Friday, July 17, 2020

ಪಯಣ - 12

ಅದು ಹತ್ತು ಹನ್ನೆರೆಡರ ಎಳೆಯ ವಯಸ್ಸಾದರೂ ಪ್ರೀತಿ ಪ್ರೇಮವೆಂಬ ಅಸಹಜ ಭಾವವೊಂದು ಆ ಮುಗ್ದ ಮನಸ್ಸುಗಳಲ್ಲಿ ಮನಸ್ಸುಗಳಲ್ಲಿ ಹಾಸುಹೊಕ್ಕುವ ಸಮಯವದು.

'ಲೋ .. ರಾಕಿ ಕಟ್ಟಿದ್ದೀನಿ .. ದುಡ್ಡ್ ಕೊಡೊ..' ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಅನವಶ್ಯಕವಾಗಿ ಆದಿಯ ವೈರಿಯಾಗಿದ್ದ ಹುಡುಗನ ಕೊರಳು ಪಟ್ಟಿಯನ್ನಿಡಿದು ಕೇಳತೊಡಗಿದಳು ಖುಷಿ. ಇಡೀ ಕ್ಲಾಸಿನಲ್ಲೇ ತನ್ನೊಬ್ಬನಿಗೆ ಮಾತ್ರ ರಾಕಿ ಕಟ್ಟಿಸಿಕೊಳ್ಳುವ ಅಧಿಕಾರವಿದೆಯೇನೋ ಎಂಬಂತೆ ಆತ ಬೀಗುತ್ತಿದ್ದ. ಸ್ವಲ್ಪ ಹೊತ್ತಿನಲ್ಲೇ ತರಗತಿಯ ಇತರ ಹುಡುಗಿಯರೂ ಆತನನ್ನು ಸುತ್ತುವರೆದರು ಹಾಗು ತಮ್ಮ ಜೇಬಿನಲ್ಲಿದ್ದ ಬಣ್ಣ ಬಣ್ಣದ ರಾಖಿಯನ್ನು ಹೊರತೆಗೆದು ಅವನ ಕೈ ತುಂಬೆಲ್ಲ ಕಟ್ಟತೊಡಗಿದರು.

ಅದು ಚಿತ್ತಾಕರ್ಷಕ ರಾಖಿಯ ಮೋಡಿಯೋ ಅಥವಾ ತನ್ನನು ಖುಷಿ ‘ಇಗ್ನೋರ್’ ಮಾಡಿದಳೊ ಎಂಬ ಬಾಲಸಹಜ ಕೋಪವೋ ಅಥವಾ ತನ್ನ ಮುಂದೆ ಹುಡಗಿಯರ ಮುದ್ದು ಕೃಷ್ಣನಾದ ತನಗಿಂದಲೂ ಹೆಚ್ಚು ಅಂಕಗಳನ್ನು ಪಡೆಯುವ ಹುಡುಗನ ಮೇಲೆ ಮೂಡಿದ ಅಸೂಯೆಯೋ ಏನೋ ಒಟ್ಟಿನಲ್ಲಿ ಚೀರಾಡುತ್ತಿದ ಗುಂಪಿನಿಂದ ದೂರಬಂದು ಶಾಲೆಯ ಕಟ್ಟೆಯ ಮೇಲೆ ಕೂತ ಆದಿ.

ಅದೆಷ್ಟೋ ಹೊತ್ತಿನ ನಂತರ ಕ್ಲಾಸಿನಿಂದ ಹೊರಬಂದ ಖುಷಿ ಆದಿಯನ್ನುದ್ದೇಶಿಸಿ,

'ಇಲ್ಯಾಕೋ ಕೂತಿದ್ದೀಯ' ಎಂದು ಕೇಳಿದಳು.

'ಹೋಗೆ, ನನ್ನ್ ಹತ್ರ ಮಾತಾಡ್ಬೇಡ! ಇನ್ಮೇಲೆ ನಾನ್ ನಿನ್ನೊಟ್ಟಿಗೆ ಕಲ್ಲಾಟ ಆಡಲ್ಲ .. ನಮ್ಮ್ ಮನೆ ಹತ್ರ ಈಗ ಹೊಸ ಫ್ರೆಂಡ್ ಬಂದಿದ್ದಾಳೆ, ನಾನ್ ಅವಳೊಟ್ಟಿಗೇ ಇನ್ಮುಂದೆ ಕಣ್ಣಾ ಮುಚ್ಚಾಲೆ ಆಡ್ತೀನಿ..' ಆದಿಯ ಮುಖ ರಸ್ತೆಬದಿಯ ಆಲೂಬೋಂಡದಂತೆ ಊದಿಕೊಂಡಿತ್ತು.

'ಏನಾಯಿತೋ ಆದಿ.. ಯಾರಾದ್ರು ಬೈದ್ರಾ' ತನ್ನ ಸಹಜ ಕಳವಳದ ಧ್ವನಿಯಲ್ಲಿ ಆಕೆ ಕೇಳಿದಳು.

'ನೀನ್ ಅವ್ನಿಗೆ ಮಾತ್ರ ರಾಖಿ ಕಟ್ದೆ.. ನಂಗಿಲ್ವ?'

ಆದಿಯ ಪ್ರೆಶ್ನೆಗೆ ನಗತೊಡಗಿದ ಖುಷಿ 'ನಾನ್ ನಿಂಗೆ ರಾಕಿ ಕಟ್ಟಲ್ಲ ಕಣೋ..' ಎಂದಳು.

ಆದಿಯ ಕೋಪ ಇನ್ನೂ ವಿಪರೀತವಾಯಿತು. ತನ್ನೊಟ್ಟಿಗೆ ಕಲ್ಲಾಟವನ್ನು ಆಡಲು ತಂದಿದ್ದ ಕಲ್ಲುಗಳನ್ನು ದೂರಕ್ಕೆ ಎಸೆದು ಆದಿ ತರಗತಿಯ ಒಳಗೆ ಓಡಿದ.

'ಆದಿ ನಿಲ್ಲೋ .. ನಾನು ಬರ್ತೀನೋ ಕಣ್ಣಾ ಮುಚ್ಚಾಲೆ ಆಡೋದಿಕ್ಕೆ.. ನಿಲ್ಲೋ..'

ದಶಕದ ಹಿಂದಿನ ಹಿಂದಿ ಹಾಡುಗಳನ್ನು ಹಾಕಿ ಗರಗರನೆ ತಿರುಗುತ್ತಿದ್ದ ಸೀಲಿಂಗ್ ಫ್ಯಾನನ್ನು ಧಿಟ್ಟಿಸುತ್ತಾ ಅಂಗಾತ ಮಲಗಿದ್ದ ಆದಿ, ಆ ಹಾಡುಗಳು ಚಿತ್ರೀಕರಣಗೊಳುತ್ತಿದ್ದ ಕಾಲದ ತನ್ನ ಹಾಗು ಖುಷಿಯ ನೆನಪುಗಳನ್ನು ಕೆದಕತೊಡಗಿದ. ಆಕೆ ತನ್ನ ಬಿಟ್ಟು ಯಾರೊಟ್ಟಿಗೂ ಮಾತಾಡಬಾರದು, ಸೇರಬಾರದು, ಆಟವಾಡಬಾರದೆಂಬ ಹಠ ಈತನದ್ದಾರೆ ಇಡೀ ಶಾಲೆಗೆ ಶಾಲೆಯೇ ಖುಷಿಯನ್ನು ಸುತ್ತುವರೆಯುತ್ತಿತ್ತು. ದೂರದಿಂದಲೇ ಆಕೆಯ ನೀಳಜಡೆಯನ್ನು ದಿಟ್ಟಿಸುತ್ತಾ ಆಕೆ ಗುಂಪಿನಿಂದ ಹೊರಬರುವುದನ್ನೇ ಆತ ಕಾಯುತ್ತಿದ್ದ ಹಾಗು ಅಕೆಗೆಂದೇ ಹತ್ತಾರು ಕಲ್ಲುಗಳನ್ನು ತನ್ನ ಚಡ್ಡಿಯ ಜೇಬಿನಲ್ಲಿ ಇರಿಸಿಕೊಂಡಿರುತ್ತಿದ್ದ. ಆ ಎಳೆಯ ವಯಸ್ಸಿನಲ್ಲೇ ಕ್ಲಾಸಿನ ಇತರ ಹುಡುಗರು ಆದಿ ಖುಷಿಯೊಟ್ಟಿಗೆ ಇರಬಯಸುತ್ತಿದ್ದದ್ದನು ಕಂಡು ಕತ್ತಿ ಮಸೆಯುತ್ತಿದ್ದರು ಹಾಗು ಸುಖಾಸುಮ್ಮನೆ ಆದಿಯೊಟ್ಟಿಗೆ ಕಾದಾಡುತ್ತಿದ್ದರು! ರಾತ್ರಿಯ ವೇಳೆ ಕೆಲವೊಮ್ಮೆ ಮನೆಯವರೆಲ್ಲ ಹೊರಗೆ ಬಂದು ಮೆಟ್ಟಿಲುಗಳ ಮೇಲೆ ಕೂತರೆ ಈತ ತಮ್ಮ ಮನೆಯ ಕಾಂಪೌಂಡಿನ ಮೇಲೆ ಕೂತು ತಿಂಗಳ ಬೆಳಕಿನ ಆ ತಂಪು ರಾತ್ರಿಯಲ್ಲಿ ಒಂದೆರಡು ಕಿಲೋಮೀಟರ್ ಗಳು ದೂರವಿದ್ದ ನಗರದ ಮಧ್ಯಭಾಗದ ತೆಂಗಿನ ಮರಗಳ ಸಾಲನ್ನೇ ಧಿಟ್ಟಿಸುತ್ತಿದ್ದ. ಖುಷಿಯ ಮನೆಯೂ ಅಲ್ಲಿಯೇ ಇದ್ದರಿಂದ ಬಹುಷಃ ಅವಳೂ ಹೀಗೆ ಹೊರಬಂದು ನನನ್ನು ನೋಡುತ್ತಿರಬಹುದೆಂಬ ಅಮಾಯಕ ಕಲ್ಪನೆಯಿಂದ! ಅದೇನಕ್ಕೋ ತಿಳಿಯದು ಆ ಒಂದು ಶುಕ್ರವಾರದಂದು ಆದಿ ಆಕೆಯಿಂದ ಎರಡು ರೂಪಾಯಿ ಪಡೆದು ಮುಂದಿನ ವಾರದ ಸೋಮವಾರದಂದು ತಂದು ಹಿಂದಿರುಗಿಸಿದ್ದ. ಅಂತೆಯೇ ಶಾಲೆಯಲ್ಲಿ ನೆಡೆಸುತ್ತಿದ್ದ ಸಂಗೀತ ಕ್ಲಾಸಿಗೆ ಸೇರಿ ಅಲ್ಲಿನ ಶಿಕ್ಷಕಿ ಖುಷಿಯ ಧ್ವನಿ ಇಡಿದಿಡಿದು ಬಿಡುತ್ತಿದೆ ಎಂದು, ನಂತರದ ದಿನಗಳಿಂದ ಆಕೆ ಕ್ಲಾಸಿಗೆ ಬಾರದೆ ಹೋದಾಗ ಈತನೂ ಆ ಕ್ಲಾಸಿಗೆ ಗುಡ್ ಬೈ ಹೇಳಿದ್ದ. ಅರೆಬರೆ ನಾಟ್ಯದ ಸ್ಟೆಪ್ಪುಗಳನ್ನೇ ಕಲಿತು ಶಾಲೆಯ ಯೂನಿಯನ್ ಡೇ ಗೆ ಚಿತ್ರ ವಿಚಿತ್ರವಾಗಿ ಕುಣಿದು ಕುಪ್ಪಳಿಸಿದ ಆ ದಿನಗಳು ಅದೆಂತೆಂಹ ಜಂಜಾಟದ ದಿನಗಳಲ್ಲೂ ಆದಿಯ ಮನಸ್ಸಿಗೆ ಒಂದು ಮಂದಹಾಸವನ್ನು ನೀಡುತ್ತಿದ್ದವು. ಮುಖದ ಮೇಲೊಂದು ಸಂತೋಷದ ಕಳೆಯನ್ನು ಹೊತ್ತಿಸುತ್ತಿದ್ದವು.

ಸೀಲಿಂಗ್ ಫ್ಯಾನು ಗರಗರನೆ ತಿರುಗುತ್ತಲಿತ್ತು. 'ನಾ ತುಮ್ ಜಾನೋ ನ ಹಮ್..' ಎಂದು ಲಕ್ಕಿ ಅಲಿ ಪದಗಳಿಗೆ ಜೀವ ತುಂಬಿ ಹಾಡುತ್ತಿದ್ದ. ಕೂಡಲೇ ಆದಿಯ ಫೋನು ಟನ್ ಟನ್.. ಎಂಬ ಸದ್ದಿನೊಂದಿಗೆ ಬೆಳಗತೊಡಗಿತು. ರಾತ್ರಿ ಹನ್ನೊಂದರ ನಂತರ ತನ್ನ ಫೋನು ಸದ್ದು ಮಾಡಿತೆಂದರೆ ಸಾಕು ಆದಿಯ ಹೃದಯ ಅಮಾನುಷವಾಗಿ ಬಡಿಯತೊಡಗುತ್ತದೆ. ಟನ್ಗುಟ್ಟ ಆ ಎರೆಡು ಮೆಸೇಜುಗಳು ಖುಷಿಯ ಮೆಸ್ಸೇಜುಗಳೇ ಎಂದು ಹೃದಯ ಹೇಳುತ್ತಿರಲು, ಅವು ಆಕೆಯ ಮೆಸೇಜುಗಳೇ ಆಗಿರಲಿ ಎಂದು ಮನಸ್ಸೂ ಸಹ ಬೇಡಿಕೊಳ್ಳುತ್ತಿತ್ತು. ವಾರಗಳ ನಂತರ ಮೊದಲ ಬಾರಿಗೆ ಬಂದಿರಬಹುದಾದ ಆಕೆಯ ಮೆಸೇಜುಗಳು ಆದಿಯ ದುಗುಡವನ್ನು ದೂರ ಮಾಡಿದ್ದವು. ಆದಿ ಸುಮ್ಮನಾದ. ಅದೆಷ್ಟು ಹೊತ್ತಿನವರೆಗೆ ತನ್ನನ್ನು ತಾನು ತಡೆದುಕೊಳ್ಳಬಲ್ಲೆ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು ಎಂದುಕೊಳ್ಳುವ ಮೊದಲೇ ಆತನ ಕೈಗಳು ಮೊಬೈಲನ್ನು ಅನ್ ಲಾಕ್ ಮಾಡಿದ್ದವು!

'Hi.. How are you..' ಎಂದು ಕಳಿಸಿದ್ದ ಆಕೆಯ ಮೆಸ್ಸೇಜುಗಳನ್ನು ನೋಡಿಯೇ ಆದಿಯ ಕಣ್ಣಂಚುಗಳು ಒದ್ದೆಯಾಗತೊಡಗಿದವು. ಕಳೆಗಟ್ಟಿದ್ದ ಫೋನಿಗೆ ಏನೋ ಒಂದು ಹೊಸತನವನ್ನು ಆ ಪದಗಳು ತಂದಿದ್ದವು. ಆದಿಯ ಮುಖದ ಮೇಲಿದ್ದ ದುಃಖದ ಸಿಕ್ಕುಗಳು ಮರೆಯಾಗಿದ್ದವು ಹಾಗು ಆಕೆಯ ಮೇಸಜಿಗೆ ಪ್ರತ್ಯುತ್ತರವಾದ ಮೆಸೇಜನ್ನು ಕಳುಹಿಸುವುದ ಬಿಟ್ಟು ಆತ ಆ ನಡುರಾತ್ರಿಯಲ್ಲಿಯೇ ಆಕೆಗೆ ಫೋನಾಯಿಸಿದ!


****

ಬೆಳ್ಳಂಬೆಳೆಗೆ ಎಲ್ಲರಿಗಿಂತ ಮೊದಲೇ ಎದ್ದು ರೆಡಿಯಾದ ಆದಿ ಲೊಕೇಶನನ್ನು ತನ್ನ ಕಾಲಿನಿಂದ ತಿವಿಯತೊಡಗಿದ. ನೆನ್ನೆ ರಾತ್ರಿಯವರೆಗೂ ಇಹಲೋಕದ ಕಲ್ಪನೆಯನ್ನೇ ಮರೆತು ಜೈಲುವಾಸಿಯಾಗಿದ್ದಂತಹ ಈತನಿಗೆ ಏನಾಗಿರಬಹುದೆಂದು ಆ ನಿದ್ದೆಗಣ್ಣಿನಲ್ಲೂ ನಾನು ಯೋಚಿಸತೊಡಗಿದೆ.

'ತತ್ ತೇರಿ .. ಏನಾ ಲೈ ನಿಂದು..!!' ಲೋಕೇಶ ಒಮ್ಮೆಲೇ ಅರಚಿದ.

'ಗುರು ಬನ್ನಿ ಜಾಗಿಂಗ್ಗೆ .. ಅದೇನೋ ಅವತ್ತು ಸೂಪರ್ ಆಗ್ ಓಡ್ತಿಯ .. ಅದು .. ಇದು ಅಂತಿದ್ರಿ..' ಮೂದಲಿಸುವ ಧ್ವನಿಯಲ್ಲಿ ಆದಿ ಹೇಳಿದ.

ಆತನ ಮಾತನ್ನು ಕೇಳಿ ಸುಮ್ಮನಾದ ಲೋಕಿ ನಿಧಾನವಾಗಿ ಮೇಲಿದ್ದು ಕಣ್ಣುಮುಚ್ಚಿಕೊಂಡೇ ಆಕಳಿಸುತ್ತಾ, ' ದೇವ್ರು ನಿಂಗೆ ಒಳ್ಳೆ ಬುದ್ದಿ ಕೊಟ್ಟಿದ್ದಾನೆ.. ಒಳ್ಳೇದಾಗ್ಲಿ.. ತಾವ್ ಈಗ ಹೋಗಿ ಜಾಗಿಂಗ್ ಮಾಡ್ತಾ ಇರಿ.. ನಾನ್ ಇನ್ ಅರ್ಧ ಗಂಟೇಲಿ ಬರ್ತೀನಿ' ಎಂದು ಆತನನ್ನು ಕಳುಹಿಸಿದ. ಆದಿ ಇನ್ನೂ ಬಾಗಿಲನ್ನು ದಾಟುವ ಮೊದಲೇ,

'ನೋಡೋ ಬಡ್ಡಿ ಮಗ್ನೆ .. ಹುಡ್ಗಿ ಅಂತ ಒಂದ್ ಇದ್ರೆ ಲೈಫಲ್ಲಿ ಏನೇನೆಲ್ಲಾ ಚೇಂಜ್ ಆಗುತ್ತೆ .. ನೀನು ಇದ್ದೀಯ .. ಆ ಟೀಚರ್ ಅಂಟಿನ ಇಟ್ಕೊಂಡು..' ಎನುತ ಮಕಾಡೆ ಬಿದ್ದು ನಿದ್ರಿಸತೊಡಗಿದ.

'ಲೋಫರ್ ನನ್ ಮಗ್ನೆ .. ರಾಧಾ ಅಂತ ಅವ್ರ್ ಹೆಸ್ರು' ಎಂದು ಆತನ ಅಂಡಿನ ಮೇಲೊಂದು ಜೋರಾಗಿ ಜಾಡಿಸಿ ಒದ್ದ ನಾನು 'ನಮ್ಮೊಳಗಿನ ಸುಖಕ್ಕೆ ಪರಜನರ ಕೊಡುಗೆ ಇಷ್ಟ್ಯಾಕೆ?' ಎಂದು ಯೋಚಿಸುತ್ತಲೇ ಬೆಳಗಿನ ಮತ್ತೊಂದು ಸುತ್ತಿನ ಗತ್ತಿನ ನಿದ್ದೆಗೆ ಜಾರಿದೆ.

ಲೋಕೇಶ ಫೀಲ್ಡ್ ನ್ನು ತಲುಪುವ ಮೊದಲೇ ಆದಿ ಮೂರ್ನಾಲ್ಕು ಸುತ್ತನ್ನು ಓಡಿ ಅರ್ವತ್ತರ ಆ ವ್ಯಕ್ತಿಯೊಟ್ಟಿಗೆ ಸಂಭಾಷಿಸುತ್ತಿದ್ದ. ಆದಿ ಹೋದವನೇ ಅವರಿಗೆ ವಂದಿಸಿ ಆದಿಯನ್ನು ಪಕ್ಕಕ್ಕೆ ಕರೆತಂದು,

'ಏನಪ್ಪಾ ಬೋಧನೆ ಮಾಡ್ತಾ ಇದ್ದ ಆ ಬುಡ್ಡ' ಎಂದು ಕೇಳಿದ.

'ಏನು ಇಲ್ಲ .. ನೀನ್ ಸೂಪರ್ ಆಗಿ ಓಡ್ತಿಯ.. ಬ್ರಿಲಿಯಂಟ್ .. ಫೆಂಟಾಸ್ಟಿಕ್..ಅಂತ ಹೇಳ್ತಾ ಇದ್ರಪ್ಪ.’

'ಬ್ರಿಲಿಯಂಟ್, ಫೆಂಟಾಸ್ಟಿಕ್… ಸೀರಿಯಸ್ಲೀ!?' ಅಣುಕಿಸುವವನಂತೆ ಲೋಕಿ ಆದಿಯನ್ನು ಕೇಳಿದ.

'ಇರ್ಬಹುದು ಗುರು .. ಯಾಕೆ ತಮ್ಗೆ ಜಲಸಿನ?'

'ತಂದೆ.. ಕೋಣ ಒಡ್ದನ್ಗೆ ಓಡಿದ್ರೆ ಅದನ್ನ ಯಾರೂ ರನ್ನಿಂಗ್ ಅನ್ನಲ್ಲ.. ಗೊತ್ತಿರ್ಲಿ .. ಅಲ್ಲೂ ಸ್ವಲ್ಪ ನ್ಯಾಕು, ಟೆಕ್ನಿಕು ಅನ್ನೊದು ಇರುತ್ತೆ.. ಆ ಬುಡ್ಡ ಅಂಕಲ್ ಇಡೀ ಲೈಫಲ್ಲಿ 5 km/hr ಗಿಂತ ಹೆಚ್ಚು ಓಡಿರೋದೇ ಇಲ್ಲ ಅಂತದ್ರಲ್ಲಿ ನೀನ್ ಒಳ್ಳೆ ಅವ್ನ್ ಮಾತ್ ಕೇಳ್ತಾ ಇದ್ದೀಯಲ್ಲ .. ಫ್ಯಾಕ್ಟ್ ಹೇಳ್ತಿನಿ ಕೇಳು.. ಫಸ್ಟ್ ಆಫ್ ಆಲ್ ನಿನ್ ರನ್ನಿಂಗ್ ರನ್ನಿಂಗೇ ಅಲ್ಲ, ಓಕೇ?.. You have to go a long way ahead .. Morever, 400 ಮೀಟರ್ ರನ್ನಿಂಗ್ ಅಲ್ಲಿ ಡಿಸ್ಟ್ರಿಕ್ ಲೆವೆಲ್ ರೆಕಾರ್ಡ್ 44 ಸೆಕೆಂಡ್ಸ್.. So, ಸದ್ಯಕ್ಕೆ ನಿನ್ ಟಾರ್ಗೆಟ್ ಅದನ್ನ ಬೀಟ್ ಮಾಡೋದು.. ಮೊನ್ನೆ ನೀನು ಓಡ್ತಾ ಇದ್ದಾಗ, according to my calculation it was approximately 54 Seconds.. You still got to to improve 10 Seconds.. mind it!'

ಲೊಕೇಶನ ಮಾತನ್ನು ಕೇಳಿ ಕೊಂಚ ಮುನಿಸಿಕೊಂಡವನಂತಾದ ಆದಿ ಬೇರೆ ದಾರಿ ಕಾಣೆದೆ ತಲೆಯನ್ನು ಅಲ್ಲಾಡಿಸಿದ ಹಾಗು ಇಂದೇ ಎಲ್ಲ ರೆಕಾರ್ಡ್ಗಳನ್ನು ಮುರಿಯುವವನಂತೆ ಪುನ್ಹ ನಾಲ್ಕು ಸುತ್ತನ್ನು ಜೀವ ಬಿಟ್ಟು ಓಡಿದ.

ಈ ಬಾರಿ ಲೋಕೇಶನ ಟೈಮರ್ನ ಸಮಯ 52.5 ಸೆಕೆಂಡ್ಗಳೆಂದು ತೋರಿಸುತ್ತಿತ್ತು.


****


ಕಾರಿಡಾರಿನ ಆ ಕಡೆಯಿಂದ ರಾಧಾ ಬರುತಿರಲು.. ನನ್ನ ಸುತ್ತಲಿನ ಪ್ರಪಂಚ ಒಮ್ಮೆಲೇ ಸ್ತಬ್ದವಾದಂತಾಗಲು...ನಾಗರಹಾವು ಚಿತ್ರದ ‘ಬಾರೆ ಬಾರೆ..’ ಹಾಡಿನ ಸ್ಲೋ ಮೋಶನ್ ಫ್ರೆಮ್ಗಳು ನನ್ನ ಕಣ್ಣ ಮುಂದೆ ಒಂದೊಂದಾಗಿಯೇ ಬರತೊಡಗಿದವು.

ಜೇನಿನ ನೆಡೆಯಂತೆ ರಾಧಾ ನನ್ನ ಹತ್ತಿರಕ್ಕೆ ಬಂದರು.

'What the fuck you guys think about youself, uh?' ಎಲ್ಲಿಲ್ಲದ ಆವೇಶದಲ್ಲಿ ಆಕೆ ಸಿಡಿಲಬ್ಬರಿಸಿದಂತೆ ಕೂಗತೊಡಗಿದವು. ತಣ್ಣನೆಯ ಗಾಳಿ ಅವರ ಮುಂಗುದಲೆರಡನ್ನು ತೋಯ್ಸಿ ಅವರ ಕೋಪಭಾವದ ಅಂದವನ್ನು ದುಪ್ಪಟ್ಟಾಗಿಸಿತ್ತು. 'ಕಮ್ ಟು ಟೆರೇಸ್..' ಎಂದು ನನ್ನನ್ನು ಇಲ್ಲಿ ಕಾಯಲೇಳಿ ಅದಾಗಲೇ ಅರ್ಧ ತಾಸೇ ಸಂದಿದ್ದವು.

'ಸಮಾಧಾನ.. ಕೂಲ್.. ಏನಾಯಿತು ಅಂತ ನಿಧಾನಕ್ಕೆ ಹೇಳಿ' ನಾನೆಂದೆ.

'ಎಲ್ಲಿ ಆ ನಿನ್ ರೂಮೇಟ್ ಲೋಕೇಶ ..ಈಡಿಯಟ್.. '

'ಹಲೋ .. Mind your language.. He is not just my roomate .. he is like my brother..'

'So, ಬ್ರದರ್ ಆದ್ ಮಾತ್ರಕ್ಕೆ ಸಿಕ್ ಸಿಕ್ದವರ್ನ ಸೋಶಿಯಲ್ ಮೀಡಿಯಾದಲ್ಲಿ ಮಾನ ಹಾರಾಜ್ ಹಾಕ್ ಬಹುದಾ ಅವ್ನು?'

'ಸೋಶಿಯಲ್ ಮೀಡಿಯಾನ?!'

'ಹೌದು ಸಾರ್ .. To be precise it’s called Orkut’

'ಏನ್ ಮಾಡ್ದ ಅಂತ ಸರಿಯಾಗಿ ಹೇಳಿ ರಾಧಾ .. don't drag it unnecessarily' ನಾನು ಬೇಕಂತಲೇ ಗೊತ್ತಿರದವಂತೆ ನಟಿಸಿದೆ.

'Nothing unnecessary here..ಏನ್ ದೊಡ್ಡ್ ಸೋಶಿಯಲ್ ರಿಫಾರ್ಮೆರ ಅವ್ನು ..’ ಎಂದು ಕೆಲಕ್ಷಣ ನನ್ನನು ತೀಕ್ಷ್ಣವಾಗಿ ನೋಡಿ 'ಮಾಲಲ್ಲಿ ತಿಂದು ಬಾಡಿ ಅಲ್ದೆ ಬುದ್ಧಿನೂ ಕೊಬ್ಬಿದೆ, New Generation Hypocrisy ಅಂತ ಏನೇನೋ ಬಾಯಿಗೆ ಬಂದಾಗೇ ಬರ್ದು ಜನರ ಫೋಟೋ ಟ್ಯಾಗ್ ಮಾಡಿ ಮಾನ ಹರಾಜ್ ಮಾಡ್ತಾನಲ್ಲ ಅವ್ನ್ ಏನು ಬಾರಿ ಸಾಚಾನಾ.. ಅಲ್ಲ ಅವ ಯಾವಾಗ ಕಾಲೇಜಲ್ಲಿ ಕೂತಿರೋದನ್ನ ನೋಡಿದ್ದೀವಿ ಹೇಳು..ಯಾವಾಗ್ ನೋಡಿದ್ರು ಗದ್ದೆ ಶುಠಿ ಅಂತ .. Is he even called as a student first of all ..ಫುಡ್ ಬಗ್ಗೆ ಬರೀತಾನೆ ಲೋಫರ್..'

'ರೀ.. ಅವ್ನ್ ಏನ್ ಮಾಡ್ಬಾರ್ದನ್ನು ಮಾಡ್ತಾ ಇಲ್ಲ .. ಕೃಷಿ ಮಾಡೋದೂ ಒಂದ್ ಕಲೆ.. ಅಪ್ಪನ್ ದುಡ್ಡ್ ಇದೆ ಅಂತ ಮೇಲಿಂದ ಕೆಳಕ್ಕೂ ಅದ್ರಲ್ಲೇ ಸ್ನಾನ ಮಾಡೋರ್ ಮದ್ಯೆ he is earning his own.. ಅವ ಮನ್ಸ್ ಮಾಡಿದ್ರೆ ಕ್ಲಾಸಲ್ಲಿ ಕೂತು ಓದದೇನೆ ಕಾಲೇಜಿಗೆ ಟಾಪ್ ಬರಬಲ್ಲ.. Don’t underestimate him.. ಮಕ್ಕಳಿಗಿಂತ ಕಡೆಯಾಗಿ ತಿಂದು ಪ್ರಾಣಿಗಳ ತರ ಗಬ್ಬೆಬ್ಬಿಸಿ ಒಬ್ಬ ಕ್ಲೀನರ್ ಬಾಯನ್ನು ಕ್ಲೀನಿಂಗ್ ಮಷೀನ್ ತರ ನೋಡೋ ಜನಗಳಿಗೆ ಆತರ ಮಾಡಿದ್ರೆ ತಪ್ಪೇನಿದೆ..' ತೀಕ್ಷ್ಣವಾಗಿಯೇ ನಾನು ಪ್ರತಿಕ್ರಿಯಿಸಿದೆ.

'ಇಡೀ ಕ್ಲಾಸ್ ರೂಮಲ್ಲಿ ಟೀಚರ್ಸ್ನ ಟೀಸ್ ಮಾಡ್ತಿರ್ಬೇಕಾದ್ರೆ ಎಲ್ಲಿ ಹೋಗಿತ್ತು ಇವ್ನ ಈ ಫಿಲೋಸಫರ್ ಟೀಚಿಂಗ್ಸು? ಇವ್ನ್ ತಪ್ಪ್ ಮಾಡಿದ್ರೆ ಎಲ್ಲ ಓಕೆ. ಬೇರೆಯವರ್ ಮಾಡಿದ್ರೆ ಮಾತ್ರ ಸಮಾಜ ಸೇವಕ ಆಗ್ತಾನ? Listen, ಇಂಟರ್ನೆಟ್ ಇದೆ ಅಂತ ಸಿಕ್ ಸಿಕ್ದವ್ರ ಮಾನ ಹಾರಾಜ್ ಹಾಕಿದ್ರೆ ಹುಷಾರ್.. ನಿನ್ ಬ್ರದರ್ಗೆ ಹೇಳು.. ಡಿಫೆಮೇಷನ್ ಕೇಸ್ ಹಾಕಿದ್ರೆ ಮುಂದೆ ಏನ್ ಆಗುತ್ತೆ ಅಂತಾನೂ ಗೊತ್ತಿರ್ಲಿ'

ಕೊಬ್ಬಿ ಕೂತಿರುವ ಆ ದೇಹಗಳಿಗೆ ಫೇಮ್ ಎಂಬ ಪದದ ಕಲ್ಪನೆಯೇ ಇದ್ದಂತೆ ನನಗೆ ಕಾಣಲಿಲ್ಲ. ನಗುವನ್ನು ನಾನು ತಡೆದುಕೊಂಡೆ.

'ಏನ್ರಿ ಒಳ್ಳೆ ಕೊಲೆ ಮಾಡಿರೋ ರೀತಿ ಹೇಳ್ತಾ ಇದ್ದೀರಾ..'

'ಯಸ್ ಅದು ಒಂದ್ ರೀತಿಲಿ ಕೊಲೆನೆ.. ಕ್ಯಾರೆಕ್ಟರ್ ಮರ್ಡರಿಂಗ್ ಇನ್ ಸೋಶಿಯಲ್ ಮೀಡಿಯಾ!'

'ರೀ..ಹೋಗ್ಲಿ ಬಿಡ್ರಿ ...ಯಾರ್ದೋ ಬಗ್ಗೆ ಯಾರ್ ಏನೋ ಬರ್ದ್ರು ಅಂತ ನೀವ್ಯಾಕೆ ಅಷ್ಟ್ ಫ್ರಸ್ಟ್ಟ್ರೇಟ್ ಆಗ್ತೀರಾ ..'

'ಯಾರ್ ಬಗ್ಗೆ ಆದ್ರೂ ಅಷ್ಟೇ .. Being a citizen of the country it’s my responsibility! Moreover ನಿನ್ ಬ್ರದರ್ ಟ್ಯಾಗ್ ಮಾಡಿದ್ದು ಬೇರೆ ಯಾರನ್ನು ಅಲ್ಲ ನನ್ನ ಅಣ್ಣ ಮತ್ತು ಅತ್ಗೆನ, ನೆನ್ಪ್ ಇರ್ಲಿ!'

ಅವರ ಕೊನೆಯ ಮಾತನ್ನು ಕೇಳಿ ನನ್ನ ಗಂಟಲು ಮರುಭೂಮಿಯ ಬರ ನೆಲದಂತಾಯಿತು. ಪದಗಳೇ ಮೂಡದ ನನ್ನಲ್ಲಿ.'ಒಹ್..' ಎಂದಷ್ಟೇ ಹೇಳಲು ಶಕ್ತನಾಗುವಷ್ಟು ಮಾತ್ರ ಶಕ್ತಿ ಉಳಿಯಿತು. ಭೇಟೆಗಾರ ಕುದ್ದು ತನ್ನ ಭೇಟೆಗೇ ಸಿಲುಕಿಗೊಂಡ ಪರಿಸ್ಥಿತಿ. ಲೊಕೇಶನ ಪರವಾಗಿ ವಾದಿಸಿದರಿಂದಲೋ ಅಥವ ಅಂದು ಆಕೆಗೆ ‘ದಿ ಕಿಸ್..’ ಕೊಡಲಿಲ್ಲವೆಂಬ ಕೋಪದಿಂದಲೋ ಅಥವ ಇತ್ತೀಚೆಗೆ ಬೇಕಂತಲೇ ನಾನು ಆಕೆಯನ್ನು ಅವಾಯ್ಡ್ ಮಾಡುತ್ತಿದ್ದೇನೆಂಬ ಸಂಶಯದಿಂದಲೋ ಏನೋ ಆಕೆ ಮತ್ತಷ್ಟು ಉದ್ವಿಗ್ನಗೊಂಡವಳಂತೆ ಸಿಡಿಮಿಡಿಗೊಳ್ಳುತ್ತಾ ಅಲ್ಲಿಂದ ಹೊರಟಳು.

ಹಿತವಾಗಿ ಬೀಸುವ ಗಾಳಿಯನ್ನು ಬಡಿದು ಓಡಿಸುವಂತೆ ಆಡುತ್ತಿದ್ದ ಆಕೆಯ ಕೋಪಿಷ್ಠ ಕೂದಲನ್ನೇ ನಾನು ತದೇಕಚಿತ್ತದಿಂದ ನೋಡುತ್ತಾ ನಿಂತೆ.



****





'ಒಹ್ ಶಿಟ್ .. ಏನೋ ಇದು..?!' ಕೈಗಳೆರಡನ್ನು ತನ್ನ ಹಿಂತಲೆಗೆ ಹೊತ್ತುಕೊಟ್ಟು ಬೆಳ್ಳಂಬೆಳೆಗೆ ಡಿಸ್ಟ್ರಿಕ್ಟ್ ಫೀಲ್ಡನ ಸ್ಟೇಜ್ನ ಮೇಲೆ ನೆಡೆಯುತ್ತಿದ್ದ ಯಾವುದೊ ಸಾರ್ವಜನಿಕ ಸಮಾರಂಭವನ್ನು ಆತಂಕದಿಂದ ನೋಡುತ್ತಾ ಹೇಳಿದ ಲೋಕೇಶ. ಅಲ್ಲಿಗೆ ಬರುವವರೆಗೂ ಲವಲವಿಕೆಯಿಂದಿದ್ದ ಆತ, ರನ್ನಿಂಗ್ ಟ್ರ್ಯಾಕನ್ನೂ ದಾಟಿ ನೆರೆದಿದ್ದ ಜನಸಮೂಹವನ್ನು ಕಂಡು ಹತಾಶನಾದ. ಆತನ ಹಿಂದೆಯೇ ಬಂದ ಓಟಗಾರ ಆದಿ ತನ್ನ ಓಟಕ್ಕೆ ಸಾಸಿವೆಕಾಳಿನಷ್ಟೂ ಸಂಬಂಧವಿರದ ಮಾರ್ಕ್ ಟೈಸನ್ನ ಬಾಕ್ಸಿಂಗ್ ಪಂಚ್ಗಳನ್ನು ಗಾಳಿಯಲ್ಲಿ ತೇಲಿಬಿಡುತ್ತಾ, ಪ್ರತಿ ಅರೆಕ್ಷಣಕ್ಕೂ 'ಡುಫ್ .. ಡುಫ್' ಎಂಬ ಸದ್ದಿನೊಟ್ಟಿಗೆ ಜಿಗಿದು ಜಂಪ್ ಮಾಡುತ್ತ ನಿಂತಿದ್ದ. ಅದು ಖುಷಿಯ ಖುಷಿಯೋ ಅಥವಾ ಓಟದ ಖುಷಿಯೋ ತಿಳಿಯದು. ಲೋಕೇಶ ತನ್ನ ತಲೆಯ ಮೇಲೆ ಕೈಹೊತ್ತು ನಿಂತಿದ್ದನ್ನೂ ಸಹ ಆತ ಲೆಕ್ಕಿಸಲಿಲ್ಲ. 'ಯಾ .. ಹೂ .. ಡುಫ್..' ಎಂದು ಸದ್ದು ಮಾಡುತ್ತಾ ಕೊನೆಗೆ ಬ್ರುಸ್ಲಿ ಮಹಾಶಯನನ್ನೂ ನಡುವಿನಲ್ಲಿ ತಂದು ಕುಣಿಯುತ್ತಿದ್ದ. ಅದೆಷ್ಟೋ ನಿಮಿಷಗಳವರೆಗೂ ಲೋಕೇಶ ಮುಂದುವರೆಯದನ್ನು ಕೊನೆಗೂ ಗ್ರಹಿಸಿದ ಆತ,

'Any problems buddy?!' ಎಂದು ತನ್ನ ಮುಷ್ಟಿಯನ್ನು ಮುಖದ ಮುಂದಿನ ನಿರ್ವಾತ ಪ್ರದೇಶದಲ್ಲಿ ಯಾವುದೊ ಕಾಲ್ಪನಿಕ ಬಿಂದುವಿನೆಡೆಗೆ ಗುರಿಮಾಡಿ ಒಂದೇ ಸಮನೆ ಬಡಿಯ ತೊಡಗಿದ.

'ಏನಲೇ ನಿಂದು .. ಥು.. ಮುಚ್ಕೊಂಡ್ ಒಂದ್ ಸೆಕೆಂಡ್ ನಿಂತು ಆಕಡೆ ನೋಡು' ಎನುತ ಸಾರ್ವಜನಿಕರನ್ನು ಉದ್ದೇಶಿಸಿ ಅರಚುತಿದ್ದ ರಾಜಕಾರಣಿಗಳ ಸ್ಟೇಜನ್ನು ತೋರಿಸಿದ ಲೋಕೇಶ. .

'ಅರ್ರೆ, ಏನೋ ಇದು .. ಬೆಳ್ ಬೆಳ್ಗೆ. ಇವ್ರಿಗೆ ಮಾಡೋಕ್ ಬೇರೆ ಏನ್ ಕೆಲ್ಸ ಇಲ್ವ..' ಕೊನೆಗೂ ಇಹಲೋಕಕ್ಕೆ ಬಂದವನಂತೆ ಆದಿ ನುಡಿದ.

'ಅವ್ರಿಗೆ ಕೆಲ್ಸ ಇಲ್ಲ ಆದ್ರೆ ಇವ್ರಿಗ್ ಏನಾಗಿದ್ಯಪ್ಪ ..’ ಎಂದು ಅಲ್ಲಿ ನೆರೆದಿದ್ದ ಜನಸಮೂಹನ್ನು ನೋಡಿ ‘ವಾಕಿಂಗೆ ತುಂಬಾ ಜನ ಬರ್ತಾರೆ ಅಂತಾನೆ ಇಲ್ಲೇ ಪ್ರೋಗ್ರಾಮ್ ಹಾಕೊಂಡಿರೋದು ಕರ್ಮದವ್ರು' ಎಂದ.

'ಹೋಗ್ಲಿ ಬಿಡ್ ಮಚಿ .. ಒಂದ್ ದಿನ ತಾನೇ .. ರನ್ನಿಂಗ್ ನಾಳೆ ಕಂಟಿನ್ಯೂ ಮಾಡಿದ್ರೆ ಆಯ್ತು..' ಎಂದು ಆದಿ ಹೊರಡಲು ಅಣಿಯಾದ.

'ಇಟ್ಸ್ ನಾಟ್ ಅಬೌಟ್ ದಟ್ ' ಎಂದು ಸುಮ್ಮನಾದ ಲೋಕೇಶ 'ಬಾ..' ಎಂದು ಆದಿಯೊಟ್ಟಿಗೊಡಗೂಡಿ ಸ್ಟೇಜಿನ ಬಳಿಗೆ ನೆಡೆದ.

ಒಲ್ಲದ ಮನಸ್ಸಿನಲ್ಲಿಯೇ ಆದಿ ಆತನನ್ನು ಹಿಂಬಾಲಿಸಿದ.

ಅಮೆರಿಕಾದವರು ಇನ್ನೇನು ಬಂದು ಅಣುಬಾಂಬನ್ನು ಸುರಿದುಬಿಡುವರೋ ಎಂದರಿತು ಮಾಡುವ ಎಮರ್ಜೆನ್ಸಿ ಮೀಟಿಂಗ್ನಂತೆ ಜಿಲ್ಲೆಯ ಹೆಚ್ಚು ಕಡಿಮೆ ಅಷ್ಟೂ ರಾಜಕೀಯ ತಲೆಗಳು ಆ ವಿಶಾಲ ಸ್ಟೇಜಿನ ಮೇಲೆ ರಾರಾಜಿಸಿದ್ದವು. ಇಡೀ ಸಿಟಿಯ ಶಾಂತ ಮುಂಜಾವಿನ ಪರಿಸರವನ್ನು ತನ್ನ ಕರ್ಕಶ ಶಬ್ದದಿಂದ ಹಾಳುಗೆಡವುವಂತೆ ಧ್ವನಿವರ್ಧಕವು ಶಕ್ತಿಮೀರಿ ಅರಚುತಿತ್ತು. ಸ್ಟೇಜಿನ ಕೆಳಗ್ಗೆ ನಿಂತಿದ್ದ ಪಕ್ಷದ ಕಟ್ಟಾ ಕಾರ್ಯಕರ್ತರು ಮೇಲೆ ನೆಡೆಯುತ್ತಿದ್ದ ಭಾಷಣವೊಂದನ್ನು ಆಲಿಸುವುದ ಬಿಟ್ಟು ಸಾಧ್ಯವಾದ ಬೇರೆಲ್ಲ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 'ರಂಗಣ್ಣ .. ನೆನ್ನೆ ಬಾಟ್ಲಿಗೆ 200, ಇವತ್ತ್ ಬೆಳಗ್ಗೆ ಬಿರಿಯಾನಿ ಊಟಕ್ಕೆ 250, ಬಸ್ ಚಾರ್ಜು 50 ಅಂತ ಒಟ್ಟ್ 500 ರೂಪಾಯಿ ಪೀಕಿದ್ರಲ್ಲ, ಎಲ್ಲಿ, ನೆಟ್ಟಗೆ 10 ಜನಾನು ಇಲ್ವಲ್ರಿ?' ಎಂಬ ಸಂಭಾಷಣೆಗಳೇ ಅಲ್ಲಿ ಹೆಚ್ಚಾಗಿ ಕೇಳಿಬರುತ್ತಿದ್ದವು.

'ಪ್ರಿಯ ಜನರೇ .. ಇದು ನೆಡೆಯಲ್ಲ .. ಇಂತ ಗೊತ್ತು ಗುರಿ ಇಲ್ಲದ ಸರ್ಕಾರ ಯಾರಿಗೆ ತಾನೇ ಬೇಕು .. ನಾವೆಲ್ಲಾ ಒಗ್ಗಟ್ಟಾಗಿ ಇಂದು ಸರ್ಕಾರದ ವಿರುದ್ಧ ಸಮರ ಸಾರ್ಬೇಕು..ಇಲ್ಲ ಅಂದ್ರೆ ನಮ್ಗೆ ಉಳಿಗಾಲವಿಲ್ಲ..' ಎಂದು ಒಬ್ಬ ರಾಜಕಾರಣಿ ತನ್ನ ಗಂಟಲು ಹರಿಯುವಂತೆ ಚೀರತೊಡಗಿದ. ಆತ ಇತರೆ ರಾಜ್ಯಗಳ ಹೋಲಿಕೆಯನ್ನು ನೀಡುತ್ತಾ ಅಲ್ಲಿ ಅಷ್ಟು ಸಾಲ ಮನ್ನವಾಗಿದೆ, ಇಲ್ಲಿ ಇಷ್ಟಾಗಿದೆ ಎಂದು ಕೊನೆಗೆ ತಮ್ಮ ರಾಜ್ಯದ 'ಶೂನ್ಯ ಸಾಧನೆ'ಯನ್ನು ಹೀಯಾಳಿಸುತ್ತ ಆತ ತನ್ನ ಭಾಷಣವನ್ನು ಮುಂದುವರೆಯುತ್ತಾನೆ. ಸರ್ಕಾರ ಬಿದ್ದರೆ ಜಾತಿ ಕೋಟದ ಮೇಲೆ ಹೈ ಪ್ರೊಫೈಲ್ ಮಿನಿಸ್ಟರ್ಗಿರಿಯನ್ನು ತನ್ನದಾಗಿಸಿಕೊಳ್ಳುವ ಆತನ ಆಸೆಯ ಹೊಳಪು ಬಲ್ಲವರಿಗೆ ಮಾತ್ರ ತಿಳಿದಿತ್ತು.

'ನಿಮ್ಮ ಎದೆ ಮುಟ್ಕೊಂಡ್ ಹೇಳಿ .. ನಿಮ್ಗೆ ಇಂತ ಸರ್ಕಾರ ಬೇಕಾ.. ಬಡವರ ರಕ್ತ ಹೀರೊ ಇಂತ ನಾಯಕರು ಬೇಕಾ' ಶಾಲಾ ಮಕ್ಕಳಿಗೆ ನಿಮ್ಗೆ ಭಾನುವಾರ ತರಗತಿಗಳು ಬೇಕಾ ಎಂಬಂತೆ ಆತ ನೆರೆದಿದ್ದ ಅಷ್ಟೂ ತಲೆಗಳನ್ನು ಉದ್ದೇಶಿಸಿ ಆತ ಕೇಳಿದ.

'ಬೇಡ .. ಬೇಡ .. ಬೇಡ ಆನ್ರೋ..' ಕಾರ್ಯಕರ್ತರು ತಮ್ ತಮ್ಮ ಜನರ ಗುಂಪಿನೆಡೆಗೆ ಮೊಗಮಾಡಿ ಜೋರಾಗಿ ಪಿಸುಗುಡತೊಡಗಿದರು. ಆದರೆ ಅದು ರಾತ್ರಿಯ ಗುಂಡಿನ ಮತ್ತೊ ಅಥವ ಇನ್ನು ಸ್ವಲ್ಪ ಸಮಯದಲ್ಲಿ ಸವಿಯಬಹುದಾದ ಬಿರಿಯಾನಿಯ ಕನಸೋ ಅಥವಾ ಭಾಷಣ ಘೋಷಣೆಗಳೆಂದರೆ ಸಹಜವಾಗಿ ಮೂಡುವ ಹಿಂಜರಿಕೆಯ ಸ್ವಭಾವವೊ ಏನೊ ಗುಂಪಿನಿಂದ ಒಂದೆರೆಡು ಧ್ವನಿಗಳು ಬಿಟ್ಟರೆ ಬೇರ್ಯಾರು ತುಟಿಕ್ ಪಿಟಿಕ್ ಅನ್ನಲಿಲ್ಲ. ಮೇಲಾಗಿ ವಾಕಿಂಗೆ ಬರುವ ಭಾಗಶಃ ಸಿಟಿಯ ಪ್ರಜ್ಞಾವಂತ ನಾಗರಿಕರೂ ಸಹ ಅದಾಗಲೇ ಬಂದ ದಾರಿಗೆ ಸುಂಕವಿಲ್ಲವೆಂದು ಗೊಣಗಿಕೊಳ್ಳುತ್ತ ಅಲ್ಲಿಂದ ಜಾಗ ಕಿತ್ತಿದ್ದರಿಂದಲೂ ಮೂಡಬೇಕಿದ್ದ ಸಹಜ ಸದ್ದು ಅಲ್ಲಿ ಮೂಡಲಿಲ್ಲವೆನ್ನಬಹುದು.

'ನಿಮ್ಗೆ ಇಂತ ಸರ್ಕಾರ ಬೇಕ ಮಹಾಜನರೇ ?' ಎಂದು ಮತ್ತೊಮ್ಮೆ ಅರಚಿದ ರಾಜಕಾರಣಿ ತನ್ನ ಸಿಟ್ಟಿನ ಕಣ್ಣುಗಳಿಂದ ಕಾರ್ಯಕರ್ತರನ್ನು ನೋಡತೊಡಗಿದ.

'ಯಸ್ ಮೈ ಲೀಡರ್ .. ಸರ್ಕಾರ ಬೇಕು .. ಬೇಕೇ ಬೇಕು .. ಕೋಟಿ ಕೋಟಿ ಖರ್ಚ್ ಮಾಡಿ ಎಲೆಕ್ಟ್ ಮಾಡಿರೋದು ಮೂರ್ ದಿನಕ್ಕೆ ಗಂಟು ಮೂಟೆ ಕಟ್ಸಿ ಮೂಲೆಗೆ ಹಾಕೋಕಲ್ಲ!'

ಗುಂಪಿನ ಮಧ್ಯದಿಂದ ಮೂಡಿದ ಈ ಅಚಾನಕ್ ಉತ್ತರಕ್ಕೆ ಕಕ್ಕಾಬಿಕ್ಕಿಯಾದ ರಾಜಕಾರಣಿ ಸದ್ದು ಬಂದೆಡೆಯೇ ನೋಡತೊಡಗಿದ. ಸ್ಟೇಜಿನ ಮೇಲಿದ್ದ ಇತರರ ದೃಷ್ಟಿಯೂ ಅತ್ತ ಕಡೆಗೇ ತಿರುಗಿತು. ದಷ್ಟಪುಷ್ಟವಾದ ಕೈಯೊಂದು ಜನರ ಗುಂಪಿನ ಮದ್ಯೆ ಮೇಲೆದ್ದು ನಿಂತಿತ್ತು. ಕಾರ್ಯಕರ್ತರು ಇನ್ನೇನು ಧಿಕ್ಕಾಪಾಲಾಗಿ ಓಡುವುದೊಂದೇ ಬಾಕಿ. ಆದಿ ತನ್ನ ಪಕ್ಕಕ್ಕೆ ತಿರುಗಿ ರಾಜಕಾರಣಿಯ ಮುಖಕ್ಕೆ ಒಡೆದವನಂತೆ ಉತ್ತರಿಸಿದ ಲೋಕೇಶನನ್ನು ಕಂಡು ಚೇಳು ಕಡಿದವರಂತೆ ಚಂಗನೆ ನೆಗೆದು ಪಕ್ಕದ ಗುಂಪಿನಲ್ಲಿ ಮರೆಯಾದ ಹಾಗು 'ಲೋಕಿ .. ಬೇಡ .. ಸುಮ್ನಿರೋ ..' ಎಂದು ಅಲ್ಲಿಂದಲೇ ಪಿಸುಗುಡತೊಡಗಿದ.

'ಯಂಗ್ ಮ್ಯಾನ್ .. ನಿಮ್ಗೆ ಇವೆಲ್ಲ ಅರ್ಥ ಆಗಲ್ಲ ಅನ್ಸುತ್ತೆ...ನಾವ್ ಹೇಳ್ತಾ ಇರೋದು ಜನಗಳ ಒಳಿತಿಗೇ'

'ನಾನ್ ಹೇಳ್ತಾ ಇರೋದು ಜನಗಳ ಒಳಿತಿಗೇನೆ ಸಾರ್..' ರಪ್ಪನೆ ಲೊಕೇಶನೂ ಉತ್ತರಿಸಿದ.

'ಒಹ್ ಇಸ್ ಇಟ್ .. ಬನ್ನಿ ಹಾಗಾದ್ರೆ .. ಇಲ್ ಬಂದು ಮಾತಾಡಿ .. ಬಂದು ವಿವರಿಸಿ.. ದಿಸ್ ಸ್ಟೇಜ್ ಇಸ್ ಫಾರ್ ಯು' ಎಂದ ರಾಜಕಾರಣಿ ಬಹುಶಃ ಬೊಗಳುವ ನಾಯಿ ಕಚ್ಚುವುದಿಲ್ಲವೆಂಬ ಲೆಕ್ಕಾಚಾರದಲ್ಲಿ ಸ್ಟೇಜಿನ ಕೊಂಚ ಹಿಂದೆ ಸರಿದು ನಿಂತಂತೆ ನಟಿಸಿದ. ಪಕ್ಕದಲ್ಲಿ ಆಸೀನರಾಗಿದ್ದಂತಹ ಇತರೆ ರಾಜಕಾರಣಿಗಳು ಪ್ರೋಗ್ರಮಿನ ಪ್ರೊಟೋಕಾಲನ್ನು ಮುರಿದ ಆತನನ್ನು ದುರುಗುಟ್ಟು ನೋಡುತ್ತಾ ಮನದೊಳಗೆ ಗುಸು ಗುಸು ಬೈಯತೊಡಗಿದರು. ಯುವಜನರ ಹುಲಿಯೆಂಬ ನಾಮಾಂಕಿತದ ಆತ ಇತರೆ ರಾಜಕಾರಣಿಗಳಿಗೆ ತನ್ನ ಕಣ್ಣಿನಲ್ಲೇ ಏನೂ ಆಗಲಿಲ್ಲವೆಂಬ ಸಮಜಾಯಿಷಿಯನ್ನು ನೀಡಿ ಇನ್ನೇನು ಮೈಕಿನೆಡೆಗೆ ಪುನಃ ಬರಬೇಕು ಅನ್ನುವಷ್ಟರಲ್ಲಿಯೇ ಲೋಕೇಶ ಅಲ್ಲಿಗೆ ಬಂದು 'ಒಂದೂರಿನಲ್ಲಿ ಒಬ್ಬ ಯುವಕನಿದ್ದ..' ಎಂದು ಯಾರಿಗೆ ಯಾವುದೇ ಗೌರವಸೂಚಕಗಳಿಲ್ಲದೆಯೇ ತನ್ನ ಭಾಷಣವನ್ನು ಮುಂದುವರೆಸಿದ!

Continues..

No comments:

Post a Comment