Sunday, August 9, 2020

ಪಯಣ - 15

What the f*** ...!!' ಮೊಬೈಲಿನಲ್ಲಿ ಬ್ರೇಕಿಂಗ್ ನ್ಯೂಸ್ ಒಂದನ್ನು ನೋಡಿದ ಲೋಕೇಶ ಕೂಡಲೇ ರೂಮಿನಿಂದ ಹೊರಬಂದು ಸಿಟಿಯ ಹೊರಗಿದ್ದ ಸಣ್ಣ ನದಿಯ ಬಳಿಗೆ ಓಡಹತ್ತಿದ. ಕಾಲಿಗೆ ಚಪ್ಪಲಿಯನ್ನೂ ಧರಿಸದ ಆತ ಮುಖ್ಯರಸ್ತೆಯನ್ನು ಬಿಟ್ಟು ಪಾಳುಬಿದ್ದ ಜಾಗದಲ್ಲಿ ಮೂಡಿದ್ದ ಕಾಲುದಾರಿಯನ್ನೇ ಅನುಸರಿಸಿದ. ಬೆಳ್ಳಂಬೆಳಗ್ಗೆ ವಾಕಿಂಗೆಂದು ಬಂದವರು ಈತನ ಓಟವನ್ನು ಕಂಡು ದಂಗಾಗಿ ನಿಂತರು.

ಕಲ್ಲು, ಮುಳ್ಳು, ಮೋರಿ, ಕೇರಿಗಳನ್ನೂ ಲೆಕ್ಕಿಸದೆ ಓಡುತ್ತಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆಯ ಬಳಿಗೆ ಬರುವಷ್ಟರಲ್ಲೇ ನೂರಾರು ಜನರ ಗುಂಪು ಅಲ್ಲಿ ಮುತ್ತಿಕೊಂಡಿತ್ತು. ಲೈವ್ ಕಾರ್ಯಕ್ರಮವನ್ನು ಬಿತ್ತರಿಸುತ್ತಿದ ಟಿವಿ ಚಾನೆಲ್ನವರೂ ಅಲ್ಲಿಯೇ ಇದ್ದರು. ಎಲ್ಲರು ಸೇತುವೆಯ ಒಂದು ಬದಿಗೆ ಅಡ್ಡಲಾಗಿ ನಿರ್ಮಿಸಿದ್ದ ಕಿರುಗೋಡೆಯ ಸಹಾಯದಿಂದ ತಮ್ಮ ಕತ್ತನ್ನು ಹೊರಹಾಕಿ ನದಿಯನ್ನು ಧಿಟ್ಟಿಸುತ್ತಿದ್ದರು. ಕೂಡಲೇ ಪೊಲೀಸರು ಬಂದು ಗುಂಪನ್ನು ಚದುರಿಸಿ ಜಾಗವನ್ನು ಕೆಂಪು ಬ್ಯಾರಿಕೆಡ್ಗಳನಿಟ್ಟು ತಡೆದರು.

ನೊಂದ ಜೀವವೊಂದು ಅಲ್ಲಿ ಕಡೆಯ ಬಾರಿ ನಿಂತಿತ್ತು. ಹರಿಯುವ ರಭಸದ ನೀರ ಧಾರೆಗೆ ಅದು ನೆನ್ನೆಯೇ ನೆಗೆದು ತನ್ನ ಆತ್ಮಾರ್ಪಣೆಯನ್ನು ಮಾಡಿಕೊಂಡಿರುವುದೆಂದು ಹೇಳಲಾಗುತ್ತಿತ್ತು. ಲೋಕೇಶ ಆದಿಗೆ ಫೋನಾಯಿಸುವ ಮನಸ್ಸಾದರೂ ಸುಮ್ಮನಾದ. ಮೋಡಗಟ್ಟಿದ್ದ ಆ ಮುಂಜಾವು ಲೊಕೇಶನ ಜೀವನದ ಆಶಾಕಿರಣಗಳನ್ನೆಲ್ಲ ಮುಚ್ಚಿಹಾಕಿತು. ಕಲ್ಲು ಮುಳ್ಳು ಜಿಗ್ಗುಗಳಿಗೆ ಬಡಿದು ತೆರಚಿ ರಕ್ತಗತವಾಗಿದ್ದ ಕಾಲುಗಳಲ್ಲೇ ಆತ ನಿಧಾನವಾಗಿ ಮುಂದುವರೆದ.

ಜೋತು ಬಿದ್ದ ಎಲ್ಲರ ಮುಖದಲ್ಲಿಯೂ ಅದೇನೋ ಒಂದು ಅಮೂಲ್ಯವಾದ ವಸ್ತುವನ್ನು ಕಳೆದುಕೊಂಡ ಭಾವ. ಕೆಲವರು ಅದಾಗಲೇ ಕಣ್ಣೀರಿನ ಧಾರೆಯನ್ನೇ ಹರಿಸುತ್ತ ತಲೆಯನ್ನು ಚಚ್ಚಿಕೊಳ್ಳುತ್ತಿದ್ದರು. 'ಬುದ್ದಿ..' ಎನುತ ಕೂಲಿಕಾರ್ಮಿಕನೊಬ್ಬ ಅಕ್ಷರಸಹ ಮಕ್ಕಳಂತೆ ತನ್ನ ವಸ್ತ್ರವೆಲ್ಲವೂ ಮಣ್ಣಾಗುವಂತೆ ನೆಲದ ಮೇಲೆ ಬಿದ್ದು ಒರಳಾಡತೊಡಗಿದ್ದ.

'ನಮಸ್ತೆ ಸರ್. ಸಾಲ್ದಾನ ಜೋಸೆಫ್ ಅವರ ಈ ಅಚಾನಕ್ ಸಾವಿಗೆ ಕಾರಣವೇನಿರಬಹುದು ಹೇಳ್ತೀರಾ?!!' ಎಂದು ಅಲ್ಲಿ ನೆರೆದಿದ್ದ ವ್ಯಕ್ತಿಯೊಬ್ಬರಿಗೆ ಆಂಕರ್ ಒಬ್ಬಳು ಕೇಳಿದ ಪ್ರೆಶ್ನಗೆ ಕೆಂಡಾಮಂಡಲವಾದ ಲೋಕೇಶ ಕೂಡಲೇ ಅವರಲ್ಲಿಗೆ ಧಾವಿಸಿ,

'ರೀ .. ಬಂದ್ ಮಾಡ್ರಿ ಸಾಕು .. ಯಾರಿ ಹೇಳಿದ್ದು ನಿಮ್ಗೆ ಇದು ಸಾವು ಅಂತ? ಏನ್ರಿ ಪ್ರೂಫ್ ಇದೆ ? ಎಲ್ರಿ ಬಾಡಿ?' ಎಂದು ಅರಚಿದ.

ಏರು ಧ್ವನಿಯಲ್ಲಿ ಆಕೆ ಏನೋ ಹೇಳುತ್ತಿರುವಾಗಲೇ ಇನ್ನಷ್ಟು ಜನ ಅಲ್ಲಿ ನೆರೆದು ಲೊಕೇಶನ ಮಾತಿಗೆ ಜೊತೆಯಾಗಿ ಕ್ಯಾಮರಾಮ್ಯಾನ್ ಹಾಗು ಆ ಆಂಕರಿಬ್ಬರನ್ನೂ ಗದರಿಸಿದರು. ರಾಜ್ಯದ ಅಷ್ಟೂ ಟಿವಿ ಚಾನೆಲ್ಗಳು ಒಂದೇ ವಿಷಯವನ್ನು ಕಬ್ಬಿನ ಜಲ್ಲೆಯಂತೆ ಅರೆಯಹತ್ತಿದರೆ ಆ ವಿಷಯ ಸುಳ್ಳಾಗಿರಲು ಸಾಧ್ಯವಿಲ್ಲವೆಂದು ತಿಳಿದಿದ್ದರೂ ಲೋಕೇಶನಿಗೆ ಪ್ರಸ್ತುತ ನೆಡೆಯುತ್ತಿರುವ ಸನ್ನಿವೇಶಗಳೆಲ್ಲವೂ ಕನಸ್ಸೆಂದೆ ಭ್ರಮೆ. ನಿಜಜೀವನದ ಒಬ್ಬ ನೈಜ ನಾಯಕನನ್ನು ಕಳೆದುಕೊಳ್ಳುವುದು ಲೋಕೇಶನಿಗೆ ಸಾಧ್ಯವಾಗುವುದಿಲ್ಲ. ತಾನು ಅಷ್ಟು ಇಷ್ಟಪಟ್ಟು ಅನುಕರಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಹೇಡಿಯಂತೆ ಹೀಗೆ ನೀರಿಗೆ ಹಾರಿದನೆಂದರೆ ಅದು ಸಹಿಸಲಾರದ ಅವಮಾನ ಎಂದು ಪಕ್ಕದಲ್ಲಿದ್ದ ಲೈಟುಕಂಬಕ್ಕೆ ಜೋರಾಗಿ ತನ್ನ ಕಾಲಿನಿಂದ ಒದೆದ. ಆತನ ಕೋಪ ಶಾಂತವಾಗಲಿಲ್ಲ.

ತುಂಬಿಹರಿಯುತ್ತಿದ್ದ ನೀರಿನ ರಭಸವನ್ನೇ ಧಿಟ್ಟಿಸಿನೋಡತೊಡಗಿದ ಆತನಿಗೆ ಇದು ಆತ್ಮಹತ್ಯೆಯೋ, ಕೊಲೆಯೋ ಅಥವಾ ಮಾದ್ಯಮಗಳು ಸೃಷ್ಟಿಸಿದ ಭ್ರಮೆಯೋ ಎಂಬ ಸಂಶಯ ಮೂಡತೊಡದಿತು. ಜೊತೆಗೆ ಈ ಕೆಲತಿಂಗಳುಗಳಲ್ಲಿ ತಾನು ಅವರೊಟ್ಟಿಗೆ ಕಳೆದ ಚೆಂದದ ದಿನಗಳು ನೆನಪಾಗಿ ಮರುಗತೊಡಗಿದ. ಇಂತಹ ದೂರದೃಷ್ಟಿಯುಳ್ಳ, ಶಾಂತ ಸ್ವಭಾವದ ಆಶಾವಾದಿ ನಾಯಕನೊಬ್ಬ ಮರೆಯಾಗಲು ಹೇಗೆ ಸಾಧ್ಯ? ಸಾವಯವ ಕೃಷಿಯ ಕರ್ತೃ ಇಂದು ತಾನು ಬೆಳೆಸಿದ ಅಷ್ಟೂ ಸಸ್ಯಸಂಕುಲಗಳನ್ನು ಅನಾಥರನ್ನಾಗಿಸಿ ಇಹಲೋಕದ ಪಯಣವನ್ನು ಕೊನೆಗೊಳಿಸಿದ್ದಾನೆ. ಇಲ್ಲಿಯ ಕಾಫಿಯ ಘಮವನ್ನು ದೇಶವಿದೇಶಗಳಿಗೆ ಪಸರಿಸಿ ಈ ಪುಟ್ಟ ಊರಿನ ಹೆಸರನ್ನು ಅಜರಾಮರನನನ್ನಾಗಿಸಿದ ವ್ಯಕ್ತಿ ಇಲ್ಲವೆಂಬ ಸುದ್ದಿ ಶುದ್ಧ ಸುಳ್ಳೆಂದು ಆತನಿಗೆ ಅನಿಸತೊಡಗಿತು. ಇನ್ನು ಲೋಕೇಶನಿಗೆ ಅಲ್ಲಿ ನಿಲ್ಲಲು ಆಗಲಿಲ್ಲ. ದೇವರೆಂಬ ಶಕ್ತಿಯೊಂದಿದ್ದರೆ ಈಗ ಜರುಗುತ್ತಿರುವ ಘಟನೆಗಳೆಲ್ಲ ಕನಸ್ಸಾಗಲಿ ಅಥವಾ ಪವಾಡಸದೃಶ್ಯ ರೀತಿಯಲ್ಲಿ ಅವರು ಬದುಕಿಬರಲಿ ಎಂದು ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತಾ ಬರಿಗಾಲಿನಲ್ಲೇ ತನ್ನ ಗದ್ದೆಯೆಡೆಗೆ ನೆಡೆದ. 

ಅದೆಷ್ಟೋ ಹೊತ್ತಿನವರೆಗೂ ಹಳದಿ ಮಿಶ್ರಿತ ಹಸಿರಾಗಿ ಮುದಿಗೊಂಡಿದ್ದ ಶುಂಠಿ ಸಸಿಗಳನ್ನೇ ಧಿಟ್ಟಿಸುತ್ತಾ ಕಲ್ಲುಬಂಡೆಯಂತೆ ಕೂತ. ಆತನ ಕಣ್ಣೀರನ್ನು ಮರೆಮಾಚಲೇನೋ ಎಂಬಂತೆ ಮಳೆಯ ಹನಿಗಳು ಆತನ ಕಪೋಲವನ್ನು ನೆನೆಸತೊಡಗಿದವು.

ಆತ ಯೋಚಿಸತೊಡಗಿದ. ಕೈಯಲ್ಲಿ ನಯಾಪೈಸೆ ಇಲ್ಲದ ಈ ಪ್ರದೇಶದ ವ್ಯಕ್ತಿಯೊಬ್ಬ ಇಂದು ವಿಶ್ವಮಟ್ಟಕ್ಕೆ ಬೆಳೆದು ಬ್ರಾಂಡ್ ಒಂದನ್ನು ಸೃಷ್ಟಿಸಿ ಹೆಸರು ಮಾಡಿರುವುದನ್ನು ಮಾತನಾಡುವುದೇ ಇಲ್ಲಿನ ಜನರಿಗೆ ಒಂದು ಹೆಮ್ಮೆಯ ವಿಚಾರ. ಶೋಕಿ ಎಂದರೂ ತಪ್ಪಾಗಲಾರದು. ಅವ ನಮ್ಮವ , ನಮ್ಮ ಊರಿನವ ಎಂದು ಎದೆಯುಬ್ಬಿಸಿಕೊಂಡು ಹೇಳುವ ವ್ಯಕ್ತಿಗಳನ್ನು ಕಂಡು ತಾನೂ ಕೂಡ ಸಾಲ್ದಾನ ಜೋಸೆಫ್ರಂತೆ ಆಗಬೇಕು. ನನ್ನನ್ನು ಕುರಿತೂ ಜನರು ಹೀಗೆಯೇ ಮಾತನಾಡಿಕೊಳ್ಳಬೇಕು, ಹಣ ಸಂಪಾದನೆಯೊಟ್ಟಿಗೆ ಇದೆ ಮಣ್ಣಲ್ಲಿ ಹುಟ್ಟಿ ಬೆಳೆದ ಇತರರಿಗೂ ಕೈಲಾದ ಸಹಾಯವನ್ನು ಮಾಡುತ್ತಾ ಅರ್ಥಪೂರ್ಣ ಜೀವನವನ್ನು ನೆಡೆಸಬೇಕೆಂಬ ಹಂಬಲ ಅವರನ್ನು ಭೇಟಿಯಾಗುವ ಮೊದಲು ಅವರ ಬಗ್ಗೆ ಇಂಟರ್ನೆಟ್ಟಿನಲ್ಲಿ ಹುಡುಕಾಡಿದ ದಿನದಿಂದಲೂ ಈತನಲ್ಲಿ ಮನೆಮಾಡಿತ್ತು. ಅಂತೆಯೇ ಅವರ ಸ್ಫೂರ್ತಿದಾಯಕ ಮಾತುಗಳು. ಇಷ್ಟೆಲ್ಲ ಖರ್ಚು ಮಾಡಿ ಬೆಳೆಸಿದ ಪೈರನ್ನು ಕಟಾವು ಮಾಡದೆ ಬಿಟ್ಟಿದ್ದನ್ನು ಬೇರೆಯವರಾದರೆ ಉಗಿದು ಬೈಯುತ್ತಿದ್ದರು. ಆದರೆ ಸಾಲ್ದಾನ ಜೋಸೆಫ್ ತನ್ನ ಭಾವನೆಗಳನ್ನು ಅರಿತುಕೊಂಡಿದ್ದರು. ನೀನೊಬ್ಬ ಪರಿಪೂರ್ಣ ರೈತನಾಗುತ್ತಿದ್ದಿಯ ಎಂದು ಹುರಿದುಂಬಿಸಿದ್ದರು. ನನ್ನ ಪ್ರತಿ ಹೆಜ್ಜೆಗೂ ಬೆನ್ನುತಟ್ಟುತ್ತಿದ್ದರು. 'ಇವಾಗ ತಪ್ ಮಾಡ್ದೆ ಇನ್ಯಾವಾಗ ಮಾಡ್ತೀಯೋ ಅಣ್ಣ…' ಎಂದು ಸರಳವಾಗಿ ಜೀವನಪಾಠವನ್ನು ಹೇಳುತ್ತಿದ್ದರು. ಲೋಕೇಶ ಬಹಳ ಯೋಚಿಸತೊಡಗಿದ. ಅದೆಷ್ಟೋ ಹೊತ್ತಿನ ನಂತರ ಏನೋ ಮಹತ್ತರವಾದದನ್ನು ತೀರ್ಮಾನಿಸಿದಂತೆ ಎದ್ದು ರೂಮಿನೆಡೆಗೆ ಹೆಜ್ಜೆಹಾಕತೊಡಗಿದ. ಕೂಡಲೇ ಸರ್ರನೆ ತನ್ನ ಹಿಂಬದಿಗೆ ಏನೋ ಜಾರಿದಂತೆನಿಸಿ ತಿರುಗಿ ನೋಡಿದ. ಏನೂ ಕಾಣಲಿಲ್ಲ. ತುಸು ದೂರ ಬೆಟ್ಟದ ಬುಡಕ್ಕೆ ಹೋಗಿ ನೋಡುತ್ತಾನೆ ಮಂಡಿಯೆತ್ತರಕ್ಕೆ ಗುಡ್ಡದ ಮಣ್ಣು ಕುಸಿದು ಮೈಯ ಚರ್ಮವನ್ನು ಸುಲಿದಂತೆ ಕೆಂಪಾಗಿ ಕಾಣುತ್ತಿತ್ತು. ಯಾವುದೊ ಪ್ರಾಣಿಯೊಂದು ಗುಡ್ಡದ ಮೇಲಿನಿಂದ ಜಾರಿರಬೇಕೆಂದುಕೊಂಡು ಸುಮ್ಮನಾಗಿ ಅಲ್ಲಿಂದ ನೆಡೆದ..



****

ದಾರಿಯಲ್ಲಿ ಸಿಗುತ್ತಿದ್ದ ಪ್ರತಿಯೊಂದು ದೇವಾಲಯಗಳಲ್ಲೂ ಬಸ್ಸನ್ನು ನಿಲ್ಲಿಸಿ , ಇಳಿದು , ಅಲ್ಲಿರುವ ಅರ್ಚಕರನ್ನೋ, ದೇವಾಲಯದ ಆಡಳಿತ ಮಂಡಳಿಯ ಸದಸ್ಯರನ್ನೂ ವಿಚಾರಿಸಿ ಕೊನೆಗೆ ಎಲ್ಲಿಯೂ ಅಪ್ಪ ಗೋಚರಿಸದಿದ್ದಾಗ ತಾನೇ ಆ ದೇವಾಲಯದ ಸುತ್ತ ಮುತ್ತ ಹಲವಾರು ದೂರ ನೆಡೆದು ಪಾಳುಬಿದ್ದಿರುವ ಗುಡಿಗೋಪುರಗಳನ್ನು ನೋಡುತ್ತಾ ಪುನಃ ಮತ್ತೊಂದು ಬಸ್ಸನ್ನು ಏರಿ ಮುನ್ನಡೆಯತೊಡಗಿದ ಆದಿಶೇಷ. ಅಪ್ಪ ಮನೆಗೆ ಬಾರದೆ ಅದಾಗಲೇ ತಿಂಗಳುಗಳು ಕಳೆದಿವೆ. ಮನೆ ಈಗ ಶಾಂತವಾಗಿದ್ದರೂ ಅಮ್ಮನ ಮನಸ್ಸು ಮಾತ್ರ ಘಾಸಿಗೊಂಡಿದೆ. ಪ್ರತಿದಿನ ಆಕೆಯ ಆಕ್ರಂದನವನ್ನು ತಾಳಲಾರದೆ ಕೊನೆಗೆ ಯಾರೋ ಅಪ್ಪ ಹೀಗೆ ಮರೆಯಾಗುವ ಮೊದಲು ದೂರದ ತಮಿಳುನಾಡಿನ ತಂಜಾವೂರಿನ ದೇವಾಲಯದ ಬಗ್ಗೆ ಹೇಳುತ್ತಿದ್ದರು, ಎಂದಿಗೂ ಹೋಗದ ಆ ದೇವಾಲಯದ ವರ್ಣನೆಯನ್ನು ಕಣ್ಣಿಗೆ ಕಟ್ಟುವಂತೆ ಕೆಲವೊಮ್ಮೆ ವರ್ಣಿಸುತ್ತಿದ್ದರು ಎಂಬುದನ್ನು ಕೇಳಿ ಕೊನೆಗೆ ತಾನೇ ಅಲ್ಲಿಗೆ ಹೊಗುವುದೆಂದು ತೀರ್ಮಾನಿಸಿದ. ಹೀಗೆ ದೂರದ ತಾಂಜಾವೂರಿನ ಹಾದಿಯಲ್ಲಿ ಹೋಗುವಾಗ ಸಿಗುತ್ತಿದ್ದ ಇತರೆ ದೇವಾಲಯಗಳಲ್ಲೂ ಒಮ್ಮೆ ನೋಡಿ ಅವುಗಳಿಗೂ ಹೋಗಬೇಕೆಂದುಕೊಳ್ಳುತ್ತಾನೆ. ಒಂದು ಪಕ್ಷ ಅಪ್ಪ ಮೊಬೈಲನ್ನು ತನ್ನೊಟ್ಟಿಗೆ ಕೊಂಡೊಯ್ದು ಎಲ್ಲಿಯಾದರೂ ಆನ್ ಮಾಡಿದ್ದರೆ ಅದರ ಮುಖೇನವಾದರೂ ಅವನನ್ನು ಹುಡುಕಬಹುದಿತ್ತು ಎಂದುಕೊಂಡರೆ ಕೆಲದಿನಗಳ ನಂತರ ಅಮ್ಮ ಫೋನು ಮಾಡಿ ಅವರ ಮೊಬೈಲು ಮನೆಯಲ್ಲೇ ಸಿಕ್ಕಿತೆಂದು ಹೇಳುತ್ತಾಳೆ. ಪ್ರತಿ ದಿನ ಫೋನಾಯಿಸಿ ಆಕೆಗೆ ಸಮಾಧಾನ ಪಡಿಸುತ್ತಿದ್ದ. ಇತ್ತಕಡೆ ಲೋಕೇಶ ನೀನು ಎಲ್ಲಿದ್ದರೂ ಸರಿಯೇ ಆದರೆ ಪ್ರತಿ ದಿನ ಬೆಳಗ್ಗೆ ಹಾಗು ಸಂಜೆ ಒಂದೆರೆಡು ಕಿಲೋಮೀಟರ್ಗಳು ಓಡುತ್ತಿರು ಎನ್ನುತ್ತಿದ್ದ. ಆತನ ಮಾತನ್ನು ಕೇಳಿ ಕೂಡಲೇ ಸಿಟ್ಟು ಬರುತ್ತಿದ್ದರೂ ದುಃಖತಪ್ತ ಜೀವನದಲ್ಲಿ ಓಟದ ವೇಗವೇ ಆದಿಯನ್ನು ಎಲ್ಲದರಿಂದ ದೂರವಾಗಿಸುತ್ತಿತು. ಇತ್ತೀಚಿಗೆ ಆತ ಒಡಲು ಶುರುವಿಟ್ಟರೆ ನಿಲ್ಲದ ಯಂತ್ರದಂತೆ ಒಂದೇ ಸಮನೆ ಓಡತೊಡಗುತ್ತಾನೆ. ಆತನಿಗೆ ಒಂದಿನಿತು ಸುಸ್ತಾಗಲಿ, ಸಂಕಟವಾಗಲಿ ಎಂಬುವುದು ಆಗುವುದಿಲ್ಲ. ಯಾರೋ ನಿಲ್ಲಿಸಿ ತಡೆದು ಕೇಳಿದಾಗಲಷ್ಟೇ ಆತನಿಗೆ ಇಹಲೋಕದ ಅರಿವು ಬರುವುದು. ನೀರಿನ ಮುದ್ದೆಯಾಗಿರುತ್ತಿದ್ದ ತನ್ನ ಬಟ್ಟೆಯ ಮೇಲೆ ಗಮನ ಹೋಗುವುದು.

ಹೀಗೆಯೇ ಇನ್ನೆಷ್ಟು ದೇವಾಲಯಗಳನ್ನು ಹುಡುಕುವುದು? ತಾಂಜಾಊರಿನ ದೇವಾಲಯದಲ್ಲೂ ಅಪ್ಪ ಸಿಗದಿದ್ದರೆ ಏನು ಮಾಡುವುದು, ನಂತರ ಎಲ್ಲಿಗೆ ಹೋಗುವುದು ಎಂದು ಆತನಿಗೆ ತಿಳಿಯಲಿಲ್ಲ. ಬಸ್ಸು ವೇಗವಾಗಿ ಚಲಿಸುತ್ತಲಿತ್ತು. ಅದೆಷ್ಟೇ ಗುಂಡಿ ತಗ್ಗುಗಳು ಬಂದರೂ ವೇಗ ಮಾತ್ರ ಕಡಿಮೆಯಾಗುತ್ತಿರಲಿಲ್ಲ. ಹೊರಗಿನಿಂದ ಬೀಸುತ್ತಿದ್ದ ಬಿಸಿಗಾಳಿ ಒಂದು ಬಗೆಯ ಸೋಲನ್ನು ಮನದೊಳಗೆ ಮೂಡಿಸುತ್ತಿದ್ದರೆ ಕಣ್ಣುಗಳಿಗೆ ಎಲ್ಲಿಲ್ಲದ ನಿದ್ರೆಯ ಚಾಳಿ.

ಖುಷಿಯ ಫೋನಾದರೂ ಬರಬಾರದೇ? ಆಕೆಯೊಟ್ಟಿಗೆ ಮಾತನಾಡಿ ಒಂದಷ್ಟು ಮನಸ್ಸನ್ನು ಹಗುರಾಗಿಸಿಕೊಳ್ಳುವ ಕನಸೂ ಸಹ ಈಗ ಕಮರಿಹೋಗಿದೆ. ಆಕೆಯನ್ನು ನೆನೆದರೇ ತನ್ನ ಮೇಲೆಯೇ ಎಲ್ಲಿಲ್ಲದ ಜಿಗುಪ್ಸೆ ಮೂಡುತ್ತದೆ. ಆಕೆಯನ್ನು ಅಷ್ಟೊಂದು ಹತ್ತಿರವಾಗಿಸಿಕೊಂಡೆನೇ ಅಥವಾ ಆಕೆಯೇ ನನ್ನ ಇಷ್ಟು ಸನಿಹಕ್ಕೆ ಬಂದು ಕೂತಳೆ? ಅದೇನೇ ಇರಲಿ. ಈ ಸಮಯದಲ್ಲಿ ಯಾರಾದರೊಬ್ಬರು ನನ್ನನ್ನು ಕೇಳುವ , ಅರಿಯುವ ವ್ಯಕ್ತಿ ಬೇಡವೇ ? 'ಏ ಆದಿ , ಏನಾಯಿತೋ. ಹೇಳ್ತೀಯೋ ಇಲ್ವಾ ಇವಾಗ..' ಎಂದು ಕೇಳಿದ್ದರೂ ಸಾಕಾಗಿತ್ತು. ಕೂಡಲೇ ಒಂದಿಷ್ಟು ಅತ್ತು ಮನಸ್ಸು ಹಗುರು ಮಾಡಿಕೊಳ್ಳಬಹುದಿತ್ತು.

ಖುಷಿಯ ಫೋನೇಕೆ ಬರಬಾರದು ಎಂದು ತನ್ನ ಜೇಬಿನಲ್ಲಿದ್ದ ಮೊಬೈಲನ್ನು ಹೊರಗೆಳೆದು ನೋಡತೊಡಗುತ್ತಾನೆ. ಕಾಕತಾಳೀಯವೆಂಬಂತೆ ಮೊಬೈಲಿನ ಆ ಸ್ಕ್ರೀನನ್ನು ನೋಡುತ್ತಿರುವಾಗಲೇ ಟನ್ ಎಂಬ ಆಕೆಯ 'Hi..' ಮೆಸೇಜು ಬರುತ್ತದೆ. ಆಶ್ಚರ್ಯವಾದರೂ ಕಾದ ಪಾತ್ರೆಯ ಮೇಲಿಟ್ಟ ಮಂಜುಗೆಡ್ಡೆಯಂತೆ ಆದಿಯ ಕಣ್ಣುಗಳು ಹನಿಗೂಡಿದವು. ಉತ್ತರವಾಗಿ ಇವನು ಹೇಗಿದ್ದೀಯ ಎಂದು ಕೇಳಿ ಎಲ್ಲವನ್ನು ಮರೆತಿರುವಂತೆ ಮಾತನಾಡತೊಡಗಿದ. ಬರಡುಗಟ್ಟಿದ ಭೂಮಿಗೆ ಎಳೆಯ ಮಳೆಯ ಮೋಡಗಳು ಕಂಡತಹ ಅನುಭವ. ಏನೋ ಒಂದು ಬಗೆಯ ಅವರ್ಣೀಯ ನೆಮ್ಮದಿ ಆಕೆಯ ಮೆಸ್ಸೇಜುಗಳಲ್ಲಿ. ಆದಿ ತನ್ನ ಅಪ್ಪ ಮರೆಯಾದದನ್ನಾಗಲಿ, ತಾನು ಆತನನ್ನು ಅರಸುತ್ತ ತಮಿಳುನಾಡಿಗೆ ಹೋಗುತ್ತಿರುವುದನ್ನಾಗಲಿ ಹೇಳಲಿಲ್ಲ. ಆಕೆ ಏನೋ ಹೇಳಲು ತಡವರಿಸುತ್ತಿದ್ದಂತೆ ಕಂಡಿತು. ದೀಪಾವಳಿಗೆ ಹಬ್ಬಕ್ಕೆ ಬಂದಾಗ ಸಿಗಲಿಲ್ಲವೇಕೆಂದು ಕೇಳಿದರೂ ಆಕೆ ಮರುತ್ತವರಾಗಿ ಏನನ್ನೂ ಹೇಳಲಿಲ್ಲ. ಆದರೂ ಏನೋ ಒಂದು ಬಗೆಯ ಹುಮ್ಮಸ್ಸು ಆತನಲ್ಲಿ ಜಾಗೃತಗೊಂಡಿತು. ಈಗಲಾದರೂ ಅಪ್ಪ ಸಿಕ್ಕೇ ಸಿಕ್ಕುವನೆಂದು ಬಿಸಿಗಾಳಿಯ ಸುಖಾನುಭವವನ್ನು ಅನುಭವಿಸುತ್ತಾ ಸಾಗಿದನು.

**

ಹೆಸರಿಗೆ ತಕ್ಕ ಬೃಹತ್ ಆಕೃತಿಯನ್ನು ಹೊಂದಿರುವ ಬೃಹದೇಶ್ವರ ದೇವಾಲಯನ್ನು ನೋಡಿದವನ ಎದೆ ಒಮ್ಮೆಗೆ ಹುಬ್ಬಿಕೊಳ್ಳುವುದಂತೂ ಸುಳ್ಳಲ್ಲ. ಎಲ್ಲೂ ಕಂಡಿರದಷ್ಟು ಎತ್ತರದ ಆ ಶಿವಲಿಂಗವೇನು , ಭೂಮಿಯನ್ನೇ ತನ್ನ ಭಾರದಿಂದ ಅದುಮಿ ಕೂತಿರುವಂತೆ ಕಾಣುವ ಆ ವಿಶಾಲ ನಂದಿಯೇನು, ಆಗಸಕ್ಕೆ ಚುಂಬಿಸುತ್ತಿರುವಂತೆ ಮೇಲೆದ್ದಿರುವ ಗ್ರಾನೈಟ್ ಶಿಲೆಗಳ ದೇವಾಲಯದ ಆ ವಿಮಾನವೇನು, ಅದರ ಮೇಲಿರುವ ನೂರಾರು ಕೆಜಿಯ ಆ ಬಂಡೆಯ ಚಂಡೇನು, ಅದಕ್ಕಿರುವ ಸಾವಿರಾರು ವರ್ಷಗಳ ಇತಿಹಾಸದ ಮೆರುಗೇನು… ಹುಲುಮಾನವನಿಗೆ ಇಂತಹ ವಿಸ್ಮಯವನ್ನು ಕೆತ್ತಲು ಸಾಧ್ಯವೇ ಎಂಬ ಸಂಶಯ ಮೂಡತೊಡಗಿತು ಆದಿಯ ಮನದೊಳಗೆ. ಸಂಜೆಯ ಕೆಂದಾವರೆಯ ಆಗಸದ ಕಡೆಗೆ ಹಕ್ಕಿಗಳು ಒಂದರಿದೊಂದು ಹಾರಿ ಮರೆಯಾಗುತ್ತಿದ್ದವು. ದೇವಾಲಯದ ಘಂಟೆಯ ಸದ್ದು ಅಂತರಂಗದ ಸುಪ್ತ ಮನಸ್ಸನ್ನು ಜಾಗೃತಗೊಳಿಸುವಂತೆ ಮೂಡತೊಡಗಿತು.

ಅಪ್ಪ ಇಂತಹ ಮನೋಹರ ದೇವಾಲಯವನ್ನು ಕಲ್ಪನೆ ಮಾಡಿಕೊಂಡಿರುವುದಾದರೂ ಹೇಗೆ? ಎಲ್ಲಿಯಾದರೂ ಓದಿರಬಹುದೇ ? ಯಾರೋ ಹೇಳಿದ್ದನ್ನು ಕೇಳಿರಬಹುದೇ? ಅಲ್ಲಿರುವ ಪ್ರತಿಯೊಂದು ಚಹರೆಯಲ್ಲೂ ಆದಿ ಅಪ್ಪನನ್ನು ಹುಡುಕತೊಡಗಿದ. ಅವರಿವರನ್ನು ವಿಚಾರಿಸಿ ಕೊನೆಗೆ ಎಲ್ಲಿಯೂ ಅವರ ಸುಳಿವು ಸಿಗದೆ ಸುಮ್ಮನಾದ. ದೇವಾಲಯದ ಪ್ರಾಂಗಣದಲ್ಲೇ ಕಲ್ಲುಗಂಬವೊಂದಕ್ಕೆ ತಲೆಯೂರಿಕೊಂಡು ಕೂತ. ಅಪ್ಪ ಬಂದರೂ ಇಂತಹ ದೇವಾಯಲಕ್ಕೇ ಬರಬೇಕು ಎಂದೆಳತೊಡಗಿತು ಆತನ ಮನಸ್ಸು. ಕೂಡಲೇ ಹಿಂದಿನಿಂದ ಯಾರೋ ಬಂದು ಬೆನ್ನಿನ ಮೇಲೆ ಕೈಯಾಕಿದರು. ಆದಿಗೆ ಯಾರೋ ನನ್ನವರೇ ಬಂದಿರುವರು ಎಂಬಂತೆ ಖಾತ್ರಿಯಾಯಿತು . ಖುಷಿಯಿಂದ ಆತ ಹಿಂದಕ್ಕೆ ತಿರುಗಿ ನೋಡುತ್ತಾನೆ, ಹರಿದು ಕೊಳಕುಗೊಂಡ ಬಟ್ಟೆಗಳನ್ನು ತೊಟ್ಟು , ಉದ್ದುದ್ದವಾದ ಗಡ್ಡವನ್ನು ಬಿಟ್ಟು , ಹಳದಿ ಮೆತ್ತಿದಂತಹ ಹಲ್ಲುಗಳನ್ನು ಬಿಡುತ್ತಾ ಏನೋ ಹೇಳಲು ತಡವರಿಸುವಂತೆ ವ್ಯಕ್ತಿಯೊಬ್ಬ ನಿಂತಿದ್ದಾನೆ. ಆತನ ಆ ವಿಚಿತ್ರ ಹಾವಭಾವ ಹಾಗು ವೇಶಭೂಷಣಗಳನ್ನು ಕಂಡು ಆದಿಗೆ ಏನನ್ನು ಹೇಳಬೇಕೆಂದು ತಿಳಿಯಲಿಲ್ಲ. ಕೆಲವೊತ್ತು ಆದಿಯನ್ನೇ ಧಿಟ್ಟಿಸಿ ನೋಡಿದ ಆತ ಕೂಡಲೇ ಆತನನ್ನು ಅಲ್ಲಿಂದ ಎಬ್ಬಿಸಿ ಉತ್ತರ ದಿಕ್ಕಿನೆಡೆಗೆ ಹೋಗುವಂತೆ ಕೈಯಲ್ಲಿ ಸನ್ನೆಯನ್ನು ಮಾಡತೊಡಗಿದ. ಆತನ ವೇಷಭೂಷಣಗಳನ್ನು ಕಂಡು ದಿಗ್ಬ್ರಾಂತನಾದ ಆದಿಗೆ ಕೂಡಲೇ ಏನೇಳಬೇಕೆಂದು ತಿಳಿಯದಿದ್ದರೂ ಆತ ಏನೋ ಸೂಚನೆಯನ್ನು ಕೊಡುವಂತೆ ಭಾಸವಾಯಿತು. ಆತ ಪುನಃ ಉತ್ತರದೆಡೆಗೆ ಬೊಟ್ಟುಮಾಡಿ ತೋರಿಸುತ್ತಾ ತಕ್ಷಣವೇ ಹೊರಡಬೇಕೆನ್ನುವಂತೆ ಆದಿಯನ್ನು ಹಿಂದಿನಿಂದ ತಳ್ಳಿದ. ಆದಿಗೆ ಅಲ್ಲಿ ನೆಡೆಯುತ್ತಿರುವುದೇನು ಎಂಬುದು ಅರಿವಾಗಲಿಲ್ಲ. 
ಕೂಡಲೇ ಹಿಂದಿನಿಂದ ಓಡಿಬಂದ ವ್ಯಕ್ತಿಗಳಿಬ್ಬರು ತಮಿಳಿನಲ್ಲಿ ತುಚ್ಛಪದಗಳಿಂದ ಆತನನ್ನು ಬೈಯುತ್ತಾ ಎಳೆದು ದೇವಾಲಯದ ಹೊರಗಡೆಗೆ ದಬ್ಬಿದರು. ಆದಿ ದಿಗ್ಬ್ರಾಂತನಾಗಿ ಆತನನ್ನೇ ನೋಡುತ್ತಾ ಸುಮ್ಮನೆ ನಿಂತುಬಿಟ್ಟ. ಅದೆಷ್ಟೋ ಹೊತ್ತಿನವರೆಗೂ ಹಾಗೆಯೇ ನಿಂತಿದ್ದ ಆತನಿಗೆ ಕೂಡಲೇ ಏನೋ ಹೊಳೆದಂತಾಗಿ ಆ ವ್ಯಕ್ತಿ ಹೊರಬಂದ ಹಾದಿಯಲ್ಲೆ ಓಡಿಬಂದು ಆತನನ್ನು ಅರಸತೊಡಗಿದ. ಆತ ಎಲ್ಲಿಯೂ ಕಾಣಲಿಲ್ಲ. ಅದೆಷ್ಟೋ ಹೊತ್ತಿನವರೆಗೂ ಅರಸಿ ಕೊನೆಗೆ ಅಲ್ಲಿದ್ದ ಕೆಲವರನ್ನು ವಿಚಾರಿಸಿದರೂ ಆತನ ಬಗೆಗೆ ಸುಳಿವು ಸಿಗಲಿಲ್ಲ.

ಏನೂ ಅರಿಯದವನಾದ ಆದಿಗೆ ಏಕೋ ಓಡುವ ಮನಸ್ಸಾಯಿತು. ಕೂಡಲೇ ಓಡತೊಡಗಿದ. ದೇವಾಲಯದಿಂದ ತುಸು ದೂರ ಚಲಿಸಿ ಪ್ರದಕ್ಷಿಣೆ ಹಾಕುವಂತೆ ಬೃಹತ್ ವೃತ್ತದ ಪರಿಧಿಯಲ್ಲಿ ದೇವಾಲಯವನ್ನು ಓಡುತ್ತಲೇ ಸುತ್ತತೊಡಗಿದ. ಅಪ್ಪನನ್ನು ಅರಸುತ್ತಾ ಆತನ ಮೇಲೆ ಮೂಡುತ್ತಿರುವ ಕಾಳಜಿಗೂ ಖುಷಿಯನ್ನು ನೆನೆದು ಮೂಡುವ ಪ್ರೀತಿಗೂ ಮನಸ್ಸು ತುಲನೆ ಮಾಡತೊಡಗಿತು. ತುಲನೆ ಹೆಚ್ಚಾದಂತೆ ಓಟ ಜೋರಾಯಿತು. ಉತ್ತರದಿಂದ ಬೀಸಿದ ಸಂಜೆಯ ತಂಗಾಳಿ ಒಮ್ಮೆಲೇ ಆದಿಯ ಮುಖವನ್ನು ಬಡಿಯಿತು. ರಾಢಿಯಾಗಿದ್ದ ಮನಸ್ಸು ಒಮ್ಮೆಲೇ ಶಾಂತವಾಯಿತು. ಮರುದಿನ ಬೆಳಗ್ಗೆ ಎದ್ದವನೇ ಹತ್ತಿರದ ಕಡಲ ತೀರಕ್ಕೆ ಹೋಗಿ ಪುನಃ ಎಂಟತ್ತು ಕಿಲೋಮೀಟರ್ ಗಳಷ್ಟು ಓಡಿದ. ಅಪ್ಪ ಸಿಗುವುದಿಲ್ಲವೆಂಬ ಖಾತ್ರಿ ರಾತ್ರಿಯಿಡಿ ಯೋಚಿಸಿದ ಮನಸ್ಸಿಗೆ ಅದಾಗಲೇ ಆಗಿದ್ದರಿಂದ ರೂಮಿಗೆ ವಾಪಸ್ಸು ಬಂದವನೇ ಊರಿನ ರೈಲನ್ನು ಹಿಡಿದ.



****

'ಲೋಕೇಶ್ , ಕಮ್ ಆನ್ !! ಒಂದ್ ನಿಮಿಷ ನನ್ನೊಟ್ಟಿಗೆ ನಿಂತು ಮಾತಡೋಕ್ಕೂ ಪುರ್ಸತ್ತ್ ಇಲ್ವಾ ನಿಮ್ಗೆ?' ಶಶಿ ಕೊನೆಯ ಬಾರಿ ಎಂಬಂತೆ ಜೋರಾಗಿ ಅರಚಿದಳು. ಸಲ್ಡಾನ ಜೋಸೆಫ್ರ ಸಾವಿನ ನಂತರ ಕಾಲೇಜಿಗೆ ಹೋಗದೇ ಕೃಷಿಯಲ್ಲಿ ಇನ್ನೂ ಹೆಚ್ಚಾಗಿ ತೊಡಗಿ ಅವರಂತೆಯೇ ಎತ್ತರಕ್ಕೆ ಬೆಳೆದು ಸಮಾಜದಲ್ಲಿ ಹೆಸರನ್ನು ಗಳಿಸಿಕೊಳ್ಳಬೇಕೆಂದುಕೊಂಡಿದ್ದಾನೆ ಲೋಕೇಶ. ಅವರ ಹೆಸರನ್ನು ಉಳಿಸಬೇಕು. ಅವರ ಸಾವಿನ ನಂತರ ಅಕ್ಷರ ಸಹ ನೆಲಕಚ್ಚಿರುವ ಕಂಪನಿಯ ಷೇರುಗಳನ್ನು ಆದಷ್ಟು ಪ್ರಮಾಣದಲ್ಲಿ ಖರೀದಿಸಿ ಕಂಪೆನಿಯನ್ನೂ ಉಳಿಸಿಕೊಳ್ಳಬೇಕೆಂದುಕೊಂಡಿದ್ದಾನೆ. ಅದರಂತೆ ತಾನು ಶುಂಠಿ ಹಾಕಿದ್ದ ಪಕ್ಕಕ್ಕೆ ಇದ್ದ ಅವರ ಇನ್ನೂ ಹಲವು ಎಕರೆ ಜಮೀನನ್ನು ಒಂದು ವರ್ಷಕ್ಕೆ ಖರೀದಿಸಿ ಅದರಲ್ಲಿ ಈ ಬಾರಿ ಭತ್ತವನ್ನು ಬೆಳೆಯಲು ಯೋಚಿಸಿದ್ದಾನೆ. ಅದರಂತೆಯೇ ಎರಡು ಜೋಡೆತ್ತುಗಳನ್ನು ತಂದು ಇಂದು ಖುದ್ದಾಗಿಯೇ ಉಳುಮೆಯನ್ನು ಮಾಡಲು ತೊಡಗಿದ್ದಾನೆ. ಅಜ್ಜಿಯೂ ಸಹ ಅವನ ಬೆಂಬಲಕ್ಕೆ ನಿಂತವಳಂತೆ ಉಳುಮೆಯ ಬಗೆಗೆ ಕೆಲವು ವಿಷಯಗಳನ್ನು ಹೇಳಿಕೊಡುತ್ತಿದ್ದಾಳೆ...

Continues....

No comments:

Post a Comment