Saturday, July 11, 2020

ಪಯಣ - 11

ರಾತ್ರಿ ತಡರಾತ್ರಿಯವರೆಗೂ ಮೊಬೈಲ್ ಚಾಟ್ ಹಿಸ್ಟರಿಯನ್ನು ಚಾಚೂತಪ್ಪದೆ ರಿವೈಸ್ ಮಾಡಿದ ಆದಿಗೆ ಬೆಳ್ಳಂಬೆಳಗೆ ಆತನ ಅಮ್ಮನ ಫೋನ್ ಕಾಲು ಬಡಿದೆಬ್ಬಿಸಿತು . ಕಟ್ ಮಾಡಿದಷ್ಟೂ ಪುನ್ಹ ರಿಂಗುಡುತಿದ್ದ ಫೋನನ್ನು ಕಡೆಗೂ ಕಿವಿಯ ಮೇಲಿಟ್ಟ ಆತ ಸಿಟ್ಟಿನಿಂದ 'ಏನ್ ಆಯ್ತ್ ಇವತ್ತು ಬೆಳ್ ಬೆಳ್ಗೆ?!' ಎನುತ ಅರಚಿದ. ಅತ್ತ ಕಡೆಯಿಂದ ಅಮ್ಮ ಅದೇನೋ ವಿಷಯದ ಬಗ್ಗೆ ಏರು ಧ್ವನಿಯಲ್ಲಿ ಹೇಳುತ್ತಾ ಹೋದಂತೆ ಅದಕ್ಕೆ ತಾಳವೇನೋ ಎಂಬಂತೆ ಅಪ್ಪನೂ ಜೋರಾಗಿ ಚೀರತೊಡಗಿದ. ಮೊಬೈಲ್ನಿಂದ ಬರುತ್ತಿದ್ದ ಅರಚಾಟದ ಸದ್ದು ಹೆಚ್ಚಾದಂತೆ ಆದಿ ಎದ್ದು ರೂಮಿನ ಹೊರಗೆ ಬಂದ. ಕೈ ಮೀರಿರುವ ಘಳಿಗೆಯಲ್ಲಿ ತಾನೂ ಬೆಂಕಿಯ ಕಿಡಿಯಾದರೆ ಏನು ಗತಿ ಎಂದುಕೊಂಡು ಎಂದಿನಂತೆಯೇ ಅವರಿಬ್ಬರನ್ನು ಸಂತೈಸಲು ಆತ ಪ್ರಯತ್ನಿಸತೊಡಗಿದ. ಸಿಟ್ಟಿನ ಅಲೆ ಮನದೊಳಗೆ ಏರಿಳಿಯುತ್ತಿರಲು, ಆದಿ ಶಾಂತಿದೂತನಂತೆ ಪೋಷಕರ ಸಿಲ್ಲಿ ವಿಷಯಗಳಿಗೆ ಶಾಂತ ಸ್ವರದಲ್ಲಿ ಸಾಂತ್ವನವನ್ನು ಹೇಳುತ್ತಿರಲು, ಆತನ ಸಹನೆಯ ಕಟ್ಟೆ ಹೊಡೆಯಿತು. ಆದರೆ ಆತ ಅವರೊಟ್ಟಿಗೆ ಚೀರಾಡದೆ ತನ್ನ ಫೋನನ್ನೇ ಬಾಲ್ಕನಿಯ ನೆಲದ ಮೇಲೆ ಜೋರಾಗಿ ಎಸೆದು ಆವೇಶದಿಂದ ಒಂದೇ ಸಮನೆ ಏದುಸಿರು ಬಿಡುತ್ತ ನಿಂತ. ದೇವರಿಗೆ ಒಡೆಯುವ ಕಾಯಿಯಂತೆ ಛಿದ್ರ ವಿಛಿದ್ರವಾಗಿ ಫೋನು ಮುರುಟಿ ಬಿದ್ದಿತು. ಸಿಟ್ಟಿನಿಂದ ಏದುಸಿರು ಬಿಡುತ್ತಿದ್ದ ಆದಿಗೆ ಛಿದ್ರಗೊಂಡ ಮೊಬೈಲನ್ನು ಧಿಟ್ಟಿಸುತ್ತ ಇಂತಹ ಪೋಷಕರಿಂದ ಖುಷಿ ದೂರವಿದ್ದರೇ ಒಳ್ಳೆಯೆದು ಎಂಬ ಯೋಚನೆ ಮೂಡಿತು. ಇವರ ಕಿತ್ತಾಟ, ಅಪ್ರಬುದ್ದತೆ, ಅರಚಾಟ ಎಲ್ಲವೂ ಎಂಥವರಿಗೂ ಸಹಿಸಲಾಗದ ವಿಷಯಗಳಾಗುತ್ತವೆ ಎಂದನಿಸಿತು.

ಲೋಕೇಶ ಎದ್ದು ಜಾಗಿಂಗ್ ಗೆ ರೆಡಿಯಾಗತೊಳಗಿದ. ತಲೆಯಲ್ಲಿ ಸಾವಿರ ಯೋಚನೆಗಳ ಆಗರವನ್ನು ಸೃಷ್ಟಿಸಿಕೊಂಡಿದ್ದ ಆದಿಗೆ ಮುಂದೇನು ಮಾಡಬೇಕೆಂದು ತೋಚಲಿಲ್ಲ. ಒಡೆದ ತೆಂಗಿನಕಾಯಿಯ ಚೂರುಗಳಾಗಿದ್ದ ಫೋನಿನ ಭಾಗಗಳನ್ನು ಎತ್ತಿ ಒಂದೊಂದಾಗಿಯೇ ಜೋಡಿಸತೊಡಗಿದ. ಲೋಕೇಶ ಏನೋ ಹೇಳಿದ್ದನ್ನೂ ಅಷ್ಟಾಗಿ ಕೇಳಿಸಿಕೊಳ್ಳದೆ ತನ್ನ ವ್ಯರ್ಥ ಕೆಲಸದಲ್ಲಿಯೇ ಮಗ್ನನಾದ ಆತ. ಲೋಕೇಶ ತನ್ನ ಸ್ಪೋರ್ಟ್ಸ್ ಶೂ ಅನ್ನು ತೊಟ್ಟು ಜಾಗಿಂಗ್ಗೆ ಇನ್ನೇನು ಹೋಗಬೇಕು ಎನ್ನುವಷ್ಟರಲ್ಲಿ ಆದಿ ಲೋಕೇಶನಿಗೆ ನಿಲ್ಲುವಂತೆ ಹೇಳುತ್ತಾನೆ. ತೊಟ್ಟ ಚಡ್ಡಿಯಲ್ಲಿಯೇ ತೆಳುವಾದ ಟಿ ಶರ್ಟ್ ಹಾಗು ಶೂ ಅನ್ನು ತೊಟ್ಟು ತಾನೂ ಜಾಗಿಂಗ್ ಗೆ ಬರುವುದಾಗಿ ಹೇಳುತ್ತಾನೆ.

ಗಹಗಹನೇ ನಕ್ಕ ಲೊಕೇಶನನ್ನು ಆದಿಯ ತೀಕ್ಷ್ಣ ದೃಷ್ಟಿಗೆ ಮಾತು ಬಾರದಂತಾಗುತ್ತಾನೆ. ಆದಿಯ ಕಣ್ಣುಗಳು ಕೆಂಡದಂತೆ ಹೊಳೆಯುತ್ತಿದ್ದವು

'ಸರಿ ಬಾರಪ್ಪ .. ನಿನ್ ಇಷ್ಟ' ಎಂದು ಲೋಕೇಶ ಆತನನ್ನು ಡಿಸ್ಟ್ರಿಕ್ಟ್ ಫೀಲ್ಡ್ ಗೆ ಓಡಿಸಿಕೊಂಡೆ ಕರೆದೊಯ್ಯುತ್ತಾನೆ.

**

ಕಾಡು ನಾಡಾಗಿ ನಾಡು ಪಟ್ಟಣಗಳಾಗಿ ಈಗ ಪಟ್ಟಣಗಳು ಸ್ಮಾರ್ಟ್ ಸಿಟಿಗಳಾಗುತ್ತಿರುವ ಕಾಲದಲ್ಲಿ ಬೊಜ್ಜು ತುಂಬಿದ ದೇಹಗಳೇ ಎಲ್ಲೆಂದರಲ್ಲಿ. ದಿನದ ಹನ್ನೆರೆಡು ಘಂಟೆಗಳ ಕಾಲ ಲ್ಯಾಪ್ಟಾಪಿನ ಮುಂದೆಯೇ ಕೂತು ದಿನ ಕಳೆಯುವ ಪ್ರಸ್ತುತ ಕೆಲಸಗಳ ಕಾಲದಲ್ಲಿ ಇಂತಹ ಬೊಜ್ಜುದೇಹಗಳಿಗೆ ನಗರದ ಪಾರ್ಕು ಹಾಗು ಆಟದ ಫೀಲ್ಡ್ಗಳೇ ಒಂತರ ಸಾಮೂಹಿಕ ನೈಸರ್ಗಿಕ ಓಪನ್ ಜಿಮ್ಗಳಾಗಿಬಿಟ್ಟಿವೆ. ಬೆಳಗಾದರೆ ಸಾಕು ಹುಡುಗ ಹುಡುಗಿಯರು, ಆಂಟಿ ಅಂಕಲ್ ಗಳಲ್ಲದೆ ಅಜ್ಜ ಅಜ್ಜಿಯರವರೆಗೂ ಜನ ಇಲ್ಲಿ ಬಂದು ನೆರೆಯುತ್ತಾರೆ. ಕೆಲವರು ವಿಚಿತ್ರವಾಗಿ ಗುಂಪುಗಟ್ಟಿಕೊಂಡು ಗಹಗಹನೇ ನಗತೊಡಗಿದರೆ ಕೆಲವರು ಇವರ ಆ ವಿಚಿತ್ರ ವರ್ತನೆಯನ್ನು ಸಂಶಯದ ದೃಷ್ಟಿಯಿಂದ ನೋಡುತ್ತಾ ನೆಡೆಯುವರು. ಮತ್ತೆ ಕೆಲವರು ಮಿಲ್ಕಾ ಸಿಂಗ್ ಗಳಂತೆ ಮುಂದೆ ಸಿಕ್ಕವರನ್ನು ತುಳಿದು ತಿವಿದೇ ಬಿಡುವಂತೆ ಓಡತೊಡಗಿದರೆ ಇನ್ನು ಕೆಲವರು ಓಡುವುದಕ್ಕಿಂತ ಜಾಸ್ತಿ ಜ್ಯೂಸು, ಬಿಸ್ಕತ್ತು ಹಾಗು ಹಣ್ಣುಗಳನ್ನು ತಿಂದು ಸಾಂತ್ವನ ತಂದುಕೊಳ್ಳುವರು. ಇನ್ನು ಮಕ್ಕಳು ಯುವಕರಂತೂ ಇಡೀ ಫೀಲ್ಡ್ನ ತುಂಬೆಲ್ಲ ಪಸರಿಸಿಕೊಂಡು ಕ್ರಿಕೆಟ್ ಆಡುವ ಮೋಜು. ಯಾವ ಆಟಗಾರ ಅದ್ಯಾವ ಮ್ಯಾಚಿನವನೋ ಅದೊಂದು ಬಗೆಯ ಚಿದಂಬರ ರಹಸ್ಯವೇ ಹಲವರಿಗೆ. ಇನ್ನು ಕೆಲವರು ತಾವು ವಾಕ್ ಮಾಡಲು ಬಂದಿರುವುದೋ ಅಥವಾ ತಮ್ಮ ಅತಿ ಧುಬಾರಿ ನಾಯಿಯನ್ನು ಪ್ರದರ್ಶನಕ್ಕೆ ತಂದಿರುವರೋ ಹೇಳುವುದು ಕಷ್ಟ. ಕಿವಿಗೆ ಇಯರ್ ಫೋನನ್ನು ತೂರಿಸಿಕೊಂಡು ಹಜ್ಜೆಗೊಂದು ಹೆಜ್ಜೆಯನ್ನು ಪೋಣಿಸುತ್ತಾ ನೆಡೆದರೆ ಆ ಧುಬಾರಿ ನಾಯಿ ತನ್ನ ಅಗ್ಗದ ನಾಯಿ ಬುದ್ದಿಯನ್ನು ಬಿಡಬೇಕೆ? ಕುತ್ತಿಗೆಗೆ ಹಾಕಿರುವ ಸರಪಳಿಯೇ ತುಂಡಾಗುವಂತೆ ಗಬ್ಬು ವಾಸನೆ ಬರುವೆಡೆಯೊ ಅಥವಾ ಮತ್ಯಾವಾವುದೋ ಅನ್ಯ ಲಿಂಗಿ ನಾಯಿಯ ಸೆಳೆತಕ್ಕೊ ಒಳಗಾಗಿ ಓಟ ಕೀಳುವುದು. ಆಗ ಮಾತ್ರ ಬಹುಷಃ ಆ ನಾಯಿಯೊಟ್ಟಿಗೆ ವಾಕಿಂಗ್ ಬಂದಿರುವವರು ಜಾಗಿಂಗ್ ಮಾಡುವುದು! ಸುಪ್ತವಾಗಿದ್ದ ನಾಯಿಯ ನಾಯಿಬುದ್ಧಿಯನ್ನು ಕೂಡಲೇ ಶಮನಮಾಡುವುದು ಅಷ್ಟು ಸುಲಭವಲ್ಲ ಎಂದೆನಿಸಿ ಏದುಸಿರು ಬಿಡುತ್ತಾ ಕೊನೆಗೂ ಅದನ್ನು ಅದರ ಪಾಡಿಗೆ ಬಿಟ್ಟು ಕಲ್ಲು ಬೆಂಚಿನ ಮೇಲೆ ಕೂತು ನಿಟ್ಟುಸಿರು ಬಿಡುವರು.

ಲೋಕೇಶ ಅದೇನೇ ಬಡಬಡಿಸಿದರೂ ಆದಿ ಒಂದಿನಿತೂ ಪ್ರತಿಕ್ರಿಯೆ ನೀಡದೆಯೆ ಫೀಲ್ಡ್ನವರೆಗೂ ಓಡುತ್ತಲೇ ಬಂದ. ಆತನೊಳಗೆ ಈಗ ಅಪ್ಪ, ಅಮ್ಮ, ಖುಷಿ ಎಂಬ ಮೂರು ಪಾತ್ರಗಳು ಪ್ರೀತಿಯೆಂಬ ನಾಲ್ಕನೇ ಪಾತ್ರವನು ಸೃಷ್ಟಿಸಲು ಆವಣಿಸುತ್ತಿವೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಕಾರಣ ತನ್ನ ಪೋಷಕರೇ ಎಂದು ಆತ ಅಂದುಕೊಳ್ಳುತ್ತಾನೆ. ಕೋಪ ಇನ್ನೂ ವಿಪರೀತವಾಯಿತು. ಲೊಕೇಶನೊಟ್ಟಿಗೆ ಓಡೋಡಿಕೊಂಡೆ ಇಲ್ಲಿಯವರೆಗೂ ಬಂದ ಆದಿ ಒಂದಿನಿತೂ ಸುಸ್ತಾದವನಂತೆ ಕಾಣಲಿಲ್ಲ. ಲೋಕೇಶನೇ ಖುದ್ದಾಗಿ 'ಸ್ವಲ್ಪ ಹೊತ್ತು ಕೂತು ಆಮೇಲೆ ಜಾಗಿಂಗ್ ಮಾಡುವ' ಎಂದರೂ ಕೇಳದ ಆದಿ ಕ್ರೀಡಾಂಗಣದ ಸುತ್ತ ಓಡತೊಡಗುತ್ತಾನೆ. ತಲೆಯ ತುಂಬೆಲ್ಲ ಚಿತ್ತವನ್ನು ಹರಿದು ತಿನ್ನುವ ವಿಷಯಗಳೇ ತುಂಬಿರುವಾಗ ಬಹುಷಃ ಆತನಿಗೆ ತಾನು ಇಲ್ಲಿಗೆ ಬಂದಿರುವದೇ ಗೊತ್ತಿಲ್ಲದಿರಬಹುದು. ಆತ ಓಡುತ್ತಲೇ ಹೋದ. ಓಟ ತೀವ್ರವಾಯಿತು. ಮುಂದೆ ಸಿಕ್ಕ ಬೊಜ್ಜು ತುಂಬಿದ ದೇಹಗಳು ಈತನ ಓಟದ ರಭಸಕ್ಕೆ ಸರ್ರನೆ ದಾರಿ ಸರಿದು ಬದಿಗೆ ನಿಂತವು. ದುಭಾರಿ ನಾಯಿಯೊಂದು ತನ್ನ ಮಾಲೀಕನಿಂದ ಸರಪಣಿ ಸಮೇತ ಬೇರ್ಪಟ್ಟು ಆದಿಯೊಟ್ಟಿಗೆ ಓಡತೊಡಗಿತು.

ಅಷ್ಟು ದೊಡ್ಡ ಕ್ರೀಡಾಂಗಣದ ಎರಡನೇ ಸುತ್ತನ್ನು ಮುಗಿಸಿದ ಆದಿಯನ್ನು ಲೋಕೇಶ ಜೋರಾಗಿ ಕೂಗಿ ನಿಲ್ಲುವಂತೆ ಹೇಳುತ್ತಾನೆ. ಆದಿಗೆ ಆತನ ಕೂಗಿನ ಸದ್ದೂ ಕಿವಿಯ ಮೇಲೆ ಬೀಳಲಿಲ್ಲ. ಓಟ ಮುಂದುವರೆಯಿತು. ಆತನ ಓಟವನ್ನು ನೋಡಿದ ಲೋಕೇಶನಿಗೆ ಈಗ ಅಕ್ಷರ ಸಹ ದಿಗ್ಬ್ರಮೆಯಾಗತೊಡಗಿತು. ಆತ ತನ್ನ ಮೊಬೈಲನ್ನು ಹೊರತೆಗೆದ. ಮೂರನೇ ಸುತ್ತನ್ನು ಮುಗಿಸುವಷ್ಟರಲ್ಲಿ ವಾಕಿಂಗ್ ಗೆ ಬಂದಿದ್ದ ಹಲವರು ಟ್ರ್ಯಾಕ್ ನ ಉದ್ದಕ್ಕೂ ಈತನಿಗೆ ದಾರಿ ಬಿಡುವಂತೆ ಪಕ್ಕಕೆ ಸರಿದು ನಿಂತಿದ್ದರೆ, ಗಹಗಹನೇ ನಗುತ್ತಿದ್ದ ಹಿರಿಯರ ಗುಂಪೂ ಮೊದಲ ಬಾರಿಗೆ ಎಂಬಂತೆ ಅಷ್ಟು ದೊಡ್ಡ ಕ್ರೀಡಾಂಗವನ್ನು ಒಂದೇ ವೇಗದಲ್ಲಿ ಮೂರು ಬಾರಿ ಪ್ರದಕ್ಷಿಣೆ ಹಾಕಿದ ಯುವಕನನ್ನು ಬಾಯ್ಬಿಟ್ಟುಕೊಂಡೇ ನೋಡತೊಡಗಿತು. ನಾಲ್ಕನೇ ಸುತ್ತನ್ನು ತನ್ನ ಮೊಬೈಲಿನ ಟೈಮರ್ ನಲ್ಲಿ ಲೆಕ್ಕ ಹಾಕಿದ ಲೋಕೇಶನಿಗೆ ಆದಿಯ ವೇಗವನ್ನು ಕಂಡು ನಂಬಲೇ ಆಗಲಿಲ್ಲ.

'ಆದಿ...! ಕಮ್ ಆನ್ ಮ್ಯಾನ್ .. ಸ್ಟಾಪ್ ಇಟ್ ನೌ..' ನಾಲ್ಕನೇ ಸುತ್ತನ್ನು ಮುಗಿಸಿದ ಆದಿಯನ್ನು ಉದ್ದೇಶಿಸಿ ಈ ಬಾರಿ ತನ್ನ ಶಕ್ತಿಯನ್ನು ಮೀರಿ ಕೂಗಿದ.

ಆದಿ ನಿಲ್ಲಲಿಲ್ಲ.

ಆದರೆ ಈ ಬಾರಿ ಲೋಕೇಶ ಸುಮ್ಮನಿರದೆ ಆತನೂ ಆದಿಯ ಹಿಂದೆ ಓಡುತ್ತಾ ಒದ್ದೆಯಾಗಿದ್ದ ಆತನ ಶರ್ಟ್ನ ಕುತ್ತಿಗೆಯನ್ನು ಹಿಡಿದು ಜಗ್ಗತೊಡಗಿದ. ದುಃಖಭರಿತ ಸಿಟ್ಟಿನಲ್ಲಿ ಕೂಗುತ್ತಾ ಆದಿ ಲೊಕೇಶನ ಕೈಯನ್ನು ದೂರಕ್ಕೆ ತಳ್ಳುತ್ತಾನೆ. ಆದರೆ ಲೋಕೇಶ ಸುಮ್ಮನಾಗುವುದಿಲ್ಲ. ಆತನ ಕೈಯನ್ನು ಗಟ್ಟಿಯಾಗಿ ಹಿಡಿದು ನಿಲ್ಲಿಸತೊಡಗುತ್ತಾನೆ. ಕೆಲ ಕ್ಷಣ ಕೊಸರಾಡಿದಂತೆ ಆಡಿದ ಆದಿ ಕೊನೆಗೆ ಶಾಂತವಾಗುತ್ತಾನೆ. ಆತನ ಕಣ್ಣುಗಳು ರಕ್ತ ಕಾರುವಂತೆ ಕೆಂಪಾಗಿದ್ದವು. ಲೋಕೇಶ ಆತನಿಗೆ ಕುಡಿಯಲು ನೀರನ್ನು ಕೊಟ್ಟರು ಒಂದು ಗುಟುಕು ಕುಡಿಯದ ಆತ ಕೂಡಲೇ ಅಲ್ಲಿಂದ ರೂಮಿನೆಡೆಗೆ ಓಡುತ್ತಾನೆ. ಲೋಕೇಶ ಆಶ್ಚರ್ಯದಿಂದ ಆತ ಓಡಿದ ದಿಕ್ಕನೇ ನೋಡುತ್ತಾ ನಿಲ್ಲುತ್ತಾನೆ.

'ಏನಪ್ಪಾ ಆತ ನಿನ್ ಫ್ರೆಂಡ' ಹಿಂದಿನಿಂದ ಬಂದ ಅರ್ವತ್ತರ ವ್ಯಕ್ತಿಯೊಬ್ಬರು ಕೇಳಿದರು.

'ಹೌದು ಸಾರ್.. ಏಕೆ?'

'ನೋಡು, ನಾನ್ ಇಲ್ಲಿ ಕಳೆದ ಮೂವತ್ತು ವರ್ಷದಿಂದ ವಾಕಿಂಗ್ ಗೆ ಬರ್ತಾ ಇದ್ದೀನಿ .. ಆದ್ರೆ ಈ ರೀತಿ ನಾಲ್ಕ್ ರೌಂಡ್ ರನ್ನಿಂಗ್ ನ ಇಷ್ಟ್ ಫಾಸ್ಟಾಗಿ ಓಡಿರೋದ್ನ ಯಾರನ್ನೂ ನೋಡಿಲ್ಲ.. ಅವ್ರು ನ್ಯಾಷನಲ್ ಲೆವೆಲ್ ರನ್ನರ?' ಎಂದು ಕೇಳುತ್ತಾರೆ.

ಅವರ ಪ್ರೆಶ್ನೆಗೆ ನಕ್ಕ ಲೋಕೇಶ ತನ್ನ ಫೋನಿನ ಟೈಮರ್ ಅನ್ನು ತೆಗೆದು ನೋಡುತ್ತಾ,

'ಸದ್ಯಕ್ಕೆ ಒಬ್ಬ ಟ್ರೂ ಲವರ್ ಅಷ್ಟೇ ಸರ್ .. ಇನ್ ಸ್ವಲ್ಪ ದಿನದಲ್ಲಿ ನೋಡಿ ಹಿ ವಿಲ್ ಬಿ ಆ ಡ್ಯಾಶಿಂಗ್ ರನ್ನರ್..' ಎನ್ನುತ್ತಾನೆ.

**

ಸುಪ್ತವಾಗಿದ್ದ ಆದಿಯ ಆ ಅದ್ಭುತ ಓಟ ಲೋಕೇಶನಲ್ಲಿ ಹಲವಾರು ಪ್ರೆಶ್ನೆಗಳನ್ನು ಹುಟ್ಟು ಹಾಕಿದ್ದವು. ವರ್ಷಗಳಿಂದ ಓಡುತ್ತಿರುವ ತಾನೇ ಮನಸ್ಸು ಮಾಡಿ ಓಡಿದರೂ ಹೆಚ್ಚೆಂದರೆ ಎರಡು ಸುತ್ತುಗಳನ್ನು ಓಡಬಹುದಾದ ಟ್ರ್ಯಾಕ್ ಅನ್ನು ಆದಿ ಅದೇಗೆ ಒಮ್ಮೆಲೇ ನಾಲ್ಕು ಸುತ್ತನ್ನು ಓಡಿದ ಎಂದು ದಿಗ್ಭ್ರಮೆಯಾಯಿತು. ಒಟ್ಟಿಗೆ ಒಂದು ಹೊಸ ಆಲೋಚನೆಯೂ ಮೂಡಿತು.

ಜಾಗಿಂಗ್ ಮುಗಿಸಿ ಅಲ್ಲಿಂದ ಸೀದಾ ತನ್ನ ಶುಂಠಿ ಗದ್ದೆಗೆ ಹೋಗಿ ಅಜ್ಜಿಯೊಟ್ಟಿಗೆ ಜೀವನದ ಬಗೆಗಿನ ಅರೆಪಕ್ವಗೊಂಡ ಕೆಲವು ವಿಚಾರಗಳನ್ನು ಚರ್ಚಿಸಿ ರೂಮಿಗೆ ಬಂದ ಲೋಕೇಶ ಎಂದಿನಂತೆ ಕೈಕಾಲುಗಳನ್ನು ತೊಳೆಯದೆ ರೂಮಿನೊಳಗೆ ಬಂದು ಮಲಗಿದ್ದ ನನ್ನ ಮೇಲೆ ದೊಪ್ಪನೆ ಬಿದ್ದ. ಕನಸ್ಸಿನ ಲೋಕದಲ್ಲಿ ಆರಾಮಾಗಿ ವಿಶ್ರಮಿಸುತ್ತಿದ್ದ ನನಗೆ ದೊಡ್ಡ ಬಂಡೆಯೊಂದು ಮೈಮೇಲೆ ಕುಸಿದು ಬಿದ್ದಂತಹ ಅನುಭವವಾಯಿತು. ಎದ್ದು ವಾಸ್ತವವನ್ನು ಅರಿತು , ಲೊಕೇಶನ ಅಂಡಿನ ಮೇಲೆ ಎರಡು ಬಾರಿ ಜಾಡಿಸಿ ಒದೆದ ಮೇಲೆಯೇ ನನ್ನ ಕೋಪ ಕೊಂಚ ಶಮನವಾದದ್ದು. ನಾನು ಶಕ್ತಿ ಮೀರಿ ಕೊಟ್ಟ ಏಟನ್ನೂ ಅಷ್ಟಾಗಿ ಲೆಕ್ಕಕ್ಕೆ ತೆಗೆದುಕೊಳ್ಳದೆ ಆತ,

'ಮಚಿ.. ಇವತ್ತಿಂದ ಇನ್ ಆರ್ ತಿಂಗಳ್ಲಲಿ ನಮ್ಮಲ್ಲಿ ಒಬ್ಬ ಯೂನಿವರ್ಸಿಟಿ ಚಾಂಪಿಯನ್ ಆಗ್ತಾನೆ.. ದಿ ರನ್ನಿಂಗ್ ಚಾಂಪಿಯನ್'. ಎಂದು ಆತ ಹೇಳಿದ. ಬಾಯ್ಬಿಟ್ಟರೆ ಆಕಾಶಕ್ಕೆ ಹಾರುವ ಮಾತಾಡುವ ಆತನ ಮಾತನ್ನು ನಾನು ಕೇಳಿಯೂ ಕೇಳದವನಂತೆ ಸುಮ್ಮನಾದೆ. ಆದರೂ ಯಾಕೋ ಕೇಳಬೇಕೆಂದ್ದಾಗಿ,

'ಯಾರಪ್ಪ ಅದು ಮಹಾತ್ಮಾ' ಎಂದು ಹೊದೆದುಕೊಂಡಿದ್ದ ರಗ್ಗನ್ನು ಮುಖ ಮುಚ್ಚುವಂತೆ ಮೇಲಕ್ಕೆ ಎಳೆದುಕೊಂಡೆ.

'ಆದಿ..' ಎಂದಷ್ಟೇ ಹೇಳಿದ ಆತ ಸುಮ್ಮನಾದ. ಓದುವ ಕಾಲದಲ್ಲಿ ಶುಂಠಿ ಬಿಸಿನೆಸ್ನಂತ ಅಡ್ಡ ಕಸುಬನ್ನು ಹಿಡಿದಿರುವ ಈ ಅಡ್ಡಕಸುಬಿ ಇನ್ನು ಆ ಅಮಾಯಕ ಆದಿಶೇಷನನ್ನು ಮುಗಿಸಿಬಿಡುವನೋ ಎಂದು ಕೂಡಲೇ ಎದ್ದು ಕೂತೆ.

'ವ್ಹಾಟ್ ?! ಮಗ್ನೆ ನೀನು ಫೇಲ್ ಆಗೋದಲ್ದೆ ಅವನ್ನೂ ಜೊತೆಗೆ ಕೂರ್ಸ್ಕೊಬೇಕು ಅನ್ಕೊಂಡಿದ್ದೀಯ?! ಪಾಪ ಅವ್ನ್ ಏನ್ ಮಾಡ್ದ ಅಂತ ಈಗ ರನ್ನಿಂಗು'

'ಏನ್ ಮಾಡಿದಾನ.. ನೋಡಿಲ್ಲಿ' ಎಂದು ತನ್ನ ಜೇಬಿನಲ್ಲಿದ್ದ ಮೊಬೈಲನ್ನು ಹೊರಗೆಳೆದು ತೋರಿಸುತ್ತಾ 'ರೆಕಾರ್ಡ್ ಬ್ರೇಕಿಂಗ್ ಸ್ಪೀಡಲ್ಲಿ ಓಡ್ತಾನೇ ಕಾಣಪ್ಪಾ ಈ ಮಹಾಶಯ.. ನಂಗಂತೂ ಅಷ್ಟ್ ಓಡೋಕೆ ಸಾಧ್ಯನೇ ಇಲ್ಲ ಬಿಡು .. ಅದ್ ಯಾರನ್ನ ಓಡಿಸ್ಕೊಂಡ್ ಹೋಗ್ತಾ ಇದ್ನೋ ಗೊತ್ತಿಲ್ಲ' ಎಂದು ನಗತೊಡಗಿದ.

'ಲೋಕಿ ಬೇಡ್ವೊ .. ಅವ್ನ್ ಏನಾದ್ರೂ ಫೇಲ್ ಆದ್ರೆ ನಮ್ ಕತೇನೂ ಅಷ್ಟೇ.. ಅವ್ನ್ ಪಾಡಿಗೆ ಅವ್ನ ಓದೋಕ್ಕೆ ಬಿಡು' ನಾನೆಂದೆ.

'ನೋ ವೇಸ್.. ನೀನ್ ಸುಮ್ನಿರಪ್ಪಾ, ನಾನೇನ್ ಅವ್ನ ಮಾರ್ಸಿಗೂ ಅಥವಾ ಮತ್ತೊಂದು ಗ್ರಹಕ್ಕೋ ಕಳ್ಸ್ತಾ ಇಲ್ಲ..ಏನ್ ದಿನಕ್ಕೆ ಒಂದ್ ಘಂಟೆ ಖರ್ಚ್ ಮಾಡಿದ್ರೆ ಸಾಕು' ಎನ್ನುತ್ತಾನೆ. ಅಷ್ಟರಲ್ಲಿ ಸ್ನಾನಕ್ಕೆ ಹೋಗಿದ್ದ ಆದಿ ಹೊರಬರುತ್ತಾನೆ. ಎಂದಿನಂತೆ ಯಾರೊಟ್ಟಿಗೂ ಮಾತನಾಡದೆ ಸೆಪ್ಪೆಮೋರೆಯನ್ನು ಹಾಕಿಕೊಂಡೆ ಕಾಲೇಜಿಗೆ ರೆಡಿಯಾಗತೊಡಗುತ್ತಾನೆ.

'ಆದಿ, ದಾರೀಲಿ ಪ್ರಿನ್ಸಿಪಲ್ ಸಿಕ್ಕಿದ್ರು' ಲೋಕೇಶ ಹೇಳಿದ.

'ಒಹ್, ಏನಂತೆ'

'ಅವ್ರ್ ಮಗಳಿಗೆ ಒಬ್ಬ ಬಾಯ್ ಫ್ರೆಂಡ್ ಬೇಕಂತೆ..' ಎಂದ ಆತ ಗೊಳ್ಳನೆ ನಗತೊಡಗಿದ. ಒಮ್ಮೆಲೇ ಮೂಡಿದ ಆ ಪ್ರತಿಕ್ರಿಯೆಗೆ ನನಗೂ ನಗುವನ್ನು ತಡೆಯಲಾಗಲಿಲ್ಲ.

ಆದಿ ಸುಮ್ಮನಿದ್ದ.

ಕೂಡಲೇ ಲೋಕೇಶ ಆತನ ಬಳಿಗೋಗಿ 'ಮಚಿ, ನೀನ್ ಈ ಪಾಟಿ ಓಡಿರೋದನ್ನ ನಾನು ನೋಡಿರಲೇ ಇಲ್ಲ. ಏನ್ ಅಂತ ಬ್ರಿಲಿಯಂಟ್ ರನ್ನಿಂಗ್ ಅಲ್ದೆ ಇದ್ರೂ ಇಟ್ಸ್ ಪ್ರಾಮಿಸಿಂಗ್. ಡೈಲಿ ಇದೆ ರೀತಿ ಪ್ರಾಕ್ಟೀಸ್ ಮಾಡಿದ್ರೆ ಯೂನಿವರ್ಸಿಟಿ ಚಾಂಪಿಯನ್ಶಿಪ್ಗೆ ಟ್ರೈ ಮಾಡಬಹುದು..' ಎಂದು ಸುಮ್ಮನಾದ.

'ನನ್ನ್ ಲೈಫೇ ಒಂದು ಚಾಂಪಿಯನ್ ಶಿಪ್ ಆಗಿದೆ ಇವಾಗ .. ಮೊದ್ಲು ಅದನ್ನ ಗೆದ್ರೆ ದೊಡ್ಡ್ ವಿಷ್ಯ..' ಎಂದ ಆದಿ ಮತ್ತೇನೂ ಮಾತನಾಡದೆ ಬಿರಬಿರನೆ ರೂಮಿನಿಂದ ಹೊರನೆಡೆದ.

ಲೋಕೇಶನಿಗೆ ಏನೇಳಬೇಕೆಂದು ತೋಚದೆ ನನ್ನೆಡೆಗೆ ನೋಡತೊಡಗಿದ.



****



ಮದ್ಯಾಹ್ನದ ಊಟಕೆಂದು ಬರ್ಗರ್ ತಿನ್ನಲು ಕಾಲೇಜಿನ ಹತ್ತಿರದ ಮಾಲಿಗೆ ಬಂದು ಕೂತಿರುವಾಗ ಪಕ್ಕದ ಟೇಬಲ್ಲಿನ ತಿಂದು ಬಿಟ್ಟ ಪ್ಲೇಟ್ಗಳನ್ನು ತೆಗೆಯಲಿಲ್ಲವೆಂದು ಬೊಜ್ಜುಗಟ್ಟಿದ್ದ ದೇಹಗಳೆರೆಡು ಅಲ್ಲಿನ ಕ್ಲೀನರನ್ನು ಕರೆದು ಒಂದೇ ಬೈಯತೊಡಗಿದವು. ಬಿರಬಿರನೆ ವಾನರರಂತೆ ಅರೆಬರೆ ತಿಂದು ಬಿಸುಟು ಹೋಗಿದ್ದ ಆಹಾರವನ್ನು ಆತ 'ಸಾರಿ ಸಾರ್ , ಸಾರಿ ಮೇಡಂ' ಏನುತಾ ಎತ್ತಿ ಪ್ಲೇಟ್ ಒಂದಕ್ಕೆ ಸುರಿದು ಅದನ್ನು ಪಕ್ಕದ ಡಸ್ಟ್ ಬಿನ್ನಿಗೆ ಹಾಕಿ ಬಂದು, ಸ್ಪ್ರೇಯ ನೀರನ್ನು ಟೇಬಲ್ಲಿನ ಮೇಲೆಲ್ಲಾ ಚುಮುಕಿಸಿ ಬಟ್ಟೆಯೊಂದನ್ನು ತೆಗೆದು ನೀಟಾಗಿ ಒರೆಸಿ ಅವರನ್ನು ಕೂರುವಂತೆ ಹೇಳುತ್ತಾನೆ.

'ಹ್ಯುಮಾನಿಟಿ ಅನ್ನೋ ಪದಕ್ಕೆ ಅರ್ಥ ಹೋಗಿರೋದೇ ಇಂತವರಿಂದ..' ಸಂಕಟದ ಅಲೆಯೊಂದು ಲೋಕೇಶನ ಮುಖದ ಮೇಲೆ ಮೂಡಿ ಮರೆಯಾಯಿತು.

'ಅಲ್ ನೋಡ್ ಮಚಿ ಆ ಕಾಗೆಗಳನ್ನ.. ತಿನ್ನೋಕ್ಕೆ ಒಂಚೂರು ಊಟ ಸಿಕ್ರು ಸಾಕು ಹೇಗೆ ಕೂಗಿ ತನ್ನವರೆಲ್ಲರನ್ನು ಕರೆಯುತ್ತೆ..ಅಲ್ಲಿ ವರ್ಣ, ಜಾತಿ, ಮೇಲು ಕೀಳು ಅನ್ನೋ ಒಂಚೂರೂ ತಾರತಮ್ಯ ಇಲ್ಲ. ಹಸಿದಾಗ ಮಾತ್ರ ಆಹಾರ ಇಲ್ಲವರಾದರೆ ವಿರಾಳವಾದ ವಿಹಾರ. ಇಂತಹ ಮುಗ್ದ ಪ್ರಾಣಿಗಳ ನಡುವೆ ಮಾನವ ಅದೇಗೆ ಜನ್ಮ ತಾಳಿದ ಅನ್ನೋದೇ ತಿಳಿಯೋಲ್ಲ . ಅದೆಷ್ಟು ಕೆಟಗರಿಯ ಮಾನವರು ಇದ್ದಾರೆ ಇಲ್ಲಿ. ದೇಶ, ಭಾಷೆ, ಜಾತಿ, ವರ್ಣದಿಂದಿಡು ಪ್ರಗತಿಪರ, ದೇಶದ್ರೋಹಿ, ಅತ್ಯಾಚಾರಿ.. ಥು.. ನಮ್ದು ಒಂದು ಜೀವ್ನಾನ..' ಲೋಕೇಶನ ಸದ್ದು ನಾವು ಕೂತಿದ್ದ ಮೂರು ಟೇಬಲ್ಲಿನ ಆಚೆಗೂ ಕೇಳಿ ಕೆಲವರು ನಮ್ಮೆಡೆಗೆ ತಿರುಗುವಂತೆ ಮಾಡಿತು.

'ಹೊಟ್ಟೆ ತುಂಬಿದಾಗ ಮಾತ್ರ ಕೊಡ್ಬೇಕು ಅನ್ಸೋದು ..ಇಲ್ಲ ಅಂದ್ರೆ ಪ್ರಾಣಿಗಳಿಂತ ಕೀಳು.. ಆ ಕಣ್ಣುಗಳನ್ನು ನೋಡು ಮಚಿ .. ಬರಿ ನಾನು , ನನಗೆ , ನನ್ನದು ಅನ್ನೋದೇ ತುಂಬಿ ಕೊಬ್ಬಿ ಹೋಗಿದೆ..’

'ಗುರು.. ತಿಂದ್ ಆಯ್ತಾ.. ಫಸ್ಟ್ ಪಿರಿಯಡ್ ನಿಮ್ ಕುಂಬಕರ್ಣಿ ಅತ್ತೆದು.. ಬರ್ತೀಯೋ ಇಲ್ಲ ಇಲ್ಲೇ ಕೊಬ್ಬಿರೋ ಕಣ್ಣ್ಗಳನ್ನ ನೋಡ್ತಾ ಕೂರ್ತಿಯೋ ' ಎಂದು ಆತನ ಮಾತಿಗೆ ಕಿಂಚಿತ್ತು ಬೆಲೆಕೊಡದಂತೆ ಆತನಿಗೆ ನೆನಪಿಸಿದೆ.

ಆದಿ ಒಂದು ಮುಗುಳ್ನಕ್ಕ. ಆತನ ಮುಖದ ಮೇಲೆ ಇತ್ತೀಚಿಗೆ ನಗುವೆಂಬುದನ್ನು ಕಂಡು ತಿಂಗಳುಗಳೇ ಆಗಿವೆ.

'ಹಲೋ.. ಮಿಸ್ಟರ್!!' ಎಂದು ಜೋರಾಗಿ ಅರಚಿದ ಲೋಕಿ. ತುಸು ಮೊದಲು ತಾವೇ ಪರಮಪಾವನರಂತೆ ಟೇಬಲನ್ನು ಕ್ಲೀನರೊಬ್ಬನಿಂದ ಶುಚಿಗೊಳಿಸಿ ಈಗ ಬೇಕಾದ ಬೇಡವಾದ ಎಲ್ಲವನ್ನು ಆರ್ಡರ್ ಕೊಟ್ಟು ತಂದು, ರಕ್ಕಸರಂತೆ ತಿಂದು, ಫ್ರೆಂಚ್ ಫ್ರೈ ಹಾಗು ಕೆಚಪ್ಪಿನ ಒಡೆದ ಪ್ಯಾಕನ್ನು ಟೇಬಲ್ಲಿನ ಮೇಲೆಲ್ಲಾ ಚೆಲ್ಲಿ, ಬರ್ಗರ್ನ ಸುತ್ತಿ ಕೊಡುವ ಪೇಪರ್ ಹಾಗು ಟಿಶ್ಯೂವನ್ನು ಉಂಡೆಗಟ್ಟಿ ಕಸದ ತೊಟ್ಟಿಯಲ್ಲಿ ಬಿಸಾಡುವಂತೆ ಎಸೆದು ಗೊರ್ರನೆ ತೇಗುತ್ತಾ ಎದ್ದು ನೆಡೆಯತೊಡಗಿದ ಆ ಜೋಡಿಗೆ ಲೊಕೇಶನ ಗದರಿಸುವ ಸದ್ದು ಇತ್ತ ಕಡೆ ತಿರುಗುವಂತೆ ಮಾಡಿತು.

'ಯೆ..ಸ್..' ಅಮೇರಿಕ ಅಧ್ಯಕ್ಷನ ಹೆಂಡತಿಯಂತೆ ಧಿಮಾಕಿನ ಧ್ವನಿಯಲ್ಲಿ ನುಡಿದಳು ಆತನೊಟ್ಟಿಗಿದ್ದ ಆಕೆ.

'ಟೇಬಲನ್ನು ಅಷ್ಟ್ ಕ್ಲೀನ್ ಆಗಿ ಯಾಕ್ರೀ ಬಿಟ್ ಹೋಗ್ತಾ ಇದ್ದೀರಾ.. ಇನ್ನೂ ಸ್ವಲ್ಪ ಗಲೀಜ್ ಮಾಡಿ.. ಕ್ಲೀನರ್ ಬಾಯ್ ಅನ್ನೋ ಪ್ರಾಣಿ ಕಮ್ ಮಷೀನ್ ಇದ್ಯಲ್ಲ .. ಕ್ಲೀನ್ ಮಾಡುತ್ತೆ..’ ಅವರನ್ನೇ ದುರುಗುಟ್ಟಿ ನೋಡುತ್ತಾ ಹೇಳಿದ ಲೋಕೇಶ.

'Excuse me .. Mind your own Business!!'

‘I’m midning my own business Ma’m.. Now will you be kind enough to clean the table & leave..?' ತನ್ನ ಸಿಟ್ಟನ್ನು ಬಿಟ್ಟೂ ಬಿಡದವನಂತೆ ಹೇಳತೊಡಗಿದ ಲೋಕೇಶ.

‘Fuck off..’ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಆಕೆ ತನ್ನೊಟ್ಟಿಗೆ ಬಂದ ಯುವಕನ ಕೈ ಹಿಡಿದು ಎಳೆದುಕೊಂಡು ಹೊರಡತೊಡಗಿದಳು.

ಕೂಡಲೇ ಅಲ್ಲಿಗೆ ಬಂದ ಕ್ಲೀನರ್ ಹುಡುಗನನ್ನು ಕಣ್ ಸನ್ನೆಯಲ್ಲೇ ಶುಚಿಗೊಳಿಸದಂತೆ ಹೇಳಿದ ಲೋಕೇಶ,

'ಕ್ಲೀನ್ ಮಾಡೇ ಹೋಗ್ಬೇಕು.. ಇಲ್ಲ ಅಂದ್ರೆ ಇದೆ ಫೋಟೋನ ನ್ಯೂಸ್ ಪೇಪರ್ಸ್ ಗೆ ಹಾಕಿ ಮಾನ ತೆಗಿಬೇಕಾಗುತ್ತೆ..' ಎಂದು ಆತ ಅವರಿಬ್ಬರು ಕೂತು ತಿನ್ನುತ್ತಿದ್ದ ಹಾಗು ತಿಂದ ನಂತರದಲ್ಲಿ ಸೆರೆಹಿಡಿದಿದ್ದ ಫೋಟೋವನ್ನು ಕಾಣುವಂತೆ ತನ್ನ ಮೊಬೈಲಿನಲ್ಲಿ ಅವರಿಗೆ ತೋರಿಸುತ್ತಾನೆ. ಫೋಟೋವನ್ನು ಯಾವಾಗ ಅವರುಗಳು ಕಂಡರೋ ಕೊಂಚ ಹೊತ್ತು ಯೋಚಿಸುವಂತೆ ಮಾಡಿ ತಮ್ಮೆಲ್ಲ ಅಟ್ಟಿಟ್ಯೂಡನ್ನು ಬದಿಗಿಟ್ಟವರಂತೆ ಸಿಡುಕು ಮೊರೆಯಲ್ಲಿಯೇ ತಿಂದ ಅಷ್ಟೂ ವೆಸ್ಟನ್ನು ಪ್ಲೇಟ್ನ ಮೇಲಿರಿಸಿ ಅದನ್ನು ಪಕ್ಕದ ಡಸ್ಟ್ ಬಿನ್ನಿಗೆ ಸುರಿದು ಗೊಣಗಿಗೊಳ್ಳುತ್ತಾ ಅಲ್ಲಿಂದ ಜಾಗ ಕಿತ್ತರು.

ಅಲ್ಲಿಯವರೆಗೂ ನೆರೆದಿದ್ದ ಎಲ್ಲರೂ ಇತ್ತಕಡೆಯೇ ನೋಡುತ್ತಿದ್ದರು ಹಾಗು ಊಟವಾದ ನಂತರ ತಮ್ಮ್ ತಮ್ಮ ಪ್ಲೇಟಿನಲ್ಲಿದ್ದ ಮಿಕ್ಕ ಊಟವನ್ನು ಖುದ್ದು ತಾವಾಗಿಯೇ ಎತ್ತಿ ಕಸದ ಬುಟ್ಟಿಗೆ ಸುರಿದು ಬರತೊಡಗಿದರು.

'ನೋಡ್ದ ಮಚಿ.. ಎಲ್ಲದಕ್ಕೂ ಒಂದ್ ಟ್ರಿಕ್ ಇರುತ್ತೆ' ಎಂದ ಲೋಕೇಶ ನಮತ್ತ ನೋಡುತ್ತಾ ನಗತೊಡಗಿದ.

'ಏನೋ ಬಿಡಪ್ಪ.. ಆದ್ರೆ ನಿನ್ ಈ ಸೋಶಿಯಲ್ ರಿಫಾರ್ಮ್ ಅಲ್ಲಿ ಆ ಅಮಾಯಕ ಕ್ಲೀನರ್ ಬಾಯ್ ಕೆಲ್ಸ ಹೋಗ್ಬಾರ್ದು ಅಷ್ಟೇ' ಎಂದೇ ನಾನು.

'ಹಾಗೇನಾದ್ರೂ ಆದ್ರೆ ಇವ್ನ್ ಅಂಗಡಿ ಮುಚ್ಚ್ಸಲ್ವ..'

'ಹೌದು ಬಾರಪ್ಪ ರೌಡಿ ರಂಗಣ್ಣ.. ಬಿಟ್ರೆ ನೀನು ಕಾಲೇಜನ್ನೂ ಮುಚ್ಚುಸ್ತಿಯ' ಎಂದ ನಾನು ಹೊರಡಲು ಅಣಿಯಾದೆ.

ಎಲ್ಲಿ ತಮ್ಮ ಫೋಟೋವನ್ನೂ ನ್ಯೂಸ್ ಪೇಪರ್ಸ್ ಗೆ ಹಾಕಿ ಮಾನವನ್ನು ಹರಾಜು ಹಾಕುವನೋ ಎಂಬಂತೆ ಆದಿ ನಮ್ಮೆಲ್ಲರ ಪ್ಲೇಟ್ಗಳನ್ನೂ ಎತ್ತಿ ಬದಿಗಿಟ್ಟು ಟೇಬಲನ್ನು ಶುಚಿಗೊಳಿಸಿದ.

ಲೋಕೇಶ ಏನೋ ಮೊಬೈಲ್ನಲ್ಲಿ ಟೈಪ್ ಮಾಡುವಂತೆ ಮಾಡಿ ದೊಡ್ಡದಾದ ಮಂದಹಾಸವನ್ನು ಬೀರತೊಡಗಿದ.

'ಈಗ್ ಏನಾಯಿತೋ ತಂದೆ?' ನಾನು ಕೇಳಿದೆ.

'ಏನಿಲ್ಲ.. ಆ ಧಡೂತಿ ಜೋಡಿ ಫೋಟೋನ ಆರ್ಕುಟ್ ನಲ್ಲಿ ಅಪ್ಲೋಡ್ ಮಾಡ್ದೆ ಅಷ್ಟೇ'

'ಎಂಥ ಕುಟ್ಟು??' ಮೊದಲಬಾರಿಗೆ ಎಂಬಂತೆ ಕೇಳಿದ ವಿಚಿತ್ರ ಪದವನ್ನು ಮಗದೊಮ್ಮೆ ಕೇಳಿದೆ.

'ಒಂದು ಸೋಶಿಯಲ್ ನೆಟ್ವರ್ಕಿಂಗ್ ಸೈಟ್ .. ಅಲ್ಲಿ ನೂರಾರ್ ಜನ ಫ್ರೆಂಡ್ಸ್ ಗ್ರೂಪ್ಸ್ ಇರುತ್ತೆ .. ಕೆಲವ್ ತಿಂಗಳ ಮೊದಲಷ್ಟೇ ಲಾಂಚ್ ಆಗಿದ್ದು .. ನಮ್ ಕಾಲೇಜ್ ಗ್ರೂಪು ಅದ್ರಲ್ಲಿದೆ.. ಅದೇ ಒಂದು ಗ್ರೂಪಿಗೆ ಈ ಫೋಟೋ ಹಾಕಿ ಕಾಮೆಂಟ್ಸ್ ಬರ್ದಿದ್ದೀನಿ ..'

'ಲೋ ಯಾಕೋ ಇದೆಲ್ಲ.. ಅವ್ರ್ ಕ್ಲೀನ್ ಮಾಡಿ ಹೋದ್ರಲ್ಲ '

'ಹೌದು ಗುರು .. ಆದ್ರೆ ಏನ್ ಮಾಡೋದು, Fuck off ಅಂತ ಬೈದ್ಲಲ್ಲ ' ಎಂದ ಲೋಕೇಶ ವ್ಯಂಗ್ಯಭರಿತ ನಗುವನ್ನು ಬೀರಿದ.

Continues..

No comments:

Post a Comment