Tuesday, January 1, 2019

ಹಸಿರ ಪಯಣ …

ಶಾಂತ ಸಂಜೆಯ ತಿಳಿತಂಪಿನ ಹಿತಕ್ಕೆ ಭಂಗ ತರುವಂತೆ ಬಿಸಿಯಾದ ಗಾಳಿ ಒಮ್ಮೆಲೇ ಬೀಸತೊಡಗಿತ್ತು. ಗಾಳಿಯ ಬೀಸುವಿಕೆಯ ದಿಕ್ಕನ್ನು ಪರಿಗಣಿಸದೆಯೆ ಹಕ್ಕಿಗಳ ಗುಂಪು ತಮ್ಮ ತಮ್ಮ ಗೂಡುಗಳೆಡೆಗೆ ಮುಖಮಾಡಿ ಹಾರತೊಡಗಿದ್ದವು. ಕಪ್ಪು ಬಣ್ಣದ ಟ್ರ್ಯಾಕ್ ಪ್ಯಾಂಟ್, ಅದೇ ಬಣ್ಣದ ಟಿ ಶರ್ಟ್ ಹಾಗು ಅತಿ ಧುಬಾರಿಯಾದೊಂದು ಸ್ಪೋರ್ಟ್ಸ್ ಶೋವನ್ನು ಧರಿಸಿ ಮೋಹನ ಜಾಗಿಂಗ್ ಗೆ ಇಳಿದಿದ್ದ. ವಾಹನಗಳಿಗೆ ಪಾರ್ಕ್ ಮಾಡಲೂ ಸರಿಯಾದ ಸ್ಥಳ ಸಿಗದಿರುವ ಸಿಟಿಯಲ್ಲಿ ಆಟೋಟ, ವ್ಯಾಯಾಮಗಳಿಗೆ ಜಾಗವನ್ನು ಕೊಡುವವರ್ಯಾರು? ವಾಹನಗಳೊಟ್ಟಿಗೆಯೇ ರಸ್ತೆಯ ಪಾದಚಾರಿ ಮಾರ್ಗದ ಮೇಲೆಯೇ ಈತನ ಪ್ರತಿದಿನದ ಓಟ. ಹೃದಯ ಸಿಡಿದು ಹೊರಬರುವವರೆಗೂ ಓಡುವುದ ನಿಲ್ಲಿಸಲಾರೆ ಎಂಬುವಂತಿರುತ್ತದೆ ಈತನ ಓಟದ ಧಾಟಿ. ಸುಮಾರು ಮೂರ್ನಾಲ್ಕು ಕಿಲೋಮೀಟರ್ನಷ್ಟು ಓಡಿದ ನಂತರ ಕಾಫಿ ಶಾಪೊಂದರ ಮುಂದೆ ಕೂತು ಕೊಂಚ ದಣಿವಾರಿಸಿಕೊಳ್ಳುತ್ತಾನೆ. ಅಲ್ಲೂ ತನ್ನ ಮೊಬೈಲನ್ನು ಹೊರಗೆಳೆದು ಆಫೀಸಿನ ಇಮೇಲ್ ಗಳನ್ನು ನೋಡತೊಡಗುತ್ತಾನೆ. ಆಗಷ್ಟೇ ಡವಡವ ಬಡಿದು ಶಾಂತವಾಗಿದ್ದ ಹೃದಯ, ಕ್ಲೈಂಟ್ ಒಬ್ಬನ ಇಮೇಲ್ ಅನ್ನು ಕಂಡು ಪುನಃ ಬಡಿಯಹತ್ತಿತು. ಇನ್ನೊಂದು ಸುತ್ತು ಓಡಲು ಬಾಕಿ ಇದ್ದರೂ ತನ್ನ ರೂಮಿನೆಡೆ ಧಾಪುಗಾಲು ಹಾಕುತ್ತಾನೆ ಮೋಹನ. ರೂಮಿಗೆ ಬಂದವನೆ ಬೆವರಿನ ದಸೆಯಿಂದ ಅಂಟು-ಅಂಟಾಗಿದ್ದ ಬಟ್ಟೆಯನ್ನೂ ಲೆಕ್ಕಿಸದೆ ತನ್ನ ಆಫೀಸಿನ ಲ್ಯಾಪ್ಟಾಪ್ ಅನ್ನು ಹೊರಗೆಳೆದು ಕೆಲಸದಲ್ಲಿ ನಿರತನಾಗುತ್ತಾನೆ. ನೆಟ್ಟ ದೃಷ್ಟಿಯನ್ನು ಒಂತಿಷ್ಟೂ ಕದಲಿಸದೆ, ಕೀಲಿಮಣೆಗಳ ಮೇಲೆ ಸುಮಾರು ಎರಡು ಗಂಟೆಗಳ ಕಾಲ ಟಕಟಕ ಕುಟ್ಟಿದ ನಂತರ ಗಡಿಯಾರವನ್ನು ನೋಡುತ್ತಾನೆ, ಸಮಯ ಅದಾಗಲೇ ರಾತ್ರಿ ಹನ್ನೊಂದು! ಕೂಡಲೇ ಎದ್ದು ಪಕ್ಕದ ಹೋಟೆಲಿನಿಂದ ಊಟವೊಂದಕ್ಕೆ ಆರ್ಡರ್ ಕೊಟ್ಟು, ಸ್ನಾನಾದಿಗಳನ್ನು ಮುಗಿಸಿ ಹೊರಬಂದು ಊಟವನ್ನು ಮುಗಿಸುವಷ್ಟರಲ್ಲಿ ಮಧ್ಯರಾತ್ರಿ 12! ಒಂತಿಷ್ಟು ಸುದ್ದಿ ಸಮಾಚಾರಗಳನ್ನು ನೋಡಲು ಟಿವಿಯನ್ನು ಆನ್ ಮಾಡಿದ ಕೂಡಲೇ ಕಣ್ಣುಗಳ ರೆಪ್ಪೆಗಳು ಒಂದನ್ನೊಂದು ತಬ್ಬಿಕೊಳ್ಳತೊಡಗುತ್ತವೆ. ಅದೆಷ್ಟೋ ಬಾರಿ ಹೀಗೆಯೇ ಸೋಫಾದ ಮೇಲೆಯೇ ಬೆಳಗಿನವರೆಗೂ ಕೂತೇ ನಿದ್ರಿಸಿರುವುದುಂಟು! ಬೆಳಗೆದ್ದು ಮತ್ತದೇ ಓಟದ ಜೀವನ. ವಾರ, ವಾರಾಂತ್ಯ ಎಂಬ ಯಾವುದೇ ವ್ಯತ್ಯಾಸಗಳಿಲ್ಲದೆ 24X7 ಕಾಲದ ಕೆಲಸ. ಮೊದ ಮೊದಲು ಕಿರಿಕಿರಿಗುಡುತ್ತಿದ್ದ ಮೋಹನ ಕಾಲ ಕಳೆದಂತೆ ಇದೆ ಜೀವನಕ್ಕೆ ಒಗ್ಗಿಕೊಂಡಿದ್ದಾನೆ. ಅದೆಷ್ಟರ ಮಟ್ಟಿಗೆಂದರೆ ಆಗೊಮ್ಮೆ ಈಗೊಮ್ಮೆ ಸಿಗುವ ರಜೆಯ ಸಮಯವನ್ನೂ ಮನೆಯಲ್ಲಿ ಕಳೆಯಲಾಗದೆ ಆಫೀಸಿಗೆ ಬಂದು ಒಬ್ಬನೇ ಕೆಲಸ ಮಾಡುವುದುಂಟು!

ಇಂದು ಟಿವಿಯಲ್ಲಿ ಸುದ್ದಿಯನ್ನು ನೋಡುವಾಗ ನಟನೊಬ್ಬ ಕೃಷಿಕನಾದುದರ ಬಗ್ಗೆ ಕಾರ್ಯಕ್ರಮವೊಂದು ಬರುತ್ತಿರುತ್ತದೆ. ನಿದ್ದೆಗಟ್ಟುತ್ತಿದ್ದ ಕಣ್ಣುಗಳೂ ಒಮ್ಮೆಲೇ ತದೇಕಚಿತ್ತದಿಂದ ಎಂಬಂತೆ ಆ ಸುದ್ದಿಯನ್ನು ನೋಡತೊಡಗುತ್ತವೆ. ವೃತ್ತಿಜೀವನದ ಉತ್ತುಂಗದಲ್ಲಿದ್ದ ಆತ ನಟನೆಯನ್ನು ಬಹುವಾಗಿ ಕಡಿಮೆಗೊಳಿಸಿ ಸಿಟಿಯಿಂದ ತುಸು ದೂರದೊಂದು ಊರಿನಲ್ಲಿ ಜಮೀನನ್ನು ಖರೀದಿಸಿ ಪಕ್ಕಾ ಸಾವಯವ ಕೃಷಿಯನ್ನು ಮಾಡುತ್ತಾ, ಕೊಂಚ ಆನ್ಲೈನ್ ಮಾರುಕಟ್ಟೆಯ ಲಾಭವನ್ನೂ ಬಳಸಿಕೊಂಡು ಬೆಳೆದ ಬೆಳೆಗಳನ್ನು ಮಾರುತ್ತಿರುವ ವಿವರಣೆಯನ್ನು ಎಳೆಎಳೆಯಾಗಿ ಬಿತ್ತರಿಸಲಾಗುತ್ತಿತ್ತು. ಜಮೀನಿನಲ್ಲಿ ನಿಂತು ಕ್ಯಾಮೆರಾದ ಮುಂದೆ ತನ್ನ ಕತೆಯನ್ನು ಹೇಳಿಕೊಳ್ಳುತ್ತಿದ್ದ ಆ ನಟನ ಮುಖದಲ್ಲಿ ನೆಮ್ಮದಿಯ ಛಾಯೆ ಎದ್ದುಕಾಣುತ್ತಿತ್ತು.

ಆ ಪ್ರೋಗ್ರಾಮಿನ ಬಹಳ ದಿನಗಳವರೆಗೂ ಮೋಹನ ಆ ನಟನ ಬಗ್ಗೆ ಹಾಗು ಆತನ ಕೃಷಿಜೀವನದ ಬಗ್ಗೆಯೇ ಯೋಚಿಸತೊಡಗಿದ. ವರ್ಷಕ್ಕೆ ಕೋಟ್ಯಂತರ ರೂಪಾಯಿಗಳ ಜೊತೆಗೆ ಲಕ್ಷಕೊಬ್ಬರಿಗೂ ಸಿಗದ ಸ್ಟಾರ್ಡಮ್ ಅನ್ನು ತಂದುಕೊಡುವ ವೃತ್ತಿಯನ್ನು ಬಿಟ್ಟು ಆತ ಕೃಷಿಕನಾಗಲು ಮನಸ್ಸು ಮಾಡಿದಾದರೂ ಹೇಗೆ? ಜಮೀನಿನಲ್ಲಿ ದಿನವಿಡೀ ದುಡಿದು ದಣಿದರೂ ಆತನ ಮುಖದಲ್ಲಿದ್ದ ಆ ನೆಮ್ಮದಿ ಭರಿತ ಮಂದಹಾಸ ತನ್ನ ಗೆಳೆಯರಲ್ಲಿ, ಸಹೋದ್ಯೋಗಿಗಳಲ್ಲಿ ಅಷ್ಟೇ ಏಕೆ ಇಡೀ ಸಿಟಿಯಲ್ಲೇ ಯಾರೊಬ್ಬರ ಮುಖದಲ್ಲೂ ಆತ ಕಂಡಿರುವುದಿಲ್ಲ! ಅಂತಹ ಏನನ್ನು ಆ ಜಮೀನಿನಲ್ಲಿ ಆತ ಪಡೆದಿರಬಹುದು? ಕೃಷಿ ಅರ್ಧ ಘಂಟೆಯ ಆ ಪ್ರೋಗ್ರಾಮಿನಲ್ಲಿ ತೋರಿಸಿದಷ್ಟು ಸುಲಭವೆ? ಪ್ರೆಶ್ನೆ ಮೋಹನನ ತಲೆಯನ್ನು ಕೊರೆಯಲಾರಂಭಿಸಿತು.

ಗೊತ್ತುಗುರಿ ಇಲ್ಲದೆಯೇ ಎಂಬಂತೆ ಓಡುತ್ತಿತ್ತು ಮೋಹನನ ಜೀವನ. ಸುಂದರ ಬದುಕಿನ ಒಂತಿಷ್ಟೂ ರಸಾಸ್ವಾಧನೆಯನ್ನೂ ಮಾಡದೆಯೇ ಅರ್ಥಹೀನ ಬದುಕಿನ ಬಂಡಿಯನ್ನು ಸವೆದ ಅದೆಷ್ಟೋ ಮಂದಿಯ ಸಾಲಿನಲ್ಲಿ ನಾನೂ ನಿಲ್ಲುತ್ತೇನೆಯೇ?! ಎಂಬ ಭಯದ ಪ್ರೆಶ್ನೆಯೊಂದು ಆತನನ್ನು ಬಾಧಿಸತೊಡಗಿತು. ಹಾಗಾದರೆ ಏನು ಮಾಡುವುದು? ಎಲ್ಲಕ್ಕೂ ಒಂದು ಅಲ್ಪವಿರಾಮವನ್ನು ಜಡಿದು ತಿಂಗಳುಗಳ ಕಾಲ ಪ್ರಪಂಚಪರಿಹಟನೆ ಮಾಡುವುದೆಂದು ಯೋಚಿಸುತ್ತಾನೆ. ಆದರೆ ತದಾನಂತರ ಮತ್ತದೇ ಖೈದಿಯ ಜೀವನದ ಪಾಡು. ಈ ಸಮಸ್ಯೆಗೆ ಪರಿಹಾರ ಪೂರ್ಣಾವಧಿಯದ್ದಾಗಿರಬೇಕು. ಜೊತೆಗೆ ಬದುಕೂ ಆರ್ಥಮಯವಾಗಿದ್ದಿರಬೇಕು. ಆದರೆ ಬೆಂಬಿಡದ ನೆರಳಿನಂತಾಗಿರುವ ಕೆಲಸದ ಗೀಳು ಅಷ್ಟು ಸುಲಭವಾಗಿ ಜಾರಬಲ್ಲದೇ! ಇಂದು ಸರಿಯೆನಿಸಿದರೂ ನಾಳೆ ಒಂದಲ್ಲ ಒಂದು ಕಾರಣಕ್ಕೆ ನನ್ನ ನಿರ್ಧಾರವನ್ನು ನಾನು ಜರಿದುಕೊಳ್ಳಬಾರದು ಎಂದುಕೊಳ್ಳುತ್ತಾನೆ.

ಆರೋಗ್ಯದ ಬಗ್ಗೆ ಅತ್ಯಧಿಕ ಕಾಳಜಿಯನ್ನು ವಹಿಸುವ ಮೋಹನ ಆಹಾರಾದಿಗಳನ್ನು ಸೇವಿಸುವ ಮುನ್ನ ತುಂಬಾನೇ ಜಾಗರೂಕನಾಗಿರುತ್ತಾನೆ. ಅಂದೊಮ್ಮೆ ದೇಶದಲ್ಲಿ ಕ್ರಿಮಿನಾಶಕಗಳ ಬಗ್ಗೆ ಸರ್ಕಾರಗಳಿಗಿರುವ ಅಸಡ್ಡೆಯ ಬಗ್ಗೆ ಚರ್ಚೆಯಾಗುತ್ತಿದ್ದದ್ದನು ಟಿವಿಯಲ್ಲಿ ನೋಡುತ್ತಾನೆ. ಮುಂದುವರೆದ ಅದೆಷ್ಟೋ ದೇಶಗಳಲ್ಲಿ ಇಂದು ಯಾವುದೇ ರಾಸಾಯನಿಕಗಳಿಲ್ಲದೆ ಶುದ್ಧ ಜೈವಿಕ ಕೃಷಿಯನ್ನು ಅನುಸರಿಸಿ ಮಿಕ್ಕಿ ಉಳಿಯುವಷ್ಟು ಆರೋಗ್ಯಕರ ಆಹಾರವನ್ನು ಬೆಳೆಯುವ ಉದಾಹರಣೆಗಳಿದ್ದರೂ ಜೈವಿಕ ಕೃಷಿಯ ತವರೂರಾದ ನಮ್ಮಲ್ಲೇ ಅದರ ಬಗ್ಗೆ ಆಸಕ್ತಿ ಇಲ್ಲದಿರುವುದು, ಜೊತೆಗೆ ಇಂದಿನ ಬಹುತೇಕ ''ಆಧುನಿಕ' ರೈತರೆಂದೆನಿಸಿಕೊಂಡವರು ಕೇವಲ ಹಣದ ಉದ್ದೇಶದ ವಿನಃ ಯಾವುದೇ ಪರಿಸರ ಕಾಳಜಿ ಇಲ್ಲದೆಯೇ ಮಾಡುವ ಕೃಷಿ, ಅಲ್ಲದೆ ಇಂದು ಸಸಿಯಿಂದಿಡಿದು ಪೈರಿನವರೆಗೂ ಬೆಳೆಸುವ ಕೀಟನಾಶಕಗಳು ರೈತರಷ್ಟೇ ಅಲ್ಲದೆ ಗ್ರಾಹಕರ ಆರೋಗ್ಯವನ್ನೂ ಹಾಳುಗೆಡವುತ್ತಿದ್ದರೂ ಸರ್ಕಾರಗಳು ಅಂತಹ ಕೀಟನಾಶಕಗಳನ್ನು ರದ್ದುಪಡಿಸುವ ಬದಲು ಅಂತಹ ಕಂಪನಿಗಳನ್ನು ಬೆಳೆಸಿಕೊಂಡು ಬರುತ್ತಿವೆ ಎಂಬ ವಿಷಯಗಳ ಬಗ್ಗೆ ಗಹನವಾಗಿ ಚರ್ಚೆಯಾಗುತ್ತಿತ್ತು. ಹೀಗೆ ಪರೋಕ್ಷವಾಗಿ ದೇಹವನ್ನು ಸೇರುತ್ತಿರುವ ವಿಷಪೂರಿತ ಆಹಾರವನ್ನು ನಾವು ದಿನನಿತ್ಯ ಸೇವಿಸುತ್ತಿದ್ದೇವೆ ಎಂದು ಕೇಳಿದಾಗ ಮೋಹನನಿಗೆ ತಳಮಳವಾಗತೊಡಗಿತು. ದೇಹಕ್ಕೆ ಸೇರುವ ವಿಷವನ್ನೇ ಗುರುತಿಸಲಾಗದ ಮೇಲೆ ನಾವು ಆಧುನಿಕರೆಂದು ಕರೆಸಿಕೊಂಡರೂ ಏನು ಪ್ರಯೋಜನ? ಬಹುದಿನಗಳಿಂದ ಪಕ್ವಗೊಳ್ಳುತ್ತಿದ್ದ ನಿರ್ಧಾರ ಇಂದು ದೃಢವಾಯಿತು. ಏನಾದರಾಗಲಿ ಜಮೀನೊಂದನ್ನು ಖರೀದಿಸಿ ನನ್ನ ಆಹಾರವನ್ನು ನಾನೇ ಬೆಳೆದುಕೊಳ್ಳಬೇಕು. ಉತ್ಕೃಷ್ಟ ಮಟ್ಟದ ಜೈವಿಕ ಕೃಷಿಯನ್ನು ಅನುಸರಿಸಿ ಇತರರಿಗೆ ಮಾದರಿಯಾಗಬೇಕು. ಕೂಡಲೇ ಪೋಷಕರಿಗೆ ಫೋನಾಯಿಸಿ ಊರಿನ ಬಳಿ ಯಾವುದಾದರೊಂದು ಸಾಧಾರಣ ಬೆಲೆಯ ಜಮೀನನ್ನು ನೋಡಲು ಹೇಳುತ್ತಾನೆ.

ದಾರಿ ಕಷ್ಟಕರವಾಗಿದೆಯೆನಿಸಿದರೂ ನಡೆ ಆತನಿಗೆ ಸ್ಪಷ್ಟವಾಗಿತ್ತು. ಆ ಸ್ಪಷ್ಟತೆಯಲ್ಲಿಯೇ ವರ್ಣಾತೀತವಾದೊಂದು ನೆಮ್ಮದಿ ಮನೆಮಾಡಿತ್ತು.ಮೋಹನ ಕೆಲಸ ಬಿಡುತ್ತಿರುವ ಕಾರಣವನ್ನು ಕೇಳಿ ದಂಗಾದ ಕಂಪನಿಯ ಮಾಲೀಕ ಆತನಿಗೆ ಮನೆಯಿಂದ ಕೂತೆ ಕೆಲಸವನ್ನು ಮಾಡುವಂತೆ ಕೇಳಿಕೊಳ್ಳುತ್ತಾನೆ ಹಾಗು ಆತನ ನೆಡೆಗೆ ಮೆಚ್ಚುಗೆಯನ್ನೂ ಸೂಚಿಸುತ್ತಾನೆ. ನೋಡನೋಡುತ್ತಲೇ ಮೋಹನ ಸಿಟಿಯ ಒತ್ತಡದ ಜೀವನಕ್ಕೆ ಪೂರ್ಣವಿರಾಮವನ್ನು ಜಡಿದು ತನ್ನ ಊರನ್ನು ಸೇರುತ್ತಾನೆ. ಅಮ್ಮನ ಕೈಯಡುಗೆಯ ಊಟ, ಬೇಸಿಗೆಯಲ್ಲೂ ತಂಪು ಗಾಳಿಯನ್ನು ಬೀಸುವ ಪರಿಸರ, ಅಲ್ಲೊಂದು ಇಲ್ಲೊಂದು ಮೂಡುವ ವಾಹನಗಳ ಸದ್ದನ್ನೂ ಹತ್ತಿಕ್ಕುವ ಹಕ್ಕಿಗಳ ಚಿಲಿಪಿಲಿ ನಾದ, ಅಷ್ಟ ದಿಕ್ಕುಗಳಿಗೂ ಹರಡಿರುವ ಹಸಿರ ನೇಸರ ಮನಸ್ಸಿಗೆ ಮಹಾನೆಮ್ಮದಿಯನ್ನು ನೀಡುತ್ತಿದ್ದವು. ಕೆಲದಿನಗಲ್ಲೇ ಮನೆಯಿಂದ ಕೊಂಚದೂರದಲ್ಲಿ ಮೂರೆಕರೆ ಗದ್ದೆಯನ್ನು ಖರೀದಿಮಾಡಿದ. ಜಮೀನು ಖಾಲಿಯಾಗಿದ್ದರಿಂದ ಮೋಹನ ತನಗೆ ಬೇಕೆನಿಸಿದ ಹಾಗೆ ಕೃಷಿಯನ್ನು ಶುರುವಿಟ್ಟುಕೊಳ್ಳಬಹುದೆಂಬ ಲೆಕ್ಕಾಚಾರ.

ನಿಸರ್ಗದ ಸಹಜ ಸುಂದರತೆಯನ್ನು ಸವಿಯಲು ಎಂಬಂತೆ ಮೂಡಣದಲ್ಲಿ ಬೆಳಕು ಮೂಡುವುದರೊಳಗೆ ಎದ್ದು ರೆಡಿಯಾಗಿ, ಯೋಗಾದಿಗಳನ್ನು ಮಾಡಿ, ಕೈಯಲ್ಲಿ ಕಾಫಿಯ ಕಪ್ಪೊಂದನ್ನು ಹಿಡಿದು ಹಕ್ಕಿಗಳ ಇಂಚರ ಹಾಗು ಮುಂಜಾವಿನ ಹಿಂದೂಸ್ತಾನಿ ರಾಗಗಳ ಹಿನ್ನಲೆಯಲ್ಲಿ ಸೂರ್ಯದೇವ ನಿಧಾನವಾಗಿ ವಿಸ್ತರಿಸುವುದನ್ನು ನೋಡುತ್ತಾ ನಿಂತರೆ ಆ ನಯನ ಮನೋಹರ ದೃಶ್ಯದಲ್ಲಿ ಅಕ್ಷರ ಸಹ ನಿಂತ ಕಲ್ಲಾಗಿಬಿಡುತ್ತಾನೆ ಮೋಹನ. ಅದೆಷ್ಟೋ ಹೊತ್ತಿನ ನಂತರ ಅಮ್ಮನ ಕೂಗುವಿಕೆಗೆ ಓಗೊಟ್ಟು, ಕೆಳಗಿಳಿದು ಬಂದು ತಿಂಡಿಯನ್ನು ತಿಂದು, ಆಫೀಸಿನ ಇಮೇಲ್ ಗಳ ಮೇಲೆ ಹಾಗೆಯೇ ಒಮ್ಮೆ ಕಣ್ಣಾಯಿಸಿ, ಗುದ್ದಲಿಯನ್ನಿಡಿದು ಗದ್ದೆಗೆ ಹೊರಟರೆ ವಾಪಸ್ಸು ಬರುತ್ತಿದ್ದದ್ದು ಮದ್ಯಾಹ್ನದ ಊಟಕ್ಕೆ. ಗದ್ದೆಯ ಸುತ್ತಲೂ ಬೇಲಿಯನ್ನು ಹಾಕಿ, ನೆಲವನು ಹಗೆದು 'ಕಾವೇರಿ' ತಳಿಯ ಕಾಫಿ ಗಿಡಗಳನ್ನು ಮತ್ತು ಪಕ್ಕದ ಒಂದೆಕರೆ ಜಮೀನಿನಲ್ಲಿ ಭತ್ತವನ್ನು ಹಾಗು ಮನೆಗೆ ಸಾಕಾಗುವಷ್ಟು ಸೊಪ್ಪು ತರಕಾರಿಗಳನ್ನು ಬೆಳೆಯುವುದಾಗಿಯೂ ಯೋಜನೆಯನ್ನು ಹಾಕಿಕೊಂಡಿರುತ್ತಾನೆ. ಅಷ್ಟರಲ್ಲಾಗಲೇ ಜೈವಿಕ ಕೃಷಿ ಹಾಗು ಅದಕ್ಕೆ ಬಳಸುವ ನೈಸರ್ಗಿಕ ಗೊಬ್ಬರಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದ ಆತ ಗಿಡಗಳನ್ನು ನೆಡುವ ಮೊದಲು ನೆಲವನ್ನು ಪೋಷಕಾಂಶಭರಿತ ನೆಲವನ್ನಾಗಿ ಪರಿವರ್ತಿಸಲು ಯೋಜಿಸಿರುತ್ತಾನೆ. ಇಂದು ಬೆಳಗ್ಗೆ ಜಮೀನಿಗೆ ಬಂದವನೇ ಪಕ್ಕದ ಊರಿನಿಂದ ಬಂದ ಕೆಲಸಗಾರರೊಡಗೂಡಿ ಸಗಣಿ ಹಾಗು ಇತರೆ ನೈಸರ್ಗಿಕ ವಸ್ತುಗಳಿಂದ ಮಾಡಿದ್ದ ಕಾಂಪೋಸ್ಟ್ ಗೊಬ್ಬರವನ್ನು ಜಮೀನಿನ ಪೂರಾ ಚೆಲ್ಲತೊಡಗುತ್ತಾನೆ. ಗೊಬ್ಬರದ ನಾತ ಮೂಗಿಗೆ ದೊಪ್ಪನೆ ಬಡಿಯುತ್ತಿದ್ದರೂ ಮೋಹನ ಅವುಗಳಿಗೆಲ್ಲ ಒಗ್ಗಿಕೊಂಡಿರುವಂತೆ ಕಾಣುತ್ತದೆ. ಒಂದೆರೆಡು ಹದದ ಬೇಸಿಗೆಯ ಮಳೆಯೂ ಬಂದ್ದಿದ್ದರಿಂದ ಮಣ್ಣು ಗೊಬ್ಬರವನ್ನೆಲ್ಲ ಚೆನ್ನಾಗಿ ತನ್ನಲ್ಲಿ ಬೆರೆಸಿಕೊಂಡಿತು.

ಊರ ಮೇಲ್ಮನೆಯ ದೊಡ್ಡೇಗೌಡ ಮೋಹನ ಊರಿಗೆ ವಾಪಸ್ಸಾಗಿನಿಂದಲೂ ಈತನ ಚಲನವಲನಗಳನ್ನೇ ಗಮನಿಸುತ್ತಿರುತ್ತಾನೆ. ಸಣ್ಣವನಿಂದಲೂ ಊರ ಹೊರಗೆಯೇ ಬೆಳೆದ ಮೋಹನನನ್ನು ಅಷ್ಟಾಗಿ ಬಲ್ಲದ ಆತ ಪ್ರತಿಬಾರಿಯೂ ಮಾತನಾಡಲು ಅಂಜಿಕೆ ಪಡುತ್ತಿರುತ್ತಾನೆ. ಊರಿಗೆ ಹಿರಿಕನಾದ ಆತ ಪ್ರತಿದಿನ ಬೆಳಗೆದ್ದು ತನ್ನ ಮನೆಯ ದನಕರುಗಳನ್ನು ಊರಿನ ಗೋಮಾಳಕ್ಕೆ ತಂದು ಬಿಡುವುದು ನಂತರ ಮಧ್ಯಾಹ್ನದವರೆಗೂ ಇತರೆ ರೈತರ ಕಷ್ಟ ಸುಖಗಳನ್ನು ಆಲಿಸುವುದು, ತನ್ನ ಅನುಭವದ ವಿಚಾರಧಾರೆಯನ್ನು ಅವರಲ್ಲಿ ಅಂಚಿಕೊಳ್ಳುವುದು ಮಾಡುತ್ತಿರುತ್ತಾನೆ. ಭಾಗಶಃ ಸಿಟಿಯಲ್ಲೇ ಬೆಳೆದಿದ್ದ ಮೋಹನನ ಕೃಷಿಯಾಸಕ್ತಿಗೆ ಖುಷಿಪಟ್ಟ ದೊಡ್ಡೇಗೌಡ ಇಂದು ಏನಾದರಾಗಲಿ ಆತನನ್ನು ಮಾತನಾಡಿಸಲೇಬೇಕೆಂಬ ಹಠದಿಂದ ಉಳುಮೆ ಮಾಡುತ್ತಿದ್ದ ಗದ್ದೆಯ ಬಳಿ ಬಂದು ನಿಲ್ಲುತ್ತಾನೆ. ಬಿಳಿಯಾದ ಧೋತಿ ಕಪ್ಪು ಕೋಟು ಹಾಗೆ ತಲೆಗೊಂದು ಹತ್ತಿಯ ಟೋಪಿಯನ್ನು ಧರಿಸಿ ಊರುಗೋಲನ್ನು ಕಾಟಾಚಾರಕ್ಕೆ ಎಂಬಂತೆ ಹಿಡಿದುಕೊಂಡಿದ್ದ ದೊಡ್ಡೇಗೌಡನನ್ನು ನೋಡಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಬಳಿಗೆ ಬರುತ್ತಾನೆ ಮೋಹನ.

'ಹ್ಯಾಗಿದ್ದೀಯಪ್ಪ.. ಮೋನಾ.. ನಾ ಯಾರ್ ಗೊತ್ತೈತ' ಎಂದು ದೊಡ್ಡೇಗೌಡರು ಕೇಳಿದಾಗ,

'ಗೊತ್ತು ಗೌಡ್ರೆ.. ನಮ್ಮಪ್ಪ ನಿಮ್ ಬಗ್ಗೆ ಬಹಳಾನೇ ಹೇಳ್ತಿರ್ತಾರೆ.. ರೈತ್ರ ಪರವಾಗಿ ಮಾಡಿದ ಕೆಲ್ಸಕ್ಕೆ ಸರ್ಕಾರ ನಿಮ್ಗೆ ಸನ್ಮಾನವನ್ನು ಮಾಡಿದೆಯಂತೆ' ಎನ್ನುತ್ತಾನೆ.

'ಹೊ, ಅದಾಗಿ ಆಗ್ಲೇ ಏಟ್ ವರ್ಷ ಆತೋ. ಅದೂ ಒಂದ್ ಕಾಲನೇ ಬಿಡು.' ಎಂದು ನಿಟ್ಟುಸಿರು ಬಿಡುತ್ತಾ ಮೋಹನನ ಬಗ್ಗೆ, ಆತನ ಈ ನಿರ್ಧಾರದ ಬಗ್ಗೆ, ಕೃಷಿಗೆ ಅನುಸರಿಸುತ್ತಿರುವ ವಿಧಾನಗಳ ಬಗ್ಗೆ ಅವರು ತಿಳಿಯತೊಡಗುತ್ತಾರೆ. ಎಲ್ಲವನ್ನೂ ಕೂಲಂಕುಷವಾಗಿ ಕೇಳಿ ತಿಳಿದ ಮೇಲೆ ಗೌಡರು ಹೆಮ್ಮೆಯಿಂದ ಮೋಹನನ್ನು ಹೊಗಳುತ್ತಾರೆ. ಈತನ ಆಸಕ್ತಿಯ ಕಿಂಚಿತ್ತಾದರೂ ಊರ ಯುವಕರಿಗೆ ಇದ್ದಿದ್ದರೆ ರಾಶಿ ರಾಶಿಯಷ್ಟು ಜಮೀನು ಹೀಗೆ ಹಾಳುಬಿಳುತ್ತಿರಲಿಲ್ಲ ಅಲ್ಲದೆ ಅವರಿಗೆಲ್ಲ ಇಂದು ಜಮೀನೆಂದರೆ ಕೇವಲ ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯುವುದು ಹಾಗು ಮುಂದಿನ ವರ್ಷ ಆ ಸಾಲ ಮನ್ನವಾಗುವುದನ್ನೇ ಕಾಯುಯುವುದಷ್ಟೇ ಆಗಿದೆ ಎಂದು ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಾರೆ.

ತಾವು ಅಟ್ಟಿಕೊಂಡು ಬಂದಿದ್ದ ದನಗಳೆಲ್ಲ ಅದಾಗಲೇ ದೂರ ಸಾಗಿದ್ದರೂ ಕಪ್ಪು ಬಣ್ಣದ ಮೇಲೆ ಬಿಳಿಯ ಕಲೆಗಳಿದ್ದ ಹಸುವೊಂದು ಮೋಹನ ದಾಟಿ ಬಂದ ಬೇಲಿಗಂಡಿಯ ಬಳಿಗೂಗಿ ನಿಂತಿತ್ತು. ಅತ್ಯಂತ ಶಿಸ್ತಿನ ಬಂಗಿಯಲ್ಲಿ ನಿಂತಿದ್ದ ಅದು ಮೋಹನನ ಗದ್ದೆಯ ಏರಿಯ ಮೇಲಿದ್ದ ಹಸಿರು ಹುಲ್ಲನ್ನೇ ನೋಡುತ್ತಾ ತನ್ನ ಕೊರಳ ಘಂಟೆಯನ್ನು ಅಲುಗಾಡಿಸುತಿತ್ತು. ಹಸುವನ್ನು ನೋಡಿದ ಗೌಡರು 'ನೋಡಪ್ಪ, ನಿಮ್ಮನೆಗೆ ದಿನ ಹಾಲು ಕೊಟ್ಟು ಇವಾಗ ಹುಲ್ಲ್ ಬೇಕು ಅಂತ ನಿಂತಿದೆ' ಎಂದು, ಜಿನ್ನಿ ಎಂದು ಕರೆಯುತ್ತಿದ್ದ ಆ ಹಸುವನ್ನು ತೋರಿಸುತ್ತಾರೆ. ಅದು ಹಾಲಿನ ಸ್ವಾದವೋ ಅಥವಾ ಕಾಫಿಯ ಮಹಿಮೆಯೋ ಒಟ್ಟಿನಲ್ಲಿ ಮುಂಜಾವಿನಲ್ಲೊಂದು ಹಾಲಿನ ಕಾಫಿಯನ್ನು ಬಿಡಲಾರದೇನೋ ಎಂಬಂತಾಗಿದ್ದ ಮೋಹನ ಜಿನ್ನಿಯ ಬಳಿಗೋಗಿ ಆಕೆಯ ತಲೆಯನೊಮ್ಮೆ ಸವರುತ್ತಾನೆ. ತನ್ನ ಕಿವಿ ಚಟ್ಟೆಗಳೆರಡನ್ನೂ ಸರ್ರನೆ ಹಿಂದಕ್ಕೆ ಸರಿಸಿ ಬಾಲವನ್ನು ಅತ್ತಿಂದಿತ್ತಾ ಇತ್ತಿಂದತ್ತ ಅಲುಗಾಡಿಸಿದ ಸೂಚನೆಯನ್ನು ಅರಿತ ಮೋಹನ ಕೂಡಲೇ ಗದ್ದೆಗಿಳಿದು ಎತೇಚ್ಚವಾಗಿ ಬೆಳೆದಿದ್ದ ಎಳೆಯ ಹಸಿರು ಹುಲ್ಲನ್ನು ಒಂದು ಹೊರೆಯಷ್ಟಾಗುವಷ್ಟು ತಂದು ಆಕೆಗೆ ತಿನ್ನಿಸತೊಡಗುತ್ತಾನೆ. ಉಲ್ಲಾಸದಿಂದ ಹುಲ್ಲನ್ನು ತಿಂದ ಜಿನ್ನಿ ಪಕ್ಕದ ಹಳ್ಳದಲ್ಲಿ ನೀರೊಂದಿಷ್ಟನ್ನು ಹೀರಿ ಪುನ್ಹ ಇತರೆ ದನಗಳ ಹಾದಿಯನ್ನು ಹಿಡಿದಳು.

ಅಂದಿನಿಂದ ಪ್ರತಿದಿನವೂ ಗೌಡರ ಬಳಿ ಒಂದಿಷ್ಟು ಲೋಕಾರೂಢ ಮಾತು, ಜಿನ್ನಿಗೆ ಹುಲ್ಲು ತಿನ್ನಿಸುವುದು ಮೋಹನನ ದಿನಚರಿಯಲ್ಲಿ ಸೇರಿಕೊಂಡಿತ್ತು. ಹೊಸ ಗಿಡಗಳಿಗೆ ಬೇಕಾದ ಹಾರೈಕೆ ಹಾಗು ಗದ್ದೆಯ ನಾಟಿ ಹಾಗು ಇನ್ನಿತರ ಕೆಲಸಗಳಿಗೆ ಗೌಡರ ಮಾರ್ಗದರ್ಶನ ಮೋಹನನಿಗೆ ವಿಪರೀತವಾಗಿ ಇಷ್ಟವಾಯಿತು. ಜೊತೆಗೆ ಮೋಹನನೂ ಗೌಡರನ್ನು ಆಗಿಂದಾಗೆ ಮನೆಗೆ ಕರೆದುಕೊಂಡು ಹೋಗಿ ಜೈವಿಕ ಕೃಷಿ, ಹನಿ ನೀರಾವರಿ ಪದ್ಧತಿ, ಮಳೆ ನೀರಿನ ಸಂಗ್ರಹಣೆ ಹಾಗು ಇನ್ನಿತರ ವಿಷಯಗಳ ಬಗ್ಗೆ ತನ್ನ ಲ್ಯಾಪ್ಟಾಪಿನ ಮೂಲಕ ತೋರಿಸುತ್ತಿದ್ದ. ಅಲ್ಲದೆ ಅವರ ಕಲಿಕಾ ಸಾಮರ್ಥ್ಯವನ್ನು ಹಾಗು ಅವರ ತರ್ಕಬದ್ಧ ಪ್ರೆಶ್ನೆಗಳ ಚೂಬಾಣಗಳಿಗೆ ವಿಸ್ಮಿತನೂ ಆಗುತ್ತಿದ್ದ. ಅದೆಷ್ಟೋ ಭಾರಿ ಆಧುನಿಕ ಕೃಷಿಯೆಂದು ವಿವರಿಸುತ್ತಿದ್ದ ವಿಷಯಗಳಿಗೆ ತದ್ವಿರುದ್ದವಾಗಿ ಮೂಡುತ್ತಿದ್ದ ಗೌಡರ ಪ್ರೆಶ್ನೆಗಳಿಗೆ ಮೋಹನನಲ್ಲಿ ಉತ್ತರವೇ ಇರುತ್ತಿರಲಿಲ್ಲ! ಆಗ ಘಂಟೆಗಳ ಕಾಲ ಅವರ ವಾದಸರಣಿ ಜರುಗುತ್ತಿತ್ತು. ಹೀಗೆ ಒಂದು ದಿನವೂ ಗೌಡರನ್ನಾಗಲಿ ಜಿನ್ನಿಯನ್ನಾಗಲಿ ಕಾಣದೆ, ಅವರೊಟ್ಟಿಗೆ ಮಾತನಾಡಿಸದೆ ಇರಲಾಗುತ್ತಿರಲಿಲ್ಲ ಮೋಹನನಿಗೆ. ಜಿನ್ನಿಗೆ ಒಂದಿಷ್ಟು ಹುಲ್ಲನ್ನು ತಿನ್ನಿಸಿ ಆಕೆಯ ತಲೆಯನ್ನೊಮ್ಮೆ ಸವರದಿದ್ದರೆ ಅದೇನೋ ಒಂದು ಅಮೂರ್ತ ಭಾವದ ಕೊರತೆ ಆತನಿಗೆ ಕಾಡುತ್ತಿತ್ತು. ಒಂದೊಮ್ಮೆ ಗೌಡರೇನಾದರೂ ಇತ್ತ ಕಡೆ ಬಾರದಿದ್ದರೆ ಈತನೇ ಖುದ್ದಾಗಿ ಅವರ ಮನೆಯ ಬಳಿಗೋಗಿ ಅವರನ್ನು ವಿಚಾರಿಸಿಕೊಂಡು ಬರುತಿದ್ದ. ಆ ಹಿರಿಯ ಹಾಗು ಕಿರಿಯ ಗೆಳೆಯರಿಬ್ಬರನ್ನು ಕಂಡು ಊರಿನವರಿಗಂತೂ ಮಹದಾಶ್ಚರ್ಯ!

ದಿನ ಕಳೆದಂತೆ ಮೋಹನನ ಜಮೀನು ಹಸಿರಿನಿಂದ ಕಂಗೊಳಿಸತೊಡಗಿತ್ತು. ಒಂದೆಡೆ ತಮ್ಮ ಪುಟ್ಟಪುಟ್ಟ ಎಲೆಗಳನ್ನು ಹೊರಬಿಡುತ್ತಾ ಚಿಗುರುತ್ತಿದ್ದ ಎಳೆಯ ಕಾಫಿ ಸಸಿಗಳು, ಮತ್ತೊಂದೆಡೆ ತಿಳಿಹಸಿರ ಚಿನ್ನದಂತಹ ಭತ್ತದ ಪೈರು ನಯನಗಳಷ್ಟೇ ಅಲ್ಲದೆ ಮನಸ್ಸಿಗೂ ಮುದವನ್ನು ನೀಡುತ್ತಿದ್ದವು. ಕೆಲತಿಂಗಳ ಹಿಂದಷ್ಟೇ ಕಾಂಕ್ರೀಟ್ ನಾಡಿನಲ್ಲಿ ಗಾಳಿ ಬೆಳಕಿರದ ಜೈಲಿನೊಳಗೆ ತಳ್ಳುವಂತಹ ಜೀವನವನ್ನು ಸಾಗಿಸುತ್ತಿದ್ದ ಮೋಹನ ಇಂದು ಅಕ್ಷರ ಸಹ ಹಾರುವ ಹಕ್ಕಿಯಂತಾಗಿದ್ದಾನೆ. ಪೈರುಗಳು ಆತನಿಗೆ ಇಳುವರಿಯನ್ನು ತಂದುಕೊಡುವ ಸರಕೆನಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ತಾನೇ ಹೆತ್ತು ಹೊತ್ತು ಬೆಳೆಸಿದ ಮಕ್ಕಳೇನೋ ಎಂಬ ಭಾವ ಆತನಿಗೆ ಬೆಳೆದಿರುತ್ತದೆ. ಅಲ್ಲದೆ ಅಷ್ಟೊಂದು ಪ್ರೀತಿ ಕಾಳಿಜಿಯಿಂದ ಬೆಳೆಸಿದ ಭತ್ತದ ಪೈರನ್ನು ಕೇವಲ ಒಂತಿಷ್ಟು ಅಕ್ಕಿಯ ಕಾಳುಗಳ ಆಸೆಯಲ್ಲಿ ಕತ್ತನು ಕತ್ತರಿಸುವುದೇ?! ಏನಾದರಾಗಲಿ, ಯಾರಾದರು ಏನನ್ನನಾದರೂ ಮಾತಾಡಿಕೊಳ್ಳಲ್ಲಿ, ಈ ಬಾರಿ ಭತ್ತದ ಪೈರ ಕಟಾವು ಮಾಡಲೇ ಬಾರದೆಂದು ಆತ ತನ್ನಲ್ಲೇ ತೀರ್ಮಾನಿಸಿರುತ್ತಾನೆ! ಆ ನಿಶ್ಚಯ ಆತನಲ್ಲಿ ದೃಢವಾಗಿರುತ್ತದೆ. ಇತ್ತೀಚಿಗೆ ಅತ್ತಕಡೆಯಿಂದ ಇತರ ದನಕರುಗಳೊಡಗೂಡಿ ಬರುವ ಜಿನ್ನಿಯೂ ಸಹ ಮೋಹನನ ಆರೈಕೆಗೋ ಏನೋ ಎಂಬಂತೆ ಆತನ ಜಮೀನಿನ ಮುಂದಿನ ಹಾದಿಯನು ಹಿಡಿಯುತ್ತಿರಲೇ ಇಲ್ಲ. ಅದೆಷ್ಟೇ ಹುಲ್ಲನ್ನು ತಂದು ಹಾಕಿದರೂ ಎಲ್ಲವನ್ನು ತಿಂದು ಮೋಹನನ ಕೈಗಳೆನ್ನೆ ನೆಕ್ಕುತ್ತಾ ಅಲ್ಲೇ ಒಂದು ಮರದ ನೆರಳಿನಲ್ಲಿ ದಣಿವಾರಿಸಿಕೊಂಡು ಸಂಜೆ ಬರುವ ಮತ್ತದೇ ದನಕರುಗಳ ಸಾಲಿಗೆ ಸೇರಿಕೊಳ್ಳುತ್ತದೆ. ಮೋಹನನಿಗೂ ತನ್ನ ಮಾತುಗಳನ್ನು ಪ್ರೆಶ್ನಿಸದೆ ಸುಮ್ಮನೆ ಕೇಳುವ ಯಾರೊಬ್ಬರಾದರೂ ಬೇಕಿದ್ದರಿಂದ ಆಕೆಯನ್ನು ಜಮೀನಿನೊಳಗೆಯೆ ಹುಲ್ಲನ್ನು ಮೇಯಲು ಬಿಡುತ್ತಿದ್ದ.

ಮಧ್ಯಾಹ್ನದ ಬಿಸಿಲಿಗೆ ಪಕ್ಕದಲ್ಲಿ ಮಲಗಿದ್ದ ಜಿನ್ನಿಯ ಕುತ್ತಿಗೆಯನ್ನು ಸವರುತ್ತಾ, ಮತ್ತೊಂದು ಕೈಯಲ್ಲಿ ಪುಸ್ತಕವೊಂದನ್ನು ಹಿಡಿದು ಓದುತ್ತಾ ದಣಿವಾರಿಸಿಕೊಳ್ಳುತ್ತಿದ್ದ ಮೋಹನನಿಗೆ ಜನರ ಮಿಜಿಗುಡುವ ಸದ್ದು ಕೇಳಿತು. ಹತ್ತರಿಂದ ಹದಿನೈದು ಜನರ ಗುಂಪು ತಮ್ಮ ತಮ್ಮಲ್ಲೇ ಏನನ್ನೋ ಮಾತಾನಾಡಿಕೊಳ್ಳುತ್ತಾ ಮೋಹನ ಕೂತಿರುವೆಡೆಗೇ ಬರತೊಡಗಿತ್ತು. ಪುಸ್ತಕವನ್ನು ಕೂಡಲೇ ಮಡಚಿಟ್ಟು ಎದ್ದು ನಿಂತ ಮೋಹನನ ಬಳಿಗೆ ಬಂದ ಗುಂಪಿನ ಎಲ್ಲರೂ ಆತನಿಗೆ ನಮಸ್ಕರಿಸಿದರು ಹಾಗು ತಾವು ಬಂದ ವಿಚಾರವನ್ನು ಹೇಳತೊಡಗಿದರು. ವರ್ಷಾನುವರ್ಷದಿಂದ ಕೃಷಿಯನ್ನು ಮಾಡಿಕೊಂಡು ಬರುತ್ತಿರುವ ಅವರುಗಳು ಮೋಹನನ ಜಮೀನಿನಲ್ಲಿ ಬೆಳೆದ ಕೀಟರಹಿತ, ರೋಗರಹಿತ ಸಮೃದ್ಧ ಗಿಡಗಳನ್ನು ನೋಡಿಯೇ ಇರಲಿಲ್ಲವಂತೆ. ಅಲ್ಲದೆ ಹಳ್ಳಿಯ ರೈತರು ಬಳಸುವ ಯಾವುದೇ ಕೆಮಿಕಲ್ ಪೂರಿತ ಗೊಬ್ಬರಗಳನ್ನು ಬಳಸದೆಯೇ ಅವರುಗಳ ಖರ್ಚಿನ ಅರ್ಧಕ್ಕಿಂತ ಕಡಿಮೆ ಹಣದಲ್ಲಿ ಈತ ಜಮೀನನ್ನು ನಿರ್ವಹಿಸುತ್ತಿರುವುದರ ಬಗ್ಗೆ ಕೇಳಿ ತಿಳಿದುಕೊಳ್ಳಬೇಕೆಂಬ ಕೂತುಹಲದಿಂದ ಬಂದಿರುವೆವು ಎನ್ನುತ್ತಾರೆ. ರೈತರ ಆಸಕ್ತಿಯನ್ನು ಕಂಡು ಸಂತೋಷಗೊಂಡ ಮೋಹನ ಸಾವಯವ ಕೃಷಿ, ಜೈವಿಕ ಕೃಷಿ, ಹನಿ ನೀರಾವರಿ, ಮಣ್ಣಿನಲ್ಲಿ ನೀರಿನ ಸಾಂಧ್ರತೆಯನ್ನು ಹೆಚ್ಚಿಸುವ ಬಗೆ, ಗಿಡಗಳ ನಡುವಿನ ನಿಖರವಾದ ಅಂತರ ಅಲ್ಲದೆ ಕ್ರಿಮಿನಾಶಕ ಹಾಗು ರಾಸಾಯನಿಕಪೂರಿತ ಗೊಬ್ಬರಗಳಿಂದ ಪ್ರಾಣಿ ಪಕ್ಷಿಗಳಿಗೆ, ಜಮೀನಿನ ನೆಲಕ್ಕೆ, ಮಾನವರಿಗೆ ಆಗುತ್ತಿರುವ ದುಷ್ಪರಿಣಾಮಗಳ ಬಗೆಗೆ ತನಗೆ ಗೊತ್ತಷ್ಟು ವಿಚಾರವನ್ನು ತಿಳಿಸುತ್ತಾನೆ. ಇಂದು ಜೈವಿಕ ಇಂಧನದಿಂದ ಏರೋಪ್ಲೇನುಗಳನ್ನೇ ಓಡಿಸುತ್ತಿರುವಾಗ ಕೃಷಿಕರಾದ ನಾವುಗಳು ಏಕೆ ಇಂತಹ ಪರಿಸರ ಸ್ನೇಹಿ ವಿಧಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬಾರದು? ಎಂದಾಗ ರೈತರಲ್ಲಿ ಉತ್ತರವೇ ಇರುವುದಿಲ್ಲ. ಹಲವರು ಈತನ ವಿವರಣೆಯನ್ನು ಮೆಚ್ಚಿದರೆ ಇನ್ನು ಕೆಲವರು ಇವೆಲ್ಲ ಹಾಗಿಹೋಗುವ ವಿಚಾರವಲ್ಲ ಎಂಬಂತೆ ಮುಗುಳ್ನಗುತ್ತಿರುತ್ತಾರೆ. ಗುಂಪಲ್ಲಿ ಯಾರೋ ಒಂದಿಬ್ಬರು 'ಈ ಬಾರಿ ಸರ್ಕಾರ ಎಷ್ಟ್ ಸಾಲ ಮಾಡುತ್ತೆ ಸಾಮಿ, ಅಷ್ಟ್ ಹೇಳಿ ನಮಿಗೆ ಸಾಕು' ಎನ್ನುತ್ತಾ ಗೊಳ್ ಎಂದು ನಗುತ್ತಾರೆ.

ಇವರ ವಿಚಾರಸರಣಿಯನ್ನೇ ದೂರದಲ್ಲಿ ನಿಂತು ಕೇಳುತ್ತಿದ್ದ ದೊಡ್ಡೇಗೌಡರು 'ಥು ನಿಮ್ ಮಕುಕ್ಕೆ, ಸಾಲಮನ್ನಕ್ಕ್ ಕಾಯೋ ಸೋಂಬೇರಿಗಳ, ಹೋಗಿ ಪಕ್ಕದ್ ಊರಲ್ಲಿ ಕಾಳ ಈ ಸಾರಿ ಸರ್ಕಾರ ಸಾಲ ಮನ್ನಾ ಮಾಡಲ್ಲ ಅನ್ನೋದ ಕೇಳಿ ಕೆರೆಗ್ ಹಾರಿ ಸತ್ತೋಗ್ಯಾವ್ನಂತೆ! ಸಾಲ ಮನ್ನಾ ಬೇಕಾ ನಿಮುಗೆ, ಹೋಗಿ ಆ ಎಳೆ ಮಕ್ಳ ಅಳೋದ ನೋಡಿ. ಮೈ ಬಗ್ಸಿ ದುಡಿದ್ರೆ ಭೂಮವ್ವ ಕೊಟ್ಟೆ ಕೊಡ್ತಾವ್ಲೇ. ಬ್ಯಾಸಾಯ ಮಾಡೋದು ಬರಿ ದುಡ್ಡ್ ಮಾಡೋ ಗ್ಯಾಮೆ ಆಗಿರ್ವಾಗ ನಿಮ್ಗೆ ಕೃಷಿ ಅಂದ್ರೆ ಸಾಲ ಮನ್ನಾ ಅನ್ನೋದ್ ಬಿಟ್ರೆ ಬ್ಯಾರೇನು ಅಲ್ಲ!' ಎನ್ನುತ್ತಾರೆ. ಪಕ್ಕದೂರಿನ ಕಾಳನನ್ನು ಬಲ್ಲ ಕೆಲವರು ಆತನ ಸಾವಿನ ಸುದ್ದಿಯನ್ನು ಕೇಳಿ ದಬದಬನೆ ಆ ಕಡೆ ಓಡತೊಡಗುತ್ತಾರೆ. ಅವರುಗಳೆಲ್ಲ ಅಲ್ಲಿಂದ ಹೋದನಂತರ ಗೌಡರು ಕಾಳನ ಬಗ್ಗೆ ಹೇಳುತ್ತಾ, ಆತ ಸರ್ಕಾರ ಪೂರಾ ಸಾಲವನ್ನು ಮನ್ನಾ ಮಾಡೇ ಮಾಡುತ್ತದೆ ಎಂಬ ಹುಮ್ಮಸ್ಸಿನಲ್ಲಿ ತೀರಿಸಲು ಅಸಾಧ್ಯವಾದ ಹಣವನ್ನು ಬ್ಯಾಂಕುಗಳಿಂದ ಪಡೆದದ್ದಾಗಿಯೂ ನೆನ್ನೆ ಸರ್ಕಾರ ಕೇವಲ ಅಲ್ಪಪ್ರಮಾಣದ ಸಾಲವನ್ನು ಬಿಟ್ಟು ಉಳಿದ ಎಲ್ಲಾ ಬಗೆಯ ಸಾಲವನ್ನು ಮನ್ನಾ ಮಾಡುವುದಿಲ್ಲವೆಂದು ಘೋಷಿಸಿದಾಗ ಹುಚ್ಚನಂತೆ ಚೀರಿಕೊಳ್ಳುತ್ತಾ ಕೆರೆಗೆ ಹಾರಿ ಜೀವ ಕಳೆದುಕೊಂಡ ಎನ್ನುತ್ತಾರೆ. ಅಲ್ಲದೆ ಇನ್ನೊಬ್ಬ ರೈತನ ಉದಾಹರಣೆಯನ್ನು ನೀಡುತ್ತಾ ಬ್ಯಾಂಕು ವಹಿವಾಟುಗಳ ಅರಿವಿಲ್ಲದ ಆತ ತನ್ನ ಹೆಚ್ಚಿನ ಸಾಲವನ್ನು ಬರಿ ಅವರಿವರಲ್ಲಿ ಕೈಸಾಲವಾಗೇ ಮಾಡಿದ್ದರಿಂದ ಕಳೆದ ಬಾರಿ ಸರ್ಕಾರ ರಾಷ್ಟ್ರೀಕೃತ ಹಾಗು ಸಹಕಾರಿ ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಿದರೂ ಈತನಿಗೆ ಅದು ಪ್ರಯೋಜನವಾಗದೇ ಅದೇ ಖಿನ್ನತೆಯಲ್ಲಿ ಪ್ರಾಣವನ್ನು ಕಳೆದುಕೊಂಡ ಎನ್ನುತ್ತಾರೆ. 'ಈಗೆಲ್ಲ ಕೃಷಿ ಹೊಂಡ, ಇತರ ನೀರಾವರಿ ವ್ಯವಸ್ಥೆ, ಕೃಷಿ ಮಾಡೋ ಹತಾರಗಳನ್ನು ಬಾಡಿಗೆಗೆ ನೀಡುವುದು, ಬೆಂಬಲ ಬೆಲೆ, ಮುಕ್ತ ಮಾರುಕಟ್ಟೆ, ಎಪಿಎಂಸಿ, ಅಲ್ಲದೆ ಸಾಲದ ಜೊತೆಗೆ ಆ ಸಾಲಕ್ಕೆ ಇನ್ಶೂರೆನ್ಸ್ ಅನ್ನೂ ಸರ್ಕಾರ ಮಾಡಿ ಕೊಡ್ತಿದ್ರೂ ಇವ್ರುಗಳಿಗೆ ಕೃಷಿ ಅಂದ್ರೆ ಅಸಡ್ಡೆ. ಅಲ್ಲ ಮಗ, ನಮ್ಮಜ್ಜ ನಮ್ಮಪ್ಪನೂ ಕೃಷಿ ಮಾಡೇ ಜೀವನ ಸಾಗ್ಸ್ಡೂರು, ಏನೇ ಮಳೆ ಬರ್ಲಿ, ಅದೆಂತದೆ ರೋಗ ಬರ್ಲಿ, ಅವಾಗೆಲ್ಲ ಅವ್ರು ಬ್ಯಾಸಾಯನ ಮಾಡ್ಲಿಲ್ವಾ? ನಮ್ಮ್ನೆಲ್ಲಾ ಸಾಕ್ಲಿಲ್ವ? ಅವಾಗೆಲ್ಲ ಅದ್ಯಾವ ಸರ್ಕಾರ ಸಾಲ ಕೊಡಕ್ಕ್ ಬರೋದು ಹೇಳು. ' ಎಂದಾಗ ಮೋಹನನಿಗೆ ಉತ್ತರ ಕಾಣದಾಯಿತು.

ಇನ್ನೂ ಕೆಲ ದಿನಗಳು ಕಳೆದವು. ಈ ಬಾರಿಯ ಮಳೆ ಅದೇಕೋ ಊರನ್ನೇ ಮುಳುಗಿಸಿಬಿಡುತ್ತದೆಯೋ ಎಂಬ ರೀತಿಯಲ್ಲಿ ಸುರಿಯತೊಡಗಿತ್ತು. ಮಳೆಯಲ್ಲಿ ಕೆಲಸ ಮಾಡಬೇಡೆಂದು ಮನೆಯವರು ಅದೆಷ್ಟು ಹೇಳಿದರೂ ಮೋಹನ ಯಾರ ಮಾತನ್ನು ಕೇಳದೆ ಜಮೀನಿಗೆ ಹೋಗುತ್ತಿರುತ್ತಾನೆ. ಒಂದೇ ಸಮನೆ ಬೀಳುತ್ತಿದ್ದ ಆ ಮೆಳೆಯಲ್ಲಿ ಕೆಲಸ ಮಾಡುವುದೆಂದರೆ ಆತನಿಗೆ ಬಲು ಇಷ್ಟದ ಕಾಯಾಕ. ಆದರೆ ಇಂದು ರಾತ್ರಿ ಬಂದ ಮಹಾಮಳೆಗೆ ಮೋಹನನ ಮನೆಯ ಸುತ್ತಲ ಗಿಡಮರಗಳೆಲ್ಲ ಚಿತ್ರ ವಿಚಿತ್ರವಾಗಿ ತಿರುಗಿ ಮುರುಟಿಗೊಂಡಿದ್ದವು. ಬೆಳಗಿನ ಮುಂಜಾವಿನ ಚಿಲಿಪಿಲಿ ಸದ್ದುಗಳೂ ಮೌನವಾಗಿದ್ದವು. ಮೋಡ ಕವಿದ ಮಂಕಾದ ಆ ಮುಂಜಾವು ಏನೋ ಒಂದು ಬಗೆಯ ಆಘಾತದ ಮುನ್ಸೂಚನೆಯನ್ನು ನೀಡುವಂತಿತ್ತು. ರಾತ್ರಿ ಸುರಿದ ಮಳೆಗೆ ಊರಿನ ಹಲವಾರು ಮನೆಗಳು ಬಿದ್ದವೆಂದು ಊರ ಹೊರಗೆ ಅಲ್ಲಲ್ಲಿ ಭೂಕುಸಿತವಾಗಿದೆ ಎಂಬ ಮಾತನ್ನು ಅಮ್ಮನಿಂದ ತಿಳಿದ ಕೂಡಲೇ ಗಾಬರಿಕೊಂಡ ಮೋಹನ ಬರಿಗಾಲಿನಲ್ಲಿಯೇ ಜಮೀನಿನೆಡೆಗೆ ಓಡುತ್ತಾನೆ. ಕೊಂಚ ತಗ್ಗು ಪ್ರದೇಶದಲ್ಲಿದ್ದ ತನ್ನ ಜಮೀನನ್ನು ಬಂದು ನೋಡಿದರೆ ಅಕ್ಷರ ಸಹ ಗುರುತು ಹಿಡಿಯದ ಭೂಮಿಯಾಗಿ ಅದು ಮಾರ್ಪಾಡಾಗಿರುತ್ತದೆ! ಗದ್ದೆಗೆ ಅಂಟಿಕೊಂಡಿದ್ದ ಗುಡ್ಡದ ಒಂದು ಪಾರ್ಶ್ವ ಮಳೆಯ ಹೊಡೆತಕ್ಕೆ ಜರಿದು ಕಾಫಿ ಸಸಿಗಳು ಹಾಗು ಭತ್ತದ ಪೈರನ್ನು ಸಂಪೂರ್ಣವಾಗಿ ಮುಚ್ಚಿ ಹಾಕಿರುತ್ತದೆ! ಮೋಹನ ತಾನು ನಿಂತಲ್ಲಿಯೇ ಕುಸಿಯುತ್ತಾನೆ. ತನ್ನ ಒಡಲಲ್ಲಿ ಹುಟ್ಟಿದ ಮಕ್ಕಳೇನೋ ಎಂಬಂತೆ ಬೆಳೆಸಿದ್ದ ಗಿಡಗಳ ಶವವನ್ನು ಕಂಡು ದುಃಖ ಉಲ್ಬಣಿಸಿ ಬಂದು ಜೋರಾಗಿ ಅಳತೊಡಗುತ್ತಾನೆ. ಗೊಂಚಲು ಭತ್ತದ ಸಮೇತ ನೀರಿನಲ್ಲಿ ಮುಳುಗಿಹೋಗಿದ್ದ ಸಸಿಯೊಂದನ್ನು ಕಂಡು ಆತನ ಸಂಕಟ ಇನ್ನೂ ವಿಪರೀತವಾಯಿತು. ಅದು ತನ್ನ ಅತ್ಯಾಪ್ತರೊಬ್ಬರನ್ನು ಕಳೆದುಕೊಂಡಾಗ ಉಂಟಾಗುವ ದುಃಖವಾಗಿದ್ದಿತು. ಜಗತ್ತೇ ಬೇಡವೆನಿಸುತ್ತದೆ ಆತನಿಗೆ.

ಮುನಿದು ಅಕ್ಷರಸಹ ರುದ್ರಕಾಳಿಯಂತಾಗಿದ್ದ ಪರಿಸರವನ್ನು ತನ್ನ ಅಳುವ ಕಣ್ಣುಗಳಲ್ಲೇ ನೋಡುತ್ತಾ ನಿಂತಿದ್ದ ಮೋಹನನಿಗೆ ಪಕ್ಕದ ಹಳ್ಳವು ತನ್ನ ಮಿತಿಯನ್ನು ಮೀರಿ ನದಿಯಂತೆ ಹರಿಯುತ್ತಿದ್ದದ್ದು ತಿಳಿಯುವುದಿಲ್ಲ. ಕಾಲುಜಾರಿ ದೊಪ್ಪನೆ ನೀರಿನೊಳಗೆ ಬಿದ್ದುಬಿಡುತ್ತಾನೆ. ನೀರಿನ ರಭಸ ಕೂಡಲೇ ಆತನನ್ನು ದೂರಕ್ಕೆ ಎಳೆದುಕೊಂಡು ಹೋಗುತ್ತದೆ. ಒಂತಿಷ್ಟು ಈಜು ಬರುತ್ತಿದ್ದರೂ ಆ ರಭಸಭರಿತ ನೀರಿನಲ್ಲಿ ಏನೂ ಮಾಡಲೂ ಆಗುವುದಿಲ್ಲ. ಮೋಹನ ಜೋರಾಗಿ ಕೂಗಿಕೊಳ್ಳುತ್ತಾನೆ. ಯಾರೊಬ್ಬರೂ ಕಾಣುವುದಿಲ್ಲ! ಅಡ್ಡಡ್ಡ ಬಿದ್ದಿದ್ದ ಮರದ ಕಾಂಡಗಳು, ಕಲ್ಲಿನ ಚೂರುಗಳು ಕೈಕಾಲುಗಳಿಗೆ ತಗುಲಿ ಅಲ್ಲಲ್ಲಿ ರಕ್ತ ಸುರಿದು ನೋವು ಹೆಚ್ಚಾಗತೊಡಗುತ್ತದೆ. ತನ್ನ ಜಮೀನಿನೊಟ್ಟಿಗೆ ತನ್ನ ಅಂತ್ಯಗಾಲವೂ ಬಂತೆಂದು, ಬರುವ ಮುನ್ನ ಪೋಷಕರಿಗಾದರೂ ಒಮ್ಮೆ ಹೇಳಿ ಬರಬೇಕಿತ್ತೆಂದುಕೊಳ್ಳುತ್ತಾನೆ. ನೀರು ಮೂಗಿನ ಮೂಲಕ ತಲೆಗೆ ಏರಿ ಕಮ್ಮು ಬರತೊಡಗಿ ಸಂಕಟ ವಿಪರೀತವಾಗುತ್ತದೆ. ನಾಲ್ಕೈದು ಕಿಲೋಮೀಟರ್ ದೂರದಲ್ಲಿರುವ ನದಿಗೆ ಸೇರುವ ಹಳ್ಳ ಹೆಚ್ಚಾಗಿ ಕಾಡಿನೊಳಗೆಯೇ ಹರಿಯುವುದರಿಂದ ಯಾರೊಬ್ಬ ಮಾನವರೂ ಅದರ ಪಾತ್ರದಲ್ಲಿ ಕಾಣಸಿಗರು…

ಜೀವ ಭಯದಿಂದ ತತ್ತರಿಸಿ ಹೋಗಿದ್ದ ಮೋಹನನಿಗೆ ಒಮ್ಮೆಲೇ ಘಂಟೆಯ ಸದ್ದೊಂದು ಆ ಹರಿವಿನ ರಭಸದ ಸದ್ದಿನಲ್ಲೂ ಕೇಳತೊಡಗುತ್ತದೆ. ಕ್ಷಣಮಾತ್ರದಲ್ಲಿ ಅದು ಜಿನ್ನಿಯ ಕೊರಳಘಂಟೆಯ ಸದ್ದೆಂದು ಗುರುತಿಸಿದ ಮೋಹನನಿಗೆ ಮೈಯ ತುಂಬೆಲ್ಲ ಶಕ್ತಿಸಂಚಯನವಾದಂತಹ ಅನುಭವವಾಯಿತು. 'ಅಂಬಾ..' ಎಂಬ ಸದ್ದಿನೊಂದಿಗೆ ಕೂಗಿಕೊಳ್ಳುತ್ತಾ ಬಂದ ಜಿನ್ನಿ ಮೋಹನ ತೇಲುತ್ತಿದ್ದ ದಿಕ್ಕಿನೆಡೆಗೆ ಜೋರಾಗಿ ಓಡತೊಡಗಿದಳು. ಮೋಹನನ ಜಮೀನಿನ ಬೇಲಿಯನ್ನು ರಭಸವಾಗಿ ಹಾರಿ ಬಂದಿದ್ದರಿಂದ ಆಕೆಯ ಮೈಯ ಒಂದೆಡೆ ಸಿಗಿದು ಕೆಂಪಾಗಿರುತ್ತದೆ. ಕೊರಳ ಹಗ್ಗದೊಟ್ಟಿಗೆ ಮರದ ಕುಣಿಕೆಯನ್ನೂ ಕಿತ್ತುಕೊಂಡು ಬಂದಿದ್ದ ಜಿನ್ನಿ ಮೋಹನನಿಗಿಂತ ತುಸು ಮುಂದೋಗಿ, ಹಳ್ಳದ ನೀರು ತನ್ನ ಆಕೆಯ ಕುತ್ತಿಗೆಯ ಮಟ್ಟಕ್ಕೆ ತಲುಪವರೆಗೂ ಮುಂದೆ ಚಲಿಸಿ 'ಅಂಬಾ..' ಎಂದು ಕೂಗುತ್ತಾ ಮೋಹನ ತೇಲಿ ಬರುವುದನ್ನೇ ನೋಡುತ್ತಾ ನಿಂತಳು. ಕೊರಳ ಹಗ್ಗ ಕೊಂಚ ಉದ್ದವಾಗಿದ್ದರಿಂದ ಅದು ನೀರಿನಲ್ಲಿ ಬಹು ದೂರದವರೆಗೂ ತೇಲತೊಡಗಿತು. ಅಲ್ಲದೆ ಅದರ ಒಂದು ತುದಿಗೆ ಮರದ ಕುಣಿಕೆಯೂ ತೇಲುತ್ತಿದ್ದರಿಂದ ಮೋಹನನಿಗೆ ಹಗ್ಗವನ್ನು ಹಿಡಿದುಕೊಳ್ಳುವುದು ಕಷ್ಟಕರವಾಗಲಿಲ್ಲ. ಕೂಡಲೇ ಹಗ್ಗವನ್ನು ಹಿಡಿದುಕೊಂಡು ಎಳೆದುಕೊಳ್ಳುತ್ತಾ ದಡಕ್ಕೆ ಬಂದ ಮೋಹನ ಜಿನ್ನಿಯನ್ನು ತಬ್ಬಿ ಬಿಕ್ಕಿ ಬಿಕ್ಕಿ ಅಳತೊಡಗುತ್ತಾನೆ. ಅದು ಮೂಕಪ್ರಾಣಿಯ ಪ್ರೀತಿಯ ಮಹಿಮೆಯೋ ಅಥವಾ ನಿಸರ್ಗದ ಚಮತ್ಕಾರವೋ ಏನೋ ಮೋಹನ ನೀರಿಗೆ ಬೀಳುವದ ಮೊದಲೇ ಅರಿತಿತ್ತೇನೋ ಎಂಬಂತೆ ಜಿನ್ನಿ ಆತನನ್ನು ಕಾಪಾಡಲು ಓಡೋಡಿ ಬಂದಿರುತ್ತದೆ! ಅಷ್ಟರಲ್ಲಾಗಲೇ ಛತ್ರಿಯೊಂದನ್ನಿಡಿದುಕೊಂಡು 'ಅಂಬಾ.. ಜಿನ್ನಿ..' ಎಂದು ಕೂಗುತ್ತಾ ಜಿನ್ನಿಯ ಹುಡುಕಿಕೊಂಡು ಬಿರಬಿರನೆ ಬಂದ ಗೌಡರು, ಮೋಹನನ ಸ್ಥಿತಿಯನ್ನು ಕಂಡು ಹೌಹಾರಿದರು. ನೆಡೆದ ಘಟನೆಯನ್ನು ಕೇಳಿ ಕೊಂಚ ಕಾಲ ಸುಮ್ಮನಿದ್ದು 'ನೋಡಪ್ಪ ಮೋನ, ಎಲ್ಲಾನು ಕಳ್ಕೊಂಡ್ವು ಅನ್ನೋರಿಗೆ ಈ ನಿಸರ್ಗ ಮಾತೇನೇ ಮತ್ತೊಂದು ಅವ್ಕಾಶ ಕೊಡ್ತಳೇ. ಈಗ ನಿನ್ನ ಬದ್ಕಸೋಕೆ ಜಿನ್ನಿನೆ ನಿನ್ನ್ ಬಳಿ ಕಳ್ಸಿದ್ದಾಳೆ ನೋಡು. ಅಂತ ಭೂಮಾತೆ ನೀನ್ ಬೆಳ್ದ ಗದ್ದೇನ ಅಷ್ಟ್ ಸುಲಬಾಗಿ ಮುಚ್ಚಾಕಲ್ಲ ಕಣಪ್ಪ. ಮರಳಿ ಯತ್ನ ಮಾಡು ಮಗ. ಆಕೆ ಹಿಂಗ್ ಮಾಡಿರೋ ಹಿಂದೇನೂ ಏನೋ ಒಂದು ಕಾರ್ಣ ಇರುತ್ತೇ. ನಮ್ಮಂತ ಮಂಕ್ ಜೀವಗಳಿಗೆ ಅದು ಅರ್ಥ ಆಗಕಿಲ್ಲ. ಕೃಷಿ ಮಾಡೋರು ಈವೆಲ್ಲ ಕಷ್ಟ ನಷ್ಟಗಳಿಗೆ ತಯಾರಾಗಿರ್ಬೇಕು..ನಾವಾದ್ರೂ ಹೇಗೂ ನಡಿಯುತ್ತೆ. ಪಾಪ ಗದ್ದೆ ಒಳಗೇ ಗುಡಿಸಲನ್ನ ಕಟ್ಟಿಕೊಂಡು ಇರೋ ಒಂದೆಕ್ರೆ ಜಮೀನನಲ್ಲೇ ಗಂಜಿ ಕಣೋರ ಕಷ್ಟ ನೋಡಾಕ್ ಆಗಲ್ಲ ಕಾಣಪ್ಪಾ’ ಎನ್ನುತ್ತಾ ಆತನನ್ನು ಸಮಾಧಾನಿಸಿ ಹಿಂದಕ್ಕೆ ಕರೆದುಕೊಂಡು ಹೋಗುತ್ತಾರೆ.

ಅಷ್ಟ ದಿಕ್ಕುಗಳಿಂದಲೂ ರಭಸವಾದ ಗಾಳಿ ಛೇಡಿಸುವಂತೆ ಒಂದೇ ಸಮನೆ ಬೀಸುತ್ತಿರುತ್ತದೆ.ಅಷ್ಟರಲ್ಲಾಗಲೇ ಮೋಹನನ ಜಮೀನು ಬರುತ್ತದೆ.ಸಮಾಧಿಯಂತಾಗಿದ್ದ ಜಮೀನನ್ನು ಕಂಡು ದುಃಖ ಮತ್ತೊಮ್ಮೆ ಉಲ್ಬಣಿಸಿ ಬಂದರೂ ತಡೆದುಕೊಂಡು ಆತ ಗದ್ದೆಯ ಮೂಲೆಯಲ್ಲಿ ಇಟ್ಟಿದ್ದ ಹಾರೆಯನ್ನು ಕೈಗೆತ್ತಿಕೊಳ್ಳುತ್ತಾನೆ. ಅದು ತನ್ನೊಬ್ಬನ ಜಮೀನನ್ನು ಮರುನಿರ್ಮಿಸುವ ನಡೆಗಿಂತ ಹೆಚ್ಚಾಗಿ ಅವೈಜ್ಞಾನಿಕ ಕೃಷಿಯಿಂದ ಭೂಮಿಯನ್ನು ಹಾಳುಗೆಡವಿದ ಇಡೀ ಊರ ಜಮೀನುಗಳನ್ನೇ ಮರುನಿರ್ಮಿಸುವ ಸಂಕಲ್ಪವಾಗಿರುತ್ತದೆ…

No comments:

Post a Comment