Thursday, June 29, 2017

ಮತ್ತೊಮ್ಮೆ ಮಾಡಲಾದೀತೇ ಇಂಥದೊಂದು ಮೂವಿ...?


ವರ್ಷ 1997. ಮುಂಬೈ ನಗರದ ಬಾಡಿಗೆ ಮನೆಯೊಂದರ ಕೋಣೆಯಲ್ಲಿ ಚಿತ್ರಕಥೆಯೊಂದಕ್ಕೆ ಅಂತಿಮ ಸ್ಪರ್ಶ ದೊರೆತ್ತಿತ್ತು. ಆ ಕಥೆಯ ಜನಕ ಒಬ್ಬ ನಿರ್ದೇಶಕನೂ ಹೌದು. ನಿರ್ದೇಶಕನಾಗಿ ತಾನು ಮಾಡಿದ ಎರಡು ಚಿತ್ರಗಳ ಫಲಿತಾಂಶಕ್ಕೆ ಆತನ ಬಾಡಿಗೆ ಮನೆಯೇ ಸಾಕ್ಷಿ. ಆದರೆ ಅಂದು ಬರೆದು ಮುಗಿಸಿದ ಚಿತ್ರಕಥೆಯ ಮೇಲೆ ಎಲ್ಲಿಲ್ಲದ ವಿಶ್ವಾಸ ಆತನಿಗೆ. ಕಥೆ ಅಂದಿಗೆ ಸುಮಾರು ನೂರು ವರ್ಷಗಳ ಹಿಂದಿನ ಕಾಲದ್ದು. ಅದ್ಯಾಕೆ ತಾನು ಅಂತದೊಂದು ಚಿತ್ರಕಥೆಗೆ ಕೈ ಹಾಕಿದೆ ಎಂಬುದು ಸ್ವತಃ ಆತನಿಗೂ ತಿಳಿದಿರಕ್ಕಿಲ್ಲ. ಹಿಂದಿ ಚಿತ್ರರಂಗದ ಭವಿತವ್ಯದ ಅದ್ಭುತ ದಿನಗಳನ್ನು ವಿಶ್ವಮಟ್ಟದಲ್ಲಿ ಕಂಗೊಳಿಸಲು ಹೊರಟಿದ್ದ ಚಿತ್ರ ಅದಾಗಿದ್ದಿತು. ಗಟ್ಟಿ ಮನಸ್ಸು ಮಾಡಿ ಕೆತೆಯನ್ನು ಹೊತ್ತು ಚಿತ್ರವನ್ನು ಕಟ್ಟುವ ಕನಸಿನಲ್ಲಿ ಆತ ಮನೆಯಿಂದ ಹೊರನಡೆದ.

ಅಲ್ಲಿಂದ ಅಶುತೋಷ್ ಗೋವಾರಿಕರ್ ನ ಪಯಣ ಅಂದಿನ ರೈಸಿಂಗ್ ಸ್ಟಾರ್ ಶಾರುಖ್ ಖಾನನ ಮನೆಗೆ. ದೃಶ್ಯ ಮಾದ್ಯಮದಲ್ಲಿ ಪರದಾಡುತ್ತಿದ್ದ ಕಾಲದಿಂದಲೂ ಶಾರುಖ್ ನನ್ನು ಬಲ್ಲವನಾಗಿದ್ದರಿಂದ ತನ್ನ ಚಿತ್ರಕ್ಕೆ ಒಲ್ಲೆ ಎನ್ನನು ಎಂಬ ಆತ್ಮವಿಶ್ವಾಸದಲ್ಲಿ ಆತನ ಮನೆಯ ಕದವನ್ನು ತಟ್ಟಿದ್ದ. ನಾಯಕನ ಒಪ್ಪಿಗೆಯ ರುಜುವಾತನ್ನು ಕಾಣಲು ಒಳನಡೆದ ಆತ ಕೆಲಸಮಯದಲ್ಲೇ ಹ್ಯಾಪೆ ಮೊರೆಯನ್ನು ಹೊತ್ತು ಹೊರಬರಬೇಕಾಯಿತು. ಶಾರುಖ್ ಕಾರಣಾಂತರಗಳಿಂದ ಚಿತ್ರವನ್ನು ನಿರಾಕರಿಸಿದ್ದ. ಪಾದರಸದಂತಹ ನಟನೊಬ್ಬ ಚಿತ್ರಕ್ಕೆ ನಾಯಕನಾದರೆ ನಿರ್ಮಾಪಕರನ್ನು ಆರಾಮಾಗಿ ಸೆಳೆಯಬಹುದು ಎಂಬ ಆತನ ಲೆಕ್ಕಾಚಾರವೆಲ್ಲ ತಲೆಕೆಳಗಾಯಿತು. ಮುಂದೆ ಮತ್ತೊಬ್ಬ ನಾಯಕನ ಜೊತೆಗೆ ನಿರ್ಮಾಪಕನನ್ನೂ ಒಲಿಸಬೇಕಾದ ಅನಿವಾರ್ಯತೆ. ಶಾರುಖ್ ಅಂದು ಚಿತ್ರವನ್ನು ನಿರಾಕರಿಸಿದಲ್ಲದೆ ಆ ಪಾತ್ರಕ್ಕೆ ದಿ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ನನ್ನು ಹಾಕಿಕೊಳ್ಳಬೇಕೆಂಬ ಸಲಹೆಯನ್ನು ನೀಡುತ್ತಾನೆ. ಅಂತೆಯೇ ಆಶುತೋಷ್ ಅಂದು ಆಮಿರ್ ನ ಮನೆಯ ಮುಂದೆ ಬಂದು ನಿಲ್ಲುತ್ತಾನೆ. ಅಂದು ಹೆಚ್ಚಿನ ಜನರು ಈತನ ಚಿತ್ರಕಥೆಯನ್ನು ನಿರಾಕರಿಸಲು ಮುಖ್ಯ ಕಾರಣ ಕಥೆಯ ಕಾಲಘಟ್ಟ. ಸುಮಾರು ಶತಮಾನಗಳ ಹಿಂದೆ ನೆಡೆದಿರಬುದಾದ ಕತೆಯೆಂದು ಪ್ರಾರಂಭವಾಗುವ ಚಿತ್ರವನ್ನು ಕಂಡು ನೋಡುಗ ಚಿತ್ರದ ಆರಂಭದಲ್ಲಿಯೇ ಖಿನ್ನತೆಗೆ ಒಳಪಡಬಹುದು. ಅಲ್ಲದೆ ಚಿತ್ರದ ಸಮಯ ಮೂರು ತಾಸಿಗೂ ಮಿಗಿಲಾಗುವ ಸಂಭವವಿತ್ತು. ಕಥೆಯ ಸಾರಾಂಶ ಅದೆಷ್ಟೇ ಅರ್ಥಪೂರ್ಣವಾಗಿದ್ದರೂ, ಮೇನ್ ಸ್ಟ್ರೀಮ್ ಚಿತ್ರಗಳ ಹೋಲಿಕೆಗೆ ಅದೆಷ್ಟೇ ಭಿನ್ನವಾಗಿದ್ದರೂ ಅದನ್ನು ಕೇಳಿ ಒಪ್ಪಿಕೊಳ್ಳುವ ನಟ ಹಾಗು ನಿರ್ಮಾಪಕ ಅಷ್ಟೇ ಸೃಜನಶೀಲನಾಗಿರಬೇಕು. ಆಗ ಮಾತ್ರ ಆ ಚಿತ್ರ ಸಟ್ಟೇರಲ್ಪಡುತಿತ್ತು. ಆದ ಕಾರಣದಿಂದಲೇ ಏನೋ ಆಮಿರ್ ಅಂದು ಚಿತ್ರವನ್ನು ಒಪ್ಪಿಕೊಂಡಿದ್ದಲ್ಲದೆ ಆ ಚಿತ್ರದ ನಿರ್ಮಾಣಕ್ಕೂ ಸೈ ಎಂದದ್ದು.

ಚಿತ್ರದ ಅಡಿಪಾಯವೇನೋ ಭದ್ರವಾಯಿತು. ಆದರೆ ಚಿತ್ರೀಕರಣ ಸ್ಥಳ? ಎಲ್ಲೆಂದರಲ್ಲಿ ಚಿತ್ರಿಸಿ ಬಿಸಾಡಲು ಅದು ಶತಮಾನಗಳ ಹೆಳೆಯ ಬ್ರಿಟಿಷರ ಆಧಿಕಾರಶಾಹಿ ನೀತಿಯಿಂದ ಬಳಲಿದ ಕಾಲ. ಅರೆಬರೆ ಹೊದ್ದ ದೇಹಗಳು, ಬರಡಾದ ನೆಲ, ಚಚ್ಚಿ ಹೊಡೆಯುವ ಬಿಸಿಲು, ಪೊದೆ ಜಿಗ್ಗುಗಳು, ಕಲ್ಲಿನ ಗುಡ್ಡಗಳು, ಹುಲ್ಲಿನ ಗುಡಿಸಲುಗಳು ಹಾಗು ಒಂದು ಕ್ರಿಕೆಟ್ ಮೈದಾನ. ಚಿತ್ತದಲ್ಲಿ ಅರಳಿದ ಕನಸ್ಸನ್ನು ಕಣ್ಣ ಮುಂದೆ ಬಿಡಿಸಬೇಕಿತ್ತು. ಆದರೆ ಅದೆಲ್ಲಿ ಹುಡುಕುವುದು ಇಂತಹ ಒಂದು ಸ್ಥಳವನ್ನು? ಪ್ರಸ್ತುತ ದಿನಗಳಲ್ಲಾದರೆ ಅಷ್ಟೂ ಚಿತ್ರವನ್ನು ಕಂಪ್ಯೂಟರ್ನ ಪರದೆಯ ಒಳಗೇ ಶುರು ಮಾಡಿ ಅಲ್ಲಿಯೇ ಇತಿಶ್ರೀ ಹಾಡಿಬಿಡಬಹುದಿತ್ತು. ಆದರೆ ಆಶುತೋಷ್ ತಾನು ಮಾಡುತ್ತಿರುವ ಚಿತ್ರ ಯಾಂತ್ರಿಕವಾಗಿರದೆ ಇಂಚಿಚ್ಚು ನ್ಯಾಚುರಲ್ ಆಗಿ ಮೂಡಬೇಕೆಂಬ ಆಸೆಯನ್ನು ಕಟ್ಟಿಕೊಂಡವನು. ಆದ ಕಾರಣ ಒಂದು ಪಕ್ಷ ಅಂದು 'ಗ್ರೀನ್ ಸ್ಕ್ರೀನ್' ಟೆಕ್ನಾಲಜಿಯನ್ನು ಬಳಸಲು ಅವಕಾಶವಿದ್ದರೂ ಆಶುತೋಷ್ ಒಲ್ಲೆ ಎಂದಿರುತ್ತಿದ್ದ. ಆ ಮಟ್ಟಿನ ಸಹಜತೆ ತನ್ನ ಸೃಷ್ಟಿಯ ಚಿತ್ರದಲ್ಲಿ ಆತನಿಗೆ ಬೇಕಿದ್ದಿತ್ತು.

ತನ್ನ ಕಲ್ಪನಾ ಲೋಕದ ಆ ಸ್ಥಳವನ್ನು ಅರಸುತ್ತ ಹೊರಟ ಆಶುತೋಷ್ 1998 ರ ಕೊನೆಯಲ್ಲಿ ಬಂದಿಳಿದಿದ್ದು ಗುಜರಾತ್ ನ ಕುಚ್ ಜಿಲ್ಲೆಯಲ್ಲಿ. ಅಲ್ಲಿಂದ ಮುಂದೆ ಭುಜ್ ಎಂಬ ಹಳ್ಳಿಯ ಸಮೀಪ ಇಂಥದ್ದೇ ಒಂದು ಬರಡು ಜಾಗವಿದೆಯೆಂದು ತಿಳಿದು ಕೂಡಲೇ ಅಲ್ಲಿಗೆ ಧಾವಿಸಿತ್ತಾನೆ. ಅಲ್ಲಿನ ವಾತಾವರಣವೆಲ್ಲವೂ ತಾನು ಅಂದುಕೊಂಡಂತೆ ಇದ್ದಿತು. ಹಲವು ವಾರಗಳ ಅಲೆದಾಟಕ್ಕೆ ಕೊನೆಗೂ ಜಯ ಸಿಕ್ಕಿತ್ತು. ಚಿತ್ರದಲ್ಲಿನ ಚಂಪಾನೇರ್ ಹಳ್ಳಿಯೇ ಈ ಬರಡು ಜಾಗ.

ಬರಗಾಲದ ಛಾಯೆ ಇರುವ ನೆಲವೇನೋ ಧಕ್ಕಿತು ಆದರೆ ಮನೆ, ಭಾವಿ, ದೇವಾಲಯಗಳಿರುವ ಚಂಪಾನೇರ್ ನನ್ನು ಹೇಗೆ ಕಟ್ಟುವುದು? ಮರು ಯೋಚಿಸದೆ ಆಮಿರ್ ನ ಮುಂದೆ ತನ್ನ ಯೋಜನೆಯನ್ನು ಬಿಚ್ಚಿಟ್ಟ ಆಶುತೋಷ್ ತಾನು ಚಿತ್ರಕ್ಕಾಗಿ ಹಳ್ಳಿಯೊಂದನ್ನು ಕಟ್ಟಬೇಕೆಂದಿದ್ದೇನೆ ಎನ್ನುತ್ತಾನೆ! ಬೇರ್ಯಾವ ನಿರ್ಮಾಪಕನೇ ಆಗಿದ್ದರೂ ತುಸು ಉಗಿದು ಬೇರೆ ಯಾವುದಾದರೂ ಪರ್ಯಾಯ ಮಾರ್ಗವನ್ನು ಹುಡುಕಲು ಹೇಳುತ್ತಿದ್ದರೇನೋ. ಆದರೆ ಅಶುತೋಷ್ನ ಧೈರ್ಯವನ್ನು ಮೆಚ್ಚಿದ ಆಮಿರ್ ಆಗಲಿ ಎನ್ನುತ್ತಾನೆ. ಚಿತ್ರವೆಂದರೆ ಹಣ, ಹಣಕ್ಕಾಗಿಯೇ ಚಿತ್ರ ಎನಿಸಿಕೊಂಡಿರುವ ಪ್ರಸ್ತುತ ಕಾಲದಲ್ಲಿ ಹೀಗೆ ಕಲಾಭಿರುಚಿಯ ನಟರು ನಿರ್ಮಾಪಕರಾದರೆ ಯಾವುದೇ ಕಾಂಪ್ರೊಮೈಸ್ ಗಳಿಲ್ಲದೆ ಉತ್ತಮ ಚಿತ್ರಗಳನ್ನು ತೆಗೆಯಲು ನಿರ್ದೇಶಕರಿಗೆ ಸಾದ್ಯವಾಗಬಹುದು ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ. ಒಟ್ಟಿನಲ್ಲಿ 40 ರಿಂದ 50 ಡಿಗ್ರಿ ಯಷ್ಟು ಉರಿಯುವ ರಣಬಿಸಿಲಿನಲ್ಲಿ ತಿಂಗಳುಗಳ ಕಾಲ ಚಿತ್ರ ತೆಗೆಯಲು ಅಲ್ಲಿ ತಂಗಿದ್ದ ಚಿತ್ರತಂಡದವರನ್ನು ಕಂಡು ‘ಇವರಿಗೇನೋ ತಲೆ ನೆಟ್ಟಗಿಲ್ಲ’ ಎಂದು ಭುಜ್ ನ ಜನ ಮಾತಾಡಿಕೊಂಡಿರಬಹುದು. ಮೇ 1999 ರಲ್ಲಿ ಶುರುವಾದ ಚಿತ್ರೀಕರಣ ಪೂರ್ಣಗೊಳಿಸಲು ವರ್ಷಕ್ಕೂ ಮಿಗಿಲಾದ ಸಮಯ ಆ ಮರುಭೂಮಿಯಲ್ಲಿ ಬೇಕಾಗಿದೆ ಎಂದು ಮೊದಲೇ ತಿಳಿದಿದ್ದರೆ ಬಹುಷಃ ಅರ್ಧಕ್ಕಿಂತ ಹೆಚ್ಚಿನ ಸದಸ್ಯರು ಕಾಣೆಯಾಗುತ್ತಿದ್ದರೇನೋ!

ನೂರಾರು ಜನರ ತಂಡವೊಂದನ್ನು ವರ್ಷಗಳ ಕಾಲ ಸುಡುಬಿಸಿಲಿನಲ್ಲಿ ನಟಿಸಿ, ಚಿತ್ರಿಸಿ, ಕುಣಿಸಿ, ಮುನ್ನೆಡೆಸುವುದು ಸುಲಭವಾದ ಮಾತಾಗಿರಲಿಲ್ಲ. ಬಹುಷಃ ಅಲ್ಲಿಯವರೆಗೂ ಬಾಲಿವುಡ್ ನ ಬೇರ್ಯಾವ ನಿರ್ದೇಶಕನೂ ಅಂತಹದೊಂದು ಎದೆಗಾರಿಕೆಯ ನಿರ್ದೇಶನಕ್ಕೆ ಕೈ ಹಾಕುವ ಧೈರ್ಯವನ್ನು ತೋರಿರಲಿಲ್ಲ. ಅಂದಿನ ಕಾಲಕ್ಕೆ ಸುಮಾರು ಇಪ್ಪತ್ತರಿಂದ ಇಪ್ಪತೈದು ಕೋಟಿಯಷ್ಟು ಹಣವನ್ನು ಸುರಿದು, ನೋಡುಗರನ್ನು ದಿಕ್ಕುತಪ್ಪಿಸಿ ಹಣ ಪೀಕುವ ಬೇರ್ಯಾವ ಅಂಶಗಳು ಚಿತ್ರಗಳಲ್ಲಿಲ್ಲದೆ, ಕೇವಲ ಕಥೆಯನ್ನೇ ಬಂಡವಾಳವಾಗಿಸಿಕೊಂಡು ಅಷ್ಟೂ ದುಡ್ಡನ್ನು ಹಿಂಪಡೆಯುವ ಧೈರ್ಯ ಪುಳ್ಳಂಗೋವಿ ನಿರ್ದೇಶಕ ನಿರ್ಮಾಪಕರಿಗಂತೂ ಸಾಧ್ಯವೇ ಇರುತ್ತಿರಲಿಲ್ಲ. ಆದ ಕಾರಣಕ್ಕೆ ಆಶುತೋಷ್ ಇನ್ನೆಲ್ಲ ವಿಚಾರದಲ್ಲಿ ಇತರ ನಿರ್ದೇಶಕರಿಗೆ ಹೋಲಿಸಿದಾಗ ಭಿನ್ನವೆನಿಸುವುದು. ಆತನ ಕಥೆಯ ಕಾಲಘಟ್ಟ, ಅದಕ್ಕೆ ಬೇಕಾದ ತಯಾರಿ, ಚಿತ್ರೀಕರಣದ ಕೊನೆಯವರೆಗೂ ಬತ್ತದ ಸ್ಪೂರ್ತಿ, ಚಿತ್ರದಲ್ಲಿ ಮೂಡುವ ಸಮಾಜಮುಖಿ ಸಂದೇಶಗಳು ಇತ್ತೀಚಿನ ಚಿತ್ರಗಳಲಂತೂ ಸಿಗುವುದು ಬಲು ಅಪೂರ್ವ. 'ಬಾಕ್ಸ್ ಆಫೀಸ್' ಎಂಬ ಭ್ರಮೆಯಲ್ಲಿ ಈತನ ಚಿತ್ರಗಳು ಅದೆಷ್ಟೇ ಸೋತರೂ ನೋಡುಗನ ಮನಸ್ಸಿನ ಆಫೀಸಿನಲ್ಲಿ ಅಮರವಾಗಿ ಉಳಿಯುತ್ತವೆ. 'ಲಗಾನ್' ಚಿತ್ರದ ಚಿತ್ರೀಕರಣಕ್ಕೂ ಮುನ್ನ ಆಶುತೋಷ್ ನ ತಲೆಯ ತುಂಬ ಮುತ್ತಿದ್ದ ಗುಂಗುರು ಕೂದಲುಗಳು ಚಿತ್ರೀಕರಣದ ಕೊನೆಗೆ ಕಾಣೆಯಾಗಿ, ತಲೆ ಕಾದ ಬಾಣಲೆಯಾಗಿ, ವರ್ಷದ ಕೆಳಗೆ ನೋಡಿರುವವರು ಸಡನ್ನಾಗಿ ಈತನನ್ನು ಕಂಡರೆ ಯಾರೋ ಬೇರೊಬ್ಬ ವ್ಯಕ್ತಿಯೆಂದು ಅಂದುಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ಅಶುತೋಷ್ ತನ್ನನು ಚಿತ್ರಕ್ಕಾಗಿ ಸಮರ್ಪಿಸಿಕೊಂಡಿದ್ದ. ಮುನ್ನೂರು ಜನರ ತಂಡವನ್ನು ಸಂಭಾಳಿಸುವುದು ಸುಲಭದ ಮಾತಾಗಿರಲಿಲ್ಲ. ಚಿತ್ರೀಕರಣದ ಕೊನೆಯಲ್ಲಿ 'ಸ್ಲಿಪ್ ಡಿಸ್ಕ್' ತೊಂದರೆಯಿಂದ ಅತಿಯಾಗಿ ಬಳಲಿದ ಈತ ಯಾವುದೇ ಕಾರಣಕ್ಕೂ ಚಿತ್ರವನ್ನು ನಿಲ್ಲಿಸಬಾರದೆಂದು ಒಂದು ಹಾಸಿಗೆಯ ಮೇಲೆ ಮಲಗಿಕೊಂಡೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದುಂಟು!

ಸ್ವಾಭಾವಿಕವಾಗಿ ಚಿತ್ರ ಮೂಡಿಬರಬೇಕೆಂಬ ಆಸೆ ನಿರ್ದೇಶಕನದ್ದಾಗಿದ್ದರಿಂದ ದೊಡ್ಡ ಸಮಸ್ಯೆಯೊಂದು ಚಿತ್ರತಂಡಕ್ಕೆ ಉದ್ಭವಿಸಿತ್ತು. ಲಗಾನ್ ಚಿತ್ರವನ್ನು ನೋಡಿರುವವರು ಚಿತ್ರದ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಸುತ್ತಲೂ ಬೆಟ್ಟಗುಡ್ಡಗಳ ಮೇಲೆ ಕೂತು ಕೇಕೆ ಹಾಕುವ ಗುಂಪು ಗುಂಪು ಜನರನ್ನೂ ಗಮನಿಸಿರಬಹುದು. ಅಂಕಿ ಅಂಶಗಳ ಮುಖೇನ ಹೇಳುವುದಾದರೆ ಆ ಗುಂಪಿನ ಜನರ ಸಂಖ್ಯೆ ಹತ್ತು ಸಾವಿರಕ್ಕೂ ಹೆಚ್ಚು! ಕ್ರಿಕೆಟ್ ಪಂದ್ಯದ ಚಿತ್ರೀಕರಣದ ಮೊದಲು ಆಶುತೋಷ್ ಆಮಿರ್ ನ ಬಳಿಗೆ ಬಂದು ತನಗೆ ಇಷ್ಟು ಜನರ ಆವಶ್ಯಕೆತೆ ಇದೆ ಎಂದಾಗ ಈತ ಒಂದು ಕ್ಷಣ ತಬ್ಬಿಬ್ಬಾಗಿದಂತೂ ಸುಳ್ಳಲ್ಲ. ಆದರೆ, ದಿ ಪೆರ್ಫೆಕ್ಷನಿಸ್ಟ್ ನಟನಿಗೆ ತನ್ನ ನಿರ್ದೇಶಕನ ಅಳಲನ್ನು ಅರಿಯಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಆದರೆ ವಾರಗಳ ಕಾಲ ಆ ಬರಡು ಭೂಮಿಯ ಕಾದ ಸುಣ್ಣದಂತಹ ನೆಲದ ಮೇಲೆ ತಮ್ಮೆಲ್ಲ ಕೆಲಸವನ್ನು ಬಿಟ್ಟು ನಿರ್ದೇಶಕನ 'ಕಟ್, ಕಟ್' ಎಂಬ ಅರಚುವಿಕೆಯನ್ನು ಕೇಳಲು ಅದೆಷ್ಟು ಜನ ಮುಂದೆ ಬಂದಾರು? ಆದರೂ ದೃತಿಗೆಡದ ಚಿತ್ರತಂಡ ಹಗಲು ರಾತ್ರಿಯೆನ್ನದೆ ಜನರ ಅನ್ವೇಷಣೆಯಲ್ಲಿ ತೊಡಗುತ್ತದೆ. ಬಹುಷಃ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಇಷ್ಟೊಂದು ಜನರ ಒಗ್ಗೂಡಿಸುವಿಕೆ ಅದೇ ಮೊದಲೇನೋ. ಅಲ್ಲದೆ ಅಷ್ಟೂ ಜನರ ವೇಷಭೂಷಣ, ಊಟ ಉಪಚಾರ, ಸಾರಿಗೆ ವ್ಯವಸ್ಥೆ ಹುಡುಗಾಟಿಕೆಯ ವಿಷಯವಾಗಿರಲಿಲ್ಲ. ಅಂತೂ ಚಿತ್ರತಂಡ ಆ ಕಾರ್ಯದಲ್ಲೂ ಯಶಸ್ಸನ್ನು ಕಂಡಿತು.

ಇನ್ನು ಚಿತ್ರದ ಕಥೆ ಸ್ವಾತಂತ್ರ್ಯ ಪೂರ್ವ ಭಾರತದ ಬ್ರಿಟಿಷ್ ಅಧಿಕಾರಿಶಾಯಿ ಪದ್ದತಿಗೆ ವಿರುದ್ಧವಾಗಿ ಧ್ವನಿಯೆತ್ತುತ್ತಿದ್ದ ಯೋಧರ ನೆನಪನ್ನು ತರಿಸದಿರದು. ಆದರೆ ಆಗೆಲ್ಲ ಸತ್ಯಾಗ್ರಹ, ಲೂಟಿ, ಚಳುವಳಿ ಎಂಬಿತ್ಯಾದಿ ಅಂಶಗಳೇ ಧ್ವನಿಯಾಗಿದ್ದವೆ ವಿನಃ ಈ ರೀತಿ ಕ್ರಿಕೆಟ್ ಪಂದ್ಯವೊಂದರ ಮೂಲಕವಂತೂ ವ್ಯಕ್ತವಾಗುತ್ತಿರಲಿಲ್ಲ. ಕಥೆ ಅದೆಷ್ಟೇ ಕಾಲ್ಪನಿಕವಾದರೂ ದರ್ಪದ ಬ್ರಿಟಿಷ್ ಅಧಿಕಾರಿಗಳನ್ನು ಎದುರಿಸುವುದು ರೀತಿ, ಕ್ರಿಕೆಟ್ ಎಂಬ ಪದವನ್ನೇ ತಮ್ಮ ಜೀವಮಾನದಲ್ಲಿ ಕಂಡು ಕೇಳರಿಯದ ಜನರಿಗೆ ಆಡುವುದನ್ನು ಕಲಿಸುವ ಬಗೆ, ಒಬ್ಬ ನಾಯಕನಿಗಿರಬೇಕಾದ ತಂಡವನ್ನು ಕಟ್ಟುವ ಕಲೆ, ತನ್ನ ವಿರುದ್ಧ ತಮ್ಮವರೇ ವಿರುದ್ದವಾದರೂ ಬೆಂಬಿಡದ ಆತನ ಗುರಿ ಛಲ, ಹೀಗೆ ಅಸಾದ್ಯವೆಂಬೊಂದು ಅಂಶವನ್ನು ಕತೆ ಸಾಧ್ಯತೆಯ ಗಡಿಯನ್ನು ದಾಟಿಸುತ್ತದೆ. ನಿಜವಾದ ಕ್ರಿಕೆಟ್ ಪಂದ್ಯವನ್ನು ನೋಡುವುದಕ್ಕಿಂತಲೂ ಅಂದು ಪ್ರೇಕ್ಷಕ ಲಗಾನ್ ಚಿತ್ರದ ಈ ರೋಚಕ ಪಂದ್ಯವನ್ನು ಮತ್ತೊಮ್ಮೆ ಮಗದೊಮ್ಮೆ ನೋಡಲು ಇಚ್ಛಿಸುತ್ತಿದ್ದ.

ಲಗಾನ್ ಚಿತ್ರದ ಆರಂಭಿಕ ‘ರನ್ ಟೈಮ್’ ಸುಮಾರು ಏಳು ತಾಸು!! ಇಂದು ಅಷ್ಟು ಸಮಯದಲ್ಲಿ ನಮ್ಮ ನಿರ್ದೇಶಕರು ಕೊನೆ ಪಕ್ಷ ನಾಲ್ಕು ಚಿತ್ರಗಳನ್ನಾದರೂ ಮಾಡಿ ಬದಿಗಿಡಬಹುದು ಎಂಬುದು ಸೋಜಿಗದ ಸಂಗತಿ. ನಾಲ್ಕು ವರ್ಷದ, ಮುನ್ನೂರು ಜನರ ಅವಿರತ ಪರಿಶ್ರಮವನ್ನು ಮುಲಾಜಿಲ್ಲದೆ ತುಂಡುಮಾಡುವುದು (ಎಡಿಟಿಂಗ್) ನಿರ್ದೇಶಕನಿಗಂತೂ ಒಪ್ಪಲಾಗದ ಕೆಲಸ. ಅಂತೂ ಅಷ್ಟುದ್ದದ ಚಿತ್ರವನ್ನು ಕೊನೆಗೆ ಮೂರುವರೆ ತಾಸಿಗೆ ಇಳಿಸಲಾಯಿತು. ಈ ಮೂರುವರೆ ತಾಸಿನಲ್ಲಿ ಕ್ರಿಕೆಟ್ ಪಂದ್ಯವೇ ಸುಮಾರು ಒಂದೂವರೆ ತಾಸಿನಷ್ಟಿದೆ ಎಂಬುದು ಮಹತ್ವವಾದ ವಿಷಯ.

ಈ ಮದ್ಯೆ ಚಿತ್ರೀಕರಣ ಮುಗಿದು ಎಡಿಗಿಂಗ್ ಕಾರ್ಯ ನೆಡೆಯುತ್ತಿರುವಾಗಲೇ ಇತ್ತ ಕಡೆ ಗುಜರಾತ್ ನ ಕುಚ್ ಜಿಲ್ಲೆ ಅಕ್ಷರ ಸಹ ಸಾವಿನ ಸಂತೆಯಾಯಿತು. ದೇಶ ಹಿಂದೆದೂ ಕೇಳರಿಯದ ಭೂಕಂಪ ಅಂದು ಬಂದೆರೆಗಿತ್ತು. ಚಿತ್ರದ ಚಿತ್ರೀಕರಣ ಮುಗಿಯಲೆಂದೇ ಜವರಾಯ ಕಾದು ಕುಳಿತ್ತಿತ್ತೇನೋ ಎಂಬ ಊಹೆ ಚಿತ್ರತಂಡದ ಎಲ್ಲರ ಮನದಲ್ಲೂ ಅಂದು. ಶತಮಾನಗಳ ಹಿಂದಿನ ಜನಜೀವನ, ಬ್ರಿಟಿಷರ ದಬ್ಬಾಳಿಕೆ, ಮುದ್ದಾದ ಪ್ರೇಮಕಹಾನಿ ಎಲ್ಲಕಿಂತ ಮಿಗಿಲಾಗಿ ಛಲ, ಹುರುಪು ಹಾಗು ಒಗ್ಗಟ್ಟನ್ನು ನೋಡುಗನ ಮನದಲ್ಲಿ ಬಿತ್ತಿದ್ದ ಸ್ಥಳವೊಂದು ಅಂದು ಭೂಕಂಪನದ ರಭಸಕ್ಕೆ ಮೂಕ ಸಮಾಧಿಯಾಗಿ ಮಲಗಿತ್ತು.

2001 ರ ಜೂನ್ ನಲ್ಲಿ ತೆರೆಕಂಡ ಚಿತ್ರ ಭಾರತೀಯರ ರೋಮು ರೋಮುಗಳನ್ನು ನಿಮಿರಿ ನಿಲ್ಲಿಸಿತು. ಅದೊಂದು ಕಾಲ್ಪನಿಕ ಕತೆಯಾದರೂ ನೋಡುಗರಲ್ಲಿ ದೇಶಪ್ರೇಮದ ಜ್ವಾಲೆಯನ್ನು ಹುಟ್ಟಿಸಿತು. ತೆರೆಕಂಡ ಎಲ್ಲೆಡೆ ಭರ್ಜರಿ ಪ್ರದರ್ಶನವನ್ನು ಕಂಡಿತು. ಸ್ವತಃ ಚಿತ್ರತಂಡಕ್ಕೆ ಆ ಮಟ್ಟಿನ ಯಶಸ್ಸಿನ ನಿರೀಕ್ಷೆ ಇದ್ದಿರಕ್ಕಿಲ್ಲ. ಫಿಲಂಫೇರ್ ನ ಸುಮಾರು 8 ಪ್ರಶಸ್ತಿಗಳನ್ನು ಚಿತ್ರ ಗೆದ್ದದ್ದಲ್ಲದೆ, ಆಸ್ಕರ್ಗಾಗಿ ಭಾರತದಿಂದ ಆಯ್ಕೆಯಾಗಿ, ಉತ್ತಮ ಪರಭಾಷಾ ಚಿತ್ರಗಳ ಸಾಲಿನಲ್ಲಿ ನಾಮನಿರ್ದೇಶನಗೊಂಡಿತು. ಈ ರೀತಿ ನಾಮನಿರ್ದೇಶನಗೊಳ್ಳುತ್ತಿದ್ದ ಭಾರತದ ಮೂರನೇ ಸಿನಿಮಾ ಅದಾಗಿದ್ದಿತು. ಅಂದು ಲಗಾನ್ ಚಿತ್ರಕ್ಕೆ ಆಸ್ಕರ್ ನ ಪ್ರಶಸ್ತಿ ಗ್ಯಾರೆಂಟಿ ಎಂದು ಕಾದುಕುಳಿತವರಿಗೆ ಕೊನೆಗೆ ನಿರಾಸೆ ಆದದಂತೂ ಸುಳ್ಳಲ್ಲ. ಪ್ರಶಸ್ತಿ ಪಡೆಯದಿದ್ದರೂ ವಿಶ್ವದ ಮೂಲೆ ಮೂಲೆಯಿಂದ ಚಿತ್ರಕ್ಕೆ ಪ್ರಶಂಸೆಯ ಸುರಿಮಳೆಗಳು ಬರತೊಡಗಿದವು.

ಉತ್ತಮ ಕತೆಗಳ ರೆಕ್ಕೆ ಪುಕ್ಕ ಕತ್ತರಿಸಿ ಚಿತ್ರದ ಎತ್ತರವನ್ನೇ ಕುಗ್ಗಿಸುವ ಇಂದಿನ ಕಾಲದಲ್ಲಿ ಯಾವುದೇ ರಾಜಿಯಿಲ್ಲದೆ ಅಂದುಕೊಂಡಿದ್ದನ್ನು ಸಾಧಿಸಿ ತೂರಿಸಿದ ಚಿತ್ರತಂಡ ಮುಂಬಂದ ಅದೆಷ್ಟೋ ಚಿತ್ರಗಳಿಗೆ ಸ್ಫೂರ್ತಿಯಾಯಿತು.

Thursday, June 22, 2017

ಸಾಲಮನ್ನಾ...ಮಾಡುವ ಮುನ್ನ...


ವಿಷಯ ಅದಲ್ಲ. ಸಾಲ ಮನ್ನಾ ಅಂದಾಕ್ಷಣ ಹೇಗೆ, ಎಷ್ಟು, ಎಲ್ಲಿ ಎಂಬ ಪ್ರೆಶ್ನೆಗಳೇ ಹೆಚ್ಚಾಗಿ ನಮ್ಮಲ್ಲಿ ಮೂಡುತ್ತವೆ ಅಲ್ಲವೇ? ರೈತರಾದರೆ ಆಫ್-ಕೋರ್ಸ್ ಯಸ್. ರೈತನ ಕನಸ್ಸು ಮನಸಲ್ಲೂ ಸದ್ಯಕ್ಕೆ ಹರಿದಾಡುತ್ತಿರುವ ಏಕೈಕ ಪದವೆಂದರೆ ಅದು 'ಸಾಲಮನ್ನಾ'. ಆದರೆ ಈ ಪ್ರೆಶ್ನೆಗಳು ಒಂದು ವಿಧದಲ್ಲಿ ಪ್ರೆಶ್ನೆಗಳೇ ಅನಿಸಿಕೊಳ್ಳುವುದಿಲ್ಲ ಅಂದರೆ!? ಇನ್ ಫ್ಯಾಕ್ಟ್ ಇವು ಒಂತರ ಪಂದ್ಯದ ಮೊದಲೇ ಸೋಲೊಪ್ಪಿಕೊಂಡ ಮನೋಭಾವದ ಸಂಕೇತಗಳೆಂದರೂ ತಪ್ಪಾಗುವುದಿಲ್ಲ. ನಾ ಮಾಡಿದ ನಿರ್ಧಾರ ತಪ್ಪೆಂದು ಬೇರೆಯವರ ಮೇಲೆ ಗೂಬೆ ಕೂರಿಸಿ, ಇನ್ಯಾರಿಂದಲೋ ಅದಕ್ಕೊಂದು ಪರಿಹಾರವನ್ನು ಬಯಸುತ್ತ, ಕಾಯುತ್ತ, ಕೊನೆಗೆ ಹಿಂದಿನಕ್ಕಿಂತಲೂ ಮತ್ತೊಂದು ಬಾಲಿಶ ನಿರ್ಧಾರವನ್ನು ಕೈಗೊಂಡು ಇಡೀ ಸಂಸಾರವನ್ನು ನಡು ನೀರಿನಲ್ಲಿ ಕೈ ಬಿಟ್ಟು, ಯಾರೋ ಮಾಡಿಟ್ಟ ಚಟ್ಟವನ್ನು ಹತ್ತುವುದು ಯಾವ ಸೀಮೆಯ ಪುರುಷಾರ್ಥ?

ಇಂದು ಬರಡು ಭೂಮಿಯೊಂದನ್ನು ಯಾವುದೇ ಯಂತ್ರಗಳ ಸಹಾಯವಿಲ್ಲದೆ ಅಗೆದು, ಗುದ್ದಿ ಹಸಿರನ್ನು ಹೊತ್ತಿಸಿ ಸಾವಿರ ಜನರ ಹಸಿವನ್ನು ನೀಗಿಸಬಲ್ಲ ಒಂದಾದರೂ ಪೇಟೆಯ ಕಂಪನಿಗಳನ್ನು ತೋರಿಸಿ ನೋಡುವ.? ಇವುಗಳು ನೂರು ಕೋಟಿ ಸುರಿದು ಸಾವಿರ ಕೋಟಿ ಮಾಡುವ ಮನಿ ಮೈಂಡ್ಸ್ ಗಳೇ ಹೊರತು ಬಿಡಿಗಾಸು ಹಣವಿಲ್ಲದೆ ಬೆವರನ್ನು ಬಸಿದು ಹಸಿವನ್ನು ನೀಗಿಸಬಲ್ಲ ನಮ್ಮ ರೈತನೆಂಬ ನೈಸರ್ಗಿಕ ಕಂಪೆನಿಗಳಂತಲ್ಲ. ಅಂತಹ ಎದೆಗಾರಿಕೆಯ ರೈತನೆಂಬ ಶಕ್ತಿ ಇಂದು 'ಆತ್ಮಹತ್ಯೆ' ಹಾಗು 'ಸಾಲಮನ್ನಾ' ಎಂಬೆರೆಡೇ ಪದಗಳಿಗೆ ಮೀಸಲಾಗಿರುವುದೇಕೆ? ಆತ್ಮಹತ್ಯೆ ಎಂಬುದು ಜೀವನದ ಅತಿ ಸಹಜ ಸವಾಲಿಗೆ ಹೆದರಿ ಓಟಕೀಳುವಂತಹ ಮನೋಭಾವವಾದರೆ, ಸಾಲಮನ್ನಾ ಎಂಬುದು ಎಲ್ಲವೂ ಇದ್ದು ಮತ್ತೊಬ್ಬರ ಮುಂದೆ ಕೈಯೊಡ್ಡಿದಂತೆ! ಕುಂಟುತ್ತಿದ್ದ ದೇಶದ ಆರ್ಥಿಕತೆಗೇ ಬೆನ್ನೆಲುಬಾಗಿ ನಿಲ್ಲಬಲ್ಲ ತಾಕತ್ತಿದ್ದ ರೈತನೆಂಬ ಚೇತನ ಇಂದು ಸಾಲವೆಂಬ ಪುಡಿಗಾಸಿಗೆ ನಿಜವಾಗಿಯೂ ಹೆದರಬೇಕೇ? ಒಂದುಪಕ್ಷ ವಿಷಯ ಇಷ್ಟು ಸರಳವಲ್ಲ ಎಂದೇ ಇಟ್ಟುಕೊಳ್ಳೋಣ. ಸರಿ, ಸಾಲ ಎಂಬ ವಿಷಸರ್ಪವನ್ನು ಆತ ಕೆಣಕಿದ್ದಾದರೂ ಏತಕ್ಕೆ? ಗೊಬ್ಬರ ಕೊಳ್ಳಲು? ಜಮೀನಿನಲ್ಲಿ ದುಡಿಯುವ ಕಾರ್ಮಿಕರಿಗಾಗಿ? ನೀರಿಗಾಗಿ ? ಅಥವಾ ತನ್ನ ಸ್ವಂತ ಭೋಗಕ್ಕಾಗಿ? ವಿಷಯವಿರುವುದೇ ಇಲ್ಲಿ. ಕೃಷಿಯ ಯಾವುದೊ ಸಮಸ್ಯೆಯನ್ನು ಹೊತ್ತು ತನ್ನಲ್ಲಿಗೆ ಬರುವ ರೈತನಿಗೆ ಕೃಷಿಸಾಲವೆಂಬ ವಿಷ ಮುಲಾಮನ್ನು ಸವರುವುದೇ ಈ ಸರ್ಕಾರಗಳು. ಅವರ ಸಮಸ್ಯೆಗಳಿಗೊಂದು ಸೂಕ್ತ ಪರಿಹಾರವನ್ನು ಆಲೋಚಿಸುವುದ ಬಿಟ್ಟು ತೋರ್ಪಡಿಕೆಯ ಪ್ರೀತಿಗೆ ದುಡ್ಡಿನ ಅಮಲೇರಿಸಿ ಮಕ್ಕಳು ಹಾಳಾದಾಗ ಮುಂದೇನು ಮಾಡುವುದೆಂದು ಕೈ ಕೈ ಹಿಸುಕಿಕೊಳ್ಳುವ ಪೋಷಕರಂತಾಗಿದೆ ಇಂದಿನ ಸರ್ಕಾರಗಳ ವಸ್ತುಸ್ಥಿತಿ.



ಅಂಕಿ ಅಂಶಗಳ ಪ್ರಕಾರ ಪ್ರಸ್ತುತ ದೇಶದ ಮೇಲಿರುವ ಕೃಷಿ ಸಾಲ ಸುಮಾರು ಹದಿಮೂರು ಲಕ್ಷ ಕೋಟಿ ರೂಪಾಯಿಗಳು! ಇಡೀ ದೇಶದ ಈ ಬಾರಿಯ ಬಜೆಟ್ ನ ಮೊತ್ತವೇ 21 ಲಕ್ಷ ಕೋಟಿಗಳಿರುವಾಗ ಘಂಟೆ ಅಲ್ಲಾಡಿಸಿದಂತೆ ಸಿಕ್ಕ ಸಿಕ್ಕ ಕಡೆಯೆಲ್ಲ ಸಾಲಮನ್ನದ ಭಾಗ್ಯವನ್ನು ಕರುಣಿಸುತ್ತಾ ಹೋದರೆ ದೇಶದ ನಾಳಿನ ಸ್ಥಿತಿ ಏನಾಗಬಹುದೆಂದು ನೀವೇ ಊಹಿಸಬಹುದು. ಮೇಲಾಗಿ ಸಾಲ ಮನ್ನ ಅಂದಾಕ್ಷಣ ಬ್ಯಾಂಕುಗಳೇನು ಲೆಕ್ಕ ಪತ್ರಗಳನ್ನು ಹರಿದು ರೈತರ ಕಲ್ಯಾಣವೇ ನಮ್ಮ ಧ್ಯೇಯ ಎಂದು ಎಂದಿಗೂ ಹೇಳವು. ಅವು ಸರ್ಕಾರದ ಬೊಗಸೆಯಿಂದ ಹಣದ ರಾಶಿ ತಮ್ಮ ಜೋಳಿಗೆಗೆ ಬೀಳುವ ತನಕ ಸುಮ್ಮನಿರವು. ಆಗ ಬರಿದಾದ ಸರ್ಕಾರದ ಜೋಳಿಗೆಯನ್ನು ತುಂಬಲು ದೇಶದ ಇತರೆ ನಾಗರಿಕರೊಂದಿಗೆ ರೈತನೂ ತನ್ನ ನೊಂದ ಹೆಗಲನ್ನು ನೀಡಬೇಕು ಎಂಬವುದ ಮರೆಯಬಾರದು. ಸರಿ, ಈ ಪ್ರಕ್ರಿಯೆಯಲ್ಲಿ ರಾಜ್ಯಸರಕಾರಗಳೂ ಕೈ ಜೋಡಿಸಿ ಒಂದು ಪಕ್ಷ ಅಷ್ಟೂ ಸಾಲವನ್ನು ಮನ್ನ ಮಾಡಿ ರೈತನನ್ನು ಉಳಿಕೊಂಡರೆ ಸಂತೋಷದ ಸಂಗತಿಯೇ. ಆದರೆ ಇಂದು ಸಾಲ ಮನ್ನ ಮಾಡಿ ನಾಳೆ ಪುನಃ ಸಾಲ ಕೊಳ್ಳುವಂತೆ ರೈತರಿಗೆ ತೆರೆದುಕೊಳ್ಳುವುದು ಮಾತ್ರ ಸಹಿಸಲಾಗದ ವಿಷಯವಾಗುತ್ತದೆ.



ಹಿಂದೆ 1990 ಹಾಗು 2008 ರಲ್ಲಿ ಅಂದಿನ ಕೇಂದ್ರ ಸರ್ಕಾರಗಳು ರೈತರ ಸಾಲಮನ್ನವೆಂಬ ಯಜ್ಞವನ್ನು ಮಾಡಿವೆಯಾದರು ಇಂದಿಗೂ ರೈತನ ಸ್ಥಿತಿ ಅರೆಬೆಂದ ಅನ್ನದಂತಾಗಿಯೇ ಉಳಿದಿದೆ ಎಂದರೆ ಸುಳ್ಳಾಗದು. ಸರ್ಕಾರಗಳೇನೋ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಗಳ ಸಾಲವನ್ನು ಮನ್ನಾ ಮಾಡುತ್ತವೆ. ಆದರೆ ನಮ್ಮ ನಿಮ್ಮೆಲ್ಲರ ಮನೆಯ ಸುತ್ತೊಮ್ಮೆ ಕಣ್ಣು ಹಾಯಿಸಿದರೆ ಸಿಗುವ ಹೆಚ್ಚಿನ ರೈತರ ಸಾಲಗಳು ಕೈಸಾಲವೋ ಅಥವಾ ಚಿನ್ನವನ್ನು ಅಡವಿಟ್ಟು ಮಾಡಿರುವ ಸಾಲವೋ ಆಗಿರುತ್ತದೆ. ಇಂತಹ ಸಾಲಗಳ ಮನ್ನಾ ಯಾರಿಂದ ಸಾಧ್ಯ? 2008 ರಲ್ಲಿ ಕೇಂದ್ರ ಸರ್ಕಾರ 65,000 ಕೋಟಿ ಸಾಲ ಮನ್ನ ಮಾಡಿ ಮುಂದಿನ ವರ್ಷ ಬಂದ ಲೋಕಸಭಾ ಚುನಾವಣೆಗೆ ಭದ್ರ ಬುನಾದಿಯನ್ನೇನೋ ಹಾಕಿಕೊಂಡಿತ್ತು. ನಂತರ ತಿಳಿದು ಬಂದ ವಿಷಾದದ ವಿಷಯವೆಂದರೆ ಅಂದು ಸಾಲಮನ್ನದಿಂದ ಪ್ರಯೋಜನಕ್ಕೊಳಪಟ್ಟವರು ಕೇವಲ ಸ್ಥಿತಿವಂತ ರೈತರೇ ವಿನಃ ಉಡಲು ಕನಿಷ್ಠ ಬಟ್ಟೆ ಇರದ ಗುಡಿಸಲು ಮನೆಯಲ್ಲಿ ವಾಸಿಸುವ ರೈತರಾಗಿರಲಿಲ್ಲ. ಕಾರಣ ,ಬಡಪಾಯಿ ರೈತರೆಲ್ಲ ಅಂದು ಅವಲಂಬಿಸಿದ್ದು ಹೆಚ್ಚಾಗಿ ಕೈಸಾಲವನ್ನೇ! ಇಲ್ಲದಿದ್ದರೆ ಸಾಲ ಮನ್ನದ ನಂತರವೂ ರಾಶಿ ರಾಶಿ ರೈತರರ ತಲೆಗಳು ಹಗ್ಗದ ಕುಣಿಕೆಗೇಕೆ ಬೀಳುತ್ತಿದ್ದವು?! ಇಷ್ಟೇ. ಕೇವಲ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಯಾರೋ ಊದಿದ ಪೀಪಿಗೆ ತಲೆಯಲ್ಲಾಡಿಸುತ್ತ ಎಡಬಿಡಂಗಿ ನಿರ್ಧಾರಗಳನ್ನು ಕೈಗೊಳ್ಳುವ ಸರ್ಕಾರಗಳು ಆರಕ್ಕೂ ಏರದ ಮೂರಕ್ಕೂ ಇಳಿಯದ ಸ್ಥಿತಿಯಲ್ಲಿ ರೈತರನ್ನು ಹಾಗು ಹೊತ್ತಷ್ಟು ಮತ್ತೂ ಹೊರುವ ಕತ್ತೆಗಳಂತೆ ಸಾಮಾನ್ಯ ಜನರನ್ನು ಮಾಡಿಬಿಡುತ್ತವೆ.



ಕೃಷಿ ಎಂದರೆ ಸಾಲ ಎಂದಾಗಿರುವ ಇಂದಿನ ಕಾಲದಲ್ಲಿ ಸಾಲದ ವಿನಃ ಬೆಳೆಯನ್ನು ಬೆಳೆಯಲು, ದೇಶದ ಹಸುವೆಯನ್ನು ನೀಗಿಸಲು ಸಾಧ್ಯವಿಲ್ಲವೇ ಎಂಬುದನ್ನು ವಿಮರ್ಷೆ ಮಾಡಲು ಇದು ಸೂಕ್ತ ಕಾಲ. ಆಧುನಿಕ ಕೃಷಿ ಪದ್ದತಿಯನ್ನು ಒಮ್ಮೆ ಅವಲೋಕಿಸಿದಾಗ ಕೆಲವು ವಿಷಯಗಳು ನಮಗೆ ಸ್ಪಷ್ಟವಾಗುತ್ತವೆ. ಕೃಷಿಗಾಗಿಯೇ ಪಡೆಯುವ ಸಾಲವನ್ನು ರೈತ ಹೆಚ್ಚಾಗಿ ಬಳಸುವುದು ರಸಗೊಬ್ಬರಗಳ, ಕೀಟನಾಶಕಗಳ ಖರೀದಿಗೆ. ಯೂರಿಯಾ, ಪೊಟ್ಯಾಷ್, ರಂಜಕ ಇತ್ಯಾದಿ ಇತ್ಯಾದಿಗಳಿಲ್ಲದೆ ಇಂದು ಕೃಷಿ ಎಂಬುದು ಸಾಧ್ಯವೇ ಇಲ್ಲವೇ? ಸಾವಿರಾರು ವರ್ಷಗಳಿಂದ ಅದೇ ನೆಲದಲ್ಲಿ ರಾಶಿ ರಾಶಿ ದವಸ ಧಾನ್ಯಗಳನ್ನು ಬೆಳೆದ ನಮ್ಮ ಹಿರಿಯರು ಅಂದೂ ಸಹ ಯೂರಿಯಾ, ಪೊಟ್ಯಾಷ್ ಗಳಿಗೇ ಅಂಟಿಕೊಂಡಿದ್ದರೆ? ಹಾಗಾದರೆ ಅಚ್ಚುಕಟ್ಟಾಗಿ ಮಾಡಿಕೊಂಡಿದ್ದ ಸಾವಯವ ಕೃಷಿಗೆ ಈ ರಾಸಾಯನಿಕ ಗೊಬ್ಬರಗಳ, ಕೀಟನಾಶಕಗಳ ಗೀಳು ಹುಟ್ಟಿಕೊಂಡಿದ್ದಾದರೂ ಏತಕ್ಕೆ? ಉತ್ತರ ನಮ್ಮಲಿಯೇ ಇದೆ. ಅದೇ ಅತಿಯಾಸೆ! ಹೌದು. ಒಂದು ಬೊಗಸೆ ಮಣ್ಣಿನಲ್ಲಿ ನಿಮಗೆ ಸಾವಿರ ಕೇಜಿಯಷ್ಟು ಆಹಾರವನ್ನು ಬೆಳೆಸಿಕೊಡುತ್ತೇವೆ ಎಂಬ ಭ್ರಮೆಯನ್ನು ಹುಟ್ಟಿಸಿದ ವಿದೇಶಿ ಕಂಪನಿಗಳ ವ್ಯಮೋಹಕ್ಕೆ ಬಲಿಯಾದ ನಮ್ಮ ರೈತ ಅಂದು ತನ್ನ ಕೈಯ ಅಸ್ತ ಸುಟ್ಟಾದರೂ ಸರಿಯೇ ಜಮೀನಿಗೆ ರಾಸಾಯನಿಕಗಳನ್ನು ಹಾಕಿಯೇ ತೀರುತ್ತೇನೆಂಬ ಹಠಕ್ಕೆ ಬಿದ್ದ. ಮುಂದಿನ ಒಂದೆರೆಡು ವರ್ಷ ಒಮ್ಮೆಲೇ ಊದಿದ ಬಲೂನಿನಂತೆ ಫಸಲು ಸೊಗಸಾಗಿಯೇ ಬಂದಿತು. ಆದರೆ ಸಮಯ ಕಳೆದಂತೆ ಆ ಬಲೂನಿನ ಗಾಳಿ ಮಾತ್ರ ಮಾಯವಾಗತೊಡಗಿತ್ತು. ಪರಿಣಾಮ ಈಗ ನಮ್ಮ ರೈತ ಬೇಡವೆಂದರೂ ರಸಗೊಬ್ಬರಗಳನ್ನು ಬಿಟ್ಟಿರಲಾರ. ಈ ರಸಗೊಬ್ಬರಗಳು ನೆಲದ ಸತ್ವವನ್ನು ಹೀರಿ ಹಿಪ್ಪೆ ಮಾಡುವುದು ಒಂದೆಡೆಯಾದರೆ, ಕೇಜಿಗಟ್ಟಲೆ ಕೆಮಿಕಲ್ ಗಳನ್ನು ಕಾಲಕಾಲಕ್ಕೆ ಜಮೀನಿಗೆ ಸುರಿಯದಿದ್ದರೆ ಆ ಭಾರಿಯ ಫಸಲೇ ಗೋತಾ! ಇಂತಹ ಕೆಮಿಕಲ್ ಪೂರಿತ ಆಹಾರ ಸವೆನೆಯಿಂದ ದೇಹಗಳಿಗಾಗುವ ಘಾಸಿ ಹೇಳತೀರದು. ಅಂದು ಒಂದಿಷ್ಟೂ ಖರ್ಚಿಲ್ಲದೆ ನೆಮ್ಮದಿಯಾಗಿ ಕೃಷಿಯನ್ನು ಮಾಡಿಕೊಂಡಿದ್ದ ರೈತ ಇಂದು ಹೆಚ್ಚಿನ ಹಣವನ್ನು ಇಂತಹ ರಸಗೊಬ್ಬರಗಳ ಕೊಳ್ಳುವಿಕೆಗೇ ಸುರಿಯುತ್ತಿದ್ದಾನೆ. ಮೇಲಾಗಿ ಭಾರತ ಒಂದರಲ್ಲೇ ಅದೆಷ್ಟೋ ಸಾವಿರ ಕೋಟಿಯಷ್ಟು ಹಣ ರಸಗೊಬ್ಬರ, ರಾಸಾಯನಿಕಗಳ ವಹಿವಾಟಿನಿಂದಲೇ ವಿದೇಶಿ ಕಂಪನಿಗಳ ಜೋಳಿಗೆಯನ್ನು ಸೇರುತ್ತಿದೆ. ಅಂತಹ ಒಂದು ಉದ್ಯಮವನ್ನು ಮಟ್ಟ ಹಾಕಿ ಸಾವಯವ ಕೃಷಿಗೆ ಆದ್ಯತೆಯನ್ನು ನೀಡುವುದು ಸದ್ಯದ ಊಸರವಳ್ಳಿ ಸರಕಾರಗಳಿಂದಂತೂ ಸಾಧ್ಯವಿಲ್ಲ.

ಮರ್ಕಟ ಮನಸ್ಸಿನ ಇತ್ತೀಚಿನ ಮಳೆರಾಯನನ್ನು ನಂಬಲಾಗದ ರೈತ ಅಕ್ಷರ ಸಹ ನೀರಿನ ವಿಚಾರದಲ್ಲಿ ಕಂಗಾಲಾಗುತ್ತಿದ್ದಾನೆ. ಪಡೆಯುವ ಸಾಲದಿಂದ ಒಂದು ಕೃಷಿ ಹೊಂಡವೋ ಅಥವಾ ಕೊಳವೆ ಭಾವಿಯನ್ನೋ ತೊಡಲು ಹೋಗುವ ಆತ ಭಾಗಶಃ ಈ ಕಾರ್ಯದಲ್ಲಿ ಕೈ ಸುಟ್ಟುಕೊಳ್ಳುತ್ತಿದ್ದಾನೆ. ಸಾವಿರ ಅಡಿ ಆಳ ಕೊರೆದರೂ ನೀರು ಸಿಗದ ಈ ಕಾಲದಲ್ಲಿ ಸಾಲವೆಂಬ ಭಾರವನ್ನು ಹೆಗಲ ಮೇಲೆ ಹೊತ್ತ ಆತನಿಗೆ ನಷ್ಟವಾದರೆ ಭರಿಸಿಕೊಡುವವರ್ಯಾರು? ಈ ನಿಟ್ಟಿನಲ್ಲಿ ನಮ್ಮ 'ಸಾಲಮನ್ನ ಸರ್ಕಾರ'ಗಳ ಯೋಚನೆಗಳು ಏನಿವೆ? ಬಾರದ ಮಳೆಯನ್ನೇನೋ ಜಪ ಮಾಡಿ ತರಲಾಗುವುದಿಲ್ಲ ಆದರೆ ಬೀಳುವ ಮಳೆಯನ್ನಾದರೂ ಶೇಖರಿಸಿಡುವ ಕಾರ್ಯ ಅದೆಷ್ಟು ಸರ್ಕಾರಗಳ ಕಾರ್ಯತಂತ್ರದಲ್ಲಿ ಇದೆ? ಪ್ರತಿ ವರ್ಷದ ಆಯವ್ಯಯದಲ್ಲಿ ಅದೆಷ್ಟು ನೀರಾವರಿ ಯೋಜನೆಗಳು ಜಾರಿಯಾಗುತ್ತಿವೆ. ನದಿ ಜೋಡಣೆಯ ವಿಚಾರ ಎಲ್ಲಿಯವರೆಗೆ ಬಂದಿದೆ? ಬ್ಯಾಂಕುಗಳಿಗೆ ಸಾಲವನ್ನು ಕೊಡಲೇಳುವ ಮುನ್ನ ಇಂತಹ ಪ್ರೆಶ್ನೆಗಳನ್ನು ಸರ್ಕಾರಗಳು ಕೇಳಿಕೊಳ್ಳಬೇಡವೇ?

ಹೀಗೆ ರೈತನ ಸಾಲ ಹಾಗು ಸಾವುಗಳಿಗೆ ಪರಿಹಾರ ಕೇವಲ ಸಾಲಮನ್ನವೇ ಪರಿಹಾರವೆಂಬುದು ಅಕ್ಷರ ಸಹ ತಪ್ಪು ಕಲ್ಪನೆ. ಆತ ಬೆಳೆಯುವ ಫಸಲಿಗೆ ದಳ್ಳಾಳಿಗಳಿಲ್ಲದ ಒಂದು ಮುಕ್ತ ಮಾರುಕಟ್ಟೆಯನ್ನು ಶುರುಮಾಡುವುದು ಎಂದಿಗೆ? ಡಿಜಿಟಲ್ ಯುಗದಲ್ಲಿ ಆನ್ಲೈನ್ ಮುಖಾಂತರವೇ ತಾವು ಬೆಳೆದ ಫಸಲನ್ನು ಗ್ರಾಹಕರಿಗೆ ನೇರವಾಗಿ ಮಾರುವ ವ್ಯವಸ್ಥೆಯ ಉದ್ಘಾಟನೆ ಎಂದು? ಮುಂದೊಮ್ಮೆ ಅದು ಸಾದ್ಯವಾದರೂ ಅದರ ಬಗೆಗಿನ ತಿಳುವಳಿಕೆ ಅತಿಸಾಮಾನ್ಯ ರೈತನೊಬ್ಬನಿಗೆ ಮೂಡಿಸುವುದು ಹೇಗೆ? ಮುಕ್ತಮಾರುಕಟ್ಟೆಯ ಪ್ರಾರಂಭದಿಂದ ಕೊನೆ ಪಕ್ಷ ಹಿಂಗಾರು ಹಾಗು ಮುಂಗಾರಿನ ಕೊರತೆಯಲ್ಲಿಯೂ ಬಂದ ಕೊಂಚ ಬೆಳೆಯಲ್ಲೇ ಉತ್ತಮ ಆದಾಯವನ್ನು ರೈತ ಗಳಿಸಿಕೊಳ್ಳಬಹುದಲ್ಲವೇ?. ಅಲ್ಲದೆ ಈಗಾಗಲೇ ಬಹಳಷ್ಟು ಬಗೆಯ ಕೃಷಿ ವಿಮೆಗಳು ಜಾರಿಯಿದ್ದರೂ ರೈತಾಪಿ ವರ್ಗಕ್ಕೆ ಅದು ಗೊತ್ತಿರುವುದು ಬಹಳಾನೇ ವಿರಳ. ಕಾರಣ, ನಷ್ಟವೆಂಬುದು ಕಟ್ಟಿಟ್ಟ ಬುತ್ತಿಯಾಗಿರುವ ಇಂದಿನ ಕೃಷಿಯಲ್ಲಿ ಸರ್ಕಾರ ರೂಪಿಸುವ ಅಷ್ಟೂ ವಿಮೆಗಳನ್ನು ಚಾಚೂತಪ್ಪದೆ ಪ್ರತಿ ರೈತನಿಗೂ ಮಾಡಿಕೊಟ್ಟರೆ ವರ್ಷ ಪೂರ್ತಿ ಅವರ ಪರಿಹಾರದ ಹಣವನ್ನು ಹೊಂದಿಸುವುದರಲ್ಲೇ ಆಗಿಹೋಗಬಹುದೇನೋ ಎಂಬ ಭಯವೂ ಅದರ ಹಿಂದೆ ಅಡಗಿಕೊಂಡಿರುತ್ತದೆ. ಆದ ಕಾರಣ ಅರ್ಥಪೂರ್ಣ ವಿಮೆ ಯೋಜನೆಗಳನ್ನು ಜಾರಿಗೊಳಿಸುವುದಲ್ಲದೆ ಅದನ್ನು ರೈತಸಾಮಾನ್ಯನ ಮನೆಮನೆಗೂ ತಲುಪುವಂತೆ ನೋಡಿಕೊಳ್ಳಬೇಕಲ್ಲವೇ?

ಒಟ್ಟಿನಲ್ಲಿ ಯಾವುದೇ ಲಂಗು ಲಗಾಮಿಲ್ಲದೆ ಸಾಲಮನ್ನ ಎಂದು ಕೋಟಿ ಕೋಟಿಗಳಷ್ಟು ಹಣದ ಹೊರೆಯನ್ನು ಜನರ ಹೆಗಲ ಮೇಲೆ ಹೊರಿಸುವ ಸರ್ಕಾರಗಳು ಸಾಲಮನ್ನದ ನಂತರ ಅಥವಾ ಸಾಲಮನ್ನದ ಮೊದಲು ಹಣಕ್ಕಿಂತಲೂ ಪರ್ಯಾಯವಾಗಿ ಯಾವ್ಯಾವ ವ್ಯವಸ್ಥೆಯನ್ನು ರೈತರಿಗೆ ಮಾಡಿಕೊಡಬೇಕು ಎಂದು ಆಲೋಚಿಸಬೇಕು. ಅಲ್ಲದೆ ಹಣವೆಂದರೆ ಸರ್ವಸ್ವವೇ ಆಗಿರುವ ಇಂದಿನ ಕಾಲದಲ್ಲಿ ಸಾಲಪಡೆದವರೆಲ್ಲರೂ ಕಡುಬಡವ ರೈತರೆಂದು ತಿಳಿಯುವುದೂ ಮೂರ್ಖತನದ ಕೆಲಸ. ಬಲು ಹತ್ತಿರದಲ್ಲೇ ಕಂಡಿರುವಂತೆ ಸರ್ಕಾರ ಸಾಲ ಮನ್ನ ಮಾಡುತ್ತದೆ ಎಂಬ ಅದಮ್ಯ ಭರವಸೆಯಲ್ಲೇ ಲಕ್ಷ ಲಕ್ಷ ಸಾಲವನ್ನು ಬ್ಯಾಂಕುಗಳಿಂದ ಪಡೆದು ತಿಂದು ತೇಗಿರುವವರೂ ಉಂಟು.

ಒಟ್ಟಿನಲ್ಲಿ ವಿಶ್ವಬ್ಯಾಂಕಿನ ಅತಿ ಹೆಚ್ಚು ಸಾಲ ಪಡೆದಿರುವ ನಂಬರ್ ಒನ್ ದೇಶವಾಗಿರುವ ಭಾರತ ಅಭಿವೃದ್ಧಿಯ ಮಂತ್ರ ಜಪಿಸುತ್ತ ಇಂತಹ ಮನಸಾ ಇಚ್ಛೆ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರೆ ಸ್ವತಂತ್ರವಾಗಿಯೂ ಅತಂತ್ರವಾಗುವ ಕಾಲ ದೂರವಿಲ್ಲವೆಂದೆನಿಸುತ್ತಿದೆ.

Thursday, June 15, 2017

ಅಮ್ಮ, ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು….

ಇವು ಚಿತ್ರಕಥೆಯೂ, ಕಟ್ಟುಕಥೆಯೋ, ನಿಜವೋ ಅಥವ ಶುದ್ಧ ಸುಳ್ಳೋ ಸದ್ಯಕ್ಕೆ ಮಾತ್ರ ಎಲ್ಲವೂ ಗೋಜಲು.

ಆತ ತಮಿಳಿನ ಸುಪ್ರಸಿದ್ದ ನಟ. ಹೆಸರು ಧನುಷ್. ಗಡ್ಡವನ್ನು ತೆಳುವಾಗಿ ಬಿಟ್ಟು, ಕಪ್ಪಗೆ ತೆಳ್ಳಗೆ ಇರುವ ಈತ ಒಮ್ಮೆಲೇ ಹೀರೋ ಮೆಟೀರಿಯಲ್ ಎಂದರೆ ಯಾರಾದರೂ ಮೇಲೆ ಕೆಳಗೆ ನೋಡಿಯಾರು. ಆಗ ಈತ ಒಬ್ಬ ಅದ್ಬುತ ನಟ, ನಿರ್ದೇಶಕ, ಹಾಡುಗಾರ ಅಲ್ಲದೆ ಒಬ್ಬ ನಿರ್ಮಾಪಕನೂ ಹೌದು ಎಂದರೆ ಒಮ್ಮೆ ಕೇಳಿದವರು ಕಕ್ಕಾಬಿಕ್ಕಿಯಾಗುವರು. 'ತಮಾಷೆ ಮಾಡಬೇಡಿ ಸುಮ್ನಿರಿ ಸಾರ್' ಎಂದು ನಗುತ್ತಾ ಮುಂದೆ ಸಾಗುವರು. ಅದೂ ನಿಜ. ಬಹುಪಾಲು ಪ್ರೇಕ್ಷಕರಿಗೆ ನಟ ಎಂದಾಕ್ಷಣ ಸದೃಢ ಕಾಯ, ಭಿನ್ನ ಬಗೆಯ ಉಡುಗೆ, ಕಣ್ಣಿಗೊಂದು ಗ್ಲಾಸು, ಗಡುಸಾದ ಧ್ವನಿ, ಇತ್ಯಾದಿ ಇತ್ಯಾದಿಗಳೇ ಕಲ್ಪನೆಯಲ್ಲಿ ಮೂಡುತ್ತಿದ್ದವು. ಅಂತಹದರಲ್ಲಿ ಧನುಷನ ಭಾಹ್ಯ ದೇಹಕಾಯ ಇವೆಲ್ಲ ಹೀರೊ ಫ್ಯಾಕ್ಟರ್ಗಳಿಗೆ ಪ್ರೆಶ್ನಾರ್ಥಕವಾಗಿದಿತ್ತು. ಹೀಗೆ ಅಸಾಧ್ಯವೆಂಬ ಸರೋವರದಲ್ಲಿ ಸಾಧ್ಯವೆಂಬ ಹಡಗನ್ನು ಹರಿಬಿಟ್ಟ ಪರಿಯನ್ನು ಕಂಡು ಕೋಟಿ ಕೋಟಿ ಜನರು ಈತನ ಅಭಿಮಾನಿಗಳಾದರು. ನಟನೆಯನ್ನೇ ಅತಿದೊಡ್ಡ ಬಂಡವಾಳವಾಗಿಸಿಕೊಂಡು ಈತ ಬೆಳೆದದ್ದು ಇಂದಿಗೆ ಇತಿಹಾಸ.ಸದ್ಯಕ್ಕೆ ಈತನ ಬಗ್ಗೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಈತನ ಪೋಷಕರ ಕುರಿತಾಗಿ ಎಂಬುದನ್ನು ಹಲವರು ಬಲ್ಲರು. ಆತನ ವಿಕಿಪೀಡಿಯ ಪೇಜ್ ಅನ್ನು ಒಮ್ಮೆ ಇಣುಕಿ ನೋಡಿದಾಗ ಆತನ ಹುಟ್ಟೆಸರು ವೆಂಕಟೇಶ ಪ್ರಭುವೆಂದು, ತಂದೆ ತಮಿಳಿನ ನಿರ್ಮಾಪಕ ಕಸ್ತೂರಿ ರಾಜ ಹಾಗು ತಾಯಿ ವಿಜಯಲಕ್ಷ್ಮಿ ಎಂದು ತಿಳಿಯುತ್ತದೆ. ಆದರೆ ಧಿಡೀರನೆ ಒಂದು ದಿನ ತಮಿಳುನಾಡಿನ ಯಾವುದೊ ಮೂಲೆಯಲ್ಲಿ ಜೀವನ ಸಾಗಿಸುತ್ತಿದ್ದ ಹಿರಿಯ ಜೀವಗಳೆರಡು ಧನುಷ್ ತಮ್ಮ ಮಗನೆಂದೂ, ಆತನ ಹುಟ್ಟೆಸರು ಕೇಲೈಸೆಲ್ವನ್ ಎಂದೂ ಹಾಗು ಅದಕ್ಕೆ ಪೂರಕವಾದ ಸಾಕ್ಷಿಗಳು ತಮ್ಮ ಬಳಿ ಇವೆಯೆಂದು ಹೇಳಿಕೊಂಡು ಕೋರ್ಟ ಮೆಟ್ಟಿಲನ್ನು ಏರುತ್ತವೆ. ಮಗನನ್ನು ಕಾಣದ ಅವರುಗಳು ಕೊನೆಪಕ್ಷ ಜೀವನ ನಿರ್ವಹಣೆಗಾಗಿ ಕರಾರುವಕ್ಕಾಗಿ 65 ಸಾವಿರ ರೂಗಳನ್ನು ಮಾಸಿಕವಾಗಿ ಕೊಡಬೇಕೆಂದು ಕೇಳಿಕೊಳ್ಳುತ್ತವೆ. ಕರುಳು ಚುರ್ರ್ ಎನ್ನುವ ಅವರ ಮುಗ್ದ ಮುಖಗಳು ಟಿವಿ ಪರದೆಯ ಮೇಲೆ ಮೂಡುತ್ತವೆ. ಅರೆಬೆಂದ ಸುದ್ದಿಗಳನ್ನೇ ಮೃಷ್ಟಾನ್ನ ಭೋಜನದಂತೆ ಮಾಧ್ಯಮಗಳೂ ಅವುಗಳನ್ನು ನೋಡುಗರಿಗೆ ಉಣಬಡಿಸುತ್ತವೆ.



ಇನ್ನೊಂದೆಡೆ ತಮಿಳುನಾಡಿನ ಅಮ್ಮಳೆನಿಸಿಕೊಂಡ ಜಯಲಲಿತಾಳ ಸಾವಿನ ಕಣ್ಣೀರು ಆಕೆಯ ಅಭಿಮಾನಿಗಳಲ್ಲಿ ಇನ್ನೂ ಒಣಗುವುದರ ಒಳಗೆಯೇ ಇತ್ತಕಡೆ ಬಿಳಿ ಶಿರ್ಟ್ ಹಾಗು ಪಂಚೆಯನ್ನು ತೊಟ್ಟು, ಮುಖದ ಮೇಲೊಂದು ಮಂದಹಾಸದ ನಗೆಯನ್ನುಟ್ಟು ಮಾಯಾಲೋಕದಿಂದ ಇಳಿದುಬಂದ ಗಂಧರ್ವನಂತೆ ವ್ಯಕ್ತಿಯೊಬ್ಬ ಕೋರ್ಟನ ಮುಂದೋಗಿ ತಾನು ಜಯಲಲಿತಾ ಹಾಗು ತಮಿಳು ಚಿತ್ರರಂಗದ ಇನ್ನೊಬ್ಬ ನಟನಿಗೆ ಹುಟ್ಟಿದ ಸುಪುತ್ರನೆಂದೂ, ಅದನ್ನು ಸಾಬೀತುಪಡಿಸುವ ದಾಖಲೆಗಳು ತನ್ನ ಬಳಿ ಇವೆಯೆಂದೂ, ಆದರಿಂದ ಆಕೆಯ ಸಮಗ್ರ ಆಸ್ತಿಯೂ ತನಗೆ ಸೇರಬೇಕೆಂದು ಅನಾಥನಂತೆ ಅವಲತ್ತು ತೋಡಿಕೊಳ್ಳುತ್ತಾನೆ. ಆಡುವ ಮಕ್ಕಳ ದೂರುಗಳಂತಿರುವ ಕೇಸ್ ಗಳಿಗೆ ತೀರ್ಪುಗಾರರಬೇಕಾದ ಅನಿವಾರ್ಯತೆಯಲ್ಲಿ ಯಾವಾಗ ಈತನು ಕೋರ್ಟ್ ಗೆ ಪ್ರಸ್ತುತ ಪಡಿಸಿದ ದಾಖಲೆಗಳು ಸುಳ್ಳೆಂದು ಸಾಬೀತಾದವೋ ಕೆಂಡಾಮಂಡಲವಾದ ನ್ಯಾಯಾಧೀಶರು ಕೂಡಲೇ ಅವನನ್ನು ಜೈಲಿಗಟ್ಟುವಂತೆ ಆಗ್ರಹಿಸಿದರಂತೆ!

ಆಸೆ ಮಾನವನ ಸಹಜ ಗುಣಗಳಲ್ಲೊಂದು. ಒಪ್ಪೋಣ. ಮಮತೆಯೂ ಈ ವಾದಕ್ಕೆ ಪೂರಕವಾಗಿರಬಹುದು ಎಂದುಕೊಳ್ಳೋಣ. ಆದರೆ ಹುಟ್ಟಿಸಿದ ಮಕ್ಕಳ ಮೇಲಿನ ಅಥವಾ ಹೆತ್ತ ತಾಯಿಯ ಮಡಿಲಿನ ಮಮತೆ ಎಂಬುದು ಆಸೆಯಿಂದ ಹುಟ್ಟುವ ಭಾವಗಳಂತೂ ಅಲ್ಲವೇ ಅಲ್ಲ. ಅದು ಗಾಳಿಯಲ್ಲಿರುವ ಉಸಿರಿನಷ್ಟೇ ಸಹಜ. ಅದರಲ್ಲೂ ಹಣದ ಮೇಲಿನ ಆಸೆಗೋ ಅಥವಾ ವ್ಯಮೋಹಕ್ಕೋ ಒಳಗಾಗಿ ಇಂದು ಸಿಕ್ಕ ಸಿಕ್ಕವರನ್ನೆಲ್ಲ ಇವ ನನ್ನ ಮಗ, ಅವಳು ನನ್ನ ತಾಯಿ ಎನ್ನುವುದು ತಮ್ಮ ಕೆನ್ನಗೆ ತಾವೇ ರಪರಪನೆ ಭಾರಿಸಿಕೊಂಡಷ್ಟು ಹೀನ. ಒಂದು ಪಕ್ಷ ಮೇಲಿನ ವಾದಗಳು ನಿಜವೆಂದೇ ಇಟ್ಟುಕೊಂಡರು ಇಷ್ಟು ವರ್ಷಗಳ ಕಾಲ ಅಡಗಿಕೊಂಡಿದ್ದ ಆ ಬಾಂಧವ್ಯ ಧಿಡೀರನೆ ಜಾಗೃತಗೊಳ್ಳಲು ಕಾರಣವಾದರು ಏನು? ಅಂದು ಕೇಲೈಸೆಲ್ವನ್ ಮನೆ ಬಿಟ್ಟು ಓಡಿ ಹೋದಾಗ ಇರದ ಕೋರ್ಟು ಕಚೇರಿಗಳು ಇಂದು ಆತ ಕೋಟಿಗಳೊಡನೆ ಆಡಲು ಶುರುಮಾಡಿಕೊಂಡಾಗ ಒಮ್ಮೆಲೇ ಕಾಣಸಿಗುತ್ತವೆ ಏಕೆ ? ಈಕೆಯೇ ನನ್ನ ಅಮ್ಮ ಎಂದು ಹೇಳಿಕೊಳ್ಳಲು ಅವನಿಗೆ ಕಾಗದ ಪತ್ರಗಳ ಸಬೂತೆ ಏಕೆ ಬೇಕಾಗುತ್ತದೆ?. ಎಲ್ಲಿಯ ಪ್ರೀತಿ, ಅದೆಲ್ಲಿಯ ಮಮತೆ?. ಒಂದಂತೂ ನಿಜ. ಹಣವೆಂಬ ಆಸೆಯನ್ನು ತಾಯಿಯ ಮಮತೆಯ ಸ್ಥರಕ್ಕೆ ಏರಿಸಲಾಗದಿದ್ದರೂ ಅಂತಹ ಮಿಗಿಲಾದ ಒಂದು ಭಾವವನ್ನು ಇಂದು ಮಾನವ ನೋಟಿನ ಹಾಳೆಗಳೊಟ್ಟಿಗೆ ತುಲನೆ ಹಾಕುವ ಮಟ್ಟಿಗೆ ಕೆಳಗೆಳೆದು ತಂದು ನಿಲ್ಲಿಸಿದ್ದಾನೆ. ಈಗ ಎಲ್ಲವೂ ಹಣಮಯ. ಹುಟ್ಟಿ ಒದ್ದಾಡಿ ಕೊಸರಾಡುವ ಎಳೆಯ ಕಾಲುಗಳು ಎಂದು ಬಲಿತು ಜಗದ ಸಂತೆಯನ್ನು ಸೇರುತ್ತವೋ ಅಂದೇ ಅಸೆ ಎಂಬೊಂದು ಕವಚ ಅವುಗಳನ್ನು ಭದ್ರವಾಗಿ ಆವರಿಸಿಬಿಡುತ್ತದೆ. ಮುಂದೆ ಏನಿದ್ದರೂ ಅವುಗಳ ಓಟ ಆ ಆಸೆಯ ಗಮ್ಯದೆಡೆಗೆ. ದಾರಿಯಲ್ಲಿ ಸಿಗುವ ಭಾಂದವ್ಯಗಳೆಲ್ಲ ಆ ಓಟಕ್ಕೆ ನಗಣ್ಯ. ಇಲ್ಲವಾದಲ್ಲಿ ಇಷ್ಟು ವರ್ಷಗಳ ನಂತರ ಸಿಕ್ಕ ಮಗನಿಂದ ಒಂದಿಷ್ಟು ಪ್ರೀತಿ ದೊರೆತರೆ ಸಾಕಪ್ಪ ಎಂಬುದ ಬಿಟ್ಟು ಬರೋಬ್ಬರಿ 65 ಸಾವಿರ ನೋಟಿನ ಹಾಳೆಗಳೇ ಬೇಕೆನ್ನುವ ಆಸೆಯನ್ನು ಮಮತೆ ಎನ್ನಲಾಗುತ್ತದೆಯೇ?

ತನ್ನೆಲ್ಲವನ್ನು ಕಳೆದುಕೊಂಡು ಪರದೇಶಿಯಾದ ಜೀವವೊಂದಕ್ಕೆ ನೆನಪಾಗಾಗುವುದು ಅಮ್ಮನ ಮಡಿಲೇ ಅಂದರೆ ಅದು ಆ ಜೀವ ಮರುಹುಟ್ಟಿಗೆ ಹಾತೊರೆದಂತೆ. ತನ್ನೆಲ್ಲ ಪಾಪ ನಿವಾರಣೆಯ ಕೇಂದ್ರವೇನೋ ಎಂಬಂತೆ ತಾಯಿಯ ಮಡಿಲು ಆ ಜೀವಕ್ಕೆ ಕಾಣತೊಡಗುತ್ತದೆ.ತಾನು ಅದೆಷ್ಟೇ ನೀಚ ಕಾರ್ಯವನ್ನು ಮಾಡಿದ್ದರೂ, ಜಗತ್ತಿನ ಕಣ್ಣಿನಲ್ಲಿ ಇನ್ನೆಂದೂ ಮೇಲೇಳಲಾಗದ ಮಟ್ಟಿಗೆ ಕುಸಿದರೂ ಅಮ್ಮನ ಮಡಿಲು ಮಗುವನ್ನು ಕೈ ಬೀಸಿ ಕರೆಯುತ್ತದೆ. ಬಿ. ಆರ್. ಲಕ್ಷ್ಮಣ ರಾವ್ ಅವರ ‘ಅಮ್ಮ ನಿನ್ನ ಎದೆಯಾಳದಲ್ಲಿ’ ಎಂಬ ಅದ್ಭುತ ಸಾಲುಗಳಲ್ಲಿ ಹೊರಲೋಕಕ್ಕೆ ಬರಲು ಹಾತೊರೆಯುವ ಆ ಮಗು ಹೊರಬಂದು, ಜಗವೆಲ್ಲ ಜಾಲಾಡಿ ಆಯಾಸಗೊಂಡು ಕೊನೆಗೆ ಅಮ್ಮನ ಮಮತೆಯ ಮಡಿಲಿನ ಆಸರೆಯನ್ನೇ ಆಶಿಸುತ್ತದೆ. ಭಾವಗೀತೆಯ ಆ ಸಾಲುಗಳು ಅದೆಷ್ಟೇ ಅಪ್ಪಟ ಸತ್ಯವೆನಿಸಿದರೂ ನಿಜ ಜೀವನದಲ್ಲಿ 'ಕೊನೆಗೆ' ಎಂಬ ಘಳಿಗೆಯಲ್ಲಿ ಅಮ್ಮನ ಮಡಿಲ ನೆನಪನ್ನು ತರಿಸಿಕೊಳ್ಳುವ ಜೀವಗಳು ವಿರಳವಾಗತೊಡಗಿವೆ. ಅಂತಹ ವಿರಳತೆಯ ಹಿಂದಿರುವ ಕರಾಳ ಕೈಗಳು ಮಾತ್ರ ಅನೇಕ.

‘ದುಡ್ಡಿಗಿಂತ ಮಗನೆ, ನಿನ್ನ ಒಂದು ಬಿಗಿದಪ್ಪುಗೆ ನಮಗೆ ಸಾಕು. ಎಂದಿಗೂ ನೀನೆ ನಮ್ಮ ಮಗ.’ ಎಂದಿದ್ದರೂ ಧನುಷನೇ ಅತ್ತು ಅವರನ್ನು ಅಪ್ಪಿಕೊಳ್ಳುತ್ತಿದ್ದ್ದನೇನೋ, ಯಾರು ಬಲ್ಲರು? ತಿಂಗಳಿಗೆ 65 ಸಾವಿರ ಕೊಡುವುದು ಕೋಟಿಗಳಲ್ಲಿ ಆಡುವ ನಟನೊಬ್ಬನಿಗೆ ದೊಡ್ಡ ವಿಷಯವೇನಲ್ಲ. ಒಂದು ಪಕ್ಷ ಆದದ್ದು ಆಗಲಿ ಇನ್ನು ಮುಂದಿನ ಇಪ್ಪತ್ತು ವರ್ಷಕ್ಕಾಗುವ ದುಡ್ಡನ್ನು ಒಮ್ಮೆಲೇ ಕೊಟ್ಟು ಕೈ ತೊಳೆದುಕೊಂಡರೂ ಸಹ ಈತ ಪರೋಕ್ಷವಾಗಿ ಆ ಹಿರಿಯ ಜೀವಗಳ ವಾದವನ್ನು ಒಪ್ಪಿಕೊಂಡಂತಾಗುತ್ತದೆ. ಮುಂದೆ ಹಣದ ಆಸೆಯಲ್ಲಿ ಹೆತ್ತ ಪೋಷಕರನ್ನೇ ವಂಚಿಸಿ ಬಾಳುವ ಈತ ಯಾವ ಸೀಮೆಯ ನಾಯಕ ಎಂದು ತಮಿಳರು ಈತನನ್ನು ತಿರಸ್ಕರಿಸಿಯಾರು. ಅಥವಾ ಆ ಹಿರಿಯ ಜೀವಗಳ ವಾದದಂತೆ ಈತ ನಿಜವಾಗಿಯೂ ಅವರ ಮಡಿಲಲ್ಲೇ ಅತ್ತು ಒದ್ದಾಡಿ ಬೆಳೆದಿರಬಹುದಾ? ಅದೂ ನಿಜವಾದರೆ ಹೆತ್ತ ತಾಯಿ ಹಾಗು ಸಾಕು ತಾಯಿಯ ಪ್ರೀತಿಯಲ್ಲಿ ಯಾವುದು ಗೆಲ್ಲಬಹುದು? ಇಂತಹ ಸಂಧಿಘ್ನ ಘಳಿಗೆಯ ಚಿತ್ರಗಳಲ್ಲಿ ನಟಿಸಬೇಕಾದ ನಟನೊಬ್ಬ ತನ್ನ ಜೀವನವನ್ನೇ ಇಂದು ಅಂತಹ ಉದಾಹರಣೆಯಾಗಿ ಸಾಬೀತುಪಡಿಸಬೇಕಿದೆ. ಇದಕ್ಕೆಲ್ಲ ಉತ್ತರ, ಕಪ್ಪು ಬಿಳುಪಿನ ತೀರ್ಪು ಕೋರ್ಟ್ನಿಂದ ಹೊರಬಿದ್ದ ನಂತರವೇ.


ಒಟ್ಟಿನಲ್ಲಿ ತಮಿಳುನಾಡಿನ ಇತ್ತೀಚಿನ ಕೆಲ ವಿದ್ಯಮಾನಗಳಲ್ಲಿ ಹೆತ್ತವರ ಹಾಗು ಮಕ್ಕಳ ನಡುವಿನ ಹಗ್ಗ ಜಗ್ಗಾಟ ತುಸು ಹೆಚ್ಚಾಗಿಯೇ ಸುದ್ದಿಯಾಗಿತ್ತು. ನೀನೆ ನಮ್ಮ ಮಗ ಎಂಬ ವಾದ ಒಂದೆಡೆಯಾದರೆ, ಅವಳೇ ನನ್ನ ಅಮ್ಮ ಎನ್ನುವನ ವಾದ ಇನ್ನೊಂದೆಡೆ. ಹುಟ್ಟಿಸಿದ ಮಕ್ಕಳನ್ನು ಮತ್ತೊಮ್ಮೆ ಹೆತ್ತವರ ತೆಕ್ಕೆಗೆ ಹಾಕುವ ಕಾರ್ಯವನ್ನು ಅಲ್ಲಿಯ ಕೋರ್ಟುಗಳು ಮಾಡಬೇಕಿವೆ. ಆದರೆ ಹುಟ್ಟು ಮತ್ತು ಸಾವುಗಳ ಪರಿಧಿಯಿಂದಾಚೆಗೆ ಅನಂತವಾಗಿ ಸಾಗುವ ಆತ್ಮವೆಂಬ ಜ್ವಾಲೆಯನ್ನು ಹಿಡಿದು ಪ್ರೆಶ್ನೆಯನ್ನು ಕೇಳುವ ಕ್ಷಮತೆ ಭೂ ಲೋಕದ ಯಾವ ಕೋರ್ಟುಗಳಿಗೆ ಇದೆ? ಅದು ಸಾದ್ಯವಾಗುವುದಾಗಿದ್ದಿದ್ದರೆ ಅದೆಷ್ಟು ಕಪಟ ಮುಖಗಳು ಉದುರಿ ಬೀಳುತ್ತಿದ್ದವೋ ಏನೋ! ಒಂದು ಪಕ್ಷ ಸಾದ್ಯವಾಗಬಹುದಾಗಿದ್ದರೂ ಆತ್ಮಗಳನ್ನೂ ಸುಳ್ಳುಗಾರನನ್ನಾಗಿ ಮಾಡುವ ಕಲೆ ಮಾನವನಿಗೆ ದೊಡ್ಡದೇನಲ್ಲ ಬಿಡಿ. ಒಟ್ಟಿನಲ್ಲಿ ಮದರ್ಸ್ ಡೇ ಎನ್ನುತ ಕಂಪ್ಯೂಟರ್ನ ಕೀಲಿಗಳಿಂದ ಜಗತ್ತಿನ ಮುಂದೆ ಹಚ್ಚೊತ್ತುವ ಜನರು ತಮ್ಮಲಿರುವ ಆ ನಿಷ್ಕಲ್ಮಶ ಪ್ರೀತಿಯನ್ನು ಅದೆಂದಿನವರೆಗೆ ಎದೆಯ ಮಡಿಲಲ್ಲಿ ಕಾಪಾಡಿಕೊಳ್ಳುತ್ತಾರೆ ಎಂಬುದರಲ್ಲೇ ಆಧುನಿಕ ಜಗತ್ತಿನ ನಿಜಬಣ್ಣ ಅಡಗಿದೆ.

Thursday, June 8, 2017

'ಬಿಸಿಸಿಐ' ಬೆಳಕ ಹೊತ್ತಿಸದ ಶಶಾಂಕ!

ಕೆಲವಾರಗಳ ಹಿಂದಷ್ಟೆಯೇ ಬಿಸಿಸಿಐ (ಭಾರತೀಯ ಕ್ರಿಕೆಟ್ ಕೌನ್ಸಿಲ್) ಕ್ರಿಕೆಟ್ ಅಭಿಮಾನಿಗಳ ನಿದ್ದೆಗೆಡಿಸುವ ಸುದ್ದಿಯೊಂದನ್ನು ಹೊರಹಾಕಿತ್ತು. 'ಈ ಬಾರಿ ಟೀಮ್ ಇಂಡಿಯ ಚಾಂಪಿಯನ್ಸ್ ಟ್ರೋಪಿಯಲ್ಲಿ ಆಡುವುದು ಅನುಮಾನ' ಎಂಬೊಂದು ಅಣೆಬರಹದ ಹೇಳಿಕೆಗಳು ಕೇಳಿಬರತೊಡಗಿದವು. ಸುದ್ದಿಯನ್ನು ಕೇಳಿ ಅಭಿಮಾನಿ ಕೆಂಡಮಂಡಲವಾಗತೊಡಗಿದ್ದ. ಮಾಧ್ಯಮಗಳು ಬಿಸಿಸಿಐಯ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡವು. ಚರ್ಚೆಗಳ ಮೇಲೆ ಚರ್ಚೆಗಳು, ಕವರ್ ಸ್ಟೋರಿಗಳು, ದೋಷಾರೋಪಗಳು ಹೆಚ್ಚತೊಡಗಿದವು. ಬಿಸಿಸಿಐ ಮಾತ್ರ ತನ್ನ ಪಟ್ಟನ್ನು ಸಡಿಲಿಸಲಿಲ್ಲ. ಕೆಲದಿನಗಳ ನಂತರ ಅಸಲಿ ವಿಷಯ ಅಂಕಿ ಅಂಶಗಳ ಸಮೇತ ಹೊರಬರತೊಡಗಿದಾಗ ಬಹುಪಾಲು ಭಾರತೀಯರಿಗೆ ಬಿಸಿಸಿಐಯ ನಿರ್ಧಾರ ಸಮಂಜಶವಾಗಿದೆ ಎನಿಸತೊಡಗಿತು. ಆದರೆ ವಿಷಯವನ್ನು ಅರೆದು ಕುಡಿದ ನೋಡುಗನ ಮನದಲ್ಲಿ ಕೊನೆಗೆ ಒಂದು ಪ್ರೆಶ್ನೆ ಮಾತ್ರ ಉತ್ತರಿಸಲಾಗದೆ ಮೆತ್ತಗಾಯಿತು. ಬಿಸಿಸಿಐ ವಾದಕ್ಕಿಳಿದಿರುವ ICC (ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಯ ಅಧ್ಯಕ್ಷ ಅಪ್ಪಟ ಭಾರತೀಯ ಹಾಗು ಮಾಜಿ ಬಿಸಿಸಿಐ ಅಧ್ಯಕ್ಷನಾಗಿದ್ದ ಶಶಾಂಕ್ ಮನೋಹರ್. ದೇಶೀ ಕ್ರಿಕೆಟ್ ಸಂಸ್ಥೆಗೆ ಬಲ ತುಂಬಲೆಂದೇ ಅಂದು ಖುದ್ದು ಬಿಸಿಸಿಐ ಶಶಾಂಕ್ ರವರನ್ನು ICC ಯ ಅಧ್ಯಕ್ಷಗಿರಿಗೆ ಹೆಸರಿಸಿ ಆ ಕುರ್ಚಿಯ ಮೇಲೆ ಕೂರಿಸಿಯೂ ಬಂದಿತ್ತು. (ಆತನ ಆಯ್ಕೆ ಇಂಡಿಪೆಂಡೆಂಟ್, ಅಂದರೆ ಯಾವುದೇ ಮಂಡಳಿಯ ಮುಖೇನ ಆರಿಸಿ ಬಂದಿರದಂತಹ ಆಯ್ಕೆ. ಆದರೂ ಒಂದಲ್ಲ ಒಂದು ಬಗೆಯಲ್ಲಿ ಬಿಸಿಸಿಐ ತನ್ನ ಪ್ರಭಾವವನ್ನು ಈ ಆಯ್ಕೆಯಲ್ಲಿ ಬೀರಿತ್ತು ಎಂದರೆ ಸುಳ್ಳಾಗದು) ಅಂತಹ ಒಬ್ಬ ವ್ಯಕ್ತಿ ಇಂದು ದೇಶಕ್ಕೇ ದ್ರೋಹ ಬಗೆಯುವಂತಹ ಕೆಲಸವೇತಕ್ಕೆ ಮಾಡುತ್ತಿದ್ದಾನೆ? ಅಷ್ಟಕ್ಕೂ ಆತನ ಈ ನಿಲವು ದೇಶಕ್ಕೆ ಮಾಡುತ್ತಿರುವ ದ್ರೋಹವೇ ಅಥವಾ ಜವಾಬ್ದಾರಿಯುತ ಸ್ಥಾನದಲ್ಲಿ ಕೂತು ಮಾಡುತ್ತಿರುವ ನಿಷ್ಕಳಂಕ ಕಾರ್ಯವೇ?

ICC ರೂಪಿಸುವ ತನ್ನ ಆಧಾಯ ಹಂಚಿಕೆ ಮಾದರಿಯೇ (ರೆವೆನ್ಯೂ ಶೇರಿಂಗ್ ಮಾಡೆಲ್) ಸದ್ಯಕ್ಕೆ ಇಷ್ಟೆಲ್ಲಾ ಚರ್ಚೆಗೆ ಕಾರಣವಾಗಿರುವುದು. ಆ ಮಾದರಿಯ ಪ್ರಕಾರ ICC ಯ ಅಧೀನಕ್ಕೊಳಪಡುವ ತಂಡಗಳ ನಡುವಿನ ಅಂತಾರಾಷ್ಟ್ರೀಯ ಪಂದ್ಯ/ಸರಣಿಗಳಿಂದ ಬಂದ ಲಾಭವನ್ನು ತಂಡಗಳಿಗೆ ಅವುಗಳ ಪ್ರಸಿದ್ಧತೆ ಹಾಗು ICC ಯ ಜೋಳಿಗೆಗೆ ಆದಾಯವನ್ನು ಗಳಿಸಿ ಕೊಡುವ ಆದರದ ಮೇಲೆ ಹಂಚಿಕೆ ಮಾಡಲಾಗುತ್ತದೆ. ಪ್ರಸಿದ್ದತೆಯ ವಿಷಯ ಬಂದಾಗ ನೂರಾರು ಧರ್ಮಗಳೊಟ್ಟಿಗೆ ಕ್ರಿಕೆಟ್ ಅನ್ನೂ ತನ್ನ ಇನ್ನೊಂದು ಧರ್ಮವೆಂದೇ ಪರಿಗಣಿಸಿರುವ ಭಾರತವನ್ನು ಹಿಂದಿಕ್ಕುವ ದೇಶ ಮತ್ತೊಂದಿಲ್ಲ. ಪರಿಣಾಮ ಭಾರತ ವಿಶ್ವದ ಅದ್ಯಾವ ಮೂಲೆಗೆ ಹೋದರೂ ಅಲ್ಲಿ ಹಣದ ಹೊಳೆಯನ್ನೇ ಹರಿಸಿ ಪ್ರೇಕ್ಷಕರನ್ನು ರಂಜಿಸಿಯೇ ಬರುತ್ತದೆ. ಆದಕಾರಣ ಒಟ್ಟು ಆದಾಯದ ಬಹುಪಾಲು ಹಕ್ಕು ಬಿಸಿಸಿಐ ಎಂಬ ದೈತ್ಯನಿಗೇ ಸಲ್ಲುತ್ತದೆ ಹಾಗು ಇದು ಸಮಂಜಶವೂ ಕೂಡ. ಉಳಿದಂತೆ ಇಂಗ್ಲೆಂಡ್ ಹಾಗು ಆಸ್ಟ್ರೇಲಿಯಾ ತಂಡಗಳು ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿವೆ. 2013 ರಲ್ಲಿ ರೂಪಿಸಲ್ಪಟ್ಟ ಆಧಾಯ ಹಂಚಿಕೆ ಮಾದರಿಯ ಪ್ರಕಾರ ಭಾರತ, ಇಂಗ್ಲೆಂಡ್ ಹಾಗು ಆಸ್ಟ್ರೇಲಿಯಾ ತಂಡಗಳನ್ನು 'ಬಿಗ್ 3' ತಂಡಗಳೆಂದು ಪರಿಗಣಿಸಿ ICC ತಾನು ಗಳಿಸಿದ ಬಹುಪಾಲು ಲಾಭವನ್ನು ಈ ಮೂರು ತಂಡಗಳಿಗೂ, ಉಳಿದ ಹಣವನ್ನು ಇತರೆ ಸದಸ್ಯ ತಂಡಗಳಿಗೂ ಹಂಚಿಕೆ ಮಾಡುತ್ತಿದ್ದರೂ ಯಾವೊಬ್ಬ ದೇಶವೂ ಈ ನಿಯಮದ ವಿರುದ್ಧ ತಕರಾರು ಎತ್ತಲಿಲ್ಲ. ಒಂದು ಪಕ್ಷ ಅಂತಹ ಒಂದು ತಂಡ ಈ ನಿಯಮವನ್ನು ಪ್ರೆಶ್ನಿಸ ಹೊರಟರೂ, ಒಂದೋ ಬಿಸಿಸಿಐ ಗಳಿಸಿ ಕೊಡುತ್ತಿದ್ದ ಆದಾಯದ ಮುಂದೆ ಅಂತಹ ತಂಡದ ಆದಾಯ ಪುಡಿಗಾಸಿಗೂ ಸಮವಿರುತ್ತಿರಲಿಲ್ಲ ಅಥವಾ ಇದರಿಂದ ಬಿಸಿಸಿಐ ಕುಪಿತಗೊಂಡು ಇನ್ನು ಮುಂದೆ ತಾನು ಆ ತಂಡದೊಂದಿಗೆ ಪಂದ್ಯಗಳನ್ನೇ ಆಡದೇ ಬರುವ ಕಾಸನ್ನೂ ಕೈಚೆಲ್ಲಿ ಕೂರಬೇಕು ಎಂಬ ಒಳಭಯ. ಆ ಮಟ್ಟಿನ ಬಿಗಿಹಿಡಿತ ಅಂದು ಬಿಸಿಸಿಐ ವಿಶ್ವಕ್ರಿಕೆಟ್ ನಲ್ಲಿ ಮೂಡಿಸಿತ್ತು. ಈ ನಿಯಮದ ಹಿಂದಿದ್ದ ಮತ್ತೊಂದು ಬಲವಾದ ಕಾರಣ ICC ತನ್ನ ಒಟ್ಟು ಆದಾಯದ ಪ್ರತಿಶತ 80 ರಷ್ಟು ಈ ಮೂರು ತಂಡಗಳಿಂದಲೇ ಗಳಿಸುತ್ತಿರುವುದು. ಅಂದರೆ ಉಳಿದ ಅಷ್ಟೂ ತಂಡಗಳಿಂದ ICC ಯ ಜೋಳಿಗೆಯ ಭರ್ತಿ ಕೇವಲ 20% ನಷ್ಟು ಮಾತ್ರ. ಆದ ಕಾರಣ 2015 ರಿಂದ 2023 ರ ವರೆಗೆ ಭಾರತ ಒಟ್ಟು ಆದಾಯದ ನಿಂಹಪಾಲು ಅಂದರೆ ಸುಮಾರು 570 ಮಿಲಿಯನ್ ಡಾಲರ್(20.3%), ಉಳಿದಂತೆ ಇಂಗ್ಲೆಂಡ್ ಹಾಗು ಆಸ್ಟ್ರೇಲಿಯಾ ತಂಡಗಳು ಕ್ರಮವಾಗಿ 143 (4.4%) ಮತ್ತು 132 (2.7%) ಮಿಲಿಯನ್ ಡಾಲರ್ ಹಣವನ್ನು ಪಡೆಯಬೇಕು ಎಂಬುದು ಆ ಮಾದರಿಯ ಒಟ್ಟು ಸಮ್ಮತಿಯಾಗಿದ್ದಿತು. ಒಟ್ಟಿನಲ್ಲಿ ಹೆಚ್ಚು ಅಧಾಯವನ್ನು ಗಳಿಸಕೊಡುವವನು ಹೆಚ್ಚು ಪಡೆದುಕೊಳ್ಳುವನು ಎಂಬ ತಿಳಿಯಾದ ಸೂತ್ರ.

ಏತನ್ಮದ್ಯೆ ಚೆನ್ನೈ ಸೂಪರ್ ಕಿಂಗ್ಸ್ ನ ಒಡೆಯ ಹಾಗು ICCಯ ಅಂದಿನ ಚೇರ್ಮನ್ಗಿರಿಯನ್ನು ಅಲಂಕರಿಸಿದ್ದ ಶ್ರೀನಿವಾಸನ್ (ಇದೇ ಶ್ರೀನಿವಾಸನ್ ಅಂದಿನ ಬಿಗ್ ೩ ಫಾರ್ಮುಲಾ ದ ಜನಕ ಎಂಬುದು ಮತ್ತೊಂದು ಗಮನಾರ್ಹ ಹಾಗು ಅಷ್ಟೇ ಕುತೂಹಲವಾದ ಸಂಗತಿ) ಅವರು ವಿವಾದಗಳ ಸುಳಿಯಲ್ಲಿ ಸಿಲುಕಿ ತಮ್ಮ ಸ್ಥಾನದಿಂದ ಕೆಳಗಿಳಿದಾಗ, ಶಾಂತ ಹಾಗು ಅಷ್ಟೇ ಖಡಕ್ ವ್ಯಕ್ತಿತ್ವದ, ಮಾಜಿ ಬಿಸಿಸಿಐ ಅಧ್ಯಕ್ಷರೂ ಆಗಿದ್ದ ಶಶಾಂಕ್ ಮನೋಹರ್ ಅವರನ್ನು ಆ ಸ್ಥಾನಕ್ಕೆ ಆರಿಸಿ ಕಳುಹಿಸಿತು. ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪವಿದ್ದ ಶ್ರೀನಿವಾಸನ್ ಅವರ ತಕರಾರುಗಳ ಹಿನ್ನಲೆಯಲ್ಲಿ ಭಾರತ ವಿಶ್ವ ಕ್ರಿಕೆಟ್ ನಲ್ಲಿ ಎಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತದೆಯೋ ಎನ್ನುವಾಗ ಆಯ್ಕೆಯಾದ ಶಶಾಂಕ್ ಮನೋಹರ್ ಅವರಿಗೆ ದೇಶದ ಜೊತೆಗೆ ಅದರ ಕ್ರಿಕೆಟ್ ಮಂಡಳಿಯ ಘನತೆಯನ್ನೂ ಎತ್ತಿ ಹಿಡಿಯುವ ಗುರುತರ ಜವಾಬ್ದಾರಿ ಇದ್ದಿತು. ಅಂತೆಯೇ ಆತ ಆಯ್ಕೆಯಾದ ಕೆಲವೇ ದಿನಗಳಲ್ಲಿ ಅದೇ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿ ಸ್ವದೇಶ, ಪರದೇಶ ಎನ್ನದೆ ತಾನು ಅಲಂಕರಿಸಿದ್ದ ಸ್ಥಾನಕ್ಕೆ ಪೂರಕವಾಗಿ ಯೋಚಿಸತೊಡಗಿದರು. ಅದರ ಪ್ರತಿಫಲವೇ ಎನ್ನಬಹುದು ಈ ‘ನವೀಕರಿಸಲಾದ’ ರೆವೆನ್ಯೂ ಶೇರಿಂಗ್ ಮಾಡೆಲ್. ಅಲ್ಲಿಯವರೆಗೂ ಸುಖದ ಕನಸನ್ನು ಕಾಣುತ್ತಿದ್ದ ಬಿಸಿಸಿಐ ಒಮ್ಮಿಂದೊಮ್ಮೆಗೆ ಬೆಚ್ಚಿ ಬೀಳುವ ಸುದ್ದಿಯನ್ನು ಕೇಳತೊಡಗಿತು. ಈ ಹೊಸ ಮಾದರಿಯಲ್ಲಿ ICC, ವಿಶ್ವ ಕ್ರಿಕೆಟ್ ನ ಏಳಿಗೆಯಷ್ಟನ್ನೇ ಗಮನದಲ್ಲಿಟ್ಟುಕೊಂಡು ಹಳೆಯ ಮಾದರಿಗೆ ಹೊಸ ರೂಪವನ್ನು ಕೊಟ್ಟಿತ್ತು. ಅದರ ಪ್ರಕಾರ ಭಾರತದ ಹಿಂದಿನ 20.9 % ಪಾಲನ್ನು ಕುಗ್ಗಿಸಿ 10.3% ನಷ್ಟು ಮಾಡಿದ್ದಿತು. ಸುಮಾರು 570 ಮಿಲಿಯನ್ ಡಾಲರ್ ಬರುವ ಜಾಗಕ್ಕೆ ಭಾರತಕ್ಕೆ ಈಗ ಸಿಗುತ್ತಿರುವು ಕೇವಲ 290 ಮಿಲಿಯನ್ ಡಾಲರ್. ಭಾರತವನ್ನು ಬಿಟ್ಟರೆ ಕೊಂಚ ನಷ್ಟವನ್ನು ಕಂಡ ಮತ್ತೊಂದು ಮಂಡಳಿ ಇಂಗ್ಲೆಂಡ್. ಆದರೆ ಅದರ ನಷ್ಟ ಕೇವಲ 20 ಮಿಲಿಯನ್. ಆದರೆ ಮಿಕ್ಕ ಅಷ್ಟೂ ದೇಶಗಳು ಈ ಹೊಸ ಮಾದರಿಯ ಪ್ರಕಾರ ಯಾವುದೇ ಲೆಕ್ಕಧಾರವಿಲ್ಲದೆಲ್ಲದೆ ಸುಮಾರು 110 ರಿಂದ 140 ಮಿಲಿಯನ್ ಡಾಲರ್ ವರೆಗೂ ಗಳಿಸಿಕೊಳ್ಳುತ್ತವೆ. ಅದೂ ಸಾಲದಕ್ಕೆ ಹೊಸತಾಗಿ ಸುಮಾರು 280 ಮಿಲಿಯನ್ ಡಾಲರ್ ನಷ್ಟು ಹಣವನ್ನು ಇತರೆ ಕ್ರಿಕೆಟ್ ಮಂಡಳಿಗಳ (ಐರ್ಲೆಂಡ್ , ಆಫ್ಘಾನಿಸ್ಥಾನ್ ಇತ್ಯಾದಿ) ಅಭಿವೃದ್ಧಿಗೆ ಇಲ್ಲಿ ಮೀಸಲಿಡಲಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಮೇಲಿನ 280 ಮಿಲಿಯನ್ ಡಾಲರ್ ಹಣದ ಸಂಪೂರ್ಣ ಪಾಲು ಭಾರತದ್ದೇ ಆಗಿರುತ್ತದೆ. ಅಂದರೆ ವಿಶ್ವದ ಇತರೆ ಕ್ರಿಕೆಟ್ ಮಂಡಳಿಗಳ ಅಭಿವುದ್ಧಿಗೆ ಬಿಸಿಸಿಐ ತಾನು ಗಳಿಕೊಡುವ ಕೂಳೆ ಬೇಕು ಎಂದಾಯಿತು. ಅಂದರೆ ಉಳಿದ ಏಳೆಂಟು ಕ್ರಿಕೆಟ್ ಮಂಡಳಿಗಳು ಇರುವುದಾದರೂ ಏತಕ್ಕೆ? ಅವುಗಳ ನಯಾ ಪೈಸೆಯೂ ವಿಶ್ವ ಕ್ರಿಕೆಟ್ ನ ಅಭಿವೃದ್ಧಿಗೆ ಖರ್ಚಾಗಬಾರದ್ದೇಕೆ? ಇದ್ಯಾವ ಸೀಮೆಯ ನ್ಯಾಯ?

ಸುಮಾರು ಇದೇ ವೇಳೆಗೆ ಬಿಸಿಸಿಐ ತನ್ನ ಅಂತಃಕಲಹ ಹಾಗು ಅಪಾರದರ್ಶಕ ಆಡಳಿತದಿಂದ ಸುಪ್ರೀಂಕೋರ್ಟಿನ ಚಾಟಿ ಏಟಿನ ಪೆಟ್ಟಿನಿಂದ ಸುಧಾರಿಸಿಕೊಳ್ಳುತ್ತಿತ್ತು. ಹೊಂಚು ಹಾಕಿ ಗಾಳ ಎಸೆದಂತೆ ಚಾಟಿ ಏಟಿನ ಜೊತೆಗೆ ಹೊಸ ಅಧಾಯದ ಮಾದರಿಯ ವಿಷಯದಲ್ಲಿ ಸಿಲುಕಿ ಅದು ಕಕ್ಕಾಬಿಕ್ಕಿಯಾಗತೊಡಗಿತು. ಆಗ ಅದರ ಮುಂದೆ ಕಂಡ ದೊಡ್ಡ ಅಸ್ತ್ರ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯುವುದು. ಕೂಡಲೇ ಆ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಹಣದ ವಿಷಯ ಒಂದೆಡೆಯಾದರೆ ಕಳೆದ ಬಾರಿಯ ಚಾಂಪಿಯನ್ಸ್ ಪಟ್ಟವನ್ನು ಉಳಿಸಿಕೊಳ್ಳುವ ಛಲ ಟೀಮ್ ಇಂಡಿಯ ಹಾಗು ಅದರ ಅಭಿಮಾನಿಗಳದ್ದು. ವಿಶ್ವ ಕ್ರಿಕೆಟ್ ನಲ್ಲಿ ಭಾರತದ ತೂಕವನ್ನು ಅರಿತ್ತಿದ್ದ ICC ಕೂಡಲೇ ದುಬೈನಲ್ಲಿ ಮೀಟಿಂಗ್ ಒಂದನ್ನು ಏರ್ಪಡಿಸಿ ಬಿಸಿಸಿಐ ಯನ್ನು ಮಾತುಕತೆಗೆ ಆಹ್ವಾನಿಸಿತು. ತಕ್ಷಣ ದುಬೈಯ ವಿಮಾನ ಹಿಡಿದವರು ಬಿಸಿಸಿಐ ಯ ಜಂಟಿ ಕಾರ್ಯದರ್ಶಿ ಅಮಿತಾಬ್ ಚೌದರಿ. ಆ ಮೀಟಿಂಗಿಗೂ ಮುನ್ನ ICC ತನ್ನ ಹೇಳಿಕೆಯಲ್ಲಿ ಅಧಾಯದ ಹಿರಿಯನಾದ ಭಾರತಕ್ಕೆ, ಸದ್ಯಕ್ಕೆ ನೀಡುತ್ತಿರುವ 290 ಮಿಲಿಯನ್ ಡಾಲರ್ ಜೊತೆಯಾಗಿ ಇನ್ನೂ 100 ಮಿಲಿಯನ್ ಡಾಲರ್ ಅನ್ನು ಹೆಚ್ಚುವರಿಯಾಗಿ ನೀಡಲಾಗುವ ಒಂದು ಆಫರ್ ಅನ್ನು ಮುಂದಿಟ್ಟಿತ್ತು. ಆದರೆ ಬಿಸಿಸಿಐ ಇದಕ್ಕೆ ಕೊಂಚವೂ ಸಮ್ಮತಿಸದೆ ತನ್ನ ಹಕ್ಕನ್ನು ಪಡೆದೇ ತೀರುತ್ತೇನೆಂದು ಪಟ್ಟು ಹಿಡಿಯಿತು. ಅಲ್ಲದೆ ICCಯ ಇತರೆ ಸದಸ್ಯ ದೇಶಗಳಿಗೆ ಓಟಿನ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲು ಮನವಿ ಮಾಡಿತು. ಆದರೆ ಓಟಿಂಗ್ ಪ್ರಕ್ರಿಯೆಗೆ ಸುತರಾಂ ಒಪ್ಪದ ICC ಒಂದು ಪಕ್ಷ ಓಟಿಂಗ್ ಆಗಲೇಬೇಕಾದರೆ, ಅದರಲ್ಲಿ ಬಿಸಿಸಿಐ ಕನಿಷ್ಠ ನಾಲ್ಕು ಓಟುಗಳನ್ನಾದರೂ ಪಡೆಯಲೇಬೇಕು. ಅದಕ್ಕಿಂತಲೂ ಕಡಿಮೆ ಓಟುಗಳನ್ನು ಪಡೆದರೆ ಸದ್ಯಕ್ಕೆ ನೀಡಲಾಗುತ್ತಿರುವ 100 ಮಿಲಿಯನ್ ಹೆಚ್ಚುವರಿ ಹಣವನ್ನೂ ವಾಪಾಸ್ ಪಡೆಯಲಾಗುವುದು ಎಂದು ಹೇಳಿಕೆಯನ್ನು ಕೊಟ್ಟಿತ್ತು. ಆಸ್ಟ್ರೇಲಿಯಾ, ಶ್ರೀಲಂಕಾ ಹಾಗು ಜಿಂಬಾಂಬೆ ತಂಡಗಳ ಮೇಲಿದ್ದ ಅತಿಯಾದ ನಂಬುಗೆಯಿಂದ ಅಂದು ಅಭಿಷೇಕ್ ಚೌದರಿ ಓಟಿಂಗ್ ಪ್ರಕ್ರಿಯೆಗೆ ಅಸ್ತು ಎಂದರು. ಆದರೆ ಫಲಿತಾಂಶ ಮಾತ್ರ ಅಕ್ಷರ ಸಹ ಅವರ ನಿಂತ ನೆಲವನ್ನೇ ಅದುರಿಸಿತ್ತು. ಇದ್ದ ಹತ್ತು ಓಟುಗಳಲ್ಲಿ ಭಾರತ ಪಡೆದದ್ದು ಕೇವಲ ಒಂದೇ ಓಟು, ಅದು ತನ್ನದೇ ಓಟು! 'ಕೆಲಸ ಇರದ ಆಚಾರಿ ಸುಮ್ನೆ ಇರದೇ ಅದೇನೋ ಮಾಡ್ದ' ಅನ್ನೋ ಹಾಗೆ ಸಿಗುತ್ತಿದ್ದ ಒಂದು ಉತ್ತಮ ಮೊತ್ತವನ್ನೂನಂಬಿಗಸ್ತರೆಂದು ತೋರ್ಪಡಿಸಿಕೊಳ್ಳುವ ಗೆಳೆಯರನ್ನು ನಂಬಿ ಬಿಸಿಸಿಐ ಕೈ ಚೆಲ್ಲಿ ಕೂತಿತು.


ಪ್ರಸ್ತುತ ಸ್ಥಿತಿಯಲ್ಲಿ ಶಶಾಂಕ್ ಮನೋಹರ್ ಬಿಸಿಸಿಐಯ ಪಾಲಿಗೆ ತೆರೆಮರೆಯ ವಿಲನ್ ನಂತೆ ಕಂಡರೂ ವಿಶ್ವ ಕ್ರಿಕೆಟ್ ನ ಭವಿಷ್ಯವನ್ನು ಗಮನದಲ್ಲಿಟ್ಟು ಯೋಚಿಸಿದಾಗ ಅವರ ಆಲೋಚನೆಗಳು ಶುಭ್ರವಾಗಿದೆ ಎನಿಸದಿರುವುದಿಲ್ಲ. 2013 ರ ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣದ ನಂತರ ಪ್ರತಿ ಐಪಿಎಲ್ ಮ್ಯಾಚ್ ಗಳೂ ಇನ್ನು ಮುಂದೆ ತನಿಖೆಗೆ ಒಳಪಡಬೇಕು ಎಂದು ವಾದಿಸಿದರಲ್ಲದೆ ಅಂದಿನ ಬಿಸಿಸಿಐ ಅಧ್ಯಕ್ಷರಾಗಿದ್ದ ಶ್ರೀನಿವಾಸನ್ ಅವರ ಹೆಸರು ಫಿಕ್ಸಿಂಗ್ ಮಾಫಿಯಾ ದಲ್ಲಿ ಕೇಳಿಬಂದಾಗ ಅವರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಯಾರಿಗೂ ಭಯಪಡದ ಸ್ವಭಾವದ ಮನುಷ್ಯನೀತ. ಅಲ್ಲದೆ 2008 ರಿಂದ 2011 ರ ವರೆಗೆ ಬಿಸಿಸಿಐ ಅಧ್ಯಕ್ಷರಾಗಿ ದೇಶೀ ಕ್ರಿಕೆಟ್ ನ ಉನ್ನತಿಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡ ಕಳಂಕ ರಹಿತ ವ್ಯಕ್ತಿತ್ವ ಅವರದ್ದಾಗಿತ್ತು. ಅಂತಹ ಒಬ್ಬ ವ್ಯಕ್ತಿ ಯಾವುದೇ ಕಾರಣವಿಲ್ಲದೆ ಕೇವಲ ಒಂದೇ ಮಂಡಳಿಯ ವಿರುದ್ಧ ಹಗೆ ಸಾದಿಸುತ್ತಾನೆಂದರೆ ಅದು ನಂಬುಗೆಗೆ ದೂರವಾದ ಮಾತು . ಆದರೆ ಇವರ ಅಂತಹ ದೃಢ ನಿರ್ಧಾರಗಳೇ ಅವರಿಗೆ ಸಾಕಷ್ಟು ವೈರಿಗಳನ್ನು ಸೃಷ್ಟಿಸಿಕೊಟ್ಟಿತ್ತು. ಈ ಮದ್ಯೆ ಇದೇ ಮಾರ್ಚ್ ನಲ್ಲಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟದ್ದೂ ಉಂಟು!. ಆದರೆ ಹಲವರ ಸಂಧಾನದಿಂದ ಪುನ್ಹ ಮತ್ತೊಮ್ಮೆ ಅವರು ಅಧ್ಯಕ್ಷಗಿರಿಯ ಸ್ಥಾನದಲ್ಲಿ ಕೂರಲು ಸಮ್ಮತಿಸಿದ್ದಾರೆ. ಆದರೆ ಹೊಸ ರೆವೆನ್ಯೂ ಮಾಡೆಲ್ ನ ಅವರ ನಿರ್ಧಾರ ಇನ್ನೂ ಅಚಲವಾಗಿಯೇ ಇದೆ ಎಂದರೆ ಆತ ಅದೆಂಥಹ ಗಟ್ಟಿ ಮನುಷ್ಯ ಎಂದು ಊಹಿಸಬಹುದು. ಸದ್ಯಕ್ಕೆ ಬಿಸಿಸಿಐ ದೊಡ್ಡ ಮನಸ್ಸು ಮಾಡಿ ICC ಯ ನಿರ್ಧಾರವನ್ನು ಒಪ್ಪಿಕೊಳ್ಳುವುದು ಹಾಗು ವಿಶ್ವ ಕ್ರಿಕೆಟ್ನಲ್ಲಿ ಹಿರಿಯಣ್ಣನೆನಿಸಿಕೊಂಡಿರುವಾಗ ಆ ಅಣ್ಣನ ಸ್ಥಾನದ ಜವಾಬ್ದಾರಿ ಇದೆಂದು ಭಾವಿಸಿ ಎಲ್ಲರೊಟ್ಟಿಗೂ ಮುನ್ನೆಡೆದು ತನ್ನ ದೊಡ್ಡತನವನ್ನು ಸಾರಬೇಕಿದೆ. ಪ್ರತಿ ವರ್ಷ ನೆಡೆಸುವ ಐಪಿಎಲ್ ನಿಂದಲೇ ಅದು ಗಳಿಸಿಕೊಳ್ಳುವ ಲಾಭ ಸುಮಾರು 400 ಮಿಲಿಯನ್ ಡಾಲರ್ ನ ಗಡಿಯನ್ನು ದಾಟುತ್ತದೆ ಎಂದರೆ ತನ್ನ ಅತಿಯಾಸೆಯನ್ನು ಕೊಂಚ ಅದುಮಿಟ್ಟಿಕೊಂಡರೆ ನಷ್ಟವೇನೂ ಇಲ್ಲ, ಎಂದು ಅನಿಸದಿರುವುದಿಲ್ಲ!

Thursday, June 1, 2017

ರಾತ್ರಿ ಕಂಡ ಭಾವಿಗೆ ಹಗಲು ಬಿದ್ದವರ್ಯಾರು?!

ಡೊನೊಲ್ಡ್ ಟ್ರಂಪ್. ಇತ್ತೀಚಿನ ದಿನಗಳಲ್ಲಿ ಈ ಹೆಸರನ್ನು ಯಾರು ತಾನೇ ಕೇಳಿರಲಿಕ್ಕಿಲ್ಲ. ಒಂದು ಪಕ್ಷ ನಮ್ಮ ದೇಶದ ರಾಷ್ಟ್ರಪತಿಯ ಹೆಸರೇ ತಿಳಿಯದಿದ್ದರೂ ಸಾಗರಗಳಾಚೆಗಿರುವ ಈ ಟ್ರಂಪ್ ಯಾರು, ಆತನ ಸುಂದರ ಮಗಳ ಹೆಸರೇನು, ಅವನ ಆಸ್ತಿಯ ಓಟ್ಟು ಮೊತ್ತವೆಷ್ಟು ಎಂಬೆಲ್ಲ ವಿಚಾರಗಳು ಸಾರಸಗಟಾಗಿ ಹೇಳಬಲ್ಲ ಬುದ್ದಿವಂತರಿದ್ದಾರೆ ನಮ್ಮಲ್ಲಿ. ಎಲ್ಲೋ ಒಂದೆಡೆ ಇದು ಪಾಶ್ಚಿಮಾತ್ಯೀಕರಣದ ಮತ್ತೊಂದು ಮುಖವೆಂದರೂ ಸುಳ್ಳಾಗದು.

ಅದೇನೇ ಇರಲಿ. ಸದ್ಯಕ್ಕೆ ಅಮೇರಿಕಾದ ನಲ್ವತ್ತೈದನೆಯ ಅಧ್ಯಕ್ಷ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿ ಬಂದದ್ದು ಅಮೇರಿಕ ಹಾಗು ಸೌದಿ ಅರೇಬಿಯಾದ ನಡುವಿನ 110 ಬಿಲಿಯನ್ ಡಾಲರ್ ಗಳ ಶಸ್ತ್ರಾಸ್ತ್ರ ಒಪ್ಪಂದವಾದಾಗ. ಇದು ಅಮೇರಿಕ ಇಲ್ಲಿಯವರೆಗೂ ಇತರ ಯಾವುದೇ ದೇಶದೊಟ್ಟಿಗೂ ಮಾಡಿಕೊಂಡಿರದ ಅತಿ ದೊಡ್ಡ ಶಸ್ತ್ರಾಸ್ತ್ರ ಒಪ್ಪಂದ! ತನ್ನ ಅಧ್ಯಕ್ಷೀಯ ಚುನಾವಣಾ ಪ್ರಚಾರದುದ್ದಕ್ಕೂ ಸೌದಿಯನ್ನು ಕಾಯ ವಾಚಾ ಮಾನಸ ತೆಗಳುತ್ತಲೇ ಸಾಗಿಬಂದ ಟ್ರಂಪ್ ತಾನು ಅಧ್ಯಕ್ಷನಾದ ಮೇಲೆ ವಿಶ್ವದ ಬೇರ್ಯಾವ 'ಇಂಪಾರ್ಟೆಂಟ್' ಎನ್ನುವ ದೇಶಗಳ ಪ್ರವಾಸಕ್ಕೂ ಮುನ್ನವೇ ಸೌದಿ ರಾಜರ ಜೊತೆಗೂಡಿ ಕುಣಿಯುತ್ತಿದ್ದದ್ದನ್ನು ಕಂಡು ಜಗತ್ತು ಕೆಲಕಾಲ ತಲೆ ಕೆರೆದುಕೊಂಡಿತ್ತು. ಒಬಾಮ ಅದೇನೇ ಮಾಡಿದ್ದರೂ ನಾನು ಅದರ ತದ್ವಿರುದ್ದವಾಗಿಯೇ ಮಾಡಬೇಕೆಂದು ಹಠ ಹಿಡಿದ ಮಕ್ಕಳಂತೆ ಈತ ವರ್ತಿಸುತ್ತಿರುವುದು ಜಗಜ್ಜಾಹಿತ ವಿಷಯ. ಒಬಾಮ ಆಡಳಿತ ಯಾವುದನ್ನು ವಿಶ್ವದ ಕಂಟಕ ಎಂದು ಕರೆಯುತ್ತಿತ್ತೋ ಅಂತಹ ಒಂದು ನಿರ್ಧಾರವನ್ನು ನೀರು ಕುಡಿದಂತೆ ಟ್ರಂಪ್ ಆಡಳಿತ ಅಂದು ತೆಗೆದುಕೊಂಡಿತ್ತು. ತನ್ನ ಎಲ್ಲ ನಿರ್ಧಾರವನ್ನು ಎಕ್ಸಲೆಂಟ್ ಎಂದು ತೋರಿಸುವ ಬರದಲ್ಲಿ ಮದ್ಯಪ್ರಾಚ್ಯಾ ದೇಶಗಳ ನಿದ್ದೆಯನ್ನಾಳುವಮಾಡುವ ಕುತಂತ್ರವೇನಾದರೂ ಇದರ ಹಿಂದೆ ಅಡಗಿದ್ದರೆ ಈಗಾಗಲೇ ಮದ್ದುಗುಂಡುಗಳ ಕಪ್ಪು ಹೊಗೆಯಿಂದ ಕರಕಲಾಗಿ ಹೋಗುತ್ತಿರುವ ಇಲ್ಲಿಯ ನೆಲ ಅಕ್ಷರ ಸಹ ಬೂದಿಯ ಗುಡ್ಡೆಯಾಗುವ ಮಾತು ಸುಳ್ಳಾಗುವುದಿಲ್ಲ. ಅಷ್ಟಕ್ಕೂ ಈ ಶಸ್ತಾಸ್ತ್ರ ಒಪ್ಪಂದವನ್ನು ಒಬಾಮ ಆಡಳಿತ ಹಿಡಿತಗೊಳಿಸಿದ್ದೇಕ್ಕೆ? ಟ್ರಂಪ್ ಸರ್ಕಾರಕ್ಕೆ ಇದರಿಂದ ಆಗುವ ಲಾಭವಾದರೂ ಏನು? ಶಿವನ ಪೂಜೆಯಲ್ಲಿ ಕರಡಿಗೇನು ಕೆಲಸ ಎಂದುಕೊಂಡು ಹಾಯಾಗಿ ಮಲಗಿಕೊಂಡಿರುವ ಜಗತ್ತಿಗೆ ಇದರಿಂದ ಆಗುವ ಪರಿಣಾಮಗಳೇನು?

ವಿಶ್ವವನ್ನೇ ತನ್ನ ತೈಲ ಶಕ್ತಿಯಿಂದ ಕುಣಿಸುವ ತಾಕತ್ತಿರುವ ಸೌದಿ ದೇಶಕ್ಕೆ ಪಕ್ಕದಲ್ಲಿರುವ ಇರಾನ್ ನ ಕಂಡರೆ ಕೆಂಡವನ್ನು ಮೈಯ್ಯ ಮೇಲೆ ಸುರಿದುಕೊಂಡಂತೆ ಆಡುತ್ತದೆ. ಎಂದಿಗೂ ಆ ದೇಶದ ಮೇಲೆ ತನ್ನ ಒಂದು ಹದ್ದಿನ ಕಣ್ಣನ್ನು ಇರಿಸಿಗೊಂಡಿರುತ್ತದೆ. ಹೆಚ್ಚುಕಡಿಮೆ ತನ್ನಷ್ಟೇ ತೈಲವನ್ನು ಉತ್ಪಾದಿಸಬಲ್ಲ ಸಾಮರ್ಥ್ಯವಿರುವ, ವಿಶ್ವ ಮಾರುಕಟ್ಟೆಯಲ್ಲಿ ತನ್ನ ಬಾಸ್-ಗಿರಿಗೇ ಸಡ್ಡು ಹೊಡೆಯಬಲ್ಲ ದೇಶವಾವದರಿಂದ ಅದು ರಕ್ಷಣಾತ್ಮಕವಾಗಿ ತೆಗೆದುಕೊಳ್ಳುವ ಪ್ರತಿ ಹೆಜ್ಜೆಗಿಂತಲೂ ತಾನು ಎರಡೆಜ್ಜೆ ಮುಂದೆ ಇರಬೇಕಂಬ ಧರ್ಪ ಸೌದಿಯರದ್ದು. ಇರಾನ್ ಅದಾಗಲೇ ಅತ್ಯುತ್ತಮ ಸಾಮರ್ಥ್ಯದ ಮಿಸೈಲ್ ಗಳನ್ನೂ ಹೊಂದಿರುವುದಲ್ಲದೆ ತನ್ನ ರಕ್ಷಣಾ ವ್ಯವಸ್ಥೆಗೆ ಏನು ಬೇಕೋ ಅದೆಲ್ಲವನ್ನು ಹೆಚ್ಚಿನ ಆಸ್ಥೆಯಿಂದ ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದೆ. ನೆಲ ಬಗೆದು ಎಣ್ಣೆಯನ್ನು ಎತ್ತುವ ಮಟ್ಟಿನ ಚತುರತೆ ಹೊಂದಿರುವ ಸೌದಿ ಅರೇಬಿಯಾ ಮಾತ್ರ ತನ್ನ ಮಿಲಿಟರಿ ಕಾರ್ಯಾಚರಣೆಗಳಿಗೆ/ ಕಾರ್ಯಕ್ರಮಗಳಿಗೆ ಬೇಕಾಗುವ ಅವಶ್ಯಕ ಯುದ್ಧ ಸಾಮಗ್ರಿಗಳಿಗೆ ಹೆಚ್ಚಾಗಿ ಇತರೆ ದೇಶಗಳನ್ನೇ ಅವಲಂಬಿಸಿರುತ್ತದೆ. ವರ್ಷಕ್ಕೆ ಒಮ್ಮೆ ಹಬ್ಬಕ್ಕೋ ಜಾತ್ರೆಗೋ ಶಾಪಿಂಗ್ ಗೆ ಹೋದಂತೆ ಒಂದಿಷ್ಟು ಬಿಲಿಯನ್ ಡಾಲರ್ ದುಡ್ಡನ್ನು ಸುರಿದು ತನಗೆ ಇಷ್ಟ ಬಂದ ಯುದ್ಧ ಸಾಮಗ್ರಿಗಳನ್ನು ಕೊಂಡು ತಂದರೆ ಇಲ್ಲಿನ ರಕ್ಷಣಾ ಸಚಿವಾಲಯಕ್ಕೆ ನೆಮ್ಮದಿಯ ನಿಟ್ಟುಸಿರು. ಹೀಗೆ ಯುದ್ಧ ಸಾಮಗ್ರಿಗಳ ಶಾಪಿಂಗ್ ಹೊರಡುವ ಸೌದಿ ದೊರೆಗಳು ಹೆಚ್ಚಾಗಿ ತಟ್ಟುವುದು ವಿಶ್ವದ ದೊಡ್ಡಣ್ಣ ಅಮೇರಿಕಾದ ಬಾಗಿಲು.

ಸೌದಿ ಹಾಗು ಅಮೇರಿಕ ನಡುವಿನ ಸಂಬಂಧ ದಶಕಗಳ ಕಾಲ ಹಳೆಯದು. ಮಧ್ಯದಲ್ಲಿ ಕೊಂಚ ಇರುಸು ಮುರುಸು ಉಂಟಾದರೂ ಸಂಬಂಧದ ಗಟ್ಟಿತನವೇನು ಅಷ್ಟಾಗಿ ಕ್ಷೀಣಿಸಲಿಲ್ಲ. 2001 ರ WTC ಧಾಳಿಯ ಹಿಂದೆ ಸೌದಿಯ ಕೈಚಳಕ ಇದೆಯೆಂಬ ಸುದ್ದಿಗಳು ಇದ್ದರೂ ಅಮೇರಿಕ ಅಷ್ಟಾಗಿ ತನ್ನ ವಕ್ರ ದೃಷ್ಟಿಯನ್ನು ಈ ವಿಷಯದ ಮೇಲೆ ಹರಿ ಬಿಡಲಿಲ್ಲ. ವರ ಕೊಡುವ ದೇವರನ್ನೇ ಹಿಡಿದು ಜೈಲಿನಲ್ಲಾಕಲಾದಿತೇ?! ಪರಿಣಾಮ ಅದೇನೇ ಕಷ್ಟ-ನಷ್ಟಗಳಿದ್ದರೂ ತೈಲದ ಧಾಹಕ್ಕೆ ಮಣಿದು ತಣ್ಣಗಿರಲೇಬೇಕಾದ ಅನಿವಾರ್ಯದ ಸ್ಥಿತಿ ಅಮೆರಿಕದಾಯಿತು. ಆದರೆ ಎಂದು ಅಮೇರಿಕ ‘ಷೇಲ್ ‘ತೈಲವನ್ನು (Shale Oil - ಒಂದು ಭಿನ್ನ ಬಗೆಯ ಕಲ್ಲಿನಿಂದ ತೈಲವನ್ನು ಉತ್ಪಾದಿಸುವ ವಿಧಾನ) ಉತ್ಪಾದಿಸಲು ಪ್ರಾರಂಭಿಸಿತೋ, ತೈಲದ ವಿಚಾರದಲ್ಲಿ ಸ್ವಾವಲಂಬಿಯಾಗುವ ಕನಸು ಕಂಡಿತೋ ಅಂದೇ ಈ ವಿಚಾರ ಕುರಿತು ಸೌಧಿ ದೇಶಕ್ಕೆ ಸಡ್ಡೋಡೇಯಲು ಶುರು ಮಾಡಿದ್ದು. ವಾಡಿಕೆಯಂತೆ ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ, ತೈಲದ ಬೆಲೆ ಕುಸಿತವನ್ನು ತಡೆಯಲು ವಿಶ್ವದ ತೈಲ ಉತ್ಪಾದಿಸುವ ಎಲ್ಲಾ ದೇಶಗಳು ಕೆಲಕಾಲ ತೈಲ ಗಣಿಗಾರಿಕೆಯನ್ನು ಕಡಿಮೆ ಮಾಡುತ್ತವೆ. ಇದು ಪೂರೈಕೆ ಕಡಿಮೆಯಾದಷ್ಟು ಕೋರಿಕೆ ಹೆಚ್ಚಾಗಿ ಬೆಲೆ ಕುಸಿಯತಂತೆ ತಡೆಯುವ ಸರಳ ಸೂತ್ರ. OPEC (Organization of Petrolium Exporting Companies) ಎಂಬ ವಿಶ್ವದ ಅತಿ ಹೆಚ್ಚು ತೈಲ ಉತ್ಪಾದಿಸುವ ದೇಶಗಳ ಸಂಘದ ಅಧ್ಯಕ್ಷನಾಗಿರುವ ಸೌದಿ, 2014 ರ ನವೆಂಬರ್ನಲ್ಲಿ ವಾಡಿಕೆಯಂತೆ ಉತ್ಪಾದನೆಯನ್ನು ನಿಲ್ಲಿಸದೆ ತೈಲದ ಬೆಲೆಯಲ್ಲಿ ಭಾರಿ ಅಲ್ಲೊಲ್ಲ ಕಲ್ಲೊಲ್ಲವನ್ನು ಉಂಟುಮಾಡಿತ್ತು. ಈ ಕಿತಾಪತಿಯ ಹಿಂದಿದ್ದ ಮುಖ್ಯ ಕಾರಣ ಅಮೆರಿಕದ ಷೇಲ್ ತೈಲವನ್ನು ಉತ್ಪಾದಿಸುವ ಕಂಪನಿಗಳನ್ನು ಪಾಪರ್ ಮಾಡುವುದು ಹಾಗು ಜಾಗತಿಕ ಇಂಧನ ಉತ್ಪಾದಕರ ಕುರ್ಚಿಯಲ್ಲಿ ಅಮೆರಿಕವನ್ನು ಕೂರದಂತೆ ಮಾಡುವುದು. ಅಲ್ಲಿಯವರೆಗೂ ತೆಪ್ಪಗೆ ಕೂತಿದ್ದ ರಷ್ಯಾವೂ ಕೂಡ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆ ಎಡೆಬಿಡದೆ ತೈಲವನ್ನು ಉತ್ಪಾದಿಸಲು ಶುರುಮಾಡಿದಾಗಲೇ ನೋಡಿ ಪೆಟ್ರೋಲ್ ಡೀಸೆಲ್ ಗಳ ಬೆಲೆ ಊಹಿಸಲಾಗದ ಮಟ್ಟಿಗೆ ಕ್ಷೀಣಿಸಿದ್ದು. ಪರಿಣಾಮ ಜಾಗತಿಕ ಮಟ್ಟದಲ್ಲಿ 110 ರಿಂದ 120 ಡಾಲರ್ ಪ್ರತಿ ಬ್ಯಾರೆಲ್ ಇದ್ದ ತೈಲದ ಬೆಲೆ ಒಂದು ಹಂತದಲ್ಲಿ 20 ಡಾಲರ್ ಪ್ರತಿ ಬ್ಯಾರೆಲ್ ಬರುವ ಸನಿಹದಲಿತ್ತು! ತೈಲದ ಬೆಲೆ ಏನೋ ಕುಸಿಯಿತು. ಅಮೆರಿಕದ ಹಲವು ತೈಲ ಕಂಪನಿಗಳ ಜೋಳಿಗೆಗಳು ಬರಿದೂ ಕೂಡ ಆದವು. ಆದರೆ ಜೊತೆ ಜೊತೆಗೆ ಕುಸಿಯತೊಡಗಿದ್ದು ಸೌದಿಯ ತೈಲ ಕಂಪನಿಗಳು! ಕುರುಡು ಕಾಂಚಾಣ ಕುಣಿಯುವ ಭರದಲ್ಲಿ ತನ್ನವರನ್ನೇ ತುಳಿದು ಅಪ್ಪಚ್ಚಿ ಮಾಡತೊಡಗಿತ್ತು. ಪರಿಣಾಮ ಬಹಳಷ್ಟು ತೈಲ ಕಂಪನಿಗಳು ಸೌದಿಯ ನೆಲದಿಂದ ಕಾಲುಕಿತ್ತವು. (ಈ ಸಂದರ್ಭದಲ್ಲಿ ತೈಲದ ಬೆಲೆ ಅರ್ಧಕ್ಕಿಂತ ಹೆಚ್ಚು ಕುಸಿದರೂ ಭಾರತದಲ್ಲಿ ಮಾತ್ರ ಅದು ಪೈಸೆಗಳಲ್ಲಿ ಇಳಿತ ಕಂಡಿದ್ದು ಮಾತ್ರ ಚಿದಂಬರ ರಹಸ್ಯವೇ ಸರಿ.) ತನ್ನ ತುಘಲಕ್ ಬುದ್ದಿಯ ಅರಿವು ಕೊನೆಗೂ ಆದ ಮೇಲೆ ಒಮ್ಮಿಂದೊಮ್ಮೆಗೆ ಸೌಧಿಯ ತೈಲ ಸಚಿವ ಅಮೆರಿಕದ ಕದವನ್ನು ತಟ್ಟಿ ಆದದ್ದೆಲ್ಲ ಆಗಿಹೋಯಿತು, ಇನ್ಮುಂದೆ ಇಂಥ ತಲೆಕೆಡುಕ ವಿಚಾರಗಳು ಬಂದಾಗ ವಿಚಾರ ವಿಮರ್ಶೆ ಮಾಡಿ ಸಾಗೋಣ ಎಂಬಂತೆ ಪತ್ರಿಕಾ ಹೇಳಿಕೆಯನ್ನು ನೀಡಿದ್ದು.

ಇಷ್ಟೆಲ್ಲಾ ಹಿನ್ನಲೆಯೊಂದಿಗೆ 2016 ರ ಅಧ್ಯಕ್ಷೀಯ ಚುನಾವಣೆಯಲ್ಲಿ ದೇಶದ ಕಡುಬದ್ದ ವೈರಿಗಳಲ್ಲಿ ಒಂದಾಗಿ ಮಾಡಿಕೊಂಡಿದ್ದ ಟ್ರಂಪ್ ಅಧ್ಯಕ್ಷ ಗಾದಿಯನ್ನು ಏರಿದ ದಿನವಂತೂ ಸೌದಿಗರ ಪಾಲಿಗೆ ನೆಲವೇ ಅದುರಿ ಹೋಗಿತ್ತು.

ಸೌದಿ ಹಾಗು ಅಮೇರಿಕಾದ ನಡುವಿನ ಶಸ್ತ್ರಾಸ್ತ್ರ ಒಪ್ಪಂದ ಹೊಸತೇನಲ್ಲ. ಒಬಾಮ ಆಡಳಿತದಲ್ಲೇ ಈ ಒಪ್ಪಂದಕ್ಕೆ ಹಸಿರು ನಿಶಾನೆಯನ್ನು ತೋರಲಾಗಿತ್ತಾದರೂ ಕೆಲ ಅಂಶಗಳನ್ನು ಆ ಒಪ್ಪಂದದಲ್ಲಿ ಸೇರಿಸಲೇ ಬೇಡವೆಂಬ ವಾದ ಬಿಗಿಯಾಗಿದ್ದಿತು. ತಿಳಿದವನು ಬಲ್ಲನೆಂಬುವಂತೆ ಸೌದಿ ತಾನು ಆಮದು ಮಾಡಿಕೊಳ್ಳುವ ಹೆಚ್ಚಿನ ಯುದ್ಧ ಸಾಮಗ್ರಿಗಳನ್ನು ಅಲ್-ಖೈದಾ ಹಾಗು ಇತರ ಭಯೋತ್ಪಾದಕ ಗುಂಪಿಗೆ ಸರಬರಾಜು ಮಾಡಿರುವ ಸುಳಿವುಗಳಿದ್ದವು. ಅಲ್ಲದೆ ತನ್ನ ರಕ್ಷಣೆಗಿಂತ ಇತರರ ಮೇಲೆ ಆಕ್ರಮಣ ಮಾಡಲೇ ಈ ಯುದ್ಧ ಸಾಮಗ್ರಿಗಳು ಬಳಕೆಯಾಗಿರುವುದಕ್ಕೂ ಪುರಾವೆಗಳು ಸಿಕ್ಕವು. ಕೂಡಲೇ ಒಬಾಮ ಆಡಳಿತ ಒಪ್ಪಂದದಲ್ಲಿ ಕೆಲ ಯುದ್ಧ ಸಾಮಗ್ರಿಗಳನ್ನು ತೆಗೆದು ಹಾಕಿ ಇಂತಿಷ್ಟೇ ಸಾಮಗ್ರಿಗಳನ್ನು ‘ಬೇಕಾದರೆ ಖರೀದಿಸಬಹು’ ಎಂದು ಬೇಕು ಬೇಡವಾಗಿ ಹೇಳತೊಡಗಿತು. ಕೈಗೆ ಬಂದ ತುತ್ತು ಬಾಯಿಗೆ ಬರದೇ ಸೌದಿಗರ ಕೋಪಕ್ಕೆ ಕಾರಣವಾಯಿತು. ಪರಿಣಾಮ ಎಂದೋ ಆಗಿ ಹೋಗಬೇಕಿದ್ದ ಒಪ್ಪಂದ ಕುಂಟಲು ಶುರುವಾಹಿತು. ನಂತರ ಟ್ರಂಪ್ ಅಧಿಕಾರಕ್ಕೇರಿದ ಮೇಲಂತೂ ಅಮೆರಿಕದೊಡಗಿನ ಶಸ್ತ್ರಾಸ್ತ್ರ ಒಪ್ಪಂದ ಇನ್ನು ಕನಸೇ ಎನಿಸಿಕೊಂಡಿದ್ದ ಸೌದಿ ರಾಜರುಗಳಿಗೆ ಈಗ ಒಮ್ಮಿಂದೊಮ್ಮೆಲೆ ವೈಟ್ ಹೌಸ್ ನ ಮುದ್ರೆ ಅಕ್ಷರ ಸಹ ಸಿಹಿ ಕಡಲಿನಲ್ಲಿ ಮುಳುಗಿಸೆಬ್ಬಿಸಿದೆ. ಈ ಒಪ್ಪಂದದಲ್ಲಿ ಒಬಾಮ ಆಡಳಿತ ನಿಷೇದಿಸಿದ ಯುದ್ಧ ಸಾಮಗ್ರಿಗಳ ಜೊತೆಗೆ ಇನ್ನೂ ಹೆಚ್ಚಿನ ಅತ್ಯಾಧುನಿಕ ಶಸ್ತ್ರಾಸ್ತ್ರ ಗಳನ್ನು ಸೌದಿ ಅರೇಬಿಯಾಕ್ಕೆ ಅಮೇರಿಕ ಪೂರೈಸಲಿದೆ. ಪ್ರತಿಯಾಗಿ ಸೌದಿ ದೊರೆಗಳು ಅಮೆರಿಕದಲ್ಲಿ ಸುಮಾರು 40 ಬಿಲಿಯನ್ ಡಾಲರ್ ನಷ್ಟು ಹಣವನ್ನು ಇನ್ಫ್ರಾಸ್ಟ್ರಕ್ಚರ್ ಕ್ಷೇತ್ರದಲ್ಲಿ ಊಡುವ ಕನಸ್ಸನ್ನು ಬಿತ್ತಿ ಟ್ರಂಪ್ ನನ್ನ ಹಿರಿ ಹಿರಿ ಹಿಗ್ಗಿಸಿದ್ದಾರೆ.

'ಥಿಂಗ್ ಬಿಗ್' ಎಂಬೊಂದೇ ಘೋಷವಾಕ್ಯವನ್ನು ಜಪಿಸುತ್ತ ಸಾಗುತ್ತಿರುವ ಟ್ರಂಪ್ ನ ನಿರ್ಧಾರಗಳು ಅದೆಷ್ಟು ಪಕ್ವಗೊಂಡ ನಿರ್ಧಾರಗಳು ಎಂಬುದನ್ನು ಜಗತ್ತು ಕಾದು ನೋಡಬೇಕಿದೆ. ನೀವು ಮಾರುತ್ತಿರುವ ಯುದ್ಧ ಸಾಮಗ್ರಿಗಳನ್ನು ಸೌದಿ ಉಗ್ರ ಸಂಘಟನೆಗಳಿಗೆ ರವಾನಿಸುತ್ತಿದೆಯಲ್ಲ ಎಂದು ಪ್ರೆಶ್ನಿಸಿದರೆ 'ನೋ ವೇಸ್, ಇವುಗಳೆಲ್ಲ ಆ ದೇಶದ ಗಡಿ ರಕ್ಷಣೆಗೆ ಹಾಗು ISIS ನಂತಹ ಉಗ್ರ ಸಂಘಟನೆಗಳ ವಿರುದ್ಧ ಹೊರಡುವುದಕ್ಕೆ' ಎಂದು ಆತ ಸೌದಿಗರ ಪಕ್ಷವನ್ನೇ ತೆಗೆದುಕೊಳ್ಳುತ್ತಾನೆ. ಇರಾನ್ ನೊಟ್ಟಿಗಿನ ತನ್ನ ಸಂಬಂಧ ಎಣ್ಣೆ ಸೀಗೆಕಾಯಿ ಆಗಿರುವಾಗ, ಅಲ್ಲದೆ ಸೌದಿ ಹಾಗು ಇರಾನ್ ನ ಮಾತುಕತೆಗಳು ಭಾಗಶಃ ಮುನಿಸೇಕೊಂಡಿರುವ ಸೂಕ್ತ ಸಂದರ್ಭದಲ್ಲಿ ಇರಾನ್ ನ ಮೇಲಿನ ತನ್ನ ಹಳೆಯ ಸೇಡನ್ನು ಸೌದಿ ಮುಖಾಂತರ ತೀರಿಸಿಕೊಳ್ಳುವ ಹುನ್ನಾರವೂ ಇದರಿಂದೆ ಇರಬಹುದು. ಇಲ್ಲಿಯವರೆಗೂ ಸುಮಾರು ಹತ್ತರಿಂದ ಹನ್ನೆರೆಡು ಯುದ್ಧಗಳಲ್ಲಿ ಸೆಣೆಸಿ ಒಮ್ಮೆಯೂ ಸೋಲನ್ನು ಕಾಣದ ಇರಾನ್ ಎಂಬ ಭಲಿಷ್ಟ ದೇಶಕ್ಕೆ ಇದು ಅಷ್ಟೇನೂ ದೊಡ್ಡ ತಲೆನೋವೆನಿಸದಿದ್ದರೂ ಸುಖಾಸುಮ್ಮನೆ ಇಂತಹ ಕಲಹಗಳನ್ನು ಹುಟ್ಟುಹಾಕಿಕೊಳ್ಳಲು ಅದು ಬಯಸುವುದಿಲ್ಲ.



ಈ ಹಿಂದೆ ದ್ವಿತೀಯ ವಿಶ್ವಯುದ್ದಕ್ಕೆ ಕಾರಣವಾಗಿದ್ದ ಜಪಾನಿನ ಪರ್ಲ್ ಹಾರ್ಬರ್ ಧಾಳಿ ಅಮೇರಿಕ ಹೇಳಿ ಮಾಡಿಸಿಕೊಂಡಿತ್ತು ಎಂಬೊಂದು ಕಾನ್ಸ್ಪಿರಸಿ ಥಿಯರಿ ಇದೆ. ಆ ಮೂಲಕ ಅಮೇರಿಕ ಎಲ್ಲಡೆ ಕೋಲಾಹಲವನ್ನು ಹಬ್ಬಿಸಿ, ಯುದ್ಧ ಸಾಮಗ್ರಿಗಳ ಬೇಡಿಕೆಯನ್ನು ಹೆಚ್ಚಿಸಿ ವಿಶ್ವವನ್ನೇ ತನ್ನ ಮರುಕಟ್ಟೆಯನ್ನಾಗಿ ಮಾಡಿಕೊಂಡಿತು ಎಂಬೊಂದು ವಾದವಿದೆ. ಈ ಥಿಯರಿ ನಿಜವೋ ಸುಳ್ಳೋ ಆದರೆ ಅಮೇರಿಕಾದದ ನಗುಮುಖದ ಹಿಂದಿರುವ ಚಾಣಾಕ್ಷ ಬುದ್ದಿಯನ್ನು ಅಲ್ಲಗೆಳೆಯಲಾಗುವುದಿಲ್ಲ. ಪ್ರಸ್ತುತ ಟ್ರಂಪ್ ಆಡಳಿತವೂ ಇಂತದೆ ಒಂದು ಒಪ್ಪಂದವನ್ನು ಮಾಡಿಕೊಂಡು ಸೌದಿ ದೊರೆಗಳ ಹಣವನ್ನು ಪೀಕತೊಡಗಿದೆ. ಆದರೆ ಕೇವಲ ಬಡಾಯಿ ಕೊಚ್ಚುವುದಷ್ಟೇ ಟ್ರಂಪ್ ನ ಸಾಮರ್ಥ್ಯ ವೆಂದು ಅರಿತಿದ್ದ ಜಗತ್ತಿಗೆ ಆತನ ಇತ್ತೀಚಿನ ಕೆಲವು ನಿರ್ಧಾರಗಳು ಅಕ್ಷರ ಸಹ ಕಾದ ತುಪ್ಪವಾಗಿದೆ. ಇತ್ತಕಡೆ ಯುದ್ಧ ಸಾಮಗ್ರಿಗಳನ್ನು ಗೆದ್ದ ಖುಷಿಯಲ್ಲಿ ಬೀಗುತ್ತಿರುವ ಸೌದಿ ಅರೇಬಿಯಾ ತಾನೊಂದು ಕಾಣದ ಗುಂಡಿಯೊಳಗೆ ಬಿದ್ದಿರಬಹುದೇ ಎಂಬುದನ್ನೂ ಸಾವಕಾಶವಾಗಿ ಕೂತು ವಿಶ್ಲೇಷಿಸಬೇಕಿದೆ.