Sunday, December 23, 2018

ಕನ್ನಡಿಗನೊಬ್ಬನ ಕ್ಲಾಸಿಕ್ ವಿಮಾನಗಳು ಆಗಸದಲ್ಲಿ ಹಾರುವುದನ್ನು ನೋಡಲು ಇನ್ನೆಷ್ಟು ದಶಕಗಳು ಕಾಯಬೇಕೋ?!

'ಈತ ನಮ್ಮ ನೂರು ಬಿಲಿಯನ್ ಕಂಪನಿಯ ಚೇರ್ಮ್ಯಾನ್. ಅಪ್ಪನ ಕಂಪನಿಯನ್ನು ಮುನ್ನೆಡಿಸಿಕೊಂಡು ಬಂದು ಎದ್ವಾ ತದ್ವಾ ಸಾಲವನ್ನು ಮಾಡಿ ತೀರಿಸಲಾಗದೆ ಇಂದು ವಿದೇಶದಲ್ಲಿ ಅಡಗಿ ಕೂತಿದ್ದಾನೆ. ಆತ ಮಾಡಿರುವ ಸಾಲದ ಮೊತ್ತ ಹೆಚ್ಚು ಕಡಿಮೆ ನಮ್ಮ ಇಡೀ ಕಂಪನಿಯ ರೆವೆನ್ಯೂ ಮೊತ್ತಕ್ಕೆ ಸಮ. ನಮ್ಮ ಕಂಪನಿಯನ್ನಷ್ಟೇ ಅಲ್ಲದೆ ನಮ್ಮನ್ನು ನಂಬಿಕೊಂಡು ಕೂತಿರುವ ಇನ್ನೂ ಹತ್ತಾರು ಕಂಪನಿಗಳ ಭವಿಷ್ಯದೊಟ್ಟಿಗೆ ಚೆಲ್ಲಾಡಿ ಮರೆಯಾದವನಿವ' ಎಂಬಮಾತುಗಳಿಗೆ ಪೂರಕವಾಗಿರುವ ಹಾಗು ಅದೇ ಪೇಜಿನಲ್ಲಿ ಕಂಪನಿಯ ಇತರ ಉದ್ಯೋಗಿಗಳನ್ನು Mr. ಅಥವ Mrs. ಎಂಬ ಗೌರವ ಸೂಚಕಗಳನ್ನು ಬಳಸಿ ಸಂಭೋದಿಸಿ ಆದರೆ ಕಂಪನಿಯ ಚೇರ್ಮ್ಯಾನ್ ನನ್ನು ಕೇವಲ ಹೆಸರಿನಿಂದಷ್ಟೇ ಕರೆಯುವ ಕಂಪನಿಯ ವೆಬ್ಸೈಟ್ ಅನ್ನು ಎಲ್ಲಿಯಾದರೂ ಕಂಡಿರುವಿರಾ? ಇಲ್ಲವಾದರೆ ಒಂದು ಕಾಲಕ್ಕೆ ಇಡೀ ವಿಶ್ವದಲ್ಲೇ ಟಾಪ್ ಸ್ಪಿರಿಟ್ ಕಂಪನಿಗಳಲ್ಲಿ ಒಂದಾಗಿ ಇಂದು ಅಕ್ಷರ ಸಹ ತನ್ನ ಉಳಿವಿಗಾಗಿ ಪರದಾಡುತ್ತಿರುವ ಯುಬಿ.ಗ್ರೋಪ್ಸ್ ನ ವೆಬ್ಸೈಟ್ ಗೆ ಒಮ್ಮೆ ಭೇಟಿ ಕೊಡಿ. ತನಗೆ ಅನ್ನ ಕೊಟ್ಟ ಒಡೆಯನಾದರೂ, ತಪ್ಪು ಮಾಡಿದಾಗ ಆತನನ್ನು ಕಳ್ಳನೆಂದೇ ಕರೆಯುತ್ತೀವಿ ಎಂಬಂತಿದ್ದೆ ಅಲ್ಲಿಯ ಬೋರ್ಡ್ ಆಫ್ ಡೈರೆಕ್ಟರ್ ಗಳ ಮಾತುಗಳು.

ಯುಬಿ.ಗ್ರೋಪ್ಸ್. ವಿಠ್ಠಲ್ ಮಲ್ಯರಿಂದ ಹಿರಿದಾಗುತ್ತಾ ಬೆಳೆದುಬಂದ ಮದ್ಯದ ಈ ಸಂಸ್ಥೆ ಎಂಬತ್ತರ ದಶಕದಷ್ಟೊತ್ತಿಗೆ ದೇಶದ ಅತ್ಯುನ್ನತ ಸ್ಪಿರಿಟ್ ಕಂಪೆನಿಗಳಲ್ಲಿ ಒಂದೆನಿಸಿಕೊಂಡಿತ್ತು. ತಾನು ಕಟ್ಟಿದ ಭವ್ಯ ಕೋಟೆಯನ್ನು ಇನ್ನೂ ಹಿರಿದಾಗಿಸುವ ಕನಸ್ಸು ವಿಠ್ಠಲ್ ಮಲ್ಯರದು. ಆ ಕನಸ್ಸಿನ ಮೂಲಬೇರು ತನ್ನ ಏಕೈಕ ಸುಪುತ್ರ. ವಿದೇಶದಲ್ಲೇ ನೆಲೆಯೂರಿದ್ದ ಆತನನ್ನು ಇಲ್ಲಿಗೆ ಕರೆತರುವ ಮೊದಲು ಆತನ ಚಿಗುರು ಮೀಸೆಯ ಕಾಲದಲ್ಲೇ ತನ್ನದಲ್ಲದ ಬೇರೊಂದು ಕಂಪನಿಯಲ್ಲಿ (Hoechst Corporation ) ಕೆಲಸಮಾಡಲು ಸೂಚಿಸುತ್ತಾರೆ. ಕಾರಣ ವ್ಯವಹಾರಗಳ ಹಾಗು ಮಾರುಕಟ್ಟೆಯ ಹಾಗುಹೋಗುಗಳ ತಿಳುವಳಿಕೆ. ಇದು ಒಬ್ಬ ಕೋಟ್ಯಧಿಪತಿ ಅಪ್ಪನಿಗೆ ಇರುವ ಸಹಜ ತುಮುಲಾ. ತಾನು ಬೆಳೆಸಿಕೊಂಡು ಬಂದ ಸಾಮ್ರ್ಯಾಜ್ಯವನ್ನು ಮುನ್ನೆಡೆಸಿಕೊಂಡು ಒಯ್ಯುವ ಒಬ್ಬ ಸಾರಥಿ ನನ್ನ ಮಗನಾದರೆ ಸಾಕೆಂದು ಅವರ ಆಶಯವಿತ್ತೇನೋ. ಆದರೆ ಇತ್ತಕಡೆ ಖಾಸಗಿ ಕಂಪನಿಯಲ್ಲಿ ಸಾಮಾನ್ಯ ನೌಕರನಾಗಿ (ಊಹೆಯಷ್ಟೇ!) ದುಡಿಯುತ್ತಿದ್ದ ಬಿಸಿರಕ್ತದ ಆ ಮಗನಿಗೆ ವಯೋಸಹಜವಾದ ಅದೇನೇ ಶೋಕಿಗಳಿದ್ದರೂ ಕಂಪನಿಯನ್ನು ವಿಶ್ವಮಟ್ಟದಲ್ಲಿ ಮಿಂಚುವಂತೆ ಮಾಡುವ ಮಹಾದಾಸೆಯಿದ್ದಿತು. ಅಂತೆಯೇ 1983 ರಲ್ಲಿ ವಿಠ್ಠಲ್ ಮಲ್ಯರ ಕಾಲವಾದ ನಂತರ ಸಂಸ್ಥೆಯ ಆಡಳಿತ ಚುಕ್ಕಾಣಿಯನ್ನು ಹಿಡಿದ ಮಗ ನೋಡ ನೋಡುತ್ತಲೇ ದೇಶವೇ ಬೆರಗಾಗುವಂತಹ ಸಾಮ್ರಾಜ್ಯನು ಕಟ್ಟಿದ. ಕೇವಲ ಸ್ಪಿರಿಟ್ ಉದ್ಯಮವೊಂದೇ ಅಲ್ಲದೆ, ಇಂಜಿನಿಯರಿಂಗ್, ಟ್ರೇಡಿಂಗ್, ಕೆಮಿಕಲ್ಸ್, ಫಾರ್ಮುಲಾ ಒನ್ ರೇಸ್, ಐಪಿಎಲ್, IT Consulting ನಂತಹ ಹತ್ತಾರು ವಲಯಗಳನ್ನು ಆಕ್ರಮಿಸಿಕೊಳ್ಳುತ್ತಾ, ನಷ್ಟ ಹೊಂದುತ್ತಿದ್ದ ಕೆಲ ಸಂಸ್ಥೆಗಳನ್ನು ಮಾರುತ್ತಾ, ಅಪ್ಪನಿಂದ ಬಂದ ಸಂಸ್ಥೆಯ ವಹಿವಾಟನ್ನು ಒಂದಲ್ಲ ಎರಡಲ್ಲ ಬರೋಬ್ಬರಿ 64% ನಷ್ಟು ಹೆಚ್ಚಿಸಿ ತೋರಿಸುತ್ತಾನೆ. ಅದೂ ಸಹ ಕೇವಲ 15 ವರ್ಷಗಳ ಅಂತರದೊಳಗೆ. ಮುಂದೆ ಯುಬಿ.ಗ್ರೋಪ್ಸ್ ಕೇವಲ ಸ್ಪಿರಿಟ್ ಸಂಸ್ಥೆಯಂದಷ್ಟೇ ಅಲ್ಲದೆ ದೇಶದ ಅತ್ಯುನ್ನತ ಸಂಘಟಿತ ಸಂಸ್ಥೆಗಳಲ್ಲಿ ಒಂದಾಯಿತು.

ಹೆಸರು ವಿಜಯ್ ವಿಠ್ಠಲ್ ಮಲ್ಯ. ಬ್ರಾಹ್ಮಣನೆಂಬ ಗರಿ ಹೆಸರಿಗೆ ಮಾತ್ರ. ಉಳಿದಂತೆ ಮನುಷ್ಯ ಏಕ್ದಂ ಮಾಸ್ ವಿಥ್ ಕ್ಲಾಸ್. ಆ ರಂಗು ರಂಗಿನ ಬಟ್ಟೆಗಳೇನು, ಕೋಟಿ ಬೆಲೆಬಾಳುವ ವಾಚು ಶೆಡ್ಗಳೇನು, ಕೈಯಲೊಂದು ಎಣ್ಣೆಯ ಬಾಟಲು, ಸೊಂಟದ ಪಕ್ಕಕೊಬ್ಬಳು ರಂಬೆಯಂತಹ ಬೆಡಗಿ. 'ಕಿಂಗ್ ಆಫ್ ಗುಡ್ ಟೈಮ್ಸ್' ಎಂಬ ಮಾತಿಗೆ ಪಕ್ಕಾ ಅನ್ವರ್ಥ ನಾಮವಾಗಿದ್ದಿತು ಆತನ ವಿಲಾಸಿ ಜೀವನ. Hopefully ಹೀಗಲೂ ಹೆಚ್ಚು ಕಡಿಮೆ ಹಾಗೆಯೆ ಇದೆ. ಆತ ತೆರೆಯ ಹಿಂದೆ ಅದೇನೇ ಮಾಡಲಿ, ಆದರೆ ಮಾರುಕಟ್ಟೆಯ ತೆರೆಯ ಮುಂದೆ ಆತನೊಬ್ಬ ಪಕ್ಕಾ ಬಿಸಿನೆಸ್ ಮ್ಯಾನ್. ಜನ ಯಾವುದನ್ನು ಆತನ ಶೋಕಿ ಎಂದು ಕರೆಯುತ್ತಿದರೋ ಅವುಗಳೆಲ್ಲವೂ ಇಂದು ವಿಶ್ವಪ್ರಖ್ಯಾತ ಬ್ರಾಂಡ್ ಗಳಾಗಿ ಕೋಟ್ಯಂತರ ಜನರ ಮನೆಮಾತಾಗಿವೆ. ಬ್ರಾಂಡ್ ಎಂಬ ಪದದ ನಿಜ ಅರ್ಥ ತಿಳಿದವರಿಗಷ್ಟೇ ಗೊತ್ತು ಒಂದು ಬ್ರಾಂಡನ್ನು ಕಟ್ಟುವುದೆಷ್ಟು ಕಷ್ಟವೆಂದು. ಈಗಂತೂ ಕಟ್ಟುವುದೆಂದರೆ ಪಂಚೆ ಉಡುವ ಮೇಸ್ಟ್ರಿಯೂ ಕಟ್ಟುತ್ತಾನೆ. ಆದರೆ ಕಟ್ಟಿದ ಆ ಬ್ರಾಂಡನು ಜಗತ್ತಿನ ಮೂಲೆ ಮೂಲೆ ಗಳ ಕೋಟಿ ಕೋಟಿ ಜನರ ನೆಚ್ಚಿನ ಪ್ರಾಡಕ್ಟ್ ಆಗಿ ಪರಿವರ್ತಿಸುವ ಕಾರ್ಯದಲ್ಲಿರುವ ಆ ಚಾಣಾಕ್ಷತನ ಕೇವಲ ಕುಡಿದು ತಿಂದು ತೇಗುವ ಡೊಳ್ಳೊಟ್ಟೆಗಳಿಗಳಿಗೆ ಬರುವಂತಹದಲ್ಲ. ಮಲ್ಯ ಈ ಮಾತಿಗೆ ಅಪವಾದ! ಅರ್ತಾಥ್ ಅಪ್ಪನಿಂದ ಬಳುವಳಿಯಾಗಿ ಪಡೆದ ಕೋಟೆಯೊಂದು ಇದ್ದಿದಂತೂ ನಿಜ. ಆದರೆ ಆ ಕೋಟೆಯನ್ನು ಸಾಮ್ರಾಜ್ಯವನ್ನಾಗಿ ಮಾಡಿ ತೋರಿಸಿದ ನಡೆಯಲ್ಲಿ ಆತನ ಮೋಜು ಮಸ್ತಿಯ ಆಟಗಳೆಲ್ಲವೂ ಗೌಣವಾಗುತ್ತವೆ. ಇಲ್ಲಿ ಮುಖದ ಮೇಲಿರುವ ಕಲೆಯೊಂದರಿಂದಷ್ಟೇ ಆ ವ್ಯಕ್ತಿತ್ವವನ್ನು ಅಳೆಯಾಲಾಗುತ್ತದೆಯೇ ವಿನಃ ಆದರ ಸುತ್ತಿರುವ ಆಕರ್ಷಕ ವ್ಯಕ್ತಿತ್ವದಿಂದಲ್ಲ.. ದೇಶವೆಂದರೆ ಟಾಟಾ, ಬಿರ್ಲಾ, ಅಂಬಾನಿ ಎಂದುಕೊಂಡವರಿಗೆ ಠಕ್ಕರ್ ಕೊಡುವ ಖಾಸಗಿ ಕಂಪನಿಯಾಗಿ ಯುಬಿ.ಗ್ರೋಪ್ಸ್ ಮಾರ್ಪಾಡಾಗತೊಡಗಿತು. ಅದು ಕೇವಲ ಕೊಟ್ಟು ಗಳಿಸುವ ವ್ಯವಹಾರವಷ್ಟೇ ಅಲ್ಲದೆ 'ವಾವ್' ಎಂಬ ಹ್ಯಾಪಿ ಫೀಡ್ಬ್ಯಾಕ್ ಗಳನ್ನು ಗ್ರಾಹಕರಿಂದ ಪಡೆಯುವ ಕಂಪೆನಿಯಾಯಿತು. ಎಲ್ಲ ಅಂದುಕೊಂಡಂತೆಯೇ ನೆಡೆಯುತ್ತಿತ್ತು. ಆಗ ಎಲ್ಲವೂ ಸರಿಯಾಗಿದ್ದಿತು.

ಅದು ವರ್ಷ 2003. ತನ್ನ ಬಹುವರ್ಷದ ಕನಸ್ಸೊಂದು ನನಸಾಗಿದ ದಿನವದು. ಮದ್ಯದ ಬಾಟಲಿಗಳ ಮೇಲೆ ಮೂಡಿ ಜಗತ್ಪ್ರಸಿದ್ದಿ ಹೊಂದಿದ ಅಕ್ಷರಗಳು ಈಗ ವಿಮಾನಯಾನ ವಲಯಕ್ಕೆ ಕಾಲಿರಿಸಿದವು. KFA (ಕಿಂಗ್ ಫಿಷರ್ ಏರ್ಲೈನ್ಸ್). ಆದರೆ ಸಂಸ್ಥೆ ತನ್ನ ವಿಮಾನವನ್ನು ಗಗನಕ್ಕೆ ಚಿಮ್ಮಿಸಲು ಬರೋಬ್ಬರಿ ಎರಡು ವರ್ಷ ಕಾಯಬೇಕಾಯಿತು. ಕೊನೆಗೂ ಮೇ 9, 2005 ರಲ್ಲಿ ಮುಂಬೈಯಿಂದ ಹೊರಟ Airbus A-320 ದೆಹಲಿ ವಿಮಾನ ನಿಲ್ದಾಣವನ್ನು ತಲುಪಿದಾಗ ಮಲ್ಯನ ಖುಷಿಗೆ ಪಾರವೇ ಇರಲಿಲ್ಲ. ಆದರೆ ಆ ಆಸಾಮಿಯ ಕನಸ್ಸು ಅಲ್ಲಿಗೆ ನಿಲ್ಲಲಿಲ್ಲ. ತನ್ನ ಕಂಪು ಬಿಳಿಪಿನ ಸೂಪರ್ ಕೂಲ್ ವಿಮಾನಗಳು ದೇಶವಿದೇಶಗಳ ನೆಲವನ್ನೂ ತಲುಪಬೇಕೆಂಬ ಮಹದಾಸೆ ಆತನದು. ಆದರೆ ನಮ್ಮ ದೇಶದ ಕಾನೂನಿನ ಪ್ರಕಾರ ಯಾವುದೇ ವಿಮಾನ ರಾಷ್ಟ್ರ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ಹಾರಲು ಇಚ್ಛಿಸಿದರೆ ಆ ಸಂಸ್ಥೆಯ ಆಯುಷ್ಯ ಕಡಿಮೆ ಎಂದರೂ 5 ವರ್ಷಗಳಾಗಿರಬೇಕು.

ಮಲ್ಯ ಯೋಚಿಸಿದ. ಯೋಜಿಸಿದ. ಅದು ಬಡಜನರ ಏರ್ಲೈನ್ ಎಂದೇ ಪ್ರಸಿದ್ದಿ ಹೊಂದಿದ್ದ, ಸಾಮಾನ್ಯರಲ್ಲಿ ಅತಿ ಸಾಮನ್ಯನೊಬ್ಬನೂ ಮನಸ್ಸು ಮಾಡಿದರೆ ವಿಮಾನಯಾನ ಸಂಸ್ಥೆಯನ್ನೇ ಹುಟ್ಟುಹಾಕಬಹುದೆಂಬುದನ್ನು ತೋರಿಸಿಕೊಟ್ಟಿದ್ದ ಕ್ಯಾಪ್ಟನ್ ಗೋಪಿನಾಥ್ ರವರ ಡೆಕ್ಕನ್ ಏವಿಯೇಷನ್ ಸಂಸ್ಥೆ ನಷ್ಟದಲ್ಲಿ ಸಾಗುತ್ತಿದ್ದ ಕಾಲ. ಧುಬಾರಿ ತೈಲ ಬೆಲೆ ಹಾಗು ಅಷ್ಟೇ ಧುಬಾರಿಯಾದ ನಿರ್ವಹಣ ವೆಚ್ಚವನ್ನು ಭರಿಸಲಾಗದೆ ಕುಂಟುತ್ತಿದ್ದ ಡೆಕ್ಕನ್ ಏವಿಯೇಷನ್ ಮಲ್ಯನ ಕಣ್ಣಿಗೆ ಚಿನ್ನದ ಕೋಳಿಯಾಗಿ ಕಾಣತೊಡಗಿತು. ಕಾರಣ ಒಂದು ಪಕ್ಷ ತಾನೇನಾದರೂ ಆ ಸಂಸ್ಥೆಯ ಬಹುಪಾಲು ಷೇರನ್ನು ಖರೀದಿಸಿದರೆ ಅದಾಗಲೇ ಹತ್ತು ವರ್ಷಗಳನ್ನು ಪೂರೈಸಿದ್ದ ಡೆಕ್ಕನ್ ಏವಿಯೇಷನ್ ಕಿಂಗಫಿಶರ್ ಏರ್ಲೈನ್ಸ್ ನ ವಿಮಾನಗಳಿಗೆ ವಿದೇಶದ ಟಿಕೆಟ್ ಆಗಿ ಪರಿಣಮಿಸುತ್ತಿತ್ತು. ಹುಮ್ಮಸ್ಸಿನ ವಿಜಯ್ ಅಂದು ಹಿಂದೂ ಮುಂದೂ ನೋಡದೆ ಡೆಕ್ಕನ್ ಏವಿಯೇಷ ನ್ನಿನ 26% ಷೇರುಗಳನ್ನು ಖರೀದಿಸಿದ. ಕಿಂಗ್ ಫಿಷರ್ ಪರದೇಶದ ನೆಲವನ್ನೂ ಸ್ಪರ್ಶಿಸಿತು.

ಗುರಿಯೇನೋ ಸ್ಪಷ್ಟವಾಗಿದ್ದಿತು. ಆತನ ಆ ಸಾಧನೆ ಆತನೊಬ್ಬನದೇ ಅಲ್ಲದೆ ಇಡೀ ಕಂಪನಿಯನ್ನು, ಒಂದು ಕೋನದಲ್ಲಿ ದೇಶವನ್ನೂ ಹೆಮ್ಮೆ ಪಡುವಂತೆ ಮಾಡಿತ್ತು. ಆದರೆ ಈ ಬಾರಿ ಕಾಲ ಮಾತ್ರ ಕೈಕೊಟ್ಟಿತ್ತು. ವಿಮಾನಯಾನ ಶುರುವಾದ ಮೊದಲ ವರ್ಷದಿಂದಲೂ ಕೇವಲ ನೆಗೆಟಿವ್ ನಿವ್ವಳ ಲಾಭವಷ್ಟೇ ಕಂಪನಿಯ ಪಾಲಾಗತೊಡಗಿತು. ಒಂದು ಸಮಯದಲ್ಲಿ ದೇಶದ ಎರಡನೇ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿ ಬೆಳೆದರೂ ಗುಡ್ಡದಂತೆ ಬೆಳೆಯುತ್ತಿದ್ದ ನಷ್ಟವನ್ನು ಮಾತ್ರ ಯಾರೊಬ್ಬರಿಂದಲೂ ತಪ್ಪಿಸಲಾಗಲಿಲ್ಲ. ಸಂಸ್ಥೆಯ ಉಳಿವಿಗಾಗಿ ರಾಶಿ ರಾಶಿ ಸಾಲದ ಹೊರೆ. ಕಿಂಗ್ ಆಫ್ ಗುಡ್ ಟೈಮ್ಸ್ ನ ಬ್ಯಾಡ್ ಟೈಮ್ ಶುರುವಾಯಿತು.

ಮುಂದೆ ನೆಡೆದ ವಿಷಯಗಳೆಲ್ಲ ನಮ್ಮ ಮಾಧ್ಯಮಗಳು ನಮ್ಮೆಲ್ಲರ ತಲೆಯಲ್ಲಿ ಅಳಿಸದಂತೆ ಹಚ್ಚೋತ್ತಿವೆ. ಕಳ್ಳ, ಸುಳ್ಳ, ಮೋಸಗಾರ, ಬಂಡ, ಪುಕ್ಕಲ etc etc. ಅಲ್ಲಿಯವರೆಗೂ ತನ್ನ ಅಣ್ತಮ್ಮ ಎಂದು ಹೆಮ್ಮೆಯಿಂದ ಹೆಸರಿಸಿಕೊಳ್ಳುತ್ತಿದ್ದ ಪಕ್ಷಗಳೂ 'ನಂದಲ್ಲ ನಿಂದು, ನಿಂದಲ್ಲ ನಂದು' ಏನುತಾ ಕೆಸರಾಟವನ್ನು ಆಡತೊಡಗಿದವು. ಅತ್ತ ಕಡೆ ನೋಡಿದರೆ ಅಸಲಿನ ಮೇಲೆ ಬಡ್ಡಿಯ ತೂಕ ಹೆಚ್ಚಾಗತೊಡಗಿತು. ನೌಕರರಿಗೆ ತಿಂಗಳ ಸಂಬಳ ಕೊಡಲು ಹಣವಿರಲಿಲ್ಲ. ನೌಕರರು ಮುಷ್ಕರಕ್ಕೆ ಕೂತರು. ವಿಮಾನಗಳ ಹಾರಾಟ ಕ್ಷೀಣಿಸತೊಡಗಿತು. ಇತ್ತ ಕಡೆ ನೌಕರರು ಅತಂತ್ರರಾಗಿ ಪರದಾಡುತ್ತಿದ್ದರೆ ಅತ್ತ ಕಡೆ ಮಲ್ಯ ಕೋಟಿ ಕೋಟಿ ಹಣವನ್ನು ಐಪಿಎಲ್ ಹಾಗು ತನ್ನ ಬರ್ತ್ಡೇಯ ವಿಜೃಂಭಣೆಯಲ್ಲಿ ಸುರಿಯತೊಡಗಿದ. ಭವ್ಯ ಭಾರತದ MP ಯಾಗಿ ತನ್ನ ನೌಕರರನ್ನು ನಡುನೀರಿನಲ್ಲಿ ಬಿಟ್ಟು ಮೋಜು ಮಸ್ತಿ ಮಾಡಿದನ್ನು ಮಾತ್ರ ಯಾರು ಕೂಡ ಕ್ಷಮಿಸಲಾರರು. ಬಹುಷಃ ಇದೆ ಶಾಪ ‘ರಿಚರ್ಡ್ ಬ್ರಾನ್ಸನ್ ಆಫ್ ಇಂಡಿಯ’ ಎಂದೆನಿಸಿಕೊಂಡಿದ್ದ ಮಲ್ಯನನ್ನು ಬಲವಾಗಿ ತಟ್ಟಿರಬೇಕು.

ಸರಿ ಸುಮಾರು ಮೂರು ದಶಕಗಳ ತನ್ನ ಬಿಸಿನೆಸ್ ಮಂತ್ರವನ್ನು ಮಲ್ಯ ಕಿಂಗ್ಫಿಷರ್ ಏರ್ಲೈನ್ಸ್ ಅನ್ನು ಮುನ್ನೆಡುಸುವಲ್ಲಿ ಏಕೋ ಮರೆತಿದ್ದ. ಅಲ್ಲ ಸ್ವಾಮಿ, ಒಂದಲ್ಲ ಎರಡಲ್ಲ ಬರೋಬ್ಬರಿ 8 ವರ್ಷಗಳಾದರೂ ಒಂದು ನಯಾ ಪೈಸೆ ಲಾಭವನ್ನು ಸಂಸ್ಥೆ ಗಳಿಸುತ್ತಿಲ್ಲವೆಂದರೆ ಅಲ್ಲಿ ಏನೋ ತೊಡಕಿದೆ ಎಂದರ್ಥ. ಆಗ ಮಾಲೀಕನಾಗಿ ಸಂಸ್ಥೆಯ ಮಾಡೆಲ್ ಅಥವಾ ಸ್ಟ್ರಾಟರ್ಜಿಯನ್ನು ಬದಲಿಸುವುದ ಬಿಟ್ಟು ಮತ್ತೂ ರಾಶಿ ರಾಶಿ ಹಣವನ್ನು ತಂದು ಸುರಿಯತೊಡಗಿದರೆ ಏನಾದೀತು?. ಅದು ಬ್ಯಾಂಕುಗಳ ಮರ್ಮವೊ ಅಥವಾ ಕರ್ಮವೋ, ಇಂದಲ್ಲ ನಾಳೆ ಏರ್ಲೈನ್ಸ್ ನ ಟೈಮ್ ಬದಲಾಗುತ್ತದೆ ಎಂದು ಕಾದು ಕುಳಿತದಷ್ಟೇ ಬಂತು ಅವುಗಳ ಪಾಲಿಗೆ. ಆತನ ಸಾಲದ ಮೊತ್ತ ಸಚಿನ್ ತೆಂಡುಲ್ಕರ್ನ ರನ್ನುಗಳಂತೆ ಬೆಳೆಯುತ್ತಲೇ ಹೋಯಿತು. ಅತ್ತ ಕಡೆ ಸಚಿನ್ ರನ್ ಗಳ ರಾಶಿಯನ್ನು ಹೊತ್ತು ನೆಮ್ಮದಿಯಿಂದ ನಿವೃತ್ತಿ ಹೊಂದಿದರೆ ಇತ್ತ ಕಡೆ ಮಲ್ಯ ಸಾಲದ ಹೊರೆಯನ್ನು ಹೊರಲಾರದೆ ಏರ್ಲೈನ್ ಬಿಸಿನೆಸ್ ನಿಂದ ನಿವೃತ್ತಿ ಹೊಂದತೊಡಗಿದ.

ತಾನು ಕಟ್ಟಿ ಬೆಳೆಸಿದ ಸಂಸ್ಥೆ ಹುಟ್ಟಿಸಿದ ಮಕ್ಕಳಿಗಿಂತಲೂ ಬಲು ಹತ್ತಿರ. ಆದರಿಂದಲೇನೋ ಅಂದು ಇತರೆ ವಿದೇಶಿ ಏರ್ಲೈನ್ ಸಂಸ್ಥೆಗಳು KFA ಯನ್ನು ಖರೀದಿಸಲು ಬಂದಾಗಲೂ ಮಲ್ಯ ಒಂತಿಷ್ಟೂ ಮನಸು ಮಾಡಲಿಲ್ಲ. ಒಂದು ಪಕ್ಷ ಆತ ಸಂಸ್ಥೆಯನ್ನು ಮಾರಿ ಸುಮ್ಮನಾಗಿದ್ದರೂ ಸಾಲವೆಲ್ಲ ತೀರಿ ಇನ್ನೂ ರಾಶಿ ಕೋಟಿಗಳು ಆತನ ಬ್ಯಾಂಕಿನ ಖಾತೆಯಲ್ಲಿ ಉಳಿಯುತ್ತಿತೇನೋ. ಆದರೆ ಆತ ಸೋಲೊಪ್ಪಿಕೊಳ್ಳಲಿಲ್ಲ. ನಡೆ ತಪ್ಪಾಗಿದ್ದಿತು, ಆದರೆ ಗುರಿ ಸಂಸ್ಥೆಯನ್ನು ಉಳಿಸಿಕೊಳ್ಳುವುದಾಗಿದ್ದಿತು. ಸಾಲ ಮಾಡಿ ಮನೆ ಕಟ್ಟಿ ಕೊನೆಗೆ ಹಣಹೊಂದಿಸಲಾಗದೆ ಮನೆಯನ್ನೇ ಮಾರಬೇಕೆಂದಾಗ ಎದುರಾಗುವ ಸ್ಥಿತಿಯೇ ಅಂದು ಆತನದು. ಉದ್ಯಮಿಗಳಿಗೆ ತಮ್ಮ ಜೀವಮಾನದ ಒಂದಿಲ್ಲೊಂದು ಘಳಿಗೆಯಲ್ಲಿ ಈ ಸ್ಥಿತಿ ಎದುರಾಗುತ್ತದೆ. ಕನಸ್ಸು ಬಿತ್ತಿ ಕಟ್ಟಿದ ಮನೆಯನ್ನು ಮಾರಬೇಕೋ ಅಥವ ಬೇರೆ ದಾರಿ ಕಾಣದೆ ಮರುಗಬೇಕೋ ಆಗ ಅದರ ಉತ್ತರ ಮಾತ್ರ ಪ್ರರಿಸ್ಥಿತಿಯ ಹತ್ತಿರ! ಅಂದಹಾಗೆ ಮಲ್ಯ ವಿದೇಶಕ್ಕೆ ಹಾರಿ ಹೋದರೂ ಈ ವರ್ಷದ ಶುರುವಿನಲ್ಲಿ ಸುಮಾರು 6000 ಕೋಟಿ ರೂಪಾಯಿಗಳ ಸಾಲವನ್ನು ಮೊದಲ ಕಂತಿನಲ್ಲಿ ತೀರಿಸುವೆನು ಎಂದದ್ದೂ ಉಂಟು. ಆದರೆ ಬ್ಯಾಂಕುಗಳು ಕೇಳಲಿಲ್ಲ. ಕೊಟ್ಟರೆ ಅಸಲು ಬಡ್ಡಿ ಸಮೇತ ಎಲ್ಲವೂ ಬೇಕೆನುತ ಹಠಹಿಡಿದವು.

ಮೊನ್ನೆ ಮೊನ್ನೆಯಷ್ಟೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ 'ದಶಕಗಳಿಂದ ಸಾಲವನ್ನು ಮರುಪಾವತಿ ಮಾಡಿಕೊಂಡು ಬಂದು ಇಂದು ಬ್ಯುಸಿನೆಸ್ ನಲ್ಲಿ ನಷ್ಟವನ್ನು ಅನುಭವಿಸಿ ಸಾಲತೀರಿಸಲಾಗದಿದ್ದ ಮಾತ್ರಕ್ಕೆ ಅವರನ್ನು ಮೋಸಗಾರರು ಎಂಬುವುದು ತಪ್ಪಾಗುತ್ತದೆ' ಎಂದರು. ಇದೇ ಮಾತನ್ನು ಒಂದು ಪಕ್ಷ ಐದಾರು ವರ್ಷಗಳ ಹಿಂದೆ ದೇಶದ ಹೆಮ್ಮೆಯ ಪ್ರತೀಕವಾಗಿದ್ದ ವಿಮಾನಸಂಸ್ಥೆಯೊಂದು ಮುಚ್ಚುವಾಗ ಹೇಳಿದ್ದರೆ ಬಹುಶಃ ಚೆನ್ನಾಗಿರುತ್ತಿತ್ತು. ಅರ್ಥಪೂರ್ಣವಾಗಿರುತ್ತಿತು. ಅಲ್ಲ ಸರ್, ಇಂದು ಸರ್ಕಾರವೇ ತನ್ನ ಉಮೇದುವಾರಿಕೆಯಲ್ಲಿ ನೆಡೆಸುವ ದೇಶದ ಅತಿ ದೊಡ್ಡ ವಿಮಾನ ಸಂಸ್ಥೆಯೇ ಪ್ರತಿಕೂಲ ಮಾರುಕಟ್ಟೆಯ ಹೊಡೆತಕ್ಕೆ ಸಿಕ್ಕಿ ಡೋಲಾಯಮಾನವಾಗುವ ಸ್ಥಿತಿಯಲ್ಲಿರುವಾಗ ನಷ್ಟದಲ್ಲಿದ್ದ ಉದ್ಯಮಿಗಳ ಸಂಸ್ಥೆಗಳ ಕತೆ ಇನ್ನು ಹೇಗಿರಬಹುದು? ಕಿಂಗ್ ಫಿಷರ್ ಏರ್ಲೈನ್ಸ್ ಮುಚ್ಚಲು ಮಲ್ಯನ ಪೆದ್ದುತನ ಎಷ್ಟಿದ್ದಿತೋ ಅಷ್ಟೇ ಹುಂಬತನ ಸರ್ಕಾರದ್ದೂ ಇದ್ದಿತು. ಸಂಸ್ಥೆಯೊಂದನ್ನು ಮುಚ್ಚಿಸುವಾಗ ಸಿಗುವ ಖುಷಿ ಅದನ್ನು ಉಳಿಸಿ ಕೊಡುವುದರಿರಲಿಲ್ಲ. ಯಾರೋ ಮಾಡಿದ್ದ ತಪ್ಪಿಗೆ ಸರಕಾರವೇಕೆ ದಂಡ ತೆತ್ತಬೇಕು ಎಂಬ ಮಾತು ಸರಿಯೇ. ಆದರೆ ಮುಚ್ಚಿದ ಒಂದು ಬ್ರಾಂಡಿನ ಸರಿಸಮನಾದ ಮತ್ತೊಂದು ಬ್ರಾಂಡನ್ನು ಕಟ್ಟಲು, ಸಾವಿರಾರು ಜನರಿಗೆ, ದೇಶಕ್ಕೆ ಪರೋಕ್ಷವಾಗಿಯಾದರೂ ಆದಾಯವನ್ನು ಗಳಿಸಿಕೊಡುವ ಮತ್ತೊಂದು ಸಂಸ್ಥೆಯೊಂದನ್ನು ನಿಮಿಷಮಾತ್ರದಲ್ಲಿ ಕಟ್ಟಲ್ಲಂತೂ ಸಾಧ್ಯವೇ ಇಲ್ಲ. ಅದರಲ್ಲೂ ಕಿಂಗ್ ಫಿಷರ್ ಎಂಬ ಕನ್ನಡಿಗನೊಬ್ಬನ ಕ್ಲಾಸಿಕ್ ವಿಮಾನಗಳು ಆಗಸದಲ್ಲಿ ಹಾರಾಡುವುದನ್ನು ನೋಡಲು ಇನ್ನೆಷ್ಟು ದಶಕಗಳು ಬೇಕೋ ಯಾರು ಬಲ್ಲರು?


No comments:

Post a Comment