Tuesday, February 26, 2019

ಗುಡಿಯಿಂದ ಮನೆಕಾಯುವವನು ದೇವರಾದರೆ, ಗಡಿಯಿಂದ ದೇಶ ಕಾಯುವವನು .. ?

ಉರಿಯುವ ಬಿಸಿಲಾಗಲಿ ಅಥವಾ ಕೊರೆಯುವ ಚಳಿಯಾಗಲಿ, ಹಸಿವು ಕೂಗುತ್ತಿರಲಿ ಅಥವಾ ದುಃಖ ಮಡುಗಟ್ಟಿರಲಿ, ದೇಹ ಸಾಕೆನ್ನುತ್ತಿರಲಿ ಅಥವಾ ಭಯ ಮನೆಮಾಡಿರಲಿ, ಹಗಲಿರಲಿ, ಇರುಳಿರಲಿ, ಕೇವಲ ದೇಶ ದೇಶ ದೇಶವೆನುತ ಜೀವ ತೆತ್ತುವ ಆ ಹುಚ್ಚು ಪ್ರೇಮಿಗಳಿಗೆ ಅರ್ಥಾತ್ ನಮ್ಮ ಧೀರ ಸೈನಿಕರನ್ನು ಸ್ಮರಿಸುತ್ತಾ, ಗೌರವಿಸುತ್ತಾ ಹಾಗು ಶ್ರದ್ದಾಂಜಲಿಯನ್ನು ಅರ್ಪಿಸುತ್ತಾ...

ನಾನಿಂದು ಹೇಳಹೊರಟಿರುವುದು ಒಬ್ಬ ಪಾಪ್ಯುಲರ್ ಪತ್ತೇದಾರಿಯ ಬಗ್ಗೆ. 'ದಿ ಬ್ಲಾಕ್ ಟೈಗರ್' ಎಂಬ ಹುಲಿಯ ವರ್ಚಸ್ಸಿನ ಈತ ಭಾರತ ನೆಲದ ವೀರಪುತ್ರ. ಜೀವಹೋದರೂ ದೇಶದ ಮಾಹಿತಿಯನ್ನು ಬಿಡದ ಒಬ್ಬ true ಹೀರೋ. ತನ್ನ ಬದುಕಿನ ಅರ್ದದಷ್ಟು ಕಾಲವನ್ನು ದೇಶ ಹಾಗು ದೇಶದ ನೆಲಕ್ಕೆ ಮುಡಿಪಾಗಿಟ್ಟ ಈತನ ಜೀವನದ ಕೊನೆಯ ದಿನಗಳು ದುಃಖಾಂತ್ಯ ಕಂಡದ್ದು ಮಾತ್ರ ವಿಪರ್ಯಾಸವೇ ಸರಿ.

ಮಕಾಡೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಜಾಯಮಾನದ ಪಾಕಿಸ್ತಾನ ಮೂರು ಮೂರು ಬಾರಿ ಸೋತು ಸುಣ್ಣವಾದರೂ ನಾಲ್ಕನೇ ಬಾರಿಗೆ ಒಳನುಗ್ಗುವ ಕುತಂತ್ರವನ್ನು ರೂಪಿಸುತ್ತಿದ್ದ ಕಾಲವದು. ತೀವ್ರವಾದಿಗಳೆಂಬ ಆಂತರಿಕ ಭಯೋತ್ಪಾದಕರ ಬಲದಲ್ಲಿ ನೆಡೆಯುವ ದೇಶಗಳು ಮಾತ್ರ ಹೀಗೆ ತಿನ್ನಲು ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜಗತ್ತನ್ನು ಗೆಲ್ಲುವ ದುಸ್ಸಾಹಸಕ್ಕೆ ಕೈಹಾಕುವುದು. ಮೆಷಿನ್ ಗನ್ನುಗಳನ್ನು ಹಿಡಿದಿರುವ ಮಂಗಗಳ ಗುಂಪು ಜಗತ್ತನ್ನು ಗೆಲ್ಲುವುದುಂಟೆ ಎನುತ ಸುಮ್ಮನಿರಲೂ ಇತ್ತಕಡೆ ಸಾದ್ಯವಿರಲಿಲ್ಲ. ಭಾರತ ಆ ಮಿಲಿಟರಿ ಕಮಂಗಿಗಳ ನಾಲ್ಕನೇ ಆಕ್ರಮಣಕ್ಕೂ ಮೊದಲೇ ಹೆಚ್ಚೆತ್ತುಕೊಳ್ಳಬೇಕಿತ್ತು. ಸೋಲೋ ಗೆಲುವೋ, ಯುದ್ದವೆಂಬುದು ದೇಶವನ್ನು ಹಲವಾರು ವರ್ಷಗಳಿಗೆ ಹಿಂಬಡ್ತಿಯನ್ನು ನೀಡುವುದಂತೂ ಸುಳ್ಳಲ್ಲ. ಆದ ಕಾರಣ ಈ ಬಾರಿ ಸಾವು ನೋವುಗಳಿಲ್ಲದ ಸೈಲೆಂಟ್ ಯುದ್ಧವನ್ನು ಮಾಡಬೇಕಿದ್ದಿತು. ಕಾಲ ಮೀರುವ ಮೊದಲೇ ದೇಶಕ್ಕೆ ಅವರುಗಳ ಚಲನವಲನಗಳಲ್ಲದೆ, ತಂತ್ರ ಕುತಂತ್ರಗಳ ಬಗ್ಗೆಯೂ ತಿಳಿಯಬೇಕಿದ್ದಿತು. ಹಾಗಾಗಿ ನಮ್ಮವರಲ್ಲೊಬ್ಬ ಅವರ ಮನೆಯಲ್ಲಿದ್ದೆ ವಿಷಯಗಳನ್ನು ಸಂಗ್ರಹಿಸಬೇಕಿದ್ದಿತು. ಅವುಗಳನ್ನು ಅಲ್ಲಿಂದ ಇಲ್ಲಿಗೆ ಕಳುಹಿಸಬೇಕಿದ್ದಿತು. ಅರ್ತಾಥ್ County Needed a Smart & Powerful Spy!

ಅದು ಅರ್ವತ್ತನೆ ದಶಕದ ಕೊನೆಯ ವರ್ಷಗಳು. ರಾಜಸ್ತಾನದ ಗಂಗಾನಗರದಲ್ಲಿ ನೋಡಲು ಏಕ್ದಂ ಅಂದಿನ ಸೂಪರ್ಸ್ಟಾರ್ ವಿನೋದ್ ಖನ್ನಾನಂತೆ ಕಾಣುತಿದ್ದ ಚಿಗುರುಮೀಸೆಯ ಯುವಕನೊಬ್ಬ ಥಿಯೇಟರ್ ನ ಸ್ಟೇಜಿನ ಮೇಲೆ ತನ್ನ ನಟನಾ ಚತುರತೆಯಿಂದ ಮಿಂಚುತ್ತಿರುತ್ತಾನೆ. ಬೆಳ್ಳನೆಯ ಆರಡಿ ಎತ್ತರದ ದೇಹಾಕಾಯ ಹೊರಗಡೆಯಾದರೆ ದೇಶ ಹಾಗು ದೇಶಕ್ಕಾಗಿ ಏನಾದರೊಂದು ಮಾಡಲೇಬೇಕೆಂಬ ಹಪಾಹಪಿ ಆತನ ಒಳಗಡೆ. ಹಾಗಾಗಿ ತಾನು ನಟಿಸುತ್ತಿದ್ದ ನಾಟಕಗಳಲ್ಲಿ ತನಗೆ ಅಂತಹದ್ದೇ ಯಾವುದಾದರೊಂದು ಪಾತ್ರವನ್ನು ಗಿಟ್ಟಿಸಿಕೊಂಡು ಅದಕ್ಕೆ ಜೀವ ತುಂಬುತ್ತಿದ್ದ ಆತ. ಅದು ನೋಡುಗರಲ್ಲಿ ನಾಟಕವೂ, ನಿಜಜೀವನವೋ ಎಂಬ ಭ್ರಮೆಯನ್ನು ಮೂಡಿಸುವಂತಿತ್ತು ಆತನ ನಟನೆ. ಹೆಸರು ರವೀಂದ್ರ ಕೌಶಿಕ್ ಉರ್ಫ್ ನಬಿ ಅಹ್ಮದ್ ಶಾಕಿರ್!

ಆ ದಿನ ಭಾರತದ ಏಜೆಂಟ್ ಒಂದರ ಪಾತ್ರವನ್ನು ನಟಿಸುತ್ತಿದ್ದ ಈತನ ನಟನೆಯನ್ನು ನೋಡಿ ಅಲ್ಲಿ ಬೆರಗಾಗದಿರುವವರೇ ಇರಲಿಲ್ಲ. ದೇಶದ ಮುಂದಿನ ಸೂಪರ್ ಸ್ಟಾರ್ ಆಗುವ ಎಲ್ಲಾ ಲಕ್ಷಣಗಳಿದ್ದ ಆತನ ನಟನೆಯನ್ನು ಅಂದು ನೋಡಲು ಬಂದಿದ್ದವರ ಗುಂಪಿನಲ್ಲಿ ಕೇವಲ ಪ್ರೇಕ್ಷಕರಷ್ಟೇ ಅಲ್ಲದೆ ಭಾರತ ದೇಶದ ಗುಪ್ತಚರ ಸಂಸ್ಥೆಯ ಅಧಿಕಾರಿಗಳೂ ಇದ್ದರು. ಅಧಿಕಾರಿಗಳೇನು ನಾಟಕ ನೋಡಬಾರದೇ ಸ್ವಾಮಿ, ಅದರಲ್ಲೇನಿದೆ ಅಂಥಹದ್ದು ಎನ್ನಬಹುದು. ಆದರೆ ಅಂದು ಅಲ್ಲಿಗೆ ಬಂದಿದ್ದ ಅಧಿಕಾರಿಗಳು ನಾಟಕವನ್ನು ಅದೆಷ್ಟು ಆಸ್ವಾದಿಸಿದರೂ ಗೊತ್ತಿಲ್ಲ ಆದರೆ ತಾವು ವರುಷಗಳಿಂದ ಅರಸುತ್ತಿದ್ದ ವ್ಯಕಿಯೊಬ್ಬನನ್ನು ಆ ಯಂಗ್ ಸೂಪರ್ ಸ್ಟಾರ್ನಲ್ಲಿ ಅವರು ಕಂಡರು! ಕೂಡಲೇ ಆತನನ್ನು ಭೇಟಿಯಾಗಿ ಆತ ದೇಶದ ಹಿತರಕ್ಷಣೆಗೆ, ದೇಶದ ಜನರ ಒಳಿತಿಗೆ ಇಲಾಖೆಯನ್ನು ಸೇರಬೇಕೆಂಬ ಜಾಬ್ ಆಫರನ್ನೂ ಕೊಟ್ಟರು. ಅಲ್ಲದೆ ಮುಚ್ಚು ಮರೆಯಿಲ್ಲದೆ ಕೆಲಸ ಪಕ್ಕದ ಪಾಕಿಸ್ತಾನಕ್ಕೆ ತೆರಳಿ ಅಲ್ಲಿಂದ ಸೀಕ್ರೆಟ್ ಇನ್ಫಾರ್ಮಶನ್ ಗಳನ್ನು ಇಲ್ಲಿಗೆ ರವಾನಿಸುವುದು ಎಂದರು. ಬೇರೆಯವರಾಗಿದ್ದರೆ ಬಹುಷಃ ಕಡ್ಡಿ ಮುರಿದಂತೆ ಇಲ್ಲವೆನ್ನುತ್ತಿದ್ದರೋ ಅಥವಾ ಯೋಚಿಸಲು ಸಮಯಾವಕಾಶ ಕೇಳುತ್ತಿದ್ದರೊ ಏನೋ ಆದರೆ ಬಿಸಿರಕ್ತದ ದೇಶಭಕ್ತ ರವೀಂದ್ರ ಕೌಶಿಕ್ ನಿಂತ ಜಾಗದಲ್ಲೇ ಆ ಕಾರ್ಯಕ್ಕೆ ಸಮ್ಮತಿಸಿಯೇ ಬಿಟ್ಟ!

ಮುಂದಿನ್ನೇನು, ಮನೆಯಲ್ಲಿ ಇದು ದೇಶದ ಕೆಲಸ, ಸರ್ಕಾರಿ ಕೆಲಸವೆಂದಷ್ಟೇ ಹೇಳಿ ತರಬೇತಿಯಲ್ಲಿ ತೊಡಗೆಬಿಟ್ಟ ಆ ಯಂಗ್ ವಿನೋದ್ ಖನ್ನಾ. ಅದು ಬರೋಬ್ಬರಿ ಎರಡು ವರ್ಷಗಳ ತರೆಬೇತಿ. ಪಾಕಿಗಳ ಮದ್ಯೆ ಪಾಕಿಯೊಬ್ಬನಾಗುವ ಪ್ರಕ್ರಿಯೆ. ಉರ್ದು, ಪಂಜಾಬಿ ಭಾಷೆಗಳ ತಿಳಿವಳಿಕೆ ಹಾಗು ಉಚ್ಚಾರಣೆಗಳ ಜೊತೆಗೆ ಒಬ್ಬ ಅತ್ಯುನ್ನತ ಸೈನಿಕನನ್ನೂ ಅಲ್ಲಿ ನಿರ್ಮಿಸಲಾಗುತ್ತಿತ್ತು. ಯಾವುದೇ ಸಮಯದಲ್ಲಿ ಅದೆಂಥಹ ಕ್ಲಿಷ್ಟಕರ ಸನ್ನಿವೇಶಗಳೂ ಎದುರಾದರೂ ಧೈರ್ಯವಾಗಿ ಎದುರಿಸುವ ಯೊದ್ದನಾಗಿ ರವೀಂದ್ರ ಕೌಶಿಕ್ ಅಂದು ಮಾರ್ಪಾಡಾಗಿದ್ದ. 1975 ರ ಮುಂಜಾವಿನ ಒಂದು ದಿನ ಮನೆಯನ್ನು ಬಿಟ್ಟ ಕೌಶಿಕ್ ದೇಶಕ್ಕಾಗಿ ತನ್ನ ಸೇವೆಯನ್ನು ಆರಂಭಿಸಿಯೆ ಬಿಟ್ಟ. ಅಬುಧಾಬಿ, ದುಬೈ ಮಾರ್ಗದ ಮೂಲಕ ಪಾಕಿಸ್ತಾನವನ್ನು ತಲುಪಿದ ಈತ ಮೊದಲು ಮಾಡಿದ ಕೆಲಸ ಕರಾಚಿ ಯೂನಿವರ್ಸಿಟಿಯಲ್ಲಿ ಅಡ್ಮಿಶನ್. ಆಗ ಆತನ ಹೆಸರು ನಬಿ ಅಹ್ಮದ್ ಶಾಕಿರ್. ಅಲ್ಲಿ LLB ಯನ್ನು ಓದಲು ಶುರುಮಾಡಿದ ಈತನ ಗುರಿ ಪಾಕಿಸ್ತಾನದ ಸೈನ್ಯವನ್ನು ಸೇರುವುದು ಹಾಗು ಕ್ರಮೇಣವಾಗಿ ಮುಂಬಡ್ತಿಯನ್ನು ಪಡೆಯುವುದು. ಅಂತೆಯೇ ಡಿಗ್ರಿಯನ್ನು ಪೂರ್ಣಗೊಳಿಸಿ ಆಡಿಟರ್ ಆಗಿ ಪಾಕಿಸ್ತಾನ ಆರ್ಮಿಯನ್ನು ಸೇರಿದ ಕೌಶಿಕ್ ತನ್ನ ಚತುರತೆಯನ್ನು ನಮ್ಮಯ ಅಧಿಕಾರಿಗಳಿಗೆ ತೋರಿಸಿಬಿಟ್ಟ. ದೇಶಕ್ಕೆ ಬೇಕಾಗಿದ್ದ ಹಲವಾರು ಉಪಯುಕ್ತ ಮಾಹಿತಿಗಳು ಅಂದು ಒಂದೊಂದಾಗಿಯೇ ನಮ್ಮವರ ಕೈ ಸೇರತೊಡಗಿದವು. ಅಲ್ಲದೆ ಆತ ತನ್ನ ಈ ಕಾರ್ಯದಲ್ಲಿ ಅದೇಷ್ಟು ನೈಪುಣ್ಯನಾಗಿದ್ದನೆಂದರೆ ಕುತಂತ್ರಿ ಪಾಕ್ ಸೈನ್ಯದ ಅಧಿಕಾರಿಗಳಿಂದಲೇ ಶಹಬಾಸ್ಗಿರಿಯನ್ನು ಪಡೆಯುತ್ತಾ ಮುಂಬಡ್ತಿಯನು ಪಡೆದು ಮುಂದೊಂದು ದಿನ ಪಾಕಿಸ್ತಾನ ಆರ್ಮಿಯ ಮೇಜರ್ನ ಹುದ್ದೆಗೂ ಏರಿದ ಎಂದರೆ ನಾವು ನಂಬಲೇ ಬೇಕು. ಆತನ ಆ ಸಾಹಸದ ಕೆಲಸಕ್ಕೆ ಮೆಚ್ಚಿ ನಮ್ಮವರು 'ಬ್ಲಾಕ್ ಟೈಗರ್' ಎಂದು ನಾಮಕರಣ ಮಾಡಿರುವುದೂ ಉಂಟು.

ಏತನ್ಮದ್ಯೆ ತನ್ನ ಸಹೋದ್ಯೋಗಿಯ ಮಗಳೊಬ್ಬಳನ್ನು ಮದುವೆಯಾದ ಟೈಗರ್ ತನ್ನ ಸೂಕ್ಷ್ಮ ಕಾರ್ಯಾಚರಣೆಯನ್ನು ಮುಂದುವರೆಸಿಯೇ ಇದ್ದ. ಇದು ಆತನ ಪ್ಲಾನಿನ ಒಂದು ಬಾಗವೋ ಅಥವಾ ಆಕಸ್ಮಿಕವಾಗಿ ಜರುಗಿದ ಸಹಜ ಪ್ರೀತಿಯೋ ಗೊತ್ತಿಲ್ಲ. ಆದರೆ ಈ ಮನುಷ್ಯ ತನ್ನ ಹೆಂಡತಿ ಹಾಗು ನಂತರ ಜನಿಸಿದ ಮಗುವಿಗೂ ತನ್ನ ನಿಜ ಕಾರ್ಯದ ಬಗ್ಗೆ ತಿಳಿಸಲಿಲ್ಲ. ಅಲ್ಲದೆ ಇತ್ತಕಡೆ ಭಾರತದಲ್ಲಿ ಮನೆಯವರೊಟ್ಟಿಗೆ ನಿರಂತರ ಪತ್ರವ್ಯವಹಾರವನ್ನು ಹೊಂದಿದ್ದ ಆತ ಒಂದೆರೆಡು ಬಾರಿ ಮನೆಗೆ ಬಂದು ಹೋಗಿರುವುದೂ ಉಂಟು. ಹೀಗೆ ಬಂದಾಗಲೆಲ್ಲ ಮತ್ತದೇ ದೇಶದ ಕೆಲಸ, ಸರ್ಕಾರೀ ವೃತ್ತಿ ಎಂದಷ್ಟೇ ಹೇಳಿ ಒಬ್ಬ ಪಕ್ಕಾ ದೇಶಭಕ್ತ ಸೇವಕನಿಗೆ ಇರಬೇಕಾದ ಪ್ರೌಢಿಮೆಯನ್ನು ಮೆರೆದಿದ್ದ. ಅಲ್ಲದೆ ತಾನು ಪಕ್ಕದ ದೇಶದಲ್ಲಿ ಒಬ್ಬಾಕೆಯನ್ನು ಮದುವೆಯಾಗಿರುವಾದಾಗಲಿ ಹಾಗು ತನಗೊಬ್ಬ ಮಗನಿರುವ ಬಗ್ಗೆಯೂ ಆತ ಮೌನ ಮುರಿಯುವುದಿಲ್ಲ. ಹೀಗೆ ಬರೋಬ್ಬರಿ ಎಂಟು ವರ್ಷಗಳ ಕಾಲ ರಹಸ್ಯವಾಗಿ ನಮಗಾಗಿ ಶ್ರಮಿಸಿದ ಕೌಶಿಕ್ ಬಹುಷಃ ದೇಶದ ಇತಿಹಾಸದಲ್ಲಿಯೇ ತಾಯ್ನಾಡಿಗೆ ಬೇರ್ಯಾರೂ ಮಾಡದ ಪರಾಕ್ರಮವನ್ನು ಮಾಡಿರುವುದಂತೂ ಸುಳ್ಳಲ್ಲ.

ಅದು 1983ರ ಸೆಪ್ಟೆಂಬರ್ ನ ಸಮಯ. ನಮ್ಮಯ ಗುಪ್ತಚರ ಅಧಿಕಾರಿಗಳು ಇನಾಯತ್ ಎಂಬ ಏಜೆಂಟ್ ಒಬ್ಬನನ್ನು ಕೌಶಿಕ್ ನನ್ನು ಕಾಣಲು ಪಾಕಿಸ್ತಾನದ ಗಡಿಯನ್ನು ದಾಟಿಸಿದರು. ಆದರೆ ವಿಧಿಯಾಟವೋ ಏನೋ ಆ ಇನಾಯತ್ ಅಂದು ಪಾಕಿಸ್ತಾನಿ ಅಧಿಕಾರಿಗಳಿಗೆ ಸಿಕ್ಕಿಬಿದ್ದ. ಅಷ್ಟೇ . ಮುಂದೆ ನೆಡೆದ ಘಟನೆಗಳೆಲ್ಲ ಕೌಶಿಕ್ ನ ಜೀವನದ ಕಾರಾಳ ಕಡೆಯ ಪುಟಗಳನ್ನು ತೆರೆಯತೊಡಗಿದವು. ಪಾಕಿಗಳ ಚಿತ್ರಹಿಂಸೆಯನ್ನು ತಾಳಲಾರದೆ ಇನಾಯತ್ ಅಲ್ಲಿಯವರೆಗೂ ಗೌಪ್ಯವಾಗಿದ್ದ ವಿಷಯವನ್ನು ಕೊನೆಗೆ ಹೇಳಿಯೇ ಬಿಟ್ಟ. ಕೌಶಿಕ್ ಉರ್ಫ್ ನಬಿ ಅಹ್ಮದ್ ಭಾರತದಿಂದ ಬಂದು ಪಾಕಿಸ್ತಾನವನ್ನು ಪ್ರವೇಶಿಸಿ ಸಾಲು ಸಾಲು ಇನ್ಫಾರ್ಮಶನ್ ಗಳನ್ನು ರವಾನಿಸುತ್ತಿದ್ದ ಬಗೆಯೆಲ್ಲವನ್ನೂ ಒಂದಿಷ್ಟು ಬಿಡದೆ ಆತ ತೆರೆದಿಟ್ಟ. ಆತ ಹೇಳಿ ಸುಮ್ಮನಾಗುವ ಮೊದಲೇ ಇತ್ತಕಡೆ ಕೌಶಿಕ್ ನ ಗಟ್ಟಿ ಕೈಗಳ ಮೇಲೆ ಕೋಡಿಗಳು ಬಿದ್ದುಬಿಟ್ಟಿದ್ದವು.

ಭಾರತ ಹಾಗು ಭಾರತೀಯರು ಎಂದರೆ ನಿಂತ ನೆರಳಿಗೆ ಆಗದ ಪಾಕಿಸ್ತಾನ, ಅಲ್ಲಿಯ ಒಬ್ಬ ನಮ್ಮಲಿಗೆ ಬಂದು ನಮಗೇ ಚಳ್ಳೆಹಣ್ಣು ತಿನ್ನಿಸಿದನೆಂದರೆ ಸುಮ್ಮನಿರಬೇಕೇ. ಬಗೆ ಬಗೆಯ ಚಿತ್ರ ಹಿಂಸೆಯನ್ನು ನೀಡಿಯೂ ಕೊನೆಗೆ 1985 ರಲ್ಲಿ ಆತನಿಗೆ ಮರಣದಂಡನೆಯನ್ನು ನೀಡಲಾಯಿತು. ಆದರೆ ಮುಂದೆ ಅದನ್ನು ಕೊಂಚ ಸಡಿಲಿಸಿ ಜೀವಾವಧಿ ಶಿಕ್ಷೆಯೆಂದು ತಿದ್ದಲಾಯಿತಾದರೂ ಮುಂದೆ ಆತ ಅನುಭವಿಸದ ಯಾತನೆಯನ್ನು ನೋಡಿದರೆ ಅಂದೇ ಆತನಿಗೆ ಸಾವನ್ನು ಕರುಣಿಸಿದರೆ ಚೆನ್ನಾಗಿರುತ್ತಿತ್ತೇನೋ ಎಂದನಿಸದಿರದು!

ಇತ್ತ ಕಡೆ ಭಾರತ ಸರ್ಕಾರಕ್ಕೂ ಒಂತರ ಬಿಸಿತುಪ್ಪವನ್ನು ಗಂಟಲಿಗಿಟ್ಟ ಸಂಧರ್ಭ. ಸುದ್ದಿ ಅದಾಗಲೇ ಅಂತರಾಷ್ಟ್ರೀಯ ವೇದಿಕೆಯನ್ನು ತಲುಪಿದ ಕಾರಣ ಬಹಿರಂಗವಾಗಿ ಬೇರೊಂದು ದೇಶದ ಮೇಲೆ ಗೂಢಚಾರಿಕೆಯನ್ನು ನೆಡೆಸಿದೆ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಳ್ಳುವುದು ಆಗಿನ ಕಾಲಕ್ಕೆ ಸುತರಾಂ ಸಹಿಸಿಕೊಳ್ಳದ ವಿಷಯವಾಗಿದ್ದಿತು. ಅಲ್ಲದೆ ಗೂಡಾಚಾರಿ ಗುಂಪಿನಲ್ಲಿ ಹೀಗೆ ವ್ಯಕ್ತಿಯೊಬ್ಬ ಕೆಲಸದ ನಿಮಿತ್ತಾ ಬೇರೊಂದು ದೇಶದಲ್ಲಿ ಸಿಕ್ಕಿಬಿದ್ದರೆ ಖುದ್ದು ಕಳಿಸಿದ ದೇಶವೇ ನಿರಾಕರಿಸುತ್ತದೆ ಎಂಬ ನಿಯಮವಿದೆಯಂತೆ. ಈ ನಿಯಮವೇನು ನಮ್ಮ ಟೈಗರ್ ಗೆ ತಿಳಿದಿರಲಿಲ್ಲವೆಂದೆನಲ್ಲ. ಆದರೂ ಸಹ ಆ ವೀರಯೋಧ ದೇಶದ ರಕ್ಷಣೆಗೆ ತನ್ನ ಜೀವದ ಹಂಗುಬಿಟ್ಟು ಹೋಗಿದ್ದ. ವರ್ಷಗಳ ಕಾಲ ತಾನು, ತನ್ನ ಹೆಸರು, ತಮ್ಮವರು, ನೆಲ, ದೇಶವನ್ನಷ್ಟೇ ಅಲ್ಲದೆ ತನ್ನ ಧರ್ಮವನ್ನೂ ಬಿಟ್ಟು ದೇಶಕ್ಕಾಗಿ ಶ್ರಮಿಸಿದ. ಅಂತಹ ವೀರಪುರುಷನನ್ನು ಅಂದು ಕೈಹಿಡಿದು ಮೇಲೆತ್ತುವರಿರಲಿಲ್ಲ. 1985 ರಿಂದ ಶುರುವಾದ ಆತನ ನರಕಹಿಂಸೆ ಮುಂದಿನ ಒಂದೂವರೆ ದಶಕಗಳವರೆಗೂ ನೆಡೆಯಿತು. ದಿನಕ್ಕೆ ಒಪ್ಪೊತ್ತು ಊಟ.ಆ ಊಟದ ತುತ್ತು ಗಂಟಲೊಳಗೆ ಇಳಿಯುವ ಮೊದಲೇ ಮತ್ತೊಬ್ಬ ಅಧಿಕಾರಿ ತನ್ನ ಲಾಠಿಯನ್ನು ಹಿಡಿದು ಅವನ ಮುಂದೆ ಹಾಜರು. ಹೀಗೆ ಆಹಾರ, ನಿದ್ರೆ, ಗಾಳಿ, ಬೆಳಕು ಕಾಣದೆ ದಿನದಿಂದ ದಿನಕ್ಕೆ ಕೌಶಿಕ್ ಕುಂದತೊಡಗಿದ. ಕಲ್ಲುಗುಂಡಿನಂತಿದ್ದ ವ್ಯಕ್ತಿ ಮರದ ಚಕ್ಕೆಯಂತೆ ಮಾರ್ಪಾಡಾದ.

ಆಗಲೂ ಸಹ ಹೇಗೋ ಜೈಲಿನ ಆಧಿಕಾರಿಗಳ ಕಣ್ತಪ್ಪಿಸಿ ಮನೆಗೆ ಕಾಗದವನ್ನು ಬರೆಯುತ್ತಿದ್ದ. ತನ್ನ ನೋವು ಸಂಕಟವನ್ನು ತೋಡಿಕೊಳ್ಳುತ್ತಿದ್ದ. ಅಲ್ಲಿಂದ ಯಾವುದೇ ಪ್ರತುತ್ತರ ಬಾರದು ಎಂದು ತಿಳಿದ್ದಿದ್ದರೂ ಪತ್ರವನ್ನು ಬರೆಯುವುದ ನಿಲ್ಲಿಸಿರಲಿಲ್ಲ. 'ನಾನಿಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದೇನೆ, ನನಗೆ ಕಡೆ ಪಕ್ಷ ಒಂದಿಷ್ಟು ಔಷಧಿಗಳನ್ನಾದರೂ ತಲುಪಿಸುವ ವ್ಯವಸ್ಥೆಯನ್ನು ಮಾಡಿರಿ' ಎಂದು ಅಂಗಲಾಚಿಕೊಂಡು ಕೆಲವೊಮ್ಮೆ ಬರೆಯುತ್ತಿದ್ದ. ಒಂಬತ್ತು ತಿಂಗಳು ಹೊತ್ತು, ಹೆತ್ತು, ಎದೆಹಾಲ ಕುಡಿಸಿ ಮುದ್ದಾಗಿ ಬೆಳೆಸಿದ ಮಗ ಇಂದು ಜೈಲಿನಲ್ಲಿ ಊಟ ತಿಂಡಿಯಿಲ್ಲದೆ ಖಾಯಿಲೆಯಿಂದ ನರಳುತ್ತಿದ್ದಾನೆ ಎಂದರೆ ಆ ತಾಯಿಗೆ ಅದೆಂತಹ ನೋವು ಸಂಕಟವಾಗಿರಬಹುದು ಯೋಚಿಸಿ. ವರ್ಷಗಳ ಕಾಲ ಆತ್ತು ಅತ್ತು ಕೊನೆಗೆ ಆಕೆಯ ಕಣ್ಣೀರೆ ಹಿಂಗಿ ಹೋದವೇನೋ? ಆದರೆ ನಮ್ಮಲ್ಲಿ? ಅತ್ತಕಡೆಯಿಂದ ಪಿಕ್ ನಿಕ್ ಗೆ ಬಂದು ಮೋಜು ಮಸ್ತಿ ಮಾಡುವಂತೆ ಮುಂಬೈನ ಗಲ್ಲಿ ಗಲ್ಲಿಗಲ್ಲಿ ನರಮೇಧವನ್ನೇ ನೆಡಸಿ ಅಟ್ಟಹಾಸವನ್ನು ಮೆರೆದಿದ್ದ ಪಾಪಿಗಳಿಗೆ ವರ್ಷಗಳ ಕಾಲ ರಾಜಾತಿಥ್ಯ ಸಿಗುತ್ತದೆ. ಅಂತವರಿಗೆ ನೀಡುವ ಕೋಟಿ ಕೋಟಿ ಮೊತ್ತದ ಭದ್ರತೆಗಳೇನು? ಅವರ ಪರವಾಗಿ ವಾದಿಸುವ ಮೂರು ಬಿಟ್ಟ ವಕೀಲರ ಗುಂಪೆನು? ನಾಚಿಕೆಯಾಗಬೇಕು ನಮ್ಮ ಮೇಲೆ ನಮಗೆ!

ಅದೊಂದು ದಿನ ಮಗನ ಪತ್ರವೊಂದು ಮನೆಯವರ ಕೈ ಸೇರಿತು. ಅದನ್ನು ತೆರೆದು ಓದಿದರೆ ಅದರಲ್ಲಿ ಬರೆದಿದ್ದ ಮಾತುಗಳು ಮಾತ್ರ ಎಂತವರ ಮನವನ್ನು ಚುಚ್ಚುವುದಂತೂ ಸುಳ್ಳಲ್ಲ. 'ನಾನು ಭಾರತದವನಾದ ಮಾತ್ರಕ್ಕೆ ನನ್ನನು ಬಿಡಿಸಲು ಸಾಧ್ಯವಾಗುತ್ತಿಲ್ಲ. ಅದೇ ನಾನೊಬ್ಬ ಅಮೇರಿಕದವನಾಗಿದ್ದರೆ ಮೂರೇ ಮೂರು ದಿನದಲ್ಲಿ ಹೊರಬರುತ್ತಿದ್ದನೇನೋ ಏನೋ?!' ಎಂದು ಆತ ಬರೆದಿದ್ದ. ಇದಾದ ಕೆಲವೇ ದಿನಗಳಲ್ಲಿ ಭಾರತದ ಬ್ಲಾಕ್ ಟೈಗರ್ ಟಿಬಿ ಖಾಯಿಲೆಯಿಂದ ಸತ್ತನೆಂಬ ಸುದ್ದಿ ಬಂದಿತು.ಅದನ್ನು ಕೇಳಿ ಆತನ ತಂದೆ ಕೆಲವೇ ದಿನಗಲ್ಲಿ ಅಸುನೀಗಿದರೆ ಅಮ್ಮ ನಂತರದ ಕೆಲವರ್ಷಗಳ ಒಳಗೆ ಇಹಲೋಕ ತ್ಯೆಜಿಸಿದರು.

ನಂಬಿದರೆ ನಂಬಿ, ಅಷ್ಟೆಲ್ಲ ಚಿತ್ರಹಿಂಸೆಯನ್ನು ಅನುಭವಿಸಿದರೂ ಸಹ ನಮ್ಮ ಯಾವೊಂದೂ ಸಿಕ್ರೆಟ್ ಇನ್ಫಾರ್ಮಶನ್ಗಳನ್ನೂ ಕೌಶಿಕ್ ಅವರುಗಳಿಗೆ ಬಿಟ್ಟುಕೊಡಲಿಲ್ಲವಂತೆ!! ಇದೆಂತಹ ದೇಶಭಕ್ತಿ ಸ್ವಾಮಿ? ಗುಡಿಗೋಪುರಗಳಲ್ಲಿ ಕಾಣುವ ದೇವರು ನಮ್ಮ ಮನೆಯನ್ನು ಕಾಯ್ದರೆ, ಮಳೆಗಾಳಿಯೆನ್ನದೆ ಎಲ್ಲೆಂದರಲ್ಲಿ ಎದ್ದು ಬಿದ್ದು ಹೋರಾಡುವ ಈ ದೇವಮಾನವರು ನಮ್ಮ ದೇಶವನ್ನು ಕಾಯುವರು. ಅಂತಹ ಕೆಲವರು ನಮ್ಮ ಕಣ್ಣ ಮುಂದೆ ಇದ್ದರೆ ಇಂತಹ ಕೆಲವರು ಇದ್ದೂ ಕಾಣದಾಗುವರು. ಇಂತಹ ನೂರಾರು ವೀರಸೈನಿಕರ ಬಗ್ಗೆ ತಿಳಿದುಕೊಳ್ಳಲೂ ನಮಗೆ ಯೂಗ್ಯತೆ ಬೇಕು. ಅಂತಹ ಯೋಗ್ಯತೆಗೆಟ್ಟ ಮೂರುಕಾಸಿನ ಗುಂಪುಗಳಿಗಷ್ಟೇ ಇಂತಹ ಸೇನೆ ಹಾಗು ಸೈನಿಕರ ಮೇಲೆ ಪ್ರೆಶ್ನೆಯನ್ನು ಮಾಡಲು ಸಾಧ್ಯ..!



Wednesday, February 20, 2019

ಸಿಂಪಲ್ಲಾಗೊಂದು ಕಪೂರ್ ಸ್ಟೋರಿ..!

ವಾವ್, ಏನ್ ಸೀನ್ ಸರ್ ಅದು. ಸಿಟ್ಟು, ಮದ, ಮತ್ಸರದಿಂದ ಕೂಡಿದ ಆರಡಿ ಉದ್ದದ ಕ್ಯಾರೆಕ್ಟರ್ ಒಂದೆಡೆಯಾದರೆ, ನ್ಯಾಯ, ನೀತಿ ಹಾಗು ಘನತೆಯನೊತ್ತ ಕೀರ್ತಿಪುರುಷ ಇನ್ನೊಂದೆಡೆ. ಸುಳ್ಳು ಸತ್ಯಗಳ ಈ ಎರಡು ವ್ಯಕ್ತಿತ್ವಗಳ ತಿಕ್ಕಾಟದಲ್ಲಿ ನರಳುತಿರುವಾಕೆ ಎರಡಕ್ಕೂ ಜನ್ಮವಿತ್ತ ಮಹಾಮಾತೆ. ನಶ್ವರ ಜಗತ್ತಿನ ನೋಟಿನ ಮೂಲಕ ತನ್ನ ಹೆತ್ತ ತಾಯಿಗೆ ಬೆಲೆಕಟ್ಟಲೋಗಿ ಮುಂದಿದ್ದ ತನ್ನ ತಮ್ಮನ ಬಳಿ 'ತೇರೇ ಪಾಸ್ ಕ್ಯಾ ಹೈ 'ಎಂದಾಗ ಇಡೀ ಚಿತ್ರಮಂದಿರವೇ ಕುಣಿದು ಕುಪ್ಪಳಿಸುವಂತೆ ಆಡುವ 'ಮೇರೇ ಪಾಸ್ ಮಾ ಹೈ' ಎಂಬ ಆ ಡೈಲೌಗ್ ಕೇವಲ ಡೈಲೌಗ್ ಆಗಿರದೆ ಆಧುನಿಕ ಜಗತ್ತಿನ ಇಡೀ ಮಾನವ ಕುಲಕ್ಕೇ ಇಡಿದ ಕೈಗನ್ನಡಿಯಂತಿತ್ತು. ಜಗತ್ತಿನ ಸರ್ವ ಐಶ್ವರ್ಯವೆಲ್ಲವೂ ತಾಯಿಯೆಂಬ ಅಘಾಧತೆಯ ಮುಂದೆ ಅದೆಷ್ಟು ಕನಿಷ್ಠವಾಗುತ್ತದೆ ಎಂಬುದನ್ನು ನಾಲ್ಕೇ ಪದಗಳ ವಾಕ್ಯದಲ್ಲಿ ತೋರಿಸಿಕೊಟ್ಟ ಚತುರತೆಯಂತೂ ಫೆಂಟಾಸ್ಟಿಕ್! ಆಗ ಮಾತುಬಾರದ ಕಲ್ಲಿನಂತಾದ ಅಮಿತಾಬ್ ತನ್ನ ಸಣ್ಣ ತಮ್ಮನ ಮುಂದೆ ಮತ್ತೂ ಸಣ್ಣವನಾಗುತ್ತಾನೆ.

ಆ ಡೈಲೌಗಿಗೆ ಜೀವ ಬರಲು/ತರಲು ಚಿತ್ರಕತೆಗಾರರಾದ ಸಲೀಮ್-ಜಾವೇದ್ರ ಕ್ರಿಯೇಟಿವಿಟಿಯೊಟ್ಟಿಗೆ ಎದೆಯುಬ್ಬಿಸಿಕೊಂಡು ಆತ್ಮವಿಶ್ವಾಸದಿಂದ ಆಡಿದ ಆ ಮುಗ್ದ ಮಾತುಗಳೂ ಕಾರಣವಾಗಿರುತ್ತವೆ. ಅಂದಿಂಗೂ, ಇಂದಿಗೂ. ಕಣ್ಣುಗಳಲ್ಲಿನ ಆ ದೃಢತೆಯ ಜೊತೆಗೆ ಮುಖದ ಮೇಲೆ ಆ ಗಾಂಭೀರ್ಯತೆಯನ್ನೊತ್ತು ಸಂಭಾಷಣೆಯನ್ನು ಹೇಳಿದ ಆ ವ್ಯಕ್ತಿಯ ಹೆಸರೇ ದ ಒನ್ & ಓನ್ಲಿ Mr.ಶಶಿ ಕಪೂರ್. ಒಂದು ಕಾಲಕ್ಕೆ ಕಪೂರ್ ಮನೆತನದಲ್ಲಿ ಹ್ಯಾಂಡ್ಸಮ್ ಕಪೂರ್ ಎಂದು ಕರೆಯಲಾಗುತ್ತಿದ್ದ ಈತ ಇತರೆ ಬಹಳಷ್ಟು ನಟ ನಟಿಯರಂತೆ ಇಲ್ಲ ಸಲ್ಲದ ಕಾರಣಗಳಿಂದಾಗಿ ಪ್ರಸಿದ್ದಿ ಹೊಂದಲಿಲ್ಲ. ತಾನು ಹಾಗು ಸಿನಿಮಾ ಎಂದುಕೊಂಡು ಬದುಕಿದ ಈ ಜೀವ ಹೂವರಳಿ ಕೊನೆಯಾಗುವಂತೆ ಸದ್ದಿಲ್ಲದೆ ಮರೆಯಾಯಿತು. ಬಹುಷಃ ಆದರಿಂದಲೇನೋ ಪ್ರಶಸ್ತಿ ಪುರಸ್ಕಾರಗಳೂ ಸಹ ಈತನ ಮನೆಯ ಹಾದಿಯನ್ನು ಮರೆತವು.

ಅವತಾರ ಪುರುಷರಂತೆ ನಟರನ್ನು ಬಿಂಬಿಸಿ ಅವರ ಸುತ್ತಲೇ ಸುತ್ತುವಂತಹಃ, ನಿಜಜೀವನಕ್ಕೆ Infinity ಕಿಲೋಮೀಟರ್ಗಳಷ್ಟು ದೂರದಂತಹ ಕ್ಯಾರೆಕ್ಟರ್ ಹಾಗು ಕತೆಯನ್ನು ನೋಡುಗರಿಗೆ ನೀಡುತ್ತಿದ್ದ ಕಾಲದಲ್ಲಿ ಪಕ್ಕಾ ಕ್ಲಾಸಿಕ್ ಸಿನಿಮಾಗಳನ್ನು ಒಂದರಿಂದೊಂದರಂತೆ ನೀಡುತ್ತಾ, ಬೆರಳೆಣಿಕೆಯ ಪ್ರೇಕ್ಷಕರಾದರೂ ದೃತಿಗೆಡದೆ ಮತ್ತದೇ ಅರ್ಥಪೂರ್ಣ ಚಿತ್ರಗಳನ್ನು ಮಾಡುತ್ತ ಕಣ್ಣು ಮುಚ್ಚಿ ನೆಡೆಯುವ ಸಾಲಿನಲ್ಲಿ ವಿಭಿನ್ನರಾಗಿ ಕಾಣಿಸಿಕೊಳ್ಳತೊಡಗಿದ ವ್ಯಕ್ತಿ ಈ ಶಶಿ ಕಪೂರ್. ಭಾರತೀಯ ಸಿನಿಮಾವನ್ನು ಒಂದು ಮಜಲು ಎತ್ತರಕ್ಕೆ ಕೊಂಡೊಯ್ದ ಹಲವಾರು ಸೈಲೆಂಟ್ ಪೆರ್ಸನಾಲಿಟಿಗಳಲ್ಲಿ ಒಬ್ಬರು ಈ ಶಶಿ ಕಪೂರ್.. ಇವೆಲ್ಲ ಅಂಶಗಳ ಹೊರತಾಗಿ ಶಶಿ ಕಪೂರ್ ಎಂಬ ದಿಗ್ಗಜ ಹಲವರಿಗೆ ಇಷ್ಟವಾಗುವುದು ತನ್ನ ಆಫ್ ಸ್ಕ್ರೀನ್ ಪ್ರೇಮ ಕತೆಯಿಂದ. ಆಫ್ ಸ್ಕ್ರೀನ್ ಎಂದ ಮಾತ್ರಕ್ಕೆ ಯಾರೋ ಬೇರೊಬ್ಬ ವ್ಯಕ್ತಿ ಅಂದುಕೊಳ್ಳಬೇಡಿ. ಅದು ಸ್ವತಃ ಅವರ ಪತ್ನಿ ಜೆನ್ನಿಫರ್. ಮೀಸೆ ಚಿಗುರುವ ವಯಸ್ಸಿಗೆ ತನಗಿಂತಲೂ ಮೂರು ವರ್ಷ ದೊಡ್ಡವಳಾದ ಈಕೆಯನ್ನು ಭೇಟಿಯಾಗಿ ಮದುವೆಯ ಪ್ರಸ್ತಾಪ ವನಿಟ್ಟು, ವಿದೇಶಿ ಮಾವ ಹಾಗು ದೇಶೀ ಅಪ್ಪ(ಪೃಥ್ವಿರಾಜ್ ಕಪೂರ್) ನೊಟ್ಟಿಗೆ ಹೋರಾಡಿ, ಪ್ರೀತಿಗಾಗಿ ಸಿಂಗಾಪೂರದವರೆಗೂ ಹೋಗಿ ಕೊನೆಗೆ ಅಂದಿನ ಕಾಲಕ್ಕೆ ಬಹುಪಾಲು ಮಂದಿಗೆ ಅರಗಿಸಿಕೊಳ್ಳಲಾಗದಂತಹ ಜೋಡಿಯಾಗಿ ಹೊರಹೊಮ್ಮಿದರು ಇವರು. ಆದರೆ ವಿದೇಶಿ ಲವ್ ಸ್ಟೋರಿ ಹೆಚ್ಚು ದಿನ ನಡೆಯಲ್ಲ ಬಿಡಿ ಅಂದುಕೊಂಡವರಿಗೆ ಇವರ ಜೀವನ ಮಾತ್ರ ಒಂದು ನೀತಿಪಾಠವಾಯಿತು. ಮನಸ್ಸು ಮಾಡಿದ್ದರೆ ತನಗೆ ಸಿಗದ ತ್ರಿಪುರ ಸುಂದರಿ ಯಾರು ಎಂಬಂತಿದ್ದ ಕಾಲದಲ್ಲಿ ಶಶಿ ಎಲ್ಲಿಯೂ ತನ್ನ ಹಾಗು ಜೆನ್ನಿಫರ್ ನ ಸಂಬಂಧಕ್ಕೆ ಧಕ್ಕೆ ಬಾರದಂತೆ ನೋಡಿಕೊಂಡರು. ಹಾಗೊಮ್ಮೆ ಈಗೊಮ್ಮೆ ತಮ್ಮ ಹಾಗು ಇತರ ನಟಿಯರ ಬಗ್ಗೆ ಕಲ್ಪಿಸಿ ಮೂಡುವ ಕತೆಗಳೂ ಇವರ ಗಟ್ಟಿ ಸಂಬಂಧದ ಮುಂದೆ ಕ್ಷೀಣಿಸಿಹೋದವು. ಶಶಿ ತನ್ನಾಕೆಯನ್ನು ಅದೆಷ್ಟು ಇಷ್ಟಪಟ್ಟಿದ್ದರೆಂದರೆ ಅಂದು (1984) ರಲ್ಲಿ ಆಕೆ ಕ್ಯಾನ್ಸರ್ ನಿಂದ ಕಾಲವಾದ ನಂತರವೂ ಇವರು ಯಾರೊಬ್ಬರ ಸಂಗಡವನ್ನು ಬಯಸದೆ ತಮ್ಮ ಕೊನೆಯುಸಿರಿರುವರೆಗೂ ಏಕಾಂಗಿಯಾಗಿಯೇ ಆಕೆಯ ನೆನಪಲ್ಲೇ ಜೀವನ ಕಳೆದರು. ಬಹುಷಃ ಆ ಸ್ಥಾನವನ್ನು ತುಂಬುವ ಬೇರ್ಯಾರು ಇಲ್ಲಿ ಸಿಗಲಿಲ್ಲವೇನೋ? ಒಂದು ಪಕ್ಷ ಸಿಕ್ಕರೂ ಅದು ಬಹುಷಃ ಆ ಹೊಸ ವ್ಯಕ್ತಿಗೆ ಉಳಿದುಕೊಳ್ಳಲು ಶಶಿಯ ಹೃದಯದಲ್ಲಿ ಜಾಗವಿರಲಿಲ್ಲವೇನೋ?!

ಆಸೆಗೆ ಪ್ರೇಮವೆಂಬ ಹೆಸರು ಕಟ್ಟಿ, ಮೂರು ಗಂಟಿನ ಸಂಬಂಧಕ್ಕೆ ಮೂರುಕಾಸಿನ ಬೆಲೆಯನ್ನೂ ಕೊಡದೆ ಎಡಕ್ಕೂ ಬಲಕ್ಕೂ Swipe ಮಾಡುತ್ತ ಜೀವನದ ಸಾತಿಯ(ರ)ನ್ನು ಅರಸುವ ಈ ಕಾಲದಲ್ಲಿ ಶಶಿ ಕಪೂರ್ ತೀರಾ ಭಿನ್ನವಾಗಿ ಹಾಗು ಮಾದರಿಯಾಗಿ ಕಾಣುತ್ತಾರೆ. That's it.

'ಮೇರೇ ಪಾಸ್ ಮಾ ಹೈ' ಎಂದ ಗುಳಿಕೆನ್ನೆಯ ಆ ಲೆಜೆಂಡರಿ ವ್ಯಕ್ತಿ ಮೊನ್ನೆ ಡಿಸೆಂಬರ್ ಗೆ ಇಹಲೋಕ ತ್ಯೆಜಿಸಿ ಆಗಲೇ ಒಂದು ವರ್ಷವೇ ಸಂದಿದೆ. ನಗುಮೊಗದ ಯುವ ಚೆಲುವನಾಗಿ ನೋಡುಗರನ್ನು ರಂಜಿಸಿದ ಆ ಶಶಿಗೂ, ಬಾಡಿದ ಹಣ್ಣಿನಂತಾಗಿ ನೆಡೆಯಲೂ ಶಕ್ತನಿರದೆ ವೀಲ್ ಚೇರಿನ ಮೇಲೆಯೇ ತನ್ನ ಕೊನೆದಿನಗಳನ್ನು ತಳ್ಳಿದ ಶಶಿಯನ್ನು ನೋಡಿದರೆ ಕಾಲದ ಮೇಲೆ ಸಿಟ್ಟು ಬರುವುದಂತೂ ಸುಳ್ಳಲ್ಲ. ಏನಿಲ್ಲವಾದರೂ ಏನೊಂದಕ್ಕಾದರೂ ಇಂತಹ ವ್ಯಕ್ತಿಗಳು ಆಗೊಮ್ಮೆ ಈಗೊಮ್ಮೆ ನೆನಪಾಗುತ್ತಲೇ ಇರಬೇಕು. ಆದರೆ ಆ ಏನೊಂದು ಏನೆಂಬುದು ಮಾತ್ರ ನಮ್ಮ ನಿಮ್ಮ ವಿವೇಕ ಹಾಗು ವಿವೇಚನೆಗೆ ಬಿಟ್ಟ ವಿಷಯ.

ಕಾಲುಶತಮಾನ ಜನಮಾನಸವನ್ನಾಳಿದ ಕತೆಯೊಂದರ ಕತೆ!

ಭಾರತೀಯರ ಸಿನಿಮಾ ಕ್ರೆಝೇ ಅಂತಹದ್ದು. ಜನಜೀವನದ ವಿವಿಧ ಸ್ತರಗಳಲ್ಲಿ ಸಿಕ್ಕಾಬಟ್ಟೆ ಹಾಸುಹೊಕ್ಕಿರುವ ಈ ಸಿನಿಮಾ ಎಂಬ ಮಾಹೆ ಒಂಥರ ಊಟಕ್ಕೆ ಬೇಕಾದ ಉಪ್ಪಿನಕ್ಕಾಯಿಯಂತೆ. ಉಪ್ಪಿನಕ್ಕಾಯಿ ಇಲ್ಲದೆಯೇ ಊಟ ಮಾಡಬಹುದಾದರೂ ನಮ್ಮಲ್ಲಿ ಕೆಲವೆಡೆ ಅದೇ ಊಟವಾಗಿಬಿಡುತ್ತದೆ! ಜೀವನದ ಅಷ್ಟೂ ಸಂಕಷ್ಟಗಳಿಗೆ ಆಧ್ಯಾತ್ಮದ ಮೊರೆ ಹೋಗುವ ಗುಂಪು ಒಂದೆಡೆಯಾದರೆ ಅದಕ್ಕಿಂತಲೂ ನೂರು ಪಟ್ಟು ದೊಡ್ಡ ಗುಂಪು ತಮ್ಮ ತಮ್ಮ ಕಷ್ಟ ದುಃಖಗಳಿಗೆ ಆ ಸಿನಿಮಾಗಳ ಹಿಂದೆ ಬೀಳುವುದನ್ನು ಇಲ್ಲಿ ಅಲ್ಲಗೆಳೆಯಲಾಗುವುದಿಲ್ಲ. ಅದ್ಯಾವುದೋ ಕ್ರಿಸ್ತ ಪೂರ್ವ ಜಮಾನದಲ್ಲಿ ಕೈಕೊಟ್ಟ ಹುಡುಗಿಯ ನೆನಪಲ್ಲಿ ಮೀಯಲು ಅಥವಾ ಗುಡುಗು ಸಿಡಿಲುಗಳ ಆರ್ಭಟದ ನಡುವೆಯೂ ಕಿಲೋಮೀಟರ್ಗಟ್ಟಲೆ ದೂರ ನಿಂತು ಪ್ರೀತಿ ನಿವೇದನೆ ಮಾಡುವ ಮ್ಯಾಜಿಕನ್ನು ಕಂಡು ಬೆರಗಾಗಲು ಅಥವ ಪಠ್ಯ ಪುಸ್ತಕಗಳ ಬದನೇಕಾಯಿ ಎನುತ ಮೂರು ನಿಮಿಷದಲ್ಲಿ ಕೋಟ್ಯಾದಿಪತಿಯಾಗುವ 'ಇಸ್ಟೈಲ'ನ್ನು ನೋಡಿ inspire ಆಗಲು ಅಥವಾ ಆಫೀಸಿನಲ್ಲಿ ತನ್ನ ಬಾಸಿನ ಮೇಲಿನ ಸಿಟ್ಟನ್ನು ಇಲ್ಲಿ ಹೀರೊ ವಿಲ್ಲೈನ್ಸ್ ಗಳಿಗೆ ತದುಕುವ ಪೆಟ್ಟುಗಳಲ್ಲಿ ದಮನಮಾಡಿಕೊಳ್ಳಲು ಅಥವಾ ವಯಸ್ಸಿನ ಹುಡುಗ ಹುಡುಗಿಯರಿಗೆ ಆ ಹೊರಗಿನ ಕೆಟ್ಟ ಜಗತ್ತಿನಲ್ಲಿ ಕಪ್ಪುಕೋಣೆಯ ನಾಲ್ಕಡಿ ಜಾಗ ಸ್ವರ್ಗಲೋಕವಾಗಲು.. ಒಂದೇ ಎರಡೇ ಇಂತಹ ಹಲವಾರು ಕಾರಣಗಳಿಂದ ಸಿನಿಮಾ ಹಾಗು ಥಿಯೇಟರ್ ಗಳು ನಮ್ಮವರಿಗೆ ವಿಪರೀತ ಹತ್ತಿರವಾಗಿವೆ. ಇನ್ನು ನಟ ನಟಿಯರ ವಿಚಾರಕ್ಕೆ ಬಂದರಂತೂ ಕತೆಬರೆದು, ಸೆಟ್ ಹಾಕಿ, ಸಂಗೀತ ಕರೆದು, ಹಾಡಿ, ಹಣ ಸುರಿದು, ಬೆಳಕಿಡಿದು ದುಡಿಯುವ ನೂರಾರು ಜನರನ್ನೂ ಮರೆತು ಕ್ಯಾಮರಾದ ಮುಂದೆ ಕಾಣುವ ಆ ಒಂದು ಚಹರೆಗೆ ಕಠೋರ ತಪಸ್ಸಿಗೆ ದೊರಕುವ ಭಗವಂತನ ದರ್ಶನದಂತೆ ಆಡುವ ಜನರ ಗುಂಪು ಒಂದೆಡೆಯಾದರೆ ಕೆಲವೆಡೆ ಅಂತಹ ಚಹರೆಗಳು ಅಂತಹ ದೇವರೆಂಬ ಪವರ್ಫುಲ್ ಶಕ್ತಿಗೇ ಒಂದು ಗೇಣು ಕೀಳು! ಇಂತಹ ಹತ್ತಾರು ನೂರಾರು ಕಾರಣಗಳಿಂದಲೇ ಇಂದು ಭಾರತೀಯ ಸಿನಿಮಾ ಇಂಡಸ್ಟ್ರಿ ಇಡೀ ವಿಶ್ವದಲ್ಲಿಯೇ ಅತಿ ಶ್ರೀಮಂತ ಇಂಡಸ್ಟ್ರಿ ಎನಿಸಿಕೊಂಡಿದೆ. ಇದು ವಿಪರ್ಯಾಸವೋ, ಹಾಸ್ಯವೋ ಅಥವಾ ಆಯಾಸವವೋ ಹೇಳುವುದು ಕಷ್ಟ. ಆದರೆ ಒಂದು ಮಾತ್ರ ಸತ್ಯ. ಒಂದು ಕಾಲು ಬಿಲಿಯನ್ ಜನರ ನಮ್ಮ ದೇಶದಲ್ಲಿ ಒಬ್ಬೊಬ್ಬರಿಗೆ ಇರುವ ಹತ್ತಾರು ಕನಸುಗಳು ನನಸಾಗದ ನೋವುಗಳಿಗೆ, ಹತಾಶೆಗಳಿಗೆ ತೆರೆಯ ಮೇಲೆ ಕಾಣುವ ಆ ಕಾಲ್ಪನಿಕ ಚಿತ್ರ ಒಂದು ಬಗೆಯ ಸಾಂತ್ವಾನವನ್ನು ನೀಡಬಲ್ಲದು. ಅದಕ್ಕೆ ಆ ಶಕ್ತಿ ಇದೆ! ಕೆಲಚಿತ್ರಗಳನಂತೂ ನಮ್ಮವರು ಅದ್ಯಾವ ಪರಿ ಹಚ್ಚಿಕೊಳ್ಳುತ್ತಾರೆ ಎಂದರೆ ದಶಕಗಳವರೆಗೂ ಅದನ್ನು ಥಿಯೇಟರ್ ಗಳಿಂದ ತೆಗೆಯಲು ಬಿಡುವುದಿಲ್ಲ. ಯಸ್ ದಶಕ I mean ಡೇಕೇಡ್ಸ್!

ಈ ಚಿತ್ರ ರಿಲೀಸಾಗಿ ಇಂದಿಗೆ ಹೆಚ್ಚುಕಡಿಮೆ 25 ವರ್ಷಗಳಾಗಿವೆ. ಇಲ್ಲಿ ಮೇಲೆ ಹೇಳಿದ ಪವರ್ ಫುಲ್ ಚಹರೆಗಳಾಗಲಿ, ಕಾಲಿಟ್ಟ ಮಾತ್ರಕ್ಕೆ ಇಡೀ ಭೂಮಂಡಲವೇ ನಡುಗಿ ಗುಡುಗಿ ಸಿಡಿಯುವ ದೃಶ್ಯಗಳಾಗಲಿ ಅಥವಾ Massness ನ ಮತ್ಯಾವುದೇ ಅಂಶಗಳಾಗಲಿ ಇರಲಿಲ್ಲ. ತೊಂಬತ್ತರ ದಶಕದಲ್ಲಿ ಇಂತಹ ಎಲಿಮೆಂಟ್ಸ್ ಗಳು ಇಲ್ಲದೆಯೇ ಒಂದು ಚಿತ್ರವನ್ನು ಗೆಲ್ಲಿಸುವುದು ಸಾಧ್ಯಕ್ಕೆ ದೂರವಾದ ಮಾತಾಗಿದ್ದಿತು. ದೂರವೆನು, ಅಸಾಧ್ಯವೆಂದೇ ಹೇಳಬಹುದಿತ್ತು. ಆದರೆ ಸೋಜಿಗದ ಸಂಗತಿ ಎಂದರೆ ಈ ಮಾತ್ರ ಚಿತ್ರ ಗೆದ್ದಿತು! ಆ ಗೆಲುವಿನ ಕಂಪು ದೇಶ ವಿದೇಶಗಳೆಲ್ಲೆಲ್ಲೂ ಪಸರಿಸಿತು. ತಿಂಗಳು, ವರ್ಷ, ದಶಕಗಳಾಚೆಗೂ ಅದು ತನ್ನ ಛಾಪನ್ನು ಮೂಡಿಸಿತು. ಚಿತ್ರನಿರ್ಮಾಣದಲ್ಲಿ ಈ ಸಿನಿಮಾ ಟ್ರೆಂಡ್ ಸೆಟ್ಟರಾಯಿತು. ತೀರಾ ಸಾಧಾರಣವೆನಿಸಿಕೊಂಡಿದ್ದ ಇಂಡಸ್ಟ್ರಿಯ ಯಂಗ್ ಗ್ರೂಪೊಂದು ಅಂದು ಭಾರತೀಯ ಸಿನಿಮಾ ಇತಿಹಾಸದಲ್ಲಿ ಮೈಲಿಗಲ್ಲೊಂದನ್ನು ಸ್ಥಾಪಿಸಿತು.

ಹಾಗಾದರೆ ಅಂತಹ ಯಾವ ಅಂಶ ಚಿತ್ರವನ್ನು ಈ ಪರಿಯಾಗಿ ಗೆಲ್ಲಿಸಿತು? ಇಷ್ಟು ಕಾಲ ನೋಡಿದರೂ ಏಕೆ ಜನರ ಬಯಕೆ ಇನ್ನೂ ಕೊನೆಗೊಳ್ಳುತ್ತಿಲ್ಲ? ಅಂದಿನ ಜನರಿಗಷ್ಟೇ ಅಲ್ಲದೆ ಟಿಂಡರ್, ಇನ್ಸ್ಟಾ ಎನುವ ಪ್ರಸ್ತುತ ಯುವಪೀಳಿಗೆಗೂ ಈ ಚಿತ್ರ ಇಷ್ಟವಾಗಲು ಕಾರಣವೇನು?

ಚಿತ್ರಕಥೆ. ಚಿತ್ರರಸಿಕರ ಮನಸ್ಥಿತಿಯನ್ನು ಅರಿತು ಹದವಾಗಿ ಹಣೆದಿದ್ದ ಕಥೆ ಚಿತ್ರವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು. ಗೊತ್ತು ಗುರಿ ಇಲ್ಲದ ನಾಯಕ ರಾಜ್, ಕಪ್ಪೆಚಿಪ್ಪಿನ ಮುತ್ತಿನಂತೆ ವಿದೇಶದಲ್ಲಿದ್ದೂ ಆಚಾರವಿಚಾರಗಳ ಗೊಡೊಳಗಿರುವ ಮುದ್ದಾದ ಹೆಸರಿನ ನಾಯಕಿ, ವಿದೇಶದ ಲವ್ ಸ್ಟೋರಿ, ವಿರುದ್ಧ ಧ್ರುವಗಳಂತಹ ಹೀರೊ ಹಾಗು ಹೀರೋಯಿನ್ ನ ಅಪ್ಪಂದಿರು ಹಾಗು ಚಿತ್ರದ ಕೊನೆಯವರೆಗೂ ನೋಡುಗರನ್ನು ಕತೆಯಲ್ಲಿ ಹಿಡಿದಿಡುವ ಆ ಚಿತ್ರಕಥೆ ಆಗಿನ ಕಾಲಕ್ಕೆ ಅತಿ ಭಿನ್ನ ಹಾಗು ಶುದ್ಧ ಚಿನ್ನದಂತಿದ್ದಿತು. ಇಲ್ಲಿ ನಿರ್ಮಲ ಪ್ರೀತಿಯಿದೆ, ಅತ್ತು ಸುಖಪಡುವ ದುಃಖವಿದೆ, ತನ್ನ ಯವ್ವನವನ್ನು ನನ್ನ ಮಗ ಅನುಭವಿಸಲಿ ಎಂಬ ಅಪ್ಪ ಒಂದೆಡೆಯಾದರೆ, ತನ್ನ ಜೀವಮಾನದಲ್ಲೇ ಎಂದಿಗೂ ಕಾಣದ ಹುಡುಗನಿಗೆ ತನ್ನ ಮಗಳನ್ನು ಕಟ್ಟಲಿಚ್ಚಿಸುವ ಅಪ್ಪ ಇನ್ನೊಂದೆಡೆ. ಇಲ್ಲಿ ಕುಣಿದು ಕುಪ್ಪಳಿಸುವಂತಹ ಸಂಗೀತವಿದೆ, ಯೂರೋಪಿನ ಚಳಿಯಲ್ಲಿ ಕಾಲೆಳೆದು, ಬೈದಾಡಿ, ಗುಂಪಿನಿಂದ ಬೇರೆಯಾಗಿ, ನೆಡೆಯುತ್ತಲೇ ಸಾಗುವ ಮುದ್ದಾದ ಜೋಡಿಯಿದೆ, ಎಲ್ಲಕ್ಕೂ ಮಿಗಿಲಾಗಿ ಅತಿರೇಕವೆನಿಸದ ಸಹಜತೆ ಚಿತ್ರದ ಪ್ರತಿ ಫ್ರೇಮಿನಲ್ಲೂ ಬೇರುಬಿಟ್ಟಿದೆ. ಮಾನವ ಜೀವನದ ಎಲ್ಲ ಭಾವಗಳು ಮಿಳಿತಗೊಂಡಿರುವ ಸುಂದರ ಕಲ್ಪನೆಯ ಕತೆಯಿರದೆ ಹೋಗಿದ್ದರೆ ಚಿತ್ರ ಈ ಮಟ್ಟಿನ ಯಶಸ್ಸನ್ನು ಗಿಟ್ಟಿಸಿಕೊಳ್ಳುತ್ತಿರಲಿಲ್ಲವೇನೋ. ಪೀಳಿಗೆಗಳನ್ನು ಮರೆತು ಎಲ್ಲರಲ್ಲಿ ಬೆರೆಯುತ್ತಿರಲಿಲ್ಲವೇನೋ?

ಈ ಚಿತ್ರದ ಕತೆ, ನಿರ್ದೇಶನ, ನಿರ್ಮಾಣ ಎಲ್ಲವೂ ಹಿಂದಿ ಚಿತ್ರರಂಗದ ದಂತಕತೆ ಯಶ್ ಚೋಪ್ರರ ಮಗ ಆದಿತ್ಯ ಚೋಪ್ರಾನದು. ಮೊದಲು ಹಾಲಿವುಡ್ ನ ಟಾಮ್ ಕ್ರೂಸ್ ನನ್ನು ನಾಯಕನನ್ನಾಗಿ ಮಾಡಲು ಯೋಚಿಸಿದ್ದ ಆದಿ (!) ಒಂದು ಟ್ರೆಂಡ್ ಸೆಟ್ಟಿಂಗ್ ಚಿತ್ರವನ್ನು ಮಾಡಲೆಂದೇ ಆಕ್ಷನ್ ಕಟ್ ಹೇಳಿದಂತಿದೆ. ಕೇವಲ ಮೂರ್ನಾಲ್ಕು ವಾರದಲ್ಲೇ ಬರೆದು ಮುಗಿಸಿದ ಕತೆ ಅಂದು ಚಿತ್ರದಲ್ಲಿ ತೊಡಗಿದ ಅಷ್ಟೂ ಜನರ ಜೀವನನ್ನೇ ಬದಲಿಸಿತು. ಶಾರುಖ್ ಖಾನ್, ಕಾಜೋಲ್ರ ಜೋಡಿ ಭಾರತೀಯರ ಮಗಳು ಅಳಿಯರಂತಾದರು. ನಾಲ್ಕು ಕೋಟಿ ಸುರಿದು ನಿರ್ಮಿಸಿದ ಸಿನಿಮಾ ನೂರು ಕೋಟಿಗೂ ಹೆಚ್ಚಿನ ವಹಿವಾಟನ್ನು ನೆಡೆಸಿತು. ಚಿತ್ರದ ಹುಚ್ಚು ಅದ್ಯಾವ ಮಟ್ಟಿಗೆ ಜನಮಾನಸದಲ್ಲಿ ಹಬ್ಬಿತೆಂದರೆ ಚಿತ್ರದ ನಾಯಕ ನಾಯಕಿಯರು ಬಳಸಿದ ಬಟ್ಟೆಯ ಶೈಲಿಗಳೆಲ್ಲವೂ 'ಸಿಮ್ರಾನ್' ಹಾಗು 'ರಾಜ್' ನ ಹೆಸರಿನ ಬ್ರಾಂಡ್ಗಳಾಗಿ ಮಾರುಕಟ್ಟೆಗೆ ಬಂದವು. ಮುಂಬೈ ಸೆಂಟ್ರಲ್ ನ ಬಳಿ ಇರುವ ಮರಾಠ ಮಂದಿರ್ ಚಿತ್ರಮಂದಿರದಲ್ಲಿ ಚಿತ್ರ ಕಳೆದ ವರ್ಷದವರೆಗೂ ಓಡಿತು. ಈ ಪರಿ ಬರೋಬ್ಬರಿ 22 ವರ್ಷಗಳ ಕಾಲ ಚಿತ್ರವೊಂದು ನಡೆದಿರುವ ಉದಾಹರಣೆ ಭಾರತದಲ್ಲೇನು ಇಡೀ ವಿಶ್ವದಲ್ಲಿಯೇ ಇಲ್ಲ! ಕತೆ, ನಿರ್ದೇಶನ, ಸಂಗೀತ ಹಾಗು ನಟನೆ ಇತ್ತಕಡೆ ಹೆಚ್ಚೆನಿಸದೆ ಅತ್ತಕಡೆ ಕಡಿಮೆಯೂ ಎನಿಸದ ಫಾರ್ಮುಲಾ ಚಿತ್ರವನ್ನು ಗೆಲ್ಲಿಸಿತು. ಜನರ ಮನವನ್ನು ಗೆದ್ದಿತು. ಸ್ಕೂಲು ಕಾಲೇಜು Function ಗಳಲ್ಲಿ, ಮದುವೆ ಸಮಾರಂಭಗಳಲ್ಲಿ, ಜಾತ್ರೆ ಹಬ್ಬಗಳಲ್ಲಿ ಮೂಡುವ ಈ ಚಿತ್ರದ ಹಾಡುಗಳು ತಿಳಿದೋ ತಿಳಿಯದೆಯೋ ನೂರಾರು ಕೋಟಿ ಜನರ ತುಟಿಗಳಲ್ಲಿ ರಾರಾಜಿಸಿರುವುದಂತೂ ಸುಳ್ಳಲ್ಲ.

'ಜಾ .. ಸಿಮ್ರಾನ್ .. ಜಾ .. ಜೀಲೇ Apni ಜಿಂದಗಿ' ಎಂಬ ಅಂಬರೀಷ್ ಪೂರಿಯ ಡೈಲಾಗ್ ತೆರೆಯ ಮೇಲೆ ಬರುವವರೆಗೂ ಪಿನ್ ಡ್ರಾಪ್ ಸೈಲೆಂಟ್ ಆಗುವ ಚಿತ್ರಮಂದಿರ, ಸಿಮ್ರಾನ್ ಓಡಿ ರಾಜ್ ನ ತೆಕ್ಕೆಯನ್ನು ಸೇರಿದಾಗಂತೂ ಸಿಳ್ಳೆ ಚಪ್ಪಾಳೆಗಳ ಕಹಳೆಯನ್ನು ಎಲ್ಲೆಲ್ಲೂ ಮೂಡಿಸುತ್ತದೆ. ಎಲ್ಲರ ಮನದೊಳಗೂ ಅಡಗಿರುವ ಒಂದೊಂದು ಬಗೆಯ ರಾಜ್ ಹಾಗು ಸಿಮ್ರಾನ್ ರ ಕ್ಯಾರೆಕ್ಟರ್ ಹೊರಬಂದು ಅಲ್ಲಿ ನಲಿಯತೊಡಗುತ್ತದೆ. 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆ' ಎಂದು ಹಾಡುತ್ತದೆ!

Friday, February 8, 2019

ಮೆಹ್ತಾ Killed ಮೆಹ್ತಾ! - Part 4

Continued...

'Deepak Mehtha is gone!!.. ಆಸಾಮಿ ಇನ್ನು ಒಂದ್ ವಾರ ಲೇಟಾಗಿ ಬರ್ತಾನೆ ಅಂತ ಹೇಳಿ ಇವತ್ತೇ ಬಂದ, ಸೊ ವಿಥ್ ಮಿನಿಮಲ್ ಟೈಮ್ ನಾನೇ ಎಲ್ಲ ಕೆಲ್ಸ ಮುಗ್ಸಿದ್ದೀನಿ.. ಬಾಡಿ ನಿಮ್ ಕ್ಯಾಬಿನ್ ನ ಫ್ರಿಡ್ಜ್ ನ ಕಂಪಾರ್ಟ್ ಮೆಂಟ್ ಒಳಗೇ ಇದೆ.. ಇನ್ನು So many documents need his Thumb Impression.. ನೀವ್ ಯಾವಾಗ ಬರೋದು..? ‘ಎಂಬ ಮೆಸೇಜ್ ಹೋದ ಕೂಡಲೇ ಅತ್ತಕಡೆಯಿಂದ ಹತ್ತಾರು ಕಾಲ್ಸ್ ಗಳು ಬಂದರೂ ಒಂದನ್ನು ಸಹ ನಾನು ತೆಗೆಯಲಿಲ್ಲ.



ಕೊನೆಯದಾಗಿ ಬರಿ ದಿನಾಂಕವಿರುವ ಒಂದು ಮೆಸೇಜ್ ಬಂದಿತು.



ಭುಜಂಗ ಬರುವ ದಿನವನ್ನು ಸರಿಯಾಗಿ ನೋಡಿಕೊಂಡು ಅಲ್ಲಿಯವರೆಗೂ ಕೆಮಿಕಲ್ ಹಾಕಿ ಸಂರಕ್ಷಿಸಿಟ್ಟಿದ್ದ ಹೆಣವನ್ನು ರಾತ್ರಿಯೇ ಮೇಲೆ ಸಾಗಿಸಿ ಆತ ಆಫೀಸಿಗೆ ಬರುವ ಕೆಲಹೊತ್ತಿನ ಮುಂಚೆಯೇ ಹೊರಗೆಸೆದು ಕಂಪನಿಯ ಹಿಂದಿನಿಂದ ಇಳಿದು ಹೊರನೆಡೆದೆ. ಭುಜಂಗ ಬಂದವನೇ ಆದು ತನ್ನ ಸ್ವಂತ ಮಗನ ದೇಹವೆಂಬುದನ್ನೂ ಅರಿಯದೆ ಕೇಸನ್ನು ಮುಚ್ಚಿಸಿ ಹಾಕಿದ.



ಮೊನ್ನೆ ನಾನು ಬೆಳಗಿನ ಹೊತ್ತಿಗೆ ಆಫೀಸಿಗೆ ಹೋದಾಗ ನನ್ನನ್ನು ಆತನ ಮಗನೆಂದೇ ಭಾವಿಸಿ ಎದ್ದು ನಿಂತು ನನ್ನ ಕೆನ್ನೆಗೆ ಛಟಾರನೆ ಭಾರಿಸಿದ. 'ಬಡ್ಡಿ ಮಗ್ನೆ .. ಅಷ್ಟ್ ದಿನದಿಂದ ಫೋನ್ ಮಾಡ್ತಾ ಇದ್ದೀನಿ.. ತೆಗೆಯೋಕ್ಕೆ ಏನ್ ರೋಗ ನಿಂಗೆ ..?' ಎಂಬ ಸಿಡುಕಿನ ಧ್ವನಿಯಲ್ಲಿ ಅರಚಿದ ಆತನಿಗೆ ಸಹಜವಾಗಿಯೇ ತನ್ನ ಮಗನ ಮೇಲಿನ ಕಾಳಜಿಯಿತ್ತು. ಒಂದಿನಿತು ಕುಗ್ಗಿದ ಮನಸ್ಸಿಗೆ ಕೂಡಲೇ ನನ್ನ ತಂದೆಯ ನೆನಪು ಬಂದಿತು. ಅಲ್ಲದೆ ರಕ್ತದ ಮಡುವಿನಲ್ಲಿ ನರಳುತ್ತಿದ್ದ ನನ್ನ ಅಮ್ಮನ ತಾಳಿಯನ್ನೂ ಕಿತ್ತು ಪಾರಾಯಿಯಾಗಿದ್ದ ಕಿರಾತಕನ ವೇಷ ನನ್ನ ಕಣ್ಣ ಮುಂದೆ ಕಂಡಿತು. ಅಂದೇ ಪ್ರತಿಜ್ಞೆ ಮಾಡಿಕೊಂಡಂತೆ ತಾಯಿಯ ಚಿನ್ನವನ್ನು ಕದ್ದು ಕಟ್ಟಿದ ಚಿನ್ನದ ಅಂಗಡಿಗಳ ಚಿನ್ನದ ಗುಂಡಿನಿಂದಲೇ ನಿನ್ನ ಸಾಯಿಸುವೆ ಎಂಬ ಮಾತಿನಂತೆ 'ನಿನ್ ಮಗ ನಿನಗಿಂತ ಮೊದಲೇ ಹೋದ ಭುಜಂಗ.. ಇವಾಗ ನಿನ್ನ ಬಾರಿ .. ' ಎನುತ ನಿಖಿಲ್ ನ ಮುಖವಾಡವನ್ನು ತೆಗೆಯತೊಡಗಿದೆ. ಬುಡಕಡಿದ ಮರದಂತಾಗಿ ತರತರನೆ ನಡುಗತೊಡಗಿದ ಭುಜಂಗ. ಆತನ ಮುಖದ ಮೇಲೆ ಮೂಡಿದ ಆ ಗೊಂದಲ ಹಾಗು ವಿಪರೀತ ಭಯ, ಆಹಾ.. ಸಾವಿರ ಜನ್ಮಕ್ಕೆ ಸಾಕಾಗುವಷ್ಟು ನೆಮ್ಮದಿಯನ್ನು ನನಗೆ ನೀಡಿತು. ಆತ ತನ್ನ ಪೋಷಕರ ಕೊಲೆಗಾರನೆಂದೂ, ಆಸ್ತಿಯನ್ನು ಲಪಟಾಯಿಸಿದ್ದರ ಬಗ್ಗೆ, ಕಳೆದ ಇಪ್ಪತ್ತು ವರ್ಷಗಳಿಂದ ತಾನು ಈತನ ಒಂದೊಂದೇ ನಡೆಯನ್ನು ಗಮನಿಸುತ್ತಿದ್ದ ಬಗೆಯನ್ನು, ಎಲ್ಲವನ್ನು ಆ ಬೆವತ ಮುಖಕ್ಕೆ ಹೇಳತೊಡಗಿದೆ. ಕೂಡಲೇ ತನ್ನ ಫೋನಿನ ಮೇಲೆ ಕೈಹಾಕಹೋದ ಆತನನ್ನು ಕಂಡು ಗನ್ನಿನ ಟ್ರಿಗರ್ ಅನ್ನು ಒತ್ತಿಯೇ ಬಿಟ್ಟೆ. ಹಣೆಗೆ ತಗುಲಿದ ಚಿನ್ನದ ಗುಂಡು ಬಿಕ್ಕಿನ ಕಣ್ಣಿನ ಭುಜಂಗನನ್ನು ಕ್ಷಣಮಾತ್ರದಲ್ಲಿ ಮುಗಿಸಿತು. ತೆರೆದ ಬಾಯನ್ನು ಮುಚ್ಚದೆಯೇ ಪರಲೋಕಕ್ಕೆ ಸೇರಿದ ಭುಜಂಗ. ದಶಕಗಳ ಕಾಲ ನನ್ನ ಎದೆಯಲ್ಲಿ ಮನೆಮಾಡಿದ್ದ ಸಿಟ್ಟಿನ ಜ್ವಾಲೆಯೊಂದು ಅಂದು ಕೊನೆಯಾಯಿತು.. ಪೋಷಕರ ಆತ್ಮಕ್ಕೆ ಶಾಂತಿ ಸಿಕ್ಕಿತು' ಎಂದೇಳಿ ಸುಮ್ಮನಾದ ದೀಪಕ್ ಮೆಹ್ತಾ.



ಕಣ್ಣನ್ನು ಮುಚ್ಚದೆಯೇ ನಿರ್ಜೀವ ವಸ್ತುಗಳಂತೆ ಕೂತಿದ್ದ ಜನಸ್ತೋಮವನ್ನು ಜಡ್ಜಿನ ಮಾತು ಎದ್ದೇಳಿಸಿತು. ಜಡ್ಜ್ ಮಾತನಾಡಿ 'ದೀಪಕ್ ಮೆಹ್ತಾ ತಾನೇ ಭುಜಂಗ ರಾವ್ ಹಾಗು ಅವರ ಮಗ ನಿಖಿಲ್ ನನ್ನು ಕೊಂದಿರುವುದಾಗಿ ಒಪ್ಪಿಕೊಂಡಿರುವುದರಿಂದ, ಅಲ್ಲದೆ ಅದಕ್ಕೆ ಪೂರಕವಾದ ಸಾಕ್ಷದಾರಗಳೂ ಇರುವುದರಿಂದ ಕೇಸು ಇಲ್ಲಿಗೆ ಮುಗಿದಂತೆಯೇ ಸರಿ' ಎಂದೇಳಿ ಇನ್ನೇನು ಶಿಕ್ಷೆಯನ್ನು ಪ್ರಕಟಿಸಬೇಕು ಎನಿಸುವಷ್ಟರಲ್ಲಿ ಅಜಯ್ ಮತ್ತೊಮ್ಮೆ ಮಾತನಾಡಿ 'ಸಾರ್, ಒಂದು ನಿಮಿಷ' ಎನ್ನುತ್ತಾನೆ….!



ಒಂದಿನಿತು ಸಂಶಯವಿರದ ದಾಖಲೆಗಳನ್ನು ನೀಡಿ ಮಾತುಮರೆತು ನಿಂತಿದ್ದ ದೀಪಕ್ ಮೆಹ್ತಾರನ್ನೂ ಮಾತಿಗಿಳಿಸಿ ಸತ್ಯವನ್ನು ಹೊರಹಾಕಿದ ವ್ಯಕ್ತಿಯ ಮಾತನ್ನು ನಿರಾಕರಿಸದೆ ಜಡ್ಜ್ ಮಾತನಾಡುವಂತೆ ಹೇಳುತ್ತಾರೆ. ಮುಗಳ್ನಗುತ್ತಾ ದೀಪಕ್ ಮೆಹ್ತಾ ನಿಂತಿದ್ದ ಕಟಕಡೆಯ ಬಳಿಗೆ ಬಂದ ಅಜಯ್, ದೀಪಕ್ ಮೆಹ್ತಾರ ಕಣ್ಣುಗಳನ್ನೇ ನೋಡುತ್ತಾ,

'ಮಿಸ್ಟರ್ ದೀಪಕ್, ನೀವು ಕೊಲೆಮಾಡಿರುವುದು ಅಕ್ಷರ ಸಹ ಸತ್ಯ. ಅಂತೆಯೆ ತಾವು ಕೊಲೆಯಾಗದಿರುವುದೂ ಅಷ್ಟೇ ಸತ್ಯ.But, ನಿಮ್ಮಿಂದ ನೆಡೆದಿರುವ ಕೊಲೆಗಳ ಸಂಖ್ಯೆ ಎರಡಲ್ಲ….' ಎಂದು ಹೇಳಿ ತನ್ನ ದೃಷ್ಟಿಯನ್ನು ದೀಪಕ್ ಮೆಹ್ತಾರ ಚಹರೆಯಿಂದ ಸರಿಸಿ ಪಕ್ಕದಲ್ಲಿ ನಿಂತಿದ್ದ ದಪ್ಪ ಮೀಸೆಯ ಸಬ್ ಇನ್ಸ್ಪೆಕ್ಟರ್ ನ ಮೇಲೆ ಇರಿಸುತ್ತಾನೆ.

'ಓನ್ಲಿ ಒನ್!!'

'ವಾಟ್..?' ಪೊಲೀಸ್ ಹಾಗು ದೀಪಕ್ ಮೆಹ್ತಾರಿಬ್ಬರಿಂದ ಏಕಕಾಲದಲ್ಲಿ ಪ್ರೆಶ್ನೆ ಮೂಡಿತು.ಕಪ್ಪು ಬಣ್ಣದ ಸಬ್ ಇನ್ಸ್ಪೆಕ್ಟರ್ ನ ಮುಖ ಕರಿದ ಎಣ್ಣೆಯ ಬಣ್ಣಕ್ಕೆ ತಿರುಗಿತು. ಕೋರ್ಟಿನ ತುಂಬಾ ಮತ್ತೊಮ್ಮೆ ಗುಜುಗುಜು ಸದ್ದು.



'ಆರ್ಡರ್ .. ಆರ್ಡರ್'

'ಸರ್, ಅಂದು ನಿಖಿಲ್ ನ ಹೆಣವನ್ನು ಆಸ್ಪತ್ರೆಗೆ ಕೊಂಡೊಯ್ದದ್ದಾಗಲಿ, ಪೋಸ್ಟ್ ಮಾರ್ಟಮ್ ನ ಉಸ್ತುವಾರಿಯನ್ನು ವಹಿಸಿದ್ದಾಗಲಿ, ,ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾಗಲಿ, Infact ನಿಖಿಲ್ ರಾವ್ ನ ನಿಜವಾದ ಕೊಲೆಗಾರನೂ ಸಹ ಇದೆ ಸಬ್ ಇನ್ಸ್ಪೆಕ್ಟರ್, ನೀರಜ್ ಮಲ್ಹೋತ್ರ!!'



ತನ್ನ ಹೆಸರನ್ನು ಕೇಳಿದ ಕೂಡಲೇ ಕಕ್ಕಾಬಿಕ್ಕಿಯಾದ ನೀರಜ್ ಕೂಡಲೇ ತನ್ನ ರಿವಾಲ್ವರನ್ನು ಹೊರಗೆಳೆದು ಅಜಯ್ ಎಡೆಗೆ ಶೂಟ್ ಮಾಡಲೆತ್ನಿಸುತ್ತಾನೆ. ಆದರೆ ಆತನ ಪ್ರಯತನವನ್ನು ಕಟಕಡೆಯ ಮೇಲಿದ್ದ ದೀಪಕ್ ರಾವ್ ತಡೆಯಲೊಗುತ್ತಾನೆ. ಆದರೂ ಹಾರಿದ ಗುಂಡು ಮೆಹ್ತಾನ ತೋಳನು ಸವರಿಕೊಂಡು ಹೋಗಿ ಕೊಂಚ ಗಾಯವನ್ನೂ ಜೊತೆಗೆ ರಕ್ತವನ್ನು ಚಿಮ್ಮಿಸುತ್ತದೆ. ಕೂಡಲೇ ನೀರಜ್ ಮಲ್ಹೋತ್ರನನ್ನು ಸುತ್ತುವರೆದ ಇತರ ಪೊಲೀಸರು ಆತನ ಕೈಲಿದ್ದ ರಿವಾಲ್ವರನ್ನು ಕಸಿದುಕೊಂಡರು. ತಂಡದಲ್ಲಿದ್ದ ಮತ್ತೋರ್ವ ಸಬ್ ಇನ್ಸ್ಪೆಕ್ಟರ್ ಆತನ ಬೆನ್ನಿನ ಹಿಂದಕ್ಕೆ ತನ್ನ ರಿವಾಲ್ವರನ್ನು ಹಿಡಿದು ಅಲುಗಾಡದಂತೆ ನಿಲ್ಲಲು ಹೇಳುತ್ತಾರೆ. ಮೆಹ್ತಾನ ವಿರುದ್ಧವಾಗಿ ವಾದಿಸುತ್ತಿದ್ದ ಒಬ್ಬನೇ ಲಾಯರ್ ಕೂಡ ಸದ್ದುಗದ್ದಲವಿಲ್ಲದೆ ಕೂರುತ್ತಾನೆ.



'ಥಾಂಕ್ ಯು ಮಿಸ್ಟರ್ ಮೆಹ್ತಾ.. anyone please treat his wound' ಎಂದಾಗ ವ್ಯಕ್ತಿಯೊಬ್ಬ ಮೆಡಿಕಲ್ ಕಿಟ್ಟೊಂದನ್ನು ಹಿಡಿದು ತಂದು ಕಟಕಟೆಯಲ್ಲೇ ಆತನ ಗಾಯಕ್ಕೆ ಬ್ಯಾಂಡೇಜ್ ಅನ್ನು ಕಟ್ಟುತ್ತಾನೆ.



ನಂತರ ಮಾತು ಮುಂದುವರೆಸಿದ ಅಜಯ್,

'Till this Very moment ನನಗೆ ನೀರಜ್ ಮಲ್ಹೋತ್ರ ನ ಮೇಲೆ ಪೂರ್ಣ ಸಂಶಯ ಇರಲಿಲ್ಲ. His gun shot made all things clear. ಅಂದು ನಿಖಿಲ್ ಸತ್ತ ಮೂರು ಗಂಟೆಯ ನಂತರ ಅಂದರೆ ಮಧ್ಯರಾತ್ರಿ ಒಂದುವರೆಯ ಸುಮಾರಿಗೆ ನಿಖಿಲ್ ರಾವ್ ನ ಹಸ್ತಾಕ್ಷರ ನೀರಜ್ ಮಲ್ಹೋತ್ರ ರಾತ್ರಿ ಡ್ಯೂಟಿ ಮಾಡುತ್ತಿದ್ದ ಪೊಲೀಸ್ ಸ್ಟೇಷನ್ ನ ಎಂಟ್ರಿ ಬುಕ್ಕಿನಲ್ಲಿ ರೆಕಾರ್ಡ್ ಆಗಿರುತ್ತದೆ. ಅಲ್ಲಿಗೆ ದೀಪಕ್ ಅಂದುಕೊಂಡ ಹಾಗೆ ನಿಖಿಲ್ ಪಾಯಿಸನ್ ನಿಂದ ಸಾಯಲಿಲ್ಲ. ಧೈರ್ಯ ಮಾಡಿ ನಾನೇ ಒಂದು ಸಣ್ಣ ಇನ್ವೆಸ್ಟಿಗೇಷನ್ ಮಾಡಿದೆ. ಲಂಚಬರಿತ ಈ ಕಾಲದಲ್ಲಿ ಎಂತಹ ಸತ್ಯವನ್ನೂ ಹೊರಗೆಳೆಯಬಹುದು ಬಿಡಿ.. ಪೊಲೀಸ್ ಗೌರ್ಡ್, ಪೋಸ್ಟ್ ಮೊರ್ಟ್ನಮ್ ಸಿಬ್ಬಂದಿ etc etc .. ಎಲ್ಲರಲ್ಲೂ ಇಂಚಿಚ್ಛೇ ಸತ್ಯ ಅಡಗಿದ್ದಿತು. ದೀಪಕ್ ಮೆಹ್ತಾ ನಿಖಿಲ್ ನ ಬಾಡಿಯನು ಫ್ರಿಡ್ಜ್ ನ ಒಳಗೆ ತಳ್ಳಿ ಹೋದ ಕೆಲಸಮಯದ ನಂತರ ನಿಖಿಲ್ ಗೆ ಪ್ರಜ್ಞೆ ಬಂದೂ ಕಷ್ಟಪಟ್ಟು ಫ್ರಿಡ್ಜ್ ನಿಂದ ಹೊರಬಂದು ತೂರಾಡುತ್ತಾ ನೀರಜ್ ಮಲ್ಹೋತ್ರ ನ ಸ್ಟೇಷನ್ ಅನ್ನು ತಲುಪುತ್ತಾನೆ. ನೀರಜ್ ನೆಡೆದ ವಿಷಯವನ್ನೆಲ್ಲ ತಿಳಿದ ಕೂಡಲೇ ತನ್ನೊಳಗೆ ಒಂದು ಮಾಸ್ಟರ್ ಪ್ಲಾನನ್ನು ಮಾಡುಕೊಳ್ಳುತ್ತಾನೆ. ಅಸಲಿಗೆ ದೀಪಕ್ ಮೆಹ್ತಾ ತಾನೇ ನಿಖಿಲ್ ನನ್ನು ಕೊಂದಿದ್ದಾನೆ ಎಂದುಕೊಂಡಿದ್ದಾನೆ. ಒಂದು ಪಕ್ಷ ನಾನು ನಿಖಿಲ್ ನನ್ನು ನಿಜವಾಗಿಯೂ ಮುಗಿಸಿದರೆ ಫಾರಿನ್ ರಿಟರ್ನ್ ದೀಪಕ್ ನನ್ನು ಬ್ಲಾಕ್ ಮೇಲ್ ಮಾಡಿ ಜೀವನಪೂರ್ತಿ ಹಣವನ್ನು ದೋಚಬಹುದೆಂಬ ಲೆಕ್ಕಾಚಾರ ಅವನದಾಗಿರುತ್ತದೆ!'

ಹೇಗೋ ಪುಸಲಾಯಿಸಿ ಸುಸ್ತಾಗಿದ್ದ ನಿಖಿಲ್ ನನ್ನು ಪುನ್ಹ ಅದೇ ಆಫೀಸಿಗೆ ಕರೆದುಕೊಂಡು ಬಂದ ನೀರಜ್ ತನ್ನ ರಿವಾಲ್ವರ್ನಿಂದ ಎದೆಯ ಕೆಳಗೆ ಮೂರು ಗುಂಡುಗಳನ್ನು ಹಾರಿಸಿ ಆತನನ್ನು ಸಾಯಿಸುತ್ತಾನೆ. ರಕ್ತ ಮಡುಗಟ್ಟುವಂತೆ ಮಾಡಿ, ಮತ್ತದೇ ಕೋಟನ್ನು ಕೃತಕ ಮುಖವಾಡವನ್ನೂ ಫ್ರಿಡ್ಜ್ ನ ಒಳಗೆ ತೂರಿಸುತ್ತಾನೆ. ಭುಜಂಗರಾವ್ ಬರುವ ದಿನ ದೀಪಕ್ ಮೆಹ್ತಾ ಅದು ತಾನೇ ಕೊಂದ ಹೆಣವೆಂದು ಭಾವಿಸಿ ಮೇಲಿಂದ ಎಸೆದು ಪರಾರಿಯಾಗುತ್ತಾನೆ. ಆಗ ತಾನೇ ಖುದ್ದಾಗಿ ಕೇಸಿನ ಜವಾಬ್ದಾರಿಯನ್ನು ಹೊತ್ತು ನೀರಜ್ ತನ್ನ ಗೇಮನ್ನು ಆಡುತ್ತಾನೆ. ಆದರೆ ಯಾವಾಗ ಕೇಸು ಹಿರಿಯ ಅಧಿಕಾರಿಗಳ ಗಮನ ಸೆಳೆಯಿತೋ ಆಗ ಒಮ್ಮೆ ಕೇಸು ಮುಗಿಯಲಿ ಎನುತ ತರಾತುರಿಯಲ್ಲಿ ದೀಪಕ್ ಮೆಹ್ತಾನನ್ನು ತಪ್ಪಿತಸ್ಥನನ್ನಾಗಿ ನಿರೂಪಿಸಿ ಜಾಗ ಕೀಳುವ ಸಂಚು ಅವನದಾಗಿರುತ್ತದೆ' ಎಂದು ಸುಮ್ಮನಾದಾಗ ನೀರಜ್ ಮೆಹ್ತಾ ತನ್ನ ತಲೆಯನ್ನು ತಗ್ಗಿಸಿಕೊಂಡಿರುತ್ತಾನೆ. ಆತನ ಆ ಸುಮ್ಮನಿರುವಿಕೆಯೇ ಎಲ್ಲ ಸಂಶಯಗಳಿಗೂ ಉತ್ತರವಾಗಿರುತ್ತದೆ. ಕೋರ್ಟನ್ನು ಮಹಾಮೌನವೊಂದು ಮತ್ತೊಮ್ಮೆ ಆವರಿಸಿರುತ್ತದೆ.

ಹೈ ಪ್ರೊಫೈಲ್ ಡಬಲ್ ಮರ್ಡರ್ ಕೇಸ್ ನ ಅಂತ್ಯ ಅಲ್ಲಿಗೆ ಪೂರ್ತಿಯಾಗಿರುತ್ತದೆ. ಅಲ್ಲಿಯವರೆಗೂ ತುಟಿಕ್ ಪಿಟಿಕ್ ಎನ್ನದ ಮಹೇಶ ಎದ್ದು ನಿಂತು ಚಪ್ಪಾಳೆಯ ಸುರಿಮಳೆಗೈಯ್ಯುತ್ತಾನೆ. ಆದರೆ ಜಡ್ಜಿನ ಕೆಮ್ಮಿನ ಸದ್ದೇ ಆತನನ್ನು ಪುನಃ ತನ್ನ ಸ್ವಸ್ಥಾನದಲ್ಲಿ ಕೂರುವಂತೆ ಮಾಡುತ್ತದೆ....



The End ....


ಮೆಹ್ತಾ Killed ಮೆಹ್ತಾ! - Part 3

Continued..


ಹಣೆಗೆ ಗುರಿಯಿಟ್ಟು ಹೊಡೆದ ಆ ಹೊಡೆತ ಕ್ಷಣಮಾತ್ರದಲ್ಲೇ ದೇಹವನ್ನು ಹೆಣವನನ್ನಾಗಿಸುತ್ತದೆ! ಆತನ ಕೈ ಮಾತ್ರ ಒಂದೇ ಸಮನೆ ನಡುಗಹತ್ತುತ್ತದೆ.

ಆ ದಿನ ಕಂಪನಿಯ ಪ್ರತಿಯೊಬ್ಬರನ್ನೂ ಆಫೀಸಿನ ಒಳಗೆಯೇ ಇರುವಂತೆ ಸೂಚಿಸಲಾಗಿದ್ದಿತು. ಸತ್ತು ಬಿದ್ದಿದ್ದ ಭುಜಂಗ್ ರಾವಿನ ಹೆಣವನ್ನು ತೆಗೆದ ನಂತರ ಪೊಲೀಸರು ದೀಪಕ್ ಮೆಹ್ತಾನನ್ನೂ ಅರೆಸ್ಟ್ ಮಾಡಿ ಕರೆದೊಯ್ದರು. ಆ ವಿಚಿತ್ರ ಘಟನೆಯನ್ನು ಕಂಡು ನಾಲ್ಕೈದು ಜನರು ಮೂರ್ಛೆ ತಪ್ಪಿ ಆಸ್ಪತ್ರೆ ತಲುಪಿದ್ದೂ ಉಂಟು! ನಂತರ ಒಬ್ಬೊಬ್ಬರನ್ನೇ ಕರೆದು ಇನ್ವೆಸ್ಟಿಗೇಷನ್ ಶುರುಮಾಡಿದ ಪೊಲೀಸರು ಅದನ್ನು ಮುಗಿಸುವಷ್ಟರಲ್ಲಿ ರಾತ್ರಿ ಹತ್ತಾಗಿದ್ದಿತು. ಆಗ ತಿಳಿದ ಮಹತ್ವದ ವಿಷಯವೇನೆಂದರೆ ಕಳೆದ ಎರಡು ವಾರಗಳಿಂದ ಸಿಸಿಟಿವಿ ಕ್ಯಾಮರಗಳೆಲ್ಲವೂ ಆಫ್ ಆಗಿದ್ದೂ ವಿಷಯವನ್ನು ಬುಜಂಗ್ರಾವಿನ ಗಮನಕ್ಕೆ ಹಲವು ಬಾರಿ ತಂದರೂ ಆತ ಬೇಕಂತಲೇ ಅದನ್ನು ಸರಿಪಡಿಸದಿದ್ದದು.

ಘಟನೆ ನೆಡೆದು ಎರಡು ದಿನಗಳ ನಂತರ ಜಡ್ಜಿನ ಆದೇಶದಂತೆ ಕಂಪನಿಯ ಎಲ್ಲರನ್ನೂ ಮತ್ತೊಂದು ಸುತ್ತಿನ ವಿಚಾರಣೆಗೆ ಕೋರ್ಟಿಗೆ ಬರುವಂತೆ ಹೇಳಲಾಗುತ್ತದೆ. ಹಲವಾರು ಸಾಕ್ಷಿಗಳನ್ನು ನ್ಯಾಯಮೂರ್ತಿಗಳ ಮುಂದೆಯೇ ವಿಚಾರಿಸಬೇಕೆಂದು ಆಜ್ಞೆಯಾಗಿರುತ್ತದೆ. ಜೀವ ಹೋದರೂ ನಾ ಕೋರ್ಟ್ ಗೆ ಬರೆನು ಎಂದು ಕೂತ ಮಹೇಶನನ್ನು ಮಕ್ಕಳನ್ನು ಮೊದಲ ಬಾರಿಗೆ ಶಾಲೆಗೆ ಸೇರಿಸುವ ಹಾಗೆ ಅಜಯ್ ಕಾಡಿ ಬೇಡಿ ಕರೆತಂದಿದ್ದ . ವಿಚಾರಣೆ ಶುರುವಾಗಿ ಬಹಳ ಸಮಯ ಕಳೆದರೂ ಯಾರೊಬ್ಬರಿಗೂ ಕೊಲೆಯ ಹಾಗು ಸಾವಿನ ಹಿಂದಿದ್ದ ನಿಖರ ಉತ್ತರ ತಿಳಿಯಲಿಲ್ಲ. ಅತ್ತ ಕಡೆ ಮೆಹ್ತಾ ಒಂದೂ ಪದವನ್ನು ಮಾತನಾಡದೆ ಕಲ್ಲುಗುಂಡಿನಂತೆ ನಿಂತಿದ್ದ. ಅಲ್ಲದೆ ಆತ ಮಾನವನೋ ಅಥವ ಸತ್ತ ಹೆಣಕ್ಕೆ ಆತ್ಮ ಸೇರಿ ನೆಡೆಸುತ್ತಿರುವ ಕೃತ್ಯವೋ ಎಂಬ ಭಯದೊಂದಿಗೆ ಯಾರೊಬ್ಬರೂ ಅವನ ವಿರುದ್ಧವಾಗಿ ಒಂದಿನಿತೂ ಕೆಟ್ಟದಾಗಿ ಹೇಳಿಕೆಯನ್ನು ಕೊಡಲಿಲ್ಲ. ಹತ್ತಿರವೂ ಸುಳಿಯಲಿಲ್ಲ. 'ತುಂಬಾ ಒಳ್ಳೆಯ ವ್ಯಕ್ತಿ', 'ಯಾರಿಗೂ ನಿಂದಿಸುತ್ತಿರಲಿಲ್ಲ', 'ಎಲ್ಲರನ್ನೂ ಸಮನಾಗಿ ಕಾಣುತ್ತಿದ್ದರು' ಎಂಬ ಗೌರವ ಸೂಚಕಗಳೇ ಎಲ್ಲರ ಹೇಳಿಕೆಗಳಲ್ಲೂ!

ತನ್ನ ಸರದಿ ಬರುತ್ತದೆ ಎಂದು ಕಾದು- ಕಾದು ಹೈರಾಣಾದ ಅಜಯ್ ಯಾವಾಗ ತನ್ನ ಹೆಸರನ್ನು ಕರೆಯಲಿಲ್ಲವೋ ಆಗ ಕೊಂಚ ಕುಪಿತಗೊಂಡವಂತೆ ಕೂಡಲೇ ಎದ್ದು ನಿಂತು ಅರಚಿತ.

'Would you please stop this Nonsense?!!'

ಗುಜುಗುಜುಗುಡುತ್ತಿದ್ದ ಸದ್ದು ಒಮ್ಮೆಲೇ ತಣ್ಣಗಾಗುತ್ತದೆ. ತಲೆತಗ್ಗಿಸಿಕೊಂಡು ನಿಂತಿದ್ದ ಮೆಹ್ತಾ ಕೂಡ ಅಜಯ್ ನನ್ನು ಒಮ್ಮೆ ನೋಡಿದ.

'ರೀ ಮಿಸ್ಟರ್, ಯಾರ್ರೀ ನೀವು? ನಿಮಗೇನಾದ್ರೂ ಹೇಳೋದಿದ್ರೆ ಕಟಕಟೆಯ ಮುಂದೆ ಬಂದು ಹೇಳಿ. Its not a Fish Market!' ಎಂದ ಜಡ್ಜಿನ ಮಾತಿಗೆ ಉತ್ತರಿಸುವಂತೆ, ಸಿಟ್ಟಿನ ಚಹರೆಯಲ್ಲಿಯೇ ಕಟಕಟೆಗೆ ಬಂದು ನಿಂತ ಅಜಯ್ ಕೊಂಚ ಹೊತ್ತು ಸುಮ್ಮನಾಗಿ ದೀಪಕ್ ಮೆಹ್ತಾನನ್ನೂ ಹಾಗು ಕೆಳಗೆ ನಿಂತಿದ್ದ ಸಬ್ ಇನ್ಸ್ಪೆಕ್ಟರ್ ಒಬ್ಬನನ್ನು ನೋಡಿದ.

'Your Honor, ನಾನು ಹೀಗ ಹೇಳಹೊರಟಿರುವ ವಿಷಯದ ಬಗ್ಗೆ ನನ್ನ ಬಳಿ ಸಂಪೂರ್ಣ ಸಾಕ್ಷ್ಯಾಧಾರಗಳಿವೆ ಹಾಗು ಯಾವುದನ್ನೂ ಊಹಿಸಿಕೊಂಡಾಗಲಿ, ಕಲ್ಪಿಸಿಕೊಂಡಾಗಲಿ ನಾನು ಹೇಳುತ್ತಿಲ್ಲ' ಎನ್ನುತ್ತಾನೆ.

'For your kind Information, ಅಂದು ಕಂಪನಿಯ ಮೇಲಿಂದ ಬಿದ್ದು ಸತ್ತದ್ದು ಬೇರ್ಯಾರು ಅಲ್ಲ ಅದು ಬುಜಂಗ್ ರಾವಿನ ಒಬ್ಬನೇ ಮಗ ನಿಖಿಲ್ ರಾವ್!!’’

ಕೋರ್ಟ್ನ ತುಂಬಾ ಮತ್ತೊಮೆ ಗುಸು ಗುಸು ಶುರುವಾಯಿತು. ಮಹೇಶ ತನ್ನ ಕಣ್ಣುಗಳನ್ನು ಸಾಧ್ಯವಾದಷ್ಟು ಹಿಗ್ಗಿಸಿ ಅಜಯ್ ನನ್ನೇ ನೋಡುತ್ತಿದ್ದ. ಮಗುವೊಂದಕ್ಕೆ ಮೊದಲ ಬಾರಿಗೆ ಜಾದೂವನ್ನು ತೋರಿಸಿದಂತೆ.

‘ಅಲ್ಲದೆ ಅದು ಯಾವುದೇ ಬಗೆಯ ಆತ್ಮಹತ್ಯೆಯಾಗಲಿ ಎಂತಹದ್ದು ಇಲ್ಲ! That was a pure Murder!’

'ಸತ್ತ್ತಿದ್ದು ದೀಪಕ್ ಮೆಹ್ತಾ ಎಂಬ ಪೊಲೀಸ್ ರಿಪೋರ್ಟ್ ಇದಿಯಲ್ರಿ'

'ಹೌದು ಸಾರ್, ಪೊಲೀಸ್ ರಿಪೋರ್ಟ್ ಹೇಳಿದ್ದ ಮಾತ್ರಕ್ಕೆ ಸತ್ಯ ಸುಳ್ಳಾಗೋದಿಲ್ಲ'

ಜಡ್ಜ್ 'ಆರ್ಡರ್ .. ಆರ್ಡರ್ ' ಎಂದ ನಂತರ ಅಜಯ್ ಮುಂದುವರೆಸಿ ತಾನು ಆ ದಿನ ರಾತ್ರಿ ಚೇರಿನ ಮೇಲೆ ಮಲಗಿ ತಡವಾದರಿಂದ ಆಫೀಸಿನಲ್ಲಿಯೇ ಕಳೆಯಬೇಕಾಗಿ ಬಂದು, ಹೊರಡುವ ಸಮಯಕ್ಕೆ ಆಕೃತಿಯೊಂದು ಭುಜಂಗರಾವಿನ ಕೋಣೆಯ ಒಳಗೆ ವಿಚಿತ್ರವಾಗಿ ಸದ್ದನು ಮಾತನಾಡುತ್ತಾ ಏನನ್ನೋ ಮಾಡುತ್ತಿರುವುದ ಕಾಣುತ್ತಾನೆಂದು ಹೇಳುತ್ತಾನೆ. ಮಾರನೇ ದಿನ ಅದು ಏನೆಂದು ತಿಳಿಯಲು ಇಂದೂ ಆ ಆಕೃತಿ ಬರಬಹುದೆಂಬ ಊಹೆಯ ಮೇರೆಗೆ ಒಂದೆರೆಡು ಸಣ್ಣ ಕ್ಯಾಮೆರಾ ಹಾಗು ಮೈಕ್ರೋಫೋನನ್ನು ಭುಜಂಗರಾವ್ ಬರುವ ಮೊದಲೇ ಆತನ ಕ್ಯಾಬಿನಲ್ಲಿ ಯಾರಿಗೂ ಕಾಣಿಸದಂತೆ ಅಳವಡಿಸುತ್ತಾನೆ.

ಕೆಲದಿನಗಳ ಹಿಂದೆ ಅವನ್ನು ತಂದು ತನ್ನ ಲ್ಯಾಪ್ಟಾಪ್ ಗೆ ಹಾಕಿ ನೋಡಿದಾಗ…..

ಆ ದಿನ ಬೆಳಗ್ಗೆ ಭುಜಂಗರಾವ್ ಆಫೀಸಿಗೆ ಬಂದ ಸ್ವಲ್ಪ ಸಮಯದಲ್ಲೆ ದೀಪಕ್ ಮೆಹ್ತಾ ಕೂಡ ಆಫೀಸಿಗೆ ಬರುತ್ತಾರೆ. ಆದರೆ ಬಂದ ದೀಪಕ್ ಕೂಡಲೇ ತನ್ನ ಮುಖದ ಮೇಲಿದ್ದ ಪೌಡರು ಮೆತ್ತಿದ್ದ ಚರ್ಮದ ಮುಖವಾಡವನ್ನು ತೆಗೆದು 'ಡ್ಯಾಡ್, ನನ್ನ್ ಕೈಯಲ್ಲಿ ಆಗಲ್ಲ.. ಇನ್ನು ಎಷ್ಟ್ ದಿನ ಅಂತ ಇದೆಲ್ಲ. ಬೇಗ ಅದೇನ್ ಡಾಕ್ಯುಮೆಂಟ್ಸ್ ಇದ್ದವೊ ಎಲ್ಲ ಮುಗ್ಸು..' ಎಂದು ಹೇಳಿದಾಗ ಭುಜಂಗ ರಾವ್, ದೀಪಕ್ ಮೆಹ್ತಾ ಫಾರಿನ್ ನಿಂದ ಬರಲು ಇನ್ನೂ ಸ್ವಲ್ಪ ದಿನ ಆಗುತ್ತೆ, ಬಂದ ದಿನವೇ ಆತನನ್ನು ಮುಗಿಸಬೇಕೆಂದು ಹೇಳುತ್ತಾನೆ. ನಂತರ ಆತನ ಹೆಣವನ್ನು ತಂದು ಆದರ ಥಂಬ್ ಇಂಪ್ರೆಷನ್ ಎಲ್ಲವನ್ನು ತೆಗೆದುಕೊಂಡು ಇಡೀ ಕಂಪನಿಯ ಮಾಲೀಕತ್ವವನ್ನು ತಮ್ಮದಾಗಿಸಿಕೊಂಡು ಆ ಹೆಣವನ್ನು ಆಫೀಸಿನ ಮೇಲ್ಚಾವಣಿಯಿಂದ ದಬ್ಬುವುದಾಗಿಯೂ ಹಾಗು ಅದು ಆತ್ಮಹತ್ಯೆ ಎಂಬುವಂತೆ ತೋರಿಸುವುದಾಗಿಯೂ ಸಂಚನ್ನು ರೂಪಿಸುತ್ತಾರೆ.

ಇತ್ತಕಡೆ ತಾನು ಹೇಳಿದ ದಿನಕ್ಕಿಂತ ಮೊದಲೇ ಬಂದ ದೀಪಕ್ ಹೋಟೆಲೊಂದರಲ್ಲಿ ಉಳಿದುಕೊಳ್ಳುತ್ತಾರೆ. ದಿನ ರಾತ್ರಿ ಆಫೀಸಿಗೆ ಬರುವುದು ಹಾಗು ದೀಪಕ್ ಮೆಹ್ತಾನ ಅಕೌಂಟ್ನಿಂದ Purchase Order ಗಳನ್ನು ಅನುಮೋದಿಸಿ ಅವನ್ನು ಮಾರಿ ಬಂದ ಹಣವನ್ನೂ ಕಂಪನಿಯ ಉದ್ಯೋಗಿಗಳಿಗೇ ಬೋನಸ್ ರೂಪದಲ್ಲಿ ನೀಡತೊಡಗುತ್ತಾರೆ. ನಿಖಿಲ್ ಹೇಗೆ ಸತ್ತನೋ I Dont know. ಅಂದು ನಿಖಿಲ್ ನ ಹೆಣ ಕೆಳಗ್ಗೆ ಬಿದ್ದ ಸಮಯಕ್ಕೆ ಸರಿಯಾಗಿ ಆಫೀಸಿಗೆ ಬಂದ ಬುಜಂಗ್ ರಾವ್ ಅದು ತನ್ನ ಸ್ವಂತ ಮಗನ ಹೆಣವೆಂಬುದನ್ನೂ ಅರಿಯದೇ ಪೊಲೀಸರನ್ನು ಒಳ ಕರೆದುಕೊಂಡು ಯಾವುದೇ ಇನ್ವೆಸ್ಟಿಗೇಷನ್ ಇಲ್ಲದೆಯೆ ಸ್ಯುಸೈಡ್ ಕೇಸಿನಲ್ಲಿ ವಿಚಾರಣೆಯನ್ನು ಮುಗಿಸಬೇಕೆಂದು ಒಪ್ಪಿಸುತ್ತಾನೆ. ಭುಜಂಗ್ ರಾವ್ ಹಾಗು ಮಗ ನಿಖಿಲ್ ಕೊಲೆಯ ಸಂಚನ್ನು ರೂಪಿಸಿದರ ಬಗ್ಗೆ ದೀಪಕ್ ಮೆಹ್ತಾಗೆ ಹೇಗೆ ತಿಳಿಯಿತೋ ನಾ ಕಾಣೆ. ಅಲ್ಲದೆ ದೀಪಕ್ ಮೆಹ್ತಾ ಕೂಡ ದಿನ ರಾತ್ರಿ ಬುಜಂಗ್ ರಾವಿನ ಚಿನ್ನದ ಅಂಗಡಿಗಳಿಗೆ ಮಾರುವೇಷದಲ್ಲಿ ತೆರಳಿ ಪ್ರತಿದಿನ ಚೂರು ಚೂರೇ ಚಿನ್ನದ ಪುಡಿಯಗಳನ್ನು ಕದ್ದು ಅದರಿಂದ ಗುಂಡೊಂದನ್ನು ತಯಾರಿಸಿದನ್ನು ತಾನು ಸ್ವತಃ ಅವರನ್ನು ಹಿಂಬಾಲಿಸಿ ರೆಕಾರ್ಡ್ ಮಾಡಿದ್ದಾಗಿಯೂ ಹಾಗು ನಿನ್ನೆ ಭುಜಂಗರಾವಿನ ತಲೆಯನ್ನೊಕ್ಕಿದ್ದು ಅದೇ ಚಿನ್ನದ ಗುಂಡೆಂದು ಹೇಳಿ ಅಜಯ್ ತನ್ನ ಬಳಿ ಇದ್ದ ಎಲ್ಲ ವಿಡಿಯೋ ಕ್ಲಿಪ್ ಗಳನ್ನು, ಇತರೆ ಸಾಕ್ಷಾಧಾರಗಳನ್ನು ಕೋರ್ಟಿನಲ್ಲಿ ಹಾಜರುಪಡಿಸುತ್ತಾನೆ.

ಅಲ್ಲಿಯವರೆಗೂ ಸುಮ್ಮನೆ ನಿಂತಿದ್ದ ದೀಪಕ್ ಮೆಹ್ತಾ ಕೂಡಲೇ ಕಟಕಟನೆ ಹಲ್ಲನ್ನು ಕಡಿಯ ಹತ್ತುತ್ತಾನೆ. ಚೂರಿ ಮಸೆಯುವಂತಹ ಆ ಭಯಂಕರ ಸದ್ದನ್ನು ಕೇಳಿದ ಜನರು ಅಕ್ಷರಸಹ ಕಲ್ಲಿನ ವಿಗ್ರಹವಾಗುತ್ತಾರೆ.

'Yes….!! ನಾನೇ ಆ ಬುಜಂಗನನ್ನು ಸಾಯಿಸಿದ್ದು !!' ಎಂದು ಭಯಂಕರವಾಗಿ ಚೀರಿದಾಗ ಜಡ್ಜ್ ಕೂಡ 'ಆರ್ಡರ್ .. ಆರ್ಡರ್' ಎಂದೇಳಿ ಆತನನ್ನು ಶಾಂತವಾಗಿಸುವುದನ್ನು ಮರೆತರು. ಇಡೀ ಕೋರ್ಟಿನ ಕೋಣೆಯೇ ಪ್ರತದ್ವನಿಸುವಂತಿದ್ದ ಆ ಸದ್ದನ್ನು ಕೇಳಿ ಹೊರಗಡೆಯಿದ್ದ ಜನರೂ ಒಳಬಂದು ಜಮಾವಣೆಗೊಳ್ಳತೊಡಗಿದರು.

'ಬ್ಲಡಿ ಭುಜಂಗ .. ನಮ್ಮ ಮನೆ ಅನ್ನ ತಿಂದು ನಮ್ಮ ಮನೆಗೇ ದ್ರೋಹ ಬಗೆದ Scoundrel.. ಇಪ್ಪತ್ತು ವರ್ಷದ ಹಿಂದೆ ನಾನು ಓದಲು ಹೊರದೇಶಕ್ಕೆ ಹೋದಾಗ ನಮ್ಮ ಮನೆಯ ಮ್ಯಾನೇಜರ್ ಆಗಿದ್ದ ಈತ ಸಿಗ್ನೇಚರ್ ಫೋರ್ಜರಿ ಮಾಡಿ ನಮ್ಮ ಮನೆ, ತೋಟ ಹಾಗು ಕಂಪನಿಯನ್ನೂ ತನ್ನ ಹೆಸರಿಗೆ ಮಾಡಿಕೊಂಡು, ಅಪ್ಪನನ್ನು ಕೊಂದು ಅಮ್ಮನಿಗೂ ಚೂರಿ ಹಾಕಿದ.. ಆ ನೋವಿನಲ್ಲೂ ಅಮ್ಮ ಮೈಕ್ ರೆಕಾರ್ಡರ್ ಅನ್ನು ಆನ್ ಮಾಡಿ ಎಲ್ಲ ವಿಷಯವನ್ನು ರೆಕಾರ್ಡ್ ಮಾಡಿ ಆ ಕ್ಯಾಸೆಟ್ ಅನ್ನು ಬಚ್ಚಿಟ್ಟಳು. ಆಕೆಯನ್ನು ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದರೂ ಅದು ಪ್ರಯೋಜನವಾಗದೇ ಮಾರ್ಗ ಮಧ್ಯದಲ್ಲಿಯೇ ಆಕೆ ಕೊನೆಯುಸಿರೆಳೆದಳು. ಯಾರೊಬ್ಬರಿಗೂ ಆ ಕೊಲೆಯನ್ನು ಮಾಡಿದ್ದು ಭುಜಂಗನೇ ಎಂದು ತಿಳಿಯಲೇ ಇಲ್ಲ. ಅಪ್ಪಅಮ್ಮರ ಅಂತ್ಯ ಸಂಸ್ಕಾರಕ್ಕೆ ಬಂದು ಎದೆಬಡಿಕೊಂಡು ಅಳುತ್ತಿದ್ದ ನನಗೆ ಆ ಕ್ಯಾಸೆಟ್ ದೊರೆತರೂ ಅದನ್ನು ನಾನು ತಿಂಗಳುಗಳ ನಂತರ ವಿದೇಶಕ್ಕೆ ತೆರಳಿದ ಮೇಲೆಯೆ ಹಾಕಿ ಕೇಳಿದೆ. ಕೇಳಿ ರಕ್ತ ಕುದಿಯತೊಡಗಿತು. ಜೊತೆಗೆ ಅಮ್ಮನ ಕೊನೆಯ ಪದಗಳ ತೊದಲು ನುಡಿಗಳು. ದುಃಖ ಸಿಟ್ಟನ್ನು ಹುಟ್ಟುಹಾಕಿತು. ಆದರೆ ಸಿಟ್ಟು ಬೇಕಾಬಿಟ್ಟಿಯಾಗಿರದೆ ಗುರಿಯನ್ನು ಸ್ಪಷ್ಟವಾಗಿಸಿತು. ಆಗ ಒಂದು ವಿಷಯವನ್ನು ತೀರ್ಮಾನಿಸಿದೆ. ಇದನ್ನು ಪೊಲೀಸರಿಗೆ ತಿಳಿಸಿ ಆತನನ್ನು ಜೈಲಿಗೆ ಅಟ್ಟುವುದ ಬಿಟ್ಟು ಅಪ್ಪಅಮ್ಮರ ಮಗನಾಗಿ ಆತನನ್ನು ಕೊಂದೇ ನನ್ನ ಸೇಡನ್ನು ತೀರಿಸಿಕೊಳ್ಳುತ್ತೀನಿ ಹಾಗು ಅಪ್ಪ ಮಾಡಿಟ್ಟ ಅಷ್ಟೂ ಆಸ್ತಿಯನ್ನು ಹಾಗೆಯೆ ವಾಪಸ್ಸು ಪಡೆಯುತ್ತೀನಿ ಎಂದುಕೊಂಡು. ಅಂದು ಅಂತ್ಯಸಂಸ್ಕಾರಕ್ಕೆ ಹೋಗಿದ್ದಾಗ ತನ್ನ ಸ್ವಂತ ಪೋಷಕರನ್ನೇ ಕಳೆದುಕೊಂಡ ಮಕ್ಕಳಂತೆ ಅತ್ತು ನಟಿಸುತ್ತಿದ್ದ ಭುಜಂಗರಾವನ್ನು ಕಂಡು ಅಯ್ಯೋ ಎಂದುಕೊಂಡಿದ್ದೆ ಅಲ್ಲದೆ ಆತ ಹೇಳಿದ ಕಾಗದ ಪತ್ರಗಳೆಲ್ಲ ಮೇಲೆಯೂ ಸಹಿ ಹಾಕಿದೆ. ನಂತರವೇ ತಿಳಿದದ್ದು ಆತ ನಮ್ಮ ಅಷ್ಟೂ ಆಸ್ತಿಯ ಪಾಲುದಾರನಾಗಿದ್ದನೆಂದು ! ಆದರೆ ಆತ ಅದನ್ನು ಎಲ್ಲಿಯೂ ಹೇಳದೆ ಇಲ್ಲಿಯವರೆಗೂ ಗೌಪ್ಯವಾಗಿಟ್ಟುಕೊಂಡು ಬಂದಿದ್ದ. ಊರ ಆಸ್ತಿಗೆ ಮತ್ತೊಬ್ಬ ಮ್ಯಾನೇಜರ್ ಅನ್ನು ನೇಮಿಸಿ ಸಿಟಿಯ ಈ ಕಂಪನಿಯನ್ನು ತಾನೇ ಖುದ್ದಾಗಿ ನೆಡೆಸತೊಡಗಿದ. ನಾನೂ ಕಾದೆ. ಹತ್ತು ಕೋಟಿ ಬೆಲೆಬಾಳುವ ಕಂಪನಿಯಯನ್ನು ನೂರು ಕೋಟಿಗೆ ತಂದು ನಿಲ್ಲಿಸಿದ ಆತನ ಚತುರತೆಯನ್ನು ಮಾತ್ರ ಮೆಚ್ಚಲೇಬೇಕು. ನಾನು ಎಲ್ಲಿಯವರೆಗು ಬದುಕಿರುತ್ತೇನೆಯೋ ಅಲ್ಲಿಯವರೆಗೂ ಅರ್ಧ ಆಸ್ತಿಯ ಒಡೆಯನಾಗಿಯೇ ಇರದನ್ನು ಸಹಿಸಲಾರದ ಆತ ನನ್ನನ್ನು ಭಾರತಕ್ಕೆ ಕರೆಸಿ ಮುಗಿಸಿಬಿಡುವ ನಾಟಕವನ್ನು ಆಡುತ್ತಾನೆ. ಆದರೆ ನಾನು ಇಪ್ಪತ್ತು ವರ್ಷದಿಂದ ಈತನ ಒಂದೊಂದು ನಡೆಯನ್ನೂ ಕೂಲಂಕುಷವಾಗಿ ಗಮನಿಸಲು ಒಂದು ನೆಟ್ವರ್ಕ್ ಅನ್ನೇ ಸೃಷ್ಟಿಸಿಕೊಂಡಿದ್ದೆ. ಬೇಕಂತೆಲೆ ನನ್ನ ವಿದೇಶಿ ಬಿಸಿನೆಸ್ ನಷ್ಟಗೊಂಡಿದೆ ಎಂದು, ಸಾಲ ಹೆಚ್ಚಾಗಿ ಭಾರತಕ್ಕೆ ಮರಳುತ್ತಿದ್ದೇನೆಂದು ಹುಸಿ ಸುದ್ದಿಯನ್ನು ಹಬ್ಬಿಸಿದೆ. ಅದನ್ನು ನಂಬಿದ ಭುಜಂಗ ನಾನು ಬರುವ ದಿನದಂದೇ ನನ್ನನ್ನು ಮುಗಿಸುವ ಪ್ಲಾನನ್ನು ಮಗನೊಟ್ಟಿಗೆ ಸೇರಿ ಮಾಡಿಕೊಳ್ಳುತ್ತಾನೆ. ಆದರೆ ನಾನು ಬರುವ ಮೊದಲೇ ವಿದೇಶದಲ್ಲಿದ್ದ ಹೆಚ್ಚು ಕಡಿಮೆ ನನ್ನದೇ ವಯಸ್ಸಿನ ಆತನ ಮಗನನ್ನು ಕರೆಸಿ ಆತನಿಗೆ ನನ್ನನ್ನು ಹೋಲುವ ಮುಖವಾಡವನ್ನು ಹಾಕಿ ಪ್ರತಿದಿನ ಆಫೀಸಿಗೆ ಕರೆಸಿ ಆತನೇ ದೀಪಕ್ ಮೆಹ್ತಾ ಎಂದು ಎಲ್ಲರಲ್ಲೂ ನಂಬಿಕೆ ಹುಟ್ಟಿಸುತ್ತಾನೆ. ಅಂತಹ ಹತ್ತಾರು ನನ್ನನ್ನು ಹೋಲುವ ಮುಖವಾಡಗಳನ್ನು ಮಾಡಿಸಿ ಇಟ್ಟುಕೊಂಡಿರುತ್ತಾನೆ. ಹಾಗು ಬೋರ್ಡ್ ಮೀಟಿಂಗ್ ನಲ್ಲಿ ನಾನು ಕಂಪನಿಯ ಎಲ್ಲ ಷೇರನ್ನು ಮೆಹ್ತಾನಿಗೆ ಮಾರಿ ಹಣವನ್ನು ವಿದೇಶದಲ್ಲಿರುವ ಸಾಲವನ್ನು ತೀರಿಸಲು ವಿನಿಯೋಗಿಸುವುದಾಗಿ ಹೇಳಿಸುತ್ತಾನೆ. ಅಂತೆಯೇ ನನ್ನ ಸಹಿಯನ್ನು ನಕಲು ಮಾಡಿ ಕಾಗದ ಪತ್ರವನ್ನೆಲ್ಲವನ್ನೂ ತಯಾರಿಸಿದ. ಆಗ ಹೆಚ್ಚುಕಡಿಮೆ ಕಂಪನಿ ಭುಜಂಗಾರವಿನದ್ದೆ ಆಗಿದ್ದಿತು. ನಾನು ಬರುವ ದಿನ ಏರ್ಪೋರ್ಟಿನಿಂದ ರಾತ್ರಿಯೇ ಏನಾದರು ಕಾರಣ ಹೇಳಿ ಆಫೀಸಿಗೆ ಕರೆಸಿ, ಸಾಯಿಸಿ, ಮುಂದಕ್ಕೆ ಬೇಕಾಗುವ ಬೆರಳ ಗುರುತು ಇತ್ಯಾದಿಗಳೆಲ್ಲವನ್ನು ಕಾಗದ ಪತ್ರಗಳ ಮೇಲೆ ಹಾಕಿಸಿ ಕೊನೆಗೆ ಸತ್ತ ಹೆಣವನ್ನೇ ಕೆಳಗೆ ತಳ್ಳಿ ಆತ್ಮಹತ್ಯೆಯ ಪಟ್ಟಿಯನ್ನು ಕಟ್ಟುವುದು ಅವರುಗಳ ಪ್ಲಾನ್ ಆಗಿದ್ದಿತು! ಆದರೆ ನಾನು ಅದಾಗಲೇ ಭಾರತಕ್ಕೆ ಬಂದಿರುವುದಾಗಲಿ, ಹೋಟೆಲಿನಲ್ಲಿ ತಂಗಿ ಅವರನ್ನು ಇಂಚಿಂಚ್ಚು ನಡೆಯನ್ನು ಗಮನಿಸುತ್ತಿರುವುದಾಗಲಿ ಅವರಿಗೆ ತಿಳಿದಿರಲಿಲ್ಲ. ನಾನೇ ವೇಷಮರೆಸಿ ಪ್ರತಿದಿನ ಆಫೀಸಿಗೆ ರಾತ್ರಿಯ ಸಮಯದಲ್ಲಿ ನುಗ್ಗಿ ಭುಜಂಗನ ಕಂಪ್ಯೂಟರನ ಒಳಹೊಕ್ಕು ಅಷ್ಟೂ ದಾಖಲೆಗಳನ್ನು ನಕಲು ಮರುಸೃಷ್ಟಿಸಿದೆ. ಎಲ್ಲಿಯವರೆಗೂ ಎಂದರೆ ಇಂದು ಇಡೀ ಕಂಪನಿಯ ಒಡೆಯನ ಹೆಸರು ನನ್ನದೇ ಆಗಿದೆ. ಪಾಪ ಭುಜಂಗನಿಗೆ ಸಾಯುವಾಗಲೂ ಆ ವಿಷಯ ತಿಳಿಯಲಿಲ್ಲ ಎಂದು ಗಹಗಹನೇ ನಗುತ್ತಾನೆ.

ನಂತರ ಮುಂದುವರೆಸಿ, ನಮ್ಮ ತಂದೆ ಮಹಾ ತ್ಯಾಗಮಯಿ. ಅಂದು ತಿನ್ನಲು ಕೂಳಿಲ್ಲದೆ ಹಳ್ಳಿಯಲ್ಲಿ ಅಲೆಯುತ್ತಿದ್ದ ಭುಜಂಗನನ್ನು ಕರೆಸಿ ಕೆಲಸಕೊಟ್ಟು ಮ್ಯಾನೇಜರ್ನ ಹುದ್ದೆಯನ್ನು ಕೊಟ್ಟರೂ ತನ್ನ ನಾಯಿಬುದ್ಧಿಯನ್ನು ತೋರಿಸಿದ ಆತ. ಆದರಿಂದ ನಾನೇ ಖುದ್ದಾಗಿ ಕಂಪನಿಯ ಹಣದಲ್ಲೇ ಉದ್ಯೋಗಿಗಳಿಗೆ ಎರಡು ವರ್ಷದ ಬೋನಸ್ ಅನ್ನು ಒಮ್ಮೆಲೇ ಬರುವಂತೆ ಮಾಡಿದೆ.

ಅಂದು ನಾನು ವಿದೇಶದಿಂದ ಬರುತ್ತೇನೆ ಎಂಬುದನ್ನು ತಿಳಿಸಿ ಭೇಟಿಯಾಗೋಣ ಎಂದು ಕಳಿಸಿದ ಮೆಸೇಜ್ಗೆ ಸೀದಾ ಆಫೀಸ್ಸೆ ಹೋಗೋಣ ನಾನೇ ಪಿಕ್ ಮಾಡ್ತೀನಿ ಎಂದ ಭುಜಂಗನ ಮಗ. ಅಪ್ಪ ಸೇರಾದರೆ ಮಗ ಸವಾ ಸೇರು. ಕಾರಿನಲ್ಲೇ, 'ನೋಡ್ರಿ ನಮ್ಮಪ್ಪ ಕಷ್ಟ ಪಟ್ಟು ಮಾಡಿದ ಕಂಪನಿ ಇದು.. ಅವ್ರ್ ಇಲ್ದೆ ಇದ್ರೆ ಇಷ್ಟೆಲ್ಲಾ ಬೆಳೀತಾನೆ ಇರ್ತಿರ್ಲಿಲ್ಲ..' ಎನುತ ಪರೋಕ್ಷವಾಗಿ ಹೆದರಿಸತೊಡಗಿದ. ಅಂದುಕೊಂಡಂತೆಯೇ ಕೊಲ್ಲಲು ಸಿದ್ದವಾಗಿ ಬಂದಿದ್ದನಾತ! ರಾತ್ರಿ ಹತ್ತುವರೆಗೆ ಆಫೀಸಿಗೆ ಬಂದ ಕೂಡಲೇ ಗನ್ ಒಂದನ್ನು ತೆಗೆದು ನನ್ನ ಹಣೆಯ ಮೇಲಿಟ್ಟು ಟೇಬಲ್ಲಿನಲ್ಲಿದ ಕಾಗದ ಪತ್ರಗಳ ಮೇಲೆ ಸಹಿ ಮಾಡುವಂತೆ ಹೇಳಿದ. ಅಂತೆಯೇ ನಾನು ನನ್ನ ನಕಲಿ ಸಹಿಯನ್ನು ಮಾಡಿ ಇನ್ನೇನು ತಲೆಯೆತ್ತಬೇಕುವನ್ನುವಷ್ಟರಲ್ಲಿ ಆತನ ಗನ್ನನ್ನು ತಳ್ಳಿ ಆಣೆಯ ನೇರಕ್ಕೆ ಒಂದು ಬಲವಾದ ಗುದ್ದನು ಕೊಟ್ಟೆ. ಸೇಫ್ಟಿಗೆಂದು ತಂದಿದ್ದ ವಿಷ ಸಿಂಪಡಿಸಿದ ಕರ್ಚಿಫನ್ನು ಆತನ ಮೂಗಿನ ನೇರಕ್ಕೆ ಇರಿಸಿ ಪ್ರಜ್ಞೆ ತಪ್ಪಿಸಿದೆ. ಆದರೆ ವಿಷದ ಮತ್ತೊ ಅಥವ ಆತನ ಕೆಟ್ಟ ಗಳಿಗೆಯೋ ನಿಮಿಷಮಾತ್ರದಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಯಿತು!! ಅಪ್ಪನನ್ನು ಸಾಯಿಸಲು ಹೋಗಿ ಮಗನನ್ನೇ ಪರಲೋಕಕ್ಕೆ ಕಳುಯಿಸಿದ ನನ್ನ ಎದೆ ನಡುಗತೊಡಗಿತು. ಕೆಲನಿಮಿಷಗಳಲ್ಲೇ ಇಹಸ್ಥಿತಿಗೆ ಬಂದ ನಾನು ಆತನ ಹೆಣವನ್ನು ಕಟ್ಟಿ ಊರೇ ಮಲಗಬಹುದಾದಷ್ಟು ದೊಡ್ಡದಾದ ಫ್ರಿಡ್ಜ್ ನ ಕೆಳ ಕಂಪಾರ್ಟ್ ಮೆಂಟ್ನ ಒಳಗೆ ತೂರಿಸಿ, ಗಟ್ಟಿಯಾದ ಕಲ್ಲಿನಂತೆ ಅಂಟುವ ಲಿಕ್ವಿಡ್ ನಿಂದ ನನ್ನದೇ ನಕಲಿ ಮುಖ ಚಹರೆಯನ್ನು ಆತನ ಮುಖಕ್ಕೆ ಅಂಟಿಸಿ ಫ್ರಿಡ್ಜ್ ನ ಕೀಲಿಯನ್ನು ಹಾಕಿದೆ.


ಆತನ ಮೊಬೈಲಿಂದ ಭುಜಂಗನಿಗೆ ಮೆಸೇಜ್ ಮಾಡಿದೆ.

Will be Continued...