Saturday, November 16, 2019

ಗುರಿಯೊಂದು ಸ್ಪಷ್ಟವಾದ ಮೇಲೆ ಕೈ ಮೂಳೆ ಮುರಿದರೇನು ಕನ್ನಡಕ ಒಡೆದರೇನು..!?

ಕಷ್ಟ-ದುಃಖಗಳೆಂಬುದು ಜೀವನದಲ್ಲಿ ಅದೆಷ್ಟು ಮಹತ್ವವಾದವು ಅಲ್ವೇ. ಮುಖ್ಯವಾಗಿ ಮಹತ್ತರವಾದ ಸಾಧನೆಯನ್ನು ಬೆನ್ನತ್ತಿರುವ ಅಥವಾ ಮುಂದೆ ಅಂತಹದೊಂದು ಸಾಧನೆಯನ್ನು ಮಾಡಲಿರುವ ಜೀವಗಳಿಗೆ ತಿಳಿದೋ ಅಥವಾ ತಿಳಿಯದೆಯೋ ಈ ಕಷ್ಟ ದುಃಖಗಳೆಂಬ ಸಹಾಯಕರು ಒದಗಿಸಿಕೊಡುವ ಎನರ್ಜಿ ಬಹುಶಃ ಮತ್ಯಾವುದೇ ಸಪ್ಲಿಮೆಂಟರಿಗಳಿಗೂ ಮಿಗಿಲಾದದ್ದು! ವಿಪರ್ಯಾಸವೆಂದರೆ ಈ ಕಹಿಸತ್ಯ ಬೆಳಕಿಗೆ ಬರುವುದು ಸಾಧನೆಯ ಗುರಿಯನ್ನು ಛಂಗನೆ ಹಾರಿ ತಲುಪಿದ ಮೇಲೆಯೇ. ಅಲ್ಲಿಯವರೆಗೂ ಹಿಂಸೆಯ ಕೂಪವೆನಿಸುವ ಆ ಕಷ್ಟ ದುಃಖಗಳು, ಗುರಿಯನ್ನು ತಲುಪಿದ ಒಮ್ಮೆಲೇ ಸಾಧನೆಯ ಮಹಾ ಮೆಟ್ಟಿಲುಗಳಾಗುತ್ತವೆ. ಬಹುಷಃ ಆ ಕಷ್ಟಗಳನ್ನು ದೈರ್ಯದಿಂದ ಎದುರಿಸದಿದ್ದರೆ, ಮುನ್ನುಗ್ಗಿ ನೆಡೆಯದಿದ್ದರೆ ಇಂದು ನಾನಿಷ್ಟರ ಮಟ್ಟಿಗೆ ಬೆಳೆಯುತ್ತಿರಲಿಲ್ಲವೇನೋ ಎಂದು ಅವೇ ಕಷ್ಟ-ದುಃಖಗಳನ್ನು ಉಪ್ಪರಿಗೆಯ ಮೇಲೆ ಕೂರಿಸಿ ಮೆರೆಸುವ ಹೇಳಿಕೆಗಳು ನಮಗೆ ಕಾಣಸಿಗುತ್ತವೆ. ಬಡತನ, ಹಸಿವು, ಪೋಷಕರ ಕಚ್ಚಾಟ, ಸಮಾಜದ ತುಳಿತ ಎಂಬೆಲ್ಲ ಮುಳ್ಳುಗಳು ಮಗುವೊಂದರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿರುವಾಗ ಅರಳುವ ಕುಡಿಯಂತಹ ಮಕ್ಕಳ ಮನಸ್ಸನ್ನು ಸಂತೈಸಿ, ಗುರಿಯನ್ನು ಸ್ಪಷ್ಟಪಡಿಸಿ, ಇವೆಲ್ಲವನ್ನು ಮೆಟ್ಟಿ ನೆಡೆದರೆ ಮಾತ್ರವೇ ನಿನಗೆ ದೂರತೀರವನ್ನು ತಲುಪಲು ಸಾಧ್ಯ ಎಂದು ಹೇಳುವ ದಾರಿದೀಪಗಳು ಇಂದು ಎಷ್ಟಿವೆ?

ಇದು ಸಹ ಅಂತಹದ್ದೆ ಒಬ್ಬ ಸಾಧಕನ ಕತೆ. ಸಾಧನೆಗೂ ಮೊದಲಿನ ಕಷ್ಟ ದುಃಖಗಳ ಕಥೆ. ಒಲಿಂಪಿಕ್ಸ್ ನಲ್ಲಿ ನಮ್ಮ ಇಡೀ ದೇಶ ಇಲ್ಲಿಯವರೆಗೂ ಗೆದ್ದಿರುವ ಚಿನ್ನದ ಪದಕಗಳಿಗಿಂತಲೂ ಮೂರು ಪಟ್ಟು ಪದಕಗಳನ್ನು ಒಬ್ಬನೇ ಗೆದ್ದಿರುವ ಶೂರನ ಕಥೆ. ದುಃಖ, ನೋವು, ಮೂದಲಿಕೆ, ದುಶ್ಚಟಗಳೆಂಬ ಕಷ್ಟಗಳನ್ನು ತನ್ನ ವಿಸ್ತಾರವಾದ ಕೈಗಳಿಂದ ಹಿಂದಕ್ಕೆ ತಳ್ಳುತ್ತಾ, ಹೀಜುತ್ತಾ ಇತಿಹಾಸ ನಿರ್ಮಿಸಿದ ಮಹಾರಥಿಯ ಕಥೆ.

ಹೆಸರು ಮೈಕಲ್ ಫೆಲ್ಫ್ಸ್. ಗಾಡ್ ಫಾದರ್ ಗಳಿರದ ಜೀವನವಾದರೂ ಯಾವುದೇ ಗಾಡ್ ಗಿಂತಲೂ ಮಿಗಿಲಾದ ತಾಯಿ ಹಾಗು ತನ್ನ ಖುದ್ದು ಫಾದರ್ಗಿಂತಲೂ ಆಪ್ತನಾದ ಕೋಚ್ ನನ್ನು ಆತ ಗಳಿಸಿದ್ದ. ನೀರಿನೊಳಗೆ ಮುಖವನ್ನೇ ಮುಳುಗಿಸಲು ಹೆದರುತ್ತಿದ್ದ ಹುಡುಗನೊಬ್ಬನನ್ನು ಒಲಿಂಪಿಕ್ ಇತಿಹಾಸದ ದಂತಕತೆಯನ್ನಾಗಿ ಮಾಡಿದ ಶ್ರೇಯ ಆತನ ಏಕೈಕ ಕೋಚ್ (!) ಬಾಬ್ ಬೌಮನ್ಗೆ ಸೇರಿದರೆ ಆತನ ಗುರಿಯನ್ನು ಸ್ಪಷ್ಟಪಡಿಸಿ ಆತ್ಮಸ್ತಯ್ರ್ಯವನ್ನು ತುಂಬಿದ ಹೆಗ್ಗಳಿಕೆ ಗಂಡನಿಂದ ಬೇರ್ಪಟ್ಟು ಮೂರು ಮಕ್ಕಳನ್ನು ಕಷ್ಟಪಟ್ಟು ಸಾಕಿದ ಆ ಮಾತೆಗೆ ಸಲ್ಲಬೇಕು. ಚಿಕ್ಕವನಿದ್ದ ಮೈಕಲ್ಗೆ ಅರಿವಿರದ ಮತ್ತೊಂದು ಖಾಯಿಲೆ ಇದ್ದಿತು. ADHD. ಸರಳ ಭಾಷೆಯಲ್ಲಿ ಹೇಳುವುದಾದರೆ ನಿಂತರೆ ನಿಲ್ಲಲಾಗದ ಕೂತರೆ ಕೂರಲಾಗದ ಒಂದು ಬಗೆಯ ದ್ವಂದ್ವದ ಮನೋಸ್ಥಿತಿ. ಎಳೆಯ ಪ್ರಾಯದ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಒಂದು ಬಗೆಯ ಕಾಯಿಲೆ. ಅಂತಹ ಮಾನಸಿಕ ತೊಳಲಾಟದ ದ್ವಂದ್ವಕ್ಕೆ ಅಂಕುಶ ಆಡಿದ್ದೇ ಆತನ ಈಜುಗಾರಿಕೆ ಎಂದರೆ ಅದು ತಪ್ಪಾಗದು. ಫಿಲಿಪ್ಸ್ ಒಮ್ಮೆ ನೀರಿನಲ್ಲಿ ತಲೆಯನ್ನು ಮುಳುಗಿಸಿದರೆ ಮುಗಿಯಿತು, ಆತನ ಏಕಾಗ್ರತೆ ಒಮ್ಮೆಲೇ ಬಂಡೆಗಲ್ಲಿನಂತೆಯೇ ಸ್ಥಿರ ಹಾಗು ಗಟ್ಟಿಯಾಗಿಬಿಡುತ್ತದೆ. ಹೀಗೆ ಈಜುಗಾರಿಗೆ ಎಂಬುದು ಆತನಿಗೊಂದು ಹವ್ಯಾಸವಾಯಿತಷ್ಟೆ ಅಲ್ಲದೆ ತನ್ನ ಮಾನಸಿಕ ತೊಳಲಾಟವನ್ನು ಮರೆಮಾಡುವ ಸಾಧನವೂ ಆಯಿತು. ಅದೆಷ್ಟರ ಮಟ್ಟಿಗೆಂದರೆ ತನ್ನ ಹತ್ತನೇ ವಯಸ್ಸಿಗೆ ಆತ ತನ್ನ ಹೆಸರಿನ ಹತ್ತಾರು ರಾಷ್ಟ್ರಿಯ ಈಜು ಧಾಖಲೆಯನ್ನು ನಿರ್ಮಿಸಿದ್ದ! ಅಲ್ಲದೆ ತನ್ನ ಕೇವಲ ಹದಿನೈದನೇ ವಯಸ್ಸಿಗೆ ಅಮೇರಿಕವನ್ನು 2000 ನೇ ಇಸವಿಯ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಪ್ರತಿನಿಧಿಸಿದ್ದ!

ಮುಂದೆ ನೆಡೆಯುವುದೆಲ್ಲ ಆತನ ಪ್ರತಿಶ್ರಮಕ್ಕೆ ದೊರೆತ ಪ್ರತಿಫಲ. ಬರೋಬ್ಬರಿ ಹದಿನಾರು ವರ್ಷಗಳ ಈತನ ವೃತ್ತಿಜೀವನದಲ್ಲಿ ಒಟ್ಟು 39 ವಿಶ್ವದಾಖಲೆಗಳು ಹಾಗು 23 ಗಿನ್ನಿಸ್ ದಾಖಲೆಗಳನ್ನು ನಿರ್ಮಿಸಿ ಒಲಿಂಪಿಕ್ಸ್ ನಲ್ಲಿ 'ದಿ ಮೋಸ್ಟ್ ಡೆಕೋರೇಟೆಡ್ ಅಥ್ಲೀಟ್' ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಾನೆ.

ಆದರೆ ಇಲ್ಲಿ ವಿಷಯ ಆತನ ಚಿನ್ನದ ಸಾಧನೆಗಳ ಬಗ್ಗೆಯಲ್ಲ. ಬದಲಾಗಿ ಆತ ಅವನ್ನು ಸಾಧಿಸಿದ ಹಾದಿಯ ಕುರಿತು. ಹಾದಿಯಲ್ಲಿ ಎದುರಾದ ಸಮಸ್ಯೆಗಳನ್ನು ಮೆಟ್ಟಿ ಮುನ್ನುಗ್ಗಿದ ಕುರಿತು. 2004ರ ಒಲಿಂಪಿಕ್ಸ್ ನಲ್ಲಿ ಆರು ಪದಕಗಳನ್ನು ಗೆದ್ದು ಹೆಸರು ಮಾಡಿದ್ದ ಫೆಲ್ಪ್ಸ್ ಅದೊಂದು ದಿನ ಮುಂದಿನ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಈಜಿನ ಎಲ್ಲಾ ಪ್ರಕಾರದ ಚಿನ್ನದ ಪದಕಗಳನ್ನು ಗೆದ್ದು ದಶಕಗಳ ಹಳೆಯ ಅಮೇರಿಕಾದ ದಂತಕತೆ ಮಾರ್ಕ್ ಸ್ಪಿಟ್ಸ್ ನ ದಾಖಲೆಯನ್ನು ಮುರಿಯುವುದಾಗಿ ಹೇಳಿಕೆ ನೀಡಿದ. ಈತ ಹೀಗೆ ಹೇಳಿಕೆ ನೀಡಿದ ಕೂಡಲೇ ಅಮೇರಿಕದಾದ್ಯಂತ ಚರ್ಚೆಗಳು ಶುರುವಾದವು. ಎಲ್ಲಿಯ ಸ್ಪಿಟ್ಸ್ ಅದೆಲ್ಲಿಯ ಫೆಲ್ಪ್ಸ್? ಎಲ್ಲೆಂದರಲ್ಲಿ ಜನ ಈತನನ್ನು ಮೂದಲಿಸತೊಡಗಿದರು. ಎಳೆಯ ವಯಸ್ಸಿನ ಬಾಲಸಹಜ ಹೇಳಿಕೆಗಳು ಎಂದು ಹಂಗಿಸತೊಡಗಿದರು. ಒಲಿಂಪಿಕ್ಸ್ ನಲ್ಲಿ ಇರುವ ಎಂಟೇ ಪ್ರಕಾರಗಳ ಈಜಿನಲ್ಲಿ ಅಷ್ಟೂ ಪಂದ್ಯಗಳಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವುದು ಸಾಧ್ಯವೇ ಇಲ್ಲವೆಂದು ಹಲವರು ಖಡಾಖಂಡಿತವಾಗಿ ಹೇಳಿದರು. ನೂರಾರು ಜನ ಸೆಣೆಸಿ ಕನಿಷ್ಠ ಒಂದು ಪದಕವನ್ನು ಗೆಲ್ಲಲು ಹರಸಾಹಸ ಮಾಡುತ್ತಿರುವಾಗ ಇಪ್ಪತ್ತರ ಹರೆಯದ ಹುಡುಗನೊಬ್ಬ ಒಮ್ಮೆಗೆ ಎಂಟು ಚಿನ್ನದ ಪದಕಗಳನ್ನು ಗೆಲ್ಲುತ್ತೇನೆಂದರೆ ನಮಗೇ ಹಾಸ್ಯಾಸ್ಪದವೆನಿಸದಿರದು. ಇತ್ತ ಕಡೆ ಇಲ್ಲ ಸಲ್ಲದ ಹೇಳಿಕೆಗಳು ಬರುತ್ತಿದ್ದರೆ ಅತ್ತ ಕಡೆ ಫೆಲ್ಪ್ಸ್ ತನ್ನ ಕಠಿಣ ತಯಾರಿಯಲ್ಲಿ ಕಾರ್ಯೋನ್ಮುಖನಾಗಿದ್ದ. ಮೈಗೆರಗುವ ಕಲ್ಲುಗಳನ್ನೇ ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಗುರಿಯೆಡೆಗೆ ಮುನ್ನುಗ್ಗುತ್ತಿದ್ದ. ಸ್ಪಿಟ್ಸ್ ದಿನಕ್ಕೆ ಎಂಟು ಘಂಟೆ ಅಭ್ಯಾಸ ನೆಡೆಸುತ್ತಿದ್ದರೆ ಈತ ಹನ್ನೆರಡು ಘಂಟೆ ಈಜತೊಡಗಿದ!

ಆದರೆ ವಿಧಿಯಾಟ ಬೇರೆಯದೇ ಆಗಿದ್ದಿತು. ಬೀಜಿಂಗ್ ಒಲಿಂಪಿಕ್ಸ್ ಇನ್ನೊಂದು ವರ್ಷವಿರುವಾಗ ಅಪಘಾತವೊಂದರಲ್ಲಿ ಈತನ ಬಲಗೈಯ ಮೂಳೆ ಮುರಿದುಹೋಯಿತು! ಆತನ ಡಾಕ್ಟರ್ ನಿನಗೆ ಮುಂದಿನ ಕೆಲವರ್ಷಗಳವರೆಗೂ ಈ ಕೈಯನ್ನು ಈಜಲು ಉಪಯೋಗಿಸಲಾಗದು ಎಂದು ಹೇಳಿದರು! 2008 ರ ಒಲಿಂಪಿಕ್ಸ್ ಮುಂದಿಂದೆ, ಚಿನ್ನದ ಪದಕಗಳನ್ನು ಗೆಲ್ಲುವ ತನ್ನ ಜೀವಮಾನದ ಹೇಳಿಕೆಯೊಂದ ನ್ನೂ ಕೊಟ್ಟಾಗಿದೆ. ಈಗ ನಿಲ್ಲುವ ಮಾತೆಲ್ಲಿ. ಒಂದಿಷ್ಟು ಹೆಚ್ಚುಕಡಿಮೆಯಾದರೆ ತನ್ನ ಜೀವನದ ಈಜುಗಾರಿಕೆಗೆ ಮಹಾಕುತ್ತು. ಸಂಬಂಧಿಗಳು,ಹಿತೈಷಿಗಳು ಬುದ್ಧಿವಾದವನ್ನು ಹೇಳಿದರು. ನಿನ್ನ ಕೈ ಚೆನ್ನಾಗಿದ್ದರೆ ಮುಂದಿನ ಬಾರಿಯ ಒಲಿಂಪಿಕ್ಸ್ನಲ್ಲಿ ಈಜಬಹುದಪ್ಪಾ ಸುಮ್ಮನೆ ಡಾಕ್ಟರ್ ಹೇಳುವ ಮಾತನ್ನು ಕೇಳು ಎಂದರು. ಆದರೆ ಇಟ್ಟ ಹೆಜ್ಜೆಯನ್ನು ಹಿಂದಿಡುವ ಜಾಯಮಾನ ಈತನದಲ್ಲ. ಕೈ ಸರಿಯಿರದಿದ್ದರೇನು ತನ್ನ ಕಾಲಿನಲ್ಲಿ ಈಜುವುದನ್ನು ಶುರುಮಾಡಿದ! ತನ್ನೆಲ್ಲ ಶಕ್ತಿಯನ್ನು ಕಾಲಿನ ಸ್ನಾಯುಗಳ ಮೇಲಿರಿಸಿ ಮುನ್ನುಗ್ಗತೊಡಗಿದ. ಈತನ ಪರಿಶ್ರಮ ಅದೆಷ್ಟರ ಮಟ್ಟಿಗೆತ್ತೆಂದರೆ ಮುಂದಿನ ವರ್ಷ ತನ್ನ ಮುರಿದ ಕೈ ಈಜಿಗೆ ಅಣಿಯಾದದ್ದು ಓಡುವ ಗಾಡಿಗೆ ಎಕ್ಟ್ರಾ ಎಂಜಿನ್ಗಳು ದೊರೆತಂದಾದವು. ಆದರೂ ಹಲವರಿಗೆ ಈತ ಎಂಟು ಪದಕಗಳನ್ನು ಗೆಲ್ಲುವುದು ಹಾಗಿರಲಿ ಕನಿಷ್ಠ ಒಂದನ್ನು ಗೆಲ್ಲುವುದನ್ನೂ ಸಂಶಯಪಡುತ್ತಿದ್ದರು. ಫೆಲ್ಪ್ಸ್ ದೃತಿಗೆಡಲಿಲ್ಲ. ಚೀನಾದ ಆ ಜಗತ್ಪ್ರಸಿದ್ದ ಒಲಿಂಪಿಕ್ಸ್ನಲ್ಲಿ ಒಂದರಿಂದೊಂದು ಚಿನ್ನದ ಪದಕಗಳನ್ನು ಗೆಲ್ಲುತ ತನ್ನೆಡೆಗೆ ಕುಹಕವಾಡಿದ ಅಷ್ಟೂ ಜನರ ಬಾಯನ್ನು ಮುಚ್ಚತೊಡಗಿದ. ಮೊದಲ ಏಳು ಪ್ರಕಾರದ ಈಜಿನಲ್ಲಿ ಏಳು ಚಿನ್ನದ ಪದಕವನ್ನು ಗಳಿಸಿಯೇ ಬಿಟ್ಟ!!


ಅಂದು ಆತ ತನ್ನ ಎಂಟನೇ ಹಾಗು ಕೊನೆಯ ಈಜಿಗೆ ಅಣಿಯಾಗುತ್ತಿದ್ದಾನೆ. ಕಳೆದ ಏಳೂ ಈಜಿನ ಪ್ರಕಾರಗಳಲ್ಲಿ ಅದಾಗಲೇ ಚಿನ್ನವನ್ನು ಗೆದ್ದು ಶತಮಾನದ ಇತಿಹಾಸವನ್ನು ಅದಾಗಲೇ ಸೃಷ್ಟಿಸಿದ್ದಾನೆ. ಇದು ಆತನ ಹೇಳಿಕೆಯ ಎಂಟನೇ ಚಿನ್ನದ ಪದಕದ ಈಜು. 200 ಮೀಟರ್ಗಳ ಬಟರ್ ಫ್ಲೈ. ತನ್ನ ಎರಡೂ ಕೈಗಳನ್ನು ಮೇಲಕೆತ್ತಿ ಎದೆಯ ಮುಖಾಂತರ ಚಿಟ್ಟೆಯಂತೆಯೇ ಈಜುವ ಬಗೆ. ಫೆಲ್ಪ್ಸ್ ನೀರಿಗೆ ಜಿಗಿದ. ಶರವೇಗದಲ್ಲಿ ಇತರ ಈಜುಗಾರರನ್ನು ಹಿಂದಿಕ್ಕತೊಡಗಿದ. ಆದರೆ ಆತನ ಚಿನ್ನದ ಕನಸಿಗೆ ಕೊನೆಗಾಲದ ವಿಘ್ನವೊಂದು ಎದುರಾಯಿತು. ಕಣ್ಣನು ನೀರಿನಲ್ಲಿ ಗಟ್ಟಿಯಾಗಿ ಮುಚ್ಚಿದ್ದ ಆತನ ಕನ್ನಡಕ ಸಣ್ಣದಾಗಿ ಸೀಳುಬಿಟ್ಟಿತು. ಪರಿಣಾಮ ನೀರು ಒಮ್ಮೆಲೇ ಕಣ್ಣೊಳಗೆ ರಭಸವಾಗಿ ನುಸುಳತೊಡಗಿತು. ಕಣ್ಣು ಹುರಿಯಹತ್ತಿತು. ಆದರೆ ಈಜುತ್ತಿದ್ದವನ ಹೆಸರು ಮೈಕಲ್ ಫೆಲ್ಪ್ಸ್. ಮುರಿದ ಕೈಯಲ್ಲೇ ಈಜಿ ಚಿನ್ನವನ್ನು ಗೆದ್ದವನಿಗೆ ಕಣ್ಣಿಗೆ ಉರಿಕೊಡುವ ನೀರು ಅದ್ಯಾವ ಲೆಕ್ಕ. ಆತನಿಗೆ ತನ್ನ ಇನ್ನೂರು ಮೀಟರ್ ರೇಸಿನಲ್ಲಿ ಅದೆಷ್ಟು ಬಾರಿ ಕೈಗಳನ್ನು ಬಡಿಯಬೇಕೆಂಬ ಕರಾರುವಕ್ಕಾದ ಲೆಕ್ಕವಿದ್ದಿತು. ಅಂತೆಯೇ ಎಣಿಸುತ್ತಲೇ ಮುನ್ನುಗ್ಗಿದ. ನೋಡನೋಡುತ್ತಲೇ ಈಜಿನ ಕೊನೆಯನ್ನು ತಲುಪಿದ. ಸಿಳ್ಳೆ ಕೇಕೆಗಳ ಮದ್ಯೆ ಎತ್ತರದಲ್ಲಿ ಝಗಝಗಿಸುತ್ತಿದ್ದ ಸ್ಕೋರ್ ಬೋರ್ಡನ್ನು ನೋಡುತ್ತಾನೆ, ತನ್ನ ಹೆಸರಿನ ಮುಂದೆ WR ಎಂಬ ಅಕ್ಷರಗಳು ಮೂಡಿ ಮಿನುಗತ್ತಿವೆ. ಅರ್ತಾಥ್ ಆತನ ಆ ಈಜು ವರ್ಲ್ಡ್ ರೆಕಾರ್ಡ್ ವೇಗದಲ್ಲಿ ಮುಗಿಸಲಾಗಿದೆ ಎಂದು! ಆತನ ಒದ್ದೆಯಾದ ಕಣ್ಣುಗಳು ಪುನಃ ಒದ್ದೆಯಾದವು. ಅಲ್ಲದೆ ತಾನು ಗೆದ್ದ ಎಂಟು ಚಿನ್ನದ ಪದಕಗಳಲ್ಲ್ಲಿ ಏಳು ವರ್ಲ್ಡ್ ರೆಕಾರ್ಡ್ಗಳನ್ನು ಆತ ಅಲ್ಲಿ ನಿರ್ಮಿಸಿದ್ದ!

ಇದು 21ನೆಯ ಶತಮಾನ ಕಂಡ ಸಾಧಕನೊಬ್ಬನ ಕತೆ. ಜೀವನದಲ್ಲಿ ಬಂದ ಕಷ್ಟಗಳನ್ನು ಬಿಗಿದಪ್ಪಿಕೊಂಡೇ ಮುನ್ನೆಡೆದ ಅಮೇರಿಕಾದ ಸಾಹಸಿಯೊಬ್ಬನ ಕತೆ. ಗುರಿಯೊಂದು ಸ್ಪಷ್ಟವಾದರೆ ಏನೆಲ್ಲವನ್ನು ಸಾಧಿಸಬಹುದೆಂದು ಫಿಲ್ಪ್ಸ್ ಜಗತ್ತಿಗೆ ತೋರಿಸಿಕೊಟ್ಟ. ತನ್ನನ್ನು ಅಣಕಿಸಿದ, ನೋಯಿಸಿದ ಸಮಾಜವನ್ನೇ ಎನರ್ಜಿ ಸಪ್ಲಿಮೆಂಟಿನಂತೆ ಬಳಸಿಕೊಂಡು ಮುನ್ನೆಡೆದ. 2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ ಪುನಃ ಆರು ಪದಗಳನ್ನು ಗೆದ್ದು ಭಾಗಶಃ ನಿವೃತ್ತಿ ಹೊಂದಿದ್ದ ಫಿಲ್ಪ್ಸ್ ವಯೋಸಹಜ ಚಟುವಟಿಕೆಗಳಂತೆ ಕುಡಿತ, ಡ್ರಗ್ಸ್ ಎನ್ನುತ್ತಾ ಸುದ್ದಿಯಾಗತೊಡಗಿದ. ಇದೇ ಕಾರಣಕ್ಕೆ ಜೈಲುವಾಸವನ್ನೂ ಅನುಭಸಿಸತೊಡಗಿದ. ಇಡೀ ವಿಶ್ವವೇ ಗುರುತಿಸುವ ಹೆಗ್ಗಳಿಕೆಯ ಕ್ರೀಡಾಪಟುವೊಬ್ಬ ಒಮ್ಮೆಲೇ ಜೈಲುಕೋಣೆಯನ್ನು ಸೇರುವುದು ತಮಾಷೆಯ ವಿಷಯವಲ್ಲ. ಇದು ಫಿಲ್ಪ್ಸ್ ನನ್ನು ನಡುಗಿಸಿಹಾಕಿತು. ನಿವೃತ್ತಿ ಹೊಂದಿದ್ದ ಆತ ಕೂಡಲೇ ಮತ್ತೊಂದು ಪಣತೊಟ್ಟ. ಐದನೇ ಬಾರಿಗೆ 2016 ರ ರಿಯೋ ಒಲಿಂಪಿಕ್ಸ್ ನಲ್ಲಿ ಈಜಿ ಗೆಲ್ಲುವುದಾಗಿ ಘೋಷಿಸಿದ. ತನ್ನೆಲ್ಲ ಚಟಗಳನ್ನು ತುಳಿದು ಮಗದೊಮ್ಮೆ ನೀರಿಗೆ ನೆಗೆದ. ಗುರಿ ಸ್ಪಷ್ಟವಾದ ಮೇಲೆ ಮುಂದೇನು. ರಿಯೋ ವಿನಲ್ಲಿ ಆತ ಬಾಚಿದ್ದು ಒಟ್ಟು ಆರು ಮೆಡಲ್ಗಳು. ಅದರಲ್ಲಿ ಚಿನ್ನದ ಮೆಡಲ್ಗಳ ಸಂಖ್ಯೆ ಬರೋಬ್ಬರಿ ಐದು!