Friday, November 10, 2017

ಕಥೆ : ಮನೆ


ಸಮಯ ಇನ್ನು ಮಧ್ಯರಾತ್ರಿಯನ್ನು ಕಳೆದಿರಲಿಲ್ಲ. ಮನೆಯ ಅಟ್ಟದ ಮೇಲೆ ಮಲಗಿದ್ದ ಮಗ ನಿಮಿಷಕ್ಕೊಮ್ಮೆ ಮಗ್ಗುಲು ಬದಲಾಯಿಸುತ್ತಿದ್ದ. ಆ ಒರಳಾಟಕ್ಕೆ ಅಟ್ಟದ ಮರದ ಹಲಗೆಗಳ ನಡುವೆ ಹಚ್ಚಿದ್ದ ಸುಣ್ಣದ ಎಕ್ಕೆಗಳು ಹಿಡಿ-ಹಿಡಿಯಾಗಿ ಕೆಳಗೆ ಚಾಪೆಯನ್ನಾಸಿಕೊಂಡು ಮಲಗಿದ್ದ ಅಪ್ಪನ ಮೇಲೆ ಬೀಳತೊಡಗುತ್ತಿದ್ದವು. ನಡು ನಡುವೆ ಚಟ್ ಪಟ್ ಎಂಬ ಸದ್ದಿನೊಂದಿಗೆ ಸೊಳ್ಳೆಗಳನ್ನು ಜಜ್ಜುವ ಸಿಟ್ಟಿನಲ್ಲಿ ಮಗ ತನ್ನ ಕೆನ್ನೆಯ ಮೇಲೆ ತಾನೇ ಬಾರಿಸಿಕೊಳ್ಳುತ್ತಿರುತ್ತಾನೆ. ತಾಸುಗಳು ಕಳೆದರೂ ನಿದ್ರೆಯೇರದ್ದಿದ್ದಾಗ ಒಮ್ಮೆಲೇ ಮೇಲೆದ್ದು ಮೆಯ್ಯ ಮೇಲಿದ್ದ ಬನಿಯನ್ನು ಹಾಗು ಲುಂಗಿಯನ್ನು ಬಿಚ್ಚೋಗೆದು, ಪಕ್ಕದಲ್ಲಿದ್ದ ಪುಸ್ತಕವನ್ನೇ ಬೀಸಣಿಗೆಯಂತೆ ಮಾಡಿಕೊಂಡು ಅಂಗಾತ ಮಲಗಿಕೊಳ್ಳುತ್ತಾನೆ. ಸೆಖೆಯೇನೋ ಕೊಂಚ ಕಡಿಮೆಯಾಯಿತೆಂದೆನಿಸಿದರೂ ಸೊಳ್ಳೆಗಳ ಆಕ್ರಮಣ ಮಾತ್ರ ವಿಪರೀತವಾಗುತ್ತದೆ. ಸಿಟ್ಟಿನಿಂದ ಮಗ ತನ್ನ ಅಂಗಾಗಳಿಗೆಲ್ಲ ಕೈ ಏಟಿನ ರುಚಿಯನ್ನು ತೋರಿಸುತ್ತ ಒರಳಾಡತೊಡಗುತ್ತಾನೆ. ಅಟ್ಟದ ಮೇಲೆ ಮೂಡುತ್ತಿದ್ದ ಸದ್ದಿಗೆ ವಿಚಲಿತರಾದ ಅಮ್ಮ 'ಅದ್ಯಾಕ್ ಅಷ್ಟ್ ಒದ್ದಾಡ್ತಿಯೋ, ಮುಖ ಓದ್ಕಂಡ್ ಮಲ್ಕ' ಎಂದ ಮಾತಿಗೆ ತದ್ವಿರುದ್ಧವಾಗಿ ಏನೋ ಅರಚಿದ ಮಗ.

ಇಂಜಿನಿಯರಿಂಗ್ ಮುಗಿಸಿ ಒಂದು ವರುಷವಾದರೂ ಯಾವೊಂದು ಕೆಲಸವೂ ಸಿಗದೇ ಒಂದಿಷ್ಟು ದಿನಗಳ ಕಾಲ ಮನೆಯಲ್ಲಿ ಇರಲು ಬಂದು ಅದಾಗಲೇ ನಾಲ್ಕು ತಿಂಗಳಾಗಿದೆ! 'ಸಿಟಿನೂ ಸಾಕು, ಆ ಕೆಲ್ಸನೂ ಸಾಕು. ಪಕ್ಕದೂರಿನ ಗ್ರಾಮ್ ಪಂಚಾಯಿತಿಲಿ ಬಿಲ್ ಕಲೆಕ್ಟರ್ ಕೆಲ್ಸ ಖಾಲಿ ಇದ್ಯಂತೆ. ಸ್ವಲ್ಪ ಟಬೇಲ್ ಕೆಳಗೆ ತಳ್ಳಿದ್ರೆ ಕೆಲ್ಸ ಗ್ಯಾರೆಂಟಿ' ಎನ್ನುತ್ತಾ ದಿನವೆಲ್ಲ ಊರಿನಲ್ಲೇ ಅಲೆದಾಡಿಕೊಂಡು ಕಾಲ ತಳ್ಳುತ್ತಿದ್ದ. ಓದಿನಲ್ಲಿ ತೀರಾ ಕನಿಷ್ಠದವನಲ್ಲನಾದರೂ ಪ್ರಸ್ತುತ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಗೋಳನ್ನು ಕಂಡು, ಅನುಭವಿಸಿ ಒಂದು ಬಗೆಯ ಅಸಡ್ಡೆ ಆತನಲ್ಲಿ ಮೂಡಿದೆ.

ಹತ್ತನೇ ತರಗತಿಯಲ್ಲಿ ಊರಿಗೇ ಮೊದಲಿಗನಾಗಿ ಬಂದಂದೇ ಅಪ್ಪನಿಗೆ ಗೊತ್ತಾದದ್ದು ಮಗನ ಅಸಲಿಯತ್ತು. ಅಂದು ಶುರುವಾದ ಒಂದು ಉತ್ಕಟ ಛಲ ಮಗನನ್ನು ಒಬ್ಬ ಇಂಜಿನಿಯರ್ ನನ್ನಾಗಿ ಮಾಡಿ ತೀರುವವರೆಗೂ ಆರಲಿಲ್ಲ. ಆತನ ಕುಟುಂಬದಲ್ಲೇ ಯಾರೊಬ್ಬರೂ ಈ ಮಟ್ಟಿನ ವಿದ್ಯಾಭ್ಯಾಸವನ್ನು ಮಾಡಿರುವ ಪುರಾವೆಗಳೇ ಇರಲಿಲ್ಲ. ಆ ಹೆಮ್ಮೆಯೆ ಅಪ್ಪನನ್ನು ಮತ್ತಷ್ಟು ಛಲಗಾರನಾಗಿ ಮಾಡಿತು. ತನ್ನ ರಕ್ತ ಬೆವರನ್ನು ಬಸಿದು ಮಗನೆಂಬ ಆಸ್ತಿಯನ್ನು ಬೆಳೆಸಿದ.

ಮನೆಯನ್ನು ಬಿಟ್ಟರೆ ಆತನಿಗಿರುವ ಕಡೆಯ ಆಸ್ತಿಯೇ ಈ ಮಗ.

ಆದರೆ ಇಂದು ಮಗ ಹೆಸರಿಗಷ್ಟೇ ಇಂಜಿನಿಯರ್. ಆತನ ಭವಿಷ್ಯ ಮಾತ್ರ ತೋಟದ ಕೂಲಿ ಕೆಲಸದವನಿಗಿಂತಲೂ ಅತಂತ್ರ. ಮನೆಯ ಹೆಸರನ್ನು ಬೆಳಗಬೇಕಾದ ಮಗನಿಗೆ ಜೀವನದ ಹಾಫ್ ಸೆಂಚುರಿಯನ್ನು ಪೂರೈಸಿದ್ದ ಅಪ್ಪ ಏನಾದರೊಂದು ದಾರಿಯನ್ನು ಮಾಡಲು ಅವಣಿಸುತ್ತಿದ್ದ. ಮನೆಗೆ ಮೂರೊತ್ತಿನ ಊಟವನ್ನು ವ್ಯವಸ್ಥೆ ಮಾಡುವುದೇ ಹರಸಾಹಸವಾಗಿರುವಾಗ ಮಗನಿಗಾಗಿ ಪ್ರತ್ಯೇಕವಾಗಿ ಏನಾದರು ಮಾಡಲು ಬೇಕಾದ ಸಮಯವಾಗಲಿ, ಹಣವಾಗಲಿ ಮಾತ್ರ ಅಪ್ಪನಲ್ಲಿ ಇರಲಿಲ್ಲ. ತನ್ನ ಕಣ್ಣ ಮುಂದೆಯೇ ಮಗನನ್ನು ಬೆಳೆಸಬೇಕೆಂದು ಮುಂಬೈಯ ಗಾರ್ಮೆಂಟ್ ಕಂಪನಿಯ ಕೆಲಸವನ್ನೂ ಬಿಟ್ಟು ಊರಿಗೆ ಬಂದು ನೆಲೆಗೊಂಡಿದ್ದ ಅಪ್ಪ. ಒಂದು ಪಕ್ಷ ಇಲ್ಲಿಯವರೆಗೂ ಆ ಕಂಪನಿಯಲ್ಲಿ ದುಡಿದ್ದಿದ್ದರೆ ಕಡೆ ಪಕ್ಷ ಒಂದು ನಾಲ್ಕೆಕರೆ ಜಮೀನನ್ನಾದರೂ ಮಾಡಬಹುದಿದ್ದತು ಎಂದು ಅದೆಷ್ಟೋ ಬಾರಿ ಅನಿಸಿದ್ದರೂ ಮನೆ ಹಾಗು ಮನೆಯವರನ್ನು ಬಿಟ್ಟಿರಲು ಅಪ್ಪನಿಗೆ ಸಾಧ್ಯವೇ ಆಗುತ್ತಿರಲಿಲ್ಲ. ಮಗ ಹುಟ್ಟಿದ ಮೇಲಂತೂ ಒಂದು ದಿನವೂ ಆತನಿಗೆ ಅಲ್ಲಿ ನೆಲೆಸಲು ಸಾಧ್ಯವಾಗಿರಲಿಲ್ಲ.

ಸುಣ್ಣದ ಎಕ್ಕೆಗಳ ಪುಡಿ ಮೈಯ ಮೇಲೆ ಬೀಳುತ್ತಿದ್ದರಿಂದ ಅಪ್ಪನಿಗೂ ಅಂದು ನಿದ್ರೆ ಆವರಿಸಲಿಲ್ಲ. ಹುಣ್ಣಿಮೆಯ ಚಂದಿರನ ಬಳದಿಂಗಳು ಹೊರಗೆಲ್ಲ ಪಸರಿಸಿರುವುದನ್ನು ಕಂಡ ಆತ ಬಾಗಿಲನ್ನು ತೆರೆದು ಹೊರಬಂದು ಮನೆಯ ಸಣ್ಣ ಕಾಂಪೌಂಡನ್ನೊರಗಿ ನಿಲ್ಲುತ್ತಾನೆ. ತಂಪಾದ ಗಾಳಿ ಆತನಿಗೆ ಕೊಂಚ ಹಿತವೆನಿಸುತ್ತದೆ. ಆದರೆ ಇಂದು ಅಪ್ಪನಿಗೆ ನಿದ್ರೆ ಬಾರದಿದ್ದಕ್ಕೂ ಹೀಗೆ ಹೊರಬಂದು ಗಾಳಿಗೆ ಮಯೊಡ್ಡಿದಕ್ಕೂ ಎಳ್ಳಷ್ಟೂ ಸಂಬಂಧವಿಲ್ಲ. ಅದೆಷ್ಟೇ ಸೆಕೆಯ ಮಾಸವಾದರೂ ಸರಿಯೇ ಮನೆಯ ನೆಲದ ಮೇಲೆ ಚಾಪೆಹಾಸಿ ಮಲಗಿದರೆ ಸಾಕು, ಕಣ್ತೆರೆಯುತ್ತಿದ್ದದ್ದು ಮರುದಿನ ಮುಂಜಾನೆಯೇ. ಆ ಮನೆಯೇ ಅಂತಹದ್ದು. ಸಿಟಿಯ ಒಳಗಿರುವ ಹಂಚಿನ ಮನೆ. ಅಪ್ಪನ ಅಪ್ಪ ಕಟ್ಟಿಸಿದ ಮನೆ. ಕುಟುಂಬದವರೆಲ್ಲರನ್ನೂ ಸಾಕಿದ ಮನೆ. ಅಪ್ಪ ಕೊಟ್ಟ, ಮುಂದೆ ಮಗನಿಗೆ ಕೊಡಬೇಕಾದ ಮನೆ. ಐವತ್ತು ವರ್ಷದ ಈ ಮನೆ ಅದೆಂಥಹ ಮಹಾ ಗಾಳಿ ಮಳೆಗೂ ಅಲುಗದೆ ನಿಂತಿದೆ. ಹಳೆ ಕಾಲದ ನಿರ್ಮಾಣವನ್ನೂ ಕೊಂಚ ಒಳಗೊಂಡಿದೆ. ಸುತ್ತ ಮುತ್ತ ಕಣ್ಣಾಹಿಸಿದರೂ ಈ ಮನೆಗೆ ಹೋಲುವ ಮಾದರಿಯ ಮತ್ತೊಂದು ಮನೆಯಿಲ್ಲ. ಅಲ್ಲಿರುವುದೆಲ್ಲ ನವ ಮಾದರಿಯ RCC ಮನೆಗಳೇ. ಸಿಟಿಯ ಮಧ್ಯದಲ್ಲಿರುವ ಈ ಹಳೆಕಾಲದ ಹಂಚಿನ ಮನೆ ಗತಿಸಿದ ಕಾಲದ ಏಕಮಾತ್ರ ಪುರಾವೆಯಂತಿದೆ. ಅಲ್ಲದೆ ಅಪ್ಪನೊಟ್ಟಿಗೆ ಬೆಳೆದು ಆತನ ಕಣ ಕಣದಲ್ಲೂ ಬಸಿದುಕೊಂಡಿದೆ, ಆತನ ನೆನಪಿನ ಗಣಿಯಾಗಿದೆ.

ಮನೆ ಕಟ್ಟುವಾಗ ಅಂಬೆಗಾಲಿಟ್ಟು ನೆಡೆದಾಡುತಿದ್ದ ಅಪ್ಪ ಮನೆಕಟ್ಟಲು ತಂದು ಸುರಿದಿದ್ದ ಮರಳನ್ನು ಹಿಡಿ ಹಿಡಿ ತಿಂದು ಅವಾಂತರ ಮಾಡಿಕೊಂಡಿದ್ದ ನೆನಪಾಗಲಿ, ಅಪ್ಪನ ದುಡ್ಡನ್ನು ಕದ್ದು ಸಿಕ್ಕಿಹಾಕಿಕೊಂಡ ಭಯದಲ್ಲಿ ಮನೆಯ ಹಂಚಿನ ತುದಿಗೆ ಯಾರಿಗೂ ಸಿಗದಂತೆ ಹೋಗಿ ಕುಳಿತು ಮನೆಯವರೆಲ್ಲವನ್ನೂ ಸತಾಯಿಸಿದ ಘಳಿಗೆಯಾಗಲಿ, ಅಜ್ಜಿಯ ಮನೆಯಿಂದ ತಂದ ಹಲಸಿನ ಹಣ್ಣನು ಎಲ್ಲರು ನಿದ್ರಿಸುತ್ತಿರುವಾಗ ಅಟ್ಟಕ್ಕೆ ಏರಿ ಒಬ್ಬನೇ ಸುಲಿದು ತಿಂದ ಚಿತ್ರವಾಗಲಿ ಇಂದಿಗೂ ಅಪ್ಪನ ಕಣ್ಣ ಮುಂದೆ ಬರುತ್ತಿರುತ್ತವೆ. ಮನೆಯ ಬಾಗಿಲಿಗೆ ಮುಂದೆಯೆ ನಿರ್ಮಿಸಿದ್ದ ಆ ಮೆಟ್ಟುಲುಗಳಲ್ಲೇ ಅಮ್ಮ ಅಪ್ಪನನ್ನು ಎದೆಗವುಚಿಕೊಂಡು ಲಾಲಿ ಹಾಡುತ್ತಾ ಮಲಗಿಸಿದ ದಿನಗಳೆಷ್ಟೋ. ಸುಮಾರು ಏಳೆಂಟು ವರ್ಷಗಳ ವರೆಗೂ ಅಪ್ಪ ಅಮ್ಮನ ತೊಡೆಯ ಮೇಲೆ ಹಾಗೆಯೆ ತಲೆಯಿಟ್ಟು ಮಲಗುತ್ತಿದ್ದ. ಪ್ರತಿದಿನ.

ಯಾಕೋ ಇಂದು ಅಮ್ಮ ಬಲವಾಗಿ ಆತನಿಗೆ ನೆನಪಾಗತೊಡಗಿದಳು. ಅಮ್ಮ ಕಾಲವಾಗಿ ಹತ್ತು ವರ್ಷಗಳೇ ಆದರೂ ಆಕೆ ಇಲ್ಲದ ಅನುಭವವೇ ಅಪ್ಪನಿಗಾಗಿಲ್ಲ. ಪ್ರತಿದಿನವೂ ಹೀಗೆಯೆ ರಾತ್ರಿಯ ಸಮಯ ಮೆಟ್ಟಿಲುಗಳನ್ನು ನೋಡಿದರೆ ಆಕೆ ಅಲ್ಲೇ ಕೂತು ತನ್ನನ್ನು ಆಕೆಯ ತೊಡೆಯ ಮೇಲೆ ಮಲಗಲು ಕರೆಯುತ್ತಿದ್ದಾಳೆ ಎನಿಸತೊಡಗುತ್ತದೆ. ಒಮ್ಮೆ ಅಲ್ಲಿ ಕೂತರೆ ಸಾಕು, ದಿನದ ಜಂಜಾಟವೆಲ್ಲ ಕ್ಷಣದಲ್ಲೇ ಮಂಗಮಾಯ! ಅಪ್ಪ ಮೆಟ್ಟಿಲುಗಳ ಮೇಲೆ ಹೋಗಿ ಕುಳಿತ. ಗಾಳಿ ಇನ್ನೂ ಹಿತವಾಗಿ ಬೀಸತೊಡಗಿತ್ತು. ತನ್ನ ಹೆಂಡತಿ, ಮಗನಿಗೆ ಸುಮ್ಮನೆ ಮಲಗಲು ಮತ್ತೊಮ್ಮೆ ಕೂಗಿದ್ದು ಕೇಳಿಸಿತು.

ಯೋಚಿಸತೊಡಗಿದ ಅಪ್ಪ. ಮಗನ ಜೀವನದ ಬಗ್ಗೆ, ಆತನ ನಾಳೆಗಳ ಬಗ್ಗೆ. ಮನೆಯೊಂದನ್ನು ಬಿಟ್ಟರೆ ಮಗನಿಗೆ ಕೊಡಲು ಆತನಲ್ಲಿ ಬೇರೇನೂ ಇಲ್ಲ. ಒಮ್ಮೆ ಮಗ ತನ್ನ ಸ್ವಂತ ಕಾಲ ಮೇಲೆ ನಿಂತರೆ ಸಾಕು, ಅಪ್ಪನ ವರ್ಷಗಳ ತಪಸ್ಸಿಗೆ ವರ ದೊರಕಿದಂತಾಗುತ್ತದೆ. ಬಿಲ್ ಕಲೆಕ್ಟರ್ ಹುದ್ದೆಯ ಹೊರಒಳಗುಗಳನ್ನು ಚೆನ್ನಾಗಿ ಅರಿತಿದ್ದ ಅಪ್ಪ, ಮಗನನ್ನು ಒಬ್ಬ ಗಿಂಬಳದ ಆಸೆಗೆ ದುಡಿಯುವ ನೌಕರನನ್ನಾಗಿ ಖಂಡಿತ ನೋಡಲಾರ. ಆದ ಕಾರಣಕ್ಕೆ ಒಳಗೆ ಅದೆಷ್ಟೇ ಮೃದು ಸ್ವಭಾವದವನಾಗಿದ್ದರೂ ಮಗನ ಮುಂದೆ ಮಾತ್ರ ಬಹಳ ಸೀರಿಯಸ್ ಆಗಿಯೇ ವರ್ತಿಸುತ್ತಿದ್ದ. ಆತ ಕೇಳಿದಕ್ಕೆಲ ಹುಂ ಅನ್ನದೆ ಒಂದು ಬಗೆಯ ಅದ್ದುಬಸ್ತಿನಲ್ಲೇ ಮಗನನ್ನು ಇರಿಸಿಕೊಂಡಿದ್ದ. ಆದ ಕಾರಣವೇ ಎರಡು ತಿಂಗಳ ಮೊದಲೇ ಬಿಲ್ ಕಲೆಕ್ಟರ್ ಹುದ್ದೆ ಇದೆಯೆಂದು ತಿಳಿದರೂ ಇಂದಿನವರೆಗೂ ಅವನ ಕೋರಿಕೆಗೆ ಅಸ್ತು ಎಂದಿರಲಿಲ್ಲ. ಆದರೆ ಅದೆಷ್ಟೇ ಅದ್ದುಬಸ್ತಿನಲ್ಲಿ ಇರಿಸಿಕೊಂಡಿದ್ದರೂ ಮಗನನ್ನು ತನ್ನಂತೆ ಒಬ್ಬ ಛಲಗಾರನಾಗಿ ಮಾಡಲಾಗಲಿಲ್ಲ ಎಂಬ ಕೊರಗು ಅಪ್ಪನಲ್ಲಿ ಇದೆ. ಪ್ರಸ್ತುತ ಪರಿಸ್ಥಿತಿಯೂ ಇಂಜಿನಿಯರಿಂಗ್ ಓದಿದವರಿಗೆ ಅಷ್ಟೇನೂ ಪೂರಕವಾಗಿಲ್ಲದಿರುವುದೂ ಅಪ್ಪನ ಸುಮ್ಮನಿರುವಿಕೆಗೆ ಒಂದು ಕಾರಣವಾಗಿದ್ದಿತು. ಮೆಟ್ಟಿಲುಗಳ ಮೇಲೆ ಕೂತ ಅಪ್ಪನಿಗೆ ಇಂದು ಏಳಲು ಮನಸ್ಸೇ ಬರುತ್ತಿಲ್ಲ. ಕೂತಷ್ಟೂ ಇನ್ನೂ ಕೂರಬೇಕು ಎಂದನಿಸತೊಡಗುತ್ತದೆ. ಆದರೆ ಎಂದಿನಂತೆ ಇಂದು ಮಾತ್ರ ಆತನ ತಲೆಯನ್ನು ಕೊರೆಯುತ್ತಿದ್ದ ಚಿಂತೆ ಮಾತ್ರ ಕೆಳಗಿಳಿಯಲಿಲ್ಲ.

ಬುದ್ದಿ ಪಕ್ವತೆಯ ಹಾದಿಯನ್ನು ಹಿಡಿದಾಗಿನಿಂದಲೂ ಅಪ್ಪನನ್ನು ಕಂಡರೆ ಅಷ್ಟಕಷ್ಟೇ ಮಗನಿಗೆ. ಯಾವಾಗಲೂ ಸೀರಿಯಸ್ಸಾಗಿ ಕೋರ್ಟಿನ ಜಡ್ಜ್ ನಂತೆ ಇರುವ ಅಪ್ಪನೊಟ್ಟಿಗೆ ಮಗ ಮಾತಾಡುತ್ತಿದ್ದದ್ದೇ ಬಲು ಅಪೂರ್ವ. ಸಣ್ಣವನಿದ್ದಾಗ ಅವರ ಈ ಗುಣ ಹೆಚ್ಚು ಹಿಡಿಸದಿದ್ದ ಅವನಿಗೆ ದೊಡ್ಡವನಾಗುತ್ತಾ ಅವರ ಹಿಂದಿನ ಒಂದೊಂದು ನಿರ್ಧಾರಗಳ ಬಗ್ಗೆಯೂ ಸಿಟ್ಟು ಬರತೊಡಗುತ್ತದೆ. ಅದು ದೂರದ ಮುಂಬೈಯಲ್ಲಿ ಗಾರ್ಮೆಂಟ್ ಕಂಪನಿಯೊಂದರ ಮ್ಯಾನೇಜರ್ ಆಗಿದ್ದ ಕೆಲಸವನ್ನು ಬಿಟ್ಟು ಊರಿಗೆ ವಾಪಾಸ್ ಬಂದದ್ದಾಗಲಿ ಅಥವಾ ಕೆಲ ವರ್ಷಗಳ ಹಿಂದೆ ಒಂದೊಳ್ಳೆ ಪಾರ್ಟಿ ಇಪ್ಪತ್ತು ಲಕ್ಷ ರೂಪಾಯಿಗೆ ಮನೆಯನ್ನು ಕೊಂಡುಕೊಳ್ಳುತ್ತೇನೆ ಎಂದರೂ ಒಪ್ಪದ ನಿರ್ಧಾರವಾಗಲಿ ಅಥವಾ ಇತ್ತೀಚಿಗೆ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಹುದ್ದೆಗೂ ಅಸ್ತು ಎನ್ನದೆ ಸತಾಯಿಸುತ್ತಿದ್ದ ಅಪ್ಪನನ್ನು ಕಂಡರೆ ಉರಿದು ಬೀಳುತಿದ್ದ ಮಗ. ತನ್ನ ಪ್ರಸ್ತುತ ಅವಸ್ಥೆಗೆ ಒಂದಿಲ್ಲೊಂದು ಬಗೆಯಲ್ಲಿ ಅಪ್ಪನೇ ಕಾರಣವೆಂಬ ಮನಸ್ಥಿತಿಯನ್ನು ಆತ ಬೆಳೆಸಿಕೊಂಡಿರುತ್ತಾನೆ. ಬೆಳಗ್ಗೆದ್ದರೆ ತನ್ನಂತೆಯೇ ಇಂಜಿನಿಯರಿಂಗ್ ಮಾಡಿ ಕೆಲಸ ಸಿಗದೇ ಅಲೆಯುತ್ತಿದ್ದ ಊರಿನ ಇನ್ನಿತರ ಹುಡುಗರನ್ನು ಕಟ್ಟಿಕೊಂಡು ಸುತ್ತುತಿದ್ದ . ದಿನವಿಡಿ ಈಗಿರುವ ಶಿಕ್ಷಣ ವ್ಯವಸ್ಥೆಗೆ, ತಾವು ಓದಿದ ಶಿಕ್ಷಣ ಸಂಸ್ಥೆಗಳಿಗೆ, ತಮಗೆ ಕೆಲಸ ಕೊಡದ ಕಂಪನಿಗಳಿಗೆ ಶಪಿಸುತ್ತಾ, ಕೆಲವೊಂದು ಬಿಸಿನೆಸ್ ಪ್ಲಾನ್ ಗಳನ್ನು ಹಣೆಯುತ್ತ ಕಾಲಹರಣ ಮಾಡುತಿದ್ದ.

ಆದರೆ ಇಂದು ಮಾತ್ರ ಮಗನಿಗೆ ತನ್ನ ಹೊಸ ಬಗೆಯ ಬಿಸಿನೆಸ್ ಪ್ಲಾನ್ ಬಹಳ ಸತಾಯಿಸುತ್ತಿದೆ. ಗೆಲುವಿನ ಖಚಿತತೆಯ ಬೆಗ್ಗೆ ಎಳ್ಳಷ್ಟೂ ಅನುಮಾನವಲ್ಲ ಅವನಿಗೆ! ಇದನ್ನು ಗೆಳೆಯರೊಟ್ಟಿಗೆ ಸೇರಿ ಮಾಡಬೇಕಾ ಅಥವಾ ತಾನೇ ಖುದ್ದಾಗಿ ಬಂಡವಾಳ ಹೂಡಿ ಶುರುಮಾಡಬೇಕಾ ಎಂಬ ಗೊಂದಲದಲ್ಲಿ ಆತ ಮುಳುಗುತ್ತಾನೆ. ಗೆಳೆಯರನ್ನು ಒಟ್ಟುಗೂಡಿ ಶುರುವಿಟ್ಟುಕೊಂಡರೆ ಗೆಳೆತನ ಹಾಗು ಹಣ ಎಂದಿಗೂ ಎಣ್ಣೆ-ನೀರಿನಂತೆ ಎಂಬುದ ಆತ ಚೆನ್ನಾಗಿ ಬಲ್ಲ. ಒಂದು ಪಕ್ಷ ತಾನೇ ಎಲ್ಲ ಜವಾಬ್ದಾರಿಯನ್ನು ಹೊತ್ತು ಮಾಡ ಹೊರಟರೆ ಕನಿಷ್ಠ ಎಂದರೂ ಹತ್ತರಿಂದ ಹನ್ನೆರಡು ಲಕ್ಷಗಳಷ್ಟು ಬಂಡವಾಳ ಬೇಕು. ಹತ್ತು ಲಕ್ಷಗಳು ಹೋಗಲಿ, ಕಡೆ ಪಕ್ಷ ಹತ್ತು ಸಾವಿರಗಳಾದರೂ ತನ್ನಲ್ಲಿ ಅಥವಾ ಅಪ್ಪನೊಟ್ಟಿಗಾಗಲಿ ಇಲ್ಲ ಎಂಬುದು ಮಗನಿಗೆ ಗೊತ್ತು. ಅಪ್ಪನನ್ನು ಕೇಳಿದರೆ ಆತನಿಂದ ಆಗದು. ಒಂದು ಪಕ್ಷ ಸಾದ್ಯವಾಗುತ್ತಿದ್ದಾದರೂ ಇಂತಹ ಹೆಚ್ಚಿನ ಖರ್ಚುಗಳಿಗೆಲ್ಲ ಆತ ಸಮ್ಮತಿಸುತ್ತಿರಲೂ ಇಲ್ಲ. ಆದರೂ ಅಪ್ಪ ಏನಾದರೊಂದು ವ್ಯವಸ್ಥೆ ಮಾಡಬಹುದೇ ಎಂಬ ಪ್ರೆಶ್ನೆ ಮಗನಲ್ಲಿ ಮೂಡುತ್ತದೆ. ಅಪ್ಪನನ್ನು ಬಿಟ್ಟರೆ ಯಾರಿದ್ದಾರೆ ತನಗೆ ಸಹಾಯ ಮಾಡಲು? ಕೊನೆಯ ಸಾಲುಗಳನ್ನು ಮಗ ತನ್ನೊಳಗೆ ಹೇಳಿಕೊಳ್ಳುತ್ತಿರುವಾಗ ಮಾತ್ರ ಏನೋ ಒಂದು ಬಗೆಯ ದಿಗ್ಬ್ರಮೆ ಮೂಡುತ್ತದೆ. ಇಷ್ಟು ವರ್ಷಗಳ ಕಾಲದಲ್ಲಿ ಒಮ್ಮೆಯೂ ಸಹ ಇಂತಹ ಒಂದು ಭಾವ ಆತನಲ್ಲಿ ಮೂಡಿರಲಿಲ್ಲ. ಅಪ್ಪನನ್ನು ಬಿಟ್ಟರೆ ನನಗೆ ಮತ್ಯಾರು?!

ಮಾರನೆಯ ದಿನದ ಸಂಜೆ ಮನೆಯ ಮೆಟ್ಟಿಲುಗಳ ಮೇಲೆ ಕೂತಿದ್ದ ಅಪ್ಪನ ಮುಂದೆ ಬಂದು ಕೂತ ಮಗ ತಾನು ಯೋಚಿಸಿದ್ದ ಯೋಜನೆಯನ್ನು ತನ್ನ ಪಾಡಿಗೆ ತಾನು ಹೇಳಿಕೊಂಡು ಹೋಗುತ್ತಾನೆ. ಅದು ಅಪ್ಪನ ಕಿವಿಗೆ ಬೀಳುತ್ತಿದೆ ಎಂಬುದ ತಿಳಿದೇ ಶುರು ಮಾಡುತ್ತಾನೆ. ಮನೆಯ ಬಾಗಿಲಿಗೆ ತಲೆಯನ್ನು ಒರಗಿ ಚಿಂತಿಸುತ್ತಿದ್ದರೂ ಒಂದು ಬಗೆಯ ಗಾಂಭೀರ್ಯತೆ ಅಪ್ಪನ ಮುಖದ ಮೇಲೆ ಮೂಡಿರುತ್ತದೆ.

'ಇದನ್ನು ಬಿಸಿನೆಸ್ ಅಂತ ಬೇರೆಯವರು ಕರೆಯಬಹದು. ಆದರೆ ನಾನು ಇದನ್ನು ಸೋಶಿಯಲ್ ಸರ್ವಿಸ್ ಅಂತಾನೆ ಕರೀತೀನಿ. ಯಾಕಂದ್ರೆ ಇಲ್ಲಿ ಪ್ರಯೋಜನಕ್ಕೊಳಪಡುತ್ತಿರುವವರು ವಿದ್ಯಾರ್ಥಿಗಳು, ಕಾಲೇಜುಗಳು, ಹಾಗು ಕಂಪನಿಗಳು. ಹೌದು, ಇದೊಂದು ಟ್ರೈನಿಂಗ್ ಇನ್ಸ್ಟಿಟ್ಯೂಟ್. ನಮ್ಮ ತಾಲೂಕಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅದೆಷ್ಟೇ ಉತ್ತಮ ಅಂಕಗಳನ್ನೂ ಗಳಿಸಿಕೊಂಡಿದ್ದರೂ ಯಾವೊಂದು ಕಂಪನಿಯೂ ಬೆಂಗಳೂರಿನ ಕಾಲೇಜುಗಳಿಗೆ ಬರುವಂತೆ ಸೆಮಿಸ್ಟರ್ ಮುಗಿಯುವ ಮೊದಲೇ ಇಲ್ಲಿಯ ಕಾಲೇಜುಗಳಿಗೆ ಬಂದು ನೂರಾರು ವಿದ್ಯಾರ್ಥಿಗಳನ್ನು ಹೆಕ್ಕಿ ಕರೆದುಕೊಂಡು ಹೋಗುವುದಿಲ್ಲ. ಹಳ್ಳಿಯ ವಿದ್ಯಾರ್ಥಿಗಳು ಕಾಲೇಜು ಮುಗಿದು ವರ್ಷಾನುಗಟ್ಟಲೆ ಬೆಂಗಳೂರಿನಂತ ನಗರಗಳಲ್ಲಿ ಕೆಲಸಕ್ಕಾಗಿ ಅಲೆಯಬೇಕು. ಸಿಕ್ಕರೂ ಅಂತ ಕೆಲಸಗಳಿಂದ ಬರುವ ಸಂಬಳ ಬಟ್ಟೆಗಾದರೆ ಹಿಟ್ಟಿಗಿಲ್ಲ, ಹಿಟ್ಟಿಗಾದರೆ ಬಟ್ಟೆಗಿಲ್ಲ ಎಂಬಂತೆ. ಇನ್ನು ಸಾಧಾರಣ ವಿದ್ಯಾರ್ಥಿಗಳಿಗಂತೂ ಕೆಲಸವೆಂಬುದು ಹಿಮಾಲಯ ಪರ್ವತವೇ ಸರಿ. ಊರಿನಿಂದ ಅಷ್ಟೋ ಇಷ್ಟೋ ಹಣವನ್ನು ಹಿಡಿದುಕೊಂಡು ಹೋಗಿ, ಯಾವುದೊ ಗೆಳೆಯನ ಒಂದು ರೂಮಿನ ಮೂಲೆಯಲ್ಲಿ ಒಂದಿಷ್ಟು ಜಾಗವನ್ನು ಪಡೆದು ದಿನವಿಡೀ ಸಿಟಿಯ ಗಲ್ಲಿಮೂಲೆಗಳನ್ನು ಸುತ್ತುತ್ತಾ, ಕಂಡ ಕಂಡಲ್ಲೆಲ್ಲ ಇಂಟರ್ವ್ಯೂ ಗಳನ್ನು ಕೊಡುತ್ತಾ, ಹಣ ಖಾಲಿಯಾಗುತ್ತಿರುವಂತೆ ಏರೊಡೊತ್ತಿನ ಊಟವನ್ನು ಒಂದೊತ್ತಿಗೆ ಸೀಮಿತವಾಗಿರಿಸಿಕೊಳ್ಳುತ್ತಾ, ಕೊನೆಕೊನೆಗೆ ಕೇವಲ ಟೀ ಬನ್ನುಗಳಲ್ಲೇ ದಿನವನ್ನು ಸಾಗಿಸುತ್ತ, ಆಗಲೂ ಕೆಲಸ ಸಿಗದೇ ಕೊನೆಗೆ ಊರಿನ ಯಾರೋ ಒಬ್ಬರನ್ನು ಸಿಟಿಯಲ್ಲಿ ಕಂಡು ಅವರಿಂದ ಒಂದಿಷ್ಟು ಹಣವನ್ನು ಸಾಲದ ರೂಪದಲ್ಲಿ ಪಡೆದು ಇದ್ದೆನೋ ಬಿದ್ದೆನೋ ಎಂಬಂತೆ ಊರಿಗೆ ಸೇರುವ ಇಂತಹ ಯುವಕರನ್ನು ಎಂಜಿನೀರ್ಸ್ ಗಳು ಎಂದು ಕರೆಯಬಹುದೇ?’

ಅಪ್ಪ ಯಾವ ಭಾವವನ್ನೂ ಸೂಚಿಸದೆ ಕೇಳಿಸಿಕೊಳ್ಳುತ್ತಿರುತ್ತಾನೆ. ಆದರೂ ಮಗ ಮುಂದುವರೆಸಿದ,

'ನಾನು ಶುರು ಮಾಡಲೋಗುತ್ತಿರುವ ಇನ್ಸ್ಟಿಟ್ಯೂಟ್ ಮೊದಲು ಕಂಪನಿಗಳನ್ನು ಸಂಪರ್ಕಿಸಿ ಅವರು ಪ್ರಸ್ತುತ ವರ್ಷಕ್ಕೆ ನೇಮಕಾತಿ ಮಾಡಲು ಯೋಜಿಸಿರುವ ವಿದ್ಯಾರ್ಥಿಗಳ ಅರ್ಹತೆ, ಬೇಡಿಕೆ ಹಾಗು ಒಟ್ಟು ಸಂಖ್ಯೆಯನ್ನು ಒಟ್ಟುಗೂಡಿಸಿಕೊಂಡು ಬರುತ್ತದೆ. ಹೀಗೆ ಎಂಟತ್ತು ಕಂಪನಿಗಳನ್ನು ಸಂಪರ್ಕಿಸಿ ವಿವರಗಳನ್ನು ಗುರುತಾಕಿಕೊಂಡು ಕಾಲೇಜನ್ನು ಸಂಪರ್ಕಿಸುವುದು. ಕಾಲೇಜಿನಲ್ಲಿ ತಮ್ಮಲ್ಲಿರುವ ವಿವರಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯಾ ವಿಷಯದ್ಲಲಿಯೇ ಸಂಜೆ ಕಾಲೇಜು ಮುಗಿದ ಬಳಿಕ ಅಥವಾ ವಾರಾಂತ್ಯದಲ್ಲಿ ತರಬೇತಿಯನ್ನು ನೀಡುವುದು. ಉದಾಹರಣೆಗೆ ಇಂದು ಒಬ್ಬ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮಾಡಿದ ವಿದ್ಯಾರ್ಥಿ ಹೆಚ್ಚಾಗಿ ಆಯ್ಕೆಯಾಗುತ್ತಿರುವುದು ಪ್ರೋಗ್ರಾಮಿಂಗ್ ಆಧಾರಿತ ಕೆಲಸಗಳ ಮೇಲೆಯೇ. ಅಂದರೆ ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಾಡಬೇಕಾದ ಕೆಲಸ. ಇದು ಅವನ ಸ್ವಂತದ್ದ ಆಯ್ಕೆಯಾಗದಿದ್ದರೂ ಪ್ರಸ್ತುತ ಪರಿಸ್ಥಿತಿ ಆತನನ್ನು ಮೂಕನನ್ನಾಗಿಸುತ್ತದೆ. ಹಾಗಾದರೆ ಕೊನೆಗೆ ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಾಡುವ ಕೆಲಸವನ್ನೇ ಈತ ಮಾಡಬೇಕಾದರೆ ಬೇರೆ ವಿಷಯಗಳನ್ನು ತನ್ನ ನಾಲ್ಕು ವರ್ಷಗಳ ಕಲಿಕೆಯಲ್ಲಿ ಕಲಿತು ಏನು ಪ್ರಯೋಜನ? ಇಂದು ಬಹುಪಾಲು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಗೋಳು ಇದೆಯೇ. ಓದುವುದು ಒಂದು ಮಾಡುವುದು ಬೇರೊಂದು! ನಾನು ಶುರು ಮಾಡುವ ಇನ್ಸ್ಟಿಟ್ಯೂಟ್, ಕಂಪನಿಗಳಿಂದ ಕರಾರುವಕ್ಕಾಗಿ ಡೇಟಾಗಳನ್ನು ಸಂಗ್ರಹಿಸಿ ಅವರವರ ಐಚ್ಚಿಕ ವಿಷಯಗಳಲ್ಲೇ ತರಬೇತಿಯನ್ನು ನೀಡುತ್ತದೆ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವರ ವಲಯದಲ್ಲಿನದೇ ಕಂಪನಿಗಳ ಅಗತ್ಯದ ಮೇರೆಗೆ ತರಬೇತಿಯನ್ನು ನೀಡುತ್ತದೆ. ಅದೂ ಸಹ ಕೆಲಸ ದೊರೆತ ಮೊದಲ ಆರು ತಿಂಗಳು ಕಂಪೆನಿಗಳಲ್ಲಿ ನೀಡುವ ತರಬೇತಿಯಂತೆಯೆ. ಸಾದ್ಯವಾದರೆ ಈ ತರಬೇತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಕೊನೆಯ ವರ್ಷದ ಪ್ರೊಜೆಕ್ಕ್ಟ್ ಅನ್ನೂ ಸಹ ಮಾಡಿಕೊಳ್ಳಬಹುದು.

ಈಗ ನನ್ನ ಸಂಸ್ಥೆಯ ಪ್ರಯೋಜನಕ್ಕೆ ಬಂದರೆ, ಮೊದಲು ವಿದ್ಯಾರ್ಥಿಗಳು ಅವರವರ ಐಚ್ಚಿಕ ವಿಷಯಗಳಲ್ಲೇ ವೃತ್ತಿ ಆಧಾರಿತ ತರಬೇತಿಯನ್ನು ಪಡೆದು ವರ್ಷಾಂತ್ಯದ ಹೊತ್ತಿಗೆ ರೆಡಿಯಾಗಿರುತ್ತಾರೆ. ಇದರಿಂದ ಕಂಪನಿಗಳಿಗೂ ತರಬೇತಿಯ ಹೊರೆ ಕಡಿಮೆಯಾಗಿ ಅವರಿಗಿಚ್ಚಿಸಿದ ವಿದ್ಯಾರ್ಥಿಗಳೇ ತಯಾರಾಗಿ ನಿಂತಿರುತ್ತಾರೆ. ಎಲ್ಲಾ ಬಗೆಯ ಕಂಪನಿಗಳು ತಾವು ನಿರಾಳವಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬಹುದು. ಅಲ್ಲದೆ ಮೊದಲ ದಿನದಿಂದಲೇ ಉದ್ಯೋಗಿಗಳ ಪೂರ್ಣ ಲಾಭವನ್ನು ಪಡೆಯಬಹುದು. ಒಂದು ಪಕ್ಷ ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಕಂಪನಿಗಳಲ್ಲಿ ಆಯ್ಕೆಯಾಗದಿದ್ದರೂ ಅವರಿಗೊಂದು ವೃತ್ತಿ ಆಧಾರಿತ ತರಬೇತಿ ಆಗಲೇ ಆಗಿರುತ್ತದೆ. ಇದು ಕೇವಲ ಪದವಿ ಪ್ರಮಾಣಪತ್ರವನ್ನು ಹಿಡಿದು ಕೆಲಸವನ್ನು ಅರಸುವುದಕಿಂತ ಎಷ್ಟೋ ವಾಸಿ.ಅಲ್ಲದೆ ಹಳ್ಳಿಗಳ ಕಾಲೇಜುಗಳಿಗೂ ಹೆಚ್ಚೆಚ್ಚು ಕಂಪನಿಗಳು ಬರುವುದರಿಂದ ಕಾಲೇಜಿಗೂ ಒಳ್ಳೆಯ ಹೆಸರು, ಹಳ್ಳಿಯ ವಿದ್ಯಾರ್ಥಿಗಳಿಗೂ ಒಂದೊಳ್ಳೆಯ ಅವಕಾಶ ದೊರೆತಂದಾಗುತ್ತದೆ.’ ಎಂದು ಸುಮ್ಮನಾಗುತ್ತಾನೆ.

ಕೆಲಹೊತ್ತು ಸುಮ್ಮನೆ ಕೂತು ಅಪ್ಪನಿಂದ ಯಾವುದೇ ಪ್ರತ್ಯುತ್ತರ ಬಾರದಿದ್ದನ್ನು ಕೇಳಿ ಮಗ ಸಿಟ್ಟಿನಿನ ಅಲ್ಲಿಂದ ಎದ್ದು ಹೊರನೆಡೆಯುತ್ತಾನೆ, ಅಪ್ಪನ ಮುಖವನ್ನೂ ತಿರುಗಿ ನೋಡದೆ. ಒಂದು ಪಕ್ಷ ನೋಡಿದ್ದರೆ ಹೆಮ್ಮೆಯಿಂದ ಪ್ರಜ್ವಲಿಸುತ್ತಿರುವ ಕಣ್ಣುಗಳ ಕಾಂತಿಗೆ ಮಗ ದಂಗಾಗಿ ಹೋಗಿರುತ್ತಿದ್ದ!!...

ಮಗ ತನ್ನಲ್ಲಿ ಬಂದು ಆತನ ಬಿಸಿನೆಸ್ ಪ್ಲಾನ್ ನನ್ನು ಹೇಳಿದ ದಿನದಿಂದಲೂ ಅಪ್ಪನಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿದ್ದೆ. ಇಂತಹ ಉತ್ಕೃಷ್ಟವಾದ ಯೋಜನೆ ಮಗನಲ್ಲಿ ಮೂಡಬಹುದು ಎಂದರೆ ಆತ ಮುಂದೆ ಅದೆಷ್ಟು ಉನ್ನತಿಯನ್ನು ಗಳಿಸಬಹುದು ಎಂದು ಯೋಚಿಸಿದಷ್ಟೂ ಸಂತೋಷದ ಅಲೆಗಳು ಒಂದರಿಂದೊಂದು ಮೇಲೇರಿ ಅವನನ್ನು ಅಪ್ಪಳಿಸತೊಡಗುತ್ತವೆ. ಪ್ರತಿ ನಿಮಿಷ ಪ್ರತಿ ಘಳಿಗೆಯೂ ಆತನ ಆ ಇನ್ಸ್ಟಿಟ್ಯೂಟ್ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಆದರೆ ಅದಕ್ಕೆ ಬೇಕಾದ ಬಂಡವಾಳವಾಗಲಿ ಅಥವಾ ಇನ್ಯಾವ ಬಗೆಯ ಬೆಂಬಲವಾಗಲಿ ಆತನಿಗೆ ತಿಳಿದಿಲ್ಲ. ಹೆಂಡತಿಯೊಂದಿಗೆ ಅದರ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಾನೆ. ಈ ಪ್ರಾಜೆಕ್ಟ್ ನನ್ನು ಮಗನೆ ಖುದ್ದಾಗಿ ಪ್ರಾರಂಭಿಸಲು ಕಡೆ ಪಕ್ಷ ಹನ್ನೆರಡು ಲಕ್ಷಗಳು ಬೇಕೆಂದು ತಿಳಿದುದಂಗಾಗಿ ಹೋಗುತ್ತಾನೆ. ಎಷ್ಟೇ ಯೋಚಿಸಿದರೂ ಅಷ್ಟೊಂದು ಮೊತ್ತದ ಹಣವನ್ನು ಹೊಂದಿಸುವುದು ಹೇಗೆಂದು ಆತನಿಗೆ ತಿಳಿಯುವುದಿಲ್ಲ.

ಮಗನಿಗಂತೂ ಅಪ್ಪನ ಮೇಲೆ ಭರವಸೆ ಎಂಬುದೇ ಉಳಿದಿರುವುದಿಲ್ಲ. ಯಾವುದೇ ಬಗೆಯ ಬಂಡವಾಳವಾದರೂ ಅಪ್ಪನ ಬಳಿ ಇದ್ದದ್ದು ಕೇವಲ ಮನೆಯೊಂದೇ ಮಾತ್ರ. ಆತ ಏನಿದ್ದರೂ ಅದನ್ನು ಮಾರಿಯೇ ಮಗನ ಕನಸಿನ ಗೋಪುರವನ್ನು ಕಟ್ಟಿಕೊಡಬೇಕು. ಆದರೆ ಕುಟುಂಬದ ಇತರ ಸದಸ್ಯರಲ್ಲಿ ಒಂದಾಗಿದ್ದ, ತನ್ನ ಅಮ್ಮನನ್ನು ದಿನವೂ ಕಾಣುತಿದ್ದ, ತನ್ನ ಸರ್ವಸ್ವವೇ ಆಗಿದ್ದ ಮನೆಯನ್ನು ಅಪ್ಪ ಅಷ್ಟು ಸುಲಭವಾಗಿ ಮಾರಬಲ್ಲನೆ? ಆದರೆ ದಿನೇ ದಿನೇ ಮಗನ ಜೋತುಬಿದ್ದ ಮುಖವನ್ನು ಮಾತ್ರ ಆತನಿಂದ ನೋಡಲಾಗುತ್ತಿರಲಿಲ್ಲ.

ಅಂದು ಬೆಳಗ್ಗೆ ಮೊದಲ ಬಾರಿ ಏನೋ ಎಂಬಂತೆ ಮುಂಜಾನೆ ಆರರ ಹೊತ್ತಿಗೆ ಮಗನ ಕಣ್ಣುಗಳು ಒಮ್ಮೆಲೇ ತೆರೆದವು. ಎಷ್ಟೇ ಪ್ರಯತ್ನಿಸಿದರೂ ಮತ್ತೊಮ್ಮೆ ಮಲಗಲು ಸಾದ್ಯವಾಗುವುದಿಲ್ಲ. ಎದ್ದು ಇನ್ನೇನು ಅಟ್ಟದಿಂದ ಕೆಳಗಿಳಿಯಬೇಕು ಅನ್ನುವಷ್ಟರಲ್ಲೇ ಅಪ್ಪನ ಹಳೆಯ ಕಬ್ಬಿಣದ ಟ್ರಂಕು ಮಗನ ಕಣ್ಣಿಗೆ ಬೀಳುತ್ತದೆ. ಚಿಕ್ಕವನಿದ್ದಾಗ ಅಪ್ಪನನ್ನು ಅದೆಷ್ಟೇ ಕಾಡಿ ಬೇಡಿದರೂ ಒಮ್ಮೆಯೂ ಆತ ಅದರ ಕೀಲಿಯನ್ನು ಮಗನಿಗೆ ನೀಡಿರಲಿಲ್ಲ. ಈಗೆಲ್ಲ ಅದರ ಕೀಲಿಯನ್ನು ಮನೆಯ ಬಾಗಿಲಿಗೆ ಬಳಸುತ್ತಿದ್ದರಿಂದ ಟ್ರಂಕನ್ನು ಹಾಗೆಯೆ ಬಿಡಲಾಗಿದ್ದಿತು. ಆದರೆ ಒಮ್ಮೆಯೂ ಅದನ್ನು ತೆಗೆಯುವ ಗೋಜಿಗಂತೂ ಮಗ ಹೋಗಿರಲಿಲ್ಲ. ರದ್ದಿಯವನಿಗೆ ಅದನ್ನು ಮಾರಿ ಅಟ್ಟದ ಜಾಗವನ್ನು ಒಂತಿಷ್ಟು ವಿಸ್ತರಿಸಬೇಕೆಂಬುದಷ್ಟೇ ಆತನ ತಲೆಯಲ್ಲಿ ಕೆಲ ದಿನಗಳಿಂದ ಕೊರೆಯುತ್ತಿತ್ತು.

ಅದ್ಯಾಕೋ ಇಂದು ಒಮ್ಮೆ ಅದನ್ನು ತೆಗೆದು ನೋಡಬೇಕಂಬ ಮನಸ್ಸಾಯಿತು. ಅಟ್ಟದಿಂದ ಇಳಿಯುತಿದ್ದವ ಮತ್ತೊಮೆ ಮೇಲೇರಿ ಹೋಗುತ್ತಾನೆ. ಸದ್ದಾಗದಂತೆ ಟ್ರಂಕನ್ನು ಹಾಸಿಗೆಯ ಬಳಿಗೆಳೆದು ತೆರೆಯುತ್ತಾನೆ.

ಟ್ರಂಕನ್ನು ತೆರೆದ ಕೆಲ ಕ್ಷಣಗಳು ಮಗನಿಗೆ ಮಾತೆ ಹೊರಡದಂತಾಗುತ್ತದೆ. ತಾನು ಅಂಬೆಗಾಲಿಟ್ಟು ಚಲಿಸುತ್ತಿದ್ದಾಗಿನಿಂದ ಹಿಡಿದು ಕಳೆದ ವರ್ಷ ಹಳೆಯದಾಯಿತು ಬೇಡವೆಂದು ಬಿಸಾಡಿದ್ದ ಶರ್ಟನ್ನೂ ಅದರಲ್ಲಿ ನೀಟಾಗಿ ಮಡಚಿ ಇಡಲಾಗಿದ್ದಿತು. ಇಷ್ಟು ವರ್ಷಗಳು ಕಳೆದರೂ ತಾನು ಚಿಕ್ಕವನಿದ್ದಾಗ ಹಾಕಿಕೊಳ್ಳಲು ಹಟಮಾಡುತ್ತಿದ್ದ ನೀಲಿಯ ಬಣ್ಣದ ಮಂಕಿ ಟೋಪಿ ಇನ್ನೂ ಹಾಗೆಯೇ ತನ್ನ ಹೊಳಪನ್ನು ಕಳೆದುಕೊಳ್ಳದೆ ಇಡಲ್ಪಟ್ಟಿತ್ತು! ಮಗ ಟೋಪಿಯನ್ನು ತೆಗೆದು ಹಾಕಿಕೊಳ್ಳಲು ಯತ್ನಿಸುತ್ತಾನೆ. ಆಗುವುದಿಲ್ಲ. ಬಟ್ಟೆಗಳ ತಳದಲ್ಲಿ ಬೆಳ್ಳಿಯ ಕಾಲುಂಗುರ, ಗಾಜಿನ ಬಳೆಗಳ ಚೂರುಗಳು ಸಿಗುತ್ತವೆ. ಅವು ತನ್ನ ಅಜ್ಜಿಯ ವಸ್ತುಗಳು ಎಂದರಿಯಲು ಮಗನಿಗೆ ಹೆಚ್ಚು ಸಮಯ ಹಿಡಿಯುವುದಿಲ್ಲ. ಯಾಕೋ ಎದೆ ಬಾರವಾಯಿತ್ತೆಂದೆನಿಸುತ್ತದೆ. ಟ್ರಂಕಿನ ಒಂದು ಮೂಲೆಯಲ್ಲಿ ಉದ್ದದೊಂದು ನೋಟ್ ಬುಕ್ಕು ಇರುವುದನ್ನು ಕಂಡು ಮಗ ಅದನ್ನು ಕೈಗೆತ್ತಿಕೊಳ್ಳುತ್ತಾನೆ. ಅಪ್ಪನ ಆಸ್ತಾಕ್ಷರದಲ್ಲಿ ಬರೆದ ಪುಟಗಳವು. ಅಷ್ಟೊಂದು ಅಂದವಾಗಿ ಅಪ್ಪ ಬರೆಯಬಲ್ಲರು ಎಂಬುದು ಮಗನಿಗೆ ತಿಳಿದಿರುವುದೇ ಇಲ್ಲ. ಪುಸ್ತಕದ ಮೊದಲ ಪುಟದಲ್ಲೇ 'ನನ್ನ ಮನೆ' ಎಂಬ ಶೀರ್ಷೆಕೆಯನ್ನು ದೊಡ್ಡ ಅಕ್ಷಗಳಲ್ಲಿ ತಿದ್ದಲಾಗಿರುತ್ತದೆ. ಒಂದೊಂದೇ ಪುಟಗಳನ್ನು ಮಗ ಓದುತ್ತಾ ಹೋಗುತ್ತಾನೆ. ತಮ್ಮ ಮನೆಯನ್ನು ಕಟ್ಟಿದ ಬಗ್ಗೆ, ಅಪ್ಪ ಮಗುವಾಗಿನಿಂದ ಮನೆಯಲ್ಲಿ ಆಡಿ ಬೆಳೆದ ಬಗ್ಗೆ, ತನ್ನ ಅಜ್ಜಿಯ ಬಗ್ಗೆ ಅತ್ಯಾಪ್ತವಾಗಿ ಬರೆದಿದ್ದ ವಾಕ್ಯಗಳನ್ನು ಓದಿ ಮಗನಿಗೆ ಅಳು ಬರುವಂತಾಗುತ್ತದೆ. ಅಷ್ಟು ಚೆನ್ನಾಗಿ ಅಪ್ಪ ಮನೆಯನ್ನು ವರ್ಣಿಸಿದ್ದ. ನೋಟುಬುಕ್ಕಿನ ಅರ್ಧ ಬಾಗ ಮನೆ ಹಾಗು ಅಜ್ಜಿಯ ಬಗ್ಗೆಯಾದರೆ ಉಳಿದರ್ಧ ಬಾಗ ಕೇವಲ ಮಗನ ಬಗ್ಗೆಯೇ ಆಗಿರುತ್ತದೆ. ತಾನು ಮುಂಬೈಯ ಕೆಲಸವನ್ನು ಬಿಟ್ಟು ಬಂದ ಕಾರಣವಾಗಲಿ, ಮಗನನ್ನು ಇಂಜಿನಿಯರ್ ಮಾಡಲು ಶಪಥ ಪಟ್ಟ ಘಳಿಗೆಯನ್ನು, ಮುಂದಿನ ಭವಿಷ್ಯಕ್ಕೆ ಅವನ ಬಗ್ಗೆ ಕಂಡ ಕನಸ್ಸನ್ನು ಒಂದೊಂದಾಗೆ ಅಪ್ಪ ಅದರಲ್ಲಿ ಬರೆದಿರುತ್ತಾನೆ. ಪ್ರತಿ ಪುಟಗಳನ್ನು ತಿರುವಿಹಾಕುವಾಗಲೂ ಮಗನ ಕೈಗಳು ಒಂದೇ ಸಮನೆ ನಡುಗುತ್ತಿರುತ್ತವೆ. ವಾಸ್ತವದ ಹೊಳಪನ್ನು ಕಾಣಲು ಆಗದೆ ರೆಪ್ಪೆಗಳು ಕಂಪಿಸುವಂತೆ. ಮಗನಿಗೆ ತಾನೊಬ್ಬ ಕ್ರೂರಿ ಎಂಬ ಭಾವ ಒಳಗಿಂದೊಳಗೆ ಮೂಡುತ್ತದೆ. ತಾನು ಹುಟ್ಟಿದಾಗಿನಿಂದಲೂ ಅಟ್ಟದ ಗೋಡೆಗೆ ಬಣ್ಣವನ್ನು ಬಳಿಸಿಲ್ಲ ಎಂದೇ ಗೊಣಗುತ್ತಿದ್ದ ಮಗ, ತಾನು ಚಿಕ್ಕವನಿದ್ದಾಗ ಗೋಡೆಯ ತುಂಬೆಲ್ಲ ಗೀಚಿದ್ದ ಅಕ್ಷರಗಳ ಮುದ್ರೆಯನ್ನು ಅಳಿಸಲು ಮನಸ್ಸಿರದೆ ಅಪ್ಪ ಬಣ್ಣವನ್ನು ಒಡೆಸಿರುವುದಿಲ್ಲ ಎಂಬುದ ಓದಿ ಆತನ ಕಣ್ಣಂಚುಗಳು ಒದ್ದೆಯಾಗುತ್ತವೆ. ಒಮ್ಮೆ ಸುತ್ತಲೂ ಕಣ್ಣಾಹಿಸಿದ್ದಾಗ ತಾನು ಅಂಗನವಾಡಿಗೆ ಹೋಗುತ್ತಿದ್ದಾಗ ಪೆನ್ಸಿಲಿನಲ್ಲಿ ಗೀಚಿದ್ದ ನೂರಾರು ಅಕ್ಷಗಳು ಹಾಗೆಯೆ ಕಾಣಸಿಗುತ್ತವೆ. ಹಣ ಉಳಿಸಲು ಕೆಳಗೆ ಮಾತ್ರ ಬಣ್ಣ ಹೊಡೆದು ಅಟ್ಟದ ಮೇಲೆ ಹಾಗೆಯೆ ಬಿಟ್ಟಿದ್ದಾನೆ ಎಂದು ಮಗ ಅದೆಷ್ಟು ಬಾರಿ ಅಪ್ಪನ ಮೇಲೆ ಚೀರಿದ್ದಾನೋ ಲೆಕ್ಕವಿಲ್ಲ.

ಮುಂದೆ ಓದಲು ಮಗನಿಂದ ಸಾಧ್ಯವಾಗುವುದಿಲ್ಲ. ಯಾರೋ ತನ್ನ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ತೆರೆದಂತಹ ಅನುಭವವಾಯಿತು. ನೋಟುಬುಕ್ಕನು ಹಾಗೆಯೆ ಮಡಿಚಿಟ್ಟು ಅಟ್ಟದಿಂದ ಕೆಳಗಿಳಿಯುತ್ತಾನೆ. ಬಿದ್ದ ಸುಣ್ಣದ ಎಕ್ಕೆಗಳ ಜಾಗಕ್ಕೆ ಅಪ್ಪ ಹೊಸದಾಗಿ ಸುಣ್ಣವನ್ನು ಮೆತ್ತಿರುತ್ತಾನೆ. ಅಪ್ಪ ಎಲ್ಲೆಂದು ಅಮ್ಮನಲ್ಲಿ ಕೇಳಿ, ಅವರು ಪೇಟೆಯೆಡೆ ಹೋದರು ಎಂಬುದ ತಿಳಿದು ಕೊಡಲೇ ಹೊರನೆಡೆಯುತ್ತಾನೆ. ಮೆನೆಯಿಂದ ಹೊರಬರುವಾಗ ಅಪ್ಪ ವರ್ಣಿಸಿದ್ದ ಮನೆಯ ಮೆಟ್ಟಿಲುಗಳನ್ನು ನೋಡುತ್ತಾನೆ. ಕೂರುವ ಮನಸ್ಸಾಗಿ ಗೋಡೆಯನ್ನೊರಗಿ ಹಾಗೆಯೆ ತಾನೂ ಕೂರುತ್ತಾನೆ. ಏನಾಶ್ಚರ್ಯ! ತನ್ನ ತಲೆಯಲ್ಲಿದ್ದ ಚಿಂತೆಯಲ್ಲ ಒಮ್ಮೆಲೇ ಮಾಯವಾದಂತಹ ಅನುಭವ! ಮೇಲೇಳಲು ಮನಸ್ಸೇ ಒಪ್ಪುತ್ತಿಲ್ಲ! ಬುಕ್ಕಿನಲ್ಲಿ ಬರೆದ ಅಪ್ಪನ ಮಾತುಗಳು ನೂರಕ್ಕೆ ನೂರರಷ್ಟು ಸತ್ಯವೆನಿಸುತ್ತದೆ. ಒಲ್ಲದ ಮನಸ್ಸಿನಲ್ಲಿ ಎದ್ದು ಶೆಟ್ಟರ ಚಹದ ಅಂಗಡಿಯ ಬಳಿಗೆ ಹೋಗುತ್ತಾನೆ.

ತಮ್ಮ ಗುಂಪಿನ ಖಾಯಂ ಅಡ್ಡವಾಗಿದ್ದ ಶೆಟ್ಟರ ಅಂಗಡಿಗೆ ಬಂದು ಚಹಾ ಒಂದನ್ನು ಹೇಳಿ ಕೂತ ಮಗ ಅಪ್ಪನೇನಾದರೂ ಇತ್ತಕಡೆ ಬಂದಿದ್ದರೆಂದು ಶೆಟ್ಟರ ಬಳಿ ಕೇಳುತ್ತಾನೆ. ಆದರೆ ಮಗನ ಪ್ರೆಶ್ನೆಗೆ ಕ್ಯಾರೇ ಎನ್ನದ ಶೆಟ್ಟಿ ಚಹಾವನ್ನು ಒಂದು ಲೋಟದಿಂದ ಇನ್ನೊಂದು ಲೋಟಕ್ಕೆ ಸುರಿಯುತ್ತಾ ಈತನನ್ನೇ ಗುರಾಯಿಸತೊಡಗುತ್ತಾನೆ. ಮೊದಲ ಬಾರಿಗೆ ಆತನ ದೃಷ್ಟಿಯಲ್ಲಿನ ತೀವ್ರತೆ ಹಿಂದೆಂದೂ ಕಾಣದಷ್ಟಿರುತ್ತದೆ. ಕಾರಣವೇನೆಂದು ಮಗ ಅರಿಯದಾಗುತ್ತಾನೆ. ಟೀಯನ್ನು ಕುಡಿದು ಹಣವನ್ನು ಕೊಡಲು ಎದ್ದ ಮಗನನ್ನು ತಡೆದ ಶಟ್ಟಿ 'ನಿಮ್ಮಪ್ಪ ನಿನ್ ಹಳೆ ಬಾಕಿ ಎಲ್ಲ ಕೊಟ್ಟು ನೂರುಪಾಯಿ ಅಡ್ವಾನ್ಸ್ ಕೊಟ್ಟವ್ರೆ' ಎಂದು ಹೇಳಿ ಸುಮ್ಮನಾದ. ಆತನ ದೃಷ್ಠಿಯ ಹಿರಿತ ಮಾತ್ರ ಕಡಿಮೆಯಾಗಿರಲ್ಲಿಲ. ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಶೆಟ್ಟಿಯ ಈ ಮುಖ ಚಹರೆಯನ್ನು ಮಗ ಕಂಡಿರಲಿಲ್ಲ. ಒಂದು ಬಗೆಯ ತಿರಸ್ಕಾರದ ನೋಟ ಅದಾಗಿದ್ದಿತು. ಅಪ್ಪ ಹಣವನ್ನು ಕೊಟ್ಟಿದ್ದಾರೆ ಎಂಬುದ ಕೇಳಿ ಕುಪಿತನಾದ ಮಗ 'ನಿಮ್ಗ್ಯಾರಿ ಅವ್ರ್ ಹತ್ರ ಹಣ ತಗೋಳಕ್ಕೆ ಹೇಳಿದ್ದು? ಸಾಲ ಮಾಡಿದವನು ನಾನು, ನಾನೇ ಸಾಲ ತೀರಿಸ್ತೀನಿ' ಎಂದು ಅಬ್ಬರಿಸತೊಡಗಿದ. ಅದಕ್ಕೆ ಉತ್ತರವಾಗಿ ಶೆಟ್ಟಿ 'ಸಾಕು ಮುಚ್ಚಪ್ಪ ಕಂಡಿದ್ದಾರೆ, ನಾಲ್ಕ್ ತಿಂಗಳಿಂದ ನೀನ್ ಸಾಲ ತೀರ್ಸಿರೋದು ಸಾಕು. ನಿಮ್ಮಂತ ಮಾಕ್ಳುನ್ನ ಆ ದ್ಯಾವ್ರು ನಿಮ್ಮಪ್ಪನಂಥ ಮನ್ಸ್ರುಗೆ ಯಾಕೆ ಕೊಡ್ತಾನೆ ಗೊತ್ತಿಲ್ಲ ಕಾಣೆ. ಏನ್ ಬ್ಯುಸಿನೆಸ್ ಮಾಡ್ತೀಯೋ ನೀನು? ಲೇ ನೀನ್ ಮೀಸೆ ಬರೋ ಗಂಡಸೇ ಆದ್ರೆ ನಿಮ್ಮಪ್ಪನಂತವ್ರ ಹತ್ರ ಹಣ ಕೇಳ್ತಿರ್ಲಿಲ್ಲ. ತಾಕತ್ ಇದ್ರೆ ನೀನೆ ಸಂಪಾದಿಸಿ ಬಿಸಿನೆಸ್ ನ ಶುರು ಮಾಡಿ ತೋರ್ಸು. ಪಾಪ ನಿಮ್ಮಪ್ಪ ದೇವರಂಥ ಮನುಷ ಎಷ್ಟೋ ವರ್ಷದಿಂದ ಕಾಪಡ್ಕೊಂಡು ಬಂದ ಮೆನೇನ ಇವತ್ತು ಮಾರೋಕ್ಕ್ ಒಂಟ್ಟವ್ನೆ. ಅದು ಜುಜುಬಿ ಮೂರ್ ಕಾಸಿಗೆ. ಮಗ, ಮಗ, ಮಗ. ಯಾವಾಗ್ ನೋಡಿದ್ರೂ ಮಗಂದೇ ಕನಸು ಅವ್ನಿಗೆ. ನೀನೋ.. ಹೋಗ್ಲಿ ಬಿಡು ನಿಮ್ಮಂಥವರಿಗೆ ಹೇಳಿ ಏನು ಪ್ರಯೋಜ್ನ' ಎಂದು ಸುಮ್ಮನಾಗುತ್ತಾನೆ. ಶೆಟ್ಟಿಯ ಮಾತುಗಳನು ಕೇಳಿದ ಮಗ ಶುರುವಿನಲ್ಲಿ ಆತ ಅಪ್ಪನ ಜಿಗ್ರಿ ದೋಸ್ತ್ ಎಂಬುದನ್ನೂ ತಿಳಿಯದೆ ಅವನ ಕೆನ್ನೆಗೆ ರಪರಪನೆ ನಾಲ್ಕು ಭಾರಿಸಬೇಕೆಂದೆನಿಸಿದರೂ ಅಪ್ಪ ಮನೆ ಮಾರುವ ವಿಷಯ ತಿಳಿದು ಕಳವಳಗೊಳ್ಳುತ್ತಾನೆ. ಮರುಗುತ್ತಾನೆ. ಕಣ್ಣುಗಳಿಗೆ ಕಪ್ಪುಗಟ್ಟಿದ ಅನುಭವವಾಗುತ್ತದೆ. ತನಗಾಗಿ ಅಪ್ಪ ಇಷ್ಟೆಲ್ಲಾ ಮಾಡಬಲ್ಲರೇ ಎಂಬುದ ಊಹಿಸಿಯೇ ಆತನಿಗೆ ಮಾತು ಹೊರಡದಂತಾಗುತ್ತದೆ. 'ಹೋಗು, ಸಬ್ ರಿಜಿಸ್ಟರ್ ಆಫೀಸಿಗೆ ನಿಮಪ್ಪ ಹೋಗಿದ್ದಾನೆ, ಯಾರೋ ಬರಿ ಇಪ್ಪತ್ತು ಲಕ್ಷಕ್ಕೆ ಮನೆ ಕೇಳ್ತಾ ಇದ್ದಾರಂತೆ. ಅರ್ಧ ಕೋಟಿ ಬೆಲೆಬಾಳೋ ಮನೇನ, ಅದಕ್ಕೂ ಹೆಚ್ಚಾಗಿ ಅವ್ನ ಸರ್ವಸ್ವಾನೆ ಆಗಿರೋ ಮನೇನ ಮಾರೋಕ್ ಹೊರಟಿದ್ದಾನೆ ನಿಮ್ಮಪ್ಪ, ಬೇಡ್ವೊ ಅಂದ್ರೆ ಮಗ ಚೆನ್ನಾಗಿರ್ಬೇಕಂತೆ, ತತ್' ಎಂದು ಶೆಟ್ಟಿ ಶಪಿಸತೊಡಗುತ್ತಾನೆ.

ಶೆಟ್ಟಿ ಮಾತುಗಳನ್ನು ಮುಂದುವರೆಸುತ್ತಾ ಹೋಗುತ್ತಾನೆ. ಆದರೆ ಯಾವೊಂದು ವಾಕ್ಯಗಳೂ ಮಗನ ಕಿವಿಗಳನ್ನು ಹೊಕ್ಕುವುದಿಲ್ಲ. ತನಗಾಗಿ ಯಾರು ಎಂಬ ಬಹುದಿನದ ಪ್ರೆಶ್ನೆಗೆ ಮಗನಿಗೆ ಉತ್ತರ ಸಿಕ್ಕಿರುತ್ತದೆ. ಕಣ್ಣುಗಳಲ್ಲಿ ನೀರಿನ ಕಟ್ಟೆಯೊಡೆದು ಧುಮುಕುತ್ತಿರುತ್ತದೆ. ಮರುಮಾತನಾಡದೆ ಒಂದೇ ಉಸಿರಿನಲ್ಲಿ ಮಗ ರಿಜಿಸ್ಟರ್ ಆಫೀಸಿನ ಕಡೆ ಓಡುತ್ತಾನೆ. ಶೆಟ್ಟಿ ಗೂಡಂಗಡಿಯ ಮೂಲೆಯಲಿ ನೇತಾಕಿದ್ದ ಗಣಪತಿ ಪಟಕ್ಕೆ ಭಕ್ತಿಯಿಂದ ಕೈಮುಗಿಯುತ್ತಾನೆ.

ಅದಾಗಲೇ ಪಟೇಲ ಹಾಗು ಅವನ ಸಂಗಡಿಗರು ಸಬ್ ರಿಜಿಸ್ಟರ್ ಆಫೀಸಿನಲ್ಲಿ ಅಪ್ಪ ತಲುಪುವ ಮೊದಲೇ ಬಂದು ಕುಳಿತ್ತಿರುತ್ತಾರೆ. ಅಪ್ಪ ಒಬ್ಬನೇ ಕಾಗದ ಪತ್ರಗಳನ್ನು ಹಿಡಿದು ಬಂದದ್ದು ಪಟೇಲನಿಗೆ ಕೊಂಚ ದಿಗ್ಬ್ರಮೆಯಾದರೂ ಅಷ್ಟು ಬೆಲೆಬಾಳುವ ಮನೆಯೊಂದನ್ನು ಕನಿಷ್ಠ ಕಾಸಿಗೆ ಕೊಂಡುಕೊಳ್ಳುವ ಚಾಲಾಕಿಯ ಅವನ ನೀಚತ್ವವನ್ನು ಇತರರೆದುರಿಗೆ ಮರೆಮಾಚಿಕೊಳ್ಳಲು ಒಳ್ಳೆಯದೇ ಆಯಿತೆಂದುಕೊಳ್ಳುತ್ತಾನೆ. ಜೀವನ ಪೂರ್ತಿ ಅಪ್ಪನನ್ನು ತುಚ್ಛವಾಗಿಯೇ ಕಂಡಿದ್ದ ಪಟೇಲ ಕಳೆದ ಹಲವು ವರ್ಷಗಳಿಂದ ಅಪ್ಪನ ಮನೆಯನ್ನು ಒಡೆದುಕೊಳ್ಳಲು ಹೊಂಚು ಹಾಕಿ ಕೂತಿದ್ದ. ಅಪ್ಪ ಬರುವುದನ್ನೇ ಇದಿರು ನೋಡುತ್ತಿದ್ದ ಪಟೇಲ ಕೂಡಲೇ ಸಬ್ ರಿಜಿಸ್ಟರ್ ರೂಮಿನೊಳಗೆ ನುಸುಳಿ ಕಾಗದಪಾತ್ರಗಳನ್ನೆಲ್ಲ ರೆಡಿ ಮಾಡಿಸುತ್ತಾನೆ. ಕೆಲ ಸಮಯದಲ್ಲೇ ಕಾಗದಪತ್ರಗಳೆಲ್ಲ ರೆಡಿಯಾಗಿ ಅಪ್ಪನ ಬಳಿ ಸಹಿಗಾಗಿ ಬರುತ್ತವೆ. ಅಲ್ಲಿಯವರೆಗೂ ಶಾಂತವಾಗಿದ್ದ ಅಪ್ಪ ಮನೆಯ ಮಾರಾಟದ ಬಾಂಡ್ ಪೇಪರ್ ಗಳನ್ನು ಕಂಡು ಕುಸಿದು ಕೂರುತ್ತಾನೆ. ಒಂದೇ ಸಮನೆ ಮಗುವಿನಂತೆ ರೋಧಿಸತೊಡಗುತ್ತಾನೆ. ಬಿಕ್ಕಳಿಸ ತೊಡಗುತ್ತಾನೆ. ಅಪ್ಪನನ್ನು ಅತ್ತಿರುವುದ ಎಂದಿಂಗೂ ಕಂಡಿರದ ಪಟೇಲ ಹಾಗು ಆತನ ಸಂಗಡಿಗರು ಕೆಲ ಕಾಲ ದಿಗ್ಬ್ರಾಂತರಾಗುತ್ತಾರೆ. ಅಪ್ಪ ಅಳುವುದ ಹಿಂದಿರುವ ಕಾರಣ ತಿಳಿದಿದ್ದರೂ ಪಟೇಲನ ಕಣ್ಣುಗಳು ಮಾತ್ರ ಪೆನ್ನನ್ನು ಹಿಡಿದಿದ್ದ ಅಪ್ಪನ ಕೈಗಳನ್ನೇ ದುರುಗುಟ್ಟುತ್ತಿರುತ್ತವೆ.'ಅಮ್ಮ.. ಅಮ್ಮ' ಎನ್ನುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅಪ್ಪನನ್ನು ಸಮಾಧಾನ ಪಡಿಸಲು ಅಲ್ಲಿದ್ದ ಯಾವೊಂದು ಜೀವವು ಮುಂದೆ ಬರುವುದಿಲ್ಲ.

ಕೂಡಲೇ ಅಪ್ಪನ ಹೆಗಲ ಮೇಲೆ ಸಾಂತ್ವನದ ಕೈಯೊಂದು ಬೀಳುತ್ತದೆ. ಅಪ್ಪನ ಅಳು ಬೇಸಿಗೆಯ ಮಳೆಯಂತೆ ಕೂಡಲೇ ನಿಂತುಬಿಡುತ್ತದೆ. ಆ ಕೈಗಳ ಶಕ್ತಿಯೇ ಅಂತಹದ್ದು. ಅದು ಅಪ್ಪನ ಮಗ ಎಂದು ತಿಳಿಯದೆ ಗುಂಪಿನಲ್ಲಿದ್ದ ಒಬ್ಬ ಯಾರಯ್ಯ ನೀನು ಎಂದು ದರ್ಪದಿಂದ ಅಬ್ಬರಿಸಿದ್ದ ಕಡೆ ತಿರುಗಿದ ಮಗನ ಜ್ವಲಿಸಿವ ಕೆಂಪಾದ ಕಣ್ಣುಗಳು ಆ ವ್ಯಕ್ತಿಯ, ಅಷ್ಟೇ ಏಕೆ ಇಡೀ ಗುಂಪಿನ ಧೈರ್ಯವನ್ನೇ ಉದುಗಿ ಹೋಗುವಂತೆ ಮಾಡುತ್ತವೆ. ಮುಂದೆ ಯಾರೊಬ್ಬನೂ ತುಟಿಕ್ ಪಿಟಿಕ್ ಅನ್ನುವುದಿಲ್ಲ! ಅಪ್ಪನ ಈ ಸ್ಥಿತಿಯನ್ನು ಮಗನಿಗೆ ನೋಡಲಾಗುವುದಿಲ್ಲ. ಅವನ ಕೈಲಿದ್ದ ಬಾಂಡ್ ಪೇಪರ್ಗಳನ್ನು ತೆಗೆದುಕೊಂಡು ನೋಡುತ್ತಾನೆ. ಅಪ್ಪನ ಅಸ್ತಾಕ್ಷರ ಅಷ್ಟರಲ್ಲಾಗಲೇ ಅವುಗಳ ಮೇಲೆ ಮೂಡಿರುತ್ತದೆ. ತಂದೆಯ ಮಮತೆಗೆ, ತ್ಯಾಗಕ್ಕೆ ಕರಗಿನ ಮಗನ ಕಣ್ಣೀರಿನ ಹನಿಗಳು ಪಟಪಟನೆ ಅಸ್ತಾಕ್ಷರದ ಮೇಲೆ ಒಂದರಿಂದೊಂದು ಬೀಳುತ್ತವೆ.

ಅಪ್ಪನ ಕಂಡು ಮಗನ ಮೊಗದಲ್ಲಿ ಮಂದಹಾಸವೊಂದು ಮೂಡಿದರೆ ಕಣ್ಣೇರಿಂದ ತೊಳೆದ ಇಂಕಿನ ಹನಿಗಳು ಒಂದೊಂದಾಗಿ ನೆಲವನ್ನು ಸೇರುತ್ತಿರುತ್ತವೆ….….

No comments:

Post a Comment