Sunday, October 13, 2019

ಡಿಸ್ಲಿಕ್ಸಿಯಾ ಸಮಸ್ಯೆಯಿಂದ ಬಳಲುತ್ತಲೇ ಜುರಾಸಿಕ್ ಪಾರ್ಕ್ನ ಡೈನೋಸರ್ಗಳನ್ನು ಸೃಷ್ಟಿಸಿದನೀತ!


ವಿಶ್ವದ ಆಲ್ ಟೈಮ್ ಗ್ರೇಟೆಸ್ಟ್ ಮೂವಿ ಡೈರೆಕ್ಟರ್ ಗಳ್ಯಾರು ಎಂದು ಹುಡುಕುತ್ತಾ ಹೊರಟರೆ ಈತನ ಹೆಸರು ಮೊದಲ ಐದರೊಳಗೆ ಬರಲೇಬೇಕಿದೆ. ಸೈನ್ಸ್ ಫಿಕ್ಷನ್ನಿಂದಿಡಿದು ಇತಿಹಾಸದ ದಂಥಕತೆಗಳನ್ನೊಳಗೊಂಡ ಚಿತ್ರಗಳನ್ನು ನಿರ್ದೇಶಿಸಿರುವ ಈತನ ಭಾಗಶಃ ಅಷ್ಟೂ ಚಿತ್ರಗಳು ಬಾಕ್ಸ್ ಆಫೀಸ್ನನ್ನು ಕೊಳ್ಳೆಹೊಡೆದಿರುವುದಷ್ಟೇ ಅಲ್ಲದೆ ಚಿತ್ರನಿರ್ಮಾಣದಲ್ಲಿ ತೊಡಗಿರುವವರಿಗೆ ಮೈಲ್ ಸ್ಟೋನ್ಗಳಾಗಿ ನಿಂತಿವೆ. ಅನಿಮೇಷನ್ ಅಥವಾ ಮತ್ಯಾವುದೇ ಪ್ರಸ್ತುತ ಟೆಕ್ನಾಲಜಿಗಳು ಪ್ರಭುದ್ದಗೊಂಡಿರದ ಕಾಲದಲ್ಲೇ Jaws, Indiana Jones, Jurassic Park ಗಳಂತಹ ಅಸಾಮಾನ್ಯ ಚಿತ್ರಗಳನ್ನು ನೀಡಿದ ಈತ ಪ್ರಸ್ತುತ 25,000 ಕೋಟಿಗೂ ಹೆಚ್ಚಿನ ಆಸ್ತಿಯ ಶ್ರೀಮಂತ ನಿರ್ದೇಶಕ. ಹಾಗಂದ ಮಾತ್ರಕ್ಕೆ ಈತ ಚಿನ್ನದ ಕೋಳಿಯನ್ನು ತನ್ನ ಜೊತೆಯಲ್ಲಿಯೇ ಅವುಚಿಕೊಂಡು ಬೆಳೆದವನಲ್ಲ. ಈತನ ಪ್ರಸ್ತುತ Success ಸ್ಟೋರಿಗಳು ಸ್ಪೂರ್ತಿದಾಯಕವಾಗಲು ಈತ ಬೆಳೆದು ಬಂದ ಹಾದಿಯನ್ನೊಮ್ಮೆ ನೋಡಬೇಕು. ಗುರಿಯೊಂದು ಸ್ಪಷ್ಟವಾಗಿದ್ದರೆ, ಗೆಲ್ಲಬೇಕೆಂಬ ಹಠವೊಂದಿದ್ದರೆ ಕಷ್ಟನಷ್ಟಗಳೆಲ್ಲ ತೃಣಮಾತ್ರಕ್ಕೆ ಸಮ ಎಂಬುದನ್ನಿಲ್ಲಿ ಕಾಣಬಹುದು.


ಹುಟ್ಟುವಾಗಲೇ ಡಿಸ್ಲೆಕ್ಸಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಈತ ಶಾಲಾ ದಿನಗಳಲ್ಲಿ ಇತ್ತ ಕಡೆ ಓದಲೂ ಆಗದೆ ಆತ್ತ ಕಡೆ ಗೆಳೆಯರೊಟ್ಟಿಗೆ ಬೆರೆತು ಆಡಲೂ ಆಗದೆ ನರಳುತ್ತಿದ್ದ. ಈತನ ವಿಚಿತ್ರ ವರ್ತನೆಯನ್ನು ಕಂಡು ಈತನ ಗೆಳೆಯರು ಗೇಲಿ ಮಾಡುತ್ತಿದರಷ್ಟೇ ಅಲ್ಲದೆ ಕೆಲವೊಮ್ಮೆ ಬೈದು ಅವಮಾನಿಸಿ ತಳಿಸುತ್ತಿದ್ದರು. ಆ ಬೈಗುಳ ಹಾಗು ಅವಮಾನಗಳು ಈಗಲೂ ಕಾಡುತ್ತವೆಂದು ಆತ ಕೆಲವೊಮ್ಮೆ ಹೇಳಿಕೊಂಡಿದ್ದಾನೆ! ತನ್ನ ಮುಗ್ದ ಕಣ್ಣುಗಳನ್ನು ಬಿಟ್ಟು ಪ್ರಪಂಚವನ್ನು ಸರಿಯಾಗಿ ಅರಿಯುವ ಮೊದಲೇ ಗೇಲಿ, ಅವಮಾನಗಳಿಂದ ಬೆಳೆಯುತ್ತಿದ್ದ ಈತನಿಗೆ ತನ್ನದೇ ಅದೊಂದು ಆಸೆಯಿದ್ದಿತು. ಆ ಅಸೆ ಸಮಾಜದ ಮೂದಲಿಕೆಯಿಂದ ತನ್ನಿಂತಾನೇ ಮನದೊಳಗೆ ಹುಟ್ಟಿದ್ದೋ ಅಥವಾ ವಯೋಸಹಜವಾಗಿ ಬೆಳೆದದ್ದೋ ತಿಳಿಯದು ಆದರೆ ಆರೇಳು ವರ್ಷದ ಆ ಪೋರನಿಗೆ ಚಿತ್ರ ನಿರ್ಮಿಸುವ ಮಹದಾಸೆ ಮನದೊಳಗೆ ಮೂಡಿತು. ತನ್ನ ಅಪ್ಪನ ಬಳಿಯಿದ್ದ ಸಣ್ಣದೊಂದು ಕ್ಯಾಮೆರಾವನ್ನು ಹಿಡಿದು ತನಗನಿಸಿದ ಹಾಗೆ ಚಿತ್ರೀಕರಿಸುತ್ತಾ ನಡೆದ. ಇದೆ ಹವ್ಯಾಸ ಆತನ ಆಪ್ತ ಗೆಳೆಯನಾಯಿತು.



ಕಾಲ ಓಡತೊಡಗಿತು. ಓದಿನಲ್ಲಿ ತೀರಾನೇ ಹಿಂದಿದ್ದರೂ ತನ್ನ ಹದಿನೆಂಟನೇ ವಯಸ್ಸಿಗೇ ಹಲವಾರು ಸಣ್ಣ ಚಿತ್ರಗಳನ್ನು 'ಸೃಷ್ಟಿಸಿ' ಚಿತ್ರಿಸುವುದನ್ನು ಆತ ಕಲಿತಿದ್ದ. ಮುಂದಿನ ಆತನ ಗುರಿ ಯೂನಿವರ್ಸಿಟಿ ಆಫ್ ಸೌತ್ ಕ್ಯಾಲಿಫೋರ್ನಿಯಾ. ಚಿತ್ರ ನಿರ್ಮಾಣದಲ್ಲಿ ಡಿಗ್ರಿಯೊಂದನ್ನು ಮಾಡಬೇಕೆಂಬ ಆತನ ಮಹದಾಸೆಗೆ ಯೂನಿವರ್ಸಿಟಿ ತಣ್ಣೀರೆರಚಿತು. ಕಾರಣಾತರಗಳಿಂದ ಈತನ ಅಪ್ಲಿಕೇಶನ್ ತಿರಸ್ಕರಿಸಲ್ಪಟ್ಟಿತ್ತು. ಅಷ್ಟೆಲ್ಲ ಕಷ್ಟಗಳ ಒರತಾಗಿಯೂ ಮುನ್ನೆಡೆದು ತನ್ನ ಜೀವನದ ಏಕೈಕ ಗುರಿಯನ್ನು ತಲುಪಲು ಆಗಲಿಲ್ಲವೆಂದು ಆತ ಖಂಡಿತವಾಗಿಯೂ ಕುಗ್ಗಿದ. ಆದರೆ ಬಗ್ಗಲಿಲ್ಲ! ಛಲವನ್ನು ಬಡಿದೆಬ್ಬಿಸಿದ. ಮುನ್ನೆಡೆದ. ಪ್ರತಿದಿನ ತನ್ನ ನಗರದಲ್ಲಿದ್ದ ಅಷ್ಟೂ ಚಿತ್ರಮಂದಿರಗಳಿಗೆ ಭೇಟಿಯಿಟ್ಟು ಎಲ್ಲ ಬಗೆಯ ಚಿತ್ರಗಳನ್ನು ಸೂಕ್ಷ್ಮವಾಗಿ ನೋಡತೊಡಗಿದ. ಚಿತ್ರನಿರ್ದೇಶನದ ಸೂಕ್ಷಮಾತಿಸೂಕ್ಷ್ಮ ಅಂಶಗಳನ್ನು ಗಮನಿಸತೊಡಗಿದ. ತನ್ನ ಪ್ರಯತ್ನವನ್ನು ಮುಂದುವರೆಸುತ್ತಲೇ ಇದ್ದ ಈತನಿಗೆ ಸಂಬಳವಿಲ್ಲದ ಇಂಟರ್ನ್ಶಿಪ್ ಮಾಡುವ ಅವಕಾಶವೊಂದು ಕೊನೆಗೂ ಬಂದೊದಗುತ್ತದೆ. ಆ ಸಂಸ್ಥೆಯ ಹೆಸರೇ ಜಗತ್ಪ್ರಸಿದ್ದ ಯೂನಿವರ್ಸಲ್ ಸ್ಟುಡಿಯೋ. ಹಾರುಬಯಸುವ ಹಕ್ಕಿಗೆ ಈಗ ಪಂಜರದ ಬಾಗಿಲನ್ನು ತೆರೆದುಕೊಟ್ಟಂತಾಯಿತು. ಅಲ್ಲಿಂದ ಮುಂದೆ ತನ್ನ ನಡೆಯಲ್ಲಿ ಈತ ನಿಂತ ಉದಾಹರಣೆಗಳೇ ಇಲ್ಲ. ಕಾಡಿದ ಹಾಗು ಕಾಡುತ್ತಿರುವ ಡಿಸ್ಲೆಕ್ಸಿಯಾ ಹಾಗು ಖಿನ್ನತೆಯೂ ಕೂಡ ಈತನನ್ನು ತಡೆಯಲಾಗಲಿಲ್ಲ! ಅಲ್ಲಿ ತಾನು ನಿರ್ದೇಶಿಸಿದ ಮೊದಲ ಚಿತ್ರದಲ್ಲೇ ಕಂಪನಿಯ ವೈಸ್ ಪ್ರೆಸಿಡೆಂಟ್ನ ಕಣ್ಣಿಗೆ ಬಿದ್ದ ಈತ ಮುಂದೆ ಒಂದೊಂದಾಗಿಯೇ ಇತಿಹಾಸವನ್ನು ಸೃಷ್ಟಿಸುತ್ತಾ ಸಾಗಿದ.



ಅದೊಂದು ದಿನ ಈತನ ಸಾಧನೆಯನ್ನು ಗಮನಿಸಿ ಯೂನಿವರ್ಸಿಟಿಯೊಂದು ಗೌರವ ಡಾಕ್ಟರೇಟ್ ಕೊಡಲು ಆಹ್ವಾನಿಸುತ್ತದೆ. ಆದರೆ ಈತ ಆ ಯೂನಿವರ್ಸಿಟಿಗೆ ಹೋಗಿ ಡಾಕ್ಟರೇಟನ್ನು ಸ್ವೀಕರಿಸುವ ಮೊದಲು ಇಟ್ಟ ಏಕೈಕ ಬೇಡಿಕೆಯೆಂದರೆ ಹಲವು ವರ್ಷಗಳ ಹಿಂದೆ ತನ್ನನ್ನು ರಿಜೆಕ್ಟ್ ಮಾಡಿ ಮನೆಗೆ ಕಳುಹಿಸಿದ ಅದೇ ಪ್ರೊಫೆಸರ್ನಿಂದ ಸರ್ಟಿಫಿಕೇಟ್ನ ಮೇಲೆ ಸಹಿ ಹಾಕಬೇಕೆಂದು! Yes. ಅಂದು ಡಾಕ್ಟರೇಟ್ ಕೊಡಲು ಆಹ್ವಾನಿಸಿದ ಆ ಯೂನಿವರ್ಸಿಟಿ ಯಾವುದಂತಿರ? ಅದು ಅದೊಂದು ದಿನ ಈತನ ಅಪ್ಲಿಕೇಶನನ್ನು ನಿರಾಕರಿಸಿ ಸೀಟು ಕೊಡದೆ ವಾಪಸ್ಸು ಕಳಿಸಿದ್ದ ಯೂನಿವರ್ಸಿಟಿ ಆಫ್ ಸೌತ್ ಕ್ಯಾಲಿಫೋರ್ನಿಯಾ!


ಸಕ್ಸಸ್ ಎಂದರೆ ಹೀಗಿರಬೇಕಲ್ಲವೇ?


ಕಾಲ ಎಂದಿಗೂ ನಿಂತ ನೀರಲ್ಲ. ಕೆಲವೊಮ್ಮೆ ನಾವು ಈಜದಿದ್ದರೂ ಆ ಸೆಳೆತ ನಮ್ಮನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಹೊತ್ತೊಯ್ಯುತ್ತದೆ. ಅಲ್ಲಿ ಗುರಿಯಿರುವುದಿಲ್ಲ. ಅಲ್ಲಿ ಯಾವ ಸಮಯಕ್ಕೆ ಯಾವ ಬಂಡೆಗೆ ಗುದ್ದಿ ಅದೇನು ಅನಾಹುತ ಸಂಭವಿಸುವುದೋ ತಿಳಿಯದು. ಆದರೆ ಗುರಿ ಸ್ಪಷ್ಟವಿರುವ ಕೆಲವರು ಅದೆಂತಹ ಸೆಳೆತದ ವಿರುದ್ಧವಾದರೂ ಸರಿಯೇ ಕಷ್ಟಪಟ್ಟು ಈಜುತ್ತಾ ತಮ್ಮ ಗುರಿಯನ್ನು ಸೇರುತ್ತಾರೆ. ಇಚ್ಛಾಶಕ್ತಿಯೆಂಬ ಮೂಲ ಮಂತ್ರವನ್ನು ಜಪಿಸುತ್ತ ಹೀಗೆ ಧಿಟ್ಟ ಹೆಜ್ಜೆಯನ್ನು ಹಿಡುತ್ತಾರೆ. ಅಂದಹಾಗೆ ಇಷ್ಟೆಲ್ಲಾ ಸಾದನೆಗಳನ್ನು ಮಾಡಿದ ಅಮೇರಿಕಾದ ಆ ಸುಪ್ರಸಿದ್ದ ಡೈರೆಕ್ಟರ್ನ ಹೆಸರೇ ಲೆಜೆಂಡರಿ ಸ್ಟೀವನ್ ಸ್ಪಿಲ್ಬರ್ಗ್.