Sunday, December 8, 2019

ಸಾಧನೆಗೆ ಬೇಕಾದ ಜೀವರಸ ...

ಗಿಡದ ಎಲೆಯೊಂದಕ್ಕೆ ಅಂಟಿಕೊಂಡಿದ್ದ ಗೂಡಿನಿಂದ (cocoon) ಆಗತಾನೆ ಚಿಟ್ಟೆಯೊಂದು ಹೊರಬರಲು ಆವಣಿಸುತ್ತಿತ್ತು. ಮೊದಲ ಬಾರಿಗೆ ಜಗತ್ತನ್ನು ನೋಡುವ ತವಕದಲ್ಲೇನೋ ಎಂಬಂತೆ ಆ ಸಣ್ಣ ರಂಧ್ರದ ಮೂಲಕ ಹೊರಬಾರಲಾಗದೆ ಅದು ಹರಸಾಹಸ ಪಡುತ್ತಿದೆ. ಕತ್ತನ್ನು ಹೊರಹಾಕುವುದು, ಒಳಗೆಳೆದುಕೊಳ್ಳುವುದು ಮತ್ತೊಮ್ಮೆ ಗೂಡಿನೊಳಗೋಗಿ ಸ್ವಲ್ಪಹೊತ್ತಿನ ನಂತರ ಪುನಹಃ ತನ್ನೆಲ್ಲ ಶಕ್ತಿಯನ್ನು ಬಿಟ್ಟು ಹೊರಬರಲು ಆವಣಿಸುವುದು, ಹೀಗೆ ಅದರ ಪ್ರಯತ್ನ ಸತತವಾಗಿ ಮುಂದುವರೆದಿತ್ತು. ಒಮ್ಮೆ ಹೊರಬಂದು ತನ್ನ ರೆಕ್ಕೆಯನ್ನು ಚಾಚಿ ಎತ್ತರೆತ್ತರಕ್ಕೆ ಹಾರುತ್ತಾ ಹೂವಿಂದ ಹೂವಿಗೆ ಹೋಗಿ ಕೂತು ಮಕರಂದನ್ನು ಹೀರಿ ಸುಖಿಸುವ ಸವಿಗನಸು ಆ ಎಳೆಯ ಚಿಟ್ಟೆಗೆ. ಆದರೆ ಆ ಸಣ್ಣ ರಂಧ್ರವನ್ನು ಬೇಧಿಸಿ ಹೊರಬರಲು ಅದಕ್ಕೆ ಆಗುತ್ತಿಲ್ಲ. ಹಾಗಂತ ತನ್ನ ಸತತ ಪ್ರಯತ್ನವನ್ನೂ ಸಹ ಅದು ಬಿಡುತ್ತಿಲ್ಲ.

ಪ್ರತಿದಿನ ಅದೇ ಹಾದಿಯಲ್ಲಿ ನೆಡೆದುಕೊಂಡು ಹೋಗುತ್ತಿದ್ದ ಹುಡುಗನೊಬ್ಬ ಈ ಚಿಟ್ಟೆ ಹುಳುವಾಗಿದ್ದ ಸಮಯದಿಂದ ಎಲೆಯ ಕೆಳಗೆ ಗೂಡುಕಟ್ಟುವವರೆಗೂ ಸೂಕ್ಶ್ಮವಾಗಿ ಗಮನಿಸುತ್ತಿದ್ದ. ಇಂದು ಆ ಗೂಡಿನಲ್ಲಿ ಸಣ್ಣ ರಂಧ್ರವೊಂದು ಮೂಡಿದ್ದನ್ನು ಗಮನಿಸಿದ ಆತ ಹತ್ತಿರ ಬಂದು ನೋಡುತ್ತಾನೆ ಎಳೆಯ ಚಿಟ್ಟೆಯ ಮರಿ ತನ್ನೆಲ್ಲ ಶಕ್ತಿಯನ್ನು ಹೊರಹಾಕಿ ಆ ಪುಟ್ಟ ರಂಧ್ರದ ಮೂಲಕ ಹೊರಬರಲು ಆವಣಿಸುತ್ತಿದೆ. ಸಂತಸಗೊಂಡ ಆ ಹುಡುಗ ಚಿಟ್ಟೆ ಹೊರಬಂದು ಹಾರುವುದನ್ನೇ ಆಸೆಯ ಕಣ್ಣಿನಿಂದ ಕಾಯತೊಡಗಿದ. ನಿಮಿಷಗಳು, ಘಂಟೆಗಳು ಉರುಳಿದವು. ಚಿಟ್ಟೆ ಅದೆಷ್ಟೇ ಪ್ರಯತ್ನ ಪಟ್ಟರೂ ರಂಧ್ರದ ಮೂಲಕ ಹೊರಬರಲಾಗುತ್ತಿಲ್ಲ. ಹುಡುಗನ ಸಹನೆ ಮೀರಿತು. ಹೀಗೆ ಇನ್ನೂ ಒಂದೆರಡು ತಾಸು ಹೋದರೆ ಆಯಾಸದಿಂದಲೇ ಚಿಟ್ಟೆ ಸತ್ತು ಹೋದಿತು ಎಂದುಕೊಂಡ ಆತ ಸಣ್ಣ ಕಡ್ಡಿಯೊಂದನ್ನು ಮುರಿದು ಅದರ ತುದಿಯಿಂದ ಆ ಗೂಡನ್ನು ನಿಧಾನವಾಗಿ ಒಡೆದ. ಕೂಡಲೇ ಚಿಟ್ಟೆಯ ಮರಿ ಹೊರಬಂದಿತು. ಏಳುತ್ತಾ ಬೀಳುತ್ತಾ ಕೊನೆಗೆ ಇಂಚಿಚ್ಛೇ ಹಾರಲೂ ಪ್ರಯತ್ನಿಸಿತು. ಅದರೆ ಅದೆಷ್ಟೇ ಹೊತ್ತು ಕಾದರು ಆ ಚಿಟ್ಟೆಯ ಪೂರ್ಣ ರೆಕ್ಕೆಗಳು ಹಿಗ್ಗಲೇ ಇಲ್ಲ. ಅದೆಷ್ಟೇ ಹಾರಲು ಪ್ರಯತ್ನಿಸಿದರೂ ಚಿಟ್ಟೆ ನೆಲದ ಮೇಲೆ ದೊಪ್ಪನೇ ಬೀಳುವುದು ತಪ್ಪಲಿಲ್ಲ.

ವಿಪರ್ಯಾಸವೆಂಬಂತೆ ಆ ಚಿಟ್ಟೆ ಮುಂದೆ ಎಂದಿಗೂ ಹಾರಲು ಸಾಧ್ಯವಾಗಲಿಲ್ಲ. ಚಿಟ್ಟೆಗೆ ಸಹಾಯ ಮಾಡಲು ಹೊರಟ ಹುಡುಗನಿಗೆ ತನ್ನ ಗೂಡಿನ ರಂಧ್ರದ ಮೂಲಕ ಹೊರಬರವ ಕಷ್ಟದ ಪ್ರಕ್ರಿಯೆಯಲ್ಲೇ ಅದಕ್ಕೆ ಹಾರಲು ಬೇಕಾಗುವ ಅಮೂಲ್ಯ ಜೀವರಸ ದೇಹದಿಂದ ರೆಕ್ಕೆಗೆ ಹರಿಯುತ್ತದೆ ಎಂದು ತಿಳಿ ದಿರಲೇ ಇಲ್ಲ! ಆ ಜೀವರಸದ ವಿನ್ಹಾ ಚಿಟ್ಟೆಗಳಿಗೆ ಹಾರಲು ಸಾಧ್ಯವೇ ಇಲ್ಲ.

ಗೂಡಿನಿಂದ ಹೊರಬರಲು ಪಡುವ ಕಷ್ಟವೆ ಚಿಟ್ಟೆಗೆ ಹಾರಲು ಸಹಾಯ ಮಾಡುತ್ತದೆ ಎಂಬುದು ಎಂತಹ ಸೋಜಿಗದ ಸಂಗತಿ ನೋಡಿ. ಚಿಟ್ಟೆಯ ಮುಂದಿನ ಕನಸಿನ ದಿನಗಳಿಗೆ ಕಷ್ಟದ ಅವೊಂದು ಘಳಿಗೆ ಅನಿವಾರ್ಯ ಹಾಗು ಅಷ್ಟೇ ಅಮೂಲ್ಯ. ಮಾನವನ ಜೀವನವೂ ಇದಕ್ಕೆ ಹೊರತೆ? ಸುಖವೇ ಎಂದೆಂದಿಗೂ ಸಿಗಬೇಕೆಂದು ಬಯಸುವ ನಾವುಗಳಿಗೆ ಕಷ್ಟಗಳೂ ಸಹ ಅಷ್ಟೇ ಮಹತ್ವವನ್ನು ಪಡೆಯುತ್ತವೆ, ಕಷ್ಟ ದುಃಖಗಳಿಲ್ಲದ ಜೀವನವೂ ಅದೆಂತಹ ಜೀವನ ಎಂದನಿಸದಿರದು. ಚಿಟ್ಟೆಯ ಈ ಕತೆ ಆ ನಿಟ್ಟಿನಲ್ಲಿ ಯೋಚಿಸುವಂತೆ ನಮ್ಮನ್ನು ಪ್ರೇರೇಪಿಸಬೇಕು. ಅಲ್ಲದೆ ಮುಂದೆ ತನಗೆ ಹಾರಲಾಗದು, ತನ್ನ ಕನಸ್ಸಿನ ಮಕರಂದವನ್ನು ಹೀರಲಾಗದು ಎಂದು ಚಿಟ್ಟೆ ಕೊರಗಿತೆ, ಆತ್ಮಾರ್ಪಣೆ ಮಾಡಿಕೊಂಡಿತೇ? ಈ ಪ್ರೆಶ್ನೆಯ ಉತ್ತರವೂ ನಮ್ಮ ಜೀವನದ ಮತ್ತಷ್ಟು ಗೊಂದಲಗಳಿಗೆ ನೀತಿಪಾಠವಾಗಬಹುದು, ಅಲ್ಲವೇ?