Thursday, November 9, 2017

S L B

ಇವರದ್ದು ನಿಜ ಜೀವನದಲ್ಲಷ್ಟೇ ಅಲ್ಲ ಸಾಹಿತ್ಯ ಲೋಕದಲ್ಲೂ ಆನೆಯ ನಡೆಯೇ. ಈ ಮಹೋನ್ನತ ನಡೆ ಯಾವುದೇ ಚಿತ್ರಕತೆಗೂ ಕಮ್ಮಿಯಲ್ಲ ಎಂದೇ ಅನ್ನಬಹುದು. ಬೇಜವಾಬ್ದಾರಿಯುತ ಅಪ್ಪನ ಹಿಂಸೆಯನ್ನನುಭವಿಸುತ್ತಾ, ಎಳೆಯ ಸಹೋದರ ಸಹೋದರಿಯರು ಹಾಗು ಅಮ್ಮನ ಸಾಲು ಸಾಲು ಸಾವುಗಳು ನೋವುಗಳು, ಬಡತನದ ಬವಣೆಯಲ್ಲಿ ಬೇಯುತ್ತಾ, ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದ ಪೋರನೊಬ್ಬ ಅದ್ಯಾವ ಹುಮ್ಮಸ್ಸಿನ ಬಲದಿಂದ ಮುನ್ನೆಡೆದನೋ ಆತನೊಬ್ಬನೇ ಬಲ್ಲ. ಈ ಕಷ್ಟ ನೋವುಗಳೇ ಆತನನ್ನು ಒಬ್ಬ ಕಠಿಣ ಮನಸ್ಸಿನ ಸ್ವತಂತ್ರ ವ್ಯಕ್ತಿಯನ್ನಾಗಿ ಮಾಡಿದವು ಎಂದರೆ ಸುಳ್ಳಾಗದು. ಇಂದು ಕೇವಲ ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ತನ್ನ ಬರಹಗಳಿಂದ ಹೆಸರು ಮಾಡಿರುವ ಹಾಸನದ ಸಂತೇಶಿವರದ ಭೈರಪ್ಪನವರು ಕನ್ನಡದ ಹೆಮ್ಮೆಯ ಬರಹಗಾರರಲ್ಲೊಬ್ಬರು. ಕಳೆದ ಸುಮಾರು ಆರು ದಶಕಗಳಿಂದ ಕನ್ನಡ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿರುವ ಇವರು ನವ್ಯ, ನವೋದಯ, ಬಂಡಾಯ ಎನ್ನುವ ಯಾವೊಂದು ಪಂಗಡಕ್ಕೂ ತೂಗಾಕಿಕೊಳ್ಳದೆ ತಮಗೆ ಸರಿಯೆನಿಸಿದ್ದನ್ನು, ತಮ್ಮ ಮನಸ್ಸು ನಿಶ್ಚಿಯಿಸಿದನ್ನು ಯಾವುದೇ ಅಡೆ ತಡೆಗಳಿಲ್ಲದೆ ಸಾಮಾನ್ಯನ ಧಾಟಿಯಲ್ಲಿ ವ್ಯಕ್ತಪಡಿಸುತ್ತಾ ಬಂದರು. ಓದುಗರ ಮನೆಮಾತಾದರು. ಹಳೆಬೇರುಗಳಿಂದಿಡಿದು ಹೊಸಚಿಗುರುಗಳಿಗೂ ಸ್ಪೂರ್ತಿಯಾದರು.


ಒಂದೆಡೆ ವಿಧಿ ಎಂಬುದು ತನ್ನ ಚಾಟಿಯ ಏಟಿನಿಂದ ಭ್ಯರಪ್ಪನವರನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದ್ದರೆ ಇನ್ನೊಂದೆಡೆ ಅದೇ ವಿಧಿ ಪ್ರತಿ ಏಟಿನ ನೋವನ್ನು ಸಹಿಸಿಕೊಳ್ಳುವ, ಏನಾದರೊಂದು ಸಾಧಿಸಬೇಕೆಂಬ ಕಿಚ್ಚುಳ್ಳ ಮನವೊಂದು ಎಳೆಯ ಭೈರಪ್ಪನವರಲ್ಲಿ ಬೆಳೆಸುತ್ತದೆ. ತನ್ನ ಆತ್ಮೀಯರನ್ನು ಕಳೆದುಕೊಂಡ ಭೈರಪ್ಪನವರು ಅಲೆಮಾರಿಯಂತೆ ಕೆಲವರ್ಷಗಳ ಕಾಲ ಊರೂರು ಅಲೆದರು. ಈ ಅಲೆದಾಟದ ಹಿಂದೆ ಅಂಥಹದ್ದೇನೂ ಮಹೋದ್ದೇಶಗಳಿರದಿದ್ದರೂ ಇವರು ಹೋದಡೆಯಲ್ಲ ಮಾತ್ರ ಜೀವನವನ್ನು ಕಲಿಸುವ ಗುರುಗಳೇ ಎದುರಾಗತೊಡಗಿದ್ದರು. ಕೆಲವರು ಮಾತಿನಿಂದಾದರೆ ಕೆಲವರು ಏಟಿನಿಂದ! ಕೆಲವರು ಇಷ್ಟದಿಂದಾದರೆ ಕೆಲವರು ಕಷ್ಟದಿಂದ! ಹೀಗೆ ಅಲೆಯುತ್ತ ದೂರದ ಮುಂಬೈವರೆಗೂ ಹೋಗಿದ್ದ ಭೈರಪ್ಪನವರು ತಮ್ಮ ಉದರ ಪೋಷಣೆಗೆ ಸಿನಿಮಾ ಮಂದಿರದ ಕಾವಲುಗಲಾರನಾಗಿ, ರೈಲ್ವೆ ಸ್ಟೇಷನ್ನಿನ ಕೂಲಿಯವನಾಗಿ, ನಾಟಕ ಕಂಪನಿಯಲ್ಲಿ ನೌಕರನಾಗಿ ಅಲ್ಲದೆ ಸನ್ಯಾಸಿಗಳೊಟ್ಟಿಗೆ ಸೇರಿ ಕೆಲಕಾಲ ಅವರಂತೆಯೇ ವೇಷಭೂಷಣಗಳನ್ನೂ ತೊಟ್ಟು ಅಲೆದಿರುವುದೂ ಉಂಟು. ಜೀವನದ ಪ್ರಾರಂಭದ ದಿನಗಳಲ್ಲಿ ವ್ಯತಿರಿಕ್ತವಾಗಿ ಕಾಡಿದ್ದ ವಿಧಿ ಈ ಬಾರಿ ಮಾತ್ರ ಭೈರಪ್ಪನವರನ್ನು ಪುನ್ಹ ಶಾಲೆಯೆಡೆ ಸೆಳೆದಿತ್ತು. ಆ ಸೆಳೆತ ಅದ್ಯಾವ ಪರಿಯೆಂದರೆ ಓದು ಬರಹಗಳೆರಡನ್ನೇ ಅವರ ಜೀವನದ ಅತ್ಯಾಪ್ತ ವ್ಯಕ್ತಿಗಳನ್ನಾಗಿ ಮಾಡಿತು. ಓದೇ ಅಂತಹದ್ದು. ಪಂಜರದೊಳಗಿನ ಗಿಳಿಮರಿಯನ್ನು ಬಾಗಿಲು ತೆರೆದು ಬಿಟ್ಟಂತೆ. ರೆಕ್ಕೆಗಳಿವೆ ಎಂಬುದನ್ನೇ ಮರೆತಿದ್ದ ಹಕ್ಕಿಗೆ ಮನವರಿಕೆ ಮಾಡಿಕೊಟ್ಟಂತೆ. ಅಂದು ಜೀವನದ ಆದಷ್ಟೂ ಏಳು ಬೀಳುಗಳಿಗೆ ಭೈರಪ್ಪನವರು ಆಸರಿಸಿದ್ದು ಓದನ್ನು ಮಾತ್ರ. ಉಳಿದಂತೆ ಜೀವನವಿಡೀ ಅವರು ಒಂಟಿ ಸಲಗವೇ. ಹೀಗೆ ಓದುತ್ತಾ ಸಾಗಿದ ಭೈರಪ್ಪನವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿಎ ಮುಗಿಸಿ ಅಲ್ಲಿಯೇ ಚಿನ್ನದ ಪದಕದ ಸಮೇತ ಎಂಎಯನ್ನು ಪೂರ್ಣಗೊಳಿಸಿದರು. ನಂತರ ಹುಬ್ಬಳ್ಳಿ, ಗುಜರಾತ್, ದೆಹಲಿ, ಮೈಸೂರು ಹಾಗು ದೇಶದ ಇನ್ನೂ ಹಲವೆಡೆ ಪ್ರಾದ್ಯಾಪಕರಾಗಿ ಸೇವೆ ಹಾಗು 1991ರಲ್ಲಿ ನಿವೃತ್ತಿ.


ಭೈರಪ್ಪರವ ವ್ಯಕ್ತ ಪ್ರಕಾರ ಕಾದಂಬರಿಗಳು. ಇಲ್ಲಿಯವರೆಗೂ ಸುಮಾರು 26 ಕಾದಂಬರಿಗಳನ್ನು ಸೃಷ್ಟಿಸಿರುವ ಇವರು ಅವುಗಳ ಮೂಲಕ ಕಮ್ಮಿಯಂದರೂ ನೂರರಿಂದ ನೂರೈವತ್ತು ಓದುಗರ ಪರಮಾಪ್ತ ಪಾತ್ರಗಳನ್ನು ಸೃಷ್ಟಿಸಿಕೊಟ್ಟಿದ್ದಾರೆ. ಒಮ್ಮೆ ಓದಿದವ ಮುಂದೆ ಎಂದೆಂದಿಗೂ ಮರೆಯಲಾಗದಂತಹ ಪಾತ್ರಗಳವು. ಎಲ್ಲ ಬಗೆಯ ರಸಗಳನ್ನು ಧಾರೆಎಳೆಯಬಲ್ಲ ಸೃಷ್ಟಿಕರ್ತನ ಸೃಷ್ಟಿಗಳವು. ಪಾತ್ರಗಳ ವಿಚಾರವನ್ನು ಇನ್ನೂ ಆಳವಾಗಿ ನೋಡಹೋದರೆ ಇವರ ಪ್ರತಿಯೊಂದು ಪುಸ್ತಕಗಳಲ್ಲೂ ಒಂದಲ್ಲೊಂದು ಗಟ್ಟಿಗಿತ್ತಿಯ ಪಾತ್ರವಂತೂ ಇದ್ದೆ ಇರುತ್ತದೆ. ಸಮಾಜದ ವ್ಯತಿರಿಕ್ತತೆಯ ತುಳಿತ ಆಕೆಯನ್ನು ಸದೃಢಳನ್ನಾಗಿಸುವ, ಸ್ವಾವಲಂಬಿಯನ್ನಾಗಿಸುವ ಇವರ ಬರವಣಿಗೆಯ ಪರಿಯಂತೂ ಮಹೋನ್ನತವಾದದ್ದು. ಅದು 'ದಾಟು' ವಿನ ಸತ್ಯಳ ಪಾತ್ರವಿರಬಹುದು, 'ಆವರಣ'ದ ರಝಿಯಾ, 'ಯಾನ'ದ ಉತ್ತರೆ, 'ಮಂದ್ರ'ದ ರಾಮಕುಮಾರಿ, ಅಥವಾ 'ತಬ್ಬಲಿಯು ನೀನಾದೆ ಮಗನೆ' ಪುಸ್ತಕದ ಹಿಲ್ಡಾಳ ಪಾತ್ರವಾಗಿರಬಹದು, ಇಲ್ಲಿ ಯಾವ ಹೆಣ್ಣು ಸಹ ಜೀವನದ ಕಷ್ಟಗಳಿಗೆ, ಬವಣೆಗಳಿಗೆ ಬೆನ್ನು ತೋರಿಸಿ ಓಡುವವಳಲ್ಲ. ಸ್ವಾಭಾವಿಕ ಹೆಣ್ಣಿನ ಗುಣದಂತೆ ಆಕೆ ಶುರುವಿನಲ್ಲಿ ಕೊಂಚ ಹಿನ್ನೆಡೆದರೂ ಕತೆ ಸಾಗಿದಂತೆ ಆಕೆ ಮುನ್ನೆಡೆದು ಬರುತ್ತಾಳೆ. ಛಲ, ಧೈರ್ಯ ಹಾಗು ಸ್ವಾವಲಂಬನೆಯ ವಿಶಿಷ್ಟ ಮೂರ್ತಿಯಾಗುತ್ತಾಳೆ. ಅಂತಹ ಅದೆಷ್ಟೋ ಪಾತ್ರಗಳು ಇಂದಿಗೂ ಪ್ರಸ್ತುತವಾಗಿವೆ. ಹೆಣ್ಣೆಂದರೆ ಒಳಗೆ, ಗಂಡೊಬ್ಬ ಮಾತ್ರ ಹೊರಗೆ ಎಂಬಂತಿದ್ದ ಕಾಲದಲ್ಲಿ ಮೂಡಿಬಂದ ಬೈರಪ್ಪನವರ ಈ ಕಾದಂಬರಿಗಳು ಲಕ್ಷಾಂತರ ಹೆಣ್ಣು ಮನಗಳನ್ನು ಅಂದು ಬಡಿದೆಬ್ಬಿಸಿದಂತೂ ಸುಳ್ಳಲ್ಲ.


ಯಾವೊಂದು ಬಗೆಯ ಅಥವಾ ಇಂತಿಷ್ಟೇ ವಲಯದಲ್ಲಿ ಮಾತ್ರವಷ್ಟೇ ಇವರ ಪ್ರವೀಣತೆ, ಇಂತಿಷ್ಟು ವಿಚಾರಗಳನ್ನು ಬಿಟ್ಟು ಇವರಿಂದ ಬೇರೇನೂ ಹೊತ್ತಿಸಲು ಸಾಧ್ಯವಿಲ್ಲ ಎನ್ನುವವರಿಗೆ ಇವರ 'ಮಂದ್ರ' ಹಾಗು 'ಯಾನ' ಪುಸ್ತಕಗಳೇ ತಕ್ಕ ಉತ್ತರಗಳು. ಮಂದ್ರ ಕೃತಿಗೆ ಜ್ಞಾನಪೀಠಕ್ಕೆ ಸರಿಸಮಾನವಾದದೆಂದೇ ಹೇಳಬಹುದಾದ ಸರಸ್ವತಿ ಸಮ್ಮಾನ್ ಪ್ರಶಸ್ತಿ ದೊರೆತರೆ, 'ಯಾನ' ಪುಸ್ತಕದ ವಿವರಣೆ ಸಾಮಾನ್ಯನಲ್ಲದೆ ವಿಜ್ಞಾನಿಗಳನ್ನೂ ಬೆರೆಗುಗೊಳಿಸಿದೆ! ಭೈರಪ್ಪನವರೇ ಹಾಗೆ. ಕಣ್ಣು ಮುಚ್ಚಿ, ತಲೆಗೆ ತೋಚಿದಷ್ಟನ್ನೇ ಗೀಚುವ ಜಾಯಮಾನದವರಲ್ಲ. ಪ್ರತಿ ಪುಸ್ತಕದ ಶುರುವಿನ ಮೊದಲು ಒಬ್ಬ Phd ವಿದ್ಯಾರ್ಥಿಗಿಂತಲೂ ಮಿಗಿಲಾದ ಸಂಶೋಧನೆ ಇವರಿಂದ ಜರುಗುತ್ತದೆ. ಅವರ ಆವರಣ ಕೃತಿಯ ಪ್ರಾರಂಭದ ಹಂತದಲ್ಲಿ ಮುಸ್ಲಿಂ ಧರ್ಮದ ಬಗ್ಗೆ, ಒಬ್ಬ ಸಾಮಾನ್ಯ ಮುಸ್ಲಿಂರ ದಿನಚರಿಯನ್ನು ಖುದ್ದಾಗಿ ನೋಡಿ ತಿಳಿದುಕೊಳ್ಳಲು ವಾರಗಳ ಕಾಲ ಒಂದು ಮುಸ್ಲಿಂ ಕುಟುಂಬದದಲ್ಲಿ ನೆಲೆಸಿ, ನೋಡಿ, ಅರಿತು ಪುಸ್ತಕವನ್ನು ಶುರುಮಾಡಿದ್ದರು! ಇನ್ನು ಇವರ 'ಮಂದ್ರ' ಪುಸ್ತಕ ಕೇವಲ ಸಾಹಿತ್ಯ ಕೃತಿ ಮಾತ್ರವಾಗಿರದೆ ಕಲ್ಯಾಣಿ, ಭೈರವ, ಮೋಹನ ಎಂಬ ಹಲವು ಹಿಂದುಸ್ಥಾನಿ ರಾಗಗಳನ್ನು ಸರಳ ಭಾಷೆಯಲ್ಲಿ ತಿಳಿಯೇಳುವ ಸಂಗೀತದ ಕಿರುಹೊತ್ತಿಗೆಯಂತಿದೆ. ಮಾನವನ ಜೀವನವನ್ನೇ ಸಂಗೀತಕ್ಕೆ ಹೋಲಿಸಿ, ರಸವನ್ನು ಹೊತ್ತಿಸಿದ ಇವರ ಆ ಕಲಾಚತುರತೆಗೆ ಹೋಲಿಕೆಯೇ ಇಲ್ಲವೆನ್ನಬಹುದು.ಇನ್ನು 'ಯಾನ' ಕೃತಿ ವಿಜ್ಞಾನಿ ಹಾಗು ತತ್ವಜ್ಞಾನಿ ಇಬ್ಬರನ್ನು ಒಟ್ಟುಗೂಡಿಸಿ ಮೂಡಿಬಂದ ಹೊತ್ತಿಗೆ. ಭೈರಪ್ಪನವರ ಸಮಕಾಲೀನರಲ್ಲಿ ಈ ಮಟ್ಟಿನ ಸಮ್ಮಿಶ್ರಣ ಬೇರ್ಯಾವ ಬರಹಗಾರನಿಂದಲೂ ಸಾಧ್ಯವಾಗದಿದ್ದದು ಭೈರಪ್ಪನವರ ಹಿರಿಮೆಗೆ ಹಿಡಿದ ಕನ್ನಡಿ ಎನ್ನಬಹುದು.


ಇಂದು ಭೈರಪ್ಪನವರ ಹೆಸರು ಕೇಳಿದರೆ ಮೈಮೇಲೆ ಕೆಂಡ ಸುರಿದವರಂತೆ ಆಡುವವರಿದ್ದಾರೆ. ಯಾವುದೊ ಒಂದು ಅಜೇಂಡಾದೊಂದಿಗೆ ತೂಗಾಗಿಕೊಂಡು ಇವರ ಬರಹಗಳು ಮೂಡುತ್ತವೆ ಎಂದು ಜರಿಯುವವರಿದ್ದಾರೆ. ಕೆಲವರಂತೂ ಇನ್ನೂ ಒಂದೆಜ್ಜೆ ಮುಂದೋಗಿ ಭೈರಪ್ಪನರ ಸಾಹಿತ್ಯ ಸಾಹಿತ್ಯವೇ ಅಲ್ಲ, ಅವರ ಪುಸ್ತಕದ ಪ್ರತಿ ಪಾತ್ರಗಳು ಸ್ವತಂತ್ರವಾಗಿ ಮೂಡುವುದೇ ಇಲ್ಲ, ಎಲ್ಲವೂ ಕೈಕಟ್ಟಿ ಕುಣಿಸುವ ಕೀಲುಗೊಂಬೆಗಳು ಎಂದು ದೂರುವವರಿದ್ದಾರೆ. ಆದರೆ ಭೈರಪ್ಪನವರು ಇದ್ಯಾವ ಕುಹಕಗಳಿಗೂ ಕಿವಿ ಕೊಟ್ಟು ಸಮಯವನ್ನು ಹರಣಮಾಡುವವರಲ್ಲ. ತಮ್ಮ ಅಸಂಖ್ಯ ಓದುಗ ಪ್ರೇಮಿಗಳಿಗೆ ಒಂದರಿಂದೊಂದು ಪುಸ್ತಕಗಳನ್ನು ನೀಡುತ್ತಾ ಆತ್ಮತೃಪ್ತಿಯ ಕಾರ್ಯದಲ್ಲಿ ನಿರತರಾಗಿರುವವರು ಅವರು. ಮಾತಿಗೆ ಮಾತಿನಲ್ಲಿ, ಬರಹಕ್ಕೆ ಬರವಣಿಗೆಯಲ್ಲಿ ಉತ್ತರಿಸಲಾಗದ ಗುಂಪೊಂದಕ್ಕೆ ಜವಾಬನ್ನು ನೀಡುತ್ತಾ ಕುಳಿತಿದ್ದರೆ ಇಂದು ಇಷ್ಟೆಲ್ಲಾ ಕೃತಿಗಳು ಇವರಿಂದ ಮೂಡಲು ಸಾಧ್ಯವಾಗದೆ ಇರುತಿತ್ತೇನೋ ಯಾರು ಬಲ್ಲರು?! ಒಬ್ಬ ಸಾಮನ್ಯನಿಗೆ ಅರ್ಥವಾಗದ ಧಾಟಿಯಲ್ಲಿ ಬರೆದು ಒಂದಿಷ್ಟು ಜನರ ಮೆಚ್ಚಿಗೆ ಗಳಿಸಿಕೊಳ್ಳುವರಿಂದ ಏನು ಬಂತು ಸ್ವಾಮಿ? ಕೂಲಿ ಕೆಲಸ ಮಾಡುವ ವ್ಯಕ್ತಿಯ ಬ್ಯಾಗಿನಲ್ಲೂ ತಾವು ಬರೆದ ಒಂದು ಪುಸ್ತಕವನ್ನು ಕಾಣ ಸಿಕ್ಕರೆ ಬರವಣಿಗೆಯ ಸಾರ್ಥಕತೆ ಅದಲ್ಲದೆ ಮತ್ತಿನ್ನೇನು? ಭೈರಪ್ಪನವರ ವಂಶವೃಕ್ಷ, ನಾಯಿ ನೆರಳು, ಗೃಹಬಂಗ, ನಿರಾಕರಣ, ಪರ್ವ, ನೆಲೆ, ಎಂಬ ಇನ್ನು ಹಲವು ಕೃತಿಗಳು ಕನ್ನಡ ಸಾಹಿತ್ಯ ಲೋಕದ ಮುಕುಟಮಣಿಗಳಂತೆ ಕಂಗೊಳಿಸುತ್ತಿವೆ. ಸಾಧ್ಯವಾದಷ್ಟು ಸವಿಯುವ ಭಾಗ್ಯ ಮಾತ್ರ ನಮಗೆ ಬಿಟ್ಟದ್ದು.

No comments:

Post a Comment