Friday, September 28, 2018

ಇರುವುದೆಲ್ಲಿ..? 'ಆ ಮನೆ' ವಿಶ್ವದ ಅನಂತತೆಯಲ್ಲಿ....

ಭೂಮಿಯ ಮೇಲೆ ತನ್ನ ಪಾದಾರ್ಪಣೆಯದಾಗಿನಿಂದಲೂ ಮಾನವ ಒಂದಿಲ್ಲೊಂದು ಬಗೆಯಲ್ಲಿ ತನ್ನ ಸುತ್ತಲಿನ ಪರಿಸರವನ್ನು ಅನ್ವೇಷಿಸುತ್ತಿದ್ದಾನೆ. ಈ ಅನ್ವೇಷಣೆ ಆತನ ಹಸಿವು,ರಕ್ಷಣೆ ಹಾಗು ಮೈಗಳ್ಳತನಕ್ಕೆ ಪೂರಕವಾಗಿತ್ತಲ್ಲದೆ ಆತನ ಕುತೂಹಲ ಚಿಂತನೆಗಳಿಗೂ ದಾರಿಯನ್ನು ತೋರಿಸಿತು. ಆದ ಕಾರಣವೇ ಇತರೆ ಪ್ರಾಣಿಗಳೊಟ್ಟಿಗೆ ಗೆಡ್ಡೆ ಗೆಣಸು ಹಾಗು ಹಸಿ ಮಾಂಸವನ್ನು ತಿಂದು ಎಲ್ಲೆಂದರಲ್ಲಿ ಎದ್ದು ಬಿದ್ದು ಬೆಳೆಯುತ್ತಿದ್ದ ಜೀವಿಯೊಂದು ಇಂದು ತನ್ನ ಸಹವರ್ತಿ ಜೀವಿಗಳನೆಲ್ಲ ಬಿಟ್ಟು ಬಹಳಷ್ಟು ದೂರಕ್ಕೆ ಸಾಗಿರುವುದು. ಇಂದು ಆ ಜೀವಿಯ ನಡೆ ಕೇವಲ ಭೂಮಿಯ ಮೇಲೆ ಸಮಾಜವನ್ನು ನಿರ್ಮಿಸಿ ಬಾಳಿ ಬದುಕುವುದಲ್ಲದೆ ಪ್ರಚಂಡದೂರಗಳಲ್ಲಿರುವ ಗ್ರಹ, ಗ್ಯಾಲಕ್ಸಿಗಳ ಅಧ್ಯಯನವನ್ನೂ ಒಳಗೊಂಡಿದೆ. ಕತ್ತಲೆಯ ರಾತ್ರಿಯಲ್ಲಿ ಮಿನುಗುವ ಅಗಣಿತ ನಕ್ಷತ್ರಗಳ ನಡುವೆ ಗ್ರಹಗಳನ್ನು ಗುರುತಿಸಿ ಅದರ ಮುಖೇನ ಸೌರಮಂಡಲ, ಅಲ್ಲಿರುವ ಗ್ರಹಗಳು, ಅವುಗಳ ರಚನೆ, ತೂಕ, ಹಾಗು ತಾಪಮಾನವಲ್ಲದೆ ಅವುಗಳಿಗಿರುವ ನೈಸರ್ಗಿಕ ಉಪಗ್ರಹಗಳ ಬಗೆಗೂ ಈತ ಕೂತಲ್ಲೇ ಲೆಕ್ಕಾಚಾರ ಹಾಕತೊಡಗಿದ. ದಿನಗಳು ಕಳೆದಂತೆ, ವಿಜ್ಞಾನ ಬೆಳೆದಂತೆ ಈತನಿಗೆ ಅವುಗಳ ಮೇಲೂ ಕಾಲೂರಬೇಕೆಂಬ ತವಕ ವಿಪರೀತವಾಯಿತು. ಮಾನವನ ಈ ತವಕ ಏತಕೆ? ಅದನ್ನು ಆತನ ಮಸ್ತಿಷ್ಕದೊಳಗೆ ತುಂಬಿದವರ್ಯಾರು? ಭೂಮಿಯ ಮೇಲೆ ಬದುಕಲಿ ಎನುತ ಗಾಳಿ, ನೀರು ಎಲ್ಲವನ್ನೂ ಕೊಟ್ಟರೂ ಪಕ್ಕದ ಮನೆಯ ಮೇಲ್ಯಾಕೆ ಈತನಿಗೆ ಕಣ್ಣು ಎಂಬ ಪ್ರೆಶ್ನೆಗೆ ಉತ್ತರ ಮಾತ್ರ ನಾವುಗಳೇ ಹುಡುಕಿಕೊಳ್ಳಬೇಕು.

ಮಾನವ ಹೀಗೆ ಸೌರಮಂಡಲದಲ್ಲಿರುವ ಅಷ್ಟೂ ಗ್ರಹಗಳ ಆಳೆತ್ತರಗಳನ್ನು ಅರಿತು ಕೊನೆಗೆ ಹೆಚ್ಚುಕಡಿಮೆ ಯಾವ ಗ್ರಹಗಳ ಮೇಲೂ ಜೀವಿಗಳಿರುವುದು ಸಾಧ್ಯವಿಲ್ಲವೆಂಬುದನ್ನು ಅರಿತಮೇಲೆ ಆತನ ದೃಷ್ಟಿ ಸೌರಮಂಡಲದಾಚೆ ಇರುವ ಅನಂತ ವಿಶ್ವದ ಕಡೆಗೆ ನೆಟ್ಟಿತು. ನಮ್ಮ ಸೌರಮಂಡಲದಂತಹ ಕೋಟಿ ಕೋಟಿ ಸೌರಮಂಡಲಗಳಿರುವ ಅಗಾಧ ವಿಶ್ವದಲ್ಲಿ ಇತರೆ ಜೀವಿಗಳ ಇರುವಿಕೆಯನ್ನು ಅಲ್ಲಗೆಳೆಯಲಾಗುವುದಿಲ್ಲ ಎಂಬುದನ್ನರಿತು ತನ್ನ ಸಂಶೋಧನೆಯನ್ನು ಮುಂದುವರೆಸಿದರೂ ಇಂದಿಗೂ ಆತನಿಗೆ ಹೇಳಿಕೊಳ್ಳುವಂತಹ ಯಾವುದೇ ಪುರಾವೆಗಳು ಸಿಗದಿರುವುದು ವಿಪರ್ಯಾಸವೇ ಸರಿ. ಆದರೆ ಮುಂದೊಂದು ದಿನ ಇದು ಸಾಧ್ಯವಾಗದು ಎಂದು ಖಡಾಖಂಡಿತವಾಗಿ ಹೇಳಲೂ ಆಗದು. ಆದರೆ ಆ ಸಮಯದವರೆಗೆ ಮಾನವ ಬದುಕಿರಬೇಕು. ಆದರೆ ಇನ್ನು ಕೆಲವು ದಶಕಗಳಲ್ಲೇ ಸಾವಿರ ಕೋಟಿ ಜನಸಂಖ್ಯೆಯನ್ನು ಹಾಗು ಅವರುಗಳ ಉಪಟಳವನ್ನು ಸಹಿಸಿಕೊಳ್ಳಬೇಕಾದ ಭೂಮಿಯ ಕತೆ ಏನಾಗುತ್ತದೋ ಎಂಬುದನ್ನು ಯಾವೊಬ್ಬ ವಿಜ್ಞಾನಿಯೂ ನಿಖರವಾಗಿ ಹೇಳಲಾರ. ಈವೊಂದು ಕಾರಣಕ್ಕಾದರೂ ಮಾನವನಿಗೆ ತನ್ನ ಸೌರಮಂಡಲದ ಇತರ ಗ್ರಹಗಳ ವಿವರವಾದ ಅಧ್ಯಯನ ಅವಶ್ಯಕ. ಹಾಗೆ ಯೋಚಿಸುತ್ತಾ ಹೋದ ಮಾನವನಿಗೆ ತಕ್ಷಣ ಹೊಳೆದ ಗ್ರಹವೇ ಮಂಗಳ ಗ್ರಹ.

ಭೂಮಿ ಸೂರ್ಯನಿಂದ 93 ಮಿಲಿಯನ್ ಮೈಲುಗಳ ದೂರದಲ್ಲಿದ್ದರೆ ಮಂಗಳ ಸೂರ್ಯನಿಂದ 142 ಮಿಲಿಯನ್ ಮೈಲುಗಳಷ್ಟು ದೂರದಲ್ಲಿದೆ. ಹಾಗಾಗಿ ಅದು ಸೂರ್ಯನ ಸುತ್ತ ಸುತ್ತಲು ಭೂಮಿಗಿಂತಲೂ ಎರಡು ಪಟ್ಟು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಅಂದರೆ ಅಲ್ಲಿನ ಇಂದು ವರ್ಷ ನಮ್ಮಯ ಎರಡು ವರ್ಷಕ್ಕೆ ಸಮ. ಆದರೆ ಕೆಲವು ನಿಮಿಷಗಳ ಅಂತರವನ್ನು ಬಿಟ್ಟರೆ ದಿನದ ಘಂಟೆಗಳು ಎರಡೂ ಗ್ರಹಗಳಲ್ಲೂ ಒಂದೇಯಾಗಿರುತ್ತದೆ. ಅಲ್ಲಿಯ ಸರಾಸರಿ ತಾಪಮಾನವೂ 30 ಡಿಗ್ರಿಗಳ ಒಳಗೆ ಇರುತ್ತದೆ. ವಾತವರಣ ಇಂಗಾಲದ ಡೈ ಆಕ್ಸೈಡ್ ಹಾಗು ಇತರ ಅನಿಲಗಳಿಂದ ಕೂಡಿದೆ. ಹೀಗೆ ಭಾಗಶಃ ಭೂಮಿಯ ಮೇಲ್ಮೈಯನ್ನೇ ಹೋಲುವ ಮಂಗಳ ಗ್ರಹ ಸಧ್ಯಕ್ಕೆ ಮಾನವನ ಲೆಕ್ಕಾಚಾರದಲ್ಲಿ ಜೀವಿಗಳ ಇರುವುಕೆಗೆ ಪೂರಕವಾಗಿರುವ ಗ್ರಹ. ಇದಲ್ಲದೆ ನಮ್ಮ ಸೌರಮಂಡಲದ ಅತಿದೊಡ್ಡ ಗ್ರಹವೆನಿಸಿಕೊಂಡ ಗುರುಗ್ರಹ ಸುಮಾರು ಎಂಬತ್ತು ಉಪಗ್ರಹಗಳನ್ನು ಒಳಗೊಂಡಿದೆ. ಆ ಉಪಗ್ರಹಗಳಲ್ಲಿ ಭೂಮಿಯ ಕಾಲು ಭಾಗದಷ್ಟು ದೊಡ್ಡದಾದ ‘ಯುರೋಪಿಯಾ’ ಎಂಬ ಉಪಗ್ರಹ ಒಂದಿದೆ. ಇದನ್ನು ಕ್ರಿಸ್ತ ಶಕ 1610 ರಲ್ಲಿ ಗೆಲಿಲಿಯೋ ತನ್ನ ಟೆಲಿಸ್ಕೋಪ್ ನ ಮೂಲಕ ಕಂಡುಹಿಡಿದ.(!) ಹೀಗೆ ಪತ್ತೆಯಾದ ಉಪಗ್ರಹದ ಮೇಲ್ಮೈ ದಟ್ಟವಾದ ಮಂಜುಗೆಡ್ಡೆಯಿಂದ ಕೂಡಿದ್ದೂ ಆ ಪದರದ ಕೆಳಗೆ ಅಗಾಧವಾದ ನೀರಿನ ಸಾಗರಗಳಿವೆ ಎಂಬುದನ್ನು ವಿಜ್ಞಾನಿಗಳು ಇತ್ತೀಚಿಗೆ ಪತ್ತೆಹಚ್ಚಿದ್ದಾರೆ. ಒಂದು ಪಕ್ಷ ಮಂಗಳವೇನಾದರೂ ಬದುಕಲು ಯೋಗ್ಯವಲ್ಲದ ನೆಲವಾದರೆ ಇಡೀ ಸೌರಮಂಡಲದಲ್ಲಿ ಬಹುಶಃ ಬದುಕಲು ಯೋಗ್ಯವಾದ ಮತ್ತೊಂದು ಗ್ರಹವೊಂದಿದ್ದರೆ ಅದು ಯುರೋಪಿಯಾ ಗ್ರಹವಾಗಬಹುದು ಎಂಬುದು ಸದ್ಯಕ್ಕೆ ಹಲವು ವಿಜ್ಞಾನಿಗಳ ಲೆಕ್ಕಾಚಾರ.

ಎರಡನೇ ವಿಶ್ವಯುದ್ಧದ ನಂತರ ವಿಶ್ವದ ಎರಡು ಮಹಾಶಕ್ತಿಗಳಾದ ಅಮೇರಿಕ ಹಾಗು ರಷ್ಯಾಗಳ ನಡುವೆ ನೆಡೆದ ಶೀತಲ ಸಮರದಲ್ಲಿ ಅಂತರಿಕ್ಷದ ಬಗೆಗಿನ ಅನ್ವೇಷಣೆಗಳು ವೇಗೋತ್ಕರ್ಷದ ಹಾದಿಯನ್ನು ಹಿಡಿದವು. ಈ ಸಮರದಲ್ಲಿ ನಾ ಮುಂದು ತಾ ಮುಂದು ಎನುತ ಮಂಗಳ ಗ್ರಹದ ಮೇಲೆ ಕಾಲಿಡಬಯಸಿದ ಎರಡು ದೇಶಗಳಲ್ಲಿ ಸಾಕಷ್ಟು ಕಷ್ಟ ನಷ್ಟಗಳ ನಂತರ ಅಮೆರಿಕದ ಮರಿನಾರ್-4 ಎಂಬ ಬಾಹ್ಯಾಕಾಶ ನೌಕೆ ಮೊದಲು (1965) ಮಂಗಳನ ಕಕ್ಷೆಯನ್ನು ಸೇರಲು ಸಫಲವಾಯಿತು. ಅಲ್ಲಿಂದ ಮುಂದೆ ಅದೇ ಅಮೇರಿಕ ಒಟ್ಟು ನಾಲ್ಕು ರೋವರ್ (ಮಂಗಳದ ನೆಲದ ಮೇಲೆ ಇಳಿದ ಯಂತ್ರಗಳು) ಗಳನ್ನು ಮಂಗಳ ಅಂಗಳದ ಮೇಲೆ ಇಳಿಸಿ ಇತಿಹಾಸವನ್ನು ಸೃಷ್ಟಿಸಿತು. ಕ್ಯೂರಿಯಾಸಿಟಿ (2011) ಹಾಗು ಆಪರ್ಚುನಿಟಿ (2003) ಎಂಬ ಎರಡು ರೋವರ್ಗಳು ಇಂದಿಗೂ ಭೂಮಿಯ ಪ್ರತಿನಿಧಿಗಳಾಗಿ ಮಂಗಳನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇನ್ನು ಭಾರತದ ವಿಷಯಕ್ಕೆ ಬಂದರೆ ತನ್ನ ಮೊದಲ ಉಡಾವಣೆಯಲ್ಲೇ ಯಶಸ್ವೀಯಾದ ವಿಶ್ವದ ಏಕೈಕ ದೇಶವಾಗಿ ಅಲ್ಲದೆ ವಿಶ್ವದಲ್ಲೇ ಅತೀ ಅಗ್ಗವಾದ ಮಂಗಳಯಾನ (MOM) ಪ್ರೋಬನ್ನು 2013 ರಲ್ಲಿ ಗಗನಕ್ಕೆ ಹಾರಿಸಿ ಕಕ್ಷೆಯನ್ನು ತಲುಪಿಸಿದ ಕೀರ್ತಿ ನಮ್ಮ ಇಸ್ರೋ ಸಂಸ್ಥೆಗೆ ಸೇರುತ್ತದೆ. ಈ ಮೂಲಕ ಏಷ್ಯಾದಲ್ಲೇ ಮಂಗಳವನ್ನು ತಲುಪಿದ ಮೊದಲ (ವಿಶ್ವದಲ್ಲಿ ನಾಲ್ಕನೇ) ದೇಶವೆಂಬ ಹೆಗ್ಗಳಿಕೆಗೂ ಅದು ಪಾತ್ರವಾಗಿದೆ.

ಎಲ್ಲ ನಕ್ಷತ್ರಗಳಂತೆ ನಮ್ಮ ಸೂರ್ಯನೂ ಒಂದು ದಿನ ನಶಿಸಲೇಬೇಕು. ಅದರಲ್ಲಿರುವ ಹೈಡ್ರೋಜೆನ್ ಹಾಗು ಹೀಲಿಯಂ ಒಂದಿಷ್ಟೂ ಬಿಡದೆ ಖಾಲಿಯಾದ ನಂತರ ಕೆಂಡಂತಹ ದೈತ್ಯ ಸೂರ್ಯ ತನ್ನ ಹತ್ತಿರವಿರುವ ಗ್ರಹಗಳನೆಲ್ಲ ನುಂಗಿ ಹಾಕಲಿದೆ. ಇದಕ್ಕೆ ಕಾರಣ ಗುರುತಾಕರ್ಷಣೆಯಷ್ಟೇ ಅಲ್ಲದೆ ಆ ಸಮಯಕ್ಕೆ ಸೂರ್ಯ ಅದೆಷ್ಟರ ಮಟ್ಟಿಗೆ ದೊಡ್ಡವನಾಗಿರುತ್ತಾನೆ ಎಂದರೆ ಆದರ ಪ್ರಸ್ತುತ ಪರಿಧಿ ಹೆಚ್ಚು ಕಡಿಮೆ ಭೂಮಿಯ ಬಳಿಗೆ ಬಂದಿರುತ್ತದೆ!. ಆದರೆ ಇದು ಜರುಗಲು ಇನ್ನು 5 ಬಿಲಿಯನ್ ವರ್ಷಗಳಿಗೂ ಹೆಚ್ಚಿನ ಕಾಲವಿದೆ. ಅಷ್ಟೊತ್ತಿಗಾದರೂ ಮಾನವನಿಗೆ ಶತಾಯ ಗತಾಯ ಅಂತರಿಕ್ಷದಲ್ಲೊಂದು ಹೊಸ ಮನೆಯನ್ನು ಹುಡುಕುವ ಅವಶ್ಯಕೆತೆಯಿದೆ.ಆದರೆ ಸೂರ್ಯನ ಕಾಲಾವಧಿ ಹೀಗೆ ಮುಗಿದ ನಂತರ ನಮ್ಮ ಇಡೀ ಸೌರಮಂಡಲವೇ ಬದುಕನ್ನು ಕಳೆದುಕೊಳ್ಳುವಾಗ ಇಲ್ಲಿಯ ಯಾವುದೇ ಗ್ರಹಗಳ ಮೇಲೂ ಆತ ಶಾಶ್ವತವಾದೊಂದು ಮನೆಯನ್ನು ನಿರ್ಮಿಸಿಕೊಳ್ಳಲಾರ. ಹಾಗಾಗಿ ಆತನ ಅರಸುವ ಗುರಿಯೇನಿದ್ದರೂ ಅಂತರಿಕ್ಷದಲ್ಲಿ ಮತ್ತೊಂದು ಜೀವಿಸಲೋಗ್ಯವಾದ ಸಂಪೂರ್ಣ ಸೌರಮಂಡಲಗಳೇ ಆಗಿದೆ.

ಹೀಗೆ ದಿನದಿಂದ ದಿನಕ್ಕೆ ಆಗಸದೆಡೆಗೆ ದಾಪುಗಾಲಿಡುತ್ತಿರುವ ಮಾನವನ ಪ್ರಯತ್ನದ ಫಲಿತಾಂಶ ಅದೆಷ್ಟರ ಮಟ್ಟಿಗೆ ಸಫಲವಾಗಲಿದೆ? ಮಂಗಳ ಗ್ರಹದಲ್ಲಿ ತನ್ನ ಎರಡನೆಯ ಮನೆಯನ್ನು ಕಾಣುವ ಆತನ ಕನಸ್ಸು ನನಸಾಗಲಿದೆಯೇ ? ಬ್ರಹ್ಮಾಂಡದ ಅಲ್ಲೆಲ್ಲೋ ನಮ್ಮಂತೆಯೇ ಹೋಲುವ ಜೀವಿಗಳೋ ಅಥವಾ ಭೂಮಿಯೊಂದು ಸಿಗುವ ಲಕ್ಷಣಗಳೆಷ್ಟಿವೆ? ಇಂದು ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೇ ಹೋಗಲು ಪರದಾಡುವ ಮಾನವನಿಗೆ ಅಂತಹ ಅನಂತ ದೂರದ ಪ್ರಯಾಣಕ್ಕೆ ಬೇಕಾಗುವ ವಾಹಕಗಳಾದರೂ ಎಂತಹದ್ದು? ಆದರೆ ಅಂತಹ ಜಾಗವೊಂದು ಅನಂತ ವಿಶ್ವದ ಅದ್ಯಾವ ಮೂಲೆಯಲ್ಲಿದೆ. ಅದನ್ನು ಹುಡುಕುವ ಬಗೆಯಾದರೂ ಎಂತಹದ್ದು?ಇದು ಖಂಡಿತವಾಗಿಯೂ ಸಾಧ್ಯವೇ? ಎಂಬ ಹಲವಾರು ಪ್ರೆಶ್ನೆಗಳು ನಮ್ಮೊಳಗೇ ಮೂಡುತ್ತವೆ.

ಐನ್ಸ್ಟಿನ್ ನ ಟೈಮ್-ಸ್ಪೇಸ್ ಥಿಯರಿ, ಟೈಮ್ ಮಷೀನ್, ಬ್ಲಾಕ್ ಹೋಲ್ಸ್, ಏಲಿಯನ್ಸ್ ಅಥವಾ ಇನ್ನಾವುದೇ ಥಿಯರಿಗಳೂ ಸದ್ಯಕಂತೂ ಈ ಪ್ರೆಶ್ನೆಗಳಿಗೆ ಪೂರಕವಾದಂತಹ ಉತ್ತರವನ್ನು ನೀಡಲಾರವು. ಹಾಗಾದರೆ ಬೇರ್ಯಾವ ಬಗೆಯಲ್ಲಿ ಈ ಕಾರ್ಯವನ್ನು ಸಿದ್ಧಿಗೊಳಿಸಬಹುದು? ದೀಪದ ಬೆಳಕು ತನ್ನ ಬುಡಕ್ಕೇ ಕತ್ತಲನೆಯನ್ನು ತಂದಂತೆ ನಾವುಗಳು ವಿಶ್ವದ ಸರ್ವವನ್ನೂ ಪಶ್ಚಿಮದ ಕನ್ನಡಕ ಒಂದರಲ್ಲೇ ನೋಡಲಿಚ್ಛಿಸುತ್ತೇವೆ. ನಮ್ಮ ವೇದ ಉಪನಿಷತ್ತುಗಳಲ್ಲಿ ತಿಳಿಸಿರುವ ಫಾರ್ಮುಲಾಗಳ ಮೇಲೂ ಒಮ್ಮೆ ಕಣ್ಣಾಯಿಸಿದರೆ ಬಹುಷಃ ಇನ್ನೊಂದು ಬಗೆಯ ಸಂಶೋಧನೆಯನ್ನು ಹುಟ್ಟುಹಾಕಬಹುದೇನೋ. ಮಹಾಭಾರತದದಲ್ಲಿ ಬಳಸಲಾದ ಬ್ರಹ್ಮಾಸ್ತ್ರ, ವಿಮಾನ, ವಿಷ್ಣವಾಸ್ತ್ರ ಎಂಬ ಹಲವು ಪದಗಳಾಗಲಿ, ಕಾಪರ್ನಿಕಸ್ ನಿಗಿಂತಲೂ ಸಹಸ್ರ ವರ್ಷಗಳ ಮುಂಚೆಯೇ ಸೌರಮಂಡಲ, ಗ್ರಹಗಳು, ಅವುಗಳ ಚಲನೆ, ದೂರದ ನಕ್ಷತ್ರಗಳು, ಗ್ರಹಣ ಇವುಗಳ ಬಗ್ಗೆ ವಿವರಿಸಿರುವ ವೇದ ಉಪನಿಷತ್ತುಗಳಾಗಲಿ ಎಲ್ಲವೂ ನಮ್ಮ ಪೂರ್ವಜರ ವೈಜ್ಞಾನಿಕ ಜ್ಞಾನದ ಆಳವನ್ನು ತೋರಿಸುತ್ತದೆ. ಇಂತಹ ಭಾರತೀಯ ವಿಜ್ಞಾನದ ನಿಟ್ಟಿನಲ್ಲೇನಾದರೂ ಸಂಶೋಧನೆ ನೆಡೆಸಿದರೆ ಬಹುಷಃ ಮೇಲಿನ ಕೆಲವು ಪ್ರೆಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬಹುದೇನೋ. ಹಾಗಾದರೆ ಆ ಕಾಲಕ್ಕೆ ಭಾರತದ ವಿಜ್ಞಾನ ಅಷ್ಟೊಂದು ಮುಂದುವರೆದಿದ್ದರೆ ಇಂದಿಗೆ ನಾವುಗಳು ನಮ್ಮಂತೆಯೇ ಹೋಲುವ ಅದೆಷ್ಟೋ ಗ್ರಹಗಳನ್ನು ಕಂಡುಹಿಡಿಯಬಹುದಿತ್ತು, ಅದೇಕೆ ಸಾಧ್ಯವಾಗಲಿಲ್ಲ ಎಂಬ ಪ್ರೆಶ್ನೆ ಉದ್ಭವಿಸುವುದು ಸಹಜ. ಆದರೆ ಹಿಂದೂ ವಿಶ್ವವಿಜ್ಞಾನ (Hindu Cosmology) ದ ಪ್ರಕಾರ ಇಡೀ ಬ್ರಹ್ಮಾಂಡವು ಹುಟ್ಟುವ ಮತ್ತು ಸಾಯುವ ಆವರ್ತ ನಿಯಮವನ್ನು ಅನುಸರಿಸುತ್ತದೆ. ಈ ನಿಯಮವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಇಡೀ ಬ್ರಹ್ಮಾಂಡವೇ ಇಂತಹ ಹುಟ್ಟು ಸಾವುಗಳ ನಡುವೆ ಚಲಿಸುತ್ತಿದ್ದರೆ ಮಾನವ ಹೊಸ ಗ್ರಹವೊಂದನ್ನು ಹುಡುಕಿದರೆಷ್ಟು ಅಥವ ಬಿಟ್ಟರೆಷ್ಟು. ಪಡೆದುಕೊಂಡಿರುವ ನಿಸರ್ಗವನ್ನು ಹಾಳುಗೆಡವದೆ ಮನೆಯಲ್ಲಿಯೇ ಬದುಕಿ ನಮ್ಮ ಮನೆಯಲ್ಲಿಯೇ ಕೊನೆಯುಸಿರೆಳೆವುದು ನೆಮ್ಮದಿಯ ಕಾರ್ಯ. ಆದರಿಂದಲೇ ಏನೋ ನಮ್ಮ ಹಿರಿಕರು ವೈಜ್ಞಾನಿಕವಾಗಿ ಅದೆಷ್ಟೇ ಮುಂದುವರೆದಿದ್ದರೂ ಆ ವಿಜ್ಞಾನವನ್ನು ಬೇರೊಂದು ಗ್ರಹದ ಅನ್ವೇಷಣೆಗೆ ಬಳಸಿ ಅದನ್ನೂ ಹಾಳುಗೆಡಹುವ ಕಾರ್ಯಕ್ಕೆ ಕೈಯಾಕದಿದ್ದದ್ದು.

ಒಟ್ಟಿನಲ್ಲಿ ಅಂಬೆಗಾಲಿಡುತ ಬೆಳೆವ ಮಗುವಿಗೆ ಪ್ರತಿದಿನವೂ ಕುತೂಹಲ ಹಾಗು ಬೆರಗನ್ನು ನೀಡುವ ಪರಿಸರದಂತೆ ಇಂದು ವಿಶ್ವವು ಮಾನವನಿಗೆ ಗೋಚರವಾಗುತ್ತಿದೆ. ಈ ಅನಂತ ಸಮುದ್ರದಲ್ಲಿ ಆತನಿಗೆ ಕಲಿತಷ್ಟೂ, ತಿಳಿದಷ್ಟೂ ಕಡಿಮೆಯೇ. ಸೃಷ್ಟಿಯ ಮುಂದೆ ಇದು ಆತನ ಕುಬ್ಜತೆಯನ್ನು ತೋರಿಸುತ್ತದೆ. ಇದು ಮಹತ್ವಾಕಾಂಕ್ಷಿ ಮಾನವನಿಗೆ ಸುಮ್ಮನಿರದಿರಲು ವಿಷಯವೊಂದನ್ನು ಮಾತ್ರ ಸದಾ ತೆರೆದಿರುತ್ತದೆ. ಒಟ್ಟಿನಲ್ಲಿ ಮಾನವನ ಹೊಟ್ಟೆಗೆ ಹಿಟ್ಟು ಖಾಲಿಯಾಗುವ ಮುನ್ನ ಪಕ್ಕದ ಮನೆಯನ್ನು ಹುಡುಕುವ ಆತನ ಹುಚ್ಚು ಅದೆಂದು ಸಾಧ್ಯವಾಗಲಿದೆ ಎಂಬುದನ್ನು ಕಾದು ನೋಡಲೂ ನಮಗೆ ಸಾಧ್ಯವಾಗದೇನೋ?!!

Wednesday, September 19, 2018

ಕೊಡುವ ಮೂರಾಣೆಗೇನು ಇವನ ಹೆಗಲ ಮೇಲೊತ್ತು ಸುತ್ತಬೇಕೇನು?

ಜಾಗತಿಕ ಮಟ್ಟದಲ್ಲಿ ಇಂದು ನಾಲ್ಕು ರೀತಿಯ ದೇಶಗಳನ್ನು ಕಾಣುತ್ತೇವೆ. ಅವುಗಳಲ್ಲಿ ಮೊದಲನೆಯವು ಇತರೆ ದೇಶಗಳ ಸಂಕಷ್ಟಗಳಿಗೆ ಸ್ಪಂಧಿಸಿ ಅಲ್ಪವೋ ಅಪಾರವೋ ತಮ್ಮ ಕೈಲಾದ ನೆರವನ್ನು ನೀಡುವ ದೇಶಗಳು, ಕೆಲವು ಕೊಡುವವರಿಗೆ ನಮ್ರತೆಯಿಂದಲೇ ಬೇಡವೆಂದು ಕಷ್ಟಗಾಲದಲ್ಲಿ ತಮಗೆ ತಾವೇ ನೆರವಾಗುವ ದೇಶಗಳು, ನಂತರದವು ಸ್ವಪ್ರತಿಷ್ಠೆ, ಆತ್ಮಗೌರವ ಎಂಬುದನ್ನೆಲ್ಲವನ್ನು ಬಿಟ್ಟು ಎಷ್ಟೂ ಕೊಟ್ಟರೂ ಸಾಲದೆನುತ ಕೈಚಾಚುವು, ಮತ್ತುಳಿದವು ನೆರವನ್ನು ಕೊಟ್ಟೂ, ಮೂರನ್ನು ಬಿಟ್ಟು ಅಯ್ಯೋ ಕೊಟ್ಟೆನೆಲ್ಲಾ ಎಂಬ ಸಣ್ಣತನವನ್ನು ತೋರಿಸುವ ದೇಶಗಳು. ತಿಳಿದೋ ತಿಳಿಯದೆಯೋ ಯಾವೊಂದು ದೇಶವೂ ಸಹ ಈ ನಾಲ್ಕನೇ ಕೆಟಗರಿಗೆ ಬರಲಿಚ್ಚಿಸುವುದಿಲ್ಲ. ಅದು ಒಂತರ ಭಂಡತನದ ಪರಮಾವಧಿ ಎನ್ನುತ್ತಾರಲ್ಲ ಹಾಗೆ. ಮೇಲುಕೀಳೆಂಬ ಅಸಹನೆ, ನಾನು ನಾನೆಂಬ ಆಹಂ, ಕುತಂತ್ರಿ ತಂತ್ರಗಳೇ ತುಂಬಿ ತುಳುಕಾಡುವ ದೇಶವೊಂದು ಮಾತ್ರ ಈ ಬಗೆಯ ಕೊಟ್ಟು ಕೈ-ಕೈ ಹಿಸುಕುಕಿಕೊಳ್ಳುವ ಗುಂಪಿಗೆ ಸೇರುತ್ತದೆ.

ಪ್ರಸ್ತುತ ಟ್ರಂಪ್ ಮಹಾಶಯ ದಿ ಗ್ರೇಟ್ ಎಂದು ಕರೆಸಿಕೊಳ್ಳುವ ಅಮೇರಿಕವನ್ನು ಈ ನಾಲ್ಕನೇ ಕೆಟಗರಿಯ ದೇಶದ ಪಟ್ಟಿಯಲ್ಲಿ ತಂದು ನಿಲ್ಲಿಸಿದ್ದಾನೆ. ಕೊಟ್ಟ ಮೂರಾಣೆ ದುಡ್ಡಿನ ಗರ್ವದಿಂದ ನಾವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹಣದ ನೆರವನ್ನು ನೀಡುತ್ತಾ ತಪ್ಪುಮಾಡುತ್ತಿದ್ದೇವೆ ಎನುತ ಸಣ್ಣತನದ ಮಾತನಾಡುತ್ತಾನೆ. ತಾನೇ ರಾಜನೆಂಬಂತೆ ಸಿಕ್ಕ ಸಿಕ್ಕ ಅಂತಾರಾಷ್ಟ್ರೀಯ ವಾಗ್ವಾದಗಳಿಗೆ ಮೂಗನ್ನು ತೂರಿಸುತ್ತಾ, ದ್ವೇಷದ ಜ್ವಾಲೆಯನ್ನು ಹೊತ್ತಿಸುತ್ತಾ, ತನ್ನ ಕಳ್ಳತನವನ್ನು ಮರೆಮಾಚಿಕೊಳ್ಳಲು ಇತರ ದೇಶಗಳ ಮೇಲೆ ಗೂಬೆಯನ್ನು ಕೂರಿಸುತ್ತಾ, ಅರಚುತ್ತಾ, ಬೆದರಿಸುತ್ತ, ಶ್ರೀಮಂತ ಅಪ್ಪನ ಪುಡಾರಿ ಮಗನಂತನಾಗಿದೆ ಇಂದು ಟ್ರಂಪ್ ಆಡಳಿತ. ಇಡೀ ಭೂಮಂಡಲವನ್ನೇ ತನ್ನ ನೌಕಾನೆಲೆಯ ತುಣುಕುಗಳನ್ನಾಗಿ ಮಾಡಿಕೊಳ್ಳುವ ಸಲುವಾಗಿಯೂ, ತನ್ನ ದೇಶದ ತೈಲಕ್ಕೆ ಅಂತರಾಷ್ಟ್ರಿಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿಸಿಕೊಳ್ಳಲೋ, ನಾನಿದ್ದರೆ ಮಾತ್ರ ಇಂದು ವಿಶ್ವಮಾರುಕಟ್ಟೆ ನೆಡೆಯುವುದು ಎಂಬ ಭ್ರಮೆಯನ್ನು ಹುಟ್ಟುಹಾಕಲು ಅವಣಿಸುತ್ತಿರುವ ಈ ಆಸಾಮಿ ಕೊನೆಗೆ ಇದು ಸಾಧ್ಯವಿಲ್ಲ ಎಂಬುದನ್ನು ಮನಗಂಡಾಗ ಬಳಸುತ್ತಿರುವ ಕೊನೆಯ ಅಸ್ತ್ರಗಳೇ 'ಆರ್ಥಿಕ ದಿಗ್ಬಂಧನ' ಹಾಗು 'ಆರ್ಥಿಕ ನೆರವಿನ ಮೊಟಕುಗೊಳಿಸುವಿಕೆ'. ಅದರಲ್ಲೂ ಆರ್ಥಿಕ ನೆರವಿನ ಮೊಟಕುಗೊಳಿಸುವಿಕೆಯನ್ನು ಆತ ಹೇಳುವ ರೀತಿಯನ್ನು ನೋಡಿದರೆ ಇಂದು ವಿಶ್ವದ ಬಡದೇಶಗಳಿಗೆಲ್ಲವೂ ಈತನೊಬ್ಬನೇ ಅನ್ನಧಾತನೇನೋ ಎನ್ನುವ ಧಾಟಿಯದ್ದಾಗಿರುತ್ತದೆ. ಅಷ್ಟಾಗಿಯೂ ಇಂದು ಅಮೇರಿಕ ವಿದೇಶಗಳಿಗೆ ಕೊಡುವ ಆರ್ಥಿಕ ನೆರವು ಎಷ್ಟಂತೀರಾ, ಅದು ತನ್ನ ಒಟ್ಟು ಜಿಡಿಪಿಯ 0.7% ಮಾತ್ರ! ಇದು ಆರ್ಥಿಕವಾಗಿ ಸಣ್ಣವರಾದರೂ ಮನಸ್ಸಿನಿಂದ ದೊಡ್ಡವರಾದ ಸ್ವೀಡನ್, ನಾರ್ವೆಯ ಶೇಕಾಡುವರುವಿಗೆ ಹೋಲಿಸಿದರೆ ತೀರಾನೇ ಕಡಿಮೆ ಎಂಬುದು ಅಮೇರಿಕಾದ ಅಧ್ಯಕ್ಷನಿಗೇನು ತಿಳಿಯದ ವಿಚಾರವಲ್ಲ. ಅಷ್ಟಾಗಿಯೂ ಈತ ಸಾಕು ಮಕ್ಕಳಿಗೆ ಆಸ್ತಿಯ ಹಕ್ಕಿಲ್ಲವೇನೋ ಎಂಬಂತೆ ಅಭಿವೃದ್ದಿಶೀಲ ರಾಷ್ಟ್ರಗಳಿಗೆ ನಮ್ಮ ಆರ್ಥಿಕ ನೆರವನ್ನು ಮೊಟಕುಗೊಳಿಸಬೇಕು ಎಂಬಂತಹ ಬಾಲಿಶ ಹೇಳಿಕೆಗಳನ್ನು ಕೊಡುವಾಗ ಈತನ ಬೆಂಬಲಿಗರು ಕುಡಿದು ಕುಪ್ಪಳಿಸಲು ಖರ್ಚು ಮಾಡುವ ಒಟ್ಟು ಹಣದಿಂದಲೇ ಆಫ್ರಿಕಾದ ಯಾವುದಾದರೊಂದು ಜಿಲ್ಲೆಯನ್ನು ವರ್ಷವಿಡೀ ಬೆಳಗಬಹುದೇನೋ?!

ಅದು ಹಾಗಿರಲಿ. ಇಂದು ಜಾಗತಿಕವಾಗಿ ಜರುಗುತ್ತಿರುವ ವಿಶ್ವದ ಹತ್ತಾರು ಯುದ್ಧಗಳಲ್ಲಿ ಕನಿಷ್ಠ ಒಂದರಲ್ಲಿಯೂ ಅಮೇರಿಕಾದ ಪಾತ್ರ ಇಲ್ಲದಂತಿಲ್ಲ. ಅಲ್ಲದೆ ಕೈಕುಲುಕಿ ಚರ್ಚಿಸಿ ಕೊನೆಗೊಳ್ಳಬಹುದಾದ ಅದೆಷ್ಟೋ ವಿವಾದಗಳಿಗೆ ಈ ದೇಶ ಬೆಂಕಿ ಹಚ್ಚಿ ಕಾಲುಕಿತ್ತಿರುವ ಹತ್ತಾರು ನಿದರ್ಶನಗಳು ಇಂದು ನಮ್ಮ ಮುಂದಿವೆ. ಒಂದೆಡೆ ಯುದ್ದಗುಂಡುಗಳ ಸುರಿಮಳೆಯನ್ನು ಸುರಿಸುತ್ತಾ ತಕಥೈ ಕುಣಿಯುವ ದೇಶದಿಂದ ಶಾಂತಿ ನೆಮ್ಮದಿಯ ಮಾತುಗಳು ದುಸ್ವಪ್ನವೇ ಸರಿ. ಇಂತಹ ಯುದ್ಧಪ್ರಿಯ ನಾಯಕನ ಆಡಳಿತದ ಪ್ರಸ್ತುತ ಅಮೇರಿಕ, ತಾನು ಹೋದಲೆಲ್ಲ ಗುಡುಗಿ ಗುಂಡಾಂತರ ಮಾಡಿ ಅಲ್ಲಿನ ಜನಜೀವನವೆನ್ನಲ್ಲದೆ ಸಸ್ಯ ಸಂಕುಲವನ್ನೂ ಕಪ್ಪು ಹೊಗೆಯೊಳಗೆ ತಳ್ಳಿ ಬರುವುದು ಸಾಮನ್ಯವಾದ ಸಂಗತಿಯಾಗಿದೆ. ಈ ದೇಶ ಅಂತಹ ದೇಶಗಳ ಅಭಿವೃದ್ಧಿಗೆ ಅದೆಷ್ಟೇ ಪರಿಹಾರವನ್ನು ಕೊಟ್ಟರು ಸಾಲದು. 60ರ ದಶಕದ ವಿಯೆಟ್ನಾಂ ಯುದ್ಧದಲ್ಲಿ ಸ್ಥಳೀಯ ಪಡೆಗಳ ಹಲವು ಬಗೆಗಳ ಕಾಡಿನ ಯುದ್ಧವನ್ನು ಎದುರಿಸಲಾಗದೆ ನರಿಬುದ್ದಿಯನ್ನು ಅನುಸರಿಸಿದ ಅಮೇರಿಕ ವಿಯೆಟ್ನಾಂ ಸೈನಿಕರು ಅಡಗಿ ಕುಳಿತಿದ್ದ ಕಾಡಿನ ಮೇಲೆಲ್ಲಾ ‘ಏಜೆಂಟ್ ಆರೆಂಜ್’ ಎಂಬ ರಾಸಾಯನಿಕವನ್ನು ಸುರಿದು ಮಾಡಿರುವ ಅನಾಹುತವನ್ನು ಕಲ್ಪಿಸಲು ಸಾಧ್ಯವಲ್ಲ. ಆ ರಾಸಾಯನಿಕ ಅಂದು ಸಾವಿರಾರು ವಿಯೆಟ್ನಿಗರ ಜೀವ ಬಲಿಯನ್ನು ಪಡೆದುಕೊಂಡಿತಲ್ಲದೆ ಲಕ್ಷಾಂತರ ಜನರನ್ನು ಕ್ಯಾನ್ಸರ್ ಹಾಗು ಚರ್ಮದ ಖಾಯಿಲೆಗಳೊಟ್ಟಿಗೆ ಮಾನಸಿಕವಾಗಿಯೂ ಹಿಂಸಿಸಿತು. ಅದಕ್ಕಿಂತ ಮಿಗಿಲಾಗಿ ಅಂದು ಈ ರಾಸಾಯನಿಕದಿಂದ ಹೇಳಹೆಸರಿಲ್ಲದೆ ಮರೆಯದ ಹಸಿರುಗಾಡಿನ ಪ್ರದೇಶ ಬರೋಬ್ಬರಿ 31 ಲಕ್ಷ ಹೆಕ್ಟರ್!! ಅಲ್ಲದೆ ಎರಡನೇ ಮಹಾಯುದ್ಧದಲ್ಲಿ ಜಪಾನಿನ ಹಿರೋಷಿಮಾ ಹಾಗು ನಾಗಸಾಕಿ ನಗರಗಳ ಮೇಲೆ ಮಾನವೀಯತೆಯ ಎಲ್ಲ ಎಲ್ಲೆಯನ್ನು ಮೀರಿ ಅಣುಬಾಂಬನ್ನು ಎಸೆದು ನೆಡೆಸಿದ ಮಿಲಿಯನ್ಗಟ್ಟಲೆ ಜೀವಹಾನಿಗಳನ್ನು ಮುಂದೆ ಸಾವಿರವರ್ಷಗಳ ನಂತರವೂ ಖಂಡಿಸಲಾಗುತ್ತದೆ. ಇನ್ನು ಅಫ್ಘಾನಿಸ್ಥಾನ, ಸಿರಿಯಾ ಹಾಗು ಮಧ್ಯಪ್ರಾಚ್ಯದ ಹಲವೆಡೆ ಅಮೇರಿಕಾದ ಸೇನೆಗಳು ನೆಡೆಸಿರುವ ಧಾಂದಲೆಯ ಪುರಾವೆಗಳು ಒಂದೇ ಎರಡೇ. ಇಂತಹ ಅಮೆರಿಕವನ್ನು 'MAKE AMERICA GREAT AGAIN! ' ಎಂಬ ಸ್ಲೋಗನ್ನಿನೊಟ್ಟಿಗೆ ಗೆದ್ದ ಟ್ರಂಪ್ ನ ಪ್ರಕಾರ ರಾಶಿ ಕೋಟಿ ಜೀವಗಳನ್ನು ಬಲಿಪಡೆದು ದೊಡ್ಡವನು ಎನಿಸಿಕೊಂಡ ಹಾಗೆ ಮತ್ತದೇ ನರಯಜ್ಞವನ್ನು ಮಾಡಿ ಮಗದೊಮ್ಮೆ ಗ್ರೇಟ್ ಎಂದು ಕರೆಸಿಕೊಳ್ಳುದಾಗಿದೆ ಎನಿಸುತ್ತದೆ. ಇಂತಹ ನಿರ್ಧಯಿ ದೇಶದಿಂದ ಇಂದು ವಿಶ್ವದ ಮೂಲೆ ಮೂಲೆಗಳಲ್ಲಿಯೂ ಜರುಗಿದ ಅನಾಹುತಗಳಿಗೆ ಪರಿಹಾರವನ್ನು ಪರಿಹಾರವಲ್ಲದೆ ದಂಡದ ರೂಪದಲ್ಲಿ ಪಡೆಯಬೇಕು. ಕೊಡದಿದ್ದರೆ ಕೊಬ್ಬಿರುವ ದೇಹದಿಂದ ಕಕ್ಕಿಸಬೇಕು!

ಇನ್ನು ಇಂತಹ ದೇಶಗಳು ಕೊಡುವ ತೃಣಮಾತ್ರದ ಆರ್ಥಿಕ ಸಹಾಯ ಯಾವ ದೇಶವನ್ನಾಗಲಿ ಇಂದು ಅಭಿವೃದ್ಧಿಯ ಉತ್ತುಂಗಕ್ಕೆ ತಂದು ನಿಲ್ಲಿಸಿದೆ? ಅಭಿವೃದ್ಧಿ ಹೊಂದುತ್ತಿರುವ ದೇಶಗಳೆಂದರೆ ಹೆಚ್ಚಾಗಿ ಅದು ಅಧಿಕಾರಿಗಳ ಮೋಸ, ಕಪಟ, ಲಂಚಗುಳಿತನ ಹಾಗು ಭ್ರಷ್ಟತೆಯ ವಿರುದ್ದದ ಹೋರಾಟವೇ ಆಗಿರುತ್ತದೆ. ಇಂತಹ ದೇಶಗಳಿಗೆ 'ಇಗೋ ತಗೋಳಿ' ಎನುತ ಜಾತ್ರೆಗೆ ಹೊರಡುವ ಹುಡುಗರ ಕೈಗೆ ಚಿಲ್ಲರೆಯನ್ನು ಸುರಿದಂತಹ ನೆರವನ್ನು ಕೊಟ್ಟರೆ ಆದರ ಪೂರ್ಣ ಪ್ರಮಾಣದ ಸದ್ಭಳಕೆಯಾಗದಿರುವುದು ಬೇರೆಯ ವಿಚಾರವೇ. ಆದರೆ ಅಭಿವೃದ್ಧಿ ಹೊಂದಿದ ಬಹಳಷ್ಟು ದೇಶಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೀಗೆ ನೆರವನ್ನು ಕೊಡುವ ಹಿಂದಿರುವ ಚಾಣಾಕ್ಷ ನೀತಿ ಇಂದು ಯಾರಿಗೂ ಗೊತ್ತಿರದ ವಿಷಯವೇನಲ್ಲ. ನನಗೊಂದು ನೌಕಾನೆಲೆ ಆಗಬೇಕು, ಯುದ್ಧ ಸಮಯದಲ್ಲಿ ತುರ್ತು ಸಹಾಯ ಸಿಗಬೇಕು, ವೀಸಾ ನಿಯಮಾವಳಿಗಳಲ್ಲಿ ನಮ್ಮವರಿಗೆ ರಿಯಾಯಿತಿ ದೊರಕಬೇಕು, ಆ ದೇಶದೊಟ್ಟಿಗೆ ವ್ಯಾಪಾರವನ್ನು ಮಾಡಬಾರದು, ಈ ದೇಶದಿಂದ ತೈಲವನ್ನು ಆಮದುಮಾಡಿಕೊಳ್ಳಬಾರದೆಂಬ ಸಾಲು ಸಾಲು ಕಂಡೀಷನ್ಗಳು ಆ ಮುಖೇನ ಉದ್ಭವಿಸುತ್ತವೆ. ಇನ್ನು ಹಣವೆಂದರೆ ಊಟ ಕಾಣದೆ ಎಷ್ಟು ದಿನಗಳಾದವೋ ಎಂಬಂತೆ ಬಾಯಿ ಬಿಡುವ ದೇಶಗಳು ಮುಂದೊಂದು ದಿನ ಬಂದೆರಗುವ ಆಪತ್ತನ್ನೂ ಲೆಕ್ಕಿಸದೆ 'ಜೈ' ಎನುತ ಅಂತಹ ದೇಶಗಳು ವಿಧಿಸುವ ಷರತ್ತುಗಳಿಗೆಲ್ಲಕ್ಕೂ ಒಪ್ಪಿಬಿಡುತ್ತವೆ. ಪರೋಕ್ಷವಾಗಿ ಜಗತ್ತನ್ನು ಆಕ್ರಮಿಸುವ ಜಾಣತನ ಇದಕ್ಕಿಂತ ಬೇರೊಂದಿದೆಯೇ? ಒಟ್ಟಿನಲ್ಲಿ ಆರ್ಥಿಕ ನೆರವು ಎಂಬ ಹೆಸರಿನಲ್ಲಿ ತನ್ನ ಇರುವಿಕೆಯನ್ನು ಗಟ್ಟಿಗೊಳಿಸಿಕೊಂಡು ಬೆಳೆಯುತ್ತಿರುವ ಅಮೇರಿಕ ಇಂದು ದೇಶಗಳ ಮೇಲೆ ಮಾಡಿರುವ ಆ ಡಿಪಾಸಿಟ್ ಗಳ ಪೂರ್ಣ ಪ್ರಮಾಣದ ನೆರವನ್ನು ಪಡೆಯುತ್ತಿದೆ ಅಷ್ಟೇ. ಇಂದು ಭಾರತಕ್ಕೆ ಅದು ಕೊಡುತ್ತಿರುವ ಆರ್ಥಿಕ ಸಹಾಯವನ್ನು ಮೊಟಕುಗೊಳಿಸಬೇಕು ಎನ್ನುತ್ತಿದೆ. ಆದರೆ ಸುಮಾರು ಆರೇಳು ವರ್ಷಗಳ ಹಿಂದೆ ಮನಮೋಹನ್ ಸಿಂಗ್ರ ಸರ್ಕಾರವಿದ್ದಾಗ ಕಡ್ಡಿ ಮುರಿದಂತೆ 'ನಿಮ್ಮ ನೆರವು ನಮಗೆ ಬೇಕಾಗಿಲ್ಲ' ಎಂದರೂ ಇಂದಿನವರೆಗೂ ಹಣವನ್ನು ನೀಡುತ್ತಾ ಬಂದಿದೆ ಎಂದರೆ ಈ ಕಪಟ ನೆರವಿನ ಹಿಂದಿರುವ ಸ್ವಹಿತಾಸಕ್ತಿ ಎಷ್ಟಿದೆ ಎಂದು ನಾವು ಅರಿಯಬೇಕು.

ಅಲ್ಲದೆ ಅಮೇರಿಕಾದ ಈ ನೀತಿ ಅಭಿವೃದ್ಧಿಹೊಂದಿದ ದೇಶಗಳೊಟ್ಟಿಗಾದರೆ ಅದೇ ರಷ್ಯಾ, ಚೀನಾ,ಆಸ್ಟ್ರೇಲಿಯಾದಂತಹ ದೇಶಗಳೊಟ್ಟಿಗೆ ಬೇರೇನೇ ತರಹದ್ದಾಗಿರುತ್ತದೆ. ಎಷ್ಟಿದ್ದರೂ ಅವು ಮುಂದುವರೆದ ದೇಶಗಳೆಂದು ಬಲ್ಲ ಅಮೇರಿಕ ಅಂತಹ ದೇಶಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಳಸುವ ಅಸ್ತ್ರ ಅಲ್ಲಿಂದ ಆಮದಾಗುವ ವಸ್ತುಗಳ ಮೇಲೆ ಎರಾಬಿರಿ ಸುಂಕವನ್ನು ಜಡಿಯುವುದು. ಆದರೆ ಆ ಸುಂಕ ಜಡಿದ ಕತೆಯ ಹಿಂದಿನ ಅಸಲಿಯತ್ತು ಬೇರೇನೇ ಇರುತ್ತದೆ. ಎಲ್ಲಿಯವರೆಗೂ ಆ ದೇಶ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವುದಿಲ್ಲವೋ ಅಲ್ಲಿಯವರೆಗೂ ಇಂತಹ ಇತ್ತಲಬಾಗಿಲ ಕೆಲಸವನ್ನೇ ಅಮೇರಿಕ ಅದರಲ್ಲೂ ಟ್ರಂಪ್ ಆಡಳಿತ ಮಾಡಿಕೊಂಡು ಬಂದಿದೆ. ಅಂದರೆ ವಿಶ್ವದ ಯಾವುದೇ ದೇಶವೂ ತನ್ನ ಸಮನಾಗಿ ಬೆಳೆಯಬಾರದು, ನನ್ನ ನೆಡೆಯನ್ನು ಪ್ರೆಶ್ನಿಸಬಾರದು ಎಂಬುದಷ್ಟೇ ಆಗಿದೆ. ಇಲ್ಲವಾದರೆ 'ಆರ್ಥಿಕ ದಿಗ್ಬಂದನ' 'ನೆರವಿನ ಮೊಟಕುಗೊಳಿಸುವಿಕೆ' 'ಸುಂಕ ಏರಿಕೆ' ಎಂಬ ಪೆಟ್ಟುಗಳಲಿಂದ ಅದನ್ನು ಸದೆಬಡಿಯುತ್ತದೆ.

ಇಂತಹ ಕಿರಾತಕ ದೇಶಗಳ ನಡುವೆ ವಿಶ್ವಶಾಂತಿ, ಸಕಲಲೋಕಕಲ್ಯಾಣ ಎನುತ ನೆಡೆಯುತ್ತಿರುವ ಭಾರತದಂತಹ ದೇಶಗಳಿಗೆ ಎದುರಾಗುವ ಸಂದಿಘ್ನ ಸನ್ನಿವೇಶಗಳು ಒಂದೆರಡಲ್ಲ. ಅಸಲಿಯತ್ತು ಹೀಗಿರುವಾಗ ಪ್ರಸ್ತುತ ಕಾಲದಲ್ಲಿ ನಾವುಗಳು ಸ್ವಾವಲಂಬಿಗಳಾಗುವ ಜರೂರು ಅದೆಷ್ಟರಮಟ್ಟಿಗಿದೆ ಎಂಬುದನ್ನು ತಿಳಿಸಿ ಹೇಳಬೇಕಾಗಿಲ್ಲ. ಅತಿವೃಷ್ಟಿ ಹಾಗು ಅನಾವೃಷ್ಟಿಯ ಸಂದರ್ಭದಲ್ಲಷ್ಟೇ ನಾವುಗಳು ಇತರ ದೇಶಗಳ ನೆರವು ಬೇಡವೆಂದರೆ ಸಾಲದು. ಯುದ್ದೋಪಕರಣಗಳಿನಿಂದಿಡಿದು ಒಂದು ಅತ್ಯಾಧುನಿಕ ತಂತ್ರಜ್ಞಾನಗಳಿಗೂ ಇತರೆ ದೇಶಗಳನ್ನು ಅವಲಂಬಿಸುವುದನ್ನೂ ನಾವು ಮೊಟಕುಗೊಳಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ಯಾವುದೇ ಇರಲಿ, ಸ್ವಾವಲಂಬಿ ಯೋಜನೆಗಳಿಗೆ ಚಿಂತಿಸತೊಡಗಿದರೆ ಅವುಗಳನ್ನು ಮುಕ್ತವಾಗಿ ಬೆಂಬಲಿಸಬೇಕು. ಇಲ್ಲವಾದಲ್ಲಿ ಪ್ರಸ್ತುತ ಕಪಟ ದೊಡ್ಡಣ್ಣನ ಜಮಾನದಲ್ಲಿ ನಾವುಗಳು ಮೂರನೇ ಕೆಟಗರಿಯ ದೇಶವಾಗಿ ಪರದಾಡುವ ಸನ್ನಿವೇಶ ಬರಬಾರದಂತೇನಿಲ್ಲ!




Friday, September 7, 2018

ಬ್ರಿಟನ್ನಿಗರ ತಪ್ಪನ್ನೇ ಪುನರಾವರ್ತಿಸಿದರೆ ಅಮೇರಿಕನ್ನರು?!

ಜೂನ್ 23, 2016. ಎಡಮಗ್ಗುಲಲ್ಲಿ ಎದ್ದ ಬ್ರಿಟನ್ ಅಂದು ಮಹತ್ವದಾದೊಂದು ಜನಾದೇಶವನ್ನು ಸಂಗ್ರಹಿಸಿತು . ಇಡೀ ವಿಶ್ವದಾದ್ಯಂತ ದಿಗಿಲು ಹುಟ್ಟಿಸಿದ ಸುದ್ದಿಯೊಂದು ತನ್ನ ತಾರ್ಕಿಕ ಕೊನೆಯನ್ನು ತಲುಪುವ ಹಂತದಲ್ಲಿತ್ತು. ಬ್ರಿಟನ್, ಯೂರೋಪಿಯನ್ ಯೂನಿಯನ್ (EU) ನಿಂದ ಹೊರಬರಬೇಕೋ ಬೇಡವೋ ಎಂಬ ವಿಷಯದ ಕುರಿತಾಗಿದ್ದ ಜನಾದೇಶದ ಆ ಫಲಿತಾಂಶ ಮಾತ್ರ ಇಡೀ ವಿಶ್ವವನ್ನಲ್ಲದೆ ಸ್ವತಃ ಬ್ರಿಟನ್ ದೇಶದ ಪ್ರಧಾನಿಯನ್ನೇ ಬೆಚ್ಚಿ ಬೀಳುವಂತೆ ಮಾಡಿತು. ಸುಮಾರು ಅರ್ಧಕ್ಕಿಂತ ಹೆಚ್ಚಿನ ಪ್ರಜೆಗಳು ಅಂದು ಹೊರಬರುವ (BREXIT) ನಿರ್ಧಾರಕ್ಕೆ ಹಸಿರುನಿಶಾನೆಯನ್ನು ತೋರಿಸಿದರು. ಡೇವಿಡ್ ಕಮೆರೋನ್ ಕೂಡಲೇ ತನ್ನ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿ ಸದ್ದಿಲ್ಲದೇ ತೆರೆಮರೆಗೆ ಸರಿದ. ಆಗ ಶುರುವಾದದ್ದು ನೋಡಿ ನಿಜವಾದ ಹಗ್ಗಜಗ್ಗಾಟ. ಗುಂಡು ನಳಿಕೆಯಿಂದ ಹಾರಿದ ಮೇಲೆ ತಪ್ಪಾಯಿತೇನೋ ಎಂಬಂತೆ ಹಣೆಯನ್ನು ಚಚ್ಚಿಕೊಂಡವರ ಸಾಲಿಗೆ ಸೇರಿದರು, ಜನಾದೇಶವನ್ನು ನೀಡಿದ ಜೇಂಟಲ್ಮ್ಯಾನ್ ಗಳು. ಅದಾಗಿ ಇಂದಿಗೆ ಎರಡು ವರ್ಷಗಳು ಕಳೆದಿವೆ. ಇಷ್ಟರಲ್ಲಾಗಲೇ ತನ್ನ ನಿರ್ಧಾರಕ್ಕೆ ಪೂರಕವಾಗಿ ಗುಂಪಿನಿಂದ ಹೊರಬಂದಿರಬೇಕಿದ್ದ ಬ್ರಿಟನ್ ಇನ್ನೂ ಕೂಡ ಮೀನಾಮೇಷ ಎಣಿಸುತ್ತಲಿದೆ. ನೀರಿನ ಮೇಲಿನ ಗುಳ್ಳೆಯಂತೆ ಕ್ಷಣಮಾತ್ರದಲ್ಲಿ ಹುಬ್ಬಿಕೊಂಡ ಬ್ರಿಟನ್ನಿಗರ ಹುಮ್ಮಸ್ಸು ಇಂದು ಏನಾಗಿದೆ? 'ಜೋಷ್' ನಲ್ಲಿ ಕಳೆದುಕೊಂಡ 'ಹೊಷ್' ಈಗ ಬಂದರೆಷ್ಟು ಹೋದರೆಷ್ಟು? ನಾನು, ನನ್ನದು ಎನುತ ಎಲ್ಲರಿಂದ ಪ್ರತ್ಯೇಕವಾಗಬಯಸಿದ ನಿರ್ಧಾರ ಅದೆಷ್ಟರ ಮಟ್ಟಿಗೆ ಸರಿಯೋ ಕಾದು ನೋಡಬೇಕು.

BREXIT ನ ಕೆಲವೇ ತಿಂಗಳ ಅವಧಿಯಲ್ಲಿ ಅಮೆರಿಕದಲ್ಲೊಂದು ನೆಲ ‘ಕಂಪಿಸದ’ ಭೂಕಂಪವೊಂದು ಜರುಗಿತು! 2016 ರ ಅಧ್ಯಕ್ಷರ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಡೊನಾಲ್ಡ್ ಟ್ರಂಪ್ ಮರಳುಗಾಡಿನ ಮಾನ್ಸೂನ್ ನಂತೆ ಹುಚ್ಚು ಮತಗಳ ಹೆಚ್ಚು ಸಂಖ್ಯೆಯಲ್ಲಿ ಜಯಗಳಿಸಿದ. ಕೆಲವರಿಗಂತು ಅದು ಇಂದಿಗೂ ನಂಬಲಾರದ ವಿಷಯವೇ ಸರಿ. ರಿಯಾಲಿಟಿ ಷೋ ನಲ್ಲಿ ಡೊಂಬರಾಟ ಕುಣಿಯುವ ಕ್ಯಾರೆಕ್ಟರ್ ಒಂದರ ನಕಲೆನಿಸುವ ಈತನೂ ಒಬ್ಬ ಅಧ್ಯಕ್ಷ ಆಕಾಂಕ್ಷಿಯೇ ಎಂದು ಅಂದು ರಿಪಬ್ಲಿಕ್ ಪಕ್ಷವನ್ನು ಕೇಳಿದವರೆಷ್ಟೋ. ಲಿಂಕನ್, ರೂಸ್ವೆಲ್ಟ್, ಬುಷ್ ರಂತಹ ನಾಯಕರನ್ನು ಕೊಟ್ಟ ಈ ಪಕ್ಷಕ್ಕೆ ಇಂತಹ ಒಬ್ಬ ವ್ಯಕ್ತಿಯ ಬಲದಲ್ಲಿ ಚುನಾವಣೆಯನ್ನು ಗೆಲ್ಲುವ ದುಸ್ಥಿತಿ ಬರಬಾರದಿತ್ತು ಎಂದವರು ಮತ್ತೆಷ್ಟು ಮಂದಿಯೋ. ಅದೇನೇ ಇದ್ದರು ಅಂದು ಜನರು ಮಣೆಹಾಕಿದ್ದು 'ಔಟ್ ಆಫ್ ದ ಬಾಕ್ಸ್' ಟ್ರಂಪ್ ಎಂಬ ಮುದುಕನಿಗೆಯೇ. 'ಅಮೇರಿಕ ಫಸ್ಟ್' ಎಂಬ ಎರಡಕ್ಷರದ ಪದಗಳ ಬಲದ್ಲಲ್ಲಿಯೇ ಅಂದು ಆತ ಚುನಾವಣೆಯನ್ನು ಗೆದ್ದ. ಅದೂ ಕೂಡ ಅಮೆರಿಕವನ್ನು ಮೊದಲುಗೊಳಿಸುವ, ಎಲ್ಲ ದೇಶಗಳಿಂದ ಪ್ರತ್ಯೇಕಿಸುವ, ನಾನು ನಾನೆಂಬ ಮೊಂಡುತನದ ಚುನಾವಣಾ ಪ್ರಚಾರವಾಗಿದ್ದಿತು. ಜನಗಳಿಗೂ ಹಳೆಯ ರಾಗ ಮತ್ತದೇ ತಾಳವನ್ನು ಕೇಳಿ 'ಬೋರ್' ಆಗಿತ್ತೇನೋ ಎಂಬಂತೆ ಬಹುಪಾಲು ಮಂದಿ ಹಿರಿ ಮುದುಕನೊಬ್ಬನಿಗೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಕೊಟ್ಟರು. ಆದರೆ ಅಂದು ಈತನಿಗೆ ಬಿದ್ದ ಓಟುಗಳಲ್ಲಿ ವಿಮರ್ಶಕರು ಹಾಗು ವಿಚಾರವಂತರ ಓಟುಗಳೆಷ್ಟು, ಹಿರಿಯ ನಾಗರೀಕರ ಓಟುಗಳೆಷ್ಟು, ಬಿಸಿನೆಸ್ ಮ್ಯಾನ್ಗಳ ಓಟುಗಳೆಷ್ಟು, ನೌಕರರ ಓಟುಗಳೆಷ್ಟು ಹಾಗು ಪುಂಡ ಪೋಕರಿಗಳ ಓಟುಗಳೆಷ್ಟು ಎಂಬುದನ್ನು ಪ್ರತ್ಯೇಕಿಸಿ ಎಣಿಸಿ ನೋಡಿದರೆ ಬಹುಷಃ ಅಮೇರಿಕಾದ ಭವಿಷ್ಯವನ್ನು ನಿರ್ಧರಿಸಿದವರ್ಯಾರು ಎಂಬುದು ತಿಳಿಯುತ್ತದೇನೋ!

ವಿಶ್ವದಲ್ಲೇ ಅತಿಹೆಚ್ಚಿನ ಹಣವನ್ನು (ಭಾರತದ ಐದು ಪಟ್ಟು - 140 ಲಕ್ಷ ಕೋಟಿಗಳು) ತನ್ನ ಮಿಲಿಟರಿಗಾಗಿಯೇ ಸುರಿಯುವ ಧನವಂತ ದೇಶದ ಅಧಿಕಾರದ ಚುಕ್ಕಾಣಿಯನ್ನು WWE ಬಡಿದಾಟದ ಕಚ್ಚಾಟದಲ್ಲಿ ಹುಚ್ಚನಂತಾಗುತ್ತಿದ್ದ ವ್ಯಕಿಯೊಬ್ಬನ ಕೈಗೆ ಕೊಟ್ಟ ಅಲ್ಲಿನ ಬಹುಪಾಲು ಸತ್ಪ್ರಜೆಗಳೂ ಸಹ ಬ್ರಿಟನ್ನಿನ ಪ್ರಜೆಗಳಂತೆಯೇ ಇಂದು ಕೈ-ಕೈಯನ್ನು ಹಿಸುಕಿಕೊಳ್ಳುತ್ತಿದ್ದಾರೆ. ಮುಸ್ಲಿಂ ಜನಾಂಗ ಹಾಗು ಅಂತಹ ದೇಶಗಳ ವಿರುದ್ಧ ಆಕ್ರೋಶ, ನ್ಯೂಕ್ಲಿಯರ್ ಸುಸಜ್ಜಿತ ದೇಶಗಳ ಜೊತೆಗೆ ವೈಮಸಸ್ಸು, ಇಂದೂ ಮುಂದೂ ನೋಡದ ದೇಶ ದೇಶಗಳನ್ನು ಜರಿಯುವ ಬೇಕಾಬಿಟ್ಟಿ ಟ್ವೀಟ್ ಗಳು, ಇರಾನ್ ಹಾಗು ಚೀನಾದೊಟ್ಟಿಗಿನ ಟ್ರೇಡ್ ವಾರ್, ತಟಸ್ಥ ಭಾರತಕ್ಕೇ ಬುದ್ದಿ ಹೇಳುವಂತ ಹುಂಬತನ, ವಿಶ್ವವೇ ಸಮ್ಮತಿಸಿದ ಪ್ಯಾರಿಸ್ ಒಪ್ಪಂದದಿಂದ ಹೊರಬರುವಿಕೆ ಹಾಗು ಮಾಲಿನ್ಯವನ್ನು ಹೆಚ್ಚುಮಾಡುವ ಕಾರುಗಳ ತಯಾರಿಕೆಗೂ ಅನುಮತಿ ನೀಡುವಿಕೆ, ಆರೋಗ್ಯ ವಿಮೆಯನ್ನು ಮೊಟಕುಗೊಳಿಸಿವಿಕೆ, ವೈಟ್ ಹೌಸ್ ನ ಹಿರಿಯ ಅಧಿಕಾರಿಗಳೊಟ್ಟಿಗೆ ವೈಮನಸ್ಸು, ಅವರುಗಳ ರಾಜೀನಾಮೆ, ದೇಶದ ನ್ಯಾಯಾಧೀಶರೊಟ್ಟಿಗೆ, ಕೋರ್ಟುಗಳೊಟ್ಟಿಗೆ ವಾಗ್ವಾದ, ರಾಜಕೀಯವೇನೆಂದೇ ಅರಿಯದ ಮಗ, ಮಗಳು, ಅಳಿಯರೆಲ್ಲರಿಗೂ ವೈಟ್ ಹೌಸಿನ ಕೀಗುಚ್ಛವನ್ನು ನೀಡಿ ರಾಜಾಂತ್ರಿಕ ಧೂತರನ್ನಾಗಿ ದೇಶಾದಿಗಳಿಗೆ ಕಳುಹಿಸುವುದು... ಒಂದೇ ಎರಡೇ. ಅಧ್ಯಕ್ಷನಾದ ಕೇವಲ ಕೆಲವೇ ತಿಂಗಳುಗಲ್ಲಿ ಸಾಕು ಸಾಕಪ್ಪ ಎಂಬ ಮಟ್ಟಿಗೆ ಅಮೆರಿಕದವರನ್ನು ಆತಂಕಕ್ಕೆ ಗುರಿಮಾಡಿದನೀತ. ಉತ್ತರ ಕೊರಿಯದೊಟ್ಟಿಗೆ ನ್ಯೂಕ್ಲಿಯರ್ ವಾರ್ ಜರುಗಿ ದೇಶದ ಹವಾಯಿ ನಗರಕ್ಕೆ ಇನ್ನೇನು ಕಂಟಕ ಬಂದೆರಗಿತು ಎಂಬಂತೆ ಜನತೆಯ ಜೀವವನ್ನು ಬಾಯಿಗೆ ತಂದು ನಂತರ ತೆಪ್ಪಗಾದ ಈತನಿಂದ ವಿಶ್ವ ಇನ್ನು ಏನೇನನ್ನು ನೋಡುತ್ತದೆಯೋ ಸದ್ಯಕಂತು ತಿಳಿಯದು.

It was expected!


ಅಮೇರಿಕ ಒನ್, ಅಮೇರಿಕ ಫಸ್ಟ್, ಅಮೇರಿಕ ಗ್ರೇಟ್ ಎಂಬ ಅರಚುವಿಕೆಯಲ್ಲೇ ಗೆದ್ದ ಟ್ರಂಪ್ ನಿಂದ ಇವೆಲ್ಲ ಅತಿರೇಕಗಳು ಜರುಗಲೇ ಬೇಕಿದ್ದವು. ಹುಚ್ಚಾಸ್ಪತ್ರೆಯಲ್ಲಿ ಹುಚ್ಚನೊಬ್ಬ ಹುಚ್ಚನಂತೆ ವರ್ತಿಸದಿದ್ದರೆ ಆಸ್ಪತ್ರೆಗೆ ಬೆಲೆಯಿದೆಯೇ?! ಅಂತೆಯೇ ಅಮೇರಿಕವೆಂದರೆ ಅದ್ಯಾವುದೋ ಅನ್ಯ ಗ್ರಹದಲ್ಲಿರುವ ದೇವತೆಗಳ ದೇಶಗಳೇನೋ ಎಂಬಂತೆ ಬಿತ್ತರಿಸಿತೊಡಗಿದನೀತ. ಇಲ್ಲಿಗೆ ಬರುವವರು, ಹೋಗುವವರು, ಇರುವವರು, ಸಾಯುವವರು ಎಲ್ಲರನ್ನು ಸಂಶಯ ದೃಷ್ಟಿಯಿಂದಲೇ ನೋಡುವ ಈತ ತನ್ನ ದೇಶವನ್ನು ಒಂದು ಕಾರ್ಪೊರೇಟ್ ಕಂಪನಿಯಂತೆ ಬದಲಾಗಿಸತೊಡಗಿದ್ದಾನೆ. ಆ ಬುಡ ಗಟ್ಟಿಯಿಲ್ಲದ ಕಂಪನಿಯಲ್ಲಿ ಜರುಗುವ ನಿರ್ಧಾರಗಳೆಲ್ಲವೂ ಕೇವಲ ಲಾಭ ನಷ್ಟಗಳ ಸಮೀಕರಣಗಳಷ್ಟೇ. ಮೂಲತಃ ಬಿಸಿನೆಸ್ ಪರಿವಾರದವನಾದ ಟ್ರಂಪ್ ದೇಶವನ್ನು ನೆಡೆಸುವುದೆಂದರೆ ಕೇವಲ ಕೊಡುವುದು ಹಾಗು ಕೊಟ್ಟ ದುಡ್ಡಿಗೆ ಲಾಭವನ್ನು ಪಡೆಯುವುದೆಂದಷ್ಟೇ ತಿಳಿದಿರುವ ಹಾಗಿದೆ. 'ಹಸಿರು ಮನೆ ಪರಿಣಾಮದಿಂದ' ಹೊತ್ತಿ ಉರಿಯುವಂತಾಗಿರುವ ಧರೆಯನ್ನು ತಂಪಾಗಿಸಲು ವಿಶ್ವದ ದೇಶಗಳೆಲ್ಲವೂ ಜಾತಿ, ಪಂಥ, ದ್ವೇಷ ಅಸೂಯೆಗಳೆಲ್ಲವನ್ನೂ ಮರೆತು ಒಂದಾಗಿ 'ಪ್ಯಾರಿಸ್ ಒಪ್ಪಂದ' ಎಂಬ ಮಹತ್ವದ ಒಪ್ಪಂದವನ್ನು ಮಾಡಿಕೊಂಡು ಮುನ್ನೆಡೆಯಬಯಸಿದರೆ ಟ್ರಂಪ್ ಅಧ್ಯಕ್ಷನಾದ ಕೂಡಲೇ ಚೀನಾ, ಭಾರತ ಹಾಗು ಇನ್ನಿತರ ಅಭಿವೃದ್ಧಿಶೀಲ ರಾಷ್ತ್ರಗಳ ಮಾಲಿನ್ಯ ವಿಪರೀತವಾಗಿದ್ದು ಅವುಗಳಿಗೆ ಇನ್ನೂ ಹೆಚ್ಚಿನ ನಿಯಮಗಳನ್ನು ಜಡಿಯಬೇಕು, ಅದಿಲ್ಲದೆ ಈ ಒಪ್ಪಂದ ಅಮೆರಿಕಕ್ಕೆ ಮೋಸ ಬಗೆದಂತೆ ಎಂಬ ಭಂಡ ಸಬೂಬನನ್ನು ನೀಡಿ ಒಪ್ಪಂದದಿಂದ ಹೊರಬಂದ. 'ಅಮೆರಿಕಕ್ಕೆ ಮೋಸ' ಎಂಬ ಮಾತುಗಳನ್ನು ಕೇಳಿಯೇ ಶಿಳ್ಳೆ ಚಪ್ಪಾಳೆಗಳಿಂದ ಈತನ ನಿರ್ಧಾರವನ್ನು ಅಲ್ಲಿನ ಬಹುಪಾಲು ಜನತೆಯೂ ಸ್ವಾಗತಿಸಿದರು ಮತ್ತು ವಿಶ್ವದ ಯಾವ ಮಾನದಂಡಗಳಿಲ್ಲದೆಯೇ ಪರಿಸರವನ್ನು ನಾನಾಬಗೆಯಲ್ಲಿ ಮಾಲಿನ್ಯಮಾಡತೊಡಗಿದರು.

ಡೆಮೋಕ್ರೆಟ್ ಪಕ್ಷ ಹಾಗು ಹಿಂದಿನ ಅಧ್ಯಕ್ಷ ಬರಾಕ್ ಒಬಾಮನೆಂದರೆ ನಿಂತ ನೆರಳಿಗೆ ಆಗದ ಈತನಿಗೆ ಅವರ ಪ್ರತಿಯೊಂದು ನಿರ್ಧಾರಗಳನ್ನು ತುಂಡರಿಸುವುದು ಅಥವಾ ಅದರ ತದ್ವಿರುದ್ಧವಾಗಿ ಬೇರೊಂದು ತಲೆಬುಡವಿಲ್ಲದ ನಿಯಮವನ್ನು ಜಾರಿತರುವುದಷ್ಟೇ ಕಾಯಕವಾಗಿಬಿಟ್ಟಿತು. ಕೋಟ್ಯಾನುಕೋಟಿ ಜನರ ಅರೋಗ್ಯ ವಿಮೆ (ಒಬಾಮ ಹೆಲ್ತ್ ಕೇರ್)ಯನ್ನು ಮೊಟಕುಗೊಳಿಸಿ ಆಟಕುಂಟು ಲೆಕ್ಕಕಿಲ್ಲದಂತಹ ಮತ್ತೊಂದು ವಿಮೆಯನ್ನು ಜಾರಿಗೊಳಿಸಿದ ನಂತರ ಏನುಮಾಡಬೇಕೆಂದು ಯೋಚಿಸುತ್ತ ಕುಳಿತ ಟ್ರಂಪ್ ಗೆ ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂತಿಷ್ಟು ಜಗಳವಾಡಬೇಕೆಂಬ ಬಯಕೆ ಹೆಚ್ಚಾಯಿತೆನಿಸುತ್ತದೆ. ಕೂಡಲೇ ತೈಲ ಸಂಪತ್ಭರಿತ ಮಧ್ಯಪ್ರಾಚ್ಯಾದ ದೇಶ ಇರಾನ್ನ ಮೇಲೆ ಮುಗಿಬಿದ್ದ ಟ್ರಂಪ್ ಪಡೆ ಇರಾನ್ ಈಗಲೂ ಕೂಡ ಅಲ್ಲೊಂದು ಇಲ್ಲೊಂದು ನ್ಯೂಕ್ಲಿಯರ್ ಮಿಸೈಲ್ ಗಳನ್ನು ಪರೀಕ್ಷಿಸುತ್ತಿದೆ ಹಾಗು ಇದು ಹಿಂದಿನ ಸರ್ಕಾರ ಮಾಡಿಕೊಂಡ 'ನ್ಯೂಕ್ಲಿಯರ್ ಡೀಲ್' ಗೆ ವಿರುದ್ಧವಾಗಿದ್ದು ಕೂಡಲೇ ಇರಾನ್ ನ ಮೇಲೆ ಆರ್ಥಿಕ ದಿಗ್ಬಂದನವನ್ನು ಹೇರಿ ಅದನ್ನು ಎಲ್ಲರಿಂದ ಪ್ರತ್ಯೇಕಿಸಬೇಕೆಂದು ಅರಚತೊಡಗಿದ ಅಲ್ಲದೆ ಹಾಗೆ ಮಾಡಿಯೂ ಬಿಟ್ಟ! ಸರಿ ಒಂದುಪಕ್ಷ ಇರಾನ್ ನ್ಯೂಕ್ಲಿಯರ್ ಮಿಸೈಲ್ ಗಳನ್ನು ತಯಾರುಮಾಡಿಕೊಂಡಿದೆ ಅಂದುಕೊಳ್ಳೋಣ. ಮಿಡಲ್ ಈಸ್ಟ್ ಎಂದರೆ ಇಂದು ಯುದ್ಧದ ಗೂಡಾಗಿರುವ ಪ್ರದೇಶದಲ್ಲಿ ಸ್ವಂತ ರಕ್ಷಣೆಗೆ ದೇಶವೊಂದು ಸುಸಜ್ಜಿತವಾಗುವುದರಲ್ಲಿ ತಪ್ಪೇನಿದೆ? ದೇಶ ಸುಸಜ್ಜಿತವಾಗುವುದಕ್ಕೆ ಪ್ರಸ್ತುತ ಕಾಲದಲ್ಲಿ ನೂರಾರು ಸಾವಿರಾರು ತಂತ್ರಜ್ಞಾನಗಳು, ಯುದ್ದೋಪಕರಣಗಳು ಇದ್ದರೂ ನ್ಯೂಕ್ಲಿಯರ್ ಮಿಸೈಲ್ಗಳೇ ಏಕೆ ಬೇಕೆಂಬುದು ಸಹಜವಾದ ಪ್ರೆಶ್ನೆಯೇ. ಆದರೆ ಹೀಗೆ ಪ್ರೆಶ್ನೆಯನ್ನು ಕೇಳುವ ಅಮೇರಿಕ ಅದೆಷ್ಟರ ಮಟ್ಟಿಗೆ ಸಾಚಾ? ಸಮೀಕ್ಷೆಯೊಂದರ ಪ್ರಕಾರ ಇಂದು ವಿಶ್ವದಲ್ಲೇ ಅತಿಹೆಚ್ಚಿನ ನ್ಯೂಕ್ಲಿಯರ್ ಬಾಂಬುಗಳು, ಮಿಸೈಲ್ಗಳು ಅಮೆರಿಕವೊಂದರಲ್ಲಿಯೇ ಇವೆಯಂತೆ! ವಸ್ತುಸ್ಥಿತಿ ಹೀಗಿರುವಾಗ ಇನ್ನೊಂದು ದೇಶಕ್ಕೆ ಬುದ್ಧಿಹೇಳುವ ಕಾಯಕವಾದರೂ ಅದಕ್ಕೆ ಏಕೆ? ಹೋಗಲಿ ಇದು ಆ ಎರಡು ದೇಶಗಳ ಹಣೆಬರಹ ನಾವೇಕೆ ಮೂಗು ತೂರಿಸಬೇಕೆಂದು ಸುಮ್ಮನಿಯಬಹುದು. ಆದರೆ ಈ ಯಪ್ಪಾ ಅಮೇರಿಕ ಇರಾನೊಟ್ಟಿಗೆ ಮಾತುಬಿಟ್ಟರೆ ನೀವು ಕೂಡ ಮಾತು ಬಿಡಬೇಕು ಎಂದರೆ ಕೇಳಲಾಗುತ್ತದೆಯೇ ಸ್ವಾಮಿ? ವಿಶ್ವಮಾರುಕಟ್ಟೆ ಏನು ಅಮೇರಿಕವೊಂದೇ ಬೆವರು ಸುರಿಸಿ ಬೆಳೆಸಿದ ವಲಯವೇ? ಈ ಮಾರುಕಟ್ಟೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ. ಇಲ್ಲಿ ಎಲ್ಲರೂ ಒಂದೇ ಎನ್ನುವಾಗ ಟ್ರಂಪ್ ಎಂಬ ದೊಣ್ಣೆ ನಾಯಕನ ಅನುಮತಿ ಯಾರಿಗೆ ತಾನೇ ಬೇಕು?

ಇದೆ ದ್ವೇಷರಾಜಕಾರಣವನ್ನು ವಿಶ್ವಮಾರುಕಟ್ಟೆಯ ಕಿಂಗ್ ಚೀನಾದ ಮೇಲೂ ಬಳಸಿ ಅಲ್ಲಿಂದ ತರುವ ಅಲ್ಯೂಮಿನಿಯಂ ಹಾಗು ಉಕ್ಕಿನ ಮೇಲೆ ಅಗಾಧವಾಗ (35%) ಸುಂಕವನ್ನು ಜಡಿದ. ಕೂಡಲೇ ಹೆಚ್ಚೆತ್ತುಕೊಂಡ ಚೀನಾವೂ ಅಮೆರಿಕದದಿಂದ ಬರುವ ವಸ್ತುಗಳ ಮೇಲೆ ಅದೇ ಪ್ರಮಾಣದ ಸುಂಕವನ್ನು ಜಡಿಯಲು ಶುರುವಿಟ್ಟಾಗ ಅಯ್ಯಯೋ.. ಎನುತ ಒಳಗೊಳಗೇ ನಾಲಿಗೆಯನ್ನು ಕಚ್ಚಿಕೊಂಡರೂ ಹೊರಗೆಲ್ಲೂ ಅದನ್ನು ತೋರಿಕೊಳ್ಳಲಿಲ್ಲ!

ಭಾಗಶಃ ಎಲ್ಲ ದೇಶಗಳೊಟ್ಟಿಗೂ ಶಾಂತಿಯ ಸಂಬಂಧವನ್ನು ಬೆಳೆಸಿಕೊಂಡಿರುವ ಭಾರತದಂತಹ ದೇಶಕ್ಕೆ ನೀವು ರಷ್ಯಾದಿಂದ ಯುದ್ದೋಪಕರಣವನ್ನು ಖರೀದಿಸಬಾರದು, ಇರಾನ್ ನಿಂದ ತೈಲವನ್ನು ಆಮದುಮಾಡಿಕೊಳ್ಳಬಾರದು, ಪರಮಾಣು ಪರೀಕ್ಷೆಯನ್ನು ಮಾಡಿಕೊಳ್ಳಬಾರದು ಎಂಬ ಪಾಠವನ್ನು ಹೇಳುವ ಟ್ರಂಪ್ ಅಜ್ಜಪ್ಪನಿಗೆ ನಾವುಗಳು ಇಂದಿಗೂ ಸಹ ಅವರ ತಾಳಕ್ಕೆ ಕುಣಿಯುವ ಕೀಲುಗೊಂಬೆಗಳು ಎಂಬ ನಿಲುವೇ ತಲೆಯಲ್ಲಿದ್ದಂತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವಿಷಯ ಅದೆಷ್ಟೇ ಮಹತ್ವದಾಗಿದ್ದರೂ ಭಾರತದಂತಹ ದೇಶಗಳ ಖಡಕ್ ಉತ್ತರಗಳು ಅಮೆರಿಕಕ್ಕೆ ಮುಟ್ಟಿಕೊಳ್ಳುವಂತೆ ತಟ್ಟುತ್ತಿವೆ. ದೊಡ್ಡಣ್ಣ, ಹಿರಿಯಣ್ಣ, ದೈತ್ಯ, ನಾಯಕ ಎಂಬ ಪದಗಳಿಂದ ಕೂಡಿದ ಉಪಮೇಯಗಳ ಹೊಗಳಿಕೆಗಳ ಕಾಲ ಮುಗಿದು ಇಂದಿಗೆ ದಶಕಗಳೇ ಕಳೆದಿವೆ. 10% ಅಮೇರಿಕ ಒಂದೆಡೆಯಾದರೆ 90% ವಿಶ್ವದ ಇತರ ದೇಶಗಳು ಇನ್ನೊಂದೆಡೆ ಎಂಬುದ ಅದು ಮನವರಿಕೆ ಮಾಡಿಕೊಳ್ಳಬೇಕು.

ಟ್ರಂಪ್ ಚುನಾವಣೆಯಲ್ಲಿ ಅಬ್ಬರಿದ ಮಾತ್ರಕ್ಕೆ, ಆತ ಆ ಮಾತುಗಳಿಗೆ ಪೂರಕವಾಗಿ ನೆಡೆದುಕೊಳ್ಳುತ್ತಿರುವ ಮಾತ್ರಕ್ಕೆ ವಿಶ್ವವೇಕೆ ಆ ತಾಳಕ್ಕೆ ತಕ್ಕಂತೆ ಕುಣಿಯಬೇಕು? ಇಂದು ನಮಗೆ ಬೇರ್ಯಾವ ದೇಶಗಳ ಅನಿವಾರ್ಯವಿಲ್ಲವೆನುವವರು ಮೂರ್ಖರಲ್ಲದೆ ಬೇರ್ಯಾರು ಅಲ್ಲ. ಮನೆಗೆ ಬಂದುಹೋಗುವ ನೆರೆವೊರೆಯವರು ಅವರು ಕೇವಲ ನಮ್ಮ ಮನೆಯನ್ನು ಕೊಳ್ಳೆಹೊಡೆಯಲೇ ಬರುತ್ತಾರೆಂಬ ಮಾತು ಅದೆಷ್ಟರ ಮಟ್ಟಿಗೆ ಸರಿ? ಹಾಗೆನುತ ಅದೆಂದಿನವರೆಗೆ ನಾವುಗಳು ಅವರ ಮುಖವನ್ನು ನೋಡದೆ ಇರುವುದು? ಈ ಕಾರಣಕ್ಕಾಗಿಯೇ ಹಿಂದಿನ ಒಬಾಮ ಆಡಳಿತ ವಿಶ್ವದ ಪ್ರತಿಯೊಂದು ದೇಶಗಳೊಟ್ಟಿಗೂ ಒಂದಲ್ಲ ಒಂದು ಬಗೆಯಲ್ಲಿ ಉತ್ತಮ ಸಂಬಧವನ್ನು ಬೆಳೆಸಲು ಇಚ್ಛಿಸುತ್ತಿತ್ತು. ಆದರೆ ಈ ಒಂದು ಸರಳ ಫಾರ್ಮುಲಾ ಟ್ರಂಪ್ ಅಭಿಮಾನಿಗಳಿಗೆ ತಿಳಿಯಲಿಲ್ಲ. ಅಂದು ಒತ್ತಲು ಬಟನ್ ಒಂದಿದೆ ಏನುತಾ ಏಕಾಏಕಿ ಬ್ರಿಟನ್ ಅನ್ನು ಅತಂತ್ರ ಸ್ಥಿತಿಗೆ ತಂದ ಜನಗಳಂತೆಯೇ ಅಮೆರಿಕದ ಜನರೂ ಮಾಡಿದರು. ಟ್ರಂಪ್ ಅಧ್ಯಕ್ಷನಾದ ಎರಡು ವರ್ಷಗಳಲ್ಲಿಯೇ ಇಷ್ಟೆಲ್ಲಾ ಅನಾಹುತಗಳು ಜರುಗಿರುವಾಗ ಇನ್ನೊಂದೆರಡು ವರ್ಷಗಳಲ್ಲಿ ಅದ್ಯಾವ ಬಗೆಯ ಪ್ರಳಯ ಅಮೇರಿಕಾದ ನೆಲದಲ್ಲಿ ನೆಡೆಯುತ್ತದೆಯೋ ಕಾದು ನೋಡಬೇಕು.