Thursday, May 25, 2017

ಆಸ್ಕರ್ ನಾಮಾಂಕಿತ ಇವನ ಚಿತ್ರಗಳನ್ನು ವಿದೇಶಗಳಲ್ಲಿ ತೋರಿಸಿ ನಮ್ಮ ಮಾನ ಕಳೆಯಬೇಡಿ ಎಂದಿದ್ದರು...!!

ಇಂದಿಗೆ ಸುಮಾರು 65 ವರ್ಷಗಳ ಹಿಂದೆ ಮೂವತ್ತು ವರ್ಷದ ಯುವಕನೊಬ್ಬ ಬಂಗಾಳಿ ಬರಹಗಾರರಾದ ಭೀಹುತಿ ಭೂಷಣ್ ಬಂಡೋಪಾಧ್ಯಾಯ್ ಅವರ ಕಾದಂಬರಿಯನ್ನು ಆಧರಿಸಿ ಚಿತ್ರವೊಂದನ್ನು ನಿರ್ದೇಶಿಸುವ ಕನಸನ್ನು ಕಟ್ಟಿಕೊಳ್ಳತೊಡಗುತ್ತಾನೆ. ಚಿತ್ರಕಥೆ ಬರೆಯುವುದು ಆತನ ಫ್ಯಾಂಟಸಿ ಎನ್ನುವುದಾದರೆ ಚಿತ್ರನಿರ್ದೇಶನ ಅವನ ಬಹು ಕಾಲದ ಕನಸು. ಕನಸೇನೋ ಸರಿ, ಸಾಧಿಸುವುದೂ ಬಲು ದಿಟ, ಆದರೆ ತನ್ನ ಮೊದಲ ಆರಂಭಕ್ಕೆ ಬೇರೊಬ್ಬರ ಕೃತಿಯೇ ಏಕಾಗಬೇಕು? ಸ್ವಂತ ಕಲ್ಪನೆ ಹಾಗು ಸೃಜನಶೀಲತೆಯಿಂದ ಒಂದೊಳ್ಳೆ ಕಥೆಯನ್ನು ಕಟ್ಟಲು ನಿನಗೆ ಸಾಧ್ಯವಿಲ್ಲವೇ? ಒಂದು ಪಕ್ಷ ಚಿತ್ರ ಗೆದ್ದರೂ ಅದರ ಬಹುಪಾಲು ಶ್ರೇಯ ಮೂಲ ಕತೆಗಾರನಿಗೆ ಹೋಗುತ್ತದೆ. ಎಂಬೆಲ್ಲ ಪ್ರೆಶ್ನೆ, ಸಲಹೆಗಳನ್ನು ಎಳೆದುಕೊಂಡು ಮುನ್ನೆಡೆದ ಆತ ಯಾವುದೇ ಅನ್ಯ ಕಾರಣಗಳಿಗೂ ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ಚಿತ್ರ ಸೆಟ್ಟೇರಿತು. ಅಲ್ಲಿನ ರಾಜ್ಯಸರ್ಕಾರವೇ ಅಂದು ಚಿತ್ರ ನಿರ್ಮಾಣದ ಹೊಣೆಯನ್ನು ಹೊತ್ತಿತು! ಆದರೇನಂತೆ, ಚಿತ್ರ ಶುರುವಾದ ಕೆಲವೇ ದಿನಗಳಲ್ಲಿ ಹಣಕಾಸಿನ ಸಮಸ್ಯೆ ಚಿತ್ರದ ಬಗ್ಗೆ ಹಲವರಿಗಿದ್ದ ನಿರುತ್ಸಾಹಗಳಿಗಿಂತ ಹೆಚ್ಚಾಯಿತು. ಆದರೆ ದೃತಿಗೆಡದ ಆತ ತಂಡವನ್ನು ಮುನ್ನೆಡೆಸಿ ಚಿತ್ರವನ್ನು ಪೂರ್ಣಗೊಳಿಸಿಯೇ ತೀರುತ್ತಾನೆ. ಅಂತೂ ಆಗಸ್ಟ್ 25, 1955 ಕ್ಕೆ ಚಿತ್ರ ಬಿಡುಗಡೆಗೆ ಸಿದ್ಧಗೊಂಡಿತು. ದೇಶದ ಪ್ರಧಾನಿ ನೆಹರು ಹಾಗು ಪಶ್ಚಿಮ ಬಂಗಾಳದ ಅಂದಿನ ಮುಖ್ಯಮಂತ್ರಿ ಬಿಧಾನ್ ಚಂದ್ರ ರಾಯ್ ಅವರು ಖುದ್ದಾಗಿ ಚಿತ್ರವನ್ನು ವೀಕ್ಷಿಸಲು ಬಂದಿದ್ದರು. ಇಷ್ಟೆಲ್ಲಾ ಸವಾಲುಗಳನ್ನು ಜಹಿಸಿ ಜೀವಪಡೆದ ಚಿತ್ರವೊಂದು ಜನಮಾನಸದಲ್ಲಿ ಬದುಕುತ್ತದೆಯೇ ಎಂಬ ಪ್ರೆಶ್ನೆ ಒಂದೆಡೆಯಾದರೆ, ಹಾಕಿರುವ ದುಡ್ಡು ವಾಪಾಸ್ ಬಂದರೆ ಸಾಕಪ್ಪ ಎಂಬುದು ಅದೆಷ್ಟೋ ಸರ್ಕಾರೀ ಅಧಿಕಾರಿಗಳ ಹರಕೆ. ಆಗಿನ ಮೇನ್ ಸ್ಟ್ರೀಮ್ ಚಿತ್ರಗಳಿಗೆ ಹೋಲಿಸಿದರೆ ತೀರಾ ಬಿನ್ನವಾಗಿದ್ದ ಚಿತ್ರ ಗೆಲ್ಲುವುದು ಕಷ್ಟ-ಕಷ್ಟ ಎಂಬುದು ಅಂದಿನ ಕೆಲ ವಿಮರ್ಶಕರ ಅಭಿಪ್ರಾಯವಾಗಿದ್ದಿತು. ಆದರೆ ದೇಶದ ಚಿತ್ರರಂಗಕ್ಕೇ ಒಂದು ಗಟ್ಟಿ ಬುನಾದಿಯನ್ನು ಹಾಕಲು ಆ ಚಿತ್ರ ಹೊರಟಿದೆಯೆಂದು ಅಂದು ಯಾರೊಬ್ಬರೂ ಊಹಿಸಲೂ ಸಾದ್ಯವಿರಲಿಲ್ಲ. ನಿರೀಕ್ಷೆಗೂ ಮೀರಿ ಚಿತ್ರ ಗೆದ್ದಿತು! ರಾಷ್ಟ ಮಟ್ಟದಲ್ಲಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚನ್ನು ಹರಿಸಿತು. ಫ್ಯಾನ್ಸ್, ಇಟಲಿ, ಸ್ಕಾಟ್ಲೆಂಡ್, ಮನಿಲಾ, ಬರ್ಲಿನ್, ಕೆನೆಡಾ, ಅಮೇರಿಕ, ಜಪಾನ್ ಹೀಗೆ ಹೊದಡೆಯಲ್ಲ (ಫಿಲಂ ಫೆಸ್ಟಿವಲ್ನ) ಒಂದಲ್ಲೊಂದು ಪ್ರಶಸ್ತಿಯನ್ನು ಗೆದ್ದೇ ಬರುತ್ತಿತ್ತು. ಸ್ವಾತಂತ್ರ್ಯ ದಕ್ಕಿದ ದಶಕದೊಳಗೇ ಭಾರತದ ಚಿತ್ರರಂಗವನ್ನು ವಿಶ್ವದ ಎಲ್ಲೆಡೆಗೂ ಪಸರಿಸಿದ ಖ್ಯಾತಿ ಈ ಚಿತ್ರಕ್ಕೆ ಸಲ್ಲಬೇಕು. ಅಂದು ಮೂವತ್ತು ವರ್ಷದ ಆ ಯುವಕನ ಕನಸು, ನಿರ್ದೇಶನ, ಚಿತ್ರಕಥೆ ಎಲ್ಲಕ್ಕೂ ಮಿಗಿಲಾಗಿ ಆತನ ಆಯ್ಕೆ ನಿಜವಾಗಿಯೂ 'ಎಕ್ಸಲೆಂಟ್' ಎಂದು ಜನರು ಕೊಂಡಾಡಿದರು. ಆ ಲೆಜೆಂಡರಿ ಚಿತ್ರದ ಹೆಸರೇ 'ಪಥೇರ್ ಪಾಂಚಾಲಿ'. ನಿರ್ದೇಶಕ, ಮುಂದೆ ಭಾರತದಲ್ಲೇಕೆ  ವಿಶ್ವದಲ್ಲೇ ಮಹಾನ್ ನಿರ್ದೇಶಕರಲೊಬ್ಬನೆನಿಸಿಕೊಂಡ ಸತ್ಯಜಿತ್ ರೇ ಅಥವಾ ಬೆಂಗಾಲಿಗರ ನೆಚ್ಚಿನ ಮಾಣಿಕ್ -ದಾ.

ಸತ್ಯಜತ್ ಹುಟ್ಟಿ (1921) ಬೆಳೆದದ್ದೆಲ್ಲ ಬಂಗಾಳದ ನೆಲದಲ್ಲೇ. ಸಣ್ಣವನಿದ್ದಾಗಲೇ ತಂದೆಯ ಅಕಾಲಿಕ ಮೃತ್ಯು. ತಾಯಿಯ ಪ್ರೋತ್ಸಾಹದ ಮೇರೆಗೆ ಹೆಚ್ಚಿನ ವಿದ್ಯಾಭ್ಯಾಸ. ಅದೂ ಸಹ ‘ಗೀತಾಂಜಲಿ ಕವಿ’ ರವೀಂದ್ರನಾಥ್ ಠಾಗೂರರ ಶಾಂತಿನಿಕೇತನದಲ್ಲಿ. ಬತ್ತಿದ ಕೆರೆಯಲ್ಲಿ ವಿಲ-ವಿಲ ಹೊದ್ದಾಡುತ್ತಿದ್ದ ಜೀವಕ್ಕೆ ಚೈತನ್ಯದ ಮಳೆ ಸುರಿದ ಅನುಭವ. ಚಿಗುರೊಡೆಯುತ್ತಿದ್ದ ಹಸಿರಿಗೆ ಹೆಮ್ಮರವಾಗುವ ಕನಸ್ಸನ್ನು ಸತ್ಯಜಿತ್ ಕಂಡಿದ್ದೆ ಶಾಂತಿನಿಕೇತನದಲ್ಲಿ. ಕಲೆ ಹಾಗು ಸಾಹಿತ್ಯದ ಆಳವಾದ ಅಧ್ಯಯನ, ಚಿತ್ರಕಲೆ ಹಾಗು ಸಂಗೀತವನ್ನೂ ಕಲಿಯುವಂತೆ ಪ್ರೇರೇಪಿಸಿತು. 1942 ರ ಸುಮಾರಿಗೆ ಯುವ ಸತ್ಯಜಿತ್ ಕ್ರಿಯಾಶೀಲ ಕಲೆಗಾರನಾಗಿ ಅಲ್ಲಿಂದ ಹೊರಬರುತ್ತಾನೆ. ಚಿತ್ರಕಥೆ, ಚಿತ್ರ ನಿರ್ದೇಶನ ಎಂಬುದು ಆತನ ನಾಡಿ-ನಾಡಿಗಳಲ್ಲಿ ಸಂಚರಿಸಲ್ಪಡುತ್ತಿರುತ್ತದೆ. ಅಷ್ಟರಲ್ಲಾಗಲೇ ಬಂಗಾಳದಲ್ಲಿ ತನ್ನ ಸ್ನೇಹಿತರೊಳಗೂಡಿ ನಗರದಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸುವುದು, ಚಿತ್ರಗಳನ್ನು ವಿಮರ್ಶಿಸುವುದು ಹಾಗು ಅವುಗಳ ಬಗ್ಗೆ ಸಾಧ್ಯವಾದಷ್ಟು ಮಟ್ಟಿನ ಅದ್ಯಯನವನ್ನು ಮಾಡುವುದನ್ನೂ ಬೆಳೆಸಿಕೊಂಡಿರುತ್ತಾನೆ. ಮುಂದೆ ಖಾಸಗಿ ಕಂಪನಿಯೊಂದರಲ್ಲಿ ‘ಗ್ರಾಫಿಕ್ ಡಿಸೈನರ್' ಆಗಿ ಕೆಲಸ. ಅದು ಮೂಲತಃ ಬ್ರಿಟನ್ ದೇಶಕ್ಕೆ ಸೇರಿದ ಕಂಪೆನಿಯಾದ್ದರಿಂದ ಇದೆ ಕಂಪನಿ ಮುಂದೆ ಸತ್ಯಜಿತ್ ಅವರನ್ನು ಕೆಲಕಾಲಕ್ಕೆ ಬ್ರಿಟನ್ ಗೂ ಕಳುಹಿಸುತ್ತದೆ. ಬ್ರಿಟನ್ನಿನ ಐಷಾರಾಮತೆಯ ಸುಯೋಗದಲ್ಲಿ ಈತ ಮಾಡಿದ್ದು ಕೇವಲ ಚಲನ ಚಿತ್ರ ವೀಕ್ಷಣೆ. ಅದೂ ವಿವಿಧ ದೇಶಗಳ ಸುಮಾರು ನೂರು ಚಿತ್ರಗಳು! ಪಾಶ್ಚಾತ್ಯ ಚಿತ್ರ ನಿರ್ಮಾಣದದಿಂದ ಪ್ರಭಾವಿತನಾಗಲು ಮುಂದೆ ಹೆಚ್ಚೇನೂ ಈತನಿಗೆ ಬೇಕಾಗಲಿಲ್ಲ. ಏತನ್ಮದ್ಯೆ ಫ್ರಾನ್ಸ್ ನ ಪ್ರಸಿದ್ಧ ಚಿತ್ರ ನಿರ್ದೇಶಕ ಜೀನ್ ರೆನೊಯ್ರ್ ಅವರ ಪರಿಚಯ ಹಾಗು ಪ್ರೋತ್ಸಾಹ ಇವನ್ನಲ್ಲಿ ಚಿತ್ರ ನಿರ್ಮಾಣದದ ಬೆಗ್ಗೆ ಇನ್ನಷ್ಟು ಒಲವನ್ನು ಮೂಡಿಸುತ್ತದೆ. ನಂತರದ ಕೆಲವೇ ವರ್ಷಗಳಲ್ಲಿ ಎಳೆ ಹುಡುಗರ ತಂಡವೊಂದನ್ನು ಕಟ್ಟಿ 1952 ರ ಚಳಿಗಾಲದಲ್ಲಿ ತನ್ನ ಮೊದಲ ಚಿತ್ರದ ಚಿತ್ರೀಕರಣಕ್ಕೆ ಆರಂಭವನ್ನು ಹಾಡುತ್ತಾನೆ. 'ಪಥೇರ್ ಪಾಂಚಾಲಿ' ಚಿತ್ರ ನಿರ್ಮಾಣಕ್ಕೆ ತಗುಲಿದ ಸಮಯ ಬರೋಬ್ಬರಿ ಮೂರು ವರ್ಷ. ಚಿತ್ರದ ವೆಚ್ಚ ಲಕ್ಷದ ಗಡಿ ದಾಟಲಿಲ್ಲ.

ಪಥೇರ್ ಪಾಂಚಾಲಿ ಚಿತ್ರವನ್ನು ಬೆಂಗಾಲ ಸರ್ಕಾರ ನಿರ್ಮಿಸಲು ಒಪ್ಪುವುದಕ್ಕೂ ಮುನ್ನ ಸತ್ಯಜಿತ್ ನ ಚಿತ್ರಕ್ಕೆ ಹಣ ಸುರಿಯಲು ಒಂದು ನರಪಿಳ್ಳೆಯೂ ಮುಂದೆ ಬಂದಿರಲಿಲ್ಲ. ಬಂದರೂ ಒಂದಲ್ಲೊಂದು ನೆಪವನ್ನು ಹೇಳಿ ಜಾರಿಕೊಳ್ಳುತ್ತಿದ್ದರು. ಹೆಂಡತಿಯ ಒಡವೆ, ತನ್ನ ನೆಚ್ಚಿನ ಗ್ರಾಮಫೋನ್ ಗಳು ಹಾಗು ಮನೆಯ ಇನ್ನೂ ಹಲವು ವಸ್ತುಗಳನ್ನು ಸತ್ಯಜಿತ್ ಮಾರತೊಡಗಿದರು. ಆದರೆ ಅದರಿಂದ ಬಂದ ಹಣ ಮಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿರುತ್ತಿತ್ತು. ಚಿತ್ರ ಕೀಲು ತಪ್ಪಿದ ಗಾಲಿಯಂತೆ ಅದ್ರಂಬರ್ದ ಮೂಡತೊಡಗಿತು. ಆದ ಕಾರಣ ಆತ ತನ್ನ ಗ್ರಾಫಿಕ್ ಡಿಸೈನರ್ ವೃತ್ತಿಯನ್ನು ಬಿಡಲಾಗಲಿಲ್ಲ. ವರ್ಷಾನುಗಟ್ಟಲೆ ಕುಂಟತೊಡಗಿದ ಚಿತ್ರಕ್ಕೆ ತಗುಲಿದ ಮತ್ತೊಂದು ಸಮಸ್ಯೆ ಅದರಲ್ಲಿನ ಮೂರು ಪಾತ್ರಗಳದ್ದು. ಒಂದು ಪುಟ್ಟ ಬಾಲಕ ಅಪ್ಪು, ಮತ್ತೊಂದು ಎಳೆಯ ವಯಸ್ಸಿನ ಹುಡುಗಿ ದುರ್ಗಾ ಹಾಗು ಅಜ್ಜಿ ಇಂದಿರ್ ಠಾಕುರನ್. ಬೆಳೆಯುವ ಅಪ್ಪುವಿನ ಧ್ವನಿ ಈ ಮೂರು ವರ್ಷದಲ್ಲಿ ಒಡೆದಿದ್ದರೆ ಬೇರೊಂದು ಧ್ವನಿಯನ್ನು ಚಿತ್ರಕ್ಕೆ ಅಳವಡಿಸುವುದು ಆಗಿನ ಕಾಲಕ್ಕಂತೂ ಅಸಾಧ್ಯವಾದ ಕೆಲಸವಾಗಿದ್ದಿತು. ಅಂತೆಯೇ ದುರ್ಗಾಳ ಹರೆಯ ಮೈ ನೆರೆಯುವಿನ ಆಸುಪಾಸು. ಇದೂ ಸಹ ಚಿತ್ರದ ಕಥೆಯ ಕೋರಿಕೆ. ಆದರೆ ವಯಸ್ಸಿನಲ್ಲಿ ಎಂಬತ್ತರ ಆಸುಪಾಸಿನಲ್ಲಿದ್ದ ಅಜ್ಜಿ ಇಂದಿರ್ ಠಾಕುರನ್ ಮಾತ್ರ ಒಮ್ಮೆ ಕೆಮ್ಮಿದರೂ  ಚಿತ್ರ ತಂಡದ ಜೀವವೇ ಹಾರಿಹೋದಂತಾಗುತ್ತಿತ್ತು! ಅದೃಷ್ಟವಶಾತ್ ಎಲ್ಲವೂ ನಿರ್ದೇಶಕ ಬಯಸಿದಂತೆ ನೆಡೆದವು.

ಸತ್ಯಜಿತ್ ತಮ್ಮ ಜೀವನದ ಸುಮಾರು ನಾಲ್ಕು ದಶಕಗಳನ್ನು ಚಿತ್ರ ನಿರ್ಮಾಣಕ್ಕಾಗಿಯೇ ಮೀಸಲಿಟ್ಟರು. ಪ್ರತೀ ಚಿತ್ರವೂ ಮತ್ತೊಂದಕ್ಕಿಂತ ತೀರಾ ಭಿನ್ನ ಹಾಗು ಅಷ್ಟೇ ಆಳವಾಗಿರುತ್ತಿದ್ದವು ಹಾಗು ಸಾಮಾನ್ಯನ ಮನ ಕುಲುಕುವಂತಿರುತ್ತಿದ್ದವು. ದಿ ಗೋಲ್ಡನ್ ಫೋರ್ಟ್ರೆಸ್, ಪಥೇರ್ ಪಾಂಚಾಲಿ, ದಿ ಬಿಗ್ ಸಿಟಿ, ಅಭಿಜಾನ್, ದ ವರ್ಲ್ಡ್ ಆಫ್ ಅಪು, ಚಾರುಲತಾ, ಅಪರಾಜಿತೋ ಇನ್ನು ಹಲವು ಚಿತ್ರಗಳು ಈ ಮಾತಿಗೆ ಕೆಲ ಉದಾಹರಣೆಗಳು. ಕಥೆ ಹಾಗು ಪಾತ್ರದ ಆಳವನ್ನು ಅರಿಯಬಲ್ಲವನಾಗಿದ್ದ ಅಂದಿನ ಬಂಗಾಲಿ ಪ್ರೇಕ್ಷಕ ಸತ್ಯಜಿತ್ ರ ಮೊದಲ ಕ್ರಿಯಾಕ್ಷೇತ್ರ. ತಾನು ಮಾಡುವ ಚಿತ್ರಗಳು ಅತಿ ನಿಧಾನ ಹಾಗು ನೋಡುಗರ ತಾಳ್ಮೆಯನ್ನು ಪರೀಕ್ಷಸಿಸುತ್ತದೆ ಎಂಬ ವಾದ ಒಂದೆಡೆಯಾದರೆ, ಪ್ರತೀ ಚಿತ್ರಗಳು ದೇಶವಿದೇಶಗಳಲ್ಲಿ ಪ್ರಶಸ್ತಿಗಳನ್ನು ಗೆದ್ದು ತರುತ್ತಿದ್ದದ್ದು ರಾಜಕೀಯ ನಾಯಕರಿಗೆ, ನಟರಿಗೆ ನಾಚಿಕೆಯನ್ನು ತರುತ್ತಿದ್ದದ್ದು ಮತ್ತೊಂದೆಡೆ. ಕಾರಣ ಈತ ದೇಶದ ಬಡ ಪರಿಸ್ಥಿಯನ್ನು, ಅಂದಿನ ಒಬ್ಬ ಸಾಮನ್ಯನ ಜೀವನದ ವೇತನೆಯನ್ನು ಅದ್ಯಾವ ಪರಿಗೆ ಚಿತ್ರದಲ್ಲಿ ಕಟ್ಟುತ್ತಿದ್ದನೆಂದರೆ ತಂಪು ಕೋಣೆಯಲ್ಲಿ ಪಾನೀಯಗಳೊಟ್ಟಿಗೆ ಸೂಟು ಬೂಟುಗಳಲ್ಲಿ ಚಿತ್ರವನ್ನು ನೋಡುವ ವಿದೇಶಿ ಪ್ರೇಕ್ಷಕನಿಗೆ ಕಡುಗಷ್ಟವೆಂದರೆ ಇದೇನಾ? ಭಾರತವೆಂದರೆ ಇಷ್ಟೇನಾ? ಎಂಬೊಂದು ಕೀಳರಿಮೆಯನ್ನು ತಂದಿಡುತ್ತಿತ್ತು. ಇದನ್ನು ಎದುರಿಸಲಾಗದೆ ನಮ್ಮ ಅಂದಿನ ಕೆಲನಟ ಮಣಿಯರು, ಘನ ರಾಜಕಾರಣಿಗಳು  ತಮ್ಮ ಸ್ಥಾನ , ಮಾನಕ್ಕೆ ಎಲ್ಲಿ ಕುತ್ತು ಬಂದಿತೆಂದು ಚಿತ್ರವನ್ನು ಬೇರ್ಯಾವ ದೇಶದಲ್ಲೂ ತೋರಿಸಬಾರದೆಂದು ಬೊಬ್ಬೆಯೊಡೆಯುತ್ತಿದ್ದರು. ಆದರೆ ಕಲೆಗೆ ಯಾವ ತಡೆ? ಜಗತ್ತು ಸತ್ಯಜಿತ್ ಅವರ ಕಲೆಯನ್ನು ಗುರುತಿಸಲು ಹೆಚ್ಚೇನು ಸಮಯ ತೆಗೆದುಕೊಳ್ಳಲಿಲ್ಲ. ತಮ್ಮ ಗ್ರಾಫಿಕ್ ಡಿಸೈನರ್ ವೃತ್ತಿಯ ತಂತ್ರಗಾರಿಕೆ, ಪಾಶ್ಚಾತ್ಯ ಚಿತ್ರ ನಿರ್ಮಾಣದ ಪ್ರಭಾವಳಿ ಹಾಗು ಅದಕ್ಕೆ ಪೂರಕವಾದ ಓದು, ಸಂಗೀತ ಹಾಗು ಬರವಣಿಗೆ ಸತ್ಯಜಿತ್ ರನ್ನು ನಿರ್ದೇಶಕರ ಸಾಲಿನಲ್ಲಿ ತೀರಾ ಭಿನ್ನವಾಗಿಸಿತು. ಸತ್ಯದ ನೆರಳಿನಲ್ಲಿ, ಯಾವುದೇ ಕಪೋಕಲ್ಪಿತ ಅವೈಜ್ಞಾನಿಕ ಕತೆಗಳಿಗೆ ಜೋತುಬೀಳದೆ ಸತ್ಯಜಿತ್ ಒಬ್ಬ ಜನಸಾಮನ್ಯನ ನೈಜ ದೃಷ್ಟಿಕೋನದಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದರು.

ಟ್ರೈಲಾಜಿ ( ಕ್ರಮಾನುಗತ ತ್ರಿವಳಿ ಕಥೆಗಳು / ಚಿತ್ರಗಳು ) ಇಂದಿನ ಕಾಲದ ಪುಸ್ತಕ ಬರಹಗಾರರ ಟ್ರೆಂಡ್ ಎನ್ನಬಹುದು. ಆದರೆ ಆಗಿನ ಕಾಲಕ್ಕೆ ಅದನ್ನು ಚಿತ್ರದ ಮೂಲಕ ಸಾಧಿಸಿ ತೋರಿಸಿದವರು ಸತ್ಯಜಿತ್. 'ಪಥೇರ್-ಪಾಂಚಾಲಿ', 'ಅಪಾರ್ಜಿತೋ' ಹಾಗು 'ಅಪುರ್-ಸಂಸಾರ್' ಎಂಬ ಟ್ರೈಲಾಜಿ ಚಿತ್ರಗಳು ಕೇವಲ ಚಿತ್ರಗಳಾಗಿರದೆ ಬಂಗಾಳಿ ಹಾಗು ಭಾರತೀಯ ಸಿನಿಮಾಗಳ ದಂತಕಥೆಗಳೆನಿಸಿದವು. ಮೊದಲೇ ಹೇಳಿದಂತೆ ಕೇವಲ ಒಂದೇ ಕಥೆಗೆ ಅಥವಾ ವರ್ಗಕ್ಕೆ ಸೇರದ ವರ್ಸಾಟೈಲಿಟಿ ಸತ್ಯಜಿತ್ ರ ವ್ಯಕ್ತಿತ್ವದಾಗಿದ್ದಿತು.. ಅರ್ವತ್ತರ ದಶಕದಲ್ಲಿ ಬಂಗಾಲದ ಪೋರರ ಹರಟೆಗಳಲ್ಲಿ ಹಾಗು ಓದುಗಳಲ್ಲಿ ಹೆಚ್ಚಾಗಿ ಇರುತ್ತಿದ್ದದ್ದು ಪ್ರೊಫೆಸರ್ ಶೊನ್ಕು, ಫೆಲ್ಯೂಡ ಎಂಬ ಹಲವು ಪತ್ತೇದಾರಿ ಪಾತ್ರಗಳು ಹಾಗು ಅವುಗಳನ್ನು ಆಧರಿಸಿದ ಕಥೆಗಳು. ಆ ಕಥೆಗಳು ಅಂದಿನ ಕಾಲದ ಓದುಗರ ಕಲ್ಪನೆಗೂ ಮೀರಿದ ಧಾಟಿಯಲ್ಲಿ ಹಣೆಯಲ್ಪಡುತ್ತಿದ್ದವು ಹಾಗು ಅಷ್ಟೇ ಕುತೂಹಲಭರಿತವಾಗಿದ್ದವು. ಹಾಗಾಗಿ ಆ ಪಾತ್ರಗಳು ಇಂದಿಗೂ ಬಂಗಾಳದಲ್ಲಿ ಚಿರಪರಿಚಿತ. ಒಂತರ ಕನ್ನಡಿಗರಿಗೆ ಮಾಲ್ಗುಡಿ ಡೇಸ್ ಇದ್ದ ಹಾಗೆ. ಅಂತಹ ಪಾತ್ರಗಳ ಸೂತ್ರದಾರಿಯೇ ಈ ಸತ್ಯಜಿತ್. ಇವರ ಈ ಮಟ್ಟಿನ ಬಹುಮುಖ ಪ್ರತಿಭೆಗೆ 1967 ರಲ್ಲೇ ' ದಿ ಏಲಿಯನ್' ಎಂಬ ಇಂಡೋ -ಅಮೆರಿಕನ್ ಸೈನ್ಸ್-ಫಿಕ್ಷನ್ ಚಿತ್ರವೊಂದು ಸಟ್ಟೇರಲು ರೆಡಿಯಾಗಿತ್ತು. ಅದರ ಚಿತ್ರಕಥೆಯನ್ನೂ ಸತ್ಯಜಿತ್ ಬರೆದು ಮುಗಿಸಿದ್ದರು. ಆದರೆ ಕಾರಣಾಂತರಗಳಿಂದ ಚಿತ್ರ ನಿರ್ಮಾಣ ನಿಂತರೂ ಮುಂದೆ ಬಂದ ಸ್ಟೀವನ್ ಸ್ಪಿಲ್ ಬರ್ಗ್ ರವರ ‘ಈ.ಟಿ’ (The Extra Terrestrial ) ಚಿತ್ರಕ್ಕೆ ಬಳಕೆಯಾಗಿದ್ದು ಸತ್ಯಜಿತ್ ರವರ ಅದೇ ಚಿತ್ರಕಥೆಯೇ ಎಂಬ ವಾದ ಇಂದಿಗೂ ಕೇಳಿಬರುತ್ತದೆ!

ದೇಶವನ್ನು ಅತಿ ಹೆಚ್ಚು ಬಾರಿ ಆಸ್ಕರ್ ನಲ್ಲಿ ಪ್ರತಿನಿಧಿಸಿದ ಖ್ಯಾತಿ, ಜೀವಮಾನದ ಸಾಧನೆಗೆ ಆಸ್ಕರ್ ಅನ್ನು ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ, ಫ್ರಾನ್ಸ್ ದೇಶದ ಗೌರವ ಲೀಜನ್, ಭಾರತ ರತ್ನ, ಪದ್ಮಶ್ರೀ, ಪದ್ಮಭೂಷಣ ಅಲ್ಲದೆ ಮೊನ್ನೆಯಷ್ಟೇ ನಮ್ಮ ದೊರೆ ಭಗವಾನ್ ರಿಗೆ ಕೊಡಲ್ಪಟ್ಟ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಇನ್ನೂ ಹಲವಾರು ಪ್ರಶಸ್ತಿಗಳಿಗೆ ಭಾಜನರರಾಗಿರುವ ಇವರು ಬಂಗಾಲ ಚಿತ್ರ ಪ್ರೇಮಿಗಳಿಗೆ ಅಕ್ಷರ ಸಹ ದೇವತಾಮನುಷ್ಯರಂತೆ ಭಾಸವಾಗುತ್ತಾರೆ. ನಮ್ಮ ನಿಮ್ಮ ನಡುವಿನ ಹುಡುಗನೊಬ್ಬ ಬೆಳೆದು ವಿಶ್ವದಲ್ಲೇ ಅಗ್ರಮಾನ್ಯ ನಿರ್ದೇಶಕನೆನಿಸಿಕೊಂಡರೆ ಇರಬೇಕಾದ ಸಹಜ ಅಭಿಮಾನ ಬಂಗಾಳದವರಿಗೂ ಇದೆ ಅಷ್ಟೇ. ಮಾಣಿಕ್-ದಾ ಎಂದರೆ ಬಂಗಾಳ. ಬಂಗಾಳದ ಕಲೆ, ಸಾಹಿತ್ಯ ಹಾಗು ಸೃಜನಶೀಲತೆಯನ್ನು ದೇಶಕ್ಕೆ ವಿಶ್ವಕ್ಕೆ ಪರಿಚಯಿಸಿಕೊಟ್ಟ ಮೂರ್ತ ರೂಪ. ದೇಶ ಹಸಿವು ಬರಗಾಲವೆಂಬ ಬೆಂಕಿಯಲ್ಲಿ ಬೇಯುತ್ತಿದ್ದಾಗಲೇ ಪಥೇರ್ ಪಾಂಚಾಲಿಯಂತ ಚಿತ್ರವನ್ನು ಮಾಡಿ ಚಿತ್ರನಿರ್ಮಾಣದಲ್ಲಿ ನಾವೇನು ಕಡಿಮೆ ಎಂಬೊಂದು ಧಿಟ್ಟ ಸವಾಲನ್ನು ಜಗತ್ತಿನ ಮುಂದಿಟ್ಟ ಪ್ರತಿಭೆ. ಕಡು ಬಿಳಿ ಬಣ್ಣದ ಜುಬ್ಬಾ ಹಾಗು ಧೋತಿಯನ್ನು ತೊಟ್ಟು, ಘಾಡವಾದ ಕಣ್ಣುಗಳೊಳಗೆ ಆತ್ಮಾಭಿಮಾನದ ದೃಷ್ಟಿಯನ್ನು ನೆಟ್ಟು ಬಂಗಾಳದ ಬೀದಿಗಿಳಿದರೆ ಇಡೀ ಊರಿಗೆ ಊರೇ ಅವರ ಮುಂದೆ ತಲೆಬಾಗುತಿತ್ತು. ವಿಪರ್ಯಾಸವೆಂಬಂತೆ ಈ ಅಭಿಮಾನ, ಗೌರವ ಹಾಗು ಕಾಳಜಿಗಳು ಕೇವಲ ಬೆಂಗಾಲಕ್ಕೆ ಮಾತ್ರ ಸೀಮಿತವಾದವು. ವಿಶ್ವವನ್ನೇ ತನ್ನೆಡೆಗೆ ಮುಖ ಮಾಡುವಂತೆ ಮಾಡಿದ ಇವರ ಚಿತ್ರಗಳಾಗಲಿ, ಅವುಗಳು ದೇಶಕ್ಕೆ ತಂದ ಕೀರ್ತಿಯನ್ನಾಗಲಿ ಅಥವಾ ಅಂತಹ ಚಿತ್ರಗಳಿಂದ ಪ್ರೇರಿತರಾಗಿ 'ಕ್ವಾಲಿಟಿ' ಚಿತ್ರಗಳನ್ನು ತೆಗೆಯುವ ಮನೋಭಾವವಾಗಲಿ ನಮ್ಮ ದೇಶದ ಇತರ ನಿರ್ಮಾಪಕ ನಿರ್ದೇಶಕರಲ್ಲಿ ಹೆಚ್ಚಾಗಿ ಮೂಡಲಿಲ್ಲ. 'ಅಂಡ್ರೆಡ್ ಕ್ರೋರ್ ಬಾಕ್ಸ್ ಆಫೀಸ್', 'ಐಟಂ ಸಾಂಗ್' 'ರಾಪ್ ಸಾಂಗ್ಸ್' ಎಂಬ ಕಪೋಕಲ್ಪಿತ ಪದಗಳು, ಅರ್ಥಹೀನ ಬಿರುದುಗಳು ಹಾಗು ನಾಯಕನೇ ಚಿತ್ರದ ಮೂಲಸ್ತಂಭ ಎಂದಾಗಿಸಿರುವ ಇಂದಿನ ಕಾಲದಲ್ಲಿ ಸಾಮಾಜಿಕ ಕಳಕಳಿಯೊಟ್ಟಿಗೆ ಅಪ್ಪಟ ಸಾಹಿತ್ಯ ಹಾಗು ಸಂಗೀತದಿಂದ ಮೂಡುವ ಚಿತ್ರಗಳು ಮೂಡುವ ಕಾಲ ಮುಗಿದು ದಶಕಗಳೇ ಆಗಿವೆಯೋ ಎಂಬಂತಿದೆ. ಇಂತಹ ಸ್ಥಿತ್ಯಂತರದ ಕಾಲದಲ್ಲಿ ದೇಶೀ ಸಿನಿಮಾ ಇತಿಹಾಸದ ಪುಟಗಳಲ್ಲಿ ಸತ್ಯಜಿತ್ ಎಂಬ ಹೆಸರು ಧ್ರುವತಾರೆಯಂತೆ ಕಂಗೊಳಿಸುತ್ತಿದೆ. ಇಂತಹ ಧ್ರುವತಾರೆ ಜನಿಸಿ ಕಳೆದ ಮೇ 2ಕ್ಕೆ ಬರೋಬ್ಬರಿ ತೊಂಬಾತ್ತರು ವರ್ಷ. ರಾಜಕೀಯವೆಂಬ ಬಿಸಿನೆಸ್ನ ನಾಟಕದಾರಿಗಳನ್ನು ಅಥವಾ ಮಾಡಿರುವ ಮೂರು ಮುಕ್ಕಾಲು ಚಿತ್ರಕ್ಕೇ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿ ಸಾಧನೆಗೈದ ನಟಿಯೇನೋ ಎಂಬ ರೇಂಜಿನಲ್ಲಿ ದಿನ ಪೂರ್ತಿ ನೆಡೆಯುವ ಅವರ ಆಡಂಬರದ ಮದುವೆಯ ತುಣುಕುಗಳನ್ನು ವೈಭವೀಕರಿಸಿ ತೋರಿಸುವ ನಮ್ಮ ಮಾಧ್ಯಮಗಳು, ದೇಶದ ಹೆಸರನ್ನು ವಿದೇಶಿ ನೆಲಗಳಲ್ಲಿ ಮೊಳಗಿಸಿದ ಸತ್ಯಜಿತ್ ರಂತಹ ಧೀಮಂತರ ಹೆಸರನ್ನೇ ಅರಿಯದಿರುವುದು ಇತ್ತೀಚಿನ ದಿನಗಳ ನಮ್ಮ ವಿಪರ್ಯಾಸ.

Friday, May 12, 2017

ಇವರು ನೋವುಗಳ ಹತ್ತಿಕ್ಕಿ ನಗುವನ್ನು ಹೊತ್ತಿಸುವ ಅದೃಷ್ಯವಾಣಿಗಳು..!!


ಮಹಾನಗರಿಗಳ ಟ್ರಾಫಿಕ್ ಜಾಮ್ ಗಳೆಂಬ ಕಿರಿಕಿರಿ ಯಾರಿಗೆ ತಾನೇ ಇಷ್ಟ? ಇಳಿ ವಯಸ್ಸಿನಲ್ಲೂ ತನ್ನ ಮಾಲೀಕನ ಜಿಪುಣುತನಕ್ಕೆ ಮಣಿದು ಸಾಯುವವರೆಗೂ ಗೇಯುವ ಎಂಜಿನ್ ಗಳ ಆಕ್ರಂದನದ ದಟ್ಟ ಹೊಗೆಯಾಗಲಿ, ಪಕ್ಕದಲ್ಲೆಲ್ಲೋ ಮರಳುಗಾಡಿನ ಬೆಟ್ಟವೇ ಎದ್ದು ಕೂತಿರುವಂತೆ ಕಣ್ಣು ಕಿವಿ ಮೂಗು ಬಾಯಿ ಎಲ್ಲೆಂದರಲ್ಲಿ ಹೊಕ್ಕು ಉಪದ್ರವ ಮಾಡುವ ಧೂಳಾಗಲಿ, ಹುಚ್ಚು ನಾಯಿಗಳ ಸಂತೆಯೇ ತಮ್ಮನ್ನು ಅಟ್ಟಾಡಿಸಿಕೊಂಡು ಬಂದವೇನೋ ಎಂಬಂತೆ ಹೆದರಿ ಬೊಬ್ಬಿಕ್ಕುವ ವಾಹನಗಳ ರಣಕಹಳೆ ಅಥವಾ ತಲೆಗೆದರಿ ಚಿಂದಿ ಬಟ್ಟೆಯನ್ನುಟ್ಟು ಅನುಕಂಪದ ಕಂಗಳಿಂದ ಕೈಯಲ್ಲಿರುವ ಹೂವನ್ನೋ, ದಿನಪತ್ರಿಕೆಗಳನ್ನೋ ಅಥವಾ ಮತ್ಯಾವುದೋ ಮಕ್ಕಳನ್ನು ಸೆಳೆಯುವ ಅಂದದ ಗೊಂಬೆಯನ್ನೂ ಹಿಡಿದು ಬೇಡವೆಂದರೂ ಕೊಂಡುಕೊಳ್ಳುವಂತೆ ಪೀಡಿಸುವ ಎಳೆವಯಸ್ಸಿನ ಹುಡುಗರ ಉಪಟಳ, ಇವೆಲ್ಲವನ್ನು ಘಂಟೆಗಳ ಕಾಲ ಅನುಭವಿಸಲು ಋಷಿಮುನಿಗಳ ತಾಳ್ಮೆ ಯೂ ಕೆಲವೊಮ್ಮೆ ಸಾಲದು.

ಸಾಕಪ್ಪ ಸಾಕು ಎನ್ನುತ ನೀಲಕಂಠನ ಕತ್ತಿನ ಹಾವಿನಂತಿರುವ 'ಹ್ಯಾಂಡ್ಸ್ -ಫ್ರೀ' ಗಳನ್ನು ಎಳೆದು ಕಿವಿಯೊಳಗೆ ತೂರಿಸಿಕೊಂಡು, ಮೊಬೈಲ್ ನಿಂದ FM ನ ಬಟನ್ ಅನ್ನು ಒಮ್ಮೆ ಒತ್ತಿದರೆ ಅಲ್ಲೂ ಸಹ ‘ಹಾಡ್’ ಗಳಿಗಿಂತ ಜಾಸ್ತಿ ತಲೆ ಚಿಟ್ಟಿಡಿಸುವ 'ಆಡ್’ ( Ad ) ಗಳ ಸಂತೆಯೇ! ಕೆಲವೊಮ್ಮೆ ಬೇರೆ ದಾರಿಯಿಲ್ಲದೆ ಈ Ad ಗಳ ಸಂಗೀತವನ್ನೇ ಚಿತ್ರಗೀತೆಗಳಂತೆ ಭಾವಿಸಿ ತೃಪ್ತರಾಗಬೇಕಾಗುತ್ತದೆ. ಸಾಲದಕ್ಕೆ ರೇಡಿಯೋ ಜಾಕಿಗಳು. ಮಾತಿನ ಯಂತ್ರದಂತೆ ಬಡಬಡಿಸುವ ಅವರ ಚೀರಾಟ. ಹಲವು ಬಾರಿ ಇವರುಗಳ ಬಣ್ಣಬರಿತ ಆ ಅದೃಶ್ಯ ನಟನೆಗೆ ಕೇಳುಗ ಕುಪಿತಗೊಂಡರೆ, ಕೆಲವೊಮ್ಮೆ ಈ ಚೀರಾಟಗಳೇ ತುಂಟಾಟಗಳಗಿ ಅವುಗಳಲ್ಲೇ ಮರೆತುಬಿಡುತ್ತಾನೆ. ಕೆಲವರಿಗಂತೂ ಸಂಜೆ ಸರಿಯಾಗಿ ಇದೆ ಸಮಯಕ್ಕೆ, ಇದೆ ಸಿಗ್ನಲ್ ನ ದಟ್ಟ ಸದ್ದಿನಲ್ಲಿ ತನಗರಿಯದಂತೆ ಕೈಗಳು FM ಅನ್ನು ಹೊತ್ತಿಸಿಬಿಡುತ್ತವೆ, ಇಂತಹ ಕೆಲವು RJ ಗಳ ಮಾತಿನ ಪುಳಕ ತಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯಲು ತವಕಿಸುತ್ತಿರುವಂತೆ! ಆ ಮುದ್ದು ಮುದ್ದಾದ ಮಾತುಗಳು, ನೊಂದ ಮನಸ್ಸುಗಳಿಗೆ ಸಾಧ್ಯವಾದಷ್ಟೂ ಸಾಂತ್ವನ ತುಂಬುವ ಕಲೆ, ನಗಲು ಹಾಗು ನಗಿಸಲು ಪ್ರಯತ್ನಿಸುವ ಜೋಕುಗಳು ಹಾಗು ಅದಕ್ಕೆ ತಕ್ಕ ಮಟ್ಟಿನ ‘ಸೆನ್ಸ್ ಆಫ್ ಹ್ಯುಮರ್’ ಸಾಲದಕ್ಕೆ ಫೋನ್ ಹಾಯಿಸಿ ಆಕಡೆಯಿಂದ ಮನಬಂದಂತೆ ಉಗಿಸಿಕೊಂಡರೂ ಮನ ಕುಗ್ಗದ ಕ್ಯಾರೆಕ್ಟರ್ ಈ RJ ಗಳದ್ದು.

ಕೋಳಿಯೂ ತನ್ನ ಕೊನೆ ಗೊರಕೆಯನ್ನು ಹೊಡೆಯುವ ಮುನ್ನವೇ, ದೂರದಲ್ಲೆಲ್ಲೋ ಸ್ವಯಂಘೋಷಿತ ನಗರಪಾಲಕ (ಗೂರ್ಖಾ) ತನ್ನ ಸೀಟಿಯನ್ನು ಊದುತ್ತಿರುವಾಗಲೇ, ಅರ್ದನ್ಬರ್ದ ನಿದ್ರೆಯಲ್ಲೇ ಎದ್ದು, ಚುಮು ಚುಮು ಚಳಿಗೆ ಒಂದು ಲೀಟರ್ ನಷ್ಟು ದೊಡ್ಡ ಲೋಟದಲ್ಲಿ ಕಾಫಿಯನ್ನೂ, ಟೀ ಯನ್ನೂ ಹಿಡಿದು ಮೈಕ್ನ ಮುಂದೆ ಕೂತು 'ಶುಬೋಧಯ' ಎಂದು ದೀರ್ಘವಾಗಿ ಹೇಳಿದರೆ ಅದೇನೋ ಒಂದು ಬೆಳಗಿನ ಉಲ್ಲಾಸ ಪೇಪರ್ ಹಾಕುವ, ಹಾಲನ್ನು ಮಾರುವ ಹಾಗು ಹೂವನ್ನು ಪೋಣಿಸುವ ಸಾವಿರಾರು ವರ್ತಕರಿಗೆ. ಆ ಕ್ಷಣದಿಂದ ಶುರುವಾಗಿ ನಂತರದ ಮೂರೋ ನಾಲ್ಕೋ ಘಂಟೆಯೊ ಒಂದೇ ಸಮನೆ ಮುಂಗಾರಿನ ಮಳೆಯಂತೆ RJ ತನ್ನ ಮಾತುಗಳನ್ನು ಸುರಿಸಿದರೆ ಇತ್ತಕಡೆ ಅದೆಷ್ಟೋ ಲಕ್ಷ ಜನರಿಗೆ ಸೂರ್ಯ ಆಳೆತ್ತರಕ್ಕೆ ಬಂದಿರಬಹುದು ಎಂಬುದರ ಸಂದೇಶ ರವಾನೆಯಾಗುತ್ತದೆ. ಅದೇ ತುಸು ಒಳಗೆ ಹಳ್ಳಿಗಳಾದರೆ ಚಿಂತನ-ಮಂಥನ, ಕೃಷಿವಾರ್ತೆ, ಪ್ರದೇಶ ಸಮಾಚಾರ, ಹಿತವಚನ ಎಂಬ ಉದ್ದುದ್ದದ ಕಾರ್ಯಕ್ರಮಗಳು. ಎಲ್ಲದರಲ್ಲೂ ನಯವಾಗಿ, ವಿನಯದಿಂದ, ಕೇಳಿದರೆ ಮತ್ತೂ ಕೇಳಬೇಕೆನಿಸುವ ವಾಚಕರ ಮಧುರ ಧ್ವನಿ. ಸಿಟಿಯಲ್ಲಿ ಬೆಳಂಬೆಳ್ಳಗೆ ತ್ರಾಸನ್ನು ಕೊಡುವ ಪಟ್ ಪಟಾಕಿ, ಕಿರಿಕ್ ಹುಡ್ಗ, ತರ್ಲೆ ರಾಮ ಎಂಬ ಏನೇನೋ ಬಿರುದುಗಳನ್ನು ಹೆಣೆದುಕೊಂಡಿರುವ ಹುಡುಗ ಹುಡುಗಿಯರ ಸದ್ದು. ಅದೇನೇ ಆದರೂ ಬಹಳಷ್ಟು ಮಂದಿಗೆ ಒಂದು ದಿನ ಇವರುಗಳ ಸದ್ದೆನಾದರೂ ಕಿವಿಗೆ ಬೀಳದಿದ್ದರೆ ದಿನವೇ 'ಕೋಯಾ ಕೋಯಾ ಚಾಂದ್, ಖುಲಾ ಆಸಮನ್' ಎಂಬ ಹಾಡಿನಂತಾಗಿಬಿಡುತ್ತದೆ.

ಇವೆಲ್ಲವನ್ನು ಗಮನಿಸಿದರೆ, RJ ಗಳ ಮಾತನ್ನು ಕೇಳುತ್ತಿದ್ದರೆ, ಇವರಿಗೇನು ನಿಜ ಜೀವನದಲ್ಲಿ ದುಃಖ, ಸಿಟ್ಟು, ನೋವು, ಚಿಂತೆ, ಎಂಬೆಲ್ಲ ಫ್ಯಾಕ್ಟರ್ ಗಳು ಸತಾಯಿಸುವುದಿಲ್ಲವೋ ಎಂದು ಅನ್ನಿಸದೆ ಇರುವುದಿಲ್ಲ. ಒಂದು ಪಕ್ಷ ಇದ್ದರೂ ಅವರು ತೋರಿಸಿಕೊಳ್ಳುವುದಿಲ್ಲ ಎಂಬೊಂದು ಲೋಕಾರೂಢದ ಮಾತು ನಮ್ಮನ್ನು ಸುಮ್ಮನಾಗಿಸುತ್ತದೆ. ಆದರೆ ತಕ್ಷಣ ಮತ್ತೊಂದು ಪ್ರೆಶ್ನೆ ನಮ್ಮನ್ನು ಬಹುವಾಗಿ ಕಾಡದೇ ಇರುವುದಿಲ್ಲ. ಅದೇನೇ ದುಃಖವಿದ್ದರೂ, ನೋವುಗಳ ಸರಮಾಲೆಯನ್ನು ಹೊತ್ತಿದರೂ ಅವೆಲ್ಲವುಗಳಿಗೆ ಕೆಲಕಾಲ ಬ್ರೇಕ್ ಹಾಕಿ ನಗುವೆಂಬ ಕಳಸವನ್ನು ಮುಖದ ಮೇಲೆ ತೊಡುವ ಕಲೆಯನ್ನು ಇವರುಗಳು ಕಲಿತಿದ್ದಾದರೂ ಹೇಗೆ? ಈ ಕೆಲೆ ಯಾವುದೇ ಆಸ್ಕರ್ ವಿಜೇತ ನಟ ಅಥವಾ ನಟಿಗೂ ಕಡಿಮೆ ಇರುವುದಿಲ್ಲ. ಇದೊಂದು ನಟಿಸುವ ಕಲೆಯೋ ಅಥವಾ ಸಂತೋಷದ ಜೀವನವನ್ನು ನೆಡೆಸಲು ಇರುವ ಸ್ಪೂರ್ತಿಯ ಸೆಲೆಯೋ? RJ ಗಳೇ ಬಲ್ಲರು!

ಆದರೆ,

ಎದ್ದೂ ಬಿದ್ದೂ ಮನೋರಂಜನೆಯನ್ನೇ ಮನೋಕಾಮನೆಯಾಗಿಸಿಕೊಂಡಿರುವ ಇಂದಿನ RJ ಗಳಿಗೂ, ಮನೆಯ ಒಬ್ಬ ಅದೃಶ್ಯ ಸದಸ್ಯನಂತೆ ಜೊತೆಗೆ ಇರುತ್ತಿದ್ದ ಅಂದಿನ ರೇಡಿಯೋ ವಾಚಕರಿಗೂ ಅಜಗಜಾಂತರ ವ್ಯತ್ಯಾಸವಿರುವುದು ತಿಳಿದವರು ಬಲ್ಲ ವಿಷಯ. ಹೆಚ್ಚಾದ ರೇಡಿಯೋ ಕೇಂದ್ರಗಳ ಸ್ಪರ್ಧೆಯಲ್ಲಿ ನಾ ಮುಂದು ತಾ ಮುಂದು ಎನ್ನುತಾ ತಿಳಿದೋ ತಿಳಿಯದೆಯೋ ಸಿಕ್ಕ ಸಿಕ್ಕವರಿಗೆಲ್ಲ ಫೋನಾಯಿಸಿ, ಕಿಚಾಯಿಸಿ , ಸತಾಯಿಸಿ, ಕೊನೆಗೆ 'ನಾವು ಮಾಡಿದೆಲ್ಲ ತಮಾಷೆಗಾಗಿ’ ಎಂದು ನಯವಾಗಿ ಚಾಪೆಯ ಅಡಿ ತೂರಿಕೊಂಡಂತೆ ನಟಿಸಿದರೆ ಮೌಂಟ್ ಎವರೆಸ್ಟ್ ನನ್ನು ಒಂದೇ ಉಸಿರಿನಲ್ಲಿ ಹತ್ತಿದ ಸಾಧಕರಂತೆ ಅವರನ್ನು ಕಾಣಲಾಗುತ್ತದೆ. ಅಲ್ಲಿ 'ಕುರಿ' ಎನಿಸಿಕೊಂಡವನು ಪಡುವ ವೇದನೆಗಿಂತ, ಕೇಳುಗನಿಗಿಂತಲೂ ಹೆಚ್ಚಾಗಿ ನಗುವ RJ ಮಹಾರಾಜನೇ ಸರ್ವರಿಗೂ ಹಿತವಾಗುತ್ತಾನೆ. ಹಲವು ಬಾರಿ ಇಂತಹ ಎಡಬಿಡಂಗಿ ಕಾರ್ಯಕ್ರಮಗಳೇ ಅದೆಷ್ಟೋ ಜನರ ಪ್ರಾಣಕ್ಕೆ ಕುತ್ತು ತರುವುದು ಉಂಟು. ತಂದಿರುವುದೂ ಉಂಟು! ಪ್ರೀತಿಸುವ ಹುಡುಗಿಯ ಅಪ್ಪನಾಗಿ, ಏರ್ಪೋರ್ಟ್ನ ಕಸ್ಟಮ್ಸ್ ಅಧಿಕಾರಿಯಾಗಿ, ಪಕ್ಕದ ಗಲ್ಲಿಯ ಪೊರ್ಕಿ ನಾಗರಾಜನಾಗಿ ಅಥವಾ ಯಾವುದಾದರೊಂದು ಆಸ್ಪತ್ರೆಯ ಡಾಕ್ಟರ್ ನಂತೆ ಬೆಳ್ಳಂಬೆಳಗ್ಗೆ ಅಮಾಯಕರನ್ನು ಸತಾಯಿಸುವ ಜರೂರತ್ತಾದರೂ ಯಾರಿಗಿದೆ? ಜರೂರತ್ತಿರುವುದು ನಿಜವೇ ಆದರೆ ಅದು ಇವೇ ರೇಡಿಯೋ ಚಾನೆಲ್ ಗಳಿಗೆ. ನಾನೇ ನಂಬರ್ ಒನ್ ಆಗಬೇಕೆಂಬ ಅತಿಆಸೆಯ ಮನಸ್ಸುಗಳಿಗೆ. ಒಂದೊಳ್ಳೆ ಕಾರ್ಯಕ್ರಮವನ್ನು ನೀಡಿ ರಂಜಿಸಲಾಗದ ರಂಜನಾಕಾರರಿಗೆ, ಇಂತಹ ಕಳಪೆ ಕಾರ್ಯಕ್ರಮಗಳೇ ಮಹಾಧಾರ.

ಒಟ್ಟಿನಲ್ಲಿ ಮನೆಯೆಂಬ ಗುರಿಯನ್ನು ತಲುಪಲು ಎದುರಾಗುವ ಟ್ರಾಫಿಕ್ ಜಾಮ್ ಗಳೆಂಬ ಕಿರಿಕಿರಿಗಳ ಮದ್ಯೆ ಯಾವುದೊ ಲೋಕದಲ್ಲಿ ಕಳೆದು ಹೋಗುವ ಕೇಳುಗನ ಚಿತ್ತಕ್ಕೆ RJ ಗಳ ಬಗ್ಗೆ ಇಷ್ಟೆಲ್ಲಾ ವಿಶ್ಲೇಷಣೆ ಮಾಡುವ ಸಂಯಮವಿರುವುದಿಲ್ಲ. 'ಎಂಥ ಸೂಪರ್ ವಾಯ್ಸು ಮಗ' ಎನ್ನುತ್ತಾ ಕಲ್ಪಿತ ಲೋಕದಲ್ಲೊಂದು ಅಂದವಾದ ಚಹರೆಯನ್ನಿಟ್ಟುಕೊಂಡು ತನ್ನಲ್ಲೇ ತಾನು ಕಳೆದು ಹೋಗುವ ಅನೇಕರಿಗೆ ಇಹಲೋಕದ ಪ್ರಜ್ಞೆ ಬರುವುದು ಹಿಂದಿರುವ ಗಾಡಿಯ ರಣಚಂಡಿಯ ಕಹಳೆಯ ಜೊತೆಗೆ ಬೈಗುಳದ ಪದಗಳೂ ಕೇಳತೊಡಗಿದಾಗ. ಅಲ್ಲಿಂದ ಕೊಂಚ ದೂರದಲ್ಲಿ ಸಿಗುವ ಮತ್ತ್ತೊಂದು ಸಿಗ್ನಲ್ಲಲ್ಲಿ ಮತ್ತದೇ ಭಾವಲೋಕ! ಹೀಗೆ ಹ್ಯಾಂಡ್ಸ್ ಫ್ರೀ ಗಳನ್ನು ಹಾಕಿಕೊಂಡು RJ ಗಳ ಮಾತುಗಳಿಗೆ ತನ್ನಲ್ಲೇ ತಾನು ನಗುವುದ ಕಂಡು ಪಕ್ಕದ ಆಂಟಿ ಅಂಕಲ್ ಗಳು ಮುಖ ಮುರಿದುಕೊಳ್ಳುವುದೂ ಉಂಟು.
ಒಟ್ಟಿನಲ್ಲಿ ಹೆಸರಿಗೆ ತಕ್ಕಂತೆ ಆಕಾಶದಿಂದ ಬರುವ ಈ ವಾಣಿಗಳು ಕೇಳುಗರನ್ನು ನಗಿಸಿ, ನಲಿಸಿ, ಆಡಿಸಿ, ಹಾಡಿಸಿ, ಸತಾಯಿಸಿ, ಸಾಕು ಸಾಕಾಗಿಸಿ, ಬೇಕು ಬೇಡವಾಗಿಸಿ, ಚರ್ಚಿಸಿ, ಚಿಂತನೆಗೊಳಪಡಿಸಿ, ಕೊನೆಗೆ ಮಲಗುವ ಜೋಗುಳವೂ ಆಗುವುದುಂಟು. ಅಲ್ಲದೆ ಹಲವು ಬಾರಿ ಯಾರೊಟ್ಟಿಗೂ ಹೇಳಿಕೊಳ್ಳಲಾಗದ ನೋವು ನಲಿವುಗಳನ್ನು ಬಹಳಷ್ಟು ಜನರು RJಗಳೊಟ್ಟಿಗೆ ತೋಡಿಕೊಳ್ಳುವುದನ್ನು ಕೇಳಬಹುದು. ಯಾವುದೊ ಒಂದು ಅತಿಮಾನುಷ ಶಕ್ತಿಯಂತೆ ಅವರ ಮಾತುಗಳು ನೊಂದವರನ್ನು ಸಂತೈಸಿ ಕೊಂಚ ಮಟ್ಟಿನ ಜೀವನ ಪ್ರೀತಿಯನ್ನಾದರೂ ಅವರಲ್ಲಿ ಜಾಗೃತಗೊಳಿಸುತ್ತದೆ. ಹೀಗೆ ವರ್ಷವಿಡೀ ಅದೇ ಸಮಯಕ್ಕೆ ಅದೇ ಜಾಗದಲ್ಲಿ ಅದೇ ಜೀವನೋತ್ಸಾಹವನ್ನು ಬೀರುವ ಅವರ ಅವಿರತ ಮಾತುಗಳು ಕೇಳುಗನಲ್ಲಿ ತಾವೂ ಸಹ ಅಂತಹ ವ್ಯಕ್ತಿತ್ವಧಾರಿಗಳಂತಾಗಲು ಪ್ರೇರೇಪಿಸದಿರವು.

ಅದೇನೇ ಕಷ್ಟ ನೋವುಗಳಿದ್ದರೂ ಎಲ್ಲವನ್ನು ಮರೆತು ಕೆಲಕಾಲಕ್ಕಾದರೂ ಬೇರೆಯವರ ನಗುವಿಗಾಗಿ ತಮ್ಮನ್ನು ಮುಡಿಪಿಡುವ ಇವರ ಆ ಡೆಡಿಕೇಶನ್ ನೂರಕ್ಕೆ ನೂರು ಅನುಕರಣೆಗ್ಯೂಗ್ಯ. ದಿನವಿಡೀ ಮುಖವನ್ನು ಗಂಟ್ಟಿಕ್ಕಿಕೊಂಡು, ಚಿಟಿಕೆಯಷ್ಟು ಕಷ್ಟವನ್ನೇ ಬೆಟ್ಟದಷ್ಟು ಮಾಡಿ ಕೊರಗುವ ಹಲವರಿಗೆ ಇಂತಹ ಅದೃಶ್ಯ ವ್ಯಕ್ತಿತ್ವಗಳು ಸ್ಪೂರ್ತಿಯ ದೀಪಗಳಾಗಬಹುದು. 'ನಗು ನಗುತ ನಲಿ ನಲಿ ಏನೇ ಆಗಲಿ' ಎಂಬ ಹಾಡಿನಂತೆ ನಗುವೆಂಬ ಟಾನಿಕ್ ನನ್ನು ಆಗಾಗ ಸೇವಿಸುತ್ತಿದ್ದರೆ ಬದುಕಿನ ಬಂಡಿಗೆ ಅಗತ್ಯವಾದ ಕೀಲೆಣ್ಣೆಯ ಅಭಾವವನ್ನು ಇದು ಬರಿಸಬಲ್ಲದು.. ಮಗುವಿನ ನಗುವಿನ ಅಪ್ಪಟ ಒಳಪಿನಂತೆ ನಲಿಯುವ ಇವರುಗಳೂ ಸಹ ಇಂತಹ ಟಾನಿಕ್ನ ಸಣ್ಣ ಸಣ್ಣ ಫ್ಯಾಕ್ಟರಿಗಳಂತೆ! ಆದರೆ 'ತಮಾಸೆ ಹೋಗಿ ಅಮಾಸೆ ಆಗ್ಬಾರ್ದು' ಎಂಬ ಮಾತಿನಂತೆ ಕನಿಷ್ಠದ ಸಾಮಾಜಿಕ ಕಾಳಜಿಯೊದಿಂಗೆ ಜನಮಾನಸದಲ್ಲಿ ಬೆರೆಯುವ ಹಂಬಲವಿದ್ದರೆ ಇವರು ಯಾವ ದೊಡ್ಡ ಆದರ್ಶ ವ್ಯಕ್ತಿಗಳಿಗೂ ಕಡಿಮೆಯಲ್ಲ.

Friday, May 5, 2017

ವಿಂಡೀಸ್ ಕ್ರಿಕೆಟ್ : ಹಣವೆಂಬ ಸುಳಿಯಲ್ಲಿ ಪ್ರತಿಭೆಯ ಹುಡುಕಾಟ !!

ವಿಶ್ವ ಕ್ರಿಕೆಟ್ ನನ್ನೇ ದಶಕಗಳ ಕಾಲ ನಲುಗಾಡಿಸಿಬಿಟ್ಟಿದ್ದ ತಂಡವದು. ಆಡುವುದು ದೂರದ ಮಾತು, ಆ ತಂಡದ ಆಟಗಾರರನ್ನು ನೋಡಿಯೇ ಎದುರಾಳಿಯ ಮುಖದ ಬೇವಳಿಯುತಿತ್ತು. ಬ್ಯಾಟ್ ಹಿಡಿದು ಪಿಚ್ ಗೆ ಬಂದವನಿಗೆ ರನ್ ಗಳಿಸುವುದಕಿಂತ ಹೆಚ್ಚಾಗಿ ಜಿಂಕೆಯಂತೆ ಜಿಗಿಸಲ್ಪಡುತ್ತಿದ್ದ ಗುಂಡಿನ ವೇಗದ ಬೌಲ್ ಗಳಿಂದ ತಪ್ಪಿಸಿಕೊಳ್ಳುವುದೇ ಒಂದು ದೊಡ್ಡ ಸವಾಲು. ಆ ತಂಡದ ವಿರುದ್ಧ ಪಂದ್ಯ ಡ್ರಾ ಆದರೂ ಎದುರಾಳಿ ತಂಡಕ್ಕೆ ಗೆದ್ದಷ್ಟೇ ಸಂಭ್ರಮ! ಬೇರೆ ತಂಡಗಳಿಂದ ರಚಿಸಲ್ಪಟ್ಟರೆ ಮುನಿಸಿಕೊಳ್ಳುವಂತೆ ದಾಖಲೆಗಳು ಅಂದು ಈ ತಂಡದಿಂದಲೇ ಮೂಡುತಿದ್ದವು. ಎಪ್ಪತ್ತರ ನಂತರದ ಎರಡು ದಶಕಗಳಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ತಂಡವೆಂಬ ದಾಖಲೆಯಾಗಲಿ, ವಿಶ್ವಕಪ್ ನ ಮೊದಲ ಮೂರು ಆವೃತಿಯಲ್ಲಿ ಸತತವಾಗಿ ಫೈನಲ್ನ ವರೆಗೂ ಬಂದು ಎರಡು ಬಾರಿ ವಿಶ್ವಕಪ್ ಅನ್ನು ಗೆದ್ದ ಮೊದಲ ತಂಡವೆಂಬ ದಾಖಲೆ, 1980 ರಿಂದ 95 ನಡುವೆ ಒಂದೂ ಟೆಸ್ಟ್ ಸರಣಿಯನ್ನು ಸೋಲದ ಹೆಗ್ಗಳಿಕೆ, ಅತಿ ಹೆಚ್ಚಿನ ರನ್ ಗಳಿಕೆ, ಮಹೋತ್ತಮವಾದ ಬೌಲಿಂಗ್ ಏಕಾನಮಿ ಹಾಗು ಸರಾಸರಿಯನ್ನು ಹೊಂದಿದ್ದ ಆ ತಂಡ ಆಡುತಿದ್ದ ಭಾಗಶಃ ಪಂದ್ಯಗಳ ಫಲಿತಾಂಶ ವಿಶ್ವಕಪ್ ನಲ್ಲಿ ಭಾರತ ಹಾಗು ಪಾಕಿಸ್ತಾನದ ನಡುವಿನ ಫಲಿತಾಂಶದಂತೆ 'ಪಾರದರ್ಶಕ'ವಾಗಿರುತ್ತಿತ್ತು! ಎಪ್ಪತ್ತರ ದಶಕದ ಆ ತಂಡವನ್ನು ಒಮ್ಮೆ ನೆನೆಸಿಕೊಂಡರೆ ಯು-ಟ್ಯೂಬಿನಲ್ಲಿ ತಕ್ಷಣ ಅಂದಿನ ಒಂದೆರೆಡು ಪಂದ್ಯಗಳನ್ನು ನೋಡಬೇಕೆಂಬ ಬಯಕೆ ಮೂಡದೇ ಇರುವುದಿಲ್ಲ.

ಇಂದು ಹೇಳ ಹೊರಟಿರುವುದು ಒಂದು ಕಾಲಕ್ಕೆ ಬೆಟ್ಟದಷ್ಟು ಪ್ರಸಿದ್ದಿಯನ್ನು ಹೊಂದಿ ಇಂದು ಆಟಕುಂಟು ಲೆಕ್ಕಕಿರದಂತೆ ಮೂಲೆಗುಂಪಾಗಿರುವ ಕ್ರಿಕೆಟ್ ತಂಡದ ಬಗ್ಗೆ. ವೆಸ್ಟ್ ಇಂಡೀಸ್ ಅಥವಾ ವಿಂಡೀಸ್. ಮೊದಲು ಹೇಳಿದಂತೆ ಅಂದು ಯಶಸ್ಸಿನ ಶಿಖರದಲ್ಲಿದ್ದ ಈ ತಂಡ ಗೆದ್ದು ತೋರಿಸದ ಸರಣಿಗಳಿಲ್ಲ ಮಾಡದೆ ಇರುವ ದಾಖಲೆಗಳಿಲ್ಲ. ಸರ್ ಗಾರ್-ಫೀಲ್ಡ್ ಸೋಬರ್ಸ್, ಜಾರ್ಜ್ ಹೆಡ್ಲಿ, ಕ್ಲೆಯ್ವ್ ಲಾಯ್ಡ್, ವಿವ್ ರಿಚರ್ಡ್ಸ್, ಮೈಕಲ್ ಹೋಲ್ಡಿಂಗ್ ಹೀಗೆ ಹೇಳುತ್ತಾ ಹೋದರೆ ವಿಂಡೀಸ್ ಎಂಬ ತಂಡವನ್ನು ವಿಶ್ವಕ್ಕೆ ಪರಿಚಯಿಸಿಕೊಟ್ಟ ದಂತಕಥೆಗಳಂತೆ ಅಂದಿನ ಒಬ್ಬೊಬ್ಬ ಆಟಗಾರನೂ ಪರಿಚಯವಾಗುತ್ತಾನೆ.

ಅಂತಹ ತಂಡವೊಂದು ಇಂದು ಏನಾಗಿದೆ? ನೀರು ಕುಡಿದಷ್ಟೇ ಸರಾಗವಾಗಿ ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ತಂಡವಿಂದು ನಕ್ಷತ್ರಗಳಿರದ ಆಗಸದಂತಾಗಿರುವು ಎಲ್ಲರಿಗೂ ಸ್ಪಷ್ಟ. (1976 ರಿಂದ 2000 ನೇ ಇಸವಿಯವರೆಗೂ ಆಡಿದ ಟೆಸ್ಟ್ ಪಂದ್ಯಗಳಲ್ಲಿ 71 ನ್ನು ಗೆದ್ದು 20 ಪಂದ್ಯಗಳನ್ನು ಸೋತರೆ ಅದೇ 2000 ದಿಂದ ಈಚೆ ಮುಂದಿನ ಹದಿನೈದು ವರ್ಷಗಳಲ್ಲಿ ಆಡಿದ ಪಂದ್ಯಗಳಲ್ಲಿ 78 ಅನ್ನು ಸೋತು ಗೆದ್ದಿರುವುದು ಕೇವಲ 17 ಪಂದ್ಯಗ ಳು!!) ಈ ಮಟ್ಟಿನ ಭಾರಿ ಮುಗ್ಗರಿಸುವಿಕೆಗೆ ನಿಜವಾಗ ಕಾರಣವೇನು? ಅಂದಿನ ವಿಂಡೀಸ್ ಆಟಗಾರರಿಗೂ, ಇಂದಿನ 'ಪಾರ್ಟಿ ಡ್ಯೂಡ್ಸ್' ಗಳಿಗೂ ಆಟದಲ್ಲಿ ಕೊಂಚ ಅಂತರವಿರುವು ನಿಜವಾದರೂ ಈ ರೀತಿಯ ಮೂಲೆಗುಂಪಾಗುವಿಕೆ ಮೊಘಲ್ ಸಾಮ್ರಾಜ್ಯದಂತೆ ಎಲ್ಲವನ್ನು ಗೆದ್ದು ಮದ, ಅಸೂಯೆ, ಒಳಜಗಳ ಗಳೆಂಬ ಕಾರಣಗಳಿಂದ ಹೇಳಹೆಸರಿಲ್ಲದಂತಾದ ಸಾಮ್ರಾಜ್ಯದಂತೆ ಈ ತಂಡ ಗೋಚರಿಸುತ್ತದೆ. . ಇದರ ಶ್ರೇಯ ಆಟಗಾರಿಗೆ ಕೊಡಬೇಕೋ ಅಥವಾ ವಿಂಡೀಸ್ ಕ್ರಿಕೆಟ್ ಮಂಡಳಿಯ ಮುಡಿಗೆ ಅರ್ಪಿಸಬೇಕೋ ಎರಡೂ ಗೋಜಲು.

ಈ ವಿಷಯವನ್ನು ಹೆಚ್ಚು ಹೆಚ್ಚು ಕೆದಕುತ್ತಾ ಹೋದಷ್ಟೂ ಬೆಳಕಿಗೆ ಬರುವುದು ಕ್ರಿಕೆಟ್ ಮಂಡಳಿ ಹಾಗು ಆಟಗಾರರ ನಡುವೆ ಇರುವ ಸಂಘರ್ಷ. ಇದು ವಿಶ್ವದ ಬಾಗಶಃ ದೇಶಗಳ ಕತೆಯೇ ಆದರೂ ಯಾವ ಮಂಡಳಿಗಳೂ ಸಹ ದೇಶವನ್ನು ಪ್ರತಿನಿಧಿಸುವ ತಂಡವನ್ನು/ಆಟಗಾರರನ್ನು ಇಂತಹ ಅಧೋಗತಿಗೆ ತಂದು ನಿಲ್ಲಿಸುವುದಿಲ್ಲ. ಅಲ್ಲಿ ಮೊದಲ ಬಾರಿಗೆ ವಿವಾದ ಬುಗಿಲ್ಲೆದ್ದಿದ್ದು 2005 ರಲ್ಲಿ, ಸೌತ್ ಆಫ್ರಿಕಾದ ವಿರುದ್ಧದ ಪಂದ್ಯಕ್ಕೆ ಏಳು ಜನ ಆಟಗಾರರು ಗೈರಾಗಲು ತೀರ್ಮಾನಿಸಿದಾಗ. ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಕೂಡ ಅವರಲ್ಲಿ ಒಬ್ಬರಾಗಿದ್ದರು. ಕ್ರಿಕೆಟ್ ನ ದಂತಕಥೆಯೇ ಅಂದು ಮಂಡಳಿಯ ವಿರುದ್ಧ ಸಿಡಿದೆದ್ದರೆ ಯಾರಿಗೆ ತಾನೇ ಸಂಶಯ ಮೂಡುವುದಿಲ್ಲ? ಅದು ಒಂತರಾ ಗ್ರೇಗ್ ಚಾಪೆಲ್ ನ ನಿಜ ಬಣ್ಣವನ್ನು ಬಯಲು ಮಾಡಲು ಅಂದು ಸಚಿನ್ ಪ್ರೆಸ್ ನ ಮುಂದೆ ಬಂದಂತಿತ್ತು. ಒಟ್ಟಿನಲ್ಲಿ ಬೆಳೆಯಬೇಕಿದ್ದ ಎರಡನೆಯ ತಲೆಮಾರಿನ ವಿಂಡೀಸ್ ಆಟಗಾರಿಗೆ ಅಂದು ತಮ್ಮ ಅಧಿಕಾರಿಗಳ ಜೊತೆಯೇ ಬಿರುಕು ಮೂಡಿತ್ತು. ಈ ಬಿರಕು ಮಾತ್ರ ಮುಂದೆಂದೂ ಮುಚ್ಚದ ರೀತಿ ಬೆಳೆಯ ತೊಡಗಿತು. ಅಂದೊಮ್ಮೆ ವಿಂಡೀಸ್ ಕ್ರಿಕೆಟ್ ನ ದಂತಕಥೆ ಕಾರ್ಟ್ಲಿ ಆಂಬ್ರೋಸ್ ನ ಮನೆ ಸೈಕ್ಲೋನ್ ನಿಂದ ನುಚ್ಚು ನೂರಾದಾಗ ಆತ ವಿದೇಶದ ಪ್ರವಾಸದಲ್ಲಿದ್ದ. ವಿಷಯ ತಿಳಿದವನೇ ತಕ್ಷಣ ವಿಂಡೀಸ್ ಕ್ರಿಕೆಟ್ ಮಂಡಳಿ ಗೆ ಫೋನಾಯಿಸಿ ತನ್ನ ಕುಟುಂಬಕ್ಕೆ ತಾತ್ಕಾಲಿಕವಾಗಾದರೂ ಏನಾದರೂ ವ್ಯವಸ್ಥೆಯನ್ನು ಮಾಡಿಕೊಡಿ ಎಂದು ಬೇಡಿಕೊಂಡ. ಮಂಡಳಿ ಮಾತ್ರ ಮಾನವೀಯತೆಯ ದೃಷ್ಟಿಯಿಂದಲೂ ಸಹ ಒಂದಿಷ್ಟೂ ಸ್ಪಂಧಿಸಲಿಲ್ಲ. ಬೇರೆ ದಾರಿ ಕಾಣದೆ ಆತ ಕ್ರಿಕೆಟ್ ಪ್ರವಾಸವನ್ನು ಅರ್ಧಕ್ಕೆ ಬಿಟ್ಟು ಅಂದು ಮನೆಯ ದುರಸ್ತಿಗೆಂದು ವಾಪಾಸ್ ಬರುತ್ತಾನೆ. ಇಂತಹ ಹಲವಾರು ಘಟನೆಗಳು ವಿಂಡೀಸ್ ಆಟಗಾರರಲ್ಲಿ ಮಂಡಳಿಯ ವಿರುದ್ಧವಾಗಿ ದಟ್ಟ ಅಲೆಗಳನ್ನು ಒಳಗೊಳಗೇ ಸೃಷ್ಟಿಸತೊಡಗಿರುತ್ತವೆ. ಹೊರಬರಲು ಅವಕಾಶನಷ್ಟೇ ಇದಿರು ನೋಡುತ್ತಿರುತ್ತವೆ. ಹೀಗೆ ಇಪ್ಪತ್ತೊಂದನೇ ಶತಮಾನದ ಆದಿಯಲ್ಲಿ ಶುರುವಾದ ವಿಂಡೀಸ್ ತಂಡದ ಬೀಳುವಿಕೆ ಇಂದು ಪಾತಾಳವನ್ನು ಮುಟ್ಟುವ ಸನಿಹದಲ್ಲಿದೆ.

ಆ ಕದಂಬ ಬಾಹುಗಳು, ಚಚ್ಚಿದರೆ ಚೆಂಡೆ ಚೂರಾಗುವುದೇನೋ ಎಂಬ ಹೊಡೆತಗಳು, ಮುಡಿಯೆತ್ತರಕ್ಕೆ ಜಿಗಿಯುವ ಬೌಲಿಂಗ್ ದಾಳಿ, ಹೀಗೆ ನೋಡುಗ ಜಿಗಿದು ಕುಣಿಯುವಂತೆ ಮಾಡುವ ವಿಶ್ವಪ್ರಸಿದ್ಧ ಆಟಗಾರರಿದ್ದರೂ ನಷ್ಟದ ನೆಪಹೂಡ್ದಿ ತಂಡವನ್ನು ಹೀಗೆ ಸತಾಯಿಸುವುದು ಎಷ್ಟರ ಮಟ್ಟಿಗೆ ಸರಿ?

ಇಂದಿಗೆ ಸರಿಯಾಗಿ ಒಂದು ದಶಕದ ಹಿಂದೆ ಶುರುವಾದ ಟಿ-ಟ್ವೆಂಟಿ ಕ್ರಿಕೆಟ್ ಉಸಿರುಗಟ್ಟಿದ ಈ ತಂಡಕ್ಕೆ ಆಕ್ಸಿಜೆನ್ ನಂತೆ ಪರಿಣಮಿಸಿತ್ತು. ನವ ಮಾದರಿಯ ಈ ಹೊಡಿ ಬಡಿ ಆಟದಲ್ಲಿ ಮೆರೆಯತೊಡಗಿದ್ದು ಹೆಚ್ಚಾಗಿ ಇಲ್ಲಿನ ದೈತ್ಯರೇ! ಡ್ಯಾರೆನ್ ಸ್ಯಾಮಿ, ಕ್ರೈಸ್ ಗೈಲ್, ಮರ್ಲೊನ್ ಸ್ಯಾಮ್ಯುಲ್ಸ್, ಡೇವೆನ್ ಸ್ಮಿಥ್, ಆಂಡ್ರೇ ರುಸ್ಸೇಲ್, ಸುನಿಲ್ ನಾರೈನ್, Dwayne ಬ್ರಾವೊ, ಕೆರಿನ್ ಪೊಲ್ಲಾರ್ಡ್ ಹೀಗೆ ಕಟ್ಟಿಕೊಂಡ ವಿಂಡೀಸ್ ಪಡೆ ಶರವೇಗದಲ್ಲಿ ವಿಶ್ವ ಕ್ರಿಕೆಟ್ ನಲ್ಲಿ ಮೇಲೇರತೊಡಗಿತ್ತು. ಕೇವಲ ಒಂದೇ ದಶಕದೊಳಗೆ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿ ಮೆರೆಯಿತು. ಗತಿಸಿದ ವಿಂಡೀಸ್ ನ ಇತಿಹಾಸ ಇನ್ನೇನೂ ಮರುಕಳಿಸಬೇಕು ಎನ್ನುವಷ್ಟರಲ್ಲಿ ಮತ್ತದೇ ಅಸಮಾಧಾನದ ಹೊಗೆ ತಂಡವನ್ನು ಉಸಿರುಗಟ್ಟಿಸಿತು. ಒಗ್ಗಟ್ಟಾಗಿ ಸಾಗುವ ಕಾಡುಕೋಣಗಳ ಗುಂಪು ನರಭಕ್ಷಕನೊಂದನ್ನು ಕಂಡು ದಿಕ್ಕಾಪಾಲಾಗಿ ಓಡಿ ಕಣ್ಮರೆಯಾಗುವಂತೆ ಆಯಿತು. ಸದೃಢವಾಗಿ ಕಟ್ಟಲ್ಪಡುತ್ತಿದ್ದ ಗೋಡೆಯೊಂದು ಉರುಳಲು ಶುರುವಾಯಿತು.

ಇಂದು ಆಟವಾಡು, ನಾಳೆ ಪಾರ್ಟಿ ಮಾಡು, ನಾಡಿದ್ದು ನಿದ್ದೆ ಮಾಡು ನಂತರ ಮತ್ತೆ ಆಟವಾಡು ಎಂಬಂತೆ ತಂಡ ಮೋಜಿನ ಅಡ್ಡವನ್ನಾಗಿ ಟಿ-ಟ್ವೆಂಟಿ ಪಂದ್ಯಗಳನ್ನು ಪರಿಗಣಿಸಿತು.ದುಡ್ಡಿನ್ನ ಸಾಗರವೇ ಇಲ್ಲಿ ಈಜಲು ಸಿಗುವಾಗ ಊರಿನ ಹೊಲಸು ಕೆರೆಗೆ ನೆಗೆದು ಮೈಯನ್ನೇಕೆ ಕೊಳಕು ಮಾಡಿಕೊಂಡಾರು? ಪರಿಣಾಮ ವಿಶ್ವದ ಯಾವುದೇ ಮೂಲೆಯಲ್ಲಿಯಾದರು ಸರಿ, ಟಿ-ಟ್ವೆಂಟಿ ಪಂದ್ಯಗಳೆಂದರೆ ಇರುವೆಗಳಂತೆ ಈ ಆಟಗಾರರು ಮುತ್ತಿಕೊಳ್ಳುತ್ತಾರೆ. ಪಂದ್ಯಗಳನ್ನು ನೆಡೆಸುವ ಫ್ರಾಂಚೈಸಿಗಳಿಗೂ ಬೇಕಿರುವುದು ಅಬ್ಬರಿಸಿ ಬೊಬ್ಬಿಕ್ಕುವ ಇಂತಹ ಆಟಗಾರರೇ. ಹಣ ಹಾಗು ಮೋಜಿನ ರಂಗಿನಲ್ಲಿ ದೇಶ, ದೇಶದ ಕೀರ್ತಿ, ದೇಶದ ಭವಿಷ್ಯ ಎಂಬೆಲ್ಲ ಜವಾಬ್ದಾರಿಗಳನ್ನು ಕಾಲ ದೂಳಿನಂತೆ ಕೊಡವಿ ನೆಡೆಯುವ ಇಂತಹ ಆಟಗಾರರೇನು ಮುಗ್ದರೇನಲ್ಲ. ಮನೆಯಲ್ಲಿ ಕಷ್ಟವಿದ್ದ ಮಾತ್ರಕ್ಕೆ ಪೋಷಕರನ್ನೇ ಧಿಕ್ಕರಿಸಿ ಹೊರಬರುವುದು ಎಷ್ಟರ ಮಟ್ಟಿಗೆ ಸರಿ? ಅಂದೊಮ್ಮೆ ಜಮೈಕಾದ ವೇಗಿ ಮೈಕಲ್ ಹೋಲ್ಡಿಂಗ್ 'ನನ್ನ ದೇಶದ 5 ಮಿಲಿಯನ್ ಕ್ರೀಡಾಪ್ರೇಮಿಗಳಿಗೆ ನಾನು ಉತ್ತಮವಾಗಿ ಆಡುವುದು ಬಹು ಮುಖ್ಯ, ಏಕೆಂದರೆ ನಾಳೆ ಅವರು ಹೊಡೆದೆಯಲ್ಲ ತಲೆಯೆತ್ತಿ ಗರ್ವದಿಂದ ನೆಡೆಯಬೇಕು' ಎಂದಿದ್ದ. ಇಡೀ ವಿಶ್ವವನ್ನೇ ತನ್ನ ಮಾರಕ ಬೌಲಿಂಗ್ ನಿಂದ ಚೆಂಡಾಡಿಬಿಟ್ಟಿದ್ದ ಆತನ ಮಾತುಗಳು ಮುಂಬಂದ ಅದೆಷ್ಟೋ ಆಟಗಾರರಿಗೆ ಪ್ರೇರಣೆಯಾಯಿತು. ಆದರೆ ಒಬ್ಬರನ್ನೊಬ್ಬರು ದೋಷಿಸುವ ಕಿಚ್ಚಿನಲ್ಲಿ ಮಂಡಳಿ ಹಾಗು ಆಟಗಾರ ಮಾನವೆಂಬುದು ಇಂದು ಸಂತೆಯಲ್ಲಿ ಮಾರುವ ಕೊಳೆತ ತರಕಾರಿ ಯಂತಾಗಿದೆ. ಇನ್ನು ಇಂತಹ ದೇಶಪ್ರೇಮದ ಮಾತುಗಳೆಲ್ಲ ಇವರನ್ನು ಒಟ್ಟುಗೂಡಿಸಬಲ್ಲವೆಂಬ ಆಶಾವಾದ ಒಂದು ಮೂರ್ಖತನವೇ ಸರಿ.

ತೊಂಬತ್ತರ ದಶಕದ ಲೆಜೆಂಡರಿ ಆಟಗರೆಲ್ಲ ನಿವೃತ್ತಿ ಹೊಂದಿದಾಗ ಆಸ್ಟ್ರೇಲಿಯಾದ ತಂಡವೂ ಸಹ ಹೀಗೆ ಮೂಲೆ ಸರಿಯುತ್ತದೆ ಎಂದುಕೊಂಡಿದ್ದ ಕ್ರೀಡಾಸಕ್ತರ ಲೆಕ್ಕಾಚಾರವನ್ನೆಲ್ಲ 2015 ರ ವಿಶ್ವಕಪ್ ನಲ್ಲಿ ಮೈಕಲ್ ಕ್ಲಾರ್ಕ್ ಹಾಗು ಆತನ ಪಡೆ ಪಡೆ ಸುಳ್ಳಾಹಿಸಿತು. ತಂಡದ ಆಟಗಾರ ಮದ್ಯೆ, ತಂಡ ಹಾಗು ಮಂಡಳಿಯ ಮದ್ಯೆ ತಿಳಿಯಾದ ಸಂಬಧವಿದ್ದರೆ ಜಗತ್ತನ್ನು ಗೆಲ್ಲಲು ಮೀಸೆ ಚಿಗುರದ ಹುಡುಗರೂ ಸಾಕು ಎಂಬುದನ್ನು ಅದು ಸಾಧಿಸಿ ತೋರಿಸಿತು. ಈ ನಿಟ್ಟಿನಲ್ಲಿ ವಿಂಡೀಸ್ ನ ಆಟಗಾರರು ಹಾಗು ಮಂಡಳಿ ಇಬ್ಬರಿಗೂ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸೂಕ್ತ ಸಮಯ. ಕಾಲ ಕೈ ಜಾರುವ ಮುನ್ನ ಹೆಚ್ಚೆತ್ತುಕೊಳ್ಳಲು ಇನ್ನು ಸಮಯವಿದೆ.

ಇಂದು ಕ್ರಿಕೆಟ್ ಎಂದರೆ ಹಣ, ಹಣವೆಂದರೆ ಕ್ರಿಕೆಟ್ ನಂತಾಗಿರುವ ಕಾಲದಲ್ಲಿ ದೇಶದ ಕೀರ್ತಿಯ ಜವಾಬ್ದಾರಿಯನ್ನು ಹೊತ್ತು ಆಡುವ ಆಟಗಾರರು ವಿರಳವಾಗುತ್ತಿದ್ದಾರೆ. ಈ ವಿರಳತೆ ತಂಡ, ಮಂಡಳಿ ಹಾಗು ದೇಶವನ್ನೇ ಹಿಂಬದಿಗೆ ತಳ್ಳುತ್ತಿದೆ ಎಂಬುದು ಸುಳ್ಳಲ್ಲ. ಇವರುಗಳ ಕಚ್ಚಾಟ ಹಾಗು ಕೆಸರಾಟದಲ್ಲಿ ದೇಶದ ಕ್ರೀಡಾ ಪ್ರೇಮಿ ನಷ್ಟ ಅನುಭುವಿಸುತ್ತಿರು ವುದು ಸಹ ದಿಟ. ಮಂಡಳಿ ಹಾಗು ಆಟಗಾರರ ನಡುವಿನ ಹೊಂದಾಣಿಗೆ ಸರಿಹೊಂದದಿದ್ದಾಗ ಆಗುವ ಅನಾಹುತಕ್ಕೆ ವೆಸ್ಟ್ ಇಂಡೀಸ್ ಒಂದು ಜ್ವಲಂತ ಉದಾಹರಣೆಯಷ್ಟೇ. ಕೊಂಚವೂ ದಾರಾಳವಾಗದ ಮಂಡಳಿ ಹಾಗು ಹಣವನ್ನೇ ಆಟವೆಂದು ಪರಿಗಣಿಸಿರುವ ಆಟಗಾರರು ಇವರಿಬ್ಬರನ್ನೂ ಸಮತಕ್ಕಡಿಯಲ್ಲಿ ಕೂರಿಸುವ ಕೈಗಳು ಬೇಕಾಗಿದೆ. ಮೈಕಲ್ ಹೋಲ್ಡಿಂಗ್ ನ ಮಾತುಗಳು ಮತ್ತೊಮ್ಮೆ ಆಟಗಾರರನ್ನು ಪ್ರೇರೇಪಿಸಬೇಕಿದೆ. ಗತಿಸಿಹೋದ ವಿಂಡೀಸ್ ನ ವೈಭವವನ್ನು ಮಗದೊಮ್ಮೆ ಚಿಗುರೊಡೆಸಬೇಕಿದೆ