Saturday, December 30, 2017

ಗೆಲುವಿನ ಸೌಧಕ್ಕೆ ಅಡಿಗಲ್ಲಾದ ನಾಯಕರು…

ನಾಯಕ ಎಂಬ ಪದವೊಂದಕ್ಕೆ ಹಲವಾರು ವ್ಯಾಖ್ಯಾನಗಳಿವೆ. ಮುಂದಾಳು, ಗಟ್ಟಿಗ, ನಿಪುಣ, ಚಿಂತಕ, ಧೀರ ಎಂಬ ಕೆಲವು ಅಥವಾ ಇನ್ನೂ ಹಲವು ಸಮರೂಪಿ ಸಂದೇಶ ಸಾರುವ ಪದಗಳ ಸಮ್ಮಿಶ್ರಣದ ವ್ಯಕ್ತಿತ್ವ ನಾಯಕನೆನಿಸಿಕೊಳ್ಳುತ್ತದೆ. ಇಂತಹ ಹಲವಾರು ವ್ಯಕ್ತಿತ್ವಗಳನ್ನು ನಾವು ದಿನಜೀವನದಲ್ಲಿ ಕಾಣುತ್ತೇವೆ, ಕೇಳುತ್ತೇವೆ. ಕೆಲವು ನೋಡಲು ಚೆಂದವೆನಿಸಿದರೆ ಇನ್ನೂ ಕೆಲವು ಕೇಳಲಷ್ಟೇ ಲಾಯಕ್ಕಾಗಿರುತ್ತವೆ! ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆ ಎಂಬುದು ಕೇವಲ ಆಟವಲ್ಲ. ಅದೊಂದು ಭಾರಿ ಪ್ರೊಫೆಶನ್. ತಾಳ್ಮೆ, ನಿಖರತೆ, ಪೂರ್ವಭಾವಿ ಚಿಂತನೆ, ವ್ಯಕ್ತಿತ್ವ ವಿಕಸನ, ತಂತ್ರಗಾರಿಕೆ, ಸಂವಹನ ಎಂಬೆಲ್ಲ ಹಲವು ಅಂಶಗಳು ಸೇರಿ ಇಂದು ಅದು ಕೇವಲ ಮನೋರಂಜನೆಯ ತಾಣವಾಗಷ್ಟೇ ಉಳಿದಿಲ್ಲ. ಶತಮಾನಗಳ ಇತಿಹಾಸವಿರುವ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದು. ಕ್ರಿಕೆಟ್ ಸಹ ಹೀಗೆಯೇ ಕೇವಲ ಮನೋಲ್ಲಾಸಕೆಂದು ಆಡಲು ಶುರುವಾಗಿ ಇಂದು ಒಂದು ಜೆಂಟಲ್ ಮ್ಯಾನ್ ಗೇಮ್ ಎನ್ನಿಸಿಕೊಂಡಿದೆ. ಭಾರತದಲ್ಲಿ ಅಂದು ಕೇವಲ ರಾಜ ಮಹರಾಜಾರುಗಳಿಗಷ್ಟೇ ಸೀಮಿತವಾಗಿದ್ದ ಆಟವೊಂದು ಇಂದು ಸಕಲರಿಗೂ ಸಲ್ಲುವ ಹೊಂಗಿರಣವಾಗಿದೆ. ಕಳೆದ ನಾಲ್ಕೈದು ದಶಕಗಳಿಂದೀಚೆಗಂತೂ ದೇಶದ ಜನಮನದ ಅತ್ಯಾಪ್ತ ಅಂಶವಾಗಿಬಿಟ್ಟಿದೆ. ಹೀಗೆ ಕೇವಲ ದಶಕಗಳ ಅಂತರಲ್ಲಿ ಭಾರತೀಯ ಕ್ರಿಕೆಟ್ ಜಗತ್ತೇ ಹುಬ್ಬೇರುವಂತೆ ಬೆಳೆದು, ಹೊಳೆದು, ಉತ್ತುಂಗಕ್ಕೇರಿ ರಾರಾಜಿಸಲು ಕಾರಣಗಳು ಹಲವಿರಬಹುದು. ಅಂತಹ ಹಲವು ಕಾರಣಗಳಲ್ಲಿ ನಾಯಕನೆಂಬ ಅಂಶವೂ ಒಂದು. ಕಳೆಗುಂದಿದ ತಂಡದ ಚೈತನ್ಯನಾಗಿ, ತಂಡದೊಳಗಿನ ಕಿತ್ತಾಟ ಮನಸ್ತಾಪಗಳ ಶಮನಿಯಾಗಿ, ಗೆಲುವಿನಲ್ಲಿ ಹಿಂದಿದ್ದು ಕಷ್ಟಗಾಲದಲ್ಲಿ ಮುಂಬಂದು ಎದೆಯೊಡ್ಡುವ ಧೀರನಾಗಿ ಅಷ್ಟೇ ಅಲ್ಲದೆ ತನ್ನ ನಂತರದ ಪೀಳಿಗೆಗಾಗಿ ಸದೃಢ ತಂಡದ ಬುನಾದಿಯೊಂದನ್ನು ಹಾಕಿಕೊಟ್ಟು ಹೋಗುವ/ಹೋಗಿರುವ ಹಲವಾರು ನಾಯಕರಿಂದ ಇಂದು ಟೀಮ್ ಇಂಡಿಯಾ ಎಂಬುದೊಂದಾಗಿದೆ. ಟೆಸ್ಟ್ ಪಂದ್ಯವನ್ನು ಆಡಲು ಶುರುವಿಟ್ಟು ಸುಮಾರು 86 ವರ್ಷಗಳ ಈ ಸುಧೀರ್ಘ ಅವಧಿಯಲ್ಲಿ ಭಾರತ ಇಂತಹ ಹಲವಾರು ನಾಯಕರನ್ನು ಕಂಡಿದೆ.

ಆಗೆಲ್ಲ ದೇಶದಲ್ಲಿ ಕ್ರಿಕೆಟ್ ಎಂದರೆ ಬಾಂಬೆ, ಮದ್ರಾಸ್, ದೆಹಲಿ, ಕೋಲ್ಕತ್ತ ಎಂಬಷ್ಟೇ ವಲಯಗಳಿಗೆ ಸೀಮಿತವಾಗಿದ್ದವು. ಒಬ್ಬ ಆಟಗಾರ ಕ್ರಿಕೆಟರ್ ಎಂದೆನಿಸಿಕೊಳ್ಳುವುದಕ್ಕೆ ಹೆಚ್ಚಾಗಿ ಇವಿಷ್ಟೇ ವಲಯವೊಂದರಾವುದರಲ್ಲಾದರೂ ಬೆವರು ಸುರಿಸಬೇಕಾಗಿದ್ದಿತು. ಅಲ್ಲದೆ ವಲಯಗಳಲ್ಲಿನ ಭೇದ ಭಾವಗಳೂ ಕೊಂಚ ಹೆಚ್ಚಾಗೇ ಇದ್ದ ಕಾಲವದಾಗಿತ್ತು. ಟೆಸ್ಟ್ ಕ್ರಿಕೆಟ್ ಆಡಲು ಶುರುವಾಗಿ ಹತ್ತಿರ ಹತ್ತಿರ ಮೂರು ದಶಕಗಳಾಗಿದ್ದರೂ ಕನಿಷ್ಠ ಒಂದಾದರೂ ಪಂದ್ಯವನ್ನು ಭಾರತ ತಂಡ ವಿದೇಶಿ ನೆಲದಲ್ಲಿ ಗೆದ್ದಿರಲಿಲ್ಲ. ಅಲ್ಲೊಂದು ಇಲ್ಲೊಂದು ಪಂದ್ಯಗಳ ಡ್ರಾ ಅನ್ನು ಬಿಟ್ಟರೆ ಉಳಿದಂತೆ ಸರಣಿ ಸರಣಿ ಸೋಲುಗಳೇ ತಂಡದ ಸಾಧನೆಯಾಗಿರುತ್ತಿತ್ತು. ಅಂತಹ ಕಾಲಘಟ್ಟದಲ್ಲಿ ತಂಡವನ್ನು ಮುನ್ನೆಡಸಲು ಬಂದವನೇ ನವಾಬ್ ಮನ್ಸೂರ್ ಅಲಿ ಖಾನ್ ಪಟೌಡಿ ಅಥವಾ ಕ್ರಿಕೆಟ್ ಪ್ರಿಯರ ಟೈಗರ್ ಪಟೌಡಿ. ಹೆಸರಿಗೆ ತಕ್ಕಂತೆ ಆತ ಕೇವಲ ಒಬ್ಬ ನವಾಬನಂತಿರದೆ ಹುಲಿಯ ಕೆಚ್ಚನ್ನು ತಂಡದಲ್ಲಿ ಹಚ್ಚಿಸಿದ ನಾಯಕನಾಗಿದ್ದ. 1961 ರಲ್ಲಿ ಟೈಗರ್ ತಂಡದ ಚುಕ್ಕಾಣಿಯನ್ನು ಹಿಡಿದಾಗ ಆತನಿಗೆ ಕೇವಲ 21 ವರ್ಷಗಳು! ಆಡಿದ್ದ ಪಂದ್ಯಗಳು ಕೇವಲ ಮೂರೇ ಮೂರು!! ಸಂಪೂರ್ಣ ಹಿರಿಯರ ಅತಿ ಕಿರಿಯ ನಾಯಕನಾಗಿ ತಂಡವನ್ನು ನೆಡೆಸಿದ ಆತ ಎಲ್ಲಾ ಅಂದುಕೊಂಡಂತೆ ತಂಡದ ಜೋಳಿಗೆಗೆ ಮಗದೊಂದು ಸೋಲಿನ ಉಡುಗರೆಯನ್ನು ಗಳಿಸಲಿಲ್ಲ. ಕಡೆಯಪಕ್ಷ ಗೆಲ್ಲಲಾಗದಿದ್ದರೂ ಅಂದು ಪಂದ್ಯವನ್ನು ಡ್ರಾ ನಲ್ಲಿ ಅಂತ್ಯಗೊಳ್ಳುವಂತೆ ಮಾಡಿದ್ದ ಚಿಗುರು ಮೀಸೆಯ ಪೋರ. ಆ ಮೂಲಕ ದೇಶೀ ಕ್ರಿಕೆಟ್ ವಲವದಲ್ಲಿ ಒಂದು ಬಗೆಯ ನವ ಚೈತನ್ಯನ್ನು ಮೂಡಿಸಿದ್ದ. ಟೆಸ್ಟ್ ಕ್ರಿಕೆಟ್ನಲ್ಲಿ ಸ್ಪಿನ್ನರ್ಗಳ ಮಹತ್ವವನ್ನು ಅರಿತಿದ್ದ ಪಟೌಡಿ ಮೂರು ಸ್ಪಿನ್ನರ್ಗಳ ತಂಡವನ್ನು ಆಟದ ಕಣಕ್ಕೆ ಇಳಿಸಲು ಮೊದಲುಮಾಡಿದ. ಅಲ್ಲಿಂದ ಮುಂದೆ ಸದೃಢ ಸ್ಪಿನ್ನರ್ಗಳ ತಂಡವೊಂದನ್ನು ಕಟ್ಟುವಲ್ಲಿ ಯಶಸ್ವಿಯಾದ. ಇಂದು ಏರಪಲ್ಲಿ ಪ್ರಸನ್ನ, ವೆಂಕಟರಾಘವನ್, ಚಂದ್ರಶೇಖರ್ ಅಥವಾ ಭೀಷನ್ ಸಿಂಗ್ ಬೇಡಿಯೆಂಬ ಸ್ಪಿನ್ ಮಾಂತ್ರಿಕರ ಹೆಸರನ್ನು ನಾವು ಇತಿಹಾಸದ ಪುಟಗಳಲ್ಲಿ ಕಾಣುತ್ತೇವೆಂದರೆ ಅದರ ಬಹುಪಾಲು ಶ್ರೇಯ ನಾಯಕ ಪಟೌಡಿಗೂ ಸಲ್ಲಬೇಕು. ಅಂತೂ 1967 ರ ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ಮೂರುವರೆ ದಶಕಗಳಿಂದಲೂ ಕಾಡುತ್ತಿದ್ದ ಬರವನ್ನು ಪಟೌಡಿ ಹಾಗು ತಂಡ ಕೊನೆಗೊಳಿಸಿತು. ಭಾರತ ವಿದೇಶಿ ನೆಲದಲ್ಲಿ ಮೊದಲ ಟೆಸ್ಟ್ ಗೆಲವು ಹಾಗು ಸರಣಿ ಗೆಲುವನ್ನೂ ತನ್ನದಾಗಿಸಿಕೊಂಡಿತು. ಅಪಘಾತವೊಂದರಲ್ಲಿ ತನ್ನ ಬಲಗಣ್ಣಿನ ದೃಷ್ಟಿಯನ್ನು ಕಳೆದುಕೊಂಡು ಮುಂದೆಂದೂ ಕ್ರಿಕೆಟ್ ಅನ್ನು ಆಡಲಾಗದು ಎಂಬಂತಹ ಸಂದರ್ಭದಲ್ಲಿ ಕೆಲ ತಿಂಗಳಾಗುವುದರೊಳಗೆಯೇ ಮತ್ತೊಮ್ಮೆ ಆಟದ ಅಂಗಳಕ್ಕೆ ಇಳಿದು ಶತಕವೊಂದನ್ನು ಭಾರಿಸುವ ಕೆಚ್ಚೆದೆ ಪಟೌಡಿಯದಾಗಿದ್ದಿತು. ಇದೇ ಕೆಚ್ಚೆದೆಯ ನಾಯಕತ್ವ ಮುಂಬಂದ ಹಲವಾರು ಆಟಗಾರರಿಗೆ ಸ್ಫೂರ್ತಿಯಾಯಿತು.

1975 ರಷ್ಟರಲ್ಲಿ ಪಟೌಡಿ ತಮ್ಮ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದರು. ಅಷ್ಟರೊತ್ತಿಗೆ ಭಾರತ ವಿಶ್ವ ಕ್ರಿಕೆಟ್ ನಲ್ಲಿ ತನ್ನ ಛಾಪನ್ನು ಮೂಡಿಸುತ್ತಿತ್ತಾದರೂ, ದೇಶದ ಮಟ್ಟಕ್ಕೆ ಉತ್ತಮ ಸಾಧನೆಗಳನ್ನು ಮಾಡುತ್ತಿದ್ದಾದರೂ ಯಾವುದೇ ಅಂತಾರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್ನನ್ನು ಅದು ತನ್ನದಾಗಿರಿಸಿಕೊಂಡಿರಲಿಲ್ಲ. ಅಂತಹ ಒಂದು ಮೇಜರ್ ಬ್ರೇಕಿಗೋಸ್ಕರ ತಂಡ ಸನ್ನದ್ಧವಾಗಿದ್ದಿತು. ಅದು ವಿಶ್ವಕಪ್ 1983. ಜೂನ್ 18. ಭಾರತ ಸರಣಿಯಲ್ಲಿ ನಾಲ್ಕು ಪಂದ್ಯಗಳಾಡಿ ಎರಡರಲ್ಲಿ ಗೆದ್ದು ಮತ್ತೆರಡರಲ್ಲಿ ಸೋತಿದ್ದಿತು. ಜಿಂಬಾಂಬೆ ವಿರುದ್ದದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮೊದಲು ಬ್ಯಾಟ್ ಬೀಸಿದ ಭಾರತ ಕೇವಲ ಒಂಬತ್ತು ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ಗಳನ್ನು ಎದುರಾಳಿ ತಂಡಕ್ಕೆ ಒಪ್ಪಿಸಿತು. ತಂಡದ ಅಗ್ರಮಾನ್ಯ ಆಟಗಾರರೆಲ್ಲ ಪೆವಿಲಿಯನ್ ತಲುಪಿ ಇನ್ನೇನು ಕೆಲವೇ ನಿಮಿಷಗಳಲ್ಲಿ ತಂಡ ಆಲೌಟ್ ಆಗುತ್ತದೆ ಎನ್ನುವಾಗ ಬ್ಯಾಟ್ ಬೀಸಲು ಬಂದವನೇ ಇಪ್ಪತ್ತನಾಲ್ಕು ವರ್ಷ, ಆರು ಅಡಿ ಎತ್ತರದ ನಾಯಕ ಕಪಿಲ್ ದೇವ್. ಇಡೀ ಇನ್ನಿಂಗ್ಸ್ನನ್ನು ಕಟ್ಟುವ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಎಳೆದುಕೊಂಡ ಈತ ಆಗಿನ ಕಾಲಕ್ಕೆ ಯಾರು ಕೇಳರಿಯದ ಮಟ್ಟದ ಬ್ಯಾಟಿಂಗ್ನನ್ನು ಅಲ್ಲಿ ಪ್ರದರ್ಶಿಸುತ್ತಾನೆ. ಒಂದು ಸಮಯಕ್ಕೆ 17 ರನ್ಗಳನ್ನು ಗಳಿಸಿ 5 ವಿಕೆಟ್ ಕಳೆದುಕೊಂಡಿದ್ದ ತಂಡ ಇನ್ನಿಂಗ್ಸ್ ಮುಗಿಯುವಾಗ ಬರೋಬ್ಬರಿ 266 ರನ್ಗಳನ್ನು ತನ್ನ ಖಾತೆಯಲ್ಲಿ ಇರಿಸಿಕೊಂಡಿತ್ತು. 16 ಬೌಂಡರಿ ಹಾಗು 6 ಸಿಕ್ಸರ್ಗಳನ್ನು ಒಳಗೊಂಡ 175 ರನ್ ಗಳ ಪ್ರಚಂಡ ಆಟವನ್ನು ಆಡಿ ಕಪಿಲ್ ಒಂದು ಬದಿಯಲ್ಲಿ ಅಜೇಯನಾಗಿ ಉಳಿದಿದ್ದ. ನಂತರದ ಇನ್ನಿಂಗ್ಸ್ ನಲ್ಲಿ ಜಿಂಬಾಂಬೆಯನ್ನು 235 ರನ್ ಗಳಿಗೆ ಕಟ್ಟಿಹಾಕಿ ತಂಡ ಸರಣಿಯಲ್ಲಿ ಮರುಜೀವವನ್ನು ಪಡೆಯಿತು. ನಂತರ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ನನ್ನು ಮಣಿಸಿ ದೈತ್ಯ ವೆಸ್ಟ್ ಇಂಡೀಸ್ ವಿರುದ್ದದ ಫೈನಲ್ಸ್ ಗೆ ಅಣಿಯಾಯಿತು. ಭಲಿಷ್ಟ ವಿಂಡೀಸ್ನ ಎದುರು ಅಂದು ಸೋಲೆಂಬುದು ಭಾರತಕ್ಕೆ ಕಟ್ಟಿಟ್ಟ ಬುತ್ತಿ ಎಂಬುದು ಬಹುಪಾಲು ಜನರಿಗೆ ಸಹಜವಾಗಿಯೇ ಅನ್ನಿಸಿದ್ದ ವಿಷಯ. ಆದರೆ ಕಪಿಲ್ ತಂಡವನ್ನು ಯಾವುದೇ ಆತಂಕಗಳಿಗೂ ಎಡೆಮಾಡಿಕೊಡದೆ ಮುನ್ನೆಡೆಸುತ್ತಾನೆ. ಭಾರತ ನೀಡಿದ 183 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ್ದ ವೆಸ್ಟ್ ಇಂಡೀಸ್ಗೆ ಗೆಲುವು ನೀರು ಕುಡಿದಷ್ಟೇ ಸುಲಭವಾಗಿದ್ದಿತು. ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಮತ್ತೊಮ್ಮೆ ಆಸರೆಯಾದವನು ಅದೇ ನಾಯಕ. ಮದನ್ ಲಾಲ್ರ ಎಸೆತವನ್ನು ವೆಂಡಿಸ್ ನ ಲೆಜೆಂಡ್ VV ರಿಚರ್ಡ್ಸ್ ಮಿಡ್ ವಿಕೆಟ್ನ ಕಡೆಗೆ ಬಾರಿಸಿದಾಗ ಬಹುಪಾಲು ಮಂದಿ ಆಕಾಶದಲ್ಲಿ ತೇಲುತ್ತಿದ್ದ ಬಾಲನ್ನು ನೋಡುತ್ತಿದ್ದರೆ ವಿನಃ ಮಿಂಚಿನ ವೇಗದಲ್ಲಿ ಕಪಿಲ್ ಅದೇ ದಿಕ್ಕಿನಲ್ಲಿ ಓಡುವುದನ್ನು ಗಮನಿಸಲಿಲ್ಲ! ಕಷ್ಟಕರವಾಗ ಆ ಕ್ಯಾಚ್ ಅನ್ನು ಕಪಿಲ್ ಇಡಿದಿದ್ದೆ ತಡ ನೆರೆದಿದ್ದ ಪ್ರೇಕ್ಷಕರ ಸಂಭ್ರಮ ಮುಗಿಲು ಮುಟ್ಟಿತು. ಇತ್ತ ಕಡೆ ಸೋಲು ಗ್ಯಾರಂಟಿ ಎಂದು ಕೈಚೆಲ್ಲಿ ಕೂತಿದ್ದ ಲಕ್ಷಾಂತರ ಭಾರತೀಯರ ರೂಮು ರೋಮುಗಳು ಎದ್ದು ನಿಂತವು. ವಿಶ್ವಕಪ್ ಅನ್ನು ಎತ್ತಿ ಹಿಡಿದಷ್ಟೇ ಖುಷಿಯಲ್ಲಿ ದೇಶ ಸಂಭ್ರಮಿಸಿತು! ಆ ಕ್ಯಾಚಿನ ಮುಖೇನ ಕಪಿಲ್ ಇಡೀ ಪಂದ್ಯದ ದಿಕ್ಕನ್ನೇ ಬದಲಾಯಿಸಿದನು. ಅಲ್ಲಿಂದ ಮುಂದಕ್ಕೆ ತರಗಲೆಗಳಂತೆ ಉದುರತೊಡಗಿದ ವಿಂಡೀಸ್ ತಂಡ 140 ರನ್ ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಒಪ್ಪಿಸಿ ಚೊಚ್ಚಲ ಪ್ರಶಸ್ತಿಗೆ ಭಾರತವನ್ನು ಭಾಜನವಾಗುವಂತೆ ಮಾಡಿತು. ಇಡೀ ಸರಣಿಯಲ್ಲಿ ಕಪಿಲ್ ಗಳಿಸಿದ್ದು 303 ರನ್ ಹಾಗು ಪಡೆದದ್ದು 12 ವಿಕೆಟ್ ಗಳು. ಆಗಿನ ಕಾಲಕ್ಕೆ ಅದೊಂದು ಮಹತ್ತರವಾದ ಸಾಧನೆ. 'Leading from the Front' ಎಂಬ ನಾಣ್ಣುಡಿಯಂತೆ ಕಪಿಲ್ ಅಂದು ಮುಂನಿಂತು ತಂಡವನ್ನು ಮುನ್ನೆಡೆಸಿದ. ಕ್ರೀಡಾ ವಲಯದಲ್ಲಿ ವಿಶ್ವದ ಗಮನವನ್ನು ದೇಶದೆಡೆ ತಿರುಗುವಂತೆ ಮಾಡಿದ. ಇಂತಹದೊಂದು ಬ್ರೇಕ್ಗೋಸ್ಕರ ಕಾಯುತ್ತಿದ್ದ ತಂಡ ಮುಂದೆ ಮತ್ತೊಂದು ಮಗದೊಂದು ಸಾದನೆಗಳನ್ನು ಮಾಡುತ್ತಾ ಮುನ್ನೆಡೆಯಿತು. ದೇಶದಲ್ಲಿ ಕ್ರಿಕೆಟ್ ಕ್ರಾಂತಿಯನ್ನೇ ಹಬ್ಬಿಸಿತು 1983 ರ ವಿಶ್ವಕಪ್.

ಅಲ್ಲಿಂದ ಮುಂದೆ ತಂಡ ವರ್ಲ್ ಚಾಂಪಿಯನ್ಷಿಪ್ ಹಾಗು ಇನ್ನಿತರೇ ಬಹುಮುಖ್ಯ ಸರಣಿಗಳನ್ನು ಗೆಲ್ಲತೊಡಗಿತ್ತು. ವಿಶ್ವದ ಅಗ್ರಮಾನ್ಯ ತಂಡಗಳಲ್ಲಿ ಒಂದಾಗಿದ್ದಿತು. ವರ್ಷ 1999. ಕಪಿಲ್ ದೇವ್ ನಿವೃತ್ತಿಯಾಗಿ ಭಾರತ ತಂಡದ ಕೋಚ್ ಆಗಿ ಕಾರ್ಯನಿರ್ವಾಹಿಸುತ್ತಿದ್ದ ಕಾಲವದು. ಭಾರತ ಸಚಿನ್, ಅಜರುದ್ದೀನ್. ಗಂಗೂಲಿ, ದ್ರಾವಿಡ್, ಜಡೇಜಾ, ಕುಂಬ್ಳೆ ಎಂಬ ಹಲವು ದಂತಕತೆಗಳ ತಂಡವಾಗಿ ಹೊರಹೊಮ್ಮಿತ್ತು. ಇಂತಹ ಒಂದು ತಂಡಕ್ಕೆ ಕಾಡ್ಗಿಚ್ಚಿನಂತೆ ಬಂದು ಅಪ್ಪಳಿಸಿದ ಸುದ್ದಿ ಮ್ಯಾಚ್ ಫಿಕ್ಸಿಂಗ್ ! ಸೌತ್ ಆಫ್ರಿಕಾ ಸರಣಿಯಿಂದ ಶುರುವಾಗಿರಬಹುದಾದ ಈ ಬೆಂಕಿಗೆ ತಂಡದ ಅತಿರಥ ಮಹಾರಥಿಗಳ ಸ್ಥಾನವನ್ನೇ ಬಲಿಕೊಡಬೇಕಾಯಿತು. ವಿಶ್ವಕ್ರಿಕೆಟ್ನಲ್ಲಿ ದೇಶದ ಮಾನ ಮೂರು ಕಾಸಿಗೆ ಹರಾಜಾಯಿತು. ಅತ್ತ ಕಡೆ ನಾಯಕತ್ವವನ್ನು ವಹಿಸಿಕೊಂಡು ಸಾಲು ಸಾಲು ಸೋಲುಗಳನ್ನು ಕಾಣುತ್ತಿದ್ದ ಸಚಿನ್ ತಂಡವನ್ನು ಇನ್ಮುಂದೆ ಮುನ್ನೆಡೆಸಲು ನಿರಾಕರಿಸತೊಡಗಿದ. ವಿಶ್ವರಾಂಕಿಂಗ್ ನಲ್ಲಿ ಭಾರತ ಎಂಟನೇ ಸ್ಥಾನಕ್ಕೆ ಕುಸಿಯಿತು.ಆಗ ಆಯ್ಕೆ ಸಮಿತಿಯ ಮುಂದೆ ಇದ್ದ ಏಕೈಕ ಆಯ್ಕೆ ಬೆಂಗಾಲದ ಹುಲಿ ಖ್ಯಾತಿಯ ಸೌರವ್ ಗಂಗೂಲಿ. ಅಷ್ಟರಲ್ಲಾಗಲೇ ವಿಶ್ವದ ಅಗ್ರಮಾನ್ಯ ಬ್ಯಾಟ್ಸಮನ್ ಗಳಲ್ಲಿ ಒಬ್ಬನಾಗಿದ್ದ ಸೌರವ್ ನಾಯಕನಾದ ಮೇಲೆ ಮಾಡಿದ ಮೊದಲ ಕೆಲಸ ತಂಡದ ಕಟ್ಟುವಿಕೆ. ಲೆಜೆಂಡರಿ ಆಟಗಾರರ ಸ್ಥಳಕ್ಕೆ ಯುವಪೀಳೆಗೆಯನ್ನು ತಯಾರು ಮಾಡುವ ಬಗೆ. ಇಂದು ದೇಶದ ಟಾಪ್ ಕ್ರಿಕೆಟರ್ ಗಳಲ್ಲಿ ಒಂದಾಗಿರುವ ಸೆಹ್ವಾಗ್, ಜಹೀರ್ ಖಾನ್, ಯುವರಾಜ್, ಮುಹಮದ್ ಕೈಫ್, ಪಾರ್ಥಿವ್ ಪಟೇಲ್, ಇರ್ಫಾನ್ ಪಠಾಣ್, ಬಾಲಾಜಿ ಹೀಗೆ ಇನ್ನೂ ಹಲವು ಯುವ ಚೆಹರೆಗಳ ಆಯ್ಕೆ ಗಂಗೂಲಿಯ ನಿರ್ದೇಶನದ ಮೇರೆಯೇ ನೆಡೆಯಿತು. ಹೀಗೆ ಯುವ ಪಡೆಯ ತಂಡವನ್ನು ಕಟ್ಟಿಕೊಂಡು ಜಗತ್ತನ್ನು ಜಹಿಸಲು ಹೋದ ಸೌರವ್ ಅಕ್ಷರ ಸಹ ಪ್ರೇಕ್ಷಕರ ಹುಬ್ಬೇರುವಂತೆ ಮಾಡುತ್ತಾನೆ. ಭಾರತ ಅದೆಷ್ಟೇ ಭಲಿಷ್ಟವಾಗಿದ್ದರೂ ವಿದೇಶಿ ನೆಲಗಳಲ್ಲಿ ಆದರ ಸಾಧನೆ ನಗಣ್ಯ ಎಂಬ ಮಾತೊಂದು ಇದ್ದಿತು. ಈ ಮಾತಿಗೆ ಅಪವಾದವೇನೋ ಎಂಬಂತೆ ಸೌರವ್ ಹಾಗು ತಂಡ ಅಂದು ಆಟವನ್ನು ಆಡಿತ್ತು. ತಾವೇ ರಾಜರು ಎಂಬಂತೆ ಬೀಗುತ್ತಿದ್ದ ಬಿಳಿಯರ ಸೊಕ್ಕನ್ನು ಅವರದೇ ನೆಲದಲ್ಲಿ ಅಡಗಿಸುವ ಚತುರತೆಯನ್ನು ಗಂಗೂಲಿ ತಂಡಕ್ಕೆ ಕಲಿಸಿಕೊಟ್ಟಿದ್ದ. ಇಂಗ್ಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಹೀಗೆ ಹೊಡದೆಯಲ್ಲ ಅಸಾದ್ಯವಾಗಿದ್ದ ಸಾಧನೆಯೊಂದನ್ನು ಗಂಗೂಲಿ ಹಾಗು ತಂಡ ಮಾಡುತ್ತದೆ. ಎಂಟನೇ ಸ್ಥಾನದಲ್ಲಿದ್ದ ತಂಡ ಕೆಲವೇ ವರ್ಷಗಲ್ಲಿ ಎರಡನೇ ಸ್ಥಾನದಲ್ಲಿ ರಾರಾಜಿಸುತ್ತಿರುತ್ತದೆ. ಕಳೆಗುಂದುತಿದ್ದ ತಂಡಕ್ಕೆ ಮರುಜೀವ ಬರುತ್ತದೆ.

ಮುಂದೆ ಗ್ರೆಗ್ ಚಾಪೆಲ್ ನಂತಹ ಸಿಡುಕು ಮೋರೆಯ ವ್ಯಕ್ತಿಯಿಂದಾಗಿ ಮತ್ತೊಮ್ಮೆ ಅಲ್ಲೊಲ್ಲ ಕಲ್ಲೊಲ್ಲವಾದ ತಂಡ ನಾಯಕನನ್ನೇ ಹೊರಹಾಕುವ ಸಂಧರ್ಭವೊಂದು ಎದುರಾಗುತ್ತದೆ. ಗಂಗೂಲಿ ಅಂದು ನಾಯಕತ್ವದಿಂದಷ್ಟೇ ಅಲ್ಲದೆ ತಂಡದಿಂದಲೂ ಹೊರಗುಳಿಯಬೇಕಾಗುತ್ತದೆ. ಆದರೇನಂತೆ ಕೈಕಟ್ಟಿ ಕೂರುವ ಜಾಯಮಾನ ಗಂಗೂಲಿಯದಾಗಿರಲಿಲ್ಲ. ದೇಶೀ ರಣಜಿ ಪಂದ್ಯಗಳಲ್ಲಿ ಬೆವರು ಸುರಿಸಿ ಮತ್ತೊಮ್ಮೆ ತಂಡಕ್ಕೆ ಪುನರಾಯ್ಕೆಯಾಗುತ್ತಾನೆ. ಈ ಕಮ್ ಬ್ಯಾಕ್ ಅಂದಿನ ಅದೆಷ್ಟು ಯುವಪೀಳಿಗೆಗೆ ಸ್ಫೂರ್ತಿದಾಯಕವಾಯಿತೆಂದು ಹೇಳಲಾಗದು. ಮುಂದೆ 2007 ರ ವಿಶ್ವಕಪ್ ನ ಸೋಲಿನಿಂದ ದ್ರಾವಿಡ್ ನಾಯಕತ್ವದಿಂದ ಕೆಳಗಿಳಿದಾಗ ಎಲ್ಲರ ದೃಷ್ಟಿ ಮತ್ತೊಮ್ಮೆ ಗಂಗೂಲಿಯ ಮೇಲೆ ಇದ್ದಿರುತ್ತದೆ. ಆದರೆ ಆಯ್ಕೆ ಸಮಿತಿ ಒಲವು ತೋರಿಸಿದ್ದು ಮಾತ್ರ ಮಹೇಂದ್ರ ಸಿಂಗ್ ಧೋನಿ ಎಂಬ ಮ್ಯಾಚ್ ವಿನ್ನರ್ ನ ಮೇಲೆ. ಆತ ತನ್ನ ಆಯ್ಕೆಯನ್ನು ಅದೆಷ್ಟರ ಮಟ್ಟಿಗೆ ಸಮರ್ಥಿಸಿಕೊಂಡ ಎಂದರೆ ಮುಂದೆ ಆತ ದೇಶವಷ್ಟೇ ಅಲ್ಲದೆ ಇಡೀ ವಿಶ್ವದಲ್ಲೇ ಮಹೋನ್ನತ ನಾಯಕನೆನ್ನುವ ಬಿರುದಿಗೆ ಬಾಜನನಾಗುತ್ತಾನೆ. ಟೆಸ್ಟ್ ಹಾಗು ಏಕದಿನ ಪಂದ್ಯದಲ್ಲಿ ತಂಡದ ಅಗ್ರಸ್ಥಾನ, ಟೀ 20 ಹಾಗು ಏಕದಿನ ವಿಶ್ವಕಪ್ , ಚಾಂಪಿಯನ್ಸ್ ಟ್ರೋಫಿ ಗಳ ಗೆಲುವುಗಳಲ್ಲದೆ ಇನ್ನೂ ಹಲವಾರು ಸರಣಿಗಳನ್ನು ಜಯಿಸತೊಡಗಿದ. ಒಂದು ಕಾಲಕ್ಕೆ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಎಂದರೆ ಹೇಗೆ ಇತರ ತಂಡಗಳು ನಡುಗುತ್ತಿದ್ದವೋ ಅಂತೆಯೇ ಭಾರತವನ್ನು ಧೋನಿ ಸಜ್ಜುಗೊಳಿಸಿದ. ಅಗ್ರೆಸಿವ್ ಎಂಬ ಪದಕ್ಕೆ ಅಪವಾದ ಏನೋ ಎಂಬಂತೆ ದೋನಿ ಆಡುವುದು ಎಲ್ಲರಿಗು ತಿಳಿದಿರುವ ವಿಷಯವೇ. ತಾಳ್ಮೆ ಎಂಬ ಅಂಶ ಅದೆಷ್ಟರ ಮಟ್ಟಿಗೆ ನಾಯಕನಾದವನಿಗೆ ಪ್ರಾಮುಖ್ಯವಾದುದು ಎಂಬುದು ಧೋನಿಯನ್ನು ನೋಡಿಯೇ ಕಲಿಯಬೇಕೇನೋ. ಇಂದು ಟ್ವಿಟ್ಟರ್, ಫೇಸ್ಬುಕ್ ಗಳ ಸಂತೆಯಲ್ಲಿ ತಮ್ಮ ಸ್ಥಾನ ಮಾನದ ಒಂದಿಷ್ಟೂ ಘನತೆ, ಜವಾಬ್ದಾರಿಯನ್ನು ಅರಿಯದ ಅದೆಷ್ಟೋ ಆಟಗಾರರಿಗೆ ಧೋನಿ ಒಬ್ಬ ಮಾದರಿ ಪುರುಷ. ನಯ ನಾಜೂಕು, ಮಾತಿನ ಮೇಲೆ ಹಿಡಿತ, ಎಷ್ಟು ಬೇಕೋ ಅಷ್ಟೇ ಹೇಳುವ /ಕೇಳುವ ಪ್ರಭುದ್ದತೆ ಇವೆಲ್ಲವೂ ಧೋನಿಯನ್ನು ಒಬ್ಬ ವಿಭಿನ್ನ ಬಗೆಯ ನಾಯಕನಾಗಿ ಮಾಡಿವೆ.

ಹೀಗೆ ದೇಶದ ಅತಿ ಯಶಸ್ವೀ ನಾಯಕನಾಗಿದ್ದ ಧೋನಿಯ ದಾಖಲೆಯನ್ನು ಮುರಿಯಲು ಸದ್ಯಕಂತೂ ಯಾರಿಂದಲೂ ಸಾಧ್ಯವಿಲ್ಲ ಎನ್ನುವಾಗಲೇ ಬೆಂಕಿಯ ಚೆಂಡಿನಂತೆ ಸಿಡಿದು ಹೊರಬಂದ, ಬ್ಯಾಟಿಂಗ್ ನಲ್ಲಿ ಸಚಿನ್ ನ ಸಾಧನೆಯನ್ನೇ ಮುರಿಯಬಲ್ಲ ಕ್ಷಮತೆಯ ಈತ ಯುವ ಪೀಳಿಗೆಯ ಹಾಟ್ ಫಾವೊರೇಟ್. ಮೂರು ಬಗೆಯ ಆವೃತ್ತಿಗಳಲ್ಲೂ 50 ರ ಮೇಲಿನ ಬ್ಯಾಟಿಂಗ್ ಸರಾಸರಿಯನ್ನು ಹೊಂದಿ, ನಾಯಕನಾಗಿ ಪ್ರಚಂಡ ಯಶಸ್ಸನ್ನು ಗಳಿಸಿರುವ ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ ಗೆ ಹೇಳಿಮಾಡಿಸಿರುವ ಆಟಗಾರ. ಅಂದು ಕೇವಲ ಡ್ರಾ ಮಾಡುವುದಕಷ್ಟೆ ಆಡುತ್ತಿದ್ದ ಭಾರತ ತಂಡ ಇಂದು ಗೆಲ್ಲುವುದಕಷ್ಟೇ ಮಾತ್ರವೇನೋ ಎಂಬಂತೆ ಆಡುತ್ತಿದೆ. ಪ್ರತಿ ಸರಣಿಯನ್ನು ವೈಟ್ವಾಷ್ ಮಾಡಿಯೇ ಗೆಲ್ಲಬೇಕು ಏನೋ ಎಂಬಂತೆ ಆಡುವ ಕೊಹ್ಲಿ ಹಾಗು ತಂಡ ಇನ್ನೂ ಹಲವಾರು ಕಠಿಣ ಪರೀಕ್ಷೆಗಳಿಗೆ ತನ್ನನ್ನು ಒಡ್ಡಿಕೊಳ್ಳಬೇಕಿದೆ. ಸ್ವದೇಶೀ ನೆಲದಲ್ಲಿ ತಂಡದ ಸಾಧನೆ ಅದೆಷ್ಟೇ ಉತ್ತಮವಾಗಿರಬಹುದು ಆದರೆ ವಿದೇಶಿ ನೆಲದಲ್ಲೂ ಅದೇ ಬಗೆಗಿನ ಸಾಧನೆಯನ್ನು ಮಾಡಬೇಕಿದೆ. ಪ್ರಸ್ತುತ ತಂಡ ಹಾಗು ನಾಯಕನನ್ನು ನೋಡಿದರೆ ಅಂತಹ ಸಾವಾಲುಗಳು ನೀರು ಕುಡಿದಷ್ಟೇ ಸುಲಭವೆಂದೆನಿಸದಿರದು.


ಒಟ್ಟಿನಲ್ಲಿ ಅಂದು ಜೀವನ ನಿರ್ವಹಣೆಗಷ್ಟೇ ಆಡಲು ಶುರುವಾದ ಆಟ ಪ್ರತಿಷ್ಠೆ, ಹೆಸರು, ಸಾಧನೆ ಹಾಗು ಪ್ರಭುತ್ವವನ್ನು ಸಾಧಿಸಲು ಇಂದು ಆಡಲಾಗುತ್ತಿದೆ. ಇಂದು ಇಡೀ ವಿಶ್ವವನ್ನೇ ಬಗ್ಗುಬಡಿಯಬಲ್ಲ ಭಾರತ ತಂಡವೊಂದು ನಮ್ಮ ಮುಂದಿಂದೆ ಎಂದರೆ ಅದಕ್ಕೆ ಇವರಿಷ್ಟೇ ಅಲ್ಲದೆ ಇನ್ನೂ ಹಲವಾರು ಆಟಗಾರರ, ನಾಯಕರ ಕೊಡುಗೆಯೂ ಮಹತ್ವವಾದುದು. ಸ್ವಾತಂತ್ರ್ಯ ಪೂರ್ವ ಆಂಗ್ಲರ ಸೊಕ್ಕನ್ನು ಬಗ್ಗು ಬಡಿಯುತ್ತಿದ್ದ, ದೇಶದ ಮೊದಲ ಟೆಸ್ಟ್ ಕ್ಯಾಪ್ಟನ್ CK ನಾಯ್ಡು ನಂತರದ ಸುನಿಲ್ ಗವಾಸ್ಕರ್, ಬಿಷನ್ ಸಿಂಗ್ ಬೇಡಿ, ಮೊಹಮ್ಮೆದ್ ಅಝರುದ್ದೀನ್ ನಂತಹ ಇನ್ನೂ ಹಲವಾರು ನಾಯಕರು, ಸಚಿನ್ , ಸೆಹ್ವಾಗ್, ಗಂಭೀರ್, ದ್ರಾವಿಡ್, ಲಕ್ಷ್ಮಣ್, ಕುಂಬ್ಳೆ, ಜಾವಗಲ್ ಶ್ರೀನಾಥ್, ಹರ್ಭಜನ್, ಯುವರಾಜ್ ರಂತಹ ಆಟಗಾರರ ನೆರವಿನಿಂದ ಇಂದು ಕ್ರಿಕೆಟ್ ಎಂಬುದು ದೇಶದ ಹೆಮ್ಮೆಯ ಕ್ರೀಡೆಯಾಗಿದೆ. ಆದರೆ ಇದೇ ಯಶಸ್ಸನ್ನು ಮುಂದೆ ಅದೆಷ್ಟು ವರ್ಷಗಳ ಕಾಲ ತಂಡ ಮುಂದುವರೆಸಿಕೊಂಡು ಹೋಗುವುದೋ ಎಂಬುದನ್ನು ಮಾತ್ರ ಕಾದು ನೋಡಬೇಕು.

Friday, December 22, 2017

ಕೊಳಕು ಪ್ಯಾಂಟಿನ ಹರಿದ ನೋಟು ...


ಅದೊಂದು ದೊಡ್ಡ ವೇದಿಕೆ. ವ್ಯಕ್ತಿಮಹನೀಯನೊಬ್ಬ ಕಿಕ್ಕಿರಿದು ನೆರೆದಿದ್ದ ಜನಸ್ತೋಮದ ಮುಂದೆ ಕಿವಿತಮಟೆಯೇ ಉದುರುವಂತೆ ಅರಚುತಿದ್ದ. ಏಳಿಗೆ ಎಂದರೆ ತಮ್ಮೆಲ್ಲ ಕೆಲಸಕಾರ್ಯಗಳನ್ನು ಬಿಟ್ಟು ಇಂತಹ ಬಿಟ್ಟಿ ಭಾಷಣವನ್ನು ಕೇಳುವುದು ಮಾತ್ರವೆಂದೇ ಅಂದುಕೊಂಡಿದ್ದ ಸಾವಿರಾರು ಜನ ಆತನ ಒಂದೊಂದು ಮಾತಿಗೂ ‘ಓ…’ ಎನ್ನುತ್ತಾ, ಶಿಳ್ಳೆಯೊಡೆಯುತ್ತ, ಬೊಬ್ಬೆಯಾಕುತ್ತಾ ಕುಣಿದಾಡುತಿದ್ದರು. ನೆರೆದಿದ್ದ ಜನಸ್ತೋಮದಲ್ಲಿ ಅಪ್ಪನೂ ಒಬ್ಬನಾಗಿರುವಾಗ ಮೆನೆಯಲ್ಲಿನ ಮಕ್ಕಳು ಪೋಲಿ ಬೀಳುವ ಮೊದಲ ದಿನಕ್ಕೆ ನಾಂದಿಯನ್ನು ಹಾಡಿದ್ದರು. ತನ್ನ ಗೂಡು ಪೆಟ್ಟಿಗೆಯ ಡಬ್ಬದಿಂದ ಬೀಡಿಯ ಕಟ್ಟು, ಬೆಂಕಿಯಪೊಟ್ಟಣವನ್ನು ಯಾವುದೇ ಭಾವಗಳಿಲ್ಲದೆ ಮಕ್ಕಳಿಗೆ ಕೊಟ್ಟ ಗೂಡಂಗಡಿಯ ತಾತ ಚಡ್ಡಿ ಹಾಕಿರುವ ಅವುಗಳಿಂದ ಪಡೆದ ಹರಿದ ಐವತ್ತು ರೂಪಾಯಿಗಳಿಗೆ ಚಿಲ್ಲರೆಯನ್ನು ಹಿಂದುರಿಗಿಸುವ ಮುನ್ನತಪ್ಪು ಲೆಕ್ಕವನ್ನೇನಾದರೂ ಹೇಳಿ ಒಂದೆರೆಡು ರೂಪಾಯಿ ಲಪಟಾಯಿಸುವುದರ ಬಗ್ಗೆ ಆಲೋಚಿಸುತ್ತಿದ್ದನೇ ವಿನ್ಹಾ ಎಳೆಯ ವಯಸ್ಸಿಗೆ ಬೀಡಿಯ ಮೋಹಕ್ಕೆ ಬಿದ್ದಿರುವ ಆ ಕುಡಿಗಳಿಗೆ ಗದರಿಸುವ ಗುರುತರ ಕಾರ್ಯವನ್ನು ನಿಭಾಯಿಸಲಿಲ್ಲ. ಬೀಡಿಯ ನಂತರ ಕೊನೆಗೊಂದು ಸಿಗರೇಟಿಗೂ ಬೇಕಿದ್ದ ಹಣವಷ್ಟೇನ್ನೇ ಅಪ್ಪನ ಪ್ಯಾಂಟಿನ ಜೇಬಿನಿಂದ ಎಗರಿಸಿಕೊಂಡು ಬಂದಿದ್ದವರು ಅರ್ವತ್ತು ವಯಸ್ಸಿನ ತಾತಪ್ಪನ ಕುತಂತ್ರವನ್ನು ಸಫಲವಾಗಲು ಬಿಡುತ್ತಾರೆಯೇ?!

ಅಷ್ಟರಲ್ಲಾಗಲೇ ಮನೆಯ ದೇವರ ಕೋಣೆಯಿಂದ ಬಂದ ಘಂಟೆಯ ಸದ್ದು ಮನೆಯನ್ನೇ ಒಂದು ಕ್ಷಣಕ್ಕೆ ಅದುರಿಸಿದಂತಿದ್ದಿತು. ಲಕ್ಷಿ ಪಟದ ಮುಂದೆ ಮಗನ ವಿದ್ಯಾಭ್ಯಾಸ ಚೆನ್ನಾಗಿ ಆಗಲಿ ಎಂದು ಜೋರಾಗೆ ಹೇಳಿಕೊಳ್ಳುತ್ತಿದ್ದ ಮನೆಯ ಸೊಸೆ ಅರ್ಧ ಘಂಟೆಯ ನಂತರ ಪಕ್ಕದ ಮೆನೆಯಾಕೆಯೊಟ್ಟಿಗೆ ಮನೆಗೆ ಅಂಟಿಕೊಂಡಿದ್ದ ಗೂಡಂಗಡಿಯ ಮುಂದೆ ಕೂತಿದ್ದ ಮಾವನಿಗಾಗಲಿ, ಅಲ್ಲೆಲ್ಲೋ ಭಾಷಣದ ಪ್ರವಾಹವನ್ನೇ ಹರಿಸುತ್ತಿರುವ ತನ್ನ ಪತಿರಾಯನಿಗಾಗಲಿ ತಿಳಿಯದಂತೆ ಹೋಗಿ ತನ್ನ ಗಲ್ಲಿಯ ಹೆಂಗಸರೆಲ್ಲರ ಹೊಟ್ಟೆ ಉರಿಯುವಂತೆ ಕಾಣುವ ಹೊಸ ಸೀರೆಯೊಂದನ್ನು ತಂದು, ಹುಟ್ಟು ಬೀಗಬೇಕೆಂದು ಅವಣಿಸುತ್ತಿದ್ದಳು. ತಾತ ಅತ್ತ ಕಡೆ ಓದಂತೆಯೇ ಮೊಬೈಲ್ ಫೋನಿಗೆ ಕೈ ಹಾಕಿದ ಮೊಮ್ಮಗ ನೀಲಿ ಚಿತ್ರಗಳ ವೆಬ್ಸೈಟ್ ಒಂದನ್ನು ತೆರೆದು ಕಣ್ಣರಳಿಸಿ ನೋಡತೊಡಗಿದ.

ವಚನದಲ್ಲಿ ಮಾತ್ರ ಅಮ್ಮ ಅಕ್ಕ ಎನ್ನುತ್ತಾ ಒಳಗಣ್ಣಿನಲ್ಲಿ ಬೇರೊಂದು ನೀಚ ಕಲ್ಪನೆಯ ಲೋಕವನ್ನೇ ಸೃಷ್ಟಿಸಿಕೊಂಡು ಪಕ್ಕದ ರಾಜ್ಯದ ಹಳ್ಳಿಯೊಂದರಲ್ಲಿ ಸಿಗುವ ಮೂರು ಕಾಸಿನ ಉತ್ತಮ ಸೀರೆಗಳನ್ನು, ಕೊಂಡ ಕಾಸಿಗಿಂತ ಹತ್ತು ಪಟ್ಟು ಹೆಚ್ಚಿನ ಬೆಲೆಯಲ್ಲಿ ಮಾರುತ್ತಾ ಜೀವನ ಸಾಗಿಸುತ್ತಿದ್ದ ವ್ಯಾಪಾರೀ. ಹೆಂಗಸರಿಬ್ಬರು ಬಂದು ವ್ಯಾಪಾರಿಯ ಬಳಿ ಸೀರೆಯೊಂದನ್ನು ಕೊಂಡು ನೀಡಿದ್ದ ಸಾವಿರ ರೂಪಾಯಿಯ ಮೇಲೆ ಮಾವನ ಗಲ್ಲದ ಡಬ್ಬಿಯಿಂದ ತಂದಿದ್ದ ಹರಿದ ಐವತ್ತು ರೂಪಾಯಿಗಳನ್ನು ಅಂಗಡಿಯವನಿಗೆ ನೀಡಿ ವ್ಯಾಪಾರವನ್ನು ಅಂತಿಮಗೊಳಿಸಿದ್ದರು. ಊರೆಲ್ಲ ಅಲೆದರೂ ಒಂದು ರೂಪಾಯಿ ಸಿಗದ ಇಂದಿನ ಕಾಲದಲ್ಲಿ ಭಿಕ್ಷುಕನೊಬ್ಬನು ಕೈಚಾಚಿ ಅಂಗಡಿಯವನ್ನಿಲ್ಲಿಗೆ ಬಂದಾಗ ಗಲ್ಲದೊಳಗೆ ಕೈ ಹಾಕಿ, ಚಿಲ್ಲರೆ ಕಾಣದೆ, ಹೆಂಗಸರಿಬ್ಬರು ನೀಡಿದ್ದ ಹರಿದ ಐವತ್ತು ರೂಪಾಯಿಯನ್ನು ಈತ ಪರೀಕ್ಷಿಸುವ ಮೊದಲೇ ಆಕೆಯರಿಬ್ಬರು ಜಾಗ ಕಿತ್ತಿದ್ದರಿಂದ ಕಷ್ಟಪಟ್ಟು ಕನಿಕರವನ್ನು ಹೊತ್ತಿಸಿಕೊಂಡು ಹರಿದ ನೋಟನ್ನು ಭಿಕ್ಷುಕನ ಕೈಗಿರಿಸಿದ ವ್ಯಾಪಾರೀ.

ಗೋಡೆಗೆ ತಗುಲಿಹಾಕಿದ್ದ ಸರ್ವದೇವರುಗಳ ಪಟಗಳಿಗೆ ಕೈಯನ್ನು ಮುಗಿದು, ಊರು ಮುಳುಗಿಹೋದರೂ ಸರಿಯೇ ತನ್ನ ಗಲ್ಲಪೆಟ್ಟಿಗೆಯೊಂದು ತುಂಬಿದರೆ ಸಾಕೆಂದು ಬೇಡಿದ ಬಾರ್ ಅಂಗಡಿಯ ಮಾಲೀಕ ಬೆಳ್ಳಂಬೆಳೆಗೆ ಬಾರಿನ ಬಾಗಿಲನ್ನು ತೆಗೆಯುವಾಗಲೇ ಮುಂಜಾವು ಎಲ್ಲಾ ಕಾರ್ಯಗಳನ್ನು ಬದಿಗಿಟ್ಟು ದೇವಾಲಯಕ್ಕೆ ಹೋಗುವ ಶ್ರದ್ದಾಭರಿತ ಕಾರ್ಯದಂತೆ ಅಪ್ಪ ಹಾಗು ಇತರ ಕುಡುಕ ಪ್ರಜೆಗಳು/ ಕಾರ್ಯಕರ್ತರು ಅತ್ತ ಭಾಷಣದ ಮಧ್ಯೆಯೇ ಎದ್ದು ಇತ್ತಕಡೆ ಬಂದು ನಿಂತಿದ್ದರು. ಖಾಲಿ ಹೊಟ್ಟೆಗೆ ಗಟಗಟನೆ ಮದ್ಯವನ್ನು ಹೀರಿ, ಕಿಸೆಯ ದುಡ್ಡೆಲ್ಲ ಖಾಲಿಯಾಗಿ ಒಬ್ಬರ ಮುಖವನ್ನು ಮತ್ತೊಬ್ಬರು ಗಲಿಬಿಲಿಯಾಗಿ ನೋಡುತ್ತಾ ಕೊನೆಗೆ ಒಂತಿಷ್ಟು ಸಾಲದ ರೂಪದಲ್ಲೂ ಬಂದಿದ್ದನು ‘ಸಮಾ’ ಹೀರಿ ಭಾಷಣ ನೆಡೆಯುತ್ತಿದ್ದ ಸ್ಥಳಕ್ಕೆ ಮನಸ್ಸಿರದ ಮನಸ್ಸಲ್ಲಿ ಹೆಜ್ಜೆಯಿಟ್ಟರು. ಅತ್ತ ಕಡೆಯಿಂದ ಸಾಯುವವನಿಗೆ ಸ್ವರ್ಗ ಸಿಕ್ಕಂತೆ ಐವತ್ತು ರೂಪಾಯಿಯ ನೋಟೊಂದನ್ನು ಪಡೆದು ಮೊದಲು ಎರಡು ದಿನದಿಂದ ನೀರನ್ನು ಬಿಟ್ಟು ಬೇರೇನೂ ಕಾಣದ ಹೊಟ್ಟೆಗೆ ತಿಂಡಿಯೊಂದಿಷ್ಟನ್ನು ತಿನ್ನಲು ಧಾವಿಸುತ್ತಿದ್ದ ಹರಿದ ಬಟ್ಟೆಯ ಪ್ರಜೆಯನ್ನು ಸುತ್ತುವರೆದವು ಕುಡಿದ ಮತ್ತಿನಲ್ಲಿದ್ದ ಪ್ರಜೆಗಳು. 'ಅಸಹಾಯಕರಿಗೆ ಸಹಾಯಕರಾಗಿ, ಬಡವರಿಗೆ ಆಸರೆಯಾಗಿ, ಹಸಿದವನಿಗೆ ದಾನಿಯಾಗಿ...' ಎಂಬ ನಾಯಕನ ಭಾಷಣದ ಚೀರಾಟ ಗುಂಪಿನ ಪ್ರತಿ ಕಿವಿಗಳಿಗೂ ಬೀಳುತಿತ್ತು. ನತ್ತಿಗೆ ಏರಿದ್ದ ಹೆಂಡದ ಮತ್ತೊ ಅಥವ ಗುಣಸಹಜವಾಗಿದ್ದ ಒರಟು ತನವೋ ಅಥವ ಮಾನವೀಯತೆಯನ್ನು ಮರೆತ ಮನದ ಕ್ರೌರ್ಯವೊ ಏನೋ ಹಣವನ್ನು ಕೊಡಲೊಪ್ಪದ ಭಿಕ್ಷುಕನನ್ನು ಪ್ರಾಣಿಗಳಿಗೆ ಥಳಿಸಿದಂತೆ ಥಳಿಸಿ ಜೀವ ಹೋದರೂ ಬಿಗಿಮುಷ್ಟಿಯಲ್ಲಿ ಮುದುರಿ ಹಿಡಿದಿದ್ದ ಐವತ್ತು ರೂಪಾಯಿ ನೋಟನ್ನು ಪಡೆಯಲು ಹರ ಸಾಹಸ ಮಾಡಿ ಕೊನೆಗೆ ಕಲ್ಲೊಂದರಿಂದ ಆ ನೊಂದ ಕೈ ಗಳ ಮೇಲೆ ಜಜ್ಜಿ, ಮುದುಡಿ ಒದ್ದೆಯಾದ ಹರಿದ ನೋಟನ್ನು ಕಸಿದುಕೊಂಡು ಎಣ್ಣೆಯಂಗಡಿಯ ಕಡೆಗೆ ಧಾವಿಸಿತು ಅಮಲು ಕಾರ್ಯಕರ್ತರ ದಂಡು.

ಹಳಸು, ಹುಳುಕು, ಬೈಗುಳ, ನಿಷ್ಠುರ, ಶಾಪ, ಮತ್ತೊಂದು ಮಗದೊಂದು ಯಾವುದೇ ಆದರೂ ಸರಿಯೇ ಬಾಲ ಅಲ್ಲಾಡಿಸಿಕೊಂಡು ಕಂಡ ಕಂಡವರ ಹಿಂದೆಲ್ಲ 'ನೀನೆ ನನ್ನ ಸರ್ವಸ್ವ' ಎಂಬಂತೆ ಹೋಗುತ್ತಿದ್ದ ಬೀದಿ ನಾಯಿಯ ಮರಿಯೊಂದು ಹೆಂಡಗುಡುಕರ ಗುಂಪೊಂದು ವ್ಯಕ್ತಿಯೊಬ್ಬನನ್ನು ನೆಲದ ಮೇಲೆ ಹೊಡೆದುರುಳಿಸಿ ಎತ್ತಲೋ ಓಟ ಕಿತ್ತ ಎಡೆಗೆ ತಾನೂ ಓಡಲು ಶುರುವಿಟ್ಟು, ಗುಂಪಿನಲ್ಲೊಬ್ಬನ ದೈತ್ಯ ಕಾಲಿನಿಂದ ಕರುಳೇ ಕಕ್ಕಿ ಹೊರಬರುವಂತೆ ಹೊಟ್ಟೆಯ ಮೇಲೆ ಗುದ್ದನ್ನು ತಿಂದು ಚೆಂಡಿನಂತೆ ಹಾರಿ, ಬಿದ್ದು ಒರಳಾಡುತಿದ್ದ ಭಿಕ್ಷುಕನ ಬಳಿಗೆ ಬಿದ್ದಿತು. ನಾಯಿಯ ಆರ್ತನಾದ, ಭಿಕ್ಷುಕನ ರೋಧನೆ ಮುಗಿಲು ಮುಟ್ಟಿತು. ಬೆಳ್ಳಂಬೆಳೆಗೆ ರಾಶಿ ರಾಶಿ ಪುಸ್ತಕದ ಓರೆಯನ್ನು ಎಳೆಯ ಬೆನ್ನುಗಳ ಮೇಲೆ ಹೊತ್ತು ಸ್ಕೂಲಿಗೆ ಹೊರಟಿದ್ದ ಎಂಟು ವರ್ಷದ ಪುಟ್ಟಿ ವ್ಯಕ್ತಿಯೊಬ್ಬ ಬಿದ್ದು ಒರಳಾಡುತಿದ್ದದನ್ನು ಕಂಡು ಅವನ ಬಳಿಗೆ ಹೋಗಿ ಆತನ ನರಳುವಿಕೆಯಲ್ಲಿಯೇ ಹಸಿದ ಆರ್ತನಾದವನ್ನು ಅರಿತು (!) ಮನೆಯಿಂದ ಅಮ್ಮ ಕಟ್ಟಿ ಕೊಟ್ಟಿದ್ದ ಎರಡು ಇಡ್ಲಿಯನ್ನು ಪಕ್ಕದ ಅಂಗಡಿಯಿಂದ ಪಡೆದ ಒಂದಿಷ್ಟು ಪೇಪರ್ ಚೂರಿನ ಮೇಲೆ ಸುರಿದು ಆತನ ಮುಂದಿಟ್ಟಳು. ಒಂದಿಚು ಪೇಪರ್ ಅನ್ನೂ ಬಿಡದೆ ತಿನ್ನುವಷ್ಟು ಹಸಿವೆಯಲ್ಲಿಯೂ ಆತ ಒಂದು ಇಡ್ಲಿಯನ್ನು ಎದ್ದು ಸರಿಯಾಗಿ ನಿಲ್ಲಲೂ ಶಕ್ತನಾಗಿರದ ನಾಯಿ ಮರಿಯ ಮುಂದೆ ಇಟ್ಟನು. ತನ್ನ ಮುದ್ದು ಪಿಳಿ ಪಿಳಿ ಕಣ್ಣುಗಳಿಂದ ಅದು ಬಿಕ್ಷುಕನ ಮೇಲೆ ಕರುಣೆಯ ನೋಟವನ್ನು ಬೀರಿತ್ತು.

ಅಂಗಡಿಯ ಮುಂದೆ ಮತ್ತೊಂದು ಸುತ್ತು ಬಂದ ಗುಂಪು ಹರಿದ ಐವತ್ತು ರೂಪಾಯಿಯ ನೋಟನ್ನು ನೀಡಿ ಬಾಟಲಿಯೊಂದನ್ನು ಕೂಗಿ ಪಡೆದು ಗಟ ಗಟನೆ 'ಎತ್ತ'ತೊಡಗಿತು. ಅಂಗಡಿಯವ ನೋಟನ್ನು ಗಲ್ಲದ ಪೆಟ್ಟಿಗೆಯೊಳಗೆ ಹಾಕುವ ಮುನ್ನ ಅದರ ಹರಿದ ಆಕಾರವನ್ನು ಕಂಡು ಕುಪಿತನಾಗಿ ಗುಂಪಿನ ವಿರುದ್ಧ ಧ್ವನಿ ಎತ್ತುವ ಮೊದಲೇ ಹಫ್ತಾ ವಸೂಲಿಯ ಖದೀಮರು ಬಂದು ಆತನ ಕೈಲಿದ್ದ ನೋಟಿನೊಟ್ಟಿಗೆ ಇನ್ನೂ ಮೂರ್ನಾಲ್ಕು ನೋಟನ್ನು ಪಡೆದು ಜಾಗ ಕಿತ್ತರು.

ಒಳಗಡೆಯಿಂದ ಪುಟ್ಟಿ 'ಅಪ್ಪಾ, ಷೋ ಕಟ್ಟು' ಎಂದು ಕರೆದಿದ್ದರಿಂದ ಕಾರ್ಯಕರ್ತ ಕುಡುಕರ ಗುಂಪಿಗೆ ಬೈಯುವ ಮೊದಲೇ ಅಂಗಡಿಯವನಿಗೆ ಮನೆಯೊಳಗೇ ಹೋಗಬೇಕಾಗಿ ಬಂತು. ಅಷ್ಟರಲ್ಲಾಗಲೇ ಮನೆಯಾಕೆ ಮಗಳ ಶೂ ಅನ್ನು ಕಟ್ಟಿ ಇಡ್ಲಿಗೆ ಚಟ್ನಿ ಹಾಕಿದ್ದ ಡಬ್ಬವನ್ನು ಊಟದ ಡಬ್ಬಿಗೆ ಹಾಕಿ 'ಪೂರ್ತಿ ತಿಂದು ಬಾ' ಎಂದು ಕೂಗಿಕೊಂಡಳು. ಹಫ್ತಾ ವಸೂಲಿಯ ಗುಂಪು ಊರಿನ ಹತ್ತಿಪ್ಪತ್ತು ಅಂಗಡಿ ಗಳಿಂದ ಬಂದ ಹಣವನ್ನು ಭಾಷಣ ಬಿಗಿಯುತ್ತಿದ್ದ 'ಅಣ್ಣ'ನ ಹಿಂದೆ ಯಾರಿಗೂ ಕಾಣದಂತೆ ಆತನ ಕೈಯ ಮೇಲಿತ್ತವು. 'ಅಣ್ಣ' ಕೊನೆಗೂ ಭಾಷಣ ಮುಗಿಸಿ ಸ್ಟೇಜಿನಿಂದ ಕೆಳಗಿಳಿದು ಕಾರ್ಯಕರ್ತರೊಬ್ಬರ ಬಳಿ ಬಳಿಗೂ ಹೋಗಿ ಕೈ ಕುಲುಕುವ ನೆಪದಲ್ಲಿ ಒಂದೊಂದೇ ನೋಟನ್ನು ಅವರ ಕೈಮೇಲೆ ಇರಿಸತೊಡಗಿದ. ಖುಷಿಯನ್ನು ತಾಳಲಾರದೆ ಕುಡುಕ ಗುಂಪಿನ ಕೆಲವರಂತೂ 'ಅಣ್ಣ' ನ ಎದುರು ನಮಸ್ಕರಿಸುತ್ತಾ ಸಾಷ್ಟಾಂಗ ಬಿದ್ದರು, ಅಪ್ಪ ನೊಬ್ಬನ್ನನ್ನು ಬಿಟ್ಟು! ಬೇಸರ, ಆಶ್ಚರ್ಯ ಹಾಗು ಗೊಂದಲ ಭಾವಗಳು ಆತನ ಮನಸ್ಸನು ಆವರಿಸ್ದದವು. ಏಕೆಂದರೆ ಮನೆಯ ಗೋಡೆಗೆ ನೇತಾಕಿದ್ದ ಆತನ ಕೊಳಕು ಪ್ಯಾಂಟಿನ ಜೇಬಿನ ತಳದಲ್ಲಿ ವರ್ಷಗಳಿಂದ ಕೊಳೆಯುತಿದ್ದ ಹರಿದ ಐವತ್ತು ರೂಪಾಯಿ ನೋಟು ಇಲ್ಲಿ ಆತನ ಕೈಯ ಮೇಲೆ ಇರಿಸಲ್ಪಟಿತ್ತು!!

Saturday, December 16, 2017

ಬದಲಾವಣೆಯ ಹಾದಿಯಲ್ಲಿ ...

ಇದು ಸ್ಥಿತ್ಯಂತರದ ಕಾಲ. ಪ್ರಸ್ತುತ ಕಾಲಘಟ್ಟದ ಮಾನವನೊಬ್ಬನೇ ಮಾತ್ರ ಈ ಬಹುಮುಖ್ಯವಾದ ಘಳಿಗೆಗೆ ಇತಿಹಾಸದಲ್ಲಿ ಉಳಿಯುವ ಏಕಮಾತ್ರ ಸಾಕ್ಷಿಯ ಪ್ರತೀಕ. ಈತ ಪೋಸ್ಟ್ ಆಫೀಸಿನಿಂದ ಬರುವ ಪೋಸ್ಟ್ ಕಾರ್ಡಿಗೋಸ್ಕರ ತಿಂಗಳುಗಟ್ಟಲೆ ಕಾದಿರುವುದೂ ಉಂಟು, ಆಕಾಶದಿಂದ ಡ್ರೋನ್ ಗಳ ಮೂಲಕ ವಸ್ತುಗಳನ್ನು ನಿಮಿಷ ಮಾತ್ರದಲ್ಲಿ ಕ್ಯಾಚ್ ಇಡಿದಿರುವುದೂ ಉಂಟು! ತನ್ನದೇ ಪ್ರತಿಬಿಂಬವನ್ನು ಕಾಣಲು (ಫೋಟೋ) ವಾರಗಟ್ಟಲೆ ಕಾದು ಸಾವಿರಾರು ರೂಪಾಯಿಗಳನ್ನು ಸುರಿದಿರುವುದೂ ಉಂಟು, ಅಂಗೈಯಂಚಿನ ವಸ್ತುವೊದರಲ್ಲಿ (ಮೊಬೈಲ್) ಇಂತಹ ಲಕ್ಷಾಂತರ ಪ್ರತಿಬಿಂಬಗಳನ್ನು ಫ್ರೀ-ಆಫ್-ಕಾಸ್ಟ್ ನಲ್ಲಿ ಏಕಕಾಲಕ್ಕೆ ತೆಗೆದಿರುವುದೂ ಉಂಟು! ವರ್ಷಗಳ ಕಾಲ ಕಾಲು ಸವೆಸಿ ನೆಡೆದು ದಣಿದು ದೂರದ ಊರೊಂದನ್ನು ಸೇರಿರುವುದೂ ಉಂಟು, ಇಂದು ಅದೇ ಊರನ್ನು ಘಂಟೆಯೊಂದರಲ್ಲಿ ತಲುಪಿ ತೋರಿಸಿರುವುದೂ ಉಂಟು! ದುಡಿಯುವ ನೆಪದಲ್ಲಿ ಮೆನೆಬಿಡುವ ಅಪ್ಪ ವರ್ಷಾನುಗಟ್ಟಲೆ ಮನೆಯವರನ್ನು ಕಾಣದೆ ಪರಿತಪಿಸಿರುವುದೂ ಉಂಟು, ಇಂದು ದಿನದ ಇಪ್ಪನಾಲ್ಕೂ ಘಂಟೆಯೂ ಖಂಡಾಂತರ ದೂರದಿಂದ ಆತನ ಮೊಮ್ಮಕ್ಕಳೊಟ್ಟಿಗೆ ನೋಡುತ್ತಾ ನಲಿಯುತ್ತ ಮಾತಾಡಿರುವುದೂ ಉಂಟು! ಅದೆಷ್ಟೇ ಅರಚಾಡಿದರೂ ಗುಂಪುಗಳೆರಡನ್ನು ಬಡಿದಾಡಿಸಲಾಗದಿರುವುದೂ ಉಂಟು, ಒಂದು 'ಶೇರ್' ಎಂಬ ಭ್ರಮಲೋಕದ ಬಟನ್ ಅನ್ನು ಒತ್ತಿ ಕೋಮುಗಳಲ್ಲಿ ಬೆಂಕಿಯ ಜ್ವಾಲೆಯನ್ನು ಹೊತ್ತಿರಿಸಿರುವುದೂ ಉಂಟು!! ಒಟ್ಟಿನಲ್ಲಿ ಕಳೆದ ಇಪ್ಪತ್ತು ಮೂವತ್ತು ವರ್ಷಗಳ ಅವಧಿಯಲ್ಲಿ ಮಾನವ ಕಂಡಷ್ಟು ಬದಲಾವಣೆ ಇತಿಹಾಸದ ಯಾವೊಂದು ಕಾಲಘಟ್ಟದಲ್ಲೂ ಆತ ಕಂಡಿರಲು ಸಾಧ್ಯವಿಲ್ಲ. ಬೆಂಕಿಯ ಭಯದಲ್ಲೇ ಬದುಕುತ್ತಿದ್ದ ಆತ ಅದೇ ಬೆಂಕಿಯನ್ನು ತನ್ನ ಗುಲಾಮನಂತೆ ಮಾಡಿಕೊಳ್ಳಲು ಶತಮಾನಗಳ ಕಾಲ ಹೆಣಗಾಡಿದ ಆ ಕಾಲವೆಲ್ಲಿ, ಹೊಸದೊಂದು ಅನ್ವೇಷಣೆ ಜನಮಾನಸದ ರೀತಿ ನೀತಿಯನ್ನೇ ನಿಮಿಷಮಾತ್ರದಲ್ಲಿ ಬದಲಾಯಿಸುವ ಇಂದಿನ ಕಾಲವೆಲ್ಲಿ?! ಬದಲಾವಣೆಗಳೆಂಬುದು ಹೀಗೆ ಮಿಂಚಿನ ವೇಗದಲ್ಲಿ ಇಂದು ಆಗುವುದಾದರೆ ಪ್ರಸ್ತುತ ಜಾರಿಯಲ್ಲಿರುವ ಅದೆಷ್ಟೋ ವಸ್ತುಗಳು/ಟೆಕ್ನಾಲಜಿಗಳು ಸಹ ಕಣ್ಮರೆಯಾಗಿ ಆ ಜಾಗದಲ್ಲಿ ಮತ್ಯಾವುದೋ ವಸ್ತು/ಟೆಕ್ನಾಲಜಿಗಳು ಮುಂದೊಂದು ದಿನ ಬಂದು ಕೂರುವುದಂತೂ ಸುಳ್ಳಲ್ಲ. ಹೀಗೆ ಕೆಲಕಾಲದಿಂದ ನಮ್ಮ ಜೀವನದ ಸಂಗಾತಿಗಿಂತಲೂ ಹತ್ತಿರವಾಗಿದ್ದೂ ಇಂದು ಹೊಸತನದ ಭರದಲ್ಲಿ ನಶಿಸಿಹೋಗುತ್ತಿರುವ, ಕಾಲ ಸರಿದಂತೆ ಮುಂದೆಂದೂ ಬಾರದ/ಕಾಣದ ಕೆಲವು ವಸ್ತುಗಳನ್ನು ಇಲ್ಲಿ ಮೆಲುಕು ಹಾಕಲಾಗಿದೆ.

ಮುದ್ರಣ ಮಾಧ್ಯಮ :
ಆವೊಂದು ದಿನವಿತ್ತು. ಬೆಳಗೆದ್ದು ಆಟ, ಓಟ ಹಾಗು ಮತ್ತಿತರ ನಿತ್ಯಕರ್ಮಗಳನ್ನು ಮುಗಿಸಿ ರೆಡಿಯಾಗಿ ಮನೆಯ ಹಾಲಿಗೋ ಅಥವಾ ಬಾಗಿಲ ಮುಂದಿನ ಎಳೆಬಿಸಿಲ ಹೊಳಪಿಗೂ ಕುರ್ಚಿಯೊಂದನ್ನು ಎಳೆದು ತಂದು ಕೂತರೆ ಕೈಯಲ್ಲಿ ಎರಡು ವಸ್ತುಗಳು ಇದ್ದಿರಲೇಬೇಕಿದ್ದಿತು. ಒಂದು ಟೀ ಅಥವಾ ಕಾಫಿಯ ಲೋಟವರಾದರೆ ಇನ್ನೊಂದು ಚುರುಮುರು ಸದ್ದಿನೊಂದಿಗೆ ಜಗತ್ತಿನ ಮಿನಿ ದರ್ಶನವನ್ನು ಮಾಡಿಸುತ್ತಿದ್ದ ದಿನಪತ್ರಿಕೆ. ಕೆಲವರು ತಾಸುಗಳ ಕಾಲ ತಮ್ಮನ್ನು ತಾವು ದಿನಪತ್ರಿಕೆಯೊಳಗೆ ಮುಳುಗಿಸಿಕೊಂಡರೆ ಇನ್ನು ಕೆಲವರು ತಮ್ಮ ಮನೆಯಾಕೆಯ ಅರಚುವಿಕೆಗೋ, ಮಕ್ಕಳ ಉಪಟಳಕ್ಕೋ ಅಥವಾ ಮತ್ಯಾವುದೋ ದಿನದ ಜಂಜಾಟಗಳಿಗೋ ಮಣಿದು ಸಾಧ್ಯವಾದಷ್ಟು ವಿಷಯಗಳನ್ನೆಲ್ಲ ಗಬಗಬನೆ ಓದಿ, ಮಿಕ್ಕುಳಿದ ವಿಷಯಗಳನ್ನು ಹೀರಿಕೊಳ್ಳುವ ಚಟಕ್ಕೆ ಬದುಕುಳಿದ ಪುಟಗಳನ್ನು ತಮ್ಮ ಕೆಲಸದ ಬ್ಯಾಗಿನೊಳಗೆ ಸುರುಳಿ ಸುತ್ತಿ ತೂರಿಸಿಕೊಂಡು ಬಸ್ಸನ್ನೇ ಓದುವ ಸ್ಥಳವಾಗಿ ಮಾಡಿಕೊಂಡು, ಮಧ್ಯಾಹ್ನದ ಕೊಂಚ ಬಿಡುವಿನ ವೇಳೆಯಲ್ಲಿಯೂ ತಮ್ಮ ಊರಗಲ ಕೈಯನ್ನು ಚಾಚಿ ತಮ್ಮನು ತಾವು ಪತ್ರಿಕೆಯೊಳಗೆ ಕಳೆದುಕೊಂಡುಬಿಡುತ್ತಿದ್ದರು. ನಾವು ಚಿಕ್ಕವರಿದ್ದಾಗ ಅಥವಾ ತೀರಾ ಇತ್ತೀಚೆಗೂ ಕಾಣಸಿಗುವ ವಿದ್ಯಮಾನವಿದು. ಆದರೆ ಇನ್ನೊಂದಿಷ್ಟು ವಸಂತಗಳಲ್ಲಿ ಇವೆಲ್ಲ ಘಳಿಗೆಗಳು, ತವಕಗಳು ಕೇವಲ ನೆನಪಾಗಿ ಮಾತ್ರವಷ್ಟೇ ಉಳಿಯುತ್ತವೆ ಎಂದರೆ ನಾವು ನಂಬಲೇಬೇಕು! ಇಂದಿನ ಇಂಟರ್ನೆಟ್ಟಿನ ಮಾಯಾಜಾಲದದಲ್ಲಿ ನಮ್ಮ ಕೈಗೆಟುಕದ ವಸ್ತುವೊಂದಿಲ್ಲ. ಅಂತಹ ಮಹಾಸಾಗರದಲ್ಲಿ ದಿನಪತ್ರಿಕೆ ಎಂಬುದು ಯಾವ ಮಹಾ. ಅದಾಗಲೇ ಪ್ರಸ್ತುತ ಜಾರಿಯಲ್ಲಿರುವ ಬಹುತೇಕ ಪತ್ರಿಕೆಗಳು ತಮ್ಮ ತಮ್ಮ ಆನ್ಲೈನ್ ವೆಬ್ಸೈಟ್ಗಳನ್ನು ನಿರ್ಮಿಸಿಕೊಂಡು ಮುಂದಿನ ದಿನಗಳಿಗೆ ಸಜ್ಜಾಗಿವೆ. ಕ್ಷಣ ಕ್ಷಣದ ಬ್ರೇಕಿಂಗ್ ಸುದ್ದಿಗಳು, ಲಕ್ಷಾಂತರ ಭಿನ್ನ-ಭಿನ್ನ ಬಗೆಯ ವಿಷಯಗಳು ಕೈಯಂಚಿನಲ್ಲಿ ಸಿಗುವ ಸುಲಭ ಮಾರ್ಗವಿರುವಾಗ ಟೆಕ್ನಾಲಜಿಯ ನೆಪದಲ್ಲಿ ಕೊಂಚ ಸೊಂಬೇರಿಯಾಗಬಯಸುವ (ಪರಿಸರ ಸಂರಕ್ಷಣೆಯ ಸದುದ್ದೇಶವನ್ನೂ ಇಲ್ಲಿ ಅಲ್ಲಗೆಳೆಯಲಾಗುವುದಿಲ್ಲ) ಮಾನವ ಪತ್ರಿಕೆಗಳನ್ನು ಕೊಂಡು ತೆರೆದು ಕಷ್ಟ ಪಟ್ಟು ಓದುವುದು ಮುಗಿದು ಹೋದ ಅಧ್ಯಾಯವೆಂದೇ ಅನ್ನಬಹುದು! ಇನ್ನು ಮೊಬೈಲ್ ಫೋನುಗಳ ಸಂತೆಯಲ್ಲಿ ಪುಸ್ತಕಗಳಿಗೂ ಬಂದೊದಗಿರುವ ಆವಸ್ಥೆ ಹೆಚ್ಚು ಕಡಿಮೆ ಇಂತಹದ್ದೇ ಎಂದರೆ ಸುಳ್ಳಾಗದು. ಸರ್ವವೂ ಮೊಬೈಲ್ಮಯವಾಗಿರುವಾಗ ಕೆಜಿಗಟ್ಟಲೆ ತೂಕದ ಪುಸ್ತಕಗಳನ್ನು ಕೊಂಡು, ಓದಿ ಮನೆಯ ಕಪಾಟಿನಲ್ಲಿ ಜೋಡಿಸಿಡುವುದು, ಆಗೊಮ್ಮೆ ಈಗೊಮ್ಮೆ ತೆಗೆದು ದೂಳೋರೆಸುವ ಕಾರ್ಯದಲ್ಲಿ ಮಗದೊಮ್ಮೆ ಒಂದೆರೆಡು ಪುಟಗಳ ಓದಿನಲ್ಲಿ ತೊಡಗಿ, ಆಸಕ್ತಿ ಮೂಡಿ, ಇಡೀ ಪುಸ್ತಕವನ್ನೇ ಮತ್ತೊಮ್ಮೆ ತಿರುವಿಹಾಕಿ ಆನಂದಪಡುತಿದ್ದದ್ದು ಇನ್ನು ಕಳೆದುಹೋದ ನನಪುಗಳೆಂದೇ ಎನ್ನಬಹುದು! ಜೊತೆಗೆ ಪ್ರಿಂಟರ್ ಗಳು, ಕ್ಸೆರಾಕ್ಸ್ ಮಷೀನ್ಗಳು ಅಷ್ಟೇ ಏಕೆ ಸಂಪೂರ್ಣ ಕಾಯಂಪ್ರತಿಗಳ(HardCopies) ಕಾಲವೇ ಕೊನೆಗೊಳ್ಳುವ ಕಾಲ ಬಹುಬೇಗನೆ ಸಮೀಪಿಸುತ್ತಿದೆ ಎಂಬುದನ್ನು ಬಾಂಡ್ ಪೇಪರಿನಲ್ಲಿ ಬೇಕಾದರೂ ಕೂಡ ಬರೆದು ಕೊಡಬಹುದು!

ಕರೆನ್ಸಿ ನೋಟುಗಳು:
'ಸತ್ತ ಮೇಲೆ ದುಡ್ಡನ್ನೇನು ತಲೆಯಮೇಲೆ ಹೊತ್ತುಕೊಂಡು ಹೋಗಲಾಗುವುದಿಲ್ಲ' ಎಂಬ ಪ್ರಸಿದ್ಧ ನಾಣ್ನುಡಿ ಸುಳ್ಳಾಗುವ ಕಾಲ ಸಮಿಪಿಸುತ್ತಿದೆ! ಡಿಜಿಟಲೀಕರಣದ ಈ ಹೊಸ ಜಮಾನದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಎಲ್ಲ ಬಗೆಯ ನೋಟುಗಳು, ನಾಣ್ಯಗಳು ಮರೆಯಾಗಿ ಕೇವಲ ಆನ್ಲೈನ್ ಮುಖಾಂತರದ ಹಣವನ್ನು ಕಾಣುವ ದಿನಗಳು ಅದಾಗಲೇ ಬಹುಪಾಲು ಜನರ ದಿನಚರಿಯಲ್ಲಿ ಒಂದಾಗತೊಡಗಿದೆ. ಅದಾಗಲೇ ಗೋಪ್ಯನಾಣ್ಯ (ಬಿಟ್ ಕರೆನ್ಸಿ) ಗಳೆಂಬ ‘ಆನ್ಲೈನ್ ಕರೆನ್ಸಿ’ಗಳು ಮಾರುಕಟ್ಟೆಯನ್ನು ಅವರಿಸುತ್ತಿವೆ. ಇದು ಸಾಂಪ್ರದಾಯಿಕ ಹಣಕಾಸು ವ್ಯವಹಾರಗಳಿಗೆ ತೀರಾ ಭಿನ್ನವಾಗಿದ್ದು, ವಿಕೇಂದ್ರೀಕೃತ (ಬ್ಯಾಂಕ್ ಅಥವಾ ಮತ್ಯಾವುದೇ ಹಣಕಾಸು ಸಂಸ್ಥೆಗಳ ಅಧೀನಕ್ಕೆ ಒಳಪಟ್ಟಿರದ ಒಂದು ಜಾಲ) ಮಾದರಿಯನ್ನು ಒಳಗೊಂಡಿದೆ. ಇಡೀ ಪ್ರಪಂಚದಾದ್ಯಂತ ಏಕ ಮಾತ್ರದ ಡಿಜಿಟಲ್ ಕರೆನ್ಸಿಯ ರೂಪ! ಇನ್ನೇನಿದ್ದರೂ ಇಂತಹ ಡಿಜಿಟಲ್ ಕರೆನ್ಸಿಗಳು ಹಾಗು ಡಿಜಿಟಲ್ ವ್ಯವಸ್ಥೆ ಎಲ್ಲಾ ವರ್ಗದ ಜನರಿಗೆ ಅದೆಷ್ಟು ಬೇಗನೆ ತಲುಪಲಿದೆ ಎಂಬುದು ಮಾತ್ರವೇ ಆಗಿದೆ. ಡಿಜಿಟಲೀಕರಣ ಕೇವಲ ನೋಟುಗಳ ಕಾಟವನು ತಪ್ಪಿಸುವುದಲ್ಲದೆ ಪಾರದರ್ಶಕ ವ್ಯವಹಾರಗಳಿಗೂ ಇಂಬು ಕೊಡುತ್ತದೆ. ಆದರಿಂದಲೇ ಹತ್ತಾರು ದೇಶಗಳು ತಮ್ಮ ಪ್ರಜೆಗಳಿಗೆ ಆದಷ್ಟು ಬೇಗನೆ ಸಂಪೂರ್ಣ ಆನ್ಲೈನ್ ಟ್ರಾನ್ಸಾಕ್ಷನ್ಸ್ ಗಳಿಗೆ ಸಿದ್ಧರಾಗಲು ಹುರಿದುಂಬಿಸುತ್ತಿವೆ. ಆಗ ತನ್ನ ತಾತನ ಕಾಲದಿಂದ ಕೂಡಿಟ್ಟ ಹಣದ ರಾಶಿಯನ್ನು ಹೆಣದೊಟ್ಟಿಗೆಯೆ ಮಲಗಿಸಿ ಕಳಿಸಬೇಕಾಗುವುದೇನೋ ಯಾರು ಬಲ್ಲರು?!

ಕ್ಯಾಮೆರಾ :
ಆಧುನೀಕರಣವೆನ್ನುವ ಓಟದ ಮುಂದೆ ವೇಗೋತ್ಕರ್ಷವೂ ನಿಧಾನವೆಂದೆನಿಸುವುದು ಕ್ಯಾಮರಾಗಳ ಬಗ್ಗೆ ಯೋಚಿಸಿದಾಗ. ಹೆಚ್ಚೇನೂ ಅಲ್ಲ ಕೇವಲ ದಶಕಗಳ ಹಿಂದಷ್ಟೇ ನಾವುಗಳು ಕ್ಯಾಮೆರಾ ಒಂದನ್ನು ಕೊಂಡರೆ ಜೊತೆಗೆ ಸಣ್ಣ ನಶ್ಯಡಬ್ಬಿಯ ಆಕಾರದ ರೀಲುಗಳಿಗೂ ಕಾಸು ಚೆಲ್ಲಬೇಕಿದ್ದಿತು. ಫೋಟೋಗಳನ್ನು ತೆಗೆದ ನಂತರ ಮತ್ತೆ ಅದೇ ಅಂಗಡಿಗೆ ಓಟ ಕಿತ್ತು, ಮತ್ತೊಂದಿಷ್ಟು ಹಣವನ್ನು, ಸಮಯವನ್ನು ತೆತ್ತು ಕಾಯಂಪ್ರತಿಯೊಂದನ್ನು ಪಡೆಯುವಷ್ಟರಲ್ಲಿ ಸಾಕು ಸಾಕಪ್ಪ ಎಂದನಿಸುತಿತ್ತು. ಇವೆಲ್ಲ ಕಿರಿಕಿರಿಗಳಿಗೂ ಬ್ರೇಕ್ ಹಾಕಿದಂತೆ ಬಂದದ್ದೇ ಡಿಜಿಟಲ್ ಕ್ಯಾಮೆರಾಗಳು. ಎಲ್ಲೆಂದರಲ್ಲಿ ಸಮಾದಾನವಾಗುವವರೆಗೂ ಚಕ ಚಕನೆ ಫೋಟೋಗಳನ್ನು ಕ್ಲಿಕ್ಕಿಸಿ ತಮ್ಮ ಕಂಪ್ಯೂಟರ್ಗಳಿಗೆ ಜೋಡಿಸಿದರೆ ಸಾಕು. ನೂರು, ಸಾವಿರ ಫೋಟೋಗಳ ರಾಶಿ ಯಾವುದೇ ತೊಳೆಯುವಿಕೆ, ಹೊಳೆಯುವಿಕೆ ಎಂಬ ತಾಪತ್ರಯವಿಲ್ಲದೆ ಪರದೆಯ ತುಂಬ ಮೂಡಿಬಿಡುತ್ತವೆ. ಪರಿಣಾಮ ಒಂದುಕಾಲದಲ್ಲಿ ಐಶಾರಾಮತೆಯ ವಸ್ತುಗಳಲ್ಲಿ ಒಂದೆನಿಸಿದ್ದ ರೀಲ್ ಕ್ಯಾಮೆರಾಗಳು ಇಂದು ಮರೆಯಾಗಿವೆ. ಅಂದ ಮಾತ್ರಕ್ಕೆ ಪ್ರಸ್ತುತ ಜಾರಿಯಲ್ಲಿರುವ ಡಿಜಿಟಲ್ ಕ್ಯಾಮೆರಾಗಳೇನೂ ಶಾಶ್ವತವಲ್ಲ. ಮೊಬೈಲ್ ಫೋನುಗಳ ಭರಾಟೆಯಲ್ಲಿ ಅವುಗಳೂ ನಶಿಸುವ ಅಂಚಿನಲ್ಲಿವೆ. ಡಿಜಿಟಲ್ ಕ್ಯಾಮೆರಾಗಳಿಗಿಂತಲೂ ಉತ್ಕೃಷ್ಟವಾದ ಮೊಬೈಲ್ ಕ್ಯಾಮೆರಾಗಳು ಇಂದು ಮಾರುಕಟ್ಟೆಗೆ ಬಂದಿವೆ. ಸಕಲವೂ ಅಂಗೈಯಷ್ಟಿನ ಮೊಬೈಲ್ ಒಂದರಲ್ಲೆ ಸಿಗುತ್ತಿರುವಾಗ ಸಾವಿರಾರು ರೂಪಾಯಿಗಳನ್ನು ಕ್ಯಾಮೆರಾಗಳಿಗೆ ಪ್ರತ್ಯೇಕವಾಗಿ ಸುರಿಯುವುದು ಇನ್ನು ಮುಂದೆ ಹಾಸ್ಯಾಸ್ಪದವೆಂದೆನಿಸದಿರದು. ಅದೇನೇ ಇರಲಿ ಇಂದಿನ ನಾವುಗಳು ಕಪ್ಪುಬಿಳುಪಿನ ಕಾಯಂಪ್ರತಿಯ ಕಾಲದಿಂದ ಸೆಲ್ಫಿ ಎಂಬ ಹೊಸ ಪದವನ್ನೇ ಹುಟ್ಟಿಹಾಕಿದ ಯುಗಗಳೆರಡನ್ನೂ ಕಂಡು ಅನುಭವಿಸಿದ್ದೇವೆ. ಪುಳಕಗೊಂಡಿದ್ದೇವೆ.

ಫ್ಲಾಪಿ ಡಿಸ್ಕ್, ಸಿಡಿ ಡ್ರೈವ್ ಹಾಗು ಪೆನ್ ಡ್ರೈವ್ :
ಒಂದು ಸಣ್ಣಗಾತ್ರದ ಡಾಟಾವನ್ನು ಸೇವ್ ಮಾಡಲು ಇಡೀ ಕೋಣೆಯ ಗಾತ್ರದ ಯಂತ್ರವನ್ನು ಬಳಸುತ್ತಿದ್ದ ದಿನಗಳು ಕೆಲವರಿಗೆ ತಿಳಿದಿರಬಹುದು. ಅವೇ ದಿನಗಳು ಬರಬರುತ್ತ ಸಿಡಿ ಡ್ರೈವ್, ಫ್ಲಾಪಿ ಡಿಸ್ಕ್, ಪೆನ್ ಡ್ರೈವ್, ಹಾರ್ಡ್ ಡ್ರೈವ್, ಮೆಮೊರಿ ಕಾರ್ಡ್ ಗಳೆಂಬ ಸೂಕ್ಷ್ಮಾತಿಸೂಕ್ಷ್ಮ ಶೇಖರಣ ವಿಧಾನಗಳನ್ನು ಕಂಡುಕೊಂಡವು. ಅಂದು ಒಂದು ಕೋಣೆಯ ಗಾತ್ರದ ಯಂತ್ರದಲ್ಲಿ ಏನನ್ನು ಶೇಖರಿಸಿ ಇಡಬಹುದಿದ್ದಿತೋ ಇಂದು ಅದೇ ಡಾಟಾವನ್ನು ಕೇವಲ ಕಿರುಬೆರಳ ಉಗುರಿನ ಗಾತ್ರದ 'ಚಿಪ್ಪಿ'ನಲ್ಲಿ ಉದುಗಿಸಿಡಬಹುದು! ಹೀಗೆಯೇ ಮುಂದುವರೆದರೆ ಮುಂದೇನು ಎಂಬುವವರಿಗೆ ಪ್ರಸ್ತುತ ಸಂಶೋಧನ ವಲಯ ನೀಡಿದ ಉತ್ತರ 'ಕ್ಲೌಡ್ ಸ್ಟೋರೇಜ್'. ಹಾಲಿ ಚಾಲ್ತಿಯಲ್ಲಿರುವ ಭಾಗಶಃ ಎಲ್ಲ ಬಗೆಯ ಶೇಖರಣ ವಿಧಾನಗಳು ಇನ್ನು ಮುಂದೆ 'ವರ್ಚುಯಲ್ ' (ಆನ್ಲೈನ್ ಸರ್ವರ್ ಗಳಲ್ಲಿ ಶೇಖರಿಸಿಡುವ ವಿಧಾನ) ಆಗಲಿವೆ. ಅದಾಗಲೇ ಅದೆಷ್ಟೋ ಕಂಪ್ಯೂಟರ್ಗಳಲ್ಲಿ USB ಪೋರ್ಟ್ಗಳೇ ಬರುತ್ತಿಲ್ಲವೆಂದರೆ ಕ್ಲೌಡ್ ಸ್ಟೋರೇಜ್ಗಳ ಮೇಲಿನ ನಂಬಿಕೆ ಅದೆಷ್ಟರ ಮಟ್ಟಿಗೆ ಗಟ್ಟಿಯಿದೆ ಎಂಬುದನ್ನು ಊಹಿಸಬಹುದು. ಒಟ್ಟಿನಲ್ಲಿ ದಶಕಗಳ ಹಿಂದಷ್ಟೇ ಕಂಪ್ಯೂಟರ್ ಒಂದನ್ನು ತನ್ನ ಮನೆಯ ಟೇಬಲ್ಲಿನ ಮೇಲೆ ಕಾಣುವುದೇ ಯಾವುದೊ ಜನ್ಮದ ಪುಣ್ಯವೆಂದು ಭಾವಿಸಿದ್ದ ಮಕ್ಕಳು ಇಂದು ಅದೇ ಕಂಪ್ಯೂಟರನ್ನು ನೋಟ್ ಬುಕ್ಕಿನಂತೆ ಮಡಚಿ (ಸಂಕುಚಿತಗೊಂಡ ಶೇಕರಣ ವಿಧಾನದಿಂದ) ಬ್ಯಾಗಿನೊಳಗೆ ಗಿಡುಗಿಕೊಂಡು ಎಲ್ಲೆಂದರಲ್ಲಿ ಸುತ್ತಬಹುದಿತ್ತು ಎಂಬುದನ್ನು ಅಂದು ತಮ್ಮ ಕನಸ್ಸಿನಲ್ಲೂ ಊಹಿಸಿರಲು ಸಾಧ್ಯವಿಲ್ಲವೆಂದೆನಿಸುತ್ತದೆ.


ಗಣಕಯ೦ತ್ರ (Calculator) :
ಕ್ಯಾಲ್ಕುಲೇಟರ್ ಎಂದ ಮಾತ್ರಕ್ಕೆ ಬಹುಪಾಲು ಮಂದಿಗೆ ನೆನಪು ಬರುವುದು 0.7734 (HELLO), 4377 (HELL) ಹಾಗು ಇನ್ನು ಕೆಲವು ಅಡಲ್ಟ್ರಿ (ಆಗಿನ ಕಾಲಕ್ಕೆ!) ಅರ್ಥವನ್ನು ಬಿತ್ತುವ ಅಂಕೆಯಿಂದ ಮೂಡುವ ಪದಗಳು. ಎದೆ ಜೇಬಿನ ಒಳಗೆ ಪರೀಕ್ಷೆಗೆ ಕೊಂಡೊಯ್ಯಲು ಮನೆಯವರಿಗೆಲ್ಲ ಕಾಟ ಕೊಟ್ಟು, ಅತ್ತು ಒದ್ದಾಡಿ ಪಡೆದುಕೊಂಡು ಕೊನೆಗೆ ಹೆಚ್ಚಾಗಿ ಅವುಗಳಲ್ಲಿ ಮಾಡುತ್ತಿದ್ದದ್ದು ಇಂತಹ ಸರ್ಕಸ್ಗಳನ್ನೇ! ಇನ್ನು ಕೆಲವರು ಪರೀಕ್ಷೆಯಲ್ಲಿ ಕಾಪಿ-ಗೀಪಿ ಒಡೆಯಲು ಹೇಗಾದರೂ ಸಾಧ್ಯವಿದೆಯೇ ಎಂದು ದಿನವೆಲ್ಲ ಗೋಳಾಡಿ ಆಗಿನ ಕಾಲಕ್ಕೆ ಇವುಗಳ ಮೇಲೆ ಪಿಎಚ್ಡಿ ಗಳನ್ನೂ ಮಾಡಿರುವವರೂ ಉಂಟು. ಒಟ್ಟಿನಲ್ಲಿ ಕ್ಲಿಷ್ಟ ಲೆಕ್ಕಾಚಾರಗಳ ಸ್ಪಷ್ಟ ನಿವಾರಕನಾಗಿ ಜನಸಾಗರದಲ್ಲಿ ಬೆರೆತು ಹೋಗಿದ್ದ ಈ ಕ್ಯಾಲ್ಕುಲೇಟರ್ ಗಳು ಇಂದು ಮೂಲೆಗುಂಪನ್ನು ಹಿಡಿಡಿಯುತ್ತಿವೆ. ಇವುಗಳ ರಿಪ್ಲೇಸೆಮೆಂಟ್ ಗಳೂ ಸಹ ಸರ್ವವ್ಯಾಪಿ ಸಂಪನ್ನರಾದ ಮೊಬೈಲ್ ಮಹಾಶಯರುಗಳೇ. ಹೇಗೆ, ಏನು ಎಂಬುದರ ವಿವರಣೆಯನ್ನೇನು ಹೆಚ್ಚಾಗಿ ಹೇಳುವ ಅಗತ್ಯವೆಂದುಕೊಳ್ಳುವೆ.

ಲ್ಯಾಂಡ್ ಲೈನ್ ಫೋನುಗಳು:
ಬೋರ್ವೆಲ್ಲಿನ ಕುತ್ತಿಗೆಯನ್ನು ಹಿಡಿದೆಳೆದು, ಶಾವಿಗೆ ಪಾಯಸದಂತಹ ವೈರುಗಳನ್ನು ಅದರ ಬುಡದಲ್ಲಿ ರಾಶಿ ರಾಶಿಯಾಗಿ ಚೆಲ್ಲಿ, ಮೆಳೆಗಾಲದಲ್ಲಿ ಸತ್ತೂ ಬದುಕಿದಂತೆ ಆಗೊಮ್ಮೆ ಈಗೊಮ್ಮೆ ಜೀವವನ್ನು ಪಡೆದುಕೊಳ್ಳುತ್ತಾ ಇರುತ್ತಿದ್ದ ಇವುಗಳು ಇಷ್ಟು ಬೇಗನೆ ತೆರೆಮರೆಗೆ ಸರಿದವೆಂದರೆ ನಂಬಲಸಾಧ್ಯ. ಕರೆಂಟು ಕಂಬಗಳಂತೆ ಇವುಗಳಿಗೇ ಪ್ರತ್ಯೇಕವಾದ ಕಂಬಗಳನ್ನು ನೆಡಿಸಿ, ಕಾಡು, ಹಳ್ಳ, ತೋಟವನ್ನೆಲ್ಲ ದಾಟಿಕೊಂಡು ಬರುತ್ತಿದ್ದ ಇವುಗಳ ಜಾಲ ಇಂದು ಕೇವಲ ಆಫೀಸ್ ಗಳಿಗೆ ಮಾತ್ರ ಸೀಮಿತವಾಗಿದೆ ಅಷ್ಟೇ. ಅತ್ತ ಕಡೆಯಿಂದ ಸತ್ತು ಬಿದ್ದಿರುವ ಮತ್ತೊಂದು ಫೋನಿಗೆ ಫೋನಾಯಿಸಿದಾಗ ಬರುತ್ತಿದ್ದ ಟೋನ್ ಗಳನ್ನೇ ಇಂಪಾದ ಸಂಗೀತವೇನೋ ಎಂಬುವ ಮಟ್ಟಿಗೆ ಕೇಳುತ್ತಾ ಹಿರಿಯರಲೊಬ್ಬರು ಬೈಯುವವರೆಗೂ ಕಿವಿಯ ಮೇಲೆ ಒತ್ತಿಕೊಂಡ ರಿಸೀವರ್ ಅನ್ನು ಕೆಳಗಿಡದ ಆ ದಿನಗಳನ್ನು ನೆನೆದರೆ ಇಂದು ಹೊಟ್ಟೆ ಬಿರಿಯುವಷ್ಟು ನಗು ಬರುವುದಂತೂ ಸುಳ್ಳಲ್ಲ. ಒಟ್ಟಿನಲ್ಲಿ ಮತ್ತದೇ ಮೊಬೈಲ್ ಫೋನುಗಳ ಭರಾಟೆಯಲ್ಲಿ ಲ್ಯಾಂಡ್ ಲೈನ್ ಗಳೆಂಬ ಇಪ್ಪತ್ತನೇ ಶತಮಾನದ ಅದ್ಭುತ ಅನ್ವೇಷಣೆಯೊಂದು ಇಂದು ತೆರೆಮರೆಗೆ ಸರಿದಿದೆ.


ಹೀಗೆ ದಿನ ಕಳೆದಂತೆ ನಾವುಗಳು ಯಾವುದನ್ನು ಅತ್ಯುತ್ತಮವೆಂದು ಭಾವಿಸಿರುತ್ತೇವೆಯೋ ನಾಳೆಯೇ ಅದು ನಮಗೆ ಬೇಡವಾಗಿಬಿಟ್ಟಿರುತ್ತದೆ. ಇದೆ ಸ್ಥಿತ್ಯಂತರದ ಯುಗ. ಸ್ಲೇಟು-ಬಳಪ, ಬ್ಯಾಗು-ಪುಸ್ತಕ, ಭೂಪಟಗಳು, ಡಿವಿಡಿ ಪ್ಲೇಯರ್ಗಳು, ಟೇಪ್ ರೆಕಾರ್ಡ್ಸ್ಗಳು, ಅಷ್ಟೇ ಅಲ್ಲದೆ ಫ್ಯಾಕ್ಸ್ ಮಷೀನ್ಗಳೂ, ವಾಚುಗಳೂ ಇಂದು ವಿದಾಯದ ವೇಳೆಯಲ್ಲಿವೆ. ಇನ್ನು ಕೊಂಚ ದೂರಾಲೋಚನೆ ಮಾಡಿದರೆ ಮಾನವನ ಮಾತುಗಳು, ಬರೆಯುವ ಲಿಪಿಗಳು, ಹೊರಾಂಗಣ ಆಟೋಟಗಳು ಕೊನೆಕೊನೆಗೆ ಆತನ ಬದಲಿಗೆ ಯಂತ್ರಗಳೇ ಈ ಜಗತ್ತನ್ನು ಅವರಿಸಿದರೂ ಆಶ್ಚರ್ಯ ಪಡಬೇಕಿಲ್ಲ. ಆಗಿನ ಕಾಲದಲ್ಲಿ ಎಲ್ಲವೂ ಎಲ್ಲರಿಗೂ ಸಿಗುತ್ತಿರಲಿಲ್ಲ. ಆದರಿಂದಲೋ ಏನೋ ಮಾನವ ತನ್ನಲ್ಲಿದ್ದ ಚಿಕ್ಕ ಪುಟ್ಟ ವಸ್ತುಗಳಲ್ಲೇ ಸಂತೋಷಪಡುತ್ತಿದ್ದ. ಸುಖಿಯಾಗಿರುತ್ತಿದ್ದ. ವಾರಕ್ಕೊಮ್ಮೆ ಬರುತ್ತಿದ್ದ ಚಲನಚಿತ್ರ ವೀಕ್ಷಣೆಗೇ ಮಿಕ್ಕಿದ ಆರು ದಿನಗಳು ವಾದ ಸಂವಾದಗಳು ನೆಡೆಯುತ್ತಿದ್ದವು. ದೂರದ ಊರಿನಿಂದ ಅಪ್ಪನೋ, ಅಕ್ಕನೋ,ತಮ್ಮನ್ನೂ ಬರೆಯುತ್ತಿದ್ದ ಕಾಗದದ ನಿರೀಕ್ಷೆಯ ಸಂತೋಷವೆಲ್ಲಿ? ಒಂದು ನಿಮಿಷವೂ ನಮ್ಮವರು 'ಆಫ್ ಲೈನ್' ಆದರೆ ಪ್ರಾಣಪಕ್ಷಿಯೇ ಹಾರಿಹೋದಂತೆ ಆಡುವ ಇಂದಿನ ಕಾಲದಲ್ಲಿ ಅಂದು ತಿಂಗಳುಗಟ್ಟಲೆ ಯಾವುದೇ ಮೊಬೈಲ್, ಇಂಟರ್ನೆಟ್ ಗಳೆಂಬ ಆಧಾರಗಳಿಲ್ಲದಯೇ ಮನೆಯಿಂದ ಹೊರಗಿರುತ್ತಿದ್ದಾಗ ಇರುತ್ತಿದ್ದ ಧೈರ್ಯವೆಲ್ಲಿ? ಒಟ್ಟಿನಲ್ಲಿ ಪ್ರಸ್ತುತ ಮಾನವನಿಗೆ ಕ್ಷಣಮಾತ್ರದಲ್ಲಿ ಮನಸ್ಸಿಗೆ ಬೇಕೆನಿಸಿದ್ದು ದೊರೆಯತೊಡಗಿದೆ. ಇರದಿರುವುದನ್ನು ಪಡೆಯುವುದರಲ್ಲೇ ಜೀವನದ ಖುಷಿ ಎಂಬುದು ಅಡಗಿದೆ. ಆದರೆ ಇಂದು ಬೇಕಿರದ್ದನ್ನೂ ಬೇಕಾಗಿರುವುದಕ್ಕಿಂತ ಹೆಚ್ಚಾಗಿಯೇ ಪಡೆದುಕೊಂಡಿರುವ ಮಾನವನ ಮುಂದಿನ ದಿನಗಳು ಗುರಿಯಿರದ ನೆಡೆಯಂತಾದರೂ ಸುಳ್ಳಾಗದು. ಮೊಬೈಲ್ ಇಂಟರ್ನೆಟ್ಗಳೆಂಬ ಶತಮಾನದ ಅನ್ವೇಷಣೆಗಳು ಮಿಕ್ಕುಳಿದ ಇನ್ನೂ ಅದೆಷ್ಟು ವಸ್ತುಗಳನ್ನು ಬದಲಾಯಿಸುತ್ತವೆಯೋ ಅಥವಾ ಬದಲಾವಣೆಯ ಕಾಲದಲ್ಲಿ ಅವುಗಳೇ ಬದಲಾಗಿ ಬೇರೊಂದು ರೂಪವನ್ನು ಧರಿಸುತ್ತವೆಯೋ ಕಾದು ನೋಡಬೇಕು ಎಂದಿದೆ ಸ್ಥಿತ್ಯಂತರದ ಕಾಲ!

Thursday, December 7, 2017

ಗಳಿಸಬೇಕು ಒಂದು ದಿನ, ಗಳಿಸಿದ್ದನ್ನು ಕೊಡಲೂಬೇಕಿದೆ ಎಮ್ಮ ಮನ!

ಆತ ಪ್ರಪಂಚದ ಅತಿರಥ ಶ್ರೀಮಂತ. ಆಸ್ತಿಯ ಮೊತ್ತ ಸುಮಾರು ಐದುಕಾಲು ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು! ಕಾಲೇಜಿನಿಂದ ಹೊರಬಿದ್ದು ಮುಂದೆ ಇನ್ನೇನೂ ಸಾಧ್ಯವಲ್ಲ ಎಂಬಂತಿದ್ದ ಹುಡುಗನೊಬ್ಬನಿಂದ ಈ ಮಟ್ಟಿನ ಬೆಳವಣಿಗೆ ಸಾಧ್ಯವೆ ಎಂಬುದು ಇಂದಿಗೂ ಹಲವರಲ್ಲಿ ಕಾಡುತ್ತಿರುವ ಜಟಿಲ ಪ್ರೆಶ್ನೆ. ಇವನೊಟ್ಟಿಗೆ ಮತ್ತೊಬ್ಬನಿದ್ದಾನೆ. ಇಂದಿಗೂ ಕೀಲಿಮಣೆಯ ದಶಕದಷ್ಟು ಹಳೆಯ ಮೊಬೈಲ್ ಫೋನನ್ನೇ ಉಪಯೋಗಿಸುವ ಈತ ಸುಮಾರು ನಾಲ್ಕುವರೆ ಲಕ್ಷ ಕೋಟಿ ರೂಪಾಯಿಗಳ ಒಡೆಯ! ಕೋಕಾ ಕೋಲಾ, ವೀಕ್ಲಿ ಮ್ಯಾಗಜಿನ್, ಚೆವಿಂಗ್-ಗಮ್ ಗಳನ್ನು ಮಾರುತ್ತಿದ್ದ ಈ ಪೋರ 'ಲಕ್ಷ ಗಳಿಕೆಗಿರುವ ಸಾವಿರ ಮಾರ್ಗಗಳು' ಎಂಬಂತಹ ಒಂದು ಪುಸ್ತಕದಿಂದ ಪ್ರೇರಣೆ ಪಡೆದು ಈ ಮಟ್ಟಿಗೆ ಬೆಳೆದ ಎಂದರೆ ನೀವು ನಂಬಲೇಬೇಕು!

ಕಳೆದ ಹಲವು ದಶಕಗಳಿಂದ ಪ್ರಪಂಚದ ಅತಿ ದೊಡ್ಡ ಶ್ರೀಮಂತರ ಪಟ್ಟಿಯ ಅಗ್ರಸ್ಥಾನದಲ್ಲಿ ರಾರಾಜಿಸುವ ಇವರಿಬ್ಬರ ಹೆಸರನ್ನು ಕೇಳದಿರುವವರು ಅತಿ ವಿರಳ ಎನ್ನಬಹದು. ಮೊದಲನೆಯವ ದೈತ್ಯ ಮೈಕ್ರೋಸಾಫ್ಟ್ ಕಂಪನಿಯ ಸಂಸ್ಥಾಪಕ ಬಿಲ್ ಗೇಟ್ಸ್ ಎಂದಾದರೆ ಇನ್ನೊಬ್ಬ ಷೇರು ಮಾರುಕಟ್ಟೆಯ ಪ್ರಚಂಡ ಹೂಡಿಕೆದಾರ ವಾರೆನ್ ಬಫೆಟ್. ಇಂದು ಇವರಿಬ್ಬರ ಹೆಸರನ್ನು ಇಲ್ಲಿ ಪ್ರಸ್ತಾಪಿಸುತ್ತಿರಲು ಕಾರಣವಿದೆ. ಗಳಿಕೆಯ ಸಾರ್ಥಕತೆಯ ಶೃಂಗವನ್ನು ಇಲ್ಲಿ ಕಾಣಬಹುದಾಗಿದೆ. ವಿಶ್ವದ ಹಿರಿಯ ಶ್ರೀಮಂತದ್ವಯರು ಎಂಬ ವಿಶೇಷಣವಷ್ಟೇ ಅಲ್ಲದೆ ಮತ್ತೊಂದು ಬಹು ಮುಖ್ಯ ಗುಣ ಇವರಿಬ್ಬರನ್ನು ಒಂದಾಗಿ ಬೆಸೆದಿದೆ. ಇದು ವಿಶ್ವದ ಹಲವು ದೊಡ್ಡ ಕುಳಗಳ ತನು-ಮನದಲ್ಲೂ ಅಷ್ಟಾಗಿ ಚಿಗುರದ ಆಲೋಚನೆ. ಗಳಿಸುವ ಸಂಪತ್ತೂ ಹೆಮ್ಮೆಯಿಂದ ಸಂಭ್ರಮಿಸುವ ನೆಡೆ. ಅದೇ ಫಿಲಾಂತ್ರೋಫಿ / ಲೋಕೋಪಕಾರಿಕೆ. ಇಂದು ಫಿಲಾಂತ್ರೋಫಿ ಎಂಬ ಹೆಸರಿನಲ್ಲಿ ನೂರಾರು ಕಂಪನಿಗಳು ತಮ್ಮ ಕೈಲಾದ ಸಮಾಜ ಕಲ್ಯಾಣ ಕಾರ್ಯಗಳನ್ನು ಮಾಡುತ್ತಿರುವುದು ನಮಗೆ ಕಾಣಸಿಗುವ ವಿಷಯವೇ. ಆದರೆ ಈ ಇಬ್ಬರು ಮಹಾಶಯರ ಕಲ್ಯಾಣಕಾರ್ಯ ಇಂತಹ ದಿನನಿತ್ಯದ ನೂರಾರು ಫಿಲಾಂತ್ರೋಫೇರ್ಸ್ ಗಳಿಂಗಿಂತ ಸಾವಿರ ಪಟ್ಟು ಮಿಗಿಲಾದುದು ಎನ್ನಬಹುದು. ಸಮಾಜ ಕಲ್ಯಾಣವೆಂದರೆ ಮೂಗು ಮುರಿಯುವ ಪ್ರಸ್ತುತ ಕಾಲದಲ್ಲಿ ಲೋಕೋಪಯೋಗಿ ಕಾರ್ಯಗಳನ್ನು ಹೀಗೆ ಸಣ್ಣ ಅಥವ ದೊಡ್ಡ ಎಂಬ ಅಳತೆಗೋಲುಗಳಿಂದ ಅಳೆಯುವುದು ಸಮಂಜಶವಲ್ಲದಾದರೂ ಇವರಿಬ್ಬರ ವಿಷಯದಲ್ಲಿ ಅದು ಕೊಂಚ ಗೌಣವಾಗುತ್ತದೆ.

2010ರಲ್ಲಿ ಈ ನಿಟ್ಟಿನಲ್ಲಿ ಕೈಜೋಡಿಸಿದ ಈ ದಿಗ್ಗಜರು ತಮ್ಮ ಆಸ್ತಿಯ ಸುಮಾರು ಅರ್ದದಷ್ಟು ಹಣವನ್ನು ಸಮಾಜ ಕಲ್ಯಾಣ ಸೇವೆಗಳಿಗಾಗಿ ಮುಡಿಪಾಗಿಡುವ ಪ್ರತಿಜ್ಞೆಯನ್ನು (Pledge ) ಮಾಡಿದರು! ಇದರ ಬೆನ್ನಲ್ಲೇ 'ದಿ ಗಿವಿಂಗ್ ಪ್ಲೆಡ್ಜ್' ಎಂಬ ಚಾರಿಟಬಲ್ ಸಂಸ್ಥೆಯನ್ನು ಸ್ಥಾಪಿಸಿದ ಜೋಡಿ ವಿಶ್ವದ ಶ್ರೀಮಂತರೆಲ್ಲರೂ ತಮ್ಮ ಆಸ್ತಿಯ ಅರ್ದದಷ್ಟು ಹಣವನ್ನು ಲೋಕೋಪಯೋಗಿ ಕಾರ್ಯಗಳಿಗೆ ವಿನಿಯೋಗಿಸಬೇಕೆಂದು ಕೇಳಿಕೊಂಡರು. ವಾರೆನ್ ಬಫೆಟ್ ಇನ್ನೂ ಒಂದೆಜ್ಜೆ ಮುಂದೆ ಹೋಗಿ ತನ್ನ ಸಂಪತ್ತಿನ ಶೇಕಡಾ 99 ರಷ್ಟನ್ನು ಇಂತಹ ಕಾರ್ಯಗಳಿಗೆ ವಿನಿಯೋಗಿಸಲು ಮುಂದಾಗುತ್ತಾನೆ! ಹೀಗೆ ಶುರುವಾದ 'ದಿ ಗಿವಿಂಗ್ ಪ್ಲೆಡ್ಜ್' ಸಂಸ್ಥೆ ಇಂದು ವಿಶ್ವದ ಸುಮಾರು 158 ಶ್ರೀಮಂತರ ಮನಒಲಿಸುವಲ್ಲಿ ಯಶಸ್ವೀಯಾಗಿದೆ. ತಮ್ಮ ಅರ್ದಕ್ಕಿಂತಲೂ ಹೆಚ್ಚಿನ ಸಂಪತ್ತನ್ನು ಲೋಕ ಕಲ್ಯಾಣ ಕಾರ್ಯಗಳಿಗೆ ಮುಡಿಪಾಗಿಡಲು ಪ್ರೇರೇಪಿಸಿದೆ. ಇಷ್ಟೆಲ್ಲಾ ಜನರನ್ನು ಒಲಿಸಿ, ಒಪ್ಪಿಸಿದರೆ ಎಷ್ಟೆಲ್ಲಾ ಮೊತ್ತದ ಸಂಪತ್ತು ಬಂದಿರಬಹುದು ಎಂಬ ಗುಣಸಹಜ ಪ್ರೆಶ್ನೆ ಸಾಮಾನ್ಯರಾದ ನಮ್ಮಲ್ಲಿ ಬಾರದೆ ಇರದು. ಅದರ ಮೊತ್ತ ಸುಮಾರು ಇಪ್ಪತೈದು ಲಕ್ಷ ಕೋಟಿ ರೂಪಾಯಿಗಳು! (2017-18 ನೇ ಸಾಲಿನ ಕರ್ನಾಟಕ ಸರ್ಕಾರದ ಆಯವ್ಯಯದ ಒಟ್ಟು ಮೊತ್ತವೇ ಹತ್ತಿರ ಹತ್ತಿರ ಎರಡು ಲಕ್ಷ ಕೋಟಿ ರೂಪಾಯಿಗಳು.) 'ಜೋಕ್ ಮಾಡ್ಬೇಡಿ ಸುಮ್ನಿರಿ ಸಾರ್' ಎಂಬ ಒಬ್ಬ ಸಾಮಾನ್ಯನ ಅಲಷಿಸುವ ಮಾತಿಗೆ ಮತ್ತಷ್ಟು ವಿಸ್ಮಯವನ್ನು ಮೂಡಿಸುವ ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾದ ನಂದನ್ ನೀಲ್ಕಣಿ. ಕಳೆದ ತಿಂಗಳು ನಿಲ್ಕಣಿ ದಂಪತಿ ತಮ್ಮ ಸಂಪತ್ತಿನ ಅರ್ದದಷ್ಟು ಅಂದರೆ ಸುಮಾರು 5500 ಕೋಟಿ ರೂಪಾಯಿಗಳಷ್ಟನ್ನು ಸಮಾಜಸೇವಾ ಕಾರ್ಯಗಳಿಗೆ ಮುಡಿಪಾಗಿಡುವರೆಂದು ಘೋಷಿಸಿಕೊಂಡಿದ್ದಾರೆ. ಅಲ್ಲದೆ ವಿಪ್ರೋ ಸಂಸ್ಥೆಯ ಅಜೀಮ್ ಪ್ರೇಮ್ಜಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಂಜುದಾರ್ ಷಾ, ಶೋಭಾ ಡೆವೆಲಪರ್ಸ್ನ PNC ಮೆನನ್ ಹಾಗು ಭಾರತಿ ಏರ್ಟೆಲ್ ನ ಸುನಿಲ್ ಮಿತ್ತಲ್ ಕುಟುಂಬ ಈ ಒಪ್ಪಂದಕ್ಕೆ ಸಹಿ ಹಾಕಿರುವ ಇತರ ಭಾರತೀಯರು.

ನೂರಾರು, ಸಾವಿರಾರು ಸರ್ಕಾರಗಳು ನಾಯಕರುಗಳು ಸಮಾಜದ ಸರ್ವ ಕಾರ್ಪಣ್ಯಗಳನ್ನು ನಿವಾರಿಸಬಲ್ಲವರೆಂದು ಅರಚಿ, ಬಂದು, ಬೆಳಗಿ ಮರೆಯಾದರೂ ಇಂದಿಗೂ ಅಪೌಷ್ಟಿಕತೆ, ಆಹಾರದ ಕೊರತೆ, ಕುಡಿಯುವ ನೀರಿನ ಕೊರತೆ, ಮೂಲಭೂತ ಶಿಕ್ಷಣದ ಅಭಾವ, ಕನಿಷ್ಠ ಸೂರಿನ ಅಭಾವ ಎಂಬಂತಹ ಬೇಸಿಕ್ ಅವಶ್ಯಕೆತೆಗಳೇ ವಿಶ್ವದ ಕೋಟಿ ಕೋಟಿ ಜನರಿಗೆ ಸಿಗದಿರುವದು ದುರದೃಷ್ಟಕರ. ಕಾರಣ ಒಂದೆಡೆ ಸರ್ಕಾರಗಳ ಬಾಯ್ಬಡಿಕೆಯ ತೋರಿಕೆಯಾದರೆ ಇನ್ನೊಂದೆಡೆ ಹೊಟ್ಟೆ ತುಂಬಿ ಮಿಕ್ಕುವುದನ್ನೂ ಮುಕ್ಕುವ ಮನಸ್ಥಿತಿಯ ಜನರ ಗುಂಪು. ಒಂದು ವರದಿಯ ಪ್ರಕಾರ ವಿಶ್ವದ ಅರ್ದದಷ್ಟು ಸಂಪತ್ತು ಇಂದು ಕೇವಲ ಕೇವಲ 1% ನಷ್ಟು ಜನರ/ಶ್ರೀಮಂತರ ಬೊಗಸೆಯೊಳಗಿದೆಯಂತೆ! ಅಂದರೆ ಭೂಮಿಯನ್ನು ಸರಿಯಾಗಿ ಎರಡು ಭಾಗಗಳಾಗಿ ವಿಂಗಡಿಸಿ ಒಂದು ಭಾಗದಲ್ಲಿ ಈ ಎಲ್ಲಾ ಶ್ರೀಮಂತರನ್ನು ಹಾಗು ಇನ್ನೊಂದೆಡೆ ಉಳಿದ ಇತರರನ್ನು ಬಿಟ್ಟರೆ ಏಳುವರೆ ಕೋಟಿಯಷ್ಟು ಜನ ಸಂಪೂರ್ಣ ಒಂದು ಭಾಗವನ್ನು ಆಕ್ರಮಿಸಿದರೆ ಉಳಿದ ಭಾಗವನ್ನು ತುಂಬಿಕೊಳ್ಳುವವರು ಬರೋಬ್ಬರಿ ಏಳುನೂರ ಐವತ್ತು ಕೋಟಿ ಜನ!! ಈ ಮಟ್ಟಿನ ಮಹಾವ್ಯತ್ಯಾಸವನ್ನು ಅರಿತೋ ಏನೋ ಎಂಬಂತೆ ಬಿಲ್ ಗೇಟ್ಸ್ ಹಾಗು ವಾರೆನ್ ಬಫೆಟ್ ಒಟ್ಟುಗೂಡಿ ಒಂದು ಹೊಸ ಇತಿಹಾಸವನ್ನು ಬರೆಯಲು ಮುಂದಾಗಿರುವುದು. ತುಂಬು ಹೃದಯದಿಂದ ಕೊಟ್ಟು ಸಾರ್ಥಕತೆಯ ಹಾಗು ಅರ್ಥಪೂರ್ಣ ಜೀವನವನ್ನು ನೆಡೆಸಲು ಪ್ರೇರೇಪಿಸುತ್ತಿರುವುದು. ದಿ ಗಿವಿಂಗ್ ಪ್ಲೆಡ್ಜ್ ಸಂಸ್ಥೆ ವಿಶ್ವದ ಇಂತಹ ಹಲವಾರು ಮೂಲಭೂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಮನುಷತ್ವ ಎಂಬ ಮರೆಯಾಗುತ್ತಿರುವ ಚಿಗುರನ್ನು ಬೆಳೆಸಲು ಪಣತೊಟ್ಟಿದೆ.

ಇನ್ನು ನಮ್ಮ ದೇಶದ ವಿಚಾರಕ್ಕೆ ಬಂದರೆ ಒಂದು ಪಕ್ಷ ಈ ಸಂಸ್ಥೆ ಏನಾದರೂ ನಮ್ಮ ದೇಶದ ಮೊದಲ ಇಪ್ಪತ್ತರಿಂದ ಇಪ್ಪತೈದು ಶ್ರೀಮಂತರ ಮನ ಒಲಿಸಿದರೂ ಸಾಕು, ಅದರಿಂದ ಬರುವ ಮೊತ್ತವೇ ಸುಮಾರು ಹದಿನೈದು ಲಕ್ಷ ಕೋಟಿ ರೂಪಾಯಿಗಳು!! (ಪ್ರತಿಯೊಬ್ಬರು ತಮ್ಮ ಸಂಪತ್ತಿನ ಅರ್ಧದಷ್ಟು ಮೊತ್ತವನ್ನು ವಿನಿಯೋಗಿಸಲು ಮುಂದಾದರೆ ಮಾತ್ರ). ನಮ್ಮ ದೇಶದ ಒಂದು ವರ್ಷದ ಆಯವ್ಯಯವೇ ಸುಮಾರು ಇಪ್ಪತ್ತರಿಂದ ಇಪ್ಪತ್ತೆರೆಡು ಲಕ್ಷ ಕೋಟಿಗಳಿರುವಾಗ ನಮ್ಮೆಲ್ಲ ದೊಡ್ಡ ಮಹಾನುಭಾವರುಗಳೇನಾದರೂ ಇಂತಹದೊಂದು ಮನೋವೈಶಾಲ್ಯತೆಯನ್ನು ಮೆರೆದರೆ ಖಂಡಿತವಾಗಿಯೂ ಆಳುವ ಸರ್ಕಾರಗಳು ತಮ್ಮ ನೂರಾರು ವರುಷಗಳ 'ವೃತ್ತಿಜೀವನ'ದಲ್ಲಿ ಸಾಧಿಸದ್ದನ್ನು ಒಂದೇ ವರ್ಷದಲ್ಲಿ ಇಂತಹ ಕಾರ್ಯಗಳು ಮಾಡಿ ತೋರಿಸಬಲ್ಲವೇನೋ?!
ಇನ್ನು ಸಮಾಜಸೇವೆ ಎನ್ನುವ ಬಣ್ಣದ ಮಾತುಗಳಿಂದ ರಾಜಕಾರಣ ಮಾಡುವ ನಮ್ಮ ನಾಯಕರು ಹಾಗು ಅವರ ಪಕ್ಷಗಳು 'ನಿಜವಾದ' ಸಮಾಜಸೇವೆಯ ಹೆಸರಿನಲ್ಲಿ ತಮ್ಮ/ಪಕ್ಷದ ಅರ್ಧದಷ್ಟು ಹಣವನ್ನು ಬಿಟ್ಟುಕೊಡುವ ಒಂದು ಕರಾರಿನ ಮೇಲೆ ಒಂದು ಪಕ್ಷ ಸಹಿ ಮಾಡಲಿ ನೋಡುವ! ಪ್ರಸ್ತುತ ಸ್ಥಿತಿಗತಿಗಳನ್ನು ಗಮನಿಸಿದರೆ ನಮ್ಮ ಕನಸ್ಸಿನಲ್ಲೂ ಇಂತಹದೊಂದು ಘಟನೆ ನೆಡೆಯುತ್ತದೆ ಎಂದು ಊಹಿಸಲಾಗುವುದಿಲ್ಲ ಬಿಡಿ.
ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು ದಿನದಿಂದ ದಿನಕ್ಕೆ ಒಂದಿಲ್ಲೊಂದು ಶತಕೋಟಿಗಳ ವಹಿವಾಟನ್ನು ನೆಡೆಸುವ 'ಇವರು', ಮಿತ್ತಲ್, ಟಾಟಾ, ಪ್ರೇಮ್ಜಿ ಯವರಂತಹ ಮಹಾನುಭಾವರೇ ತಮ್ಮ ಬಹುಪಾಲು ಮೊತ್ತದ ಹಣವನ್ನು ಇಂತಹ ಒಂದು ಸದುದ್ದೇಶದ ಕಾರ್ಯಗಳಿಗೆ ಮುಡಿಪಾಗಿಡುವಾಗ ಗುಲಗಂಜಿಯಷ್ಟು ಹಣವನ್ನಷ್ಟೇ ಎಲ್ಲೋ ಒಂದೆಡೆ ಕೊಟ್ಟು ನಾನೂ ಸಮಾಜಸೇವಕ ಎಂಬಂತೆ ಫೋಸು ಕೊಟ್ಟು ಇಷ್ಟೆಲ್ಲಾ ಬೆಳೆಯಲು ಪ್ರತ್ಯಕ್ಷವಾಗಿ ಅಥವ ಪರೋಕ್ಷವಾಗಿ ಕಾರಣರಾದ ದೇಶ ಹಾಗು ದೇಶದ ಜನತೆಗೆ ಮರಳಿಸುವ ಕಾರ್ಯವನ್ನು ಮಾಡುವುದೆಂದು? ಬಿಟ್ಟಿ ಇಂಟರ್ನೆಟ್ಟನು ಬಿಸಿನೆಸ್ ನ ಒಳಯೋಚನೆಯಲ್ಲೇ ಕೊಟ್ಟರು ಅವರನ್ನು ಸಮಾಜಸೇವಕರಂತೆ ಕಾಣುವುದು ಮಾತ್ರ ನಮ್ಮ ದುರದೃಷ್ಟ.

ಖ್ಯಾತ ಬರಹಗಾರ್ತಿ ಸುಧಾಮೂರ್ತಿಯವರು ಒಂದೆಡೆ ತಮ್ಮ ವೃತ್ತಿ ಜೀವನದ ಆರಂಭದ ಕಾಲದಲ್ಲಿ ಟಾಟಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ನೆಡೆದ ಒಂದು ಘಟನೆಯನ್ನು ಮೆಲುಕು ಹಾಕಿಕೊಳ್ಳುತ್ತಾರೆ. ಟಾಟಾ ಗುಂಪಿನ ಅಂಗಸಂಸ್ಥೆಯಾಗಿದ್ದ ಟೆಲ್ಕೊ ಕಂಪನಿಯ ಮೊದಲ ಮಹಿಳಾ ತಾಂತ್ರಿಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಕೆಲವರ್ಷಗಳ ನಂತರ ನಿರ್ಗಮಿಸುವ ಸಮಯದಲ್ಲಿ ಟಾಟಾ ಸಂಸ್ಥೆಯ ಮುಕುಟಮಣಿ JRD ಟಾಟಾರನ್ನು ಕಾಣುವ ಸಂಧರ್ಭವೊಂದು ಒದಗಿಬಂದು ಆಕೆ ತನ್ನ ಪತಿ ಹೊಸದೊಂದು (ಇನ್ಫೋಸಿಸ್) ಕಂಪನಿಯನ್ನು ಹುಟ್ಟುಹಾಕಲು ಮುಂದಾಗಿದ್ದಾರೆ, ತಾನು ಅವರ ಸಹಾಯಕ್ಕಾಗಿ ಇಲ್ಲಿಯ ಕೆಲಸವನ್ನು ಬಿಡುತ್ತಿದ್ದೇನೆ ಎಂದಾಗ ಅವರು ಮಂದಹಾಸದ ನೆಗೆಯೊಂದನ್ನು ಬೀರುತ್ತಾ 'ನೀನು ನಿಮ್ಮ ಹೊಸ ಕಂಪನಿಯಿಂದ ಅದೆಷ್ಟೇ ಸಂಪತ್ತನ್ನು ಗಳಿಸು, ಆದರೆ ಖಂಡಿತವಾಗಿಯೂ ನೀನು ಗಳಿಸಿದ್ದನು ಸಮಾಜಕ್ಕೆ ಹಿಂದುರಿಗಿಸುವಳಂತಾಗು ಏಕೆಂದರೆ ಸಮಾಜ ನಿನಗೆ ಹೆಚ್ಚೆಚ್ಚು ನೀಡಿದರಿಂದಲೇ ನೀನು ಹೆಚ್ಚೆಚ್ಚು ಬೆಳೆಯಬಹುದು. ಹೀಗೆ ಸಮಾಜದಿಂದ ಪಡೆದದ್ದನ್ನು ಹಿಂದಿರುಗಿಸಲು ಮಾತ್ರ ಮರೆಯಬೇಡ' ಎಂದಿದ್ದರಂತೆ. JRD ಯವರನ್ನು ಗುರುವಿಂದಂತೆ ಪೂಜಿಸುತ್ತಿದ್ದ ಸುಧಾಮೂರ್ತಿ ಅವರ ಆ ಮಾತನ್ನು ಇಂದು ಅಕ್ಷರ ಸಹ ನಿಜವಾಗಿ ಮಾಡಿ ತೋರಿಸಿದ್ದಾರೆ. ಇನ್ಫೋಸಿಸ್ ಫೌಂಡೇಶನ್ ಎಂಬ ಲೋಕೋಪಯೋಗಿ ಸಂಸ್ಥೆಯನ್ನು ಹುಟ್ಟುಹಾಕಿ ದಕ್ಷಿಣ ಭಾರತದಾದ್ಯಂತ ತಮಗಾದ ಸೇವೆಯನ್ನು ನಿಸ್ವಾರ್ಥವಾಗಿ ಮಾಡಿಕೊಂಡು ಬಂದಿದ್ದಾರೆ. ನೂರಾರು ಸಂಸ್ಥೆಗಳಿಗೆ ಆದರ್ಶಪ್ರಾಯರಾಗಿದ್ದರೆ.

ಇಂತಹ ಜನೋಪಕಾರಿ ಮನೋಭಾವ ಮರಿಮಕ್ಕಳ ಮೊಮ್ಮಕ್ಕಳಿಗೆ ಕೂಡಿಡುವ ಇಂದಿನ ಕಾಲದಲ್ಲಿ ಹಲವರಲ್ಲಿ ಮೂಡಬೇಕಿದೆ. ಭೂಮಿಯ ಮೇಲಿನ ಯಾವೊಂದು ಜೀವಿಗಳಲ್ಲೂ ಕಾಣದ ಭೇದ-ಭಾವ, ಮೇಲು-ಕೀಳು ಹಾಗು ಬಡವ-ಬಲ್ಲಿದನೆಂಬ ನೀಚ ಪಿಡುಗುಗಳನ್ನು ಮಾನವ ಬುಡಸಮೇತ ಕಿತ್ತೆಸೆಯುವ ಸಮಯ ಬಂದಿದೆ. ಬಿಲ್ ಗೇಟ್ಸ್ ಹಾಗು ವಾರೆನ್ ಬಫೆಟ್ ರ ಈ ನಿಟ್ಟಿನ ಕಾರ್ಯ ಇನ್ನಷ್ಟು ಯಶಸ್ಸು ಕಾಣಲಿ, ಸಕಲರಲ್ಲೂ ಇಂತಹ ಲೋಕೋಪಯೋಗಿ ಮನೋಭಾವ ಬೆಳೆಯುವಂತಾಗಲಿ ಎಂದು ಸದ್ಯಕ್ಕೆ ಆರೈಸೋಣ.

ದಿ ಗಿವಿಂಗ್ ಪ್ಲೆಡ್ಜ್ ನ ಹೆಚ್ಚಿನ ಮಾಹಿತಿಗಾಗಿ,

https://givingpledge.org/