Wednesday, November 29, 2017

ಕಥೆ - ಒಂಟಿಬೆಟ್ಟದ ಸ್ಮಶಾನ - 1

                               
ಸಿಟಿಯ ಬಿಸಿಲಲ್ಲೇ ಹುಟ್ಟಿ ಬೆಳೆದಿದ್ದ ರಾಹುಲ್ನಿಗೆ ಹಾರರ್ ಮೂವಿಗಳೆಂದರೆ ಪಂಚಪ್ರಾಣ. ಪ್ರೀತಿ,ಪ್ರೇಮ,ಪ್ರಣಯ ಎಂಬ ಅಳಿಯ ಅಲ್ಲ ಮಗಳ ಗಂಡನೆನಿಸಿಕೊಳ್ಳುವ ಚಿತ್ರಗಳೆಂದರೆ ಆತ ಉರಿದುಬೀಳುತ್ತಿದ್ದ. ಬಿಟ್ಟಿಯಾಗಿ ಅಂತಹ ಚಿತ್ರದ ಟಿಕೆಟ್ ದೊರೆತರೂ ಹೋಗದೆ ಇರುವಂತಹ ಆಸಾಮಿ. ಆದರೆ ಸಿಟಿಯಲ್ಲಿ ಯಾವುದೇ ಇಂಗ್ಲಿಷ್ ಹಾರರ್ ಚಿತ್ರಗಳೂ ಬಂದರೂ ಬೆಂಬಿಡದೆ ನೋಡುವ ಖಯಾಲಿ. ಚಿತ್ರದ ಪೋಸ್ಟರ್ ನೋಡಿಯೇ ಗಡ ಗಡ ನಡುಗುವ ಒಂದಿಷ್ಟು ಸ್ನೇಹಿತರನ್ನು ಅವರು ಅಕ್ಷರ ಸಹ ಕಾಲಿಗೆ ಅಡ್ಡ ಬೀಳುತ್ತೀನಿ ಬಿಡಪ್ಪ ಎಂದರೂ ತಾನೇ ಖುದ್ದಾಗಿ ಅಷ್ಟೂ ಜನರಿಗೆ ಟಿಕೆಟ್ ಗಳನ್ನು ಕೊಂಡು, ಜೊತೆಗೆ ಒಂದಿಷ್ಟು ಪಾಪ್ ಕಾರ್ನ್ ಹಾಗು ಪೆಪ್ಸಿಯನ್ನೂ ಕೊಂಡು ಚಿತ್ರ ಮಂದಿರಕ್ಕೆ ಎಳೆದುಕೊಂಡು ಹೋಗುತ್ತಿದ್ದ. ಕಿವಿ ಸಿಡಿದು ಹೋಗುವ ಶಬ್ದದೊಂದಿಗೆ ಎದೆ ಜಲ್ಲ್ ಎನಿಸುವ ದೃಶ್ಯಗಳ ಕುತೂಹಲ ಒಂದೆಡೆಯಾದರೆ, ಊರಿಗೆ ದೊಡ್ಡದಾದ ಮೀಸೆ ಗಡ್ಡವನ್ನು ಬಿಟ್ಟು ನಿಮಿರುವ ತನ್ನ ಉತ್ತರಕುಮಾರ ಸ್ನೇಹಿತರು ಕಣ್ಮುಚ್ಚಿ ಕಿವಿಗೆ ಕೈಯ್ಯ ಬೆರಳುಗಳನ್ನು ಚುಚ್ಚಿ ಪಡುವ ಪಾಡಿನ ಮಜಾ ಇನ್ನೊಂದೆಡೆ. ಆ ಸ್ನೇಹಿತರೋ ಈತ ತುತ್ತು ಕೊಡಿಸಿ ಟಿಕೆಟ್ ಅನ್ನೂ ಕೊಡಿಸಿದ ಎಂಬ ಒಂದೇ ಕಾರಣಕ್ಕೆ ಮಾತ್ರ ತಮ್ಮ ದೇಹವನ್ನು ಸಿನಿಮಾ ಮಂದಿರದ ಒಳಗಿರಿಸಿ ಮನಸ್ಸನ್ನು ಊರ ದೇವಾಲಯದ ದೇವರ ಮುಂದಿರಿಸುತ್ತಾರೆ ವಿನ್ಹಾ ಗೆಳೆತನದ ಗಟ್ಟಿತನವನ್ನೂ ಪ್ರದರ್ಶಿಸುವುದಕಂತೂ ಅಲ್ಲವೇ ಅಲ್ಲ.ಅಂತೂ ತಿಂಗಳಿಗೆ ಎರೆಡೆರಡು ಅಮಾವಾಸ್ಯೆಯನ್ನು ಕಾಣುತ್ತಿದ್ದರು ಆತನ ಸ್ನೇಹಿತರು. ಒಂದು ಚಂದ್ರ ಕಾಣೆಯಾದಗಾದರೆ ಮತ್ತೊಂದು ರಾಹುಲ್ನ ಬಿಟ್ಟಿ ಟಿಕೆಟ್ಟು ಸಿಕ್ಕಾಗ!

ಆ ತಿಂಗಳು ರಾಹುಲ್ನ ಆಫೀಸಿನ ಸಹೋದ್ಯೋಗಿ ಕಮ್ ಬೆಸ್ಟ್ ಫ್ರೆಂಡ್ನ ಮದುವೆ ಸಟ್ಟೇರಿತ್ತು. ಮದುಮಗ ಮದುವೆಯ ಒಂದು ತಿಂಗಳ ಮೊದಲೇ ರಜೆ ಹಾಕಿ ಊರಿಗೆ ಹೋದರಿಂದ ಇತರ ಸ್ನೇಹಿತರಾದಿಗಳಿಗೆ ಕಾಗದ ಹಂಚುವ ಕೆಲಸ ಒಂದೆಡೆಯಾದರೆ, ಮದುಮಗನ ಊರು ಮಲೆನಾಡಿನ ಧಟ್ಟಾರಣ್ಯದ ಪುಟ್ಟ ಗೂಡಿನೊಳಗೆ ಅವಿತಿರುವಂತ್ತಿರುವಾಗ ಮದುವೆಯ ಮನೆಗೆ ಸಿಟಿಯಿಂದ ತಲುಪಬೇಕಾದ ಬಹುಮಖ್ಯ ವಸ್ತುಗಳೆಲ್ಲವನ್ನೂ ಊರಿನಿಂದ ಬರುವ ಯಾರೊಟ್ಟಿಗಾದರೂ ಹೊರಿಸಿ ಕಳಿಸುವ ಜವಬ್ದಾರಿಯೂ ರಾಹುಲ್ನ ಮೇಲಿದ್ದಿತು. ಇಷ್ಟೆಲ್ಲಾ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿರುವ ಆಸಾಮಿ ಮದುವೆಯ ಎರಡು ದಿನ ಮೊದಲು ಬರುತ್ತೀನಿ ಎಂದರೆ ಕೇಳಬೇಕಾ. ಮದುಮಗನ ಅಮ್ಮನೇ ಖುದ್ದಾಗಿ ಫೋನಾಯಿಸಿ ಹದಿನೈದು ದಿನ ಮೊದಲೇ ಬರುವಂತೆ ಹೇಳುತ್ತಾರೆ. ಸರಿ ಎನ್ನುತ್ತಾ ಕೊನೆಗೆ ಒಂದಿಷ್ಟು ಕಳ್ಳ ನೆಪವನ್ನು ಕ್ರೂಡೀಕರಿಸಿ ಜೊತೆಗೆ ಗೆಳೆಯನ ಮದುವೆಯ ನೆಪವನ್ನೂ ಒಡ್ಡಿ ಎರಡು ವಾರಗಳ ಬರಪೂರ ರಜೆಯನ್ನು ಆಫೀಸಿನಿಂದ ಗಿಟ್ಟಿಸಿಕೊಂಡ.

ಅದು ಮಳೆಗಾಲ ಹಾಗು ಚಳಿಗಾಲ ಪರಸ್ಪರ ಸಂಧಿಸುವ ವಿಶಿಷ್ಟವಾದ ಮಾಸ. ಬಿಟ್ಟು ಬಿಟ್ಟು ಹೊಡೆಯುವ ಹಿಂಗಾರಿನ ಮಳೆ ಒಂದೆಡೆಯಾದರೆ ಮೈ ಕೊರೆಯುವ ಚಳಿ ಮತ್ತೊಂದೆಡೆ. ಮಲೆನಾಡಿನ ದಟ್ಟಾರಣ್ಯದ ಕಿರಿದಾದ ಗುಂಡಿಬಿದ್ದ ರಸ್ತೆಯಲ್ಲಿ ಆಮೆನೆಡೆಯಲ್ಲಿ ದಿನಕೊಮ್ಮೆ ಬರುವ ಬಸ್ಸು ರಾಹುಲ್ನನ್ನು ಮದುಮಗನ ಊರಿನ ಮಣ್ಣಿನ ದಾರಿಯ ಮುಂದೆ ತಂದು ನಿಲ್ಲಿಸಿತು. ಹಸಿರು ಸಾಗರದೊಳಗೆ ಕಷ್ಟ ಪಟ್ಟು ನುಗ್ಗಿದ ಆ ಮಣ್ಣಿನ ರಸ್ತೆಯೊಂದೆ ಮನೆ ತಲುಪಲು ಸದ್ಯಕ್ಕೆ ರಾಹುಲನಿಗೆ ಸಿಕ್ಕ ಏಕೈಕ ಸುಳಿವು. ಬ್ಯಾಗನ್ನು ಹೆಗಲ ಮೇಲೇರಿಸಿಕೊಂಡು ಸಿಳ್ಳೆಯಾಕುತ್ತಾ ಆತ ಮುನ್ನೆಡೆದ. ಸೂರ್ಯನ ಒಂದಿಷ್ಟು ಬೆಳಕನ್ನು ಜಪ್ಪಯ್ಯ ಅಂದರೂ ಬಿಡಲೊಲ್ಲೆವು ಎಂಬಂತೆ ಬೆಳೆದಿದ್ದ ಸಾಗರ ಸಂಖ್ಯೆಯ ಮರಗಳ ಕಣ್ ಕೊರೆಸುವಿಕೆ ಸಾಕು ಸಾಕಪ್ಪ ಎನಿಸುತಿತ್ತು. ಜೊತೆಗೆ ಕೆಲ ಹೊತ್ತಿನ ಮುಂಚಷ್ಟೇ ಭೋರ್ಗರೆದಿದ್ದ ಮಳೆರಾಯ ಕಾಡಿನ ಹಸಿರಿನೊಟ್ಟಿಗೊಳಗೂಡಿ ವಿಭಿನ್ನ ಬಗೆಯ ಪರಿಮಳವನ್ನು ಸೃಷ್ಟಿಸಿದ್ದ . ಅದೂ ಸಹ ಕೆಲ ಸಮಯದ ನಂತರ ತಲೆ ನೋವನ್ನು ತರಿಸುತ್ತಿತ್ತು. ಒಟ್ಟಾರೆ ಯಾವೆಲ್ಲ ಮಿತವಾಗಿ ಹಿತವಾಗಿರಬೇಕಿತ್ತೋ ಅವುಗಳೆಲ್ಲ ಇಂದು ಹೆಚ್ಚಾಗಿ ಚುಚ್ಚಿ ಸತಾಯಿಸುತ್ತಿವೆ. ಅಂತೂ ಒಂದು ತಾಸು ನೆಡೆದ ನಂತರ ಸಿಕ್ಕ ಮತ್ತೊಂದು ರಹದಾರಿಯ ಮುಂದೆ ಒಣಗಿದ ಮಾವಿನ ತೋರಣವನ್ನು ಕಂಡಾಗ ಮಾತ್ರ ಈ ದಿಕ್ಕಿನಲ್ಲಿ ಜನಗಳಿರಬಹುದೆಂಬ ಒಂದಿಷ್ಟು ಸುಳಿವು ರಾಹುಲ್ನಿಗೆ ಸಿಕ್ಕಿತು.ನಿಲ್ಲುತ್ತಾ, ಏದುಸಿರು ಬಿಡುತ್ತಾ, ಮತ್ತೆ ಬೇಗಬೇಗನೆ ನೆಡೆಯುತ್ತಾ ಅಂತೂ ನಾಲ್ಕೈದು ಮನೆಗಳಿರುವ ಜಾಗವೊಂದನ್ನು ಕಂಡಾಗ ತಾನು ದಾರಿ ತಪ್ಪಿದೆನೆಂದು ಕಾಡುತಿದ್ದ ಆತಂಕ ಆತನಲ್ಲಿ ಕೊಂಚ ಕಡಿಮೆಯಾಯಿತು.

ಇನ್ನೇನು ಆ ಪುಟ್ಟ ಊರ ಒಳಗೆ ಕಾಲಿಡಬೇಕು ಅನ್ನುವಷ್ಟರಲ್ಲಿ ಕಿವಿಯ ತಮಟೆಗಳೇ ಛಿದ್ರವಾಗುವಂತಹ ಭಯಂಕರ ಸದ್ದಿಗೆ ಬೆಚ್ಚಿ ಬಿದ್ದ ರಾಹುಲ್. ಹುಲಿಗಳೂ ಬಾಲಮುದುಡಿ ಜಾಗಕೀಳುವಂಥಹ ಶ್ವಾನ ದಳಗಳವು. ಬಣ್ಣ ಬಣ್ಣದ ಬಟ್ಟೆ ಹಾಗು ಬೆನ್ನಿನ ಮೇಲೆ ನೇತಾಕಿಕೊಂಡಿದ್ದ ಬ್ಯಾಗನ್ನು ಕಂಡು ತಮ್ಮ ಕಲ್ಪನೆಗೆ ತಕ್ಕಂತೆ ಏನೋ ಒಂದು ವಿಷಜಂತುವನ್ನು ಕಲ್ಪಿಸಿಕೊಂಡತೆ ಆ ನಾಯಿಗಳು ಅಷ್ಟ ದಿಕ್ಕೂಗಳಿಂದಲೂ ರಾಹುಲ್ನನ್ನು ಘೇರಾವ್ ಮಾಡಿದವು. ಅವುಗಳ ಆಳೆತ್ತರದ ದೇಹಸಿರಿ, ಕ್ಷಣಾರ್ಧದಲ್ಲಿ ಭೇಟೆಯನ್ನು ಕತ್ತರಿಸಿ ಹಾಕಬಹುದಾದ ಚೂಪಾದ ಭಯಂಕರವಾದ ಹಲ್ಲುಗಳು, ನೋಟದಲ್ಲೇ ವೈರಿಯನ್ನು ಮೂರ್ಛೆ ತಪ್ಪಿಸಬಲ್ಲವಂತಹ ಆ ರೌದ್ರ ಕಣ್ಣುಗಳು ಅಂತಹ ತಣ್ಣನೆಯ ವಾತಾವರಣದಲ್ಲಿಯೂ ರಾಹುಲ್ನ ಮೈಬೆವರುವಂತೆ ಮಾಡಿದವು. ಪ್ರತಿ ಕ್ಷಣಕ್ಕೂ ಅರಚುತ್ತಾ ಇಂಚಿಚೆ ಮುಂಬರುತ್ತಿದ್ದ ಶ್ವಾನ ದಳಗಳ ವೃತ್ತ ಇನ್ನೇನು ರಾಹುಲ್ನನ್ನು ಆವರಿಸಿದವು ಅನ್ನುವಷ್ಟರಲ್ಲಿ ಅತ್ತಕಡೆಯಿಂದ ಓಡೋಡಿ ಬಂದ ವ್ಯಕ್ತಿಯೊಬ್ಬ ವೃತ್ತವನ್ನು ಚದುರುವಂತೆ ಮಾಡಿದ. ಆದರೆ ತೋರ್ಪಡಿಕೆಗಷ್ಟೇ ಓಡುವಂತೆ ನಟಿಸಿದ ಆ ಗುಂಪು ಕತ್ತಿನ ಕೂದಲನ್ನು ನಿಮಿರಿಸಿ ದೂರದಲ್ಲಿ ಗುರ್ರ್ ಎನ್ನುತ ಸದ್ದುಮಾಡುತ್ತಲೇ ಇದ್ದವು. ಅವುಗಳ ನೋಟದಲ್ಲಿ ಏನೋ ಒಂದು ಬಗೆಯ ಕಿಚ್ಚು ಎದ್ದು ಕಾಣುತ್ತಿತ್ತು. ಅವುಗಳಿಗೆ ಮಾತು ಬಲ್ಲದಾಗಿದ್ದಿದ್ದರೆ ಬೆಚ್ಚಿ ಬೀಳುವ ಸತ್ಯವೊಂದನ್ನು ಅಲ್ಲಿ ಬಾಯಿ ಬಿಡುತ್ತಿದ್ದವೇನೋ ಯಾರು ಬಲ್ಲರು?!

ರಾಹುಲ್ನ ಆಗಮನವನ್ನೇ ಕಾಯುತ್ತಿದ್ದ ಆ ವ್ಯಕ್ತಿ ತಾನು ಮದುಮಗನ ಸಂಬಂಧಿಯೆಂದೂ ರಾಹುಲ್ ಗೆ ಬಹಳ ಬಾರಿ ಫೋನಾಯಿಸಿದರೂ ಆತನ ಮೊಬೈಲ್ನಿಂದ ಯಾವುದೇ ಉತ್ತರ ಬರಲಿಲ್ಲವೆಂದು ಹೇಳಿದಾಗ ಉತ್ತರವಾಗಿ ರಾಹುಲ್ ದಾರಿಯುದ್ದಕ್ಕೂ ಒಂದಿನಿತು ಸಿಗ್ನಲ್ನ ಸುಳಿವು ಸಿಗಲಿಲ್ಲ ಎನ್ನುತ ಮೊಬೈಲ್ನನ್ನು ತೆಗೆದು ನೋಡುತ್ತಾನೆ, ಅಷ್ಟೂ ಪಾಯಿಂಟ್ಗಳ ಸಿಗ್ನಲ್ ಮೊಬೈಲ್ ನ ಒಂದು ತುದಿಯಲ್ಲಿ ಕಾಣುತ್ತಿದೆ! ನಾಯಿಗಳ ಸದ್ದಿಗೆ ಎದೆಬಡಿತ ಒಂದೇ ಸಮನೆ ಏರುತ್ತಿರುವಾಗ ರಾಹುಲ್ನಿಗೆ ಸದ್ಯಕ್ಕೆ ಬೇರ್ಯಾವ ಯೋಚನೆಯೂ ಆತನಲ್ಲಿ ಬರುವುದಿಲ್ಲ. ಏನೋ ಮೊಬೈಲ್ ನ ತೊಂದರೆ ಇರಬೇಕೆಂದು ಸುಮ್ಮನಾಗುತ್ತಾನೆ. ಮದುವೆಯ ಮನೆಯ ಒಳಗೆಲ್ಲ ಒಂದು ಸುತ್ತು ಸುತ್ತಿ, ಮದುಮಗ ಎಲ್ಲೆಂದು ವಿಚಾರಿಸಿ, ಆತ ಪಟ್ಟಣಕ್ಕೆ ಹೋಗಿದ್ದಾನೆಂದು ತಿಳಿದು ಮದ್ಯಾಹ್ನದ ಊಟವನ್ನು ಮಾಡಿ ಹಾಗೆಯೆ ಒಂದು ನಿದ್ರೆಗೆ ಜಾರುತ್ತಾನೆ.

ಸಂಜೆ ಕಣ್ಣು ತೆರೆದಾಗ ಸಮಯ ಐದಾಗಿದ್ದಿತು. ಎದ್ದು ರೆಡಿಯಾಗಿ ಹೊರಗೆ ಬಂದ ರಾಹುಲ್ ಗೆ ಮಲೆನಾಡಿನ ಘಮಘಮಿಸುವ ಕಾಫಿಯ ಕಪ್ಪು ಸಿಕ್ಕಿ ಕ್ಷಣಕಾಲ ಕಾಲವೇ ಮರೆತುಹೋದಂತಿತ್ತು. ಒಂದೆರೆಡು ಕೆಜಿಯಷ್ಟು ಕಾಫಿಪುಡಿಯನ್ನು ಮನೆಗೆ ತೆಗೆದುಕೊಂಡು ಹೋಗುವುದಾಗಿ ಕೇವಲ ಮೊಬೈಲ್ನ ಸದ್ದಿನಲ್ಲಿ ಪರಿಚಯವಿದ್ದ ಮದುಮಗನ ಅಮ್ಮನಿಗೆ ಹೇಳಿ ಮನೆಯಿಂದ ಹೊರಬಂದ. ಮದುವೆಯ ಮನೆಯ ಕೆಲವೇ ಜನರ ಸದ್ದಿನಲ್ಲಿ ತನ್ನ ಮನೆಯಿಂದ ಬಂದ ಹಲವು ಮಿಸ್ಡ್ ಕಾಲ್ ಗಳು ಆತನಿಗೆ ತಿಳಿಯಲೇ ಇಲ್ಲ. ಮನೆಯಿಂದ ಕೊಂಚ ದೂರಕ್ಕೆ ಬಂದು ಸುತ್ತಲೂ ಯಾವುದೇ ಹುಲಿಯಾಕಾರದ ನಾಯಿಗಳು ಇಲ್ಲವೆಂದು ಖಚಿತಪಡಿಸಿಕೊಂಡು ಮನೆಗೆ ಫೋನಾಯಿಸಿದ. ಅತ್ತ ಕಡೆಯಿಂದ ಅಮ್ಮ 'ಹಲೋ' ಎಂಬ ಸ್ವಾಗತಸೂಚಕವನ್ನೂ ಬಳಸದೆ ಒಂದೇ ಉಸಿರಿನಲ್ಲಿ ಕಳವಳಗೊಂಡಂತೆ ಮಾತುಗಳನ್ನು ಮುಂದುವರಿಸಿದಳು. ಆಕೆ ಇಂದು ಮದ್ಯಾಹ್ನ ಮಲಗಿದ್ದಾಗ ಏನೋ ಕೆಟ್ಟ ಕನಸ್ಸೊಂದು ಬಿದ್ದಂತಾಗಿ, ಅದರ ವರ್ಣನೆಯನ್ನೇನು ಅಷ್ಟಾಗಿ ಮಾಡದೆ, ರಾಹುಲ್ ಮದುವೆ ಮುಗಿಯುವವರೆಗೂ ಎಲ್ಲೂ ದೂರ ಸುತ್ತಲು ಹೋಗದಂತೆ ಹೇಳುತ್ತಾಳೆ. ಅಮ್ಮನನ್ನು ನೋಯಿಸಬಾರದು ಎಂದೆಣಿಸಿ 'ಸರಿ' ಎನ್ನುವ ಮೊದಲೇ ಆತನಿಗೆ ದೂರ ದೂರದ ಮಂಜು ಕವಿದಿದ್ದ ಬೆಟ್ಟಗಳು ಕೈ ಬೀಸಿ ಕರೆದಂತಾಗುತ್ತದೆ. ಒಂದೊಳ್ಳೆ ಟ್ರೆಕಿಂಗ್ ಮಾಡಿದರಾಯಿತು ಎಂದುಕೊಂಡು ಒಳಗೊಳಗೇ ಸಂತೋಷಪಟ್ಟುಕೊಂಡ. ಅಮ್ಮ ಇನ್ನೂ ಏನೋ ಹೇಳುತ್ತಿರುವಾಗಲೇ ಫೋನ್ ಇದ್ದಕ್ಕಿದಂತೆ ಕಟ್ ಆಯಿತು. ಫೋನನ್ನು ನೋಡಿದ ರಾಹುಲ್ ಬೆಳಗ್ಗೆ ಕಂಡಂತೆ ಒಂದಿನಿತು ಸಿಗ್ನಲ್ ಅದರಲ್ಲಿ ಕಾಣುವುದಿಲ್ಲ. ಆತ ನಿಜವಾಗಿಯೂ ಏನೋ ಫೋನಿನಲ್ಲಿ ತೊಂದರೆ ಇರಬಹುದೆಂದು ಊಹಿಸಿ ಮನೆಯ ಒಳಗೆ ಹೋಗಲು ತಿರುಗಿದನಷ್ಟೆ, ರಕ್ತವೆ ಸಿಡಿದು ಹೊರಬರುವಂತೆ ಕೆಂಪಾಗಿದ್ದ ಕಣ್ಣುಗಳನ್ನು ಹೊತ್ತಿಸಿ ಗುರ್ರ್ ಎನ್ನುತ್ತಾ ರಾಹುಲ್ನನ್ನೇ ನೋಡುತ್ತಾ ನಿಂತಿತ್ತು ಬೆಳಗ್ಗೆ ಕಂಡ ನಾಯಿಗಳೆಲ್ಲದಕ್ಕಿಂತ ದೊಡ್ಡದಾದ ನಾಯಿಯೊಂದು!

ಆದರೆ ರಾಹುಲ್ ಈ ಬಾರಿ ಹೆದರದೆ, ಇತರ ಯಾರನ್ನೂ ಸಹಾಯಕ್ಕೆ ಕರೆಯದೆ ನಾಯಿಯ ಕಣ್ಣಿನಲ್ಲಿ ಕಣ್ಣನ್ನಿಟ್ಟೆ ನೋಡಿದ. ಕೆಲಕಾಲ ಗುರ್ರೆಂದು ಸದ್ದು ಮಾಡುತ್ತಿದ್ದ ಆ ನಾಯಿ ಇದ್ದಕ್ಕಿದ್ದಂತೆ ತಣ್ಣಗಾಗಿ ಕಾಲಿನಿಂದ ಮಣ್ಣನು ಪರಪರನೆ ಕೆರೆಯುತ್ತ ಎತ್ತಲೋ ಮುಖ ಮಾಡಿ ಕೂಗತೊಡಗಿತು. ನಾಯಿಯೊಂದು ಅಷ್ಟೆಲ್ಲ ಅರಚಿದರೂ ಮನೆಯ ಯಾರೊಬ್ಬರೂ ಹೊರಗೆ ಬಾರಲಿಲ್ಲ. ನಾಯಿಯು ಮುಖ ಮಾಡಿ ಕೂಗುತ್ತಿದ್ದ ದಿಕ್ಕಿನೆಡೆ ಎತ್ತರವಾದ ಪರ್ವತವೊಂದು ಏಕಾಂತವಾಗಿ ನಿಂತಿದ್ದಿತು. ಮಧ್ಯಾಹ್ನದ ಮೇಲೆ ಮೋಡಗಳು ಒಂದಿಷ್ಟು ಚದರಿ ಸೂರ್ಯನ ತಿಳಿ ರಶ್ಮಿಗಳು ಕಾಣತೊಡಗುತ್ತಿರುತ್ತವೆ. ಇನ್ನು ಸೂರ್ಯಾಸ್ತವಾಗಲು ಒಂದು ತಾಸಿರುವಾಗ ಬೇಗನೆ ಹೋದರೆ ಆ ಬೆಟ್ಟದ ಮೇಲೆ ನಿಂತು ಆನಂದಿಸಬಹುದು ಎಂದೆಣಿಸಿ, ಅಲ್ಲದೆ ನಾಯಿಯು ಆಕಡೆಯೆ ತಿರುಗಿ ಕೂಗುತ್ತಿದ್ದರಿಂದ ಚಿತ್ರಗಳಲ್ಲಿ ತೋರಿಸುವಂತೆ ಏನೋ ಒಂದು ಪತ್ತೇದಾರಿ ವಿಷಯ ಅಲ್ಲಿರಬಹುದು ಎಂದು ತನ್ನಲ್ಲೇ ಅಂದು ಕೊಳ್ಳುತ್ತಾನೆ. ಧೈರ್ಯವೆಲ್ಲ ಒಟ್ಟುಗೂಡಿಸಿ ನಾಯಿಯ ಬಳಿಗೆ ನೆಡೆಯುತ್ತಾನೆ. ನಾಯಿ ತಾನು ಮೊಗ ಮಾಡಿ ಕೂಗುತ್ತಿದ್ದ ದಿಕ್ಕಿನಲ್ಲಿಯೇ ನೆಡೆಯುತ್ತದೆ. ರಾಹುಲ್ ಅದನ್ನು ಹಿಂಬಾಲಿಸುತ್ತಾನೆ. ಹೋಗುವ ಮುನ್ನ ನಾಯಿ ರಾಹುಲನ್ನು ಆತ ಕಡೆ ಬರಬಾರದೇನೋ ಎಂಬಂತೆ ನೆಲವನ್ನು ಪರಪರ ಕೆರೆಯುತ್ತಾ ಸೂಚನೆಯನ್ನು ನೀಡುತ್ತಿರುತ್ತದೆ. ಆದರ ಸೂಚನೆಯ ಅರಿವು ರಾಹುಲ್ಗೇನಾದರೂ ಆಗಿದ್ದಿದ್ದರೆ ಅಕ್ಷರ ಸಹ ಆತ ತಲೆ ಸುತ್ತಿ ಬಿದ್ದುಬಿಟ್ಟಿರುತ್ತಿದ್ದ! ಬೆಟ್ಟವನ್ನು ಏರುವ ಮುನ್ನ ಮನೆಯವರಿಗೆ ಒಂದು ಮಾತು ಹೇಳುವುದನ್ನೂ ಲಕ್ಷಿಸಿ ಜಿಗ್ಗು ಮುಳ್ಳುಗಳನ್ನು ಬಿಡಿಸಿಕೊಳ್ಳುತ್ತಾ ಆತ ಮುನ್ನೆಡೆದ. ಕೆಲ ಹೊತ್ತು ಸದ್ದು ಮಾಡದೇ ರಾಹುಲ್ನ ಮುಂದೆಯೇ ನೆಡೆದ ಆ ಹುಲಿಯಾಕಾರದ ನಾಯಿ ಒಮ್ಮೆಲೇ ‘ಕಯ್ಯಂಯೋ’ ಎಂದು ಸದ್ದು ಮಾಡುತ್ತಾ ಹಿಂದಕ್ಕೆ ಓಡುತ್ತಾ ಮರೆಯಾಯಿತು. ಯಾಕೋ ರಾಹುಲನಿಗೆ ಅಲ್ಲಿಂದಲೇ ವಾಪಸ್ಸು ಹೋಗುವ ಮನಸ್ಸಾದರೂ ಇನ್ನೇನು ಕೆಲವೇ ಹೆಜ್ಜೆಗಳ ಅಂತರದಲ್ಲಿದ್ದ ಬೆಟ್ಟದ ತಪ್ಪಲು ಆತನನ್ನು ಕೈ ಬೀಸಿ ಕರೆದಂತಾಯಿತು.

ರಾಹುಲ್ ಬೆಟ್ಟದ ತಪ್ಪಲನ್ನು ತಲುಪಿದಾಗ ಸೂರ್ಯದೇವ ಅಷ್ಟರಲ್ಲಾಗಲೇ ಕರಗಿ ಮರೆಯಾಗಿದ್ದನು. ಕೆಲನಿಮಿಷಗಳ ಕಾಲ ಅತ್ತಲೇ ನೋಡುತ್ತಾ ನಿಂತ ರಾಹುಲ್ ಇನ್ನೇನು ಎದ್ದು ಹೋರಡಬೇಕು ಎಂದು ಹಿಂತಿರುಗುವಾಗಲೇ ಕಣ್ಣೇ ಕಪ್ಪಾಗುವಂತಹ ಕತ್ತಲೆ ಕಾಡನ್ನು ಆವರಿಸಿರುತ್ತದೆ! ನಿಮಿಷಗಳ ಅಂತರದಲ್ಲಿಯೇ ಬದಲಾವಣೆಯಾದ ಪರಿಸರವನ್ನು ಕಂಡು ದಿಗ್ಬ್ರಾಂತನಾದ ಆತ ತಾನು ಏರಿ ಬಂದ ದಾರಿಯ ದಿಕ್ಕನ್ನು ನೆನಪಿಸಿಕೊಳ್ಳುತ್ತಾನೆ. ತನ್ನ ಕೈಗಳೇ ಕಾಣದಷ್ಟು ಕತ್ತಲೆಯ ಒಳಗೆ ಯಾವುದೊ ಒಂದು ಊಹೆಯ ಮೇಲೆ ಕೆಳಗಿಳಿಯುತ್ತಾ ಸಾಗುತ್ತಾನೆ. ಜೊತೆಗೆ ಅಲ್ಲಿಯವರೆಗು ಬೆಳಕನ್ನು ಸೂಸುತ್ತಿದ್ದ ಮೊಬೈಲ್ ಇದ್ದಕಿದಂತೆ ಸ್ವಿಚ್ ಆಫ್ ಆಗುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ಅದನ್ನು ಆನ್ ಮಾಡಲು ಆತನಿಗೆ ಆಗುವುದಿಲ್ಲ. ಮುಂದೇನು ಮಾಡಬೇಕೆಂದು ಅರಿಯದ ರಾಹುಲ್ ಆದದ್ದು ಆಗಲಿ ಎನುತ ಸಿಕ್ಕ ಸಿಕ್ಕ ಮರ ಜಿಗ್ಗುಗಳಿಗೆಲ್ಲ ಗುದ್ದಿಕೊಳ್ಳುತ್ತ ದಿಕ್ಕುಕೆಟ್ಟವನಂತೆ ನೆಡೆಯತೊಡಗುತ್ತಾನೆ. ಅದೆಷ್ಟೋ ಘಂಟೆಗಳ ಕಾಲ ನೆಡೆದ ಆತ ಕೊನೆಗೆ ತಾನು ದಾರಿ ತಪ್ಪಿದೆನೆಂದು ಮನಗಂಡ ಮೇಲೆ ಕೊಂಚ ಹೊತ್ತು ಸುಧಾರಿಸಿಕೊಳ್ಳಲು ಅಲ್ಲಿಯೇ ಕೂರುತ್ತಾನೆ. ಧಟ್ಟ ಆರಣ್ಯದ ಕಪ್ಪು ಬೆಳಕಿನಲ್ಲಿ ಎತ್ತ ಹೋಗಬೇಕೆಂದು ಆತನಿಗೆ ತೋಚುವುದಿಲ್ಲ. ಮುಂದೇನು ಮಾಡುವುದೆಂದು ತೋರದೆ, ಮೊಬೈಲ್ನನ್ನು ಒಂದೆರೆಡು ಬಾರಿ ಆನ್ ಮಾಡಲು ಪ್ರಯತ್ನಿಸಿ ಸಾಧ್ಯವಾಗದೆ ಅದನ್ನು ಶಪಿಸುತ್ತಾ ಕೂರುತ್ತಾನೆ.

ಒಂಡೆದೆರಡು ತಾಸು ಅಲ್ಲಿಯೇ ಕೂತ ನಂತರ ಇದ್ದಕ್ಕಿದಂತೆ ಯಾರೋ ಓಡುತ್ತಿರುವ ಸದ್ದನ್ನು ಕೇಳಿ ರಾಹುಲ್ ಚಕಿತನಾಗುತ್ತಾನೆ. ಸದ್ದನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ಆತನಿಗೆ ಆ ಹೆಜ್ಜೆಗಳ ಸದ್ದು ತನ್ನೆಡೆಯೆ ಬರುತ್ತಿದ್ದೆ ಎಂಬುದರ ಅನುಭವವಾಗುತ್ತದೆ. ಸದ್ದು ಹತ್ತಿರವಾದಂತೆ ತಾನು ಕೂತಿದ್ದ ನೆಲವೇ ನಡುಗುತ್ತಿದ್ದ ಅನುಭವ! ಈ ಭಯಾನಕ ಓಟ ಯಾವುದೇ ಆನೆಯಾಕಾರದ ಜೀವಿಯಿಂದ ಮಾತ್ರ ಸಾಧ್ಯ. ಆದರೆ ಅದರ ಪ್ರತಿ ಹೆಜ್ಜೆಯ ನಡುವಿನ ಅಂತರ ಹಾಗು ವೇಗ ಅದು ನಾಲ್ಕು ಕಾಲಿನ ಜೀವಿಯೊಂದಕ್ಕೆ ಹೋಲಿಕೆಯಾಗುತ್ತಲೇ ಇಲ್ಲ! ರಾಹುಲ್ ತಾನು ನಿಂತಲ್ಲಿಂದ ಎದ್ದು ನಿಲ್ಲುತ್ತಾನೆ. ಅಲ್ಲಿಯವರೆಗು ಓಡೋಡಿ ಬರುತ್ತಿದ್ದ ಆ ಹೆಜ್ಜೆಗಳ ಸದ್ದು ಒಮ್ಮೆಲೆ ನಿಧಾನಗೊಳ್ಳುತ್ತದೆ. ಮಳೆಯ ದಿನಗಳಾದರಿಂದ ಒಣಗಿದ ದರಗುಗಳು ಅಷ್ಟೇನೂ ಇಲ್ಲದಿದ್ದರೂ ಹೆಜ್ಜೆಯ ಸಪ್ಪಳ ಸ್ಪಷ್ಟವಾಗಿ ಆತನಿಗೆ ಕೇಳುತ್ತಿರುತ್ತದೆ. ಹೆಜ್ಜ್ಜೆಗಳ ಸದ್ದು ಹತ್ತಿರವಾಗುತ್ತವೆ. ರಾಹುಲ್ ನಿಧಾನವಾಗಿ ಹೆಜ್ಜೆಗಳನ್ನು ಹಿಂದಿಡತೊಡಗುತ್ತಾನೆ. ಕೂಡಲೇ ಆತನಿಗೆ ಯಾರೋ ತನ್ನಿಂದೆ ನಿಂತಿದ್ದಾರೆ ಎಂದೆನಿಸಿ ಹಿಂದಿರುದಿದ್ದರೆ ಕೆಲವು ಹೊತ್ತಿನ ಮುಂಚೆಯಷ್ಟೇ ತನಗೆ ಎದುರಾಗಿದ್ದ ದೈತ್ಯ ನಾಯಿ ಗರಬಡಿದಂತೆ ಅಲ್ಲಿ ನಿಂತಿರುತ್ತದೆ! ರಾಹುಲ್ಗೆ ಎದೆ ಸಿಡಿದಂತ ಅನುಭವವಾಗುತ್ತದೆ. ತನ್ನ ಕಿವಿಗಳಿಗೆ ಕೇಳಿಸುವಂತಹ ಎದೆಬಡಿತ ಅದಾಗಿರುತ್ತದೆ. ತನ್ನ ಹಿಂದೆಯೇ ನಿಂತತ್ತಿಂದ ಆ ನಾಯಿ ನಿಧಾನವಾಗಿ ರಾಹುಲ್ನ ಮುಂಬದಿಗೆ ಬಂದು ಆ ಭಯಂಕರ ಸದ್ದು ಬರುತ್ತಿದ್ದ ಕಡೆ ಮುಖ ಮಾಡಿ ನಿಲ್ಲುತ್ತದೆ. ಅಲ್ಲಿಯವರೆಗೂ ಮುಂದಡಿಯಿಟ್ಟು ಬರುತ್ತಿದ್ದ ಆ ಸದ್ದು ನಾಯಿಯನ್ನು ಕಂಡು ಒಮ್ಮೆಲೇ ನಿಂತುಬಿಡುತ್ತದೆ. ನೋಡ ನೋಡುತ್ತಿದಂತೆ ಬೆಳಗ್ಗೆ ಕಂಡ ನಾಯಿಗಳ ಗುಂಪು ಆ ಕತ್ತಲೆಯ ಹುತ್ತದಿಂದ ಒಂದೊಂದಾಗಿಯೇ ವೃತ್ತಾಕಾರದಲ್ಲಿ ಬಂದು ನಿಲ್ಲುತ್ತವೆ. ಅವುಗಳ ಕಣ್ಣು ಆ ಘಾಡ ಕತ್ತಲೆಯಲ್ಲೂ ಕೆಂಪಗೆ ಹೊಳೆಯುತ್ತಿರುವಂತೆ ರಾಹುಲ್ನಿಗೆ ಭಾಸವಾಗುತ್ತದೆ. ಅವುಗಳು ಸುತ್ತುವರೆದ ಮದ್ಯದಲ್ಲಿ ಯಾರೋ ನಿಂತಿರುವಂತೆ ಕಾಣುತ್ತದೆ. ಆದರೆ ಯಾರು ಇಲ್ಲ! ಅದೆಷ್ಟೇ ಘಟ್ಟಿ ಮನಸ್ಸಿನವನಾದರೂ ರಾಹುಲ್ ಆ ಕ್ಷಣ ಮಾತ್ರ ಅಕ್ಷರ ಸಹ ನಡುಗತೊಡಗುತ್ತಾನೆ. ತನ್ನ ಮುಂದಿದ್ದ ನಾಯಿ ಆ ಅದೃಶ್ಯ ಆಕಾರದೆಡೆ ಮುಖಮಾಡಿ ನೆಲವೇ ಅದುರುವಂತೆ ಕೂಗುತ್ತದೆ. ಆ ಕೂಗು ಕಾಡಿಗೆ ಕಾಡೇ ಬೆಚ್ಚಿ ಬೀಳುವಂತಿರುತ್ತದೆ.

ರಾಹುಲ್ನಿಗೆ ಗಟ್ಟಿಯಾಗಿ ಉಸಿರಾಡಲೂ ಧೈರ್ಯ ಸಾಲುವುದಿಲ್ಲ. ತನ್ನ ರಕ್ಷಕನಂತೆ ನಿಂತಿದ್ದ ಆವೊಂದು ನಾಯಿಯಿರದಿದ್ದರೆ ಏನಾಗುತ್ತಿತೋ ಎಂದನಿಸುತ್ತದೆ. ಆ ಕೊರೆಯುವ ಚಳಿಯಲ್ಲೂ ಬಟ್ಟೆಯಲ್ಲ ಒದ್ದೆಯಾಗುವಂತೆ ಆತ ಬೆವತಿರುತ್ತಾನೆ. ಒಮ್ಮೆ ಜೋರಾಗಿ ಕೂಗಿಕೊಳ್ಳಲೂ ಆತನಿಗೆ ಆಗುತ್ತಿಲ್ಲ. ಎಷ್ಟೇ ಶತಪ್ರಯತ್ನ ಮಾಡಿದರೂ ಅದು ಸಾಧ್ಯವಾಗುತ್ತಿಲ್ಲ. ಕೂಡಲೇ ತನ್ನ ಮುಂದಿದ್ದ ಆ ನಾಯಿ ಕಾಲುಗಳಿಂದ ನೆಲವನ್ನು ಪರಪರನೆ ಕೆರೆದು ಕುತ್ತಿಗೆಯ ಜುಟ್ಟನು ನಿಮಿರಿಸಿ ಆ ಅದೃಶ್ಯ ಆಕಾರವನ್ನು ಸುತ್ತುವರೆದಿದ್ದ ನಾಯಿಗಳ ಕಡೆ ಬೌಗುಡುತ್ತ ನೆಗೆಯುತ್ತದೆ. ಇದಕ್ಕಿದಂತೆ ಚದುರಿದ ಆ ಗುಂಪು ಸಿಕ್ಕ ಸಿಕ್ಕ ಕಡೆ ಓಡಿ ಮರೆಯಾಗುತ್ತದೆ. ನಾಯಿಗಳ ಗುಂಪು ಕಾಣೆಯಾದ ನಂತರ ತುಸು ಹೊತ್ತು ಅಲ್ಲಿಯೇ ನಿಂತಿದ್ದ ಆ ದೊಡ್ಡ ನಾಯಿ ನಿಧಾನವಾಗಿ ತನ್ನ ಬಲಕ್ಕೆ ತಿರುಗಿ ಇಳಿಯತೊಡಗುತ್ತದೆ. ರಾಹುಲ್ ಆ ನಾಯಿಯನ್ನೇ ಹಿಂಬಾಲಿಸುತ್ತಾನೆ. ಹೀಗೆ ಆ ನಾಯಿಯ ಹಿಂದೆ ಸಾಗುತ್ತ ಒಂದತ್ತು ನಿಮಿಷವಾಗಿರಬಹುದು ಅಷ್ಟೇ. ಇದ್ದಕ್ಕಿದಂತೆ ಬೆಟ್ಟದ ಮೇಲಿನಿಂದ ಆ ದೈತ್ಯ ಸದ್ದು ತನ್ನೆಲ್ಲ ಶಕ್ತಿಯನ್ನು ಬಳಸಿ ಓಡಿ ಬಂದಂತಹ ಸದ್ದು ರಾಹುಲ್ನಿಗೆ ಕೇಳಿಸುತ್ತದೆ. ಶ್ವಾಸಕೋಶಗಳೇ ಕಕ್ಕಿ ಹೊರಗೆ ಬರುವೆವೋ ಎಂಬಂತಹ ಎದುಸಿರು, ಅದರೊಟ್ಟಿಗೆ ಕೈಬಳೆ ಹಾಗು ಕಾಲ್ಗೆಜ್ಜೆಯ ನಾದವೂ ಮೂಡತೊಡಗಿರುತ್ತದೆ! ಕೆಲನಿಮಿಷಗಳ ಮೊದಲೇ ಅಷ್ಟೂ ನಾಯಿಗಳನ್ನು ಹಿಮ್ಮೆಟ್ಟಿಸಿದ್ದ ನಾಯಿ ಕುಯ್ ಗುಡುತ್ತಾ ಪುನ್ಹ ಎತ್ತಲೋ ಓಡತೊಡಗುತ್ತದೆ. ರಾಹುಲ್ ಸಹ ಆ ನಾಯಿಯು ಓಡಿದ ದಿಕ್ಕಿನಲ್ಲೇ ಓಡತೊಡಗುತ್ತಾನೆ. ಓಟದ ರಭಸಕ್ಕೆ ಕಲ್ಲು ಮುಳ್ಳುಗಳು ತರಚಿ ಆತನ ಕೈ ಕಾಲುಗಳೆಲ್ಲ ರಕ್ತ ಮಾಯವಾಗುತ್ತದೆ. ಆದರೆ ಓಡುವುದ ಮಾತ್ರ ಆತ ನಿಲ್ಲಿಸಲಿಲ್ಲ. ಒಂದೆರೆಡು ಬಾರಿ ಹಾದಿಯಲ್ಲಿ ಸಿಕ್ಕ ಸಣ್ಣಪುಟ್ಟ ಗುಂಡಿಯೊಳಕ್ಕೂ ಕಾಲಿಟ್ಟು ನಾಲ್ಕೈದು ಸುತ್ತು ಉರುಳಿ ಬಿದ್ದರೂ ಗಮನಿಸದೆ, ದೇವರ ನಾಮಗಳನ್ನು ಜಪಿಸುತ್ತಾ ರಾಹುಲ್ ಓಡತೊಡಗುತ್ತಾನೆ.ರಾಹುಲ್ನ ಮೈಯ ರೋಮುಗಳೆಲ್ಲ ವಿದ್ಯುತ್ತ್ ಹರಿದಂತೆ ನಿಮಿರಿ ನಿಂತಿದ್ದವು.

ಒಳದಾರಿಗಳಲ್ಲಿ ಕಳ್ಳರಂತೆ ಓಡುತ್ತಾ ಸಾಗಿದ ನಾಯಿ ಕೊನೆಗೂ ಬಲ್ಬು ಲೈಟುಗಳಿಂದ ಕೂಡಿದ ಊರೊಂದಕ್ಕೆ ರಾಹುಲ್ ನನ್ನು ತಂದು ನಿಲ್ಲಿಸುತ್ತದೆ. ಆದರೂ ಹಿಂದುರಿಗಿ ನೋಡಲು ಆತನಿಗೆ ಧೈರ್ಯ ಸಾಲುತ್ತಿರಲಿಲ್ಲ. ತಾನು ಓಡುತ್ತಾ ಬಂದು ನಿಂತ ಆ ಊರು ತುಸು ದೊಡ್ಡದಾಗಿಯೇ ಇರುತ್ತದೆ. ಬೀದಿ ದೀಪಗಳು, ಅಂಗಡಿ ಮುಂಗಟ್ಟುಗಳು ಅಲ್ಲಲಿ ಕಾಣಸಿಗುತ್ತವೆ. ಆದರೆ ಯಾವೊಬ್ಬ ನರಪಿಳ್ಳೆಯೂ ಅಲ್ಲಿ ಕಾಣಸಿಗುವುದಿಲ್ಲ. ಆದರೆ ಅಲ್ಲಿಯವರೆಗೂ ತನ್ನ ಮುಂದಿದ್ದ ಆ ನಾಯಿ ಮಾತ್ರ ಕಣ್ಮರೆಯಾಗಿರುತ್ತದೆ! ನಾಯಿಯ ಬಗ್ಗೆ ಹೆಚ್ಚಾಗಿ ಚಿಂತಿಸದೆ ನಿಧಾನವಾಗಿ ಆ ಜನನಿಬಿಡ ರಸ್ತೆಯಲ್ಲಿ ಚಲಿಸುತ್ತಿರುವಾಗ ಹಿಂದಿನಿಂದ ಯಾರೋ ಬಂದು ರಾಹುಲ್ನ ಹೆಗಲನ್ನು ಅದುಮಿ ಹಿಡಿದಂತಾಗುತ್ತದೆ.

ರಾಹುಲ್ ತನ್ನ ಧೈರ್ಯವನ್ನೆಲ್ಲ ಬಳಸಿ ಹಿಂದುರಿಗಿ ನೋಡುತ್ತಾನೆ. ಆ ಹೊಸ ಊರಿನಲ್ಲಿ ಅಪರಾಹ್ನ ನಾಯಿಗಳಿಂದ ರಕ್ಷಿಸಿದ್ದ ಮಧುಮಗನ ಸಂಬಂಧಿ 'ಹಾಯ್, ನೀವು ರಾಹುಲ್ ಅಲ್ವ?' ಎಂದು ಕೇಳುತ್ತಾನೆ. ಆತನ ಪ್ರೆಶ್ನೆಯಲ್ಲಿ ಮೊದಲ ಬಾರಿಯ ಸಂಭಾಷಣೆಯ ನಯ ವಿನಯ ಅಡಗಿದಂತಿರುತ್ತದೆ. ಕೆಲ ಘಂಟೆಗಳ ಹಿಂದಷ್ಟೇ ಸಿಕ್ಕ ಆ ವ್ಯಕ್ತಿ ಮತ್ತೊಮ್ಮೆ ಏಕೆ ತನ್ನನು ಹೊಸಬನಂತೆ ಕಾಣುತ್ತಿದ್ದಾನೆ ಎಂದು ರಾಹುಲ್ನಿಗೆ ದಿಗ್ಬ್ರಮೆಯಾಗುತ್ತದೆ. ಅಲ್ಲದೆ ಆತ ಇಷ್ಟು ರಾತ್ರಿಯಲ್ಲಿ ಈ ಊರಿನಲ್ಲಿ ಏನು ಮಾಡುತ್ತಿದ್ದಾನೆ ಎಂಬುದರ ಮೇಲೂ ಸಂಶಯ ಮೂಡುತ್ತದೆ. ಆತ ಮಾತು ಮುಂದುವರೆಸುತ್ತಾ 'ಎಲ್ಲಿ ಸಾರ್ ನೀವು, ನೆನ್ನೆಯಿಂದ ನಿಮ್ಮ್ ನಂಬರ್ ಗೆ ಕಾಲ್ ಮಾಡಿ ಮಾಡಿ ಸಾಕಾಯಿತು. ಹೊಸ ಊರು, ಹೊಸ ದಾರಿ.. ಎಲ್ಲ್ ಕಳೆದೋದ್ರು ಅಂತ ನಾನು ನಿಮ್ಮನ್ನ ಹುಡುಕೊಂಡು ಹೊರಟೆ, ಇಲ್ಲೇ ಸಿಕ್ಕಿದ್ರಿ ನೋಡಿ' ಎನ್ನುತ್ತಾ ಕೈ ಕುಲುಕಲು ಮುನ್ನುಗ್ಗುತ್ತಾನೆ. ರಾಹುಲ್ನ ರಕ್ತ ಮಯ ಕೈ ಹಾಗು ಕಾಲುಗಳನ್ನು ಕಂಡು ಹೆಚ್ಚೇನು ಚಕಿತನಾಗದೇ ಮುಗುಳ್ನಗೆಯ ನೋಟವನು ಆತ ಬೀರುತ್ತಾನೆ.

ರಾಹುಲ್ನಿಗೆ ಒಂದು ಕ್ಷಣಕ್ಕೆ ನಿಂತ ನೆಲವೇ ಕುಸಿದಂತ ಅನುಭವ. ತಾನು ಮಧ್ಯಾಹ್ನ ಮಾತಾಡಿಸಿದ್ದ ವ್ಯಕ್ತಿ ಇವನೆಯೇ. ಕಿಂಚಿತ್ತೂ ವ್ಯತಾಸವಿಲ್ಲ. ಆದರೂ ಧೈರ್ಯ ಮಾಡಿ ಆತನ್ನಲ್ಲಿ ಹೇಳಿಯೇ ಬಿಡುತ್ತಾನೆ. ತಾನು ಬಸ್ಸಿನಿಂದ ಇಳಿದು ಮದುಮಗನ ಮನೆಗೆ ಹೊರಟಿದ್ದು, ಅಲ್ಲಿನ ಆ ವಿಚಿತ್ರ ನಾಯಿಗಳ ಕಾಟ, ತಾನು ಪಕ್ಕದಲ್ಲಿದ್ದ ಬೆಟ್ಟಕ್ಕೆ ಹತ್ತಿದ್ದು, ಮೊಬೈಲ್ ಇದ್ದಕ್ಕಿಂತೆ ಆಫ್ ಆದದ್ದು, ಕೊನೆಗೆ ನಾಯಿಗಳಲ್ಲೊಂದು ತನಗೆ ದಾರಿ ತೋರಿಸಿದ್ದು, ನಂತರ ಒಂದು ಅದೃಶ್ಯ ದೈತ್ಯ ಹೆಜ್ಜೆ ತನ್ನನ್ನು ಅಟ್ಟಿಸಿಕೊಂಡು ಬಂದಿದ್ದು ಇವೆಲ್ಲವನ್ನು ಹೇಳುವಷ್ಟರಲ್ಲೇ ಆ ವ್ಯಕ್ತಿ ತರ ತರನೇ ನಡುಗಲು ಶುರುವಿಟ್ಟುಕೊಂಡಿರುತ್ತಾನೆ. ಅಳುವ ಸ್ವರದಲ್ಲಿ 'ಸಾರ್, ನೀವು ಹೋಗಿದ್ದು ಒಂಟಿ ಬೆಟ್ಟದ್ ಪಕ್ಕದಲ್ಲಿರೋ ಹಾಳ್ ಸ್ಮಶಾನದ ಜಾಗಕ್ಕೆ ಸಾರ್! ಊರಿಗೆ ಬರೋ ಹೊಸ ಜನ್ರನ್ನ ದಾರಿ ದಾರಿ ತಪ್ಪಸ್ತಾಳೆ ಸಾರ್ ಅವ್ಳು! ಆಗ್ಲೇ ಹತ್ತಾರು ಜನಾನ ಬಲಿ ತಗೊಂಡಿದ್ದಾಳೆ ಸಾರ್.. ಅಯ್ಯೋ, ನೀವ್ ಯಾಕ್ ಸಾರ್ ಆಕಡೆ ಹೋದ್ರಿ' ಎನ್ನುತ್ತಾ ರೋಧಿಸತೊಡಗುತ್ತಾನೆ ಆತ. ಆದರೆ ತಾನು ಬಸ್ಸಿಳಿದು ಓದ ದಿಕ್ಕಿನಲ್ಲಿ ಸವೆದ ದಾರಿಯಿದ್ದು, ಮೂರ್ನಾಲ್ಕು ಮನೆಗಳು ಇದ್ವಲ್ಲ, ನಿಮ್ಮನ್ನೂ ಆ ಮೆನೇಲಿ ನೋಡಿದ್ನರಿ, ಎನ್ನುತ್ತಾನೆ ರಾಹುಲ್. ಆಗ ಆ ವ್ಯಕ್ತಿಯಿಂದ ಬಂದ ಉತ್ತರವನ್ನು ಕೇಳಿ ರಾಹುಲನಿಗೆ ತಲೆ ಸುತ್ತು ಬರುವಂತಾಗುತ್ತದೆ. ಏಕೆಂದರೆ ಆತ ಮಧ್ಯಾಹ್ನದಿಂದ ಸಂಜೆಯವರೆಗೂ ಮಲಗೆದ್ದು ಬಂದ ಜಾಗದಲ್ಲಿ ಯಾವುದೇ ಮನೆಗಳಿರದೆ ಅಲ್ಲಿದ್ದದ್ದು ನಾಲ್ಕೈದು ಹಾಳುಬಿದ್ದ ಘೋರಿಗಳಾಗಿರುತ್ತವೆ!!

ಸ್ವಿಚ್ ಆಫ್ ಆಗಿದ್ದ ಫೋನು ಕೂಡಲೇ ಟ್ಯೂಬ್ ಲೈಟಿನಂತೆ ಮಿನುಗತೊಡಗುತ್ತದೆ. ಇನ್ನೇನು ಆನ್ ಆಯಿತು ಎನ್ನುವಷ್ಟರಲ್ಲಿ ಜೀವವೇ ಕಳೆದುಕೊಂಡಂತೆ ಒಂದೇ ಕ್ಷಣದಲ್ಲಿ ಪುನಃ ಆಫ್ ಆಗಿ ಬಿಡುತ್ತದೆ! ಶಾಂತವಾಗಿದ್ದ ಜಾಗದಲ್ಲಿ ಇದ್ದಕಿದಂತೆ ವಿಪರೀತ ಗಾಳಿ! ಮಧುಮಗನ ಸಂಬಂಧಿ ಇನ್ನು ಇಲ್ಲಿ ನಿಲ್ಲುವುದು ಬೇಡವೆಂದು ಆಗೋ ಅಲ್ಲಿ ಮಧುಮಗನ ಮನೆ ಕಾಣುತ್ತಿದೆಯೆಂದು ಚಪ್ಪರ ಕಟ್ಟಿದ್ದ ಮನೆಯನ್ನು ತೋರಿಸುತ್ತಾ, ಮನೆಯವರೆಲ್ಲ ನಿನ್ನೆಯಿಂದ ಚಿಂತಾಗ್ರಸ್ತರಾಗಿ ಕಾಯುತ್ತಿದ್ದಾರೆ ಎನ್ನುತ್ತಾ ಬೇಗನೆ ಆತ್ತ ಕಡೆ ನೆಡೆಯಲು ಹೇಳುತ್ತಾನೆ. ತನ್ನ ಕಿವಿಗಳೆ ನಂಬಲಾಗದಂತಹ ಸುದ್ದಿಯನ್ನು ಕೇಳಿ ಅಕ್ಷರ ಸಹ ಹೆದರಿ ಹೈರಾಣಾಗಿದ್ದ ರಾಹುಲ್ ಆ ವ್ಯಕ್ತಿಗಿಂತ ಮೊದಲೇ ಮಧುಮಗನ ಮನೆಯೆಡೆ ಧಾವಿಸುತ್ತಾನೆ.

ಮನೆಯ ಕಡೆಗೆ ಧಾವಿಸುತ್ತಿದ್ದ ರಾಹುಲ್ ಆ ಭಯಾನಕ ಘಳಿಗೆಯಲ್ಲಿಯೂ ತನ್ನ ಹಿಂದೆ ಬರುತ್ತಿದ್ದ ವ್ಯಕ್ತಿಯ ಹೆಸರೇನೆಂದು ಕೇಳಬಯಸುತ್ತಾನೆ. ಅದಕ್ಕೆ ಮರುತ್ತರವಾಗಿ ಕೀರಲು ಧ್ವನಿಯಲ್ಲಿ ರೋಧಿಸಿದ ಸದ್ದು ಹಿಂದಿನಿಂದ ಬರಲು ರಾಹುಲ್ ಅತ್ತ ಕಡೆ ತಿರುಗುತ್ತಾನಷ್ಟೆ, ಮತ್ತೊಮ್ಮೆ ಸಿಡಿಲು ಬಡಿದಂತಹ ಅನುಭವ ಆತನಿಗೆ! ಅಲ್ಲಿಯವರೆಗೂ ತನ್ನ ಬಳಿ ಮಾತಾಡುತ್ತಿದ್ದ ವ್ಯಕ್ತಿಯ ದೇಹ ಪೂರ್ತಿಯಾಗಿ ತಾನು ಇಳಿದು ಬಂದ ಬೆಟ್ಟದ ಕಡೆಗೆ ತಿರುಗಿರುತ್ತದೆ, ಆದರೆ ರುಂಡ ಮಾತ್ರ ರಾಹುಲ್ನನ್ನೇ ದುರುಗುಟ್ಟು ನೋಡುತ್ತಿರುತ್ತದೆ!! 'ಓ..ಡಿ.. ಓಡಿ' ಎನ್ನುತ್ತಾ ಕರ್ಕಶ ಸ್ವರದಿಂದ ಅರಚುತ್ತಿದ್ದ ಆತನನ್ನು ಕಂಡು ಮತಿ ಕೆಟ್ಟವರಂತೆ ರಾಹುಲ್ ಚೀರುತ್ತಾ ಹೆಜ್ಜೆಯನ್ನು ಹಿಂದಿಡತೊಡಗುತ್ತಾನೆ. ನೋಡ ನೋಡುತ್ತಲೇ ಆ ವ್ಯಕ್ತಿಯ ಕಾಲನ್ನು ಯಾರೋ ಹಿಡಿದೆಳೆಯುತ್ತಾರೆ! ಆದರೆ ಯಾರೆಂದು ಎಷ್ಟೇ ಪ್ರಯತ್ನಪಟ್ಟರೂ ಕಾಣುವುದಿಲ್ಲ, ಕಾಲ್ಗೆಜ್ಜೆ, ಕೈಬಳೆ ಹಾಗು ಏದುಸಿರಿನ ಸದ್ದನ್ನು ಬಿಟ್ಟು. ಆ ಎಳೆತದ ರಭಸಕ್ಕೆ ಆ ವ್ಯಕ್ತಿ ಜೋರಾಗಿ ನರಳುತ್ತಾ ಕೆಳಗೆ ಬೀಳುತ್ತಾನೆ. ಆತನ ನರಳುವಿಕೆಯಲ್ಲಿ ಹೆಣ್ಣು ಧ್ವನಿಯೊಂದೂ ಮಿಶ್ರಣಗೊಂಡಿರುವುದು ಕೊಂಚ ಗಮನವಿಟ್ಟು ಆಲಿಸಿದ್ದರೆ ಕೇಳುತಿತ್ತು. ಆ ಅದೃಶ್ಯ ಆಕಾರ ಆತನನ್ನು ದರದರನೆ ಕಾಡಿನೊಳಗೆ ಎಳೆದುಕೊಂಡು ಹೋಗಿ ಮರೆಯಾಗುತ್ತದೆ. ನರಳುವಿಕೆಯ ಸದ್ದು ಮಾತ್ರ ಬಹು ಸಮಯದವರೆಗೂ ಮಾರ್ದನಿಸುತ್ತಲೇ ಇರುತ್ತದೆ.



ರಾಹುಲ್ ಒಂದೇ ಉಸಿರಿನಲ್ಲಿ ಮದುಮಗನ ಮನೆಯ ಕಡೆ ಓಡುತ್ತಾನೆ. ರಾಹುಲ್ನನ್ನು ಕಂಡು ಮನೆಯವರಿಗೆಲ್ಲ ಸಂತೋಷ ಹಾಗು ಭಯ ಒಟ್ಟೊಟ್ಟಿಗೆ. ರಾಹುಲ್ ಕೊಂಚ ಸಮಯ ಸುಧಾರಿಸಿಕೊಂಡ ಮೇಲೆ ಬೆಳಗಿನಿಂದ ನೆಡೆದ ಒಂದೊಂದೇ ವಿಷಯವನ್ನು ಹೇಳಿ ಕೊನೆಗೆ ನನ್ನ ಕಣ್ಣ ಮುಂದೆಯೇ ನಿಮ್ಮ ಸಂಭಂದಿ ಯುವಕನನ್ನು ಆ ಅದೃಶ್ಯ ಭೀಭತ್ಯ ಆಕಾರ ಎಳೆದುಕೊಂಡು ಹೋಗಿ ಗುಡ್ಡದಲ್ಲಿ ಮರೆಯಾಯಿತು ಎನ್ನುತ್ತಾ ಅಕ್ಷರ ಸಹ ಸಣ್ಣ ಮಕ್ಕಳಂತೆ ಅಳಲು ಶುರುವಿಡುತ್ತಾನೆ. ಕೊಂಚ ಹೊತ್ತು ಸಾವಧಾನವಾಗಿ ಆಲಿಸಿದ ಮನೆಯವರು ಕೊನೆಗೆ ರಾಹುಲ್ನನ್ನು ಸಮಾಧಾನ ಪಡಿಸುತ್ತಾ ಮನೆಯ ಒಂದು ಮೂಲೆಯಲ್ಲಿ ಹಾರವನ್ನಾಕಿ ನೇತಾಕಿದ್ದ ವ್ಯಕ್ತಿಯ ಫೋಟೋವನ್ನು ತೋರಿಸುತ್ತಾರೆ. ರಾಹುಲ್ ತಾನಿದ್ದಲ್ಲಿಂದ ಎದ್ದು ಆ ಫೋಟೋದ ಬಳಿ ಹೋಗಿ ನೋಡಿದರೆ ಅದು ತಾನು ಸ್ವಲ್ಪ ಹೊತ್ತು ಮುಂಚೆ ಕಂಡ ವ್ಯಕ್ತಿಯ ಫೋಟೋವೇ ಆಗಿರುತ್ತದೆ!! ಆಗ ಮೆನೆಯವರಲ್ಲೊಬ್ಬರು ಆತ ಮದುಮಗನ ಸೋಧರ ಸಂಬಂಧಿಯೆಂದೂ ಆತ ಕಾಲವಾಗಿ ಅದಾಗಲೇ ಒಂದು ತಿಂಗಳಾಗಿದೆ ಎಂದು ತಿಳಿಸುತ್ತಾರೆ!! ಅಲ್ಲದೆ ಆತ ಹೀಗೆ ದಾರಿ ತಪ್ಪಿದ ಅನೇಕರನ್ನು ನಾಯಿಯ ರೂಪದಲ್ಲಿ ಅಥವಾ ಮತ್ಯಾವುದೋ ರೂಪದಲ್ಲಿ ಬಂದು ರಕ್ಷಿಸುತ್ತಾನೆ ಎಂದು ತಿಳಿಸುತ್ತಾರೆ. ರಾಹುಲ್ ಮುಂದೇನನ್ನೂ ಕೇಳಲು ಅಥವ ಹೇಳುವ ಸ್ಥಿತಿಯಲ್ಲಿರುವುದಿಲ್ಲ. ಯಾವುದೇ ಭಾವವೂ ಆತನಿಂದ ಆ ಕ್ಷಣದಲ್ಲಿ ಹೊರಹೊಮ್ಮುವುದಿಲ್ಲ. ಅಲ್ಲಿಯವರೆಗೂ ತನ್ನ ಗೆಳೆಯನ ಸುಳಿವು ಕಾಣದೆ ಆತ ಎಲ್ಲಿ ಎನ್ನುತ್ತಾ ಮೆತ್ತಗೆ ನೆರೆದಿದ್ದವರನ್ನು ಕೇಳುತ್ತಾನೆ. ಯಾರೊಬ್ಬರೂ ಏನನ್ನು ಹೇಳುವುದಿಲ್ಲ. ಅಲ್ಲಿಯವರೆಗೂ ಗಿಜಿ ಗಿಜಿ ಗುಟ್ಟುತ್ತಿದ್ದ ಆ ಗುಂಪು ಕೂಡಲೇ ಘಾಡ ಮೌನದಲ್ಲಿ ಲೀನವಾಗುತ್ತದೆ. ರಾಹುಲ್ ಮತ್ತೊಮ್ಮೆ ತನ್ನ ಗೆಳೆಯ ಎಲ್ಲಿದ್ದಾನೆ ಎಂದು ಜೋರಾಗಿ ಕೇಳುತ್ತಾನೆ. ಯಾರೊಬ್ಬರಿಂದಲೂ ಯಾವುದೇ ಬಗೆಯ ಪ್ರತಿಕ್ರಿಯೆ ವ್ಯಕ್ತವಾಗುವುದಿಲ್ಲ. ಬದಲಾಗಿ ಅಲ್ಲಿದ್ದ ಒಂದಿಷ್ಟು ಹೆಂಗಸರ ಕೂದಲುಗಳು ತನಗೆ ತಾವೇ ಬಿಚ್ಚಿಕೊಂಡು ಮುಖವನ್ನು ಆವರಿಸಿಕೊಳ್ಳುತ್ತವೆ!! ಒಂದೆರೆಡು ಗಂಡಸರು ತಮ್ಮ ಮೈಯ್ಯ ಮೇಲಿನ ವಸ್ತ್ರವನ್ನೆಲ್ಲ ಕಳಚಿ ಜೋರಾದ ಕೀಚಲು ಧ್ವನಿಯನ್ನು ಸೂಸುತ್ತಾ ಮನೆಯಿಂದ ಹೊರಗೋಡಿ ಕತ್ತಲೆಯಲ್ಲಿ ಮರೆಯಾಗುತ್ತಾರೆ! ಅಷ್ಟೂ ಹೆಂಗಸರುಗಳು ತನ್ನ ಕಾಲನ್ನು ನೆಲಕ್ಕೆ ಗುದ್ದುತ್ತ ತಮ್ಮ ಕೆಂಪಾದ ಕಣ್ಣುಗಳಿಂದ ರಾಹುಲ್ನನ್ನು ದುರುಗುಟ್ಟು ನೋಡುತ್ತಾ ಸುತ್ತುವರೆಯುತ್ತಾರೆ...

ರಾಹುಲ್ 'ಬೇಡ,..ಬೇಡ' ಎನ್ನುತ್ತಾ ವಿಲ ವಿಲ ಒದ್ದಾಡ ತೊಡಗುತ್ತಾನೆ. ಚಳಿಗೆ ಒದೆದುಕೊಂಡಿದ್ದ ಓದಿಕೆ ಮಂಚದಿಂದ ಕೆಳಗೆ ಬಿದ್ದಿರುತ್ತದೆ. ಮೈಯೆಲ್ಲಾ ಬೆವರುಮಯ! ಮದ್ಯಾಹ್ನ ಕೊಂಚ ವಿಶ್ರಾಂತಿಗೆಂದು ಮಲಗಿದ್ದ ರಾಹುಲ್ ಮೊದಲ ಬಾರಿಗೆ ಬಿದ್ದ ಈ ಭಯಾನಕ ಕನಸ್ಸಿಗೆ ಅಕ್ಷರ ಸಹ ನಲುಗಿ ಹೋಗಿರುತ್ತಾನೆ! ಕಣ್ಣು ತೆರೆದು ಅದೆಷ್ಟೋ ನಿಮಿಷಗಳ ನಂತರ ರಾಹುಲ್ನಿಗೆ ನಿಜ ಜಗತ್ತಿನ ಅರಿವವಾಗುತ್ತದೆ. ತನ್ನ ಗೆಳೆಯರನ್ನು ಪುಕ್ಕಲರು ಎಂದು ಅಣಕಿಸುತ್ತಿದ್ದ ಈತ ಇಂದು ಕೇವಲ ಕನಸ್ಸೊಂದಕ್ಕೆ ಈ ಮಟ್ಟಿನ ಭಯಬೀತಿಗೊಂಡಿದ್ದು ಮಾತ್ರ ತನ್ನ ಮೇಲೆ ಆತನಿಗೆ ನಗು ಬರಿಸುವಂತಿರುತ್ತದೆ. ಕಿಟಕಿಯಿಂದ ಮನೆಯ ಹೊರಗೆ ನೋಡುತ್ತಾನೆ, ಅದಾಗಲೇ ಮಳೆರಾಯ ಮತ್ತೊಂದು ಸುತ್ತು ಭೇಟಿಕೊಟ್ಟು ಮರೆಯಾಗಿರುತ್ತಾನೆ. ಗಡಿಯಾರದಲ್ಲಿ ಘಂಟೆ ಐದನ್ನು ತೋರಿಸುತ್ತಿರುತ್ತದೆ. ಮಂಚದಿಂದ ಎದ್ದು ರೆಡಿಯಾಗಿ ಮನೆಯಿಂದ ಕೊಂಚ ದೂರ ಬಂದು ದಿಗಂತವರೆಗೆ ಹಬಿದ್ದ ಹಸಿರು ಸಿರಿಯನ್ನು ನೋಡತೊಡಗುತ್ತಾನೆ. ಜೊತೆಗೆ ತನ್ನ ಕನಸ್ಸಿನಲ್ಲಿ ಕಂಡ ಬೆಟ್ಟವೇನಾದರೂ ಅಲ್ಲಿ ಇರಬಹುದಾ ಎಂದೂ ಅರಸುತ್ತಾನೆ. ಆದರೆ ಅದೇ ಬಗೆಯ ಇನ್ನೂ ಎತ್ತರವಾದ ಹಾಗು ಧಟ್ಟವಾದ ಕಾಡಿನಿಂದ ಆವರಿಸಿದ ಬೆಟ್ಟವೊಂದು ಅಲ್ಲಿಯೇ ಇರುತ್ತದೆ.! ಆ ಬೆಟ್ಟವನ್ನು ಕಂಡು ಒಂದೇ ಕ್ಷಣಕ್ಕೆ ಹೃದಯ ಬಡಿತ ನಿಂತತಾದದ್ದು ಮಾತ್ರ ಸುಳ್ಳಲ್ಲ. ಅಲ್ಲಿಯವರೆಗೂ ಸೈಲೆಂಟ್ ಮೋಡಿನಲ್ಲಿಟ್ಟಿದ್ದ ತನ್ನ ಮೊಬೈಲ್ ಅನ್ನು ತೆಗೆದು ನೋಡುತ್ತಾನೆ, ಅಮ್ಮನಿಂದ ಮೂವತ್ತೆರೆಡು ಮಿಸ್ಸೇಡ್ ಕಾಲ್ ಗಳು! ಕೊಂಚ ಚಕಿತಗೊಂಡ ಆತ ಕೂಡಲೇ ಅಮ್ಮನ ನಂಬರ್ ಗೆ ಫೋನಾಯಿಸುತ್ತಾನೆ. ಅತ್ತ ಕಡೆಯಿಂದ ಬಂದ ಧ್ವನಿ ಮಾತ್ರ ತನ್ನ ಗೆಳೆಯ ಮದುಮಗನದ್ದಾಗಿರುತ್ತದೆ! ಹಿನ್ನಲೆಯಲ್ಲಿ ತನ್ನ ಅಮ್ಮ ಅಳುತ್ತಿರುವ ಸದ್ದು ಸ್ಪಷ್ಟವಾಗಿ ರಾಹುಲ್ ಗೆ ಕೇಳುತ್ತಿರುತ್ತದೆ. ರಾಹುಲ್ ಮಾತನಾಡುವ ಮೊದಲೇ ಮದುಮಗ, ರಾಹುಲನಿಗೆ ಆತ ಕೂಡಲೇ ಎಲ್ಲಿದ್ದರೂ ಮರುಮಾತನಾಡದೆ ಬಸ್ಸೊಂದನ್ನು ಹಿಡಿಸು ಸಿಟಿಗೆ ವಾಪಸ್ಸು ಬರಬೇಕೆಂದು, ತಾನು ಮದುವೆಯಾಗಲು ಇಚ್ಛಿಸಿದ್ದ ಹುಡುಗಿ ತನ್ನ ಸೋಧರ ಸಂಭಂದಿ ಹುಡುಗನೊಬ್ಬನನ್ನು ಇಷ್ಟಪಡುತ್ತಿದ್ದಳೆಂದೂ, ತನ್ನೊಟ್ಟಿಗೆ ಆಕೆಯ ಮಧುವೆ ನಿಶ್ಚಿತವಾದ ಕೆಲ ದಿನಗಳ ನಂತರ ಆತ್ಮಹತ್ಯೆ ಮಾಡಿಕೊಂಡಳ್ಳೆಂದೂ, ಅಲ್ಲದೆ ಆಕೆ ಇಷ್ಟ ಪಟ್ಟ ಹುಡುಗನನ್ನೂ ಅಂದರೆ ತನ್ನ ಸೋಧರ ಸಂಭಂಧಿಯನ್ನೂ ಬಲಿ ತೆಗೆದುಕೊಂಡು ತನ್ನನ್ನೂ ಮುಗಿಸಲು ಕಾಡುತ್ತಿದ್ದಾಳೆಂದೂ, ಅಲ್ಲದೆ ನನ್ನ ಮದುವೆಗೆ ಸಹಾಯ ಮಾಡಿದ ಪ್ರತಿಯೊಬ್ಬರನ್ನೂ ಹೀಗೆ ಒಂದಿಲ್ಲೊಂದು ಬಗೆಯಲ್ಲಿ ಕಾಡುತ್ತಿದ್ದಾಳೆಂದು, ತಾನು ಒಂದು ತಿಂಗಳ ಮೊದಲೇ ಆಫೀಸಿಗೆ ರಜೆಹಾಕಿ ಊರಿಗೆ ಕಾರಿನಲ್ಲಿ ಬರುವಾಗ ಅಪಘಾತವಾಗಿ ನಿನ್ನೆಯವರೆಗೂ ಕೋಮಾದಲ್ಲಿ ಇದ್ದೇನೆಂದು, ಇಂದಿನವರೆಗೂ ರಾಹುಲ್ ನೊಟ್ಟಿಗೆ ತಾನು ಒಂದು ಮಾತನ್ನೂ ಆಡಿಲ್ಲವೆಂದು ಹೇಳುತ್ತಾನೆ. ಅಲ್ಲದೆ ಪ್ರಸ್ತುತ ರಾಹುಲ್ ಎಲ್ಲಿದ್ದಾನೆಂದು ಯಾರಿಗೂ ತಿಳಿದಿಲ್ಲವೆಂದು, ನೆನ್ನೆಯಿಂದ ಆತನನ್ನು ಸಂಪರ್ಕಿಸಲು ಶತಪ್ರಯತ್ನ ಮಾಡುತ್ತಿದ್ದಾರೆಂದೂ ಸಹ ಹೇಳುತ್ತಾನೆ!! ರಾಹುಲ್ ಮರುತ್ತರವಾಗಿ ಏನೋ ಹೇಳಲು ಶುರುವಿಡುವ ಮೊದಲೇ ಶಾರ್ಟ್ ಸರ್ಕ್ಯೂಟ್ ನ ಸದ್ದಿನಂತೆ ಆತನ ಮೊಬೈಲ್ ಬಗೆ ಬಗೆಯ ಸದ್ದನ್ನು ಮಾಡುತ್ತಾ ಆಫ್ ಆಗಿ ಬಿಡುತ್ತದೆ! ಕೂಡಲೇ ಎಲ್ಲಿಂದಲೋ ಪ್ರತ್ಯಕ್ಷವಾದಂತೆ ಎಂಟತ್ತು ನಾಯಿಗಳು ರಾಹುಲ್ನನ್ನು ಸುತ್ತುವರೆಯುತ್ತವೆ. ಅವುಗಳ ಬಾಯಿಯಿಂದ ಕಡುಗಪ್ಪು ಬಣ್ನದ ರಕ್ತದ ಕೂಡಿ ಹರಿಯುತ್ತಿರುತ್ತದೆ. ಕ್ಷಣಮಾತ್ರದಲ್ಲಿ ಮೋಡಗಳು ಒಂದರಿಂದೊಂದು ಕವಿದು ಘಾಡ ಕತ್ತಲೆಯ ವಾತಾವರಣವನ್ನು ಮೂಡಿಸುತ್ತವೆ. ತನ್ನ ಹಿಂದೆ ಯಾವುದೊ ಒಂದು ದೈತ್ಯ ಆಕಾರವೊಂದು ನಿಂತಿರುವ ಖಾತರಿ ರಾಹುಲ್ ನಿಗೆ ಅದಾಗಲೇ ಆಗಿರುತ್ತದೆ. ಹಿಂದಿರುಗಲು ಬೇಕಾದ ಧೈರ್ಯವಾಗಲಿ, ಶಕ್ತಿಯಾಗಲಿ ಮಾತ್ರ ಆತನಲ್ಲಿ ಇಲ್ಲವಾಗಿರುತ್ತದೆ….!


Thursday, November 23, 2017

ಕೋಟಿ ಜನರ ಕಷ್ಟದಲ್ಲಿ ಕೋಟಿ-ಕೋಟಿಯನ್ನೆಣಿಸುವ ಮುನ್ನ..!!

ಕೆಳಗಿನ ಕೆಲ ಪ್ರೆಶ್ನೆಗಳಿಗೆ ಸಾದ್ಯವಾದರೆ ನಿಮ್ಮ ಎದೆಯ ಮೇಲೆ ಕೈಯಿರಿಸಿ ಉತ್ತರಿಸಿ. ಕಳೆದ ತಿಂಗಳು ರಾಜ್ಯದಾದ್ಯಂತ ನೆಡೆದ ವೈದ್ಯರ ಮುಷ್ಕರವನ್ನು ನಿಜವಾಗಿಯೂ ನೀವು ಬೆಂಬಲಿಸುತ್ತೀರಾ? ಇಂದು ಕೆಲಸ ಮಾಡಿದರಷ್ಟೇ ನಾಳಿನ ಕೂಳನ್ನು ಕಾಣುವ ಕೋಟ್ಯಂತರ ಹೊಟ್ಟೆಗಳ ಮಳೆ ಲಕ್ಷ ಲಕ್ಷ ಹೊರೆಯನ್ನೊರಿಸುವ ಖಾಸಗಿ ಆಸ್ಪತ್ರೆಗಳ ದಬ್ಬಾಳಿಕೆಗೆ ಕಾನೂನಿನ ಚೌಕಟ್ಟಿನಲ್ಲಿ ಕಡಿವಾಣ ಹಾಕುವ ಒಂತಿನಿತು ಕಾನೂನು ನಿಮಗೆ ಬೇಡವೆನಿಸುವುದೇ? ವೈದ್ಯ ಹೇಳಿದ್ದೆ ರೋಗ ನೀಡಿದ್ದೆ ಮದ್ದು ಎಂಬಂತಾಗಿರುವ ಸಂದರ್ಭದಲ್ಲಿ , ರೋಗಿಗಳ/ಜನತೆಯ ಹಿತದೃಷ್ಟಿಯಿಂದ ತರಲೆತ್ನಿಸುತ್ತಿರುವ ಕಾಯಿದೆಯ ನಿಜವಾದ ಉದ್ದೇಶ ನಿಮಗೆ ತಿಳಿದಿದೆಯೇ? ನಿಮ್ಮ ಹತ್ತಿರವರೇ ಒಬ್ಬರು ತಕ್ಷಣಕ್ಕೆ ಯಾವುದಾದರೊಂದು ಪ್ರೈವೇಟ್ ಆಸ್ಪ್ರತ್ರೆಗೆ ಸೇರಿ ನಂತರ ಹಣ ಸಾಲುತ್ತಿಲ್ಲವೆನ್ನುತ್ತ ಜೆಲ್ಲೆಯ ಅಥವಾ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಬಂದು ಪಡುವ ವಿಪರ್ಯಾಸವನ್ನು ಕಣ್ಣು ಮುಚ್ಚಿಕೊಂಡು ನೀವು ಸಹಿಸುತ್ತೀರಾ? ಅದೇ ಪ್ರೈವೇಟ್ ಆಸ್ಪತ್ರೆಯಲ್ಲಿ ಸತ್ತ ಒಂದು ಬಡ ಹೆಣವನ್ನು ಹಿಂದಿರುಗಿಸಲೂ ಹಣದ ಬಿಲ್ಲನ್ನೇ ಮುಂದಿಟ್ಟು ಸತಾಯಿಸುವ ಕಟು ಹೃದಯಿಗಳನ್ನು ನೀವು ಹೊತ್ತು ಮೆರವಣಿಗೆ ಮಾಡುತ್ತೀರಾ? ಯಾರೋ ಪುಡಾರಿ ರಾಜಕಾರಣಿ ತನ್ನ ಬೇಳೆಯನ್ನು ಬೇಯಿಸಿಕೊಳ್ಳಲು ಅಂತಹ ಸಂಸ್ಥೆಗಳನ್ನು ವಿರೋಧಿಸಲಾರ ಎಂಬುದಾದರೆ ನೀವುಗಳು ಸಹ ‘ಕುರಿಗಳು ಸಾರ್ ಕುರಿಗಳು’ ಎಂಬಂತೆ ಆತನನ್ನೇ ಹಿಂಬಾಲಿಸುತ್ತೀರಾ? ಹೇಳಿ. ಇಂದು ಒಂದು ಸಾಧಾರಣ ಜ್ವರಕ್ಕೆ ಪ್ಯಾರಾ-ಅಸಿಟಮೋಲ್ ಮಾತ್ರೆಯನ್ನು ಕೊಡಲೇ ಸಾವಿರ ಸಾವಿರ ರೂಪಾಯಿಗಳನ್ನು ಪೀಕುವ ಆಸ್ಪತ್ರೆಗಳು ದಿನಕ್ಕೆ ಇನ್ನೂರು ರೂಪಾಯಿ ಹಣವನ್ನು ಸಂಪಾದಿಸುವ ವ್ಯಕ್ತಿಯನ್ನು ಅಂತಹ ಆಸ್ಪತ್ರೆಗಳ ಹತ್ತಿರವೂ ಸುಳಿಯದಂತೆ ಮಾಡುತ್ತಿರುವುದು ಎಷ್ಟು ಮಟ್ಟಿನ ನ್ಯಾಯ? ಇವರಿಗೆ ಜಾಗ, ಓದು, ಕಟ್ಟಡ ಎಲ್ಲವೂ ಬಡ ಜನರ ದುಡ್ಡಿನಲ್ಲಿ ನೆಡೆವ ರಾಜ್ಯಸರ್ಕಾರದ್ದೇ ಬೇಕು ವಿನಃ ಅಂತಹ ಬಡ ಜನರ ಶೂಶ್ರುಷೆಯಲ್ಲ.ದಿನಪೂರ್ತಿ ಇಂಗ್ಲಿಷಿನ ಪೋಷಾಕುಗಳನ್ನೇ ತೋರುತ್ತ 1 ನಿಮಿಷ ತೋರ್ಪಡಿಕೆಗೆ ಏನೋ ಎಂಬಂತೆ ಕನ್ನಡ ಕನ್ನಡ ಎಂದು ಬೊಬ್ಬೆಯೊಡೆಯುವ ಹಲವರು ಇದೇ ಕನ್ನಡ ನಾಡಿನಲ್ಲಿ ಅವೇ ಇಂಗ್ಲಿಷ್ ಔಷಧಗಳು ತಮ್ಮ ರಣಬೆಲೆಯ ಬಲದಲ್ಲಿ ನಮ್ಮವರನ್ನು ಕಬ್ಬಿನ ಜಲ್ಲೆಯಂತೆ ಅರೆಯುತ್ತಿರುವುದು ನಿಮಗೆ ತಪ್ಪು ಎನಿಸುವುದಿಲ್ಲವೇ?

ಹಣ ಉಳಿಸುವ ಆಸೆಗೆ/ಅನಿವಾರ್ಯತೆಗೆ ಸಾಲು-ಸಾಲಾಗಿ ನಿಂತು ನರಳುವ ಭಾಗ್ಯವನ್ನು ಕರುಣಿಸುವ ಸರ್ಕಾರೀ ಆಸ್ಪತ್ರೆಗಳು, ಗುಣವಾಗಿ ಹೊರಬರುವ ರೋಗಿ ಕೊನೆಗೆ ಆತನ ಬಿಲ್ಲಿನ ಮೊತ್ತವನ್ನು ನೋಡಿಯೆ ಮತ್ತೊಮ್ಮೆ ಅಸ್ವಸ್ಥನಾಗುವಂತೆ ಮಾಡುವ ಖಾಸಗಿ ಆಸ್ಪತೆಗಳು, ಎರಡೂ ಬೇಡವೆನ್ನುತ್ತಾ 'ಇದ್ದರೆ ಇದ್ದ ಸತ್ತರೆ ಸತ್ತ' ಎನ್ನುತ್ತಾ ವ್ಯವಸ್ಥೆಯ ಮೇಲೆ ನಂಬಿಕೆಯನ್ನೇ ಕಳೆದುಕೊಂಡು ಜೀವನ ಕಳೆಯುವ ಬಹುಮಂದಿ ವೃದ್ದರು, ಇವೆಲ್ಲಕ್ಕೂ ಶಾಸ್ತಿ ಎಂಬಂತೆ ರಾಜ್ಯ ಸರ್ಕಾರ ಮಂಡಿಸಲೊಗುತ್ತಿರುವ ಪ್ರಸ್ತುತ KPME (Karnataka Private Medical Establishment Act) ಮಸೂದೆಯ ಕೆಲವು ತಿದ್ದುಪಡಿ, ಅದರ ವಿರೋಧವಾಗಿ ಬೊಬ್ಬೆಯೊಡೆಯುವ ಖಾಸಗಿ ವೈದ್ಯರ ಸಂಘ, ತಿಳಿದೋ ತಿಳಿಯದೆಯೋ ಇದರ ಪರ ವಿರೋಧವನ್ನು ಮಂಡಿಸುವ ಸಾವಿರಾರು ಗುಂಪುಗಳು, ಇವೆಲ್ಲದರ ಜೊತೆಗೆ ಕುಟುಂಬದ ಹಾದಿಯಲ್ಲಿ ಇನ್ನೆಂದೂ ಬಾರದೆ ಕಣ್ಮರೆಯಾದ ಹತ್ತಾರು ಜೀವಗಳು, ನೋವುಗಳು. ಸದ್ಯಕ್ಕೆ ಇವಿಷ್ಟು ರಾಜ್ಯದ ವೈದ್ಯಕೀಯ ವಲಯದ ಪ್ರತಿದಿನದ ಹಾಗು ಹೋಗುಗಳು. ಕೊನೆಯ ಒಂದಿಷ್ಟು ಅಂಶಗಳು ಪ್ರಸ್ತುತ ಹೀನಾಯ ಸ್ಥಿತಿಗೆ ಮತ್ತಷ್ಟುಇಂಬು ಕೊಟ್ಟಂತಿದೆ.

ಮೊದಲಿಗೆ ರಾಜ್ಯದಲ್ಲಿ KPME ಮಸೂದೆ ಜಾರಿಯಾದದ್ದು 2007 ರಲ್ಲಿ. ಅಂದಿನ ರಾಜ್ಯ ಸರಕಾರ ಮಂಡಿಸಿದ ಈ ಮಸೂದೆಯ ಪ್ರಕಾರ ಪ್ರತಿಯೊಂದು ಖಾಸಗಿ ಆಸ್ಪತ್ರೆಗಳು ತಮ್ಮ ಹೆಸರನ್ನು ಸಂಬಂಧಪಟ್ಟ ಇಲಾಖೆಯಲ್ಲಿ ನೊಂದಾಯಿಸಿಕೊಳ್ಳಬೇಕಲ್ಲದೆ ಸರಕಾರ ರಚಿಸುವ ನಿಯಮಾವಳಿಗೆ ಬದ್ದವಾಗಿರಬೇಕು ಎಂಬುದಾಗಿದ್ದಿತು. ಈ ಅಂಶಗಳಲ್ಲಿ ಮೊದಲನೆಯ ಅಂಶವನ್ನು ಹೆಚ್ಚಿನ ಆಸ್ಪತ್ರೆಗಳು ಪಾಲಿಸಿವೆಯಾದರು ಹೊಳೆಯಲ್ಲಿ ಹುಣಸೆಯನ್ನು ತೊಳೆದಂತೆ ನಂತರದನ್ನು ಮಾಡಿದವು. ಇದಕ್ಕೆ ಮೂಲ ಕಾರಣ ಮಸೂದೆಯೊಂದನ್ನು ಜಾರಿಗೊಳಿಸಿ ನಂತರ ಕೈಕಟ್ಟಿ ಮೂಕವಾಗಿ ಕೂರುವ ಸರ್ಕಾರಗಳಾಗಿರಬಹುದು ಅಥವಾ ಇಂತಹ ಮಸೂದೆಯನ್ನು ಮಂಡಿಸುವವರೇ ಕುಟುಂಬದವರ ಹೆಸರಿನಲ್ಲಿ ರಾಶಿ ರಾಶಿ ಆಸ್ಪತ್ರೆಗಳನ್ನು ನಿರ್ಮಿಸಿಕೊಂಡಿರುವುದಾಗಿರಬಹುದು. ಇಂತಹ ಪ್ರಫುಲ್ಲ ವಾತಾವರಣದಲ್ಲಿ ನಿಯಮಾವಳಿಗಳು ಗಾಳಿಗೆ ಪ್ರಿಯವಾದದಂತೂ ಸುಳ್ಳಲ್ಲ. ಪರಿಣಾಮ ಖಾಸಗಿ ಆಸ್ಪತ್ರೆಗಳ ಬಡವರ ಮೇಲಿನ ಆರ್ಥಿಕ ಬಡಿತ ಇನ್ನೂ ವಿಪರೀತವಾಯಿತು. ಅದೆಷ್ಟರ ಮಟ್ಟಿಗೆ ಎಂದರೆ 'ದುಡ್ಡು ಇದ್ದರೆ ಮಣಿಪಾಲು, ಇಲ್ಲ ಅಂದ್ರೆ ಮಣ್ಣುಪಾಲು' ಎಂಬುವಷ್ಟರ ಮಟ್ಟಿಗೆ! ಹೃದಯ ಕಸಿಯಿಂದ ಹಿಡಿದು ಮಂಡಿಚಿಪ್ಪಿನ ಬದಲಿ ಎಲ್ಲವೂ ಹಣವಂತನ ಭಾಗ್ಯ ಎಂಬುದು ಸರ್ವವ್ಯಾಪ್ತಿಯಾಗಿರುವ ವಿಷಯ. ಬೇರೆ ಯಾರು ಬೇಡ ನಾವುಗಳೇ ಚಿಕಿತ್ಸೆಯ ನೆಪದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ರಾಶಿ ರಾಶಿ ದುಡ್ಡನು ಸುರಿದು ಹಿಡಿ ಹಿಡಿ ಶಾಪ ಹಾಕುತ್ತ ಅದೆಷ್ಟು ಬಾರಿ ವಾಪಸ್ಸು ಬಂದಿಲ್ಲ? ಜಿಗಣೆಗಳಂತೆ ಹಣವನ್ನು ಹೀರಿ ದರ್ಪದಿಂದ ವರ್ತಿಸುವ ಇಂತಹ ಹಲವಾರು ಸಂಸ್ಥೆಗಳಿಗೆ (ಆಸ್ಪತ್ರೆಗಳಿಗೆ) ಕೂಡಲೇ ಕಡಿವಾಣ ಹಾಕುವುದು ಅತ್ಯಾವಶ್ಯಕವಾಗಿದ್ದಿತು. ಅಂತೆಯೇ ಆಯಿತು. ಪ್ರಸ್ತುತ ಜಾರಿಯಲ್ಲಿದ್ದ KPME ಮಸೂದೆಯ ಮೇಲಿನ ಹಿಡಿತವನ್ನು ಬಿಗಿಗೊಳಿಸಿ ಇಂತಹ ಒಂದು ಮಸೂದೆ ಕೇವಲ ನಾಮ್-ಕಾ-ವಾಸ್ತೆ ಆಗಿರಬಾರದು ಎಂಬ ಕಾರಣಕ್ಕೆ ಪ್ರಸ್ತುತ ಆರೋಗ್ಯ ಸಚಿವಾಲಯ ಕೆಲವು ಅಂಶಗಳನ್ನು ಇದಕ್ಕೆ ಅಳವಡಿಸಹೊರಟಿದೆ. ಆಸ್ಪತ್ರೆಗಳಲ್ಲಿ ನೆಡೆಯುವ ಪ್ರತಿಯೊಂದೂ ಚಿಕೆತ್ಸೆಗಳಿಗೂ ರಾಜ್ಯದಾದ್ಯಂತ ಸಮರೂಪಿಯಾದ ಬೆಲೆಯನ್ನು ನಿಗದಿಪಡಿಸಲು, ತತ್ಕಾಲದ (ಎಮರ್ಜೆನ್ಸಿ) ಚಿಕಿತ್ಸೆಗಳಿಗೂ ಮುಂಗಡ ಹಣದ ಬೇಡಿಕೆಯನ್ನಿಡುವ ಅಭ್ಯಾಸಕ್ಕೆ ಬೇಲಿ ಹಾಕಲು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ ವ್ಯಕ್ತಿಯ ಮೃತದೇಹವನ್ನು ಮರಳಿಸುವ ಮುನ್ನ ಗಿರವಿ ಅಂಗಡಿಯ ಮಾಲಿಕನಂತೆ ಹಣದ ಕಂತೆಗಳನ್ನೇ ಕೇಳುವ ಕ್ರಮಕ್ಕೆ ಏಕ್ದಂ ಕಡಿವಾಣ ಹಾಕುವುದು ಈ ಮಸೂದೆಯ ಮೂಲ ಉದ್ದೇಶವಾಗಿದೆ. ಅದರ ಪ್ರಕಾರ ಒಂದು ವೇಳೆ ಈ ನಿಯಮವನ್ನು ಉಲ್ಲಘಂನೆ ಮಾಡುವುದಾದರೆ ಹಿಂದೆ ಸಾವಿರದಲ್ಲಿದ್ದ ದಂಡವನ್ನು ಈಗ ಲಕ್ಷಕ್ಕೆ ಹಾಗು ಜೈಲುವಾಸವನ್ನು ತಿಂಗಳುಗಳಿಂದ ವರ್ಷಗಳಿಗೆ ಏರಿಸಲಾಗಿದೆ!

ಪ್ರಸ್ತುತ ಜಾರಿಯಲ್ಲಿದ್ದ ಮಸೂದೆಯ ತಿದ್ದುಪಡಿಯ ಬಗೆಗಿನ ಚರ್ಚೆ ಬಹಳ ತಿಂಗಳುಗಳಿಂದ ನೆಡೆಯುತ್ತಲೇ ಇದೆ. ಈ ಕುರಿತು ಕಳೆದ ವರ್ಷವೇ ಸರ್ಕಾರ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ವಿಕ್ರಂಜಿತ್ ಸೇನ್ ರವರ ಅಧ್ಯಕ್ಷತೆಯಲ್ಲಿ ಕಮಿಟಿಯೊಂದನ್ನು ರಚಿಸಿ ಖಾಸಗಿ ಆಸ್ಪತ್ರೆಗಳ ಸುಲಿಗೆಯ ಬಗ್ಗೆ ಹಾಗು ಇದಕ್ಕೆ ಸಂಬಂಧಿಸಿದ ಇತರ ವಿಷಯಗಳ ಕುರಿತು ವರದಿಯೊಂದನ್ನು ಸಿದ್ಧಪಡಿಸಲು ಕೇಳಿಕೊಂಡಿತ್ತು. ಅದರಂತೆಯೇ ಈ ವರ್ಷದ ಏಪ್ರಿಲ್ಲಿನಲ್ಲಿ ರೆಡಿಯಾದ ಸಮಿತಿಯ ವರದಿಯನ್ನು, ಹಾಗು ಅದರಲ್ಲಿದ್ದ ಕೆಲವು ಅಳವಡಿಕೆಗಳನ್ನು ಕಂಡು ಕೆಂಡಾಮಂಡಲವಾದ ಖಾಸಗಿ ಆಸ್ಪತ್ರೆಗಳ ಸಂಘ ದಿನಕೊಂಡರಂತೆ ಹೊಸ ಹೊಸ ಖ್ಯಾತೆಗಳನ್ನು ಎತ್ತುತ್ತಾ ಕುಣಿದಾಡತೊಡಗಿತು. ಪ್ರೈವೇಟ್ ಆಸ್ಪತ್ರೆಗಳಿಗೆ ಕಡಿವಾಣ ಹಾಕುವ ಮೊದಲು ಸರ್ಕಾರೀ ಆಸ್ಪತ್ರೆಗಳ ಸ್ಟ್ಯಾಂಡರ್ಡ್ಸ್ ಅನ್ನು ಹೆಚ್ಚಿಸಿ ಅನ್ನುವುದು ಇವುಗಳಲ್ಲಿ ಒಂದು. ಪ್ರಸ್ತುತ ಸರ್ಕಾರೀ ಆಸ್ಪತ್ರೆಗಳ ಅವತಾರವನ್ನು ನೋಡಿದರೆ ಇವರ ಈ ಸಬೂಬು ತಪ್ಪೆಂದು ಅನಿಸದೇ ಇರದು. ಆದರೆ ಕಳ್ಳ ಯಾರು ಎಂದರೆ 'ನಾನಲ್ಲ, ಇವನು' ಎಂದು ಸರ್ಕಾರೀ ಆಸ್ಪತ್ರೆಗಳೆಡೆ ಬೊಟ್ಟುಮಾಡಿ ತೋರಿಸುವ ಇಂತಹ ಖಾಸಗಿ ಆಸ್ಪತ್ರೆಗಳ ಮೇಲೆ ಸಂಶಯ ಬಾರದೆ ಇರದು! ಸರಿ ಎನ್ನುತ್ತಾ ಪ್ರಸ್ತುತ ವಿಧಾನಸಭೆಯ ಅಧಿವೇಶನದವರೆಗೂ ತಳ್ಳಿಸಿಕೊಂಡು ಬಂದ ಮಸೂದೆ ಇನ್ನೇನು ಮಂಡಿಸಬೇಕು ಅನ್ನುವಷ್ಟರಲ್ಲಿ ರಾಜ್ಯದಾದ್ಯಂತ ಸುಮಾರು 500ಕ್ಕೂ ಹೆಚ್ಚಿನ ವೈದ್ಯರು ತಮ್ಮ ವೈದ್ಯ ವೃತ್ತಿಯ ಮೂಲ ಉದ್ದೇಶವನ್ನು ಮರೆತಂತೆ ರಸ್ತೆಗಿಳಿದು ಧರಣಿ ನೆಡೆಸಿದರು. ವೈದ್ಯಕೀಯ 'ಸೇವೆ' ಎಂಬುದು ಅಕ್ಷರ ಸಹ ಬಿಸಿನೆಸ್ ನಂತಾಗಿದೆ ಎಂಬುದನ್ನು ಸಾಬೀತುಮಾಡಿ ತೋರಿದರು. ಅತ್ತ ಚಿಕಿತ್ಸೆ ಸಿಗದೇ ವಿಲ ವಿಲ ಒದ್ದಾಡುತ್ತಿದ್ದ ಜೀವಗಳನ್ನೇ ಇಂದು ಕಣ್ಣೆತ್ತಿ ನೋಡದವರು ನಾಳೆ ಮಸೂದೆ ಮಂಡನೆಯಾಗಿ ರಾಜ್ಯಾದಾಂದ್ಯಂತ ಜಾರಿಯಾದರೆ ರೋಗಿಗಳ ಶುಶ್ರುಷೆಯನ್ನು ಅದೆಷ್ಟರ ಮಟ್ಟಿಗೆ ಮಾಡಬಹುದೆಂದು ನೀವೇ ಊಹಿಸಬಹುದು.

ಕಳೆದ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ಮಂಡಿಚಿಪ್ಪಿನ ಜೋಡಣೆ ಹಾಗು ಶಸ್ತ್ರ ಚಿಕಿತ್ಸೆಯ ದರವನ್ನು ಶೇಕಡ 70% ನಷ್ಟು ಇಳಿಸಿ ದೇಶದಾದ್ಯಂತ ಆಸ್ಪತ್ರೆಗಳು ಈ ದರವನ್ನೇ ಪಾಲಿಸುವಂತೆ ನಿಯಮವನ್ನು ಜಾರಿಗೊಳಿಸಿತು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಜಾರಿಯಲ್ಲಿದ್ದ ಚಿಕಿತ್ಸೆಯ ವೆಚ್ಚವನ್ನು ಪ್ರತಿಶತ 70 ರಷ್ಟು ಇಳಿಸಿದರೂ ಆಸ್ಪತ್ರೆಗಳೇನು ಬೀದಿಗೆ ಬೀಳಲಿಲ್ಲ. ಡಾಕ್ಟರುಗಳೇನು ಮನೆ ಮಠವನ್ನು ಕಳೆದುಕೊಳ್ಳಲಿಲ್ಲ. ಹಾಗಾದರೆ ಇಲ್ಲಿಯವರೆಗೂ ಖಾಸಗಿ ಆಸ್ಪತ್ರೆಗಳು ಬಕಾಸುರರಂತೆ ಜನರ ಹಣ ಹಾಗು ನೆಮ್ಮದಿಯನ್ನು ಸಾಗರೋಪಾದಿಯಲ್ಲಿ ನುಂಗಿ ನೀರು ಕುಡಿದ್ದಿದಂತೂ ಸುಳ್ಳಲ್ಲ. ಅಲ್ಲವೇ? ಇದು ಕೇವಲ ಮಂಡಿಚಿಪ್ಪಿನ ಮಹಿಮೆ. ಅಂತಹ ಇನ್ನೆಷ್ಟು ರಾಶಿ ರಾಶಿ ದೇಹದ ಬಿಡಿ ಬಾಗಗಳ ಬಿಸಿನೆಸ್ ಗಳು ರೋಗಿಯ ರೋಗಗಳೊಟ್ಟಿಗೆ ಹಸುಕೊಕ್ಕಿವೆಯೋ ಯಾರು ಬಲ್ಲರು?!

ಖಾಸಗಿ ಆಸ್ಪತ್ರೆಗಳು ಈ ರೀತಿಯಾಗಿ ಯದ್ವಾ ತದ್ವಾ ಹಣವನ್ನು ಪೀಕಲು ಇರುವ ಮತ್ತೊಂದು ಮುಖ್ಯ ಕಾರಣ ಇನ್ಶೂರೆನ್ಸ್. ಹೌದು, ರೋಗಿಯ ಬಳಿ ಇನ್ಶೂರೆನ್ಸ್ ಎಂಬೊಂದು ಟ್ರಂಪ್ ಕಾರ್ಡ್ ಇದೆ ಎಂದರೆ ಆಸ್ಪತ್ರೆಗಳ ಬಿಲ್ಲಿನಲ್ಲಿ ನೂರು ಸಾವಿರವಾಗಬಹುದು, ಸಾವಿರ ಲಕ್ಷವಾಗಬಹುದು! ಇನ್ಶೂರೆನ್ಸ್ ಕಂಪನಿಗಳು ಕೊಡುತ್ತವಲ್ಲಾ ಎನ್ನುತ ರೋಗಿಗಳೂ ಬಾಯಿ ಮುಚ್ಚಿ ಸುಮ್ಮನೆ ಕೂರುತ್ತಾರೆ. ರೋಗಿಗಳ ನೆಪದಲ್ಲಿ ಹಣವನ್ನು ಲೂಟಿ ಮಾಡುವ ಮತ್ತೊಂದು ವಿಧಾನ ಶಿಫಾರಸ್ಸು (ರೆಫೆರೆನ್ಸ್) ಮಾಡುವಿಕೆ. ಆಸ್ಪತ್ರೆಗಳಲ್ಲಿ ಮಾತ್ರೆಯನ್ನೋ, ಯಾವುದೊ ಒಂದು ಬಗೆಯ ಚಿಕೆತ್ಸೆಯನ್ನೂ ಬ್ರಹ್ಮಲಿಪಿಯ ಕೋಡ್-ವರ್ಡ್ ಗಳಲ್ಲಿ ಬರೆದು ಅದನ್ನು ಅವರು ಹೆಸರಿಸಿದ್ದ ಮೆಡಿಕಲ್ ಅಥವಾ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕೆಂದು ಡಾಕ್ಟರ್ ಗಳು ಆಜ್ಞಾಪಿಸುತ್ತಾರೆ. ಒಂದು ಪಕ್ಷ ಅವರು ಹೇಳಿದ ಮೆಡಿಕಲ್ ಅಥವಾ ಪರೀಕ್ಷಾ ಕೇಂದ್ರಕ್ಕೆ ಹೋಗದಿದ್ದರೆ ರೋಗಿ ತನ್ನ ಅಂತ್ಯವನ್ನೇ ಕಾಣುತ್ತಾನೇನೋ ಎನ್ನುವಂತಿರುತ್ತದೆ ಅವರ ಆ ದರ್ಪದ ಮಾತು. ಹೀಗೆ ಕಳುಹಿಸಿಕೊಡುವ ರೋಗಿಗಳ ಹಣದಲ್ಲಿ ನನಗೆ ಇಷ್ಟು, ನಿನಗೇ ಅಷ್ಟು ಎಂಬಂತೆ ಹಣ ಹಂಚಿಕೆಯಾಗುವುದು ಒಂದು ಆಡುವ ಮಕ್ಕಳಿಗೂ ತಿಳಿದಿರುವ ವಿಷಯವೇ! ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆಯಂತೆ ಆಸ್ಪತ್ರೆ, ಮೆಡಿಕಲ್ ಹಾಗು ಪರೀಕ್ಷ ಕೇಂದ್ರಗಳು ಹೀಗೆ ರೋಗಿಗಳ ಹೆಸರಲ್ಲಿ ಹಣವನ್ನು ಲೂಟಿ ಸಹಜವಾದ ವಿಷಯವಾಗಿದೆ. ಆದರೂ ಯಾರೊಬ್ಬರೂ ಇದರ ಬಗ್ಗೆ ಧ್ವನಿ ಎತ್ತುವುದಿಲ್ಲ. ಈಗ ಸರ್ಕಾರವೊಂದು ಈ ನಿಟ್ಟಿನಲ್ಲಿ ಜಾರಿಗೊಳಿಸಲೆತ್ನಿಸಿರುವ ಕಾನೂನು ಇವೆಲ್ಲ ಅಕ್ರಮಗಳಿಗೂ ಕಡಿವಾಣ ಹಾಕುವ ನಿಟ್ಟಿನಲ್ಲಿಯೇ ಇದೆ. ಆದರೂ ಈ ಮಸೂದೆಗೆ ವಿರೋಧವನ್ನು ವ್ಯಕ್ತಪಡಿಸುತ್ತಿರುವುದು ನಮ್ಮ ದೌರ್ಭ್ಯಾಗ್ಯವೇ ಸರಿ.

ಇವೆಲ್ಲ ವಾದ ಪ್ರತಿವಾದಗಳ ಹಿನ್ನಲೆಯಲ್ಲಿ ಬಹಳಷ್ಟು ವಿಷಯಗಳು ಆಳುವ ಸರಕಾರಗಳನ್ನು ತಮ್ಮ ಆತ್ಮಾವಲೋಕನವನ್ನು ಮಾಡಿಕೊಳ್ಳುವಂತೆ ಮಾಡಿವೆ. ಸರ್ಕಾರೀ ಆಸ್ಪತ್ರೆಗಳೆಂದರೆ ಗತಿ ಇಲ್ಲದವರಿಗೆ ಎಂಬುವಂತಹ ಮನೋಭಾವವೊಂದು ಜನರಲ್ಲಿ ಇಂದು ಆಳವಾಗಿ ಬೇರೂರಿದೆ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳೆಂಬುದು ಪ್ರತಿಯೊಂದು ಕುಟುಂಬಗಳ ಪ್ರತಿಷ್ಠೆಯ ವಿಷಯವಾಗಿರುವುದಂತೂ ಸುಳ್ಳಲ್ಲ. ಜನರ ಪರವಾಗಿ ಹೊರಡುವ ಸದುದ್ದೇಶವಿದ್ದರೆ ಸರ್ಕಾರಗಳ ಮೊದಲ ಹೋರಾಟ ಇಂತಹ ಮನೋಸ್ಥಿತಿಯ ವಿರುದ್ದವಾಗಿರಬೇಕು. ಸರ್ಕಾರೀ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗೆ ಯಾವುದೇ ವಿಧದಲ್ಲೂ ಕಡಿಮೆಯಿಲ್ಲ ಎಂಬುದನ್ನು ಸಾಧಿಸಿ ತೋರುವ ಕಡೆಯಿರಬೇಕು. ಓದು, ಚಿಕಿತ್ಸೆ ಖಾಸಗಿಯದ್ದು, ಕೆಲಸ ಮಾತ್ರ ಸರ್ಕಾರದ್ದು ಎಂಬುವ ಉದ್ಯೋಗಕಾಂಕ್ಷಿಗಳಿಗೆ ಮಾತ್ರ ಸರ್ಕಾರೀ ಆಸ್ಪತ್ರೆಗಳು, ಶಾಲೆಗಳು ಪ್ರಿಯವಾದರೆ ಸಾಲದು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳನ್ನೇ ಆಧಾರವಾಗಿಟ್ಟುಕೊಂಡು ಅಲ್ಲಿರುವ ಸರ್ಕಾರೀ ಆಸ್ಪತ್ರೆಗಳನ್ನು ಅಭಿವೃದ್ದಿಪಡಿಸುವ ಗುರಿಯನ್ನು ಹಿಟ್ಟುಕೊಳ್ಳಲಿ. ವೈದ್ಯರ ಸಂಬಳ, ಅತ್ಯಾಧುನಿಕ ಫೆಸಿಲಿಟಿಗಳು, ಚಿಕಿತ್ಸಾ ಯಂತ್ರಗಳು, ಎಲ್ಲ ಬಗೆಯ ಡಿಪಾರ್ಟ್ಮೆಂಟುಗಳನ್ನು ಖಾಸಗಿ ಆಸ್ಪತ್ರೆಗಳ ಹಂತಕ್ಕೆ ತಂದು ನಿಲ್ಲಿಸಲಿ. ಆಗ ನೋಡುವ, ಏಕೆ ಜನಸಾಮಾನ್ಯರಿಗೆ ಸರ್ಕಾರೀ ಆಸ್ಪತ್ರೆಗಳು ಪ್ರಿಯವಾಗದೆ


ಪ್ರಸ್ತುತ ಮಸೂದೆ ಎರಡೂ ಸದನಗಳ ಅಂಕಿತವನ್ನು ಜೊತೆಗೆ ರಾಜ್ಯಪಾಲರ ಅನುಮೋದನೆಯನ್ನೂ ಪಡೆದಿದೆ.ಇಲ್ಲಿಯವರೆಗೂ ಆಳುವ ಸರ್ಕಾರಗಳು ಮಾಡುವ ಪ್ರತಿಯೊಂದು ಕಾರ್ಯಗಳನ್ನು ವಿರೋಧಿಸುವುದಷ್ಟೇ ತಮ್ಮ ಧ್ಯೇಯವೆಂದುಕೊಂಡಿದ್ದ ವಿರೋಧಪಕ್ಷಗಳು ಯಾವಾಗ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಲು ಶುರುವಾದರೋ ಸರ್ವಾನುಮತದಿಂದ ಈ ವಿಧೇಯಕಕ್ಕೆ ಒಪ್ಪಿಗೆ ನೀಡಿವೆ. ಇದೊಂದು ಉತ್ತಮ ಬೆಳವಣಿಗೆ. ಅದಾಗಲೇ ಸರ್ಕಾರೀ ಆಸ್ಪತ್ರೆಗಳನ್ನೂ ಅಲ್ಲಿನ ವೈದ್ಯರನ್ನೂ ಈ ನಿಯಮದ ಒಳಗೆ ಒಳಪಡಿಸಿ ಎನ್ನುತ್ತಾ ರಾಜ್ಯ ವೈದ್ಯರ ಸಂಘ ಹೈಕೋರ್ಟಿನ ಕದವನ್ನು ತಟ್ಟಿದ್ದೆ. ಹಾಗು ಇದು ನ್ಯಾಯ ಸಮ್ಮತವೂ ಹೌದು. ರಾಜ್ಯದಾದ್ಯಂತ ಏಕರೂಪ ನಿಯಮವನ್ನು ಜಾರಿತರುವಾಗ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣವೇಕೆ? ಆದರೆ ಸದ್ಯಕ್ಕೆ ಜಾರಿಯಾಗಿರುವ ಈ ಕಾನೂನಿನ ಮೇಲಿನ ಸಿಟ್ಟನ್ನು ಅಮಾಯಕ ರೋಗಿಗಳ ಮೇಲೆ ತೋರದಂತಾಗಲಿ, ಇದರಿಂದ ಸಕಲರಿಗೂ (ಖಾಸಗಿ / ಸರ್ಕಾರೀ) ಒಳಿತಾಗಲಿ ಎಂಬುದೇ ಸದ್ಯಕ್ಕೆ ಬಹುಜನರ ಆಶಯ.

Friday, November 10, 2017

ಕಥೆ : ಮನೆ


ಸಮಯ ಇನ್ನು ಮಧ್ಯರಾತ್ರಿಯನ್ನು ಕಳೆದಿರಲಿಲ್ಲ. ಮನೆಯ ಅಟ್ಟದ ಮೇಲೆ ಮಲಗಿದ್ದ ಮಗ ನಿಮಿಷಕ್ಕೊಮ್ಮೆ ಮಗ್ಗುಲು ಬದಲಾಯಿಸುತ್ತಿದ್ದ. ಆ ಒರಳಾಟಕ್ಕೆ ಅಟ್ಟದ ಮರದ ಹಲಗೆಗಳ ನಡುವೆ ಹಚ್ಚಿದ್ದ ಸುಣ್ಣದ ಎಕ್ಕೆಗಳು ಹಿಡಿ-ಹಿಡಿಯಾಗಿ ಕೆಳಗೆ ಚಾಪೆಯನ್ನಾಸಿಕೊಂಡು ಮಲಗಿದ್ದ ಅಪ್ಪನ ಮೇಲೆ ಬೀಳತೊಡಗುತ್ತಿದ್ದವು. ನಡು ನಡುವೆ ಚಟ್ ಪಟ್ ಎಂಬ ಸದ್ದಿನೊಂದಿಗೆ ಸೊಳ್ಳೆಗಳನ್ನು ಜಜ್ಜುವ ಸಿಟ್ಟಿನಲ್ಲಿ ಮಗ ತನ್ನ ಕೆನ್ನೆಯ ಮೇಲೆ ತಾನೇ ಬಾರಿಸಿಕೊಳ್ಳುತ್ತಿರುತ್ತಾನೆ. ತಾಸುಗಳು ಕಳೆದರೂ ನಿದ್ರೆಯೇರದ್ದಿದ್ದಾಗ ಒಮ್ಮೆಲೇ ಮೇಲೆದ್ದು ಮೆಯ್ಯ ಮೇಲಿದ್ದ ಬನಿಯನ್ನು ಹಾಗು ಲುಂಗಿಯನ್ನು ಬಿಚ್ಚೋಗೆದು, ಪಕ್ಕದಲ್ಲಿದ್ದ ಪುಸ್ತಕವನ್ನೇ ಬೀಸಣಿಗೆಯಂತೆ ಮಾಡಿಕೊಂಡು ಅಂಗಾತ ಮಲಗಿಕೊಳ್ಳುತ್ತಾನೆ. ಸೆಖೆಯೇನೋ ಕೊಂಚ ಕಡಿಮೆಯಾಯಿತೆಂದೆನಿಸಿದರೂ ಸೊಳ್ಳೆಗಳ ಆಕ್ರಮಣ ಮಾತ್ರ ವಿಪರೀತವಾಗುತ್ತದೆ. ಸಿಟ್ಟಿನಿಂದ ಮಗ ತನ್ನ ಅಂಗಾಗಳಿಗೆಲ್ಲ ಕೈ ಏಟಿನ ರುಚಿಯನ್ನು ತೋರಿಸುತ್ತ ಒರಳಾಡತೊಡಗುತ್ತಾನೆ. ಅಟ್ಟದ ಮೇಲೆ ಮೂಡುತ್ತಿದ್ದ ಸದ್ದಿಗೆ ವಿಚಲಿತರಾದ ಅಮ್ಮ 'ಅದ್ಯಾಕ್ ಅಷ್ಟ್ ಒದ್ದಾಡ್ತಿಯೋ, ಮುಖ ಓದ್ಕಂಡ್ ಮಲ್ಕ' ಎಂದ ಮಾತಿಗೆ ತದ್ವಿರುದ್ಧವಾಗಿ ಏನೋ ಅರಚಿದ ಮಗ.

ಇಂಜಿನಿಯರಿಂಗ್ ಮುಗಿಸಿ ಒಂದು ವರುಷವಾದರೂ ಯಾವೊಂದು ಕೆಲಸವೂ ಸಿಗದೇ ಒಂದಿಷ್ಟು ದಿನಗಳ ಕಾಲ ಮನೆಯಲ್ಲಿ ಇರಲು ಬಂದು ಅದಾಗಲೇ ನಾಲ್ಕು ತಿಂಗಳಾಗಿದೆ! 'ಸಿಟಿನೂ ಸಾಕು, ಆ ಕೆಲ್ಸನೂ ಸಾಕು. ಪಕ್ಕದೂರಿನ ಗ್ರಾಮ್ ಪಂಚಾಯಿತಿಲಿ ಬಿಲ್ ಕಲೆಕ್ಟರ್ ಕೆಲ್ಸ ಖಾಲಿ ಇದ್ಯಂತೆ. ಸ್ವಲ್ಪ ಟಬೇಲ್ ಕೆಳಗೆ ತಳ್ಳಿದ್ರೆ ಕೆಲ್ಸ ಗ್ಯಾರೆಂಟಿ' ಎನ್ನುತ್ತಾ ದಿನವೆಲ್ಲ ಊರಿನಲ್ಲೇ ಅಲೆದಾಡಿಕೊಂಡು ಕಾಲ ತಳ್ಳುತ್ತಿದ್ದ. ಓದಿನಲ್ಲಿ ತೀರಾ ಕನಿಷ್ಠದವನಲ್ಲನಾದರೂ ಪ್ರಸ್ತುತ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಗೋಳನ್ನು ಕಂಡು, ಅನುಭವಿಸಿ ಒಂದು ಬಗೆಯ ಅಸಡ್ಡೆ ಆತನಲ್ಲಿ ಮೂಡಿದೆ.

ಹತ್ತನೇ ತರಗತಿಯಲ್ಲಿ ಊರಿಗೇ ಮೊದಲಿಗನಾಗಿ ಬಂದಂದೇ ಅಪ್ಪನಿಗೆ ಗೊತ್ತಾದದ್ದು ಮಗನ ಅಸಲಿಯತ್ತು. ಅಂದು ಶುರುವಾದ ಒಂದು ಉತ್ಕಟ ಛಲ ಮಗನನ್ನು ಒಬ್ಬ ಇಂಜಿನಿಯರ್ ನನ್ನಾಗಿ ಮಾಡಿ ತೀರುವವರೆಗೂ ಆರಲಿಲ್ಲ. ಆತನ ಕುಟುಂಬದಲ್ಲೇ ಯಾರೊಬ್ಬರೂ ಈ ಮಟ್ಟಿನ ವಿದ್ಯಾಭ್ಯಾಸವನ್ನು ಮಾಡಿರುವ ಪುರಾವೆಗಳೇ ಇರಲಿಲ್ಲ. ಆ ಹೆಮ್ಮೆಯೆ ಅಪ್ಪನನ್ನು ಮತ್ತಷ್ಟು ಛಲಗಾರನಾಗಿ ಮಾಡಿತು. ತನ್ನ ರಕ್ತ ಬೆವರನ್ನು ಬಸಿದು ಮಗನೆಂಬ ಆಸ್ತಿಯನ್ನು ಬೆಳೆಸಿದ.

ಮನೆಯನ್ನು ಬಿಟ್ಟರೆ ಆತನಿಗಿರುವ ಕಡೆಯ ಆಸ್ತಿಯೇ ಈ ಮಗ.

ಆದರೆ ಇಂದು ಮಗ ಹೆಸರಿಗಷ್ಟೇ ಇಂಜಿನಿಯರ್. ಆತನ ಭವಿಷ್ಯ ಮಾತ್ರ ತೋಟದ ಕೂಲಿ ಕೆಲಸದವನಿಗಿಂತಲೂ ಅತಂತ್ರ. ಮನೆಯ ಹೆಸರನ್ನು ಬೆಳಗಬೇಕಾದ ಮಗನಿಗೆ ಜೀವನದ ಹಾಫ್ ಸೆಂಚುರಿಯನ್ನು ಪೂರೈಸಿದ್ದ ಅಪ್ಪ ಏನಾದರೊಂದು ದಾರಿಯನ್ನು ಮಾಡಲು ಅವಣಿಸುತ್ತಿದ್ದ. ಮನೆಗೆ ಮೂರೊತ್ತಿನ ಊಟವನ್ನು ವ್ಯವಸ್ಥೆ ಮಾಡುವುದೇ ಹರಸಾಹಸವಾಗಿರುವಾಗ ಮಗನಿಗಾಗಿ ಪ್ರತ್ಯೇಕವಾಗಿ ಏನಾದರು ಮಾಡಲು ಬೇಕಾದ ಸಮಯವಾಗಲಿ, ಹಣವಾಗಲಿ ಮಾತ್ರ ಅಪ್ಪನಲ್ಲಿ ಇರಲಿಲ್ಲ. ತನ್ನ ಕಣ್ಣ ಮುಂದೆಯೇ ಮಗನನ್ನು ಬೆಳೆಸಬೇಕೆಂದು ಮುಂಬೈಯ ಗಾರ್ಮೆಂಟ್ ಕಂಪನಿಯ ಕೆಲಸವನ್ನೂ ಬಿಟ್ಟು ಊರಿಗೆ ಬಂದು ನೆಲೆಗೊಂಡಿದ್ದ ಅಪ್ಪ. ಒಂದು ಪಕ್ಷ ಇಲ್ಲಿಯವರೆಗೂ ಆ ಕಂಪನಿಯಲ್ಲಿ ದುಡಿದ್ದಿದ್ದರೆ ಕಡೆ ಪಕ್ಷ ಒಂದು ನಾಲ್ಕೆಕರೆ ಜಮೀನನ್ನಾದರೂ ಮಾಡಬಹುದಿದ್ದತು ಎಂದು ಅದೆಷ್ಟೋ ಬಾರಿ ಅನಿಸಿದ್ದರೂ ಮನೆ ಹಾಗು ಮನೆಯವರನ್ನು ಬಿಟ್ಟಿರಲು ಅಪ್ಪನಿಗೆ ಸಾಧ್ಯವೇ ಆಗುತ್ತಿರಲಿಲ್ಲ. ಮಗ ಹುಟ್ಟಿದ ಮೇಲಂತೂ ಒಂದು ದಿನವೂ ಆತನಿಗೆ ಅಲ್ಲಿ ನೆಲೆಸಲು ಸಾಧ್ಯವಾಗಿರಲಿಲ್ಲ.

ಸುಣ್ಣದ ಎಕ್ಕೆಗಳ ಪುಡಿ ಮೈಯ ಮೇಲೆ ಬೀಳುತ್ತಿದ್ದರಿಂದ ಅಪ್ಪನಿಗೂ ಅಂದು ನಿದ್ರೆ ಆವರಿಸಲಿಲ್ಲ. ಹುಣ್ಣಿಮೆಯ ಚಂದಿರನ ಬಳದಿಂಗಳು ಹೊರಗೆಲ್ಲ ಪಸರಿಸಿರುವುದನ್ನು ಕಂಡ ಆತ ಬಾಗಿಲನ್ನು ತೆರೆದು ಹೊರಬಂದು ಮನೆಯ ಸಣ್ಣ ಕಾಂಪೌಂಡನ್ನೊರಗಿ ನಿಲ್ಲುತ್ತಾನೆ. ತಂಪಾದ ಗಾಳಿ ಆತನಿಗೆ ಕೊಂಚ ಹಿತವೆನಿಸುತ್ತದೆ. ಆದರೆ ಇಂದು ಅಪ್ಪನಿಗೆ ನಿದ್ರೆ ಬಾರದಿದ್ದಕ್ಕೂ ಹೀಗೆ ಹೊರಬಂದು ಗಾಳಿಗೆ ಮಯೊಡ್ಡಿದಕ್ಕೂ ಎಳ್ಳಷ್ಟೂ ಸಂಬಂಧವಿಲ್ಲ. ಅದೆಷ್ಟೇ ಸೆಕೆಯ ಮಾಸವಾದರೂ ಸರಿಯೇ ಮನೆಯ ನೆಲದ ಮೇಲೆ ಚಾಪೆಹಾಸಿ ಮಲಗಿದರೆ ಸಾಕು, ಕಣ್ತೆರೆಯುತ್ತಿದ್ದದ್ದು ಮರುದಿನ ಮುಂಜಾನೆಯೇ. ಆ ಮನೆಯೇ ಅಂತಹದ್ದು. ಸಿಟಿಯ ಒಳಗಿರುವ ಹಂಚಿನ ಮನೆ. ಅಪ್ಪನ ಅಪ್ಪ ಕಟ್ಟಿಸಿದ ಮನೆ. ಕುಟುಂಬದವರೆಲ್ಲರನ್ನೂ ಸಾಕಿದ ಮನೆ. ಅಪ್ಪ ಕೊಟ್ಟ, ಮುಂದೆ ಮಗನಿಗೆ ಕೊಡಬೇಕಾದ ಮನೆ. ಐವತ್ತು ವರ್ಷದ ಈ ಮನೆ ಅದೆಂಥಹ ಮಹಾ ಗಾಳಿ ಮಳೆಗೂ ಅಲುಗದೆ ನಿಂತಿದೆ. ಹಳೆ ಕಾಲದ ನಿರ್ಮಾಣವನ್ನೂ ಕೊಂಚ ಒಳಗೊಂಡಿದೆ. ಸುತ್ತ ಮುತ್ತ ಕಣ್ಣಾಹಿಸಿದರೂ ಈ ಮನೆಗೆ ಹೋಲುವ ಮಾದರಿಯ ಮತ್ತೊಂದು ಮನೆಯಿಲ್ಲ. ಅಲ್ಲಿರುವುದೆಲ್ಲ ನವ ಮಾದರಿಯ RCC ಮನೆಗಳೇ. ಸಿಟಿಯ ಮಧ್ಯದಲ್ಲಿರುವ ಈ ಹಳೆಕಾಲದ ಹಂಚಿನ ಮನೆ ಗತಿಸಿದ ಕಾಲದ ಏಕಮಾತ್ರ ಪುರಾವೆಯಂತಿದೆ. ಅಲ್ಲದೆ ಅಪ್ಪನೊಟ್ಟಿಗೆ ಬೆಳೆದು ಆತನ ಕಣ ಕಣದಲ್ಲೂ ಬಸಿದುಕೊಂಡಿದೆ, ಆತನ ನೆನಪಿನ ಗಣಿಯಾಗಿದೆ.

ಮನೆ ಕಟ್ಟುವಾಗ ಅಂಬೆಗಾಲಿಟ್ಟು ನೆಡೆದಾಡುತಿದ್ದ ಅಪ್ಪ ಮನೆಕಟ್ಟಲು ತಂದು ಸುರಿದಿದ್ದ ಮರಳನ್ನು ಹಿಡಿ ಹಿಡಿ ತಿಂದು ಅವಾಂತರ ಮಾಡಿಕೊಂಡಿದ್ದ ನೆನಪಾಗಲಿ, ಅಪ್ಪನ ದುಡ್ಡನ್ನು ಕದ್ದು ಸಿಕ್ಕಿಹಾಕಿಕೊಂಡ ಭಯದಲ್ಲಿ ಮನೆಯ ಹಂಚಿನ ತುದಿಗೆ ಯಾರಿಗೂ ಸಿಗದಂತೆ ಹೋಗಿ ಕುಳಿತು ಮನೆಯವರೆಲ್ಲವನ್ನೂ ಸತಾಯಿಸಿದ ಘಳಿಗೆಯಾಗಲಿ, ಅಜ್ಜಿಯ ಮನೆಯಿಂದ ತಂದ ಹಲಸಿನ ಹಣ್ಣನು ಎಲ್ಲರು ನಿದ್ರಿಸುತ್ತಿರುವಾಗ ಅಟ್ಟಕ್ಕೆ ಏರಿ ಒಬ್ಬನೇ ಸುಲಿದು ತಿಂದ ಚಿತ್ರವಾಗಲಿ ಇಂದಿಗೂ ಅಪ್ಪನ ಕಣ್ಣ ಮುಂದೆ ಬರುತ್ತಿರುತ್ತವೆ. ಮನೆಯ ಬಾಗಿಲಿಗೆ ಮುಂದೆಯೆ ನಿರ್ಮಿಸಿದ್ದ ಆ ಮೆಟ್ಟುಲುಗಳಲ್ಲೇ ಅಮ್ಮ ಅಪ್ಪನನ್ನು ಎದೆಗವುಚಿಕೊಂಡು ಲಾಲಿ ಹಾಡುತ್ತಾ ಮಲಗಿಸಿದ ದಿನಗಳೆಷ್ಟೋ. ಸುಮಾರು ಏಳೆಂಟು ವರ್ಷಗಳ ವರೆಗೂ ಅಪ್ಪ ಅಮ್ಮನ ತೊಡೆಯ ಮೇಲೆ ಹಾಗೆಯೆ ತಲೆಯಿಟ್ಟು ಮಲಗುತ್ತಿದ್ದ. ಪ್ರತಿದಿನ.

ಯಾಕೋ ಇಂದು ಅಮ್ಮ ಬಲವಾಗಿ ಆತನಿಗೆ ನೆನಪಾಗತೊಡಗಿದಳು. ಅಮ್ಮ ಕಾಲವಾಗಿ ಹತ್ತು ವರ್ಷಗಳೇ ಆದರೂ ಆಕೆ ಇಲ್ಲದ ಅನುಭವವೇ ಅಪ್ಪನಿಗಾಗಿಲ್ಲ. ಪ್ರತಿದಿನವೂ ಹೀಗೆಯೆ ರಾತ್ರಿಯ ಸಮಯ ಮೆಟ್ಟಿಲುಗಳನ್ನು ನೋಡಿದರೆ ಆಕೆ ಅಲ್ಲೇ ಕೂತು ತನ್ನನ್ನು ಆಕೆಯ ತೊಡೆಯ ಮೇಲೆ ಮಲಗಲು ಕರೆಯುತ್ತಿದ್ದಾಳೆ ಎನಿಸತೊಡಗುತ್ತದೆ. ಒಮ್ಮೆ ಅಲ್ಲಿ ಕೂತರೆ ಸಾಕು, ದಿನದ ಜಂಜಾಟವೆಲ್ಲ ಕ್ಷಣದಲ್ಲೇ ಮಂಗಮಾಯ! ಅಪ್ಪ ಮೆಟ್ಟಿಲುಗಳ ಮೇಲೆ ಹೋಗಿ ಕುಳಿತ. ಗಾಳಿ ಇನ್ನೂ ಹಿತವಾಗಿ ಬೀಸತೊಡಗಿತ್ತು. ತನ್ನ ಹೆಂಡತಿ, ಮಗನಿಗೆ ಸುಮ್ಮನೆ ಮಲಗಲು ಮತ್ತೊಮ್ಮೆ ಕೂಗಿದ್ದು ಕೇಳಿಸಿತು.

ಯೋಚಿಸತೊಡಗಿದ ಅಪ್ಪ. ಮಗನ ಜೀವನದ ಬಗ್ಗೆ, ಆತನ ನಾಳೆಗಳ ಬಗ್ಗೆ. ಮನೆಯೊಂದನ್ನು ಬಿಟ್ಟರೆ ಮಗನಿಗೆ ಕೊಡಲು ಆತನಲ್ಲಿ ಬೇರೇನೂ ಇಲ್ಲ. ಒಮ್ಮೆ ಮಗ ತನ್ನ ಸ್ವಂತ ಕಾಲ ಮೇಲೆ ನಿಂತರೆ ಸಾಕು, ಅಪ್ಪನ ವರ್ಷಗಳ ತಪಸ್ಸಿಗೆ ವರ ದೊರಕಿದಂತಾಗುತ್ತದೆ. ಬಿಲ್ ಕಲೆಕ್ಟರ್ ಹುದ್ದೆಯ ಹೊರಒಳಗುಗಳನ್ನು ಚೆನ್ನಾಗಿ ಅರಿತಿದ್ದ ಅಪ್ಪ, ಮಗನನ್ನು ಒಬ್ಬ ಗಿಂಬಳದ ಆಸೆಗೆ ದುಡಿಯುವ ನೌಕರನನ್ನಾಗಿ ಖಂಡಿತ ನೋಡಲಾರ. ಆದ ಕಾರಣಕ್ಕೆ ಒಳಗೆ ಅದೆಷ್ಟೇ ಮೃದು ಸ್ವಭಾವದವನಾಗಿದ್ದರೂ ಮಗನ ಮುಂದೆ ಮಾತ್ರ ಬಹಳ ಸೀರಿಯಸ್ ಆಗಿಯೇ ವರ್ತಿಸುತ್ತಿದ್ದ. ಆತ ಕೇಳಿದಕ್ಕೆಲ ಹುಂ ಅನ್ನದೆ ಒಂದು ಬಗೆಯ ಅದ್ದುಬಸ್ತಿನಲ್ಲೇ ಮಗನನ್ನು ಇರಿಸಿಕೊಂಡಿದ್ದ. ಆದ ಕಾರಣವೇ ಎರಡು ತಿಂಗಳ ಮೊದಲೇ ಬಿಲ್ ಕಲೆಕ್ಟರ್ ಹುದ್ದೆ ಇದೆಯೆಂದು ತಿಳಿದರೂ ಇಂದಿನವರೆಗೂ ಅವನ ಕೋರಿಕೆಗೆ ಅಸ್ತು ಎಂದಿರಲಿಲ್ಲ. ಆದರೆ ಅದೆಷ್ಟೇ ಅದ್ದುಬಸ್ತಿನಲ್ಲಿ ಇರಿಸಿಕೊಂಡಿದ್ದರೂ ಮಗನನ್ನು ತನ್ನಂತೆ ಒಬ್ಬ ಛಲಗಾರನಾಗಿ ಮಾಡಲಾಗಲಿಲ್ಲ ಎಂಬ ಕೊರಗು ಅಪ್ಪನಲ್ಲಿ ಇದೆ. ಪ್ರಸ್ತುತ ಪರಿಸ್ಥಿತಿಯೂ ಇಂಜಿನಿಯರಿಂಗ್ ಓದಿದವರಿಗೆ ಅಷ್ಟೇನೂ ಪೂರಕವಾಗಿಲ್ಲದಿರುವುದೂ ಅಪ್ಪನ ಸುಮ್ಮನಿರುವಿಕೆಗೆ ಒಂದು ಕಾರಣವಾಗಿದ್ದಿತು. ಮೆಟ್ಟಿಲುಗಳ ಮೇಲೆ ಕೂತ ಅಪ್ಪನಿಗೆ ಇಂದು ಏಳಲು ಮನಸ್ಸೇ ಬರುತ್ತಿಲ್ಲ. ಕೂತಷ್ಟೂ ಇನ್ನೂ ಕೂರಬೇಕು ಎಂದನಿಸತೊಡಗುತ್ತದೆ. ಆದರೆ ಎಂದಿನಂತೆ ಇಂದು ಮಾತ್ರ ಆತನ ತಲೆಯನ್ನು ಕೊರೆಯುತ್ತಿದ್ದ ಚಿಂತೆ ಮಾತ್ರ ಕೆಳಗಿಳಿಯಲಿಲ್ಲ.

ಬುದ್ದಿ ಪಕ್ವತೆಯ ಹಾದಿಯನ್ನು ಹಿಡಿದಾಗಿನಿಂದಲೂ ಅಪ್ಪನನ್ನು ಕಂಡರೆ ಅಷ್ಟಕಷ್ಟೇ ಮಗನಿಗೆ. ಯಾವಾಗಲೂ ಸೀರಿಯಸ್ಸಾಗಿ ಕೋರ್ಟಿನ ಜಡ್ಜ್ ನಂತೆ ಇರುವ ಅಪ್ಪನೊಟ್ಟಿಗೆ ಮಗ ಮಾತಾಡುತ್ತಿದ್ದದ್ದೇ ಬಲು ಅಪೂರ್ವ. ಸಣ್ಣವನಿದ್ದಾಗ ಅವರ ಈ ಗುಣ ಹೆಚ್ಚು ಹಿಡಿಸದಿದ್ದ ಅವನಿಗೆ ದೊಡ್ಡವನಾಗುತ್ತಾ ಅವರ ಹಿಂದಿನ ಒಂದೊಂದು ನಿರ್ಧಾರಗಳ ಬಗ್ಗೆಯೂ ಸಿಟ್ಟು ಬರತೊಡಗುತ್ತದೆ. ಅದು ದೂರದ ಮುಂಬೈಯಲ್ಲಿ ಗಾರ್ಮೆಂಟ್ ಕಂಪನಿಯೊಂದರ ಮ್ಯಾನೇಜರ್ ಆಗಿದ್ದ ಕೆಲಸವನ್ನು ಬಿಟ್ಟು ಊರಿಗೆ ವಾಪಾಸ್ ಬಂದದ್ದಾಗಲಿ ಅಥವಾ ಕೆಲ ವರ್ಷಗಳ ಹಿಂದೆ ಒಂದೊಳ್ಳೆ ಪಾರ್ಟಿ ಇಪ್ಪತ್ತು ಲಕ್ಷ ರೂಪಾಯಿಗೆ ಮನೆಯನ್ನು ಕೊಂಡುಕೊಳ್ಳುತ್ತೇನೆ ಎಂದರೂ ಒಪ್ಪದ ನಿರ್ಧಾರವಾಗಲಿ ಅಥವಾ ಇತ್ತೀಚಿಗೆ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಹುದ್ದೆಗೂ ಅಸ್ತು ಎನ್ನದೆ ಸತಾಯಿಸುತ್ತಿದ್ದ ಅಪ್ಪನನ್ನು ಕಂಡರೆ ಉರಿದು ಬೀಳುತಿದ್ದ ಮಗ. ತನ್ನ ಪ್ರಸ್ತುತ ಅವಸ್ಥೆಗೆ ಒಂದಿಲ್ಲೊಂದು ಬಗೆಯಲ್ಲಿ ಅಪ್ಪನೇ ಕಾರಣವೆಂಬ ಮನಸ್ಥಿತಿಯನ್ನು ಆತ ಬೆಳೆಸಿಕೊಂಡಿರುತ್ತಾನೆ. ಬೆಳಗ್ಗೆದ್ದರೆ ತನ್ನಂತೆಯೇ ಇಂಜಿನಿಯರಿಂಗ್ ಮಾಡಿ ಕೆಲಸ ಸಿಗದೇ ಅಲೆಯುತ್ತಿದ್ದ ಊರಿನ ಇನ್ನಿತರ ಹುಡುಗರನ್ನು ಕಟ್ಟಿಕೊಂಡು ಸುತ್ತುತಿದ್ದ . ದಿನವಿಡಿ ಈಗಿರುವ ಶಿಕ್ಷಣ ವ್ಯವಸ್ಥೆಗೆ, ತಾವು ಓದಿದ ಶಿಕ್ಷಣ ಸಂಸ್ಥೆಗಳಿಗೆ, ತಮಗೆ ಕೆಲಸ ಕೊಡದ ಕಂಪನಿಗಳಿಗೆ ಶಪಿಸುತ್ತಾ, ಕೆಲವೊಂದು ಬಿಸಿನೆಸ್ ಪ್ಲಾನ್ ಗಳನ್ನು ಹಣೆಯುತ್ತ ಕಾಲಹರಣ ಮಾಡುತಿದ್ದ.

ಆದರೆ ಇಂದು ಮಾತ್ರ ಮಗನಿಗೆ ತನ್ನ ಹೊಸ ಬಗೆಯ ಬಿಸಿನೆಸ್ ಪ್ಲಾನ್ ಬಹಳ ಸತಾಯಿಸುತ್ತಿದೆ. ಗೆಲುವಿನ ಖಚಿತತೆಯ ಬೆಗ್ಗೆ ಎಳ್ಳಷ್ಟೂ ಅನುಮಾನವಲ್ಲ ಅವನಿಗೆ! ಇದನ್ನು ಗೆಳೆಯರೊಟ್ಟಿಗೆ ಸೇರಿ ಮಾಡಬೇಕಾ ಅಥವಾ ತಾನೇ ಖುದ್ದಾಗಿ ಬಂಡವಾಳ ಹೂಡಿ ಶುರುಮಾಡಬೇಕಾ ಎಂಬ ಗೊಂದಲದಲ್ಲಿ ಆತ ಮುಳುಗುತ್ತಾನೆ. ಗೆಳೆಯರನ್ನು ಒಟ್ಟುಗೂಡಿ ಶುರುವಿಟ್ಟುಕೊಂಡರೆ ಗೆಳೆತನ ಹಾಗು ಹಣ ಎಂದಿಗೂ ಎಣ್ಣೆ-ನೀರಿನಂತೆ ಎಂಬುದ ಆತ ಚೆನ್ನಾಗಿ ಬಲ್ಲ. ಒಂದು ಪಕ್ಷ ತಾನೇ ಎಲ್ಲ ಜವಾಬ್ದಾರಿಯನ್ನು ಹೊತ್ತು ಮಾಡ ಹೊರಟರೆ ಕನಿಷ್ಠ ಎಂದರೂ ಹತ್ತರಿಂದ ಹನ್ನೆರಡು ಲಕ್ಷಗಳಷ್ಟು ಬಂಡವಾಳ ಬೇಕು. ಹತ್ತು ಲಕ್ಷಗಳು ಹೋಗಲಿ, ಕಡೆ ಪಕ್ಷ ಹತ್ತು ಸಾವಿರಗಳಾದರೂ ತನ್ನಲ್ಲಿ ಅಥವಾ ಅಪ್ಪನೊಟ್ಟಿಗಾಗಲಿ ಇಲ್ಲ ಎಂಬುದು ಮಗನಿಗೆ ಗೊತ್ತು. ಅಪ್ಪನನ್ನು ಕೇಳಿದರೆ ಆತನಿಂದ ಆಗದು. ಒಂದು ಪಕ್ಷ ಸಾದ್ಯವಾಗುತ್ತಿದ್ದಾದರೂ ಇಂತಹ ಹೆಚ್ಚಿನ ಖರ್ಚುಗಳಿಗೆಲ್ಲ ಆತ ಸಮ್ಮತಿಸುತ್ತಿರಲೂ ಇಲ್ಲ. ಆದರೂ ಅಪ್ಪ ಏನಾದರೊಂದು ವ್ಯವಸ್ಥೆ ಮಾಡಬಹುದೇ ಎಂಬ ಪ್ರೆಶ್ನೆ ಮಗನಲ್ಲಿ ಮೂಡುತ್ತದೆ. ಅಪ್ಪನನ್ನು ಬಿಟ್ಟರೆ ಯಾರಿದ್ದಾರೆ ತನಗೆ ಸಹಾಯ ಮಾಡಲು? ಕೊನೆಯ ಸಾಲುಗಳನ್ನು ಮಗ ತನ್ನೊಳಗೆ ಹೇಳಿಕೊಳ್ಳುತ್ತಿರುವಾಗ ಮಾತ್ರ ಏನೋ ಒಂದು ಬಗೆಯ ದಿಗ್ಬ್ರಮೆ ಮೂಡುತ್ತದೆ. ಇಷ್ಟು ವರ್ಷಗಳ ಕಾಲದಲ್ಲಿ ಒಮ್ಮೆಯೂ ಸಹ ಇಂತಹ ಒಂದು ಭಾವ ಆತನಲ್ಲಿ ಮೂಡಿರಲಿಲ್ಲ. ಅಪ್ಪನನ್ನು ಬಿಟ್ಟರೆ ನನಗೆ ಮತ್ಯಾರು?!

ಮಾರನೆಯ ದಿನದ ಸಂಜೆ ಮನೆಯ ಮೆಟ್ಟಿಲುಗಳ ಮೇಲೆ ಕೂತಿದ್ದ ಅಪ್ಪನ ಮುಂದೆ ಬಂದು ಕೂತ ಮಗ ತಾನು ಯೋಚಿಸಿದ್ದ ಯೋಜನೆಯನ್ನು ತನ್ನ ಪಾಡಿಗೆ ತಾನು ಹೇಳಿಕೊಂಡು ಹೋಗುತ್ತಾನೆ. ಅದು ಅಪ್ಪನ ಕಿವಿಗೆ ಬೀಳುತ್ತಿದೆ ಎಂಬುದ ತಿಳಿದೇ ಶುರು ಮಾಡುತ್ತಾನೆ. ಮನೆಯ ಬಾಗಿಲಿಗೆ ತಲೆಯನ್ನು ಒರಗಿ ಚಿಂತಿಸುತ್ತಿದ್ದರೂ ಒಂದು ಬಗೆಯ ಗಾಂಭೀರ್ಯತೆ ಅಪ್ಪನ ಮುಖದ ಮೇಲೆ ಮೂಡಿರುತ್ತದೆ.

'ಇದನ್ನು ಬಿಸಿನೆಸ್ ಅಂತ ಬೇರೆಯವರು ಕರೆಯಬಹದು. ಆದರೆ ನಾನು ಇದನ್ನು ಸೋಶಿಯಲ್ ಸರ್ವಿಸ್ ಅಂತಾನೆ ಕರೀತೀನಿ. ಯಾಕಂದ್ರೆ ಇಲ್ಲಿ ಪ್ರಯೋಜನಕ್ಕೊಳಪಡುತ್ತಿರುವವರು ವಿದ್ಯಾರ್ಥಿಗಳು, ಕಾಲೇಜುಗಳು, ಹಾಗು ಕಂಪನಿಗಳು. ಹೌದು, ಇದೊಂದು ಟ್ರೈನಿಂಗ್ ಇನ್ಸ್ಟಿಟ್ಯೂಟ್. ನಮ್ಮ ತಾಲೂಕಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅದೆಷ್ಟೇ ಉತ್ತಮ ಅಂಕಗಳನ್ನೂ ಗಳಿಸಿಕೊಂಡಿದ್ದರೂ ಯಾವೊಂದು ಕಂಪನಿಯೂ ಬೆಂಗಳೂರಿನ ಕಾಲೇಜುಗಳಿಗೆ ಬರುವಂತೆ ಸೆಮಿಸ್ಟರ್ ಮುಗಿಯುವ ಮೊದಲೇ ಇಲ್ಲಿಯ ಕಾಲೇಜುಗಳಿಗೆ ಬಂದು ನೂರಾರು ವಿದ್ಯಾರ್ಥಿಗಳನ್ನು ಹೆಕ್ಕಿ ಕರೆದುಕೊಂಡು ಹೋಗುವುದಿಲ್ಲ. ಹಳ್ಳಿಯ ವಿದ್ಯಾರ್ಥಿಗಳು ಕಾಲೇಜು ಮುಗಿದು ವರ್ಷಾನುಗಟ್ಟಲೆ ಬೆಂಗಳೂರಿನಂತ ನಗರಗಳಲ್ಲಿ ಕೆಲಸಕ್ಕಾಗಿ ಅಲೆಯಬೇಕು. ಸಿಕ್ಕರೂ ಅಂತ ಕೆಲಸಗಳಿಂದ ಬರುವ ಸಂಬಳ ಬಟ್ಟೆಗಾದರೆ ಹಿಟ್ಟಿಗಿಲ್ಲ, ಹಿಟ್ಟಿಗಾದರೆ ಬಟ್ಟೆಗಿಲ್ಲ ಎಂಬಂತೆ. ಇನ್ನು ಸಾಧಾರಣ ವಿದ್ಯಾರ್ಥಿಗಳಿಗಂತೂ ಕೆಲಸವೆಂಬುದು ಹಿಮಾಲಯ ಪರ್ವತವೇ ಸರಿ. ಊರಿನಿಂದ ಅಷ್ಟೋ ಇಷ್ಟೋ ಹಣವನ್ನು ಹಿಡಿದುಕೊಂಡು ಹೋಗಿ, ಯಾವುದೊ ಗೆಳೆಯನ ಒಂದು ರೂಮಿನ ಮೂಲೆಯಲ್ಲಿ ಒಂದಿಷ್ಟು ಜಾಗವನ್ನು ಪಡೆದು ದಿನವಿಡೀ ಸಿಟಿಯ ಗಲ್ಲಿಮೂಲೆಗಳನ್ನು ಸುತ್ತುತ್ತಾ, ಕಂಡ ಕಂಡಲ್ಲೆಲ್ಲ ಇಂಟರ್ವ್ಯೂ ಗಳನ್ನು ಕೊಡುತ್ತಾ, ಹಣ ಖಾಲಿಯಾಗುತ್ತಿರುವಂತೆ ಏರೊಡೊತ್ತಿನ ಊಟವನ್ನು ಒಂದೊತ್ತಿಗೆ ಸೀಮಿತವಾಗಿರಿಸಿಕೊಳ್ಳುತ್ತಾ, ಕೊನೆಕೊನೆಗೆ ಕೇವಲ ಟೀ ಬನ್ನುಗಳಲ್ಲೇ ದಿನವನ್ನು ಸಾಗಿಸುತ್ತ, ಆಗಲೂ ಕೆಲಸ ಸಿಗದೇ ಕೊನೆಗೆ ಊರಿನ ಯಾರೋ ಒಬ್ಬರನ್ನು ಸಿಟಿಯಲ್ಲಿ ಕಂಡು ಅವರಿಂದ ಒಂದಿಷ್ಟು ಹಣವನ್ನು ಸಾಲದ ರೂಪದಲ್ಲಿ ಪಡೆದು ಇದ್ದೆನೋ ಬಿದ್ದೆನೋ ಎಂಬಂತೆ ಊರಿಗೆ ಸೇರುವ ಇಂತಹ ಯುವಕರನ್ನು ಎಂಜಿನೀರ್ಸ್ ಗಳು ಎಂದು ಕರೆಯಬಹುದೇ?’

ಅಪ್ಪ ಯಾವ ಭಾವವನ್ನೂ ಸೂಚಿಸದೆ ಕೇಳಿಸಿಕೊಳ್ಳುತ್ತಿರುತ್ತಾನೆ. ಆದರೂ ಮಗ ಮುಂದುವರೆಸಿದ,

'ನಾನು ಶುರು ಮಾಡಲೋಗುತ್ತಿರುವ ಇನ್ಸ್ಟಿಟ್ಯೂಟ್ ಮೊದಲು ಕಂಪನಿಗಳನ್ನು ಸಂಪರ್ಕಿಸಿ ಅವರು ಪ್ರಸ್ತುತ ವರ್ಷಕ್ಕೆ ನೇಮಕಾತಿ ಮಾಡಲು ಯೋಜಿಸಿರುವ ವಿದ್ಯಾರ್ಥಿಗಳ ಅರ್ಹತೆ, ಬೇಡಿಕೆ ಹಾಗು ಒಟ್ಟು ಸಂಖ್ಯೆಯನ್ನು ಒಟ್ಟುಗೂಡಿಸಿಕೊಂಡು ಬರುತ್ತದೆ. ಹೀಗೆ ಎಂಟತ್ತು ಕಂಪನಿಗಳನ್ನು ಸಂಪರ್ಕಿಸಿ ವಿವರಗಳನ್ನು ಗುರುತಾಕಿಕೊಂಡು ಕಾಲೇಜನ್ನು ಸಂಪರ್ಕಿಸುವುದು. ಕಾಲೇಜಿನಲ್ಲಿ ತಮ್ಮಲ್ಲಿರುವ ವಿವರಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯಾ ವಿಷಯದ್ಲಲಿಯೇ ಸಂಜೆ ಕಾಲೇಜು ಮುಗಿದ ಬಳಿಕ ಅಥವಾ ವಾರಾಂತ್ಯದಲ್ಲಿ ತರಬೇತಿಯನ್ನು ನೀಡುವುದು. ಉದಾಹರಣೆಗೆ ಇಂದು ಒಬ್ಬ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮಾಡಿದ ವಿದ್ಯಾರ್ಥಿ ಹೆಚ್ಚಾಗಿ ಆಯ್ಕೆಯಾಗುತ್ತಿರುವುದು ಪ್ರೋಗ್ರಾಮಿಂಗ್ ಆಧಾರಿತ ಕೆಲಸಗಳ ಮೇಲೆಯೇ. ಅಂದರೆ ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಾಡಬೇಕಾದ ಕೆಲಸ. ಇದು ಅವನ ಸ್ವಂತದ್ದ ಆಯ್ಕೆಯಾಗದಿದ್ದರೂ ಪ್ರಸ್ತುತ ಪರಿಸ್ಥಿತಿ ಆತನನ್ನು ಮೂಕನನ್ನಾಗಿಸುತ್ತದೆ. ಹಾಗಾದರೆ ಕೊನೆಗೆ ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಾಡುವ ಕೆಲಸವನ್ನೇ ಈತ ಮಾಡಬೇಕಾದರೆ ಬೇರೆ ವಿಷಯಗಳನ್ನು ತನ್ನ ನಾಲ್ಕು ವರ್ಷಗಳ ಕಲಿಕೆಯಲ್ಲಿ ಕಲಿತು ಏನು ಪ್ರಯೋಜನ? ಇಂದು ಬಹುಪಾಲು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಗೋಳು ಇದೆಯೇ. ಓದುವುದು ಒಂದು ಮಾಡುವುದು ಬೇರೊಂದು! ನಾನು ಶುರು ಮಾಡುವ ಇನ್ಸ್ಟಿಟ್ಯೂಟ್, ಕಂಪನಿಗಳಿಂದ ಕರಾರುವಕ್ಕಾಗಿ ಡೇಟಾಗಳನ್ನು ಸಂಗ್ರಹಿಸಿ ಅವರವರ ಐಚ್ಚಿಕ ವಿಷಯಗಳಲ್ಲೇ ತರಬೇತಿಯನ್ನು ನೀಡುತ್ತದೆ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವರ ವಲಯದಲ್ಲಿನದೇ ಕಂಪನಿಗಳ ಅಗತ್ಯದ ಮೇರೆಗೆ ತರಬೇತಿಯನ್ನು ನೀಡುತ್ತದೆ. ಅದೂ ಸಹ ಕೆಲಸ ದೊರೆತ ಮೊದಲ ಆರು ತಿಂಗಳು ಕಂಪೆನಿಗಳಲ್ಲಿ ನೀಡುವ ತರಬೇತಿಯಂತೆಯೆ. ಸಾದ್ಯವಾದರೆ ಈ ತರಬೇತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಕೊನೆಯ ವರ್ಷದ ಪ್ರೊಜೆಕ್ಕ್ಟ್ ಅನ್ನೂ ಸಹ ಮಾಡಿಕೊಳ್ಳಬಹುದು.

ಈಗ ನನ್ನ ಸಂಸ್ಥೆಯ ಪ್ರಯೋಜನಕ್ಕೆ ಬಂದರೆ, ಮೊದಲು ವಿದ್ಯಾರ್ಥಿಗಳು ಅವರವರ ಐಚ್ಚಿಕ ವಿಷಯಗಳಲ್ಲೇ ವೃತ್ತಿ ಆಧಾರಿತ ತರಬೇತಿಯನ್ನು ಪಡೆದು ವರ್ಷಾಂತ್ಯದ ಹೊತ್ತಿಗೆ ರೆಡಿಯಾಗಿರುತ್ತಾರೆ. ಇದರಿಂದ ಕಂಪನಿಗಳಿಗೂ ತರಬೇತಿಯ ಹೊರೆ ಕಡಿಮೆಯಾಗಿ ಅವರಿಗಿಚ್ಚಿಸಿದ ವಿದ್ಯಾರ್ಥಿಗಳೇ ತಯಾರಾಗಿ ನಿಂತಿರುತ್ತಾರೆ. ಎಲ್ಲಾ ಬಗೆಯ ಕಂಪನಿಗಳು ತಾವು ನಿರಾಳವಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬಹುದು. ಅಲ್ಲದೆ ಮೊದಲ ದಿನದಿಂದಲೇ ಉದ್ಯೋಗಿಗಳ ಪೂರ್ಣ ಲಾಭವನ್ನು ಪಡೆಯಬಹುದು. ಒಂದು ಪಕ್ಷ ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಕಂಪನಿಗಳಲ್ಲಿ ಆಯ್ಕೆಯಾಗದಿದ್ದರೂ ಅವರಿಗೊಂದು ವೃತ್ತಿ ಆಧಾರಿತ ತರಬೇತಿ ಆಗಲೇ ಆಗಿರುತ್ತದೆ. ಇದು ಕೇವಲ ಪದವಿ ಪ್ರಮಾಣಪತ್ರವನ್ನು ಹಿಡಿದು ಕೆಲಸವನ್ನು ಅರಸುವುದಕಿಂತ ಎಷ್ಟೋ ವಾಸಿ.ಅಲ್ಲದೆ ಹಳ್ಳಿಗಳ ಕಾಲೇಜುಗಳಿಗೂ ಹೆಚ್ಚೆಚ್ಚು ಕಂಪನಿಗಳು ಬರುವುದರಿಂದ ಕಾಲೇಜಿಗೂ ಒಳ್ಳೆಯ ಹೆಸರು, ಹಳ್ಳಿಯ ವಿದ್ಯಾರ್ಥಿಗಳಿಗೂ ಒಂದೊಳ್ಳೆಯ ಅವಕಾಶ ದೊರೆತಂದಾಗುತ್ತದೆ.’ ಎಂದು ಸುಮ್ಮನಾಗುತ್ತಾನೆ.

ಕೆಲಹೊತ್ತು ಸುಮ್ಮನೆ ಕೂತು ಅಪ್ಪನಿಂದ ಯಾವುದೇ ಪ್ರತ್ಯುತ್ತರ ಬಾರದಿದ್ದನ್ನು ಕೇಳಿ ಮಗ ಸಿಟ್ಟಿನಿನ ಅಲ್ಲಿಂದ ಎದ್ದು ಹೊರನೆಡೆಯುತ್ತಾನೆ, ಅಪ್ಪನ ಮುಖವನ್ನೂ ತಿರುಗಿ ನೋಡದೆ. ಒಂದು ಪಕ್ಷ ನೋಡಿದ್ದರೆ ಹೆಮ್ಮೆಯಿಂದ ಪ್ರಜ್ವಲಿಸುತ್ತಿರುವ ಕಣ್ಣುಗಳ ಕಾಂತಿಗೆ ಮಗ ದಂಗಾಗಿ ಹೋಗಿರುತ್ತಿದ್ದ!!...

ಮಗ ತನ್ನಲ್ಲಿ ಬಂದು ಆತನ ಬಿಸಿನೆಸ್ ಪ್ಲಾನ್ ನನ್ನು ಹೇಳಿದ ದಿನದಿಂದಲೂ ಅಪ್ಪನಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿದ್ದೆ. ಇಂತಹ ಉತ್ಕೃಷ್ಟವಾದ ಯೋಜನೆ ಮಗನಲ್ಲಿ ಮೂಡಬಹುದು ಎಂದರೆ ಆತ ಮುಂದೆ ಅದೆಷ್ಟು ಉನ್ನತಿಯನ್ನು ಗಳಿಸಬಹುದು ಎಂದು ಯೋಚಿಸಿದಷ್ಟೂ ಸಂತೋಷದ ಅಲೆಗಳು ಒಂದರಿಂದೊಂದು ಮೇಲೇರಿ ಅವನನ್ನು ಅಪ್ಪಳಿಸತೊಡಗುತ್ತವೆ. ಪ್ರತಿ ನಿಮಿಷ ಪ್ರತಿ ಘಳಿಗೆಯೂ ಆತನ ಆ ಇನ್ಸ್ಟಿಟ್ಯೂಟ್ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಆದರೆ ಅದಕ್ಕೆ ಬೇಕಾದ ಬಂಡವಾಳವಾಗಲಿ ಅಥವಾ ಇನ್ಯಾವ ಬಗೆಯ ಬೆಂಬಲವಾಗಲಿ ಆತನಿಗೆ ತಿಳಿದಿಲ್ಲ. ಹೆಂಡತಿಯೊಂದಿಗೆ ಅದರ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಾನೆ. ಈ ಪ್ರಾಜೆಕ್ಟ್ ನನ್ನು ಮಗನೆ ಖುದ್ದಾಗಿ ಪ್ರಾರಂಭಿಸಲು ಕಡೆ ಪಕ್ಷ ಹನ್ನೆರಡು ಲಕ್ಷಗಳು ಬೇಕೆಂದು ತಿಳಿದುದಂಗಾಗಿ ಹೋಗುತ್ತಾನೆ. ಎಷ್ಟೇ ಯೋಚಿಸಿದರೂ ಅಷ್ಟೊಂದು ಮೊತ್ತದ ಹಣವನ್ನು ಹೊಂದಿಸುವುದು ಹೇಗೆಂದು ಆತನಿಗೆ ತಿಳಿಯುವುದಿಲ್ಲ.

ಮಗನಿಗಂತೂ ಅಪ್ಪನ ಮೇಲೆ ಭರವಸೆ ಎಂಬುದೇ ಉಳಿದಿರುವುದಿಲ್ಲ. ಯಾವುದೇ ಬಗೆಯ ಬಂಡವಾಳವಾದರೂ ಅಪ್ಪನ ಬಳಿ ಇದ್ದದ್ದು ಕೇವಲ ಮನೆಯೊಂದೇ ಮಾತ್ರ. ಆತ ಏನಿದ್ದರೂ ಅದನ್ನು ಮಾರಿಯೇ ಮಗನ ಕನಸಿನ ಗೋಪುರವನ್ನು ಕಟ್ಟಿಕೊಡಬೇಕು. ಆದರೆ ಕುಟುಂಬದ ಇತರ ಸದಸ್ಯರಲ್ಲಿ ಒಂದಾಗಿದ್ದ, ತನ್ನ ಅಮ್ಮನನ್ನು ದಿನವೂ ಕಾಣುತಿದ್ದ, ತನ್ನ ಸರ್ವಸ್ವವೇ ಆಗಿದ್ದ ಮನೆಯನ್ನು ಅಪ್ಪ ಅಷ್ಟು ಸುಲಭವಾಗಿ ಮಾರಬಲ್ಲನೆ? ಆದರೆ ದಿನೇ ದಿನೇ ಮಗನ ಜೋತುಬಿದ್ದ ಮುಖವನ್ನು ಮಾತ್ರ ಆತನಿಂದ ನೋಡಲಾಗುತ್ತಿರಲಿಲ್ಲ.

ಅಂದು ಬೆಳಗ್ಗೆ ಮೊದಲ ಬಾರಿ ಏನೋ ಎಂಬಂತೆ ಮುಂಜಾನೆ ಆರರ ಹೊತ್ತಿಗೆ ಮಗನ ಕಣ್ಣುಗಳು ಒಮ್ಮೆಲೇ ತೆರೆದವು. ಎಷ್ಟೇ ಪ್ರಯತ್ನಿಸಿದರೂ ಮತ್ತೊಮ್ಮೆ ಮಲಗಲು ಸಾದ್ಯವಾಗುವುದಿಲ್ಲ. ಎದ್ದು ಇನ್ನೇನು ಅಟ್ಟದಿಂದ ಕೆಳಗಿಳಿಯಬೇಕು ಅನ್ನುವಷ್ಟರಲ್ಲೇ ಅಪ್ಪನ ಹಳೆಯ ಕಬ್ಬಿಣದ ಟ್ರಂಕು ಮಗನ ಕಣ್ಣಿಗೆ ಬೀಳುತ್ತದೆ. ಚಿಕ್ಕವನಿದ್ದಾಗ ಅಪ್ಪನನ್ನು ಅದೆಷ್ಟೇ ಕಾಡಿ ಬೇಡಿದರೂ ಒಮ್ಮೆಯೂ ಆತ ಅದರ ಕೀಲಿಯನ್ನು ಮಗನಿಗೆ ನೀಡಿರಲಿಲ್ಲ. ಈಗೆಲ್ಲ ಅದರ ಕೀಲಿಯನ್ನು ಮನೆಯ ಬಾಗಿಲಿಗೆ ಬಳಸುತ್ತಿದ್ದರಿಂದ ಟ್ರಂಕನ್ನು ಹಾಗೆಯೆ ಬಿಡಲಾಗಿದ್ದಿತು. ಆದರೆ ಒಮ್ಮೆಯೂ ಅದನ್ನು ತೆಗೆಯುವ ಗೋಜಿಗಂತೂ ಮಗ ಹೋಗಿರಲಿಲ್ಲ. ರದ್ದಿಯವನಿಗೆ ಅದನ್ನು ಮಾರಿ ಅಟ್ಟದ ಜಾಗವನ್ನು ಒಂತಿಷ್ಟು ವಿಸ್ತರಿಸಬೇಕೆಂಬುದಷ್ಟೇ ಆತನ ತಲೆಯಲ್ಲಿ ಕೆಲ ದಿನಗಳಿಂದ ಕೊರೆಯುತ್ತಿತ್ತು.

ಅದ್ಯಾಕೋ ಇಂದು ಒಮ್ಮೆ ಅದನ್ನು ತೆಗೆದು ನೋಡಬೇಕಂಬ ಮನಸ್ಸಾಯಿತು. ಅಟ್ಟದಿಂದ ಇಳಿಯುತಿದ್ದವ ಮತ್ತೊಮೆ ಮೇಲೇರಿ ಹೋಗುತ್ತಾನೆ. ಸದ್ದಾಗದಂತೆ ಟ್ರಂಕನ್ನು ಹಾಸಿಗೆಯ ಬಳಿಗೆಳೆದು ತೆರೆಯುತ್ತಾನೆ.

ಟ್ರಂಕನ್ನು ತೆರೆದ ಕೆಲ ಕ್ಷಣಗಳು ಮಗನಿಗೆ ಮಾತೆ ಹೊರಡದಂತಾಗುತ್ತದೆ. ತಾನು ಅಂಬೆಗಾಲಿಟ್ಟು ಚಲಿಸುತ್ತಿದ್ದಾಗಿನಿಂದ ಹಿಡಿದು ಕಳೆದ ವರ್ಷ ಹಳೆಯದಾಯಿತು ಬೇಡವೆಂದು ಬಿಸಾಡಿದ್ದ ಶರ್ಟನ್ನೂ ಅದರಲ್ಲಿ ನೀಟಾಗಿ ಮಡಚಿ ಇಡಲಾಗಿದ್ದಿತು. ಇಷ್ಟು ವರ್ಷಗಳು ಕಳೆದರೂ ತಾನು ಚಿಕ್ಕವನಿದ್ದಾಗ ಹಾಕಿಕೊಳ್ಳಲು ಹಟಮಾಡುತ್ತಿದ್ದ ನೀಲಿಯ ಬಣ್ಣದ ಮಂಕಿ ಟೋಪಿ ಇನ್ನೂ ಹಾಗೆಯೇ ತನ್ನ ಹೊಳಪನ್ನು ಕಳೆದುಕೊಳ್ಳದೆ ಇಡಲ್ಪಟ್ಟಿತ್ತು! ಮಗ ಟೋಪಿಯನ್ನು ತೆಗೆದು ಹಾಕಿಕೊಳ್ಳಲು ಯತ್ನಿಸುತ್ತಾನೆ. ಆಗುವುದಿಲ್ಲ. ಬಟ್ಟೆಗಳ ತಳದಲ್ಲಿ ಬೆಳ್ಳಿಯ ಕಾಲುಂಗುರ, ಗಾಜಿನ ಬಳೆಗಳ ಚೂರುಗಳು ಸಿಗುತ್ತವೆ. ಅವು ತನ್ನ ಅಜ್ಜಿಯ ವಸ್ತುಗಳು ಎಂದರಿಯಲು ಮಗನಿಗೆ ಹೆಚ್ಚು ಸಮಯ ಹಿಡಿಯುವುದಿಲ್ಲ. ಯಾಕೋ ಎದೆ ಬಾರವಾಯಿತ್ತೆಂದೆನಿಸುತ್ತದೆ. ಟ್ರಂಕಿನ ಒಂದು ಮೂಲೆಯಲ್ಲಿ ಉದ್ದದೊಂದು ನೋಟ್ ಬುಕ್ಕು ಇರುವುದನ್ನು ಕಂಡು ಮಗ ಅದನ್ನು ಕೈಗೆತ್ತಿಕೊಳ್ಳುತ್ತಾನೆ. ಅಪ್ಪನ ಆಸ್ತಾಕ್ಷರದಲ್ಲಿ ಬರೆದ ಪುಟಗಳವು. ಅಷ್ಟೊಂದು ಅಂದವಾಗಿ ಅಪ್ಪ ಬರೆಯಬಲ್ಲರು ಎಂಬುದು ಮಗನಿಗೆ ತಿಳಿದಿರುವುದೇ ಇಲ್ಲ. ಪುಸ್ತಕದ ಮೊದಲ ಪುಟದಲ್ಲೇ 'ನನ್ನ ಮನೆ' ಎಂಬ ಶೀರ್ಷೆಕೆಯನ್ನು ದೊಡ್ಡ ಅಕ್ಷಗಳಲ್ಲಿ ತಿದ್ದಲಾಗಿರುತ್ತದೆ. ಒಂದೊಂದೇ ಪುಟಗಳನ್ನು ಮಗ ಓದುತ್ತಾ ಹೋಗುತ್ತಾನೆ. ತಮ್ಮ ಮನೆಯನ್ನು ಕಟ್ಟಿದ ಬಗ್ಗೆ, ಅಪ್ಪ ಮಗುವಾಗಿನಿಂದ ಮನೆಯಲ್ಲಿ ಆಡಿ ಬೆಳೆದ ಬಗ್ಗೆ, ತನ್ನ ಅಜ್ಜಿಯ ಬಗ್ಗೆ ಅತ್ಯಾಪ್ತವಾಗಿ ಬರೆದಿದ್ದ ವಾಕ್ಯಗಳನ್ನು ಓದಿ ಮಗನಿಗೆ ಅಳು ಬರುವಂತಾಗುತ್ತದೆ. ಅಷ್ಟು ಚೆನ್ನಾಗಿ ಅಪ್ಪ ಮನೆಯನ್ನು ವರ್ಣಿಸಿದ್ದ. ನೋಟುಬುಕ್ಕಿನ ಅರ್ಧ ಬಾಗ ಮನೆ ಹಾಗು ಅಜ್ಜಿಯ ಬಗ್ಗೆಯಾದರೆ ಉಳಿದರ್ಧ ಬಾಗ ಕೇವಲ ಮಗನ ಬಗ್ಗೆಯೇ ಆಗಿರುತ್ತದೆ. ತಾನು ಮುಂಬೈಯ ಕೆಲಸವನ್ನು ಬಿಟ್ಟು ಬಂದ ಕಾರಣವಾಗಲಿ, ಮಗನನ್ನು ಇಂಜಿನಿಯರ್ ಮಾಡಲು ಶಪಥ ಪಟ್ಟ ಘಳಿಗೆಯನ್ನು, ಮುಂದಿನ ಭವಿಷ್ಯಕ್ಕೆ ಅವನ ಬಗ್ಗೆ ಕಂಡ ಕನಸ್ಸನ್ನು ಒಂದೊಂದಾಗೆ ಅಪ್ಪ ಅದರಲ್ಲಿ ಬರೆದಿರುತ್ತಾನೆ. ಪ್ರತಿ ಪುಟಗಳನ್ನು ತಿರುವಿಹಾಕುವಾಗಲೂ ಮಗನ ಕೈಗಳು ಒಂದೇ ಸಮನೆ ನಡುಗುತ್ತಿರುತ್ತವೆ. ವಾಸ್ತವದ ಹೊಳಪನ್ನು ಕಾಣಲು ಆಗದೆ ರೆಪ್ಪೆಗಳು ಕಂಪಿಸುವಂತೆ. ಮಗನಿಗೆ ತಾನೊಬ್ಬ ಕ್ರೂರಿ ಎಂಬ ಭಾವ ಒಳಗಿಂದೊಳಗೆ ಮೂಡುತ್ತದೆ. ತಾನು ಹುಟ್ಟಿದಾಗಿನಿಂದಲೂ ಅಟ್ಟದ ಗೋಡೆಗೆ ಬಣ್ಣವನ್ನು ಬಳಿಸಿಲ್ಲ ಎಂದೇ ಗೊಣಗುತ್ತಿದ್ದ ಮಗ, ತಾನು ಚಿಕ್ಕವನಿದ್ದಾಗ ಗೋಡೆಯ ತುಂಬೆಲ್ಲ ಗೀಚಿದ್ದ ಅಕ್ಷರಗಳ ಮುದ್ರೆಯನ್ನು ಅಳಿಸಲು ಮನಸ್ಸಿರದೆ ಅಪ್ಪ ಬಣ್ಣವನ್ನು ಒಡೆಸಿರುವುದಿಲ್ಲ ಎಂಬುದ ಓದಿ ಆತನ ಕಣ್ಣಂಚುಗಳು ಒದ್ದೆಯಾಗುತ್ತವೆ. ಒಮ್ಮೆ ಸುತ್ತಲೂ ಕಣ್ಣಾಹಿಸಿದ್ದಾಗ ತಾನು ಅಂಗನವಾಡಿಗೆ ಹೋಗುತ್ತಿದ್ದಾಗ ಪೆನ್ಸಿಲಿನಲ್ಲಿ ಗೀಚಿದ್ದ ನೂರಾರು ಅಕ್ಷಗಳು ಹಾಗೆಯೆ ಕಾಣಸಿಗುತ್ತವೆ. ಹಣ ಉಳಿಸಲು ಕೆಳಗೆ ಮಾತ್ರ ಬಣ್ಣ ಹೊಡೆದು ಅಟ್ಟದ ಮೇಲೆ ಹಾಗೆಯೆ ಬಿಟ್ಟಿದ್ದಾನೆ ಎಂದು ಮಗ ಅದೆಷ್ಟು ಬಾರಿ ಅಪ್ಪನ ಮೇಲೆ ಚೀರಿದ್ದಾನೋ ಲೆಕ್ಕವಿಲ್ಲ.

ಮುಂದೆ ಓದಲು ಮಗನಿಂದ ಸಾಧ್ಯವಾಗುವುದಿಲ್ಲ. ಯಾರೋ ತನ್ನ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ತೆರೆದಂತಹ ಅನುಭವವಾಯಿತು. ನೋಟುಬುಕ್ಕನು ಹಾಗೆಯೆ ಮಡಿಚಿಟ್ಟು ಅಟ್ಟದಿಂದ ಕೆಳಗಿಳಿಯುತ್ತಾನೆ. ಬಿದ್ದ ಸುಣ್ಣದ ಎಕ್ಕೆಗಳ ಜಾಗಕ್ಕೆ ಅಪ್ಪ ಹೊಸದಾಗಿ ಸುಣ್ಣವನ್ನು ಮೆತ್ತಿರುತ್ತಾನೆ. ಅಪ್ಪ ಎಲ್ಲೆಂದು ಅಮ್ಮನಲ್ಲಿ ಕೇಳಿ, ಅವರು ಪೇಟೆಯೆಡೆ ಹೋದರು ಎಂಬುದ ತಿಳಿದು ಕೊಡಲೇ ಹೊರನೆಡೆಯುತ್ತಾನೆ. ಮೆನೆಯಿಂದ ಹೊರಬರುವಾಗ ಅಪ್ಪ ವರ್ಣಿಸಿದ್ದ ಮನೆಯ ಮೆಟ್ಟಿಲುಗಳನ್ನು ನೋಡುತ್ತಾನೆ. ಕೂರುವ ಮನಸ್ಸಾಗಿ ಗೋಡೆಯನ್ನೊರಗಿ ಹಾಗೆಯೆ ತಾನೂ ಕೂರುತ್ತಾನೆ. ಏನಾಶ್ಚರ್ಯ! ತನ್ನ ತಲೆಯಲ್ಲಿದ್ದ ಚಿಂತೆಯಲ್ಲ ಒಮ್ಮೆಲೇ ಮಾಯವಾದಂತಹ ಅನುಭವ! ಮೇಲೇಳಲು ಮನಸ್ಸೇ ಒಪ್ಪುತ್ತಿಲ್ಲ! ಬುಕ್ಕಿನಲ್ಲಿ ಬರೆದ ಅಪ್ಪನ ಮಾತುಗಳು ನೂರಕ್ಕೆ ನೂರರಷ್ಟು ಸತ್ಯವೆನಿಸುತ್ತದೆ. ಒಲ್ಲದ ಮನಸ್ಸಿನಲ್ಲಿ ಎದ್ದು ಶೆಟ್ಟರ ಚಹದ ಅಂಗಡಿಯ ಬಳಿಗೆ ಹೋಗುತ್ತಾನೆ.

ತಮ್ಮ ಗುಂಪಿನ ಖಾಯಂ ಅಡ್ಡವಾಗಿದ್ದ ಶೆಟ್ಟರ ಅಂಗಡಿಗೆ ಬಂದು ಚಹಾ ಒಂದನ್ನು ಹೇಳಿ ಕೂತ ಮಗ ಅಪ್ಪನೇನಾದರೂ ಇತ್ತಕಡೆ ಬಂದಿದ್ದರೆಂದು ಶೆಟ್ಟರ ಬಳಿ ಕೇಳುತ್ತಾನೆ. ಆದರೆ ಮಗನ ಪ್ರೆಶ್ನೆಗೆ ಕ್ಯಾರೇ ಎನ್ನದ ಶೆಟ್ಟಿ ಚಹಾವನ್ನು ಒಂದು ಲೋಟದಿಂದ ಇನ್ನೊಂದು ಲೋಟಕ್ಕೆ ಸುರಿಯುತ್ತಾ ಈತನನ್ನೇ ಗುರಾಯಿಸತೊಡಗುತ್ತಾನೆ. ಮೊದಲ ಬಾರಿಗೆ ಆತನ ದೃಷ್ಟಿಯಲ್ಲಿನ ತೀವ್ರತೆ ಹಿಂದೆಂದೂ ಕಾಣದಷ್ಟಿರುತ್ತದೆ. ಕಾರಣವೇನೆಂದು ಮಗ ಅರಿಯದಾಗುತ್ತಾನೆ. ಟೀಯನ್ನು ಕುಡಿದು ಹಣವನ್ನು ಕೊಡಲು ಎದ್ದ ಮಗನನ್ನು ತಡೆದ ಶಟ್ಟಿ 'ನಿಮ್ಮಪ್ಪ ನಿನ್ ಹಳೆ ಬಾಕಿ ಎಲ್ಲ ಕೊಟ್ಟು ನೂರುಪಾಯಿ ಅಡ್ವಾನ್ಸ್ ಕೊಟ್ಟವ್ರೆ' ಎಂದು ಹೇಳಿ ಸುಮ್ಮನಾದ. ಆತನ ದೃಷ್ಠಿಯ ಹಿರಿತ ಮಾತ್ರ ಕಡಿಮೆಯಾಗಿರಲ್ಲಿಲ. ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಶೆಟ್ಟಿಯ ಈ ಮುಖ ಚಹರೆಯನ್ನು ಮಗ ಕಂಡಿರಲಿಲ್ಲ. ಒಂದು ಬಗೆಯ ತಿರಸ್ಕಾರದ ನೋಟ ಅದಾಗಿದ್ದಿತು. ಅಪ್ಪ ಹಣವನ್ನು ಕೊಟ್ಟಿದ್ದಾರೆ ಎಂಬುದ ಕೇಳಿ ಕುಪಿತನಾದ ಮಗ 'ನಿಮ್ಗ್ಯಾರಿ ಅವ್ರ್ ಹತ್ರ ಹಣ ತಗೋಳಕ್ಕೆ ಹೇಳಿದ್ದು? ಸಾಲ ಮಾಡಿದವನು ನಾನು, ನಾನೇ ಸಾಲ ತೀರಿಸ್ತೀನಿ' ಎಂದು ಅಬ್ಬರಿಸತೊಡಗಿದ. ಅದಕ್ಕೆ ಉತ್ತರವಾಗಿ ಶೆಟ್ಟಿ 'ಸಾಕು ಮುಚ್ಚಪ್ಪ ಕಂಡಿದ್ದಾರೆ, ನಾಲ್ಕ್ ತಿಂಗಳಿಂದ ನೀನ್ ಸಾಲ ತೀರ್ಸಿರೋದು ಸಾಕು. ನಿಮ್ಮಂತ ಮಾಕ್ಳುನ್ನ ಆ ದ್ಯಾವ್ರು ನಿಮ್ಮಪ್ಪನಂಥ ಮನ್ಸ್ರುಗೆ ಯಾಕೆ ಕೊಡ್ತಾನೆ ಗೊತ್ತಿಲ್ಲ ಕಾಣೆ. ಏನ್ ಬ್ಯುಸಿನೆಸ್ ಮಾಡ್ತೀಯೋ ನೀನು? ಲೇ ನೀನ್ ಮೀಸೆ ಬರೋ ಗಂಡಸೇ ಆದ್ರೆ ನಿಮ್ಮಪ್ಪನಂತವ್ರ ಹತ್ರ ಹಣ ಕೇಳ್ತಿರ್ಲಿಲ್ಲ. ತಾಕತ್ ಇದ್ರೆ ನೀನೆ ಸಂಪಾದಿಸಿ ಬಿಸಿನೆಸ್ ನ ಶುರು ಮಾಡಿ ತೋರ್ಸು. ಪಾಪ ನಿಮ್ಮಪ್ಪ ದೇವರಂಥ ಮನುಷ ಎಷ್ಟೋ ವರ್ಷದಿಂದ ಕಾಪಡ್ಕೊಂಡು ಬಂದ ಮೆನೇನ ಇವತ್ತು ಮಾರೋಕ್ಕ್ ಒಂಟ್ಟವ್ನೆ. ಅದು ಜುಜುಬಿ ಮೂರ್ ಕಾಸಿಗೆ. ಮಗ, ಮಗ, ಮಗ. ಯಾವಾಗ್ ನೋಡಿದ್ರೂ ಮಗಂದೇ ಕನಸು ಅವ್ನಿಗೆ. ನೀನೋ.. ಹೋಗ್ಲಿ ಬಿಡು ನಿಮ್ಮಂಥವರಿಗೆ ಹೇಳಿ ಏನು ಪ್ರಯೋಜ್ನ' ಎಂದು ಸುಮ್ಮನಾಗುತ್ತಾನೆ. ಶೆಟ್ಟಿಯ ಮಾತುಗಳನು ಕೇಳಿದ ಮಗ ಶುರುವಿನಲ್ಲಿ ಆತ ಅಪ್ಪನ ಜಿಗ್ರಿ ದೋಸ್ತ್ ಎಂಬುದನ್ನೂ ತಿಳಿಯದೆ ಅವನ ಕೆನ್ನೆಗೆ ರಪರಪನೆ ನಾಲ್ಕು ಭಾರಿಸಬೇಕೆಂದೆನಿಸಿದರೂ ಅಪ್ಪ ಮನೆ ಮಾರುವ ವಿಷಯ ತಿಳಿದು ಕಳವಳಗೊಳ್ಳುತ್ತಾನೆ. ಮರುಗುತ್ತಾನೆ. ಕಣ್ಣುಗಳಿಗೆ ಕಪ್ಪುಗಟ್ಟಿದ ಅನುಭವವಾಗುತ್ತದೆ. ತನಗಾಗಿ ಅಪ್ಪ ಇಷ್ಟೆಲ್ಲಾ ಮಾಡಬಲ್ಲರೇ ಎಂಬುದ ಊಹಿಸಿಯೇ ಆತನಿಗೆ ಮಾತು ಹೊರಡದಂತಾಗುತ್ತದೆ. 'ಹೋಗು, ಸಬ್ ರಿಜಿಸ್ಟರ್ ಆಫೀಸಿಗೆ ನಿಮಪ್ಪ ಹೋಗಿದ್ದಾನೆ, ಯಾರೋ ಬರಿ ಇಪ್ಪತ್ತು ಲಕ್ಷಕ್ಕೆ ಮನೆ ಕೇಳ್ತಾ ಇದ್ದಾರಂತೆ. ಅರ್ಧ ಕೋಟಿ ಬೆಲೆಬಾಳೋ ಮನೇನ, ಅದಕ್ಕೂ ಹೆಚ್ಚಾಗಿ ಅವ್ನ ಸರ್ವಸ್ವಾನೆ ಆಗಿರೋ ಮನೇನ ಮಾರೋಕ್ ಹೊರಟಿದ್ದಾನೆ ನಿಮ್ಮಪ್ಪ, ಬೇಡ್ವೊ ಅಂದ್ರೆ ಮಗ ಚೆನ್ನಾಗಿರ್ಬೇಕಂತೆ, ತತ್' ಎಂದು ಶೆಟ್ಟಿ ಶಪಿಸತೊಡಗುತ್ತಾನೆ.

ಶೆಟ್ಟಿ ಮಾತುಗಳನ್ನು ಮುಂದುವರೆಸುತ್ತಾ ಹೋಗುತ್ತಾನೆ. ಆದರೆ ಯಾವೊಂದು ವಾಕ್ಯಗಳೂ ಮಗನ ಕಿವಿಗಳನ್ನು ಹೊಕ್ಕುವುದಿಲ್ಲ. ತನಗಾಗಿ ಯಾರು ಎಂಬ ಬಹುದಿನದ ಪ್ರೆಶ್ನೆಗೆ ಮಗನಿಗೆ ಉತ್ತರ ಸಿಕ್ಕಿರುತ್ತದೆ. ಕಣ್ಣುಗಳಲ್ಲಿ ನೀರಿನ ಕಟ್ಟೆಯೊಡೆದು ಧುಮುಕುತ್ತಿರುತ್ತದೆ. ಮರುಮಾತನಾಡದೆ ಒಂದೇ ಉಸಿರಿನಲ್ಲಿ ಮಗ ರಿಜಿಸ್ಟರ್ ಆಫೀಸಿನ ಕಡೆ ಓಡುತ್ತಾನೆ. ಶೆಟ್ಟಿ ಗೂಡಂಗಡಿಯ ಮೂಲೆಯಲಿ ನೇತಾಕಿದ್ದ ಗಣಪತಿ ಪಟಕ್ಕೆ ಭಕ್ತಿಯಿಂದ ಕೈಮುಗಿಯುತ್ತಾನೆ.

ಅದಾಗಲೇ ಪಟೇಲ ಹಾಗು ಅವನ ಸಂಗಡಿಗರು ಸಬ್ ರಿಜಿಸ್ಟರ್ ಆಫೀಸಿನಲ್ಲಿ ಅಪ್ಪ ತಲುಪುವ ಮೊದಲೇ ಬಂದು ಕುಳಿತ್ತಿರುತ್ತಾರೆ. ಅಪ್ಪ ಒಬ್ಬನೇ ಕಾಗದ ಪತ್ರಗಳನ್ನು ಹಿಡಿದು ಬಂದದ್ದು ಪಟೇಲನಿಗೆ ಕೊಂಚ ದಿಗ್ಬ್ರಮೆಯಾದರೂ ಅಷ್ಟು ಬೆಲೆಬಾಳುವ ಮನೆಯೊಂದನ್ನು ಕನಿಷ್ಠ ಕಾಸಿಗೆ ಕೊಂಡುಕೊಳ್ಳುವ ಚಾಲಾಕಿಯ ಅವನ ನೀಚತ್ವವನ್ನು ಇತರರೆದುರಿಗೆ ಮರೆಮಾಚಿಕೊಳ್ಳಲು ಒಳ್ಳೆಯದೇ ಆಯಿತೆಂದುಕೊಳ್ಳುತ್ತಾನೆ. ಜೀವನ ಪೂರ್ತಿ ಅಪ್ಪನನ್ನು ತುಚ್ಛವಾಗಿಯೇ ಕಂಡಿದ್ದ ಪಟೇಲ ಕಳೆದ ಹಲವು ವರ್ಷಗಳಿಂದ ಅಪ್ಪನ ಮನೆಯನ್ನು ಒಡೆದುಕೊಳ್ಳಲು ಹೊಂಚು ಹಾಕಿ ಕೂತಿದ್ದ. ಅಪ್ಪ ಬರುವುದನ್ನೇ ಇದಿರು ನೋಡುತ್ತಿದ್ದ ಪಟೇಲ ಕೂಡಲೇ ಸಬ್ ರಿಜಿಸ್ಟರ್ ರೂಮಿನೊಳಗೆ ನುಸುಳಿ ಕಾಗದಪಾತ್ರಗಳನ್ನೆಲ್ಲ ರೆಡಿ ಮಾಡಿಸುತ್ತಾನೆ. ಕೆಲ ಸಮಯದಲ್ಲೇ ಕಾಗದಪತ್ರಗಳೆಲ್ಲ ರೆಡಿಯಾಗಿ ಅಪ್ಪನ ಬಳಿ ಸಹಿಗಾಗಿ ಬರುತ್ತವೆ. ಅಲ್ಲಿಯವರೆಗೂ ಶಾಂತವಾಗಿದ್ದ ಅಪ್ಪ ಮನೆಯ ಮಾರಾಟದ ಬಾಂಡ್ ಪೇಪರ್ ಗಳನ್ನು ಕಂಡು ಕುಸಿದು ಕೂರುತ್ತಾನೆ. ಒಂದೇ ಸಮನೆ ಮಗುವಿನಂತೆ ರೋಧಿಸತೊಡಗುತ್ತಾನೆ. ಬಿಕ್ಕಳಿಸ ತೊಡಗುತ್ತಾನೆ. ಅಪ್ಪನನ್ನು ಅತ್ತಿರುವುದ ಎಂದಿಂಗೂ ಕಂಡಿರದ ಪಟೇಲ ಹಾಗು ಆತನ ಸಂಗಡಿಗರು ಕೆಲ ಕಾಲ ದಿಗ್ಬ್ರಾಂತರಾಗುತ್ತಾರೆ. ಅಪ್ಪ ಅಳುವುದ ಹಿಂದಿರುವ ಕಾರಣ ತಿಳಿದಿದ್ದರೂ ಪಟೇಲನ ಕಣ್ಣುಗಳು ಮಾತ್ರ ಪೆನ್ನನ್ನು ಹಿಡಿದಿದ್ದ ಅಪ್ಪನ ಕೈಗಳನ್ನೇ ದುರುಗುಟ್ಟುತ್ತಿರುತ್ತವೆ.'ಅಮ್ಮ.. ಅಮ್ಮ' ಎನ್ನುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅಪ್ಪನನ್ನು ಸಮಾಧಾನ ಪಡಿಸಲು ಅಲ್ಲಿದ್ದ ಯಾವೊಂದು ಜೀವವು ಮುಂದೆ ಬರುವುದಿಲ್ಲ.

ಕೂಡಲೇ ಅಪ್ಪನ ಹೆಗಲ ಮೇಲೆ ಸಾಂತ್ವನದ ಕೈಯೊಂದು ಬೀಳುತ್ತದೆ. ಅಪ್ಪನ ಅಳು ಬೇಸಿಗೆಯ ಮಳೆಯಂತೆ ಕೂಡಲೇ ನಿಂತುಬಿಡುತ್ತದೆ. ಆ ಕೈಗಳ ಶಕ್ತಿಯೇ ಅಂತಹದ್ದು. ಅದು ಅಪ್ಪನ ಮಗ ಎಂದು ತಿಳಿಯದೆ ಗುಂಪಿನಲ್ಲಿದ್ದ ಒಬ್ಬ ಯಾರಯ್ಯ ನೀನು ಎಂದು ದರ್ಪದಿಂದ ಅಬ್ಬರಿಸಿದ್ದ ಕಡೆ ತಿರುಗಿದ ಮಗನ ಜ್ವಲಿಸಿವ ಕೆಂಪಾದ ಕಣ್ಣುಗಳು ಆ ವ್ಯಕ್ತಿಯ, ಅಷ್ಟೇ ಏಕೆ ಇಡೀ ಗುಂಪಿನ ಧೈರ್ಯವನ್ನೇ ಉದುಗಿ ಹೋಗುವಂತೆ ಮಾಡುತ್ತವೆ. ಮುಂದೆ ಯಾರೊಬ್ಬನೂ ತುಟಿಕ್ ಪಿಟಿಕ್ ಅನ್ನುವುದಿಲ್ಲ! ಅಪ್ಪನ ಈ ಸ್ಥಿತಿಯನ್ನು ಮಗನಿಗೆ ನೋಡಲಾಗುವುದಿಲ್ಲ. ಅವನ ಕೈಲಿದ್ದ ಬಾಂಡ್ ಪೇಪರ್ಗಳನ್ನು ತೆಗೆದುಕೊಂಡು ನೋಡುತ್ತಾನೆ. ಅಪ್ಪನ ಅಸ್ತಾಕ್ಷರ ಅಷ್ಟರಲ್ಲಾಗಲೇ ಅವುಗಳ ಮೇಲೆ ಮೂಡಿರುತ್ತದೆ. ತಂದೆಯ ಮಮತೆಗೆ, ತ್ಯಾಗಕ್ಕೆ ಕರಗಿನ ಮಗನ ಕಣ್ಣೀರಿನ ಹನಿಗಳು ಪಟಪಟನೆ ಅಸ್ತಾಕ್ಷರದ ಮೇಲೆ ಒಂದರಿಂದೊಂದು ಬೀಳುತ್ತವೆ.

ಅಪ್ಪನ ಕಂಡು ಮಗನ ಮೊಗದಲ್ಲಿ ಮಂದಹಾಸವೊಂದು ಮೂಡಿದರೆ ಕಣ್ಣೇರಿಂದ ತೊಳೆದ ಇಂಕಿನ ಹನಿಗಳು ಒಂದೊಂದಾಗಿ ನೆಲವನ್ನು ಸೇರುತ್ತಿರುತ್ತವೆ….….

Thursday, November 9, 2017

ಸಮಾಜಸೇವೆ ಮಾಡಲು ರಾಜಕಾರಣವೆಂಬ ಅಸ್ತ್ರವೇ ಬೇಕೇ ಅಥವಾ ಮನೆಯಲ್ಲಿನ ಗಂಟು ಮೂಟೆಗಳ ಸಂಪತ್ತೇ ಸಾಕೆ?

ಸಮಾಜಸೇವೆ. ಅದೇನೇ ಹೇಳಿದರೂ ಈ ಪದವನ್ನು ಕೇಳಿದಾಗ ಮೊದಲಿಗೆ ಕಣ್ಣ ಮುಂದೆ ಬರುವವರಂತೂ ರಾಜಕಾರಣಿಗಳೆ! ಒಪ್ಪಿಕೊಳ್ಳಿ. ದೇಶದ ರಾಜಕೀಯ ಹಾಗು ಸಮಾಜಸೇವೆ ಎನ್ನುವ ಪದಗಳಿಗೆ ಅವಿನಾಭಾವ ಸಂಬಂಧ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಚುನಾವಣೆಯ ಘಳಿಗೆ ಸಮೀಪಿಸುತ್ತಿದಂತೆ, ನಾಟಕದಲ್ಲಿ ತನ್ನ ಪಾತ್ರ ಬಂದಾಗ ಮಾತ್ರ ವೇದಿಕೆಯ ಮೇಲೆ ಬಂದು ನಂತರ ಮಾಯವಾಗುವ ನಟ ನಟಿಯರಂತೆ ರಾಜಕಾರಣಿಗಳು ಚುನಾವಣೆಯ ಸುಮೂಹರ್ತದಲ್ಲಿ ತಮ್ಮ ದಂಡಿನ ಮೂಲಕ ಮನೆ ಮೆನೆಯ ಮುಂದೆ ಪ್ರತ್ಯಕ್ಷರಾಗಿಬಿಡುತ್ತಾರೆ. ಕಳೆದ ಬಾರಿಯ ಚುನಾವಣೆಯ ಪುಳ್ಳಂಗೋವಿಯನ್ನೇ ಈ ಬರಿ ಕೊಂಚ ಅಪ್-ಗ್ರಡೆಡ್ ಪದಗಳಲ್ಲಿ ಉಚ್ಚರಿಸಿ, ಬಡವರ ಮನೆಯ ಉಪ್ಪು ಉಪ್ಪಿನಕಾಯಿಯನ್ನು ಚಪ್ಪರಿಸಿ, ತಮ್ಮ ಗುಡಾಣದ ಹೊಟ್ಟೆಯನ್ನು ಪ್ರದರ್ಶನ್ನಕ್ಕಿಟ್ಟಿರುವಂತೆ ತೂಗುತ್ತ-ವಾಲುತ್ತಾ ಸಾಗುವ ಇವರನ್ನು ಯಾರೋ ಒಂದಿಬ್ಬರು ಬಿಸಿ ರಕ್ತದ ಯುವಕರು 'ಯಾಕ್ರೀ ನಿಮ್ಗೆ ರಾಜಕಾರಣ? ಒಂದು ಹುಲ್ಲುಕಡ್ಡಿಯನ್ನ ಇಲ್ಲಿಂದ ಎತ್ತಿ ಅಲ್ಲಿಗೆ ಇಡಿಸೋ ತಾಕತ್ ಇಲ್ಲ ಅಂದ್ಮೇಲೆ ನಿಮ್ಗೆ ಯಾಕ್ ಬೇಕು ರಾಜಕೀಯ?' ಎಂದು ಕೇಳಿದರೆ ಬರುವ ಏಕೈಕ ಉತ್ತರ, 'ಸಮಾಜಸೇವೆ'

ಇತ್ತೀಚಿಗೆ ಸಮಾಜಸೇವೆ ಎಂಬುದು ಆಪತ್ಕಾಲದ ಆಕ್ಸಿಜೆನ್ ನಂತೆ ರಾಜಕಾರಣಿಗಳಿಗೆ ತನ್ನ ತಪ್ಪನೆಲ್ಲ ಮುಚ್ಚಿ ಮರೆಮಾಡುವ ಏಕೈಕ ಸಾಧನದಂತೆ ಆಗಿರುವುದಂತೂ ಸುಳ್ಳಲ್ಲ. ಕಳ್ಳಕಾಕರಿಂದ ಇಡಿದು ರೌಡಿ ಶೀಟರ್ಗಳೂ ಇಂದು ರಾಜಕಾರಣಕ್ಕೆ ಧುಮುಕಬೇಕಾದರೆ ಅವರಿಗಿರುವ ಏಕೈಕ ಅರ್ಹತೆಯಂದರೆ ಅದು ಸಮಾಜಸೇವೆಯ ಹೊರೆ. ಇದು ಒಂತರ ಗಬ್ಬು ನಾರುವ ಕಾರ್ಪೊರೇಟ್ ತೊಟ್ಟಿಯ ಮುಂದೆಯೆ ನಿಂತು ಶುಚಿತ್ವದ ಬಗ್ಗೆ ಭಾಷಣ ಬಿಗಿದಂತೆ. ತಮಾಷೆ ಎಂದರೆ ಇಂದು ಹುಟ್ಟುವಾಗಲೇ ಚಿನ್ನದ ತಟ್ಟೆಯೊಟ್ಟಿಗೆ ಆಡಿ ಬೆಳೆಯುವ ರಾಜಕಾಣಿಗಳ ಮಕ್ಕಳು ಮೊದಲ ಇಪ್ಪತ್ತು ಇಪ್ಪತೈದು ವರ್ಷ ತನ್ನ 'ಸಮಾಜಸೇವಕ' ತಂದೆಯ ‘ಸೇವೆ’ಯ ಹಣವನ್ನು ಯದ್ವಾ ತದ್ವಾ ಉಡಾಯಿಸಿ, ಓದು ಬರಹ ಗಳಿಗೂ ಒಬ್ಬ ಸಹಾಯಕನನ್ನು ಇರಿಸಿ (!), ಒಂದಿಷ್ಟು ಕೇಸು ಹಗರಣಗಳನ್ನು ಸೃಷ್ಟಿಸಿ, ಮುಚ್ಚಿಸಿ, ಕೊನೆಗೆ ಈತನಿಂದ ಮತ್ತೇನೂ ಆಗುವುದಿಲ್ಲ ಎಂದರಿತ ಅವನ/ಅವಳ, ಅಪ್ಪ/ಅಮ್ಮ, ಸ್ನಾನ-ಗೀನ ಮಾಡಿಸಿ, ಗಡ್ಡ-ಪಡ್ಡವನ್ನೆಲ್ಲ ನೀಟಾಗಿ ಬೋಳಿಸಿ, ಬಿಳಿಯ ಬಟ್ಟೆಗಳನ್ನು ತೊಡಿಸಿ, ಬಾಲದಂತೆ ಹೊಡದೆಯಲ್ಲ ಎಳೆದುಕೊಂಡು ಹೋಗಿ ಸಾವಿರಾರು ಜನರ ಮುಂದೆ ಅವನನ್ನೂ ಪ್ರತಿಷ್ಠಾಪಿಸಿ ಬಿಡುತ್ತಾರೆ, 'ಜೂನಿಯರ್ ಸಮಾಜ ಸೇವಕ’ ಎಂಬ ಅಂಕಿತ ನಾಮದೊಟ್ಟಿಗೆ! ಅಲ್ಲ, ಸಮಾಜ ಏನೆಂಬುದರ ಕಲ್ಪನೆಯೇ ಇಲ್ಲದ, ಹಸಿವು ಎಂಬುದೇನೆಂದೇ ಅರಿಯದ, ಅಪ್ಪನ ಮಕ್ಕಳನ್ನು ಸಮಾಜಸೇವೆಯ ಹೆಸರಲ್ಲಿ ದೇಶದ ನಾಳಿನ ನಾಯಕರನ್ನಾಗಿ 'ಮಾಡಲು' ಹೊರಟಿರುವ ಇಂದಿನ ಅದೆಷ್ಟೋ ರಾಜಕಾರಣಿಗಳನ್ನು ಸಮಾಜಸೇವೆಯನ್ನು ಫ್ಯಾಮಿಲಿ ಬಿಸಿನೆಸ್ ನನ್ನಾಗಿ ಯಾಕೆ ಮಾಡಿಕೊಂಡಿದ್ದೀರಿ ಸಾರ್ ಅಂದರೆ ಮಾತ್ರ ಉರಿದುಬೀಳುತ್ತಾರೆ. ಓದು ವಿದೇಶ, ಕಾರು ವಿದೇಶದ್ದು, ತೊಡುವ ಬಟ್ಟೆಯಿಂದಿಡಿದು ತಿನ್ನುವ ಊಟವೂ ವಿದೇಶದ್ದೇ ಆಗಿರುವ ಮಕ್ಕಳಿಗೆ ರಾಜಕೀಯ ಮಾತ್ರ ದೇಶದ್ದೇ ಯಾಕೆ ಬೇಕು? ಸಮಾಜ ಎಂಬುದು ವಿದೇಶದ್ಲಲೂ ಇದೆಯಲ್ಲ, ಅಲ್ಲಿನ ಸಮಾಜಸೇವೆ ಸಮಾಜಸೇವೆಯೆನಿಸಿಕೊಳ್ಳುವುದಿಲ್ಲವೇ? ಉತ್ತರ ಇಲ್ಲೇ ಇದೆ ನೋಡಿ. ಇಂದಿನ ಅದೆಷ್ಟೋ ರಾಜಕಾರಣಿಗಳ ಮಕ್ಕಳು ಒಂದೋ ಅಪ್ಪನ/ಅಮ್ಮನ ಒತ್ತಾಯದ ಮೇರೆಗೆ ಬೇಡ ಬೇಡವೆನ್ನುತ್ತಲೇ ಈ ಅಖಾಡಕ್ಕೆ ಧುಮುಕುತ್ತಾರೆ, ಇಲ್ಲವೇ ನಿರಾಯಾಸವಾಗಿ ಹೆಸರು ಹಾಗು ಹಸಿರನ್ನು ಗಳಿಸಿಕೊಳ್ಳಬಹುದಾದ ಏಕೈಕ ಸಾಧನವಾದ ತಮ್ಮ ರಾಜಕೀಯ ಫ್ಯಾಮಿಲಿ ಬಿಸಿನೆಸ್ ಅನ್ನು ಸೇರುತ್ತಾರೆ, ಇಲ್ಲವೇ ತಲೆಯನ್ನು ಸೀಳಿದರೂ ಒಂದೆರಡು ವಿಚಾರಯುತ ಪದಗಳನ್ನು ಕಲಿತಿರದಿದ್ದಾಗ ಅಪ್ಪನ ಮಗನಾಗಿ ಏನೇ ಏಳಿದರೂ ಕೈಕಟ್ಟಿ ಪಾಲಿಸುವ ಪಾರ್ಟಿಯ ಸೇವಕರ ಸೇವೆಯ ಭಾಗ್ಯವನ್ನು ಸವಿಯುವ ಆಸೆಯಲ್ಲಿ ರಾಜಕಾರಣವನ್ನು ಧುಮುಕುತ್ತಾರೆ. ದೇಶವನ್ನು ಉದ್ಧರಿಸುವ ಕನಸ್ಸಲ್ಲಿ. ಇಂಥವರಿಂದ ಅದ್ಯಾವ ಮಟ್ಟಿನ ಸಮಾಜಸೇವೆ ಸಾಧ್ಯವುಂಟು ನೀವೇ ಹೇಳಿ.


ಮೇಲಾಗಿ ಇಂದು ತಾಲೂಕಿಗೆ ಒಬ್ಬ MLA ಹಾಗು ಜಿಲ್ಲೆಗೊಬ್ಬ MP ಯ ಸ್ಥಾನವನ್ನೂ ಇಂತಹ ಹಾಲಿ ರಾಜಕಾರಣಿಗಳ ಮಕ್ಕಳೇ ಪ್ರತಿನಿಧಿಸುವಂತಾದರೆ, ಬಡವರ ನಡುವೆ ಬೆಳೆದು, ಕಷ್ಟ ಕಾರ್ಪಣ್ಯಗಳೇನು ಎಂದು ಅರೆದು ಕುಡಿದಿರುವ ಜನನಾಯಕನೊಬ್ಬ ಆ ಇಡೀ ತಾಲೂಕು ಅಥವಾ ಜಿಲ್ಲೆಯಲ್ಲೇ ಇಲ್ಲವೆಂದೇ ಅರ್ಥವೇ? ಸಮಾಜಸೇವೆ ಎಂಬುದು ಕೇವಲ ರಾಜಕಾರಣಿಗಳ ರಕ್ತದಲ್ಲಿ ಮಾತ್ರವೇ ಕಾಣಸಿಗುತ್ತದೆಯೇ? ಅಥವಾ ಇಂತಹ ಕುಟುಂಬರಾಜಕಾರಣದಿಂದ ಜನಸಾಮನ್ಯರಲ್ಲಿ ಮೂಡಬೇಕಾದ ನಾಯಕರುಗಳು ಅರಳುವ ಮುನ್ನವೇ ಚಿವುಟಿಹೋಗುತ್ತಾರೆಯೇ? ಹಾಗಾದರೆ ಇಂತಹ ರಾಜಕಾರಣ ಪ್ರಜಾತಂತ್ರ ವ್ಯವಸ್ಥೆಯ ಮೂಲ ಉದ್ದೇಶವನ್ನು ಈಡೇರಿಸಬಲ್ಲುದೆ? ಲಕ್ಷಾಂತರ, ಕೋಟ್ಯಂತರ ಜನರನ್ನು ಪ್ರತಿನಿಧಿಸುವ ಇಂತಹ ವ್ಯಕ್ತಿಗೆ ಕನಿಷ್ಠ ವಿದ್ಯಾರ್ಹತೆ, ಕ್ಲೀನ್ ಹಿಸ್ಟರಿಗಳೆಂಬ ಒಂತಿಷ್ಟು ಮಾನದಂಡಗಳೂ ಬೇಕಲ್ಲವೇ?


ಪ್ರಸ್ತುತ 'ಮುಷ್ಠಿಯೊಳಗಿನ ಪ್ರಪಂಚ'ದ ಜೀವನದಲ್ಲಿ ರಾಜಕಾರಣ ಎಂಬುದು ಪ್ರತಿಯೊಬ್ಬರಲ್ಲೂ ಅದೆಷ್ಟರ ಮಟ್ಟಿಗೆ ಹಾಸುಹೊಕ್ಕಿದೆ ಎಂದರೆ ಪ್ರತಿಯೊಬ್ಬ ಪ್ರಜೆಯೂ ತನ್ನದೊಂದಿರಲಿ ಎಂದು ಅಭಿಪ್ರಾಯ ಮೂಡಿಸುವ, ಮೊಳಗಿಸುವ ಮೇಧಾವಿಗಳೇ. ಒಂದು ಸರ್ಕಾರ ಜಾರಿಗೊಳಿಸುವ ಕಾನೂನು ಇಂದು ಹೆಚ್ಚಾಗಿ ವ್ಯಕ್ತಿನಿಷ್ಠವವಾಗಿಯೇ ಸ್ವೀಕರಿಸಲಾಗುತ್ತದೆಯೇ ವಿನಃ ವಸ್ತುನಿಷ್ಠವಾಗಿ ಅಲ್ಲ. ಇಂತಹ ವ್ಯಕ್ತಿನಿಷ್ಠ ಸರ್ಕಾರಗಳ ಯೋಜನೆಗಳನ್ನು ಕಣ್ಮುಚ್ಚಿ, ಕೈಚಾಚಿ ತಬ್ಬಿಕೊಳ್ಳುವವರು ಒಬ್ಬರಾದರೆ, ಮುಟ್ಟಿದರೆ ಮುನಿ ಸಸ್ಯದಂತೆ ಆಡುವವರು ಕೆಲವರು. ಒಟ್ಟಿನಲ್ಲಿ ಈ ಒಪ್ಪು ತಪ್ಪುಗಳ ಚರ್ಚೆಯೇ ಇಂದಿನ ಮುಷ್ಠಿಯೊಳಗಿನ ಪ್ರಪಂಚದ ಅವಿಬಾಜ್ಯ ಅಂಗ. ವಿಪರ್ಯಾಸವೆಂದರೆ ಇಂತಹ ಚರ್ಚೆಗಳನಷ್ಟನ್ನೇ ಜನರು ರಾಜಕಾರಣವೆಂದು ತಿಳಿದಿರುವದು. ದೇಶದ ಚುಕ್ಕಾಣಿಯನ್ನು ಹಿಡಿದಿರುವವರಿಗೂ ಇದೆ ಬೇಕಾದದ್ದು. ಸರಿಯೋ ತಪ್ಪೋ. ತಮ್ಮ ಒಂದು ವಿಷಯವನ್ನು ವಿರೋಧಿಸುತ್ತಿದ್ದಾರೆ ಎಂದರೆ ಅದರಿಂದ ಕಲಿಯುವ ಬದಲು ಇಂತಹ ಟೀಕೆಗಳನ್ನು ಕೇವಲ ವೈಯಕ್ತಿಕವಿವಾಗಿಸಿಕೊಂಡು ಕಚ್ಚಾಡತೊಡಗುತ್ತಾರೆ. ಮೆನೆಯಲ್ಲಿ ಅಪ್ಪ ತಪ್ಪುಮಾಡಿದರೆ ಅದನ್ನು ತಿದ್ದುವ ಕೆಲಸ ಮನೆಯ ಇತರ ಸದಸ್ಯದ್ದಾಗಿರಬೇಕು. ಕಲಿಯುವ ಮನಸ್ಸೂ ಅಪ್ಪನದ್ದಾಗಿರಬೇಕು. ಆಗಲೇ ಮನೆಎಂಬುದು ನೆಡೆಯುವುದು. ದೇಶವು ಸಹ ಒಂದು ಮೆನೆಯಲಲ್ಲವೇ?! ಇಂತಹ ಮನೆಯ ಸೇವೆ ಸಮಾಜಸೇವೆಯಂತೂ ಖಂಡಿತ ಅಲ್ಲ. ಇದು ದೇಶದ ಪ್ರತಿಯೊಬ್ಬನ ಆದ್ಯ ಕರ್ತವ್ಯ. ಕುಟುಂಬದ ಇತರ ಸದ್ಯರನ್ನು ಹಸಿವಿನಿಂದ, ಅಶಿಕ್ಷಣದಿಂದ, ಅನಾರೋಗ್ಯದಿಂದ ನರಳುವುದ ಕಾಣಲಾಗುತ್ತದೆಯೇ? ಮನೆಯ ನೆಡೆಸುವವನು ಖಂಡಿತವಾಗಿಯೂ ಇಂತಹ ಅಧೋಗತಿಗೆ ಮನೆಯವರನ್ನು ತಂದು ನಿಲ್ಲಿಸುವುದಿಲ್ಲ. ಸಮಾಜಸೇವೆಯ ಹೆಸರಲ್ಲಿ ಜನರ ಕಣ್ಣಿಗೆ ಸುಣ್ಣವನ್ನು ಬಳಿಯುವುದಿಲ್ಲ. ದೇಶವನ್ನು ಮನೆಯೆಂದು ಭಾವಿಸಿರುವ ನಾಯಕರಿಗೆ ಇಲ್ಲಿಯ ಪ್ರತಿಯೊಬ್ಬ ಯುವಕ, ಯುವತಿಯರೂ ಮಕ್ಕಳೆಯೇ. ಹಾಗಾದಾಗ ಮಾತ್ರ ಗಲ್ಲಿ ಗಲ್ಲಿಗೊಬ್ಬ ನಾಯಕ ಮೂಡಬಲ್ಲ. ಇಲ್ಲವಾದರೆ ಗುರಿ ಸ್ಪಷ್ಟವಲ್ಲದೆ ಗುಂಡನ್ನು ಹಾರಿಸಿದಂತಾಗುತ್ತದೆ ಲೋಕಲ್ ನಾಯಕರ ಸಮಾಜಸೇವೆಯ ರಾಜಕೀಯ.

ಎಲ್ಲಕ್ಕೂ ಮಿಗಿಲಾಗಿ ಮೂಡುವ ಒಂದು ಪ್ರೆಶ್ನೆಎಂದರೆ ಸಮಾಜಸೇವೆ ಮಾಡಲು ಇವರಿಗೆ ರಾಜಕಾರಣವೆಂಬ ಅಸ್ತ್ರವೇ ಬೇಕೇ ಅಥವಾ ತಮ್ಮ ಮನೆಯಲ್ಲಿನ ಗಂಟು ಮೂಟೆಗಳ ಸಂಪತ್ತೇ ಸಾಕೆ? ನಿಸ್ವಾರ್ಥವಾದ ಸಮಾಜಸೇವಕರಾದರೆ ತಮ್ಮ ಸ್ವಂತದ್ದ ಹಣವನ್ನೇ ಹಂಚಿ ಸಮಾಜದ ಏಳಿಗೆಯನ್ನು ಬಯಸಬವುದಿತ್ತು ಅಲ್ಲವೇ? ದೇಶದ ದುಡ್ಡನ್ನು ದೇಶಕ್ಕೇ ಹಂಚಲು ಇಂತಹ ಅಪ್ಪನ ಮಕ್ಕಳೇ ಬೇಕೇ? ಇಂತಹ ಮಧ್ಯವರ್ತಿ ಪಾಳೇಗಾರರನ್ನು ಮಾತ್ರ ಯಾವೊಬ್ಬ ಪ್ರಜೆಯೂ ನೀ ಬಂದು ನಮ್ಮ ಸಮಾಜಸೇವಕನಾಗು ಎಂದು ಕೇಳಿಕೊಳ್ಳುವುದಿಲ್ಲ. ತಮ್ಮ ತಮ್ಮ ಭಾವಚಿತ್ರದ ದೊಡ್ಡ ದೊಡ್ಡ ಪೋಸ್ಟರ್ಗಳು. 'ಶ್ರೀಯುತ MLA ಅವರ ಅನುಧಾನದಲ್ಲಿ ನಿರ್ಮಿಸಿರುವ ಆಟೋ ನಿಲ್ದಾಣ', 'ಜಿಲ್ಲೆಯ MP ಯವರ ಅನುಧಾನದಲ್ಲಿ ನಿರ್ಮಿಸಿರುವ ಉದ್ಯಾನವನ' ಇಂತಹ ಬೋರ್ಡುಗಳನ್ನು ಗಲ್ಲಿ ಗಲ್ಲಿಗೂ ಹಾಕುತ್ತಾರಲ್ಲ ಸ್ವಾಮಿ, ಏನು ಇವರು ತಮ್ಮ ಜೇಬಿನಿಂದ ತಂದು ಸುರಿಯುವ ಹಣವೇ ಅದು? ದೇಶದ ಪ್ರತಿಯೊಬ್ಬ ಟ್ಯಾಕ್ಸ್ ಪೆಯೆರ್ ಗಳ ಬೆವರಿನ ಹಣವಲ್ಲವೇ ಅದು? ವ್ಯಕ್ತಿಯೊಬ್ಬ ನಮ್ಮ ಮನೆಯ ದುಡ್ಡನ್ನು ಪಡೆದು ತನ್ನ ಹೆಸರಿನ ಬಿಸಿನೆಸ್ ಒಂದನ್ನು ಶುರುಮಾಡಿದರೆ ನಾವು ಸುಮ್ಮನಿರುತ್ತೇವೆಯೇ? ಆತನ ಕುತ್ತಿಗೆ ಪಟ್ಟಿ ಇಡಿದು ಕೇಳುವುದಿಲ್ಲವೇ? ಪ್ರಸ್ತುತ ಸಮಾಜಸೇವೆಯ ಹೆಸರಿನಲ್ಲಿ ರಾಜಕಾರಣಿಗಳು ಹಾಗು ಅವರ ಸುಪುತ್ರರುಗಳು ನೆಡೆಸುವ ಕಳ್ಳಾಟವನ್ನು ಹೀಗೆಯೇ ಕುತ್ತಿಗೆ ಪಟ್ಟಿಯನ್ನು ಹಿಡಿದು ನಾವು ಕೇಳಬಲ್ಲವೇ? ಅದು ಸಾಧ್ಯವಾದರೆ ಮಾತ್ರ ನೋಡಿ ನಮ್ಮ 'ಪ್ರಜಾ''ಪ್ರಭುತ್ವ' ದ ನಿಜವಾದ ಆಶಯ ಈಡೇರುವುದು. ಸಮಾಜಸೇವಕರು ಪ್ರಜಾ ಸೇವಕರಾಗುವುದು. ಆಯ್ಕೆ ನಮ್ಮದು. ಅನುಭವವೂ ನಮ್ಮದೇ!

S L B

ಇವರದ್ದು ನಿಜ ಜೀವನದಲ್ಲಷ್ಟೇ ಅಲ್ಲ ಸಾಹಿತ್ಯ ಲೋಕದಲ್ಲೂ ಆನೆಯ ನಡೆಯೇ. ಈ ಮಹೋನ್ನತ ನಡೆ ಯಾವುದೇ ಚಿತ್ರಕತೆಗೂ ಕಮ್ಮಿಯಲ್ಲ ಎಂದೇ ಅನ್ನಬಹುದು. ಬೇಜವಾಬ್ದಾರಿಯುತ ಅಪ್ಪನ ಹಿಂಸೆಯನ್ನನುಭವಿಸುತ್ತಾ, ಎಳೆಯ ಸಹೋದರ ಸಹೋದರಿಯರು ಹಾಗು ಅಮ್ಮನ ಸಾಲು ಸಾಲು ಸಾವುಗಳು ನೋವುಗಳು, ಬಡತನದ ಬವಣೆಯಲ್ಲಿ ಬೇಯುತ್ತಾ, ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದ ಪೋರನೊಬ್ಬ ಅದ್ಯಾವ ಹುಮ್ಮಸ್ಸಿನ ಬಲದಿಂದ ಮುನ್ನೆಡೆದನೋ ಆತನೊಬ್ಬನೇ ಬಲ್ಲ. ಈ ಕಷ್ಟ ನೋವುಗಳೇ ಆತನನ್ನು ಒಬ್ಬ ಕಠಿಣ ಮನಸ್ಸಿನ ಸ್ವತಂತ್ರ ವ್ಯಕ್ತಿಯನ್ನಾಗಿ ಮಾಡಿದವು ಎಂದರೆ ಸುಳ್ಳಾಗದು. ಇಂದು ಕೇವಲ ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ತನ್ನ ಬರಹಗಳಿಂದ ಹೆಸರು ಮಾಡಿರುವ ಹಾಸನದ ಸಂತೇಶಿವರದ ಭೈರಪ್ಪನವರು ಕನ್ನಡದ ಹೆಮ್ಮೆಯ ಬರಹಗಾರರಲ್ಲೊಬ್ಬರು. ಕಳೆದ ಸುಮಾರು ಆರು ದಶಕಗಳಿಂದ ಕನ್ನಡ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿರುವ ಇವರು ನವ್ಯ, ನವೋದಯ, ಬಂಡಾಯ ಎನ್ನುವ ಯಾವೊಂದು ಪಂಗಡಕ್ಕೂ ತೂಗಾಕಿಕೊಳ್ಳದೆ ತಮಗೆ ಸರಿಯೆನಿಸಿದ್ದನ್ನು, ತಮ್ಮ ಮನಸ್ಸು ನಿಶ್ಚಿಯಿಸಿದನ್ನು ಯಾವುದೇ ಅಡೆ ತಡೆಗಳಿಲ್ಲದೆ ಸಾಮಾನ್ಯನ ಧಾಟಿಯಲ್ಲಿ ವ್ಯಕ್ತಪಡಿಸುತ್ತಾ ಬಂದರು. ಓದುಗರ ಮನೆಮಾತಾದರು. ಹಳೆಬೇರುಗಳಿಂದಿಡಿದು ಹೊಸಚಿಗುರುಗಳಿಗೂ ಸ್ಪೂರ್ತಿಯಾದರು.


ಒಂದೆಡೆ ವಿಧಿ ಎಂಬುದು ತನ್ನ ಚಾಟಿಯ ಏಟಿನಿಂದ ಭ್ಯರಪ್ಪನವರನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದ್ದರೆ ಇನ್ನೊಂದೆಡೆ ಅದೇ ವಿಧಿ ಪ್ರತಿ ಏಟಿನ ನೋವನ್ನು ಸಹಿಸಿಕೊಳ್ಳುವ, ಏನಾದರೊಂದು ಸಾಧಿಸಬೇಕೆಂಬ ಕಿಚ್ಚುಳ್ಳ ಮನವೊಂದು ಎಳೆಯ ಭೈರಪ್ಪನವರಲ್ಲಿ ಬೆಳೆಸುತ್ತದೆ. ತನ್ನ ಆತ್ಮೀಯರನ್ನು ಕಳೆದುಕೊಂಡ ಭೈರಪ್ಪನವರು ಅಲೆಮಾರಿಯಂತೆ ಕೆಲವರ್ಷಗಳ ಕಾಲ ಊರೂರು ಅಲೆದರು. ಈ ಅಲೆದಾಟದ ಹಿಂದೆ ಅಂಥಹದ್ದೇನೂ ಮಹೋದ್ದೇಶಗಳಿರದಿದ್ದರೂ ಇವರು ಹೋದಡೆಯಲ್ಲ ಮಾತ್ರ ಜೀವನವನ್ನು ಕಲಿಸುವ ಗುರುಗಳೇ ಎದುರಾಗತೊಡಗಿದ್ದರು. ಕೆಲವರು ಮಾತಿನಿಂದಾದರೆ ಕೆಲವರು ಏಟಿನಿಂದ! ಕೆಲವರು ಇಷ್ಟದಿಂದಾದರೆ ಕೆಲವರು ಕಷ್ಟದಿಂದ! ಹೀಗೆ ಅಲೆಯುತ್ತ ದೂರದ ಮುಂಬೈವರೆಗೂ ಹೋಗಿದ್ದ ಭೈರಪ್ಪನವರು ತಮ್ಮ ಉದರ ಪೋಷಣೆಗೆ ಸಿನಿಮಾ ಮಂದಿರದ ಕಾವಲುಗಲಾರನಾಗಿ, ರೈಲ್ವೆ ಸ್ಟೇಷನ್ನಿನ ಕೂಲಿಯವನಾಗಿ, ನಾಟಕ ಕಂಪನಿಯಲ್ಲಿ ನೌಕರನಾಗಿ ಅಲ್ಲದೆ ಸನ್ಯಾಸಿಗಳೊಟ್ಟಿಗೆ ಸೇರಿ ಕೆಲಕಾಲ ಅವರಂತೆಯೇ ವೇಷಭೂಷಣಗಳನ್ನೂ ತೊಟ್ಟು ಅಲೆದಿರುವುದೂ ಉಂಟು. ಜೀವನದ ಪ್ರಾರಂಭದ ದಿನಗಳಲ್ಲಿ ವ್ಯತಿರಿಕ್ತವಾಗಿ ಕಾಡಿದ್ದ ವಿಧಿ ಈ ಬಾರಿ ಮಾತ್ರ ಭೈರಪ್ಪನವರನ್ನು ಪುನ್ಹ ಶಾಲೆಯೆಡೆ ಸೆಳೆದಿತ್ತು. ಆ ಸೆಳೆತ ಅದ್ಯಾವ ಪರಿಯೆಂದರೆ ಓದು ಬರಹಗಳೆರಡನ್ನೇ ಅವರ ಜೀವನದ ಅತ್ಯಾಪ್ತ ವ್ಯಕ್ತಿಗಳನ್ನಾಗಿ ಮಾಡಿತು. ಓದೇ ಅಂತಹದ್ದು. ಪಂಜರದೊಳಗಿನ ಗಿಳಿಮರಿಯನ್ನು ಬಾಗಿಲು ತೆರೆದು ಬಿಟ್ಟಂತೆ. ರೆಕ್ಕೆಗಳಿವೆ ಎಂಬುದನ್ನೇ ಮರೆತಿದ್ದ ಹಕ್ಕಿಗೆ ಮನವರಿಕೆ ಮಾಡಿಕೊಟ್ಟಂತೆ. ಅಂದು ಜೀವನದ ಆದಷ್ಟೂ ಏಳು ಬೀಳುಗಳಿಗೆ ಭೈರಪ್ಪನವರು ಆಸರಿಸಿದ್ದು ಓದನ್ನು ಮಾತ್ರ. ಉಳಿದಂತೆ ಜೀವನವಿಡೀ ಅವರು ಒಂಟಿ ಸಲಗವೇ. ಹೀಗೆ ಓದುತ್ತಾ ಸಾಗಿದ ಭೈರಪ್ಪನವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿಎ ಮುಗಿಸಿ ಅಲ್ಲಿಯೇ ಚಿನ್ನದ ಪದಕದ ಸಮೇತ ಎಂಎಯನ್ನು ಪೂರ್ಣಗೊಳಿಸಿದರು. ನಂತರ ಹುಬ್ಬಳ್ಳಿ, ಗುಜರಾತ್, ದೆಹಲಿ, ಮೈಸೂರು ಹಾಗು ದೇಶದ ಇನ್ನೂ ಹಲವೆಡೆ ಪ್ರಾದ್ಯಾಪಕರಾಗಿ ಸೇವೆ ಹಾಗು 1991ರಲ್ಲಿ ನಿವೃತ್ತಿ.


ಭೈರಪ್ಪರವ ವ್ಯಕ್ತ ಪ್ರಕಾರ ಕಾದಂಬರಿಗಳು. ಇಲ್ಲಿಯವರೆಗೂ ಸುಮಾರು 26 ಕಾದಂಬರಿಗಳನ್ನು ಸೃಷ್ಟಿಸಿರುವ ಇವರು ಅವುಗಳ ಮೂಲಕ ಕಮ್ಮಿಯಂದರೂ ನೂರರಿಂದ ನೂರೈವತ್ತು ಓದುಗರ ಪರಮಾಪ್ತ ಪಾತ್ರಗಳನ್ನು ಸೃಷ್ಟಿಸಿಕೊಟ್ಟಿದ್ದಾರೆ. ಒಮ್ಮೆ ಓದಿದವ ಮುಂದೆ ಎಂದೆಂದಿಗೂ ಮರೆಯಲಾಗದಂತಹ ಪಾತ್ರಗಳವು. ಎಲ್ಲ ಬಗೆಯ ರಸಗಳನ್ನು ಧಾರೆಎಳೆಯಬಲ್ಲ ಸೃಷ್ಟಿಕರ್ತನ ಸೃಷ್ಟಿಗಳವು. ಪಾತ್ರಗಳ ವಿಚಾರವನ್ನು ಇನ್ನೂ ಆಳವಾಗಿ ನೋಡಹೋದರೆ ಇವರ ಪ್ರತಿಯೊಂದು ಪುಸ್ತಕಗಳಲ್ಲೂ ಒಂದಲ್ಲೊಂದು ಗಟ್ಟಿಗಿತ್ತಿಯ ಪಾತ್ರವಂತೂ ಇದ್ದೆ ಇರುತ್ತದೆ. ಸಮಾಜದ ವ್ಯತಿರಿಕ್ತತೆಯ ತುಳಿತ ಆಕೆಯನ್ನು ಸದೃಢಳನ್ನಾಗಿಸುವ, ಸ್ವಾವಲಂಬಿಯನ್ನಾಗಿಸುವ ಇವರ ಬರವಣಿಗೆಯ ಪರಿಯಂತೂ ಮಹೋನ್ನತವಾದದ್ದು. ಅದು 'ದಾಟು' ವಿನ ಸತ್ಯಳ ಪಾತ್ರವಿರಬಹುದು, 'ಆವರಣ'ದ ರಝಿಯಾ, 'ಯಾನ'ದ ಉತ್ತರೆ, 'ಮಂದ್ರ'ದ ರಾಮಕುಮಾರಿ, ಅಥವಾ 'ತಬ್ಬಲಿಯು ನೀನಾದೆ ಮಗನೆ' ಪುಸ್ತಕದ ಹಿಲ್ಡಾಳ ಪಾತ್ರವಾಗಿರಬಹದು, ಇಲ್ಲಿ ಯಾವ ಹೆಣ್ಣು ಸಹ ಜೀವನದ ಕಷ್ಟಗಳಿಗೆ, ಬವಣೆಗಳಿಗೆ ಬೆನ್ನು ತೋರಿಸಿ ಓಡುವವಳಲ್ಲ. ಸ್ವಾಭಾವಿಕ ಹೆಣ್ಣಿನ ಗುಣದಂತೆ ಆಕೆ ಶುರುವಿನಲ್ಲಿ ಕೊಂಚ ಹಿನ್ನೆಡೆದರೂ ಕತೆ ಸಾಗಿದಂತೆ ಆಕೆ ಮುನ್ನೆಡೆದು ಬರುತ್ತಾಳೆ. ಛಲ, ಧೈರ್ಯ ಹಾಗು ಸ್ವಾವಲಂಬನೆಯ ವಿಶಿಷ್ಟ ಮೂರ್ತಿಯಾಗುತ್ತಾಳೆ. ಅಂತಹ ಅದೆಷ್ಟೋ ಪಾತ್ರಗಳು ಇಂದಿಗೂ ಪ್ರಸ್ತುತವಾಗಿವೆ. ಹೆಣ್ಣೆಂದರೆ ಒಳಗೆ, ಗಂಡೊಬ್ಬ ಮಾತ್ರ ಹೊರಗೆ ಎಂಬಂತಿದ್ದ ಕಾಲದಲ್ಲಿ ಮೂಡಿಬಂದ ಬೈರಪ್ಪನವರ ಈ ಕಾದಂಬರಿಗಳು ಲಕ್ಷಾಂತರ ಹೆಣ್ಣು ಮನಗಳನ್ನು ಅಂದು ಬಡಿದೆಬ್ಬಿಸಿದಂತೂ ಸುಳ್ಳಲ್ಲ.


ಯಾವೊಂದು ಬಗೆಯ ಅಥವಾ ಇಂತಿಷ್ಟೇ ವಲಯದಲ್ಲಿ ಮಾತ್ರವಷ್ಟೇ ಇವರ ಪ್ರವೀಣತೆ, ಇಂತಿಷ್ಟು ವಿಚಾರಗಳನ್ನು ಬಿಟ್ಟು ಇವರಿಂದ ಬೇರೇನೂ ಹೊತ್ತಿಸಲು ಸಾಧ್ಯವಿಲ್ಲ ಎನ್ನುವವರಿಗೆ ಇವರ 'ಮಂದ್ರ' ಹಾಗು 'ಯಾನ' ಪುಸ್ತಕಗಳೇ ತಕ್ಕ ಉತ್ತರಗಳು. ಮಂದ್ರ ಕೃತಿಗೆ ಜ್ಞಾನಪೀಠಕ್ಕೆ ಸರಿಸಮಾನವಾದದೆಂದೇ ಹೇಳಬಹುದಾದ ಸರಸ್ವತಿ ಸಮ್ಮಾನ್ ಪ್ರಶಸ್ತಿ ದೊರೆತರೆ, 'ಯಾನ' ಪುಸ್ತಕದ ವಿವರಣೆ ಸಾಮಾನ್ಯನಲ್ಲದೆ ವಿಜ್ಞಾನಿಗಳನ್ನೂ ಬೆರೆಗುಗೊಳಿಸಿದೆ! ಭೈರಪ್ಪನವರೇ ಹಾಗೆ. ಕಣ್ಣು ಮುಚ್ಚಿ, ತಲೆಗೆ ತೋಚಿದಷ್ಟನ್ನೇ ಗೀಚುವ ಜಾಯಮಾನದವರಲ್ಲ. ಪ್ರತಿ ಪುಸ್ತಕದ ಶುರುವಿನ ಮೊದಲು ಒಬ್ಬ Phd ವಿದ್ಯಾರ್ಥಿಗಿಂತಲೂ ಮಿಗಿಲಾದ ಸಂಶೋಧನೆ ಇವರಿಂದ ಜರುಗುತ್ತದೆ. ಅವರ ಆವರಣ ಕೃತಿಯ ಪ್ರಾರಂಭದ ಹಂತದಲ್ಲಿ ಮುಸ್ಲಿಂ ಧರ್ಮದ ಬಗ್ಗೆ, ಒಬ್ಬ ಸಾಮಾನ್ಯ ಮುಸ್ಲಿಂರ ದಿನಚರಿಯನ್ನು ಖುದ್ದಾಗಿ ನೋಡಿ ತಿಳಿದುಕೊಳ್ಳಲು ವಾರಗಳ ಕಾಲ ಒಂದು ಮುಸ್ಲಿಂ ಕುಟುಂಬದದಲ್ಲಿ ನೆಲೆಸಿ, ನೋಡಿ, ಅರಿತು ಪುಸ್ತಕವನ್ನು ಶುರುಮಾಡಿದ್ದರು! ಇನ್ನು ಇವರ 'ಮಂದ್ರ' ಪುಸ್ತಕ ಕೇವಲ ಸಾಹಿತ್ಯ ಕೃತಿ ಮಾತ್ರವಾಗಿರದೆ ಕಲ್ಯಾಣಿ, ಭೈರವ, ಮೋಹನ ಎಂಬ ಹಲವು ಹಿಂದುಸ್ಥಾನಿ ರಾಗಗಳನ್ನು ಸರಳ ಭಾಷೆಯಲ್ಲಿ ತಿಳಿಯೇಳುವ ಸಂಗೀತದ ಕಿರುಹೊತ್ತಿಗೆಯಂತಿದೆ. ಮಾನವನ ಜೀವನವನ್ನೇ ಸಂಗೀತಕ್ಕೆ ಹೋಲಿಸಿ, ರಸವನ್ನು ಹೊತ್ತಿಸಿದ ಇವರ ಆ ಕಲಾಚತುರತೆಗೆ ಹೋಲಿಕೆಯೇ ಇಲ್ಲವೆನ್ನಬಹುದು.ಇನ್ನು 'ಯಾನ' ಕೃತಿ ವಿಜ್ಞಾನಿ ಹಾಗು ತತ್ವಜ್ಞಾನಿ ಇಬ್ಬರನ್ನು ಒಟ್ಟುಗೂಡಿಸಿ ಮೂಡಿಬಂದ ಹೊತ್ತಿಗೆ. ಭೈರಪ್ಪನವರ ಸಮಕಾಲೀನರಲ್ಲಿ ಈ ಮಟ್ಟಿನ ಸಮ್ಮಿಶ್ರಣ ಬೇರ್ಯಾವ ಬರಹಗಾರನಿಂದಲೂ ಸಾಧ್ಯವಾಗದಿದ್ದದು ಭೈರಪ್ಪನವರ ಹಿರಿಮೆಗೆ ಹಿಡಿದ ಕನ್ನಡಿ ಎನ್ನಬಹುದು.


ಇಂದು ಭೈರಪ್ಪನವರ ಹೆಸರು ಕೇಳಿದರೆ ಮೈಮೇಲೆ ಕೆಂಡ ಸುರಿದವರಂತೆ ಆಡುವವರಿದ್ದಾರೆ. ಯಾವುದೊ ಒಂದು ಅಜೇಂಡಾದೊಂದಿಗೆ ತೂಗಾಗಿಕೊಂಡು ಇವರ ಬರಹಗಳು ಮೂಡುತ್ತವೆ ಎಂದು ಜರಿಯುವವರಿದ್ದಾರೆ. ಕೆಲವರಂತೂ ಇನ್ನೂ ಒಂದೆಜ್ಜೆ ಮುಂದೋಗಿ ಭೈರಪ್ಪನರ ಸಾಹಿತ್ಯ ಸಾಹಿತ್ಯವೇ ಅಲ್ಲ, ಅವರ ಪುಸ್ತಕದ ಪ್ರತಿ ಪಾತ್ರಗಳು ಸ್ವತಂತ್ರವಾಗಿ ಮೂಡುವುದೇ ಇಲ್ಲ, ಎಲ್ಲವೂ ಕೈಕಟ್ಟಿ ಕುಣಿಸುವ ಕೀಲುಗೊಂಬೆಗಳು ಎಂದು ದೂರುವವರಿದ್ದಾರೆ. ಆದರೆ ಭೈರಪ್ಪನವರು ಇದ್ಯಾವ ಕುಹಕಗಳಿಗೂ ಕಿವಿ ಕೊಟ್ಟು ಸಮಯವನ್ನು ಹರಣಮಾಡುವವರಲ್ಲ. ತಮ್ಮ ಅಸಂಖ್ಯ ಓದುಗ ಪ್ರೇಮಿಗಳಿಗೆ ಒಂದರಿಂದೊಂದು ಪುಸ್ತಕಗಳನ್ನು ನೀಡುತ್ತಾ ಆತ್ಮತೃಪ್ತಿಯ ಕಾರ್ಯದಲ್ಲಿ ನಿರತರಾಗಿರುವವರು ಅವರು. ಮಾತಿಗೆ ಮಾತಿನಲ್ಲಿ, ಬರಹಕ್ಕೆ ಬರವಣಿಗೆಯಲ್ಲಿ ಉತ್ತರಿಸಲಾಗದ ಗುಂಪೊಂದಕ್ಕೆ ಜವಾಬನ್ನು ನೀಡುತ್ತಾ ಕುಳಿತಿದ್ದರೆ ಇಂದು ಇಷ್ಟೆಲ್ಲಾ ಕೃತಿಗಳು ಇವರಿಂದ ಮೂಡಲು ಸಾಧ್ಯವಾಗದೆ ಇರುತಿತ್ತೇನೋ ಯಾರು ಬಲ್ಲರು?! ಒಬ್ಬ ಸಾಮನ್ಯನಿಗೆ ಅರ್ಥವಾಗದ ಧಾಟಿಯಲ್ಲಿ ಬರೆದು ಒಂದಿಷ್ಟು ಜನರ ಮೆಚ್ಚಿಗೆ ಗಳಿಸಿಕೊಳ್ಳುವರಿಂದ ಏನು ಬಂತು ಸ್ವಾಮಿ? ಕೂಲಿ ಕೆಲಸ ಮಾಡುವ ವ್ಯಕ್ತಿಯ ಬ್ಯಾಗಿನಲ್ಲೂ ತಾವು ಬರೆದ ಒಂದು ಪುಸ್ತಕವನ್ನು ಕಾಣ ಸಿಕ್ಕರೆ ಬರವಣಿಗೆಯ ಸಾರ್ಥಕತೆ ಅದಲ್ಲದೆ ಮತ್ತಿನ್ನೇನು? ಭೈರಪ್ಪನವರ ವಂಶವೃಕ್ಷ, ನಾಯಿ ನೆರಳು, ಗೃಹಬಂಗ, ನಿರಾಕರಣ, ಪರ್ವ, ನೆಲೆ, ಎಂಬ ಇನ್ನು ಹಲವು ಕೃತಿಗಳು ಕನ್ನಡ ಸಾಹಿತ್ಯ ಲೋಕದ ಮುಕುಟಮಣಿಗಳಂತೆ ಕಂಗೊಳಿಸುತ್ತಿವೆ. ಸಾಧ್ಯವಾದಷ್ಟು ಸವಿಯುವ ಭಾಗ್ಯ ಮಾತ್ರ ನಮಗೆ ಬಿಟ್ಟದ್ದು.