Tuesday, August 21, 2018

ಸೃಷ್ಟಿಯ ಅಗಾಧತೆಗೆ ಸವಾಲೆಸೆಯುವ ಮುನ್ನ..!

ಇಡೀ ಭೂಖಂಡವೇ ತನ್ನದೆಂದುಕೊಂಡು ಒಂತಿಷ್ಟು ತಂತ್ರಜ್ಞಾನದ ಉನ್ನತಿಯ ಶಿಖರದ ಹಿನ್ನಲೆಯಲ್ಲಿ ಬೀಗುವ ಮಾನವ ನಿಸರ್ಗದ ಅಗಾಧತೆಯ ಮುಂದೆ ತಾನು ಅದೆಷ್ಟು ಕುಬ್ಜ ಕನಿಷ್ಠ ಎಂಬುದು ಇತ್ತೀಚಿಗೆ ಜರುಗುತ್ತಿರುವ ಪ್ರವಾಹ ಪ್ರಳಯಗಳ ಹಿನ್ನಲೆಯಲ್ಲಿ ಗಮನಿಸಿದರೆ ಬಹಳ ಸವಿವರವಾಗಿ ತಿಳಿಯುತ್ತದೆ. 4ಜಿ ಸ್ಪೀಡಿನ ಇಂಟೆರ್ನೆಟ್ಟು, ಜಗತ್ತನೇ ತನ್ನ ಮುಷ್ಠಿಯೊಳಗೆ ಭದ್ರವಾಗಿಸಿರುವ ಸ್ಮಾರ್ಟ್ ಫೋನುಗಳು, ಜನರೇಟರ್ ಗಳು, ಯುಪಿಎಸ್ಗಳು, ದೇಶದ ಮೂಲೆ ಮೂಲೆಯನ್ನು ಜೋಡಿಸುವ ಹೈ ಸ್ಪೀಡ್ ಟ್ರೈನುಗಳು, ಸಾಗರದ ಆಳೆತ್ತರಕ್ಕೆ ಹತ್ತಿಳಿಯುವ ಹಡಗುಗಳು ಹೀಗೆ ಪ್ರಸ್ತುತ ತಂತ್ರಜ್ಞಾನದ ಲೋಕದಲ್ಲಿ ಇರದಿರುವ ವಸ್ತುಗಳ್ಯಾವುವು? ಇಷ್ಟೆಲ್ಲಾ ಆಧುನಿಕ ಪರಿಕರಗಳ ನಡುವೆ ಅಮೃತವಿಲ್ಲದೆಯೇ ಸಕಾಲಕ್ಕೂ ಅಮರನಾಗಿಬಿಡುವ ಮಾನವ ಇಂದು ಆಗಿರುವುದಾದರೂ ಏನು ಸ್ವಾಮಿ. ಕೇವಲ ನಾಲ್ಕೇ ನಾಲ್ಕು ದಿನದ ಮಳೆಗೆ ಆತ ಗುಡಿ ಗೋಪುರಾದಿಗಳನ್ನು ತರಗಲೆಗಳಂತೆ ಕಳೆದುಕೊಂಡು ಅಕ್ಷರಸಹ ಅನಾಥನಾಗುತ್ತಿರುವ ದೃಶ್ಯಾವಳಿಗಳನ್ನು ನೋಡಿದರೆ ದುಃಖ ಹಾಗು ಎದೆನಡುಕಗಳು ಒಟ್ಟೊಟ್ಟಿಗೆ ಮೂಡುತ್ತವೆ. ಪ್ರಸ್ತುತ ಜರುಗತ್ತಿರುವ ಪ್ರಕೃತಿ ವಿಕೋಪಗಳಿಗೆ ಕೇವಲ ಮಳೆಯೊಂದೇ ಕಾರಣವಲ್ಲದಾದರೂ ಇತರೆ ಮತ್ಯಾವುದೇ ಕಾರಣಗಳಾದರೂ ಅದಕ್ಕೆ ಮಾನವನೊಬ್ಬನೇ ನೇರ ಹೊಣೆಗಾರನಾಗುತ್ತಾನೆ ಎಂಬುದರಲ್ಲಿ ಸಂಶಯವೇ ಬೇಡ. ಸೃಷ್ಟಿಯ ಸಮಷ್ಟಿಯಲ್ಲಿ ನಾನೂ ಒಬ್ಬನೇ ಹೊರತು ನಾನೇ ಬೇರೆ, ಪ್ರಕೃತಿಯೇ ಬೇರೆ, ಇಡೀ ಭೂಮಿಯೇ ನನ್ನ ಅನುಭೋಕಕ್ಕೆ ಮಾತ್ರ ಎಂಬ ಭ್ರಮೆಯಲ್ಲಿ ಬದುಕುತ್ತಿರುವ ನಾವುಗಳಿಗೆ ನೇಸರ ಆಗೊಮ್ಮೆ ಹೀಗೊಮ್ಮೆ ಹೀಗೆ ಚಾಟಿ ಏಟನ್ನು ಬೀಸುತ್ತಿರುತ್ತದೆ. ಎಚ್ಚರಿಸುತ್ತಿರುತ್ತದೆ. ಏಟಿನಿಂದ ಕಲಿಯುತ್ತೇವೆಯೋ ಅಥವಾ ಮತ್ತದೇ ನನ್ನದೇ ಎಲ್ಲವೆಂಬ ಅಮಲಿನಲ್ಲಿ ಕುಣಿಯುತ್ತೇವೆಯೋ ಅದು ನಮ್ಮ್ ನಮ್ಮ ನಾಗರೀಕತೆಯ ವಿವೇಕಕ್ಕೆ ಬಿಟ್ಟ ವಿಚಾರ.

'ನದಿ ಎಂಬ ಪ್ರಿಯತಮೆಯನ್ನು ಕೊಂದರೆ ಮಳೆ ಎಂಬ ಪ್ರಿಯಕರನನ್ನು ಮರೆಯಬೇಡಿ' ಎಂಬ ಮಾತಿದೆ. ಮಾನವನ ಹಿಂಗದ ಧಾಹಕ್ಕೆ ನದಿ ತೊರೆಗಳನ್ನು ಮನಸ್ಸಾಇಚ್ಛೆ ತಿರುಗಿಸಿ ಬಾಗಿ ಬೆಂಡಾಗಿಸುವ ಆತ ಬಾಕಿ ಉಳಿದಷ್ಟೂ ಜಾಗದಲ್ಲಿ ಮನೆ ಮಠಗಳನ್ನು ನಿರ್ಮಿಸಿಕೊಂಡು ಆರಾಮಾಗಿರುತ್ತಾನೆ. ಕಾಲಚಕ್ರದಲ್ಲಿ ಕೆಲಸಮಯ ಮೋಡವಾಗಿ ಕಾಣೆಯಾಗುವ ನದಿಯ ಪ್ರಿಯತಮ ಮತ್ತೊಮ್ಮೆ ಇಳೆಗೆ ಇಳಿದು ಬಂದು ನೋಡಿದರೆ ತಾನು ಕಾಣ ಬಯಸುವ ಮುದ್ದಿನ ಪ್ರಿಯತಮೆ ಕಾಣೆಯಾಗಿರುತ್ತಾಳೆ! ಆದರೆ ಅವರುಗಳ ಪ್ರೇಮ ಪ್ರಸ್ತುತ ಕಾಲದ ಮಿಲಿಸೆಕೆಂಡುಗಳ ಪ್ರೇಮಕಾವ್ಯವಲ್ಲ. ಅದು ಕಾಲಾತೀತವಾದದ್ದು. ಅಮರವಾದದ್ದು! ಹಾಗೆ ವರುಷಗಳ ನಂತರ ಧರೆಗಿಳಿದು ಬರುವ ಧಾರೆ ತನ್ನ ಪ್ರಿಯತಮೆಯ ಹುಡುಕಾಟದಲ್ಲಿ ಅಕ್ಷರ ಸಹ ಹುಚ್ಚನಂತಾಗಿಬಿಡುತ್ತದೆ. ಮತ್ತದೇ ಜಾಗದಲ್ಲಿ, ಆಕೆ ಹರಿಯುತಿದ್ದ ದಿಕ್ಕಿನಲ್ಲಿಯೇ ರುಧ್ರಾವೇಷದಲ್ಲಿ ಮುನ್ನುಗ್ಗಿ ಸಾಗುತ್ತದೆ. ಇದನ್ನೇ ಆಧುನಿಕ ನಾವುಗಳು ಪ್ರವಾಹ, ಪ್ರಳಯ ಎಂದುಕೊಂಡು ದೇವರನ್ನು ದ್ವೇಷಿಸುವುದು. ನಿಸರ್ಗದ ಜೀವನಚರಿಯನ್ನು ಅರಿಯಲಾಗದ ನಾವುಗಳಿಗೆ ಅದೊಂದು ಪ್ರವಾಹವಾಗಿಯೇ ಕಾಣುತ್ತದೆ ವಿನಹಃ ತನ್ನಾಕೆಯನ್ನು ಕಳೆದುಕೊಂಡ ಭಗ್ನಪ್ರೇಮಿಯ ರೋಧನೆ ಕಾಣಿಸುವುದಿಲ್ಲ. ಪ್ರಸ್ತುತ ವಿಶ್ವದಲ್ಲಿ ಜರುಗುತ್ತಿರುವ ಹೆಚ್ಚಿನ ಜಲಪ್ರವಾಹಗಳಿಗೆ ಮಾನವ ಹೀಗೆ ನದಿಯ ನೀರನ್ನು ತನ್ನ ಅನುಕೂಲಕ್ಕೆ ತಕ್ಕಂತೆ ದಿಕ್ಕುಬದಲಿಸಿಕೊಳ್ಳುತ್ತಿರುವದೇ ಮೊದಲ ಮಹತ್ವದ ಕಾರಣ. ಇದೇ ವಿಷಯವಾಗಿ ಹಲವು ವೇಳೆ ಪರಿಸರವಾದಿಗಳ ಕೂಗಾಟ ನಮಗೆ ಎಡಪಂಥೀಯ ಬುದ್ದಿಜೀವಿಗಳ ಅರಚಾಟದಂತೆ ಕಾಣುತ್ತದೆ. ಅವರ ಕೂಗಾಟವನ್ನು ನಾವು ಗಂಭೀರ ಸಮಸ್ಯೆಗಳೆಂದು ಎಲ್ಲಿಯವರೆಗೂ ಅರಿವಿಯುವುದಿಲ್ಲವೋ ಅಲ್ಲಿಯವರೆಗೂ ಯಾವ ಕಾಲದಲ್ಲ್ಲೂ ಯಾವುದೇ ಬಗೆಯ ನೈಸರ್ಗಿಕ ವಿಕೋಪಗಳಿಗೆ ನಾವುಗಳು ರೆಡಿಯಾಗಿರಬೇಕು. ಪರಿಸರವಾದಿಗಳಷ್ಟೇ ಅಲ್ಲದೆ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರ ಸೂಚನೆಗಳನ್ನೇ ಲಘುವಾಗಿ ಪರಿಣಮಿಸಿ ಇಂದು ವಿಪತ್ತನ್ನು ಎದುರಿಸುತ್ತಿರುವ ಕೇರಳ ಸರ್ಕಾರದ ಹಿನ್ನಲೆಯಲ್ಲಿ ಇಡೀ ದೇಶದ ನೀರಿನ ಸಮಸ್ಯೆಗಳಿಗೆ ಒಂದೇ ಹೆಜ್ಜೆಯಲ್ಲಿ ಪರಿಹಾರವನ್ನು ಕರುಣಿಸುವ ಕೇಂದ್ರ ಸರ್ಕಾರದ ''ಗಂಗಾ-ಕಾವೇರಿ' ನದಿ ಜೋಡಣೆ ಸಾಹಸವನ್ನು ಇನ್ನಾದರೂ ಕೊಂಚ ಯೋಚಿಸಿ ಕೈಗೆತ್ತುಕೊಳ್ಳಬೇಕು. ಅಂದು ಬೆಂಗಳೂರಿನಲ್ಲಿ ಬಂದ ಮಹಾಮಳೆಗೆ ರಾಜಕಾಲುವೆಗಳ ನೀರೂ ಹೀಗೆ ಎಲ್ಲೆಂದರಲ್ಲಿ ನುಗ್ಗಿ ಮಾಡಿದ ಅನಾಹುತ ನಮ್ಮ ಕಣ್ಣ ಮುಂದೆಯೇ ಇರುವಾಗ ಹೀಗೆ ದಿಕ್ಕುಬದಲಿಸಿದ ನದಿಗಳ ದಂಡೆಗಳಲ್ಲಿ ಅಥವಾ ಆ ನದಿಯ ಹಿಂದಿನ ಹರಿವಿನ ಜಾಗದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿಕೊಡುವ ಬುದ್ದಿವಂತರನ್ನು ಹೀಗೆ ಪ್ರವಾಹಗಳಿಂದ ಮನೆಮಠಗಳನ್ನು ಕಳೆದುಕೊಂಡು ಪರದಾಡುವ ಜನರ ಮುಂದೆ ತಂದು ನಿಲ್ಲಿಸಬೇಕು. ಹೀಗೆ ತಮ್ಮದೇ ಸಮಾಧಿಯ ಜಾಗಕ್ಕೆ ಏನೋ ಎಂಬಂತೆ ಮನೆಗಳನ್ನು ಮಾರುವ ಅವರಿಗೆ ಹಾಗು ಖರೀದಿಸುವ ನಮಗೆ ತಿಳಿಹೇಳುವರ್ಯಾರು.

ಅಲ್ಲಿ ವರುಣದ ಆರ್ಭಟವಾದರೆ ನಮ್ಮಲ್ಲಿ (ಕೊಡಗು ಹಾಗು ಇತರೆ ಮಲೆನಾಡು ಪ್ರದೇಶ) ಬೆಟ್ಟಗುಡ್ಡಗಳೇ ಕುಸಿದು ಪ್ರಪಾತವನ್ನು ನಿರ್ಮಿಸುತ್ತಿರುದು. ಜಾರುವ ಬಂಡೆಗಳಿಂದ ನಿರಾಯಾಸವಾಗಿ ಜಾರುವಂತೆ ಜಾರಿ ಪ್ರಪಾತಕ್ಕೆ ಬೀಳುವ ಮನೆಗಳು, ಕ್ಷಣಮಾತ್ರದಲ್ಲಿ ಇಡೀ ಹಳ್ಳಿಗೆ ಹಳ್ಳಿಯೇ ಉದುಗಿಹೋಗಿ ಕಣ್ಮರೆವಾಗುವ ದೃಶ್ಯಗಳು, ಕಲ್ಲುಗುಡ್ಡದ ಒಂದಿಡೀ ಬಾಗವೇ ಕುಸಿದು ಭೂಕಂಪನವನ್ನು ಹುಟ್ಟುಹಾಕುವ ವಿಡಿಯೋಗಳನ್ನು ನೋಡಿದರೆ ಕಲಿಯುಗದ ಅಂತ್ಯಕಾಲ ಸಮೀಪಿಸಿತೇನೋ ಎಂದನಿಸುವುದು ಸುಳ್ಳಲ್ಲ. ಆದರೆ ಇಲ್ಲಿ ವಿಚಾರಕ್ಕೊಳಪಡಿಸುವ ವಿಷಯವೇನೆಂದರೆ, ಈಗ ಬರುತ್ತಿರುವ ಮಳೆಯ ಪ್ರಮಾಣವೇನು ಹಿಂದೆಂದೂ ಬಾರದಿದ್ದ ಮಟ್ಟದ್ದೇನಲ್ಲ. ಇದಕ್ಕಿಂತಲೂ ಹೆಚ್ಚಿನ ಅಗಾಧವಾದ ಮಳೆಯನ್ನು ಇಲ್ಲಿನ ನೆಲ ಕಂಡಿದೆ. ಆಗ ನೋಡುಗರಿಗೆ ಅದು ರಮ್ಯಾ ರಮಣೀಯ ನೋಟವನ್ನು ಕೊಡುತ್ತಿತ್ತೇ ವಿನಃ ಹೀಗೆ ರುಧ್ರಕಾಳಿಯಂತೆ ಕುಣಿದು ಭಯಬೀಳಿಸುತ್ತಿರಲಿಲ್ಲ. ಹಾಗಾದರೆ ಎರಡು ದಿನದ ಮೋಜಿಗೆ ಗುಡ್ಡಗಳನ್ನು ಕಡಿದು ಕಾಡನ್ನು ಹಾಳುಗೆಡಗುವ ಹೋಂ ಸ್ಟೇಗಳು, ಪೋಷಿಸಿ ಬೆಳೆಸಿದ ಭೂಮಾತೆಯ ಒಡಲನ್ನೇ ಬಗೆದು ನೆಡೆಸುವ ಗಣಿಗಾರಿಕೆ, ಸಿಕ್ಕ ಸಿಕ್ಕ ಜಾಗಗಳಲ್ಲಿ ಅವೈಜ್ಞಾನಿಕವಾಗಿ ಜರುಗುವ ಮನೆ ನಿರ್ಮಾಣಗಳೇ ಇಂದು ನಮ್ಮ ಹಸಿರು ಜಿಲ್ಲೆಗಳ ಕುಸಿತಕ್ಕೆ ನಿಜವಾದ ಕಾರಣವೇ? ಉತ್ತರ ಇಲ್ಲ ಎನ್ನುವವರು ಮಾತ್ರ ಶತಮೂರ್ಖರು!

ಜಲವಿಕೋಪಗಳು ವಿಶ್ವದಲ್ಲಿ ಜರುಗುವುದು ಇಂದು ಹೊಸತೇನಲ್ಲ. ಮಾನವ ಒಂದೆಡೆ ನೆಲೆಸಿ ವ್ಯವಸಾಯ ಮಾಡಲು ಶುರುವಿಟ್ಟಾಗಿನಿಂದಲೂ ಒಂದಲ್ಲ ಒಂದು ಬಗೆಯಲ್ಲಿ ನದಿಗಳಿಗೆ, ಹಳ್ಳಗಳಿಗೆ ಅಡ್ಡಗಟ್ಟಿ ಅವುಗಳ ಹರಿವಿನ ವಿರುದ್ಧ ಆಟವಾಡುತ್ತಾ ಬಂದಿದ್ದಾನೆ. ಚೋಳರ ಕಾಲದಲ್ಲಿ (ಒಂದನೇ ಶತಮಾನ) ನಿರ್ಮಿತವಾದ ಇಂದಿಗೂ ಕಾರ್ಯನಿರ್ವಾಹಿಸುತ್ತಿರುವ (!) ತಮಿಳುನಾಡಿನ ಕಲ್ಲಣೈ ಆಣೆಕಟ್ಟು ವಿಶ್ವದಲ್ಲೇ ಅತಿ ಪುರಾತನವಾದ ಆಣೆಕಟ್ಟು ಎಂದನಿಸಕೊಂಡಿದೆ. ತಂತ್ರಜ್ಞಾನಗಳು ಬೆಳೆದಂತೆ ಹೀಗೆ ಕಟ್ಟಿದ ಅಣೆಕಟ್ಟುಗಳ ನಿರ್ವಹಣೆಯಲ್ಲೂ ಸಾಕಷ್ಟು ಸುಧಾರಣೆಗಳು ಬಂದಿವೆ. ಆದರೆ ಇಂದು ಇತರೆ ದೇಶಗಳಲ್ಲಿ ನೆಡೆಯುವ ದುರಂತಗಳು ನಮ್ಮಲಿ ಜರುಗುವುದಕ್ಕಿಂದಲೂ ಅದೆಷ್ಟೋ ಪಟ್ಟು ಭಯಾನಕ ಹಾಗು ಭೀಕರವಾಗಿರುತ್ತವೆ. ಆದರೂ ಅಲ್ಲಿನ ಸಾವು-ನೋವು, ಕಷ್ಟ-ನಷ್ಟಗಳನ್ನು ನಮಗೆ ಹೋಲಿಸಿದರೆ ತೀರಾ ಕನಿಷ್ಠವಾಗಿಯೇ ಇರುತ್ತದೆ. ಕಾರಣ ನಮ್ಮಲ್ಲಿ ಅನಾಹುತಗಳು ಜಗುಗುವ ಮೊದಲು ಹಾಗು ಜರುಗಿದ ನಂತರವೂ ಸರಕಾರಗಳನ್ನು ಧೊಷಿಸುವ ಏಕಮಾತ್ರ ಕಾರ್ಯವೊಂದನ್ನು ಬಿಟ್ಟರೆ ಬೇರೇನೂ ಆಗುವುದೇ ಇಲ್ಲ. ಕನಿಷ್ಠ ಬೆಲೆಗೆ ಸಿಕ್ಕ ಜಾಗವೆನುತ ನದಿ, ಅಣೆಕಟ್ಟುಗಳ ಪ್ರದೇಶವೆನ್ನುವುದನ್ನೂ ಲೆಕ್ಕಿಸದೆ ಮನೆ ಮಠಗಳನ್ನು ಖರೀದಿಸುವ ನಮಗೆ ಹೀಗೆ ಪ್ರವಾಹದ ಪಾಠ ದೊರೆತರೂ ಅದರಿಂದ ಕಲಿಯುವುದ ಬಿಟ್ಟು ಬಿಸ್ಕತ್ತನ್ನು ಎಸೆಯುವ ರಾಜಕಾರಣಿ ಹಾಗು ಅವನ ಸರ್ಕಾರಗಳ ದೋಷಣೆಯಲ್ಲೇ ನಮ್ಮ ಸಿಟ್ಟನ್ನು ಶಮನಮಾಡಿಕೊಳ್ಳುತ್ತೇವೆ. ಅಲ್ಲದೆ ಇತ್ತೀಚಿನ ವರದಿಯೊಂದರ ಪ್ರಕಾರ ನೀರಿಗಿಂತ ಹೆಚ್ಚಾಗಿ ಹೂಳೇ ತುಂಬಿಕೊಂಡಿರುವ ಕೇರಳದ ಪ್ರತಿಯೊಂದು ಅಣೆಕಟ್ಟುಗಳನ್ನು ಮಾನ್ಸೂನ್ ಶುರುವಾಗುವ ಮೊದಲೇ ಬರಿದುಗೊಳಿಸಿ ಹೂಳನ್ನು ತೆಗೆಯುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದರೆ ಬಹುಷಃ ಈ ಮಟ್ಟಿನ ಸಾವುನೋವುಗಳು ಸಂಭವಿಸುತ್ತಿರಲಿಲ್ಲವೆಂಬುದು. ಅಲ್ಲದೆ ಅಣೆಕಟ್ಟುಗಳ ಸಂಖ್ಯೆಯಲ್ಲಿ USA ಹಾಗು ಚೈನಾದ ನಂತರದ ಸ್ಥಾನದಲ್ಲಿರುವ ಭಾರತ (ಸುಮಾರು 3000 ಕಿಂತಲೂ ಹೆಚ್ಚು) ದಲ್ಲಿನ ಅಣೆಕಟ್ಟುಗಳಲ್ಲಿ ಪ್ರವಾಹವನ್ನು ನಿಯಂತ್ರಿಸಬಹುದಾದ ವ್ಯವಸ್ಥೆ ಇರುವುದು ಕೇವಲ ಬೆರಳೆಣಿಕೆಯಷ್ಟರಲ್ಲಿ ಮಾತ್ರ(25-30 ಅಣೆಕಟ್ಟುಗಳಲ್ಲಿ ಮಾತ್ರ). ಬದಲಾಗುತ್ತಿರುವ ಹವಾಮಾನ ವೈಪರಿತ್ಯದಲ್ಲಿ ಹೀಗೆ ಮುಲಾಜಿಲ್ಲದೆ ಬರುವ ಮಳೆಯ ಹಿನ್ನಲೆಯಲ್ಲಿ ಉಳಿದಂತೆ ಇರುವ ಅಷ್ಟೂ ಅಣೆಕಟ್ಟುಗಳ ಬಗ್ಗೆ ಚಿಂತಿಸಬೇಕಾದ ಅನಿವಾರ್ಯತೆ ಕೇವಲ ಸರಕಾರಗಳಿಗೆ ಇದ್ದರೆ ಸಾಲದು.

ದೂರುಗಳಲ್ಲೆಯೇ ಕಾಲಹರಣ ಮಾಡುವ ನಮ್ಮವರು 'ಮುಲ್ಲಪೆರಿಯಾರ್' ಅಣೆಕಟ್ಟಿನ ಬಗ್ಗೆಯೂ ಕೊಂಚ ತಿಳಿದುಕೊಳ್ಳುವುದು ಲೇಸು. ಇಂದು ನೆನೆದ ಹಸಿಮುದ್ದೆಯಂತಾಗಿರುವ ಧಕ್ಷಿಣ ಭಾರತದ ನೆಲದ ಭಾಗಶಃ ಅಣೆಕಟ್ಟುಗಳು ತುಂಬಿತುಳುಕುತ್ತಿವೆ. ಆದರೆ ಕೇರಳದ ಪೆರಿಯಾರ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನೂರಿಪ್ಪತ್ತು ವರ್ಷಗಳ ಪುರಾತನವಾದ ಮುಲ್ಲಾ ಪೆರಿಯಾರ್ ಆಣೆಕಟ್ಟು ತುಂಬಿತೆಂದರೆ ಕೇರಳದ ನಾಲ್ಕೈದು ಜಿಲ್ಲೆಗಳ ಜನರಿಗೆ ಜಲಬಾಂಬೊಂದು ಸ್ಪೋಟಗೊಳ್ಳುವ ಭಯ ಆವರಿಸಿಕೊಳ್ಳುತ್ತದೆ. ಅಂದು ಬ್ರಿಟಿಷರು ಕೇವಲ ಐವತ್ತು ವರ್ಷ ಆಯಸ್ಸಿಗೆ ಎನ್ನುವಂತೆ ನಿರ್ಮಿಸಿದ ಆಣೆಕಟ್ಟನ್ನು ಇಂದು ನೂರು ವರ್ಷಗಳು ಕಳೆದರೂ ದುಡಿಸಿಕೊಂಡು ಬಂದಿದ್ದಾರೆ. ಕಾರಣ ಪೆರಿಯಾರ್ ನದಿಯ ಹೆಚ್ಚಿನ ಭಾಗದ ಹರಿವು ಕೇರಳ ರಾಜ್ಯದಲ್ಲೇ ಆದರೂ ಅದರ ಉಗಮಸ್ಥಾನ ತಮಿಳುನಾಡಿನ ಸಿವಗಿರಿ ಅರಣ್ಯ ಪ್ರದೇಶಗಳಲ್ಲಿ. ಅಂದು ಬ್ರಿಟಿಷರ ತಪ್ಪುನಿರ್ಧಾರದಿಂದಲೂ ಅಥವಾ ಎಪ್ಪತ್ತರ ದಶಕದಲ್ಲಿ ಕೇರಳ ಹಾಗು ತಮಿಳುನಾಡು ಸರ್ಕಾರಗಳ ಒಪ್ಪಂದದಿಂದಲೋ ಏನೋ ಇಂದಿಗೂ ಈ ಅಣೆಕಟ್ಟಿನ ಸಂಪೂರ್ಣ ಅಧಿಕಾರ ತಮಿಳುನಾಡು ಸರ್ಕಾರದ ಬಳಿಯೇ ಉಳಿದಿದೆ. ಯಾವುದೇ ವಿಪತ್ತಿಲ್ಲದೆ ಎತೇಚ್ಛವಾಗಿ ಸಿಗುವ ನೀರು, ವಿದ್ಯುತ್ತ್ ನನ್ನು ಅನುಭವಿಸುವ ತಮಿಳರು ಇಲ್ಲಿಯೂ ಸಹ ಕೇರಳ ಸರಕಾರದೊಟ್ಟಿಗಿನ ಅಮಾನವೀಯತನದಿಂದಲೇ ನಿಂದನೆಗೊಳಗಾಗುತ್ತಿದ್ದರೆ. ಒಂತಿಷ್ಟು ಹಣವನ್ನು ಖರ್ಚುಮಾಡಿ ಇರುವ ಅಣೆಕಟ್ಟಿನ ಪಕ್ಕಕ್ಕೆ ಹೊಸತೊಂದು ಅಣೆಕಟ್ಟನ್ನು ಕಟ್ಟಿ ಮುಂದೊಂದು ದಿನ ಬಂದೊದಗುವ ಅಪಾಯವನ್ನು ತಪ್ಪಿಸಬಹುದಲ್ಲ ಎಂದರೆ 136 ಅಡಿಗಳಿಷ್ಟಿದ್ದ ಗರಿಷ್ಟ ಮಟ್ಟವನ್ನು 142 ಅಡಿಗೆ ಏರಿಸಿ 'ಮುಲ್ಲಾ ಪೆರಿಯಾರ್ ಆಣೆಕಟ್ಟು ಇನ್ನೂ ಹೆಚ್ಚಿನ ನೀರನ್ನು ಹಿಡಿದಿಟ್ಟುಕೊಳ್ಳಬಹುದೆಂಬ' ಬಾಲಿಶ ಹೇಳಿಕೆಯನ್ನು ಕೊಡುತ್ತಿದ್ದಾರೆ ಒಬ್ಬ ಸಾಮಾನ್ಯ ಮುಖ್ಯಮಂತ್ರಿಯನ್ನು ದೇವರಿಗಿಂತಲೂ ಮಿಗಿಲಾದವರಂತೆ ಪೂಜಿಸಿ ಬಿದ್ದು ಒರಳಾಡುವ ತಮಿಳುನಾಡಿನ ಅಂಧ ರಾಜಕಾರಣಿಗಳು. ಒಂದೊಮ್ಮೆ ಮುಲ್ಲಾ ಪೆರಿಯಾರ್ ಆಣೆಕಟ್ಟು ಒಡೆದು ಅದರಲ್ಲಿನ ನೀರೇನಾದರೂ ಒಳನುಗ್ಗಿದರೆ ನಿಮಿಷಮಾತ್ರದಲ್ಲಿ ನಾಲ್ಕು ಜಿಲ್ಲೆಗಲ್ಲಿ ಒಂದು ನರಪಿಳ್ಳೆಯೂ ಬದುಕುವುದು ಕಷ್ಟಕರವೆನುತದೆ ಸಂಶೋಧನೆಗಳು! ಅಲ್ಲದೆ ಸುಣ್ಣ ಹಾಗು ಸಿಮೆಂಟಿನಿಂದ ಮಾಡಿದ ಈ ಪುರಾತನ ಅಣೆಕಟ್ಟಿನ ಅಲ್ಲಲ್ಲಿ ಬಿರುಕುಗಳು ಮೂಡುತ್ತಿದ್ದರೂ ಇಂತಹ ಬಂಡ ಹೇಳಿಕೆಗಳನ್ನು ನೀಡುವ ರಾಜಕಾರಣಿಗಳನ್ನು ಆರಿಸಿ ಸರ್ಕಾರವನ್ನು ನೆಡೆಸಲು ಕಳಿಸುವ ಜನರ ವಿಚಾರಶಕ್ತಿಯನ್ನೂ ಮೆಚ್ಚಲೇಬೇಕು!

ನಾವು, ನಮ್ಮ ದೇಶ ಎನುತ ಕೆಲದಿನಗಳ ಹಿಂದಷ್ಟೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಕೊಂಡ ಭಾರತೀಯರು ನೀರಿನ ವಿಚಾರ ಬಂದಾಗ ಅಕ್ಷರ ಸಹ ಸ್ವಾರ್ಥಿಗಳಾಗುತ್ತೇವೆ. ಒಂದೆಡೆ ನೀರು ಬೇಕೆಂದು ಕೋರ್ಟ ಮೆಟ್ಟಿಲನ್ನು ಏರಿದರೆ ಮತ್ತೊಂದೆಡೆ ನೀರು ಬೇಡವೆಂದು ವಾದವನ್ನು ಮಂಡಿಸುತ್ತೇವೆ. ಅದು ಕೇರಳ ತಮಿಳುನಾಡಿನ ಸರ್ಕಾರಗಳ ವಿಷಯವಷ್ಟೇ ಅಲ್ಲ. ಹಸಿವು, ನೋವು, ದುಃಖ ದುಮ್ಮಾನಗಳಲ್ಲೇ ಬಾಡಿ ಬೆಂಡಾಗಿ ಹೋಗಿರುವ ಅಮಾಯಕ ಜನರ ಜೀವನದ ಪ್ರೆಶ್ನೆ. ಇಂದು ಪರಿಹಾರ ಕಾರ್ಯ, ದೇಣಿಗೆ, ದಾನ ಎನುತ ಕೊಡುವುದಕ್ಕಿಂತ ಹೆಚ್ಚಾಗಿ 'ತೋರಿಸಿಕೊಳ್ಳುವ' ಜನ ಹೀಗೆ ಮುಂದೊಂದು ದಿನ ಬಂದೆರಗಬಹುದಾದ ಭೀಕರ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಜಾತಿ, ಭೇದ, ವರ್ಣ, ರಾಜ್ಯ,ಬೇಲಿಯನ್ನು ಮರೆತು ಕೈಜೋಡಿಸಬೇಕು. ಪೆಟ್ಟುತಿಂದ ನೇಸರರಾಜ ಮುನಿದು ಶಿಕ್ಷಿಸುವ ಮೊದಲೇ ನಮ್ಮ ಟೆಕ್ನಾಲಜಿ ಎಂಬ ಕೊಂಬುಗಳನ್ನು ಬದಿಗಿಟ್ಟು ನೇಸರ ನನ್ನು ಬದುಕಿಸಿ ನಾವುಗಳೂ ಬದುಕುವ ಹಾದಿಯನ್ನು ಕಂಡುಕೊಳ್ಳಬೇಕು.

Friday, August 17, 2018

ಆಟವೆಂಬುದು ಕ್ರೀಡೆಯಾಗಬೇಕಾದರೆ ..

ಕತ್ತಿಮಸೆಯುವ ದೇಶಗಳ ಎದೆಯಲ್ಲಿ ನಡುಕಹುಟ್ಟಿಸಿ ದೇಶದ ತಲೆಯನೆತ್ತಿ ನಿಲ್ಲುವಂತೆ ಮಾಡಿದ ದೇಶದ ಮಾಜಿ ಪ್ರಧಾನಿ, ಭಾರತರತ್ನ, ದೇಶದ ರಾಜಕೀಯ ಇತಿಹಾಸದ ಅಜಾತಶತ್ರು ಅಟಲ್ ಬಿಹಾರಿ ವಾಜಿಪೇಯಿ, ವೆಸ್ಟ್ ಇಂಡೀಸ್ ವಿರುದ್ಧ ಅವರದ್ದೇ ನೆಲದಲ್ಲಿ ಮೊದಲ ಟೆಸ್ಟ್ ಸರಣಿಯ ಸಿಹಿಯನ್ನು ಗಳಿಸಿಕೊಟ್ಟ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್, ಮಾಜಿ ಲೊಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ, ದ್ರಾವಿಡ ಚಳುವಳಿಯ ಅಸ್ಮಿತೆಯ ಪ್ರತೀಕ ಹಾಗು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಹಾಗು ಶತಮಾನದ ಮಹಾ ಜಲಪ್ರಳಯದ ರೌದ್ರಾವತಾರಕ್ಕೆ ಕೇರಳ ಹಾಗು ದೇಶದ ಹಲವೆಡೆ ಬಲಿಯಾದ ಎಲ್ಲ ಜೀವಗಳಿಗೂ ಶಾಂತಿಯನ್ನು ಕೋರುತ್ತಾ....

ಕೆಲದಿನಗಳ ಹಿಂದೆ ಹಿಮಾದಾಸ್ ಎಂಬ ಹೆಸರೊಂದು ಎಲ್ಲಡೆ ಸದ್ದು ಮಾಡಿತ್ತು. 46 ವರ್ಷಗಳ ಇತಿಹಾಸವಿರುವ ‘IAAF ವಿಶ್ವ ಚಾಂಪಿಯನ್ ಶಿಪ್’ ನಲ್ಲಿ 51.46 ಸೆಕೆಂಡುಗಳಲ್ಲಿ 400 ಮೀಟರ್ ಓಟವನ್ನು ಜಿಂಕೆಯಂತೆ ಕ್ರಮಿಸಿ ಭಾರತಕ್ಕೆ ಮೊಮ್ಮದಲ ಚಿನ್ನದ ಪದಕವನ್ನು ಗಳಿಸಿ ಇತಿಹಾಸವನ್ನು ಬರೆದ ಈಕೆ ಕತ್ತಲು ಕಳೆಯುವ ಮುನ್ನ ಅರಳಿದ ತಾವರೆಯಂತಾಗಿದ್ದಳು. ಭಾರತೀಯ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ವಿಜೃಂಭಿಸುವಂತೆ ಮಾಡಿದ ಆಕೆಯ ಸಾಧನೆಯ ಗುಣಗಾನವನ್ನು ಮಾಡದಿರುವವರಿಲ್ಲ. ರಾಶಿ ರಾಶಿ ಶೇರು, ಲೈಕು ಹಾಗು ಕಾಮೆಂಟುಗಳು, ಇತರ ನಟ ನಟಿಯರನ್ನು ಈಕೆಗೆ ಹೋಲಿಸಿ ಅವರನ್ನು ಜರಿಯುವ ಪೋಸ್ಟುಗಳು, ಸೋತರೂ, ಗೆದ್ದರೂ ರಾಜಕಾರಣಿಗಳಿಗೆ ಹಾಗು ಸರ್ಕಾರಗಳಿಗೆ ನೆಡೆಯುವ ಮಂಗಳಾರತಿಗಳು, ಚಿನ್ನ ಬಂದರೂ ಜಾತಿ ಬಿಡದ ಸರ್ಚುಗಳು, ಅವುಗಳಿಂದ ವಿಶ್ವಮಟ್ಟದಲ್ಲಿ ತಲೆಕೆಳಗು ಮಾಡುವಂತಾದ ಕಾಮೆಂಟುಗಳು, ಒಂದೇ ಎರಡೇ. ಬಿರುಗಾಳಿಯಂತೆ ಎತ್ತಲಿಂದಲೋ ಬಂದು ಅಲ್ಲೊಲ್ಲ ಕಲ್ಲೋಲವಾಗಿಸಿ ಧೂಳೆಬ್ಬಿಸಿಬಿಟ್ಟಿತು ಈ ಸುದ್ದಿಯೊಂದು.

ಈಗ ಆ ಸುದ್ದಿ ಶಾಂತವಾಗಿದೆ. ಭೋರ್ಗರೆಯುವ ನದಿಯ ಸಿಹಿ ನೀರು ಸಮುದ್ರ ಸರೋವರಗಳನ್ನು ಸೇರಿ ತನ್ನ ಸಿಹಿತನವನ್ನು ಕಳೆದುಕೊಳ್ಳುವಂತೆ ಆ ಸುದ್ದಿಯ ವಿಶಿಷ್ಟತೆಯೂ ಇಂದೂ ಗೌಣವಾಗಿದೆ. ಅರೆಹೊಟ್ಟೆಯಲ್ಲೇ ಆಕೆ ಬೆವರು ಸುರಿಸಿ ಓಡಲತ್ತಿದಾಗ ಆಕೆಯ ಕಷ್ಟಗಳನ್ನು ಕಾಣದ ಕೈಗಳಿಗೆ ಇಂದು ಚಿನ್ನದ ಬಿಲ್ಲೆಯೊಂದು ಆ ಎಳೆಯ ಕೊರಳಮೇಲೆ ರಾರಾಜಿಸಿದ ಕೂಡಲೇ ಜ್ಞಾನೋದಯವಾಗುತ್ತದೆ. ಆ ಸ್ಕಾಲರ್ಶಿಪ್ಗಳೇನು, ಆ ಕೋಟಿ ಕೋಟಿ ರೂಪಾಯಿಗಳ ಜಾಹಿರಾತುಗಳ ಒಪ್ಪಂದಗಳೇನು, ಸರ್ಕಾರಗಳ ಪ್ರೋತ್ಸಹ ಧನಗಳೇನು ಹಾಗು ಸರ್ಕಾರೀ ಹುದ್ದೆಗಳೇನು! ಇಲ್ಲಿ ಕ್ರೀಡೆ, ದೇಶ ಹಾಗು ಹೆಮ್ಮೆ ಎನ್ನುವ ಅಭಿಮಾನಕ್ಕಿಂತ ಹೆಚ್ಚಾಗಿ ತಮ್ಮ ತಮ್ಮ ಒಂದಿಷ್ಟು ಬೇಳೆಯನ್ನು ಬೇಯಿಸಿಕೊಳ್ಳುವ ಚತುರತೆಯನ್ನು ಬಿಟ್ಟರೆ ಇಲ್ಲಿ ಬೇರೇನು ಕಾಣುವುದಿಲ್ಲ.ಈಕೆಯ ಸಾಧನೆಗೆ ನೀಡಿದ ಅಷ್ಟೇ ಕೋಟಿಗಳನ್ನು ಅಲ್ಲಿ ಬಿಸಿಲ ಧಗೆಯಲ್ಲಿ 'ಕುಟುಂಬವೋ ಅಥವಾ ದೇಶವೋ' ಎಂಬ ದ್ವಂದ್ವದಲ್ಲಿ ಕಾಲ ತಳ್ಳುವ ಇತರೆ ಮಕ್ಕಳಿಗೂ ನೀಡಲಾಗುವುದಿಲ್ಲವೇ? ಅಷ್ಟಿಲ್ಲದಿದ್ದರೂ ಇಷ್ಟಾದರೂ ಕ್ರೀಡಾ ಸ್ಕಾಲರ್ಶಿಪ್ಗಳು ಇಂದು ಅದೆಷ್ಟು ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ? ಅಲ್ಲೊಬ್ಬ ಐಎಎಸ್ ಆಕಾಂಕ್ಷಿಯ ಹುದ್ದೆಯನ್ನು ಕ್ಷಣಮಾತ್ರದಲ್ಲಿ ಕಿತ್ತು ಪದಕವನ್ನು ಪಡೆಯುವ ಇವರಿಗೆ ಕೊಟ್ಟು 'ಅತ್ತ ಕ್ರೀಡೆಯೂ ಇಲ್ಲ, ಇಲ್ಲಿ ಅಧಿಕಾರಿಯೂ ಅಲ್ಲ' ಎಂಬ ಗೊಂದಲದ ಗೋಜಲಿಗೆ ತಳ್ಳುವ ವಿಪರ್ಯಾಸವಾದರೂ ಏತಕ್ಕೆ? ಪದಕಗಳ ನಂತರ ಹರಿಯುವ ಹಣದ ಹೊಳೆ ಆಟದ ಮೊದಲೇ ಹುಟ್ಟುವುದಿಲ್ಲವೇಕೆ?

ಇದೇ ಬೈಗುಳಗಳು ಮತ್ತದೇ ಮಾತುಗಳು. ಹೇಳಿ ಕೇಳಿ ‘ಸಾಕಾಗಿದೆ’ ಎಂಬುದು ಮಾತ್ರ ಕಹಿಸತ್ಯ. ಹೇಳುವ ನಾವುಗಳೂ ಮಿಲ್ಕಾ ಸಿಂಗ್ ಗಳೇನಲ್ಲ ಅಥವಾ ಪಿ ವಿ ಸಿಂಧುಗಳೂ ಅಲ್ಲ. ಸರ್ಕಾರ ಅಥವಾ ಸಂಸ್ಥೆಗಳಿಗೆ ಹಾಗಲ್ಲ ಹೀಗೆ ಮಾಡಿ ಎನ್ನುವ ನೈತಿಕ ಹಕ್ಕು ನಮಗಿಲ್ಲದಿದ್ದರೂ ನಮ್ಮ ನಮ್ಮ ಮನೆಯಲ್ಲೇ ನೆಡೆಯುವ ತಿರುಗುದಾರಿಗಳನ್ನು ಸರಿಪಡಿಸಿಕೊಳ್ಳಬಲ್ಲೆವು. ಉದಾಹರಣೆಗೆ ಇಂದು ಎಲ್ಲಾ ಸೌಲಭ್ಯಗಳೂ ಇದ್ದೂ ಅದರ ಒಂತಿಷ್ಟೂ ಸದುಪಯೋಗ ಮಾಡಿಕೊಳ್ಳದ ನಾವುಗಳೇ 'ಸರ್ಕಾರಗಳ ನಿರ್ಲಕ್ಷ್ಯತನದಿಂದ' ಇಂದು ದೇಶದ ಕ್ರೀಡೆಗಳು ನೆಲಕಚ್ಚಿವೆ ಎನ್ನುತ್ತೀವಿ. ಆದರೆ ನಮ್ಮದೇ ಮಕ್ಕಳನ್ನು ಡಿಗ್ರಿ ಮುಗಿದ ಕೂಡಲೇ ಅಥವಾ ಮುಗಿಯುವ ಮೊದಲೇ ಉನ್ನತ ವ್ಯಾಸಂಗಕ್ಕೆ ಎಂದು ವಿದೇಶಗಳಿಗೆ ಹಾರಲು ವಿಮಾನಗಳ ಟಿಕೆಟ್ಟುಗಳನ್ನು ಕಾಯ್ದಿರಿಸುತ್ತೀವಿ! ಆಕೆಯ ಅಥವಾ ಆತನ ಆಟವನ್ನು ನೋಡಿ 'ಛೆ..ಥು' ಎಂದು ಜರಿಯುತ್ತೀವಿ. ಆದರೆ ಕ್ರೀಡೆ ದೂರದ ಮಾತು ಕನಿಷ್ಠ ಪಕ್ಷ ಎದ್ದು ಅತ್ತಿಂದಿತ್ತ ನೆಡೆಯಲೂ ಆಗದೆ ಕೂತ ಸ್ಥಳಕ್ಕೆ ದೇಹವನ್ನು ಅಂಟಿಸಿಕೊಂಡು ಕೈಕಾಲುಗಳಿದ್ದೂ ಅಂಗವಿಕಲರಾಗುತ್ತೀವಿ. ಏನೂ ಇಲ್ಲದೆ ಆಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದನ್ನು ನೋಡಿ ಕೊಂಡಾಡುತ್ತಿವಿ. ಆದರೆ ಸಾಧಿಸಲು ಸಕಲವೂ ಇದ್ದೂ ಕೇವಲ ನ್ಯೂನ್ಯತೆಗಳನ್ನೇ ದೊಡ್ಡದಾಗಿಸಿ ಕೊಂಡು ಕುಯಿಂಗುಡುತ್ತಿವಿ.

ಆಟ ನನಗೋ, ದೇಶಕ್ಕೋ ಅಥವಾ ಹಣಕ್ಕೋ ಎಂಬ ಅಸ್ಪಷ್ಟ ಗುರಿಗಳಿಂದಲೆಯೇ ಅರಳುವ ಕ್ರೀಡಾಪಟುಗಳು ಇಂದು ಘಮಿಕರಿಸುವ ಮೊದಲೇ ಕಮರುವುದು. ಅಲ್ಲಿ ಆಟವೆಂಬುದು ಪ್ಯಾಶನ್ ಅಥವಾ ಇಚ್ಛಿಸಿ ಪಡೆಯುವ ಪ್ರೊಫೆಶನ್. ಇಲ್ಲಿ ಆಟವೆಂಬುದು ಒಂದೋ ಹಣ ಇಲ್ಲವೆಂದರೆ ರೆಕ್ಕೆ ಕತ್ತರಿಸಿದ ನೊಣ! ಇಲ್ಲಿ ಎರಡು ಮುಖ್ಯ ವಿಚಾರಗಳನ್ನು ಗಮನಿಸಬೇಕು. ಒಂದು ದೇಶಕ್ಕೆ ಕೀರ್ತಿಯನ್ನು ಗಳಿಸಿಕೊಡಬೇಕೆಂಬ ಅಥವಾ ಹೆಸರು ಗಿಟ್ಟಿಸಿಕೊಳ್ಳಬೇಕೆಂಬ ಹಪಾಹಪಿ. ಎರಡನೆಯದು ನಿಖರತೆಯಿಲ್ಲದ ಕ್ರೀಡಾ ಹಾದಿಯಲ್ಲಿ ಆರ್ಥಿಕವಾಗಿ ಮುಗ್ಗರಿಸಿ ಮಕಾಡೆ ಬಿದ್ದು ಎದ್ದೇಳಲೇ ಆಗದೇನೋ ಎಂಬ ಭಯ. ಭಾರತದಂತಹಃ ಅಭಿವೃದ್ಧಿಶೀಲ ರಾಷ್ಟ್ರದ ಬಹುಸಂಖ್ಯೆಯ ಮಾಧ್ಯಮವರ್ಗದ ಜನರು ಎರಡನೆಯ ವಿಚಾರದ ತೂಕದಲ್ಲಿ ಮೊದಲನೇ ಸಂಗತಿಯನ್ನು ಹತ್ತಿಕ್ಕಿಕೊಳ್ಳುತ್ತಾರೆ. ಭಯ. ನನ್ನದೇಗೋ ಆಯಿತು ನನ್ನ ಮಗುವಿನ ಭವಿಷ್ಯ ಸುಭದ್ರವಾಗಿರಬೇಕೆಂಬ ಕನಸ್ಸನ್ನು ಕಾಣುವ ಮಾಧ್ಯಮವರ್ಗದ ಪೋಷಕರಿಗೆ ಆ ಸುಭದ್ರತೆಯ ಕಲ್ಪನೆಯೆಯೆಂದರೆ ಮಗ ಅಥವಾ ಮಗಳು ಬೆಳಗ್ಗೆ ಒಂಬತ್ತಕ್ಕೆ ಮನೆ ಬಿಟ್ಟು ಸಂಜೆ ಆರಕ್ಕೆ ಮನೆ ತಲುಪಿ, ತಿಂಗಳ ಕೊನೆಯಲ್ಲಿ ತಮಗಿಲ್ಲದಿದ್ದರೂ ಸರಿಯೇ ಅವರುಗಳು ಮಾತ್ರ ಒಳ್ಳೆಯ ಸಂಬಳವನ್ನು ಪಡೆದು, ಮದುವೆಯೊಂದಾಗಿ, ಮಕ್ಕಳು ಮರಿಗಳನ್ನು ಬೆಳೆಸಿ ಆ ನೆಮ್ಮದಿಯಲ್ಲೇ ತಾವು ಕಣ್ಣು ಮುಚ್ಚಿಕೊಂಡರೆ ಎಂಬ ಕನಸ್ಸಿನಲ್ಲಿಯೇ ಇರುತ್ತದೆ. ಅಲ್ಲದೆ ಭಾಗಶಃ ಜನರು ಇಂದು ಈ 'ಸಾಧನೆ'ಯನ್ನು ಸಾಧಿಸಿಯೇ ತೀರುತ್ತಾರೆ. ಇದರಲ್ಲಿ ಎಳ್ಳಷ್ಟೂ ತಪ್ಪಿಲ್ಲ. ಸ್ವಾಭಾವಿಕವಾಗಿ ಚಿಂತಿಸುವವರ ಸ್ವಾಭಾವಿಕ ಸ್ವಭಾವವಿದು. ಇಂತಹ ಸ್ವಾಭಾವಿಕತೆಯಲ್ಲಿ ಕ್ರೀಡೆ, ದೇಶ, ದೇಶಪ್ರೇಮವೆಂಬುದು ಅಸ್ವಾಭಾವಿಕವಾಗಿಯೇ ಅವರಲ್ಲಿ ಮೂಡಬೇಕು. ಮೋಡಕವಿದ ಆಗಸದಲ್ಲಿ ಇದ್ದಕ್ಕಿದಂತೆ ರವಿಯ ಕಿರಣಗಳು ಹೊಳೆದಂತೆ.



ಇಂತಹ ಮನಸ್ಥಿತಿಯ ಸಮಾಜದಲ್ಲಿ ಪ್ರತಿಭಾರಿಯ ಒಲಿಂಪಿಕ್ಸ್ ನಲ್ಲಿ ಕೇವಲ ಬೆರಳೆಣಿಕೆಯ ಪದಕಗಳನ್ನು ಗಳಿಸಿಬರುವ ನಮ್ಮವರ ಜರಿಯುವ ಹಕ್ಕು ನಮಗೆ ಎಳ್ಳಷ್ಟೂ ಇರುವುದಿಲ್ಲ ಎಂಬುದನ್ನು ನಾವು ಮನಗಾಣಬೇಕು. ಹಿಮಾದಾಸ್ ಗೆದ್ದರೆ ಅದು ಹೆಮ್ಮೆಯ ವಿಚಾರ. ಆದರೆ ಆ ಹೆಮ್ಮೆಯನ್ನು ಇತರೆ ನಟ ನಟಿಯರಿಗೆ ಹೋಲಿಸಿ ಜರಿಯುವುದು ಮಾತ್ರ ನಮ್ಮ ಕಮ್ಮಿ ಬುದ್ದಿಯ ಸಂಕೇತ. ಒಂದೂ ಮಾಡಿ ತೋರಿಸೋಣ ಅಥವ ಮಾಡುವವರಿಗೆ ಪ್ರೋತಾಹಿಸೋಣ. ಎರಡನ್ನೂ ಬಿಟ್ಟು ಕೇವಲ ಫೇಸ್ಬುಕ್ ಪೋಸ್ಟ್ಗಳನ್ನು ಶೇರ್ ಮಾಡುತ್ತಾ, ಆಟದ ಹಿರಿಮೆಯನ್ನು ಮರೆತು ಜಾತಿಯ ಹಿರಿಮೆಯನ್ನು ತಿಳಿಯಬಯಸಿದರೆ ಅದು ಕೇವಲ ಆಟವಾಗಿ ಉಳಿಯುತ್ತದೆಯೇ ವಿನಃ ಕ್ರೀಡೆಯಾಗಲು ಹೇಗೆ ತಾನೆ ಸಾಧ್ಯ?!

Friday, August 10, 2018

ಬಾಡದ ಹೂವು...

ಹತ್ತು ವರ್ಷದ ಮೊಮ್ಮಗನಿಂದ ಇಂದು ಬೆಳ್ಳಂಬೆಳಗ್ಗೆ ಬಂದ ಸುದ್ದಿಯನ್ನು ಕೇಳಿ ಜೀವ ಹಿಂಡಿಹೋದಂತಾಯಿತು. ಹಿಡಿದಾದ ಒಂದು ನಿಟ್ಟಿಸಿರು. ಆ ಉಸಿರಿನಲ್ಲಿ ದಶಕಗಳ ಕಾಲ ಎದೆಯಾಳದಲ್ಲಿ ಅವಿತು ಕಲೆತು ಪಳೆಯುಳಿಕೆಯಾದಂತಹ ಪ್ರೀತಿ, ಸಿಟ್ಟು, ಕೋಪ, ದುಃಖ ದುಮ್ಮಾನಗಳು ಒಮ್ಮೆಲೇ ಒಟ್ಟೊಟ್ಟಿಗೆ ಮೂಡಿದ್ದವು. ಕೆಲಕಾಲ ಕಣ್ಣು ಮುಚ್ಚಿ ಮೌನಿಯಾದೆ. ಮನವನ್ನೂ ಮಾತಾಡಲು ಬಿಡದೆ ಸುಮ್ಮನಿರಿಸಿದೆ.

ಜೀವನ. ಎಪ್ಪತ್ತೇಳು ವರ್ಷಗಳ ಈ ಜೀವನ ಮೊದಲು ಏಳು ವರ್ಷಗಳಷ್ಟೇ ಆಕೆಯನ್ನು ಗುರುತಿಸದು. ಅದು ಮೂರನೇ ತರಗತಿಯ ಮೊದಲ ಸಾಲ ಕೊನೆಯ ಸೀಟು. ಎಣ್ಣೆಯಚ್ಚಿದ ಕೂದಲ ನೀಳವಾದ ಜಡೆಯೆರಡನ್ನು ಅಂದವಾಗಿ ಕಟ್ಟಿ, ಹಿಂದಿನ ದಿನವೇಳಿದ ಮನೆಗೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಬಂದಿರುವಳೋ ಎಂಬ ಧಾಟಿಯಲ್ಲಿ ಕಿಟಕಿಯ ಪಕ್ಕಕ್ಕೆ ಆಕೆ ಕುಳಿತಿದ್ದಾಳೆ. ಮೊಣಕೈಯೆರಡು ಆಕೆಯ ಮಂಡಿಗಳ ಮೇಲೆ, ಕೈಯ ಅಸ್ತಗಳೆರೆಡು ಎಳೆಯ ಕೆನ್ನೆಗಳ ಮೇಲೆ. ಯಾರೊಟ್ಟಿಗೂ ತುಟಿಕ್ ಪಿಟಿಕ್ ಅನ್ನದೆ ಏನೋ ಒಂದು ಆಲೋಚನೆಯಲ್ಲಿ ಮಗ್ನಳಾಗಲಿದ್ದಾಳೆ. ತರಗತಿಯ ಮಕ್ಕಳೆಲ್ಲ ಜೀವವನ್ನೇ ಪಣಕ್ಕಿಟ್ಟು ಅರಚಿ ಗುಂಡಾಂತರ ಮಾಡುತ್ತಿರುವಾಗ ಈಕೆ ಮೌನಗೌರಿಯ ಮುಖವಾಡವನ್ನು ಹಾಕಿಕೊಂಡಿದ್ದಾಳೆ. ಚೋಟುದ್ದದ ಕಾಲುಗಳ್ನು ನಿಧಾನವಾಗಿ ಇಡುತ್ತಾ ಆಕೆಯ ಹಿಂಬದಿಗೆ ಬಂದು 'ಹೂ...' ಎಂದು ಕೂಗಿದ ಸದ್ದಿಗೆ ಆಕೆ ತನ್ನ ಕೈಗಳೆರಡನ್ನು ಕಿವಿಯ ಮೇಲಿರಿಸಿ ಭಯದಿಂದ ನನ್ನ ಮೊದಲ ಬಾರಿಗೆ ನೋಡಿದ್ದನ್ನ ನಾನು ಇಂದಿಗೂ ಮರೆತಿಲ್ಲ. ಎಂದೆಂದಿಗೂ ಮರೆಯುವುದಿಲ್ಲ.

'ತಾತ, ಅಪ್ಪ ತಿಂಡಿಗೆ ಆನ್ಲೈನ್ ಆರ್ಡರ್ ಮಾಡಿ ಆಗಿದೆ ಅಂತೇ. ಪಾಸ್ತಾ.. ಬೇಗ ತಿನ್ನು, ನಾನು ಲಂಚ್ ಬ್ರೇಕ್ ಗೆ ವಿಡಿಯೋ ಕಾಲ್ ಮಾಡ್ತೀನಿ' ಎಂದ ಮೊಮ್ಮಗನ ಮೆಸೇಜುಗಳು ಗೋಡೆಯ ಮೇಲೆ ಒಂದೊಂದಾಗೆ ಮೂಡತೊಡಗಿದವು.ಎಲ್ಲರೂ ಇದ್ದೂ ಯಾರೂ ಇಲ್ಲದ ಇಂದಿನ ಮುದಿ ಜೀವಗಳಿಗೆ ಓಲ್ಡ್ ಏಜ್ ಹೋಮುಗಳೇ ಜೀವನದ ಕೊನೆಯ ಛಾವಣಿ. ನಾನಿಲ್ಲಿಗೆ ಬಂದು ಅದಾಗಲೇ ಏಳು ವರ್ಷಗಳಾಗಿವೆ. ಇನ್ನೆಷ್ಟು ದಿವಸ ಈ ಜೀವನದ ಬಂಡಿಯನ್ನು ಸವೆಸಬೇಕೋ. ಆಕೆಯೊಟ್ಟಿಗೆ ನಾನೂ ಹೊರಟಿದ್ದರೆ? ಆ ಮಧುರ ಯಾನದಲ್ಲಿ ನಾನು ಹಾಗು ಆಕೆ. ಇಬ್ಬರೇ. ಸೂರ್ಯ. ಚಂದ್ರ, ನಕ್ಷತ್ರಾದಿಗಳಾಚೆಗೆ ಚಲಿಸುತ್ತ ಗೊತ್ತಿರದ ಗುರಿಯನ್ನು ಅನ್ವೇಷಿಸುತ್ತಾ ಆ ಅನಂತ ನಡಿಗೆಯಲ್ಲಿ.. ನಾನು ಹಾಗು ಅವಳು….

ಕಲ್ಲಾಟ. ಬಿಡುವು ಸಿಕ್ಕಾಗೆಲ್ಲ ಆಕೆ, ನಾನು ಜೊತೆಗೆ ಹತ್ತಾರು ಕಲ್ಲುಗಳು. ಕರ ಕರ ಸದ್ದನ್ನು ಮಾಡುತ್ತಾ, ಒಂದೊಂದೇ ಕಲ್ಲನ್ನು ಗಾಳಿಗೆ ಎಸೆಯುತ್ತಾ, ಕೈ ಬೆವತು ನೆಲದ ಮೇಲಿದ್ದ ದೂಳೆಲ್ಲ ಸೇರಿ ಕೊಳಕು ಕೊಳಕುಗೊಂಡ ಕೈಗಳಲ್ಲೇ ಆಡಿದ ಆಟಗಳು ಅದೆಷ್ಟೋ! ಅಂದಿನ ಒಂದೆರೆಡು ಕಲ್ಲುಗಳನ್ನು ನಾನು ಇಂದಿಗೂ ಕಾಪಾಡಿಕೊಂಡು ಬರಬೇಕಿತ್ತು. ಆಕೆಯ ನೆನಪಿಗೆ. ಅಲ್ಲ, ಅಲ್ಲ, ಆ ನೆನಪಿನ ಬಯಕೆಗೆ….

ಎಳೆಯ ವಯಸ್ಸಿನ ಗೆಳೆತನವೇ ಹಾಗೆ. ಹುಡುಗಿ ಅಂದವಾಗಿದ್ದು ಹಲವು ವರ್ಷಗಳ ನಂತರ ಕಾಲೇಜಿನಲ್ಲೋ, ಆಫೀಸಿನಲ್ಲೋ ಮಗದೊಮ್ಮೆ ಸಿಕ್ಕರೆ ಮುಗ್ದ ಗೆಳೆತನದ ನೆನಪಿನ ಗೂಡು ಪ್ರೀತಿ ಪ್ರೇಮ ಎಂಬ ಹಲವಾರು ಸಂಬಂಧಗಳಿಗೆ ದಾರಿಮಾಡಿಕೊಡುತ್ತದೆ. ಅದು ವಯಸ್ಸಿನ ಮಾಹೆಯೋ ಅಥವಾ ತಿಳಿದೇ ಜರುಗುವ ತಪ್ಪೋ ಗೊತ್ತಿಲ್ಲ. ಆದರೆ ಪ್ರಾಥಮಿಕ ಶಾಲೆಯ ನಂತರ ಆಕೆಯ ನೆನಪು ಅದೆಷ್ಟು ಕಾಡಿತು ನನಗೆ. ಆಕೆಯೆಲ್ಲೋ, ನಾನೆಲ್ಲೋ. ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯ ನಂತರ ಮಾರ್ಕ್ಸ್ ಶೀಟ್ಗಳನ್ನು ತೆಗೆದುಕೊಳ್ಳಲು ಕೊನೆಯಬಾರಿ ಹೋದಾಗ ಕಾಕತಾಳೀಯವೆಂಬಂತೆ ಆಕೆಯೂ ಅದೇ ಸಮಯಕ್ಕೆ ಬಂದಿದ್ದಳು. ಕಪ್ಪು ಬಣ್ಣದ ಬಟ್ಟೆಯ ಮೇಲೆ ಹರಿಶಿನ ಬಣ್ಣದ ನಕ್ಷತ್ರಗಳೂ ಅಥವಾ ಹರಿಶಿನ ಬಣ್ಣದ ಬಟ್ಟೆಯ ಮೇಲೆ ಕಪ್ಪು ಬಣ್ಣದ ಚಿಟ್ಟೆಗಳೋ ನೆನಪಿಗೆ ಬರುತ್ತಿಲ್ಲ. ಆದರೆ ಆ ಕೊನೆ ಕ್ಷಣವನ್ನು ಮುಂದೆ ನಾನು ಪ್ರತಿದಿನ ನೆನೆದುಕೊಳ್ಳುತ್ತಿದ್ದೆ. ಆದದ್ದಾಗಲಿ ಆಕೆ ಇರುವ ಶಾಲೆ ಯಾವುದೆಂದು ತಿಳಿದು ನಾನೂ ಅಲ್ಲಿಗೆ ಸೇರಿಕೊಂಡರೆ? ಆಕೆ ಎಲ್ಲಿದ್ದಾಳೆ? ಆಕೆ ಸಿಕ್ಕರೂ ಶಾಲೆಗೆ ಸೇರಿಸಲು ಮನೆಯವರು ಒಪ್ಪುವರೇ? ಗೊತ್ತಿರಲಿಲ್ಲ. ಆದರೂ ಹುಡುಕಿದೆ! ಸ್ಥಳಗುರುತ್ತಿದ್ದ ಆಕೆಯ ಮನೆಯನ್ನು ಹುಡುಕಿ ಹೋಗಿ ಕೇಳಿದರೆ ಅಂದು ಆಕೆ ಮನೆಯಲ್ಲಿರಲಿಲ್ಲ. ಮತ್ತೊಮೆ ಹೋಗಲು ಧೈರ್ಯವೇ ಸಾಲಿರಲಿಲ್ಲ! ನೆನಪುಗಳು ಚಟಪಟಗುಡುತ್ತಿದ್ದವು. ಕಾಲ ಓಡತೊಡಗಿತ್ತು. ಮಾರ್ಕ್ ಝುಕರ್ಬರ್ಗ್ ಕೂಡ ಕೊಂಚ ಲೇಟಾಗೆ ಫೇಸ್ಬುಕ್ಕನ್ನು ಅನ್ವೇಷಿಸಿದ. ಅದೆಷ್ಟು ಬೇಗ ಆತನೂ ಮುದುಕನಾದ! ಕಲಿಯುಗದ ಪ್ರೇಮದೇವತೆಗಳ ಸಾಲಿಗೆ ಸೇರುವ ಆತನ ಅನ್ವೇಷಣೆಯ ಐದಾರು ವರ್ಷಗಳ ನಂತರ ಆಕೆ ಮತ್ತೊಮೆ ನನಗೆ ಸಿಕ್ಕಳು ಅಥವಾ ನಾನು ಆಕೆಗೆ ಸಿಕ್ಕನೆ? ಇಲ್ಲ, ಆಕೆಯೇ ನನಗೆ ಸಿಕ್ಕಳು. ಅದೆಂತಹ ಆನಂದ! ಸಣ್ಣವನಿದ್ದಾಗ ಕಳೆದುಕೊಂಡ ಆಟಿಕೆಯೊಂದು ಪುನ್ಹ ಸಿಕ್ಕಂಥ, ಅಂಗನವಾಡಿಗೆ ಸೇರಿಸಿದ ಮೊದಲನೇ ದಿನ ಅಮ್ಮನ ದಾರಿಯನ್ನೇ ವರುಷಗಳಂತೆ ಕಾದು, ಅತ್ತು, ಬೇಸತ್ತು ಕೊನೆಗೆ ದೂರದಿಂದ ಆಕೆ ಬರವುದ ಕಂಡಾಗ ಮೂಡುತ್ತಿದ್ದ ಸಂತೋಷದ ಬುಗ್ಗೆಗಳ ಅನುಭವದಂತೆ ಅಂದು ಈಕೆಯೊಟ್ಟಿಗೆ ಮೊದಲ ಬಾರಿಗೆ ಫೋನಿನಲ್ಲಿ 'ಹಲೋ' ಎಂದಾಗ ಆಗಿದ್ದಿತು.

ವರುಷಗಳ ತಪ್ಪಸ್ಸಿಗೆ ಏನೋ ಎಂಬಂತೆ ದೊರೆತ ಆಕೆಯ ಮಾತುಗಳ ಮುಂದೆ ಏನೇನೂ ಬೇಡವಾಯಿತು. ಸ್ಕೂಲು, ಕಾಲೇಜು, ಪ್ರೀತಿ, ಗೆಳೆತನ, ಇಷ್ಟ ಕಷ್ಟಗಳಿಂದಿಡಿದು, ಸಾವು, ನೋವು, ಜೀವ ಜನ್ಮಜನ್ಮಾಂತರಗಳವರಗೆ ಘಂಟೆಗಟ್ಟಲೆ ಮಾತು, ನೂರಾರು ಮೆಸೇಜುಗಳು, ಆಗೊಮ್ಮೆ ಈಗೊಮ್ಮೆ ವಿನಿಮಯ ಮಾಡಿಕೊಳ್ಳುತ್ತಿದ್ದ ಗಿಫ್ಟುಗಳು ಏನೋ ಒಂದು ಅಕಲ್ಪಿತ ಲೋಕವನ್ನೇ ನನ್ನಲ್ಲಿ ಸೃಷ್ಟಿಸಿಬಿಟ್ಟಿದ್ದವು. ಕೆಲವೊಮ್ಮೆ ಪ್ರತಿಭಾರಿಯ ಕನಸ್ಸಿನಂತೆ ಇದೂ ಕೂಡ ಕನಸ್ಸಿರಬಹುದೇ ಎಂದನಿಸಿದ್ದು ಮಾತ್ರ ಸುಳ್ಳಲ್ಲ. ಆದರೂ ಅದೆಷ್ಟೋ ಭಾರಿ ಅದು ನಿಜವಾಗದಿರಲೆಂದು ಬೇಡಿಕೊಂಡು ಪರಿತಪಿಸುತ್ತಿದ್ದೆ. ಎಲ್ಲಿಯೂ ತೋರ್ಪಡಿಕೆಗೆ ಅವಕಾಶವಿಯಲಿಲ್ಲ. ನಟಿಸಿ ಭ್ರಮಿಸಿ ಗಳಿಸುವ ಜರೂರು ನನಗೆ ಅಂದಿಗೂ ಇರಲಿಲ್ಲ. ಇಂದೂ ಬೇಕಿಲ್ಲ! ಹೆಚ್ಚು ಕಡಿಮೆ ನನ್ನ ಗುಣಸ್ವಭಾವ ಅಂದು ಹೇಗಿದ್ದಿತೋ ದಶಕಗಳ ನಂತರ ಇಂದಿಗೂ ಹಾಗೆಯೇ ಇದೆ. ಮಾತಿನ ವಕ್ಕಣಿಯಲ್ಲೋ, ಮುಖಪುಟಗಳಲ್ಲೋ ಮತ್ತೆಲ್ಲೋ ತಾನೊಬ್ಬ ಸುಂದರಾಂಗ, ಸಾತ್ವಿಕ, ಸ್ನೇಹಿತರಿಂದ ಸುತ್ತುವರೆದ ಸೊಗಸುಗಾರನೆಂದು ತೋರ್ಪಡಿಸಿಕೊಂಡು ಪ್ರೀತಿಯನ್ನು ಗಿಟ್ಟಿಸಿಕೊಳ್ಳುವುದು ಕಷ್ಟದ ವಿಚಾರವಾಗಿರಲಿಲ್ಲ. ಆದರೆ ನಾನೆಂದೂ ಆ ಹಾದಿಯನ್ನು ಹಿಡಿಯಲಿಲ್ಲ. ಹಾಗಂತ ನನ್ನಲ್ಲಿ ನ್ಯೂನ್ಯತೆಗಳೇನು ಇರಲಿಲ್ಲ ಎಂದಲ್ಲ. ಆದರೆ ಪಡೆದುಕೊಳ್ಳುವ ಆಸೆಗೆ ಬಲಿಯಾಗಿ ನಾನೆಂದು ಅವುಗಳನ್ನು ಬಚ್ಚಿಡಲಿಲ್ಲ. ಹೀಗೆ ತಂತ್ರಜ್ಞಾನದ ನೆರಳಲ್ಲೇ ಅರಳಿದ ನಮ್ಮಿಬ್ಬರ ಸಂವಹನ ಕೇವಲ ಕಾಣದೆ ಆಡದ ಮಾತುಗಳು ಹಾಗು ಟಕಟಕ ಕುಟ್ಟುವ ಮೆಸೇಜುಗಳಿಗೆ ಸೀಮಿತವಾಗಿದ್ದವು. ಪ್ರತಿದಿನ ರಾತ್ರಿ ಹತ್ತರ ಸುಮಾರಿಗೆ ಶಬರಿಯಂತೆ ಕಾದು ಮನೆಯ ಮೇಲ್ಚಾವಣಿಯ ಮೇಲೆ ತಂಪಾದ ಗಾಳಿಗೆ ಮುಖವೊಡ್ಡಿ ಆಕೆಯ ನಂಬರಿಗೆ ರಿಂಗಾಯಿಸಿದಾಗ ನನ್ನ ಮನದಲ್ಲಿ ಮೂಡುತ್ತಿದ್ದ ಸಂತೋಷದ ಅಲೆಗಳನ್ನಾಗಲಿ, ನಂತರ ಆಕೆಯ 'ಹಲೋ' ಎಂಬ ಉದ್ವೇಗಭರಿತ ಎರಡಕ್ಷರವನ್ನು ಕೇಳಿ ದಿನದ ಜಂಜಾಟವೆಲ್ಲ ಮರೆಯಾಗಿ ಮಂದಹಾಸದಿಂದ ಅರಳುತ್ತಿದ್ದ ನನ್ನ ಮುಖಭಾವವನ್ನಾಗಲಿ ಆಕೆ ಕಾಣಲಿಲ್ಲ. ಆಕೆಯ ಮಾತುಗಳನ್ನು ಅರೆಕಿವುಡನಿಗೆ ಕೇಳುವ ಅಮೂಲ್ಯ ಪದಗಳಂತೆ ಅಷ್ಟನ್ನೂ ನನ್ನ ಮನದೊಳಗೆ ಇಳಿಸಿ ರಾಶಿಯಾಕಿಕೊಳ್ಳುತ್ತಿದ್ದೆ. ಆ ಮಾತುಗಳ ರಾಶಿ ಇಂದಿಗೂ ಹಾಗೆಯೆ ಇವೆ. ಆಗೊಮ್ಮೆ ಈಗೊಮ್ಮೆ ತೀರಾ ಒಬ್ಬಂಟಿ ಎನಿಸಿದಾಗ ಬಂದು ಮಾತಾಡಿಸುತ್ತವೆ. ಭಾರವಾದ ಎದೆಯನ್ನು ಹಗುರಾಗಿಸುತ್ತವೆ. ನನ್ನನು ಆಕೆ ಹೆಚ್ಚಾಗಿ ಇತ್ಯರ್ಥಿಸಿದ್ದು ಈ ತಂತ್ರಜ್ಞಾನದ ಕೊಂಡಿಗಳಲ್ಲಿಯೇ. ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸಲಾಗದ, ಹಾಗೆ ವ್ಯಕ್ತಪಡಿಸಲೊಗಿ ದ್ವಂದ್ವರ್ಥವನ್ನು ಹುಟ್ಟು ಹಾಕಿಕೊಂಡು ಪೇಚಾಡುತ್ತಿದ್ದ ನನ್ನನ್ನು ಆಕೆ ಬಹುವಾಗಿಯೇ ತಪ್ಪು ತಿಳಿದಳು.

ಅಷ್ಟರಲ್ಲಾಗಲೇ ಗಿರ್ರನೆ ತೇಲಿಬಂದ ಜೇಡದ ದೇಹದಂತಿದ್ದ ಡ್ರೋನ್ ಒಂದು ಕಾಗದದ ಪೊಟ್ಟಣವನ್ನು ಹಿಡಿದು ತಂದಿತು. ಅದರ ಕೈಯಿಂದ ಪಡೆದ ಪಾಸ್ತಾವನ್ನು ಪ್ಲೇಟೊಂದಕ್ಕೆ ಸುರಿದುಕೊಂಡೆ. ತಿನ್ನಲ್ಲು ಮಾತ್ರ ಮನಸ್ಸಾಗಲ್ಲಿಲ್ಲ. ಸಣ್ಣವನಿದ್ದಾಗ ದಿನಕ್ಕೆ ನಾಲ್ಕು ಅಕ್ಕಿರೊಟ್ಟಿ, ತುಪ್ಪ ಹಾಗು ಸಾರನ್ನು ಕಲಸಿ ಭಾರಿಸುತ್ತಿದ್ದ ನನಗೆ ಇಂದು ಒಂದು ಗುಕ್ಕೂ ಒಳಗೆ ಸೇರಿಸಲು ಹೆಣಗಾಡುವಂತಾಗಿದೆ. ಇಂದು ಅಂತಹ ಅಕ್ಕಿರೊಟ್ಟಿಯನ್ನು ಮಾಡಿ ಮುದ್ದಿಸಿ ತುಪ್ಪವನ್ನು ಸುರಿದುಕೊಡುವವರ್ಯಾರು. ನನ್ನವರು ಯಾರು. ಕಾಲ ಎಲ್ಲರನ್ನು ಏಕೆ ಅನಂತವಾಗಿಸಲಿಲ್ಲ. ಏಕೆ ಹುಟ್ಟು, ಅದ್ಯಾಕೆ ಸಾವು?

ಆಕೆ ನನ್ನೋಟ್ಟಿಗೆ ಮುನಿಸಿಕೊಳ್ಳತೊಡಗಿದ್ದು ಏಕಿರಬಹದು? ಇಂದಿಗೂ ಉತ್ತರ ತಿಳಿದಿಲ್ಲ. ನನ್ನ ತಳಬುಡ ಇಲ್ಲದ ಮಾತಿಗೂ ಅಥವ ವಿಪರೀತ ಸಲುಗೆಗೋ, (ಸ್ನೇಹದಲ್ಲಿ ಕಡಿಮೆ ವಿಪರೀತ ಎಂಬುವ ಮಾತೆಲ್ಲಿ, ನಾನು ಇದನ್ನು ಒಪ್ಪೆನು), ಅಥವ ನನ್ನ ಜಾತಿಗೋ ಅಥವ ಏಳಿಗೆಗೂ. ಗೊತ್ತಿಲ್ಲ! ಆದರೆ ನನ್ನ ಮೇಲಿನ ಆಕೆಯ ಮುನಿಸು ತಿಳಿಯದಂತೆ ಬೆಳೆಯಿತು. ಅದೊಂದು ದಿನ ತಲೆಗೆಟ್ಟವನಂತೆ ಮೊದಲ ಬಾರಿಗೆ ಆಕೆಯ ಪರೀಕ್ಷಾದಿನವೆಂದೂ ತಿಳಿಯದೆ ತಡರಾತ್ರಿ ಪ್ರೀತಿಯ ನಿವೇಧನೆಯನ್ನು ಮಾಡಿದೆ. ಪಾಪದ ಜೀವಕ್ಕೆ ಸಿಡಿಲು ಬಂದೆರಗಿದ ಅನುಭವವಾಗಿರಬೇಕು! ಅಲ್ಲಿಯವರೆಗೂ ಒಬ್ಬ ಅತ್ಯಾಪ್ತ ಗೆಳೆಯನೆಂಬ ಸಲುಗೆಯಿಂದಿದ್ದ ಆಕೆ ನನ್ನಿಂದ ಇಂತಹ ಕೀಳುಮಟ್ಟದ ಭಾವನೆಯನ್ನು ನಿರೀಕ್ಷಿಸಿರುವುದಕ್ಕೆ ಸಾಧ್ಯವಿಲ್ಲ (ಆದರೆ ನನ್ನ ಮನಮಾತ್ರ ಆ ಮಧುರ ಭಾವನೆಯನ್ನು ಕೀಳುಮಟ್ಟದ್ದು ಎಂದು ಇಂದಿಗೂ ಒಪ್ಪಿಕೊಂಡಿಲ್ಲ, ಅದೆಷ್ಟೇ ಪ್ರಯತ್ನಪಟ್ಟರೂ!) ಆ ಸಂಧಿಘ್ನ ಘಳಿಗೆಯಲ್ಲೂ ಆಕೆ ಕೋಪಗೊಳ್ಳದೆ ನನ್ನನ್ನು ನಯವಾಗಿ ಸಮಾಧಾನಪಡಿಸಿದಳು. ಎದೆಯೊಳಗೆ ನೋವಿನ ಜ್ವಾಲಾಮುಖಿಯೇ ಸ್ಪೋಟಿಸುತ್ತಿದ್ದಾರೂ ನಾನು ಸುಮ್ಮನೆ ಆಕೆಯ ಮಾತನ್ನು ಆಲಿಸತೊಡಗಿದೆ. ಆದರೆ ಯಾವೊಂದು ಮಾತುಗಳೂ ನನಗೆ ಸಾಂತ್ವನವನ್ನು ನೀಡಲಿಲ್ಲ. ಕೊನೆಗೆ 'ಗೆಳೆಯರಾಗಿರುವ' ಎಂಬ ಮಾತನ್ನು ಹೇಳಿ ಫೋನನ್ನು ತುಂಡರಿಸಿದಳು! ಆಕೆ ಒಪ್ಪಿಕೊಳ್ಳದಿದ್ದರೂ ಸರಿ ಆಕೆಯ ಮಾತುಗಳು ಹೀಗೆಯೇ ನನ್ನ ಕಿವಿಯ ಮೇಲೆ ಬೀಳುತ್ತಿರಲಿ ಎಂದು ಮನವು ಚೀರಾಡತೊಡಗಿತು. ಆ ನಡುರಾತ್ರಿಯಲ್ಲೂ ನಾ ಇತ್ತಕಡೆಯಿಂದ ಫೋನಾಯಿಸಿದೆ. ಆಕೆ ಉತ್ತರಿಸಲಿಲ್ಲ. ಅಲ್ಲಿನ ನಂತರದ ಮೂರುದಿನಗಳ ಕಾಲ ಆ ಚಿಗುರು ಜೀವನದ ಮೊಮ್ಮೊದಲ ನೋವಿನ ದಿನಗಳನ್ನು ಕಂಡೆ. ಅಲ್ಲಿಯವರೆಗೂ ಪರೀಕ್ಷೆಯಲ್ಲಿ ಕಡಿಮೆ ಅಂಕವನ್ನು ಪಡೆಯುವುದು ಅಥವ ಕ್ರಿಕೆಟ್ ಆಡುವಾಗ ಶೂನ್ಯ ರನ್ನಿಗೆ ಔಟ್ ಆಗುವುದು ಅಥವಾ ಹಣದ ಅಭಾವದಿಂದ ಸ್ನೇಹಿತರೊಟ್ಟಿಗೆ ಪ್ರವಾಸಕ್ಕೆ ಹೋಗಲಾಗದಿರುವುದೇ ದುಃಖವೆಂದು ತಿಳಿದವನಿಗೆ ತೀರಾ ಹಚ್ಚಿಕೊಂಡ ವ್ಯಕ್ತಿಯೊಬ್ಬರ ದೂರಾಗುವಿಕೆ ಈ ಮಟ್ಟಿನ ನೋವನ್ನು ತಂದುಕೊಡುತ್ತದೆ ಎಂದು ತಿಳಿದಿರಲಿಲ್ಲ. ಎದೆಯ ಮಧ್ಯಭಾಗದಲ್ಲಿ ಮೂಡುತ್ತಿದ್ದ ಆ ಸಂಕಟ ಎಳೆಯ ವಯಸ್ಸಿಗೆ ಸಾಕು ಸಾಕಾಗಿದ್ದಿತು. ಎಣಿಸಿದಂತೆ ಕೆಲದಿನಗಳ ನಂತರ ಆಕೆಯ ಮೆಸ್ಸೇಜು ಬಂದಿತು. 'ಹೇಗಿದ್ದೀಯ' ಎಂಬ ಆ ನಾಲ್ಕಕ್ಷರದ ಪದಗಳನ್ನು ಕಂಡು ಕಣ್ಣು ತುಂಬಿ ಬಂದಿತು. ಅದ್ಯಾವ ಜನ್ಮದ ಮೈತ್ರಿಯೋ ಕಾಣೆ, ಆಕೆಯೆಂದರೆ ಅದೇನೋ ಒಂದು ವರ್ಣಿಸಲಾಗದ ನವಿರಾದ ಅನುಭವ.

ನಂತರದ ಆಕೆಯ ಮಾತಿನ ವರಸೆ ಬಹುವಾಗಿಯೇ ಬದಲಾಗಿದ್ದಿತು. ಗೆಳೆಯನೆಂಬ ಆಪ್ತತೆ ಮಾತ್ರ ಎಂದಿನಂತೆಯೇ ಇದ್ದರೂ ಆಕೆ ನಮ್ಮ ಸಂಭದಕ್ಕೆ ಇಂತಿಷ್ಟೇ ಎಂಬೊಂದು ಬೇಲಿಯನ್ನು ಹಾಕಲು ಬಯಸಿದಂತೆ ಕಾಣುತ್ತಿದ್ದಳು. ನಾನು ಅವಳನ್ನು ಇಷ್ಟಪಟ್ಟಂತೆ ಆಕೆಯೂ ಒಬ್ಬನನ್ನು ಇಷ್ಟ ಪಡುತ್ತಿರುವಳೆಂದೂ ಹೇಳತೊಡಗಿದಳು. 'ನಿನ್ನನು ಪ್ರೀತಿಸೆನು' ಎಂದಾಗ ಆದ ದುಃಖಕ್ಕಿಂತ 'ನಾನು ಇನ್ನೊಬ್ಬನ್ನನ್ನು ಇಷ್ಟಪಡುತ್ತಿರುವೆ' ಎಂಬ ಮಾತಿನಿಂದ ಆದ ನೋವು ಮಾತ್ರ ಚೂರಿಯಿಂದ ಎದೆಗೆ ಚುಚ್ಚಿದಂತಿತ್ತು. ಆದರೂ ಸಂಬಾಳಿಕೊಂಡೇ. ನನ್ನ ಪ್ರೀತಿಯಷ್ಟೇ ಆಕೆಯದೂ ಅಮೂಲ್ಯವಾದದು. ಮಧುರವಾದುದು. ಆತ ಆಕೆಗೆ ಸಿಕ್ಕಿ ಇಬ್ಬರು ಸಂತೋಷವಾಗಿರಲಿ ಎಂದುಕೊಂಡು ಸಮಾಧಾನ ತಂದುಕೊಂಡೆ. ಆದರೆ ಆಕೆಯದೂ ನನ್ನ ಪಾಡೇ! ಅವಳಿಷ್ಟ ಪಡುವ ಹುಡುಗನೂ ಬೇರೊಬ್ಬಳನ್ನು ಇಷ್ಟ ಪಡುತ್ತಿರುವನೆಂದು ಆಕೆ ನೊಂದಿದ್ದಳು. ಜಾತಿಯಲ್ಲಿ ಆಕೆಯದೇ ಆದ ಅವನನ್ನು ಆಕೆ ಇಷ್ಟ ಪಟ್ಟಿದ್ದೇ ಯಾಕೋ ನನಗೆ ಒಂದು ಆಶ್ಚರ್ಯಕರ ಸಂಗತಿ. 'ನಿಜವಾದ ಪ್ರೀತಿ ಎಂದೂ ಸೋಲದು, ಸಮಾಧಾನ ತಂದುಕೊ' ಎಂದು ತಿಳಿಹೇಳತೊಡಗಿದೆ. ಆಕೆಯ ನೋವಿನಲ್ಲಿ ಭಾಗಿಯಾಗಲು ಪ್ರಯತ್ನಿಸಿದೆ. ಅಳುತ್ತಲೇ ನಗತೊಡಗಿದೆ. ಆದರೆ ಮೊದಲ ಬಾರಿಗೆ ನನಗೆ ಆಕೆಯ ಮೇಲೆ ಮುನಿಸು ಬರತೊಡಗಿದ್ದು ಕೆಲತಿಂಗಳ ಅಂತರದಲ್ಲಿಯೇ ಆಕೆ ಈತನನ್ನು ಮರೆತು ಮತ್ತೊಬ್ಬನ್ನನ್ನು ಇಷ್ಟಪಡುತ್ತಿರುವೆನೆಂದು ಹೇಳಿದಾಗ! ತನ್ನ ಮೊದಲ ಪ್ರೀತಿಯನ್ನು ಇಷ್ಟು ಬೇಗ ಮರೆತು ಮತೊಬ್ಬ ತನ್ನನು ಪ್ರಪೋಸ್ ಮಾಡಿದ ಎಂದಾಗ ನನ್ನ ಮೈಯೆಲ್ಲ ಹುರಿದುಹೋಯಿತು. ಸಿಕ್ಕರೂ ಸಿಗದಿದ್ದರೂ ತಾವು ಮೊದಲ ಪ್ರೀತಿಯನ್ನು ಅಷ್ಟು ಸುಲಭವಾಗಿ ಬಿಟ್ಟುಗೂಡಕೂಡದು ಎಂಬ ನನ್ನ ತರ್ಕರಹಿತ ನೀತಿಗೆ ಅವಳನ್ನೂ ಒಳಪಡಿಸಿದೆ. ಸಿಟ್ಟು ಜಗಳಕ್ಕೆ ಹಾದಿಯಾಯಿತು. ಮನಸ್ತಾಪ ವಿಪರೀತವಾಯಿತು. ಅಷ್ಟಾದರೂ ನಾನೇ ಆಕೆಯ ಹಿಂದೋಗಿ ಕ್ಷಮೆಯಾಚಿಸುತ್ತಿದ್ದೆ. ಹಲವು ಭಾರಿಯ ನಂತರ ಅದು ನನ್ನ ಸ್ವಾಭಿಮಾನಕ್ಕೆ ಧಕ್ಕೆ ತರುವಂತಿತ್ತು. ಮುಂಗಾರು ಮಳೆಯಂತೆ ಬಿಡದಂತೆ ಉದುರುತ್ತಿದ್ದ ನಮ್ಮ ಮಾತುಗಳು ಕ್ಷೀಣಿಸತೊಡಗಿದವು.

ಬೇಕಂತಲೇ ಏನೋ ಇಂದು ಸೆಕೆ ಕಡಿಮೆಯಾಗಿದೆ. ಮೋಡಗಳೂ ಕನೆ ಮೊಸರಂತೆ ಅಲ್ಲಲಿ ಚಲ್ಲಿವೆ. ಆಕೆಯ ಮನೆಯೂ ನಾನಿರುವ ಜಾಗದಿಂದ ಹೆಚ್ಚೇನು ದೂರವಿರಲಿಲ್ಲ. ಜೀವಮಾನದಲ್ಲೇ ಒಮ್ಮೆಯೂ ಹೋಗದ ಅಲ್ಲಿಗೆ ಇಂದು ಏಕೋ ಹೋಗುವ ಮನಸ್ಸಾಯಿತು. ಸ್ವಯಂಚಾಲಿತ ಕುರ್ಚಿಯಿಂದ ನಿಧಾನವಾಗಿ ಆಕೆಯ ಮನೆಯ ಹಾದಿಯನ್ನಿಡಿದೆ. ಊರಿನಲ್ಲಿದ್ದ ಮನೆಯಿಂದ ಬೈಕಿನಲ್ಲಿ ಪೇಟೆಗೆ ಬಂದರೆ ಸುತ್ತಿ ಬಳಸಿ ಅದೆಷ್ಟು ಸಾರಿ ಈಕೆಯ ಮನೆಯ ಮುಂದೆ ಹಾದು ಹೋಗುತ್ತಿರಲಿಲ್ಲ. ಇಳಿಸಂಜೆಯ ಕಣ್ತುಂಬಿಕೊಳ್ಳಲು ಬೆಟ್ಟದ ಬಳಿಗೆ ಹೋಗುವಾಗ, ಅಲ್ಲಿಂದ ವಾಪಸ್ಸು ಬರುವಾಗ, ಯಾವುದೊ ಮೂಲೆಯಲ್ಲಿರುವ ಮಾರ್ಕೆಟಿನ ಹಾದಿಯನ್ನು ಹಿಡಿದಾಗ, ದೇವಸ್ಥಾನಕ್ಕೆ ಹೋಗುವಾಗ ಅಥವಾ ಆಕೆಯ ನೆನೆಪು ಅತಿಯಾಗಿ ಕಾಡಿದಾಗ ಹೀಗೆ ಇಲ್ಲದ ಸಲ್ಲದ ಕಾರಣಗಳನಿಟ್ಟುಕೊಂಡು ನಾನು ಆಕೆಯ ಮನೆಯ ಮುಂದೆ ಅಗಣಿತ ಸಂಖ್ಯೆಯಲ್ಲಿ ಹಾದುಹೋಗಿರುವೆ. ಬಹುತೇಕ ನನ್ನೊಟ್ಟಿಗೆ ಮಾತನ್ನು ನಿಲ್ಲಿಸೇಬಿಟ್ಟಿದ್ದ ನನ್ನ ಪ್ರಾಣಸ್ನೇಹಿತೆಯನ್ನು ಕಾಣಲು ಕಣ್ಣುಗಳು ಹಾತೊರೆಯುತ್ತಿದ್ದವು. ಆದರೆ ವಿಧಿಯಾಟವೋ ಏನೋ ಒಮ್ಮೆಯೂ ಅದು ಸಾಧ್ಯವಾಗಲ್ಲಿಲ್ಲ. ಅಲ್ಲದೆ ಟ್ರಾಫಿಕ್ ರೂಲ್ಸ್ ಎನ್ನುತ ತಲೆಯ ತುಂಬಾ ISI ಮಾರ್ಕಿನ ಹೆಲ್ಮೇಟುಗಳೇ ಮುಖದ ತುಂಬಾ ಅಂಟಿಸಿಕೊಂಡಿರುವಾಗ ಒಂದು ಪಕ್ಷ ಆಕೆಯೇ ನನ್ನ ಕಂಡರೂ ಗುರುತಿಸಿಲಾರಳು!

ಒಂದೇ ಒಂದು ದಿನವೂ ತಪ್ಪದೆ ವರ್ಷಗಳ ಕಾಲ ಹರಟಿದ್ದ ನಾವುಗಳು ವರ್ಷಕೊಂದು ಹುಟ್ಟುಹಬ್ಬಕ್ಕೆ ಹಾರೈಸುವ ಗೆಳೆಯರೇನೋ ಎಂಬ ಮಟ್ಟಿಗೆ ಬದಲಾದೆವು. ಕಾಲದ ಮಾಹೆಯೇ ಹಾಗೆ! ಯಾರನ್ನು ಎಂತವರನ್ನಾಗಿಯೂ ಬದಲಾಗಿಸುತ್ತದೆ. ಆದರೆ ನನ್ನ ಮನದಲ್ಲಿ ಮೊದಲ ಪ್ರೀತಿಯ ಚಿಗುರು ಕೊನೆಯುಸಿರನ್ನೆಳೆಯದಿದ್ದರೂ ನನ್ನ ಕೆಲವೇ ಕೆಲವು ಅತ್ಯಾಪ್ತ ಸ್ನೇಹಿತರಲ್ಲಿ ಆಕೆಯೂ ಒಬ್ಬಳು ಎಂಬುದ ಅದು ಮರೆತಿರಲಿಲ್ಲ. ನನ್ನ ಕಷ್ಟ ದುಃಖಗಳಿಗೆ ಸಾಂತ್ವನ ಹೇಳಲು, ಸುಖ ಸಂತೋಷಗಳನ್ನು ಹಂಚಿಕೊಳ್ಳಲು, ವಿಪರೀತವಾಗಿ ಕಾಡಿದ ಖಿನ್ನತೆ ಹಾಗು ಆತಂಕವನ್ನು ನಿವಾರಿಸಿಕೊಳ್ಳಲು ನನಗೆ ನನ್ನ ಗೆಳತಿಯ ಜರೂರು ಇದ್ದಿತು. ಪ್ರತಿದಿನ ಬಿಡುವು ದೊರೆತಾಗಲೆಲ್ಲ ಅದು ನೆನೆನೆದು ಮರುಗುತ್ತಿತ್ತು. ತನ್ನ ಪ್ರೀತಿ ಪ್ರೇಮವೆಂಬ ಎಲ್ಲಾ ತರಹದ ಭಾವನೆಗಳನ್ನು ಅತ್ತಿಕ್ಕಿಕೊಂಡು ಕೊನೆಯ ಪಕ್ಷ ಕೇವಲ ಸ್ನೇಹಿತರಾಗಿಯೇ ಇರಲು ಅದು ಬಯಸತೊಡಗಿತು. ಜೀವದ ಗೆಳತಿಯನ್ನು ಅದು ಪರಿತಪಿಸುತ್ತಿತ್ತು. ಆದರೆ ಆಕೆಗೆ ಅದ್ಯಾವುದೂ ಗೊತ್ತಿರಲೇ ಇಲ್ಲ. ಕೊನೆಕೊನೆಗೆ ವರ್ಷಕ್ಕೊಮ್ಮೆ ಬರುವ ನನ್ನ ಹುಟ್ಟುಹಬ್ಬಕ್ಕೂ ಸಂದೇಶವನ್ನು ಕಳಿಸುವುದನ್ನ ನಿಲ್ಲಿಸಿದಳಾಕೆ. ಅಷ್ಟಾಗಿ ಬೇಡವಾದನೆ ಆಕೆಗೆ ನಾನು?

ವರುಷಗಳು ಕಳೆದವು. ಆಕೆಯೊಟ್ಟಿಗಿನ ಕೆಲದಿನಗಳ ನೆನಪು ನನ್ನಲ್ಲಿ ಹೆಮ್ಮರವಾಗಿ ಬೆಳೆದು ನಿಂತಿತ್ತು. ಅದೊಂದು ದಿನ ತಟ್ಟನೆ ಬಂದ ಆಕೆಯ ಮೆಸೇಜೊಂದನ್ನು ತೆರೆಯುವ ಮೊದಲೇ ಮನಸ್ಸು ಅದೇನೆಂದು ಊಹಿಸಿತು! ಆಕೆಯ ಮದುವೆಯ ಆಮಂತ್ರಣ ಪ್ರತಿಯ ಫೋಟೋ. ಸಂತೋಷದ ಸಂಗತಿಯೆಂದರೆ ಹುಡುಗ ಆಕೆಯ ಎರಡನೆಯ ಪ್ರೀತಿ. ಯಾವುದೊ ಆನ್ಲೈನ್ ವೆಬ್ಸೈಟಿನಲ್ಲಿ ತಯಾರು ಮಾಡಿ ಕಳಿಸಿದ್ದ ಆ ಫೋಟೋ ನನ್ನ ವರುಷಗಳ ತುಮುಲಗಳಿಗೆ ಕೊನೆಗೂ ಪೂರ್ಣವಿರಾಮವೊಂದನ್ನು ಜಡಿದಿತ್ತು. ಕಡೆ ಪಕ್ಷ ಖುದ್ದಾಗಿಯೇ ಒಂದೆರೆಡು ಪದಗಳನ್ನು ಟೈಪ್ ಮಾಡಿ ಕಳಿಸಲಾಗದ ಆಕೆ ನನ್ನ ಅದೆಷ್ಟು ದೂರವಾಗಿಸಿದ್ದಾಳೆ ಎನ್ನುವುದು ಅರಿವಾಯಿತು. ಅದಾದೆಲ್ಲ ಆಯಿತು, ನನ್ನ ಪರಮಾಪ್ತ ಗೆಳತಿಯವಳು. ಒಂದೆರೆಡು ದಿನ ಮೊದಲೇ ಹೋಗಿ ಮದುವೆಯ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಈ ನೆನಪುಗಳ ಬುತ್ತಿಗೆ ಇನ್ನಷ್ಟು ಸವಿನೆನಪುಗಳ ರಾಶಿಗಳನ್ನು ಸುರಿದುಕೊಳ್ಳಬೇಕೆನ್ನುವ ಆಸೆಗೂ ತಣ್ಣೀರೆರಚಲಾಯಿತು. ಒಂದು ಫೋನಾಯಿಸಿ ಅಥವಾ ತುಸುದೂರದಲ್ಲೇ ಇದ್ದ ಮನೆಗೊ ಬಂದು ಆಮಂತ್ರಣ ಪ್ರತಿಯನ್ನು ಕೊಡಲಾಗದ ಆಕೆಯ ಮದುವೆಗೆ ನಾನ್ಯಾಕೆ ಹೋಗಲಿ!? ಸ್ವಾಭಿಮಾನ ಹೆಚ್ಚೆತ್ತಿತು.

ಸರ್ವವೂ ಯಂತ್ರಮಯವಾಗಿರುವ ಈ ಕಾಲದಲ್ಲಿ ಮೆನೆಯ ವಿಳಾಸವನ್ನು ಹೇಳಿದರೇನೇ ತಂದು ಬಿಡುವ ವೀಲ್ಚೇರು ನನ್ನನ್ನು ಆಕೆಯ ಮನೆಯ ಮುಂದೆ ತಂದು ನಿಲ್ಲಿಸಿದ್ದೆ ತಿಳಿಯಲಿಲ್ಲ. ಮೆನೆಯ ಹೊರಗೊಳಗೆ ಓಡಾಡುತ್ತಿದ್ದ ಅಲ್ಲಿನ ಯಾರೊಬ್ಬರಲ್ಲೂ ದುಃಖದ ಛಾಯೆಯಾಗಲಿ, ಅಗಲಿಕೆಯ ನೋವಾಗಲಿ ಕಾಣುತ್ತಿರಲಿಲ್ಲ. ಬದಲಾಗಿ ಯಾವುದೊ ಕಾರ್ಯಕ್ರಮಕ್ಕೂ ಏನೋ ಎಂಬಂತೆ ಸಂತೋಷದ ತಯಾರಿ ನೆಡೆಯುತ್ತಿತು. ಮಾನವ ಜೀವಿಗಳಿಗಿಂತ ಹೆಚ್ಚಾಗಿ ಡ್ರೋನ್ಗಳೇ ಝುಯಿಂಗುಡುತ್ತಾ ಹಾರಾಡುತ್ತಿದ್ದವು. ಓಲ್ಡ್ ಏಜ್ ಹೋಮಿನಲ್ಲಿದ್ದರೂ ಸಮಾಜದಲ್ಲಿ ತುಸುವಾಗಿ ಗುರುತಿಸಿಕೊಂಡಿದ್ದ ನನ್ನನು ಹೆಣ್ಣುಮಗಳೊಬ್ಬಳು ಮನೆಯೊಳಗೇ ಬರಮಾಡಿಕೊಂಡಳು. ಒಂದೆರೆಡು ಮಾತಿನ ನಂತರ ಈಕೆ ಆಕೆಯ ಮೊಮ್ಮಗಳೆಂಬುದು ತಿಳಿಯಿತು. ತುಸು ಸಮಯದಲ್ಲಿ ಆಕೆ ಬೇರೇನೋ ಕೆಲಸದ ನಿಮಿತ್ತಾ ಅಲ್ಲಿಂದ ಎದ್ದುಹೋದಳು. ನಾನು ನನ್ನ ವೀಲ್ಚೇರಿನಿಂದ ಎದ್ದು ಪಕ್ಕದಲ್ಲಿದ್ದ ಸೋಫಾದ ಮೇಲೆ ಆಸೀನನಾದೆ. ಮೊದಲ ಬಾರಿ ಆಕೆಯ ಮನೆಗೆ ಬಂದರೆ ಇಂದು ಆಕೆಯೇ ಇಲ್ಲ. ಇದ್ದಿದ್ದರೆ ಸಂತೋಷಪಡುತ್ತಿದ್ದಳೋ, ಮುನಿದುಕೊಳ್ಳುತ್ತಿದ್ದಳೋ ಅಥವಾ ಗುರುತೇ ಹಿಡಿಯದಿರುತ್ತಿದ್ದಳೋ ತಿಳಿಯದು. ಹಾಲಿನ ಒಂದು ಮೂಲೆಯಲ್ಲಿದ್ದ ರೂಮಿನ ಬಾಗಿಲಿಗೆ ಒರಗಿ ಐದಾರು ವರ್ಷದ ಹೆಣ್ಣುಮಗುವೊಂದು ನನ್ನನ್ನೇ ನೋಡುತ್ತಾ ನಿಂತಿತ್ತು. ಮೊದಲಬಾರಿಗೆ ಆಕೆಯನ್ನು ಕಂಡ ಚಿತ್ರ ಒಮ್ಮೆಲೇ ನನ್ನ ಕಣ್ಣ ಮುಂದೆ ಹಾದುಹೋದಂತಾಯಿತು. ಅದೇ ಬಣ್ಣ, ಅದೇ ಕಣ್ಣು, ಅದೇ ಮೂಗು, ಅದೇ ಘಾಡ ಕಪ್ಪುಬಣ್ಣದ ಕೂದಲು! ಕೈಬೀಸಿ ಆಕೆಯನ್ನು ನನ್ನ ಬಳಿಗೆ ಬರುವಂತೆ ಕರೆದೆ. ಮೊದಲು ಬರಲೊಲ್ಲೆ ಎಂದು ತಲೆಯಾಡಿಸಿದ ಆಕೆ ನಂತರ ನಿಧಾನವಾಗಿ ಒಂದೊಂದೇ ಹೆಜ್ಜೆಯನ್ನು ಪೋಣಿಸುತ ನನ್ನ ಬಳಿಗೆ ಬಂದಳು. ಆಕೆಯನ್ನು ಬಳಿಗೆ ಕರೆದು ಕೂರಿಸಿಕೊಂಡು ವಿಚಾರಿಸಿದೆ. ಈಕೆ ಆಕೆಯ ಮರಿಮಗಳು! ಕೆಲಕ್ಷಣಗಳ ಮೊದಲು ಮಾತಾಡಿದ ಹೆಣ್ಣುಮಗಳ ಮಗಳಿವಳು. 'ನೀನು ನಿನ್ನ ದೊಡ್ಡಜ್ಜಿಯಂತೆಯೇ ಇದ್ದೀಯ' ಎಂದು ಇಂಗ್ಲೀಷಿನಲ್ಲಿ ಹೇಳಿದಾಗ ನಾಚಿದ ಆಕೆ ನಾನು ಯಾರು, ನನ್ನ ಹೆಸರೇನೆಂದು ಕೇಳಿದಳು.

ಹಾಗೆಯೆ ಮಾತಾಡುವಾಗ ನನ್ನ ದೃಷ್ಟಿ ಗೋಡೆಯ ಮೇಲೆ ತೂಗುಹಾಕಿದ ಮರದ ಪೇಂಟಿಂಗ್ ಒಂದರ ಮೇಲೆ ಬಿದ್ದಿತು. ಕೆಲಕಾಲ ಅದನ್ನೇ ನೋಡುತ್ತಿದ್ದ ನನ್ನ ಕಣ್ಣುಗಳಲ್ಲಿ ಇದ್ದಕ್ಕಿಂದಂತೆ ನೀರು ಗಳಗಳನೆ ಹರಿಯತೊಡಗಿತು! ಆಕೆಯ ಮರಿಮಗಳ ಪುಟ್ಟ ಕೈಗಳು ನನ್ನ ಕಣ್ಣುಗಳನ್ನು ಒರೆಸತೊಡಗಿದವು. ಆಕೆಯೇ ಬಂದು ನನ್ನ ಸಮಾಧಾನಮಾಡಿದ ಅನುಭವವಾಯಿತು. ಗೋಡೆಯಲ್ಲಿ ನೇತಾಕಿದ್ದ ಪಟ ನಾನು ಆಕೆಗೆ ಕೊನೆಯ ಬಾರಿಗೆ ಕೊಟ್ಟ ಉಡುಗೊರೆಯಾಗಿದ್ದಿತು. ನನ್ನ ಕಂಡರೂ ಗುರುತಿಡಿಯಲಾರಳು ಎಂದುಕೊಂಡಿದ್ದ ನಾನು ಐವತ್ತು ವರ್ಷಗಳಿಗೂ ಮಿಗಿಲಾದ ನನ್ನ ಉಡುಗೊರೆಯನ್ನು ಹಾಗೆಯೆ ಸಂರಕ್ಷಿಸಿಕೊಂಡು ಬಂದಿದ್ದಾಳೆ ಎಂಬುದ ಕಂಡು ದುಃಖ ಉಮ್ಮಳಿಸಿ ಬಂದಿತು. ತಕ್ಷಣ ಏನೋ ನೆನಪಾಗಿ ಆ ಮಗುವಿಗೆ ಪಟವನು ಬಿಚ್ಚಿ ತರಲು ಕೇಳಿದೆ. ದಶಕಗಳ ಹಳೆಯ ಪಟ ನನ್ನ ಕೈಸೇರಿತು. ಅಂದು ಈ ಉಡುಗೊರೆಯನ್ನು ಆಕೆಗೆ ಕೊಡುವ ಮುನ್ನ ಒಂದಿಷ್ಟು ಸಾಲುಗಳನ್ನು ಆಕೆಗಾಗಿ ಬರೆದು ಯಾರಿಗೂ ಕಾಣದಂತೆ ಅದರ ಹಿಂದಕ್ಕೆ ಇರಿಸಿದ್ದೆ. ನಿಧಾನವಾಗಿ ಪಟವನ್ನು ಬಿಚ್ಚಿ, ಮಡಚಿ ಇಟ್ಟಿದ್ದ ಆ ಕಾಗದದ ಚೂರನ್ನು ದಶಗಳಗಳ ನಂತರ ಮೊದಲ ಭಾರಿಗೆ ಹೊರತೆಗೆದೆ. ಅದು ಕಂದು ಬಣ್ಣಕ್ಕೆ ತಿರುಗಿ ಒಣಗಿದ ಹಪ್ಪಳದಂತಾಗಿದ್ದಿತು. ನಿಧಾನವಾಗಿ ಅದನ್ನು ಬಿಡಿಸಿ ಓದ ತೊಡಗಿದೆ...

'ಹಲೋ.. ಎಂಬ ಉದ್ವೆಗಭರಿತ ನಿನ್ನ ಆ ಎರಡಕ್ಷರದ ಛಾಯೆ ನನ್ನ ಮೇಲೆ ಅದೆಷ್ಟಿದೆ ಎಂದರೆ ಇಡೀ ಜೀವಮಾನಪೂರ್ತಿ ನಿನಗೆ ಫೋನಾಯಿಸಬೇಕೆಂಬ ಹೆಬ್ಬಯಕೆ ನನ್ನದು. ನನ್ನ ಸರ್ವ ದುಃಖದುಮ್ಮಾನಗಳಿಗೂ ನಿನ್ನ ಹಲೋ ಎಂಬ ಆ ಎರಡಕ್ಷರದ ಪದವೇ ಔಷಧ ಎಂಬುದು ನಿನಗೆ ತಿಳಿದಿರುವುದಿಲ್ಲ. ಇದು ಉತ್ಪ್ರೇಕ್ಷೆಯಲ್ಲ. ತೋರ್ಪಡಿಕೆಯ ಪ್ರೀತಿಯೂ ಅಲ್ಲ. ಸೂರ್ಯಕಾಂತಿ ಹೂವಿಗೆ ಸೂರ್ಯನ ದರ್ಶನವಾದಂತೆ, ಹಸಿದ ಕರುವಿಗೆ ಅಮ್ಮನ ಕೊರಳಘಂಟೆಯ ಸದ್ದು ಕೇಳಿಸಿದಂತೆ, ಬಿರಿದ ನೆಲಕ್ಕೆ ಮಳೆಯ ಸಿಹಿಸಿಂಚನವಾದಂತೆ, ನೀನು ನನಗೆ. ಇದು ಮಾನವ ಸಂಬಂಧದ ಯಾವ ಕೆಟಗರಿಯೂ ಅಲ್ಲ. ಇದು ಕೇವಲ ಭಾವಸಂಭಂದದ ವರ್ಣನಾತೀತವಾದ ಬೆಸುಗೆ. ಇದು ನಿನಗೆ ಅರಿಯದು. ನಿನ್ನ ಉಪಸ್ಥಿತಿಯಿಂದ ನನ್ನಲ್ಲಿ ಹೀಗೆ ಮೂಡುತಿದ್ದ ಜೀವನೋತ್ಸಹದ ಅಲೆಗಳಿಂದಾಗಿಯೇ ನೀನು ನನಗೆ ಇಷ್ಟವಾಗುತ್ತೀಯ ವಿನಃ ಪ್ರೀತಿ ಪ್ರೇಮ ಅಂದ ಚೆಂದಗಳೆಂಬ ಮಾಹೆಗಳಿಂದಲ್ಲ... ' ಎಂದು ಬರೆದಿದ್ದ ನಾಲ್ಕಾರು ಸಾಲುಗಳನ್ನು ಓದುವಷ್ಟರಲ್ಲಿ ನನ್ನ ಕಪೋಲಗಳೆರಡೂ ಒದ್ದೆಯಾಗಿದ್ದವು.

ಎಲ್ಲಿಂದಲೋ ಬೀಸಿದ ತಂಗಾಳಿ ನನ್ನ ಬಂದು ಅಪ್ಪಳಿಸಿತು. ಆರು ವರ್ಷದ ಆಕೆಯ ಮರಿಮಗಳು ಅಷ್ಟರಲ್ಲಾಗಲೇ ನನ್ನ ಎದೆಯ ಮೇಲೆ ತಲೆಯೊರಗಿ ನಿದ್ರೆಗೆ ಜಾರಿದ್ದಳು.......

Friday, August 3, 2018

ದೇಶಕಟ್ಟುವ ಫ್ಯಾಂಟಸಿ...

ಇತಿಹಾಸದ ಕಾಲಘಟ್ಟದಲ್ಲಿ ಐವತ್ತು ವರ್ಷಗಳ ಸಮಯ ತೀರಾ ಚಿಕ್ಕದು. ಅರ್ದ ತಲೆಮಾರಿನ ಈ ಐದು ದಶಕಗಳಲ್ಲಿ ಹೆಚ್ಚೆಂದರೆ ಏನೆಲ್ಲಾ ಜರುಗಬಹುದು? ಸಾಮಾಜಿಕ ಬೆಳವಣಿಗೆಯ ದೃಷ್ಟಿಯಲ್ಲಿ ನೋಡುವುದಾದದರೆ ದಾರಿಕಾಣದ ಹಳ್ಳಿಗಳಿಗೆ ರಸ್ತೆಗಳ ಮೇಣವೊಂದಿಷ್ಟು ಅಂಟಿಕೊಳ್ಳಬಹುದು, ಸೂರು ಕಾಣದ ತಲೆಗಳ ಮೇಲೆ ಸ್ವಂತ ಮನೆಯೊಂದರ ನೆರಳು ಮೂಡಬಹುದು, ಬೆಳಕು ಕಾಣದ ಮನೆಗಳು LED ಬಲ್ಬುಗಳ ಕಾಂತಿಯಿಂದ ಮಿನುಗಬಹುದು ಅಥವಾ ಅಷ್ಟೂ ಸರ್ಕಾರೀ ಸ್ಕೂಲುಗಳ ಜಾಗದಲ್ಲಿ ತಕಿದಿಮಿತ ಕುಣಿಯುವ ಕಷ್ಟಪಟ್ಟು ಇಷ್ಟಪಡುವ ಪ್ರೈವೇಟ್ ಸ್ಕೂಲುಗಳು ತಲೆಯೆತ್ತಬಹುದು, ಎಲ್ಲವೂ ಗೂಗಲ್ ಇಂಟರ್ನೆಟ್ಮಯವಾಗುವ ಹಾದಿಯಲ್ಲಿ ಮಾನವ ಓದು ಬರಹಗಳನ್ನೇ ಮರೆತು ಕೇವಲ ಮಾಂಸದ ಮುದ್ದೆಯಂತಾಗಲೂಬಹುದು. ಒಟ್ಟಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸರ್ವೋತೋಮುಖ ಅಭಿವೃದ್ಧಿ ಎಂದರೆ ಇವಿಷ್ಟೇ ಎಂದರೂ ಅದು ಉತ್ಪ್ರೇಕ್ಷೆಯಾಗದು! ಆದರೆ ಅಲ್ಲೊಂದು ದೇಶವಿತ್ತು. ದೇಶವೆನ್ನುವುದಕ್ಕಿಂತ ಮರಳುಗಾಡಿನ ರಾಶಿ ರಾಶಿ ಗುಡ್ಡೆಗಳ ಪ್ರದೇಶವೆನ್ನಬಹುದು. ಸುಟ್ಟು ಕರಕಲಾಗುವ ಉರಿಬಿಸಿಲಿಗೆ ಅಲ್ಲಿ ಮಾನವರೋಗಲಿ ಕನಿಷ್ಠ ಒಂದೆರೆಡು ಪ್ರಾಣಿಗಳೂ ಕಾಣಲು ಸಿಗುತ್ತಿರಲಿಲ್ಲ.ನಮ್ಮ ರಾಜ್ಯಕ್ಕಿಂತಲೂ ಸಣ್ಣದಾದ ಆ ಭೂಪ್ರದೇಶ ಅಕ್ಷರ ಸಹ ಮರಳುಗಾಡಿನ ಆಗರ. ಅಲ್ಲೊಂದು ಇಲ್ಲೊಂದು ಗುಂಪು ಜನಗಳು ನೇಸರರಾಜನೊಟ್ಟಿಗೆ ಸೆಣೆಸುತ್ತಾ ವಾಸಿಸುತ್ತಿದ್ದದ್ದು ಬಿಟ್ಟರೆ ಉಳಿದಷ್ಟೂ ಜಾಗ ಬಟಬಯಲಿನ ಜನವಿರಳ ಪ್ರದೇಶವಾಗಿತ್ತು. ದಿನಕೊಂದು ಮುಡಿಯಷ್ಟು ಅನ್ನವನ್ನು ಬಿಟ್ಟರೆ ಖರ್ಜೂರದ ಹಣ್ಣುಗಳೇ ಇವರಿಗೆ ಮೂರೊತ್ತಿನ ಆಹಾರ! ವರ್ಷಕೊಮ್ಮೆ ಅಥವಾ ಕೆಲವೊಮ್ಮೆ ಒಮ್ಮೆಯೂ ಬಾರದ ಮಳೆರಾಯನಂತೂ ಇಲ್ಲಿ ಒಂದು ನರಪಿಳ್ಳೆಯೂ ನಂಬಿ ಬದುಕುತ್ತಿರಲಿಲ್ಲ. ಇನ್ನು ನೀರನಂತೂ ಕೇಳಬೇಕೆ, ಅದು ಜಗತ್ತಿನ ಅತಿ ಕೊನೆಯ ಹನಿಯೊ ಎಂಬಂತೆ ಕಾಪಾಡಿಕೊಂಡು ಬರುತ್ತಿದ್ದರು. ಅದೆಷ್ಟೇ ಬಾಯಾರಿದರೂ ದಿನಕೊಂದು ಸಣ್ಣ ಲೋಟದ ನೀರನಷ್ಟೇ ಕುಡಿಯಲು ಶಕ್ತರಾಗಿದ್ದರು! ಇಂತಹ ಬರಬಿದ್ದ ಮರಳು ರಾಶಿಯಲ್ಲಿ ಮೇಲೆ ಹೇಳಿದ ಐವತ್ತು ವರ್ಷಗಳಲ್ಲೇ ಏನೆಲ್ಲಾ ಜರುಗಿರಬಹದು? ಹಳ್ಳಿಯೊಂದು, ಊರೊಂದು ಹುಟ್ಟಿರಬಹುದು. ಹುಟ್ಟಿದರೂ ಈ ಬೆಂಕಿಯ ನೆಲದಲ್ಲಿ ಜೀವ ಪಣಕ್ಕಿಟ್ಟು ಬದುಕುವುದಕ್ಕಿಂತ ಮೂರ್ಖತನ ಮತ್ತೊಂದಿರದು. ಅಥವಾ ಅಕ್ಕಪಕ್ಕದ ಯಾವುದಾದರೊಂದು ಸದೃಢ ದೇಶ ನ್ಯೂಕ್ಲಿಯರ್ ಪ್ಲಾಂಟ್ಗಳನ್ನೋ ಅಥವಾ ಪವನಶಕ್ತಿ ಕೇಂದ್ರಗಳನ್ನೂ ನಿರ್ಮಿಸಿದ್ದಿರಬಹುದು. ಅಥವಾ ಇದ್ದ ಮೂರು ಮತ್ತೊಂದು ಕುಟುಂಬಗಳೂ ಕಣ್ಮರೆಯಾಗಿ ಕೇವಲ ಬಿಸಿಲಿನ ಮೊರೆತವೇ ಸರ್ವವ್ಯಾಪ್ತಿಯಾಗಿದ್ದಿರಬಹುದು, ಅಲ್ಲವೇ?

ಬಿಲ್ಲಕುಲ್ ಇಲ್ಲ!

ಹೌದು. ಶತಮಾನಗಳಿಂದ ರಣಬೆಂಕಿಯ ಶಾಖದಲ್ಲಿ ಬಾಡಿ ಬೆಂದ ಆ ದೇಶದ ಇಂದಿನ ಸ್ಥಿತಿಯನ್ನು ನೋಡಿದರೆ ನಾವು ಅಕ್ಷರ ಸಹ ಮೂಖವಿಸ್ಮಿತರಾಗುವುದರಲ್ಲಿ ಸಂಶಯವೇ ಬೇಡ. ಇಂದು ತಲವಾರು ಜಿಡಿಪಿಯಲ್ಲಿ ಅಮೇರಿಕ, ಕೆನಡಾ, ಜರ್ಮನಿಯಂತಹ ಸಬಲ ದೇಶಗಳನ್ನೇ ಹಿಂದಿಕ್ಕಿ, ಮಾನವ ಅಭಿವೃದ್ಧಿ ಸೂಚ್ಯಂಕ (HDI) ದಲ್ಲಿ ಮುಂಚೂಣಿ ದೇಶಗಳ ಸಾಲಿನಲ್ಲಿ ಬರುವ, ವಿಶ್ವದಲ್ಲೇ ಅತಿ ಹೆಚ್ಚಿನ ಗಗನಚುಂಬಿ ಕಟ್ಟಡಗಳ ನಗರಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದು (ದುಬೈ), ವಿಶ್ವದ ಅತಿ ಎತ್ತರವಾದ ಕಟ್ಟಡ, ಅತಿ ದೊಡ್ಡದಾದ ಮಾನವನಿರ್ಮಿತ ದ್ವೀಪ, ಅತಿ ದೊಡ್ಡ ಶಾಪಿಂಗ್ ಮಾಲ್ (ವಿಸ್ತೀರ್ಣವಾರು), ಅತಿ ದೊಡ್ಡ ಅಕ್ವೇರಿಯಂ ಗಳ ನಿರ್ಮಾಣದ ಹೆಗ್ಗಳಿಕೆಯನ್ನೂ ಗಿಟ್ಟಿಸಿಕೊಂಡು, ದೇಶದ ಜನಸಂಖ್ಯೆಯಲ್ಲಿ ಶೇಕಡಾ 80 ರಷ್ಟು ಪರದೇಶದವರೇ ಬಂದು ಮುಗಿಬೀಳುವಂತೆ ಮಾಡಿಕೊಂಡಿದೆ ಎಂದರೆ ನಾವು ನಂಬಲೇ ಬೇಕು. ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್). ಅಬುಧಾಬಿ, ದುಬೈ, ಶಾರ್ಜಾ ಎಂಬ ಒಟ್ಟು ಏಳು ಸಂಸ್ಥಾನಗಳು ಸೇರಿ ಮೂಡಿದ ದೇಶವಿದು. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದ ಇಂದಿಗೂ ರಾಜರುಗಳ ಗಟ್ಟಿ ಆಳ್ವಿಕೆಯಲ್ಲಿಯೇ ಇರುವ ದೇಶ. ಅಬುಧಾಬಿ ದೇಶದ ರಾಜಧಾನಿ. ಇಂದು ಜಗತ್ತಿನ ಮೂಲೆ ಮೂಲೆಯ ಗಲ್ಲಿ ಗಲ್ಲಿಗಳಲ್ಲಿಯೂ ತನ್ನ ಹೆಸರನ್ನು ಗುರುತಿಸಿಕೊಳ್ಳಬಲ್ಲ ಯುಎಇ ಒಂದು ಕಾಲಕ್ಕೆ ಯಾರಿಗೂ ಬೇಡವಾಗಿದ್ದ ಬಂಜರು ಭೂಮಿಯೆಂದೇ ಹೇಳಬಹುದು. ಕೇವಲ ದಶಕ ಒಂದೆರಡರಲ್ಲೇ ಅಭಿವೃದ್ಧಿ ಹಾಗು ಬೆಳವಣಿಗೆಯ ಮಹಾಬದಲಾವಣೆಯನ್ನು ಕಂಡ ಈ ದೇಶದ ಇತಿಹಾಸವನ್ನು ಕೇಳುವುದೇ ಒಂದು ರೋಮನಂಚಕಾರಿ ಅನುಭವ.

ಶತಕಗಳ ಕಾಲ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಇಲ್ಲಿನ ಪ್ರಾಂತ್ಯಗಳು ಜಗತ್ತಿನ ಭೂಪಟದಲ್ಲಿ ಗುರುತಿಸಲ್ಪಡುತ್ತಿದ್ದದ್ದು ಮುತ್ತುಗಳ ವಹಿವಾಟಿಗೆ. ಬಿಸಿಲಿನ ತಾಪಕ್ಕೆ ಕುದಿಯುವಂತಹ ಉಪ್ಪುನೀರಿನ ತಳದಲ್ಲಿ ಸಿಗುತ್ತಿದ್ದ ರಾಶಿ ರಾಶಿ ಮುತ್ತುಗಳನ್ನು ಬ್ರಿಟಿಷರು ಅವಿರತವಾಗಿ ಬಗೆದು, ತುಂಬಿ ವಿಶ್ವದ ಎಲ್ಲೆಡೆಗೆ ಮಾರುತ್ತಾ ಹಣವನ್ನು ಗಳಿಸಿಕೊಳ್ಳುತ್ತಿದ್ದರು. ಸುತ್ತಮುತ್ತಲಿನ ಜನರು ಹಾಗು ಭಾರತದಿಂದಲೂ ಉತ್ತಮ ಈಜುಗಾರರನ್ನು ಕರೆತಂದು ಅಕ್ಷರ ಸಹ ಜಲಚರ ಪ್ರಾಣಿಗಳಂತೆ ಮೂಗಿದೊಂದು ಸುತ್ತುವರಿ (Clip)ಯನ್ನು ಕೊಟ್ಟು ನಿಮಿಷಗಳ ಕಾಲ ನೀರಿನಲ್ಲಿ ಮುಳುಗಿಸಿ ಬಿಡುತ್ತಿದ್ದರು. ತಮ್ಮ ಜೋಳಿಗೆಯ ತುಂಬ ಸಾಗರದ ತಳದಲ್ಲಿ ಅಂಟಿಕೊಂಡಿರುವ ಕಪ್ಪೆಚಿಪ್ಪುಗಳನ್ನು ಹೆಕ್ಕಿ ತಂದು ಕೊಡುವುದೇ ಈ ಈಜುಗಾರರ ಕಾಯಕವಾಗಿತ್ತು. ದಿನಕೊಂದು ಲೋಟ ನೀರು ಹಾಗು ಒಂದಿಡೀ ಅನ್ನವನ್ನಷ್ಟೇ ತಿಂದು ಜಗತ್ತಿನ ಐಷಾರಾಮತೆಯ ಸಂಕೇತಕ್ಕೆ ತಮ್ಮ ಪರೋಕ್ಷವಾದ ಕಾಣಿಕೆಯನ್ನು ನೀಡುತ್ತಿದ್ದರು ಇಲ್ಲಿನ ಜನ. ಆದರೆ 1920 ರಷ್ಟರಲ್ಲಿ ಜಪಾನಿನ ಹಲವೆಡೆ ಇಂತಹ ನೈಸರ್ಗಿಕ ಮುತ್ತುಗಳಿಗೆ ಸರಿಸಮನಾದ ಅಥವಾ ನೋಡಲು ಇನ್ನೂ ಅಂದವಾಗಿ ಕಾಣುವ ಕೃತಕ ಮುತ್ತುಗಳು ಮಾರುಕಟ್ಟೆಗೆ ಬಂದ ಕೂಡಲೇ ಇಲ್ಲಿನ ಮುತ್ತುಗಳಿಗೆ ಮುತ್ತಿಡುವವರೇ ಇಲ್ಲರಾದರು. ಪರಿಣಾಮ ಜಗತ್ತಿನ ಭೂಪಟದಲ್ಲಿ ಕನಿಷ್ಠ ಕಾರಣಕ್ಕಾದರೂ ಒಂತಿಷ್ಟು ಗುರುತಿಸಲ್ಪಡುತ್ತಿದ್ದ ಈ ಮರಳುಗಾಡು ಪ್ರದೇಶ ಕ್ರಮೇಣ ಕಣ್ಮರೆಯಾಗತೊಡಗಿತು. ಮೀನುಗಾರಿಕೆ ಹಾಗು ಖರ್ಜುರದ ಹಣ್ಣುಗಳ ವಹಿವಾಟಷ್ಟೆ ಮುಂದಿನ ದಿನಗಳ ಆಧಾರವಾಯಿತು. 1947 ರಲ್ಲಿ ಭಾರತ ಸ್ವಾತಂತ್ರ್ಯವನ್ನು ಗಳಿಸಿಕೊಂಡಮೇಲೆ ಬ್ರಿಟಿಷರ ಹಿಡಿತ ಇಲ್ಲಿಯೂ ಕಡಿಮೆಯಾಗತೊಡಗಿತು. ಅಲ್ಲದೆ ಐಶ್ವರ್ಯವಿದ್ದಾಗ ಅನಾಗರೀಕರಂತೆ ದುಡಿಸಿಕೊಂಡು ಎಲ್ಲವೂ ಹೋದಾಗ ನಾಗರಿಕರನ್ನಾಗಿ ಮಾಡುವ ನಾಟಕದಂತೆ ಇಲ್ಲಿನ ಸ್ಥಳೀಯ ನಾಯಕರನ್ನು ಒಟ್ಟುಗೂಡಿಸಿ ಒಕ್ಕೂಟವೊಂದನ್ನು ನಿರ್ಮಿಸಿ ದೇಶ ವಿದೇಶಗಳ ಸಂಪರ್ಕವನ್ನು ಸಾಧಿಸುವುದನ್ನು ಕಲಿಸಿ ಕೈತೊಳೆದುಕೊಳ್ಳತೊಡಗಿದರು, ಬ್ರಿಟಿಷ್ ಪ್ರಭುಗಳು. ಆದರೆ ಮುಂದೆ ಈ ತಪ್ಪಿನಿಂದ ಅವರು ಪಟ್ಟ ಪಶ್ಚಾತಾಪ ಮಾತ್ರ ಯಾವುದೇ ಇತಿಹಾಸದ ಪುಟಕಳಲ್ಲಿಯೂ ದಾಖಲೆಯಾಗುವುದಿಲ್ಲ! ಹೀಗೆ ಸುಮಾರು 1950ರ ವರೆಗೂ ಆಟಕುಂಟು ಲೆಕ್ಕಕಿಲ್ಲದಂಥ ನೆಲವಾಗಿದ್ದ ಪ್ರದೇಶ ನಂತರದ ಕೆಲ ವರ್ಷಗಳೆಲ್ಲೆ ಶತಮಾನಗಳಿಂದ ಅನುಭವಿಸಿದ ಕಡುಕಷ್ಟಗಳ ಪರಿಣಾಮವೋ ಏನೋ ಎಂಬಂತೆ ನೇಸರರಾಜನಿಂದ ಯಾರೊಬ್ಬರೂ ಊಹಿಸಲಾರದಂತಹ ವರವೊಂದನ್ನು ಪಡೆಯಿತು.

ಅಮೇರಿಕಾದಲ್ಲಿ ಮೊದಲುಗೊಂಡ (1859) ಪೆಟ್ರೋಲಿಯಂ ನ ಅವಿಷ್ಕಾರ ನಂತರ ವಿಶ್ವದೆಲ್ಲೆಡೆ ಕಾಡ್ಗಿಚ್ಚಿನಂತೆ ಹರಡತೊಡಗಿತು. ಬಗೆದರೆ ಕನಿಷ್ಠ ಒಂದು ತೊಟ್ಟು ನೀರೇ ಸಿಗದ ಇಲ್ಲಿನ ನೆಲದಲ್ಲಿ ಇನ್ನೇನು ದೊರೆತೀತು ಎನ್ನುತ್ತಿದ್ದ ಪರಕೀಯರಿಗೆ 1908 ರ ಪರ್ಷಿಯಾದ ತೈಲ ಸಂಶೋಧನೆ ನುಂಗಲಾರದ ಬಿಸಿ ತುತ್ತಾಗಿ ಪರಿಣಮಿಸಿತು. ಅಲ್ಲಿಂದ ಮುಂದೆ ಶುರುವಾದ ತೈಲದ ಆವಿಷ್ಕಾರ ಮರಳುಭೂಮಿಯ ಕೆಳಗೆ ಅಡಗಿರುವ ಕಪ್ಪುಚಿನ್ನದ ಅಕ್ಷಯ ಪಾತ್ರೆಯನ್ನೇ ವಿಶ್ವಕ್ಕೆ ಪರಿಚಯಿಸಿತು. ಹೀಗೆ ಮುಂದುವರೆಯುತ್ತಿದ್ದ ತೈಲನಿಕ್ಷೇಪಗಳ ಆವಿಷ್ಕಾರ ಯುಎಇ ಯನ್ನು ತಲುಪಲು ದಶಕಗಳೇ ಹಿಡಿದವು. ಐವತ್ತನೇ ದಶಕದ ಕೊನೆಯ ವರ್ಷಗಳಲ್ಲಿ ಮೊದಲುಗೊಂಡ ಆವಿಷ್ಕಾರ ನಂತರದ ಕೆಲವೇ ದಿನಗಳಲ್ಲಿ ದೇಶವನ್ನು ಚಿನ್ನದ ತಟ್ಟೆಯಲ್ಲಿ ತಂದು ಕೂರಿಸಿತು. ಅಷ್ಟರಲ್ಲಾಗಲೇ ಇಲ್ಲಿಂದ ಭಾಗಶಃ ಕಣ್ಮರೆಯಾಗಿದ್ದ ಬ್ರಿಟಿಷ್ ಪ್ರಭುಗಳು ಕೈ ಕೈ ಹಿಸುಕಿಕೊಳ್ಳುತ್ತಾ 1971 ರಲ್ಲಿ ಇಲ್ಲಿನ ರಾಜರುಗಳಿಗೆ ತಮ್ಮ ಸಂಪೂರ್ಣ ಅಧಿಕಾರವನ್ನು ಅಸ್ತಾಂತರಿಸಿದರು. ಅಭುದಾಭಿ, ದುಬೈ, ಶಾರ್ಜಾ, ಫುಜೆರಾ, ರಸ್-ಅಲ್-ಕೈಮಾ, ಅಜ್ಮಾನ್ ಹಾಗು ಉಮ್-ಅಲ್-ಕ್ವೆನ್ ಎಂಬ ಏಳು ಸಂಸ್ಥಾನಗಳು ಒಟ್ಟುಗೂಡಿ ಯುಎಇ ಯನ್ನು ಕಟ್ಟಿಕೊಂಡವು. ಅಲ್ಲಿಂದ ಮುಂದೆ ಅಂಬೆಗಾಲಿಡುತ್ತಾ ಬೆಳೆದ ದೇಶ ಯಾವುದೇ ಪ್ರಜಾಪ್ರಭುತ್ವವ್ಯವಸ್ಥೆಗಳಿಲ್ಲದೆಯೇ ಮುಂದೊಂದು ದಿನ ಉತ್ತುಂಗಕ್ಕೆ ಏರುವ ಪರಿಯಂತೂ ಹಲವಾರು ದೇಶಗಳಿಗೆ ಮಾದರಿಯಾಯಿತು.



ಇಂದು ಯುಎಇ ಉತ್ಪಾದಿಸುತ್ತಿರುವ ತೈಲದ ಪ್ರಮಾಣ 'ಪ್ರತಿದಿನ' ಸುಮಾರು 40 ಲಕ್ಷ ಬ್ಯಾರೆಲ್ಗಳು! ಇದು ಹೆಚ್ಚು ಕಡಿಮೆ ನಮ್ಮ ದೇಶದ 130 ಕೋಟಿ ಜನರ ಪ್ರತಿದಿನದ ಬಳಕೆಯ ಪ್ರಮಾಣ! ಇಷ್ಟು ಅಗಾಧ ಪ್ರಮಾಣದ ತೈಲವನ್ನು ಭೂಮಿಯಾಳದಿಂದ ಹೊರತೆಗೆದು ಇಟ್ಟರೆ ವಿಶ್ವಮಾರುಕಟ್ಟೆಯಲ್ಲಿ ಕಣ್ಮುಚ್ಚಿ ಬಿಡುವಷ್ಟರಲ್ಲಿ ಖರೀದಿಸಿಬಿಡುವ ಗ್ರಾಹಕರಿಗೇನು ಕಡಿಮೆ ಇಲ್ಲ. ಪರಿಣಾಮ ಹಣದ ರಾಶಿಯೇ ಸಾಗರೋಪಾದಿಯಲ್ಲಿ ಇಲ್ಲಿನ ಖಜಾನೆಗಳನ್ನು ಬಂದು ಸೇರುತ್ತದೆ. ಇಂದು ಯುಎಇಯ ಬೆಳವಣಿಗೆ ಹೀಗೆ ತೈಲದ ನಿಕ್ಷೇಪಗಳು ಒದಗಿಸಿಕೊಟ್ಟ ಹಣದ ಹೊಳೆಯಿಂದ ಎಂಬುದನ್ನು ಅಲ್ಲಗೆಳೆಯಲಾಗುವುದಿಲ್ಲ. ಆದರೆ, ಹಣವೊಂದಿದ್ದ ಮಾತ್ರಕ್ಕೆ ಲಕ್ಷಾಂತರ ಜನರ ದೇಶವೊಂದನ್ನು ಚಿಟಿಕೆ ಹೊಡೆಯುವ ಕಾಲದಲ್ಲಿ ಬದಲಾಗಿಸಲಾದೀತೇ? ಮೊಟ್ಟಮೊದಲು ದೇಶವೊಂದರ ಸ್ಪಷ್ಟ ಕಲ್ಪನೆ ಹಾಗು ಆ ಕಲ್ಪನೆಗೆ ಬೇಕಾದ ದೂರದೃಷ್ಟಿ ಇಲ್ಲದೆ ಹೋದರೆ ರಾಜರುಗಳದ್ದೇ ಎಲ್ಲವೂ ಆಗಿರುವ ದೇಶ ಕೇವಲ ರಾಜಕುಟುಂಬಗಳನ್ನಷ್ಟೇ ಅಭಿವೃದ್ಧಿಪಡಿಸುತ್ತದೆ. ಆದರೆ ಯುಎಇ ಅಂದು ಸ್ವತಂತ್ರ ದೇಶವಾದಾಗ ದೇಶದ ಅಧಿಕಾರದ ಚುಕ್ಕಾಣಿ ಹಿಡಿದದ್ದು ಇಂದು ಎಲ್ಲರಿಂದ ರಾಷ್ಟ್ರಪಿತನೆಂದು ಕರೆಸಿಕೊಳ್ಳುವ ಶೇಖ್ ಝಯಾದ್ ನಿಂದ. ಯಾವುದೇ ಅತ್ಯುನ್ನತ ಮಟ್ಟದ ಶಿಕ್ಷಣವನ್ನು ಪಡೆದುಕೊಂಡಿರದಿದ್ದರೂ ತನ್ನ ಜನಗಳ ನಡುವೆಯೇ ಬೆಳೆದ ಈತನ ದೂರದೃಷ್ಟಿಯನ್ನು ವಿಶ್ವವೇ ಕಂಡು ಬೆರಗಾಯಿತು. ಯಾವೊಂದು ಕಾಮರ್ಸ್, ಇಂಜಿನಿಯರಿಂಗ್ ಅಥವಾ ಡಾಕ್ಟರೇಟ್ ಡಿಗ್ರಿಗಳಿಲ್ಲದೆಯೇ ಈತ ದೇಶವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸದೃಢವಾಗಿ ಕಟ್ಟಿ ಬೆಳೆಸಿದ. ಆ ಯಶೋಗಾಥೆ ಮುಂಬಂದ ನಾಯಕರುಗಳಿಗೆ ಪ್ರೇರಣಾದಾಯಕವಾದದಲ್ಲದೆ ಹೆಮ್ಮೆಯ ವಿಚಾರವೂ ಆಗಿದ್ದಿತು. ಏಕೆಂದರೆ ಇಂದು ಡಿಗ್ರಿಯೊಂದರ ಮುಖವಾಡ ಅದೆಷ್ಟು ಜರೂರಿಯಾಗಿದೆ ಎಂದರೆ ನೀನು ಕಳ್ಳನಾದರೂ ಸರಿಯೇ ಡಿಗ್ರಿಯನ್ನೊಂದಿರುವ ಕಳ್ಳನಾಗು ಎಂಬಂತಾಗಿದೆ ಪರಿಸ್ಥಿತಿ. ಸಮಾಜವನ್ನು ಕಟ್ಟಬೇಕು, ನಾಳೆಯ ದಿನಗಳು ಇಂದಿನದಕ್ಕಿಂತ ಚೆನ್ನಾಗಿರಬೇಕು ಎಂಬ ಸಾತ್ವಿಕ ಗುರಿಯಿದ್ದರೆ ಹಾಗು ಆ ಗುರಿಯನ್ನು ಸಾಧಿಸುವ ಕಲೆ ಕರಗತಗೊಂಡಿದ್ದರೆ ನಾಡನ್ನು ಕಟ್ಟಲು ಯಾವ ಡಿಗ್ರಿಗಳ ಡಂಗೂರಗಳ ಅವಶ್ಯಕೆ ಇರುವುದಿಲ್ಲ ಎಂಬುದಕ್ಕೆ ಶೇಖ್ ಝಯಾದ್ನ ಕಾರ್ಯವೈಖರಿ ಒಂದು ಉತ್ತಮ ಉದಾಹರಣೆ.

ಇಂದು ಮುಸ್ಲಿಂ ರಾಷ್ಟ್ರಗಳೆಂದರೆ ಯುದ್ಧ, ಹೊಡೆದಾಟ, ದ್ವೇಷ, ಅಸೂಯೆ ಎನ್ನುವ ಕಾಲದಲ್ಲಿ ಯುಎಇ ಯ ಏಳೂ ಸಂಸ್ಥಾನಗಳು ಸುಮಾರು ನಾಲ್ಕು ದಶಕಗಳಿಗೂ ಹೆಚ್ಚಾಗಿ ಇಂದಿಗೂ ಯಾವುದೇ ವೈಮನಸ್ಸಿಲ್ಲದೇ ಒಟ್ಟಿಗೆ ಇವೆ. ಈ ಒಗ್ಗಟ್ಟಿಗೆ ಅಂದು ಶೈಖ್ ಝಯಾದ್ ಹಾಕಿಕೊಟ್ಟ ಅಡಿಪಾಯದ ಗಟ್ಟಿತನವೇ ಆಧಾರವೆನ್ನಬಹುದು. ಒಡೆದು ಛಿದ್ರವಾಗಬೇಕಿದ್ದ ಏಳು ಸಂಸ್ಥಾನಗಳನ್ನು ನಮ್ಮ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲರಂತೆಯೇ ಒಟ್ಟುಗೂಡಿಸಿ ದೇಶವೊಂದನ್ನು ಕಟ್ಟಿದ್ದ ಸಾಧನೆ ಮೊದಲುಗೊಂಡು, ಮಣ್ಣಿನ ರಾಶಿಯ ನೆಲದಲ್ಲಿ ಸ್ಕೂಲು, ಆಸ್ಪತ್ರೆ, ಬ್ರಿಡ್ಜು, ಬಂಧರುಗಳನ್ನು ನಿರ್ಮಿಸತೊಡಗಿದನಾತ. ಅಂದು ಬೆರಳೆಣಿಕೆಗೂ ಸಿಗದಿದ್ದ ಸ್ಕೂಲು ಕಾಲೇಜುಗಳು ಇಂದು ಹತ್ತಾರು ನೂರಾರು ಸಂಖ್ಯೆಯಲ್ಲಿ ವಿಶ್ವಮಟ್ಟಕ್ಕೆ ಬೆಳೆದು ಹೆಸರುಮಾಡುತ್ತಿವೆ. ದುಬೈ ನಗರದಲ್ಲಿರುವ 'ಜಬೆಲ್ ಅಲಿ' ಬಂಧರು ಇಂದು ವಿಶ್ವದಲ್ಲೇ ಅತಿದೊಡ್ಡ ಮಾನವ ನಿರ್ಮಿತ ಬಂಧರೆಂದು ಹೆಸರು ಮಾಡಿದೆ ಅಲ್ಲದೆ ದೇಶದ ಪ್ರಗತಿಗೂ ತನ್ನ ಗಜಬಲವನ್ನು ತುಂಬಿದೆ. ಇಂದು ದೇಶವಿದೇಶಗಳಿಂದ ಬರುವ ನೂರಾರು ಹಡಗುಗಳು ಪ್ರತಿದಿನ ಈ ಬಂಧರನ್ನು ಹಾದು ಹೋಗುತ್ತವೆ. ಅಲ್ಲದೆ ಅಂದು ತಿನ್ನಲು ಒಪ್ಪೂತ್ತು ಊಟಕ್ಕೂ ಪರದಾಡುವಂತಹ ಸ್ಥಿತಿಯಲ್ಲಿದ್ದ ದೇಶ ಇಂದು ಕೋಟಿ ಕೋಟಿ ಹಣವನ್ನು ವಿದೇಶಿನೆರವಾಗಿ ಅಗತ್ಯವಿರುವ ದೇಶಗಳಿಗೆ ನೀಡುವ ಸ್ಥಿತಿಗೆ ಬೆಳೆದು ನಿಂತಿದೆ. ಇಲ್ಲಿಯವರೆಗು ಯುಎಇ ವಿದೇಶಿನೆರವಿನ ರೂಪದಲ್ಲಿ ನೀಡಿರುವ ಹಣದ ಮೊತ್ತ ಸುಮಾರು 175 ಬಿಲಿಯನ್ ದಿರ್ಹಾಂಗಳು.( ದಿರ್ಹಾಂ ಇಲ್ಲಿನ ಅಧಿಕೃತ ಕರೆನ್ಸಿ. ಸೋಜಿಗದ ಸಂಗತಿಯೆಂದರೆ 1973 ರ ವರೆಗೂ ಭಾರತದ ರೂಪಾಯಿ ಇಲ್ಲಿ ಚಲಾವಣೆಯಲ್ಲಿದ್ದ ಬಹುಸಂಖ್ಯೆಯ ಕರೆನ್ಸಿ. ಎರಡೂ ದೇಶಗಳು ಬ್ರಿಟಿಷರ ಆಳ್ವಿಕೆಯಲ್ಲಿದ್ದ ಕಾರಣ ಭಾರತದ ಕರೆನ್ಸಿಯನ್ನೇ ಇಲ್ಲಿಯೂ ಬಳಸಲಾಗುತ್ತಿತ್ತು.) ಇದು ಆರು ಕೋಟಿ ಜನಸಂಖ್ಯೆಯ ನಮ್ಮ ರಾಜ್ಯದ ಹೆಚ್ಚುಕಡಿಮೆ ಎರಡು ವರ್ಷಗಳ ಆಯವ್ಯಯದ ಹಣವೆನ್ನಬಹುದು! ಹೀಗೆ ತನ್ನ ತಟ್ಟೆಯಿಂದ ಹಸಿದವನ ತಟ್ಟೆಗೂ ಒಂತಿಷ್ಟು ನೀಡಿ ಸುಖಪಡುವ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದವನು ಶೈಖ್ ಝಯಾದ್. ಅಲ್ಲದೆ ಮುಸ್ಲಿಂ ಮಹಿಳೆಯರೆಂದರೆ ಸಾಲಿನಲ್ಲಿ ಕಡೆಯವರು ಎಂಬಂತಿದ್ದ ಕಾಲದಲ್ಲಿ ಈತ ಮಹಿಳೆಯರ ಸಬಲೀಕರಣ, ಶಿಕ್ಷಣ ಹಾಗು ಅವರುಗಳ ಮುನ್ನೆಲೆಗೆ ಶ್ರಮಿಸಿದನಲ್ಲದೆ ಸರ್ಕಾರಿ ಕೆಲಸಗಳಲ್ಲೂ ಇಂತಿಷ್ಟು ಮೀಸಲಾತಿಯನ್ನು ನೀಡುತ್ತಾನೆ. ಕಟ್ಟಾ ಇಸ್ಲಾಂ ಸಂಪ್ರದಾಯದ ಪರಿಸರದಲ್ಲಿ ಈತನ ನಡೆ ಅಂದು ಬಹುಮಂದಿಯ ಹುಬ್ಬನ್ನು ಏರುವಂತೆ ಮಾಡಿದರೂ ಯಾರೊಬ್ಬರು ತುಟಿಕ್ ಪಿಟಿಕ್ ಅನ್ನಲ್ಲಿಲ. ಇವೆಲ್ಲದರ ಪರಿಣಾಮ ಇಲ್ಲಿನ ಜನರ ಮೇಲೆ ಅದೆಷ್ಟರ ಮಟ್ಟಿಗೆ ಬೀರಿತೆಂದರೆ ಅತಿ ಕನಿಷ್ಠವಾಗಿದ್ದ (0.55-0.60) ಮಾನವ ಅಭಿವೃದ್ಧಿ ಸೂಚ್ಯಂಕ (HDI) ಕೇವಲ ಮೂರು ದಶಕಗಳಲ್ಲೆಯೇ ಆಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್ ಅನ್ನು ಮೀರಿಸುವ ಮಟ್ಟಕ್ಕೆ (0.80-0.85) ಬಂದು ನಿಂತಿತು. ಕಾರಣ ಆತನ ಹೂಡಿಕೆ ಅಂದು ಕೇವಲ ನಗರ ಪಟ್ಟಣಗಳ ಬ್ರಿಡ್ಜು ಬಂದರುಗಳಷ್ಟೇ ಅಲ್ಲದೆ ಅದು ನೇರವಾಗಿ ಅಲ್ಲಿನ ಜನರ ಮೇಲೆಯೇ ಆಗಿದ್ದಿತು.

2004 ರಲ್ಲಿ ಶೈಖ್ ಝಯಾದ್ ನ ಮರಣಾ ನಂತರ ಬಂದ ಇತರ ದೊರೆಗಳೂ ಸಹ ಆತನ ನಾಯಕತ್ವವನ್ನೇ ಮಾದರಿಯಾಗಿಸಕೊಂಡರು. 'The race for excellence has no finish line' (ಉತ್ಕೃಷ್ಟತೆಯ ಓಟಕ್ಕೆ ಅಂತ್ಯವೆಂಬುದೇ ಇಲ್ಲ) ಎನ್ನುತ ಮುನ್ನೆಡುತ್ತಿರುವ ಮತ್ತೋರ್ವ ನಾಯಕ ಪ್ರಸ್ತುತ ಯುಎಇ ಪ್ರಧಾನಿ ಹಾಗು ದುಬೈನ ದೊರೆ ಶೈಖ್ ಮುಹಮ್ಮದ್. ಈತ ದುಬೈ ನಗರವನ್ನು ಮಧ್ಯಪ್ರಾಚ್ಯದ, ಅಷ್ಟೇಕೆ ಇಡೀ ವಿಶ್ವದ ಉತ್ಕೃಷ್ಟ ನಗರವನ್ನಾಗಿ ಸಜ್ಜುಗೊಳಿಸಿದ್ದಾನೆ. ತೈಲವೊಂದಿದೆ ಎಂಬ ಮಾತ್ರಕ್ಕೆ ಕುಡಿಯುವುದರಿಂದ ಹಿಡಿದು ಮೀಯುವುದಕ್ಕೂ ಅದನ್ನೇ ಬಳಸಿ ಮೂರೇ ದಿನದಲ್ಲಿ ಗುಡಿಸಿ ಗುಂಡಾತರವಾಗಿಸಬಹುದಾದ ಸಂಪತ್ತನ್ನು ಇಲ್ಲಿನ ನಾಯಕರುಗಳು ಅತ್ತಕಡೆ ಅತಿಯೂ ಆಗದೆ ಇತ್ತಕಡೆ ಮಿತಿಯೂ ಎನಿಸದೆ ಕಾಪಾಡಿಕೊಂಡು ಬಂದಿದ್ದಾರೆ. ಎಷ್ಟಾದರೂ ನವೀಕರಿಸಲಾಗದ ಸಂಪತ್ಮೂಲವನ್ನು ಸಾಯುವವರೆಗೂ ನೆಚ್ಚಿಕೊಂಡು ಕೂರಲಾಗದು ಎಂಬುದನ್ನು ಅರಿತ ಇಲ್ಲಿನ ನಾಯಕರು ದೇಶದ ಬೊಗಸೆಯನ್ನು ತುಂಬಿಸಲು ಸಾಧ್ಯವಾಗಬಹುದಾದ ಇತರೆ ವಲಯಗಳನ್ನು ಸಂಶೋದಿಸತೊಡಗಿದರು. ಆಗ ಚಿಗುರೊಡೆದದ್ದೇ ಪ್ರವಾಸೋದ್ಯಮ, ಸರಕು ವ್ಯಾಪಾರ ಹಾಗು ಬಹುಬಗೆಯ ಸೇವೆಗಳು. ಪರಿಣಾಮ ಇಂದು ದುಬೈ ನಗರ ಅಷ್ಟೆಲ್ಲ ಹೆಸರು ಮಾಡಿದ್ದರೂ ದೇಶದ ಅಭಿವೃದ್ಧಿಗೆ ಅದು ಪೆಟ್ರೋಲಿಯಂ ವಲಯದಿಂದ ಗಳಿಸುತ್ತಿರುವ ಆದಾಯ ಶೇಕಡಾ 5 ಕಿಂತಲೂ ಕಡಿಮೆ! ಆ ಮಟ್ಟಿನ ಬೆಳವಣಿಗೆ ಮರುಭೂಮಿಯ ಉರಿಬಿಸಿಲಲ್ಲೂ ಇತರ ವಲಯಗಳಿಗೆ ಸಾಧ್ಯವಾಗಿದೆ. ಇಂದು ಇಡೀ ವಿಶ್ವದ ಟಾಪ್ 10 ಪ್ರವಾಸಿ ತಾಣಗಳಲ್ಲಿ ಒಂದೆನಿಸಿರುವ ದುಬೈ ಇಂತಹ ಹಲವಾರು ನಾಯಕರುಗಳ ದೂರದೃಷ್ಟಿಯ ಫಲವಂದರೆ ಸುಳ್ಳಾಗದು. ಜಗತ್ತಿನ ಅತಿ ಎತ್ತರವಾದ ಕಟ್ಟಡ (ಬುರ್ಜ್ ಖಲೀಫಾ 828 ಮೀಟರ್!), ಅತಿ ಎತ್ತರವಾದ ಹೋಟೆಲು (ಬುರ್ಜ್ ಅಲ್ ಅರಬ್), ಅತಿ ದೊಡ್ಡ ಮಾನವ ನಿರ್ಮಿತ ದ್ವೀಪ (ಪಾಮ್ ಜುಮೇರಾ), ವಿಸ್ತೀರ್ಣವಾರು ಅತಿ ದೊಡ್ಡ ಶಾಪಿಂಗ್ ಮಾಲ್ (ದುಬೈ ಮಾಲ್) ಹಾಗು ಅದರೊಳಗಿರುವ ವಿಶ್ವದ ಅತಿ ದೊಡ್ಡ ಅಕ್ವೇರಿಯಂ, ಹೀಗೆ ದುಬೈ ಎಂದರೆ ಸಾಲು ಸಾಲು ಮಾನವ ನಿರ್ಮಿತ ವಿಸ್ಮಯಗಳ ಒಂದು ಪೊಟ್ಟಣವೆಂದೇ ಹೇಳಬಹುದು. ಇಂತಹ ಕೃತಕ ವಿಸ್ಮಯಗಳನ್ನು ನೋಡಿ ಆನಂದಿಸಲು ದುಬೈ ನಗರವೊಂದಕ್ಕೆ ಇಂದು ಬರುವ ಪ್ರವಾಸಿಗರ ಸಂಖ್ಯೆ ವರ್ಷಕ್ಕೆ ಸುಮಾರು ನೂರೈವತ್ತು ಲಕ್ಷಕ್ಕೂ ಮಿಗಿಲು!

ತೈಲವೊಂದಷ್ಟೇ ಅಲ್ಲದೆ ಇತರ ವಲಯಗಳ ಪೋಷಣೆಯಲ್ಲಿಯೂ ತೊಡಗಿದ ದೇಶ ನಿಧಾನವಾಗಿ ವಿಧೇಶಿ ಬಂಡವಾಳ ಹೂಡಿಕೆಯ ಬರಮಾಡಿಕೊಡುವೆಡೆಗೆ ಮುಖಮಾಡತೊಡಗಿತು. ಆದರೆ ಇಂತಹ ಹೂಡಿಕೆಗೆ ಬೇಕಾದ ಮಾರುಕಟ್ಟೆಯ ಸಾಮರ್ಥ್ಯ ಅಂತೇನೂ ಹೇಳಿಕೊಳ್ಳುವ ಮಟ್ಟಿಗಿರಲಿಲ್ಲ. ಪ್ರತಿಯೊಂದು ವಸ್ತುಗಳಿಗೂ ಇತರೆ ದೇಶಗಳನ್ನೇ ನೆಚ್ಚಿಕೊಂಡು ಬದುಕುವ ನೆಲದಲ್ಲಿ ಸ್ಥಳಿಯದಲ್ಲದ ವಸ್ತುಗಳ ವಿನಃ ಯಾವೊಂದು ಫ್ಯಾಕ್ಟರಿಯನ್ನೂ ಸ್ಥಾಪಿಸುವುದು ತಿಳಿದೇ ಅಪಾಯವನ್ನು ಮೈಮೇಲೆಳೆದುಕೊಂಡಂತೆ ಆಗುತ್ತದೆ. ಆದರೆ ದಿನೇ ದಿನೇ ಕೊಂಚ ಕೊಂಚವಾಗಿ ಬೆಳೆಯತೊಡಗಿದ ಮಾರುಕಟ್ಟೆಯ ಲಾಭವನ್ನು ಪಡೆದ ಇಲ್ಲಿನ ಆಡಳಿತ, ಕಂಪನಿಗಳನ್ನು ಸ್ಥಾಪಿಸಲು ಸುವರ್ಣಾವಕಾಶವೊಂದನ್ನು ಒದಗಿಸಿಕೊಟ್ಟಿತು. ಯಾವುದೇ ಬಗೆಯ ತೆರಿಗೆ ಸುಂಕವಿಲ್ಲದೆಯೇ ಅಲ್ಲದೆ ವರಮಾನ ತೆರಿಗೆಯೂ ಇಲ್ಲದ ದೇಶದ ಬಾಗಿಲನ್ನು ವಿಶ್ವಕ್ಕೆ ತೆರೆಯಿತು. ಅಲ್ಲಿಯವರೆಗೂ ಇತ್ತಕಡೆ ತಿರುಗಿಯೂ ಮಲಗದ ಕಂಪನಿಗಳು ಇತರೆ ದೇಶಗಳಲ್ಲಿ ತಮ್ಮ ಆಧಾಯದ ಸುಮಾರು ಅರ್ಧದಷ್ಟು ಹಣವನ್ನು ತೆರಿಗೆಯ ರೂಪದಲ್ಲಿ ಸ್ಥಳ್ಳಿಯ ಸರ್ಕಾರಗಳಿಗೆ ನೀಡುವ ಹೊರೆಯನ್ನು ತಪ್ಪಿಸಿಕೊಂಡು ಕೂಡಲೇ ತಮ್ಮ ಒಂದೊಂದು ಶಾಖೆಯನ್ನು ಇಲ್ಲಿ ತೆರೆದುಕೊಳ್ಳತೊಡಗಿದವು. (ಇಂದು ಕಾರ್ಪೊರೇಟ್ ಟ್ಯಾಕ್ಸ್ ಹಾಗು ವ್ಯಾಲ್ಯೂ ಆಡೆಡ್ ಟ್ಯಾಕ್ಸ್ ಗಳು ಜಾರಿಯಾಗಿರುವುದು ಸುಸ್ಥಿತಿಯಲ್ಲಿರುವ ದೇಶ ತೆಗೆದುಕೊಳ್ಳಬಹುದಾದ ಧೈರ್ಯದ ನಡೆಯ ಸಂಕೇತ)ವಿಶ್ವದ ಪೂರ್ವ ಹಾಗು ಪಶ್ಚಿಮ ದೇಶಗಳು ಸಂಧಿಸುವ ಈ ಪ್ರದೇಶ ಕಾಲಾನುಕ್ರಮದಲ್ಲಿ ಎಲ್ಲ ಬಗೆಯ ಹೂಡಿಕೆಗೂ ಅನುಕೂಲವಾಯಿತು. ಆದರೆ ಈ ನಿರ್ಧಾರ ಸ್ಥಳೀಯ ಜನರ ಹಿತಾಸಕ್ತಿಯನ್ನು ಕಾಯುವಲ್ಲಿ ಮಾತ್ರ ಇಂತಿಷ್ಟೂ ಎಡವಲಿಲ್ಲ. ದೇಶಕ್ಕೆ ಏನೇ ಮಾಡಿದರೂ ಅದು ನಮ್ಮ ಜನರಿಗಾಗಿಯೇ ಎನ್ನುವ ಇಲ್ಲಿನ ದೊರೆಗಳು ಇಲ್ಲಿ ಬಂದು ತೆರೆದುಕೊಳ್ಳುವ ಕಂಪೆನಿಗಳಲ್ಲಿ ಶೇಕಡ ಅರ್ಧದಷ್ಟು ಹೂಡಿಕೆಯನ್ನು ದೇಶದ ಪ್ರಜೆಗಳಿಂದಲೇ ಮಾಡಿಸಬೇಕೆನ್ನುವ (Local Sponsor ) ನಿಯಮವನ್ನು ಜಾರಿಮಾಡಿದರು. ಇಲ್ಲವಾದರೆ ಅಂತಹ ಕಂಪನಿಗಳಿಗೆ ಪರವಾನಿಗೆಯೇ ಸಿಗದಂತೆ ಕಾನೂನನ್ನು ತರಲಾಯಿತು. ಪರಿಣಾಮವಾಗಿ ಇಂದು ಇಲ್ಲಿನ ನೆಲದಲ್ಲಿ ತೆರೆದುಕೊಳ್ಳುವ ಪ್ರತಿಯೊಂದು ಕಂಪನಿಗಳಿಗೂ ಒಬೊಬ್ಬ ಸ್ಥಳೀಯ ಪ್ರಾಯೋಜಕನಿದ್ದೆ ಇರುತ್ತಾನೆ. ಪ್ರತಿಯೊಂದು ಕಂಪನಿಯ 51% ಮಾಲೀಕತ್ವ ಒಬ್ಬ ಎಮರಾತಿ ಪ್ರಜೆಯದ್ದೇ ಆಗಿರುತ್ತದೆ. ಅಲ್ಲದೆ ಕಾಗದ ಪತ್ರ, ವಿಪರೀತ ನಿಯಮಗಳ ಜಂಜಾಟ ಬೇಡವೆನ್ನುವರಿಗೆ ನಮ್ಮ ಬೆಂಗಳೂರಿನ ಇಂಟರ್ನ್ಯಾಷನಲ್ ಟೆಕ್ ಪಾರ್ಕ್ ನಂತಹ ತೆರೆಗೆ ರಹಿತ ವಲಯಗಳು (Free Zones), ಯುಎಇ ವಿಪರೀತ ದುಭಾರಿ ಎನ್ನುವವರಿಗೆ ಇನ್ಕಮ್ ಟ್ಯಾಕ್ಸ್ ರಹಿತ ಆಧಾಯ, ಸುಸಜ್ಜಿತ ಮೂಲಸೌಕರ್ಯಗಳು, ಯಾವುದೇ ಬಗೆಯ ಬ್ಯುಸಿನೆಸ್ಸ್ಗಳನ್ನು ಮಾಡಲು ಇರುವ ವಿಪುಲ ಅವಕಾಶಗಳು, ವಿಶ್ವದಲ್ಲೇ ಅತಿ ಕಡಿಮೆಯಲ್ಲಿರುವ ಇಲ್ಲಿನ ಅಪರಾಧ ದರ (Crime Rate) ಹೀಗೆ ಇನ್ನು ಹಲವು ಸಂಗತಿಗಳು ಇಂದು ಈ ಪುಟ್ಟ ದೇಶವನ್ನು ಜಗತ್ತಿನ ಅಗ್ರಮಾನ್ಯ ದೇಶಗಳ ಪಟ್ಟಿಯಲ್ಲಿ ತಂದು ನಿಲ್ಲಿಸಿವೆ.

ಸಾಧಿಸುವ ಛಲ ಹಾಗು ಆ ಹಾದಿಯ ಸ್ಪಷ್ಟಗುರಿಯೊಂದಿದ್ದರೆ ಎಂಥಹ ವಿಘ್ನಗಳೇ ಎದುರಾದರೂ ಜಯಿಸಿ ಮುನ್ನಡೆಯಬಲ್ಲವು ಎಂಬುದಕ್ಕೆ ಯುಎಇ ಇಂದು ಜ್ವಲಂತ ಉದಾಹರಣೆಯಾಗಿ ನಮ್ಮ ಮುಂದಿದೆ. ಒಂದು ಬಾಟಲಿ ನೀರಿಗಿಂತಲೂ ಕಡಿಮೆ ದುಡ್ಡಿನಲ್ಲಿ ಪೆಟ್ರೋಲ್ ಡಿಸೇಲ್ಗಳು ಸಿಗುವಾಗ ಯಾವ ದೇಶ ತಾನೇ ಮುನ್ನೆಡೆಯುವುದಿಲ್ಲ ಹೇಳಿ ಎನ್ನುವವರಿಗೆ ಇಡೀ ವಿಶ್ವವನ್ನೇ ಕೊಳ್ಳೆಯೊಡೆದು ದೇಶದ ದೊಡ್ಡ ದೊಡ್ಡ ಗೋದಾಮುಗಳನ್ನು ಭರಪೂರ ತುಂಬಿಸಿದರೂ ನಾಳಿನ ಸ್ಪಷ್ಟ ಚಿತ್ರಣವಿಲ್ಲದೇ ಮಕಾಡೆ ಮಲಗುವಂತಹ ಸ್ಥಿತಿ ಇಂದು ಬ್ರಿಟನ್ ದೇಶಕ್ಕೆ ಬಂದೊದಗಿರುವುದನ್ನು ಮರೆಯಬಾರದು. ದೇಶ ಕಟ್ಟುವ ಹಾಗು ಕಟ್ಟಿ ನೆಡೆಸುವ ಕೈಗಳ ಶಕ್ತಿಯಷ್ಟೇ ಅಲ್ಲದೆ ಅವುಗಳನ್ನು ಪ್ರೆಪರೇಪಿಸುವ ಮನಗಳ ಯುಕ್ತಿಯೂ ಇಲ್ಲಿ ಮಹತ್ವವನ್ನು ಪಡೆಯುತ್ತದೆ ಎಂಬುದು ತಿಳಿದಿರಬೇಕು. ಅಂತಹ ನಾಯಕರ ಜನ್ಮಭೂಮಿಯಾದ ಈ ದೇಶ ಒಂದು ಪಕ್ಷ ಅಂದೊಮ್ಮೆ ಇಲ್ಲಿನ ತೈಲ ನಿಕ್ಷೇಪಗಳು ಪತ್ತೆಯಾಗದಿದ್ದರೂ ಮತ್ತೊಂದು ಯಾವುದಾದರು ದಿಸೆಯಲ್ಲಿ ಸಾಧನೆ ಮಾಡಿಯೆ ಮುನ್ನೆಡೆಯುತ್ತಿತ್ತು ಎಂಬುದರಲ್ಲಿ ಸಂಶಯವೇ ಬೇಡ. ಇಂದು ವಿಶ್ವದ ಏಳನೇ ಅತಿಹೆಚ್ಚು ತೈಲ ಹಾಗು ನೈಸರ್ಗಿಕ ಅನಿಲದ ಸಂಗ್ರಹವನ್ನು ಹೊಂದಿರುವ ದೇಶ ಮುಖ ಮಾಡುತ್ತಿರುವದು ಸೌರ ಫಲಕಗಳ ಮೂಲಕ ಪಡೆಯಬಹುದಾದ ಶಕ್ತಿಯೆಡೆಗೆ ಎಂದರೆ ಇಲ್ಲಿನ ನಾಯಕರ ದೂರದೃಷ್ಟಿ ಅದೆಷ್ಟರ ಮಟ್ಟಿಗಿದೆ ಎಂದು ತಿಳಿಯುತ್ತದೆ. ಕುಡಿಯಲು ನೈಸರ್ಗಿಕವಾಗಿ ಸಿಗದ ನೀರಿಲ್ಲದ, ಸರಾಸರಿ ತಾಪಮಾನ 40 ರಿಂದ 50 ಡಿಗ್ರಿಗಳವರೆಗೆ ಹೋಗುವ, ಯಾವೊಂದು ಬೆಳೆಯನ್ನು ಹೆಚ್ಚಾಗಿ ಬೇರೆ ದೇಶಗಳಿಂದ ಆಮದುಮಾಡಿಕೊಳ್ಳುವ ದೇಶ ಇಂದು ಕೋಟ್ಯಾನುಕೋಟಿ ಜನರನ್ನು ತನ್ನ ಒಡಲಲ್ಲಿ ಹಾಕಿಕೊಂಡು ಬೆಳೆಸುತ್ತಿದ್ದೆ. ಇಷ್ಟೆಲ್ಲ ಇತಿ ಮಿತಿಗಳ ನಡುವೆಯೇ ನೋಡುಗರ ಕಣ್ಣು ಕುಕ್ಕುವಂತೆ ಬೆಳೆದ ನಗರ ಹಾಗು ಅದನ್ನು ಬೆಳೆಸಿದ ನಾಯಕರುಗಳು ಇಂದು ನಮ್ಮಲ್ಲಿ ಪ್ರತ್ಯೇಕ ರಾಜ್ಯಬೇಕೆಂದು ಅರಚುತ್ತಾ ಅಲೆಯುವವರಿಗೆ ಮಾದರಿಯಾಗಬಲ್ಲರು.