Sunday, March 18, 2018

ವರ್ಷಗಳ ಕಾಲ ವರುಣದೇವನ ತಪಸ್ಸಿನಲ್ಲಿ...

ಆಹಾರ ಹಾಗು ನೀರಿಲ್ಲದೆ ಅದೆಷ್ಟು ದಿನಗಳ ಕಾಲ ಜೀವಿಯೊಂದು ಬದುಕಬಹುದು? ಎಂಬೊಂದು ಪ್ರೆಶ್ನೆಯನ್ನು ಕೇಳುತ್ತಾ ಹೋದಂತೆ ಕೆಲ ಘಂಟೆಗಳು, ದಿನಗಳು ಅಥವಾ ವಾರಗಳೆಂಬ ಉತ್ತರಗಳು ನಮಗೆ ಸಿಗಬಹುದು. ‘ಪ್ರಸ್ತುತ’ ಮಾನವ ಜೀವಿಯಂತೂ ದಿನಗಳು ಬಿಡಿ ಘಂಟೆಗಳೂ ಸಹ ಹೊಟ್ಟೆಗೆ ಹಿಟ್ಟಿಲ್ಲದೆ ಜೀವಿಸಲಾರ. ಒಂದು ಪಕ್ಷ ಅಂತಹ ಏನೂ ಸಿಗದ ಜಾಗಕ್ಕೇನಾದರೂ ಆತನನ್ನು ಹೊತ್ತೊಯ್ದರೆ ಬದುಕುವ ಉಪಾಯವನ್ನು ಹೆಣೆಯುವ ಬದಲು ಪರಲೋಕದ ಪಯಣವೇ ಆರಾಮದಾಯಕ ಎನುತ ಆತ ಕೈಲಾಸ ಯಾತ್ರೆಯನ್ನೇ ಕೈಗೊಂಡರೂ ಆಶ್ಚರ್ಯಪಡಬೇಕಾಗಿಲ್ಲ. ಆದರೆ ನೀರೇ ಸರ್ವಸ್ವವಾಗಿರುವ ಮೀನಿನಂತಹ ಜೀವಿಯೊಂದನ್ನು ನೀರಿರದ, ಎಕ್ಕಿ ತಿನ್ನಲು ಹುಳು ಹಪ್ಪಟೆಗಳಿಲ್ಲದ ಮರುಭೂಮಿಯೊಂದಕ್ಕೆ ಹೊತ್ತೊಯ್ದು ಬಿಟ್ಟರೆ ಅದು ಅದೆಷ್ಟು ದಿನಗಳ ಕಾಲ ಬದುಕಬಹುದು ಎಂದರೆ ಕೇಳಿದವರು 'ಸಾರ್, ನಾವ್ ಇಲ್ಲಿ ಕಾರ ಅರೆಯೋ ಅಷ್ಟೊತ್ತಿಗೆ ಅದು ಇಹ ಲೋಕ ಬಿಟ್ಟಿರುತ್ತೆ, ಯಾವ್ ಮೀನ್ ಸಾರ್, ಕೆಜಿಗೆಷ್ಟು' ಎನುತ್ತಾ ಬಾಯಲ್ಲಿ ನೀರೂರಿಸತೊಡಗುವವರೂ ಇದ್ದಾರೆ. ಆದರೆ ಸೃಷ್ಟಿ ಅದೆಷ್ಟು ವಿಸ್ಮಯ ಎಂಬುದರ ಕಿರುನೋಟ ನಮಗೆ ಈವೊಂದು ಪ್ರೆಶ್ನೆಗೆ ಉತ್ತರ ಕಂಡುಕೊಂಡರೂ ಸಾಕು! ಆಫ್ರಿಕ, ದಕ್ಷಿಣ ಅಮೇರಿಕ ಹಾಗು ಆಸ್ಟ್ರೇಲಿಯಾದ ಕೆಲವು ಬಾಗಗಲ್ಲಿ ಸಿಗುವ ಮೀನೊಂದು ಸುಡುವ ಉರಿ ಬಿಸಿಲಿಗೆ ಸುಟ್ಟ ಇಟ್ಟಿಗೆಯಂತಾಗುವ ನೆಲದ ಮಣ್ಣಿನಲ್ಲೇ ಉದುಗಿಕೊಂಡು ಬದುಕುವ ಕಾಲ ಒಂದಲ್ಲ ಎರಡಲ್ಲ, ಸುಮಾರು ನಾಲ್ಕು ವರ್ಷಗಳವರೆಗೂ ಮಿಗಿಲು!

ಹೌದು. ಪುಪ್ಪಸಮೀನು ಅಥವಾ Lungfish ಎಂದು ಕರೆಯಲ್ಪಡುವ ಈ ಮೀನು ಸೃಷ್ಟಿಯ ಚತುರತೆಗೇ ಸವಾಲೆಸೆಯುವಂತೆ 'ನೀರಲ್ಲಿ ಮೀನಾಗಿ, ಮಣ್ಣಲ್ಲಿ ಕಲ್ಲಾಗಿ' ಬದುಕಬಲ್ಲದು. ಹೆಸರೇ ಹೇಳುವಂತೆ ಈ ಮೀನು ಶ್ವಾಸಕೋಶಗಳನ್ನು ಒಳಗೊಂಡಿರುವ ಮೀನು. ಅರೆ, ಮೀನಿನಲ್ಲಿ ಕಿವಿರುಗಳುಗಳನ್ನು ಕೇಳಿದ್ದೇವೆ, ಈ ಶ್ವಾಸಕೋಶಗಳು ಎಲ್ಲಿಂದ ಬಂದವು ಎಂದರೆ ಉತ್ತರ ಮಾತ್ರ ಡಾರ್ವಿನ್ ನ ತತ್ವಗಳೇ ಕೊಡಬೇಕು. ಒಂದು ವೇಳೆ ಡಾರ್ವಿನ್ ನ ವಿಕಸನವಾದ ನಿಜವಾದರೆ ನೀರಿನೊಳಗಿರುವ ಆಹಾರದ ರುಚಿಗೆ ಬೇಸತ್ತು ನೆಲದ ಮೇಲಿನ ಹುಳ ಹಪ್ಪಟೆಗಳನ್ನು ಸವಿಯುವ ಖುಷಿಯಲ್ಲಿ ಶ್ವಾಸಕೋಶಗಳೆ ಸೃಷ್ಟಿಗೊಂಡಿರಬಹುದು. ಅಥವಾ ಸೃಷ್ಟಿಕರ್ತನ ಸೃಷ್ಟಿಯ ಹಲವು ವಿಸ್ಮಯಗಳಲ್ಲಿ ಈವೊಂದು ವಿಸ್ಮಯವೂ ಒಂದೆಂದು ಸುಮ್ಮನಿದ್ದುಬಿಡಬೇಕು! ಒಂದು ಲೆಕ್ಕದಲ್ಲಿ ನೋಡಿದರೆ ಇದು ಕಪ್ಪೆಯಂತೆ ಉಭಯಚರ ಜೀವಿ. ಸರಿ ಕಪ್ಪೆಯಂತೆ ನೀರು ಹಾಗು ನೆಲದಲ್ಲೂ ಬದುಕುವ ಇನ್ನೂ ಅದೆಷ್ಟೋ ಮೀನುಗಳಿದ್ದರೂ ವರ್ಷಗಳು ತಪಸ್ಸನ್ನು ಮಾಡುವ ಇದರ ಹಿಂದಿರುವ ಮಹಿಮೆಯಾದರೂ ಏನು ಎಂಬ ಪ್ರೆಶ್ನೆ ನಮ್ಮನ್ನು ಕಾಡದಿರದು.

ಆಫ್ರಿಕಾ, ಆಸ್ಟ್ರೇಲಿಯ ಹಾಗು ದಕ್ಷಿಣ ಅಮೇರಿಕಾದಲ್ಲಿ ಬಡಿಯುವ ಒಣಬಿಸಿಲು ಹಸಿರು ಕಾನನವನ್ನೇ ಬರಡು ಭೂಮಿಯಾನ್ನಾಗಿಸಬಲ್ಲದು. ಇನ್ನು ಕೆರೆ ತೆರೆ ಹಳ್ಳ ಕೊಳ್ಳಗಳ ಕತೆಯಂತೂ ಯಾವ ಲೆಕ್ಕ. ಪ್ರಖರ ಬಿಸಿಲಿಗೆ ಒಣ ಇಟ್ಟಿಗೆಗಳಂತಾಗುವ ಇವುಗಳ ಅವಶೇಷಗಳಿಂದಲೇ (ಮಣ್ಣಿನ ಇಟ್ಟಿಗೆಗಳು) ಅಲ್ಲಿನ ಜನರು ಮನೆಗಳನ್ನು ನಿರ್ಮಿಸಿಕೊಳ್ಳುವುದೂ ಉಂಟು. ಹೀಗೆ ಆವಿಯಾಗುವ ಪ್ರಕ್ರಿಯೆಯಲ್ಲಿ ಇತರ ಮೀನುಗಳು ವಿಲವಿಲ ಒದ್ದಾಡಿ ಸತ್ತು ಸುಣ್ಣವಾದರೆ ಈ ಪುಪ್ಪಸಮೀನು ಮಾತ್ರ ಅಂತಹ ಅಪಾಯದ ಘಳಿಗೆ ಎದುರಾಗುವ ಸಮಯಕ್ಕೆ ಸರಿಯಾಗಿ ನೆಲದೊಳಗೆ ಬಿಲವೊಂದನ್ನು ಕೊರೆದು ದೇಹವನ್ನು ಅದರೊಳಗೆ ಇಳಿಬಿಟ್ಟು ಲೋಳೆಯ ಪದರವೊಂದನ್ನು (mucus cocoon) ತನ್ನ ದೇಹದ ಸುತ್ತ ಸ್ರವಿಸಿಕೊಳ್ಳುತ್ತದೆ. ಈ ಪದರ ನಂತರ ಗಟ್ಟಿಯಾಗುತ್ತಾ ಒಂದು ಬಗೆಯ ರಕ್ಷಣಾ ಪೊರೆಯಂತೆ ಮೀನನ್ನು ಆವರಿಸಿಕೊಳ್ಳುತ್ತವೆ. ಸರಿ, ಮೀನೇನೋ ಭೂಮಿಯೊಳಗೆ ಹುದುಗಿ ಕವಚವನ್ನು ನಿರ್ಮಿಸಿಯೂ ಆಯಿತು ಆದರೆ ತಿನ್ನಲು ಅದಕ್ಕೆ ಒಂದಿನಿತು ಆಹಾರವೂ ಬೇಡವೇ? ಕಡೆ ಪಕ್ಷ ವಾರಕೊಂದೆರೆಡು ಕ್ರಿಮಿ ಕೀಟಗಳು? ಬಿಲ್ಲಕುಲ್ ಇಲ್ಲ! ಘಂಟೆ ಘಂಟೆಗೂ ಕರಾರುವಕ್ಕಾಗಿ ಮೇಯುವ ಜೀವಿಗಳಿಗೆ ಇದು ಸೋಜಿಗದ ಸಂಗತಿಯೇ. ತಿಂಗಳು ಹಾಗು ವರ್ಷಗಳ ಕಾಲ ಆಹಾರವೇ ಇಲ್ಲದೆ ಬದುಕುವುದು ಮಾತ್ರ ಈ ಮೀನುಗಳಿಗೆ ಬದುಕುವ ಅನೀವಾರ್ಯತೆ ತಂದೊದಗಿಸಿರುವ ವರವೆಂದೇ ಹೇಳಬಹುದು. ಇಲ್ಲವಾದಲ್ಲಿ ಬರಿದಾದ ನೆಲದೊಳಗೆ ವಿಲವಿಲ ಒದ್ದಾಡಿ ಇತರ ಪ್ರಾಣಿಗಳ ಆಹಾರವಾಗುವುದು ಎಷ್ಟು ಹೊತ್ತಿನ ಮಾತು. ಹೀಗೆ ನೆಲದೊಳಗೆ ಹುದುಗಿಕೊಂಡು ವರ್ಷಗಳ ಕಾಲ ಮಳೆರಾಯನಿಗೆ ಕಾಯುವ ಇವುಗಳು ತಮ್ಮ ದೇಹದಲ್ಲಿನ ತ್ಯಾಜ್ಯವನ್ನು ಬಹುತೇಕ ಕಡಿಮೆ ಮಾಡಿ ಯಕೃತ್ತಿನಲ್ಲಿ ವಿಷಯುಕ್ತ ವಸ್ತುಗಳು ಸಂಗ್ರಹವಾಗದಂತೆ ನೋಡಿಕೊಳ್ಳುತ್ತವೆ. ಚಯಾಪಚಯ ಕ್ರಿಯೆಯನ್ನೂ ಕಡಿಮೆಗೊಳಿಸಿ ಶಕ್ತಿಯನ್ನು ನಂತರದ ದಿನಗಳಿಗೆ ಕಾಪಾಡಿಕೊಳ್ಳುವ ಚತುರತೆಯೂ ಇವುಗಳಿಗೆ ಇವೆ. ಒಟ್ಟಿನಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭವನ್ನು ಗಿಟ್ಟಿಸಿಕೊಳ್ಳುವ ಚತುರ ವ್ಯಾಪಾರಿಯ ಹಾಗೆ ಈ ಮೀನುಗಳು ನೆಲದೊಳಗೆ ಉದುಗಿಕೊಳ್ಳುವ ಮೊದಲು ಉಳಿಸಿಕೊಂಡ ಶಕ್ತಿಯಿಂದಲೇ ನಂತರದ ಕಾಲವನ್ನು ತಳ್ಳುತ್ತವೆ. ಇದೇ ತಂತ್ರಗಾರಿಕೆಯನ್ನು ಈಗ ಮಾನವ ಅರಿಯಲು ಬಯಸುತ್ತಿದ್ದಾನೆ. ಅದು ಸಾದ್ಯವಾದರೆ ಮಾನವ ಜೀವಿಗಳ ಕಡಿಮೆ ಶಕ್ತಿಯ ಬಳಕೆಯಿಂದ ಬಲು ದೂರಗಳ ಸ್ಪೇಸ್ ಟ್ರಾವೆಲ್ (ಆಕಾಶ ನಡಿಗೆ) ನಲ್ಲಿ ಈ ತಂತ್ರಗಾರಿಕೆ ಉಪಯೋಗವಾಗಲಿದೆ.

ಪ್ರಕೃತಿ ಜೀವಿಗಳಿಗೆ ಎಲ್ಲವನ್ನೂ ಕೊಡದಿದ್ದರೂ ಬದುಕುವ ಹಠವನ್ನು ಸಾಧಿಸಿಕೊಳ್ಳಲು ಒಂದು ಮುಕ್ತ ಅವಕಾಶವವನ್ನಂತೂ ಖಂಡಿತ ನೀಡಿದೆ. ಇಂತಹ ಅವಕಾಶಗಳಿಗೆ ಒಂದು ಸಣ್ಣ ಉದಾಹರಣೆ ಈ ಪುಪ್ಪಸ ಮೀನು. ಮಾನವ ಪ್ರಸ್ತುತ ಏನೆಲ್ಲವನ್ನೂ ಸಾಧಿಸಿದರೂ ಸೃಷ್ಟಿಕರ್ತನ ಇಂತಹ ಮತ್ತೊಂದು ಮಗದೊಂದು ವಿಸ್ಮಯಗಳ ಮುಂದೆ ಆತ ತೀರಾ ಕುಬ್ಜನಾಗಿದ್ದಾನೆ,ಆಗುತ್ತಿದ್ದಾನೆ. ಅಲ್ಲಿ ಅವನೆದಿದ್ದರೂ ಕೇವಲ ಒಬ್ಬ ಮೂಕ ಪ್ರೇಕ್ಷಕನಷ್ಟೇ!

Friday, March 2, 2018

ಮುದುಡಿದ ಮೊಗ್ಗು..

ಸಂಜೆ ಸುಮಾರು ಏಳರ ಆಸುಪಾಸು. ಆಫೀಸ್ನ ಕ್ಯಾಬಿನ್ನಲ್ಲಿ ತದೇಕಚಿತ್ತದಿಂದ ಕಂಪ್ಯೂಟರ್ ಪರದೆಯ ಮೇಲಿನ ಇಮೇಲ್ಗಳನ್ನು ಓದುತ್ತಿದ್ದ ರಾಹುಲ್ ಇದ್ದಕ್ಕಿದಂತೆ ಆಕಾಶವೇ ಕಳಚಿ ಕೆಳಗೆ ಬೀಳುವಂತೆ ಅರಚತೊಡಗಿದ. ಆಫೀಸಿನ ನೌಕರರು ಸಂಜೆ ಐದಕ್ಕೇ ಭಾಗಶಃ ಖಾಲಿಯಾದರೂ ಇತ್ತೀಚೆಗಷ್ಟೇ ಸೇರಿಕೊಂಡಿದ್ದ ಚಿಗುರು ಮೀಸೆಯ ಹೊಸ ಅಭ್ಯರ್ಥಿಯೊಬ್ಬ ರಾಹುಲ್ ನ ಹೋಗುವಿಕೆಯನ್ನೇ ಕಾಯುತ್ತಿದ್ದ. ರೂಮಿಗೆ ಬೇಗ ಹೋದರೆ ಅರೆಬರೆ ಕಲಿತಿದ್ದ ಒಂದಿನಿತು ಅಡುಗೆಯನ್ನು ಮಾಡಿ ಹೋಟೆಲ್ಲಿಗೆ ಕಾಸು ಚೆಲ್ಲುವುದನ್ನು ತಪ್ಪಿಸಬಹುದಲ್ಲ ಎಂಬುದಷ್ಟೇ ಆತನ ಲೆಕ್ಕಾಚಾರ. ತಿಳಿದಷ್ಟು, ಸಾಧ್ಯವಾದಷ್ಟು ಶ್ರಮ ವಹಿಸಿ ಅಂದಿನ ಕೆಲಸವನ್ನು ಮಾಡಿ ಮುಗಿಸಿದ್ದ. ಕೂಡಲೇ ಕ್ಯಾಬಿನ್ನ ಒಳಗಿಂದ ತನ್ನ ಹೆಸರನ್ನು ಕೂಗಿ ಅರಚಿದ ಬಾಸಿನ ಸದ್ದಿಗೆ ಕೊಂಚ ಕಾಲ ಹೌಹಾರಿದ ಹುಡುಗನ ಎದೆ ಡಬಡಬನೆ ಬಡಿಯತೊಡಗಿತು. ಉಸಿರಿನ ವೇಗ ಹೆಚ್ಚಾಗತೊಡಗಿತು. ಗ್ರಹಚಾರವೋ ಏನೋ ಎಂಬಂತೆ ಪ್ರತಿದಿನ ಹೀಗೆ ಒಂದಿಲ್ಲೊಂದು ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿ ನೀತಿಪಾಠಗಳನ್ನು ಹೇಳಿಸಿಕೊಳ್ಳುವುದು ಆತನಿಗೆ ಕಳೆದ ಕೆಲದಿನಗಳಿಂದ ದಿನನಿತ್ಯದ ಅನುಭವವಾಗಿದ್ದಿತು. ಆಫೀಸಿನಲ್ಲಿ ತನ್ನ ವಯಸ್ಸಿನ ಎರಡು ಪಟ್ಟು ದೊಡ್ಡವರು ತಪ್ಪು ಮಾಡಿದರೂ ಕ್ಯಾರೇ ಎನ್ನದ ಬಾಸು ನನ್ನನು ಕಂಡರೆ ಮಾತ್ರ ಏಕೆ ಹೀಗೆ ಎನುತ್ತಾ ಅಲುಕುತ್ತಿರಿರುತ್ತಾನೆ. ಹೊಸ ಅಭ್ಯರ್ಥಿಗಳನ್ನು ಈ ರೀತಿಯಾಗಿ ನೆಡೆಸಿಕೊಂಡರೇನೇ ಮುಂದೆ ಕಂಪನಿಯಲ್ಲಿ ಅವರು ತಗ್ಗಿ ಬಗ್ಗಿ ನೆಡೆಯುತ್ತಾರೆ ಎಂಬ ತರ್ಕರಹಿತವಾದ ತರ್ಕವನ್ನು ಇತ್ತೀಚೆಗೆ ರಾಹುಲ್ ಮೂಡಿಸಿಕೊಂಡಿದ್ದಾನೆ.

ಹಾಲನ್ನು ಕದ್ದು ಕುಡಿದ ಬೆಕ್ಕಿನಂತೆ ಒಂದೊಂದೇ ಹೆಜ್ಜೆಗಳನ್ನು ಪೋಣಿಸುತ್ತಾ ಮುನ್ನೆಡೆದ ಹುಡುಗನ ಮನದಲ್ಲಿ ನಾನಾ ಬಗೆಯ ಆಲೋಚನ ಲಹರಿಗಳು ಮೂಡತೊಡಗಿದ್ದವು. ದಿನೇ ದಿನೇ ಒಂದಿಲ್ಲೊಂದು ತಪ್ಪುಗಳು ಅದೆಷ್ಟೇ ಪ್ರಯತ್ನಪಟ್ಟರೂ ತಪ್ಪುತ್ತಿರಲಿಲ್ಲ. ಕಡಲೆಯ ಒಳಗಿನ ಕಲ್ಲುಗಳಂತೆ ಅಲ್ಲೊಂದು ಇಲ್ಲೊಂದು ತಪ್ಪುಗಳು ಉಳಿಯುತ್ತಲೇ ಇರುತ್ತಿದ್ದವು. ಕನ್ನಡ ಬರುತ್ತಿದ್ದರೂ ಪ್ರತಿ ದಿನವೂ ಒಂದಿಲ್ಲೊಂದು ಪೋಷಾಕಿನ ಇಂಗ್ಲೀಷಿನಲ್ಲಿ ಬೈದು ಮೈಬೆವರಿಳಿಸುತ್ತಿದ್ದ ರಾಹುಲ್ನನ್ನು ಕಂಡರೆ ನೆಲವೇ ಕುಸಿದು ಬಿದ್ದಂತ ಅನುಭವ ಹುಡುಗನಿಗಾಗುತ್ತಿದ್ದರೂ ತನ್ನ ಚಿಗುರುಮೀಸೆಯ ಗಂಡಸುತನವನ್ನು ಕಾಪಾಡಿಕೊಳ್ಳಲೋ ಎಂಬಂತೆ ಭಯವನ್ನು ಮುಖದ ಮೇಲೆ ಆತ ತೋರಿಸಿಕೊಳ್ಳುತ್ತಿರಲಿಲ್ಲ. ಇಂದೂ ಸಹ ಅದೇ ಬಗೆಯ ಭಯದೊಂದಿಗೆ ರಾಹುಲ್ನ ಕ್ಯಾಬಿನ್ನೊಳಗೆ ಒಳಹೊಕ್ಕ ಆತ ಧರಿಸಿಕೊಂಡಿದ್ದ ಶರ್ಟ್ನ ಮೇಲೆ ಬೆವರಿನ ಕಲೆಗಳು ಮೂಡುವವರೆಗೂ ಬೈಗುಳಗಳ ಸುರಿಮಳೆಗೈಸಿಕೊಂಡು ಇನ್ನೊಂದು ಮಾತನ್ನು ಕೇಳಿಸಿಕೊಂಡರೂ ಉಸಿರೇ ನಿಂತುಹೋಗುವುದೇನೋ ಎಂಬ ಸ್ಥಿತಿಗೆ ತಲುಪಿ ಅಲ್ಲಿಂದ ಹೊರಬಂದ. ಅಲ್ಲದೆ ಇಂದು ಸಮಯ ಅದೆಷ್ಟೇ ಆದರೂ ಸರಿಯೇ ತಪ್ಪೆಗೆಸೆಗಿರುವ ಕೆಲಸವನ್ನು ಮತ್ತೊಮೆ ಪೂರ್ತಿಯಾಗಿ ಮಾಡಿಯೇ ಹೊರಡಬೇಕೆಂಬ ಹುಕುಂ ಕೂಡ ಹಾಕಿಸಿಕೊಂಡ. ಕೆಲ ನಿಮಿಷಗಳಲ್ಲೇ ದಡಬಡನೆ ಎದ್ದು ಹೊರನೆಡೆದ ರಾಹುಲ್ನನ್ನು ಕಂಡು ಕೊಂಚ ನಿರಾಳನಾದ ಆತ ತನ್ನ ಪುರ್ಸನ್ನು ಹೊರತೆಗೆದು ಒಮ್ಮೆ ನೋಡಿದ. ಮೊದಲ ತಿಂಗಳ ಸಂಬಳ ಬರಲು ಇನ್ನು 2 ವಾರಗಳಿರುವಾಗಲೇ ಬರಿದು ಬರಿದಾಗಿದ್ದ ಅದರಲ್ಲಿ ಅಂದಿನ ಹೋಟೆಲಿನ ಊಟಕ್ಕೂ ಹಣವನ್ನು ವ್ಯಹಿಸಬೇಕೆಂಬ ಚಿಂತೆ ಆತನನ್ನು ಕೊರೆಯತೊಡಗಿತು. ದಿನಪೂರ್ತಿ ಮಾಡಿದ ಕೆಲಸವನ್ನು ಮತ್ತೊಮ್ಮೆ ಅದೆಷ್ಟೊತ್ತಿನವರೆಗೆ ಮಾಡಿ ಮುಗಿಸಬಲ್ಲೆನೋ ಎಂಬ ಚಿಂತೆಯಲ್ಲಿ ಕೆಲಸದಲ್ಲಿ ಮಗ್ನನಾದ. ಏಕಾಂತವಾಗಿದ್ದ ಆಫೀಸಿನಲ್ಲಿ ಕೀಬೋರ್ಡ್ನ ಕುಟ್ಟುವ ಸದ್ದು ಆತನ ರೋದನೆಯ ಪ್ರತೀಕವೇನೋ ಎಂಬಂತೆ ಮಾರ್ದನಿಸತೊಡಗಿತ್ತು.

ತೊಟ್ಟಿಲಿನ ಅನುಭವವನ್ನು ನೀಡುವ ಪಜೆರೊ ಕಾರು, ಇಂಪಾದ ಹಿಂದೂಸ್ತಾನಿ ಸಂಗೀತ, ಇಂಚಿಂಚೇ ಕರಗಿ ಕತ್ತಲಾಗುವ ಮುಗಿಲು, ತಣ್ಣನೆಯ ಗಾಳಿ ಇವೆಲ್ಲವೂ ಟ್ರಾಫಿಕ್ ಎಂಬ ಕಿಕ್ಕಿರಿದ ಕಾನನದೊಳಗೂ ಒಂದು ಬಗೆಯ ಅಮೂರ್ತ ಸುಖಾನುಭವವನ್ನು ನೀಡುವಂತೆ ರಾಹುಲ್ನನ್ನು ಆವರಿಸಿದ್ದವು. ಪ್ರತಿ ದಿನ, ಕೆಲಸದ ಅದ್ಯಾವುದೇ ಒತ್ತಡಗಳಿದ್ದರೂ ಮೆನೆಗೆ ಹಿಂತಿರುಗುವ ಸಮಯದಲ್ಲಿ ಫೋನನ್ನು ಸೈಲೆಂಟ್ ಮೋಡಿನಲ್ಲಿಟ್ಟು ಕಾರಿನ ಉತ್ಕೃಷ್ಟ ಸ್ಪೀಕರ್ಸಗಳಿಂದ ಮೂಡುವ ಸಂಗೀತವನ್ನು ಗುನುಗುತ್ತಾ ಹೋದಂತೆ ಚಿಂತೆ ಒತ್ತಡಗಳಿಂದ ದೂರವಾಗುವ ಅನುಭವ ಆತನಿಗೆ. ಆದರೆ ಅಕ್ಷರ ಸಹ ರುದ್ರತಾಂಡವವನ್ನು ಆಡುವ ಬೆಂಕಿಯ ಚೆಂಡಿನಂತೆ ರಾಹುಲ್ ಆಫೀಸಿನ ಒಳಗೆ! ಆತನಿಗೆ ಕೆಲಸ, ಸಮಯ, ಮಾತು, ರೀತಿ ಎಲ್ಲವೂ ಕರಾರುವಾಕ್ಕಾಗಿಯೇ ಇರಬೇಕು. ಕೋಟಿಯಲ್ಲಿ ನಾಲ್ಕಾಣೆ ಕಾಣೆಯಾದರೂ ಕಾಣೆಮಾಡಿದವನೊಟ್ಟಿಗೆ ಕುರುಕ್ಷೇತ್ರವನ್ನೇ ಮಾಡುವ ಖಯಾಲಿಯ ಆತ ಹಿರಿಯರು ಕಿರಿಯರು ಎಂಬ ಮುಲಾಜಿಲ್ಲದೆ ವರ್ತಿಸುತ್ತಿದ್ದ. ಅದರಲ್ಲೂ ಕಿರಿಯರೆಂದರೆ ಕಾದ ಎಣ್ಣೆಯೊಳಗೆ ಹಪ್ಪಳವನ್ನು ಕರಿದಂತೆ ಆಡಿಸಿಬಿಡುತ್ತಿದ್ದ. ಅಂತಹ ಭಯಂಕರ ವ್ಯಕ್ತಿತ್ವದ ಆತನನ್ನು ಆಫೀಸಿನವರು ಸಾಧುವಿನಂತೆ ಶಾಂತ ಸ್ವಭಾವದ ಮುಗುಳ್ ನಗೆಯನ್ನು ಬೀರುತ್ತಾ ಹೀಗೆ ಹಾಡನ್ನು ಗುನುಗುವುದನ್ನು ಕಂಡರಂತೂ ಅಕ್ಷರ ಸಹ ಕಕ್ಕಾಬಿಕ್ಕಿಯಾಗಿಬಿಡುತ್ತಿದ್ದರು. ಆ ಒಂದು ಬಗೆಯ ಮಹಾಮಾರ್ಪಾಡು ಸಂಜೆ ಆಫೀಸಿನಿಂದ ಹೊರಬಂದಾಗ ಆತನಲ್ಲಿ ಮೂಡಿಬಿಡುತ್ತದೆ. ಪ್ರತಿದಿನದಂತೆ ಇಂದೂ ಸಹ ಸಂಜೆಯ ಇಂಪಾದ ರಾಗವನ್ನು ಗುನುಗುತ್ತಾ ಹೋಗುತ್ತಿದ್ದರೂ ಏನೋ ಒಂದು ಬಗೆಯ ದುಗುಡ ರಾಹುಲ್ನ ಮನದೊಳಗೆ. ಕೆಲ ಸಮಯದ ಮೊದಲು ಆಫೀಸಿನ ಹೊಸ ಅಭ್ಯರ್ಥಿ ಮಾಡಿದ್ದ ಸಣ್ಣ ತಪ್ಪಿಗೆ ಬಾಯಿಗೆ ಬಂದಂತೆ ಬೈದ ರೀತಿ ಆತನನ್ನು ಸಣ್ಣದಾಗಿ ಕೊರೆಯತೊಡಗಿತು. ಆ ಸಣ್ಣ ಕಣ್ಣುಗಳಲ್ಲಿ ಅಡಗಿದ್ದ ಅಗಾಧ ಭಯವನ್ನು ಕಂಡರೂ ಮುಲಾಜಿಲ್ಲದೆ ಆತನನ್ನು ತರಾಟೆಗೆ ತೆಗೆದುಕೊಂಡದ್ದು ಮಾತ್ರ ಏಕೋ ಸರಿಯೆನಿಸಲಿಲ್ಲ. ಸಂಧಿಪ್ರಕಾಶ ರಾಗವೊಂದು ಹಿತವಾಗಿ ಮೂಡುತ್ತಿದ್ದಿತು.

ಮಧ್ಯದಲ್ಲೆಲೋ ಟ್ರಾಫಿಕ್ನ ಕಡುಗೆಂಪು ಸಿಗ್ನಲ್ ಗೆ ಕಾರನ್ನು ನಿಲ್ಲಿಸಿದ ರಾಹುಲ್ಗೆ ರಸ್ತೆಯ ಬದಿಯಲ್ಲಿದ್ದ ಶಾಲೆಯ ತರಗತಿಯೊಳಗೆ ದೃಷ್ಟಿ ಬಿದ್ದಿತು. ಸಂಜೆ ಎಂಟಾದರೂ ಇನ್ನು ಬಾಗಿಲು ತೆರೆದಿದ್ದ ಶಾಲೆಯನ್ನು ಕಂಡು ಆತನಲ್ಲಿ ಕುತೂಹಲವೊಂದು ಮೂಡಿತು. ಅದರೊಳಗೆ ಪಾಠವನ್ನು ಮಾಡುತ್ತಿದ್ದ ದಪ್ಪ ಮೀಸೆಯ ಶಿಕ್ಷಕ, ಅವನ ಗಡುಸಾದ ದನಿ, ಮೊದಲ ಸಾಲಿನಲ್ಲಿ ಕೂತಿದ್ದ ವಿದ್ಯಾರ್ಥಿಗಳ ಗುಸುಗುಸು ಸದ್ದುಗಳೂ ಸಹ ಆತನ ಕಿವಿಗೆ ಕೇಳಿಸತೊಗಿತು. ಹತ್ತನೇ ತರಗತಿಯ ಪರೀಕ್ಷೆ ಸಮೀಪಿಸುತ್ತಿದ್ದರಿಂದ ಸಂಜೆ ಎಂಟಾದರೂ ಹುಡುಗರನ್ನು ಮನೆಗೆ ಬಿಟ್ಟಿಲ್ಲ.

ರಾಹುಲ್ನ ದೃಷ್ಟಿ ಹಸಿರು ಬಣ್ಣದ ಪ್ಯಾಂಟು ಹಾಗು ಅಸ್ತವ್ಯಸ್ತಗೊಂಡಿದ್ದ ಬಿಳಿಯ ಶರ್ಟ್ ಅನ್ನು ಧರಿಸಿ ಭಯದ ಕಣ್ಣುಗಳಿಂದ ದಪ್ಪ ಮೀಸೆಯ ಶಿಕ್ಷಕನನ್ನೇ ನೋಡುತ್ತಿದ್ದ ಮೊದಲ ಸಾಲಿನ ಹುಡುಗನೊಬ್ಬನ ಮೇಲೆ ಬಿದ್ದಿತು. ಪದಗಳ ಒಂದೊಂದು ಮಹಾಪ್ರಾಣಗಳನ್ನೂ ಬಾಂಬು ಸಿಡಿಸಿದಂತೆ ಅರಚುತಿದ್ದ ಅವರ ಮಾತಿನ ಧಾಟಿಗೆ ಹುಡುಗನ ಎದೆ ಡಬಡಬನೆ ಬಡಿದುಕೊಳ್ಳುತ್ತಿತು. ಅಂಗೈಯೆಲ್ಲ ಬೆವರಿನಿಂದ ಒದ್ದೆಯಾಗಿ ಪುಸ್ತಕದ ಹಾಳೆಗಳ ಮೇಲಿನ ಅಕ್ಷಗಳು ಒಂದರ ಮೇಲೊಂದು ಕಲಸಿಕೊಂಡಿದ್ದವು. ಮೇಷ್ಟ್ರು ಅದೇನನ್ನು ಹೇಳಿಕೊಡುತ್ತಿದ್ದಾರೆ ಎಂಬುದು ಆತನಿಗೆ ಒಂದಿನಿತು ತಿಳಿಯದು. ಮನೆಯಲ್ಲಿನ ಆರ್ಥಿಕ ಸಮಸ್ಯೆ ಅದರಿಂದ ಹುಟ್ಟಿಕೊಂಡ ಅಪ್ಪನ ಕುಡಿತ, ಅಮ್ಮನ ಅಳಲು, ಮದುವೆಯ ವಯಸ್ಸಿಗೆ ಬಂದಿರುವ ಅಕ್ಕ ಇವುಗಳೇ ದಿನ ಪೂರ್ತಿ ಆ ಎಳೆಯ ಮಸ್ತಿಷ್ಕದೊಳಗೆ ಕೊರೆಯುತ್ತಿದಾಗ ಓದಿನ ಮೇಲೆ ಮನಸ್ಸನ್ನು ಕೇ೦ದ್ರೀಕರಣ ಮಾಡುವುದಾದರೂ ಹೇಗೆ? ಓದಿನಲ್ಲಿ ಬಹಳ ಹಿಂದುಳಿಯದಿದ್ದರೂ ಇದ್ದಲ್ಲಿಂದ ಮುಂದೆ ಹೋಗದಂತಹ ಸ್ಥಿತಿಯಲ್ಲಿ ಆತನಿದ್ದಾನೆ. ಭಯ, ಆತಂಕ, ಖಿನ್ನತೆ, ದುಃಖ ಎಲ್ಲವೂ ಅವನನ್ನು ಹರಿದು ತಿನ್ನತೊಡಗಿದ್ದವು. ಅದೆಷ್ಟೇ ಪ್ರಯತ್ನ ಪಟ್ಟರೂ ಆತನಿಗೆ ಮೇಷ್ಟ್ರ ಪಾಠದ ಮೇಲೆ ನಿಗಾ ಹತ್ತುತ್ತಲೇ ಇಲ್ಲ.
'ಏ ಕೋತಿ! ಅದೇನ್ ನನ್ನ್ ಮುಖಾನೇ ನೋಡ್ತಾ ಇದ್ದೀಯ.. ಬೋರ್ಡ್ ನೋಡು, ಬೋರ್ಡ್ ' ಎಂದು ಅರಚಿದ ಶಿಕ್ಷಕನ ಸದ್ದಿಗೆ ವಿಚಲಿತನಾದ ಹುಡುಗನಿಗೆ ಏನೇಳಬೇಕೆಂದು ತೋಚದೆ ತಲೆಯನ್ನು ಬಗ್ಗಿಸಿಕೊಂಡ. ಕೊಂಚ ಸಂಶಯಗೊಂಡ ಮೇಷ್ಟ್ರು 'ಎಲ್ಲಿ, ಎದ್ದೇಳು..ನೆನ್ನೆ ಕಲಿಸಿದ ಸೂತ್ರವನ್ನು ಹೇಳು ನೋಡಣ' ಎಂದಾಗಲಂತೂ ತನ್ನ ಪ್ರಾಣಪಕ್ಷಿಯೇ ಹಾರಿ ಹೋದಂತಾಗಿ ತನ್ನ ಬೆವರಿನ ಕೈಗಳ ಮುಷ್ಟಿಯನ್ನು ಆತ ಉಜ್ಜಿಕೊಳ್ಳತೊಡಗಿದ. ನೆನ್ನೆಯ ಸೂತ್ರ ದೂರದ ಮಾತು ಕಡೆಯ ಪಕ್ಷ ಆ ದಿನ ಹೇಳಿಕೊಡುತ್ತಿದ್ದ ಅಧ್ಯಾಯ ಪುಸ್ತಕದ ಯಾವ ಪುಟದಲ್ಲಿದ್ದೆ ಎಂಬುದನ್ನೂ ಗುರುತಿಸಲಾರ ಆತ. ಸಣ್ಣವನಿದ್ದಾಗ ಇದ್ದ ಚುರುಕು, ಚೂಟಿತನ ವರ್ಷಗಳು ಕಳೆಯುತ್ತಾ ಕಾಣೆಯಾಗತೊಡಗಿದ್ದವು. ಮನೆಯಲ್ಲಿ ಉಗ್ರ ನರಸಿಂಹನಂತೆ ಅರಚಾಡುವ ಅಪ್ಪ, ಮಾತುಮಾತಿಗೂ ಕೊಂಕುನುಡಿದು ಬೈದು, ಬೈಸಿಕೊಂಡು, ಅಳುವನ್ನೇ ಪರಿಪಾಠಮಾಡಿಕೊಂಡಿರುವ ಅಮ್ಮ, ಮನೆಯ ಈ ಸ್ಥಿತಿಯನ್ನು ಕಂಡು ತನ್ನ ಓದನ್ನೂ ಅರ್ಧಕ್ಕೆ ನಿಲ್ಲಿಸಿ ಮನೆಯಲ್ಲಿ ಕೂತಿರುವ ಅಕ್ಕ ಇವೆಲ್ಲ ದುಗುಡಗಳು ದಿನಕಳೆದಂತೆ ಹುಡುಗನ ಮನವನ್ನು ಕಾರ್ಮೋಡಗಳಂತೆ ಅವರಿಸತೊಡಗಿದವು. ಮನೆಯ ಯಾರೊಬ್ಬರೂ ಇದನ್ನು ಗುರುತಿಸಲಿಲ್ಲ. ಗುರುತಿಸುವ ಸಂಯಮ ಅಥವಾ ನಿಗಾ ಎಂಬುದೂ ಸಹ ಅವರಲ್ಲಿರಲಿಲ್ಲ. ತಲೆಬಗ್ಗಿಸಿ ನಿಂತಿದ್ದ ಆತನ ಇನ್ನೇನು ತಲೆ ಮೇಲೆತ್ತಬೇಕು ಅನ್ನುವಷ್ಟರಲ್ಲಿ ಬಾಣದಂತೆ ಬೀಸಿಬಂದ ಶಿಕ್ಷಕನ ಕೈಯ ಆಸ್ತ ಆ ಎಳೆಯ ಕೆನ್ನೆ ಹಾಗು ಕಿವಿಗಳ ಮೇಲೆ ಬಿದ್ದವು. ಛಟಾರನೆ ಮೂಡಿದ ಆ ಸದ್ದಿಗೆ ತಗತಿಯಲ್ಲಿ ಮೂಡುತಿದ್ದ ಅಲ್ಲೊಂದು ಇಲ್ಲೊಂದು ಗುಸುಗುಸುಗಳೂ ಕಾಣೆಯಾದಾವು. ಕ್ಷಣಮಾತ್ರದಲ್ಲಿ ತರಗತಿ ನಿಶ್ಯಬ್ದವಾದ ರೀತಿಯನ್ನು ಕಂಡು ಶಿಕ್ಷಕನಿಗೆ ತನ್ನ ಏಟಿನ ಮೇಲೆ ದುರಾಭಿಮಾನ ಮೂಡಿತು. ಕೂಡಲೇ ತನ್ನ ಇನ್ನೊಂದು ಕೈಗಳಿಂದ ಹುಡುಗನ ಇನ್ನೊಂದು ಕೆನ್ನೆ ಹಾಗು ಕಿವಿಗಳ ಮೇಲೆ ಛಟಾರನೆ ಜಾಡಿಸಿದ. ಆತನ ಅಕ್ಕಪಕ್ಕದಲ್ಲಿದ್ದ ಹುಡುಗರು ಹೆದರಿ ದೂರ ಸರಿದರು. ಅಷ್ಟು ಪೆಟ್ಟು ತಿಂದರೂ ಹುಡುಗ ಅಳಲಿಲ್ಲ. ಜೋರಾಗಿ ಚೀರಿ ಅತ್ತು ಮನದೊಳಗಿರುವ ದುಃಖ ದುಮ್ಮಾನಗಳನ್ನೆಲ್ಲ ಒಮ್ಮೆಲೇ ಹೊರಹಾಕಬೇಕೆಂದುಕೊಂಡರೂ ಸಹ ಅಳುವುದು ಮಾತ್ರ ಆತನಿಂದ ಸಾಧ್ಯವಾಗಲಿಲ್ಲ! ಆತನನ್ನೇ ಮೇಲಿಂದ ಕೆಳಕ್ಕೂ ದುರುಗುಟ್ಟಿಕೊಂಡು ನೋಡಿದ ಶಿಕ್ಷಕ ಆತನ ಪಕ್ಕದಲ್ಲಿದ್ದ ವಿದ್ಯಾರ್ಥಿಯನ್ನು ಏಳಿಸಿ ಸೂತ್ರವನ್ನು ಒಪ್ಪಿಸುವಂತೆ ಹೇಳಿದರು. ಅಷ್ಟರಲ್ಲಾಗಲೇ ನೆನ್ನೆಯ ಪುಸ್ತಕದ ಪುಟಗಳನ್ನು ತಿರುವಿ ಓದಿಕೊಂಡಿದ್ದ ಆತ ನೀರು ಕುಡಿದಂತೆ ಸೂತ್ರವನ್ನು ಒಪ್ಪಿಸಿದ. 'ಅವ್ನ ಕಾಲ್ ಸಂಧಿ ನುಸಿ ಮಂಕ್ ಮುಂಡೇದೆ' ಎಂದು ಮತ್ತೊಮ್ಮೆ ಆತನನ್ನು ಬೈದು ಕೂರುವಂತೆ ಗದರಿಸಿ ಪಾಠವನ್ನು ಪುನಹಃ ಶುರುಮಾಡಿದ ಶಿಕ್ಷಕ.

ಸಾಂತ್ವನದ ಕೈಯೊಂದು ಆ ಎಳೆಯ ಹೆಗಲ ಮೇಲೆ ಬೇಕಿದ್ದಿತು. ಹೀಗೆಯೇ ಕಾದ ಕೆಂಡವನ್ನು ಮನವೆಂಬ ಬೂದಿಯೊಳಗೆ ಕವಿದುಕೊಂಡು ಕೂತಿರುವ ವಿದ್ಯಾರ್ಥಿಗಳು ಎಲ್ಲೆಲ್ಲಿಯೂ ಇದ್ದಾರೆ! ಆ ತರಗತಿಯಲ್ಲಿಯೂ ಕೂಡ. ಕೆಲ ನಿಮಿಷಗಳ ಕಾಲ ಸುಮ್ಮನಿದ್ದ ಆ ವಿದ್ಯಾರ್ಥಿ ತನ್ನ ಬ್ಯಾಗಿನಲಿದ್ದ ಕೈವಾರವನ್ನು ಎಳೆದು ಸೂತ್ರವನ್ನು ಒಪ್ಪಿಸಿದ ವಿದ್ಯಾರ್ಥಿಯ ಕೈಯ ಮೇಲೆ ತನ್ನ ಶಕ್ತಿಯನ್ನೆಲ್ಲ ಬಿಟ್ಟು ಚುಚ್ಚಿದ. ಆತನ ಕೈ ಕ್ಷಣಮಾತ್ರದಲ್ಲೇ ರಕ್ತಮಯವಾಯಿತು. ನೋವಿನಿಂದ ಆತ ನೆಲದ ಮೇಲೆ ಬಿದ್ದು ಒದ್ದಾಡತೊಡಗಿದ. ಅಕ್ಕ ಪಕ್ಕದ ವಿದ್ಯಾಥಿಗಳೆಲ್ಲ ಹೆದರಿ ಎದ್ದು ದೂರ ಸರಿದು ನಿಂತರು. ಶಿಕ್ಷಕನೂ ಸಹ ಅವನ ಆ ರೌದ್ರವಾತಾರವನ್ನು ಕಂಡು ಹತ್ತಿರಬರಲು ಹೆದರಿದ. ಕೆಲಕಾಲ ಶಿಕ್ಷಕನನ್ನೇ ಗುರಾಯಿಸಿದ ಆತ ಚೀರುತ್ತಾ ತರಗತಿಯ ಹೊರಗೆ ಓಡಿಬಂದ.

ಕಾರಿನ ಒಳಗೆ ಕೂತಿದ್ದ ರಾಹುಲ್ನನ್ನು ನೋಡಿದ ಆತನ ಕಣ್ಣುಗಳಲ್ಲಿ ನೀರಿನ ಜ್ವಾಲಾಮುಖಿಯೇ ಮೂಡಿದಂತಿದ್ದಿತು. ಇಬ್ಬರ ದೃಷ್ಟಿಗಳು ಕೆಲ ಕ್ಷಣಗಳು ಸಂಧಿಸಿದವು. ಆತನನ್ನು ಕಾಪಾಡುವಂತೆ ಅವುಗಳು ರೋಧಿಸತೊಡಗಿದಂತಿದ್ದವು. ಕೂಡಲೇ ಆತ ಜೋರಾಗಿ ಅಳುವ ಸದ್ದನು ಮಾಡುತ್ತಾ ಓಡಿ ದೂರದಲ್ಲಿ ಮರೆಯಾದ. ಮತ್ತೆಂದೂ ಹಿಂದಕ್ಕೆ ಬಾರದಂತೆ! ರಾಹುಲ್ ಆತ ಓಡಿಹೋದ ದಿಕ್ಕಿನ ಕಡೆಯೇ ನೋಡ ತೊಡಗುತ್ತಾನೆ, ದೊಡ್ಡ ದೊಡ್ಡ ಹೆಡ್ ಲೈಟುಗಳನ್ನು ಝಳಪಿಸುತ್ತಾ ಊರೇ ಮುಳುಗಿಹೋಗುವುದೇನೋ ಎಂಬಂತೆ ವಾಹನಗಳು ಶಬ್ದಮಾಡತೊಡಗಿದ್ದವು! ರಾಹುಲ್ ಶಾಲೆಯ ಕಡೆ ತಿರುಗಿ ನೋಡುತ್ತಾನೆ. ತಾನು ಕಲಿತಿದ್ದ ಸಿಟಿಯ ಹಳೆಯ ಶಾಲೆಯ ಗೇಟಿಗೆ ಬೀಗವನ್ನು ಹಾಕಿರಲಾಗಿರುತ್ತದೆ! ಗಾಡಿಯ ಸ್ಟೈರಿಂಗ್ ನ ಮೇಲೆ ಇದ್ದ ತನ್ನ ಕೈಯ ಮೇಲೆ ಆತನ ದೃಷ್ಟಿ ಹೋಗುತ್ತದೆ. ಹಲವಾರು ವರ್ಷಗಳ ಹಿಂದೆ ಮೂಡಿದ್ದ ಕೈವಾರದ ಕಲೆ ಇನ್ನೂ ಹಾಗೆಯೇ ಕಾಣುತ್ತಿರುತ್ತದೆ!! ಮತ್ತೊಮ್ಮೆ ಅಂದು ಕಾಣೆಯಾದ ತನ್ನ ಸಹಪಾಠಿಯನ್ನು ನೆನೆದು ಆತನ ಮನ ಮರುಗುತ್ತದೆ. ಕೆಲ ಕಾಲ ಸುಮ್ಮನಾದ ಆತನಿಗೆ ಕೂಡಲೇ ಏನೋ ನೆನಪಾದಂತಾಗಿ ಮುಂದಿನ ಸಿಗ್ನಲ್ನಲ್ಲಿ ಗಾಡಿಯನ್ನು ಹಿಂದಕ್ಕೆ ತಿರುಗಿಸಿ ಪುನ್ಹ ಆಫೀಸಿಗೆ ಬರುತ್ತಾನೆ.

ಹೊಸ ಅಭ್ಯರ್ಥಿ ತನ್ನ ಕಂಪ್ಯೂಟರಿನ ಮುಂದೆ ತದೇಕಚಿತ್ತದಿಂದ ಕೆಲಸವನ್ನು ಮುಂದುವರೆಸಿರುತ್ತಾನೆ. 'ಇನ್ನೂ ಮನೆಗ್ ಹೋಗಿಲ್ವೇನ್ರಿ' ಎಂದು ಮೊದಲ ಬಾರಿ ಕನ್ನಡದಲ್ಲಿ ಕೇಳಿದ ಪ್ರೆಶ್ನೆಗೆ 'ಇನ್ ಸ್ವಲ್ಪ ಇದೆ ಸಾರ್, ಬೇಗ ಮುಗಿಸ್ತೀನಿ' ಎಂದು ಅಳುಕುತ್ತಲೇ ಆತ ಉತ್ತರಿಸಿದ. ರಾಹುಲ್ ಆತನ ಬಳಿಗೆ ಬಂದು ಹೆಗಲ ಮೇಲೆ ಕೈಹಾಕಿ 'ಏನ್ರಿ ಯಾರು ಗರ್ಲ್ ಫ್ರೆಂಡ್ಸ್ ಇಲ್ವಾ ನಿಮ್ಗೆ.. ಅತ್ವಾ ಕೆಲ್ಸಾನೆ ಗರ್ಲ್ ಫ್ರೆಂಡ್ ಮಾಡ್ಕೊಂಡಿದ್ದೀರಾ?' ಎಂದು ನಗುತ್ತಾ ಕೇಳಲು ಹೊಸ ಅಭ್ಯರ್ಥಿಗೆ ಏನೇಳಬೇಕೆಂದು ತೋಚುವುದಿಲ್ಲ. ಮೊದಲ ಬಾರಿಗೆ ತನ್ನ ಬಾಸು ಇಷ್ಟೊಂದು ಅನ್ಯೂನ್ಯತೆಯಿಂದ ಮಾತನಾಡಿಸಿದ ಖುಷಿಗೆ ಅದೆಷ್ಟೇ ಹೊತ್ತಾದರೂ ಸರಿ ಈ ಕೆಲಸವನ್ನು ಇಂದಿಗೇ ಮುಗಿಸಬೇಕೆಂಬ ಛಲ ಏಕೋ ಆತನ ಮನದಲ್ಲಿ ಮೂಡುತ್ತದೆ! ಕೂಡಲೇ ರಾಹುಲ್ ಆತನ ಕಂಪ್ಯೂಟರ್ನ ಪರದೆಯ ಬಳಿಗೋಗಿ ಅದರ ಪವರ್ ಬಟನ್ ಅನ್ನು ಒತ್ತಿ ಆತನಿಗೆ ಹೊರಡಲು ಹೇಳುತ್ತಾನೆ.

'ಸಾರ್ ಇನ್ನೇನ್ ಸ್ವಲ್ಪ ಹೊತ್ತಲ್ಲೇ ಮುಗಿಸಿಬಿಡ್ತಿನಿ ಅಂದ ಅವನಿಗೆ, 

'ರ್ರೀ, ಏಳ್ರಿ ಸಾಕು. ಬನ್ನಿ ನಮ್ಮೊರಿನ ಒಂದು ಒಳ್ಳೆ ಹೋಟೆಲ್ ಇದೆ. ನಿಮ್ಗೆ ಅಲ್ಲಿ ಊಟ ಮಾಡಿಸ್ತೀನಿ' ಎನ್ನುತ್ತಾ ಆತನ ಹೆಗಲ ಮೇಲೆ ಕೈಹಾಕಿಕೊಂಡು ಆತನನ್ನು ಆಫೀಸಿನಿಂದ ಹೊರಗೆ ಕರೆದುಕೊಂಡು ಹೋಗುತ್ತಾನೆ. 

ಹಲವು ವರ್ಷಗಳ ಹಿಂದೆ ಕೈವಾರದಿಂದ ಚುಚ್ಚಿ ಓಡಿಹೋದ ಸಹಪಾಠಿಯನ್ನು ಒತ್ತಡದ ಕೂಪದಿಂದ ಹೊರಗೆಳೆದು ರಕ್ಷಿಸಿದಂತಹ ಅನುಭವ ರಾಹುಲ್ನಿಗೆ ಆಗುತ್ತದೆ.

'ನಗು ನಗುತಾ ನಲಿ ನಲಿ, ಏನೇ ಆಗಲಿ' ಪಿ.ಬಿ ಶ್ರೀನಿವಾಸ್ ರ ಮಧುರ ಸ್ವರದಲ್ಲಿ ಮಾಡುತ್ತಿದ್ದ ಹಾಡಿನ ಕಂಪು ಕಾರಿನ ಒಳಗೆಲ್ಲ ಸೂಸತೊಡಗಿತು…..