Sunday, July 26, 2020

ಪಯಣ - 13

ಲೆಕ್ಕಾಚಾರವೆಲ್ಲ ತಲೆಕೆಳಗಾದ ಯುವಜನರ ಹುಲಿ ಅಳುತ್ತಲೇ ನಗುವಂತೆ ನಟಿಸುತ್ತಾ ತನ್ನ ಕುರ್ಚಿಯ ಮೆಲೋಗಿ ಆಸೀನವಾಯಿತು. 

'ಆತನ ಹೆಸರು ಮನೋಜ್ ಕುಮಾರ್ ಪಾಂಡೆ... ವಯಸ್ಸು ಜಸ್ಟ್ ಇಪ್ಪತ್ತರ ಆಸು ಪಾಸು .. ಪುಣೆಯಲ್ಲಿರೋ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಇಂಟರ್ವ್ಯೂ ಕೊಡೋಕ್ಕೆ ಬಂದಿದ್ದಾನೆ.. ಯಾರಿಗಾದ್ರೂ ಗೊತ್ತಿದ್ಯಾ ಈ ಅಕಾಡೆಮಿ ಏನ್ ಮಾಡುತ್ತೆ ಅಂತ..' ಎಂದು ಕೇಳಿದ ಲೋಕೇಶ ನೆರೆದಿದ್ದ ಅಷ್ಟೂ ಜನರನ್ನು ಒಮ್ಮೆ ನಿಧಾನವಾಗಿ ನೋಡಿದ. ಕೇವಲ ಗುಸುಗುಸು ಪಿಸುಪಿಸುಗಳನ್ನು ಬಿಟ್ಟರೆ ಯಾರಿಂದಲೂ ಈತನ ಪ್ರೆಶ್ನೆಗೆ ಉತ್ತರ ಬರಲಿಲ್ಲ. ಬಹುಶಃ ಗೊತ್ತಿದ್ದರೂ ಯಾಕೋ ಅಲ್ಲಿನ 'ಸತ್'ಪ್ರಜೆಗಳು ಉತ್ತರಿಸಲು ಹೆಣಗುತ್ತಿದ್ದರು ಅಥವಾ ಹೆದರುತ್ತಿದ್ದರು. ಯಾರೊಬ್ಬರಿಂದಲೂ ಉತ್ತರ ಬಾರದಿದ್ದಾಗ ಲೋಕೇಶ ಸ್ಟೇಜಿನ ಮೇಲೆ ತಿರುಗಿದ. ಬೆಳಗಿನ ಲೆಕ್ಕಾಚಾರವೆಲ್ಲ ತಪ್ಪಿ ಸಿಟ್ಟಿನ ಕೂಪದಲ್ಲಿದ್ದ ಜಿಲ್ಲೆಯ ನಾಯಕರನ್ನು ನೋಡಿದ. ಆದರೆ ಅವರು ತಾವ್ಯಾಕೆ ಈ ಪುಡುಗೋಸಿ ಯುವಕನ ಪ್ರೆಶ್ನೆಗೆ ಉತ್ತರಿಸಬೇಕು ಎನ್ನುವಂತೆ ಸುಮ್ಮನೆ ಕುಳಿತ್ತಿದ್ದರು. ಕೆಲವರು ತಮ್ಮ ಕೈಗಡಿಯಾರವನ್ನು ತೋರುತ್ತಾ ಸಮಯ ಮೀರುತ್ತಿದ್ದೆ ಎಂಬ ಮೂಕ ಸಂದೇಶವನ್ನು ನೀಡುತ್ತಿದ್ದರು. ಹುಲಿಯ ನಾಮಾಂಕಿತದ ನಾಯಕನೂ ಎಲ್ಲಿ ತನ್ನನ್ನು ಎದ್ದು ನಿಲ್ಲಿಸಿ ಕೇಳುತ್ತಾನೋ ಎಂಬ ಭಯದಲ್ಲಿ ತಮ್ಮ ಮೊಬೈಲಿನಲ್ಲಿ ಮುಳುಗಿ ಮಗ್ನನಾದಂತೆ ನಟಿಸತೊಡಗಿದ.

'ಇಂಟರ್ವ್ಯೂ ತೆಗೆದುಕೊಳ್ಳುವ ಅಧಿಕಾರಿಗಳು ಏನಪ್ಪಾ, ನೀನು ಸೈನ್ಯವನ್ನು ಏಕೆ ಸೇರಬೇಕು ಅಂದ್ಕೊಂಡಿದ್ದೀಯ? ಎಂದು ಕೇಳಿದರು. ಆಗ ಆತ 'ಸಾರ್ .. ನನ್ಗೆ ಪರಮವೀರ ಚಕ್ರ ಬೇಕು ಸಾರ್’ ಎಂದನಂತೆ! ಮೋನೋಜ್ ಬಿಸಿ ರಕ್ತದ ಹುಡುಗ. ಅಧಿಕಾರಿಗಳು ನಕ್ಕರು. ನಾಡು, ನೆಲ, ದೇಶ ಎಂದರೆ ಆತನ ಎದೆ ಹುಬ್ಬುತಿತ್ತು. ದೇಶಕ್ಕಾಗಿ ಏನಾದರು ಮಾಡಬೇಕೆಂಬ ಮಹಾದಾಸೆಯಿದ್ದ ಆತನಿಗೆ ಸೈನ್ಯದ ಸೇರ್ಪಡೆ ಇನ್ನೂ ಹೆಚ್ಚಿನ ಚೈತನ್ಯವನ್ನು ನೀಡಿತು. ಅಲ್ಲಿಂದ ಮುಂದೆ ಗೋರ್ಖಾ ರೆಜಿಮೆಂಟ್ ಸೇರ್ಕೊಂಡ , ಮುಂದೆ ಲೆಫ್ಟಿನಂಟ್ ಆದ, ಅಲ್ಲಿಂದ ಮುಂದೆ ಕ್ಯಾಪ್ಶನ್ ಕೂಡ ಆದ.

ಅದು 1999 ಜುಲೈ ತಿಂಗಳು. ಈ ತಿಂಗಳನ್ನ ಭಾರತೀಯರಾದ ಯಾರೂ ಕೂಡ ಮರೆಯೋಕ್ಕೆ ಸಾಧ್ಯನೇ ಇಲ್ಲ. ಅಲ್ವೇ?' ಎಂದ ಲೋಕೇಶ ಮತ್ತೊಮ್ಮೆ ಜನರ ಗುಂಪನ್ನು ನೋಡಿದ. ಆದರೆ ಈ ಬಾರಿ ಯಾರೋ ಪುಣ್ಯಾತ್ಮ ತನ್ನ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ 'ಕಾರ್ಗಿಲ್ ವಾರ್..!!' ಎಂದು ಜೋರಾಗಿ ಅರಚಿದ. ಮುಗುಳ್ ನಕ್ಕ ಲೋಕೇಶ ಕೂಡಲೇ ಮುಂದುವರೆದ,

'ಯಸ್, ಕಾಶ್ಮೀರದ ಆ ಜಾಗದ ಹೆಸರು ಕಾಲುಬಾರ್. ಎತ್ತರದ ಬೆಟ್ಟದ ಮೇಲೆ ಪಾಕಿಸ್ತಾನಿ ಸೈನಿಕರು ಸೇರಿಕೊಂಡಿದ್ದಾರೆ.. 24 ವರ್ಷದ ಕ್ಯಾಪ್ಶನ್ ಮನೋಜ್ಗೆ ತನ್ನ ಮೇಲಧಿಕಾರಿಗಳಿಂದ ಸ್ಥಳವನ್ನು ವಶಪಡಿಸಿಕೊಳ್ಳಲು ಸಂದೇಶ ಬಂದಿತು. ಇದಕ್ಕಿಂತ ಮೊದಲು ಹೋದ 19 ಜನ ಸೈನಿಕರು ಅಲ್ಲಿಂದ ವಾಪಸ್ ಬಂದಿರಲೇ ಇಲ್ಲ! ಕಾರಣ ವೈರಿ ಸೈನಿಕರು ಕೂತಿರುವುದು ಬಹಳ ಎತ್ತರದ ಆಯಕಟ್ಟಿನ ಜಾಗದಲ್ಲಿ. ಅದು ಹೇಗೆ ಹೋದರೂ ಸಹ ಮೈಮೇಲೆ ಗುಂಡಿನ ಸುರಿಮಳೆಯಾಗುತ್ತದೆ. ಇಂತಹ ಸಾವಿನ ದವಡೆಗೆ ಹೋಗುವುದು ಹುಡುಗಾಟಿಕೆಯ ಮಾತಾಗಿರಲಿಲ್ಲ. ಆದರೂ ತನ್ನ ತಂಡವನ್ನು ಹುರಿದುಂಬಿಸಿ ಮನೋಜ್ ತೆರಳಲು ಅಣಿಯಾದ. ಕಾರ್ಯಾಚರಣೆಯನ್ನು ರಾತ್ರಿಯೇ ಮಾಡೋಣವೆಂದು ನಿರ್ಧರಿಸಿ ಕಾಯತೊಡಗಿದ.

ಕೊನೆಗೂ ಆ ಸಮಯ ಬಂದಿತು. ಇಮ್ಯಾಜಿನ್ ಮಾಡ್ಕೊಳಿ. ಎತ್ತರವಾದ ಗುಡ್ಡ. ಅದರ ತುದಿಯಲ್ಲಿ ರಾಶಿಗಟ್ಟಲೆ ಮದ್ದುಗುಂಡುಗಳೊಟ್ಟಿಗೆ ಕೂತಿರುವ ವೈರಿಪಡೆ. ಗುಡ್ಡದ ತುದಿಗೆ ಏರಲು ಅದರ ಎರಡೂ ಕಡೆಗೂ ಒಂದೊಂದು ಬದುಗಳು ಬಿಟ್ಟರೆ ಬೇರೇನೂ ಇಲ್ಲ. ಬಿದ್ದರೆ ಆಳವಾದ ಪ್ರಪಾತ.. ಆ ಬದುವಿನ ಮೇಲೆ ನಾಜುಕ್ಕಾಗಿ ಓಡಿ ವೈರಿಳೊಟ್ಟಿಗೆ ಕಾದಾಡಬೇಕು.

ಕೂಡಲೇ ಮೋನೋಜ್ ಉಪಾಯವೊಂದನ್ನು ಮಾಡಿದ. ಒಂದು ಬದುವಿನಲ್ಲಿ ತಾನು ಹೋಗುವುದೆಂದು ಇನ್ನೊಂದು ಬದುವಿನ ಮೇಲೆ ಇತರ ಸೈನಿಕರು ನಂತರ ಬರುವುದೆಂದು. ಕೊಡಲೇ ಉಪಾಯ ಕಾರ್ಯಗತವಾಯಿತು. ಅಂದುಕೊಂಡಂತೆ ಮನೋಜ್ ಒಂದು ಬದುವಿನ ಮೇಲೆ ಓಡಹತ್ತಿ ವೈರಿಗಳಿದ್ದ ಒಂದು ಕಂದಕಕ್ಕೆ ಹಾರಿದ. ಅಚಾನಕ್ಕಾಗಿ ಭಾರತೀಯ ಯೋಧನೊಬ್ಬ ಹೀಗೆ ಪ್ರತ್ಯಕ್ಷನಾದದನ್ನು ಕಂಡು ಕಕ್ಕಾಬಿದ್ದಿಯಾದ ಇಬ್ಬರು ವೈರಿ ಸೈನಿಕರು ಇನ್ನೇನು ತಮ್ಮ ಬಂದೂಕನ್ನು ತೆಗೆದು ಗುಂಡು ಹಾರಿಸಬೇಕೆನ್ನುವಷ್ಟರಲ್ಲಿ ತನ್ನ ಕಠಾರಿಯನ್ನು ತೆಗೆದು ಅವರನ್ನು ಅಲ್ಲಿಯೇ ನಿರ್ನಾಮ ಮಾಡಿದ ಮನೋಜ! ಆದರೂ ಆತನ ಬಲಭುಜಕ್ಕೆ ಗುಂಡೊಂದು ತಗುಲಿತು. ಯುದ್ದೋನ್ಮಾದ ಗುಂಗಿನಲ್ಲಿದ್ದ ಆತನಿಗೆ ಆ ಗುಂಡಿನ ನೋವು ಗೊತ್ತಾಗಲೇ ಇಲ್ಲ! ಕೂಡಲೇ ಪಕ್ಕದ ಕಂದಕಕ್ಕೆ ಜಿಗಿದ. ಅಲ್ಲೂ ಮತ್ತಿಬ್ಬರನ್ನು ಮುಗಿಸಿದ. ಈ ಬಾರಿ ಬಂದ ಗುಂಡೊಂದು ಆತನ ಸೊಂಟಕ್ಕೆ ತಗುಲಿತು. ಕೂಡಲೇ ‘ಚಿಲ್..’ ಎಂದು ರಕ್ತ ಒಮ್ಮೆಲೇ ಹಾರತೊಡಗಿತು. ಹುಚ್ಚನಿಗೆ ಆಗಲೂ ಸಮಾಧಾನವಾಗಲಿಲ್ಲ. ತನ್ನ ರಕ್ತವನ್ನೇ ತುಣಿದುಕೊಳುತ್ತ ನಂತರದ ಕಂದಕಕ್ಕೂ ಹೋದ. ಆದರೆ ಈ ಬಾರಿ ಜಾಗೃತರಾಗಿದ್ದ ವೈರಿಗಳು ಈತನ ವಿರುದ್ಧ ಮುಗಿಬಿದ್ದರು. ಅಲ್ಲೂ ಸಹ ಆತ ಕಾದಾಡಿದ. ದುರದೃಷ್ಟವಶಾತ್ ವೈರಿಪಡೆಯ ಗುಂಡೊಂದು ಈ ಬಾರಿ ಸೀದಾ ಈತನ ತಲೆಗೆ ಬಂದು ರಪ್ಪನೆ ಬಡಿಯಿತು.ಮೋನೋಜ ಕುಸಿದ.

ವೈರಿಗಳು ಈತನೆಡೆಗೆ ಗಮನ ಕೇಂದ್ರೀಕರಿಸಿರುವುದನ್ನು ಗಮನಿಸಿದ ನಮ್ಮ ಸೈನ್ಯದ ಇನ್ನೊಂದು ತಂಡ ಕೂಡಲೇ ಮುನ್ನುಗ್ಗಿತು. ನಿಮಿಷಮಾತ್ರದಲ್ಲಿ ವೈರಿಪಡೆಯನ್ನು ಸಂಹರಿಸಿ ಬೆಟ್ಟವನ್ನು ಹಿಂಪಡೆಯಿತು. ಆದರೆ ಕೆಚ್ಚೆದೆಯ ಹುಲಿಯಂತೆ ಒಬ್ಬಂಟಿಗನಾಗಿ ಹೋರಾಡಿದ ಮೋನೋಜನನ್ನು ಜವರಾಯನಿಂದ ಮಾತ್ರ ಹಿಂಪಡೆಯಲಾಗಲಿಲ್ಲ. ಸಾಯುವಾಗಲು ಆತ 'ಬಿಡಬೇಡಿ.. ಹೊಡೆಯಿರಿ.. ನಾವು ಗೆಲ್ಲಬೇಕು' ಎಂದು ಎನ್ನುತ್ತಲೇ ಕೊನೆಯುಸಿರೆಳೆದ. ಕೊನೆಗೂ ಆತ ಅಂದುಕೊಂಡಂತೆ 1999 ರ ಯುದ್ಧದಲ್ಲಿ ದೊರೆತ ನಾಲ್ಕು ಪರಮವೀರಚಕ್ರದಲ್ಲಿ ತನಗೂ ಒಂದನ್ನು ಗಿಟ್ಟಿಸಿಕೊಂಡ .' ಎಂದು ಹೇಳಿ ಕೆಲಕ್ಷಣ ಮೌನವಾದ ಲೋಕೇಶ.

'ಇಲ್ಲಿ ನೆರೆದಿರುವವರಲ್ಲಿ ಯಾರಿಗಾದರೂ ಅಂತಹ ಆಸೆಯಿದೆಯೆ? ದೇಶಕ್ಕಾಕಿ ಸರ್ವವನ್ನು ಅರ್ಪಿಸುವ 24 ವರ್ಷದ ಮನೋಜ್ ಕುಮಾರ್ ಪಾಂಡೆಯಂತಹ ವ್ಯಕ್ತಿಗಳು ಇಲ್ಲಿ ಯಾರಾದರೂ ಇರುವರೇ?' ಎಂದು ಕೇಳಿದ. ಅಂದುಕೊಂಡಂತೆ ಯಾವೊಂದು ಕೈಗಳು ಮೇಲೇಳಲಿಲ್ಲ. ಲೋಕೇಶ ಸ್ಟೇಜಿನೆಡೆಗೆ ತಿರುಗಿದ.

ಒಮ್ಮೆ ತಲೆಬಾಗಿ ನಗುವಂತೆ ಮಾಡಿ,

'ಸ್ಟೇಜಿನ ಮೇಲೆ ಆಸೀನರಾಗಿರುವ ದೇಶಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಮಹಾ ನೇತಾರರೇ ಹಾಗು ತಮ್ಮೆಲ್ಲವನ್ನು ಬಿಟ್ಟು ಇಂತಹ ಘನಕಾರ್ಯಕ್ರಮಗಳಿಗೂ ಸಮಯ ವ್ಯಹಿಸುವ ಮಹಾಜನಗಳೇ' ಎಂದು ಹೇಳಿ ಅಧಿಕೃತವಾಗಿ ತನ್ನ ಭಾಷಣವನ್ನು ಆರಂಭಿಸಿದ!

'ಹೇಳಿ. ಯಾರಿಗಾಗಿ..ಯಾವ ಸ್ವಾರ್ಥಕ್ಕಾಗಿ.. ಅದ್ಯಾವ ಸಾಧನೆಗಾಗಿ.. ಇಂತಹ ರಾಶಿ ರಾಶಿ ಹುಚ್ಚು ಜೀವಗಳು ತಮ್ಮ ಬಲಿದಾನವನ್ನು ಕೊಡುತ್ತವೆ.ಇಂದು ವ್ಯಕ್ತಿಯೊಬ್ಬ ಸಾಯುತ್ತಿದ್ದಾನೆ ಎಂದರೆ ಹನಿ ನೀರನ್ನೂ ಕೊಡದ ಜನರಲ್ಲಿ ದೇಶಕ್ಕಾಗಿ ತನ್ನ ರಕ್ತ ಮಾಂಸಗಳೊಟ್ಟಿಗೆ ಆಸೆ ಆಕಾಂಕ್ಷೆ ಜೀವನ ಸಂಸಾರವನ್ನೆಲ್ಲ ದೂರಗೊಳಿಸಿ ಅವರು ಪಡೆಯುವುದಾದರೂ ಏನು? ಏತಕ್ಕಾಗಿ ಮನೋಜ್ ಅಂದು ತನ್ನ ರಕ್ತಮಾಂಸಗಳನ್ನು ಅರ್ಪಿಸಿ ತನ್ನ ಜೀವನವನ್ನು ತ್ಯಾಗ ಮಾಡಿದ? ರಿಸೆರ್ವಶನ್ಗಾಗಿಯೋ? ಬ್ರಷ್ಟಾಚಾರಕ್ಕಾಗಿಯೋ? ಸರ್ಕಾರ ಬೀಳಿಸಿ ಹೊಸ ಚುನಾವಣೆ ಎಂದು ಮತ್ತದೇ ಕೋಟಿ ಕೋಟಿ ಹಣವನ್ನು ವ್ಯಹಿಸುವುದಕ್ಕೋ? ಮೋಸ ವಂಚನೆಗಾಗಿಯೋ ಅಥವಾ ನಮ್ಮೆಲ್ಲರ ಪ್ರೀತಿಯ ಸಾಲಮನ್ನಾಕ್ಕಾಗಿಯೋ? ಅಂತಹ ಮಹಾನ್ ವ್ಯಕ್ತಿಗಳು ಗಳಿಸಿಕೊಟ್ಟಿರುವ ನಮ್ಮ ಈ ನೆಲಜಲಗಳನ್ನು ನಾವ್ಗಳು ಬಳಸಿಕೊಳ್ತಿರೋದು ಹೇಗೆ ನೋಡಿ.
ಅವ್ರಿಗೆ ರೆಸೆರ್ವಶನ್ ಬೇಕಂತೆ. ರೆಸೆರ್ವಶನ್ ಪಡೆಯುವ ಜನರಿಗೆ ನೀನು ಸರ್ಕಾರಕ್ಕೆ ಸಮಾಜಕ್ಕೆ ಏನ್ ಮಾಡಿದ್ದೀಯಪ್ಪ ಅಂದ್ರೆ, ಏನೂ ಯಾಕೆ ಮಾಡ್ಬೇಕು? ನಾವು ಹಿಂದೆ ಉಳಿದ್ದಿದೀವಿ ಅದಕ್ಕೆ ರೆಸೆರ್ವಶನ್ ಬೇಕು ಅಂತಾರೆ. ಗಟ್ಟಿಮುಟ್ಟಾಗಿದ್ದು ದಿನಕ್ಕೆ ನಾಲ್ಕೊತ್ತು ಊಟ ಭಾರಿಸುವ ಜನ ಕುದುರೆಯಂತೆ ಓಡುತ್ತಿರುವ ಪ್ರಪಂಚದಲ್ಲಿ ಹಿಂದೆ ಉಳಿದಿರುವರಂತೆ! What a Comedy..
ಇಲ್ಯಾರೋ ಇವ್ರಿಗೆ ಸಾಲ ಮನ್ನಾ ಆಗ್ಬೇಕಂತೆ. ಸ್ವಾಮಿ, ನಮ್ಮ ಹಿರೀಕರು ಅವರ ಹಿರೀಕರೂ ಸಹ ವ್ಯವಸಾಯ, ಕೃಷಿ ಮಾಡಿಕೊಂಡೇ ಬಂದವರು. ಅವಾಗಲು ಮಳೆ ಪ್ರವಾಹ ಬೆಳೆನಾಶ ಎಲ್ಲಾವು ಆಗ್ತಾ ಇದ್ವು. ಮೇಲಾಗಿ ಆಗೆಲ್ಲ ಈಗಿನಂತೆ ಇನ್ಶೂರೆನ್ಸು, ಬೆಂಬಲ ಬೆಲೆ, ಎಪಿಎಂಸಿ ಮತ್ತೊಂದು ಮಗದೊಂದು ಅಂತ ಹತ್ತಾರು ಸವಲತ್ತುಗಳಿರಲಿಲ್ಲ. ಅಷ್ಟೆಲ್ಲ ಪ್ರತಿಕೂಲ ವಾತಾವರಣವಿದ್ದರೂ ಅವ್ರು ಕೃಷಿಯನ್ನ ಮಾಡಲಿಲ್ಲವ? ನಮ್ಮ ಅಜ್ಜ ಅಜ್ಜಿಯರನ್ನು ಹೊಟ್ಟೆ ತುಂಬಾ ತಿನ್ನಿಸಿ ಬೆಳೆಸಲಿಲ್ವ? ಅವಾಗ ಅದ್ಯಾವ ಸರ್ಕಾರ ಸಾಲ ಕೊಡ್ತಾ ಇತ್ತು. ಅದ್ಯಾವ ಬ್ಯಾಂಕು ಸಾಲ ಮನ್ನಾ ಮಾಡ್ತಾ ಇತ್ತು? ಹೇಳಿ.
ಇನ್ನು ಇವ್ರಿಗೆ ಸರ್ಕಾರನೇ ಬೇಡ್ವಂತೆ. ಇದಕ್ಕೆ ಒಂದ್ ಸಣ್ಣ ಎಕ್ಸಾಮ್ಪಲ್ ಕೊಡ್ತೀನಿ, ತಪ್ಪ್ ತಿಳ್ಕೊ ಬೇಡಿ. ಮನೇಲಿ ಮಗುವೊಂದು ಹುಟ್ಟಿ ಬುದ್ದಿ ಬಂದಮೇಲೆ ತನ್ನ ಅಪ್ಪ ಕುಡುಕ, ಸಿಡುಕ, ದಡ್ಡ ಎಂದು ಅರಿತು ಅಪ್ಪನನ್ನೇ ಚೇಂಜ್ ಮಾಡು ಅಂದ್ರೆ ಆಗುತ್ತಾ? ಇಲ್ಲ ತಾನೇ. ಹೇಗಾದ್ರು ಮಾಡಿ ಅದು ಅವನನ್ನ ತಿದ್ದೋಕ್ಕೆ ನೋಡುತ್ತೆ. ಸರಿ ಮಾಡೋಕ್ಕೆ ಪ್ರಯತ್ನಿಸುತ್ತೆ. ನಮ್ಮ ನಿಮ್ಮೆಲ್ಲರ ಈ ಸರ್ಕಾರನೂ ಮನೆಯ ತಂದೆಯ ಸಮಾನ. ಸರಿ ಇಲ್ಲ ಅಂತ ಅಪ್ಪನನ್ನೇ ಹೊರಗಟ್ಟುವುದು ಎಷ್ಟು ಸರಿ ಹೇಳಿ. ಪ್ರೆಶ್ನೆ ಮಾಡಿ. ಅರ್ಥಪೂರ್ಣವಾಗಿ ಪ್ರತಿಭಟನೆ ಮಾಡಿ. ತಪ್ಪಿದ್ರೆ ಸರಿ ಮಾಡಿಸಿ. ಯಾರಿಗ್ ಗೊತ್ತು ಹೊಸದಾಗಿ ಬರೋ ಅಪ್ಪ ಅದ್ಯಾವ್ತರದ ಕಿರಾತಕ ಆಗಿರ್ತಾನೆ ಅಂತ?’ ಎಂದ ಲೋಕೇಶ.

ಜನರ ಗುಂಪಿನಿಂದ ಒಮ್ಮೆಲೇ ಚಟಪಟ ಸದ್ದಿನ ಚಪ್ಪಾಳೆ ಹಾಗು ಒಂದೆರಡು ಜೋರಾದ ಸಿಳ್ಳೆಗಳೂ ಮೂಡಿದವು. ಹೆದರಿ ಮುದುಡಿ ನಿಂತಿದ್ದ ಆದಿಯೂ ಕೂಡ ಈಗ ಮುಂಬಂದು ಚಪ್ಪಾಳೆಯನ್ನು ಭಾರಿಸತೊಡಗಿದ. ತನ್ನ ಮುಖಕ್ಕೆ ಛಟಾರನೆ ಬಡಿದವನಂತೆ ಮಾತನಾಡಿದ ಲೊಕೇಶನನ್ನು ಗುರಾಯಿಸಿದ ಹುಲಿಯ ನಾಮಾಂಕಿತದ ರಾಜಕಾರಣಿ ಕೂಡಲೇ ಮೇಲೆದ್ದು,

'ಜನರನ್ನು ಹಿಂಸಿಸೋ ಸರ್ಕಾರ ಇದ್ರೆಷ್ಟು ಹೊದ್ರೆಷ್ಟು.. ಅಪ್ಪ, ಮನೆ ಅಂತ ಹೀಗೇನೆ ಇದ್ರೆ ನಮ್ಮನ್ನ ಕೊಳ್ಳೆ ಒಡೆಯೋದಂತೂ ಸುಳ್ಳಲ್ಲ.. ಒಮ್ಮೆ ನಮ್ಗೆ ಅವಕಾಶ ಕೊಟ್ಟು ನೋಡಿ.. ಸರ್ಕಾರ ಹೇಗೆ ನೆಡಸ್ತೀವಿ ನೋಡಿ' ಎಂದು ಅಬ್ಬರಿಸಿದ.

ಓಟಕ್ಕೆ ಗ್ರೌಂಡು ಸಿಗಲಿಲ್ಲವೆಂಬ ಸಿಟ್ಟು ಇನ್ನೇನು ತಣ್ಣಗಾಯಿತು ಎಂದು ಸ್ಟೇಜಿನಿಂದ ಇಳಿಯಬೇಕು ಎನ್ನುವಷ್ಟರಲ್ಲಿ ಅಚಾನಕ್ಕಾಗಿ ಮೂಡಿದ ರಾಜಕಾರಣಿಯ ಮಾತನ್ನು ಕೇಳಿ ಲೋಕೇಶ ಪುನ್ಹ ವಾಪಸ್ಸು ಬಂದ. ಅವನನ್ನು ಉದ್ದೇಶಿಸಿ 'ಸಾರ್ ಇನ್ನೊಂದೇ ನಿಮಿಷ.. ಕೂತ್ಕೊಳಿ' ಎಂದ. ಇವನ್ಯಾರು, ಯಾವ ಪಕ್ಷದವನಿರಬಹುದು, ನನ್ನ್ ಮೇಲೆ ಯಾಕಿಷ್ಟು ಸಿಟ್ಟು ಎಂಬ ಪ್ರೆಶ್ನೆಗಳು ರಾಜಕಾರಣಿಯ ಮನದೊಳಗೆ ಒಮ್ಮೆಲೇ ಮೂಡಿದವು. ಆತನ ಮಾತನ್ನು ಪಾಲಿಸುವ ಬಂಟನಂತೆ ತುಟಿಕ್ ಪಿಟಿಕ್ ಎನ್ನದೆ ಕುರ್ಚಿಯ ಮೇಲೆ ಸುಮ್ಮನೆ ಕೂತ. ಯಾಕೆಂದು ಆತನಿಗೂ ತಿಳಿಯಲಿಲ್ಲ.

ಲೋಕೇಶ ಕೂಡಲೇ ಜನರನ್ನು ಉದ್ದೇಶಿಸಿ 'ಇಲ್ಲಿ ಇರೋ ಜನರಲ್ಲಿ ಪರ್ಸ್ ಇರೋದು ಯಾರಾದರೊಬ್ಬರು ಮೇಲೆ ಬರ್ಬೇಕು' ಎನ್ನುತ್ತಾನೆ. ಒಂದರೆ ನಿಮಿಷ ಹೋದನಂತರ ಹದಿನೆಂಟು ಹತ್ತೊಂಬತ್ತರ ಚಿಗುರು ಮೀಸೆಯ ಹುಡುಗನೊಬ್ಬ ಹೆದರುತ್ತಲೇ ಮೇಲಕ್ಕೆ ಬಂದನು. ಬಹುಷಃ ಧೈರ್ಯ ಮಾಡಿ ಸ್ಟೇಜಿನ ಮೇಲೆ ಬಂದ ಮಾತ್ರಕ್ಕೇ ತನಗೆ ಏನಾದರು ಒಂದು ಇನಾಮನ್ನು ಕೊಡುವರೇನೋ ಎಂದುಕೊಂಡು ಆತ ಹೆಜ್ಜೆಯಿಡುತ್ತಿದ್ದ. ಲೋಕೇಶ ಆತನನ್ನು ಕರೆದು ಹೆಸರು ಕೇಳಿ ನಂತರ, 'ನನ್ಗೆ ಒಂದು ನೂರುಪಾಯಿ ನಿನ್ ಪರ್ಸಿನಿಂದ ಕೊಡು' ಎಂದು ಕೇಳಿದ. ಮೊದಲಿಗೆ ಗಾಬರಿಗೊಂಡ ಹುಡುಗ ಬಹುಷಃ ಈತ ಇದನ್ನು ಐನೂರು ರೂಪಾಯಿ ಮಾಡಿ ನನಗೆ ಹಿಂದುರಿಗಿಸಬಹುದು, ಇಲ್ಲದಿದ್ದರೂ ಇಷ್ಟು ಜನರ ಸಮ್ಮುಖದಲ್ಲಿ ಈತನೇನು ಕದ್ದು ಓಡುವುದಿಲ್ಲವೆಂಬ ಧೈರ್ಯದಲ್ಲಿ ಇದ್ದ ನೂರರ ಒಂದೇ ನೋಟನ್ನು ತನ್ನ ಪರ್ಸಿನಿಂದ ತೆಗೆದು ಲೊಕೇಶನ ಕೈಲಿತ್ತ. ಲೋಕೇಶ ನೋಟನ್ನು ಕೂಲಂಕುಷವಾಗಿ ಪರೀಕ್ಷಿಸಿ ನಂತರ ಅದನ್ನು ಮಡಚಿ ತನ್ನ ಜೇಬಿನಲ್ಲಿ ಇರಿಸಿಕೊಂಡ ಹಾಗು 'ಥ್ಯಾಂಕ್ಸ್' ಎಂದೇಳಿ ಆತನನ್ನು ಅಲ್ಲಿಂದ ತೆರಳುವಂತೆ ಹೇಳಿದ. ಮೊದಮೊದಲು ಲೋಕೇಶ ತಮಾಷೆ ಮಾಡುತ್ತಿರುವನೆಂದು ಊಹಿಸಿ ನಗಾಡಿದ ಆ ಹುಡುಗ ಯಾವಾಗ ಆತ ಹಣವನ್ನು ಕೊಡಲಿಲ್ಲವೋ ಆಗ ತುಸು ಕೋಪಿಷ್ಠನಾದ. 'ನನ್ನ್ ದುಡ್ಡ್ ಅದು .. ಯಾಕ್ರೀ ಕೊಡಲ್ಲ' ಎಂದು ದಬಾಯಿಸತೊಡಗಿದ. ಲೋಕೇಶ ಸುಮ್ಮನಿದ್ದ. ಯಾರೂ ತನ್ನ ರಕ್ಷಣೆಗೆ ಬಾರದಿದ್ದನ್ನು ಕಂಡು ಸಿಡುಕಿದ ಆ ಪೋರ ಕೂಡಲೇ ಲೊಕೇಶನ ಕೊರಳುಪಟ್ಟಿಯನ್ನು ಹಿಡಿದು 'ಕೊಡ್ತಿಯೋ ಇಲ್ವೋ..' ಎಂದು ಅರಚತೊಡಗಿದ. ಕೂಡಲೇ ನಗತೊಡಗಿದ ಲೋಕೇಶ ಆತನನ್ನು ಸಂತೈಸಿ ತನ್ನ ಜೇಬಿನಲ್ಲಿದ್ದ ನೂರರ ನೋಟನ್ನು ಆತನಿಗೆ ಕೊಟ್ಟು ಕಳುಹಿಸಿದ ಹಾಗು ಸ್ಟೇಜಿನ ಮೇಲಿದ್ದ ರಾಜಕಾರಣಿಗಳನ್ನು ನೋಡುತ್ತಾ 'ಇಷ್ಟೇ ಅಲ್ವ ಸಾರ್ .. ಸರ್ಕಾರ ನೆಡೆಸೊದು ಅಂದ್ರೆ' ಎಂದು ಸುಮ್ಮನಾದ.

'ನಮ್ಮ ದುಡ್ಡನ್ನು ನಮ್ಮಿಂದಲೇ ಪಡೆದು ವಾಪಾಸ್ ಕೊಡದೆ ಸತಾಯಿಸುವುವ ಈ ಪ್ರಕ್ರಿಯೆಯನ್ನೇ ಡೆಮಾಕ್ರಸಿ ಎನ್ನಬಹುದೇ?’ ಎಂದೇಳಿ ಜನರೆಡೆಗೆ ತಿರುಗಿ ‘ನಾವುಗಳೂ ಏನ್ ಕಡಿಮೆ ಇಲ್ಲ ಬಿಡಿ.. ಆ ಹುಡುಗ ಕೊರಳುಪಟ್ಟಿ ಹಿಡಿದು ಕೇಳಿದಂತೆ ನಾವುಗಳೂ ಸರ್ಕಾರಗಳನ್ನು ಕೇಳುವುದು ಯಾವಾಗ? ನಮ್ಮ ಅಧಿಕಾರವನ್ನು ಚಲಾಯಿಸುವುದು ಯಾವಾಗ? ನಾವುಗಳು ಎಲ್ಲಿಯವರೆಗೂ ಹೀಗೆಯೇ ಇರುತ್ತೇವೆಯೋ ಅಲ್ಲಿಯವರೆಗೂ ಇಂತಹ ಸರ್ಕಾರ ಉರುಳಿಸುವ ಕಾಲಹರಣ ಕಾರ್ಯಕ್ರಮಗಳು ನೆಡೆಯುತ್ತಲೇ ಇರುತ್ತವೆ.. ಸರ್ಕಾರ ನೆಡೆಯೋದು ಜನರಿಂದಲೇ ಹೊರತು ರಾಜಕಾರಣಿಗಳಿಂದಲ್ಲ ಎಂಬ ಕಡುಸತ್ಯವನ್ನು ಹೊರಗೆಡವಿ ನಾವುಗಳು ಎಂದಿಗೆ ಮುನ್ನಡೆಯುವುದಿಲ್ಲವೋ ಅಲ್ಲಿಯವರೆಗೂ ಏನೇನೂ ಸಾಧ್ಯವಿಲ್ಲ. ಒಮ್ಮೆ ಈ ಸತ್ಯವನ್ನು ಅರಿತರೆ ನಮಗೆ ಯಾವ ಸರ್ಕಾರವಾದರೇನು..ಅದ್ಯಾವ ಮಂತ್ರಿಯಾದ್ರೇನು, ಅಲ್ವೇ.. So, ಆಯ್ಕೆನೂ ನಮ್ಮದೇ, ಅನುಭವಿಸುವವರೂ ನಾವುಗಳೇ' ಎಂದು ತನ್ನ ಎರಡನೇ ರೌಂಡಿನ ಮಿನಿ ಭಾಷಣವನ್ನು ಮುಗಿಸಿ ಕೆಳಗಿಳಿದ. ನೆರೆದಿದ್ದ ಜನರ ಚಪ್ಪಾಳೆಯ ಸದ್ದು ಮುಗಿಲು ಮೂಡಿತು. ಕಟ್ಟಾ ಕಾರ್ಯಕರ್ತರೂ ಸಹ ಪಕ್ಷದ ವಿರುದ್ಧ ಸುಪ್ತವಾಗಿ ಅಡಗಿದ್ದ ತಮ್ಮ ಸಿಟ್ಟನ್ನು ಹೊರಹಾಕುವಂತೆ ಇನ್ನೂ ಜೋರಾಗಿಯೇ ಚಪ್ಪಾಳೆಯನ್ನು ತಟ್ಟತೊಡಗಿದರು. ಅಷ್ಟರಲ್ಲಾಗಲೇ ರಾಜಕಾರಣಿಗಳ ಕೆಂಗಣ್ಣುಗಳು ಲೊಕೇಶನನ್ನು ಗುರಾಯಿಸ ಹತ್ತಿದ್ದವು. ಹುಲಿಯ ಹೆಸರಿನ ರಾಜಕಾರಣಿ ಮೈಕಿನ ಬಳಿಗೆ ಬರಲು ಅಂಜತೊಡಗಿದ. ದೇವರ ಅನುಗ್ರಹವೆಂಬಂತೆ ನಿರೂಪಕಿಯೊಬ್ಬರು ಬಂದು ವಂದನಾ ಭಾಷಣವನ್ನು ಪ್ರಾರಂಭಿಸದರು.

ನೆರೆದಿದ್ದ ಜನರು ಬಂದು ಲೊಕೇಶನ ಕೈಕುಲುಕಿ ಅಭಿನಂದಿಸತೊಡಗಿದರು. ಕೊಡಲೇ ಬಲವಾದ ಕೈಯೊಂದು ಲೊಕೇಶನ ಭುಜದ ಮೇಲೆ ಬಿಗಿಯಾಗಿ ಬಂದೆರಗಿತು. ಹಿಡಿತ ಗಟ್ಟಿಯಾದಂತೆ ಲೊಕೇಶನ ಭುಜದ ಸ್ನಾಯುಗಳು ನೋಯತೊಡಗಿ ಆತ ಕೊಸರಾಡತೊಡಗಿದ. ಬಹುಷಃ ಆ ರಾಜಕಾರಣಿ ಕೋಪಗೊಂಡು ತನನ್ನು ಥಳಿಸಲು ಬಂದಿದ್ದಾನೆ ಎಂದಾದರೆ ಆದದ್ದು ಆಗಲಿ ಒಂದು ಕೈ ನೋಡೇ ಬಿಡುವ ಎಂದು ಹಿಂದಕ್ಕೆ ತಿರುಗಿ ನೋಡುತ್ತಾನೆ ತನ್ನ ಜಮೀನಿನ ಒಡೆಯ ಸಾಲ್ದಾನ ಜೋಸೆಫ್ ನಗುತ್ತಾ ಅಲ್ಲಿ ನಿಂತಿದ್ದಾರೆ. ಗಣ್ಯವ್ಯಕ್ತಿಯೊಬ್ಬರು ತನ್ನ ಭುಜವನ್ನು ಹೀಗೆ ಅಧುಮುತ್ತಿರುವುದು ಸಿಟ್ಟಿನಿಂದಲ್ಲ ಪ್ರಶಂಸೆಯಿಂದ ಎಂದರಿತು ಲೊಕೇಶನು ಬಾಲಸಹಜ ನಗೆಯನ್ನು ಬೀರುತ್ತಾನೆ.

'ಲೋಕೇಶ್ , What a speech man .. I appreciate it' ಎಂದು, 'ನೋಡಪ್ಪ ನೀನ್ ಮುಖಕ್ಕೆ ಹೊಡೆದ ಹಾಗೆ ಮಾತಾಡಿ ನನ್ನ ಖಾಸಾ ದೋಸ್ತ್ನ ಮುಖ ಸೆಪ್ಪೆಯಾಗುವಂತೆ ಮಾಡಿದ್ದಿ. ನೋಡ್ ಅಲ್ಲಿ ಹೇಗೆ ನಿಂತಿದ್ದಾನೆ' ಎಂದು ಹುಲಿಯ ಹೆಸರಿನ ರಾಜಕಾರಣಿಯನ್ನು ಅವರು ತೋರಿಸುತ್ತಾರೆ. ಆತ ಜಿಲ್ಲೆಯ ಇತರೆ ಹಿರಿಯ ರಾಜಕಾರಣಿಗಳು ಹೇಳುತ್ತಿದ್ದ ಬುದ್ಧಿಮಾತನ್ನು ಕೇಳುವಂತೆ ಕೈಗಟ್ಟಿಕೊಂಡು ತಲೆತಗ್ಗಿಸಿ ನಿಂತಿದ್ದಾನೆ. ಅಂದುಕೊಂಡ ಕಾರ್ಯಕ್ರಮ ಅಂದುಕೊಂಡಂತೆಯೇ ನೆಡೆಯದಿದ್ದನ್ನು ಕಂಡು ಎಲ್ಲರ ಮುಖದಲ್ಲೂ ಸೂತಕದ ಛಾಯೆಯೊಂದು ಮನೆಮಾಡಿದೆ. ಸಾಲ್ದಾನ ಜೋಸೆಫ್ ಲೋಕೇಶನಿಗೆ ಈ ಭಾಷಣ ಕಲೆಯನ್ನು ಹೇಗೆ ವೃದ್ಧಿಸಿಕೊಳ್ಳಬೇಕು ಎಲ್ಲೆಲ್ಲ ಇದು ಸಹಾಯಕ್ಕೆ ಬರುತ್ತದೆ ಎಂದು ವಿವರಿಸತ್ತಾ ಕೊನೆಗೆ 'ನಿನ್ನ ಶುಂಠಿಗದ್ದೆಯನ್ನು ನೋಡಿ ತುಂಬಾ ದಿನ ಆಯ್ತು ಮಾರಾಯ, ಬಾ ಹೋಗಿಬರುವ' ಎಂದು ತಮ್ಮ ಜೀಪಿನಲ್ಲಿ ಲೊಕೇಶನನ್ನು ಕೂರಿಸಿಕೊಂಡು ಅಲ್ಲಿಂದ ಹೊರಟರು.

ಮನೋಜ್ ಕುಮಾರ್ ಪಾಂಡೆಯ ಬಗ್ಗೆ ಖುಷಿಗೆ ಫೋನಿನಲ್ಲಿ ವಿವರಿಸುತ್ತಾ ಆದಿ ಓಡುತ್ತಲೇ ರೂಮನ್ನು ಸೇರಿದ.

'ಇಲ್ಲ ಸಾರ್ , ಯಾಕೋ ಇವುಗಳನ್ನ ಕೀಳೋಕ್ಕೆ ಮನಸ್ಸೇ ಬರ್ತಾ ಇಲ್ಲ' ಕಂದುಬಣ್ಣಕ್ಕೆ ತಿರುಗಿದ್ದ ಶುಂಠಿಗದ್ದೆಯನ್ನು ನೋಡಿ ಯಾಕಿನ್ನು ಕಟಾವು ಮಾಡಿಲ್ಲವೆಂದು ಕೇಳಿದ ಸಾಲ್ದಾನಾ ಜೋಸೆಫ್ರಿಗೆ ಲೋಕೇಶ ಉತ್ತರಿಸಿದ.

'ವಾಟ್ ಡು ಯು ಮೀನ್ ಬೈ ಮನಸ್ಸೇ ಬರ್ತಾ ಇಲ್ಲ?! ಇವಾಗ್ ಕಿತ್ರೆ ಒಳ್ಳೆ ಮಾರ್ಕೆಟ್ ರೇಟ್ ಇದೆ ..ಶುಂಠಿ ಇಷ್ಟೇ ಬರೋದು .. ಜಾಸ್ತಿ ಗ್ರೀಡಿನೆಸ್ ಒಳ್ಳೇದಲ್ಲ ಯಂಗ್ ಮ್ಯಾನ್'

'ಹಾಗಲ್ಲ ಸಾರ್ ..' ಎಂದೇಳಿದ ಲೋಕೇಶ ನಂತರ ಏನೋ ಹೇಳಲೊಗಿ ಸುಮ್ಮನಾದ. ಅವನ ದ್ವಂದ್ವವನ್ನು ಅರಿತ ಸಾಲ್ದಾನಾ ಜೋಸೆಪ್,

'ಪರವಾಗಿಲ್ಲ ಹೇಳಪ್ಪ ..' ಎಂದು ಭುಜವನ್ನು ತಟ್ಟಿದರು.

'ಸಾರ್ ಅದು .. ನಾನ್ ಹೇಳ್ತಿನಿ, ಆದ್ರೆ ನೀವು ಬೈಬಾರ್ದು..'

'ಸರಿ ಬೈಯಲ್ಲ .. ಹೇಳು'

'ಸಾರ್ ಏನೋ ಗೊತ್ತಿಲ್ಲ. ಬಹುಶಃ ನಾನೇ ನೆಟ್ಟು ಬೆಳೆಸಿರೋದ್ರಿಂದ ಅನ್ಸುತ್ತೆ ನನಗೆ ಅವುಗಳನ್ನು ಕೀಳೋಕ್ಕೆ ಮನಸ್ಸೇ ಬರ್ತಾ ಇಲ್ಲ .. ನನ್ನ ಮಕ್ಕಳನ್ನು ನಾನೇ ಕೈಯಾರೆ ಸಾಯಿಸಿಬಿಡುತ್ತೇನೋ ಎಂಬ ಭಯವೊಂದು ನನ್ನ ಕಾಡುತ್ತೆ ಸಾರ್.. I don’t know but I can’t !!'

ಸ್ವಲ್ಪ ಹೊತ್ತು ಸುಮ್ಮನಾದ ಅವರು ಲೊಕೇಶನನ್ನು ನೋಡುತ್ತಾ ಪ್ರಶಂಸೆಯ ನಗೆಯನ್ನು ಬೀರತೊಡಗಿದರು. ಕೆಲಸಮಯದ ನಂತರ ಮೌನವಾಗಿ,

'ನೀನೊಬ್ಬ ಪರಿಪೂರ್ಣ ಕೃಷಿಕ ಆಗ್ತಾ ಇದ್ದೀಯ ಲೋಕೇಶ್.. ಯಾವಾಗ ಕೃಷಿಕನೊಬ್ಬನಿಗೆ ತನ್ನ ಹಾಗು ಪೈರಿನ ಸಂಬಂಧ ಕೇವಲ ಹಣ ಹಾಗು ಲಾಭದ ಸಂಬಂಧವಲ್ಲವೆಂಬುದು ಅರಿವಾಗುತ್ತದೆಯೋ ಆಗಲೇ ಆತ ಒಬ್ಬ ಕಂಪ್ಲೀಟ್ ಫಾರ್ಮರ್ ಅಂತಾ ಅನ್ನಿಸಿಕೊಳ್ಳೋದು. ಪ್ರಕೃತಿ ಇಲ್ಲಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕೊಟ್ಟಿದ್ದಾಳೆ. ಪ್ರಾಣಿಗಳಿಗೆ, ಸಸ್ಯಗಳಿಗೆ ಅದು ಗೊತ್ತು ಆದರೆ ಮನುಷ್ಯರಿಗಲ್ಲ. ಹಸಿವನ್ನು ನೀಗಿಸಲು ಸಸ್ಯಗಳ ಮೂಲಕ ಹಣ್ಣು ತರಕಾರಿಗಳನ್ನು ಕೊಟ್ಟರೂ ಮಾನವ ಲಗ್ಗೆ ಹಿಟ್ಟದ್ದು ಮಾತ್ರ ಆ ಸಸ್ಯಗಳ ಕಾಂಡ ಬೇರುಗಳಿಗೇ. ಜಗತ್ತಿನಲ್ಲಿ ಎಲ್ಲರು ಒಟ್ಟಿಗೆ ಬಾಳಿ ಎಂದು ಇತರ ಜೀವಸಂಕುಲಗಳನ್ನು ಸೃಷ್ಟಿಸಿದರೆ ಬುದ್ದಿಯಿರುವ ಮಾನವ ಅವುಗಳೊಟ್ಟಿಗೆ ಬಾಳುವುದ ಬಿಟ್ಟು ಹಸಿವು ಹಾಗಿರಲಿ ತೃಣಮಾತ್ರದ ಮೋಜಿಗೆ ಅವುಗಳ ಚರ್ಮವನ್ನು ಸುಲಿಯತೊಡದಿದ. ತಾನೇ ಸೃಷ್ಟಿಸಿದ ನೆಲವೇನೋ ಎಂಬಂತೆ ಕಾಡು ಕಡಿದು ಬೇಲಿ ಜಡಿದು ಇದು ತನ್ನದು ಎಂದು ಬೀಗತೊಡಗಿದ. ಇಲ್ಲಿ ಇರುವುದೆಲ್ಲ ಸ್ವಾರ್ಥಕ್ಕೆ ಲೋಕೇಶ್.. ಫಸ್ಟ್ ಟೈಮ್ ಇನ್ ಮೈ ಲೈಫ್ ಐಮ್ ಸೀಯಿಂಗ್ ಆ ಪರ್ಸನ್ ಲೈಕ್ ಯು .. ಡೋಂಟ್ ವರಿ .. ನಿಂಗೆ ಕಟಾವು ಮಾಡೋಕ್ಕೆ ಇಷ್ಟ ಇಲ್ಲ ಅಂದ್ರೆ ಬೇಡ .. ಮಾಡ್ಬೇಡ .. ಇನ್ನು ಸ್ವಲ್ಪ ತಿಂಗಳು ಹಾಗೆ ಬಿಟ್ರೆ ಕೊನೆಗೆ ಅದು ಬೀಜದ ಶುಂಠಿಯಾಗಿಯಾದರೂ ಮಾರ್ಪಾಡಾಗುತ್ತೆ.. ಇನ್ಫ್ಯಾಕ್ಟ್ ಈಗ ಬೀಜದ ಶುಂಠಿಗೇನೆ ಮಾರ್ಕೆಟ್ನಲ್ಲಿ ಒಳ್ಳೆ ಧಾರಣೆ ಇರುವುದು. See, ಪರಿಸರ ನಾವು ಏನ್ ಮಾಡ್ದೆ ಇದ್ರೂ ಪ್ರತಿಫಲ ಅನ್ನೋದನ್ನ ಕೊಟ್ಟೇ ಕೊಡುತ್ತೆ' ಎಂದು ನಗುತ್ತಾರೆ.

ಅವರ ಹಿತವಚನಗಳು ಲೋಕೇಶನ ಆತ್ಮವಿಶ್ವಾಸವನ್ನು ನೂರು ಪಟ್ಟು ಹೆಚ್ಚಿಸುತ್ತವೆ. ತನ್ನಂತೆಯೇ ಯೋಚಿಸುವ ವ್ಯಕ್ತಿಯೊಬ್ಬರ ಒಳಪರಿಚಯ ಆತನಿಗೆ ಸಂತೋಷವನ್ನು ಉಂಟುಮಾಡುತ್ತದೆ.

ಗದ್ದೆಯ ಮತ್ತೊಂದು ಬದುವಿನಲಿದ್ದ ಅಜ್ಜಿಯ ಗುಡಿಸಲಿಗೆ ಹೋಗಿ ಹೊಟ್ಟೆತುಂಬ ಅಂಬಲಿಯನ್ನು ಕುಡಿದು ಅವರು ವಾಪಸ್ಸಾಗುತ್ತಾರೆ.

ಸಂಜೆ ಮತ್ತೊಂದು ಸುತ್ತು ಗದ್ದೆಗೆ ಬರುತ್ತಾನೆ ಲೋಕೇಶ. ಈ ಭಾರಿ ಆತನೊಟ್ಟಿಗಿದ್ದದ್ದು ಶಶಿ. ಗದ್ದೆಯ ಬದುವಿನ ಮೇಲೆ ಜೀವನದ ಬಗೆಗಿನ ನೂರಾರು ಮಾತುಗಳನ್ನಾಡಿ ಪಡುವಣದಲ್ಲಿ ಸೂರ್ಯ ಕಣ್ಮರೆಯಾಗುವವವರೆಗೂ ಇಬ್ಬರು ಅಲ್ಲಿ ಕೂತಿದ್ದರು. ತನ್ನ ಗದ್ದೆಯ ಪಕ್ಕಕ್ಕೆ ಯಾರೋ ಒಬ್ಬರು ಸಣ್ಣದಾಗಿ ಮಾಡಿದ್ದ ಭತ್ತದ ಗದ್ದೆಯ ತಿಳಿ ಹಸಿರ ಬಣ್ಣ ಲೊಕೇಶನನ್ನು ಆಕರ್ಷಿಸಿತು. ಲೋಕೇಶ ಆ ಗದ್ದೆಯನ್ನೇ, ಅವುಗಳಲ್ಲಿದ್ದ ಭತ್ತದ ತೆನೆಗಳನ್ನೇ ದೃಷ್ಟಿಯಿಟ್ಟು ನೋಡುತ್ತಾನೆ. ಆ ಒಂದೊಂದು ತೆನೆಗಳಲ್ಲೂ ಆತನಿಗೆ ಒಂದು ಮುಖಗಳು ಗೋಚರಿಸುತ್ತವೆ.

ಅಲ್ಲೊಂದು ಅಂಗಿಯರಿದಿರುವ ಅಳುವ ಮಗುವಿದೆ, ಸಣಕಲು ದೇಹದ ನೆಲದ ಮೇಲೆ ಬಿದ್ದು ನರಳುತ್ತಿರುವ ಒಬ್ಬ ಹಿರಿಯ ವೃದ್ಧನಿದ್ದಾನೆ, ಯುದ್ಧದ ಕಾರ್ಮೋಡ ಕವಿದಿರುವ ಪ್ರದೇಶದಲ್ಲಿ ಚಾವಣಿ ಕುಸಿದಿರುವ ಮನೆಯ ಮೂಲೆಯಲ್ಲಿ ಅಪ್ಪನೊಬ್ಬ ತನ್ನ ಸಂಸಾರವನ್ನು ತಬ್ಬಿಕೊಂಡು ನಿಂತಿದ್ದಾನೆ ಹಾಗು ನಾಯಿಮರಿಯೊಂದು ಹಸಿತದ ಹೊಡೆತಕ್ಕೆ ದಿಕ್ಕೆಟ್ಟು ಅತ್ತಿಂದ್ದಿತ್ತ ಒಡಾಡುತ್ತಿದೆ.

'ನೋಡು ಶಶಿ .. ಆ ಭತ್ತದ ಗದ್ದೆ ಅದೆಷ್ಟು ಜನರ ಹಸಿವನ್ನು ನಿವಾರಿಸುತ್ತದೆ ಅಂತ. ಇಲ್ಲಿ ಹಸಿರಾಗಿ ಮುಂದೆ ಯಾರದೋ ಜೀವದಲ್ಲಿ ಜೀವವಾಗುವ ಅದು ಕಳೆದ ಜನ್ಮದಲ್ಲಿ ಯಾವುದೊ ಮಹಾನ್ ವ್ಯಕಿಯಾಗಿ ಹುಟ್ಟಿರಬೇಕು ಅದಕ್ಕೆ ಈಗ ಅದು ಹಸಿವ ನೀಗಿಸುವ ಪುಣ್ಯ ಗದ್ದೆಯಾಗಿದೆ ' ಎಂದು ಸುಮ್ಮನಾಗಿ .. 'ನಾನು ಗದ್ದೆಯನ್ನು ಕಟ್ಟಬೇಕು .. ಆ ಮೂಲಕ ಅರ್ಥಪೂರ್ಣ ಜೀವಗಳನ್ನು ಅಲ್ಲಿ ಬೆಳೆಸಬೇಕು..' ಎಂಬ ತನ್ನ ಮುಂದಿನ ಗುರಿಯ ಮಾತನಾಡುತ್ತಾನೆ.

ಶಶಿಯ ಮಂದಹಾಸದ ಮೌನ ಲೊಕೇಶನ ಮಾತುಗಳಿಗೆ ಪೂರಕವಾಗಿರುತ್ತದೆ.

Continues ...

No comments:

Post a Comment