Friday, July 31, 2020

ಪಯಣ - 14

ಅವರು ನನ್ನೊಟ್ಟಿಗೆ ಮಾತು ಬಿಟ್ಟು ಅದಾಗಲೇ ವಾರಗಳೇ ಕಳೆದಿವೆ. ಹಾಗಂತ ನಾನೇನು ಅವರ ಮೆಸೇಜಿಗೂ, ಫೋನ್ ಕಾಲಿಗೂ ಹಾತೊರೆಯುತ್ತಿಲ್ಲ. ಐ ಶುಡ್ ಮೇಂಟೈನ್ ಮೈ ಡಿಗ್ನಿಟಿ. ಆದರೆ ಅವರು ಇದ್ದಷ್ಟು ದಿವಸನೂ ನನ್ನಲ್ಲಿ ಮೂಡುತಿದ್ದದ್ದು ಒಂದೇ ಭಾವ. ಅದೇ ಕಾಮ. ಅದು ಅವರ ತಪ್ಪಿರದಿರಬಹುದು. ನಾನೂ ಸಹ ಬೇಕಂತಲೇ ಏನೋ ಅದನ್ನು ಇಚ್ಛಿಸದಿರಬಹುದು. ಆದರೆ ನನ್ನ ಗುರಿಯೆಂಬ ಹರಿವು ಅವರೆದುರಿಗಿರುವಾಗ ಹಾಳು ಬಯಕೆಯ ಆಸೆಯಲ್ಲಿ ಅಲ್ಲೋಲಕಲ್ಲೋಲವಾಗುವುದಂತು ಸುಳ್ಳಲ್ಲ. ಕೂಡಲೇ ಮದುವೆ ಸಂಬಂಧ ಎಂಬ ನೂರಾರು ಯೋಚನೆಗಳು.

ಸಾಧ್ಯವೇ ಇಲ್ಲ. ನಾನು ತಿಳಿಯಬೇಕು. ಕಲಿಯಬೇಕು.ಅರಿಯಬೇಕು. ನಮ್ಮ ಹಿರಿಯರನ್ನು. ನಮ್ಮ ಕಲೆ ಸಂಸ್ಕೃತಿಯನ್ನು. ಅದೂ ಸಹ ನನ್ನದೇ ದೃಷ್ಟಿಕೋನದಲ್ಲಿ. ನಾನು ಸುಖವಾಗಿರಲು ಬೇರೆಯೊಬ್ಬರ ಅಥವ ಬಾಹ್ಯ ವಸ್ತುಗಳ ಪ್ರಭಾವ ನನ್ನೊಳಗೆ ಒಂದಿನಿತು ಇರಕೂಡದು. ಅಲ್ಲದೆ ಸುಖವೆನ್ನುವುದು ಕೇವಲ ಕಾಮವಷ್ಟೇ ಆಗಕೂಡದು. ಮದ್ಯ, ಮಾಂಸ, ಮೋಜು ,ಮಸ್ತಿಗಳಿಂದಾಚೆಗಿನ ಸಂತೋಷದ ಲಹರಿ ನನ್ನೊಳಗೆ ಮೂಡಬೇಕು. ಧ್ಯಾನ ಮಾಡಿದಾಗ ಮೂಡುವ ಆ ಅರೆಕ್ಷಣದ ನೆಮ್ಮದಿ ಜೀವನದುದ್ದಕ್ಕೂ ನನಗೆ ಬೇಕು. ದ್ವಾರಕಸಮುದ್ರದ ದೇವಾಲಯದ ಒಳಗಿರುವ ಶಾಂತತೆ ಅನಂತವಾಗಿ ಮೂಡಬೇಕು.ಇದು ಕೇವಲ ಆ ಒಂದು ದೇವಾಲಯದೊಳಗೆ. ದೇಶದ ಇಂತಹ ಸಾವಿರಾರು ದೇವಾಲಯಗಳು ಅದೆಂತಹ ಪ್ರಭೆಯನ್ನು ನಮ್ಮೊಳಗೇ ಬೀರಬಹುದು?.

ಯಾರಿಗೊತ್ತು, ಆ ಮಹಾದೇವನೇ ಒಂದು ದಿನ ಕಾಣಲು ಸಿಕ್ಕರೆ?!

ಹೋಗಬೇಕು. ಪ್ರತಿದಿನ ಸೂರ್ಯೋದಯ ಹಾಗು ಸೂರ್ಯಾಸ್ತದ ಸಮಯದಲ್ಲಿ ಒಂದೊಂದು ಹೊಸ ದೇವಾಲಯಗಳಿಗೆ ಭೇಟಿಯಿಟ್ಟು ಧ್ಯಾನಿಸಬೇಕು. ಶಾಂತಿಯ ಸಾಗರದಲ್ಲಿ ಈಜುತ್ತಾ ಅವುಗಳ ಕಲೆ , ಕೆತ್ತನೆಗಳನ್ನು ಅರಿಯಬೇಕು. ಎಂಬ ಆಲೋಚನೆಗಳು ಮೂಡುತ್ತಿದ್ದಂತೆಯೇ ಮನದೊಳಗೆ ಸಂತೋಷದ ಅಲೆಗಳು ಉಕ್ಕಿ ಬರಲಾರಂಭಿಸಿದವು. ಬೆಟ್ಟದ ತುದಿಗೆ ನಾನಿಂದು ಒಬ್ಬನೇ ಬಂದಿದ್ದೆ. ಇನ್ನರೆ ಹೊತ್ತಿನಲ್ಲಿ ಸೂರ್ಯ ಪಡುವಣ ದಿಕ್ಕಿನಲ್ಲಿ ಮರೆಯಾಗುವುನ್ನು ತಡೆಯಲೇನೋ ಎಂಬಂತೆ ಸಾಲು ಸಾಲು ಹಕ್ಕಿಗಳು ಆ ಕಡೆಗೇ ಧಾವಿಸತೊಡಗಿದ್ದವು. ಯಾವುದೇ ಯಾಂತ್ರಿಕ ಸದ್ದುಗಳಿರದ ಆ ಎತ್ತರದ ಸ್ಥಳದಲ್ಲಿ ಒಂದು ಘಳಿಗೆ ಧ್ಯಾನಿಸುವ ಮನಸ್ಸಾಗಿ ನಿಧಾನವಾಗಿ ಕಣ್ಣುಮುಚ್ಚಿದೆ.


****


'ದೀಪಾವಳಿಗಾದ್ರು ಬಾರೋ ಮಾರಾಯ.. ಏನ್ ಸೀಮೆಗಿರದ ಕಾಲೇಜು ನಿಂದು..' ಎಂದು ಮನೆಗೆ ತೆರಳುವ ಕಷ್ಟದ ಕಾಯಕಕ್ಕೆ ಅಮ್ಮನಿಂದ ಆಮಂತ್ರಣ ದೊರೆಕಿತು. ತಾನಿರುವಲ್ಲಿಂದ ಊರಿಗೆ ಹೋಗುವ ಧಟ್ಟ ಹಸಿರಾದ ರಮಣೀಯ ಹಾದಿಯನ್ನು ಇಂಪಾದ ಹಾಡುಗಳೊಟ್ಟಿಗೆ ಬೆಳ್ಳಂಬೆಳೆಗೆ ಕ್ರಮಿಸುವುದೆಂದರೆ ಆದಿಗೂ ಎಲ್ಲಿಲ್ಲದ ಸಂತೋಷವೇ ಆದರೂ ಅಂತಹ ಸ್ವರ್ಗದಾರಿಯನ್ನು ಕ್ರಮಿಸಿ ಮನೆಗೆ ತಲುಪಿದನೆಂದರೆ ಮಾನಸಿಕ ಒತ್ತಡದಿಂದ ಕೂಡಿರುವ ಮಹಾ ಕೂಪದೊಳಗೆ ಬಿದ್ದಂತಹ ಕಹಿಯಾದ ಅನುಭವ. ಮಗನಿಗಾಗಿ ಅಮ್ಮ ಮಾಡಿಡುವ ಭಕ್ಷಾದಿಗಳು ಒಂದೆರಡಲ್ಲ. ಆದರೂ ಕಹಿಯಾದ ಅತ್ತಕಡೆ ಕಾಲಿಡಲು ಮನಸ್ಸೇ ಬಾರದು. ಇಲ್ಲದ ಮನಸ್ಸಿನಲ್ಲಿಯೇ 'ಸರಿ, ನೋಡ್ತೀನಿ..' ಎಂದು ಆತ ಫೋನನ್ನು ಕೆಳಗಿಟ್ಟ. ತಂಗಿ ಬಂದಿದ್ದರೆ ಹೋಗಬಹುದಿತ್ತು ಆದರೆ ಅವಳೆಲ್ಲಿ ಬರುತ್ತಾಳೆ ಎಂದು ಮನದಲ್ಲೇ ಅಂದುಕೊಂಡ. ಹತಾಶೆಯ ನಿಟ್ಟುಸಿರನ್ನು ಬಿಟ್ಟ. ಸಿಗುವ ನಾಲ್ಕೈದು ದಿನಗಳ ರಜೆಯ ನೆಮ್ಮದಿಯನ್ನು ಪುಸ್ತಕ ಓದುತ್ತಲೋ , ರಾತ್ರಿಯಿಡಿ ಕಷ್ಟಪಟ್ಟು ಇಂಟರ್ನೆಟ್ಟಿನಿಂದ ಬಟ್ಟಿಇಳಿಸಿದ ಚಲನಚಿತ್ರಗಳನ್ನು ನೋಡುವುದರಲ್ಲೋ ಅಥವಾ ಸಂಜೆ ಒಂದೆರೆಡು ಬಿಯರ್ಗಳನ್ನು ಹಾಕಿ ಎಲ್ಲವನ್ನು ಮರೆಯುವುದರಲ್ಲಿ ಕಳೆಯಬೇಕೆಂದುಕೊಂಡಿದ್ದ ಆದಿಗೆ ಈಗ ಮನೆಗೆ ಹೋಗಬೇಕೆಂಬುದನ್ನು ನೆನೆದು ಮನಸ್ಸು ಕುಗ್ಗತೊಡಗಿತು. ಮೊದಲೆಲ್ಲ ಅಮ್ಮನ ವಾರಾಂತ್ಯದ ಬಾಡೂಟವನ್ನು ಸವಿಯಲೆಂದೇ ಇಷ್ಟಬಿದ್ದು ಹೋಗುತ್ತಿದ್ದ ಮನೆ ಬರಬರುತ್ತಾ ಏಕೋ ಬೇಡವಾಗತೊಡಗಿದೆ.

ಆತನಿಗೆ ಯೋಚನೆಯೊಂದು ಮೂಡಿತು. ಬಹುದಿನಗಳ ತನ್ನ ಕನಸ್ಸನ್ನು ಈಡೇರಿಸಿಕೊಳ್ಳಬಹುದೆಂಬ ಖುಷಿಯ ಬುಗ್ಗೆ ಆತನೊಳಗೆ ಪುಟಿದೇಳತೊಡಗಿತು. ಶಾಲಾ ದಿನಗಳ ನಂತರ ಕೇವಲ ತನ್ನ ಕಲ್ಪನೆಗಷ್ಟೇ ಸೀಮಿತವಾಗಿದ್ದ ಖುಷಿಯನ್ನು ಈ ಬಾರಿ ಕಣ್ತುಂಬ ಕಾಣಬಹುದೆಂಬ ಆಲೋಚನೆ ಕಾರ್ಮೋಡ ಕವಿದ ಆಗಸದಲ್ಲಿ ನಕ್ಷತ್ರವೊಂದು ಮಿನುಗಿದಂತೆ ಮೂಡಿತು.. ಕೂಡಲೇ ಅಮ್ಮನಿಗೆ ಫೋನಾಯಿಸಿ 'ಬರ್ತೀನಿ.. ಕಾಯಿ ಹೋಳ್ಗೆ ಮತ್ತು ಬೇಳೆ ಹೋಳ್ಗೆ ಮಾಡು' ಎಂದು ಆಜ್ಞಾಪಿಸಿ ಫೋನನ್ನು ಇರಿಸಿದ. ತುಸು ಹೊತ್ತಿನ ಮೊದಲು ಬೇಡವಾಗಿದ್ದ ಮನೆ ಈಗ ಎಲ್ಲಿಲ್ಲದ ಖುಷಿಯನ್ನು ತುಂಬಿ ಕೊಡುವ ಅಕ್ಷಯಪಾತ್ರೆಯಂತೆ ಭಾಸವಾಯಿತು.

ಆದಿನ ಸಂಜೆ ನಿಗದಿತ ಸಮಯಕ್ಕೂ ಮೊದಲೇ ಟೆರೇಸಿನ ಮೇಲೋಗಿ ಖುಷಿಯ ನಂಬರಿಗೆ ಫೋನಾಯಿಸಿದ. ಎಂದಿನಂತೆಯೇ ಎಲ್ಲಿಲ್ಲದ ಹುರುಪಿನಲ್ಲಿ ಅದೇ ಪ್ರೆಶ್ನೆಗಳನ್ನು ಮತ್ತೊಮ್ಮೆ ಕೇಳಿ ಮುಂದೇನೂ ತೋಚದಿದ್ದಾಗ ಕೊನೆಯಲ್ಲಿ ತಾನು ಹಬ್ಬಕ್ಕೆ ಊರಿಗೆ ಬರುವುದನ್ನು ಹೇಳಿ ಆಕೆಯೂ ಬಂದರೆ ಸಿಗಬಹುದೆಂಬುದನ್ನು ಹೇಳಿ ಆಕೆಯ ಉತ್ತರಕ್ಕೆ ಕಾಯುತ್ತಾನೆ. 'ಸರಿ, ನೋಡೋಣ' ಎಂಬ ಎರಡಂಕಿಯ ಉತ್ತರವನ್ನು ಬಿಟ್ಟರೆ ಬೇರೇನೂ ಹೆಚ್ಚಾಗಿ ಆಕೆ ಹೇಳಲಿಲ್ಲ. ಆದಿ ಮತ್ತೊಮ್ಮೆ ಆಕೆಯನ್ನು ಕೇಳಿದ. ಆಗಲೂ ಒಂದು ಬಗೆಯ ಅಸಡ್ಡೆಯ ಉತ್ತರ. ಇಷ್ಟು ವರ್ಷಗಳ ನಂತರ ಸಿಗುವ ಖುಷಿಗೆ ಆಕೆಯ ಒಲ್ಲದ ಮನಸ್ಸಿನ ಉತ್ತರವನ್ನು ಕಂಡು ಆದಿಯ ಮುಖ ಕೆಂಪೇರತೊಡಗಿತು. ಆಕೆಗೆ ನಿಜವಾಗಿಯೂ ನನ್ನ ಕಾಣಲು ಆಸ್ಥೆಯಿಲ್ಲವೇ ಅಥವಾ ಬೇರೇನೋ ಕಾರಣವಿರಬಹುದೇ? ಹೆಚ್ಚು ಕಡಿಮೆ ಪ್ರತಿಯೊಬ್ಬರೂ ಹಬ್ಬಕ್ಕೆ ಊರಿಗೆ ಬರುತ್ತಾರೆ. ಅದನ್ನರಿತು, ನಾನು ಹೇಳುವ ಮೊದಲೇ ಆಕೆಯೇ ನನಗೆ ಫೋನಾಯಿಸಿ ಕೇಳಬಹುದಿತ್ತು. ಸಿಗಲು ಜಾಗ ಹಾಗು ಸ್ಥಳವನ್ನು ನಿಗದಿಮಾಡಬಹುದಿತ್ತು. ಇಲ್ಲ, ಆಕೆಗೆ ಇವೆಲ್ಲ ಬೇಕಿಲ್ಲ. ತಾನಾಯಿತು ತನ್ನ ಓದಾಯಿತು. ಇಂತಹ ಹಲವು ಯೋಚನೆಗಳೇ ಮೂಡತೊಡಗಿದ ಮೇಲೆ ಮತ್ತೇನೂ ಹೆಚ್ಚಾಗಿ ಮಾತನಾಡಲು ಕಾಣದೆ ಆತ ಫೋನನ್ನಿರಿಸಿದ. ಊರಿಗೆ ಹೋಗಬೇಕೆಂದು ಮೂಡುತ್ತಿದ್ದ ಆನಂದದ ಅಲೆ ಮತ್ತೊಮ್ಮೆ ಕಣ್ಮರೆಯಾಗತೊಡಗಿತು.

ಖುಷಿಯ ಈ ನಿರಾಸಕ್ತಿಯ ಮಾತುಗಳು ಆದಿಯ ಮನದೊಳಗೆ ಹಲವು ಪ್ರೆಶ್ನೆಗಳನ್ನು ಹುಟ್ಟುಹಾಕಿದವು. ಆಕೆ ಹೀಗೇಕೆ ಮಾಡುತ್ತಿದ್ದಾಳೆ ಎನ್ನುವುದಕ್ಕಿಂತಲೂ ಹೆಚ್ಚಾಗಿ ನಾನೇಕೆ ಅವಳನ್ನು ಇಷ್ಟು ಹಚ್ಚಿಕೊಂಡೆ ಎಂಬುದಾಗಿರುತ್ತವೆ. ತನ್ನ ಜೀವನದಲ್ಲಿ ಆಕೆಯ ಪುನರಾಗಮನ ಅವ್ಯಕ್ತವಾದೊಂದು ಖುಷಿಯನ್ನು ತಂದಿರುವುದಂತೂ ಸುಳ್ಳಲ್ಲ. ಹಾಗಂದ ಮಾತ್ರಕ್ಕೆ ಆಕೆ ನನ್ನೊಳಗಿನ ಪ್ರತಿಯೊಂದು ಭಾವನೆಗಳ ನಿಯಂತ್ರಕಿಯಾಗಿರುವುದು ಆತನಿಗೆ ದಿಗ್ಬ್ರಮೆಯನ್ನು ಹುಟ್ಟಿಸುತ್ತದೆ. ಆಕೆ ನಕ್ಕರೆ ನನ್ನ ನಗು, ಆಕೆಗೆ ನೋವಾದರೆ ತನಗೆ ಅಳು, ನಲಿದರೆ ಖುಷಿ, ಮುನಿದರೆ ದುಃಖ, ಏನಿದು? ನಾನು ನನ್ನ ಮನೆಗೋಗಲು ಈಕೆಯನ್ನು ಕೇಳಬೇಕೆನ್ನುವ ತನ್ನ ನಿರ್ಧಾರ ಅದೆಂತಹದ್ದು? ಖುಷಿ ಪ್ರತಿದಿನ ಫೋನಾಯಿಸಿ ಮಾತಾಡುತ್ತಿದ್ದರೆ ಎಲ್ಲವೂ ಸರಿ. ನನ್ನ ಗೆಳತಿ ಎಂಬ ಅಹಃ. ಆದರೆ ಕನಿಷ್ಠ ಒಂದು ದಿನ ಫೋನಾಯಿಸದಿದ್ದರೆ ಅಥವಾ ಸಂತೋಷದಿಂದ ಮಾತಾಡದಿದ್ದರೆ ತನಗ್ಯಾಕೆ ಈ ಬಗೆಯ ವಿಪರೀತ ಕೋಪ? ಆಕೆಯ ಅಗಲುವಿಕೆ ನನ್ನೊಳಗೆ ಎಲ್ಲಿಲ್ಲದ ತುಮುಲವನ್ನು ಉಂಟುಮಾಡುವುದೇಕೆ? ಶಾಲಾದಿನಗಳಂತೆಯೇ ತನ್ನನ್ನು ಬಿಟ್ಟು ಆಕೆ ಎಲ್ಲಿಯೂ ಹೋಗಬಾರದು, ನಾನಿಲ್ಲದ ಆಟದಲ್ಲಿ ಆಕೆ ಬಾಗಿಯಾಗಬಾರದು ಎಂಬಂತಹ ಹಠ ಈಗಲೂ ಇದೆ. ಅದಕ್ಕೆ ಅದ್ಯಾವ ವ್ಯಾಖ್ಯಾನವನ್ನು ಸಮಾಜ ಕೊಡುತ್ತದೆಯೂ ತಿಳಿಯದು. ಆದರೆ ಆಕೆ ನನ್ನ ಗೆಳತಿ. ಅಣ್ಣ ತಮ್ಮ ಅಕ್ಕ ತಂಗಿಯರಿಗಿಂತಲೂ ಮಿಗಿಲಾದ ಸಲುಗೆ. ನನ್ನ ಜೀವನದಲ್ಲಿ ಅದೇನೇ ಜರುಗಿದರೂ ಕನ್ನಡಿಯ ಪ್ರತಿಬಿಂಬದಂತೆ ಅದು ಆಕೆಯಲ್ಲಿಯೂ ಮೂಡಬೇಕು. ಯಾರೊಟ್ಟಿಗೂ ಹಂಚಿಕೊಳ್ಳದ ಕನಸ್ಸುಗಳನ್ನು, ನೋವನ್ನು, ಹತಾಶೆಯನ್ನು, ಗುರಿಯನ್ನು ನಾನು ಆಕೆಯೊಟ್ಟಿಗೆ ಹಂಚಿಕೊಳ್ಳಬೇಕೆಂಬ ಹಂಬಲವೇಕೆ?

ಏನಿದರ ಅರ್ಥ.

ಅದೇನೇ ಇರಲಿ ತಾನು ಎಂದಿಗೂ ಬೇರೊಬ್ಬರ ಚಟುವಟಿಕೆಗಳ ಕೈಗೊಂಬೆಯಂತೂ ಸುತರಾಂ ಆಗಬಾರದು ಎಂದುಕೊಳ್ಳುತ್ತಾನೆ. ಅದು ಖುಷಿಯೇ ಯಾಕಾಗಿರಬಾರದು. ಆಕೆ ನನಗಾಗಿಯೇ ಆಗಸದಿಂದ ಬಂದಿಳಿದ ಗೆಳತಿಯಾದರೂ ಸರಿಯೇ ನನ್ನ ತೀರ್ಮಾನಗಳು ಎಂದಿಗೂ ನನ್ನದಾಗಿಯೇ ಇರಬೇಕು.

ಬಹುಷಃ ಈ ಮಾತನ್ನು ಬೇರ್ಯಾರ ಬಗ್ಗೆಯಾದರೂ ಹೇಳಿದ್ದರೆ ಆದಿಯ ಮನ ಕೇಳುತ್ತಿತ್ತೇನೋ ಆದರೆ ಖುಷಿಯ ಬಗೆಗೆ ಅದು ಆ ನಿಲುವನ್ನು ತಾಳಲು ಸಾಧ್ಯವಿರಲಿಲ್ಲ. ಗೊಂದಲ ಹಾಗು ಸಿಟ್ಟಿನಲ್ಲಿಯೇ ಆದಿ ಮನೆಗೆ ಹೋಗುವುದೆಂದು ನಿರ್ಧರಿಸಿದ. ಖುಷಿಯನ್ನು ಹೇಗಾದರೂ ಮಾಡಿ ಬೇಟಿಯಾಗಬೇಕೆಂಬ ಉತ್ಕಟ ಹಠದ ಉಸಿರನ್ನು ಕಟ್ಟತೊಡಗಿದ.

**

ಆದಿ ಊರನ್ನು ತಲುಪಿದ. ವಿಚಿತ್ರವೆಂಬಂತೆ ಕಳೆದ ಎರಡು ದಿನಗಳಲಿಂದ ಅಪ್ಪ ಮನೆಯಲಿಲ್ಲದೆ ತನ್ನ ಫೋನನ್ನೂ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಅಮ್ಮನನ್ನು ವಿಚಾರಿಸಿದಾಗ 'ಹಬ್ಬ ಹರಿದಿನ ಬಂತು ಅಂದ್ರೆ ಇದ್ದದ್ದೇ ಬಿಡು .. ಯಾರ್ದೋ ಹಳೆ ನೆಂಟ್ರ ಮನೆಗೆ ಹೋಗಿರ್ತಾರೆ .. ಇನ್ನೊಂದ್ ಸ್ವಲ್ಪ ದಿನ ಬಿಟ್ಟು ಬರಬಹದು' ಎಂದು ಸುಮ್ಮನಾದಳು. ಆಕೆಯ ಮನದಲ್ಲೂ ಬಹುಷಃ ಮುಟ್ಟಿದರೆ ಮುನಿಯಂತಾಡುವ ಗಂಡ ಇಲ್ಲದೆ ಹಬ್ಬದ ದಿನದಲ್ಲಾದರೂ ಮನೆ ಶಾಂತವಾಗಿರುತ್ತದೆ ಎಂಬ ನೆಮ್ಮದಿ. ರಾತ್ರಿಯಿಡಿ ಮಾಡಿಟ್ಟ ಹೋಳಿಗೆ, ಜಾಮೂನು ಹಾಗು ಇನ್ನು ಹಲವು ಭಕ್ಷಾದಿಗಳನ್ನು ಸಾಕು ಸಾಕೆನ್ನುವಷ್ಟು ಉಣಬಡಿಸಿದಳು. ಅದೆಷ್ಟೇ ಕೊಬ್ಬಿ ಕೋಣನಂತಾದರೂ ಹೊಟ್ಟೆಗೆ ಹಿಟ್ಟಿಲ್ಲದ ಬಡಪಾಯಿಯಂತೆಯೇ ಮನೆಯ ಹೊರಗಿರುವ ಅಮ್ಮನ ಮಗ. ಹೊಟ್ಟೆಬಿರಿಯುವಷ್ಟು ತಿಂದು ಮಧ್ಯಾಹ್ನದ ರಣಬಿಸಿಲಿಗೆ ಹೊರಹೋಗಲು ಮನಸ್ಸಾಗದೆ ಸೋಫಾದ ಮೇಲೆ ಮಲಗಿ ಖುಷಿಯ ಮೆಸೇಜುಗಳು ಬಂದಿರಬಹುದೇ ಎಂದು ಕಣ್ಣಾಯಿಸುವಲ್ಲಿಯೇ ನಿದ್ರಾದೇವಿ ಬಂದು ಆತನನ್ನು ಆವರಿಸಿದಳು.

ಕನಸ್ಸಲ್ಲಿ ಖುಷಿ ತನಗಾಗಿ ಶಾಲೆಯ ದೊಡ್ಡಗೇಟಿನ ಬಳಿ ಕಾಯುತ್ತಿರುವಂತೆ, ಆಟವಾಡಲು ಕೈತುಂಬ ಕಲ್ಲುಗಳನ್ನು ಹಿಡಿದು ನಿಂತಿರುವಂತೆ ಕಾಣತೊಡಗಿತು. ಅದೆಷ್ಟೋ ಹೊತ್ತಿನವರೆಗೂ ಆಡಿದ ಆಕೆಗೆ ಪ್ರತಿ ಆಟದಲ್ಲೂ ಗೆಲ್ಲುತ್ತಿದ್ದ ಆದಿಯೊಟ್ಟಿಗೆ ಆಡಲು ಬೇಸರವಾದಂತೆನಿಸಿದಾಗ ದೂರದಲ್ಲಿದ್ದ ಮತ್ಯಾರೋ ಆಕೆಯನ್ನು ಕರೆಯುತ್ತಾರೆ. ಖುಷಿ ಹೇಳದೆಯೇ ಎದ್ದು ಹೋರಡಲು ಅಣಿಯಾಗುತ್ತಾಳೆ. ತನ್ನನ್ನು ಒಬ್ಬನೇ ಬಿಟ್ಟು ಹೊರಡಲು ಅಣಿಯಾದ ಆಕೆಯನ್ನು ಕಂಡು ಆದಿಗೆ ವಿಪರೀತ ಕೋಪ ಬರುತ್ತದೆ. ಖುಷಿ ನೆಡೆಯುತ್ತಾ ದೂರವಾಗತೊಡಗಿದಳು. ಕೂಡಲೇ ಆದಿಯ ಸಿಟ್ಟು ದುಃಖವಾಗಿ ಮಾರ್ಪಡುತ್ತದೆ. 'ಖುಷಿ .. ಹೋಗ್ ಬೇಡ್ವೇ' ಎಂದು ಗದ್ಗದಿತ ಸ್ವರದಲ್ಲಿ ಆತ ಅಳತೊಡಗುತ್ತಾನೆ. ಆದಿಯ ಅಳುವನ್ನೂ ಲೆಕ್ಕಿಸದೆ ಆಕೆ ದೂರವಾದಳು. ತನ್ನ ಅತ್ಯಾಪ್ತ ಆಟಿಕೆಯನ್ನು ಕಳೆದುಕೊಂಡಹಾಗೆ ಆದಿ ನೆಲದ ಮೇಲೆ ಬಿದ್ದು ಒದ್ದಾಡತೊಡಗಿದ. ರೋಧಿಸತೊಡಗಿದ.

'ಆದಿ..!' ಎಂದು ಅಮ್ಮ ಬಂದು ಮೈಯನ್ನು ಅಲುಗಾಡಿಸಿದ ಮೇಲೆಯೇ ಆತನಿಗೆ ಅದು ಕನಸ್ಸೆಂದು ಅರಿವಾದದ್ದು. ಸಂಜೆ ಅದಾಗಲೇ ಐದಾಗಿತ್ತು.

'ಏನಾಯ್ತೋ..?' ಎಂದ ಆಕೆಯ ಪ್ರೆಶ್ನೆಗೆ ಏನಿಲ್ಲವೆನುತ ಎದ್ದು ರೆಡಿಯಾಗಿ ಆಕೆ ಮಾಡಿಟ್ಟ ಘಮಭರಿತ ಕಾಫಿಯನ್ನು ಹೀರಿ ಊರಿನ ಬೆಟ್ಟಕ್ಕೆ ಹೋಗಿ ಸೂರ್ಯಾಸ್ತವನ್ನು ನೋಡಿ ಸಂಜೆ ಹಾರಿಸಲು ಒಂದಿಷ್ಟು ಪಟಾಕಿಗಳನ್ನು ತರಲು ತನ್ನ ಬೈಕನ್ನು ಹೊರಗೆಳೆದ.

**

ಬೆಟ್ಟದ ಆ ಜಾಗ ಆದಿಯ ಸ್ವರ್ಗಬಿಂದು. ಅದರ ತಪ್ಪಲನ್ನು ಮುಟ್ಟುವಾಗಲೇ ಸೂರ್ಯದೇವ ತನ್ನ ದೈನಂದಿನ ಕಾರ್ಯವನ್ನು ಮುಗಿಸಿ ಮರೆಯಾಗಿ ಹೋಗಿದ್ದ. ಆಗಸದಲ್ಲಿ ಮೂಡಿಸಿದ್ದ ಕೆಂಪಾದ ಪ್ರಭೆ ಹಾಗೆಯೇ ಇನ್ನೂ ಥಳಥಳಿಸುತ್ತಿತ್ತು. ಯಾರೊಬ್ಬರೂ ಹೆಚ್ಚಾಗಿ ಬಾರದ ಆ ಜಾಗದಲ್ಲಿ ತನ್ನಿಷ್ಟದ ಹಾಡುಗಳೊಟ್ಟಿಗೆ ಕೆಂದಾವರೆಯಂತಾದ ಆಗಸದಲ್ಲಿ ಕೆಲವೊಮ್ಮೆ ನಕ್ಷತ್ರಗಳು ಹೊಳೆಯುವವರೆಗೂ ಆತ ಅಲ್ಲಿ ನಿಲ್ಲುವುದುಂಟು. ಅದೇನೋ ಒಂದು ಬಗೆಯ ನೆಮ್ಮದಿ ಅಲ್ಲಿ. ದೂರದಿಂದೆಲ್ಲೋ ಖುಷಿಯೂ ನಿಂತು ನನ್ನನ್ನೇ ನೋಡುತ್ತಿರುವಳೆಂಬ ಭಾವನೆ.

ಸಮಯ ಉರುಳಿತು. ಕೂಡಲೇ ಅಮ್ಮನ ಫೋನು. ಮನೆ ಬಿಟ್ಟು ಅದಾಗಲೇ ಎರಡು ತಾಸುಗಳಗಿವೆ. ಸಿಟಿಗೆ ಬಂದು ಒಂದಿಷ್ಟು ಪಟಾಕಿಗಳನ್ನು ಕೊಂಡು ಮನೆಗೆ ಧಾವಿಸಿದ. ಅಮ್ಮನೊಟ್ಟಿಗೆ ಹಬ್ಬವನ್ನು ಆಚರಿಸಿದ. ಖುಷಿಯ ಮನೆಯ ವಿಳಾಸ ತಿಳಿಯದಿದ್ದರೂ ಹೇಗಾದರು ಮಾಡಿ ಹುಡುಕಿದರೆ ಸಿಗುತ್ತಿತ್ತು. ಆದರೆ ತಾನು ಊರಿಗೆ ಬಂದಿರುವುದು ತಿಳಿದಿದ್ದರೂ ಖುಷಿ ಬೇಕಂತಲೇ ಮೆಸೇಜನ್ನು ಮಾಡದಿರುವುದು ಆದಿಯ ಅನುಭವಕ್ಕೆ ಬಂದಿತು. ಬೇಕಾದರೆ ಆಕೆಯೇ ಮಾಡಲಿ ಎಂದು ಸುಮ್ಮನಾದ. ಅಂತೂ ಕಾದು ನೋಡಿ ಕೊನೆಗೆ ಹಬ್ಬದ ರಜೆಯ ದಿನಗಳು ಕಳೆದರೂ ಆಕೆಯ ಮೆಸೇಜು ಬಾರದಿದ್ದದ್ದು ಆತನಿಗೆ ಮುಳ್ಳಿನ ಹಾಸಿಗೆಯ ಮೇಲೆ ಅಂಗಾತ ಮಲಗಿದಂತಾಗಿತ್ತು. ಜೊತೆಗೆ ಆಪ್ಪನೂ ಮನೆಗೆ ಬಾರದಿದ್ದದ್ದು ಆತನಲ್ಲಿ ಕೊಂಚ ದಿಗಿಲನ್ನು ಹುಟ್ಟುಹಾಕಿದರೂ ಆತ ಆದನ್ನು ವ್ಯಕ್ತಪಡಿಸಲಿಲ್ಲ.

ಒಲ್ಲದ ಮನಸ್ಸಿನಲ್ಲಿಯೇ ಬರುವುದಾಗಿ ಹೇಳಿ ಕೆಜಿಗಟ್ಟಲೆ ಮನೆತಿಂಡಿಯನ್ನು ಹೊತ್ತು ಕಾಲೇಜಿಗೆ ವಾಪಸ್ಸಾದ.



****

ಚಚ್ಚಿ ಹೊಡೆಯುವ ರಣಬಿಸಿಲು, ಹಾದಿಯ ಇಬ್ಬದಿಗೂ ಕಿಕ್ಕಿರಿದು ಅಂಟಿಕೊಂಡಿರುವ ಗೂಡಂಗಡಿಗಳ ಸಾಲು, ರಸ್ತೆಯನ್ನೇ ಆಟದ ಮೈದಾನವನ್ನಾಗಿ ಮಾಡಿಕೊಂಡಿರುವ ಮಕ್ಕಳ ಸಂತೆ ಹಾಗು ತಮ್ಮ ಶಕ್ತಿಯನ್ನೆಲ್ಲ ವ್ಯಹಿಸಿ ರಾಶಿ ರಾಶಿಯಾಗಿ ಹೊಗೆಯನ್ನುಗುಳುವ ಮೋಟಾರುಗಳು. ಇವೆಲ್ಲವನ್ನು ನೋಡಿದಾಗ ಶತಮಾನಗಳಷ್ಟು ಹಳೆಯ ಜಗತ್ಪ್ರಸಿದ್ದ ದೇವಾಲಯವೊಂದು ಇಲ್ಲಿದೆ ಎಂದು ನಂಬಲೇ ಸಾಧ್ಯವಾಗದು. ದಾರಿಗೆ ಅಡ್ಡಲಾಗಿ ಬರುತ್ತಿದ್ದ ನಾಯಿ, ಬೆಕ್ಕು ಹಾಗು ಸಹನೆಯನ್ನೇ ಮರೆತಿರುವ ಮಾನವರೆಲ್ಲರನ್ನು ತನ್ನ ಬೈಕಿನ ಮೊದಲ ಗೇರಿನಲ್ಲಿಯೇ ದಾಟಿ ಆಗಸವನ್ನು ಚುಂಬಿಸುವಂತೆ ನಿಂತಿದ್ದ ದೇವಾಲಯದ ಭವ್ಯರಮಣೀಯ ವಿಮಾನ ನನ್ನನ್ನು ಮಾತುಮರೆತ ವ್ಯಕ್ತಿಯನ್ನಾಗಿಸಿತು. ಇಂಟರ್ನೆಟ್ಟಿನಲ್ಲಿ ಬಹಳ ಬಾರಿ ದೇವಾಲಯದ ಬಗೆಗೆ ಅದೆಷ್ಟೇ ಓದಿ ಅರಿತಿದ್ದರೂ ಇಂದು ಕಣ್ಣೆದುರಿಗೇ ಪ್ರತ್ಯಕ್ಷವಾದಂತಹ ಈ ವಿಹಂಗಮ ಆಕೃತಿ ನನ್ನ ವರ್ಣನೆಗೆ ನಿಲುಕದಂತಾಯಿತು. ಮಧ್ಯಾಹ್ನದ ರಣಬಿಸಿಲು ಜೊತೆಗೆ ದೇವಾಲಯದ ಸಂದಿಗೊಂದಲದಲ್ಲೂ ಕಿಕ್ಕಿರಿದು ನೆರೆದಿರುವ ಪ್ರವಾಸಿಗರ ಗದ್ದಲವನ್ನು ಕಂಡು ಹೊತ್ತು ಕಳೆದು ಸಂಜೆಯಾದ ಮೇಲೆಯೇ ದೇವಾಲಯವನ್ನು ಪ್ರವೇಶಿಸುವುದಾಗಿ ತೀರ್ಮಾನಿಸಿ ಹತ್ತಿರದಲ್ಲಿ ಉಳಿದುಕೊಳ್ಳಲು ರೂಮಿನ ವ್ಯವಸ್ಥೆಯನ್ನು ನೋಡತೊಡಗಿದೆ.

ಗೆಳೆಯನೊಬ್ಬನ ರಾಯಲ್ ಏನ್ಫೀಲ್ಡ್ ಬೈಕನ್ನು ಪಡೆದು ಎರಡು ತಿಂಗಳ ಮಟ್ಟಿಗೆ ದೇಶ ಪರ್ಯಟನೆ ಎಂದು ಹೊರಟ ನಾನು ಧಕ್ಷಿಣ ಭಾರತದಿಂದಿಡಿದು ಉತ್ತರ ಭಾರತದ ತುತ್ತತುದಿಯ ಸಾಧ್ಯವಾದಷ್ಟು ದೇವಾಲಯಗಳಿಗೆ ಹೋಗುವುದೆಂದು ತೀರ್ಮಾನಿಸಿದ್ದೆ. 'ಸೋಲೋ ಟ್ರಿಪ್' ಎಂದಷ್ಟೇ ಹೇಳಿ ಹೊರಟಿದ್ದೆ. ಬಹುಶಃ ದೇವಾಲಯಗಳ ಯಾತ್ರೆ ಎಂದಿದ್ದರೆ ಆದಿಯೂ ಜೊತೆಗೂಡುತ್ತಿದ್ದನೇನೋ ತಿಳಿಯದು.

ಅದರಂತೆ ದಕ್ಷಿಣ ವಾರಣಾಸಿಯ ಈ ಚೆನ್ನಕೇಶವ ದೇವಾಲಯ ನನ್ನ ಯಾತ್ರೆಯ ಮೊದಲ ಶಾಂತಿಕೇಂದ್ರ.

ಮೊದಲೇ ತೀರ್ಮಾನಿಸಿದಂತೆ ಅದೆಷ್ಟೇ ಕಷ್ಟಗಳಾದರೂ ಸರಿಯೇ ದೇವಾಲಯಗಳನ್ನು ನಾನು ಒಂದೋ ಬೆಳಗಿನ ತಿಳಿ ಜಾವದಲ್ಲೋ ಅಥವಾ ಸಂಜೆಯ ಶಾಂತ ಸಮಯದಲ್ಲೂ ನೋಡಬೇಕೆಂಬುದೆ ಆಗಿದ್ದಿತು. ಸಂಜೆ ಸುಮಾರು ಆರಕ್ಕೆ ಸ್ನಾನಾದಿಗಳನ್ನು ಮುಗಿಸಿ ದೇವಾಲಯಕ್ಕೆ ಬಂದು ಗರ್ಭಗುಡಿಯ ಬಳಿಯೂ ಅಥವಾ ದೇವಾಲಯದ ಮತ್ಯಾವುದೋ ಜನರಹಿತ ಜಾಗದಲ್ಲಿ ಶಾಂತವಾಗಿ ಕೂತು ಓಂಕಾರವನ್ನು ಗುನುಗುತ್ತಾ ಧ್ಯಾನವನ್ನು ಮಾಡತೊಡಗಿದರೆ ಆಗಸವನ್ನು ಸೀಳಿ ಇಡೀ ಬ್ರಹ್ಮಾಂಡದಿಂದ ಬಲುದೂರಕ್ಕೆ ಹೋದಂತಹ ಅವರ್ಣೀಯ ಸುಖಾನುಭವ. ಅದೇನು? ಅದೇಕೆ? ನನಗೆ ತಿಳಿಯುವುದಿಲ್ಲ. ಆದರೆ ನನ್ನ ಆ ಧ್ಯಾನ ಯಾರಿಂದಲೋ ಆಮಂತ್ರಣವೊಂದನ್ನು ಪಡೆದಂತೆ ಭಾಸವಾಗುತ್ತಿತ್ತು.

ಅಲ್ಲದೆ ಪ್ರತೀ ದೇವಾಲಯದ ಇತಿಹಾಸವನ್ನು ಓದಿ ಅಲ್ಲಿನ ಪ್ರತಿಯೊಂದು ವಿಷಯಗಳನ್ನು ಕಣ್ಣಾರೆ ನೋಡಿ ಒರೆಹಚ್ಚಿ ಅನುಭವಿಸತೊಡಗಿದೆ. ಹೀಗೆ ಮಾಡುವಾಗ ಶತಮಾನಗಳಷ್ಟು ಹಿಂದಿನ ಶಿಲ್ಪಿಗಳು, ಕವಿಗಳು, ರಾಜರು ನನ್ನನ್ನು ನೋಡಿ ಮಂದಹಾಸವನ್ನು ಬೀರುತ್ತಿರುವರೆಂಬ ಅನುಭವ. ಅವರು ಹೇಗಿದ್ದಿರಬಹುದು, ನಾಟ್ಯರಾಣಿ ಶಾಕುಂತಲೆ ನೈಜವಾಗಿ ಅದೇಗೆ ಕಂಗೊಳಿಸುತ್ತಿದ್ದಿರಬಹುದು, ಚೀವಿಂಗ್ ಗಮ್ಮಿಗಿಂತಲೂ ನಯವಾಗಿ ಕಲ್ಲುಗಳನ್ನು ತಿದ್ದಿ ತೀಯುವ ಕಲೆಗಾರರ ನಗುವಿನ ಹಿಂದಿರುವ ಆ ಮರ್ಮವಾದರೂ ಏನು, ಅವರು ಇಷ್ಟೆಲ್ಲಾ ಕೆತ್ತನೆಗಳನ್ನು ಮಾಡಿರುವಾಗ ಏನಾದರು ಮಹತ್ತರವಾದ ಸುಳಿವನ್ನು ರಹಸ್ಯವನ್ನು ಕೆತ್ತಿ ಮರೆಯಾಗಿರುವರೆ?ನಾನದನ್ನು ಪತ್ತೆ ಹಚ್ಚ ಬಲ್ಲೇನೆ ಎಂಬ ಅನೇಕಾನೇಕ ಪ್ರೆಶ್ನೆಗಳು ಮನದೊಳಗೆ ಮೂಡಿ ಮರೆಯಾಗತೊಡಗುವವು.

ಹೀಗೆ ದೇವಾಲಯವೊಂದಕ್ಕೆ ಒಂದೋ ಅಥವಾ ಕೆಲವು ಬಾರಿ ಎರಡು ದಿನಗಳನ್ನು ಮೀಸಲಿಡತೊಡಗಿದೆ.

ದಕ್ಷಿಣ ವಾರಣಾಸಿಯ ಚೆನ್ನಕೇಶವ ದೇವಸ್ಥಾನ ದ್ವಾರಸಮುದ್ರದ ದೇವಾಲಯದ ಮಂತ್ರತೆಯನ್ನೇ ತನ್ನೊಳಗೆ ಹಿಡಿದುಕೊಂಡಿದೆ. ಹೊರಗಿನ ಸಾಮಾಜಿಕ ಪರಿಸರ ಅದೇನೇ ಇದ್ದರೂ ಎಲ್ಲಿಲ್ಲದ ಶಾಂತತೆ ದೇವಾಲಯದೊಳಗೆ. ಬೆಳಗಿನ ಹಾಗು ಸಂಜೆಯ ಇಳಿಬಿಸಿಲಿನಲ್ಲಿ ದೇವಾಲಯವನ್ನು ಅನುಭವಿಸುವುದಾದರೆ, ಮಧ್ಯಾಹ್ನದ ಹೊತ್ತು ಆ ದೇವಾಲಯದ ಬಗೆಗೆ ಪುಸ್ತಕಗಳಲ್ಲೊ ಅಥವಾ ಇಂಟರ್ನೆಟ್ಟಿನಲ್ಲೂ ಓದುವುದು ಹಾಗೆ ಒಂದರೆಹೊತ್ತು ವಿಶ್ರಾಂತಿ. ಸಂಜೆಯ ಸೂರ್ಯ ಕಣ್ಮರೆಯಾದ ಕೆಲವು ತಾಸುಗಳ ನಂತರ ದೇವಾಲಯದ ಪ್ರಾಂಗಣದಲ್ಲಿ ತಂಪುಗಾಳಿಯ ಹಿತಾನುಭವದಲ್ಲಿ ನಭದ ರಾಶಿ ರಾಶಿ ನಕ್ಷತ್ರಗಳ ಕೆಳಗೆ ಅತ್ತಿಂದ್ದಿತ್ತ ಇತ್ತಿಂದ್ದತ್ತ ವಿಹಾರಿಸತೊಡಗಿದರೆ ಹೊತ್ತು ಕಳೆಯುವುದೇ ತಿಳಿಯುವುದಿಲ್ಲ. ಏರಿಳಿತಗಳಿಲ್ಲದ ತಿಳಿಯಾದ ತೊರೆಯೊಂದರ ಮೇಲಿನ ಹೂವಿನ ಅನುಭವ. ಅಲ್ಲದೆ ದೇವಾಲಯ ಹೊರಕ್ಕೂ ಹಾಗು ಒಳಕ್ಕೂ ಬರುವ ಹೋಗುವ ರಾಶಿ ರಾಶಿ ಬಗೆ ಬಗೆಯ ಹೂವುಗಳ ಸುಗಂಧ. ಆಹಾ.. ಜಗತ್ತಿನ ಸರ್ವ ಸುಖಗಳೂ ಸಹ ಏನಿಲ್ಲ ಇದರ ಮುಂದೆ. ರಾಜವೈಭೋಗವೆಂದರೆ ಇದೆಯೇ?

ಅಂದು ದೇವಾಲಯದ ಉಸ್ತುವರಿಯ ಜನ ಬಂದು ಹೊರಗೆ ಕರೆದುಕೊಂಡು ಹೋಗದಿದ್ದರೆ ರಾತ್ರಿಯಿಡಿ ಅಲ್ಲೇ ನೆಡೆದಾಡುತ್ತ ಇರುತ್ತಿದ್ದನೇನೋ?!!. ಬೆಳಗ್ಗೆ ಬೇಗನೆ ಎದ್ದು ದೇವಾಲಯಕ್ಕೊಂದು ಪ್ರದಕ್ಷಿಣೆ ಬಂದು, ಅರೆ ಹೊತ್ತು ಧ್ಯಾನ ಮಾಡಿ ಮೋಡಗಳನ್ನು ಕೊರೆದು ಉದಯಿಸುತ್ತಿದ್ದ ರವಿಯ ಜಾಡನ್ನು ಹಿಡಿದು ಅಹಿರ್ ಭೈರವಿ ರಾಗವನ್ನು ಕೇಳುತ್ತಾ ಬೈಕಿನ ವೇಗವನ್ನು ಹೆಚ್ಚಿಸಿದೆ…

.

****



ಒಂದರಿಂದೊಂದು ಪಟಪಟನೆ ಮೂಡುತ್ತಿದ್ದ ಮೆಸೇಜುಗಳನ್ನು ಓದಿ ಯಾವ ಮೆಸೇಜಿಗೂ ಉತ್ತರಿಸುವ ಗೋಜಿಗೆ ಹೋಗದ ಆದಿ ಫೋನನ್ನು ತನ್ನ ಬದಿಗೆ ಎಸೆಯುತ್ತಿದ್ದನ್ನು ಏನೆಂದು ಕೇಳಿದ ಲೊಕೇಶನ ಪ್ರೆಶ್ನೆಗೆ ಏನನ್ನೂ ಉತ್ತರಿಸದೆ, ನಾಳೆ ಬೆಳಗ್ಗೆ ಆದಷ್ಟು ಬೇಗನೆ ರನ್ನಿಂಗ್ ಟ್ರ್ಯಾಕ್ ಗೆ ಹೋಗೋಣವೆಂದು ಅಲರಾಮನ್ನು ಬೆಳಗ್ಗೆ ಐದು ಘಂಟೆಗೆ ಹೊಂದಿಸಿ ಮಲಗಿದ. ತನ್ನ ಹಾಗು ಖುಷಿಯ ವಿಷಯವಾಗಿ ಹೆಚ್ಚೇನೂ ಯಾರೊಟ್ಟಿಗೂ ಹೇಳದಿದ್ದರೂ ಲೊಕೇಶನಂತಹ ಪರಾಕ್ರಮಿಗೆ ಇಂತಹ ಗುಪ್ತ ಕೋಟೆಯೊಳಗೆ ಭೇದಿಸುವುದು ಕಷ್ಟದ ಕೆಲಸವೇನಲ್ಲ. ಆದಿ ಮಲಗಿದ ಕೆಲ ನಿಮಿಷಗಳಲ್ಲಿಯೇ ಆತನ ಫೋನನ್ನು ತೆಗೆದು ಇವರಿಬ್ಬರ ಶೀತಲ ಸಮರದ ಸಂಭಾಷಣೆಗಳನ್ನು ಓದುತ್ತಾ ಆತ ನಗತೊಡಗಿದ. ತನ್ನ ಹಾಗು ಶಶಿಯ ಚಿಕ್ಕದಾದ ಹಾಗು ಅಷ್ಟೇ ಚೊಕ್ಕವಾದ ಸಂಭಾಷಣೆಗಳ ಮುಂದೆ ಇವುಗಳು ಎಂದಿಗೂ ಮುಗಿಯದ ಧಾರವಾಯಿಗಳಂತೆ ಇಲ್ಲ ಸಲ್ಲದ ಪ್ರೆಶ್ನೆಗಳು, ಸಿಡುಕಿನ ಉತ್ತರಗಳು ಹಾಗು ಮಕ್ಕಳಾಟಿಕೆಯಂತಹ ಜಗಳಗಳಿಂದ ಕೂಡಿದ್ದವು. ದೀರ್ಘವಾದ ಏದುಸಿರನ್ನು ಬಿಡುತ್ತಾ ಆತನ ಫೋನನ್ನು ಬದಿಗಿರಿಸಿದ. ಕೂಡಲೇ 'ಟನ್ ..' ಎಂಬ ಸದ್ದಿನೊಂದಿಗೆ ಮತ್ತೊಂದು ಮೆಸೇಜ್ ಬಂದಿತಾದರೂ ಆತ ಅದನ್ನು ಓದಲಿಲ್ಲ. ಏಕೆ ಈ ಪುಣ್ಯಾತ್ಮ ಆಕೆಯನ್ನು ಅಷ್ಟೊಂದು ಹಚ್ಚಿಕೊಂಡಿದ್ದಾನೆ ಎಂದು ಗಹನವಾಗಿ ಯೋಚಿಸತೊಡಗಿದ.

ಬೆಳಗ್ಗಿನ ಸರಿಯಾಗಿ ಐದಕ್ಕೆ ಎದ್ದು ಇನ್ನೂ ಮಲಗಿದ್ದ ಲೊಕೇಶನನ್ನು ಬಡಿದೇಳಿಸಿ ಡಿಸ್ಟ್ರಿಕ್ಟ್ ಫೀಲ್ಡ್ ಗೆ ಹೋದ ಆದಿ ತನ್ನೆಲ್ಲ ಶಕ್ತಿಯನ್ನು ಮೀರಿ ಓಡತೊಡಗಿದ. ಆತನ ಓಟವನ್ನು ನೋಡುತ್ತಾ ಲೋಕೇಶ 'ಶೋಲ್ಡರ್ ರಿಲಾಕ್ಸ್ .. ಡೋಂಟ್ ಬೌನ್ಸ್..' ಎನ್ನುತ ಪದೇ ಪದೇ ಅರಚತೊಡಗಿದ. ಆದರೆ ಆದಿ ಕೇಳಲಿಲ್ಲ. ಏನೋ ಮಾಡಬಾರದ ತಪ್ಪನ್ನು ಮಾಡಿ ತನ್ನ ದೇಹಕ್ಕೆ ತಾನೇ ದಂಡಿಸಿಕೊಳ್ಳುವನಂತೆ ಓಡಹತ್ತಿದ. ಲೊಕೇಶನ ಕೋಪ ನತ್ತಿಗೇರತೊಡಗಿತು. ಆದಿ ನಾಲ್ಕು ಸುತ್ತು ಓಟವನ್ನು ಓಡಿ ಬಂದು ಲೊಕೇಶನ ಕೈಯಲ್ಲಿದ್ದ ಟೈಮರನ್ನು ತೆಗೆದು ನೋಡಿದರೆ ಅದು 48 ಸೆಕೆಂಡ್ಗಳನ್ನು ತೋರಿಸುತ್ತಿತ್ತು.

'ಪರ್ವಾಗಿಲ ಅಲ .. Improved almost 6 ಸೆಕೆಂಡ್ಸ್..' ಎಂದ ಆದಿ.

'ನಿನ್ ತಲೆ! ಮಗ್ನೆ, ನಾನ್ ಇಲ್ಲಿ ಅರ್ಧ ನಿದ್ರೇಲಿ ಎದ್ದು ಇಲ್ಲಿಗೆ ಬರೋದು ನೀನ್ ಹುಚ್ಚ್ ಕುದ್ರೆ ತರ ಓಡೋದನ್ನ ನೋಡೋಕ್ ಅಲ್ಲ .. ಸ್ವಲ್ಪನಾದ್ರೂ ಪ್ರೆಸೆನ್ಸ್ ಆಫ್ ಮೈಂಡ್ ಅನ್ನೊದಿರ್ಲಿ..' ಎಂದು ತನ್ನ ಕೈಲಿದ್ದ ಟವೆಲ್ ಅನ್ನು ನೆಲಕ್ಕೆ ಬಡಿದು ಕೂಡಲೇ ಅಲ್ಲಿಂದ ರೂಮಿನೆಡೆಗೆ ನೆಡೆದ . ಆತನ ಮಾತುಗಳಿಗೆ ಹೆಚ್ಚೇನೂ ತಲೆಗೆಡಿಸಿಕೊಳ್ಳದ ಆದಿ ಮತ್ತೊಮ್ಮೆ ಓಡಲು ಅಣಿಯಾದ.

ಊರಿಗೆ ಹೋದಾಗ ಖುಷಿಯ ಮುಖದರ್ಶನವಾಗಲಿಲ್ಲ ಎಂಬ ಒಂದೇ ಕಾರಣಕ್ಕೆ ಇಷ್ಟೆಲ್ಲಾ ಕೋಪವೇ? ಆ ಸಿಟ್ಟನ್ನು ಓಟದ ಮೇಲೆ ಹಾಕಿ ಏದುಸಿರಿನಿಂದ ಮೂಡುವ ನೋವನ್ನು ಮರೆಮಾಚಬಹುದು. ಆದರಿಂದಲೇ ಹೀಗೆ ಶಕ್ತಿಯನ್ನೆಲ್ಲ ಬಿಟ್ಟು ಓಡುವುದು. ಪ್ರತಿ ಬಾರಿಯೂ ಆಕೆಯನ್ನು ನೆನೆದರೆ ಎಲ್ಲಿಲ್ಲದ ಕೋಪ. ಇಡೀ ಭೂಮಂಡಲವನ್ನೇ ನಾಲ್ಕು ನಿಮಿಷಗಳಲ್ಲಿ ಓಡಿ ಮುಗಿಸಬೇಕೆಂಬ ಹಠದ ಭಾವನೆಗಳು ಆತನೊಳಗೆ ಒಮ್ಮಿಂದೊಮ್ಮೆಗೆ ಮೂಡುತ್ತವೆ. ಆದರೆ ಹೀಗೆ ಮಾಡುವುದರಿಂದ ಖುಷಿ ನನ್ನಿಂದ ಇನ್ನೂ ದೂರವಾಗುತ್ತಾಳೆ ಎಂದೆನಿಸಿ ಕೂಡಲೇ ಗದ್ಗದಿಸತೊಡಗುತ್ತಾನೆ. ಬೆಂಕಿಗೆ ತುಪ್ಪವನ್ನು ಚುಮುಕಿಸಿದಂತೆ ಮನೆಯ ಕಷ್ಟಗಳೂ ಆಗ ಕಣ್ಣ ಮುಂದೆ ಬರುತ್ತವೆ. ನಂತರದ ಕೆಲ ಕ್ಷಣಗಳಲ್ಲೇ ಜೀವನದಲ್ಲಿ ಏನೇನೂ ಬೇಡವೆಂಬ ಶುಷ್ಕ ಭಾವವೊಂದು ಮೂಡುತ್ತದೆ. ಏನು ಮಾಡಬೇಕೆಂದು ತೋಚದೆ ಪುನ್ಹ ಓಡಲು ಅಣಿಯಾಗುತ್ತಾನೆ.

ದಿನಗಳು ಸಾಗಿದಂತೆ ಆದಿಯ ಚಿಂತೆಯೂ ವಿಪರೀತವಾಯಿತು. ಅದೇನೇ ಆಗಲಿ ತನ್ನ ಅಹಂ ಎಲ್ಲವನ್ನೂ ಬದಿಗಿಟ್ಟು ಒಮ್ಮೆಲೆ ಆಕೆಗೆ ಫೋನಾಯಿಸಿ ಕ್ಷಮೆಯಾಚಿಸಬೇಕೆಂದುಕೊಳ್ಳುತ್ತಾನೆ. ಅದೆಷ್ಟೇ ಪ್ರಯತ್ನಿಸಿದರೂ ಸಹ ಅದು ಸಾಧ್ಯವಾಗುವುದಿಲ್ಲ. ಬರಿ ಮೆಸ್ಸೇಜುಗಳಲ್ಲೇ ಅವರ ಶೀತಲಯುದ್ಧ ಮುಂದುವರೆಯುತ್ತದೆ. ಇತ್ತ ಕಡೆ ಅಪ್ಪ ಇನ್ನೂ ಮನೆಗೆ ವಾಪಸ್ಸಾಗಲಿಲ್ಲವೆಂಬ ಅಮ್ಮನ ಆತಂಕದ ಫೋನುಗಳು. 'ಎರ್ಡ್ ವಾರ ಆಯಿತೋ .. ಫೋನು ಇಲ್ಲ ಏನೂ ಇಲ್ಲ..' ಎನ್ನುತ ಆಕೆ ಹೇಳತೊಡಗಿದರೆ ಆದಿಗೆ ಎಲ್ಲಿಲ್ಲದ ದಿಗ್ಭ್ರಮೆ. ಅಪ್ಪ ಇರುವವರೆಗೂ ಹಾವು ಮುಂಗುಸಿಯಂತೆ ಕಚ್ಚಾಡುವ ಜನ ಎರಡು ವಾರಕ್ಕೇ ಆತಂಕಗೊಳಗಾಗುವರೇ? ಅಪ್ಪ ಬಾರದೆ ಇದ್ದರೆ ಒಳ್ಳೆಯದು ಎಂದುಕೊಂಡವನಿಗೆ ಈಗ ಅಮ್ಮನ ಒತ್ತಡದ ಮೇರೆಗೆ ದೂರದ ನೆಂಟರಿಷ್ಟರೆಲ್ಲರಿಗೂ ಫೋನಾಯಿಸುವ ಕಷ್ಟದ ಕಾಯಕ ಬಂದೊದಗಿತು. 'ಏನೂ ಆಗಲ್ಲ ನಾನ್ ವಿಚಾರಿಸ್ತಿನಿ, ಸುಮ್ನಿರು..' ಎಂದೇಳಿ ಫೋನನ್ನು ಇರಿಸತೊಡಗಿದ. ಆದರೆ ಇದ್ದೆಲ್ಲ ನೆಂಟರಿಷ್ಟರ ಮೆನೆಗಳಿಗೆಲ್ಲ ಫೋನಾಯಿಸಿದರೂ ಅಪ್ಪನ ಸುದ್ದಿಯಿರಲಿಲ್ಲ. ಹಿಂದೊಮ್ಮೆ ಹೀಗೆಯೇ ಹಲವು ದಿನಗಳ ಕಾಲ ಮೆನೆಯಲ್ಲಿರದೆ ಕೊನೆಗೆ ಪಕ್ಕದ ಊರಿನ ಕಾಡಿನೊಳಗಿರುವ ದೇವಾಲಯವೊಂದರಲ್ಲಿ ಅಡಿಗೆ ಮಾಡಿಕೊಂಡು ವಾಸವಿದ್ದು ಕೊನೆಗೆ ಕಾಡಿ ಬೇಡಿ ಮನೆಗೆ ಕರೆತಂದಿದ್ದು ಆತನಿಗೆ ನೆನಪಾಯಿತು.

ಆದಿ ಏಕಾಂತದಲ್ಲಿ ಹೀಗೆ ಯೋಚಿಸುತ್ತಿರುವಾಗ ಒಮ್ಮೊಮ್ಮೆ ತಾನು ಅಪ್ಪನನ್ನು ಅಷ್ಟಾಗಿ ದ್ವೇಷಿಸುವುದೇಕೆಂಬುವುದೇ ಆತನಿಗೆ ಅರಿವಾಗುವುದಿಲ್ಲ. ಆತನ ಮಾತುಗಳು ಒರಟಾದರೂ ಅವು ತನ್ನ ಸ್ಕೂಲಿನ ಪಿಟಿ ಮೇಷ್ಟರ ಪೆಟ್ಟಿನಂತೆ ಒಂದು ಹದ್ದುಬಸ್ತನ್ನು ತಂದಿಡುತ್ತಿದ್ದವು. ಅಂದು ಆದಿ ಶಾಲೆಯಲ್ಲಿಯೇ ಉತ್ತಮ ವಿದ್ಯಾರ್ಥಿ ಎಂದು ಗುರುತಿಸಿಕೊಳ್ಳಲು ಅಪ್ಪನ ಭಯವೆಂಬ ಚುಚ್ಚುಮದ್ದು ಬಹುವಾಗಿಯೇ ಸಹಾಯ ನೀಡಿತ್ತು ಎಂಬುದನ್ನು ಅಲ್ಲಗೆಳೆಯಲಾಗುವುದಿಲ್ಲ. ಮುಂಗೋಪಿ , ಕೋಪಿಷ್ಠ. ಅದಕ್ಕೂ ಕಾರಣಗಳು ಹಲವಿರಬಹುದು. ಅಮ್ಮನ ಮಾತುಗಳೇ ಹಾಗೆ. ಮೈಮೇಲೆ ಕೆಂಡವನ್ನು ಸುರಿದಂತೆ. ಅವುಗಳನ್ನು ಕೇಳಿ ಕೂಡಲೇ ಮದವೇರಿದ ಗಜದಂತೆ ಆಡಿದರೂ ಆತನಿಗೆ ಈಕೆಯನ್ನು ಮಾತಿನಲ್ಲಿ ಸೋಲಿಸಲಾಗದು. ಆ ಸಿಟ್ಟಿನಲ್ಲೆ ಎಲ್ಲವನ್ನು ಬಿಟ್ಟು ದೂರ ಹೋಗುತ್ತಾನೆ. ಹಳೆಯ ಗುಡಿ ಗೋಪುರಗಳು, ಪಾಳು ಬಿದ್ದ ದೇವಾಲಯಗಳು ಆತನ ಏಕಾಂತದ ವಾಸಸ್ಥಾನ. ಅಲ್ಲದೆ ಕೆಲವೊಮ್ಮೆ ಕುಡಿದಾಗ ಆದಿಯೊಟ್ಟಿಗೆ ಮಾತಿನ ತತ್ವಯುದ್ಧಕ್ಕಿಳಿದರೆ ಆತನ ಮಾತುಗಳ ಆಳ ಆದಿಯ ಊಹೆಗೂ ನಿಲುಕದಾಗಿರುತ್ತದೆ. ಒಂದು ಪಕ್ಷ ಆತ ಅಮ್ಮನನ್ನು ಬೈಯದಿದ್ದರೆ, ಶಪಿಸದಿದ್ದರೆ ಬಹುಷಃ ಆದಿ ಆತನಲ್ಲಿ ಬೇರೊಬ್ಬ ಮಹಾಪುರುಷನನ್ನೇ ಕಾಣುತ್ತಿದ್ದನೇನೋ? ಅದೊಂದು ದಿನ ಟಿವಿಯಲ್ಲಿ ಬರುತ್ತಿದ್ದ ಕಾರ್ಯಕ್ರಮವೊಂದನ್ನು ನೋಡಿ ಮೊದಲ ಬಾರಿ ಎಂಬಂತೆ 'ಎಲ್ಲ ಬರಿ ಫೇಕು .. ಡ್ರಾಮಾ .. ಥು ಇವ್ರ ಜನ್ಮಕ್ಕೆ..' ಎಂದು ಚರ್ಚಾಕೂಟದಲ್ಲಿ ಬಾಗಿಯಾಗಿದ್ದ ಪಾನಾಲಿಸ್ಟ್ಗಳನ್ನು ನೋಡಿ ಬೈಯ್ಯತೊಡಗಿದ. ಗೋರಕ್ಷಣೆಯ ಬಗ್ಗೆ ಜರುಗುತ್ತಿದ್ದ ಆ ಚರ್ಚಾಕೂಟವನು ನೋಡುತ್ತಿದ್ದ ಆದಿ ಏಕೆಂದು ಕೇಳಿದರೆ, 'ಇನ್ನೇನು ಮತ್ತೆ. ರಕ್ಷಣೆ ಗೋವುಗಳಿಗೆ ಮಾತ್ರ ಸಾಕ. ದಿನ ಕೆ ಎಫ್ ಸಿ, ಮೆಕ್ಡಿ , ಮಣ್ಣು ಮಸಿ ಅಂತ ರಾಶಿ ರಾಶಿ ನುಂಗುವ ಕೋಳಿಗಳಿಗಾಗಲಿ, ಮೀನುಗಳಿಗಾಗಲಿ, ಹಂದಿ ಕುರಿಗಳಿಗಾಗಲಿ ಬೇಡವ? ಕಪಟ ಮನಸ್ಸಿನ ಮಾನವ ತನ್ನ ಬೇಳೆ ಬೇಯಿಸ್ಕೊಳ್ಳೋಕೆ ಎಷ್ಟ್ ಬೇಕೋ ಅಷ್ಟೇ ಮಾತ್ರ ಮಾತಾಡ್ತಾನೆ. ಅಲ್ಲಿರೋ ಒಬ್ರಲ್ಲೂ ನಿಜತ್ವ ಇಲ್ಲ. ಅವರ ಕಣ್ಣುಗಳನ್ನು ನೋಡಿದ್ರೇನೇ ನಾನ್ ಹೇಳ್ತಿನಿ. ಇತಿಹಾಸ ಪುರಾಣಗಳಲ್ಲಿ ಬಾರದ ಮಾತ್ರಕ್ಕೆ ಬೇರೆ ಜೀವಗಳು ಕರಿದ ರುಚಿಕರವಾದ ಸ್ವಾದಿಷ್ಟ ಭೋಜನಗಳು. ಅಲ್ಲಿರೋ ಒಬ್ಬನಾದ್ರು ನಿಜ ಮಾತಾಡಿದರೆ, ಒಳಗಿದ್ದದ್ದನ್ನು ಇದ್ದಹಾಗೆಯೇ ಕಕ್ಕಿದರೆ ನಾನು ಮೀಸೆ ಬೋಳಿಸಿಕೊಳ್ತೀನಿ' ಎಂದು ಹೇಳಿದ ಮಾತುಗಳೂ ಆತನಿಗೆ ನೆನಪಾಗತೊಡಗಿದವು.



Continues ....

No comments:

Post a Comment