Wednesday, January 23, 2019

ಮೆಹ್ತಾ Killed ಮೆಹ್ತಾ! - Part 2

ಶೌಚಾಲಯದ ಪೈಪುಗಳ ಮೂಲಕ ಮೇಲೇರಿದ ಅದು ಕಿಟಕಿಯ ಮುಖೇನ ಸೀದಾ ಆಫೀಸಿನೊಳಗೆ ನುಗ್ಗಿತು. ಆ ಕಡು ಕತ್ತಲೆಯಲ್ಲೂ ಒಂದಿನಿತೂ ದಾರಿ ತಪ್ಪದೆ ಕೂಡಲೇ ಭುಜಂಗರಾವ್ನ ಕೋಣೆಯಳೊಗೆ ಹೋಗಿ ಕಂಪ್ಯೂಟರ್ ಅನ್ನು ಆನ್ ಮಾಡಿ ಬಹಳದಿನಗಳಿಂದ ಕಾಯುತ್ತಿದ್ದ ಕೆಲಸವನ್ನು ಅದು ಮುಗಿಸಿಕೊಂಡಿತು. ನಕಲಿ Purchase Order ಗಳನ್ನು ಭುಜಂಗರಾವ್ ನ ಐಡಿಯಿಂದ ಅನುಮೋದಿಸಿ ಅದರ ಒಂದು ಕಾಪಿಯನ್ನು ಇಮೇಲ್ ಮೂಲಕ ತನ್ನ ಐಡಿಯೊಂದಕ್ಕೆ ಕಳಿಸಿಕೊಂಡಿತು. ನಕಲಿ Purchase Orderಗಳನ್ನು ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ವ್ಯಾಪಾರಿಗಳೊಟ್ಟಿಗೆ ಚಲಾವಣೆಗೊಳಿಸಿ ಅವರಿಂದ ಕ್ರೆಡಿಟ್ ನಲ್ಲಿ ಸಿಗುವ ಮಾಲುಗಳನು ಮತ್ತೊಬ್ಬ ವ್ಯಾಪಾರಿಗೆ ಅದರ ಅರ್ಧದಷ್ಟು ಹಣದಲ್ಲಿ ಮಾರಿ ಹಣವನ್ನು ಗಳಿಸಿಕೊಳ್ಳುತ್ತಿತ್ತು ಆ ಕ್ರಿಮಿನಲ್ ಆಕೃತಿ. 'ಭುಜಂಗ ..' ಎಂದು ಕಟಕಟನೆ ಹಲ್ಲು ಕಡಿದ ಅದು ತನ್ನ ಕೆಲಸ ಮುಗಿದ ನಂತರ ಚಂಗನೆ ಕಿಟಕಿಯ ಬಳಿಗೆ ಹಾರಿತಾದರೂ ಕೂಡಲೇ ಏನೋ ಅದಕ್ಕೆ ನೆನಪಾಯಿತು. ಪುನಃ ಭುಜಂಗ್ರಾವಿನ ಕೊಣೆಯೊಳಗೆ ಬಂದು ಟೇಬಲ್ಲಿನ ಕೆಳಗೆ ಏನೋ ಕಂಡಂತಾದ ವಸ್ತುವನ್ನು ಎಳೆದು ತೆಗೆಯಿತು. ಬೆಳಕು ಬಿಟ್ಟು ನೋಡಿದರೆ, ತಲೆಸುತ್ತು ಬೀಳುವಂತಹ ದೃಶ್ಯ ಆ ಕಪ್ಪು ಕೈಗಳ ಮೇಲೆ!!

**

'ಅಜಯ್..! ಏನ್ರಿ ನಿಮ್ದು. ಡೆಲಿವರಿ ಡೇಟ್ ಮುಗಿದ್ ಹೋದ್ರೂ ಯಾಕ್ರೀ ಇನ್ನು ಶಿಪಿಮೆಂಟ್ ಕಸ್ಟಮರ್ ಗೆ ಮುಟ್ಟಿಲ್ಲ..?' ಸಹಜವಾದ ಸಿಡುಕಿನ ಧ್ವನಿಯಲ್ಲಿ ಕೇಳಿದ ಭುಜಂಗರಾವ್. ಬಿಳಿಕೂದಲಿನ ಅರ್ವತ್ತು ವಯಸ್ಸಿನ ಆತನ ಆ ಬೆಕ್ಕಿನ ಕಣ್ಣುಗಳು ಭಯಾನಕ ಭಯವನ್ನುಂಟುಮಾಡುತ್ತಿದ್ದವು. ಅಜಯ್ ಏನನ್ನೂ ಮಾತನಾಡದೆ ತಲೆ ತಗ್ಗಿಸಿಕೊಂಡು ನಿಂತಿದ್ದ. ಭುಜಂಗರಾವ್ರ ಪಕ್ಕದಲ್ಲಿ ಕೂತಿದ್ದ ದೀಪಕ್ ಮೆಹ್ತಾ, 'ಲುಕ್ ಮಿಸ್ಟರ್, ನಾವೇನ್ ಇಲ್ಲಿ ಚಾರಿಟಿ ವರ್ಕ್ ಮಾಡ್ತಾ ಇಲ್ಲ. ನಿಮ್ಮ್ ಒಂದೊಂದು ತಪ್ಪು ನಾವ್ ಕಷ್ಟ ಪಟ್ಟು ಕಟ್ಟಿದ ಕಂಪನಿಗೆ ಹೊರೆಯಾಗುತ್ತೆ. ದಿಸ್ ಇಸ್ ದಿ ಫೈನಲ್ ವಾರ್ನಿಗ್!’ ಎಂದ ಧ್ವನಿಯಲ್ಲಿ ಏನೋ ಒಂದು ಬಗೆಯ ಅಸಹಜತೆ…ಕಳೆದ ತಿಂಗಳವರೆಗೂ ಕಂಪನಿಯ ಸ್ಲೀಪಿಂಗ್ ಪಾರ್ಟರ್ ಆಗಿದ್ದ ದೀಪಕ್ ಮೆಹ್ತಾರನ್ನು ಕಂಪನಿಯ ಯಾರೊಬ್ಬರೂ ಅಷ್ಟಾಗಿ ನೋಡಿಯಾಗಲಿ ಮಾತಾಡಿಯಾಗಿ ಬಲ್ಲವರಾಗಿರಲಿಲ್ಲ. ಹೊರದೇಶದಲ್ಲೆಲ್ಲೋ ಒಬ್ಬ ದೀಪಕ್ ಮೆಹ್ತಾ ಎಂಬ ವ್ಯಕ್ತಿ ನಮ್ಮ ಕಂಪನಿಯ ಇಂತಿಷ್ಟು ಷೇರುಗಳ ಒಡೆಯ ಎಂದಷ್ಟೇ ಅಲ್ಲಿನ ಉದ್ಯೋಗಿಗಳಿಗೆ ತಿಳಿದ್ದಿತ್ತು. ಈಗ ತನ್ನ ಹೊರದೇಶದ ಬಿಸಿನೆಸ್ ನಷ್ಟ ಕಂಡ ಪರಿಣಾಮ ಆತ ಇಲ್ಲಿಗೆ ಬಂದಿದ್ದೂ ದಿನೇ ದಿನೇ ಕಂಪನಿಯ ಒಂದೊಂದೇ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳತೊಡಗಿದ.. ಬುಜಂಗ್ರಾವಿನ ಸಿಟ್ಟಿನ ಆ ರಣ ಕಣ್ಣುಗಳು ಆತ ಡೋರನ್ನು ದಾಟುವವರೆಗೂ ನೋಡುತ್ತಲೇ ಇದ್ದವು.

ಅಜಯ್ ನಿಂತ ಅಷ್ಟೂ ಸಮಯವನ್ನು ದೀಪಕ್ ಮೆಹ್ತಾರವರ ಚಹರೆಯನ್ನೇ ಇಣುಕಿಣುಕಿ ನೋಡತೊಡಗಿದ್ದ. ಹೊರಬಂದವನೇ ಮಹೇಶನನ್ನು ಕುರಿತು 'ಆ ಮೆಹ್ತಾ ಹೇಳೋಕ್ಕಷ್ಟೇ ನಲವತ್ತು ವರ್ಷ ರೀ , ಮೇಕ್ ಅಪ್ ಮಾತ್ರ ಒಳ್ಳೆ ಟೀನೇಜ್ ಹುಡ್ಗೀರ್ ತರ ಮಾಡ್ಕೊಂತಾರೆ. ಅದೆಷ್ಟು ಪೌಡರ್ ಮುಖಕ್ಕೆ ಆಕೊಂಡ್ಡಿದ್ದಾರೆ ನೋಡಿದ್ರ.. ಒಳ್ಳೆ ಕಾರ್ಟೂನ್ ಕ್ಯಾರೆಕ್ಟರ್ ನೋಡ್ದ ಹಾಗೆ ಆಗುತ್ತೆ' ಎಂದು ಗಹಗಹನೇ ನಗಹತ್ತಿದ್ದ. ಕೆಲ ನಿಮಿಷಗಳಲ್ಲಿಯೇ ‘ನಿದ್ರೆ ಇಲ್ಲ ರೀ’ ಎನುತ ತೂಕಡಿಸತೊಡಗಿದ,'ರೀ ಅಜಯ್, ಭುಜಂಗ ಬಂದ್ರೆ ಇವತ್ತ್ ನಿಮ್ ಕಥೆ ಮುಗ್ದ್ ಹಾಗೆ..ಏಳ್ರಿ' ಎಂದ ಮಹೇಶನ ಮಾತನ್ನೂ ಲೆಕ್ಕಿಸದೆ ಕುರ್ಚಿಯನ್ನು ಸಾಧ್ಯವಾದಷ್ಟು ಕೆಳಗೊಳಿಸಿ ನಿದ್ರೆಗೆ ಜಾರಿದ.

ಕುರ್ಚಿಯ ಮೇಲೆಯೇ ಘಾಡ ನಿದ್ರೆಗೆ ಜಾರಿದ ಅಜಯ್ ಕಣ್ಣು ಬಿಡುವಷ್ಟರಲ್ಲಿ ಆಫೀಸಿನ ತುಂಬಾ ಕತ್ತಲೆಯದೆಯೇ ಕಾರುಬಾರು. ಅಲ್ಲೊಂದು ಇಲ್ಲೊಂದು ಎಮರ್ಜೆನ್ಸಿ LED ಲೈಟುಗಳನ್ನು ಬಿಟ್ಟರೆ ಆತನ ಕಣ್ಣುಗಳಿಗೆ ಏನೇನೂ ಗೋಚರಿಸದು. ಸಂಜೆ ಮಹೇಶ ‘ಏಳ್ರಿ ಹೋಗಣ’ ಎಂದಾಗಲೂ ಹೊರಳಾಡಿ ಮಲಗಿದ ತುಸು ನೆನಪು ಬಿಟ್ಟರೆ ಬೇರೇನೂ ಸಹ ಆತನ ನೆನೆಪಿಗೆ ಬರುತ್ತಿಲ್ಲ. ಮೊಬೈಲನ್ನು ಜೇಬಿನಿಂದ ತೆಗೆದು ನೋಡುತ್ತಾನೆ. ಘಂಟೆ ಆಗಲೇ ಹನ್ನೆರಡರ ಸಮೀಪ! ಆಕ್ಸೆಸ್ ಕಾರ್ಡ್ ಇದ್ದಿದ್ದರಿಂದ ಬಚಾವು ಎಂದುಕೊಂಡು ಎದೆಯ ಜೇಬಿನಿಂದ ಆಕ್ಸೆಸ್ ಕಾರ್ಡ್ ನ್ನು ತೆಗೆದು ಇನ್ನೇನು ಎದ್ದು ಹೊರಡಬೇಕು ಎನ್ನುವಷ್ಟರಲ್ಲಿ ಭುಜಂಗ್ ರಾವ್ನ ಕ್ಯಾಬಿನಿಂದ ಏನೋ ನೆಡೆದಾಡುವ ಸದ್ದು!! ನಿಂತಿದ್ದ ಅಜಯ್ ಕೂಡಲೇ ಕುಕ್ಕರುಗಾಲಿನಲ್ಲಿ ಕೆಳಗೆ ಕೂರುತ್ತಾನೆ. ಬೆಂಕಿಪೊಟ್ಟಣದಂತಿದ್ದ ಆ ಹತ್ತಾರು ಕ್ಯಾಬಿನುಗಳ ನಡುವೆ ಕೂತ ಅಜಯ್ ಮೆಲ್ಲಗೆ ಆ ಸದ್ದನ್ನು ಅಳಿಸತೊಡಗಿದ. ಏನೇನೋ ಪದಗಳ ಉಚ್ಚಾರಣೆಯಿಂದ ಅತ್ತಿಂದಿತ್ತ ಇತ್ತಿಂದಂತ್ತ ನೆಡೆಯುತ್ತಿದ್ದ ಅದು ಬುಜಂಗ್ರಾವ್ ನ ಧ್ವನಿಯಂತೂ ಅಲ್ಲವೇ ಅಲ್ಲ! ಕೊಂಚ ಕಿವಿಯಿಟ್ಟು ಆಲಿಸಹೋದಗ ಕೂಡಲೇ ಕಟಕಟನೆ ಹಲ್ಲುಕಡಿಯುವ ಸದ್ದು ಭಾರಿ ಗಾತ್ರದ ಕಲ್ಲನ್ನು ಅಷ್ಟೇ ಗಾತ್ರದ ಇನ್ನೊಂದು ಕಲ್ಲಿಗೆ ಉಜ್ಜಿದಾಗ ಮೂಡುವ ಸದ್ದಿನಂತೆ ಮೂಡುತ್ತದೆ! ಆ ಭಯಾನಕ ಸದ್ದಿಗೆ ಎದೆ ಜಲ್ ಎಂದ ಅಜಯ್ ಕುಕ್ಕರುಗಾಲಿನಿಂದ ಒಮ್ಮೆಲೇ ಹಿಂದಕ್ಕೆ ಬೀಳುತ್ತಾನೆ. ಆಗ ಆತನ ಬೆನ್ನು ತನ್ನ ಕುರ್ಚಿಗೆ ತಾಗಿ, ಕುರ್ಚಿ ಕ್ಯಾಬಿನ್ನ ಚೌಕಕ್ಕೆ ತಾಗಿ ನಿಶ್ಯಬ್ಧವಾಗಿದ್ದ ಆಫೀಸಿನ ತುಂಬಾ ಒಮ್ಮೆಲೆ ಸದ್ದು ಮೂಡುತ್ತದೆ. ಅಲ್ಲಿಯವರೆಗೂ ಬುಜಂಗ್ ರಾವಿನ ಕ್ಯಾಬಿನಿಂದ ಒಂದೇ ಸಮನೆ ಮೂಡುತ್ತಿದ್ದ ಸದ್ದು ಕುರ್ಚಿಯ ಸದ್ದುಕೇಳಿ ನಿಂತುಬಿಡುತ್ತದೆ. ಪುನ್ಹ ಮತ್ತೊಂದು ಮಹಾಮೌನ! ಅಜಯ್ ನ ಎದೆ ಡವ-ಡವ ಬಡಿದುಕೊಳ್ಳುತ್ತಿರುತ್ತದೆ. ಅದರ ಸದ್ದು ಕಿವಿಗೆ ಕೇಳುವಷ್ಟು ಜೋರು. ಹಣೆಯಲ್ಲಿ ಬೆವರಿನ ನದಿಯೇ ಹರಿದು ನೆಲದಮೇಲೆ ಹನಿಗೂಡುತ್ತಿರುತ್ತದೆ. ಕೆಲಕ್ಷಣಗಳಲ್ಲೇ ಕ್ಯಾಬಿನಿನ ಬಾಗಿಲನ್ನು ತೆರೆದ ಆ ಸದ್ದು ತನ್ನ ಬೂಟುಗಾಲಿನಿಂದ ಆಫೀಸಿನ ತುಂಬೆಲ್ಲ ನೆಡೆಯುತ್ತದೆ. ಆ ರಾಜನೆಡಿಗೆಯ ಹೆಜ್ಜೆಗಳ ನಡುವಿನ ಅಂತರ ಅದರಲ್ಲಿ ಯಾವುದೇ ಭಯವಿರದ ಭಾವವನ್ನು ತಿಳಿಸುತ್ತಿರುತ್ತದೆ. ಅಜಯ್ ತನ್ನ ಕಣ್ಣು ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಂಡು ತಲೆಕೆಳಗು ಮಾಡಿ ಕೂತಿರುತ್ತಾನೆ. ಕೆಲನಿಮಿಷಗಳ ನಂತರ ಆ ಸದ್ದು ಆಫೀಸಿನ ಕಿಟಕಿಯನ್ನು ಇಳಿದು ಮರೆಯಾಗದಿದ್ದರೆ ಅಜಯ್ ಕೂತಲ್ಲಿಯೇ ಎದೆಯೊಡೆದು ಸಾಯುವುದು ಖಚಿತವಾಗಿದ್ದಿತು....!

**

'ಅರ್ರೆ!! ಏನ್ರಿ ಇದು .. ದೀಪಾವಳಿ ಬೋನಸ್ ಮೂರ್ ತಿಂಗ್ಳು ಮೊದ್ಲೇ ಬಂತರ್ಲಿ..' ಎಂದು ಮೊಬೈಲನ್ನು ನೋಡಿ ಕೂಗಹತ್ತಿದ ಮಹೇಶ. ಆತ ಹೇಳಿದಂತೆಯೇ ಆಫೀಸಿನ ಎಲ್ಲರ ಸ್ಯಾಲರಿ ಅಕೌಂಟಿಗೆ ಒಂದೇ ಸಮನಾದ ಹಣ ಜಮಾವಣೆಯಾಗಲ್ಪಟ್ಟಿರುತ್ತದೆ. ಎದ್ದು ನಿಂತ ಎಲ್ಲರು ಮಿಕ ಮಿಕ ಕಣ್ಣುಗಳನ್ನು ಬಿಟ್ಟು ಒಬ್ಬರನ್ನೊಬ್ಬರು ನೋಡತೊಡಗಿದರು. 'ಬುಜಂಗ್ ರಾವ್ ಯಾವಾಗ ಇಷ್ಟು ಬದಲಾದ?' ಎಂಬ ಪ್ರೆಶ್ನೆಯೊಂದೇ ಆ ಎಲ್ಲ ನೋಟಗಳಲ್ಲೂ.

**

ಆ ದಿನ ರಾತ್ರಿ ಪುನ್ಹ ತನ್ನ ಹೋಟೆಲಿನ ಕೋಣೆಯಿಂದ ಹೊರಟ ಆ ಆಕೃತಿ ಸಿಟಿಯ ಮೂಲೆಯಲ್ಲಿದ್ದ ಭುಜಂಗ್ ರಾವಿನ ಮತ್ತೊಂದು ಚಿನ್ನದ ಅಂಗಡಿಗೆ ನೆಡೆಯಿತು. ಎಂದಿನಂತೆ ಹತ್ತಾರು ಚಿನ್ನದ ಆಭರಣಗಳನ್ನು ಪಡೆದ ಅದು ಸಾದ್ಯವಾದಷ್ಟು ತನ್ನ ಕೈಗಳ ಮೇಲೆ ಹರಿದಾಡಿಸಿ ಇನ್ನೇನು ಹೊರನೆಡೆಯಬೇಕು ಎನ್ನುವಷ್ಟರಲ್ಲಿ ಅಲ್ಲಿ ಕೆಲಸಕ್ಕಿದ್ದ ಒಬ್ಬ ಹುಡುಗ 'ನಮಸ್ಕಾರ ಸಾರ್' ಎಂದು ಸಲಾಂ ಮಾಡಿದ. ಕಕ್ಕಾಬಿಕ್ಕಿಯಾದ ಆ ಆಕೃತಿ ಒಂದು ಕ್ಷಣವೂ ಅಲ್ಲಿ ನಿಲ್ಲದೆ, ಏನನ್ನೂ ಮಾತನಾಡದೆ ಬಿರಬಿರನೆ ಹೊರಬಂದಿತು. ರೂಮಿಗೆ ಬಂದ ಕೂಡಲೇ ಕೈಗೆ ಅಂಟಿಕೊಂಡಿದ್ದ ಚಿನ್ನದ ಪುಡಿಯನ್ನು ತೊಳೆದು ಫೋಟೋವಿನ ಮುಂದಿದ್ದ ಪೊಟ್ಟಣದ ಒಳಗೆ ಸುರಿಯಿತು. ಹೆಚ್ಚುಕಡಿಮೆ ಆ ಸಣ್ಣ ಪೊಟ್ಟಣದ ಅರ್ಧದಷ್ಟು ತುಂಬಿದ ಚಿನ್ನದ ಪುಡಿಯನ್ನು ಇಂದು ಒಂದು ದಪ್ಪ ಕಬ್ಬಿಣದ ಸಣ್ಣ ಪಾತ್ರೆಯಲ್ಲಿ ಸುರಿದು ಗ್ಯಾಸಿನ ಮೇಲಿಟ್ಟು ಕಾಯಿಸತೊಡಗಿತು. ಹೆಚ್ಚುಕಡಿಮೆ ಒಂದೆರಡು ತಾಸಿನ ಚಟುವಟಿಕೆಯ ನಂತರ ತನ್ನ ಬಹುದಿನದ ಕನಸ್ಸನ್ನು ನನಸ್ಸಾಗಿಸಿದ ಖುಷಿಯಲ್ಲಿ ಸಣ್ಣ ಬುಲೆಟ್ ಆಕಾರದ ಚಿನ್ನದ ಗುಂಡನ್ನು ತಯಾರಿಸಿ ಆ ಫೋಟೋವಿನ ಮುಂದಿರಿಸಿ ಅದರ ಪಕ್ಕಕ್ಕೆ ತನ್ನ ಜೇಬಿನಲ್ಲಿದ್ದ ಪಿಸ್ತೂಲನ್ನೂ ಇಟ್ಟು ಒಂದೇ ಸಮನೆ ಬಿಕ್ಕಿ ಬಿಕ್ಕಿ ಅಳತೊಡಗಿತು. ಕೂಡಲೇ ಹೊರಗಿನ ಹಾಲಿನಿಂದ ಬಂದ ಸದ್ದು ಆಕೃತಿಯನ್ನು ಜಾಗೃತಗೊಳಿಸಿತು. ಆದರೆ ಹೊರಬಂದು ನೋಡಿದರೆ ಅಲ್ಲಿ ಏನೇನೂ ಕಾಣದು. ನಂತರ ಪುನ್ಹ ಎಂದಿನಂತೆ ತನ್ನ ಹೋಟೆಲು ಕೋಣೆಯಿಂದ ಹೊರನೆಡೆದು ಭುಜಂಗರಾವಿನ ಆಫೀಸ್ಸಿನ ಹಿಂಬಾಗಿಲನ್ನು ಅದು ತಲುಪಿತು. ಆತನ ಕಂಪ್ಯೂಟರ್ ಅನ್ನು ತೆರೆದು ತನ್ನ ಕೆಲಸವನ್ನು ಪ್ರಾರಂಭಿಸಿತು.



******************



                                                              Present Day.. 


ದೀಪಕ್ ಮೆಹ್ತಾ ಸತ್ತು ಅಲ್ಲಿಗೆ ಹತ್ತು ದಿನಗಳು ಕಳೆದಿದ್ದವು. ಪೊಲೀಸರ ಖಾಸಾವಾಗಿದ್ದ ಭುಜಂಗರಾವ್ ಅದು ಆತ್ಮಹತ್ಯೆ ಎಂದು ರಿಪೋರ್ಟ್ ಕೊಡುವಂತೆ ಅವರುಗಳಿಗೆ ತಿಳಿಸುತ್ತಾನೆ! ಅಂತೆಯೇ ವಿದೇಶದ ಬಿಸಿನೆಸ್ ಅಲ್ಲಿ ಸೋತು, ತನ್ನ ಇಲ್ಲಿಯ ಕಂಪನಿಯ ಅಷ್ಟೂ ಷೇರನ್ನು ಬುಜಂಗ್ ರಾವಿಗೆ ಮಾರಿಬಂದ ಹಣದಿಂದ ಅಲ್ಲಿಯ ಸಾಲವನ್ನು ತೀರಿಸಲು ಪ್ರಯತ್ನಿಸಿದರೂ ಇನ್ನೂ ಬೆಟ್ಟದಷ್ಟು ಬಾಕಿ ಉಳಿದಿದ್ದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಕೊನೆಯ ರಿಪೋರ್ಟ್ ನಲ್ಲಿ ಪೋಸ್ಟ್ ಮಾರ್ಟಮ್ ರಿಪೋರ್ಟ್ ನ ಕೆಲ ಅಂಶಗಳನ್ನು ಬೇಕಂತಲೇ ತೆಗೆದು ಹಾಕಲಾಗಿತ್ತು. ಅದರಲ್ಲಿದ್ದ ಪ್ರಮುಖ ಅಂಶವೇನೆಂದರೆ ಘಟನೆ ನೆಡೆದ ದಿನದಿಂದ ಎರಡು ವಾರಗಳ ಮೊದಲೇ ದೀಪಕ್ ಮೆಹ್ತಾನ ಜೀವ ಹೋಗಿದೆ ಎಂಬ ಎದೆಯೊಡೆಯುವ ವಿಷಯ. ಅಲ್ಲದೆ ವಿದೇಶದಲ್ಲಿ ಮದುವೆಯಾಗಿ ನಂತರ ಡೈವೋರ್ಸ್ ಆದದ್ದರಿಂದ ಹಾಗು ಪೋಷಕರು ಮೊದಲೇ ತೀರಿಕೊಂಡಿದ್ದರಿಂದ ಆ ಬಗ್ಗೆ ಪ್ರೆಶ್ನಿಸುವುದಾಗಲಿ, ವಿಚಾರಿಸಲಾಗಲಿ ದೀಪಕ್ ರಾವ್ಗೆ ಯಾರೊಬ್ಬರೂ ಇರಲಿಲ್ಲ. ಬರಲಿಲ್ಲ.

**

'ನಿಖಿಲ್..!! Shit.. Shit..Shit!!' ಎಂದು ಸಿಟ್ಟಿನಿಂದ ಅರಚುತ್ತಾ ತಾನು ಕೂತಿದ್ದ ಟೇಬಲ್ಲನ್ನು ಒಂದೇ ಸಮನೆ ಬಡಿಯತೊಡಗಿದ ಭುಜಂಗರಾವ್. ತನ್ನ ಮಗನ ಫೋನು ಕಳೆದ ಎರಡು ವಾರದಿಂದ ನಾಟ್ ರೀಚ್ಯೆಬಲ್.. ಎಲ್ಲ ಪ್ಲಾನ್ನಂತೆ ನೆಡೆದಿದ್ದರೆ ಇಂದು ಆತ ಇಲ್ಲಿ ಬರಲೇಬೇಕಿತ್ತಲ್ಲ, ಎಲ್ಲಿ ಹೋದ ಆಸಾಮಿ ಎನುತ ಒಳಗೊಳಗೇ ಯೋಚಿಸತೊಡಗಿದ.

ಅದು ಬೆಳಗ್ಗೆ ಹತ್ತರ ಆಸುಪಾಸು. ಎಂದಿನಂತೆಯೇ ಲೇಟಾಗಿ ಕೆಲಸಕ್ಕೆ ಬಂದ ಅಜಯ್ ನನ್ನು ಕಂಡು ಮಹೇಶ,

'ರೀ ಅಜಯ್ , ಇವತ್ತು ಭುಜಂಗ ನಿಮಗಿಂತ ಬೇಗ ಬಂದಿದ್ದಾನೆ. ನೀವ್ ಎಲ್ಲಿ ಅಂತಾನೂ ಕೇಳ್ದ..!'

'ಕೇಳ್ಲಿ ಬಿಡ್ರಿ.. ಅವ್ನ್ ಯಾಕೆ ಬೇಗ ಬರೋದು, ಲೇಟಾಗಿ ಹೋಗೋದು ನಂಗೆ ಎಲ್ಲ ಗೊತ್ತು, ಅಪ್ಪ ಮಕ್ಳ ಬಿಸಿನೆಸ್.. '

'ಅಪ್ಪ ಮಗನ ?.. ಯಾರಿ ಅಪ್ಪ, ಮಗ ಯಾರ್ರೀ?'

'ಜಸ್ಟ್ ವೇಟ್ ಅಂಡ್ ವಾಚ್ ಮಹೇಶ್.. ಇನ್ ಕೆಲ್ವೇ ದಿನಗಳಲ್ಲಿ ಎಲ್ಲ ಕ್ಲಿಯರ್ ಆಗುತ್ತೆ' ಎಂದು ಹೇಳಿ ತನ್ನ ಲ್ಯಾಪ್ಟಾಪ್ ಬ್ಯಾಗನ್ನು ಟೇಬಲ್ಲಿನ ಮೇಲೆ ಇಟ್ಟನಷ್ಟೇ

'ಪಟಾರ್..!' ಎಂಬ ಪಟಾಕಿ ಸಿಡಿದಂತ ಭಯಂಕರ ಸದ್ದು ಭುಜಂಗ್ ರಾವಿನ ಕ್ಯಾಬಿನ್ ಒಳಗಡೆಯಿಂದ ಬಂದಿತು! ಉದ್ಯೋಗಿಗಳೆಲ್ಲ ಕೂಡಲೇ ಎದ್ದು ನಿಂತು ಒಳಗೇನಾಯಿತೆಂದು ಬಾಗಿಲು ತೆರೆದು ನೋಡುತ್ತಾರೆ, ಬೆಚ್ಚಿ ಬೀಳಿಸುವಂತಹಃ ದೃಶ್ಯ ಅಲ್ಲಿದವರೆಲ್ಲರ ನಿಂತ ನೆಲವನ್ನೇ ಕಂಪಿಸುವಂತೆ ಮಾಡುತ್ತದೆ. 'ಹೂ..!' ಎನುತ ವಿಕಾರವಾಗಿ ಕೂಗುತ್ತಾ ಅರಚುತ್ತಾ ಹಲವರು ಅಲ್ಲಿಂದ ಓಟ ಕಿತ್ತರೆ ಕೆಲವರು ಆ ದೃಶ್ಯವನ್ನು ನೋಡಿ ನಿಂತಲ್ಲೇ ತಲೆಸುತ್ತು ಬಂದು ಕೆಳಗೆ ಬಿದ್ದರು.ಕೆಲದಿನಗಳ ಹಿಂದಷ್ಟೇ ತನ್ನ ಕಣ್ಣ ಗುಡ್ಡೆ ಹೊರಬಂದು ವಿಕಾರವಾಗಿ ಸತ್ತು, ಚಿತೆಯಲ್ಲಿ ಸುಟ್ಟು ಭಸ್ಮವಾಗಿದ್ದ ದೀಪಕ್ ರಾವ್ ಭುಜಂಗರಾವಿನ ಕ್ಯಾಬಿನ್ನೊಳಗೆ ಪ್ರತ್ಯಕ್ಷನಾಗಿದ್ದಾನೆ!! ದೀಪಕ್ ಮೆಹ್ತಾನ ಕೈ ಗಳು ಗನ್ ಒಂದನ್ನು ಹಿಡಿದು ರಕ್ತದ ಮಡುವಿನಲ್ಲಿ ಮಲಗಿದ್ದ ಬುಜಂಗ್ ರಾವಿನ ಕಡೆಗೆ ಬೊಟ್ಟುಮಾಡಿರುತ್ತದೆ!

**

No comments:

Post a Comment