Saturday, June 27, 2020

ಪಯಣ - 6

...ಆಶ್ಚರ್ಯದಿಂದ ಇಬ್ಬರೂ ರೋಮಿನ ಹೊರಗೆ ನೋಡತೊಡಗಿದೆವು. ಆಕೆಯ ಮಾತಿನ ಸದ್ದನ್ನು ಕೇಳಿ ಓನರ್ ಅಂಕಲ್ ಪರೀಕ್ಷಿಸಲೆಂದು ಮೇಲೆ ಬಂದಿರಬಹುದೇ? ಇದ್ದರೂ ಇರಬಹುದು. ಇಡೀ ಕಟ್ಟಡದ ಸಿಸಿಟಿವಿ ಕ್ಯಾಮೆರಮ್ಯಾನ್ ಆಗಿರುವ ಆತ ರಾಧಾ ಬಂದಿದ್ದನ್ನೂ ನೋಡಿರಬಹುದು. ಕೇಳಿದರೆ ಎಕ್ಸಾಮ್ಸ್ ಗೆ ಪರ್ಸನಲ್ ಟ್ಯೂಷನ್ ತೆಗೊಂತ ಇದ್ದೀನಿ ಎಂದು ಉತ್ತರಿಸಬಹುದು. ಆದರೆ ಆತ ನಂಬನು. ನಂಬದಿದ್ದರೆ ಕತ್ತೆ ಬಾಲ ಎಂದು ಮೇಲೆದ್ದೆ. ಏನೂ ಆಗುವುದಿಲ್ಲವೆಂದು ಆಕೆಯ ಕಿವಿಯ ಬಳಿ ನಿಧಾನವಾಗಿ ಉಸುರಿ ನಾವಿದ್ದ ರೂಮಿನ ಬಾಗಿಲನ್ನು ಎಳೆದುಕೊಂಡು ಹೊರಬಂದೆ. ಮತ್ತೊಮ್ಮೆ ಬೆಲ್ಲು ಬಡಿಯಿತು. ಮೊದಲಬಾರಿಗೆ ಆ ಬಾಗಿಲಿಗೆ ಮೂರು ಲಾಕ್ ಗಳನ್ನು ಹಾಕಿದ್ದೆ. ಒಂದೊಂದನ್ನೇ ನಿಧಾನವಾಗಿ ತೆಗೆಯತೊಡಗಿದೆ. ಓನರ್ ಅಂಕಲ್ನ ಒಟ್ಟಿಗೆ ಅವರ ಮಡದಿಯೂ ಬಂದಿದ್ದರೆ ಏನು ಮಾಡುವುದೆಂದು ಯೋಚಿಸುತ್ತಾ ಬಾಗಿಲನ್ನು ತೆರೆದರೆ ಆಶ್ಚರ್ಯವೊಂದು ಕಾದಿತ್ತು. ಸೆಪ್ಪೆಮೋರೆಯನ್ನು ಹಾಕಿಕೊಂಡು ಆದಿ ತನ್ನ ಲಗೇಜ್ ಬ್ಯಾಗಿನೊಟ್ಟಿಗೆ ಅಲ್ಲಿ ನಿಂತಿದ್ದಾನೆ!

**

'ಏನಾಯಿತೋ ಮಚಿ.. ರಾತ್ರಿನೇ ಯಾಕೋ ಬಂದ್ಬಿಟ್ಟೆ?' ನಾನು ಕೇಳಿದ ಪ್ರೆಶ್ನೆಗೆ ಆದಿ ಕೂಡಲೇ ಉತ್ತರಿಸಲಿಲ್ಲ. ಏನೂ ಆಗಿಲ್ಲವೆಂದು, ನಾಳೆ ಸಾರಿಗೆ ನೌಕರರು ಮುಷ್ಕರ ಊಡಿ ರಸ್ತೆಯನ್ನು ತಡೆಯಿಡಿಯುವ ಸಂಭವವಿರುವುದರಿಂದ ರಿಸ್ಕ್ ಬೇಡವೆಂದು ಬೇಗ ಬಂದನೆನ್ನುತ್ತಾನೆ. ಜೀವನದ ಮೊಮ್ಮೊದಲ ಸುಮಧುರ ಕ್ಷಣಗಳನ್ನು ಅನುಭವಿಸಲು ಅಣಿಯಾಗಿದ್ದ ನನಗೆ ಸಾರಿಗೆ ನೌಕರರರು ಹಾಗು ಮಿಗಿಲಾಗಿ ಆದಿಯ ಮೇಲೆ ಎಲ್ಲಿಲ್ಲದ ಕೋಪ ಮೂಡಿತು. ಹಸಿದ ನಾಯಿಮರಿಗೆ ಟಿವಿಯೊಳಗಿನ ಮಾಂಸದ ತುಂಡನ್ನು ತೋರಿಸಿದಂತ್ತಾಗಿತ್ತು ನನ್ನ ಪರಿಸ್ಥಿತಿ. ಆದಿ ಬಂದ ಕೂಡಲೇ ರಾಧಾ ನಮ್ಮ ಮನೆಯಿಂದ ನೆಡೆದರು.

'By the way, how was your day.. ?' ತನ್ನ ಬಟ್ಟೆಗಳನ್ನು ಜೋಡಿಸುತ್ತಾ ಆದಿ ಕೇಳಿದ. ಶಾಂತ ಕಣ್ಣಿನಿಂದಲೇ ನಾನು ಆತನನ್ನು ಗುರಾಯಿಸತೊಡಗಿದೆ.


****


'ನೋಡ್ರಿ.. ಇವನಿಗೆ ಏನೂ ಗೊತ್ತಿಲ್ಲ, ಕೇಳಿದಷ್ಟು ಕೊಡ್ತಾನೆ ಅಂತೆಲ್ಲಾ ಅನ್ಕೋ ಬೇಡಿ.. ಕೊಟ್ರೆ, ದಿನ ಸಂಬಳ.. ಗಂಡಾಳು ಹೆಣ್ಣಾಳು ಇಬ್ರಿಗೂ ದಿನಕ್ಕೆ 500. ಆಗುತ್ತಾ, ಇಲ್ವಾ? ' ಶುಂಠಿಯ ಬೀಜಗಳಿಗೆ ಮಣ್ಣಿನ ಬೆಡ್ ಗಳನ್ನು ನಿರ್ಮಿಸಲು ತನ್ನೊಟ್ಟಿಗೆ ಜನಗಳನ್ನು ತಂದಿದ್ದ ಮೇಸ್ತ್ರಿಯೊಟ್ಟಿಗೆ ಲೋಕೇಶ ಚರ್ಚಿಸತೊಡಗಿದ. ಅಂದು ಭಾನುವಾರವಾದರಿಂದ ನಾವು ಮೂವರೂ ಲೊಕೇಶನ ಟೆಂಪರರಿ ಗದ್ದೆಯೆಡೆಗೆ ಸವಾರಿಯನ್ನು ಹೂಡಿದ್ದೆವು. ಸಿಟಿಯಿಂದ ಸುಮಾರು ನಾಲ್ಕೈದು ಕಿಲೋಮೀಟರ್ ದೂರದಲ್ಲಿರುವ ಜಾಗ ಬೆಳ್ಳಂಬೆಳೆಗೆ ಸೂರ್ಯ ಉದಯಿಸುವ ಹೊತ್ತಿಗೆ ಬಂದರಂತೂ ಸ್ವರ್ಗಕ್ಕೆ ಮೂರೇ ಗೆಣೇನೋ ಎಂಬಂತಿರುತ್ತದೆ. ಗದ್ದೆಯ ಪಕ್ಕಕ್ಕೇ ಬೆಳೆದುಕೊಂಡಿರುವ ಬೃಹದಾಕಾರದ ಗುಡ್ಡದ ಮೇಲಿದ್ದ ಮರಗಳಿಂದ ಚಿಲಿಪಿಲಿಗುಡುವ ಸಹಸ್ರಾರು ಪಕ್ಷಿಗಳು, ಆ ತಂಪಾದ ಗಾಳಿ, ಮೋಡ ಚದುರಿದ ಶಾಂತ ಆಗಸ ಹಾಗು ಸ್ಪೂರ್ತಿಯ ಚಿಲುಮೆಯಂತೆ ನಿಧಾನವಾಗಿ ಮೇಲೇಳುತ್ತಿರುವ ಸೂರ್ಯದೇವ. ಬಸ್ಸಲ್ಲಿ ಹೋಗೋಣವೆಂದರೂ ಕೇಳದೆ ಅಲ್ಲಿಂದ ಇಲ್ಲಿಯವರೆಗೂ ಜಾಗಿಂಗ್ ಎಂದು ಓಡಿಸಿಕೊಂಡೇ ಬಂದ ಲೊಕೇಶನ ಮೇಲಿದ್ದ ಸಿಟ್ಟೆಲ್ಲವೂ ಈ ಪ್ರಕೃತಿಯ ಸೊಬಗಿನಲ್ಲಿ ಶಮನವಾಗಿದ್ದಿತು.

'ಬ್ಯಾಡಿ ಸರ.. ಸುಮ್ನೆ ನಿಮ್ಗೆ ಲಾಸ್ ಆಗುತ್ತೆ.. ಕಾಂಟ್ರಾಕ್ಟ್ ರೇಟ್ ಮಾತಾಡೋಣ.. ಫೈನಲ್ ಆಗಿ ಒಂದ್ ರೇಟ್ ನೀವೇ ಹೇಳಿ ' ಎಂದ ಮೂರಡಿ ಉದ್ದದ ಉತ್ತರಕರ್ನಾಟಕದೆಡೆಯ ಮೇಸ್ತ್ರಿ. ಲೋಕೇಶ ಕೂಡಲೇ ತನ್ನ ಫೋನಿಂದ ಯಾವುದೊ ನಂಬರ್ ಗೆ ಫೋನ್ ಮಾಡಿ 'ರೀ ಸೋಮಶೇಖರ್, ಕಳ್ಸ್ರಿ ನಿಮ್ ಜನಾನ.. ಇಲ್ ಯಾರೋ ಟೈಮ್ ವೇಸ್ಟ್ ಮಾಡೋಕ್ಕೆ ಅಂತಾನೆ ಬಂದಿದ್ದಾರೆ ಅನ್ಸುತ್ತೆ..' ಎಂದ ಮಾತನ್ನು ಕೇಳಿದ ಕೂಡಲೇ ಕಕ್ಕಾಬಿಕ್ಕಿಯಾದ ಮೂರಡಿಯ ಮೇಸ್ತ್ರಿ 'ಸಾಮಿ.. ಒಂದ್ ನಿಂಷ.. ಸರಿ. ಅದೇನೋ ಕೊಡ್ತಿರೋ ಕೊಡಿ. ಕಾಪಿ ತಿಂಡಿಗೆ ಅಂತ ಒಂದ್ ಐವತ್ ಸೇರ್ಸಿ ಕೊಟ್ರೆ ಆಯಿತು' ಎಂದ. ತನ್ನ ಕೋಪವನ್ನು ನಿಗ್ರಹಿಸುವಂತೆ ವರ್ತಿಸಿದ ಲೋಕೇಶ 'ನೀವಿನ್ನು ನಡಿಬಹುದು.. ಬೇರೆ ಜನ ಬರ್ತಾ ಇದ್ದಾರೆ..' ಎಂದಕೂಡಲೇ. 'ಯಾ.. ಸುಮ್ನಿರಿ ಬುದ್ದಿ.. ನೀವೊಳ್ಳೆ..ಎಷ್ಟಾದ್ರೂ ಕೊಡಿ.. ಕಾಫಿ ಗೀಫಿ ಏನು ಬ್ಯಾಡ.. ಹೇಯ್ ಏನ್ ಮಾಡಕ್ ಹತ್ತಿರ್ಲೆ ನೀವು, ನಡೀರ್ ನಡೀರಿ. ನಾಳಿ ಒಳಿಕ್ಕ ಕೆಲ್ಸ ಮುಗಿಸ್ಬೇಕಂತಿ..' ಎನ್ನುತ ಮೇಸ್ತ್ರಿ ತನ್ನವರನ್ನು ಕೆಲಸಕ್ಕೆ ತೊಡಗಿಸತೊಡಗಿದ. ಲೋಕೇಶ ನಮ್ಮನ್ನು ನೋಡಿ ಒಮ್ಮೆ ಮುಗುಳ್ನಕ್ಕ.

'ಅಲ್ಲ ಮಾರಾಯ.. ಒಂದ್ ಐವತ್ ರೂಪಾಯಿಗೆ ಕಂಜೂಸ್ತನ ಮಾಡ್ತಿಯಲ್ಲ. ಎಲ್ಲೆಲ್ಲೋ ಕೊಡ್ತೀಯ,ಪಾಪ ಅವ್ರಿಗೆ ಕೊಟ್ರೆ ಏನಾಗೋದು ನಿಂಗೆ' ಎಂದ ಆದಿ.

'ಸಾರ್, ಸುಮ್ನಿರಿ ತಾವು. ದುಡ್ಡು ಡೈರೆಕ್ಟ್ ಆಗಿ ಕೆಲ್ಸ ಮಾಡೋರ್ ಕೈಗೇ ಹೋದ್ರೆ ಓಕೆ.. ಆ ಮೂರಡಿ ಮೇಸ್ತ್ರಿ ಫಿಲ್ಟರ್ ಮಾಡಿ ಅವ್ರುಗಳಿಗೆ ಅದರ ಅರ್ದಾನು ಕೊಡಲ್ಲ...ನಾನೇ ಕೊನೆಗೆ ಒಂದಿಷ್ಟು ಅಂತ ಜನಗಳಿಗೆ ಕೊಡ್ತೀನಿ.. ಅದನ್ನ ಈವಾಗಲೇ ಹೇಳಿದ್ರೆ ಸಂಬಳದಲ್ಲೇ ಅದನ್ನೂ ಕಟ್ ಮಾಡ್ಕೊಂಡು ಕೊಡ್ತಾನೆ ಆಸಾಮಿ'

'Good .. ನೀನ್ ಮಾಡೋದೂ ಸರೀನೇ.. ಆದ್ರೂ ಬಾರ್ಗೇನಿಂಗ್ ಮಾಡೋದನ್ನ ನಿನ್ನಿಂದ ಕಲಿಬೇಕು ನೋಡಪ್ಪ' ಎಂದ ಆದಿ.

ಲೋಕೇಶ ನಗಾಡಿದ. ತನ್ನ ಜಾಗಿಂಗ್ ಸೂಟ್ನಲ್ಲಿದ್ದ ಆತ ಅಲ್ಲಿಯೇ ಮೇಲಕ್ಕೂ ಕೆಳಕ್ಕೂ ಬಗ್ಗುತ್ತಾ ಸಣ್ಣದಾಗಿ ವ್ಯಾಯಾಮವನ್ನು ಮಾಡತೊಡಗಿದ.

ವೀಳೇದೆಲೆಗೆ ಅಡಿಕೆ ಕಡಿಪುಡಿ ಹಾಗು ಸುಣ್ಣವನು ಮೆತ್ತಿ ಬಾಯನ್ನು ಭರ್ತಿಮಾಡಿಕೊಳ್ಳುತ್ತಿದ್ದ ಕೂಲಿಯ ಹೆಂಗಸರು ಈತನನ್ನು ನೋಡಿ ನಗುತ್ತಿದ್ದರು.

ಬಾಯ್ತುಂಬ ಎಲೆಯಡಿಕೆಯ ರಸವೇ ತುಂಬಿದ್ದರೂ, ತುಟಿಗಳು ಬಿರಿದು ದಂತಪಂಕ್ತಿಗಳು ಕಾಣದಿದ್ದರೂ ಅವರು ನಕ್ಕರು ಎಂಬ ಖಾತ್ರಿ ನನಗೆಗಾಯಿತು ಎಂದು ನಾನು ಯೋಚಿಸತೊಡಗಿದೆ.

'ಮತ್ತೆ ಅದ್ಯಾರೋ ಸೋಮಶೇಖರ್ ಎಂದಲ್ಲ ಅವ್ರ್ ಜನ ಬಂದ್ರೆ ಏನ್ ಮಾಡ್ತಿಯಾ' ಎಂದ ಆದಿಯ ಪ್ರೆಶ್ನೆಗೆ,

'ನಾನು ಯಾವ್ ನಂಬರಿಗೂ ಫೋನೇ ಮಾಡ್ಲಿಲ್ಲ .. I know how to bargain ' ಎಂದು ಪುನಃ ನಗಾಡಿದ.


****



'ಮಗ್ನೆ, ನಿಂಗೆ ಎರ್ಡ್ ಇಂಟರ್ನಲ್ನಲ್ಲೆ ಫುಲ್ ಮಾರ್ಕ್ಸ್ ಬಂದಿದೆ.. ಮೂರ್ನೆದೇನು ಬರಿಯೋದು..?' ಕಾಲೇಜಿನ ಕಾರಿಡಾರಿನ ಮೂಲೆಯಲ್ಲಿ ನಿಂತು ಲೋಕೇಶ ಹೇಳಿದ.

'ಹಾಗೇನಿಲ್ಲ.. ಆ ನೆಪದಲ್ಲಾದರೂ ರಿವಿಶನ್ ಆಗುತ್ತಲ ಅಂತ..' ಎಂದ ಆದಿಯ ಮಾತಿಗೆ,

'ರಿವಿಶನ್ನು ಬೇಡ ಗಿವಿಷನ್ನು ಬೇಡ.. ಮುಚ್ಕೊಂಡು ನನ್ ಹೆಸ್ರಲ್ಲಿ ಇಂಟರ್ನಲ್ ಬರಿ..'

ಕೊಂಚ ಸುಮ್ಮನಾದ ಆದಿ, 'ಲೋ.. ಸಿಕ್ ಹಾಕೊಂಡ್ರೆ ಇಬ್ರು ಡಿಬಾರ್ ಆಗ್ತಿವಿ.. ಗೊತ್ತಲ್ಲ'

'ಏನೂ ಆಗಲ್ಲ..ನನ್ನ್ ಬ್ಲೂ ಬುಕ್ಕಲ್ಲಿ ತಲೆ ಬಗ್ಗಿಸ್ಕೊಂಡು ಬರಿ ಸಾಕು.. ನಾನು ಒಂದ್ ಡಮ್ಮಿ ಬ್ಲೂ ಬುಕ್ ಇಟ್ಕೊಂಡು ಬರಿತೀನಿ'

'ಲೋಕಿ, ಇನ್ನೂ ಒಂದ್ ವಾರ ಇದೆ ಇಂಟರ್ನಲ್ಸ್ ಗೆ.. ನಾನ್ ಹೇಳ್ಕೊಡ್ತೀನಿ, ಓದೋ...'

'ಇಲ್ಲ ಗುರು.. ಜೀವನಕ್ಕೆ ಉಪಯೋಗ ಆಗ್ದೇ ಇರೋದನ್ನ ಓದಿ ಸಾಧಿಸೋದು ಏನೂ ಇಲ್ಲ.. ಆ ಫಾರ್ಮುಲಾ, ಆ ಥಿಯೋರಂ, ಆ ಔಟ್ಪುಟ್ಟು, ಮಣ್ಣು ಮಸಿ.. I challenge you.. ಇನ್ ಒಂದ್ ಹತ್ ವರ್ಷ ಆದ್ಮೇಲೆ ನಿಂಗೆ ಇವೆಲ್ಲ ದೇವ್ರಾಣೆ ನೆನ್ಪ್ ಇರಲ್ಲ. ಇದ್ರೂ ಯೂಸ್ಗೆ ಬರೋಲ್ಲ..ಬರಿ ಎಕ್ಸೆಲ್ ಅಂಡ್ ಇಮೇಲ್ ಅಲ್ಲೇ ನಿನ್ನ ಇಡೀ ವರ್ಕ್ ಲೈಫ್ ಮುಗ್ದ್ ಹೋಗಿರುತ್ತೆ.. ಹೆಸ್ರಿಗೊಂಡು ಡಿಗ್ರಿ ಇರ್ಲಿ ಅಂತ ಅಷ್ಟೇ.. ಇಲ್ಲ ಅಂದ್ರೆ ಇದಕ್ಕೆಲ್ಲ ಟೈಮ್ ವೇಸ್ಟ್ ಮಾಡೋಕ್ಕೆ ನನ್ನ್ ಹತ್ರ ಅಂತೂ ಟೈಮ್ ಇಲ್ಲ.. Moreover ಈ ಎಕ್ಸಾಮ್ಸ್ ಗಳೆಲ್ಲ ಕೇವಲ ಸ್ಟೂಡೆಂಟ್ಸ್ ಗಳ ಮೆಮೊರಿ ಪವರ್ನ ಟೆಸ್ಟ್ ಮಾಡ್ತಾವೆ ವಿನಃ ಟ್ಯಾಲೆಂಟ್ನ ಅಂತೂ ಅಲ್ವೇ ಅಲ್ಲ..' ಎಂದು ನಗುತ್ತಾನೆ.

'ಹೌದಪ್ಪ.. ನೀನೆ ಒಂದು ಯೂನಿವೆರ್ಸಿಟಿನ ಶುರು ಮಾಡಿ ಅಲ್ಲಿ ನಿನ್ ಇಷ್ಟದಂತೆ ಪಾಠ ಮಾಡ್ಸು.. ಆದ್ರೆ ಅಲ್ಲಿವರೆಗೂ ದಯಮಾಡಿ ಕಾಲಿಗ್ ಬಂದಿದ್ದು ಪಂಚಾಮೃತ ಅಂತ ಸಿಗೋದನ್ನ ಓದ್ತಾ ಇರು..'

'ಏನ್ ಇದ್ಯಪ್ಪಾ ಓದೋಕ್ಕೆ.. ಯಾವ ಫಾರ್ಮುಲಾನೇ ನೋಡು ಯಾವ ಥಿಯೋರಂನೇ ನೋಡು, ಎಲ್ ನೋಡಿದ್ರೂ ಬರಿ ಫಾರಿನರ್ಸ್ ಹೆಸ್ರೇ .. ನಮ್ಮ ಆರ್ಯಭಟ, ಭಾಸ್ಕರಚಾರ್ಯ ಅಂತಾವ್ರೆಲ್ಲ ಇವ್ರಿಗೆ ಲೆಕ್ಕಕ್ಕೆ ಇಲ್ಲ.. ಫಾರಿನರ್ಸ್ಗೆ ಯೂನಿವರ್ಸಿಟಿ, ಟ್ಯೂಷನ್ನು, ಅಂತ ಹತ್ತಾರು ಫೆಸಿಲಿಟಿ ಪಡ್ಕೊಂಡು ಅವ್ರ್ ಕಂಡ್ ಹಿಡಿದಿರೋದನ್ನ ನಮ್ಮವ್ರು ಬರಿ ನೆಲದ ಮೇಲೆ ಕೂತ್ಕೊಂಡು ಅರೆಬೆತ್ತಲೆ ಬಟ್ಟೆಯಲ್ಲೇ ಸಾವಿರಾರು ವರ್ಷಗಳ ಹಿಂದೆನೇ ಕಂಡ್ ಹಿಡ್ದಿದ್ದಾರೆ.. ಇದೇನು ಇವಾಗ ಯಾರಿಗೂ ಗೊತ್ತಿರದೆ ಇರೋ ವಿಷಯ ಅಲ್ಲ ಬಿಡು..'

'So, what’s your point??'

'Nothing.. ನಂಗೆ ನಾನೇ ರಿಸರ್ಚ್ ಮಾಡಿ ಕಲಿ ಬೇಕು.. ಅದನ್ನ ಬರಿಬೇಕು.. ನಮ್ಮವರು 1000 ವರ್ಷಗಳ ಹಿಂದೆ ಕಟ್ಟಿದ್ದ ತಾಂಜಾಊರಿನ ಬೃಹದೇಶ್ವರ ಟೆಂಪಲ್ ತರ ಯಾವುದೇ ಇಂಜಿನಿಯರಿಂಗ್ ಡಿಗ್ರಿಗಳಿಲ್ಲದೆ ನಾನು ಕೂಡ ಅಂತಹ ಒಂದು ಸಾಧನೆಯನ್ನು ಮಾಡ್ಬೇಕು..'

ಆದಿ ನಗತೊಡಗಿದ.

'ಲೋಕಿ.. ಡೋಂಟ್ ವರಿ .. ನಾನ್ ನಿನ್ನ ಇಂಟರ್ನಲ್ಸ್ ಬರೀತಿನಿ.. ನೀನು ಸದ್ಯಕ್ಕೆ ಶುಂಠಿ ಬಿಸಿನೆಸ್ ಮಾಡು ಸಾಕು.. ಟೆಂಪಲ್ನ ಆಮೇಲೆ ಕಟ್ಸ್ವಂತೆ'

'ಲವ್ ಯು ಮಚಿ... ನಿಂಗೆ ಏನ್ ಟ್ರೀಟ್ ಬೇಕು ಕೇಳು .. ನಾನ್ ಕೊಡ್ತೀನಿ'

'ಏನು ಬೇಡಪ್ಪ.. ಬೃಹದೇಶ್ವರ ಟೆಂಪಲ್ ಅಂದ್ಯಲ್ಲ.. ನಂಗೆ ಯಾಕೋ ದ್ವಾರಸಮುದ್ರದ ಟೆಂಪಲ್ ಗೆ ಹೋಗ್ಬೇಕು ಅನ್ನಿಸ್ತಾ ಇದೆ.. ಅದೂ ಕೂಡ ಬೆಳ್ಳಂಬೆಳೆಗೆ..'

'ಅದಕ್ಕೇನಪ್ಪಾ.. ನಂದೇ ಖರ್ಚು.. ನೆಕ್ಸ್ಟ್ ವೀಕೇ ಹೋಗಣ.. ಇಂಟರ್ನಲ್ಸ್ ಮುಗ್ದ ಮೇಲೆ..'

'Done..' ಎಂದ ಆದಿ ಲೊಕೇಶನ ಹೊಸ ಬ್ಲೂ ಬುಕ್ಕಿನ ಮೇಲೆ ಆತನ ಹೆಸರನ್ನು ಬರೆದು ಬ್ಯಾಗಿನೊಳಗೆ ಇರಿಸಿದ.


****



ಮೂರು ಶತಮಾನಗಳ ಸಾಮ್ರಾಜ್ಯವೊಂದು ಕಟ್ಟಿಸಿದ ಒಂದುವರೆಸಾವಿರ ದೇವಾಲಯಗಳಲ್ಲಿ (!) ನಾಲ್ಕು ದಶಕ ಬೆವರು ಹರಿಸಿ ಕಟ್ಟಿಸಿದ ಈ ರಮ್ಯರಮಣೀಯ ದೇವಾಲಯದ ಆಯಸ್ಸೀಗ ಬರೋಬ್ಬರಿ ಒಂಬೈನೂರು ವರ್ಷಗಳು. ಹತ್ತಾರು ಆಕ್ರಮಣಗಳನ್ನು, ಭೂಕಂಪಗಳನ್ನು ಎದುರಿಸಿ ಗತಿಸಿದ ಇತಿಹಾಸಕ್ಕೂ ಹಾಗು ಪ್ರಸ್ತುತ ಪರಿಹಾಸ್ಯಕ್ಕೂ ನಿಂತಿರುವ ಏಕಮಾತ್ರ ಕೊಂಡಿಯಂತೆ ಕಾಣುತ್ತಿದೆ. ಈ ಕಲಾಶಕ್ತಿಕೇಂದ್ರ ಆಸಕ್ತಿದಾಯ ಕಣ್ಣುಗಳನ್ನು ತಮಗರಿಯಂದಂತೆ ಜಿನಿಗಿಸುವುದಂತೂ ಸುಳ್ಳಲ್ಲ. ಆ ಕೆತ್ತನೆ, ಆ ಚತುರತೆ, ಆ ಜೀವಂತಿಗೆ ಹಾಗು ಎಲ್ಲಿಲ್ಲದ ಶಾಂತತೆ. ಉತ್ತರ ದಿಕ್ಕಿನಿಂದ ದೇವಾಲಯದ ದ್ವಾರವನ್ನು ಪ್ರವೇಶಿಸಿದ ನನಗೆ ಗುಬ್ಬಚ್ಚಿಗಳ ಚಿಲಿಪಿಲಿ ನಾದವನ್ನು ಬಿಟ್ಟರೆ ಬೇರೇನೂ ಕೇಳಲಿಲ್ಲ. ತಂಪಾದ AC ಕೋಣೆಯೊಳಗೆ ಓದಂತೆ ತಣ್ಣಗಿನ ಪರಿಸರ ದೇವಾಲಯದೊಳಗೆ. ಮನಸಿನ ಬಾಯನ್ನು ಮುಚ್ಚಿಸುವ ಆ ಶಾಂತತೆಯಲ್ಲಿ ಚಿತ್ತವೂ ತಣ್ಣಗಾಗತೊಡದಿತು. ಹಾಗೆಯೆ ದೇವಾಯಲದ ಒಳಗೆ ಒಮ್ಮೆ ಕಣ್ಣಾಯಿಸಿದೆ. ನೆಲ, ಚಾವಣಿ, ಕಂಬಗಳಿಂದಿಡಿದು ಕಿಟಕಿ ದ್ವಾರಗಳೂ ಸಹ ಬಳಪದ ಕಲ್ಲಿನ ಬೈ ಪ್ರಾಡಕ್ಟುಗಳು. ಚೀವಿಂಗ್ ಗಮ್ಮನ್ನೂ ಬಹುಷಃ ಇಷ್ಟೊಂದು ಸ್ಪಷ್ಟವಾಗಿ ತಿದ್ದೀ ತೀಡಿ ಬಳುಕಿಸಿ ಕೊರೆಯಲು ಸಾಧ್ಯವಿಲ್ಲವೆನೋ. ಅಂತಹ ಚತುರತೆಯನ್ನು ಅಲ್ಲಿನ ಕಲ್ಲುಗಳ ಮೇಲೆ ಮೂಡಿಸಿರುವ ಶಿಲ್ಪಿಗಳ ಬೃಹತ್ವ ವರ್ಣನಾತೀತವಾದುದು. ನಯವಾದ ನುಣುಪಾದ ಮಂಟಪಗಳ ಮೇಲೆ ತನ್ನಿಂತಾನೇ ಕೂತ ನನ್ನ ದೇಹ ಪಕ್ಕದಲ್ಲಿದ್ದ ಕಲ್ಲಿನ ಕಂಬವೊಂದಕ್ಕೆ ಒರಗಿಕೊಂಡಿತು. ಪೂರ್ವದಿಂದ ರಂಗೇರುತ್ತಿದ್ದ ಆಗಸದ ಹೊಳಪು ನಕ್ಷತ್ರಗಳಂತೆ ಕೊರೆದಿರುವ ದೇವಾಲಯದ ಕಿಟಕಿಗಳ ಸಂದುಗಳಿಂದ ಮೋಹಕವಾಗಿ ಮೂಡತೊಡಗಿತ್ತು.ತನಗರಿಯಂದತೆಯೇ ನನ್ನ ಕಣ್ಣುಗಳು ಮುಚ್ಚಿಕೊಂಡವು. ಗುಬ್ಬಿಗಳ ಚಿಲಿಪಿಲಿ ಸದ್ದು ಕ್ರಮೇಣ ಮರೆಯಾಯಿತು. ಇಹಲೋಕದ ಪರಿಜ್ಞಾನವೇ ಕೊನೆಗೆ ಇಲ್ಲದಂತಾಯಿತು.

'ಮಚಿ, ಈ ದೇವಸ್ಥಾನಕ್ಕೆ ಮಾತ್ರ ವಿಮಾನ ಯಾಕಿಲ್ಲ..' ದೂರದಿಂದ ದೇವಾಲಯವನ್ನು ಕೈಕಟ್ಟಿ ನೋಡುತ್ತಿದ್ದ ಲೋಕೇಶ ಆದಿಯನ್ನು ಕೇಳಿದ.

'ವಿಮಾನನ?' ಎಂದು ಗಂಟಿಕ್ಕಿಕೊಂಡ ಆದಿಯ ಉಬ್ಬುಗಳ ಅರ್ಥವನ್ನು ಅರಿತ ಲೋಕೇಶ,

'ಹೌದು, ವಿಮಾನ. ನಮ್ಮ ಬಹಳಷ್ಟು ದೇವಾಲಯಗಳ ದ್ವಾರದಲ್ಲಿ ಅಥವಾ ದೇವಾಲಯದ ಮೇಲೆ ಕಾಣುವ ತ್ರಿಭುಜಾಕೃತಿ ಅಥವಾ ಗೋಪುರಾಕೃತಿಯ ರಚನೆ'

'ಹೌದಲ್ಲ..’ ಎಂದ ಆದಿ , ‘ಆದ್ರೂ ವಿಮಾನ ಇಲ್ದೆನೇ ದೇವಸ್ಥಾನ ಒಂತರ ಚೆನ್ನಾಗಿದೆ..' ಎಂದ. ಕೆಲಹೊತ್ತು ಸುಮ್ಮನಾಗಿ, 'ವಿಮಾನ? ಈತರ ಹೆಸ್ರು ಯಾಕಿರಬಹುದು.. ಏನ್ ಇಲ್ಲಿ ಪ್ಲೈನ್ ಲ್ಯಾಂಡ್ ಮಾಡ್ಬಹುದಾ' ಎಂದು ಕೇಳಿದ.

ಲೋಕೇಶ ನಗುತ್ತಾ, 'ಮಚಿ, ನಮ್ಮ ಹಿರೀಕ್ರು ನಮಗಿಂತ ಅದೆಷ್ಟು ಮುಂದುವರೆದಿದ್ರೂ ಅನ್ನೋದಕ್ಕೆ ಅವಾಗ ವಿಡಿಯೋ ರೆಕಾರ್ಡಿಂಗ್ಸ್ಗಳಿರಲಿಲ್ಲ… ಮಿಗಿಲಾಗಿ ಅವ್ರಿಗೆ ಅದನ್ನ ರೆಕಾರ್ಡ್ ಮಾಡಿ ಸೋಶಿಯಲ್ ನೆಟ್ವರ್ಕ್ಗಳಲ್ಲಿ ಹಾಕ್ಬೇಕು ಅನ್ನೋ ತೆವಲು ಸಹ ಇರ್ಲಿಲ್ಲ.. ಒಂದು ಪಕ್ಷ ಅದು ಇದ್ದಿದ್ರೆ ಅಥವಾ ದೇವಾಲಯದ ಕಲ್ಲುಗಳಿಗೇ ಮಾತು ಬರುವಂತಿದ್ರೆ ನಾವು ಆಗಿನ ಅದೆಷ್ಟು ವಿಸ್ಮಯಗಳನ್ನು ಕಾಣ್ತಿದ್ದೆವೋ ಏನೋ.. 7000 ವರ್ಷಗಳ ಹಿಂದಿನ ರಾಮಾಯಣದ ಕಾಲದಲ್ಲೇ ಪುಷ್ಪಕ ವಿಮಾನ ಎಂಬ ಹೆಸರು ಬಂದಿದೆ ಅಂದ್ರೆ ನಮ್ಮವರಿಗೆ ಇಂತಹ ಆಟೋಮೇಷನ್ಸ್ ಗಳ ಬಗ್ಗೆ ಸಾವಿರಾರು ವರ್ಷಗಳ ಹಿಂದೆಯೇ ಸ್ಪಷ್ಟ ಕಲ್ಪನೆ ಇತ್ತು ಅಂತ ಆಯ್ತು..ವಿಮಾನ means ವಿಮಾನ..ಹಾರುವ ವಸ್ತು.. ಏರೋಡೈನಾಮಿಕ್ಸ್ ಬುಕ್ಸ್ ತಗೊಂಡು ಓದಿದ್ರೆ ಇಂತಹ ತ್ರಿಭುಜಾಕೃತಿಯ ರಚನೆಗಳೇ ಹಾರಲು ಸೂಕ್ತ ಎಂಬುದನ್ನು ಕಾಣ್ತಿವಿ.. ಇವಾಗಿನ ಅದೆಷ್ಟು ವೆಸ್ಟೆರ್ನ್ ಮೂವಿಗಳಲ್ಲಿ ಇಂತಹ ಹಾರೋ ಫ್ಲೈಟ್ ಗಳನ್ನ ನಾವ್ ಕಾಣಲ್ಲ ಹೇಳು.. ವಿಪರ್ಯಾಸ ಅಂದ್ರೆ ನಾವು ಡೀಪ್ ಆಗಿ ನಮ್ಮವರ ಕ್ರಿಯೇಟಿವಿಟಿ ಬಗ್ಗೆ ಸ್ಟಡಿ ಮಾಡಲ್ಲ.. M.S, Mtech, CA, MBA ಇಷ್ಟ್ ಬಿಟ್ರೆ ಕಲೆ ಸಂಸ್ಕೃತಿ ಹಿಸ್ಟರಿಗಳನ್ನೆಲ್ಲ ಆಸ್ಥೆಯಿಂದ ಓದೋರು ಇವತ್ತಿನ ಕಾಲದಲ್ಲಿ ಎಷ್ಟ್ ಜನ ಸಿಗ್ತಾರೆ ಹೇಳು.. ನನ್ನ್ ಪ್ರಕಾರ ಈ ವಿಮಾನಗಳು ಹಾಗು ಬ್ರಹ್ಮಾಂಡಕ್ಕೂ ಏನೋ ಒಂದು ಕನೆಕ್ಷನ್ ಇದೆ.. ಏನು ಅಂತ ಮಾತ್ರ ಕೇಳ್ಬೇಡ.. But ಏನೋ ಒಂದು ಕನೆಕ್ಷನ್ ಇದೆ..' ಎಂದು ಲೋಕೇಶ ಸುಮ್ಮನಾದ.

ದೇವಾಲಯವನ್ನು ಪ್ರವೇಶಿಸುವ ಮೊದಲು ಅದರ ಹೊರಗಿನ ರಚನೆ ಹಾಗು ಆಕೃತಿಯನ್ನೇ ಭಿನ್ನ ವಿಭಿನ್ನವಾಗಿ ನೋಡುತ್ತಾ, ಚರ್ಚಿಸುತ್ತಾ ಇಬ್ಬರು ಮುನ್ನೆಡೆಯುತ್ತಿದ್ದರು. ಈಶ್ವರನಿಗೆ ಸಮರ್ಪಿತವಾಗಿರುವ ಈ ದೇವಾಲಯದ ಕೆತ್ತನೆ ಹಾಗು 'ಭಿತ್ತನೆ'ಯಲ್ಲಿ ಹಲವಾರು ಮಹತ್ವದ ಅಂಶಗಳು ಕಾಣಸಿಗುತ್ತವೆ. ಅದು ಯಾಂತ್ರಿಕಯುಗವಲ್ಲದ ಕಾಲದಲ್ಲಿ ಸುರುಳಿಯಾಕೃತಿಯಲ್ಲಿ ನಯವಾಗಿ ಕೆತ್ತಿರುವ ಕಂಬಗಳಾಗಿರಬಹುದು, ನಿಜ ಬಸವನೇ ಬಂದು ಮಂಡಿಯೂರಿ ಕೂತಿರುವಂತಿರುವ ಕಲ್ಲಿನ ಜೀವಂತಿಕೆಯಾಗಿರಬಹದು ಅಥವಾ ಇಡೀ ರಾಮಾಯಣ, ಮಹಾಭಾರತದ ಕತೆಯನ್ನು ಸೈನಿಕರ, ಕುದುರೆಗಳ, ರಣರಂಗಗಳ, ನೃತ್ಯಗಾರ್ತಿಯರ ಮೂಲಕ ಕೆತ್ತಿರುವ ಭಿತ್ತನೆಯಾಗಿರಬಹದು. ಒಟ್ಟಿನಲ್ಲಿ ಇಂತಹ ಅಗಣಿತ ವಿಸ್ಮಯಗಳ ಮೋಹಕ ಕೃತಿಯಾಗಿ ಹೊಯ್ಸಳರ ವಿಷ್ಣುದೇವರಾಯ ಕಟ್ಟಿಸಿದ ದ್ವಾರಕಾಸಮುದ್ರದ ಈ ದೇವಾಲಯ ಇಂದು ನಮ್ಮ ಮುಂದಿದೆ.

'ಲೋಕಿ, ಬಾ ಇಲ್ಲಿ...' ವಿಸ್ಮಯವನ್ನೇನೋ ಕಂಡಂತೆ ಆದಿ ದೇವಾಲಯದ ಪ್ರಾಂಗಣದಲ್ಲಿದ್ದ ಕಲ್ಲಿನ ಮೂರ್ತಿಯೊಂದನ್ನು ತುಂಬಾ ಹತ್ತಿರದಿಂದ ನೋಡುತ್ತಾ ಕೂಗಿದ. ಕೂಡಲೇ ಲೋಕೇಶ ಅವನ ಬಳಿಗೋಗಿ ನೋಡಿದರೆ ಪ್ರಸ್ತುತ ಕಾಲದಲ್ಲಿ ಅಂತರಿಕ್ಷಯಾನಿಗಳು ತೊಡುವ ದುಂಡಾದ ಹೆಲ್ಮೆಟ್ ಹಾಗು ಕೈಗೆ ಅವರಂತೆಯೇ ಧರಿಸಿರುವ ದಪ್ಪನಾದ ಗ್ಲೋಸ್ಸ್ಗಳನ್ನು ತೊಟ್ಟ ವ್ಯಕ್ತಿಯ ಮೂರ್ತಿಯೊಂದು ಕಾಣುತ್ತದೆ!

'ನಮ್ಮವ್ರಿಗೆ ಆವಾಗಲೇ ಸ್ಪೇಸ್ ಟ್ರಾವೆಲ್ ಬಗ್ಗೆ ಗೊತ್ತಿತ್ತೇನೋ?!' ಆದಿ ಆಶ್ಚರ್ಯಚಕಿತನಾಗಿ ಕೇಳಿದ.

'ಇರ್ಬಹುದು .. ಅಥವಾ ಇಲ್ದೇನೂ ಇರ್ಬಹುದು'

‘What do you mean .. ಇಲ್ಲ ಅಂದ್ರೆ ಅಂತರಿಕ್ಷಯಾನಿಗಳು ಹಾಕೋ ತರ ಮುಖ ಮುಚ್ಚಿದ ಮುಖವಾಡವನ್ನು ಯಾಕೆ ಹಾಕೋಂತರೇ?'

'ಯಾರಿಗೊತ್ತು .. ಯುದ್ಧದ ಟೈಮಲ್ಲಿ ತಲೆಗೆ ರಕ್ಷಣೆಗೆ ಅಂತ ಇರೋ ಗೌರ್ಡ್ ಅದಾಗಿರಬಹುದು ?!' ಎಂದು ತಾರ್ಕಿಕ ಉತ್ತರವನ್ನು ನೀಡಿದ ಲೋಕೇಶ .

'ಹಾಗಾದ್ರೆ ನಮ್ಮವ್ರಿಗೆ ಸ್ಪೇಸ್ ಟೆಕ್ನಾಲಜಿ ಬಗ್ಗೆ ಗೊತ್ತೇ ಇರ್ಲಿಲ್ಲ ಅಂತಾನಾ?'

'ನೋಡು ಆದಿ.. ಇಲ್ಲಿರೋ ಕೆಲ ಆಕೃತಿಗಳನ್ನ ನೋಡಿ ಪ್ರಸ್ತುತ ಟೆಕ್ನಾಲಜಿಗಳಿಗೆ ಅವುಗಳನ್ನು ಕಲ್ಪಿಸಿ ಇದು ಅದೆಯೇ ಅಂತ ಹೇಳೋದು ಮೂರ್ಖತನವಾಗುತ್ತೆ. ಫಸ್ಟ್ ಆಫ್ ಆಲ್ ನಾವು ಆಗಿನ ಕಾಲದವರನ್ನು ಈಗಿನವರೊಟ್ಟಿಗೆ ಕಂಪೇರ್ ಮಾಡೋದೇ ಮೊದಲ ತಪ್ಪು. ಅವ್ರು ಆಗಿನ ಕಾಲಕ್ಕೆ ದಿ ಗ್ರೇಟ್ ಅನ್ನಬಹುದಾದ ಜನಾಂಗ. ಯಾವುದೇ ಮೋಟಾರು, ಕರೆಂಟು, ಡಿಸೇಲು ಮತ್ತೊಂದು ಮಗದೊಂದುಗಳೆಂಬ ಆಧುನಿಕ ಯಂತ್ರೋಪಕರಣಗಳಿಲ್ಲದೆ ಇಷ್ಟೆಲ್ಲಾ ನಿರ್ಮಿಸಿ ತೋರಿಸಿದ್ದಾರೆ ಎಂದರೆ ಅವರ ಅಸಾಧಾರಣ ಕಲೆಗೆ ನಾವು ತಲೆಬಾಗಲೇಬೇಕು. ಪ್ರತಿ ಮೂರ್ತಿಗಳಲ್ಲಿ ಇರೋ ಆ ಡೀಟೇಲ್ ಹಾಗು ಇನ್ಫಾರ್ಮಶನ್ ಗಳೇ ಅದಕ್ಕೆ ಸಾಕ್ಷಿ. ಶ್ರೀಕೃಷ್ಣ ಎತ್ತಿ ಹಿಡಿದಿರುವ ಆ ಪರ್ವತವನ್ನು ನೋಡು. ಮೂರಡಿ ಉದ್ದದ ಆ ಕಲ್ಲಿನಲ್ಲಿ ಹಾವು, ಹುಳ, ಮಾನವ, ಮರ, ಹಕ್ಕಿ, ಹುಲಿ, ಬಾಳೆಯ ಗಿಡ ಹಾಗು ಅದರ ಗೊನೆ ಎಂಬ ಎಲ್ಲವನ್ನು ತೋರಿಸಿ ಪರ್ವತ ಎಂಬವುದರ ಸ್ಪಷ್ಟ ಕಲ್ಪನೆಯನ್ನು ಅದೆಷ್ಟು ಸೊಗಸಾಗಿ ತೋರಿಸಿದ್ದಾರೆ . ಆ ನರಹಹರಿಯ ಮೂರ್ತಿಯನ್ನು ಗಮನಿಸಿದ? ಹಿರಣ್ಯ ಕಶುಪುವಿನ ಕರುಳನ್ನೇ ಬಗೆದು ಸುರುಳಿಯಾಗಿ ಸುತ್ತಿ ತನ್ನ ಕೊರಳಿಗೆ ಹಾರವನ್ನಾಗಿ ಹಾಕಿಕೊಂಡಿರುವುದಾಗಲಿ, ತನ್ನ ಇನ್ನೊಂದು ಕೈಯಲ್ಲಿ ಆತನ ರಕ್ಷಕನ ಮುಖದ ಚರ್ಮವನ್ನು ಸಿಟ್ಟಿನಿಂದ ಎಳೆದಿರುವ ರಭಸಕ್ಕೆ ಆತನ ಕಣ್ಣುಗುಡ್ಡೆಗಳೇ ಕಿತ್ತು ಬಂದಿರುವ ಆ ಕಲ್ಲಿನ ಕೆತ್ತನೆಯನ್ನು ವರ್ಣಿಸಲು ಅಸ್ಸಾಧ್ಯ..ಇಂತಹ ಕಲೆ ಹಾಗು ಕುಶಲತೆಯನ್ನು ಪ್ರಸ್ತುತಕ್ಕೆ ಹೋಲಿಸುವುದು ಸುತರಾಂ ಸರಿಯಲ್ಲ. ಆದರೆ ಆವಾಗಲೇ ಹೇಳಿದಂತೆ ವಿಮಾನ ಹಾಗು ಇತರ ಕಲ್ಪನೆಗಳು ನಮ್ಮವರಿಗೆ ನಿಜವಾಗಿಯೂ ಇದ್ದಿರಲೂ ಬಹುದು. ಕಾರಣಾಂತರಗಳಿಂದ ಆ ತಂತ್ರಗಾರಿಕೆ ಕಾಲಘಟ್ಟದಲ್ಲಿ ಮರೆಯಾಗಿರಲೂಬಹುದು. ಆದರೆ ನನ್ನಂತವರಿಗೆ ಇಂತಹ ದೇವಾಲಯಗಳು ನಾವುಗಳು ಅದೆಷ್ಟೇ ಮುಂದುವರೆದಿದ್ದೀವಿ ಎಂದು ಬೀಗಿದರೂ ಕೈಹಿಡಿದು ನೆಲಕ್ಕೆ ತಂದು ನಿಲ್ಲಿಸುವ ಆತ್ಮಸಾಕ್ಷಿಗಳಂತೆ ಕಾಣುತ್ತವೆ' ಎನ್ನುತ್ತಾನೆ.

ಇಬ್ಬರ ಮದ್ಯೆ ಈ ಭಾರಿ ಚರ್ಚೆ ತುಸು ಧೀರ್ಘವಾಗಿ ಸಾಗಿತು.

'ಓಂ.......' ಕಣ್ಣು ಮುಚ್ಚಿ ಅದೆಷ್ಟೋ ಹೊತ್ತಿನ ನಂತರ ತನ್ನಿಂತಾನೇ ನನ್ನೊಳಗೆ ಮೂಡ ಹತ್ತಿದ ಓಂಕಾರದ ನಾಧ ಬಹಳ ಹೊತ್ತಿನವರೆಗೂ ಹಾಗೆಯೇ ಮುಂದುವರೆಯಿತು. ಲೋಕೇಶ ಹಾಗು ಆದಿಯರಿಬ್ಬರೂ ಅಷ್ಟರಲ್ಲಾಗಲೇ ದೇವಾಲಯದ ಒಳಗೆ ಬಂದು, ನಾನು ಧ್ಯಾನವನ್ನು ಮಾಡುತ್ತಿರುವುದನ್ನು ಕಂಡು ಅದರ ಇನ್ನೊಂದು ದಿಕ್ಕಿಗೆ ಹೋಗಿ ತಮ್ಮ ರಿಸೀರ್ಚನ್ನು ಮುಂದುವರಿಸಿದ್ದರು. ಸ್ಪಷ್ಟವಾಗಿ ಮೂಡಹತ್ತಿದ ಓಂಕಾರ ಕೆಲಹೊತ್ತಿನ ನಂತರ ಒಮ್ಮೆಲೇ ನಿಂತಿತು. ಅರೆಬರೆಯಾಗಿ ನನಗೆ ಇಹಲೋಕದ ಪ್ರಜ್ಞೆ ಬರತೊಡಗಿತು. ಪೂರ್ವದಲ್ಲಿ ಚೇತನಸ್ಫೂರ್ತಿಯಂತೆ ಸೂರ್ಯದೇವ ಕಿರಣಗಳ ಮೂಲಕ ತನ್ನನ್ನು ತಾನು ಪ್ರತಿಷ್ಠಾಪಿಸಿಕೊಂಡಿದ್ದ. ಪಕ್ಷಿಗಳು ಚಿಲಿಪಿಲಿಗುಟ್ಟುತ್ತಿದ್ದವು. ಮನಸ್ಸು ಹಗುರಾಗಿದ್ದಿತು. ಕಣ್ಣೀರ ಧಾರೆ ಹರಿದು ನನ್ನ ಕೆನ್ನೆಗಳು ತೇವವಾಗಿದ್ದವು.

ಕಲೆಯನ್ನೇ ಗೋಡೆಯನ್ನಾಗಿ ನಿರ್ಮಿಸಿರುವ ಅಗಣಿತ ಸಂಖ್ಯೆಯ ಆ ಕೆತ್ತನೆಗಳನ್ನು ನೋಡುತ್ತಾ ಅಕ್ಷರ ಸಹ ಮಾತು ಬಾರದಂತಹ ಅನುಭವ. ಹಿತವಾದ ಪರಿಸರ, ಹಗುರಾದ ಮನಸ್ಸು, ಅಚ್ಚುಗಟ್ಟಾಗಿ ಬಣ್ಣ ಬಳಿದಂತೆ ಹರಡಿಕೊಂಡಿರುವ ಹಸಿರಿನ ಜೊತೆಗೆ ಒಬ್ಬರನ್ನೊಬ್ಬರು ರೇಗಿಸುತ್ತಾ, ನಗುತ್ತ ಹೆಜ್ಜೆಯಾಕುತ್ತಿದ್ದ ನನ್ನವರು.. ಈಶ್ವರ ದೇವರ ಆಶ್ರಿವಾದವನ್ನು ಪಡೆದು ವಾಪಸ್ಸು ಹೊರಡಲು ಯಾಕೋ ಮನಸ್ಸೇ ಕೇಳುತ್ತಿಲ್ಲ. ಆದರೆ ದೇವಸ್ಥಾನಕ್ಕೆ ಆಗಮಿಸುವ ಜನಜಂಗುಳಿಯೂ ಕ್ರಮೇಣ ಹೆಚ್ಚಾಗತೊಡಗಿತು. ಮುಂಜಾವಿನಲ್ಲಿದ್ದ ಆ ತನ್ಮಯತೆ ಹೊತ್ತು ಮೂಡಿದಂತೆ ಮರೆಯಾಗತೊಡಗಿತು. ಒಲ್ಲದ ಮನಸ್ಸಿನಿಂದ ಹಿಂದುರಿಗಿ ನೋಡುತ್ತಲೇ ಅಲ್ಲಿಂದ ಬೀಳ್ಕೊಡಬೇಕಾಯಿತು.



****



'ಹಲೋ..!' ಉದ್ವೇಗಭರಿತ ಸಹಜ ಧ್ವನಿಯಲ್ಲಿ ಮೂಡಿದ ಆಕೆಯ ಆ ಧ್ವನಿಯನ್ನು ಸುಮಾರು ವರ್ಷಗಳ ನಂತರ ಕೇಳಿದ ಆದಿ ಕಣ್ಣನೊಮ್ಮೆ ಗಟ್ಟಿಯಾಗಿ ಮುಚ್ಚಿ ಆಕಾಶದೆಡೆಗೆ ಮುಖವನ್ನು ಮಾಡಿದ. ಸಂಜೆಯ ಹಿತವಾದ ಗಾಳಿ ಟೆರೇಸ್ನ ಮೇಲೆ ಹಾಯಾಗಿ ಬೀಸುತ್ತಿತ್ತು. ಅಗಣಿತ ಕಿಲೋಮೀಟರ್ ದೂರದ ನಕ್ಷತ್ರಗಳೊಟ್ಟಿಗೆ ನಗರದ ಲೈಟುಗಳೂ ಮಿರಿ ಮಿರಿ ಮಿನುಗತೊಡಗಿದ್ದವು. ಅದೆಷ್ಟೋ ದಿನಗಳ ನಂತರ ಅದೇನೋ ಒಂದು ಬಗೆಯ ಖುಷಿಯ ಹಿತಾನುಭಾವ ಆದಿಯ ಮನದೊಳಗೆ. ಮುಂಬರುವ ಪ್ರತಿ ಕ್ಷಣವನ್ನು ತೀವ್ರವಾಗಿ ಕಾತರದಿಂದ ಕಾಯುವಂತೆ ಸಂತೋಷದ ಬುಗ್ಗೆಗಳು ಮೂಡದೇ ಅದೆಷ್ಟೋ ವರ್ಷಗಳಾಗಿದ್ದ ಆದಿಯ ಮನಸ್ಸು ಇಂದು ಹೂವಂತೆ ಅರಳತೊಡಗಿತ್ತು. ಕಳೆದ ಎಂಟತ್ತು ವರ್ಷದ ವರ್ಷದ ಪ್ರತಿ ಘಳಿಗೆಯೂ ಒಂದಿಲ್ಲೊಂದು ಕಾರಣಗಳಿಂದ ನೆನೆಪಿಸಿಕೊಳ್ಳುತ್ತಿದ್ದ ವ್ಯಕ್ತಿಯ ಧ್ವನಿ ಇಂದು ತನ್ನ ಕಿವಿಗಳ ಮೇಲೆ ಬೀಳುತ್ತಿದೆ. ಆತನಿಗೆ ಅದು ನಿಜವೆಂದು ನಂಬಲು ಆಗುತ್ತಿಲ್ಲ. ಆರ್ಕುಟ್ ಎಂಬ ಮಾಯಾಜಿಂಕೆಗೆ ಮೋಹಗೊಂಡಿರುವ ಯುವಪಡೆ ಅದರಲ್ಲಿ ತಮ್ಮದೊಂದು ಪ್ರೊಫೈಲನ್ನು ತೆರೆದು ಮಾಡುವ ಮೊದಲ ಕೆಲಸವೇ ತಮ್ಮ ಹಳೆಯ ಗೆಳಯ ಗೆಳತಿಯರನ್ನು ಅರಸುವುದು. ಅಲ್ಲಿಯವರೆಗೂ ಇಮೇಲು,ಮೊಬೈಲು, ಮೆಸೇಜುಗಳು ಮಾತ್ರವೇ ಸ್ನೇಹದ ಕೊಂಡಿಗಳಾಗಿದ್ದ ಕಾಲದಲ್ಲಿ ಪ್ರಪಂಚದ ಅದ್ಯಾವ ಮೂಲೆಯಲ್ಲೋ ಕೂತು ಒಮ್ಮೆಗೆ ಹತ್ತಾರು ಜನರೊಟ್ಟಿಗೆ ಫ್ರೀಯಾಗಿ ಏಕಕಾಲದಲ್ಲಿ ಸಂಧಿಸಬಹುದಾದ ಒಂದು ವಸ್ತುವಿದ್ದರೆ ಅದಕ್ಕಿಂತ ಮಿಗಿಲಾದ ವರ ಬೇರೊಂದು ಇರಲಿಲ್ಲ. ಅಂತಹ ಆರ್ಕುಟ್ ಎಂಬ ಆಧುನಿಕ ವರದಲ್ಲಿ ತನ್ನದೊಂದು ಪ್ರೊಫೈಲನ್ನು ತೆರೆದು ಆದಿ ಮೊದಲು ಮಾಡಿದ ಕೆಲಸವೇ ಖುಷಿಯೆಂಬ ಹೆಸರಿನ ಪ್ರೊಫೈಲ್ಗಳನ್ನು ಅರಸುವುದು. ಸರಿಸುಮಾರು ಇನ್ನೂರು ಅಂತಹ ಪ್ರೊಫೈಲ್ಗಳನ್ನು ಅರಸಿ ಕೊನೆಗೆ ಸುಮಾರು ಮೂರುಸಾವಿರ ದಿನಗಳ ಹಿಂದೆ ಕಂಡಿದ್ದ ಚಹರೆ ಇದೇ ಎಂದು ಗುರುತಿಸಿ ಆಕೆಯನ್ನು ತನ್ನ ಫ್ರೆಂಡ್ ಲಿಸ್ಟ್ ನಲ್ಲಿ ಹಾಕಿದ. ಆಕೆಯೂ ತಿಳಿದೋ ತಿಳಿಯದೆಯೋ ಎಂಬಂತೆ ಈತನ ರಿಕ್ವೆಸ್ಟ್ ಅನ್ನು accept ಮಾಡಿದ್ದಳು. ಒಂದೆರೆಡು ಹಾಯ್ ಹಲೋ ಎಂಬ ಮೆಸ್ಸೇಜುಗಳ ನಂತರ ತನ್ನನ್ನು ಅವನೆಂದೂ, ಆಕೆಯನ್ನು ಅವಳೇ ಎಂದೂ, ಇಬ್ಬರೂ ಇಬ್ಬರನ್ನು ಗುರುತಿಸಿಕೊಂಡ ಮೇಲೆ ಆಕೆಯ ಮೊಬೈಲ್ ನಂಬರನ್ನು ಕೇಳಿದ ಆದಿ. ಮುಂದೆ ಜೀವಮಾನವಿಡಿ ಮರೆಯಲಾಗದಂತಹ ದೊರೆತ ಆ ನಂಬರನ್ನು ಆದಿ ತನ್ನ ಮಸ್ತಿಷ್ಕದೊಳಗೆ ಕ್ಷಣಮಾತ್ರದಲ್ಲಿಯೇ ಹಚ್ಚೋತ್ತಿಕೊಂಡ. ಅದಾದ ಮರುದಿನವೇ ಎಂದರೆ ಪ್ರಸ್ತುತ ದಿನ ಆಕೆಗೆ ಫೋನಾಯಿಸಿದ. ಹಸುವನ್ನು ಅರಸುತ್ತಿರುವ ಕರುವಿಗೆ ಬೀಳುವ ಘಂಟೆಯ ಸದ್ದಿನಂತೆ ಆಕೆಯ 'ಹಲೋ' ಎಂಬ ಆ ಎರಡಕ್ಷರದ ಧ್ವನಿ. ಆಕೆಯೊಟ್ಟಿಗೆ ಹೇಗೆ ಪ್ರಾರಂಭಿಸಬೇಕು, ಏನು ಮಾತಾಡಬೇಕು ಎಂದೆಲ್ಲ ಯೋಚಿಸಿದ್ದ ಆತನಿಗೆ ಈಗ ಮಾತೆ ಹೊರಬಾರದಂತಹ ಅನುಭವ.

'ಹಾಯ್...' ರಾಗವಾಗಿ ಆದಿ ಉತ್ತರಿಸಿದ.

'ಹಾಯ್...' ಅದೇ ರಾಗದಲ್ಲಿ ಆಕೆಯೂ ಅತ್ತಕೆಡೆಯಿಂದ ಪುನಃ ಉತ್ತರಿಸಿದಳು. ಮೊದಲ 'ಹಲೋ' ವಿನಲಿದ್ದ ಉದ್ವಿಗ್ನತೆ ಈ ಬಾರಿಯ 'ಹಾಯ್' ನಲ್ಲಿ ಇರಲಿಲ್ಲ. ಈ 'ಹಾಯ್' ಇಂಪಾಗಿಯೂ, ಮಧುರವಾಗಿಯೂ ಮೂಡಿದ್ದಿತು.

'Guess me...?' ಆದಿ ಹೇಳಿದ. ನೆನ್ನೆಯಷ್ಟೇ ಆಕೆಯ ನಂಬರನ್ನು ಪಡೆದು, ಇಂದು ಸಂಜೆ ಫೋನನ್ನು ಮಾಡುತ್ತೀನಿ ಎಂದೂ ಸಹ ಹೇಳಿ, ಈಗ 'Guess me...?' ಎಂದ ತನ್ನ ಪೆದ್ದುತನದ ಅರಿವಾಗಿ ತನ್ನ ನಾಲಿಗೆಯನ್ನು ಕಚ್ಚಿಕೊಂಡ. ಆಕೆಯೂ ಈತನ ಪ್ರೆಶ್ನೆಗೆ ಏನೇಳಬೇಕೆಂದು ತಿಳಿಯದೆ ಸುಮ್ಮನಾದಳು. ಜೀವನದ ಮಹತ್ವದ ತಿರುವಿನ ಮೊದಲ ಹೆಜ್ಜೆಯಲ್ಲೇ ಕುಂಟತೊಡಗಿದ ಆದಿ ಹೇಗೋ ಸಂಭಾಷಣೆಯನ್ನು ಮುಂದುವರೆಸಿದ. ಆದಿನ ನೆಡೆದ ಕೆಲವೇ ನಿಮಿಷಗಳ ಸಂಭಾಷಣೆ ಪ್ರಸ್ತುತ ಓದುತ್ತಿರುವ ಕಾಲೇಜು,ತಮ್ಮ ಶಾಲೆ, ಬಾಲ್ಯದ ದಿನಗಳು, ಬೋಧಿಸುತ್ತಿದ್ದ ಶಿಕ್ಷಕವರ್ಗ ಎಲ್ಲವನ್ನೂ ಒಮ್ಮೆ ಸಂಕ್ಷಿಪ್ತವಾಗಿ ಮೆಲುಕುಹಾಕಿತು. 'PT ಸರ್ ಈಗ್ಲೂ ಇದ್ದಾರೆ ಕಣೆ..' ಎಂದ ಆದಿಯ ಮಾತಿಗೆ ಹೌದೆಂದು ಆಕೆ ಉತ್ತರಿಸಿದಳು. ಮಾತಿನ ಹೊಳೆಯಲ್ಲಿ ಮುಳುಗಿ ತನ್ನ ಸುತ್ತಲಿನ ಪ್ರಪಂಚವನ್ನೇ ಮರೆತಿದ್ದ ಆದಿಗೆ ಲೋಕೇಶ ಬಂದು ಊಟಕ್ಕೆ ಕರೆದದ್ದೂ ತಿಳಿಯದಾಯಿತು. ಅಲ್ಲದೆ ಮೊಬೈಲಿನ ಬ್ಯಾಲೆನ್ಸ್ ತನ್ನ ಕೊನೆಯುಸಿರನ್ನು ಎಳೆಯುವ ಮೊದಲು ಫೊನಿಡಬೇಕು ಇಲ್ಲವಾದರೆ ಮೆಸ್ಸೇಜುಗಳನ್ನೂ ಕಳುವಿಸಲು ಬಹುಷಃ ಆಗದು ಎಂಬುದೂ ಸಹ ಅರಿಯದಾಯಿತು. ವಾಸ್ತವವಾಗಿ ಆತನಿಗೆ ಆ ಸಂಭಾಷಣೆ ನಿಜವೆಂದು ಅರಿಯಲೇ ಸಾಧ್ಯವಾಗದಾಯಿತು. ಅಂತಹ ಅದೆಷ್ಟು ಸಂಭಾಷಣೆಗಳನ್ನು ಆತ ಕಳೆದ ಎಂಟು ವರ್ಷಗಳಲ್ಲಿ ಮಾಡಿದ್ದಾನೋ ಆತನಿಗೇ ಲೆಕ್ಕವಿಲ್ಲ. ಆಗೆಲ್ಲ ಈತನೊಬ್ಬನೇ ಮಾತಾಡುವ ವಾಚಕನಾದರೆ ಆಕೆ ಕೇವಲ ಕೇಳುವ ಕಾಲ್ಪನಿಕ ಗೊಂಬೆಯಾಗಿರುತ್ತಿದ್ದಳು. ಅಷ್ಟರಲ್ಲಿ ಆಕೆಯೇ 'ಸರಿ ಕಣೋ, ಇನ್ನೊಂದ್ ದಿನ ಮಾತಾಡೋಣ.. ಟೈಮ್ ಆಯ್ತು' ಎಂದಳು. ಆಕೆಯ ಮಾತನ್ನು ಕೇಳಿದ ಆದಿಗೆ ಸಮಯದ ಮೇಲೆಯೇ ಕೋಪ ಬರತೊಡಗಿತು. ಒಂದರಿಂದೊಂದು ಮೂಡುತ್ತಿದ್ದ ಸಂತೋಷದ ಬುಗ್ಗೆಗಳು ಒಮ್ಮೆಲೇ ಕಾಣೆಯಾಗತೊಡಗಿದವು. ಮತ್ತದೇ ಬಗೆಯ ದುಗುಡದ ಛಾಯೆ ಆತನನ್ನು ಆವರಿಸತೊಡಗಿತು. ಆಕೆಗೆ ಒಂದು ಪದವನ್ನು ಆಡಲೂ ಬಿಡದೆ ತಾನೇ ಪಟಪಟನೆ ಮಾತಾಡತೊಡಗಿದ ಆದಿ ಈಗ ಫೋನನ್ನು ಇಡದಿರಲು ಕಾರಣಗಳನ್ನು ಯೋಚಿಸತೊಡಗಿದ. ಕೊನೆಗೆ ಬೇರೆ ದಾರಿಕಾಣದೆ ಒಲ್ಲದ ಮನಸ್ಸಿನಿಂದ 'ಸರಿ ಕಣೆ.. ಗುಡ್ನೈಟ್, ಸ್ವೀಟ್ ಡ್ರೀಮ್ಸ್, ಟೇಕ್ ಕೇರ್' ಎಂದಾಗ ಆಕೆ ಅದನ್ನೇ ಪುನರಾವರ್ತಿಸಿ ಫೋನನ್ನು ಇಟ್ಟಳು. ಬೆವರಿನಿಂದ ಒದ್ದೆಯ ಮುದ್ದೆಯಾಗಿದ್ದ ಕೈಗಳನ್ನು ತನ್ನ ಎದೆಗೆ ಅದ್ದಿಕೊಳ್ಳುತ್ತಾ ಆದಿ ಟೆರೇಸಿನ ಮೆಟ್ಟಿಲನ್ನು ಇಳಿಯತೊಡಗಿದ..



ಮುಂದುವರೆಯುವುದು...

No comments:

Post a Comment