Friday, September 22, 2017

ಪರಮಾಣುಬಾಂಬುಗಳಿಗಿಂತಲೂ ಅಪಾಯಕಾರಿಯಾಗಬಹುದೇ ಈ ಟೆಕ್ನಾಲಜಿ!?

ಮಾನವನ ಅಳಿವು ಉಳಿವಿನ ಬಗೆಗಿನ ವಾದ-ಸಂವಾದಗಳು ಇಂದು ನೆನ್ನೆಯದಲ್ಲ. ಪ್ರತಿಯೊಂದು ಹೊಸ ಆವಿಷ್ಕಾರಗಳ ಸಾಧಕಗಳನ್ನು ಹೊರತುಪಡಿಸಿ ಅವುಗಳ ಬಾದಕಗಳನಷ್ಟೇ ನೋಡಿದಾಗ ಭಾಗಶಃ ಹೆಚ್ಚಿನ ಅವಿಷ್ಕಾರಗಳು ಆತನ ಉಳಿವಿಗೇ ಕುತ್ತು ತರವಂತಿರುತ್ತವೆ ಎಂಬುದು ಜಗಜ್ಜನಿತ ವಿಚಾರ. ಅದು ನ್ಯೂಕ್ಲಿಯರ್ ಬಾಂಬಿನಿಂದ ಹಿಡಿದು ಇಂದಿನ ಮೊಬೈಲ್ ಫೋನುಗಳವರೆಗೂ ಪ್ರಸ್ತುತ. ನೈಸರ್ಗಿಕವಾಗಿ ಬಳುವಳಿಯಾಗಿ ಬಂದಂತಹ ದೇಹಸಿರಿಯನ್ನು ಆದಷ್ಟೂ ಸೋಮಾರಿಯನ್ನಾಗಿ ಮಾಡಲು ಟೆಕ್ನಾಲಜಿ ಎಂಬೊಂದು ಹೆಸರನ್ನು ಕೊಟ್ಟು ಸೃಷ್ಠಿಗೆ ಸವಾಲೆಸೆಯುವ ಕಾರ್ಯವನ್ನು ಮಾನವ ತನ್ನ ಮೊದಲೆನೆ ದಿನದಿಂದಲೇ ಹಮ್ಮಿಕೊಳ್ಳುತ್ತಾನೆ. ಟೆಕ್ನಾಲಜಿಯ ಮರದ ನೆರಳಲ್ಲೇ ನಿಂತು ಮರವನ್ನೇ ಶಪಿಸುವಂತಹ ಮಾತು ಇದಾದರೂ ಪ್ರೆಶ್ನಿಸುವ ಗುಣವೇ ಅದರ ಬೆನ್ನೆಲುಬು ಎಂಬ ನಿಯಮವನ್ನು ಇಲ್ಲಿ ಆಧಾರವಾಗಿಟ್ಟುಕೊಳ್ಳೋಣ! ಇಂತಹ ಅದೆಷ್ಟೋ ಟೆಕ್ನಾಲಜಿಗಳು ಇಂದು ಮಾನವನ ಊಹೆಗೂ ಮೀರಿ ಬೆಳೆಯುತ್ತಿವೆ. ಅಂತಹದೊಂದು ಟೆಕ್ನಾಲಜಿಗಳಲ್ಲಿ ಕೃತಕ ಬುದ್ದಿವಂತಿಕೆಯೂ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಸಹ ಒಂದು.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆದರಿಸಿದ ಅದೆಷ್ಟೋ ಚಲಚಿತ್ರಗಳು ಇಂದು ಪರದೆಯ ಮೇಲೆ ಮೂಡಿ ಅದರ ಬಗೆಗಿನ ಒಂದು ಪಕ್ಷಿನೋಟವನ್ನು ಜನಮಾದ್ಯಮಕ್ಕೆ ತೋರಿಸಿವೆ. ಇಲ್ಲಿ ತನ್ನ ಸುತ್ತಲಿನ ಆಗುಹೋಗುಗಳನ್ನು ಒಂದು ಸಾಮಾನ್ಯ ಜೀವಿಯಂತೆಯೇ ಗ್ರಹಿಸಬಲ್ಲ ಯುಕ್ತಿಯ ಆ ರೋಬೋಟ್/ ಯಂತ್ರಗಳು ಮುಂದೊಂದು ದಿನ ತನ್ನನ್ನು ಸೃಷ್ಟಿಸಿದ ಮಾನವನನ್ನೇ ಎದುರಾಕಿಕೊಳ್ಳುತ್ತವೆ. ಅಪ್ಪನ ಕೊರಳುಪಟ್ಟಿಯನ್ನು ಮಗ ಬಿಗಿಮುಷ್ಟಿಯಲ್ಲಿ ಹಿಡಿದುಕೊಂಡಂತೆ! ಅಂದು ಮಾನವನ ಹಾಗು ಅವನ ಸೃಷ್ಟಿಯ ಯಂತ್ರಗಳ ನಡುವಿನ ತಾಕತ್ತಿನ ಪರೀಕ್ಷೆಯಾಗುತ್ತದೆ. ಯಂತ್ರಗಳೇನಾದರೂ ಸೋತರೆ ಅದು ಮಾನವನ ಸೋಲೇ ಆಗಿರುತ್ತದೆ ಇಲ್ಲವಾದರೆ ಭೂಗೋಳ ಒಂದು ಯಂತ್ರಗಳ ಬೃಹತ್ ಉಂಡೆಯಾಗಿಬಿಡುತ್ತದೆ! ಸದ್ಯಕಂತೂ ಇವೆಲ್ಲ ವಿಚಾರಗಳು ಪಾಪ್ಕಾರ್ನ್ ಅನ್ನು ತಿನ್ನುತ್ತಾ ಸಿನಿಮಾ ಮಂದಿರದಲ್ಲಿ ಕೂತು ನೋಡಲು ಮುದವೆನಿಸಿದರೂ ಮುಂದೊಂದು ದಿನ ಇಂತಹ ಸಾಧ್ಯತೆಯನ್ನು ಅಲ್ಲಗೆಳೆಯಲಾಗುವುದಿಲ್ಲ. ಪರಮಾಣು ಬಾಂಬ್ ಗಳಿಗಿಂತಲೂ ಕೃತಕ ಬುದ್ದಿವಂತಿಕೆ ಅತಿ ಅಪಾಯಕಾರಿ ವಿಷಯವೆಂಬುದು ಆಗಲೇ ಅದೆಷ್ಟೋ ವಿಜ್ಞಾನಿಗಳ ದಿಟ್ಟ ಅಭಿಪ್ರಾಯವಾಗಿದೆ.

ಇಪ್ಪತ್ತನೆಯ ಶತಮಾನದ ಆದಿಯಲ್ಲಿಯೇ ಕೃತಕ ಬುದ್ಧಿವಂತಿಕೆಯ ಬಗ್ಗೆ ಅದೆಷ್ಟೋ ಊಹಾಪೋಹಗಳಿದ್ದರೂ ಅದಕ್ಕೊಂದು ಸದೃಶ್ಯ ರೂಪ ದೊರೆತದ್ದು 1955 ರಲ್ಲಿ ಜಾನ್ ಮೆಕಾರ್ತಿ ಎಂಬ ಅಮೆರಿಕಾದ ವಿಜ್ಞಾನಿಯಿಂದ. ಮೆಕಾರ್ತಿ ಹಾಗು ತಂಡ ಅಂದು LISP ಎಂಬ ಕಂಪ್ಯೂಟರ್ ಭಾಷೆಯೊಂದನ್ನು ಆವಿಷ್ಕರಿಸಿ ಅದನ್ನು ಯಂತ್ರಗಳಿಗೆ ಅಳವಡಿಡಿಸಿ ಕೃತಕ ಬುದ್ಧಿವಂತಿಕೆ ಎಂಬುದು ಕನಸಿನ ಮಾಯಜಿಂಕೆಯಂತಲ್ಲ ಎನ್ನುವುದನ್ನು ಸಾಬೀತುಪಡಿಸಿದರು. ಕೂಡಲೇ ವಿಶ್ವದಾದ್ಯಂತ ಈ ಒಂದು ವಿಷಯದ ಬಗ್ಗೆ ವ್ಯಾಪಕ ಸಂಶೋದನೆಗಳಾದವು. ಆದರೆ ಗೊತ್ತು ಗುರಿಯಿಲ್ಲದ, ಅಲ್ಲಿಯವರೆಗೂ ಕೇವಲ ಕಲ್ಪನೆಗಷ್ಟೇ ಸೀಮಿತವಾಗಿದ್ದ ವಿಷಯವೊಂದಕ್ಕೆ ಕೋಟ್ಯಾನುಕೋಟಿ ಸುರಿದರೂ ಹೇಳಿಕೊಳ್ಳುವ ಮಟ್ಟಿನ ಪ್ರತಿಫಲ ಮುಂದೆ ಸಿಗದೇ ಇದ್ದ ಕಾರಣ ಸಂಶೋಧನೆಯ ಸದ್ದು ಮಂಕಾಗತೊಡಗಿತು. ಆದರೆ ಕೆಲದಶಕಗಳ ನಂತರ ಚೆಸ್ ಆಟದ ದಿಗ್ಗಜ ಗ್ಯಾರಿ ಕಾಸ್ಪೋರೊವ್ ನನ್ನು ಕೃತಕ ಬುದ್ಧಿವಂತಿಕೆಯ ‘ಡೀಪ್ ಬ್ಲೂ’ ಎಂಬ ಯಂತ್ರ ಸೋಲಿಸಿದಾಗಲೇ ಜಗತ್ತಿಗೆ ಕೃತಕ ಬುದ್ಧಿವಂತಿಕೆಯ ನಿಜದರ್ಶನವಾದದ್ದು. ಮುಂದೆ IBN ಕಂಪನಿ ವಿಕಾಸಗೊಳಿಸಿದ್ದ 'ವ್ಯಾಟ್ಸನ್' ಎಂಬ ಪ್ರೋಗ್ರಾಮ್ ಅಮೇರಿಕಾದ ರಸಪ್ರೆಶ್ನೆ ಕಾರ್ಯಕ್ರಮದ ವಿಜೇತರಿಬ್ಬರಿಗೆ ಸೋಲಿನ ರುಚಿಯನ್ನು ಕಾಣಿಸಿದಾಗಲಂತೂ ಕೃತಕ ಬುದ್ಧಿವಂತಿಕೆಯ ಮೇಲಿದ್ದ ಎಳ್ಳಷ್ಟೂ ಸಂಶಯಗಳು ದೂರವಾಗತೊಡಗಿದವು.

ಅದಾಗಲೇ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ ಹಲವು ಉತ್ಪನ್ನಗಳು ನಮ್ಮನ್ನು ಸುತ್ತುವರೆದಿವೆ ಅಥವಾ ಸುತ್ತುವರೆಯುತ್ತಿವೆ. ನೀವು ಆಪಲ್ ಐ-ಫೋನ್ ಬಳಕೆದಾರರಾದರೆ ಅದರಲ್ಲಿ ನಾವು ಕೇಳುವ ಪ್ರತಿಯೊಂದು ಉಲ್ಟಾಸೀದಾ ಪ್ರೆಶ್ನೆಗಳಿಗೂ ಮಾನವರಂತೆಯೇ ಉತ್ತರಿಸುವ 'ಸಿರಿ' ಅಪ್ಲಿಕೇಶನ್ ಸಹ ಈ ಕೃತಕ ಬುದ್ಧಿವಂತಿಕೆಯ ಉಪಉತ್ಪನ್ನವೇ ಆಗಿದೆ. ಗೂಗಲ್ ಸರ್ಚ್ ನಿಂದಿಡಿದು ‘Go’ ಆಟದಲ್ಲೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತನ್ನ ಛಾಪನ್ನು ಮೂಡಿಸಿದೆ. ‘Go’ ಪುರಾತನ ಚೀನಾದ ಆಟಗಳಲ್ಲೋದು. ಚೆಸ್ನಂತೆಯೇ ಈ ಆಟದಲ್ಲಿಯೂ ಸಹ ಪ್ರತಿ ಹೆಜ್ಜೆಗೂ ನೂರಾರು ಸಾವಿರಾರು ದಾರಿಗಳಿರುತ್ತವೆ.ಡೀಪ್ ಮೈಂಡ್ ಟೆಕ್ನಾಲಜೀಸ್ ಲಿಮಿಟೆಡ್ ಎಂಬ ಲಂಡನ್ ಮೂಲದ ಕಂಪನಿಯೊಂದು ಅಭಿವೃದ್ಧಿ ಪಡಿಸಿದ 'ಅಲ್ಫಾಗೊ' ಎಂಬ ಕೃತಕ ಬುದ್ಧಿವಂತಿಕೆಯ ಪ್ರೋಗ್ರಾಮ್ ಮೊದಲ ಬಾರಿಗೆ 2015 ರಲ್ಲಿ Go ಆಟದ ವಿಶ್ವದ ನಂಬರ್ ಒನ್ ಆಟಗಾರನನ್ನುಸೋಲಿಸಿ, ಇತಿಹಾಸ ಸೃಷ್ಟಿಸಿ ಎಲ್ಲೆಡೆ ವಿಸ್ಮಯವನ್ನು ಮೂಡಿಸಿತ್ತು. ಅಲ್ಲಿಂದ ಮುಂದೆ ಈ ವಿಷಯದ ಬಗೆಗಿನ ಸಂಶೋಧನೆ, ಅಭಿವೃದ್ಧಿ ಹಾಗು ಒಳಹೊರಗುಗಳ ಬಗ್ಗೆ ಆಳವಾದ ಚರ್ಚೆಗಳು ಶುರುವಾಗಿ ಖಾಸಗಿ ಕಂಪನಿಗಳೂ ಸಹ ನೂರಾರು ಕೋಟಿ ಹಣವನ್ನು ಈ ವಿಷಯದ ಅಧ್ಯಯನಕ್ಕಾಗೆ ಮುಡಿಪಾಗಿಡಲು ಮುಂದೆ ಬಂದವು.

ಅಸಲಿಗೆ ಕೃತಕ ಬುದ್ದಿವಂತಿಕೆ ಎಂಬುದು ತಾಯಿಯ ಗರ್ಭದಿಂದ ಆಗಷ್ಟೇ ಹೊರಬಂದ ಮಗುವಿನಂತೆ. ಮಗು ಬೆಳೆಯುತ್ತ ತನ್ನ ಸುತ್ತಲಿನ ಆಗುಹೋಗುಗಳಿಂದ, ಪರಿವರ್ತನೆಗಳಿಂದ ಹೇಗೆ ಒಂದೊಂದೇ ಅಂಶಗಳನ್ನು ತನ್ನ ಮಸ್ತಿಸ್ಕದೊಳಗೆ ಸೇರಿಸಿಕೊಂಡು ವಿಕಾಸಗೊಳ್ಳುತ್ತದೆಯೋ ಹಾಗೆಯೆ ಕೃತಕ ಬುದ್ದಿವಂತಿಕೆ ಇರುವೆಯ ಗಾತ್ರದಿಂದ ಶುರುವಾಗಿ ಆನೆಯ ಗಾತ್ರದ ಬುದ್ಧಿಯನ್ನು ಗಳಿಸಿಕೊಳ್ಳುತ್ತದೆ. ಹುಟ್ಟಿದ ಕೆಲವರ್ಷಗಳಲ್ಲೇ ನೆಡೆಯುವುದ ಕಲಿಯುವ ಮಗುವೊಂದಕ್ಕೆ ಇಪ್ಪತ್ತು ವರ್ಷಗಳ ನಂತರ ಹೇಗೆ ಪುನಃ ಅದಕ್ಕೆ ರಿವಿಶನ್ನಿನ್ನ ಆಗತ್ಯವಿರುವುದಿಲ್ಲವೊ ಅಂತೆಯೇ ಕೃತಕ ಬುದ್ಧಿವಂತಿಕೆಯ ಕಲಿಕೆಯೂ ಸಹ ದಿನದಿಂದ ದಿನಕ್ಕೆ ಹೊಸ ವಿಷಯಗಳ ಬಗ್ಗೆಯೇ ವಿನಃ ಹಾದುಹೊದ ವಿಷಯಗಳ ಬಗ್ಗೆಯಾಗಿರುವುದಿಲ್ಲ. ಆದರೆ ಹತ್ತೊಂಬಂತ್ತರ ಮಗ್ಗಿಯೊಂದನ್ನು ಕಲಿಯುವ ಮಗು ಮುಂದೊಂದು ದಿನ ಅದನ್ನು ಮರೆಯಲೂಬಹುದು. ಆದರೆ ಕೃತಕ ಬುದ್ದಿವಂತಿಕೆಯಲ್ಲಿ ಈ ಮರೆಯುವ ಚಾಳಿಗೆ ಆಸ್ಪದವೇ ಇರುವುದಿಲ್ಲ.ಅಂದ ಮಾತ್ರಕ್ಕೆ ಕೃತಕ ಬುದ್ದಿವಂತಿಕೆ ಎಂಬುದು ನಮ್ಮ ದಿನನಿತ್ಯದ ಸಹವರ್ತಿಗಳಾದ ವಾಷಿಂಗ್ ಮಷೀನ್ ಅಥವಾ ಫ್ರಿಡ್ಜ್ ಗಳಂತೆ ಹೇಳಿದ ಕೆಲಸವನ್ನಷ್ಟೇ ಮಾಡಿ ಸುಮ್ಮನಿರುವ ಯಂತ್ರಗಳಲ್ಲ. ಬದಲಾಗಿ ಇವುಗಳಲ್ಲಿ ಸ್ವಚಿಂತನೆ, ಸರಿತಪ್ಪು ನಿರ್ಧರಿಸುವ ತಾರ್ಕಿಕ ಗುಣ ಒಟ್ಟುಗೂಡುತ್ತಾ ಸಾಗುತ್ತದೆ. ಅರ್ತಾಥ್ ಅಕ್ಷರಸಹ ಯಾಂತ್ರಿಕ ಮಾನವನನ್ನು ಅಥವಾ ಅದಕ್ಕಿಂತಲೂ ಮಿಗಿಲಾದ ಮಾಹೆಯೊಂದನ್ನು ಸೃಷ್ಟಿಸುವ ಗುರಿ ಈ ವಲಯದ್ದಾಗಿರುತ್ತದೆ. ಒಟ್ಟಿನಲ್ಲಿ ಇಡೀ ಭೂಮಿಯನ್ನೇ ತನ್ನ ಮುಷ್ಟಿಯಲ್ಲಿ ಹಿಡಿಯಲೆತ್ನಿಸುತ್ತಿರುವ ಮಾನವ ಜೀವಿ ತನ್ನಂತೆಯೇ ಜೀವಭಾವದಿಂದ ಕೂಡಿದ ಯಾಂತ್ರಿಕ ವಿಸ್ಮಯವನ್ನು ಸೃಷ್ಟಿಸುವ ಸನಿಹದಲ್ಲಿದ್ದಾನೆ.

ಹೀಗೆ ಮುಂದೊಂದು ದಿನ ಆರ್ಟಿಫಿಕಲ್ ಇಂಟೆಲಿಜೆನ್ಸ್ ಎಂಬುದು ಮನೆಯ ಅಡುಗೆಯವರಾಗಿ, ಪ್ರೀತಿಯ ಪೋಷಕರರಾಗಿ, ಬಾಡಿಗಾರ್ಡ್ ಗಳಾಗಿ, ಚಾಲಕ ರಹಿತ ವಾಹನಗಳ ಚಾಲಕನಾಗಿ, ಗಡಿ ಕಾಯುವ ಸೈನಿಕರಾಗಿ, ವೈಜ್ಞಾನಿಕ ಗೊಂದಲಗಳ ನಿವಾರಕನಾಗಿ ಅಲ್ಲದೆ ಇಡೀ ಬ್ರಹ್ಮಾಂಡದ ಅನಂತತೆಯ ಉತ್ತರದಾಯಕನೂ ಆದರೆ ಸಂಶಯಪಡಬೇಕಿಲ್ಲ. ಆದರೆ ಇವೆಲ್ಲ ಮಾನವನ ಬಿಗಿಹಿಡಿತದ ಅಧೀನದಲ್ಲಿಯೇ ಜರುಗುವ ಕ್ರಿಯೆಗಳು ಎಂದುಕೊಂಡು ಯೋಚಿಸಿದರೆ ಮಾತ್ರ ನಮಗೆ ರೋಮಾಂಚನವೆನಿಸಬಹುದು, ಕೂತುಹಲಕಾರಿಯಾಗಬಹುದು. But there is a Catch! ಮೊದಲೇ ಹೇಳಿದಂತೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬುದು ಎಂದಿಗೂ ಮಾನವನ ಅಧೀನದಲ್ಲೇ ಇರುವ ಯಂತ್ರಗಳು ಎಂದರೆ ಅದು ನಮ್ಮ ದಿನನಿತ್ಯ ಬಳಕೆಯ ಮಷೀನ್ ನಂತಾಗಿಬಿಡುತ್ತವೆ. ಬದಲಾಗಿ ಗಳಿಕೊಳ್ಳುವ ಕೃತಕ ಬುದ್ದಿಯ ಸಹಾಯದಿಂದ ಅವುಗಳಿಗೆ ಮಾನವನ ಬಿಗಿ ನಿಯಂತ್ರಣದ ಸರಪಳಿಯಿಂದ ಕಳಚಿಕೊಳ್ಳುವುದು ಕಷ್ಟದ ವಿಷಯವಾಗುವುದಿಲ್ಲ. ಆಗ ಉದ್ಭವಗೊಳ್ಳುವ ಯಾಂತ್ರಿಕ ಮಾನವ ನಿಜ ಮಾನವಂತೆಯೇ ಅರಿಷಡ್ವರ್ಗ ಗಳ ದಾಸನಾದರೂ ಚಕಿತರಾಗಬೇಕಿಲ್ಲ. Infact ನಿಜ ಮಾನವನಿಗಿಂತಲೂ ಮಿಗಿಲಾದ ಭಾವಗಳು ಅವುಗಳಲ್ಲಿ ಮೂಡಬಹುದು! ಆಸೆಯೇ ದುಃಖಕ್ಕೆ ಮೂಲ ಎಂಬುದು ಅಸಲಿ ಮಾನವನ ಗಾದೆಯಾದರೆ, ನಿರಾಸೆಯೇ ದುಃಖಕ್ಕೆ ಮೂಲ ಎಂಬುದು ಆ ಯಾಂತ್ರಿಕ ಮಾನವನ ಜೀವನ ಮಂತ್ರವಾಗಬಹುದು. ಹೀಗೆ ಮುಂದುವರೆದು ಈ ಭೂಮಿಯೇ ನನ್ನದು, ನಾನೇ ರಾಜ ಎಂಬ ಹೊಸತೊಂದು ಸಾಮ್ರಾಜ್ಯವೇ ಶುರುವಾಗುವ ಸಾಧ್ಯತೆಯನ್ನೂ ಅಲ್ಲಗೆಳೆಯಲಾಗುವುದಿಲ್ಲ. ಮೊದಲಬಾರಿ ಕೇಳುವವರಿಗೆ ಇದು ಹಾಸ್ಯಾಸ್ಪದ ವಾದವೆನಿಸಿದರೂ ಸಂಶೋಧಿಸುತ್ತಾ ಹೊರಟರೆ ಇಂತಹ ವಿಷಯಗಳೇ ಹೆಚ್ಚು ಹೆಚ್ಚಾಗಿ ನಮಗೆ ಕಾಣಸಿಗುತ್ತವೆ. ವಿಜ್ಞಾನಿ ಸ್ಟೀಫನ್ ಹಾಕಿಂಗ್, ಟೆಸ್ಲಾ ಕಂಪನಿಯ ಒಡೆಯ ಇಲೊನ್ ಮುಸ್ಕ್ ಅಲ್ಲದೆ ಮೈಕ್ರೋಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ಕೂಡ ಹೇಳುವ ಮಾತುಗಳು ಅಂತಹದ್ದೇ. ಅದಾಗಲೇ ನ್ಯೂಕ್ಲಿಯರ್ ಬಾಂಬುಗಳ ತಯಾರಿಯ ನಿಯಂತ್ರಣದಂತೆಯೇ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ಮುಂಬರುವ ಅದೆಷ್ಟೋ ಕಂಟಕಗಳ ನಿವಾರಣೆಗೆ ಇಂದೇ ಕಾಯಿದೆ ಹಾಗು ವಿದೇಯಕಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡಲೇ ಜಾರಿ ಮಾಡಬೇಕೆಂಬ ಕೂಗು ಸಹ ದೊಡ್ಡದಾಗುತ್ತಿದೆ. ಇಲ್ಲದಿದ್ದರೆ ಇಂದು ಗನ್ನು ಬಾಂಬುಗಳಿಂದ ಹೊಡೆದಾಡುವ ದೇಶಗಳು ಮುಂದೊಂದು ದಿನ ನಶಿಸಲಾಗದೆ ಇರುವ ಇಂತಹ ಹಲವಾರು ಯಂತ್ರಗಳ ದಾಳಿಗಳಿಗೆ ತುತ್ತಾಗಿ ಅಸ್ತಿತ್ವವೇ ಇಲ್ಲದ ಬರಡು ಭೂಮಿಗಳಾಗಬಹುದು ಎಂಬುದು ಸದ್ಯಕ್ಕೆ ಬಹುಜನರ ಅಭಿಮತ.

Thursday, September 21, 2017

ಉತ್ತರೆಯರನ್ನು ದಕ್ಷಿಣೆಯರೊಟ್ಟಿಗೆ ಸೇರಿಸುವ ಸಾಹಸದ ಘಳಿಗೆಯಲ್ಲಿ…

ಉತ್ತರದ ಅತಿವೃಷ್ಟಿ ಹಾಗು ದಕ್ಷಿಣದ ಅನಾವೃಷ್ಟಿ, ಎರಡೂ ದೇಶವನ್ನು ಕಾಡುತ್ತಿರುವ ಬಹುಮುಖ್ಯವಾದ ಸಮಸ್ಯೆಗಳು. ಶತಮಾನಗಳಿಂದ ಜನಜೀವನಗಳನ್ನು ಬಹುವಾಗಿ ಕಾಡುತ್ತಾ ಬಂದಿರುವ ಈ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಇತಿಶ್ರೀ ಹಾಡುತ್ತೇನೆಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದೆ. ಆ ಆತ್ಮವಿಶ್ವಾಸದ ಮಾತಿನ ಹಿಂದಿರುವ ಯೋಜನೆಯೇ ನದಿ ಜೋಡಣೆ. ಉತ್ತರದ ನದಿಗಳನ್ನು ಕಾಲುವೆ, ಆಣೆಕಟ್ಟುಗಳ ಮೂಲಕ ದಕ್ಷಿಣದ ನದಿಗಳ ಹರಿವಿನೊಟ್ಟಿಗೆ ಸೇರಿಸಿ, ಹಿಗ್ಗಿ ಒಡೆದು ಹೋಗುವ ಪ್ರವಾಹವನ್ನು ಕುಗ್ಗಿ ಸೊರಗಿ ಹೋಗುವ ಧಾರೆಯೊಟ್ಟಿಗೆ ಸೇರಿಸುವ ಪ್ರಕ್ರಿಯೆ. ಹಿಂದೆಲ್ಲ ಜನರು ಗಂಗೆಯನ್ನು ಕಾಣಲು ಅವಳ ಬಳಿಗೆ ಹೋದರೆ ಮುಂದೊಂದು ದಿನ ಇಂತಹ ಯೋಜನೆಗಳ ಮೂಲಕ ಆಕೆಯೇ ನಮ್ಮ ಮನೆಬಾಗಿಲಿಗೆ ಬಂದರೂ ಆಶ್ಚರ್ಯಪಡಬೇಕಾಗಿಲ್ಲ. ಸರಿಸುಮಾರು 30 ನದಿಗಳನ್ನು ಸುಮಾರು 5.6 ಲಕ್ಷ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಜೋಡಿಸಲ್ಪಡುವ ಯೋಜನೆ ಇದಾಗಿದೆ. ಪ್ರಸ್ತುತ ಶತಮಾನದ ಶುರುವಿನಲ್ಲೂ ಆಗಿನ ಸರ್ಕಾರ ಇದೇ ಯೋಜನೆಯನ್ನು ಜಾರಿಗೆ ತರಲು ತುದಿಗಾಲಲ್ಲಿ ನಿಂತಿತ್ತಾದರೂ ಅದ್ಯಾಕೋ ಯೋಜನೆಯ ಬಂಡಿ ಶುರುವಾಗಲೇಇಲ್ಲ. ವಿದೇಶಗಳಲ್ಲೂ ಇಂತಹ ಅದೆಷ್ಟೋ ನದಿಜೋಡಣೆ ಯೋಜನೆಗಳು ಶುರುವಾಗಿ ಕೊನೆಯಲ್ಲಿ ನೆಲಕಚ್ಚಿರುವುದೂ ಉಂಟು. ಇವುಗಳ ಹಿನ್ನಲೆಯಲ್ಲಿ ದೇಶದ ಅತಿ ದೊಡ್ಡ ಯೋಜನೆಗಳಲ್ಲೊಂದೆನಿಸಿಕೊಂಡಿರುವ ನದಿಜೋಡಣೆ ಯೋಜನೆಯ ಪೂರ್ವಪರಗಳ ಚಿಂತನ ಮಂಥನ ಸರಿಯಾಗಿ ಆಗಿದೆಯೇ ಎಂಬುದು ಗಂಭೀರವಾದ ವಿಚಾರ. ಇಲ್ಲವೇ ಇತ್ತೀಚೆಗಷ್ಟೇ ಕಣ್ಣು ಮಿಟುಕಿಸುವುದರೊಳಗೆ ಜಾರಿಗೊಳಿಸಿ, ಅನುಷ್ಠಾನದಲ್ಲಿ ಬಹುವಾಗಿ ಹೊಡೆತ ತಿಂದ 'ಇತರೆ ಎರಡು' ಯೋಜನೆಗಳಂತೆಯೇ ಈ ಯೋಜನೆಯೂ ಆಗುವ ಸಂಭವವಿದೆಯೇ ಎಂಬುದನ್ನು ಚರ್ಚಿಸಿ ಹೆಜ್ಜೆಹಿಡಬೇಕಿದೆ.


ಭಾರತ ಕೃಷಿ ಪ್ರಧಾನ ದೇಶ. ಮಾನ್ಸೂನ್ ಮಾರುತಗಳು ಅಥವ ಸರಳವಾಗಿ ಹೇಳುವುದಾದರೆ ನೈಸರ್ಗಿಕ ಮಳೆಯೇ ಬಹುಪಾಲು ಕೃಷಿಯ ಮಹಾಧಾರ. ಅದರೆ ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರದ ದೇಶವೊಂದು ಇಂದಿಗೂ ತನ್ನ ಕೃಷಿ ಚಟುವಟಿಕೆಗಳಿಗೆ ಮಾನ್ಸೂನ್ ಮಾರುತಗಳನ್ನೇ ಬಹುವಾಗಿ ಅವಲಂಬಿಸಿದೆ ಎಂದರೆ ಅದು ಸೋಜಿಗದ ವಿಚಾರ. ಅದಾಗಲೇ ಇಂತಹ ಮಾರುತಗಳ ಏರಿಳಿತ, ಕಾಣೆಯಾಗುವಿಕೆಗಳಿಂದ ಪ್ರಸ್ತುತ ಕೃಷಿ ವಲಯದಲ್ಲಿ ಬೀರಿರುವ ವ್ಯತಿರಿಕ್ತ ಪರಿಣಾಮಗಳ ಉದಾಹರಣೆಗಳು ನಮ್ಮ ಮುಂದೆಯೇ ಹಲವಿವೆ. ದೇಶದ ಆಹಾರ ಭದ್ರತೆಯ ವಿಚಾರದಲ್ಲಿ ಸದೃಢವಾಗಬೇಕಾದ ಕಾಲದಲ್ಲಿ ಇನ್ನೂ ಸಹ ನೈಸರ್ಗಿಕ ಮಾರುತಗಳ ಸಹಕಾರವನ್ನೇ ನೆಚ್ಚಿಕೊಂಡು ಕೂರುವುದು ಮೂರ್ಖತನವೆಂದೆನಿಸದಿರದು. ನದಿ ಜೋಡಣೆ ಇಂತಹ ಅವಲಂಬಿತ ಕೃಷಿ ಪದ್ದತಿಗೆ ವರದಾನವಾಗಬಹುದು. ಅತಿಯಾಗಿ ಸುರಿಯುವ ಮಳೆ ಪ್ರದೇಶದಿಂದ ಕಾಲುವೆ ಹಾಗು ಅಣೆಕಟ್ಟುಗಳ ಮೂಲಕ ನಿಯಂತ್ರಿತವಾಗಿ ನೀರಿನ ಸರಬರಾಜು ಈ ಯೋಜನೆಯ ಮೂಲಕ ಸಾಧ್ಯವಾಗಬಹುದು. ಮಾನವನ ಹುಚ್ಚಾಟದಿಂದಲೇ ಹೆಚ್ಚಾಗಿ ಇಂದು ಕಣ್ಣಾಮುಚ್ಚಾಲೆ ಆಡುವ ಮಳೆಯನ್ನು ಅತಿಯಾಗಿ ನಂಬಿಕೊಂಡು ಕೂರುವುದನ್ನು ಈ ಮೂಲಕ ಕಡಿಮೆಗೊಳಿಸಬಹುದು.

ಇನ್ನು ವಿಶ್ವದ ನಾಲ್ಕನೇ ಅತಿ ದೊಡ್ಡ ‘ಗ್ರೀನ್ ಹೌಸ್’ ಅನಿಲಗಳ ಹೊರ ಸೋಸುವಿಕೆಯ ದೇಶವಾಗಿರುವ ಭಾರತ 'ಪ್ಯಾರಿಸ್ ಒಪ್ಪಂದ'ದ ಬಳಿಕ ದೇಶದ ಒಟ್ಟು ಶಕ್ತಿಯ ಉತ್ಪಾದನೆಯಲ್ಲಿ 40% ರಷ್ಟನ್ನು ನವೀಕರಿಸಬಹುದಾದ (Renewable) ಹಾಗು ಶುದ್ಧ ಶಕ್ತಿಯ (Clean Energy) ಮೂಲಗಳಿಂದಲೇ ಉತ್ಪಾದಿಸುತ್ತದೆಂದು ಹೇಳಿಕೊಂಡಿದೆ ಹಾಗು ಅದನ್ನು ಮಾಡಿಯೂ ತೋರಿಸಬೇಕಾದ ಅನಿವಾರ್ಯತೆ ಇದೆ! ಇಂತಹ 'ಕ್ಲೀನ್ ಎನರ್ಜಿ' ಯೋಜನೆಗಳಲ್ಲಿ ಜಲವಿದ್ಯುತ್ (Hydro Energy) ಯೋಜನೆಯೂ ಸಹ ಒಂದು. ನದಿ ಜೋಡಣೆಯ ಹಾದಿಯ ಸೂಕ್ತ ಸ್ಥಳಗಳಲ್ಲಿ ನಿರ್ಮಾಣವಾಗುವ ಅಣೆಕಟ್ಟುಗಳ ಮೂಲಕ ಜಲವಿದ್ಯುತ್ತನ್ನೂ ಉತ್ಪಾದಿಸುವುದು ಸಾಧ್ಯವಿದೆ. ದೇಶದ ಪ್ರಸ್ತುತ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ 15% ರಷ್ಟು ಮಾತ್ರ ಜಲವಿದ್ಯುತ್ ನ ಮೂಲಕ ಸಾಧ್ಯವಾಗುತ್ತಿದೆ. ಆದ ಕಾರಣ ಕೇಂದ್ರ ಸರ್ಕಾರಕ್ಕೆ ತನ್ನ ನದಿಜೋಡಣೆ ಯೋಜನೆಯನ್ನು ಸಮರ್ಥಿಸಿಕೊಳ್ಳಲು ಈವೊಂದು ಕಾರಣವೂ ಹೆಚ್ಚಾಗಿ ಸಹಕಾರಿಯಾಗಲಿದೆ. ಅಲ್ಲದೆ ಮೊದಲೇ ಹೇಳಿದಂತೆ ಪ್ರವಾಹವೆಂಬ ಅತಿವೃಷ್ಟಿಯಿಂದ ಪಾರಾಗಲು, ಬರಪೀಡಿತ ಸ್ಥಳಗಳಲ್ಲಿ ಹಸಿರು ಕ್ರಾಂತಿಯನ್ನು ಮೂಡಿಸಲು, ಕುಡಿಯುವ ನೀರಿನ ಆಹಾಕಾರಕ್ಕೆ, ಅಲ್ಲದೆ ಸದ್ಯಕ್ಕೆ ತಲೆದೋರಿರುವ ನಿರುದ್ಯೋಗ ಸಮಸ್ಯೆಗೂ ಒಂತಿಷ್ಟು ಪರಿಹಾರವನ್ನು ಕಂಡುಕೊಳ್ಳಲು ನದಿ ಜೋಡಣೆ ಯೋಜನೆ ಪೂರಕವಾಗಲಿದೆ. 

ಆದರೆ,

ಈ ಮೊದಲು ದೇಶದ ಹಾಗು ವಿಶ್ವದ ಹಲವೆಡೆ ಇಂತಹದ್ದೇ ಯೋಜನೆಗಳು ಜಾರಿಗೊಂಡು, ನಿಸರ್ಗನಾಶ, ಪರಿಸರ ವ್ಯವಸ್ಥೆಯ ಅಸ್ತವ್ಯಸ್ತೆ, ರಾಜಕೀಯ ಕಚ್ಚಾಟಗಳು ಎಂಬ ಮತ್ತೊಂದು ಮಗದೊಂದು ಕಾರಣಗಳ ಮೂಲಕ ಬಹುವಾಗಿ ಟೀಕೆಗೆ ಒಳಪಟ್ಟಿರುವ ನಿದರ್ಶನಗಳೂ ಇವೆ.

ಉತ್ತರಪ್ರದೇಶ ಹಾಗು ಮಧ್ಯಪ್ರದೇಶ ರಾಜ್ಯಗಳ ಕೆನ್ ಹಾಗು ಬೆಟ್ವಾ ನದಿಗಳ ಜೋಡಣೆಗೆ ಶುರುವಿಟ್ಟುಕೊಂಡಿರುವ ಕೇಂದ್ರ ಸರ್ಕಾರ ಅದಾಗಲೇ ಸ್ಥಳೀಯರಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಯೋಜನೆಯ ಹಾದಿಯಲ್ಲಿ ಬರುವ ಪನ್ನಾ ರಾಷ್ಟೀಯ ಉದ್ಯಾನದ ಸುಮಾರು 55.75 ಚದರ ಕಿಲೋಮೀಟರ್ನಷ್ಟು ಹುಲಿ ಮೀಸಲು (Tiger Reserve) ಜಾಗ ಸಂಪೂರ್ಣ ಜಲಾವೃತಗೊಳ್ಳಲಿದೆ. ಅದಾಗಲೇ ಹತ್ತು ಹಲವು ಕಾರಣಗಳಿದ ಕ್ಷೀಣಿಸುತ್ತಿರುವ ರಾಷ್ಟ್ರೀಯ ಉದ್ಯಾನಗಳು ಹಾಗು ಹುಲಿ ಮೀಸಲು ಅರಣ್ಯಗಳು ಇಂತಹ ನಿಖರ ಫಲಿತಾಂಶವಿಲ್ಲದ ಯೋಜನೆಗಳಿಗೆ ಬಲಿಪಶುವಾಗುತವುದು ಶೋಚನೀಯ ಸಂಗತಿ. ಹೀಗೆಯೇ ನದಿ ಜೋಡಣೆಯಲ್ಲಿ ಬರುವ ಅದೆಷ್ಟೋ ದಟ್ಟಾರಣ್ಯಗಳು, ಹಳ್ಳಿಗಳು, ಮೀಸಲು ಅರಣ್ಯಗಳ ಉಳಿವಿಕೆ ಅದೆಷ್ಟರ ಮಟ್ಟಿಗೆ ಸಾಧ್ಯವಾಗಲಿದೆ ಎಂದು ಕಾದು ನೋಡಬೇಕು. ಜಾಗತಿಕವಾಗಿ ನೋಡುವುದಾದರೆ ಕಝಕಿಸ್ತಾನ ಹಾಗು ಉಜ್ಬೇಕಿಸ್ತಾನ್ ಗಳಲ್ಲೂ ಅಮು ದರ್ಯಾ ಹಾಗು ಡೈರ್ ದರ್ಯಾ ಎಂಬ ನದಿಗಳ ಹರಿವನ್ನು ಬದಲಿಸಿ ಪರಿಸರ ವ್ಯವಸ್ಥೆಯಲ್ಲಿ ಭಾರಿ ಅಲ್ಲೊಲ್ಲ ಕಲ್ಲೋಲವಾದ ಹಲವು ಯೋಜನೆಗಳನ್ನೂ ಇಲ್ಲಿ ಉಲ್ಲೇಖಿಸಬಹುದು.

ದೇಶದಲ್ಲಿ ನದಿ ಜೋಡಣೆ ಯೋಜನೆಯ ರೂಪುರೇಶೆ ಇಂದು ನೆನ್ನೆಯದಲ್ಲ. ಎಂಬತ್ತರ ದಶಕದಲ್ಲೇ ಅಂದಿನ ಸರ್ಕಾರಗಳು ಇದಕ್ಕೆ ಒಲವನ್ನು ತೋರಿಸಿದವಾದರೂ ಕಾರಣಾಂತರಗಳಿಂದ ದೇಶದ ಎಲ್ಲೆಡೆ ಇದು ಜಾರಿಯಾಗಲಿಲ್ಲ. ಅಲ್ಲದೆ ಅಂದೆಲ್ಲ ದೇಶದ ಉತ್ತರದಲ್ಲಿ ಬೀಳುತ್ತಿದ್ದ ಧಾರಾಕಾರ ಮಳೆಯ ಪ್ರಮಾಣ ಇಂದಿನ ಸಮಯಕ್ಕೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವಿರುವುದು ತಿಳಿದಿರುವ ವಿಷಯವೇ. ಅಂತಹದರಲ್ಲಿ ಬಹುಪಾಲು ಅಂದಿನ ಯೋಜನೆಯ ನೀಲನಕ್ಷೆಯನ್ನೇ ಹಿಡಿದುಕೊಂಡು, ಲಕ್ಷಾಂತರ ಕೋಟಿ ರೂಪಾಯಿಗಳನ್ನು ಕಣ್ಣಾಮುಚ್ಚಾಲೆಯಾಡುವ ವರುಣನನ್ನು ನೆಚ್ಚಿ ಸುರಿಯುವುದು ವಿಮರ್ಶಿಸಬೇಕಾದ ವಿಚಾರ. ಸದ್ಯದ ಅಂಕಿಅಂಶಗಳ ಪ್ರಕಾರ ಈ ಯೋಜನೆಗೆ ತಗುಲುವ ಒಟ್ಟು ಮೊತ್ತ ಸುಮಾರು 5 ರಿಂದ 6 ಲಕ್ಷ ಕೋಟಿ ರೂಪಾಯಿಗಳು. ಇದು ನಮ್ಮ ದೇಶದ ಜಿಡಿಪಿಯ ಅಂದಾಜು 5% ನಷ್ಟು ಮೊತ್ತ! ಇನ್ನು ಸರ್ಕಾರದ ಯಾವ ಯೋಜನೆ ತಾನೇ ಹೇಳಿದ ಸಮಯಕ್ಕಿಂತ ಹಾಗು ಅಂದಾಜಿಸಿದ ಹಣಕ್ಕಿಂತ ಮೊದಲೇ ಆಗಿವೆ?! ಹಾಗಾಗಿ ಈಗ ಹೇಳುತ್ತಿರುವ ಮೊತ್ತ ದಲ್ಲಾಳಿ ಹಾಗು ಭ್ರಷ್ಟ ಅಧಿಕಾರಿಗಳ 'ಸೇವೆ'ಯಲ್ಲಿ ಇನ್ನೂ ಹೆಚ್ಚಾಗುವುದರಲ್ಲಿ ದೂಸರಾ ಮಾತೇ ಇಲ್ಲ. ಅಲ್ಲದೆ ನಮ್ಮಲ್ಲಿ ನದಿಜೋಡಣೆ ಎಂಬುದು ರಾಜ್ಯ ರಾಜ್ಯಗಳ ನಡುವಿನ ಸಹಕಾರದ ವಿಷಯ. ಕೇಂದ್ರ ಸರ್ಕಾರ ಅದೆಷ್ಟೇ ಪಾರದರ್ಶಕವಾಗಿ ಯೋಜನೆಯನ್ನು ಶುರುವಿಟ್ಟುಕೊಂಡರೂ ರಾಜಕೀಯದ ಚದುರಂಗದ ಆಟ ಇಲ್ಲಿ ನೆಡೆದೇ ನೆಡೆಯುತ್ತದೆ. ಕೆಲ ರಾಜ್ಯಗಳು ಇದರಿಂದ ಅದೆಷ್ಟೇ ಒಳಿತಿದ್ದರೂ ಬೇಕಂತಲೇ ಕ್ಯಾತೆ ತೆಗೆದು ಸುಪ್ರೀಂ ಕೋರ್ಟಿನ ಮೊರೆಯನ್ನು ಹೋಗುವ ಸಂಭವವನ್ನೂ ಸಹ ತಪ್ಪಿಸಲಾಗುವುದಿಲ್ಲ. ಇವೆಲ್ಲ ತಕರಾರುಗಳು ಇತ್ಯರ್ಥವಾಗಿ ಶುರುವಾದ ಯೋಜನೆ ಕೊನೆಗಾಣುವುದರ ಒಳಗೆ ಅದೆಷ್ಟು ತಲೆಮಾರುಗಳು ಉರುಳುವವೋ ಅಥವಾ ಅದೆಷ್ಟರ ಮಟ್ಟಿನ ಹೊರೆಯನ್ನು ಜನಸಾಮಾನ್ಯ ಹೊರಬೇಕಾಗುವುದೋ ಕಾದು ನೋಡಬೇಕು.

ಹಾಗಾದರೆ ದೇಶದ ನೀರಿನ ಸಮಸ್ಯೆಗಳಿಗೆ ಬಹುಕೋಟಿ ರೂಪಾಯಿಗಳ ನದಿಜೋಡಣೆಯೊಂದೇ ಸೂಕ್ತ ಪರಿಹಾರವೇ? ಮಳೆ ನೀರಿನ ಸಂಗ್ರಹ, ಅಂತರ್ಜಲ ವೃದ್ಧಿ, ಡಿಸಾಲೆನೇಷನ್, ಅರಣ್ಯಕರಣ, ಹನಿ ನೀರಾವರಿ ಪದ್ದತಿ, ಹೀಗೆ ಇನ್ನೂ ಹಲವು ಸರಳ ಖರ್ಚಿನ ನಿಖರ ಫಲಿತಾಂಶದ ಯೋಜನೆಗಳೂ ಏತಕ್ಕೆ ಉತ್ತರಗಳಾಗಬಾರದು? ಪ್ರಸ್ತುತ ಕುಂಠಿತ ಜಿಡಿಪಿಯ ದರದಲ್ಲಿ, ಮಾತೆತ್ತಿದರೆ ಕೇಳಿದವನು ಸುಸ್ತಾಗಿ ಕುಸಿದು ಬೀಳುವಂತಹ ಬಂಡವಾಳದ, ಒಂದಲ್ಲ ಒಂದು ಬಗೆಯಲ್ಲಿ ಜನರ(ಸರ್ಕಾರದ) ಬೊಕ್ಕಸದ ಮೇಲೆ ತೀವ್ರವಾಗಿ ಹೊರೆಯಾಗುವ ಯೋಜನೆಗಳೇ ಏತಕ್ಕೆ ಸರ್ಕಾರದ ಪ್ರಣಾಳಿಕೆಗಳಲ್ಲಿ ಮೂಡುತ್ತಿವೆಯೋ ತಿಳಿಯದು. ಎಷ್ಟಾದರೂ ನಾವುಗಳು ದಿನನಿತ್ಯದ ಅತಿಸಾಮಾನ್ಯ ವಿಷಯಗಳಲ್ಲೇ ಮುಳುಗಿ ಮರೆಯಾಗಿರುವ ಜನಸಾಮಾನ್ಯರು. ಮೇಲಿನವರು ಅದೇನೂ ಮಾಡಿದರೂ ತಿಳಿದು, ಅರಿತು, ಯೋಚಿಸಿ, ವಿಮರ್ಶಿಸಿ ಮಾಡುವವರು! ನಾವೇನಿದ್ದರೂ ಕೇಳುಗರು. ಹೇಳುಗರ ಮಾತಿಗೆ ಕಿವಿಯೊಡ್ಡುವರು, ತಲೆಬಾಗಿ 'ಜೈ' ಎನ್ನುವವರು!

Friday, September 15, 2017

ನಂಬುಗೆಯೆಂಬ ಅಡಿಪಾಯದಲ್ಲಿ ವೈಚಾರಿಕತೆಯ ಸ್ಥಾನ...

ಮಾನವನ ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ಎರಡು ವಿಧಗಳಾಗಿ ವಿಂಗಡಿಡಬಹುದು. ಒಂದು ವ್ಯಾವಹಾರಿಕ ಮತ್ತೊಂದು ಭಾವನಾತ್ಮಕವಾದದ್ದು. ಈ ಎರಡು ಚಟುವಟಿಕೆಗಳು ಹಾಗು ಅವುಗಳ ಮೂಲವಾಗಿರುವ ಗುಣಗಳು ಒಂದಕೊಂದು ಎಷ್ಟು ತದ್ವಿರುದ್ದವೋ ಅಷ್ಟೇ ಒಂದಕೊಂದು ಪೂರಕ.

ಒಬ್ಬ ಮನುಷ್ಯ ತಾನು ಅದೆಷ್ಟೇ ಸಾತ್ವಿಕ ನಡವಳಿಕೆಯ ಮಹಾಪುರುಷನೇ ಆಗಿದ್ದರೂ ವ್ಯವಹಾರದ ವಿಷಯಕ್ಕೆ ಬಂದಾಗ ಅಲ್ಲಿ ಆತ ಮಹಾ ಚಾಣಕ್ಯನಾಗಿರುತ್ತಾನೆ. ಆತ ಒಬ್ಬ ಉತ್ತಮ ಸೇಲ್ಸ್ ಮ್ಯಾನ್ ಆಗಿದ್ದರೆ ಒಂದಲ್ಲ ಒಂದು ಬಗೆಯಲ್ಲಿ ತನ್ನ ಸರಕನ್ನು ಮಾರುವ ವ್ಯಾವಹಾರಿಕ ಜ್ಞಾನ, ಮಾತಿನ ತಂತ್ರಗಾರಿಕೆ, ನಿಪುಣತೆ ಹಾಗು ಇನ್ನು ಹಲವು ಹತಾರಗಳು ಆತನ ಬತ್ತಳಿಕೆಯಲ್ಲಿರುತ್ತವೆ. ಆ ಕೆಲಸವೊಂದನ್ನು ಮಾಡುವಾಗ ಆತ ತನ್ನ ಸಾತ್ವಿಕ ನಡವಳಿಕೆಯ ಭಾವನಾತ್ಮಕ ಗುಣವನ್ನು ಕೆಲಕಾಲದವರೆಗೆ ಎಲ್ಲೋ ಒಂದೆಡೆ ಭದ್ರವಾಗಿ ಮಲಗಿರಿಸಿ ಬರಬೇಕಾಗುತ್ತದೆ. ಇಲ್ಲವಾದಲ್ಲಿ ಇಂದಿನ ವ್ಯಾವಹಾರಿಕ ಪ್ರಪಂಚದಲ್ಲಿ ಆತನಂತಹ ವ್ಯಕ್ತಿಗಳು ‘ಮುಂದುವರೆದ’ ಅಥವಾ 'ಬೆಳೆದ' ಎಂದು ಕರೆಸಿಕೊಳ್ಳುವುದು ಕಷ್ಟ ಸಾಧ್ಯ. ಮುಂದಿರುವ ವ್ಯಕಿ ಸೇರಾದರೆ ಈತ ಸವಸೇರಾಗಿರಲೇಬೇಕು. ಇಂತಹ ಒಂದು ವ್ಯಾವಹಾರಿಕ ಗುಣ ಜಗತ್ತಿನ ಭಾಗಶಃ ಜನರ ಪ್ರಸ್ತುತ ವಸ್ತುಸ್ಥಿತಿ. ಇಲ್ಲಿ ಪ್ರತಿಯೊಂದು ವಿಷಯಗಳನ್ನು ಒರೆಹಚ್ಚಿ, ಪ್ರೆಶ್ನಿಸಿ, ಪರಿಕ್ಷಿಸಿ ನೋಡಲಾಗುತ್ತದೆ. ಕೊಳ್ಳುವ, ಕೇಳುವ, ನೋಡುವ ಅಲ್ಲದೆ ಆಡುವ ಮೊದಲೂ ವಿಷಯಗಳ ಪಚನಕ್ರಿಯೆ ಬಹುವಾಗಿ ಆಗುತ್ತದೆ.

ಅದೇ ಮಾನವನನಲ್ಲಿ ಇರುವ ಮತ್ತೊಂದು ಕಂಡೂ ಕಂಡರಿಯದಂತಹ ಗುಣವೇ ಭಾವನಾತ್ಮಕ ಗುಣ. ಇಲ್ಲಿ ಭಾವನೆಗಳದ್ದೇ ಮೇಲುಗೈ. ಇಲ್ಲಿ ಪ್ರೆಶ್ನಿಸುವ, ಪರೀಕ್ಷಿಸುವ ಗುಣಗಳಿಗೆ ಹೆಚ್ಚಾಗಿ ಆಸ್ಪದವಿರುವುದಿಲ್ಲ. ಯಾರೋ ಊದುವ ಪೀಪಿಗೆ ತಲೆಯಾಡಿಸುತ್ತಾ, ಅವರ ಜೈಕಾರಕ್ಕೆ ಜೈಕಾರವೊಂದು ತನಗರಿಯದಂತೆ ಒಳಗೊಳಗೆ ಮೂಡಿಬರುತ್ತದೆ. ಇಲ್ಲಿ ವಿಷಯಗಳ ಹೇರಿಕೆಗಿಂತ ಜನರಲ್ಲಿರುವ ಅಂತರಂಗದ ಮುಗ್ದತೆಯೇ ಪಾಪದ್ದು ಎನ್ನಬಹುದು. ಹಿರಿಯರು ಅಥವ ಹತ್ತಿರದವರು ಮಾಡುವ ಕಾರ್ಯಗಳು, ವಿಚಾರಗಳು ಇಲ್ಲಿ ಯಥಾವತ್ತಾಗಿ ಕಾಪಿಯೊಡಯಲ್ಪಡುತ್ತವೆ. ಏನು ಮಾಡುತ್ತಿದ್ದಾರೆ, ಏಕೆ ಮಾಡುತ್ತಿದ್ದಾರೆ ಎಂಬುದಕ್ಕಿಂತ ‘ಯಾರು’ ಮಾಡುತ್ತಿದ್ದಾರೆ ಎಂಬುದೇ ಮುಖ್ಯವಾಗಿರುತ್ತದೆ. ಅವರು ಸರಿ ಎಂದರೆ ಸರಿ, ತಪ್ಪೆಂದರೆ ತಪ್ಪು. ಈ ಬಗೆಯ ಒಂದು ಭಾವನಾತ್ಮಕ ಅಂಧತ್ವದ ಗುಣವದು.

ಈ ಎರಡು ಬಗೆಗಳನ್ನು ಇಲ್ಲಿ ಪ್ರಸ್ತಾಪಿಸಲು ಕಾರಣ ಬಹಳಷ್ಟಿದೆ. ಪ್ರಸ್ತುತ ಹಾಗುಹೋಗುಗಳನ್ನು ಗಮನಿಸಿದಾಗ ಈ ಎರಡೂ ಬಗೆಯ ಗುಣಗಳು ಹಾಗು ಅದರಿಂದ ಸಮಾಜದ ಮೇಲೆ ಬೀಳಬಹುದಾದ ಪರಿಣಾಮಗಳನ್ನು ನಿಸ್ಸಂದೇಹವಾಗಿ ಊಹಿಸಬಹುದಾಗಿದೆ.

ಇಂದು ಕೋತಿ ತಾನು ಕೆಡುವುದಲ್ಲದೆ ಇಡೀ ವನವನ್ನೇ ಕೆಡಿಸಿತು ಅನ್ನುವ ಹಾಗೆ ಒಬ್ಬ ವ್ಯಕ್ತಿ ತನ್ನೊಳಗಿನ ನಂಬುಗೆ ಹಾಗು ವಿಚಾರಗಳನ್ನು ನನ್ನವರು ನಮ್ಮವರು ಎಂಬುವವರ ಮೇಲೆಲ್ಲಾ ಹರಿಸಲು ಆವಣಿಸುತ್ತಾನೆ. ನನ್ನವರು ನಮ್ಮವರು ಆಂದಮೇಲೆ ನನ್ನ ದಾರಿಯನ್ನೇ ಅನುಕರಿಸಬೇಕು ಎಂದು ಇಚ್ಛಿಸುತ್ತಾನೆ. ಆ ವಿಚಾರ ವ್ಯಕ್ತಿನಿಷ್ಠವಾಗಿರಬಹುದು, ವಸ್ತುನಿಷ್ಠವಾಗಿರಬಹದು ಅಥವಾ ಮತ್ತೇನೋ ಒಂದು ಆಗಿರಬಹುದು. ಉದಾಹರಣೆಗೆ ಪ್ರಸ್ತುತ ಆದ್ಯಾತ್ಮಿಕ ವಲಯದಲ್ಲಿ ಕಾಣಿಸಿಕೊಳ್ಳುವ , ದೇವರಿಗಿಂತ ಕೇವಲ ಇಂಚಷ್ಟೇ ಸಣ್ಣವರೋ ಅಥವಾ ಸರಿಸಮಾನರೋ ಅಥವಾ ಅವನಿಗಿಂತಲೂ ಮಿಗಿಲೋ ಎಂಬ ಒಂದು ಇಮೇಜ್ ಅನ್ನು ಅಂತಹವರು ತಾವಾಗಿಯೇ ಮೂಡಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಆತನ/ಆಕೆಯ ಹಿಂಬಾಲಕರೇ ಸಮಾಜದಲ್ಲಿ ಮೂಡಿಸಿಬಿಡುತ್ತಾರೆ.ಅಂತವರನ್ನು ಆದ್ಯಾತ್ಮಿಕ ಲೋಕದ ಉತ್ತುಂಗದಲ್ಲಿ ಕುರ್ಚಿಯಲ್ಲಿ ಕೂರಿಸಿಬಿಡುತ್ತಾರೆ. ಇಂದು ಮುಂದು ನೋಡದೆ ಅಪ್ಪ ಹಾಕಿದ ಆಲದ ಮರ ಎನ್ನುತ ಮನೆಯ ಇತರರೂ, ನೆರೆಹೊರೆಯವರು, ನೆಂಟರಿಷ್ಟರು ಸಹ ಅಂತಹ ಅನುಕರಣೆಯ ಅಯಸ್ಕಾಂತದೆಡೆ ಆಕರ್ಷಿತರಾಗುತ್ತಾರೆ. ಭಾವನಾತ್ಮಕ ಗುಣ ಇಲ್ಲಿ ತನ್ನ ಕೈಚಳಕವನ್ನು ತೋರಿಸುತ್ತದೆ. ಹೀಗೆ ಅಂದು ಒಂದೆರೆಡು ಕುಟುಂಬಗಳಿಗೆ ದೇವರಂತೆ ಭಾಸವಾಗುವ ಈ ವ್ಯಕ್ತಿ ಬರಬರುತ್ತಾ ಒಂದು ಊರಿಗೆ, ಜಿಲ್ಲೆಗೆ ಅಷ್ಟೇ ಏಕೆ ಇಡೀ ದೇಶಕ್ಕೆ ದೇವರಂತಾಗಿ ಬಿಡುತ್ತಾನೆ. ಆಗ ಅವನ ಪ್ರವಚನಗಳೇನು? ಹಿತವಚನಗಳೇನು? ಅಬ್ಬಬ್ಬಾ! ಹೀಗೆ ಮಹಾ ಮೇಧಾವಿಗಳೆನಿಸಿಕೊಂಡವರು ಮುಂದೊಂದು ಸಿಂಹಾಸನದ ಮೇಲೆ ಕೂತು ಹೊಲಸು ಕೆಲಸ ಮಾಡಿದಾಗ, ಜನರಲ್ಲ ಹಿಡಿ ಹಿಡಿ ಶಾಪವನ್ನಾಕುತ್ತ ಮನಬಂದಂತೆ ಉಗಿಯತೊಡಗಿದಾಗ, ಪೊಲೀಸ್ ತನಿಖೆಗಳು ಇನ್ನಿಲ್ಲದಂತೆ ನೆಡೆಯತೊಡಗಿದಾಗ ಮಾತ್ರ ಆತನನ್ನು ಎತ್ತಿ ಮೇಲಕ್ಕೆ ಕೂರಿಸಿದವರ ಮುಖ ಕಪ್ಪಾಗುವಂತೆ ಮಾಡುತ್ತದೆ. ಹಣಸಂಪಾದನೆಯ ಬಿಸಿನೆಸ್ ಮ್ಯಾನ್ ಆಗಿ ,ಲಲನೆಯರ ಸ್ಥಾನ ಹಾಗು ಮನವನ್ನೂ ಕುಲಗೆಡಿಸುವ ಕಾಮಿಯಾಗಿ, ರಾಜಕಾರಣಿಗಳ ಜುಟ್ಟನ್ನು ಹಿಡಿದು ತಾನೇ ಪರೋಕ್ಷವಾಗಿ ಅಧಿಕಾರ ನೆಡೆಸುವ ನೇತಾರನಾಗಿ, ಸಿನಿಮಾ ನಟನಾಗಿ, ಒಟ್ಟಿನಲ್ಲಿ ಇಹವೆಲ್ಲ ನಶ್ವರವೆನ್ನುವ ಆತ ಅದೇ ನಶ್ವರ ಲೋಕದಲ್ಲಿ ಕಪಟ ರಾಜನಂತೆ ಜೀವಿಸುತ್ತಾನೆ.

ಪ್ರಸ್ತುತ ಸುದ್ದಿಯಲ್ಲಿರುವ ಗುರ್ಮಿತ್ ರಾಮ್ ರಹೀಮ್ ಕೂಡ ಇಂತಹ ಅದ್ವಾನತೆಗೆ ಒಂದು ಉತ್ತಮ ಉದಾಹರಣೆ. ಅಲ್ಲದೆ ಹೀಗೆಯೇ ಹಿಂದೆಯೂ ಹತ್ತಾರು ನೂರಾರು ವ್ಯಕ್ತಿಗಳು ತಮ್ಮ ಸುಳ್ಳು ಪರದೆಯನ್ನು ಕಳಚಿ ಸಮಾಜದ ಮುಂದೆ ನಗ್ನವಾಗಿರುವ ಸಂದರ್ಭಗಳು ಅನೇಕ. ಹೀಗೆ ನಗ್ನವಾದ ನಂತರ ರಾಶಿ ರಾಶಿ ಶಪಿಸುವ ನಾವುಗಳು ಇದಕ್ಕೂ ಮೊದಲು ಅದೇ ವ್ಯಕ್ತಿತ್ವಗಳನ್ನು ಭಕ್ತಿಭಾವಗಳಿಂದ ಪೂಜಿಸುವಾಗ ಮಾತ್ರ ಎಳ್ಳಷ್ಟೂ ಅವರ ನಿಜಸ್ಥಿತಿಯ ಬಗ್ಗೆ ಯೋಚಿಸುವುದಿಲ್ಲ. ಆಗೆಲ್ಲ ನಮ್ಮ ವ್ಯಾವಹಾರಿಕ/ವೈಚಾರಿಕ ಜ್ಞಾನ ಸ್ಥಿರ ರಜೆಯಲ್ಲಿ ಮಜಾ ಮಾಡುತ್ತಿರುತ್ತದೆ ಹಾಗು ಕೇವಲ ಭಾವನಾತ್ಮಕ ಜ್ಞಾನ ನಮ್ಮನ್ನು ಆವರಿಸಿರುತ್ತದೆ.

ಇನ್ನು ಗೌರಿ ಲಂಕೇಶ್ ರವರ ಹತ್ಯೆಯ ನಂತರವೂ ಜರುಗುತ್ತಿರುವ ಹಲವು ಘಟನೆಗಳು ಹೆಚ್ಚಾಗಿ ಭಾವನಾತ್ಮಕ ನಿಲುವನ್ನೇ ತಾಳಿವೆ. ಎಡ, ಬಲ, ಕಸ, ಕಡ್ಡಿ ಎಂಬ ಹಳಸುಗಳನ್ನು ಬದಿಗಿಟ್ಟು ಕೇವಲ ಮಾನವೀಯ ದೃಷ್ಟಿಯಿಂದ ಈ ಕೃತ್ಯವನ್ನು ನೋಡಲಾಗದ ವ್ಯಕ್ತಿತ್ವಗಳು ಕಳೆದ ಒಂದು ವಾರದಿಂದ ಎಲ್ಲೆಡೆ ಕಾಣುತ್ತಿವೆ. ಕೃತ್ಯದ ತ್ವರಿತ ವಿಚಾರಣೆಗಿಂತ ಒಬ್ಬರು ಇನ್ನೊಬ್ಬರ ಮೇಲೆ ಕೆಸರೆರಚಿಗೊಳ್ಳುವುದರಲ್ಲೇ ದಿನಗಳು ಕಳೆಯುತ್ತಿವೆ. ನೀರಿಗೆ ಬಿದ್ದ ವ್ಯಕ್ತಿಯನ್ನು ಬದುಕಿಸುವುದ ಬಿಟ್ಟು ಸೆಲ್ಫ್ ಫೊಕ್ಲೆಯ್ಮ್ಡ್ ನ್ಯಾಯಾಲಯಗಳಂತಿರುವ ಟಿವಿ ಸ್ಟುಡಿಯೋಗಳ ಮುಂದೆ ನ್ಯಾಯಾಧೀಶರಂತೆ ವರ್ತಿಸುವ ಸಂಕುಚಿತ ಮನಸ್ಸುಗಳು ಹೀಜಲು ಬಾರದೆ ಕೇವಲ ಬಡಾಯಿ ಕೊಚ್ಚಿಕೊಳ್ಳುವ ವ್ಯಕ್ತಿತ್ವಗಳು.ಇಂತಹ ಚರ್ಚೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೊನೆಯಲ್ಲಿ ಮೂಡುವ ಅಂತಿಮ ಚೀರಾಟ ಹಾಗು ಶುರುವಲ್ಲಿ ಪ್ರಸ್ತಾಪಿಸಲಾಗುವ ವಿಷಯಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಅದು ಕೇವಲ ಒಬ್ಬರನೊಬ್ಬರು ನಿಂದಿಸುವ, ಹಣಕಿಸುವ ಕಾರ್ಯಕ್ರಮವಾಗಿರುತ್ತದೆಯೇ ವಿನಃ ಅಲ್ಲಿ ವಿಷಯದ ಅಳವನ್ನು ಮುಟ್ಟುವ ಗೋಜಿಗಂತೂ ಹೋಗುವ ಮಾತೇ ಇಲ್ಲ. ಇನ್ನು ಇಂತಹ ಕಚ್ಚಾಟಕೂಟಗಳನ್ನು ರಾಜ್ಯದ, ದೇಶದ ಘನಂದಾರಿ ಸುದ್ದಿವಾಹಿನಿಗಳು ಬಿತ್ತರಿಸುವ ಅಷ್ಟೂ ತುಣುಕುಗಳನ್ನು ತದೇಕಚಿತ್ತದಿಂದ ನೋಡುವ ಜನತೆಯ ಮೇಲೆ ಬೀರುವ ಪರಿಣಾಮವಾದರೂ ಹೇಳತೀರದ್ದು. ಕುಂಬಳಕಾಯಿ ಕಾಯಿ ಕಳ್ಳ, ಕಳ್ಳನಾದರೆ ಮಾತ್ರ ಹೆಗಲು ಮುಟ್ಟಿ ನೋಡಿಕೊಳ್ಳಬೇಕಲಲ್ಲವೇ?! ಹಾಗಾದರೆ ಸತ್ಯ ಹೊರಬರುವ ಮುನ್ನವೇ ಊಹಾಪೋಹಗಳ ಕಾಲಹರಣವೇಕೆ?.

ಇಲ್ಲಿ ಯಾರೋ ಒಬ್ಬ ನಾಯಕನೆನಿಸಿಕೊಂಡವನು ತಳಬುಡ ಇಲ್ಲದೆಯೇ ನೀಡುವ ಒಂದು ಹೇಳಿಕೆ ಅದು ಸರಿಯೋ ತಪ್ಪೋ ಎಂದು ಪರೀಕ್ಷಿಸುವ ಗೋಜಿಗೂ ಹೋಗದೆ, ಅದೇ ವಾದವನು ಮೊಂಡವಾದವನ್ನಾಗಿ ಮಾಡಿಕೊಂಡು, ಬಾಯಿಗೆ ಬಂದಂತೆ ಅರಚಾಡಿ ತಮ್ಮ ರಾಜಕೀಯ ಲಾಭವನ್ನು ಮಾಡಿಕೊಳ್ಳುವ ಹಲವರನ್ನು ಹಿಂಬಾಲಿಸುವ ಅಂಧರ ಗುಣವೂ ಸಹ ಭಾವನಾತ್ಮಕವಾದದ್ದು. ಇಂದು ಜರುಗುವ ಪ್ರತಿಯೊಂದು ವಿದ್ಯಮಾನಗಳು ಜನಮಾಸದೊಳಗೆ ಸೇರುವಾಗ ಅದೆಷ್ಟರ ಮಟ್ಟಿಗೆ ರೂಪಾಂತರವಾಗಿರುತ್ತದೆ ಎಂದರೆ ಮುಂದೊಂದು ದಿನ ಗೌರಿಯ ಹಂತಕರು ಸೆರೆಸಿಕ್ಕಿ ತಾವೇ ಆ ಕೊಲೆಯನ್ನು ಮಾಡಿರುವವರು ಎಂದರೂ ಈ ಒಂದು ಗುಂಪು ಅದನ್ನು ನಂಬದು. ಬದಲಾಗಿ ತಮ್ಮ ನಾಯಕ ಹೇಳಿದ್ದ ವ್ಯಕ್ತಿಗಳೇ ಅವನನ್ನು ಕೊಂದಿರುವರು ಎಂದೇ ವಾದಿಸುತ್ತಾರೆ.

ಯದ್ಯದಾಚಾರತಿ ಶ್ರೇಷ್ಠಸ್ತತ್ತ ದೇವೇತರೋ ಜನಃ ।
ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ

ಭಗವತ್ಗೀತೆಯ ಮೇಲಿನ ಶ್ಲೋಕ ಅಕ್ಷರ ಸಹ ಇಲ್ಲಿ ನಿಜವೆನಿಸುತ್ತದೆ. ನಾಯಕನೆನಿಸಿಕೊಂಡವನು ಅದೇನನ್ನು ಅನುಸರಿಸುವನೋ ಅಥವಾ ಪ್ರವಚನ ಮಾಡವುವನೋ ಇತರರೂ ಸಹ ಅದನ್ನು ಹಾಗೆಯೇ ಪಾಲಿಸುವರು. ಆದ ಕಾರಣ ನಾಯಕನಾದವನ ನಡೆ ಹಾಗು ನುಡಿ ಇತರರಿಗೆ ಮಾದರಿಯಾಗಿರಬೇಕು. ಆದರ್ಶದಾಯಕವಾಗಿರಬೇಕು.



ಅದೇನೆ ಇರಲಿ, ಮಾನವ ಹೆಚ್ಚಾಗಿ ತನ್ನ ಭಾವನಾತ್ಮಕ ವಿಚಾರಗಳಿಂದ ಗ್ರಹಿಸಿಕೊಳ್ಳುವ ವಿಚಾರಗಳನ್ನು ವ್ಯವಹಾರಿಕ ನೆಲೆಯಲ್ಲೂ ಒರೆ ಹಚ್ಚಿನೋಡಬೇಕು. ತಮ್ಮ ತನ, ತಮ್ಮ ಬುದ್ದಿ ಎಂಬುದಿರುವುದು ಅದಕ್ಕಾಗಿಯೇ ಅಲ್ಲವೇ?. ಪ್ರಸ್ತುತ ಸಾಮಾಜಿಕ ಜಾಲತಾಣಗಳ ಹಿನ್ನಲೆಯಲ್ಲಿ ಭಾರತದಂತಹ ದೇಶವೊಂದು ತನ್ನ ತನವನ್ನು ಕಳೆದುಕೊಳ್ಳದೆ ಬೆಳೆಯಬೇಕಾದರೆ ಅಲ್ಲಿ ಬಲವಾದ ವೈಚಾರಿಕ ನಿಲುವು ಅತ್ಯಗತ್ಯ. ಫೇಸ್ ಬುಕ್, ಟ್ವಿಟ್ಟರ್, ವಾಟ್ಸ್ ಆಪ್ ಗಳಲ್ಲಿ ಬರುವ ಪ್ರತಿಯೊಂದು ಸುದ್ದಿಗಳನ್ನು/ಹೇಳಿಕೆಗಳನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಂಬುವ ಜಾಯಮಾನವನ್ನು ಕ್ಷೀಣಿಸಿಕೊಳ್ಳಬೇಕು. ಇಲ್ಲವಾದರೆ ಇನ್ನೂ ಲಕ್ಷಾಂತರ ರಾಮ್ ರಹೀಮರು ಈ ನೆಲದಲ್ಲಿ ಹುಟ್ಟಬಹುದು ಇಲ್ಲವೇ ದೇಶದ ಅದೆಷ್ಟೋ ಕೋಟಿ ಜನರೆಲ್ಲರೂ ಗೌರಿಯ ಹಂತಕರಾಗಬಹುದು!

Friday, September 8, 2017

ವಿಶ್ವದ ದೊಡ್ಡಣ್ಣನಾಗುವ ಕನಸನೊತ್ತ ಘಳಿಗೆಯಲ್ಲಿ ...

ಕಳೆದ ಆಗಸ್ಟ್ 31ರ ಸಂಜೆ ದೇಶದ ವಿತ್ತ ವಲಯದಲ್ಲಷ್ಟೇ ಅಲ್ಲದೆ ಭಾಗಶಃ ಇತರ ಎಲ್ಲಾ ವಲಯಗಳಲ್ಲೂ ಹೆಚ್ಚಾಗಿ ಚರ್ಚೆಗೊಳಗಾದ ವಿಷಯ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದರದ ಬಗೆಗೆ. ಕಾರಣ ಅಂದು ‘ಸೆಂಟ್ರಲ್ ಸ್ಟಾಟಿಸ್ಟಿಕಲ್ ಆರ್ಗನೈಜೇಷನ್’ (CSO) ತಿಳಿಯಪಡಿಸಿದ ಅಂಕಿಅಂಶಗಳ ಪ್ರಖಾರ 2017-18 ನೇ ಸಾಲಿನ ಮೊದಲ ತ್ರೈಮಾಸಿಕದ (ಏಪ್ರಿಲ್ ನಿಂದ ಜೂನ್ ವರೆಗೆ) ಜಿಡಿಪಿಯ ದರ 5.7%. ಈ ದರ ಕಳೆದ ತ್ರೈಮಾಸಿಕ್ಕೆ, ಅದರ ಮೊದಲಿನ ತ್ರೈಮಾಸಿಕ ಅಷ್ಟೇ ಏಕೆ ಕಳೆದ ಮೂರು ವರ್ಷಗಳಲ್ಲೇ ಅತಿ ಕಡಿಮೆ ದರವೆನಿಸಿಕೊಂಡಿದೆ! ಪರಿಣಾಮ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ, ಅವುಗಳ ದೂರದೃಷ್ಟಿಯ ಬಗೆಗೆ ಹಲವರಲ್ಲಿ ಸಂಶಯ, ಗೊಂದಲ ಹಾಗು ಹತಾಶೆಯನ್ನು ಹುಟ್ಟಿಸಿವೆ. ಬೆಂಕಿಯ ಮೇಲೆ ತುಪ್ಪ ಸುರಿದಂತೆ ಕೇಂದ್ರ ಹಣಕಾಸು ಮಂತ್ರಿಗಳೂ ತಮ್ಮ ಪತ್ರಿಕಾಗೋಷ್ಠಿಯಲ್ಲಿ 'ಪ್ರಸ್ತುತ ಜಿಡಿಪಿ ದರ ಕಳವಳಕಾರಿಯಾಗಿದ್ದೂ ಸರ್ಕಾರದ ಮುಂದೆ ಸವಾಲು ಎದುರಾಗಿದೆ' ಎಂಬ ಹೇಳಿಕೆಯ ನಂತರವಂತೂ ಈ ವಿಷಯದ ತೀವ್ರತೆ ಇನ್ನೂ ಹೆಚ್ಚಾಗಿದೆ.

ಜಿಡಿಪಿ ಎಂಬುದು ದೇಶದಲ್ಲಿ ವಾರ್ಷಿಕವಾಗಿ ಉತ್ಪತ್ತಿಯಾಗುವ ಎಲ್ಲಾ ಅಂತಿಮ ಸರಕುಗಳ (ಟಿವಿ, ಫ್ರಿಡ್ಜ್, ಬಸ್ಸು ಕಾರು, ಬಟ್ಟೆ, ಸೋಪು, ಬಿಸ್ಕತ್ತು ಇತ್ಯಾಗಿ ಇತ್ಯಾದಿ) ಒಟ್ಟು ಮೊತ್ತ ಎನ್ನಬಹುದು. ಕಳೆದ ಬಾರಿಯ ದೇಶದ ಒಟ್ಟು ಜಿಡಿಪಿಯ ಮೊತ್ತ ಸುಮಾರು 150 ಲಕ್ಷ ಕೋಟಿ ರೂಪಾಯಿಗಳ ಆಸುಪಾಸು. ಈ ಮೊತ್ತದ ಮೂಲಕ ಇಡೀ ವಿಶ್ವದ ಜಿಡಿಪಿಯ ಬೆಳವಣಿಗೆಯಲ್ಲಿ ದೇಶದ ಕೊಡುಗೆ ಸುಮಾರು 3% ನಷ್ಟಿದ್ದಿತು. ಇದು ಭಾರತವನ್ನು ವಿಶ್ವದಲ್ಲೇ ಏಳನೇ ಅತಿ ಹೆಚ್ಚು ಜಿಡಿಪಿಯ ದೇಶವನ್ನಾಗಿಸಿತ್ತು. ಇನ್ನು ಅಮೇರಿಕ ಸುಮಾರು 1250 ಲಕ್ಷ ಕೋಟಿ ರೂಪಾಯಿಗಳ ಒಟ್ಟು ಜಿಡಿಪಿಯ ಮೊತ್ತದೊಂದಿದೆ ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದಿರಿಸಿಕೊಂಡಿತ್ತು.

ಇನ್ನು ಆಯಾ ವರ್ಷದ ಜಿಡಿಪಿಯ ಮೊತ್ತವನ್ನು ಕಳೆದ ವರ್ಷದ ಅಥವಾ ತ್ರೈಮಾಸಿಕದ ಮೊತ್ತಕ್ಕೆ ಹೋಲಿಸಿದರೆ ನಮಗೆ ಸಿಗುವ ಶೇಕಡಾವಾರುವನ್ನೇ 'ಜಿಡಿಪಿ ದರ' ಎನ್ನಲಾಗುತ್ತದೆ. ಕಳೆದ ವರ್ಷ ಇದೆ ತಿಂಗಳಿನಲ್ಲಿ ದೇಶದ ತ್ರೈಮಾಸಿಕ ಜಿಡಿಪಿ ದರ 7.9% ರ ಆಸುಪಾಸಿನಲ್ಲಿದ್ದಿತು. ಆದರೆ ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ಅದು 5.7 % ನಷ್ಟಾಗಿದೆ. ಪ್ರಸ್ತುತ ಬೆಳವಣಿಗೆಯ ಕುಂಠಿತ ದರ ದೇಶದ ಇತಿಹಾಸದಲ್ಲೇ ಮೊದಲೇನಲ್ಲ. ಈ ಮೊದಲೂ ಎಪ್ಪತ್ತು ಹಾಗು ಎಂಬತ್ತರ ದಶಕದ ಹಲವು ವರ್ಷಗಳಲ್ಲಿ ಜಿಡಿಪಿಯ ದರ ಶೂನ್ಯಕ್ಕಿಂತಲೂ ಕಡಿಮೆ ಅಂದರೆ ಋಣಾತ್ಮಕವಾಗಿರುವುದೂ ಉಂಟು. ಆದರೆ ಕಳೆದ ಹಲವು ತ್ರೈಮಾಸಿಕಗಳಿಂದ ಏರುತ್ತಲೇ ಅಥವಾ ಬಾಗಶಃ ಅಚಲವಾಗಿದ್ದ ದರ ಒಮ್ಮಿಂದೊಮ್ಮೆಲೆ ಕುಸಿಯಲು ಕಾರಣವೇನು? ನೋಟ್ ಬ್ಯಾನ್, ಜಿಎಸ್ಟಿ, ಸಾಲಮನ್ನಾ ಎಂಬ ಮತ್ತೊಂದು ಮಗದೊಂದು ಯೋಜನೆಗಳನ್ನು ರಾತ್ರಿ ಕಳೆದು ಹಗಲಾಗುವುದರೊಳಗೆ ಜಾರಿಗೊಳಿಸಿ, ಊರೆಲ್ಲ ಡಂಗೂರ ಒಡೆಸಿ, ಕೊನೆಗೆ ಜನರ ಮುಂದೆ ತಲೆ ಕೆರೆದುಕೊಳ್ಳುವಂತಹ ನಿರ್ಧಾರಗಳು ಪ್ರಸ್ತುತ ಅಂಕಿಅಂಶಗಳ ಹಿನ್ನಲೆಯೊಂದಿಗೆ ದೇಶಕ್ಕೆ ಅದ್ಯಾವ ಬಗೆಯಲ್ಲಿ ಪೂರಕವಾಗಲಿವೆ ಎಂಬುದೇ ಪ್ರೆಶ್ನೆ.

ನೋಟು ಅಮಾನಿಕರಣ ದೇಶ ಕಂಡ ಹಲವು ದಿಟ್ಟ ನಿರ್ಧಾರಗಳಲ್ಲೊಂದು. ಪ್ರಸ್ತುತ ಜಾರಿಯಲ್ಲಿದ್ದ ಕಪ್ಪು ಹಣವನ್ನು ಮಟ್ಟ ಹಾಕುವುದೇ ಈ ನಿರ್ಧಾರದ ಹಿಂದಿದ್ದ ಬಹು ಮುಖ್ಯ ಚಿಂತನೆ. ಆದರ ಪ್ರಕಾರ ದೇಶದಲ್ಲಿ ಅಂದು ಜಾರಿಯಲ್ಲಿದ್ದ 15.44 ಲಕ್ಷ ಕೋಟಿ ರೂಪಾಯಿಗಳಲ್ಲಿ (ಕೇವಲ 500 ಹಾಗು 1000 ಮುಖಬೆಲೆಯ ನೋಟುಗಳ ಒಟ್ಟು ಮೊತ್ತ) ಒಟ್ಟು ಕಪ್ಪು ಹಣದ ಮೊತ್ತ ಸುಮಾರು ನಾಲ್ಕು ಲಕ್ಷ ಕೋಟಿಯಷ್ಟಾಗಿದ್ದಿತು(ಕೇಂದ್ರ ಸರ್ಕಾರದ ಪ್ರಕಾರ). ಹಾಗಾಗಿ ನೋಟು ಅಮಾನಿಕರಣದಿಂದ ದೇಶದ ಜೋಳಿಗೆಗೆ ಬಂದು ಸೇರಬೇಕಿದ್ದ ಮೊತ್ತ ಅಂದಾಜು ಹನ್ನೊಂದರಿಂದ ಹನ್ನೆಡರೆದು ಲಕ್ಷ ಕೋಟಿ ರೂಪಾಯಿಗಳು. ಆದರೆ ವಿಪರ್ಯಾಸವೊ, ಅವಿವೇಕಿತನವೋ ಅಥವಾ ಬಹುಜನರ ಬಹುಬಗೆಯ ಕೈಚಳಕದ ಫಲವೋ ಸುಮಾರು 99% ಹಣ ದೇಶದ ಜೋಳಿಗೆಗೆ ಇಂದು ವಾಪಸ್ಸುಬಿದ್ದಿದೆ! ಅರ್ತಾಥ್ ದೇಶದಲ್ಲಿ ಅಂದು ಇದ್ದ ಅಷ್ಟೂ ಹಣವು ಬಿಳಿಯ ಹಣವೇ ಆಗಿದ್ದಿತು ಎಂದರೆ ನಂಬಬಹುದೇ? ಹಾಗಾದರೆ ಸರ್ಕಾರದ ಅಂಕಿ ಅಂಶಗಳು ಅಂದು ಆಧಾರರಹಿತವಾಗಿದ್ದವೇ?

ನೋಟು ಅಮಾನ್ಯದಿಂದ ದೇಶದ ಬೊಕ್ಕಸಕ್ಕೆ ಆಗಿರುವ ನಷ್ಟ ಹಲವು ಸಾವಿರ ಕೋಟಿ ರೂಪಾಯಿಗಳು. ದೇಶದ ನಿರ್ಮಾಣ ವಲಯ ನೋಟು ಅಮಾನಿಕರಣದಿಂದ ತತ್ತರಿಸಿದ ಅತಿ ದೊಡ್ಡ ವಲಯ. ಅತಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದ ಈ ವಲಯವನ್ನು ಸದ್ಯಕಂತೂ ಶಕ್ತಿ ಮೀರಿ ಎಳೆದರೂ ಮೇಲೇಳುವುದು ಕಷ್ಟಸಾಧ್ಯ. ಇಂತಹ ಒಂದು ವಲಯದ ದಿಢೀರ್ ಕುಸಿತ ಜಿಡಿಪಿ ದರದ ಕುಂಠಿತದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಅಲ್ಲದೆ ದೇಶದ ಉತ್ಪಾದನಾ ವಲಯವೂ ಇಂತಹದ್ದೇ ಬಹುಮುಖ ಇಳಿಕೆಯನ್ನು ಇಲ್ಲಿ ಕಂಡಿದೆ. ಕಳೆದ ವರ್ಷ ಇದೆ ಸಮಯದಲ್ಲಿ ಸುಮಾರು 10.2% ನಷ್ಟಿದ್ದ ಈ ವಲಯದ ಅಭಿವೃದ್ಧಿಯ ದರ ಇಂದು 1.2% ರಷ್ಟರಲ್ಲಿ ಬಂದು ನಿಂತಿದೆ ಎಂದರೆ ನಂಬಲಸಾಧ್ಯ. ಇದಕ್ಕೆ ಪೂರಕವೆಂಬಂತೆ ನೋಟು ಅಮಾನ್ಯದ ಮೊದಲು 7.5% ರಷ್ಟಿದ್ದ ಜಿಡಿಪಿಯ ದರ ನಂತರದ ಕೆಲವೇ ದಿನಗಳಲ್ಲಿ 6.1% ರಷ್ಟಾಗಿದ್ದಿತು. ಕಳೆದ ಜುಲೈನ ಜಿಎಸ್ಟಿ ಜಾರಿಯ ನಂತರ ಉಂಟಾಗಿರುವ ಪರಿಣಾಮ ಮುಂದಿನ ತಿಂಗಳ ಜಿಡಿಪಿಯ ದರದಲ್ಲಿ ವ್ಯಕ್ತವಾಗಲಿದೆ. ಹಾಗು ಈ ದರ ಇನ್ನೂ ಹೆಚ್ಚು ಕ್ಷೀಣಿಸುವ ಸಂಭವವೇ ಹೆಚ್ಚು! ಇವುಗಳೆಲ್ಲದರ ಹಿನ್ನಲೆಯಲ್ಲಿ ಮೇಲೆದ್ದಿರುವ ಇಂತಹ ಹಲವು ಪ್ರೆಶ್ನೆಗಳಿಗೆ ಕೇಂದ್ರ ಸಮಜಾಯಿಷಿಕೊಡಬೇಕಿದೆ.

ಇಂದು ವಿಶ್ವದ ಇತರೆಲ್ಲ ದೇಶಗಳನ್ನೂ ಹಿಂದಿಕ್ಕಿ ಅತಿ ದೊಡ್ಡ ಆರ್ಥಿಕತೆಯಾಗುವ ಕನಸನ್ನು ಹೊತ್ತಿರುವ ಭಾರತ ಈ ರೀತಿಯ ಇಳಿಮುಖವಾದ ಬೆಳವಣಿಗೆಯ ದರವನ್ನು ಹೊತ್ತು ಅಂತಹ ಗುರಿಯೊಂದನ್ನುಸಾಧಿಸಲು ಸಾಧ್ಯವುಂಟೆ? ಜಿಡಿಪಿ ಎಂಬುದು ಒಂದು ದೇಶದ ಜನತೆಯ ಜೀವನಮಟ್ಟವನ್ನು(Standard Of Living) ಅಳೆಯುವ ಬಹುಮುಖ್ಯ ಮಾಪನಗಳಲ್ಲೊಂದು. ಇಂತಹ ಒಂದು ಮಾಪನದ ಸಂಖ್ಯ ಸೂಚಿಗಳು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರಲೇಬೇಕು. ಭಾರತದನಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗಂತೂ ಇದರ ಅಂಕಿ ಅಂಶಗಳ ಇಳಿಮುಖವಾಗುವಿಕೆ ತೀರಾ ಆತಂಕಕರ. ಹಿಂದೂ ಮುಂದೂ ನೋಡದೆ ಸಿನಿಮೀಯ ರೀತಿಯಲ್ಲಿ ಒಂದರ ಮೇಲೊಂದು ಕಾನೂನುಗಳನ್ನು ದೇಶದ ಜನತೆಯ ಮೇಲೇರಿಸುವ ಸರ್ಕಾರಗಳು ತಮ್ಮ ಉದ್ದೇಶ ಅದೆಷ್ಟೇ ಸಾತ್ವಿಕವಾಗಿದ್ದರೂ ಜಾರಿ ತರುವ ಮೊದಲು ಹಲವು ಬಾರಿ ಒರೆಹಚ್ಚಿ ಪರೀಕ್ಷಿಸಿ ನೋಡಬೇಕು. ಅಲ್ಲದೆ ಎಲ್ಲಿಯವರೆಗೂ ನಾವುಗಳೂ ಸಹ ಏರಲಾಗುವ ಪ್ರತಿಯೊಂದು ಕಾಯಿದೆ ಕಾನೂನುಗಳನ್ನು ಪ್ರೆಶ್ನಿಸುವ, ಪರೀಕ್ಷಿಸುವ ಗುಣವನ್ನು ಬೆಳೆಸಿಕೊಳ್ಳದೆ ಗುಂಪು ಸಮ್ಮತಿಸಿದಂತೆ ತಲೆಯಾಡಿಸುವ ಜಾಯಮಾನದವರಾಗಿರುತ್ತೇವೆಯೋ ಅಲ್ಲಿಯವರೆಗೂ ಗೆದ್ದೂ ಸೋತಂತೆ. ಅಲ್ಲದೆ ದೇಶದ ಅಭಿವೃದ್ಧಿ ಕೇವಲ ಜನತೆಯ ಮೇಲೆ ತೆರಿಗೆಯನ್ನೊರಿಸುವುದೇ ಆಗಿದೆ ಎಂಬ ಮನಸ್ಥಿತಿ ದೂರವಾಗಿ ಕಸದಿಂದಲೂ ರಸ ತೆಗೆಯುವಂತಹ ಯೋಜನಾಲೋಚನೆಗಳು ಸರ್ಕಾರಗಳ ಕಾರ್ಯಸೂಚಿಯಲ್ಲಿ ಮೂಡಬೇಕು. ಮುಂದಿನ ದಿನಗಳಿಗೆ ಹಾಕಿಕೊಂಡಿರುವ ಗುರಿಯನ್ನು ಅಂದುಕೊಂಡಂತೆಯೇ ಸಾಧಿಸಿ ತೋರಿಸಲೂಬೇಕು.





Tuesday, September 5, 2017

ಕಥೆ : ಯಾವೂರು,ಯಾರ ಮನೆ, ಹೋಗಲಿ ಕೊನೆ ಪಕ್ಷ ನಿನ್ನ ಹೆಸರೇನಯ್ಯ ಅಂತಾನೂ ಕೇಳಲಿಲ್ಲ ಆಸಾಮಿ…:)

ಅಲ್ಲಾ, ಜಿಗ್ರಿ ಒಬ್ಬ ಡ್ರಾಪ್ ಕೊಡ್ತಿನಿ ಬಾರೋ ಅಂತ ಅಷ್ಟ್ ಕರ್ದ. ಆಪರೂಪಕೊಮ್ಮೆ ಬರೋ ಬೇಸಿಗೆ ಮಳೆ ತರ ಯಾವಾಗ್ಲಾದ್ರೂ ಒಮ್ಮೆ ಕರುಣೆ ಬಂದು ಆಫೀಸಿನ ಯಾರಾದರೊಬ್ಬ ಪುಣ್ಯಾತ್ಮ ಡ್ರಾಪ್ ಕೇಳ್ದ ಚಾನ್ಸ್ ಮಿಸ್ ಮಾಡ್ಕೊಂಡು, ಮೊಬೈಲು, ಪರ್ಸು, ಲ್ಯಾಪ್ಟಾಪ್ ಅಂತಷ್ಟೇ ಅಲ್ಲದೆ ಇನ್ನು ಯಾವ್ಯಾವ ಜಾಗದ ಮೇಲೋ ಏಕಾಗ್ರತೆ, ರಕ್ಷಣೆ ಎರಡನ್ನು ಮಾಡಿಕೊಳ್ಳುತ್ತಾ ಬಿಎಂಟಿಸಿಯ ಕಿಕ್ಕಿರಿದ ಅಮಾಯಕ ಬಸ್ಸಿನಲ್ಲಿ ಹತ್ತು ಕಿಲೋಮೀಟರ್ ಸಾಗುವ ಯಾತನೆಗೆ ಒಂದು ದಿನಾನಾದ್ರೂ ಸಿಗೋ ಬ್ರೇಕಿಗೆ ಯಾಕೆ ಮಣ್ಣೆರೆಚಿಕೊಂಡೆ ಎಂದನಿಸತೊಡಗಿತ್ತು. 'ಮದ್ವೆ ಆಗಿ ಹದ್ನಾರು ವರ್ಷ ಆಯ್ತು, ಒಂದ್ ಕಾರು, ಅಟ್ಲೀಸ್ಟ್ ಒಂದ್ ಬೈಕಾದ್ರು ತಗೋಣೊ ಯೋಗ್ಯತೆ ಇಲ್ಲ' ಎಂಬ ಡೈಲಾಗ್ ಅನ್ನು ಮೊದಲೆಲ್ಲ ತಲೆ ತಗ್ಗಿಸಿ ಹೇಳ್ತಿದ್ದ ನನ್ನಾಕೆ ಇಂದು ಅದೇ ಡೈಲಾಗ್ ನನ್ನು ನಾನೇ ತಲೆ ತಗ್ಗಿಸೋ ಹಾಗೆ ಅರಚತ್ತಾಳೆ. ಹೆಸ್ರ ಪಕ್ಕಕೆ ಮಾರಮ್ಮ ಅಂತ ಹೆಸ್ರ್ ಇಡಬೇಕು, ಬಜಾರಿ! ಎಂದು ಅಂದುಕೊಳ್ಳುತ್ತಿರಬೇಕಾದರೆ …

ಉದ್ದ ಕೂದಲನ್ನು ನೀಳವಾಗಿ ಕಟ್ಟಿ, ಹಣೆಯ ಮೇಲೊಂದು ಚಿಕ್ಕದಾದ ಹಾಗು ಚೊಕ್ಕವಾದ ಬಿಂದಿಗೆಯನಿಟ್ಟು, ಉಬ್ಬುಗಳೆರಡನ್ನು ಗಂಟಿಕ್ಕಿಕೊಂಡು, ಇಡೀ ಸಿಟಿಯ ಕಳವಳವೆಲ್ಲವೂ ಈಕೆಯ ಅಮಾಯಕ ಕಣ್ಣುಗಳ ಒಳಗೇನೆ ಮನೆ ಮಾಡಿಕೊಂಡಿವೆಯೋ ಎಂಬಂತೆ ಅತ್ತ ಕಡೆಯಿಂದ ಬರುವ ಒಂದೊಂದೇ ಬಸ್ಸುಗಳನ್ನು ಅವುಗಳು ಬಂದು, ನಿಂತು, ಒಳಗಿದ್ದ ನರಮಾನವರನ್ನೆಲ್ಲ ಒರ ಕಕ್ಕಿ, ಮತ್ತಷ್ಟು ಜನರನ್ನು ಒಳನುಂಗಿ, ಕೊಂಚ ವಿರಮಿಸಿ, ಮತ್ತದೇ ದಾರಿಯಲ್ಲಿ ಸಾಗುವವರೆಗೂ ನೋಡಿ, ಪುನ್ಹ ಮತ್ತೊಂದು ಬಸ್ಸಿನ ಬೋರ್ಡಿನಲ್ಲಿ ತಾನೊಗುವ ಏರಿಯದ ಹೆಸರನ್ನು ಹುಡುಕುತ್ತಿದ್ದಳು ಆಕೆ. ಗುಲಾಬಿ ಬಣ್ಣದ ಸೀರೆಯನುಟ್ಟು, ಕೆಂಪೆನಿಸುವ ತುಟಿಗಳನ್ನು ಆಗೊಮ್ಮೆ ಈಗೊಮ್ಮೆ ಮುಂಚಾಚಿ ಎಡಕ್ಕೂ ಬಲಕ್ಕೂ ತಿರುಗಿಸುತ್ತಾ, ಬಲ ಹೆಗಲ ಮೇಲಿದ್ದ ವ್ಯಾನಿಟಿ ಬ್ಯಾಗಿನ ಪಟ್ಟಿಯನ್ನು ಸರ ಸರನೆ ಹಿಡಿದೆಳೆಯುತ್ತಿದ್ದಳು. ಥೇಟ್ ಕಬಿ ಅಲ್ವಿದಾ ನಾ ಕೆಹನಾ ಚಿತ್ರದ ರಾಣಿ ಮುಖರ್ಜಿ! ಕಾಲೇಜಿನ ಪುಂಡರಂತೆ ಬಿಟ್ಟ ಕಣ್ಣು ಮುಚ್ಚದೆಯೇ ಅವಳನ್ನೇ ಗುರಾಹಿಸುತಿದ್ದ ನನ್ನನ್ನು ಅಕ್ಕ ಪಕ್ಕದವರು ಕಕ್ಕಾಬಿಕ್ಕಿಯಾಗಿ ನೋಡಿದರು. ‘ಕ್ಯೋ ಚಲ್ತಿ ಹೈ ಪವನ್...’ ಹಾಡುಗಳನ್ನು ತುಟಿಗಳು ಗುನುಗುತ್ತಿದ್ದವು.

ಹದಿಮೂರು ವರ್ಷ ಆಯ್ತು! ಇದೇ ಜಡೇ, ಅವೇ ಕಣ್ಣುಗಳು. ಗೆಳತಿಯರೊಟ್ಟಿಗೆ ಕೂಡಿ ಊರಿನ ಬಸ್ ಸ್ಟ್ಯಾಂಡಿನಲ್ಲಿ ನಿಂತ್ರೆ ಹುಡುಗರ ಕಣ್ಣೆಲ್ಲ ಇವಳ ಮೇಲೆಯೇ. ‘ಓಂ..’ ಮೂವಿ ಸ್ವಲ್ಪ ಮೊದ್ಲೇ ರೆಲೀಸ್ ಆಗಿರ್ತಿದ್ರೆ ಅವತ್ತು ಇವಳನ್ನ ಹಾಗೆ ಗುರಾಯಿಸ್ತಿದ್ದ ಹುಡುಗ್ರೆಲ್ಲಾರಿಗೂ ನಾಲ್ಕ್ ನಾಲ್ಕು ಬಾರ್ಸಿ ಕಳ್ಸ್ತೀದ್ದೆ. ಆದ್ರೆ ಇವ್ಳು ಏನ್ ಕಮ್ಮಿನಾ? ಹುಡುಗರು ನೋಡ್ತಾ ಇದ್ದಾರೆ ಅಂತ ಗೊತ್ತಿದ್ರೂ ಅಲ್ಲೇ ನಿಲ್ತಿದ್ಲು! ಊರಿನ ಬಸ್ಸು ಬಂದ್ರೂ ಹತ್ತದೆ ಇದೆ ರೀತಿ ತುಟಿಗಳನ್ನ ಮುಂದಕ್ಕೆ ಮಾಡುತ್ತಾ, ಪಕ್ಕದಲ್ಲಿರೋ ಗೆಳತಿಯರ ಕಿಸಿಕಿಸಿ ಅನ್ನೋ ಸದ್ದಿಗೆ ಬೇಕೂ ಬೇಡವೋ ಎಂಬಂತೆ ಮುಗುಳ್ ನಗುತ್ತಾ ಓರೆ ಕಣ್ಣಿನಲ್ಲಿ ನನ್ನ ನೋಡ್ತಾ ಇದ್ಲು!

ಇವಾಗ್ಲೂ ಹಾಗೆ ನೋಡ್ತಾ ಇದ್ದಾಳೆ!! ನನ್ನನೇ. ಅರೆ..ರೆ..ರೆ..... ಮತ್ತೆ ಆಕಡೆ ತಲೆ ಎತ್ತಿ ನೋಡೋ ಧೈರ್ಯ ಮಾತ್ರ ದೇವರಾಣೆ ಇಲ್ಲ. ಪುಕ್ಕಲು ಬಡ್ಡಿಮಗ ನಾನು.
ಅಂತೂ ಇದ್ದಬದ್ದ ಧೈರ್ಯವನ್ನೆಲ್ಲ ಒಟ್ಟುಗೂಡಿಸಿಕೊಂಡು ಅತ್ತ ಕಡೆ ಕಣ್ಣಾಯಿಸಿದೆ. ಆಕೆ ತನ್ನ ವ್ಯಾನಿಟಿ ಬ್ಯಾಗಿನಿಂದ ಫೋನ್ ಅನ್ನು ತೆಗೆದು ನೋಡತೊಡಗಿದಳು. ಇತ್ತ ಕಡೆ ನನ್ನಾಕೆಯ ಫೋನು ರಿಂಗಾಯಿಸಿತು. ಶಿವ ಪೂಜೆಯ ನಡುವೆ ಕರಡಿ ಎಂದು ಗೊಣಗುತ್ತಾ ಇನ್ನೇನು ಫೋನ್ ರಿಸೀವ್ ಮಾಡ್ಬೇಕು ಅನ್ನೋವಷ್ಟರಲ್ಲಿ ಅದು ತಂತಾನೆ ಕಟ್ಟಾಯಿತು. ಬೇಸಿಗೆಯಲ್ಲಿ ಮತ್ತೊಮ್ಮೆ ಮಳೆಯಾದ ಅನುಭವವಾಗಿ, 'ಆಹಾ...ಒಳ್ಳೆದಾಯಿತು' ಎನ್ನುತಾ ಫೋನ್ ಅನ್ನು ಜೇಬಿನೊಳಗೆ ಇರಿಸಿದೆ.
ಬಸ್ಸುಗಳ ಹಿಂದೆ ಬಸ್ಸುಗಳು. ಆಕೆಯ ಬಸ್ಸು ಇನ್ನು ಬರಲಿಲ್ಲ. ನನ್ನ ಖುಷಿಗಂತೂ ಪಾರವೇ ಇರಲಿಲ್ಲ.

*******
ಕಾಲೇಜಿನ ದಿನಗಳೇ ಹಾಗೆ. ಯಾವಾಗ ಪ್ರೀತಿ ಹುಟ್ಟುತ್ತೋ, ಅದ್ಯಾವಾಗ ಚಿಗುರುತ್ತೋ, ತಿಳಿದವ ಮಾತ್ರ ಬುದ್ದಿಜೀವಿ! ಬಸ್ ಸ್ಟ್ಯಾಂಡಿನಲ್ಲಿ ನಿಂತ್ಕೊಂಡೆ, ಬರಿ ಕಣ್ಣುಗಳನ್ನೇ ಮಾತಿಗಿಳಿಸಿ, ಎರಡು ವರ್ಷಗಳ ನಂತರ ಪ್ರೀತಿಯ ಪದಗಳನ್ನು ಅವಳಿಗೆ ಉಸುರಿದೆ. ಅವಳೋ ನಕ್ರೆ ಕಿ ರಾಣಿ. ಇವನ್ಯಾವನಪ್ಪ ಜೊಲ್ಲು ಪಾರ್ಟಿ ಎಂಬಂತೆ ನನ್ನ ಮೇಲೆ ಕೆಳಗು ನೋಡಿದ್ಲು.

ತತ್ !! ಈ ಲುಕ್ ಕಾಣಕ್ಕ ನಾನು ಎರಡು ವರ್ಷದಿಂದ ಇವಳನ್ನ ಒಳ್ಳೆ ತಾಜ್ ಮಹಲ್ ತರ ದೂರದಲ್ಲೇ ನಿಂತು ಪ್ರೀತಿಸಿದ್ದು ಅನಿಸತೊಡಗಿತು. ಇನ್ನೇನು ಮನಸ್ಸಾ ಇಚ್ಛೆ ಉಗಿತ್ತಾಳೆ ಅನ್ನೋ ಅಷ್ಟರಲ್ಲಿ ಆಕೆಯ ಗೆಳತಿ ಕಿಸಿ ಕಿಸಿ ಅಂತಾ ನಕ್ಕಾಗಲೇ ಎಲ್ಲೋ ಒಂಚೂರು ಸಂಶಯ ಮಿನುಗಿ ಮರೆಯಾದದ್ದು. ಧೈರ್ಯ ಮಾಡಿ ತಲೆ ಎತ್ತಿ ಆಕೆಯನ್ನು ನೋಡಿದೆ. ಆಗಷ್ಟೇ ತನ್ನ ರೌದ್ರಾವತಾರಾಳನ್ನೆಲ್ಲ ಕಣ್ಣುಗಳಲ್ಲಿ ಸೂಸುತಿದ್ದ ಆಕೆ ಒಂದೇ ಸಮನೆ ಮುಗುಳ್ ನಗುತಿದ್ದಾಳೆ! ಕೂಡಲೇ ಒಂಚೂರು ನೋಯದಂತೆ ಒಂದು ಬಾರಿಸಬೇಕೆಂಬ ಸಿಟ್ಟು ಉಲ್ಬಣಿಸಿ ಬಂದರೂ ತಡೆದುಕೊಂಡಿದ್ದೆ ಅಂದು.

ಕ್ಲಾಸು, ಕ್ಯಾಂಟೀನು, ಬಸ್ ಸ್ಟ್ಯಾಂಡಿನಲ್ಲಿ ಶುರುವಾದ ನಮ್ಮ ಪ್ರೇಮದ ಚಿಗುರು ತಿಂಗಳು ಕಳೆಯುವುದರಳೊಗಾಗಿ ನಾನು ಅವರ ಮನೆಯ ಕಾಫಿಯನ್ನು ಹೀರುತ್ತಿರುವಂತೆ ಮಾಡಿತ್ತು. ಆಕೆ ಕಾಫಿಯನ್ನು ತಂದಿದ್ದ ತಟ್ಟೆಯನ್ನು ಎದೆಗವುಚಿಗೊಂಡು ಒಳಮನೆಯ ಮರದ ದೊಡ್ಡ ಬಾಗಿಲಿಗೆ ಓರಗಿಕೊಂಡು ನಿಂತಿದ್ದರೆ, ಆಕೆಯ ಅಪ್ಪ ನನ್ನ ಕಾಫಿಯ ಕೊನೆಯ ಸಿಪ್ಪಿನ ಸರ್ರೆಮ್ಬ ಸದ್ದನ್ನು ಕೇಳಲು ಕಾತರನಾಗಿರುವಂತೆ ಗುರಾಯಿಸುತಿದ್ದ. ಯಾವೂರು,ಯಾರ ಮನೆ ಹೋಗಲಿ ಕೊನೆ ಪಕ್ಷ ನಿನ್ನ ಹೆಸರೇನಯ್ಯ ಅಂತಾನೂ ಕೇಳಲಿಲ್ಲ ಆಸಾಮಿ. ಮುಂದೆ ಮಾವ ಆಗೋನು ಅಂತ ಸುಮ್ನಿದ್ದೆ. ಇಲ್ದೆ ಇದ್ರೆ 'ನಿಮ್ಮಪ್ಪ ಏನ್ ಮೂಗನ ಅತ್ವಾ ಕೆಪ್ಪನಾ?' ಅಂತ ಅವಳನ್ನೇ ಕೇಳ್ ಬಿಡ್ತಿದ್ದೆ! ನೋಟ್ ಬುಕ್ ಬೇಕೆಂಬ ನಾಟಕ ಮಾಡಿ ಮನೆ ಹೊಕ್ಕ ನನ್ನನು ಮುಟ್ಟದೆಯೇ ಹೊರ ತಳ್ಳಿದ್ದ ಆಕೆಯ ಅಪ್ಪ. ಚಿಗುರು ಮೀಸೆಯ ಕಳ್ಳಾಟಗಳನೆಲ್ಲ ಬಲ್ಲದಾಗಿದ್ದ ಆ ಹಳೆ ಮೀಸೆಯನ್ನು ಪಳಗಿಸಿಕೊಳ್ಳುವ ಹಾದಿಯನು ಯೋಚಿಸುತ್ತಾ ನನ್ನ ಹಾದಿ ಹಿಡಿದೆ.

'ಯಾರ್ ಒಪ್ಪಿದ್ರೂ ನನ್ನ್ ಅಪ್ಪ ಒಪ್ಪೋಲ್ವೋ..' ಎನ್ನುತ್ತಾ ನನ್ನ ಹಸಿರು ಬಣ್ಣದ ಶರ್ಟ್ ಎಲ್ಲ ಒದ್ದೆಯಾಗುವಂತೆ ಅಪ್ಪಿಕೊಂಡು ಅತ್ತಿದ್ದ ಆಕೆ, 'ಎಲ್ಲಾದ್ರೂ ದೂರ ಓಡೋಗಣ' ಎಂದು ನನ್ನ ನಿಂತ ನೆಲವನ್ನೇ ಕುಸಿಯುವಂತೆ ಮಾಡಿದ್ದಳು ಅಂದೊಂದು ದಿನ. ಅವ್ರಪ್ಪ ಹಿಟ್ಲರ್ ಆದ್ರೆ ನಮ್ಮಪ್ಪ ಮುಸ್ಸೊಲೊನಿ! ಪ್ರಪಂಚದ ಯಾವುದೇ ಮೂಲೇಲಿದ್ರು ಅಟ್ಟಾಡಿಸಿಕೊಂಡು ಬಂದು ಹೊಡೆಯುತ್ತಾನೆ. ಅದೂ 20 ವರ್ಷ ಹಳೆಯ ಬೆಲ್ಟ್ ನಲ್ಲಿ! ನಾನ್ ಹುಟ್ಟಿದಾಗ ನಂಗೆ ಹೊಡೆಯಲಿಕ್ಕೆ ತಗೊಂಡಿದ್ದಂತಿದ್ದ ಆ ಬೆಲ್ಟು ನಂಗೊಂಥರಾ ಭಯ ಹುಟ್ಟಿಸೋ ನಾಗರ ಹಾವಿನಂತೆ ಆಗಿಬಿಟ್ಟಿತ್ತು. ಅದು ತನ್ನ ಜೀವಿತಾವಧಿಯಲ್ಲಿ ನಮ್ಮಪ್ಪನ ಹೊಟ್ಟೆಯ ಸುತ್ತ ಸುತ್ತಿಕೊಂಡಿದ್ದಕಿಂತ ನನ್ನ ಎಳೆಯ ಚರ್ಮದ ರುಚಿಯ ಮಜವನ್ನೇ ನೋಡಿರುವುದೇ ಜಾಸ್ತಿ!

'ಮೊದ್ಲು ನಾನು ಓದ್ ಮುಗ್ಸಿ, ಕೆಲ್ಸ ಗಿಲ್ಸ ಅಂತ ಒಂದು ತಗೊಂಡು ಆದ್ಮೇಲೆ ನಾನೇ ನಿಮ್ಮನೆಗೆ ಬಂದು ನಮ್ಮ್ ಮದ್ವೆ ಬಗ್ಗೆ ಮಾತಾಡ್ತೀನಿ' ಅಂತ ಒಂಚೂರೂ ಗಂಡಸ್ಥನದ ಮಾನವನ್ನು ಉಳಿಸಿಕೊಳ್ಳದೆ ಪುಕ್ಕಲನಂತೆ ಆಕೆಯನ್ನು ಸಮಾಧಾನಿಸಿದ್ದೆ.

ಖಾಲಿ ಜೇಬಿನ ತುಂಬಾ ಒಲವಿನ ಹೂವುಗಳನ್ನೇ ತುಂಬಿಕೊಂಡು ಕಾಲೇಜಿನ ಕೊನೆಯ ವರ್ಷದ ವರೆಗೂ ಅಲೆದಾಡಿದೆ, ಆಕೆಯ ನಿರ್ಮಲ ಪ್ರೀತಿಯೊಟ್ಟಿಗೆ.
ಕಾಲೇಜಿನ ಕೊನೆಯ ವರ್ಷದ ಅವೊಂದು ದಿನ ಆಕೆಯ ಗೆಳತಿಯೊಬ್ಬಳು ಬಂದು ಇವಳ ಮದುವೆಯ ವಿಚಾರ ಹೇಳಿದಳು. ಮದುವೆಯ ವಿಚಾರ ಮೂರನೆಯವರ ಮುಖೇನ ನನಗೆ ತಿಳಿದಿದ್ದು ಕೊಂಚ ಸಿಟ್ಟನ್ನು ತಂದರೂ ಸದ್ಯಕಂತು ನನ್ನ ಕಣ್ಣಿರೀನ ಕಟ್ಟೆಯನ್ನು ತಡೆಯುವುದರಲ್ಲಿಯೇ ಮಗ್ನನಾಗಿ ಹೋಗಿದ್ದೆ. ಅಂದಿನಿಂದ ಇವಳನ್ನು ಕಾಲೇಜಿನಲ್ಲಾಗಲಿ, ಸಂಗೀತ ಶಾಲೆಯಲ್ಲಾಗಲಿ ಅಥವಾ ಪೇಟೆಯ ಯಾವೊಂದು ಗಲ್ಲಿ ಮೂಲೆಯಲ್ಲೂ ಕಾಣಲಿಲ್ಲ. ನಮ್ಮಿಬ್ಬರ ವಿಚಾರ ತಿಳಿದು ದಪ್ಪ ಮೀಸೆಯ ಅವರಪ್ಪ ಆಕೆಯ ಮದುವೆ ಮಾಡಿಯೇ ತೀರುತ್ತೇನೆನ್ನುತಾ ಹಠ ಹಿಡಿತು ಕುಳಿತನಂತೆ. ಆತನ ಬೋಳುತಲೆಯ ಮೇಲೆ ರಪ ರಪ ನಾಲ್ಕು ಬಾರಿಸಿ ನನ್ನ ಸಿಟ್ಟನ್ನೆಲ್ಲ ಕಡಿಮೆ ಮಾಡಿಕೊಳ್ಳಬೇಕೆನಿಸಿತು. ದಿನ, ವಾರ, ತಿಂಗಳುಗಳು ಕಳೆದವು. ಪ್ರತಿ ದಿನ ಅತ್ತಿಂದಿತ್ತ ಇತ್ತಿಂದಂತ್ತ ಹೋಗುವ ಬಸ್ಸುಗಳ ಬಾಗಿಲನ್ನೇ ನೋಡುವುದು ನನ್ನ ಕಾಯಕವಾಗಿ ಹೋಗಿತ್ತು. ಅವಳ ಮನೆ ಹೋಗಲಿ, ಮನೆಯ 1 ಕಿಲೋಮೀಟರ್ ಪರಿಧಿಯೊಳಗೂ ಕಾಲಿಡಲು ಧೈರ್ಯ ಸಾಲುತ್ತಿರಲಿಲ್ಲ. ಅಕ್ವೇರಿಯಂ ಒಳಗಿನ ಮೀನಿನಂತಾಗಿ ಹೋಗಿತ್ತು ಜೀವನ.

ಆಕೆಯ ಮಧುವೆ ಇದ್ದದ್ದು ಪೇಟೆಯ ಚೌಟ್ರಿಯಲ್ಲಿ. ಮದುವೆಯ ಎರಡು ದಿನ ಮೊದಲೇ ತಿಳಿದಿದ್ದು ನನಗೆ ಅಂದು ಆಕೆಯ ಮದುವೆ ಎನ್ನುವುದು. ಪೇಟೆಯ ಅರ್ಧ ಪಾಲು ಜನರೆಲ್ಲಾ ಅಂದು ಅಲ್ಲಿ ನೆರೆದಿದ್ದರು. ಪುಕ್ಸಾಟೆಯಾಗಿ ಸಿಗೋ ಬಾಡೂಟವನ್ನ ಗಡತ್ತಾಗಿ ಬಾರಿಸೋ ಕನಸಲ್ಲಿ. 'ಬೇಡ ಮಗ, ಅವ್ರಪ್ಪ ನಿನ್ನ ಅಲ್ಲಿ ನೋಡಿದ್ರೆ ಸಿಗ್ದು ತೂರ್ಣ ಕಟ್ ಬಿಡ್ತಾನೆ' ಎಂದ ಇಬ್ಬರು ಗೆಳೆಯರನ್ನ ಅವ್ರು ನನ್ನ ಕಾಲಿಗೆ ಬೀಳ್ತಿವಿ ಅಂದ್ರೂ ಬಿಡದೆ ಚೌಟ್ರಿಗೆ ಕರೆದುಕೊಂಡು ಹೋದೆ.

ಹೂವಿನ ತೋಟವನ್ನೇ ಕಡಿದು ತಂದಿರೋ ಹಾಗಿತ್ತು ಆ ಮದುವೆಯ ಗತ್ತು. ಪೇಟೆಯ ಯಾವುದೇ ಮೂಲೆಯಲ್ಲಿ ನಿಂತು ನೋಡಿದರೂ ಈ ಹೂವಿನ ಸಿಂಗಾರಗಳು ಕಣ್ಣು ಕುಕ್ಕುವಂತೆ ಕಾಣುವಂತಿದ್ದವು. 'ಬಾರೋ ಲೇ .. ನೀನು ಸಾಯೋದಲ್ದೆ ನಮ್ಮನ್ನೂ ಸಾಯಿಸ್ತೀಯ' ಎನ್ನುತ ಗೆಳೆಯರು ತಮ್ಮ ಕೊನೆಯ ಪ್ರಯತ್ನ ಮಾಡಿದರು. ನಾನು ಧೈರ್ಯ ಮಾಡಿ ಹಾಲಿನ ಒಳಗೆ ಕಾಲಿಟ್ಟೆ. ಸುತ್ತಲಿನ ಜನ, ಅವರ ಅರಚಾಟ, ಬಾಡೂಟದ ಘಮ, ಪುರೋಹಿತರ ಮಂತ್ರವಾದ್ಯ, ನಿಶಾನಿಯ ಸದ್ದು, ಮಧುಮಗ, ಓವರ್ಆಕ್ಟಿಂಗ್ ಮಾಡುತ್ತಾ ಚೀರಾಡುವ ಫೋಟೋಗ್ರಾಫರ್ಸ್ ಗಳು, ಹೂವಿನ ರಾಶಿ, ಎಲ್ಲವೂ ಕಾಣೆಯಾಗಿ ಆಕೆಯೊಬ್ಬಳೇ ನನ್ನ ಕಣ್ಣರವಿಂದಗಳಿಗೆ ಗೋಚರಿಸತೊಡಗಿದಳು. ಅತ್ತು ಬಾತಿದ್ದ ಕೆನ್ನೆ, ಕಣ್ಣೀರಿನ ತೇವ ಆರದ ಆಕೆಯ ಕಣ್ಣುಗಳು ನನ್ನನು ಇನ್ನೂ ಮಂತ್ರಮುಗ್ದನಂತೆ ಮಾಡಿದವು. ಕೊಂಚ ಹೊತ್ತು ಹಾಗೆಯೇ ಕಳೆದ ನನಗೆ ಇಹಲೋಕದ ಅರಿವು ಬಂದಿದ್ದು ಹಿಂದಿನಿಂದ ಯಾರೋ ಬೆನ್ನಿಗೆ ಜೋರಾಗಿ ಗುದ್ದಿದಾಗ. ಸುತ್ತಲಿನ ವಾತಾವರಣವೆಲ್ಲವೂ ಸ್ತಬ್ದವಾಗಿದೆ. ಮಧುಮಗಳು ಎದ್ದು ನಿಂತಿದ್ದಾಳೆ, ಕಣ್ಣೇರಿನ ಕೋಡಿಯನ್ನು ಹರಿಸುತ್ತ. ನಾನೊಟ್ಟಿಗೆ ಬಂದಿದ್ದ ಗೆಳೆಯರಿಬ್ಬರು ಕಾಲ್ಕಿತ್ತು ಬಹಳ ಹೊತ್ತೇ ಆಗಿದಿದ್ದಿರಬಹುದು. ಕೂಡಲೇ ಅವರಪ್ಪ ಚೀರುತ್ತಾ ಅರಚುತ್ತಾ ಇತ್ತ ಕಡೆಯೇ ಬರತೊಡಗಿದ. ಅವನ ಆ ರೌದ್ರಾವತಾರದಲ್ಲಿ ನನ್ನ ಕೊನೆಯ ಕ್ಷಣಗಳನ್ನು ಕಾಣತೊಡಗಿದ್ದೆ...!

*********

ವರ್ಷಗಳಾದರೂ ಬದಲಾಹಿಸದ ಸಿಟಿ ಬಸ್ಸಿನ ಹಾರ್ನಿನ ಸದ್ದಿಗೆ ಬೆಚ್ಚಿಬಿದ್ದ ನನಗೆ ವರ್ತಮಾನದ ಅರಿವಾದದ್ದು ಕೆಲ ಸೆಕೆಂಡುಗಳ ನಂತರವೇ! ಅವಳ ನೀಲ ಜಡೆಯ ಮತ್ತಿನಲ್ಲಿ ಭೂತಕಾಲದ ನೆನಪುಗಳೆಲ್ಲ ಮತ್ತೊಮ್ಮೆ ಕದಕಿ, ಮೆಲುಕು ಹಾಕಿ,ಮನಸ್ಸಿಗೊಂದು ನೆಮ್ಮದಿಯನ್ನು ತಂದಿದ್ದವು. ಕೂಡಲೇ ಅತ್ತ ಕಡೆ ಕಣ್ಣಾಯಿಸಿದ ನನಗೆ ಆಕೆ ಕಾಣಲಿಲ್ಲ. ಬಸ್ಸತ್ತಿ ಹೋಗಿ ಅದೆಷ್ಟು ಹೊತ್ತಾಯಿತೊ. ನಾನು ನಿಟ್ಟುಸಿರನ್ನು ಬಿಡುತ್ತಾ ಸಿಕ್ಕಿದೊಂದು ಬಸ್ಸನ್ನು ಏರಿ ಮನೆಯ ಹಾದಿಯನ್ನು ಹಿಡಿದೇ. ಮಾರ್ಗ ಮದ್ಯದಲ್ಲಿ ಮೊಬೈಲನ್ನು ತೆರೆದು ನೋಡಿದಾ ಗ ನನ್ನಾಕೆಯ ಎರಡು ಮಿಸ್ಡ್ ಕಾಲ್ ಹಾಗು ಒಂದು ಕುಪಿತಗೊಂಡಿರುವ ಇಮೊಜಿ. ಹೆಂಡತಿಯರ ಸಿಟ್ಟಿನಲ್ಲಿ ಇರುವ ಮಜಾ ಅನುಭವಿಸಿದವನಿಗೆ ಗೊತ್ತು. ಮುಗುಳ್ ನಗಲು ಹೋಗಿ ಯಾಕೋ ಜೋರಾಗೆ ನಕ್ಕು ಬಿಟ್ಟೆ. ನಗುವುದೇ ಮಹಾಪರಾಧವೇನೋ ಎಂಬಂತೆ ಬಸ್ಸಿನಲ್ಲಿ ಕಷ್ಟಪಟ್ಟು ಉಸಿರಾಡುತಿದ್ದವರು ನನ್ನ ಗುರಾಹಿಸಿದರು.

ಬಸ್ಸನ್ನು ಇಳಿದು ಮನೆಗೆ ಬಂದ ನನಗೆ ಶಾಕ್, ಆಶ್ಚರ್ಯ,ಆಘಾತ ಅಂತಾರಲ್ಲ ಅಂತದೊಂದು ಕಾದಿದ್ದಿತ್ತು. ಹದಿಮೂರು ವರ್ಷದ ನಂತರ ನನ್ನ ಮಾವಯ್ಯ ಈ ಬಡವನ ಮನೆಗೆ ಬಂದಿದ್ದಾನೆ! ಅದೂ ಮಗಳೊಟ್ಟಿಗೆ ಹರಟೆಯೊಡಿಯುತ್ತ ಕಾಫಿಯ ಒಂದೊಂದೇ ಸಿಪ್ಪನ್ನು ಸರ್ರೆಮ್ಬ ಸದ್ದಿನೊಂದಿಗೆ ಒಳಗೆಳೆದುಕೊಳ್ಳುತ್ತಿದ್ದಾನೆ. ಅಲ್ಲೊಂದು ಇಲ್ಲೊಂದು ಇದ್ದ ತಲೆಗೂದಲು ಈಗ ಪೂರ್ತಿ ಕಣ್ಮರೆಯಾಗಿ ತಲೆ ಅಕ್ಷರ ಸಹ ಬಾಣಲಿಯ ಒಳಪನ್ನು ಪಡೆದಿದೆ. ಸಂಗೀತ ಶಾಲೆಯ ತಬಲದ ನೆನಪು ಬಂದು ಒಂದೆರೆಡು ಸದ್ದನ್ನು ಈತನ ತಲೆಯಿಂದಲೇ ತೆಗೆಯಬೇಕೆಂಬ ಮನಸ್ಸಾಯಿತು. ಆದರೆ ಬಿಳಿಯಾದರು ಹುಲಿಯಂತಿದ್ದ ಆತನ ಮೀಸೆ ನನ್ನ ಮಾರ್ಮಿಕತೆಗೆ ಏಕ್ದಂ ವಿರಾಮವನ್ನು ನೀಡಿತ್ತು. ನನ್ನನು ನೋಡಿದೊಡನೆಯೇ ವೈರಿಗಳಿಬ್ಬರನ್ನು ಏಕಾಂಗಿಯಾಗಿ ಬಿಟ್ಟು ಸಿಟ್ಟಿನಿಂದ ಮುಖವನ್ನು ಊದಿಸಿಕೊಂಡು ಚಕಚಕನೆ ಒಳನೆಡೆದ ನನ್ನಾಕೆ ನನ್ನನ್ನು ಮತ್ತೊಮ್ಮೆ ಅಗ್ನಿ ಪರೀಕ್ಷೆಗೆ ತಳ್ಳಿದಳು. ನಾನು ಮಾವ ಕೂತಿದ್ದ ಸೋಫಾದ ಕಟ್ಟಕಡೆಯ ತುದಿಯಲ್ಲಿ ಹೋಗಿ ಕುಳಿತೆ. ಮುಂದಿನ ಸುಮಾರು ಅರ್ಧ ತಾಸಿನವರೆಗೂ ಯಾರೊಬ್ಬರೂ ತುಟಿಕ್ ಪಿಟಿಕ್ ಅನ್ನಲಿಲ್ಲ. ಹೊರಗಿನಿಂದ ಬಂದ ನೊಣವೊಂದು ಮಾವಯ್ಯ ಕುಡಿದು ಇಟ್ಟಿದ್ದ ಕಪ್ಪಿನ ತಳದ ಕಾಫಿಯ ಸಿಹಿಯನ್ನು ಹೀರತೊಡಗಿತ್ತು. ಮಾವಯ್ಯ ಆ ನೊಣವನ್ನೇ ನೋಡುತ್ತಾ ತಲ್ಲೀನನಾಗಿದ್ದ. ಒಳಗಿದ್ದ ನನ್ನಾಕೆಯ ಕಿವಿಗಳೆಲ್ಲವೂ ಇಲ್ಲಿಯೇ ಇವೆಯಂದು ತಿಳಿದಿದ್ದ ನಾನು ಕೊನೆಗೆ 'ಹೇಗಿದ್ದೀರ ಅಂಕಲ್' ಎಂದೇ. ಕೂಡಲೇ ಕೀಲಿ ಗೊಂಬೆಗೆ ಜೀವ ಬಂದಂತೆ ಬದಬದನೆ ಒದರುತ್ತಾ ಹೋದ ಆಸಾಮಿ 'ಈ ಸಾರಿ ಮಳೆ ಕಮ್ಮಿ, ನೋಡಣ ದೇವ್ರು ಅಡಿಸ್ದನ್ಗೆ ಆಗ್ಲಿ' ಅನ್ನೋವಷ್ಟಲ್ಲಿ ನನ್ನ ಸ್ನಾನ ಮುಗಿದಿರುತಿತ್ತು. 'ನೀವ್ ರೆಸ್ಟ್ ತಗೋಳಿ, ನಾನು ಫ್ರೆಶ್ ಆಗಿ ಬರ್ತೀನಿ' ಎನ್ನುತ ಒಳ ನೆಡೆದಾಗ ನನ್ನಾಕೆ ಮೈದಾಹಿಟ್ಟಿನ ರಾಶಿಯ ಮೇಲೆ ಮೇರಿ ಕೋಮ್ ಳಂತೆ ಹಿಂದಿನ ದಿನದ ಜಗಳದ ಸಿಟ್ಟನ್ನು ವ್ಯಕ್ತ ಪಡಿಸುತ್ತಿದ್ದಳು. ಮೆತ್ತಗೆ ಹೋಗಿ ಆಕೆಯ ಕುತ್ತಿಗೆಯ ಮೇಲೊಂದು ಮುತ್ತನಿಟ್ಟು ಹಿತವಾಗಿ ಅಪ್ಪಿಕೊಂಡಾಗ ಕೊಸರಾಡುತ್ತ ಆಕೆ 'ಬಸ್ ಸ್ಟ್ಯಾಂಡಿನಲ್ಲಿ ಯಾಕೆ ಹಾಗೆ ಪೊರ್ಕಿ ತರ ನನ್ನ ನೋಡ್ತಾ ಇದ್ದೆ' ಎನ್ನುತ್ತಾ ನನ್ನ ದಬ್ಬಿದಳು. ಉತ್ತರವನ್ನು ಬದಿಗಿಟ್ಟು ಆಕೆಯ ಅಪ್ಪನನ್ನು ಪಕ್ಕದ ರೂಮಿನಲ್ಲಿ ಕೂರಿಸಿ ಇವಳ ಮುದ್ದಾಡುವ ಸಾಹಸವನ್ನು ಮಿಸ್ ಮಾಡ್ಕೋ ಬಾರ್ದು ಎನ್ನುತ್ತಾ ಮುಂದುವರೆದ ನನಗೆ ಅವಳಪ್ಪನ ಕೆಮ್ಮುವ ಸದ್ದು ಬಚ್ಚಲು ಮನೆಯ ಕಡೆಗೆ ಓಟ ಕೀಳುವಂತೆ ಮಾಡಿತ್ತು...