Saturday, June 27, 2020

ಪಯಣ - 7

'ಗುಡ್ ಮಾರ್ನಿಂಗ್ ಸರ್…' ಬೆಳ್ಳನೆ ನರಪಿಳ್ಳೆಯಂತಿದ್ದ ಫ್ರೆಷೆರ್ ಗ್ರೂಪಿನ ಹುಡುಗನೊಬ್ಬ ಲೋಕೇಶನನ್ನು ನೋಡಿ ಸೆಲ್ಯೂಟನ್ನು ಹೊಡೆದ.


ಬಹುಷಃ ಎಲ್ಲೋ ಒಬ್ಬನೇ ಪಾಪದ ಆಸಾಮಿ ಸಿಕ್ಕಾಗ ಸಿಕ್ಕಿದ್ದೇ ಚಾನ್ಸು ಎನುತ ragging ನ ಹೆಸರಿನಲ್ಲಿ ಈತ ಹಾಕಿ ರುಬ್ಬಿರಬೇಕು ಹಾಗಾಗಿ ಆತ ಅಷ್ಟೊಂದು ನಯನಾಜೂಕಿನಲ್ಲಿ 'ಗುಡ್ ಮಾರ್ನಿಂಗ್ ಸರ್..' ಎಂದಿರಬೇಕೆಂದು ಎಂದು ನಾನಂದುಕೊಂಡೆ. ಆದರೆ ತುಸು ದೂರ ನೆಡೆದ ನಂತರ ಒಂದು ಗುಂಪಿನಲ್ಲಿದ್ದ ಹತ್ತಾರು ಹುಡುಗ ಹುಡುಗಿಯರೂ ಒಟ್ಟಾಗಿ ಗುಡ್ ಮಾರ್ನಿಂಗ್ ಸರ್ ಎಂದು ರಾಗವನ್ನು ಎಳೆದರು. ಲೋಕೇಶ ನಸುನಕ್ಕು ಸುಮ್ಮನಾದ.


'ಅದ್ಯಾವಾಗ್ಲೋ , ಅಷ್ಟೂ ಜನಕ್ಕೆ ಒಟ್ಟಿಗೆ ragging ಮಾಡಿದೆ?' ಆಶ್ಚರ್ಯಚಕಿತನಾಗಿ ನಾನು ಕೇಳಿದೆ.


'ಲಾಸ್ಟ್ ವೆಡ್ಸ್ಡೇ .. ಮಾರ್ನಿಂಗ್ ಅವರ್ಸ್ ನಲ್ಲಿ' ನಗುತ್ತಾ ಆತ ಉತ್ತರಿಸಿದ.


'ಮಾರ್ನಿಂಗ್ ಅವರ್ಸ?!'


'ಹೂ ಗುರು .. ಮಾರ್ನಿಂಗ್ ಅವರ್ಸೆ.. ರೆಗ್ಯುಲರ್ ಕ್ಲಾಸ್ ಟೈಮಿಂಗ್ಸ್ ಅಲ್ಲೇ ' ಎಂದು,





**


ಈತ ಅಂದು ಕೆಮಿಸ್ಟ್ರಿ ಲ್ಯಾಬಿನ ಕಾರಿಡಾರ್ನಲ್ಲಿ ನೆಡೆದುಕೊಂಡು ಹೋಗುತ್ತಿರಬೇಕಾದರೆ ಕೆಸರುಗದ್ದೆಯ ಕಪ್ಪೆಗಳಂತೆ ವಟಗುಡುತ್ತಿದ್ದ ಫ್ರೆಷೆರ್ಸ್ ಕ್ಲಾಸ್ಸನ್ನು ನೋಡಿ ಅದೇ ಸುಸಮಯವೆಂದುಕೊಂಡು, 'ಮಕ್ಳ ಇದೆ ನಿಮ್ಗೆ ಹಬ್ಬ' ಎಂದು ತನ್ನ ಮನದಲ್ಲೇ ಅಂದುಕೊಂಡು ಕಾಲರ್ಡ್ ಟಿ-ಶರ್ಟ್ ಅನ್ನು ತನ್ನ ಜೀನ್ಸ್ನೊಳಗೆ ತುಂಬಿ ಟಿಪ್-ಟಾಪಾಗಿ ಕ್ಲಾಸ್ ರೂಮಿನ ಸ್ಟೇಜ್ ಮೇಲೆ ಹೋಗಿ ಸುಮ್ಮನೆ ನಿಂತನಷ್ಟೇ, ಕರೆಂಟು ತಗುಲಿದ ವಾನರರಂತೆ ತಮ್ಮ ತಮ್ಮ ಚಿತ್ರ-ವಿಚಿತ್ರ ಭಂಗಿಯಲ್ಲಿ ಅಂತಂತೆಯೇ ಕಲ್ಲುಗಟ್ಟಿಹೋದರು ಕ್ಲಾಸ್ಸಿನ ಅಷ್ಟೂ ಮಂದಿ ಹೊಸ ಬ್ಯಾಚಿನ ಪೋರ ಪೋರಿಯರು. ಕೆಲವರ ಬಾಯಿ ಊರಗಲದಷ್ಟು ತೆರೆದಿದ್ದರೆ, ಕೆಲವರ ಕೈ ತಲೆಯನ್ನು ಕೆರೆಯುತ್ತಾ ಹಾಗೆಯೆ ಅಂಟಿಕೊಂಡಿತ್ತು. ಕೆಲವರು ಡೆಸ್ಕ್ನ ಮೇಲೆ ವಸ್ತ್ರ ಧರಿಸಿದ ಗೊಮ್ಮಟೇಶ್ವರನಂತೆ ನಿಂತಿದ್ದರೆ, ಕೆಲ ಹುಡುಗರು ಹುಡುಗಿಯರ ಬೆಂಚುಗಳಿಂದ ನಿಧಾನವಾಗಿ ಹೊರಬರತೊಡಗಿದರು..! ತಾನು ಯಾರೆದು ಅವರಿಗೆ ನಯ ಪೈಸೆಯಷ್ಟು ಗೊತ್ತಿಲ್ಲ. ಸ್ಟೇಜಿನ ಮೇಲೆ ಬಂದು ನಿಲ್ಲುವವರೆಲ್ಲ ಶಿಕ್ಷಕರೇ ಅವಕ್ಕೆ! ಸಮಯವನ್ನು ಸದುಪಯೋಗ ಪಡಿಸಿಕೊಂಡ ಲೋಕೇಶ 'I Said, stand up' ಎಂದು ಜೋರಾಗಿ ಅರಚಿದ.. ಸಂತೆ ಮಾರ್ಕೆಟಿನ ವ್ಯಾಪಾರಿಗಳಂತೆ ಅರಚುತಿದ್ದ ಕ್ಲಾಸ್ಸು ಅಕ್ಷರ ಸಹ ಪಾಪದ ಮೂಕ ಪ್ರಾಣಿಗಳಂತಾಗಿ ಎದ್ದು ನಿಂತಿತ್ತು. ಕೊನೆಯ ಬೆಂಚಿನ ಕೆಲ ಹುಡುಗರು ತಾವು ಏನೋ ಮಹಾಪರಾದವನ್ನು ಮಾಡಿರುವಂತೆ ತಲೆಯನ್ನು ತಗ್ಗಿಸಿಕೊಂಡರು.


'ಲಾಸ್ಟ್ ಬೆಂಚ್ ಕಮ್ ಫಸ್ಟ್ .. ಫಸ್ಟ್ ಬೆಂಚ್ ಗೋ ಲಾಸ್ಟ್' ಎಂದು ಅತಿ ಗಡುಸಾಗಿ ಹೇಳಿದ ಲೋಕೇಶ. ಆತ ಹೇಳಿ ಮುಗಿಸುವ ಮೊದಲೇ ವಿನಿಮಯ ಪ್ರಕ್ರಿಯೆ ಶರವೇಗದಲ್ಲಿ ಪೂರ್ಣಗೊಂಡಿತ್ತು. ನಂತರ ಕೆಲಕಾಲ ಮೊದಲಿನ ಬೆಂಚಿನ ವಿದ್ಯಾರ್ಥಿಗಳನ್ನು ದುರುಗುಟ್ಟಿ ನೋಡತೊಡಗಿದ. ಪಾಪ ಅವರು ಅಳುವುದೊಂದೇ ಬಾಕಿ ಏನೋ ಎನ್ನುವಂತೆ ವರ್ತಿಸತೊಡಗಿದರು.


'So, class..' ಎಂದು ಕೊನೆಗೂ ಏನೋ ಹೇಳುವಂತೆ ಶುರು ಮಾಡಿದ. ವಿದ್ಯಾರ್ಥಿಗಳು ಆತ ಹೇಳದಿದ್ದರೂ ಟಕಟಕನೇ ತಮ್ಮ ನೋಟ್ ಬುಕ್ಕು ಹಾಗು ಪೆನ್ನನ್ನು ತೆಗೆದು ಕೂತರು.


'How many of you know how to do coding..?’ ಕೈಗಳನ್ನು ಹಿಂದಕ್ಕೆ ಕಟ್ಟಿ, ಇಲ್ಲದ ಸಣಕಲು ಹೊಟ್ಟೆಯನ್ನು ಸಾಧ್ಯವಾದಷ್ಟು ಮುಂಚಾಚಿ ತಲೆ ಆಕಾಶವನ್ನು ನೋಡುತ್ತಿದ್ದರೂ ಕಣ್ಣುಗಳು ಇಡೀ ಕ್ಲಾಸನ್ನೇ ನೋಡುವಂತೆ ವರ್ತಿಸತೊಡಗಿದ. ಪ್ರಶ್ನೆಯ ಉತ್ತರವಾಗಿ ಭಾಗಶಃ ಕೈಗಳು ಮೇಲ್ಬಂದವು. ಕೆಲವರು ಇಂಪ್ರೆಸ್ ಮಾಡಲು ಎಂಬಂತೆ ಎದ್ದು ನಿಂತು ಉತ್ತರಿಸಲೂ ಮುಂದಾದರು. ಸ್ಕೂಲಿನ ಚಾಳಿ ಎಂದು ಒಳಗೊಳಗೇ ನಗುತ್ತಾ ಸುಮ್ಮನಾದ ಲೋಕೇಶ.


'Then, how many of you how to do farming..?'


ಫಾರ್ಮಿನ್ಗ್ ಎಂದರೆ ಯಾವುದೂ ಕೋಡಿಂಗ್ ಲ್ಯಾಂಗ್ವೇಜ್ ಇರಬೇಕೆಂದು ಈ ಬಾರಿಯೂ ಸಾಕಷ್ಟು ಕೈಗಳು ಮೇಲ್ಬಂದವು. ಕೂಡಲೇ ತಲೆಯೊಳಗಿನ ಗಂಟೆ ಟಣ್ಣನೆ ಬಾರಿಸಿಯೋ ಏನೋ ಹಲವು ಕೈಗಳು ಪುನಃ ಕೆಳಗಿಳಿದವು. ಒಂದೆರಡು ಕೈಗಳಷ್ಟೇ ಲಂಬಕೋನದಲ್ಲಿ ನಿಂತಿದ್ದವು.


'Okay, how many of you like Pizza..?'


ಕ್ಲಾಸಿನ ಅಷ್ಟೂ ಕೈಗಳು ಮೇಲೆದ್ದವು.


'How many of you know how to make Pizza..? ' ವಿಚಿತ್ರವಾಗಿ ಮೂಡಿದ ಪ್ರೆಶ್ನೆಗೆ ಗೊಂದಲಗೊಂಡ ಮುಖಗಳು ಒಂದನೊಂದು ನೋಡಿಕೊಂಡವು. ಮೂರ್ನಾಲ್ಕು ಕೈಗಳಷ್ಟೇ ಅಲ್ಲಿ ಮೇಲ್ಬಂದವು. ಆಶ್ಚರ್ಯವೆಂಬಂತೆ ಆ ನಾಲ್ಕು ಕೈಗಳಲ್ಲಿ ಮೂರು ಕೈಗಳು ಹುಡುಗರದ್ದೇ ಆಗಿದ್ದಿತು!


'So class, what is the lesson you have learnt here?..first bench guys..?!’ ಎಂದಾಗ ಆಪತ್ಕಾಲದಲ್ಲಿ ಮೂಕಪ್ರಾಣಿಗಳು ಗುಂಪುಗಟ್ಟಿಕೊಳ್ಳುವಂತೆ ಆ ಬೆಂಚಿನ ಅಷ್ಟೂ ಹುಡುಗರು ಸಾಧ್ಯವಾದಷ್ಟು ಹತ್ತಿರತ್ತಿರಕ್ಕೆ ಜರುಗತೊಡಗಿದರು. ತಾವುಗಳ ಮದ್ಯೆ ಈಗ ಗಾಳಿಯೂ ಸಹ ನುಸುಳಲು ಸಾಧ್ಯವಿಲ್ಲವೆಂಬುದನ್ನು ಅರಿತ ಅವರು ಉತ್ತರಿಸಲು 'ನೀನು, ನೀನು' ಎಂಬಂತೆ ಒಬ್ಬರನೊಬ್ಬರು ತಿವಿಯತೊಡಗಿದರು. ಅವರ ತಲೆ ಇನ್ನೂ ಸಹ ಕೆಳಮುಖವಾಗಿಯೇ ಅಲುಗಾಡುತ್ತಿತ್ತು. ‘You red shirt..!’ ಅತ್ತಿಬ್ಬರು ಹಾಗು ಇತ್ತಿಬ್ಬರ ಒತ್ತುವಿಕೆಯಿಂದ ಬತ್ತಿದ ನಿಂಬೆಹಣ್ಣಿನಂತಾಗಿದ್ದ ಸಣಕಲು ದೇಹದ ಹುಡುಗನನ್ನು ಕೂಗಿದ ಲೋಕೇಶ. ಚಕ್ಕನೆ ಎದ್ದು ನಿಂತು ಏನೆಳಬೇಕೆಂದು ತೋಚದೆ ಬಡಬಡನೆ ತನ್ನೊಳಗೆ ತಾನೇ ಏನೇನೋ ಉದ್ಗರಿಸತೊಡಗಿದ ಆತ.


‘Sir, pizza is good but not that good.. good is a mom made roti.. pizza, they put sauce but roti is with coconut chutney..pizza no energy but roti full energy..’


ಆತನ ಅವಸ್ಥೆಯನ್ನು ಅರಿತ ಲೋಕೇಶ 'ಗುರು, ಸಾಕು ಕೂರಪ್ಪ..' ಎಂದು ಹೇಳಿದ, ಇಡೀ ಕ್ಲಾಸೇ ಗೊಳ್ಳೆಂದು ನಗತೊಡಗಿತು. ಅದನ್ನು ಕಂಡ ಆತ,


‘Shut up, I said.. Why the hell you people are laughing at him.. Coding doesn’t feed you and make your hunger gone. You cannot eat Money to get rid of hunger. Am I right ?? Life is not only about Studying, Coding & Earning. It’s all about Living... Learning & then Living... Creator has never sent us here with a degree attached. A farmer who invents a new kind of crop & earns few bugs in a year is far better than a person who works for an overseas firm and earns a lakh per month..’


ಈ ಬಾರಿ ಲೋಕೇಶ ತುಸು ಸೀರಿಯಸ್ಸಾಗಿಯೇ ಹೇಳಿದ. ತರಗತಿ ತದೇಕಚಿತ್ತದಿಂದ ಈತನ ಮಾತುಗಳನ್ನೇ ಕೇಳುತ್ತಿದ್ದವು.


ಈಗ ಹೆಚ್ಚು ಕೊರೆಯಲು ಸಮಯವಿಲ್ಲದೆ,


‘Okay, how many of you are having girlfriends here ?’ ಹುಡುಗರನ್ನು ಉದ್ದೇಶಿಸಿ ಆತ ಕೇಳಿದ.


ಭಯದಿಂದಲೋ , ನಾಚಿಕೆಯಿಂದಲೋ ಅಥವಾ ಅದೇ ವಾಸ್ತವವೋ ಏನೋ ಒಂದೂ ಕೈಗಳು ಅಲ್ಲಿ ಮೇಲೇಳಲಿಲ್ಲ.


‘See, this is what I don’t like. Guys know how to do coding but don’t know to have a girlfriend..! if not now then when?’


ಕೋರ್ಟ್ನಲ್ಲಿ ವಾದ ಮಾಡುವ ಲಾಯರುಗಳಂತೆ ಆತ ತನ್ನೆರಡು ಕೈಗಳನ್ನು ಗಾಳಿಯಲ್ಲಿ ತೇಲಿಸುತ್ತಾ ಅರಚತೊಡಗಿದ. ತರಗತಿ ಒಮ್ಮೆ ಜೋರಾಗಿ ನಕ್ಕಿತು. ಲೊಕೇಶನೂ ಈ ಬಾರಿ ಜೊತೆಗೂಡಿದ. ಕಾರಿಡಾರಿನಲ್ಲಿ ಹೋಗುತ್ತಿದ್ದ ಬೇರೆಯ ಡಿಪಾರ್ಟ್ಮೆಂಟಿನ ಶಿಕ್ಷಕರೊಬ್ಬರು ತರಗತಿಗಲ್ಲಿ ಎಂದೂ ಕೇಳದ ಒಕ್ಕೂರಲಿನ ನಗುವನ್ನು ಕೇಳಿ ಬಾಗಿಲಿನಿಂದ ಇಣುಕಿದರು. ಅದೃಷ್ಟವಶಾತ್ ಲೋಕೇಶನ ಮುಖಚಹರೆ ಅಷ್ಟಾಗಿ ತಿಳಿಯದಿದ್ದರಿಂದ ಆತನನ್ನು ನೋಡಿ ಬಹುಷಃ ಯಾರೋ ಹೊಸ ಲೆಕ್ಚರರ್ ಇರಬೇಕೆಂದುಕೊಂಡು ದೊಡ್ಡದಾದ ಮುಗುಳ್ ನಗೆಯನ್ನು ಬೀರಿ ವಾಪಸ್ಸಾದರು. ತಾನು ಇಲ್ಲೇ ಇದ್ದರೆ ಇನ್ನು ಉಳಿಗಾಲವಿಲ್ಲೆಂದು ಅರಿತ ಲೋಕೇಶ ಅಲ್ಲಿಂದ ಜಾಗ ಕೀಳಲು ಅನುವಾದ. ಸ್ಟೇಜಿನ ಮೇಲಿಳಿದು ಬಾಗಿಲಿನ ಹೊರಗೆ ಹೋಗಬೇಕು ಎನ್ನುವಷ್ಟರಲ್ಲಿ ಕೂಡಲೇ ನಿಂತು ಮತ್ತೊಮ್ಮೆ ತರಗತಿಯನ್ನುದ್ದೇಶಿಸಿ ..


'How many of you are ambitious' ಎಂದು ಕೇಳಿದ. ತರಗತಿಯ ಅಷ್ಟೂ ಕೈಗಳು ಆಕಾಶವನ್ನು ಮುಟ್ಟುವಂತೆ ಮೇಲೆದ್ದಿದ್ದವು…


**


ಲೊಕೇಶನ ಮಾತುಗಳನು ಕೇಳಿ ನನಗೆ ನಗುವನ್ನು ತಡೆಯಲಾಗಲಿಲ್ಲ.


'ಅಲ್ವೋ ಮಾರಾಯ .. ನಿನ್ನ ಫಾರ್ಮಿನ್ಗ್ ಬಿಸಿನೆಸ್ ನ ಅಲ್ಲೂ ತೂರ್ಸದ?! ಅಯ್ಯೋ, ಕತೆಯೇ.. ಏನೋ… ಮಾಸ್ ragging ಅಂದ್ರೆ ಇದು ನೋಡಪ್ಪ' ಎಂದು ಆತನ ಬೆನ್ನನ್ನು ತಟ್ಟಿದೆ.


'ಚುರ್ಕುಟ್ಸ್ .. ಅದ್ ಎಷ್ಟ್ ದಿನ ಸೆಲ್ಯೂಟ್ ಹೊಡಿತಾರೋ ಹೊಡಿಲಿ' ಎಂದ ಲೋಕೇಶ 'ಎಲ್ಲಪ್ಪ ನಮ್ಮ ಸ್ಯಾಡ್ ರಾಜೇಶ್ ಖನ್ನಾ..' ಎಂದು ಕೇಳಿದ.



****



ನಾಟಕದ ರಿಹರ್ಸಲ್ಗೆ ಒಬ್ಬೊಬ್ಬರೇ ಹುಡುಗರನ್ನು ಕರೆದು ಸ್ವಾತಂತ್ರ್ಯ ಸಂಗ್ರಾಮದ ಒಂದೆರೆಡು ಡೈಲಾಗ್ ಗಳನ್ನು ಹೇಳುವಂತೆ ಪೀಡಿಸುತ್ತಿದ್ದ ಸಮಾಜ-ವಿಜ್ಞಾನದ ಮೇಷ್ಟು ತಮ್ಮ ಈ ಅರಸುವಿಕೆಯ ಕಾರ್ಯದಲ್ಲಿ ಬೆಳಗಿನಿಂದ ಸುಸ್ತಾಗಿ ಹೈರಾಣಾಗಿದ್ದರು. ಮುಂಬರುವ ಸ್ವಾತಂತ್ರ್ಯ ದಿನಾಚರಣೆಗೆ ಮಕ್ಕಳಿಂದ ನಾಟಕವಾಡಿಸುವ ಹೊಣೆಯನ್ನು ಶಾಲೆಯ ಮ್ಯಾನೇಜ್ಮೆಂಟ್ ಅವರಿಗೆ ವಹಿಸಿದ್ದಿತ್ತು. ಅವರು ಕೆಚ್ಚೆದೆಯ ಬಿಸಿರಕ್ತದ ಭಗತ್ ಸಿಂಗ್ ಒಬ್ಬನನ್ನು ಅಲ್ಲಿ ಅರಸುತ್ತಿದ್ದರು. ಸುಮಾರು ಐವತ್ತು ಹುಡುಗರ ಆಡಿಷನ್ ಪಡೆದುಕೊಂಡ ಮೇಲೆ ಕೊನೆಯದಾಗಿ ಎರಡನೇ ಬೆಂಚಿನ ಕೊನೆಯಲ್ಲಿ ಕೂತಿದ್ದ ಆದಿಯ ಮೇಲೆ ಅವರ ಕಣ್ಣು ಬಿದ್ದಿತು. ತನ್ನ ಕೈಗಳನ್ನು ಗಲ್ಲದ ಮೇಲಿರಿಸಿ ಪಕ್ಕದ ಸಾಲಿನಲ್ಲಿದ್ದ ಹುಡುಗಿಯೊಬ್ಬಳ ಎಣ್ಣೆ ಹಾಕಿ ಬಾಚಿದ ಜೋಡಿ ಜುಟ್ಟುಗಳನ್ನು ನೋಡುತ್ತಾ ಆಸಾಮಿ ಆಕೆ ಖುಷಿಯೇ ಯಾಕಾಗಿರಬಾರದೆಂಬ ಕಲ್ಪನಾ ಲೋಕದಲ್ಲಿ ಕಳೆದುಹೋಗಿದ್ದ. ಮೇಷ್ಟ್ರ ಸದ್ದು ಆತನನ್ನು ಬಡಿದೆಬ್ಬಿಸಿತು.


‘ಏನಯ್ಯ ನಿನ್ ಹೆಸ್ರು..' ಎಳೆಯ ಮಕ್ಕಳದರಾದರೆ ಚಡ್ಡಿ ಒದ್ದೆಯಾಗುವಂತಿತ್ತು ಅವರ ಆ ಧ್ವನಿಯ ಆರ್ಭಟ.


'ಆದಿಶೇಷ ಸರ್..' ಯಾವುದೇ ಅಳುಕಿಲ್ಲದೆ ಉಚ್ಚಸ್ವರದಲ್ಲಿ ಮೂಡಿದ ಆತನ ಸದ್ದನ್ನು ಕೇಳಿ ಮೇಷ್ತ್ರು ಆತನನ್ನು ಹತ್ತಿರಕ್ಕೆ ಕರೆದರು.


‘ಬಾರಯ್ಯ ಇಲ್ಲಿ .. ತಗೋ ಈ ಸಾಲನ್ನು ಓದ್ಕೊಂಡು ಅದನ್ನ ಆಕ್ಟ್ ಮಾಡಿ ತೋರ್ಸು'.


ಒಂದಿನಿತು ಭಯವಿಲ್ಲದೆ ತೀರಾ ಸಾಮನ್ಯವಾಗಿಯೇ ಅವರ ಬಳಿಗೆ ಬಂದ ಆದಿ ಅವರ ಕೈಲಿದ್ದ ಹಾಳೆಯ ಸಾಲನ್ನು ಮನದೊಳಗೆ ಓದಿಕೊಂಡ. ಸ್ವಲ್ಪ ಸಮಯದ ನಂತರ,


'ಯಾರ್ ಸಾರ್ ಇದು..?' ಎಂದು ಅಳುಕಿಲ್ಲದ ಪ್ರೆಶ್ನೆಯನ್ನು ಕೇಳಿದ. ಆದಿಯ ಪ್ರೆಶ್ನೆಗೆ ಮೇಷ್ಟು ಒಮ್ಮೆಲೇ ಚಕಿತರಾದರು. ಅಲ್ಲಿಯವರೆಗೂ ಯಾವೊಬ್ಬ ಹುಡುಗನೂ ಭಯದಿಂದಲೋ ಅಥವಾ ಅಂಜಿಕೆಯಿಂದಲೋ ಗಜಕಾಯದ ಮೇಷ್ಟ್ರಿಗೆ ಮರು ಪ್ರೆಶ್ನೆಯನ್ನು ಮಾಡದೇ ಅವರು ಹೇಳಿದ ವಾಕ್ಯಗಳನ್ನು ಚಾಚೂತಪ್ಪದೆ ಹೇಳಿ ವಾಪಸ್ಸಾಗುತ್ತಿದ್ದರೆ ವಿನಹಃ ಬೇರೇನೂ ಕೇಳುವ ಆತ್ಮಹತ್ಯೆಯಂತಹ ಕಾರ್ಯಕ್ಕೆ ಹೋಗಿರಲಿಲ್ಲ.


ಆದರೂ ಪರೀಕ್ಷೆ ಮಾಡುವ ಎಂದು ಅವರು,


'ಇದನ್ನ್ ಯಾರ್ ಹೇಳಿದ್ದು ಅನ್ನೋದ್ ಗೊತ್ತಿಲ್ವ ನಿಂಗೆ ..?! ಯಾವ್ ಸೀಮೆ ಹುಡ್ಗನೋ ನೀನು?!' ಗದರಿಸುವ ಧ್ವನಿಯಲ್ಲಿ ಅವರು ಕೇಳಿದರು.


'ಸಾರ್.. ನಿಜ್ವಾಗ್ಲೂ ನಂಗೆ ಇದು ಯಾರ್ ಅಂದಿದ್ದು ಅಂತ ಗೊತ್ತಿಲ್ಲ ಸಾರ್' ಎಂದ ಆದಿಶೇಷ.


'ಇಂಡಿಯನ್ ಆಗಿ ಇವ್ನ ಬಗ್ಗೆ ಇಷ್ಟೂ ಗೊತ್ತಿಲ್ಲ ಅಂದ್ರೆ ನೀನ್ ವೇಸ್ಟು..' ಎಂದ ಮೇಷ್ಟ್ರು ಉತ್ತರವನ್ನು ಅಪೇಕ್ಷಿಸುವ ನೆಪದಲ್ಲಿ ಕ್ಲಾಸಿನ ಇತರ ವಿದ್ಯಾರ್ಥಿಗಳೆಡೆಗೆ ತಿರುಗಿದರು. ಅಲ್ಲಿಯವರೆಗೂ ಮುಂದೆ ನೆಡೆಯುತ್ತಿದ್ದ ಘಟನೆಯಲ್ಲಿ ತಾವೂ ಪಾತ್ರಧಾರಿಗಳಾಗುವೆಂಬ ಅರಿವಿಲ್ಲದೆ ತಮ್ಮ ಪಾಡಿಗೆ ತಾವೇ ಗುಸುಗುಸುಗುಡುತ್ತಿದ್ದ ಗುಂಪು ಒಮ್ಮೆಲೇ ಜಾಗೃತಗೊಂಡಿತು. ನಿರಾಯಾಸವಾಗಿ ಅವುಗಳ ತಲೆಗಳು ಕೆಳಕ್ಕೆ ಮಡಚಿಕೊಂಡವು. ಅದರ ಸಂಜ್ಞೆಯನ್ನು ಅರಿತ ಮೇಷ್ಟ್ರು ತಮ್ಮ ಹಣೆಯನ್ನು ಚಚ್ಚಿಕೊಳ್ಳುತ್ತಾ ವೀರ ಯೋಧ ಭಗತ್ ಸಿಂಗ್ನ ಬಗ್ಗೆ ಸವಿವರವಾಗಿ ವಿವರಿಸತೊಡಗಿದರು. ಸಹಜತೆಗೆ ತೀರಾನೇ ಹತ್ತಿರವಾಗಿದ್ದ ಅವರ ವರ್ಣನೆ ಆದಿಗೆ ಗತಕಾಲದ ಭಗತ್ ತನ್ನ ಮುಂದೆಯೇ ಬಂದು ನಿಲ್ಲುವಂತೆ ಮಾಡಿತು. ಆತನ ತುಂಟತನ,ಎಲ್ಲಿರದ ಎದೆಗಾರಿಕೆ, ಬೆಂಬಿಡದ ಛಲ, ಎಂದಿಗೂ ಮುಗಿಯದ ದೇಶಪ್ರೇಮ, ಎಂತಹ ನೋವನ್ನೂ ಸಹಿಸುವ ಧಿಟ್ಟತನ ಎಲ್ಲವೂ ಆದಿಯ ರೋಮು ರೋಮುಗಳನ್ನು ಎದ್ದು ನಿಲ್ಲುವಂತೆ ಮಾಡಿದವು. ಬ್ರಿಟಿಷರಿಗೆ ಸೆರೆಸಿಕ್ಕ ಭಗತ್ ಅಂದು ನಗು ನಗುತ್ತಲೇ 'Inquilab Zindabad' ಎನುತ ನೇಣುಗಂಬವನ್ನೇರಿದ ಎಂಬುದನ್ನು ಕೇಳಿ ಆದಿಗೆ ನಂಬಿಕೆಯೇ ಬರಲಿಲ್ಲ.


'ರಣರಂಗದ ರಣಕಹಳೆಗೆ ಬಾಲಮುದುಡಿ ಜಾಗಕೀಳುವ ಹೇಡಿಗಳಿಗೆ ನಾನೇಕೆ ತಲೆಬಾಗಲಿ..? ನೀವುಗಳು ನನ್ನ ಈ ದೇಹವನ್ನು ಬಂಧಿಸಿರಬಹುದು ಆದರೆ ನನ್ನ ಈ ಮನಸ್ಸನ್ನಾಗಲಿ ಅಥವ ಯೋಚನೆಯನ್ನಾಗಲಿ ಅಲ್ಲ.. ಒಬ್ಬ ಭಾರತೀಯನನ್ನು ನೀವು ತುಳಿಯಬಹುದು ಆದರೆ ಆತನ ಆಲೋಚನೆಗಳನಲ್ಲ.. ಈ ಮದ್ದುಗುಂಡುಗಳಾಗಲಿ, ಗನ್ನುಗಳಾಗಲಿ ದೇಶದಲ್ಲಿ ಕ್ರಾಂತಿಯನ್ನು ಮೂಡಿಸವು ಬದಲಾಗಿ ಆಲೋಚನಾ ಬರಿತ ಮನಸ್ಸುಗಳು ಮಾತ್ರ ಅಂತಹ ಮಹಾಕ್ರಾಂತಿಯ ಹರಿಕಾರರಾಗಬಹುದು.. ನಿಮ್ಮ ಉಳಿಗಾಲ ಮುಗಿದು ಅಳಿವಿನ ದಿನಗಳು ಶುರುವಾಗಿವೆ..Inquilab..' ಎಂದು ಜೋರಾಗಿ ಕೂಗುತ್ತಾನೆ ಆದಿ. ಇಡೀ ತರಗತಿಯಲ್ಲಿ ಆತನ ಧ್ವನಿ ಪ್ರತಿಧ್ವನಿಸುತ್ತದೆ.


'Zindabad..' ಎಂದ ಮೇಷ್ಟ್ರು ಒಮ್ಮೆ ಜೋರಾಗಿ ಚಪ್ಪಾಳೆಯನ್ನು ತಟ್ಟಿದರು.


ಒಂದಿನಿತು ಅಳುಕಿಲ್ಲದೆ ಮೂಡಿದ ಆ ಕಣ್ಣಿನ, ಕಣ್ಣ ಉಬ್ಬಿನ ಮೇಲಿನ ಪ್ರಚಂಡ ಅಭಿವ್ಯಕ್ತಿಯನ್ನು ಕಂಡ ಮೇಷ್ಟು ವಿಸ್ಮಿತರಾದರು.


'ಏನಯ್ಯ .. ಊರಲ್ಲಿ ನಾಟಕ ಕಂಪನಿಯಲ್ಲೇನಾದರೂ ಕೆಲ್ಸ ಮಾಡ್ತಿಯಾ?' ನಗುತ್ತಾ ಅವರು ಕೇಳಿದರು.


'ಇಲ್ಲ ಸಾರ್..' ಎಂದ ಆತ ಕಾಗದವನ್ನು ಅವರಿಗೆ ಹಿಂದುರಿಗಿಸಿ ತನ್ನ ಜಾಗಕ್ಕೆ ಹೋಗಿ ಕುಳಿತ. ಎಣ್ಣೆ ಹಾಕಿ ಬಾಚಿದ ಆ ಹುಡುಗಿಯ ಕೂದಲುಗಳ ಮೇಲೆ ಆತನ ದೃಷ್ಟಿ ಪುನ್ಹ ಕೇಂದ್ರೀಕೃತವಾಯಿತು…


ಅದೆಂತಹ ತುಮುಲ? ಅದೆಂತಹ ಆ ಆಕರ್ಷಣೆ? ನಟನೆ. ಎಲ್ಲೂ ಕಲಿಯದೇ, ಎಲ್ಲಿಯೂ ನೋಡದೆ ತನ್ನೊಳಗೆ ತಾನೇ ಮೂಡಿದ ಆ ಭಾವಲಹರಿಯ ನಟನ ಚತುರತೆ ನನ್ನನು ಶಾಲೆಯ ಹೀರೊ ಮೆಟೀರಿಯಲ್ಲನ್ನಾಗಿ ಮಾಡಿತು. ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ತಾಂತ್ಯಾ ಟೋಪೆ, ಸಾವರ್ಕರ್ ಅಥವಾ ಭಾಷಣ, ಚರ್ಚೆ ಅಥವಾ ಮತ್ಯಾವುದೇ ಕಾರ್ಯಕ್ರಮವಾದರೂ ನನ್ನೆಸರೇ ಮೊದಲು!


**


'Shit ..!!' ಟೆರಸಿನ ಪ್ಯಾರಾಫಿಟ್ ವಾಲ್ನ ಮೇಲೆ ತನ್ನ ಕೈಯನ್ನು ಜೋರಾಗಿ ಬಡಿದ ಆದಿ. ಕಲಾವಿದನಾಗುವ ಕನಸ್ಸನ್ನು ಕಂಡಿದ್ದ ಆತ ಪ್ರಸ್ತುತ ಅರ್ಥವಲ್ಲದ ಕಲಿಕೆ, ಗುರಿಯಿಲ್ಲದ ಜೀವನ, ಖುಷಿಯಿಲ್ಲದ ಮನೆ ಇವೆಲ್ಲದರ ನಡುವೆ ನಲುಗಿ ನರಳುತ್ತಿರುವುದರ ಹತಾಶೆ ಒಮ್ಮೆಲೇ ಉಕ್ಕಿತು. ನನ್ನ ನೋಡಲು, ನನ್ನ ಮಾತನ್ನು ಕೇಳಲು ಸಾಗರೋಪಾದಿಯಲ್ಲಿ ಜನ ಸೇರುವಂತಾಗುವ ಆ ದಿನ ದಾರ ತುಂಡಾದ ಗಾಳಿಪಟದಂತೆ ಗುರಿಯಿರದ ದಿಕ್ಕಿನಲ್ಲಿ ಹಾರಿ ಮರೆಯಾಗತೊಡಗಿತು.


ಆದರೆ ಇಂದು ಕೋಪ ಮೂಡಲು ಕಾರಣ ಮತ್ತೊಂದಿತ್ತಿತು. ಖುಷಿಯ ಮೊಬೈಲ್ ನಂಬರ್ ದೊರೆತ ನಂತರ ನಿಶಾಚರಿ ಪ್ರಾಣಿಯಂತಾಗಿರುವ ಆತ ಮಧ್ಯರಾತ್ರಿಯವರೆಗೂ ಸಾಕು ಸಾಕೆನಿಸುವಷ್ಟು ಮಾತನಾಡುತ್ತಿದ್ದ. ಆ ನಗುವೇನು, ಆ ಮಾತಿನ ವರಸೆಯೇನು? ಇನ್ನು ಪುಣ್ಯಾತ್ಮನ Sense of Humor ಅಂತೂ ಲೊಕೇಶನನ್ನೇ ಮೀರಿಸುವಂತಿತ್ತು. ಹುಡುಗ ಹೊಸ ಉರುಪಿನಲ್ಲಿ ಹೊಳೆಯುತ್ತಿದ್ದ. ಬಹುಷಃ ಆ ಖುಷಿಯಲ್ಲೇ ಅನಿಸುತ್ತೆ ಕಳೆದ ಇಂಟರ್ನಲ್ ನಲ್ಲಿ ಕೊನೆಯ ಒಂದು ಘಂಟೆಯಷ್ಟೇ ಓದಿ ಇಡೀ ಕ್ಲಾಸ್ಸಿಗೆ ಮೊದಲು ಬಂದದ್ದು. ಭಾರತ ಪಾಕಿಸ್ತಾನದ ನೆಲದಲ್ಲಿ ಚೊಚ್ಚಲ ಒಂಡೇ ಸರಣಿಯನ್ನು ಗೆದ್ದು ಬೀಗಿದಾಗ ಯಾರು ಸಹ ಊಹಿಸಿರದಂತೆ ಹಾಸ್ಟೆಲ್ಲಿನ ಟೆರೇಸಿನ ಮೆಲೋಗಿ ತನ್ನ ಅಂಗಿಯನ್ನು ಕಳಚಿ ಗಾಳಿಯಲ್ಲಿ ತೂರುತ್ತಾ ಇಡೀ ಸಿಟಿಗೆ ಕೇಳುವಂತೆ ಅರಚಿದ್ದ. ಆತನ ಆ ಎಕ್ಸೈಟ್ ಮೆಂಟ್ ನನಗಂತೂ ಕಲ್ಪನೆಗೂ ಮೀರಿದ ದೃಶ್ಯವಾಗಿದ್ದಿತು. ಆದಿಯೊಳಗಿದ್ದ ಮತ್ತೊಬ್ಬ ಆದಿಯನ್ನು ಅದು ಪರಿಚಯಿಯಿಸಿತು. ಹಾಗಾಗಿ ಇತ್ತೀಚೆಗೆ ತನ್ನ ಹಳೆಯ ಕನಸ್ಸುಗಳಿಗೆಲ್ಲ ಪುನ್ಹ ಬಣ್ಣವನ್ನು ತುಂಬುವ ಕೆಲಸವನ್ನು ಆತ ಮಾಡುತ್ತಿದ್ದಾನೆ. ವ್ಯರ್ಥ ಮಾಡಿದ ಸಮಯವನ್ನು ನೆನೆದು ಮರುಗುತ್ತಾನೆ. ಈಗ ಪ್ಯಾರಾಫಿಟ್ ವಾಲ್ನ ಮೇಲೆ ತನ್ನ ಕೈಯನ್ನು ಬಡಿದದ್ದೂ ಸಹ ಅಂತಹ ಒಂದು ಕಾರಣಕ್ಕೆ. ಒಟ್ಟಿನಲ್ಲಿ ಖುಷಿ, ಸುಪ್ತವಾಗಿದ್ದ ಆದಿಶೇಷನನ್ನು ಜಾಗೃತಗೊಳಿಸಿದ್ದಾಳೆ.


‘ಜಿಂದಗಿ ... ಕೈಸಿ ಪಹೇಲಿ ಹೈ..’ ಎನ್ನುತ ತನ್ನನ್ನುದ್ದೇಶಿಸಿ ಹಿಂದಿನಿಂದ ಹಾಡುತ್ತಾ ಬಂದ ನಮ್ಮನ್ನು ಕಂಡು ತನ್ನ ಯೋಚನಾಲೋಕದಿಂದ ಇಹಲೋಕಕ್ಕೆ ಬಂದ ಆದಿ.


'ನೀನೋ .. ನಿನ್ ಟೆರೆಸೊ , ಯಾವಾಗ್ ನೋಡಿದ್ರೂ ಇದನ್ನ್ ಬಿಟ್ ಕೆಳಗ್ ಬರೋದೇ ಇಲ್ಲ ಅಂತಿಯಲ್ಲ ಮಾರಾಯ.. ಬೈ ದ ವೆ ನಿನ್ ಅತ್ಗೆನ ಏನಾದ್ರೂ ನೋಡಿದ್ಯಾ…' ತನ್ನ ಸಹಜ ಮೂದಲಿಸುವ ಧ್ವನಿಯಲ್ಲಿ ಲೋಕೇಶ ಕೇಳಿದ.


'ಹುಂ.. ಬಂದಿದ್ರು.. ರಾಕೀ ಹಬ್ಬಕ್ಕೆ ರಾಕಿ ಕಟ್ಬೇಕು .. ಲೋಕೇಶಂಗೆ ಯಾವ ಕಲರ್ ಇಷ್ಟ ಅಂತ ಕೇಳಿದ್ರು' ಎಂದ ಆದಿ.


ಅಚಾನಕ್ಕಾಗಿ ಮೂಡಿದ ಆತ ಉತ್ತರಕ್ಕೆ ನಾನು ಗಹಗಹಿಸಿ ನಗಾಡಿದೆ. ತೀರಾ ಏಕಾಂತದಲ್ಲಿದ್ದಾಗ ಆದಿಯನ್ನು ಕೆಣಕುವುದು ತನಗೇ ತಾನೇ ಸಂಕಷ್ಟವನ್ನು ಆಹ್ವಾನಿಸಿಕೊಂಡ ಹಾಗೆ ಎಂದು ಮನಗಂಡ ಲೋಕೇಶ,


'ನನ್ನ ಗುಡ್ಡ ಎಷ್ಟ್ ಆರಾಮಾಗಿದೆ ಅಲ..' ಎಂದು ಕಾಲೇಜಿನಿಂದ ಸುಮಾರು ನಾಲ್ಕೈದು ಕಿಲೋಮೀಟರ್ ದೂರದಲ್ಲಿದ್ದ ಪಾಚಿಗಟ್ಟಿದ್ದ ಬಂಡೆಯಂತೆ ಕಾಣುತ್ತಿದ್ದ ಗುಡ್ಡವನ್ನು ನೋಡಿದ. ಆ ಗುಡ್ಡದ ಬುಡಕ್ಕೇ ಲೊಕೇಶನ ಗದ್ದೆಗಳು ಚಿಗುರು ಬಿಡುತ್ತಿದ್ದುವು ಹಾಗು ಆತ ಬೆಳ್ಳಂಬೆಳಗ್ಗೆ ಜಾಗಿಂಗೆಂದು ಅಲ್ಲಿಗೆ ಹೋದಾಗಲೆಲ್ಲ ಒಂದು ದಿನ ಗುಡ್ಡದ ತುದಿಯನ್ನು ಹತ್ತೇ ತೀರಬೇಕೆಂದು ಹೇಳಿಕೊಳ್ಳುತ್ತಿದ್ದ.


'ತನ್ನ ಮೇಲೆ ಅದೆಷ್ಟೋ ಮರಗಿಡಗಳು, ಪ್ರಾಣಿ ಪಕ್ಷಿಗಳನ್ನು ಸಾಕಿಕೊಂಡು ಅವುಗಳೆಲ್ಲದರ ಚೆಲ್ಲಾಟ, ತುಂಟಾಟ, ಬಡಿದಾಟಗಳನೆಲ್ಲ ಸಹಿಸಿಕೊಂಡು ದೂರದಿಂದ ಮಾತ್ರ ಶಾಂತವಾಗಿ ನಿಂತಿರುವಂತೆ ಕಾಣುವ ಅದನ್ನು ನೋಡಿದರೆ ಅದಕ್ಕೂ ನಮಗೂ ಏನೂ ವ್ಯತ್ಯಾಸವಿಲ್ಲ ಅನ್ಸಲ್ವಾ..' ಎಂದು ಕೇಳಿದ ಆದಿ.


ಆತನ ಮಾತುಗಳು ನನ್ನಲ್ಲಿ ಏನೋ ಒಂದು ಬಗೆಯ ಹೊಸ ಆಲೋಚನೆಯನ್ನು ಹುಟ್ಟು ಹಾಕಿದವು. ನಂತರದ ಕೆಲ ನಿಮಿಷಗಳ ಕಾಲ ಮೂವರು ಆ ಬೆಟ್ಟವನ್ನೇ ದಿಟ್ಟಿಸುತ್ತಾ ಏಕಾಂತವಾದೆವು. ಅಚಾನಕ್ಕಾಗಿ ಮೂಡಿದ ನಿಶಬ್ದವನ್ನು ಭೇದಿಸಲು ಲೋಕೇಶ, 'ನೆಕ್ಸ್ಟ್ ವೀಕ್, ಟ್ರೆಕ್ ಟು ದಿ ಬೆಟ್ಟ' ಎಂದ.


ಒಂದಿನಿತು ಯೋಚಿಸದೆ ನಾನು ಹಾಗು ಆದಿ ಸಮ್ಮತಿಸುವಂತೆ ತಲೆಯಾಡಿಸಿದೆವು.





****



‘ಏನೋ ಗೊತ್ತಿಲ್ಲ.. ಒಂದೊಂದ್ ಸಾರಿ Intellectuality ಬಗ್ಗೆ ಮಾತಾಡ್ತಾರೆ.. ಒಮ್ಮೊಮ್ಮೆ ಪ್ರೀತಿನೇ ಎಲ್ಲಾ ಅಂತಾರೆ... ನಿನ್ನೊಬ್ಬನೆ ನಾನು ಟ್ರಸ್ಟ್ ಮಾಡೋದು ಅಂತಾರೆ .. ಇವೆಲ್ಲಾವನ್ನ ಸೇರ್ಸಿ ನ್ಯೂಸ್ ಪೇಪರ್ಗೆ ಆರ್ಟಿಕಲ್ ಕೂಡ ಬರೀತಾರೆ.. ಮೊನ್ನೆ ನಾನ್ ಒಬ್ಬ ಹುಡುಗನ್ನ ಜೀವನ ಪೂರ್ತಿ ಲವ್ ಮಾಡ್ಬೇಕು ಆದ್ರೆ ಮದ್ವೆ ಅವನ್ನ ಆಗ್ಬಾರ್ದು, ಮದ್ವೆ ಬೇರೆ ಯಾರ್ನೋ ಆಗಿ ಈ ಹುಡ್ಗನ ಯಾವತ್ತೂ ಪ್ರೀತಿ ಮಾಡ್ತಾ ಇರ್ಬೇಕು ಅಂತಾರೆ.. ನನಗಂತೂ ಮುಂದೆ ಏನ್ ಮಾಡ್ಬೇಕು ಅಂತ ತಿಳಿತಾ ಇಲ್ಲ..' .


ಕೆಲ ತಿಂಗಳುಗಳ ಸಲಿಗೆಯಲ್ಲೇ ರಾಧಾ ನನಗೆ ತೀರಾನೇ ಹತ್ತಿರವಾಗಿದ್ದರು. ನನಗಿಂತ ದೊಡ್ಡವರು. ಜಾತಿ ಕುಲ ಗೋತ್ರವಂತೂ ಇದ್ದರೂ ಗೊತ್ತಿರದವರು.. ಆಕೆಗೆ ನನ್ನ ಮೇಲೆ ಗೆಳೆಯನೆಂಬ ಕಾಳಜಿ ಬಿಟ್ಟು ಬೇರ್ಯಾವ ಬಗೆಯ ಭಾವಗಳು ಇವೆಯೋ, ಇಲ್ಲವೋ? ನಾ ಕಾಣೆ. ಆದಷ್ಟು ಬೇಗ ಈ ಸಲಿಗೆಗೆ ಸಂಬಂಧವೊಂದನ್ನು ಕಟ್ಟಿಬಿಡಬೇಕೆಂಬ ಆಸೆಯಿದ್ದರೂ ಮುಂದಿನ ಕಪ್ಪಾದ ಹಾದಿ ನನ್ನನು ಪ್ರತೀ ಬಾರಿಯೂ ಕಟ್ಟಿ ನಿಲ್ಲಿಸುತ್ತಿತ್ತು. ಈಗ ಸಮುದ್ರದ ಈಜಿನಂತೆ ಮುಂದೆ ಹೋದಷ್ಟೂ ಆಳ ವಿಪರೀತವಾಗತೊಡಗಿದೆ. ಕೆಲವೊಮ್ಮೆ ಭಯವೂ ಆಗುತ್ತದೆ. ಒಂತೊಮ್ಮೆ ಎಲ್ಲರನ್ನೂ ಒಪ್ಪಿಸಿ, ಅದೇನೇ ಆದರೂ ಸರಿಯೇ ಎಂದು ಈಕೆಯೊಟ್ಟಿಗೆ ಮದುವೆಯಾದರೆ? ಆಗ ಮೂಡುವ ನಂತರದ ಪ್ರೆಶ್ನೆಯೇ , ನನ್ನ ಜೀವನದ ಗುರಿ ಅಷ್ಟಕ್ಕೇ ಸೀಮಿತವೇ? ಆಕೆಯನ್ನು ಕೊನೆಯವರೆಗೂ ನಗಿಸುವುದು, ಸುಖಿಸುವುದು, ದುಡಿಯುವುದು, ಮನೆ, ಮಕ್ಕಳು..ನನಗಿದೆಲ್ಲ ಸಾದ್ಯವುಂಟೇ? ಇಲ್ಲ. ಗೊತ್ತಿಲ್ಲ! ಆದರೆ ಆಕೆಯೆಂದರೆ ನನಗೇನೋ ಒಂದು ಮಧುರ ಭಾವ. ಆ ಮಲ್ಲಿಗೆ ಹೊವಿನಂತಹ ಅರಳಿದ ಮುಖವನ್ನು ನೋಡಿದರೆ ದಿನದ ಜಂಜಾಟವೆಲ್ಲ ಮಂಗಮಾಯಾ. ಜೊತೆಗೆ ಅದೇನೋ ಒಂದು ಬಗೆಯ ವಿಪರೀತ ಆಕರ್ಷಣೆ. ಎಂತಹ ಜಾಗದಲ್ಲೂ ಕ್ಷಣಮಾತ್ರದಲ್ಲೇ ಮತ್ತೇರಿಸುವ ಆಕೆಯ ಆ ಮೈಮಾಟ ನಲಿಯುವ ನವಿಲಿಗೆ ಚಿನ್ನದ ಗರಿಗಳಂತೆ. ಅಮೋಘ. ಅನನ್ಯ. ಆದರೆ ನನ್ನ ಹಾಗು ಆಕೆಯ ಸಂಬಂಧ ಕೇವಲ ಸಲುಗೆಯಾಗಿರಬಾರದು. ಆಕರ್ಷಣೆಯಂತೂ ಬಿಲ್ಲಕುಲ್ ಇರಲೇಬಾರದು. ಆದರೆ ನನ್ನ ಹೃದಯ ಸ್ವಚ್ಛಂದವಾದರೂ ಮನಸ್ಸು ಮಾತ್ರ ತದ್ವಿರೋಧಿ. ಎಂದಿಗೂ ಅದು ಹೇಳಿದಂತಯೇ ನೆಡೆಯಬೇಕು! I hate it.




Continue...

No comments:

Post a Comment