Saturday, May 18, 2019

ಗೆಸ್ಟ್ ಹೌಸು ಹೋಮ್ ಸ್ಟೇ ಗಳ ಪೆಗ್ಗೋ ಅಥವಾ ಮಲೆನಾಡ ಸಿಹಿಸುಗ್ಗಿಯ ಹಿಗ್ಗೋ ... ?!

ಮಲೆನಾಡು. ಇತ್ತೀಚಿನ ಕೆಲವರ್ಷಗಳವರೆಗೂ ಈ ಮಲೆನಾಡು ಎಂದರೆ ಬೆಟ್ಟ, ಗುಡ್ಡ, ಮಳೆ, ಹಸಿರು, ತಂಪು, ಕಂಪು ಇಂಪುಗಳ ಜೊತೆಗೆ ಪ್ರಾಣಿ ಪಕ್ಷಿ ಜೀವಜಂತುಗಳೆಲ್ಲವಿಂದ ಕೂಡಿದ ಶಾಂತಿ, ನೆಮ್ಮದಿಯ ಸ್ವರ್ಗವೆಂದೇ ಗುರುತಿಸಲ್ಪಡುತಿತ್ತು. ಜೀವನದ ಅದೆಷ್ಟೇ ಕಷ್ಟನಷ್ಟಗಳಿದ್ದರೂ ಇಲ್ಲಿಯ ಗೆಳೆಯರ ಅಥವ ನೆಂಟರಿಷ್ಟರ ಮನೆಗೋ, ತೋಟಕ್ಕೋ ಅಥವಾ ಗೆಸ್ಟ್ ಹೌಸುಗಳಿಗೂ ಬಂದು ಒಂದೆರೆಡು ದಿನ ಆಧುನಿಕ ಜಗತ್ತಿನ ಸ್ಲೋ ಪಾಯಿಸನ್ಗಳಾದ ಮೊಬೈಲು, ಇಂಟರ್ನೆಟ್ಟು ಮತ್ತೊಂದು ಮಗದೊಂದುಗಳೆಲ್ಲವನ್ನೂ ಮರೆತು ಇಲ್ಲಿನ ನೆಲದ ಮೇಲೆ ಇತ್ತಿಂದತ್ತ ಅತ್ತಿಂದಿತ್ತ ನೆಡೆದಾಡಿದರೂ ಸಾಕಿತ್ತು, ಬೇಸತ್ತು ಜಡಗಟ್ಟಿದ ಜೀವಕ್ಕೆ ಅದೇನೋ ಒಂದು ಬಗೆಯ ಚೈತ್ಯನ್ಯದ ಕಳೆ ಮೂಡಿಬಿಡುತ್ತಿತ್ತು. ಮನಸ್ಸು ಹಗುರವಾಗುತ್ತಿತ್ತು. Life is Beautiful ಎಂದೆನಿಸಿ ಮಹಾನೆಮ್ಮದಿಯೊಂದು ತನ್ನಿಂತಾನೇ ಮೂಡಿಬಿಡುತ್ತಿತ್ತು. ಇದೆಲ್ಲ Past. ಹೆಚ್ಚುಕಡಿಮೆ ದಶಕಗಳಿಂದಿನ ಮಾತುಗಳು ಎನ್ನಬಹುದು. ಮಲೆನಾಡು ಆಗತಾನೆ ಡಿಜಿಟಲ್ ಜಗತ್ತಿಗೆ ಬಾಗಿಲುತೆರೆಯ ತೊಡಗಿತ್ತು. ತಾಲೂಕಿಗೊಂದೆರಡರಂತಿದ್ದ ಗೆಸ್ಟ್ ಹೌಸುಗಳಿಗೂ ಅಥವಾ ಹೋಂಸ್ಟೇಗಳಿಗೋ ಶರವೇಗದಲ್ಲಿ ಹೋಗುತ್ತಿದ್ದ ದೊಡ್ಡ ಚಕ್ರದ ಕಾರುಗಳನ್ನು ಕಣ್ಣರಳಿಸಿಕೊಂಡು ನೋಡುತ್ತಿದ್ದ ಮಲೆನಾಡಿಗರು ಕೊಂಚ ಯೋಚಿಸತೊಡಗಿದರು. ಸಾಧಾರಣವಾಗಿದ್ದ ತಮ್ಮ ಮನೆಗೂ ಬಣ್ಣಗಿಣ್ಣವನ್ನು ಬಳಿದು ಒಂದೆರೆಡು ರೂಮುಗಳನ್ನು ಶುಚಿಗೊಳಿಸಿ ಮನೆಯ ಮುಂದೊಂದು ಅಂಕುಡೊಂಕಿನ ಅಕ್ಷರಗಳ ಹೋಂ ಸ್ಟೇ ಎಂಬ ಬೋರ್ಡನ್ನು ಹಾಕಿಯೇಬಿಟ್ಟರು. ಆಗ ಶುರುವಾಯಿತು ನೋಡಿ ಮಲೆನಾಡ ಮೋಡಿ. ಹೆಚ್ಚೇನು ಇಲ್ಲ ಸ್ವಾಮಿ, ಮಲೆನಾಡಿಗರು ದಿನ ಸೇವಿಸುವ ಅಕ್ಕಿ ರೊಟ್ಟಿ, ಕಾಯಿ ಚಟ್ನಿ, ಕಡುಬು, ರಾಗಿಯ ಅಂಬಲಿ, ನಾನಾ ಬಗೆಯ ಅಣಬೆಗಳು, ಬಿದಿರಿನ ಕಳಲೆ, ನಾಟಿ ಕೋಳಿಸಾರು, ಕಾಡುಹಂದಿ ಮಾಂಸಗಳನ್ನೇ ಮಾಡಿ ಉಣಬಡಿಸಿದತೊಡಗಿದಾಗ ನಗರದ ಪ್ರವಾಸಿಗರ ದಂಡೇ ಸಾಲಾಗಿ ಬಂದು ನಿಲ್ಲತೊಡಗಿತು. ಶಾಂತ ಪರಿಸರ, ಬಾಯಿಚಪ್ಪರಿಸುವ ಊಟಾದಿಗಳು, ಯಾರ ಮುಲಾಜಿಲ್ಲದೆಯೋ ಎಲ್ಲೆಂದರಲ್ಲಿ ಉಗಿದು, ಸುರಿದು, ಹೋದ ಜಾಗವನ್ನೆಲ್ಲ ಗಬ್ಬೆಬ್ಬಿಸಿ, ಕೊಳಕುಗೊಳಿಸಿ, ಕಾನೂನು ಕಟ್ಟಳೆಗಳೇ ಇಲ್ಲದ ಯಾವುದೊ ಹೊಸ ಗ್ರಹಕ್ಕೆ ಬಂದವರಂತೆ ವರ್ತಿಸಿ ತೆರಳತೊಡಗಿದರು. ಮಾಲೀಕ ಕೇಳಿದ ಹಣಕ್ಕಿಂತ ದುಪ್ಪಟ್ಟು ಹಣವನ್ನು ಕೊಟ್ಟರು. ಪೇಟೆಯ ವೈನು ಜಿನ್ನುಗಳೊಟ್ಟಿಗೆ ಹಳ್ಳಿಯ ಸೇಂದಿ ಕಳ್ಳುಗಳ ಸವಿಯ ರುಚಿಯನ್ನೂ ಚಪ್ಪರಿಸಿದರು. ಹಸಿರು ಗೊಬ್ಬರ ಬೀಳಬೇಕಿದ್ದ ಮಲೆನಾಡ ರಸ್ತೆ ಬದಿಯ ಮರಗಳ ಬುಡಗಳಿಗೆ ಮದ್ಯದ ಬಾಟಲಿಗಳ ರಾಶಿಗೊಬ್ಬರವನ್ನು ಫ್ರೀಯಾಗಿ ತಂದು ಸುರಿಯತೊಡಗಿದರು. ಪೇಟೆಯ ದುಡ್ಡು, ಹಳ್ಳಿಯ ಪರಿಸರಗಳ ಈ ತಿಕ್ಕಾಟದಲ್ಲಿ ಪೇಟೆಯ ದುಡ್ಡೇ ಕ್ರಮೇಣ ಗೆಲ್ಲತೊಡಗಿತು. ಅಚ್ಚುಗಟ್ಟಾಗಿ ಮನೆ ಹಾಗು ತೋಟವನ್ನು ಮಾಡಿಕೊಂಡಿದ್ದ ಹಲವಾರು ಮಲೆನಾಡಿಗರು ಇಂದು ಇಂತಹ ಹೋಂ ಸ್ಟೇಗಳೆಂಬ ಬೆಪ್ಪು ಹುಚ್ಚಿನಲ್ಲಿ ತಮ್ಮ ಮೆನೆಮಠಗಳೆಲ್ಲವನ್ನು ಕುಡಿದು ಕುಣಿಯುವ ಮನೋರಂಜನಾ ಅಡ್ಡಗಳನ್ನಾಗಿ ಮಾಡಿಕೊಂಡಿದ್ದಾರೆ. ಹಚ್ಚಹಸಿರ ಸುಂದರ ತೋಟವನ್ನು ಕಾಡನ್ನು ಕಡಿದು ರೆಸಾರ್ಟು, ಪಬ್ಬು, ಗೆಸ್ಟ್ ಹೌಸುಗಳೆಂಬ ಹಲವಾರು ವಾಣಿಜ್ಯ ಕೇಂದ್ರಗಳನ್ನು ಹುಟ್ಟಿಸುತ್ತಿದ್ದಾರೆ. ಇನ್ನು ಹಿರಿಯರಿಂದ ಬಂದ ತೋಟ ಗದ್ದೆಗಳ ಮೇಲಿನ ನಿಗಾವಂತೂ ಅಷ್ಟಕಷ್ಟೇ. ಕೇಳಿದರೆ 'ಕೂಲಿ ಮಾಡೋಕ್ಕೆ ಜನ ಎಲ್ರಿ ಸಿಗ್ತಾರೆ ಇವಾಗಿನ್ ಕಾಲ್ದಲ್ಲಿ' ಎನುತ ಅವುಗಳನ್ನು ಹಾಳುಗೆಡತ್ತಿರುವುದು ಇಂದು ಸಾಮನ್ಯದ ಸಂಗತಿಯಾಗುತ್ತಿವೆ. ಒಟ್ಟಿನಲ್ಲಿ ಭೂಲೋಕದ ಸ್ವರ್ಗದಂತಿದ್ದ ನಮ್ಮ ಮಲೆನಾಡು ಇಂದು ನೋಡನೋಡುತ್ತಲೇ ಶರವೇಗದಲ್ಲಿ ಕ್ಷೀಣಿಸುತ್ತಿದೆ. ಮರುಭೂಮಿಯ ಉರಿಬಿಸಿಲು, ಕುಡಿಯುವ ಹನಿ ನೀರಿಗೂ ಹಾಹಾಕಾರ, ಹಸಿರನ್ನೇ ನುಂಗಿ ಮುನ್ನುಗ್ಗುತ್ತಿರುವ ನಗರವ್ಯಾಪ್ತಿ ಇವೆಲ್ಲವುಗಳಿಂದ ಇಂದು ಮಲೆನಾಡು ಕಣ್ಮರೆಯಾಗುತ್ತಿದೆ.

ಇದು ಪ್ರಸ್ತುತ ಮಲೆನಾಡ ಕತೆ. ಈಗ ಮುಖ್ಯ ವಿಷಯಕ್ಕೆ ಬರೋಣ. ದಕ್ಷಿಣ ಭಾರತದ ಕಿರೀಟಪ್ರಾಯವಾಗಿರುವಂತಹ ಮಲೆನಾಡೇ ಈ ರೀತಿ ಕಣ್ಮರೆಯಾದರೆ ಇನ್ನು ಗತಕಾಲದಿಂದ ನೆಡೆದುಕೊಂಡು ಬಂದ ಇಲ್ಲಿಯ ಸಂಪ್ರದಾಯ, ವಿಶಿಷ್ಟ ಆಚರಣೆಗಳು, ಆಚಾರ-ವಿಚಾರಗಳು, ಹಬ್ಬ-ಹರಿದಿನಗಳ ಕತೆ ಏನಾಗಬಹುದು? ಒಮ್ಮೆ ಯೋಚಿಸಿ. ನೋ ಡೌಟ್, ಅವುಗಳೂ ಸಹ ನಗರೀಕರಣದ ಈ ಮಹಾ ಬಿರುಗಾಳಿಯಲ್ಲಿ ಹೇಳಹೆಸರಿಲ್ಲದೆ ಕಣ್ಮರೆಯಾಗಬಹುದು.

ಸುಗ್ಗಿ ಹಬ್ಬ. ವಸಂತಮಾಸ ಬಂತೆಂದರೆ ಮಲೆನಾಡಿನ ಮನೆಮನೆಗಳಲ್ಲೂ ಏನೋ ಒಂದು ಬಗೆಯ ಸಂಭ್ರಮದ ವಾತಾವರಣ. ವರ್ಷಪೂರ್ತಿ ತಮ್ಮ ತೋಟಗದ್ದೆಗಳಲ್ಲಿ ದುಡಿದು ದಣಿದ ಮನಗಳಿಗೆ ಒಂದಿನಿತು ದಿನಗಳ ಬಿಡುವು. ನಗರಗಳಲ್ಲಾದರೆ ಬಿಡುವು ಎಂದಾಕ್ಷಣ ತಮ್ಮ ಗಂಟು ಮೂಟೆಗಳನೆಲ್ಲ ಕಟ್ಟಿಕೊಂಡು ಇಂತಹ ಸುಂದರ ಶಾಂತ ಪರಿಸರಗಳಿಗೆ ಲಗ್ಗೆಹಿಟ್ಟು ಪುಡಿಮಾಡಿಬರುವ ಕಾರ್ಯಕ್ರಮವಾಗಿರುತ್ತದೆ. ಆದರೆ ಮಲೆನಾಡಿಗರಲ್ಲಿ ಅದರ ಬಗೆಯೇ ತೀರಾ ಭಿನ್ನವಾದುದು. ಊರು ಕೇರಿಯ ಹಿರಿಯರೆಲ್ಲ ಒಂದೆಡೆ ಸೇರಿ ಗತಕಾಲದಿಂದ ನೆಡೆದುಕೊಂಡು ಬಂದ ಮಲೆನಾಡ ಹೆಮ್ಮೆಯ ಸುಗ್ಗಿಹಬ್ಬದ ತಯಾರಿಗೆ ಆಗ ಶುರುವಿಟ್ಟುಕೊಳ್ಳುತ್ತಾರೆ. ಅಲ್ಲಿಂದ್ದ ಮುಂದೆ ಮೂರ್ನಾಲ್ಕು ವಾರಗಳವರೆಗೆ ಊರವರೆಲ್ಲ ಅಪ್ರತಿಮ ಶುಚಿತ್ವವನ್ನು ಕಾಪಾಡಿಕೊಳ್ಳುತ್ತಾರೆ. ಅದು ಹೆಸರಿಗೆ ಮಾತ್ರದ ಶುಚಿತ್ವವಲ್ಲ ಸ್ವಾಮಿ. ಆಗ ಕ್ಷೌರವನ್ನೂ ಮಾಡಿಸುವಂತಿಲ್ಲ. ಅಂಗಡಿ ಬೇಕರಿಗಳ ತಿಂಡಿ ತಿನಿಸು ಗಳನಂತೂ ಬಿಲ್ಕುಲ್ ತಿನ್ನುವಂತಿರುವುದಿಲ್ಲ. ಅನ್ನವನ್ನು ಅದರ ಗಂಜಿ ಹೋಗುವಂತೆ ಬಸಿಯದೆಯೇ ತಯಾರಿಸಿ ಸೇವಿಸಬೇಕಾಗುವುದು.. ಪೇಟೆಯೆಡೆಗೆ ಹೋಗಿಬಂದರೆ ಮನೆಯೊಳಗೇ ಬರುವಂತಿರುವುದಿಲ್ಲ. ಅಂತವರು ಹಿತ್ತಲು ಬಾಗಿಲಿಂದ ಬಚ್ಚಲುಮನೆಗೆ ಬಂದು ಮಿಂದೇ ಮನೆಯೊಳಗೇ ಬರಬೇಕಾಗುವುದು ಅಲ್ಲದೆ ಕಾಲಿಗೆ ಪಾದರಕ್ಷೆಗಳನ್ನೂ ತೊಡುವಂತಿಲ್ಲ. ಇನ್ನು ಮಾಂಸ ಮದ್ಯಾದಿಗಳನ್ನು ಕನಸ್ಸಿನಲ್ಲಿಯೂ ನೆನೆಯುವುದಿಲ್ಲ. ದಿನ ಸಂಜೆಯಾದರೆ ಒಂದು ತೊಟ್ಟಾದರೂ ಸರಿಯೆ ಮದ್ಯದ ಹನಿಗಳಿಂದ ತಮ್ಮ ಗಂಟಲನ್ನು ನೆನೆಸದೆ ಬಿಡದ ಹಲವರು ಇಲ್ಲಿ ತಿಂಗಳುಗಟ್ಟಲೆ ಮದ್ಯಾದಿಗಳಿಂದ ವಿಮುಖರಾಗಿ ಇರುವುದನ್ನು ಮೆಚ್ಚಲೇ ಬೇಕು. ಇಲ್ಲಿ ದೇವರ ಮೇಲಿನ ಭಕ್ತಿಯಿದೆ. ಭಕ್ತಿಯಷ್ಟೇ ಭಯವೂ ಇದೆ. ಊರಿನ ನೆಲ ಜಲ ಬೆಳೆಗೆ ಪೋಷಕರಾದ ದೇವ ದೇವಿಯರ ಉತ್ಸವನ್ನು ಆಚರಿಸಲು ಹೀಗೆ ಊರಿಗೆ ಊರೇ ಸನ್ಯಾಸತ್ವವನ್ನು ಸ್ವೀಕರಿಸುವ ಪರಿ ವಿಶಿಷ್ಟವಾದುದು, ವಿಶೇಷವಾದುದು. ನಾಲ್ಕಾರು ಹಳ್ಳಿಗಳು ಜೊತೆಗೂಡಿ ನೆಡೆಸುವ ಈ ಹಬ್ಬದ ಶುರುವನ್ನು ಯಾರು ಮಾಡಿದರೋ ಆ ಭಗವಂತನೇ ಬಲ್ಲ. ಆದರೆ ಆ ಮೂಲಕ ಪ್ರಸ್ತುತ ಯಾವುದೇ ಸರ್ಕಾರ ಅಥವಾ ರಾಜಕೀಯ ಪಕ್ಷಗಳಿಗೂ ಮಾಡಲಾಗದಂತಹ ಹಳ್ಳಿ ಹಳ್ಳಿಗಳ ನಡುವಿನ ಸಹಬಾಳ್ವೆ, ಬಾತೃತ್ವ, ಪ್ರೀತಿ ವಿಶ್ವಾಸಗಳನ್ನುಈ ಸುಗ್ಗಿಹಬ್ಬ ಕಾಪಾಡಿಕೊಂಡು ಬಂದಿದೆ. ತೋರ್ಪಡಿಕೆಯ ಭಕ್ತಿಯ ಒಂದಿನಿತು ನಾಮಶೇಷಗಳಿಲ್ಲದೆ, ಚಿನ್ನ ಬೆಳ್ಳಿ ವಜ್ರ ವೈಡೂರ್ಯಗಳ ಆಡಂಬರಗಳಿಲ್ಲದೆ ಹುಟ್ಟಬಟ್ಟೆಯಲ್ಲೇ ಕೈಮುಗಿದು 'ಅಮ್ಮಾ, ತಂದೆ' ಎನುತ ದೇವರ ಅಡ್ಡೆಗಳ ಮುಂದೆರಗುವ ಮಲೆನಾಡಿಗರ ಆ ಭಕ್ತಿ, ಶ್ರದ್ದೆ ನೋಡುಗರಲ್ಲಿ ರೋಮಾಂಚನವನ್ನು ಮೂಡಿಸುತ್ತವೆ.

ಹರಿಜನರ ಕೇರಿಯಿಂದ ಬರುವ ಭೂತಪ್ಪ ಇಡೀ ಹಳ್ಳಿಯ ಮನೆಮನೆಗಳಿಗೋಗಿ ಹಬ್ಬದ ಕರೆಯೋಲೆಯನ್ನು ಕೊಟ್ಟು ಬಂದ ನಂತರ ಎರಡು ಮೂರು ಅಥವ ಕೆಲವೆಡೆ ಹಲವು ವಾರಗಳವರೆಗೂ ಸುಗ್ಗಿಹಬ್ಬದ ಸಂಭ್ರಮ ನೆಡೆಯುತ್ತದೆ. ಆಗ ಪ್ರತಿದಿನವೂ ಒಂದೊಂದು ಬಗೆಯ ಆಚರಣೆ ಪೂಜೆಗಳು . ಕಾಳಬ್ಬ/ ಅವರಳೆಕಾಳಬ್ಬ (ಕೇವಲ ಮೊಳಕೆ ಕಟ್ಟಿದ ವಿಧ ವಿಧವಾದ ಕಾಳುಗಳ ಪಲ್ಯ ಹಾಗು ಸಾರನ್ನು ಮಾಡುವುದು), ದೇವತೆಗಳನ್ನು ಶೃಂಗಾರಗೊಳಿಸಿ ಗುಡಿಯಿಂದ ಹೊರತರುವ ದಿನ (ಅಂದು ಮನೆಯಲ್ಲಿ ಯಾವುದೇ ಸುಡುವ/ಹುರಿಯುವ ಆಹಾರಗಳನ್ನು, ರೊಟ್ಟಿ, ಚಪಾತಿ ಇತ್ಯಾದಿಗಳನ್ನು ಮಾಡುವಂತಿಲ್ಲ), ಹಸಿಗೆ (ಕೇವಲ ಹಾಲು ಹಾಗು ಕೆಲ ಹಣ್ಣುಗಳನ್ನು ಮಾತ್ರ ತಿಂದು ದೇವರ ಅಡ್ಡೆಗಳನ್ನು ಹೊರುವ ದಿನ), ಗುರಿಯೊಡೆಯುವುದು (ವಿವಿಧ ಬಗೆಯ ಹಣ್ಣುಗಳನ್ನು ಎತ್ತರದೆರಡು ಕಂಬಗಳಿಗೆ ನೇತಾಗಿ ಊರಿನ ಮನೆಗಳ ಕೇಪಿನ ಅಥವಾ ತೋಟದ ಕೋವಿಗಳಿಂದ ಗುರಿಯೊಡೆಯುವುದು), ಕೆಂಡ (ರಾಶಿ ಕೆಂಡವನ್ನು ದೇವಾಲಯದ ಮಂದಾಕಿ ಬರಿಕಾಲಿನಿಂದಲೇ ತುಳಿಯುತ್ತಾ ದೇವಾಲಯವನ್ನು ಸುತ್ತುವುದು), ತೇರು (ದೇವಾಲಯದ ದೇವ / ದೇವತೆಯ ವಿಗ್ರಹವನ್ನು ರಥವೊಂದರಲ್ಲಿ ಕೂರಿಸಿ ದೇವರ ಸುತ್ತ ಪ್ರದಕ್ಷಣೆ ಸುತ್ತಿಸುವುದು) ಹೀಗೆ ಒಂದೊಂದು ಹಳ್ಳಿಗಳಲ್ಲೂ ಒಂದೊಂದು ಬಗೆಯ ವಿಶಿಷ್ಟ ಹಾಗು ವಿಭಿನ್ನ ಆಚರಣೆಗಳನ್ನು ನೆಡೆಸುತ್ತಾರೆ. ಇನ್ನು ಇಲ್ಲಿನ ದೇವ-ದೇವತೆಗಳ ಹೆಸರೋ ದೊಡ್ಡಮ್ಮ, ಚಿಕ್ಕಮ್ಮ, ನಾಕುರಮ್ಮ, ಎಂಬ ಹೆಣ್ಣುದೇವತೆಗಳ ಜೊತೆಗೆ ಈಶ್ವರನ ಹಲವು ನಾಮಧ್ಯೆಯಗಳ ಗಂಡುದೇವರುಗಳ ಹೆಸರು. ಇನ್ನು ಭೂತಪ್ಪ ಈ ದೇವ ದೇವತೆಯರ ರಕ್ಷಕನಾಗಿ ಅವರನ್ನು ಹೊತ್ತೊಯ್ಯುವ ಮೆರವಣಿಗೆಯಲ್ಲಿ ಎಲ್ಲರಿಗಿಂತಲೂ ಮುಂದಿರುತ್ತಾನೆ. ಹೆಚ್ಚಾಗಿ ಹರಿಜನರೇ ಹೊತ್ತು ಸಾಗುವ ಆ ಬೂತಪ್ಪನ ‘ಅಡ್ಡೆ’ಯನ್ನು ಅತ್ಯಂತ ಭಾವಬಕುತಿಯಿಂದ ಊರಿನ ಜನರು ನೋಡುತ್ತಾರೆ. ಊರುಕೇರಿ ಎಲ್ಲವನ್ನು ಸುತ್ತಿ ಗುಣವಾಗದ ಕಾಯಿಲೆಗೆ, ಮಗಳ ಕಂಕಣ ಭಾಗ್ಯದ ವಿಘ್ನಗಳ ನಿವಾರಣೆಯ ಬಗ್ಗೆ, ಗಂಡನ ಕುಡಿತದ ಬಗ್ಗೆ, ಬರಗಾಲದ ಮಳೆ ಬೆಳೆಯ ಕಷ್ಟಗಳ ಬಗ್ಗೆ ಯಾರಿಲ್ಲ ಅಂದರೂ ಕೊನೆಗೆ ಬೂತಪ್ಪನೆ ನಮಗೆ ಗತಿ ಎಂಬ ನಂಬುಗೆಯನ್ನು ಇಂದಿಗೂ ಇಟ್ಟುಕೊಂಡಿದ್ದಾರೆ ಇಲ್ಲಿನ ಮಲೆನಾಡಿಗರು. ಇಲ್ಲಿ ಹರಿಜನ ಮೆಲ್ಜನ ಎಂಬ ತಕರಾರುಗಳಿಲ್ಲ. ಕ್ಷಮಿಸಿ, ತಕರಾರುಗಳಿರಲಿಲ್ಲ! ಇಡೀ ಮಲೆನಾಡಿಗರು ತಿನ್ನುವ ತುತ್ತನ್ನು ಭಿತ್ತಿ, ಬೆಳೆಸಿ, ಕಟಾವು ಮಾಡಿಕೊಡುತ್ತಿದ್ದ ಜನರೊಟ್ಟಿಗೆ ತಕರಾರು ಎಂಬ ಪದಕ್ಕೆ ಯಾವ ಬಗೆಯ ಅರ್ಥ? ಕೆಲವೆಡೆಯಂತೂ ಇಡೀ ದೇವಸ್ಥಾನದ ದೇವದೇವತೆಗಳ ಪೂಜೆಯ ಜವಾಬ್ದಾರಿಯನ್ನೂ ಈ ಹರಿಜನರೆ ಮಾಡುತ್ತಾರೆ. ಶ್ರದ್ಧಾ ಭಕ್ತಿಯಿಂದ ಅವರುಗಳು ಕೊಡುವ ತೀರ್ಥ ಪ್ರಸಾದವನ್ನು ಊರಿನ ಎಲ್ಲರು ಸೇವಿಸಿ ಕೈಮುಗಿಯುತ್ತಾರೆ. ತಮಟೆ ಡೊಳ್ಳಿನ ಸದ್ದಿಗೆ ಎಲ್ಲರೂ ಒಟ್ಟಾಗಿ ಕುಣಿಯುತ್ತಾರೆ. ಕುಣಿದು ನಲಿಯುತ್ತಾರೆ.

ಪ್ರಸ್ತುತ ರಣಬಿಸಿಲಿನ ಝಳಪಿಗೆ ಮೈಯೊಡ್ಡಿರುವ ತಣ್ಣನೆಯ ಬೆಣ್ಣೆಯ ಮುದ್ದೆಯಂತಾಗಿರುವ ಮಲೆನಾಡ ನೆಲದಲ್ಲಿ ಅಳಿದುಳಿದ ಈ ಸುಗ್ಗಿಯ ಸಂಭ್ರಮವೂ ನಿಧಾನವಾಗಿ ಕರಗಿ ಕಣ್ಮರೆಯಾಗುತ್ತಿದೆ. ಊರು, ಕೇರಿ, ಹೊಲ, ದೇವಸ್ಥಾನ ಇವಿಷ್ಟೇ ಜೀವನವನ್ನಾಗಿ ಮಾಡಿಕೊಂಡಿದ್ದ ತಲೆಮಾರೂ ಸಹ ಇಂದು ಅಳಿವಿನ ಅಂಚಿನಲ್ಲಿದ್ದೆ. ಜಗತ್ತೇ ತನ್ನ ಮುಷ್ಠಿಯೊಳಗೆ ಎಂದುಕೊಂಡೆ ಹುಟ್ಟುವ ಇಂದಿನ ಯುವಜನ ಊರು ಸುಗ್ಗಿಹಬ್ಬಗಳೆಲ್ಲ ದೂರದ ಮಾತು ಕನಿಷ್ಠ ಪಕ್ಷ ತಮ್ಮ ಹಳ್ಳಿಯ ದೇವಸ್ಥಾನದ ದಾರಿಯನ್ನು ತೋರಿಸಲು ತಡವರಿಸುತ್ತಾರೆ. ಇನ್ನು ಅಳಿದುಳಿದ ಮನೆಯ ಯಜಮಾನರುಗಳಿಗೆ, ಪ್ರಜ್ಞಾವಂತ ಹಳ್ಳಿಗರಿಗೆ ಮೊದಲೇ ಹೇಳಿದಂತೆ ಹೋಂ ಸ್ಟೇ, ಗೆಸ್ಟ್ ಹೌಸುಗಳ ಕನಸ್ಸೇ ಬಹುವಾಗಿ ತುಂಬಿಕೊಂಡಿದೆ ಎಂದರೆ ತಪ್ಪಾಗದು. ತಾನಾಯಿತು ತನ್ನ್ನ ಹಣ ಸಂಪಾದನೆಯಾಯಿತು ಎಂದುಕೊಂಡೆ ಕಾಲ ತಳ್ಳುವ ಜನರ ಮದ್ಯೆ ಸುಗ್ಗಿಯ ಸಂಭ್ರಮ ಮುಳುಗಡೆಗೊಳ್ಳುತ್ತಿದೆ. ಅಷ್ಟಾಗಿಯೂ ಅಲ್ಲೊಂದು ಇಲ್ಲೊಂದು ಹಳ್ಳಿಗಳ ಜನರೆಲ್ಲ ಜೊತೆಗೂಡಿ ಹಬ್ಬವನ್ನು ಆಚರಿಸಲು ಮುಂದಾದರೆ ಎದುರಾಗುವ ಮತ್ತೊಂದು ಮಹಾ ಸಮಸ್ಯೆ 'ಹರಿಜನರ ದೇವಸ್ಥಾನ ಪ್ರವೇಶ'. ಸ್ವಸೃಷ್ಟಿಯ ಜಾಲದೊಳಗೆ ಖುದ್ದು ಮಾನವನೇ ಬಿದ್ದು ಒದ್ದಾಡುತ್ತಿರುವುದ್ದಕ್ಕೆ ಇದಕ್ಕಿಂತ ಮತ್ತೊಂದು ಸ್ಪಷ್ಟ ನಿದರ್ಶನ ಮತ್ತೊಂದು ಸಿಗದು. ತಲೆತಲಾಂತರದಿಂದ ನೆಡೆದುಕೊಂಡು ಬಂದ 'ಸಂಪ್ರದಾಯ' ದ ಪ್ರಕಾರ ಹರಿಜರರ ದೇವಾಲಯ ಪ್ರವೇಶಕ್ಕೂ ಇಂತಿಷ್ಟು ಲಕ್ಶ್ಮಣರೇಖೆಗಳಿದ್ದವು. ಆ ರೇಖೆಗಳನ್ನು ನಮ್ಮ ಹಿರಿಯರು ಸಂಪ್ರದಾಯವೆಂದು ಕರೆದರೆ ಈಗ ಆ ಸಂಪ್ರದಾಯ ಮುರಿದುಬಿಳಿಯುವ ಕಾಲ ಸನಿಹವಾಗುತ್ತಿದೆ! ಯಾವ ಜಾತಿಯ ಹಂಗಿಲ್ಲದೆಯೋ ದೇಶದ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು, ರಾಜಕಾರಣಿಗಳೇನಾದರೂ ದೇವಾಲಯ ಪ್ರವೇಶಕ್ಕೆ ಬಂದರೆ ಅಂತವರನ್ನು ತಡೆಯುವ ಹುಂಬುತನ ಇಂದು ಅದೆಷ್ಟು ಮಂದಿಗಿದೆ? ಕೆಲವು ಸಾರಿ ಅಂತವರು ದೇವರ ದರ್ಶನವಲ್ಲ, ದೇವರನ್ನೇ ಅವರ ದರ್ಶನಕ್ಕೆ ತಂದು ನಿಲ್ಲಿಸಿದರೂ ಆಶ್ಚರ್ಯಪಡಬೇಕಾಗಿಲ್ಲ. ಆದರೆ ತಮ್ಮ ಜೀವಮಾನ ಪೂರ್ತಿ ನೋಡಿ, ಕಲಿತು, ನೆಡೆಸಿಕೊಂಡು ಬಂದಿರುವ ಆಚರಣೆಯನ್ನು ಅಷ್ಟು ಸಲೀಸಾಗಿ ಬಿಟ್ಟುಕೊಡದ ಊರಿನ ಜನ ಹೆಸರಿಗೆ ಮಾತ್ರವಷ್ಟೇ ಇದ್ದ ಭೇದ ಭಾವದ ಬೇಲಿಯನ್ನು ಕಿತ್ತು ಕಲ್ಲಿನ ಗೋಡೆಯನ್ನೇ ಅಲ್ಲಿ ಕಟ್ಟುತ್ತಿದ್ದಾರೆ. ಹಬ್ಬ ನಿಂತರೂ ಚಿಂತೆಯಿಲ್ಲ ನಮ್ಮ ಹಿರಿಯರ 'ಸಂಪ್ರದಾಯ'ವನ್ನು ಅಷ್ಟು ಸಲೀಸಾಗಿ ಬಿಟ್ಟುಗೋಡೆವು ಏನುತಾ ಅರಚುತ್ತಾರೆ. ಮತ್ತದೇ ಮನೆ ಕಮ್ ಹೋಂಸ್ಟೇಗಳಿಗೆ ಹೋಗಿ ಜಾತಿಯ ಹಂಗಿಲ್ಲದ ಅತಿಥಿಗಳಿಗೆ ಕಾಯುತ್ತಾ ಕೂರುತ್ತಾರೆ! ಇಲ್ಲಿ ತಮ್ಮ ಮನೆಯ 'ಸಂಪ್ರದಾಯ' ಎಲ್ಲಡಗಿ ಹೋಯಿತೋ ಬಲ್ಲವರ್ಯಾರು?

ದೇವರಿಗೂ ಮಿಗಿಲಾದ ಹಣಭಕ್ತಿ, ವೈಮನಸ್ಸು, ತುಳಿದು ಮೇಲೆ ನಿಲ್ಲುವ ರಾಕ್ಷಸಿ ಬುದ್ದಿ, ಭಕ್ತಿ ಗುಲಗಂಜಿಯಷ್ಟಿರದಿದ್ದರೂ ಸರಿ ದೇವಸ್ಥಾನದ ಇತಿಹಾಸದ ಹಾಗು ಆಚರಣೆಗಳ ಮಹತ್ವವನ್ನು ಅರಿಯದಿದ್ದರೂ ಸರಿ ಒಟ್ಟಿನಲ್ಲಿ ತಾನು ದೇವಸ್ಥಾನವನ್ನು ಒಳಹೊಕ್ಕು ಬಂದರೆ ಸಾಧಿಸಿದ ಸಾಧನೆಯಾದರೂ ಏನೆಂದು ಅರಿಯದ ಅಮಾಯಕ ಜೀವಿಗಳ ಮದ್ಯೆ ನಿಂತು ಸೊರಗುತ್ತಿರುವುದು ಮಾತ್ರ ಸುಗ್ಗಿಯ ಹಿಗ್ಗು. ಸಂಪ್ರದಾಯದ ಹೆಸರೇಳಿ ಸಮಾನತೆಯ ಹಕ್ಕನ್ನು ಕಸಿಯಬೇಕೋ ಅಥವ ಇಲ್ಲಿಗೆ ಮುಗಿಯಿತು ಎನುತ ಅಂತಹ ಆಚರಣೆಗಳನ್ನೇ ಬಿಡಬೇಕೋ ಎಂಬ ದ್ವಂದ್ವದಲ್ಲಿ ಇಂದು ಮಲೆನಾಡಿಗರಿದ್ದಾರೆ. ಪಿಜ್ಜಾ ಬರ್ಗರ್ ಹಾಗು ಮಾಮೂಸ್ಗಳ ಈ ಹೊಸ ಪೀಳಿಗೆಗೆ ಇನ್ನು ಸುಗ್ಗಿಯ ಜಾತ್ರೆಯ ಜಿಗಳಿ ಹಾಗು ಟಮಟಗಳ ಸಿಹಿಯನ್ನು ತಿನಿಸುವವರ್ಯಾರು ? ಮಲೆನಾಡ ಸುಗ್ಗಿಯನ್ನು ಮುನ್ನೆಡೆಸುವವರ್ಯಾರು ?

(* ಮೇಲೆ ತಿಳಿಸಿದ ಕೆಲ ಆಚರಣೆಗಳು ಕೊಂಚ ಬದಲಿರಬಹುಸು ಅಥವಾ ತಪ್ಪಿರಲೂಬಹುದು. ಇಲ್ಲಿ ನನ್ನ ತಪ್ಪಿಗಿಂತ ಹೆಚ್ಚಾಗಿ ದಶಕಗಳ ಕಾಲದವರೆಗೆ ಸುಗ್ಗಿಯ ಜಾತ್ರೆಯನ್ನು ನಿಲ್ಲಿಸಿದ ಜನಗಳೇನೇಕರಿಗೇ ಇದರ ಹೊಣೆ ನೇರವಾಗಿ ಸಲ್ಲುತ್ತದೆ! ಹೀಗೆಯೇ ಮುಂದುವರೆದರೆ, ಮುಂದೊಂದು ದಿನ ಒಂದು ಪಕ್ಷ ಯುವಕರೆಲ್ಲ ಒಟ್ಟಾಗಿ ಹಬ್ಬವನ್ನು ಆಚರಿಸಲು ಬಂದರೂ ಆಚಾರ ಸಂಪ್ರದಾಯಗಳೇ ಗೊತ್ತಿಲ್ಲದೇ ಪರದಾಡಿದರೂ ಆಶ್ಚರ್ಯ ಪಡಬೇಕಾಗಿಲ್ಲ!)