Friday, January 18, 2019

ಮೆಹ್ತಾ Killed ಮೆಹ್ತಾ! - Part 1

ಇದ್ದಕ್ಕಿಂದಂತೆ ಶುಭ್ರ ನೀಲಾಕಾಶವನ್ನು ಕರಿಮೋಡಗಳ ಹಿಂಡು ಮುಗಿಬಿದ್ದು ಅವರಿಸತೊಡಗಿದವು. ಅಲ್ಲಿಯವರೆಗೂ ಚಿಲಿಪಿಲಿಗುಡುತ್ತಿದ್ದ ಹಕ್ಕಿಗಳೂ ಸಹ ತಮ್ಮ ತಮ್ಮ ಗೂಡನ್ನು ಸೇರುವ ನೆಪದಲ್ಲಿ ಒಂದೊಂದಾಗಿಯೇ ಕಣ್ಮರೆಯಾಗತೊಡಗಿದವು. ಹೊಂಚು ಹಾಕಿ ಅಡಗಿ ಕೂತಂತಿದ್ದ ಗಾಳಿ ಎಲ್ಲಿಂದಲೋ ರಭಸವಾಗಿ ಬೀಸತೊಡಗಿತು.

ನಂತರದ ಕೆಲ ಕ್ಷಣ ಒಂದು ಮಹಾ ಮೌನ.

'ಇದೆಂತಾ ಕ್ಲೈಮೇಟ್ ಅಜಯ್.. ಪಕ್ಕಾ ಮಳೆ.. ಆಫೀಸ್ನಿಂದ ಬೇಗ ಹೊರ್ಟ್ವೋ, ಬದ್ಕೋತೀವಿ.. ಇಲ್ಲ ಅಂದ್ರೆ ನಾಳೆ ಮೋರಿಲೋ ಕೆರೀಲೋ ಬಿದ್ದಿರ್ತಿವಿ ನೋಡಿ'

'ರೀ , ಯಾಕ್ರೀ ಮಳೆ ಅಂದ್ರೆ ಅಷ್ಟ್ ಎದ್ರುತ್ತಿರ ನೀವು.. ಏನ್ ಒಂಚೂರು ಮಳೆ ಬಂದ್ ಮಾತ್ರಕ್ಕೆ ಊರೇ ಮೂಳ್ಗೋಗುತ್ತಾ.. ಒಳ್ಳೆ ಮಕ್ಳ್ ತರ ಆಡ್ಬೇಡಿ, ತಗೋಳಿ' ಏನುತಾ ಮಹೇಶನ ತುಟಿಯ ಮೇಲಿದ್ದ ಸಿಗರೇಟಿನ ತುದಿಗೆ ಲೈಟರ್ರನ್ನು ಹಿಟ್ಟು ತಾನೂ ಒಂದು ಸಿಗರೇಟನ್ನು ಹೊತ್ತಿಸುತ್ತಾನೆ ಅಜಯ್ ರಾವ್.

'ಹಾಗೇನಿಲ್ಲ ಅಜಯ್, ಈ ಬೇವರ್ಸಿ ಮಳೆ ಬಂದು ಮಾಡೋ ಅನಾಹುತ ಒಂದೋ ಎರಡೂ ಹೇಳಿ. ಆ ಕಡೆ ಹಳ್ಳಿ-ಗಿಳ್ಳಿ ಕಡೆ ಬಂದ್ರೆ ಅದೊಂತರ. ಅದ್ ಬಿಟ್ಟು ಈ ಕಾಂಕ್ರೀಟ್ ಸಿಟಿಗ್ ಬಂದು ಮಾಡೋದು ಏನಿದೆ ಇದ್ರ ಪಿಂಡ' ಏನುತಾ ನಾಲ್ಕೇ ದಮ್ಮಿನಲ್ಲಿ ಎರಡಿಂಚಿನ ಸಿಗರೇಟನ್ನು ಎಳೆದು ಬಿಸಾಕಿದ.

'ತತ್, ರೀ ಅದು ಸಿಗರೇಟ್ ಕಣ್ರೀ .. ಹೆಲ್ತ್ ಮೇಲೆ ನಿಗಾ ಇರ್ಲಿ'

'ಗೊತ್ತು ಬಿಡ್ರಿ ಕಂಡಿದ್ದಾರೆ.. ಏನ್ ಇವತ್ತ್ ಎಳೀತಿಲ್ಲ.. ಬನ್ನಿ ಆಕಡೆ ಹೋಗಿ ಒಂದೆರ್ಡು ಕಪ್ಪ್ ಕಾಫಿ ಕುಡ್ಕೊಂಡ್ ಬರೋಣ.. ಬಂದು ಹೋರ್ಡನ..' ಎಂದು ಇಬ್ಬರೂ ಕಂಪನಿಯ ಗ್ರೌಂಡ್ ಫ್ಲೋರ್ ನಿಂದ ಕೆಲವೇ ಮೀಟರ್ ದೂರದಲ್ಲಿದ್ದ ಗೂಡಂಗಡಿಯ ಕಡೆಗೆ ನೆಡೆಯುತ್ತಾರೆ.

ಗಾಳಿಯ ಬಿರುಸಿಗೆ ಅಜಯ್ ತಾನು ಎಳೆದು ಬಿಡುತ್ತಿದ್ದ ಸಿಗರೇಟಿನ ಹೊಗೆ ಬಾಯಿಂದ ಹೊರಬಾರದೆಯೇ ಎದೆಯೊಳಗೆಯೇ ಅಂತರ್ದಹನವಾಗುತ್ತಿತ್ತು. ಕಪ್ಪು ಮೋಡಗಳ ರಾಶಿ ಮಳೆಗಾಲದ ದಿನಗಳನ್ನು ನೆನೆಸುವಂತಿದ್ದವು. ಗೂಡಂಗಂಡಿಯ ಕಡೆಗೆ ನೆಡೆಯುತ್ತಾ ಎರಡೆಜ್ಜೆ ಹಿಟ್ಟಿರಬಹದಷ್ಟೇ, ಆರು ಅಂತಸ್ತಿನ ಆಫೀಸಿನ ಕಟ್ಟಡದಿಂದ ಒಮ್ಮೆಲೇ ಏನೋ ಕೆಳಗೆ ಬೀಳುತ್ತಿರುವ ಹಾಗೆ ಅಜಯ್ ಗೆ ಅನಿಸುತ್ತದೆ. ಇನ್ನೇನು ಆತ ತಲೆ ಮೇಲೆತ್ತಿ ನೋಡಬೇಕು ಅನ್ನುವಷ್ಟರಲ್ಲಿ ದೊಪ್ಪನೆ ಬಿದ್ದ ಆ ದೇಹ ಛಿದ್ರ ವಿಛಿದ್ರವಾಗಿ ಮುರುಟಿಗೊಂಡಿತು! ಬಿದ್ದ ರಭಸಕ್ಕೆ ಅದರ ಧೈತ್ಯ ಕಣ್ಣಗುಡ್ಡೆಯೊಂದು ಹೊರಬಂದಿದ್ದರೆ ಕೈಕಾಲುಗಳೆಲ್ಲವೂ ಅಷ್ಟ ದಿಕ್ಕುಗಳಿಗೆ ತಿರುಚಿಗೊಂಡಿದ್ದವು. ಕ್ಷಣಮಾತ್ರದಲ್ಲಿ ಜರುಗಿದ ಈ ಘಟನೆಯನ್ನು ಕಂಡ ಮಹೇಶ ಅಕ್ಷರ ಸಹ ಮಾತಿಗೆಟ್ಟವನಂತೆ ವಿಕಾರವಾಗಿ ಅರಚುತ್ತಾ ಆಫೀಸಿನ ಒಳಗೋಡಿದ. ಅಜಯ್ ಮಾತ್ರ ನಿಂತ ನೆಲದಿಂದ ಕದಲಲಿಲ್ಲ. ತನ್ನ ತುಂಡು ಸಿಗರೇಟಿನ ಕೊನೆಯ ಧಮ್ಮನ್ನು ಎಳೆಯುತ್ತಾ ಆರನೇ ಅಂತಸ್ತಿನಿಂದ ಬಿದ್ದರೂ ಒಂದು ತೊಟ್ಟು ರಕ್ತ ಬಾರದ ತನ್ನ ಕಂಪನಿಯ ಮಾಲೀಕನ ಶವವನ್ನು ಸಂಶಯಗಣ್ಣಿನಿಂದ ನೋಡತೊಡಗಿದ!

ಚಿಟಪಟ ಮಳೆಯ ಸದ್ದು ಹೆಚ್ಚಾಗುತ್ತಿದ್ದಂತೆ ಅಜಯ್ ನ ಮೊಗದ ಮೇಲೊಂದು ವಿಚಿತ್ರವಾದೊಂದು ಮಂದಹಾಸ ಮೂಡಿತು. ಅದಾಗಲೇ ಕಂಪನಿಯ ಜಂಟಿ ಮಾಲೀಕ ಮಿಸ್ಟರ್ ದೀಪಕ್ ಮೆಹ್ತಾರ ಸಾವಿನ ಸುದ್ದಿಯನ್ನು ಕೇಳಿ ನೂರಾರು ತಲೆಗಳು ಅಲ್ಲಿ ಬಂದು ಅವರಿಸಿದವು. ''ಅಯ್ಯೋ ದೇವರೇ', 'ಛೆ', 'ಪಾಪ' ಎಂಬ ಆಶ್ಚರ್ಯ ಸೂಚಕಗಳನ್ನು ಬಿಟ್ಟರೆ ಛಿದ್ರಗೊಂಡಿದ್ದ ಆ ದೇಹದ ಬಳಿಗೆ ಮಾತ್ರ ಯಾರೊಬ್ಬರೂ ಸುಳಿಯಲಿಲ್ಲ. ಕಪ್ಪು ಬಣ್ಣದ ಕೋಟಿನ ಮೇಲೆ ಮೊಡವೆ ಒಡೆದಂತೆ ಆ ನಲವತ್ತು ವರ್ಷದ ಕೇಶರಹಿತ ತಲೆ ನೋಡುಗರಿಗೆ ಗೋಚರಿಸುತ್ತಿತ್ತು. ಭಯ ಹುಟ್ಟಿಸುವಂತಿತ್ತು.

'ಎಂಥಾ ಬಾಸ್ ಸರ್ ಇವ್ರು.. ಕಂಪನಿಯ ಅಷ್ಟೋ ಷೇರನ್ನು ಭುಜಂಗರಾವ್ ರಿಗೆ ಮಾರಿ ಸಾಯೋ ಅಂಥದ್ದು ಏನು ಬಂದಿತ್ತೋ ನಾ ಕಾಣೆ ' ಅಳುವ ಧ್ವನಿಯಲ್ಲಿ ಎಂದ ಮಹೇಶನ ಮಾತಿಗೆ ಏನನ್ನೂ ಉತ್ತರಿಸದೆ ನಿಂತ ಅಜಯ್. ಆತನ ತಲೆಯಲ್ಲಿ ಅದಾಗಲೇ ಮುಂದಿನ ಹಾಗುಹೋಗುಗಳು ಗೋಚರಿಸತೊಡಗಿದ್ದವು. ಅವುಗಳಲ್ಲಿ ತನ್ನ ಪಾತ್ರವನ್ನು ಆತ ಗಟ್ಟಿಯಾಗಿಸಿಕೊಳ್ಳತೊಡಗಿದ! ಕೆಲಸಮಯದಲ್ಲೇ ಬಂದ ಪೊಲೀಸ್ ನೆರೆದಿದ್ದ ಜನರನ್ನು ದೂರ ಸರಿಸಿ ಅಲ್ಲಿದ್ದ ಕೆಲವರನ್ನು ವಿಚಾರಿಸತೊಡಗಿದರು.

ಕಂಪನಿಯ ಇನ್ನೋರ್ವ ಮಾಲೀಕ ಭುಜಂಗರಾವ್. ಬಿಸಿನೆಸ್ ಟ್ರಿಪ್ ಗೆ ಹೊರದೇಶಕ್ಕೆ ಹೋಗಿ ಸೀದಾ ಏರ್ಪೋರ್ಟ್ ನಿಂದ ಆಫೀಸಿಗೆ ಬಂದಿದ್ದ. ಕಳೆದ ಎರಡು ತಾಸಿನಿಂದ ತದೇಕಚಿತ್ತದಿಂದ ಕತ್ತಲೆಯ ಮಳೆಯಲ್ಲಿ ತೋಯುತ್ತಿದ್ದ ಶವವನ್ನೇ ನೋಡುತ್ತಿದ್ದ ಆತನನ್ನು ಯಾರೊಬ್ಬರೂ ಮಾತನಾಡಿಸುವ ಧೈರ್ಯವನ್ನು ಮಾಡಲಿಲ್ಲ. ಆದರೆ ಅಲ್ಲಿ ಬಿದ್ದಿದ್ದ ಆ ಶವಕ್ಕೂ ತನಗೂ ಇರುವ ಸಂಬಂಧದ ನಿಜಸತ್ಯವನ್ನೇನಾದರೂ ತಿಳಿದಿದ್ದರೆ ನಿಂತಲ್ಲಿಯೇ ಆತನ ಪ್ರಾಣಪಕ್ಷಿ ಹಾರಿಹೋಗಿದ್ದರೂ ಆಶ್ಚರ್ಯವಾಗುತ್ತಿರಲಿಲ್ಲ!! ಆ ಸಿಡುಕು ಮೊಗದ ಮೇಲೆ ಸಿಟ್ಟಿನ ಛಾಪೊಂದನ್ನು ಬಿಟ್ಟರೆ ಬೇರ್ಯಾವ ಭಾವವನ್ನೂ ಎಂದೂ ಯಾರೊಬ್ಬರೂ ಕಂಡಿರಲಿಲ್ಲ. ಇಂದೂ ಸಹ ಅದೇ ಸಿಡುಕು ಮೊರೆ ಶವವನ್ನು ತೀಕ್ಷ್ಣ ದೃಷ್ಟಿಯಿಂದ ನೋಡುತ್ತಿತ್ತು. ಪೋಲಿಸಿನವರು ಎಲ್ಲರನ್ನು ವಿಚಾರಿಸಿ ಕೊನೆಗೆ ಆತನ ಬಳಿಗೆ ಬಂದರು. ಆತ ಅವರನ್ನು ಕರೆದುಕೊಂಡು ಆಫೀಸಿನೊಳಗೆ ನೆಡೆದ. ಆಂಬುಲೆನ್ಸ್ ಬಂದು ಶವವನ್ನು ಹೊತ್ತೊಯ್ಯುವಷ್ಟರಲ್ಲಿ ರಾತ್ರಿ ಹತ್ತಾಗಿದ್ದಿತು.

ಅದಾದ ಕೆಲದಿನಗಳ ನಂತರ ಮಹೇಶ ಆಫೀಸಿಗೆ ಬಂದವನೇ ರೋಧಿಸತೊಡಗಿದ.

'ಸಾರ್.. ಸಾರ್' ಅಕ್ಷರಸಹ ಅಳುತ್ತಾ ಬಂದ ಮಹೇಶನನ್ನು ಕಂಡು ಕೋಪಗೊಂಡ ಅಜಯ್,

'ತತ್ತ್ ನಿಮ್ಮ.. ರೀ ಏನ್ರಿ ನಿಮ್ದು ಪ್ರಾಬ್ಲಮ್ಮು.. ಮೂವತ್ತು ವರ್ಷ ಆದ್ರೂ ಒಳ್ಳೆ ಮಕ್ಳ್ ತರ ಆಡ್ತೀರಾ..'

'ಸಾರ್ .. ಸಾ.. ರ್..'

'ರೀ! ನನ್ನ ಸರ್ ಅಂತ ಕರಿಯೋಕ್ಕೆ ಯಾರ್ರೀ ಹೇಳಿದ್ದು ನಿಮ್ಗೆ.. ಮುಚ್ಚ್ಕೊಂಡು ಹೆಸ್ರಿಟ್ಟು ಕರೀರಿ' ಎಂದ ಕೂಡಲೇ ಹೆಚ್ಚು ಕಡಿಮೆ ತನ್ನ ಅಣ್ಣನ ವಯಸ್ಸಿನ ವ್ಯಕ್ತಿಗೆ ಹೀಗೆನ್ನಬಾರದಿತ್ತು ಎನಿಸಿತು ಅಜಯನಿಗೆ. ತನ್ನ ಜೂನಿಯರ್ ಆಗಿ ಬಂದು ಇಂದು ತನಗೆ ಮುಚ್ಚ್ಕೊಂಡಿರ್ರಿ ಎಂದ ಮಾತಿಗೆ ಜಾಗೃತನಾದ ಮಹೇಶನೂ ಆಗ ಕೊಂಚ ಅಳುವುದ ನಿಲ್ಲಿಸಿದ. ಆದರೆ ನಂತರದ ಕೆಲವೇ ಕೆಲಕ್ಷಣದಲ್ಲಿ ಪುನ್ಹ ಅಳಲು ಶುರುವಿಟ್ಟುಕೊಂಡ. ಆತನಿಗೆ ಏನೇಳಿದರೂ ಅದು ತನ್ನ ಶಕ್ತಿಪೋಲು ಎಂದುಕೊಂಡು ಅಜಯ್ ತನ್ನ ಕೆಲಸದಲ್ಲಿ ಮಗ್ನನಾದ.

'ರೀ ಅಜಯ್.. ದೀಪಕ್ ಮೆಹ್ತಾ ಸರ್ ಅವ್ರ ಪೋಸ್ಟ್ ಮೊರ್ಟಮ್ ರಿಪೋರ್ಟ್ ಬಂತಂತೆ ರೀ…'

'ಸರಿ ಏನಿವಾಗ?'

'ಏನು ಅಂತೀರಾ , ಮೊನ್ನೆ ತಾನೇ ಅವ್ರು ಬಿದ್ದು ಸತ್ತೋಗಿದ್ದು?'

'ರೀ .. ಅದ್ ನಿಮ್ಗೆನು ಗೊತ್ತಿಲ್ವ?!'

'ಆದ್ರೆ ಪೋಸ್ಟ್ ಮಾರ್ಟಮ್ ರಿಪೋರ್ಟ್ ಪ್ರಕಾರ ಜೀವ ಹೋಗಿ ಕನಿಷ್ಠ ಅಂದ್ರೂ 2 ವಾರ ಆಗಿದೆಯಂತೆ ಸಾರ್!!' ಎಂದು ಮತ್ತೆ ಅಳುತ್ತ ಇಹಲೋಕವನ್ನೇ ಮರೆತ. ಯಾವುದೇ ಭಾವಗಳೂ ಸಹ ಅಜಯ್ನ ಮೊಗದ ಮೇಲೆ ಮೂಡಲಿಲ್ಲ. ಕೀಲಿಮಣೆಗಳ ಟಕಗುಡುವ ಸದ್ದು ಮಾತ್ರ ವಿಪರೀತವಾಯಿತು.

ಕೆಲವಾರಗಳ ಕೆಳಗೆ….

ಮಧ್ಯರಾತ್ರಿಯಾದರೂ ಮಲಗದ ಆ ಸಿಟಿಯ ಹೋಟೆಲೊಂದರಿಂದ ವ್ಯಕ್ತಿಯ ಆಕೃತಿಯೊಂದು ಹೊರಬರುತ್ತದೆ. ತಲೆಯ ತುಂಬಾ ಕಪ್ಪಾದ ಕವರ್ ಆಲ್ ಒಂದನ್ನು ತೊಟ್ಟು, ಕಣ್ಣಿಗೆ ದೊಡ್ಡ ಗಾಜಿನ ವೃತ್ತಾಕಾರದ ಕನ್ನಡಕದ ಜೊತೆಗೆ ಕೈಗಳೆರಡನ್ನು ತನ್ನ ಜೇಬಿನೊಳಗೆ ತೂರಿಸಿ ನೆಡೆಯುವ ಆ ಆಕೃತಿ ಪ್ರತಿದಿನ ಭುಜಂಗರಾವ್ ನ ಚಿನ್ನದ ಅಂಗಡಿಗಳ ಒಳಗೆ ಬರುತ್ತದೆ. ಒಂದಿನಿತೂ ಚಿನ್ನವನ್ನು ಖರೀದಿಸದೆ ಪ್ರತಿಬಾರಿಯೂ ಹತ್ತಾರು ಚಿನ್ನದ ಆಭರಣಗಳನ್ನು ಪಡೆದು ಮುಟ್ಟಿ ಇಟ್ಟು ಕೈಗೆ ಕೊರಳಿಗೆ ಹಾಕಿಕೊಂಡು ಒಂದರ್ಧ ತಾಸಿನ ನಂತರ ಏನನ್ನೂ ಕೊಳ್ಳದೆ ಮರೆಯಾಗುತ್ತಿತು. ನಂತರ ರೂಮಿಗೆ ವಾಪಸ್ಸಾಗುತ್ತಿದ್ದ ಅದು ಜೇಬಿನೊಳಗೆ ಮುಷ್ಠಿ ಮಾಡಿ ಇರಿಸಿಕೊಂಡಿದ್ದ ಕೈಗಳನ್ನು ಹೊರತೆಗೆದು ಪಾತ್ರೆಯೊಂದರಲ್ಲಿ ಇರಿಸಿದ್ದ ನೀರಿನಂತಿದ್ದ ಕೆಮಿಕಲ್ ನೊಳಗೆ ತೊಳೆಯುತ್ತದೆ. ನೋಡ ನೋಡುತ್ತಲೇ ಮಿರಿ ಮಿರಿ ಮಿರುಗುವ ಸಣ್ಣ ಸಣ್ಣ ಚಿನ್ನದ ಕಣಗಳು ಆ ಪಾತ್ರೆಯ ತಳ ಸೇರುತ್ತವೆ! ಸಿಟಿಯ ಎಲ್ಲೆಡೆ ಇದ್ದ ಭುಜಂಗರಾವ್ ನ ಹತ್ತಾರು ಅಂಗಡಿಗಳಿಗೂ ಪ್ರತಿದಿನ ಒಂದರಂತೆ ಹೋಗಿ ದಿನಕ್ಕೆ ಕೆಮಿಕಲ್ ಮೆತ್ತಿದ ತನ್ನ ಕೈಗಳಿಂದ ಕನಿಷ್ಠವೆಂದರೂ ಕಾಲು ಗ್ರಾಂ ಚಿನ್ನವನ್ನು ಲಪಟಾಯಿಸುತ್ತಿತ್ತು ಆ ಆಕೃತಿ. ಹೀಗೆ ಸೋಸಿ ತೆಗೆಯಿತ್ತಿದ್ದ ಚಿನ್ನವನ್ನು ಒಂದು ಸಣ್ಣ ಪೊಟ್ಟಣದೊಳಗೆ ತುಂಬಿ ಆ ಪೊಟ್ಟಣವನ್ನು ದಂಪತಿಗಳಿಬ್ಬರ ಫೋಟೋವಿನ ಮುಂದಿರಿಸುತಿತ್ತು ಮತ್ತು ಕೆಲಕಾಲ ಮೌನವಾಗುತ್ತಿತ್ತು. ನಂತರದ ಕೆಲಹೊತ್ತಿನಲ್ಲಿಯೇ ಬೇರೋದು ಕಾರ್ಯದ ನಿಮಿತ್ತ ರಾತ್ರಿಯೇ ಬುಜಂಗ್ ರಾವಿನ ಆಫೀಸಿನ ಹಿಂಬಾಗಿಲನ್ನು ತಲುಪುತ್ತಿತ್ತು!

Continued ....

No comments:

Post a Comment