Friday, January 27, 2017

ನೀಳ್ಗತೆ : ಮರಳು


"ಎಷ್ಟೇ ಮಾಡಿದರೂ ಆಗಿ ಮುಗಿಯದ ಕೆಲಸವಿದು. ನೆಮ್ಮದಿ ಎಂಬುದಿಲ್ಲಿ ಮರೀಚಿಕೆಯಾಗಿಬಿಟ್ಟಿದೆ. ಸಾಧನೆಯೆಂದರೆ ವಿದೇಶದಲ್ಲಿ ಉನ್ನತ ಶಿಕ್ಷಣ ಮುಗಿಸಿ, ಎಲ್ಲರಿಗಿಂತ ಹೆಚ್ಚು ಹಣ ಸಿಗುವ ಉದ್ಯೋಗಕ್ಕೆ ಸೇರಿ ಎದೆಯುಬ್ಬಿಸಿಕೊಂಡು ನೆಡೆಯುವುದು ಎಂದರಿತ್ತಿದ್ದೆ. ನೆನ್ನೆ ಮೊನ್ನೆಯಷ್ಟೇ ಸೇರಿದ ಕೆಲಸವಿದು. ನೋಡ ನೋಡುತ್ತಲೇ ಐದು ವರ್ಷಗಳಾಗಿ ಬಿಟ್ಟಿದೆ! ಇಂದು ನಾನು ಸಾಧಿಸಿರುವುದೇನೆಂದು ಒಮ್ಮೆ ಹಿಂತಿರುಗಿ ನೋಡಿದರೆ ಕೇವಲ ಶೂನ್ಯ. ಸಿಗುವ ಸಂಬಳಕ್ಕೆ ಇನ್ನೂ ಕೆಲ ಶೂನ್ಯಗಳನ್ನು ಸೇರಿಸಿಕೊಳ್ಳುವ ಭರದಲ್ಲಿ ಬದುಕನ್ನೇ ಶೂನ್ಯವಾಗಿಸಿಕೊಂಡುಬಿಟ್ಟೆನೆ? ಸಣ್ಣವನಿದ್ದಾಗ ಒಂದು ರೂಪಾಯಿ ಸಿಕ್ಕಾಗ ಸಿಗುತ್ತಿದ್ದ ಆ ಖುಷಿ ಇಂದು ಲಕ್ಷ ಸಿಕ್ಕರೂ ಕಾಣದು ಏಕೆ? ಅಮ್ಮನ ಸೀರೆಯ ಸೆರಗನ್ನು ಬಾಯಿಯೊಳಗೆ ತೂರಿಕೊಂಡು ಕಾರು ಬಸ್ಸುಗಳಂತೆ ಶಬ್ದವನ್ನು ಮಾಡಿಕೊಂಡು ಆಕೆಯ ಹಿಂದೆಯೆ ಓಡಾಡುತಿದ್ದ ಆ ದಿನಗಳಲ್ಲಿ ಸಿಗುತ್ತಿದ್ದ ಆನಂದ ಇಂದು ಇಷ್ಟು ದುಬಾರಿಯಾದ ಕಾರನ್ನು ಓಡಿಸುವಾಗಲೂ ಸಿಗುತ್ತಿಲ್ಲ. ಜೀವನ ಅರ್ಥಹೀನವಾಗುತ್ತಿದೆ. ಕೇವಲ ಕೆಲಸ ಹಾಗು ಹಣದ ನಡುವೆ ಸುತ್ತುತ್ತಿದೆ. ಏನೋ ಒಂದು ನನ್ನಿಂದ ದೂರವಾಗುತ್ತಿದೆ.ಈ ತಳಮಳ ಇತರರಿಗೂ ಹೀಗೆಯೇ?" ಲ್ಯಾಪ್ಟಾಪ್ನ ಕಪ್ಪು ಪರದೆಯನ್ನು ದಿಟ್ಟಿಸಿ ಯೋಚಿಸುತ್ತಾ ಕುಳಿತ್ತಿದ್ದ ಭರತ. ಸಂಜೆ ಏಳಾದರು ಆಫೀಸ್ಸನ್ನು ಬಿಟ್ಟಿಲ್ಲ. ನಾಳಿನ ಪ್ರೆಸೆಂಟೇಷನ ಚಿಂತೆ ಬೇರೆ ತಲೆಯನ್ನು ಕೊರೆಯುತ್ತಿದೆ. ಅದನ್ನು ಬೇರೆಯವರು ಮಾಡಬಲ್ಲರಾದರೂ ಸುಖಾಸುಮ್ಮನೆ ತನ್ನ ಮೇಲೆ ಎಳೆದುಕೊಂಡಿದ್ದಾನೆ. ಇಂದು ತನ್ನೊಳಗೆ ಮೂಡುತ್ತಿರುವ ತಳಮಳದ ಪ್ರೆಶ್ನೆಗಳಿಗೆ ಮಂಕಾಗಿದ್ದಾನೆ. ನಾಳಿನ ಪ್ರೆಸೆಂಟೇಷನ್ ಮಾಡಬೇಕೋ ಬೇಡವೋ ಎಂಬ ದ್ವಂದ್ವದಲ್ಲಿದ್ದಾನೆ.

‘ಮುಕ್ತವಾಗಿ ಚಿಂತಿಸಲೂ ಬಿಡದು ಈ ಹಾಳು ಕೆಲಸದ ಗೋಳು’ ಎಂದು ಶಪಿಸುತ್ತಾನೆ. ಇತ್ತೀಚೆಗೆ ತನ್ನಿಂದ ನೆಡೆಯುವ ಪ್ರತಿಯೊಂದು ಅಚಾತುರ್ಯಕ್ಕೂ ಕೆಲಸದ ಒತ್ತಡವೇ ಕಾರಣವೆಂದು ಭಾವಿಸುತ್ತಾನೆ. ಆದರೆ ಅದೆಷ್ಟು ಸತ್ಯವೆಂದು ಮಾತ್ರ ಅವನಿಗರಿಯದು.ಮೊದಲೆಲ್ಲ ಸಂಜೆ ಐದಕ್ಕೆ ಆಫೀಸಿನಿಂದ ಹೊರಟು ಹತ್ತಿರದಲ್ಲೇ ಇದ್ದ ಸಂಗೀತ ಶಾಲೆಯಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದ. ದಿನ ಕಳೆದಂತೆ ಕೆಲಸದ ಒತ್ತಡದಲ್ಲಿ ಸಮಯವೇ ಸಾಲುತ್ತಿರಲಿಲ್ಲ. ನಂತರ ವಾರಾಂತ್ಯದಲ್ಲಿ ಹೋಗಲು ಶುರು ಮಾಡಿದ. ಆದರೆ ಇತ್ತೀಚೆಗೆ ವಾರಾಂತ್ಯವೂ ಆಫೀಸ್ಸಿಗೆ ಬರಬೇಕಾಗಿ ಬರುತ್ತಿದೆ. ಕಳೆದ ಮೂರು ವಾರಗಳಿಂದ ಒಂದು ದಿನವೂ ಸಹ ರಜೆಯನ್ನು ತೆಗೆದಿಲ್ಲ.

“ಸಾರ್ ನಿಮ್ಮನ್ನ ಮ್ಯಾನೇಜರ್ ಕರೀತಾ ಇದ್ದಾರೆ.” ಆಫೀಸಿನ ಹುಡುಗ ಬಾಗಿಲ ಬಳಿ ಬಂದು ಹೇಳಿದಾಗ ಭರತನಿಗೆ ಎಚ್ಚರವಾಯಿತು.

ವಾರಾಂತ್ಯದಲ್ಲಿ ಇರುವ ಕ್ಲೈಂಟ್ ಮೀಟಿಂಗ್ಗೆ ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕೆಂದು ಮ್ಯಾನೇಜರ್ ಹೇಳಿದ. ವಯಸ್ಸು ಐವತ್ತರ ಆಸುಪಾಸು, ಭರತನಂತೆ ಶ್ರಮಜೀವಿ. ಕೆಲಸದ ಒತ್ತಡದಲ್ಲಿ ಮಂಕಾಗಿರುವ ಭರತನ ಮನವನ್ನು ಅರಿಯಲು ವಿಫಲನಾಗುತ್ತಾನೆ. ಮಾನವನಿಗಾಗಿ ಕೆಲಸ ಎಂಬುವುದಕ್ಕಿಂತ ಹೆಚ್ಚಾಗಿ ಕೆಲಸಕ್ಕಾಗೇ ಮಾನವನಿರುವುದು ಎಂಬ ಒಂದು ರೀತಿಯ ಭ್ರಮೆಯ ಬದುಕು ಅವನದು. ಹೊರಬರುವ ಮುನ್ನ ಭರತ ಒಮ್ಮೆ ಅವನ ಮುಖವನ್ನು ದಿಟ್ಟಿಸಿ ನೋಡುತ್ತಾನೆ. ಭಾವನೆಗಳೇ ಇಲ್ಲದ ಯಂತ್ರದಂತೆ ಜೀವಿಯೊಂದು ತನ್ನ ಮುಂದೆ ಕೂತಿರುವಂತೆ ಅವನಿಗೆ ಭಾಸವಾಗುತ್ತದೆ.

'ಎನಿಥಿಂಗ್ ಎಲ್ಸ್ Mr.ಭರತ್..?' ಮ್ಯಾನೇಜರ್ ನ ಸದ್ದಿಗೆ ಚಕಿತನಾಗಿ 'ನೋ ಸರ್ ನಥಿಂಗ್....’ ಎನ್ನುತ ಹೊರಬರುತ್ತಾನೆ.

‘ಕೆಲವರ್ಷಗಳ ನಂತರ ನಾನೂ ಹೀಗೆಯೆ ಆಗುವೆನೆ? ಭಾವನೆಗಳೇ ಅರಿಯದ ಯಂತ್ರದಂತೆ!?' ಪ್ರೆಶ್ನೆಗೆ ಉತ್ತರ ಅರಿಯದಾಗುತ್ತಾನೆ.

ಮೊದಲು ಯಾವುದಾದರೊಂದು ಕೆಲಸ. ಆಮೇಲೆ ಬೈಕು. ಆನಂತರ ಕಾರು. ಸಾಲದಕ್ಕೆ ಒಬ್ಬನಿದ್ದರೂ 2BHK ಯ ದುಬಾರಿ ಬಾಡಿಗೆ ಮನೆ. ದುಂದುವೆಚ್ಚಗಳು. ಅವಶ್ಯಕತೆಗಿಂತ ಹೆಚ್ಚಿನ ಬಯಕೆಗಳು. ಬಯಕೆಗಳೇ ಹಾಗೆ, ಒಮ್ಮೆ ಹುಟ್ಟಿದರೆ ಸಾಯವು. ಹಾಗಾಗಿ ಏನೋ ಕೆಲಸಕ್ಕೆ ನಾನು ಹೀಗೆ ಜೋತುಬಿದ್ದುಗೊಂಡಿರುವುದು. ಪ್ರತಿತಿಂಗಳ ಕೊನೆಗೆ ಇವುಗಳಿಗೆಲ್ಲ EMI ಕಟ್ಟಿ ಕೊನೆಗೆ ಉಳಿಯುತ್ತಿದ್ದದು ತಿಂಗಳ ಖರ್ಚಿಗೆ ಸಾಲುತ್ತಿರಲಿಲ್ಲ! ತಾನೇ ತೋಡಿಕೊಂಡ ಗುಂಡಿಯೊಳಗೆ ಬಿದ್ದ ಭರತ ಹೊರಬರಲು ಅವಣಿಸುತ್ತಿದ್ದಾನೆ. ಆದರೆ ಆಗುತ್ತಿಲ್ಲ.


ಈ ವಾರಂತ್ಯವೂ ಕೆಲಸಕ್ಕೆ ಬರಬೇಕೆಂಬುದ ಯೋಚಿಸಿಯೇ ಖಿನ್ನತೆಯಲ್ಲಿ ಮನ ಮುಳುಗುತ್ತದೆ. ಇದು ಎಂದಿಗೂ ಮುಗಿಯದ ವ್ಯಥೆ. ತುಸು ಸಮಯ ಸುಮ್ಮನಿದ್ದ ಭರತ ಎದ್ದು ನಿಲ್ಲುತಾನೆ. ಇಮೇಲ್ ಮೂಲಕ ತನ್ನ ಸಹೋದ್ಯೋಗಿಗೆ ಕೆಲಸವನ್ನು ಒಪ್ಪಿಸಿ, ಮುಂದಿನ 2 ವಾರಕ್ಕೆ ರಜೆಯನ್ನು ಬರೆದು ಹೊರಬರುತ್ತಾನೆ. ಕೆಲಹೊತ್ತು ತಳಮಳಗೊಂಡ ಮನ ಸ್ವಲ್ಪ ಹೊತ್ತಿನ ನಂತರ ಶಾಂತವಾಯಿತು. ಆದರೆ ಈ ಎರಡು ವಾರದಲ್ಲಿ ಏನು ಮಾಡುವುದು, ಎಲ್ಲಿಗೆ ಹೋಗುವುದು ಎಂದು ಯೋಚಿಸುತ್ತಾನೆ. ಮನೆಗೆ ಹೋದರೆ ಇನ್ನೊಂದು ಬಗೆಯ ಚಿಂತೆ, ಒತ್ತಡ. ಇವೆಲ್ಲವನ್ನೂ ಬಿಟ್ಟು ಕೆಲಕಾಲಕ್ಕೆ ಎಲ್ಲಾದರೂ ದೂರಹೋಗಬೇಕೆನಿಸಿತು. ಎಷ್ಟೋ ದಿನಗಳಿಂದ ಸಮುದ್ರದ ಅಲೆಗಳಂತೆ ಅಪ್ಪಳಿಸುತ್ತಿದ್ದ ಅಜ್ಜನ ಮನೆಯ ನೆನಪುಗಳು ನನಪಾದವು. ಅಲ್ಲಿಗೆ ಹೋಗಿ ಅದೆಷ್ಟೋ ವರ್ಷಗಳಾಗಿವೆ. ಇಲ್ಲಿಂದ ನಾಲ್ಕುನೂರು ಕೀಲೊಮೀಟರ್ ದೂರದ ಹಳ್ಳಿ. ಆಧುನಿಕತೆಯ ಪರಿಧಿಯ ಹೊರಗಿರುವ ಪ್ರದೇಶ. ಆದರೆ ಹಸಿರುಸಿರಿಯಿಂದ ಕಂಗೊಳಿಸುವ ಶಾಂತವಾದ ಜಾಗ. ಕೆಲವರ್ಷಗಳ ಹಿಂದೆ ಒಮ್ಮೆ ಹೋಗಿದ್ದಾಗ ವಾಪಾಸ್ಸೆ ಬರಲು ಮನವು ಒಪ್ಪುತ್ತಿರಲಿಲ್ಲ! ಆಧುನಿಕ ಸೌಲಭ್ಯಗಳೆಚ್ಚೇನೂ ಇಲ್ಲದಿದ್ದರೂ ಅದೇನೋ ಒಂದು ಆಕರ್ಷಣೆ ಆ ನೆಲದಲ್ಲಿ. ಅದೇನೋ ಇಂದು ಮತ್ತೊಮ್ಮೆ ಅಲ್ಲಿಗೆ ಹೋಗಲು ಮನ ಬಯಸಿದೆ. ‘ಮನೆಯವರ್ಯಾರು ಬೇಡ. ತಾನೊಬ್ಬನೇ ಹೋಗಿ ಬರುವೆ’ ಎಂದುಕೊಳ್ಳುತ್ತಾನೆ. ಅದೇನೋ ಒಂದು ಬಗೆಯ ಖುಷಿ ಮನದೊಳಗೇ ಮೂಡುತ್ತದೆ. ಅಪ್ಪ ಅಮ್ಮನಿಗೆ ಫೋನ್ ಮಾಡಿ ಹೇಳಿ ಆ ದಿನ ರಾತ್ರಿಯೇ ರೈಲನ್ನು ಹಿಡಿದು ಹೊರಡುತ್ತಾನೆ.

ರೈಲಿನ ದಡಬಡ ಸದ್ದಿನಲ್ಲೂ ದಣಿದ ಕಣ್ಣುಗಳು ನಿದ್ರೆಗೆ ಶರಣಾಗುತ್ತವೆ. ಕೆಲಸಮಯದ ನಂತರ ಕಣ್ಣು ತೆರೆದಾಗ ಮುಂಜಾವಿನ ಮೊಬ್ಬಾದ ಗಿಡ ಮರ ಹಾಗು ಗದ್ದೆಗಳು ಕಾಣತೊಡಗುತ್ತವೆ. ನೋಡ ನೋಡುತ್ತಲೇ ಆಕಾಶ ನಿಧಾನವಾಗಿ ಕೆಂದಾವರೆಯ ಬಣ್ಣ ತಳೆದು ನಿಲ್ಲುತ್ತದೆ. ಕಿಟಕಿಯಿಂದ ತಂಪಾದ ಗಾಳಿ ಮುಖವನ್ನು ಅಪ್ಪಳಿಸಿಗಾದ ಹಿತವೆವೆನಿಸಿ ಕೆಲಹೋತ್ತು ಹಾಗೆ ಕಣ್ಣನು ಮುಚ್ಚಿ ಮುಖವನ್ನು ಗಾಳಿಗೆ ಒಡ್ಡಿಕೊಂಡಿರುತ್ತಾನೆ.
'ಮಗಾ.. ಚಳಿ ತುಂಬಾ ಇದೆ...ಕಿಟಿಕಿ ಹಾಕಪ್ಪ' ಎಂದ ತಾತನ ಸದ್ದಿಗೆ ಒಲ್ಲದ ಮನಸ್ಸಿಂದ ಕಿಟಕಿಯನ್ನ ಕೆಳಗೆ ಎಳೆಯುತ್ತಾನೆ. 'ಯಾವೂರಪ್ಪ ನಿಂದು.?' ಎಂದು ಕೇಳಿದ ತಾತನಿಗೆ, ತಾನು ಹೋಗುತ್ತಿರುವ ಊರು ವಿಳಾಸವನ್ನೆಲ್ಲ ಹೇಳಿದಾದ ಅವರು 'ಅರ್ರೆ... ನೀನು ನಮ್ಮ್ ಪಟೇಲ್ರ ಮೊಮ್ಮಗ...ನಾನು ಅದೇ ಊರು' ಎಂದು ಅವರು ಪರಿಚಯ ಮಾಡಿಕೊಳ್ಳುತ್ತಾರೆ. ಬಿಳಿ ಪಂಚೆ ಹಾಗು ಶರ್ಟನ್ನು ದರಿಸಿದ್ದ ಅವರು ತಲೆಗೊಂದು ಪೇಟವನ್ನು ಸುತ್ತಿದ್ದರು. ತಿಳಿಯಾದ ಮೀಸೆ ಗಡ್ಡವನ್ನು ಬಿಟ್ಟಿದ್ದ ಅವರ ವಯಸ್ಸು ಸುಮಾರು ಎಪ್ಪತ್ತರ ಆಸುಪಾಸು. ಎಲ್ಲೋ ನೋಡಿದ ನೆನಪು. ಆದರೆ ಸರಿಯಾಗಿ ಬಲ್ಲದ ಹೊಸ ವ್ಯಕ್ತಿಯೊಟ್ಟಿಗೆ ಹೆಚ್ಚೇನೂ ಸಂಭಾಷಿಸದೆ ಭರತ ಕಿಟಕಿಯ ಮೂಲಕ ರಮಣೀಯವಾದ ಪರಿಸರವನ್ನು ನೋಡುತ್ತಾ ಕೂರುತ್ತಾನೆ. ಪರಿಸರನ್ನು ನೋಡುತ್ತಾ ಒಂದು ನೆಮ್ಮದಿಯ ನಗೆ ಭರತನಲ್ಲಿ ಮೂಡಿದರೆ, ಆತನನ್ನು ನೋಡಿ ಹಿರಿಯ ಮುಗಳ್ನಗೆಯೊಂದು ತಾತನಲ್ಲಿ ಮೂಡುತ್ತದೆ.

ಕೆಲ ಸಮಯದಲ್ಲೇ ರೈಲು ಊರನ್ನು ತಲುಪುತ್ತದೆ. ಭಾರವಾದ ಬ್ಯಾಗನ್ನು ಹೊರಗೆಳೆಯಲಾಗದೆ ಗೋಳಾಡುತ್ತಿದ್ದ ತಾತನಿಗೆ ಸಹಾಯ ಮಾಡಲು ಹೋಗಿ ಬ್ಯಾಗಿನ ತುಂಬೆಲ್ಲಾ ಪುಸ್ತಕಗಳೇ ಇರುವುದನ್ನು ಕಂಡು ಭರತ ಕೊಂಚ ಆಶ್ಚರ್ಯಚಕಿತನಾಗುತ್ತಾನೆ. ಬ್ಯಾಗನ್ನು ಎಳೆದು ರೈಲಿನಿಂದ ಹೊರತಂದು ತಾತನ ಬಳಿ ಇಟ್ಟ ಭರತ ಊರಿಗೆ ಹೋಗುವ ದಾರಿ ಯಾವುದೆಂದು ಕೇಳಿದಾಗ,
'ಇಲ್ಲಿಂದ ಗದ್ದೆ ಆಸಿ ನೆಡೆದ್ರೆ ಮೂರ್ ಕಿಲೋಮೀಟ್ರು.. ಆಟೋ ಹಿಡ್ದು ಆ ಟಾರ್ ರಸ್ತೆಲಿ ಹೋದ್ರೆ ಒಂದು ವರೆ... ನೀ ಬಾ ನನ್ನೊಟ್ಟಿಗೆ. ನಾನ್ ಹೇಗಿದ್ರು ಆಟೋ ಮಾಡ್ಲೆ ಬೇಕು ' ಎಂದ ಅಜ್ಜನನ್ನು ನೋಡಿದ ಭರತ ಕೆಲಹೊತ್ತು ಸುಮ್ಮನಾದ.
'ನಂಗೊತ್ತಪ್ಪ, ನಿಂಗೆ ಗದ್ದೆ ದಾರೀಲೆ ಹೋಗ್ಬೇಕು ಅಂತ ನಿನ್ ಮನ್ಸ್ ಅಂತಿದೆ. ಸರಿ, ನೀ ಹಾಗೆ ಹೋಗು. ನಾನ್ ಆಟೋ ಇಟ್ಕೊಂಡು ಬರ್ತೀನಿ..ಊರಲ್ ಸಿಗೋಣ' ಎನ್ನುತ ತಾತ ಆಟೋದವನನ್ನು ತನ್ನ ಬಳಿ ಕರೆದ. ತನ್ನ ಮನಸ್ಸಿನಲ್ಲಿ ಏನಿದೆ ಎಂದು ಈ ತಾತನಿಗೇಗೆ ತಿಳಿಯಿತು ಎಂದು ಭರತ ಕಳವಳಗೊಂಡ. ಬ್ಯಾಗಿನ ತುಂಬ ಪುಸ್ತಕ, ಅಲ್ಲದೆ ಆ ತಾತನ ಮಾತಿನ ಉಚ್ಚಾರಣೆಯೂ ಹಳ್ಳಿಯ ಇತರರಿಗಿಂತ ತುಸು ಭಿನ್ನವಾಗಿದ್ದರಿಂದಲೇ ಭರತನಿಗೆ ಅವರ ಮೇಲೆ ಕುತೂಹಲ ಮೂಡಿತು. ಅಲ್ಲದೆ ಅವರನ್ನು ತಾನು ತೀರಾ ಸಮೀಪದಿಂದ ಬಲ್ಲೆನೆಂಬ ಭಾವ. ಆದರೆ ನೆನಪಿಗೆ ಬಾರದು. ಅಷ್ಟರಲ್ಲಿ ಅವರು ಆಟೋವನ್ನೇರಿ ಹೊರಟು ಹೋದರು. ಭರತ ನಿಧಾನವಾಗಿ ಗದ್ದೆಯ ಬದುಗಳನ್ನು ಇಳಿಯುತ್ತಾ ಊರಿನೆಡೆ ಸಾಗಿದ.

ಮುಂಜಾವಿನ ಕಿರಣಗಳು ಮೈ ಮೇಲೆ ಬಿದ್ದಾಗ ಭರತನಿಗೆ ಹಿತವೆನಿಸಿತು. ಹಕ್ಕಿ-ಪಕ್ಷಿಗಳ ಚಿಲಿಪಿಲಿಯ ಮಧುರ ಸ್ವರಗಳನ್ನು ಆಸ್ವಾದಿಸುತ್ತಾ ನಿಧಾನವಾಗಿ ಮುನ್ನೆಡೆದ. ಮುಂಜಾವಿನ 'ಅಸಾವರಿ' ರಾಗವನ್ನು ಮನದೊಳಗೆ ಹಾಗೆ ಹಾಡಿಕೊಳ್ಳಬೇಕೆನಿಸಿತು. ಅದಾಗಲೇ ಮನಸ್ಸು ಕೆಲಸದ ಚಿಂತೆ ಒತ್ತಡಗಳಿಂದ ದೂರವಾಗಿತ್ತು. ಹಸಿರುಸಿರಿಗಳ ನಡುವೆ ನಲಿಯುತ್ತಿತ್ತು. ಮನದೊಳಗೆ ರಾಗವನ್ನು ಗುನುಗತೊಡಗಿದ.

ಅದಾಗಲೇ ಗದ್ದೆಯ ಕೆಲಸಕ್ಕೆ ಹಾಜರಾಗಿದ್ದ ಮಂಜ ಒಬ್ಬ ಪೇಟೆಯ ವ್ಯಕ್ತಿ ಬ್ಯಾಗೊಂದನ್ನು ತಗುಲಾಕಿಕೊಂಡು ತನ್ನ ಪಾಡಿಗೆ ಏನೋ ಗುನುಗಿಕೊಳ್ಳುತ್ತಾ ನೆಡೆಯುತ್ತಿದ್ದದ್ದನು ನೋಡಿ ತನ್ನ ಕೆಲಸವನ್ನು ಬಿಟ್ಟು ಈತನನ್ನೇ ಧಿಟ್ಟಿಸಿ ನೋಡುತ್ತಾನೆ.
ಯಾವೂರಪ್ಪ ನಿಮ್ದು.? ಯಾರ್ ಮನೆ ಕಡಿ ಹೊರಟಿದಿರಿ?' ಎಂಬ ಮಂಜನ ಪ್ರೆಶ್ನೆಗೆ ರೈಲಿನಲ್ಲಿ ಸಿಕ್ಕ ತಾತನಿಗೆ ನೀಡಿದ ಉತ್ತರವನ್ನೇ ನೀಡಿ ಮುನ್ನೆಡೆದ. ಮಂಜ ಖುಷಿಯಿಂದ ಅದೇನೋ ಅಂದಿದ್ದನ್ನೂ ಲೆಕ್ಕಿಸದೆ ರಾಗವನ್ನು ಗುನುಗುತ್ತಾ ಸಾಗಿದ. ಕೆಲ ಹೊತ್ತಿನ ನಂತರ ಗದ್ದೆಯ ಬದುಗಳನ್ನು ಏರಿ ಊರನ್ನು ಪ್ರವೇಶಿಸಿದ.

'ದಿನಕಳೆದಂತೆ ಸಿಟಿಗಳ ರೀತಿ ಹಳ್ಳಿಗಳು ಬದಲಾಗವು. ಹಳ್ಳಿ ಅಂದು ಹೇಗಿತ್ತೋ ಈಗಲೂ ಹಾಗೆಯೇ ಇದೆ. ಸುಂದರವಾಗಿದೆ' ಎಂದುಕೊಳ್ಳುತ್ತಾನೆ. ಅರಳಿಕಟ್ಟೆಯ ಮೇಲೆ ಕೂತಿರುವ ಜನರ ಗುಂಪು, ಊರ ಭಾವಿಯಿಂದ ನೀರನ್ನು ಎಳೆದು ಬಿಂದಿಗೆಯಲ್ಲಿ ಹೊತ್ತೊಯ್ಯುತ್ತಿರುವ ಹೆಂಗೆಳೆಯರು, ಅವರ ಕೈ ಬಳೆಗಳು ಒಂದಕೊಂದು ತಾಗಿ ಮೂಡುವ ಇಂಪಾದ ಸದ್ದು, ಮನೆಯ ಮುಂಬದಿಗೆ ಕಟ್ಟಿರುವ ಹಸು, ಎತ್ತು ಹಾಗು ಆಡು ಗಳು, ಊರ ಶಾಲೆ ಹಾಗು ಅದರ ಮುಂದೆ ಜೀವವೇ ಪಣವಿಟ್ಟಂತೆ ಅರಚಿ ಆಡುತ್ತಿರುವ ಮಕ್ಕಳು. ಭರತನಿಗೆ ಅಪ್ಪನೊಟ್ಟಿಗೆ ಕೊನೆಯ ಬಾರಿ ಬಂದ ದಿನಗಳು ನೆನಪಾದವು. ತುಸು ದೂರ ನಡೆದು ಬಲಕ್ಕೆ ತಿರುಗಿದಾಗ ಊರ ದೊಡ್ಡ ಮೆನೆ, ತನ್ನ ಅಜ್ಜನ ಮನೆ ಕಂಡಿತು. ಚಿಕ್ಕವನಿದ್ದಾಗ ಅತ್ತು ಕಾಡಿ ಇಲ್ಲಿಗೆ ಬರಲು ಅವಣಿಸುತ್ತಿದ್ದ ಭರತ ದೊಡ್ಡವನಾಗುತ್ತಿದ್ದಂತೆ ತನಗರಿವಿಲ್ಲದಂತೆ ಇಲ್ಲಿಂದ ದೂರವಾಗುತ್ತಾನೆ. ಇತ್ತೀಚೆಗೆ ಇಲ್ಲಿನ ಬಾಲ್ಯದ ನೆನಪುಗಳೂ ಮಾಸಿವೆ.

'ಅರ್ರೆ. ರೈಲಿನಲ್ಲಿ ಸಿಕ್ಕ ತಾತ ದೊಡ್ಡೆಗೌಡ್ರಲ್ಲವೇ?!' ಎಂಬ ಪ್ರೆಶ್ನೆ ಅಚಾನಕ್ಕಾಗಿ ಭರತನಲ್ಲಿ ಮೂಡುತ್ತದೆ.

'ನನಗೆ ಗೊತ್ತಿಲ್ಲದಿರಬಹುದು. ಅವರಾದರೂ ನನ್ನ ಗುರುತು ಹಿಡಿಯಬಹುದಿತ್ತಲ್ಲಾ? ಇಲ್ಲಾ, ಅವರಿಗೂ ನಾನು ಮರೆತುಹೋಗಿರಬಹುದೇ? ಅವರ ಮಾತಿನಲ್ಲಿ ನಾನು ಅವರಿಗೆ ಬಲ್ಲೆ ಎಂಬ ಅನ್ಯೂನ್ಯತೆಯಂತು ಇರಲಿಲ್ಲ...' ಎಂದುಕೊಳ್ಳುತ್ತಾನೆ.


ಅಜ್ಜನ ಮನೆಯನ್ನು ಒಮ್ಮೆ ಹಾಗೆಯೇ ನೋಡುತ್ತಾನೆ. ಸುಣ್ಣ-ಬಣ್ಣಗಳು ಕಾಣದಿದ್ದರೂ ಗಟ್ಟಿಮುಟ್ಟಾದ ಮನೆ. ಮನೆಯ ಮುಂದಿನ ಮರದ ಕಂಬಗಳು ಇನ್ನೂ ಹಾಗೆಯೇ ಇವೆ ಎಂದು ನೋಡುತ್ತಿರುವಾಗಲೇ 'ಯಾರದು.?' ಎಂಬ ಹೆಣ್ಣ ದನಿಯೊಂದು ಮೂಡುತ್ತದೆ. ಬಾಗಿಲ ಸಂದಿಯಿಂದ ಬಂದ ಆ ಸದ್ದಿನ ಕಡೆ ಮುಖ ಮಾಡಿ 'ನಾನು ಭರತ... ' ಎಂದು ಕೂಗುತ್ತಾನೆ. ಭರತನ ಹೆಸರನ್ನು ಕೇಳಿದ ಆಕೆ ಜಲ್-ಜಲ್ ಎಂಬ ಗೆಜ್ಜೆಯ ಸದ್ದಿನೊಂದಿಗೆ ಒಳ ಓಡುತ್ತಾಳೆ.

ಮೆಟ್ಟಿಲನ್ನು ಏರಿ, ಶೂಗಳನ್ನು ಬಿಚ್ಚಿಟ್ಟು 'ಅಜ್ಜಾ..' ಎಂದು ಕೂಗುತ್ತಾ ಭರತ ಒಳ ನೆಡೆಯುತ್ತಾನೆ.

'ಅಯ್ಯಾ.. ಭರತ.. ಬಾ.. ಹೆಂಗಿದ್ದೀಯಪ್ಪ.. ಅಪ್ಪ ಹೆಂಗವ್ನೆ.?' ಎಂದು ಕನ್ನಡಕವನ್ನು ಹಾಕಿ ಬಂದ ಅಜ್ಜ, ಭರತನನ್ನು ನೋಡಿ ಆತನ ಮುಖವನ್ನು ತನ್ನ ಕೈಗಳಿಂದ ಎಳೆದು ಕೆನ್ನೆಯ ಮೇಲೆ ಮುತ್ತಿಕ್ಕುತ್ತಾರೆ.

'ಅವೇ ದೊಡ್ಡ ಕೈಗಳು. ಇಂದು ಒಣಗಿ ಸುಕ್ಕಾಗಿವೆ' ಎಂದುಕೊಳ್ಳುತ್ತಾನೆ ಭರತ.

‘ಮರಕೋತಿ ಆಡಲು ಮರವೇರಿ ಹೆದರಿ, ಇಳಿಯಲು ಆಗದೆ ಅಳುತ್ತಾ ಮರದಲ್ಲೇ ಕೂತಿರುವಾಗ, ಅಪ್ಪ-ಅಮ್ಮರಿಬ್ಬರೂ ಮರದ ಕೆಳಗೆ ನಿಂತು ಬಯ್ಯುತಿರುವಾಗ, ಅಜ್ಜ ಮಾತ್ರ ಹೇಗಾದರೂ ಮಾಡಿ ಮರವೇರಿ, ಭರತ ಹೆದರಿ ಅವಿತು ಕೂತಲ್ಲಿಗೆ ಬಂದು ಇವೇ ಕೈಗಳಿಂದ ಮೃದುವಾಗಿ ಎತ್ತಿ ಕೆಳಗೆ ಇಳಿಸುತ್ತಿದ್ದರು. ಜೀವವೇ ಹೋಯಿತೆಂದು ನಡುಗಿ ಹೋಗುತ್ತಿದ್ದ ಭರತನಿಗೆ ಈ ಕೈಗಳು ಬಳಿಗೆ ಬಂದವೆಂದರೆ ಎಲ್ಲಿಲ್ಲದ ಧೈರ್ಯ! ಅಪ್ಪ ಅಮ್ಮರ ಬೈಗುಳದ ಭಯವೆಲ್ಲ ಮಾಯ! ಮರದ ಕೆಳಗೆ ಇಳಿಯುತ್ತಿದ್ದದ್ದನೆ ಕಾಯುತ್ತಿದ್ದ ಅಪ್ಪ, ಕೋಲನ್ನು ಹಿಡಿದು ಹೊಡೆಯಲು ಸಿದ್ದರಾಗಿರುತ್ತಿದ್ದರು. ಇಳಿದೊಡನೆಯೇ ಅಜ್ಜನ ಹಿಂದೆ ಹೋಗಿ ಅವರ ಕಾಲುಗಳನ್ನು ಭರತ ಬಿಗಿಯಾಗಿ ಅಪ್ಪಿಕೊಳ್ಳುತ್ತಿದ್ದೆ. ಹೊಡೆಯಲು ಬರುತ್ತಿದ್ದ ಅಪ್ಪನ ಕೋಲನ್ನು ಕಿತ್ತು ಎಸೆಯುತ್ತಿದ್ದರು ಅಜ್ಜ’ ಎಂಬ ನೆನಪುಗಳು ಅವರ ಹಸ್ತಗಳ ಸ್ಪರ್ಶದಿಂದ ಒಂದರಿಂದೊಂದು ಮೂಡುತ್ತವೆ.

'ಎಲ್ಲ ಚೆನ್ನಾಗಿದ್ದಾರೆ, ನೀನ್ ಹೇಗಿದ್ದೀಯ ಅಜ್ಜ..' ಎಂದು ಕೇಳುತ್ತಾನೆ.

'ನಂದ್ ಬಿಡಪ್ಪ.. ಹಿಂಗ್ ಅವ್ನಿ.. ಯೇಟ್ ದೊಡ್ಡವನಾಗಿದ್ದೀಯಪ್ಪ ನೀನು.. ಬರಿ ಫೋನಲ್ಲಿ ದನಿ ಕೇಳಿ ಕಣ್ಮುಂದೆ ನೋಡಿದ್ರೆ ಗುರ್ತೇ ಸಿಗಾಕಿಲ್ಲ.. ಅದ್ರು ಮ್ಯಾಗೆ ಈ ಮ್ಯಾಕೆ ಗಡ್ಡ ಬೇರೆ ' ಎಂದು ನಗುತ್ತಾ 'ಫ್ರೆಂಚ್ ಕಟ್' ಎಂದು ಬಿಟ್ಟಿದ್ದ ಗಡ್ಡವನ್ನು ಒಮ್ಮೆ ಮುಟ್ಟಿ ನಗುತ್ತಾರೆ.

'ಗೌರಿ.. ಕಾಪಿ ತಾರೆ ಮಗಿಗೆ..' ಎಂದು ಕೂಗಿದ ಅಜ್ಜನನ್ನು ಗೌರಿ ಯಾರೆಂದು ಕೇಳುತ್ತಾನೆ.

'ನಮ್ಮ್ ದೊಡ್ಡೆಗೌಡ್ರ ಮೊಮ್ಮಗ್ಳು .. ಯಾಕ್ ಮರ್ತ್ ಹೋಯಿತೇನ.. ನೀನ್ ಅವಳೊಟ್ಟಿಗೆ ಕುಂಟೆಪಿಲ್ಲೆ ಆಡ್ತಾ ಇದ್ರೆ, ಹಳ್ಳಿ ಹುಡುಗ್ರು ನಿನ್ನ ಹುಡ್ಗಿ ಹುಡ್ಗಿ ಅಂತ ರೇಗುಸ್ತಿದ್ರಲ್ಲ..' ಎಂದು ನಗುತ್ತಾ ಕೇಳಿದಾಗ ಭರತನಿಗೆ ನೆನಪಾಗುತ್ತದೆ. ಹದಿಮೂರು ವರ್ಷಗಳ ಹಿಂದೊಮ್ಮೆ ಅಪ್ಪನೊಟ್ಟಿಗೆ ಬಂದಾಗ ಕೊನೆಯದಾಗಿ ಆಕೆಯನ್ನು ನೋಡಿದ ನೆನೆಪು. ಅದಾದ ನಂತರ ಅಪ್ಪ, ಅಜ್ಜನೊಟ್ಟಿಗೆ ಮುನಿಸಿಕೊಂಡು ಇತ್ತ ಕಡೆ ಬರಲೇ ಇಲ್ಲ. ಭರತನನ್ನೂ ಬರಲು ಬಿಡಲಿಲ್ಲ. ಇಂದೂ ಸಹ ಹೊರಡುವಾಗ ಒಪ್ಪಲಿಲ್ಲ. ನಂತರ ಹಠಕ್ಕೆ ಮಣಿದು ಜಾಸ್ತಿ ದಿನ ಇರಬಾರದು, ಜಾಸ್ತಿ ಜನರೊಟ್ಟಿಗೆ ಬೇರೆಯಬಾರದು, ಅದು,ಇದು ಎಂದು ಫೋನಿನಲ್ಲಿ ಬಹಳ ಹೇಳಿಯೇ ಕಳಿಸಿದ್ದರು. ಆದರೂ ಭರತ ಅದ್ಯಾವುದನ್ನೂ ಲೆಕ್ಕಿಸದೆ ಬಂದಿರುತ್ತಾನೆ.

ಗೌರಿಯನ್ನು ಕಾಣಲು ಭರತನ ಕಣ್ಣುಗಳು ಹಾತೊರೆಯುತ್ತವೆ.

'ನಿಮ್ ಅಜ್ಜಿ ತೀರೋದ್ ಮೇಲೆ ಈಕೇನೇ ಮನಿಗ್ ಬಂದು ಚೂರು-ಪಾರು ಕೆಲ್ಸ ಮಾಡ್ಕೊಡ್ತಾವಳೆ' ಎಂದು ಸುಮ್ಮನಾದರು.

'ಕಾಫಿ...' ಎನ್ನುತಾ ಲೋಟವನ್ನಿಟ್ಟ ತಟ್ಟೆಯನ್ನು ಮುಂದೆ ಹಿಡಿದ ಗೌರಿಯನ್ನು ಒಮ್ಮೆ ಭರತ ನೋಡುತ್ತಾನೆ. ಬಾಲ್ಯದ ಆಕೆಯನ್ನು ಗುರುತಿಡಿಯುವುದು ಕಷ್ಟ ಸಾಧ್ಯವಾಗಿರುತ್ತದೆ. ಬಣ್ಣ ಕೊಂಚ ಮಂದವಾದರೂ ಲಕ್ಷಣವಾಗ ಮೈಕಟ್ಟು. ಮಧುರವಾದ ಧ್ವನಿ. ಸ್ವರಸಾಧನೆಗೆ ಹೇಳಿಮಾಡಿಸಿದ ಹಾಗಿದೆ ಎಂದುಕೊಳ್ಳುತ್ತಾನೆ.

'ಥ್ಯಾಂಕ್ ಯು.. ಇಟ್ಸ್ ರಿಯಲಿ ನೈಸ್' ಎಂದು ಕಾಫಿಯನ್ನು ಕುಡಿದು ಹೇಳಿ, 'ಈ ಹಾಳಾದ್ ಇಂಗ್ಲಿಷ್ ಪದಗಳು ಎಲ್ಲಿ ಹೋದ್ರು ಬಿಡಲ್ಲ' ಎನ್ನುಕೊಳ್ಳುತಿರುವಾಗಲೇ,

'ಇಟ್ಸ್ ಮೈ ಪ್ಲೆಷರ್.. ' ಎಂದು ಗೌರಿ ಮುಗುಳ್ನಗುತ್ತಾಳೆ.

'ನೀವ್ ಈಗ ಏನ್ ಮಾಡ್ಕೊಂಡಿದ್ದೀರಾ.?' ಎಂದು ಕೇಳಿದ ಭರತನ ಪ್ರೆಶ್ನೆಗೆ,

'ನಿನ್ನಷ್ಟೇನ್ ಇಲ್ಲ ಬಿಡಪ್ಪ. TCH ಮಾಡಿ ಇಲ್ಲೇ ಸ್ಕೂಲ್ ಮಕ್ಳಿಗೆ ಟೀಚ್ ಮಾಡ್ತಾ ಇದ್ದೀನಿ' ಎಂದಳು.ತನ್ನ ಬಹುವಚನದ ಪ್ರೆಶ್ನೆಗೆ ಅವಳ ಏಕವಚನ ಉತ್ತರ ತನ್ನ ಬಗ್ಗೆ ಅವಳಿಗಿರುವ ಅನ್ಯೂನ್ಯತೆ ಎಂದು ಖುಷಿಪಡುತ್ತಾನೆ.

ಮದ್ಯಾಹ್ನ ಹೊಟ್ಟೆ ತುಂಬಿದರು ಸಾಕೆನಿಸದಷ್ಟು ರುಚಿಯಾದ ಊಟವನ್ನು ತಿಂದು ವಿಶ್ರಮಿಸಿದ ಭರತ ಮೇಲೆದ್ದಾಗ ಸಂಜೆ ಐದಾಗಿರುತ್ತದೆ. ಭರತ ಎದ್ದು ರೆಡಿಯಾಗಿ ಅಟ್ಟವನ್ನು ಏರುತ್ತಾನೆ. ಅಟ್ಟದ ಮೇಲಿನ ಮರದ ಹಲಗೆಗಳ ಮೇಲೆ ಚೌಕಾಬರೆ ಆಟದ ಮನೆಯ ಹಚ್ಚುಗಳು ಇನ್ನೂ ಹಾಗೆಯೇ ಇರುತ್ತವೆ. ಬಾಲ್ಯದಲ್ಲಿ ಅಜ್ಜನನ್ನು ಕಾಡಿ-ಬೇಡಿ ರಾತ್ರಿಯಿಡಿ ಅಟ್ಟದ ಮೇಲೆ ಚೌಕಬರೇ ಆಡಿದ ನೆನಪುಗಳು ಮರುಕಳಿಸುತ್ತವೆ. ಗೆಲ್ಲುವವರೆಗೂ ಬಿಡದೆ ಆಡುತ್ತಿದ್ದ ಭರತನ ಉಪಟಳಕ್ಕೆ ಸಾಕಾಗಿ ಕೊನೆಗೆ ಅಜ್ಜ ಬೇಕಂತಲೇ ಸೋತುಬಿಡುತ್ತಿದ್ದರು. ನಂತರವೇ ಅವರಿಗೆ ಹೋಗಿ ಮಲಗಲು ಅವಕಾಶ ಎಂದು ನೆನೆಪಾಗಿ ಭರತ ತನ್ನಲ್ಲೇ ನಗುತ್ತಾನೆ. ಅಟ್ಟದ ಸಣ್ಣ ಬಾಗಿಲಿನಿಂದ ಮಾಳಿಗೆಯ ಮೇಲೆ ಬಂದು ಮೂಲೆಯಲ್ಲಿದ್ದ ಬೆತ್ತದ ಕುರ್ಚಿಯನ್ನು ಎಳೆದು ಪಶ್ಚಿಮಕ್ಕೆ ಮುಖಮಾಡಿ ಕೂರುತ್ತಾನೆ. ಮನೆ ಕೊಂಚ ಎತ್ತರದ ಪ್ರದೇಶದಲ್ಲಿದ್ದಿದ್ದರಿಂದ ದೂರ ದೂರದ ಹೊಲ-ಗದ್ದೆ, ಗಿಡ ಮರಗಳು ಸುತ್ತಲೂ ಕಾಣತೊಡಗಿದ್ದವು. ಮನೆಯ ಪಕ್ಕದದಲ್ಲೇ ಬೆಳೆದಿದ್ದ ಹಲಸಿನ ಮರಗಳ ಎಲೆಗಳ ನಡುವೆ ಸೂರ್ಯನ ಸೌಮ್ಯವಾದ ಸಂಜೆಯ ಕಿರಣಗಳು ಹೊರ ಹೊಮ್ಮುತ್ತಿದ್ದವು. ಸಿಟಿಯಲ್ಲೆಂದೂ ಕಾಣದ ಗುಬ್ಬಚ್ಚಿಗಳು, ಅಳಿಲುಗಳು ಹಾಗು ಇನ್ನು ಹಲವು ಬಗೆ ಬಗೆಯ ಹಕ್ಕಿಗಳು ಮರದ ತುಂಬೆಲ್ಲಾ.
'ಅಬ್ಬಾ.. ಅದ್ಭುತ!' ಎಂದುಕೊಂಡು ಮನಸ್ಸಿಗೆ ಹಿತವಾದ ರಾಗವೊಂದನ್ನು ಗುನುಗಿಕೊಳ್ಳುತ್ತಿರುತ್ತಾನೆ. ಅಷ್ಟರಲ್ಲಿ 'ಕಾಫಿ..' ಎಂದು ತಟ್ಟೆಯನ್ನು ಹಿಡಿದು ಭರತನ ಹಿಂದೆ ಗೌರಿ ಬಂದು ನಿಲ್ಲುತ್ತಾಳೆ. ಕಾಫಿಯನ್ನು ಕುಡಿದ ನಂತರ ಮನಸ್ಸಿಗೆ ಇನ್ನೂ ಹಿತವಾಗುತ್ತದೆ.

'ಕಾಫಿ ತುಂಬ ಚೆನ್ನಾಗಿದೆ... ಏನ್ ಇವತ್ ಸ್ಕೂಲ್ಗೆ ಹೋಗಿಲ್ವಾ' ಎಂದು ಕೇಳುತ್ತಾನೆ.

'ಇಲ್ವೋ. ಹೋದ್ ವಾರ ಅಷ್ಟೇ ಎಕ್ಸಾಮ್ಸ್ ಮುಗ್ದಿದೆ. ಹಾಗಾಗಿ ಇನ್ನೆರ್ಡ್ ವಾರ ರಜಾ ಹಾಕಿದ್ದೀನಿ' ಎನ್ನುತ್ತಾಳೆ.

ಸ್ವಲ್ಪ ಹೊತ್ತು ಸುಮ್ಮನಿದ್ದ ಗೌರಿ, 'ನಿಮ್ಮ್ ಅಜ್ಜನ್ನ ಹೀಗೆ ಒಬ್ಬರನ್ನೇ ಬಿಟ್ಟ್ ಹೋಗೋಕೆ ಅದೇಗೆ ಮನ್ಸ್ ಬರುತ್ತೆ ನಿಮ್ಗೆ..ಹ?' ಎಂದು ಕೊಂಚ ಏರು ದನಿಯಲ್ಲಿ ಕೇಳುತ್ತಾಳೆ. ಮಿಂಚಿನಂತೆ ಬಂದ ಆಕೆಯ ಅಚಾನಕ್ ಪ್ರೆಶ್ನೆಗೆ ಭರತನಿಗೆ ಏನು ಉತ್ತರಿಸಬೇಕೆಂದು ಅರಿಯುವುದಿಲ್ಲ.

'ದುಡ್ಡು ದುಡ್ಡು. ಅದೆಷ್ಟು ಅಂತ ದುಡ್ಡಿನಿಂದೆ ಓಡ್ತಿರಾ..? ಹೆತ್ತ್ ಅಪ್ಪ ಅಮ್ಮನ್ನೇ ಬಿಟ್ಟು ಅದೇನು ಸಿಗುತ್ತೋ ನಿಮ್ಗೆ ಹಣ ಮಾಡೋದ್ರಲ್ಲಿ' ಎಂದ ಅವಳ ಮಾತಿಗೆ ಕ್ಷಣಮಾತ್ರದಲ್ಲೇ ಕುಪಿತಗೊಂಡ ಭರತ ನಂತರ ‘ಈಕೆ ನನ್ನ ಮನದಾಳದ ಮಾತನ್ನೇ ಆಡುತ್ತಿದ್ದಾಳೆ' ಎಂದುಕೊಂಡು ಸುಮ್ಮನಾಗುತ್ತಾನೆ.

'ಭರತ್, ಐ ಅಮ್ ನಾಟ್ ಬ್ಲೇಮಿಂಗ್ ಯು ಬಟ್, ಇಲ್ಲಿ ಇಷ್ಟ್ ದೊಡ್ಡ ಮನೆ, ಆಸ್ತಿ-ಪಾಸ್ತಿ ಎಲ್ಲ ಬಿಟ್ಟು ಆ ಹಾಳಾದ್ ಸಿಟಿ ಯಾಕ್ ಸೇರ್ಕೊಂಡ್ರು ನಿಮ್ ಅಪ್ಪ ಅಂತ ಗೊತ್ತಿಲ್ಲ' ಎಂದು ಸುಮ್ಮನಾದಳು.

'ಯು ನೊ ವಾಟ್, ನೀವು ನನ್ನ್ ಮನಸ್ಸಲ್ಲಿ ಇರೋದನ್ನೇ ಹೇಳ್ ಬಿಟ್ರಿ. ನನಗೂ ಈ ಕೃತಕ ಸಿಟಿ ಲೈಫ್ ಸಾಕನ್ಸಿಬಿಟ್ಟಿದೆ.. ಆದ್ರೆ ಏನ್ ಮಾಡೋದು' ಎಂದು ಸುಮ್ಮನಾಗುತ್ತಾನೆ.

'ನಮ್ಮ್ ಹಳ್ಳಿಗೆ ಬಂದು ಒಂದೆರ್ಡ್ ದಿನ ಎಲ್ರಿಗೂ ಹಾಗೆ ಅನ್ಸೋದು ಮಿಸ್ಟರ್ ಭರತ್. 3ಜಿ ಸ್ಪೀಡ್ನಲ್ಲಿ ಇಂಟರ್ನೆಟ್ ಯಾವಾಗ್ ಸಿಗಲ್ವೋ ತಕ್ಷಣ ವಾಪಾಸ್ ಓಡೋಗ್ತೀರಾ ನೀವು.. ಕೃತಕ ಸಿಟಿ ಲೈಫ್ ನ ಹುಡ್ಕೊಂಡು' ಎಂದು ನಗಲಾರಂಭಿಸುತ್ತಾಳೆ. ಕ್ಷಣಗಳಿಂದೆಯಷ್ಟೇ ಕುಪಿತಕೊಂಡಂತಿದ್ದ ಆಕೆಯ ಕಣ್ಣುಗಳು ನಗುವಿನ ಕಡಲಲ್ಲಿ ಅರಳಿದ್ದವು. ಭರತ ಆ ಕಣ್ಣುಗಳನ್ನೇ ದಿಟ್ಟಿಸಿ ನೋಡತೊಡಗಿದ. ಕೊಂಚ ಹೊತ್ತು ನಕ್ಕಿ, ಯಾವಾಗ ಭರತನ ಕಣ್ಣುಗಳು ತನ್ನ ಕಣ್ಣುಗಳನ್ನು ಧಿಟ್ಟಿಸುತ್ತಿವೆ ಎಂದರಿತಾಗ ಗೌರಿ ಭರತನ ಬಳಿಯಿದ್ದ ಲೋಟವನ್ನೂ ತೆಗೆದುಕೊಳ್ಳದೆ ಬೇಗನೆ ಅಟ್ಟವನ್ನಿಳಿದು ಒಳ ಹೋಗುತ್ತಾಳೆ.

‘ಭರತ. ಬಾರಪ್ಪ ಕೆಳಗೆ. ದೊಡ್ಡೆಗೌಡ್ರು ನಿನ್ನ ಮಾತಾಡ್ಸಬೇಕಂತೆ' ಎಂದು ಅಜ್ಜ ಕರೆದಾಗ ಭರತ ಅಂಗಳಕ್ಕೆ ಇಳಿದು ಬರುತ್ತಾನೆ. ಅಜ್ಜ ಕೆಲಸದ ಆಳುಗಳೊಡನೆ ಯಾವುದೊ ವಿಷಯದ ಬಗ್ಗೆ ಮಾತನಾಡತೊಡಗುತ್ತಾರೆ. ದೊಡ್ಡೆಗೌಡರ ಬಳಿ ಬಂದು ಕೂತ ಭರತ ಅವರು ತನ್ನನು ಮೊದಲೇ ರೈಲಿನಲ್ಲಿ ಏಕೆ ಗುರುತಿಸಿಲ್ಲವೆಂದು ನೇರವಾಗಿ ಕೇಳುತ್ತಾನೆ.
'ನೀನೆ ನನ್ನ ಗುರ್ತ್ ಹಿಡಿಯದವನು, ಇನ್ ಈ ಮುದುಕಪ್ಪ ನಿನ್ನ ಹೇಗ್ ಗುರ್ತ್ ಹಿಡೀಬಹುದು? ಆದ್ರೂ ನಾನ್ ನಿನ್ನ ಪಕ್ಕಕ್ಕೆ ಬಂದ್ ಕೂತಾಗ್ಲೆ ನಂಗೆ ನೀನು ಪಟೇಲ್ರ ಮೊಮ್ಮಗ ಭರತ ಅಂತ ಗೊತ್ತಾಯಿತ್ತು. ನೀನು ಮಲ್ಗಿ ನಿದ್ರೇಲಿ ಕನವರಿಸೋದ ನೋಡೇ ನೀನು ಯಾವುದೊಂದು ಚಿಂತೆಯಲ್ಲಿದ್ದೀಯ ಅಂತನೂ ತಿಳೀತು. ನನ್ನ್ ಬಗ್ಗೆ ಜಾಸ್ತಿ ಹೇಳಿ ನೀನು ಪರಿಸರನ ಖುಷಿಯಿಂದ ನೋಡ್ತಾ ಇದ್ದ ಭಾವವನ್ನು ಹಾಳ್ ಮಾಡೋದು ಬೇಡೆಂದು ನಿಂಗೆ ಏನು ಹೇಳ್ಲಿಲ್ಲ. ಚಿಂತೆ ಮಾಡ್ಬೇಡ ಮಗ, ಇದು ಹಳ್ಳಿ. ನೀನ್ ಬೇಡ ಅಂದ್ರು ನಿನ್ನ್ ರಕ್ತದಲ್ಲಿ ಇರಾದು ಇದೆ ಮಣ್ಣಿನ್ ಸಾರ. ನಿಂಗೆ ಶಾಂತಿ, ನೆಮ್ಮದಿ ಸಿಗೋದು ಅಂದ್ರೆ ಅದು ಈ ನೆಲದಾಗೆ ಮಾತ್ರ. ಸ್ವಿಟ್ಜರ್ಲ್ಯಾಂಡ್ಗು ಹೋದ್ರು ಸಿಗಾಕಿಲ್ಲ..ನೆನಪಿರ್ಲಿ' ಎಂದು ಸುಮ್ಮನಾಗುತ್ತಾರೆ. ದೊಡ್ಡೆಗೌಡ್ರ ಮಾತು ಭರತನಿಗೆ ಹಿತವೆನಿಸುತ್ತದೆ. ಆತನಿಗೆ ತನ್ನ ಮನದಲ್ಲಿನ ತುಮುಲಗಳನ್ನೆಲಾ ಒಮ್ಮೆಲೇ ಹೇಳಿ ಮನಸ್ಸನ್ನು ಹಗುರಾಗಿಸಿಕೊಳ್ಳಬೇಕೆನಿಸುತ್ತದೆ. ಅಷ್ಟರಲ್ಲೇ ದೂರದಿಂದೆಲ್ಲೋ ಭಜನೆಯ ಸದ್ದು ಶುರುವಾಗುತ್ತದೆ.

'ನಮ್ಮೂರ ದೇವಿಯ ದೇವಸ್ಥಾನದಿಂದ ಬರ್ತಿರೋ ಸದ್ದು...ಬಾ, ನಿಂಗು ಚೆನ್ನಾಗ್ ಅನ್ಸುತ್ತೆ' ಎಂದು ದೊಡ್ಡೇಗೌಡರು ಎದ್ದು ನಿಂತರು.

'ಇವರು ಮಾತಿನಲ್ಲಿ ಎಲ್ಲ ಬಲ್ಲವರಂತಿದ್ದರೂ ಆಚಾರ ವಿಚಾರಗಲ್ಲಿ ಹಳ್ಳಿಗರಂತೆ ಗುಂಪಲ್ಲಿ ಗೋವಿಂದ' ಎನ್ನುವವರು ಅಂದುಕೊಳುತ್ತಾನೆ. ಭಜನೆ, ಪದಗಳೆಂಬುದು ಅರ್ಥವೇ ಗೊತ್ತಿಲ್ಲದೆ ಸುಮ್ಮನೆ ಕಾಲಹರಣ ಮಾಡುವ ಜನರ ಗುಂಪುಗಳ ಹವ್ಯಾಸ ಎಂಬುದು ಭರತನ ಅಭಿಪ್ರಾಯವಾಗಿರುತ್ತದೆ. ಬರಲೊಲ್ಲೆ ಎಂದರೆ ಬೇಜಾರು ಮಾಡಿಕೊಂಡಿಯಾರು ಎನ್ನುತ ಇಲ್ಲದ ಮನಸ್ಸಿನಲ್ಲಿ ಅವರ ಜೊತೆಗೆ ಹೊರಡುತ್ತಾನೆ.

ಊರ ಮಧ್ಯದಲ್ಲಿದ್ದ ದೇವಾಲಯದ ಬಳಿ ಬಂದು, ಪಕ್ಕದ ಕೆರೆಯಲ್ಲಿ ಕೈಕಾಲುಗಳನ್ನು ತೊಳೆದು ಬಂದ ದೊಡ್ಡೆಗೌಡರನ್ನು ಕುರಿತು. ‘ನೀವು ದಿನ ನಿತ್ಯ ಬಳಸೋದು ಇದೆ ನೀರೇ.? ' ಎಂದು ಆಶ್ಚರ್ಯದಿಂದ ಕೇಳುತ್ತಾನೆ.
'ಇಲ್ಲ ಡಿಸಾಲಿನೇಷನ್ ಮಾಡಿರೋ ನೀರನ್ನ ಸಮುದ್ರದಿಂದ ತರಿಸ್ಕೊಂಡು ಉಪಯೋಗಿಸ್ತೀವಿ’ ಎಂದು ಮಾರ್ಮಿಕವಾಗಿ ನಗುತ್ತಾ ಗೌಡರು ದೇವಾಲಯದೊಳಗೆ ಪ್ರವೇಶಿಸುತ್ತಾರೆ. ಗೌಡರ ಬಾಯಿಂದ ವೈಜ್ಞಾನಿಕವಾದ ಇಂಗ್ಲಿಷ್ ಪದವೊಂದು ಇಷ್ಟು ಸರಾಗವಾಗಿ ಮೂಡಿದ್ದು ಭರತನಿಗೆ ಆಶ್ಚರ್ಯವಾಗುತ್ತದೆ. ಅಲ್ಲದೆ ಸಮುದ್ರದ ಉಪ್ಪು ನೀರನ್ನು ಬಳಸಲೋಗ್ಯವಾದ ನೀರನ್ನಾಗಿ ಪರಿವರ್ತಿಸುವ ಕ್ರಿಯೆಗೆ ಡಿಸಾಲಿನೇಷನ್ ಎನ್ನುತ್ತಾರೆ ಎಂಬುದು ಎಷ್ಟೋ ಹೊತ್ತಿನ ನಂತರ ನೆನಪಾಗುತ್ತದೆ. ವಾದ್ಯಗಳನ್ನು ನುಡಿಸುತ್ತಾ, ಪದಗಳನ್ನು ಹಾಡುತ್ತಾ ದೊಡ್ಡೇಗೌಡರು ತಲ್ಲೀನರಾಗುತ್ತಾರೆ. ಭರತ ನೆರೆದಿದ್ದ ಹಳ್ಳಿಯ ಜನರ ವೇಷಭೂಷಣಗಳನ್ನು ನೋಡುತ್ತಾ ಗೌಡರ ಪಕ್ಕದಲ್ಲಿ ಕೂರುತ್ತಾನೆ. ಪೇಟೆಯ ಹುಡುಗನೊಬ್ಬ ಹೀಗೆ ಟಿ-ಶರ್ಟು, ಜೀನ್ಸ್ ಪ್ಯಾಂಟ್ ಅನ್ನು ಧರಿಸಿ ದೇವಸ್ಥಾನಕ್ಕೆ ಬಂದು ಕೂತಿರುವುದ ನೋಡಿ ಕೆಲವರು ನಸು ನಗುತ್ತಿರುತ್ತಾರೆ.

ದುಡಿದುಣ್ಣುವ ರೈತನಿಗೆ ಏನಿಲ್ಲ ರೊಕ್ಕ,

ದುಡಿವ ಬಂಟರಿಗೆ ಬಾರಿ ಬಿಂಕ

ದುಡಿಸಿಕೊಳ್ಳುವ ಜನರಿಗೆ ಬಾರಿ ಸೊಕ್ಕ

ಅಂಥವರೇ ಆಳಕ ಬರತಾರ ದೇಶಾಕ

ಎಂಬ ಪದದ ಮಧ್ಯೆ ಭರತ ದೊಡ್ಡೇಗೌಡರ ಕಿವಿಯ ಬಳಿ ಹೋಗಿ 'ಏನಿದರ ಅರ್ಥ.?' ಎಂದು ಕೇಳುತ್ತಾನೆ. ಅದಕ್ಕೆ ಗೌಡರು ಇದು ಪ್ರಸ್ತುತ ಸಮಾಜದ ವಸ್ತುಸ್ಥಿತಿಯನ್ನು ಬಿಂಬಿಸುವ ಪದವೆಂದೂ, ಇದು ಹಳ್ಳಿಯಲ್ಲದೆ, ದಿಲ್ಲಿಯವರೆಗೂ ಅನ್ವಯಿಸುತ್ತದೆ ಎಂದಾಗ ಭರತನಿಗೆ ತಳಮಳವಾಯಿತು. ಹಳ್ಳಿಗರು ಇಷ್ಟೆಲ್ಲಾ ಯೋಚಿಸಿ ಪದಗಳನ್ನು ರೂಪಿಸುತ್ತಾರೆಯೇ? ಎಂದುಕೊಳ್ಳುತ್ತಾನೆ. ನಂತರ ಪ್ರತಿ ಪದಗಳ ಮದ್ಯೆ ದೊಡ್ಡೇಗೌಡರ ಬಳಿ ಅದರ ಅರ್ಥವನ್ನು ಕೇಳಿ, ಅವುಗಳ ಒಳಾರ್ಥವನ್ನು ಅರಿಯತೊಡಗುತ್ತಾನೆ. ತಾನೂ ಗುನುಗಬೇಕೆನಿಸುತ್ತದೆ. ಗುನುಗತೊಡಗುತ್ತಾನೆ. ಕೆಲಕ್ಷಣದಲ್ಲೇ ಕೈಯಿಂದ ಕೈಯಿಗೆ ವರ್ಗಾಹಿಸಲ್ಪಡುತ್ತಿದ್ದ ತಾಳ ತನ್ನ ಬಳಿ ಬಂದಾಗ ನಿಧಾನವಾಗಿ ಒಂದನೊಂದು ಕುಕ್ಕುತ್ತಾ ಪದಗಳನ್ನು ಹೇಳತೊಡಗುತ್ತಾನೆ. ನೋಡನೋಡುತ್ತಲೇ ನೆರೆದಿದ್ದ ಎಲ್ಲರೊಟ್ಟಿಗೆ ಹಾಡಲಾರಂಭಿಸುತ್ತಾನೆ. ತಾನು ಬಲ್ಲ ಸಂಗೀತ ಜ್ಞಾನದಿಂದ ಪದಗಳು ರಾಗಗಳಾಗಿ ಮೂಡುತ್ತವೆ. ಪದಗಳ ಅರ್ಥಗಳು ತಿಳಿದಾಗ ಭಾವ ಉಕ್ಕಿ ಬರುತ್ತದೆ. ಎಲ್ಲರೂ ಮಂತ್ರಮುಗ್ದರಾಗಿ ಈತನನ್ನೇ ನೋಡುತ್ತಾರೆ. ಸ್ವರವಿಸ್ತಾರವನ್ನು ಮಾಡಿ ಕೊನೆಗೆ ನಿಧಾನಗೊಂಡಾಗ ಪ್ರತಿಯೊಬ್ಬರೂ ಮೌನವಾಗಿರುತ್ತಾರೆ. ಮಕ್ಕಳು ತೆರೆದ ಬಾಯಿಯನ್ನು ಮುಚ್ಚದೇ ಭರತನನ್ನು ನೋಡತೊಡಗುತ್ತಾರೆ. ಭರತನ ಕೆನ್ನೆಗಳ ಮೇಲೆ ಕಣ್ಣೇರು ಹರಿದು ಒಣಗಿರುತ್ತದೆ.

'ಅಪ್ಪ. ಯಸ್ ವೈನಾಗಿ ಹಾಡ್ತಿಯ ಕಂದ..ದೇವಿ ನಿನ್ನ ಚೆನ್ನಗಿಡ್ತಾಳೆ. ದಿನಾ ಬಂದು ಹಿಂಗೆ ಆಡ್ತಿರು.. ನಿನ್ ಕಷ್ಟ ಎಲ್ಲ ದೂರಾಗುತ್ತೆ' ಎಂದು ಹಳ್ಳಿಯ ಹಿರಿಯರೊಬ್ಬರು ಭರತನ ಬಳಿ ಬಂದು ಹೇಳುತ್ತಾರೆ. ಊರ ಜನರ ಅಕ್ಕರೆಯ ಮಾತುಗಳು ಭರತನಲ್ಲಿ ಒಂದು ಹೊಸ ಕಳೆಯನ್ನು ಮೂಡಿಸುತ್ತವೆ.

'ಮಗ ನಿನ್ನ್ ಒಳ್ಗೆ ಏನೋ ಒಂದ್ ಚಿಂತೆ ಇದೆ. ನೀನ್ ಅದ್ ಯಾರೊಟ್ಟಿಗೂ ಹೇಳ್ಕೊಂಡಿಲ್ಲ. ನಾನ್ ಅದ್ ಏನು ಅಂತ ಕೇಳದಿಲ್ಲ, ಆದ್ರೆ ಯಾರೊಟ್ಟಿಗಾದ್ರೂ ಅದನ್ನ ಹೇಳ್ಕ.. ಮನ್ಸು ಹಗುರ ಮಾಡ್ಕ' ಎಂದು ಮನೆಗೆ ಹಿಂದಿರುಗುವಾಗ ದೊಡ್ಡೇಗೌಡರು ಹೇಳಿದರು.
ಅಲ್ಲದೆ 'ಇಂದು ನಮ್ಮನೇಲಿ ಊಟ’ ಎಂದು ದೊಡ್ಡೇಗೌಡರು ಭರತ ಹಾಗು ಪಟೇಲರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಾರೆ.

'ಗೌರಿ. ಭರತಂಗೆ ಸಂಗೀತ ಚೆನ್ನಾಗಿ ಬರುತ್ತೆ ಕಣೆ.. ದೇವಸ್ಥಾನದಲ್ಲಿ ಹೆಂಗ್ ಹಾಡ್ದಾ ಅಂತೀಯಾ' ಎಂದು ದೊಡ್ಡೇಗೌಡರು ಭರತನನ್ನು ಹೊಗಳಿದರು. 'ಹೌದೇ' ಎಂದು ಭರತನ ಅಜ್ಜ ಆಶ್ಚರ್ಯದಿಂದ ಕೇಳಿದರು. ಗೌರಿ ಮುಗುಳ್ನಕ್ಕಳು.

ದೊಡ್ಡೇಗೌಡರ ಅಡುಗೆ ಮನೆ ಹೊಕ್ಕ ಭರತ ತನಗೆ ತಿಳಿದಿದ್ದ ಸೊಪ್ಪಿನ ಸಾರನ್ನು ಮಾಡುತ್ತಾನೆ. ಅದೆಷ್ಟೋ ದಿನಗಳ ನಂತರ ಅಡುಗೆಯನ್ನು ಮಾಡುವಾಗ ಎಲ್ಲಿಲ್ಲದ ಸಂತೋಷ ಭರತನಿಗಾಗುತ್ತದೆ. ಸಾರಿನ ಘಮ ಮನೆಯಲೆಲ್ಲ ಪಸರಿಸುತ್ತದೆ. ಅರ್ಧ ತಾಸಿನೊಳಗೆ ಸಾರನು ಮಾಡಿ ಮುಗಿಸಿದ ಭರತನ ವೇಗಕ್ಕೆ ಗೌರಿ ಬೆರಗಾಗುತ್ತಾಳೆ. ಭರತನ ಕೈರುಚಿಯನ್ನು ಎಲ್ಲರೂ ಮೆಚ್ಚುತ್ತಾರೆ.

'ಗೌಡ್ರೆ ದಿನಾ ನಂಗೆ ಇದೆ ಊಟ ಸಿಕ್ಕಿದ್ರೆ ನಾನ್ ಇಲ್ಲೇ ಇದ್ಬಿಡ್ತಿನಿ ... ನಿಮ್ಗೆ ಏನೂ ತೊಂದ್ರೆ ಇಲ್ಲ ತಾನೆ' ಎಂದು ಭರತ ನಗುತ್ತಾ ಹೇಳಿದಾಗ,

'ಹೇಗೂ ಅಡುಗೆ ಮಾಡೋಕೆ, ಪಾತ್ರೆ ಉಜ್ಜೋಕೇ ಕೆಲ್ಸದವ್ರು ಬೇಕಾಗಿತ್ತು.ಒಳ್ಳೇದೇ ಆಯಿತು' ಎಂದು ಅದಕ್ಕೆ ಮರುತ್ತರವಾಗಿ ಗೌರಿ ಹೇಳುತ್ತಾಳೆ.

'ನಮ್ಮ್ ಪಟೇಲ್ರು ಮನೆ, ನಮ್ಮ್ ಮನೆ ಬೇರೆ ಬೇರೆ ಏನಲ್ಲ ಮಗ. ನಮ್ಮನೆ ಅನ್ನ, ಅವ್ರು ಮನೆ ಸಾರು.. ನಮ್ಮ್ ಗೌರಿ ಇಬ್ರಿಗೂ ಮೊಮ್ಮಗಳು.. ಅಲ್ದೆ ಈ ಹಳ್ಳೀಲಿ ನಾನ್ ನಿಮ್ಮನೆಗೆ ಬರ್ತೀನಿ, ಇರಿ, ಎಲ್ಲೂ ಹೋಗ್ಬೇಡಿ ಅಂತೆಲ್ಲ ನಿಮ್ಮ್ ಸಿಟಿ ರೀತಿ ಅಲ್ಲ ಮಗ... ಇಡೀ ಹಳ್ಳೀನೇ ಒಂದ್ ಮನೆ.. ನಂಗ್ ನೀನಾದ್ರೆ...ನಿಂಗೆ ನಾನು ಅನ್ನೋತರ. ಇಲ್ಲಿ ಯಾರ್ ಮೆನೆಗೂ ಯಾರ್ ಬೇಕಾದ್ರೂ ಹೋಗ್ಬಹುದು.. ಯಾರ್ ಮನೇಲೂ ಬೇಕಾದ್ರು ಮಲಗಬಹುದು' ಎನ್ನುತಾರೆ.
ಕೇವಲ ಪುಸ್ತಕಗಳಲ್ಲಿ ಈ ವಿಷಯಗಳನ್ನೆಲ್ಲ ಓದಿದ್ದ ಅನುಭವವಿದ್ದ ಭರತ ಇಂದು ಹಳ್ಳಿಗರೊಬ್ಬರಿಂದ ಈ ಮಾತನ್ನು ಸ್ವತಃ ಕೇಳುವಾಗ ಖುಷಿಯಾಗುತ್ತದೆ. ಗೌರಿ ಬೇಡವೆಂದರೂ ಭರತನಿಗೆ ಹೆಚ್ಚು ಹೆಚ್ಚು ಅನ್ನವನ್ನು ಹಾಗು ಅದಕ್ಕೆ ತುಪ್ಪವನ್ನು ಹಾಕತೊಡಗುತ್ತಾಳೆ

ಊಟವಾದ ಮೇಲೆ ಎಲ್ಲರು ದೊಡ್ಡೇಗೌಡರ ಚಾವಡಿಯ ಮೇಲೆ ಬಂದು ಕೂತರು. ಗೌರಿ ಮನೆಯೊಳಗಿಂದ ಚೌಕಾಬರೆಯ ಮಣೆಯನ್ನು ತಂದಳು. ಅದೆಷ್ಟೋ ವರ್ಷಗಳ ನಂತರ ಚೌಕಬರೆ ಆಡಲು ಭರತನಿಗೆ ಎಲ್ಲಿಲ್ಲದ ಸಂತೋಷ. 'ಅಪ್ಪಾ. ಸೋತ್ರೆ ಸೋತೆ ಅಂತ ಒಪ್ಕೋ.. ನಂಗೆ ನೀನ್ ಗೆಲ್ಲೊ ತನ್ಕ ಆಡೋಕ್ ಆಗಲ್ಲ...’ ಎಂದು ಅಜ್ಜ ಆಕಳಿಸುತ್ತಾ ಹೇಳಿದಾಗ ಎಲ್ಲರೂ ನಕ್ಕರು. ಗೌರಿಯ ನೀಳ ಬೆರಳುಗಳ ಸುಂದರ ಕೈಗಳು ಚೌಕಾಬರೆಯ ಕಾಯಿಗಳನ್ನು ಆಯ್ದು ಎಸೆಯುವುದನ್ನೇ ಭರತನ ಕಣ್ಣುಗಳು ನೋಡುತ್ತಿದ್ದವು. ಆಟದ ಕೊನೆಗೆ ತನ್ನ ಅಜ್ಜ ಗೆದ್ದಾಗ ಭರತ 'ಅಜ್ಜ.. ಇನ್ನೊಂದೇ ಒಂದು ಆಟ.. ಪ್ಲೀಸ್..ಪ್ಲೀಸ್' ಎಂದು ಮಕ್ಕಳಂತೆ ರೋಧಿಸುತ್ತಾನೆ.ಅಲ್ಲಿಯವರೆಗೂ ಒಬ್ಬ ಜೆಂಟಲ್ ಮ್ಯಾನ್ ಥರ ವರ್ತಿಸುತ್ತಿದ್ದೂ, ಈಗ ಅಜ್ಜನ ತೊಡೆಯ ಮೇಲೆ ಮಗುವಿನಂತೆ ಹಠವಿಡಿಯುತ್ತಿದ್ದ ಭರತನನ್ನು ನೋಡಿ ಗೌರಿ ನಗುತ್ತಾಳೆ. ಭರತನ ರೋಧನೆಗೆ ಮಣಿದು ಎಲ್ಲರು ಮತ್ತೊಮ್ಮೆ ಆಡಲು ಶುರು ಮಾಡುತ್ತಾರೆ. ಆದರೆ ಈ ಬಾರಿ ಗೆದ್ದದ್ದು ಮಾತ್ರ ದೊಡ್ಡೇಗೌಡರು.
ಹಿರಿಯರಿಬ್ಬರು ಆಟವನ್ನು ಗೆದ್ದು ಮಲಗಲು ಹೋದಮೇಲೆ ಗೌರಿ ಹಾಗು ಭರತ ಮನೆಯ ಜಗುಲಿಯ ಮೇಲೆ ತಿಂಗಳ ಬೆಳಕಿನ ತಂಪಾದ ಆಗಸವನ್ನು ನೋಡುತ್ತಾ ಕೂರುತ್ತಾರೆ.

'ಅದೆಷ್ಟ್ ವರ್ಷ ಆದ್ಮೇಲೆ ನನ್ಗೆ ಇಷ್ಟ್ ಖುಷಿ ಆಗಿದೆ ಗೊತ್ತಾ...' ಎಂದು ಭರತ ಗೌರಿಯನ್ನೊಮ್ಮೆ ನೋಡುತ್ತಾನೆ.

'ನಿಮ್ಮ್ ಅಜ್ಜನ ತೊಡೆ ಮೇಲೆ ಮಗುತರ ಹಠ ಪಡ್ಬೇಕಾದ್ರೇನೇ ಅನ್ಕೊಂಡೆ. ಅಲ್ಲ ಭರತ್, ಅಜ್ಜನ್ನ ಇಷ್ಟೊಂದು ಇಷ್ಟ ಪಡೋನು ಅದ್ ಹೇಗೆ ಇಷ್ಟ್ ವರ್ಷ ಅವ್ರಿಂದ ದೂರ ಇದ್ದೆ? ಒಮ್ಮೆನೂ ಅವ್ರನ್ನ ನೋಡ್ಬೇಕು ಅನ್ನಿಸ್ಲ್ಲೆ ಇಲ್ವಾ?! ಅಜ್ಜಿ ಹೋದ್ ಮೇಲಂತೂ ತುಂಬಾನೇ ಮಂಕಾಗಿದ್ರು ಅವ್ರು.. ನಿಮ್ಮ್ ತಂದೆಯವ್ರ ಹೆಸ್ರು ಹೇಳ್ತಾ ರಾತ್ರಿ ಎಲ್ಲ ಕನವರಿಸ್ತಿದ್ರು.. ನಿಮ್ಮ್ ತಂದೆಗೆ ತುಂಬಾ ಸರಿ ನಮ್ಮ್ ತಾತ ಫೋನ್ ಮಾಡೂ ಹೇಳಿದ್ರು.. ಯಾಕೆ ನಿಂಗೆ ಹೇಳ್ಲಿಲ್ವ ಅವ್ರು' ಎಂದಾಗ ಭರತನಿಗೆ ದಿಗ್ಭ್ರಮೆಯಾಯಿತು. ಪ್ರತಿ ಬಾರಿಯೂ ಅಜ್ಜ ಚೆನ್ನಾಗಿದ್ದರೆ ಅನ್ನೊದನ್ನ ಅಮ್ಮನ ಮಾತಲ್ಲಿ ಮಾತ್ರ ಕೇಳಿದ್ದ ಭರತ, ಅಜ್ಜನ ಬಗ್ಗೆ ಅಷ್ಟೇನೂ ಯೋಚಿಸಿರಲಿಲ್ಲ. ಆದರೆ ಈಗ ಗೌರಿಯ ಮಾತುಗಳು ಭರತನಿಗೆ ತೀವ್ರ ಕಳವಳವನ್ನುಂಟುಮಾಡುತ್ತವೆ. ನಾವೆಲ್ಲ ಇದ್ದರೂ ಅಜ್ಜನಿಗೆ ಯಾರೂ ಇಲ್ಲವಾದೆವ.? ಎಂದನಿಸುತ್ತದೆ. ಅಪ್ಪ-ಅಮ್ಮರ ಮೇಲೆ ಸಿಟ್ಟೂ ಬರುತ್ತದೆ.

'ನಮ್ಮಪ್ಪಂಗೆ ಅಜ್ಜ ಇಲ್ಲಿರೋ ಆಸ್ತಿನ ಎಲ್ಲಾ ಮಾರಿ, ಬಂದ ದುಡ್ಡಿಂದ ಒಂದು ದೊಡ್ಡ ಫ್ಯಾಕ್ಟರಿ ಕಟ್ಟೋ ಆಸೆ. ಆದ್ರೆ ಅಜ್ಜಂಗೆ ಈ ಹಳ್ಳಿ ಬಿಟ್ಟ್ ಬರೋ ಮನ್ಸಿಲ್ಲ.. ಒಂದ್ ಸಾರಿ ಅಪ್ಪ ಫೋನ್ ಮಾಡಿ ನಿನ್ನ್ ದುಡ್ಡು ಬೇಡ, ಆಸ್ತಿನೂ ಬೇಡ, ಎಲ್ಲಾ ನೀನೆ ಹಿಡ್ಕೋ ಎಂದು ಅರಚಿ ಫೋನ್ ಇಟ್ರು.. ಅವತ್ತಿನಿಂದ ಅಜ್ಜನ ಬಗ್ಗೆ ಅಷ್ಟಕ್ಕಷ್ಟೇ ಅವ್ರಿಗೆ.. ನಂಗೂ ಇಲ್ಲಿಗೆ ಬರೋಕ್ಕೆ ಬಿಡ್ಲಿಲ್ಲ' ಎನ್ನುತ್ತಾನೆ.

'ನಿಮ್ಮ್ ಅಜ್ಜ ಇಡೀ ಊರಿಗೆ ಮಾರ್ಗದರ್ಶಕರು ಭರತ್. ಅವ್ರು ಸಿಟಿಗ್ ಹೋಗ್ತೀನಿ ಅಂದ್ರು ಈ ಊರಿನವ್ರು ಅವ್ರುನ್ನ ಹೋಗಕ್ಕೆ ಬಿಡಲ್ಲ.. ಸ್ಕೂಲು, ಆಸ್ಪತ್ರೆ ಎಲ್ಲ ಅವ್ರೆ ಕಟ್ಸಿರೋದು.. ಆದ್ರೆ ಅಪ್ಪನಂತೆ ಮಗ ಆಗ್ಲಿಲ್ಲ ಅಂತ ಎಲ್ರು ಇವಾಗ್ಲೂ ಅನ್ಕೊಂಡು ಬೇಜಾರ್ ಮಾಡ್ಕೊಂತ್ತಾರೆ' ಎಂದು ಗೌರಿ ಹೇಳಿದಾಗ ಭರತನಿಗೆ ಅಜ್ಜನ ಬಗ್ಗೆ ಹೆಮ್ಮೆ ಎನಿಸುತ್ತದೆ.

'ಅದ್ಸರಿ ಇಷ್ಟ್ ದಿನ ಆದ್ಮೇಲೆ ನೀನ್ ಹೇಗ್ ಬಂದೆ?' ಎಂದ ಗೌರಿಗೆ, ತಾನು ಮಾಡುತ್ತಿರುವ ಅರ್ಥಹೀನ ಕೆಲಸ, ಅದರಿಂದ ಉಂಟಾಗಿರುವ ಖಿನ್ನತೆ, ಮನೆಯಲ್ಲಿನ ಅಪ್ಪ ಅಮ್ಮಂದಿರ ದೈನಂದಿನ ಅರಚಾಟ, ಸ್ವಾರ್ಥತೆ, ತಾನು ಅಂತಹ ಸಮಾಜದಲ್ಲಿ ಒಬ್ಬನಾಗಿ ಬಿಡುವೆನೆಂಬ ಭಯ ಎನ್ನುತ ಎಲ್ಲವನ್ನೂ ಮನಸ್ಸು ಬಿಚ್ಚಿ ಹೇಳಿಕೊಳ್ಳುತ್ತಾನೆ.. ತುಸು ಸಮಯದ ನಂತರ 'ಅವಳೂ ಸಹ ನನ್ನ ಬಿಟ್ಟು ಹೋದಳು' ಎನ್ನುತ್ತಾನೆ. ಭರತನ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಿದ್ದ ಗೌರಿ ‘ಅವಳು’ ಯಾರೆಂದೂ ಸಹ ಕೇಳುವುದಿಲ್ಲ. ಭರತ ಮುಂದುವರೆಸಿ 'ಪ್ರೀತಿಯೂ ಸಹ ಇಂದು ಹಣ ಹಾಗು ಚರ್ಮದ ಬಣ್ಣಗಳ ಮೇಲೆ ಡಿಪೆಂಡ್ ಆಗಿರುತ್ತೆ ಗೌರಿ' ಎಂದಾಗ ಅವಳು ನಗುತ್ತಾಳೆ. ನೋಡಲು ಸಾದಾರಣವಾಗಿದ್ದರೂ, ಬಣ್ಣ ತುಸು ಕಪ್ಪಿದ್ದರೂ ಗೌರಿ ಭರತನಿಗೆ ತೀರಾ ಸನಿಹದವಳೆನಿಸುತ್ತಾಳೆ. ‘ಅವಳು’ ಅದೆಷ್ಟೇ ತೆಳ್ಳಗೆ ಬೆಳ್ಳಗಿದ್ದರೂ ಈ ಬಗೆಯ ಭಾವ ಅವಳಲ್ಲಿ ಎಂದಿಗೂ ಮೂಡಿರಲಿಲ್ಲ ಎಂದುಕೊಳ್ಳುತ್ತಾನೆ.

'ನಿನ್ನ್ ಪ್ರಾಬ್ಲಮ್ ಏನಂತ ನಂಗೆ ಗೊತ್ತಾಯಿತು ಬಿಡು. ಒಂದ್ ಕೆಲ್ಸ ಮಾಡು.. ನಾಳೆ ಪೂರ್ತಿ ದಿನ ನನ್ನೊಟ್ಟಿಗೆ ಇರು. ನಿಂಗೆ ನಿಜವಾದ ಹಳ್ಳಿನ ತೋರಿಸ್ತಿನಿ.' ಎಂದು ಮೇಲೇಳುತ್ತಾಳೆ. ಭರತನಿಗೆ ಇನ್ನೂ ತುಸು ಹೊತ್ತು ಮಾತಾಡಬೇಕೆನಿಸಿದರೂ ಅವಳನ್ನು ಒತ್ತಾಯ ಮಾಡುವುದು ಸರಿಯಲ್ಲವೆಂದೆನಿಸುತ್ತದೆ.

ಮನೆಗೆ ಬಂದ ಭರತ ಮಲಗಿದ್ದ ಅಜ್ಜನನ್ನು ಒಮ್ಮೆ ನೋಡುತ್ತಾನೆ. ತಲೆಗೆ ಕೈಯನ್ನು ಆಧಾರವಾಗಿಸಿ ಮಗ್ಗುಲು ಮಾಡಿ ಮಲಗಿಗೊಂಡಿದ್ದ ಅಜ್ಜನನ್ನು ಕಂಡು ದುಃಖ ಉಕ್ಕಿ ಬರುತ್ತದೆ. ಅವರ ಬಳಿಗೆ ಹೋಗಿ, ಪಕ್ಕದಲ್ಲಿದ್ದ ಕಂಬಳಿಯನ್ನು ಬಿಡಿಸಿ ಹೊದಿಸಿ, ತನ್ನ ಕೋಣೆಗೆ ಹೋಗಿ ಮಲಗುತ್ತಾನೆ.

ಮುಂಜಾನೆ ಆರರ ಸುಮಾರಿಗೆ ಗೌರಿ ಭರತನನ್ನು ಏಳಿಸುತ್ತಾಳೆ. ಎದ್ದು ರೆಡಿಯಾಗಿ ಬಂದ ಭರತನನ್ನು ಊರ ಗುಡ್ಡದ ಮೇಲೆ ಕರೆದೊಯ್ಯುತ್ತಾಳೆ. ಮುಂಜಾವಿನ ಸೂರ್ಯನ ಕಿರಣಗಳ ಶಾಖಕ್ಕೆ ಊರಿಗೆ ಆವರಿಸಿದ ದಟ್ಟ ಮಂಜಿನ ಕವಚ ನಿಧಾನವಾಗಿ ಮರೆಯಾಗುತ್ತಿರುತ್ತದೆ. ಚಿಲಿ-ಪಿಲಿ ಹಕ್ಕಿಗಳ ಸದ್ದು, ಹಸಿರು ಪರ್ವತಗಳು, ಮುಂಜಾವಿನ ನಿರ್ಮಲ ಆಕಾಶ ಭರತನಿಗೆ ಮಾತೇ ಹೊರಡದಂತೆ ಮಾಡುತ್ತವೆ. ಗೌರಿ ಭರತನನ್ನು ಬೆಟ್ಟದ ಮೇಲಿನ ಆಲದ ಮರದ ಬುಡದಲ್ಲಿ ಪದ್ಮಾಸನದಲ್ಲಿ ಕೂರಲು ಹೇಳುತ್ತಾಳೆ. ತಾನೂ ಕೂರುತ್ತಾಳೆ. ಇದು ಊರಿನ ಎತ್ತರವಾದ ಶಾಂತವಾದ ಜಾಗವೆಂದೂ, ಕೆಲಸ, ಹಣ, ಕಾರು, ಮೊಬೈಲು, ಸಂಬಂಧ ಎಲ್ಲವನ್ನು ಅರೆಕ್ಷಣ ಮರೆತು ಕಣ್ಣು ಮುಚ್ಚಿ ಪ್ರಕೃತಿಯ ಸೊಬಗನ್ನು ಆಸ್ವಾದಿಸಬೇಕೆಂದೂ ಹಾಗು ದೀರ್ಘವಾಗಿ ಉಸಿರನ್ನು ಒಳಗೆಳೆದು ಹೊರಬಿಡಬೇಕೆಂದು ಹೇಳುತ್ತಾಳೆ. ಅಂತೆಯೇ ಭರತ ನಿಧಾನವಾಗಿ ಕಣ್ಣನು ಮುಚ್ಚುತ್ತಾನೆ. ತಲೆಯನ್ನು ಕೊರೆಯುತ್ತಿದ್ದ ಒಂದೊಂದೇ ವಿಷಯವನ್ನು ಮರೆಯುತ್ತ ಹೋಗುತ್ತಾನೆ. ಕೆಲ ಸಮಯದ ನಂತರ ಗಾಳಿಯ ಸದ್ದು ಕೇಳತೊಡಗುತ್ತದೆ. ನಿಧಾನವಾಗಿ ಓಂಕಾರವನ್ನು ಗುನುಗ ತೊಡಗುತ್ತಾನೆ. ಮನಸ್ಸು ಬೇರೆಲ್ಲೂ ಸುಳಿಯದೆ ನಿಶ್ಚಲವಾಗುತ್ತದೆ. ಹೀಗೆ ಸುಮಾರು ಅರ್ಧ ತಾಸು ಧ್ಯಾನದಲ್ಲಿ ತಲ್ಲೀನನಾಗಿ ನಿಧಾನವಾಗಿ ಕಣ್ಣು ತೆರೆದಾಗ ಭರತನಿಗೆ ಒಂದು ಹೊಸ ಅನುಭವವಾಗುತ್ತದೆ. ಎಲ್ಲಿಲ್ಲದ ಒಂದು ಹರುಷ ಮನದಲ್ಲಿ ಮೂಡುತ್ತದೆ. ಗೌರಿ ಅಷ್ಟರಲ್ಲಾಗಲೇ ಎದ್ದು ಕೂತು ಭರತನನ್ನೇ ನೋಡುತ್ತಿರುತ್ತಾಳೆ.
'ಹೌ ವಾಸ್ ಇಟ್..?' ಎಂದು ಗೌರಿ ಕೇಳಿದಾಗ,
'ಅಧ್ಭುತ..!! ಇಲ್ಲಿಂದ ಹೊರಡಲು ಮನಸ್ಸೇ ಬರುತ್ತಿಲ್ಲ ಗೌರಿ' ಎನ್ನುತಾನೆ.

ನಂತರ ಭರತನನ್ನುಊರ ದೇವಸ್ಥಾನಕ್ಕೆ ಕರೆದೊಯ್ದು, ಆ ದೇವಾಲಯದ ಮಹಿಮೆ, ಅದರ ಕೆತ್ತನೆ, ಆ ಕೆತ್ತನೆಯ ಹಿಂದಿನ ಕುಶಲತೆ, ಎಲ್ಲವನ್ನೂ ತಿಳಿಸುತ್ತಾಳೆ. ದೇವಸ್ಥಾನದ ದೇವರ ಮೂರ್ತಿಗೆ ನಮಸ್ಕರಿಸಿ, ಹಣ್ಣು ಕಾಯಿಯನ್ನು ಮಾಡಿಸಿ ಪಕ್ಕದ ನದಿಯ ಬಳಿ ಬಂದು ಕೂರುತ್ತಾರೆ.
'ಇಂದೆಲ್ಲ ಮನುಷ್ಯ ಮಷೀನ್ ಗಳ ಸಹಾಯದಿಂದ ಕೆತ್ತಿ ಮಾಡೋ ದೇವಸ್ಥಾನಕ್ಕೂ, ಕೈಯಲ್ಲೇ ಕೆತ್ತಿ ಮಾಡಿರೋ ದೇವಸ್ಥಾನಕ್ಕೂ ಎಷ್ಟ್ ವ್ಯತ್ಯಾಸ ಇದೆ ನೋಡು ಭರತ್. ನಮ್ಮ್ ಹಿರೀಕರನ್ನ ನಾವು ಅಜ್ಞಾನಿಗಳೆಂದರೆ ಅದು ನಮ್ಮ ಮೂರ್ಖತನ. ಇಂದಿನ ಅದೆಷ್ಟೋ ಸೈಂಟಿಫಿಕ್ ರಿಸರ್ಚ್ಗಳನ್ನ ನಮ್ಮ ಹಿರಿಕರು ಅದೆಷ್ಟೋ ವರ್ಷಗಳ ಹಿಂದೇನೆ ಕಂಡು ಹಿಡಿದಿದ್ರು...' ಎಂದು ಸುಮ್ಮನಾಗುತ್ತಾಳೆ. ನಂತರ ಮುಂದುವರೆಸಿ '..ಜಗತ್..' ಎಂಬ ಪದದ ಅರ್ಥ ನೋಡು. ಈ ಪದವನ್ನು ಅದೆಷ್ಟೋ ಸಾವಿರ ವರ್ಷಗಳ ಹಿಂದೆ ನಮ್ಮ ಪುರಾಣಗಳಲ್ಲಿ ಸಂಸ್ಕೃತ ಭಾಷೆಯಲ್ಲಿ ಬಳಸಿದ್ದಾರೆ. ಜಗತ್ತ್ ಅಂದರೆ 'ಜಿಸ್ಕ ಗತಿ ಹೊ'.. ಅಂದ್ರೆ ಚಲಿಸುತ್ತಿರುವ ವಸ್ತು. ಅಲ್ಲದೆ ಗರುಡಪುರಾಣದಲ್ಲಿ ವಿಷ್ಣುವಿನ ಅವತಾರವನ್ನು ಅದರ ಮುಖಪುಟದ ಮೇಲೆ ಚಿತ್ರಿಸಿದ್ದಾರೆ. ಅದರಲ್ಲಿ ವಿಷ್ಣು ತನ್ನ ವರಹ ಅವತಾರದಲ್ಲಿ ಕೋರೆಗಳಿಂದ ಗೋಲಾಕಾರದ ಭೂಮಿಯನ್ನು ಮೇಲೆತ್ತಿ ನಿಂತಿರುವ ಚಿತ್ರವಿದೆ' ಎನ್ನುತ್ತಾಳೆ.
'ನೌ ಥಿಂಕ್.. ಅದೆಷ್ಟೋ ಸಾವಿರ ವರ್ಷಗಳ ಹಿಂದೆಯೇ ನಮ್ಮ ಪೂರ್ವಿಕರಿಗೆ ಭೂಮಿ ಗೋಲವಾಗಿದೆ ಎಂದೂ ಅಲ್ಲದೆ ಅದು ಚಲಿಸುತ್ತಿದೆ ಎಂದು ತಿಳಿದ್ದಿತ್ತು ಅಂದ್ರೆ ಅವ್ರು ವೈಜ್ಞಾನಿಕವಾಗಿ ಅದೆಷ್ಟು ಮುಂದುವರ್ದಿದ್ರು ಅನ್ಸಲ್ವಾ? ಆಧುನಿಕ ವಿಜ್ಞಾನ ಇತ್ತೀಚೆಗಷ್ಟೇ ಅದನ್ನು ಸಾಬೀತು ಪಡಿಸಿದೆ ಅಷ್ಟೇ' ಎನ್ನುತ್ತಾಳೆ. ಭರತನಿಗೂ ಹೌದೆನಿಸುತ್ತದೆ. ಗೌರಿಯ ಅವಲೋಕನಕ್ಕೆ ಖುಷಿಪಡುತ್ತಾನೆ.

ಅಷ್ಟರಲ್ಲಾಗಲೇ ಅಜ್ಜ ಎದ್ದು, ರೊಟ್ಟಿಯನ್ನು ಮಾಡಿ ಕಾಯುತ್ತಿರುತ್ತಾರೆ.

'ಅರ್ರೆ ನೀವ್ಯಾಕೆ ಮಾಡೋಕೆ ಹೋದ್ರಿ.. ನಾನ್ ಬಂದ್ ಮಾಡ್ತಿದ್ದನಲ್ಲ..' ಎಂದು ಗೌರಿ ಹೇಳಿದಾಗ

'ಭರತ ಸಣ್ಣವನಿದ್ದಾಗ ಅವರಜ್ಜಿ ಮಾಡೋ ರೂಟ್ಟಿ ಚಟ್ನಿ ಅಂದ್ರೆ ಅವ್ನಿಗೆ ಬಾಳ ಇಸ್ಟ' ಎಂದು ರೊಟ್ಟಿನ ಮುರಿದು ಭರತನ ಬಾಯಿಗೆ ಇಡುತ್ತಾರೆ.

ತಿಂಡಿ ಮುಗಿಸಿದ ನಂತರ ಗೌರಿ ಭರತನನ್ನು ಗದ್ದೆಗೆ ಕರೆದುಕೊಂಡು ಹೋಗುತ್ತಾಳೆ. ಕೆಲಸ ಮಾಡುತ್ತಿದ್ದ ಮಂಜನನ್ನು ನೋಡಿ 'ಮಂಜ ಇವನ್ಯಾರು ಗುರ್ತ್ ಸಿಕ್ತ?' ಎಂದು ಕೇಳಿದಾಗ ಮಂಜ, ಭರತ ನೆನ್ನೆ ಹಾಡುತ್ತಾ ಗದ್ದೆಯ ಬದುವಿನ ಮೇಲೆ ಹೋದದ್ದು, ಇವನು ಅವನನ್ನು ಕರೆದಿದ್ದೂ, ಅವನಿಗದು ಕೇಳದೆ ಹೋದದ್ದು, ಎಲ್ಲವನ್ನೂ ಹೇಳುತ್ತಾನೆ.
'ಭರತ್.. ನೀನು ಸಣ್ಣವನಿದ್ದಾಗ ನನ್ನೊಟ್ಟಿಗೆ ಕುಂಟೆಪಿಲ್ಲೆ ಆಡುವಾಗ ನಿನ್ನ ಹುಡ್ಗಿ ಅಂತ ರೇಗುಸ್ತಿದ್ದಿದ್ದು, ಮರಕೋತಿ ಆಡ್ವಾಗ ನಿನ್ನನ್ನ ಬೇಕು ಅಂತಾನೆ ಮರದ್ ಮೇಲೆ ಬಿಟ್ಟು ಕೆಳಗಿಳಿತಾ ಇದ್ನಲ್ಲಾ ಮಂಜ, ಇವ್ನೆ ಅವ್ನು' ಎನ್ನುತ್ತಾಳೆ. ಭರತ ನಗುತ್ತಾ ಅವನ ಬಳಿ ಹೋಗಿ, ಯೋಗಕ್ಷೇಮವನ್ನು ವಿಚಾರಿಸುತ್ತಾನೆ. ಹೆಗಲ ಮೇಲೆ ಭರತನ ಕೈ ಇರುವುದು ಕೊಂಚ ಮುಜುಗರವೆನಿಸಿದರೂ ಮಂಜ ಸುಮ್ಮನಾಗುತ್ತಾನೆ.

'ಭರತ್ ನೀನು ಗದ್ದೆ ಕೆಲ್ಸ ಮೊದ್ಲು ಎಂದೂ ಮಾಡಿಲ್ಲ ಅಲ್ಲ? ಮಂಜನೊಟ್ಟಿಗೆ ಕೆಸ್ರು ಗದ್ದೇಲಿ ಗುದ್ದಲಿ ತಗೊಂಡು ಕೆಲ್ಸ ಮಾಡಿ ನೋಡು' ಎನ್ನುತ್ತಾಳೆ. ದಿನವೆಲ್ಲ ಅವಳಿಗಾಗೇ ಮುಡಿಪಾಗಿಟ್ಟಿರುವ ಭರತ ಎದುರು ಹೇಳದೆ ಗದ್ದೆಗೆ ಇಳಿದೇ ಬಿಡುತ್ತಾನೆ. ಕೆಸರಿನ ತಂಪಿಗೆ ಕೊಂಚ ನಡುಗಿದ ಭರತನ ಕಾಲುಗಳು ನಿಧಾನವಾಗಿ ಅವಕ್ಕೆ ಒಗ್ಗಿಕೊಳ್ಳುತ್ತವೆ. 'ಬೇಡ ಬುದ್ದಿ.. ಇದ್ಯಾಕೆ ನಿಮ್ಗೆಲ್ಲಾ' ಎಂದು ಹೇಳುತ್ತಿದ್ದ ಮಂಜನನ್ನು, ತನಗೆ ಭರತನೆಂದು ಕರೆಯಬೇಕೆಂದೂ, ಅಲ್ಲದೆ ಸದ್ಯಕ್ಕೆ ಒಂದು ಗುದ್ದಲಿಯನ್ನೂ ಕೊಡಬೇಕೆಂದು ಹೇಳುತ್ತಾನೆ. ಬದುವಿಗೆ ಮಣ್ಣು ಕೊಡುವುದು, ನೀರು ಹರಿಯಲು ಚರಂಡಿ ಮಾಡುವುದು, ಕಳೆ ಕೀಳುವುದು ಎಲ್ಲವನ್ನು ಮಂಜನಿಂದ ಕೇಳಿ ಮಾಡುವಷ್ಟರಲ್ಲಿ ಸೂರ್ಯ ನತ್ತಿಗೆ ಬಂದಿರುತ್ತಾನೆ. ಅಷ್ಟರಲ್ಲಿ ಗೌರಿ ಬುತ್ತಿಯಲ್ಲಿ ಊಟವನ್ನು ತರುತ್ತಾಳೆ. ಜೊತೆಗೆ ದೊಡ್ಡೇಗೌಡರೂ ಬಂದಿರುತ್ತಾರೆ. ಭರತ ಮಂಜನೊಟ್ಟಿಗೆ ಮಾಡುತ್ತಿದ್ದ ಗದ್ದೆ ಕೆಲಸವನ್ನು ಅವರು ಪ್ರಶಂಸಿಸುತ್ತಾರೆ.
'ನಮ್ಮ್ ಅನ್ನನ ನಾವೇ ಬೆಳ್ಕಬೇಕು, ನಾವೇ ಮಾಡ್ಕಬೇಕು, ನಾವೇ ತಿನ್ಬೇಕು ಮಗ.. ಈ ಕೈ ಕಾಲು ಇರೋದು ಅದಕ್ಕಾಗೇ’ ಎನ್ನುತ್ತಾರೆ. ಎಲ್ಲರೂ ಮರದ ಕೆಳಗೆ ಕೂತು ಊಟ ಮಾಡುತ್ತಾರೆ. ದೇಹ ದಣಿದಾಗ ಊಟದ ರುಚಿ ಎಷ್ಟು ಸೊಗಸಾಗಿರುತ್ತದೆ ಎಂದು ಭರತನಿಗನಿಸುತ್ತದೆ. ಊಟವಾದ ನಂತರ ದೊಡ್ಡೇಗೌಡರು,
'ಇನ್ನು ಈ ಬಿಸಿಲಲ್ಲಿ ಕೆಲ್ಸ ಮಾಡ್ಬೇಡ.. ಬೇಕಾದ್ರೆ ಇಲ್ಲೇ ವಂಗೆ ಮರದ ನೆರಳಲ್ಲಿ ವಿಶ್ರಾಂತಿ ಮಾಡ್ಕೋ.. ಆದ್ರೆ ಈ ಪುಸ್ತಕಾನು ಓದು' ಎನ್ನುತ ಶಿವರಾಮ ಕಾರಂತರ 'ಮರಳಿ ಮಣ್ಣಿಗೆ' ಕಾದಂಬರಿಯನ್ನು ನೀಡುತ್ತಾರೆ. ಅವರೆಲ್ಲ ಹೋದ ನಂತರ ಭರತ ಮರದ ಬುಡಕ್ಕೆ ಬೆನ್ನು ಕೊಟ್ಟು ಪುಸ್ತಕವನ್ನು ಓದಲಾರಂಭಿಸುತ್ತಾನೆ. ದೇಹ ದಣಿದಿದ್ದರಿಂದ ಬೇಗನೆ ನಿದ್ರೆಯ ಜೋಂಪು ಹತ್ತುತ್ತದೆ. ತುಸು ಹೊತ್ತು ಮಲಗಿ ಎದ್ದಾಗ ಬಿಸಿಲಿನ ದಗೆ ಕೊಂಚ ಕಡಿಮೆಯಾಗಿರುತ್ತದೆ. ಮಂಜ ಅಷ್ಟರಲ್ಲಾಗಲೇ ಕೆಲಸ ಮುಗಿಸಿ ಹೊರಟು ಹೋಗಿರುತ್ತಾನೆ.

ಮನೆಗೆ ಬಂದು, ಸ್ನಾನ ಮುಗಿಸಿ ಹೊರಬಂದಾಗ ಗೌರಿ ಅವನಿಗಾಗಿ ಕಾಯುತ್ತಿರುತ್ತಾಳೆ. 'ಮುಂದಿನ ಪಯಣ..?' ಎಂದು ನಗುತ್ತಾ ಕೇಳಿದ ಭರತನ ಪ್ರೆಶ್ನೆಗೆ 'ಹಕ್ಕಿಮ್ ಸಾಹೇಬ್ರ ಚಹಾದ ಅಂಗಡಿ' ಎನ್ನುತ್ತಾಳೆ. ಊರ ಶಾಲೆಯ ಬಳಿಯಿದ್ದ ಚಹಾದ ಅಂಗಡಿ ಸಣ್ಣ ಮಡಿಕೆಯ ಲೋಟಗಳಲ್ಲಿ ಮಾರುವ ಸ್ಪೆಷಲ್ ಚಹಾಕ್ಕೆ ಹೆಸರುವಾಸಿ. 'ಗೌರಿ ಬೇಟಿ ಹೇಗಿದ್ದೀಯ.?' ಎಂದು ಕೇಳಿದ ಹಕ್ಕಿಮ್ ಸಾಹೇಬರಿಗೆ ಭರತನನ್ನು ಪರಿಚಯ ಮಾಡಿಕೊಡುತ್ತಾಳೆ. ನಂತರ ಬಂದ ಚಹಾದ ಘಮಕ್ಕೆ ಭರತ ತಲೆದೂಗುತ್ತಾನೆ. ನಿಧಾನವಾಗಿ ಒಂದೊಂದೇ ಗುಟುಕನ್ನು ಹೀರುತ್ತಾ,
'ಬೆಸ್ಟ್ ಮೆಡಿಸಿನ್ ಫಾರ್ ಹೆಡ್ ಏಕ್ .. ' ಎನ್ನುತ್ತಾನೆ.
'ಟೂರಿಸ್ಟ್ಸ್ ನಮ್ಮೂರಿಗೆ ಬಂದ್ರೆ, ಚಹಾ ಕುಡಿಲಿಕ್ಕೆ ಇದೆ ಅಂಗಡಿಗೆ ಬರುವುದು'. ಎನ್ನುತ್ತಾಳೆ ಗೌರಿ.

ಚಹ ಕುಡಿದು ಊರ ಹೊರವಲದಲ್ಲಿದ್ದ ಹಕ್ಕಿಗಳನ್ನು ಮಾರುವ ಅಂಗಡಿಗೆ ಹೋಗುತ್ತಾರೆ. ಅಲ್ಲಿ ಬಣ್ಣ ಬಣ್ಣದ ವಿವಿಧ ಬಗೆಯ ಹಕ್ಕಿಗಳನ್ನು ಪಂಜರದೊಳಗೆ ಇಟ್ಟು ಮಾರುತ್ತಿರುತ್ತಾರೆ. 'ಭರತ್ ನಿಂಗೆ ಇಷ್ಟ ಆದ ಯಾವದಾದ್ರು ಒಂದು ಪಂಜರನ ತಗೋ' ಎಂದು ಗೌರಿ ಹೇಳಿದಾಗ ಭರತ ಏತಕ್ಕೆ ಎಂದು ಕೇಳುತ್ತಾನೆ. 'ತಗೋಳಪ್ಪಾ ಹೇಳ್ತೀನಿ' ಎನ್ನುತ್ತಾಳೆ. ನಂತರ ಇಬ್ಬರು ಬೆಳಗ್ಗೆ ಬಂದಿದ್ದ ಬೆಟ್ಟದ ತಪ್ಪಲಿಗೆ ಬರುತ್ತಾರೆ. ಬೆಳಗ್ಗೆ ಪೂರ್ವದಲ್ಲಿ ಕಂಡ ಸ್ವರ್ಗ ಈಗ ಪಶ್ಚಿಮದಲ್ಲಿ ಕೆಂಪಾಗಿ ಮೂಡಿದೆ ಎಂದನಿಸುತ್ತದೆ ಭರತನಿಗೆ.

'ಭರತ್, ನೋಡು ಎಲ್ಲ ಹಕ್ಕಿಗಳು ತಮ್ಮ-ತಮ್ಮ ಗೂಡುಗಳನ್ನು ಸೇರ್ತಿವೆ. ತಗೋ, ಈ ಪಂಜರದಲ್ಲಿರೋ ಹಕ್ಕಿಗಳನ್ನ ಹಾರಿಬಿಡು.. ಇವೂ ಗೂಡು ಸೇರಲಿ' ಎಂದು ಹೇಳಿದಾಗ, ಚಿಯ್ಗುಡುತ್ತಿದ್ದ ಪುಟ್ಟ ಹಕ್ಕಿಗಳನ್ನು ಒಂದೊಂದೇ ಹೊರತೆಗೆದು ಹಾರ ಬಿಡುತ್ತಾನೆ. ಹಕ್ಕಿಗಳು ಹಾರುತ್ತಾ ದೂರ ಸಾಗಿ ಕಣ್ಮರೆಯಾದ ಮೇಲೆ, 'ಭರತ್ ನೀನೂ ಹೀಗೆ ನಿನ್ನ ಪಂಜರದ ಜೀವನವನ್ನು ಬಿಟ್ಟು ಮುಕ್ತವಾಗಿ ಹಾರಾಡು' ಎನ್ನುತ್ತಾಳೆ. ಇಬ್ಬರೂ ಹಾರಿಹೋಗುತ್ತಿದ್ದ ಹಕ್ಕಿಗಳನ್ನೇ ನೋಡುತ್ತಾರೆ.

ಆ ದಿನ ಭರತನಿಗೆ ಜೀವನದ ಅತಿ ಮುಖ್ಯವಾದ ದಿನವಾಗುತ್ತದೆ. ನಂತರದ ಎರಡು ವಾರ ಅದೇ ದಿನಚರಿಯನ್ನು ಮುಂದುವರೆಸುತ್ತಾನೆ. ಬೆಳಗ್ಗೆ ಬೇಗ ಏಳುವುದು, ಬೆಟ್ಟದ ತಪ್ಪಲಿನಲ್ಲಿ ಧ್ಯಾನ, ಮಂಜನೊಟ್ಟಿಗೆ ಗದ್ದೆಯ ಕೆಲಸ, ಮರಳಿ ಮಣ್ಣಿಗೆ ಪುಸ್ತಕ, ಸಂಜೆ ಗೌರಿಯೊಟ್ಟಿಗೆ ಊರ ಸುತ್ತಾಟ, ಭಜನೆ, ಅಡಿಗೆ, ಅಲ್ಲದೆ ದಿನಕ್ಕೊಂದರಂತೆ ಪಂಜರವನ್ನು ಕೊಂಡು ಅದರಲ್ಲಿನ ಹಕ್ಕಿಯನ್ನು ಗುಡ್ಡದ ತಪ್ಪಲಿನಿಂದ ಹಾರ ಬಿಡುವುದು, ಅದು ಹಾರಿ ಕಣ್ಮರೆಯಾಗುವವರೆಗೂ ನೋಡುವುದು. ಭರತನ ಜೀವನ ಒಂದು ಹೊಸ ದಿಕ್ಕನ್ನು ಪಡೆಯುತ್ತಿತ್ತು. ಅರ್ಥಪೂರ್ಣವಾಗಿದೆ ಎಂದೆನಿಸುತ್ತಿತ್ತು. 'ನಾಳೆ' ಎಂಬುವ ಹುಸಿಭಯ ಮನಸ್ಸಿಂದ ಮರೆಯಾಗಿ ಹೋಗಿತ್ತು.

ದಿನಗಳು ಕಳೆದವು. ಅಷ್ಟರ ಲ್ಲಾಗಲೇ ಭರತನಿಗೆ ಆಫೀಸ್ಸಿನಿಂದ ಫೋನುಗಳು ಬರತೊಡಗಿದ್ದವು. ಅವುಗಳಲ್ಲಿ ಕೆಲವನ್ನು ಉತ್ತರಿಸಿದರೆ ಕೆಲವನ್ನು ಹಾಗೆಯೇ ಬಿಡುತ್ತಿದ್ದ. ಕೊನೆಯ ದಿನ ಸಂಜೆ ಭರತ ಹಾಗು ಗೌರಿ ಬೆಟ್ಟದ ಮೇಲೆ ಬಂದಿರುತ್ತಾರೆ. ಹಕ್ಕಿಯ ಅಂಗಡಿಯ ಕೊನೆಯ ಪಂಜರದ ಹಕ್ಕಿಯನ್ನೂ ಹಾರಿ ಬಿಡುತ್ತಾರೆ. 'ಹಕ್ಕಿ ಅಂಗಡಿಯವನಿಗೆ ಇಡೀ ವರ್ಷದ್ ಬಿಸಿನೆಸ್ ಕೊಟ್ಟೆ ನೋಡು ನೀನು' ಎನ್ನುತ ಭರತನನ್ನು ನೋಡಿ ಗೌರಿ ನಗುತ್ತಾಳೆ. ಸ್ವಲ್ಪ ಹೊತ್ತು ಸುಮ್ಮನಿದ್ದ ಭರತ 'ನಾಳೆ ನಾನು ಹೊರಡ್ಬೇಕು ಗೌರಿ' ಎನ್ನುತ್ತಾನೆ. ನಗುತ್ತಿದ್ದ ಗೌರಿ ಒಮ್ಮೆಲೇ ಮೌನವಾಗುತ್ತಾಳೆ. ಭರತನೂ ಸುಮ್ಮನಾಗುತ್ತಾನೆ. 'ಅಲ್ಲಿ ಹೋಗಿ ಏನ್ ಮಾಡ್ತಿಯಾ' ಎಂದು ತುಸು ಕೋಪದಿಂದ ಕೇಳಿದಾಗ ಭರತನಿಗೆ ಏನೆನ್ನಬೇಕೆಂದು ತಿಳಿಯುವುದಿಲ್ಲ. 'ಊರು, ಈ ಜಾಗ, ಅಜ್ಜ, ದೊಡ್ಡೆಗೌಡ್ರು, ಹಕ್ಕಿಮ್ ಸಾಹೇಬ್ರ ಚಹಾ, ಗದ್ದೆ, ಮಂಜ, ಈ ಹಕ್ಕಿಗಳು, ನೀನು ಎಲ್ಲರನ್ನು ಮಿಸ್ ಮಾಡ್ಕೊಂತೀನಿ ' ಎನ್ನುತಾನೆ. ಗೌರಿ ಏನನ್ನೂ ಉತ್ತರಿಸದೆ ಗುಡ್ಡದಿಂದಿಳಿದು ಹೋಗುತ್ತಾಳೆ. ಅವಳ ಕೋಪದ ಹಿಂದಿದ್ದ ಅರ್ಥವನ್ನು ಅರಿತರೂ ಅರಿಯದಾಗುತ್ತಾನೆ.

ಸ್ವಲ್ಪ ಸಮಯ ಗುಡ್ಡದ ಮೇಲೆ ಕೂತು ದೊಡ್ಡೇಗೌಡರ ಮನೆಗೆ ಬಂದ ಭರತ 'ಮರಳಿ ಮಣ್ಣಿಗೆ' ಪುಸ್ತಕವನ್ನು ಹಿಂದಿರುಗಿಸಲು ಅವರ ಕೋಣೆಯೊಳಗೆ ಹೋಗುತ್ತಾನೆ. ದೊಡ್ಡದ್ದಾದ ಎರಡು ಗಾಜಿನ ಕಪಾಟಿನಲ್ಲಿ ಜೋಡಿಸಿದ್ದ ನೂರಾರು ಪುಸ್ತಕಗಳನ್ನು ಕಂಡು ಭರತನಿಗೆ ಆಶ್ಚರ್ಯವಾಗುತ್ತದೆ. ದೊಡ್ಡೇಗೌಡರ ಅನುಭವದ ಮಾತುಗಳ ಹಿಂದಿನ ರಹಸ್ಯ ಅರಿಯುತ್ತದೆ. 'ಬಾರಪ್ಪ ಬಾ... ಓದಿದ ಪುಸ್ತಕ? ಹೇಗಿದೆ? ಎಂದು ಪುಸ್ತಕವನ್ನು ಓದುತ್ತಾ ಕುರ್ಚಿಯ ಮೇಲೆ ಒರಗಿದ್ದ ಗೌಡರು ಕೇಳುತ್ತಾರೆ.

'ಈ ಪುಸ್ತಕ ನನ್ನ ಜೀವನದ ದಿಕ್ಕನೇ ಬದಲಿಸುತ್ತದೆ ಅನ್ಸುತ್ತೆ' ಎಂದ ಭರತನನ್ನು ಉದ್ದೇಶಿಸಿ,
'ನೀನೊಬ್ಬನೇ ಅಲ್ಲ ಮಗ.. ಅದೆಷ್ಟೋ ಜನರ ಜೀವನದ ಹಾದಿನೇ ಬದಲಿಸಿದೆ ಈ ಪುಸ್ತಕ' ಎನ್ನುತ್ತಾರೆ. ‘ಇಂತಹ ಪುಸ್ತಕಗಳೇ ನನ್ನ ಆಸ್ತಿ’ ಎಂದ ಅವರು ಕಪಾಟಿನಿಂದ ಸುಧಾ ಮೂರ್ತಿಯವರ 'How I Taught My Grandmother to Read' ಎಂಬ ಇಂಗ್ಲಿಷ್ ಪುಸ್ತಕವನ್ನೂ ಕೊಡುತ್ತಾರೆ.

ಅಷ್ಟರಲ್ಲಿ ಕೋಣೆಯ ಹೊರಗಿಂದ ತಂಬೂರಿಯ ನಾದವೊಂದು ಮೂಡುತ್ತದೆ. ಪೂರವಿಕಲ್ಯಾಣಿ ರಾಗ ನೋವಿನ ಭಾವವನ್ನು ಸ್ಪುರಿಸುತ್ತಿರುತ್ತದೆ. ಇದು ಗೌರಿಯ ಧ್ವನಿಯೆಂದೇ ಕ್ಷಣಮಾತ್ರದಲ್ಲಿ ಅರಿತ ಭರತ 'ಗೌರಿ ಹಾಡುತ್ತಾಳೆಯೇ.?' ಎಂದು ದೊಡ್ಡೇಗೌಡರನ್ನು ಆಶ್ಚರ್ಯದಿಂದ ಕೇಳುತ್ತಾನೆ. ದೊಡ್ಡೇಗೌಡರು ಹೌದೆಂದೂ, ಗೌರಿ ಹಲವು ಸಂಗೀತ ಕಛೇರಿಗಳನ್ನೂ ನೆಡೆಸಿಕೊಡುವಳೆಂದೂ ಹೇಳುತ್ತಾರೆ. ಗೌಡರ ಮಾತನ್ನು ಕೇಳುತ್ತಲೇ ತಕ್ಷಣ ಹೊರಬಂದ ಭರತ, ತಂಬೂರಿಯನ್ನು ಎದೆಗವುಚಿಕೊಂಡು ಹಾಡುತ್ತಿದ್ದ ಗೌರಿಯನ್ನು ನೋಡುತ್ತಾನೆ. ಕಣ್ಣು ಮುಚ್ಚಿ ರಾಗದ ಆರೋಹಣವನ್ನು ಮಾಡುತ್ತಿದ್ದ ಗೌರಿ ಅಕ್ಷರಸಹ ದೇವತೆಯಂತೆ ಭರತನಿಗೆ ಕಾಣುತ್ತಾಳೆ. ಅಷ್ಟೊಂದು ಆಳವಾದ ಸ್ವರವಿಸ್ತಾರವನ್ನು ಭರತ ಎಂದಿಗೂ ಪ್ರತ್ಯಕ್ಷವಾಗಿ ಕೇಳಿರಲಿಲ್ಲ. ಗೌರಿ ಹಾಡುತ್ತಾ ಮೈ ಮರೆತಿರುತ್ತಾಳೆ. ದುಃಖದ ಭಾವಗಳೆಲ್ಲ ಅವಳ ಕಣ್ಣ ಹುಬ್ಬುಗಳ ಮೇಲೆ ಮೂಡುತ್ತಿರುತ್ತವೆ. ನೋಡುತ್ತಲೇ ಕಣ್ಣೀರ ಧಾರೆ ಅವಳ ಕಣ್ಣುಗಳಿಂದ ಹರಿಯತೊಡಗುತ್ತದೆ. ಆದರೆ ರಾಗ ಒಂದಿಂಚೂ ತಪ್ಪುವುದಿಲ್ಲ. ಕೆಲ ಸಮಯದ ನಂತರ ರಾಗವನ್ನು ಮಂದ್ರದಲ್ಲಿ ತಂದು ನಿಲ್ಲಿಸುತ್ತಾಳೆ. ಶಾಂತವಾಗುತ್ತಾಳೆ. ಆಕೆಯ ಕಣ್ಣೀರಿನ ಅರ್ಥವನ್ನು ಅರಿತ ಭರತ, ಆಕೆ ಕಣ್ಣು ಬಿಡುವ ಮೊದಲೇ 'ಬರ್ತೀನಿ' ಎಂದೇಳಿ ಹೊರನಡೆಯುತ್ತಾನೆ.

ಗೌರಿಯನ್ನು ನೋಡಿದರೆ ಹೊರಡಲು ಮನಸ್ಸು ಬರುವುದಿಲ್ಲ. ಆದರೆ ಏನು ಮಾಡಬೇಕೆಂದೂ ತೋರುತ್ತಿಲ್ಲ.ರಾತ್ರಿಯೆಲ್ಲ ಭರತನಿಗೆ ನಿದ್ರೆಯೇ ಬರುವುದಿಲ್ಲ. ಇಂದು ಮತ್ತೊಮ್ಮೆ ಮನಸ್ಸು ತಳಮಳಗೊಂಡಿರುತ್ತದೆ.

ಮುಂಜಾವಿನ ರೈಲನ್ನು ಹಿಡಿಯಲು ಭರತ ಬೇಗನೆ ಏಳುತ್ತಾನೆ. ಹೊರಡುವ ಮೊದಲು ಗೌರಿಯನೊಮ್ಮೆ ನೋಡಬೇಕೆನಿಸಿದರೂ, ಬೇಡವೆಂದು ಅಲ್ಲಿಂದ ಹೊರಡುತ್ತಾನೆ. ಹೊರಡುವ ಮೊದಲು ಅಜ್ಜನ ಕಾಲಿಗೆ ಬಿದ್ದು, ಆಶ್ರಿವಾದವನ್ನು ಪಡೆದು, ದೊಡ್ಡೇಗೌಡರಿಗೆ ಹೇಳಿ ಹೊರಡುತ್ತಾನೆ.'ಗೌರಿ ಮಲಗಿದ್ದಾಳೆ, ಅವಳನ್ನೂ ಎಳಸ್ತಿನಿ' ಎಂದ ದೊಡ್ಡೇಗೌಡರಿಗೆ 'ಅವಳು ಮಲಗಲಿ ಬಿಡಿ, ನೆನ್ನೆ ರಾತ್ರಿಯೇ ಅವಳಿಗೆ ಹೇಳಿದ್ದೀನಿ' ಎನ್ನುತ್ತಾನೆ. ಆದರೂ ಗೌರಿ ನನ್ನ ಕಳಿಸಿಕೊಡಲು ಬರಲಿಲ್ಲವೇಕೆಂದು ಕಳವಳಗೊಳ್ಳುತ್ತಾನೆ.

ನನ್ನ ನೆನಪಿಗಾಗಿ ಏನಾದರೊಂದು ಭರತನಿಗೆ ಕೊಡಲೆಂದು ತಡರಾತ್ರಿಯವರೆಗೂ ಉಣ್ಣೆಯ ಶಾಲೊಂದನ್ನು ಗೌರಿ ಹಣೆಯುತ್ತಾಳೆ. ಬೆಳಗ್ಗೆ ತುಸು ನಿಧಾನವಾಗಿ ಎದ್ದು ನೋಡಿದಾಗ ಘಂಟೆ ಏಳಾಗಿರುತ್ತದೆ. ಎದ್ದು ರೆಡಿಯಾಗಿ ಹೊರಬಂದು 'ಭರತ್ ಬಂದಿದ್ನ?' ಎಂದು ದೊಡ್ಡೇಗೌಡರಲ್ಲಿ ಕೇಳುತ್ತಾಳೆ. ಅವರು ಹೌದೆಂದೂ, ನಿನ್ನ ಏಳಿಸಲು ಬೇಡವೆಂದು ಅವನು ಹೇಳಿದನೆಂದೂ, ಬೆಳಗ್ಗಿನ ರೈಲಿಗೆ ಅವನು ಹೊರಟನೆಂದು ಹೇಳುತ್ತಾರೆ. ನಂಬಲಾಗದ ಗೌರಿ ಭರತನಿಗಾಗಿ ಮಾಡಿದ್ದ ಶಾಲನ್ನು ಹಿಡಿದು ಪಟೇಲರ ಮನೆಯಡೆ ಬೇಗನೆ ಹೋಗುತ್ತಾಳೆ. ಬಾಗಿಲು ತೆರೆದಿದ್ದ ಮನೆಯೊಳಗೇ ಯಾರೂ ಇರುವುದಿಲ್ಲ. 'ಭರತ್.. ತಾತ' ಎನ್ನುತ ಗದ್ಗದಿತ ಸ್ವರದಲ್ಲಿ ಕೂಗುತ್ತಾಳೆ.
'ಅಯ್ಯರು ರೈಲ್ವೆ ಸ್ಟೇಷನ್ ಕಡೆ ಹೋದ್ರು' ಎಂದು ಯಾರೋ ಹೊರಗಿನಿಂದ ಹೇಳಿದಾಗ ಗೌರಿ ನಿಂತಲ್ಲೇ ಕುಸಿಯುತ್ತಾಳೆ. ಅಲ್ಲಿಯವರೆಗೂ 'ಭರತ ಹೊರಡುವುದಿಲ್ಲ' ಎಂದು ಮನದ ಎಲ್ಲೋ ಒಂದೆಡೆ ಮೂಡುತ್ತಿದ್ದ ಸಂದೇಶ ಒಮ್ಮೆಲೇ ನಿಂತುಬಿಡುತ್ತದೆ. ಭರತ ಇಷ್ಟೊಂದು ಕಟು ಹೃದಯಿಯೇ ಎಂದುಕೊಳ್ಳುತ್ತಾಳೆ. ಶಾಲನ್ನು ಎದೆಗವುಚಿಕೊಂಡು ಬಿಕ್ಕಿ ಅಳುತ್ತಾಳೆ. ಸ್ವಲ್ಪ ಸಮಯದ ನಂತರ ಹೊರಬಂದು ರೈಲು ಬರುವ ಸಮಯವನ್ನು ಕೇಳಿ, ಗದ್ದೆಯ ಮಾರ್ಗದಲ್ಲಿ ಹೋದರೆ ಹತ್ತಿರವಾಗಬಹುದೆಂದು ಬದುಗಳನ್ನು ಇಳಿದು ಬೇಗ-ಬೇಗನೆ ಹೋಗುತ್ತಾಳೆ.
'ಒಂದು ಮಾತು ಹೇಳಿಯೂ ಹೋಗಲಿಲ್ಲವಲ್ಲ' ಎಂದು ಅವಳಿಗೆ ಭರತನ ಮೇಲೆ ಕೊಂಚ ಸಿಟ್ಟೂ ಬಂದರೂ ಕೆಲ ಕ್ಷಣಗಳ ನಂತರ ದುಃಖ ಉಕ್ಕಿ ಬರುತ್ತಿತ್ತು. ದುಃಖವನ್ನು ತಡೆಯಲಾಗದೆ ಶಾಲಿನಿಂದ ಕಣ್ಣುಗಳನ್ನು ಅದ್ದುತ್ತಾ ನೆಡೆಯುತ್ತಾಳೆ.ಅಷ್ಟರಲ್ಲಿ ರೈಲು ಹೊರಡುವ ಸದ್ದೊಂದು ಮೂಡುತ್ತದೆ. ಬದುಗಳ ಮೇಲೆ ಸಂಬಾಲಿಸಿಕೊಂಡು ಓಡುತ್ತಿದ್ದ ಆಕೆ ರೈಲು ಹೊರಟ ಸದ್ದಿಗೆ ಒಮ್ಮೆಲೇ ನಿಲ್ಲುತ್ತಾಳೆ. ಕಳ್ಳಿಯ ಹಾಲಿನಂತೆ ಕಣ್ಣೀರ ಹನಿಗಳು ಒಮ್ಮೆಲೇ ಪಟಪಟನೆ ಉದುರುತ್ತವೆ. ರೈಲು ಸದ್ದು ಮಾಡುತ್ತಾ ದೂರದಲ್ಲಿ ಮರೆಯಾಗುತ್ತದೆ.



ಎಲ್ಲಿಗೋಗಬೇಕೆಂದು ಗೌರಿಗೆ ಅರಿಯುವುದಿಲ್ಲ. ಓಡಿಹೋಗಿ ರೈಲನ್ನು ಹಿಡಿಯಬೇಕನಿಸುತ್ತದೆ. ಭರತನನ್ನು ಕೆಳಗಿಳಿಸಿ ಕೇಳಬೇಕೆನಿಸುತ್ತದೆ. ಕೆಲಹೊತ್ತು ರೈಲಿನ ಹಾದಿಯನ್ನೇ ನೋಡುತ್ತಾ ನಿಂತ ಗೌರಿಗೆ ದೂರದಿಂದ ಯಾರೊ ಆಕೆಯನ್ನು ಕರೆದ ಹಾಗನಿಸುತ್ತದೆ. ಹಿಂದಿರುಗಿ ನೋಡಿದರೆ ಗದ್ದೆಯ ಮದ್ಯದಲ್ಲಿ ಇಬ್ಬರು ಕೆಲಸ ಮಾಡುತ್ತಿರುವುದು ಕಾಣುತ್ತದೆ. ತಡಮಾಡದೆ ಗೌರಿ ಅವರಲ್ಲಿಗೆ ಹೋಗುತ್ತಾಳೆ. ಅತ್ತ ಕಣ್ಣುಗಳನ್ನು ಶಾಲಿನಿಂದ ಒರೆಸಿಕೊಳ್ಳುತ್ತಾಳೆ. 'ಲೇ ಮಂಜ.. ಈ ಬದಿನ ನೀರಾ ಇನ್ನೂ ಯಾಕ್ ಬಿಟ್ಟಿಲ್ಲ.. ಗುದ್ದಲಿ ತಾ.. ನೀರ್ ಜಾಸ್ತಿ ಆಯಿತು ಗದ್ದೆಗೆ' ಎನ್ನುತ ಭರತ ಕೂಗು ತ್ತಿರುತ್ತಾನೆ. ಭರತನನ್ನು ನೋಡಿದ ಗೌರಿಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. 'ಏನ್ ಗೌರಿ, ಯಾವ್ ಕಡೆ ಹೊರಟೆ' ಎಂದು ಚೇಷ್ಟೆಯಿಂದ ಮುಗುಳ್ನಗುತ್ತಾ ಕೇಳುತ್ತಾನೆ. ಫ್ರೆಂಚ್ ಕಟ್ನ ಮೇಲೆ ಗದ್ದೆಯ ಕೆಸರು ಮೆತ್ತಿಕೊಂಡು ಭಿನ್ನವಾಗಿ ಕಾಣುತ್ತಿದ್ದ ಭರತನ್ನು ನೋಡಿ ನಗುತ್ತಾ, ತಾನು ತಂದಿದ್ದ ಕೆಂಪು ಶಾಲನ್ನು ಗೌರಿ ಅವನಿಗೆ ಎಸೆಯುತ್ತಾಳೆ. ರೈಲು ಹೋದ ದಿಕ್ಕಿನಿಂದ ಕೋಗಿಲೆಯೊಂದು ಕೂಗುತ್ತಿರುತ್ತದೆ.

ಪೋಲಿಯೋ ಮುಕ್ತ ದೇಶದ ಮುಂದಿರುವ ಮತ್ತೊಂದು ದೊಡ್ಡ ಸವಾಲು....!

ಅದು ಅತಿ ವಿಕಾರವಾದ ಮುಖ. ಮುಖದ ತುಂಬೆಲ್ಲ ನೀರು ತುಂಬಿ ಹುಬ್ಬಿರುವ ಬೊಬ್ಬೆಗಳು. ಒಣ ಮೀನಿನಂತೆ ಸುಕ್ಕಾದ ಮೈಯ ಚರ್ಮ. ಹೆಬ್ಬೆರಳು ತೋರ್ಬೆರಳುಗಳ ವ್ಯತ್ಯಾಸ ಗುರುತಿಡಿಯಲಾಗದ ಕೈ ಬೆರಳುಗಳು. ಕಾಲಿನ ಪಾಡು ಭಾಗಶ ಹಾಗೆಯೇ! ಇಂತಹ ಒಬ್ಬ ವ್ಯಕ್ತಿ ಬೀದಿಯಲ್ಲಿ ನೆಡೆದುಕೊಂಡು ಹೋಗುತ್ತಿದ್ದರೆ ಜನರೆಲ್ಲ ಇವನಿಂದ ದೂರ ಓಡುತ್ತಿದ್ದರು. ಹಿಡಿ-ಹಿಡಿ ಶಾಪವನ್ನು ಹಾಕುತ್ತಿದ್ದರು. ಯಾರಾದರೂ ಈ ವಿಕಾರಿ ಮಾನವನನ್ನು ಹೇಗಾದರೂ ಮಾಡಿ ಊರ ಹೊರಗೆ ದಬ್ಬಿ ಬರಲು ಹೇಳುತಿದ್ದರು. ಇಂತಹ ಶಾಪ, ಕೋಪ, ದಿಕ್ಕಾರಗಳನ್ನು ಸಹಿಸುತಿದ್ದ ಆ ಜೀವ ನಿಧಾನವಾಗಿ ಮುನ್ನೆಡೆಯುತ್ತಿತ್ತು. ತನ್ನ ಗುಡಿಸಲನ್ನು ಸೇರುತಿತ್ತು. ಆ ಗುಡಿಸಲೋ, ಯಾರು ಬಾರದ ನಿರ್ಜನ ಪ್ರದೇಶದಲ್ಲಿರುತಿತ್ತು. ನಾಯಿಗಳು ಬಿಟ್ಟರೆ ಅಲ್ಲಿಗೆ ಯಾರೊಬ್ಬರೂ ಸುಳಿಯರು. ಎಲ್ಲಿಂದಲೋ ಸಿಕ್ಕಿದ ಅನ್ನದಲ್ಲೇ ತುಸು ತಿಂದು ಮಲಗಬೇಕಿತ್ತು. ಹೀಗೆ ಕೊರಗಿ, ನೊಂದು-ಬೆಂದ ಜೀವ, ಕೆಲದಿನಗಳ ನಂತರ ಅಸುನೀಗುತ್ತಿತ್ತು. ಆ ಜೀವ ಹಾರಿ ಹೋದಾಗಲಂತೂ ಇಡೀ ಊರಿಗೆ ಊರೇ ಸಂತಸ ಪಡುತ್ತಿತ್ತು. ನೆಮ್ಮದಿಯ ನಿಟ್ಟುಸಿರು ಬಿಡುತ್ತಿತ್ತು! ಮೂಢನಂಬಿಕೆಯ ಎಲ್ಲಾ ತರ್ಕಗಳಿಂದ ಆ ಜೀವವನ್ನು ಶಪಿಸಿ ಸುಮ್ಮನಾಗಬಿಡುತ್ತಿತು.

ಇದು ಯಾವುದೇ ಕರುಣಾಜನಕ ಕಥೆಯ ಆಯ್ದ ಭಾಗವಂತೂ ಅಲ್ಲ. ಹಲವು ದಶಕಗಳ ಹಿಂದೆ ಕಾರಣಾಂತರಗಳಿಂದ ಬರುತಿದ್ದ ಕುಷ್ಠರೋಗವೆಂಬ ಮಹಾಮಾರಿಗೆ ಸಿಲುಕಿ, ಮರುಗಿ ಕೊನೆಯಾಗುತಿದ್ದ ಅದೆಷ್ಟೋ ಜೀವಗಳ ನೋವಿನ ವ್ಯಥೆ. ಉಸಿರಾಡಲಾಲೂ ಹೆದರಿ, ಮುದುಡಿ ಕೂರಬೇಕಿದ್ದ ಬಹುಜನರ ಕಥೆ.

ಕುಷ್ಠರೋಗ. ಇತಿಹಾಸದುದ್ದಕ್ಕೂ ಮಾನವನನ್ನು ಬಿಡದೆ ಕಾಡಿದ ಮಾರಕ ರೋಗ. ಇದಕ್ಕೆ ಸಾಕ್ಷಿ ಎಂಬಂತೆ ಪುರಾವೆಗಳು ಕ್ರಿಸ್ತ ಪೂರ್ವದಿಂದಲೂ ನಮಗೆ ದೊರಕಿವೆ. ಆದರೆ ಮೂಢನಂಬಿಕೆಯ ಪರಮಾವಧಿಯಲ್ಲಿ ನಮ್ಮಲ್ಲಿ ಈ ರೋಗವನ್ನು ಹೆಚ್ಚಾಗಿ ತಪ್ಪಾಗಿಯೇ ಅರಿಯಲಾಯಿತು. ಇದರಿಂದ ಒಂದು ಸೂಕ್ತ ಮದ್ದನು, ಸೂಕ್ತ ಸಮಯದಲ್ಲಿ, ಕಂಡುಹಿಡಿಯಲಾಗಲಿಲ್ಲ ಎನ್ನಬಹುದು. ಕೋಟಿ-ಕೋಟಿ ಜನರನ್ನು ಬಲಿ ತೆಗೆದುಕೊಂಡ ಈ ಕುಷ್ಠರೋಗಕ್ಕೆ 'ಮೈಕೋಬ್ಯಾಕ್ಟಿರಿಯಮ್ ಲೆಪ್ರಯ್' ಎಂಬ ಬ್ಯಾಕ್ಟಿರಿಯವೇ ಕಾರಣವೆಂದು 1873 ರಲ್ಲಿ ನಾರ್ವೆಯ ವಿಜ್ಞಾನಿ ಹೆನ್ಸನ್ ಎಂಬಾತ ಕಂಡುಹಿಡಿದ ಮೇಲೆ ಸಹಸ್ರ ವರ್ಷಗಳ ಜನರ ಮೂಢನಂಬಿಕೆ ಒಂದು ಮಟ್ಟಿಗೆ ಕಡಿಮೆಯಾಗತೊಡಗಿತು. ಇದು ಯಾವುದೇ ದುಷ್ಟ ಶಕ್ತಿಯಾಗಲಿ, ಅನುವಂಶೀಯವಾಗಲಿ ಅಥವಾ ಮತ್ಯಾವುದೇ ಪಾಪ ಪುಣ್ಯಗಳ ಫಲವಲ್ಲ ಎಂಬುದು ಮಂದಗತಿಯಲ್ಲಿ ಹಲವರಿಗೆ ಅರಿವಾಗತೊಡಗಿತು. ಒಮ್ಮೆ ಈ ಬ್ಯಾಕ್ಟೀರಿಯ ದೇಹದ ಒಳಗೆ ಸೇರಿ ಕುಷ್ಠ ರೋಗದ ಮೊದಲ ಲಕ್ಷಣಗಳು ಕಾಣತೊಡಗಲು ಒಂದು ವರ್ಷದಿಂದ ಇಪ್ಪತ್ತು ವರ್ಷಗಳೂ ತೆಗೆದುಕೊಳ್ಳಬಹುದು .ಅಲ್ಲಿಯವರೆಗೂ ಈ ಬ್ಯಾಕ್ಟೀರಿಯಾ ದೇಹವನ್ನು ಹಂತ ಹಂತವಾಗಿ ವ್ಯಾಪಿಸುತ್ತಲೇ ಇರುತ್ತದೆ. ಈ ಸಮಯವನ್ನು 'ಇನ್ಕ್ಯುಬೇಷನ್ ಪಿರಿಯಡ್' ಎಂದು ಕರೆಯಲಾಗುತ್ತದೆ. ಅಲ್ಲದೆ ರೋಗಿಯ ಕೆಮ್ಮು ಹಾಗು ಸೀನುವುದರ ಮೂಲಕ ಇದು ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಹೆಚ್ಚಾಗಿ ಉಷ್ಣವಲಯದ ದೇಶಗಳಲ್ಲಿ ಕಂಡು ಬರುವ ಈ ಬ್ಯಾಕ್ಟಿರಿಯಾದ ವಿರುದ್ಧ ಬಹಳಷ್ಟು ಪ್ರಯೋಗಗಳು ನಡೆದವು. ಹಲವಾರು ಪ್ರಯೋಗಗಳ ಪರಿಣಾಮ ಅಂತಿಮವಾಗಿ ಇಪ್ಪತ್ತನೇ ಶತಮಾನದದ ಎಪ್ಪತ್ತನೇ ದಶಕದಲ್ಲಿ ಯಶಸ್ವಿಯಾದ ಮಲ್ಟಿ-ಡ್ರಗ್-ಟ್ರೀಟ್ಮೆಂಟ್ (MTD) ಚಿಕಿತ್ಸೆಯನ್ನು ಕಂಡುಹಿಡಿಯಲಾಯಿತು. ಇದು ಇಂದಿಗೂ ಕುಷ್ಠ ರೋಗಕ್ಕೆ ಇರುವ ಅತಿ ಪರಿಣಾಮಕಾರಿಯಾದ ಚಿಕಿತ್ಸೆ.

ಕುಷ್ಠ ರೋಗವೆಂಬುದು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಯಾರ ಹಂಗಿಲ್ಲದೆ ಕಾಡುವ ರೋಗ. ಇತ್ತೀಚಿನ ದಿನಗಳಲ್ಲಿ ಇದರ ಬಗ್ಗೆ ಸಾಕಷ್ಟು ಮಾಹಿತಿಗಳಿದ್ದರೂ ಸಹ ಒಮ್ಮೆ ಕುಷ್ಠ ರೋಗಿಯಾದರೆ ಆತ ಯಾರಿಗೂ ಬೇಡದಂತಾಗುತ್ತಾನೆ. ವಿಕಾರವಾದ ಅವನ ದೇಹ ಸ್ಥಿತಿಯೇ ಇದಕ್ಕೆ ಹೆಚ್ಚಿನ ಕಾರಣವಾಗಿರುತ್ತದೆ. ಅದು ಮಕ್ಕಳಿಗಾದರೆ ಅವುಗಳಿಗೆ ಶಾಲೆಗೇ ಹೋಗಲಾಗದ, ಇತರ ಮಕ್ಕಳೊಟ್ಟಿಗೆ ಆಡಲಾಗದ ಬವಣೆ. ದೊಡ್ಡವರಾದರೆ ಸಂಸಾರದ ದೋಣಿಯನ್ನು ಸಾಗಿಸಲು ಬೇಕಾದ ಕೆಲಸಕ್ಕೆ ಕುತ್ತು. ಇಂದು ಕುಷ್ಠ ರೋಗ ಸಂಪೂರ್ಣವಾಗಿ ಗುಣಮುಖವಾಗಬಲ್ಲದು ಎಂದು ಅರಿತಿದ್ದರೂ ಜನರಲ್ಲಿ ಭಯವೊಂದು ಮನೆಮಾಡಿದೆ. ಎಲ್ಲಿ ನಮ್ಮನ್ನು ಕೊಂದು ಬಿಡುತ್ತಾರೋ ಎಂಬಂತೆ ಕುಷ್ಠ ರೋಗಿಗಳನ್ನು ಕಾಣುವವರಿದ್ದಾರೆ. ಕುಷ್ಠರೋಗಿಗಳಿಗೆ ಸಿಗಬೇಕಾದ ತಕ್ಕ ಮಟ್ಟಿನ ಮೂಲಭೂತ ಸೌಕರ್ಯಗಳಾಗಲಿ, ಪ್ರೀತಿ ಸಾಂತ್ವಾನಗಳಾಗಲಿ, ಉತ್ಸಾಹ ಭರಿತ ಮಾತುಗಳಾಗಲಿ ಇತ್ತೀಚಿನ ದಿನಗಳಲ್ಲೂ ಹಲವೆಡೆ ದೊರಕದಾಗಿದೆ. ಕುಷ್ಠರೋಗವು ಔಷಧಿಗಳಿಂದ ಸಂಪೂರ್ಣವಾಗಿ ಗುಣಮುಖಗೊಂಡರೂ ಒಮ್ಮೆ ಜರ್ಜರಿತವಾದ ದೇಹ ಹಿಂದಿನ ಕಳೆಯನ್ನು ಪಡೆಯದು. ಹಚ್ಚೆ ಹೊತ್ತಿದಂತಹ ಕಲೆಗಳ ಕುರುಹುಗಳನ್ನು ಹೊತ್ತು ಇವರುಗಳು ಹೋದಡೆಯಲ್ಲ ನೋಡುಗರಿಗೆ ವಸ್ತುಸಂಗ್ರಹಾಲಯದ ಪ್ರದರ್ಶನದ ವಸ್ತುಗಳಾಗಿ ಬಿಡುತ್ತಾರೆ. ಜೀವನವಿಡಿ. ತಾನು ಮಾಡದ ತಪ್ಪಿಗೆ ಬಲಿಯಾಗಿ ನರಳುತ್ತಾರೆ. ಜೀವನವಿಡಿ!

ಈ ನಿಟ್ಟಿನಲ್ಲಿ ನಮ್ಮೆಲ್ಲರ ನಡುವೆಯೇ ಬಂದು, ಕುಷ್ಠ ರೋಗಿಗಳ ಶತ್ರುಷೆಯನ್ನು ಮಾಡಿ, ಇವರಿಗಾಗೇ ಹಲವಾರು ಸಂಸ್ಥೆಗಳನ್ನು ನಿರ್ಮಿಸಿ, ಇವರ ಒಳಿತಿಗೆ ದಾರಿ ತೋರಿಕೊಟ್ಟ ಮಹಾತ್ಮ ಗಾಂಧೀಜಿ, ಮದರ್ ಥೆರೆಸಾ ಹಾಗು ಬಾಬಾ ಆಮ್ಟೆಯವರಂತಹ ಹಲವರ ಕಾರ್ಯ ಬಹಳ ಮಹತ್ತರವಾದುದು. ಮಹಾತ್ಮ ಗಾಂಧೀಜಿಯವರು ಕುಷ್ಠ ರೋಗದ ವಿರುದ್ಧ, ಕುಷ್ಠರೋಗಿಗಳ ಪಾಲನೆಯಲ್ಲಿ ತೋರುವ ತಾರತಮ್ಯದ ವಿರುದ್ಧ ಸಾಕಷ್ಟು ಹೋರಾಡಿದರೆ, ಮದರ್ ತೆರೇಸಾರವರು 'ನಿರ್ಮಲ್ ಹೃದಯ್' ಹಾಗು ಬಾಬಾ ಆಮ್ಟೆಯವರು 'ಆನಂದವನ' ಎಂಬ ಶುಶ್ರುಷಾ ಕೇಂದ್ರವನ್ನು ಕ್ರಮವಾಗಿ ಪಶ್ಚಿಮ ಬಂಗಾಲ ಹಾಗು ಮಹಾರಾಷ್ಟ್ರದಲ್ಲಿ ತೆರೆದು ಕುಷ್ಠರೋಗಿಗಳಿಗಾಗಿ ಶ್ರಮಿಸಿದರು.ಇದು ದೇಶದಲ್ಲಲ್ಲದೆ ವಿದೇಶಗಳಲ್ಲೂ ಹಲವಾರು ಕುಷ್ಠರೋಗ ನಿರ್ಮೂಲನ ಸಂಸ್ಥೆಗಳ ಸ್ಥಾಪನೆಗೆ ಕಾರಣವಾಯಿತು. ಈ ದಿಸೆಯಲ್ಲಿ WHO (World Health Organization) ಸಹ 2020ರ ವರೆಗೂ ಕುಷ್ಠ ರೋಗಿಗಳಿಗೆ ಔಷಧಗಳನ್ನು ಉಚಿತವಾಗಿ ಹಂಚುತ್ತಿರುವುದು ಸಹ ಶ್ಲಾಘನೀಯ ವಿಚಾರ. ಹೀಗೆ ಇನ್ನೂ ಹೆಚ್ಚು ಹೆಚ್ಚು ಸಂಸ್ಥೆಗಳು, ಸರ್ಕಾರಗಳು, ಹೆಚ್ಚಾಗಿ ನಾಗರೀಕರಾದ ನಾವುಗಳು ಕುಷ್ಠ ರೋಗಿಗಳ ಶ್ರೇಯಾಭಿವೃದ್ದಿಗೆ ನಮ್ಮ ಅಲ್ಪವನ್ನಾದರೂ ಮಾಡಬೇಕು. ಮಾನವರಾಗಿ ಮಾನವೀಯತೆಯ ತನವನ್ನು ಉಳಿಸಿಕೊಳ್ಳಬೇಕು.

ಒಂದು ಕಾಲದಲ್ಲಿ (ಸುಮಾರು ೧೫ ನೆಯ ಶತಮಾನದ ಆಸುಪಾಸಿನಲ್ಲಿ) ಯುರೋಪಿನಲ್ಲಿ ಕುಷ್ಠರೋಗ ಅತಿ ವಿಪರೀತವಾಗಿದ್ದಿತ್ತು. ಆದರೆ ಕ್ರಮೇಣ ಇದ್ದಕ್ಕಿದಂತೆ ಇದು ಕ್ಷೀಣಿಸತೊಡಗುತ್ತದೆ. ಮುಂದೊಂದು ದಿನ ಅದು ಮರೆಯಾಗಿಯೂ ಬಿಡುತ್ತದೆ. ಆದರೆ ಇದಕ್ಕೆ ಕಾರಣವೇನೆಂಬುದು ಇಂದಿಗೂ ರಹಸ್ಯದ ಅಂಚಿನಲ್ಲೆ ಉಳಿದಿದೆ. ಹೀಗೆ ಯುರೋಪಿನಲ್ಲಿ ಕುಷ್ಠ ರೋಗ ಒಮ್ಮೆಲೇ ಕಡಿಮೆಯಾದದ್ದು ಇಂದಿಗೂ ಹಲವಾರು ವಿಜ್ಞಾನಿಗಳ ತಲೆಯನ್ನು ಕೊರೆಯುತ್ತಿದೆ ಅಲ್ಲದೆ ಇದು ಇನ್ನೂ ಹೆಚ್ಚಿನ ಪರಿಣಾಮಕಾರಿಯಾದ ಚಿಕಿತ್ಸೆಯನ್ನು ಕಂಡುಹಿಡಿಯಲು ಅವಕಾಶವನ್ನೂ ಕಲ್ಪಿಸಿಕೊಟ್ಟಿದೆ. ಕುಷ್ಠ ರೋಗದಿಂದ ಬಳಲುತ್ತಿರುವ ಅದೆಷ್ಟೋ ದೇಶಗಳಿಗೆ ಇಂತಹ ಸಂಶೋಧನೆಗಳು ಅತಿ ಸಹಾಯಕಾರಿಯಾಗಬಲ್ಲದು.

ಇಂದು ಪ್ರಪಂಚದ ಒಟ್ಟು ಕುಷ್ಠರೋಗ ಪ್ರಕರಣಗಳಲ್ಲಿ ಪ್ರತಿಶತ ಅರ್ಧದಷ್ಟು ಪ್ರಕರಣಗಳು ಭಾರತದಲ್ಲೇ ಕಾಣಸಿಗುವುದು ಅತಿ ಶೋಚನೀಯ ವಿಚಾರ. 2013-14 ರ ಒಂದು ವರ್ಷದಲ್ಲೇ ಸುಮಾರು ಒಂದುವರೆ ಲಕ್ಷ ಹೊಸ ಪ್ರಕರಣಗಳು ಬೆಳಕಿದೆ ಬಂದಿವೆ! ಇಲ್ಲಿನ ಹವಾಗುಣ ಹಾಗು ಜನರಿಗೆ ಕುಷ್ಠ ರೋಗದ ಬಗ್ಗೆ ಇರುವ ಅತ್ಯಲ್ಪ ತಿಳುವಳಿಕೆಯೇ ಇದಕ್ಕೆಲ್ಲ ಹೆಚ್ಚಿನ ಕಾರಣವೆನ್ನಬಹುದು. ‘ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮದ’ (NLEP) ಮೂಲಕ ದೇಶದಲ್ಲಿ ಇಂದು ಕುಷ್ಠ ರೋಗದ ವಿರುದ್ಧ ಸಮರವನ್ನೇ ಸಾರಲಾಗಿದೆ, ಪರಿಣಾಮವಾಗಿ 1981 ರಲ್ಲಿ ದೇಶದಲ್ಲಿ 57/1೦,೦೦೦ರಷ್ಟಿದ್ದ (10,000 ಮಂದಿಯಲ್ಲಿ 57 ಜನರಿಗೆ) ಕುಷ್ಠರೋಗದ ಪ್ರಕರಣಗಳು ಇಂದು 0.6/1೦,೦೦೦ ರಷ್ಟಾಗಿದೆ. ಕರ್ನಾಟಕದಲ್ಲಿ ಇದರ ಪ್ರಮಾಣ ೦.42/1೦,೦೦೦ ರಷ್ಟಿದೆ. ಆದರೆ ಭಾರತದಂತಹ ದೊಡ್ಡ ದೇಶದಲ್ಲಿ ಇಂತಹ ಸಣ್ಣ ಅಂಕೆ-ಅಂಶಗಳೂ ಕೆಲವೊಮ್ಮೆ ಬೆಚ್ಚಿಬೀಳಿಸುವಂತಿರುತ್ತವೆ. ಹೀಗೆ ಲಕ್ಷ-ಲಕ್ಷ ಪ್ರಕರಣಗಳು ಬೆಳಕಿಗೆ ಬಂದು ಭಯವನ್ನು ಮೂಡಿಸಿದರೆ ಇನ್ನೂ ಹಲವು ಪ್ರಕರಣಗಳು ಕಾಣದೆಯೆ ದೇಶವನ್ನು ಕಾಡುತ್ತಿವೆ. ಪರಿಣಾಮ ಕಾರ್ಯಗಳು ಮತ್ತಷ್ಟು ಹೆಚ್ಚುಗೊಳ್ಳಬೇಕಾಗಿದೆ. ಕುಷ್ಠರೋಗವನ್ನು ಬುಡಸಮೇತ ಕಿತ್ತೊಗೆಯುವವರೆಗೂ ನಾವುಗಳು ಕಾರ್ಯನಿರತರಾಗಬೇಕಿದೆ. ದಶಕಗಳ ಶ್ರಮದ ಪ್ರತಿಫಲವಾಗಿ ಇಂದು ಭಾರತ ಪೋಲಿಯೋ ಮುಕ್ತ ದೇಶವಾದಂತೆ ಮುಂದೊಂದು ದಿನ ಕುಷ್ಠರೋಗ ಮುಕ್ತ ದೇಶವಾಗಿಯೂ ಬೆಳೆಯಬೇಕಿದೆ. ಮಹಾತ್ಮಗಾಂಧಿಯವರ ಸ್ಮರಣೆಯಲ್ಲಿ ಹಾಗು ಕುಷ್ಠ ರೋಗಿಗಳ ಪರವಾದ ಅವರ ಅವಿರತ ಶ್ರಮದ ಪ್ರತೀಕವಾಗಿ ಪ್ರತಿ ವರ್ಷ ಜನವರಿಯ ಕೊನೆಯ ಭಾನುವಾರವನ್ನು ವಿಶ್ವದಾದ್ಯಂತ ಕುಷ್ಠರೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಇಂದು 64 ನೇ ವರ್ಷದ ಆಚರಣೆ. ಇದು ಕೇವಲ ಕುಷ್ಠ ರೋಗಿಗಳನ್ನು ಗುರುತಿಸುವ ಹಾಗು ಅವರನ್ನು ವಿಚಾರಿಸುವ ದಿನವಾಗದೆ ಅವರುಗಳ ಶ್ರೇಯಾಭಿವೃದ್ದಿ ಹಾಗು ಕುಷ್ಠರೋಗದ ಸಂಪೂರ್ಣ ನಿರ್ಮೂಲನೆ ಮಾಡಲು ಪಣತೊಡುವ ದಿನವಾಗಿದೆ. ದೇಶದ ಪ್ರಗತಿಯ ಬಯಸುವವರು ಈ ಮೂಲಕ ಪರೋಕ್ಷವಾಗಿಯೂ ಶ್ರಮಿಸಬೇಕಿದೆ.

PC : Internet 

Thursday, January 12, 2017

ಸುದ್ದಿವಾಹಿನಿಗಳೂ, ಚರ್ಚಾಕೂಟಗಳೂ, ನಿರೂಪಕರುಗಳೂ, TRP ಅಂಕೆಗಳೂ ಹಾಗು ವೀಕ್ಷಕರುಗಳೂ ಜೊತೆಗೆ ಸಮಾಜಗಳು...!!

ಅದು ದೇಶದ ಅತಿ ಪ್ರಸಿದ್ಧ ಸುದ್ದಿವಾಹಿನಿ. ಪ್ರತಿದಿನ ಸಂಜೆ ಎಂಟು ಘಂಟೆಗೆ ಸರಿಯಾಗಿ ಒಂದಲ್ಲೊಂದು ವಿಷಯದ ಕುರಿತು ಅಲ್ಲಿ ಚರ್ಚಾಕೂಟವಿರುತ್ತದೆ. ಕರಿಕೋಟನ್ನು ಧರಿಸಿ ಕೂತಿರುವ ನಿರೂಪಕ ಮೊದಲು ಒಂದೆರೆಡು ಲೈನುಗಳನ್ನು ಸಾವಕಾಶದಿಂದ ಹೇಳಿ ಕೊನೆಗೆ ಪ್ಯಾನೆಲ್ ನ ಒಬ್ಬರನ್ನು ತಮ್ಮ ಅಭಿಪ್ರಾಯವನ್ನು ಮುಂದಿಡಲು ಹೇಳುತ್ತಾನೆ. ಆದರೆ ಅವರು ಬಾಯಿತೆರೆದು ಒಂದೆರೆಡು ವಾಕ್ಯಗಳನ್ನು ಹೇಳಿ ಮುಗಿಸುವುದರೊಳಗೆ ಅವರನ್ನು ಅಲ್ಲಿಗೇ ತಡೆದು, ಅವರಂದ ವಿಚಾರಗಳಿಗೆ ವ್ಯತಿರಿಕ್ತವಾಗಿ ತನ್ನ ಒಂದೆರೆಡು ಸೊ ಕಾಲ್ಡ್ ದುಬಾರಿ ಇಂಗ್ಲಿಷ್ ಪದಗಳನ್ನು ಸೇರಿಸಿ ಒಮ್ಮೆಲೇ ಅರಚುತ್ತಾನೆ. ಕಿರುಚುತ್ತಾನೆ. ಮಧ್ಯದಲ್ಯಾರೋ ಒಬ್ಬರು ತಮ್ಮ ವಿಚಾರವನ್ನು ಹೇಳ ಹೊರಟರೆ ಅವರನ್ನೂ ತಬ್ಬಿಬ್ಬಾಗುವಂತೆ ಅರಚಿ ಬಾಯಿ ಮುಚ್ಚಿಸುತ್ತಾನೆ. ನೋಡ ನೋಡುತ್ತಲೇ ಚರ್ಚೆ ಯಂಡಕುಡುಕರ ಅಂಗಡಿಯಂತಾಗಿ ಬಿಡುತ್ತದೆ. ಹೀಗೆ ಸುಮಾರು ಒಂದು ಘಂಟೆಗಳ ಕಾಲ ನೆಡೆಯುವ ಈ ಚರ್ಚಾ ಕೂಟ ಅಥವಾ ಕಿತ್ತಾಟ, ಆ ನಿರೂಪಕ ನ ವಿಚಾರಧಾರೆಯ ಹಿನ್ನುಡಿಗಳೊಂದಿಗೇ ಮುಕ್ತಾಯಗೊಳ್ಳುತ್ತದೆ! ನೋಡುಗ ಇದು ಚರ್ಚಾ ಕೂಟವೊ, ಊರ ಸಂತೆಯೋ ಅಥವಾ ಹನಿ ಸಿಂಗ್ ನ ರ್ಯಾಪ್ ಪದ್ಯವೋ ಎಂಬ ಗೊಂದಲದಲ್ಲಿ ಮುಳುಗುತ್ತಾನೆ. ಸ್ವಲ್ಪ ಕಾಲ ಏಕಾಂತದ ಮೊರೆ ಹೋಗುತ್ತಾನೆ.



ಅದೊಂದು ಕಾಲವಿತ್ತು. ಅಲ್ಲಿ ಬರುತ್ತಿದ್ದದ್ದು ಒಂದೇ ಚಾನಲ್ಲು. ಸಂಜೆ ಟಿವಿಯ ಮುಂದೆ ಮಕ್ಕಳು ಕಾಣೆಯಾಗಿವೆ ಅಂದುಕೊಂಡರೆ ಅದು ಬಹುಪಾಲು ವಾರ್ತೆಗಳ ಸಮಯ. ಹದಿನೈದು ನಿಮಿಷದ ಅಥವಾ ಅರ್ಧ ತಾಸಿನ ಆ ಸುದ್ದಿ ಸಮಾಚಾರಗಳು ಆದಷ್ಟು ವಿಷಯಗಳನ್ನು ಸಂಕ್ಷಿಪ್ತವಾಗಿ, ಎಥಾವತ್ತಾಗಿ ಬಿತ್ತರಿಸುತ್ತಿದ್ದವು. ಒಮ್ಮೆ ವಾರ್ತೆಗಳನ್ನು ನೋಡಿದರೆ ನೋಡುಗನಿಗೆ ಮತ್ತೆಲ್ಲೋ ಅದರ ಆಧಾರವನು ಹುಡುಕುವ ಅವಶ್ಯಕತೆಯಿರಲಿಲ್ಲ. ದಿನಪತ್ರಿಕೆಗಳನ್ನು ಒಂದು ಪಕ್ಷ ಓದದೇ ಇದ್ದರೂ ಪರವಾಗಿಲ್ಲ, ಆದರೆ ದೂರದರ್ಶನದ ವಾರ್ತೆಗಳನ್ನು ಮಾತ್ರ ತಪ್ಪದೆ ನೋಡಬೇಕು. ಇಲ್ಲವಾದರೆ ದಿನವೇ ಅಪೂರ್ಣವಾದಂತಿತ್ತು ಅಂದಿನ ನೋಡುಗನಿಗೆ.

ನಂತರ ಬಂದ ಕೇಬಲ್ ಹಾಗು ಸ್ಯಾಟಲೈಟ್ ಗಳ ತಂತ್ರಜ್ಞಾನಕ್ಕೆ ಮೊಬೈಲು ಹಾಗು ಇಂಟರ್ನೆಟ್ಗಳೆಂಬ ಅದ್ಬುತ ಟಚ್ ಗಳಿಂದ ಟಿವಿ ಚಾನೆಲ್ಗಳ ಸಂಖ್ಯೆ ಕಾಡ್ಗಿಚ್ಚಿನಂತೆ ಹಬ್ಬುತ್ತದೆ. (ತೊಂಬತ್ತರ ದಶಕದಲ್ಲಿ ದೇಶದಲ್ಲಿ ದೂರದರ್ಶನವು ಆರ್ಥಿಕವಾಗಿ ಸುಧಾರಣೆ ಹೊಂದಲು ಇತರ ಖಾಸಗಿ ಚಾನೆಲ್ ಗಳಿಗೆ ಅವಕಾಶ ನೀಡಿದ್ದೂ ಒಂದು ಕಾರಣವೆಂಬುದನ್ನ ಇಲ್ಲಿ ನೆನಸಿಕೊಳ್ಳಬೇಕು) ಹೀಗೆ ಒಂದರಿದೊಂದು, ರಾಜಕೀಯ ಪಕ್ಷಗಳಿಂದ, ಉದ್ಯಮಿಯಿಂದ, ನಟ-ನಟಿಯರಿಂದ, ಇನ್ನೂ ಹುಟ್ಟದೇ ಇರುವ ಮೊಮ್ಮಕ್ಕಳಿಗೆ ಆಸ್ತಿಯನ್ನು ಮಾಡಿಡುವ ಹಾಗೆ ಉಳ್ಳವರು ಟಿವಿ ಚಾನೆಲ್ ಗಳನ್ನ ಶುರುಮಾಡಿದರು. ಕಾಲಾಂತರದಲ್ಲಿ ಇವುಗಳ ನಡುವಿನ ಪೈಪೋಟಿ ಹಿಂದೆಂದೂ ಕಂಡರಿಯದಂತೆ ಹೆಚ್ಚಿತು. ಪರಿಣಾಮವಾಗಿ ಸುದ್ದಿಗಳು ಬಣ್ಣ ಮೆತ್ತಿದ ವ್ಯಾಪಾರದ ಸರಕುಗಳಾಗ ತೊಡಗಿದವು. ಆದರೆ ಈ ಸರಕುಗಳು ಊರು, ನಾಡು, ಗಡಿಗಳಿಗನುಗುಣವಾಗಿ ತಮ್ಮ ಬಣ್ಣವನ್ನು ಬದಲಿಸತೊಡಗಿದವು!

ಅಂದು ಸೀರೆಯನ್ನು ತೊಟ್ಟು, ಮುಖದ ಮೇಲೊಂದು ಅಂದದ ಬೊಟ್ಟನ್ನು ಇಟ್ಟು, ವಾರ್ತೆಗಳನ್ನು ಓದುತ್ತಿರುವವರ ಜಾಗದಲ್ಲಿ ಇಂದು, ಯಾವುದೊ ಫ್ಯಾಷನ್ ಷೋ ಗೆ ಹೋಗುವ ಹಾದಿಯಲ್ಲಿ ದಾರಿತಪ್ಪಿ ಕ್ಯಾಮೆರಾದ ಮುಂದೆ ಬಂದಂತೆ, ತಳುಕುತ್ತ, ಬಳುಕುತ್ತ, 'ಅ'ಕಾರಗಳಿಗೆ 'ಹ'ಕಾರವನ್ನೂ, 'ಹ'ಕಾರ ಗಳಿಗೆ 'ಅ'ಕಾರವನ್ನು ಸೇರಿಸಿ ಸುದ್ದಿಗಳು 'ಇಂಪಾಗಿ' ಕೇಳಲಿ ಎಂಬಂತೆ, ತಮ್ಮ ಪರದೆಯ ಮುಂದೆ ಬರುವ ಪದಗಳನ್ನು ಅವರುಗಳು ಎಥಾವತ್ತಾಗಿ ಓದುತ್ತಾ ಹೋದರೆ ನೋಡುಗ ಸುದ್ದಿಯನ್ನು ಕೇಳಬೇಕೋ ಅಥವಾ ಅವ(ಳ)ರನ್ನು ನೋಡಬೇಕೋ ಎಂಬ ಪೇಚಾಟದಲ್ಲಿ ಸಿಲುಕಿಕೊಳ್ಳುತ್ತಾನೆ! ಅಲ್ಲದೆ ಸುದ್ದಿಗಳು ಅದೆಷ್ಟೇ ಸೂಕ್ಷ್ಮವಾಗಿದ್ದರೂ, ಕೋಮುಗಳಲ್ಲಿ ಗಲಭೆಯನ್ನು ಹೊತ್ತಿಸುವಂತಿದ್ದರೂ, 'ದಿ ನೇಷನ್ ವಾಂಟ್ಸ್ ಟು ನೋ' ಎಂದು ಅರಚಿ, ಮುಂದೊದಗುವ ಪರಿಣಾಮಗಳ ಬಗ್ಗೆ ಕ್ಯಾರೇ ಎನ್ನದ ಇವರಿಗೆ ಪಕ್ವವಾಗದ ಜನಪರ ಕಾಳಜಿ ಎಷ್ಟಿದೆ ಎಂದು ತಿಳಿಯುತ್ತದೆ. ಒಂದು ಚರ್ಚೆ ಎಂದರೆ ಪ್ರತಿಯೊಬ್ಬ ಪ್ಯಾನಾಲಿಸ್ಟಿಗೂ ಸಮಾನ ಅವಕಾಶವನ್ನು ಕೊಟ್ಟು, ಅವರ ವಿಚಾರಧಾರೆಯನ್ನು ಸಾಮಾನ್ಯನಿಗೂ ತಿಳಿಯುವಂತೆ ಹೇಳಬೇಕು. ಆದರೆ ಇಂದು ನಾನೇ ದೊರೆ ಎಂಬಂತೆ ಪ್ಯಾನಾಲಿಸ್ಟ್ ಗಳೇ ತಬ್ಬಿಬ್ಬಾಗುವಂತ ದುಬಾರಿ ಇಂಗ್ಲಿಷ್ ಪದಗಳನ್ನು ಬಳಸಿ ಮನೆಯೊಳಗಿನ ಹುಲಿಯಂತೆ ಅರಚಿ, ನಟಿಸಿದರೆ ಏನು ಬಂತು ಸ್ವಾಮಿ? ಅಷ್ಟಾಗ್ಯೂ ತನ್ನ ನಿಲುವನ್ನೇ ಮುಂದಿಡುವುದೇ ಅಂತಿಮ ಗುರಿಯಾದರೆ ಅದು ಚರ್ಚಾಕೂಟಕ್ಕೆ ಅವಮಾನ ಮೆತ್ತಿದಂತಾಗುವುದಿಲ್ಲವೇ? ನಿರೂಪಕ ಗಳೇ ತಮ್ಮ ವಿಚಾರಗಳು ಸರಿ ಎಂದು ತೋರ್ಪಡಿಸುವುದಾದರೆ ಅದಕ್ಕೆ ಚರ್ಚಾಕೂಟವೇ ಏತಕ್ಕೆ ಬೇಕು? ಹೀಗೆ ಕೇವಲ ತೋರ್ಪಡಿಕೆಯೇ ಹೆಚ್ಚಾಗಿಸಿ ನೋಡುಗನ ಸಾಮನ್ಯ ಅರಿವಿಗೆ ಬಾರದಂತಾಗಿವೆ ಇಂದಿನ ಹೆಚ್ಚಿನ ಸುದ್ದಿ ವಾಹಿನಿಗಳು.

ಇಂದು ನಮ್ಮ ದೇಶವೊಂದರಲ್ಲೇ ಸುಮಾರು ಒಂಬೈನೂರು ಟಿವಿ ಚಾನೆಲ್ ಗಳಿವೆ. ಅಂದರೆ ವೀಕ್ಷಕ ಪ್ರತಿ ಎರಡು ನಿಮಿಷಕೊಂದರಂತೆ ಒಂದೊಂದು ಚಾನೆಲ್ ಗಳನ್ನು ಬದಲಿಸುತ್ತಾ ದಿನಪೂರ್ತಿ ನೋಡಿದರೂ ಮಿಕ್ಕಿ ಉಳಿಯುವಷ್ಟು ಚಾನೆಲ್ ಗಳು! ಇಷ್ಟು ದೊಡ್ಡ ಚಾನೆಲ್ ಗಳ ಸಾಗರದಲ್ಲಿ ಪ್ರತಿಯೊಂದು ಚಾನೆಲ್ಗಳು ಪೈಪೋಟಿ ಗೆ ಬಿದ್ದು ನಾ ಮುಂದು, ತಾ ಮುಂದು ಎನ್ನುತಾ ಸುದ್ದಿಯನ್ನು ತಿರುಚಿ, ಮುರುಚಿ, 'ಅಳಿಯ ಅಲ್ಲ, ಮಗಳ ಗಂಡನಂತೆ' ಮಾಡಿ, ಸಿಕ್ಕಿದ್ದನ್ನೆಲ್ಲ ಹಾಗೆಯೇ ವಾಕರಿಸಿ, ಗಬ್ಬೆಬ್ಬಿಸಿ, ಕಿತ್ತಾಡಿಸಿ, ಕೊನೆಗೆ TRP ಎಂಬುವ ಮಹಾ ಅಣೆಕಟ್ಟೆಯ ಮಟ್ಟ ಎಷ್ಟಿದೆ ಎಂದು ಪಿಳಿ-ಪಿಳಿ ಕಣ್ಣನ್ನು ಬಿಟ್ಟು ನೋಡುವುದು ಸಾಮನ್ಯದ ಸಂಗತಿ. ಪ್ರತಿಶತ 80 ರಷ್ಟು ಹಳ್ಳಿಗಳಿರುವ ಒಂದು ದೇಶದಲ್ಲಿ, ಅಲ್ಪ ಸಮಯವನ್ನಷ್ಟೇ ವಾರ್ತೆಗಳನ್ನು ನೋಡಲು ವ್ಯಹಿಸಬಹುದಾದ ಸಾಮನ್ಯ ಜನಗಳ ಮುಂದೆ, ಇಷ್ಟೆಲ್ಲಾ ಸರ್ಕಸ್ ಗಳ ತೋರ್ಪಡಿಕೆಗೆ ಈ TRP ಎಂಬುವ ನಶೆಯೇ ಹೆಚ್ಚಾಗಿ ಕಾರಣವಾಗಿರುತ್ತದೆ. TRP (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಅಂದರೆ ದೃಶ್ಯಮಾಧ್ಯಮದ ಒಂದು ಕಾರ್ಯಕ್ರಮವನ್ನು ವೀಕ್ಷಿಸುವ ಒಟ್ಟು ಜನರ ಸಂಖ್ಯೆಯನ್ನು ನಿರ್ಧರಿಸುವ ವಿಧಾನ. ಇದಕ್ಕಾಗಿ ಎಲೆಕ್ಟ್ರಾನಿಕ್ಸ್ ಸಾಧನವೊಂದನ್ನು ಪ್ರದೇಶಗಳಿಗನುಗುಣವಾಗಿ ಹಲವಾರು ಮನೆಗಳಲ್ಲಿ ಅಳವಡಿಸಲಾಗಿರುತ್ತದೆ. ಇವುಗಳ ಮೂಲಕ ಆ ಮನೆಯಲ್ಲಿ ಯಾವ ಕಾರ್ಯಕ್ರಮವನ್ನು ಎಷ್ಟು ಬಾರಿಗೆ, ಯಾವ ಪ್ರಮಾಣದಲ್ಲಿ ವೀಕ್ಷಿಸಲಾಗುತ್ತದೆ ಎಂದು ಅಂದಾಜಿಸಲಾಗುತ್ತದೆ. ಹೀಗೆ ಹಲವಾರು ಪ್ರದೇಶಗಳ ಸರಾಸರಿ ಅನುಪಾತದ ಮೇಲೆ ಒಂದು ಕಾರ್ಯಕ್ರಮದ TRP ನಿಗದಿತವಾಗುತ್ತದೆ. ಒಟ್ಟಾರೆ, ಹೆಚ್ಚಿನ TRP ಸಿಗಲು ಹೆಚ್ಚಿನ ವೀಕ್ಷಣೆ ಅಗತ್ಯ. ಹೆಚ್ಚಿನ ವೀಕ್ಷಣೆಗೆ ಹೆಚ್ಚಿನ ವೀಕ್ಷಕರು ಹಾಗಾಗಿ ಹೆಚ್ಚಿನ ವೀಕ್ಷಕರ ಸೆಳೆಯುವಿಕೆಯೇ ಕೋಟಿ ಸುರಿದು ಕಟ್ಟುವ ಅಷ್ಟೂ ಟಿವಿ ಚಾನೆಲ್ ಗಳ ಬಾಗಶಃ ಗುರಿಯಾಗಿರುತ್ತದೆ.

ಹಾಗಾದರೆ TRP ಎಂಬುದರ ಅವಶ್ಯಕತೆ ನಿಜವಾಗಿಯೂ ನಮಗೆ ಎಷ್ಟರ ಮಟ್ಟಿಗಿದೆ? TRP ಎಂಬೊಂದರ ಅಗೋಚರ ಅಂಖ್ಯೆಯ ಸ್ಪರ್ಧೆಗೆ ಬೀಳುವ ಒಂದೇ ಕಾರಣಕ್ಕೆ ಇಂದು ಹೆಚ್ಚಾಗಿ ವಿಷಯಗಳು ಮಾರ್ಪಾಡಾಗುತ್ತಿವೆ. ಸುದ್ದಿ ವಾಚಕರು ಕ್ಯಾಮೆರಾದ ಮುಂದೆ ನಟರಾಗಿ, ಅಧಿಕಾರಿಗಳಾಗಿ, ನ್ಯಾಯಾಧೀಶರೂ ಆಗುತ್ತಿದ್ದಾರೆ! ಒಂದು ಪಕ್ಷ TRP ಎಂಬುದರ ಕಲ್ಪನೆಯನ್ನೇ ಈ ವ್ಯವಸ್ಥೆಯಿಂದ ತೆಗೆದೊಗೆದರೆ ಚಾನೆಲ್ ಗಳು ತೆಪ್ಪಗೆ ನೈತಿಕತೆಯ ಚೌಕಟ್ಟಿನ ಒಳಗೆ ತಮ್ಮ ಕಾರ್ಯವನ್ನು ನಿರ್ವಹಿಸಬಹುದೆ? ತಾನು ಇನ್ನೊಬ್ಬನಿಗಿಂತ ಹಿಂದಿದ್ದೇನೋ, ಮುಂದಿರುವೆನೋ ಎಂಬುದನ್ನು ಅರಿಯಲೇ ಸಾಧ್ಯವಾಗದಿದ್ದರೆ ಸುದ್ದಿಗಳು ಸರಕಾಗುವುದನ್ನು ತಪ್ಪಿಸಬಹುದಲ್ಲವೇ? ಅಷ್ಟಾಗ್ಯೂ ಭಾರತದಂತ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ನೋಡುಗ TRPಯ ಆಧಾರದ ಮೇಲೆ ಯಾವ ಸುದ್ದಿ ಸಮಾಚಾರಗಳನ್ನು ನೋಡಿಯಾನು? ವಿಷಯಗಳು ಒಳ್ಳೆಯದಾಗಿದ್ದರೆ ನೋಡುಗ ಎಂದಿಗೂ ಒಲ್ಲೆ ಎಂದಾನು.

ಆದ ಮಾತ್ರಕ್ಕೆ ದೃಶ್ಯ ಮಾಧ್ಯಮಗಳ ಕಾರ್ಯ ಎಲ್ಲ ಬಗೆಯಲ್ಲೂ ಘಾತಕವಾಗಿದೆ ಹಾಗು ಕೇವಲ TRP ಗಾಗಿಯೇ ಇವೆ ಎಂದು ಹೇಳಲಾಗುವುದಿಲ್ಲ. ದೇಶದ ಅತಿ ಪ್ರಭಾವಿ ವ್ಯಕ್ತಿಗಳಿಂದ ಹಿಡಿದು ಒಬ್ಬ ಸಾಮನ್ಯನನ್ನೂ ಒಂದೇ ದೃಷ್ಟಿಯಿಂದ ನೋಡುವ ಮಾಧ್ಯಮಗಳೂ ಇಂದು ಸಾಕಷ್ಟಿವೆ. ಆದರೆ ಸೀದಾ-ಸಾದಾ ಸುದ್ದಿಗಳಿಗಿಂತ ಕೇವಲ ರಂಜನೀಯ ಸುದ್ದಿಗಳನ್ನೇ ಇಷ್ಟ ಪಟ್ಟು ನೋಡುವ ವೀಕ್ಷಕರಿಗೆ ಇಂತಹ ಮಾಧ್ಯಮಗಳು ರಸದೌತಣವನ್ನು ನೀಡಲಾಗುತ್ತಿಲ್ಲ. ಪರಿಣಾಮವಾಗಿ ಮುಂದೊಂದು ದಿನ ಇವುಗಳು ಮರೆಯಾಗಲ್ಪಡುತ್ತಿರುವುದು ಶೋಚನೀಯ ವಿಷಯ. ವಿಷಯವನ್ನು ವಿಶೇಷಣವಾಗಿಸದೆ ನೆಡೆಯುತ್ತಿರುವ ದೂರದರ್ಶನದ ನೋಡುಗರು ಇಂದು ಎಷ್ಟಿದ್ದಾರೆ ಹೇಳಿ?

ದೃಶ್ಯ ಮಾಧ್ಯಮಗಳ ಮೂಲಕ ಜನರನ್ನು ತಲುಪುವ ವಿಚಾರಗಳು ಪಕ್ಷಾತೀತವಾಗಿರದೆ ವಿಚಾರಪೂರಿತವಾಗಿರಬೇಕು. ದಿನವೆಲ್ಲ ಯಾರೋ ಒಬ್ಬರು ಅನ್ನುವ ಬಾಯಿಮಾತಿನ ವಿಚಾರವನ್ನೇ ನಿಜವೆಂದು ನಂಬುವ ಸಾಮನ್ಯ ಜನರ ಆಧಾರ ಇತ್ತೀಚೆಗೆ ಹೆಚ್ಚಾಗಿ ಟಿವಿ ಚಾನೆಲ್ ಗಳೇ ಆಗಿರುತ್ತದೆ. ಇವುಗಳಲ್ಲಿ ಬರುವ ವಿಚಾರಗಳ ಸತ್ಯಾಸತ್ಯತೆಯನ್ನು ಅರಿಯಲು ಬೇರ್ಯಾವ ಮಾರ್ಗವೂ ಹೆಚ್ಚಾಗಿ ಸಾಮಾನ್ಯನಿಗೆ ಇರುವುದಿಲ್ಲ. ಅದೇನೇ ಇದ್ದರೂ ಪುಸ್ತಕವನ್ನು ಎದೆಗವುಚಿಕೊಂಡು ಬಾಯಿಪಾಠ ಮಾಡಿ ಪರೀಕ್ಷೆಯಲ್ಲಿ ಉತೀರ್ಣರಾಗಲು ಬಯಸುವ ವಿದ್ಯಾರ್ಥಿಗಳಂತೆ. ಇಂದು ಸುದ್ದಿವಾಹಿನಿಗಳೆಂಬ ಪುಸ್ತಕಗಳ ಶುದ್ದಿ ಕಾರ್ಯ ಶುರುವಾಗಬೇಕಿದೆ. ನೋಡುಗನನನ್ನು ಕೇವಲ ಆಸಕ್ತದಾಯಕನಾಗಿ ಮಾಡುವುದಲ್ಲದೆ ವಿಚಾರಭರಿತನಾಗೂ ಮಾಡುವ ಕಾರ್ಯ ಇಂದು ಸುದ್ದಿ ವಾಹಿನಿಗಳಿಂದ ಆಗಬೇಕಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಅಭಿವೃದ್ಧಿ ಹೊಂದಿದ ಆರೋಗ್ಯಕರ ಚಿತ್ತಗಳ ಅವಶ್ಯಕತೆ ಹೆಚ್ಚಿದೆ. ಅದಕ್ಕೆ ಪೂರಕವಾಗಿ ನಮ್ಮ ಮಾಧ್ಯಮಗಳು ಕೆಲಸಮಾಡಬೇಕಿದೆ. ಪಾರದರ್ಶಕ ಪ್ರಸಾರದ ಮುಖೇನ ಸಮಾಜದ ಅಭ್ಯುದಯವೂ ಇದರಿಂದ ಸಾರ್ಥಕವಾಗಬೇಕಿದೆ.

Sunday, January 8, 2017

ಡಿಯರ್ ಮಾಹೀ, ವೀ ವಿಲ್ ಮಿಸ್ ಯು....!

ಏಕದಿನ ವಿಶ್ವಕಪ್ 2007.

ಟೀಮ್ ಇಂಡಿಯ 1992 ರ ನಂತರ ಮೊದಲ ಬಾರಿಗೆ ಮೊದಲ ಸುತ್ತಿನಲ್ಲೇ ವಿಶ್ವಕಪ್ ಸರಣಿಯೊಂದರಿಂದ ಹೊರಬಿದ್ದಿತ್ತು. ಆಟಗಾರರ ವಿರುದ್ದ ದೇಶದಾದ್ಯಂತ ಅಸಮದಾನದ ಕಾವು ಸಹಜವವಾಗಿಯೇ ವ್ಯಕ್ತವಾಗಿತ್ತು. ಅದಾಗಲೇ ತಂಡದ ಕೋಚ್ ಗ್ರೆಗ್ ಚಾಪೆಲ್ ವಿರುದ್ದ ತಂಡದಲ್ಲಿ ಅಸಮದಾನದ ದ್ವನಿ ಭುಗಿಲೆದ್ದಿತ್ತು. ಅಷ್ಟರಲ್ಲಾಗಲೇ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಚುಟುಕು ಓವರ್ಗಳ ಟ್ವೆಂಟಿ-ಟ್ವೆಂಟಿ ವಿಶ್ವಕಪ್ ಶುರುವಾಗುವುದರಲ್ಲಿತ್ತು. ಈ ವಿನೂತನ ಸರಣಿಗೆ ಭಾರತ ಅರ್ಹತೆಯನ್ನೂ ಪಡೆದಿತ್ತು. ತಂಡದ ಹಿರಿಯ ಆಟಗಾರರೂ ಅಂದು ಈ ಚುಟುಕು ಓವರ್ಗಳ ಪಂದ್ಯದಿಂದ ತಮ್ಮನ್ನು ಹೊರಗುಳಿಸಿಕೊಂಡರು. ಯುವ ಆಟಗಾರರ ಹೊಸದೊಂದು ತಂಡವನ್ನು ಕಟ್ಟಬೇಕಾಗಿತ್ತು. ವಿಭಿನ್ನ ಮಾದರಿಯ ಈ ಸರಣಿ ಎಲ್ಲರಲ್ಲೂ ಕೂತುಹಲವನ್ನು ಕೆರಳಿಸಿದರೆ, ಆಟಗಾರರಿಗೆ ತಮ್ಮ ಏಕದಿನ ವಿಶ್ವಕಪ್ ನ ಸೋಲಿನ ಕರಿ ಛಾಯೆ ಇನ್ನೂ ದಟ್ಟವಾಗಬಹುದೆಂಬ ಭಯವನ್ನು ಮನೆಮಾಡಿತ್ತು. ತಂಡದ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ, ವಿಮರ್ಶಕರ ಕುಹಕ ನುಡಿಗಳಿಗೆ, ಮಾಧ್ಯಮಗಳ ಬೇಜಾವಾಬ್ದಾರಿ ಹೇಳಿಕೆಗಳಿಗೆ ಅಲ್ಲದೆ ಹಿಂದಿನ ಸರಣಿಗಳ ಸೋಲಿನ ಮುಖಭಂಗಗಳಿಗೂ ದಿಟ್ಟ ಉತ್ತರವನ್ನು ಕೊಡಬೇಕಿತ್ತು. ಚೊಚ್ಚಲ ಟ್ವೆಂಟಿ-ಟ್ವೆಂಟಿ ವಿಶ್ವ ಕಪ್ ಗೆ ಭಾರತ ತಂಡದ ಒಬ್ಬ ಸಮರ್ಥ ನಾಯಕನ ಅರಸುವಿಕೆ ಶುರುವಾಗಿತ್ತು.

ಇಂದು ಧೋನಿ, ಅವನ ಆರಂಭಿಕ ಜೀವನ, ದಾಂಪತ್ಯ ಜೀವನ, ಅಂಕಿ ಅಂಶಗಳು ಎಲ್ಲವನ್ನು ಬಿಟ್ಟು ಕೇವಲ ಅವನ ನಾಯಕತ್ವದ ಬಗ್ಗೆ ಮಾತನಾಡೋಣ. ಅಷ್ಟಾಗ್ಯೂ ಅವನ ಜೀವನದ ಬಗ್ಗೆ ತಿಳಿಯಬೇಕೆನಿಸಿದರೆ ಒಮ್ಮೆ ಆತನ ಜೀವನ ಚರಿತೆ ಆಧಾರಿತ ಇತ್ತೀಚೆಗೆ ಬಿಡುಗಡೆಗೊಂಡ ಚಿತ್ರವನ್ನು ನೋಡಿದರಾಯಿತು.

ಧೋನಿಯ ಹೆಸರನ್ನು ನಾಯಕನ ಸ್ಥಾನಕ್ಕೆ ಸೂಚಿಸಿದ ಶ್ರೇಯ ಸಚಿನ್ ಹಾಗು ದ್ರಾವಿಡ್ ರಿಗೆ ಸೇರಬೇಕು. ನಾಯಕರಾಗಿ ನಾಯಕನನ್ನು ತಂಡದ ಒಬ್ಬ ಸಾಮಾನ್ಯ ಆಟಗಾರನಲ್ಲಿ ಕಾಣುವುದೂ ಅಷ್ಟು ಸುಲಭದ ಕೆಲಸವಲ್ಲ. ಅಂತೂ ಚೊಚ್ಚಲ ಟ್ವೆಂಟಿ-ಟ್ವೆಂಟಿ ವಿಶ್ವಕಪ್ನ ನಾಯಕನಾಗಿ ಧೋನಿ ಕಣಕ್ಕಿಳಿಯುತ್ತಾನೆ.ಕೇವಲ ಹೊಡಿ-ಬಡಿ ಆಟಕ್ಕೆ ಹೆಸರಾಗಿದ್ದ ಧೋನಿ ನಾಯಕನಾಗಿ ತಂಡವನ್ನು ಹೇಗೆ ಮುನ್ನೆಡೆಸಬಹುದೆಂದು ದೇಶವೇ ಕಾತುರದಿಂದ ಕಾಯತೊಡಗಿತ್ತು. ಸ್ಕೋರ್ಟ್ಲ್ಯಾಂಡ್ ವಿರುದ್ದದ ಮೊದಲ ಪಂದ್ಯ ರದ್ದಾದ ಬಳಿಕ ಭಾರತದ ನಂತರದ ಎದುರಾಳಿ ಪಾಕಿಸ್ತಾನ! ವಿಶ್ವಕಪ್ ಸರಣಿಯಲ್ಲಿ ಪ್ರತಿ ಬಾರಿಯೂ ಪಾಕಿಸ್ಥಾನವನ್ನು ಭಾರತ ಸೋಲಿಸಿ ಬಗ್ಗು ಬಡಿಯುವುದೇ ಸರಣಿಯ ಒಂದು ಅದ್ಬುತ ಹೈಲೈಟ್. ಹಾಗಾಗಿ ಭಾರತ ದಶಕಗಳಿಂದ ಉಳಿಸಿಕೊಂಡು ಬಂದ ಈ ಅಮೋಘ ದಾಖಲೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಮತ್ತೊಮ್ಮೆ ಎದುರಾಗಿತ್ತು. ಧೋನಿಯ ನಾಯಕತ್ವದ ಪರೀಕ್ಷೆಗೆ ವೇದಿಕೆ ಸಜ್ಜಾಗಿತ್ತು. ಅಂದು ಮೊದಲು ಬ್ಯಾಟ್ ಬೀಸಿ 141 ರನ್ ಗಳ ಸಾಧಾರಣ ಮೊತ್ತವನ್ನು ಕಲೆಹಾಕಿದ ಭಾರತ ಪಾಕಿಸ್ತಾನದ ವಿರುದ್ಧ ಸೋಲುವುದು ಖಚಿತವೆಂಬ ಮಾತುಗಳು ಹರಡತೊಡಗಿತು. ಅದಾಗಲೇ ಧೋನಿಯ ವಿರುದ್ಧ ಸಾಲು ಸಾಲು ತೆಗಳಿಕೆಯ ಪದಗಳನ್ನು ಬರೆದು ಕಿಚಾಹಿಸುವ ವರದಿಗಳೂ ದೃಶ್ಯ ಮಾಧ್ಯಮಗಳಲ್ಲಿ ಸಿದ್ಧವಾಗತೊಡಗಿದವು. ಆದರೆ ನಂತರದ ಇಪ್ಪತ್ತು ಓವರ್ಗಳ ಬಳಿಕ ಇವರೆಲ್ಲರ ಲೆಕ್ಕಚಾರ ತಲೆಕೆಳಗಾದವು. ಧೋನಿಯ ನಾಯಕತ್ವದ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸುತ್ತಾ ವಟಗುಡುತ್ತಿದ್ದ ಅದೆಷ್ಟೋ ಬಾಯಿಗಳು ತೆಪ್ಪಗಾಗತೊಡಗಿದವು. 141 ರನ್ ಗಳನ್ನು ಕಷ್ಟಪಟ್ಟು ತಲುಪಿದ ಪಾಕಿಸ್ತಾನ ಪಂದ್ಯವನ್ನು ಟೈ ಮಾಡಿಕೊಂಡಿತು. ನಂತರ ಬಾಲ್ ಔಟ್ ನ ಮುಖೇನ ಗೆಲುವನ್ನು ನಿರ್ಧರಿಸಬೇಕಾಯಿತು. ಗೆಲ್ಲಲೇ ಬೇಕಾದ ಆ ಮಹತ್ವದ ಘಳಿಗೆಯಲ್ಲೂ ಉತ್ತಪ್ಪನಂತ ಬ್ಯಾಟ್ಸಮನ್ ಒಬ್ಬನಿಗೆ ಬೌಲ್ ಮಾಡಲು ಹೇಳಿದಾಗಲೇ ಧೋನಿಯ ವಿಭಿನ್ನ ಬಗೆಯ ಆಲೋಚನೆ ಕ್ರೀಡಾಲೋಕಕ್ಕೆ ಪರಿಚವಾಯಿತು. ಅಂತೂ ಭಾರತ ಎಂದಿನಂತೆ ಪಾಕಿಸ್ಥಾನವನ್ನು ಸೋಲಿಸಿ ಮಕಾಡೆ ಕೆಡವಿತು. ಅಲ್ಲದೆ ಸರಣಿಯುದ್ದಕ್ಕೂ ಭಾರತ ಕೇವಲ ಒಂದು ಪಂದ್ಯವನ್ನು ಸೋತದ್ದು ಬಿಟ್ಟರೆ ಉಳಿದಂತೆ ಅಷ್ಟೂ ಪಂದ್ಯಗಳನ್ನು ಗೆದ್ದು ಬೀಗಿತು. ಧೋನಿಗೆ ಈ ಸರಣಿ ಪಾಕಿಸ್ತಾನದ ವಿರುದ್ಧ ಗೆಲುವಿನಲ್ಲಿ ಶುರುವಾಗಿ ಪಾಕಿಸ್ತಾನದ ವಿರುದ್ಧವೇ ಗೆಲುವಿನಲ್ಲಿ ಕೊನೆಗೊಂಡಿತು. ಚೊಚ್ಚಲ ಟ್ವೆಂಟಿ-ಟ್ವೆಂಟಿ ವಿಶ್ವಕಪ್ ಭಾರತದ ಮುಡಿಗೇರಿತು. ಹೀಗೆ ಧೋನಿಯೆಂಬ ನಾಯಕನ ಹೆಸರು ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಟ್ಟಿತ್ತು.

ಹನ್ನೊಂದು ಜನರ ಈ ಆಟದಲ್ಲಿ ಸೋತರೂ ಅಥವಾ ಗೆದ್ದರೂ ಜನರ ಗುರಿಯಾಗುವುದು ಹೆಚ್ಚಾಗಿ ನಾಯಕನೊಬ್ಬನೇ. ಗೆದ್ದರೆ ಹೊಗಳಿ ಸೋತರೆ ಹೀನಾಯವಾಗಿ ತೆಗಳುವ ಕೋಟ್ಯಾನುಕೋಟಿ ಜನಗಳ ಮದ್ಯೆ ನಾಯಕನಾದವನು ತಂಡವನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು. ಗೆದ್ದಾಗ ಹಿರಿ ಹಿರಿ ಹಿಗ್ಗದೇ, ಸೋತಾಗ ಸಿಡುಕಿ ನಂತರ ಕುಗ್ಗದೆ ಜಾಣ್ಮೆಯಿಂದ ಹೆಜ್ಜೆಗಳನ್ನು ಹಿಡಬೇಕು. ಧೋನಿ ಈ ಎಲ್ಲ ಮಾತುಗಳಿಗೆ ಅನ್ವರ್ಥ ರೂಪವೆನ್ನಬಹುದು. ಅದು 2011 ರ ಏಕದಿನ ವಿಶ್ವಕಪ್ ಗೆದ್ದ ಘಳಿಗೆಯಾಗಲಿ ಅಥವಾ ಹೊರದೇಶಗಳಲ್ಲಿ ಟೆಸ್ಟ್ ಪಂದ್ಯಗಳ ಸರಣಿ ಸೋಲಾಗಲಿ, ಈತನ ತಾಳ್ಮೆಯ ಲಹರಿ ಸೋಲು-ಗೆಲುವಲ್ಲೂ ತಂಬೂರಿಯ ಸ್ವರದಂತೆ ಒಂದೇ ಸಮನಾಗಿರುತ್ತದೆ. ಸಿಟ್ಟು ಹೆಚ್ಚಿದಷ್ಟೂ ನಿರ್ಧಾರಗಳು ಹುಳುಕಾಗುತ್ತವೆ ಎಂಬುದನ್ನು ಕರಗತಮಾಡಿಕೊಂಡಿದ್ದ ಧೋನಿ ಆಡುವಾಗ ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾದ ಅದೆಷ್ಟೋ ಆಟಗಾರರಂತೆ ಸಿಡುಕುವುದಾಗಲಿ, ಇತರ ಆಟಗಾರರನ್ನು ಕಿಚಾಯಿಸುವುದಾಗಲಿ, ಕಿಚಾಯಿಸಿ ಜಗಳ ಕಾಯುವುದಾಗಲಿ ಮಾಡಿರುವ ಉದಾಹರಣೆಗಳಿಲ್ಲ. ಅಲ್ಲದೆ ಈತನ 'ಥಿಂಕ್ ಔಟ್ ಆಫ್ ದಿ ಬಾಕ್ಸ್' ಯೋಚನೆಗಳಿಗೆ ಹಾಗು ಅದನ್ನು ಕಾರ್ಯಗತ ಮಾಡುವ ಯೋಜನೆಗಳಿಗೆ ಯಾರೊಬ್ಬರ ಹೋಲಿಕೆಯೇ ಸಾಧ್ಯವಲ್ಲ ಎನ್ನಬಹುದು. ಅದು 2007 ರ ಟ್ವೆಂಟಿ-ಟ್ವೆಂಟಿ ವಿಶ್ವಕಪ್ ನ ಕೊನೆಯ ಓವರ್ ನ ಮಹತ್ವವನ್ನು ಅರಿತು ಜೋಗಿಂದರ್ ಶರ್ಮ ನಂತ ಅನಾನುಭವಿ ಬೌಲರ್ ಗೆ ಬೌಲ್ ಮಾಡಲು ಬಿಟ್ಟ ನಿರ್ಧಾರವಾಗಿರಬಹುದು, 2011 ವಿಶ್ವ ಕಪ್ನ ಫೈನಲ್ ನಲ್ಲಿ ದಿಢೀರ್ ಕುಸಿತವನ್ನು ಕಂಡು ಆತಂಕದ ಸ್ಥಿತಿಯಲ್ಲಿದ್ದ ತಂಡವನ್ನು ಸಂಭಾಳಿಸಲು ಆಡುವ ಕ್ರಮಾಂಕವನ್ನೇ ಬದಲಿಸಿ ತಾನೇ ಮೊದಲು ಬಂದು ಆಡಿ ಗೆಲ್ಲಿಸಿದ ಘಳಿಗೆಯಾಗಿರಬಹುದು, ಅಥವಾ ರಾಹುಲ್ ದ್ರಾವಿಡ್ ರ ನಿವೃತ್ತಿಯ ನಂತರ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾದ್ಯವಲ್ಲವೆಂದು ಹೇಳುತ್ತಿರುವಾಗ ಚೇತೇಶ್ವರ್ ಪೂಜಾರನನ್ನು ಆ ಸ್ಥಾನಕ್ಕೆ ತಂದು ಹುರಿದುಂಬಿಸಿದ ಪರಿಯಾಗಲಿ, ಅಶ್ವಿನ್ , ಜಡೇಜಾರಂತ ಆಟಗಾರರನ್ನು ಇಂದು ಕ್ರಿಕೆಟ್ ದಂತಕಥೆಗಳನ್ನಾಗಿ ಮಾಡಿದ ಬಗೆಯಾಗಲಿ, ಇನ್ನು ಹಲವು ಮಜಲುಗಳಲ್ಲಿ ಧೋನಿ ಮಹತ್ತರವಾದ ಕಾರ್ಯಗಳನ್ನು ಮಾಡಿ ದೇಶ ಕಂಡ ಅತಿ ಯಶಸ್ವೀ ನಾಯಕನಾಗಿದ್ದಾನೆ. ಅದಕ್ಕೆ ಅವನ ರಾಶಿ ರಾಶಿ ಅಂಕಿ-ಅಂಶಗಳೇ ಸಾಕ್ಷಿ. ಹೀಗೆ ಒಬ್ಬ ಮಿಂಚಿನ ವೇಗದ ವಿಕೆಟ್ ಕೀಪರ್ ನಾಗಿ, ಸುಮಾರು ಹತ್ತು ವರ್ಷಗಳ ಕಾಲ ವಿಶ್ವದ ಟಾಪ್ ಟೆನ್ ಅಗ್ರಮಾನ್ಯ ಬ್ಯಾಟ್ಸಮನ್ ಗಳಲ್ಲಿ ಒಬ್ಬನಾಗಿ, ವಿಶ್ವದ ದಿ ಗ್ರೇಟ್ ನಾಯಕರಲೊಬ್ಬರಾಗಿ, ಧೋನಿ ಇಂದು ಎಲ್ಲರ ಮನ ಗೆದ್ದಿದ್ದಾನೆ.

ಒಮ್ಮೆ ನಾಯಕನಾದರೆ ಅದು ಪಂದ್ಯದ ಮಟ್ಟಿಗೆ ಮಾತ್ರ ಸೀಮಿತವಾಗುವುದಿಲ್ಲ. ಅದು ನೆರಳಿನಂತೆ ಅವನು ಹೋದಲೆಲ್ಲಾ ಹಿಂಬಾಲಿಸುತ್ತಲೇ ಇರುತ್ತದೆ. ಆದ ಕಾರಣ ಅವನ ಪ್ರತಿಯೊಂದು ನಡೆಯಲ್ಲೂ, ಮಾತಿನಲ್ಲೂ ಅವನ ನಾಯಕತ್ವದ ಗುಣಗಳನ್ನೇ ಜನ ನೋಡಲು ಆಶಿಸುತ್ತಾರೆ. ಈ ವಿಚಾರಕ್ಕೆ ಬಂದರೆ ಧೋನಿಯದು ಒಂದು ಮಟ್ಟಿಗೆ ಪ್ರಬುದ್ಧ ನಡತೆ. ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ನ ಗೌರವ ಹುದ್ದೆಯನ್ನು ಹೊಂದಿರುವ ಧೋನಿ ತನ್ನ ಬಿಡುವಿನ ವೇಳೆಯಲ್ಲಿ ಸಾಕಷ್ಟು ಸಮಯವನ್ನು ಸೈನಾಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾನೆ. ನಿವೃತ್ತಿಯ ನಂತರ ದೇಶಕ್ಕೆ ಏನಾದರು ಮಾಡಬೇಕೆಂಬ ಈ ನಾಯಕನ ಕಾಳಜಿ ಇಂದಿನ ಹಲವು ಯುವಕರಿಗೆ ಸ್ಪೂರ್ತಿಧಾಯಕ. ಅಲ್ಲದೆ ಮಾತಿನಲ್ಲೂ ಸಹ ಎಲ್ಲಿಯೂ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ನಗೆಪಾಟಲಿಗೆ ಒಳಗಾಗಿರುವುದು ಅತಿ ವಿರಳ. 2015 ರ ಕ್ರಿಕೆಟ್ ವರ್ಲ್ಡ್ ಕಪ್ ಆಡುವಾಗ ಜನಿಸಿದ ತನ್ನ ಮಗಳ ಕುರಿತು 'ನಿಮ್ಮ ಮಗಳು ಜನಿಸಿದ ಖುಷಿಯಲ್ಲಿ ನಿಮಗೆ ಆಡಲು ಅಡಚಣೆಯಾಗುತ್ತಿಲ್ಲವೇ?' ಎಂದು ಯಾರೋ ಕೇಳಿದ ಪ್ರೆಶ್ನೆಗೆ, 'ನಾನಿಲ್ಲಿ ದೇಶದ ಕೆಲಸದಲ್ಲಿದ್ದೀನಿ, ಮೊದಲು ದೇಶ ನಂತರ ಉಳಿದದ್ದು' ಎಂಬ ನಾಯಕನ ಮಾತಿನಲ್ಲೇ ಧೋನಿಗೆ ದೇಶದ ಬಗ್ಗೆ ಅದೆಷ್ಟು ಕಾಳಜಿ ಇದೆಯಂದು ತಿಳಿಯುತ್ತದೆ.

ತಂಡಕ್ಕೆ ವಿಕೆಟ್ ಕೀಪರ್ ನ ಅವಶ್ಯಕತೆಯಿದ್ದಾಗ, ಅಗ್ರಮಾನ್ಯ ಬ್ಯಾಟ್ಸಮನ್ ಗಳೆಲ್ಲ ಉದುರಿ ತಂಡಕ್ಕೆ ಇನ್ನಿಂಗ್ಸ್ ಕಟ್ಟುವ ಅವಶ್ಯಕತೆಯಿದ್ದಾಗ, ಗೆಲ್ಲಲು 6 ಎಸೆತಕ್ಕೆ 23 ರನ್ನುಗಳು ಬೇಕಾದಾಗ ಅಥವಾ ಕಳೆಗುಂದಿದ ತಂಡಕ್ಕೆ ಒಬ್ಬ ಸ್ಪೂರ್ತಿಧಾಯಕ ನಾಯಕನ ಅವಶ್ಯಕತೆಯಿದ್ದಾಗ ಧೋನಿಯ ಹೆಸರೇ ಇಲ್ಲಿಯವರೆಗೂ ಕೇಳಿಬರುತ್ತಿತ್ತು..

ಇಂದು ಧೋನಿ ತನ್ನ ನಾಯಕನ ಸ್ಥಾನದಿಂದ ಕೆಳಗಿಳಿದ್ದಿದ್ದಾನೆ. ಮುಂದಿನ ಏಕದಿನ ವಿಶ್ವಕಪ್ಗೆ ಇನ್ನು ಕೇವಲ ಐವತ್ತರಿಂದ ಅರವತ್ತು ಏಕದಿನ ಪಂದ್ಯಗಳಿರುವಾಗ ನಾಳಿನ ದಿನಗಳ ಕಾಳಜಿಯನ್ನು ಹೊತ್ತು ಸೂಕ್ತ ಸಮಯದಲ್ಲಿ ಮುಂಬರುವ ಪೀಳಿಗೆಗೆ ನಾಯಕತ್ವದ ಸ್ಥಾನವನ್ನು ತೆರವು ಮಾಡಿರುವುದು ನಾಯಕನ ಮತ್ತೊಂದು ಲಕ್ಷಣ. ತನಗೆ ನೀಡಿದ ಎಲ್ಲಾ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಧೋನಿ ಕಳೆದ ಒಂಬತ್ತು ವರ್ಷಗಳಲ್ಲಿ ತಂಡದ ನಾಯಕನಾಗಿ ದೇಶದ ಕೀರ್ತಿಯನ್ನು ಉನ್ನತ ಮಟ್ಟಕ್ಕೆ ಹೆಚ್ಚಿಸಿದ್ದಾನೆ. ನಾಯಕನೆಂಬ ಪದಕ್ಕೆ ಒಂದು ಹೊಸ ರೂಪವನ್ನೇ ಕೊಟ್ಟಿದ್ದಾನೆ. ಇಂತಹ ಸಾರಥಿ ಮತ್ತಷ್ಟು ಪಂದ್ಯಗಳಲ್ಲಿ ಆಡಲಿ ಹಾಗು ತನ್ನ ಹೆಲಿಕ್ಯಾಪ್ಟಾರ್ ಹೊಡೆತದಿಂದ ಮಗದಷ್ಟು ಪಂದ್ಯಗಳನ್ನು ಗೆಲ್ಲಿಸಲಿ ಎಂಬುದೇ ಈತನ ಎಲ್ಲಾ ಅಭಿಮಾನಿಗಳ ಆಶಯ.