಲಗೇರಿಯ ಕೆಂಚ ನೆನ್ನೆಯಷ್ಟೇ ಅಳಿಯ ಬರುವ ಸುದ್ದಿಯನ್ನು ಮಾವನಿಗೆ ಹೇಳಿದ ಕೂಡಲೇ ಹುರಿದ ಕಾಡಂದಿ ಮಾಂಸ ಹಾಗು ಮನೆಕೋಳಿಯ ಬಾಡೂಟವನ್ನು ಅವರು ಏರ್ಪಡಿಸಿದ್ದರು. ಸಂಜೆಯಿಂದ ಕಾದು ಕಾದು ಕೊನೆಗೆ ದೂರದಲ್ಲಿ ನಾಯಿಗಳು ಬೊಗಳುವ ಸದ್ದನ್ನು ಕೇಳಿ ಕೆಂಚನನ್ನು ಕೂಗಿ ಕರೆದು ಬೆಳಕಿನ ಪಂಜನ್ನು ಮಾಡಿಕೊಂಡು ಅಳಿಯರನ್ನು ಬರಮಾಡಿಕೊಳ್ಳಲು ತಾವೂ ಹೊರಟುಬಿಟ್ಟರು. ಊರಿನ ನಾಯಿಗಳು ಅದಾಗಲೇ ತಮ್ಮ ವಲಯಕ್ಕೆ ಬಂದಿರುವ ಅಳಿಯನ ಏಕೈಕ ನಾಯಿಯ ಮೇಲೆ ಆಕ್ರಮಣವನ್ನು ಘೋಷಿಸಿದ್ದವು. ಮಾವನ ಊರಿನ ನಾಯಿಗಳ ಕಾಟಕ್ಕೆ ತಮ್ಮ ಮನೆಯ ಕರಿಯನೇ ಕಾರಣವೆಂದು ಅದಕ್ಕೆ ಬೈಯುತ್ತಾ, ಶಪಿಸುತ್ತಾ ಇತರೆ ನಾಯಿಗಳಿಂದ ರಕ್ಷಿಸಿಕೊಳ್ಳುತ್ತಾ ಬರುತ್ತಿದ್ದ ಅಳಿಯನನ್ನು ಮಾವಯ್ಯ ಕೊನೆಗೂ ಬರಮಾಡಿಕೊಂಡು, ಯೋಗಕ್ಷೇಮ ಹಾಗು ಮಳೆ ಬೆಳೆಯನ್ನು ಕೇಳಿ ಊರಿನ ನಾಯಿಗಳನ್ನು ಗದರಿಸಿ ಅಲ್ಲಿಂದ ಮನೆಯೆ ಹಾದಿಯನ್ನು ಹಿಡಿಯುತ್ತಿದ್ದರು. ಮನೆಯ ಬಾಗಿಲಲ್ಲೇ ಬಿಂದಿಗೆ ನೀರನ್ನಿಡಿದು ಕಾಯುತ್ತಿದ್ದ ಆತ್ತೆ ಹಾಗು ಮಗಳನ್ನು ಕಂಡು ಊರಿಂದ ತಂದ ಭತ್ತ, ಬೇಳೆ, ತರಕಾರಿ ಹಾಗು ಸಿಹಿತಿಂಡಿಗಳನ್ನು ನೀಡಿ, ಬಿಂದಿಗೆಯ ಬೆಚ್ಚನೆಯ ನೀರನ್ನು ಕಾಲುಗಳ ಮೇಲೆ ಹೊಯ್ದುಕೊಂಡು ಮನೆಯೊಳಗೇ ಹೋಗುತ್ತಿದ್ದ ಅಳಿಯ. ಕೆಂಚ ದೂರದೂರಿನ ನಾಯಿಯನ್ನು ಮಕ್ಕಳಂತೆ ಮುದ್ದಿಸುತ್ತಾ ಅಲ್ಲಿಯೇ ಜಗಲಿಯಲ್ಲಿ ಕೂರುತ್ತಿದ್ದ. ಒಂದು ಪಕ್ಷ ಒಡೆಯ ಬಂದು ಹೋಗೆಂದರೂ ಆತ ಅಲ್ಲಿಂದ ಕದಲುತ್ತಿರಲಿಲ್ಲ. ಕಾರಣ ಹಿರಿಮನೆಯ ಬಾಡೂಟದ ಜೊತೆಗೆ ಅಳಿಯರ ಹೆಗಲಿಗೆ ತಗಲಾಕಿಕೊಂಡಿದ್ದ ಸೇಂದಿಯ ಒಳ್ಳೆ! ಅಳಿಯ ಮಡದಿಯ ಕೋಣೆಗೆ ಹೋಗಿ ಒಂದರೆನಿಮಿಷ ತಮಾಷೆಯ ಮಾತನಾಡಿ ತನ್ನ ಕೋಟಿನ ಒಳಗಿಟ್ಟಿದ್ದ ಮಲ್ಲಿಗೆ ಹೂವಿನ ಹಾರವನ್ನು ತೆಗೆದು ಅವಳ ಕೈಯ ಮೇಲಿಟ್ಟು ಅಲ್ಲಿಂದ ಹೊರನೆಡೆದ. ಸಂತೋಷಗೊಂಡ ಮಡದಿ ಎಲ್ಲಿ ಅದರ ಘಮ ಪಸರಿಸಿ ಯಾರು ಏನೆಂದು ಕೇಳುವರೋ ಎಂಬ ನಾಚಿಕೆಯಲ್ಲಿ ಕೊಡಲೇ ತನ್ನ ಕಬ್ಬಿಣದ ಪೆಟ್ಟಿಗೆಯೊಳಕ್ಕೆ ಅದನ್ನು ಹಾಕಿ ಬೀಗವನ್ನು ಹಾಕುತ್ತಾಳೆ.

ಹಂದಿ ಮಾಂಸವನ್ನು ಮನೆಯೊಳಗೆ ತಾರದ ಕಾರಣ ಮನೆಯೋರಗಡೆಯ ಒಲೆಯ ಮುಂದೆ ಕುಳಿತರು ಶತಮಾನದ ಹಿಂದಿನ ಮಾವ ಹಾಗು ಅಳಿಯ. ಮಾವ ಮನೆಯಲ್ಲೇ ಮಾಡಿದ ಕಳ್ಳಭಟ್ಟಿಯ ಬಾಟಲಿಯನ್ನು ಕುಸ್ತಿ ಪಂದ್ಯದಲ್ಲಿ ಗೆದ್ದ ಪ್ರಶಸ್ತಿಯಂತೆ ತಂದರೆ ಅಳಿಯ ಹಾದಿಯಲ್ಲಿ ಕಟ್ಟಿಸಿಕೊಂಡು ತಂದಿದ್ದ ಹುಳಿ ಸೇಂದಿಯನ್ನು ಹೊರತೆಗೆದ. ಮನೆಯಾಕೆ ಕಡುಗಪ್ಪುಬಣ್ಣದ ಹುರಿದ ಹಂದಿಯ ತುಂಡುಗಳು, ನಾಟಿ ಕೋಳಿಯ ಸಾರು ಹಾಗು ಕಂಚಿಹಣ್ಣಿನ ಕೆಂಬಣ್ಣದ ಉಪ್ಪಿನಕಾಯಿಯನ್ನು ತಂದಿಟ್ಟು ಜೊತೆಗೆ ಒಲೆಯ ಪಕ್ಕದ ಗೋಡೆಯ ಮೇಲಕ್ಕೆ ನೇತಾಕಿದ್ದ ಲೋಟ ಹಾಗು ತಟ್ಟೆಯನ್ನೂ ತೆಗೆದು ಕೆಳಗಿಟ್ಟಳು. ತಟ್ಟೆ ಹಾಗು ಲೋಟದ ಸದ್ದನ್ನು ಕೇಳಿದ ಕೂಡಲೇ ಕೆಂಚ ಕ್ಷಣಮಾತ್ರದಲ್ಲಿ ಮುಂದಿನ ಬಾಗಿಲಿನಿಂದ ಹಿತ್ತಲುಬಾಗಿಲಿಗೆ ಅಹ್ವಾನವಿಲ್ಲದೆಯೇ ಬಂದು ಹಲ್ಲುಕಿರಿದುಕೊಂಡು ನಿಂತ.

ಮುಂದೆ ಮಾವ ಒಲೆಯ ಕೆಂಡವನ್ನು ಮೆಲ್ಲ ಮೆಲ್ಲನೆ ಕಬ್ಬಿಣದ ಕೊಳಪೆಯಲ್ಲಿ ಊದುತ್ತಾ ಸೇಂದಿ ಹಾಗು ಕಳ್ಳಭಟ್ಟಿಯ ಕಹಿ ಸಿಹಿಯನ್ನು ಸವಿಯುತ್ತಾ, ಕೆಂಚ ಹಾಗು ಆತನ ಪ್ರೇಮಕಥೆಯನ್ನು ಅಣಕಿಸುತ್ತಾ, ಅಳಿಯನ ಊರಿನ ನಾಯಿಗೆ ಪ್ರೀತಿ ತೋರುವಂತೆ ತಿಂದು ಬಿಟ್ಟ ಮೂಳೆಗಳನ್ನು ಎಸೆಯುತ್ತಾ, ನಗುತ್ತ, ನಗಿಸುತ್ತಾ, ಒಮ್ಮೊಮ್ಮೆ ಗಂಭೀರವಾಗಿ 'ಅಳಿಯರೇ ನೀವು ನೂರ್ ಕಾಲ ಬಾಳಿ ಬದುಕಬೇಕು.. ನನ್ನ ಆಯಸ್ಸೂ ನಿಮ್ಗೆ ಹೋಗ್ಲಿ' ಎಂದು ಅತ್ತರೆ ಇತ್ತ ಕಡೆ ಅಳಿಯ ಮಾವನ ಕಾಲನ್ನು ಹಿಡಿಕೊಂಡು 'ದೇವರಂತ ಮಾವಯ್ಯ .. ನೀವು ನೂರ್ ಕಾಲ ಬದುಕ್ ಬೇಕು ..' ಎಂದು ತೊದಲುತ್ತಾ ಆತನೂ ರೋಧಿಸುತ್ತಾನೆ. ಅವರಿಬ್ಬರ ರೋಧನೆಯಲ್ಲಿ ಲಾಭ ಅನುಭವಿಸಿದ್ದು ಮಾತ್ರ ಕೆಂಚ ಹಾಗು ಅಳಿಯನ ನಾಯಿ ಮಾತ್ರ.

ಸಮಯ ಸಾಗಿದಂತೆ ಮಾತಿನ ಸದ್ದು ಹೆಚ್ಚಾದಂತೆ ಮನೆಯೊಳಗಿಂದ 'ಲೇ ಕೆಂಚ .. ಬಿಟ್ರೆ ಊರೇ ಮುಳುಗಸ್ತಿಯ ನೀನು .. ಬಾರ್ಲ ಈಕಡೆ .. ಹೊತ್ತು ಗೊತ್ತು ಅನ್ನೋದ್ ಇಲ್ಲ .. ಉಣ್ಣು ಬಾ' ಎಂದು ಮನೆಯಾಕೆ ಪರೋಕ್ಷವಾಗಿ ಮಾವ ಹಾಗು ಅಳಿಯನನ್ನು ಕುರಿತು ಚಾಟಿ ಬೀಸಿದರೆ ಅದರ ಅರ್ಥವನ್ನು ಅರಿತ ಅಳಿಯ ಹೇಗೋ ಪುಸಲಾಯಿಸಿ ನಶೆಯೇರಿ ವಾಲಾಡುವ ಮಾವನನ್ನು ತಂದು ಊಟಕ್ಕೆ ಕೂರಿಸುತ್ತಿದ್ದ.

ತಮ್ಮ ಹಿರೀಕರು ಹೀಗಿದ್ದಿರಬಹುದೇ ..? ಎಂದು ನೆನೆದು ನಗತೊಡಗಿದ ನನ್ನನ್ನು ಫೋನಿನಲ್ಲಿ ಪ್ರೇಮಶಾಸ್ತ್ರವನ್ನು ಹೇಳುತ್ತಿದ್ದ ಲೋಕೇಶ ಏನೆಂಬಂತೆ ಕೇಳಿದ. ನಾನು ಏನು ಆಗಿಲ್ಲವೆಂಬತೆ ಮುಸುಕುಗಟ್ಟುತ್ತಿದ್ದ ಕೆಂಡವನ್ನು ಊದಿದೆ.

'ಈ ಕೆಂಡಗಳಂತೆ ಆಗಲೂ ಅಲ್ಲಿ ಕೆಂಡವೊಂದು ಉರಿಯುತ್ತಿತ್ತು. ಮಾವ ಅಳಿಯ ಕಾಲದ ಗಾಲಿಯಲ್ಲಿ ತಮ್ ತಮ್ಮ ಆಯಸ್ಸನ್ನು ಒಬ್ಬಬ್ಬರಿಗೊಬ್ಬರು ಕೊಡತೊಡಗಿದ್ದರು. ಅಸಲಿಗೆ ಅವರು ಯಾರು, ಯಾರಿಗೆ ಏನನ್ನು ಕೊಡುತ್ತಿದ್ದರು?! ಅವರೆಲ್ಲ ಹೀಗೆಲ್ಲಿ? ಮಾವ, ಅಳಿಯ, ಮಡದಿ, ಅತ್ತೆ, ಕೆಂಚ ಹಾಗು ಊರಿನ ನಾಯಿ. ಈಗ ಯಾರೊಬ್ಬರೂ ಇಲ್ಲ. ಕಾಲಚಕ್ತ್ರ ಎಲ್ಲರನ್ನೂ ಮರೆಯಾಗಿಸಿದೆಯೇ ? ಕೊನೆ ಪಕ್ಷ ಅವರು ಆಡಿದ ಮಾತುಗಳಾಗಲಿ, ಮದಭರಿತ ಆ ಸಂಜೆಗಳಾಗಲಿ ಈಗ ಯಾವುವೂ ಇಲ್ಲ. ಇಂದು ನಾವಿಲ್ಲಿ ಅಕ್ಕ ಪಕ್ಕದಲ್ಲೇ ಇದ್ದರೂ ನೂರು ವರ್ಷಗಳ ನಂತರ ಈ ಘಳಿಗೆಗೂ ಅದ್ಯಾವ ಬೆಲೆ? ಕಳೆದುಹೋದ ಘಳಿಗೆಯ ಬೆಲೆ ಅದೆಂದಿನವರೆಗೆ?' ಆದರೆ ಮಾವ ಅಳಿಯರ ಆ ಸುಂದರ ಜೀವನದ ಒಂದೆರೆಡು ಜೀನ್ಸ್ಗಳು ಬಹುಷಃ ನನ್ನ ರಕ್ತದಲ್ಲಿರಬಹುದೇ? ಅವುಗಳೇ ಇಂದು ನನಗೆ ಅವರನ್ನು ಕಲ್ಪಿಸುತ್ತಿರಬಹುದೇ? ತಿಳಿಯಲಿಲ್ಲ.

ದೂರದ ಒಂದೆರೆಡು ನಕ್ಷತ್ರಗಳು ಬಲು ಪ್ರಕಾಶಮಾನವಾಗಿ ಮಿನುಗಿದಂತೆ ಭಾಸವಾಯಿತು.

ಒಟ್ಟಿನಲ್ಲಿ ಪ್ರಸ್ತುತ ಕಾಲದ ಬೀಯರ್ ಎಂಬ ಮಹಾಶಯ ನನಗೆ ಗತಕಾಲದ ತನ್ನ ಸಹೋದ್ಯೋಗಿಗಳನ್ನು ನೆನಪಿಸಿ ಒಂದು ಹೊಸ ಭಾವವನ್ನು ಹುಟ್ಟು ಹಾಕಿದ. ಅಳಿಯ ಮಾವನನ್ನು ಊಟಕ್ಕೆ ಕರೆದುಕೊಂಡುಹೋದ ಹಾಗೆ ಲೋಕಿ ನನ್ನನ್ನು ರೂಮಿನೊಳಗೆ ಕರೆದುಕೊಂಡು ಹೋಗಿ ಪಾರ್ಸೆಲ್ ತರಿಸಿದ್ದ ಬಿರಿಯಾನಿಯನ್ನು ಪ್ಲೇಟಿನ ತುಂಬಾ ಹಾಕಿ ತಿನ್ನಲು ಕೊಟ್ಟ. ಆಗಲೂ ನನ್ನಲ್ಲಿ ಮೂಡಿದ ಪ್ರೆಶ್ನೆ,

'ನಾನ್ಯಾಕೆ ಮುಂದೆ ಮಾವ ಅಳಿಯನ ತರಹದ್ದೇ ಜೀವನವನ್ನು ನೆಡೆಸಬಾರದು?'

Continues..

No comments:

Post a Comment