Friday, October 28, 2016

ಅಳುತ್ತಾ ಬಂದಳು…ಅಳುತ್ತಲೇ ಹೋದಳು…ಈಕೆ ನಟನ ಜಗತ್ತಿನ ಶಿರೋಮಣಿ!


Chand tanha hai asman tanha

Dil mila hai kahan kahan tanha

Bujh gai aas chup gaya tara

Thartharata raha dhuan tanha


ಸುಂದರ ಚಂದಿರ, ಶಾಂತ ಅಂಬರ, ಜೊತೆಗೆ ಪ್ರೀತಿಸುವ ಹೃದಯ. ಇವಿಷ್ಟೂ ಇದ್ದರೂ ಒಂಟಿತನವನ್ನು ಕಾಣುವ ಮನ.

ಬೆಳದಿಂಗಳ ಶಾಂತ ರಾತ್ರಿಯಲ್ಲಿ ಅಗಣ್ಯ ತಾರಾರಾಶಿಗಳ ನಡುವೆ ಸವಿ ಮಧುರ ಸ್ವರದಲ್ಲಿ ಹಾಡಿರುವ ಈ ಹಾಡನ್ನು ಕೇಳುತ್ತಾ ಕುಳಿತರೆ ಬೆನ್ನತ್ತಿದ ಏಕಾಂತವನ್ನೂ ಶೃಂಗಾರ ಕಾವ್ಯವನ್ನಾಗಿ ಬಣ್ಣಿಸಿರುವ ಚಿತ್ರಣ ತಿಳಿಯುತ್ತದೆ. ವರ್ಣಿಸಿರುವ ಪ್ರತಿ ಸಾಲಿನಲ್ಲೂ ಏಕಾಂತ, ಹಾಡಿರುವ ಪ್ರತಿ ಪದಗಳಲ್ಲೂ ವೇದನೆ. ಇಂತಹ ಹಲವಾರು ಕವಿತೆಗಳನ್ನು ಬರೆದು ಹಾಡಿರುವವರು ನಾಯಕ ನಟಿ, ಕವಿಯತ್ರಿ, ಹಾಡುಗಾರ್ತಿ, ನೃತ್ಯಗಾರ್ತಿ ಹಾಗು ಹಿಂದಿ ಚಿತ್ರರಂಗದ ದಂತಕಥೆ, ಟ್ರಾಜಿಡಿ ಕ್ವೀನ್, ಮ್ಹಜಾಮೀನ್ ಬಾನು ಉರ್ಫ್ ಮೀನಾ ಕುಮಾರಿ. 'ನಾಜ್' ಎಂಬ ಕಾವ್ಯನಾಮದೊಂದಿಗೆ ಇಂತಹ ಹಲವಾರು ಕವಿತೆಗಳನ್ನು ಬರೆದು ಹಾಡಿರುವ ಮ್ಹಜಾಮೀನ್ ಬಾನು ಪರದೆಯ ಹಿಂದೂ ಹಾಗು ಪರದೆಯ ಮುಂದೂ ಕಂಡ ತನ್ನ ನೋವಿನ ಸಂಘರ್ಷಣೆಯನ್ನು ಕವಿತೆಗಳಲ್ಲಿ ಸೊಗಸಾಗಿ ಬಣ್ಣಿಸಿದ್ದಾರೆ. ಚಿತ್ರಪ್ರಿಯರ ಹೃದಯಗಳಲ್ಲಿ ಇಂದಿಗೂ ಚಿರಸ್ತಾಯಿಯಾಗಿದ್ದಾರೆ.

ಆಗಸ್ಟ್ 1, 1933 ರಲ್ಲಿ ಅಲಿ ಬಕ್ಸ್ ಹಾಗು ಇಕ್ಬಲ್ ಬೇಗಮ್ ಬಡ ದಂಪತಿಗೆ ಜನಿಸಿದ ಮೀನಾ ,ಬಾಲ್ಯದಿಂದಲೇ ಕಷ್ಟದ ಸರಮಾಲೆಯ ಜೊತೆಗೆ ಬೆಳೆದಳು. ನಾಟಕ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿ ಕಷ್ಟದಿಂದ ಜೀವನ ಸಾಗಿಸುತ್ತಿದ್ದ ತಂದೆ ಅಲಿ ಬಕ್ಸ್ ಗಂಡು ಮಗುವೊಂದನ್ನು ಅಪೇಕ್ಷಿಸಿದ್ದರು. ಮೀನಾಳ ಜನನ ತಂದೆಗೆ ಅದೆಷ್ಟು ನೋವುಂಟು ಮಾಡಿತ್ತೆಂದರೆ ಕೆಲ ಸಮಯದ ಕಾಲ ಅನಾಥಾಲಯದ ಬಳಿ ಮಗುವನ್ನು ಬಿಟ್ಟು ಹೋದರು. ಆತ್ಮಸಾಕ್ಷಿಯ ಕರೆಗೆ ಕರಗಿದ ತಂದೆ ಪುನಃ ಹಿಂದಕ್ಕೆ ಬಂದು ಅಳುತಿದ್ದ ಮಗಳನ್ನು ಎತ್ತಿಕೊಳ್ಳಲು ಹೋದರೆ ಮಗುವಿನ ಮೈಯ ಮೇಲೆಲ್ಲಾ ಇರುವೆಗಳು ತುಂಬಿಕೊಂಡಿರುತ್ತವೆ! ಹೀಗೆ ಹುಟ್ಟಿಸಿದ ತಂದೆಗೆ ಬೇಕು-ಬೇಡವಾದ ಮೀನಾ ತನ್ನ ಬಾಲ್ಯದಲ್ಲೇ ನಾಟಕ ಶಾಲೆಗೆ ದುಡಿಯಲು ಹೋಗಬೇಕಾಗುತ್ತದೆ. ಗಂಡನ್ನು ಅಪೇಕ್ಷಿಸಿದ್ದ ಅಪ್ಪ ಆಕೆಯನ್ನು ಒಬ್ಬ ಹೆಣ್ಣು ಎಂಬುದನ್ನೇ ಮರೆಯುತ್ತಾರೆ. ಇತರ ಮಕ್ಕಳೆಲ್ಲ ಶಾಲೆಗೆ ಹೊಗುವುದ ಕಂಡು ತಾನು ಓದಬೇಕೆಂದು ಪುಟಾಣಿ ಮೀನಾ ಅತ್ತರೆ ಆಕೆಯನ್ನು ನಾಟಕ ಸಂಸ್ಥೆಯಲ್ಲಿ ಕೆಲಸ ಮಾಡೆಂದು ತಂದು ನಿಲ್ಲಿಸುತ್ತಿದ್ದರು ಅಪ್ಪ. ಹೀಗೆ ಬಾಲ್ಯದಿಂದಲೇ ಮೀನಾಳಿಗೆ ನಾಟಕ ಹಾಗು ಚಿತ್ರಗಳ ನಂಟು ಹತ್ತುತ್ತದೆ.

ಮ್ಹಜಾಮೀನ್ ಬಾನುವಿನಿಂದ ಬೇಬಿ ಮೀನಾಳಾಗಿ, ತನ್ನ ಹದಿನಾಲ್ಕನೇ ವಯಸ್ಸಿಗೆ 1946 ರಲ್ಲಿ 'ಬಚ್ಚೋ ಕ ಖೇಲ್' ಎನ್ನುವ ಚಿತ್ರ ದಲ್ಲಿ ಮೀನಾ ಕುಮಾರಿ ಎಂಬ ಹೆಸರಿನೊಟ್ಟಿಗೆ ನಾಯಕ ನಟಿಯಾಗಿ ತೆರೆಯ ಮೇಲೆ ಮೂಡುತ್ತಾಳೆ. ಮುಂದೆ ನಡೆಯುವುದೆಲ್ಲ ಅಮೋಘ ಇತಿಹಾಸ. ನಟನೆಯನ್ನು ಅದೆಷ್ಟು ಕರಗತ ಮಾಡಿಕೊಳ್ಳುತ್ತಾಳೆಂದರೆ ಅಂದಿನ ದಿನಗಳ ಹೆಣ್ಣಿನ ಬವಣೆಯ ನಾನಾ ಮುಖಗಳನ್ನು, ಆಕೆಯ ನೂರಾರು ಭಾವನೆಗಳನ್ನು ನೋಡುಗರ ಮನ ಮುಟ್ಟುವಂತೆ, ನೋಡುಗ ಕಣ್ಣು ಮಿಟುಕಿಸದಂತೆ ನಟಿಸುತ್ತಾಳೆ. ದೇಶದ ಮನೆಮಾತಾಗುತ್ತಾಳೆ. ಹೀಗೆ ತೊಂಬತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಮೀನಾ ನಾಲ್ಕು ಬಾರಿ ಫಿಲಂ ಫೆರ್ ನ ಅತ್ತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿರುವುದಲ್ಲದೆ ಎಂಟು ಬಾರಿ ನಾಮನಿರ್ದೇಶನಗೊಂಡಿರುತ್ತಾಳೆ! ಫಿಲಂ ಫೆರ್ ನ ಮೊದಲ ಅತ್ಯುತ್ತಮ ನಟಿ ಪ್ರಶಸ್ತಿ ಕೂಡ ಮೀನಾ ಕುಮಾರಿಯದೆ ಆಗಿದೆ.

ಚಿತ್ರರಂಗಕ್ಕೆ ಬಂದು ದೇಶದಲ್ಲೇಲ ಪ್ರಸಿದ್ದಿ ಪಡೆದಿದ್ದರೂ ಮನೆಯ ಗೋಳೇನು ಈಕೆಗೆ ತೀರಲಿಲ್ಲ. ಅಪ್ಪನಿಗೆ ಇವಳು ನೋಟನ್ನು ಸುರಿಯುವ ಯಂತ್ರದಂತಾಗುತ್ತಾಳೆ. ಚಿತ್ರಗಳ ಆಯ್ಕೆ, ಸಂಭಾವನೆ ಎಲ್ಲವೂ ಅಪ್ಪನ ಆಯ್ಕೆ. ಈಕೆ ಏನಿದ್ದರೂ ಕ್ಯಾಮರಾದ ಮುಂದೆ ತನ್ನ ಮುಗ್ದ ಮುಖವನ್ನು ತಂದು ನಟಿಸಿ ಪುನ್ಹ ಸಂಜೆ ಮನೆಯನ್ನು ಸೇರಬಕು. ಆದ ಕಾರಣಕ್ಕೆ ಈಕೆಯನ್ನು ಏಕಾಂತ ಸದಾ ಕಾಡಿತು. ರವೀಂದ್ರನಾಥ ಠಾಗೂರರ ವಂಶಸ್ಥಳಾಗಿದ್ದರಿಂದಲೋ (ಮೀನಾಳ ಅಜ್ಜಿ ರವೀಂದ್ರನಾಥ ಠಾಗೂರರ ತಮ್ಮನ ಮಗಳು) ಏನೋ ನಟನೆಯ ಜೊತೆ-ಜೊತೆಗೆ ಬರಹಗಳಲ್ಲೂ ಮೀನಾ ಕುಮಾರಿಗೆ ಆಸಕ್ತಿ ಮೂಡುತ್ತದೆ. ತನ್ನ ನೋವು ಸಂಕಟವನ್ನೆಲ್ಲ ಬರೆದಿಡುವ ಬಯಕೆ ಮೂಡುತ್ತದೆ. ಆದರೆ ತನ್ನ ಜೀವನದಲ್ಲಿ ಒಮ್ಮೆಯೂ ಶಾಲೆಯ ಹಾದಿ ಕಾಣದ ಮೀನಾ ಬರೆಯುವುದೇಗೆ? ಯಾರೊಟ್ಟಿಗೂ ಹಂಚಿಕೊಳ್ಳಲಾಗದ ಸಾವಿರ ಭಾವಗಳು ಕಣ್ಣ ಅಂಚಿನಲ್ಲಿ ಬಂದು, ಕರಗಿ ಜಾರಿ ಹೋಗುವ ಮುನ್ನ ಹಿಡಿದು ಕೂರಿಸಬೇಕು. ಬರೆಯಬೇಕು. ದೃತಿ ಗೆಡುವುದಿಲ್ಲ. ಮನೆಯಲ್ಲೇ ಉರ್ದು ಪಾಠವನ್ನು ಹೇಳಿಸಿಕೊಳ್ಳುತ್ತಾಳೆ. ಕಲಿತ ಚೂರು ಪಾರು ಪದಗಳಲ್ಲೇ ಬರಹವನ್ನು ಶುರುಮಾಡುತ್ತಾಳೆ.

ಏತನ್ಮದ್ಯೆ ಚಿತ್ರನಿರ್ದೇಶಕ ಕಮಲ್ ಆರೋಹಿಯೊಟ್ಟಿಗೆ ಪ್ರೇಮಾಂಕುರವಾಗಿ ಮನೆಯವರ ತೀವ್ರ ವಿರೋಧದ ನಡುವೆಯೂ ಅವರನ್ನು ವರಿಸುತ್ತಾಳೆ. ಕೆಲ ವರ್ಷಗಳ ಕಾಲ ತನ್ನ ಜೀವನದ ಸುಮಧುರ ದಿನಗಳನ್ನು (ಇವೆಷ್ಟೇ ದಿನಗಳು ಮಾತ್ರ ಆಕೆಯ ನೆಮ್ಮದಿಯ ದಿನಗಳೆನ್ನಬಹುದು) ಪತಿಯೊಟ್ಟಿಗೆ ಕಳೆಯುತ್ತಾಳೆ. ಎಲ್ಲವೂ ಸಾಂಗಾವಾಗಿ, ನೆಮ್ಮದಿಯಿಂದ ನಡೆಯುತ್ತಿದೆ ಅನ್ನುವಾಗಲೇ ಎಲ್ಲ ಸಂಸಾರದಂತೆ ಇಲ್ಲೂ ಬಿರುಕು-ಕೊರಕುಗಳು ಮೂಡುತ್ತವೆ. ತುಂಬ ಭಾವಜೀವಿಯಾಗಿದ್ದ ಮೀನಾ ನೊಂದು ಪತಿಯಿಂದ ದೂರವಾಗುತ್ತಾಳೆ. ಆದರೆ ವಿಚ್ಛೇದನವನ್ನು ಬಯಸುವುದಿಲ್ಲ! ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಪತಿಯಿಂದ ದೂರದ ಮೀನಾ ಮತ್ತೊಮ್ಮೆ ಏಕಾಂತದ ಕೂಪಕ್ಕೆ ಬೀಳುತ್ತಾಳೆ. ಮುಂದೆದೂ ಏಳದ ರೀತಿ. ಆಗಲೇ ಇಂತಹ ಹಲವಾರು ಕತೆ, ಕವನಗಳು ಅವಳಿಂದ ಮೂಡುವುದು.

ಪತಿಯಿಂದ ದೂರದ ವೇದನೆ, ಮತ್ತೆಲ್ಲೋ ಆ ಬಗೆಯ ಪ್ರೇಮಾನ್ವೇಷಣೆ ಹಾಗು ಸೋಲು, ಜೊತೆಗೆ ಬೆಂಬಿಡದ ಏಕಾಂತ. ಮೀನಾ ಮಾನಸಿಕ ಖಿನ್ನತೆಗೆ ಒಳಗಾಗುತ್ತಾಳೆ. ನಿದ್ರಾವಂಚಿತಳಾಗುತ್ತಾಳೆ. ಕೊನೆಗೆ ಆಕೆಯ ಡಾಕ್ಟರ್ನ ಸಲಹೆಯ ಮೇರೆಗೆ, ನಿದ್ರಾಹೀನತೆಯಿಂದ ಕೊಂಚ ಮುಕ್ತಿ ಪಡೆಯಲು ಕೆಲವೇ ಮಿಲಿಯಷ್ಟು ಬ್ರಾಂಡಿಯ ಸೇವನೆಗೆ ಮುಂದಾಗುತ್ತಾಳೆ. ಆದರೆ ಅಭ್ಯಾಸ ಚಟವಾಗುತ್ತದೆ. ಮನಸ್ಸಿನ ನೋವಿಗೆ ಮದ್ಯದ ಕಹಿಯೇ ಔಷಧಿಯೆಂದು ಭಾವಿಸುತ್ತಾಳೆ. ನಂತರದ ದಿನಗಳಲ್ಲಿ ಮೀನಾ ಮದ್ಯಕ್ಕೆ ಅದೆಷ್ಟು ಅವಲಂಬಿತಳಾಗಿದ್ದಳೆಂದರೆ ಮನೆಯವರು ಹರಸಾಹಸ ಮಾಡಿ ಆಕೆಯಿಂದ ಮದ್ಯವನ್ನು ಕಾಣದಂತೆ ಮುಚ್ಚಿಡಬೇಕಿತ್ತು. ಆಕೆಯ ಅರಿವಿಗೆ ಬಾರದಂತೆ ದೇಹ ಹದಗೆಡುತ್ತಾ ಹೋಯಿತು. ಆದರೆ ಮೀನಾ ಬರೆಯುವುದ ಬಿಡಲಿಲ್ಲ. ಮದ್ಯದ ನಶೆಯಲ್ಲೂ ತನ್ನ ಜೀವನವನ್ನು ಕಥೆ-ಕವನಗಳ ಮೂಲಕ ಹಾಳೆಗಳ ಮೇಲೆ ಗೀಜುತ್ತಿದ್ದಳು. ಗೀಜಿ ಅಳುತ್ತಿದ್ದಳು. ಅತ್ತು ಮತ್ತೆ ಬರೆಯುತ್ತಿದ್ದಳು. ಇದೆ ಸಮಯದಲ್ಲಿ ' I write, I recite ' ಎಂಬ ಕವನ ಸಂಕಲವನ್ನು ಖಯ್ಯಾಮ್ ರ ಸಂಗೀತದ ಸಹಾಯದಿಂದ 1971 ರಲ್ಲಿ ಸ್ವತಹಃ ತಾನೆ ಹಾಡಿ ಹೊರತಂದಳು.

ಇವೆಲ್ಲದರ ನಡುವೆ ಮೀನಾ ನಟಿಸುವುದ ಮಾತ್ರ ಬಿಟ್ಟಿರಲಿಲ್ಲ. ಜೀವನ ನೋಯಿಸಿದಷ್ಟು ಅವಳ ಚಿತ್ರಗಳು ಆಕೆಯನ್ನು ನೋಯಿಸಲಿಲ್ಲ. ಒಂದರ ಮೇಲೊಂದು ಚಿತ್ರಗಳು ನೋಡುಗರ ಮನಗೆಲ್ಲತೊಡಗಿದವು. ಕರುಣಾಜನಕ, ರೋದನೆಗಳೊಡಪಡುವ ಪಾತ್ರಗಳೇ ಹೆಚ್ಚಾಗಿ ಮೀನಾಳ ಪಾಲಾಗುತ್ತಿದ್ದವು. ಆಕೆಯ ನಿಜಜೀವನವೂ ಇಂತಹ ಪಾತ್ರಗಳೊಟ್ಟಿಗೆ ವ್ಯತಿರಿಕ್ತವಾಗಿಲ್ಲದ್ದಿದರಿಂದ ನೋಡುಗನ ಕಣ್ಣುಗಳು ತೇವವಾಗುವಂತೆ ಸರಾಗವಾಗಿ ನಟಿಸುತ್ತಿದ್ದಳು. ಆಜಾದ್, ಕೊಹಿನೂರ್, ಫುಟ್ ಪಾತ್, ಗಜಲ್, ಕಾಜಲ್, ಸಾಹಿಬ್ ಬೀವಿ ಔರ್ ಗುಲಾಮ್, ಹೀಗೆ ಸಾಲು ಸಾಲು ಚಿತ್ರಗಳು ಆಕೆಯನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸತೊಡಗಿದವು. ಈ ಮದ್ಯೆ ವಿಪರೀತ ಮದ್ಯ ಸೇವನೆಯಿಂದ ಆರೋಗ್ಯ ತೀವ್ರ ಹದಗೆಡುತ್ತದೆ. ೧೯೬೮ ರಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್ಗೆ ಹೋಗಬೇಕಾಗುತ್ತದೆ. ಸತತ ಮೂರು ತಿಂಗಳ ಚಿಕಿತ್ಸೆಯ ಪರಿಣಾಮ ಮೀನಾ ಚೇತರಿಸಿಕೊಳ್ಳುತ್ತಾಳೆ ಅಲ್ಲದೆ ಮುಂದೆಂದೂ ಮದ್ಯದ ಒಂದು ಹನಿಯನ್ನು ಸಹ ಸೇವಿಸುವುದಿಲ್ಲ. ಆದರೆ ಒಳಗೊಳಗೇ ಕ್ಷಿಣಿಸುತ್ತಿದ್ದ ಆರೋಗ್ಯ ಯಾರ ಅರಿವಿಗೂ ಸಹ ಬರುವುದಿಲ್ಲ!



ಚಿತ್ರ 'ಪಾಕೀಝ' :

1958 ರಲ್ಲಿ ಶುರುವಾದ ಪಾಕಿಝ ಚಿತ್ರ ಪೂರ್ಣಗೊಂಡಿದ್ದು 1972 ರಲ್ಲಿ! ಇದರ ನಿರ್ದೇಶಕ ಮೀನಾಳ ಪತಿ ಕಮಲ್ ಆರೋಹಿ. ಚಿತ್ರ ಶುರುವಾಗಿ ಮುಂದುವರೆಯುತಿದ್ದಾಗ ಮೀನಾ ಹಾಗು ಕಮಲ್ರ ನಡುವಿನ ಮನಸ್ಥಾಪ ಚಿತ್ರವನ್ನು ಇನ್ನೂ ಕೆಲ ವರ್ಷಗಳ ಕಾಲ ಮುಂದೂಡುತ್ತದೆ. ಪರಸ್ಪರ ವೈಮನಸ್ಸಿನಿಂದ ದೂರವಿದ್ದ ಇಬ್ಬರನ್ನೂ ಈ ಚಿತ್ರವೇ ಮತ್ತೊಮ್ಮೆ ಒಂದುಗೂಡಿಸಿತು ಎಂದರೆ ಸುಳ್ಳಾಗದು. ಬಾಗಶಃ ಪೂರ್ಣಗೊಂಡಿದ್ದ ಚಿತ್ರವನ್ನು ಪೂರ್ಣಗೊಳಿಸಲು, ಚಿತ್ರದ ಕಥೆ ಹಾಗು ಅದರ ಪ್ರಾಮುಖ್ಯತೆಯನ್ನು ಅರಿತಿದ್ದ ನರ್ಗಿಸ್ ಹಾಗು ಸುನಿಲ್ ದತ್ತ್ ಜೋಡಿಯ ಸಂಧಾನ ಮೀನಾ ಚಿತ್ರವನ್ನು ಪೂರ್ಣಗೊಳಿಸಲು ಮತ್ತೆ ಕರೆತಂದಿತು. ಮೀನಾ ಚಿತ್ರವನ್ನು ಪೂರ್ಣಗೊಳಿಸಲು ಸಜ್ಜಾದಳು. ಆದರೆ ಅಷ್ಟರಲಾಗಲೇ ಆಕೆಯ ಕಾಯಿಲೆ ಉಲ್ಬಣಿಸಿ ಹೋಗಿತ್ತು. ಲಿವರ್ನ Cirrhosis ಕಾಯಿಲೆ ಆಕೆಯನ್ನು ಆವರಿಸಿತ್ತು. ಬೇರೆ ಇತರರಿಗಿಂತ ಮೀನಾಳಿಗೆ ತಾನು ಬದುಕುಳಿಯುವ ಅಸಾಧ್ಯತೆಯ ಬಗ್ಗೆ ಹೆಚ್ಚಿನ ಅರಿವಿತ್ತು! ಚಿತ್ರಕ್ಕಾಗಿ ಕೇವಲ ಒಂದು ರೂಪಾಯಿ ಸಂಭಾವನೆಯನ್ನು ಪತಿಯಿಂದ ಪಡೆದ ಮೀನಾ ನಗು ನಗುತ್ತಲೇ ಚಿತ್ರದ ಶೂಟಿಂಗ್ಗೆ ಬಂದಳು. ದೇಹ ಪೂರ್ಣವಾಗಿ ನಿಷ್ಕ್ರಿಯವಾಗುವ ಮುನ್ನ ಚಿತ್ರವನ್ನು ಮುಗಿಸಬೇಕೆಂದು ಬೇಗ ಬೇಗನೆ ನಟಿಸಿದಳು. ಅತ್ತು ಬೇಸತ್ತ ಕಣ್ಣುಗಳು, ಅವುಗಳನ್ನೂ ಸೊಗಸಾಗಿಸುವ ಕಾಡಿಗೆ, ನಗುವ ಮರೆತ ಮುಖದಲ್ಲಿ ಹತಾಶೆಯ ಸ್ವರಗಳು, ಇವಕ್ಕೆ ಸರಿದೂಗುವಂತೆ ಆಕೆಯ ವಸ್ತ್ರಾಭರಣಗಳು ಜೊತೆಗೆ ಆಕೆಯ ಅಮೋಘ ನಟನೆ. ಸಾವಿನ ಬಾಗಿಲಲ್ಲಿ ನಿಂತು ಹೊರಡುವ ಮುನ್ನ ಮೀನಾ ನೋಡುಗರಿಗೆ ಒಂದು ಅದ್ಬುತ ಚಿತ್ರವನ್ನು ನೀಡಿದಳು. ಪಾಕೀಝ ಚಿತ್ರ ಇಂದಿಗೂ ದೇಶದ ಅತ್ಯುತ್ತಮ ಕ್ಲಾಸಿಕ್ ಚಿತ್ರಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ. ಅಲ್ಲದೆ ಚಿತ್ರ ಮುಗಿಯುವಷ್ಟರಲ್ಲಿ ಕಮಲ್ ಹಾಗು ಮೀನಾರ ನಡುವಿನ ಮನಸ್ತಾಪ ಮುರಿದು ಬಿದ್ದಿರುತ್ತದೆ. ಆದರೆ ಚಿತ್ರ ಬಿಡುಗಡೆಗೊಂಡ ಮೂರು ತಿಂಗಳಲ್ಲೇ ಮೀನಾ ಕೊನೆಯುಸಿರೆಳೆದ್ದಿರುತ್ತಾಳೆ. ಹೀಗೆ ಹೋಗುವಾಗ ಮೀನಾಳಿಗೆ ಕೇವಲ ಮೂವತ್ತೆಂಟು ವರ್ಷಗಳು!



ಇಂದು ಮೀನಾ ಕುಮಾರಿಯೆಂದರೆ ಬಲ್ಲವರು ತೀರಾ ವಿರಳ. ಆದರೆ ಆಕೆ ತನ್ನ ಕೆಲವೇ ವರ್ಷಗಳ್ಲಲಿ ನಟಿಸಿ ಚಿತ್ರಪ್ರಿಯರ ಮನ ತುಂಬಿದ ಪಾತ್ರಗಳು ಇಂದಿನ ಅದೆಷ್ಟೋ ನಟ ನಟಿಯರಿಗೆ ಪ್ರೇರಕವಾಗಿವೆ. ಮೀನಾ ಕುಮಾರಿ ತನ್ನ ನಟನೆಗೆ ಅಲ್ಲದೆ ಆಕೆಯ ಉದಾರಿ ಗುಣದಿಂದಲೂ ಹೆಸರು ಮಾಡಿದ್ದಳು. ಜೀವನ ಅರಿತಾಗಿನಿಂದ ಆಕೆ ಇತರರಿಗಾಗೇ ದುಡಿದಳು. ಮನೆಯವರಿಗಂತೂ ಈಕೆಯೇ ಹಸಿವು ನೀಗಿಸುವ ಸಾಧನ ವಾಗಿದ್ದಳು. ತಾನು ಸಾಯುವುದು ಖಚಿತವೆಂದರಿತ್ತಿದ್ದ ಆಕೆ ನಟಿ ಮುಮ್ತಾಜ್ ಳ ಹಣವನ್ನು ಹಿಂದಿರುಗಿಸಲು ಸಾಧ್ಯವಾಗದಿದ್ದಾಗ ತನ್ನ ಬಂಗಲೆಯನ್ನೇ ಆಕೆಗೆ ಕೊಟ್ಟಳು. ಕೊನೆ ಕ್ಷಣಗಳಲ್ಲಿ ಮನೆಯಿಂದ ಆಸ್ಪತ್ರೆಗೆ ಹೋಗುವಾಗ ಅಡ್ಡ ಬಂದು ತಬ್ಬಿ ಆಳಲಾರಂಭಿಸಿದ ಕಸ ಗುಡಿಸುವಳನ್ನೂ ಸಹ ಸಮಾಧಾನ ಮಾಡಿ ತನ್ನ ಬಳಿ ಇದ್ದ ಪರ್ಸನ್ನೂ ಆಕೆಗೆ ನೀಡಿ 'ಖುದಾಹಾಫೀಜ್' ಎನ್ನುತ ಹೊರಟು ಹೋದಳು. ಇಷ್ಟೊಂದು ಹೃದಯ ವೈಶಾಲ್ಯತೆಯ ಮೀನಾಳನ್ನು ಜೀವನ ವಿಪರೀತವಾಗಿ ಕಾಡಿತು. ಆಕೆ ತಾನು ಬದುಕಿದ ಸಣ್ಣ ಜೀವನದಲ್ಲಿ ಅರಸಿದ್ದು ಕೇವಲ ಪ್ರೀತಿ ಹಾಗು ಮಮತೆ. ಜೀವನ ಆಕೆಗೆ ಅದನ್ನೂ ಕರುಣಿಸದಾಯಿತು. ಅಳುತ್ತಾ ಯಾರಿಗೂ ಬೇಡವಾಗಿ ಬಂದ ಮೀರಾ ಅಳುತ್ತಲೇ ಯಾರಿಗೂ ಬೇಡವಾಗೇ ಹೋದಳೆನ್ನಬಹುದು. ಕೊನೆ ಯ ದಿನಗಳಲ್ಲಿ ಆಸ್ಪತ್ರೆಗೆ ಸೇರಲೂ ಸಹ ಮೀನಾ ಕುಮಾರಿಯ ಬಳಿಯಲ್ಲಿ ಹಣವಿಲ್ಲದಿದ್ದದ್ದು ವಿಪರ್ಯಾಸ.



ಇಂದು ಮೀನಾ ಕುಮಾರಿ ಬದುಕ್ಕಿದ್ದರೆ ಆಕೆಗೆ ಎಂಬತ್ನಾಲ್ಕು ವರ್ಷಗಳಾಗಿರುತ್ತಿದ್ದವು. ಆದರೆ ಎಂಬತ್ನಾಲ್ಕರ ಮೀನಾ ಇಂದಿಗೂ ಮೂವತ್ತೆಂಟರ ಸುಂದರಿಯಾಗಿ ಚಿತ್ರಪ್ರಿಯರ ಹೃದಯಗಳಲ್ಲಿ ಬದುಕಿದ್ದಾಳೆ. ಆ ಮುದ್ದಾದ ಮೌನ ಆವರಿಸಿದ ಮುಖ, ಸಾವಿರ ಮಾತಾನಾಡುವ ಆಕೆಯ ಕಣ್ಣುಗಳು, ಆ ಮಾತುಗಳಿಗೆ ಬಣ್ಣ ತುಂಬುವ ಆಕೆಯ ಕವನಗಳು ಇಂದಿಗೂ ಹಸಿರಾಗಿವೆ. ಹೆಸರಾಗಿವೆ.

Wednesday, October 19, 2016

ವಿಸ್ಮಯ : ಮಿಂಚು ಹುಳು

ಮಾನವ ಅದೆಷ್ಟೇ ವೈಜ್ಞಾನಿಕವಾಗಿ ಮುಂದುವರೆದೆನೆಂದು ಭಾವಿಸಿಕೊಂಡರೂ ಪ್ರಕೃತಿ ಹಾಗು ಅದರ ಸೃಷ್ಟಿಕರ್ತನ ಮುಂದೆ ಕೇವಲ ಕನಿಷ್ಠ ಎಂಬುದನ್ನು ಎಲ್ಲರೂ ಒಪ್ಪಲೇಬೇಕಾದ ವಿಷಯ. ಇನ್ನೊಂದು ದೃಷ್ಟಿಕೋನದಲ್ಲಿ ಹೇಳುವುದಾದರೆ ಮಾನವನಿಗೆಂದೇ ಈ ಪ್ರಕೃತಿ ಮೊಗೆದಷ್ಟು ಮಿಕ್ಕುವಂತೆ ಇನ್ನಷ್ಟು ಮತ್ತಷ್ಟು ಸಂಶೋಧನೆ, ಆವಿಷ್ಕಾರಗಳನ್ನು ಮಾಡಲು ವಿಪುಲ ಅವಕಾಶವನ್ನು ಮಾಡಿಕೊಟ್ಟಂತಿದೆ. 


ಯಾವ ಕ್ಷಣದಲ್ಲೂ , ಯಾವ ದಿಕ್ಕಲ್ಲೂ ಬೇಕಾದರೂ ಚಿಮ್ಮಿ ಚಲಿಸಬಲ್ಲ, ನೀರಾಗಲಿ ನೆಲವಾಗಲಿ ಎಲ್ಲೆಂದರಲ್ಲಿ ಇಳಿದು ಹಾರಬಲ್ಲ ಹಕ್ಕಿಗಳ ಸೃಷ್ಟಿಗೆ ಮಾನವನ ಅನ್ವೇಷಣೆಯ ಅದ್ಯಾವ ವಿಮಾನ ಸರಿಸಾಟಿಯಾದಿತು ಹೇಳಿ? ಸಾವಿರಾರು ಕೋಟಿ ಖರ್ಚುಮಾಡಿ ಅತಿ ಕಡಿಮೆ ಅವಧಿಯಲ್ಲಿ(fastest) ವೀಕ್ಷಣವನ್ನು (sight) ಕೇಂದ್ರೀಕರಿಸಬಲ್ಲ ಮಸೂರ(lens) ವನ್ನು ಆವಿಷ್ಕರಿಸಿದರೂ, ಸೃಷ್ಟಿಕರ್ತನ ಸೂಕ್ಶ್ಮ ಹಾಗು ಅಷ್ಟೇ ಕ್ಲಿಷ್ಟವಾದ ನಮ್ಮ ಕಣ್ಣುಗಳ ಮಸೂರಗಳಿಗೆ ಮಾನವನ ಅನ್ವೇಷಣೆಯ ಯಾವ ಮಸೂರ ಸರಿಸಾಟಿಯಾಗಬಲ್ಲದು? ಜಲಚಾಲಿತ (Hydraulic) ಯಂತ್ರಗಳ ಅಭಿವೃದ್ಧಿಯಲ್ಲಿ ಮಾನವ ಅದೆಷ್ಟೇ ಮುಂದುವರೆದರೂ ಜಗತ್ತೇ ಒಪ್ಪುವ ಮಾನವನ ದೇಹದ ಮಾದರಿಯ ಜಲಚಾಲಿತ ವ್ಯವಸ್ಥೆಯನ್ನು ಸೃಷ್ಟಿವುದು ಕಷ್ಟಸಾಧ್ಯವೇ ಸರಿ..! ಹೀಗೆ ನಮ್ಮ ಸುತ್ತಮುತ್ತಲಿನ ದೈನಂದಿನ ಅತಿ ಸಣ್ಣ-ಪುಟ್ಟ ವಿಷಯಗಳಲ್ಲೇ ಅಗಾಧವಾದ ವಿಜ್ಞಾನ ಅಡಗಿರುತ್ತದೆ. ಜಗತ್ತು ವೈಜ್ಞಾನಿಕವಾಗಿ ಅದೆಷ್ಟೇ ಮುಂದುವರೆದಿದೆ ಎಂದು ಭಾವಿಸಿದರೂ ಸಹ ಇಂತಹ ಸಣ್ಣ-ಪುಟ್ಟ ವಿಷಯಗಳೆ ಕೆಲವೊಮ್ಮೆ ವಿಜ್ಞಾನಿಗಳಿಗೂ ಆಶ್ಚರ್ಯ ಮೂಡಿಸುವ ವಿಷಯಗಳಾಗಿ ಪರಿಣಮಿಸುತ್ತವೆ. ಮಾನವ ವಿದ್ಯುತ್ತನ್ನು ಕಂಡುಹಿಡಿದು ಜಗತ್ತನೇ ಬೆಳಗಿಸಿದ ನಿಜ. ಆದರೆ ಅದಕ್ಕೂ ಅನೇಕ ವರ್ಷಗಳ ಹಿಂದೆಯೆ, ಆತ ಕಲ್ಲನ್ನು ಜಜ್ಜಿ ಬೆಂಕಿಯನ್ನು ಹೊತ್ತಿಸುವುದಕ್ಕೂ ಮೊದಲೆ ನಿಸರ್ಗದಲ್ಲಿ ಜೀವಿಯೊಂದು ಬೆಳಕನ್ನು ಹೊತ್ತಿಸಿ ಮಿನುಗುತ್ತಿತ್ತು. ಅದೂ ಸಹ ಬಣ್ಣ ಬಣ್ಣದ ಬೆಳಕು!!

ಯಸ್, ಮಿಂಚು ಹುಳು. ಇದನ್ನು ಕೆಲವರು ಪಂಪು ಹುಳು, ಮಿಣುಕು ಹುಳು ಎಂದೂ ಕರೆಯುವುದುಂಟು. ಹೆಸರಲ್ಲೇ ಇರುವಂತೆ ಕತ್ತಲು ಕವಿದ ಮೇಲೆ ಆಕಾಶದ ನಕ್ಷತ್ರಗಳಂತೆ ಮಿನುಗುತ್ತಾ, ಹಾರುತ್ತ ಬೆಳಕನ್ನು 'ಸೃಷ್ಟಿಸಿ', ಪಸರಿಸಿ, ಘಾಡ ಕತ್ತಲೆಯ ರಾತ್ರಿಯನ್ನೂ ರಮಣೀಯವಾಗಿ ಮಾಡಬಲ್ಲವು ಈ ಮಿಂಚು ಹುಳುಗಳು . ವಿದೇಶಗಳಲ್ಲಿ ಇಂತಹ ರಮಣೀಯ ರಾತ್ರಿಯನ್ನು ಆಸ್ವಾದಿಸಲು ಟಿಕೇಟು ಪಡೆದು ಕಾಡಿನೊಳಗೆ ಧಾವಿಸಿ ಕಾದು ಕೂರುವುದು ಉಂಟು!

ಆಹಾರಕ್ಕಾಗಿ ಬೇಟೆಯನ್ನು ತನ್ನ ಬಳಿ ಸೆಳೆಯಲು ಅಥವಾ ತಾನು ಬೇಟೆಯಾಗಿ ಇತರ ಪ್ರಾಣಿ-ಪಕ್ಷಿಗಳ ಆಹಾರವಾಗದೆ ಇರಲು ಅಥವಾ ಸಂಭೋಕಕ್ಕಾಗಿ ಮತ್ತೊಂದು ಹುಳುವನ್ನು ತನ್ನೆಡೆ ಆಕರ್ಷಿಸಲು ಮಿಂಚುಹುಳುಗಳು ತಮ್ಮ ಬೆಳಕನ್ನು ಉಪಯೋಗಿಸಿಕೊಳ್ಳುತ್ತವೆ. ಮಿಂಚುಹುಳುಗಳ ಅಂಗದಲ್ಲಿ ಕಿಣ್ವಗಳು (Enzymes) ಹಾಗು ಪ್ರೋಟೀನ್ ಒಟ್ಟುಗೂಡಿ ಬೆಳಕು ಹೊರ ಚಿಮ್ಮುತದೆ. ಈ ರಾಸಾಯನಿಕ ಕ್ರಿಯೆಯ ಮೂಲಕ ಬೆಳಕು ಉತ್ಪತಿಯಾಗುವುದಕ್ಕೆ ಜೈವದೀಪ್ತಿಯ (Bioluminescence) ಎಂದು ಕರೆಯುತ್ತಾರೆ. ನಾವು ಯಾಂತ್ರಿಕವಾಗಿ ಉತ್ಪಾದಿಸುವ ಬೆಳಕಲ್ಲಿ ಶಾಖಶಕ್ತಿಯೂ ಜೊತೆಗೆ ಉತ್ಪತಿಯಾಗುತ್ತದೆ. ಬೆಳಕಿನ ಗುಣಮಟ್ಟ ಅದನ್ನು ಒಮ್ಮಿಸುವ ಸಾಧನದ ಶಾಖೋತ್ಪತ್ತಿಗೆ ಪರೋಕ್ಷವಾಗಿರುತ್ತದೆ. ಅಂದರೆ ಶಾಖೋತ್ಪನ್ನ ಕಡಿಮೆ ಇದ್ದಷ್ಟೂ ಬೆಳಕಿನ ಗುಣಮಟ್ಟ ಹೆಚ್ಚಿರುತ್ತದೆ. ಈ ಹೋಲಿಕೆಯಲ್ಲಿ ಮಿಂಚುಹುಳುಗಳಿಂದ ಹೊರಹೊಮ್ಮುವ ಬೆಳಕು ನೂರಕ್ಕೆ ನೂರರಷ್ಟು ಶಾಖರಹಿತವಾದ ಪೂರ್ಣ ಪ್ರಮಾಣದ ಶುದ್ಧ ಬೆಳಕಾಗಿರುತ್ತದೆ! ನಾವು ಕಾಣುವ ಬೆಳಕಿನ ಯಾವುದೇ ರೂಪವಾಗಿರಲಿ, ಅದು ಸೂರ್ಯನಾಗಿರಲಿ ಅಥವಾ ಉರಿಯುವ ಕಟ್ಟಿಗೆಯಾಗಿರಲಿ ಅಥವಾ ಎಲೆಕ್ಟ್ರಿಕ್ ಬಲ್ಬ್ ಗಳಾಗಿರಲಿ, ಒಟ್ಟಿನಲ್ಲಿ ಒಂದಲ್ಲೊಂದು ಮೊಲಧಾತು ಹೊತ್ತಿ ಉರಿಯಲೇ ಬೇಕು. ಅಂತಹದರಲ್ಲಿ ಒಂದು ಜೀವಿ ತನ್ನ ಒಡಲಾಳದಿಂದ ‘ಶುದ್ಧ ಬೆಳಕ’ನ್ನು ಒಮ್ಮಿಸಿ ಬೆಳಗುತ್ತದೆಯಂದರೆ ನಾವು ಆಶ್ಚರ್ಯಚಕಿತರಾಗಲೇ ಬೇಕು ಅಲ್ಲವೇ?

ಹಾಗಾದರೆ ಮಿಂಚುಹುಳುಗಳ ಈ ಮಿಂಚಿನ ಆಟ ಏತಕ್ಕೆ ಎಂದು ಕೇಳಿದರೆ, ಅದು ಹೆಚ್ಚಾಗಿ ಸಂಭೋಕ್ಕಾಗೆ ಆಗಿರುತ್ತದೆ. ಗಂಡು ಹುಳುಗಳು ತಮಗೆ ಅರಿವಿರುವ ಒಂದು ನಿರ್ದಿಷ್ಟ ಮಾದರಿಯ (Pattern) ಬೆಳಕ್ಕನ್ನು ಸೂಸುತ್ತಾ ಹಾರುತ್ತವೆ. ಈ ಮೂಲಕ ಹೆಣ್ಣು ಹುಳುಗಳಿಗೆ ತನ್ನ ಲಬ್ಯತೆಯನ್ನು ರವಾನಿಸುತ್ತವೆ! ಆ ಮಾದರಿಯ ಬೆಳಕ್ಕನ್ನು ಅರಿಯುವ ಹಾಗು ಆಸಕ್ತಿಯಿರುವ ಹೆಣ್ಣು ಹುಳುಗಳು ಮರುತ್ತರವಾಗಿ ಮತ್ತೊಂದು ಬಗೆಯ ಬೆಳಕಿನ ಮಾದರಿಯ ಮೂಲಕ ಉತ್ತರವನ್ನು ರವಾನಿಸಿ ತನ್ನ ಇರುವಿಕೆಯನ್ನು ಖಚಿತಪಡಿಸುತ್ತವೆ. ಒಟ್ಟಿನಲ್ಲಿ ಬೆಳಕಿನ ಮೂಲಕವೇ ಮಿಂಚು ಹುಳುಗಳು ಸಂವಹನ ನೆಡೆಸುತ್ತವೆ ಅರ್ಥಾತ್ ಮಾತಾಡಿಕೊಳ್ಳುತವೆ!

ವಿಜ್ಞಾನ ‘ಲ್ಯೂಸಿಫೆರಿನ್’ ಎಂಬ ಕಿಣ್ವವೇ ಇವುಗಳ ದೇಹದಲ್ಲಿ ಉತ್ಪತಿಯಾಗುವ ಬೆಳಕಿಗೆ ಕಾರಣವೆಂದು ಹೇಳುತ್ತದೆ. ಹಾಗಾದರೆ ನಮ್ಮ ನಿಸರ್ಗದಲ್ಲಿ ಬೆಳಕನ್ನು ಉತ್ಪದಿಸಬಲ್ಲ ಕಿಣ್ವಗಳು ಅಥವ ಆ ಬಗೆಯ ವಸ್ತುಗಳು ಇವೆಯೆಂಬುದು ಸುಳ್ಳಲ್ಲ. ಹಾಗಾದರೆ ಬೆಳಕನ್ನುನೈಸರ್ಗಿಕವಾಗಿ ಸೃಷ್ಟಿಸಲು ಸಾಧ್ಯವಿದೆ ಯೆ? ನಾಲಿಗೆಯಿದ್ದ ಮಾತ್ರಕ್ಕೆ ಪ್ರಬುದ್ಧ ಜೀವಿಗಳು, ಇಲ್ಲದ ಮಾತ್ರಕ್ಕೆ ಮೂಕಜೀವಿಗಳು ಅನ್ನುವ ನಾವುಗಳು ಮಿಂಚುಹುಳುಗಳಂತೆ ಅದೆಷ್ಟೋ ಸಾವಿರ ಕೋಟಿ ಮೂಕಜೀವಿಗಳ ನಡುವೆ ನಾಲಿಗೆಯ ವಿನಃ ನಡೆಯಬಹುದಾದ ಸಂಭಾಷಣೆಯನ್ನು ಅರಿವಿಗೆ ತಂದುಕೊಳ್ಳಲು ವಿಪಲರಾಗುತ್ತೇವೆ. ಸಂವಹನದ ಈ ಹೊಸ ಬಗೆ ಹಾಗು ಪ್ರಾಣಿ ಪಕ್ಷಿಗಳ ನಡುವಿನ ಮೂಕ ಸಂಭಾಷಣೆಯ ನ್ನು ಅರಿಯದಾಗುತ್ತೇವೆ. ಇಷ್ಟೆಲ್ಲಾ ವಿಷಯಗಳನ್ನು ಮಿಂಚು ಹುಳುಗಳು ಹಂಚಿಕೊಳ್ಳುವಾಗ ಮಾನವನೆಂಬ ಜೀವಿ ಕೊಂಚವೂ ಕದಲದೆ ಕೈಯ ಅಂಚಿನಲ್ಲಿ ಕ್ಯಾಮರವಂಬ ಕಪ್ಪು ಪೆಟ್ಟಿಗೆಯನ್ನು ಹಿಡಿದು ಹೊಂಚಿ ಕೂತಿರುತ್ತಾನೆ!


ಹೀಗೆ ಮಿಂಚುಹುಳುಗಳು ಬೆಳಕಿನ ಉತ್ಪಾದನೆಯ ಸಾಧ್ಯತೆ ಬಗ್ಗೆ ಹಾಗೂ ಅವುಗಳ ನಡುವೆ ನಡೆಯಬಹುದಾದ ಸಂವಹನ ಬಗ್ಗೆಯೂ ನಮಗೆ ಒಂದು ಹೊಸ ಬಗೆಯ ಸಂಶೋಧನ ಕ್ಷೇತ್ರವನ್ನು ಮಾಡಿಕೊಡಬಲ್ಲದೆ?! Who Knows..ಹೀಗೆ ಮುಂದೊಂದು ದಿನ ನಾವು ಬೆಳಕನ್ನು ಉತ್ಪಾದಿಸಿ ಇನ್ನಷ್ಟು ಬಲ್ಬುಗಳನ್ನು ಉರಿಸುತ್ತೇವೆಯೋ ಅಥವಾ ಸಂವಹನದ ಒಂದು ಹೊಸ ಬಗೆಯನ್ನು ಕಲಿತು ಪ್ರಾಣಿ ಪಕ್ಷಿಗಳ ಮಾತುಗಳನ್ನು ಅರಿಯುತ್ತೇವೆಯೋ, ಒಟ್ಟಿನಲ್ಲಿ ಜಗತ್ತೇ ನನ್ನದೆಂದು ಕುಣಿದು ನಡೆಯುವ ನಾವುಗಳು ಸದ್ಯಕ್ಕೆ ಇಂತಹ ಜೀವಿಗಳಿಂದ ವಿಸ್ಮಯರಾಗಿ, ಬದುಕಿ, ಅವುಗಳನ್ನೂ ಬದುಕಲು ಬಿಡುವುದೇ ಲೇಸು. ಏನಂತೀರಾ?

Saturday, October 8, 2016

ಪ್ರಸ್ತುತ : ದೇಶದ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಗಳೇನು?

ನೀರು. ಸಕಲ ಜೀವರಾಶಿಗಳಿಗೂ ಅರಿಯುವ ಏಕಮಾತ್ರ ಪದ. ಅದು ಚಿಗುರವ ಸಸ್ಯವಾಗಿರಲಿ ಅಥವಾ ಬಲಿತ ಮರವಾಗಿರಲಿ, ಮಾನವನಾಗಿರಲಿ ಅಥವಾ ಪ್ರಾಣಿ ಪಕ್ಷಿಗಳಾಗಿರಲಿ, ಶಾಕಾಹಾರಿ, ಮಾಂಸಾಹಾರಿ ಹೀಗೆ ಭೂಮಿಯ ಪ್ರತಿಯೊಂದು ಜೀವಕ್ಕೂ ಬೇಕಾಗಿರುವ ಜೀವನಾದಾರ ಈ ನೀರು. ನೀರಿನ ವಿನಃ ಎಲ್ಲವೂ ಅಸ್ತಿರ. ಜೀವನವೇ ದುಸ್ಥರ!


ನವೀಕರಿಸಬಹುದಾದ ಸಂಪನ್ಮೂಲಗಳಲ್ಲೊಂದಾಗಿದ್ದ ಜಲ ಇತ್ತೀಚಿನ ಜಾಗತಿಕ ತಾಪಮಾನ ಏರಿಕೆ, ಕೈಗಾರೀಕರಣ, ಜಲ ಮಾಲಿನ್ಯಗಳೆಂಬ ವಿವಿಧ ಕಾರಣಗಳಿಂದ ಕ್ಷೀಣಿಸುತ್ತಾ ನವೀಕರಿಸಲಾಗದ ಸಂಪನ್ಮೂಲಗಳಲ್ಲೊಂದಾಗುತ್ತಿದೆ. ಭಾರತದಲ್ಲಿ ಅದಾಗಲೇ ಸುಮಾರು ಅರ್ಧದಷ್ಟು ರಾಜ್ಯಗಳು ವಿಪರೀತವಾದ ನೀರಿನ ಅಭಾವವನ್ನು ಎದುರಿಸುತ್ತಿವೆ. ಪ್ರಸ್ತುತ ಕಾಲಮಾನಕ್ಕೆ ಇದು ಒಂದು ಸಮಸ್ಯೆಯಷ್ಟೇ. ಆದರೆ ಇದೆ ಮುಂದುವರೆದರೆ ನಂತರದ ತಲೆಮಾರಿಗೆ ಇದು ಕಂಟಕಪ್ರಾಯವಾಗುವುದರಲ್ಲಿ ಸಂಶಯವೇ ಇರುವುದಿಲ್ಲ! ಈ ನಿಟ್ಟಿನಲ್ಲಿ ನಮ್ಮ ತಾರ್ಕಿಕ ದೂರದೃಷ್ಟಿತ್ವ ನಮಗೂ ಹಾಗು ನಮ್ಮ ನಂತರದವರಿಗೂ ಮಹತ್ತರವಾದ ಪಾತ್ರ ವಹಿಸುತ್ತದೆ.

ಭಾರತ ಕೃಷಿ ಪ್ರದಾನ ದೇಶ. ಒಟ್ಟು ನೀರಿನಲ್ಲಿ ಶೇಕಡ 70-80 ರಷ್ಟು ನೀರು ಕೃಷಿಗಾಗೇ ಬೇಕಾಗುತ್ತದೆ. ಉಳಿದಂತೆ ಅತಿ ಹೆಚ್ಚಾಗಿ ನೀರನ್ನು ಕುಡಿಯಲು, ಕಾರ್ಖಾನೆಗಳಿಗೆ ,ವಿದ್ಯುತ್ ಉತ್ಪಾದನ ಘಟಕಗಳು ಹಾಗು ಇತರೆ ಕ್ಷೇತ್ರಗಳಿಗೆ ಬಳಸಲಾಗುತ್ತದೆ. ದೇಶದಲ್ಲಿ 1997 ರಲ್ಲಿ ಸುಮಾರು 600 CBM (ಬಿಲಿಯನ್ ಕ್ಯೂಬಿಕ್ ಮೀಟರ್) ನಷ್ಟಿದ್ದ ನೀರಿನ ಬೇಡಿಕೆ 2050 ರ ವೇಳೆಗೆ 1500 CBM, ಅಂದರೆ ಕೇವಲ ಐದು ದಶಕಗಳಲ್ಲೇ ಅದು ತ್ರಿಗುಣವಾಗುವ ಸನಿಹದಲ್ಲಿದೆ ಎಂದು ಅಂದಾಜಿಸಲಾಗಿದೆ! (Source :Central water commission)ಇಲ್ಲಿ ನೋಡಬೇಕಾದ ಗಮನಾರ್ಹ ವಿಷಯವೆಂದರೆ, 1997 ರಲ್ಲಿ ಇದ್ದ ಭಾರತದ ಜನಸಂಖ್ಯೆ ಸುಮಾರು 100 ಕೋಟಿ. 2050 ಕ್ಕೆ ಇದು 160 ಕೋಟಿ ತಲುಪಬಹುದೆಂದು ಅಂದಾಜಿಸಲಾಗಿದೆ. ಇಂದಿನ ಬೇಡಿಕೆಯ ದರದಲ್ಲೇ ಒಂದು ಪಕ್ಷ ನೀರನ್ನು ಪೂರೈಸಲಾದರೆ 2050 ಕ್ಕೆಅಗತ್ಯಕ್ಕಿಂತ ಸುಮಾರು 500 CBM ನಷ್ಟು ನೀರಿನ ಕೊರತೆ ಕಾಡುತ್ತದೆ!
ಇತ್ತಕಡೆ ನದಿನೀರಿನ ವಿಚಾರದಲ್ಲೂ ಸಮಸ್ಯೆ ತೀರಾ ಭಿನ್ನವೇನಲ್ಲ. ಒಟ್ಟು ಲಭ್ಯವಿರುವ ನೀರಿನಲ್ಲಿ ಕೇವಲ ಮೂರನೇ ಒಂದು ಬಾಗದಷ್ಟು ಮಾತ್ರ ಉಪಯೋಗಿಸಲಾಲಾಗುತ್ತದೆ. ಉಳಿದ ಅಷ್ಟೂ ನೀರು ಸಹ ಪೋಲಾಗಿ ಸಮುದ್ರವನ್ನು ಸೇರುತ್ತಿದೆ. (Source :Central water commission) ಅಲ್ಲದೆ ಅತಿ ಹೆಚ್ಚಿನ ಅಂತರ್ಜಲ ಬಳಕೆಯಿಂದ ಮುಂದಿನ ಕೆಲ ವರ್ಷಗಳಲ್ಲೇ ಅದರ ಮಟ್ಟವೂ ಗಣನೀಯವಾಗಿ ಕ್ಷೀಣಿಸಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ನಗರೀಕರಣ, ಹೆಚ್ಚುತ್ತಿರುವ ಕಾರ್ಖಾನೆಗಳು, ಜನಸಂಖ್ಯಾ ಸ್ಫೋಟ ಹೀಗೆ ಇನ್ನೂ ಹತ್ತು ಹಲವು ಕಾರಣಗಳಿಂದ ನೀರಿನ ಅಭಾವದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತಿದೆ.

ಹಾಗಾದರೆ ಲಭ್ಯತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮುಂದಿನ ದಿನಗಳಲ್ಲಿ ಬರುವ ನೀರಿನ ಅವಶ್ಯಕತೆಯನ್ನು ನೀಗುವುದಾದರೂ ಹೇಗೆ? ಲಭ್ಯವಿರುವ ನೀರಿನಲ್ಲೇ ಪರಿಸ್ಥಿತಿಯನ್ನುನಿಬಾಯಿಸುವ ಬಗೆಯಾದರೂ ಎಂತಹದ್ದು? ನದಿ ತಟದಿಂದ ಸಾವಿರಾರು ಮೈಲುಗಳು ದೂರವಿರುವ ಬರಪೀಡಿತ ಸ್ಥಳಗಳಿಗೆ ನೀರಿನ ಸರಬರಾಜಿಗೆ ಇರುವ ಸೂಕ್ತ ಕ್ರಮಗಳು ಯಾವುವು? ಆಣೆಕಟ್ಟು ನಿರ್ಮಾಣ, ಡಿಸಾಲೆನೇಷನ್ , ನದಿ ಜೋಡಣೆ? ನದಿ ಜೋಡಣೆಗಾಗಿ ನೀರಿನ ದಿಕ್ಕನ್ನು ಬದಲಿಸುವುದರಿಂದ ನಿಸರ್ಗಕ್ಕೆ, ಜೀವ ಸಂಕುಲಕ್ಕೆ ಆಗುವ ಹಾನಿ ಎಂತಹದ್ದು? ಡಿಸಾಲಿನಶನ್ ಅಷ್ಟೊಂದು ಸುಲಭವಾಗಿದ್ದಲ್ಲಿ ಅದನ್ನು ಕಾರ್ಯಗತಗೊಳಿಸಲು ಇರುವ ಅಡೆತಡೆಗಳೇನು? ದೇಶದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಗಳೇನು ಮತ್ತು ಎಂದು? ಹೀಗೆ ಸಾಲು ಸಾಲು ಪ್ರೆಶ್ನೆಗಳು ನಮ್ಮನು ಕಾಡುತ್ತವೆ.

ದೇಶದಲ್ಲಿ ಶೇಕಡಾವಾರು ಮಳೆಯ ಪ್ರಮಾಣ ವರ್ಷಕ್ಕೆ ಸುಮಾರು ೧೦೦೦ ಮಿಲಿಮೀಟರ್ನಷ್ಟಿದೆ (Source data.gov by Government Of India ). ಇದು ಕೆಲವೆಡೆ ಹೆಚ್ಚಾಗಿಯೂ ಕೆಲವೆಡೆ ವಿಪರೀತ ಕಡಿಮೆಯೂ ಇರಬಹುದು. ಆದರೆ ನಮ್ಮಲ್ಲಿ ಏನಿಲ್ಲವೆಂದರೂ ಜೂನ್-ಜುಲೈ ನಿಂದಿಡಿದು ಸೆಪ್ಟೆಂಬರ್-ಅಕ್ಟೋಬರ್ವರೆಗೂ ಮಳೆ ಬರುವುದು ಕಂಡಿತ. ಆದರೆ ಇಲ್ಲೂ ಕೂಡ ಕೆಲವೆಡೆ ತುಸು ಹೆಚ್ಚು ಅಥವಾ ಕೆಲವೆಡೆ ತುಸು ಕಡಿಮೆ. ಬೇಸಿಗೆಯ ಬಿಸಿಲಲ್ಲಿ ಬೆಂದು ಬೆಂಡಾಗುವ ನಮಗೆ ಜೂನ್ ತಿಂಗಳಲ್ಲಿ ಮಳೆಯ ಆಗಮನ ಅದೇನೋ ಒಂದು ಬಗೆಯ ಪುಳಕವನ್ನುಟ್ಟಿಸುತ್ತದೆ. ಮೊದಲ ಮಳೆಯ ಹನಿಗಳು ಭೂಮಿಯನ್ನು ಸ್ಪರ್ಷಿಸುವುದನ್ನು ಸಡಗರದಿಂದ ನೋಡುತ್ತೇವೆ ವಿನಃ ರಾಶಿ ರಾಶಿ ನೀರು ಹರಿದು ಪೋಲಾಗುವುದನ್ನು ಕಂಡು ಮರುಗುವವರು ತುಂಬ ವಿರಳ. ಮಳೆಗಾಲ ಕಳೆದು ಮುಂದಿನ ಬೇಸಿಗೆಗೆ ಆಣೆಕಟ್ಟುಗಳೆಲ್ಲ ಖಾಲಿಯಾಗಿ ನೀರಿನ ಅಭಾವ ಎದುರಾದಾಗ ಮಾತ್ರ ಚಡಪಡಿಸುತ್ತೇವೆ. ಸರ್ಕಾರಕ್ಕೆ ದೂರುತ್ತೇವೆ. ದೊಡ್ಡ ದೊಡ್ಡ ಪೈಪುಗಳಲ್ಲಿ ಹೆಚ್ಚಿನ ಸಾಮರ್ಥ್ಯವಿರುವ ಪಂಪುಗಳಿಂದ ದೂರದ ಸ್ಥಳಗಳಿಂದ ಕಷ್ಟಪಟ್ಟು ದಬ್ಬುತಾ ಬರುವ ನೀರಿಗೆ ಇಷ್ಟೊಂದು ಹಾತೊರೆಯುವ ನಾವುಗಳು ಮಳೆರಾಯ ಮನೆಯ ಬಾಗಿಲಿಗೆ ಬಂದು ಎಥೇಚ್ಛಾವಾಗಿ ಸುರಿಸುವ ನೀರನ್ನು ಅಷ್ಟೇ ಕಾಳಜಿಯಿಂದ ಸಂರಕ್ಷಿಸದೇ ವ್ಯರ್ಥ ಮಾಡುತ್ತೇವೆ.

ಮಳೆ ನೀರಿನ ಸಂಗ್ರಹ ಹಾಗು ಅಂತರ್ಜಲ ವೃದ್ಧಿ:
ಒಂದು ಮನೆ. ಅದರ ಛಾವಣಿಯ ವಿಸ್ತೀರ್ಣ 500 ಚದರ ಮೀಟರ್ ಎಂದಿಟ್ಟುಕೊಳ್ಳೋಣ. ಆ ಮನೆಯಿರುವ ಊರಿನಲ್ಲಿ ಮಳೆಗಾಲದಲ್ಲಿ ಆಗುವ ಮಳೆಯ ಪ್ರಮಾಣ 800 mm. ಚಾವಡಿಯ ಮೇಲೆ ಸುರಿಯುವ ಅಷ್ಟೂ ಮಳೆಯ ನೀರನ್ನು ಸಂಗ್ರಹಿಸಿದರೆ (1 mm of rain = 1 liter of water ) ಆಗುವ ನೀರಿನ ಪ್ರಮಾಣ 350000 ಲೀಟರ್! ಛಾವಣಿಯಿಂದ ಬೀಳುವ ನೀರನ್ನು ಇದ್ದಿಲು ಹಾಗು ಮರಳಿನ ಮುಖಾಂತರ ಹಾಲಾಯಿಸಿದಾಗ ಬಾಗಶಃ ನೀರು ಶುದ್ಧಿಯಾಗುತ್ತದೆ. ಪರೀಕ್ಷೆಯ ವಿನ್ಹಾಕುಡಿಯಲು ಅಷ್ಟೊಂದು ಯೋಗ್ಯವಲ್ಲದಿದ್ದರೂ ಮನೆಯ ಇತರ ಕೆಲಸಗಳಿಗೆ ಹೀಗೆ ಸಂಗ್ರಹಿಸಿಟ್ಟ ನೀರನ್ನು ಉಪಯೋಗಿಸಬಹುದು. ಒಂದು ಕುಟುಂಬದ ದೈನಂದಿಂದ ಬಳಕೆ 1000 ಲೀಟರ್ ಆದರೂ (350000/1000) ಉತ್ತಮ ಮಳೆಯಾಗುವ ಪ್ರದೇಶದಲ್ಲಿ ಮಳೆನೀರಿನಲ್ಲೇ ವರ್ಷಪೂರ್ತಿ ಜೀವನ ಸಾಗಿಸಬಹುದೆಂಬ ಸಾಧ್ಯತೆಯ ಮಾತು ಸುಳ್ಳಲ್ಲ!! ಮೆನೆ ಮುಂದೆಯೇ ನಿರ್ಮಿಸುವ ನೀರಿನ ಟ್ಯಾಂಕ್ಗೇ ಈ ರೀತಿಯ ವ್ಯವಸ್ಥೆ ಬಾರಿ ಪ್ರಯೋಜನವನ್ನು ನೀಡಬಲ್ಲದು. ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ಇದೆ ವ್ಯವಸ್ಥೆಯನ್ನು ಕೆಲ ಮನೆಗಳು ಒಟ್ಟಾಗಿ ಸೇರಿ ಹತ್ತಿರದ ಜಲಾಶಯಕ್ಕೆ ಅಥವಾ ಅಣೆಕಟ್ಟಿಗೆ ನೀರಿನ ಪೈಪುಗಳನ್ನು ಜೋಡಿಸಿದರೆ ಅದರ ಇದರ ಪ್ರಯೋಜನ ಇನ್ನೂ ಹೆಚ್ಚು! ಈ ಬಗ್ಗೆ ನಮ್ಮಲ್ಲಿ ಸಾಕಷ್ಟು ಮಾಹಿತಿ ಇದ್ದರೂ ಅನುಷ್ಠಾನದ ಮನೋಭಾವನೆ ಪ್ರತಿಯೊಬರಲ್ಲೂ ಬರಬೇಕು. ಮಳೆ ನೀರಿನ ಸಂರಕ್ಷಣೆ ಪ್ರಸ್ತುತ ಕಾಲಮಾನಕೆ ಒಂದು ಉತ್ತಮ ಪರಿಹಾರವಾಗಬಲ್ಲದು.
ಲಕ್ಷ್ಮಣ್ ಸಿಂಗ್. ರಾಜಸ್ಥಾನದ ಬರಡು ಭೂಮಿಯಲ್ಲೂ ಎಥೇಚ್ಚವಾಗಿ ಹಸಿರನ್ನು ಹೊತ್ತಿಸಿದ ಈತ ಕೆಲ ವರ್ಷದ ಹಿಂದೆ ಮಾದ್ಯಮದಲ್ಲಿ ಬಹಳ ಸುದ್ದಿ ಮಾಡಿದ್ದ ವ್ಯಕ್ತಿ. ಅಲ್ಲಿನ ಬರಡು ನೆಲದ ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು ಆತ ಕೈಗೊಂಡ 'ಚೌಕ' ಪದ್ದತಿ ದೇಶದಲ್ಲೆಲ್ಲ ಹೆಸರು ಮಾಡಿತು. ಹಳ್ಳಿಯ ಸುತ್ತ ಮುತ್ತ ಚೌಕಾಕಾರದ ಗುಂಡಿಗಳನ್ನು ತೆಗೆದು ಮಳೆಯ ನೀರು ಅದರಲ್ಲಿ ಇಂಗುವಂತೆ ಮಾಡಿ ಊರಿನ ಅಂತರ್ಜಲದ ಮಟ್ಟವನ್ನು ಸಾಕಷ್ಟು ಹೆಚ್ಚಿಸಿ ಹೊಲಗದ್ದೆಗಳ್ಳಲ್ಲಿ ಹಸಿರನ್ನು ಬೆಳೆಸಿದ ಈತನ ಶ್ರಮವನ್ನು ದೇಶವೇ ಕೊಂಡಾಡಿತು. ಅಂತರ್ಜಲವನ್ನು ಹೆಚ್ಚಿಸುವ ಇಂತಹ ಸುಲಭ ಸರಳ ಮಾರ್ಗವನ್ನು ಅನುಸರಿಸಿ, ಪೋಲಾಗುವ ನೀರಿನಿಂದ ಕ್ಷೀಣಿಸುತ್ತಿರುವ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಅರಿವು ನಮ್ಮಲ್ಲಿ ಹಾಗು ನಮ್ಮ ರೈತರಲ್ಲಿ ಮೂಡಬೇಕು. ಹಳ್ಳಿ ಹಳ್ಳಿಯಲ್ಲೂ ಒಬ್ಬ ಲಕ್ಷ್ಮಣ್ ನಿಂಗ್ ಹುಟ್ಟಬೇಕು.


ಡಿಸಾಲೆನೇಷನ್ :
ಇತ್ತೇಚೆಗೆ ಎಲ್ಲೆಲ್ಲೂ ಚರ್ಚೆಯಲ್ಲಿರುವ ವಿಷಯ ಸಮುದ್ರದ ನೀರಿನ ಡಿಸಾಲೆನೇಷನ್. ಅಂದರೆ ಸಮುದ್ರದ ನೀರಿನ ಉಪ್ಪಿನ ಅಂಶವನ್ನು ತೆಗೆದು ಅದನ್ನು ಉಪಯೋಗಿಸಲು ಯೋಗ್ಯವಾದ ನೀರನ್ನಾಗಿ ಮಾಡುವ ಪ್ರಕ್ರಿಯೆ. 'ಹೌದಲ್ಲ, ಸಮುದ್ರದ ಅಷ್ಟೂ ನೀರನ್ನು ಡಿಸಾಲೆನೇಷನ್ ಮಾಡಿದರೆ ಸಮಸ್ಯೆ ಬಗೆಹರಿದೆ ಹೋಯಿತಲ್ಲ, ಇದರ ಅನುಷ್ಠಾನಕ್ಕೆ ಇನ್ನೂಏಕೆ ಮೀನಾ-ಮೇಶ?' ಎಂದು ಮೂಗಿನ ಮೇಲೆ ಬೆರೆಳಿಟ್ಟುಕೊಂಡರೆ ಅದು ತಪ್ಪೇನಿಲ್ಲ. ನಿಜ, ಡಿಸಾಲಿನೇಶನ್ ಎಂಬುದು ಪ್ರಸ್ತುತ ನೀರಿನ ಸಮಸ್ಯೆಗೆ ಒಂದು ಪರಿಣಾಮಕಾರಿ ಹಾಗು ಸರಳ ಪರಿಹಾರ. ಆದರೆ ಅದು ಎಷ್ಟೇ ಸರಳವಾದರೂ ಇಂತಹ ಒಂದು ಘಟಕದ ನಿರ್ಮಾಣಕ್ಕೆ ತಗುಲುವ ವೆಚ್ಚ ಬಲು ಹೆಚ್ಚು. ಕೇವಲ ಹಣದ ವಿಚಾರವಾಗಿದ್ದರೆ ಆಗಬುಹುದಿತ್ತೇನೋ ಆದರೆ ಇದಕ್ಕೆ ಅಷ್ಟೇ ಪ್ರಮಾಣದಲ್ಲಿ ಇಂಧನ ಅಥವಾ ವಿದ್ಯುತ್ನ ಅವಶ್ಯಕತೆಯೂ ಇದೆ. ಇಷ್ಟೆಲ್ಲಾ ಹೂಡಿಕೆ ಮಾಡಿ ನೀರನ್ನು ಉತ್ಪಾದಿಸಿದರೂ ಕೊನೆಗೆ ಅದಕ್ಕೆ ತಗುಲುವ ವೆಚ್ಚ ಬೇರೆ ವಿಧಾನದಲ್ಲಿ ತಗುಲುವ ವೆಚ್ಚಕ್ಕಿಂತ ಎಷ್ಟೋ ಪಟ್ಟು ಹೆಚ್ಚಿರುತ್ತದೆ. ಹಾಗಾಗಿ ಎಥೇಚ್ಚವಾಗಿ ಹಣ ಹಾಗು ಇಂಧನದ ಲಭ್ಯವಿರುವ ದೇಶಗಳಲ್ಲೇ ಈ ಪದ್ದತಿ ಹೆಚ್ಚಾಗಿ ಚಾಲ್ತಿಯಲ್ಲಿರುವುದನ್ನು ಕಾಣಬಹುದು. ಆದ ಕಾರಣ ಡಿಸಾಲೆನೇಷನ್ ಘಟಕಗಳು ನಮ್ಮ ದೇಶದಲ್ಲಿ ತೀರಾ ವಿರಳ. ಆದ ಮಾತ್ರಕ್ಕೆ ಈ ಪ್ರಕ್ರಿಯೆ ನಮ್ಮಲ್ಲಿ ಸಾದ್ಯವೇ ಇಲ್ಲವೆನೆಂದಲ್ಲ. ಸೌರ ಶಕ್ತಿ ಹಾಗು ನಮ್ಮ ವಿಜ್ಞಾನಿಗಳ ಯುಕ್ತಿ ಮುಂದಿನ ದಿನಗಳಲ್ಲಿ ಇದಕೊಂಡು ಸರಳ ಪರಿಹಾರವನ್ನು ಕಂಡುಹಿಡಿಯುವ ಸನಿಹದಲ್ಲಿದೆ. ಒಂದು ಪಕ್ಷ ಪರಿಹಾರ ಲಭಿಸಿದ್ದೇ ಆದಲ್ಲಿ ದೇಶದ ಭಾಗಶಃ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ.

ಅರಣ್ಯಕರಣ :
ಕಾಡು. ಸಕಲ ಜೀವರಾಶಿಗಳಿಗೂ ಆಶ್ರಯತಾಣವಾಗಿರುವ ಕಾಡು, ಮಳೆಯ  ಆಗಮನಕ್ಕೂ ಹಾಗು ಮಳೆನೀರ ಸಂರಕ್ಷಣೆಗೂ ಇರುವ ಏಕ ಮಾತ್ರ ಆಧಾರ. ದ್ಯುತಿಸಂಶ್ಲೇಷಣೆಯ (Photosynthesis) ಪ್ರಕ್ರಿಯೆಯಿಂದ ಗಿಡಮರಗಳ ಎಲೆಗಳಿಂದ ಆವಿಯಾಗುವ ನೀರು ಘನೀಕರಣಗೊಂಡು ಮೋಡವಾಗಿ ಪುನ್ಹ ಧರೆಗೆ ಬೀಳುತ್ತದೆ. ಅಲ್ಲದೆ ಹೆಚ್ಚು ಮರಗಳಿದ್ದ ಕಡೆ ಬಿದ್ದ ನೀರು, ನೆಲದೊಳಗೆ ಬಸಿದು ಅಂತರ್ಜಲದ ಮಟ್ಟ ಕೂಡ ಹೆಚ್ಚುತ್ತದೆ. ಪುನ್ಹ ಇದೆ ನೀರು ಎಲೆಗಳವರೆಗೂ ತಲುಪಿ ಪುನಃ ಆವಿಯಾಗಿ ಮೋಡವಾಗಿ ಮಳೆಯಾಗುತ್ತದೆ. ಇದೆ ಮಳೆಯ ಚಕ್ರ.
ಹೆಚ್ಚುತಿರುವ  ಅರಣ್ಯನಾಶ  ಪ್ರಕಿಯೆಗೆ ವ್ಯತಿರಿಕ್ತವಾಗಿ ಪರಿಣಮಿಸಿದೆ. ಒಂದೆಡೆ ಮಳೆಯ ಪ್ರಮಾಣ ಕಡಿಮೆಯಾದರೆ ಇನ್ನೊಂದೆಡೆ ಮರಗಿಡಗಳ ಅಭಾವವದಿಂದ ಧರೆಗೆ ಬೀಳುವ ಮಳೆನೀರು ಒಂದೆಡೆ ನಿಲ್ಲದೆ,ಹರಿದು ಸಮುದ್ರವನ್ನುಸೇರುತ್ತದೆ. ಹೀಗೆ ಅಂತರ್ಜಲದ ಮಟ್ಟವೂ ಕ್ಷೀಣಿಸತೊಡಗುತ್ತದೆ. ಧರೆಗೆ ಉರುಳುವ ಪ್ರತಿಯೊಂದು ಮರವೂ ಮುಂಬರುವ ನೀರಿನ ಅಭಾವಕ್ಕೆ ಸಾಕ್ಷಿಯಾಗುತ್ತದೆ.   'ಕಾಡು ಬೆಳೆಸಿ ನಾಡು ಉಳಿಸಿ' ಎಂಬ ಶಾಲೆಯಲ್ಲಿ ಹೇಳಿಕೊಟ್ಟ ನಾಣ್ಣುಣಿಯನ್ನು ಮರೆತು ಕಾಡು ಕಡಿದು ನಾಡು ಮಾಡುತ್ತೇವೆ ಆದರೆ ನಾಡ ಮಾಡಿ ನೀರು ಅರೆಸುತ್ತೇವೆ! ಕುಟುಂಬಕೊಂಡು ಮನೆಯಂತೆ, ಮನೆಗೊಂದು ಮರವಿರಬೇಕು. ಅರಣ್ಯಕರಣ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ದೇಶದ ನೀರಿನ ಸಮಸ್ಯೆಗೆ ಇದು ಉತ್ತಮ ಪರಿಹಾರವಾಗಬೇಕು.


ನದಿ ಜೋಡಣೆ ಹಾಗು ಆಣೆಕಟ್ಟು ನಿರ್ಮಾಣ :
ನದಿ ಜೋಡಣೆ ಹಾಗು ಆಣೆಕಟ್ಟು ನಿರ್ಮಾಣ. ನಮ್ಮ ಉತ್ತರ ಭಾರತದಲ್ಲಿ ಪ್ರತಿವರ್ಷಅತಿವೃಷ್ಟಿಯಿಂದ ಸಂಭವಿಸುವ ಸಾವು-ನೋವು, ಬೆಳೆ ಹಾನಿ ತುಂಬ ಸಾಮನ್ಯ. ಅಲ್ಲದೆ ಅದಷ್ಟೂ ನೀರು ಉಪಯೋಗಿಸಲಾಗದೆ ಪೋಲಾಗುತ್ತಾ ಸಮುದ್ರವನ್ನು ಸೇರುತ್ತದೆ. ಉತ್ತರದಲ್ಲಿ ಅತಿವೃಷ್ಟಿಯಾದರೆ ದಕ್ಷಿಣದಲ್ಲಿ ಅನಾವೃಷ್ಟಿ! ಇದೆ ಅಂಶಗಳನಿಟ್ಟುಕೊಂಡು ಕೆಲವರ್ಷಗಳ ಹಿಂದೆ ಗಂಗಾ ಕಾವೇರಿ ನದಿ ಜೋಡಣೆ ಎಂಬ ಮಹತ್ತರವಾದ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಗಾಗಿತ್ತು. ಉತ್ತರ ಭಾರತದ ನದಿಗಳನ್ನು ದಕ್ಷಿಣ ಭಾರತದ ನದಿಗಳೊಟ್ಟಿಗೆ ಸೇರಿಸಿ ದಕ್ಷಿಣದ ನೀರಿನ ಅಭಾವಕ್ಕೆ ಒಂದು ಸೂಕ್ತ ಪರಿಹಾರವನ್ನು ಕೊಡುವುದಲ್ಲದೆ ಜೋಡಣೆಯ ಹಾದಿಯ ಸೂಕ್ತ ಸ್ಥಳಗಳಲ್ಲಿ ಅಣೆಕಟ್ಟು ನಿರ್ಮಿಸುವ ಉದ್ದೇಶವೂ ಈ ಯೋಜನೆಯದಾಗಿತ್ತು. ಹೀಗೆ ಆಣೆಕಟ್ಟು ನಿರ್ಮಿಸಿ ನೀರನ್ನು ಶೇಖರಿಸಿ ವ್ಯವಸಾಯ ಹಾಗು ಕುಡಿಯುವ ನೀರಿಗೆ ಒಂದು ಶಾಶ್ವತ ಪರಿಹಾರವನ್ನು ಒದಗಿಸುವುದಲ್ಲದೇ ಸಾಕಷ್ಟುವಿದ್ಯುತ್ ಉತ್ಪಾದನೆಯೂ ಸಹ ಇದರಿಂದ ಸಾಧ್ಯವಿತ್ತು. ಇಂದು ನಾವು ಕಾಣುವ ಕಾವೇರಿ, ಮಹದಾಯಿ, ಕೃಷ್ಣಾ ಹಾಗು ಇನ್ನು ಹಲವು ಜಲವಿವಾದಗಳಿಗೆ ಈ ಯೋಜನೆ ಪರಿಹಾರವಾಗುತ್ತಿತ್ತು. ಆದರೆ ಅರ್ಥವಿಲ್ಲದ ಪೊಳ್ಳುವಾದ ಹಾಗು ಇದರ ನಿಜವಾದ ಸದುದ್ದೇಶವನ್ನು ರಾಜ್ಯಸರ್ಕಾರಗಳಿಗೆ ಮನವರಿಕೆ ಮಾಡಿಕೊಡದ ಕೇಂದ್ರಸರ್ಕಾರಗಳು ಆರ್ಥಿಕಬಿಕ್ಕಟ್ಟು, ಪರಿಸರ ನಾಶವೆಂಬ ಸಬೂಬುಗಳನ್ನು ಕೊಟ್ಟು ಈ ಯೋಜನೆಯ ಅನುಷ್ಠಾನವನ್ನು ಮರೀಚಿಕೆಯಾಗಿಸಿದವು. ಇಂದು ಇದೆ ಬಗೆಯ ಹಲವು ನದಿ ಜೋಡಣೆ ಯೋಜನೆಗಳು ಯಶಸ್ವೀಯಾಗಿ ನಿರ್ಮಾಣಗೊಂಡು ಸಾಕಷ್ಟು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿವೆ. ಹಾಗಾಗಿ ನಮ್ಮ ಸರ್ಕಾರಗಳು ಇಂಥಹ ಬಹುಪಯೋಗಿ ಯೋಜನೆಗಳ ಬಗ್ಗೆ ತಾರ್ಕಿಕವಾದ ಗಮನ ಹರಿಸುವುದು ಹೆಚ್ಚು ಸೂಕ್ತ.


ಹನಿ ನೀರಾವರಿ ಪದ್ದತಿ:
ಮೊದಲೇ ಹೇಳಿದಂತೆ ಭಾರತದ ಒಟ್ಟು ಲಭ್ಯವಿರುವ ನೀರಿನಲ್ಲಿ ಸುಮಾರು 70 ರಿಂದ 80 ರಷ್ಟು ನೀರನ್ನು ಕೃಷಿಗಾಗೇ ಉಪಯೋಗಿಸಲಾಗುತ್ತದೆ. ಇಷ್ಟೊಂದು ಪ್ರಮಾಣದ ನೀರನ್ನು ಉಪಯೋಗಿಸಿಯೂ ಕೃಷಿಯಲ್ಲಿ ನೀರಿನ ಕೊರತೆ ಕಾಡುತಿರುವುದು ವಿಷಾದನೀಯ. ಹಾಗಾದರೆ ಬಳಸುವ ಅಷ್ಟೂ ನೀರು ಕೃಷಿಗೆ ಸಾಕಾಗದೆ ಹೋಗುತ್ತದೆಯೋ ಅಥವಾ ಇಲ್ಲೂ ಸಹ ಹೆಚ್ಚಿನ ಪ್ರಮಾಣದ ನೀರು ಪೋಲಾಗಿ ಹೋಗುತ್ತದೆಯೋ ಅನ್ನುವುದೇ ಪ್ರೆಶ್ನೆ. ನಮಗೆ ತಿಳಿದಿರುವಂತೆ ಹನಿ ನೀರಾವರಿ ಪದ್ದತಿ ಕೃಷಿಯಲ್ಲಿ ಕಂಡ ಅದ್ಬುತ ಸುಧಾರಣೆಗಲ್ಲೊಂದು. ಈ ಪದ್ದತಿಯಿಂದ ಮಣ್ಣಿನ ಸವಕಳಿಯನ್ನೂ ತಡೆಗಟ್ಟಬಹುದಲ್ಲದೆ ಸಾಮಾನ್ಯ ನೀರಾವರಿ ಪದ್ಧತಿಗಿಂತ ಹೆಚ್ಚಿನ ಇಳುವರಿ ಸಾದ್ಯವಿದೆ. ಸಾಂಪ್ರದಾಯಿಕ ಪದ್ದತಿಯ ನೀರಾವರಿಗಿಂತ ಕೇವಲ ಅರ್ದದಷ್ಟು ನೀರಿನಲ್ಲೇ ಉತ್ತಮ ಫಸಲನ್ನು ಬೆಳೆಯಬಹುದಾದ ವಿಧಾನ. ಒಂದು ಪಕ್ಷ ದೇಶದ ಪ್ರತಿಯೊಬ್ಬ ಕೃಷಿಕನೂ ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿಕೊಂಡನೆಂದರೆ ಅದೆಷ್ಟು ನೂರು ಬಿಲಿಯನ್ ಕ್ಯೂಬಿಕ್ ಮೀಟರ್ನಷ್ಟು ನೀರನ್ನು ಉಳಿಸಬಹುದು ಎಂಬುದು ಗಮನಾರ್ಹ ವಿಷಯ! ಇಂತಹ ಸರಳ ಬಹುಪಯೋಗಿ ನೀರಾವರಿ ವಿಧಾನವನ್ನೂ ಅಳವಡಿಸ್ಕೊಳ್ಳಲು ಹಿಂದೇಟೇಕೆ?? ಈ ನಿಟ್ಟಿನಲ್ಲಿ ನಮ್ಮ ರೈತರು ಜಾಗೃತರಾಗಿ ಇಂತಹ ಪರಿಣಾಮಕಾರಿ ಪದ್ದತಿಯನ್ನು ಅಳವಡಿಕೊಳ್ಳುವುದು ಅವಶ್ಯಕವಾಗಿದೆ.

ಒಟ್ಟಿನಲ್ಲಿ ನಮ್ಮಲ್ಲಿ ನೀರಿನ ಸಮಸ್ಯೆ ಇರುವುದಂತು ನಿಜ. ಆದ ಮಾತ್ರಕ್ಕೆ ಕೊಂಚ ಹೆಚ್ಚಿರುವ ಅಥವಾ ಬೇರ್ಯಾರೊ ಸಂಗ್ರಹಿಸಿಟ್ಟ ನೀರಿನ ಮೇಲೆ ಕಣ್ಣಾಕುವುದು ಶೋಭೆ ತರುವ ವಿಚಾರವಲ್ಲ. ಇಪ್ಪತ್ತೊಂದನೇ ಶತಮಾನದಲ್ಲಿರಿವ ನಾವುಗಳು ನಮ್ಮ ಬೊಗಸೆಯ ನೀರನ್ನು ಕಾಪಾಡಿಕೊಳ್ಳುವಷ್ಟಾದರೂ ವೈಜ್ಞಾನಿಕರಾಗಬೇಕು. ಪ್ರಸ್ತುತ ಜಾಗತಿಕ ಮಟ್ಟದ ಹವಾಮಾನವನ್ನು ಅರಿತು ನೀರನ್ನು ಮಿತಿಯಾಗಿ ವ್ಯಹಿಸಬೇಕು. ಆ ಮನೋಭಾವನೆ ನಮ್ಮಲ್ಲಿ ಮೂಡಬೇಕು ಹಾಗು ಮೂಡಿಸಬೇಕು. ಅತಿವೃಷ್ಟಿಯ ಜಾಗಗಳಲ್ಲಿನ ನೀರನ್ನು ಬರಪೀಡಿತ ಪ್ರದೇಶಗಳಿಗೆ ಸಾಗಿಸುವ 'ವೈಜ್ಞಾನಿಕ' ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು. ತುಂಬ ಸರಳ ಹಾಗು ಅಷ್ಟೇ ಪರಿಣಾಮಕಾರಿಯಾದ ನೀರಾವರಿ ಪದ್ದತಿಗಳನ್ನುರೈತರು ಅರಿತು ಅಳವಡಿ ಸಿಕೊಳ್ಳಬೇಕು .ಈ ನಿಟ್ಟಿನಲ್ಲಿ ಪಾರದರ್ಶಕ ಚರ್ಚೆಯಾಗಬೇಕು .ಇಲ್ಲವೆಂದರೆ ಮುಂದೊಂದು ದಿನ ಅದೆಷ್ಟೇ ಹಣ ಸುರಿದರೂ, ಬಡಿದಾಡಿಕೊಂಡರೂ ಸಹ ಒಂದು ತೊಟ್ಟು ನೀರು ಉತ್ಪತಿಯಾಗದಿರಬಹುದು. ಈ ನಿಟ್ಟಿನಲ್ಲಿ ನಮ್ಮ ನಾಯಕರ, ರೈತರ, ಹೆಚ್ಚಾಗಿ ನಮ್ಮ ನಿಮ್ಮೆಲ್ಲರ ಚಿಂತನೆ ತುಂಬಾ ಮಹತ್ವವಾದುದು.