Saturday, June 27, 2020

ಪಯಣ - 3

'ಬೋಳಿಮಗ ನಿಮ್ ಅಪ್ಪಂಗ್ ಹೇಳು.... ನಿನ್ ಕಾಲ್ ಕಟ್ ಮಾಡಿ ನಾಯಿಗ್ ಆಕ್ತಿನಿ..' ಅಪ್ಪ ಚೀರತೊಡಗಿದ. ಊರಿಗೆ ಬಂದು ಒಂದೊಳ್ಳೆ ನಿದ್ರೆ ಮಾಡುವ ಕನಸು ಆದಿಗೆ ನನಸಾಗದ ಕನಸ್ಸಾಗಿಯೇ ಉಳಿದಿದೆ. ದಿನಾ ಬೆಳಗಾದರೆ ಹಾವು ಮುಂಗಸಿಯಂತೆ ಕಾದಾಡುವ ಇವರುಗಳನ್ನು ಕಂಡು ಭಯ, ಅಂಜಿಕೆ ಇತ್ತೀಚಿಗೆ ಏಕೋ ವಿಪರೀತವಾಗಿದೆ. ಅಪ್ಪನ ಸದ್ದನ್ನು ಕೇಳಿದರೇ ಎದೆ ಒಂದೇ ಸಮನೆ ಬಡಿದುಕೊಳ್ಳುತ್ತದೆ. ಜೀವನದ ಮೇಲೆಯೇ ಒಂದು ಬಗೆಯ ಜಿಗುಪ್ಸೆ ಮೂಡತೊಡಗುತ್ತದೆ. ಆಗೆಲ್ಲ ತಂಗಿ ಆತನಿಗೆ ಬಹುವಾಗಿ ನೆನಪಾಗುತ್ತಾಳೆ.

'ಅಯ್ಯ ನಿನ್ನ ನಾಲ್ಗೆ ಸೇದೋಗ.. ನಿಮ್ಮ್ ಅಪ್ಪ ಏನ್ ಸಂಪಾನ್ನ?.. ಮನೆ ಒಳ್ಗಡೆ ತೋರ್ಸೋ ನಿನ್ ಪೌರುಷನ ಹೊರ್ಗಡೆ ತೋರ್ಸು ಮುಂಡೇದೆ ' ಎಂದು ಅಮ್ಮ ಖಾರವಾಗಿಯೇ ಹೇಳಿದಳು.

'ನಿನ್ ಜಾತಿನಾ..' ಎಂದು ರಣಭಯಂಕರನಾದ ಅಪ್ಪ ಅಮ್ಮನನ್ನು ಒಡೆಯಲು ದಬದಬನೆ ನುಗ್ಗಿದ. ಅಷ್ಟರಲ್ಲಿ ಆದಿ ಎದ್ದು ಅಡುಗೆ ಮನೆಗೆ ಓಡಿ ಆತನನ್ನು ಎಳೆಯತೊಡಗಿದ. ಹುಚ್ಚೇರಿದ ಶ್ವಾನದಂತೆ ಹಿಂದೆಳೆದಷ್ಟೂ ಆತ ನುಗ್ಗಿ ನುಗ್ಗಿ ಮುನ್ನೆಡೆಯತೊಡಗಿದ. ಆದಿಗೆ ಭಯದೊಟ್ಟಿಗೆ ದುಃಖವೂ ಉಲ್ಬಣಿಸಿತ್ತು. ಅಷ್ಟರಲ್ಲಾಗಲೇ ಕಣ್ಣೀರ ಧಾರೆ ಉಕ್ಕಿ ಹರಿಯತೊಡಗಿತ್ತು.

'ಅಪ್ಪ.. ಬಿಡಪ್ಪ.. ನಿನ್ನ ದಮ್ಮಯ್ಯ ಅಂತೀನಿ.. ಬಿಡು' ಎಂದು ರೋದಿಸತೊಡಗಿದ ಆತನನ್ನು ಕಂಡು ಕೂಡಲೇ ಅಪ್ಪ ದೂರವಾಗಿ,

'ನೀನೂ ಬಳೆ ತೊಟ್ಕೊಂಡು ಹಿಂಗೇ ಇದ್ಬಿಡು..ಒಳ್ಳೆ ಹೆಂಗ್ಸ್ ಆಗೋದಲ್ಲೋ ನೀನೂ.. ಥು..' ಎನುತ ಮೂದಲಿಸಿ ಆತ ಹೊರನೆಡೆದ.

'ನೀನ್ಯಾಕೋ ಅಳ್ತಿಯಾ .. ಹೋಗ್ ಮಲಿಕೋ' ಎನುತ ಅಮ್ಮ ತನ್ನ ಕೆಲಸದಲ್ಲಿ ಮಗ್ನಳಾದಳು.

ಆದರೆ ಅಪ್ಪನ ಮಾತುಗಳು ಆದಿಯನ್ನು ನಾಚಿಕೆಯ ಕೂಪದೊಳಗೆ ತಳ್ಳಿದಂತೆ ಮಾಡಿದವು. ತಾನೊಬ್ಬ ಸಭ್ಯ ವ್ಯಕ್ತಿಯಾಗಿ ಊರಿನಲ್ಲಿ ನಾಲ್ಕಾರು ಜನಗಳಿಂದ ಗೌರವವನ್ನು ಗಳಿಸಿಕೊಳ್ಳಬೇಕು, ಅಲ್ಲ, ಇಡೀ ಪ್ರಪಂಚದಲ್ಲೇ ಗೌರವವನ್ನು ಗಿಟ್ಟಿಸಿಕೊಳ್ಳಬೇಕು,ಸಿನಿಮಾ ನಟನಾಗೋ, ಪ್ರಸಿದ್ಧ ಗಾಯಕನಾಗೋ, ಹೆಚ್ಚು ಹಣ ಸಂಪಾದಿಸುವ ಮಂತ್ರಿಯಾಗೋ, ಖಡಕ್ ಅಧಿಕಾರಿಯಾಗೋ ಅಥವಾ ಅಪ್ರತಿಮ ಕ್ರಿಕೆಟ್ ಆಟಗಾರನಾಗಿಯೋ ಒಟ್ಟಿನಲ್ಲಿ ತನ್ನ ನೋಡಲು ಜನರು ಮುಗಿಬೀಳಬೇಕು. ನೋವು ಹತಾಶೆಯನ್ನು ನೀಡಿದ ಸಮಾಜದ ಜನ ನನ್ನ ನೋಡಿ ಗಡಗಡನೆ ಕಂಪಿಸಬೇಕು. ನನ್ನ ಒಂದು ಮಾತು ವೇದವಾಕ್ಯವಾಗಬೇಕು ಎಂದು ಕನಸ್ಸನ್ನು ಕಾಣುತ್ತಿದ್ದ ಆದಿಗೆ ಅಪ್ಪನ ಮೂರೂ ಬಿಟ್ಟ ವರ್ತನೆ ಹಾಗು ಅಮ್ಮನ ಹಠಮಾರಿತನವನ್ನು ಕಂಡು ಸಿಟ್ಟು ವಿಪರೀತವಾಯಿತು. ವಿಕಾರವಾಗಿ ಕೂಗುತ್ತ ತನ್ನೆರೆಡು ಕೈಗಳಿಂದ ಕೂದಲುಗಳನ್ನು ಹಿಡಿದೆಳೆಯತೊಡಗಿದ.

'ನಿಂಗೇನಾಯಿತೋ ಮಾರಾಯ.. ಹೋಗ್ಲಿ, ಹೋಗ್ ಮುಖ ತೊಳ್ಕ, ತಿಂಡಿ ಮಾಡಂತೆ ' ಎಂದು ಅಮ್ಮ ಆದಿಯ ಅಂತರ್ಯುದ್ಧಕ್ಕೆ ಕಿಂಚಿತ್ತೂ ಬೆಲೆಯನ್ನು ಕೊಡದವಳಂತೆ, ಅಪ್ಪನ ಈ ಉಪಟಳ ಅತಿ ಸಾಮಾನ್ಯವಾದ ಸಂಗತಿಯೇನೂ ಎಂಬಂತೆ ವರ್ತಿಸತೊಡಗಿದಳು.ಅಕ್ಕಿ ರೊಟ್ಟಿ ಹಾಗು ತರಕಾರಿ ಸಾರಿನೊಟ್ಟಿಗೆ ಸಿಟ್ಟಿನಿಂದ ಬೇಡವೆಂದರೂ ಬಿಡದೆ ಸುರಿದ ತುಪ್ಪವನ್ನು ಬೆರೆಸಿ ತಿಂದು ಮನೆಯಿಂದ ಬಿರಬಿರನೆ ಹೊರನೆಡೆದ.

**

ಅದು ತಾನು ಚಿಕ್ಕಂದಿನಿಂದ ಓದಿ ಬೆಳೆದ ಶಾಲೆ. ಊರ ಹಿರಿಯ ಪ್ರಾಥಮಿಕ ಪಾಠಶಾಲೆ. ಏಳುಕೋಣೆಗಳ ತರಗತಿಗಳನ್ನು ಬಿಟ್ಟರೆ ಪ್ರವೇಶದ್ವಾರಕ್ಕೆ ಎದುರಾಗಿ ಸಿಗುವ ಎಂಟನೇ ಕೋಣೆಯೇ ಶಾಲೆಯ ಕಾರ್ಯಲಯ / ಆಫೀಸ್ ರೂಮ್. ಆಗೆಲ್ಲ ಈ ಆಫೀಸ್ ರೂಮಿನ ಒಳಗೆ ಹೋಗುವುದೇ ಒಂದು ಸಾಧನೆ ಎಂದುಕೊಂಡಿದ್ದ ಆದಿ ಹಾಗು ಆತನ ಗೆಳೆಯರು ಅದೆಷ್ಟೋ ಬಾರಿ ಕಿಟಕಿಯ ಮೂಲಕ ಕಳ್ಳರು ಇಣುಕುವಂತೆ ಅದರ ಪಕ್ಕಕ್ಕೆ ಇದ್ದ ಸಣ್ಣ ರೂಮಿನೊಳಗೆ ಇಣುಕುತ್ತಿದ್ದರು. ಅಲ್ಲಿ ಹಿಮಾಲಯ ಪರ್ವತವನ್ನು ಏರಿ ಸುಸ್ತಾಗಿ ವಿಶ್ರಮಿಸುವ ಅರ್ಥಾತ್ ನಿದ್ರೆಗೆ ಜಾರಿರುವ ಶಿಕ್ಷಕರನ್ನು ಕಂಡು ನಗುವ ಖುಷಿ ಅಪಾರವಾದುದ್ದಾಗಿತ್ತು. ಅಲ್ಲದೆ ಮಧ್ಯಾನದ ತಮ್ಮ ಈ ನಿದ್ರಾ ತಪಸ್ಸಿಗೆ ಭಂಗಬಾರದಿರುವಂತೆ ಮಕ್ಕಳ್ಳೆಲ್ಲರನ್ನೂ ಹೊರಕಳಿಸಿ ದಷ್ಟಪುಷ್ಟವಾಗಿರುವ ಒಂದಿಬ್ಬರು ಹುಡುಗರನ್ನು ಸ್ಕೂಲ ದೊಡ್ಡ ಗೇಟಿನ ದ್ವಾರಪಾಲಕರನ್ನಾಗಿ ಮಾಡಿ ಯಾರೊಬ್ರನ್ನೂ ಶಾಲೆಯ ಒಳಗೆ ಬಿಡದಂತೆ ಹೇಳುತ್ತಿದ್ದರು ಅಲ್ಲಿನ ಶಿಕ್ಷಕರು. ಆದರೆ ಆದಿ ಹಾಗು ಆತನ ಗುಂಪು ಮಾತ್ರ ಹೊಟ್ಟೆನೋವು ತಲೆನೋವೆಂಬ ಕಳ್ಳ ನೆಪವನ್ನೊಡ್ಡಿ ಶಾಲೆಯ ಒಳಗೆಯೇ ಇದ್ದು ಆಫೀಸ್ ರೂಮಿನ ಕಿರುಗಂಡಿಯ ಮೂಲಕ ಶಿಕ್ಷಕರ ವಿಭಿನ್ನ ಆಕೃತಿಗಳನ್ನು ನೋಡಿ ನಲಿಯುತ್ತಿದ್ದರು.

ಇದೀಗ ವರ್ಷಗಳೇ ಕಳೆದಿವೆ. ಹಳೆಯ ನೆನಪುಗಳು ಶಾಲೆಯ ಮುಂಬದಿಯ ತೆಂಗಿನ ಮರಗಳಂತೆ ಬೆಳೆದು ದಿಗಂತ ಮುಟ್ಟುವುದೊಂದೇ ಬಾಕಿ ಎನುವಂತೆ ಬೆಳೆದಿವೆ. ಗೇಟಿನ ಮೂಲಕ ಒಳಬಂದು ಬಲಕ್ಕೆ ತಿರುಗಿದರೆ ಏಳನೇ ತರಗತಿಯ ಹುಡುಗರು ಏನೋ ಒಕ್ಕೂರಲಿನಿಂದ ಓದುತ್ತಿದ್ದಾರೆ.

‘ಸತ್ಯ ನಿತ್ಯತೆಯ ನಿಯಮ. ಶಕ್ತಿಯನ್ನು ಸೃಷ್ಟಿಸಲೂ ಆಗದು. ನಾಶ ಪಡಿಸಲೂ ಆಗದು. ಅದನ್ನು ಒಂದು ಬಗೆಯಿಂದ ಮತ್ತೊಂದು ಬಗೆಗೆ ಪರಿವರ್ತಿಸಬಹುದಷ್ಟೆ’

ಸ್ವಲ್ಪ ಸುಮ್ಮನಾದ ನಂತರ ಶಿಕ್ಷಕರು ನೆನ್ನೆಯ ಮನೆಗೆಲಸವನ್ನು ತೋರಿಸುವಂತೆ ಹೇಳಿದರು. ನೆನ್ನೆಯಷ್ಟೇ ಹೊಸ ನೋಟ್ ಬುಕ್ಕನ್ನು ತಂದಿದ್ದ ಹುಡುಗನೊಬ್ಬನಿಗೆ ಮೆನೆಗೆಲಸ ಇದೇ ಎಂಬುದೇ ಮರೆತುಹೋಗಿದೆ. ಹೆದರುತ್ತಲೇ ಶಿಕ್ಷಕರ ಬಳಿಗೆ ಹೋದ ಆತ ಮುಂದೆ ಏನು ಮಾಡುವುದೆಂದು ತೋಚದೆ ಅಳುಕುತ್ತಲೇ ನೋಟ್ಬೊಕ್ಕನ್ನು ಅವರಿಗೆ ನೀಡಿದ. ಅದನ್ನು ನೋಡಿದ ಶಿಕ್ಷಕಿ ಕೂಡಲೇ ತನ್ನ ಕನ್ನಡಕವನ್ನು ಹಾಕಿಕೊಂಡರು. ಕಣ್ಣನ್ನು ಕೆರಳಿಸಿ ಹುಡುಗನನ್ನು ಧಿಟ್ಟಿಸತೊಡಗಿದರು. ನಂತರ ನೋಟ್ ಬುಕ್ಕಿನ ಮೊದಲ ಪೇಜಿನ ತುಂಬಾ ಬರೆದಿದ್ದ ಪದಗಳನ್ನು ಕ್ಲಾಸಿಗೆ ಕೇಳುವಂತೆ ಜೋರಾಗಿ ಓದಿ ಹೇಳಿದಳು. ಶಿಕ್ಷಕಿಯ ಕನ್ನಡಕ ಹಾಗು ಅದರೊಳಗಿದ್ದ ಬೆಂಕಿ ಕಾರುವ ಕಣ್ಣುಗಳನ್ನು ಕಂಡು ಹುಡುಗನಿಗೆ ಕಾಲುಗಳು ಒಂದೇ ಸಮನೆ ನಡುಗಹತ್ತಿದವು. ಆ ವರ್ಷ ತೆರೆಕಂಡ ಚಲನಚಿತ್ರಗಳ ಹೆಸರು ಹಾಗು ಅವುಗಳ ನಾಯಕ ನಾಯಕಿಯರ ಹೆಸರುಗಳನ್ನು ನೀಟಾಗಿ ನೋಟ್ಬುಕ್ಕಿನಲ್ಲಿ ಬರೆಯಲಾಗಿದ್ದಿತು. ಇಡೀ ಶಾಲೆ ನಗೆಯ ಹೊಳೆಯಲ್ಲಿ ತೇಲಿ ಹೋಯಿತು. ಹುಡುಗನಿಗೂ ನಗುವ ಮನಸ್ಸಾದರೂ ಕನ್ನಡಕದ ಒಳಗಿದ್ದ ಆ ಶಿಕ್ಷಕಿಯ ಪ್ರಖರ ಕಣ್ಣುಗಳು ಆತನ ಯಾವೊಂದು ಪ್ರತಿಕ್ರಿಯೆಯೂ ಹೊರಬಾರದಂತೆ ಹತ್ತಿಕ್ಕಿದ್ದವು. ಟೇಬಲ್ಲಿನ ಮೇಲಿದ್ದ ಬೆತ್ತದ ಕೋಲಿನಿಂದ ಕೈಮೇಲೆ ಒಂದೆರೆಡು ಪೆಟ್ಟುಗಳನ್ನು ಬಾರಿಸಿ ಅವರು ನೋಟ್ ಬುಕ್ಕನ್ನು ಹೊರಗೆಸೆದರು. 'ಹೋಗಿ ಹೋಂ ವರ್ಕ್ ಬರ್ಕೊ ಬಾ.. ಕತ್ತೆ' ಎಂದರು. ಪ್ರೀತಿಯಿಂದ ಕೊಂಡ ವರ್ಷದ ಮೊದಲ ಪುಸ್ತಕ ಗಾಳಿಯಲ್ಲಿ ತೇಲುತ್ತಾ ಕ್ಲಾಸ್ ರೂಮಿನ ಹೊರಬಂದು ಆದಿಯ ಮುಖಕ್ಕೆ ಬಡಿದಂತೆ ಭಾಸವಾಯಿತು. ಕಲ್ಪನಾ ಲೋಕದಲ್ಲಿ ಮುಳುಗಿದ್ದ ಆತನಿಗೆ ತನ್ನ ಬಾಲ್ಯವನ್ನು ನೆನೆದು ಮುಗುಳ್ನಗೆಯೊಂದು ಮೂಡಿತು.

ತಾನು ಅಂದು ಬರೆದಿದ್ದ ಚಲನಚಿತ್ರದ ಆ ಹೆಸರುಗಳು ಇಂದಿಗೂ ಆತನ ಮನದಲ್ಲಿ ಮರೆಯದೆ ಹಚ್ಚೋತ್ತಿವೆ.

'ಯಸ್..' ಗಡಸು ಧ್ವನಿಯಲ್ಲಿ ತನ್ನನ್ನು ಸಂಬೋಧಿಸಿ ಕರೆದ ಸದ್ದು ಸ್ಕೂಲಿನ PT ಮಾಸ್ಟರದ್ದು. ಕಪ್ಪಗೆ ಆರಡಿ ಉದ್ದದ ಆ ದೇಹಾಕಾಯ ಈಗಲೂ ಅದೇನೋ ಒಂದು ಬಗೆಯ ಭಯವನ್ನು ಹುಟ್ಟಿಸುತ್ತಿತ್ತು.

'ನಮಸ್ಕಾರ ಸಾರ್.. ಹೇಗಿದ್ದೀರಾ'

'ನಮಸ್ತೆ.. ಯಾರಪ್ಪ ನೀನು'

'ಮರ್ತ್ ಹೋಯ್ತಾ ಸಾರ್..ನಾನು ಆದಿ.. ಎಂಟ್ ವರ್ಷದ ಹಿಂದೆ ಇಲ್ಲೇ ಓದಿದ್ದೆ..'

'ಒಹ್ ಹೌದೇ.. ಒಳ್ಳೇದು.. ಎಲ್ಲಿದ್ದೀಯಪ್ಪ.. ಈಗ್ ಏನ್ ಮಾಡ್ತಾ ಇದ್ದೀಯ'

'ಡಿಗ್ರಿ ಓದ್ತಾ ಇದ್ದೀನಿ ಸಾರ್..'

'ಗುಡ್, ವೆರಿ ಗುಡ್. ನಮ್ ಸ್ಕೂಲ್ ಮಕ್ಳು ಹೀಗೆ ದೊಡ್ಡ್ ದೊಡ್ಡ್ ಕೋರ್ಸ್ ಓದಿ ನಮ್ ಶಾಲೆ ಹೆಸ್ರು ಉಳಿಸ್ಬೇಕು'

ಡಿಗ್ರಿಯನ್ನೂ ಒಂದು ದೊಡ್ಡ್ ಕೋರ್ಸ್ ಎನ್ನುವ ಅವರ ಮಾತನ್ನು ಕೇಳಿ ಆದಿಗೆ ತನ್ನ ಮೇಲೆಯೇ ಕರುಣೆ ಮೂಡಿತು!

'ಖಂಡಿತ ಸಾರ್. ನಿಮ್ಮಂತ ಶಿಕ್ಷಕರು ಈಗೆಲ್ಲಿ ಸಿಗ್ತಾರೆ.. ನಿಮ್ಮಂತ ಟೀಚರ್ಸ್ ಇರ್ದೆ ಹೋಗಿದ್ರೆ ನಾವೆಲ್ಲಿ ಇಷ್ಟ್ ಓದೋಕೆ ಆಗೋದು'

ಕೊಂಚ ಮುಗುಳ್ ನಕ್ಕ ಅವರು 'ಓದೋಕೆ ಒಳ್ಳೆ ಆಸಕ್ತಿ ಅನ್ನೋದು ಬೇಕಪ್ಪ .. ಅದ್ ಇಲ್ಲ ಅಂದ್ರೆ ಏನ್ ಮಾಡಿದ್ರೂ ಅಷ್ಟೇನೆ.. ನೀವೆಲ್ಲ ಆಸಕ್ತಿ ಕೊಟ್ಟು ಓದಿದಕ್ಕೆ ಈವಾಗ ಡಿಗ್ರಿ ತನಕ ಓದಿರೋದು' ಎಂದು 'ಅದ್ ಬಿಡಪ್ಪ, ಏನ್ ಬಂದಿದ್ದು ಈಗ? ಏನಾದ್ರು ಕೆಲ್ಸ ಇತ್ತ' ಎಂದು ಕೇಳಿದರು.

'ಹೌದು ಸಾರ್.. ಸ್ಟಡಿ ಸರ್ಟಿಫಿಕೇಟ್ ಬೇಕಿತ್ತು'

'ಹೌದೇ.. ಆದ್ರೆ ಹೆಡ್ ಮೇಡಂ ಇವತ್ತು ಬಂದಿಲ್ವಲ್ಲ..' ಎಂದು ಕೊಂಚ ಸುಮ್ಮನಾದ ನಂತರ

'ತೊಂದ್ರೆ ಇಲ್ಲ ಬಾ.. ನಾನೇ ಬರ್ದು ಸ್ಟ್ಯಾಂಪ್ ಹಾಕಿ ಕೊಡ್ತಿನಿ.. ಅದಕ್ಕಾಗಿ ಇನ್ನೊಂದ್ ದಿನ ಯಾಕ್ ಬರ್ತೀಯ' ಎಂದು ಆದಿಯನ್ನು ಆಫೀಸ್ ರೂಮಿನೊಳಗೆ ಕೊಂಡೊಯ್ದರು.

'ಯಾವ ಇಯರ್ ಅಪ್ಪ ನಿಂದು' ಎಂದು ತಮ್ಮ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತಾ ದೊಡ್ಡದಾದೊಂದು ರಿಜಿಸ್ಟರ್ ಬುಕ್ಕನ್ನು ತೆಗೆದು ನೋಡತೊಡಗಿದರು.

ಒಂದು ಕಾಲದಲ್ಲಿ ಶಾಲೆಗೇ ಬಾರದಿರಲು ನೆಪವೊಡ್ಡುತ್ತಿದ್ದ ಆದಿ ಈಗ ಪ್ರತಿ ದಿನವೂ ಆ ಶಾಲೆಗೆ ಬಂದು ಕೂರಲು ಅವಣಿಸುತ್ತಾನೆ. ಒಮ್ಮೆಲೇ ಇಡೀ ವ್ಯವಸ್ಥೆಯೇ ಬದಲಾಗಬಾರದೇಕೆ? ನಾವಿಲ್ಲಿಯವರೆಗೂ ಓದಿರುವುದನ್ನು ಯಾರಾದರೂ ಉಗ್ರಹೋರಾಟ ಮಾಡಿ ಅನರ್ಹಗೊಳಿಸಿ ನಮ್ಮೆಲ್ಲರನ್ನೂ ಪುನ್ಹ ಮೊದಲನೇ ತರಗತಿಯಿಂದ ಓದುವಂತೆ ಮಾಡಬಾರದೇಕೆ? ಆಗ ನನ್ನ ಆಗಿನ ಗೆಳೆಯರೆಲ್ಲರೂ ಮತೊಮ್ಮೆ ಸಿಗುವರು.

ಖುಷಿಯೂ ಬಹುಷಃ ಸಿಗುವಳು.

ಖುಷಿ. ಹೆಸರನ್ನು ನೆನಪಿಸಿಕೊಂಡಾಗಲೇ ಮೈಯ ರೋಮುಗಳೆಲ್ಲ ಎದ್ದು ನಿಂತವು ಆದಿಗೆ. ಇಂದು ತಾನು ನಿಂತಿದ್ದ ಜಾಗದಲ್ಲೇ ಸರಿಯಾಗಿ ಎಂಟು ವರ್ಷದ ಹಿಂದೆ ಕೊನೆಯ ಬಾರಿ ಆಕೆಯನ್ನು ನೋಡಿದ್ದ ನೆನಪು. ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯ ನಂತರ ಮಾರ್ಕ್ಸ್ ಶೀಟನ್ನು ತೆಗೆದುಕೊಳ್ಳಲು ಕೊನೆಯಬಾರಿ ಹೋದಾಗ ಕಾಕತಾಳೀಯವೆಂಬಂತೆ ಆಕೆಯೂ ಅದೇ ಸಮಯಕ್ಕೆ ಬಂದಿದ್ದಳು. ಕಪ್ಪು ಬಣ್ಣದ ಬಟ್ಟೆಯ ಮೇಲೆ ಹರಿಶಿನ ಬಣ್ಣದ ನಕ್ಷತ್ರಗಳೂ ಅಥವಾ ಹರಿಶಿನ ಬಣ್ಣದ ಬಟ್ಟೆಯ ಮೇಲೆ ಕಪ್ಪು ಬಣ್ಣದ ಚಿಟ್ಟೆಗಳೋ ನೆನಪಿಗೆ ಬರುತ್ತಿಲ್ಲ. ಆದರೆ ಆಕೆಯ ನೆನಪು ಬಾರದ ದಿನಗಳೇ ಇರಲಿಲ್ಲ. ಕಲ್ಲಾಟ. ಬಿಡುವು ಸಿಕ್ಕಾಗೆಲ್ಲ ಆಕೆಯ ಜೊತೆಗೆ ಹತ್ತಾರು ಕಲ್ಲುಗಳು. ಕರ ಕರ ಸದ್ದನ್ನು ಮಾಡುತ್ತಾ, ಒಂದೊಂದೇ ಕಲ್ಲನ್ನು ಗಾಳಿಗೆ ಎಸೆಯುತ್ತಾ, ಕೈ ಬೆವತು ನೆಲದ ಮೇಲಿದ್ದ ದೂಳೆಲ್ಲ ಸೇರಿ ಕೊಳಕುಗೊಂಡ ಕೈಗಳಲ್ಲೇ ಒಂದರಹಿಂದೊಂದರಂತೆ ಆಕೆಯೊಟ್ಟಿಗೆ ಆಡಿದ ಆಟಗಳು ಅದೆಷ್ಟೋ. ಕಡೆಯ ಪಕ್ಷ ಅಂದಿನ ಒಂದೆರೆಡು ಕಲ್ಲುಗಳನ್ನು ನಾನು ಇಂದಿಗೂ ಕಾಪಾಡಿಕೊಂಡು ಬರಬೇಕಿತ್ತು ಎಂದುಕೊಳ್ಳುತ್ತಾನೆ ಆದಿ.

'ಇಲ್ಲಿದೆ ನೋಡು.. ಸಿಗ್ತು ಬಿಡು..' ಎಂದರು ಮೇಷ್ತ್ರು.

ಆದಿ ತನ್ನ ಹೆಸರಿನ ಪೇಜಿನಲ್ಲೇ ಇದ್ದ ಖುಷಿಯ ಹೆಸರನ್ನು ನೋಡಿದ. ಖುಷಿ, ರೋಲ್ ನಂಬರ್ 36.

ತನ್ನ ಬಳಿಯಿದ್ದ ಸ್ಟಡಿ ಸರ್ಟಿಫಿಕೇಟ್ ನ ಕಾಪಿಯನ್ನು ಅವರಿಗೆ ನೀಡಿದ ಆದಿ. ಅತ್ಯಂತ ನಾಜೂಕಾಗಿ ಏಕಾಗ್ರತೆಯಿಂದ ಅದನ್ನು ಬರೆದು ಶಾಲೆಯ ಸ್ಟ್ಯಾಂಪ್ ನ್ನು ಹಾಕಿ ತಮ್ಮದೇ ಸಹಿಯನ್ನು ಅದರಲ್ಲಿ ತಿದ್ದಿ ಕೊಟ್ಟರು. ಆಗಿನ ಬ್ಯಾಚಿನಿಂದ ಉಳಿದಿರುವ ಏಕೈಕ ಶಿಕ್ಷಕರು ಇವರು ಮಾತ್ರ ಎಂದು ಏಕೋ ಆದಿಯ ಮನಸ್ಸು ಕಸಿವಿಸಿಯಾಯಿತು. ಅವರಿಗಾಗಿ ಒಂದು ನೂರರ ನೋಟನ್ನು ಕೊಡುವ ಮನಸ್ಸಾದರೂ ಎಲ್ಲಿ ಅಬ್ಬರಿಸಿ ಕಿವಿಯಿಂಡುವರೋ ಎಂಬ ಭಯದಿಂದ ಆತ ಸುಮ್ಮನಾದ.

'ಸರಿ ಸಾರ್, ಬರ್ತೀನಿ. ತುಂಬ ಧನ್ಯವಾದ ' ಎಂದೇಳಿ ಆದಿ ಆಫೀಸ್ ರೂಮಿನಿಂದ ಹೊರನೆಡೆದ.

ಆಫೀಸ್ ರೂಮಿನ ಪಕ್ಕದಲ್ಲಿದ್ದ ಕಿಟಕಿಯ ಕಿಂಡಿ ಈಗಲೂ ಹಾಗೆಯೆ ಇದೆ. ಒಮ್ಮೆ ಅದರ ಮೂಲಕ ನೋಡುವ ಮನಸ್ಸಾಗಿ ಅದರ ಬಳಿಗೆ ಹೋದರೂ ಏಕೋ ಇಣುಕಿ ನೋಡುವ ಧೈರ್ಯ ಮಾತ್ರ ಸಾಲಲಿಲ್ಲ. ಹಾಗೆಯೇ ಮುನ್ನೆಡೆದು ತಾನು ಓದಿದ ತರಗತಿಗಳನ್ನೆಲ್ಲ ಒಳಗೆ ಕಣ್ಣಾಯಿಸಿ ಖುಷಿಯೊಟ್ಟಿಗೆ ಕಲ್ಲಾಟವಾಡುತ್ತಿದ್ದ ಜಾಗದಲ್ಲಿ ತುಸುಹೊತ್ತು ಸುಮ್ಮನೆ ಕೂತ.

****

‘ಹಾಯ್.. ಅವತ್ತು ನೀವ್ ಹೇಳಿದ್ದ ಬಿಸಿನೆಸ್ ಪ್ಲಾನ್ ಎಕ್ಸಲೆಂಟ್ ಆಗಿತ್ತು. Really a very good concept! You should keep working on it…’ ಎಲ್ಲಿಂದಲೋ ಪ್ರತ್ಯಕ್ಷನಾದವನಂತೆ ಲೊಕೇಶನ ಬಳಿಗೆ ಬಂದು ಹೇಳಿದ ಆದಿ.

ಒಮ್ಮೆ ಸೂಕ್ಶ್ಮವಾಗಿ ಆತನನ್ನು ಗಮನಿಸಿದ ಲೋಕೇಶ ‘ಹೌದು ಬಿಡಪ್ಪ.. ಇಡೀ ಕ್ಲಾಸ್ಗೆ ಗೊತ್ತಾಗ್ಲಿಲ್ಲ ಇನ್ ನಿಂಗೆ ಎಲ್ಲ ಗೊತ್ತಾಯ್ತ..? ಸುಮ್ನೆ ಅಟ್ಟ ಏರ್ಸ್ಬೇಡ..' ಆದಿಯ ಮಾತಿಗೆ ತೀರಾ ಉಡಾಫೆಯ ಉತ್ತರವನ್ನು ಕೊಟ್ಟ ಲೋಕೇಶ.

ತನ್ನ ಬಹುವಚನದ ಪ್ರೆಶ್ನೆಗೆ ಲೊಕೇಶನ ಏಕವಚನದ ಉತ್ತರ ಕೊಂಚ ಸಿಟ್ಟು ಮೂಡುವಂತೆ ಮಾಡಿದರೂ ಆದಿ ಸುಮ್ಮನಾದ.

'Zuckerberg ಫೇಸ್ಬುಕ್ ಕಂಡುಹಿಡಿದಾಗಲೂ ಕೆಲವು ಮಂದಿ ಹೀಗೆಯೇ ಅಂದಿದ್ದರು.. ನಿಮ್ಮ ಐಡಿಯಾ ಅದಕ್ಕೇನೂ ಕಮ್ಮಿ ಇಲ್ಲ..' ಈ ಬಾರಿ ಆದಿ ಬೇಕಂತೆಲೆ ಆತನನ್ನು ಅಟ್ಟಕ್ಕೇರಿಸಿದ.

ಆದರೆ ಲೋಕೇಶ ಈ ಬಾರಿ ಸೀರಿಯಸ್ನಾದ. ಆತನ ಮುಖ ಗಂಟುಕಟ್ಟಿತು. ಕೈಗಳೆರೆಡು ಪ್ಯಾಂಟಿನ ಜೇಬಿನೊಳಗೆ ಹೋದರೆ ಬುಜಗಳೆರಡು ಮೇಲೆದ್ದವು.

'I know bro, ಅದು ಒಳ್ಳೆ ಕಾನ್ಸೆಪ್ಟ್ ಅಂತ. ಆದ್ರೆ ಏನ್ ಮಾಡೋದು ಕೆಲವ್ರಿಗೆ ಅದೆಲ್ಲ ಅರ್ಥ ಆಗಲ್ಲ. ಅದೆಷ್ಟ್ ಜನ ಎಂಜಿನೀರ್ಸ್ ಇಂದು ಸರಿಯಾದ ಕೆಲ್ಸ ಸಿಗ್ದೆ ಬಿಪಿಒ, ಕಾಲ್ ಸೆಂಟರ್ ಗಳಲ್ಲಿ ಕೆಲ್ಸ ಮಾಡ್ತಾ ಇದ್ದಾರೆ. ಅವ್ರ ತಪ್ಪು ಅಲ್ಲಿ ಏನೂ ಇರಲ್ಲ. ಎಲ್ಲ ನಮ್ಮ್ ಸಿಸ್ಟಮ್ ಪ್ರಾಬ್ಲಮ್ ಅಷ್ಟೇ. ಸ್ಟೇಟ್ ಗೆ ಒಳ್ಳೆ ಕಾಲೇಜು ಅಂತಾರೆ ಆದ್ರೆ ಪ್ಲೇಸ್ಮೆಂಟ್ಸ್ ಗೆ ಒಳ್ಳೆ ಕಂಪನಿ ಕರೆದುಕೊಂಡು ಬರೋ ತಾಕತ್ತ್ ಇರಲ್ಲ. 100% ರಿಸಲ್ಟ್ ಅಂತಾರೆ ಆದ್ರೆ ಅಲ್ಲಿ ಪಾಸಾದ ಹಾರ್ಡ್ವೇರ್ ಇಂಜಿನಿಯರ್ ಅವ್ರ ಅಪ್ಪನಾಣೆ ಗೊತ್ತಿರದ ಸಾಫ್ಟ್ವೇರ್ ಕೆಲ್ಸ ಮಾಡೋಕ್ಕೆ ಹೇಳ್ತಾರೆ. ಇಲ್ಲಿ ವಿಷ್ಯ ಇರೋದು ರಿಸೋರ್ಸ್ ಗಳನ್ನು ಅಲೋಕೇಟ್ ಮಾಡೋಕಡೆ. ಸರಿಯಾದ ವಿದ್ಯಾರ್ಥಿಗೆ ಸರಿಯಾದ ಡೆಸ್ಟಿನೇಷನ್ ರೀಚ್ ಮಾಡಿಸೋ ಒಂದು ಗೈಡಿಂಗ್ ಪಾತ್ ಬೇಕಷ್ಟೆ. ವಾಟೆವರ್, ಸದ್ಯಕ್ಕೆ ಅದೆಲ್ಲ ನನ್ನಿಂದ ಅಂತೂ ಸಾಧ್ಯ ಇಲ್ಲ. As of now I’m concentrating on something else..' ಎಂದು ಸುಮ್ಮನಾಗುತ್ತಾನೆ.

'ಬಟ್ ನೀವೇನಾದ್ರು ಹಾಗೆ ಟ್ರೈ ಮಾಡೋದಿದ್ರೆ ನನ್ನ 100% ಸಪೋರ್ಟ್ ಇರುತ್ತೆ ' ಎಂದು ಮುಗುಳ್ ನಕ್ಕ ಆದಿ.

'ಥಾಂಕ್ ಯು ಬ್ರೋ ' ಎಂದ ಲೋಕೇಶ ಕಾಲೇಜಿನ ಟೆರೇಸಿನ ಮೇಲಿಂದ ಅಂತ್ಯವಿರದ ಅನಂತದಂತೆ ಚಾಚಿದ್ದ ಹಸಿರುಸಿರಿಯನ್ನೇ ನೋಡತೊಡಗುತ್ತಾನೆ. ಆದಿಶೇಷನೂ ಆಕೆಡೆಗೆ ಮೊಗ ಮಾಡುತ್ತಾನೆ.

'If you don’t mind, ನಿನ್ನ್ ಹತ್ರ ಒಂದು ಪ್ರೆಶ್ನೆ ಕೇಳ್ಬೇಕಿತ್ತು' ಲೋಕೇಶ ಕೇಳುತ್ತಾನೆ

'Sure..'

'ನೀನು ಯಾವಾಗಲು ಕ್ಲಾಸ್ ರೂಮಿನಲ್ಲಿ ಅಪ್ಸೆಟ್ ಆಗಿರ್ತಿಯ ಏಕೆ.. I have seen you crying many times..'

ಲೊಕೇಶನ ಅಚಾನಕ್ ಪ್ರೆಶ್ನೆಗೆ ಆದಿಗೆ ಉತ್ತರ ಬಾರದಂತಾಗಿ ಗಂಟಲು ಹಿಡಿದಂತಾಗುತ್ತದೆ. ಮುಂದೆ ಎಂದು ಮಾಡಬೇಕೆಂದು ತೋಚದೆ,

'Its nothing..' ಎಂದ ಆತ 'ಕ್ಲಾಸಲ್ಲಿ ಸಿಗೋಣ..' ಎನುತ ಅಲ್ಲಿಂದ ಬಿರಬಿರನೆ ನೆಡೆದು ಹೋಗುತ್ತಾನೆ.

ಅದೇ ಸಮಯಕ್ಕೆ ಈಕಡೆಯಿಂದ ಬಂದ ನನ್ನ 'ಹಾಯ್..' ಗೂ ಉತ್ತರಿಸದೆ ತಲೆ ಕೆಳಗಾಕಿಕೊಂಡು ಆತ ಟೆರೇಸಿನ ಮೆಟ್ಟಿಲಿನಿಂದಿಳಿದ.

'ಏನ್ ಎಳ್ದಪ್ಪ ಪುಣ್ಯಾತ್ಮ.. ಅವನ್ಯಾಕೆ ಹಾಗ್ ಹೊರಟೋದ' ಎಂದು ಲೊಕೇಶನನ್ನು ಕೇಳಿದೆ.

'ಏನಿಲ್ಲ ಬಿಡು.. ಬೈ ದ ವೆ ನಿನ್ನ್ ಹತ್ರ ಒಂದ್ ವಿಷ್ಯ ಮಾತಾಡ್ಬೇಕಿತ್ತು. ಗಲ್ಫ್ ದೇಶಗಳಲ್ಲಿ ಹೆಚ್ಚಾಗಿ ಉಪಯೋಗಿಸೋದು ಈಜಿಪ್ಟ್ and ಬ್ರೆಜಿಲ್ ಕಾಫಿ ಯು ನೋ ..'

‘So..?!’ ಎಂದ ನನಗೆ ಕೊಂಚ ದಿಗ್ಭ್ರಮೆಯಾಯಿತು.

‘ಅವ್ರಿಗೆ ನಮ್ಮ ಮಲೆನಾಡಿನ ಅಚ್ಚ ಕಾಫಿ ರುಚಿ ಗೊತ್ತಿರೋದೇ ಇಲ್ಲ ಮಚಿ. ಹುರಿದ ಪ್ಯೂರ್ ಕಾಫಿ ಬೀಜಕ್ಕೆ ಚಕೋರಿ ಪುಡಿಯನ್ನಷ್ಟೇ ಮಿಕ್ಸ್ ಮಾಡಿ ಆ ಸುಹಾಸನೆಭರಿತ ನಮ್ಮ ನ್ಯಾಚುರಲ್ ಕಾಫಿ ಎಲ್ಲಿ, ಗಾಜಿನ ಡಬ್ಬಿಯೊಳಗೆ ಹಕ್ಕಿಯ ಇಕ್ಕೆಗಳಂತೆ ಕಾಣುವ ಕಪ್ಪಾದ ಆ ಮಣ್ಣಿನ ಪುಡಿಗಳೆಲ್ಲಿ? ನಮ್ಮ್ ಕಾಫಿ, ನಮ್ಮ್ ಹೆಮ್ಮೆ. ಅಲ್ದೆ ಇಲ್ಲಿ ನಮ್ಮವರು ಐವತ್ತು ಕೆಜಿಯ ಒಂದು ಮೂಟೆಯಷ್ಟು ಕಾಫಿಯಲ್ಲಿ ಗಳಿಸೋದು ಅಮ್ಮಮ್ಮ ಎಂದ್ರೆ ಎಂಟರಿಂದ ಒಂಬತ್ತು ಸಾವಿರ. ಇನ್ನು ಖರ್ಚು-ಗಿರ್ಚು ಎಲ್ಲ ಕಳೆದು ಸಿಗೋದು ಹೆಚ್ಚೆಂದರೆ ಐದೇ ಐದು ಸಾವಿರ.. ಇದನ್ನ ಫಾರಿನರ್ಸ್ ಕೇವಲ 10% ಕಾಫಿಯಲ್ಲೇ ದುಡೀತಾರೆ ಮಚಿ! ಅಂದರೆ ಇಲ್ಲಿನ ಐವತ್ತು ಕೆಜಿ ಬ್ಯಾಗು ಅಲ್ಲಿ ಕಡಿಮೆ ಅಂದ್ರೂ 25 ಸಾವಿರ ರೂಪಾಯಿಗಳಿಗೆ ವ್ಯಾಪಾರ ಆಗುತ್ತೆ! ಕಸ್ಟಮ್ಸ್, ಷಿಪ್ಮೆಂಟ್ ಅಂತ ಎಲ್ಲ ಕಳದ್ರು ಒನ್ ಟು ಡಬಲ್ ಲಾಭ ಇದೆ. ಮೇಲಾಗಿ ಇಂಥಾ ಒಂದು ಬಿಸಿನೆಸ್ ಮಾಡೋದ್ರಿಂದ ನಮ್ಮ ಸಣ್ಣ ಹಾಗು ಅತಿ ಸಣ್ಣ ಕಾಫಿ ರೈತರನ್ನು ಉತ್ಕೃಷ್ಟ ಮಟ್ಟದ ಸಾವಯವ ಬೆಳೆಯನ್ನು ಬೆಳೆಯಲು ಉತ್ತೇಜಿಸಬಹುದಲ್ಲದೆ ಅವರ ಬೆಳೆಗೆ ಇಲ್ಲಿನ ಮಾರುಕಟ್ಟೆಗೂ ಹೆಚ್ಚಿನ ಬೆಲೆ ಸಿಗಲ್ವಾ?’

'ಬಾಸ್, ನಿನ್ನ ಕೈ ಮುಗೀತಿನಿ. ನೀನು ಸಿಯಮ್ಮೋ ಪಿಯಮ್ಮೋ ಆಗ್ಬೇಕಾದವನು ಇಲ್ಲಿ ಟೈಮ್ ವೇಸ್ಟ್ ಮಾಡ್ತಾ ಇದ್ದೀಯ ಅನ್ಸುತ್ತೆ. ಪ್ಲೀಸ್ ಚೇಂಜ್ ಯುವರ್ ಡೆಸ್ಟಿನೇಷನ್' ಎಂದಾಗ ಲೋಕೇಶ ಆತ್ಮಾಭಿಮಾನದ ನಗೆಯನ್ನು ಬೀರತೊಡಗಿದ.

'ತತ್ ನನ್ನ್ ಮಗ್ನೆ, ನಗಾಡೋದು ಬೇರೆ ನೋಡು. ಮಾಡೋಕ್ ಏನ್ ಕೆಲ್ಸ ಇಲ್ವಾ ನಿಂಗೆ. ಅಲ್ಲ, ಮನೇಲಿ ಕಷ್ಟ ಪಟ್ಟು ಓದೋ ಆಸಾಮಿ ಅಂತ ಕಳ್ಸಿದ್ರೆ ಇವ್ನ್ ಇಲ್ಲಿ ಬಿಸಿನೆಸ್ ಮಾಡ್ತಾನಂತೆ. ಲೋ ಮಹರಾಯ ಇನ್ನೂ ಟೈಮ್ ಉಂಟಪ್ಪ ಬಿಸಿನೆಸ್ ಮಾಡೋಕ್ಕೆ. ಮೊದ್ಲು ಈ ಕಾಲೇಜ್ ಅನ್ನೋ ಬಿಸಿನೆಸ್ ಅನ್ನು ಸರಿಯಾಗಿ ಮುಗ್ಸು. ಆಮೇಲೆ ನೋಡೋಣಂತೆ ನಿನ್ನ ಈ ಓವರ್ಸೀಸ್ ಬಿಸಿನೆಸ್ ಪ್ಲಾನ್ನ.' ಎಂದಾಗ ಆತನ ಮುಖ ಸೆಪ್ಪಗಾಯಿತು. ಸಿಟ್ಟಾದರೆ ಆಗಲಿ ಎಂದು ಸುಮ್ಮನಾದೆ.

'ಸರಿ ಬಿಡಪ್ಪ, ನಿಮ್ಗೆಲ್ಲಾ ನನ್ನ್ ಪ್ಲಾನ್ ಬಗ್ಗೆ ಎಲ್ಲಿ ಅರ್ಥ ಆಗುತ್ತೆ. zukerber ಏನ್ ಓದ್ ಮುಗ್ಸಿನೇ ಫೇಸ್ಬುಕ್ ಇನ್ವೆಂಟ್ ಮಾಡಿದ್ನ?'

ತುಸು ಹೊತ್ತಿನ ಮೊದಲು ಆದಿಯೇನಾದರೂ ಆ ಫೇಸ್ಬುಕ್ ಪಿತಾಮಹನ ಹೆಸರನ್ನು ಹೇಳಿರದಿದ್ದರೆ ಖಂಡಿತವಾಗಿಯೂ ಈ ನಾಮಪದ ನಮ್ಮ ಸಂಭಾಷಣೆಯಲ್ಲಿ ಮೂಡುತ್ತಿರಲಿಲ್ಲ!

'ಗುರುವೇ ತಮ್ಗೆ ಸಾಷ್ಟಾಂಗ ನಮಸ್ಕಾರ. ನಿಮ್ಮ್ ಅತ್ತೆ ಪಾಠ ಉಂಟು ಬಾ ಬೇಗ ಹೋಗಿ ಮಲ್ಗೋಣ.. ಅಲ್ಲಿ ನಿದ್ರೇಲಿ ಕನ್ಸ್ ಕಾಣ್ತಾ Zukerburg ನ ಕೇಳಂತೆ ' ಎಂದು ನಾನು ಟೆರೇಸ್ನಿಂದ ಕೆಳಗಿಳಿದೆ. ತಲೆಯನ್ನು ಕೆಳಗಾಕಿಕೊಂಡು ಲೋಕೇಶ ಶೂನ್ಯವನ್ನು ದೃಷ್ಟಿಸುವಂತೆ ನಿಂತಿದ್ದ.

ಆದಿ ಮೂವರಿಗೂ ಮೊದಲೇ ಸೀಟನ್ನು ಹಿಡಿದಿಟ್ಟಿದ್ದ. ನಾನು ಕೂತ ಎಷ್ಟೋ ಹೊತ್ತಿನ ನಂತರ ಲೋಕೇಶ ಕ್ಲಾಸ್ಸಿಗೆ ಬಂದ.

'ಮಚಿ, ಬಿಸಿನೆಸ್ ಕನ್ಫರ್ಮ್ಡ್. ನೆಕ್ಸ್ಟ್ ವೀಕ್ ಕಾಫಿ ಸ್ಯಾಂಪಲ್ ಅನ್ನು ಕಳಿಸ್ತಾ ಇದ್ದೀನಿ!'



****



ಈ ಸಿನಿಮಾ ಹಾಡುಗಳೇ ಒಂತರ ವಿಚಿತ್ರ. ಮೊದಮೊದಲು ತೀರಾ ಸಾಧಾರಣವೆನಿಸುವ ಹಾಡುಗಳು ಕೇಳುತ್ತಾ ಹೋದಂತೆ ಮನಸ್ಸಿಗೆ ಬಹಳ ಹಿಡಿಸಿಬಿಡುತ್ತವೆ. ಅದರೆ ಅದನ್ನೇ ಅತಿಯಾಗಿ ಕೇಳಿದರೆ ಅಮೃತವೂ ವಿಷವಾಗುವಂತೆ ಸಾಕು ಸಾಕೆನಿಸಿ ಮತ್ತೆಂದೂ ಕೆಳಬಾರದೇನೋ ಎನ್ನುವಷ್ಟು ಬೊರೊಡೆಯುತ್ತದೆ. ಆದರೆ ಈ ಹಿಂದೂಸ್ತಾನಿ ಸಂಗೀತವಿದ ಜಾದುವೆ ಬೇರೆ. ದಿನ, ರಾತ್ರಿ ಎನ್ನದೆ ಯಾವುದೇ ಸಮಯದಲ್ಲೂ ಯಾವ ಭಾವದಲ್ಲೂ ಸರಿಯೇ, ಕೇಳುತ್ತಾ ಹೋದರೆ ಆಧ್ಯಾತ್ಮಿಕ ತಪಸ್ಸಿಗೆ ಕೂತಂತೆ ಸುಖದ ಮತ್ತಿನಲ್ಲಿ ತೇಲಿ ತೇಲಿ ಮಾಯವಾಗುವುದಂತೂ ಸುಳ್ಳಲ್ಲ. ಆ ಸಂತೋಷಕ್ಕೆ ಪಾರವೇ ಇರುವುದಿಲ್ಲ. ರಾಗ ತಾಳ ಗಮಕಗಳೊಟ್ಟಿಗೆ ಮಧುರ ಧ್ವನಿಯೊಂದು ಸೇರಿದರಂತೂ ಸ್ವರ್ಗಕ್ಕೇ ಮೂರೇ ಗೇಣು.

'ಏನ್ ಕೇಳ್ತಿದ್ದೀಯ..?' ಪಕ್ಕದಲ್ಲಿ ಬಂದು ನಿಂತ ಆದಿಯ ಪ್ರೆಶ್ನೆ ನನಗೆ ಕೇಳದಂತಾಯಿತು. ಕಾರಿಡಾರಿನ ಪ್ಯಾರಾಫಿಟ್ ಗೋಡೆಗೆ ನನ್ನ ಕೈಯನ್ನು ಒರಗಿಸಿಕೊಂಡು ಇಯರ್ ಫೋನುಗಳೆರಡನ್ನೂ ಕಿವಿಗೆ ಹಾಕಿಕೊಂಡು ಭೀಮ್ ಪಲಾಸಿ ರಾಗವನ್ನು ಹೈ ವೊಲ್ಯೂಮ್ ನಲ್ಲಿ ನಾನು ಕೇಳುತ್ತಿದ್ದೆ. ತಿಂಗಳುಗಳ ಒಡನಾಟ ನಮ್ಮಲ್ಲಿ ಈಗ ಹೋಗು ಬಾ ಎನ್ನುವ ಮಟ್ಟಕ್ಕೆ ಬೆಳೆದಿದ್ದಿತು.

'ಏನಂದೆ?' ಇಯರ್ ಫೋನೊಂದನ್ನು ತೆಗೆದು ನಾನು ಕೇಳಿದೆ.

'ಯಾವ್ ಸಾಂಗ್ ಕೇಳ್ತಾ ಇದ್ದೀಯ ಅಂದೇ'

'ಸಾಂಗ್ ಎಲ್ಲ ಅಲ್ಲ, ರಾಗ ಕೇಳ್ತಾ ಇದ್ದೀನಿ'

'ಯಾರ್ ಹಾಡಿರೋದು'

'ಮೈ ಫವೆರೆಟ್, ಕೌಶಿಕಿ ಚಕ್ರಬೊರ್ತಿ'

'ಒಹ್.. ಬಂಗಾಳಿ ಸಿಂಗರ್'

ಹಿಂದೂಸ್ತಾನಿ ಸಂಗೀತವನ್ನು ಕೇಳಿ ಆಸ್ವಾದಿಸುವವರಿಗೆ ತಾವುಗಳು ನೂರರಲ್ಲಿ ಒಬ್ಬರು ಎಂಬೊಂದು ಸಣ್ಣ ಅಹಃ ಇರುತ್ತದೆ. ಹಾಗಿರುವಾಗ ಎದುರಿಗಿರುವವರು ಹೀಗೆ ಹಿಂದೂಸ್ತಾನಿ ಸಂಗೀತಗಾರರ ಹೆಸರೊಂದನ್ನು ಹೇಳಿ, ಆ ಗಾಯಕ ಅಥವಾ ಗಾಯಕಿಯ ಊರು ಅಥವಾ ಸ್ಥಳದ ಬಗ್ಗೆ ಹೇಳಿದರಂತೂ ಆಗುವ ಆನಂದ ಹೇಳತೀರದು.

'ಯಸ್.. ನೀನೂ ಅವ್ರನ್ನು ಕೇಳ್ತಿಯಾ?'

'ಹೌದು, ಆಗಾಗ.. ತುಂಬಾನೇ ಹೆಚ್ಚಿನ ಸಂಗೀತ ಜ್ಞಾನ ಇರುವವರು ಆಕೆ.. ವಾಯ್ಸ್ ಅಂತೂ ಮಾರ್ವೆಲಸ್!' ಎಂದ ಆದಿ

ತುಸು ಸಮಯದ ನಂತರ,

'ನಾಲ್ಕ್ ಲೈನಿನ ಮೂವಿ ಸಾಂಗ್ಸ್ ಹಾಡಿಗೇ ಸಂಗೀತದ ಆ ಪ್ರಶಸ್ತಿ ಈ ಪ್ರಶಸ್ತಿ ಅಂತ ತಗೋಣೊರು ಅದೇ ಸಂಗೀತದ ಇಂತಹ ಒಂದೆರೆಡು ರಾಗಗಳನ್ನು ಹಾಡಿ ತೋರಸ್ಲಿ ನೋಡಣ..' ನಾನೆಂದೆ.

'ಅದೂ ನಿಜ..ಹೆಚ್ಚಾಗ್ತಿರೋ ಮೂವಿ ಸಾಂಗ್ಸ್ ಗಳಿಂದ ನಿಜವಾದ ಸಂಗೀತ ಏನಂತಾನೆ ಜನ ಮರೀತಾ ಇದ್ದಾರೆ. ಆದ್ರೆ ಇತ್ತೀಚಿನ ಯೂಥ್ ಸಾಂಗ್ ಗಳೇನೂ ಕಳಪೆ ಅನ್ನೋಕ್ಕಾಗಲ್ಲ. ಅಲ್ಲಿ ಏನಿಲ್ಲ ಅಂದರೂ ಒಂದು ಪವರ್ಫುಲ್ ಎನರ್ಜಿ ಇದೆ. ಆದ್ರೆ ಆ ಎನರ್ಜಿನ ಸರಿಯಾದ ಕಡೆ ಡೈವರ್ಟ್ ಮಾಡ್ಕೊಂಡ್ರೆ things would be much much better.' ಎಂದ ಆದಿಯ ಮಾತಿಗೆ,

'Whatever.. ಅವ್ರ್ ಅದೇನೇ ಚೆನ್ನಾಗಿ ಹಾಡ್ಲಿ, ಆದ್ರೆ ಆ ವಿಚಿತ್ರ ಡ್ರೆಸ್ಸು, ಪ್ರಿಡೇಟರ್ ತರ ಹುಚ್ಚ್ ಹುಚ್ಚಾಗಿ ಬಿಡೋ ಕೂದ್ಲು, ಗಡ್ಡ ಇವನ್ನೆಲ್ಲ ನೋಡಕ್ಕಂತೂ ಆಗಲ್ಲ.. ಇತ್ತೀಚಿಗೆ ಮ್ಯೂಸಿಕ್ ಮೇಲೆ ದೊಡ್ಡವರಿಗೆ ಇಂಟರೆಸ್ಟ್ ಹೋಗಿರೋದೇ ಇದಕ್ಕೆ ಅನ್ಸುತ್ತೆ.. ಅದೇ ಮ್ಯೂಸಿಕ್ ನ ನೀಟಾಗಿ ಬಂದು ಹಾಡಿದ್ರೆ ಕಷ್ಟನೋ ಸುಖಾನೋ ಒಂದ್ ಸ್ವಲ್ಪ ಜನ ಆದ್ರೂ ಕೇಳೋಕ್ಕೆ ಟ್ರೈ ಮಾಡ್ತಾರೆ'

ಸಂಗೀತದ ಬಗೆಗೆ ಮಾತಾಡುತ್ತಾ ಸಮಯ ಜರುಗಿದ್ದೆ ತಿಳಿಯಲಿಲ್ಲ. ಆದಿ ಹೊರಗಿನಿಂದ ನೋಡಲು ತೀರಾ ಸಾಧಾರಣದವನಂತೆ ಕಂಡರೂ ಒಳಗಿನಿಂದ ತೀರಾ ಬುದ್ದಿವಂತ. ದೇಶ ವಿದೇಶಗಳ ಹಾಗು ಹೋಗುಗಳು, ಸಾಮನ್ಯ ಜ್ಞಾನ, ಸಂಗೀತ, ಸಾಹಿತ್ಯ ಅಲ್ಲದೆ ಶೈಕ್ಷಣಿಕವಾಗಿಯೂ ಆತ ಪ್ರತಿಭಶಾಲಿ. ಆದ್ರೆ ತುಂಬಾನೇ ಮಂಕು ಜೀವಿ. ಯಾಕಪ್ಪ ಏನ್ ನಿನ್ ಪ್ರಾಬ್ಲಮ್ಮು ಎಂದು ಹೆಗಲ ಮೇಲೆ ಕೈಯಾಕಿ ಕೇಳಿದರೂ ಏನು ಹೇಳುವುದಿಲ್ಲ. ನನ್ನ ಹಾಗು ಲೋಕೇಶನೊಟ್ಟಿಗೆ ಬಿಟ್ಟರೆ ಬೇರೆಯವರೊಟ್ಟಿಗೆ ಮಾತನಾಡುವುದೇ ಕಡಿಮೆ. ಪಾಠವನ್ನು ಕೇಳದೆಯೇ ಇಂಟರ್ನಲ್ಸ್ ಗಳಲ್ಲಿ ಪಾಸಾಗಿ ನಮ್ಮನ್ನೂ ಪಾಸ್ ಮಾಡಿಸುವ ಈತ ಏನಾದರು ಫಸ್ಟ್ ಬೆಂಚಿನ ವಿದ್ಯಾರ್ಥಿಗಳಂತೆ ಓದಿದರೆ ಯೂನಿವರ್ಸಿಟಿಗೇ ಟಾಪರ್ ಆಗುವುದರಲ್ಲಿ ಸಂಶಯವೇ ಇಲ್ಲ.

'ಆದಿ, ನಿನ್ನ್ ಅತ್ತಿಗೆ ಬಂದ್ಲು ನೋಡು..' ಕ್ಲಾಸ್ ರೂಮಿಗೆ ವಾಪಸ್ಸಾಗುವಾಗ ಆಕಡೆಯಿಂದ ಬಂದ ಹುಡುಗಿಯೊಬ್ಬಳನ್ನು ಕಂಡು ನಾನು ಹೇಳಿದೆ. ಆಕೆಯ ಅಂದವಾದ ಮೈಮಾಟದ ಜೊತೆಗೆ ಬಿಳಿಬಣ್ಣದ ಚೂಡಿದಾರದ ಕೆಂಪು ಹೂವುಗಳ ಪೋಣಿಸುವಿಕೆ ಎಂತವರನ್ನೂ ಆಕೆಯೆಡೆಗೆ ನೋಡುವಂತೆ ಮಾಡುತ್ತಿದ್ದವು. ತನ್ನ ಕೂದಲನ್ನು ಸಿಂಪಲ್ಲಾಗಿ ಹಿಂದಕ್ಕೆಳೆದು ಕಟ್ಟಿ ಸಾಧಾರಣವಾದ ಕಿವಿಯ ಓಲೆಗಳನ್ನು ಧರಿಸಿದ್ದರೂ ಕಾಮನಬಿಲ್ಲಿನಂತಹ ಆ ಬಾಗಿದ ಹುಬ್ಬುಗಳು ಹಾಗು ದೃಷ್ಟಿ ನೆಟ್ಟರೆ ಸರಿಸಲಾಗದಂತಹ ಮಲ್ಲಿಗೆಯಂತಹ ಆ ಕಣ್ಣುಗಳು ಆಕೆಯನ್ನು ಅಪ್ಸರೆಯನ್ನಾಗಿ ಮಾಡಿದ್ದವು.

ಕೌಶಿಕಿಯ ಭೀಮ್ ಪಲಾಸಿ ರಾಗ ಮುಗಿದು ಲತಾ ಮಂಗೇಶ್ಕರರ 'ಬಾಹೋ ಮೇ ಚಲೇ ಆಹೋ ..' ಹಾಡು ಇಯರ್ ಫೋನುಗಳಿಂದ ಮೂಡಿತು. ಸಂದರ್ಭಕ್ಕೆ ತಕ್ಕ ಸಂಗೀತ ನನ್ನ ಒಲವಿನ ಕವಿಯನ್ನು ಜಾಗೃತಗೊಳಿಸಿತು

'ಚೆನ್ನಾಗಿದ್ದಾಳೆ..' ಆದಿ ಏನೋ ಹೇಳಬೇಕಲ್ಲ ಎನ್ನುವಂತೆ ಹೇಳಿದ.

'ಲೋ.. ನಿನ್ ಅತ್ತಿಗೆ ಅವ್ಳು.. ಅವ್ಳ್ ನನಿಗ್ ಮಾತ್ರ ಚೆನ್ನಾಗ್ ಕಾಣ್ ಬೇಕು ತಿಳಿತಾ' ಎಂದು ಬೆದರಿಸುವ ಧ್ವನಿಯಲ್ಲಿ ಹೇಳಿದೆ.

'ಸರಿ ಬಿಡಪ್ಪ' ಎನುತ ಆತ ಕ್ಲಾಸ್ ರೂಮಿನೊಳಗೆ ನೆಡೆದ. ನಾನು ಹೆಸರರಿಯದ ಆದಿಯ ಅತ್ತಿಗೆಯನ್ನು ಹಿಂಬಾಲಿಸಿದೆ.

'Excuse Me..'

'Yes..'

'ನೀವು ರಾಧ ಅಲ್ವ..?'

ನನ್ನ ಮುಖದ ಮೇಲಿನ ಕಳ್ಳ ನಗೆಯನ್ನು ಕಂಡು ಆಕೆ ತನ್ನ ಕೈಗಳೆರಡನ್ನು ಕಟ್ಟಿ ತೀಕ್ಷ್ಣ ದೃಷ್ಟಿಯಿಂದ ನನ್ನನ್ನು ನೋಡಿದರು.

'ಹೌದು, ಏನಿವಾಗ?'

'ನಿಮ್ಮ್ ಹತ್ರ ಏನೋ ಹೇಳ್ಬೇಕಿತ್ತು'

'ಹೌದೇ, ಹಾಗಾದ್ರೆ ಫೋನ್ ನಂಬರ್ ಬೇಕು ಅನ್ಸುತ್ತೆ'

'Actually, it's about my friend '

'Oh, ಏನಾಗ್ಬೇಕಂತೆ ನಿಮ್ ಫ್ರೆಂಡ್ಡಿಗೆ..?'

'ಅವ್ರಿಗೆ ಒಬ್ಳು ಅತ್ತಿಗೆ ಬೇಕಂತೆ'

ಸುಮ್ಮನಾದ ಆಕೆ ತುಸು ಮುಗುಳ್ ನಕ್ಕಳು.

'ರೀ ಮಿಸ್ಟರ್, ಅಷ್ಟ್ ಒಳ್ಳೆ ಸ್ಕಿಟ್ ಬರೀತೀರಾ, ಯಾಕ್ರೀ ನಿಮ್ಗೆ ಇವೆಲ್ಲ, ಒಳ್ಳೆ ಪೊರ್ಕಿ ತರ '

ಕೊಡಲೇ ನನ್ನನ್ನು ಯಾರೋ ರೆಕ್ಕೆ ಪುಕ್ಕವನ್ನು ಕಟ್ಟಿ ಆಕಾಶಕ್ಕೆ ತೇಲಿಬಿಟ್ಟಂತಹ ಅನುಭವವಾಯಿತು. Juniors Art Exploration ಅನ್ನೋ ragging ನಿಯಮಕ್ಕೆ ನಾಟಕವನ್ನು ಆಡಿ ಸೀನಿಯರ್ಸ್ಗಳಿಂದ ಬೈಸಿಕೊಂಡಿದ್ದ ಮಹಾನ್ ಕಾರ್ಯವನ್ನು ಈಕೆ ಒಳ್ಳೆಯ ಸ್ಕಿಟ್ ಎಂದೇಳಿ ನನ್ನ ಮನದೊಳಗೆ ಸುಪ್ತವಾಗಿದ್ದ ಬರಹಗಾರನೊಬ್ಬನ್ನನ್ನು ಪುಟಿದು ನಿಲ್ಲಿಸಿದಳು . ಬೈ ದಿ ವೆ, ಅವತ್ತು ragging ಎಂದು ಬಂದಿದ್ದ ಅಷ್ಟೂ ಮಂದಿಯೂ ನಮ್ಮ ಸೀನಿಯರ್ಸ್ಗಳೇ! ಏಕೋ ಎದೆ ಒಂದೇ ಸಮನೆ ಬಡಿದುಕೊಳ್ಳತೊಡಗಿತು.

ಆರಡಿ ಎಂಟಡಿ ಎತ್ತರದ ಸೀನಿಯರ್ಸ್ ಎಂಬ ದಾಂಡಿಗರ ಗುಂಪಿನವಳೇ ಇವಳು? ಆದರೂ ನಾನು ಕೂಡಲೇ ಸೋಲನೊಪ್ಪಿಕೊಳ್ಳಲಿಲ್ಲ.

'ಮೀನಿಂಗ್ ಫುಲ್ ಸ್ಕಿಟ್ ಬರಿಯೋರು flirt ಮಾಡಬಾರ್ದು ಅಂತ ರೂಲ್ಸ್ ಏನಾದ್ರೂ ಇದಿಯಾ, ರಾಧಾ' ಸಾಧ್ಯವಾದಷ್ಟು ನಾಜೂಕಾಗಿ ಆಕೆಯ ಹೆಸರನ್ನು ಕೂಗಿದೆ.

'ಒಹ್, So you are here to flirt with me, uh'

'if you wish so'

'What’s your name you said'

'ಕೃಷ್ಣಾ..!'

ಆಕೆ ಈ ಬಾರಿ ಜೋರಾಗೆ ನಕ್ಕುಬಿಟ್ಟರು.

'ರಾಧಾ - ಕೃಷ್ಣ, ಚೆನ್ನಾಗಿರುತ್ತೆ ಅಲ್ವಾ..?' ಈ ಬಗೆಯ ಪ್ರತ್ಯುತ್ತರ ಕೊಟ್ಟ ಧೈರ್ಯಕ್ಕೆ ನನಗೆ ನನ್ನ ಮೇಲೆಯೇ ಅಭಿಮಾನ ಮೂಡಿತು.

'ಒಹ್ ರಿಯಲಿ, ಬನ್ನಿ ಹಾಗಾದ್ರೆ. ನಿಮ್ಮನ್ನ ಗೋಪಿಕೆಯರೊಟ್ಟಿಗೆ ಇಂಟ್ರಡ್ಯೂಸ್ ಮಾಡಿಸ್ತೀನಿ ' ಎಂದು ಆಕೆ ಮುನ್ನೆಡೆದರು.

ಕ್ಲಾಸ್ಸು ಗೀಸು ಎಲ್ಲ ಇರ್ಲಿ ಆಕಡೆ ಎನುತ ನಾನು ಆಕೆಯನ್ನು ಹಿಂಬಾಲಿಸಿದೆ. ಆಕೆ ಮೊದಲ ಮಹಡಿಯ ಮೆಟ್ಟಿಲನ್ನು ಏರಿದರು. ಅಂದುಕೊಂಡಂತೆ ಏಳನೇ ಸೆಮಿಸ್ಟರ್ ನ ಸೀನಿಯರ್ಸ್ ಕ್ಲಾಸ್ಸನ್ನು ಪ್ರವೇಶಿಸಿದರು. ನಾನು ಧೈರ್ಯ ಮಾಡಿ ಒಳನುಗ್ಗಿದೆ. ಆದರೆ ಆಕೆ ಕ್ಲಾಸ್ ರೂಮಿನ ಒಳ ಹೊಕ್ಕಂತೆಯೇ ಕ್ಲಾಸಿನ ಅಷ್ಟೂ ವಿದ್ಯಾರ್ಥಿಗಳು, ಆರಡಿ ಏಳಡಿ ಉದ್ದದ ದಾಂಡಿಗರೂ ಸೇರಿ, ಎದ್ದು ನಿಂತರು!!

'ಸಿಟ್ ಡೌನ್ ಕ್ಲಾಸ್..' ಎಂದು ಆಕೆ ನನ್ನೆಡೆಗೆ ಮೊಗ ಮಾಡಿದ ತಡವೇ ನಾನು ಕೂಡಲೇ ಮುಂದೊದಗುವ ಅಪಾಯವನ್ನು ಅರಿತು ಚಂಗನೆ ಅಲ್ಲಿಂದ ನೆಗೆದು ಓಟ ಕಿತ್ತೆ. ಅಲ್ಲಿಂದ ಓಡಲು ಶುರು ಮಾಡಿ ಹಾಸ್ಟೆಲ್ಲಿನ ನನ್ನ ರೂಮನ್ನು ಸೇರಿದವ ಮುಂದಿನ ಒಂದು ವಾರಗಳವರೆಗೆ ಕಾಲೇಜಿನ ಮುಖವನ್ನು ಮತ್ತೊಮ್ಮೆ ನೋಡಲಿಲ್ಲ!!

**

'ಅಯ್ಯೋ.. ಉಫ್.. ಸಾಕಪ್ಪ ಸಾಕು.. ಇನ್ ನಂಗ್ ನಗಾಡೋಕ್ ಆಗಲ್ಲ..' ನನ್ನ ಹಾಗು ಮೇಡಂ ರಾಧಾರ ಸಂಕ್ಷೀಪ್ತ ಲವ್ ಸ್ಟೋರಿಯನ್ನು ಕೇಳಿ ಲೋಕೇಶ ಗಹಗಹನೇ ನಗತೊಡಗಿದ. ಆದಿಯ ಮುಖದಲ್ಲೂ ಒಂದು ಮಂದಹಾಸ ಮೂಡಿತ್ತು.

'ಆ ಸೀನಿಯರ್ ದಾಂಡಿಗರನ್ನು ನೋಡ್ಬೇಕಿತ್ತು ಆದಿ, ಒಳ್ಳೆ ಪಿಎಂಗೆ ಇರೋ ಬಾಡಿ ಗೌರ್ಡ್ಸ್ ತರ ನನ್ನನೇ ಗುರಾಹಿಸ್ತಾ ಇದ್ರು.. ರಾಧಾ ಏನ್ ಅವ್ರಪ್ಪನ ಮನೆ ಪ್ರಾಪರ್ಟಿನ?'

'ಹೌದು ಗುರು ಅದ್ ಅವರಪ್ಪನ್ಮನೆ ಪ್ರಾಪರ್ಟಿನೇ ಇರಬಹದು..ಯಾರಿಗೊತ್ತು, ಅವರಷ್ಟೂ ಜನಕ್ಕೆ ಈಕೆ ಸಾಮೂಹಿಕವಾಗಿ ರಾಕಿ ಕಟ್ಟಿರ್ಬೇಕು' ಎಂದಾಗ ಎಲ್ಲರು ಒಟ್ಟಿಗೆ ನಕ್ಕೆವು.

ವಿಚಿತ್ರವೆಂಬಂತೆ ಕಾರಿಡಾರಿನ ಒಂದು ಮೂಲೆಯಲ್ಲಿ ನಿಂತು ನಾವುಗಳು ನಗುವಾಗ ರಾಧಾ ದೂರದಲ್ಲಿ ನಿಂತು ನಮ್ಮನ್ನು, especially ನನ್ನನ್ನು ಸಿಟ್ಟಿನ ಕಣ್ಣುಗಳಿಂದ ನೋಡುತ್ತಿದ್ದರು. ಆಕೆಯ ತೀಕ್ಷ್ಣ ದೃಷ್ಟಿ ನನ್ನ ಗೆಳೆಯರಿಬ್ಬರು ಧಿಕ್ಕಾಪಾಲಾಗಿ ಓಟ ಕೀಳುವಂತೆ ಮಾಡಿತು. ಆಕೆ ನನ್ನ ಬಳಿಗೆ ಬಂದು ನಿಂತರು. ಇಡೀ ಕ್ಲಾಸ್ಸಿನ ಮುಂದೆ ಕಕ್ಕಾಬಿಕ್ಕಿಯಾಗಿ ಓಡಿ ವಾರಗಟ್ಟಲೆ ಮರೆಯಾಗಿದ್ದ ನನಗೆ ನಾಚಿಕೆಯಲ್ಲಿ ಮಿಂದು ಎದ್ದಂತಹ ಅನುಭವ. ಎಲ್ಲಿ ಆಕೆ ಆ ವಿಷಯವನ್ನು ಪ್ರಸ್ತಾಪಿಸಿ ನನ್ನ ನಿಂತಲ್ಲೇ ಕೊಲ್ಲುತ್ತಾಳೋ ಎಂದುಕೊಂಡೆ. ಆದರೆ ನನ್ನ ಬಳಿಗೆ ಬಂದ ಆಕೆ ದೂರದ ಕಾಡುಗಳನ್ನು ಧಿಟ್ಟಿಸುತ್ತಾ,

'ಪ್ರೀತಿ ,ಪ್ರೇಮ ಎಂಬುದೆಲ್ಲ ತೀರಾನೆ Illogical. Ultimate goal of a couple is making their next generation. That’s what the world wants. That’s what the creator want us to do.. ' ನನ್ನ ಸ್ಕೀಟ್ಟಿನ ಒಂದೆರೆಡು ಸಾಲುಗಳನ್ನು ಆಕೆ ಹೇಳಿದಳು. ತೀರಾ ಕಳಪೆಯಾದ ನಾಟಕ ಅಂದುಕೊಂಡಿದ್ದರೂ ಲೆಕ್ಚರರ್ ಒಬ್ಬರು ಅದರ ಸಾಲುಗಳನ್ನೂ ನೆನಪಿಟ್ಟುಕೊಂಡಿರುವರು ಎಂಬುದನ್ನು ಕಂಡು ನನಗೆ ಖುಷಿಯಾಯಿತು. ಇನ್ ಫ್ಯಾಕ್ಟ್ ಒಂದು ಬಗೆಯ ಅಹಂ ಮೂಡಿತು!

ನಂತರ 'ಅವತ್ತೇನಾದ್ರೂ ನೀವು ಹಿಂಗೇ ಸಿಕ್ಕಿದ್ರೆ ಕೆನ್ನೆ ಮೇಲೆ ನಾಲ್ಕ್ ಬಾರ್ಸ್ಬಿಡ್ತಿದ್ದೆ!!' ಎಂದರು.

ಈಕೆ ಯಾಕಪ್ಪ ಹೀಗೆ ಕನ್ಫ್ಯೂಸ್ ಮಾಡ್ತಾ ಇದ್ದಾರೆ ಅಂದುಕೊಂಡೆ. ರಾಧಾ ಮೇಡಂ, ಮೇಡಂ ಆದ್ರೂ ಅತಿ ಯಂಗ್ ಹುಡುಗಿ. I mean ನನಗಿಂತ ಹೆಚ್ಚೆಂದರೆ ನಾಲ್ಕು ವರ್ಷ ದೊಡ್ಡವರಿರಬಹುದು. ಯಾಕೋ ನಮ್ಮ ಗುರು ಸಚಿನ್ ತೆಂಡೂಲ್ಕರ್ ನೆನಪಾದರು. ಮನದೊಳಗೆ ಅವರನ್ನು ನೆನೆದು ನಾನು ಮುಂದುವರೆದೆ.

'ಇವಾಗಲೂ ನನ್ನ ಕೆನ್ನೆ ಇಲ್ಲೇ ಇದೆ, ರಾಧಾ..ಮೇಡಂ..'

'See, You know that flirting leads to Love.. According to you if love is illogical, then why the hell is this .. uh ' ಎಂದು ಗದರಿಸುತ್ತ ಕೇಳಿದರು. ಈಕೆ ಬಂದಿರುವುದು ಇಂಟೆಲ್ಲೆಕ್ಟುಲಿಟಿಯ ಬಗೆಗಿನ ಕಷ್ಟದ ಚರ್ಚೆ ಮಾಡಲು ಎಂದು ಅರಿತು ನನಗೆ ಬೇಸರವಾಯಿತಾದರೂ ನಾನು ಅದನ್ನು ತೋರ್ಪಡಿಸಲಿಲ್ಲ. ಒಂದು ಪಕ್ಷ ನಾನೇನಾದರೂ ಇಲ್ಲಿ ಸೋತರೆ ಖಂಡಿತವಾಗಿಯೂ ಮುಂದೆಂದೂ ಆಕೆಯ ಮುಂದೆ ತಲೆಯೆತ್ತೆನು. ಆಕೆಯ ಏರುಧ್ವನಿ ದೂರದಲ್ಲಿ ನೆಡೆದುಕೊಂಡು ಹೋಗುತ್ತಿದ್ದ ಹುಡುಗಿಯರಿಬ್ಬರನ್ನು ನಮ್ಮೆಡೆಗೆ ನೋಡುವಂತೆ ಮಾಡಿತು. ಕ್ಲಾಸಿನಲ್ಲಿ ಫೇಲ್ ಆಗಿದ್ದರಿಂದ ಶಿಕ್ಷಕರು ವಿದ್ಯಾರ್ಥಿಗೆ ಬೈಯುತ್ತಿದ್ದಾರೆಂದು, ಎಲ್ಲಿ ತಮ್ಮನ್ನೂ ಕರೆದು ನಮ್ಮ ಮಾರ್ಕ್ಸ್ ಗಳನ್ನು ಕೇಳಿಯಾರು ಎನುತ ಅವರು ಬಿರಬಿರನೇ ಅಲ್ಲಿಂದ ನೆಡೆದರು.

‘ಗುರಿಯ ದಾರಿಯಲ್ಲಿ ನೆಡೆಯುವಾಗ ಗುರಿಯೊಂದೇ ಮುಖ್ಯವಾಗಿರುತ್ತದೆ. ಉಸಿರಿರಾಡುವ ಗಾಳಿ, ಕುಡಿಯುವ ನೀರು ಹಾಗು ಆಹಾರ ಪ್ರಮುಖವಾಗಿರುದಿಲ್ಲ. ಹಾಗಂತ ಊಟ, ಗಾಳಿ ಹಾಗು ನೀರನ್ನು ಸೇವಿಸದೇ ಗುರಿಯನ್ನೂ ತಲುಪಲಾಗುವುದಿಲ್ಲ you know. ಈ ಫ್ಲರ್ಟು ಲವ್ವು ಎಲ್ಲ ಒಂತರ ಫುಡ್ ಅಂಡ್ ಆಕ್ಸಿಜನ್ ಇದ್ದ ಹಾಗೆ. ನಿಮ್ಮ ಜೀವನದ ಅಲ್ಟಿಮೇಟ್ ಗುರಿ ಅದಂತೂ ಅಲ್ಲವೇ ಅಲ್ಲ. ಪ್ರತಿಯೊಬ್ಬರ ಜೀವನಕ್ಕೂ ಒಂದೊಂದು ಗುರಿ ಇದ್ದೇ ಇರುತ್ತದೆ ರಾಧಾ. ವಿಪರ್ಯಾಸವೆಂಬಂತೆ ಲಕ್ಷಕ್ಕೊಬ್ಬರೋ ಇಬ್ಬರೋ ಮಾತ್ರ ಅದನ್ನು ಅರಿತುಕೊಳ್ಳುತ್ತಾರೆ. ' ಎಂದೋ ಬರೆದಿದ್ದ ಅರೆ ಬರೆ ನೆನಪಿದ್ದ ಸಾಲುಗಳನ್ನು ನಾನು ಉಸುರಿದೆ.

ನಂತರ ಒಂದಿಷ್ಟು ಮೌನ.

ನಾನು ಏನಂದೆ ಎಂದು ನನಗೇ ಬಹುಷಃ ತಿಳಿಯಲಿಲ್ಲ. ಆಕೆ ಏನಾದರೂ 'Could you please explain it once again' ಎಂದಿದ್ದರಂತೂ ನನ್ನ ಮಾತೇ ನಿಂತು ಹೋಗಿರುತ್ತಿತ್ತು! ದೇವರ ಕೃಪೆಯಿಂದ ಆಗ ಬೆಳಗಿನ ಪಿರಿಯಡ್ ಒಂದು ಮುಗಿದು ವಿದ್ಯಾರ್ಥಿಗಳೆಲ್ಲ ಹೊರ ಬಂದರು. ಆಕೆ ಏನೂ ಕೇಳುವಂತೆ ಮಾಡಿ 'will discuss it some other time' ಎಂದು ಅಲ್ಲಿಂದ ಬಿರಬಿರನೆ ಹೊರಟು ಹೋದರು. ನನ್ನ ಮಾತಿನ ಮೋಡಿಗೆ ನನ್ನನ್ನು ಕಾಣಲು ಬಂದಿದ್ದಾರೆ ಎಂದುಕೊಂಡವನಿಗೆ, ಸೀನಿಯರ್ಸ್ ಗಳ ಕಾಟವನ್ನು ತಡೆಯಲೋಗಿ ಏನೋ ಗಿಜುಗಿ ಬರೆದಿದ್ದ ನಾಟಕದ ಸಾಲುಗಳ ತಪ್ಪನು ತಿದ್ದಲಷ್ಟೇ ಬಂದಿದ್ದಾರೆ ಎಂದರಿತು ಒಂದೆಡೆ ಖುಷಿಯಾದರೆ ಮತ್ತೊಂದೆಡೆ ತೀರಾ ಬೇಸರವೂ ಆಯಿತು.

ನನ್ನ ಜೀವನದ Ultimate ಗುರಿ ನಿಜ ಪ್ರೀತಿಯೊಂದನ್ನು ಅರಸುವುದೇ. True love exists ಎನ್ನುವುದನ್ನು prove ಮಾಡುವುದೇ?

'Waa..w, ಏನೋ ಮಚ ಇದು! ಏನನ್ದ್ರೋ ಅವ್ರು' ಕಾಣೆಯಾಗಿದ್ದ ಲೋಕೇಶ ಎಲ್ಲಿಂದಲೋ ಕೂಡಲೇ ಪ್ರತ್ಯಕ್ಷನಾಗಿ ನನ್ನ ಹೆಗಲ ಮೇಲೆ ಕೈಯಾಕಿ ಎಳೆದೆಳೆದು ಕೇಳತೊಡಗಿದ.

'ನಿಮ್ಮ್ ಫ್ರೆಂಡ್ಸ್ ಗೆ ಬಳೆ ಕೊಡ್ಸಬೇಕಿತ್ತು, ಸೈಜ್ ಎಷ್ಟು ಅಂತಾ ಕೇಳಿ ಅಂದ್ರು'

'ಹೋಗ್ಲಿ ಬಿಡಪ್ಪ.. ಪ್ರೈವಸಿ ಇರ್ಲಿ ಅಂತ ನಾನ್ ಓಡಿದೆ.'

ಸದ್ಯ, ಓಡಿದೆ ಎಂದು ಒಪ್ಪಿಕೊಂಡನಲ್ಲ ಎಂದು ಒಂದಿಷ್ಟು ಸಮಾಧಾನವಾಯಿತು.

'ನೆಕ್ಸ್ಟ್ ಟೈಮ್ ನಂಗೆ ಪ್ರೈವಸಿ ಬೇಡಪ್ಪ.. ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಹೆಲ್ಪ್ ಮಾಡೋಕ್ಕೆ ಅಂತ ಆದ್ರೂ ಸ್ವಲ್ಪ ದೂರದಲ್ಲಿ ನಿಂತಿರಿ ' ಎಂದು ಕ್ಲಾಸ್ ರೂಮಿನೊಳಗೆ ನೆಡೆದೆ.



ಮುಂದುವರೆಯುವುದು ..

No comments:

Post a Comment